Sunday, December 29, 2019

ಥಟ್ ಎಂದು ಬರೆಯಲಾಗದ ಚಿಕ್ಕ ಪುಟ್ಟ ಸಾಲುಗಳು...

ಮಹತ್ತಾದುದಕ್ಕೆ ತುಡಿಯುತ್ತವೆ ಎಂದು ಮುಗಿಸಬೇಕು.

ಯಾವುದೇ ಪುಸ್ತಕ ಚೆನ್ನಾಗಿದೆ ಅಥವಾ ಇಲ್ಲ ಅನಿಸುವುದು ವ್ಯಕ್ತಿಗತ ಎಂದು ನಾನು ಬಲವಾಗಿ ನಂಬಿದವನು. ನಾನು ನನ್ನ ಬಾಲ್ಯ, ನನ್ನ ಹೆತ್ತವರು-ಒಡಹುಟ್ಟಿದವರು ಮಾತ್ರವಲ್ಲದೆ ನನ್ನ ಮನೆಯ ಎಲ್ಲ ಸದಸ್ಯರು (ತಾಯಿಯ ತವರಲ್ಲಿ ಬೆಳೆದಿರಬಹುದು, ತಂದೆಯ ಮನೆಯಲ್ಲಿ ಅಜ್ಜ-ಅಜ್ಜಿ-ಚಿಕ್ಕಪ್ಪ ಮುಂತಾಗಿ ಹಲವರಿರಬಹುದು, ಇಲ್ಲದಿರಬಹುದು), ಆಸುಪಾಸಿನ ಮನೆಗಳು ಮತ್ತು ಜನ (ಕೆಲವೆಡೆ ಒಂದೇ ಜಾತಿಯವರು, ಧರ್ಮದವರು ಇದ್ದು ಇಡೀ ಕೇರಿಯೇ ಒಂದು ಮನೆಯಂತಿರುತ್ತದೆ. ಎಲ್ಲ ಕಡೆ ಹಾಗಿರುವುದಿಲ್ಲ.), ಊರು, ಅಲ್ಲಿನ ಪರಿಸರ (ಗದ್ದೆಗಳು, ಕಾಡು, ಶಾಲೆ, ಆಸ್ಪತ್ರೆ, ರೇಶನ್ ಅಂಗಡಿ, ಬಾಲವಾಡಿ, ಯುವಕ ಮಂಡಲ, ಅದರ ವಾರ್ಷಿಕೋತ್ಸವ, ಕೆರೆ, ನಾಗಬನ, ದೈವದ ಮನೆ, ಕೋಲ, ಕಬ್ಬು ಅರೆದು ಬೆಲ್ಲ ತಯಾರಿಸುವ ಆಲೆಮನೆ, ದೇವಸ್ಥಾನ, ಅದರ ಜಾತ್ರೆ, ಗಣೇಶೋತ್ಸವ) ಒಟ್ಟಾರೆ ಊರಿನ ಸಮಾಜ (ಒಂದು ಊರಿನಲ್ಲಿ ಮುಸಲ್ಮಾನರ ಕೇರಿ, ಹರಿಜನರ ಕೇರಿ, ಬಳಗಾರರ ಕೇರಿ, ಶೆಟ್ಟಿಗಾರರ ಕೇರಿ ಎಂದೆಲ್ಲ ಇರಬಹುದು ಅಥವಾ ಇಲ್ಲದೆಯೂ ಇರಬಹುದು), ಅಲ್ಲಿನ ನನ್ನ ಮತ್ತು ಉಳಿದವರ ಬದುಕು ಒಂದು ಗಟ್ಟಿಯಾದ ಮನಸ್ಥಿತಿಗೆ ಕಾರಣವಾಗಿರುತ್ತದೆ. ಅದು ನನ್ನ ಗ್ರಹಿಕೆ, ಸಂವೇದನೆ, ಸೂಕ್ಷ್ಮಗಳನ್ನೆಲ್ಲ ನಿರ್ಧರಿಸುತ್ತದೆ, ನನಗೇ ತಿಳಿಯದಂತೆ. ಮುಂದೆ ಬೆಳೆದಂತೆಲ್ಲ ನಾನು ಹಾಯುವ ಅನುಭವ, ಎದೆಯ ಮೇಲೆ ಕಾಲೂರಿ ಸರಿದ ತುಳಿತದ ಗುರುತುಗಳು, ಹೆಗಲ ಮೇಲಿಟ್ಟ ಕೈಗಳ ಬಿಸುಪು, ಕೆನ್ನೆಗೆ ಬೀಸಿದವರ ಕಿಚ್ಚು, ಕೈಲಿಲ್ಲದ, ಕೈಲಾಗದ, ಕೈಸೋತ ನೂರು ಅಪಮಾನ, ಹಂಗಿಸುವಿಕೆ, ನಿರಾಸೆ ಎಲ್ಲವೂ ಸೇರಿ ಗಳಿಸಿದ್ದು, ಜಯಿಸಿದ್ದು, ಎದೆ ಸೆಟೆಸಿ, ತಲೆಯೆತ್ತಿ ಮೆರೆದಿದ್ದು ನನ್ನ ಗ್ರಹಿಕೆ (perception and conception) ಮತ್ತು ಸೂಕ್ಷ್ಮ ಸಂವೇದನೆಗಳನ್ನು ಶ್ರೀಮಂತಗೊಳಿಸುವುದು ಅಥವಾ ಹಾಗೆ ಮಾಡಲು ವಿಫಲವಾಗುವುದು ಆ ಮೂಲ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಕೆಲವೊಂದು ನಮಗೆ ದಕ್ಕುತ್ತದೆ, ಹಲವಷ್ಟು ದಕ್ಕುವುದೇ ಇಲ್ಲ ಮಾತ್ರವಲ್ಲ ದಕ್ಕದೇ ಹೋದದ್ದರ ಅರಿವೂ ಎಷ್ಟೋ ಬಾರಿ ನಮಗೆ ಆಗುವುದಿಲ್ಲ. ದಕ್ಕಿದ್ದನ್ನು ಅಲ್ಲಲ್ಲೇ ಮರೆಯುತ್ತೇವೆ.


ಏನನ್ನಾದರೂ ಓದಿದಾಗ ಅಥವಾ ನೋಡಿದಾಗ ಅದು ನಮಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಅನಿಸಲು ಇದೇ ಕಾರಣ. ಅಂದರೆ, ನಾವು ಓದುವ, ನೋಡುವ ಎಲ್ಲವನ್ನೂ ನಮ್ಮ ಅನುಭವಕ್ಕೆ, ಗ್ರಹಿಕೆಗೆ, ಸಂವೇದನೆಗಳಿಗೆ ಕನೆಕ್ಟ್ ಮಾಡುತ್ತ, ಮಾಡಲು ಸಫಲವಾಗುತ್ತ ಅಥವಾ ವಿಫಲವಾಗುತ್ತ ಅದನ್ನು ದಕ್ಕಿಸಿಕೊಳ್ಳಲು ಗೆಲ್ಲುತ್ತೇವೆ ಅಥವಾ ಸೋಲುತ್ತೇವೆ. ಮತ್ತು ಗೆದ್ದರೆ ಚೆನ್ನಾಗಿದೆ ಎನ್ನುತ್ತ ಸೋತರೆ ಚೆನ್ನಾಗಿಲ್ಲ ಎನ್ನುತ್ತ ನಮ್ಮ ಗೆಲುವು ಅಥವಾ ಸೋಲನ್ನು ಆ ಪುಸ್ತಕ ಅಥವಾ ದೃಶ್ಯಕ್ಕೆ ಆರೋಪಿಸಿ ಕೈತೊಳೆದುಕೊಳ್ಳುತ್ತೇವೆ. ಓದುಗನ ಮಟ್ಟಿಗೆ ಇದು ಎಷ್ಟು ಸತ್ಯವೋ, ಬರಹಗಾರನಿಗೂ ಅಷ್ಟೇ ಸತ್ಯ. ಇದು ಎಲ್ಲ ಕ್ರಿಯೇಟಿವಿಟಿಯ ಇತಿ ಮತ್ತು ಮಿತಿ, ಓದಿನದ್ದು ಮತ್ತು ಬರವಣಿಗೆಯದ್ದು. ಅವನು ಬರೆಯುತ್ತ ಗೆದ್ದಿದ್ದೇನೆ ಅಥವಾ ಸೋತಿದ್ದೇನೆ ಎಂಬ ಭ್ರಮೆಗೆ ಬೀಳುವುದು ಕೂಡಾ ಹೀಗೆಯೇ. ಹಾಗಾಗಿ ಅವನಿಗೆ ವಿಮರ್ಶಕರ ಸರ್ಟಿಫಿಕೇಟ್ ಬೇಕೆನಿಸುತ್ತದೆ. ‘ನಿಮ್ಮ ಮಾತು ನನಗೆ ತುಂಬ ಮುಖ್ಯ ಸಾರ್!’ ಎನ್ನುವ ಪ್ರತಿಯೊಬ್ಬ ಲೇಖಕನೂ ಅಪ್ಪಟ ಸುಳ್ಳು ಹೇಳುತ್ತಿರುತ್ತಾನೆ. ಅವನಿಗೆ ನಮ್ಮ ಮಾತಲ್ಲ ಮುಖ್ಯ, ತನ್ನ ಗೆಲುವಿನ ಕುರಿತಾದ ಅವನ ಅನುಮಾನ ದೂರ ಮಾಡಿ, ಇಲ್ಲಾ ಮಹರಾಯ, ನೀನು ನಿಜಕ್ಕೂ ಗೆದ್ದಿದ್ದೀಯ ಎನ್ನುವ ಮಾತು ಮಾತ್ರ ಮುಖ್ಯ. ಇದನ್ನು ಅರಿಯದೇ ವಿಮರ್ಶಕ ಬೀಗುತ್ತಿರುತ್ತಾನೆ, ಬಿಡಿ.

Art is to Connect ಎನ್ನುತ್ತಾನೆ E M Forster. ಸುಮಿತ್ ಮೇತ್ರಿಯವರು ತಮ್ಮ ಹೆಚ್ಚಿನೆಲ್ಲಾ ಕವಿತೆಗಳಲ್ಲಿ ಇದನ್ನು ಅದ್ಭುತವಾಗಿ ಮಾಡುತ್ತಾರೆ. ಹಾಗೆ ಮಾಡುತ್ತಲೇ ಅವರು ನಮ್ಮ ಇಡೀ ಬದುಕಿನ ಸ್ಮೃತಿಗಳಿಗೆ ಒದಗಿಸುವ ಒಂದು ಕಾಂಟ್ರಾಸ್ಟಿನಲ್ಲೇ ಅಬ್ಬಾ ಅನಿಸಬಲ್ಲ ಒಂದು ನೋಟವನ್ನು ಒದಗಿಸುವ ಕಾಣ್ಕೆ ಕೊಡುತ್ತಾರೆ. ಇವರ ಕವನ ಸಂಕಲನ ತೆರೆದು ಮೊದಲ ಕೆಲವು ಕವಿತೆಗಳನ್ನು ಓದುತ್ತಿರುವಂತೆಯೇ ನಮ್ಮ ಗ್ರಹಿಕೆಗೆ ಬರುವ ಸಂಗತಿಯಿದು. ಇದಕ್ಕಾಗಿ ಮೇಲಿನ ಪ್ಯಾರಾ ಬರೆದೆ. ನಲವತ್ತು ಐವತ್ತು ವರ್ಷಗಳಲ್ಲಿ ನಾವು ಬದುಕಿನಲ್ಲಿ ಸಾಕಷ್ಟು ಕಂಡಿರುತ್ತೇವೆ. ಅವೆಲ್ಲ ನಮ್ಮ ಗ್ರಹಿಕೆಗೆ ಬಂದು, ಅನುಭವ ರಕ್ತಗತವಾಗಿ ನಮ್ಮ ಸಂವೇದನೆಗೆ ಸೇರಿ ಹೋಗಿರುತ್ತವೆ. ಹಾಗಾಗಿ ಈಗ ನಮಗೆ ಕೆಲವೊಂದು ತಕ್ಷಣವೇ ಅರ್ಥವಾದರೂ ಅದನ್ನು ಏನೆಂದು ವಿವರಿಸುವ ಅಗತ್ಯ ಕಾಣುವುದಿಲ್ಲ. ಆದರೆ ನಮಗಿಂತ ಎಳೆಯರಿಗೆ ಅದನ್ನೆಲ್ಲ ವಿವರಿಸುವ ತಾಳ್ಮೆ, ಅಗತ್ಯ, ಆಸೆ ಎಲ್ಲವೂ ಇರುತ್ತದೆ. ವಯಸ್ಸಾದಂತೆಲ್ಲ ನಾವು ಹೆಚ್ಚು ಮೌನವಾಗುತ್ತೇವೆ, ನಮ್ಮ ಗದ್ದಲ ಕಡಿಮೆಯಾಗುತ್ತದೆ. ಆದರೆ ಸಿಂಗಲ್ ಮೆಮರಿಗೆ ಬಹಳಷ್ಟನ್ನು ಒಮ್ಮೆಗೇ ನೆನಪಿಸಿಕೊಳ್ಳಬಲ್ಲ ತಾಕತ್ತು ಇರುವುದಿಲ್ಲ ಎನ್ನುತ್ತಾನೆ ಮಿಲನ್ ಕುಂದೇರಾ. ಅವನಿದನ್ನು ಒಂದು ಕಾದಂಬರಿಯ ಸಕಲೆಂಟು ಸೌಭಾಗ್ಯಗಳನ್ನು ಸಿಂಗಲ್ ಮೆಮರಿಯಲ್ಲಿ ನೆನಪಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಮಾತನಾಡುತ್ತ ಹೇಳುತ್ತಾನೆ. ನಾವು ಅದನ್ನು ಇಲ್ಲಿ, ಸುಮಿತ್ ಮೇತ್ರಿಯವರ ಕವನಗಳು ಒಡ್ಡುತ್ತಿರುವ ಸವಾಲಿನೆದುರು, ಗಮನಿಸಬಹುದು. ನೀವು ಪರಸ್ಪರ ಸಂಬಂಧ ಇಲ್ಲದ್ದು ಅನಿಸುವಂಥ, ಆದರೆ ಎಲ್ಲೋ ಯಾವುದೋ ತಂತು ಕೆಲಸ ಮಾಡುತ್ತಿರುವಂತೆಯೂ ಕಾಣುವ ಎರಡು ಮೂರು ತುಣುಕುಗಳನ್ನು ಹೀಗೆ ಜೋಡಿಸಿ ಸಿಂಗಲ್ ಮೆಮರಿಗೆ ದಬ್ಬಿದಾಗ ಹುಟ್ಟುವ ಶಾಕ್ ಏನಿದೆ, ಅದನ್ನು ಸುಮಿತ್ ಮೇತ್ರಿಯವರ ಸಂಕಲನದ ಮೊದಲ ಕೆಲವು ಕವಿತೆಗಳು ಮಾಡುತ್ತವೆ. ಅಷ್ಟನ್ನೇ ಹೇಳಿದರೆ ನಾನು ತಪ್ಪು ಮಾಡಿದಂತಾಗುತ್ತದೆ. ಸುಮಿತ್ ಮೇತ್ರಿಯವರು ಇದನ್ನು ತಮ್ಮ ಕಾವ್ಯ ಪ್ರತಿಭೆಯನ್ನು ಮೆರೆಯುತ್ತಲೇ ಇದನ್ನು ಮಾಡುತ್ತಾರೆ ಎನ್ನಬೇಕು. ಏಕೆಂದರೆ, ಮುಂದೆ ನಾನು ಹೇಳಲಿರುವ ಮಾತಿಗೆ ಇದು ತುಂಬ ಅಗತ್ಯ.

ಸುಮಿತ್ ಮೇತ್ರಿಯವರ ಕವಿತೆಗಳಲ್ಲಿ ನಾನು ಗಮನಿಸಿದ ಇನ್ನೊಂದು ಮುಖ್ಯ ಲಕ್ಷಣವೆಂದರೆ ಇವರು ಬಳಸುವ ತುಂಡು ತುಂಡು ಪದ ಗುಚ್ಛಗಳು ಅಥವಾ ಪ್ರತಿಮೆಗಳು. ಈ ತುಂಡು ತುಂಡು ಪದಗುಚ್ಛಗಳು ಅಥವಾ ಪ್ರತಿಮೆಗಳು ಅಥವಾ ಚಿತ್ರಗಳು ಅವರ ಒಟ್ಟು ಕವಿತೆಯ ಕ್ಯಾನ್ವಾಸಿನ ಮೇಲೆ ಮೂಡಿಸುವ ಆಕೃತಿಯೇನಿದೆ ಅದಕ್ಕೆ ಒಂದು ಮಟ್ಟಿನ ಏಕಸೂತ್ರ ಅಗತ್ಯ. ಏಕೆಂದರೆ ಓದುಗ ಅದನ್ನು ದಕ್ಕಿಸಿಕೊಳ್ಳುವಲ್ಲಿ ಮುಖ್ಯವಾಗುವುದು ಅದೇ ಏಕಸೂತ್ರ ಎಂಬ ಕಾರಣಕ್ಕೆ. ಆದರೆ ಕೊಲಾಜ್ ನಿರ್ಮಿಸುವ ಕಲಾಕಾರನಿಗೆ ಸಾಮಾನ್ಯವಾಗಿ ಇರುವ ಆಸಕ್ತಿ ಏಕಸೂತ್ರದ್ದಲ್ಲ, ಬದಲಿಗೆ ಕಾಂಟ್ರಾಸ್ಟಿನದೇ. ಆದರೆ, ಕಾಂಟ್ರಾಸ್ಟ್ ಕೂಡ ಒಂದು ಬಗೆಯ ಏಕಸೂತ್ರವೇ ಎನ್ನುವುದನ್ನು ಮರೆಯದಿರೋಣ. ಇದನ್ನು ತುಂಬ ಅದ್ಭುತ ಎನ್ನುವಂತೆ ಸುಮಿತ್ ಮೇತ್ರಿಯವರು ತಮ್ಮ ಕವನಗಳಲ್ಲಿ ಮಾಡುತ್ತ ಹೋಗುತ್ತಾರೆ. ಹಾಗಿದ್ದೂ ಸುಮಿತ್ ಮೇತ್ರಿಯವರ ತಂತ್ರ ಎಲ್ಲ ಕಡೆ ಫಲಿಸುತ್ತದೆ ಎನ್ನುವಂತಿಲ್ಲ. - subject however to the above said ಇತಿ ಮತ್ತು ಮಿತಿ. ಇದನ್ನು ಎರಡು ಉದಾಹರಣೆಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ.

ಈ ಸಂಕಲನದ ಮೊದಲ ಕವಿತೆ ‘ ಲೋಕಾಂತ ಮೀರಿದ ನೋವು’ ಗಮನಿಸಿ. ಇಲ್ಲಿ ರಾಧೆ, ದ್ರೌಪದಿ, ಸಾವಿತ್ರಿ, ಮೀರಾ, ಊರ್ಮಿಳೆ ಮತ್ತು ಸೀತೆ ಸಾಲಾಗಿ ಬರುತ್ತಾರೆ. ನಂತರ ಬರುವ ಚರಣ ಇದು:

ಎದೆಯ ತುಮುಲಾಗಿ ಮೊರೆದು
ಹಾಯಾಗಿ ಹಾಡಾಗಿ ಹರಿದು
ಅಂತರಂಗದ ಕವಾಟ ತೆರೆದು
ನೆಲದ ಹೂವಾಗಿ ಅರಳಿ
ಆತ್ಮ ಆತ್ಮ ಮಥನಿಸಿ, ಧ್ಯಾನಿಸಿ
ಬೆಳಗ ಬೆಳಗು ಕೂಡಿ
ಬಯಲ ಬಯಲು ಸೇರಿ
ಅಂಗ ಸಂಗವ ಮರೆತು
ಬಯಲಾಗಲಿಲ್ಲ ಬತ್ತಲೆಗೆ
ಜಂಗಮಗಿತ್ತಿ ಚೆನ್ನ ನೀ ಕೇಳಣ್ಣ!

ಅಕ್ಕನನ್ನು ಈ ಇಡೀ ಕವಿತೆಯ ಅಂತಸ್ಸ್ಫೂರ್ತಿಗೆ ಜೋಡಿಸುವಲ್ಲಿ ಮೆರೆಯುವ ಕಾವ್ಯಗುಣವೇ ಈ ಚರಣದಲ್ಲೂ ಮೆರೆದಿದೆ. ಮಾತ್ರವಲ್ಲ, ಎಲ್ಲಿಯೂ ಅಕ್ಕನ ಹೆಸರನ್ನೇ ಎತ್ತದೆ ಇಲ್ಲಿ ಅಕ್ಕನನ್ನು ಕಾಣಿಸಲಾಗಿದೆ ಕೂಡ. ಇಂಥ ಅನೇಕ ಕಾವ್ಯಾತ್ಮಕ ಅಂಶಗಳನ್ನು ಮುನ್ನುಡಿ ಬರೆದಿರುವ ಕೇಶವ ಮಳಗಿಯವರೂ, ಬೆನ್ನುಡಿ ಬರೆದಿರುವ ಕೆ ವಿ ತಿರುಮಲೇಶರೂ ಗಮನಿಸಿ ಮೆಚ್ಚಿದ್ದಾರೆ. ಸಂಕಲನದ ಉದ್ದಕ್ಕೂ ನಮಗೆ ಇಂಥ ಚಮತ್ಕಾರ ಮತ್ತು ಕಾವ್ಯಗುಣ ಬೆರೆತ ಕವಿತೆಗಳು ಮತ್ತೆ ಮತ್ತೆ ಸಿಗುತ್ತವೆ. 

ಈಗ ಇದನ್ನು ಗಮನಿಸಿ. ಇದು ‘ಹಸಿದ ಶಿಲೆ’ ಎಂಬ ಕವಿತೆ:

ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು
ಹಡಗು ಸೆಳೆದ ಕಡಲ ಅಲೆ
ಬಯಕೆಯ ಬಾಯಿ ಹಸಿದ ಶಿಲೆ
ಹಾಸಿಗೆ ಬದಲಿಸುವ ಪಾಪದ ಖಾಯಿಲೆ
ಮಾಯದ ಮರ ಏರಿದ ಜಗದ ಕಲೆ
ಸರಸ ವಿರಸದ ನಕಲಿ ಸೆಲೆ

ಕವಿತೆಯನ್ನು ತುಂಡು ತುಂಡಾಗಿ ಕೋಟ್ ಮಾಡುವುದರ ವಿರೋಧಿ ನಾನು. ಕೋಟ್ ಮಾಡುವುದಾದರೆ ಇಡೀ ಕವಿತೆಯನ್ನು ಮಾಡುವುದು ಸರಿ. ಇಲ್ಲವಾದಲ್ಲಿ ಸಂವೇದನೆ ಮರೆಯಾಗುತ್ತದೆ ಎನ್ನುವುದು ನಿಜ. ಆದರೆ ಇಲ್ಲಿ ಇಡಿ ಮತ್ತು ತುಂಡು ಒಟ್ಟಾಗಿ ಕೊಡಬೇಕಾಗಿರುವ ಏಕಸೂತ್ರದ ಸಂವೇದನೆಯ ಬಗ್ಗೆಯೇ ಮಾತನಾಡುತ್ತಿರುವುದರಿಂದ ಇದು ತಪ್ಪಾಗುವುದಿಲ್ಲ ಎಂದುಕೊಳ್ಳುತ್ತೇನೆ. ಈ ಚರಣದಲ್ಲಿ ಕವಿಗೆ ಪ್ರತಿ ಸಾಲನ್ನೂ ‘ಲೆ’ ಎಂಬ ಸ್ವರದೊಂದಿಗೇ ಮುಗಿಸಬೇಕೆಂದಿತ್ತೆ? ಗೊತ್ತಿಲ್ಲ. ಅದಿರಲಿ, ಈ ಚರಣದ ಪ್ರತಿ ಸಾಲೂ ನಮ್ಮಲ್ಲಿ ಉದ್ದೀಪಿಸುವ ಚಿತ್ರ/ಪ್ರತಿಮೆ/ಸಂವೇದನೆ/ಭಾವ ವಿಭಿನ್ನವಾಗಿದೆ. "ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು" ಎನ್ನುವುದು ಒಂದು ಉನ್ನತ ಪ್ರತಿಮೆ. ಇಲ್ಲಿ ನೆಲವೇ ಏನನ್ನೋ ಹೇಳಲು ಇರುವೆಗೂಡಿನ ತನ್ನ ಬಾಯಿಯ ಮೂಲಕ ಪ್ರಯತ್ನಿಸುತ್ತಿದೆಯೇನೋ ಎಂಬ ಕಲ್ಪನೆ ತುಂಬ ಆಪ್ತವಾಗುತ್ತದೆ. ಆದರೆ ಮುಂದಿನ ಸಾಲು ಕಡಲ ಅಲೆ ಹಡಗನ್ನು ಸೆಳೆದ ಬಗ್ಗೆ ಇದೆ. ತದನಂತರದ ಸಾಲೇ ಹಸಿದ ಶಿಲೆ (ಕವನದ ಶಿರೋನಾಮೆ)ಯ ಬಗ್ಗೆ ಹೇಳುತ್ತಿದೆ. "ಬಯಕೆಯ ಬಾಯಿ ಹಸಿದ ಶಿಲೆ". ಈಗ ಇರುವೆಗೂಡಿನ ಬಾಯಿ ಒಮ್ಮೆಗೇ ಬಯಕೆಯ ಬಾಯಿಯೂ ಆಯಿತು. ಇಲ್ಲಿ ಬಯಕೆ ಯಾರದ್ದು? ನೆಲದ ಬಯಕೆಯೆ? ನೆಲದ ಬಯಕೆಯೇ ಅದರ ಹಸಿವಾಗಿ ಶಿಲೆಯಾಗಿದೆಯೆ? 

ಮುಂದಿನ ಸಾಲು "ಹಾಸಿಗೆ ಬದಲಿಸುವ ಪಾಪದ ಖಾಯಿಲೆ"ಯ ಬಗ್ಗೆ ಹೇಳುತ್ತಿದೆ. ಇದೀಗ ನೆಲದ ಮಾತು ಮರೆಗೆ ಸರಿಯಿತು. ‘ಪಾಪ’ದ ‘ಕಾಯಿಲೆ’, ‘ಹಾಸಿಗೆ’ ಎಲ್ಲವೂ ಬಯಕೆ ತೋಟದ ಬೇಲಿಗಳ ಬಗ್ಗೆ, ಕರಣಗಳ ರಿಂಗಣದ ಬಗ್ಗೆ ಹೇಳುತ್ತಿದೆ ಅನಿಸುತ್ತದೆ. ಮುಂದೆ ಬರುವ ‘ಮಾಯದ ಮರ ಏರಿದ ಜಗದ ಕಲೆ’ ಮತ್ತು ‘ಸರಸ ವಿರಸದ ನಕಲಿ ಸೆಲೆ’ ಎರಡೂ ಇದಕ್ಕೆ ಹೊಂದಿಕೆಯಾಗುವಂತೆಯೇ ಇವೆ. ಆದರೆ ‘ಹಡಗು ಸೆಳೆದ ಕಡಲ ಅಲೆ’ ಯಾಗಲಿ, ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತಾಗಲಿ ಬಾದರಾಯಣ ಸಂಬಂಧದ ಎಳೆಯನ್ನಷ್ಟೇ ಉಳಿಸಿಕೊಳ್ಳುತ್ತವೆ. ಅದೆಲ್ಲವೂ ಗೌಣ ಎಂದರೂ ಈ ಇಡೀ ಚರಣ ಉದ್ದೀಪಿಸುವ ಸಂವೇದನೆ ಇಲ್ಲಿನ ಕಾಂಟ್ರಾಸ್ಟ್‌ನಿಂದಲೇ ಛಿದ್ರವಾಗುವಂತಿದೆ. ಇದೊಂದು ಉದಾಹರಣೆಯಷ್ಟೇ. 

ನೆನಪುಗಳು, ಸ್ಮೃತಿ, ಚಿತ್ರ, ವಾಸನೆ, ಶಬ್ದ, ಸದ್ದು ಪ್ರತಿಯೊಂದಕ್ಕೂ ಒಂದು ಭಾವಸ್ಫುರಣ ಶಕ್ತಿ ಇದ್ದೇ ಇರುತ್ತದೆ. ಆದರೆ ಹಾಗೆಂದ ಮಾತ್ರಕ್ಕೆ ಕೆಲವೊಂದನ್ನು ಅಕ್ಕಪಕ್ಕದಲ್ಲಿಟ್ಟರೆ, ಅಕ್ಷರ ಒದಗಿಸುವ ಪದಬಂಧದಲ್ಲಿ ಕಟ್ಟಿಬಿಟ್ಟರೆ ಅದು ಹೊಸತೇ ಆದ ಭಾವಸ್ಫುರಣಕ್ಕೆ ಕಾರಣವಾಗುತ್ತದೆ/ಆಗಬೇಕು ಎಂದೇನಿಲ್ಲ. 

‘ಮುಳ್ಳುಮೊನಿಯ ಮ್ಯಾಲೆ ಮೂರು ಕೆರೆಯ ಕಟ್ಟಿ’ ಎಂದು ಆರಂಭವಾಗುವ ಕನಕದಾಸರ ರಚನೆಯ ಬಗ್ಗೆ ನಮಗೆಲ್ಲ ಗೊತ್ತು. ಇಂಥವುಗಳನ್ನು ಮುಂಡಿಗೆಗಳು ಎಂದೇ ಕರೆದಿದ್ದಾರೆ. ಇವು ಒಂಥರಾ ಒಗಟಿನಂತೆ, ಆಧ್ಯಾತ್ಮದ ಯಾವುದೋ ಸತ್ಯವನ್ನು ಹೇಳುವ ನಿಗೂಢ ಮಾರ್ಗದಂತೆ ಇವೆ. ಅಲ್ಲಮನ ಅನೇಕ ರಚನೆಗಳಲ್ಲಿ ನಮಗೆ ಇಂಥದೇ ಅನುಭವವಾದರೆ ಅಚ್ಚರಿಯೇನಿಲ್ಲ. ಮರದೊಳಗಿನ ಕಿಚ್ಚು, ಶಬ್ದದೊಳಗಿನ ನಿಶ್ಶಬ್ದ ಎಲ್ಲ ಅಲ್ಲಮನ ಪರಿಕಲ್ಪನೆ. ಎ ಕೆ ರಾಮಾನುಜನ್ ಅವರ ರಚನೆಗಳಲ್ಲೂ ಇಂಥ ಬೆರಗು, ಹೊಸ ಬಗೆಯ ಪ್ರತಿಮೆ/ಚಿತ್ರ/ರೂಪಕ ಕಟ್ಟಿಕೊಟ್ಟು ಓದುಗನಲ್ಲಿ ಹೊಸ ಸಂವೇದನೆ ಉದ್ದೀಪಿಸುವ ಪ್ರಯತ್ನ ಕಾಣುತ್ತೇವೆ. ಎಸ್ ದಿವಾಕರ್ ಅವರು ಕೂಡ ಇಂಥ ಕೆಲವು ರಚನೆಗಳನ್ನು ಮಾಡಿದ್ದಿದೆ. ‘ಆತ್ಮಚರಿತ್ರೆಯ ಕೊನೆಯ ಪುಟ’ ಸಂಕಲನದಲ್ಲಿ ಇವುಗಳನ್ನು ಕಾಣಬಹುದು. ಕತೆಗಳ ಮಟ್ಟಿಗೆ ಬಂದರೆ ಮೊದಲಿಗೆ ನಿಲ್ಲುವ ಹೆಸರು ಎಂ ಎಸ್ ಕೆ ಪ್ರಭು. ಈಗ ಬರೆಯುತ್ತಿರುವವರಲ್ಲಿ ಎಸ್ ಸುರೇಂದ್ರನಾಥ್ ಅಂಥ ಕತೆಗಳ ಅಪ್ರತಿಮ ಸಾಧಕ. ಇವರಲ್ಲಿ ಶನಿದೆಸೆಯನ್ನು ಕೊಂಡುಕೊಳ್ಳಬಲ್ಲವರು, ಮಾರಬಲ್ಲವರು ಬರುತ್ತಾರೆ. ಅಪಾನವಾಯು ಬಿಟ್ಟರೆ ಅದು ಹಸಿರು ಬಣ್ಣದ ಬಲೂನಾಗಿ ಜಗಜ್ಜಾಹೀರಾಗುವ ನಾತಲೀಲೆ ತೊಡಗುತ್ತದೆ. ಗೋಡೆಯೊಳಗೆ ಆರಾಮಾಗಿ ಹಾಯಬಲ್ಲ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಒಂದು ದಿನ ಕಾಂಪೌಂಡ್ ಗೋಡೆಯೊಳಗೆ ಬಂಧಿಯಾಗಿ ಸಿಕ್ಕಿಕೊಂಡು ಬಿಡುತ್ತಾನೆ! ಅಲ್ಲಮ, ಕನಕನನ್ನು ಬಿಟ್ಟು ಆಧುನಿಕ ಕವಿತೆಗಳ ಮಾತಿಗೆ ಬಂದರೆ, ಒಂದು ಕವಿತೆ ತನ್ನ ಅಭಿವ್ಯಕ್ತಿಗೆ ಭಾಷೆಯನ್ನು ಹೇಗೆಯೇ ಬಳಸಿಕೊಳ್ಳಲಿ, ಅದರ ಎಲ್ಲ ಪ್ರಯತ್ನ ಒಂದು ಸಂವೇದನೆಯನ್ನು ತನ್ನ ಓದುಗನಲ್ಲಿಯೂ ಮರುಸೃಷ್ಟಿ ಮಾಡುವುದರತ್ತಲೇ ತುಡಿಯುತ್ತಿರುತ್ತದೆ ಎನ್ನುವುದು ನಿರೀಕ್ಷೆ. ಇದನ್ನೇ ‘ಕವಿಭಾವ ಪ್ರತಿಮಾ ಪುನರ್‌ಸೃಷ್ಟಿ’ ಎಂದಿರುವುದು. ಇದಕ್ಕೆ ನಾನಿಲ್ಲಿ ಮೊದಲಿಗೇ ವಿವರಿಸಿದ ಇತಿಮಿತಿಗಳ ತೊಡಕುಗಳೆಲ್ಲ ಇವೆ. ಹಾಗಾಗಿ ಕವಿಯ ಮುಂದಿರುವ ಸವಾಲೂ ದೊಡ್ಡದೇ. 

ಇನ್ನು ಈ ತುಂಡು ತುಂಡು ಪದಗುಚ್ಛಗಳು/ಸಾಲುಗಳು ಒಡ್ಡುವ ಇನ್ನೂ ಒಂದು ತೊಡಕಿದೆ. ಇವು ಹಿಂದೂಸ್ಥಾನೀ ರಾಗದ ಒಂದು ಸುದೀರ್ಘ ಆಲಾಪದ ಅನುಭವ ಕೊಡದೆ ಫಾಸ್ಟ್ ಬೀಟ್ ಸಂಗೀತದ ಅನುಭವವನ್ನು ಕೊಡುತ್ತಿರುತ್ತವೆ. ಹೊಸ ತಲೆಮಾರಿನ ಮಾತು ಹೇಗೋ, ನನ್ನ ತಲೆಮಾರಿನವರಿಗಂತೂ ಇದಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ. ಚುಟುಕುಗಳ ಅನುಭವವನ್ನು ಕೊಡುವುದರೊಂದಿಗೇ, ಇಲ್ಲಿ ಒಂದು ಪ್ರತಿಮೆ/ಚಿತ್ರ/ನೋಟ/ಭಾವ ಒಂದಿಷ್ಟು ಕಾಲ ಮುಂದುವರಿಯದೇ, ಥಟ್ಟನೇ ಬೇರೊಂದು ಚಿತ್ರ/ಪ್ರತಿಮೆ/ಭಾವ ಆವಾಹಿಸಿ ಕಂಗಾಲುಗೊಳಿಸುವಂತಾಗುತ್ತದೆ. ಇದಕ್ಕೆ ಇದರದ್ದೇ ಆದ ರಿದಂ ಇದ್ದೇ ಇದೆ, ಇಲ್ಲವೆಂದಲ್ಲ. ಕಾಲಧರ್ಮ ಮತ್ತು ಮನೋಧರ್ಮಕ್ಕನುಗುಣವಾಗಿ ಇದು ಬಹುಶಃ ಹೆಚ್ಚು ಸಮಕಾಲೀನ ರಿದಂ ಎಂದೇ ಎನಿಸುತ್ತದೆ. ಬಹುಶಃ ಇವತ್ತು ಸುದೀರ್ಘಾವಧಿಗೆ ಒಂದು ನಿರ್ದಿಷ್ಟ ಪ್ರತಿಮೆ/ಭಾವ/ಚಿತ್ರದೊಂದಿಗೆ ನಿಲ್ಲಬಲ್ಲ ತಾಳ್ಮೆಯೇ ಕ್ಷಣಕ್ಷಣಕ್ಕೂ, ಬೆರಳು ಸ್ವೀಪ್ ಮಾಡಿದಂತೆಲ್ಲ ಹೊಸತನ್ನು ಒದಗಿಸುತ್ತಿರುವ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸಂಸ್ಕೃತಿಗೆ ನಿಲುಕದ ವಿಚಾರವಿರಬಹುದು. We sweep everything.

ಕೊನೆಯದಾಗಿ, ಮೇಲೆ ಹೇಳಿರುವಂತೆ ನೆನಪುಗಳು, ಸ್ಮೃತಿ, ಚಿತ್ರ, ವಾಸನೆ, ಶಬ್ದ, ಸದ್ದು ಪ್ರತಿಯೊಂದಕ್ಕೂ ಒಂದು ಭಾವಸ್ಫುರಣ ಶಕ್ತಿ ಇರುತ್ತದೆ. ಒಂದು ಪದ, ಒಂದು ಶಬ್ದ, ಒಂದು ಸದ್ದು ಕವಿಗೆ ಅನನ್ಯ ಎನಿಸಬೇಕು. ಹಾಗಾಗಿ ಕವಿತೆಗಳಲ್ಲಿ ಮುದ್ರಣದೋಷ ಉಳಿಯದಂತೆ ಎಚ್ಚರ ವಹಿಸಬೇಕು. ನನಗೆ ಕನಿಷ್ಠ ಮೂರು ಮುದ್ರಣದೋಷಗಳು (ಹಾಗಂತ ಅಂದುಕೊಂಡಿರುವೆ) ಸಿಕ್ಕಿವೆ. ‘ಬಿಸಿಲು ತೊಟ್ಟವರು’ ಕವಿತೆಯಲ್ಲಿ ಕುಲಾಯಿ ಹೆಣೆದು ಅಂತ ಆಗಿದೆ. ಅದು ಕುಲಾವಿ ಆಗಬೇಕು. ‘ಸಾಕಿ’ ಕವಿತೆಯಲ್ಲಿ ನನ್ನೊಡಲ ಜೀವದೊರೆತಗಳೆಲ್ಲ ಎಂದಿರಬೇಕಿತ್ತು. ಅನೇಕ ಕಡೆ ನಿಶ್ಶಬ್ದ ಎನ್ನುವುದು ನಿಶಬ್ದ ಆಗಿದೆ. ಇದೆಲ್ಲ ಹೋಗಲಿ ಎಂದರೆ ನನಗೆ ಬಂದಿರುವ ಪ್ರತಿಯಲ್ಲಿ ಎಂಟು ಪುಟಗಳು ಅಚ್ಚಾಗಿಯೇ ಇಲ್ಲ! ಇದನ್ನು ಹೇಗೆ ಸಹಿಸುವುದೋ ಯಾರಿಗೆ ಗೊತ್ತು...

ಸುಮಿತ್ ಮೇತ್ರಿಯವರಲ್ಲಿ ಒಬ್ಬ ಕವಿಯಿದ್ದಾನೆ ಮತ್ತು ನನಗನಿಸುವಂತೆ ಒಬ್ಬ ಕವಿಗೆ ಅಗತ್ಯವಾದ ಮೌನ, ಧ್ಯಾನ ಮತ್ತು ಏಕಾಂತದ ಸಾಂಗತ್ಯವೂ ಅವರಲ್ಲಿದೆ. ಅವರ ಭಾಷಾಜ್ಞಾನ ಮತ್ತು ಭಾಷಾಶುದ್ಧಿ ತುಂಬ ಮೇಲ್ಮಟ್ಟದ್ದಿದೆ. ಹಾಗಿದ್ದೂ ನನಗೇಕೋ ಅವರು ತಮ್ಮೊಳಗಿನ ಕವಿಗೆ ಕೊಟ್ಟುಕೊಳ್ಳುವ ಸಮಯ ಸ್ವಲ್ಪ ಕಡಿಮೆಯಾದಂತೆ ಕಂಡಿದೆ. ಇಡೀ ಸಂಕಲನದಲ್ಲಿ ನನಗಿಷ್ಟವಾದ ಕವಿತೆ ‘ಮಧುರ ನೆಲ’ ಮತ್ತು ಆ ಸಾಲಿಗೇ ಸಲ್ಲುವ ಸಂಕಲನದ ಇನ್ನಿತರ ಕೆಲವು ಕವಿತೆಗಳು. ಈ ಕವಿತೆಗಳಲ್ಲಿ ಶಬ್ದಜಾಲವಿಲ್ಲ, ಮೇಲ್ನೋಟಕ್ಕೆ ಅವು ತುಂಬ ಸರಳ ರಚನೆಗಳು ಅನಿಸಬಹುದು. ಆದರೆ ಆ ಸರಳ ಪದಗಳು ಕವಿತೆಯಲ್ಲಿ ಇರುವ ಮೌನ ಮತ್ತು ಅದರಿಂದಾಗಿಯೇ ಆ ಕವಿತೆಗಳಿಗೆ ದಕ್ಕಿರುವ ಒಂದು ಕೆಲಕಾಲ ಕಾಡಬಲ್ಲ ಭಾವತೀವ್ರತೆಯ ಶಕ್ತಿ ನನಗೆ ಮೆಚ್ಚು. ಭಾವ ಸಂವೇದನೆಗಳಿರುವ ಕವಿತೆಗಳಷ್ಟೇ ಒಳ್ಳೆಯ ಕವಿತೆಗಳೆಂದೇನಲ್ಲ. ನವರಸಗಳನ್ನೂ ಕವಿತೆ ದುಡಿಸಿಕೊಳ್ಳಬಲ್ಲದು ಎನ್ನುವುದು ನಿಜವೇ. ಆದರೆ ಸಾಮಾನ್ಯವಾಗಿ ಒಂದು ಕವಿತೆ ಒಮ್ಮೆಗೆ ಒಂದೇ ರಸವನ್ನು ನೆಚ್ಚಿಕೊಂಡು ಹೊರಡುತ್ತದೆ. ಕೆಲವೊಂದು ಕವಿತೆಗಳು ಎರಡು ಮೂರು ರಸವನ್ನು ಸ್ಫುರಿಸಿದರೂ ಅವು ಒಂದು ಇನ್ನೊಂದಕ್ಕೆ ಪೂರಕವಾಗಿ, ಒಂದು ಇನ್ನೊಂದರ ಬೆಳವಣಿಗೆಯಾಗಿ ಬರುತ್ತವೆಯೇ ಹೊರತು ಏಕಕಾಲದ ಕಾಂಟ್ರಾಸ್ಟ್ ಆಗಿ ಬರುವುದು ಕಡಿಮೆ. ಹಾಗಾಗಿಯೇ ಕವಿತೆಗೆ ಕ್ಷಣಭಂಗುರತೆಯೂ, ಆ ಕ್ಷಣಭಂಗುರತೆಯೇ ಅದರ ಅದಮ್ಯ ಆಕರ್ಷಣೆ ಮತ್ತು ತೀವ್ರತೆಯೂ ಆಗಿ ಅದಕ್ಕೆ ಒದಗುತ್ತಿರುತ್ತದೆ. ಸುಮಿತ್ ಮೇತ್ರಿ ಈ ಸಂಕಲನದಲ್ಲಿ ಎರಡೂ ಬಗೆಯ ರಚನೆಗಳನ್ನು ಸಂಕಲಿಸಿದ್ದಾರೆ. ಎರಡರಲ್ಲೂ ಅವರು ಯಶಸ್ವಿಯಾಗಿದ್ದಾರೆ ಕೂಡ. ಅವರ ಇನ್ನೊಂದು ಬಗೆಯ ಕವಿತೆಗಳಲ್ಲಿ ನನಗಿಷ್ಟವಾದ ಕವಿತೆಗಳು ತುಂಬ ಇವೆ. ಹೆಚ್ಚಿನವು ಕೇಶವ ಮಳಗಿ ಮತ್ತು ಕೆ ವಿ ತಿರುಮಲೇಶ್ ಅವರಿಗೂ ಇಷ್ಟವಾಗಿ, ಅವರೂ ಅವುಗಳನ್ನು ಉಲ್ಲೇಖಿಸಿರುವುದರಿಂದ ನಾನು ಮತ್ತೆ ಅವುಗಳನ್ನೇ ಕೋಟ್ ಮಾಡುವುದು ಬೇಡ ಅನಿಸುತ್ತದೆ. ‘ಚಕ್ರದ ಹಡಗು’ ಕವಿತೆಯ ಒಂದು ಚರಣ ಸುಮಿತ್ ಮೇತ್ರಿಯವರ ಪ್ರತಿಭೆಗೆ ಒಳ್ಳೆಯ ಉದಾಹರಣೆಯಂತಿರುವುದರಿಂದ ಅದನ್ನಿಲ್ಲಿ ಕೊಡುತ್ತಿದ್ದೇನೆ:

ಪತ್ರಿಕೆಯಲ್ಲಿ ಅಚ್ಚಾಗಿವೆ
ಅಭಿವೃದ್ಧಿ ಪಥದತ್ತ
ಸಿಂಗಾರಗೊಂಡ ಕಪ್ಪು ನದಿಗಳು
ಆಳ ಕಾಣದ
ಕಗ್ಗಾಡಿನ ಒಳಗೆ ಝೀಂಗುಡುವ
ನಿಗೂಢತೆಗೆ ಮೌನ ತಬ್ಬಿ
ಹಸಿರು ಶ್ವಾಸಕೋಶಗಳನ್ನು ಕತ್ತರಿಸಿ
ಸಸಿ ನೆಡುವ ಕಾರ್ಯ
ಮುಂದೂಡಲಾಗಿದೆ ಜೂನ್ ಐದಕ್ಕೆ.

- ಈ ಕವಿತೆಯನ್ನು ಸೂಕ್ಷ್ಮವಾಗಿ ಗಮನಿಸಿ.

ಪತ್ರಿಕೆಯಲ್ಲಿ ಅಚ್ಚಾಗಿವೆ
ಹಸಿರು ಶ್ವಾಸಕೋಶಗಳನ್ನು ಕತ್ತರಿಸಿ
ಸಸಿ ನೆಡುವ ಕಾರ್ಯ
ಮುಂದೂಡಲಾಗಿದೆ ಜೂನ್ ಐದಕ್ಕೆ.

- ಎಂದು ಇದನ್ನು ಓದಬಹುದು. ಅಥವಾ,

(ನದಿಗಳಿಗೆ ಹರಿಯ ಬಿಡುವ ಕೊಳಚೆ ನೀರಿನ ನೆನಪು ತರುವ) ಸಿಂಗಾರಗೊಂಡ ಕಪ್ಪು ನದಿಗಳು
(ಅದಕ್ಕೇ ಜೋಡಿಕೆಯಾಗುವ) ಆಳ ಕಾಣದ (ಎಂಬ ಶಬ್ದ)

ಸಿಂಗಾರಗೊಂಡ ಆಳ ಕಾಣದ ಕಪ್ಪು ನದಿಗಳು (ಎಂದೂ ಓದಬಹುದು)

ಅಥವಾ,
ಪತ್ರಿಕೆಯಲ್ಲಿ ಅಚ್ಚಾಗಿವೆ
ಆಳ ಕಾಣದ ಅಭಿವೃದ್ಧಿ ಪಥದತ್ತ
ಸಿಂಗಾರಗೊಂಡ ಕಪ್ಪು ನದಿಗಳು

- ಎಂದೂ ಓದಬಹುದು. ನದಿಗಳು ಪತ್ರಿಕೆಯಲ್ಲಿ ಅಚ್ಚಾಗುವುದು, ಒಂದು ರೂಪಕವಾಗಿ ಚೆನ್ನಾಗಿದೆ.

ಝೀಂಗುಡುವ ನಿಗೂಢತೆಗೆ ಮೌನ ತಬ್ಬಿ - ಎನ್ನುವ ಸಾಲು ಇಡೀ ಚರಣಕ್ಕೆ ಕೇಂದ್ರದಂತೆ ಒದಗುವ ಪರಿ ಕೂಡ ಅನನ್ಯವಾದುದು. 

ಹೀಗೆ ಅನೇಕ ಕಡೆಗಳಲ್ಲಿ ಸುಮಿತ್ ಮೇತ್ರಿಯವರ ಕವಿತೆಗಳನ್ನು ನಾವು ನಿಧಾನವಾಗಿ, ತಾಳ್ಮೆಯಿಂದ ದಕ್ಕಿಸಿಕೊಳ್ಳಬೇಕಾಗುತ್ತದೆ ಎನ್ನುವುದು ನಿಜ. ಇವರು ಮಹತ್ವಾಕಾಂಕ್ಷೆಯ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಆಗಸಕ್ಕೆ ಕೈಚಾಚಿದ್ದಾರೆ, ಅವರಿಗೆ ಬಾಚಿಕೊಳ್ಳುವಷ್ಟು ಸಿಗಲಿ ಎಂದು ಹಾರೈಸುತ್ತ ಅವರ ಮುಂದಿನ ಸಂಕಲನಕ್ಕಾಗಿ ಕಾಯುವೆ...
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, December 22, 2019

ಕತೆ, ಇಲ್ಲಿ ಹೂವರಳಿದಂತೆ...

ಡಾ.ಬಸು ಬೇವಿನಗಿಡದ ಅವರ ಕಥಾ ಸಂಕಲನ ‘ನೆರಳಿಲ್ಲದ ಮರ’ ಕೃತಿಯಲ್ಲಿ ಒಟ್ಟು ಎಂಟು ಕತೆಗಳಿವೆ. ಕೇಶವ ಮಳಗಿಯವರ ಮುನ್ನುಡಿ, ಡಾ ರಾಜೇಂದ್ರ ಚೆನ್ನಿ, ಪ್ರೊ.ಟಿ ಪಿ ಅಶೋಕ, ಡಾ ವಿನಯಾ ವಕ್ಕುಂದ ಮತ್ತು ಸುನಂದಾ ಕಡಮೆಯವರು ಬಸು ಬೇವಿನಗಿಡದ ಅವರ ಹಿಂದಿನ ಕಥಾಸಂಕಲನಗಳ ಕುರಿತು ಬರೆದ ವಿಮರ್ಶಾತ್ಮಕ ಬರಹಗಳ ಅನುಬಂಧ ಈ ಸಂಕಲನದ ಮೌಲ್ಯ ಹೆಚ್ಚಿಸಿವೆ. ಇಂಗ್ಲೀಷ್ ಎಂ.ಎ. ಪದವಿ ಪಡೆದು ಬೆಂದ್ರೆ ಕಾವ್ಯದ ಮೇಲೆ ಪಿ ಎಚ್ ಡಿ ಮಾಡಿರುವ ಬಸು ಬೇವಿನಗಿಡದ ಅವರು ಇದುವರೆಗೆ 22 ಪುಸ್ತಕಗಳನ್ನು ಹೊರತಂದಿದ್ದಾರೆನ್ನುವ ಮಾಹಿತಿ ಓದಿದ ಬಳಿಕ ಈ ಕತೆಗಳ ಬಗ್ಗೆ ಬರೆಯಲು ಹಿಂಜರಿಕೆ ಹೆಚ್ಚಿದೆ. ಸಾಕಷ್ಟು ಬರೆದಿರುವ ಒಬ್ಬ ಲೇಖಕನ ಕೇವಲ ಒಂದೇ ಒಂದು ಕೃತಿಯನ್ನು ಓದಿ ಬರೆಯುವುದು ಕಷ್ಟ ಎಂದಲ್ಲ, ಅದು ಬಹುಮಟ್ಟಿಗೆ ತಪ್ಪು ಕೂಡ.


ಬಸು ಬೇವಿನಗಿಡದ ಅವರ ಈ ಸಂಕಲನದ ಮೊದಲ ಒಂದೆರಡು ಕತೆಗಳನ್ನು ಓದಿದ್ದೇ ಒಂದು ಹೊಸ ಅನುಭವ ತೆರೆದುಕೊಂಡಂತಾಗಿ ಆಶ್ಚರ್ಯಗೊಂಡೆ. ನೆರಳಿಲ್ಲದ ಮರ ಕತೆ, ಶಾಶ್ವತವಾಗಿ ಹುಬ್ಬಳ್ಳಿಯ ನೆಲವನ್ನು ತೊರೆದು ಹೊರಟಿದ್ದೇನೆಂನ ನೋವಿನಿಂದ ಹಲುಬುತ್ತಿರುವ ನಾಗರಾಜನ ಮನೊಲಾಗಿನೊಂದಿಗೆ ಸುರುವಾಗುತ್ತದೆ. ಸೋದರ ಮಾವನ ಆಶ್ರಯದಲ್ಲಿ ಬೆಳೆದ, ಮುಂದೆ ನಗರ ಸೇರಿ ದೊಡ್ಡ ಹುದ್ದೆಯಲ್ಲಿ ದುಡಿಯುತ್ತಿರುವ, ‘ಹೊರಗಿನ’ವಳನ್ನು ಕಟ್ಟಿಕೊಂಡ ಯುವಕ ಈಗ ತನ್ನ ಹಳ್ಳಿಗೆ, ತನ್ನನ್ನು ಸಾಕಿ ಸಲಹಿದ ಮಾವನಿಗೆ ಪರಕೀಯನಾಗಿದ್ದಾನೆ. ಸೋದರ ಮಾವ ಮತ್ತು ಅವನ ಮಕ್ಕಳ ರೀತಿ ನೀತಿ ಇವನಿಗೂ, ಇವನ ರೀತಿ ನೀತಿ ಅವರಿಗೂ ಸರಿಬರದೆ ಮನಸ್ತಾಪಗಳು ಹೆಚ್ಚಿವೆ. ಇವೆಲ್ಲದರ ನಡುವೆ ಆಸ್ತಿಯ ಮಾತು ಗಂಟಲಲ್ಲಿ ಸಿಕ್ಕಿಕೊಂಡ, ನುಂಗಲಾರದ ಉಗುಳಲಾರದ ತುಪ್ಪದಂತಿರುವ ಸಂದರ್ಭದಲ್ಲಿ ಈ ಕತೆ ನಿಂತಿದೆ. ನಿಂತಿದೆ ಎಂದಿರುವುದು ಮಾತಿಗಲ್ಲ, ಅದು ಹೀಗೆ ಒಂದು ಘಟ್ಟದಲ್ಲಿ ನಿಂತಿರುವುದೇ ಕಥಾನಕದ ಮುಖ್ಯ ಎಳೆ. ಬಹುಶಃ ಇಲ್ಲಿ ಹೇಳಿರುವ ಸಂದರ್ಭ ಕನ್ನಡದ ಕಥಾಪರಂಪರೆಯಲ್ಲಿ ಹೊಸದೇನೂ ಅಲ್ಲ. ಸ್ವಲ್ಪ ಆಸುಪಾಸಿನ ಸಂದರ್ಭ, ಸನ್ನಿವೇಶ, ಕಾಲದೇಶಗಳ ಹಿನ್ನೆಲೆಯೊಂದಿಗೆ ಮತ್ತೆ ಮತ್ತೆ ಕಾಣಿಸಿಕೊಂಡಿರುವ ಕತೆಯಿದು. ಆದರೆ ಕತೆಯ ಕೊನೆಕೊನೆಗೆ ಸುಶೀಲಾ ಆಗಮನವಾಗುತ್ತಲೇ ಕತೆಯ ಚೌಕಟ್ಟೇ ಬದಲಾಗಿ ಬಿಡುವುದಿದೆಯಲ್ಲ, ಅಲ್ಲಿ ಕತೆಯಲ್ಲ, ನಾವು ಓದುಗರು ನಿಂತು ಬಿಡುತ್ತೇವೆ! ಈ ಸುಶೀಲಾಳ ವ್ಯಕ್ತಿತ್ವವನ್ನು ಕತೆಗಾರರು ಕಟ್ಟಿಕೊಟ್ಟಿದ್ದಾರೆ, ಅವಳು ನಾಗರಾಜನನ್ನು ಇನ್ಯಾವುದೋ ಸಾಹಸಕ್ಕೆ ಸಜ್ಜಾಗಿಸಿದ್ದಾಳೆ. ಇದು ತಿರುವು. ಆದರೆ, ಕತೆಗೆ ಮುಂದೇನಾಯಿತು ಎನ್ನುವುದರಲ್ಲಿ ಆಸಕ್ತಿಯಿಲ್ಲ. ಮುಂದೇನಾದರೂ ಒಂದು ಆಗುತ್ತದೆ, ಅದು ಮುಖ್ಯವಲ್ಲ ಎಂಬಂತೆ ಕತೆ ಹೊರಳುತ್ತದೆ.

ಈಗ ಎರಡನೆಯ ಕತೆಗೆ ಬನ್ನಿ. ಇದರ ಹೆಸರು ‘ತುಳುಕಿ ಹೋಗಿತ್ತss’.ಇಲ್ಲಿ ಟೇಲರ್ ಮಾದೇವನ ಬಗ್ಗೆ ಹೇಳುತ್ತಿದ್ದಾರೆ. ಹಗಲೂ ರಾತ್ರಿ ದುಡಿಯುತ್ತಿದ್ದ ಟೈಲರ್ ಕತೆಯೊಂದನ್ನು ಕನ್ನಡದಲ್ಲಿ ಓದಿದ ನೆನಪಿನ್ನೂ ಹಸಿರಾಗಿಯೇ ಇದೆ. ಬಹುಶಃ ಪ್ರಹ್ಲಾದ ಅಗಸನಗಟ್ಟೆಯವರೋ, ಶ್ರೀಧರ ಬಳಗಾರ ಅವರೋ ಬರೆದ ಕತೆಯೆನ್ನಿಸುತ್ತದೆ. ಈಚೆಗೆ ಓದಿದ ರೋಹಿನ್ಟನ್ ಮಿಸ್ತ್ರಿಯವರ ಬಹು ಪ್ರಖ್ಯಾತ ಕಾದಂಬರಿ "ಅ ಫೈನ್ ಬ್ಯಾಲೆನ್ಸ್"ನಲ್ಲೂ ಟೈಲರುಗಳ ಕತೆಯಿದೆ. ಈತನ ಮದುವೆ, ಮಗ, ಆಧುನಿಕತೆಯೊಡ್ಡುವ ಸವಾಲುಗಳು, ವಯಸ್ಸು, ಕಣ್ಣು ಮಂಜಾಗಿ ದರ್ಜಿ ಕೆಲಸ ಕಷ್ಟವಾಗುವ ಬವಣೆಗಳು ಎಲ್ಲವೂ ಹೊಸದೇ ಎನಿಸುವ ಜಗತ್ತನ್ನೇನೂ ಕಟ್ಟಿಕೊಡುತ್ತಿಲ್ಲ. ‘ನೆರಳಿಲ್ಲದ ಮರ’ ಕತೆಯಂತೆಯೇ ಈ ಕತೆ ಕೂಡ ಒಂದು ಬಿಂದುವಿನಲ್ಲಿ ಸ್ಥಾಯಿಯಾಗಿ ನಿಂತಿದೆ. "ನೆಚ್ಚಿದ ಕೋಣ ಈಯಿತೆಂಬಂತೆ ನಂಬಿಗಸ್ಥ ಟೇಲರ್‌ನಾದ ಮಾದೇವ ಈ ರೀತಿ ಮಾಡಬಹುದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ." ಎಂಬ ಸಾಲಿನೊಂದಿಗೆ ಸುರುವಾಗುವ ಕತೆ ಮಾದೇವ ಮಾಡಿದ್ದಾದರೂ ಏನು ಎಂಬಲ್ಲಿಗೆ ತಲುಪುವುದೇ ಗುರಿ ಎಂದುಕೊಂಡರೆ ಅದು ತಪ್ಪು. ಈ ಕತೆಯಲ್ಲಿಯೂ ಕ್ಲೈಮ್ಯಾಕ್ಸ್ ಅಥವಾ ಕುತೂಹಲದ ಕುದಿಯುವ ಬಿಂದುವನ್ನು ತಲುಪುವುದು ಕತೆಗಾರರ ಉದ್ದೇಶ ಅಲ್ಲವೇ ಅಲ್ಲ. ಒಟ್ಟಾರೆ ಕತೆಯ ಆಕೃತಿ-ವಸ್ತು-ತಂತ್ರ-ಭಾಷೆ-ಕಥಾಜಗತ್ತಿನ ರಾಚನಿಕತೆಯ ಒಟ್ಟು ಶ್ರಮದ ಉದ್ದೇಶವೇ ಅದಲ್ಲ. 

ಮೃತ್ಯುವನ್ನು ಗೆದ್ದಂತಿರುವ ಮುದುಕಿ ರುದ್ರವ್ವ, ಮಾತು ಬರದ ಅವಳ ಕಿರಿಯ ಸೊಸೆ ನೀಲವ್ವ, ಕೊಲೆಯ ಆಪಾದನೆ ಹೊತ್ತು ಊರು ಬಿಟ್ಟು ಓಡಿ ಹೋಗಿರುವ ಕಿರಿಯ ಮಗ ಚನ್ನಪ್ಪ, ಬೇರೆ ಮನೆ ಮಾಡಿ ನಿಂತಿದ್ದರೂ ತಾಯಿಯತ್ತ ತನ್ನ ಕರ್ತವ್ಯವನ್ನು ಮರೆಯದ ಹಿರಿಯ ಮಗ ಗಿರಿಯಣ್ಣ ಈ ಸಂಕಲನದ ಮೂರನೆಯ ಕತೆ ‘ಚೂರಾದ ಚಂದ್ರ’ನ ಕೇಂದ್ರದಲ್ಲಿದ್ದರೂ ಈ ಕತೆಯ ತೆಕ್ಕೆಯಲ್ಲಿ ಇಡೀ ಊರೇ ಸೇರಿಕೊಂಡಿದೆ. ಈ ಕತೆಯೂ ರುದ್ರವ್ವನ ಮೊನಲಾಗಿನಲ್ಲಿ ಅದ್ದಿದಂತಿದ್ದೂ ಅದು ತನ್ನ ಒಡಲಿನಲ್ಲಿ ಒಳಗೊಳ್ಳುವ ವಿವರಗಳು ಅದ್ಭುತ. ಇಡೀ ಊರಿನ ರಾಜಕೀಯದ ಜೇಡರ ಬಲೆ, ಒಂದು ಸಂಸಾರದ ಚೌಕಟ್ಟಿನೊಳಗಿನ ಸಂದಿಗ್ಧಗಳು, ತಾಯಿ-ಮಗ ಮತ್ತು ಅಣ್ಣ-ತಮ್ಮ ಸಂಬಂಧಗಳು, ಗಂಡು-ಹೆಣ್ಣು ಸಂಬಂಧದ ದಾಂಪತ್ಯದ ಸಂಕೀರ್ಣತೆಗಳು, ಮನುಷ್ಯ ಸಂಬಂಧದ ಬಿಕ್ಕಟ್ಟುಗಳು ಎಳೆ ಎಳೆಯಾಗಿ ಈ ಕತೆಯಲ್ಲಿ ಬಂದು ಹೋಗುವ ರೀತಿಯೇ ಅಚ್ಚರಿ ಹುಟ್ಟಿಸುವಂಥದು. ಕೊಲೆಯಾದ ಮನುಷ್ಯನೂ, ಕೊಂದ ಮನುಷ್ಯನೂ ಹೋಗಲಿ, ಹಿಂಡಲಗಾ ಜೈಲಿನಲ್ಲಿರುವ ಖೈದಿಗಳೆಲ್ಲ ತನ್ನ ಮಕ್ಕಳಂತೆ ಕಾಣುವ ಸಂದರ್ಭದ ರುದ್ರವ್ವ ಈ ಕತೆಯ ಮಹಾಮಾಯಿ. ಹೀಗಿದ್ದೂ ಈ ಕತೆ ಕೂಡ ಆರಂಭದಲ್ಲಿ ಎಲ್ಲಿಂದ ತೊಡಗಿದ್ದೇವೆಯೋ ಅಲ್ಲಿಗೇ ತಲುಪುವ, ಒಂದು ಸ್ಥಾಯೀ ಬಿಂದುವಿನಲ್ಲಿ ಬಿಚ್ಚಿಕೊಳ್ಳುವ ಕತೆಯೇ. 

ನಾಟಕದ ಕಂಪೆನಿ ಕಟ್ಟಿದವರ ಕತೆಯನ್ನು ಸೂಚ್ಯವಾಗಿ ಬಿಚ್ಚಿಡುವ ‘ಜರಿ ರುಮಾಲು’, ಸುಲಭದ ಯಶಸ್ಸಿಗೆ ಕೈಚಾಚುವ, ತೃಪ್ತಿ ಕಾಣುವ ಜನರ ನಡುವೆ ಕಷ್ಟದ ಹಾದಿ ಆಯ್ದುಕೊಂಡು ಸಾಧನೆಯಲ್ಲಿ ತೃಪ್ತಿ ಕಾಣುವ ಮಂದಿಯನ್ನಿಟ್ಟು ಕಾಣುವ ಪ್ರಯತ್ನದಂತಿರುವ ಕತೆ ‘ಮಾರುಕಟ್ಟೆಯ ಭಾಷೆ’, ಪುಂಡನಂತಿದ್ದ ಪುಂಡಲೀಕ ಊರ ಶಾಲೆಯ ಮಾಸ್ತರನಾಗಿ ಮರಳುವ ಮತ್ತು ಅವನ ಕೀಟಲೆಗೆ ಬೇಸತ್ತು ಶಿಕ್ಷಿಸಿದ್ದ ಕಮಲಿ ಅದೇ ಊರಿನ ಪಂಚಾಯ್ತಿ ಅಧ್ಯಕ್ಷೆಯಾಗಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಪುಂಡಲೀಕನ ‘ನಡೆದು ಬಂದ ದಾರಿ’ಯತ್ತ ಹೊರಳಿ ನೋಡೆಂದು ಆಹ್ವಾನಿಸುವ ಕತೆ ‘ತೆರಣಿಯ ಹುಳು’, ಪರಮೇಶಿಯ ಮೂಲಕ ಅವನ ತಾಯಿ ಪಾರವ್ವನ ಬವಣೆಗಳ ಕತೆ ಬಿಚ್ಚಿಡುವ ‘ಮರವಿದ್ದು ಫಲವೇನು?’ ಎಲ್ಲವೂ ಒಂದು ಬಗೆಯಲ್ಲಿ ಇದೇ ತಂತ್ರವನ್ನು ನೆಚ್ಚಿಕೊಂಡು ಬಿಚ್ಚಿಕೊಳ್ಳುವ ‘ಗತದ’ ಕಥಾನಕಗಳೇ ಆಗಿರುವುದು ಒಂದು ವಿಶೇಷ. 

ಈಗಾಗಲೇ ಹೇಳಿರುವಂತೆ, ಕಥನ ಪ್ರಧಾನವಲ್ಲದ, ಕಥಾನಕದ ಚತುರ ಓಟದಲ್ಲೇ ಓದುಗನನ್ನು ಸೆಳೆದಿಟ್ಟುಕೊಂಡು, ಕಟ್ಟಿ ಹಾಕಿ, ಅಧ್ಭುತವಾದ ತಿರುವುಗಳಿರುವ ಒಂದು ಕತೆ ಹೇಳುವ ಉದ್ದೇಶವೇ ಇಲ್ಲದ ಈ ಕತೆಗಳು ಎಲ್ಲಿಯೂ ಬೋರು ಹೊಡೆಸದೆ, ಓದಿದ ಬಳಿಕವೂ ಕಾಡುತ್ತ ಉಳಿಯುವುದರ ಹಿಂದಿನ ರಹಸ್ಯವೇನೆಂದು ಯೋಚಿಸಬೇಕು. ಬಸು ಬೇವಿನಗಿಡದ ಅವರು ತಮ್ಮ ಕತೆಯ ವಾತಾವರಣವನ್ನು, ವ್ಯಕ್ತಿಗಳನ್ನು, ಒಟ್ಟಾರೆ ಕಥಾ ಜಗತ್ತನ್ನು ಕಟ್ಟಿಕೊಡುವ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರು ತಮ್ಮ ಕತೆಯ ಪಾತ್ರದೊಂದಿಗೇ ಆಯಾ ಕತೆಯ ಕಾಲ-ದೇಶವನ್ನು ಕಟ್ಟುವ ಕೌಶಲದಲ್ಲಿಯೇ ಆ ಆಕರ್ಷಣೆಯಿದೆ. ಅವರು ಕತೆಯನ್ನು ನಿರೂಪಿಸುವ ಈ ಕ್ರಮದಲ್ಲಿಯೇ ಒಂದು ಹೊಸತನವಿರುವಂತೆಯೇ, ಅದಕ್ಕೆ ಅದರದ್ದೇ ಆದ ಆಕರ್ಷಣೆಯನ್ನು ಕೂಡ ದಕ್ಕಿಸಿರುವುದು ಸಾಮಾನ್ಯವಾದ ಸಾಧನೆಯೇನಲ್ಲ. ಕಣ್ಣಿಗೆ ಹೊಡೆಯುವಂತೆ ಕಾಣದ, ಕತೆಯನ್ನು ಓದಿ ಮುಗಿಸಿದ ಬಳಿಕವೂ ಒಂದಿಷ್ಟು ಕಾಲ ನಮ್ಮೊಂದಿಗೆ ಅಂತರಾಳದ ಸ್ನೇಹ ರೂಢಿಸಿಕೊಂಡು ಉಳಿಯಬಲ್ಲ ಚೈತನ್ಯವನ್ನು ಈ ಕತೆಗಳು ಪಡೆದುಕೊಂಡಿರುವುದು ಗಮನಾರ್ಹ. ಮಳಗಿಯವರ ಸೂಕ್ಷ್ಮ ಅವಗಾಹ ಗುರುತಿಸಿರುವಂತೆ ಪುಂಡಲೀಕ ಮತ್ತು ಕಮಲಿಯರ ವಿಕಾಸದ ಕತೆಯನ್ನು ತುಂಬ subtle ಆಗಿ ಹೇಳುವ ‘ತೆರಣಿಯ ಹುಳು’ ಅಥವಾ ಬಹಳ ಸಂಕೀರ್ಣವಾದ ವಸ್ತುವನ್ನು ಕೈಗೆತ್ತಿಕೊಂಡಿರುವ ‘ಚೂರಾದ ಚಂದ್ರ’ ಕತೆಯನ್ನು ಬಿಟ್ಟರೆ ಕಥಾನಕ ಮುಖ್ಯವೆನಿಸುವಂಥ ಕತೆಗಳು ಈ ಸಂಕಲನದಲ್ಲಿ ಕಡಿಮೆ. ‘ಮರವಿದ್ದು ಫಲವೇನು?’ ಕತೆಯಲ್ಲಿ ತುಂಬ ಭಾವನಾತ್ಮಕವಾಗಿ ಮಿಡಿಯುವ ಎಳೆಯೊಂದಿದೆ ಎನ್ನುವುದು ಸತ್ಯವಾದರೂ ಬಸು ಬೇವಿನಗಿಡದ ಅವರ ಉಳಿದ ಕತೆಗಳಲ್ಲಿ ಅಂಥ ಭಾವನಾತ್ಮಕ ಅಂಶಗಳನ್ನು ಅಷ್ಟಾಗಿ ದುಡಿಸಿಕೊಂಡಿರುವುದು ಕಾಣುವುದಿಲ್ಲ. ಹಾಗಿದ್ದೂ ಬಸು ಬೇವಿನಗಿಡದ ಅವರ ಕತೆಗಳು ಸಾಧಿಸಿರುವ ಯಶಸ್ಸು ಸಣ್ಣದಲ್ಲ. ಆತ್ಮಸಂವಾದ, ಆತ್ಮನಿರೀಕ್ಷಣೆ ಮತ್ತು ಗತದ ಪುನರಾವಲೋಕನ ಹೆಚ್ಚಾಗಿರುವ ಈ ಕತೆಗಳಲ್ಲಿ ಸಹಜ ಸುಂದರ ಮೌನ ಕ್ಷಣಗಳು ಕತೆಗಳಾಗಿ ಬೆಳೆಯುವ, ಚಾಚಿಕೊಳ್ಳುವ ವಿಶಿಷ್ಟ ಬಗೆಯನ್ನು ನಾವು ಕಾಣಬಹುದು.

‘ತೆರಣಿಯ ಹುಳು’, ‘ಚೂರಾದ ಚಂದ್ರ’ ಕತೆಗಳಷ್ಟೇ ಮಹತ್ವದ ಇನ್ನೊಂದು ಕತೆ, ಈ ಸಂಕಲನದ ಕೊನೆಯ ಕತೆ, ‘ಅರಗಿನ ಮನೆ’. ‘ಚೂರಾದ ಚಂದ್ರ’ ಕತೆಯ ರುದ್ರವ್ವನ ಅಕ್ಕನಂತಿರುವ ಅಡಿವೆಮ್ಮ ಈ ಕತೆಯ ಕೇಂದ್ರ. ಬಡ್ಡಿ ಬಂಗಾರಮ್ಮನಂತೆ ಗಿರವಿ ಇರಿಸಿಕೊಂಡು ಸಾಲ ಕೊಟ್ಟು ಸಿರಿವಂತೆಯಾಗಿದ್ದ ಅಡಿವೆಮ್ಮ ಈ ಕತೆಯ ಕಥಾನಕ ತೊಡಗುವ ಸಂದರ್ಭದಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗಿ, ತನ್ನ ಆಯುರ್ಮಾನದ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಳೆ. ಈ ಸಂದರ್ಭದಲ್ಲಿ ನಿಂತು ನಿರೂಪಕ ನಮಗೆ ಕತೆ ಹೇಳುತ್ತಿರುವುದು. ನಿರೂಪಕನ ಅಪ್ಪ-ದೊಡ್ಡಪ್ಪ ಮತ್ತು ಈ ಅಡಿವೆಮ್ಮ ಕೇಂದ್ರದಲ್ಲಿರುವ ಒಂದು ಉಪಕತೆ ಇಲ್ಲಿದೆ. ಅದು ಅಡಿವೆಮ್ಮನ ಕತೆಯೂ, ಅಪ್ಪನ ಕತೆಯೂ, ದೊಡ್ಡಪ್ಪನ ಕತೆಯೂ ಆಗಿ ಹೆಣಿಗೆ ಹಾಕಿಕೊಂಡಿರುವುದು ತುಂಬ ಸ್ವಾರಸ್ಯಕರವಾಗಿದೆ. 

ಇಲ್ಲಿನ ಕತೆಗಳು ಹೀಗೆ ನಿರ್ದಿಷ್ಟ ಪಾತ್ರಗಳನ್ನು ಸೂಕ್ಷ್ಮವಾಗಿ ಕೆತ್ತುತ್ತ ರೂಪುಗೊಳ್ಳುತ್ತವೆ. ಅವು ಬದುಕುತ್ತಿರುವ ಪರಿಸರ, ಊರು-ಕೇರಿ, ಅವು ಬದುಕಲು ಆಯ್ದುಕೊಂಡಿರುವ ಉದ್ಯೋಗ-ವೃತ್ತಿ, ಅವುಗಳ ಸಂಬಂಧ ಏರ್ಪಟ್ಟಿರುವ ಕೊಡು-ಕೊಳ್ಳುವ ನೆಲೆಯ ಸಮಾಜ, ಅವೆಲ್ಲವುಗಳೊಂದಿಗೆ ತಳುಕು ಹಾಕಿಕೊಂಡಂತಿರುವ ವೈಯಕ್ತಿಕ ಬದುಕು, ದಾಯಾದಿ ಸಂಬಂಧ, ದಾಂಪತ್ಯ ಸಂಬಂಧ, ಹಿರಿಯರ ಬದುಕು-ವೃದ್ಧಾಪ್ಯದ ಸಂಕಟಗಳು - ಹೀಗೆ ಸಾಗುವ ನಿರೂಪಣೆಯಲ್ಲಿ ಸಾಮಾನ್ಯವಾಗಿ ಕಥಾನಕ ಗೌಣವಾಗುತ್ತದೆ. ಅಷ್ಟಿಷ್ಟು ಗೋಟಾಳೆಗಳು, ಆಕಸ್ಮಿಕಗಳು, ದುರಂತಗಳು, ತಿರುವುಗಳು ಅಲ್ಲಲ್ಲಿ ಕಾಣಿಸಿಕೊಂಡು ರೋಚಕತೆಯನ್ನು ಹೆಚ್ಚಿಸುವುದೂ ಉಂಟು, ಇಲ್ಲವೆಂದಲ್ಲ. ಆದರೆ ಅವು ಸಹಜವಾಗಿ ಬಂದರೆ ಮಾತ್ರ ಸ್ವೀಕರಿಸಿ ಮುಂದುವರಿಯುವ ಬಗೆಯ ಕಥಾನಕಗಳಿವು. ಹಾಗಾಗಿಯೇ ಬಸು ಬೇವಿನಗಿಡದ ಅವರ ಕತೆಗಳಲ್ಲಿ ಅಸಹಜತೆಯಿಲ್ಲ. ಕತೆಯನ್ನು ಕಟ್ಟುವ ದರ್ದು ತಮಗಿಲ್ಲವೆಂಬಂತೆ ಅವರು ಕಟ್ಟಿಕೊಡುವ ಬದುಕು ಆ ಕಾರಣದಿಂದಾಗಿಯೇ ಹೆಚ್ಚು ಆಪ್ತವಾಗುತ್ತದೆ ಮತ್ತು ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, December 12, 2019

ನೆನಪುಗಳಲ್ಲಿ ಜೀವಂತಗೊಳ್ಳುವ ವ್ಯಕ್ತಿತ್ವದ ಅಸ್ತಿತ್ವ ...

‘ಕ್ಯಾಪ್ಟನ್ ಕವಿತೆಗಳು’ ಹೆಸರೇ ಸೂಚಿಸುವಂತೆ ಜ ನಾ ತೇಜಶ್ರೀಯವರು ತಮ್ಮ ತಂದೆಯವರ ಕುರಿತು ಧೇನಿಸಿದ್ದರ ಫಲ. ಅವರು ಭೌತಿಕವಾಗಿ ಕಣ್ಮರೆಯಾದ ಬಳಿಕ ಹೊರಬರುತ್ತಿವೆಯಾದ್ದರಿಂದ ಸಹಜವಾಗಿಯೇ ಇಲ್ಲಿ ಸಾವಿನ ನೆರಳು ಕೂಡ ದಟ್ಟವಾಗಿ ಹಬ್ಬಿದೆ. ಸಾವಿನ ನೆರಳು ಎಂದರೆ ಪಂಚೇಂದ್ರಿಯಗಳಿಗೆ ಅದುವರೆಗೂ ಲಭ್ಯವಿದ್ದ ಕೆಲವೊಂದು ಅನುಭವಗಳಿಗೆ ಒಬ್ಬ ವ್ಯಕ್ತಿ ನಾಟ್ ಅವೈಲೇಬಲ್ ಆದ, ಆ ‘ಗೈರು’ ಕಾಡುವ ಸಂಕಟ. ಕಣ್ಣಿಂದ ಕಾಣಲಾರೆವು, ಮುಟ್ಟಲಾರೆವು, ನಮ್ಮ ಮಾತು ಕೇಳುವಂತೆ ಒತ್ತಾಯಿಸಲಾರೆವು, ಅವರ ಮಾತು ಕೇಳಿಸಿಕೊಳ್ಳಲಾರೆವು...

ಅವರಿಲ್ಲ, ಅವರಿಲ್ಲ ಎನಿಸುವ ಪ್ರತಿಕ್ಷಣದ ಸಂಕಟ ಅದು.

ಆದರೆ ಅದಷ್ಟೇ ನಿಜವಲ್ಲ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ನಮಗೆ ಲಭ್ಯ ಇರುವುದು ಕೂಡ ನೆನಪುಗಳಲ್ಲಿ. ಸದಾ ಕಾಲ ನಾವು ನಮ್ಮ ಪ್ರೀತಿಯ ವ್ಯಕ್ತಿಯನ್ನು ಮುಟ್ಟಬಹುದಾದ, ಕಣ್ಣಾರೆ ನೋಡಬಹುದಾದ, ಮುಖಾಮುಖಿ ಮಾತಿಗೆ ಸಿಗಬಲ್ಲ ಸ್ಥಿತಿಯಲ್ಲೇ ಇರುವುದಿಲ್ಲ. ಆದರೂ ಆಗ ನಮಗೆ ‘ಗೈರು’ ಕಾಡುವುದಿಲ್ಲ. ಏಕೆಂದರೆ, ಬಯಸಿದರೆ ಅದನ್ನು ಸಾಧ್ಯವಾಗಿಸಿಕೊಳ್ಳಬಲ್ಲೆವು ಎನ್ನುವ ಭರವಸೆ, ಎಲ್ಲೋ ಇದ್ದಾರೆ ಎನ್ನುವ ನಂಬುಗೆ ಅಲ್ಲಿ ಕೆಲಸ ಮಾಡುತ್ತಿರುತ್ತದೆ. ಸಾವು ಈ ಭರವಸೆಯನ್ನು ಅಳಿಸಿ ಹಾಕಿ ಬಿಡುತ್ತದೆ. ‘ಗೈರು’ ಸ್ಥಾಯೀ ಭಾವವಾಗುತ್ತದೆ. ಇಲ್ಲಾ ಎಂದುಕೊಂಡಾಗ ನೋವು. ಇಲ್ಲೇ ಇದ್ದಾರೆ, ನನ್ನಲ್ಲೇ ಇದ್ದಾರೆ ಎಂದುಕೊಂಡಾಗ ಒಂದಷ್ಟು ಶಾಂತಿ. ಒಂಟಿತನಕ್ಕೂ ಏಕಾಂತಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವಿದು. ನಾವೂ ಹೊರಟು ನಿಂತಿರುವುದು ಅರಿವಾದಾಗ ಒಂಥರಾ ನಿರ್ಲಿಪ್ತಿ. ಸಾವು ಕಾಡುವ ಬಗೆ ವಿಭಿನ್ನ, ವಿಶಿಷ್ಟ ಮತ್ತು ವಿಚಿತ್ರ ಕೂಡ.

ತೇಜಶ್ರೀಯವರು ‘ಹಡಗು ಹತ್ತುವ ಮುನ್ನ’ ಆಡಿರುವ ಎರಡು ಮಾತುಗಳು ಬಹಳ ಮಹತ್ವದವು. ಅವು ಹೀಗಿವೆ:

ಮೊದಲನೆಯದು:
"ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವ ಈ ಕವಿತೆಗಳ ಬಗ್ಗೆ ಮುನ್ನುಡಿಯಲ್ಲಿ ಹೇಳುವುದೇನೂ ಇಲ್ಲ. ನನ್ನನ್ನು ಆತ್ಯಂತಿಕವಾಗಿ ತಟ್ಟಿದ ಅಣ್ಣನ ಸಾವು ಇಲ್ಲಿನ ಕವಿತೆಗಳ ಕೇಂದ್ರದಲ್ಲಿದೆ ಎನ್ನುವುದು ಮೂಲದಲ್ಲಿ ನಿಜ. ಆದರೆ, ಇವು ಸಾವಿನ ಕವಿತೆಗಳಲ್ಲ ಅಥವಾ ಬರೀ ಅಪ್ಪನ ಕುರಿತ ನೆನಪುಗಳೂ ಅಲ್ಲ. ಇದೊಂದು ವಿಚಿತ್ರವಾದ ಬಗೆ; ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮದ ಮೂಲಕ ಹೊರಗಿನಿಂದ ಅನುಭವಿಸಿದ ಅಪ್ಪ, ನನ್ನ ಅಂತರಂಗವನ್ನು ಮುಟ್ಟಿ, ಮತ್ತೆ ಅಲ್ಲಿಂದ ಕವಿತೆಯಾಗಿ ಕಾಣುವ ಅಪ್ಪನೇ ಬೇರೆ. ಹೀಗೆ ಮೈತಳೆಯುವ ಅಪ್ಪ ನಾನೇ ಸೃಷ್ಟಿಸಿದ್ದೂ ಅಲ್ಲ ಅಥವಾ ಸಾವಿನ ನಂತರ ಕೆಟ್ಟದ್ದೆಲ್ಲ ಹೋಗಿ ಬರೀ ಒಳ್ಳೆಯವರಾಗಿ ಕಾಣುವ ವ್ಯಕ್ತಿಯೂ ಅಲ್ಲ. "ಇದು ಬರಿ ಬೆಳಗಲ್ಲೋ ಅಣ್ಣಾ" ಎಂದ ಬೇಂದ್ರೆಯವರ ಕವಿತೆಯಲ್ಲಿ ‘ಆದ’ ಬೆಳಗಿನ ಹಾಗೆ, ಇದು ಕವಿತೆಯಲ್ಲಿ ಉಂಟಾದ ಅಪ್ಪ ಮತ್ತು ಸಾವು..."

ಎರಡನೆಯದು:
"ಸಾವಿನ ಅನುಭವವೇ ಬೇರೆ, ಅದೇ ಸಾವು ಕವಿತೆಯಾಗುವಾಗಿನ ರೀತಿಯೇ ಬೇರೆ. ಎರಡೂ ಒಂದೇ ಅಲ್ಲ. ಸಾವು, ನನ್ನನ್ನು ಬೇರೆಯಾಗಿ ಮಾಡುತ್ತ, ಲೋಕವನ್ನು ಬೇರೆಯಾಗಿ ತೋರಿಸಿದೆ. ಈ ಕವಿತೆಗಳನ್ನು ಪ್ರಕಟಿಸುವ ಧೈರ್ಯ ಬಂದದ್ದೇ ಈ ಇಬ್ಬಗೆಯ ಆಗುವಿಕೆಯನ್ನು ಹಂಚಿಕೊಳ್ಳುವ ಸಣ್ಣ ಆಸೆಯಿಂದ. .......ನನ್ನ ಅಣ್ಣನ ಸಾವನ್ನು ನಾನು ಪಡೆದುಕೊಂಡಿರುವುದು ಅಥವಾ ಅದು ನನಗೆ ದಕ್ಕಿರುವುದು ಈ ಭಾಷೆಯ ಮೂಲಕ, ಈ ಕವಿತೆಗಳಾಗಿ..."

ತೇಜಶ್ರೀಯವರು ಈ ಮೂಲಕ ವಾಸ್ತವ ಮತ್ತು ಕವಿತೆಯ ಮೂಲಕ ತಾವು ಕಟ್ಟಿಕೊಂಡ ವಾಸ್ತವ ಎರಡರ ನಡುವೆ ಒಂದು ಗೆರೆಯೆಳೆಯುತ್ತಾರೆ ಮತ್ತು ಅದೇ ಹೊತ್ತಿಗೆ, ತಾವು ಸೃಜಿಸಿದ ಕಲ್ಪಿತ ವಾಸ್ತವದ ಮುಖೇನ ತಾವು ಬದುಕಿನಲ್ಲಿ ಪಡೆದುಕೊಳ್ಳುವುದರ ಕುರಿತು ಕೂಡಾ ಭರವಸೆ ಹೊಂದಿದ್ದಾರೆ. ಎಲ್ಲರ ಬದುಕಿನಲ್ಲಿಯೂ ಸಾಹಿತ್ಯದ ನೆಲೆಯೇ ಅದು. ಸಾಹಿತ್ಯ ಕಟ್ಟಿಕೊಡುವ ಬದುಕು, ಅನುಭವ, ಜಗತ್ತು, ವಾಸ್ತವ ಯಾವುದೂ ರಿಯಲ್ ಅಲ್ಲ. ಅದು ವರ್ಚ್ಯುಯಲ್. ಆದರೆ ಕಲ್ಪಿತ ವಾಸ್ತವದ ಮೂಲಕವೇ (ಬಹುಶಃ ಕೇವಲ ಕಲ್ಪಿತವಾಸ್ತವದ ಮೂಲಕ ಮಾತ್ರವೇ) ನಾವು ನಮ್ಮ ಬದುಕಿನಲ್ಲಿ ಪಡೆದುಕೊಳ್ಳಬಹುದಾದ್ದು ತುಂಬ ಇದೆ. ಅಂಥ ಒಂದು ಭರವಸೆಯೇ ಸಾಹಿತ್ಯದ ಓದು ಮತ್ತು ರಚನೆಯ ಹಿಂದಿರುವ ಸೆಲೆ.

ಹಾಗೆಯೇ, ನಾವು ನಮ್ಮ ಯಾವತ್ತೂ ಅನುಭವ, ಸಂವೇದನೆ, ಭಾವನೆಗಳನ್ನು ಭಾಷೆಯಲ್ಲಿ, ಅಕ್ಷರಗಳಲ್ಲಿ, ಭಾಷೆ ಒದಗಿಸುವ ವಿವಿಧ ಪದಗಳಲ್ಲಿ ನಮೂದಿಸಿದ ಕ್ಷಣವೇ ಅದು ನಿಜದಿಂದ ಲುಪ್ತಗೊಂಡು ನಿಲ್ಲುತ್ತದೆ ಎನ್ನುವುದು ಕೂಡ ಸತ್ಯ. ಹಾಗಾಗಿ, ಚರಿತ್ರೆ ಎನ್ನುವುದು ಇಲ್ಲ. ಇರುವುದೆಲ್ಲಾ ಫಿಕ್ಷನ್. ಭಾಷೆಯಲ್ಲಿ ಏನನ್ನೇ ಬರೆದರೂ ಅದು ಫಿಕ್ಷನ್ನೇ. ಅಕೌಂಟೆನ್ಸಿಯ ಒಂದು ಲೆಡ್ಜರ್ ಅಕೌಂಟು ಕೂಡ ಫಿಕ್ಷನಲ್! (ಈ ಮಾತಿಗೆ ಪ್ರೇರಣೆ ಅಮೆರಿಕನ್ ಕಾದಂಬರಿಕಾರ ಡಾಕ್ಟೊರೊವ್). ಈ ಅರ್ಥದಲ್ಲೇ ನಾವು ಟಿಪ್ಪು ಬಗ್ಗೆ ಮಾಡುವ ವಾದವೆಲ್ಲವೂ ಒಂದು ಫಿಕ್ಷನಲ್ ಕ್ಯಾರೆಕ್ಟರ್ ಕುರಿತಷ್ಟೇ ಆಗಿರುತ್ತದೆ. ಎಂದೋ ಆಗಿ ಹೋದ ಮನುಷ್ಯ ಹೀಗಿದ್ದ ಹಾಗಿದ್ದ ಎಂದು ಇವತ್ತು ನಾವು ಆಡುವುದೆಲ್ಲಾ ಕಲ್ಪನೆಯಿಂದ ಪಡೆದಿದ್ದೇ ಹೊರತು ಅನುಭವದಿಂದ ಅಲ್ಲ. ಅಯೋಧ್ಯೆಯ ರಾಮನ ಕುರಿತು ಆಡುವುದೂ ಅಷ್ಟೇ. ತೇಜಶ್ರೀಯವರಿಗೆ ಈ ಬಗ್ಗೆ ಸ್ಪಷ್ಟವಾದ ಅರಿವಿದೆ. ತಮ್ಮ ಕಾವ್ಯದಲ್ಲಿ ಪಡಿಮೂಡಿದ ಅಪ್ಪ ಮತ್ತು ತಮ್ಮ ಅಣ್ಣನ ನಡುವೆ ಅವರು ಗೆರೆ ಎಳೆದು ಸ್ಪಷ್ಟಪಡಿಸುತ್ತಿರುವುದು ಇದನ್ನೇ. ಇದೇ ಮಾತನ್ನು ಅವರು ಸಾವಿನ ಎದುರು ನಿಂತು ತಾವು ಕಂಡುಕೊಂಡಿದ್ದರ ಕುರಿತೂ ಆಡಿರುವುದು ಮಾತ್ರ ಸ್ವಲ್ಪ ವಿಚಾರ ವಿಮರ್ಶೆಗೆ ಕಾರಣವಾಗುವಂತಿದೆ.

ನಾವು ಯಾವತ್ತೂ ನಮ್ಮದೇ ಸಾವಿನ ಅನುಭವದ ಕುರಿತು ಬರೆಯಲಾರೆವು. ಬರೆಯಬಹುದಾದ್ದೆಲ್ಲ ಇನ್ನೊಬ್ಬರ, ಸಾಧ್ಯವಿದ್ದರೆ, ತೀರ ಒಂದೇ ಜೀವ ಎನ್ನುವ ಮಟ್ಟಿಗೆ ಆಪ್ತರಾಗಿದ್ದವರ ಸಾವಿನ ಬಗ್ಗೆ. ಇತ್ತೀಚೆಗೆ ಹಂಚಿಕೊಂಡ When Death Takes Something from You... ಪುಸ್ತಕ ಮಾಡುವುದು ಇದನ್ನು. ತನ್ನ ಇಪ್ಪತ್ತೈದು ವರ್ಷ ಪ್ರಾಯದ ಮಗನನ್ನು ಕಳೆದುಕೊಂಡು ಆಘಾತಗೊಂಡ ತಾಯಿಯ ಅಂತರಂಗ ಬಿಚ್ಚಿಕೊಂಡ ಒಂದು ಬಗೆ ಅಲ್ಲಿ ನಮಗೆ ಕಾಣ ಸಿಗುತ್ತದೆ. ನಾವೆಲ್ಲರೂ ತಮ್ಮ ತೀರ ಹತ್ತಿರದವರ ಸಾವನ್ನು ಕಂಡಿದ್ದೇವೆ ಅಥವಾ ಕಾಣಬಹುದಾದ ಸಾಧ್ಯತೆಗಳಿವೆ. ಸಾಧ್ಯತೆಗಳಿವೆ ಅನಿಸಿದವರಿಗೆ ಅದರ ಕುರಿತು ಕಲ್ಪನೆಯಿದೆ. ಅವರು ಅದನ್ನು ಎದುರಿಸಲು ಯಾವತ್ತಿನಿಂದಲೂ ತಯಾರಾಗುತ್ತ ಹೈರಾಣಾಗುತ್ತ ಇರುತ್ತಾರೆ. ಈ ಪ್ರಕ್ರಿಯೆಯಲ್ಲಿ ನಾವು ಸಾವನ್ನು ಕುರಿತು ಕಗ್ಗತ್ತಲಲ್ಲಿ ತಡಕಾಡುವವರಂತೆ, ಸ್ಪಷ್ಟವಾಗಿ ನಾವದನ್ನು ಅರಿಯಲಾರೆವು ಎಂದು ತಿಳಿದಿದ್ದರೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಅವರಿಲ್ಲದ-ಇವರಿಲ್ಲದ ನಮ್ಮ ಬದುಕು ಹೇಗಿರಬಹುದು ಎಂಬ ಕಲ್ಪನೆ, ಅದನ್ನು ಎದುರಿಸುವುದು ಹೇಗೆ ಎಂಬ ಕಲ್ಪನೆ ಇತ್ಯಾದಿಗಳ ಮೂಲಕ ನಾವು ಸಜ್ಜಾಗುತ್ತಿರುವುದು ನಮ್ಮದೇ ಸಾವಿಗೆ ಎನ್ನುವುದು ಕೂಡ ಬಹುಮಟ್ಟಿಗೆ ನಿಜ!

ಸಾಹಿತ್ಯದಲ್ಲಿ ನಮಗೆ ಸಿಗುವ ಇಂಥವೇ ಕೃತಿಗಳೆಲ್ಲ ಕಗ್ಗತ್ತಲಲ್ಲಿ ತಡಕಾಡುವಾಗ ಕೈಕಾಲಿಗೆ ತಗುಲಿದ, ಅಪಾಯವನ್ನೇನೂ ಮಾಡದೆ ಕಗ್ಗತ್ತಲಲ್ಲಿ ಎಲ್ಲೆಲ್ಲಿ ಏನಿದೆ ಎಂಬ ಬಗ್ಗೆ ಅಷ್ಟಿಷ್ಟು ಕುರುಡು ಅರಿವು ಕೊಡುವ ವಸ್ತುವಿನಂತೆ ಪೊರೆಯುತ್ತವೆ. ಆದರೆ ಅದರಿಂದಲೂ ಯಾವ ಪ್ರಯೋಜನವಾಗದು ಎನ್ನುವುದು ನಿಜ. ಕಣ್ಣು ಕೋರೈಸುವ ಬೆಳಕು ಹೊಮ್ಮಿದ್ದೇ ನಮ್ಮ ಜ್ಞಾನವೆಲ್ಲಾ ಕುರುಡ ಕಂಡ ಆನೆಯಾಗಿತ್ತು ಅನಿಸಬಹುದು. ಹಾಗಿದ್ದೂ ಬದುಕನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಇಲ್ಲಿ ಬದುಕಬಹುದಾದ ಸಮಾಧಾನಕರ ವಿಧಾನವನ್ನು ಕಂಡುಕೊಳ್ಳುವುದಕ್ಕೆ ಅಷ್ಟಿಷ್ಟು ಸಹಾಯ ಖಂಡಿತಕ್ಕೂ ಒದಗುವುದು ಸಾಹಿತ್ಯದಿಂದಲೇ ಎನ್ನುವುದು ಕೂಡ ನಿಜ.

ತೇಜಶ್ರೀಯವರ ಕವಿತೆಗಳಲ್ಲಿ ತನ್ನ ಅಣ್ಣನ ಕುರಿತ ನೆನಪುಗಳಿಂದ ಅಣ್ಣನನ್ನು ಜೀವಂತಗೊಳಿಸಿಕೊಳ್ಳುವ ಪ್ರಯತ್ನವಿದೆ. ಬಾಲ್ಯದಲ್ಲಿ ಆತ ಪೊರೆದ ಪ್ರೀತಿ, ಅವನೊಂದಿಗೆ ಗುಡ್ಡ, ಗದ್ದೆ, ದಿಬ್ಬ ಅಲೆದ ನೆನಪು, ಸಂಜೆಯ ಹೊಂಬಿಸಿಲಿಗೆ ಅವನು ಮೈಯೊಡ್ಡಿ ಸುಮ್ಮನೇ ಮೌನದಲ್ಲಿ ಕುಳಿತ ಕ್ಷಣಗಳು, ದನ, ಬೆಕ್ಕು, ಗಿಡ, ಮರ, ಬಳ್ಳಿಗಳೊಂದಿಗೆ ಹೊಂದಿದ್ದ ಅನುಬಂಧ, ಅವನ ಧೀಮಂತ ವ್ಯಕ್ತಿತ್ವವನ್ನು ಗ್ರಹಿಸಿದ ಹತ್ತು ಹಲವು ಬಗೆಗಳು ಇಲ್ಲಿ ಹರಳುಗಟ್ಟಿವೆ. ಆದರೆ, ಪ್ರಕೃತಿ-ಪರಿಸರ ಮತ್ತು ವ್ಯಕ್ತಿತ್ವದ ಅನುಸಂಧಾನದ ಮೂಲಕ ತನ್ನಣ್ಣನ ನೆನಪುಗಳನ್ನು ಚಿರಂತನಗೊಳಿಸುವ ಕವಿಯ ಯಾವುದೇ ಚಿತ್ರದಲ್ಲಿ ಅಪ್ಪ-ಮಗಳನ್ನು ಬಿಟ್ಟರೆ ಬೇರೆ ಜೀವಂತ ವ್ಯಕ್ತಿಯಿಲ್ಲದಿರುವುದು ಕುತೂಹಲಕರ. ಇಲ್ಲಿ ಒಂದು ಕುಟುಂಬವಾಗಿ ಅಣ್ಣ ತನಗೊದಗಿದ ಬಗೆ ಯಾವುದು, ಅಮ್ಮನೊಂದಿಗೆ ಅಪ್ಪನಾಗಿ ಅವನು ತನಗೊದಗಿದ ಬಗೆ ಯಾವುದು, ತನ್ನ ಇತರ ಮಕ್ಕಳೊಂದಿಗಿಟ್ಟು ತನ್ನನ್ನು ಕಾಣುತ್ತಿದ್ದ ಬಗೆ ಯಾವುದು - ಎಂಬ ಬಗ್ಗೆಯೆಲ್ಲ ಏನೂ ಇಲ್ಲ. ಒಂದು ದೊಡ್ಡ ಶೂನ್ಯ, ಮಹಾಮೌನ.

ಅಂತರದಲ್ಲಿ ನಿಂತು ರೂವಾರಿಯು ನೋಡುವಂತೆ ತನ್ನದೇ ಕೃತಿಯನ್ನು
ನೋಡುತ್ತಿದ್ದೆ ನೀನು ನನ್ನನ್ನು ಕೆಲವೊಮ್ಮೆ ಮೌನದಲ್ಲಿ.

ಒದರುವ ಹುಪ್ಪಟೆಯ ಹಿಡಿದು ಕೊಕ್ಕಲ್ಲಿ
ಗೂಡು ತೂರಿ ಗುಕ್ಕನುಣಿಸಿ ಮರಿಗೆ,
ಬಂದ ವೇಗದಲ್ಲೇ ಮರುಕ್ಷಣ
ಮಾಯವಾಗುವಂತೆ ತಾಯಿಹಕ್ಕಿ,
ನನ್ನ ಆತ್ಮವನ್ನು ಹೊಕ್ಕು ಹೊರಬರುತ್ತಿತ್ತು
ನಿನ್ನ ಮೌನ.

ಪರಿಪೂರ್ಣ ಕಲಾಕೃತಿಯನ್ನು ಎಂದೂ ಒಪ್ಪದ ನಿನ್ನ ಗುಣ
ನೂರು ಅರ್ಥಗಳ ಲೇಪಿಸುತ್ತಿದೆ ಈಗ ಆ ನಿನ್ನ ಮೌನಕ್ಕೆ.

ಇಲ್ಲಿರುವುದೆಲ್ಲಾ ಒನ್ ಟು ಒನ್ ಅನುಸಂಧಾನ, ಅಪ್ಪ-ಮಗಳು ಒಂದು ಯುನಿಟ್ ಆಗಿ ಅಪ್ಪ ಮಗಳಿಗೆ ಕೊಟ್ಟಿದ್ದು, ಮಗಳು ಅಪ್ಪನಿಂದ ಪಡೆದಿದ್ದು, ಗ್ರಹಿಸಿದ್ದು, ಕಟ್ಟಿಕೊಂಡಿದ್ದು ಮತ್ತು ದಕ್ಕಿಸಿಕೊಂಡಿದ್ದು ಮಾತ್ರವಲ್ಲ, ಅವುಗಳೊಂದಿಗೇ ಸಾಗಲಿರುವ ಭವಿಷ್ಯತ್ತಿನ ಹಾದಿಯಲ್ಲಿ ಮಾಡಲಿರುವುದು ಮಾತ್ರ. ಈ ಅಣ್ಣನ ಬದುಕಿನಲ್ಲಿ ಮಗಳ ಹೊರತಾಗಿ ಬರುವುದೆಲ್ಲಾ ಪ್ರಕೃತಿ ಮತ್ತು ಪರಿಸರ. ಬೇರೆ ಜೀವಂತ ವ್ಯಕ್ತಿಗಳಿಲ್ಲ. ಇದು ಆಶ್ಚರ್ಯ ಹುಟ್ಟಿಸಿದ ಒಂದು ಅಂಶ. ಇದರಿಂದ ಏನಾಗುತ್ತದೆ ಎಂದರೆ, ಅಣ್ಣನ ವ್ಯಕ್ತಿತ್ವ ಮತ್ತು ಸಾವು - ಭೌತಿಕ ಕಣ್ಮರೆ - ಮನಸ್ಸಿಗಾದ ಆಘಾತ - ಅದು ಸೃಷ್ಟಿಸಿದ ಶೂನ್ಯ - ನಂತರದ ದಿನಗಳಲ್ಲಿ ಅಣ್ಣನ ನೆನಪು ಹುಟ್ಟಿಸಿದ ಅವನ ಬೇರೆ ಬೇರೆ ವಸ್ತುಗಳು (ಅವನು ಕೂರುತ್ತಿದ್ದ ಕುರ್ಚಿ, ಅವನನ್ನು ನೆನೆಯುವ ಗಿಡಮರಬಳ್ಳಿಗಳು, ದನಕರುಗಳು, ಬೆಕ್ಕು, ಅವನು ನಿತ್ಯ ಧರಿಸುತ್ತಿದ್ದ ಜೋಡು ಇತ್ಯಾದಿ) ಎಲ್ಲವೂ [ಅವನು ಸ್ವತಃ ಒಂದು ಕುಟುಂಬದ ಸದಸ್ಯನಾಗಿದ್ದರಿಂದ, ಮತ್ತು ಕವಿ ಸ್ವತಃ ಅದೇ ಕುಟುಂಬದ ಸದಸ್ಯನಾಗಿರುವುದರಿಂದ] - ಬೇರೆ ಬೇರೆ ಸದಸ್ಯರಲ್ಲಿ ಉಂಟು ಮಾಡಿದ ತಳಮಳಗಳು (ಕವಿ ಕಂಡಂತೆ) ಇಲ್ಲಿ ದಾಖಲಾಗುವುದೇ ಇಲ್ಲ. ಕವಿ ತನ್ನ ಕಣ್ಮರೆಯಾದ ಅಣ್ಣನನ್ನು ಒಂಟಿಯಾಗಿ ಮತ್ತು ಆ ಕಣ್ಮರೆಯೇ ಮೂಲವಾಗಿ ಹುಟ್ಟಿದ ಉಳಿದೆಲ್ಲಾ ಚಿತ್ರಗಳಿಂದ ಐಸೊಲೇಟ್ ಆದ ಒಂದು ನೆಲೆಯ ಅನುಭವದಲ್ಲಿ ಕಟ್ಟಿಕೊಳ್ಳುವುದು ಸಾಧ್ಯವೇ?

ಆದರೆ, ಇವು ಒಂದು ನೆಲೆಯಿಂದ ಅಟೊಬಯಾಗ್ರಫಿಕಲ್ ಕವಿತೆಗಳು. ಆತ್ಮಕತೆಯ ನೋವು, ಸಂಕಟ, ಸಾವು-ನೋವು ಮತ್ತಿತರ ಗೋಳನ್ನು ಓದಿ ಸುಂದರ ಕೃತಿ ಎಂದು ಬರೆಯುವುದು ಎಷ್ಟು ಆಭಾಸಕರವೋ ಹಾಗೆಯೇ ಇದೂ. ಇನ್ನೊಂದು ನೆಲೆಯಿಂದ, ಸೃಜನಶೀಲ ಅಭಿವ್ಯಕ್ತಿ ಎಂಬುದು ಯಾವತ್ತೂ ಪ್ರಿಪ್ಲ್ಯಾನ್ಡ್ ಅಲ್ಲ, ಅದು ಅಭಿಜಾತ ಮತ್ತು ಸ್ವಯಂಸ್ಫೂರ್ತ, ಅದನ್ನು ಕವಿ/ಲೇಖಕ ಪ್ರಜ್ಞಾಪೂರ್ವಕ ನಿಯಂತ್ರಿಸಲು ಸ್ವತಂತ್ರನೂ ಅಲ್ಲ, ಅವನ ಪ್ರಜ್ಞೆಯ ನೆಲೆಯಲ್ಲಿ ಅದು ಹುಟ್ಟುವುದೂ ಅಲ್ಲ; ಹಾಗಾಗಿ ಅದು ಯಾಕೆ ಹಾಗಿದೆ, ಯಾಕೆ ಹೀಗಿಲ್ಲ ಎನ್ನುವುದೆಲ್ಲಾ ಕವಿಗೆ ಸಂಬಂಧಿಸಿದ್ದಲ್ಲ ಎನ್ನುವ ವಾದ. ಈ ಬಗ್ಗೆ ಬೇರೆಡೆ ನಾನು ಈಗಾಗಲೇ ಸಾಕಷ್ಟು ಬರೆದಿದ್ದೇನೆ. ನಯಾ ಮರಿಯ ಐತ್ ಕೃತಿಯಲ್ಲಿ ಕೂಡ ಈ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ, ಆಸಕ್ತರು ಗಮನಿಸಿಕೊಳ್ಳಬಹುದು. 

ಜ ನಾ ತೇಜಶ್ರೀ ನುರಿತ ಕವಿ. ಭಾಷೆಯ ಬಗ್ಗೆ ತುಂಬ ಸೂಕ್ಷ್ಮ ಗ್ರಹಿಕೆಗಳಿರುವ ಪ್ರಬುದ್ಧೆ. ಭಾಷೆಯನ್ನು ಎಚ್ಚರಿಕೆಯಿಂದ ಬಳಸುವ ಮತ್ತು ತನ್ನ ಸಂವೇದನೆಗೆಳ ಬಗ್ಗೆ ವಿಮರ್ಶಾತ್ಮಕ ಎಚ್ಚರವೂ, ಸೃಜನಶೀಲ ಅಭಿರುಚಿಯೂ ಜಂಟಿಯಾಗಿಯೇ ಕೆಲಸ ಮಾಡುವ ಲೇಖಕಿ. ಕವಿ ಭಾವ ಪ್ರತಿಮಾ ಪುನರ್‌ಸೃಷ್ಟಿ ಅವರ ಕವಿತೆಗಳ ಮೂಲಕ ಸಿದ್ಧಿಸುವುದನ್ನು ಮತ್ತೆಮತ್ತೆ ಕಂಡಾಗ ಇವರ ಬಗ್ಗೆ ಮೂಡುವ ಅಭಿಮಾನ, ಹೆಮ್ಮೆ ಸಣ್ಣದಲ್ಲ. ಹಾಗೆಯೇ ಇಲ್ಲಿನ ಯಾವ ಕವಿತೆಯೂ ಸಹೃದಯಿ ಓದುಗನನ್ನು ನಿರಾಶೆಗೊಡ್ಡುವುದಿಲ್ಲ. ಪ್ರತಿಯೊಂದು ಕವಿತೆಯೂ ಆಪ್ತವಾಗುತ್ತದೆ, ಇಷ್ಟವಾಗುತ್ತದೆ. ಬಹಳಷ್ಟು ಕವಿತೆಗಳು ಹೊಸ ಹೊಳಹು, ಹೊಸ ದರ್ಶನದ ತೇಜಸ್ಸು ಪಡೆದಿವೆ. ಕೆಲವನ್ನು ಸುಮ್ಮನೇ ಓದಿ ಮೆಚ್ಚಬಹುದು. ಈ ಕವಿತೆಗಳು ನಮ್ಮನ್ನು ಯಾವುದೇ ಬಗೆಯ ವಿಷಣ್ಣತೆಯಲ್ಲಿ ಅದ್ದುವುದಿಲ್ಲ. ಹಾಗೆಯೇ ಮೋಕ್ಷದ ಹುಸಿ ಭರವಸೆಯನ್ನೂ ಕೊಡುವುದಿಲ್ಲ. ಅವರೇ ಕವಿತೆಯೊಂದರಲ್ಲಿ ಹೇಳಿರುವಂತೆ ಈ ಅಪ್ಪ ಎಂಬ ಫ್ರೇಮಿನಲ್ಲಿ ಬೇರೆಯವರ ಅಪ್ಪನ ಚಿತ್ರವೂ ಅದಕ್ಕಾಗೇ ಮಾಡಿಸಿದ ಹಾಗೆ ಹೊಂದಿಕೊಂಡು ಕೂರಬಹುದು. ಅದೇ ರೀತಿ ಎಲ್ಲರೊಳಗಿನ ಅಪ್ಪನೂ ಇಲ್ಲಿ ಕಾಣಿಸಬಹುದು.

ಎಲ್ಲರೊಳಗೊಬ್ಬ ‘ಕ್ಯಾಪ್ಟನ್’ನ ಗುರುತಿಸುತ್ತ
ತಾನೇ ‘ಕ್ಯಾಪ್ಟನ್’ ಆಗಿದ್ದ ನೀನು
ಎಲ್ಲರೊಳಗಿನ ಅಪ್ಪನಿಗೂ ರೂಪಕ.

ಹಾಗಾಗಿ ಇವುಗಳೊಂದಿಗೆ ಅಂಥ ಒಂದು ಅನುಸಂಧಾನ ಸಹಜವಾಗಿ ಸಾಧ್ಯವಾಗುತ್ತದೆ. ಇಲ್ಲಿ ಒಟ್ಟು ನಲವತ್ತೊಂದು ಪ್ಲಸ್ ಎರಡು ಕವಿತೆಗಳಿವೆ. ನನಗಿಷ್ಟವಾದ ಎರಡು ಕವಿತೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಉಳಿದೆಲ್ಲಾ ಕವಿತೆಗಳನ್ನು ಓದುವ ಹಸಿವು, ರುಚಿ ನಿಮಗೆ ಹತ್ತಲಿ ಎನ್ನುವ ಉದ್ದೇಶದಿಂದ, ಅಷ್ಟೆ.

ಇಷ್ಟು ಕಾಲದ ಸಿಟ್ಟು ಮಾಸಿ
ಮೆಲುನಗೆ ಮನೆಮಾಡಿತ್ತು ಅವನ ಕಣ್ಣಲ್ಲಿ
ಆ ಬೆಳಗ್ಗೆ.

ಚೂರು ಮಾತು,
ತೇಲುಗಣ್ಣು,
ಬೊಕ್ಕತಲೆಯ ತಡವರಿಸುವ ಮೊಂಡುಬೆರಳು.
ಅಚ್ಚಬಿಳಿ ದುಂಡುಚಂದಿರ ಎರಡಾಗಿ ಮುರಿದು
ಅರ್ಧ ಅವನ ಈ ಕಣ್ಣಲ್ಲಿ, ಇನ್ನರ್ಧ ಆ ಕಣ್ಣಲ್ಲಿ.

ನೋವಿಗೆ ಮೋಹಗೊಂಡಂತೆ ಅವನ ಒಡಲು
ಹೂರಳುತ್ತಿತ್ತು ಅತ್ತಿಂದತ್ತ
ತಣಿವಿಗೆ ತಾವನರಸಿ.

ಆಯಸ್ಸಿನ ಬಿಡುನುಡಿಯು ತುಟಿಯಂಚಿಗೆ ಬಂದು
ಅದುರುತ್ತಿತ್ತು ಸರಿಯಾದ ನುಡಿಗಟ್ಟಿಗೆ ಕಾದು.

ಈ ಕವಿತೆ ಆ ದಿನದ ಕೊನೆಯ ಕ್ಷಣಗಳ ಬಗ್ಗೆ ಹೇಳುತ್ತಿದೆ. ತನ್ನ ಸುತ್ತಲಿನ ಜಗತ್ತಿನ ಬಗ್ಗೆ ಹುಟ್ಟುವ ಅಸಮಾಧಾನ, ಕಿರಿಕಿರಿ, ಅಸಹ್ಯ ಮತ್ತು ಬೇಸರವನ್ನು ಈ ಜಗತ್ತು ಸಿಟ್ಟು ಎಂದು ತಿಪ್ಪೆಸಾರಿಸಿ ಗುರುತಿಸುತ್ತ ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆ. ಅಂಥ ಒಂದು ಮಾತಿನ (ಅರಿಯದೇ ಆಡುವ ಮಂದಿಯ ಮಾತಿನ ಬಗ್ಗೆ) ಕವಿತೆ ಕೂಡಾ ಇಲ್ಲಿದೆ. ಅದರ ಹಿನ್ನೆಲೆಯಲ್ಲಿಯೇ ಈ ಸಿಟ್ಟು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈಗ ಈ ಜಗತ್ತಿನಿಂದಲೇ ಹೊರಟು ನಿಂತ ಗಳಿಗೆಯಲ್ಲಿ ಮೆಲುನಗೆ ಮಾತ್ರ ಇದೆ. ಅಲ್ಲಿಂದ ಮುಂದೆ ಆ ದೇಹಸ್ಥಿತಿಯನ್ನು ವಿವರಿಸುತ್ತಾರೆ. ಮೊಂಡು ಬೆರಳಿನ ಕತೆ ಕೂಡ ಇನ್ನೊಂದು ಕವಿತೆಯಲ್ಲಿ ಬರುತ್ತದೆ. ಇಲ್ಲಿ ಈ ದುಂಡು ಚಂದಿರ ಮುರಿದ ಕತೆ ಇದೆ. ಆ ಚಂದ್ರನಾದರೂ ಅರ್ಧ ಒಂದು ಕಣ್ಣಲ್ಲಿಯೂ ಇನ್ನರ್ಧ ಇನ್ನೊಂದು ಕಣ್ಣಲ್ಲಿಯೂ ಇದ್ದಾನೆನ್ನುತ್ತಾರೆ ಕವಿ. ಆದರೆ ನಮಗೆ ಗೊತ್ತು, ಆಗಸದಲ್ಲಿ ಆಗ ಇರುವುದೇ ಅರ್ಧ ಚಂದಿರ ಎಂಬ ಸತ್ಯ. ಅಥವಾ ಆ ಚಂದಿರ ಕೂಡ ಕವಿಯ ಕಲ್ಪನೆಯಾಗಿರುವ ಸಾಧ್ಯತೆಯಿದೆ. ಕವಿ ನಮಗಿಲ್ಲಿ ಕಟ್ಟಿಕೊಡುವ ಈ ರೂಪಕವನ್ನು ಮೇಲೆ ವಿವರಿಸಿದ ವಾಸ್ತವ ಮತ್ತು ವರ್ಚ್ಯುಯಲ್ ವಾಸ್ತವದ ಜೊತೆಗಿಟ್ಟು ನೋಡಬಹುದು.

ಈ ಕವಿತೆಯ ಅತ್ಯಂತ ಸುಂದರ ಸಾಲು ಕೊನೆಯಲ್ಲಿದೆ. ‘ಆಯಸ್ಸಿನ ಬಿಡುನುಡಿಯು ತುಟಿಯಂಚಿಗೆ ಬಂದು ಅದುರುತ್ತಿತ್ತು, ಸರಿಯಾದ ನುಡಿಗಟ್ಟಿಗೆ ಕಾದು’ ಎನ್ನುವ ಮಾತು ಗಮನಿಸಿ. ಬಹುಶಃ ಇಡೀ ಆಯುರ್ಮಾನದಲ್ಲಿ ನಾವೆಲ್ಲ ನುಡಿಯ ಬಹುದಾದ ಒಂದೇ ಒಂದು ಮಾತಿನ ಗತಿ ಇದೇ, ಇಷ್ಟೇ ಇರಬಹುದು ಎನಿಸುವುದಿಲ್ಲವೆ? ಆ ಮಾತನ್ನು ಆಡುವ ಗಳಿಗೆ ಬಂದಾಗ ಬಹುಶಃ ಯಾವ ಭಾಷೆಯೂ, ಯಾವ ಸದ್ದೂ ಮನುಷ್ಯನ ನಾಲಗೆಗೆ, ಲೇಖನಿಗೆ ನಿಲುಕುವುದೇ ಇಲ್ಲವೇನೋ. ಆದರೆ ಅಲ್ಲಿಯವರೆಗೆ ಸುಮ್ಮನೇ ಪಾತ್ರೆ ಸದ್ದು ಮಾಡಿದಂತೆ ಬಡಬಡಿಸುತ್ತಲೇ ಇರುತ್ತೇವೆ, ಈ ಲೇಖನವೂ ಸೇರಿದಂತೆ...
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, December 10, 2019

ಮೌನದ ಸದ್ದು ಕೇಳಿಸಿಕೊಂಡ ಶಂಖ ಘೋಷ್

ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಪದ್ಮಭೂಷಣ ಮತ್ತು ಜ್ಞಾನಪೀಠ ಪ್ರಶಸ್ತಿ ಕೂಡ ಪಡೆದ ಬಂಗಾಳಿ ಕವಿಯೊಬ್ಬರ ಒಂದು ಪುಟ್ಟ ಕವನ ಸಂಕಲನವನ್ನಷ್ಟೇ ಸಾಹಿತ್ಯ ಅಕಾಡಮಿ ಇಂಗ್ಲೀಷಿಗೆ ಅನುವಾದಿಸಿ ಪ್ರಕಟಿಸುತ್ತದೆ. 1992ರಲ್ಲಿ ಪ್ರಕಟವಾದ ಈ ಪುಸ್ತಕವನ್ನು, ಅದರಲ್ಲೂ ಮುಖ್ಯವಾಗಿ ಅರವತ್ತನಾಲ್ಕು ಚೌಪದಿಗಳ ಒಂದು ಗುಚ್ಛವನ್ನು ಅಮೆರಿಕದಲ್ಲಿನ ಕೆಲವು ವಿಶ್ವವಿದ್ಯಾಲಯಗಳು ಅಧ್ಯಯನಕ್ಕಾಗಿ ಎತ್ತಿಕೊಳ್ಳುತ್ತವೆ. ಅಲ್ಲಿ ಇದರ ಬಗ್ಗೆ ಪ್ರಬಂಧಗಳು ಪ್ರಕಟವಾಗುತ್ತವೆ. 2005ರಲ್ಲಿ ಇದೇ ಸಂಕಲನದ ಪರಿಷ್ಕೃತ ಮುದ್ರಣವೊಂದು ಹೊರಬರುತ್ತದೆ. ಆ ಕವಿ ಶಂಖ ಘೋಷ್. ಇದುವರೆಗೆ ಇಂಗ್ಲೀಷಿಗೆ ಬಂದಿರುವ ಅವರ ಏಕೈಕ ಕವನ ಸಂಕಲನದ ಹೆಸರು Emperor Babur's Prayer and Other Poems. ಬಂಗಾಳಿಯಿಂದ ಇದನ್ನು ಇಂಗ್ಲೀಷಿಗೆ ಅನುವಾದಿಸಿದವರು ನ್ಯೂಜೆರ್ಸಿಯ ಕಲ್ಯಾಣ್ ರೇ. ಆದರೆ ಇವತ್ತು ಈ ಪುಸ್ತಕದ ಒಂದೇ ಒಂದು ಪ್ರತಿ ಬೇಕೆಂದರೆ ಹರಸಾಹಸ ಪಡಬೇಕು. ಶಂಖ ಘೋಷ್ ಬಂಗಾಳಿ ಬರದವರಿಗೆ ಬಹುತೇಕ ಅಲಭ್ಯರೇ.

2017ರಲ್ಲಿ ಚಂದಕ್ ಚಟರ್ಜಿ ಎನ್ನುವವರು ಆರು ಮಂದಿ ಬಂಗಾಳಿ ಕವಿಗಳ ಕವಿತೆಗಳನ್ನು ಇಂಗ್ಲೀಷಿಗೆ ಅನುವಾದಿಸಿ ಒಂದು ಸಂಕಲನ ಸಿದ್ಧಪಡಿಸಿದರು. ಇದನ್ನು ಪೊಯೆಟ್ರಿವಾಲಾ ಸಂಸ್ಥೆ ಪ್ರಕಟಿಸಿದೆ. ಇದರಲ್ಲಿ ಶಂಖ ಘೋಷ್ ಅವರ ಹದಿನೇಳು ಕವಿತೆಗಳಿವೆ. ಇದನ್ನು ಹೊರತು ಪಡಿಸಿದರೆ ಶಂಖ ಘೋಷರು ಪತ್ರಿಕೆಯೊಂದಕ್ಕೆ ಬರೆಯುತ್ತ ಬಂದ ಕೆಲವು ವ್ಯಕ್ತಿಚಿತ್ರಗಳ ಒಂದು ಪುಸ್ತಕ "ಎನ್ ಆಲ್ಬಮ್ ಗಾನ್ ಟು ಸ್ಲೀಪ್" ಎಂಬ ಹೆಸರಲ್ಲಿ ಲಭ್ಯವಿದೆ. ಇದರ ಅನುವಾದಕರು ಶ್ರೋತಸ್ವಿನಿ ಭೌಮಿಕ್.


ಕನ್ನಡಿಗರು ಸ್ವಲ್ಪ ಅದೃಷ್ಟವಂತರೆಂದೇ ಹೇಳಬಹುದು. 2018ರಲ್ಲಿ ಕನ್ನಡದ ಕವಯತ್ರಿ ಜ ನಾ ತೇಜಶ್ರೀಯವರ ಕನ್ನಡಾನುವಾದದಲ್ಲಿ ಬಂದ "ಚಕ್ರವರ್ತಿ ಬಾಬರನ ಪ್ರಾರ್ಥನೆ ಮತ್ತು ಇತರ ಕವಿತೆಗಳು" ಹೆಸರಿನ ಸಂಕಲನವನ್ನು ಸಾಹಿತ್ಯ ಅಕಾಡಮಿಯೇ ಪ್ರಕಟಿಸಿದೆ.


ಶಂಖ ಘೋಷರು ಕವಿತೆಗಳನ್ನು ಬರೆಯ ತೊಡಗಿದ್ದು ಟಾಗೋರ್ ನೆರಳಿನಿಂದ ಬಂಗಾಳಿ ಕವಿತೆ ಹೊರಬರತೊಡಗಿದ ಪರ್ವಕಾಲದಲ್ಲಿ. ಅದೇ ಹೊತ್ತಿಗೆ ಭಾರತದ ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿಯೂ ಹೊಸ ಗಾಳಿ ಬೀಸತೊಡಗಿತ್ತು. ಎರಡನೆಯ ಮಹಾಯುದ್ಧ, ಭೀಕರ ಬರಗಾಲ, ಸಾಂಕ್ರಾಮಿಕಗಳ ಅಟ್ಟಹಾಸಕ್ಕೆ ನಲುಗುತ್ತಿರುವಾಗಲೇ ಒದಗಿದ ಸ್ಚಾತಂತ್ರ್ಯ ಮತ್ತು ಎಡಪಂಥೀಯ ರಾಜಕೀಯ ಸಿದ್ಧಾಂತಗಳು ತೆರೆದಿಟ್ಟ ಹೊಸ ಪ್ರಗತಿಪಥ ಬಿಸಿರಕ್ತದ ಯುವಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಅವಧಿಯದು. ಬಂಗಾಳಿ ಕಾವ್ಯ ಪರಂಪರೆ ತನ್ನ ಪಾರಂಪರಿಕ ಜಡತ್ವದಿಂದ ಹೊರಳಿ ಹೊಸ ಚುರುಕು, ಹೊಸ ಬಿಸುಪು ಮತ್ತು ಚೈತನ್ಯ ಪಡೆಯಲು ತಹತಹಿಸುತ್ತಿತ್ತು. ನಿರ್ಬಂಧದ ಎಡರು ತೊಡರುಗಳು, ಹೇರಿಕೊಂಡ ಇತಿಮಿತಿಗಳು ಮತ್ತು ಅತಿರೇಕಗಳ ವಿರುದ್ಧ ಶಂಖ ಘೋಷರ ಕವಿತೆಗಳು ಸೆಡ್ಡು ಹೊಡೆದು ನಿಲ್ಲುತ್ತವೆ ಎನ್ನುತ್ತಾರೆ ಕಲ್ಯಾಣ್ ರೇ. 

‘ಶಂಖ ಘೋಷರ ಕವಿತೆಗಳು ಹೊಮ್ಮಿಸುವ ಧ್ವನಿ ಯಾವುದೇ ಇದ್ದರೂ ಕಾಣ್ಕೆಯೊಂದೇ. ಬಹುಶಃ ಕವಿತೆಯನ್ನು ತಿಳಿದುಕೊಳ್ಳುವುದಕ್ಕೆ ಅವುಗಳ ಧ್ವನಿಶಕ್ತಿಯ ಅರಿವಷ್ಟೇ ಇದ್ದರೆ ಸಾಲದು, ಅವು ಹೊಮ್ಮಿಸುವ ಮೌನವನ್ನು ಕೂಡ ಅರಿಯುವ ಶಕ್ತಿಯಿರಬೇಕಾಗುತ್ತದೆ. ಶಂಖ ಘೋಷರ ಕವಿತೆಗಳು ಮೌನದ ಕಡೆಗೆ ತುಡಿಯುತ್ತವೆ. ಶಾಬ್ದಿಕವಾದುದನ್ನು ಸೋಸುತ್ತಲೇ ಅನಿವಾರ್ಯವಾದುದನ್ನಷ್ಟೇ ಉಳಿಸಿಕೊಂಡು ಘನೀಭವಿಸುತ್ತವೆ. ಈ ಹಾದಿ ಅಪಾಯಕಾರಿಯಾದುದು. ಮೌನ ತನ್ನ ಗಮ್ಯವನ್ನು ಅಚ್ಚುಕಟ್ಟಾಗಿ ಸಾಧಿಸಲು ವಿಫಲವಾದರೆ ಕಾವ್ಯ ವಾಯ್ಡ್ ಅನಿಸಿಕೊಳ್ಳುತ್ತದೆ. ಅವರಿಗೆ ತಾವು ಆಯ್ದುಕೊಳ್ಳುವ ಶಬ್ದದ ಬಗ್ಗೆ ಅತೀವ ಎಚ್ಚರವಿತ್ತು. ಹಾಗಾಗಿ ನಿರಂತರ ಚಲನಶೀಲ ಚೈತನ್ಯವಾದ ನೀರು, ಗಾಳಿ ಮತ್ತು ರಕ್ತ ಅವರ ಕವಿತೆಗಳಲ್ಲಿ ಪ್ರವಹಿಸುತ್ತಲೇ ಇರುತ್ತದೆ.’ 

ಶೋಧ
ರಾತ್ರಿ ಎರಡೂವರೆಗೆ ಕೈಯಲ್ಲಿ ಟಾರ್ಚು ಹಿಡಿದು
ಹೊರಬಿದ್ದಿದ್ದೇನೆ ನಾನು ಕಳೆದು ಹೋದ ಒಂದು
ಶಬ್ದವನ್ನು ಹುಡುಕುತ್ತ, ಕಾಡಿನಲ್ಲಿ.
ಅಕ್ಷರಮಾಲೆಯ ಎಲೆಗಳ ನಡುವೆ
ಮರಗಳು ನಿಡುಸುಯ್ಯುತ್ತಿವೆ
ಆಗಾಗ ಕಾಲಡಿಯ ಹುಲ್ಲು ಕೂಡ ಸಣ್ಣಗೆ ನಡುಕ ತೋರಿವೆ
ಬಹುಶಃ ಅವು ಏನೋ ಹೇಳಬಯಸಿವೆ, ಶಬ್ದವಿಲ್ಲದೆ
ಯಾರೂ ಬರೆಯದ ಇತಿಹಾಸ ನಮಗೆ ಅರ್ಥವಾಗಿದೆ


ಅನುಕ್ತ

ಹಾಗಿದ್ದ ಪಕ್ಷದಲ್ಲಿ ನೋಡುವುದು ಅರ್ಥಹೀನ, ಆಡುವುದು ಅರ್ಥಹೀನ.
ಎಲ್ಲರೂ ಹತಾಶರಾದಂತಿದೆ.
ಪದಗಳು ಕೂಡ ಲಿಪಿಯಲ್ಲಿ ಮೂಡುತ್ತಿಲ್ಲ ಈಗ,
ಎಂಥ ದಾರಿದ್ರ್ಯ, ಎಂಥ ಅಸಹಾಯಕತೆ.

ಬಾ, ಇನ್ನಷ್ಟು ದಿಟ್ಟಿಸು, ಹಿಗ್ಗಿಸು ದೃಷ್ಟಿ.

"ಎದೆಗೂಡಿನೊಳಗೆ ಜೀವಮಿಡಿತ" ಒಂದು ಬಗೆಯ ಖಂಡಕಾವ್ಯ. ನಾಲ್ಕು ಸಾಲುಗಳ ಸುಮಾರು ಅರವತ್ತನಾಲ್ಕು ಕವಿತೆಗಳ ಈ ಗುಚ್ಛಕ್ಕೆ ಭಾಷ್ಯವೋ ಎಂಬಂತೆ ಒಂದು "ಆರ್ಕೆಸ್ಟ್ರಾ" ಹೆಸರಿನ ಕವಿತೆಯಿದೆ. 

ನಾದ ಮೇಳ

ಅರುಣೋದಯವು ಆತಂಕದೊಂದಿಗೆ ಬಂತು. ನಾನಿನ್ನೂ ಆ ಕನಸನ್ನು ಮರೆತಿರಲಿಲ್ಲ.

ಗಾಳಿ ಕೂಡ ಆಡದ ಕಗ್ಗತ್ತಲ ನೀರವ ರಾತ್ರಿ - ಆಗಸದಲ್ಲಿ ಚಂದ್ರನಿಲ್ಲ
ಇರುಳ ನೆತ್ತಿಯ ಮೇಲೆ ಭುವಿಯ ಕ್ಷಿತಿಜದ ಮೇಲೆ ನಿಂತಿದ್ದೆ ನಾನು
ನನ್ನ ದೇಹ ಬೆಳೆಯುತ್ತಿತ್ತು, ಉದ್ದಾನುದ್ದ ಇನ್ನೂ ಉದ್ದ
ಆಗಸದೆತ್ತರಕ್ಕೆ, ಅದನ್ನು ಮುಟ್ಟಿಯೇ ಬಿಡುವ ಛಲ ಹೊತ್ತ ಹಾಗೆ.

ನನ್ನೆದೆಗೂಡ ಒಂದು ಮೂಳೆಯ ಕಿತ್ತು ತೆಗೆದಿದ್ದೆ ನಾನು.
ಅದನ್ನು ಹಿಡಿದ ಕೈ ನರ್ತಿಸುತ್ತಿತ್ತು ವಿಭ್ರಾಂತ ಲಯದಲ್ಲಿ
ಆ ತಾಳಮೇಳಕ್ಕೆ ಗ್ರಹ ತಾರೆ ನಕ್ಷತ್ರಗಳೆಲ್ಲ ಗಿರಗಿರನೆ ಸುತ್ತಿದವು
ವಿಷಣ್ಣ ಭಾವದ ಆ ನಾದ ಒಮ್ಮೆ ಏರುತ್ತ ಮತ್ತೆ ಇಳಿಯುತ್ತ ಆಡುತ್ತಿತ್ತು.

ಆ ನಾದಕ್ಕೆ ಗೋರಿಯೊಳಗಿಂದ ಒಮ್ಮೆಗೇ ಬಂಧವಿಮುಕ್ತಗೊಂಡಂತೆ
ದೇಹಗಳು ಮೇಲೆದ್ದು ತೇಲಿ ಬರುತ್ತವೆ
ಅನೂಹ್ಯ ಕೈಗಳ ಚಪ್ಪಾಳೆ ಸದ್ದು ಎಲ್ಲೆಲ್ಲೂ ಕೇಳಿಬರುತ್ತವೆ
ನಾನು ಬಯಲಲ್ಲಿ ಮೈಚಾಚಿ ಬಿದ್ದುಕೊಂಡೇ ಕತ್ತಲಲ್ಲಿ ಕಣ್ಣು ಬಿಡುತ್ತೇನೆ

ಕಾಮ್ರೇಡರ ತಂಡೋಪತಂಡ
ಇನ್ನೂ ಚಾಚಿಕೊಂಡೇ ಇರುವ ಅವರ ಬಾಹುಗಳು
ಇಬ್ಬನಿಯಲ್ಲಿ ತೊಯ್ದಿವೆ, ಸತ್ತಂತಿವೆ.

ಗಂಗೆಯ ತಡಿಯಲ್ಲಿ ತಮ್ಮ ಸಾವನ್ನು ಎದುರು ನೋಡುತ್ತ ಕೊನೆಯ ದಿನಗಳನ್ನು ಕಳೆಯ ಬಯಸುವ ಹಿಂದೂಗಳ ಶ್ರದ್ಧೆ, ನಂಬುಗೆಯ ಹಿನ್ನೆಲೆಯನ್ನಿಟ್ಟುಕೊಂಡು ಕಲ್ಯಾಣ್ ರೇ ಹೇಳುತ್ತಾರೆ, ಹರಿವ ನದಿಯ ತೀರ ಭೂಮಿಯ ಕೊನೆಯನ್ನೂ, ನೀರಿನ ಸುರುವಾತನ್ನೂ ಸೂಚಿಸಿದರೆ, ಬದುಕಿನ ಕೊನೆಯನ್ನು ಸೂಚಿಸುವ ಸಾವು, ದಿನದ ಕೊನೆಯನ್ನು ಸೂಚಿಸುವ ಕತ್ತಲೆ ಎಲ್ಲವೂ ಮೇಳೈಸಿದಂತೆ ಶಂಖ ಘೋಷರ ಕವಿತೆಗಳು ರುದ್ರಭೂಮಿಯ ಹಿನ್ನೆಲೆಯನ್ನಿಟ್ಟುಕೊಂಡು ಬರುತ್ತವೆ. ದೇಹ ಒಂದು ಬಂಧನ. ಬದುಕಿನೊಂದಿಗೆ ನಿತ್ಯ ನಡೆಸುವ ಹೋರಾಟವೇ ಸಾವಿನ ನಿರಾಕರಣೆಯ ಮೂಲಕ ನಡೆಯುವ ಹೋರಾಟ ಕೂಡಾ ಆಗಿರುತ್ತದೆ. ಹರಿವ ನದಿಯ ನೀರಿಗೆ ದಡವೇ ಒಂದು ಬಂಧನ, ತೊಡಕು, ಮಿತಿ, ನಿರ್ಬಂಧ. ಅದರ ಹರಿವ ಗುಣವೇ ಅವೆಲ್ಲದರ ವಿರುದ್ಧ ನೀರು ಒಡ್ಡುವ ಪ್ರತಿರೋಧ. ನೀರಿನ ಹರಿವ ಗುಣವೇ ಅದರ ಚೈತನ್ಯ, ಉಸಿರು ಮತ್ತು ಬದುಕು. ದಡ ಅದರ ಸಾವು. ನಾವೆಲ್ಲರೂ ಎದೆಮಟ್ಟದ ನೀರಿನಲ್ಲಿ ನಿಂತಿದ್ದೇವೆ. ಕೆಲವರಿಗೆ ಅದರ ಅರಿವಿದೆ, ಇನ್ನು ಕೆಲವರಿಗೆ ಇಲ್ಲ. 

ಯಾವುದರ ಕುರಿತೂ, ಯಾರ ಕುರಿತೂ ತಲೆಕೆಡಿಸಿಕೊಳ್ಳದ
ಸ್ಪಂದಿಸದ ಈ ನೀರು ಯಾಕೋ ಭಯ ಹುಟ್ಟಿಸುತ್ತಿದೆ....
ನಾವೆಲ್ಲರೂ ಇಲ್ಲಿ ಎದೆಮಟ್ಟ ಮುಳುಗಿದ್ದೇವೆ
ಕೆಲವರಿಗೆ ಅದರ ಅರಿವಿದೆ, ಕೆಲವರಿಗೆ ಇಲ್ಲ.
ಈ ಸರಳ ಸತ್ಯ ಕಾಣಿಸಿದ
ಮುಸಲಧಾರೆಯ ಮಳೆಯೇ, ನಿನಗೆ ಶರಣು!

ಶಂಖ ಘೋಷರ ಕವಿತೆಗಳಲ್ಲಿ ಮಳೆ ಒಂದು ಪ್ರತಿಮೆಯಂತೆ ಗಾಳಿ ಮತ್ತು ಭೂಮಿಯನ್ನು ಒಂದು ಗೂಡಿಸುವ ಶಕ್ತಿಯಂತೆ ಬರುತ್ತದೆ ಎನ್ನುತ್ತಾರೆ ಕಲ್ಯಾಣ್ ರೇ. ಭೂಮಿ ಮತ್ತು ಆಕಾಶ, ಬದುಕು ಮತ್ತು ಸಾವು, ಕತ್ತಲು ಮತ್ತು ಹಗಲು ಇವುಗಳ ನಡುವೆ ಇಬ್ಬನಿ, ಮಳೆ, ಗಾಳಿ, ನಾದ ಒಂದು ತಂತು, ಎನ್ನೆದೆಯಿಂದ ನಿನ್ನೆದೆಗೆ ಸಂಬಂಧ ಬೆಸೆವ ತಂತು, ಇದಕು ಅದಕು ಎದಕು! 

"ಎದೆಗೂಡಿನೊಳಗೆ ಜೀವಮಿಡಿತ" ಗುಚ್ಛದಲ್ಲಿ ಬರುವ ಅರವತ್ತನಾಲ್ಕು ಚೌಪದಿಗಳಲ್ಲಿ ಒಂದು ಹೀಗಿದೆ:

ಇದೀಗ ಅರಳಿದ ದಳಗಳ ತಾವರೆಯ ಮಧುಪಾತ್ರೆಯಲ್ಲಿ ಮುಳುಗೇಳ ಬಯಸುವೆ
ಅದರಲ್ಲಿ ನನ್ನ ಕಂಗಳ, ನರನಾಡಿಗಳ ಬಿಗಿತೆಕ್ಕೆಯಲ್ಲಿ ಹುಟ್ಟಿದ ಜನ್ಮಜನ್ಮಾಂತರಗಳ
ಅರುಣೋದಯದ ಇಬ್ಬನಿಯ ಬಣ್ಣದಲ್ಲೇ ತೊಳೆದು
ಮತ್ತೆ ಆ ದಳಗಳನ್ನು ಮುಚ್ಚುತ್ತ ವಿದಾಯ ಹೇಳುವ ಮುನ್ನ,
ಹಿಂದಿರುಗುವುದೆಂದರೆ ತಿರುಗಿ ನಡೆಯುವುದಲ್ಲ, ನಿಜಕ್ಕಾದರೆ ಅದು
ಮತ್ತಷ್ಟು ಸನಿಹಕ್ಕೆ ಬರುವುದು ಎಂದು ಅದಕ್ಕೆ ಹೇಳುವೆ.

ದಳಗಳನ್ನು ಮುಚ್ಚುವುದು ಇಲ್ಲಿ ಮುಚ್ಚಟೆಯ ಒಂದು ಕ್ರಿಯೆಯಾಗಿರುವುದನ್ನು ಗಮನಿಸಿ.

ರಿಲ್ಕೆಯ ಅಭಿಮಾನಿಯಾಗಿದ್ದ ಶಂಖ ಘೋಷ್ ಕವಿತೆಗಳ ಅಧ್ಯಯನ, ಚಿಂತನ-ಮಂಥನ ಕನ್ನಡ ಕಾವ್ಯ ಪರಂಪರೆಗೆ ಬಹಳಷ್ಟು ಕಸು ತುಂಬುವ ಶಕ್ತಿಯನ್ನು ಹೊಂದಿದೆ. ಶಂಖ ಘೋಷರ ಮತ್ತಷ್ಟು ಕವಿತೆಗಳು ಕನ್ನಡಕ್ಕೆ ಬರುವಂತಾದರೆ ಚೆನ್ನ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, December 5, 2019

ಸಾವಿನ ಕೊನೆಯ ಆಸೆ

"ನನಗೆ ಯಾರೋ ಸತ್ತ ಸುದ್ದಿ ಕೇಳಿದಾಗ ನಾನೇ ಸತ್ತ ಹಾಗೆ ಆಗುತ್ತದೆ"

- ಈ ಮಾತನ್ನು ನಾನು ಕೇಳಿದ್ದು ಇನ್ನೂ ಅಂಗನವಾಡಿಯಲ್ಲಿ ಆಟವಾಡುತ್ತ ದಿನ ಕಳೆಯುತ್ತಿದ್ದ ಒಂದು ಪುಟ್ಟ ಮಗುವಿನ ಬಾಯಲ್ಲಿ.

ಕಾದಂಬರಿಯ ಹೆಸರು : ನಿನ್ನ ಆಪ್ತರ ಸಾವು ನಿನ್ನ ಬಳಿ ಏನನ್ನೋ ಕೇಳಿದಾಗ ಅದನ್ನು ಹಿಂದಿರುಗಿಸುವುದು ನಿನ್ನ ಕರ್ತವ್ಯ ಎಂದು ತಿಳಿ. ಅವರ ಸಂಗ, ಸಹವಾಸ, ಸಾನ್ನಿಧ್ಯ, ಸಾಂಗತ್ಯ, ಸಾಮೀಪ್ಯಗಳಿಂದೆಲ್ಲ ಸಾಕಷ್ಟು ಪಡೆದಿರಬಹುದು ನೀನು. ಈಗ ಅವರು ಕಣ್ಮರೆಯಾದ ಗಳಿಗೆ, ಅದು ನಿನ್ನಿಂದ ಏನೆಲ್ಲವನ್ನು ಸೆಳೆದುಕೊಂಡ ಅನುಭವದಿಂದ ನೀನು ಕಂಗಾಲಾಗುತ್ತಿರುವಿಯೋ, ಅದು ಸಾವು ನಿನ್ನಿಂದ ಪಡೆಯಬಯಸುವ ತೆರಿಗೆಯೇ ಇದ್ದೀತು....

ಡೆನ್ಮಾರ್ಕಿನ ನಯಾ ಮರಿಯ ಐತ್ ಬರೆದ ಕಾದಂಬರಿ When Death Takes Something from You Give it Back ಅಥವಾ ಕಾರ್ಲ್ಸ್ ಬುಕ್ ಈ ಬಾರಿ ಸಾಕಷ್ಟು ಸುದ್ದಿ ಮಾಡಿದ ಒಂದು ಕೃತಿ. ಹೆಚ್ಚೆಂದರೆ ನೂರ ಐವತ್ತು ಪುಟಗಳ ಈ ಪುಟ್ಟ ಕಾದಂಬರಿಗಿರುವ ಗುರುತ್ವ ಅಚ್ಚರಿ ಹುಟ್ಟಿಸುವಂಥದು. ಒಂದು ನಿಟ್ಟಿನಿಂದ ಇದು ವೈಯಕ್ತಿಕ ಬದುಕಿನ ಒಂದು ತುಣುಕು. ಅಷ್ಟರ ಮಟ್ಟಿಗೆ ಆತ್ಮಕಥಾನಕ, ವಾಸ್ತವದ ಕಥನ. ಆದರೆ ಭಾಷೆಯಲ್ಲಿ ನಾವು ಏನನ್ನೇ ಹಿಡಿದಿಡಲು ಪ್ರಯತ್ನಿಸಿದರೂ ಅದು ತಕ್ಷಣವೇ ವಾಸ್ತವದ ಹಂಗಿನಿಂದ ಕಳಚಿಕೊಂಡು ನಿರೂಪಣೆಯ ಗಂಧಕ್ಕೆ ಮೈಯೊಡ್ಡಿ ಕಲ್ಪಿತವಾಸ್ತವವಾಗಿ ಬಿಡುತ್ತದೆ ಎನ್ನುವುದೇ ನಿಜ. ಭಾಷೆಯ ಹಂಗು ಮತ್ತು ನೋಡುಗನ ಕಣ್ಣುಗಳ ಪೂರ್ವಾಗ್ರಹಗಳ ಹಂಗು ಎರಡೂ ನಿರೂಪಣೆಯನ್ನು ಸತ್ಯದಿಂದ ವಿಚಲಿತಗೊಳಿಸುತ್ತವೆ. ಹಾಗಾಗಿ ಇದೊಂದು ಕಾದಂಬರಿ. ಆದರೆ ಸತ್ಯ ಯಾವುದು? ಸತ್ಯ ಶಬ್ದವಿಲ್ಲದ್ದು.

ಆದರೆ ಇದು ಆತ್ಮಕಥಾನಕವಲ್ಲ. ಇಲ್ಲಿನ ನಿರೂಪಣೆಯಲ್ಲಿ ಸೂಕ್ಷ್ಮವಾಗಿಯಾದರೂ ಒಂದು ತಂತ್ರದ ಬಳಕೆಯೂ ಇದೆ. ಸಾವು ಹೆಜ್ಜೆಯ ಮೇಲೆ ಹೆಜ್ಜೆ ಎತ್ತಿಡುತ್ತಾ ನಿಧಾನವಾಗಿ ಬರುತ್ತದೆ ಇಲ್ಲಿ. ಮೊದಲಿಗೆ ಅದೊಂದು ಸುದ್ದಿಯಾಗಿ. ಸತ್ತಿದ್ದಾನೆ ಎಂದು. ನಂತರ ಅವನಿನ್ನೂ ಸತ್ತಿಲ್ಲ, ಸಾಯುತ್ತ ಬಿದ್ದಿದ್ದಾನೆ ಎಂದು. ಅವನನ್ನು ಬದುಕಿಸುವುದು ಸಾಧ್ಯವಿಲ್ಲದಷ್ಟು ದೇಹ ಘಾಸಿಗೊಂಡಿದೆ ಎಂದು. ಅವನು ಐದನೆಯ ಮಹಡಿಯಿಂದ ನಗ್ನವಾಗಿ ಹಾರಿಕೊಂಡ ಎಂದು. ಹಾಗಿದ್ದೂ ಅದು ಆತ್ಮಹತ್ಯೆಯಾಗಿರಲಿಲ್ಲ ಎಂದು. ಅದಕ್ಕೆ ಸಲಿಂಗರತಿ ಮತ್ತು ಹುಚ್ಚಿನ ಬಣ್ಣ ಹಚ್ಚಿ ತಮ್ಮ ಕರ್ತವ್ಯ ವಿಮುಖತೆಯನ್ನು ಮುಚ್ಚಿಹಾಕಲು ಯತ್ನಿಸಿದ ಪೋಲೀಸರ ನಿರ್ಲಕ್ಷ್ಯದ ಪರಿಣಾಮ ಎಂದು. ಅಮಲುಕಾರಕ ಮಶ್ರೂಮ್ ತಿಂದಿದ್ದರಿಂದ ಎಂದು....

ಸಾವಿಗೊಂದು ಕಾರಣ ಬೇಕು. ಅದು ನಮಗೆ ಅರ್ಥವಾಗುವಂತಿರಬೇಕು. ಸಾವಿನ ಸುತ್ತ ಸದಾ ಕಾರ್ಯಕಾರಣಗಳು, ಹಾಗಾಗಿದ್ದಿದ್ದರೆ- ಹೀಗಾಗಿದ್ದಿದ್ದರೆ ಬದುಕುತ್ತಿದ್ದನೇನೋ ಎಂದು.....

ಬದುಕಲಾರ ಎಂಬುದು ನಿಶ್ಚಿತವಾಗಿದ್ದೂ ಹಂಬಲಿಸುವ ತಾಯಿ ಮನದ ಹಂಬಲಗಳಲ್ಲಿ ಇದು ಕಾದಂಬರಿ ಅಲ್ಲ, ಹೃದಯದ ಅಳಲು, ಒಂದು ಕವಿತೆ ಅನಿಸುತ್ತದೆ. ನಿರೂಪಣೆಯ ಲಯದಲ್ಲಿ, ಪುನರಾವರ್ತನೆಯಾಗುವ ವಿವರಗಳ ಹಿಂದೆ ಮಡುಗಟ್ಟಿರುವ ನೋವಿನ ಅರಿವಿನಲ್ಲಿ ಸಾಹಿತ್ಯದ ಸೀಮಿತ ನೆಲೆಗಳನ್ನು ಮೀರುವ ಹಂಬಲ ಸ್ಪಷ್ಟವಾಗಿಯೇ ಇರುವ ಈ ಕೃತಿ ಕಾದಂಬರಿ ಹೌದು ಮತ್ತು ಅಲ್ಲ. ಬಹುಶಃ ಇದು ಹೀಗೆಲ್ಲ ಅದರ ಪ್ರಕಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಓದಬಹುದಾದ್ದು ಎನ್ನುವುದು ನಿಜವೇ. ಆದರೆ ಈ ಕೃತಿಗೆ ಮಹತ್ವಾಕಾಂಕ್ಷೆ ಇದೆ. ಇದು ಒಂದು ನೆಲೆಯಲ್ಲಿ ನಮ್ಮದೇ ಬದುಕನ್ನು ನಮಗೆ ತೆರೆದು ತೋರಿಸುವ ದಾರ್ಶನಿಕ ಕೃತಿ ಕೂಡ ಹೌದು. ಹಾಗಾದಾಗ ಅದರ ನೆಲೆಗಳ ಬಗ್ಗೆ ಅತ್ಯಂತ ಸ್ಪಷ್ಟವಾದ ಒಂದು ಪರಿಕಲ್ಪನೆ ಕೂಡ ನಮಗೆ ಅಗತ್ಯವೇ. ಕಣ್ಣು ಕಂಡಿದ್ದನ್ನು, ಮನಸ್ಸು ಕಂಡಿದ್ದನ್ನು ಜೀರ್ಣಿಸಿಕೊಳ್ಳಲು ನಿಂತ ನೆಲ ಎಷ್ಟು ನಿಜ ಎನ್ನುವುದರ ಅರಿವನ್ನು ಪ್ರಶ್ನಿಸುತ್ತದೆ ತರ್ಕ. ಅದು ಕನಸೋ, ಕಲ್ಪನೆಯೋ, ಭ್ರಮೆಯೋ, ನಿಜವೋ ಎನ್ನುವುದು ಅದರ ತರ್ಕ. ಆದರೆ ಅದಕ್ಕೆ ನಿಜ ಎನ್ನುವುದರ ನಿಜವಾದ ಅರಿವಿಲ್ಲ. ನಿಜ ಎನ್ನುವುದು ನಿಲುಕುವುದು ಅಷ್ಟು ಸರಳವಿಲ್ಲ. ಆದರೇನು, ಸಾವಿಗೆ ತರ್ಕದ ಹಂಗೇ ಇಲ್ಲ. ಬದುಕಿಗಿದೆ. ಕಾರ್ನಾಡರು ಒಂದು ಕಡೆ ಸತ್ಯಕ್ಕೆ ತರ್ಕದ ಹಂಗಿಲ್ಲ, ಸುಳ್ಳಿಗಿದೆ ಎನ್ನುತ್ತಾರೆ. ಸಾವು ಸತ್ಯ; ಬದುಕು ಸುಳ್ಳು. - ಇದು ಕೇಳಲು ಚಂದ ಎನಿಸುವ ಪೊಳ್ಳು ಮಾತು.

ಇಪ್ಪತ್ತೈದು ವರ್ಷದ ಮಗ ಇದ್ದಕ್ಕಿದ್ದಂತೆ ಸತ್ತಾಗ ಸಿಡಿಲಿನಂತೆ ಬಂದೆರಗುವ ಆ ಸುದ್ದಿ ಒಬ್ಬ ತಾಯಿಯನ್ನು ಹೇಗೆ ಛಿದ್ರಗೊಳಿಸುತ್ತ ಹೋಗುತ್ತದೆ ಮತ್ತು ಆ ನೋವಿನಿಂದ, ನೋವಿನೊಂದಿಗೆ ಬದುಕುತ್ತ, ಎಂದಿನಂತೆ ಸಾಗುವ ಈ ಜಗತ್ತಿನಲ್ಲಿ ಏಗುವ ಸಂಕಟಗಳೇನು ಎನ್ನುವುದನ್ನೆಲ್ಲ ಭಾಷೆಯ ಮಿತಿಯಲ್ಲಿ ಹೇಳುವ ಹೊಸ ಒಂದು ಕ್ರಮ ಇದು ಎಂದು ಕಾದಂಬರಿಯನ್ನು ಓದುತ್ತ ಯಾರಿಗಾದರೂ ಅನಿಸುತ್ತದೆ. ಏಕೆಂದರೆ, ಇಲ್ಲಿನ ವಿವರಗಳಲ್ಲಿ ಸಿಗುವ ವಿದ್ಯಮಾನಗಳೆಲ್ಲ ಶನಿವಾರ ತಡರಾತ್ರಿಯಿಂದ ತೊಡಗಿ ಸೋಮವಾರದ ಹಗಲಿನ ತನಕದ್ದು. ಮತ್ತು ಈ ಯಾವತ್ತೂ ವಿವರಗಳ ಬಗ್ಗೆ ಹೇಳುವುದಾದರೆ, ಅವೆಲ್ಲವೂ ಸಾವಿನ ಸುದ್ದಿ, ಸಾವಿನ ವಿವರ, ದೇಹವೊಂದು ಪ್ರಾಣದೊಂದಿಗೆ ವ್ಯಕ್ತಿಯಾಗಿ, ಉಸಿರು ನಿಂತಿದ್ದೇ ಕಳೇಬರವಾಗುವ ಚೋದ್ಯದ ಬಗೆಗೇ. ನಮ್ಮ ಬದುಕಿಗೆ ಬೇಕಾಗಿಯೋ ಬೇಡವಾಗಿಯೋ ಬಂದೊದಗುವ ಒಬ್ಬ ವ್ಯಕ್ತಿ ಸಾವಿನೊಂದಿಗೆ ಏನೇ ಮಾಡಿದರೂ ನಮ್ಮ ಸಂಪರ್ಕಕ್ಕೆ ಅಲಭ್ಯನಾಗುವುದು ಮಾತ್ರವಲ್ಲ, ಅವನ ನಿರ್ಗಮನದೊಂದಿಗೇ ಮುಗಿದು ಹೋಗದ, ಮುಗಿದು ಬಿಡಲು ಒಪ್ಪದ ಅನೇಕ ಜೀವಂತ ಮತ್ತು ಬೆಳೆಯುತ್ತ ಹೋಗುವ ಸಂಗತಿಗಳನ್ನು ನಾವು (ಉಳಿದು ಬಿಟ್ಟವರು) ಎದುರಿಸಬೇಕಾಗುವುದರ ಸಂಕಟಗಳು.

ನಯಾ ಮರಿಯ ವಿವರಗಳಲ್ಲಿ ಭಾಷೆ ಮತ್ತು ಸಾವಿನ ನಿಗೂಢಗಳು ತೆರೆದುಕೊಂಡಿರುವ ಬಗೆ ಮಾತ್ರ ಬಹುಶಃ ನಮಗೆ ಹೆಚ್ಚು ರಿಲೆವಂಟ್ ಅನಿಸುವ ಸಂಗತಿ ಎನ್ನಬಹುದು. ಏಕೆಂದರೆ, ಎಲ್ಲಾ ಸಾವುಗಳೂ ನಮಗೆ ಅನ್ಯರದ್ದೆನಿಸುವ ಸಾಧ್ಯತೆಗಳೇ ಹೆಚ್ಚು. ನಮ್ಮ ತೀರ ಆಪ್ತರ ಸಾವು ಮಾತ್ರ ನಮ್ಮನ್ನು ಮಾತಿನಿಂದಲೂ, ಯೋಚನೆಯಿಂದಲೂ, ಈ ಜಗತ್ತಿನ ವ್ಯಾಪಾರಗಳಿಂದಲೂ ಒಂದಷ್ಟು ಕಾಲವಾದರೂ ಮುಕ್ತಗೊಳಿಸುವ ಶಕ್ತಿ ಹೊಂದಿರುತ್ತದೆ. ಉಳಿದಂತೆ ಇನ್ನೊಬ್ಬರ ಸಾವನ್ನು ಎದುರಿಸಲು ನಮಗೆ ಮಾತುಗಳು, ಕಣ್ಣೀರು, ಮೌನ ಎಲ್ಲ ಸಾಕಾಗುತ್ತವೆ.

ನಯಾ ಮರಿಯ ಇಲ್ಲಿ ಅಲ್ಲಲ್ಲಿ ನಮಗೆ ಕೆಲವೊಂದು ಶಬ್ದಗಳ ಡಿಕ್ಷನರಿ ಮೀನಿಂಗ್ ಏನಿದೆ ಎನ್ನುವುದನ್ನು ಪೂರ್ತಿಯಾಗಿ ಹೇಳುತ್ತ, ಅವು ಎಷ್ಟು ಜಡವಾಗಿವೆ ಅಥವಾ ಕ್ಲೀಷೆಯಾಗಿವೆ ಎನ್ನುವಂತೆ ಅದನ್ನು ದಾಖಲಿಸುತ್ತಾರೆ. ಸಂತಾಪ ಸೂಚಿಸಲು, ಸಾಂತ್ವನ ಹೇಳಲು, ನಮ್ಮ ನಮ್ಮ ನೋವು ತೋಡಿಕೊಳ್ಳಲು ನಾವು ಬಳಸುವ (ಅವಲಂಬಿಸುವ) ಭಾಷೆ ಎಷ್ಟೋ ಬಾರಿ ಸತ್ತ ಭಾಷೆ. ಅಷ್ಟು ಮಾತ್ರವಲ್ಲ, ತೀರ ಆರ್ತವಾದಾಗಲೂ ಬರುವ ಶಬ್ದಗಳು ಕೂಡಾ ಅಷ್ಟೇನೂ ಸಹಜವೆನಿಸುವ ಸದ್ದು ಹುಟ್ಟಿಸುವುದಿಲ್ಲ. ಅವೆಲ್ಲ ಕರ್ಕಶವಾಗಿರುತ್ತವೆ, ಸನ್ನಿವೇಶಕ್ಕೆ ಸ್ವಲ್ಪವೂ ಹೊಂದುತ್ತಿರುವುದಿಲ್ಲ ಮತ್ತು ಆಡಿದವರಿಗೇ ಮುಜುಗರ, ಇರಿಸುಮುರಿಸು ತರುವಂತಿರುತ್ತವೆ. ಆದರೆ ಅದನ್ನೆಲ್ಲ ನಾವು ಗಮನಿಸುವುದೇ ಇಲ್ಲ. ಉದಾಹರಣೆಗೆ, ಆ ರಾತ್ರಿ ನಿಜಕ್ಕೂ ಏನು ನಡೆಯಿತು ಎನ್ನುವುದನ್ನು ಒಂದಿಷ್ಟೂ ಮರೆಮಾಚದೆ ತನಗೆ ಹೇಳಬೇಕು ಎಂದು ಸತ್ತ ಹುಡುಗನ ತಾಯಿ ಅವನ ರೂಂಮೇಟ್ ಬಳಿ ಕೇಳುತ್ತಾಳೆ. ಆತ ವಿವರ ವಿವರವಾಗಿ ಆ ರಾತ್ರಿ ನಡೆದಿದ್ದನ್ನು ಕೂಲಂಕಶವಾಗಿ ವರದಿಯೊಪ್ಪಿಸುತ್ತಾನೆ. ಆದರೆ ನಿಜ ಸಿಗುತ್ತದೆಯೇ ಅಷ್ಟು ಸುಲಭವಾಗಿ? ನಿಜಕ್ಕೂ ಎಂದರೇನು? ಸತ್ಯ ಎಂದರೇನು? ಸತ್ಯವನ್ನು ನಾವು ನಿಜಕ್ಕೂ ಮುಟ್ಟಬಲ್ಲೆವೆ? ಅದನ್ನು ಮಾತಿನಿಂದ ಮುಟ್ಟುವುದು ಸಾಧ್ಯವಿದೆಯೆ, ನಿಜಕ್ಕೂ? ಸಾವಿಗೊಂದು ಕಾರಣವಿದ್ದರೆ ಅದನ್ನು ಬದುಕಿರುವ ನಾವು ಮುಟ್ಟಿ ನೋಡಬಲ್ಲೆವೆ?

ಶಬ್ದಗಳು ಸಂದರ್ಭದಿಂದ ಕಳಚಿಕೊಂಡು ನಿಂತಾಗ ಬರೀ ಶಬ್ದಗಳಾಗಿ ಬಿಡುತ್ತವೆ. ಡಿಕ್ಷನರಿಯ ತುಂಬ ಇಂಥ ಶಬ್ದಗಳಿವೆ. ಆದರೆ ಸಾವಿನ ನೆರಳಲ್ಲಿ ಅವುಗಳನ್ನು ಬಳಸಿದಾಗ ಅದಕ್ಕೆ ಅರ್ಥ ಬಂದು ಬಿಡುತ್ತದೆಯೆ? ಭಾವ ಆವರಿಸಿ ಬಿಡುತ್ತದೆಯೆ?

All
Always
Never
Are
Were
Have been
Will be

ಹಾಗೆಯೇ ದುಃಖ ಎನ್ನುವುದು, ಕಳೆದುಕೊಳ್ಳುವುದು ಎನ್ನುವುದು, ಪ್ರೀತಿ ಎನ್ನುವುದು ಎಲ್ಲ ಏನು? ಕೊನೆಗೂ ನಾವು ಶಬ್ದಗಳನ್ನು ಶಬ್ದಗಳಲ್ಲಿ, ಭಾಷೆಯಲ್ಲಿ ಹಿಂಜುತ್ತ ಹೋಗಬಹುದೇ ಹೊರತು ಅವುಗಳನ್ನು ತಲುಪಲಾರೆವು. ಭಾವನೆಗಳು ಮನೋಧರ್ಮವನ್ನು ಹೊಂದಿಕೊಂಡು ಬಂದು ಹೋಗುವ, ಕ್ಷಣಭಂಗುರ ಸ್ಥಿತಿಯಲ್ಲಿರುತ್ತವೆ. ಅವುಗಳನ್ನು ಮೂರ್ತಗೊಳಿಸಲು ಮನುಷ್ಯ ಭಾಷೆಯನ್ನು ಅವಲಂಬಿಸಿದ್ದಾನೆಯೇ ಹೊರತು ಭಾವನೆಗಳಿಗೆ ಭಾಷೆಯ ಹಂಗಿಲ್ಲ. ಸಂಗೀತದ ಒಂದು ರಾಗ, ನೃತ್ಯದ ಒಂದು ಆಂಗಿಕ ಚಲನೆ, ಮುದ್ರೆ, ಪಂಚೇಂದ್ರಿಯಗಳ ಮೂಲಕ ಒಂದು ನಿರ್ದಿಷ್ಟ ಭಾವವನ್ನು ಉದ್ದೀಪಿಸಬಹುದು ಎನ್ನುವುದು ನಿಜವಾದರೂ ಅದಕ್ಕೆ ನಿರ್ದಿಷ್ಟ ಮಾನದಂಡಗಳಾಗಲೀ, ಶಾಸ್ತ್ರವಾಗಲೀ, ನಿಯಮಗಳಾಗಲೀ ಕೇವಲ ಸಾಪೇಕ್ಷವಾದ ಪರಿಕಲ್ಪನೆಗಳಷ್ಟೆ. ಹಾಗಾಗಿ ಒಂದು ನಿರ್ದಿಷ್ಟ ಅನುಭವ ಅದರಷ್ಟಕ್ಕೆ ಅದು ಅನುಭವವಾಗಿ ಮುಖ್ಯವೇ ಹೊರತು ಅದು ಅರ್ಥವಾಗಬೇಕು, ಅದಕ್ಕೊಂದು ಅರ್ಥ ಇರಬೇಕು ಎನ್ನುವುದೇನಿಲ್ಲ. ಈ ಬದುಕಿನ ಅರ್ಥ ಹುಡುಕುವವರಿಗೆ, ಸಾವಿನ ಅರ್ಥ ಹುಡುಕುವವರಿಗೂ ಈ ಮಾತು ಅನ್ವಯಿಸುತ್ತದೆ. ಸಂಗೀತ, ನೃತ್ಯದಂಥ ಕಲೆಗಳು ಅನುಭವವನ್ನು, ಭಾವನೆಗಳ ಪುನರ್‌ಸೃಷ್ಟಿಯ ಮೂಲಕ ದಕ್ಕಿಸಬಹುದು ಎಂದು ನಂಬಿ ನಿಂತಿವೆ. ಸಾಹಿತ್ಯ ಭಾಷೆಯ ಮೂಲಕ ಇದನ್ನು ಸಾಧಿಸಲು ಪ್ರಯತ್ನಿಸುತ್ತದೆ. ಆದರೆ ಭಾಷೆಯೇ ಅನುಭವವಲ್ಲ. ಭಾಷೆಯೇ ಭಾವನೆಯಲ್ಲ. ಭಾವನೆ, ಅನುಭವ, ಅರ್ಥ ಎಲ್ಲವನ್ನೂ ಭಾಷೆಯ ತೆಕ್ಕೆಗೆ ತರಬಲ್ಲೆ ಎಂದುಕೊಳ್ಳುವುದು ಅಹಂಕಾರವಾಗುತ್ತದೆ. ಬಹುಶಃ ಸಾವಿನ ಅನುಭವ ನಮಗೆ ಈ ಸತ್ಯವನ್ನು ಕಾಣಿಸುವಷ್ಟು ಬೇರಾವುದೇ ಅನುಭವ ಕಾಣಿಸದೇನೋ.

How ‘are’ ‘you’ doing ‘now’? (ಹೇಗಿದ್ದಿ ಈಗ?)
A little ‘better’. (ಸ್ವಲ್ಪ ಉತ್ತಮ)
Have ‘you’ had any ‘sleep’ at all? (ಒಂಚೂರಾದ್ರೂ ಮಲಗೋಕೆ ಆಯ್ತಾ?)
Yes, ‘I’ ‘slept’ a little. (ಹೌದು, ಸ್ವಲ್ಪ ಮಲಗಿದೆ ನಾನು)
- ಇಲ್ಲಿ ಕಾಣುವ ಉದ್ಧರಣ ಚಿಹ್ನೆಗಳು ‘ಸದ್ಯ’ದ ಸಂದರ್ಭದಲ್ಲಿ (ಸಾವಿನ ನೆರಳಲ್ಲಿ, ಹೆಣ ಇಟ್ಟುಕೊಂಡು ಕೂತ ಸಂದರ್ಭದಲ್ಲಿ) ಪಡೆದುಕೊಳ್ಳುವ ವಿಶೇಷ ಅರ್ಥವನ್ನು ಸೂಚಿಸುವುದಕ್ಕಷ್ಟೇ ಇವೆ. ಕನ್ನಡ ಅವತರಣಿಕೆಯಲ್ಲಿ ಅವುಗಳನ್ನು ಬಳಸಿಲ್ಲ. ಒಟ್ಟಾರೆ ಧ್ವನಿಯಲ್ಲಿ ಪದಗಳು ಬಳಕೆಯಾಗುವ ಮತ್ತು ಅವೇ ಪದಗಳು ಬೇರೆ ಸಂದರ್ಭದಲ್ಲಿ ಕೊಡುವ ಅರ್ಥ ಮತ್ತು ಭಾವವನ್ನು ಕನ್ನಡಿಗರು ಊಹಿಸಬಹುದು.

ಒಮ್ಮೆ ಮೂರು ಗಂಟೆ ರಾತ್ರಿ ನಮಗೊಂದು ಫೋನ್ ಕಾಲ್ ಬಂತು. ಆಗ ಮನೆಯಲ್ಲಿ ಲ್ಯಾಂಡ್ ಲೈನ್ ಇತ್ತು. ಫೋನ್ ಎತ್ತಿದ್ದು (ರಿಸೀವ್ ಮಾಡಿದ್ದು) ನಾನು. ಆ ಕಡೆಯಿಂದ ಅಳುವ ಧ್ವನಿ ಮಾತ್ರ ಕೇಳಿಸುತ್ತಿತ್ತು. ನಡುನಡುವೆ, ಆ ಅಳುವಿನಲ್ಲೇ ಆ ವ್ಯಕ್ತಿ ಏನೋ ಹೇಳಲು ಪ್ರಯತ್ನಿಸುತ್ತಿದ್ದಂತಿತ್ತು. ಆ ಅಪಕ್ಷಣದಲ್ಲೂ ಮನಸ್ಸಿಗೆ ಎಲ್ಲವೂ ಅರ್ಥವಾಗುತ್ತಿತ್ತು ಅಂತ ಕಾಣುತ್ತದೆ. ಆ ಕಡೆ ಮಾತನಾಡುತ್ತಿದ್ದ ವ್ಯಕ್ತಿ ನನ್ನ ತಾಯಿಯ ತಮ್ಮ, ನನ್ನ ಮಾವ, ಪಾಂಡು. ಅವನಿಗಾಗ ಏನಿಲ್ಲವೆಂದರೂ ಅರವತ್ತೊಂದು ಅರವತ್ತೆರಡರ ವಯಸ್ಸು. ಅವನು ಬಿಕ್ಕಿಬಿಕ್ಕಿ ಅಳುತ್ತಿದ್ದ. ಅವನು ಆಡುತ್ತಿದ್ದ ಅಸ್ಪಷ್ಟ ಶಬ್ದ, ‘ನಾಗೇಶ, ನಾಗೇಶ’ ಎನ್ನುವುದಷ್ಟೇ. ನಾಗೇಶ ನನ್ನ ಹಿರಿಯ ಮಾವನ ಹೆಸರು, ಅಮ್ಮನ ಅಣ್ಣ. ಆತ ಇದ್ದಕ್ಕಿದ್ದಂತೆ ತೀರಿಕೊಂಡಿದ್ದ. ನಾಗೇಶ ಮತ್ತು ಪಾಂಡು ಇಬ್ಬರಿಗೂ ಬಹುಕಾಲದಿಂದ ಪರಿಹರಿಸಲಾರದ ಆಸ್ತಿ ಜಗಳವಿತ್ತು.

ಈ ಕಾದಂಬರಿ ಓದುತ್ತ ಓದುತ್ತ ನಿಮಗೆ ತೀರ ಹತ್ತಿರದವರೊಬ್ಬರ ಸಾವನ್ನು ಆವಾಹಿಸಿಕೊಂಡು ಅನುಭವಿಸುವ ವಿಚಿತ್ರ ಅನುಭವ ದಕ್ಕುತ್ತದೆ. ಅದು ಬೇಕು ಈ ಬದುಕಿಗೆ. ಅದೇ ಈ ಕಾದಂಬರಿಯ ಪ್ರಧಾನ ಆಕರ್ಷಣೆ. ಸಾವು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ ಅದು ಕಾಣಿಸಿಕೊಳ್ಳುವ ಬಗೆಯಲ್ಲಿ ಭಿನ್ನತೆಯಿರುತ್ತದೆ. ಮನೆಯಲ್ಲಿ ಹಾಸಿಗೆ ಹಿಡಿದಿರುವ ವಯೋವೃದ್ಧರು, ಮಾರಣಾಂತಿಕ ಕಾಯಿಲೆಯಿಂದ ಸಾವನ್ನು ಕಾಯುತ್ತಿರುವ ಸಂಬಂಧಿಗಳು, ಆಕಸ್ಮಿಕಕ್ಕೆ ದುರ್ಮರಣಕ್ಕೀಡಾದವರು, ತಾವಾಗಿ ಸಾವನ್ನು ತಂದುಕೊಂಡವರು, ಅನಾಹುತಕ್ಕೆ ಬಲಿಯಾದವರು ಇತ್ಯಾದಿ. ಇವರೆಲ್ಲರಲ್ಲಿ ಸುದೀರ್ಘಾವಧಿ ಸಾವನ್ನು ಕಾಯುತ್ತ ಕಳೆಯುವ ವಯೋವೃದ್ಧರು ಮತ್ತು ನಿಶ್ಚಿತವಾಗಿ ಸಾವು ಪಕ್ಕದಲ್ಲಿದೆ ಎಂದು ಅರಿವಿದ್ದು ಬದುಕುತ್ತಿರುವ ಮಾರಣಾಂತಿಕ ಕಾಯಿಲೆಗೆ ತುತ್ತಾದವರು - ಇಂಥವರ ಸಾನ್ನಿಧ್ಯ ನಮಗೆ ಕಲಿಸುವ ಪಾಠ, ಕೊಡುವ ಅನುಭವ ದೊಡ್ಡದು. ಹಾಗೆಯೇ ಆತ್ಮಹತ್ಯೆ ಮಾಡಿಕೊಂಡು ಸಾವು-ಬದುಕಿನ ತೂಗುಯ್ಯಾಲೆಯಲ್ಲಿ ತೂಗುತ್ತಿರುವವರ ಸಾನ್ನಿಧ್ಯ. ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ. ವೆಂಟಿಲೇಟರಿನಲ್ಲಿ ಉಸಿರಾಡುತ್ತಿರುವ, ವೆಂಟಿಲೇಟರ್ ಯಾವಾಗ ತೆಗೆಯುವುದು ಎನ್ನುವುದಷ್ಟೇ ನಿರ್ಧಾರವಾಗಬೇಕಿರುವ ವ್ಯಕ್ತಿಯ ಸಾನ್ನಿಧ್ಯ....

ಏನೇ ಮಾಡಿದರೂ ಸತ್ತ ವ್ಯಕ್ತಿಯೊಂದಿಗೆ ಇನ್ನು ಒಂದೇ ಒಂದು ಮಾತನ್ನೂ ಆಡುವಂತಿಲ್ಲ, ಅವನಿಗೂ ನಮಗೆ ಕೇಳುವಂತೆ ಒಂದೇ ಒಂದು ಮಾತನ್ನೂ ಆಡಿಬಿಡುವುದು ಶಕ್ಯವಿಲ್ಲ. ನಿನ್ನೆ ತನಕ ನಕ್ಕು, ಸಿಟ್ಟುಮಾಡಿ, ಗೇಲಿ ಮಾಡಿ, ಒಡನಾಡಿ ಇದ್ದ ದೇಹವನ್ನು ಕಟ್ಟಿಗೆಯ ರಾಶಿಯಲ್ಲಿಟ್ಟು ಸುಟ್ಟು ಬಿಡುವ ಕ್ರಿಯೆ. ಮಣ್ಣಿನಲ್ಲಿ ಹೂಳುವ ಕ್ರಿಯೆ.... ಆ ಕಣ್ಣುಗಳು ತೆರೆದೇ ಇದ್ದರೂ ಏನನ್ನೂ ಕಾಣಲಾರವು. ಆ ದೇಹ ಇನ್ನೂ ನಮ್ಮೊಂದಿಗಿದ್ದೂ ಕೇಳಿಸಿಕೊಳ್ಳದು, ಆಡಲಾರದು, ನೋಡಲಾರದು....

ಯಾವ ಭಾಷೆಯೂ. ಯಾವ ಶಬ್ದವೂ ತಲುಪಲಾರದು ಅವನನ್ನು...

ರಿಲ್ಕೆಯ ಮಾತುಗಳನ್ನು ಉದ್ಧರಿಸುತ್ತ ಸುರುವಾಗುವ ಈ ಕಾದಂಬರಿಯಲ್ಲಿ ವಾಲ್ಟ್ ವಿಟ್ಮನ್, ರೊಬಾಂಡ್, ಎಮಿಲಿ ಡಿಕನ್‌ಸನ್, ಕೋಚೊವ್ನ್‌ಸ್ಕಿ ಎಂದೆಲ್ಲ ಏನಿಲ್ಲವೆಂದರೂ ಸುಮಾರು ಹತ್ತಿಪ್ಪತ್ತು ಮಂದಿ ಬರಹಗಾರರ ಮನದಾಳದ ಮಾತುಗಳ ಕೋಟ್ಸ್ ಸಿಗುತ್ತವೆ. ಎಲ್ಲವೂ ಅತ್ಯಂತ ನಿಕಟರಾದವರ, ಮಕ್ಕಳು-ಗೆಳೆಯರು-ಸಂಗಾತಿಗಳ ಸಾವಿನ ಸುತ್ತವೇ ತಿರುಗುವುದು ಸಹಜ. ಆ ಎಲ್ಲ ಮಾತುಗಳೂ ನಮಗೆ ಸಾವನ್ನು ಮನುಷ್ಯ ಕಾಣುತ್ತ ಬಂದ ಬಗೆ, ಅದನ್ನು ಅರ್ಥ ಮಾಡಿಕೊಳ್ಳಲು ಸತತವಾಗಿ ಪ್ರಯತ್ನಿಸಿದ ಬಗೆ ಮತ್ತು ಸತ್ತ ವ್ಯಕ್ತಿಯೊಂದಿಗಿನ ಸಂಬಂಧವನ್ನು ಆತ ಅಥವಾ ಆಕೆಯ ಸಾವಿನ ನಂತರ ಜೀವಂತಗೊಳಿಸಿಕೊಂಡು ಬದುಕಿದವರ ಬಗ್ಗೆ ಹೇಳುತ್ತವೆ. ಸ್ವತಃ ಮರಿಯ ಬರೆದ ದಿನಚರಿಯ ಭಾಗಗಳು ಇಲ್ಲಿನ ನಿರೂಪಣೆಯಲ್ಲಿ ಸಿಂಹಪಾಲು ಪಡೆದಿವೆ. ಸಾವಿನ, ಸತ್ತವರ ಮತ್ತು ಸತ್ತವರ ಆಪ್ತರಾಗಿದ್ದು ಬದುಕಿ ಸತ್ತವರ ಈ ವಿಶ್ವರೂಪ ದರ್ಶನ ಒಂದು ಹೊಸ ಪಾಠ, ಒಂದು ಹೊಸ ದರ್ಶನ, ಒಂದು ಹೊಸ ಒಳನೋಟ ನೀಡುವಂತಿರುವುದು ನಿಜ.

ಒಂದು ನಿಟ್ಟಿನಿಂದ ನೋಡಿದರೆ, ಎಷ್ಟೋ ಸಂದರ್ಭಗಳಲ್ಲಿ ದೈಹಿಕ ಸಾನ್ನಿಧ್ಯ ಎನ್ನುವುದೇ ಒಂದು ಭ್ರಮೆಯಾಗಿರುತ್ತದೆ. ದಿನದ ಎಂಟು ಗಂಟೆಗಳಿಗೂ ಹೆಚ್ಚು ಅವಧಿಯನ್ನು ಮನೆಯ ಹೊರಗೇ ಕಳೆಯುವ ನಾವು ಮನೆಮಂದಿ ಜೀವಂತವಾಗಿದ್ದಾರೆ ಎನ್ನುವ ಭ್ರಮೆಯಲ್ಲೇ ನೆಮ್ಮದಿಯಾಗಿರುತ್ತೇವೆ. ಮನೆಯಲ್ಲಿರುವ ಮಂದಿ ಹೊರಹೋದ ನಾವು ಜೀವಂತವಾಗಿದ್ದೇವೆಂದೇ ನಂಬಿರುತ್ತಾರೆ. ಸಾಮಾನ್ಯವಾಗಿ ಈ ನಂಬಿಕೆಗೆ ಘಾಸಿಯಾಗದ ತೆರದಲ್ಲಿ ನಮ್ಮ ದಿನಗಳು ಕಳೆಯುತ್ತವೆ. ಅಮೆರಿಕೆಯಲ್ಲಿರುವ ಸಂಬಂಧಿಗಳ ಬಗ್ಗೆ, ರಾತ್ರಿ ಪಾಳಿಯಲ್ಲಿ ದುಡಿಯುತ್ತಿರುವವರ ಬಗ್ಗೆ, ಸೌದಿಯಲ್ಲಿ ದುಡಿಯುತ್ತಿರುವವರ ಬಗ್ಗೆ ಇಂಥದೇ ನಂಬುಗೆ ನಮ್ಮನ್ನು ಪೊರೆಯುತ್ತ ಇರುತ್ತದೆ. ಅಂಥ ಮಂದಿ ಸತ್ತಿದ್ದರೂ ಅಂಥ ಒಂದು ನಂಬುಗೆ ಪೊರೆಯುವುದು ಸಾಧ್ಯವೋ ಏನೋ. ಅಲ್ಲೆಲ್ಲ ದೈಹಿಕ ಸಾನ್ನಿಧ್ಯದ ಗೈರು ನಮ್ಮನ್ನು ಅಷ್ಟಾಗಿ ಕಾಡುವುದಿಲ್ಲ. ಆದರೆ ಸಾವು, ಅದು ಕೊಂಡೊಯ್ಯುವ ದೇಹ ಬಹುದೊಡ್ಡ ಶೂನ್ಯವನ್ನು ತಂದಿರಿಸಿ ಬಿಡುತ್ತದೆ. ನೆನಪುಗಳಲ್ಲೇ ಜೀವಮಾನವನ್ನೆಲ್ಲ ನೆಮ್ಮದಿಯಾಗಿ ಕಳೆಯಬಲ್ಲ ಮನುಷ್ಯ ಕಣ್ಣೆದುರು ಸುಟ್ಟ ದೇಹದ ಬಗ್ಗೆ ಅಂಥ ನೆನಪುಗಳಲ್ಲೇ ಸ್ವಸ್ಥವಾಗಿರಬಲ್ಲ ಸಾಧ್ಯತೆಯನ್ನು ಕಳೆದುಕೊಂಡು ನರಳುತ್ತಾನೆ. ಹಾಗೆಯೇ actual death ಮತ್ತು virtual death ನಡುವಿನ ವ್ಯತ್ಯಾಸ ಕೂಡ ನಮಗೆ ಮುಖ್ಯ ಎನಿಸುವುದೇ ಇಲ್ಲ. ಬದುಕಿರುವಾಗಲೇ ತನ್ನ ಸಂಬಂಧಿಕರನ್ನು ಗುರುತಿಸಲಾರದ, ಮಲಮೂತ್ರದ ಚಿಂತೆ ಬಿಟ್ಟರೆ ಬೇರೆ ಜಗತ್ತಿನ ವಿದ್ಯಮಾನಗಳಿಗೆಲ್ಲ ಸ್ಪಂದಿಸುವುದೇ ಅಸಾಧ್ಯವಾಗಿಬಿಟ್ಟಿರುವ, ಎಲ್ಲಾ ನೆನಪುಗಳನ್ನು ಕಳೆದುಕೊಂಡ ವಯೋವೃದ್ಧರ ಸಾವನ್ನು ಕೂಡ ನಾವು ಸಹಿಸಲಾರೆವು. ಏಕೆಂದರೆ ಅವರು ನಮ್ಮನ್ನು ಹೊತ್ತು, ಹೆತ್ತು, ಸಾಕಿ, ಸಲಹಿದ ಅಮ್ಮನೋ, ಅಪ್ಪನೋ ಎನ್ನುವುದನ್ನು ಹೇಗೆ ಮರೆಯಲು ಸಾಧ್ಯ?

ಆದರೆ ಕಾದಂಬರಿ ದೇಹಕ್ಕೆ ಹೆಚ್ಚು ಒತ್ತು ಕೊಟ್ಟು ನೋಡುವಂತೆ ಇದೆ ಅನಿಸುತ್ತದೆ. ಮನುಷ್ಯನ ದೇಹ ಒಂಟಿ. ಆದರೆ ತಾಯಿ ಮಾತ್ರ ತನ್ನ ದೇಹದೊಳಗೇ ಇನ್ನೊಂದು ದೇಹವನ್ನು ಅನುಭವಿಸಬಲ್ಲಳು ಮತ್ತು ಭೌತಿಕವಾಗಿ ಧರಿಸಬಲ್ಲಳು ಕೂಡ. ಹಾಗಾಗಿ, ಇಡೀ ಜಗತ್ತಿನ ಮಟ್ಟಿಗೆ ಅಸ್ತಿತ್ವವೇ ಇಲ್ಲದ ಒಂದು ದೇಹ ಅವಳಿಗಷ್ಟೇ ಇದೆ ಎನಿಸುವಂತೆ ಅಸ್ತಿತ್ವದಲ್ಲಿರುತ್ತದೆ, ಭ್ರೂಣವಾಗಿ, ಗರ್ಭದಲ್ಲಿ. ಸತ್ತು ಮಲಗಿದ ಮಗನನ್ನು ನೋಡಿ ಬಂದಾಕೆ ಸ್ನಾನ ಮಾಡುತ್ತ ತನ್ನ ದೇಹವನ್ನು ನೋಡಿಕೊಳ್ಳುತ್ತಾಳೆ. ಮೊಲೆಗಳು, ಹೊಟ್ಟೆ, ಕಿಬ್ಬೊಟ್ಟೆಯ ಮೇಲಿನ ಕಲೆ. ಸಿಸೇರಿಯನ್ ಮೂಲಕ ಹುಟ್ಟಿದವನು ಅವಳ ಮಗ, ಕಾರ್ಲ್. ಈಗ ಅವನಿಲ್ಲ. ಆದರೆ ಅವನ ಹುಟ್ಟಿನ ನೆನಪುಗಳನ್ನೆಲ್ಲ ಮತ್ತೆ ಮತ್ತೆ ಕೊಡುವ ಈ ದೇಹ, ಈ ಕಲೆ ಎಲ್ಲ ಇನ್ನೂ ಬದುಕಿದೆ, ಬದುಕಿಯೇ ಇರುತ್ತದೆ, ಪ್ರತಿದಿನ ಅವನ ಅಸ್ತಿತ್ವದ ಮೊದಲ ನೆನಪುಗಳನ್ನು ಕೆದಕುತ್ತಲೇ ಇರುತ್ತದೆ. ಅವಳಿಗಿದನ್ನು ಸಹಿಸಲಾಗುವುದಿಲ್ಲ. ತನ್ನ ದೇಹವನ್ನು ಹರಿದು ಚಿಂದಿ ಮಾಡಬೇಕು, ಅದನ್ನು ಕಳಚಿ ಎಸೆಯಬೇಕು, ಅದನ್ನು ಕೊನೆಗಾಣಿಸಬೇಕು ಎಂಬ ತೀವ್ರ ಒತ್ತಡವೊಂದು ಅವಳಲ್ಲಿ ಹುಟ್ಟಿಕೊಳ್ಳುತ್ತಿರುವಂತೆಯೇ ತಂಗಿ ಕರೆಯುತ್ತಾಳೆ. "ತಕ್ಷಣ ಹೊರಡಬೇಕು ನಾವು, ಬಟ್ಟೆ ಧರಿಸು, ಬೇಗ!"

ಕಾರ್ಲ್ ಕೂಡ ಐದನೆಯ ಮಹಡಿಯ ಕಿಟಕಿಯಿಂದ ರಾತ್ರಿಯ ಕತ್ತಲಿಗೆ ಧುಮುಕುವ ಮುನ್ನ ಇಂಥದ್ದೇ ಒಂದು ಒತ್ತಡವನ್ನು ಎದುರಿಸಿದ್ದು ನಮಗೆ ಇಲ್ಲಿ ನೆನಪಾಗುತ್ತದೆ. ದೇಹ ಮತ್ತು ಮನಸ್ಸು ಒಂದು ತಕ್ಕಡಿಯ ಎರಡು ಪರ್ಯಾಯ ತಟ್ಟೆಗಳಿದ್ದಂತೆ....

ಇಲ್ಲಿ ಸಾವು ಸಂಭವಿಸಲು ಆತ ಸೇವಿಸಿದ್ದ ಮಶ್ರೂಮ್ಸ್‌ನಿಂದ ಆತನಲ್ಲಿ ಉಂಟಾದ ಮಾನಸಿಕ ಉದ್ವಿಗ್ನತೆ ಕಾರಣ ಎಂದು ವರದಿ ಹೇಳುತ್ತದೆ. ಅವರೇ ಬೆಳೆದಿದ್ದ ಮಶ್ರೂಮ್ಸ್ ಅವು. ಹಿಂದೆಯೂ ಅವನು ತಿಂದಿದ್ದ ಪದಾರ್ಥ. ಎಲ್ ಎಸ್ ಡಿ ಸೇವಿಸಿದಾಗ ಉಂಟಾಗುವಂಥದೇ ಉದ್ವಿಗ್ನತೆ ಇದರಿಂದ ಉಂಟಾಗುತ್ತದೆ ಎನ್ನುತ್ತದೆ ವರದಿ. ತಾಯಿ ಅದರಲ್ಲಿ ಬಂದ ಶಬ್ದ ಸೈಕೊಸಿಸ್ ಎಂದರೇನೆಂದು ಅರ್ಥ ಹುಡುಕಿ ಹೊರಡುತ್ತಾಳೆ.

‘ನಾನು ಸೈಕೊಸಿಸ್ ಎಂಬ ಶಬ್ದದ ಬಗ್ಗೆ ಓದಿದೆ. ಏಕಕಾಲದಲ್ಲಿ ನೀನು ನೀನಾಗಿಯೂ ನೀನಲ್ಲವಾಗಿಯೂ ಇರುವುದು ಹೇಗೆ ಸಾಧ್ಯ ಎನ್ನುವುದನ್ನು ನನಗೆ ತಿಳಿದುಕೊಳ್ಳಬೇಕಾಗಿತ್ತು. ಅದು ಹೇಗೆ ನಿನ್ನ ದೇಹ ನಿನ್ನನ್ನು ಐದನೇ ಮಹಡಿಯಿಂದ ಹೊರಕ್ಕೆ ಎಸೆಯಿತು ಮತ್ತು ನೀನು ಮಾಡಿಕೊಂಡಿದ್ದು ಆತ್ಮಹತ್ಯೆ ಆಗಿರಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ. ನಿನ್ನ ದೇಹ ನಿನ್ನನ್ನು ಐದನೇ ಮಹಡಿಯಿಂದ ಹೊರಕ್ಕೆ ಎಸೆದಾಗ ನೀನು ನೀನಾಗಿಯೇ ಇರಲಿಲ್ಲ ಮತ್ತು ನಿನಗೆ ನಿಜಕ್ಕೂ ಏನು ನಡೆಯುತ್ತಿದೆ ಎನ್ನುವುದರ ಅರಿವೇ ಇರಲಿಲ್ಲ. ನನ್ನ ಮೆದುಳು ಕುದಿಯುತ್ತಿದೆ, ಈ ವೈಪ್ಯರೀತ್ಯವನ್ನು ನನಗೆ ಜೀರ್ಣಿಸಿಕೊಳ್ಳುವುದಕ್ಕೇ ಆಗುತ್ತಿಲ್ಲ. ಇಷ್ಟೊಂದು ವೈರುಧ್ಯವನ್ನು ಅದು ಹೇಗೆ ತಾನೇ ಒಬ್ಬನೇ ವ್ಯಕ್ತಿಯ ಮನಸ್ಸಿನ ಸಂತುಲನದ ಸ್ಥಿತಿಯಲ್ಲಿ ಪರಿಕಲ್ಪಿಸಿಕೊಳ್ಳುವುದು ಸಾಧ್ಯವೋ ನನಗೆ ಗೊತ್ತಾಗುತ್ತಿಲ್ಲ. ಆದರೆ ಸೈಕೊಸಿಸ್ ಎನ್ನುವುದು ಇಂಥ ಸ್ಥಿತಿಯಲ್ಲಿ ಎನ್ನಲಾಗುತ್ತದೆ.’

ತಾಯಿಯ ಬಳಿ ವಿವರಗಳಿವೆ. ಮಗು ಹುಟ್ಟಿದಾಗ ಇದ್ದ ತೂಕ, ತಲೆಗೂದಲ ಬಣ್ಣ, ಎತ್ತರ, ಮೈಬಣ್ಣ. ಹುಟ್ಟಿದ ದಿನ, ಸಮಯ. ಸತ್ತಾಗ ದೇಹಕ್ಕಿದ್ದ ತೂಕ, ಎತ್ತರ, ಮುರಿದ ಎಲುಬುಗಳ ಎಕ್ಸರೇ. ದಾನ ಮಾಡಿದ ಅಂಗಾಂಗಗಳು. ನಿಖರವಾದ ಸಮಯ. ನೆನಪುಗಳು ಹೆಚ್ಚಾದಷ್ಟೂ ವ್ಯಕ್ತಿಯ ಸಾವು ನಮ್ಮೊಂದಿಗೆ ಕಾಡುತ್ತ ಉಳಿಯುವ ಅವಧಿ ಹೆಚ್ಚುತ್ತ ಹೋಗುತ್ತದೆ. ಆದರೆ ಕಾಲ ಎನ್ನುವುದು ಕೂಡ ಒಂದು ಕಲ್ಪನೆ.

ದುಃಖ ಮತ್ತು ಭಯಕ್ಕಿರುವ ಸಾಮ್ಯತೆಯೊಂದು ಸಾವಿನೆದುರು ಕಣ್ಣಿಗೆ ಕಟ್ಟುತ್ತದೆ ಎನ್ನುತ್ತಾನೆ ಸಿ ಎಸ್ ಲಿವಿಸ್. ಅದು ಭಯವಲ್ಲ, ಭಯಕ್ಕೆ ಕಾರಣವಿಲ್ಲ. ಆದರೆ ಈ ದುಃಖ ಯಾಕೋ ಅವ್ಯಕ್ತ ಭಯದಂತಿತ್ತು.... ಅದು ಹತ್ತಿರದವರ ಸಾವನ್ನು ಮುಖಾಮುಖಿಯಾಗುವ ಗಳಿಗೆಯ ಭಾವ.

ಈ ಜಗತ್ತಿನಲ್ಲಿ ನಿತ್ಯವೂ ಸಾವಿರಾರು ಮಂದಿ ಸಾಯುತ್ತಲೇ ಇರುತ್ತಾರೆ. ಜಗತ್ತು ಯಾವತ್ತಿನಂತೆ ಸಾಗುತ್ತಲೇ ಇರುತ್ತದೆ. ನೋವುಗಳನ್ನು ಮರೆಯುತ್ತೇವೆ. ಮತ್ತೆ ದೈನಂದಿನಕ್ಕೆ ಮರಳುತ್ತೇವೆ. ಆದರೂ ಆಗಾಗ ಕಳೆದುಕೊಂಡವರನ್ನು ನೆನೆದು ಹನಿಗಣ್ಣಾಗುತ್ತೇವೆ. ಬದುಕಿನಲ್ಲಿ ಉದ್ದಕ್ಕೂ ಕಳೆದುಕೊಳ್ಳುತ್ತಲೇ ಅದೊಂದು ಅಭ್ಯಾಸವಾಗುತ್ತದೆ. ಪ್ರತಿ ಬಾರಿ ಏನನ್ನೋ, ಯಾರನ್ನೋ ಕಳೆದುಕೊಂಡಾಗಲೂ ನೋವಿನಿಂದ ಚೀರುತ್ತೇವೆ, ಅನುಭವದಿಂದ ಮಾಗುತ್ತೇವೆ, ಹೀಗೆ ಮಾಗುತ್ತ, ಏಗುತ್ತ ಬದುಕುವ ಬದುಕಿನ ನಿರರ್ಥಕತೆ, ಅರ್ಥಹೀನತೆ ಮತ್ತು ವ್ಯರ್ಥ ಪ್ರಯಾಸದ ಬಗ್ಗೆ ಚಿಂತಿಸುತ್ತೇವೆ, ನಿಟ್ಟುಸಿರಿಡುತ್ತೇವೆ. ಇದೆಲ್ಲದರ ಅರ್ಥವಾದರೂ ಏನು ದೇವರೇ ಎಂದು ಮೊರೆಯಿಡುತ್ತೇವೆ. ಅರ್ಥ ಎನ್ನುವುದು ಕೊನೆಗೂ ನಮಗೆ ಸಿಗುವುದೇ ಇಲ್ಲ. ಕೊನೆಗೊಂದು ದಿನ ‘ಶಿವನೆ ಸಾಕು’ ಎನ್ನುತ್ತ ಕಣ್ಮರೆಯಾಗುವ ದಿನಕ್ಕಾಗಿ ಕಾಯುತ್ತೇವೆ, ಕಣ್ಮರೆಯಾಗುತ್ತೇವೆ. ಜಗತ್ತು ನಾವಿಲ್ಲದಿದ್ದರೂ ಯಾವತ್ತಿನಂತೆ ನಡೆಯುತ್ತಲೇ ಇರುತ್ತದೆ ಎಂದುಕೊಂಡು ಈಗಲೇ ಸ್ವಲ್ಪ ಬೇಜಾರು ಮಾಡಿಕೊಳ್ಳಬಹುದು. ಬಟ್, ನಥಿಂಗ್ ಮ್ಯಾಟರ್ಸ್ ಹಿಯರ್.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, December 4, 2019

ಸೂಕ್ಷ್ಮ ಅಕ್ಷಿಗಳ ಪಕ್ಷಿನೋಟ

ಮೂರು ಕಥಾಸಂಕಲನಗಳ ನಂತರ ಅನುಪಮಾ ಪ್ರಸಾದ್ ಇದೀಗ ತಮ್ಮ ಮೊತ್ತಮೊದಲ ಕಾದಂಬರಿಯನ್ನು ಬರೆದು ಮುಗಿಸಿದ್ದಾರೆ. ಅವರ ಪ್ರತಿಯೊಂದು ಸಂಕಲನಕ್ಕೂ ಅದೂ ಇದೂ ತಕರಾರು ತೆಗೆಯುತ್ತಿದ್ದ ನನ್ನನ್ನು ಅವರು ಸಹಿಸಿದ್ದು ವಿಶೇಷ! ಈ ಬಾರಿ ಅವರು ನನಗೆ ನಿಜಕ್ಕೂ ಸವಾಲೊಡ್ಡಿದ್ದಾರೆ. ತಕರಾರುಗಳಿದ್ದರಷ್ಟೇ ಬರೆಯಲು ಇಷ್ಟಪಡುವ ನನ್ನ ಬಾಯಿ ಮುಚ್ಚಿಸುವಂಥ ಒಂದು ಅದ್ಭುತ ಕಾದಂಬರಿಯನ್ನು ಕೈಗಿಟ್ಟಿದ್ದಾರೆ. ಹಾಗಾಗಿ, ಇದು ನನಗೆ ನಿಜಕ್ಕೂ ಇಷ್ಟವಾಗಿದ್ದರ, ಸವಾಲೊಡ್ಡಿದ್ದರ ಕಾರಣಗಳನ್ನೇ ಹುಡುಕುತ್ತ ಹೋದರೆ ಅಂಥದ್ದೇನಾದರೂ ಸಿಗಬಹುದೆಂಬ ನಂಬಿಕೆಯಿಂದ ಹೊರಟಿದ್ದೇನೆ!

ಹತ್ತಿರದಿಂದ ಒಂದು ಕುಟುಂಬದ ಎರಡು ಮೂರು ತಲೆಮಾರಿನ ಬದುಕು, ಬವಣೆಯನ್ನು ಕಂಡಿದ್ದರೆ ಒಂದು ಕಾದಂಬರಿ ಬರೆಯುವುದು ನುರಿತ ಬರಹಗಾರರಿಗೆ ಅಷ್ಟೇನೂ ಕಷ್ಟವಾಗಲಾರದು. ಏಕೆಂದರೆ ಒಬ್ಬ ಬರಹಗಾರನ ದೊಡ್ಡ ಅನುಕೂಲವೇನೆಂದರೆ ಅವನು ಕಂಡಿದ್ದಕ್ಕೆಲ್ಲ ಸ್ಪಂದಿಸಿ, ತನ್ನನ್ನು ತಾನು ಕೊಟ್ಟುಕೊಂಡು, ಅದನ್ನು ತನ್ನಲ್ಲೇ ಆವಾಹಿಸಿಕೊಂಡು ಬದುಕಬಲ್ಲ. ಹಾಗಾಗಿ ಒಬ್ಬ ಬರಹಗಾರನಿಗೆ ಹಲವು ಜೀವನಗಳಿರುತ್ತವೆ. ಅವನು ಹಲವರ ಬದುಕನ್ನು, ಅದರ ಸಂಘರ್ಷವನ್ನು ತನ್ನದೇ ಎಂಬಂತೆ ತಲೆಯಲ್ಲಿ ಹೊತ್ತು ಬದುಕುತ್ತಿರುವುದರಿಂದಲೇ ಜೀವನವನ್ನು, ಮನುಷ್ಯನನ್ನು ಮತ್ತು ಮನಸ್ಸನ್ನು ಅವನು ಹೆಚ್ಚು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಲ್ಲ, ಪೂರ್ಣವಾಗಿ ಅನುಭವಿಸಬಲ್ಲ. ಆದರೆ ಹಾಗೆ ಬದುಕಿದ್ದು, ಅನುಭವಿಸಿದ್ದು, ಸ್ಪಂದಿಸಿದ್ದು ಎಲ್ಲ ಅಕ್ಷರವಾಗಿ ಹಾಳೆಯ ಮೇಲೆ ಮೂಡುವುದಕ್ಕೆ ಬೇರೆಯೇ ಪರಿಶ್ರಮ ಬೇಕಾಗುತ್ತದೆ. ಅದು ಬೇರೆಯೇ ಒಂದು ಸಾಹಸ, ಸವಾಲು ಮತ್ತು ಸಾಧನೆ. ಭಾಷೆಗೆ ಮೀರಿದ್ದು ತುಂಬ ಇದೆ ಬದುಕಿನಲ್ಲಿ. ಪಂಚೇಂದ್ರಿಯಗಳಿಗೆ ಒದಗಬಹುದಾದ ಎಲ್ಲವನ್ನೂ ಮೀರಿದ್ದು ಕೂಡ ತುಂಬ ಇದೆ ಬದುಕಿನಲ್ಲಿ. ಆದರೆ ಅದನ್ನೆಲ್ಲ ಇನ್ನೊಂದು ಜೀವದ ಅನುಭವಕ್ಕೂ ಬರುವಂತೆ ಮಾಡಲು ಒಬ್ಬ ಸಾಹಿತಿಗೆ ಇರುವುದೆಲ್ಲಾ ಬರೀ ಭಾಷೆಯ ನೆರವೊಂದೇ. ‘ಹಕ್ಕಿಯಂತೆ ಹಾಡಲಾರದ, ಹಾರಲಾರದ’ ಯಕಃಶ್ಚಿತ್ ಮನುಷ್ಯ ತನ್ನ ಕಣ್ಣ ಪೊರೆಯ ಮೇಲೆ ಮೂಡಿದ ಒಂದು ವಿನ್ಯಾಸವನ್ನು ಇನ್ನೊಂದು ಜೀವಕ್ಕೆ ತೋರಿಸಲಾರ. ಅವನು ಇನ್ನೊಂದು ಜೀವಕ್ಕೆ ಬೆಟ್ಟು ಮಾಡಿ ತೋರಿಸಬಹುದಾದ್ದೆಲ್ಲ ಕಣ್ಣಿನ ಹೊರಗಿನ ನೋಟವನ್ನಷ್ಟೇ. ಕಣ್ಣಿನ ಒಳಗಿನ ನೋಟ, ಒಳಗಣ್ಣಿನ ನೋಟ ಎರಡೂ ಸಂವಹನದಲ್ಲಿ ಮುಕ್ಕಾಗುತ್ತದೆ. ಪ್ರತಿಬಿಂಬದ ನೆರವಿಲ್ಲದೆ ಸ್ವತಃ ತನ್ನನ್ನೇ ‘ಸತ್ಯ’ವಾಗಿ, ಪೂರ್ಣವಾಗಿ ಕಾಣಲು ಅವನಿಗೆ ಸಾಧ್ಯವಿಲ್ಲ. ಹಾಗಿದ್ದೂ ಏನೆಲ್ಲವನ್ನು ತೋರಿಸಲು ಭಾಷೆಯ ನೆರವೊಂದನ್ನೇ ಆಧಾರವಾಗಿಟ್ಟುಕೊಂಡು ಅವನು ಹೊರಡುತ್ತಾನೆ. ಅವನಿಗಿರುವ ಮಿತಿಗಳು ಹೆಚ್ಚು. ಅದನ್ನು ಮೀರುವ ಕೌಶಲ, ಕಲೆ, ಸಿದ್ಧಿ ಎಲ್ಲರಿಗೂ ಇರುವುದಿಲ್ಲ. ಅನುಪಮಾ ಏನು ಬರೆದರೂ ಅದನ್ನು ಓದಬೇಕು ಅನಿಸಲು ಇರುವ ಕಾರಣ ಅವರು ಇದೆಲ್ಲದರ ಬಗ್ಗೆ ಸೂಕ್ಷ್ಮವಾದ ಅರಿವಿರುವ, ಇಂಥ ಸಿದ್ಧಿ ತನ್ನದಾಗಬೇಕೆಂಬ ಅತೀವ ಹಂಬಲವುಳ್ಳ ಮತ್ತು ತಪಸ್ಸಿನ ಪಸೆಯಿರುವ ಸಾವಧಾನ, ತಾಳ್ಮೆ, ನಿಧಾನಗಳೆಲ್ಲ ಇರುವ ಕತೆಗಾರ್ತಿಯಾಗಿರುವುದು. ಇದನ್ನು ಇಲ್ಲಿನ ಪುಟಪುಟಗಳಲ್ಲೂ ನೀವು ಕಾಣುತ್ತೀರಿ, ಕಂಡುಕೊಳ್ಳುತ್ತೀರಿ.


ಇದು ಹಲವು ಸ್ತರಗಳ ಕಾದಂಬರಿ. ಮೊದಲಿಗೆ ಇದು ಒಂದೊ ಎರಡೊ ಕುಟುಂಬದ, ತಲೆಮಾರುಗಳ ಕತೆಯಂತೆ ಕಾಣುತ್ತದೆ. ಕುಂಬಳೆ ಸನಿಹದ ಆನಂದಮಠವನ್ನು ಬಿಟ್ಟು ದೇವನಗರಿಗೆ ಬರುವ ರಾಮಶರ್ಮರ ಕುಟುಂಬ, ಅಲ್ಲಿ ಅವರಿಗೆ ನೆರವಾಗುವ ಅಣ್ಣಯ್ಯ ಬಲ್ಲಾಳರ ಕುಟುಂಬ ಈ ಕಥಾನಕದ ಕೇಂದ್ರ ಎನಿಸುವಾಗಲೇ ಅದು ಕಮ್ಯುನಿಸಂ ತನ್ನ ಮೊದಲ ಹೆಜ್ಜೆಗಳನ್ನು ಊರಲು ನಡೆಸುವ ಪ್ರಯತ್ನಗಳಿಂದ, ಕನ್ನಡಪರ ಹೋರಾಟ ತೀವ್ರಗೊಳ್ಳುವ ವಿದ್ಯಮಾನಗಳಿಂದ ಅಥವಾ ಎಂಡೋಸಲ್ಫಾನ್ ದುರಂತದ ಮೂಲಕ ಇಡೀ ಕಾಸರಗೋಡು ಸೀಮೆಗೆ ಪಸರಿಸಿಕೊಳ್ಳುತ್ತದೆ. ಅದೇ ಕಾಲಕ್ಕೆ ಅದು ಜಯಂತ-ಹರಿಣಾಕ್ಷಿಯರ, ಮಹೇಂದ್ರ-ಸುಭಾಷಿಣಿಯರ, ಮುಕ್ತಾತಾಯಿ-ಜಯವಂತನ, ತಿಮ್ಮಪ್ಪ ಭಟ್ಟ - ಕಲ್ಯಾಣಮ್ಮನವರ, ಶಿವರಾಮನ ಮಾತ್ರವಲ್ಲ, ಇಂಥ ಇನ್ನೂ ಹಲವರ ವೈಯಕ್ತಿಕ ಬದುಕಿಗೂ ಮೊನಚುಗೊಂಡು ವ್ಯಕ್ತಿಗತ ನೆಲೆಯ ನೋಟವನ್ನೂ ಒದಗಿಸುತ್ತ ಸಾಗುತ್ತದೆ. ಏನಿಲ್ಲವೆಂದರೂ ಸುಮಾರು ಐವತ್ತರಷ್ಟು ಪಾತ್ರಗಳು ಇಲ್ಲಿನ ಪ್ರಧಾನ ಭೂಮಿಕೆಯಲ್ಲೇ ನಮ್ಮ ಗ್ರಹಿಕೆಗೆ ಬರುತ್ತವೆ. ಹೀಗೆ ಮಾಡುವಾಗ ಅದು ತನ್ನ ಪ್ರಾದೇಶಿಕ ಪರಿಸರದ ಚಿತ್ರ, ಅಲ್ಲಿನ ಜನಜೀವನದ ಸಂಸ್ಕಾರ, ಜಾತೀಯತೆ, ಕಟ್ಟುಪಾಡುಗಳು, ಭಾಷಾ ವೈವಿಧ್ಯ, ಶಾಲೆ, ಅಡುಗೆ, ಯಕ್ಷಗಾನ, ಕೋಲ, ಹರಕೆ, ಕೃಷಿ, ನಗರದ ಕಾರ್ಪೊರೇಟ್ ಜಗತ್ತು ಎಲ್ಲವನ್ನೂ ಸಹಜವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡೇ ಸಾಗುತ್ತದೆ ಎನ್ನುವುದನ್ನು ಗಮನಿಸಿದರೆ ಈ ಕಾದಂಬರಿಯ ಹರಹು ಮತ್ತು ಅದನ್ನು ನಿರ್ವಹಿಸಿದ ಬಗೆಯಿಂದ ಅದು ಪಡೆದುಕೊಳ್ಳುವ ಗುರುತ್ವ ಅಚ್ಚರಿ ಹುಟ್ಟಿಸುತ್ತದೆ. ಇಷ್ಟು ವಿಶಾಲವಾದ ಒಂದು ಜನಸಮುದಾಯವನ್ನು, ಪ್ರದೇಶವನ್ನು, ಹಲವು ಬದುಕುಗಳನ್ನು ಗಮನದಲ್ಲಿರಿಸಿಕೊಂಡು ಕಥಾನಕವನ್ನು ಹೆಣೆಯುವುದು ಸುಲಭದ ಕೆಲಸವಲ್ಲ. ಅದನ್ನು ಅನುಪಮಾ ಅತ್ಯಂತ ಸೊಗಸಾಗಿ ಮತ್ತು ಸಹಜವಾಗಿ ಮಾಡುತ್ತಾರೆ.

ಈ ಕಾದಂಬರಿ ಕಥಾನಕ ಪ್ರಧಾನವಾಗಿಯೇ ಇದೆ. ಒಂದಿಷ್ಟು ಮೌನ, ಒಂದಿಷ್ಟು ಅಂತರಂಗದ ಶೋಧ, ಒಂದಿಷ್ಟು ಸ್ವಗತ ಬೇಕೆಂದರೆ ಅದಿಲ್ಲಿ ಸಿಗುವುದು ತನ್ನದೇ ಆದ ಲಯದಲ್ಲಿ, ಕ್ರಮದಲ್ಲಿ. ಉದಾಹರಣೆಗೆ ರಾಮಶರ್ಮರು ತಮ್ಮ ಪತ್ನಿ ರಾಧಮ್ಮನ ಜೊತೆ ತಮ್ಮ ದಾಂಪತ್ಯದ ಪರಾಮರ್ಶನ ನಡೆಸುವ ಪ್ರಸಂಗವೊಂದಿದೆ ಇಲ್ಲಿ. ಮುಕ್ತಾತಾಯಿ ತನ್ನ ಸಹಪಾಠಿ, ಸಹವರ್ತಿ, ಸ್ನೇಹಿತ ಮತ್ತು ಬಾಳ ಸಂಗಾತಿ ಜಯವಂತನಿಂದಾಗಿ ತನ್ನ ಜೀವದ ಹಂಬಲವಾದ ಸಂಗೀತದಿಂದ ವಿಮುಖಳಾದ ಬಳಿಕ ತನ್ನದೇ ಬಗೆಯಲ್ಲಿ ಮನುಷ್ಯ ಸಂಬಂಧ ಮತ್ತು ಬದುಕು ಎರಡನ್ನು ಮುಖಾಮುಖಿಯಾಗಿಸಿ, ತೂಗಿ ಮಾಗುವುದಿದೆ. ಮಹೇಂದ್ರ-ಸುಭಾಷಿಣಿಯರು ತಾವು ಎಂದಿಗೂ ಮಕ್ಕಳನ್ನು ಹೊಂದದೇ ಇರುವಂಥ ನಿಷ್ಠುರ ನಿಲುವಿಗೆ ಬರುವ ಪ್ರಸಂಗವಿದೆ. ಇಂಥ ಇನ್ನಷ್ಟು ಉದಾಹರಣೆಗಳನ್ನು ಕೊಡಬಹುದು. ಆದರೆ ಎಲ್ಲೂ ಅದು ಕಥಾನಕದ ಚಲನೆಗೆ ಸ್ಥಾಗಿತ್ಯವೊಡ್ಡಿ ಅಂತರಂಗದ ಮೊನಲಾಗುಗಳಿಗೆ ಹೊರಳದಂತೆ ಅನುಪಮಾ ತಮ್ಮ ನಿರೂಪಣೆಯನ್ನು ಸಾಗಗೊಡುತ್ತಾರೆ. ಕತೆ ಸಾಗುತ್ತಲೇ ಇರುತ್ತದೆ, ಅದು ನಿಲ್ಲುವುದಿಲ್ಲ ಬದುಕಿನಂತೆಯೇ, ಹರಿವ ನದಿಯಂತೆಯೇ. ಎಲ್ಲಿಯೂ ಭಾರವೆನಿಸದ, ಸಹಜವಾದ ಬದುಕಿನ ನಡೆಯಂತೆ ಸಾಗುವ ಕಥಾನಕವು ಮುಗಿದಾಗಲೇ ಅದರ ಹರಹು, ವ್ಯಾಪ್ತಿ ಮತ್ತು ಗಹನತೆ ಅರಿವಿಗೆ ಬಂದು ಒಂದು ಸಾರ್ಥಕ ಭಾವ ಮೂಡಿಸುತ್ತದೆ, ಜಿಜ್ಞಾಸೆಗಳನ್ನೊಡ್ಡುತ್ತದೆ.

ಭಾವ ಜಗತ್ತಿನ ವೈಭವೀಕರಣಕ್ಕಿಂತ ಪ್ರಜ್ಞಾವಂತಿಕೆಯ ನಿರೂಪಣೆಗೆ ಹೆಚ್ಚಿನ ಆದ್ಯತೆ ನೀಡಿ ಕಥಾನಕವನ್ನು ನಡೆಸಿರುವ ವಿಧಾನವಿದೆಯಲ್ಲ, ಅದು ಕುತೂಹಲ ಮೂಡಿಸುತ್ತದೆ. ವಿಶೇಷತಃ ಭಾವುಕ ಸನ್ನಿವೇಶಗಳಿಂದ, ಎಲ್ಲೋ ಒಂದು ಕಡೆ ಓದುಗನ ಹೃದಯವನ್ನು, ಮನಸ್ಸಿನ ಸೂಕ್ಷ್ಮವನ್ನು ಕಾವ್ಯಮಯ ಭಾಷೆಯ ನಾದದಿಂದ ಮೀಟಿ ಓದುಗನನ್ನು ಸೆಳೆದುಕೊಳ್ಳುವ ಬರವಣಿಗೆಗೆ ವಿಶೇಷವಾದ ಮನ್ನಣೆ, ಆದರ ಸಿಗುತ್ತಿರುವ ದಿನಗಳಿಂದ ತೊಡಗಿ ಅವೆಲ್ಲ ಕ್ಲೀಷೆಯಾಗಿ ಬಿಟ್ಟ ಹಂತದ ವರೆಗಿನ ಸಾಹಿತ್ಯವನ್ನು ಕಾಣುವಾಗ ಇದು ಗಮನಾರ್ಹವಾದ ಒಂದು ಡೈವರ್ಷನ್ ಅನಿಸುತ್ತದೆ. ಮನುಷ್ಯನನ್ನು ಆರ್ದ್ರಗೊಳಿಸುವ, ಅವನ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ, ಅವನಲ್ಲಿನ ಸತ್ - ಅನ್ನು ಜಾಗೃತಗೊಳಿಸುವ ಮೂಲಕ ಅವನನ್ನು ಹೆಚ್ಚು ಹೆಚ್ಚು ಮನುಷ್ಯನನ್ನಾಗಿಸುವ ಸಾಹಿತ್ಯ ಸದಾ ಕಾಲ ಅಪೇಕ್ಷಣೀಯ ಎನ್ನುವಾಗಲೇ ಅವನ ಔದಾರ್ಯ, ಆದರ್ಶ ಮತ್ತು ಮುಕ್ತ ಮನಸ್ಸು ‘ಶಾಂತಿಕಾಲ’ದ ಮನಸ್ಥಿತಿಯಾಗಿಯೇ ಒದಗುವುದಲ್ಲದೆ ‘ಯುದ್ಧಕಾಲ’ದ ಮನಸ್ಥಿತಿಯಾಗಿ ಯಾವ ಓದುಗನಿಗೂ, ಸ್ವತಃ ಅಂಥ ಸಾಹಿತಿಗೂ ರಕ್ತಗತವಾಗುವುದೇ ಇಲ್ಲ ಎನ್ನುವ ಸತ್ಯವನ್ನು ನಾವು ಮರೆಯಬಾರದು. ಎಷ್ಟೇ ಓದಿ, ತಿಳಿದುಕೊಂಡು, ಜಾಣರಾಗಿದ್ದೇವೆಂದುಕೊಂಡರೂ ನಮ್ಮ ದುರ್ಬಲ ಘಳಿಗೆಯಲ್ಲಿ ನಮ್ಮ ತಿಳಿವು ಕೈಹಿಡಿಯುವುದಿಲ್ಲ, ಸ್ವಭಾವ ವಿಜೃಂಭಿಸುತ್ತದೆ ಎನ್ನುವುದೇ ನಿಜ. ಹಾಗಿದ್ದರೆ ನಮಗೆ ಮಹಾಭಾರತವೊಂದೇ ಸಾಕಿತ್ತು, ಮನುಷ್ಯ ಹೇಗೆ ಬಾಳ್ವೆ ನಡೆಸಬೇಕು ಎನ್ನುವುದನ್ನು ತಿಳಿದುಕೊಳ್ಳಲು. ಅತ್ಯಂತ ಮಾನವೀಯ ಕಳಕಳಿಯನ್ನು, ಹೃದಯವಂತಿಕೆಯನ್ನು, ಕಕ್ಕುಲಾತಿಯನ್ನು ಭಾಷೆಯಲ್ಲಿ ಕಲ್ಲು ಕೂಡ ಕರಗುವಂತೆ ಬರೆಯುವ ಸಾಹಿತಿ ಕೂಡ ತನ್ನ ಬದುಕಲ್ಲಿ ಕ್ರೌರ್ಯವನ್ನು, ಹಿಂಸೆಯನ್ನು, ಅಸೂಯೆಯನ್ನು, ಸಣ್ಣತನವನ್ನು ಎಷ್ಟರ ಮಟ್ಟಿಗೆ ಮೀರಿದ್ದಾನೆ ಎನ್ನುವುದನ್ನು ವಿವೇಚಿಸಿ ನೋಡಿದರೆ ಎಲ್ಲೋ ಇವೆಲ್ಲ ಸಂವೇದನೆಗಳೂ ಪ್ರಸಿದ್ಧಿಗೆ, ಲಾಭಕ್ಕೆ ಬಳಸಿಕೊಳ್ಳುವ ಸರಕುಗಳಾಗಿ ಬಿಟ್ಟಿವೆ ಅನಿಸುತ್ತದೆ. ಆ ನಿಟ್ಟಿನಲ್ಲಿ ಅನುಪಮಾ ಅವರ ನಿಲುವು ಗಮನಾರ್ಹವಾಗಿದೆ ಮಾತ್ರವಲ್ಲ ಕಾದಂಬರಿಯಲ್ಲಿ ಹರಿಣಾಕ್ಷಿ ತೆಗೆದುಕೊಳ್ಳುವ ಒಂದು ವಿಶಿಷ್ಟವಾದ ನಿರ್ಧಾರವನ್ನು ನಾವು ಈ ಹಿನ್ನೆಲೆಯಲ್ಲಿ ನೋಡುವುದು ಕೂಡ ಅಗತ್ಯವಾಗಿದೆ.

ತಲೆಮಾರುಗಳ ಕತೆಯನ್ನು ಹೇಳುವ ಕಾದಂಬರಿಯಾಗಿರುವುದರಿಂದ ಸಹಜವಾಗಿಯೇ ಇದು ಕಾಲಘಟ್ಟದ ದೃಷ್ಟಿಯಿಂದಲೂ ವಿಸ್ತಾರವಾದ ಹರಹು ಉಳ್ಳದ್ದು. ಅಣ್ಣಯ್ಯ ಬಲ್ಲಾಳರ ಮಗ ಧೂಮ ಬಲ್ಲಾಳರ ಮಗ ಶೇಖರ ಬಲ್ಲಾಳರ ಮಗ ರಜನೀಂದ್ರನ ತಲೆಮಾರಿನ ತನಕದ ಕತೆ ಇಲ್ಲಿರುವಂತೆಯೇ ರಾಮಶರ್ಮರ ಮಗ ಶಂಭು ಶರ್ಮರ ಮಗ ಶಿವರಾಮನ ಮಗ ಮಹೇಂದ್ರನ ತನಕದ ಕತೆಯೂ ಇಲ್ಲಿದೆ. ಅಷ್ಟು ಮಾತ್ರವಲ್ಲ, ಮಕ್ಕಳಿಂದ ತೊಡಗಿ ಎಲ್ಲ ವಯೋಮಾನದ ತುಡಿತ-ಮಿಡಿತಗಳನ್ನೂ ಸಂತುಲಿತಗೊಳಿಸಿದ ಒಂದು ಚಿತ್ರವನ್ನು ಕೊಡುತ್ತ ಸಾಗುವ ಸಮನ್ವಯತೆಯನ್ನೂ ಇದು ಸಾಧಿಸಿದೆ. ಇದರಾಚೆ ಬೇರೆ ಬೇರೆ ತಲೆಮಾರಿನಲ್ಲಿ ಜೊತೆಯಾಗುವ ಕೇಚ-ಮಾಚಿಯರ ಮಗ ಜಯಂತ, ಅಡ್ಕ ವಾಸುದೇವ, ಅಡೂರು ಗೋಪರಾಯರು, ಶಬರಾಯರು, ಅಬ್ದುಲ್ಲಾ ಹಾಜಿ, ತಿಮ್ಮಪ್ಪ ಭಟ್ಟರು, ಮುಕ್ತಾತಾಯಿಯರ ಕತೆಯೂ ಇಲ್ಲಿದೆ. ಇಲ್ಲಿ ಬದುಕಿನ ಶೈಲಿ ಕಾಲಕಾಲಕ್ಕೆ ಬದಲಾಗುತ್ತ ಬಂದ ಒಂದು ಸುಂದರ ಚಿತ್ರವೂ ನಮಗೆ ಸಿಗುತ್ತದೆ. ಹೋಟೆಲು ಮುಚ್ಚಿ ಕೃಷಿಗೆ ಇಳಿದ ರಾಮಶರ್ಮರ ಮಗ ಶಂಭು ಭತ್ತದ ಬದಲು ಅಡಕೆ ಕೃಷಿಗೆ ಹೊರಳುವ ಮಾತನಾಡಿದಾಗ ರಾಮಶರ್ಮರಿಗೆ ಅದು ಪಥ್ಯವಾಗುವುದಿಲ್ಲ ಹೇಗೋ ಮುಂದೆ ಶೇಖರ ಬಲ್ಲಾಳರ ಮಗ ಮಹೇಶ ಹೊಲಕ್ಕೆ ಮಶೀನು ಇಳಿಸುವ, ರಬ್ಬರು ಬೆಳೆಸುವ ಮಾತನಾಡಿದಾಗಲೂ ಶಂಭು ಶರ್ಮರ ಮಗನ ಸಮಕಾಲೀನನಾದ ಶೇಖರ ಬಲ್ಲಾಳರಿಗೆ ಅದು ಪಥ್ಯವಾಗುವುದಿಲ್ಲ. ಇದೆಲ್ಲ ಹೀಗಿರುತ್ತ ಕ್ರಿಮಿನಾಶಕದ ಭಯಂಕರ ರುದ್ರತಾಂಡವ ಅದಾಗಲೇ ಆ ಸೀಮೆಯಲ್ಲಿ ಎಂಡೊಸಲ್ಫಾನ್ ಹೆಸರಿನಲ್ಲಿ ಸುರುವಾಗಿರುತ್ತದೆ. ಕೃಷಿ ಮಾತ್ರವಲ್ಲ, ಕಾಸರಗೋಡು ಸೀಮೆಯ ಕನ್ನಡ ಪರ ಹೋರಾಟ, ಕೇರಳದಲ್ಲಿ ಕಮ್ಯುನಿಸಂ ಚಳವಳಿ ಕಾಲಿಟ್ಟು ಭೂಹಿಡುವಳಿದಾರರನ್ನು ಕಂಗೆಡುವಂತೆ ಮಾಡತೊಡಗಿದ್ದು ಎಲ್ಲವೂ ಕಾದಂಬರಿಯ ಕಾಲಘಟ್ಟದಲ್ಲಿ ಸಹಜವಾಗಿ ಬಂದು ಹೋಗುತ್ತದೆ. ಕೃಷಿ ಎಂದು ನೋಡಿದರೆ ಮಹೇಂದ್ರ-ಸುಭಾಷಿಣಿಯರ ಕಾಲಕ್ಕೆ ಕಾರ್ಪೊರೇಟ್ ಜಗತ್ತಿನ ವಿವರಗಳು ಕಾದಂಬರಿಯ ತೆಕ್ಕೆಯೊಳಕ್ಕೆ ಸೇರಿಕೊಳ್ಳುತ್ತವೆ. ಹಾಗೆಯೇ ಎಂಡೋಸಲ್ಫಾನ್ ದುರಂತದ ರಾಜಕೀಯ ಆಯಾಮಗಳೂ, ಕ್ಷೇತ್ರಮಾಹಿತಿ ಸಂಗ್ರಹದ ನಾಟಕಗಳೂ, ಜನರನ್ನು ತಪ್ಪುಹಾದಿಗೆಳೆಯುವ ಪ್ರಯತ್ನಗಳು ಹೇಗೆ ಸಾಗುತ್ತವೆ ಎನ್ನುವುದೂ ಕಾಣಿಸಿಗುತ್ತದೆ. ರೈತರಿಂದಲೇ ಅದು ಹಾನಿಕಾರಕವಲ್ಲ, ಅದರಿಂದ ಬೆಳೆಗೆ ಒಳ್ಳೆಯದಾಗಿದೆ ಎಂದು ಹೇಳಿಸುವ ಪ್ರಯತ್ನಗಳು, ಅದನ್ನು ಸಮರ್ಥಿಸುವ ವೈಜ್ಞಾನಿಕ ವಿತಂಡವಾದ ಎಲ್ಲ, ಸದ್ಯ ನಾವು ಬದುಕುತ್ತಿರುವ ಜಗತ್ತಿನ ವರ್ಚ್ಯುಯಲ್ ಸತ್ಯಗಳು ಮತ್ತು ವಾಸ್ತವ ಎರಡರ ನಡುವಿನ ಕಂದಕವನ್ನು ಬೆಚ್ಚಿ ಬೀಳುವಂತೆ ಕಣ್ಣೆದುರು ಇಡುತ್ತವೆ. ಆದರೆ ಕಾದಂಬರಿಯಲ್ಲಿ ಯಾವುದಕ್ಕೂ ವಿಶೇಷ ಮಹತ್ವ, ಕೇಂದ್ರವೆಂಬ ಭಾವನೆ ಒದಗದಂತೆ ಈ ವಿದ್ಯಮಾನಗಳು ಸಾಗುತ್ತವೆ. ಅದೇ ರೀತಿ ಈ ಕಾದಂಬರಿಗೆ ಕೇಂದ್ರ ಎನ್ನಬಹುದಾದಂಥ ಪಾತ್ರವಾಗಲಿ, ಕ್ಷೇತ್ರವಾಗಲಿ, ಪ್ರದೇಶವಾಗಲಿ ಇಲ್ಲ. ಹಾಗೆ ಇದೊಂದು ಊರಿನ ಜನಸಮುದಾಯವನ್ನೇ ಕೇಂದ್ರವಾಗಿಟ್ಟುಕೊಂಡು ಸಾಗುವ ಕಾದಂಬರಿ, ಏಕಕಾಲಕ್ಕೆ ಹಲವು ಪಾತಳಿಗಳಲ್ಲಿ ಸಮಾನವಾಗಿಯೂ ಸಮರ್ಥವಾಗಿಯೂ ಮಿಡಿಯುವಂಥದ್ದು.

ಆನಂದ ಮಠದ, ಪಾನಕಕಟ್ಟೆಯ ಮೂಲದಿಂದ ತೊಡಗಿ ತೊಟ್ಟಿಮನೆಯ ತಪ್ಪಲಿಗೆ ಬಂದ ಕಥಾನಕದ ಕಥಾಕ್ಷೇತ್ರ ಪುಣೆ, ಮುಂಬಯಿ, ಧಾರವಾಡ, ವಾರಣಾಸಿ ಎಂದೆಲ್ಲ ಹರಿಯುತ್ತ ಹಕ್ಕಿ ಹಳ್ಳದ ಹಾದಿ ಊರ್ಧ್ವಮುಖಿಯಾಗಿ ಗಂಗೆಯ ಮಡಿಲಿನ ತನಕ ಹರಿಯುತ್ತದೆ ಎನ್ನುವುದೂ ಒಂದು ವಿಶೇಷ. ಗಂಗೆ ನಮಗೆಲ್ಲ ತಿಳಿದಿರುವಂತೆ ಅಘನಾಶಿನಿ, ಪಾಪನಾಶಿನಿ. ಆದರೆ ಮನುಷ್ಯ ತನ್ನ ಪರಿಸರದ ಮೇಲೆ ನಡೆಸಿದ ನಿರಂತರ ಅತ್ಯಾಚಾರ, ಹಾನಿ, ಅತಿರೇಕಗಳಿಂದ ಅವಳ ಮೈಯ ನರನಾಡಿಗಳೂ ಕೊಳೆತು ನಾರುತ್ತಿವೆ. ಇದೇ ಒಂದು ರೂಪಕದಂತಿದೆ, ಮನುಷ್ಯನ ದುರಾಸೆ, ಸ್ವಾರ್ಥ ಮತ್ತು ಮುಂದಾಲೋಚನೆಯಿಲ್ಲದ ಅತಿರೇಕದ ವರ್ತನೆಗಳಿಗೆ.

ಹೇಗೆ ಈ ಮೈಯೆಲ್ಲ ಹೇಸಿಗೆ, ಕೊಚ್ಚೆಗಳ ಮುದ್ದೆಯಾಗಿ, ವೃಣಗಳ ಮೂಟೆಯಂತಾದ ಗಂಗೆಯನ್ನು ಸಾಕ್ಷಾತ್ಕರಿಸಿ ಎಂಡೋಸಲ್ಫಾನ್ ಹೆಸರಿನಲ್ಲಿ ನಾವು ಭೂತಾಯಿಗೆ ಸಲ್ಲಿಸಿದ ಕೊಡುಗೆಯನ್ನು ಕಣ್ಣಿಗೆ ಕುಕ್ಕುವಂತೆ ಈ ಕಾದಂಬರಿ ತೋರಿಸುತ್ತಿದೆಯೋ ಹಾಗೆಯೇ ದೇವನಗರಿಯಲ್ಲಿ ಇವತ್ತು ಕಾಣುತ್ತಿರುವುದಕ್ಕೂ ಅದರದ್ದೇ ಆದ ಒಂದು ಪರಂಪರೆಯಿರುತ್ತದೆ. ಭೂತಕಾಲದ ಚರಿತ್ರೆ ಇರುತ್ತದೆ. ಯಾವುದನ್ನೂ ನಾವು ಐಸೊಲೇಟ್ ಮಾಡಿ ನೋಡಲು ಸಾಧ್ಯವಿಲ್ಲ ಮತ್ತು ಬಹುಶಃ ಹಾಗೆ ನೋಡಲೂ ಕೂಡದು. ಮತಾಂತರದ ಹೆಸರಿನಲ್ಲಿ ಇಲ್ಲಿ ನಡೆದ ದುರಾಚಾರ, ಕಮ್ಯುನಿಸಂ ಹೆಸರಿನಲ್ಲಿ ನಡೆದ ಕೊಲೆಗಳು, ಹಣದ ಬೆಂಬತ್ತಿ ಕಡಿದುರುಳಿಸಿದ ಕಾಡು, ರಬ್ಬರ್, ಶುಂಠಿ ಎಂದು ಮರುಳುಗಾಡಾದ ಭೂಮಿ, ಕಡಲ ತೀರದ ದಂಧೆಗಳು ಎಲ್ಲವೂ ಯಾವ ಧರ್ಮ/ಇಸಮ್ಮುಗಳ ಹಂಗಿಲ್ಲದ ಪ್ರಕೃತಿಗೆ ಕೇವಲ ಮನುಷ್ಯನ ಅಹಂಕಾರದ ರುದ್ರನರ್ತನವಷ್ಟೇ ಆಗಿರುತ್ತದೆ. ಎಂಡೋಸಲ್ಫಾನ್ ಎಲ್ಲೆಲ್ಲಿ ಉಪಯೋಗಿಸಲ್ಪಟ್ಟಿದೆಯೋ ಅಲ್ಲೆಲ್ಲಾ ಇದೇ ಬಗೆಯ ದುಷ್ಪರಿಣಾಮ ಆಗಿದೆಯೇ ಎನ್ನುವ ದಿಸೆಯಲ್ಲಿ ನೋಡಿದರೆ ಭಾರತದ, ಅದರಲ್ಲೂ ಕೇರಳದ ಮಟ್ಟಿಗೆ ಮಾತ್ರ ದುರಂತದ ಚಿತ್ರ ಕಣ್ಣಿಗೆ ರಾಚುತ್ತದೆ ಎನ್ನುವುದು ಕೂಡ ನಿಜವೇ. ಇದನ್ನೆಲ್ಲ ಪ್ರಾಫೆಟಿಕ್ ಆಗಿ ನೋಡುತ್ತಿದ್ದೇನೆಂದು ತಿಳಿಯುವ ಅಗತ್ಯವಿಲ್ಲ. ಪ್ರಕೃತಿಗೊಂದು ನಿಯಮವಿದೆ, ಅದು, ನಾವು ಅದಕ್ಕೇನು ಮಾಡುತ್ತೇವೋ ಅದನ್ನೇ ಅದು ನಮಗೆ ಮಾಡುತ್ತದೆ! ದೇವರ ಸ್ವಂತ ನಾಡಾದ ಕೇರಳದಲ್ಲಿ ನಡೆಯುತ್ತಿರುವುದನ್ನೆಲ್ಲ ನಾವು ಒಂದು ಸ್ವಸ್ಥ ಮನಸ್ಸಿನಿಂದ ಅರ್ಥಮಾಡಿಕೊಂಡರೆ ಅದರಲ್ಲಿ ಇಡೀ ಮನುಕುಲದ ಹಿತವಿದೆ. ಈ ನೆಲೆಯಿಂದಲೂ ಕಾಸರಗೋಡಿನ ನೆಲದಿಂದ ಬಂದ ಈ ಕಾದಂಬರಿಗೆ ವಿಶೇಷವಾದೊಂದು ಮಹತ್ವವಿದೆ.

ಇಲ್ಲಿನ ಕಥೆ ಹಲವು ತಲೆಮಾರುಗಳ ಕತೆಯಾಗಿಯೂ, ಕಾಲಘಟ್ಟಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಕತೆಯಾಗಿಯೂ, ಜೀವನಶೈಲಿಯಲ್ಲಿನ ಪಲ್ಲಟಗಳ ಕತೆಯಾಗಿಯೂ, ಹಲವು ರಂಗಗಳಲ್ಲಿ ನಡೆದ ವಿದ್ಯಮಾನಗಳ ಕತೆಯಾಗಿಯೂ, ಪರಿಸರದ ದುರಂತಕತೆಯಾಗಿಯೂ ದಾಖಲಾಗುವುದರೊಂದಿಗೆಯೇ ಮನುಷ್ಯ ಸಂಬಂಧಗಳ, ಭಾವನೆಗಳ, ಮೌಲ್ಯಗಳ ಕತೆಯಾಗಿಯೂ ಕೂಡ ನಿಲ್ಲುತ್ತದೆ. ಒಂದು ನೆಲೆಯಿಂದ ನೋಡಿದರೆ ಶೇಖರ-ಶಿವರಾಮರ ಬಾಲ್ಯದಿಂದ ತೊಡಗಿ ವೃದ್ಧಾಪ್ಯದ ವರೆಗಿನ ಅಪೂರ್ವ ಸ್ನೇಹದ ಕಥಾನಕ ಇದು. ಇನ್ನೊಂದು ನೆಲೆಯಿಂದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ನಿರ್ವಹಿಸುವ ಪಾತ್ರವನ್ನು, ಗಂಡು ಕುಸಿದಾಗ ಅವಳೇ ಕುಟುಂಬದ ಸಾರಥ್ಯವನ್ನು ವಹಿಸಿಕೊಂಡು ನಿರ್ವಹಿಸುವ ಅವಳ ಧೈರ್ಯವನ್ನು ಹೇಳುವ ಕಥಾನಕ ಕೂಡ. ಅದು ರಾಧಮ್ಮನಿಂದ ತೊಡಗಿ ಹರಿಣಾಕ್ಷಿಯ ತನಕ ಮತ್ತೆ ಮತ್ತೆ ಕಣ್ಣಿಗೆ ಕಟ್ಟುತ್ತಲೇ ಇರುತ್ತದೆ.

ಮೂರು ಭಾಗಗಳಲ್ಲಿರುವ ಕಾದಂಬರಿಯ ಅತ್ಯಂತ ಸುಂದರ ಮತ್ತು ಪ್ರಧಾನ ಎನ್ನಿಸುವ ಘಟ್ಟ ಮುಕ್ತಾತಾಯಿಯ ಪ್ರವೇಶದೊಂದಿಗೆ ತೊಡಗುತ್ತದೆ, ಈಕೆ ಒಂದು ಬಗೆಯಲ್ಲಿ ಮಹಾತಾಯಿ. ಧಾರವಾಡದ ಕುಲಕರ್ಣಿ ಮಾಸ್ತರರ ಮಗಳಾಗಿ ಸಂಗೀತಕ್ಕೆ ತನ್ನನ್ನೇ ತೆತ್ತುಕೊಂಡ ಹುಡುಗಿ ಮುಂದೆ ಜಯವಂತನಿಗಾಗಿ ತೆರೆಮರೆಗೆ ಸರಿದು ನಿಲ್ಲುತ್ತಾಳೆ. ಆದರೂ ಅವಳ ಬದುಕು ಸಂಪನ್ನಗೊಳ್ಳುವುದು ಸಂಗೀತದ ಸಾನ್ನಿಧ್ಯದಲ್ಲೇ, ಸಾಂಗತ್ಯದಲ್ಲೇ. ಅದು ಹರಿಣಾಕ್ಷಿಯ ಬದುಕಿಗೆ ಒಂದು ಸುಪ್ತ ಸಾಪೇಕ್ಷವನ್ನೊದಗಿಸುವಂತೆ ಮೂಡಿಬಂದಿರುವುದರಲ್ಲೇ ಈ ಭಾಗದ ಒಟ್ಟಾರೆ ಸಾರ್ಥಕತೆಯಿದೆ. ಕೊಂಚ ರೂಪಕದ ಭಾಷೆಯಲ್ಲಿ, ಪ್ರತಿಮಾ ವಿಧಾನವನ್ನು ನೆಚ್ಚಿಕೊಂಡು ಸುಂದರವಾಗಿ ಮೂಡಿ ಬಂದಿರುವ ಈ ಭಾಗದಲ್ಲಿ ಗಂಗೆ, ಕಾಶಿ, ಮೃತ್ಯುಪ್ರಜ್ಞೆ, ಆಧ್ಯಾತ್ಮ ಎಲ್ಲವೂ ಮೇಳೈಸಿದೆ. ಇಲ್ಲಿ ಕಾಶಿಯಲ್ಲಿ ಜಯಂತ, ಮಹೇಂದ್ರ, ಬಲ್ಲಾಳರು - ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಅನುಭೂತಿಯಾಗುತ್ತದೆ. ಅದರ ಅರ್ಥವೇನೆಂಬುದಕ್ಕಿಂತ ಹೆಚ್ಚು ಮಹತ್ವದ ಪ್ರಶ್ನೆ, ಈ ಬದುಕಿನ ಅರ್ಥವೇನೆಂಬುದೇ. ನಮ್ಮ ಬದುಕು ಕೂಡಾ ನಮಗೆ ಸರಿಯಾಗಿ ಅರ್ಥವಾಗುವುದರೊಳಗೆ ಒಂದು ಕ್ಷಣಭಂಗುರ ಅನುಭೂತಿಯಂತೆ ಕಣ್ಮರೆಯಾಗಿ ಬಿಡುತ್ತದೆ.

ಒಂದು ಅದ್ಭುತವಾದ ಜೀವನದರ್ಶನದ ಕಥಾನಕವನ್ನು ಕಾದಂಬರಿಯಾಗಿ ಕಟ್ಟಿಕೊಟ್ಟ ಅನುಪಮಾ ಪ್ರಸಾದ್ ಅವರಿಗೆ ಅಭಿನಂದನೆಗಳು.
(ಮೊದಲಿಗೆ ‘ಅವಧಿ’ ಅಂತರ್ಜಾಲ ತಾಣದಲ್ಲಿ ಈ ಬರಹ ಕಾಣಿಸಿಕೊಂಡಿತ್ತು ಎನ್ನುವುದನ್ನು ಕೃತಜ್ಞತಾಪೂರ್ವಕ ನೆನೆಯುವೆ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, October 8, 2019

ಪೊರೆಯೆ ಮರವೇಕೆ ಬೇಕು, ಒಂದೆಲೆ ಸಾಕು....

2011ರ ಸುರುವಾತಿನಲ್ಲೇ ಪ್ರಕಟವಾದ ‘ಚೌಕಟ್ಟಿನಾಚೆಯವರು’ ಕಥಾಸಂಕಲನದ ಕತೆಗಳು ಈಗ ಸುಮಾರು ಒಂದು ದಶಕದಷ್ಟು ಹಳೆಯವು. ಈ ಕತೆಗಳು 2009ರ ಸಾಲಿನ ಡಾ.ಪಾಟೀಲ ಪುಟ್ಟಪ್ಪ ಕಥಾಪ್ರಶಸ್ತಿಯಿಂದ ಪುರಸ್ಕೃತಗೊಂಡಿವೆ. ಆದರೆ ಈ ಸಂಕಲನದಲ್ಲಿ ಅನಾವರಣಗೊಂಡಿರುವ ಗೀತಾ ವಸಂತರ ಕಥನ ಕೌಶಲ ಮತ್ತು ನಿರೂಪಣಾ ಪ್ರತಿಭೆ, ಅನುಭವವನ್ನು - ಮುಖ್ಯವಾಗಿ ಉತ್ತರಕನ್ನಡದ ಹವ್ಯಕ ಸಮಾಜದ ಅಡುಗೆಮನೆ ಮತ್ತು ಹಿತ್ತಲ ದೈನಂದಿನ ವಿವರಗಳನ್ನು ಎಲ್ಲ ಸೂಕ್ಷ್ಮಗಳಲ್ಲಿ ಹಿಡಿದಿಡಬಲ್ಲ ಅವರ ಸಾಮರ್ಥ್ಯ ಒಂದೇ ಸಂಕಲನಕ್ಕೆ ನಿಂತು ಹೋದಂತೆ ಕಾಣುತ್ತಿದೆ. ಅವರ ಪ್ರತಿಭೆ ನಿಶ್ಚಯವಾಗಿ ಈ ಸಂಕಲನ ಹೊರಬಂದ ನಂತರ ಬಂದ, ಬಂದು ಖ್ಯಾತಿ ಮತ್ತು ಸ್ಥಾನಮಾನ ಎರಡನ್ನೂ ಪಡೆದುಕೊಂಡ ಹತ್ತಾರು ಹೊಸ ಕತೆಗಾರರನ್ನು ಮೀರಿಸುವಂತಿದ್ದರೂ ಅವರು ಪಡೆಯ ಬೇಕಿದ್ದ ಮನ್ನಣೆ, ರೆಕಗ್ನಿಶನ್ ಪಡೆಯದೇ ಹೋದುದೇ ಇದಕ್ಕೆ ಕಾರಣವಿರಬಹುದೆನ್ನಿಸುತ್ತದೆ. 2002, 2003 ಮತ್ತು 2004ರಲ್ಲಿ ವಿಜಯಕರ್ನಾಟಕ ಮತ್ತು ಅಂಕಿತ ಪುಸ್ತಕ ಜಂಟಿಯಾಗಿ ಆರಂಭಿಸಿ ನಡೆಸಿದ ಯುಗಾದಿ ಕಥಾಸ್ಪರ್ಧೆ ಹೊಸದೊಂದು ಸಂಚಲನವನ್ನೇ ಹುಟ್ಟಿಸಿದ್ದು ಸುಳ್ಳಲ್ಲ. 2004ರ ವಿಜೇತರ ಕತೆಗಳ ಸಂಕಲನ ’ತಾಜಮಹಲ್’ ನಲ್ಲಿ ಗೀತಾವಸಂತರ ‘ಚೌಕಟ್ಟಿನಾಚೆಯವರು’ ಕತೆ ಇರುವುದನ್ನು ಇಲ್ಲಿ ಗಮನಿಸಬಹುದು.

ಈ ಸಂಕಲನದ ಮೊದಲ ಕತೆ ‘ಚೌಕಟ್ಟಿನಾಚೆಯವರು’ ಮತ್ತು ಎರಡನೆಯ ಕತೆ ’ಮಳೆ ಬಂತೋ ಮಾರಾಯಾ...’ ನಮ್ಮನ್ನು ಇನ್ನಿಲ್ಲದಂತೆ ಹಿಡಿದಿಡಲು ಇರುವ ಕಾರಣವಾದರೂ ಏನು ಎಂದು ತಲೆಕೆಡಿಸಿಕೊಂಡಿದ್ದೇನೆ. ಕಾವ್ಯಾತ್ಮಕವಾಗಿ ಬರೆಯುವುದು, ಬಾಲ್ಯದ ನೆನಪುಗಳ ನಾಸ್ಟಾಲ್ಜಿಯಾದಿಂದ ಓದುಗನನ್ನು ಮರುಳು ಮಾಡುವುದು - ಎರಡನ್ನೂ ಮೀರಿದ ಏನೋ ಒಂದು ಈ ಎರಡೂ ಕತೆಗಳಲ್ಲಿದೆ. ಬಾಲ್ಯದ ಸಮೃದ್ಧ ನೆನಪುಗಳ ಮಹಾಪೂರ ಮತ್ತು ನಿರುದ್ದಿಶ್ಯವೆನಿಸುವಂತೆ ಕಾಡುವ ನಾಸ್ಟಾಲ್ಜಿಯಾ ಗೀತಾ ವಸಂತರ ಎಲ್ಲಾ ಕತೆಗಳಿಗೆ ತೀವ್ರತೆ ತಂದುಕೊಟ್ಟಿರುವುದು ನಿಜವೇ. ಆದರೆ ಗೀತಾ ವಸಂತರು ತಮ್ಮ ಕತೆಗಳಲ್ಲಿ ಬಿಚ್ಚಿಡುವ ಯಾವತ್ತೂ ನೆನಪುಗಳಲ್ಲಿ ಮೇಲೆ ಹೇಳಿದ ತುಂಬು ಕುಟುಂಬದ ಚಿತ್ರಗಳು, ಅಲ್ಲಿ ನೋವುಂಡು ಮನೆಯ ದೀಪ ಬೆಳಗಿದ ಹೆಣ್ಣುಮಕ್ಕಳು ಬರುತ್ತಾರೆ. ಇಷ್ಟೇ ಆಗಿದ್ದರೆ ಅದರಲ್ಲಿ ಅಂಥ ವಿಶೇಷವೇನಿರಲಿಲ್ಲ. ಭಾವ ತೀವ್ರತೆಯಿಂದ ಕಾವ್ಯ ಹುಟ್ಟುತ್ತದೆ ಮತ್ತು ಕಾವ್ಯ ನೇರವಾಗಿ ಹೃದಯವನ್ನೇ ತಟ್ಟುತ್ತದೆ ಎನ್ನುವುದು ನಿಜವಾದರೂ ಭಾವದ ಆಯಸ್ಸು ಕಡಿಮೆ ಎನ್ನುವುದು ಕೂಡಾ ಅಷ್ಟೇ ನಿಜ. ಆದರೆ ಭಾವಸ್ಪಂದನವೇ ಇಲ್ಲದ ಕಡೆ ಏನೂ ಹುಟ್ಟುವುದಿಲ್ಲ ಎನ್ನುವುದು ಕೂಡಾ ಅದಕ್ಕಿಂತ ದೊಡ್ಡ ನಿಜ!

ಇಲ್ಲಿ ಗೀತಾ ಅವರು ಭಾವ ತೀವ್ರತೆ ಮತ್ತು ಕಾವ್ಯಾತ್ಮಕತೆಗಳನ್ನು ಬಿಟ್ಟು ಕೊಡದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಅಡುಗೆ ಮನೆ ಮತ್ತು ಹಿತ್ತಲ ಜಗತ್ತಿನಲ್ಲೇ ನೀವು ಕೊಂಚ ಸೂಕ್ಷ್ಮವಾದ ಒಳನೋಟಗಳನ್ನು ಕಾಣಬಹುದಾದ ಕಣ್ಣು ಹೊಂದಿದ್ದರೆ ಗುರುತಿಸಬಹುದಾದ ವೈರುಧ್ಯಗಳನ್ನು ಜತನದಿಂದ ನಿರೂಪಣೆಯ ತೆಕ್ಕೆಗೆ ತರುತ್ತ ಹೋಗುತ್ತಾರೆ. ಉದಾಹರಣೆಗೆ, ಮಾಲ್ತಕ್ಕನ ಒಂದು ಪಾತ್ರವೇ ಕೇಂದ್ರದಲ್ಲಿರುವ ‘ಚೌಕಟ್ಟಿನಾಚೆಯವರು’ ಕತೆಯಲ್ಲಿ ಅಷ್ಟೇ ಪೋಷಣೆ ಪಡೆಯುವ ದುರ್ಗಿಯ ಪಾತ್ರವಿದೆ. ಅದರಾಚೆಗೆ ಈ ಕತೆಗೊಬ್ಬಳು ನಿರೂಪಕಿಯಿದ್ದಾಳೆ. ಅವಳು ನಮಗೆ ಒಂದು ದೃಶ್ಯವನ್ನಷ್ಟೇ ಕಾಣಿಸಿ ಪ್ರಶ್ನೆಯೊಂದನ್ನು ಮನದಕೊಳದಲ್ಲಿ ಕಲ್ಲೆಸೆದಂತೆ ಎಸೆದು ಕತೆಯನ್ನು ಮುಗಿಸುತ್ತಿದ್ದಾಳೆ. ಹಾಗಿದ್ದೂ ತಾನು ಕತೆಯ ಕೇಂದ್ರವಲ್ಲ ಎನ್ನುತ್ತಿದ್ದಾಳೆ. ಚೊಚ್ಚಲ ಹೆರಿಗೆ ಮುಗಿಸಿಕೊಂಡು ಬಾಣಂತನಕ್ಕೆ ಬಂದು ಮಲಗಿದ, ದೊಡ್ಡಮ್ಮನ ಕೈಲಿ ತನ್ನ ಸೇವೆ ಮಾಡಿಸಿಕೊಳ್ಳುತ್ತಿರುವ ಹೆಣ್ಣೊಬ್ಬಳ ಸ್ವಾಭಿಮಾನ, ಆತ್ಮಗೌರವಕ್ಕೆ ನೋವುಂಟಾಗುವ ಸಂದರ್ಭಗಳನ್ನು ಊಹಿಸಬಹುದು. ಆದರೆ ಹೆಣ್ಣಿನ ನೋವಿನ ಆರಂಭ ಮಾತ್ರ ನಮ್ಮ ಕಣ್ಣಿಗೆ ಒಡೆದು ಕಾಣಬಹುದೇ ಹೊರತು ಅದು ಟ್ರಿಗರ್ ಮಾಡಿದ ಅವಳ ಇನ್ನೂ ಹತ್ತು ಹಲವು ನೋವುಗಳ ಹೆಣಿಗೆ ನಮ್ಮ ಕಣ್ಣಿಗೆ ಎಂದೂ ಕಾಣುವುದಿಲ್ಲ ಮಾತ್ರವಲ್ಲ ಅವಳ ಬದುಕಿನ ನೋವುಗಳ ಅರಿವಿಲ್ಲದವರ ಮನಸ್ಸಿಗೂ ಅವು ಕಾಣುವುದಿಲ್ಲ. ಇದಕ್ಕಿಂತ ಹೆಚ್ಚಿನ ಕುರುಡು ಯಾವುದೆಂದರೆ, ಅವುಗಳನ್ನೆಲ್ಲ ಸಂಭಾಳಿಸಿಕೊಂಡು ನಿಲ್ಲುವ ಅವಳ ವ್ಯಕ್ತಿತ್ವದ ನೆಲೆ ಯಾವುದೆಂದು ನಮಗೆ ಅರಿವು ಹತ್ತದೇ ಹೋಗುವುದು.

ಅವಳು ಮನೆಯೊಳಗೆ ದುಡಿಯುತ್ತಿರಲಿ, ಹೊರಗೆ ದುಡಿಯುತ್ತಿರಲಿ, ಎಷ್ಟೇ ಸಂಪಾದಿಸಲಿ, ಏನನ್ನೇ ಗಳಿಸಲಿ ಎಲ್ಲವನ್ನೂ ಒಂದು ಮರದಂತೆ ತನ್ನ ನೆರಳಿಗೆ ಬಂದವರಿಗೇ ಕೊಟ್ಟು ತಾನು ಬರಿದಾಗಿ ನಿಲ್ಲುವ ಒಂದು ಅನನ್ಯ ಚೇತನವಾಗಿಯೇ ಉಳಿಯುತ್ತಾಳೆ. ಇದನ್ನು ಸಾಮಾನ್ಯವಾಗಿ ನಾವು ಕಾಣುವುದೇ ಇಲ್ಲ. ಅವಳನ್ನು ಸ್ವಾರ್ಥಿ ಎಂದು, ಚಿನ್ನಬಣ್ಣಕ್ಕೆ ಆಸೆಪಡುವವಳು ಎಂದು, ಅಸೂಯೆಪಡುವವಳೆಂದು, ಸಣ್ಣಬುದ್ಧಿಯವಳೆಂದು, ಲೋಕಜ್ಞಾನವಿಲ್ಲದವಳೆಂದು ಜರೆಯುವ ಎಲ್ಲರೂ ಅವಳ ಎಲ್ಲಾ ಇತಿಮಿತಿಗಳಾಚೆಗೂ ನಮಗೆ ಸಾಧ್ಯವೇ ಇಲ್ಲದ ಒಂದು ಅದ್ಭುತ ಔದಾರ್ಯವನ್ನು, ತಾಯ್ತನವನ್ನು ತನ್ನ ವ್ಯಕ್ತಿತ್ವದಲ್ಲಿ ಸದಾ ಜೀವಂತವಾಗಿರಿಸಿಕೊಂಡು ತನ್ನ ನೆರಳಿಗೆ ಬಂದವರನ್ನೆಲ್ಲ ಪೊರೆಯುತ್ತಿರುತ್ತಾಳೆ ಎನ್ನುವುದನ್ನು ಅವಗಣಿಸಿ ಬಿಡುತ್ತೇವೆ, ದೈನಂದಿನದ ಜಂಜಾಟದಲ್ಲಿ ಮರೆಯುತ್ತೇವೆ. ಗೀತಾ ವಸಂತರ ಎಲ್ಲಾ ಕತೆಗಳ ಆತ್ಮ ಅವಳ ಈ ಗುಣವನ್ನು ಮರೆಯದೇ ಅವಳನ್ನು ಈ ನೆಲೆಯಿಂದ ಮರುನಿರೂಪಿಸುವುದರಲ್ಲಿಯೇ ಇದೆ ಅನಿಸುತ್ತದೆ.

‘ಚೌಕಟ್ಟಿನಾಚೆಯವರು’ ಕತೆಯ ದುರ್ಗಿ, ‘ಮಳೆ ಬಂತೋ ಮಾರಾಯ...’ದ ಅಹಲ್ಯೆ, ‘ಚಿಕ್ಕ ಚಿಕ್ಕ ನವಿಲೇ’ ಕತೆಯ ಪುಟ್ಟಿ, ‘ಹಸಿರು ರೇಷ್ಮೆ ಸೀರೆ’ ಯ ತುಂಗ್ ಚಿಕ್ಕಿ, ‘ಒಂದು ಅರಳೀ ಎಲೆ ಸಾಕು’ ಕತೆಯ ಸುನಂದತ್ತೆ, ‘ಇದು ಬರಿ ಬೆಳಗಲ್ಲೋ ಅಣ್ಣಾ’ ಕತೆಯ ನಮ್ರತಾ, ‘ಬೇಟೆ’ ಕತೆಯ ಜಾನಕಿ ಎಲ್ಲರಲ್ಲೂ ಇರುವ ಅದಮ್ಯ ಜೀವನ್ಮುಖಿ ಧೋರಣೆಯ ಹಿಂದಿರುವ ಚೈತನ್ಯ ತಾನು ಬದುಕಬೇಕು ಎನ್ನುವುದಲ್ಲವೇ ಅಲ್ಲ. ಹಾಗೆ ಕಾಣುವುದು ನಮ್ಮ ಸಂಕುಚಿತ ದೃಷ್ಟಿಗೆ. ಅವಳ ಚೈತನ್ಯದ ಸೆಲೆ, ತನ್ನವರನ್ನು ಬದುಕಿಸಬೇಕು, ಬದುಕಿಸುತ್ತೇನೆ ಎನ್ನುವುದೇ. ಇದನ್ನು ಗುರುತಿಸಿ, ತಮ್ಮ ಕತೆಗಳಲ್ಲಿ ತಂದಿರುವ ಗೀತಾ ವಸಂತರು ಅಭಿನಂದನಾರ್ಹರು. ಆದರೆ ಅವರು ಅಲ್ಲಿಗೇ ನಿಂತುಬಿಟ್ಟರೇಕೆ!?

ಅಡುಗೆ ಮನೆ ಮತ್ತು ಹಿತ್ತಲ ಜಗತ್ತಿನ ವೈರುಧ್ಯಗಳ ಮಾತೆತ್ತಿದೆ. ಮಾಲ್ತಕ್ಕನಿಗೆ ದುರ್ಗಿಯ ಪಾತ್ರ ಇರುವಂತೆಯೇ ದೊಡ್ಡಮ್ಮನ ಪಾತ್ರವೂ ಅಲ್ಲಿದೆ. ಈ ಮೂರೂ ಪಾತ್ರಗಳಲ್ಲಿರುವ ವೈರುಧ್ಯ ಇಲ್ಲಿನ ನಿರೂಪಕಿಯ ಪ್ರಜ್ಞೆಯಲ್ಲಿ ಎಬ್ಬಿಸುವ ಪ್ರಶ್ನೆಗಳೇ ಅವಳ ಮಟ್ಟಿಗೆ ಈ ಕತೆಯ ಕೇಂದ್ರವಾಗಿದೆ. ಆದರೆ ಓದುಗರು ಸ್ವಲ್ಪ ಅವಸರಿಸಿದರೆ ಈ ಕತೆಯ ಹಲವು ಆಯಾಮಗಳಲ್ಲಿ ಕೆಲವನ್ನು ಮಿಸ್ ಮಾಡಿಕೊಳ್ಳುವುದು ಖಚಿತ. ಹಾಗೆಯೇ, ‘ಮಳೆ ಬಂತೋ ಮಾರಾಯ...’ ಕತೆಯಲ್ಲಿಯೂ ನಿರೂಪಕಿಗೆ ಅವಳದೇ ಆದ ಜಂಜಾಟಗಳಿವೆ. ಜೊತೆಗೆ ಅಹಲ್ಯೆಯ ಕತೆಯಿದೆ. ಇವೆರಡೂ ಅಲ್ಲದೆ ಇನ್ನೊಂದು ವೈರುಧ್ಯವೂ ಈ ಕತೆಯಲ್ಲಿಯೇ ಇದೆ. ಅದನ್ನು ಸಂಕದ ಮನೆ ಅಮ್ಮನ ಪಾತ್ರ ನಿರ್ವಹಿಸುತ್ತಿದೆ. ಕತೆಯ ನಿಜವಾದ ಸಂಕೀರ್ಣ ಮ್ಯಾಟ್ರಿಕ್ಸ್ ಗುರುತಿಸದೇ ಹೋದರೆ ಎಲ್ಲ ಸ್ತ್ರೀವಾದಿ ಲೇಖಕಿಯರ ಸಾಲಿಗೇ ನಾವು ಗೀತಾವಸಂತರನ್ನೂ ಸೇರಿಸುವ ಅಪಾಯವಿದೆ.

ಇನ್ನು ’ಚಿಕ್ಕ ಚಿಕ್ಕ ನವಿಲೇ’ ಕತೆಯಲ್ಲಿಯೂ ಕಲಾವತಿ ಮತ್ತು ಅನಿತಾ ಪಾತ್ರಗಳಂತೂ ನಿಚ್ಚಳವಾಗಿಯೇ ಪರಸ್ಪರ ಸಂವಾದಿಯಾದ ಪಾತ್ರಗಳೇ. ಆದರೆ ಇಲ್ಲಿ ಈ ಎರಡೂ ಪಾತ್ರಗಳಿಗೆ ಸಮಾನಾಂತರದಲ್ಲಿ ಶೇಷಜ್ಜಿ ಮತ್ತು ಪುಟ್ಟಿಯ ಪಾತ್ರಗಳಿವೆ. ಪುಟ್ಟಿ ಚಿಕ್ಕ ಮಗುವಾಗಿದ್ದರೂ ಅವಳ ಸ್ಥಿತಿ ಅವಳಿಗೆ ಒಂದು ಪ್ರಬುದ್ಧತೆಯನ್ನು ಶೈಶವದಲ್ಲೇ ದಯಪಾಲಿಸಿ ಬಿಡುವ ಕ್ರೌರ್ಯವೂ ಗೀತಾ ವಸಂತರ ಸೂಕ್ಷ್ಮ ಕಣ್ಣುಗಳಿಂದ ಮಿಸ್ ಆಗುವುದಿಲ್ಲ ಎನ್ನುವುದೇ ನಾವು ಗಮನಿಸಬೇಕಾದ ಅಂಶ. ಇಲ್ಲಿ ಪುಟ್ಟಿಯೇ ಇಡೀ ಕತೆಯ ಆತ್ಮವನ್ನು ಪೊರೆಯುವ ಪಾತ್ರವಾಗಿ ನಿಲ್ಲುವುದು ಇಂಥ ಕಾರಣಗಳಿಂದ.

‘ಹಸಿರು ರೇಷ್ಮೆ ಸೀರೆ’ ಕತೆಯಲ್ಲಿ ನಾನು ಹೇಳುತ್ತ ಬಂದ ಅಂಶ ಹೆಚ್ಚು ನಿಚ್ಚಳವಾಗಿ ತೆರೆದುಕೊಂಡಿರುವುದನ್ನು ಗಮನಿಸಬಹುದು. ಐಸಿಯುನಲ್ಲಿರುವ ತುಂಗ್‌ಚಿಕ್ಕಿ ‘ಹಸಿರು ರೇಷ್ಮೆ ಸೀರೆ, ಹರಕೆ ಒಪ್ಪಿಸುವುದಿತ್ತು’ ಎಂದೆಲ್ಲ ಬಡಬಡಿಸುವುದನ್ನು ಕೇಳಿ ಆಕೆಯ ಪತಿ, ನಿರೂಪಕಿ ಎಲ್ಲರೂ ಅದು ತುಂಗ್‌ಚಿಕ್ಕಿಗೆ ಹಸಿರು ರೇಷ್ಮೆ ಸೀರೆ ಉಡುವ ಸುಪ್ತ ಬಯಕೆಯಿತ್ತೇನೋ ಎಂದೇ ಅರ್ಥೈಸುತ್ತಾರೆ. ಹೆಚ್ಚೆಂದರೆ, ತುಂಗ್‌ಚಿಕ್ಕಿ ಯಾವುದೋ ಹರಕೆ ಹೊತ್ತಿರಬಹುದು ಎನ್ನುವುದು ಅವರ ಲೆಕ್ಕಾಚಾರ. ಅದು ನಿಜವೇ. ಅಂಥ ಹರಕೆಯೊಂದನ್ನು ಅವಳು ಹೊತ್ತಿದ್ದಳು ಎನ್ನುವುದು ನಿಜವೇ. ಆದರೆ ಯಾರ ಸಲುವಾಗಿ ಎನ್ನುವಲ್ಲಿಯೇ ಹೆಣ್ಣಿನ ‘ಪರೋಪಕಾರಾರ್ಥಂ ಇದಂ ಶರೀರಂ’ ತತ್ವ ನಮಗೆ ಕಾಣುವುದು. ಅದು ಹೆಣ್ಣು. ಅದೇ ಅರ್ಥದಲ್ಲಿ ದೇವೀ ಗುಡಿಯಲ್ಲಿ ನಿರೂಪಕಿ ತುಂಗ್‌ಚಿಕ್ಕಿಯಲ್ಲಿಯೇ ದೇವಿಯ ಚೈತನ್ಯವನ್ನು ಕಾಣುವ, ತನಗೂ ಅದನ್ನು ಕೊಡೇ ಎಂದು ಪ್ರಾರ್ಥಿಸುವ ದೃಶ್ಯವಿದೆ ಎನ್ನುವುದನ್ನು ಗಮನಿಸಿದರೆ ಇದು ಕಣ್ಣಿಗೆ ಹೊಡೆದು ಕಾಣುತ್ತದೆ.

‘ಒಂದು ಅರಳೀ ಎಲೆ’ ಕತೆಯಲ್ಲಿ ಗೀತಾವಸಂತರ ಅಡಕ ತತ್ವದ ಪರಿಪೂರ್ಣ ಬಳಕೆಯನ್ನು ನಾವು ಸ್ಪಷ್ಟವಾಗಿಯೇ ಕಾಣಬಹುದು. ಗೀತಾ ವಸಂತ ಅವರು ಒಂದು ಕತೆಯನ್ನು ಒಂದೇ ಪಾತಳಿಯಲ್ಲಿ ಕಟ್ಟುವುದಿಲ್ಲ. ಇದನ್ನು ನಾವು ಅವರ ಎಲ್ಲಾ ಕತೆಗಳಲ್ಲೂ ಕಾಣುವುದು ಸಾಧ್ಯವಿದೆ. ಉದಾಹರಣೆಗೆ, ಈ ಕತೆಯಲ್ಲಿ ಅರಳೀ ಎಲೆ ಕೂಡ ಒಂದು ಮೆಟಾಫರ್ ಆಗಿಯೇ ಕೆಲಸ ಮಾಡುತ್ತಿದೆ. ಅರಳಿ ಎಲೆ ನಮಗೆ ಅತ್ಯಗತ್ಯವಾದ ಆಮ್ಲಜನಕವನ್ನು ಧಾರಾಳವಾಗಿ ಉತ್ಪಾದಿಸಬಲ್ಲ ಎಲೆ ಎನ್ನುವುದು ಎಲ್ಲರಿಗೂ ಗೊತ್ತು. ಹೆಣ್ಣಿಗೆ ಗಾಳಿ-ಬೆಳಕುಗಳೇ ಬದುಕಿನ ಅತಿಮುಖ್ಯ ಅಗತ್ಯಗಳಾಗಿ ಬಿಟ್ಟ, ಅವೇ ಸಿಗಲಾರದಂಥ ದಿನಗಳಿದ್ದವು ಎನ್ನುವುದನ್ನು ಎಲ್ಲರೂ ಬಲ್ಲೆವು. ಅದಲ್ಲದೆಯೂ ಅರಳಿ ಮರಕ್ಕೆ ಇನ್ನೂ ಕೆಲವು ವಿಚಿತ್ರ ಗುಣಲಕ್ಷಣಗಳಿವೆ. ನಮಗೆಲ್ಲ ತಿಳಿದಿರುವಂತೆ ಅರಳೀ ಮರದ ಬೀಜವನ್ನು ಯಾರೂ ನೆಟ್ಟು ಮೊಳಕೆ ಬರಿಸಿ ಬೆಳೆಸುವುದಿಲ್ಲ. ಅದು ಸ್ವಚ್ಛಂದವಾಗಿ ತನಗೆ ಬೇಕಾದಲ್ಲಿ ತಾನೇ ತಾನಾಗಿ ಚಿಗುರೊಡೆವ ಸಸಿ. ಅದು ಬೆಟ್ಟದ ತುದಿಯಲ್ಲಾದರೂ ಸರಿ, ಗುಡ್ಡದ ಕೊರಕಲ್ಲಿನಲ್ಲಾದರೂ ಸರಿ, ಕಟ್ಟೆಯನು ಕಟ್ಟಿ ನೀರೆರೆವವರಿಗಾಗಿ ಕಾಯುವ ಜಾಯಮಾನದ ಬೀಜವಲ್ಲ ಅದು. ಹಾಗೆಯೇ ಅರಳಿ ಮರವೇ ಒಂದು ಸ್ವಚ್ಛಂದವನ್ನು ಮನಸ್ಸಿಗಿಳಿಸಬಲ್ಲ ಮರ. ನೀವು ಇನ್ನೂ ಚುಮುಚುಮು ಬೆಳಕು ಹರಿಯುವ ಮುನ್ನವೇ ಅದರ ಎಲೆಗಳು ಫಡಫಡಿಸಿ ಹೊಮ್ಮಿಸುವ ಗಾಳಿಯ ಸುಖವನ್ನು ಬಲ್ಲವರೇ ಆದಲ್ಲಿ ಈ ಬಗ್ಗೆ ಹೆಚ್ಚೇನೂ ಹೇಳಬೇಕಾದ್ದಿಲ್ಲ. ಇಲ್ಲಿನ ಪ್ರಜ್ಞಾಗೆ ಬೀಜ, ಮೊಳಕೆ, ಹುಟ್ಟು ಎಲ್ಲವೂ ಪ್ರಶ್ನೆಯಾಗಿದೆ ಮತ್ತು ಸುನಂದತ್ತೆಯ ಬದುಕಿನ ಹೋರಾಟ -ಸಂಘರ್ಷಗಳ ಚಿತ್ರ ಅವಳಿಗೆ ತನ್ನ ಮುಂದಿರುವ ದಾರಿಯನ್ನು ನಿಚ್ಚಳಗೊಳಿಸಿದೆ. ತವರಿನಲ್ಲೂ, ಗಂಡನ ಮನೆಯಲ್ಲೂ ಇದ್ದ ಅರಳೀಮರ ಇಲ್ಲಿ ಇಲ್ಲವಲ್ಲ ಎಂದಾಗ ಪ್ರಜ್ಞಾ ಉತ್ತರಿಸುವುದಿಷ್ಟೇ, ‘ನೀ ಇದ್ದರೆ ಸಾಕು’. ಅಂದರೆ, ಇಲ್ಲಿ ಸುನಂದತ್ತೆಯೇ ಆ ಅರಳೀಮರವಾಗಿದ್ದಾಳೆ. ಹೆಣ್ಣು ಮರವಾಗಿ ಪೊರೆಯುವುದು ಎಂದರೆ ಇದೇ. ಪೊರೆಯುವುದೇ ಆದಲ್ಲಿ ಅದಕ್ಕೆ ಇಡೀ ಮರವೇ ಬೇಕೆಂದಿಲ್ಲ, ಒಂದೆಲೆ ಸಾಕು. ಪ್ರಳಯಕಾಲದಲ್ಲಿ ಶ್ರೀಹರಿಯನ್ನು ಪೊರೆದಿದ್ದು ಕೂಡಾ ಒಂದೇ ಒಂದು ಎಲೆಯಂತೆ, ಮರವಲ್ಲ!

‘ಇದು ಬರಿ ಬೆಳಗಲ್ಲೋ ಅಣ್ಣಾ’ ಕತೆಯಲ್ಲೂ ನಮ್ರತಾ ತಳೆಯುವ ಒಂದು ನಿರ್ಧಾರದ ಬೆನ್ನಿಗೇ ಅತ್ತೆಯ ಆಸ್ಪತ್ರೆಯ ಭೇಟಿಗೆ ಹಾದಿ ಸುಗಮವಾಗುವುದು, ಮಕ್ಕಳ ಚೈತನ್ಯ ಪುಟಿಯುವುದು ಮಾತ್ರವಲ್ಲ, ವರ್ಷಗಟ್ಟಲೆ ಹಾಸಿಗೆ ಹಿಡಿದಿದ್ದ ಮಾವ ಎದ್ದು ಬಂದು ತಾನೂ ತೋಟಕ್ಕೆ ಬರುತ್ತೇನೆ, ಅಲ್ಲಿನ ಕೆಲಸ ಕಾರ್ಯಗಳ ಮೇಲುಸ್ತುವಾರಿಗೆ ಸಹಾಯ ಮಾಡುತ್ತೇನೆ ಎನ್ನುವ ಮಟ್ಟಿಗೆ ಸುಧಾರಿಸುವುದು ಎಲ್ಲವೂ ಈ ಅರಳೀಮರದ ಜೀವದಾಯಿನಿ ಗಾಳಿಯನ್ನೇ ಸೂಚಿಸುವಂತಿದೆ.

‘ಬೇಟೆ’ ಕತೆಯಲ್ಲಂತೂ ಜಾನಕಿ ಬರೆಯುವ ಪತ್ರ ನನ್ನ ಪ್ರತಿಪಾದನೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ, ಅದಕ್ಕೆ ಹೆಚ್ಚು ಪರಿಪಕ್ವವಾದ ಅರ್ಥವ್ಯಾಪ್ತಿಯನ್ನೇ ತೆರೆಯುತ್ತಿದೆ. "ರೂಪ, ರಸ, ಗಂಧಗಳು ಸೇರಿ ಪ್ರಕೃತಿ. ಮೂಳೆ, ಮಾಂಸ, ರಕ್ತ, ಚರ್ಮಗಳು ಸೇರಿ ಪ್ರಾಣಿ, ಮನುಷ್ಯ.....ಮಾಂಸಲ ಭಾಗ ಹೆಚ್ಚಾಗಿದ್ದರೆ ಹೆಣ್ಣು..." ಎಂದು ತೊಡಗುವ ಜಾನಕಿಯ ಪತ್ರ ಅಮ್ಮನಿಗಾಗಿ, ತಮ್ಮನಿಗಾಗಿ ಸಾವಿನಂಚಿನ ಜೀವದ ಜೋಕಾಲಿ ಕೂಡ ತನಗೆ ಸಹ್ಯವೇ, ಸ್ವೀಕಾರಾರ್ಹವೇ ಎನ್ನುತ್ತದೆ.

ಇಲ್ಲಿ ಉಳಿದ ಇನ್ನೆರಡು ಕತೆಗಳ ಬಗ್ಗೆ ಏನೂ ಹೇಳಲಿಲ್ಲ. ಅವು, ‘ಉರಿಯ ವಾಸನೆ’ ಮತ್ತು ‘ಕಾಗದದ ನೋಟು’. ಎರಡೂ ಮೇಲೆ ಹೇಳಿದ ಚೌಕಟ್ಟಿನೊಳಗೆ ಕೂರದ ಕತೆಗಳಂತೆ ಇವೆಯಾದರೂ ಹಾಗೆ ಹೇಳುವುದು ಅಷ್ಟು ಸರಿಯಲ್ಲ. ಇವುಗಳನ್ನೂ ಬರೆದ ಹೆಣ್ಣು, ಗೀತಾ ವಸಂತರೇ. ಅವರ ಆತ್ಮದ ಛಂದಸ್ಸು ಇಲ್ಲಿ ಇಲ್ಲ ಎನ್ನುವುದು ಹೇಗೆ? ಅದು ಇದ್ದೇ ಇರುತ್ತದೆ. ಆದರೆ ಕಥಾನಕದ ಹಂದರ, ವಸ್ತು ಮತ್ತು ಅದರ ಗಮ್ಯ ಕೊಂಚ ವಿಭಿನ್ನವಾಗಿದೆ ಅಷ್ಟೇ. ಎರಡೂ ಕತೆಗಳ ಪ್ರಧಾನ ಎನ್ನಬಹುದಾದ ಪಾತ್ರ ಗಂಡು. ‘ಉರಿಯವಾಸನೆ’ಯಲ್ಲಿ ನಾಟಕದ, ನಾಟಕದ ಗೋದೂಬಾಯಿಯ ಹುಚ್ಚಿಗೆ ಬಿದ್ದು ಮನೆಯ ವಹಿವಾಟಿನಲ್ಲಿ ‘ಮಾತು’ ಕಳೆದುಕೊಂಡ ತಿಮ್ಮಪ್ಪನ ಇಡೀ ಬದುಕಿನ ಕತೆ ಬಿಚ್ಚಿಕೊಳ್ಳುತ್ತದೆ. ತಲೆಮಾರುಗಳ ಕತೆಯನ್ನು ಬಿಚ್ಚಿಡುವ ಈ ಕತೆಯ ಹರಹು ದೊಡ್ಡದು ಮತ್ತು ಅದು ಸಂಕೀರ್ಣವಾಗಿಯೂ ಇದೆ, ಸಂಘರ್ಷಮಯವಾಗಿಯೂ ಇದೆ. ಮೇಲೆ ಹೇಳಿದ ವೈರುಧ್ಯದ ಚಿತ್ರಣ ಇಲ್ಲಿಯೂ ನಮಗೆ ಸಿಗುತ್ತದೆ ಮತ್ತು ಅದು ಬದುಕಿನ ವೈಚಿತ್ರ್ಯಗಳತ್ತ, ಸಾಮಾನ್ಯ ನಿರ್ಣಯಗಳಿಗೆ ಬರಲು ಬಿಡದ ಅದರ ನಡೆಗಳತ್ತ ಕೌತುಕದ ಚಿತ್ರವೊಂದನ್ನು ಕೊಡುತ್ತಿದೆ. ‘ಕಾಗದದ ನೋಟು’ ಕತೆಯಲ್ಲಿ ಕೇಂದ್ರ ಎನ್ನಬಹುದಾದ ಪಾತ್ರವೂ ಗಂಡು, ಶ್ರೀಪಾದ. ಇವನೊಂದಿಗೆ ಏಗುವ ಶೋಭಾಳ ಕತೆ ಇದು. ಅತ್ತೆ-ಮಾವ, ತನ್ನ ಗಂಡ ಮತ್ತು ಅವನ ವಯಸ್ಸಿನ ಇತರರು ಶೋಭಾ ಕಂಡ ದಾಂಪತ್ಯದ ಕನಸಿಗೆ ಅಷ್ಟಾಗಿ ಹೊಂದದೆ ಅವಳಲ್ಲಿ ಹುಟ್ಟುವ ಅಸಮಾಧಾನ ಸಂಸಾರದಲ್ಲಿ ಹುಟ್ಟು ಹಾಕುವ ಸಮಸ್ಯೆಗಳು ಕತೆಯ ವಸ್ತು.

ಈ ಸಂಕಲನವನ್ನು ಓದಿ ಮುಗಿಸಿದಾಗಲೂ, ಮೊದಲ ಎರಡು ಕತೆಗಳನ್ನು ಓದಿ ಮುಗಿಸುತ್ತಲೇ ಬಡಿದ ಪ್ರಶ್ನೆಯೊಂದಿಗೇ ನಾನು ನಿಂತಿದ್ದೇನೆ. ಕನ್ನಡಕ್ಕೆ ಮತ್ತೊಬ್ಬ ವೈದೇಹಿಯೋ, ಅವರನ್ನು ಮೀರಿ ಬೆಳೆಯುವ ಸಾಧ್ಯತೆಯನ್ನು ಕಾಣಿಸಬಹುದಾಗಿದ್ದ ಕತೆಗಾರ್ತಿಯೋ ಸಿಗುವ ಸಂಭವವೊಂದು ಯಾಕೆ ನಿಜವಾಗಲಿಲ್ಲ... ಇನ್ನಾದರೂ ಆಗಬಹುದಲ್ಲ ಎನ್ನುವುದೇ. ಇನ್ನೀಗ ಗೀತಾ ವಸಂತರ ಹೊಸ ಕಥಾಸಂಕಲನಕ್ಕೆ, ಕಾದಂಬರಿಗೆ ನಾವು ಕಾದೇ ಕಾಯುತ್ತೇವೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, October 7, 2019

ಎಂದು ಬರುವುದು ಮಹಾನವಮಿ?

ಬೆಂಗಳೂರು ಅಥವಾ ಮಂಗಳೂರಿನಂಥ ಜಿಲ್ಲಾ ಕೇಂದ್ರಗಳಲ್ಲಿರುವವರಿಗೂ ಮಲೆನಾಡು, ಉತ್ತರಕನ್ನಡದ ಹಳ್ಳಿಗಳು, ಧಾರವಾಡದ ಅಸುಪಾಸಿನ ವಾತಾವರಣ ಎಂದೆಲ್ಲ ಏನೇನೋ ಆಕರ್ಷಣೆಗಳಿರುತ್ತವೆ. ಕುವೆಂಪು ಕಟ್ಟಿಕೊಟ್ಟ ಮಲೆನಾಡು, ತೇಜಸ್ವಿಯವರ ಮೂಡಿಗೆರೆ, ಆ ಮಂದಣ್ಣ, ಅಲ್ಲಿನ ವಿಜ್ಞಾನಿ ಕರ್ವಾಲೊ, ಕೆಸರೂರಿನ ಕೃಷಿಕೇಂದ್ರದ ಜೋಗಿಹಾಳರು, ಆರ್ ಕೆ ನಾರಾಯಣರ ಮಾಲ್ಗುಡಿಯ ಮಂದಿ, ಮೊಗಸಾಲೆಯವರ ಸೀತಾಪುರದ ಹೋಟೆಲು-ಬಸ್‌ಸ್ಟ್ಯಾಂಡು, ಗ್ರಾಮಾಯಣದ ಪಾದಳ್ಳಿ, ಲಾರಾ ಇಂಗಲ್ಸ್ ವೈಲ್ಡರ್ ಕಾಲದ ಇಂಡಿಯನ್ನರು ಬದುಕುತ್ತಿದ್ದ ಕಾಡುಮೇಡುಗಳು ಮುಂತಾಗಿ ನಮಗೆ ಅಲ್ಲಿಗೇ ಹೋಗಿ ಅವರೊಂದಿಗೇ ಬದುಕುವಾ ಅನಿಸುವಂಥ ಒಂದು ಭಾವ ಈ ಕೃತಿಗಳನ್ನು ಓದಿ ಮುಗಿಸಿದ ಮೇಲೂ ಕಾಡುತ್ತ ಇರುತ್ತದೆ ಎನ್ನುವುದು ನಿಜವೇ. ಒಂದರ್ಥದಲ್ಲಿ ಇದಕ್ಕೆ, ನಮಗೆ ಸದ್ಯ ನಾವು ಬದುಕುತ್ತಿರುವ ಜಗತ್ತು, ಅಲ್ಲಿನ ಮಂದಿ ಅಷ್ಟೇನೂ ಸರಿಯಿಲ್ಲ ಅನಿಸುವುದು ಮತ್ತು ಇನ್ನೆಲ್ಲೋ ನಮಗಿಷ್ಟವಾದ ಪರಿಸರ, ಮಂದಿ ಇದ್ದಾರೆ ಎನ್ನುವ ನಂಬುಗೆ ಇರುವುದು ಕಾರಣವೇ ಹೊರತು ಇನ್ನೇನಲ್ಲ. ಆದರೆ ಇಂಥ ಕಲ್ಪನೆಯಲ್ಲೇ ಐಬಿರುತ್ತದೆ. ಒಂದು ಕಚೇರಿಗಳಲ್ಲಿ ದುಡಿಯುತ್ತಿರುವ ಮಂದಿಗೆ ಇವತ್ತೇ ರಿಸೈನ್ ಮಾಡಿ ಬೇರೆಲ್ಲಾದರೂ ಕೈಗೆ ಸಿಕ್ಕಿದ ಕೆಲಸ ಮಾಡಿಕೊಂಡಿರುವಾ ಅನಿಸುವಂಥ ಗಳಿಗೆಗಳಿರುತ್ತವೆ. ಇನ್ನೂ ಕೆಲವರಿಗೆ ಈ ಮನೆಯನ್ನೇ ಬಿಟ್ಟು ದೇಶಾಂತರ ಹೋಗಿ ಬಿಡಬೇಕೆನ್ನಿಸುವ ದುರ್ಬರ ಸನ್ನಿವೇಶಗಳೂ ಎದುರಾಗುತ್ತಿರುತ್ತವೆ. ಆದರೆ ಹೋಗುವುದೆಲ್ಲಿಗೆ? ಎಲ್ಲಾ ಕಡೆ ಮನುಷ್ಯರೇ ಇದ್ದಾರೆ. ಎಲ್ಲಿಂದೆಲ್ಲ ಓಡಿ ಹೋಗಲು ಸಾಧ್ಯ?

ಮನುಷ್ಯರಿಂದ ದೂರ ಹೋಗಬಹುದೇ ಹೊರತು ಮನಸ್ಸಿನಿಂದ ದೂರ ಹೋಗಲು ಸಾಧ್ಯವೆ ಎನ್ನುವ ಮಾತನ್ನು ಎಲ್ಲಿಯೋ ಓದಿದ ನೆನಪು. ಕಾರ್ನಾಡರ ನಾಟಕಗಳಲ್ಲೇ ಇರಬೇಕು. ಬಹುಶಃ ಮನುಷ್ಯರಿಂದಲೂ ದೂರ ಹೋಗುವುದು ಸಾಧ್ಯವಿಲ್ಲದ ದಿನಗಳಿವು.

"ಈ ಕತೆಗಳ ಸಹವಾಸವೇ ಸಾಕು" ಎನ್ನುವ ಹೆಸರಿನ ತಮ್ಮ ಮೊದಲ ಸಂಕಲನದಲ್ಲಿ ನವಿರಾದ ಮಲೆನಾಡ ಚಿತ್ರಗಳನ್ನು ಕಟ್ಟಿಕೊಟ್ಟು ಮನಸೂರೆಗೊಂಡ ಅಲಕಾ ತೀರ್ಥಹಳ್ಳಿ ಎನ್ನುವ ಹೆಸರಿನಲ್ಲಿ ಬರೆಯುವ ಎಚ್ ವಿ ಲಕ್ಷ್ಮೀನಾರಾಯಣರು ಮುಂದೆ "ನವಿಲೆಸರ" ಎನ್ನುವ ಹೆಸರಿನ ತಮ್ಮ ಎರಡನೇ ಕಥಾಸಂಕಲನವನ್ನೂ ಹೊರತಂದರು. ನೀವು ಒಂದು ಊರಿನಲ್ಲಿ ಸಾಕಷ್ಟು ಕಾಲ ನೆಲೆಯೂರಿದ ಸಂದರ್ಭದಲ್ಲಿ ನಿಮಗೆ ಹೊಳೆಯುವ ಕತೆ-ಪ್ರಸಂಗ-ಸನ್ನಿವೇಶಗಳು ಅವಿನಾಭಾವದಿಂದ ಆ ಕತೆ/ಪ್ರಸಂಗ/ಸನ್ನಿವೇಶ ಘಟಿಸಿದ ಊರು-ಕೇರಿ ಮತ್ತು ಆ ಜನರ ರೀತಿ ನೀತಿ, ಪರಂಪರೆ, ಸಂಪ್ರದಾಯ, ಭಾಷೆ, ದೈನಂದಿನ, ವೃತ್ತಿ-ಪ್ರವೃತ್ತಿ ಮತ್ತು ಸಾಮಾಜಿಕ, ರಾಜಕೀಯ, ಆರ್ಥಿಕ ಆಗುಹೋಗುಗಳ ಪಸೆಯನ್ನು ಹೊತ್ತೇ ಇರುತ್ತವೆ. ದೇಶ-ಕಾಲ ಪ್ರಜ್ಞೆಯನ್ನು ಬಿಟ್ಟುಕೊಡದೇ ಬರೆಯುವ ಪ್ರತಿಯೊಬ್ಬ ಸಾಹಿತಿಯೂ ಆ ಪರಿಸರದ ಪ್ರಾಕೃತಿಕ ಶ್ರೀಮಂತಿಕೆಯನ್ನೂ, ಸಾಮಾನ್ಯ ಜನಜೀವನದ ಮೇಲೆ ಸ್ಥಳೀಯ ಆಗುಹೋಗುಗಳು ಉಂಟುಮಾಡಿದ ತಲ್ಲಣಗಳನ್ನೂ ತನ್ನ ನಿರೂಪಣೆಯಿಂದ ಹೊರಗಿಟ್ಟು ಬರೆಯಲಾರ. ಆದರೆ ಅಂಥ ಬದುಕಿನ ಹಿನ್ನೆಲೆಯಿಲ್ಲದೆ ಊರಿಂದ ಊರಿಗೆ ವಲಸೆಯಾಗುತ್ತ ಬೆಳೆದ ವ್ಯಕ್ತಿಯಿಂದ ಅಂಥದ್ದನ್ನು ನಿರೀಕ್ಷಿಸುವುದು ಕಷ್ಟ. ಬಾಲ್ಯದ ಸ್ಮೃತಿಗಳು ಎಲ್ಲರನ್ನೂ ನಿಡುಗಾಲದ ಸಾಹಿತ್ಯಕೃಷಿಗೆ ಬೆನ್ನೆಲುಬಾಗಿ ನಿಂತು ಪೊರೆಯದೇ ಹೋಗುವ ಸಂಭವವಿದೆ. ಎಲ್ಲರಿಗೂ ತನ್ನ ಕತೆಯ ಬೇರುಗಳನ್ನು ಅದಕ್ಕಂಟಿಕೊಂಡ ಮಣ್ಣ ಹೆಂಟೆಗಳ ಜೊತೆಗೇ ಗಿಡದ ಜೀವಂತಿಕೆಯ ವಾಸನೆಯಿನ್ನೂ ನಳನಳಿಸುತ್ತಿರುವಾಗಲೇ ಕಿತ್ತು ಅಕ್ಷರ ಲೋಕದ ಭೂಮಿಕೆಯಲ್ಲಿ ನೆಟ್ಟು ನೀರೆರೆದು ಪೋಷಿಸಿ ಬೆಳೆಸುವ ಕಲೆ ಸಿದ್ಧಿಸಿರುವುದೂ ಇಲ್ಲ.

ಹೊಟ್ಟೆಪಾಡಿಗಾಗಿ ತಾರುಣ್ಯದಲ್ಲೇ ನಗರ ಸೇರಿಕೊಂಡ ಅನೇಕ ಸಾಹಿತಿಗಳು ತಮ್ಮ ಬಾಲ್ಯದ ಸ್ಮೃತಿಯನ್ನೇ ನೆಚ್ಚಿ ಕಟ್ಟಿಕೊಡುವ ಊರು, ಪರಿಸರ ಯಾವುದೂ ಸಹಜಕೃಷಿಯಾಗದೆ ಬೊನ್ಸಾಯ್ ತೋಟವಾಗಿ ಬಿಡುವುದು ಹೆಚ್ಚು. ಇವರ ಬೇರುಗಳಿಗೆ ಸರಿಗೆ ಸುತ್ತಿ ಅದರ ಬೆಳವಣಿಗೆಯನ್ನು ಕೃತಕ ವಿಧಾನದಲ್ಲಿ ಕುಂಠಿತಗೊಳಿಸಿರುತ್ತಾರೆ. ಇದು ನಮ್ಮ ಅರಿವಿಗೆ ಬರಬೇಕಾದರೂ ನಮಗೆ ಆಯಾ ಊರಿನ ಹೊಕ್ಕುಬಳಕೆಯಿದ್ದು ಅಲ್ಲಿನ ಜನಜೀವನ ನಿಜಕ್ಕೂ ಹೇಗಿದೆ ಎಂಬ ನೇರವಾದ ಅರಿವು, ಮಾಹಿತಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಎಲ್ಲರೂ ಒಂದು ಭ್ರಮೆಯಲ್ಲೇ ಸುಖವಾಗಿ ತೇಲುತ್ತ ಬಹುಕಾಲ ಇದ್ದು ಬಿಡಬಹುದು. ಇಲ್ಲ ಅದು ವಾಸ್ತವವಾಗಿ ಹಾಗಿಲ್ಲ ಎನ್ನುವವರದ್ದೇ ಅಪಸ್ವರವಾಗಿ ಕೇಳಿಸಲೂ ಬಹುದು.

ಒಂದು ಊರು, ಪರಿಸರವನ್ನು ತನ್ನ ಕತೆಯ ಕಥಾಜಗತ್ತನ್ನಾಗಿ ರೂಪಿಸಿಕೊಂಡ ಕತೆಗಾರ ಆಯಾ ಊರಿನ ನಿಜವಾದ ಘಟಕಗಳೆನ್ನಬಹುದಾದ ಅಲ್ಲಿನ ಪರಿಸರದ ಚಿತ್ರ, ನದಿ, ಕಾಲುವೆ, ಸೇತುವೆ, ಶಾಲೆ, ಆಸ್ಪತ್ರೆ, ದೇವಾಲಯ, ಚರ್ಚು, ಹಾದಿ ಬೀದಿಗಳು, ಅಂಗಡಿ-ಮುಂಗಟ್ಟುಗಳು, ಅಕ್ಕಪಕ್ಕದ ಊರಿಗೆ ಹೋಗಿ ಬಂದು ಮಾಡುವ ಹೆದ್ದಾರಿಗಳು, ವಾಹನ ಸೌಕರ್ಯಗಳು, ಪಂಚಾಯತು, ರಾಜಕೀಯ ಚಟುವಟಿಕೆಗಳು, ಸಾಂಸ್ಕೃತಿಕ ಜೀವಂತಿಕೆಯ ಕುರುಹುಗಳು, ಧಾರ್ಮಿಕ ಚಟುವಟಿಕೆಗಳು, ಸಂತೆ, ಜಾತ್ರೆ, ಗದ್ದಲದ ಸಭೆ-ಸಮಾರಂಭಗಳು, ಜನರ ರೀತಿ ನೀತಿ ರಿವಾಜು ಕಟ್ಟುಕಟ್ಟಳೆಗಳು, ವೃತ್ತಿ ಪ್ರವೃತ್ತಿಗಳು, ಹೊಟ್ಟೆಪಾಡಿನ ಪಡಿಪಾಟಲುಗಳು, ಸಮಾಜದ ವರ್ಗೀಕೃತ ಶ್ರೇಣಿಯ ಚಿತ್ರ ಮುಂತಾಗಿ ಸಹಜವಾಗಿ ಒದಗಿ ಬರುವ ವಿವರಗಳನ್ನು ಕಟ್ಟಿಕೊಡುವಾಗ ಅವುಗಳಿಗೂ ವಾಸ್ತವಕ್ಕೂ ಎಷ್ಟು ಮಾತ್ರಕ್ಕೂ ಸಂಬಂಧವಿಲ್ಲ ಎಂದು ಗೆರೆ ಎಳೆದು ಬಿಡುವುದು ಕಷ್ಟ.

ಬಾಲ್ಯದ ಸ್ಮೃತಿಗಳಿದ್ದೂ ಐನು ಗಳಿಗೆಗೆ ಅವೆಲ್ಲ ಒದಗಲಾರದೇ ಹೋದಲ್ಲಿ ಅಥವಾ ಅಂಥ ಅನಿವಾರ್ಯ ಸ್ಮೃತಿಗಳೇ ಇಲ್ಲದಂಥ ಬಾಲ್ಯ ನಮ್ಮದಾಗಿದ್ದಲ್ಲಿ ( ಕತೆಗಾರ ಎಂ ಎಸ್ ಶ್ರೀರಾಮ್ ಅವರು ತಮ್ಮ ಕಥೆಗಳಲ್ಲಿ ಬಾಲ್ಯದ ನಾಸ್ಟಾಲ್ಜಿಯಾ ಇಲ್ಲ ಏಕೆ ಎಂದು ಕೇಳಿದ ಒಂದು ಪ್ರಶ್ನೆಗೆ ಇಂಥ ಉತ್ತರ ಕೊಟ್ಟಿದ್ದ ನೆನಪು) ಏನು ಮಾಡಬೇಕು?

ಗಟ್ಟಿಯಾದ ಕಥಾಹಂದರವೊಂದು ತನ್ನ ಬೆನ್ನಿಗಿದೆ ಅಂದುಕೊಂಡ ಕತೆಗಾರ ಕತೆಯನ್ನೇ ನೆಚ್ಚಿ ಕಲ್ಪನೆಯ ನೆಲೆಯಲ್ಲೇ ತನಗೆ ಬೇಕಾದಂಥ ಊರು-ಕೇರಿ, ಜನ-ಮನ ಎಲ್ಲವನ್ನೂ ಕಟ್ಟಿಕೊಳ್ಳಬಲ್ಲ. ಆಗಲೂ ಅದು ಅವನ ಒಟ್ಟಾರೆ ಸಾಮಾಜಿಕ ಪ್ರಜ್ಞೆಯನ್ನು ಪೂರ್ತಿಯಾಗಿ ಕೈಬಿಟ್ಟೇ ಒಡಮೂಡಿ ಬರುವುದು ಸಾಧ್ಯವೇ ಇಲ್ಲ. ಉದಾಹರಣೆಗೆ, ಈಗ ತಮ್ಮ ಬದುಕಿನ ಅರವತ್ತರ ದಶಕವನ್ನು ಕಾಣುತ್ತಿರುವ ಅನೇಕ ಕತೆ-ಕಾದಂಬರಿಕಾರರ ಕೃತಿಗಳಲ್ಲಿ ಕಮ್ಯುನಿಸಂನ ಉಚ್ಛ್ರಾಯದ ಅವಧಿ, ಈ ದೇಶ ಕಂಡ ತುರ್ತುಪರಿಸ್ಥಿತಿ, ಇಂದಿರಾಗಾಂಧಿ ಸೇರಿದಂತೆ ನಡೆದ ಕೆಲವೊಂದು ಹತ್ಯೆಗಳು, ಕೋಮುವಾದದ ದಳ್ಳುರಿ ಪ್ರಜ್ವಲಿಸಲು ಕಾರಣವಾದ ಬಾಬ್ರಿಮಸೀದಿ ಪ್ರಸಂಗ ಮುಂತಾದ ಕೆಲವೇ ಕೆಲವಾದರೂ ವಿದ್ಯಮಾನಗಳು, ನಾಡಿಗೆ ನಾಡೇ ಏಕತ್ರ ಅನುಭವಿಸಿದ ಸಂವೇದನೆಗಳಿಗೆ ಕಾರಣವಾದ ವಿದ್ಯಮಾನಗಳು ತಪ್ಪಿಸಿಕೊಂಡಿರುವುದು ಬಹುಮಟ್ಟಿಗೆ ಅಸಾಧ್ಯವೆಂದೇ ಹೇಳಬಹುದು.

ಈ ಮಾತು ಏಕೆಂದರೆ, ಕೆಲ ಕಾಲದ ಹಿಂದೆ ನನ್ನ ಬೆಂಗಳೂರಿನ ಗೆಳೆಯರೊಬ್ಬರು ಅಲಕಾ ತೀರ್ಥಹಳ್ಳಿಯವರು ತಮ್ಮ ನಿವೃತ್ತಿಯ ಬಳಿಕ ಬೆಂಗಳೂರು ಸೇರಿಕೊಂಡಿದ್ದಾರೆ ಎಂದಾಗ ನನಗೇ ಸ್ವಲ್ಪ ಆಘಾತವಾಗಿತ್ತು. ಮುಂದೆ ಯಾವತ್ತೋ ಅವರೊಂದಿಗೆ ಮಾತನಾಡುವಾಗ ಅವರು ಹೇಳಿದ ಕೆಲವೊಂದು ವಿದ್ಯಮಾನಗಳು, ಬೆಳವಣಿಗೆಗಳು ನನಗೂ ಹೌದೆನಿಸಿದ್ದವು. ಅಂದರೆ, ಧಾರವಾಡದ ಕಡೆಯ ಒಂದು ಹಳ್ಳಿಯಲ್ಲಿ ಮನೆ, ಆಸ್ತಿ ಇರುವ ನನ್ನ ಒಬ್ಬ ಪತ್ರಕರ್ತ ಗೆಳೆಯ, ಊರಲ್ಲಿ ಸೆಟ್ಲ್ ಆಗುವುದಾದಲ್ಲಿ ತನ್ನನ್ನು ಮದುವೆಯಾಗಲು ಯಾವ ಹುಡುಗಿಯೂ ಒಪ್ಪುತ್ತಿಲ್ಲ ಎನ್ನುವ ಕಾರಣಕ್ಕೇ ಊರಿಗೆ ಮರಳಲಾರದ ಸಂಕಟದಲ್ಲಿದ್ದಾನೆ, ಉತ್ತರ ಕನ್ನಡದಲ್ಲಿ ಜಮೀನು, ಸಾಗುವಳಿ ಇದ್ದ ನನ್ನ ಓರಗೆಯ, ಕಿರಿಯ ಗೆಳೆಯರು ಅಲ್ಲಿನ ಜಮೀನು ಮಾರಿ ನಗರದಲ್ಲೇ ಬೇರೇನೇನೋ ಮಾಡುವ ಮಾತುಗಳನ್ನಾಡುತ್ತಿದ್ದಾರೆ, ಮಲೆನಾಡಿನಿಂದ ಹಿರಿಯ ಜೀವಗಳು ನಗರಕ್ಕೆ ಬಂದು ನೆಲೆಸುವುದು ವೃದ್ಧಾಪ್ಯದ ಅಗತ್ಯಗಳಿಗೆ ಅನುಕೂಲವೆಂದುಕೊಳ್ಳುತ್ತಿದ್ದಾರೆ, ಉಜಿರೆಯ ಮೂಲೆಯೊಂದರಲ್ಲಿ ಕಾಡಿನಲ್ಲಿದ್ದಾರೋ ಅನಿಸುವಂತೆ ನೆಮ್ಮದಿಯಿಂದಲೇ ಇದ್ದ ಕೆ ಟಿ ಗಟ್ಟಿಯಂಥವರು ಇಲ್ಲೇ ಮಂಗಳೂರಿನ ಹೃದಯಭಾಗದಲ್ಲಿ ಅಪಾರ್ಟ್‌ಮೆಂಟಿನಲ್ಲಿ ನೆಲೆಸಲು ಬಂದಿದ್ದಾರೆ...

ನನ್ನ ಕೈಯಲ್ಲಿ ಅಲಕಾ ತೀರ್ಥಹಳ್ಳಿಯವರದೇ ಹೊಸ ಕಾದಂಬರಿ ‘ಮುಂದೆ ಬರುವುದು ಮಹಾನವಮಿ’ ಇದೆ. ಅದರ ಓದೇ ಈ ಮೇಲಿನ ಮಾತುಗಳನ್ನೆಲ್ಲ ಬರೆಸಿದೆ. ಇದು ಕಾದಂಬರಿಯಾಗಿದೆಯೇ ಎಂಬ ಸಕಾರಣ ಅನುಮಾನಗಳೊಂದಿಗೇ ಇದನ್ನು ಬರೆದು ಮುಗಿಸಿರುವ ಅಲಕಾ ಅವರಿಗಾಗಲಿ, ಓದುಗರಿಗಾಗಲಿ ಇದು ಕಾದಂಬರಿಯೊ, ಕಥಾಸಂಕಲನವೋ, ಮಲೆನಾಡ ನುಡಿಚಿತ್ರಗಳ ಸಂಕಲನವೋ ಎನ್ನುವುದು ಅಷ್ಟು ಮುಖ್ಯ ಪ್ರಶ್ನೆ ಅಲ್ಲ ಎಂದುಕೊಳ್ಳುವೆ. ಕಾದಂಬರಿಯ ಕೊನೆಯ ಎರಡು ಮೂರು ಅಧ್ಯಾಯಗಳು ನನ್ನನ್ನು ಕೊಂಚ ಅಧೀರನನ್ನಾಗಿಸಿವೆ, ಚಿಂತೆಗೆ ದೂಡಿವೆ. ಅದಕ್ಕಿಂತ ಮುಖ್ಯವಾದದ್ದು ಅಲ್ಲ ಈ ಪ್ರಕಾರದ ಕುರಿತ ಪ್ರಶ್ನೆ.

ಸಹಜವಾಗಿಯೇ ಇಲ್ಲಿ ಅದ್ಭುತ ರಮ್ಯ ಮಲೆನಾಡ ಚಿತ್ರಗಳಿಲ್ಲ. ಅಲಕಾ ಅವರು ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತಿರುವಂತಿದೆ. ಇದು ಸದ್ಯದ ಅಗತ್ಯ ಕೂಡಾ. ಹೆಬ್ಬೈಲಮ್ಮನ ಒಂದು ಮಿಥಿಕಲ್ ಅನಿಸುವಂಥ ಕತೆಯೊಂದಿಗೆ ಆರಂಭವಾಗುವ ಈ ಕೃತಿ ಮುಂದೆ ನವಿಲೆಸರದ ಮುಖ್ಯಸ್ಥರಾದ ಮಹಾಬಲಯ್ಯನವರ ನೇತೃತ್ವದಲ್ಲಿ ಒಂದು ದೇವಿ ಗುಡಿ, ಅದಕ್ಕೊಬ್ಬರು ಯೋಗ್ಯ ಅರ್ಚಕರ ಹುಡುಕಾಟ, ಅವರಿಗೊಂದು ನೆಲೆ ಒದಗಿಸಿಕೊಡುವ ಕೆಲಸ, ಅವರ ಸಂಸಾರ ಎಂದೆಲ್ಲ ಸಾಗುತ್ತದೆ. ಕೃಷಿ ತನ್ನ ರೂಪಾಂತರವನ್ನು ಮೂರು ತಲೆಮಾರುಗಳ ಹೊಸತನದಲ್ಲಿ ಕಂಡುಕೊಳ್ಳುತ್ತ ಹೋಗುವ ಪರಿವರ್ತನೆಯ ಚಿತ್ರದಲ್ಲಿ ಹೊಸತೇ ಎನ್ನಬಹುದಾದ್ದು ಏನಿಲ್ಲ. ಮೂರು ತಲೆಮಾರುಗಳ ಹಲವು ಕಾದಂಬರಿಗಳು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಬಂದು ಹೋಗಿದ್ದು ಈಗಲೂ ಅಂಥವನ್ನು ಓದುವ ಕುತೂಹಲ, ಆಕರ್ಷಣೆ ಕನ್ನಡದ ಓದುಗರಿಗಿದ್ದೇ ಇದೆ ಎನ್ನುವುದನ್ನು ಬಿಟ್ಟರೆ ಅವು ಓದುಗನಲ್ಲಿ ಹೊಸ ತಲ್ಲಣಗಳನ್ನೇನೂ ಹುಟ್ಟಿಸುವುದಿಲ್ಲ.

ದೇವಿ ಮಾಂಸಾಹಾರಿಯೋ, ಸಸ್ಯಾಹಾರಿ/ಸಾತ್ವಿಕಾಹಾರಿಯೋ ಎನ್ನುವ ಒಂದು ಪ್ರಶ್ನೆ ಇಲ್ಲಿದ್ದು ಅದು ಕೂಡಾ ಚರ್ಚೆಗೆ ಅರ್ಹವಾದ ಸಮಕಾಲೀನ ಸಂಗತಿ ಎಂದು ನನಗಂತೂ ಅನಿಸುವುದಿಲ್ಲ.

ಮೊದಲಿಗೆ ನನ್ನ ಗಮನ ಸೆಳೆದಿದ್ದು, ಅಚ್ಚರಿ, ಕುತೂಹಲ, ಬೆರಗು ಎಲ್ಲ ಮೂಡಿಸಿದ ಒಂದು ವಿದ್ಯಮಾನವೆಂದರೆ ಮಾಧವ ಮಾಸ್ತರರ ಸಾವು, ಅವರ ಮಗ ಪುಂಡಲೀಕನ ಬದುಕಿನ ಶೈಲಿ, ತೆರೆಸಾ ಜೊತೆಗಿನ ಅವನ ವಿಲಕ್ಷಣ ಲವ್ವು, ಅವನ ತಂದೆ ಮಾಧವ ಮಾಸ್ತರ ಮತ್ತು ಫಿಲೊಮಿನಾ ಟೀಚರ್ ನಡುವೆ ಸಂಬಂಧ ಕಲ್ಪಿಸಿ ಹುಟ್ಟಿದ ಒಂದು ತಪ್ಪುಕಲ್ಪನೆಯಿಂದಾದ ಅನಾಹುತ ಇತ್ಯಾದಿಗಳು. ಇವೆಲ್ಲವನ್ನೂ ಮೀರಿ ನಿಂತ ಇನ್ನೂ ಹೆಚ್ಚಿನ ಒಂದು ವಿದ್ಯಮಾನ, ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಕೆಲವರ ಅಭಿವ್ಯಕ್ತಿ. ಇದಕ್ಕಿರುವ ಸಾಮಾಜಿಕ-ಸಾಂಸ್ಕೃತಿಕ ಮುಖಗಳು.

ಮೊದಲಿಗೆ ಬಂಗಾರಿ ನಾಯ್ಕನ ಮಾತುಗಳು. ಅವು ಹೊರಹೊಮ್ಮಿಸುವ ಊರ ರಾಜಕೀಯದ, ಪ್ರಭಾವೀ ವಲಯದ ಅಧಿಪತ್ಯವನ್ನು ಕಸಿಯಲು ಹೊಂಚು ಹಾಕುತ್ತಿರುವ ಶಕ್ತಿಗಳ ಕುರಿತು ನೀಡುವ ಭಯ-ಆತಂಕ ಮಿಶ್ರಿತ ಹೊಳಹುಗಳು, ಜಾತಿ ರಾಜಕಾರಣದ ವಿಚಿತ್ರ ಅಭಿವ್ಯಕ್ತಿಯಂತೂ ಯಾವ ಕಲೆಗೂ ಅಸಾಧ್ಯವಾದ ಒಂದು ಚಿತ್ರವೇ ಸರಿ. ಈ ಮಾತುಗಳನ್ನು ಅಲಕಾ ಅದೆಲ್ಲಿಂದ ತಂದರೋ ದೇವರೇ ಬಲ್ಲ. ಬಂಗಾರಿ ನಾಯ್ಕನ ಅಪಭ್ರಂಶ ಲೇಪಿತ ಉಚ್ಚಾರದೋಷಗಳೊಂದಿಗೇ ಆ ಜಗತ್ತಿನ ಮುಗ್ಧತೆ, ಸೆಡವು, ಕ್ರೌರ್ಯ ಮತ್ತು ಸಂಕಟಗಳನ್ನು ಒಟ್ಟೊಟ್ಟಿಗೇ ಕಟ್ಟಿಕೊಡುವ ಈ ಒಂದು ಉಪನ್ಯಾಸವೇನಿದೆ, ಅದು ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಯೋಗ್ಯ ಪಠ್ಯದಂತಿದೆ. ಲಂಕೇಶ್ ಒಂದೆಡೆ ಹೇಳಿದ ಮಾತುಗಳು ನೆನಪಾಗುತ್ತವೆ; "ಲೇಖಕನಾದವನು ತನ್ನ ಪಾತ್ರಗಳ ವಿಚಿತ್ರ ಸುಖ ಮತ್ತು ಕಾತರ ಕೂಡಿದ ಸ್ಥಿತಿ - ಇದನ್ನು ಬೇಕಾದರೆ ಕಾಂಪ್ಲೆಕ್ಸ್ ಅನ್ನಿ, ಹಿಡಿದಿಡಲಾರದವ ಒಳ್ಳೆಯ ಸಾಹಿತಿಯಾಗಲಾರ".

ಹಾಗೆಯೇ ತದನಂತರ ಮಾತನಾಡುವ ಮಡಿವಾಳ ಗಣಪ ಅಥವಾ ಮಳ್ ಗಣಪ್ಯಾನ ಮಾತುಗಳು ಕೂಡ ಮುಖ್ಯ. ಈತನ ಮಾತುಗಳು ಮೇಲೆ ಹೇಳಿದಂಥ ಗುರುತ್ವ ಹೊಂದಿಲ್ಲ ಎನ್ನುವುದು ನಿಜವೇ. ಗಣಪನ ಮನೋಲೋಕದ ಕ್ಯಾನ್ವಾಸಿನಲ್ಲಿ ರಾಜಕೀಯ-ಆರ್ಥಿಕ ಇಶ್ಯೂಗಳೆಲ್ಲ ಇರುವುದು ಸಾಧ್ಯವೂ ಇಲ್ಲ. ಆದರೆ ಅವನಿಗೆ ಗೊತ್ತಿದ್ದೋ ಇಲ್ಲದೆಯೋ ಒಂದು ಸಾಮಾಜಿಕ ಸ್ತರದ, ಜಾತೀಯತೆಯ ಚಿತ್ರವನ್ನಂತೂ ಈ ಮುಗ್ಧ-ಪೆದ್ದನ ಮಾತುಗಳು ಕಟ್ಟಿಕೊಡುವ ಅನನ್ಯ ಬಗೆಯಿದೆಯಲ್ಲ, ಅದು ಮನಸ್ಸನ್ನು ಆರ್ದ್ರಗೊಳಿಸುವುದು ಸುಳ್ಳಲ್ಲ. ಈ ಬಗ್ಗೆ ಹೆಚ್ಚು ಹೇಳದೆ, ಅದಕ್ಕಿರುವ ಸೋಶಿಯೋ ಇಕಾನಮಿಕ್ ಮುಖಗಳನ್ನು, ಅದು ಕರಟಿ ಹೋಗುತ್ತಿರುವ ಮುಗ್ಧ ಮಕ್ಕಳ ಬದುಕು ಭವಿಷ್ಯವನ್ನು ನಿರ್ಣಯಿಸುವ ವಿದ್ಯಮಾನವಾಗಿದೆ ಎನ್ನುವ ಸಂಗತಿಯನ್ನು ನೀವೇ ಕಂಡುಕೊಳ್ಳುವುದು, ನೀವೇ ಅದರ ಆಳ-ಅಗಲ ಕಾಣುವುದು ಸೂಕ್ತ.

ಮುಂದೆ ಇಲ್ಲಿ ದೇವೀಪ್ರಸಾದ ಮತ್ತು ದೀವ್ರ ಹುಡುಗಿ ಶೋಭಾರ ಪ್ರೇಮ ಪ್ರಸಂಗ, ಈ ಶೋಭಾ, ಅವಳ ಸಹೋದರ ರಾಜೇಶ ಮತ್ತು ಈ ದೇವೀಪ್ರಸಾದ ಮೂವರೂ ಸೇರಿ ನಡೆಸುವ ಹಳ್ಳಿಗರ ಮದ್ಯವರ್ಜನ ಪ್ರಯತ್ನಗಳು, ಅಮೆರಿಕದಿಂದ ಗಂಡ-ಮಗನಿಂದ ದೂರವಾಗಿ ಮರಳಿ ಊರಿಗೆ ಬಂದ ಮಹಾಬಲಯ್ಯನವರ ಮಗಳು ರಾಧಿಕಾ ಮತ್ತು ಅವಳ ಬಾಲ್ಯಸಖನೂ ಮೌನಪ್ರೇಮಿಯೂ ಆದ ದತ್ತು ನಡುವಿನ ನವಿರಾದ ಸ್ನೇಹ-ಪ್ರೇಮದ ಪ್ರಸಂಗಗಳು, ಈ ರಾಧಿಕಾ ನಡೆಸುವ ಕೃಷಿ ಸಂಬಂಧಿತ ಹೊಸ ಪ್ರಯತ್ನಗಳು, ಹಿಂದೆ ಹೇಳಿದ ಮಾಧವ ಮಾಸ್ತರರ ಮಗ ಪುಂಡಲೀಕನ ಅಪ್ಪೆ ಮಿಡಿ ಫ್ಯಾಕ್ಟ್ರಿಯ ಕನಸುಗಳು ಚಿಗುರೊಡೆಯುವುದು, ವೈನ್ ಬಾರಿನ ರಘು ಶೆಟ್ಟಿ, ಭಟ್ಟಿ ಹೆಂಡದ ಸರೋಜಮ್ಮ, ಸರೋಜಮ್ಮನ ಸೊಸೆ ಮುಂತಾದ ತುಂಡು ತುಂಡು ಪಾತ್ರಗಳ ಸುತ್ತ ಗಿರಕಿ ಹೊಡೆದು ಅಲ್ಲಲ್ಲೇ ಮುಗಿಯುವ ಕೆಲವು ಸ್ವಾರಸ್ಯಕರ ಪ್ರಸಂಗಗಳು, ಗೊಬ್ಬರ ತಯಾರಿಸಿ ಮಾರುವ ಮಡಿವಾಳ ಮರಿಯಪ್ಪನ ಕೆಮ್ಮು ಮತ್ತು ಮದುವೆಯ ಅವಾಂತರಗಳು, ಸೋಮಶೇಖರ ಮಾಸ್ತರ್ ಊರಲ್ಲಿ ಮೂಡಿಸುವ ಹೊಸ ಚೈತನ್ಯ ಎಲ್ಲವೂ ಏಕಸೂತ್ರದ ನೇಯ್ಗೆ ಇಲ್ಲದಿದ್ದರೂ ನಮ್ಮನ್ನು ಬೋರು ಹೊಡೆಸದೇ ಓದಿಸಿಕೊಂಡು ಹೋಗುತ್ತವೆ. ಇದೇ ಓಘದಲ್ಲಿ ಬರುವ ಸಂಬಯ್ಯ ಮತ್ತು ಅವರ ಇಬ್ಬರು ಮಕ್ಕಳು ರಾಜಾರಾಮ ಮತ್ತು ಶಾಂತಾರಾಮರ ಕತೆ ಬಹುಶಃ ನಾನು ಆರಂಭದಲ್ಲಿ ಹೇಳಿದ ವಿದ್ಯಮಾನದ ಕೇಂದ್ರ ಬಿಂದುಗಳು.

ದೂರದ ಬೆಟ್ಟ ನುಣ್ಣಗೆ ಎಂಬಂತೆ ಎಲ್ಲವೂ ನೆಮ್ಮದಿಯ, ಸೌಂದರ್ಯದ, ಆರೋಗ್ಯದ, ಚೈತನ್ಯದ ನೆಲೆವೀಡಾಗಿ, ಕಲ್ಪನೆಯ ಸ್ವರ್ಗದಂತೆಯೇ ಕಾಣುವ ಮಲೆನಾಡಿನಲ್ಲಿ (ಮಲೆನಾಡು ಇಲ್ಲಿ ಒಂದು ರೂಪಕ ಅಷ್ಟೇ. ಇದನ್ನು ಮಾಲ್ಗುಡಿಯಿಂದ ಹಿಡಿದು ಜಯಂತರ ಮುಂಬಯಿಯ ತನಕ ಅನ್ವಯಿಸಿಯೇ ಮಾತನಾಡುತ್ತಿದ್ದೇನೆ) ಕೂಡಾ ಬದುಕುತ್ತಿರುವ ಮನುಷ್ಯರಲ್ಲಿ ಸಣ್ಣತನ, ದುರಾಸೆ, ರಾಜಕೀಯ ಅಂಧಶ್ರದ್ಧೆ, ರಾಜಕೀಯ ಮೌಢ್ಯ, ಕೋಮುವಾದಿ-ಜಾತೀವಾದಿ ಪ್ರಜ್ಞೆ, ಮಠಮಾನ್ಯಗಳ ಹಸ್ತಕ್ಷೇಪದಿಂದ ಪಾರಾಗಲಾರದ ಇಬ್ಬಂದಿತನ, ಹಿಂಸೆ ಎಲ್ಲ ಇದೆ, ಮತ್ತು ಅದು ಎಷ್ಟರ ಮಟ್ಟಿಗೆ ಸಹ್ಯ ಮತ್ತು ಯಾವಾಗ ಮತ್ತು ಯಾರಿಗೆ ವಲಸೆಯೊಂದೇ ಉಳಿದ ದಾರಿ ಎನ್ನುವ ಮಟ್ಟಿಗೆ ಕುತ್ತಾಗಿ ಕಾಡುತ್ತದೆ ಎನ್ನುವುದನ್ನು ಈ ಕೊನೆಯ ಮುವ್ವತ್ತು ಪ್ಲಸ್ ಪುಟಗಳು ಕಾಣಿಸುತ್ತಿವೆ. ಬಹುಶಃ ಈ ಕೇಂದ್ರ ಪ್ರಜ್ಞೆಯನ್ನೇ ಇಡೀ ಕಾದಂಬರಿಯ ಸಶಕ್ತ ಧ್ವನಿಯನ್ನಾಗಿ ಮೂಡಿಸಿದ್ದರೆ ಇದೊಂದು ಬೇರೆಯೇ ಸ್ತರದ ಕಾದಂಬರಿಯಾಗುವುದು ಸಾಧ್ಯವಿತ್ತೇನೋ. ಇಲ್ಲಿ ನನಗೆ ಅಶೋಕ ಹೆಗಡೆಯವರ ‘ಅಶ್ವಮೇಧ’ ಕಾದಂಬರಿ ನೆನಪಾಗುತ್ತದೆ. ಆದರೆ ಅಲಕಾರ ಕಾದಂಬರಿಗೆ ಅಂಥ ಫೋಕಸ್ ದಕ್ಕದೇ ಹೋಗಿರುವುದು ಕಾಣಿಸುತ್ತದೆ.

ಕಾದಂಬರಿಯ ಕೆಲವೆಡೆ ನೇರವಾಗಿಯೇ ಕಾಂಗ್ರೆಸ್, ಬಿಜೆಪಿ, ಮಲೆನಾಡ ಪರಿಸರದ ಮಠ, ಮಂಗಗಳ ಸಾವು, ಧರ್ಮಸ್ಥಳದ ಮದ್ಯವರ್ಜನಾ ಶಿಬಿರಗಳು ಮುಂತಾದ ಕೆಲವು ಉಲ್ಲೇಖಗಳಿರುವುದು ಕಾದಂಬರಿಕಾರರ ಒಲವು ನಿಲುವುಗಳ ಬಗ್ಗೆ ಅವು ಏನನ್ನಾದರೂ ಹೇಳುತ್ತಿವೆಯೇ ಎನ್ನುವಂಥ ಪ್ರಶ್ನೆಗಳೂ ಬರುವುದು ಸಹಜವೇ ಆಗಿದೆ. ಅಲ್ಲದೆ, ಕಾದಂಬರಿಯ ಅರಂಭದ ಘಟ್ಟದಲ್ಲಿ ಕೊಂಚ ಅಪಾಯಕಾರಿ ಪಾತ್ರವೋ ಎಂಬಂತೆ, ಕೆಲವು ನಿಗೂಢ ಪ್ರಕರಣಗಳ ಹಿನ್ನೆಲೆಯಿರುವ ವ್ಯಕ್ತಿಯಂತೆ ಕಾಣುವ ಮಂಜುನಾಥನ ಪಾತ್ರವೂ ಅವಕಾಶವಾದಿತನದ ಲಕ್ಷಣಗಳನ್ನು ಕಾಣಿಸಿ ಕತೆ ಅತ್ತ ಬೆಳೆಯುವುದೇನೋ ಎಂಬ ನಿರೀಕ್ಷೆ ಹುಟ್ಟಿಸಿದರೂ ಅದು ಅಲ್ಲಿಗೇ ತಟ್ಟನೆ ಎಂಬಂತೆ ಮುಗಿದು ಬಿಡುವುದು ಅಚ್ಚರಿಯನ್ನೂ ಹುಟ್ಟಿಸುತ್ತದೆ. ಪುಂಡಲೀಕ, ತೆರೆಸಾ ನಡುವಿನ ಪ್ರೇಮ, ಅದಕ್ಕೆ ಅಡ್ಡಿಯಾಗುವ ಪುಂಡಲೀಕನ ತಂದೆ ಮಾಧವ ಮಾಸ್ತರ ಮತ್ತು ತೆರೆಸಾ ತಾಯಿ ಫಿಲೋಮಿನಾರ ನಡುವಿನ ಕಲ್ಪಿತ ಸಂಬಂಧದ ಗುಲ್ಲು, ಮುಂದೆ ಪುಂಡಲೀಕ ಪದ್ದಮ್ಮನ ಬಗ್ಗೆ ಆಡಿಕೊಳ್ಳುವ ಜನ, ಅವನ ಹೊಸ ವ್ಯವಹಾರ, ಕೊನೆಯಲ್ಲಿ ತೆರೆಸಾ ತೆಗೆದುಕೊಳ್ಳುವ ದೃಢ ನಿರ್ಧಾರ - ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಮಂಜುನಾಥನ ಕತೆಯೊಂದಿಗೆ ತಳುಕು ಹಾಕಿಕೊಂಡೇ ಇರುವುದರಿಂದ (ಅವನ ಸಂತಾಪ ಭಾಷಣ, ಮಾಧವ ಮಾಸ್ತರರ ಆಸ್ತಿಯ ನಿರ್ವಹಣೆ ಇತ್ಯಾದಿ ಗಮನಿಸಿ) ಮತ್ತು ಕೊನೆಯಲ್ಲಿ ರಾಧಿಕಾಳ ಪ್ರಯತ್ನದಿಂದ ಪುಂಡಲೀಕ ಅಪ್ಪೆಮಿಡಿಯ ಫ್ಯಾಕ್ಟ್ರಿಗೆ ಸಜ್ಜಾಗುವುದರಿಂದಲೂ ಕಥಾನಕವನ್ನು ಆ ದಿಸೆಯಲ್ಲಿಯೂ ಸ್ವಲ್ಪ ಬೆಳೆಸಲು ಅಥವಾ ಆ ಎಳೆಯನ್ನೇ ಮುಂದುವರಿಸಿಕೊಂಡೇ ಬೆಳೆಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಹಾಗೆ ಮಾಡದೆ, ತೊಡಗಿದ ಎಳೆಗೆ ಹೊರಗಿನ ಹೊಸ ಎಳೆಗಳನ್ನು ಕೂಡಿಸುತ್ತ ಹೋಗಿರುವುದು ಕೂಡಾ ಒಂದು ಚೌಕಟ್ಟು ನಿರ್ಮಾಣವಾಗುವಲ್ಲಿ ತೊಡಕಾಯಿತೇನೋ ಅನಿಸದೇ ಇರದು.

ಅದೇನಿದ್ದರೂ ಈ ಕಾದಂಬರಿ ಕೆಲವೊಂದು ಪ್ರಶ್ನೆಗಳನ್ನಂತೂ ಹುಟ್ಟು ಹಾಕಿದೆ. ಮುಂದೆ ಮತ್ತೆ ಮತ್ತೆ ಮಹಾನವಮಿ ಬಂದಾಗಲೆಲ್ಲ ಅವು ಚರ್ಚೆಗೆ ಒಳಪಟ್ಟರೆ ಒಳ್ಳೆಯದು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, October 6, 2019

ಅಮರೇಶ ನುಗಡೋಣಿಯವರ ‘ದಡ ಸೇರಿಸು ತಂದೆ’

ಆಧುನಿಕತೆಯಿಂದ ಅಂತರ ಉಳಿಸಿಕೊಂಡು ಹಳ್ಳಿಗಳಲ್ಲಿ ಮತ್ತು ಅಷ್ಟಿಷ್ಟು ನಗರಗಳಲ್ಲಿಯೂ ಬದುಕುತ್ತಿರುವ, ಹೊಟ್ಟೆಪಾಡಿಗಾಗಿ ಕಚೇರಿ ಕೆಲಸ - ಬಿಸಿನೆಸ್ ಮುಂತಾದ ಹೊಸ ವೃತ್ತಿ - ಪ್ರವೃತ್ತಿಗೆ ಹೊಂದಿಕೊಂಡಿದ್ದರೂ ಹಳ್ಳಿಗಳ ಮೂಲ ಕಸುಬು, ಕೃಷಿಗಳೆಡೆ ಸ್ವಾಭಾವಿಕ ಆಕರ್ಷಣೆ, ಮೋಹ ಉಳಿಸಿಕೊಂಡಿರುವ ಮಂದಿ ನಮಗೆ ಅಮರೇಶರ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಾರೆ. ಅಲ್ಲದೆ, ಅಮರೇಶರ ಎಲ್ಲಾ ಕತೆಗಳ ಮೂಲಭೂತ ಆಕರ್ಷಣೆ ಇಂಥ ಸಾಮಾನ್ಯ ಮಂದಿಯ ಬದುಕು ಹೇಗೆ ನಡೆಯುತ್ತದೆ ಎಂಬ ಬಗ್ಗೆ ಅವರಿಗಿರುವ ಆಳವಾದ ಅರಿವು. ಅರಿವು ಮಾತ್ರವಲ್ಲ, ಅದನ್ನು ಅಕ್ಷರಗಳಲ್ಲಿ, ಕಥನಗಳಲ್ಲಿ ಹದವಾಗಿ, ಕಥನಕ್ಕೆ ಎಷ್ಟು ಅಗತ್ಯವೋ ಅಷ್ಟೇ ಅನಿಸುವಂತೆ ತರಬಲ್ಲ ಕಲೆಗಾರಿಕೆ. ಅವರ ಕತೆಗಳಲ್ಲಿ ತಂತ್ರ, ತರ್ಕ, ಸಿದ್ಧಾಂತ ಮತ್ತು ಸುಪ್ತವಾಗಿ ಕೆಲಸಮಾಡುವ ಇತರೇ ಅಂಶಗಳಿಗಿಂತ ಕಥನವೇ ಮುಖ್ಯವಾಗಿ ಅದು ಮೈತಾಳುತ್ತದೆ. ಏನನ್ನು ಹೇಳುವುದಿದೆಯೋ ಅದನ್ನು ಕಥನವೇ ಮುಂದೆ ನಿಂತು ಕಾಣಿಸುವುದೇ ಹೊರತು ಅಜೆಂಡಾ ಕತೆಗಳನ್ನು ಅವರು ಬರೆಯುವುದಿಲ್ಲ.

ಹಾಗಿದ್ದೂ ಈ ಸಂಕಲನದ ಮುನ್ನುಡಿಯಲ್ಲಿ ಅವರು ಸಮಕಾಲೀನ ಬಿಕ್ಕಟ್ಟುಗಳನ್ನು ನಮ್ಮ ಸಣ್ಣಕತೆಗಾರರು ಎತ್ತಿಕೊಂಡು, ಸಮರ್ಥವಾಗಿ ದುಡಿಸಿಕೊಂಡು, ಮುಂಗಾಣ್ಕೆಯ ಹೊಳಪಿನಿಂದ ಸಮೃದ್ಧವಾದ ಸಾಹಿತ್ಯವನ್ನು ಕಟ್ಟುವಲ್ಲಿ ಅಷ್ಟು ಸಫಲರಾಗಿಲ್ಲ/ಆಸಕ್ತಿ ವಹಿಸಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ತಮ್ಮ ಪ್ರಸ್ತುತ ಸಂಕಲನ ಜಾಗತೀಕರಣ, ಕೋಮುವಾದ, ಮರ್ಯಾದಾ ಹತ್ಯೆಗಳಂಥ ಹಿಂಸೆ/ಕ್ರೌರ್ಯ ಹಾಗೂ ಧರ್ಮ-ರಾಜಕಾರಣ ಮತ್ತು ಸಾಮಾಜಿಕ ಕಾರ್ಯಕರ್ತರ ವಲಯದಲ್ಲಿ ತನ್ನ ಗಟ್ಟಿಯಾದ ಹೆಜ್ಜೆಗುರುತುಗಳನ್ನು ಮೂಡಿಸುತ್ತಿರುವ ಭ್ರಷ್ಟಾಚಾರದ ಹೊಸ ಮುಖಗಳನ್ನು ತಾವು ಕಥನದ ಒಡಲಲ್ಲಿ ನೇಯ್ದಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಅವೆಲ್ಲವೂ ನಿಜವಿದ್ದರೂ ನುಗಡೋಣಿಯವರ ಒಂದೊಂದು ಕತೆಯೂ ತೇಜಸ್ಸಿನಿಂದ ಕಂಗೊಳಿಸುವುದು, ಚೈತನ್ಯದಿಂದ ಬೆಳಗುತ್ತಿರುವುದು ಗಟ್ಟಿಯಾದ ಕತೆ ಮತ್ತು ವಿವರಗಳ ಸಮೃದ್ಧತೆಯಿಂದಲೇ ಹೊರತು ಇನ್ನೇನಲ್ಲ. ಈ ಕತೆಗಳಿಗೆ ಪ್ರಾಪ್ತವಾಗಿರುವ ಜೀವಂತಿಕೆಯ ಅಥೆಂಟಿಸಿಟಿಯೇ ಇವುಗಳ ಪ್ಲಸ್ ಪಾಯಿಂಟ್ ಮತ್ತು ಅದಕ್ಕಾಗಿ ಅವರನ್ನು ಅಭಿನಂದಿಸಲೇ ಬೇಕು. ಏಕೆಂದರೆ, ಇಲ್ಲಿ ವಿಭಿನ್ನ ಪರಿಸರದ, ವಿಭಿನ್ನ ಮತಧರ್ಮದ, ವಿಭಿನ್ನ ಬಗೆಯ ಹೊಟ್ಟೆಪಾಡಿನ ಹಾದಿಯನ್ನು ಆರಿಸಿಕೊಂಡ ಮಂದಿ ತುಂಬಿ ತುಳುಕುತ್ತಿದ್ದಾರೆ. ಇಷ್ಟೆಲ್ಲ ವಿಭಿನ್ನ ಬದುಕುಗಳ ಸೂಕ್ಷ್ಮಾತಿಸೂಕ್ಷ್ಮ ದೈನಂದಿನವನ್ನು ಕಥನದಲ್ಲಿ ತರಲು ಅಂಥವರ ಬದುಕಿನೊಂದಿಗೆ ತಾದ್ಯಾತ್ಮದಿಂದ ಸ್ಪಂದಿಸಿದ ಒಂದು ಬಾಲ್ಯ, ಅನುಭವ ಮತ್ತು ಬದುಕಿನ ಅನುಭವ ಕತೆಗಾರನಿಗಿರಬೇಕಾಗುತ್ತದೆ ಮಾತ್ರವಲ್ಲ ಅದರ ಸ್ಮೃತಿ ಇನ್ನೂ ಹಸಿರಾಗಿ ಮನಸ್ಸಿನಲ್ಲಿ ನಿಂತಿರಬೇಕಾಗುತ್ತದೆ. ಆಗ ಮಾತ್ರ ಒಬ್ಬ ಓದುಗನಿಗೆ ಕತೆಗಾರ ಇಲ್ಲಿ ಕಟ್ಟುತ್ತಿರುವ ಕಥಾಜಗತ್ತು, ಪಾತ್ರಗಳು, ಅವರ ಬದುಕು, ಅದರ ದೈನಂದಿನ, ಅದರ ಏರುಪೇರು ಎಲ್ಲವೂ ಹೌದು ಹೌದು ಅನಿಸತೊಡಗುತ್ತದೆ. ಕತೆ ಎಷ್ಟೇ ಕೌತುಕ, ಗುರುತ್ವ, ಮಹತ್ವ ಇರಿಸಿಕೊಂಡಿದ್ದರೂ ಓದುಗನಿಗೆ ಅಂಥ ಅನುಭವವನ್ನು ಕೊಡಲು ವಿಫಲವಾದ ಯಾವ ನಿರೂಪಣೆಯೂ ಯಶಸ್ವಿಯಾಗುವುದಿಲ್ಲ. ಅಮರೇಶ ನುಗಡೋಣಿಯವರ ಬಹುದೊಡ್ಡ ಆಸ್ತಿ ಎಂದರೆ ಇದೇ. ಇದು ಅಮರೇಶ ನುಗಡೋಣಿಯವರಲ್ಲಿರುವುದು, ಅವರು ಕತೆಯಿಂದ ಕತೆಗೆ ಅದನ್ನು ಸಮೃದ್ಧವಾಗಿ ಕೊಡುತ್ತಿರುವುದು ಕನ್ನಡದ ಭಾಗ್ಯ.

ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ಈಗಾಗಲೇ ಹೇಳಿದಂತೆ, ವೈವಿಧ್ಯಮಯ ಬದುಕಿನ ಚಿತ್ರಗಳು ಈ ಸಂಕಲನದ ಪ್ರಧಾನ ಆಕರ್ಷಣೆ. ಹಾಗೆಯೇ ಕಾದಂಬರಿಯೊಂದರ ಹರಹು ಇಟ್ಟುಕೊಂಡಿರುವ, ಈಗಿನ ಕಾಲಕ್ಕೆ ನೀಳ್ಗತೆಗಳೆನ್ನಿಸುವ ಕತೆಗಳಿವು. ಯಾವುದೇ ಧಾವಂತವಿಲ್ಲದ ಕಥಾನಕದ ನಡೆ, ಎಲ್ಲಿಯೂ ಕತೆಗಾರನ ಕೈಯಿಲ್ಲ ಎನಿಸುವಂಥ ಸಹಜ-ಸರಳ ಕಥಾನಕ ಇಲ್ಲಿನ ಎಲ್ಲ ಕತೆಗಳಲ್ಲೂ ಕಾಣುತ್ತೇವೆ. ಅದೆಲ್ಲಕ್ಕಿಂತ ಮುಖ್ಯವಾಗಿ ನುಗಡೋಣಿಯವರ ಕುರಿತೂ ಅವರ ಕತೆಗಳ ಕುರಿತೂ ಹೇಳಬಹುದಾದ ಒಂದು ಮಾತಿದೆ. ಬದುಕಿನ ನಡೆಯ ಕುರಿತು ಮುಗ್ಧನೊಬ್ಬನ ಮುಗ್ಧತೆಯನ್ನೂ, ಬದುಕಿನ ವೈಚಿತ್ರಗಳತ್ತ ಕುತೂಹಲಿಯೊಬ್ಬನ ಸೋಜಿಗವನ್ನೂ, ಮನುಷ್ಯನ ವ್ಯಕ್ತಿತ್ವದ ಔದಾರ್ಯವನ್ನೂ ನೀಚತನವನ್ನೂ ಸಮಾನವಾಗಿ ಕಾಣಬಲ್ಲ ಸಂತುಲತೆಯನ್ನೂ ಕಳೆದುಕೊಳ್ಳದ ಒಂದು ಮನೋಧರ್ಮ, ಬಲು ಸಂತುಲಿತ ಮತ್ತು ನಿಯಂತ್ರಿತ ನಿರೂಪಣೆಗೆ ಸೂಕ್ತವಾದ ಒಂದು ಮನೋಧರ್ಮವಿದು. ಅದನ್ನೇ ನಿರಂತರವಾಗಿ ಈ ಕಥನಗಳು ಪೋಷಿಸಿಕೊಂಡು ಬಂದಿರುವುದರಿಂದ ಸಾಧಿಸಿರುವ ಒಂದು ಅಪೂರ್ವವಾದ ಲಯವಿದೆ. ಅದನ್ನು ನಾವು ಗುರುತಿಸಬೇಕು.

"ಈ ದಾರಿ ಕೈಲಾಸಕೆ" ಎಂಬ ಮೊದಲಿನ ಕತೆಯಲ್ಲಿ ಅಂಜನಪ್ಪನ ಕತೆಯಿದೆ. ಈತ ರಾಜಕಾರಣಿ. ಆದರೆ ಮೂಲತಃ ಸಹೃದಯಿ. ವರ್ತಮಾನದಲ್ಲಿ ಅವನು ಒಂದು ಸಮಸ್ಯೆಯ ಎದುರು ನಿಂತಿದ್ದಾನೆ. ಅದರಿಂದ ಪಾರಾಗಲು ಅವನು ದೊಡ್ಡ ಬೆಲೆ ತೆರಲು ಸಿದ್ಧನಾಗಬೇಕಿದೆ. ಆ ಬೆಲೆಯ ಗುರುತ್ವ ನಮಗೆ ತಿಳಿಯಬೇಕೆಂದಿದ್ದರೆ ನಮಗೆ ಅವನ ಇಡೀ ಬದುಕಿನ ಒಂದು ಸ್ಥೂಲಚಿತ್ರ ಸಿಗುವುದು ಅನಿವಾರ್ಯವಾಗಿದೆ. ಅವನ ಬದುಕಿನ ಆರಂಭಿಕ ಹಂತದ ಪರೋಪಕಾರಿ ಮನೋಧರ್ಮವೇ ಅವನನ್ನು ಹೇಗೆ ಜನನಾಯಕನನ್ನಾಗಿ ರೂಪಿಸುತ್ತದೆ ಮತ್ತು ನಾಯಕತ್ವದ ನಿಭಾವಣೆಯ ಸಂಕಟಗಳೇನು ಎನ್ನುವುದನ್ನು ಒಂದು ಸ್ತರದಲ್ಲಿ ಕಾಣಿಸುತ್ತಲೇ ವೈಯಕ್ತಿಕ ಬದುಕಿನ ಗೊಂದಲಗಳನ್ನೂ ಕಥಾನಕ ತೆರೆದಿಡುತ್ತ ಸಾಗುತ್ತದೆ. ಅಂಜನಪ್ಪ ಆಯ್ದುಕೊಳ್ಳುವ ಹಾದಿ, ಆ ಹಾದಿಯಲ್ಲಿ ಅವನ ಜೊತೆಗಿರುವವರು ಯಾರು, ಸಂಘರ್ಷಗಳನ್ನೊಡ್ಡುವವರು ಯಾರು ಎನ್ನುವುದರ ಅರಿವು ಓದುಗನಿಗೂ ಮೂಡುವುದರೊಂದಿಗೇ ಈ ಕತೆ ಮುಗಿದರೂ ಅದು ಓದುಗನ ಮನಸ್ಸಿನಲ್ಲಿ ಇವೇ ಪ್ರಶ್ನೆಗಳೊಂದಿಗೆ ಮರುಹುಟ್ಟು ಪಡೆದುಕೊಳ್ಳುವುದು ಸೋಜಿಗ. ಹಾಗೆಯೇ ಅಮರೇಶ ನುಗಡೋಣಿಯವರು ಈ ಕತೆಗೆ ಒಂದು ಆಧ್ಯಾತ್ಮದ ಮಗ್ಗುಲನ್ನೂ ಒದಗಿಸುತ್ತಾರೆ ಎನ್ನುವುದನ್ನು ಗಮನಿಸಬೇಕು. ಮನುಷ್ಯನ ಆಳದ ನೈತಿಕತೆ, ವ್ಯಕ್ತಿತ್ವದ ಪರಿಶುದ್ಧತೆ ನಿರ್ಣಯವಾಗುವುದು ಯಾವತ್ತೂ ನಿರ್ಮಮ, ನಿರಾಕಾರ, ನಿರ್ಗುಣದ ಎದುರಿಗೇನೆ. ಇದನ್ನು ಅಮರೇಶ ನುಗಡೋಣಿಯವರು ಈ ಕತೆಯ ಚೌಕಟ್ಟಿನಲ್ಲೇ ದುಡಿಸಿಕೊಂಡಿರುವುದು ಕಾಣುತ್ತೇವೆ.

"ಜೂಜು" ಕತೆ ಕೂಡಾ ಮುಗಿದರೂ ಮುಗಿಯದೆ, ಆರಂಭವಾಯಿತೋ ಎಂಬಂತೆ ಕಾಣುವ ಕತೆಯೇ. ನಿಜಾಮ್‌ಸಾಬ ಮೇಲ್ನೋಟಕ್ಕೆ ಕಂಡುಬರುವಂತೆ ಭೋಳೇ ಬಸವನೇನಲ್ಲ. ಅವನಿಗೆ ತನ್ನ ಸುತ್ತ ಮತ್ತು ತನ್ನದೇ ಬದುಕಿನಲ್ಲಿ ನಡೆಯುತ್ತಿರುವ ಎಲ್ಲ ತುಮುಲಗಳ ಸ್ಪಷ್ಟ ಅರಿವಿದೆ. ಆದರೆ ಅವನು ಪ್ರತಿಕ್ರಿಯಿಸುವುದು, ಪ್ರತಿಸ್ಪಂದಿಸುವುದು ಮಾತ್ರ ಅತ್ಯಲ್ಪ. ಹಾಗಿದ್ದೂ ಕಥಾನಕದ ಚಲನೆಯನ್ನು ಅಮರೇಶ್ ನುಗಡೋಣಿಯವರು ಯಾವತ್ತಿನ ಲವಲವಿಕೆಯಲ್ಲೇ ನಿಭಾಯಿಸುವುದು ಕುತೂಹಲಕರವಾಗಿದೆ, ಗಮನವಿಟ್ಟು ನೋಡಬೇಕಾದ ಬಗೆಯಲ್ಲಿದೆ. ಅಂಜನಪ್ಪನ ಪಾತ್ರದೊಂದಿಗೆ ಓದುಗರು ಸಾಧಿಸಲು ಸಾಧ್ಯವಿರುವ ಒಂದು ಕನೆಕ್ಷನ್ ನಿಜಾಮ್‌ಸಾಬನ ಪಾತ್ರದೊಂದಿಗೆ ಸಾಧ್ಯವಾಗದೇ ಇರಲು ಕಾರಣ ಅವನು ಸ್ವಲ್ಪ ಬೇಜವಾಬ್ದಾರಿಯವನಂತೆ, ಲಂಪಟನಂತೆ ಮತ್ತು ಮನಸೋ ಇಚ್ಛೆ ಬದುಕುತ್ತಿರುವಂತೆ ಕಾಣುವುದೇ ಇರಬಹುದು. ಆದರೆ ಅವೆಲ್ಲವೂ ಸುಳ್ಳೆಂಬಂತೆ ನಡೆದುಕೊಳ್ಳುತ್ತ, ವ್ಯವಸ್ಥೆಗೆ ಸಿಡಿದು ನಿಲ್ಲಬಲ್ಲ, ವೈಯಕ್ತಿಕ-ಸಾಂಸಾರಿಕ ಮಾತ್ರವೇಕೆ, ಸಾಮಾಜಿಕ ಜವಾಬ್ದಾರಿ ಕೂಡ ತನಗಿದೆ ಎಂಬಂತೆ ಅವನು ನಡೆದುಕೊಳ್ಳುವ ರೀತಿ ಸೋಜಿಗವನ್ನು ಹುಟ್ಟಿಸುತ್ತದೆ. ಹುಟ್ಟಿಸುವಲ್ಲಿಯೇ ಕತೆ ಕೊನೆಯಾಗದೆ ಓದುಗನಲ್ಲಿ ಹೊಸದಾಗಿ ಸುರುವಾಗುವುದೂ ನಡೆಯುತ್ತದೆ.

"ಹೀಗೊಂದು ಮಂದಿರ" ಕತೆಯ ನಿರೂಪಣೆಯ ಸೊಗಸು, ವಿವರ ಮನಮುಟ್ಟುವಂತಿದೆ. ಆದರೆ ಫ್ಲ್ಯಾಶ್‌ಬ್ಯಾಕ್ ಲವ್‌ಸ್ಟೋರಿಯ ಹಳಸಲು ಹಂದರ ಇಷ್ಟವಾಗುವುದಿಲ್ಲ. ಅಲ್ಲದೆ, ಇದು ಅಷ್ಟೇನೂ ಗಟ್ಟಿಯಾದ ಮತ್ತು ಹೊಸತನದಿಂದ ಕೂಡಿದ ಕಥಾನಕದ ಆಧಾರವನ್ನೂ ಹೊಂದಿರದೆ, ಹೆಸರಿನಲ್ಲೇ ಕಾಣಿಸುವ ಅಜೆಂಡಾದ ಕತೆಯಂತೆ ಭಾಸವಾಗುತ್ತದೆ. ಆದರೆ ಕಥನದ ನಿರೂಪಣೆ, ಪರಿಸರ ನಿರ್ಮಾಣಕ್ಕೆ ಒದಗಿದ ವಿವರಗಳಿಂದ ಮನಸೆಳೆವ, ಆಪ್ತವಾಗುವ ಕತೆ.

"ಯಾತ್ರೆ" ಈ ಸಂಕಲನದ ಮತ್ತೊಂದು ಯಶಸ್ವೀ ಕತೆ. ಇಲ್ಲಿರುವ ಗಟ್ಟಿಯಾದ ಕಥಾನಕ, ಸೊಗಸಾದ ನಿರೂಪಣೆ, ಕುತೂಹಲವನ್ನು ಹಿಡಿದಿಟ್ಟುಕೊಳ್ಳುವ ತಂತ್ರ, ಸಾರ್ವಕಾಲಿಕವೂ ಹೊಸತನದಿಂದಲೂ ಕೂಡಿರುವ ವಸ್ತು, ಮುಂತಾಗಿ ಎಲ್ಲಾ ವಿಷಯದಲ್ಲೂ ಮೆಚ್ಚುಗೆ ಹುಟ್ಟಿಸುವ ಕತೆಯಿದು. ಇಲ್ಲಿ ಮಠಮಾನ್ಯಗಳ ರಾಜಕಾರಣವಿದೆ, ಆಸ್ತಿ ಹೊಂಚುವ ದಾಯಾದಿತನದ ಕತೆಯಿದೆ, ಸಮಾಜದ ದುರುಳತನದ ಮುಖ ಚಿತ್ರಿಸಲ್ಪಡುತ್ತದೆ, ಶರಣರ ಬದುಕಿನ ಸಹಜ ಸುಂದರ ಚಿತ್ರಗಳಿವೆ ಮಾತ್ರವಲ್ಲ ಇವೆಲ್ಲದರೊಂದಿಗೆ ಇಡೀ ಕತೆಯ ಉದ್ದಕ್ಕೂ ಕುತೂಹಲವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಲೇ ರಂಜಿಸಬಲ್ಲ ಒಂದು ಆಯಾಮವೂ ಈ ಕತೆಗಿದೆ. ಮಠದ ದೊಡ್ಡಸ್ವಾಮಿ ಮತ್ತು ಚಿಕ್ಕಸ್ವಾಮಿಗಳ ನಡುವಿನ ಶೀತಲ ವೈರುಧಕ್ಕೆ ನೀರೆರೆದು ಪೋಷಿಸುತ್ತಲೇ ತನ್ನ ಬೇಳೆ ಬೇಯಿಸಿಕೊಳ್ಳುವ ಗೌಡನಂಥವರು, ಊರ ದಾಯಾದಿಗಳ ನಡುವೆ ಸಂಬಂಧ ಹಳಸುವಂತೆ ಮಾಡಲು ಇನ್ನಿಲ್ಲದಂತೆ ಪ್ರಯತ್ನಿಸುವ, ತನ್ಮೂಲಕ ಅವರ ಆಸ್ತಿ ಹೊಡೆಯಲು ಹೊಂಚು ಹಾಕುವ ಊರ ಧನಿಕರು, ಕೌಟುಂಬಿಕ ದುರಂತಗಳಿಂದ ಹಣ್ಣಾಗಿ ಬಸವ ತತ್ವಕ್ಕೆ ಶರಣಾಗಿ ಲೋಕವಿಮುಖಿಯಾಗುವ ಸಾತ್ವಿಕರು, ಶರಣರು, ಅವರನ್ನೂ ಅವರ ಪಾಡಿಗೆ ನಿಶ್ಚಿಂತೆಯಿಂದ ಬದುಕಲು ಬಿಡದ ಸ್ವಾರ್ಥಿಗಳು ಎಲ್ಲರೂ ಇರುವ ಜಗತ್ತಿನಲ್ಲೇ ಭಕ್ತಿ-ಆಧ್ಯಾತ್ಮಗಳ ಒಂದು ಪಾತಳಿ, ಮನುಷ್ಯ ಸಂಬಂಧಗಳ, ಭಾವನೆಗಳ ಒಂದು ಪಾತಳಿ, ಸತ್ ಯಾವತ್ತಿಗೂ ಪೊರೆಯುತ್ತದೆ ಎನ್ನುವ ನಂಬುಗೆಯೇ ಹುಟ್ಟಿಸುವ ಒಂದು ಭರವಸೆಯ ಪಾತಳಿ - ಇವೆಲ್ಲವುಗಳು ಈ ಬದುಕಿಗೆ ಒದಗಿಸುವ ಒಂದು ಸೌಂದರ್ಯ ಕೂಡಾ ಇರುವುದು ಎಂಬ ಸತ್ಯವನ್ನು ಈ ಕತೆ ಎಷ್ಟೊಂದು ಸುಂದರವಾಗಿ ಕಟ್ಟಿಕೊಡುತ್ತದೆ ಎಂದರೆ ಓದು ಕೊಡುವ ಅನುಭವದಲ್ಲಿ ಇದೊಂದು ಕತೆ ಎಂದೇ ಅನಿಸುವುದಿಲ್ಲ. ಕಾದಂಬರಿಯೊಂದನ್ನು ಓದಿದ ಅನುಭೂತಿಯನ್ನು ಇದು ನೀಡುವಷ್ಟು ಸಶಕ್ತವಾಗಿದೆ, ಅಂಥ ಕಸು ಹೊಂದಿದೆ.

"ಕಟ್ಟೆಯ ಕಲ್ಲು ಕಟ್ಟೆಗೆ" ಕತೆ ಒಂದರ್ಥದಲ್ಲಿ "ಯಾತ್ರೆ" ಕತೆಯ ಮುಂದುವರಿದ ಭಾಗ. ಆದರೆ ಆ ಕತೆಯ ಹಂಗಿಲ್ಲದೆಯೂ ಇದನ್ನು ಓದಬಹುದು. ಈ ಕತೆಯ ಸ್ವತಂತ್ರ ಆಸ್ವಾದನೆಗೆ ಅಗತ್ಯವಿರುವಷ್ಟು ಹಿಂದಿನ ಕತೆಯ ವಿವರಗಳು ಇಲ್ಲಿಯೇ ಸಿಗುವಂತಿವೆ. ಆದರೆ ಒಂದು ಸಂಕಲನದಲ್ಲಿ ಎರಡೂ ಕತೆಗಳನ್ನು ಒಟ್ಟಿಗೇ ಓದುವ ಓದುಗನಿಗೆ ಇವೆರಡೂ ಕತೆಗಳಲ್ಲಿ ಸಾಕಷ್ಟು ಪುನರಾವರ್ತಿತ ವಿವರಗಳಿವೆ ಅನಿಸಿದರೆ ವಿಶೇಷವೇನಿಲ್ಲ. ಮೊದಲ ಕತೆಯಲ್ಲಿಯೇ ಮಲ್ಲಿಕಾರ್ಜುನನ ಯೌವನದಲ್ಲಿ ಆತ ತಪ್ಪು ಹೆಜ್ಜೆಯಿರಿಸಿದ ಒಂದು ಘಟನೆಯ ಬಗ್ಗೆ ದೊಡ್ಡಪ್ಪ, ದೊಡ್ಡಮ್ಮ ಮಾತ್ರವಲ್ಲ ನಿರೂಪಣೆಯಲ್ಲೂ ಮತ್ತೆಮತ್ತೆ ವಿವರವಾದ ಉಲ್ಲೇಖವೇ ಬರುತ್ತದೆ. ಅದೇ ವಿವರ ಮತ್ತೊಮ್ಮೆ ಈ ಕತೆಯಲ್ಲೂ ಬರುವುದು ಅನಿವಾರ್ಯವಾಗಿದೆ. ಇದನ್ನು ಸಹಿಸಿದರೆ ಈ ಕತೆ, ಒಂದೇ ಕತೆಯ ವಿಭಿನ್ನ ಮಜಲೊಂದನ್ನು ನಮಗೆ ತೋರಿಸುವ ವಿಚಿತ್ರಕ್ಕೆ ಬೆರಗಾಗುವ ಸರದಿ ನಮ್ಮದಾಗುತ್ತದೆ. ನಾವು ಒಂದು ಕತೆಯನ್ನು ಎಲ್ಲಿಂದ ಅಥವಾ ಯಾವ ಪಾತ್ರವನ್ನು ಕೇಂದ್ರ ಎಂದಿಟ್ಟುಕೊಂಡು ನೋಡುತ್ತೇವೆ ಎನ್ನುವುದರ ಮೇಲೆಯೇ ಅದರ (ಕತೆಯ ಮತ್ತು ಅದನ್ನು ನೋಡುವ ನಮ್ಮ) ಒಟ್ಟಾರೆ ಮನೋಧರ್ಮ ಸಿದ್ಧಗೊಳ್ಳುವುದು ವಿಚಿತ್ರವಾದರೂ ನಿಜ. ಆದರೆ ನಮ್ಮ ಬದುಕು ಹಾಗೆ ನಡೆಯುವುದಿಲ್ಲ. ಬದುಕಿನಲ್ಲಿ ನಮಗೆ ನಾವೇ ಕೇಂದ್ರವಾಗಿದ್ದರೂ, ಅದೇ ನಮಗೆ ಹೆಚ್ಚು "ಸಹ್ಯವಾದ ಸತ್ಯ"ಗಳನ್ನು ಕಾಣಿಸುವ ನೆಲೆಯಾಗಿದ್ದರೂ, ಬೇರೆಯವರನ್ನು ಕೇಂದ್ರವಾಗಿರಿಸಿಕೊಂಡು ವಸ್ತುಸ್ಥಿತಿಯನ್ನು ಅರಿಯುವ ಅಗತ್ಯ ಕೂಡಾ ನಮಗೆ ಎದುರಾಗಿಯೇ ಆಗುತ್ತದೆ. ನಮಗಾಗದವರ ಬಗ್ಗೆ ನಾವು ಅಷ್ಟು ಔದಾರ್ಯವನ್ನು ತೋರಿಸದೆ ಇದ್ದರೂ ನಮ್ಮ ವಿರುದ್ಧ ಸೆಟೆದು ನಿಲ್ಲುವ ನಮ್ಮದೇ ಬಾಳಸಂಗಾತಿಯ ವಿಷಯದಲ್ಲಿಯೋ, ಕರುಳಕುಡಿಗಳ ವಿಚಾರದಲ್ಲಿಯೋ ನಾವು ಹಾಗೆ ಕೇಂದ್ರಪಲ್ಲಟಕ್ಕೆ ಮಾನಸಿಕವಾಗಿ ಸಜ್ಜಾಗುವ ಅನಿವಾರ್ಯ ಎದುರಾಗಿಯೇ ಆಗುತ್ತದೆ. ಈ ಎರಡು ಕತೆಗಳು ಹೆಚ್ಚೂಕಡಿಮೆ ಅಂಥ ಒಂದು ಮನೋಧರ್ಮವನ್ನೇ ನಮಗೆ ಕಾಣಿಸುವಂತಿವೆ. ಮೊದಲ ಕತೆಯಲ್ಲಿ ಅಷ್ಟು ಸದ್ಭಾವಕ್ಕೆ ಕಾರಣನಾಗದ ಪಾತ್ರ ಮಲ್ಲಿಕಾರ್ಜುನನದ್ದು. ಆದರೆ ಈ ಕತೆಯಲ್ಲಿ ಅವನೇ ಕೇಂದ್ರ ಮತ್ತು ಆದರ್ಶಪಾತ್ರವೂ.

ಮೊದಲ ಕತೆಯಲ್ಲಿ ಓದುಗನೇ ತಳೆಯುವ ಕೆಲವು ಸಮಾಧಾನದ ನಿರ್ಣಯಗಳು ಈ ಕತೆಯಲ್ಲಿ ಪೂರ್ತಿಯಾಗಿ ಅಲ್ಲಗಳೆಯಲ್ಪಡುವುದು ಇನ್ನೊಂದು ಚೋದ್ಯ. ಮೊದಲ ಕತೆಯಲ್ಲಿ ಬರುವ ಕೆಲವರ ಬದುಕು ನಿರುಮ್ಮಳವಾದ ತಿರುವು ಪಡೆದಿದೆ ಎಂದುಕೊಂಡು ನಾವು ಸಹಜವಾಗಿ ನಮ್ಮದೇ ಸಮಾಧಾನಕ್ಕೆ ಬಂದಿದ್ದರೂ ಅದು ಹಾಗಾಗಿರದೇ ಹೊಸ ಆತಂಕ, ದುಗುಡಗಳಿಗೆ ಕಾರಣವಾದಂತೆ ಈ ಕತೆಯ ಆರಂಭವೇ ನಮ್ಮಲ್ಲಿ ಕೌತುಕವನ್ನು ಹೆಚ್ಚಿಸುತ್ತದೆ. ಇದನ್ನು ಎರಡೂ ಕತೆಗಳ ತಂತ್ರ ಎಂದು ಕಾಣುವುದು ಸಾಧ್ಯ ಮತ್ತು ಸರಿಯೇ, ಆದರೆ ಅದನ್ನುಳಿದಂತೆ ಈ ಕತೆಯ ಕೇಂದ್ರ ಕಥಾನಕ ಬೇರೆಯೇ ಪಾತಳಿಯ ಮೇಲೆ ಬೆಳೆಯುವುದರಿಂದ ನಮಗೆ ತಾದ್ಯಾತ್ಮವೊದಗಿದ ಹಿಂದಿನ ಕತೆಯ ಪಾತ್ರಗಳ ಬದುಕು-ಭವಿಷ್ಯದ ಪ್ರಶ್ನೆ ಕೊಂಚ ಮಸುಕಾಗುವುದನ್ನು ನಾವು ಸಾಹಿತ್ಯದ ಓದುಗರಾಗಿಯೂ, ಕೇವಲ ಮನುಷ್ಯರಾಗಿಯೂ ಗಮನಿಸಬೇಕು. ಕಥನದ ಅಗತ್ಯ, ನಿರೂಪಣೆಯ ತಂತ್ರವೇನೇ ಇರಲಿ, ಬದುಕಿನ ನೆಲೆಯಲ್ಲಿ ಮತ್ತು ಕತೆಯ ಪಾತ್ರಗಳಾಗಿ ಓದುಗನಿಗೆ ಹತ್ತಿರದವರಾದ, ಅವನು ಕನೆಕ್ಟ್ ಮಾಡಿಕೊಂಡ ಪಾತ್ರಗಳ ವಿಚಾರದಲ್ಲಿ ಅವನ ಮನೋಧರ್ಮ ಬದಲಾಗುವುದು - ಕತೆಗಾರನ ನಿರ್ದೇಶನದಲ್ಲಿಯೇ ಆದಾಗ್ಯೂ - ಒಂದು ಹೊಸತೇ ಆದ ಒಳನೋಟಕ್ಕೆ ಕಾರಣವಾಗಬೇಕು.

"ದಡ ಸೇರಿಸು ತಂದೆ" ಕತೆಯಲ್ಲಿ ವಿಭಿನ್ನವಾದ ಕಥಾಜಗತ್ತೊಂದು ತೆರೆದುಕೊಳ್ಳುತ್ತದೆ. ಕೊಂಚ ಅಂಜನಪ್ಪನ ಪಾತ್ರದ ಹೋಲಿಕೆ ಕಾಣುವ ಈ ಕತೆಯ ಸಂಗಮ್ ಸಾಮಾಜಿಕ ಕಾರ್ಯಕರ್ತನ ತರ ಬದುಕುತ್ತಿರುವ, ನಗರ ಜೀವನದಿಂದ ಕೊಂಚ ಪ್ರತ್ಯೇಕಗೊಂಡಂತಿರುವ, ಮುಳುಗಡೆಯ ಕಾರಣಕ್ಕೆ ದ್ವೀಪದಂತಾದ ಭೂಪ್ರದೇಶಕ್ಕೆ ಸೇರಿದವನು. ಆದರ್ಶ, ಸಿದ್ಧಾಂತಗಳಿಗೆ ತೆತ್ತುಕೊಂಡು ಬದುಕುವ ಜೋಡಿ ಇವನದ್ದೂ ಮತ್ತು ಈತನ ಸಂಗಾತಿ ಮೌನೇಶ್ವರಿಯದ್ದೂ. ಆದರೆ ಭೂಮಾಫಿಯಾದ ಧನದಾಹಿತನದ ಎದುರು ಉಪಕೃತ ಜನಮತವೇ ಕೃತಜ್ಞತೆಯಿಲ್ಲದೇ ಬೆಂಬಲಕ್ಕೆ ನಿಲ್ಲಲು ಅಶಕ್ತವಾಗಿರುವಾಗ ಆದರ್ಶ, ಸಿದ್ಧಾಂತಗಳು ಒಂಟಿಯಾಗಿ ಹೇಗೆ ನಿಲ್ಲುತ್ತವೆ/ಗೆಲ್ಲುತ್ತವೆ? ಆದರೆ ಈ ಕತೆಯ ಆತ್ಮ ಇಂಥ ಅಜೆಂಡಾಕ್ಕೆ ತೆತ್ತುಕೊಂಡಿಲ್ಲದೇ ಇರುವುದು ಗಮನಾರ್ಹ ಬೆಳವಣಿಗೆ. ಇಲ್ಲವಾದಲ್ಲಿ ಈ ಕತೆ ಕೂಡ ಇನ್ನೊಂದು ‘ಹೀಗೊಂದು ಮಂದಿರ’ ಕತೆಯಂತೆಯೇ ಪೇಲವವಾಗುವ ಅಪಾಯ ಇದ್ದೇ ಇತ್ತು. ಆದರೆ ನುಗಡೋಣಿಯವರ ಕೈಯಲ್ಲಿ ಈ ಕತೆ ಪಡೆದ ಪೋಷಣೆಯಿಂದಾಗಿಯೇ ಇದು ಅಂಥ ಅಪಾಯದಿಂದ ಪಾರಾಗಿದೆ ಮಾತ್ರವಲ್ಲ ಹೊಸತೇ ಆದ ಒಂದು ನಿಟ್ಟಿಗೆ ಚಾಚಿಕೊಂಡು ಮುಗಿಯುತ್ತದೆ. ತುಂಬು ಬಸುರಿ ಏಕಾಂಗಿಯಾಗಿ ‘ದಡ ಸೇರಿಸು ತಂದೆ’ ಎಂದು ಭವಸಾಗರವನ್ನು ಈಜಿ ಜೈಸಲು ಹೊರಡುವುದು ಈ ಕತೆಗೆ ಕೊಟ್ಟಿರುವ ಹೊಳಪು ಕಡಿಮೆಯದೇನಲ್ಲ. ಹಾಗೆಯೇ ಈ ಕತೆ ಸಂಕಲನಕ್ಕೆ ತನ್ನದೇ ಹೆಸರನ್ನೂ ಒದಗಿಸಿದೆ.

"ತಮಂಧದ ಅವಸಾನ" ಕತೆಯೊಂದಿಗೆ ತಪ್ಪದೇ ನೆನಪಾಗುವ ಕತೆ ಅಮರೇಶ ನುಗಡೋಣಿಯವರದೇ "ತಮಂಧದ ಕೇಡು". ಇಲ್ಲಿ ಕೇಡು ಕಳೆದು ತಮಂಧವೇ ಅವಸಾನಗೊಂಡ ಕತೆಯೊಂದಿದೆ. ವಿಚಿತ್ರವೆಂದರೆ, ತಮಂಧಕ್ಕೆ ಅಸ್ತಿತ್ವವಿಲ್ಲ. ಇರುವುದು ತಮಂಧವಲ್ಲ, ಬೆಳಕಿನ ಗೈರು. ಬೆಳಕು ಅಸ್ತಿತ್ವದಲ್ಲಿದ್ದಲ್ಲಿ ಕತ್ತಲೆ ತಾನು ಇರುವುದಿಲ್ಲ ಅಷ್ಟೇ. ಪರಂತು ಕತ್ತಲೆಗೇ ಸ್ವತಂತ್ರವಾದ ಅಸ್ತಿತ್ವವಿಲ್ಲ. ಅಥವಾ ನೀವು ಒಂದಿಷ್ಟು ಬೆಳಕನ್ನು ತರಬಹುದೇ ಹೊರತು ಒಂದಿಷ್ಟು ಕತ್ತಲೆಯನ್ನು ಎಲ್ಲಿಂದಲೂ ತರಲಾರಿರಿ. ಕತ್ತಲೆಯನ್ನು ತರುವುದಿದ್ದರೆ ‘ಇರುವ’ ಬೆಳಕನ್ನು ಆರಿಸಿ, ತನ್ಮೂಲಕ ತರಬೇಕಾಗುತ್ತದೆ ಅಷ್ಟೆ. ಹಾಗಾಗಿ, ಇರುವುದು ಬೆಳಕು, ತಮಂಧವಲ್ಲ. ಹಾಗೆ ಈ ಕತೆಯಲ್ಲಿ ನಿರ್ಣಾಯಕವಾದ ಒಂದು ಸನ್ನಿವೇಶ ನಡೆಯುವುದು ಕಗ್ಗತ್ತಲ ಖತಲ್ ರಾತ್ರಿ (ತಮಂಧ) ಧಗಧಗನೆ ಉರಿಯುವ ಕೆಂಡದ (ಬೆಳಕು) ಜೊತೆ ಮಿಂಚು ಗುಡುಗುಗಳ ಧಾರಾಕಾರ ಮಳೆಯೂ ಸುರಿಯುವಾಗ. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ನೆನೆದುಕೊಳ್ಳಿ. ಇಲ್ಲಿಯೂ ಅಂಥದೇ ದ್ವೇಷದ, ಹಿಂಸೆಯ, ಕ್ರೌರ್ಯದ ‘ಅಗ್ನಿ’ಯಿದೆ. ಪ್ರೀತಿಯ ಪ್ರತಿಮೆಯಾದ ‘ಮಳೆ’ಯೂ ಇದೆ. ಖತಲ್ ರಾತ್ರಿ ನೆನಪಿಸುವ ಗಾಢಾಂಧಕಾರವೂ ಇದೆ, ಉರಿವ ಕೆಂಡದ ಬೆಳಕಿನ ಜೊತೆ ಮಿಂಚಿನ ಹೊಳಪೂ ಇದೆ. ಅಂಧಕಾರ ಮನಸ್ಸಿನ ಅಂಧಕಾರವೂ ಆಗಬಹುದು. ಆಧ್ಯಾತ್ಮಿಕ ಕತ್ತಲೆ ಕೂಡಾ ತಮಸ್ಸೇ. ಮಿಂಚು ಎಂಥ ತಮಂಧವನ್ನಾದರೂ ನಾಶಪಡಿಸಬಲ್ಲ ಜ್ಯೋತಿರ್ಮಯಿಯಾಗಬಲ್ಲುದು. ಏಕೆಂದರೆ, ಅರಿವಿನ ಬೆಡಗೇ ಹಾಗೆ, ಅರಿವು ಬಂದಾಗ ಅಜ್ಞಾನವೆನ್ನುವುದೇ ಇರುವುದಿಲ್ಲ. ಬೆಳಕು ಬಂದಾಗ ಕತ್ತಲೆಯೆನ್ನುವುದೇ ಇರುವುದಿಲ್ಲ. ಅದು ಇಷ್ಟಿಷ್ಟೇ ಇಷ್ಟಿಷ್ಟೇ ಇಲ್ಲವಾಗುವುದಲ್ಲ್, ಒಮ್ಮೆಗೇ ಮಿಂಚಿನಂತೆ ಇಲ್ಲವಾಗುತ್ತದೆ ಎನ್ನುವುದೇ ಅದರ ವಿಚಿತ್ರ ಸತ್ಯ. ಹಾಗೆಯೇ ಗುಡುಗು ಮನುಷ್ಯನೆದೆಯ ಪಾಪವನ್ನು ನಡುಗಿಸಬಲ್ಲದು. ಮೇಲ್ನೋಟಕ್ಕೆ ಇಲ್ಲಿರುವುದು ಲಂಕೇಶರ ‘ಕಲ್ಲು ಕರಗುವ ಸಮಯ’ವನ್ನು ನೆನಪಿಸುವ ಒಂದು ಮುಗ್ಧ ಪ್ರೇಮವೇ ಆದರೂ ಕಾಗೆಯ ಪ್ರಸಂಗದೊಂದಿಗೆ ಇಡೀ ಕಥಾನಕಕ್ಕೆ ದೊರಕುವ ಒಂದು ಹೊಸತೇ ಆದ ಪಾತಳಿ ನಾವು ಅದುವರೆಗೂ ನೋಡುತ್ತಲೇ ಬಂದ ಅವೇ ಮನುಷ್ಯರನ್ನು ನೋಡುವ, ನೋಡಬಹುದಾದ ಹೊಸ ಕೋನವೊಂದನ್ನು ನಿರ್ಮಿಸಿಬಿಡುತ್ತದೆ ಎನ್ನುವುದೇ ಒಂದು ಹೊಸ ದರ್ಶನ! ಅಮರೇಶರ ಅದ್ಭುತ ಕಾಣ್ಕೆಗಳಲ್ಲಿ ಈ ಕತೆಯೂ ಒಂದಾಗಿ ಸೇರಿಬಿಡುತ್ತದೆ.

"ಕರುಳ ಬಂಧ" ಈ ಸಂಕಲನದ ಕೊನೆಯ ಕತೆ. ಅಮರೇಶ ನುಗಡೋಣಿಯವರ ಅನೇಕ ಕತೆಗಳಲ್ಲಿ ಕೊನೆಯಲ್ಲಿ ಬರುವ ಒಂದು ತಿರುವು, ಘಟನೆ ಇಡೀ ಕತೆಗೆ ಒಂದು ಗಮ್ಯ ಒದಗಿಸುವುದು ಸತ್ಯ. ಹೆಚ್ಚಿನೆಲ್ಲಾ ಕತೆಗಾರರ ಕತೆಗಳಿಗೂ ಇದು ನಿಜವೇ. ಸಣ್ಣಕತೆಯ ಒಂದು ಅನಿವಾರ್ಯ ಲಕ್ಷಣವೋ ಎಂಬಂತೆ ಅದರ ಪಂಚ್‌ಲೈನ್, ಅದರ ಕೊನೆಯ ತಿರುವು, ಕ್ಲೈಮ್ಯಾಕ್ಸ್ - ‘ಇದುವರೆಗೂ ನಾನು ಹೇಳಹೊರಟಿದ್ದು ಇದನ್ನೇ ಆಗಿತ್ತು’ ಎಂಬಂಥ ಭರತವಾಕ್ಯವಾಗುವುದು ಇದ್ದಿದ್ದೇ. ಅದರಲ್ಲಿ ಅಂಥ ವಿಶೇಷವೇನಿಲ್ಲ. ಆದರೆ ಅಪರೂಪಕ್ಕೆಂಬಂತೆ ಕೇಶವ ಮಳಗಿಯಂಥವರ ಕೈಯಲ್ಲಿ, ಅಮರೇಶ ನುಗಡೋಣಿಯಂಥವರ ಕೈಯಲ್ಲಿ ಇಡೀ ಕತೆಯ ನಿರೂಪಣೆಯ ಗುರುತ್ವ, ಅದರ ಇಡೀ ಒಡಲ ಸೌಂದರ್ಯ, ಅದರ ಆತ್ಮ ಈ ಒಂದು ಕೊನೆಗೆ ಮುಖಮಾಡಿದಂತೆ ಓಟ ಹೂಡಿರುವುದೇ ಇಲ್ಲ ಎನ್ನುವುದನ್ನು ಎಚ್ಚರಿಕೆಯಿಂದ, ಸೂಕ್ಷ್ಮವಾಗಿ ಗಮನಿಸಬೇಕು. ಇವರ ಕತೆಯಲ್ಲಿ ಅಂಥ ಪಂಚ್‌ಲೈನ್ ಅಥವಾ ತಿರುವು ಅಥವಾ ಕ್ಲೈಮ್ಯಾಕ್ಸ್ ರಂಜನೆಗಾಗಿಯೋ ಎಂಬಂತೆ ಬಂದರೂ ಅದು ಇದ್ದೂ ಇಲ್ಲದಂತೆ ಗೌಣವಾಗಿ ಬಿಡುವುದಿದ್ದರೆ ಅದಕ್ಕೆ ಕಾರಣವಾದದ್ದು ನಾನು ಮೇಲೆ ಹೇಳಿದಂತೆ ಇಡೀ ಕಥೆಯ ಒಟ್ಟಾರೆ ಚಂದ, ಬಿಗು, ಸಂಯಮ ಮತ್ತು ಸಂತುಲನ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ