"ಮಾರಾಯ, ನಾನು ವರ್ಷಗಳಿಂದ ಜಯಂತರ ಕತೆಗಳನ್ನು ಓದುತ್ತ ಬಂದಿದ್ದೇನೆ, ತುಂಬ ಇಷ್ಟಪಟ್ಟಿದ್ದೇನೆ. ಆದರೆ ಇದೆಂಥದು ಮಹರಾಯ, ಅರ್ಬನ್ ಪವರ್ಟಿ, ಚೈಲ್ಡ್ ಲೇಬರ್ರು, ಜೆಂಡರ್ ಸ್ಟಿಗ್ಮಾ, ಕ್ಲಾಸ್ ಮತ್ತು ಕಾಸ್ಟ್ ಇಶ್ಯೂ.....!!! ನನಗೆ ಯಾವತ್ತೂ ಜಯಂತರ ಕತೆಗಳಲ್ಲಿ ಇವೆಲ್ಲ ಇದೆ ಅಂತ ಅನಿಸಿದ್ದೇ ಇಲ್ಲ ನೋಡು...."
ಡಿ ಎಸ್ ಸಿ ಸೌತ್ ಏಶಿಯನ್ ಲಿಟರೇಚರ್ ಪ್ರೈಜ್ 2018ನ ಅಂತಿಮ ಸುತ್ತಿಗೆ ಜಯಂತರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ತಲುಪಿದಾಗ ಅದರ ತೀರ್ಪುಗಾರರಲ್ಲೊಬ್ಬರಾದ ನಂದನಾ ಸೆನ್ ಬರೆದಿರುವ ಕೆಲವು ಮಾತುಗಳ ಬಗ್ಗೆ ನನ್ನ ಒಬ್ಬರು ಗೆಳೆಯ ಹೀಗೆ ಅಚ್ಚರಿ ವ್ಯಕ್ತಪಡಿಸಿದ್ದರು. ನಂದನಾ ಸೆನ್ ಅವರ ಕೆಲವು ಮಾತುಗಳನ್ನು ಕೇಳುತ್ತಿದ್ದರೆ ಅವರ ಕಣ್ಣುಗಳಿಂದ ಜಯಂತರ ಕತೆಗಳನ್ನು ಮತ್ತೊಮ್ಮೆ ಕಾಣಬೇಕೆಂಬ ಆಸೆ ಹುಟ್ಟುವುದು ಸುಳ್ಳಲ್ಲ.
"ಸಶಕ್ತ ಕಲ್ಪನೆ ಮತ್ತು ಅನನ್ಯ ಅಂತಃಕರಣದೊಂದಿಗೆ ಕಾಯ್ಕಿಣಿಯವರು ಈ ಸಂತ್ರಸ್ತರ ನಗರದ ಆತ್ಮಗಳಿಗೂ ಮನಸ್ಸು,ಹೃದಯಗಳಿಗೂ ಜೀವ ಚೈತನ್ಯವನ್ನು ಕರುಣಿಸುತ್ತಾರೆ. ನಗರದಲ್ಲಿ ಕಂಡೂ ಕಾಣದಂತಿರುವ ಬಡತನ ಮತ್ತು ಸಾಮಾನ್ಯವೆನಿಸುವ ಬಾಲಕಾರ್ಮಿಕ ಸಮಸ್ಯೆ, ಅಲಕ್ಶ್ಯಕ್ಕೆ ತುತ್ತಾಗುವ ವೃದ್ಧಾಪ್ಯದ ಸಂತಾಪಗಳು ಮತ್ತು ಸದಾ ಕಾಡುವ ನೆನಪುಗಳ ಭಾರ, ಲಿಂಗ, ಜಾತಿ ಹಾಗೂ ವರ್ಗದ ಹೆಸರಿನಲ್ಲಿ ತಮ್ಮದೇ ಸಮೂಹದಿಂದ ಒಂಟಿಗೊಂಡವರ ತಲ್ಲಣಗಳು - ಇಂಥ ಸಂಕೀರ್ಣ ಸಂಗತಿಗಳನ್ನು ಅಷ್ಟೇ ಸೂಕ್ಷ್ಮವಾಗಿ ಜಯಂತ ಕಾಯ್ಕಿಣಿಯವರು ತಮ್ಮ ಕತೆಗಳಲ್ಲಿ ತರುತ್ತಾರೆ. ಅದೇ ಹೊತ್ತಿಗೆ ಜಯಂತ ಕಾಯ್ಕಿಣಿಯವರಾಗಲಿ, ನಿರಂಜನ ಅವರಾಗಲಿ ಎಲ್ಲಿಯೂ ಈ ಸೂಕ್ಷ್ಮ ಎಳೆಗೆ ಚ್ಯುತಿಯಾಗದಷ್ಟು ನವಿರಾಗಿ, ಒಂದು ಶಬ್ದದ ಭಾರ ಹೆಚ್ಚಾಗದಂತೆ, ಒಂದು ಪದದ ಧ್ವನಿ ತೀರ ದೊಡ್ಡದೆನಿಸದಂತೆ, ಭಾವುಕತೆಯ ವಿಜೃಂಭಣೆಯಿಲ್ಲದ ಹದದಲ್ಲಿ ಅದನ್ನು ನಿರೂಪಿಸುತ್ತಾರೆ."
ಇವತ್ತಿಗೂ ಆಗಾಗ ತಾವು ಬರೆದಿದ್ದನ್ನು ನನ್ನಂಥ ನಾಲ್ಕು ಮಂದಿಗೆ ಕಳಿಸಿ ನಮ್ಮ ಮಾತಿಗೆ ಕಾಯುವ, "ನಿನ್ನ ಮಾತು ಕೇಳಿ ಸ್ವಲ್ಪ ಧೈರ್ಯ ಬಂತು ನೋಡು" ಎನ್ನುವ ಜಯಂತ ಕಾಯ್ಕಿಣಿಯವರ ಹದಿನಾರು ಕತೆಗಳ ಒಂದು ಪುಟ್ಟ ಸಂಕಲನ ಮುಂಬಯಿ ಶಹರದ ಕತೆಗಳು ಎನ್ನುವ ಲೇಬಲ್ಲಿನೊಂದಿಗೆ ಇಂಗ್ಲೀಷಿಗೆ ಅನುವಾದಗೊಂಡಾಗ ಅದನ್ನು "ಯಾರೂ" ಅಷ್ಟು ಗಂಭೀರವಾಗಿ ತೆಗೆದುಕೊಂಡಂತಿರಲಿಲ್ಲ. ತುಂಬ ಹಿಂದೆಯೇ ವಿಶ್ವನಾಥ ಹುಲಿಕಲ್ ಅವರು ‘ಡಾಟ್ಸ್ ಎಂಡ್ ಲೈನ್ಸ್’ ಹೆಸರಿನಲ್ಲಿ ಜಯಂತರ ಒಂದಿಷ್ಟು ಕತೆಗಳನ್ನು ಇಂಗ್ಲೀಷಿಗೆ ಅನುವಾದಿಸಿದಾಗಲೂ ಹೀಗೆಯೇ ಆಗಿತ್ತು. ಆದರೆ ಇಂಗ್ಲೀಷ್ ಓದುಗರು ಈ ಸಂಕಲನದ ಕತೆಗಳ ಬಗ್ಗೆ ಎಲ್ಲಿಲ್ಲದ ಉತ್ಸಾಹದಿಂದ ಮಾತನಾಡುವುದನ್ನು ಕೇಳಿದಾಗಲೆಲ್ಲ ಒಂಥರಾ ಮುಜುಗರವಾಗುತ್ತಿತ್ತು. ಜಯಂತರ ಬಗ್ಗೆ ಎಲ್ಲ ಗೊತ್ತು, ಅವರ ಎಲ್ಲಾ ಕತೆಗಳನ್ನು ಅರೆದು ಕುಡಿದು ಬಿಟ್ಟಿದ್ದೇವೆ ಎನ್ನುವ ಅಹಂಕಾರದಿಂದ ನಮ್ಮ ಕಣ್ಣುಗಳು ಮಬ್ಬುಗೊಂಡವೆ? ಅಥವಾ ‘ತೆರೆದಷ್ಟೇ ಬಾಗಿಲ’ ಮೂಲಕ ದಕ್ಕಿದ ಇಣುಕು ನೋಟದಲ್ಲಿ ಇಂಗ್ಲೀಷ್ ಓದುಗರಿಗೆ ನಮಗೆ ಕಾಣಿಸದೇ ಹೋದದ್ದೆಲ್ಲ ಕಾಣಿಸುತ್ತಿದೆಯೆ?
ಹೋಟೆಲು ಮಾಣಿಗಳ ಮುಂಜಾನೆಯನ್ನು ನೆನೆಯುತ್ತ ಜಯಂತ ಬರೆಯುವ ‘ಜಾಗರದ ಜೀವಗಳಿಗೆ, ಸ್ಟವ್ವಿನ ನೀಲಿ ಜ್ವಾಲೆಯ ಸದ್ದಿನಲ್ಲಿ ಬೆಚ್ಚಗಾಗುವ ಚಹದ ಕೆಟ್ಲನ್ನು ನಿದ್ದೆಗಣ್ಣಲ್ಲೆ ಕಾಣುವ ದೂರಪ್ರಯಾಣದ ಯಾತ್ರಿಕರಿಗೆ, ಹೊಟ್ಟೆಪಾಡಿನ ಅನಿವಾರ್ಯ ಹುಟ್ಟಿಸುವ ಒಬ್ಬ ಮಿಥುನ್ ನಂಬರ್ ಟೂಗೆ, ತಟ್ಟನೇ ಮೊಬೈಕ್ ಸುತ್ತುವ ಮೃತ್ಯುಕೂಪದಂಥ ಬಾವಿಯಲ್ಲಿ ತೆರೆದುಕೊಳ್ಳುವ ಒಂದು ಅಂತಃಕರಣದ ಬಾಗಿಲಿಗೆ, ಸರ್ಕಸ್ಸಿನ ಡೇರೆಯೊಳಗೇ ಇಡೀ ಬದುಕಿನ ಎಲ್ಲ ಏರಿಳಿತಗಳನ್ನು ಕಂಡು ಹಣ್ಣಾದ ಡಂಪಿಗೆ, "ನಿಮಗೆ ನಿಜಕ್ಕೂ ಈ ಮಗು ಬೇಕಾ ಸಾರ್?" ಎಂದು ಕಂಕುಳಲ್ಲಿದ್ದ ಮಗುವನ್ನು ತುಸು ಮುಂದೆ ಮಾಡಿದ ಗೊಂಬೆ ಮಾರುವ ಹೆಂಗಸಿಗೆ, ಇಂಥ ದಾರುಣವಾದ ಕಣ್ಣುಗಳ ಹೆತ್ತ ತಾಯನ್ನು ಹುಡುಕಿ ಹೊರಡುವ ಮಧುಬಾಲಾಳಂಥ ಹೆಣ್ಣುಮಗಳಿಗೆ, ಅವಳಂಥ ಹೆಣ್ಣನ್ನು ಹುಡುಕಿ ಹಿಂದೆಯೇ ಹೊರಟ ಏಕಾಂತನಿಗೆ ಇರುವ ಸಾಮಾಜಿಕ, ತಾತ್ವಿಕ, ರಾಜಕೀಯ ಆಯಾಮಗಳನ್ನೆಲ್ಲ ಕಾಣದಂತೆ ಒದ್ದೆಗಣ್ಣಾದ ಕನ್ನಡದ ಓದುಗನಿಗೆ ಜಯಂತರ ಕತೆಗಳ ಹೊಸ ಹೊಸ ಆಯಾಮಗಳನ್ನು, ಅರ್ಥಸಾಧ್ಯತೆಗಳನ್ನು, ಅವು ತೆರೆದಿಡುವ ನಿಷ್ಠುರ ಸತ್ಯಗಳನ್ನು ಕಾಣಿಸಲು ಅನುವಾದ ಅಗತ್ಯವಾಗಿತ್ತೆ? ಈ ವಿಸ್ಮೃತಿಗೆ ಜಯಂತರ ಭಾಷೆಯ ಮೋಹಕ ಲಯ ಎಷ್ಟರ ಮಟ್ಟಿಗೆ ಕಾರಣ, ಓದುಗ/ವಿಮರ್ಶಕರ ಔದಾಸೀನ್ಯ ಎಷ್ಟರಮಟ್ಟಿಗೆ ಕಾರಣ?
ಹಿರಿಯರೊಬ್ಬರ ಬಳಿ ಇದನ್ನೇ ಕೇಳಿದರೆ, "ಚಿತ್ತಾಲರಿಗೆ ಸಿಗಬೇಕಾದ್ದು ಯಾಕೆ ಸಿಗಲಿಲ್ಲ ಎನ್ನುವುದು ನನಗೀಗ ಅರ್ಥವಾಗಹತ್ತಿದೆ ನೋಡು" ಎಂದು ಹೇಳಿ ತಾವು ಬಿಟ್ಟ ಸಿಗರೇಟಿನ ಹೊಗೆಯನ್ನೇ ನಿಗೂಢವಾಗಿ ಗಮನಿಸತೊಡಗಿದರು.
****
ಎಂಟು ವರ್ಷಗಳ ಹಿಂದೆ ಕನಸ್ಟ್ರಕ್ಷನ್ ಕಂಪೆನಿಯೊಂದು ಸಾಹಿತ್ಯಕ್ಕೆ ಇಪ್ಪತ್ತೈದು ಸಾವಿರ ಡಾಲರುಗಳ ಮೊತ್ತದ ಬಹುಮಾನವನ್ನು ಮೀಸಲಿಡುವಾಗ ಆರಿಸಿಕೊಂಡ ಭೂಪ್ರದೇಶ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು. ಆದರೆ ಬರೆದವರು ಯಾವ ದೇಶದವರೂ ಆಗಿರಬಹುದು, ಅವರು ಬರೆದಿದ್ದು ಮಾತ್ರ ಈ ದೇಶಗಳ ಕುರಿತಾಗಿರಬೇಕು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ್, ಬರ್ಮಾ ಮತ್ತು ಅಫ್ಘಾನಿಸ್ತಾನದ ಬದುಕು, ಕಲೆ, ಸಂಸ್ಕೃತಿಗೆ ಅಂತರ್ರಾಷ್ಟ್ರೀಯ ಅಭಿವ್ಯಕ್ತಿಗೆ ಇಲ್ಲೊಂದು ವೇದಿಕೆ ಹೀಗೆ ರೂಪುಗೊಂಡಿತು. ಪಾರ್ಸಿ ಜನಾಂಗದ ಶವಸಂಸ್ಕಾರದ ಪದ್ಧತಿ ಮತ್ತು ಅದರ ಫಲಾನುಭವಿಗಳ ಕತೆ ಹೇಳುವ ಸೈರಸ್ ಮಿಸ್ತ್ರಿಯ ಕ್ರಾನಿಕಲ್ ಆಫ್ ಅ ಕಾರ್ಪ್ಸ್ ಬೇರರ್ (2014), ಕಲ್ಕತ್ತಾದ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿಕೊಂಡ ನಕ್ಸಲೈಟ್ ಚಳುವಳಿಯ ಆಸುಪಾಸಿನ ಕಥಾನಕವನ್ನೇ ಕೇಂದ್ರವಾಗಿರಿಸಿಕೊಂಡಿರುವ ಜುಂಪಾ ಲಾಹ್ರಿಯವರ ದ ಲೋ ಲ್ಯಾಂಡ್ (2015) ಮುಂತಾಗಿ ಗಮನಿಸಿದರೆ ಪ್ರಶಸ್ತಿ ಸ್ಥಾಪನೆಯ ಉದ್ದೇಶ ಮತ್ತು ಅದರ ಧ್ಯೇಯದ ಅನುಸಾರ ಅದು ನಿರ್ವಹಿಸಲ್ಪಡುತ್ತಿರುವುದರ ಸ್ಥೂಲ ಪರಿಕಲ್ಪನೆ ಮೂಡಬಹುದು. ಹಾಗಾಗಿಯೇ ಮುಂಬಯಿ ಬದುಕಿನ, ಅಲ್ಲಿನ ದೈನಂದಿನದ ಒಂದು ಸೂಕ್ಷ್ಮಾತಿಸೂಕ್ಷ್ಮ ಚಿತ್ರವನ್ನು ಕಟ್ಟಿಕೊಡುವ ಜಯಂತರ ಪ್ರಯತ್ನಕ್ಕೆ ಈ ಬಾರಿ ಮನ್ನಣೆ ಒದಗುವ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿವೆ. ಏಕೆಂದರೆ ಮೂಲತಃ ಇದು ಕಾದಂಬರಿ ಮತ್ತು ಕಿರುಕಾದಂಬರಿಗಳಿಗೆ ಮೀಸಲಾಗಿರುವ ಪ್ರಶಸ್ತಿ. ಜಯಂತರು ಇದುವರೆಗೆ ಬರೆದಿರುವುದೆಲ್ಲಾ ಸಣ್ಣಕತೆಗಳೇ. ಕಾವ್ಯ, ನಾಟಕ, ಅನುವಾದ, ಪ್ರಬಂಧ, ನುಡಿಚಿತ್ರ, ಸಿನಿಮಾ ಸ್ಕ್ರಿಪ್ಟ್, ಸಿನಿಮಾ ಹಾಡು ಎಲ್ಲ ಬರೆದಿರುವ ಜಯಂತರು ಇದುವರೆಗೆ ಪೂರ್ಣಪ್ರಮಾಣದ ಕಾದಂಬರಿಯನ್ನು (‘ಚಾರ್ಮಿನಾರ್’ ಒಂದು ಕಿರು ಕಾದಂಬರಿ ಎಂದು ಪರಿಗಣಿಸಿದಲ್ಲಿ) ಬರೆದೇ ಇಲ್ಲ. ಹಾಗಿದ್ದರೂ ಅವರು ಡಿಎಸ್ಸಿಯ ಅಂತಿಮ ಸುತ್ತಿನ ತನಕ ಬಂದಿದ್ದು ಒಂದು ಪವಾಡವೇ. ಒಂದೇ ಎಳೆಯ ಕತೆಗಳ ಸಂಕಲನವನ್ನು ಅಪವಾದ ಎಂಬಂತೆ ಪ್ರಶಸ್ತಿಗೆ ಪರಿಗಣಿಸುವುದಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿದೆ. ಅದು ಈ ಕೃತಿಗೆ ವರದಾನವಾಯಿತು.
ಕನ್ನಡದವರು ಡಿಎಸ್ಸಿಯ ಅಂತಿಮ ಸುತ್ತಿಗೇರಿದ್ದು ಇದೇ ಮೊದಲಲ್ಲ. ಎರಡನೆಯ ವರ್ಷವೇ, ಅಂದರೆ, 2012ರಲ್ಲಿಯೇ ಕನ್ನಡದ ಇಬ್ಬರು ಈ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡಿದ್ದರು! ಅವರು ಡಾ||ಯು. ಆರ್. ಅನಂತಮೂರ್ತಿ (ಭಾರತೀಪುರ ಕಾದಂಬರಿ) ಮತ್ತು ಉಷಾ ಕೆ ಆರ್ (ಮಂಕೀ ಮ್ಯಾನ್ ಕಾದಂಬರಿ). ಹಾಗೆ ನೋಡಿದರೆ ಕಳೆದ ವರ್ಷ ಅಂತಿಮ ಸುತ್ತಿಗೇರಿದ ಅರವಿಂದ ಅಡಿಗರೂ (ಸಿಲೆಕ್ಷನ್ ಡೇ ಕಾದಂಬರಿ) ಕನ್ನಡದವರೇ. ಆದರೆ ಮೂಲತಃ ಕನ್ನಡದ ಕೃತಿಯೊಂದು ಹೀಗೆ ಅಂತಿಮ ಸುತ್ತಿಗೇರಿರುವುದು ಇದು ಎರಡನೆಯ ಸಾರಿ. ಕಾದಂಬರಿ ಬರೆಯದೆಯೂ ವಿಶೇಷ ಅವಕಾಶ ಗಿಟ್ಟಿಸಿ ಅಂತಿಮ ಸುತ್ತಿಗೇರಿರುವುದು ಇದೇ ಮೊದಲು.
ಈ ವರೆಗೆ ಈ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡು ಪ್ರಶಸ್ತಿ ಪಡೆಯದೇ ಹೋದವರಲ್ಲಿ ಅಮಿತ್ ಚೌಧುರಿ (ದ ಇಮ್ಮಾರ್ಟಲ್ಸ್), ಅಮಿತಾವ ಘೋಷ್ (ರಿವರ್ ಆಫ್ ಸ್ಮೋಕ್), ಉದಯ್ ಪ್ರಕಾಶ್ (ದ ವಾಲ್ಸ್ ಆಫ್ ದಿಲ್ಲಿ), ಮೊನ್ನೆಯಷ್ಟೇ ಜೆಸಿಬಿ ಸಾಹಿತ್ಯ ಪ್ರಶಸ್ತಿ ಗೆದ್ದ ಬೆನ್ಯಾಮಿನ್ (ಗೋಟ್ ಡೇಸ್) , ಕೆ ಆರ್ ಮೀರಾ (ಹ್ಯಾಂಗ್ ವುಮನ್ - ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿದೆ) , ಅಂಜಲಿ ಜೋಸೆಫ್ (ದ ಲಿವಿಂಗ್), ಅರವಿಂದ ಅಡಿಗ (ಸಿಲೆಕ್ಷನ್ ಡೇ), ಜಮೀಲ್ ಅಹ್ಮದ್ (ದ ವಾಂಡರಿಂಗ್ ಫಾಲ್ಕನ್) ಮುಂತಾದ ಘಟಾನುಘಟಿಗಳೆಲ್ಲ ಇದ್ದಾರೆ. ಮತ್ತೊಂದು ತಮಾಶೆ ಎಂದರೆ ಈ ಹಿಂದೆ ಎರಡು ಬಾರಿ ಅಂತಿಮ ಸುತ್ತಿಗೆ ಬಂದೂ ಪ್ರಶಸ್ತಿ ಗಿಟ್ಟಿಸದ ನೀಲ್ ಮುಖರ್ಜಿ (ಅ ಲೈಫ್ ಅಪಾರ್ಟ್ (2011) ಮತ್ತು ದ ಲೈವ್ಸ್ ಆಫ್ ಅದರ್ಸ್ (2016)) ಮೂರನೆಯ ಬಾರಿ ತಮ್ಮ ‘ಅ ಸ್ಟೇಟ್ ಆಫ್ ಫ್ರೀಡಮ್’ ಕಾದಂಬರಿಯೊಂದಿಗೆ ಜಯಂತರಿಗೆ ಸ್ಪರ್ಧೆ ಒಡ್ಡಿದ್ದಾರೆ! ಅಷ್ಟೇ ಅಲ್ಲ, ಬಹು ಪ್ರಶಂಸಿತ ‘ಹೋಮ್ ಫೈರ್’ ಕಾದಂಬರಿಯ ಕಮಿಲಾ ಶಂಸೀ ಮತ್ತು ‘ಎಗ್ಸಿಟ್ ವೆಸ್ಟ್’ ಕಾದಂಬರಿಯ ಮೊಹ್ಸಿನ್ ಹಮೀದ್ ಇಬ್ಬರಿಗೂ ಇದು ಎರಡನೆಯ ಬಾರಿಗೆ ಸಿಕ್ಕಿದ ಅಂತಿಮ ಸುತ್ತು! 2010ರಲ್ಲಿ ತಮ್ಮ ‘ಸೀರಿಯೆಸ್ ಮೆನ್’ ಕಾದಂಬರಿಗೆ ದ ಹಿಂದೂ ಬೆಸ್ಟ್ ಫಿಕ್ಷನ್ ಅವಾರ್ಡ್ ಮತ್ತು 2011 ರಲ್ಲಿ ಅಮೆರಿಕನ್ ಪೆನ್ ಓಪನ್ ಬುಕ್ ಅವಾರ್ಡ್ ಪಡೆದ ಮನು ಜೋಸೆಫ್ ಕೂಡಾ ಈ ಬಾರಿ ಅಂತಿಮ ಸುತ್ತಿನಲ್ಲಿದ್ದಾರೆ. ಹೀಗಾಗಿಯೂ ಅಂತಿಮ ಸುತ್ತಿಗೇರಿದ ಜಯಂತರ ಸಾಧನೆ ಬಹುಮಹತ್ವದ್ದು ಮತ್ತು ವೈಶಿಷ್ಟ್ಯಪೂರ್ಣವಾದದ್ದು.
ಏಳು ಸಂಕಲನಗಳ ಒಟ್ಟು ಎಪ್ಪತ್ತೊಂದು ಪ್ರಕಟಿತ ಕತೆಗಳ ಕತೆಗಾರ ಜಯಂತರ ಕೇವಲ ಹದಿನಾರು ಕತೆಗಳು ಈ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಸಂಕಲನದಲ್ಲಿವೆ. ಈ ಹದಿನಾರು ಕತೆಗಳು ಜಯಂತರ ಶ್ರೇಷ್ಠ ರಚನೆಗಳೆಂಬ ಕಾರಣಕ್ಕೆ ಇಲ್ಲಿ ಸಂಕಲಿತಗೊಂಡಿಲ್ಲ. ಬದಲಿಗೆ ಅವು ಮುಂಬಯಿ ನಗರವನ್ನು ತನ್ನ ಕಥಾಕ್ಷೇತ್ರವನ್ನಾಗಿಸಿಕೊಂಡಿವೆ ಎನ್ನುವ ಕಾರಣಕ್ಕಾಗಿ ಆರಿಸಲ್ಪಟ್ಟಿವೆ. ಹಾಗಾಗಿ ಈ ಸಂಕಲನಕ್ಕೆ ಒಂದು ನಿರ್ದಿಷ್ಟ ಚೌಕಟ್ಟು ತನ್ನಿಂತಾನೇ ತೊಡಿಸಲ್ಪಟ್ಟಿದೆ. ವಿಸ್ತೃತವಾದ ಓದು, ಒಡನಾಟ, ವ್ಯಕ್ತಿಗತವಾಗಿ ನಮ್ಮ ನೆಚ್ಚಿನ ಕತೆಗಾರನ ಕುರಿತು ಹೆಚ್ಚುವರಿಯಾಗಿ ತಿಳಿದುಕೊಂಡಿರುವುದು ಎಲ್ಲ ನಮ್ಮ ಓದಿಗೆ ತೊಡಿಸುವ ಒಂದು ‘ಎಕ್ಸ್ಟ್ರಾ ಫಿಟಿಂಗ್’ ಇದ್ದೇ ಇದೆ. ಅದು ಕೆಲವೊಮ್ಮೆ ನಮ್ಮ ಓದಿಗೆ ಧನಾತ್ಮಕವೂ, ಪೂರಕವೂ ಆಗಿ ಒದಗಿಬರಬಹುದು ಎನ್ನುವಷ್ಟೇ ಅದೇ ದೊಡ್ಡದೊಂದು ಮಿತಿಯಾಗಬಹುದು, ಕೆಲವು ಪೂರ್ವಾಗ್ರಹಕ್ಕೂ ಕಾರಣವಾಗಬಹುದು ಎನ್ನುವುದು ಸತ್ಯ. ಅದೇ ರೀತಿ, ಸೀಮಿತವಾದ ಒಂದು ಓದಿನಿಂದ ರೂಪಿಸಿಕೊಳ್ಳುವ ಅಭಿಪ್ರಾಯ, ನಿಲುವು ಕೂಡ ಇಂತಹುದೇ ಇತಿಮಿತಿಗಳಿಗೆ ಒಳಗಾಗಿರುತ್ತದೆ. ಅದು ಕೆಲವೊಂದು ಸ್ವಾತಂತ್ರ್ಯವನ್ನೂ ಕೊಡುತ್ತದೆ, ಮಿತಿಗಳನ್ನೂ ಹೇರುತ್ತದೆ. ಹಾಗೆ ನಾವು ಓದಿದ ಅನುವಾದಗಳಿಂದ ಅನ್ಯಭಾಷಿಕ ಲೇಖಕರ ಬಗ್ಗೆ ಹೇಳಿದ್ದು, ತಿಳಿದಿದ್ದು, ಬರೆದಿದ್ದು ಅಂಥ ಇತಿಮಿತಿಗಳಿಂದ ಮುಕ್ತವಾಗಿಲ್ಲ ಎನ್ನುವುದನ್ನು ಮರೆಯದೇ ಜಯಂತರನ್ನು ಅನ್ಯಭಾಷಿಕರು ಕಾಣುತ್ತಿರುವ ಬಗೆಯನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದೇ. ಹಾಗಿದ್ದೂ ಈ ಸಂಕಲನ ಕನ್ನಡೇತರ ಓದುಗರ ಹೃದಯ ಸೂರೆಗೊಂಡಿರುವುದು, ವಿಮರ್ಶಕರಿಗೆ ಹೊಸ ಒಳನೋಟ, ದರ್ಶನ ಒದಗಿಸಿರುವುದು ಮಹತ್ವದ ಬೆಳವಣಿಗೆ. ಅದೇ ಕಾಲಕ್ಕೆ ಜಯಂತರ ಎಲ್ಲ ಕತೆಗಳೂ ಅನುವಾದಗೊಂಡರೆ ಅದನ್ನು ಈ ಹೊಸ ಓದುಗರು ಹೇಗೆ ಸ್ವೀಕರಿಸುತ್ತಾರೆ, ಹೇಗೆ ಪ್ರತಿಸ್ಪಂದಿಸುತ್ತಾರೆ ಎನ್ನುವುದು ಕುತೂಹಲಕರ ಎನಿಸತೊಡಗಿದೆ. ಆ ಕಾಲವೂ ಬಹುಬೇಗ ಬರುವಂತಾಗಲಿ ಎನ್ನುವುದು ಈ ಸಂದರ್ಭದ ನಿರೀಕ್ಷೆಯಾಗಿದೆ.
ಕಳೆದ ಎಂಟು ವರ್ಷಗಳಲ್ಲಿ ಎರಡು ಬಾರಿ ಶ್ರೀಲಂಕಾದ ಬರಹಗಾರರು ಮತ್ತು ಒಂದು ಬಾರಿ ಪಾಕಿಸ್ತಾನಿ ಕಾದಂಬರಿಕಾರ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಉಳಿದಂತೆ ನಾಲ್ಕು ಬಾರಿ ಪ್ರಶಸ್ತಿ ಪಡೆದವರು ಭಾರತದ ಕಾದಂಬರಿಕಾರರೇ ಆಗಿರುವುದು ಒಂದು ವಿಶೇಷ. ಜೀತ್ ಥಾಯಿಲ್ (ನಾರ್ಕಾಪಾಲಿಸ್), ಸೈರಸ್ ಮಿಸ್ತ್ರಿ (ಕ್ರಾನಿಕಲ್ ಅಫ್ ಅ ಕಾರ್ಪ್ಸ್ ಬೇರರ್) , ಜುಂಪಾ ಲಾಹ್ರಿ (ದ ಲೋ ಲ್ಯಾಂಡ್), ಅನುರಾಧಾ ರಾಯ್ (ಸ್ಲೀಪಿಂಗ್ ಆನ್ ಜ್ಯುಪಿಟರ್) ಇದುವರೆಗೆ ಬಹುಮಾನ ಪಡೆದ ಭಾರತೀಯ ಕಾದಂಬರಿಕಾರರು. ಈ ಬಾರಿ ಅದು ಜಯಂತ್ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ಗೆ ಲಭಿಸಲಿ ಎಂಬುದು ಎಲ್ಲ ಕನ್ನಡಿಗರ, ಸಹೃದಯರ ಆಸೆ, ಹಾರೈಕೆ ಮತ್ತು ಪ್ರಾರ್ಥನೆ.
(ಈ ಮೇಲಿನ ಭಾಗ ಉದಯವಾಣಿ ದಿನಪತ್ರಿಕೆಯ 09/12/2018ನೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದೆ)
****
ಪ್ರಶಸ್ತಿ ಬಂದ ಬಳಿಕದ ಎರಡು ಮಾತು....
ಈ ಲೇಖನದ ಧ್ವನಿಯಲ್ಲಿ ಜಯಂತ್ ಕಾಯ್ಕಿಣಿಯವರ ಕತೆಗಳಿಗೆ ಕನ್ನಡದ ಓದುಗ/ವಿಮರ್ಶಕ ವರ್ಗದಿಂದ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ ಎನ್ನುವ ಎಳೆ ಇದೆ ನಿಜ. ಆದರೆ ಅದರ ಅರ್ಥ ಅವರ ಕೃತಿಗಳಿಗೆ ಓದುಗ/ವಿಮರ್ಶಕರು ಸ್ಪಂದಿಸಿಲ್ಲ ಎನ್ನುವುದಲ್ಲ. ಇದು ಕೊಂಚ ಸೂಕ್ಷ್ಮವಾದ ವಿಚಾರವಾಗಿದ್ದು ಆ ಬಗ್ಗೆ ಸಣ್ಣ ಸ್ಪಷ್ಟನೆ ಅಗತ್ಯವೆನಿಸಿದೆ.
ಇವತ್ತಿಗೂ ಅನೇಕರಿಗೆ ಜಯಂತ್ ಎಂದರೆ "ಮುಂಗಾರು ಮಳೆ" ಸಿನಿಮಾದ ಮತ್ತು ತದನಂತರದ ಅನೇಕ ಸಿನಿಮಾ ಹಾಡುಗಳ ಕವಿ. ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದ ನಿರ್ವಾಹಕರಲ್ಲೊಬ್ಬರಾಗಿ ಮುಗ್ಧ ಮಕ್ಕಳ ಉತ್ಸಾಹ, ಉಲ್ಲಾಸ ಮತ್ತು ಭಾವತಲ್ಲಣಗಳನ್ನು ಗೆಳೆಯನಂತೆ, ತಂದೆಯಂತೆ, ಸಂತನಂತೆ ಪೊರೆಯುತ್ತಿದ್ದ ‘ಗ್ರೇಟ್ ಮ್ಯಾನ್’. ಆದರೆ ಜಯಂತ್ ಅವರ ಸಾಹಿತ್ಯದ ಓದುಗರಿಗೆ ಇದೆಲ್ಲದರಿಂದ ಅಷ್ಟು ತೃಪ್ತಿಯಾಗುವುದಿಲ್ಲ ಎನ್ನುವ ನೆಲೆಯೊಂದಿದೆ. ಸಾಹಿತ್ಯಲೋಕದ ಒಳಗಿನಿಂದಲೂ ಜಯಂತ್ ಸಾಹಿತ್ಯಕ್ಕೆ ಸಿಕ್ಕ ಸ್ಪಂದನದಿಂದ ಅತೃಪ್ತಿಗೆ ಕಾರಣವಾಗಬಹುದಾದ ಇನ್ನೊಂದು ನೆಲೆಯೂ ಇದೆ. ಅಂದರೆ, ಸಾಮಾನ್ಯವಾಗಿ ಒಂಥರಾ ಭಾವುಕರಾಗಿ, ಕಾವ್ಯಮಯ ಭಾಷೆಯಲ್ಲಿ, ಪ್ರಿಯತಮೆಗೆ ಪತ್ರಬರೆದಂತೆ ಬರೆಯುವ ಮಾತುಗಳಿಂದ ಒಬ್ಬ ಸಾಹಿತಿಗಾಗಲೀ, ಭಾವೀ ಓದುಗರಿಗಾಗಲೀ, ಭಾವೀ ಬರಹಗಾರರಿಗಾಗಲಿ ಯಾವ ಲಾಭವೂ ಇಲ್ಲ. ಇಂಥ ಮಾತುಗಳು ಎಷ್ಟು ಕಡಿಮೆಯಾದರೆ ಅಷ್ಟೂ ಒಳ್ಳೆಯದು. ಸಾಕಷ್ಟು ನೆಲೆಗೊಂಡ, ಸಾಹಿತ್ಯಿಕವಾಗಿ ಗುರುತಿಸಿಕೊಂಡ, ಜನಮನ್ನಣೆ, ಕೀರ್ತಿ ಮತ್ತು ಯಶಸ್ಸು ಸಿಕ್ಕಿದ ಬರಹಗಾರರು ಭಟ್ಟಂಗಿಗಳ ಬಹುಪರಾಕುಗಳಿಂದ ಎಷ್ಟು ದೂರವಿದ್ದರೆ ಅಷ್ಟು ಒಳ್ಳೆಯದು. ಇಂಗ್ಲೀಷಿನಲ್ಲಿ ಒಂದು ಮಾತಿದೆ, ಯಾರನ್ನಾದರೂ ಸರ್ವನಾಶ ಮಾಡಬೇಕೆಂದಿದ್ದರೆ ಅವರನ್ನು ಪಟ್ಟಕ್ಕೇರಿಸು ಅನ್ನುವ ಅರ್ಥದ್ದು. ಈ ಬಹುಪರಾಕುಗಳಿಗೆ ಅದೇ ಗುಣವಿದೆ, ಕೆಲವಂಶ ಅದೇ ಉದ್ದೇಶವೂ ಇದೆ. ಆಕಾಶರಾಯರಾಗದೆ, ನೆಲದ ಮೇಲೆ ನಿಂತು, ಒಬ್ಬ ಮಹತ್ವದ, ಖ್ಯಾತ ಮತ್ತು ಎಲ್ಲರೂ ಪ್ರೀತಿಸುವ ಹಾಗೂ ಪ್ರೀತಿಸಿಕೊಳ್ಳಬಯಸುವ ಬರಹಗಾರನ ಪ್ರೀತಿ ಕಳೆದುಕೊಳ್ಳುವ ಭಯವಿಲ್ಲದೆ, ಅದಕ್ಕೂ ಸಿದ್ಧರಾಗಿ ಮಾತನಾಡುವವರ ಅಗತ್ಯ ಅಂಥ ಎಲ್ಲ ಬರಹಗಾರರ ಪ್ರಾಥಮಿಕ ಅಗತ್ಯ ಮತ್ತು ಅವರೇ ಆತನ ನಿಜವಾದ ಹಿತೈಷಿಗಳು ಎಂದು ತಿಳಿದ ನೆಲೆಯದು. ಈ ನೆಲೆಯ ವಿಮರ್ಶೆ/ಸ್ಪಂದನ ಜಯಂತ್ ಅವರ ಕತೆಗಳಿಗೆ ಕನ್ನಡದ ಓದುಗ/ವಿಮರ್ಶಕರಿಂದ ಸಿಕ್ಕಿಲ್ಲ ಎನ್ನುವುದು ಇಲ್ಲಿನ ಧ್ವನಿ. ಇಂಥ ನೆಲೆಯಿಂದ ಮಾತನಾಡುವಾಗಲೂ ಮೆಚ್ಚುಗೆ, ಅಭಿಮಾನ, ಹೊಗಳಿಕೆ ಬರಬಾರದೆಂದೇನೂ ಇಲ್ಲ. ಜಯಂತ್ ಅವರ ಬರವಣಿಗೆಗೆ ಅಂಥ ಕಸು, ಅಂತಃಶ್ಶಕ್ತಿ ಮತ್ತು ತೇಜಸ್ಸು ಇದೆ. ಆದರೆ ಅದನ್ನು ಗುರುತಿಸಲು ಕೂಡ ಕೃತಿನಿಷ್ಠವಾದ ವಿಮರ್ಶೆಯ ಅಗತ್ಯವಿದೆ. ಮಾತ್ರವಲ್ಲ, ಒಂದು ಕಾಲದ ವಿಮರ್ಶೆ ಭವಿಷ್ಯದ ಸಾಹಿತ್ಯ ಚರಿತ್ರೆಗೂ ಸೇರಿ ಹೋಗುವುದರಿಂದ ಯುವ ಬರಹಗಾರರು ಮತ್ತು ಮುಂದಿನ ಬರಹಗಾರರಿಗೆ ಇಂಥ ವಿಮರ್ಶೆಯಿಂದ ಸಾಕಷ್ಟು ಮಾರ್ಗದರ್ಶನವೂ ಸಿಗುತ್ತದೆ. ಮೂಲಕೃತಿಯ ಗುಣಾತ್ಮಕ ಅಂಶಗಳು, ಋಣಾತ್ಮಕ ಅಂಶಗಳು ಮಾತ್ರವಲ್ಲ ಒಬ್ಬ ವಿಮರ್ಶಕನ ಮಾನದಂಡಗಳು ಗುಣಾತ್ಮಕ ಅಥವಾ ಋಣಾತ್ಮಕ ಅಂಶಗಳನ್ನು ಕಂಡುಕೊಳ್ಳುವುದಕ್ಕೂ ಮುಂದಿನ ತಲೆಮಾರಿಗೆ ಅದು ಸಹಕಾರಿಯಾಗುತ್ತದೆ. ಈ ನೆಲೆಯಿಂದ ಜಯಂತ್ ಅವರ ಕೃತಿಗಳಿಗೆ ಬಂದಿರುವ ವಿಮರ್ಶೆಯ ಬಗ್ಗೆ ಅತೃಪ್ತಿ ಇದೆ.
ಆದರೆ ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಅನಿಸಿದೆ. ಇತ್ತೀಚೆಗೆ ಭಾಸ್ಕರ ಹೆಗಡೆಯವರು ಈ ಬಗ್ಗೆ ಒಂದು ಲೇಖನದಂಥ ಬರಹವನ್ನು ನನಗೆ ಕಳಿಸಿದ್ದರು. ಮುಂದೆ ಅದರ ಪರಿಷ್ಕೃತ ರೂಪ ಪತ್ರಿಕೆಯೊಂದರಲ್ಲಿ ಕಾಣಿಸಿಕೊಂಡಿತ್ತು. ಜಯಂತ್, ವಿವೇಕ್, ವಸುಧೇಂದ್ರ ಮುಂತಾದವರ ಪುಸ್ತಕಗಳು ಇಂಗ್ಲೀಷಿಗೆ ಹೋಗಿ ವ್ಯಾಪಕ ಮನ್ನಣೆ ಪಡೆದ ಬಳಿಕ ಕನ್ನಡದವರು ಜಾಗೃತರಾಗಿದ್ದಾರೆ, ಈ ಹಿಂದೆ ಅವರು ಈ ಲೇಖಕರನ್ನು ಸರಿಯಾಗಿ ಗುರುತಿಸಲಿಲ್ಲ ಮತ್ತು ಅದಕ್ಕೆ ಕಾರಣ ವಿಮರ್ಶಾ/ಸಾಹಿತ್ಯ ಲೋಕದ ರಾಜಕಾರಣ, ಜಾತೀಯತೆ, ಸಣ್ಣತನ ಇತ್ಯಾದಿ ಎನ್ನುವುದು ನಾನು ಗ್ರಹಿಸಿದಂತೆ ಅವರ ಲೇಖನದ ತಿರುಳು. ಇದು ಅಷ್ಟು ಸರಿಯಾದ ಅಭಿಪ್ರಾಯವಲ್ಲ ಎಂದು ಗಿರೀಶ್ ವಾಘ್ ಆ ಲೇಖನಕ್ಕೆ ಪ್ರತಿಕ್ರಿಯಿಸಿದ್ದನ್ನೂ ಗಮನಿಸಿದ್ದೇನೆ.
ನಾವು ಇದನ್ನೆಲ್ಲ ಭಾವುಕರಾಗದೆ, ರಚನಾತ್ಮಕ ಉದ್ದೇಶಗಳನ್ನಿಟ್ಟುಕೊಂಡು ನೋಡಬೇಕಾಗಿದೆ. ಜಯಂತ್, ವಿವೇಕ್, ವಸುಧೇಂದ್ರ ಅವರ ತಲಾ ಒಂದು ಕೃತಿ ಮಾತ್ರ ಕನ್ನಡೇತರ ಓದುಗ/ವಿಮರ್ಶಕರ ವ್ಯಾಪಕ ಮನ್ನಣೆ ಪಡೆದಿದೆ. ಇದರಿಂದಾಗಿ ಅವರ ಅವೇ ಕೃತಿಗಳು ಮತ್ತಷ್ಟು ಯುರೋಪಿಯನ್ ಭಾಷೆಗಳಿಗೆ ಅನುವಾದವಾಗಲು ಕಾರಣವಾಯಿತೇ ಹೊರತು ಈ ಲೇಖಕರ ಇತರ ಕೃತಿಗಳತ್ತ ಆ ಓದುಗ/ವಿಮರ್ಶಕ/ಪ್ರಕಾಶಕರ ಆಸಕ್ತಿ ಕೆರಳಿಸಿದಂತಿಲ್ಲ. ಈ ಲೇಖಕರ ಇತರ ಕೃತಿಗಳು ಅನುವಾದ ನಡೆಯುತ್ತಿದೆಯೆ? ಈ ಬಗ್ಗೆ ಮಾಹಿತಿಯಿಲ್ಲ. ವಸುಧೇಂದ್ರರ ಸಾಹಿತ್ಯ ಚರ್ಚೆಗೆ ಬಂದಿರುವುದಕ್ಕಿಂತ ಲೇಖಕ ಗೇ ಎಂಬ ವಿಚಾರಕ್ಕೆ ಒತ್ತು ಸಿಕ್ಕಿದ್ದು ಹೆಚ್ಚು. ಜಯಂತರ ಈ ಹಿಂದಿನ ಇಂಗ್ಲೀಷ್ ಅನುವಾದವನ್ನು ಕೂಡ ನೆನೆದವರು ಇಲ್ಲ. ಒಬ್ಬ ಲೇಖಕನ ಬಗ್ಗೆ, ಆತನ ಇತರ ಕೃತಿಗಳ ಬಗ್ಗೆ ಆಸಕ್ತಿ, ಕುತೂಹಲ ಮೂಡಿಸದ, ಕೇವಲ "ಪ್ರಾಡಕ್ಟ್ ಬೇಸ್ಡ್ ಇಂಟ್ರೆಸ್ಟ್" ಎಂಬಂತೆ ಕೃತಿಗಳನ್ನು ಕಾಣುವ ಅದೇ ಹಳಸಲು ಮನಸ್ಥಿತಿಯ ವ್ಯಾಣಿಜ್ಯೀಕೃತ ವಿಮರ್ಶಾ/ಸಾಹಿತ್ಯಿಕ ಜಗತ್ತಿನ ಮನ್ನಣೆಯಿದು. ಇದಕ್ಕೆ ಕನ್ನಡಿಗರು ಅಷ್ಟೇನೂ ಪ್ರತಿಸ್ಪಂದನ ತೋರಿಸಿಲ್ಲ, ತೋರಿಸಬೇಕಾಗಿಯೂ ಇರಲಿಲ್ಲ. ಕೆಲವೊಂದು ಪತ್ರಿಕೆಗಳು ಈ ಹೈಪ್ನ ಲಾಭ ಎತ್ತಲು ಸಂದರ್ಶನ ಪ್ರಕಟಿಸುವುದಕ್ಕೆ, ಈ ಲೇಖಕರ ಫೋಟೋ ಹಾಕುವುದಕ್ಕೆ ತೋರಿದ ಉತ್ಸಾಹ ಕೂಡ ವ್ಯಾಪಾರೀ ಮನೋಧರ್ಮದ ಪ್ರದರ್ಶನವೇ ಹೊರತು ಕೃತಿಕಾರ ಅಥವಾ ಕೃತಿಗಳ ಕುರಿತ ನೈಜ ಆಸ್ಥೆಯಿಂದಲ್ಲ.
ಇದೇ ಸಂದರ್ಭದಲ್ಲಿ ನಾವು ಚಿತ್ತಾಲರ ‘ಶಿಕಾರಿ’, ಎಸ್ ದಿವಾಕರ್ ಅವರ ‘ಹಂಡ್ರೆಡ್ಸ್ ಆಫ್ ಸ್ಟ್ರೀಟ್ಸ್ ಟು ದ ಪ್ಯಾಲೇಸ್ ಆಫ್ ಲೈಟ್ಸ್’ , ಮೊಗಳ್ಳಿಯವರ ‘ದ ಕ್ರೆಡಲ್ಸ್’ ಯಾವುದೂ ಕನ್ನಡೇತರರ ಭಜಾಭಜಂತ್ರಿಗೆ ಪಾತ್ರವಾಗಲಿಲ್ಲ ಎನ್ನುವುದನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ಏಜೆಂಟರನ್ನು ನೇಮಿಸಿಕೊಂಡು, ವಿಮರ್ಶೆಗೆ, ಲೇಖನಗಳಿಗೆ, ನಂಬರ್ ಲಿಸ್ಟ್ಗಳಲ್ಲಿ ಸೇರ್ಪಡೆಯಾಗುವುದಕ್ಕೆ - ಹೀಗೆ ಪ್ರತಿಯೊಂದಕ್ಕೂ ಒಂದು ಪ್ರಾಡಕ್ಟ್ ಲಾಂಚ್ ಮಾಡುವಷ್ಟೇ ನಿಷ್ಠೆಯಿಂದ, ಯೋಜನಾಕ್ರಮದಿಂದ, ಲೆಕ್ಕಾಚಾರದಿಂದ ಪುಸ್ತಕ ಪ್ರಕಟಿಸಿ, ಮಾರಾಟ ಮಾಡುವ ಇಂಗ್ಲೀಷ್ ಪುಸ್ತಕೋದ್ಯಮದ ಗಿಮ್ಮಿಕ್ಕುಗಳು ಕನ್ನಡಕ್ಕೆ ಹೊಸವು, ಈಗಷ್ಟೇ ಅಲ್ಲಿ ಇಲ್ಲಿ ಇಣುಕತೊಡಗಿರುವಂಥಾವು.
ಇಂಗ್ಲೀಷ್ ಅನುವಾದದ ಓದುಗ/ವಿಮರ್ಶಕರು ಗುರುತಿಸಿದ ಬಳಿಕ ಈ ಲೇಖಕರ ಕೃತಿಗಳನ್ನು ಕನ್ನಡದ ಓದುಗ/ವಿಮರ್ಶಕರು ಏಕಾಎಕಿ ಗಮನಿಸತೊಡಗಿದ್ದಾರೆ ಎನ್ನುವುದಕ್ಕೆ ಸಮರ್ಥನೀಯ ಎನ್ನಬಹುದಾದ ಪುರಾವೆಗಳು ನನ್ನ ಕಣ್ಣಿಗಂತೂ ಬಿದ್ದಿಲ್ಲ. ಬದಲಿಗೆ, ಕನ್ನಡದ ಓದುಗ/ವಿಮರ್ಶಕರು ಯಾವತ್ತಿನಂತೆಯೇ ಜಡವಾಗಿಯೇ ಉಳಿದಿದ್ದಾರೆನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಜಿ ಎಸ್ ಅಮೂರ, ಟಿ ಪಿ ಅಶೋಕ, ಓ ಎಲ್ ನಾಗಭೂಷಣಸ್ವಾಮಿ, ಎಸ್ ಆರ್ ವಿಜಯಶಂಕರ, ರಾಜೇಂದ್ರ ಜೆನ್ನಿ, ರಹಮತ್ ತರೀಕರೆ, ಸಿ ಎಸ್ ರಾಮಚಂದ್ರನ್, ಎಚ್ ಎಸ್ ರಾಘವೇಂದ್ರ ರಾವ್, ಗಿರಡ್ಡಿ ಗೋವಿಂದರಾಜ, ಎಂ ಎಸ್ ಆಶಾದೇವಿ ಮುಂತಾದ (ಹತ್ತು ಮಂದಿಗೆ ಸೀಮಿತಗೊಳಿಸಿಕೊಂಡಿದ್ದೇನೆ) ವಿಮರ್ಶಕರು ಬರೆಯದೇ ಇರುವ, ಕಡಿಮೆ ಬರೆದಿರುವ ಕತೆಗಾರ/ಕಾದಂಬರಿಕಾರರ ಸಂಖ್ಯೆ ಜಯಂತ್-ವಿವೇಕ್-ವಸುಧೇಂದ್ರ ಮೂರೇ ಅಲ್ಲ. ಈಚೆಗೆ ಅಮೂರರೇ ಹೇಳಿಕೊಂಡಿರುವಂತೆ ಇವರ ಬಳಿ ಬೇರೆಯವರು ಬರೆಸಿದ್ದು ಹೆಚ್ಚು. ಇವರಾಗಿ ಆರಿಸಿಕೊಂಡು ಬರೆದಿದ್ದು ಕಡಿಮೆ! ಅದಕ್ಕೆ ಕಾರಣಗಳಿವೆ, ಅದಿರಲಿ. ಒಬ್ಬ ವಿಮರ್ಶಕನಿಗೆ ಅವನದೇ ಆದ ಇತಿಮಿತಿಗಳಿರುತ್ತವೆ ಎನ್ನುವುದನ್ನು ಮರೆತು ಮಾತನಾಡಬಾರದು. ವಿಮರ್ಶಕರು ಯಾವುದೇ ಲೇಖಕನ ಕೂಲಿ ಚಾಕರಿಯವರಲ್ಲ. ಅವರ ಮಾತಿಗೆ ಇತರರು ಕೊಡುವ ಬೆಲೆ,ಮಹತ್ವ ಕೂಡ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ತರ ಇರುತ್ತದೆ ಎನ್ನುವುದನ್ನು ಎಲ್ಲರೂ ಬಲ್ಲೆವು. ಅವರನ್ನು ಬಾಳೆಲೆ ತರ ಹಾಸ್ಯುಂಡು ಒಗೆದವರು ಹೆಚ್ಚು. ಇದನ್ನೆಲ್ಲ ಗಮನಿಸಿಯೂ ಒಬ್ಬ ಲೇಖಕನ ಬಗ್ಗೆ "ಸಾಕಷ್ಟು" (ಅದು ಸದಾ ಅಕ್ಷಯ ನಿರೀಕ್ಷೆ) ವಿಮರ್ಶೆ ಬಂದಿದೆಯೇ ಇಲ್ಲವೇ ಎನ್ನುವುದು ಯಾವುದರ ಇಂಡಿಕೇಶನ್ನೂ ಅಲ್ಲ ಎನ್ನುವುದು ಸ್ವಸ್ಥ ಮನಸ್ಸಿನವರಿಗೆ ಹೊಳೆಯದ ವಿಚಾರವೇನಲ್ಲ.
ಇನ್ನು ಈ ಹತ್ತು ಮಂದಿಯಲ್ಲಿ ಯಾರು ಜಾತಿವಾದಿ, ಯಾರು ರಾಜಕೀಯ ಮಾಡುತ್ತಾರೆ, ಯಾರದ್ದು ನಿಜಕ್ಕೂ ಸಣ್ಣಬುದ್ಧಿ ಎನ್ನುವುದನ್ನು ಆಯಾ ಹೆಸರಿನೆದುರು ಮಾರ್ಕ್ ಮಾಡುವುದು ಸಾಧ್ಯವಿದೆಯೆ ಎಂದು ಒಂದು ಕ್ಷಣ ಯೋಚಿಸಿ. ಇವರು ಯಾರೂ ಹಾಗಿಲ್ಲ ಎನ್ನುವುದು ನಿಮಗೇ ಸ್ಪಷ್ಟವಾಗುತ್ತ ಹೋಗುತ್ತದೆ. ಇವರೆಲ್ಲರೂ ಉದಾರವಾಗಿಯೇ ಇದ್ದಾರೆ, ಮುಕ್ತವಾದ ಮನಸ್ಸಿನಿಂದಲೇ ಬರೆದಿದ್ದಾರೆ, ಹೊಸಬರು-ಹಳಬರು, ಮೇಲ್ಜಾತಿ-ಕೆಳಜಾತಿ, ಗಂಡು-ಹೆಣ್ಣು ಎಂಬ ವ್ಯತ್ಯಾಸ ಬದಿಗಿರಲಿ, ಕಳಪೆ ಕೃತಿ-ಉತ್ಕೃಷ್ಟ ಕೃತಿ ಎಂಬ ಭೇದವನ್ನು ಕೂಡ ಮಾಡದೆ ಬೇಕಾಗಿಯೋ ಬೇಡವಾಗಿಯೋ ಬರೆಯುತ್ತಲೇ ಬಂದಿದ್ದಾರೆ. ಹಾಗಿದ್ದೂ ವಿಮರ್ಶಕರ ಬಗ್ಗೆ ಬರುವ ವಿಮರ್ಶೆಗಳು ಅಕಾರಣ ಕಟುವಾಗಿ, ಲಘುವಾಗಿ, ತಾತ್ಸಾರದಿಂದ ಕೂಡಿರುವುದು ಕಾಣುತ್ತದೆ.
ಕೆಲಕಾಲದ ಹಿಂದೆ ಪಾಶ್ಚಾತ್ಯ ದೇಶಗಳಲ್ಲಿ ವಿಮರ್ಶೆ ಎನ್ನುವುದು ನೂರು ವರ್ಷಗಳ ಹಿಂದೆಯೇ ಸತ್ತಿದೆ, ನಾವಿಲ್ಲಿ ಅದರ ಹೆಣ ಇಟ್ಟುಕೊಂಡು ಕೂತಿದ್ದೇವೆ ಎಂದು ಒಬ್ಬರು ಬರೆದರು. ನಮ್ಮಲ್ಲೂ ಕೆಲವು ದೊಣ್ಣೆನಾಯಕರು ಬರೆದಿದ್ದೆಲ್ಲ ಮುಖಬೆಲೆಗೇ ಸತ್ಯ ಎಂದು ಕೊಂಡುಕೊಳ್ಳುವ ಮೆದುಳು ಅಡವಿಟ್ಟ ಬುದ್ಧಿವಂತರು ಇದ್ದೇ ಇದ್ದಾರೆ. ತಮಾಶೆ ಎಂದರೆ ಹೀಗೆ ಬರೆದ ಕಾಲಕ್ಕೂ, ಈಗಲೂ ಗ್ರಾಂಟಾ, ಪ್ಯಾರಿಸ್ ರಿವ್ಯೂ, ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್, ವರ್ಲ್ಡ್ ಲಿಟರೇಚರ್ ಟುಡೇ, ಕೆನಿಯನ್ ರಿವ್ಯೂ, ಟೈಮ್ಸ್ ಲಿಟರರಿ ಸಪ್ಲಿಮೆಂಟ್, ದ ವಾಲ್ರಸ್, ಏಶಿಯಾ ಲಿಟರರಿ ರಿವ್ಯೂ, ಮ್ಯೂಸ್ ಇಂಡಿಯಾ, ಆಲ್ಮೋಸ್ಟ್ ಐಲ್ಯಾಂಡ್, ಪೋಯೆಟ್ರಿ ಮ್ಯಾಗಝೀನ್, ಲಾಸ್ಏಂಜಲೀಸ್ ರಿವ್ಯೂ ಆಫ್ ಬುಕ್ಸ್, ಲಂಡನ್ ರಿವ್ಯೂ ಆಫ್ ಬುಕ್ಸ್, ದ ಮ್ಯಾಂಚೆಸ್ಟರ್ ರಿವ್ಯೂ ಮುಂತಾದ ಪತ್ರಿಕೆಗಳು ಸಿನಿಮಾಗಳ ರಿವ್ಯೂ ಬರೆಯುತ್ತಿವೆ ಎಂದು ಈ ಬೃಹಸ್ಪತಿ ನಂಬಿದಂತಿದೆ. ಅಂಥವರೇ ಈಗ ಜಯಂತ್-ವಿವೇಕ್-ವಸುಧೇಂದ್ರ ಮುಂತಾದವರ ಬಗ್ಗೆ ವಿಮರ್ಶಾಲೋಕ ಪೂರ್ವಾಗ್ರಹಪೀಡಿತವಾಗಿದೆ ಎಂದು ಲಬೊಲಬೊ ಬಡಿದುಕೊಳ್ಳುತ್ತಿರುವುದು ಎಡಬಿಡಂಗಿತನ ಅನಿಸುವುದಿಲ್ಲವೆ!
ಮುಖ್ಯವಾದದ್ದು ವಿಮರ್ಶೆ ಬಂತೆ ಇಲ್ಲವೆ ಎನ್ನುವುದಲ್ಲ, ಬಂದ ವಿಮರ್ಶೆ ಬರಹಗಾರ, ಓದುಗ, ಪ್ರಕಾಶಕ - ಇವರಲ್ಲಿ ಯಾರಾದರೂ ಒಬ್ಬರಿಗಾದರೂ ಉಪಯುಕ್ತ ಎನಿಸುವಂತಿತ್ತೆ (ವ್ಯಾಪಾರಿ ದೃಷ್ಟಿಕೋನಕ್ಕೆ ಹೊರತಾಗಿ) ಎನ್ನುವುದು. ಅದು ಕನ್ನಡದಲ್ಲೂ ಇಲ್ಲ, ಇಂಗ್ಲೀಷಿನಲ್ಲೂ ಇಲ್ಲ. ಸದ್ಯಕ್ಕಿದು ವ್ಯಾಪಾರಿಗಳ ಸಂತಿ!