Thursday, February 28, 2019

ಬರೀ ಅರ್ಧದ ಅರ್ಥ

ಮೋಹನ್ ರಾಕೇಶ್ ಎಂದರೆ ಬಹುಶಃ ಕನ್ನಡದ ಓದುಗರಿಗೆ ಏನೂ ಅನಿಸದೇ ಇರಬಹುದು. ಆದರೆ "ಆಧೇ ಅಧೂರೇ" ಎಂದರೆ ತಕ್ಷಣವೇ ಹೊಳೆದು ಬಿಡುತ್ತದೆ. ಮೋಹನ್ ರಾಕೇಶ್ ಎಂದರೆ ಈ ನಾಟಕ, ಈ ನಾಟಕ ಎಂದರೇ ಮೋಹನ್ ರಾಕೇಶ್ ಎಂಬಷ್ಟರ ಮಟ್ಟಿಗೆ ಈ ನಾಟಕದ ಖ್ಯಾತಿ. ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿರುವ ಈ ನಾಟಕ ಪ್ರಕಟವಾಗಿದ್ದು 1968ರಲ್ಲಿ, ಐವತ್ತು ವರ್ಷಗಳಷ್ಟು ಹಿಂದೆ. ಅಲ್ಲಿಂದ ಇದುವರೆಗೂ ಏನಿಲ್ಲವೆಂದರೂ ಐವತ್ತು ಸಾವಿರಕ್ಕೂ ಮಿಕ್ಕಿದ ರಂಗಪ್ರಯೋಗಗಳಾಗಿವೆ ಎನ್ನುವುದು ಒಂದು ಲೆಕ್ಕಾಚಾರ. 1958ರಲ್ಲಿ ಬಂದಿದ್ದ ರಾಕೇಶ್ ಅವರ ಮೊದಲ ನಾಟಕ "ಆಷಾಢ್ ಕೆ ಏಕ್ ದಿನ್" ಕೂಡ ಸಾಕಷ್ಟು ಖ್ಯಾತ ನಾಟಕ. ಅದಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಸರ್ವೋತ್ಕೃಷ್ಟ ನಾಟಕ ಪುರಸ್ಕಾರ ಕೂಡ ಸಿಕ್ಕಿತ್ತು. ಕುತೂಹಲಕರ ಸಂಗತಿ ಎಂದರೆ ಮೋಹನ್ ರಾಕೇಶ್ ಅವರ ಒಟ್ಟು ನಾಲ್ಕು ನಾಟಕಗಳನ್ನು ನಮ್ಮ ಖ್ಯಾತ ಸಾಹಿತಿ, ಮೋಹನ್ ರಾಕೇಶರ ಆಪ್ತ ಗೆಳೆಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಬಹುಹಿಂದೆಯೇ ಕನ್ನಡಕ್ಕೆ ತಂದಿದ್ದರೆನ್ನುವುದು. "ಆಧೇ ಅಧೂರೇ", "ಆಷಾಢದ ಒಂದು ದಿನ", "ಅಲೆಗಳಲ್ಲಿ ರಾಜಹಂಸಗಳು" ಮತ್ತು "ಕಾಲಕೆಳಗಿನ ನೆಲ" ಎಂಬ ನಾಲ್ಕೂ ನಾಟಕಗಳನ್ನು ಧಾರವಾಡದ ಅನನ್ಯ ಪ್ರಕಾಶನ ಹೊರತಂದಿದೆ. (ನನ್ನ ಬಳಿ ಇರುವ "ಆಷಾಢದ ಒಂದು ದಿನ" ನಾಟಕದ ಪ್ರತಿ ಮಾತ್ರ ಅಭಿನವದ ಪ್ರಕಟಣೆ.)

ಅಷ್ಟಕ್ಕೂ ನಾನು ಹೇಳಲು ಹೊರಟಿದ್ದು ನಾಟಕಕಾರ ಮೋಹನ್ ರಾಕೇಶ್ (1925-1972) ಬಗ್ಗೆ ಅಲ್ಲ. ಹಿಂದೀ ಸಣ್ಣಕತೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ ಒಬ್ಬ ಪ್ರಮುಖ ಕತೆಗಾರನ ಬಗ್ಗೆ. ತಮಾಶೆ ಎಂದರೆ, ಇಂಥ ಒಬ್ಬ ಬರಹಗಾರನ ನಾಲ್ಕು ನಾಲ್ಕು ನಾಟಕಗಳು ಕನ್ನಡಕ್ಕೆ ಬಂದಿದ್ದರೂ, ಒಬ್ಬ ಸಣ್ಣಕತೆಗಾರರಾಗಿ ಕೂಡ ಮೋಹನ್ ರಾಕೇಶ್ ಗಮನಿಸದೇ ಇರಲಾರದಷ್ಟು ಪ್ರಮುಖ ಕತೆಗಾರರಾಗಿದ್ದರೂ ಅವರ ಹತ್ತು ಹದಿಮೂರು ಕತೆಗಳಾದರೂ ಇಂಗ್ಲೀಷಿಗೆ ಬರಲು 2018ರ ತನಕ ಕಾಲ ಕೂಡಿ ಬರಲೇ ಇಲ್ಲ ಎನ್ನುವುದು! ಪ್ರತಿಭೆ, ಪ್ರಸಿದ್ಧಿ ಮತ್ತು ಪ್ರಶಸ್ತಿ ಮೂರಕ್ಕೂ ತಥಾಕಥಿತ ಸಂಬಂಧ ಬಹುಶಃ ಇರುವುದಿಲ್ಲ. ಎಲ್ಲ ಇದ್ದೂ ಅದೃಷ್ಟ ಒಂದಿಲ್ಲದೇ ಇದ್ದರೆ ಏನುಪಯೋಗ. ಬಹುಶಃ ಮೋಹನ್ ರಾಕೇಶ್ ಅವರ ಬದುಕಿನ ಕತೆಯನ್ನು ಕೇಳಿದರೂ ಹೀಗೆಯೇ ಅನಿಸಬಹುದು. Another Life ಎಂಬ ಹೆಸರಿನಲ್ಲಿ ಇದೀಗ ಬಂದಿರುವ ಮೋಹನ್ ರಾಕೇಶ್ ಅವರ ಕತೆಗಳ ಅನುವಾದಿತ ಸಂಕಲನದಲ್ಲಿ ರಾಕೇಶ್ ಅವರೇ ಬರೆದಿರುವ "ಸೆಲ್ಫೀ" ಲೇಖನ/ಕತೆಯೂ ಒಂದಿದೆ. ಇದರ ಹೆಸರೇ A Self Portrait. ಇದರಲ್ಲಿ ಮೋಹನ್ ರಾಕೇಶ್ ತಮ್ಮ ಬಾಲ್ಯ, ತಾರುಣ್ಯ, ತಮ್ಮನ್ನು ಕೊನೆತನಕ ಕಾಡುತ್ತ ಉಳಿದ ಏಕಾಕಿತನ ಎಲ್ಲವನ್ನೂ ಪ್ರತಿಮೆಗಳ, ರೂಪಕಗಳ ನೆರವಿನಿಂದ ತೆರೆದಿಡುತ್ತ ಸಾಗುತ್ತಾರೆ. ಗೋಡೆಗಳು, ಗೋಡೆಯ ಮೇಲೆ ಇಲ್ಲದಿರುವ, ಇದ್ದಂತನ್ನಿಸುವ ರೇಖೆಗಳು, ಚಿತ್ರಗಳು, ಮನೆಯಲ್ಲಿದ್ದ ಸಂಗೀತದ ಉಪಕರಣಗಳು, ಸಾಲಗಾರರ ಬೇಕು ಬೇಡಗಳಿಗೆ ಹೊಂದಿಕೊಂಡು ತಮ್ಮ ಸಣ್ಣಪುಟ್ಟ ಲಕ್ಷುರಿಗಳನ್ನು ಅಡಗಿಸುತ್ತ-ಅನುಭವಿಸುತ್ತ ಕಳೆದ ದಿನಗಳು ಎಲ್ಲವೂ ಮನಕಲಕುವಂತಿವೆ. ಇಲ್ಲಿ ಮೋಹನ್ ರಾಕೇಶ್ ಒಂದು ಮಾತು ಹೇಳುತ್ತಾರೆ.

"ನಿನ್ನೆಯ ವಾಸ್ತವಗಳೇ ಇಂದಿನ ಕನಸುಗಳು; ನಾಳಿನ ಕನಸುಗಳು ಇಂದಿನ ವಾಸ್ತವಗಳ ಕೂಸು. ನಮ್ಮ ಬದುಕಿನ ಒಂದೇ ಒಂದು ಕ್ಷಣ ಕೂಡ ಭೂತ ಮತ್ತು ಭವಿಷ್ಯದ ಯೋಚನೆಗಳಿಂದ ಮುಕ್ತವಾಗುಳಿದಿಲ್ಲ. ಏನೇ ಸಂಭವಿಸಿದರೂ ಮನಸ್ಸು ತಕ್ಷಣವೇ ಅದರ ಹಿಂದಿನ ಕತೆಯತ್ತ ಹೊರಳುತ್ತದೆ ಅಥವಾ ಅದರಿಂದ ಇನ್ನು ಮುಂದೇನಾದೀತೆಂದು ಕಲ್ಪಿಸುತ್ತದೆ. ನಮ್ಮ ಬದುಕಿನ ಪ್ರತಿಯೊಂದು ದಿನವೂ ನಿನ್ನೆಯ ದಿನದ ಹೊಸ ಮೊಳಕೆಯಾಗಿ ಕುಡಿಯೊಡೆಯುವುದನ್ನು ಮನಸ್ಸು ಕಾಯುತ್ತದೆ. ಬರಲಿರುವ ನಾಳೆಯ ಬೀಜ ಇಂದಿನ ವರ್ತಮಾನದಲ್ಲೇ ರೂಪುಗೊಳ್ಳುವುದರ ಬಗ್ಗೆ ನಾವು ಸದಾ ಆತಂಕಿತರಾಗಿಯೇ ಇರುತ್ತೇವೆ."

- ಇದು ಮನುಷ್ಯ. ಇದು ಮನುಷ್ಯನ ಶಿಲುಬೆ. ಅವನೇ ಹೊತ್ತು ಸಾಗಬೇಕಾದ ಅವನದೇ ಶಿಲುಬೆ. ಮೋಹನ್ ರಾಕೇಶ್ ಅವರ ಒಟ್ಟಾರೆ ಸಾಹಿತ್ಯ ಈ ಒಂದು ಎಳೆಯನ್ನು ಸದಾ ಜೀವಂತವಾಗಿರಿಸಿಕೊಂಡು ಸಾಗುತ್ತಿರುವಂತೆ ಅನಿಸಿದರೆ ಅದರಲ್ಲೇನೂ ಅಚ್ಚರಿಯಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲಾ ಸಾಹಿತ್ಯದ ಮೂಲದ್ರವ್ಯವೂ ಈ ಭೂತ-ಭವಿಷ್ಯದ ಜೋಕಾಲಿಯಲ್ಲಿ ನಿರಂತರ ತೂಗುತ್ತಿರುವ ಮನುಷ್ಯನೇ ಆಗಿರುವುದು ಕೂಡ ನಮಗೆ ಹೊಳೆಯದೇ ಇರಲಾರದು.


ಈಗ ಮೋಹನ್ ರಾಕೇಶ್ ಅವರ ಕತೆಗಳತ್ತ ಹೊರಳಿದರೆ ಒಂದು ವಿಚಿತ್ರವಂತೂ ತಕ್ಷಣಕ್ಕೆ ನಮ್ಮ ಗಮನಕ್ಕೆ ಬರುತ್ತದೆ. ಇಲ್ಲಿ ಬರುವ ಹೆಚ್ಚಿನೆಲ್ಲಾ ಕತೆಗಳ ನೆರಳು ಈಗಾಗಲೇ ನಾವು ಬೇರೆ ಬೇರೆ ಭಾಷೆಗಳಲ್ಲಿ ಓದಿರಬಹುದಾದ ಕತೆಗಳ ಮೇಲೆ ಬಿದ್ದಿರುವಂಥವೇ. ವಸ್ತು ನಮಗೆ ತೀರ ಹೊಸದು ಎಂದು ಅನಿಸದೇ ಇದ್ದರೆ ಅಂಥ ಅಚ್ಚರಿಯೇನಿಲ್ಲ. ಮೈಮಾರಿಕೊಂಡು ಸಂಪಾದಿಸುತ್ತಿರುವ ಯುವತಿಯೊಬ್ಬಳು ತನ್ನ ಅಲ್ಪಸ್ವಲ್ಪ ಸಂಪಾದನೆಯಿಂದಲೇ ತಮ್ಮನನ್ನು ಪ್ರತ್ಯೇಕವಾಗಿ ಒಂದೆಡೆ ನಿಲ್ಲಿಸಿ ಸಾಕುತ್ತಿರುವ ಚಿತ್ರ ಇರುವ ಕತೆ A Living ನಲ್ಲಿದೆ. ಈ ತಮ್ಮ ಏನೂ ಚಿಕ್ಕವನಲ್ಲ, ಪ್ರಾಯಪ್ರಬುದ್ಧ ಯುವಕ. ಅವನು ಹೇಳಿಕೊಳ್ಳುವ ಹಾಗೆ ನಿಜಕ್ಕೂ ಅವನಿಗೇನಾದರೂ ಕಾಯಿಲೆಯೇ, ಅವನ ರೂಮಿನ ಒಡತಿ ಹೇಳುವಂತೆ ಅವನೊಬ್ಬ ಬೇಜವಾಬ್ದಾರಿಯ ಆಲಸಿ ಮೈಗಳ್ಳನೇ ನಮಗೆ ಸ್ಪಷ್ಟವಾಗಿ ತಿಳಿಯುವುದೇ ಇಲ್ಲ. ಆದರೆ ಆ ಅಕ್ಕನ ಮೌನದಲ್ಲೇ ಏನೋ ಇದೆ. ಅವನನ್ನು ಅವಳು ಅದೇ ಊರಿನಲ್ಲಿ ಬೇರೆಲ್ಲೊ ವಾಸ್ತವ್ಯ ಕಲ್ಪಿಸಿ ನಿಲ್ಲಿಸಿಕೊಂಡಿರುವುದೇತಕ್ಕೆ? ಅವನ ಊಟೋಪಚಾರ, ವಾಸ್ತವ್ಯ ಎಲ್ಲಕ್ಕೂ ಅವಳೇಕೆ ಹಣ ಪಾವತಿಸುತ್ತಾಳೆ? ಅದೆಲ್ಲ ವಿವರ ಸಿಗುವುದಿಲ್ಲ. ಸಿಗುವುದಿಲ್ಲ ಎಂದರೆ ಕತೆಗಾರನ ಉದ್ದೇಶ, ಓದುಗ ಅವುಗಳತ್ತ ನೋಡುವ ಅಗತ್ಯವಿಲ್ಲ, ಅವು ಅಷ್ಟು ಮುಖ್ಯವಲ್ಲ; ಅವನು ಗಮನ ಕೇಂದ್ರೀಕರಿಸಬೇಕಾದ್ದು ಈ ಬಗೆಯ ಬದುಕಿನತ್ತ ಎನ್ನುವುದಿದ್ದೀತು. ಅದು ಖಾಲಿ ಉಳಿಸುವ ಮೌನದತ್ತ, ಆ ಬದುಕಿನ ನಿಂತ ನೀರಿನಂಥ ಕ್ಷಣಗಳತ್ತ. ಆ ತಮ್ಮನ ಬೈಗುಳಗಳು, ಅಸಮಾಧಾನಗಳು, ಹೇಳದೇ ಕೇಳದೇ ಆ ದೇಖರೇಖಿಯ ಬಂಧನದಿಂದ ಕಿತ್ತುಕೊಂಡು ಅವನು ಹೊರಬೀಳುವುದು ಎಲ್ಲವೂ ಬದುಕನ್ನು ಕೊಯ್ದು ಹೋಳು ಹೋಳಾಗಿಸಿ ಎದುರಿಟ್ಟಂತೆ ಇವೆ. ಪ್ರತಿಯೊಂದು ಪಾತ್ರವೂ ನಿಮ್ಮೊಳಗೆ ಬೆಳೆಯತೊಡಗುತ್ತವೆ. ಕಾಡಲು ಸುರು ಮಾಡುತ್ತವೆ. ಸೊ, ಇವು ಕಾಡುವ ಕತೆಗಳು, ಬರೀ ಓದುವ ಕತೆಗಳಲ್ಲ.

ಈ ಅಂತ್ಯವೇ ಈ ಕತೆಯ ಅಂತರಾತ್ಮವಾಗಿರುತ್ತ ಮೋಹನ್ ರಾಕೇಶ್ ಅದನ್ನು ಪ್ಲ್ಯಾನ್ ಮಾಡಿದ್ದರೆ ಎಂದರೆ ಸುತಾರಾಂ ಇಲ್ಲವೆನ್ನುತ್ತೇನೆ. ಏಕೆಂದರೆ, ಯಾವುದೇ ಕತೆಯ ಅಂತ್ಯವೆನ್ನುವುದು ಕತೆಗಾರನ ಕೈಯಲ್ಲಿರುವುದೇ ಇಲ್ಲ. ಇದೆ ಎನ್ನುವಂತೆ ಕಂಡರೂ. ಹಾಗಿದ್ದೂ, ಕತೆಗೆ ಅದೊಂದೇ ಅಂತ್ಯ ಸಾಧ್ಯವಿದ್ದಿದ್ದು ಎನ್ನುವಂತೆ ಅದು ಎಲ್ಲಿಂದಲೋ ಅಲ್ಲಿ ಬಂದು ಕೂತು ಬಿಡುತ್ತದೆ. ಸ್ವತಃ ಕತೆಗಾರನೇ ಅದನ್ನು ಅಲ್ಲಿಂದೆತ್ತಿ ಇಡಲಾರದಂತೆ. ಹಾಗಿದ್ದೂ ಮೋಹನ್ ರಾಕೇಶ್ ಅವರ ಈ ಕತೆಯಂತೆ ಅವರ ಎಲ್ಲಾ ಕತೆಗಳಲ್ಲೂ ಅಂತ್ಯವೇ ಆಳುತ್ತದೆ. ಅಂದರೆ, ಪೂರ್ವನಿರ್ಧಾರಿತವೋ, ಅದೃಷ್ಟವಶಾತ್ ಒದಗಿದ್ದೋ ಅದೇನೇ ಇರಲಿ, ಅಂತ್ಯವೊಂದು ಅವರ ಇಡೀ ಕತೆಯ ಅಂತರಾತ್ಮವಾಗಿ ಬಿಡುವ ಚೋದ್ಯವೇನಿದೆ, ಅದು ಗಮನವಹಿಸಿ ನೋಡಬೇಕಾದ ಒಂದು ಪ್ರಮುಖ ಅಂಶವೆಂದು ಅನಿಸುತ್ತದೆ. ಏಕೆಂದರೆ, ರಾಕೇಶ್ ಅವರಿಗೆ ಕತೆಯ ಅಂತ್ಯ ಎನ್ನುವುದು ಕೇವಲ ಓದುಗನಿಗೆ ಒಂದು ಧಕ್ಕೆ ನೀಡುವ, ಪಂಚ್ ಒದಗಿಸುವ ತಾಂತ್ರಿಕ ಅಗತ್ಯ ಅಲ್ಲವೇ ಅಲ್ಲ. ಅದಕ್ಕಿಂತ ಹೆಚ್ಚಿನದನ್ನು ಅವರು ಯೋಚಿಸಿದ್ದಾರೆನ್ನಿಸುತ್ತದೆ. ಹಾಗಾಗಿ ಅದು ಕತೆಯ ಒಂದು ಅಚಾನಕ್ ಹೊರಳುವಿಕೆಯಷ್ಟೇ ಆಗಿ ಮುಗಿಯದೆ, ಇಡೀ ಕತೆಯ ಆತ್ಮವೇ ಅದಾಗಿ ಹಿಮ್ಮೊಗವಾಗಿ ಚಾಚಿಕೊಂಡು ಇಡೀ ಕತೆಯ ಒಡಲನ್ನು ವ್ಯಾಪಿಸುತ್ತದೆ.

ಸ್ವಲ್ಪ ಸರಳವಾಗಿ ಹೇಳುವುದಾದರೆ ಇವು ಒಂದರ್ಥದಲ್ಲಿ ಓಪನ್ ಎಂಡ್ ಕತೆಗಳೆನ್ನಬಹುದು. ಆದರೆ ತೀರ ಅದೇ ಅರ್ಥದಲ್ಲಲ್ಲ. ಅಂದರೆ, ಇಲ್ಲಿ ಓದುಗ ಪರ್ಯಾಯ ಅಂತ್ಯಗಳನ್ನೆಲ್ಲ ಕಲ್ಪಿಸಿಕೊಳ್ಳಬಹುದಾದ ಒಂದು ನೆಲೆಯಲ್ಲಿ ಕತೆ ಅಂತ್ಯಗೊಳ್ಳುತ್ತದೆ ಎಂದಲ್ಲ. ಕತೆಯ ಅಂತ್ಯ ನಿರ್ದಿಷ್ಟವಾಗಿಯೇ ಇರುತ್ತದೆ. ಆದರೆ ಒಟ್ಟಾರೆ ಕಥಾನಕದ ಅರ್ಥವನ್ನು (ಓದಿನುದ್ದಕ್ಕೂ ಓದುಗನ ಮನಸ್ಸಿನಲ್ಲಿ ಆಕೃತಿ ಪಡೆದುಕೊಳ್ಳುತ್ತಲೇ ಇರುವ ಒಂದು ಕಲ್ಪಿತ ಅರ್ಥವನ್ನು) ಆ ಅಂತ್ಯ ಕಲಕುತ್ತದೆ. ಹೀಗಾಗಿ, ಇಡೀ ಕಥಾನಕವನ್ನು ಓದುಗ ಮರುನಿರ್ಮಿಸಿಕೊಳ್ಳಬೇಕಾದ ಹೊಸ ಅಗತ್ಯವೊಂದು ಹುಟ್ಟಿಕೊಂಡು ಕತೆಗೆ ಅನುರಣನ ಶಕ್ತಿಯನ್ನು ತಂದುಕೊಡುತ್ತದೆ. The Glass Tank ಕತೆ ಬಹುಶಃ ಇದಕ್ಕೆ ಇನ್ನೊಂದು ಅದ್ಭುತವಾದ ಉದಾಹರಣೆ ಎನ್ನಬಹುದು.

ಎರಡನೆಯದಾಗಿ, ಮೋಹನ್ ರಾಕೇಶ್ ಅವರಿಗೆ ತುಂಬ ಇಷ್ಟವಾದ ವಸ್ತು ಮನುಷ್ಯ ಸಂಬಂಧದಲ್ಲಿನ ಏರುಪೇರುಗಳು, ಅವು ಹುಟ್ಟಿಸುವ ತಲ್ಲಣಗಳು ಮತ್ತು ಮನುಷ್ಯನ ಬದುಕಿನ ಅಸಹಾಯಕ ಸ್ಥಿತಿ ಅವನ ಭಾವನಾತ್ಮಕ ವಿಶ್ವದೊಂದಿಗೆ ಆಡುವ ಚೆಲ್ಲಾಟ. ದ ಗ್ಲಾಸ್ ಟ್ಯಾಂಕ್ ಕತೆಯಲ್ಲಿಯೂ ಇಂಥ ಅಸಹಾಯಕತೆ ಮತ್ತು ಅದರೆದುರು ಮನುಷ್ಯ ಸಂಬಂಧದ ತಂತುಗಳು ತಹತಹಿಸುತ್ತಲೇ ಇರುವುದನ್ನು, ಉಳಿಯುವುದನ್ನು ಕಾಣುತ್ತೇವೆ.

The Sky of Steel ಕತೆ ಕೂಡ ಇಂಥದೇ ತಂತ್ರವನ್ನು, ಅಂದರೆ ಅಂತ್ಯವೇ ಕತೆಗೆ ಆರಂಭವಾಗುವ ತಂತ್ರವನ್ನು ನೆಚ್ಚಿಕೊಂಡಿದೆ. ಆದರೆ ಹೀಗಿದ್ದೂ ಈ ಕತೆಗಳು ಮಿಡಿಯುವುದು ಮಾನವ ಸಂಬಂಧದ ತುಡಿತಗಳನ್ನೇ ಎನ್ನುವುದು ಮುಖ್ಯ. ಮನುಷ್ಯ ಸಂಬಂಧಗಳು ಸಹಜವಾಗಿ ಕನೆಕ್ಟ್ ಆಗಲು ಒಂದೋ, ಯಾವುದೋ ಒಂದು ಅಸಹಾಯಕ ಪರಿಸ್ಥಿತಿ ತೊಡಕಾಗುತ್ತದೆ ಅಥವಾ ಸಂಪ್ರದಾಯ, ಸಮಾಜದ ಕಟ್ಟುಕಟ್ಟಳೆ, ನಾಗರಿಕ ಸಂಹಿತೆ ಅಡ್ಡಬರುತ್ತದೆ. ಬೇಕು ಅನಿಸಿದ್ದು ಸಿಗದಾಗ ಅದು ಕೇವಲ ಆಸೆಯಾಗಿ ಉಳಿಯದೆ ಹಪಹಪಿಕೆಯಾಗಿ ಒಂದು ಒತ್ತಡವನ್ನು ನಿರ್ಮಿಸುತ್ತದೆ. ಆದರೆ ಅದನ್ನು ಮೀರುವುದು ಸಾಧ್ಯವಿದೆ, ಕನಿಷ್ಠ ಮೋಹನ್ ರಾಕೇಶ್ ಅವರ ಕತೆಗಳ ಪಾತ್ರಗಳಿಗೆ ಸಾಧ್ಯವಿದೆ. ಅದಕ್ಕಾಗಿ The Sky of Steel, The Man and the Wall ಮತ್ತು ಕೊನೆಯ Another Life ಮೂರೂ ಕತೆಗಳು ಕೊಂಚ ಆಧ್ಯಾತ್ಮದ ಲೇಪವಿರುವ ಒಂದು ಹೊರದಾರಿಯನ್ನು ಕಾಣಿಸುತ್ತವೆ. The Man and the Wall ಕತೆಯಲ್ಲಿ ಮನುಷ್ಯ ಸಂಬಂಧದ ತೊಡಕುಗಳು ಒಂದು ರೂಪಕವಾಗಿ ಬಿಡುತ್ತದೆ. ಇಲ್ಲಿ ಸಹೋದರಿಯ ಪ್ರೇಮ ಪ್ರಸಂಗ, ಅದನ್ನು ಒಪ್ಪಿಕೊಳ್ಳಲಾರದ "ಹಿರಿಯಣ್ಣನ ಚಾಳಿ" ಮತ್ತು ತನ್ನದೇ ಕೋಣೆಯ ಗೋಡೆಯ ಮೇಲಿನ ಬರಹಗಳು ಸ್ವಯಂ ಅವುಗಳ ಹಿಂದಿನ ಕಥನಗಳಾಗಿ ಅವನೊಂದಿಗೆ ಮಾತನಾಡುವುದು, ಈ "ಮುಖಾಮುಖಿ"ಯೇ ಅವನಿಗೆ ಕಿಟಕಿಯೂ ಕನ್ನಡಿಯೂ ಆಗಿ ನೀಡುವ ಹೊಳಹುಗಳು ಕತೆಯನ್ನು ವಿಶಿಷ್ಟವಾಗಿಸಿವೆ. ಈ ಕಿಟಕಿ ಮತ್ತು ಕನ್ನಡಿಗೆ ಆಧ್ಯಾತ್ಮದ ಪಸೆ ಇದ್ದೇ ಇರುವುದು ಸೋಜಿಗ!

ಬದುಕಿನ ಸುಖ ನಮಗೆ ನೀಡುವುದಕ್ಕಿಂತ ದುಃಖ ನೀಡುವುದು ಹೆಚ್ಚು ಎನ್ನುವುದು ನಿಜ. ಸೂಕ್ಷ್ಮವಾಗಿ ನೋಡಿದರೆ ನಮ್ಮೆಲ್ಲಾ ಆಧ್ಯಾತ್ಮಗಳ ಭದ್ರ ನೆಲೆ ಇರುವುದೇ ಮರಣಾನಂತರದ ಸುಖ-ಭೋಗಗಳಲ್ಲಿ ಎನ್ನುವುದನ್ನು ಗಮನಿಸಿ. ಅಂದರೆ, ಈ ಆಧ್ಯಾತ್ಮಿಕ ಆಮಿಷಗಳು ಸದ್ಯದ ಬದುಕನ್ನು ಅನುಭವಿಸಲು, ಇಲ್ಲಿಯೇ ಸಾಧ್ಯವಿರುವ ಸುಖವನ್ನು ಹೊಂದಲು, ಅಗತ್ಯ ಬಿದ್ದರೆ ಅದಕ್ಕಾಗಿ ಪರರ ಬದುಕು-ಭವಿಷ್ಯ ನಾಶಮಾಡದ exceptions ರೂಪಿಸಿಕೊಂಡು ಪರಂಪರೆಯನ್ನು ಮುರಿಯಲು ಅವಕಾಶ ಕೊಡುವುದಿಲ್ಲ. ಅವು ತ್ಯಾಗ, ವಿರಕ್ತಿ, ನಿರ್ಲಿಪ್ತಿ, ನಿಷ್ಕಾಮ ಇತ್ಯಾದಿಗಳನ್ನೇ ಉಪದೇಶಿಸಿ ಬದುಕನ್ನು ಹೆಚ್ಚು ಹೆಚ್ಚು ನೀರಸಗೊಳಿಸುವುದರಲ್ಲಿಯೇ ಆಸಕ್ತ ಎನಿಸುತ್ತದೆ. ಹಾಗಿರುವುದರಿಂದಲೇ ನಿಮಗೆ ಮರಣಾನಂತರ ಸಕಲ ಸುಖ ಭೋಗಗಳೂ ಸಿಗುತ್ತವೆ ಎನ್ನುತ್ತದೆ. ಸರಳವಾಗಿ ಸದ್ಯದ ನಿರಾಕರಣ ಮತ್ತು ಭವಿಷ್ಯದ (ಮರಣಾನಂತರದ ಭವಿಷ್ಯ!) ಆಶ್ವಾಸನೆ. ಒಮ್ಮೊಮ್ಮೆ ಒಂದು ಬಗೆಯಲ್ಲಿ ದುಃಖವನ್ನು ಆವಾಹಿಸಿಕೊಳ್ಳುವ, ನೆಗೇಟಿವ್ ಮನೋಧರ್ಮವನ್ನು ಪ್ರಚೋದಿಸುವಂಥಾದ್ದೇನೋ ಈ ಆಧ್ಯಾತ್ಮದಲ್ಲಿದೆ ಅನಿಸುತ್ತದೆ. ಬದುಕಿನ ಆರಂಭಿಕ ಹಂತದಲ್ಲಿನ ಸೋಲು ಮನುಷ್ಯನನ್ನು ಆಧ್ಯಾತ್ಮದತ್ತ ಸೆಳೆಯುವುದು ಕೂಡ ಇದರಿಂದಲೇ ಇರಬಹುದೇನೊ. ಗೆಲ್ಲಲಾರದ ಅಸಹಾಯಕತೆಗೆ ಆಧ್ಯಾತ್ಮ ಒಂದು ಬಾಮ್ ತರ, ವಿಕ್ಸ್ ವೆಪೊರಬ್ ತರ ತತ್‌ಕ್ಷಣದ ರಿಲೀಫ್ ಒದಗಿಸುತ್ತದೆ. ಏಕೆಂದರೆ ಅದು ಗೆಲುವನ್ನೇ ಬೇಡ ಎಂದು ನಿರಾಕರಿಸುತ್ತದೆ, ನೀನು ಯಾವುದನ್ನು ಗೆಲುವು ಅಂದುಕೊಂಡಿದ್ದೆಯೊ ಅದು ಗೆಲುವೇ ಅಲ್ಲ ಎನ್ನುತ್ತದೆ. ಹಣ, ಕೀರ್ತಿ, ಹೆಸರು, ಪ್ರಸಿದ್ಧಿ ಎಲ್ಲವೂ ನಶ್ವರ ಎಂದು ಬಿಡುತ್ತದೆ. ಎಷ್ಟೊಂದು ರಿಲ್ಯಾಕ್ಸ್ ಆಗುತ್ತದೆ ಒಮ್ಮೆಗೇ! ಪ್ರೀತಿಸಿದ ಹುಡುಗಿ ಕೈಕೊಟ್ಟರೆ, ಕೈತಪ್ಪಿದರೆ ಇಲ್ಲಿ ಸರಳ ಪರಿಹಾರವಿದೆ. ಮೋಹ ಒಂದು ಮಾಯೆ! ಅದರಿಂದ ದೂರವಿರುವುದೇ ನಿರಂತರ ಶಾಶ್ವತ ಶಾಂತಿಗೆ ದಾರಿ. ನಿನಗೇನು ಸಿಗುವುದಿಲ್ಲವೋ ಅದೆಲ್ಲವೂ ಯಕಶ್ಚಿತ್ ವಸ್ತು ಎಂಬ ಕಾರಣಕ್ಕೆ ಚಿತ್ ಆಗಿಬಿಡುತ್ತದೆ ಇಲ್ಲಿ. ಅದಕ್ಕಾಗಿ ಪ್ರಯತ್ನಿಸುವ, ಹೋರಾಡುವ, ಗುದ್ದಾಡುವ, ಹೆಣಗುವ ಒತ್ತಡವೇ ಮಾಯ! ಹಾಗಿದ್ದೂ ಬರುವ ಕಷ್ಟಗಳಿಗೆ, ರೋಗ ರುಜಿನಗಳಿಗೆ, ಸಾವು ನೋವುಗಳಿಗೆ ಸರಳವಾದ ಕರ್ಮಸಿದ್ಧಾಂತವಿದೆ. ಅದು ನೀವು ಹಿಂದಿನ ಜನ್ಮದಲ್ಲಿ ಮಾಡಿದ್ದರ ಫಲ! ಈ ಜನ್ಮದಲ್ಲಿ ನೀವು ಏನೂ ಮಾಡಿಯೇ ಇಲ್ಲವಲ್ಲ.

ಕೆಲವೊಮ್ಮೆ ಇದೆಲ್ಲ ತುಂಬ ಸಮಾಧಾನ ನೀಡುತ್ತದೆ ಎನ್ನುವುದು ನಿಜವೇ. ಆದರೆ ಅದೇ ಕಾಲಕ್ಕೆ ನಿಮಗೂ ನಮಗೂ ಈ ಇಡೀ ಸಿದ್ಧಾಂತದ ಕುರಿತೇ ಗಾಢವಾದ ಅನುಮಾನವೂ ಒಳಗೊಳಗೇ ಕಾಡುತ್ತಿರುತ್ತದೆ. ಈ ಅನುಮಾನ ಕೂಡ ನಿಜವೇ. ಏಕೆಂದರೆ, ಈ ಯಾವ ಲಾಜಿಕ್ಕೂ ಇಲ್ಲಿ ವರ್ಕೌಟ್ ಆಗುವುದಿಲ್ಲ. ಜಗತ್ತು ಇಂಥ ನಂಬಿಕೆಗಳನ್ನೆಲ್ಲ ಪೊರೆಯುವಂತೆಯೂ, ನಿರಾಕರಿಸುವಂತೆಯೂ ಸಾಗುತ್ತಲೇ ಇರುತ್ತದೆ. ಮೋಹನ್ ರಾಕೇಶರ ಕತೆಗಳು ಇಂಗ್ಲೀಷಿಗೆ ಅನುವಾದಗೊಳ್ಳಲು ಅವರು ಸತ್ತು ಅರ್ಧ ಶತಮಾನ ಹಿಡಿದಿದ್ದಕ್ಕೂ ಕರ್ಮಸಿದ್ಧಾಂತವನ್ನು ಗಂಟು ಹಾಕಲು ಸಾಧ್ಯವೇ! ಆದರೆ ಮನುಷ್ಯನ ದುರ್ಬಲ ಮನಸ್ಸು ಒಂದು ಅರ್ಥಕ್ಕಾಗಿ, ಒಂದು ಲಾಜಿಕ್ಕಿಗಾಗಿ, ಒಂದು ಗ್ಯಾರೆಂಟಿಗಾಗಿ ತುಡಿಯುತ್ತದೆ, ಅದು ಕತೆಯ ಬದುಕಾಗಿರಲಿ, ಬದುಕಿನ ಕತೆಯೇ ಆಗಿರಲಿ.

ಮೋಹನ್ ರಾಕೇಶರ ಕತೆಗಳನ್ನು ಓದುವುದರಿಂದ, ನಾಟಕಗಳನ್ನು ಓದುವುದರಿಂದ ಬದುಕಿನ, ಮನುಷ್ಯನ, ಮನಸ್ಸಿನ ಈ ಅಪೂರ್ಣತೆಯ ಅರಿವು ಹೆಚ್ಚು ಸ್ಪಷ್ಟವಾಗುವುದು ಸಾಧ್ಯ ಎನ್ನುವುದೇ ಅವರು ಮುಖ್ಯವಾಗಲು ಬಹುಮುಖ್ಯ ಕಾರಣ ಎಂದರೆ ತಪ್ಪಾಗಲಾರದೇನೊ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ