Tuesday, April 30, 2019

ಸಿದ್ಧಿಸುವುದೇ ಸಿದ್ಧಿಯ ಚಂದಿರ?

ಮುಂಜಾನೆ ಎಂಟು-ಎಂಟೂವರೆಗೆ ಬಸ್ಸು ಕಾಯುತ್ತ ನಿಂತಿರಬೇಕಾದರೆ ದಟ್ಟವಾದ ನೆರಳಿನಾಚೆಯಿಂದ ಬೀಳುವ ಹೂಬಿಸಿಲಿಗೆ ಆ ದೃಶ್ಯ ಕಣ್ಣಿಗೆ ಬೀಳುತ್ತದೆ. ಹೆತ್ತವರ ಸ್ಕೂಟರು, ಬೈಕುಗಳಲ್ಲಿ ತ್ರಿಶೂಲ, ಬಿಲ್ಲು ಬಾಣ ಎಲ್ಲ ಹಿಡಿದ, ಶರ್ಟು ತೊಟ್ಟಿರದ ಪುಟ್ಟಪುಟ್ಟ ಮಕ್ಕಳು ಕಿರೀಟಧಾರಿಗಳಾಗಿ ಸಾಗುತ್ತಿರುತ್ತಾರೆ. ಈ ಮಕ್ಕಳಿಗೆ ತಾವು ಇದ್ದಕ್ಕಿದ್ದಂತೆ ಯಾವುದೋ ಗಾಡ್ ಆಗಿರುವುದು ಇನ್ನೂ ಪೂರ್ತಿಯಾಗಿ ಪ್ರಜ್ಞೆಗಿಳಿದಿರುವುದಿಲ್ಲ. ಕೆಲವಂತೂ ನಿದ್ದೆಗಣ್ಣಲ್ಲಿ ಬಾಡಿದ ಮುಖದಲ್ಲೇ ಕಂಗಾಲು ಕಣ್ಣುಗಳನ್ನು ಬಿಟ್ಟುಕೊಂಡಿರುತ್ತವೆ. ನಮ್ಮ ಗುರುತು ಹಿಡಿದು ಟಾಟಾ ಮಾಡಬೇಕೋ ಬೇಡವೋ ತಿಳಿಯದ ಗೊಂದಲದಲ್ಲಿ ಇವು ಹಾದು ಹೋಗುವುದರೊಳಗೆ ನಮಗೆ ಈ ಪುಟ್ಟ ದೇವತೆಗಳು ಯಾರ ಮಕ್ಕಳು ಎಂಬ ಗುರುತು ಹತ್ತಲು ತಡವಾಗಿದ್ದು ಗಮನಕ್ಕೆ ಬರುತ್ತದೆ. ತುಟಿಯ ಮೇಲೆ ಕಿರುನಗೆ ಮೂಡುವ ಹೊತ್ತಿಗೆ ನಮ್ಮ ಬಸ್ಸೂ ಬಂದಿರುತ್ತದೆ.

ನಮ್ಮನಿಮ್ಮ ಆಫೀಸಿನಲ್ಲೂ ಕೆಲವರು ತಮ್ಮ ತಮ್ಮ ಮಕ್ಕಳ ಮೇಕಪ್ಪು, ಕಿರೀಟ, ಗದೆ, ಟೋಪನ್ನು ಎಂದೋ, ಹಿನ್ನೆಲೆ ಸಂಗೀತಕ್ಕೋ ಡಯ್ಲಾಗಿಗೋ ಒದ್ದಾಡುತ್ತಿರುತ್ತಾರೆ. ಈ ಹೆತ್ತವರು ತಮ್ಮ ಮಕ್ಕಳ ಸ್ಪರ್ಧಾಮನೋಭಾವವನ್ನು ಪೋಷಿಸುತ್ತಿರುವ ಶಿಸ್ತು, ಅದಕ್ಕೆ ಕೊಡುತ್ತಿರುವ ಮಹತ್ವ, ವ್ಯಯಿಸುತ್ತಿರುವ ಶ್ರಮ, ಹಣ ಮತ್ತು ಸಮಯ ಎಲ್ಲ ನೋಡುತ್ತಿದ್ದರೆ ಮೆಚ್ಚುಗೆಯಾಗುತ್ತದೆ. ಆದರೆ ಅದೆಲ್ಲದರ ಹಿಂದಿನ ಮುಂದಿನ ಕತೆ ಅಷ್ಟೇ ಇರುವುದಿಲ್ಲ. ಮತ್ತಿದು ಬರೀ ಮಕ್ಕಳ ವೇಷದ ಕತೆಯಷ್ಟೇ ಆಗಿರುವುದಿಲ್ಲ. ನಾವೂ ನೀವೂ ದಿನನಿತ್ಯ ತೊಟ್ಟಿರುವ ವೇಷ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೆ. ಪ್ರಮೋಷನ್ನು, ಇಂಕ್ರಿಮೆಂಟು, ಇನ್ಸೆಂಟಿವುಗಳ ಚಿಂತೆಯಲ್ಲಿ ಬಸ್ಸು ಕಾಯುತ್ತ ನಿಂತ ನನ್ನ ವೇಷ ಕೇವಲ ಅಪ್ಪ ಅಮ್ಮಂದಿರ ಒಂದು ಬಹುಮಾನದಾಸೆಗೆ ವೇಷತೊಟ್ಟು ಹೊರಟ ಆ ಪುಟ್ಟ ದೇವತೆಗಳಿಗೆ ಕಂಡಿತ್ತೆ, ನಮಗೆ ಗೊತ್ತಿಲ್ಲ.

ನಮಗೂ ನಿಮಗೂ ಬೇಕೋ ಬೇಡವೋ ಈ ಬದುಕಿನಲ್ಲಿ ಸ್ಪರ್ಧೆ ಇದೆ, ಕೊಂಚ ಹೆಚ್ಚೇ ಇದೆ. ಎಲ್ಲವನ್ನೂ ಹೋರಾಡಿಯೇ ಗಳಿಸಬೇಕಾದ ಸ್ಥಿತಿ ಇಂದಿನ ವಾಸ್ತವವಾಗಿಬಿಟ್ಟಿದೆ. ಆದರೆ ಯಶಸ್ಸು ಎಲ್ಲಿದೆ? ಏನು ಯಶಸ್ಸು ಎಂದರೆ? ಯಾವುದು ನಿಜಕ್ಕೂ ಯಶಸ್ಸು? ಅಂಥ ಯಶಸ್ಸು ಕೈಗೆ ಹತ್ತಿದವರೆಲ್ಲ ತುಂಬ ನೆಮ್ಮದಿಯಿಂದ, ಖುಶ್‌ಖುಶಿಯಾಗಿದ್ದಾರೆಯೆ?

ಹೆತ್ತವರ ಒತ್ತಡ, ಹೆತ್ತವರ ಪ್ರತಿಷ್ಠೆ, ಹೆತ್ತವರ ಆತಂಕ, ಮಕ್ಕಳ ಮೇಲೆ ಅವರು ಹೇರುವ ಹತ್ತು ಹಲವು ನಿರೀಕ್ಷೆಗಳು, ಕಟ್ಟುಕಟ್ಟಳೆಗಳು, ಅವರ ಕಣ್ಣಲ್ಲಿ ಸ್ಪರ್ಧಾಳುವಿನ ಮಿಂಚು ಹರಿಸಲು ಅವರು ಪಡುವ ಶ್ರಮ, ಅವರಲ್ಲಿ ಮೊಳೆಯುವ ಬಹುಮಾನದ ಆಸೆ, ಯಶಸ್ಸಿನ ಧಿಮಾಕು ಇಲ್ಲವೇ ಸೋಲಿನ ಹತಾಶೆ ಇವೆಲ್ಲದರ ಮಧ್ಯೆ ರೂಪುಗೊಳ್ಳಬೇಕಿರುವ ಬದುಕು ಮತ್ತು ಭವಿಷ್ಯ.

ಶಾಲೆಗಳಲ್ಲಿ ಈ ಸ್ಪರ್ಧೆ ನಡೆಸುವವರ ಮನೋಧರ್ಮ, ಜಾತಿ, ಧರ್ಮ, ಅಧಿಕಾರ, ಅಂತಸ್ತು, ಪ್ರತಿಷ್ಠೆಗಳಿಗೆ ಮಣೆ ಹಾಕುವ ಬುದ್ಧಿ, ಸಣ್ಣತನ ಮತ್ತು ಅಸೂಯೆ ಆ ಪುಟ್ಟ ಮಕ್ಕಳ ಅರಿವಿಗೂ ಬಂದು ಅವರ ಮನಸ್ಸು ಮುದುಡುವ ಸಂದರ್ಭಗಳು.

ಭಾಷೆ, ಧರ್ಮ, ಪರಂಪರೆ, ಸಂಸ್ಕೃತಿಯ ಹೆಸರಿನಲ್ಲಿ ಸ್ಪರ್ಧೆ(ಗಿಟ್ಟ)ಗೆ ನಿಂತ ಬುದ್ಧ, ಗಾಂಧಿ, ಅಂಬೇಡ್ಕರ್, ಶ್ರೀರಾಮ, ಶಿವ, ಬಸವೇಶ್ವರ, ಯಕ್ಷಗಾನ, ಭೂತ-ದೈವಗಳು.

ಎಮ್ಮೆಲ್ಲೆಯಿಂದ ಹಿಡಿದು ಸಂತೆಮಾರ್ಕೆಟ್ಟಿನ ಕೂಲಿಯ ವರೆಗೆ ಯಶಸ್ಸಿನ ಚಂದ್ರನತ್ತ ಕೈಚಾಚಿದವರೇ ಎಲ್ಲರೂ. ಯಶಸ್ಸು ಸಿದ್ಧಿಸುವುದೇ? ಸಿದ್ಧಿಸಿದ್ದೇ ಯಶಸ್ಸೆ? ಬದುಕಿನಲ್ಲಿ ನಾವು ನಡೆಸುವ ಪ್ರಯತ್ನಗಳಿಗೆಲ್ಲ ಗೆಲುವು ಅಥವಾ ಸೋಲು ಎನ್ನುವುದಿಲ್ಲ, ಇರುವುದೆಲ್ಲ ಬರಿಯ ಫಲಿತಾಂಶಗಳಷ್ಟೇ ಎಂದಿದ್ದಾರೆ ತಿಳಿದವರೊಬ್ಬರು. ಕಾರಂತರ ಬಹುತೇಕ ಯಾವ ಪ್ರಯತ್ನವೂ ಯಶಸ್ವಿ ಎನಿಸಿಕೊಂಡಿದ್ದು ಕಡಿಮೆ. ಅವರ ಯಕ್ಷಗಾನದ ಪ್ರಯೋಗಗಳು, ಬ್ಯಾಲೆ, ಸಿನಿಮಾ, ವಿಜ್ಞಾನದ ಬರವಣಿಗೆ, ಫೋಟೋಗ್ರಫಿ, ಸ್ವಂತದ ಶಿಕ್ಷಣ, ಮುದ್ರಣ ಮತ್ತು ಪ್ರಕಾಶನ, ಚಿತ್ರಕಲೆ - ಯಾವುದೂ ಯಶಸ್ಸಿನ ಗಾಥೆ ಬರೆಯಲಿಲ್ಲ. ಕಾದಂಬರಿಗಳಾದರೂ ಮಾರಾಟವಾಗುತ್ತಿದ್ದುದು ಸಿಂಗಲ್ ಡಿಜಿಟುಗಳಲ್ಲಿ ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಆದರೂ ಇಳಿವಯಸ್ಸಿನಲ್ಲೂ ಉಕ್ಕುತ್ತಿದ್ದ ಅವರ ಉತ್ಸಾಹಕ್ಕೆ ಎಣೆಯುಂಟೆ?

"ಸಿದ್ಧಿಯ ಕೈ ಚಂದ್ರನತ್ತ" ಕಾದಂಬರಿಯಲ್ಲಿ ಪ್ರೊಫೆಸರ್ ಕೃಷ್ಣಮೂರ್ತಿ ಹನೂರ ಅವರು ಎಷ್ಟೆಲ್ಲ ಸಂಗತಿಗಳಿಗೆ ಕೈ ಚಾಚಿದ್ದಾರೆಂದರೆ ಆಶ್ಚರ್ಯವಾಗುತ್ತದೆ. ಕಾದಂಬರಿಯ ಸಂದರ್ಭ ಎಡೂರು ಮಂಗಲದ ಕ್ರೈಸ್ತ ಕಿಂಗ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಮಾರಂಭ. ಇದಕ್ಕಾಗಿ ಏರ್ಪಡಿಸಲಾದ ಒಂದು ಛದ್ಮವೇಷ ಸ್ಪರ್ಧೆಯೇ ಮೂಲವಾಗಿ ತೊಡಗಿಕೊಳ್ಳುವ ಕಥಾನಕ ದೇಶ-ಕಾಲಗಳನ್ನು ಮೀರಿ ಹಬ್ಬಿಕೊಳ್ಳುತ್ತ ಹೋಗುತ್ತದೆ. ಇಡೀ ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ಇದರ ಬಗ್ಗೆ ಯೋಚಿಸಿದರೆ ಒಂದೊಂದು ಸಾರಿ ಒಂದೊಂದು ಅರ್ಥ ಹೊಳೆಯಿಸುತ್ತ ಅರೆರೆ, ಹೀಗೂ ಇರಬಹುದಲ್ಲವೆ ಇದರ ಹುನ್ನಾರು ಎನಿಸತೊಡಗುತ್ತದೆ. ಅಂಥ ಕೆಲವು ಹೊಳಹುಗಳನ್ನಷ್ಟೇ ಇಲ್ಲಿ ಹಂಚಿಕೊಳ್ಳಬಹುದು. ಇನ್ನಷ್ಟನ್ನು ನಿಮಗೇ ಬಿಟ್ಟು ಬಿಡಬಹುದು.

ಶಿಕ್ಷಣ ವ್ಯವಸ್ಥೆಯ ಮುಖೇನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರಜ್ಞೆ ಹೇಗೆಲ್ಲ ನಮ್ಮ ದೈನಂದಿನದಲ್ಲಿ ತನ್ನ ಮುಖ ತೋರಿಸಬಹುದು ಎನ್ನುವುದನ್ನು ಕೇಂದ್ರದಲ್ಲಿರಿಸಿಕೊಂಡರೂ ಮನುಷ್ಯ ಸಂಬಂಧ, ಬದುಕನ್ನು ಉತ್ತಮ ಪಡಿಸಿಕೊಳ್ಳುವ ಮನುಷ್ಯನ ತುಡಿತ, ಅವನು ಇಷ್ಟಪಡುವ ಮೌಲ್ಯಗಳು ಮತ್ತು ಅನುಸರಿಸಲು ಕಷ್ಟಪಡುವ ವಾಸ್ತವದ ಸವಾಲುಗಳನ್ನು ತನ್ನ ಒಡಲಿನಲ್ಲಿ ಸೆಳೆದುಕೊಂಡು, ಮೇಲ್ನೋಟಕ್ಕೆ ಜಾನಪದದ ಸರಳ, ಹಗುರ, ಲವಲವಿಕೆಯ ಕಥಾನಕದಂತೆ ಕಂಡರೂ ಒಂದು ಸಂಕೀರ್ಣವಾದ ಕೊಲಾಜ್ ಚಿತ್ರವನ್ನು ಹನೂರರ ಕಾದಂಬರಿ ನಮ್ಮೆದುರಿಡುತ್ತಿದೆ. ಏಕಕಾಲಕ್ಕೆ ಹಲವು ಹತ್ತು ಸಮಸ್ಯೆಗಳ ಕುರಿತು ಮಾತನಾಡುವ ಈ ಕಾದಂಬರಿ ವಾಸ್ತವದ ಕಷ್ಟಸಾಧ್ಯ ಯಥಾವತ್ ಚಿತ್ರವನ್ನು ಕುಸುರಿ ಕಲೆಯ ನೈಪುಣ್ಯದೊಂದಿಗೆ ಮೇಳೈಸುತ್ತಿದೆ. ಹಾಗಾಗಿ, ವಸ್ತುವಿನ ನೆಲೆಯಿಂದಲಾಗಲಿ, ಕಥಾನಕದ ನೆಲೆಯಿಂದಲಾಗಲಿ ಏಕಸೂತ್ರದ ನಿರೂಪಣೆಯನ್ನು ಸಹಜವಾಗಿಯೇ ನಿರೀಕ್ಷಿಸುವ ಓದುಗನಿಗೆ ಮೇಲ್ನೋಟಕ್ಕೆ ಅದಿಲ್ಲ ಇಲ್ಲಿ ಅನಿಸಿದರೆ ಆಶ್ಚರ್ಯವಿಲ್ಲ. ಆದರೂ, ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಅಂಥ ಒಂದು ಏಕಸೂತ್ರ ತನ್ನಿಂತಾನಾಗಿಯೇ ಗಮನಕ್ಕೆ ಬರುತ್ತದೆ ಮಾತ್ರವಲ್ಲ ಅದನ್ನು ಹೀಗಲ್ಲದೆ ಬೇರೊಂದು ವಿಧದಲ್ಲಿ ಕಟ್ಟಿಕೊಡುವುದು ಸಾಧ್ಯವೇ ಇರಲಿಲ್ಲ ಎಂದೂ ಅನಿಸದಿರದು. ಈ ಕಾದಂಬರಿಯ ವಿಶೇಷ ಸಾಧನೆ ಎಂದರೆ ಬದುಕಿನ ಯಾವತ್ತೂ ಸಂಕೀರ್ಣ ಸ್ವರೂಪವನ್ನು ಬಿಟ್ಟುಕೊಡದೇನೆ, ಹಲವು ಕಥಾನಕಗಳ ಮುಖೇನ, ನಮ್ಮ ಕಾಲದ ಮತ್ತು ಎಲ್ಲರನ್ನೂ ಸಾರ್ವತ್ರಿಕವಾಗಿ ಬಾಧಿಸುತ್ತಿರುವ ಹಲವು ಹತ್ತು ಸಂಗತಿಗಳ ಕುರಿತು ಏಕಕಾಲಕ್ಕೆ ಪ್ರಶ್ನೆಗಳನ್ನೆತ್ತುವುದು ಸಾಧ್ಯವಾಗಿರುವುದೇ.

ಇಲ್ಲಿ ಪ್ರಾಧ್ಯಾಪಕರುಗಳಿದ್ದಾರೆ, ರಾಜಕಾರಣಿಗಳಿದ್ದಾರೆ, ತಹಶೀಲ್ದಾರರಂಥ ಅಧಿಕಾರಿವರ್ಗವಿದೆ, ಪೋಲೀಸರು, ರೌಡಿಗಳು, ಕೂಲಿಯವರು, ದೊಂಬರು, ವೈದ್ಯರು, ಉದ್ಯಮಿಗಳು, ಗಾಂಧಿವಾದಿಗಳು, ದಲಿತ ಸಂಘರ್ಷ ಸಮಿತಿಯ ಹೋರಾಟಗಾರರು ಎಲ್ಲ ಇದ್ದಾರೆ. ಕನ್ನಡದವರು, ತಮಿಳರು, ತೆಲುಗರು, ಬಿಹಾರಿಗಳು, ಬಂಗಾಲಿಗಳು, ಮುಂಬಯಿಗರು, ವಿದೇಶವಾಸಿಗಳು, ಎಲ್ಲೆಂಲ್ಲಿಂದಲೋ ಬಂದು ಎಡೂರು ಮಂಗಲದಲ್ಲಿ ನೆಲೆಯಾದವರು ಇದ್ದಾರೆ. ಉಳ್ಳವರು-ಶೋಷಿತರು ಇರುವಂತೆಯೇ ಬ್ರಾಹ್ಮಣರು ಮತ್ತು ಕೆಳಜಾತಿಯವರಿದ್ದಾರೆ. ಬರೀ ಅಡುಗೆ ಮನೆಗೆ ಸೀಮಿತರಾದ ಗೃಹಿಣಿಯರೂ ಇದ್ದಾರೆ, ಹೊಸಿಲು ದಾಟಿದ ಹೆಣ್ಣುಮಕ್ಕಳೂ ಇದ್ದಾರೆ, ಸೂಳೆಯರೂ ಇದ್ದಾರೆ. ಎಲ್ಲರಿಗೂ ಯಶಸ್ಸಿನ ಕನಸಿದೆ, ಸುಖದ ಹುಡುಕಾಟವಿದೆ, ನೆಮ್ಮದಿಯ ಆಸೆಯಿದೆ. ಯಾರಲ್ಲೂ ಸಂತೃಪ್ತಿಯಿಲ್ಲ, ನೆಮ್ಮದಿಯಿಲ್ಲ, ಖುಶಿಯಂಥ ಖುಶಿಯೇನಿಲ್ಲ. ಕೈ ಮಾತ್ರ ನಿರಂತರವಾಗಿ ಚಂದ್ರನತ್ತ ಚಾಚುತ್ತಲೇ ಇದೆ. ಈ ಚಿತ್ರವನ್ನು ಹನೂರರು ಅತ್ಯಂತ ಸುಂದರವಾಗಿ ಮತ್ತು ಅಷ್ಟೇ ಸೂಚ್ಯ ನೆಲೆಯಲ್ಲಿ ಚಿತ್ರಿಸುತ್ತ ಹೋಗುತ್ತಾರೆ.

ದೂರದ ಅಮೆರಿಕದಲ್ಲಿ, ತನ್ನದೇ ಕ್ಲಿನಿಕ್ಕಿನಲ್ಲಿ ಎಪ್ಪತ್ತರ ಆಸುಪಾಸಿನ ಸುಮನಾ ಮನವಳ್ಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ಬರೆದಿಟ್ಟ ಚೀಟಿಯಲ್ಲಿನ ಕವನದಂಥ ಕವನವನ್ನು ಓದುತ್ತ ವಯೋವೃದ್ಧ ಪತಿ ಚಂದ್ರಶೇಖರ ಮನವಳ್ಳಿಯವರು ಎಲ್ಲೋ ಕಳೆದು ಹೋಗುತ್ತಾರೆ ಅಥವಾ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ಮುನಿಭೈರಪ್ಪ ದಲಿತ ಸಂಘರ್ಷ ಸಮಿತಿಯ ಹೋರಾಟಗಾರನಾಗಿದ್ದವನು. ಗದ್ದರ್ ಜೊತೆ ಓಡಾಡಿದವನು. ವಿಶಾಖಪಟ್ಟಣದ ವೈಜಾಗ್ ವಿಶ್ವವಿದ್ಯಾಲಯದ ಎದುರಿನ ಕಡಲ ಕಿನಾರೆಯಲ್ಲಿ ಮಲಗಿದ್ದ ಮುನಿಭೈರಪ್ಪನಿಗೆ ಸಿಕ್ಕಿದ ಪಾರಸಮಣಿಯ ಕತೆ ಅವನಿಗೆ ಬದುಕಿನ ಸತ್ಯದರ್ಶನ ಮಾಡಿಸುತ್ತದೆ. ಈ ಅನ್ನದ ಸಮಸ್ಯೆಯೇ ಮೂಲವಾಗಿರುವ ಮನುಷ್ಯನ ಒಟ್ಟು ಹೋರಾಟ ಯಾರ, ಯಾವುದರ ವಿರುದ್ಧ? ಅವನ ಮೌಲ್ಯಗಳ, ಆದರ್ಶಗಳ ನೆಲೆ ಏನು, ಅದರ ಮಿತಿಯೇನು ಎನ್ನುವ ಪ್ರಶ್ನೆಗಳೆಲ್ಲ ಮೈಮಾರಲು ಇಟ್ಟು ಊರಿಗೆ ಹೊರಟ ಪಾರಸಮಣಿಯ ಕತೆಯಲ್ಲಿ ಅವನಿಗೆ ಎದುರಾಗಿದೆ. ಗಂಡನನ್ನು ಬಿಟ್ಟಿರಲಾರೆ ಎಂದೇ ಬಿಹಾರದಿಂದ ಇಲ್ಲಿಯ ತನಕ ಹಸುಗೂಸನ್ನೂ ಎತ್ತಿಕೊಂಡು ಬಂದ ಅವಳು ಅಕಾರಣ ಆ ಮಗುವನ್ನೂ, ಗಂಡನನ್ನೂ ಶಾಶ್ವತವಾಗಿ ಕಳೆದುಕೊಂಡು ಎಲ್ಲದರಿಂದ ಮುಕ್ತಳಾದಂತಿದೆ. ಹೊಟ್ಟೆ ಇದೆ, ಅದಕ್ಕೆ ಕಾಲಕಾಲಕ್ಕೆ ಆಹಾರ ಬೇಕು. ಮರಳಿ ಬಿಹಾರದ ಮನೆ ಸೇರಬೇಕು. ಅದಕ್ಕೆ ಹಣ ಬೇಕು. ಗಂಡಸರ ಜೊತೆ ಮಲಗಿದರೆ ಅದು ಸಿಗುತ್ತದೆ. ಇಷ್ಟೇ ಅವಳಿಗೆ ಗೊತ್ತಿರುವುದು. ಹಾಗಿದ್ದೂ ಮುನಿಭೈರಪ್ಪ ಮತ್ತು ಪರಾಸಮಣಿಯ ನಡುವೆ ಉಳಿದೇ ಹೋದ ಮೌನದ ಒಂದು ತಂತು ಯಾವುದು? ಯಶಸ್ಸಿಗೂ, ಬದುಕಿನ ಹೋರಾಟಕ್ಕೂ, ಸಿದ್ಧಿಗೂ ಅದಕ್ಕೂ ಏನಿದೆ ನಂಟು? ಈ ಪರಾಸಮಣಿಯ ಕತೆಯೊಂದಿಗೆ ಎಡೂರು ಮಂಗಲದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಚಿತ್ರಾಳ ಕತೆಗೆ ಕೂಡ ಸಮಾನವಾದದ್ದು ಏನೋ ತಳುಕು ಹಾಕಿಕೊಂಡಂತಿದೆಯಲ್ಲವೆ?

ಬಿಳಿಗಿರಿಯವರು ಗಾಂಧಿವಾದಿ. ಗಾಂಧಿ ಆಶ್ರಮದಲ್ಲಿ ವರ್ಷಕಾಲ ನೆಲೆನಿಂತವರು. ಆದರೆ ಆಶ್ರಮದಲ್ಲಿ ಗಾಂಧಿ ಸ್ವತಃ ನೂತ ನೂಲಿನ ಹಣದಲ್ಲಿ ಎರಡು ಆಣೆಯನ್ನು ಕಸ್ತೂರಿ ಬಾ ಅಡುಗೆ ಮನೆಯ ಉಪ್ಪಿಗಾಗಿ ಬಳಸಿಕೊಂಡಾಗ ಗಾಂಧಿ ಅದು ಆಶ್ರಮದ ಹಣ ಎನ್ನುತ್ತಾರೆ. ಒಂದು ವಾರ ಕಾಲ ತಮ್ಮ ಆಹಾರಕ್ರಮ ಬದಲಿಸಿ ತಮ್ಮನ್ನು ತಾವು ಶಿಕ್ಷಿಸಿಕೊಳ್ಳುತ್ತಾರೆ. ಇದನ್ನು ಕಂಡ ಬಿಳಿಗಿರಿಯವರಿಗೆ ಗಾಂಧಿಯವರ ಸನಿಹಕ್ಕೆ ಹೋಗಿ ಮಾತನಾಡಿಸುವ ಆಸೆ ಇಂಗಿ ಹೋಗಿ ಅದಕ್ಕೆ ಬೇಕಾದ ಧೈರ್ಯವೇ ಹೊರಟು ಹೋಗುತ್ತದೆ. ನಮಗೆಲ್ಲ ಗಾಂಧಿ ಗೊತ್ತು. ಅವರ ತತ್ವಗಳು ಸ್ಥೂಲವಾಗಿ ಗೊತ್ತು. ಸುಳ್ಳು ಹೇಳದಿರಲು, ಇನ್ನೊಬ್ಬರ ಸೊತ್ತಿಗೆ ಆಸೆಪಡದಿರಲು, ಹಿಂಸೆ ಮಾಡದಿರಲು ನಮಗೆ ಇಷ್ಟ. ನಾವು ನಿಜಕ್ಕೂ ಹಾಗೆಯೇ ಬದುಕುತ್ತಿದ್ದೇವೆ ಎಂದು ನಂಬುತ್ತೇವೆ ಕೂಡ. ಆದರೆ ವಿದೇಶದಲ್ಲಿ ಕಲಿಯಲು ಸರ್ಕಾರಿ ವಿದ್ಯಾರ್ಥಿವೇತನ ಮಂಜೂರಾದಾಗ ತಮ್ಮ ಮಗ ಹರಿಲಾಲ ಅದನ್ನು ಬಳಸಿಕೊಳ್ಳುವುದು ಸ್ವಜನಪಕ್ಷಪಾತವಾಗುತ್ತದೆ ಎನ್ನುವ ಗಾಂಧಿಯವರ ವಾದ ನಮಗೆ ವಿಪರೀತದ ಅತಿರೇಕ ಎನಿಸುತ್ತದೆ. ಗಾಂಧಿ ಒಬ್ಬ ಷೋಮ್ಯಾನ್ ಇರಬಹುದೆ, ಯಾರನ್ನೋ ಮೆಚ್ಚಿಸಲು ಈ ರೀತಿ ಕಡುನಿಷ್ಠೆಯ ಪ್ರದರ್ಶನ ಮಾಡುತ್ತಿದ್ದಿರಬಹುದೆ ಎಂದೆಲ್ಲ ಅನಿಸುತ್ತದೆ. ವಿದ್ಯಾರ್ಥಿವೇತನ ಮಂಜೂರು ಮಾಡಿದ್ದು ನೆಹರೂ ಸರಕಾರ ಅಲ್ಲ, ಬ್ರಿಟಿಷ್ ಸರಕಾರ. ಆ ಮಾತು ಬೇರೆ. ಸತ್ಯ, ಅಹಿಂಸೆ, ಅಸಂಗ್ರಹ ಯಾವುದೂ ಅಂದುಕೊಂಡಷ್ಟು ಸರಳವಲ್ಲ, ಸುಲಭವಲ್ಲ ಎನಿಸಿದಾಗ ನಮ್ಮ ಗಾಂಧಿ ಕೇವಲ ನಮ್ಮ ಗಾಂಧಿಯಷ್ಟೇ ಆಗಿ ಉಳಿಯಬೇಕಾಗುತ್ತದೆ. ಅವನು ನಿಜದ ಗಾಂಧಿಯಲ್ಲ, ಛದ್ಮವೇಷದ ಗಾಂಧಿ.

ಬಹುಮಾನವೇನೂ ಬೇಕಾಗಿಲ್ಲ, ನಾನಿದನ್ನು ಬಹುಮಾನದ ಆಸೆಗೆ ಮಾಡಿಸುತ್ತಿಲ್ಲ ಎಂದ ಅಂಬೇಡ್ಕರ್ ವೇಷಧಾರಿಯ ಪೋಷಕನಿಗೆ ಮನೆಯಲ್ಲೇ ಬೆಂಬಲ ಸಿಗುವುದಿಲ್ಲ. ಭಗವದ್ಗೀತೆಯ "ಫಲಾಪೇಕ್ಷೆಯಿಲ್ಲದೇ ಕರ್ಮ ಮಾಡು, ಯಶಸ್ಸು-ಅಪಯಶಸ್ಸನ್ನು ನನಗೆ ಬಿಟ್ಟುಕೊಡು" ಎಂದ ಕೃಷ್ಣನ ಕತೆ ಕೂಡ ಅಷ್ಟೇ. ನಮ್ಮ ಕೃಷ್ಣ, ನಮ್ಮ ಗೀತೆ ಛದ್ಮವೇಷದ್ದು, ಯಾವುದೋ ಯಶಸ್ಸಿಗೆ, ಅನುಕೂಲಕ್ಕೆ ಒದಗುವಂಥಾದ್ದು. ಇಲ್ಲಿ ಸಿದ್ಧಿ ಎಂದರೆ ಏನು, ಯಾವುದು?

ಚಳವಳಿಗಳ ಕಾಲ ಮುಗಿದು ಹೋಯಿತು ಎನ್ನುವವರಿದ್ದಾರೆ. ಲಂಕೇಶ್, ರಾಮದಾಸ್ ಮತ್ತು ತೇಜಸ್ವಿ ಅವರ ಕಣ್ಮರೆಯೊಂದಿಗೆ ಬಹುಶಃ ಹೋರಾಟ, ಸಂಘರ್ಷ ಮತ್ತು ಪ್ರತಿರೋಧಗಳಿಂದಲೇ ತಮ್ಮ ಸುತ್ತಲಿನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬದುಕನ್ನು ಸರಿದಾರಿಗೆ ತರಲು ಹೆಣಗುತ್ತಿದ್ದ ಒಂದು ತಲೆಮಾರು ಕೂಡ ಮರೆಯಾದಂತಿದೆ. ಸದ್ಯಕ್ಕೆ ಪ್ರಸನ್ನ ಅವರನ್ನು ಬಿಟ್ಟರೆ ಕನ್ನಡದಲ್ಲಿ ಚಳವಳಿಯ ಮಾರ್ಗದಲ್ಲೇ ಮುಂದುವರಿಯುತ್ತಿರುವವರು ಕಾಣುತ್ತಿಲ್ಲ. ಶಾಮಣ್ಣ ಇಲ್ಲಿ ನೆನಪಾಗುವ ಮತ್ತೊಂದು ಹೆಸರು. ಈ ಕಾದಂಬರಿಯಲ್ಲಿ ಹೋರಾಟದ ಎರಡು ಮುಖಗಳು ನಮಗೆ ಎದುರಾಗುತ್ತವೆ. ಒಂದು ಇದೇ ಶಾಲೆಯ ಕನ್ನಡ ಪ್ರಾಧ್ಯಾಪಕರಾಗಿರುವ ನಂಜುಂಡ ನಾಯಕರ ಮೂಲಕ; ಇನ್ನೊಂದು ಆಗಲೇ ಹೇಳಿದ ಮುನಿಭೈರಪ್ಪನವರ ಮೂಲಕ. ಹೋರಾಟದ ಸಾಧ್ಯತೆಗಳು ಮತ್ತು ಮಿತಿಗಳು ಎರಡೂ ಇಲ್ಲಿ ಬೇರೆಯೇ ನೆಲೆಯ ಮುಖೇನ, ಬಹುಶಃ ಮಾನವೀಯ ಮತ್ತು ಮನುಷ್ಯ ಸಂಬಂಧಗಳ ನೆಲೆಯಲ್ಲಿ ನಿಕಷಃಕ್ಕೊಡ್ಡಲ್ಪಟ್ಟಿರುವುದು ವಿಶೇಷ.

ರಾಜಕಾರಣ, ಧರ್ಮ ಮತ್ತು ಅಧಿಕಾರಶಾಹಿ ಮೂರೂ ಹಿಡಿದಿರುವ ನೈತಿಕ ಅಧಃಪತನದ ಚಿತ್ರ ಈ ಕಾದಂಬರಿಯ ಒಡಲಲ್ಲೇ ನೇಯ್ದಂತೆ ಬಂದಿರುವುದು ಇಲ್ಲಿನ ಇನ್ನೊಂದು ಗಮನಾರ್ಹ ಅಂಶ. ಸ್ಥಳೀಯ ಶಾಸಕ ನಾಗವಳ್ಳಿ ನಾಗೇಂದ್ರಪ್ಪ, ಆತನ ಜೊತೆಗಿರುವ ಕಾರ್ಯಕರ್ತ ರವಳಯ್ಯ ಮತ್ತು ಮಂಡಲ ಪಂಚಾಯ್ತಿ ಸದಸ್ಯೆಯಾಗಿರುವ ಆತನ ಪತ್ನಿ - ಇವರ ಸಂಬಂಧ ಮತ್ತು ವ್ಯವಹಾರಗಳು ರಾಜಕಾರಣದ ಒಳಸುಳಿಗಳ ಯಥಾವತ್ ಚಿತ್ರವೊಂದನ್ನು ಕಟ್ಟಿಕೊಡುತ್ತಿವೆ. ಉತ್ತರ ಕರ್ನಾಟಕದ ಬಸವನ ಬಾಗೇವಾಡಿಯಿಂದ ಬಂದ ತಹಶೀಲ್ದಾರ್ ಸರಣಪ್ಪಾ ಕಾಸೆಪ್ಪಾ ಪಾಟೀಲರ ಕತೆಯಲ್ಲಿ ಅಧಿಕಾರಶಾಹಿಯ ಭ್ರಷ್ಟಮುಖಗಳು ತೆರೆದುಕೊಂಡರೆ ಎಡೂರು ಮಂಗಲದ ಮಠದ ಜೀರ್ಣೋದ್ಧಾರದ ಉತಾವಳಿಗಳು ಧರ್ಮ ಮತ್ತು ಅದರ ವ್ಯಾವಹಾರಿಕ ಮುಖವಾಡಗಳನ್ನು ಬಯಲು ಮಾಡುತ್ತಿವೆ. ಮಲೆಯ ಮಾದಯ್ಯ, ಎಡೆಯೂರು ಸಿದ್ಧಲಿಂಗಯ್ಯ, ಮಂಟೇಸ್ವಾಮಿ ಮುಂತಾದವರೊಂದಿಗಿನ ಊರ ಹೆಸರಿಗಿರುವ ಸಂಬಂಧದ ಕತೆಗಳು ಈ ಮಠದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಪಡೆದುಕೊಳ್ಳುವ ಹೊಸ ವ್ಯಾಖ್ಯಾನಗಳಂತೂ ನವಿರು ಹಾಸ್ಯದ ಲೇಪನದೊಂದಿಗೇ ವಾಸ್ತವದ ಕರಾಳ ಮುಖವನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಟ್ಟಿವೆ.

ಮುನಿಭೈರಪ್ಪನ ಕತೆ, ಬೈಲಾಡಿ ಸಹೋದರರ ಕತೆ, ಕಲ್ಲುಕ್ವಾರಿ ಬಿಸಿನೆಸ್ಸಿನ ದೊಡ್ಡಮಲ್ಲಯ್ಯನ ಕತೆ, ಸುಣ್ಣದ ಕೇರಿಯ ರಾಚಯ್ಯನ ಕತೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರದ ಉಪನ್ಯಾಸಕಿ ಚಿತ್ರಾ ಅವರ ಕತೆ ಮುಂತಾಗಿ ಹೇಳುತ್ತ ಹೋದರೆ ಈ ಕಾದಂಬರಿ ಇಂಥ ಸುಮಾರು ಇಪ್ಪತ್ತು ಪಾತ್ರ/ಸಂಸಾರಗಳ ಹೆಚ್ಚುಕಮ್ಮಿ ಒಂದೊಂದೂ ಪೂರ್ಣಪ್ರಮಾಣದ ಕಾದಂಬರಿಯಾಗಿ ಬೆಳೆದು ನಿಲ್ಲಬಹುದಾದ ಕಥಾನಕಗಳನ್ನು ತನ್ನೊಡಲಲ್ಲಿರಿಸಿಕೊಂಡು ಸಮೃದ್ಧವಾಗಿದೆ, ಒಂದರ್ಥದ ಕಥಾಸರಿತ್ಸಾಗರವೇ ಆಗಿದೆ. ಹಾಗಿದ್ದೂ ಹೇಳಬೇಕಾದ ಮಾತೆಂದರೆ, ಇವು ಇಲ್ಲಿ ಸುಮ್ಮನೇ ಕತೆಗಾಗಿ ಸೇರ್ಪಡೆಯಾಗಿರದೆ ಇವು ಒಂದೊಂದೂ ಬದುಕಿನ ವಿಭಿನ್ನ ಎಳೆಗಳನ್ನು ಹಿಡಿದು ಸಾಗುತ್ತ ತೆರೆದಿಡುವ ಜೀವನದರ್ಶನ ಮಾತಿಗೆ ಮೀರಿದ್ದು, ಬಹುಕಾಲ ಕಾಡುತ್ತ ಉಳಿಯುವಂಥದ್ದು ಮತ್ತು ಬದುಕನ್ನು ಸಮಗ್ರವಾಗಿ ಗ್ರಹಿಸಲು ಪ್ರೇರೇಪಿಸುವಂಥಾದ್ದು. ಅಲ್ಲದೆ ಈ ಇಪ್ಪತ್ತು ಕಥಾಜಗತ್ತುಗಳನ್ನು ಎಡೂರು ಮಂಗಲಕ್ಕೆ ಜೋಡಿಸುವಲ್ಲಿ ಹನೂರರು ತುಂಬ ಜಾಣ್ಮೆಯನ್ನೂ ಮೆರೆದಿದ್ದಾರೆ. ದೇಶ-ಕಾಲ-ಭಾಷೆ-ಸಂಸ್ಕೃತಿ-ಧರ್ಮ ಎಲ್ಲ ವಿಚಾರದಲ್ಲೂ ಅವರು ಜೋಡಿಸುತ್ತಿರುವುದು ‘ಕೈಗೆ ಸಿಕ್ಕ’ ಕಥಾನಕಗಳನ್ನಲ್ಲ. ಶಾಲೆಯ ಸ್ಪರ್ಧೆ ಒಂದು ನೆವವಾಗಿ ತೆರೆದುಕೊಳ್ಳುವ ಈ ಎಲ್ಲರ ಕತೆಗಳಲ್ಲೂ ಸಮಾನವಾದದ್ದು ಇದೆ. ಅದು ಬದುಕಿನ ಹೋರಾಟ, ಪರಿಸ್ಥಿತಿ, ಸಂದರ್ಭಗಳು ತಂದ ತಿರುವು, ವಲಸೆ, ನೋವು, ನಲಿವು ಎಲ್ಲದರ ನಡುವೆ ಎಲ್ಲರೂ ಬಯಸುವ ‘ಸಿದ್ಧಿ’ಯ ಪ್ರಶ್ನೆ ಈ ಎಲ್ಲ ಕತೆಗಳನ್ನೂ ಒಂದೆಳೆಯ ಸೂತ್ರದಲ್ಲಿ ಜೋಡಿಸಿದೆ.

ರೂಪಕಗಳನ್ನು ಕಾವ್ಯಾತ್ಮಕವಾಗಿ, ಕಲ್ಪನೆಯನ್ನು ಅದ್ಭುತರಮ್ಯ ಕಥನವನ್ನಾಗಿ, ಕನಸುಗಳನ್ನು ಫ್ಯಾಂಟಸಿಯ ವೈಭವದೊಂದಿಗೆ ಕಟ್ಟಿಕೊಡುತ್ತ, ಅತ್ಯಂತ ಹಿತವಾದ, ಮಧುರವಾದ ಭಾಷೆಯ ಕಲಾತ್ಮಕ ಕುಸುರಿಯಲ್ಲಿ ತಮ್ಮ ಕತೆಯನ್ನೊ ಕಾದಂಬರಿಯನ್ನೊ ಮೈಮರೆಸುವಂತೆ ಬರೆಯುವವರಿದ್ದಾರೆ. ಎಲ್ಲ ಮಾತಿನ ವೈಭವ ಮುಗಿದಾಗ ಹಿಂದಿನ ದಿನ ಜಾತ್ರೆ ನಡೆದ ಪರಿತ್ಯಕ್ತ ಮೈದಾನದ ಕಸಕಡ್ಡಿ ಕಣ್ಣಿಗೆ ರಾಚಿದಷ್ಟೇ ಸಹಜವಾಗಿ ಶೂನ್ಯ ನಮ್ಮನ್ನು ಅವರಿಸುತ್ತದೆ. ಕವಿಯ ಮಾತಿನ ಮಂಟಪದಾಚೆ ಅವನು ತನ್ನದೇ ಕಲಾಕೃತಿಯ ಆತ್ಮಕ್ಕೆ ಎಷ್ಟು ನಿಷ್ಠನಾಗಿ ತನ್ನ ಬದುಕಿನಲ್ಲಿ ನಡೆಯುತ್ತಾನೆ ಎಂಬ ಪ್ರಶ್ನೆ ಉಳಿದೇ ಉಳಿಯುತ್ತವೆ. ಬರಹಗಾರ ತುಂಬ ಪ್ರಾಮಾಣಿಕನಾಗಿರದೇ ಇದ್ದಲ್ಲಿ ಓದುವ ಕಾಲಕ್ಕೇ ಅದರ ಕೃತಕ ಹಂದರ ಕಣ್ಣಿಗೆ ಹೊಡೆಯುತ್ತದೆ ಎನ್ನುವುದೂ ನಿಜ. ಹಾಗಿದ್ದೂ ಬರಹಗಾರ ಪ್ರಾಮಾಣಿಕವಾಗಿಯೇ ತನ್ನ ಸಾಮಾಜಿಕ, ಮಾನವೀಯ, ಹೃದಯವಂತಿಕೆಯನ್ನು ಬರಹದಲ್ಲಿ ವ್ಯಕ್ತಪಡಿಸುತ್ತಿದ್ದಿರಬಹುದು ಎಂದಿಟ್ಟುಕೊಳ್ಳಿ. ಆಗಲೂ, ಸೂಕ್ಷ್ಮಸಂವೇದಿ, ಭಾವಕೋಶಕ್ಕೆ ಲಗ್ಗೆಯಿಡುವ, ಹೃದಯ ಆರ್ದ್ರಗೊಳಿಸುವ ಎಲ್ಲ ರಚನೆಗಳಾಚೆ, ಅಂಥ ಓದುಗನಲ್ಲಿ ಮಾನವೀಯ ಸೆಲೆಯನ್ನು ಉದ್ದೀಪಿಸುವುದರಾಚೆ ನಿಜದ ಬದುಕಿನಲ್ಲಿ ಬರಹಗಾರನೂ ಅವನ ಓದುಗರೂ ಏನಾಗಿದ್ದಾರೆ ಎನ್ನುವುದು ನಿಷ್ಠುರ ಪ್ರಶ್ನೆಯಾಗಿಯೇ ಉಳಿಯುತ್ತದೆ. ಯಾಕೆಂದರೆ, ಯಾವ ಜ್ಞಾನವೂ, ಯಾವ ಅರಿವೂ ಅದು ನಮಗಿದೆ ಎನ್ನುವ ಒಂದೇ ಕಾರಣಕ್ಕೆ ನಾವೇ ಅದಾಗಿ ಬಿಡುವುದು ಸಾಧ್ಯವಾಗುವುದಿಲ್ಲ ಎನ್ನುವುದು ನಿಜ. ಮನುಷ್ಯನ ಅತ್ಯಂತ ದುರ್ಬಲ ಕ್ಷಣದಲ್ಲಿ ಅವನು ಮನುಷ್ಯತ್ವದಿಂದ ಜಾರಿ ರಾಕ್ಷಸನಾಗದೇ, ವ್ಯಗ್ರನಾಗದೇ ಇರುವಂತೆ ಅವನ ಜ್ಞಾನ, ಅರಿವು, ಓದು ಕಾಪಾಡಲಾರದು ಎನ್ನುವುದು ನಮಗೆ ಗೊತ್ತು. ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಾರದು. ಇದು ಗೊತ್ತಿರುವ, ಅರ್ಥವಾಗಿರುವ ಲೇಖಕನಿಗೆ ಶೈಲಿ ಒಂದು ಕ್ಲೀಷೆಯಾಗಷ್ಟೇ ಕಾಣುತ್ತದೆ.

ಹಾಗಾಗಿ ಎಲ್ಲ ಲೇಖಕರೂ ಓದುಗನನ್ನು ಓಲೈಸುವ ಭಾಷೆ, ಲಯ ಮತ್ತು ರೂಪಕ-ಪ್ರತಿಮೆ-ಸಾಂಕೇತಿಕತೆಗಳ ಬಳಕೆ ಮಾಡಬೇಕೆಂದಿಲ್ಲ. ಅಥವಾ ಉದ್ದೇಶಪೂರ್ವಕ ಅಂಥ ಮಾರ್ಗವನ್ನು ಬಿಟ್ಟುಕೊಟ್ಟೇ ಬರೆಯುವ ಪ್ರಯತ್ನ ಕೂಡ ಮಾಡಬಹುದು. ಡಾ||ಹನೂರ ಅವರ ಈ ಕಾದಂಬರಿಯನ್ನು ಓದುತ್ತ ಹಲವಾರು ಹಂತಗಳಲ್ಲಿ ನನಗೆ ಇದು ಅನಿಸಿದೆ. ಬಹುಶಃ ಅವರು ಮನಸ್ಸು ಮಾಡಿದ್ದರೆ ಅತ್ಯದ್ಭುತವಾಗಿ ‘ಪ್ರೆಸೆಂಟ್’ ಮಾಡಬಲ್ಲ ಹಲವಾರು ಅವಕಾಶಗಳು ಅವರಿಗೆ ಈ ಕಾದಂಬರಿಯಲ್ಲಿ ಇದ್ದೇ ಇದ್ದವು. ಅವು ಯಾವುವು ಎಂದು ಯಾರಿಗೂ ಹೇಳಬೇಕಾದ್ದಿಲ್ಲ, ಓದುವಾಗ ಪ್ರತಿಯೊಬ್ಬರ ಗಮನಕ್ಕೂ ಅವು ಬಂದೇ ಬರುತ್ತವೆ. ಹಾಗಿದ್ದೂ ಹನೂರರು ಯಾಕೆ ಅಂಥ ಅವಕಾಶಗಳನ್ನು ಬಳಸಿಕೊಳ್ಳಲಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡಿದ್ದಿದೆ. ಹನೂರ ಅವರು ಕಾದಂಬರಿಯ ಆತ್ಮಕ್ಕೆ ಹೆಚ್ಚು ನಿಷ್ಠರಾಗಿದ್ದಾರೆ, ಅವರ ಮಟ್ಟಿಗೆ ಇದು ಬರಿಯ ಒಂದು ಕಾದಂಬರಿಯ ‘ರಚನೆ’ಯ ಪ್ರಶ್ನೆಯಾಗಿಲ್ಲ, ಬದಲಿಗೆ ಇಲ್ಲಿ ಅವರು ಹೇಳುತ್ತಿರುವುದು ಅವರು ಬದುಕಿನಿಂದ, ಅನುಭವದಿಂದ ಕಂಡುಕೊಂಡ ಸತ್ಯ ಮತ್ತು ಅವರನ್ನು ಕಾಡಿದ ಪ್ರಶ್ನೆ ಆಗಿರುವುದೇ ಅವರು ಅಂಥ ‘ಪ್ರೆಸೆಂಟೇಶನ್’ ಪ್ರಯತ್ನಗಳನ್ನು ಮಾಡದಿರಲು, ಅಂಥ ಪ್ರಯತ್ನದಿಂದಲೂ ದೂರವಿರಲು ಇರಬಹುದಾದ ಕಾರಣ ಎಂದು ನನಗನಿಸಿದೆ. ಹಾಗಾಗಿಯೇ, ಕಾದಂಬರಿಯನ್ನು ಓದಿ ಮುಗಿಸಿದ ಬಳಿಕವೂ, ಅದು ತನ್ನ ರಾಚನಿಕ ಇತಿಮಿತಿಗಳಾಚೆ ಹೆಚ್ಚಿನ ಒಂದು ಅನುರಣನ ಶಕ್ತಿಯನ್ನು ದಕ್ಕಿಸಿಕೊಂಡಿದೆ. ಒಂದು ಅದ್ಭುತ ಕಲಾಕೃತಿಯಾಗಿ ತನ್ನ ರಾಚನಿಕ ಸ್ವರೂಪವನ್ನೇ ವಿಜೃಂಭಿಸಲು ಹೊರಟಿದ್ದರೆ ಬಹುಶಃ ಅದು ಇಂಥ ಪ್ರಾಮಾಣಿಕ ಕಳಕಳಿಯನ್ನು ಮರೆಮಾಚುವ ಒಂದು ‘ಮೇಕಪ್’ ಆಗಿ ಮುಗಿಯುವುದಿತ್ತೋ ಏನೊ.

ಸರಿಗೆಯ ಮೇಲೆ ನಡೆವ, ಉರಿವ ಚಕ್ರದಿಂದ ನುಸುಳುವ, ಹಾವು-ಚೇಳುಗಳು ಮೈಮೇಲೆ ಹರಿದಾಡಿದರೂ ವಿಚಲಿತರಾಗದಂತಿರುವ ಸವಾಲಿನ ದೊಂಬರಾಟ ಈ ಬದುಕು ಎನ್ನುತ್ತಾರೆ ಹನೂರರು. ಈ ಪರೀಕ್ಷೆಯನ್ನು, ಅದು ಯಾಕೆಂದೇ ಸ್ಪಷ್ಟವಿಲ್ಲದಿದ್ದರೂ ನಾವು ಹಾಯಬೇಕಿದೆ. ಹಾಯುವುದರಿಂದ ಚಂದ್ರ ಕೈಗೆಟುಕುವನೆ, ಸಿದ್ಧಿಸಿದ್ದರ ಗುಂಗು ಬಿಟ್ಟು ಇನ್ಯಾವುದರದ್ದೋ ಗುಂಗು ಹತ್ತಿಸುವ ಚಾಳಿಯಿಂದ ಮುಕ್ತರನ್ನಾಗಿಸುವ ಅಂತಿಮದ ಸಿದ್ಧಿ ಸಿಗುವುದೆ, ಕಾದಂಬರಿ ಅದನ್ನು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ, ಇಲ್ಲಿ ಪ್ರಶ್ನೆಗಳಿವೆ, ಕ್ರಿಸ್ತ ಹೊತ್ತ ಶಿಲುಬೆಯಂತೆ. ಮತ್ತು, ಅವರವರ ಶಿಲುಬೆಯನ್ನು ಅವರವರೇ ಹೊರಬೇಕಾಗಿದೆ, ಅಂಥ ಸಿದ್ಧಿಗಾಗಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, April 28, 2019

ನಟರಾಜ್ ಹುಳಿಯಾರ್ ಅವರ ಕಾಮನ ಹುಣ್ಣಿಮೆ

ನಟರಾಜ್ ಹುಳಿಯಾರ್ ಅವರು ಕತೆಗಾರರಾಗಿ ಈಗಾಗಲೇ ಅತ್ಯಂತ ಸಮೃದ್ಧವಾದ ಕಥಾಲೋಕವನ್ನೂ, ಜೀವಂತ ಪಾತ್ರಗಳನ್ನೂ ಸೃಷ್ಟಿಸಿದ್ದಲ್ಲದೆ ಅತ್ಯಂತ ಅರ್ಥಪೂರ್ಣವಾದ ಮತ್ತು ಸಮಕಾಲೀನವಾದ ವಸ್ತು, ವಿಚಾರಗಳನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟವರು. ನಟರಾಜ್ ಹುಳಿಯಾರ್ ಕತೆಗಳಲ್ಲಿ ಸಾಮಾಜಿಕ-ತಾತ್ವಿಕ ಆಯಾಮಗಳು ಇದ್ದೂ ಇಲ್ಲದಂತೆ ಅವರ ಕಥನ ಕಲೆಯ ಆಕರ್ಷಣೆಯಲ್ಲಿ ಹುದುಗಿಕೊಂಡಂತಿರುತ್ತವೆ. ಹಾಗಾಗಿ ಸಹಜವಾಗಿಯೇ ಅವರ ಕಾದಂಬರಿ ‘ಕಾಮನ ಹುಣ್ಣಿಮೆ’ ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿತ್ತು.

ಲಂಕೇಶರ "ಮುಸ್ಸಂಜೆ ಕಥಾ ಪ್ರಸಂಗ", "ಬಿರುಕು" ಮತ್ತು "ಅಕ್ಕ" - ಈ ಮೂರು ಕಾದಂಬರಿಗಳನ್ನು ಓದಿದ್ದವರಿಗೆ ನಟರಾಜ್ ಹುಳಿಯಾರ್ ಅವರ ಕಾದಂಬರಿ ಬಹುಶಃ ನಿರಾಶೆ ಹುಟ್ಟಿಸುತ್ತದೆ ಅನಿಸುತ್ತದೆ. ಇದನ್ನು ವಿವರವಾಗಿ ಗಮನಿಸದೇ ಹೋದರೆ ಕಾದಂಬರಿಗೂ ಅನ್ಯಾಯವೆಸಗಿದಂತಾಗುತ್ತದೆ ಮಾತ್ರವಲ್ಲ ಈ ಅತ್ಯುತ್ತಮ ಕಾದಂಬರಿ ನಮಗೆ ಕೊಡಬಹುದಾದ್ದು, ಕೊಡಬೇಕಿದ್ದುದು ಮತ್ತು ಕೊಡುತ್ತಿರುವುದು ಮೂರೂ ಕಣ್ತಪ್ಪಿ ಹೋಗಬಹುದು.

ಅರವತ್ತು ಎಪ್ಪತ್ತರ ದಶಕದಲ್ಲಿ ಕರ್ನಾಟಕದ ಹಳ್ಳಿಗಾಡಿನಿಂದ ಯಾವುದೋ ಅದೃಷ್ಟದಿಂದೆಂಬಂತೆ ತಕ್ಕಮಟ್ಟಿಗೆ ಉತ್ತಮ ಶೈಕ್ಷಣಿಕ ಮಟ್ಟ ತೋರಿದ ಕೆಲವೇ ಕೆಲವು ಮಂದಿ, ಹೆಚ್ಚಾಗಿ ಸಮಾಜದ ಕೆಳಸ್ತರದವರು (ಅದು ಜಾತಿಯಿಂದಲೂ, ಆರ್ಥಿಕವಾಗಿಯೂ ಇರಬಹುದು ಅಥವಾ ಬರೀ ಜಾತಿಯಿಂದಲೂ ಇರಬಹುದು) ಅದು ಹೇಗೋ ಬೆಂಗಳೂರು, ಮೈಸೂರಿನಂಥ ಪಟ್ಟಣ ಸೇರಿಕೊಂಡು ಪದವಿ ಪಡೆದು ಅಲ್ಲಲ್ಲಿ ಸೆಟ್ಲ್ ಆದರು. ಇವರಲ್ಲಿ ಹುಡುಗಿಯರು ಇದ್ದಿದ್ದು ಕಡಿಮೆ, ಹುಡುಗರು ಹೆಚ್ಚು. ಹೀಗೆ ನಗರ ಸೇರಿ ಸೆಟ್ಲ್ ಆದವರದ್ದೇ ಒಂದು ತಲೆಮಾರು. ಸಾಮಾನ್ಯವಾಗಿ ಇವರ ಬಡತನಕ್ಕೂ ಕಾರಣವಾಗಿರಬಹುದಾದ ಕೆಲವೊಂದು ಸಾಂಸಾರಿಕ ಸ್ಥಿತಿಗತಿಗಳು, ಜಾತಿ - ಇವರ ಜೀವನ ಚಿತ್ರದಲ್ಲಿನ ಕಾಮನ್ ಫ್ಯಾಕ್ಟರ್. ಅದು ತಂದೆಯ ಕುಡಿತ ಇರಬಹುದು, ಬೇಜವಾಬ್ದಾರಿತನ ಇರಬಹುದು, ಎಳೆಯ ವಯಸ್ಸಲ್ಲೇ ಸಂಭವಿಸಿದ ತಂದೆಯ/ಹಿರಿಯಣ್ಣನ ಮೃತ್ಯು ಅಥವಾ ಅಂಥವೇ ದುರಂತವಿರಬಹುದು, ಹೆಣ್ಣುಮಕ್ಕಳಿಗೆ ಸಂಬಂಧಿಸಿದಂತೆ ಘಟಿಸಿದ ಯಾವುದೇ ದುರಂತ, ಓಡಿಹೋಗಿದ್ದು, ಅತ್ಯಾಚಾರ, ಮದುವೆಯ ವೈಫಲ್ಯ, ಹುಚ್ಚು ಇತ್ಯಾದಿ ಇರಬಹುದು. ಇಂಥ ಸಾಂಸಾರಿಕ ಹಿನ್ನೆಲೆ, ಆರ್ಥಿಕ ಕಷ್ಟಕಾರ್ಪಣ್ಯಗಳು ಮತ್ತು ಜಾತಿ (ಇಲ್ಲಿ ಜಾತಿಗೆ ಹೆಚ್ಚಿನ ಒತ್ತು ಸಿಗುತ್ತಿದ್ದುದು ಆ ಕಾಲ ಹಾಗಿತ್ತು ಎನ್ನುವುದನ್ನು ಸೂಚಿಸುವುದಲ್ಲದೆ ಒಟ್ಟಾರೆ ಪರಿಸ್ಥಿತಿ ಇವತ್ತಿಗಿಂತ ಆವತ್ತು ಅಷ್ಟೇನೂ ಭಿನ್ನವಾಗಿರಲಿಲ್ಲ ಎಂದೇ ಹೇಳಬಹುದು.) ಮೂರೂ ಸೇರಿ (ಕೆಲವೊಮ್ಮೆ ಯಾವುದಾದರೂ ಒಂದು) ಈ ರೀತಿ ಪಟ್ಟಣಕ್ಕೆ ಬಂದ ಹುಡುಗರ ಅನುಭವ, ಪ್ರಬುದ್ಧತೆ ಮತ್ತು ಹೋರಾಟದ ಗುಣವನ್ನು ಕಟ್ಟಿಕೊಟ್ಟಿದ್ದು ಗಮನಕ್ಕೆ ಬರುತ್ತದೆ.


ಸಹಜವಾಗಿಯೇ ಇದು ಆಯಾ ವ್ಯಕ್ತಿಗಳಿಗೆ ತೀರ ಆಪ್ತವಾದ, ಹೃದಯಕ್ಕೆ ಹತ್ತಿರವಾದ, ಸದಾ ಮೆಲುಕು ಹಾಕಲು ಇಷ್ಟವಾದ ಸಂಗತಿಯೇ. ಆದರೆ ಇದನ್ನೇ ಇಟ್ಟುಕೊಂಡು ಲಂಕೇಶ್ ಗಂಭೀರವಾಗಿ ಚಿಂತಿಸುತ್ತಾರೆ. ಹಳ್ಳಿಯ ಹುಡುಗ, ಇಂಗ್ಲೀಷ್ ಎಂದರೆ ಅವನಿಗೆ ಭೀತಿ, ಹಣವಿದ್ದರೂ ನಗರ ಎಂದರೆ ಭೀತಿ, ಅಲ್ಲಿನ ಜನರ ಬಗ್ಗೆ ಭೀತಿ, ಹುಡುಗಿಯರೆಂದರೆ ಭೀತಿ ಇತ್ಯಾದಿ ಅಂಶಗಳನ್ನಿಟ್ಟುಕೊಂಡು ಯೋಚಿಸುತ್ತಾರೆ. ಅವರ ಯೋಚನೆ ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕ-ರಾಜಕೀಯ ನೆಲೆಗಳನ್ನು ಹೊಂದಿದ್ದು ಎನ್ನುವುದನ್ನಷ್ಟೇ ಇಲ್ಲಿ ಸೂಚಿಸಿ ಮುಂದೆ ಹೋಗಬಹುದು.

ಅಲ್ಲಿ ನಾನು ಹಿಂದೆ ಹೇಳಿದ ಯಾವತ್ತೂ ಸಮಸ್ಯೆಗಳಿದ್ದೇ ಇರುತ್ತವೆ. ಜೊತೆಗೆ ಇವೆಲ್ಲ. ಸಾಲದಿದ್ದರೆ ಆ ಹೊತ್ತಿಗಾಗಲೇ ಸುರುವಾಗುವ ಲೈಂಗಿಕ ಒತ್ತಡಗಳು ಮತ್ತು "ಬ್ರಹ್ಮಶ್ಚರ್ಯವೇ ಜೀವನ, ವೀರ್ಯನಾಶವೇ ಮೃತ್ಯು" ತರದ ದರಿದ್ರ ಪುಸ್ತಕಗಳು ಬೇರೆ ಅದರದ್ದೇ ಆದ ವಿಚಿತ್ರ ಮಾನಸಿಕ ಒತ್ತಡಗಳನ್ನೆಲ್ಲ ನಿರ್ಮಿಸುತ್ತವೆ. ಹಾಸ್ಟೆಲ್ಲಿನಲ್ಲಿ, ಹೋಟೆಲ್ಲಿನಲ್ಲಿ, ಕಾಲೇಜಿನಲ್ಲಿ, ಹುಡುಗಿಯರ ಸಂಬಂಧ ಇರಿಸು ಮುರಿಸು ಉಂಟು ಮಾಡುವ ಪ್ರಸಂಗಗಳಿರುತ್ತವೆ. ಆಗ ಇವರಿಗೆ ಆಪ್ಯಾಯಮಾನವಾಗಿ ಒದಗುವ ಒಂದೇ ಒಂದು ನೆರಳಾಗಿದ್ದುದು ಬಹುಶಃ ಕಮ್ಯುನಿಸಂ. ಅದು ಜಾತಿಯಿಂದ, ಹಳ್ಳಿಯ ‘ಗಮಾರ’ತನದಿಂದ ಮತ್ತು ಇಂಗ್ಲೀಷ್ ಭೂತದಿಂದ ಒಮ್ಮೆಗೇ ಮುಕ್ತಿ ಕಾಣಿಸಿದ್ದು ಮಾತ್ರವಲ್ಲ, ಹಳ್ಳಿಯಲ್ಲಿ ಅನುಭವಿಸಿದ ಯಾವತ್ತೂ ಅವಮಾನ, ಸೋಲು, ಸಂಕಟಗಳಿಗೆ ಇಂಥದ್ದೇ ಕಾರಣ ಎಂದು "ವೈರಿಯನ್ನು ಗುರುತಿಸುವ" ನಿರಾಳತೆಯನ್ನೂ ಒದಗಿಸಿತು ಎನ್ನಬೇಕು. ಇದೊಂದು ತರ ‘ಅನಿಷ್ಟಕ್ಕೆಲ್ಲ ಶನೈಶ್ಚರನೇ ಕಾರಣ’ ಟೆಕ್ನಿಕ್ಕೇ. ಸ್ವಲ್ಪ ಮುಂದುವರಿಸಿ ಯೋಚಿಸಿದರೆ, ಬಹುಶಃ ಸಂಘಪರಿವಾರದವರು ಇವತ್ತು ನಮ್ಮ ಎಳೆಯ ತರುಣರಲ್ಲಿ ತುಂಬುತ್ತಿರುವ ಮುಸ್ಲಿಮ್ ದ್ವೇಷಕ್ಕೆ ಇದನ್ನೇ ಬಳಸಿಕೊಂಡಿರುವುದೂ ನಮ್ಮ ಅರಿವಿಗೆ ನಿಲುಕುತ್ತದೆ.

ಲಂಕೇಶರ "ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ" ಯಂಥ ಅದ್ಭುತ ಕತೆಯಿಂದಲೇ ಇದನ್ನು ಗಮನಿಸಬಹುದು. ಮುಂದೆ ಕಾಮರೂಪಿ, ಎಸ್ ಎಲ್.ಭೈರಪ್ಪ, ತೇಜಸ್ವಿ, ಕೇಶವ ಮಳಗಿ, ಅಬ್ದುಲ್ ರಶೀದ್, ಅಮರೇಶ್ ನುಗಡೋಣಿ, ಮಹದೇವ, ಆಲನಹಳ್ಳಿ ಮುಂತಾದವರ ಕತೆಗಳಲ್ಲಿ ಇಂಥ ಎಳೆಗಳು ಅಲ್ಲಲ್ಲಿ ಸಿಕ್ಕಿಯೇ ಸಿಗುತ್ತವೆ ಎನ್ನುವುದು ಎಷ್ಟು ನಿಜವೋ ಅಷ್ಟೇ ನಿಜವಾದದ್ದು ಮೇಲ್ಜಾತಿಯ, ಆರ್ಥಿಕವಾಗಿ ಹೆಚ್ಚು ಸ್ಥಿತಿವಂತರಾದ, ಸಾಂಸಾರಿಕವಾಗಿ ಹೆಮ್ಮೆಯ ಮನೆತನಕ್ಕೆ ಸೇರಿದ ಕತೆಗಾರರಲ್ಲಿ ಇವು ಸಿಗುವುದಿಲ್ಲ ಎನ್ನುವುದು ಕೂಡ. ಜಾತಿ ಅಥವಾ ಸಾಂಸಾರಿಕ ಸ್ಥಿತಿಗತಿಯ ಕುರಿತ ಅವಮಾನ, ಆರ್ಥಿಕ ಸಂಕಷ್ಟ ಇದ್ದ ಯಾವುದೇ ಜಾತಿಯ ಕತೆಗಾರರೂ ಅನುಭವಿಸಿದ್ದೇ ಇದನ್ನೆಲ್ಲ. ಇವತ್ತು ಅಂಥ ಸ್ಥಿತಿಯೊಂದು ಸಂಪೂರ್ಣವಾಗಿ ಮರೆಯಾಗಿದೆ ಎನ್ನುವ ಧೈರ್ಯ ನನಗಂತೂ ಇಲ್ಲ. ಆದರೆ ಇವತ್ತು ಅಂಥ ವರ್ಗದ ಕತೆಗಾರರಿಗೆ ಯಾವುದೆ ದೇಶ-ಭಾಷೆಯ ಸಾಹಿತ್ಯಕ್ಷೇತ್ರದಲ್ಲಾದರೂ ಉಸಿರಾಡಲು ಅವಕಾಶ ಇದೆಯೇ, ಅಂಥ ಪರಿಸ್ಥಿತಿ ಉಳಿದಿದೆಯೇ ಎನ್ನುವುದು ಹೆಚ್ಚು ಗಹನವಾದ ಪ್ರಶ್ನೆ.

‘ಬಿರುಕು’ ಅಥವಾ ‘ಅಕ್ಕ’ ಬರೆಯುವ ಲಂಕೇಶರು, ‘ಪಲ್ಲವಿ’ಯಂಥ ಸಿನಿಮಾ ಮಾಡುವ ಲಂಕೇಶರು ಇದನ್ನೆಲ್ಲ ತಾತ್ವಿಕ-ಸಾಮಾಜಿಕ ಆಯಾಮವುಳ್ಳ ಅನುಭವ ಎಂದು ಸ್ವೀಕರಿಸುತ್ತಾರೆ ಅಥವಾ ಆ ಆಯಾಮ ಇಟ್ಟುಕೊಂಡೇ ಅನುಭವವನ್ನು ರಾಚನಿಕವಾಗಿ ಕಟ್ಟುವ ಕಲೆಯ ಅನುಕೂಲಗಳನ್ನು ಬಳಸಿಕೊಳ್ಳುತ್ತಾರೆ. ಇವೆಲ್ಲ ಮುಂದಿನ ಅನೇಕ ಕತೆಗಾರರಲ್ಲಿ ಶೋಷಣೆಯ, ದಲಿತ ದೌರ್ಜನ್ಯದ, ಸಮಾನತೆಯ ಘೋಷಣೆಯ ಕತೆಗಳಾಗುತ್ತವೆ. ಹೆಣ್ಣಿನ ಪ್ರೇಮ-ಕಾಮದ ನೆರಳಲ್ಲಿ ಇದು ಆದರ್ಶದ ನಡೆಗಳೆನ್ನಬಹುದಾದ ವಿಧವಾ ವಿವಾಹ, ಅಂತರ್ಜಾತೀ ವಿವಾಹ, ಪರಿತ್ಯಕ್ತರ ಪುನರ್‌ಗ್ರಹಣ ಇತ್ಯಾದಿಯಾಗಿ ಬರುತ್ತದೆ. ನಟರಾಜ್ ಹುಳಿಯಾರ್ ಅವರದೇ ಕತೆಗಳನ್ನು ನಾವು ಗಮನಿಸುತ್ತ ಬಂದರೂ ಇದೇ ಪ್ರಕ್ರಿಯೆ ಅಲ್ಲಿಯೂ ಘಟಿಸಿರುವುದನ್ನು ಸ್ಥೂಲವಾಗಿ ಗಮನಿಸಬಹುದು.

ಈ ಕತೆಗಳು ಎಷ್ಟು subtle ಆಗಿ ಈ ಎಲ್ಲ ವಿಚಾರಗಳನ್ನು, ಅನುಭವಗಳನ್ನು ತಮ್ಮ ಕಥನ ಪ್ರಕ್ರಿಯೆಯಲ್ಲಿ ಬಳಸಿಕೊಂಡವೋ ಅಷ್ಟು ಕನ್ನಡ ಕಥನ ಪರಂಪರೆ ಶ್ರೀಮಂತವಾಯಿತು, ಸಮೃದ್ಧವಾದ ಪ್ರಯೋಗಗಳಿಗೆ ಅದು ತೆರೆದುಕೊಂಡಿತು ಮತ್ತು ಒಟ್ಟಾರೆಯಾಗಿ ನವ್ಯ, ದಲಿತ, ಬಂಡಾಯ - ಮೂರೂ ಹಂತಗಳಲ್ಲಿ ವಿಜೃಂಭಿಸಿ ನವ್ಯೋತ್ತರ ಕಥನ ಮಾದರಿಗಳನ್ನೂ ಕನ್ನಡಕ್ಕೆ ಕಟ್ಟಿಕೊಟ್ಟಿತು ಎನ್ನುವುದು ಸುಳ್ಳಲ್ಲ.

ಸಾಮಾನ್ಯವಾಗಿ ನಮಗೆಲ್ಲ ಗತಕಾಲದ ಕತೆಗಳು ಇಷ್ಟ. ಚಿಕ್ಕಮಕ್ಕಳಾಗಿರುವಾಗಿನಿಂದ ‘ಒಂದಾನೊಂದು ಕಾಲದಲ್ಲಿ, ಒಂದಲ್ಲಾ ಒಂದೂರಿನಲ್ಲಿ’ ನಡೆವ ಕತೆಗಳೇ ನಮಗೆ ಬೇಕಿದ್ದುದು. ನಿನ್ನೆ ನಡೆದಿದ್ದು, ಇಲ್ಲೇ ನಮ್ಮ ಊರಲ್ಲಿ ನಡೆದಿದ್ದು ಎಂದರೆ ಅದು ಅಷ್ಟು ಇಷ್ಟವಾಗುವುದಿಲ್ಲ. ಊರಲ್ಲಿ ನಡೆದಿದ್ದಕ್ಕಿಂತ ಹಳ್ಳಿಯಲ್ಲಿ ನಡೆದಿದ್ದು, ಹಳ್ಳಿಗಿಂತ ಹೆಚ್ಚು ಕಾಡಲ್ಲಿ ನಡೆದಿದ್ದು ಇಷ್ಟ. ಹಾಗಾಗಿ ಫ್ಯಾಂಟಸಿ ಅಗತ್ಯವಾಯಿತು. ಮಾತನಾಡುವ ಪ್ರಾಣಿಗಳು, ಭೂತ-ಪ್ರೇತಗಳು, ಮಾತನಾಡುವ ಮರಗಿಡಗಳು, ದೇವರು-ದೈವಗಳು, ರಾಕ್ಷಸರು, ಚಂದ್ರ-ಸೂರ್ಯ-ತಾರೆಗಳು ಅಗತ್ಯವಾದವು. ಚಂದಮಾಮದ ಕತೆಯಲ್ಲಿ ನಮಗೆ ಮಂದಿ ಎತ್ತಿನಗಾಡಿಯಲ್ಲಿ ಓಡಾಡಿದರೆ ಹೆಚ್ಚು ಆತ್ಮೀಯರಾಗುತ್ತಾರೆಯೇ ಹೊರತು ಮಾರುತಿ ಆಮ್ನಿಯಲ್ಲಿ ಓಡಾಡಿದರೆ ಅಲ್ಲ. ಕನಿಷ್ಠ ಅಂಬಾಸೆಡರ್ ಕಾರು ನಡೆದೀತು. ಅಂದರೆ, ಒಟ್ಟಾರೆಯಾಗಿ ನಮಗೆ ‘ಅನ್ಯ’ ಎನಿಸುವ ಅನುಭವಕ್ಕೆ ಮನಸ್ಸು ಹಾತೊರೆಯುತ್ತದೆಯೇ ಹೊರತು ನಮ್ಮದೇ ಅನುಭವದ ಗೋಳುಗಳಲ್ಲ. ‘ಅನ್ಯ’ದ ಮೂಲಕ ಕಾಣಿಸುವುದು ನಮ್ಮ ಬದುಕನ್ನೇ ಎನ್ನುವುದು ನಮಗೆ ಗೊತ್ತು. ಹಾಗಿದ್ದೂ ಕಥಾಜಗತ್ತು ಅನ್ಯವಾಗಿದ್ದರೆ ಇಷ್ಟವಾಗುತ್ತದೆ. ಅನುವಾದಗಳ ಕುರಿತ ನಮ್ಮ ಆಸ್ಥೆಗೂ ಬಹುಶಃ ಇಂಥ ಅಂಶಗಳೇ ಪ್ರೇರಕ.

ನಮಗೆ ಕುವೆಂಪು, ಕಾರಂತರ, ಮಾಸ್ತಿ, ಗೊರೂರರ ಕಥಾಜಗತ್ತು ಇಷ್ಟವಾಗುವುದು ಇಂಥವೇ ಕಾರಣಗಳಿಗಾಗಿ. ಹಾಗೆಯೇ ಲಂಕೇಶ್, ತೇಜಸ್ವಿ, ಮಹದೇವ, ರಶೀದ್, ಮಳಗಿ, ನುಗಡೋಣಿ ಕಟ್ಟಿಕೊಟ್ಟ ಜಗತ್ತು ಕೂಡ ನಮಗೆ ‘ಅನ್ಯ’ವಾಗಿಯೇ ಇತ್ತು. ಇವತ್ತಿನ ತಲೆಮಾರಿನ ಕತೆಗಾರರಿಗೆ ಮತ್ತು ಓದುಗರಿಗೆ ನಟರಾಜ್ ಹುಳಿಯಾರರ ಕಾದಂಬರಿ ಕಟ್ಟಿಕೊಡುವ ಅನುಭವ ಕೂಡ ಅಷ್ಟೇ ‘ಅನ್ಯ’ ವಾದದ್ದು ಮತ್ತು ಆಪ್ಯಾಯಮಾನವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನನ್ನ ತಲೆಮಾರಿನವರಿಗೆ ಬಹುಶಃ ಅಲ್ಲ ಎನಿಸುತ್ತದೆ. ನನಗಿದನ್ನು ಓದುವಾಗ ಎರಡೂ ಅಂಶಗಳು ಮತ್ತೆ ಮತ್ತೆ ಮನವರಿಕೆಯಾದವು. ಒಂದು, ಈ ಕಥನ ಪ್ರಕ್ರಿಯೆ ನಟರಾಜ್ ಹುಳಿಯಾರ್ ಅವರಿಗೆ ಎಷ್ಟು ಆಪ್ಯಾಯಮಾನವಾಗಿದ್ದಿರಬಹುದು, ಅವರು ಇದನ್ನು ಬರೆಯುತ್ತ ಎಷ್ಟು ಸುಖಿಸಿರಬಹುದು ಎನ್ನುವುದಾದರೆ ಇನ್ನೊಂದು ನಾನು ಈಗಾಗಲೇ ಇದನ್ನೆಲ್ಲ ಇನ್ನೆಲ್ಲೊ ಓದಿಯಾದಂತಿದೆಯಲ್ಲ ಎನ್ನುವುದು. ಈಚೆಗೆ ನಾನು ಇವರದೇ ತಲೆಮಾರಿನ ಒಬ್ಬರಿಗೆ ಅವರ ಕೃತಿ ಅಷ್ಟು ಇಷ್ಟವಾಗಲಿಲ್ಲ ಎಂದಾಗ ಅವರು ತಟ್ಟನೆ, ಈಗಿನ ತಲೆಮಾರಿನ ಅನೇಕರು ಅದ್ಭುತವಾಗಿದೆ ಎಂದು ಹೊಗಳುತ್ತಿದ್ದಾರೆ ಸರ್ ಎಂದುಬಿಟ್ಟರು. ಆಗ ನನಗೆ ನನ್ನ ಮಿತಿಯ ಅರಿವಾಯಿತು. ಇದು ತಪ್ಪಲ್ಲ, ಸಹಜ.

ನಾವು ನಮಗೆ ಅಥೆಂಟಿಕ್ ಆದ, ತೀರ ನಮ್ಮ ರಕ್ತ ಮಾಂಸ ಮೂಳೆಗಳಿಗೆ ಎಡತಾಕಿದ ಅನುಭವ ಗ್ರಹೀತ ಜಗತ್ತನ್ನೇ ಸಾಹಿತ್ಯದಲ್ಲೂ ಪುನರ್-ನಿರ್ಮಿಸುವುದರ ಮೂಲಕ ಪಡೆಯುವ ಸುಖ ಒಂದು ನೆಲೆಯದ್ದಾದರೆ ಅದನ್ನು ಓದುಗನಿಗೂ ಒದಗಿಸುತ್ತ ಬರೆಯುತ್ತಿರುವುದು ಒಂದು ಕಲಾಕೃತಿಯೂ ಆಗಬೇಕು ಮತ್ತು ಅದು ಕಲೆಯಿಂದ ಬದುಕಿಗೆ ಕೊಡಬೇಕಾದ ಏನನ್ನೋ ದಕ್ಕಿಸುವುದಕ್ಕೆ ಲಂಘಿಸಬೇಕಾದ ಲೀಪ್ ಪಡೆದುಕೊಳ್ಳಲೇ ಬೇಕು ಎನ್ನುವುದು ಸಾಹಿತ್ಯದ ಮಹತ್ವಾಕಾಂಕ್ಷೆ.

ಇದೆಲ್ಲ ಹೇಳುತ್ತ ಈ ಕಾದಂಬರಿಯಲ್ಲಿ ಮೇಲ್ನೋಟಕ್ಕೆ ಕಾಣದಂತಿರುವ ಹಲವು ಅದ್ಭುತ ಸಂಗತಿಗಳೂ ಮೇಳೈಸಿರುವುದನ್ನು ಮರೆಯಬಾರದು.

೧. ಇಡೀ ಊರನ್ನು, ಒಂದು ಸಮುದಾಯವೆಂಬಂತೆ ನಟರಾಜ್ ಹುಳಿಯಾರ್ ಅವರು ಚಿತ್ರಿಸಿರುವ ಒಂದು ಆಪ್ತ ಬಗೆ. ಇಲ್ಲಿ ದೊಡ್ಡಮ್ಮ, ಚಿಕ್ಕಮ್ಮ, ನೆರೆಕೆರೆ ಎಲ್ಲರ ಒಡನಾಟ ಇತ್ಯಾದಿ ಅಂತಿರಲಿ, ಅದು ಇರುವುದೇ. ಆದರೆ ಒಂದು ಊರಿನ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ದಲಿತ ಸಮುದಾಯವನ್ನೆಲ್ಲ ಅತ್ಯಂತ ಕುಶಲತೆಯಿಂದ ಈ ಕಥಾಜಗತ್ತಿನೊಳಗೆ ಕೂರಿಸುತ್ತ ಬಂದಿರುವುದು, ಅವರ ನಡುವಿನ ಕೊಡು-ಕೊಳ್ಳುವಿಕೆಯ ಇತಿಮಿತಿಗಳನ್ನು ಮರೆಯದೇ ಒಬ್ಬರು ಇನ್ನೊಬ್ಬರ ಒಳಿತು ಕೆಡುಕುಗಳಿಗೆ ಒದಗಿ ಬರುವುದನ್ನು ಚಿತ್ರಿಸಿರುವುದು, ಅದು ಕಥನದ ಹಂದರದಲ್ಲಿ ಅತ್ಯಂತ ಸಹಜವಾಗಿ ಬಂದಿರುವುದು ಅನನ್ಯವಾಗಿದೆ.

೨. ರಾಮದಾಸ್ ಮೇಷ್ಟ್ರು, ಶಿವತೀರ್ಥನ್, ನಂಜುಂಡಸ್ವಾಮಿ ಮುಂತಾದ ಜೀವಂತ ವ್ಯಕ್ತಿಗಳನ್ನೂ ಕಥಾ ಹಂದರದೊಳಕ್ಕೆ ತಂದು, ಒಂದು ಕಾಲದ ಚಳವಳಿ-ಹೋರಾಟ ಮತ್ತು ಪ್ರತಿಭಟನೆಗಳ ಹಿಂದಿನ ಮನೋಧರ್ಮ, ಚಿಂತನೆ, ಸ್ಫೂರ್ತಿಯ ಒಂದು ಸ್ಥೂಲ ನೋಟವನ್ನು ಈ ಕಾದಂಬರಿ ಕಟ್ಟಿಕೊಡುತ್ತಿರುವ ಬಗೆ. ಡಿಎಸ್ಸೆಸ್, ರೈತಸಂಘ, ಮಾರ್ಕ್ಸಿಸ್ಟ್, ಮಾವೋವಾದಿಗಳು ಮುಂತಾದ ಸಂಘಟನೆಗಳ ಸುತ್ತ ಒಂದು ಸುತ್ತು ಹಾಕುವ ಕಾದಂಬರಿಯ ಕಥಾನಕ ಮಾವೋವಾದಿ ಪವನ್‌ನ ಎನ್‌ಕೌಂಟರ್ ಮತ್ತು ಮೈಸೂರು ದಸರಾ ಸಂದರ್ಭ ಕಪ್ಪು ಬಾವುಟ ಪ್ರದರ್ಶನ ಮುಂತಾದ ಕೆಲವು ವಿದ್ಯಮಾನಗಳನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇವೆಲ್ಲ ಒಂದು ತಲೆಮಾರಿನ ಚಿಂತನಾ ಕ್ರಮವನ್ನು ಮತ್ತು ತನ್ಮೂಲಕ ಬದುಕಿನ ರೀತಿನೀತಿಯನ್ನು ಕೂಡ ನಿರ್ಧರಿಸುವ ಚಿಕ್ಕಪುಟ್ಟ ಸಂಗತಿಗಳಾಗಿದ್ದವು ಎನ್ನುವುದು ನಿಜ. ಆದರೆ ಉತ್ತರಾರ್ಧದಲ್ಲಿ ಈ ಎಳೆಯನ್ನು ಪೂರ್ತಿಯಾಗಿ ಕೈಬಿಟ್ಟಂತೆಯೂ ಕಾಣುತ್ತದೆ.

೩. ಚೆಲುವಮ್ಮ, ದೊಡ್ಡಮ್ಮ, ಶಾಂತಕ್ಕ, ಹಾಡಿನ ಕಮಲಿ, ಭಾರ್ತಿ, ಫೆಮಿನಿಸ್ಟ್ ರಾಧಾ ಮುಂತಾದ ಗಟ್ಟಿಯಾದ ಸ್ತ್ರೀಪಾತ್ರಗಳನ್ನು ಕೆತ್ತಿ, ಅವರನ್ನು ಜೀವಂತಗೊಳಿಸಿರುವ ಮಾಯಕತೆ ಈ ಕಾದಂಬರಿಯ ಇನ್ನೊಂದು ಹೈಲೈಟ್. ಹೆಣ್ಣಿನ ಗೋಳುಗಳನ್ನು ಮತ್ತಿಷ್ಟು ಕೊರೆಯುವ ಮಾರ್ಗ ಬಿಟ್ಟುಕೊಟ್ಟು ಆಕೆಯ ದಿಟ್ಟತನದ ಚಿತ್ರಗಳನ್ನೇ ಕೊಡುತ್ತ ಹೋಗುವ ಹೊಸ ವಿಧಾನ ಅನುಸರಿಸಿರುವುದು ಕೂಡ ಮೆಚ್ಚುಗೆ ಹುಟ್ಟಿಸುತ್ತದೆ.

೪. ಕ್ರಾಂತಿಕಾರಕ ಎನ್ನಬಹುದಾದ ನಡೆಯನ್ನು ತೋರುವ ಮಠದ ಸ್ವಾಮಿ ನೀಲಗಂಗಯ್ಯ ಮತ್ತು ಸಂವಾದಿಯಾದ ಪಾತ್ರದಂತೆ ಕಾಣುವ ಯೋಗೀಬೆಟ್ಟದ ಅಮರಪ್ರೇಮಿಯಂಥ ಪಾತ್ರಗಳು. ಒಂದೆಡೆ ರಾಮದಾಸ್ ತರದವರ ವಿಚಾರವಾದಿ ನಿಲುವು ಹೊಂದಿದವರ ಬೆಂಬಲ ಮತ್ತು ಇನ್ನೊಂದೆಡೆ ಪಾದ್ರಿ ಪಾಲಣ್ಣ, ಊರಿನ ಹಿರಿಯರು ತಳೆಯುವ ಉದಾರವಾದಿ ನಿಲುವುಗಳು ಕಾದಂಬರಿಯ ಒಟ್ಟಂದಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ. ಸ್ವಲ್ಪ ರೊಮ್ಯಾಂಟಿಕ್ ಅನಿಸಿದರೂ ಅಸಹಜವೇನಲ್ಲ ಅನಿಸುವುದರಿಂದಲೂ, ಇಡೀ ಕಾದಂಬರಿಯ ‘ಒಳಗೊಳ್ಳುವಿಕೆ’ಯ ಸಮುದಾಯ ಪ್ರಜ್ಞೆಯೂ ಈ ನಡೆಗೆ ಪೂರಕವಾಗಿಯೇ ಬಂದಿದೆ. ಚನ್ನಪಟ್ಟಣದ ಚಿತ್ರ ಕೂಡ ಇದಕ್ಕೆಲ್ಲ ಪೂರಕವಾಗಿಯೇ ಇರುವುದನ್ನು ಇಲ್ಲಿ ಗಮನಿಸಬಹುದು.

೫ ಚನ್ನಪಟ್ಟಣದ ಗೊಂಬೆ ತಯಾರಿ, ರಾಜ್ಕುಮಾರನ ಸಿನಿಮಾ ಮತ್ತು ಪ್ರೇಮದ-ಕಾಮದ ಕಥನದ ರಂಜನೆ ಕಾದಂಬರಿಗೆ ತಂದಿರುವ ಸೊಗಸು.

೬. ಕಾದಂಬರಿಯ ಉತ್ತರಾರ್ಧದಲ್ಲಿ ಭಾರತಿಯ ಮಗುವಿನೊಂದಿಗೆ, ಭಾರತಿಯ ಮನೆಯ ಟೆರೇಸಿನಲ್ಲಿ ಹೂಗಿಡಗಳೊಂದಿಗೆ ಚಂದ್ರ ಕಳೆಯುವ ಸಮಯದ ವಿವರಗಳು, ನಿರೂಪಣೆ, ಭಾರತಿ ಮತ್ತು ಚಂದ್ರನ ಕೆಲವೇ ಕೆಲವು ಏಕಾಂತದ ಸಮಾಗಮದ ಚಿತ್ರಗಳು ಅತ್ಯಂತ ಆಪ್ತವೂ, ಹೃದ್ಯವೂ ಆಗಿ ಮೂಡಿಬಂದಿದ್ದು ಕಾವ್ಯದ ಲಯ ಪಡೆದಿವೆ, ಬಹುಕಾಲ ಮನದಲ್ಲುಳಿಯುತ್ತವೆ.

ಇಷ್ಟೆಲ್ಲ ಇದ್ದೂ ಬಹುಶಃ ನಾನು ನಟರಾಜ್ ಹುಳಿಯಾರ್ ಅವರಿಂದ ಸಿಕ್ಕಾಪಟ್ಟೆ ನಿರೀಕ್ಷಿಸಿ ಬಿಟ್ಟೆನೊ ಅಥವಾ ನಟರಾಜ್ ಹುಳಿಯಾರ್ ಅವರೇ ಇಲ್ಲಿ ಚಳವಳಿ-ಹೋರಾಟಗಳ ವಿವರಗಳನ್ನು ಮೊಟಕುಗೊಳಿಸಿದ್ದರಿಂದಲೋ, ಚಂದ್ರ-ಭಾರತಿಯರ ಮದುವೆಗೇ ಕಥಾನಕದ ಕ್ಲೈಮ್ಯಾಕ್ಸ್ ಕೇಂದ್ರೀಕರಿಸಿದ್ದರಿಂದಲೋ, ಚಂದ್ರನ ಇನ್ನೂ ಕೆಲವು ಫೀಲ್ಡ್ ವರ್ಕ್ಸ್ ಕುರಿತ ವಿವರ ತರದೇ ಕೈಬಿಟ್ಟಿದ್ದರಿಂದಲೋ, ಚಂದ್ರನ ಬಾಲ್ಯ- ಬೆಂಗಳೂರಿನ ಶಿಕ್ಷಣ - ಕ್ಷೇತ್ರಕಾರ್ಯಗಳು - ಚಳವಳಿ, ಹೋರಾಟಗಳು ಮತ್ತು ಪ್ರೇಮ ಕಾಮದ ವಿವರಗಳು ಎಲ್ಲದರ ನಡುವೆ ಅಗತ್ಯವಿದ್ದ ಒಂದು ಸಂತುಲನವನ್ನು ಪುಟಗಳ ದೃಷ್ಟಿಯಿಂದಲೊ ಇನ್ನೊಂದೊ ತರದೇ ಇರುವುದರಿಂದಲೊ...... ಗೊತ್ತಿಲ್ಲ, ಒಂದು ಅದ್ಭುತ ಕಾದಂಬರಿಯ ನಿರೀಕ್ಷೆಯಲ್ಲಿದ್ದವನಿಗೆ ಅಷ್ಟೇನೂ ಕುಶಿಯಾಗದೇ ಹೋಯ್ತು. ಹಾಗಾಗಿ ನಟರಾಜ್ ಹುಳಿಯಾರ್ ಅವರು ಅತಿ ಶೀಘ್ರದಲ್ಲೇ ಇನ್ನೊಂದು ಕಾದಂಬರಿ ಬರೆದು ನನ್ನಂಥವರ ಅಸಂತೃಪ್ತ ಆತ್ಮಕ್ಕೆ ಶಾಂತಿ ಒದಗಿಸುತ್ತಾರೆಂದು ನಿರೀಕ್ಷಿಸುತ್ತೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, April 21, 2019

ವಿಶಿಷ್ಟ ಧ್ವನಿಯ ‘ಆ ಬದಿಯ ಹೂವು’

ಲೇಖಕನೊಬ್ಬನ ಹೊಸ ಪುಸ್ತಕ ಬಿಡುಗಡೆಯಾದಾಗ ಆತನ ಹಳೆಯ ಪುಸ್ತಕವನ್ನು ತೆರೆದು ಓದು ಎಂದಿದ್ದಾನೆ ಒಬ್ಬ ಲೇಖಕ. ಇದಕ್ಕೆ ಬಹಳ ಅರ್ಥವಿದೆ. ಬೇರೆ ಬೇರೆ ರೀತಿ ಇದನ್ನು ಅರ್ಥೈಸುವುದಕ್ಕೂ ಸಾಧ್ಯವಿದೆ, ಇರಲಿ.

ಈಗ ದೀಪ್ತಿ ಭದ್ರಾವತಿಯವರ ಹೊಸ ಕಥಾಸಂಕಲನ ‘ಗೀರು’ ಹೊರಬಂದಿದೆ. ನಾನು ಮಾತ್ರ ಸ್ವಲ್ಪ ತಡವಾಗಿ ಅವರ ಮೊದಲ ಕಥಾಸಂಕಲನ ‘ಆ ಬದಿಯ ಹೂವು’ ಕೃತಿಯನ್ನು ಈಗಷ್ಟೇ ಓದಿ ಮುಗಿಸಿದ್ದೇನೆ. ಅವರದೇ ಕವನ ಸಂಕಲನ ‘ಕಾಗದದ ಕುದುರೆ’ ಈ ಕಥಾಸಂಕಲನದ ಜೊತೆ ಎಲ್ಲಿಲ್ಲದ ಜಿದ್ದಿನಿಂದ ಸ್ಪರ್ಧಿಸುವುದನ್ನು ಕಂಡು ಅಚ್ಚರಿಗೊಂಡಿದ್ದೇನೆ. ಈ ಸಂದರ್ಭದಲ್ಲಿ ಎರಡು ಮಾತುಗಳು.


ಸುಮಾರು 2013 ರಿಂದ 2015 ರ ಅವಧಿಯಲ್ಲಿ ಪ್ರಕಟಗೊಂಡ ಹನ್ನೊಂದು ಕತೆಗಳಿರುವ ಈ ಸಂಕಲನದಲ್ಲಿ ವಿಶೇಷ ಎನ್ನುವಂಥ ಕೆಲವೊಂದು ವೈಶಿಷ್ಟ್ಯಪೂರ್ಣ ಕತೆಗಳಿವೆ. ಬೆವರ ಹನಿಯನ್ನು ಕೊಂಡುಕೊಳ್ಳುವ ಒಂದು ಕಂಪೆನಿ, ಹಣಕ್ಕಾಗಿ ತಮ್ಮದೇ ಬೆವರನ್ನು ಮಾರಬಹುದು ಎಂಬ ಪರಿಕಲ್ಪನೆಗೆ ಒಪ್ಪಿಕೊಂಡು ಅದನ್ನು ಮಾರಲು ಮುಂದಾಗುವ ಊರ ಮಂದಿ - ಇದನ್ನು ದೀಪ್ತಿ ಎಷ್ಟು ಅಥೆಂಟಿಕ್ ಎಂಬಂತೆ ನಿರೂಪಿಸಿದ್ದಾರೆಂದರೆ, ಈ ಕಥಾಜಗತ್ತನ್ನು ಒಮ್ಮೆ ಸೇರಿಕೊಂಡ ಮೇಲೆ ಎಲ್ಲಿಯೂ ಇದೆಲ್ಲ ಸುಳ್ಳು ಎಂಬ ಅನುಮಾನ ಕೂಡ ಸುಳಿಯುವುದಿಲ್ಲ! ಅಂಥ ಮಾಂತ್ರಿಕ ವಾಸ್ತವತೆಯನ್ನು ಸಾಧಿಸಿದ ಕತೆ (‘ಬೆವರಸಂತೆ’)ಯಿದು. ಬಹುಶಃ ದೀಪ್ತಿಯವರ ಭಾಷೆ, ನಿರೂಪಣಾ ಶಕ್ತಿಗೇ ಅಂಥ ಒಂದು ಸಾಮರ್ಥ್ಯ ಒಲಿದು ಬಂದಿದೆ ಎನ್ನಬೇಕು. ಏಕೆಂದರೆ, ‘ಕ್ಲೈಮ್ಯಾಕ್ಸ್’ ಎಂಬ ಒಂದು ಪುಟ್ಟ ಕತೆಯಲ್ಲಿ ಮಗು ಏನಾಗುವುದೋ ಎಂಬ ಆತಂಕ ಓದುಗನನ್ನು ಯಾವ ಮಟ್ಟಿಗೆ ಆವರಿಸುವುದೆಂದರೆ, ಕತೆಯ ಮುಖ್ಯ ಮುದ್ದೆಯೇ ಗೌಣವಾಗಿ ಬಿಡುವಷ್ಟು! ‘ಬೆವರಸಂತೆ’ ಕತೆಯಷ್ಟೇ ವಿಶಿಷ್ಟವಾದ ಇನ್ನೊಂದು ಕತೆ ‘ನೆವ’. ‘ನೆವ’ ಕತೆಯಲ್ಲಿ ಒಂದು ನಿಟ್ಟಿನ ವಾಸ್ತವ ಚಿತ್ರಣ ಮಾತ್ರವಿದೆ, ಕಥಾನಕವಿಲ್ಲ. ಎರಡು ಪ್ರಧಾನ ಪಾತ್ರಗಳ ನಡುವಣ ಸಂಭಾಷಣೆಯಲ್ಲಿ ಅವೆಲ್ಲವೂ ತೆರೆದುಕೊಳ್ಳುತ್ತ ಹೋಗುತ್ತದೆ. ಆ ಎರಡು ಪಾತ್ರಗಳೆಂದರೆ, ಒಂದು ಸಾವು ಮತ್ತು ಇನ್ನೊಂದು ಶವಾಗಾರ!

ಸುಮಾರಾಗಿ ಒಂದೇ ನಿಟ್ಟಿನ ವಸ್ತು ಇರುವ ಎರಡು ಕತೆಗಳು ಈ ಸಂಕಲನದಲ್ಲಿವೆ. ಮೊದಲನೆಯದು, ‘ದೇವರ ಕಲ್ಲು’ ಮತ್ತು ಎರಡನೆಯದು ‘ಇರುಳುಗಣ್ಣಿನ ಬೆಳಕು’. ಕೆಲ ಸಮಯದ ಹಿಂದೆ ನನ್ನ ಒಬ್ಬ ಗೆಳೆಯ ಚಂದ ಕಂಡಿತು ಅಂತ ಆನ್‌ಲೈನಿನಲ್ಲಿ ಒಂದು ಗಣಪತಿಯ ವಿಗ್ರಹಕ್ಕೆ ಆರ್ಡರ್ ಸಲ್ಲಿಸಿದ. ಮಾರ್ಬಲ್‌ನಲ್ಲಿ ಅಂದವಾಗಿ ಕೆತ್ತಿದ ಆ ಗಣಪತಿಯ ಮೂರ್ತಿ ಡೆಲಿವರಿಯಾದಾಗಲೇ ಗೊತ್ತಾಗಿದ್ದು, ಅದು ಪುಟ್ಟ ಮೂರ್ತಿಯಾಗಿರದೆ ಒಂದಡಿಯಷ್ಟು ದೊಡ್ಡದಾಗಿದ್ದು ಅಂತ! ಅದೆಷ್ಟು ಮುದ್ದಾಗಿತ್ತೆಂದರೆ ಮನೆಯವರಿಗೆಲ್ಲ ತುಂಬ ಇಷ್ಟವಾಗಿ ಕೂಡಲೇ ಅದನ್ನು ದೇವರ ಕೋಣೆಯಲ್ಲಿ ಪ್ರತಿಷ್ಠಿತವಾಗಿ ಯಾವತ್ತಿನ ಪೂಜೆ ಪುರಸ್ಕಾರ ಎಲ್ಲ ನಡೆಯತೊಡಗಿತು. ಸ್ವಲ್ಪ ಸಮಯದ ನಂತರ ಯಾವುದೋ ದೇವತಾ ಕಾರ್ಯಕ್ಕೆ ಮನೆಗೆ ಬಂದ ಪುರೋಹಿತರು ಮಾತ್ರ ಇದನ್ನು ಯಾರು ತಂದರು, ಎಲ್ಲಿಂದ ಬಂತು, ಯಾವುದರದ್ದು ಇದು, ಇಲ್ಲಿ ಇಟ್ಟಿದ್ದು ಯಾಕೆ, ದೀಪ ಹಚ್ಚುತ್ತಿದ್ದೀರಾ ಎಂದೆಲ್ಲ ಪ್ರಶ್ನಿಸುತ್ತಲೇ ಹೋದರು. ಕೊನೆಗೆ ಅವರು ಹೇಳಿದ್ದೆಂದರೆ, ಮುಷ್ಟಿಗಾತ್ರಕ್ಕಿಂತ ದೊಡ್ಡ ಗಣಪತಿಯನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು, ಪೂಜಿಸುವುದಾದರೆ ಅದಕ್ಕೆಲ್ಲ ತುಂಬ ಕ್ರಮ, ನೇಮ ನಿಯಮ ಅನುಸರಿಸಬೇಕು. ಹೀಗೆಲ್ಲ ಮನೆಯಲ್ಲಿ ದೊಡ್ಡ ಗಾತ್ರದ, ಅದೂ ಮಾರ್ಬಲ್ಲು ಅಂತೀರಿ, ಅದು ಕಲ್ಲೇ ಅಲ್ಲವೆ, ಕಲ್ಲಿನ ವಿಗ್ರಹ ಇಟ್ಟು ಪೂಜೆ ಮಾಡಿದವರು ಮುಂದೆ ಅದನ್ನೇ ದೇವಸ್ಥಾನ ಮಾಡಬೇಕಾಗಿ ಬಂದ ಉದಾಹರಣೆಗಳಿವೆ. ನೀವು ಸ್ವಲ್ಪ ಹಿಂದೆ ಮುಂದೆ ನೋಡಿ ಆರ್ಡರ್ ಮಾಡಬೇಕಿತ್ತು. ಇದು ಸರಿಯಲ್ಲ. ಮಧ್ಯಮವರ್ಗದ ಆ ಮನೆಯವರ ನೆಮ್ಮದಿಯೇ ಹಾರಿಹೋಗುವಂತೆ ಮಾಡಿದ್ದರು ಭಟ್ಟರು.

ಮನುಷ್ಯ ತನ್ನದೇ ಒಳ್ಳೆಯತನದ ಪ್ರತೀಕವಾಗಿ ದೇವರು ಎನ್ನುವ ಒಂದು ಪರಿಕಲ್ಪನೆಯನ್ನು ಸೃಷ್ಟಿಸುತ್ತಾನೆ. ಮುಂದೆ ತನಗೆ ಬೇಕಾದಂತೆ ಅದಕ್ಕೊಂದು ರೂಪ, ಆಕೃತಿ ಕೊಡುತ್ತಾನೆ. ಅದರ ಮಹತ್ವ ಹೆಚ್ಚಿಸಲು ತಾನೇ ಒಂದಿಷ್ಟು ನೇಮ, ನಿಯಮ, ಕ್ರಮ ನಿರ್ಧರಿಸುತ್ತಾನೆ. ಸಾವಿರಾರು ವರ್ಷಗಳ ಪರಂಪರೆಯೊಂದಿಗೆ ತಾನು ನಿರ್ಮಿಸಿದ ಕಟ್ಟುಕಟ್ಟಳೆಯಿಂದ ತಾನೇ ಹೊರಬರಲಾರದೆ ನಾಶವಾಗುತ್ತಾನೆ. ಸರಳವಾಗಿ ಯೋಚಿಸಿದರೆ ಇದು ಅಷ್ಟೇ. ಆದರೆ ಬದುಕು ಅಷ್ಟು ಸರಳವಾಗಿ ಇಲ್ಲವೇ ಇಲ್ಲ ಎನ್ನುವುದು ನಮಗೆಲ್ಲ ಗೊತ್ತು. ಇಲ್ಲಿ ಇದೇ ರೀತಿ ಮನೆ ಸೇರಿಕೊಂಡ ಒಂದು ಕಲ್ಲು ಅಲಮೇಲಮ್ಮನ ನಿದ್ದೆಗೆಡಿಸುವ ಕಲ್ಲಾಗುತ್ತದೆ. ಯಕ್ಷಗಾನದ ಬೇಡಿಕೆ ಕುಗ್ಗುತ್ತಿರುವಾಗ ಅದನ್ನು ಮೇಲಕ್ಕೆತ್ತಲೆಂದು ಮಾಡಿದ ಒಂದು ನಾಟಕ ಕೈದುವಿನ ಬದುಕಿಗೆ ಭಾಷ್ಯ ಬರೆಯುತ್ತದೆ. 

ಇಂಥ, ನಿರ್ವಹಣೆ ಕಷ್ಟಕರವೆನಿಸುವ, ಸದ್ಯದ ವ್ಯವಸ್ಥೆಯಲ್ಲಿ ನಿಭಾಯಿಸಲೂ ಕಠಿಣವಾದ ಸಾಮಾಜಿಕ-ತಾತ್ವಿಕ ಆಯಾಮವುಳ್ಳ ಕತೆಗಳನ್ನು ದೀಪ್ತಿಯವರು ಕೈಗೆತ್ತಿಕೊಂಡಿರುವುದು ಅವರ ಬಗ್ಗೆ ಹೆಮ್ಮೆ ಮೂಡಿಸುತ್ತದೆ. ಬಹುಶಃ ಇಂಥ ಸವಾಲನ್ನು ಎದುರಿಸಲು ತಯಾರಾಗುವಲ್ಲಿಯೇ ಒಬ್ಬ ಕತೆಗಾರನ ಜೀವನದೃಷ್ಟಿ, ಆಶಯ ಸ್ಪಷ್ಟಗೊಳ್ಳುವುದು ಕೂಡ ಅನಿಸುತ್ತದೆ. ಆ ರೀತಿ ಅದ್ಭುತವಾಗಿ ಈ ಎರಡೂ ಕತೆಗಳನ್ನು ದೀಪ್ತಿಯವರು ನಿರ್ವಹಿಸುತ್ತಾರೆ.

‘ಗ್ರಾಸ’ ಮತ್ತು ‘ಅಂಚು’ ಕತೆಗಳು ಆಸ್ಪತ್ರೆಯ ಹಿನ್ನೆಲೆಯನ್ನಿರಿಸಿಕೊಂಡಿರುವ ಕತೆಗಳು. ಆದರೆ ಆಸ್ಪತ್ರೆ ಎಂದಾಕ್ಷಣ ಸಿದ್ಧಿಸುವ ಒಂದು ಭಾವನಾತ್ಮಕ ಸಂವೇದನೆಯ ಎಳೆಯನ್ನು ತಮ್ಮ ಕತೆಯ ಯಶಸ್ಸಿಗೆ ಬಳಸಿಕೊಳ್ಳದೆ, ಅಲ್ಲಿನ ಯಥಾವತ್ ಚಿತ್ರವನ್ನಷ್ಟೇ ಕಟ್ಟಿಕೊಡುತ್ತ, ಭಾವಕ್ಕಿಂತ ಬುದ್ಧಿಗೆ ಹೆಚ್ಚು ಪ್ರಾಧಾನ್ಯ ಕೊಡುತ್ತ ತಮ್ಮ ಕಥಾಜಗತ್ತನ್ನು ಕಟ್ಟುತ್ತಾರೆ ದೀಪ್ತಿ. ಇಲ್ಲಿನ ಕಥಾಜಗತ್ತಿನ ಅಥೆಂಟಿಸಿಟಿ ಅವರಿಗೆ ಹೆಚ್ಚು ಮುಖ್ಯ ಅನಿಸಿರಬೇಕು. ವಸ್ತು, ಓದುಗನ ಭಾವಸಂವೇದನೆಯನ್ನು ಮೀಟುವುದಕ್ಕಿಂತ ಹೆಚ್ಚು ಮುಖ್ಯವಾಗಿ ಅವನ ವಿವೇಚನೆಯನ್ನು ಕೆಣಕಬೇಕು ಎನಿಸಿರಬೇಕು. ಇಲ್ಲಿ ಕೂಡ ಸವಾಲನ್ನು ಎತ್ತಿಕೊಂಡು ಕತೆಯನ್ನು ಬೆಳೆಸುವ, ಕಟ್ಟುವ ಮನೋಧರ್ಮವೇ ಕಾಣುತ್ತದೆ.

ಸಂಕಲನದ ಹೆಸರನ್ನೇ ಹೊತ್ತ ಕತೆ ‘ಆ ಬದಿಯ ಹೂವು’ ನಿರಂಜನರ ‘ಕೊನೆಯ ಗಿರಾಕಿ’ ಕತೆಯ ನೆನಪನ್ನು ಬೇಡವೆಂದರೂ ತರುವಂತಿದೆ. ಹೆಚ್ಚು ಆಳವಾದ ಮತ್ತು ಜೀವಂತಿಕೆಯಿಂದ ತುಂಬಿದ ವಿವರಗಳಿಂದ ಈ ಕತೆಯನ್ನು ಆಸ್ಥೆಯಿಂದ ಕಟ್ಟಿರುವುದು ಗಮನಕ್ಕೆ ಬರುತ್ತದೆ. ಹಾಗಿದ್ದೂ ಈ ಸಂಕಲನದ ತುಂಬ ಮಹತ್ವದ ಕತೆಗಳು, ಮಹತ್ವಾಕಾಂಕ್ಷೆಯ ಕತೆಗಳು ಮತ್ತು ಒಂದು ಯಶಸ್ವೀ ಸಣ್ಣಕತೆಗಿರಬೇಕಾದ ಎಲ್ಲಾ ಅಂಶಗಳನ್ನೂ ಸಮರ್ಥವಾಗಿ ಮೈಗೂಡಿಸಿಕೊಂಡು ಮೂಡಿರುವ ಕತೆಗಳು ಎಂದು ಅನಿಸುವುದು ಮಾತ್ರ ಉಳಿದ ಮೂರು ಕತೆಗಳೇ.

‘ನೀಲಾಂಬರ’ ಕತೆ ಒಂದರ್ಥದಲ್ಲಿ ಒಂದು ಊರಿನ ಉಚ್ಛ್ರಾಯದ ಹಾಗೆಯೇ ಅವನತಿಯ, ಮನುಷ್ಯನ ನಿರಂತರವಾದ ಹೊಟ್ಟೆಪಾಡಿನ ಹೋರಾಟದ ಹಲವು ಮಜಲುಗಳ ಸಾಂಸ್ಕೃತಿಕ ದಾಖಲೆ. ಇಲ್ಲಿ ಸಿದ್ಧ ಮಾದರಿಯ ಸಣ್ಣಕತೆಗಳಲ್ಲಿ ನಾವು ಕಾಣುವ ಅಥವಾ ನಿರೀಕ್ಷಿಸುವ ಕಥಾನಕದ ಹಂದರ ಇಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಒಂದು ಕಾದಂಬರಿಯ ಹರಹು ಉಳ್ಳ ಕಥಾನಕ, ಹಲವು ಜೀವಗಳ ಬದುಕಿನ ಇತಿಹಾಸ, ಕುಟುಂಬದ ಇತಿಹಾಸ ಇದೆ. ಇವೆಲ್ಲ ಸೇರಿ ನಿರ್ಮಿಸುವ ಒಂದು ಊರಿನ ಚಿತ್ರವಿದೆ. ಒಂದು ಊರಿನೊಂದಿಗೆ ಆ ಊರಿನ ಒಳಗಿನವರಾಗಲಾಗದೆ, ಹೊರಗಿನವರೆಂದುಕೊಳ್ಳಲೂ ಆಗದೆ ನಡೆಸುವ ಬದುಕಿನ ಅನುಸಂಧಾನದ ಅತಿಸೂಕ್ಷ್ಮ ಎಳೆಯನ್ನು ಇಲ್ಲಿ ದೀಪ್ತಿ ಭದ್ರಾವತಿ ಮೀಟುತ್ತಿದ್ದಾರೆ. ಹೊಸ ಕತೆಗಾರರು ಮುಟ್ಟಲೂ ಹೆದರುವಂಥ ವಸ್ತು, ಆಕೃತಿಗಳ ಹಂದರವಿದು. ಈ ಸಂಕಲನದ ಯಶಸ್ವೀ ಕತೆಗಳಲ್ಲೊಂದು ಇದು. ತುಂಬ ಆಕರ್ಷಕವಾಗಿ ಮೂಡಿಬಂದಿರುವ ‘ತಿಮ್ಮಯ್ಯ ಮಾರ್ಕೆಟ್’ ಕತೆಯನ್ನು ಮೀರಿಸುವ ಕತೆ ಕೂಡ.

‘ಕನ್ನಡಿಗಳು’ ಕತೆ ಕೆಲವೊಂದು ಸೀಮಿತ ಕಾರಣಗಳಿಗಾಗಿ ವೈದೇಹಿಯವರ ಕತೆಯನ್ನು ನೆನಪಿಸುವ ಕತೆ. ಆದರೆ ವೈದೇಹಿಯವರ ಕತೆಗಳ ಛಂದಸ್ಸೇ ಬೇರೆ, ದೀಪ್ತಿಯವರ ಕತೆಗಳ ಕೇಂದ್ರ, ಕಾಳಜಿಗಳೇ ಬೇರೆ. ಬದುಕಿನ ಏರು ಪೇರುಗಳು (ಸಂತಸದ, ಸಂಕಟದ ಕ್ಷಣಗಳು) ಮತ್ತು ಮನಸ್ಸಿನ ಏರು ಪೇರುಗಳು (ಸಣ್ಣತನ, ಅಸೂಯೆ, ದ್ವೇಷ, ಹಠಸಾಧನೆ, ದುರಾಸೆ ಇತ್ಯಾದಿಗಳು ಒಂದೆಡೆ, ಪ್ರೀತಿ, ಔದಾರ್ಯ, ಅಂತರ್ಯದ ಸತ್ ಇನ್ನೊಂದೆಡೆ) ಎರಡೂ ಸೇರಿ ಮನುಷ್ಯ ಸಂಬಂಧಗಳ ರೂಪುರೇಶೆಯನ್ನು ನಿರ್ಧರಿಸುವಂಥ ಬದುಕು ನಮ್ಮದು. ಮನುಷ್ಯನ ಮನಸ್ಸು ಅರ್ಥ ಹುಡುಕುತ್ತದೆ. ಘಟನೆ, ಸನ್ನಿವೇಶ, ನಡೆಗಳಿಗೆ ಒಂದು ಅರ್ಥ, ಉದ್ದೇಶ, ಒಟ್ಟಾರೆ ಆಕೃತಿಯನ್ನು ಅದು ಹುಡುಕಾಡುತ್ತಲೇ ಇರುತ್ತದೆ. ಆದರೆ, ಬಹುಶಃ ಅಂಥದ್ದೆಲ್ಲ ಏನೂ ಇರುವುದಿಲ್ಲ ನಮ್ಮ ಬದುಕಲ್ಲಿ. ಇದೆ ಎಂದುಕೊಳ್ಳುತ್ತೇವೆ, ಇದೆ ಎಂದು ನಂಬುತ್ತೇವೆ, ಆಗ ಅದೇನೋ ಭರವಸೆ ಸಿಕ್ಕಂತಿರುತ್ತದೆ. ಈ ಭರವಸೆಯ ಆಧಾರದ ಮೇಲೆ ಇವ ಕೆಟ್ಟವ, ಇವ ಒಳ್ಳೆಯವ ಎನ್ನುವುದೆಲ್ಲ ನಿರ್ಧಾರವಾಗುತ್ತದೆ. ಗೊತ್ತಿರುತ್ತದೆ, ಇಲ್ಲಿ ಕೆಟ್ಟವರು-ಒಳ್ಳೆಯವರು ಎಂದು ವಿಂಗಡಿಸಲು ಸಾಧ್ಯವಿರುವಂಥ ಮನುಷ್ಯರಿಲ್ಲ ಎನ್ನುವ ಸತ್ಯ ಕೂಡ, ಗೊತ್ತಿರುತ್ತದೆ. ಹಾಗಿದ್ದೂ....

ತುಂಬ ಇಷ್ಟವಾದ ಇನ್ನೊಂದು ಕತೆ, ‘ತಿಮ್ಮಯ್ಯ ಮಾರ್ಕೆಟ್’. ಈ ಕತೆ ಎಲ್ಲರಿಗೂ ಇಷ್ಟ. ಹಾಗಾಗಿ ಇದರ ಬಗ್ಗೆ ಹೊಸದಾಗಿ ನಾನೇನು ಹೇಳಹೋದರೂ ಅದು ಹೆಚ್ಚಿನದ್ದನ್ನು ಸೇರಿಸಲಾರದೇನೊ. ಈ ಕತೆಯಲ್ಲಿ ‘ನೀಲಾಂಬರ’ ಕತೆಯ ಇಂಪ್ರೂವೈಸೇಶನ್ ಇದೆ ಎನಿಸುವಾಗಲೇ ಅದಿರುವುದು ‘ನೀಲಾಂಬರ’ದಲ್ಲೇ ಅಲ್ಲವೆ ಅನಿಸತೊಡಗುತ್ತದೆ! ವಸ್ತು, ಆಕೃತಿ, ತಂತ್ರ ಎಲ್ಲ ದೃಷ್ಟಿಯಿಂದಲೂ ಈ ಕತೆ ಸಾಧಿಸಿದ ಸಂತುಲನ ವಿಶೇಷವಾಗಿದೆಯಲ್ಲವೇ ಎನಿಸುವಾಗಲೇ ದೀಪ್ತಿಯವರು ಇಲ್ಲಿ ‘ಹೇಳು’ವುದಕ್ಕಿಂತ ಹೆಚ್ಚಿನದನ್ನು ‘ಕಾಣಿಸು’ತ್ತಿದ್ದಾರಲ್ಲ; ಅವರ ಇನ್ಯಾವ ಕತೆಯಲ್ಲೂ ಕಾಣಿಸದ ಕಾವ್ಯಮಯತೆಯೊಂದು ಇಲ್ಲಿ ಸದ್ದಿಲ್ಲದೆ ತನ್ನ ನಾದ ಮೀಟುತ್ತಿದೆಯಲ್ಲ ಎನಿಸುವಾಗಲೇ ಕವಿಯಾಗಿ, ಹೆಣ್ಣಾಗಿ ಅವರು ಈ ಮಾಧುರ್ಯದ ನೆಲೆಯನ್ನು ಮುಂದಿನ ಕತೆಗಳಲ್ಲಿ ಬೇಕಂತಲೇ ಬಿಟ್ಟು ನಡೆದಂತಿದೆಯಲ್ಲ ಅನಿಸತೊಡಗುತ್ತದೆ. ಬಹುಶಃ ದೀಪ್ತಿಯವರ ‘ಕಾಗದದ ಕುದುರೆ’ ಸಂಕಲನದ ಆಳ, ಗಾಢ, ಸೂಕ್ಷ್ಮಗಳೆಲ್ಲ ಗಮನಿಸಿದರೆ ಅವರು ಕವನ ಬರೆಯುತ್ತಿದ್ದರೇ ಹೆಚ್ಚು ಹೆಚ್ಚು ಸಿಗುವಂತಾಗುತ್ತಿತ್ತೇನೋ ಎನಿಸುವಾಗಲೇ ಆಗ ಈ ಕತೆಗಳು ಸಿಗುತ್ತಿರಲಿಲ್ಲವೇನೋ ಅನಿಸತೊಡಗುತ್ತದೆ. ಮೊದಲೇ ಹೇಳಿದಂತೆ, ಮತ್ತೆ ನಾನು ಹೊರಟಲ್ಲಿಗೇ ಬಂದು ಮುಟ್ಟಿದಂತಾಗುತ್ತದೆ. ಹೀಗೆ, ಇದೀಗ ಅವರ ಎರಡನೆಯ ಸಂಕಲನಕ್ಕೆ ಕಾಯುವುದು ಅನಿವಾರ್ಯವಾಗಿದೆ. 

ನಾನೊಮ್ಮೆ ಯಾವುದೋ ಒಂದು ಕಥಾಸ್ಪರ್ಧೆಯ ತೀರ್ಪುಗಾರನಾಗಿದ್ದ ಸಂದರ್ಭದಲ್ಲಿ ‘ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದು ಸಾಕಷ್ಟು ಆತ್ಮವಿಶ್ವಾಸ ಮೂಡಿಸಿಕೊಂಡಿರುವ ಕಥೆಗಾರರು ಪ್ರತಿಷ್ಠಿತ ಸ್ಪರ್ಧೆಗೆ ತಮ್ಮ ಕೃತಿಯನ್ನು ಮುಂದಿಟ್ಟ ಬಳಿಕ ಕೊಂಚ ವಿಮರ್ಶಾತ್ಮಕವಾದ ಪರಿಗಣನೆಗೆ, ಟೀಕೆಗೆ ಮುಕ್ತವಾಗಿರಬೇಕು, ಅದು ಅವರದೇ ಶ್ರೇಯಸ್ಸಿನ ದೃಷ್ಟಿಯಿಂದಲೂ ಒಳ್ಳೆಯದು’ ಎಂದು ಹೇಳಿ ಸುಮಾರು ಐದು ಕಥಾಸಂಕಲನಗಳನ್ನು ಮೊದಲ ಕೃತಿಗೆ ಕೊಡಬೇಕು ಎನ್ನುವ ಒಂದು ನಿಟ್ಟಿನ ಔದಾರ್ಯವನ್ನು ಕೊಡದೇನೆ ವಿಮರ್ಶಿಸುತ್ತಾ ಹೋದೆ. 

ವಸ್ತು, ಭಾಷೆ, ಆಕೃತಿ, ಜೀವನದೃಷ್ಟಿ/ಆಶಯ/ಸಾಮಾಜಿಕ-ತಾತ್ವಿಕ ಆಯಾಮ, ತಂತ್ರ ಮತ್ತು ಅದರ ಪ್ರಯೋಗಶೀಲತೆ, ಹೊಸತನ/ವೈವಿಧ್ಯ/ವೈಶಿಷ್ಟ್ಯ - ಎನ್ನುವ ಆರು ನಿಟ್ಟಿನಲ್ಲಿ ವಿಶ್ಲೇಷಿಸುತ್ತ ಈ ಪ್ರತಿಯೊಂದು ಅಂಶಕ್ಕೂ ಹತ್ತರಲ್ಲಿ ಇಂತಿಷ್ಟು ಅಂಕಗಳು ಎಂದು ಕೊಡುತ್ತ ಹೋದೆ. ಪ್ರತಿಯೊಂದು ಅಂಶಕ್ಕೂ ಒಂದು ಕತೆ ಗಳಿಸಲೇ ಬೇಕಾದ ಕನಿಷ್ಠ ಅಂಕಗಳೂ ಇದ್ದವು. ಅಂದರೆ, ವಸ್ತು (ಕನಿಷ್ಠ ಅಂಕ 2), ಭಾಷೆ (ಕನಿಷ್ಠ ಅಂಕ 8), ಆಕೃತಿ (ಕನಿಷ್ಠ ಅಂಕ 1), ಜೀವನ ದೃಷ್ಟಿ/ಆಶಯ/ಸಾಮಾಜಿಕ - ತಾತ್ವಿಕ ಆಯಾಮ (ಕನಿಷ್ಠ ಅಂಕ 2), ತಂತ್ರ ಮತ್ತು ಅದರ ಪ್ರಯೋಗಶೀಲತೆ (ಕನಿಷ್ಠ ಅಂಕ 1), ಹೊಸತನ/ವೈವಿಧ್ಯ/ವೈಶಿಷ್ಟ್ಯ(ಕನಿಷ್ಠ ಅಂಕ 1) - ಹೀಗೆ. ಈ ರೀತಿ 60 ರಲ್ಲಿ ಒಂದು ಕತೆ ಎಷ್ಟು ಅಂಕ ಗಳಿಸುತ್ತದೆ ಎನ್ನುವುದು ಒಂದು ಹಂತವಾದರೆ, ಉಳಿದ 40 ಅಂಕಗಳು ಪೂರ್ತಿಯಾಗಿ ಒಂದು ಕತೆಗೆ ನನ್ನ ಮನಸ್ಸು ಹೃದಯಕ್ಕೆ ತಟ್ಟುವ ಶಕ್ತಿ ಎಷ್ಟಿದೆ, ಅದು ಕೊಡುವ ಅನುಭವ ಮತ್ತು ನನ್ನಲ್ಲಿ ಉದ್ದೀಪಿಸಿದ ಸಂವೇದನೆ ಹೇಗಿತ್ತು ಎನ್ನುವುದಕ್ಕೆ ಮೀಸಲಿಟ್ಟೆ ಮಾತ್ರವಲ್ಲ, ಈ ಅಂಶದಲ್ಲಿ ಒಂದು ಕತೆ ಕನಿಷ್ಠ ಇಪ್ಪತ್ತು ಅಂಕಗಳನ್ನಾದರೂ ಪಡೆಯದೇ ಹೋದಲ್ಲಿ ಅದು ನೇರವಾಗಿ ಅನರ್ಹಗೊಳ್ಳುವ ನಿಯಮ ಹಾಕಿಕೊಂಡೆ. ಅಂದರೆ, ಮೊದಲು ಹೇಳಿದ ಆರೂ ಅಂಶಗಳಲ್ಲಿ ಒಂದು ಕತೆ ಪೂರ್ತಿ 60 ಅಂಕಗಳನ್ನು ಪಡೆದರೂ ಈ 40 ರಲ್ಲಿ ಅದು ಕನಿಷ್ಠ 20 ಅಂಕ ಪಡೆಯದೇ ಹೋದರೆ ಅದು ಅನರ್ಹವಾಗುತ್ತಿತ್ತು. 

ಇದೆಲ್ಲ ಎಂಥ ಹುಚ್ಚು ಲೆಕ್ಕಾಚಾರ ಎನಿಸಬಹುದು. ನನಗೆ ಬಂದ ಟೀಕೆಗಳಲ್ಲಿ ತುಂಬ ಕಾಡಿದ್ದು, ‘ಇಂಥ ತೀರ್ಪುಗಾರರಿದ್ದರೆ ಕತೆ ಬರೆಯುವುದನ್ನೇ ಬಿಡುವುದು ಒಳ್ಳೆಯದು’ ಎಂಬುದು. ತುಂಬ ಹಿಂದೆ ನಾನೇ ಒಬ್ಬ ವಿಮರ್ಶಕರಿಗೆ ಆಡಿದ ಮಾತಿದು. ಅಂಥ ಮಾತಿನ ಹಿಂದಿರಬಹುದಾದ ನೋವು ನನಗಲ್ಲದೇ ಇನ್ಯಾರಿಗೆ ತಾನೇ ಅರ್ಥವಾದೀತು!

ಅದು ನಿಜ. ಸೃಜನಶೀಲ ಸಾಹಿತ್ಯವನ್ನು ಹೀಗೆ ಅಳೆಯುವುದು, ಅಳೆಯುವುದಕ್ಕೆ ಒಂದು ಮಾನದಂಡವನ್ನು ರೂಪಿಸಿಕೊಳ್ಳುವುದು ತಪ್ಪು. ಆದರೆ ಅದಕ್ಕಿಂತ ದೊಡ್ಡ ತಪ್ಪು, ಸೃಜನಶೀಲ ಸಾಹಿತ್ಯಕ್ಕೆ ಸ್ಪರ್ಧೆ ಏರ್ಪಡಿಸುವುದು ಮತ್ತು ಅಲ್ಲಿ ಯಾರದೋ ಒಂದು ಕೃತಿಯನ್ನು ಸರ್ವಶ್ರೇಷ್ಠ ಎಂದು ತೀರ್ಮಾನಿಸುವುದು. ಈ ಪ್ರಕ್ರಿಯೆಯಲ್ಲಿ ನಡೆಯುವ ವಶೀಲಿಬಾಜಿ, ನಮ್ಮವರು-ನಿಮ್ಮವರು ಎಂಬ ಸ್ವಜನ ಪಕ್ಷಪಾತ, ಇಲ್ಲಿ ಹೇಳಲಾಗದ, ಆದರೆ ಪರಿಗಣನೆಯಲ್ಲಿ ಮಹತ್ವ ಪಡೆಯುತ್ತಿರುವ ಹತ್ತು ಹಲವು ಇತರೇ ಅಂಶಗಳು ನಿಮ್ಮ ಗಮನಕ್ಕೆ ಬಂದಿದ್ದರೆ, ಈ ತಪ್ಪುಗಳ ಬೇರುಗಳು ಎಷ್ಟು ಆಳ-ಅಗಲಕ್ಕೆ ಚಾಚಿಕೊಂಡಿವೆ ಎನ್ನುವುದು ಅರ್ಥವಾಗದೇ ಇರದು. ತೀರ್ಪುಗಾರನಾಗುವ ತಪ್ಪನ್ನು ಇನ್ನೆಂದೂ ಮಾಡದಿರಲು ಈ ಅನುಭವಗಳು ನೆರವಾದವು.


ದೀಪ್ತಿ ಭದ್ರಾವತಿಯವರ ಕಥಾಸಂಕಲನದ ಕುರಿತು ಬರೆಯುವಾಗ ಇದೆಲ್ಲ ನೆನಪಾಗಲು ಕಾರಣವಿದೆ. ಸ್ವತಃ ದೀಪ್ತಿಯವರ ಈ ಸಂಕಲನ. ‘ಆ ಬದಿಯ ಹೂವು’ ಕೂಡ ಚೊಚ್ಚಲ ಸಂಕಲನ ಮತ್ತು ಅದು ಕೂಡ ಹಲವು ಹತ್ತು ಪ್ರಶಸ್ತಿ, ಬಹುಮಾನಗಳನ್ನು ನಿರಾಯಾಸವಾಗಿ ಮತ್ತು ಸಮರ್ಥನೀಯವಾಗಿ ತನ್ನೊಡಲಿಗೆ ಸೇರಿಸಿಕೊಂಡಿರುವ ಕೃತಿ. ಕನ್ನಡದ ಹಿರಿಯ ಮತ್ತು ಖ್ಯಾತ ಕತೆಗಾರರೊಬ್ಬರು ನನಗೆ ಈ ಪುಸ್ತಕದ ಬಗ್ಗೆ ಹೇಳಿ ಇದು ಪಡೆದುಕೊಳ್ಳಬೇಕಾದ ಗಮನ ಪಡೆದುಕೊಳ್ಳದೇ ಹೋಯ್ತು ಎಂದಾಗ ಆಶ್ಚರ್ಯ ಮತ್ತು ಕುತೂಹಲ ಒಟ್ಟಿಗೇ ಮೂಡಿತು. ದೀಪ್ತಿಯವರ ಕತೆಗಳನ್ನು ಓದಲು ಒಂದು ಬಗೆಯ, ಸಿದ್ಧತೆ ಬೇಕು. ಇದುವರೆಗೆ ನಾವು ಓದುತ್ತ ಬಂದ ಕತೆಗಳು ಹುಟ್ಟಿಸಿರುವ ಪಾರಂಪರಿಕವಾದ ನಿರೀಕ್ಷೆಗಳಿಂದ ಭಿನ್ನವಾದ ಒಂದು ಕಥಾಹಂದರಕ್ಕೆ ಮುಕ್ತವಾಗಿ ತೆರೆದುಕೊಳ್ಳಲು ಅಗತ್ಯವಾದ ಸಿದ್ಧತೆ ಅದು. ಇದು, ಅವರು ಇಲ್ಲಿನ ಹನ್ನೊಂದೂ ಕತೆಗಳಲ್ಲಿ ಆಯ್ದುಕೊಂಡ ವಸ್ತುವಿನಿಂದಾಗಲೀ, ತಮ್ಮ ಕತೆಗಳಿಗೆ ಕಲ್ಪಿಸುವ ಆಕೃತಿಯ ವೈಶಿಷ್ಟ್ಯದಿಂದಾಗಲೀ ಹುಟ್ಟಿಕೊಳ್ಳುವ ಅಗತ್ಯವೇನಲ್ಲ. ಸಾಮಾನ್ಯವಾಗಿ ನಾವು ಹಾಗೆ ಭಾವಿಸುತ್ತೇವೆ. ಆದರೆ ಇದು ಹಾಗಲ್ಲ. ಇದು ದೀಪ್ತಿಯವರ ಕತೆಗಳ ಒಂದು ವಿಶೇಷ ಗುಣದಿಂದಾಗಿ ಹುಟ್ಟಿಕೊಂಡ ಅಗತ್ಯ. ಅದು, ಅವರ ಕತೆಗಳಲ್ಲಿ ಬರೀ ಭಾವ ಜಗತ್ತಿನ ಸೂಕ್ಷ್ಮ ಎಳೆಗಳು ಮಾತ್ರ ಓದುಗರನ್ನು ಸೆಳೆಯಲು ಕಾದಿಲ್ಲ. ಬುದ್ಧಿ-ಭಾವ ಎರಡೂ ಹದವಾಗಿ ಬೆರೆತ ಕತೆಗಳಿವು. ಹಾಗಾಗಿಯೇ ಅವರ ನಿರೂಪಣೆಯ ಹದವೇ ಬೇರೆಯಾಗಿದೆ, ವಿಶಿಷ್ಟವಾಗಿದೆ. ಒಂದು ಹಠದಿಂದಲೆಂಬಂತೆ ಈ ಗುಣವನ್ನು ತಮ್ಮ ಪ್ರತಿಯೊಂದು ಕತೆಯಲ್ಲೂ ಕಾಪಿಟ್ಟುಕೊಂಡು ಬರೆಯುವ ದೀಪ್ತಿಯಂಥ ಕತೆಗಾರರು ಅಪರೂಪ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ