Sunday, May 12, 2019

ಕಾದ ಕಲ್ಲಿನ ಮೇಲೆ ಪಾದವೂರಿ ನಿಂತ ಬದುಕಿನ ಪಂದ್ಯ

ಬರೀ ಅರವತ್ತೆಂಟು ಪುಟಗಳಲ್ಲಿ ಏಳೇ ಕತೆಗಳೊಂದಿಗೆ ಮುಗಿಯುವ ಈ ಪುಟ್ಟ ಪುಸ್ತಕ ಊದಿದರೆ ‘ಫೂ’ ಎಂದು ಹಾರಿ ಹೋಗುವಷ್ಟು ತೆಳ್ಳಗಿದೆಯಲ್ಲಾ ಎನಿಸಿದ್ದು ನಿಜ. ಹಾಗೆ ನೋಡಿದರೆ ಮಂಜುನಾಯಕ ಚಳ್ಳೂರು ಅವರು ಬರೆದ ಇನ್ನೂ ಒಂದೆರಡು ಕತೆಗಳನ್ನು ಅಲ್ಲಿ ಇಲ್ಲಿ ನೋಡಿದ ನೆನಪಿದೆ ನನಗೆ. ಹಾಗಿದ್ದೂ ಬರೆದಿದ್ದೆಲ್ಲಾ ಕತೆ, ಪ್ರಕಟವಾದದ್ದನ್ನೆಲ್ಲ ಅದರೊಳಗೆ ತುರುಕುವುದೇ ಪುಸ್ತಕ, ಸುಮಾರು ನೂರಿಪ್ಪತ್ತು ಪುಟ, ಹೆಚ್ಚೂ ಕಡಿಮೆ ಒಂಭತ್ತು ಕತೆ ಎಂದೆಲ್ಲ ವಾಸ್ತು ನೋಡದೆ ಅಪ್ಪಟ ಎನಿಸಿದ ಕತೆಗಳನ್ನು ಮಾತ್ರ ಹೆಕ್ಕಿ, ಆಯ್ದು ಸಂಕಲನ ಮಾಡಿದಂತಿದೆ. ಈ ಸಂಯಮ ಅಪರೂಪದ್ದು ಎಂದಷ್ಟೇ ಹೇಳಿ ಮುಂದುವರಿಯುತ್ತೇನೆ.

ನನ್ನನ್ನು ತೀರ ಕಾಡಿದ ಕತೆ ‘ಪಾತಿ’. ಇದ್ದುದರಲ್ಲಿ ಸ್ವಲ್ಪ ದೊಡ್ಡ ಕತೆ. ಈ ಕತೆಯನ್ನು ಮಂಜು ಅವರು ನಿಭಾಯಿಸಿದ ರೀತಿಗಾಗಿ ನನಗಿದು ಇಷ್ಟ. ಕತೆಯಲ್ಲಿ ಅಂಥ ಹೊಸದೇ ಅನಿಸುವಂಥದ್ದು ಏನಿಲ್ಲ. ಹಾಗೆ ನೋಡಿದರೆ ಇಲ್ಲಿನ ಎಲ್ಲಾ ಕತೆಗಳೂ ಬಾಲ್ಯಕಾಲದ ನೆನಪುಗಳನ್ನೇ ಸುತ್ತಿಕೊಂಡಿವೆ. ಹಾಗಿದ್ದೂ ನಾಸ್ಟಾಲ್ಜಿಯಾದ, ಭಾವುಕತೆಯ, ಓದುಗನನ್ನು ಹೇಗಾದರೂ ಮಾಡಿ ಆರ್ದ್ರಗೊಳಿಸಿ ಓಲೈಸುವ ಯಾವುದೇ ಪ್ರಯತ್ನಗಳನ್ನು ಮಂಜುನಾಯಕ ಮಾಡುವುದಿಲ್ಲ ಮಾತ್ರವಲ್ಲ, ಬಹುಶಃ ಪ್ರಜ್ಞಾಪೂರ್ವಕ ಅಂಥದ್ದನ್ನು ತಪ್ಪಿಸುವ ಪ್ರಯತ್ನವನ್ನೇ ಮಾಡಿದ್ದಾರೆ. ಎಲ್ಲರ ಬಾಲ್ಯ- ಹದಿಹರಯ - ತಾರುಣ್ಯ - ಯೌವನಗಳನ್ನು ಸಣ್ಣ ಪಾಪಪ್ರಜ್ಞೆಯಿಂದ ಕಾಡಬಲ್ಲ ಕೆಲವು ಮಧುರ ನೆನಪುಗಳು (ಬಹುಶಃ ಎಲ್ಲರಲ್ಲೂ) ಇದ್ದೇ ಇರುತ್ತವೆಯೇನೊ. ಆದರೆ ಅದು ಸ್ಪಷ್ಟವಾದ ಒಂದು ಆಕೃತಿ ತಳೆದು ಕತೆಯಾಗುವುದು ಸುಲಭದ ಕತೆಯಲ್ಲ! ಏಕೆಂದರೆ, ಅಲ್ಲಿ ಇದೆ ಎಂದರೆ ಏನೋ ಇದೆ, ಇಲ್ಲವೆಂದರೆ ಏನಿಲ್ಲ. ಹಾಗೆ ಅನ್‌ಸೆಡ್‍ಗಳಿಂದಲೇ ಒಂದು ಕತೆಗೆ ಜೀವಚೈತನ್ಯವನ್ನು ತುಂಬುವುದು ಮತ್ತು ಕತೆ ಮುಗಿದ ಮೇಲೂ ಅದು ಓದುಗನ ಮನದುಂಬುವಂತೆ ಮಾಡುವುದು ದೊಡ್ಡ ಸವಾಲು. ಮಂಜುನಾಯಕ ಗೆದ್ದಿರುವುದೇ ಇಲ್ಲಿ.

ಇದನ್ನೇ ಅವರು ‘ಫೂ’ ಕತೆಯಲ್ಲೂ ಮಾಡಿದ್ದಾರೆ. ಕತೆಯ ಅಂತ್ಯದಲ್ಲೇ ಈ ಗುರುತ್ವ ಇದೆ ಎಂದು ಮೇಲ್ನೋಟಕ್ಕೆ ಅನಿಸಬಹುದಾದರೂ ಅದು ಸುಳ್ಳು. ಈ ಬಗೆಯ ಕತೆಗಳ ನಿಜ ಗುರುತ್ವ ಅದರ ಇಡೀ ಶರೀರದಲ್ಲೇ ಹರಿದಾಡುತ್ತಿರುತ್ತದೆ. ಹಾಗಾಗಿಯೇ ಕತೆ ಮುಗಿದದ್ದೇ ಅದು ನಮ್ಮನ್ನು ಆವರಿಸಬಲ್ಲಷ್ಟು ತೀವ್ರತೆ ಪಡೆದುಕೊಳ್ಳುತ್ತದೆ. ಚಿಕ್ಕತ್ತೆಯಂಥ ಇನ್ನಷ್ಟು ಪಾತ್ರಗಳು ನಮಗೆ ಕನ್ನಡ ಕಥಾಸಾಹಿತ್ಯದಲ್ಲಿ ಕಾಣಿಸುತ್ತವೆ ಮತ್ತು ಕಣ್ಣಮುಂದೆ ಬರುತ್ತವೆಯಾದರೂ ಮುಂಜುನಾಯಕ ಅವರ ಕತೆಯನ್ನು ಓದಿದ ಮೇಲೆ ಹತ್ತಿರದ್ದು ಅನಿಸುವುದು ವಿವೇಕ ಶಾನಭಾಗರ ‘ಕಾರಣ’ ಕತೆಯ ನಾಯಕಿ. ಎರಡೂ ಕತೆಗಳ ನಿರೂಪಕ ಪ್ರಜ್ಞೆ ಪುಟ್ಟ ಹುಡುಗನಾದರೂ ಕತೆಯ ನಿರೂಪಣೆ ಬಾಲಪ್ರಜ್ಞೆಯಲ್ಲಿಲ್ಲ. ನಿರೂಪಣೆಗೆ ಆಯ್ದ ವಿವರಗಳಲ್ಲಿ, ಸನ್ನಿವೇಶಗಳಲ್ಲಿ ಪ್ರಜ್ಞಾಪೂರ್ವಕ ಆಯ್ಕೆ ಇದ್ದರೂ ನಿರೂಪಣೆಯ ಧಾಟಿಯಲ್ಲಿ ಸಾಕಷ್ಟು ಪ್ರಬುದ್ಧತೆಯೇ ಇದೆ. ಹಾಗಾಗಿ ಈ ಕತೆಯಲ್ಲಿನ unsaid ಗಳು ಕೊನೆತನಕ ಹಾಗೆಯೇ ಉಳಿಯುವುದಿಲ್ಲ. ಸಾಲದಿದ್ದರೆ ಎಲ್ಲೋ ಒಂದೆರಡು ಕಡೆ ಕತೆಗಾರನ ಧ್ವನಿಯೂ ಕೇಳಿಸಿದಂತಾಗುತ್ತದೆ. ಈ ಮಾತು ಮುಂದಿನ ‘ಖತಲ್ ರಾತ್ರಿ’ ಮತ್ತು ‘ವಜ್ರಮುನಿ’ ಕತೆಗಳಿಗೂ ಅನ್ವಯಿಸುತ್ತದೆ. ವಾಚಾಳಿತನವೇ, ಕತೆಗಾರನ ವ್ಯಾಖ್ಯಾನವೇ ಎನ್ನುವುದು ಅಷ್ಟು ಸ್ಪಷ್ಟವಾಗದಿದ್ದರೂ ಸೂಕ್ಷ್ಮವಾಗಿ ಓದಿದರೆ ಉಳಿದ ಕತೆಗಳಲ್ಲಿ ಮಂಜುನಾಯಕ ಅವರು ಸಾಧಿಸಿದ ಭಾಷೆಯ ಮಿತವ್ಯಯ ಇಲ್ಲಿಲ್ಲ.

ಭಾಷೆಯಲ್ಲಿನ, ಸನ್ನಿವೇಶದಲ್ಲಿನ ರೂಪಕಗಳ ಬದಲಿಗೆ ಇಡೀ ಕತೆಯ ಆಕೃತಿಯನ್ನೇ ರೂಪಕವಾಗಿಸಬಲ್ಲ ಮಂಜುನಾಯಕ ‘ಖತಲ್ ರಾತ್ರಿ’ ಕತೆಯಲ್ಲಿ ಅದನ್ನು ಸಾಧಿಸಿರುವುದು ಕಣ್ಣಿಗೆ ಕಟ್ಟುತ್ತದೆ. ‘ಫೂ’ ಕತೆಯ ಕಾಮನಬಿಲ್ಲು, ಜಯತ್ತೆಯ ಕಟ್ಟಕೊನೆಯ ಫೂ ಮತ್ತು ನಿರೂಪಕನ ಫೂ ಮೂರೂ ಸೇರಿ ಕಟ್ಟುವ ರೂಪಕವಿಲ್ಲದೇ ಹೋದರೆ ಇಡೀ ‘ಫೂ’ ಕತೆಗೆ ನಾವು ಓದುತ್ತ ಅನುಭವಿಸುವ ಜೀವಚೈತನ್ಯ ದಕ್ಕುತ್ತಿರಲಿಲ್ಲ. ಹಾಗಾಗಿ ಇಲ್ಲಿ ಒಂದು ರೂಪಕವಿಲ್ಲ, ಇಡೀ ಕತೆಯೇ ರೂಪಕವಾಗಿದೆ. ಹಾಗಾಗಿ ಈ ಸಂಕಲನದ ಎಲ್ಲಾ ಕತೆಗಳೂ ಒಳ್ಳೆಯ ಕವಿತೆಯ ಭಾವತೀವ್ರತೆಯೊಂದಿಗೆ ಮಿಡಿಯುತ್ತಿವೆ. ‘ಖತಲ್ ರಾತ್ರಿ’ಯ ಆಚರಣೆಯ ಹಿಂದೆ ಒಂದು ಕತೆಯಿದೆ. ಈ ಕತೆಯ ಪದ್ಮಿನಿ-ಪ್ರಶಾಂತರ ತಂದೆಯದೂ, ಒಟ್ಟು ಸಂಸಾರದ್ದೂ ಒಂದು ಕತೆಯಿದೆ. ಈ ಎರಡೂ ಕತೆಗಳ ಪರಿಪ್ರೇಕ್ಷ್ಯದಲ್ಲಿ ಈ ಒಂದು ರಾತ್ರಿಯ ಸಂಭ್ರಮಾಚರಣೆಯ ಕತೆ ಅರಳುತ್ತಿದೆ. ಇಲ್ಲಿ ದುಃಖ, ಅಸಹಾಯಕತೆ, ಸಿಟ್ಟು, ಹಿಂಸೆಯ ಮನೋಲಹರಿ ಇರುವಂತೆಯೇ ವಾಸ್ತವದ ಬದುಕಿನ ಅನಿವಾರ್ಯಗಳ ಲಯದಲ್ಲಿ ನಕ್ಕುಬಿಡುವ ಸರಳತೆಯೂ ಇದೆ ಎನ್ನುವುದನ್ನು ಗಮನಿಸಿದರೆ ಒಂದು ಹಿಂಸೆಯ ಕಥಾನಕವಿರುವ ಖತಲ್ ರಾತ್ರಿಯ ಆಚರಣೆ ಒಂದು ಸಂಭ್ರಮವಾಗಿ, ಹಬ್ಬಗೊಂಡಿರುವುದರ ಚೋದ್ಯ ನಮಗೆ ಅರ್ಥವಾಗುತ್ತದೆ. ಇದನ್ನೇ ಇಲ್ಲಿ ಮಂಜುನಾಯಕ ತಮ್ಮದೇ ಒಂದು ಕತೆಗೆ ಒಂದು ಅದ್ಭುತ ರೂಪಕವನ್ನಾಗಿಸಿಕೊಂಡು ಕತೆ ಬರೆದಿದ್ದು ಮತ್ತು ಬರೆಯುತ್ತ ತೋರಿರುವ ಕಲಾತ್ಮಕತೆ ಮತ್ತು ಜಾಣತನ ಎರಡೂ ಮನಸೆಳೆಯುತ್ತದೆ.

‘ತೇರು ಸಾಗಿತಮ್ಮ ನೋಡಿರೆ...’ ಕತೆಯಲ್ಲೂ ಪ್ರಶಾಂತ ಕಂಡಂಥದೇ ದುರಂತವಿದೆ. ಶರಣಪ್ಪನ ಸಾವು ಶ್ರೀಶೈಲನನ್ನು ಕಾಡುವ ಬಗೆ ಮತ್ತು ಶರಣಪ್ಪನ ಹಾಡುಗಳು ಅವನಲ್ಲಿ ಹುಟ್ಟಿಸಿರಬಹುದಾದ ಒಂದು ಆಧ್ಯಾತ್ಮಿಕವಾದ ಒಲವು ಜಗತ್ತಿಗೆ ಹುಚ್ಚಿನಂತೆ ಕಂಡರೆ ತನ್ನ ಕೈಗೆ ಬಂದ ಹರಯದ ಮಗ ಊರವರಿಂದ ಹುಚ್ಚ ಅನಿಸಿಕೊಂಡ ಕರುಳ ಸಂಕಟ ವಿಧವೆ ತಾಯಿಯದು. ಈ ಎರಡನ್ನೂ ಮೀರಿದಂತೆ ಸತ್ತ ಶರಣಪ್ಪನ ದೇಹ ಹಳ್ಳದಲ್ಲಿ ಕಣ್ಣೆದುರೇ ತೇಲಿ ಸಾಗುವುದು, ಸಾಗುವ ಮುನ್ನ ಒಂದೆರಡು ನಿಮಿಷ ಮರದ ಕೊಂಬೆಗೆ ಸಿಲುಕಿ ನಿಲ್ಲುವುದು ಕತೆಯ ಹೆಸರಿಗೆ ತಳುಕು ಹಾಕಿಕೊಂಡಂತಿದೆ. ಶ್ರೀಶೈಲ ಹುಚ್ಚನಲ್ಲ, ಅವನಿಗೆ ಎಲ್ಲವೂ ಅರಿವಾಗುತ್ತಿದೆ, ಹುಚ್ಚರು ಯಾರು ಎನ್ನುವುದೂ ಅವನಿಗೆ ಗೊತ್ತಿದೆ. ಆದರೆ ಅವನ ಆಯ್ಕೆ ಈ ಕರ್ತಾರನ ಕಮ್ಮಟದಲ್ಲಿ ಕಾಯಕದ ಕುಲುಮೆ ನಡೆಸುವುದಲ್ಲ ಅನಿಸುತ್ತದೆ. ಈ ಸೂಕ್ಷ್ಮವನ್ನು ಮಂಜುನಾಯಕ ನಿಭಾಯಿಸಿರುವ ಬಗೆ ಕೂಡ ಅತ್ಯಂತ ಮೆಚ್ಚುಗೆಗೆ ಅರ್ಹವಾಗಿದೆ.

ಬಹುಶಃ ‘ವಜ್ರಮುನಿ’ಯ ಕತೆಯಲ್ಲಿ ಶ್ರೀಶೈಲನ ಮುಂದುವರಿದ ಬದುಕಿನ ಕತೆ ನಮಗೆ ಸಿಗುತ್ತಿದೆ ಅಂದುಕೊಂಡರೆ ಅಪೂರ್ಣವೆನಿಸುವ ತೇರು ಕತೆಗೆ ಒಂದು ಆಯಾಮ ದೊರಕಿದಂತಾಗುತ್ತದೆ. ಇಲ್ಲಿ ಭಗಂತಪ್ಪ ಇಸ್ಪೀಟಿನ ಚಟಕ್ಕೆ ಬಿದ್ದು ‘ನಾಕೆತ್ತು, ಮೂರೆಮ್ಮಿ, ಮೂರಾಕಳಾ ಕಟ್ತಿದ್ದ ಬಂಕ’ ಖಾಲಿ ಬಿದ್ದ ಉಲ್ಲೇಖದೊಂದಿಗೇ ಕತೆ ಸುರುವಾಗುತ್ತದೆ. ಆದರೆ ವಜ್ರಮುನಿ ಎಂಬ ಹೆಸರಿನ ಕಾರಣಕ್ಕೇ ಈ ಭಗಂತಪ್ಪ ಒಬ್ಬ ದುರುಳ, ಖಳ ಎಂದುಕೊಳ್ಳಬೇಕಿಲ್ಲ. ಅದು ಹಳ್ಳಿಮಂದಿಯ ರೀತಿ. ಇಸ್ಪೀಟಾಟ, ಗಳಿಸುವುದು, ಕಳೆದುಕೊಳ್ಳುವುದು ಬದುಕಿನ ಸಹಜ ವ್ಯಾಪಾರ ಎಂಬ ಲಯದಲ್ಲೇ ಇವೆಲ್ಲ ಬಂದಿವೆ. ಇದು ಮನೆಮಾರು ಕಳೆದುಕೊಂಡು ಬೀದಿಗೆ ಬಂದ ಮನೆತನದ ಕತೆಯಲ್ಲ. ಬದಲಿಗೆ, ಇದ್ದಾಗ ಇದ್ಧಾಂಗ ಬದುಕಿದ ಭಗಂತಪ್ಪನಲ್ಲಿ, ಕಟ್ಟಕೊನೆಯ ಭದ್ರಿ ಎಮ್ಮೆ ಸತ್ತ ಬಳಿಕ, ಹೆಂಡತಿಯ ಏಟಿಗೆ ಕಾಲು ನೋವು ಮಾಡಿಕೊಂಡು ಮನೆಯಲ್ಲೇ ಕೆಲಕಾಲ ಉಳಿಯಬೇಕಾಗಿ ಬಂದ ಪ್ರಸಂಗದ ಬಳಿಕ ಕಂಡುಬಂದ ಬದಲಾವಣೆಯ ಕತೆ. ಇಲ್ಲಿ ಕತೆ ಮನೋಧರ್ಮದ ಪಲ್ಲಟಗಳನ್ನೆಲ್ಲ ವಿವರಿಸುವ ತಾಪತ್ರಯಕ್ಕೆ ಹೋಗುವುದಿಲ್ಲ. ಕಣ್ಣಿಗೆ ಕಂಡಿದ್ದನ್ನು ಚೊಕ್ಕವಾಗಿ ಹೇಳುತ್ತ ಹೋಗುವ ಕತೆಗಳಿವು. ಒಂದರ್ಥದಲ್ಲಿ ಇಲ್ಲಿ ಕೆಲವು ವಿಶಿಷ್ಟ ವ್ಯಕ್ತಿಗಳ ವ್ಯಕ್ತಿಚಿತ್ರಣವೇ ಕತೆಯಾಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಜಯತ್ತೆ, ಶ್ರೀಶೈಲ, ಭಗಂತಪ್ಪ, ರಂಗನಾಯಕಮ್ಮ, ಪಾತಿ - ಹೀಗೆ. ಆದರೆ ಈ ಪಾತ್ರಗಳ ರೂಪುರೇಶೆಗಳೆಲ್ಲ ಸ್ಕೆಚೀ ಆಗಿಯೇ ಉಳಿಯುತ್ತವೆ, ನಮ್ಮ ದೈನಂದಿನದಲ್ಲಿ ಎದುರಾಗುವ ಮಂದಿಯಂತೆ. ಪೂರ್ತಿಯಾಗಿ ಯಾರೂ ನಮ್ಮ ಅನುಭವಕ್ಕೆ ಬರುವುದಿಲ್ಲ ಎನ್ನುವುದು ನಿಜ. ದಕ್ಕಿದಷ್ಟು ನೋಟದಲ್ಲಿ ಕಂಡಷ್ಟು ಬದುಕನ್ನು ಇಲ್ಲಿ ಕಟ್ಟಿಕೊಡುವ ಬಗೆಯಲ್ಲಿ ಮಂಜುನಾಯಕ ಅವರು ಓದುಗರಿಗೆ ದೊರಕಿಸುವ Add-on ಗಳಿಂದಾಗಿಯೇ ಈ ಕತೆಗಳು ಮುಖ್ಯ. ‘ವಜ್ರಮುನಿ’ ಕತೆಯ ಕಟ್ಟಕೊನೆಯ ಎರಡು ಪ್ಯಾರಾಗಳನ್ನು ಗಮನಿಸಬೇಕು. ಇದರಲ್ಲಿ ಭಗಂತಪ್ಪನ ಮಾತು ಚೆನ್ನಾಗಿದೆ. ಆದರೆ ಕೊನೆಯ ಪ್ಯಾರಾ ತೀರ ವಾಚ್ಯವಾಗಿ ಕತೆಯನ್ನು ಸಮಪ್ ಮಾಡುತ್ತಿರುವಂತಿದೆ. ಬಹುಶಃ ಕೊನೆಯ ಒಂದು ವಾಕ್ಯವೇ ಎಲ್ಲವನ್ನೂ ಹೇಳುತ್ತಿತ್ತೇನೋ.

‘ಕನಸಿನ ವಾಸನೆ’ ಕತೆ ತುಂಬ ಸೊಗಸಾದ ಕತೆ. ಇಲ್ಲಿರುವುದು ರಂಗನಾಯಕಮ್ಮ ಮತ್ತು ಲಚುಮನ ಕತೆಯಾದರೂ, ಒಟ್ಟಾರೆಯಾಗಿ ಕತೆ ಒಂದು ರೊಮ್ಯಾಂಟಿಕ್ ಆದರ್ಶಮಯತೆಯನ್ನೇ ಕಟ್ಟಿಕೊಡುತ್ತದೆ. ಹಾಗಿದ್ದೂ ಇದು ಒಂದು ಕಲಾಕೃತಿಯಾಗಿ ಮೂಡಿಬಂದಿರುವ ಬಗೆ ಇಷ್ಟವಾಗುತ್ತದೆ, ಚೆನ್ನಾಗಿದೆ ಅನಿಸುತ್ತದೆ.

ತುಂಬ ಹಿಂದೆ ವಿವೇಕ ಶಾನಭಾಗ ಅವರು ಕತೆ ಬರೆಯುವುದನ್ನು, ಒಟ್ಟಾರೆ ಕಲೆಯನ್ನು, ಕಲೆಯ ಅಭಿವ್ಯಕ್ತಿಯಲ್ಲಿ ಹೇಗೆ ಕಲಾವಿದ ನಿರಂತರವಾಗಿ ನೈಪುಣ್ಯ ಸಾಧಿಸಲು ಪ್ರಯತ್ನಿಸುತ್ತಲೇ ಇರಬೇಕಾಗುತ್ತದೆ, ಇರುತ್ತಾನೆ ಮತ್ತು ಸುಬ್ಬಣ್ಣ ಇದನ್ನು ‘ಶ್ರೇಷ್ಠತೆಯ ವ್ಯಸನ’ ಎಂದು ಕರೆದಿದ್ದಲ್ಲ ಎನ್ನುವುದನ್ನೆಲ್ಲ ವಿವರಿಸುತ್ತ ಒಬ್ಬ ಕಾರ್ಪೆಂಟರ್ ಕುರ್ಚಿ ತಯಾರಿಸುವ ಬಗೆಗೆ ಹೋಲಿಸಿ ಕೆಲವೊಂದು ಮಹತ್ವದ ಹಿಂಟ್ಸ್ ಕೊಟ್ಟಿದ್ದರು. ಕುರ್ಚಿ ತಯಾರಿಸುವುದು ಒಂದು ಕೌಶಲ. ಅದರಲ್ಲಿ ಏನೇನೋ ಹೊಸತನ, ವೈಶಿಷ್ಟ್ಯ ಎಲ್ಲ ತರಬಹುದು. ನೈಪುಣ್ಯ ನುರಿತಂತೆಲ್ಲ ಪ್ರಯೋಗಗಳನ್ನೂ ಮಾಡಬಹುದು. ಆದರೆ ಅದೇನಿದ್ದರೂ ಕುರ್ಚಿ ತಯಾರಾದ ಮೇಲೆ ಅದು ಕುಳಿತುಕೊಳ್ಳಲು ಬರಬೇಕು, ಕಂಫರ್ಟೇಬಲ್ ಆಗಿರಬೇಕು, ಅಲ್ಲಿ ಇಲ್ಲಿ ಚುಚ್ಚಬಾರದು, ಅಲ್ಲವೆ? ತಂತ್ರ ಎನ್ನುವುದು ಹಾಗೆ, ಇರಬೇಕು ಆದರೆ ಇಲ್ಲದ ಹಾಗೆ ಇರಬೇಕು.

ಮಂಜುನಾಯಕ ಅವರ ತಂತ್ರಗಾರಿಕೆಯನ್ನು ನೋಡುವಾಗ ನನಗೆ ಮತ್ತವೇ ಮಾತುಗಳು ನೆನಪಾದವು. ಇದನ್ನು ನಾವು ಮಂಜುನಾಯಕರ ಕತೆಗಳನ್ನು ಓದಿ ಕಲಿಯಬೇಕು, ಅರ್ಥಮಾಡಿಕೊಳ್ಳಬೇಕು ಅನಿಸುತ್ತದೆ. ‘ಕನಸಿನ ವಾಸನೆ’ ಕತೆಯನ್ನೇ ನೋಡಿ. ಇಲ್ಲಿ ಅವರು ಮಾಂತ್ರಿಕ ವಾಸ್ತವತೆ ಎನ್ನುತ್ತೇವಲ್ಲ, ಅಂಥದ್ದನ್ನೆಲ್ಲ ತರುತ್ತಾರೆ. ಕನಸು, ಅರೆ ಮಂಪರು, ಭ್ರಮೆ ಮತ್ತು ವಾಸ್ತವ ಎಲ್ಲವೂ ಯಾವುದೋ ಒಂದು ಬಿಂದುವಿನಲ್ಲಿ ಕಲಬೆರಕೆಯಾದಂತೆ, ವಿಂಗಡಿಸಲು ಸಾಧ್ಯವಾಗದಂತೆ ಇಲ್ಲಿ ಬರುತ್ತವೆ. ಆದರೆ ಓದುತ್ತ ನಿಮಗೆ ಆ ಭ್ರಮೆಯಿಂದ ಹೊರಗೆ ಬಂದುಬಿಡಬೇಕು ಅನಿಸುವುದಿಲ್ಲ. ಅದು ಮಾಂತ್ರಿಕತೆ, ಅದು ಕೌಶಲ. ಇದನ್ನೇ ಸಾಧಿಸಿದ ಇನ್ನೊಂದು ಒಳ್ಳೆಯ ಕತೆ, ಕೊನೆಯದು, ‘ಮಿಣುಕುಹುಳ’.

ಕಾದ ಕಲ್ಲಿನ ಮೇಲೆ ಪಾದವೂರಿ ನಿಲ್ಲುವ ಪಂದ್ಯ ಕಟ್ಟಿದಿರಿ ಮಂಜುನಾಯಕ, ನಾವೂ ನಿಲ್ಲುತ್ತೇವೆ, ಏನಾದರಾಗಲಿ, ಗೆಲ್ಲುತ್ತೇವೆ. ಗೆದ್ದ ನಿಮಗೆ ಇದೋ ಅಭಿನಂದನೆಗಳು!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, May 2, 2019

ವೈರುಧ್ಯಗಳಲ್ಲೂ ಸೆಳೆಯುವ ‘ಸಲಾಂ ಬೆಂಗಳೂರು’

ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ‘ಚಿದಂಬರ ರಹಸ್ಯ’ದಲ್ಲಿ ಒಂದು ಕುತೂಹಲಕರ ಪ್ರಸಂಗ ಬರುತ್ತದೆ. ಅಲ್ಲಿ ಜಯರಾಂ ಎಂಬ ಕತೆಗಾರನಿದ್ದಾನೆ. ಗೆಳೆಯರೆಲ್ಲ ಕೆಸರೂರಿನ ಕ್ಲಬ್ಬಿನಲ್ಲಿ ಕೂತು ಮಾತನಾಡುತ್ತಿದ್ದಾಗ ಹೊರಗಿನಿಂದ ಬಂದ ಅಂಗಾಡಿ ಈ ಜಯರಾಂ ಆಡಿದ ಒಂದು ಮಾತನ್ನೆತ್ತಿಕೊಂಡು ಜೋಗಿಹಾಳರ ಸಾವಿನ (ಕೊಲೆಯ?) ಹಿಂದಿನ ರಹಸ್ಯ ಬೇಧಿಸುವಂಥ ಒಂದು ಕತೆಯನ್ನು ರಚಿಸಲು ಉತ್ತೇಜಿಸುತ್ತಾನೆ. (ಚಿದಂಬರ ರಹಸ್ಯ, ಮೊದಲನೆಯ ಆವೃತ್ತಿಯಲ್ಲಿ ಪುಟ ಸಂಖ್ಯೆ 118-119)

"....ನೀವೇ ಸಂಶೋಧನ ಕೇಂದ್ರದಲ್ಲಿ ಹೇಳಿದ ಹಾಗೆ ಒಬ್ಬ ನಿಜವಾದ ಕಲಾವಿದನಿಗೆ ಸಾಕಷ್ಟು ಸತ್ಯಾಂಶವಿರುವ ಸಾಮಾಗ್ರಿ ಒದಗಿಸಿದರೆ ಅವನು ವಾಸ್ತವಕ್ಕೆ ತೀರಾ ಸಮೀಪವಾದ ಕತೆ ಸೃಷ್ಟಿಸಬಲ್ಲ ಎನ್ನಲಿಲ್ಲವೆ" ಎಂಬ ಪ್ರಶ್ನೆ ಅದಕ್ಕೆಲ್ಲ ಮೂಲವಾಗುತ್ತದೆ. ಮುಂದೆ ಇನ್ನೊಂದು ಮಾತಿದೆ.

"ಇರಬಹುದು. ಸ್ವಾತಂತ್ರ್ಯದ ಭ್ರಮೆಯಲ್ಲಿಯೇ ನಾವು ನಿಯಮಗಳ ಬಂಧಿಗಳಾಗಿರಬಹುದು. ಆದರೆ ನಾವು ಸ್ವತಂತ್ರರೋ, ನಿಯಮಗಳ ಬಂಧಿಗಳೋ ಪರೀಕ್ಷಿಸಿ ಪತ್ತೆಹಚ್ಚುವುದು ಜೀವನದಲ್ಲಂತೂ ಸಾಧ್ಯವೇ ಇಲ್ಲ. ಕಾಲ ದೇಶಗಳ ವರ್ತಮಾನದ ಒಂದು ಕ್ಷಣದಲ್ಲಿ ಏಕಕಾಲದಲ್ಲಿ ಎರಡು ರೀತಿಗಳಲ್ಲಿ ವರ್ತಿಸಬಹುದಾದ ಸ್ವಾತಂತ್ರ್ಯ ನಿನಗೆ ಸಿಕ್ಕಾಗ ಮಾತ್ರ ಅದನ್ನು ನಾವು ಪತ್ತೆಹಚ್ಚಲು ಸಾಧ್ಯ. ಕಾಲ ದೇಶಗಳ ಈ ವರ್ತಮಾನದ ಕ್ಷಣದಲ್ಲಿ ನಮಗೆ ಒಮ್ಮೆ ಒಂದೇ ಒಂದು ಸಾರಿ ಮಾತ್ರ ವರ್ತಿಸೋ ಸ್ವಾತಂತ್ರ್ಯ ಅಥವಾ ಬಂಧನ ಇರುವುದು."

ಸ್ಥೂಲವಾಗಿ ಹೇಳುವುದಾದರೆ ಜೋಗಿಯವರ ‘ಸಲಾಂ ಬೆಂಗಳೂರು’ ಕೂಡ ಇದೇ ಪ್ರಶ್ನೆಯನ್ನು ಎತ್ತಿಕೊಂಡು ಅದ್ಭುತವಾದ ಬಗೆಯಲ್ಲಿ ಈ ಚಿದಂಬರ ರಹಸ್ಯವನ್ನು ಬೇಧಿಸುತ್ತ ಸಾಗುತ್ತದೆ. ಇಲ್ಲೇನಾಗಿದೆ ಎಂದರೆ, ಜೋಗಿ ಈ ಹಿಂದೆ ಬರೆದ ಒಂದು ಕಾದಂಬರಿಯಲ್ಲಿ ವೇಣೂರಿನ ವೆಂಕಟರಮಣನನ್ನು ಭೇಟಿಯಾದ ಉಲ್ಲೇಖವಿದೆ ಎನ್ನುವುದೇ ಮೂಲವಾಗಿ ಅವನೇ ತನ್ನ ಮೊಮ್ಮಗ ವೆಂಕಟರಮಣ ಎನ್ನುವ ದೃಢವಿಶ್ವಾಸಕ್ಕೆ ಬಿದ್ದ ಪಾಮಜ್ಜಿ, ಬಹುಶಃ ಜೋಗಿಯ ಗೆಳೆಯ ಕುಂಟನಿ, ಸಿನಿಮಾದ ಲಿಂಗದೇವರು ಮುಂತಾದ ಕೆಲವರು ಈ ಭ್ರಮೆ ನಿಜವಾಗಿರಲಿ ಎಂದು ಹಾರೈಸುತ್ತಿರುವವರಂತೆಯೇ ಈ ಕಥಾಪಾತ್ರ ಅಥವಾ ಜೀವಂತ ವ್ಯಕ್ತಿ ವೇಣೂರಿನ ವೆಂಕಟರಮಣನ ಹುಡುಕಾಟಕ್ಕೆ ತೊಡಗುತ್ತಾರೆ. ವೇಣೂರಿನ ವೆಂಕಟರಮಣ ನಿಜವಾದ ವ್ಯಕ್ತಿಯೇ ಅಥವಾ ಒಂದು ಕಾಲ್ಪನಿಕ ಪಾತ್ರವೇ ಎನ್ನುವ ಗೊಂದಲ ಇರುವಂತೆಯೇ ಈ ಕಾದಂಬರಿಯಲ್ಲಿ ಬರುವ ಜೋಗಿ, ಕುಂಟನಿ, ಲಿಂಗದೇವರು, ದೇಶಕಾಲ ಪತ್ರಿಕೆ, ವ್ಯಾಸ, ವಿವೇಕ ಶಾನಭಾಗ ಎಲ್ಲ ನಮಗೂ ನಿಮಗೂ ಗೊತ್ತಿರುವ ಅದೇ ಹೆಸರಿನ ವ್ಯಕ್ತಿಗಳೇ ಅಥವಾ ಕಾದಂಬರಿಯೊಂದರ ಕಾಲ್ಪನಿಕ ಪಾತ್ರಗಳೇ ಎನ್ನುವ ಅನುಮಾನವನ್ನು ಜೀವಂತವಾಗಿಯೇ ಇಟ್ಟುಕೊಳ್ಳಬೇಕಿದೆ. ಅದಕ್ಕಿರುವ ಬಲವಾದ ಕಾರಣಗಳ ಬಗ್ಗೆ ಮುಂದೆ ಗಮನ ಹರಿಸೋಣ. ಸದ್ಯಕ್ಕೆ "ಕಾಲ ದೇಶಗಳ ವರ್ತಮಾನದ ಒಂದು ಕ್ಷಣದಲ್ಲಿ ಏಕಕಾಲದಲ್ಲಿ ಎರಡು ರೀತಿಗಳಲ್ಲಿ ವರ್ತಿಸಬಹುದಾದ ಸ್ವಾತಂತ್ರ್ಯ" ಇಲ್ಲದೇ ಇರುವುದನ್ನು ಈ ವಿವರಗಳೆಲ್ಲ ಹೇಗೆ ಬಳಸಿಕೊಳ್ಳುತ್ತಿವೆ ಎನ್ನುವುದರತ್ತ ನಿಮ್ಮ ಗಮನ ಇದ್ದರೆ ಸಾಕು. ಕಾದಂಬರಿಯ ಅತ್ಯಂತ ಯೋಜನಾಬದ್ಧ ಇಂಟಲೆಕ್ಚುಯೆಲ್ ತಿರುಳೇ ಇದರಲ್ಲಿದೆ.

ಇಲ್ಲಿಯೇ ಹೇಳಬೇಕಾದ ಇನ್ನೊಂದು ಸಂಗತಿಯೆಂದರೆ, ಲಿಂಗದೇವರು ತರಲಿಚ್ಛಿಸುವ ಸಿನಿಮಾವೊಂದರ ಕತೆಯನ್ನೂ ಬೆಳೆಸುತ್ತ-ಬರೆಯುತ್ತ ಇರುವ ಜೋಗಿಗೆ ಆ ಕತೆಯ ಪಾತ್ರ ಚಿನ್ಮಯಿ ತನ್ನ ಗಂಡನಿಂದ ಕಳಚಿಕೊಳ್ಳುವುದಕ್ಕೆ ಇರುವ ಸೈದ್ಧಾಂತಿಕವೊ ಮತ್ತೊಂದೋ, ಗಟ್ಟಿಯಾದ ಕಾರಣಗಳ ಕುರಿತು ಚಿಂತೆಯಿದೆ. ಅಷ್ಟರಮಟ್ಟಿಗೆ ಈ ಚಿನ್ಮಯಿ, ಜೋಗಿಗೆ ಜೀವಂತ ವ್ಯಕ್ತಿ. ಜೋಗಿ ಈ ಚಿನ್ಮಯಿಯೊಂದಿಗೆ ಆಗಾಗ ಮಾತನಾಡುತ್ತಾರೆ, ಚರ್ಚಿಸುತ್ತಾರೆ, ಒಮ್ಮೆ ಆಕೆಗೆ ಪತ್ರ ಕೂಡ ಬರೆಯುತ್ತಾರೆ.

ಹಾಗೆ ನೋಡಿದರೆ ಈ ಕಾದಂಬರಿಯ ಪ್ರಧಾನ ಕಥಾನಕ ಚಿನ್ಮಯಿದೇ. ಊರಿನಿಂದ ಓಡಿಬಂದ ಮೊಮ್ಮಗನನ್ನು ಹುಡುಕಲು ಬಂದ ಪಾಮಜ್ಜಿಯ ಕಥಾನಕ ಇಲ್ಲಿನ ಒಂದು ಉಪಕಥೆಯಷ್ಟೇ. ಚಿನ್ಮಯಿ ಒಂದು ಸಂಪೂರ್ಣ ಕಲ್ಪಿತ ಪಾತ್ರ ಎಂದು ಘೋಷಿಸಲ್ಪಟ್ಟ, ಕತೆಯೊಳಗಿನ ಪಾತ್ರಗಳೇ ಕಟ್ಟುತ್ತಿರುವ ಕತೆ. ಆದರೆ ಈ ಚಿನ್ಮಯಿಗೆ ಕತೆಯೊಳಗಿನ ಪಾತ್ರವಾಗಿ ಉಳಿದುಹೋಗದೆ, ಕತೆಯ ಹೊರಗೂ ಅಸ್ತಿತ್ವ ಇರಬೇಕೆಂಬ ಹೆಬ್ಬಯಕೆ ಇದೆ ಎಂದು ಅವಳ ಕತೆಯನ್ನೂ ಬರೆಯುತ್ತಿರುವ ಈ ಕಾದಂಬರಿಯ ಪಾತ್ರವಾಗಿರುವ ಜೋಗಿ ಸ್ವತಃ ಕಂಡುಕೊಂಡು ನಮಗೂ ಹೇಳುವುದರಿಂದ, ಕಾದಂಬರಿಯ ಅಂತ್ಯದ ಹೊತ್ತಿಗೆ ಅವರು ಅದನ್ನವಳಿಗೆ ದಯಪಾಲಿಸಿದ್ದಾರೆ, ಕತೆಯ ಚೌಕಟ್ಟಿನ ಒಳಗೇ. ಹೌದು, ಕತೆಯ ಚೌಕಟ್ಟಿನ ಹೊರಗೆ ಚಿನ್ಮಯಿಗಾದರೂ ಒಂದು ಅಸ್ತಿತ್ವವನ್ನು ಕೊಡಿಸುವುದು ಕತೆಯ ಪಾತ್ರವೇ ಆಗಿರುವ ಜೋಗಿಗಾಗಲೀ, ಒಟ್ಟಾರೆ ‘ಸಲಾಂ ಬೆಂಗಳೂರು’ ಕಾದಂಬರಿ ಬರೆದಿರುವ ನಮಗೂ ನಿಮಗೂ ಗೊತ್ತಿರುವ ಜೋಗಿಯವರಿಗಾಗಲೀ ಹೇಗೆ ಸಾಧ್ಯ? ಮೊದಲಿಗೆ ಉಲ್ಲೇಖಿಸಿದ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯ ಪಾತ್ರ ಜಯರಾಮನ ಮಾತುಗಳನ್ನೇ ಬೇಕಿದ್ದರೆ ಮತ್ತೊಮ್ಮೆ ಓದಿ.

ಕಾದಂಬರಿಯ ಚಿನ್ಮಯಿ ಕೊನೆಗೂ ಕಾದಂಬರಿಯೊಳಗಿನ ಜೋಗಿಯ ಚಿನ್ಮಯಿ ಅಥವಾ ಹೆಚ್ಚೆಂದರೆ ನಮಗೂ ನಿಮಗೂ ಗೊತ್ತಿರುವ ಜೋಗಿಯವರ ಚಿನ್ಮಯಿ. ಅವಳಿಗೆ ಅದಲ್ಲದ ಒಂದು ಅಸ್ಮಿತೆಯನ್ನು ಇಬ್ಬರು ಜೋಗಿಗಳೂ ಕೊಡಿಸಲು ಸಾಧ್ಯವಾಗದು. ಬಹುಶಃ ನಮಗೂ ನಿಮಗೂ ಗೊತ್ತಿರುವ ಕುಂಟನಿಯವರ ಒಂದು ಕತೆಯಲ್ಲೊ ಕಾದಂಬರಿಯಲ್ಲೊ ಈ ಇದೇ ಚಿನ್ಮಯಿ ಕಾಣಿಸಿಕೊಂಡು ನಮಗೆ ಅವಳೇ ಇವಳು ಅನಿಸಿದರೆ, ಅಥವಾ ನಮಗೂ ನಿಮಗೂ ಗೊತ್ತಿರುವ ಜಯಂತ ಕಾಯ್ಕಿಣಿಯವರ ಯಾವುದೋ ಕತೆಯಲ್ಲಿ, ತನ್ಮಯಿಯ ಸೂಟಿಯ ಬದಲು ಚಿನ್ಮಯಿಯ ಸೂಟಿ ಎಂತಲೋ ಮತ್ತೊಂದೋ ಕಾಣಿಸಿದ್ದಿದ್ದರೆ ಆಗ ಬಹುಶಃ ಹಾಗೆಲ್ಲ ಆಯಿತು ಅಂತ ನಾವು, ಈ ಎಲ್ಲ ಕತೆಗಾರರ ಕಾಮನ್ ಓದುಗರು ಪರಿಭಾವಿಸಬಹುದೋ ಏನೋ. ಆದರೆ, ಈಗ ಸದ್ಯಕ್ಕಂತೂ ಜೋಗಿ (ಇಬ್ಬರೂ) ಚಿನ್ಮಯಿಗೆ ಒಂದು ಸ್ವತಂತ್ರ ವ್ಯಕ್ತಿತ್ವ/ಅಸ್ಮಿತೆಯನ್ನು ತಮ್ಮ ಬರಹದ ಚೌಕಟ್ಟಿನ ಆಚೆ ದೊರಕಿಸಿಕೊಡುವುದು, ಈ ಕಾದಂಬರಿಯ ಆಚೆ ದೊರಕಿಸಿಕೊಡುವುದು ಸಾಧ್ಯವಾಗಿಲ್ಲ. ಆದರೂ ಅವರ ಉದ್ದೇಶ ಅದು, ಅಂಥದ್ದರ ಸುಳಿವು ಕೊಡುತ್ತಾರೆ ಅವರು. ಪ್ರಯತ್ನ ಕೂಡಾ ಮಾಡಿದ್ದಾರೆ. ಬಹುಶಃ ಉಪ್ಪಿನಂಗಡಿಯಿಂದ ನಮಗೂ ನಿಮಗೂ ಗೊತ್ತಿರುವ ಕುಂಟನಿಯವರೋ, ಈ ಕಾದಂಬರಿಯೊಳಗಿನ ಪಾತ್ರ ಕುಂಟನಿಯವರೋ ಈ ಕಾದಂಬರಿಯೊಳಗಿನ ಜೋಗಿಯವರಿಗೋ, ನಮಗೂ ನಿಮಗೂ ಗೊತ್ತಿರುವ ಜೋಗಿಯವರಿಗೋ ಫೋನ್ ಮಾಡಿ, ಪಾಮಜ್ಜಿ ಉಪ್ಪಿನಂಗಡಿಗೆ ಬಂದಿದ್ದಾಳೆ ಮಹರಾಯ, ಚಿನ್ಮಯಿಯೂ ಅವಳ ಜೊತೆಗೆ ಬಂದಿದ್ದಾಳೆ ಅಂದಿದ್ದರೆ ಬಹುಶಃ ಈ ಕೃತಿಯ ಪ್ರಾಯೋಗಿಕ ಪ್ರಯತ್ನಕ್ಕೆ ಸಿಗಬಹುದಾಗಿದ್ದ ಲೀಪ್ ಪ್ರಸ್ತುತ ದಕ್ಕಿದ್ದಕ್ಕಿಂತ ಹೆಚ್ಚಿನದಾಗುತ್ತಿತ್ತೋ ಏನೋ!

ಅದೇನೇ ಇರಲಿ, ಸದ್ಯ ಕಾದಂಬರಿಯ ಚೌಕಟ್ಟಿನಲ್ಲೇ ಮಾತನಾಡುವ.

ಸೃಜನಶೀಲ ಸೃಷ್ಟಿಕ್ರಿಯೆಯ, ರಾಚನಿಕ ಮತ್ತು ನಿರಚನಾವಾದದ ಪ್ರಾಯೋಗಿಕ ಚರ್ಚೆಯನ್ನು ಒಂದು ಸೃಜನಶೀಲ ಆಯಾಮದಲ್ಲೇ ಜೋಗಿಯವರು ನಡೆಸುತ್ತಿರುವುದು ನಿಜಕ್ಕೂ ಕುತೂಹಲಕರ, ಶ್ಲಾಘನೀಯ ಮತ್ತು ಅಭಿನಂದನಾರ್ಹ ಹೆಜ್ಜೆ. ಬಹುಶಃ ನಮ್ಮ ಎಲ್ಲ ಕತೆಗಾರರೂ ಈ ಕಾದಂಬರಿಯನ್ನು ಸೂಕ್ಷ್ಮವಾಗಿ ಗಮನಿಸುವ, ಮತ್ತೆ ಮತ್ತೆ ಓದುವ ಅಗತ್ಯವೊಂದು ಖಂಡಿತವಾಗಿಯೂ ಇದೆ ಅನಿಸುವಾಗಲೇ ಜೋಗಿಯವರ ಲಘುಧಾಟಿಯ ಬರವಣಿಗೆ, ಎಲ್ಲೂ ಓದುಗನಿಗೆ ಹೊರೆಯಾಗಿಸದೆ, ವೈಚಾರಿಕ ಘಾಟು ನೆತ್ತಿಗೆ ಹತ್ತದ ಹಾಗೆ ಮೌಕಿಕ ಲಯದಲ್ಲೇ ಕತೆ ಹೇಳುವ ಕ್ರಮದ ಬಗ್ಗೆ ಇದುವರೆಗೂ ಇದ್ದ ಧೋರಣೆಯನ್ನೇ ಮರುಪರಿಶೀಲನೆಗೆ ಒಡ್ಡುವಂತೆ ಮಾಡುವ ಕಾದಂಬರಿ ಇದು. ಜೋಗಿಯವರ ನಿರೂಪಣಾ ಮಾದರಿಯ ಸಾಧ್ಯತೆಗಳು ಈ ಕಾದಂಬರಿಯೊಂದಿಗೆ ತೆರೆದುಕೊಂಡಿವೆ ಎಂದೂ ಅನಿಸುವಂತೆ ಮಾಡಿದ ಕಾದಂಬರಿ. ಬಹುಶ: ಇದೇ ಕಾದಂಬರಿಯ ಪುಟ 26ರಲ್ಲಿ ಬರುವ ಒಂದು ಮಾತು ಇದಕ್ಕೆ ಪೂರಕವಾಗಿದೆ. ಅದು ಹೀಗಿದೆ:

"ನೀನು ಬರೆಯುತ್ತಿರುವ ಕತೆ ನಿನ್ನದಷ್ಟೇ ಅಲ್ಲ. ಅದು ನಿನ್ನ ಕಾಲಕ್ಕೂ ಸೇರಿದ್ದು."

ಇವರೆಲ್ಲ ಸೇರಿ ತಯಾರಿಸುತ್ತಿರುವ ಸಿನಿಮಾದ ಹೆಸರು ‘ದಾರಿ ತಪ್ಪಿಸು ದೇವರೇ’. ನಮ್ಮ ಮಂಜುನಾಥ ಕಾಮತ್ ಇದೇ ಹೆಸರಿನಲ್ಲಿ ಒಂದು ಅಯೋಜಿತ ಪ್ರವಾಸಕಥನವನ್ನು ಬರೆದು ಪ್ರಕಟಿಸಿದ್ದಾರೆ, ಅದು ಇದಲ್ಲ, ಇದು ಅದಲ್ಲ. ಅದೇನಿದ್ದರೂ ದಾರಿ ತಪ್ಪದಂತೆ ಎಚ್ಚರ ವಹಿಸುವುದು ಯಾವತ್ತೂ ಒಳ್ಳೆಯದೇ.

ನಮಗೂ ನಿಮಗೂ ಗೊತ್ತಿರುವ ಜೋಗಿಯವರು 2010ರಲ್ಲಿ ಹೊರಬಂದ "ದೇಶಕಾಲ ವಿಶೇಷಾಂಕ"ದಲ್ಲಿ ಬರೆದ ಒಂದು ಕತೆಯಲ್ಲಿ ವ್ಯಾಸ ಎಂಬ ಒಂದು ಕೇಂದ್ರ ಪಾತ್ರವಿದೆ. ಈ ಬಗ್ಗೆ ಈ ಕಾದಂಬರಿಯ ಜೋಗಿ ಕೂಡ ಉಲ್ಲೇಖಿಸುವುದರಿಂದ ಮತ್ತು ಕಥಾಪಾತ್ರ-ಜೀವಂತ ಪಾತ್ರ, ಕತೆಗಾರನ ಊಹೆ/ಕಲ್ಪನೆ ಮತ್ತು ವಾಸ್ತವದ ಸತ್ಯ(!)ಗಳ ನಡುವಿನ ಕೂದಲೆಳೆಯ ವ್ಯತ್ಯಾಸವನ್ನು ಮುಷ್ಟಿಯಲ್ಲಿಟ್ಟುಕೊಂಡೇ ಈ ಕಾದಂಬರಿ ಓದುಗನ ಜೊತೆ ಸೃಜನಾತ್ಮಕ ಸೃಷ್ಟಿಕ್ರಿಯೆಯ ರಾಚನಿಕ ಮತ್ತು ನಿರಚನಾವಾದದ ಪ್ರಶ್ನೆಗಳನ್ನೆತ್ತುವುದರಿಂದ ಇದನ್ನು ಇಲ್ಲಿಯೇ ಚರ್ಚಿಸುವುದು ಒಳ್ಳೆಯದು. ನಮಗೂ ನಿಮಗೂ ಗೊತ್ತಿರುವ ಜೋಗಿಯವರು ಈ ಕತೆಯ ಪಾತ್ರಕ್ಕೂ ಕಾಸರಗೋಡಿನ ಕತೆಗಾರ ಎಂ ವ್ಯಾಸರಿಗೂ ತಥಾಕಥಿತ ಸಂಬಂಧವೇ ಇಲ್ಲ ಎನ್ನುತ್ತಾರೆ. ಏಕೆಂದರೆ ಈ ಕಾದಂಬರಿಯ ಜೋಗಿ ಅದನ್ನು ಹೇಳಿದರೂ ಅದಕ್ಕೆ ಯಾವುದೇ ಅರ್ಥವಾಗಲಿ, ಮಹತ್ವವಾಗಲಿ ಇಲ್ಲ ಅಲ್ಲವೆ? ಅಂಥ ಒಂದು ಕತೆ ಇರುವುದು ವಾಸ್ತವ ಮತ್ತು ಅದನ್ನು ನಮಗೂ ನಿಮಗೂ ಗೊತ್ತಿರುವ ಜೋಗಿಯವರೇ ಬರೆದಿದ್ದಾರೆ. ಈ ಕಾದಂಬರಿಯೊಳಗಿನ ಪಾತ್ರ ಜೋಗಿ ಅದರ ಬಗ್ಗೆ ಅಥೆಂಟಿಕ್ ಆಗಿ ಮಾತನಾಡಿದರೂ ಅದು ಕಾದಂಬರಿಯ ಒಂದು ಪಾತ್ರದ ಮಾತಷ್ಟೇ. ನಮಗೂ ನಿಮಗೂ ಗೊತ್ತಿರುವ ಜೋಗಿಯವರ ಮಾತಲ್ಲ. ಆದರೆ ಇಲ್ಲಿ ಸದ್ಯ ಅದನ್ನು ಹೇಳುತ್ತಿರುವುದು ಕಾದಂಬರಿಯ ಪಾತ್ರ ಜೋಗಿಯೇ, ಇರಲಿ.

ಅದೇನಿದ್ದರೂ ಎಂ ವ್ಯಾಸರ ಮಗ ತೇಜಸ್ವಿ ವ್ಯಾಸ ಅವರು ಹಾಗಂದುಕೊಳ್ಳದೆ ತಮ್ಮ ತಂದೆಯವರ ಬಗ್ಗೆ ನಮಗೂ ನಿಮಗೂ ಗೊತ್ತಿರುವ ಜೋಗಿಯವರು ಕೆಟ್ಟದಾಗಿ ಬರೆದಿದ್ದಾರೆ ಎಂದೇ ನೊಂದುಕೊಳ್ಳುತ್ತಾರೆ. ಇಂಥದ್ದೆಲ್ಲ ಸಾಧ್ಯವಿದೆ ಎನ್ನುವುದು ನಮಗೆಲ್ಲ ಗೊತ್ತು. ಇದನ್ನು ಕಮ್ಯುನಿಕೇಶನ್ ಗ್ಯಾಪು, ಕಾಕತಾಳೀಯ ವಿದ್ಯಮಾನ, ಅಪಾರ್ಥದಿಂದಾದ ಸಮಸ್ಯೆ ಎಂದು ಕರೆಯಲಾಗುತ್ತದೆ. ಸದ್ಯ ಈ ಕಾದಂಬರಿ ‘ಸಲಾಂ ಬೆಂಗಳೂರು’ ಇಂಥ ಕಾಕತಾಳೀಯ ಉಲ್ಲೇಖ, ಒಂದಿಷ್ಟು ಅಪಾರ್ಥ ಮತ್ತು ಒಂದಿಷ್ಟು ಕಮ್ಯುನಿಕೇಶನ್ ಗ್ಯಾಪುಗಳಿಂದಲೇ ಹಲವಾರು ತಿರುವುಗಳಿಗೆ ಒಡ್ಡಿಕೊಳ್ಳುವುದರಿಂದ ವ್ಯಾಸರ ಘಟನೆ ಕೇವಲ ಉದಾಹರಣೆಯಾಗಿ ಬಂದಿದೆ. ಒಂದು ಕ್ಷಣ ಯೋಚಿಸಿ, ನಿಮಗೆ ಗೊತ್ತಿರುವ ನಾನು, ನಿಮ್ಮ ನಾನು. ಅದು ನಾನಲ್ಲ. ಹಾಗೆಯೇ ನನಗೆ ಗೊತ್ತಿರುವ ನೀವು, ನನ್ನ ನೀವು. ಅದು ನಿಮ್ಮ ನೀವಲ್ಲ. ಕತೆಗಾರ ಬಳಸುವ ಹೆಸರುಗಳೆಲ್ಲ ಭೌತಿಕ ಜಗತ್ತಿನ ವ್ಯಕ್ತಿಗಳಲ್ಲ. ಸ್ವತಃ ಕತೆಗಾರ ತನ್ನದೇ ಹೆಸರನ್ನು ಬಳಸಿ ಕತೆ ಬರೆದಾಗ ಅದು ಕತೆಗಾರನಲ್ಲ, ಒಂದು ಪಾತ್ರವಷ್ಟೇ. ಆದರೆ ಒಬ್ಬ ಕತೆಗಾರ ಹೇಳುವುದೆಲ್ಲ ಅವನದೇ ಮಾತುಗಳು, ಇನ್ಯಾರದ್ದೋ ಅಲ್ಲ, ಸಾಲ ಪಡೆದು ತಂದಿರುವುದೋ ಕದ್ದು ತಂದಿರುವುದೋ ಅಲ್ಲ. ಸ್ವಂತದ್ದು. ಹಾಗಾಗಿ ಅವನು ಕಾಪಿರೈಟ್ ದಾಖಲಿಸಿ, ಅದಕ್ಕೆ ಚ್ಯುತಿಬಂದಾಗ ಕಾನೂನಿನಡಿ ಹೋರಾಡುತ್ತಾನೆ.

ಮತ್ತೆ ತೇಜಸ್ವಿಯವರ ಒಂದು ಕಾದಂಬರಿಗೇ ಹೊರಳಬೇಕಾಗುತ್ತದೆ. ಈ ತೇಜಸ್ವಿ ಕೆ ಪಿ ಪೂರ್ಣಚಂದ್ರ ತೇಜಸ್ವಿ, ಎಂ ವ್ಯಾಸರ ಮಗ ತೇಜಸ್ವಿಯಲ್ಲ ಮತ್ತೆ. ತೇಜಸ್ವಿಯವರ ‘ಸ್ವರೂಪ’ ಕಾದಂಬರಿಯಲ್ಲಿ ಹೇಮಂತ ಎದುರಿಗಿದ್ದಾನೆ ಎನ್ನುವಂತೆ ಶ್ರೀನಿವಾಸ ನಿರೂಪಿಸುತ್ತ ಹೋಗುವ ಕಥನ ತಂತ್ರವಿದೆ. ಒಂದರ್ಥದಲ್ಲಿ ಇದು ಸಂಪೂರ್ಣ ಸ್ವಗತದಂಥ ನಿರೂಪಣೆ. ಇಲ್ಲಿ ಶ್ರೀನಿವಾಸ ಕಟ್ಟ ಕೊನೆಗೊಂದು ಮಾತನ್ನಾಡುತ್ತಾನೆ, ಅದು ಹೀಗಿದೆ:

"ಹೋಗು, ನಾಲ್ಕಾರು ಪದ, ಸಂಗತಿಗಳನ್ನು ಬದಲಿಸಿ ನಿನ್ನದೇ ಮಾಡಿ ತಿಳಿಸು. ಸಾಹಿತಿ ಅನ್ನಿಸಿಕೊಂಡಿದ್ದಕ್ಕೆ ನೀವೆಲ್ಲಾ ನಿಮ್ಮದನ್ನೇ ಅನ್ಯರ ನಾಮಧೇಯ ತೊಡಿಸಿ ತಿಳಿಸುವ ಹವ್ಯಾಸ ಬೆಳೆಸಿಕೊಂಡಿದ್ದೀರಿ. ನೀವು ಎಂದುಬಿಟ್ಟೆ, ಹೋಗಲಿ ಅಂದಾಯಿತಲ್ಲ. ನಾವು ಅನ್ನಬೇಕಿತ್ತು."

"ಸಲಾಂ ಬೆಂಗಳೂರು" ಕಾದಂಬರಿಯ ಪುಟ 22 ರಲ್ಲಿ ಬರುವ, ವಿಕಾಸ್ ನೇಗಿಲೋಣಿಯವರ ಜೊತೆ ಫೋನಿನಲ್ಲಿ ಮಾತನಾಡುವ ಸಂದರ್ಭದ ಪ್ಯಾರಾ ಗಮನಿಸಿದರೆ ಅದು ಸ್ವರೂಪದ ಶ್ರೀನಿವಾಸನ ಮಾತುಗಳ ಧಾಟಿಯಲ್ಲೇ ಇರುವುದು ನಮ್ಮ ಗಮನಕ್ಕೆ ಬರುತ್ತದೆ.

ನನಗೇ ಗೊತ್ತಿರುವಂತೆ ನಮ್ಮ ನಡುವಿನ ಹಲವಾರು ಕತೆಗಾರರು ನಮ್ಮ ನಡುವೆ ಜೀವಂತ ಇರುವ ಕೆಲವು ವ್ಯಕ್ತಿಗಳನ್ನೇ ಗುರಿಯಾಗಿಟ್ಟುಕೊಂಡಂತಿರುವ ಪಾತ್ರಗಳನ್ನು ಆಯಾ ವ್ಯಕ್ತಿಗಳ ತೇಜೋವಧೆ ಮಾಡುವ ಉದ್ದೇಶದಿಂದಲೇ ತಮ್ಮ ಕತೆ ಕಾದಂಬರಿಗಳಲ್ಲಿ ಸೃಷ್ಟಿಸಿ, ಅವುಗಳನ್ನು ಎಷ್ಟೂ ನಿಕೃಷ್ಟ ಹುಳುವಿನ ಗಾತ್ರಕ್ಕೆ ತರಬಹುದೋ ಅಷ್ಟೂ ಕುಬ್ಜವಾಗಿಸಿ ತೀಟೆ ಉಜ್ಜಿಕೊಂಡಿರುವ ಅನೇಕ ಪ್ರಕರಣಗಳು ನನಗೆ ಗೊತ್ತು. ಆದರೆ ಹಾಗೆಲ್ಲ ಹೇಳಬಾರದು, ಕತೆಗಾರ ಸೃಷ್ಟಿಸುವ ಪಾತ್ರಗಳು ಕೇವಲ ಕಾಲ್ಪನಿಕ, ಅವುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದು, ಜೀವಂತ ವ್ಯಕ್ತಿಗಳೊಂದಿಗೆ ಸಮೀಕರಿಸಿ ಮಾತನಾಡುವುದು ತಪ್ಪು. ಆದರೆ ಒಬ್ಬ ಕತೆಗಾರನ ಕಲ್ಪನೆ, ಕತೆ ಎಲ್ಲಿಂದ ಬರುತ್ತದೆ ಎನ್ನುವುದು ಒಂದು ಪ್ರಶ್ನೆಯಾಗಿ ನಿಮ್ಮ ನೆನಪಿನಲ್ಲಿರಲಿ. ನೀವು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ‘ಸ್ವರೂಪ’ದ ಒಂದು ಪಾತ್ರ ಶ್ರೀನಿವಾಸ ಇನ್ನೊಂದು ಪಾತ್ರ ಹೇಮಂತನ ಜೊತೆ ಆಡಿದ ಮಾತನ್ನು ಸೀರಿಯೆಸ್ಸಾಗಿ ತೆಗೆದುಕೊಳ್ಳಬೇಕಿಲ್ಲ. ಅದು ಬಿಡಿ, ಈ ಕಾದಂಬರಿಯ ಜೋಗಿ ಎಂಬ ಪಾತ್ರವೇ ಸ್ಪಷ್ಟವಾಗಿ ಹೇಳುವ ಮಾತುಗಳನ್ನು ಕೇಳಿ;

"ನನಗೆ ನೆನಪಿರಲಿಲ್ಲ. ನಾನು ಕಾದಂಬರಿ ಬರೆದಾದ ನಂತರ ಅದರ ಲವಲೇಶವೂ ನನಗೆ ನೆನಪಿರುವುದಿಲ್ಲ. ಆ ಪಾತ್ರಗಳ ಹೆಸರು ಮರೆತು ಹೋಗಿರುತ್ತದೆ, ಅಲ್ಲಿ ಬರುವ ವ್ಯಕ್ತಿಗಳು ಅಸ್ಪಷ್ಟವಾಗಿ ನೆನಪಿರುತ್ತಾರೆ. ಯಾರಾದರೂ ಅಲ್ಲಿಯ ಸನ್ನಿವೇಶವನ್ನು ವಿವರಿಸಿದರೆ ಮಾತ್ರ ನನಗೆ ಅದು ಹೊಳೆಯುತ್ತದೆಯೇ ಹೊರತು, ಒಂದು ಪಾತ್ರದ ಹೆಸರನ್ನೋ ಘಟನೆಯನ್ನೋ ಹೇಳಿದರೆ ಏನೂ ಗೊತ್ತಾಗುವುದಿಲ್ಲ." (ಪುಟ 33)

ಆದರೆ, ಪುಟ 40ಕ್ಕೆ ಬರುವುದರೊಳಗೆ ಈ ಕಾದಂಬರಿಯ ಪಾತ್ರ ಜೋಗಿಯ ನೆನಪು ಎಷ್ಟೊಂದು ಶಾರ್ಪ್ ಆಗುತ್ತದೆ ಎಂದರೆ ಈ ಮಾತುಗಳನ್ನು ನೀವೇ ಓದಿ:
" ಇದಕ್ಕೂ ಮುಂಚೆ ಇಂಥದ್ದೇ ಒಂದು ಸಮಸ್ಯೆಯಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದು ನೆನಪಾಯಿತು. ವಿವೇಕ ಶಾನಭಾಗರು ನಡೆಸುತ್ತಿದ್ದ ದೇಶಕಾಲ ಪತ್ರಿಕೆಯ ವಿಶೇಷ ಸಂಚಿಕೆಗೆ ನಾನೊಂದು ಕತೆ ಬರೆದುಕೊಟ್ಟಿದ್ದೆ. ಆ ಕತೆಯ ಪಾತ್ರಧಾರಿಯ ಹೆಸರು ವ್ಯಾಸ. ಅವರಿಗೆ ಪದಬಂಧ ಮಾಡುವ ಹುಚ್ಚು. ಅದರ ಜೊತೆಗೆ ಚಿರವಿರಹ, ಏಕಾಂಗಿ ಬೇರೆ. ಯಾರನ್ನೂ ನೋಡಲಿಚ್ಛಿಸದ ಅವರಿಗೆ ನೀಗಿಕೊಳ್ಳಲಾರದ ಯಾತನೆಗಳು ನೂರಾರಿದ್ದವು. ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ ಎಂಬ ಸುದೀರ್ಘ ಹೆಸರಿನ ಆ ಕತೆಯಲ್ಲಿ ಬರುವ ವ್ಯಾಸರ ಪಾತ್ರಕ್ಕೂ ಕತೆಗಾರ(ರ) ವ್ಯಾಸರ ಪಾತ್ರಕ್ಕೂ ಸಂಬಂಧ ಕಲ್ಪಿಸಿ ವಿಮರ್ಶಕಿಯೊಬ್ಬರು ಪತ್ರಿಕೆಯಲ್ಲಿ ಬರೆದಿದ್ದರು. ಅದನ್ನು ಓದಿದ ವ್ಯಾಸರ ಮಗ ತೇಜಸ್ವಿ, ಅದು ತನ್ನ ಅಪ್ಪನ ಬಗ್ಗೆ ಬರೆದ ಕತೆಯೇ ಎಂಬ ತೀರ್ಮಾನಕ್ಕೆ ಬಂದಿದ್ದ. ಆ ವಿಚಾರವಾಗಿ ನನ್ನ ಹತ್ತಿರ ಅನೇಕ ಸಲ ಜಗಳ ಆಡಿದ್ದ. ಅದಾದ ನಂತರ ತನ್ನ ಮನಸ್ಸಿನ ನೋವುಗಳನ್ನೆಲ್ಲ ದಾಖಲಿಸಲು ಒಂದು ಪುಸ್ತಕವನ್ನೇ ಬರೆಸಿ ಪ್ರಕಟಿಸಿದ್ದ. ಕತೆಗಾರ ವ್ಯಾಸರಿಗೂ ನನ್ನ ಕಥಾನಾಯಕ ವ್ಯಾಸರಿಗೂ ಸಂಬಂಧವೇ ಇಲ್ಲ. ನನ್ನ ಮನಸ್ಸಿನಲ್ಲಿ ಇದ್ದದ್ದು ವೇದವ್ಯಾಸರು. ಅದಕ್ಕಾಗಿಯೇ ಕತೆಯಲ್ಲಿ ಯೋಜನಗಂಧಿಯ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ ಅಂತ ಹೇಳಿ ಅವನ ಕ್ಷಮೆ ಕೇಳಿದ್ದರೂ ಅವನ ಸಿಟ್ಟು ಇಳಿದಿರಲಿಲ್ಲ. ಐದಾರು ವರ್ಷ ಅವನು ಅದನ್ನು ಸಾಧಿಸಿದ್ದ."

2010ರ ನೆನಪುಗಳು 2018ಕ್ಕೂ ಬಂದಿರುವುದು ಸ್ವಲ್ಪ ಆಶ್ಚರ್ಯವೇ. ಏಕೆಂದರೆ, ‘ಸಲಾಂ ಬೆಂಗಳೂರು’ ಕಾದಂಬರಿಯಲ್ಲಿ ಉಲ್ಲೇಖಿಸಲಾದ, ವೇಣೂರಿನ ವೆಂಕಟರಮಣನ ಬಗ್ಗೆ ಏನೋ ಸ್ವಲ್ಪ ಬರೆದಿದ್ದರು ಎನ್ನಲಾದ ಕಾದಂಬರಿ ‘ಬೆಂಗಳೂರು’ (ಇದೇ ಹೆಸರಿನ ಒಂದು ಕಾದಂಬರಿಯನ್ನು ನಮಗೂ ನಿಮಗೂ ಗೊತ್ತಿರುವ ಜೋಗಿಯವರು 2016ರಲ್ಲಿ ಪ್ರಕಟಿಸಿದ್ದಾರೆ) ಯಾವಾಗ ಪ್ರಕಟವಾಗಿತ್ತೊ ಗೊತ್ತಿಲ್ಲ. ಆದರೆ, ಕಾದಂಬರಿಯ ಲಿಂಗದೇವರು ಹೇಳುವ ಪ್ರಕಾರ ಆ ಕಾದಂಬರಿಯನ್ನು ಈ ಕಾದಂಬರಿಯ ಜೋಗಿ ಬರೆದು ಎರಡು ವರ್ಷವಷ್ಟೇ ಆಗಿದೆ! ಪಾಮಜ್ಜಿಯ ಮೊಮ್ಮಗ ಊರು ಬಿಟ್ಟು ಓಡಿಹೋಗಿದ್ದು ನಾಲ್ಕಾರು ವರ್ಷಗಳ ಹಿಂದೆ. ನಮಗೂ ನಿಮಗೂ ಗೊತ್ತಿರುವ ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದಲ್ಲಿ ಬರುವ ಪಾಲಿಟಿಕ್ಸ್ ಆಫ್ ಮೆಮರಿ ಅಂದರೆ ಇದೇ ಇರಬಹುದೆ!

ಸ್ವಲ್ಪ ಸ್ಪಷ್ಟಪಡಿಸುವುದಾದರೆ, ನಮಗೂ ನಿಮಗೂ ಗೊತ್ತಿರುವ ಜೋಗಿಯವರ ಕತೆಯಲ್ಲಿ ಯೋಜನಗಂಧಿಯ ಪ್ರಸ್ತಾಪ ಮತ್ತೆಮತ್ತೆ ಬರುವುದಿಲ್ಲ, ಒಂದೇ ಒಂದು ಬಾರಿ ಬರುತ್ತದೆ. ಅಲ್ಲದೆ ಇದೇ ಕತೆಯಲ್ಲಿ ಪುರಾಣಗಳ ಬೇರೆ ಪಾತ್ರಗಳ ಹೆಸರು ಬರುವುದು ಇದೊಂದೇ ಬಾರಿಯಲ್ಲ. ಜೋಗಿಯವರು ಈ ಕತೆಯನ್ನು ಎಂ ವ್ಯಾಸರನ್ನೇ ಉದ್ದೇಶಿಸಿ ಬರೆದಿದ್ದಿಲ್ಲ ಎಂದು ತೇಜಸ್ವಿವ್ಯಾಸ್ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಹಲವರಲ್ಲಿ ನಾನೂ ಒಬ್ಬ ಎನ್ನುವುದನ್ನು ಹೇಳಿಯೇ ಆಡಬೇಕಾದ ಮಾತುಗಳಿವೆ. ಇದನ್ನು ಗಮನಿಸಿ.

"ಸುಕನ್ಯೆ ಬಿರುಬಿಸಿಲಲ್ಲಿ ಪ್ರತ್ಯಕ್ಷಳಾದಳು. ವ್ಯಾಸರು ಶಾಂಭವಿ ನದಿಯ ತೀರದಲ್ಲಿ ಕುಳಿತಿದ್ದರು. ವೇದವ್ಯಾಸರಿಗೂ ಮತ್ಸ್ಯಗಂಧಿ ಸಿಕ್ಕಿದ್ದು ಗಂಗಾತೀರದಲ್ಲೇ ತಾನೇ? ಅದು ಗಂಗಾ ನದಿಯೋ ಸರಯೂ ನದಿಯೋ ಮರೆತುಹೋಯಿತು."

ಈ ಕಾದಂಬರಿಯ ಪಾತ್ರವಾಗಿರುವ ಜೋಗಿಯ ಮನಸ್ಸಿನಲ್ಲಿದ್ದುದು ವೇದವ್ಯಾಸರೇ ಇರಬಹುದು. ನಮಗೂ ನಿಮಗೂ ಗೊತ್ತಿರುವ ಜೋಗಿಯವರ ಮನಸ್ಸಿನಲ್ಲಿದ್ದಿದ್ದೂ ವೇದವ್ಯಾಸರೇ ಇರಬಹುದು. ಕತೆಯಲ್ಲಿ ಬರುವ ವ್ಯಾಸರಿಗೆ ಸುಕನ್ಯೆಯನ್ನು ಕಂಡಾಗ ನೆನಪಾಗಿದ್ದು ಕೂಡ ಮತ್ಸ್ಯಗಂಧಿಯೋ ಯೋಜನಗಂಧಿಯೋ ಇರಬಹುದು. ಆದರೆ ನಮಗೂ ನಿಮಗೂ ಇಂಥ ಮಾತುಗಳನ್ನು ಚಂದ ಇದೆ ಎಂದು ನಂಬುವ ಕರ್ಮ ಬರಬಾರದು. ಮತ್ಸ್ಯಗಂಧಿಯ ಪ್ರೇಮಪಾಶಕ್ಕೆ ಸಿಲುಕಿದ್ದು ಪರಾಶರ ಮುನಿ, ವೇದವ್ಯಾಸರಲ್ಲ. ಅಸಲು ವೇದವ್ಯಾಸರು ಇದೇ ಪರಾಶರ ಮತ್ತು ಮತ್ಸ್ಯಗಂಧಿಯ ಸಮಾಗಮದಿಂದ ಜನಿಸಿದವರು, ಮತ್ಸ್ಯಗಂಧಿಯ ಪ್ರೇಮಿಯಲ್ಲ, ಮಗ! ಸಮರ್ಥನೆಗಾದರೂ ಒಂದು ಲಂಗುಲಗಾಮು ಇರಬೇಡವೆ!

ಅಜ್ಜಿಯ ಹುಡುಕಾಟ, ಅವರ ವಯಸ್ಸು, ಆಸ್ತಿ, ವಾರಸುದಾರಿಕೆಯ ಪ್ರಶ್ನೆ, ಕಬಳಿಸಲು ಕಾದಿರುವ ಮಂದಿಯ ಕಾಟ, ಜೆಂಗಳೂರಿನಂಥ ಬೆಂಗಳೂರು ಇದನ್ನು ಬಳಸಿಕೊಳ್ಳುವುದಕ್ಕೂ ಮುಂದಾಗಬಹುದಾದ ಸಾಧ್ಯತೆಗಳು, ಒಟ್ಟಾರೆ ಈ ಹುಡುಕಾಟದ ಮಾನವೀಯ ಅರ್ಥಪೂರ್ಣತೆ ಅಥವಾ ತಾರ್ಕಿಕ ಹುಚ್ಚಾಟ - ಎಲ್ಲವನ್ನೂ ಕಾದಂಬರಿ ಎಳೆ ಎಳೆಯಾಗಿ ಚಿತ್ರಿಸಿದೆ. ಬೇಸಿಕಲಿ ನಮಗೂ ನಿಮಗೂ ಗೊತ್ತಿರುವ ಜೋಗಿಯವರಿಗೂ ಮಹಾನಗರಗಳಲ್ಲಿ ಕಳೆದು ಹೋದವರನ್ನು ಹುಡುಕಿ ತೆಗೆಯುವುದು ಸಾಧ್ಯವೇ ಇಲ್ಲ ಎಂಬ, ತುಸು ಅಚ್ಚರಿ ಹುಟ್ಟಿಸುವ ನಿಲುವು ಇರುವಂತಿದೆ. ಈ ವಿಷಯದಲ್ಲಿ ಅವರು ಹೆಚ್ಚು ಅನುಭವಸ್ತರು, ತಿಳುವಳಿಕಸ್ತರು. ಹಾಗಾಗಿ ತಕರಾರು, ತರ್ಕವೇನಿಲ್ಲ.

ಹೀಗೆ ಮನೆಬಿಟ್ಟು, ಮಹಾನಗರ ಸೇರಿಕೊಂಡು ಬದುಕು ಕಟ್ಟಿಕೊಂಡ ಮಂದಿ ‘ಸತ್ತರೂ’ ಮರಳಿ ಊರಿನ ‘ಪಂಜರ’ ಸೇರಿಕೊಳ್ಳಲು ತಯಾರಿರುವುದಿಲ್ಲ ಎಂಬ ಒಂದು ತರ್ಕವೂ ಈ ಕಾದಂಬರಿಯ ಕೇಂದ್ರದಲ್ಲಿದೆ. ಇದೂ ಮೇಲೆ ಹೇಳಿದ ಕಾರಣಗಳಿಗಾಗಿಯೇ ನಿಜವಿದ್ದರೂ ಇರಬಹುದು. ಆದರೆ ಎರಡೂ ಕನ್ವಿನ್ಸಿಂಗ್ ಅನಿಸುವುದಿಲ್ಲ. ಯಾರದೋ ಯಾವುದೋ ಪುಸ್ತಕದಲ್ಲಿ ಯಥಾವತ್ ಹೆಸರು, ಲಕ್ಷಣ ಕಾಣಿಸಿಕೊಂಡಿದ್ದರಿಂದ ಅದನ್ನು ಬರೆದವರಿಗೆ ಆ ವ್ಯಕ್ತಿ ಗೊತ್ತಿರಬೇಕು ಎನ್ನುವ ಅಜ್ಜಿಯ ತರ್ಕ, ಕುಂಟನಿಯ ಅನುಮಾನ, ತೇಜಸ್ವಿ ವ್ಯಾಸರ ತೀರ್ಮಾನ ಎಲ್ಲವನ್ನೂ ಬದಿಗಿಟ್ಟು ನೋಡುವ. ನಾಲ್ಕಾರು ವರ್ಷಗಳ ಹಿಂದೆ ನಗರಕ್ಕೆ ಬಂದ ಮನುಷ್ಯ ಅಕಸ್ಮಾತ್ ಕಳೆದುಹೋದ ಚಿಕ್ಕಮಗುವಲ್ಲ. ಉದ್ದೇಶಪೂರ್ವಕ ಮನೆಬಿಟ್ಟು ಬಂದ ಬೆಳೆದ ಯುವಕ. ಇನ್ನು ನಗರದಲ್ಲಿ ನಾಲ್ಕಾರು ವರ್ಷಗಳಲ್ಲಿ ಆರ್ಥಿಕ ಭದ್ರತೆ ಕಂಡುಕೊಂಡು ಸೆಟ್ಲ್ ಆಗುವುದು ಕೂಡ ತಾರ್ಕಿಕವಾಗಿ ಸುಲಭಸಾಧ್ಯವೇನಲ್ಲ. ಹಾಗಿದ್ದೂ ಹುಡುಕಿ ತೆಗೆಯುವುದು ಸಾಧ್ಯವೇ ಇಲ್ಲದ ವಿಚಾರ ಎನ್ನುವ ತೀರ್ಮಾನದಿಂದ ವರ್ತಿಸುವ ಲಿಂಗದೇವರು ಮೋಸದ ಆಟ ಹೂಡಿದರು ಎನ್ನುವ ಸತ್ಯವನ್ನು ಅಜ್ಜಿ ಕಂಡುಕೊಂಡಂತಿರುವುದು ನಮಗೆ ಮುಖ್ಯವಾಗಬೇಕು. ಆ ಅಂಶ ಸ್ವಲ್ಪ ಮಬ್ಬಾಗಿದೆ ಕಾದಂಬರಿಯಲ್ಲಿ.

ಈ ಬಗೆಯ ಕ್ರೌರ್ಯದ ಹಲವು ಮುಖಗಳು ಕಾದಂಬರಿಯಲ್ಲಿ ಅಲ್ಲಲ್ಲಿ ನಮಗೆ ಕಾಣಸಿಗುತ್ತವೆ. ಅಸೂಕ್ಷ್ಮ ಮನಸ್ಸುಗಳು ಬೆಚ್ಚಿ ಬೀಳಿಸುವಂತೆ ಕಾಣಿಸಿಕೊಳ್ಳದೆ ಮಬ್ಬಾಗಿ ಕಾಣಿಸಿಕೊಳ್ಳುತ್ತವೆ. ಅಂಥ ಎಲ್ಲ ಸಂದರ್ಭದಲ್ಲೂ ಅದಕ್ಕೆ ಸಂವಾದಿಯಾದ ಪರಿಪ್ರೇಕ್ಷ್ಯಗಳನ್ನೂ ಕಾದಂಬರಿ ಒದಗಿಸುತ್ತದೆ ಎನ್ನುವುದು ನಿಜವಾದರೂ ಸಂದರ್ಭ, ಪರಿಸ್ಥಿತಿಗಳು ಮನುಷ್ಯ ಅಸೂಕ್ಷ್ಮನಾಗುವುದು ಸದ್ಯದ ಜೀವನಶೈಲಿಯ ಅನಿವಾರ್ಯ ಬೈಪ್ರಾಡಕ್ಟ್ ಮತ್ತದನ್ನು ಹಾಗೆಯೇ ಒಪ್ಪಿಕೊಳ್ಳಬೇಕು ಎನ್ನುವಂಥ ಮನೋಧರ್ಮ ಕಾಣಿಸುತ್ತದೆ.

"ಯಾವಾಗ ಒಂದು ಪಾತ್ರವನ್ನು ಅನಗತ್ಯವಾಗಿ ಕಟುವಾಗಿಸುತ್ತಾ ಹೋಗುತ್ತೀರೋ ಆಗ ಆ ಪಾತ್ರ ಸ್ವೀಕರಿಸುವ ಮತ್ತು ಕೊಡುವ ಗುಣವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಅದು ಬ್ಲಂಟ್ ಆಗುತ್ತದೆ. ಒಮ್ಮೆ ಮೊಂಡಾಗಿಬಿಟ್ಟರೆ ಮುಗಿಯಿತು. ಆ ಪಾತ್ರಕ್ಕೆ ಹೊಸದೇನೂ ಸೇರ್ಪಡೆಯಾಗುವುದಿಲ್ಲ. ಅಲ್ಲಿಗೆ ಆ ಪಾತ್ರ ತನ್ನ ಅಪಾರ ಸಾಧ್ಯತೆಗಳನ್ನು ಕಳೆದುಕೊಂಡು ಬಿಡುತ್ತದೆ.

"ಇದು ಕೇವಲ ಪಾತ್ರಕ್ಕಷ್ಟೇ ಒಪ್ಪುವಂಥ ಮಾತಾ? ನಮ್ಮ ಸುತ್ತಲೂ ಇರುವವರ ಬಗ್ಗೆ ನಾವೇಕೆ ಹೀಗೆ ಯೋಚಿಸುವುದಿಲ್ಲ. ನಾವೇಕೆ ನಮ್ಮವರು ಬ್ಲಂಟ್ ಆಗುವಂತೆ ವರ್ತಿಸುತ್ತಾ ಹೋಗುತ್ತೇವೆ."
(ಪುಟ 20)

ಪುಟ 22 ರಲ್ಲಿ ಬರುವ ಕತೆಗಾರ - ನಿರೂಪಕ - ಕತೆಯೊಳಗಿನ ಪಾತ್ರ ಮತ್ತು ಕತೆಯ ಚೌಕಟ್ಟಿನ ಹೊರಗಿನ ವ್ಯಕ್ತಿತ್ವಗಳ ನಡುವಣ ಸಂಘರ್ಷಗಳ ಕುರಿತ ಮಾತುಗಳನ್ನೂ ಗಮನಿಸಿ. ಅಲ್ಲಿಯೇ ಮುಂದೆ ವಿಜಯಲಕ್ಷ್ಮಿಯ ಪ್ರಸಂಗವೊಂದು ಬರುತ್ತದೆ. ವಿಜಯಲಕ್ಷ್ಮಿಯ ಅಪ್ಪ ದಿನವೂ ರಾತ್ರಿ ಕುಡಿದು ಮನೆಗೆ ಬರುತ್ತಿರುತ್ತಾನೆ. ಪ್ರತಿದಿನ ವಿಜಯಲಕ್ಷ್ಮಿಯ ತಾಯಿ ಅವನನ್ನು ಕಟುವಾದ ನಿಂದೆಯ ಮಾತುಗಳಿಂದ ಹಿಂಸಿಸುತ್ತಿರುತ್ತಾಳೆ. ಆದರೆ ಆತ ಮಾತ್ರ ಕಿವುಡನಂತೆ ತೆಪ್ಪಗೇ ಆ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ ಅಥವಾ ಒಂದು ಕಡೆ ಬಿದ್ದುಕೊಳ್ಳುತ್ತಾನೆ. "ನಮಗೆಲ್ಲ ಅದೇ ಜೋಗುಳದಂತೆ ಭಾಸವಾಗುತ್ತಿತ್ತು." ಎನ್ನುವ ಒಂದು ಮಾತಿದೆ ಇಲ್ಲಿ. ಮುಂದೆ ಆ ಮನೆಯಲ್ಲಿ ವಿಜಯಲಕ್ಷ್ಮಿಯ ಅಪ್ಪನ ಕೊಲೆಯಾಗುತ್ತದೆ. ಪೋಲೀಸರು ವಿಜಯಲಕ್ಷ್ಮಿಯನ್ನು ಬಂಧಿಸಿ ಕರೆದೊಯ್ಯುತ್ತಾರೆ. ವಿಜಯಲಕ್ಷ್ಮಿ ಮಾಡಿದ್ದು ಸರಿಯಾಗಿಯೇ ಇದೆ, ಎಷ್ಟು ದಿನಾಂತ ಸಹಿಸಿಕೊಂಡಿರುತ್ತಾಳೆ ಎಂದು ಜನ ಆಡಿಕೊಳ್ಳುತ್ತಾರೆ. ಆಗ ಮೇಲಿನಷ್ಟೇ ಅಸೂಕ್ಷ್ಮವೆನ್ನಿಸುವ ಇನ್ನೊಂದು ಮಾತು ಇದೆ:

"ಬೈಯುತ್ತಿದ್ದವಳು ಅಮ್ಮ, ಬೈಸಿಕೊಳ್ಳುತ್ತಿದ್ದವನು ಅಪ್ಪ, ವಿಜಯಲಕ್ಷ್ಮಿ ಸಹಿಸುವಂಥದ್ದು ಏನಿತ್ತು ಅನ್ನುವುದು ನನಗೆ ಗೊತ್ತೇ ಆಗಿರಲಿಲ್ಲ."

ಆಗಿರಲಿಲ್ಲ ಎಂದರೆ ಮುಂದೆ ಆಯಿತು ಅಂತ ಅಂದುಕೊಳ್ಳಲು ಕಾರಣವಿಲ್ಲ. ಕಾದಂಬರಿ ತೀರ ಲಘುಧಾಟಿಯಲ್ಲಿ ವಿಜಯಲಕ್ಷ್ಮಿಯ ಮನೆಯಲ್ಲಿ ನಿಜಕ್ಕೂ ಏನು ನಡೆದಿರಬಹುದು ಎನ್ನುವ ಊಹೆಯ ಲಹರಿಗೆ ಹೊರಳುತ್ತದೆಯೇ ಹೊರತು ಇಡೀ ಪ್ರಸಂಗದ ನಿರೂಪಣೆಯಲ್ಲಿ subtle ಆದ ಏನೂ ಕಾಣಿಸಿಕೊಳ್ಳುವುದೇ ಇಲ್ಲ.

ಕಥನಕಲೆಯ ಬಗ್ಗೆ ಬಹುಶಃ ಜೋಗಿಯವರು ಮಾತನಾಡಿದಷ್ಟು, ಬರೆದಷ್ಟು ಬೇರಾವ ಸೃಜನಶೀಲ ಲೇಖಕನೂ ಬರೆದಿದ್ದು, ಆಡಿದ್ದು ಇಲ್ಲವೇನೋ! ಇಲ್ಲಿಯೂ ಅಂಥ ಕೆಲವು ಮಾತುಗಳಿವೆ. ಕೆಲವು ಕೇವಲ ಕೇಳುವುದಕ್ಕೆ ಕುಶಿಕೊಡುವ ಶಾಬ್ದಿಕ ಆಡಂಬರದಾಚೆ, ಮಾಡುವ ಸದ್ದಿನಾಚೆ ಯಾವು ಸೂಕ್ಷ್ಮವನ್ನೂ ಕಾಣಿಸುವುದಿಲ್ಲ. ಇನ್ನು ಕೆಲವು ಅಪವಾದದಂತೆ ಚೆನ್ನಾಗಿವೆ. ಒಂದು ಸ್ಯಾಂಪಲ್ ಗಮನಿಸಿ:

"ಒಂದೊಳ್ಳೆಯ ಪಾತ್ರ ಉದ್ದಿನ ಹಪ್ಪಳದ ಹಾಗಿರಬೇಕು. ಕುದಿಯುವ ಎಣ್ಣೆಗೆ ಹಾಕಿದರೆ ಭರಭರ ಉಬ್ಬಬೇಕು, ಹುಣಸೇಬೀಜದ ಹಾಗಿದ್ದರೆ ಹುರಿದದ್ದೂ ದಂಡ." (ಪುಟ 52)

‘ಚಿನ್ಮಯಿಗೆ ಬಿಡುಗಡೆ ಕೊಟ್ಟಿದ್ದೇನೆ’ (!?) ಎಂದು ತನಗೆ ತಾನೇ ಶಹಬ್ಬಾಸ್ ಕೊಟ್ಟುಕೊಳ್ಳುವ ನಿರೂಪಕ ಪಾತ್ರಗಳನ್ನು ಬೋಂಡ ಕರಿದಂತೆ, ಉದ್ದಿನ ವಡೆ ಹುರಿದಂತೆ ಎಂದೆಲ್ಲ ಬೀಸು ಹೇಳಿಕೆಯನ್ನೂ ಕೊಡುತ್ತ, ಪಾತ್ರವೊಂದು ಕಥನ ಪ್ರಕಾರದ ಬಂಧದ ಆಚೆ, ಕೃತಿಯ ಚೌಕಟ್ಟಿನ ಆಚೆ, ಜೀವಂತವಾಗಿ ಬೆಳೆಯುವ, ಉಸಿರಾಡುವ, ಕತೆಗಾರನ ಪ್ರತಿಬಿಂಬ/ವೇಷ/ಮೀಡಿಯಾ ಆಗದೆ ತನ್ನದೇ ಅಸ್ಮಿತೆಯಿಂದ ಬೆಳಗುವ ಲೀಪ್ ಸಾಧಿಸಬೇಕು ಎಂದೂ ಆಡುವುದು ಕನ್ವಿನ್ಸಿಂಗ್ ಅನಿಸುವುದಾದರೂ ಹೇಗೆ!

"ಕತೆ ಕಾದಂಬರಿ ಬರೆಯೋರೆಲ್ಲ ಸಿಕ್ಕಾಪಟ್ಟೆ ಕತೆ ಕಾದಂಬರಿ ಓದಿಕೊಂಡಿದ್ದೇವೆ. ಸಿನಿಮಾ ನೋಡಿದ್ದೇವೆ. ಹೀಗಾಗಿ ನಮ್ಮ ಕತೆಗಳಲ್ಲಿ ಅನಿರೀಕ್ಷಿತವಾದದ್ದು ಏನೂ ನಡೆಯೋದೇ ಇಲ್ಲ. ಪ್ರತಿಯೊಂದು ಸನ್ನಿವೇಶವನ್ನೂ ಹೇಗೆ ಎದುರಿಸಬೇಕು ಅನ್ನೋದು ನಮಗೆ ಗೊತ್ತಿದೆ. ಅದನ್ನು ನಾವು ಹಾಗೆಯೇ ಎದುರಿಸ್ತಿದ್ದೀವಿ." (ಪುಟ 73)

ಇದು ನಿಜಕ್ಕೂ ಒಳ್ಳೆಯ ಒಂದು ಅಬ್ಸರ್ವೇಶನ್. ಆದರೆ ವಯಸ್ಸು, ಅನುಭವ, ಜಡ್ಡುಗಟ್ಟಿರುವುದನ್ನೇ ಸೂಚಿಸುವ ಪ್ರಬುದ್ಧತೆ ಕೂಡ ಕಾರಣವಾಗಿರಬಹುದಾದ್ದನ್ನು ಓದು, ಸಿನಿಮಾಗಳಿಗೆ ಗಂಟು ಹಾಕುವುದು ಹೇಗೆ?

ಇಡೀ ಕಾದಂಬರಿಯಲ್ಲಿ ನನಗೆ ಬಹಳ ಮುಖ್ಯವೆನಿಸಿದ ಒಂದು ಮಾತುಕತೆ ಪುಟ 78ರಲ್ಲಿದೆ. ಜೋಗಿಯವರು ಕೂಡ ಈ ಕಾದಂಬರಿಯಲ್ಲಿ ಒಂದು ಹೊಸ ಶಬ್ದವನ್ನು ರೂಪಿಸಿದ್ದಾರೆ. ಅದು ‘ಸಿಟಿ ಸಿಂಪಥಿ’. ಬಹಳ ಚೆನ್ನಾಗಿರುವ ರೂಪಕವಿದು. ಈ ಸಂಭಾಷಣೆ ಗಮನಿಸಿ:

"ನನಗೂ ಪಾಮಜ್ಜಿಗೂ ಏನು ಸಂಬಂಧ? ನಿನಗೂ ಪಾಮಜ್ಜಿಗೂ ಏನು ಸಂಬಂಧ? ನೀನು ಅವಳನ್ನು ನೋಡಿದ್ದು ನಿನ್ನೆ ಬೆಳಿಗ್ಗೆ. ನಾನೂ ಅಷ್ಟೇ. ಯಾರು ಅಂತ ಗೊತ್ತಿಲ್ಲದವರ ಜೊತೆಯಲ್ಲಿ ಎರಡು ದಿನ ಓಡಾಡಿದ್ದೇನೆ. ನಮ್ಮ ನೆಂಟರಿಷ್ಟರು ಬಂದರೇನೇ ನಾನು ರಜಾ ಹಾಕುವುದಿಲ್ಲ. ನಾನೇ ಕಾಯಿಲೆ ಬಿದ್ದರೂ ಕಷ್ಟಪಟ್ಟು ಆಫೀಸಿಗೆ ಹೋಗುತ್ತೇನೆ. ಹಾಗಿರುವಾಗ, ಕುಂಟನಿಗೋಸ್ಕರ ಎರಡು ದಿನ ಅವರಿಗೆ ಕೊಟ್ಟೆ. ಇದಕ್ಕಿಂತ ಹೆಚ್ಚಿಗೇನು ಮಾಡಲು ಸಾಧ್ಯ? ಇನ್ನೂ ಎಷ್ಟು ದಿನ ಅವರ ಜೊತೆಗೆ ಸುತ್ತಾಡಿದರೆ ಕ್ರೌರ್ಯ ಅಲ್ಲ ಅನ್ನಿಸಿಕೊಳ್ಳುತ್ತದೆ?"
ನಾನೂ ಕೊಂಚ ಸಿಟ್ಟಿನಿಂದಲೇ ವಾದಿಸಿದೆ.
"ಅವರೂ ನಮ್ಮ ಹಾಗೆ ಮನುಷ್ಯರು. ಅಷ್ಟೇ ಸಂಬಂಧ. ಅದಕ್ಕಿಂತ ದೊಡ್ಡ ಸಂಬಂಧ ಬೇಕು ಅಂತೇನೂ ಇಲ್ಲ. ಇಡೀ ದಿನ ಕೂತು ಕಾದಂಬರಿ ಬರೆದು ಈ ಜಗತ್ತಿನಲ್ಲಿ ಇಲ್ಲದ ಪಾತ್ರಗಳ ಬಗ್ಗೆ ಅನುಕಂಪ ತೋರಿಸುವುದಕ್ಕಿಂತ ಅವರೊಟ್ಟಿಗೆ ಸುತ್ತಾಡುವುದು ಒಳ್ಳೆಯ ಕೆಲಸ."

- ಎಂಥ ಮಾತು! ಗೆಳೆಯನಿಗೆ ಸಮಯ ಕೊಟ್ಟೆ ಎನ್ನುವಷ್ಟು ಸಮಯ ನಮಗೆ ದುಬಾರಿ ಆಗಬಾರದು. ಏಕೆಂದರೆ, ಬದುಕು ಕೊನೆಗೂ ಸಮಯದ ಹಿಂದೆ ಹೂಡಿದ ಓಟವಾಗಿ ಬಿಟ್ಟರೆ ಅದಕ್ಕಿಂತ ದೊಡ್ಡ ದುರಂತವಿದೆಯೆ? ಇದೇ ಅರ್ಥದ ಮಾತು ಮುಂದೆ ಪುಟ 103ರಲ್ಲೂ ಬರುತ್ತದೆ.

"ದುಡಿಯುವುದರಲ್ಲೇ ಸಂತೋಷ ಕಂಡುಕೊಂಡು ಬದುಕುವುದನ್ನೇ ಮರೆತಿದ್ದೇವಾ?"

ಅದರೆದುರಿನ ಪುಟ 79 ನೋಡಿ:
"ಆದರೆ ಆ ಹುಡುಕಾಟ ವ್ಯರ್ಥ ಅನ್ನುವುದು ನನಗೆ ಗೊತ್ತಿತ್ತಲ್ಲ? ಹುಡುಕಾಟದ ಫಲ ಮಾತ್ರ ವ್ಯರ್ಥ, ಹುಡುಕಾಟ ವ್ಯರ್ಥವಲ್ಲ ಎಂದೇಕೆ ನಾನು ಅಂದುಕೊಳ್ಳಬಾರದು. ಇನ್ನು ಉಳಿಯುವುದಿಲ್ಲ ಅಂತ ಗೊತ್ತಿದ್ದರೂ ಆಸ್ಪತ್ರೆಗೆ ಸೇರಿಸಿ ಔಷಧಿ ಕೊಡಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿಸುವುದಿಲ್ಲವೇ? ಅದು ವ್ಯರ್ಥ ಅಂತ ಮೊದಲೇ ಸುಮ್ಮನಿದ್ದರೆ ಅದನ್ನು ಜಾಣತನ ಅನ್ನುತ್ತಾರೋ ಕ್ರೌರ್ಯ ಅನ್ನುತ್ತಾರೋ?"

ಬಹುಶಃ ಹೀಗೆಲ್ಲ ಯೋಚಿಸುವುದನ್ನು, ಯೋಚಿಸುತ್ತೇವೆ ಎಂದು ಹೇಳಿಕೊಳ್ಳುವುದನ್ನು ಶುದ್ಧ ತಾರ್ಕಿಕತೆ ಅಂತಲೋ, ಪ್ಯೂರ್ ಇಂಟೆಲಿಜೆನ್ಸ್ ಅಂತಲೋ, ಚಿಂತನಶೀಲತೆ ಎಂದೋ ಭಾವಿಸಿ ಬರೆಯುತ್ತೇವಲ್ಲ, ಅದು ನಮ್ಮ ಜಡ್ಡುಗಟ್ಟಿದ ಅಸೂಕ್ಷ್ಮ ಮನಸ್ಥಿತಿ ಎನ್ನಬೇಕು. ನಮ್ಮ ಇನ್ನೊಬ್ಬ ಕತೆಗಾರರು ತಮ್ಮ ತಾಯಿಯನ್ನು ಚಿತೆಯ ಮೇಲೆ ಸುಡುವಾಗ ಇದನ್ನೆಲ್ಲ ಕತೆಯಲ್ಲಿ ಹೇಗೆ ತರಬಹುದು ಎಂದು ಯೋಚಿಸುತ್ತಿದ್ದೆ ಎಂದು ಬರೆದುಕೊಳ್ಳುತ್ತಾರೆ. ಯೋಚಿಸಿದ್ದೇ ನಿಜವಂತೆ, ಅದನ್ನು ಬರೆದುಕೊಳ್ಳುವುದಕ್ಕೇನಂತೆ, ಅದನ್ನು ಅಡಗಿಸಿಟ್ಟು ತಾನೊಬ್ಬ ಸೂಕ್ಷ್ಮಸಂವೇದಿಯೆಂಬಂತೆ ಫೋಸು ಕೊಡುವುದು ಅಪ್ರಾಮಾಣಿಕತೆಯಲ್ಲವೆ ಎನ್ನುವ ಪ್ರಶ್ನೆ ಇದ್ದೇ ಇದೆ. ಆದರೆ ಹೀಗೆಲ್ಲ ಯೋಚಿಸುವಷ್ಟೂ ಕತೆಗಾರನಾಗುವುದು ಮುಖ್ಯ ಎಂದಾದರೆ ಅಂಥ ಕತೆಗಾರ ಆಗದೇ ಇರುವುದು ನಾನು ಆರಿಸಿಕೊಳ್ಳುವ ಹಾದಿಯಾಗಿರುತ್ತದೆ ಎಂದಷ್ಟೇ ಹೇಳಬಹುದು.

‘ಸಿಟಿ ಸಿಂಪಥಿ’ಯ ಸಮಗ್ರ ಗುಣಲಕ್ಷಣಗಳನ್ನು ತಿಳಿಸುವ ಮಾತು ಪುಟ 84-85ರಲ್ಲಿದೆ. ಅದು ಕುತೂಹಲಕರವೂ ಕಟು ವಾಸ್ತವವೂ ಆಗಿದೆ ಎನ್ನುವುದು ನಿಜವಾದರೂ ಎಲ್ಲ ವಾಹ್ ಎನಿಸುವ ಮಾತುಗಳಷ್ಟೇ ಆಗಿ ಉಳಿಯುತ್ತದೆ ಎನ್ನುವುದು ಕೂಡ ಅಷ್ಟೇ ನಿಜ. ಏಕೆಂದರೆ, ಜೋಗಿಯವರ ಬೆಂಗಳೂರು ಕುರಿತ ಕಾದಂಬರಿಗಳ ಸರಣಿಯ ನಾಲ್ಕನೆಯ ಕೃತಿ ಇದು ಹೌದಾದರೂ ಇಲ್ಲಿನ ಪಾತ್ರಗಳಿಗೆ ಸ್ವಲ್ಪ ಅವಕಾಶ ಸಿಕ್ಕಿದ್ದೇ ಬೆಂಗಳೂರನ್ನು ಆಡಿಕೊಳ್ಳುವ ಕೆಟ್ಟ ಚಾಳಿ ಇದೆ. ಕುಂಟನಿಯವರ ಮೂಲಕವಂತೂ ಮತ್ತೆ ಮತ್ತೆ ಉಪ್ಪಿನಂಗಡಿ ಶ್ರೇಷ್ಠ, ಬೆಂಗಳೂರು ದರಿದ್ರ ಎನ್ನುವ ತತ್ವ ಪ್ರತಿಪಾದನೆ ಆಗುತ್ತಲೇ ಇರುತ್ತದೆ. ತಮಾಶೆ ಎಂದರೆ ಪುಟ 82ರಲ್ಲಿ ಬರುವ ಒಂದು ಮಾತು "ಅಷ್ಟಕ್ಕೂ ಈ ನಿನ್ನೆ ನಾಳೆ ಈ ಕ್ಷಣ ಅನ್ನುವುದೆಲ್ಲ ಬರೀ ಮಾತು ಅಲ್ಲವೇ?" ಎನ್ನುತ್ತದೆ. ಅದೇ ಅರ್ಥದಲ್ಲಿ ಈ ಬೆಂಗಳೂರು, ಉಪ್ಪಿನಂಗಡಿ ಕೂಡಾ ಸದ್ಯದ ಪರಿಸ್ಥಿತಿಯಲ್ಲಿ ಬರಿಯ ಮಾತು ಮಾತ್ರ. ಅಲ್ಲಿಗೂ ಇಲ್ಲಿಗೂ ವ್ಯತ್ಯಾಸ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಬೆಂಗಳೂರಿನಿಂದ ಒಮ್ಮೆ ಓಡಿ ಹೋದರೆ ಸಾಕು ಎನಿಸುವ ಹೊತ್ತಿಗೇ ‘ಸತ್ತರೂ’ ಅಲ್ಲಿಂದ ಮರಳಿ ಊರಿನ ‘ಪಂಜರ’ಕ್ಕೆ ಹೋಗುವುದಿಲ್ಲ ಎನ್ನುವವರೂ ಇದ್ದೇ ಇರುತ್ತಾರೆ ಎನ್ನುವುದಕ್ಕೆ ಕಾದಂಬರಿಯೇ ಸಾಕ್ಷ್ಯ ಒದಗಿಸುತ್ತಿದೆಯಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ