ವಿರಹದ ಸಂಕ್ಷಿಪ್ತ ಪದಕೋಶ - ದ ನಿರೂಪಣೆಯ ಸೊಗಸು, ಪ್ರೇಮದ ಸಾಧ್ಯತೆಯೊಂದು ಕುತೂಹಲ ಮೂಡಿಸಿ ಕಾಯಿಸುವ ಕಲೆ, ಜೋಗಿಯವರ ಕಾದಂಬರಿಗಳಲ್ಲಿ ಇದ್ದೂ ಇಲ್ಲದಂತೆ ಅಲ್ಲಲ್ಲಿ ಬರುವ ಮನಸ್ಸು ಕೆಡಿಸಬಲ್ಲ ಚಿಂತನೆಯ, ಜಿಜ್ಞಾಸೆಗಳ ಹೊಳಹು - ಯಾವುದರ ಬಗ್ಗೆಯೂ ನಾನು ಕೊರೆಯುವುದಿಲ್ಲ. ನನಗೆ ಮುಖ್ಯ ಎನಿಸಿದ ಎರಡೇ ಎರಡು ಸಂಗತಿಗಳನ್ನು ಇಲ್ಲಿ ಹೇಳಿ ಮುಗಿಸುತ್ತೇನೆ.
ಒಂದು, ಜೋಗಿ ಕಾದಂಬರಿಗಳಲ್ಲಿ ನಾನು ಬಹುವಾಗಿ ಬಯಸುತ್ತಿದ್ದ, ಆದರೆ ಅದು ಎಂದಿಗೂ ಅವರ ಕಾದಂಬರಿಯ ದೇಹದಲ್ಲಿ ಕಾಣಿಸದೇನೋ ಎಂದು ಸಾಕಷ್ಟು ನಿರಾಶನಾಗಿದ್ದ ಒಂದು ಸಂಗತಿ ಈ ಕಾದಂಬರಿಯಲ್ಲಿ ಸಂಭವಿಸಿರುವುದು. ಅದು ಮೌನ ಮತ್ತು ಸ್ಥಾಗಿತ್ಯ.
ನೀವು ಭಾಷೆಯನ್ನು ಬಳಸಿ ಕತೆ ಹೇಳುತ್ತೀರಿ. ಒಬ್ಬ ಬರಹಗಾರನ ಬರವಣಿಗೆಯ ಕರ್ಮದ ಅನಿವಾರ್ಯ ಸಾಹಿತ್ಯ(tool)ವೆಂದರೆ ಭಾಷೆ. ಅದರಲ್ಲೇ ಅವನು ಓದುಗನ ಪಂಚೇಂದ್ರಿಯಗಳಿಗೆ ಬೇಕಾದುದನ್ನು ಒದಗಿಸುವ ಸೊಕ್ಕು ತೋರಿಸುತ್ತಾನೆ, ಗೆಲ್ಲುತ್ತಾನೆ ಮತ್ತು ಸೋಲುತ್ತಾನೆ. ಅಂದರೆ ಅವನು ಇಂದ್ರಿಯಗಳನ್ನು ಮನಸ್ಸಿನ ಮೂಲಕ ತಲುಪುವ ಕುಶಲಿ. ಎಲ್ಲಾ ಇಂದ್ರಿಯಗಮ್ಯ ಜ್ಞಾನದ ಅರಿವು ಮನುಷ್ಯನಿಗೆ ಸಿಗುವುದು ಮನಸ್ಸಿನಲ್ಲೇ ಎನ್ನುವುದನ್ನು ಬಲ್ಲ ಮನೋವೈದ್ಯ ಅವನು. ಆದರೆ, ಅದೇ ಅನಿವಾರ್ಯ ಹೊರೆಯಾದ, ಮಿತಿಯಾದ, ಅಸ್ತ್ರವಾದ ಭಾಷೆಯಿಂದಲೇ ಅವನು ತನ್ನ ಕಾದಂಬರಿಯಲ್ಲಿ ಮೌನವನ್ನು ಕೂಡ ಕಟ್ಟಿಕೊಡಬೇಕಾಗುತ್ತದೆ, ಸ್ಥಾಗಿತ್ಯವನ್ನು ಕೂಡ ಓದುಗನಿಗೆ ಕಾಣಿಸಬೇಕಾಗುತ್ತದೆ. ಇದು ಕಷ್ಟ.
ನೀವು ಸುಮ್ಮನೇ ರಾತ್ರಿ ಹೊತ್ತು ಮನೆಯಿಂದ ಹೊರಬಂದು ಆಕಾಶದ ಕೆಳಗೆ ಊರಿನ ಸದ್ದು, ಗದ್ದಲ, ಎಲ್ಲೋ ಕೂಗುವ ನಾಯಿ, ಇನ್ನೆಲ್ಲೊ ಯಾರೋ ಗಟ್ಟಿಯಾಗಿ ನಗುವುದು, ಇನ್ನೆಲ್ಲೊ ಮಗು ಕಿರುಚಿ ಕಿರುಚಿ ಅಳುವುದು, ಇನ್ನೆಲ್ಲೋ ಕೇಳಿ ಬರುತ್ತಿರುವ ಜಗ್ಗೇಶನ ಧ್ವನಿ ಎಲ್ಲ ಕೇಳಿಸಿಕೊಳ್ಳುತ್ತಲೇ ಇದ್ಯಾವುದೂ ತನಗೆ ಸಂಬಂಧವೇ ಇಲ್ಲ ಎನ್ನುವಂತೆ ತನ್ನ ಪಾಡಿಗೆ ತಾನು ಅರೆಗತ್ತಲಲ್ಲಿ ಮೈತುಂಬ ನಕ್ಷತ್ರ ಹೊತ್ತು ನಿಂತ ಆಕಾಶದೊಡನೆ ಮಾತಿಗಿಳಿಯಲು ಪ್ರಯತ್ನಿಸುತ್ತೀರಿ. ವಿಮಾನವೊಂದು ಅದರ ಮೈಯ ಮೇಲೆ ಮೆಲ್ಲಗೆ ನೋವಾಗದಂತೆ ಸಾಗಿ ಹೋಗುವುದನ್ನು ಕಂಡು ಅದರೊಳಗೆ ಇರುವ ಪ್ರಯಾಣಿಕರ ಬಗ್ಗೆ ಯೋಚಿಸತೊಡಗುತ್ತೀರಿ. ನಿಮಗೆ ತುಂಬ ಪ್ರೀತಿಯಿದ್ದ, ಈಗ ಇನ್ಯಾರದೋ ಮಡದಿಯಾಗಿ, ಎಲ್ಲೋ ಅಡುಗೆ ಮನೆಯಲ್ಲಿ ರಾತ್ರಿಯೂಟದ ತಯಾರಿಯಲ್ಲಿರುವ ಅವಳ ನೆನಪಾಗುತ್ತದೆ. ಬೇಡವೆಂದರೂ ನಾಳೆಯ ಆಫೀಸಿನ ಕಿರಿಕಿರಿಗಳೆಲ್ಲ ನೆನಪಾಗಿ ಏನಿದು ಜೀವನ ಅನಿಸತೊಡಗುತ್ತದೆ....ತೀರಿಕೊಂಡ ಅಮ್ಮನೋ ಅಪ್ಪನೋ ಆ ನಕ್ಷತ್ರಗಳೆಡೆಯಿಂದ ನಿಮಗೆ ಸಮಾಧಾನ ಹೇಳಿದಂತೆ ಮನಸ್ಸು ಆರ್ದ್ರವಾಗುತ್ತದೆ.
ಉಂಬರ್ತೊ ಇಕೊ ಇದನ್ನು ಲಿಂಗರಿಂಗ್ ಎಂದು ಕರೆಯುತ್ತಾನೆ. ಇಲ್ಲಿ ಕತೆಗೆ ಚಲನೆಯಿಲ್ಲ. ಆದರೆ ಕತೆಯ ಆತ್ಮಕ್ಕೆ ಇದರಿಂದ ಏನೋ ಒಂದು ದಿವ್ಯ ಪ್ರಾಪ್ತಿಯಾಗುತ್ತಿರುತ್ತದೆ. ಅದನ್ನು ಗ್ರಹಿಸಿದವರಿಗೆ ಅದು ಸಿಗುತ್ತದೆ, ಉಳಿದವರಿಗೆ ಕಗ್ಗ ಎನಿಸಿಬಿಡುತ್ತದೆ. ಇವತ್ತಿನ ಲೇಖಕ ಈ ಲಿಂಗರಿಂಗ್ನ್ನು ಕೊನೆಗೆ ತಿದ್ದುವಾಗಲಾದರೂ ಕಾಟು ಹಾಕಿ ಕಟ್ ಮಾಡಿ ತೆಗೆಯುತ್ತಾನೆ. ಸಂಪಾದಕರಂತೂ ದುರ್ಬೀನು ಹಿಡಿದು ಇಂಥವನ್ನು ಸರ್ಜರಿ ಮಾಡಿ ಎಸೆಯುತ್ತಾರೆ. ಪದಮಿತಿಗಳಿವೆ ಇಲ್ಲಿ ಬದುಕುವುದಕ್ಕೆ!
ನಮ್ಮ ಭಾರತೀಯ ಆಧ್ಯಾತ್ಮವೆನ್ನುವುದು ಸದಾ ಮನುಷ್ಯನ ಕಣ್ಣುಗಳು ಹೊರಗಿನದ್ದನ್ನು ನೋಡುವುದು ನಿಲ್ಲಿಸಿ ಅವನ ಒಳಗಿನದ್ದನ್ನು ನೋಡಲು ಆರಂಭಿಸಬೇಕು ಎಂಬ ಸರಳ ತತ್ವದ ಮೇಲೆಯೇ ನಿಂತಿದೆ. ಅತಿಯಾದರೆ ನಿರಾಶಾವಾದಕ್ಕೆ ತಿರುಗುವ, ರೋಗವಾಗಬಲ್ಲ ಈ ಅಂತಃಚಕ್ಷು ಇಲ್ಲದೇ ಹೋದರೆ ಮನುಷ್ಯ ಮೃಗವಾಗುತ್ತಾನೆ. ಆದರೆ ಯಾವಾಗ ನಮ್ಮ ಧರ್ಮ ಹಬ್ಬ, ಜಾತ್ರೆ, ಮೈಕ್ಸೆಟ್ಟು, ತೀರ್ಥಯಾತ್ರೆಗಳ ಆಡಂಬರದ ಪ್ರದರ್ಶನಕ್ಕೆ ಹೊರಳಿತೊ ಆಗ ಇದು ತೆರೆಮರೆಗೆ ಸರಿದು ಸೊರಗಿತು. ಇವತ್ತು ಯೋಗ, ದೇವಸ್ಥಾನ, ಧರ್ಮ ದಿನನಿತ್ಯದ ಮಾಧ್ಯಮಗಳಲ್ಲಿ ವಿಜೃಂಭಿಸುವ ಸಂಗತಿಗಳಾಗಿರುವುದು ಇದಕ್ಕೆ ದೃಷ್ಟಾಂತ. ಕಿಟಕಿ, ಕನ್ನಡಿ ಎಂದೆಲ್ಲ ಇದನ್ನು ವಿವರಿಸುವ ಸಾಕಷ್ಟು ಚರ್ಚೆಗಳು ನಿಮಗೆ ಅಲ್ಲಲ್ಲಿ ಸಿಗುವುದರಿಂದ ಅದೆಲ್ಲ ಇಲ್ಲಿ ಮತ್ತೊಮ್ಮೆ ಬೇಡ. ಆದರೆ ಇದೆಲ್ಲ ನಡೆಯುವುದು ಏಕಾಂತದಲ್ಲಿ, ಮೌನದಲ್ಲಿ, ನಿಮ್ಮೊಳಗೆ. ಇದನ್ನೂ ಭಾಷೆಯಲ್ಲಿ, ವಾಚ್ಯವಾಗದೆ, ಉಪನ್ಯಾಸವಾಗದೆ ತರುವ ಹೊಣೆಗಾರಿಕೆ ತನಗಿದೆ ಎಂದು ಪ್ರತಿಯೊಬ್ಬ ಭಾರತೀಯ ಲೇಖಕನೂ ಅಂದುಕೊಳ್ಳುತ್ತಾನೆ. ಯಾಕೆಂದರೆ, ಇಲ್ಲಿ ಸಾಹಿತ್ಯ ಹುಟ್ಟಿದ್ದೇ ಮನುಷ್ಯ ಬದುಕ ಬಹುದಾದ ಒಂದು ಅತ್ಯಂತ ಪರ್ಫೆಕ್ಟ್ (ಶ್ರೇಷ್ಠ ಎನ್ನುವ ಶಬ್ದ ಬೇಡ ಬಿಡಿ) ನೆಲೆ ಎನ್ನುವುದು ಇರುವುದೇ ಆದರೆ ಅದು ಯಾವುದು ಎನ್ನುವ ಶೋಧದಲ್ಲಿ. ರಾಮಾಯಣಕ್ಕೂ ಇದು ಸತ್ಯ, ಜೋಗಿಯವರ ಸದ್ಯದ L ಕಾದಂಬರಿಗೂ ಇದು ಸತ್ಯ.
ಮೌನವನ್ನು, ಉದ್ದೇಶಗಳೇ ಇಲ್ಲದ, ಚಲನೆ ಇಲ್ಲದ, ಪ್ರಜ್ಞಾಪ್ರವಾಹದ ಮಾತುಗಳಾಗಲೀ, ಸನ್ನಿವೇಶದ ಕುರಿತ ಮಾತುಗಳಾಗಲೀ ಇಲ್ಲದ ಮೌನವನ್ನು ಮತ್ತು ಇದರಿಂದ ಸಾಧ್ಯವಾಗುವ ಸ್ಥಾಗಿತ್ಯವನ್ನು ಭಾಷೆಯ ಹಂಗಿನಲ್ಲಿರುವ ಸಾಹಿತ್ಯದಲ್ಲಿ ಸಾಧಿಸಲು ಹಲವು ಹತ್ತು ವಿಧಾನಗಳಿವೆ. ಅವು ನಿಮಗೆ ಗೊತ್ತು. ಆದರೆ ಜೋಗಿಯವರು ಅವುಗಳ ಬಳಕೆ ಮಾಡುತ್ತಿರಲೇ ಇಲ್ಲ. ವೇಗವಾಗಿ ಸಾಗುವ ಕಥಾನಕ, ಮಾತು, ಚಲನೆ, ತಿರುವು, ಚಕಚಕನೆ ಬದಲಾಗುವ ಸನ್ನಿವೇಶದ ನಡುವೆ ಅಲ್ಲಲ್ಲಿ ಚದುರಿದಂತೆ ಬರುವ ಅವರ ಚಿಂತನೆಯ, ಜಿಜ್ಞಾಸೆಯ ಮಾತುಗಳಿಗೆ ಸ್ಪೇಸ್ ಇಲ್ಲದೆ ಅಪರೂಪಕ್ಕೆ ಅಂಡರ್ಲೈನ್ ಮಾಡಿಕೊಂಡು ಅವುಗಳೊಂದಿಗೆ ನಿಲ್ಲುವ ಅಪರೂಪದ ಓದುಗನನ್ನು ಬಿಟ್ಟರೆ ಉಳಿದವರನ್ನು ಅವರು ತಲುಪಲೇ ಇಲ್ಲ ಮಾತ್ರವಲ್ಲ, ಜೋಗಿಯವರನ್ನು ಸಾಕಷ್ಟು ಮಂದಿ ಲೈಟ್ ಆಗಿ ತೆಗೆದುಕೊಳ್ಳುವಂತಾಯಿತು, ಹಾಗೆಂದೇ ಅವರಿವರಲ್ಲಿ ಆಡುವಂತಾಯಿತು.
"ಈ ಕತೆ ಹೇಳುವಂತೆ ಯಾರು ತಾನು ಸಾವಿಲ್ಲದವನು ಅಂದುಕೊಳ್ಳುತ್ತಾನೋ, ಮುಪ್ಪಿಲ್ಲದವನು ಅಂದುಕೊಳ್ಳುತ್ತಾನೋ ಅಂಥವನು ತನ್ನ ಮುಪ್ಪನ್ನು, ಸಾವನ್ನು ಕನ್ನಡಿಯಲ್ಲಿ ಕಾಣಬೇಕು. ಎಲ್ಲರೂ ತಮ್ಮ ನಾಳೆಯನ್ನು ಕನ್ನಡಿಯಲ್ಲಿ ನೋಡಲೇಬೇಕು. ಕನ್ನಡಿಯಲ್ಲಿ ಕಾಣುವುದು ನಮ್ಮದೇ ಪ್ರತಿಬಿಂಬ ಅಂತ ನಾವು ನಂಬುವುದರಿಂದ ನಾವು ಬದುಕಿದ್ದೇವೆ. ಕನ್ನಡಿಯೊಳಗಿನ ಪ್ರತಿಬಿಂಬವೇ ನಿಜವಾದ ನಾವು. ಕನ್ನಡಿಯೊಳಗಿನ ನಮ್ಮನ್ನು ಯಾರೂ ಏನೂ ಮಾಡಲಾರರು. ಈ ಜಗತ್ತಿನಲ್ಲಿ ಶಾಶ್ವತವಾಗಿರಲು ಪ್ರಯತ್ನ ಪಡುವ ಬದಲು ಕನ್ನಡಿಯೊಳಗೆ ಶಾಶ್ವತವಾಗಿರಲು ಯತ್ನಿಸುವುದು ಮೇಲು. ಅಷ್ಟಕ್ಕೂ ನಾನೆಂಬ ಈ ನಾನು ಕನ್ನಡಿಯೊಗಗಿದ್ದೇನಾ ಹೊರಗಿದ್ದೇನಾ? ಒಳಗಿದ್ದು ಹೊರಗಿನದನ್ನು ನೋಡುತ್ತೇನಾ, ಹೊರಗಿದ್ದು ಒಳಗಿನದನ್ನು ನೋಡುತ್ತೇನಾ?" (ಪುಟ 48)
ತಮಾಶೆ ಎಂದರೆ, ಎಲ್ ಕಾದಂಬರಿಗೂ ಮೊದಲೇ ಎಲ್ ಕಾದಂಬರಿಯಲ್ಲಿ ಇವತ್ತು ನಾವು ಕಾಣುವ, ಕಂಡ ಒಂದು ಜಿಜ್ಞಾಸೆ, ಶೋಧ, ತಡಕಾಟ ಜೋಗಿಯವರ ಹಲವಾರು ಹಿಂದಿನ ಕಾದಂಬರಿಗಳಲ್ಲಿ ಇದ್ದೇ ಇದ್ದವು. ಯಾಕೆಂದರೆ, All said and done about so called Jogi, ಈ ಜಿಜ್ಞಾಸೆ ಅವರ ವ್ಯಕ್ತಿತ್ವದ ಛಂದಸ್ಸಿನಲ್ಲೇ ಇದ್ದ ಅಂಶ. ಅವರ ಓಡಾಟ, ಕ್ರಿಯಾಶೀಲತೆ, ಸದಾ ಒಂದಕ್ಕಿಂತ ಹೆಚ್ಚು ‘ಒಪ್ಪಿಕೊಂಡ’ ಅಸೈನ್ಮೆಂಟುಗಳಲ್ಲಿ ಏದುಸಿರು ಬಿಡುತ್ತಲೇ ಇರುವವರಂತೆ ಕಾಣಿಸಿಕೊಳ್ಳುವ ವ್ಯಕ್ತಿತ್ವದ ಒಳಗೆ ಸೈಲೆಂಟಾದ, ಜಡಭರತನಂತೆ ಎಲ್ಲಿಯೋ ಒಂದು ಕಡೆ ನಿಂತುಕೊಂಡ ಜಿಜ್ಞಾಸು ಇದ್ದೇ ಇದ್ದ. ಅದು ಹೇಗೆ ಹಲವರಿಗೆ ಗೊತ್ತಿಲ್ಲವೊ ಹಾಗೆಯೇ ಅವರ ಸಾಹಿತ್ಯದ ಮೂಲಧಾತುಗಳ ಕುರಿತೂ ಸಾಕಷ್ಟು ಅವಜ್ಞೆ ಇದೆ. ‘ವಿರಹದ ಸಂಕ್ಷಿಪ್ತ ಪದಕೋಶ’ ಕಾದಂಬರಿಯನ್ನು ಅಂಥವರು ಮುದ್ದಾಂ ಓದಬೇಕು.
ಇದು ಮೇಲ್ನೋಟಕ್ಕೆ ಕಾಣುವಂತೆ ಪತಿ ಪತ್ನಿ ಔರ್ ವೊ ಅಲ್ಲ. ಕಾದಂಬರಿಯ ಪುಟ 96-100 ನಡುವೆ ಬರುವ ಒಂದು ಪುಟ್ಟ ಭಾಷಣ ಇಡೀ ಕಾದಂಬರಿಯ ಕಲಾತ್ಮಕ ಪ್ರೆಸೆಂಟೇಶನ್ನಿಗೆ ಒಂದು ಕಪ್ಪುಚುಕ್ಕಿ. ಆದರೆ ಇದು ತಾಂತ್ರಿಕವಾಗಿ, ಕಲೆಯಾಗಿ ಸೃಜನಶೀಲ ಕೃತಿಯ ಮಿತಿ ಎನ್ನುವುದನ್ನು ಒಪ್ಪಿಯೂ ಇದೆಲ್ಲ ನಮ್ಮಂಥ ಆರ್ಡಿನರಿಗಳ ಬದುಕಿನ ಒಂದು ಭಾಗ ಎನ್ನುವುದನ್ನು ನಾವೆಲ್ಲ ಒಪ್ಪುತ್ತೇವೆ. ನಾವೂ ಭಾಷಣ ಮಾಡುತ್ತೇವೆ, ಎದುರಿಗಿದ್ದವರನ್ನು ಕೊರೆಯುತ್ತೇವೆ, ಚಂದ ಎನಿಸುವ ಪರಸತಿಯನ್ನು (ಕೂಡ) ಇಷ್ಟ ಪಡುತ್ತೇವೆ, ನಮಗೂ ಸುಪರ್ಸ್ಟೀಷಿಯಸ್ ನಂಬುಗೆಗಳಿರುತ್ತವೆ. ಆದರೆ, ಹೇಳಲೇ ಬೇಕಾದ ಮಾತು, ವಯಸ್ಸಿನ ಒಂದು ಹಂತ ದಾಟಿದ ಮೇಲೆ ವಿರುದ್ಧ ಲಿಂಗದ ವ್ಯಕ್ತಿಯ ಕುರಿತು ನಮಗಿರುವ ಆಕರ್ಷಣೆ ಏನೆಂಬುದು ಪ್ರತಿಯೊಬ್ಬರಿಗೂ ಅರ್ಥವಾಗುತ್ತ ಹೋಗುತ್ತದೆ ಎನ್ನುವುದು.
ಮೌನ ಮತ್ತು ಸ್ಥಾಗಿತ್ಯವನ್ನು ಜೋಗಿ ಈ ಕಾದಂಬರಿಯಲ್ಲಿ ಹೇಗೆ ಸಾಧಿಸುತ್ತಾರೆ ಎನ್ನುವುದನ್ನು ನೀವೇ ಈ ಕಾದಂಬರಿಯನ್ನು ಓದಿ ಕಂಡುಕೊಳ್ಳಬೇಕು. ಅಂದರೆ ನೀವು ಸ್ವತಃ ಬರಹಗಾರರಾಗಿದ್ದರೆ ಅದರಿಂದ ನಿಮಗೆ ತುಂಬ ಸಹಾಯವಾಗುತ್ತದೆ. ನೀವು ‘ಕೇವಲ ಓದುಗ’ ರಾಗಿದ್ದಲ್ಲಿ ನಿಮಗೆ ಜೋಗಿಯವರ ಸಾಧ್ಯತೆಯನ್ನು, ಅವರ ಕಾದಂಬರಿ ಓದುತ್ತ ನೀವದನ್ನು ಕಾಣದೇ ಹೋಗಿದ್ದರೆ ಅದನ್ನು ಕಾಣುವ ಯೋಗ ಸಿದ್ಧಿಯಾಗುತ್ತದೆ.
ನಾನು ಹೇಳಬೇಕೆಂದಿರುವ ಎರಡನೆಯ ಸಂಗತಿ, ಈ ಕಾದಂಬರಿಯ ಮೂಲಕ ಜೋಗಿಯವರು ಹೇಳುತ್ತಿರುವುದೇನು ಎಂಬ ಜಿಜ್ಞಾಸೆಯ ಬಗ್ಗೆ. ಇದು ಪತಿ ಪತ್ನಿ ಔರ್ ವೊ ಕತೆ ಅಲ್ಲ ಎಂದೆ. The Strange Case of Billy Biswas ನ ನೆರಳು ಒಂದು ಹಂತದಲ್ಲಿ ಕಾಣಿಸಿದರೂ ಕಾದಂಬರಿ ಅಲ್ಲಿಂದ ಹೊರಳಿ ಮುಂದಕ್ಕೆ ನಡೆದು ಬಿಡುತ್ತದೆ. ಒಂದು ಆಧ್ಯಾತ್ಮಿಕ ಸಿದ್ಧಿಯ ಬಗ್ಗೆ ಜೋಗಿ ಹೇಳುತ್ತಿದ್ದಾರಾ ಎಂದರೆ ಅವರ ನಾಯಕ ಮತ್ತೆ ವಂದನಾಳ ಧ್ಯಾನದಲ್ಲಿ ದಣಿಯುತ್ತಾನೆ.
"ಮನಸ್ಸಿಗೆ ಬೇಕಾದ ವಂದನಾ ಯಾವತ್ತೋ ದಕ್ಕಿದ್ದಳು. ಅವಳನ್ನು ದೇಹಕ್ಕೆ ಒಗ್ಗಿಸಬೇಕಾಗಿತ್ತು." ಎಂದು ಮತ್ತೆ ದೇಹಕ್ಕೆ, ಕಾಮಕ್ಕೆ, ಅದರ ರಂಜನೆಗೆ ಬದ್ಧನಾಗುತ್ತಾನೆ. ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು ಎಂದ ಕವಿವಾಣಿಯನ್ನೇ ‘ಮನುಷ್ಯ ಸ್ವಂತದ ಮನೆಯಲ್ಲಿ ಸುಖಿಯಾಗಿರುವುದಿಲ್ಲ, ಬಾಡಿಗೆಯ ಮನೆಯಿದು ದೇಹ’ ಎಂದು ಆಡುವ ವಂದನಾಳ ಮಾತು ಅರಿವಿಗಿಳಿದೂ ಈ ನಾಯಕ ಕೇವಲ ಮನುಷ್ಯನಷ್ಟೇ ಆಗಿರಲು ಶಕ್ತ. ಜೋಗಿಯವರು ನನಗೆ ಕೆಲವೊಮ್ಮೆ ಇಷ್ಟವಾಗುವುದೇ ಈ ಕಾರಣಕ್ಕೆ. ಅವನನ್ನು ಶ್ರೇಷ್ಠನಾಗಿಸಿ ಬಿಡುವುದು ಬಹುಶಃ ಸುಲಭ. ಅವನ ನೀಚತನದ ಅರಿವು ಉಳಿಸಿಕೊಂಡು ಅವನನ್ನು ಕೇವಲ ಮನುಷ್ಯನನ್ನಾಗಿಯೇ ಬಿಡುವುದು ಕಷ್ಟ. ಅದಿರಲಿ. ಜೋಗಿಯವರು ಕಾದಂಬರಿಯ ಜಿಜ್ಞಾಸೆಗಳ ಮುಖೇನ ಹೇಳುತ್ತಿರುವುದೇನು ಎಂಬುದರ ಬಗ್ಗೆ ಯೋಚಿಸುವ.
"ಈ ಪದ್ಯದ ಅರ್ಥ ಹುಡುಕಲೇಬೇಕು ಅಂತ ಇಲ್ಲಿಗೆ ಬಂದು ಸುತ್ತಾಡಿ, ಇಲ್ಲಿದ್ದವರನ್ನೆಲ್ಲಾ ಕೇಳಿ, ತುಂಬಾ ತಲೆಕೆಡಿಸಿಕೊಂಡ ನಂತರ ನನಗೆ ಎಲ್ಲವೂ ನಿಧಾನಕ್ಕೆ ಅರ್ಥ ಆಗೋದಕ್ಕೆ ಶುರುವಾಯಿತು. ಅರ್ಥ ಹುಡುಕಬಾರದು ಅನ್ನೋದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಒಂಬತ್ತು ವರುಷ ಬೇಕಾಯಿತು. ಅರ್ಥದಿಂದ ನಾವೇನು ಪಡೀತೀವಿ. ನಿನಗೆ ಗೊತ್ತಿರುವ ಒಂದು ಹಾಡು ನೆನಪಿಸಿಕೋ. ಅದರ ಅರ್ಥ ಏನು ಅಂತ ನಿನ್ನನ್ನೇ ಕೇಳಿಕೋ. ನಿನಗೆ ಅದು ಅರ್ಥ ಅಗ್ತಿದ್ದ ಹಾಗೇ ಆ ಹಾಡು ಸತ್ತೇ ಹೋಗುತ್ತಲ್ಲವಾ? ಅರ್ಥ ಬಿಟ್ಟುಕೊಡದ ಹಾಡು ಸಾಯೋದಿಲ್ಲ. ಅರ್ಥ ಬಿಟ್ಟುಕೊಟ್ಟ ಹಾಡೇ ಸತ್ತು ಹೋಗೋದು. ಇವರಿಗೆ ಶಬ್ದ ಗೊತ್ತು. ಅರ್ಥ ಗೊತ್ತಿಲ್ಲ. ಅದಕ್ಕೆ ಸುಖವಾಗಿದ್ದಾರೆ." (ಪುಟ 95)
ಇಲ್ಲಿ ಕೇಂದ್ರ ಭೂಮಿಕೆಯಲ್ಲಿ ಮೂವರಿದ್ದಾರೆ. ಅವರೆಲ್ಲರೂ ಶಪಿತ ಗಂಧರ್ವರೆನ್ನುವುದನ್ನೂ, ದೇವತೆ ಮತ್ತು ಪೂಜಾರಿಯ ಸಂಬಂಧವನ್ನೂ ಬದಿಗಿಟ್ಟೇ ಯೋಚಿಸುವ. ವಿಶ್ವಾಸ ಕಾರಂತನ ನಿರ್ಲಿಪ್ತಿ, ನಿರ್ಮಮ, ನಿರ್ವಿಕಾರ ರೀತಿ ನೀತಿ, ಮೌನ, ತಾವರೆಯ ಎಲೆಯ ಮೇಲಿನ ನೀರ ಹನಿಯಂತೆ, ಇದ್ದೂ ಇಲ್ಲದಂತೆ ಬದುಕುವ ವಿಧಾನಕ್ಕೆ ಒಂದು ಕಾರಣವಿದೆ. ಅವನು ಥೇಟ್ ಬಿಲ್ಲಿ ಬಿಸ್ವಾಸ್ ತರ ಆದಿವಾಸಿಗಳ ತಾಂಡಾದಲ್ಲಿ ಮಾತ್ರ ಇದು ತನ್ನ ಜಗತ್ತು ಎಂದು ಸ್ವಸ್ಥವಾಗಿ, ಸಹಜವಾಗಿ ಇರಬಲ್ಲವ. ಅಧುನಿಕತೆಯ ಜಂಜಾಟಗಳೆಲ್ಲವೂ ಅವನಿಗೆ ಅರ್ಥಹೀನ, ಅಸಹನೀಯ ಮತ್ತು ಅಸಹಜ ಎನ್ನಿಸಿದೆ. ಇದನ್ನು ಬಿಲ್ಲಿ ಸ್ವಲ್ಪ ಸರಳವಾಗಿ ಹೇಳುತ್ತಾನೆ. ಮನುಷ್ಯ ಮೊದಲು ಹಣವನ್ನು ಬಳಕೆಗೆ ತಂದ, ಹಣದಿಂದ ಹುಟ್ಟಿಕೊಂಡ ಸಮಸ್ಯೆಗಳ ನಿವಾರಣೆಗೆ ವೈದ್ಯರನ್ನು, ವಕೀಲರನ್ನು, ಚಾರ್ಟರ್ಡ್ ಅಕೌಂಟೆಂಟುಗಳನ್ನು, ಇಂಜಿನಿಯರುಗಳನ್ನು ಹುಟ್ಟಿಸಿದ. ಆ ಬಳಿಕ ಈ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಅಂತ. ಜೋಗಿಯವರು ಇದನ್ನು ಕೊಂಚ ವಿಸ್ತರಿಸಿ ವಿವರಿಸುತ್ತಾರೆ. ಆದರೆ ಮುದ್ದೆ ಅದಲ್ಲ. ವಿಶ್ವಾಸ ಕಾರಂತ ಇಲ್ಲಿ ಒಂದು ಮಾಡೆಲ್ ಅಷ್ಟೇ. ಅದು ನಮ್ಮ ನಿಮ್ಮಂಥ ಆರ್ಡಿನರಿಗಳ ಕ್ಷುಲ್ಲಕ ದೈನಂದಿನದಲ್ಲಿ ಸಹಜವಾಗಿ, ಆರಾಮಾಗಿ ಕೂರಲಾರದ ಮಾಡೆಲ್. ಯೋಚಿಸಿ ನೋಡಿ, ನಾವ್ಯಾರೂ ವಿಶ್ವಾಸ ಕಾರಂತ್ ಆಗಲು ಸಾಧ್ಯವಿಲ್ಲ. ಇಲ್ಲಿರುವ ನಿಜವಾದ ಮಾಡೆಲ್ಲುಗಳು ವಂದನಾ ಮತ್ತು ರಾಜೀವ್ (ನಿರೂಪಕ). ಆದರೆ, ರಾಜೀವನಲ್ಲಿ ಗೊಂದಲಗಳಿವೆ, ದ್ವಂದ್ವಗಳಿವೆ, ಅಸ್ಪಷ್ಟತೆಯಿದೆ. ವಂದನಾ ಅದನ್ನು ದಾಟಿದವಳಂತೆ, ಅರ್ಥವಾದವಳಂತಿದ್ದಾಳೆ.
ನಮ್ಮ ಬದುಕು ಮನುಷ್ಯ ಸಂಬಂಧಗಳಿಂದ ಮತ್ತು ಮನಸ್ಸಿನ ಭಾವನೆಗಳಿಂದ ಬಿಗಿಯಲ್ಪಟ್ಟಿದೆ. ಎಲ್ಲ ಬಗೆಯ ಬಿಡುಗಡೆಗೆ ಇವೆರಡು ತೊಡಕು. ಆದರೆ ತಮಾಶೆ ಎಂದರೆ ನಾವೆಲ್ಲರೂ ಬಯಸಿ ಬಯಸಿ ಇವೆರಡು ತೊಡಕುಗಳನ್ನು ಚಳಿಗೆ ಹೊದ್ದುಕೊಂಡ ಚಾದರದಂತೆ ಮೈಮೇಲೆಳೆದುಕೊಳ್ಳುತ್ತೇವೆ. ಸೆಕೆಯಾದಾಗ ಕಿತ್ತೆಸೆಯಲಾರದ ಚಾದರಗಳಿವು.
ಜೋಗಿ ಎರಡು ತರದ ಪಾತ್ರಗಳನ್ನು ಇಲ್ಲಿ ತರುತ್ತಾರೆ. ಒಂದು, ಸಂಬಂಧಗಳ ಗೈರು ಕಾಡದಂತಿರಬಲ್ಲ, ಯಾರನ್ನೂ ಜೊತೆಗಿಲ್ಲ ಎನ್ನುವ ಭಾವ ಕಾಡದಂತೆ ಎಲ್ಲರೂ ತನ್ನಲ್ಲೇ, ತನ್ನ ಜೊತೆಯಲ್ಲೇ ಇದ್ದಾರೆಂಬ ಭಾವದೊಂದಿಗೆ ರಮಿಸಬಲ್ಲ ತರದವರು. ಇವರು ತೊಡಕುಗಳನ್ನು ಸ್ವಲ್ಪಮಟ್ಟಿಗೆ ಹೀಗೆ ನಿವಾರಿಸಿಕೊಂಡವರು. ನಿರ್ಲಿಪ್ತರಂತೆ ಫೋಸು ಕೊಡಬಲ್ಲವರು. ಆದರೆ ದೇಹವೆಂಬ ಕಾಮಾದಿ ಬಯಕೆಗಳು ತುಂಬಿರುವ ಮೂಳೆ ಮಾಂಸದ ತಡಿಕೆಯಿಂದ ಮುಕ್ತರಲ್ಲ ಎನ್ನುವುದು ಸತ್ಯ. ದೇಹ ತೊಡಕಲ್ಲ, ತೊಡಕು ಮನಸ್ಸಿನದೇ. ಆದರೆ ದೇಹ ಅದರ ಅಭಿವ್ಯಕ್ತಿ ಮಾಧ್ಯಮವಾಗಿ ತೊಡಕು ಸೃಷ್ಟಿಸಬಲ್ಲದು. ವಂದನಾಳನ್ನು ದೇಹಕ್ಕೆ ಒಗ್ಗಿಸುವ ಮಾತನಾಡುವ ರಾಜೀವನಿಗೆ ಇದು ಗೊತ್ತು. ಅವನು ಎರಡನೆಯ ತರದ ಪಾತ್ರ.
ರಾಜೀವನಿಗೆ ಮನುಷ್ಯ ಸಂಬಂಧಗಳು ಬೇಕು, ಭಾವನೆಗಳು ಬೇಕು, ದೇಹ ಅವನ ಮಿತಿ. ಆದರೆ ಇಲ್ಲೊಂದು ತಮಾಶೆಯಿದೆ. ಜೋಗಿಯವರು ಕಾದಂಬರಿಯನ್ನು ಆ ತಮಾಶೆಯ ನೆಲೆಯಲ್ಲೆ ಮುಗಿಸುತ್ತಾರೆ. ವಿರಹಿ ಎಂದರೆ ದೂರ ಇರುವುದರಲ್ಲೂ ಆನಂದ ಇದೆ ಎಂದು ನಂಬುವವನಂತೆ! ಇದನ್ನು ವಿವರಿಸುವ ಅಗತ್ಯವಿಲ್ಲ. ರಾಜೀವನಿಗೆ ನಿಜಕ್ಕೂ ಬೇಕಿರುವುದು ಬಹುಶಃ ವಿರಹವೇ. ಮತ್ತು, ವಂದನಾ ಹೊಂದಿರುವುದು ಕೂಡ ಅದನ್ನೇ ಎನ್ನುವುದು ನನ್ನ ಅಷ್ಟೇನೂ ತಪ್ಪಿರಲಾರದ ಅನುಮಾನ.
ಯ, ರ, ಲ(L), ವ (ವಿರಹ), ಷ, ಸ, ಹ, ಳ.
ಇದಕ್ಕೆ ಇಷ್ಟವಾಗುತ್ತಾರೆ ಜೋಗಿ. ಇದಕ್ಕೆ ಇದು ನೀವು ಓದಬೇಕಾದ ಕಾದಂಬರಿ.