Saturday, July 27, 2019

ನಾಣಜ್ಜನೆಂಬ ಒಂದು ರೂಪಕ

ಮಹಾಲಿಂಗ ಅವರ ‘ಹೊಳೆ ಹೊರಳಿತೋ ನಾಣಜ್ಜ’ ಕಾದಂಬರಿಯ ಇಂಗ್ಲೀಷ್ ಆವೃತ್ತಿ ಹೊರಬರುತ್ತಿರುವುದು ತುಂಬ ಸಂತೋಷದ ಮಾತ್ರವಲ್ಲ ಅಗತ್ಯದ ಒಂದು ವಿದ್ಯಮಾನ. ಇಂಗ್ಲೀಷ್ ಪ್ರೊಫೆಸರ್ ಆಗಿ ಭಾಷೆ ಮತ್ತು ಸಾಹಿತ್ಯದ ನಿತ್ಯ ಒಡನಾಟದಲ್ಲಿರುವ ಟಿ ಕೆ ರವೀಂದ್ರನ್ ಅವರಂಥ ಅನುಭವಿ ಅನುವಾದಕರಿಂದ ಇದು ಇಂಗ್ಲೀಷಿಗೆ ಬರುತ್ತಿರುವುದು ಇನ್ನೂ ಹೆಚ್ಚಿನ ಸಂತೋಷಕ್ಕೆ ಕಾರಣ. ಇಷ್ಟು ಮಾತ್ರವಲ್ಲ, ಟಿ ಕೆ ರವೀಂದ್ರನ್ ಅವರು ತುಳು ಮೂಲಕೃತಿಯನ್ನು ಮಲಯಾಳಂ ಭಾಷೆಗೂ ಅನುವಾದಿಸಿದವರು. ಈಗ ಅವರೇ ಇಂಗ್ಲೀಷಿಗೆ ತರುತ್ತಿರುವುದರಿಂದ ಅವರಿಗೆ ಈ ಕಾದಂಬರಿಯೊಂದಿಗೆ ಸಾಧ್ಯವಾಗಿರುವ ತಾದ್ಯಾತ್ಮ ಹೆಚ್ಚು. ಈ ಮಾತನ್ನು ಸ್ವಲ್ಪ ವಿವರಿಸುವುದು ಅಗತ್ಯ ಎನಿಸುತ್ತದೆ.

ಮೊದಲೇ ಹೇಳಿರುವಂತೆ ಇದು ಮೂಲತಃ ತುಳು ಕಾದಂಬರಿ. ಅದು ಕನ್ನಡಕ್ಕೆ, ಮಲಯಾಳಂಗೆ ಮಾತ್ರವಲ್ಲ ಕೊಂಕಣಿಗೆ ಸಹ ಬಂದಿದೆಯಾದರೂ ಅದರ ನರನಾಡಿಗಳಲ್ಲಿರುವುದು ತುಳುವೇ. ಹಾಗಾಗಿ ಈ ಕಾದಂಬರಿಯ ನಾಯಕ ಮತ್ತು ಕೇಂದ್ರ ಕೂಡ ತುಳು. ಈ ಅಂಶವನ್ನು ನಾವು ಇನ್ನಷ್ಟು ಅರ್ಥ ಮಾಡಿಕೊಂಡು ಮುಂದುವರಿಯುವ ಅಗತ್ಯವಿದೆ.

ತುಳು ಒಂದು ಸೀಮಿತ ಭೂಪ್ರದೇಶದ ಭಾಷೆ. ನಾವು ಇಡೀ ಜಗತ್ತು ಅಥವಾ ಭಾರತವನ್ನು ಗಮನದಲ್ಲಿರಿಸಿಕೊಂಡು ನೋಡುವುದಾದರೆ, ಈ ಭಾಷೆಗೆ ಇತರ ಭಾಷೆಗಳೊಂದಿಗೆ ಮತ್ತು ತತ್ಸಂಬಂಧಿ ಸಂಸ್ಕೃತಿಯೊಂದಿಗೆ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಕಾಸರಗೋಡು-ದಕ್ಷಿಣಕನ್ನಡದಲ್ಲಿಯೇ ತುಳುವಿನೊಂದಿಗೆ ನಿತ್ಯ ಒಡನಾಡುವ ಇತರ ಭಾಷೆಗಳು ಕನ್ನಡದೊಂದಿಗೆ ಸಾರಸ್ವತರ ಕೊಂಕಣಿ, ಕ್ರಿಶ್ಚಿಯನ್ನರ ಕೊಂಕಣಿ, ಮುಸ್ಲಿಮರ ಬ್ಯಾರಿ ಮತ್ತು ಉರ್ದು, ಆಧುನಿಕ ಜಗತ್ತಿನ ಬೇರೆ ಬೇರೆ ದೇಶಗಳೊಂದಿಗೆ ಸಂಬಂಧ ಬೆಸೆದುಕೊಂಡಿರುವ ಇಲೈಟ್ ವರ್ಗ ಹಾಗೂ ಬೇರೆ ರಾಜ್ಯಗಳಿಂದ ಇಲ್ಲಿಗೆ ಉದ್ಯೋಗ, ವ್ಯವಹಾರಗಳ ನಿಮಿತ್ತ ಬಂದು ನೆಲೆಯಾದವರ ಇಷ್ಟದ ಭಾಷೆಯಾಗಿರುವ ಇಂಗ್ಲೀಷ್, ದಕ್ಷಿಣಕನ್ನಡಕ್ಕೆ ನೆರೆ ರಾಜ್ಯವಾದ ಕೇರಳದ ಮಲಯಾಳ ಪ್ರಧಾನವಾಗಿ ಇಲ್ಲಿ ದೈನಂದಿನ ವ್ಯವಹಾರದಲ್ಲಿ ಕಿವಿಗೆ ಬೀಳುತ್ತಿರುತ್ತದೆ. ಇನ್ನು ಈ ಭಾಗ ಶೈಕ್ಷಣಿಕ ಕೇಂದ್ರವೂ ಆಗಿರುವುದರಿಂದ ಉತ್ತರಭಾರತದ ವಿದ್ಯಾರ್ಥಿಗಳ ಹಿಂದಿ ಕೂಡ ಇಲ್ಲಿನ ಸಾಮಾನ್ಯ ಭಾಷೆಯಾಗಿದೆ. ಇಷ್ಟಿದ್ದೂ ಈ ನೆಲದ ಭಾಷೆ ಮಾತ್ರ ತುಳುವೇ. ಯಾಕೆಂದರೆ, ಇಲ್ಲಿನ ಪ್ರತಿಯೊಂದು ಆಚರಣೆ, ಹಬ್ಬ ಹರಿದಿನ, ದೈವ ಧರ್ಮ, ಮದುವೆ, ಮುಂಜಿ, ಗೃಹಪ್ರವೇಶ, ಸೀಮಂತ ಮುಂತಾದ ಷೋಡಶ ಸಂಸ್ಕಾರಾದಿಗಳ ರೀತಿ ರಿವಾಜು, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಗುಜರಿ ವ್ಯಾಪಾರ, ದಿನಸಿ ವ್ಯಾಪಾರ ಎಲ್ಲಕ್ಕೂ ತುಳುವಿನೊಂದಿಗೆ ಮೊದಲ ನಂಟು. ಇಲ್ಲಿಗೇ ವಿಶಿಷ್ಟವಾದ ನಾಗಾರಾಧನೆ, ಭೂತಾರಾಧನೆ ಮತ್ತು ಯಕ್ಷಗಾನ ಮೂರೂ, ಇಲ್ಲಿನ ಜಾನಪದ ಸಾಹಿತ್ಯವೂ ಸೇರಿ ತುಳುವಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಉಳಿದೆಲ್ಲಾ ಭಾಷೆಗಳು ತುಸು ಮಟ್ಟಿಗೆ ಹೊರಗಿನವೇ ಆಗಿ ಉಳಿಯುತ್ತವೆ ಎನ್ನುವುದು ನಿಜ. ಹೀಗಾಗಿ ತುಳು ಎಂದರೆ ಅದು ಕೇವಲ ಭಾಷೆ ಎಂದು ತಿಳಿಯಬಾರದು. ಎಲ್ಲಾ ಭಾಷೆಗಳೂ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತವೆ ಎನ್ನುವುದು ನಿಜವಾದರೂ ತುಳುವಿಗಿರುವ ಸಂಸ್ಕೃತಿ ತೀರ ವಿಶಿಷ್ಟವಾದದ್ದು, ಪ್ರಾದೇಶಿಕವಾಗಿಯೂ ವಿಭಿನ್ನವಾದದ್ದು. ಅನುವಾದ ಇದನ್ನು ಭಾಷೆಯೊಂದಿಗೇ ಕಟ್ಟಿಕೊಂಡು ಬರಬೇಕು ಎನ್ನುವುದು ನಿರೀಕ್ಷೆ; ಸಾಧ್ಯತೆ ಒಂದು ಕಠಿಣ ಸವಾಲು.

ಈ ತುಳು ತುಂಬ ವಿಶಿಷ್ಟವಾದ ಒಂದು ಭಾಷೆ. ಅದಕ್ಕೊಂದು ರಾಗವಿದೆ, ನಾದವಿದೆ. ಅದು ಕನ್ನಡದ, ಕೊಂಕಣಿಯ, ಇಂಗ್ಲೀಷಿನ ರಾಗ ಅಥವಾ ನಾದಕ್ಕೆ ಅನ್ಯವಾದದ್ದು. ಹುಟ್ಟಾ ಕನ್ನಡದಲ್ಲೇ ಮಾತನಾಡಿ ಬೆಳೆದವರಿಗೆ ತುಳು ಭಾಷೆಯಾಗಿ ಒಲಿದರೂ ಅದರ ನಾದ,ಲಯ ಒಲಿಯುವುದು ನಿಧಾನ. ಇದು ಎಲ್ಲ ಭಾಷೆಗೂ ಒಂದು ಹಂತದ ವರೆಗೆ ನಿಜ. ಹಾಗೆಯೇ ತುಳು ಭಾಷೆಗೆ ಅದರದ್ದೇ ಆದ ಒಂದು ಜಾಯಮಾನವೂ ಇದೆ. ಅಂದರೆ, ಅದು ಇಲ್ಲಿನ ಮೂಲಭಾಷೆ ಎನ್ನುವುದು ಎಷ್ಟು ನಿಜವೋ ಅಷ್ಟೇ ನಿಜವಾದದ್ದು ಇವತ್ತಿಗೂ ಅದು ಕನ್ನಡ, ಇಂಗ್ಲೀಷ್, ಕೊಂಕಣಿ ಭಾಷೆಯಿಂದ ಪಡೆದುಕೊಂಡು ತನ್ನದೇ ಶಬ್ದಭಂಡಾರಕ್ಕೆ ಸೇರಿಸಿಕೊಂಡ ಪದಗಳು ಕಡಿಮೆ ಅಥವಾ ಇಲ್ಲ ಎನ್ನಬಹುದು. ಇಲ್ಲಿನ ದೈನಂದಿನಕ್ಕೆ ಬೇಕಾದ ಯಾವತ್ತೂ ಶಬ್ದಗಳು ತುಳುವಿನಲ್ಲೇ ಸಿಗುತ್ತವೆ ಮಾತ್ರವಲ್ಲ ಇವತ್ತಿಗೂ ಬಳಕೆಯಲ್ಲಿವೆ. ಹಾಗಾಗಿ ಒಬ್ಬ ತುಳು ಮಾತನಾಡುವ ವ್ಯಕ್ತಿ ಬೇರೆ ಭಾಷೆಯ ಶಬ್ದಗಳನ್ನು ಬಳಸುವುದು ತೀರ ಅಪರೂಪ. ಆದರೆ ಅದೇ ವ್ಯಕ್ತಿ ಕನ್ನಡ ಅಥವಾ ಬೇರೆ ಭಾಷೆಯಲ್ಲಿ ಮಾತನಾಡುವಾಗ ತುಳುವಿನಿಂದ ಎರವಲು ಪಡೆಯುತ್ತಾನೆ ಮಾತ್ರವಲ್ಲ ಅವನು ಯಾವ ಭಾಷೆ ಮಾತನಾಡಿದರೂ ಅದರ ಲಯ ತುಳುವಿನಲ್ಲೇ ಇರುತ್ತದೇನೋ ಎನಿಸುತ್ತದೆ. ದಕ್ಷಿಣಕನ್ನಡದ ಕನ್ನಡವಂತೂ ಇಂಥ ಆರೋಪದಿಂದ ಮುಕ್ತವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಒಂದು ಉದಾಹರಣೆ ಕೊಡಬಹುದಾದರೆ, ತುಳುವಿನಲ್ಲಿ ಈ ಕಾದಂಬರಿಯ ಹೆಸರು ‘ನಾಣಜ್ಜೆರ್ ಸುದೆ ತಿರ್ಗಾಯೆರ್’. ನಾಣಜ್ಜ ಹೊಳೆಯನ್ನು ಹೊರಳಿಸಿದ ಎನ್ನುವುದೇ ಅರ್ಥ. ಹೊಳೆಯನ್ನೂ ಹೊರಳಿಸಿದರೋ ನಾಣಜ್ಜರು ಎನ್ನುವುದು ನೇರ ಭಾಷಾಂತರ. ‘ಹೊಳೆ ಹೊರಳಿತೋ ನಾಣಜ್ಜ’ ಎನ್ನುವಾಗ ಅದನ್ನು ಮಾಡಿದ್ದು ನಾಣಜ್ಜ ಎನ್ನುವ ಅರ್ಥವೇ ಮಾಯ. ಅದಿರಲಿ, ಈ ಸುದೆ ಎಂಬ ಶಬ್ದಕ್ಕೆ ಕನ್ನಡದ ಶಬ್ದ ಸುಧೆ, ಅಂದರೆ ಅಮೃತ ಎನ್ನುವ ಅರ್ಥ. ತುಳುವಿನಲ್ಲಿ ನದಿಯೆಲ್ಲವೂ ಅಮೃತಧಾರೆಯೇ. ಅಲ್ಲಿನ ಪ್ರತಿಯೊಂದು ಶಬ್ದವೂ ಇಷ್ಟೇ ಕಾವ್ಯಮಯವಿದೆ, ಅದರದ್ದೇ ಆದ ಲಯ, ನಾದ ಹೊಂದಿ ಮಾತನಾಡುತ್ತಿದ್ದರೆ ಇನ್ನೂ ಕೇಳುವ, ಮತ್ತೂ ಕೇಳುವ ಅನಿಸುತ್ತಿರುತ್ತದೆ. ಇದು ಅನುವಾದದಲ್ಲಿ ಎಷ್ಟರ ಮಟ್ಟಿಗೆ ಬಿಟ್ಟುಕೊಡದೇ ಸಂಭವಿಸಬಹುದು ಎನ್ನುವುದು ಅನುವಾದಕ್ಕಿರುವ ಮತ್ತೊಂದು ಕಠಿಣವಾದ ಸವಾಲು. ಈ ಸವಾಲನ್ನು ಮತ್ತಷ್ಟು ಕಠಿಣವಾಗಿಸಿರುವುದು ಮಹಾಲಿಂಗ ಅವರ ಕಥನ ಕ್ರಮ. ಇದರ ಬಗ್ಗೆ ಮುಂದೆ ಗಮನಿಸಬಹುದು.

ಬಹುಶಃ ಕನ್ನಡಕ್ಕೆ ಅಷ್ಟು ಹೊಂದದ, ಕೊಂಕಣಿ ಮತ್ತು ತುಳು ಎರಡೂ ಭಾಷೆಗೆ ಹೊಂದುವ ಇನ್ನೊಂದು ಅಂಶವಿದೆ. ಇದೊಂದು ಊಹೆ ಮಾತ್ರ ಎನ್ನುವುದು ನಿಜವಾದರೂ ಅದು ಸತ್ಯ. ತುಳು ಒಂದು ಕುಟುಂಬದೊಳಗಿನ ಭಾಷೆಯೂ ಹೌದು, ಒಂದು ಊರಿನ, ಜಿಲ್ಲೆಯ ಪ್ರಾದೇಶಿಕ ಭಾಷೆಯೂ ಹೌದು. ಹಾಗಿದ್ದೂ ಅದು ಎಲ್ಲೆಲ್ಲಿ ಬಳಕೆಯಲ್ಲಿದೆಯೋ ಅಲ್ಲೆಲ್ಲಾ ಅದು ಕೌಂಟುಂಬಿಕ ನಂಟೊಂದನ್ನು ತನ್ನಿಂತಾನೇ ಪಸರಿಸಬಲ್ಲ ಆತ್ಮೀಯತೆಯನ್ನು ಹೊತ್ತಿದೆ ಎನ್ನುವುದು. ಕೊಂಕಣಿಗೆ ಈ ಚಾರ್ಮ್ ಇದೆ. ಅವರಲ್ಲಿ ಎಲ್ಲ ಹಿರಿಯರೂ ಮಾಮು, ಮಾಯಿ ಆಗುತ್ತಾರೆ, ಹಿರಿಯರು ಯಾವ ಕಿರಿಯರಿಗೂ ಮನೆಮಂದಿಯಂತೆಯೇ ಗದರಬಲ್ಲವರಾಗುತ್ತಾರೆ. ಇದು ತುಳುವಿನಲ್ಲೂ ಇರುವ ಭಾಷೆ ಮತ್ತು ಮನುಷ್ಯ ಸಂಬಂಧದ ಎಳೆ. ಒಂದೇ ಭಾಷೆಯನ್ನು ಆಡುವವರೆಲ್ಲರೂ ಒಂದೇ ಕುಟುಂಬಕ್ಕೂ ಸೇರಿದವರಾಗಿ ಬಿಡುವುದು ಕೊಂಕಣಿ ಮತ್ತು ತುಳುವಿಗೇ ವಿಶಿಷ್ಟವಾದ ಒಂದು ಸಂಸ್ಕಾರ. ಇದಕ್ಕೆ ಅವರವರ ಕುಲದೇವರು, ಮೂಲದೇವರು ಅಥವಾ ಕುಲದೈವ, ಕುಟುಂಬದ ದೈವ ಇತ್ಯಾದಿಗಳು ಒಳಜಾತಿ, ಪ್ರಬೇಧಗಳನ್ನು ಮೀರಿ ಒಂದೇ ಆಗಿರುವ ಸಾಧ್ಯತೆಗಳೂ ಕಾರಣವಿರಬಹುದು. ಇವೆರಡೂ ಧರ್ಮ ಮತ್ತು ಜಾತಿ ನಿರಪೇಕ್ಷ ಭಾಷೆಯಾಗಿರುವುದೂ ಕಾರಣವಿರಬಹುದು. ಕಾರಣವೇನಿದ್ದರೂ ಇದು ಭಾಷೆಯೊಂದಿಗೇ ನಮಗೆ ಅರ್ಥವಾಗಬೇಕಾದ ಒಂದು ಅಂಶ.

ಕಾದಂಬರಿ ತುಳುವಿನಿಂದ ಕನ್ನಡಕ್ಕೆ ಬಂದಾಗ ನಡುನಡುವೆ ಬಂದ ಶಬ್ದಗಳು ನನಗೆ, ಇಲ್ಲಿಯವನಾಗಿ ಅನ್ಯ ಎನಿಸಲೇ ಇಲ್ಲ ಎನ್ನುವುದು ನಿಜ. ಅನುಬಂಧ ಗಮನಿಸಿದಾಗಲೇ ತುಳುವಿಗೇ ವಿಶಿಷ್ಟವಾದ ಎಷ್ಟೊಂದು ಶಬ್ದಗಳು ಕನ್ನಡ ಆವೃತ್ತಿಯಲ್ಲೂ ಉಳಿದುಬಿಟ್ಟಿವೆಯಲ್ಲಾ ಎನಿಸಿತೇ ಹೊರತು ಓದುವಾಗ ಎಲ್ಲಿಯೂ ಅದು ಗೊತ್ತಿಲ್ಲದ ಒಂದು ಶಬ್ದ ಅನಿಸಲಿಲ್ಲ. ಆದರೆ ಕರ್ನಾಟಕದ ಇತರ ಭಾಗದವರಿಗೆ ಇದು ಅಷ್ಟು ಸರಾಗ ಎನಿಸಲಾರದು. ಆದರೆ ಭಾಷೆಯ ವಾಕ್ಯಬಂಧ ಮತ್ತು ಶೈಲಿ ಎರಡೂ ಕನ್ನಡದ ಮನಸ್ಥಿತಿಯಿಂದ ಓದಲು ಸಾಧ್ಯವೇ ಇಲ್ಲದ್ದು. ಈ ಕಾರಣಕ್ಕಾಗಿಯೇ ನಾನು ಮೊದಲಿಗೇ ಈ ಕಾದಂಬರಿಯ ಕೇಂದ್ರ ಅಥವಾ ನಾಯಕ ತುಳು ಭಾಷೆ ಎಂದಿದ್ದು ಮತ್ತು ತುಳುವಿನ ಬಗ್ಗೆ ವಿವರಿಸಿದ್ದು. ಸ್ಥೂಲವಾಗಿ ಹೇಳುವುದಾದರೆ ಕನ್ನಡದಲ್ಲಿ ಕ್ರಿಯಾಪದ ವಾಕ್ಯದ ಕೊನೆಯಲ್ಲಿಯೇ ಬರುವುದು ರೂಢಿ. ಇದಕ್ಕೆ ಧಾರವಾಡದ ಕನ್ನಡ ಅಪವಾದದಂತಿದೆ. ಅದೇ ಇಂಗ್ಲೀಷಿನಲ್ಲಿ ಸಾಮಾನ್ಯವಾಗಿ ಅದು ನಾಮಪದದ ಜೊತೆಜೊತೆಯಾಗಿಯೇ ಬಂದು ಬಿಡುತ್ತದೆ. ಅಲ್ಲಿ ವಾಕ್ಯದ ಕಾಲಕ್ಕೆ ಹೆಚ್ಚಿನ ಮಹತ್ವ. ಕನ್ನಡದ ವ್ಯಾಕರಣದಲ್ಲಿ ‘ಕಾಲ’ ಒಂದು ಸಹಜ ವಿದ್ಯಮಾನವಾಗಿ ಬಿಡುತ್ತದೆ. ಇಂಗ್ಲೀಷಿನಲ್ಲಿ ಅದು ಅಷ್ಟು ಸರಳವಲ್ಲ. ಕನ್ನಡಿಗರಿಗೆ ಇಂಗ್ಲೀಷ್ ಒಡ್ಡುವ ಬಹುಮುಖ್ಯ ತೊಡಕೇ ಇದು. ಕನ್ನಡದಲ್ಲಿ ತುಳುವಿನ ಕಾದಂಬರಿ ಮೈತಳೆಯುವಾಗ ಮಹಾಲಿಂಗ ಅವರು ರಾಜಿ ಮಾಡಿಕೊಂಡಿರುವುದು ಕಡಿಮೆ. ಇಲ್ಲಿನ ವಾಕ್ಯಗಳು, ಪದಬಂಧಗಳು ಕೊಂಚ ತೊಡಕಿನವು ಅನಿಸಿದರೆ ಅದಕ್ಕೆ ಕಾರಣ ಇದು. ಓದುಗರು ಕನ್ನಡದ ವಾಕ್ಯಬಂಧ, ಪದಬಂಧ ಎರಡರಿಂದಲೂ ಹೊರಬಂದು ಬೇರೆಯೇ ಭಾಷೆಯ ಒಂದು ಕಾದಂಬರಿ ಓದುತ್ತಿದ್ದೇವೆಂಬ ಮುಕ್ತಭಾವದಿಂದ ತೊಡಗದೇ ಹೋದರೆ ಇದರ ರಸಗ್ರಹಣ ಕಷ್ಟ. ಆದರೆ ಇಂಗ್ಲೀಷ್ ಭಾಷೆಯನ್ನು ಹೀಗೆ ಬಳಸುವುದು ಸಾಧ್ಯವೇ ಇಲ್ಲ ಎನ್ನುವುದು ನಿಜ. ಆರ್ ಕೆ ನಾರಾಯಣ್ ಅವರು ಸ್ವಾಮಿಯ ಕತೆ ಹೇಳುವಾಗ ಬಳಸುವ ಇಂಗ್ಲೀಷ್ ಗಮನಿಸಿ. ತಮಿಳು, ತೆಲುಗಿನ ಸಿನಿಮಾಗಳು ಹಿಂದಿಗೆ ಡಬ್ ಆದಾಗ ಹಿಂದಿ ನಟರೇ ನಟಿಸಿದ್ದರೂ ಆ ಭಾಷೆಯ ಲಯ ಬೇರೆಯೇ ಇರುವುದು ತತ್‌ಕ್ಷಣ ನಮಗೆ ಹೊಳೆದು ಬಿಡುವುದಿಲ್ಲವೆ? ಹಾಗೆಯೇ ಇದೂ. ಇಂಗ್ಲೀಷ್ ಭಾಷೆಗೆ ಗ್ರಾಮ್ಯ ನಾದವೆಂಬುದು ಇಲ್ಲವೇ ಇಲ್ಲ. ಅದು ಇಸ್ತ್ರಿ ಹಾಕಲ್ಪಟ್ಟಂಥ ಒಂದು ಅಂತರ್ರಾಷ್ಟ್ರೀಯ ಭಾಷೆಯಾಗಿ ಬಹುಕಾಲವಾಯಿತು. ಈಗ ಅದೇ ಅದರ ಸಂಸ್ಕೃತಿ. ಹಾಗಾಗಿ ಬೇಂದ್ರೆಯನ್ನು, ಅವರ ತುಂ ತುಂ ತುಂ ತುಂಬಿ ಬಂದಿತ್ತಾ ಎನ್ನುವಂಥ ‘ಭಾಷೆಯ ಹಂಗು ತೊರೆದು ಅರ್ಥ ಹೊಮ್ಮಿಸುವ’ ಕನ್ನಡವನ್ನು ಎಂದೂ ಇಂಗ್ಲೀಷ್ ದಕ್ಕಿಸಿಕೊಳ್ಳಲಾರದು ಹೇಗೋ, ಒಂದು ಗ್ರಾಮ್ಯ ಪರಿಸರದ, ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡ ಕನ್ನಡದ, ತುಳುವಿನ ಕಾದಂಬರಿಯನ್ನು ಇಂಗ್ಲೀಷಿಗೆ ಅದರ ಮೂಲ ಸೊಗಡಿನೊಂದಿಗೆ ಕೊಂಡೊಯ್ಯುವುದು ಬಹುಶಃ ಕಷ್ಟ ಅಲ್ಲ, ಅಸಾಧ್ಯವೇ ಅನಿಸುತ್ತದೆ.

ಮಹಾಲಿಂಗ ಅವರ ಕಥನ ಕ್ರಮದ ಬಗ್ಗೆ ಹೇಳಿದೆ. ನಾವು ಮೂಲತಃ ಕಥೆ ‘ಹೇಳುವ’ ಜಾಯಮಾನದವರು. ಜಾನಪದ ಕತೆಗಳು, ಹಾಡುಗಳು ಸದಾ ಮೌಕಿಕ ಪರಂಪರೆಯನ್ನೇ ನೆಚ್ಚಿರುವುದನ್ನು ಎಲ್ಲರೂ ಬಲ್ಲೆವು. ನಂತರದ ಹರಿಕಥೆ, ಗಮಕ, ತಾಳಮದ್ದಲೆ, ಪಾಡ್ದನ, ಭೂತಾರಾದನೆಗೆ ಸಂಬಂಧ ಪಟ್ಟ ಕತೆ, ನುಡಿಕಟ್ಟುಗಳು ಮತ್ತು ಯಕ್ಷಗಾನ ಕೂಡ ಮೌಕಿಕ ಪರಂಪರೆಯಲ್ಲೇ ಉಳಿದು ಬೆಳೆದು ಬಂದಿರುವುದನ್ನು ಮರೆಯುವಂತಿಲ್ಲ. ತೀರ ಈಚೆಗೆ ಮುದ್ರಿತ ಸಾಹಿತ್ಯವೂ ಸೇರಿದಂತೆ ನಾವು ಕತೆ ‘ಹೇಳುವುದ’ನ್ನು ಬಿಟ್ಟುಕೊಟ್ಟು ಕತೆ ‘ಬರೆಯುವುದ’ಕ್ಕೆ ತೊಡಗಿದೆವು. ಆದರೆ ನಾಣಜ್ಜನ ಕತೆಯನ್ನು ಮಹಾಲಿಂಗರು ಹಳೆಯ ಕ್ರಮದಲ್ಲಿಯೇ ‘ಹೇಳು’ತ್ತಿದ್ದಾರೆಯೇ ಹೊರತು ‘ಬರೆಯು’ತ್ತಿಲ್ಲ. ಈ ಕಾದಂಬರಿಯ ಹೆಸರಲ್ಲೇ ಆ "ಹೇಳುವ" ಗುಣವಿರುವುದನ್ನು ಗಮನಿಸಿ. ಇಲ್ಲಿ ಯಾರೋ ಹೇಳುತ್ತಿದ್ದಾರೆ, ‘ನಾಣಜ್ಜೆರ್ ಸುದೆ ತಿರ್ಗಾಯೆರ್!’ ಎನ್ನುವಲ್ಲೇ ಆ ಹೇಳುವ ಸಂಭ್ರಮವಿದೆ. ಕನ್ನಡದ ಹೆಸರಲ್ಲಿ ಅರ್ಥ ಸ್ವಲ್ಪ ವ್ಯತ್ಯಾಸವಾದರೂ "ಹೊಳೆ ಹೊರಳಿತೋ ನಾಣಜ್ಜ" ಎನ್ನುವಲ್ಲಿ ಬರುವ ಆ ‘ತೋ’ ಗಮನಿಸಿ. ನಾಣಜ್ಜನ ವಿವಿಧ ಪರಾಕ್ರಮಗಳನ್ನು ಬಣ್ಣಿಸುವ, ಬಣ್ಣಿಸುತ್ತ ಸುಖಿಸುವ, ಕೇಳುವವರಿಗೆ ರಂಜನೆ ಸಿಗಬೇಕೆಂಬಂತೆ ಸೊಗಸು ತುಂಬಿ ಹೇಳುವ ಕಥನಕ್ರಮ ಇದು. ಹಾಗೆಂದ ಮಾತ್ರಕ್ಕೆ ಇಲ್ಲಿ ಅತಿಶಯೋಕ್ತಿ, ಉತ್ಪ್ರೇಕ್ಷೆ ಎರಡೂ ಇಲ್ಲ. ನಡೆದಿರುವುದನ್ನೇ, ನೆಲದ ಮೇಲೆ ನಿಂತೇ ಹೇಳುತ್ತಿರುವುದು. ಆದರೆ, ಹೇಳುವ ಸಂಭ್ರಮ, ಉತ್ಸಾಹ, ಅದೇನೋ ವಿಶೇಷವಾದದ್ದು ಎಂಬ ನಂಬಿಕೆ ನುಡಿನುಡಿಗಳಲ್ಲೂ ತುಂಬಿಕೊಂಡಿದೆ. ಇದು ಮಹಾಲಿಂಗರ ಕಥನಕ್ರಮ. ಇದನ್ನು ಕನ್ನಡಕ್ಕೆ, ಮಲಯಾಳಮಿಗೆ,ಕೊಂಕಣಿಗೆ ತರುವುದು ಸಾಧ್ಯ ಎನಿಸುತ್ತದೆ. ಏಕೆಂದರೆ, ಈ ಯಾವತ್ತೂ ಭಾಷೆಗಳು ಬೇರೆಬೇರೆಯಾದರೂ ಒಂದೇ ನೆಲದ್ದು, ಒಂದೇ ಸಂಸ್ಕೃತಿಯ ಕೊಡು-ಕೊಳ್ಳುವಿಕೆಗೆ ಒಪ್ಪಿಕೊಂಡು ಬದುಕುತ್ತಿರುವವು. ಆದರೆ ಇಂಗ್ಲೀಷ್ ಅಲ್ಲಿನ ಜನರಂತೆಯೇ ತುಂಬ ಶಿಷ್ಟವಾದ ಭಾಷೆ. ಆ ಭಾಷೆಯಲ್ಲಿ ಭಾವೋದ್ವೇಗ, ಭಾವೋತ್ಕರ್ಷ, ಬದುಕಿನ ಸಣ್ಣಪುಟ್ಟ ಸಂತೋಷಗಳಿಗೆ ಸಂಭ್ರಮಿಸುವ ಗುಣ ಕಡಿಮೆಯಿದೆ, ಅದಕ್ಕೆ ಬೇಕಾದ ಶಬ್ದಗಳಿಗೆ ಮಿತಿಯಿದೆ. ಇದು ಅನುವಾದ ಎದುರಿಸುವ ಇನ್ನೊಂದು ಮಹಾಸಂಕಟ ಎಂದು ನನಗಂತೂ ಅನಿಸಿದೆ.

ಹಾಗಿದ್ದೂ ಇಂಗ್ಲೀಷ್ ಭಾಷೆ ತೆರೆದಿಡುವ ಕೆಲವು ಅನುಕೂಲಗಳಾದರೂ ಇದ್ದಿರಲೇ ಬೇಕು. ಅದರ ಬಗ್ಗೆ ಆ ಭಾಷೆಯ ಪ್ರೊಫೆಸರ್ ಆದ ಟಿ ಕೆ ರವೀಂದ್ರನ್ ಅವರು ಹೆಚ್ಚು ಬಲ್ಲರು. ಈ ಎಲ್ಲ ಸವಾಲುಗಳನ್ನು ಅವರು ಎದುರಿಸಿದ್ದಾರೆ, ಮುಖಾಮುಖಿಯಾಗಿ ತಮ್ಮದೇ ಆದ ರೀತಿಯಲ್ಲಿ ನಿಭಾಯಿಸಿದ್ದಾರೆ. ಕನ್ನಡೇತರ ಓದುಗರಿಗೆ ತುಳುವಿನ ಕಥನವೊಂದರ ರಸ ಲಭ್ಯವಾಗುವಂತೆ ಸಾಕಷ್ಟು ಎಚ್ಚರಿಕೆವಹಿಸಿ, ಭಾಷೆಯ ಸಾಧ್ಯತೆಗಳ ಬಗ್ಗೆ ತಿಳಿದು, ಅಳೆದು ಸುರಿದು ಅದನ್ನು ಬಳಸಿದ್ದಾರೆ. ಈಗಾಗಲೇ ಬೇರೆ ಭಾಷೆಯ ಅನುವಾದದಲ್ಲಿ ಈ ಕಾದಂಬರಿಯ ಅನುಸಂಧಾನ ಮಾಡಿಕೊಂಡಿದ್ದರಿಂದ ಅವರಿಗೆ ಕಾದಂಬರಿ ಪೂರ್ತಿಯಾಗಿ ಅವರದ್ದೇ ಆಗಿ ಮೈತುಂಬಿದೆ. ಹಾಗಾಗಿ ಈ ಅನುವಾದದ ಬಗ್ಗೆ ಎರಡು ಮಾತಿಲ್ಲ. ಅದಕ್ಕಾಗಿ ಟಿ ಕೆ ರವೀಂದ್ರನ್ ಅವರಿಗೆ ವಿಶೇಷವಾದ ಅಭಿನಂದನೆ ಸಲ್ಲಬೇಕು. ಒಂದು ಕಾದಂಬರಿಯ ಜೊತೆಗಿನ ಸುದೀರ್ಘ ಒಡನಾಟ, ಅದರ ಹಲವು ಮರುಓದು, ಬೇರೆ ಬೇರೆ ಭಾಷೆಗಳೊಂದಿಗೆ ಅದರ ಅನುಸಂಧಾನ ನಡೆಸಿ ದಕ್ಕಿದ ಅನುಭವ ಅವರನ್ನು ಕೂಡ ಕಾದಂಬರಿಯ ಸವಾಲುಗಳಿಗೆ ಜವಾಬು ಕೊಡಬಲ್ಲ ಮಟ್ಟಿಗೆ ಬೆಳೆಸಿರುವುದು ಮೇಲ್ನೋಟಕ್ಕೇ ಕಾಣುವ ಸತ್ಯ. ಹೀಗಾಗಿ ಒಂದು ಸಮರ್ಥ ಅನುವಾದ ಕಾದಂಬರಿಗೆ ಪ್ರಾಪ್ತವಾಗಿರುವುದು ಎಲ್ಲ ಕನ್ನಡೇತರ ಓದುಗರ ಭಾಗ್ಯವೆಂದೇ ಹೇಳಬೇಕು.

*****

ಹೊಳೆ ಹೊರಳಿಸುವ ಸಾಹಸಕ್ಕೆ ಕೈಯಿಕ್ಕಿದ ನಾಣಜ್ಜನ ಪಾತ್ರವೇ ಇಲ್ಲಿನ ಕಥಾನಕದ ಕೇಂದ್ರವೇ ಎಂದರೆ ಅಲ್ಲ ಎನಿಸುತ್ತದೆ. ನಾಣಜ್ಜ ಇಲ್ಲಿನ ನಾಯಕ ಅಲ್ಲ ಅನಿಸಲು ಹಲವಾರು ಕಾರಣಗಳಿವೆ. ಹೊಳೆಯನ್ನು ಹೊರಳಿಸುವ ಸಾಹಸ ಇಲ್ಲಿನ ಕೇಂದ್ರ ಕಥಾನಕವೇ ಎಂದರೆ ಅದೂ ಅಲ್ಲ ಎನ್ನಬೇಕು. ಏಕೆಂದರೆ, ನಾಣಜ್ಜನ ಈ ಸಾಹಸವನ್ನು ನಾವು ಕಾಣುವ ಮುನ್ನ ಅವನ ಇನ್ನಷ್ಟು ಸಾಹಸಗಳನ್ನು, ಹುಚ್ಚುಗಳನ್ನು ಕಾಣುತ್ತ ಹೋಗುತ್ತೇವೆ. ನಾಣಜ್ಜ ಎಂಬ ಪಾತ್ರ ಇಲ್ಲಿ ನಿಮಿತ್ತ ಮಾತ್ರವಾಗಿ, ಆತನ ಸಾಹಸ ಒಂದು ವ್ಯಕ್ತಿಯ ಸಾಹಸ ಎಂಬ ಮಿತಿಯನ್ನು ಮೀರಿ ಅದು ಒಂದು ಸಮುದಾಯದ ಜೀವನ ಪ್ರೀತಿ, ಸಾಹಸಿ ಪ್ರವೃತ್ತಿ, ಬದುಕುವ ಶೈಲಿ, ದೈನಂದಿನ ಎನ್ನುವ ಹಾಗೆ ಇಲ್ಲಿನ ಒಟ್ಟಾರೆ ಚಿತ್ರಣ ಸಾಗುವುದೇ ಈ ಕಾದಂಬರಿಯ ವೈಶಿಷ್ಟ್ಯ.

ನಾಣಜ್ಜ ಹೀರೋ ಅಲ್ಲ. ಅವನಲ್ಲಿ ಸಾಕಷ್ಟು ವಿಲನಿಯಸ್ ಅಂಶಗಳೂ ಇವೆ ಎನ್ನುವುದಕ್ಕೆ ಕಾದಂಬರಿಯೊಳಗಿನ ವದಂತಿಗಳು, ನಡವಳಿಕೆಗಳು ಪೂರಕವಾಗಿವೆ. ಆದರೆ ನಾಣಜ್ಜ ದುರುಳನೆ ಎಂದರೆ ಹೌದು ಎನ್ನುವಂತೆಯೂ ಇಲ್ಲ. ಅವನ ಮತ್ತು ಸರಸುವಿನ ದಾಂಪತ್ಯವಂತೂ ನಮಗೆ ರಮಣ ಅವರ ‘ಮಿಥುನ’ ಕಾದಂಬರಿಯ ದಂಪತಿಗಳನ್ನು ನೆನಪಿಸುವಂಥದ್ದು. ತನ್ನ ಪ್ರತಿಯೊಂದು ಸಾಹಸಕ್ಕೂ ಅವನು ‘ಮನೆಯನ್ನೊಪ್ಪಿಸುವ’ ಕಷ್ಟ ಎದುರಿಸಿದವನೇ. ಅವನ ಆಧ್ಯಾತ್ಮ, ಅವನ ದೈವನಿಷ್ಠೆ, ಧರ್ಮನಿಷ್ಠೆ, ಕುಡಿತ, ಮಾಂಸ ಸೇವನೆ, ವೇಶ್ಯೆಯರ ಸಹವಾಸ ಮುಂತಾದ ವಿಷಯದಲ್ಲಿ ಸ್ಥಾಪಿತ ಜೀವನ ಮೌಲ್ಯಗಳಿಗೆ ಅವನ ನಿಷ್ಠೆ, ರೀತಿ-ರಿವಾಜಿಗೆ ಅವನ ವ್ಯಾಖ್ಯೆ ಮತ್ತು ನಿಷ್ಠೆ, ಪೀಠ-ಮಠ-ಮಾನ್ಯರಿಗೆ ಅವನು ‘ತೋರಿಸುವ’ ನಡವಳಿಕೆ ಮತ್ತು ನಿಷ್ಠೆ, ಹಿಂಸೆ-ಶೋಷಣೆಯೊಂದಿಗೆ ಅವನ ನಂಟು ಮತ್ತು ನಿಲುವು, ಮಕ್ಕಳೊಂದಿಗೆ ಅವನ ಸಂಬಂಧ, ನಡವಳಿಕೆ, ದುಡ್ಡಿಗೆ, ಆಸ್ತಿಪಾಸ್ತಿಗೆ ಅವನ ಬದುಕಿನಲ್ಲಿರುವ ಮಹತ್ವ ಎಲ್ಲವೂ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಎಲ್ಲೋ ಒಂದು ಕಡೆ ಅವನು ಡಾ||ಕೆ ಶಿವರಾಮ ಕಾರಂತರ ‘ಬೆಟ್ಟದ ಜೀವ’ದ ಗೋಪಾಲಯ್ಯನೂ ಹೌದು, ಡಾ|| ಯು ಆರ್ ಅನಂತಮೂರ್ತಿಯವರ ‘ಸಂಸ್ಕಾರ’ದ ನಾರಾಯಣನೂ ಹೌದು. ಎರಡೂ ಕಾದಂಬರಿಗಳ ಪಾತ್ರಗಳು ಕಾದಂಬರಿಯ ವಸ್ತುವಿಗೆ ನಿಷ್ಠರಾಗಿ ರೂಪುಗೊಂಡಿದ್ದರೆ ನಾಣಜ್ಜನಿಗೆ ಅಂಥ ಯಾವ ಚೌಕಟ್ಟೂ ಇಲ್ಲ ಎನ್ನುವುದನ್ನು ನಾವು ಗಮನಿಸಬೇಕು.

ಮೂಲಭೂತವಾಗಿ ಈ ನಾಣಜ್ಜ ಸರ್‌ಪ್ರೈಸ್ ಪ್ರಿಯ. ಸದಾ ಏನಾದರೂ ಹೊಸತನ್ನು ಮಾಡಲು, ತನ್ನ ಸುತ್ತಲಿನವರನ್ನು ರಂಜಿಸಲು ಮತ್ತು ತನ್ನ ಸಾಮರ್ಥ್ಯದ ಪ್ರದರ್ಶನ ಮಾಡಲು ಬಯಸುವವನು. ಇದು ಒಂಥರಾ ಮಕ್ಕಳಾಟಿಕೆ, ತುಂಟತನ, ಕುಶಾಲು ಎಲ್ಲ ಸೇರಿಸಿಕೊಂಡಿದೆ ಎನ್ನುವುದನ್ನೂ ಗಮನಿಸಬಹುದು. ಇದರೆದುರು ಅವನಿಗೆ ಹಣ, ಆಸ್ತಿ, ಧರ್ಮದ ಕಟ್ಟಳೆ, ಜಾತಿ-ನೀತಿಗಳ ತೊಡಕು ತಾಪತ್ರಯಗಳೆಲ್ಲ ಗೌಣ ಎನ್ನುವುದರಲ್ಲೇ ಅವನ ಜೀವನ ಮೌಲ್ಯಗಳನ್ನೂ, ಅವನ ಬದುಕಿನ ಆದ್ಯತೆಗಳನ್ನೂ ನಾವು ಕಾಣಬೇಕು. ಅವನಿಗೆ ಜೀವನ ಒಂದು ದೊಡ್ಡ ಸಂಭ್ರಮದಂತೆ. ಸದಾ ಉತ್ಸಾಹದಿಂದ, ಚಟುವಟಿಕೆಯಿಂದ, ಹೊಸತನ್ನು ಮಾಡುತ್ತ, ಹಳೆಯದನ್ನೇ ಮಾಡುವಾಗಲೂ ಅದರಲ್ಲೇನೋ ಹೊಸತನ, ಬೆರಗು, ಸೌಂದರ್ಯ ಬೆರೆಸುವಂತೆ ಬದುಕುವುದು ಅವನ ಜೀವನ ಕ್ರಮ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಮನುಷ್ಯ ಸರಳವಾಗಿ, ಸಹಜವಾಗಿ ಬದುಕಲು ಇಲ್ಲಿ ತಾನೇ ಎಷ್ಟೊಂದು ಅಡ್ಡಿ, ಆತಂಕಗಳನ್ನು ಸೃಷ್ಟಿಸಿಕೊಂಡಿದ್ದಾನೆ ಎನ್ನುವುದರ ಅರಿವಾಗದೇ ಇರದು. ಇದನ್ನು ಹೇಳುವಾಗಲೂ ಕಾದಂಬರಿ ಏಕಪಕ್ಷೀಯವಾಗಿಲ್ಲ ಎನ್ನುವುದನ್ನು ಗಮನಿಸಿ. ಪ್ರಕೃತಿಯ ಎದುರು, ನಿಸರ್ಗದ ಎದುರು ಮನುಷ್ಯನ ಸಾಹಸ, ಹುಚ್ಚು, ಎದೆಗಾರಿಕೆ ಅಥವಾ ಭಂಡತನ ಎಲ್ಲವಕ್ಕೂ ಒಂದು ಮಿತಿಯಿದೆ ಎನ್ನುವುದನ್ನು ಅದು ಮರೆತಿಲ್ಲ. ಆದರೆ ಪರೋಕ್ಷವಾಗಿ ಕಾದಂಬರಿ ಹೇಳುತ್ತಿರುವುದೇನು? ಮಾನವ ಹೇಗೆ ಸರಳವಾಗಿ, ಸಹಜವಾಗಿ ಸಂತೋಷದಿಂದ, ಉತ್ಸಾಹ-ಉಲ್ಲಾಸಗಳಿಂದ ಒಂದು ಹಕ್ಕಿಯಂತೆ, ಚಿಟ್ಟೆಯಂತೆ ಬದುಕಲು ಸ್ವತಂತ್ರನೋ ಹಾಗೆಯೇ ಅವನ ಸುತ್ತಲಿನ ಪ್ರಕೃತಿಗೂ ಸ್ವತಂತ್ರವಾಗಿರುವ ಹಕ್ಕಿದೆ, ತನ್ನದೇ ಆದ ಒಂದು ಕ್ರಮದಲ್ಲಿ ಬದುಕುವ ಹಕ್ಕಿದೆ ಮಾತ್ರವಲ್ಲ ಸಂದರ್ಭ ಬಂದರೆ ಅದನ್ನು ಸಾಧಿಸುವ ಹಠ, ಕೆಚ್ಚು ಮತ್ತು ಸಾಮರ್ಥ್ಯವೂ ಇದೆ ಎನ್ನುವುದನ್ನೇ.

ಇದನ್ನು ಅತ್ಯಂತ ಸುಂದರವಾದ ಭಾಷೆ, ತಂತ್ರ ಮತ್ತು ವಿನ್ಯಾಸದೊಂದಿಗೆ ಮಹಾಲಿಂಗ ಅವರು ಇಲ್ಲಿ ಸಾಕ್ಷಾತ್ಕರಿಸುತ್ತಾರೆ. ನಾಣಜ್ಜನ ಬದುಕೋ ಅದು ನಿತ್ಯಸಾಹಸದ್ದು, ನಿತ್ಯ ನವನವೋನ್ಮೇಶಶಾಲಿಯಾದ್ದು. ಅದರಲ್ಲಿ ಆಲಸ್ಯವಿಲ್ಲ, ಜಡತ್ವವಿಲ್ಲ, ಏಕತಾನತೆಯಿಲ್ಲ. ಹರಿವ ನದಿಯ ನೀರು ಹೇಗೆ ಪ್ರತಿಕ್ಷಣವೂ ಹೊಸನೀರೇ ಆಗಿರುತ್ತದೆಯೋ ಅಷ್ಟೇ ಹೊಸತನ ನಾಣಜ್ಜನ ಬದುಕಿನ ಪ್ರತಿಯೊಂದು ಕ್ಷಣದ್ದು ಕೂಡ. ನಾಣಜ್ಜ ಹೊಳೆ ಹೊರಳಿಸುವ ಸಾಹಸಕ್ಕೆ ತೊಡಗುವ ಕತೆಯನ್ನು ಹೇಳಲು ಹೊರಟಿದ್ದಾದರೂ ಅದಕ್ಕೂ ಮುನ್ನ ಅವರು ನಾಣಜ್ಜನ ಜೀವನಕ್ರಮವನ್ನೇ ನಮಗೆ ಕಾಣಿಸುತ್ತಿದ್ದಾರೆ. ಅವನೂ ಗೋಪಾಲಯ್ಯನಂತೆಯೇ ಗುಡ್ಡ ಕಡಿದು ಗದ್ದೆ ಮಾಡಿ ಕೃಷಿಯಲ್ಲಿ ತೊಡಗಿದವನು. ಗುಡ್ಡೆ ಜಾರಿ ಗದ್ದೆಯ ಮೇಲೆ ಕುಳಿತಾಗಲೂ ಅಭಿಮನ್ಯುವಿನ ಪದ ಹಾಡಿ ತನ್ನ ಸೋಲಿಗೆ ಕುಂದದೆ ಕೆಚ್ಚು ಉಳಿಸಿಕೊಂಡು ಮುಂದುವರಿದವನು. ಯಕ್ಷಗಾನದಲ್ಲಿ ಪುಷ್ಪಕವಿಮಾನ, ವರಾಹಾವತಾರ, ಇಂದ್ರನ ಕುದುರೆ ಮುಂತಾದ ಪ್ರಯೋಗಗಳನ್ನು ಮಾಡಿದಾಗಲೂ, ಸತ್ಯನಾರಾಯಣ ಪೂಜೆಯ ಮಂಟಪ, ನೂಲಮದುವೆಯ ಚಪ್ಪರದ ಭೇತಾಳನ ಪ್ರಸಂಗದಲ್ಲಿಯೂ ನಾಣಜ್ಜನಿಗೆ ಸವಾಲುಗಳು, ಅಡ್ಡಿ ಆತಂಕಗಳು, ತೊಡಕುಗಳು ಇರಲಿಲ್ಲವೆಂದಲ್ಲ. ಹಾಗೆಯೇ ಅವನ ಅಡುಗೆಭಟ್ಟ, ಪ್ರೇತಭಟ್ಟ, ಕುದುರೆಸವಾರ, ಸೈಕಲ್ ಸವಾರ ಮುಂತಾದ ಅವತಾರಗಳಿಗೂ, ಸರಸುವಂಥ ಹೆಣ್ಣಿನೊಂದಿಗೆ ಅವನು ಬಂದು ನೆಲೆಯಾದ ಹಿಂದೆಯೂ ಮುಂದೆಯೂ ಅವನ ಚರಿತ್ರೆಯನ್ನು ತಮಗೆ ಬೇಕಾದಂತೆ ತಿರುಚಿ ಆಡಿದವರೂ, ಆಡಿಕೊಂಡವರೂ ಕಡಿಮೆಯಿಲ್ಲ. ಒಕ್ಕಲು ಐತ ಮತ್ತು ಮೊದಲನೆಯ ಹೆಂಡತಿಯ ಸಾವಿನ ವಿಚಾರದಲ್ಲಿಯೂ ನಾಣಜ್ಜನ ವ್ಯಕ್ತಿತ್ವದ ಬಗ್ಗೆ ಅಷ್ಟೇನೂ ಒಳ್ಳೆಯ ಮಾತುಗಳು ಇಲ್ಲ. ಹಾಗೆ ಇಲ್ಲಿ ನಾಣಜ್ಜನನ್ನು ಒಬ್ಬ ಸರ್ವಗುಣ ಸಂಪನ್ನ ನಾಯಕನನ್ನಾಗಿಸಿ ವಿಜೃಂಭಿಸಬೇಕೆಂಬ ಯಾವ ಉದ್ದೇಶವೂ ಕಾದಂಬರಿಕಾರರಿಗಿಲ್ಲ ಎನ್ನುವುದು ಸುಸ್ಪಷ್ಟ. ಒಂದು ರೀತಿಯಿಂದ ನೋಡಿದರೆ ನಾಣಜ್ಜನ ಬದುಕು ಸದಾ ಹೋರಾಟದ್ದೇ ಆಗಿತ್ತು ಎನ್ನಬಹುದು. ಅವನು ಸದಾ ಪ್ರವಾಹಕ್ಕೆ ಎದುರಾಗಿಯೇ ಈಜಿದವನೇ ಹೊರತು ಅದರೊಂದಿಗೆ ಈಜುತ್ತ ಹೋದವನಲ್ಲ ಎನ್ನುವುದು ನಿಜ. ಆದರೆ ಅದು ಪ್ರತಿ ಬಾರಿಯೂ ಸರಿಯಾದ ಕಾರಣಕ್ಕೆ, ಸರಿಯಾದ ಉದ್ದೇಶದಿಂದ ಆಗಿತ್ತೆ ಎನ್ನುವುದು ಓದುಗರಿಗೆ ಹೇಗೆ ಪ್ರಶ್ನೆಯೋ ಕಾದಂಬರಿಕಾರರಿಗೂ ಪ್ರಶ್ನೆಯೇ. ನಾಣಜ್ಜನಿಗೆ ಊರು ಹೇಗೆ ಪ್ರತಿಕ್ರಿಯಿಸಿತು, ನಿಸರ್ಗ ಹೇಗೆ ಪ್ರತಿಕ್ರಿಯಿಸಿತು ಎನ್ನುವುದು ಓದುಗರಷ್ಟೇ ಅವರಿಗೂ ಕುತೂಹಲಕರ. ಹಾಗಾಗಿ ಕಾದಂಬರಿ ಕೊನೆಗೂ ಓಪನ್ ಎಂಡ್ ಆಗಿಯೇ ಉಳಿಯುತ್ತದೆ ಎನ್ನುವುದನ್ನು ಗಮನಿಸಬೇಕು.

ಕಥಾನಕದ ಚೌಕಟ್ಟು ಮತ್ತು ಕಥಾಕ್ಷೇತ್ರದ ಚೌಕಟ್ಟು ಎರಡನ್ನೂ ಗಮನಿಸಿದರೆ ಒಂದು ತೀರ ಸೀಮಿತ ನೆಲೆಯಲ್ಲಿಯೇ ಮಹಾಲಿಂಗರು ಈ ಕಾದಂಬರಿಯನ್ನು ಸುಸಮೃದ್ಧಗೊಳಿಸಿ ಕಟ್ಟುವ ಬಗೆ ಅಚ್ಚರಿಗೆ ಕಾರಣವಾಗುತ್ತದೆ. ಇಲ್ಲಿ ಕಾಡಮನುಷ್ಯರು (ಆದಿವಾಸಿಗಳು), ಮೇಲ್ವರ್ಗದ ತುಂಗ-ಸ್ಥಾನಿಕರು, ಕೆಳವರ್ಗದ ತುಕ್ರ, ಪೋಣಿ, ಐತರು, ಹೆಂಡ ತಯಾರಿಯ ಬಿರುಮ ಪೂಜಾರಿ ಊರಿನ ತಂತ್ರಿ-ಪುರೋಹಿತರು, ಮಾಟ-ಮಂತ್ರ ಮಾಡುವವರು, ಭೂತದ ಕೋಲ-ನೇಮ ಕಟ್ಟುವವರು, ಮಠಾಧಿಪತಿಗಳು, ಸಿರಿವಂತ ಬೊಂಬಾಯಿ ಭಂಡಾರಿಗಳು ಎಲ್ಲರೂ ಬರುತ್ತಾರೆ. ನಾಣಜ್ಜನ ಹತ್ತು ಹಲವು ‘ಹುಚ್ಚು’ಗಳನ್ನು ವಿವರಿಸುವಾಗಲೇ ನಮ್ಮ ರೀತಿ-ರಿವಾಜು, ಧರ್ಮ-ಶಾಸ್ತ್ರ-ನಿಯಮ, ಜಾತಿಪದ್ಧತಿ, ಮನುಷ್ಯ ಸಹಜ ಅಸೂಯೆ, ದ್ವೇಷಗಳು ಹೇಗೆ ಒಂದು ಸಮಾಜದ ಅನಿವಾರ್ಯ ಅಂಗಗಳೆನ್ನುವುದನ್ನೂ ಮಹಾಲಿಂಗರು ಚಿತ್ರಿಸುತ್ತ ಹೋಗುತ್ತಾರೆ. ಎಲ್ಲವೂ ಒಂದು ಹದವರಿತ ಸಂತುಲಿತ ನೆಲೆಯಲ್ಲಿಯೇ ಬಂದು ಹೋಗುತ್ತವೆ. ಯಾವುದಕ್ಕೂ ತನ್ನದೇ ಮೇಲ್ಗೈಯಾಗಬೇಕೆಂಬ ಹಠವಿಲ್ಲ. ಹಾಗಿದ್ದೂ ಸಂದರ್ಭಗಳು ನಾಣಜ್ಜನ ಮುತ್ಸದ್ಧಿತನವನ್ನು, ಚಾಣಾಕ್ಷ್ಯವನ್ನು ಮೆರೆಯುವಂತೆ ಕಂಡರೆ ಅದು ಸಾಂದರ್ಭಿಕವೆಂದೇ ಹೇಳಬಹುದು. ರೀತಿ ರಿವಾಜಿನ ತೊಡಕುಗಳು ನಾಣಜ್ಜನಿಗೆ ಸದಾಕಾಲ ಸಮಾಜದ ಮೇಲ್ವರ್ಗದಿಂದಲೇ ಬಂದಿರುವುದೇನಲ್ಲ. ಕೆಳವರ್ಗದಿಂದಲೂ ಅದು ಬರುವುದಿದೆ. ಉದಾಹರಣೆಗೆ, ಮುಚ್ಚಿರಪದವಿನ ನಕ್ಕುರನಿಗೆ ಪೆಟ್ಟಾದಾಗ ಕುರ್ಚಿಪಳ್ಳದವರು ಧ್ವನಿಯೆತ್ತುತ್ತಾರೆ. ಮೋಂಟು ತುಕ್ರನೂ ಕೆಲವು ಜಾತಿ ಜನರೂ ಓರೆಕೊಕ್ಕೆ ತೆಗೆಯುತ್ತಾರೆ ಎನ್ನುವುದನ್ನು ಗಮನಿಸಿ. ಇವು ಒಂದು ಸಮಾಜದ ಅನಿವಾರ್ಯ ಅಂಗಗಳೇ ಎಂಬಂತೆ ತಪ್ಪದೇ ಬರುತ್ತವೆ, ತಕ್ಕ ಸಾಂತ್ವನ ಪಡೆದು ಬದಿಗೆ ಸರಿಯುತ್ತವೆ. ಬದುಕು ಮಾತ್ರ ಒಂದು ನದಿಯಂತೆ ಸದಾ ಕಾಲ ಹರಿಯುತ್ತ ಸಾಗುತ್ತದೆ, ಸಾಗಬೇಕು.

ಇಡೀ ಕಾದಂಬರಿಯಲ್ಲಿ ಪ್ರಧಾನವಾಗಿ ಗಮನ ಸೆಳೆಯುವುದು ಈ ಒಂದು ಜೀವನದೃಷ್ಟಿ. ಬದುಕು ಒಂದು ಸಂಭ್ರಮಾಚರಣೆಯಂತಿರಬೇಕು ಎನ್ನುವ ನಾಣಜ್ಜನ ನಿಲುವು. ಪ್ರಕೃತಿ, ನಿಸರ್ಗ ಬೇರೆಯಲ್ಲ, ಮನುಷ್ಯ ಬೇರೆಯಲ್ಲ ಎನ್ನುವ ನೀತಿ. ಪ್ರತಿಯೊಂದಕ್ಕೂ ತನ್ನದೇ ಆದ ಸ್ವಾತಂತ್ರ್ಯ, ಬದುಕುವ ಹಕ್ಕು ಇದೆ ಎಂಬ ತರ್ಕ. ತೊಡಕು, ತೊಡರು, ಅಡ್ಡಿ ಆತಂಕಗಳು ಜೀವನದ ಸಹಜ ಧರ್ಮ ಎಂಬ ಸ್ವೀಕ್ವೃತಿ. ಇದೆಲ್ಲದರ ಕಲಶಪ್ರಾಯದಂತೆ ಇಲ್ಲಿ ನಮಗೊದಗುವುದು ಮಹಾಲಿಂಗರು ಸಾಧಿಸುವ ಭಾಷೆಯ ಶ್ರೀಮಂತಿಕೆ, ಅದರ ಲಯದ ಸುಂದರ ನಿರ್ವಹಣೆ ಮತ್ತು ಯಶಸ್ಸು. ಈ ಕಾದಂಬರಿ ಒಂದು ಶ್ರೇಷ್ಠ ಸಾಂಸ್ಕೃತಿಕ, ಪ್ರಾದೇಶಿಕ ಮತ್ತು ಭಾಷಿಕ ಸಂಪತ್ತು ಹೇಗೆಯೋ ಹಾಗೆಯೇ ಅದು ಒಂದು ಕಾಲದ ಜೀವನಮೌಲ್ಯದ, ಜೀವನಶೈಲಿಯ ಮತ್ತು ಜೀವನ ಸೌಂದರ್ಯದ ಸಮೃದ್ಧ ದಾಖಲೆಯೂ ಹೌದು. ಎರಡೂ ತುಳುವಿಗೆ ಸೀಮಿತವಾಗದೆ, ತುಳುಗಿಂತ ಹೆಚ್ಚು ಅದರ ಸಹಭಾಷೆಗಳಿಗೇ ಸಲ್ಲುವುದು ಸಮಕಾಲೀನ ಭಾಗ್ಯವೆನ್ನಬೇಕು. ಹಾಗೆ ಅದು ವಸುದೈವ ಕುಟುಂಬಕಂ ಎಂಬ ತುಳು, ಕೊಂಕಣಿ ಭಾಷೆಗಳ ಸಾಮುದಾಯಿಕತೆಯ ಲಕ್ಷಣವನ್ನೇ ಮೆರೆಯುತ್ತಿರುವುದು ಕೇವಲ ಭಾಷೆಯ ಆಪ್ತವಲಯವನ್ನು ನಿರ್ಮಿಸುವುದಕ್ಕೆ ಸೀಮಿತವಾಗಿಲ್ಲ. ಒಂದು ಪುಟ್ಟ ಹೊಳೆಯ ಕತೆಯನ್ನು ಹೇಳುತ್ತಿದೆ ಎನ್ನುವಾಗಲೇ ಈ ಬದುಕೇ ಒಂದು ನದಿ ಎಂಬ ರೂಪಕವನ್ನು ಅದು ನಮ್ಮ ಕಣ್ಣಮುಂದಿಡುತ್ತಿದೆ. ಅತ್ಯಂತ ಮೆಲುದನಿಯಲ್ಲಿ, ವಿಶಾಲ ನದಿಯ ಒಡಲಲ್ಲಿ ಚಲನೆಯಿದೆಯೇ ಇಲ್ಲವೇ ಎನ್ನುವುದೂ ಎದ್ದು ಕಾಣದಂತೆ, ಒಂದು ಹೊಸ ಜೀವನದೃಷ್ಟಿಯನ್ನು, ದರ್ಶನವನ್ನು, ಒಳನೋಟವನ್ನು ಈ ಪುಟ್ಟ ಕಾದಂಬರಿ ಕಟ್ಟಿಕೊಡುತ್ತಿದೆ. ಅದು ಹೌದು ಎಂದರೆ ಹೌದು, ಅಲ್ಲ ಎಂದರೆ ಅಲ್ಲ. ಹಾಗೆ ಬರಿಯ ರಂಜನೆಗಾಗಿ ಓದುವವರಿಗೂ ಅತ್ಯಂತ ಆಪ್ತವಾಗುವ ಗುಣ ಈ ಕಾದಂಬರಿಯದ್ದು.

ಈ ಕಾದಂಬರಿಯ ಅಂತ್ಯದಲ್ಲಿ ಒಂದು ಸುಂದರ ರೂಪಕವಿದೆ. ಈ ಕತೆಯನ್ನು ತೊಡಗುವುದು ನಾಣಜ್ಜನಿಂದ. ಆದರೆ ಅದನ್ನು ಮುಗಿಸುತ್ತಿರುವುದು ಪೋಣಿ. ಕಾದಂಬರಿಯ ಮೊದಲಿಗೇ ಕಾಣಿಸಿಕೊಳ್ಳುವ ಪೋಣಿ ಕೊನೆಯಲ್ಲೂ ಕಾಣಿಸಿಕೊಳ್ಳುತ್ತಾನೆ. ಆದರೆ ನಾಣಜ್ಜನಿಗೆ ಆ ಭಾಗ್ಯವಿಲ್ಲ. ನಾಣಜ್ಜ ಗೆದ್ದನೆ, ಸೋತನೆ ಎನ್ನುವ ಪ್ರಶ್ನೆಗಿಂತ ದೊಡ್ಡ ಪ್ರಶ್ನೆ ಪೋಣಿ ಗೆದ್ದನೆ ಸೋತನೆ ಎನ್ನುವುದು. ಪೋಣಿಯ ಕತೆ ಇಲ್ಲಿನ ಪ್ರಧಾನಧಾರೆಯಲ್ಲಿ ಇದ್ದೂ ಇಲ್ಲದಂತೆ ಬರುತ್ತದೆ. ಅದು ಮುಖ್ಯ ನದಿಗೆ ಎಲ್ಲೋ ಬಂದು ಸೇರಿಕೊಳ್ಳುವ ಉಪನದಿಯಂತೆ. ಹೆಸರು ಉಳಿಯುವುದು ಮುಖ್ಯನದಿಯದ್ದು ಮಾತ್ರ ಎನ್ನುವುದು ನಿಜ. ಆದರೆ ಉಪನದಿಯ ಹರಿವಿಗೂ ಅದರದ್ದೇ ಆದ ಒಂದು ಸಾರ್ಥಕತೆಯಿದೆಯಲ್ಲವೆ? ಕಾದಂಬರಿ ನಾಣಜ್ಜನ ಕತೆ ಮಾತ್ರವಲ್ಲ, ಪೋಣಿಯಂಥವರ ಕತೆ ಕೂಡ ಎನ್ನುವುದನ್ನು ಸೂಚಿಸುವ ಒಂದು ರೂಪಕ ಕಾದಂಬರಿಯ ಕೊನೆಯ ಘಟ್ಟದಲ್ಲಿ ಬರುತ್ತದೆ. ಅಲ್ಲಿ ನಾಣಜ್ಜ ತೋಡಿದ, ಅವನ ನಿರೀಕ್ಷೆಯಂತೆ ಹರಿದಿದ್ದರೆ ನದಿ ಹೊರಳಿ ಹರಿಯಬೇಕಾಗಿದ್ದ ಬರಿದಾದ ನದೀಪಾತ್ರ ಮುಂದೆ ಪೇಟೆಗೆ ಹೋಗುವ ಹತ್ತಿರದ ಹಾದಿಯಾಗಿ ಮಾರ್ಪಟ್ಟಿದೆ. ಆ ದಾರಿಯಲ್ಲಿ ಸಾಗುತ್ತ ಪೋಣಿ ಅದರ ಗೋಡೆಯ ಮಣ್ಣು ತರಿದು ನೋಡುತ್ತಾನೆ. ಅದು ಮತ್ತೆ ಗಟ್ಟಿಗೊಂಡಿದೆಯೇ ಅಥವಾ ಅಗೆತದ ಪ್ರಭಾವಕ್ಕೆ ಇನ್ನೂ ಮೆದುವಾಗಿಯೇ ಇದೆಯೇ ಎಂದು ನೋಡುವಾಗಲೇ ಅವನಿಗೊಂದು ಎಲುಬಿನ ಚೂರು ಸಿಗುತ್ತದೆ. ಒಂದು ಕ್ಷಣ ಅವನು ಅದನ್ನು ಕೈಯಲ್ಲಿ ಹಿಡಿದು ಅದು ಮನುಷ್ಯರದ್ದೇ ಅಥವಾ ಯಾವುದಾದರೂ ಪ್ರಾಣಿಯದೋ ಎಂದು ಪರೀಕ್ಷಿಸುತ್ತಾನೆ. ಥಟ್ಟನೆ ನಿಮಗೆ ಐತನ ನೆನಪಾಗಿಯೇ ಆಗುತ್ತದೆ. ನದಿ ಮಾತ್ರ ಎಂದಿನಂತೆಯೇ ಹರಿಯುತ್ತಿರುತ್ತದೆ. ನದಿಯದು ಆಗಲೂ ಅದೇ, ಈಗಲೂ ಅದೇ. ಅದು ಅದೇ ದಂಡೆಗುಂಟ ಎಂದಿನಂತೆ ಹರಿಯುತ್ತಲೇ ಇದೆ. ಆದರೆ ಹರಿಯುತ್ತಿರುವುದು ಅದೇ ನೀರೆ, ಆಚೀಚಿನದು ಅದೇ ದಂಡೆಯೆ ಎನ್ನುವುದು ಅವರವರೇ ಕಂಡುಕೊಳ್ಳಬೇಕಾದ ಸತ್ಯ.

(ಪ್ರಸ್ತುತ ಈ ಕಾದಂಬರಿಯ ಕನ್ನಡ ಆವೃತ್ತಿ ಒಂದು ಕಾದಂಬರಿ ಪುಸ್ತಕವಾಗಿ ಲಭ್ಯವಿಲ್ಲ ಎನ್ನುವುದು ನಿಜ. ಆದರೆ ಸದ್ಯದಲ್ಲೇ ಅದು ಬರಲಿದೆ ಎಂದು ಮಹಾಲಿಂಗ ಅವರು ಹೇಳುತ್ತ ಬಂದಿದ್ದಾರೆ. ಅದೇನಿದ್ದರೂ ಇಂಗ್ಲೀಷ್ ಆವೃತ್ತಿ ಮಣಿಪಾಲ್ ಯುನಿವರ್ಸಿಟಿ ಪ್ರೆಸ್‌ನವರಿಂದ ಬರಲಿದೆ. ಹಾಗೆಯೇ ಸದ್ಯಕ್ಕೆ ಸೈಂಟ್ ಅಲೊಶಿಯಸ್ ಕಾಲೇಜಿನ ಪಠ್ಯಗಳಲ್ಲಿ ಒಂದಾದ ‘ನೇತ್ರಾವತಿ’ಯಲ್ಲಿ (ಬೆಲೆ ರೂ.60) ಈ ಕಾದಂಬರಿ ಪೂರ್ಣಾವೃತ್ತಿಯಾಗಿ, ಅನುಬಂಧ ಮತ್ತು ತೀರ್ಥರಾಮ್ ವಳಲಂಬೆ ಅವರ ಸುಂದರ ರೇಖಾಚಿತ್ರಗಳೊಂದಿಗೆ ಲಭ್ಯವಿದೆ. ಇದನ್ನು ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿದೆ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, July 3, 2019

ಹೊಳೆದಿದ್ದು ತಾರೆ, ಉಳಿದಿದ್ದು ಆಕಾಶ...

ರಾಘವೇಂದ್ರ ಪಾಟೀಲರ ‘ಮಾಯಿಯ ಮುಖಗಳು’ ಒಂದು ಪುಟ್ಟ ಕತೆಯಾದರೂ ಒಂದು ಕಾದಂಬರಿಯ ಹರಹು ಉಳ್ಳದ್ದು ಮತ್ತು ಇಂದಿಗೂ ಕನ್ನಡದ ಓದುಗರ ಮನದಲ್ಲಿ ನಿಂತಿರುವಂಥದ್ದು. ಆ ಕತೆಯಲ್ಲಿ ಗಂಗಾ, ತುಂಗಾ, ನರ್ಮದಾ ಎಂಬ ಮೂವರು ಹೆಣ್ಣುಮಕ್ಕಳಿದ್ದಾರೆ. ಕಲ್ಲೋಪಂತ ಮತ್ತು ಕೃಷ್ಣಾಬಾಯಿಯರ ಮಕ್ಕಳಾದ ಇವರ ಬದುಕು ಕೂಡ ಮೂರು ನದಿಗಳಂತೆ ಎಲ್ಲೆಲ್ಲೊ ಹರಿಯುತ್ತದೆ. ಸಂಗೀತ, ನಾಟ್ಯ ಎಲ್ಲ ಇರುವ ಇವರ ಬದುಕಲ್ಲಿ ಗಂಗೂಬಾಯಿಯವರೂ ಬರುತ್ತಾರೆ. ಅಣುಕಾಸುರನ ಜನ್ಮದೊಂದಿಗೆ ಮುಗಿಯುವ ಈ ಕತೆಯನ್ನು ಮೂವರು ಹೆಮ್ಮಕ್ಕಳ ಕತೆಯೆಂದೋ, ಅವರ ಮದುವೆ, ಪ್ರೇಮ, ನಿರ್ಲಿಪ್ತಿಯ ಗೋಳುಗಳ ಕತೆಯೆಂದೋ, ಕಲ್ಲೋಪಂತ-ಕೃಷ್ಣಾಬಾಯಿಯರ ಕತೆಯೆಂದೋ, ಧಾರವಾಡ-ಹುಬ್ಬಳ್ಳಿ-ಬೆಳಗಾವಿ ಎಂದು ವಲಸೆಯಾದ ಕುಟುಂಬದ ಕತೆಯೆಂದೋ ಚೌಕಟ್ಟು ಹಾಕಿ ಹೇಳುವುದು ಹೇಗೆ ಕಷ್ಟವೋ ಹಾಗೆಯೇ ಅದನ್ನು ಅಣುಕಾಸುರನ ಜನ್ಮವೃತ್ತಾಂತವೆಂದೂ ಕರೆಯುವುದು ಕಷ್ಟ. ಆದರೆ ಕತೆಯ ಚೌಕಟ್ಟಿನೊಳಗೇ ಈ ಎಲ್ಲವೂ ಬರುತ್ತ ‘ಮಾಯಿಯ ಮುಖಗಳು’ ಎಂಬ ಹೆಸರೇ ಈ ಮೂವರು ಹೆಮ್ಮಕ್ಕಳನ್ನು ಮಹಾಮ್ಮಾಯಿಯ ಅಥವಾ ಸತ್ವ-ರಜೋ-ತಾಮಸ ಪ್ರವೃತ್ತಿಯ ನೆಲೆಗೂ ಏರಿಸುವುದರಿಂದ ಕತೆ ಹೊಸದೇ ಆದ ಒಂದು ಆಯಾಮ ಪಡೆದುಕೊಂಡು ಬಿಡುತ್ತದೆ. ಅದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೇ ಓದುವವರಿಗೂ ಇದು ಧಾರವಾಡದ ಸೊಗಡಿನ ಭಾಷೆಯೊಂದಿಗೆ ಸಂಗೀತ-ನಾಟಕ-ನೃತ್ಯದ ಗಂಧವನ್ನೆಲ್ಲ ಒದಗಿಸುತ್ತ ಮಧ್ಯಮವರ್ಗದ ದಂಪತಿಗಳ ಮೂವರು ಚಂದದ ಹೆಮ್ಮಕ್ಕಳ ಮದುವೆ-ಸಂಸಾರ-ಭವಿಷ್ಯದ ಪಡಿಪಾಟಲಿನ ಕತೆಯಾಗಿ ಮನಮುಟ್ಟುತ್ತದೆ.

ಈ ವರ್ಷ(2019)ದ ಮ್ಯಾನ್‌ಬುಕರ್ ಅಂತರ್ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾದ ಓಮನ್ ದೇಶದ ಹುಡುಗಿ ಜೋಕಾ ಅಲಹರ್ತಿಯ ಅರೇಬಿಕ್ ಕಾದಂಬರಿ ಸಿಲೆಸ್ಟಿಯಲ್ ಬಾಡೀಸ್ ಬಗ್ಗೆ ಕೂಡ ಮೂವರು ಹುಡುಗಿಯರ ಕತೆ ಎನ್ನುವ ವ್ಯಾಖ್ಯಾನ ಕೇಳಿ ಬಂದಿತ್ತು. ಕೆಲವರು ಇದನ್ನು ಓಮನ್‌ನಲ್ಲಿ ಈಗಲೂ ಚಾಲ್ತಿಯಲ್ಲಿರುವ ಗುಲಾಮಗಿರಿಯ ಕಥಾನಕ ಎಂದೂ ಕರೆದಿದ್ದರು. ಇದನ್ನು ಅಲ್ಲಗಳೆಯಲಾಗದಿದ್ದರೂ ಇಡೀ ಕಾದಂಬರಿಯನ್ನು ಗಮನಿಸಿ ಹೇಳುವುದಾದರೆ ಇದು ಮೂವರು ಹುಡುಗಿಯರನ್ನು ಕೇಂದ್ರದಲ್ಲಿರಿಸಿಕೊಂಡಿರುವ ಕಥಾನಕವೇನೂ ಅಲ್ಲ. ಹಾಗೆಯೇ ಇಲ್ಲಿನ ಕಥಾಜಗತ್ತು ಓದುಗರಿಗೆ ಗುಲಾಮಗಿರಿಯ ಕಟು ಅನುಭವವನ್ನೂ ಕೊಡುತ್ತಿಲ್ಲ.

ಆಫ್ರಿಕಾದ ಕಾಡುಗಳಲ್ಲಿ ಅಮಲು ಪದಾರ್ಥದ ಇಂಜೆಕ್ಷನ್ನುಗಳನ್ನು ಬಾಣದಂತೆ ಪ್ರಯೋಗಿಸಿ, ಕರಿಯರನ್ನು ಪಂಜರಗಳಲ್ಲಿ ಬಂಧಿಸಿ, ಸಾಗಿಸುವ ಕಥೆಯಾಗಲಿ, ಅವರನ್ನು ನಗ್ನವಾಗಿ ನಿಲ್ಲಿಸಿ, ಜಾನುವಾರುಗಳನ್ನು ಆರಿಸುವಂತೆ ಅವರ ಲೈಂಗಿಕ ಮತ್ತು ಗರ್ಭಧಾರಣೆ/ವೀರ್ಯದಾನದ ಸಾಮರ್ಥ್ಯಗಳನ್ನೆಲ್ಲ ಪರೀಕ್ಷಿಸಿ ಹರಾಜಿನ ಬೆಲೆ ನಿರ್ಧರಿಸುವ ಪ್ರಕ್ರಿಯೆಯಾಗಲಿ, ಹಡಗಿನ ನೆಲಮಾಳಿಗೆಯಲ್ಲಿ ಸರಪಳಿಗಳಿಂದ ಬಂಧಿಸಿ, ಮಲಮೂತ್ರ ವಿಸರ್ಜನೆಗೂ ಬೇರೆ ವ್ಯವಸ್ಥೆ ಮಾಡದೆ, ತಿಂಗಳಿಗೊಮ್ಮೆಯೋ, ಮನಸ್ಸಾದಾಗಲೋ ಹಡಗಿನ ಡೆಕ್ಕಿಗೆ ಸಾಮೂಹಿಕವಾಗಿ ಕರೆತಂದು ಸಮುದ್ರದ ಉಪ್ಪುನೀರಿನಿಂದ ಸ್ನಾನ ಮಾಡಿಸುವ, ಆಗ ಅವರ ಮೈಮೇಲೆದ್ದ ಹುಣ್ಣುಗಳು ಉಪ್ಪುನೀರಿಗೂ, ಕಡು ಬಿಸಿಲಿಗೂ, ಚಾಟಿ ಏಟುಗಳಿಗೂ ಕೊಡುತ್ತಿದ್ದ ಅಪಾರವೇದನೆಗೇ ಕೆಲವರು ಮೂರ್ಛೆ ತಪ್ಪುವುದು, ಕಡಲಿಗೆ ಹಾರಿಕೊಳ್ಳುವುದು ಎಲ್ಲ ನಡೆಯುತ್ತಿದ್ದುದನ್ನಾಗಲೀ, ಹೆಗ್ಗಣ, ಚೇಳು, ಹಾವುಗಳೆಲ್ಲ ಇರುತ್ತಿದ್ದ ಹಡಗಿನ ನೆಲಮಾಳಿಗೆಯಲ್ಲಿ ಮೊಲೆ ಚೀಪುವ ಹಸುಗೂಸುಗಳು, ಮಕ್ಕಳು ಕಾಯಿಲೆ ಬಂದು ನೂರು-ಇನ್ನೂರರ ಸಂಖ್ಯೆಯಲ್ಲಿ ಸಾಯುತ್ತಿದ್ದ ಕರುಳು ಹಿಂಡುವ ವಿದ್ಯಮಾನವಾಗಲಿ, ಸತ್ತ ಕರಿಯರ ದೇಹಗಳನ್ನು ಕಡಲಿಗೆಸೆಯುತ್ತಿದ್ದುದನ್ನಾಗಲೀ ಈ ಕಾದಂಬರಿ ಎಳೆ ಎಳೆಯಾಗಿ ಬಿಚ್ಚಿಡಲು ಹೋಗುವುದಿಲ್ಲ. ಕಣ್ಣೆದುರೇ ಹೆತ್ತ ಮಕ್ಕಳ ಮೇಲೆ ನಡೆಯುತ್ತಿದ್ದ ಲೈಂಗಿಕ ಅತ್ಯಾಚಾರ, ಗೊತ್ತು ಗುರಿಯಿಲ್ಲದ ಊರಿನ ಧನಿಗೆ ಮಾರಾಟ ತಂದ ಅಗಲಿಕೆ ಯಾವುದೂ ಇಲ್ಲಿಲ್ಲ. ಬದಲಿಗೆ ಗುಲಾಮರೇ ಆಳರಸರ ಮನೆವಾರ್ತೆಯ ಯಜಮಾನಿಕೆ ನಡೆಸುವಷ್ಟು ಬಲಿಷ್ಠರಾಗಿ, ಮನೆಯವರೇ ಆಗಿ ಬೆಳೆದ ಕತೆಯೇ ಇಲ್ಲಿ ನಮಗೆ ಕಾಣಸಿಗುತ್ತದೆ. ಗುಲಾಮಗಿರಿಯ ಕಟು ಅನುಭವ ಬೇಕೆಂದರೆ ನಾವು ಅಕ್ಸರ್ ಹೇಲಿಯ "ರೂಟ್ಸ್", ಎಡುವರ್ಡೊ ಗೆಲಿಯಾನೊನ "ಮೆಮರಿ ಆಫ್ ಫೈರ್" (ಎರಡೂ ಕಾದಂಬರಿಗಳು ಕನ್ನಡಕ್ಕೆ ಬಂದಿವೆ), ಟೋನಿ ಮಾರಿಸನ್ನಳ "ಓ ಮರ್ಸಿ" ಮುಂತಾದ ಕಾದಂಬರಿಗಳನ್ನು ಓದಬೇಕು.

ಈ ಕಾದಂಬರಿ ನಮಗೆ ಹತ್ತು ಹಲವು ಪಾತ್ರಗಳ ಒಳಗು-ಹೊರಗಿನ ದ್ವಂದ್ವ, ತಾಕಲಾಟ, ತವಕ, ತಲ್ಲಣಗಳ ಚಿತ್ರಣ ಕೊಡುತ್ತ ಸಾಗುತ್ತದೆ. ಒಂದು ದೊಡ್ಡ ಅವಿಭಕ್ತ ಕುಟುಂಬದ ಪಾತ್ರಗಳೆಲ್ಲ ಇಲ್ಲಿ ಅನಾವರಣಗೊಳ್ಳುತ್ತಿವೆಯೋ ಎಂಬಂತೆ ಸಾಗುವ ಕಥಾನಕಕ್ಕೆ ಏಕಮುಖದ ಕೇಂದ್ರವಾಗಲಿ, ಕಥನದ ಗುರಿಯಾಗಲೀ ಇಲ್ಲ. ಹಾಗಾಗಿ ಇಡೀ ಬದುಕನ್ನು ಅದರ ಸಂಕೀರ್ಣ ಸಮಗ್ರತೆಯೊಂದಿಗೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಇನ್ನಿಲ್ಲದಂತೆ ನಡೆಸುವ ಪ್ರಯತ್ನವೇ ಕಾದಂಬರಿಯ ಯಶಸ್ಸಾಗಿ ಮೂಡಿಬಂದಿದೆ. ಮನುಷ್ಯ ಸಂಬಂಧಗಳ ತಾಕಲಾಟಗಳು, ಮನಸ್ಸಿನ ತೊಳಲಾಟ, ಹಂಬಲ, ಹಪಹಪಿಕೆಗಳು, ಭೌತಿಕ ಜಗತ್ತು ಒಡ್ಡುವ ಆಸೆ, ಆಕಾಂಕ್ಷೆಗಳು ಹುಟ್ಟಿಸುವ ಒತ್ತಡ ಮತ್ತು ನಿರೀಕ್ಷೆಗಳು, ಹಣಬಲ-ಜನಬಲದ ಪಾರಮ್ಯವೇ ಕೆಳವರ್ಗದವರ ಬದುಕನ್ನು ನಿಯಂತ್ರಿಸುವ ಕ್ರೂರ ಮುಖ ಇಲ್ಲಿ ನಮಗೆ ಏಕತ್ರ ಮುಖಾಮುಖಿಯಾಗುವ ಬಗೆ ಅನನ್ಯವಾಗಿದೆ. ಸ್ಥೂಲವಾಗಿ ಇಲ್ಲಿನ ಕಥಾಜಗತ್ತನ್ನು ಪರಿಚಯಿಸುವುದಾದರೆ ಅದನ್ನು ಹೀಗೆ ಮಾಡಬಹುದು:

ಕದ್ದುಮುಚ್ಚಿ ಬಲೂಚಿಸ್ಥಾನ, ಅಫ್ಘಾನಿಸ್ಥಾನ ಮತ್ತು ಭಾರತದೊಂದಿಗೆ ಶಸ್ತ್ರಾಸ್ತ್ರ ವ್ಯಾಪಾರ ಮಾಡುತ್ತಿದ್ದವನೊಬ್ಬನ ಮಗನಾದ ಮರ್ಚಂಟ್ ಸುಲೈಮಾನ್ ಅಪ್ಪನ ನಂತರ ಗುಲಾಮರ ವ್ಯಾಪಾರಕ್ಕೆ ತೊಡಗುತ್ತಾನೆ. ಇವನ ಹೆಂಡತಿ ಫಾತಿಮಾ ಒಬ್ಬ ಗುಲಾಮನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ ಎನ್ನುವ, ಇವನ ತಂಗಿಯೇ ತರುವ ಚಾಡಿ ಮಾತು ಮತ್ತು ಅವಳದೇ ಕುತಂತ್ರದಿಂದ ನಡೆಯುವ ಆಕೆಯ ಕೊಲೆ ಶಾಶ್ವತ ಗುಟ್ಟಾಗಿಯೇ ಉಳಿಯುತ್ತದೆ. ಈ ತಂಗಿಯನ್ನು ಮನಸಾ ದ್ವೇಷಿಸುವ, ಸುಲೈಮಾನನ ಮನದನ್ನೆಯಾದ ಗುಲಾಮಿ ಹೆಣ್ಣು ಝರೀಫಾ ಈ ಕಾದಂಬರಿಯ ಉದ್ದಗಲಕ್ಕೆ ಮಾತ್ರವಲ್ಲ ಆಳಕ್ಕೂ ಎತ್ತರಕ್ಕೂ ವ್ಯಾಪಿಸಿಕೊಂಡಂತಿರುವ ಗಟ್ಟಿಯಾದ ಒಂದು ಕೇಂದ್ರ ಪಾತ್ರ. ಇವಳನ್ನು ಕೊಳ್ಳಲು ಸುಲೈಮಾನ್ ತೆತ್ತ ಬೆಲೆ ಒಂದು ಗೋಣಿ ಅಕ್ಕಿಯ ಬೆಲೆಗಿಂತ ಐದು ಪಟ್ಟು ಕಡಿಮೆ! ಈಕೆಯನ್ನು ಹೆತ್ತ ಅಮ್ಮನದೇ ಒಂದು ಕತೆ. ಸುಲೈಮಾನನ ‘ಮಹಾಸಿಟ್ಟಿ’ನ ಪ್ರತಿಫಲವಾಗಿ ಕಟ್ಟಿಕೊಳ್ಳಲೇ ಬೇಕಾಗಿ ಬಂದ, ಇವಳಿಗೆ ಅಕಾಲಿಕ ಗಂಡನಾಗಿ ಒದಗುವ ತನಗಿಂತ ಹದಿನೈದು ವರ್ಷ ಕಿರಿಯ ಹಬೀಬ್ ಮತ್ತು ಅವನಿಂದ ಹುಟ್ಟಿದ ಮಗ ಸಂಜಾರ್ ಇಬ್ಬರ ಕ್ರಾಂತಿಕಾರಕ ನಿಲುವಿನದ್ದೇ ಒಂದು ಕತೆ. ಈಕೆಯೇ ತಾಯಂತೆ ಸಾಕಿ ಸಲಹಿದ, ತನ್ನ ಪ್ರಿಯಕರ, ಯಜಮಾನ ಸುಲೈಮಾನ್ ಮತ್ತು ಫಾತಿಮಾಳ ಮಗ ಅಬ್ದಲ್ಲಾ ಈ ಕತೆಯ ಇನ್ನೊಂದು ಕೇಂದ್ರದಂಥ ಗಟ್ಟಿ ಪಾತ್ರ. ಇವನಿಗೆ ತನ್ನ ತಾಯಿ ಹೇಗೆ ಮತ್ತು ಏಕೆ ಸತ್ತಳೆಂಬ ರಹಸ್ಯ ಕೊನೆಗೂ ತಿಳಿಯುವುದೇ ಇಲ್ಲ. ಹಾಗೆಯೇ ವರ್ಗಸಂಘರ್ಷ, ವರ್ಣಸಂಕರ ಮತ್ತು ಶೋಷಣೆಯ ಎಳೆಯನ್ನು ಈ ಕಾದಂಬರಿಯಲ್ಲಿ ನೋಡುವುದೇ ಆದಲ್ಲಿ ಲೋಕದ ಕಣ್ಣಿಗೆ ಸುಲೈಮಾನನ ಮಗನಾಗಿ, ಅವನ ಆಸ್ತಿಪಾಸ್ತಿಯ ವಾರಸುದಾರನಾಗಿ ಬೆಳೆಯುವ ಅಬ್ದಲ್ಲಾ ಒಂದು ರೀತಿ ವಂಶವೃಕ್ಷದ ಶ್ರೀನಿವಾಸ ಶ್ರೋತ್ರಿ. ಅಥವಾ ಕುಸುಮಬಾಲೆಯ ಯಾಡ, ಅವಧೇಶ್ವರಿಯ ತ್ರಸದಸ್ಯು. 

ಈ ಅಬ್ದಲ್ಲಾ ಮದುವೆಯಾಗುವುದು ಮೇಲೆ ಹೇಳಿದ ಮೂವರು ಹೆಣ್ಣುಮಕ್ಕಳ ಸಂಸಾರದ ಹಿರಿಯ ಹೆಣ್ಣುಮಗಳನ್ನು, ಮಾಯಾಳನ್ನು. ಮಾಯಾ ಈ ಕಾದಂಬರಿಯ ಮತ್ತೊಂದು ಗಟ್ಟಿಯಾದ ಕೇಂದ್ರ ಸ್ತ್ರೀಪಾತ್ರ. ಮಾಯಾ, ಆಸ್ಮಾ ಮತ್ತು ಖಾವ್ಲಾ ಈ ಮೂವರು ಅಝಾನ್ ಮತ್ತು ಸಲೀಮಾ ದಂಪತಿಯ ಮೂವರು ಪುತ್ರಿಯರು. ಈ ಗಂಡ ಹೆಂಡಿರು ಅದಾಗಲೇ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಒಂದು ಹಸುಗೂಸಾಗಿರುವಾಗಲೇ ಸತ್ತಿದ್ದರೆ ಇನ್ನೊಬ್ಬ ಹುಡುಗ ಹಮದ್, ಹನ್ನೊಂದು ಹನ್ನೆರಡರದ ಹರಯದಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ದಾರುಣ ಸಾವಿಗೆ ಬಲಿಯಾಗುತ್ತಾನೆ. ಈ ನೋವು ಅಝಾನ್‌ನನ್ನು ಸದಾಕಾಲ ಕಾಡುತ್ತಲೇ ಇರುತ್ತದೆಯಾದರೂ ಅವನದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಈ ಅಝಾನ್ ಅಕಾಲದಲ್ಲಿ ಕ್ವಮಾರ್ ಅಥವಾ ನಝಿಯಾ ಎಂಬ ಮೋಹಕ ಹೆಣ್ಣಿನ ಮೋಹಜಾಲದಲ್ಲಿ ಬಿದ್ದು ಕೆಲಕಾಲ ಪರವಶನಾಗುತ್ತಾನೆ. ಇವನನ್ನು ಆಕೆಯಿಂದ ಬಿಡಿಸಿಕೊಳ್ಳಲು ಸಲೀಮಾ ಬ್ಲ್ಯಾಕ್‌ಮ್ಯಾಜಿಕ್‌ನಂಥ ತಾಂತ್ರಿಕನ ಸಹಾಯ ಪಡೆಯುತ್ತಾಳೆ. ಇದರಿಂದ ಬಹುಶಃ ನಜಿಯಾ ಮತ್ತು ಅಝಾನ್ ಇಬ್ಬರ ಬದುಕೂ ನಾಶವಾಗುತ್ತದೆ ಎನ್ನುವುದು ಕೇವಲ ಒಂದು ಸಂಸಾರದ, ಒಂದು ಮದುವೆ ಮತ್ತು ವಿವಾಹೇತರ ಸಂಬಂಧದ ರೂಪಕವಷ್ಟೇ ಆಗಿ ಉಳಿಯದೆ ಇಡೀ ಕಾದಂಬರಿಯ ಹತ್ತು ಹಲವು ದಾಂಪತ್ಯಗಳ ಆಳದ ನೋವು, ವೈಫಲ್ಯ ಮತ್ತು ದುರಂತದ ರೂಪಕವೂ ಆಗಿರುವುದು ಗಮನಾರ್ಹ. ಕಥನದ ಕಾವ್ಯಾತ್ಮಕ ಮತ್ತು ನಿಗೂಢ ಚಲನೆಯಲ್ಲೇ ಈ ಪ್ರಸಂಗ ಇನ್ನಿಲ್ಲದ ಗುರುತ್ವವೊಂದನ್ನು ಪಡೆದುಕೊಂಡಿರುವುದು ಕಾದಂಬರಿಯ ಹಲವು ಹತ್ತು ಯಶಸ್ವೀ ತಂತ್ರಗಳಲ್ಲಿ ಒಂದಾಗಿದೆ.

ಅಬ್ದಲ್ಲಾ ಮತ್ತು ಮಾಯಾ ಇಬ್ಬರ ದಾಂಪತ್ಯ ಒಂದು ವಿಚಿತ್ರ ಬಗೆಯದು. ಅಬ್ದಲ್ಲಾ ಏನೋ ಮಾಯಾಳನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾನೆ ಎಂದೇ ಇಟ್ಟುಕೊಂಡರೂ ಮಾಯಾಗೆ ಇದ್ದಿದ್ದು ‘ಅವನ’ ಕನಸು. ಆ ‘ಅವನು’ ಯಾರೆಂದು ಅವಳಿಗೇ ಸ್ಪಷ್ಟವಿಲ್ಲದಿದ್ದರೂ ಅದು ಅಬ್ದಲ್ಲಾ ಅಲ್ಲ ಎನ್ನುವುದು ಸ್ಪಷ್ಟವಿದೆ. ಹಾಗಾಗಿ ಅಬ್ದಲ್ಲಾ ‘ನೀನು ನನ್ನನ್ನು ಪ್ರೀತಿಸುತ್ತೀಯಾ’ ಎಂದು ಇದ್ದಕ್ಕಿದ್ದಂತೆ ಒಂದು ದಿನ ಕೇಳಿದಾಗ, ಅವಳು ಒಂದು ಕ್ಷಣ ಥಕ್ಕಾಗಿ, ಮರುಕ್ಷಣವೇ ಬಿಕ್ಕಿಬಿರಿದು ನಕ್ಕು ಬಿಡುತ್ತಾಳೆ. ಆ ನಗು ಎಷ್ಟು ಹರಿತವಾಗಿತ್ತು, ತೀವ್ರವಾದ ಭಾವದಿಂದ ಕೂಡಿತ್ತು ಎಂದರೆ ಅಬ್ದಲ್ಲಾಗೆ ಅದನ್ನು ಎದುರಿಸುವುದಕ್ಕೆ, ಸಹಿಸುವುದಕ್ಕೆ ಕಷ್ಟವಾಗುತ್ತದೆ. ಆಸ್ಮಾ ಮದುವೆಯಾಗುವ ಖಲೀದ್ ಒಬ್ಬ ಚಿತ್ರಕಾರ. ಆದರೆ ಅವನೇಕೆ ಚಿತ್ರಕಾರನಾದ ಎಂದರೆ ಅದಕ್ಕೊಂದು ಭಯಂಕರವಾದ ಕತೆಯಿದೆ. ಮನುಷ್ಯನಿಗೆ ಕಲೆ ಏಕೆ ಬೇಕು ಎನ್ನುವುದಕ್ಕೆ ಅವನದೇ ಆದ ಒಂದು ಉತ್ತರವಿದೆ. ಅದರಲ್ಲಿ ಅಪಾರವಾದ ನೋವಿದೆ, ಸಂಕಟವಿದೆ. ಆದರೆ ಪುಸ್ತಕಗಳಲ್ಲಿ ಮುಳುಗುವ, ಸದಾ ಕವನಗಳನ್ನು ಓದುವ ಆಸ್ಮಾಗೆ ಈ ಭಾವತಲ್ಲಣವನ್ನು ತಲುಪುವುದು ಸಾಧ್ಯವಾಗುವುದೇ? ಗೊತ್ತಿಲ್ಲ. ಇನ್ನು ಬಾಲ್ಯದ ಯಾವುದೋ ಹುಡುಗಾಟದ ಮಾತಿಗೆ ಜೋತು ಬಿದ್ದು ನಾಸಿರನೇ ತನ್ನ ಗಂಡ, ತಾನು ಅವನಿಗಲ್ಲದೆ ಇನ್ಯಾರಿಗೂ ಸಲ್ಲತಕ್ಕವಳಲ್ಲ ಎಂದು ವ್ರತದಂತೆ ತನ್ನ ಇಡೀ ಬಾಳನ್ನು ಬದುಕುವ ಖಾವ್ಲಾಗೆ ದಕ್ಕುವುದಾದರೂ ಏನು? ಅನ್ಯಮನಸ್ಕನಂತೆ ಖಾವ್ಲಾಳನ್ನು ಬಳಸಿಕೊಳ್ಳುವ, ಕೆನಡಾದಲ್ಲಿ ಅದಾಗಲೇ ಒಬ್ಬ ಪತ್ನಿಯಿರುವ ನಾಸಿರನ ನಯವಂಚನೆ, ದ್ರೋಹ. ಮಾಯಾಗೆ ಒಬ್ಬಳು ಮಗಳಿದ್ದಾಳೆ. ಅವಳ ಹೆಸರು ಲಂಡನ್. ವೈದ್ಯೆ. ಆದರೂ ಮೋಹಪರವಶಳಂತೆ ಹುಚ್ಚಾಗಿ ಅಹ್ಮದ್ ಎಂಬಾತನನ್ನು ಪ್ರೀತಿಸುವ ಲಂಡನ್‌ಗೆ ಸಿಕ್ಕಿದ್ದೇನು? ಹಾಗೆಯೇ ಈ ಮೂವರು ಹೆಮ್ಮಕ್ಕಳ ತಾಯಿ ಸಲೀಮಾಳ ಕತೆಯೂ ದುರಂತಮಯವೇ ಆಗಿದೆ. ಅನಾಥೆಯಂತೆ, ಸರಿಸುಮಾರು ಗುಲಾಮಿ ಹೆಣ್ಣಿನಂತೆ ಬೆಳೆದ ಸಲೀಮಾ ಈ ಅಝಾನ್‌ನನ್ನು ಕಟ್ಟಿಕೊಂಡಿದ್ದು ಒತ್ತಡದಲ್ಲಿ, ಬಲವಂತದ ಮದುವೆಯಲ್ಲಿ. ಮೂವರು ಹೆಮ್ಮಕ್ಕಳನ್ನು ಅವಳು ಬೆಳೆಸಲು, ಅವರ ಮದುವೆ ಮಾಡಲು, ತನ್ನ ಗಂಡನನ್ನು ನಝಿಯಾಳಿಂದ ಬಿಡಿಸಿಕೊಳ್ಳಲು, ಹೆತ್ತು ಸತ್ತ ಇಬ್ಬರು ಗಂಡು ಮಕ್ಕಳ ಸಾವಿನ ನೋವು ಮರೆಯಲು ಅವಳು ಏನೇನು ಮಾಡಲಿಲ್ಲ? ಆದರೆ ಆ ದಾಂಪತ್ಯ ಸುಖದ್ದೆ? ನೆಮ್ಮದಿ ತಂದಿತ್ತೆ? ತನ್ನ ಮಗಳಿಗೆ ವಿಚಿತ್ರವಾದ ಲಂಡನ್ ಎಂಬ ಹೆಸರಿಡುವ, ಅವಳ ಪ್ರೇಮ-ವೈಫಲ್ಯ-ವಿಚ್ಛೇದನ ಎಲ್ಲವನ್ನೂ ಸಹಿಸುವ, ಒಬ್ಬ ಮಗನ ಮನೋವೈಕಲ್ಯವನ್ನು ಅರಗಿಸಿಕೊಂಡೂ ಮೌನ ಮತ್ತು ನಿದ್ದೆಯೊಂದಿಗೆ ಬದುಕನ್ನು ಎದುರಿಸುವ ಮಾಯಾಳ ಅಂತರಂಗವೇನಿತ್ತು? ಅಬ್ದಲ್ಲಾ ಜೊತೆ ಅದೇಕೆ ಸಂತುಲಿತ ದಾಂಪತ್ಯ ಸಾಧ್ಯವಾಗಲಿಲ್ಲ? ಅಥವಾ ಇದ್ದುದರಲ್ಲಿ ನಿಜಕ್ಕೂ ಅವರದ್ದೇ ಸಂತುಲಿತ ದಾಂಪತ್ಯವಾಗಿತ್ತೆ? ಇದ್ದುದರಲ್ಲಿ ರೊಮ್ಯಾಂಟಿಕ್ ಆಗಿ ಕಾಣುವ, ಅಲ್ಪಾಯುವಾದ ಜಡ್ಜ್ ಯೂಸುಫ್ ಮತ್ತು ಮರಿಯಮ್ಮರ ದಾಂಪತ್ಯದ ಚಿತ್ರವೂ ಇಲ್ಲಿದೆ. ಇದು ಒಟ್ಟಾರೆಯಾಗಿ ಮನುಷ್ಯ ಸಂಬಂಧಗಳ, ಗಂಡು ಹೆಣ್ಣು ಸಂಬಂಧಗಳ ಕತೆಯೆ?

ಒಂದೊಂದೇ ಪಾತ್ರಗಳ ಹೆಸರಿನಲ್ಲಿ ಬರುವ ಅಧ್ಯಾಯಗಳಲ್ಲಿ ಕೆಲವೊಮ್ಮೆ ಉತ್ತಮಪುರುಷ ನಿರೂಪಣೆಯಿದ್ದರೆ ಕೆಲವೆಡೆ ಪ್ರಥಮ ಪುರುಷ ನಿರೂಪಣೆ ಇದೆ. ಕಥಾನಕದ ಕುತೂಹಲವನ್ನು ಕಾಯ್ದುಕೊಳ್ಳಲು ಘಟನೆಗಳನ್ನು ಹಿಂದುಮುಂದಾಗಿ ಜೋಡಿಸಿದಂತೆ ನಿರೂಪಣೆ ಸಾಗುತ್ತದೆ. ಪಾತ್ರಗಳು ಮತ್ತೆ ಮತ್ತೆ ಎದುರಾಗಿ ತಮ್ಮ ಮನೋಗತವನ್ನೋ, ಬದುಕಲ್ಲಿ ನಡೆದ ವಿದ್ಯಮಾನಗಳನ್ನೋ ನಿರೂಪಿಸುತ್ತ ಹೋಗುತ್ತವೆ. ವಿವರಗಳು ಸಶಕ್ತವೂ, ಸಂಪನ್ನವೂ ಆಗಿವೆ, ಓಮನ್ ದೇಶದ ಸ್ಥೂಲ ರಾಜಕೀಯ, ಸಾಮಾಜಿಕ ಚಿತ್ರದ ಜೊತೆಗೇ ಗಾಢವಾದ ಕೌಟುಂಬಿಕ ಬದುಕಿನ ವಿವರಗಳಿಂದ ನಿರೂಪಣೆ ಸಮೃದ್ಧವಾಗಿದೆ.

ಇನ್ನಿಬ್ಬರನ್ನು ಭೇಟಿಯಾಗಬೇಕಿದೆ. ಒಬ್ಬಾಕೆ ಇನ್ನಿಲ್ಲದಂತೆ ಕಾಡುವ ಮಸೌದಾ ಎಂಬ ಹೆಣ್ಣುಮಗಳು. ಇನ್ನೊಬ್ಬ ಮರ್ವಾನ್ ಎಂಬ ಪ್ಯೂರ್ ಹಾರ್ಟ್ ಹುಡುಗ. ಸುಲೈಮಾನನ ಹೆಂಡತಿ, ಅಬ್ದಲ್ಲಾನ ಅಮ್ಮ ಫಾತಿಮಾ ನಿಜಕ್ಕೂ ಹೇಗೆ ಸತ್ತಳು ಎಂಬ ಸತ್ಯ ಗೊತ್ತಿರುವ ಒಬ್ಬಳೇ ಒಬ್ಬಳೆಂದರೆ ಈ ಮಸೌದಾ. ಗುಲಾಮಿ ಹೆಣ್ಣು. ಜೀವಮಾನ ಪೂರ್ತಿ ಕಟ್ಟಿಗೆ ಹೊತ್ತು ಹೊತ್ತು ಬೆನ್ನು ಗೂನಾಗಿ ಆಕೃತಿಯೇ ಬಾಗಿ ಹೋಗಿರುವ ಈ ಮುದುಕಿಯನ್ನು ಹೆತ್ತ ಮಗಳೇ ಪರಿತ್ಯಜ್ಜಿಸಿ ಹೊರಟು ಹೋಗುತ್ತಾಳೆ. ಈಕೆಯ ಕೊನೆಯ ದಿನಗಳಲ್ಲಿ ಆಸುಪಾಸಿನ ಮನೆಯವರು ಅವಳು ಸತ್ತ ಮೇಲೆ ಅವಳ ದೇಹ ಮತ್ತೆ ನೇರಗೊಳ್ಳಬಹುದೇ ಅಥವಾ ಅವಳನ್ನು ಹೂಳಲು ಮುರುಟಿಕೊಂಡ ಶವಪೆಟ್ಟಿಗೆಯನ್ನೇ ತಯಾರಿಸಬೇಕಾ ಎಂದು ಚರ್ಚಿಸುತ್ತಿದ್ದಾರೆ. ಈಕೆಯ ಬದುಕಿನ ನೋವು, ದುರಂತ ಬಹುಶಃ ಎಲ್ಲ ಗುಲಾಮಿ ಹೆಣ್ಣುಮಕ್ಕಳ ದುರಂತದಂತಿದೆ. ಇನ್ನು ಮರ್ವಾನ್ ಪಾತ್ರ ಹೇಗಿದೆ ಎಂದರೆ ಅರೋಪಿತ ಮೌಲ್ಯಗಳನ್ನು ಹೊರಲಾರದೆ, ತನ್ನದೇ ಅಪಕೃತ್ಯಗಳಿಗೆ ತಾನು ಕೊಟ್ಟುಕೊಂಡ ಉಪವಾಸದ ಶಿಕ್ಷೆ ಕೂಡ ತನ್ನನ್ನು ಮಹಾತ್ಮನನ್ನಾಗಿಸುತ್ತಿದೆ ಎಂಬ ದುರಂತದೆದುರು ಆತ್ಮಹತ್ಯೆಯೊಂದೇ ಉಳಿದ ಪರಿಹಾರ ಎಂಬಂತೆ ಸಾಯುವ ನತದೃಷ್ಟನಾತ. 

ಅಬ್ದಲ್ಲಾ ಬಹುಶಃ ಈ ಕಾದಂಬರಿಯ ಏಕಸೂತ್ರದ ಕೇಂದ್ರ ಅನಿಸುತ್ತದೆ. ಏಕೆಂದರೆ, ಅವನಿಗೆ ಈ ಕಾದಂಬರಿಯ ಯಾವತ್ತೂ ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧಿಸಿವೆ. ಅವನ ಸಂಬಂಧದ ನೆಲೆಯೇ ಅಭದ್ರವಾಗಿದ್ದರೂ ಅದು ಅವನಿಗೆ ಗೊತ್ತಿಲ್ಲದ ಸತ್ಯವಾಗಿಯೇ ಉಳಿದು ಬಿಡುತ್ತದೆ. ಹಾಗಿದ್ದೂ, ಅಂತರಂಗದ ಶೋಧದಲ್ಲಿ, ಕನಸು, ಭ್ರಮೆ ಮತ್ತು ಗೊಂದಲದಲ್ಲಿ ಅವನು ತನ್ನನ್ನು ತಾನು ತೆರೆದುಕೊಳ್ಳುತ್ತ, ಶೋಧಿಸುತ್ತ, ಖಾಲಿ ಮಾಡಿಕೊಳ್ಳುತ್ತ ಸಾಗುತ್ತಾನೆ. ಒಂದು ಹಂತದಲ್ಲಿ ಅಬ್ದಲ್ಲಾನ ಮಗನ ಆಟಿಸಂ ಕೂಡ ಜೋಕಾ ಕೈಯಲ್ಲಿ ರೂಪಕದಂತೆ ಬಳಸಲ್ಪಡುವುದು ಅಚ್ಚರಿ ಹುಟ್ಟಿಸುತ್ತದೆ. ಇಡೀ ಕಾದಂಬರಿಯ ಉದ್ದಕ್ಕೂ ಆಕಾಶಕಾಯಗಳು, ಮುಖ್ಯವಾಗಿ ಚಂದ್ರ ಒಂದು ಪಾತ್ರವಾಗಿ ನಮ್ಮೊಂದಿಗೆ ಬರುತ್ತಾನೆ. ಇವರೆಲ್ಲರೊಂದಿಗೆ ಸಾಗುತ್ತ ನಾವೂ ಪಡೆದುಕೊಳ್ಳುತ್ತ ಹೋಗುತ್ತೇವೆ. ಇದರಾಚೆಗೆ ಈ ಕಾದಂಬರಿಗೆ ಚೌಕಟ್ಟೆಂಬ ಚೌಕಟ್ಟಾಗಲಿ, ತುದಿಯೆಂಬೋ ತುದಿಯಾಗಲಿ ಇಲ್ಲ. ಹಾಗಾಗಿಯೇ, ಅತ್ಯಂತ ಅರ್ಹವಾಗಿಯೇ ಈ ಕಾದಂಬರಿ ಮ್ಯಾನ್ ಬುಕರ್ ಅಂತರ್ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ, ಕೇವಲ ಓಮನ್ ದೇಶದ ಅರೇಬಿಕ್ ಕಾದಂಬರಿ ಎಂದೋ, ಹೆಣ್ಣುಮಗಳು ಬರೆದ ಮೂವರು ಹೆಮ್ಮಕ್ಕಳ ಕತೆಯೆಂದೋ, ಗುಲಾಮರ ಕತೆ ಎಂದೋ ಅಲ್ಲ. ಮುಖ್ಯವಾದ ಮಾತೆಂದರೆ, ಇದನ್ನು ಅರೇಬಿಯನ್ ಭಾಷೆಯಲ್ಲಿ ಬರೆಯಲು ತೊಡಗಿದಾಗ ಜೋಕಾ ಅಲಹರ್ತಿಗಾದರೂ ತಾನಿದನ್ನು ಬುಕರ್ ಪ್ರಶಸ್ತಿಗಾಗಿ ಬರೆಯುತ್ತಿದ್ದೇನೆಂಬ ಅರಿವಿರಲಿಲ್ಲ. ನಾವೂ ಅದರ ಅರಿವಿನ ಭಾರದಿಂದ ಕಳಚಿಕೊಂಡು ಇದನ್ನು ಓದುವುದು ಮುಖ್ಯ.


(ಈ ಲೇಖನದ ಆಯ್ದ ಭಾಗ ಜುಲೈ ತಿಂಗಳ ಮಯೂರ ಸಂಚಿಕೆಯಲ್ಲಿ ಪ್ರಕಟವಾಗಿದೆ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, July 2, 2019

ಅನುಭೋಕ್ತನ ಕೆಂಡದಂಥ ಭಾಷೆ, ಮಂಜಿನಂಥ ಭಾವ

ಭಾಷೆ, ಕವಿಯ ಶಕ್ತಿಯೂ ಹೌದು ಮಿತಿಯೂ ಹೌದು. ಕವಿಯ ಭಾವ ಜಗತ್ತಿನ ತಲ್ಲಣಗಳನ್ನು ಸಶಕ್ತವಾಗಿ ಪ್ರತಿಬಿಂಬಿಸಬಲ್ಲ ಶಬ್ದ ಸಂಪತ್ತು ಒಂದು ಭಾಷೆಯಲ್ಲಿ ಇಲ್ಲದೆ ಹೋದರೆ ಅಥವಾ ಕವಿಗೇ ಅಂಥ ಶ್ರೀಮಂತಿಕೆಯಿಲ್ಲದೇ ಹೋದರೆ ಅವನು ಒದ್ದಾಡಬೇಕಾಗುತ್ತದೆ. ಒಂದು ತಳಮಳಕ್ಕೆ, ದುಗುಡಕ್ಕೆ, ಹಪಹಪಿಗೆ, ಕಾರಣವೇ ಇಲ್ಲದ ನೋವಿಗೆ, ವಿಷಾದದಂಥ ನಿರಾಶೆಗೆ ಭಾಷೆಯಲ್ಲಿ ತಕ್ಷಣಕ್ಕೆ ಒಗ್ಗುವಂಥ ಶಬ್ದವೊಂದು ಸಿಕ್ಕಿಬಿಡುವುದು ಅದೃಷ್ಟಕ್ಕೆ ಬಿಟ್ಟ ಸಂಗತಿ. ಆದರೆ ಸುಖಾಸುಮ್ಮನೆ ಸಿಗುವ ಭಾಷೆ ಕೂಡ ನಿಮ್ಮನ್ನು ದಾರಿತಪ್ಪಿಸಬಲ್ಲ ಮಾಯಾವಿಯಾಗಿರುವುದು ಸಾಧ್ಯವಿದೆ. ಶಬ್ದದ ಸದ್ದಿಗೆ ಮರುಳಾಗಿ ಅದರ ಕೈಹಿಡಿದು ಸಾಗಿದರೆ ಹಿಂದಿರುಗಲಾರದ ಕಾಡು ಸೇರುವುದು ಖಚಿತ. ನಮ್ಮಲ್ಲಿ ತಮ್ಮದೇ ಧ್ವನಿಗೆ ಮರುಳಾದ ಹರಿಕಥೆ ದಾಸರು, ತಾಳಮದ್ದಲೆಯ ಅರ್ಥಧಾರಿಗಳು, ಭಾಷಣಕಾರರು ಕಡಿಮೆಯೇನಿಲ್ಲ. ತಮ್ಮದೇ ಬರವಣಿಗೆಯ ಓಘಕ್ಕೆ ಮನಸೋತು ತಾವೇನು ಬರೆದರೂ ಕವಿತೆಯಾಗುತ್ತದೆ ಅಂದುಕೊಂಡ ಕವಿಗಳೂ ಕಡಿಮೆಯೇನಿಲ್ಲ. ಅವರ ಭಾಷೆಯ ಸುಂದರ ಕುಸುರಿಕಲೆಯ ಸಾಗವಾನಿ ಮರದ ಬಾಗಿಲು ಮಾತ್ರ ಮನದ ಭಾವಕ್ಕೆ ತೆರೆದುಕೊಳ್ಳುವುದೇ ಇಲ್ಲ.

ಈ ಕತ್ತಿಯಂಚಿನ ದಾರಿಯಲ್ಲಿ ಬರೆಯುತ್ತಿರುವ ಕವಿ ರಾಜಶೇಖರ ಬಂಡೆ. ಹಿಂದೊಮ್ಮೆ ಇವರ ಹತ್ತು ಕವಿತೆಗಳು ಓದಲು ಸಿಕ್ಕಿದ್ದವು. ಸಂಕಲನದಲ್ಲಿ ಕೆಲವೊಂದರ ಹೆಸರು ಬದಲಾಗಿದೆ. ಕೆಲವೊಂದನ್ನು ಕೈಬಿಟ್ಟಿದ್ದಾರೆ. ಆದರೆ ಆಗ ಬರೆದ ಮಾತುಗಳನ್ನು ಮತ್ತೊಮ್ಮೆ ನೆನೆಯುತ್ತೇನೆ.

=========================
ಇಲ್ಲಿನ ಒಟ್ಟು ಹತ್ತು ಕವಿತೆಗಳಲ್ಲಿ ಎದ್ದು ಕಾಣುವ ಕವಿಯ ಪ್ರಾಮಾಣಿಕತೆ ಅಚ್ಚರಿ ಹುಟ್ಟಿಸುತ್ತದೆ. ಇದರಿಂದಾಗಿಯೇ ಇಲ್ಲಿನ ರಚನೆಗಳಲ್ಲಿ ಕಾಣುವ ಪ್ರತಿಮೆಗಳು, ರೂಪಕಗಳು ಹೆಚ್ಚು ಸಹಜವಾಗಿವೆ, ಸರಳವಾಗಿವೆ ಮತ್ತು ಕವಿತೆಯಾಗುವ ಹಂಬಲಕ್ಕೇ ಹುಟ್ಟಿದ ಶಬ್ದಜಾಲವಾಗದೆ ಭಾವಕೋಶವನ್ನು ಮೀಟುತ್ತವೆ. ಹಾಗೆಯೇ ಈ ಕವನಗಳಲ್ಲೊಂದು ತೀವ್ರತೆಯಿದ್ದು ಅದು ಈ ಕವಿತೆಗಳನ್ನು ಅತ್ಯಂತ ಶಕ್ತಗೊಳಿಸಿದೆ. ಈ ಕವಿಯ ಮನೋಧರ್ಮ ಮತ್ತು ಆಶಯ ಎರಡರ ಪ್ರಬುದ್ಧತೆಯನ್ನು ಗಮನಿಸಿದರೆ ಮುಂದೆ ಇವರಿಂದ ಕನ್ನಡ ಸಾಹಿತ್ಯ ಬಹಳಷ್ಟನ್ನು ನಿರೀಕ್ಷಿಸಬಹುದೆಂದೂ ಅನಿಸುತ್ತದೆ.

ಆದರೆ ಸ್ಪಷ್ಟವಾಗಿಯೇ ಈ ಕವಿತೆಗಳು ಗಟ್ಟಿ ದನಿಯ, ಘೋಷಣೆಯ ಸದ್ದನ್ನೂ ತೀವ್ರತೆಯನ್ನೂ ತಮ್ಮ ಒಡಲಿನಲ್ಲಿರಿಸಿಕೊಂಡಿರುವ ರಚನೆಗಳೇ ಹೊರತು ಪಿಸುನುಡಿಯುವ ಜಾಯಮಾನದವಲ್ಲ. ಪ್ರೇಮದ, ಕಾಮದ, ವಿರಹದ ಮಾತನ್ನಾಡುವಾಗಲೂ ಇಲ್ಲಿ ಒಂದು ಸ್ಪಷ್ಟ ಮೊರೆತವಿದೆ. ಸಾಮಾನ್ಯವಾಗಿ ಇಂಥ ಕವಿತೆಗಳು ಓದುಗನ ಭಾವಕೋಶಕ್ಕೆ ಲಗ್ಗೆಯಿಡುವಲ್ಲಿ ಹೆಚ್ಚಿನ ಸವಾಲನ್ನೆದುರಿತ್ತವೆ. ಭಾಷೆ ಒದಗಿಸುವ ತೀವ್ರತೆ, ನಾದ ಮತ್ತು ತಲ್ಲಣಗೊಳಿಸುವ ಅದರ ಶಾರ್ಪ್‌ನೆಸ್ ಸಾಗವಾನಿಯ ಬಾಗಿಲಾಗುವ ಸಾಧ್ಯತೆಯೇ ಹೆಚ್ಚು. ಆದರೆ ಈ ಕವಿತೆಗಳು ತಮ್ಮ ಅಂತಃ ಚೈತನ್ಯದಿಂದಲೇ ಅದನ್ನು ಸಾಧಿಸುವುದು ಬೆರಗು ಹುಟ್ಟಿಸಿದೆ. ಇಲ್ಲಿ ಬಾಗಿಲುಗಳು ತೆರೆಯುತ್ತವೆ, ದಢಾರೆಂದು ತೆಗೆದುಕೊಳ್ಳುತ್ತವೆ, ಅಷ್ಟೇ. ಸುಡುವ ತುಟಿಗಳ ಹಾಡು, ಹುಡುಕಿ ಕೊಡಿ, ಮದೋನ್ಮತ್ತ ಪುರುಷನೇ, ಒಳಬೇಗುದಿ, ಒಂದೆರಡು ಪೆಗ್ ಏರಿಸಿ, ಅನುಭವ, ಎಚ್ಚರಗೊಳ್ಳುವವರೆಗೆ, ಮಾಯದ ಹಕ್ಕಿ, ನೀನು ಕುಡುಕನಾಗಿದ್ದಲ್ಲಿ, ಕಾರಾಗೃಹ - ಹೀಗೆ ಈ ಕವಿತೆಗಳು ಕೇವಲ ಪ್ರೇಮವನ್ನೊ, ರೋಷವನ್ನೊ, ವಿಷಾದವನ್ನೋ ಹಾಡದೆ ಸಾಕಷ್ಟು ವೈವಿಧ್ಯಮಯವಾಗಿಯೂ ಇರುವುದು ಗಮನ ಸೆಳೆಯುತ್ತದೆ.

ಇವರ ಕವನಗಳ ಇನ್ನೊಂದು ವಿಶೇಷ ಗುಣವೆಂದರೆ ಅವು ಇಡಿಯಾಗಿಯೇ ನಿಜವಾಗುವ ಒಂದು ವೈಶಿಷ್ಟ್ಯವನ್ನು ಹೊಂದಿರುವುದು. ಇವರ ಕವನಗಳಿಂದ ಯಾವುದೇ ಒಂದು ಸಾಲನ್ನೊ, ಕೆಲವು ಸಾಲುಗಳನ್ನೊ ತೆಗೆದು ಓದಿದರೆ ಅವುಗಳ ಸೌಂದರ್ಯ ನಿಜವಾಗುವುದಿಲ್ಲ. ಅವು ಒಟ್ಟು ಬಂಧದಲ್ಲಿಯೇ ಜೀವಂತಿಕೆಯನ್ನು ಪಡೆಯುವ ಸಾಲುಗಳು. ಹೀಗಾಗಿ ಇಲ್ಲಿನ ಎಲ್ಲ ಕವಿತೆಗಳೂ ಒಂದೇ ಉಸಿರಿಗೆ, ಒಂದೇ ವಾಕ್ಯದಂತೆ ಓದುಗರನ್ನು ತಲುಪುವುದರಿಂದಲೇ ಬಹುಶಃ ಅವು ಓದುಗನನ್ನು ಹಿಡಿದಿಡುತ್ತವೆ ಮಾತ್ರವಲ್ಲ ಇಡಿಯಾಗಿಯೇ ಅವನನ್ನು ತಲುಪುತ್ತವೆ, ಕ್ಷಣಕಾಲವಾದರೂ ಕಂಗಾಲಾಗಿಸುತ್ತವೆ. ಈ ಕವಿತೆಗಳ ನಿಜವಾದ ಶಕ್ತಿ ಇದೇ ಆಗಿರಬಹುದು ಎಂದೂ ಅನಿಸುತ್ತದೆ. ಉದಾಹರಣೆಗೆ ಈ ವಾಕ್ಯಗಳನ್ನು ಬೇರೆಯಾಗಿಯೂ ಒಟ್ಟು ಕವಿತೆಯ ಬಂಧದಲ್ಲಿಯೂ ಗಮನಿಸಿಕೊಳ್ಳಬಹುದಾಗಿದೆ.

"ಬೇಜಾರಿಗೆ ಬದುಕು ಗಲಿಬಿಲಿಗೊಂಡ ಬೆಕ್ಕಿನಂತೆಲ್ಲೋ ಅವಿತು ಕೂತಿದೆ" (ಸುಡುವ ತುಟಿಗಳ ಹಾಡು)

"ಕದ್ದು ನದಿಯೊಳಗೆ ಹೂತಿಟ್ಟ ಹೆಜ್ಜೆ" (ಹುಡುಕಿ ಕೊಡಿ)

"ಬೆಳಕು ಚೆಲ್ಲುವ ಅವಳ ಕಣ್ಣುಗಳಲ್ಲಿ ಇರುಳ
ಕರತಾಡನವನ್ನ ಕಂಡು ಬೆಚ್ಚುವ ಮೊದಲೊಮ್ಮೆ ಎಚ್ಚರ
ನಿನ್ನ ಹುಟ್ಟಿನ ಗುಟ್ಟು ಕಾಣುವ ಕೆಟ್ಟ ಖುಷಿಯಲ್ಲಿ
ಹೂತ ಹೆಣಗಳು ಕಂಡಾಬಟ್ಟೆ ಸಿಗಬಹುದು" (ಮದೋನ್ಮತ್ತ ಪುರುಷನೇ......!)

"ನಿನ್ನಂತೆ ಹುಟ್ಟಿ ನಿನ್ನಂತೆಯೇ ಸತ್ತು ಹೋಗುವ
ಅವಳ ಬೊಗಸೆಯನ್ನೊಮ್ಮೆ ತೆರೆ" (ಮದೋನ್ಮತ್ತ ಪುರುಷನೇ......!)

"ಧೈರ್ಯವಿಲ್ಲವೆಂದಾದರೆ ಹೋಗು
ಮೊದಲೊಂದಿಷ್ಟು ಅಮಲೇರಿಸಿಕೋ ಆಮೇಲೆ
ನಿನ್ನ ಪ್ರಿಯತಮೆಯ ಕಣ್ಣುಗಳಲ್ಲಿ ಮುಳುಗು" (ಮದೋನ್ಮತ್ತ ಪುರುಷನೇ......!)

"ಕಗ್ಗತ್ತಲನ್ನೇ ನುಂಗುವಂಥ ಗಾಳದಂತಿದ್ದ
ತೋಳುಗಳೀಗ ದಿಕ್ಕಿಗೊಂದರಂತೆ ಚೆಲ್ಲಿಕೊಂಡಿವೆ" (ಒಳ ಬೇಗುದಿ)

"ನನ್ನ ತೋಳುಗಳು ಕಂಗಾಲಾದ ಅರಮನೆಯ
ಮುರಿದ ಗೇಟುಗಳ ಹಾಗೆ ಉರಿಯುತ್ತಲೇ ಇವೆ" (ಒಳ ಬೇಗುದಿ)

"ನಿಮ್ಮೊಳಗೆ ಪದರಗಳ ಹಾಗೆ ತೆರೆಯುವ
ಎರಡೆರಡು ಭಿನ್ನ ಭಿನ್ನ ಆಲೋಚನೆಗಳನ್ನ
ಹೊರಗೆಳೆದು ನಿಮ್ಮ ಕಂಪೆನಿಗಿಟ್ಟುಕೊಳ್ಳಿ" (ಒಂದೆರಡು ಪೆಗ್ ಏರಿಸಿ)

"ನಿನ್ನ ತುಂಬು ಮೊಲೆಗಳನ್ನೇ ಧ್ಯಾನಿಸುತ್ತಾ ತೊಡೆಗಳತ್ತ
ಕಾಲವನ್ನ ತಳ್ಳುತ್ತಲೇ ಸವೆಯುತ್ತೇನೆ. ಸವೆಯುತ್ತಲೂ ನಿನ್ನ
ಅದೃಶ್ಯ ಪ್ರೇಮದ ಅಧ್ಯಾಯಗಳಿಗಾಗಿ ಹಾತೊರೆಯುತ್ತೇನೆ." (ಎಚ್ಚರಗೊಳ್ಳುವ ವರೆಗೆ)

"ನಿನ್ನ ಏಕಾಗ್ರತೆ ನಿನ್ನ ಬಟ್ಟಲ ಮೇಲಿದ್ದಲ್ಲಿ ನೀನು ಗೆದ್ದಂತೆ
ನನ್ನ ವಾದ ನಿನ್ನನ್ನ ಎಲ್ಲಿಯವರೆಗೂ ಎಳೆಯದು
ನಿನ್ನ ಹಾಯಿದೋಣಿಗೆ ನೀನೇ ಗಾಳಿ ನೀನೇ ಹುಟ್ಟು" (ನೀನು ಕುಡುಕನಾಗಿದ್ದಲ್ಲಿ)
===============

ಈಗ ಮತ್ತೊಮ್ಮೆ ನೆನೆದರೂ ಎಷ್ಟು ಫ್ರೆಶ್, ಎಷ್ಟು ಜೀವಂತಿಕೆ ಮತ್ತು ಎಷ್ಟು ಟಚಿಂಗ್ ಎನಿಸುವಂಥ ಸಾಲುಗಳು! ಈ ಹುಡುಗನನ್ನು ನಮ್ಮ ಸಾಹಿತ್ಯಿಕ ರಾಜಕೀಯಗಳು, ಗುತ್ತಿಗೆದಾರರ ನಯವಂಚಕ ಪಂಜರಗಳು ಮತ್ತು ಯಾವುದೇ ಬಗೆಯ ಇಂಡಲ್ಜೆನ್ಸ್ ಹಿಡಿದಿಡದೇ ಮುಕ್ತವಾಗಿರಲು ಬಿಡಲಿ ಎಂದು ಪ್ರಾರ್ಥಿಸುತ್ತೇನೆ!

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ