Tuesday, August 13, 2019

ಕನ್ನಡಿ ಎಂದರೆ ಎಲ್ಲರಿಗೂ ಇಷ್ಟ...

ನಮಗೆಲ್ಲ ದೇವರು ಎಂದರೆ ಒಂದು ಆದರ್ಶ, ಮೌಲ್ಯ ಮತ್ತು ನೈತಿಕತೆ. ದೇವರು ಎಂದರೆ ಗುಡಿಯಲ್ಲಿ, ಮನೆಯ ದೇವರ ಮಂಟಪದಲ್ಲಿ ಬೆಳಗುವ ನೀಲಾಂಜನದ ಎದುರು ನಮ್ಮನ್ನೇ ದಿಟ್ಟಿಸುತ್ತಿರುವಂತೆ ಭಾಸವಾಗುವ ಒಂದು ಬಿಂಬವಲ್ಲ. ಈ ಬಿಂಬಕ್ಕೆ ನಾವು ಮಾಡುವ ಅಲಂಕಾರ, ಧೂಪ ದೀಪಾದಿ ಸೇವೆ, ಅಭಿಷೇಕ ಅರ್ಘ್ಯಾದಿ ಅರ್ಚನೆ, ಆರತಿ ಯಾವುದೂ ಬಿಂಬದ ಆಸೆಯಲ್ಲ, ಬಿಂಬದ ಎದುರಿನ ಪ್ರತಿಬಿಂಬದ ಆಸೆಯದು. ನಾವು ಮಾಡುವ ಎಲ್ಲ ಪೂಜೆ, ವ್ರತ, ಉಪವಾಸ, ಹರಕೆ ನಮ್ಮ ಮನಸ್ಸಮಾಧಾನಕ್ಕಾಗಿಯೇ ಹೊರತು ದೇವರ ಮನಸ್ಸಮಾಧಾನಕ್ಕಾಗಿ ಅಲ್ಲ ಎನ್ನುವುದು ನಮಗೇ ಗೊತ್ತಿದೆ. ಆದರೆ ಇಲ್ಲಿ ಬಿಂಬ ಯಾವುದು ಪ್ರತಿಬಿಂಬ ಯಾವುದು ಎನ್ನುವ ಜಿಜ್ಞಾಸೆಯಿದೆ ಕೆಲವರಿಗೆ. ಅದು ಆಧ್ಯಾತ್ಮ.

ಜೋಗಿಯವರ ‘ದೇವರ ಹುಚ್ಚು’ ಕಾದಂಬರಿ ಒಂದು ಪತ್ತೇದಾರಿ ಕತೆಯಂತೆ ತೊಡಗುತ್ತದೆ. ಮೂಲದಲ್ಲೇ ಮರ್ಡರ್ ಅಥವಾ ಆತ್ಮಹತ್ಯೆ ಆಗಿರಬಹುದಾದ ಒಂದು ಸಾವು ನಮ್ಮನ್ನು ಎದುರುಗಾಣುತ್ತದೆ. ಈ ಸಾವು ಕಾದಂಬರಿಯ ನಿರೂಪಕನ ಬಾಲ್ಯ ಸ್ನೇಹಿತನದ್ದು ಎಂದು ತಿಳಿದಾಗ ಮತ್ತಷ್ಟು ಕುತೂಹಲ ಹುಟ್ಟುತ್ತದೆ. ನಿರೂಪಕನೇ ತನಿಖಾಧಿಕಾರಿಯೂ ಆಗಿರುವುದರಿಂದ ಪತ್ತೇದಾರಿ ಕಾದಂಬರಿಯಿರಬಹುದೇ ಅನಿಸುತ್ತಿರುವಂತೆಯೇ ಕತೆ ಯಳಂದೂರಿಗೆ. ಬಾಲ್ಯಕ್ಕೆ ಹೊರಳುತ್ತದೆ. 


ಹೀಗೆ ಹಿಮ್ಮೊಗ ಚಲನೆಗೆ ತೊಡಗುವ ಕತೆಯಲ್ಲಿ ಗತದ ಭಾಗ ಹೆಚ್ಚು. ಅಂದರೆ ಇಲ್ಲಿ ಕತೆ ಅದಾಗಲೇ ತಯಾರಾಗಿ ಇದೆ. ಅದನ್ನು ನಮಗೆ ಒಂದು ಕ್ರಮದಲ್ಲಿ ನಿರೂಪಿಸಲಾಗಿದೆ. ಹಾಗಾಗಿ ಇಡೀ ಕಾದಂಬರಿಯಲ್ಲಿ ‘ಸದ್ಯ’ ಎನ್ನುವುದು ಮಿಸ್ಸಿಂಗ್. ಕಾದಂಬರಿಯ ಚೌಕಟ್ಟಿನಲ್ಲೇ, ಕಥಾನಕದ ನಡೆಯೊಂದಿಗೇ ಇಲ್ಲಿನ ಕತೆ ಇಲ್ಲಿ, ಈಗ ‘ಆಗು’ತ್ತಿಲ್ಲ, ಎಂದೋ ಆಗಿರುವುದನ್ನು ನಮಗೆ ಹೇಳಲಾಗುತ್ತಿದೆ. ಈ ಕಥನ ತಂತ್ರ ಒಡ್ಡುವ ಅದರದ್ದೇ ಆದ ಮಿತಿಗಳಿವೆ. ಈ ಮಿತಿಯಿಂದಲೇ ಕಾದಂಬರಿಯಿಂದ ನಾವು ನಿರೀಕ್ಷಿಸಬಹುದಾದ ಅನೇಕ ಸಂಗತಿಗಳು ಇಲ್ಲಿ ಇಲ್ಲದ ಇನ್ನೊಂದು ಮಿತಿಯೂ ಏರ್ಪಟ್ಟಿದೆ ಎನ್ನುವುದು ಕೂಡ ನಿಜ. ಸಹಜವಾಗಿಯೇ ‘ಸಿದ್ಧ’ ಕತೆಯನ್ನು ನಿರೂಪಿಸುವಾಗ ಅದು ತನ್ನ ಗಮ್ಯದತ್ತ ಇನ್ನಿಲ್ಲದ ಏಕಗ್ರತೆಯಿಂದ ಮುನ್ನುಗ್ಗುವ ಸ್ವಭಾವ ತೋರುತ್ತದೆ. ಆಗ ಕತೆ ತನ್ನ ಎಡಬಲದ ಮಗ್ಗುಲುಗಳತ್ತ ಕಾಣುವ ಸಾಧ್ಯತೆಯನ್ನು ಕೂಡ ಕೈಬಿಡುತ್ತದೆ. ಉದಾಹರಣೆಗೆ ಹೇಳಬಹುದಾದರೆ ಇಡೀ ವಿದ್ಯಮಾನವನ್ನು ದಮಯಂತಿಯ ದೃಷ್ಟಿಯಿಂದ, ವಿಮಲಾಳ ನಿಟ್ಟಿನಿಂದ, ಯಾಕೆ ರಂಗನಾಥನ ಕೋನದಿಂದ ಕಾಣುವ ಸಾಧ್ಯತೆ ಇಲ್ಲಿ ಸಾಧ್ಯವಾಗುವುದಿಲ್ಲ. ಇದಕ್ಕೆ ರಾಜಶೇಖರನೇ ನಿರೂಪಕನೂ ಆಗಿ ಎಲ್ಲವನ್ನೂ ಹೇಳುತ್ತಿರುವ ತಂತ್ರ ಬಳಸಿರುವುದೂ ಸ್ವಲ್ಪಮಟ್ಟಿಗೆ ಕಾರಣ ಎನ್ನಬಹುದಾದರೂ ಇಡೀ ಕಾದಂಬರಿಗೆ ಬೇರೆ ಬೇರೆ ನಿರೂಪಕರು ಕೂಡ ಇರುವುದು ಸಾಧ್ಯವಾದ್ದರಿಂದ ಅದೇ ಒಂದು ಮಿತಿಯೇನಲ್ಲ. ಉತ್ತಮ ಪುರುಷ ನಿರೂಪಣೆಯ ಎಲ್ಲಾ ಕೃತಿಗಳಿಗೂ ಇರುವ ಮಿತಿಯೇ ಇದಾಗಿರುವುದರಿಂದ ಇದನ್ನು ಮೀರುವ ಹಲವು ಹಾದಿಗಳೂ ಕೃತಿಕಾರನಿಗೆ ತೆರೆದೇ ಇರುತ್ತವೆ. 

ಇದಲ್ಲದೆ ಇನ್ನೂ ಒಂದು ಮಿತಿಯನ್ನು ಜೋಗಿಯವರು ಇಲ್ಲಿ ತಮಗೆ ತಾವೇ ಹಾಕಿಕೊಂಡಿದ್ದಾರೆ. ಇಲ್ಲಿ ಕಥನದ ಪಾತ್ರವನ್ನು ಕೊಂಚ ಹಿಂದೊತ್ತಿದಂತೆ ಎದ್ದು ಕಾಣುವ ಡಯಲೆಕ್ಟ್ಸ್ ಆ ಮಿತಿ. ಸಂಭಾಷಣೆ, ತರ್ಕ, ವಾದದ ಮೂಲಕ ಒಂದು ಕೃತಿಯನ್ನು ಅದ್ಭುತವಾಗಿ ಕಟ್ಟಬಹುದು ಎನ್ನುವುದು ನಿಜ. ಆ ನಿಟ್ಟಿನಲ್ಲಿ ಜೋಗಿಯವರು ಸಾಧಿಸಿದ ಯಶಸ್ಸು ಸಣ್ಣದೇನಲ್ಲ. ಆದರೆ ಅದನ್ನೇ ನೆಚ್ಚಿಕೊಂಡರೆ ಅದು ಕಾದಂಬರಿಯಾಗುವುದು ಸ್ವಲ್ಪ ಕಷ್ಟ. ಈ ಅರಿವು ಸ್ಪಷ್ಟವಾಗಿಯೇ ಜೋಗಿಯವರಿಗಿದೆ. ಅವರು ಮುನ್ನುಡಿ ಅಥವಾ ಪ್ರಸ್ತಾವನೆಯಲ್ಲಿ ಇದನ್ನು ಉಲ್ಲೇಖಿಸಿಯೂ ಇದ್ದಾರೆ. ಈ ಎರಡು ಮಿತಿಗಳಾಚೆ ಈ ಕೃತಿಯ ಮಹತ್ವವನ್ನು ಕಾಣುವುದು ನನ್ನ ಉದ್ದೇಶ.

ಆರಂಭದಲ್ಲಿ ಪತ್ತೇದಾರಿ ಕಾದಂಬರಿಯಂತೆ ಕಾಣಿಸುವ ಈ ಕೃತಿ ಕ್ರಮೇಣ ಜಾತಿ, ಧರ್ಮ, ಅಂಧಶ್ರದ್ಧೆ, ಸಾಮಾಜಿಕ ನ್ಯಾಯ, ರಾಜಕೀಯ ವ್ಯವಸ್ಥೆ ಮತ್ತು ಮನುಷ್ಯ ಬದುಕಿನ ಮೂಲಭೂತ ಚಿಂತೆಗಳಾದ ಭವಿಷ್ಯ ಮತ್ತು ಸಾರ್ಥಕತೆಯನ್ನೆಲ್ಲ ಚರ್ಚಿಸುತ್ತದೆ. ಇಲ್ಲಿನ ಚರ್ಚೆ ತಾಜಾ ಆಗಿದೆ, ಸಾಕಷ್ಟು ದೀರ್ಘಕಾಲದ ಚಿಂತನ-ಮಂಥನ-ಮನನದ ಫಲವಾಗಿದೆ. ಹಾಗಾಗಿ ಕೇವಲ ಚರ್ಚೆಗಾಗಿ ಚರ್ಚೆ, ಬೌದ್ಧಿಕ ಪ್ರದರ್ಶನ ಅಥವಾ ರಂಜನೆ ಇಲ್ಲಿನ ಉದ್ದೇಶವಾಗಿಲ್ಲ ಎನ್ನುವುದು ಸ್ಪಷ್ಟವಿದೆ. ಈ ಕಾದಂಬರಿ ಇಷ್ಟವಾಗಲು ಒಂದು ಕಾರಣ ಇದು. ಈ ಕಾದಂಬರಿ, ಅದರ ಪ್ರಸ್ತಾವನೆಯನ್ನೂ ಸೇರಿಸಿಕೊಂಡು ಪ್ರತಿಯೊಬ್ಬ ಓದುಗನಲ್ಲಿ ಜಿಜ್ಞಾಸೆಗಳನ್ನು ಹುಟ್ಟುಹಾಕಬಲ್ಲಷ್ಟು ಸಶಕ್ತವಾಗಿದೆ. ಜೋಗಿಯವರ ಮೂಲಭೂತ ಆಸಕ್ತಿಗಳೆಲ್ಲ ಇಂಥ ಸಂಗತಿಗಳಿಂದಲೇ ಉತ್ಪೂರ್ತಗೊಂಡಿರುವುದರಿಂದ ಅವರಿಗೆ ಇದನ್ನೆಲ್ಲ ಬರೆಯುವುದು ಕೂಡ ಸಹಜವಾಗಿದೆ. ಬರೆಯದೇ ಇರುವುದು ಅಥವಾ ಇದನ್ನೆಲ್ಲ ಬಿಟ್ಟು ಇನ್ನೇನನ್ನೋ ಬರೆಯುವುದು ಅಸಾಧ್ಯವೂ ಆಗಿದೆ. 

ಸಶಕ್ತವಾಗಿದೆ ಎನ್ನುವುದನ್ನು ಒಪ್ಪುತ್ತಲೇ, ಈ ಕಾದಂಬರಿ ನನ್ನಲ್ಲಿ ಹುಟ್ಟಿಸಿದ ತರ್ಕವನ್ನೇ ಬಳಸಿಕೊಂಡು ನಾನು ಒಂದು ವಾದ ಮಂಡಿಸಬಹುದು. ದೇವರು ಇದ್ದಾನೆ ಎಂದು ವಾದಿಸುವುದು ಅಥವಾ ದೇವರು ಇಲ್ಲ ಎಂದು ವಾದಿಸುವುದು ಎರಡೂ ಸಮಾನವಾಗಿಯೇ ನಿರರ್ಥಕ. ಏಕೆಂದರೆ, ದೇವರು ಇಲ್ಲ ಎನ್ನುವುದು ನನಗೆ ಸ್ಪಷ್ಟವಾಗಿದ್ದರೆ ನಾನು ಆ ಬಗ್ಗೆ ಇನ್ನೊಬ್ಬನನ್ನು ಕನ್ವಿನ್ಸ್ ಮಾಡುವ ಅಗತ್ಯ ಕೂಡ ನನಗೆ ಕಾಣುವುದಿಲ್ಲ. ಆ ಬಗ್ಗೆ ನನಗೆ ಅನುಮಾನವಿದ್ದಾಗಷ್ಟೇ ನಾನು ಯಾರಾದರೂ ನನ್ನದು ತಪ್ಪು ನಿಲುವು ಎನ್ನುವುದನ್ನು ಸಾಧಿಸಲಿ, ಸಾಧಿಸಿದರೆ ಆಗ ನೋಡುವ ಎನ್ನುವಂಥ ಎಡಬಿಡಂಗಿತನವನ್ನು ಅಡಗಿಸಿಟ್ಟುಕೊಂಡಿರುತ್ತೇನೆ. ದೇವರಿದ್ದಾನೆಂದು ವಾದಿಸುವವನ ಸ್ಥಿತಿ ಕೂಡ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ. ನಮಗೆಲ್ಲರಿಗೂ ದೇವರಿಲ್ಲ ಎನ್ನುವುದು ಗೊತ್ತಿದೆ. ಆದರೂ ಅವನಿದ್ದಾನೆ ಎಂದು ನಂಬುವವರು ಅಕಸ್ಮಾತ್ ಅವನಿದ್ದರೆ, ರಿಸ್ಕ್ ಯಾಕೆ ಸುಮ್ಮನೆ ಎಂದು ನಂಬುತ್ತಾರೆ. ಇಲ್ಲ ಎನ್ನುವುದರಿಂದ ಅವನಿರುವುದು ಸಾಬೀತಾದರೆ ಆಗಲಿ ಎಂದೇ ಇಲ್ಲ ಎನ್ನುತ್ತಾರೆ. ಇದ್ದರೆ ಇರಲಿ, ಇಲ್ಲದಿದ್ದರೆ ಹೋಗಲಿ ಎನ್ನುವವನಿಗೆ ದೇವರು ಎಂಬ ಸಮಸ್ಯೆ ಇರುವುದಿಲ್ಲ. ಆದರೆ ಇಲ್ಲಿ ದೇವರು ಎಂದರೆ ಬರೀ ದೇವರಾಗಿ ಉಳಿದಿಲ್ಲ ಎನ್ನುವುದನ್ನು ಮರೆಯಲಾದೀತೆ? Argument is exchange of ignorance ಎನ್ನುವುದು ಕೊನೆಯ ಮಾತು. ಆದರೆ ಆರ್ಗ್ಯುಮೆಂಟ್ ಮತ್ತು ಡಿಸ್ಕಷನ್ ಎರಡೂ ಒಂದೇ ಅಲ್ಲ. ಇಲ್ಲಿ ಡಿಸ್ಕಷನ್ ಇದೆ ಮತ್ತು ಅದು ದೇವರಿದ್ದಾನೆ ಅಥವಾ ಇಲ್ಲ ಎನ್ನುವುದರ ಕುರಿತಾಗಿಯೇನಲ್ಲ. ಮೂಲಭೂತವಾಗಿ ದೇವರು ಎಂದರೆ ಬರೀ ದೇವರಲ್ಲ ಎಂಬ ಪ್ರಜ್ಞೆ ಇರುವುದರಿಂದಲೇ ಈ ಚರ್ಚೆ ಅತ್ಯಂತ ಗಹನವಾದದ್ದೂ, ಮುಖ್ಯವಾದದ್ದೂ ಮತ್ತು ಪ್ರಸ್ತುತವಾದದ್ದೂ ಆಗಿದೆ.

ನಮಗೆಲ್ಲ ದೇವರು ಎಂದರೆ ಒಂದು ಆದರ್ಶ, ಮೌಲ್ಯ ಮತ್ತು ನೈತಿಕತೆ. ಹಾಗಾಗಿ, ನಮಗೆ ದೇವರು ಎಂದರೆ ನಮ್ಮ ಜಾತೀಯತೆ ಮತ್ತು ಅಸ್ಪೃಶ್ಯತೆ ಆ ದೇವರೆದುರೇ ಸಮರ್ಥನೀಯವಾಗಬೇಕಾದ ಪ್ರಶ್ನೆಯಾಗುತ್ತದೆ. ಬಸವಣ್ಣ ಇದನ್ನು ಕೂಡಲಸಂಗಮದೇವನ ಎದುರು ಇಟ್ಟು ಸ್ಪಷ್ಟಗೊಳ್ಳುತ್ತಾರೆ. ಶೋಷಣೆ ನಡೆದರೆ ಅದನ್ನು ಆ ದೇವರೆದುರು ಇಟ್ಟು ಸರಿಯೆನ್ನಿಸಿಕೊಳ್ಳಬೇಕಾಗುತ್ತದೆ. ಅಂಬೇಡ್ಕರ್ ಇದನ್ನು ಬುದ್ಧನೆದುರು ಇಟ್ಟು ಅರ್ಥ ಕೇಳುತ್ತಾರೆ. ಅತ್ಯಾಚಾರ ನಡೆದರೆ ಅದು ಕೂಡ ಆ ದೇವರೆದುರು ಸರಿಯೆನ್ನಿಸಿಕೊಳ್ಳಬೇಕಾಗುತ್ತದೆ. ನಮ್ಮ ಪಂಚಮಹಾ ಪತಿವೃತೆಯರಾದ ಅಹಲ್ಯಾ, ತಾರಾ, ಸೀತೆ, ದ್ರೌಪದಿ ಮತ್ತು ಮಂಡೋದರಿಯರು ಆ ಲಿಸ್ಟಿಗೆ ಸೇರಿದ್ದರ ಹಿಂದಿನ ಕತೆ (ಮಂಡೋದರಿಯದ್ದು ನನಗೆ ಗೊತ್ತಿಲ್ಲ) ನಿಮಗೆ ಗೊತ್ತು. ಇದು ಹಿಂದೂಗಳಿಗೆ ಮಾತ್ರವಲ್ಲ, ಎಲ್ಲ ಮನುಷ್ಯರಿಗೂ, ಎಲ್ಲ ಧರ್ಮದವರಿಗೂ ದೇವರು ಎಂಬ ಪರಿಕಲ್ಪನೆ ಕೊಟ್ಟಿದ್ದು ಇದನ್ನೇ. ಕ್ರಿಶ್ಚಿಯನ್ನರ ಕನ್‌ಫೆಶನ್ ಹಿಂದಿನ ಪರಿಕಲ್ಪನೆ ಇದೇ. ದೇವರ ಅಸ್ತಿತ್ವದ ಬಗ್ಗೆ ಸುರುವಾಗುವ ಚರ್ಚೆ ಮತ್ತು ಜಾತಿ, ಧರ್ಮ, ಸಾಮಾಜಿಕ ನ್ಯಾಯ, ಶೋಷಣೆ ಮುಂತಾದ ಎಲ್ಲ ಪ್ರಶ್ನೆಗಳೂ ಕೊನೆಗೆ ದೇವರಿಗೆ ತಳುಕು ಹಾಕಿಕೊಳ್ಳುವುದು ಹೀಗೆ. ಪಾಪ-ಪುಣ್ಯ ಮತ್ತು ಸ್ವರ್ಗ-ನರಕಗಳ ಜಾಲದಿಂದ ಅಪರಾಧ-ಶಿಕ್ಷೆ ಮತ್ತು ನ್ಯಾಯಾಲಯ - ಕಾರಾಗೃಹಗಳ ಜಾಲ ನೇಯ್ದಿದ್ದು ಮನುಷ್ಯನೇ. ಮನುಷ್ಯನ ಸತ್ ಜಾಗೃತಗೊಳಿಸದೇ ಇದ್ದರೆ ಸಹಬಾಳ್ವೆ, ಸಹಜೀವನ, ಸೌಹಾರ್ದ ಯಾವುದೂ ಸಾಧ್ಯವಾಗುವುದಿಲ್ಲ. ಸತ್ ಜಾಗೃತಗೊಳಿಸಬೇಕು ಅಥವಾ ಬಂದೂಕ ಹಿಡಿದು ಬೆದರಿಸಿ ಅವನನ್ನು ನಿಯಂತ್ರಿಸಬೇಕು. ಎರಡರ ಉದ್ದೇಶವೂ ಒಂದೇ. ಆದರೆ ಮಾರ್ಗ ಬೇರೆ. ಅದಕ್ಕಿಂತ ಮುಖ್ಯವಾದದ್ದು, ಆಫ್ಟರ್ ಇಫೆಕ್ಟ್ಸ್ ಬೇರೆ ಎನ್ನುವುದು, ಅದಿರಲಿ.

ಇದೆಲ್ಲ ನಿಶ್ಚಯವಾಗಿಯೂ ರಾಜಶೇಖರನಿಗೂ, ರಂಗನಾಥನಿಗೂ ಗೊತ್ತಿದೆ. ಅವರು ವಾದಿಸಿ ಒರೆಗೆ ಹಚ್ಚಬೇಕಾದ್ದೇನಿಲ್ಲ. ಗೌರೀಶ್ವರನ ಅರ್ಚಕ ಅಚ್ಯುತರಾಯರ ಏಕೈಕ ಮಗ ರಂಗನಾಥ ಮೊಟ್ಟೆ ತಿಂದರೆ, ಬಿಯರು ಕುಡಿದರೆ, ಕ್ಷೌರಿಕನಾದ ರಾಜಶೇಖರನನ್ನು ಮುಟ್ಟಿ ಬಂದು ಸತ್ಯನಾರಾಯಣ ಪೂಜೆಗೆ ಕುಳಿತರೆ ಏನೂ ಸಾಧಿಸಿದಂತಾಗಲಿಲ್ಲ. ಚಂದ್ರಿಯ ಸಂಗ ಮಾಡಿದ ಕುಡುಕ ನಾರಾಯಣ ಸತ್ತಾಗ ಪ್ರಾಣೇಶಾಚಾರ್ಯರಿಗೆ ಎದುರಾದ ಧರ್ಮಸಂಕಟ ನಮಗೆ ಗೊತ್ತು. ಬ್ರಾಹ್ಮಣರ ಜೀವನೋಪಾಯದ ಮಾರ್ಗಗಳಾಗಿ ಹುಟ್ಟಿಕೊಂಡ ಪೂಜೆ, ವ್ರತ, ಅಪರಕರ್ಮದ ವರೆಗಿನ ಎಲ್ಲ ಷೋಡಶೋಪಚಾರ ಸಂಸ್ಕಾರ ಕಾರ್ಯಕ್ರಮಗಳೆಲ್ಲವನ್ನೂ ನಿರಾಕರಿಸುವುದರಿಂದ ಕೂಡ ಏನನ್ನೂ ಸಿದ್ಧಪಡಿಸಿದಂತಾಗುವುದಿಲ್ಲ. ಏಕೆಂದರೆ, ಅಮೆರಿಕದ ಒಬ್ಬ ಸತ್ತರೆ ಅವನಿಗೆ ಯಾರೂ ಪಿಂಡ ಇಟ್ಟಿಲ್ಲ ಎನ್ನುವ ಕಾರಣಕ್ಕೆ ಅವನು ಪ್ರೇತವಾಗಿ ಉಳಿದವರನ್ನು ಕಾಡಿದ ಪ್ರಸಂಗಗಳು ವರದಿಯಾಗಿಲ್ಲ ಎಂದ ಮೇಲೆ ಭಾರತೀಯನಿಗೆ ಮಾತ್ರ ಪ್ರೇತಾವತಾರ ಸಾಧ್ಯ ಎನ್ನುವುದನ್ನು ಕಾಲವೇ ಸುಳ್ಳೆಂದು ಸಾಬೀತು ಮಾಡುತ್ತದೆ, ಬಹುಶಃ ಮಾಡಿದೆ. 

ಹಾಗಿದ್ದೂ ನಮಗೆ ರಿಸ್ಕ್ ತೆಗೆದುಕೊಳ್ಳುವುದು ಬೇಕಿಲ್ಲ. ಅಕಸ್ಮಾತ್ ಪ್ರೇತ ಇದ್ದರೆ, ರಿಸ್ಕ್ ಯಾಕೆ! ನಾವು ಶ್ರಾದ್ಧ ಮಾಡಿಯೇ ಮಾಡುತ್ತೇವೆ. ಸತ್ತವರು ಹಸಿದಿರಬಾರದು ಎಂದು ಪಿಂಡ ಇಕ್ಕುತ್ತೇವೆ. 

ಅಂದರೆ ಎಲ್ಲದರ ಮೂಲದಲ್ಲಿ ಒಂದು ಭೀತಿ ಇದೆ. ಇದು ನಮ್ಮ ಜೀನ್ಸ್‌ನಲ್ಲೇ ಇದೆ. ಸ್ಮೃತಿಯಲ್ಲಿ ಸೇರಿ ಹೋಗಿದೆ. ಚಿತ್ತ ಎನ್ನುತ್ತೀರೋ, ಸುಪ್ತಮನಸ್ಸು/ಪ್ರಜ್ಞೆ ಎನ್ನುತ್ತೀರೋ, ರಕ್ತಗತ ಎನ್ನುತ್ತೀರೋ ಎಲ್ಲದರ ಅರ್ಥ ಒಂದೇ. ಭಾರತೀಯ ಮನಸ್ಸು ಏಕಕಾಲದಲ್ಲಿ ಪುರಾಣಗಳಲ್ಲೂ, ಇತಿಹಾಸದಲ್ಲೂ, ವರ್ತಮಾನದಲ್ಲೂ, ಭವಿಷ್ಯತ್ ಕಾಲದಲ್ಲೂ, ಮರಣೋತ್ತರ ಪರಮಾರ್ಥದಲ್ಲೂ ಮುಳುಗೇಳುತ್ತಲೇ ಇರುವುದರಿಂದಲೇ ಅದು ಮಹಾನ್. ಹಾಗಾಗಿಯೇ ಅದು ಮಹಾನ್ ಬಕರಾ. 

ಹಾಗಾಗಿ ಇಲ್ಲಿ ನಮಗೆ ದೇವರು ಎಂದರೆ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು, ಅದಕ್ಕಾಗಿ ರಥಯಾತ್ರೆ ಮಾಡುವುದು, ಕೇಸರಿ ಬಾವುಟ, ಕುಂಕುಮದ ನಾಮ, ಕೇಸರಿ ಶಾಲು ಧರಿಸುವುದು, ಜೈಶ್ರೀರಾಮ್ ಎನ್ನುವುದು, ಬಾಬಾಬುಡನ್ ಗಿರಿಗೆ ಯಾತ್ರೆ ಹೋಗುವುದು, ಗೋಮಾಂಸ ನಿಷೇಧಿಸಿ ಎಂದು ಬೆಂಕಿ ಹಚ್ಚುವುದು, ಹಿಂದೂ ಧರ್ಮ ಅಪಾಯದಲ್ಲಿದೆ, ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ, ಪಾಕಿಸ್ತಾನ ಕುತಂತ್ರ ಮಾಡುತ್ತಿದೆ ಎಂದೆಲ್ಲ ಗುಲ್ಲೆಬ್ಬಿಸಿ ಇದೆಲ್ಲಕ್ಕೂ ಇರುವ ಏಕೈಕ ಪರಿಹಾರ ಬಿಜೆಪಿಗೆ ಮತ ಹಾಕುವುದು ಎಂದು ಬ್ರೈನ್‌ವಾಶ್ ಮಾಡುವುದು ಸಾಧ್ಯ! ಇದೆಲ್ಲ ಸುಳ್ಳು ಎಂದು ನಮಗೆ ಗೊತ್ತು. ಆದರೆ ರಿಸ್ಕ್ ಯಾಕೆ! ಅಕಸ್ಮತ್ ಹೌದಾಗಿದ್ದರೆ!

ಅಂದರೆ ನಿರಂತರ ಪಾಪಪ್ರಜ್ಞೆ, ಪಾಪಭೀತಿ ನಮ್ಮಲ್ಲಿ ನೆಟ್ಟು ಹೋಗಿದೆ. ಜೋಗಿಯವರಿಗೆ, ನನಗೂ ಇದು ತುಂಬ ಇಷ್ಟವಾದ ಜಿಜ್ಞಾಸೆ. ಜೋಗಿಯವರ ಇನ್ನೊಂದು ಪುಸ್ತಕ ಕೂಡ ಕೋಟ್ ಮಾಡುವುದು ಇದನ್ನೇ:

ಪಾಪೋಹಂ ಪಾಪ ಕರ್ಮಾಹಂ
ಪಾಪಾತ್ಮಾ ಪಾಪ ಸಂಭವಃ

ಇಡೀ ಕಾದಂಬರಿ ಇದರ ಸುತ್ತಲೇ ಇದೆ ಎಂದು ನನಗಂತೂ ಅನಿಸಿದೆ. ಜೋಗಿಯವರ ಈ ಕಾದಂಬರಿಗೆ ನನಗೊಂದು ಅಪ್ರೋಚ್ ಬೇಕಿತ್ತು. ಇದನ್ನು ಎಲ್ಲಿಂದ ಹೊಕ್ಕರೆ ನಾನು ಕೇಂದ್ರವನ್ನು, ಗಮ್ಯವನ್ನು ತಲುಪಿಯೇನೆಂಬ ಸೂಚನೆ ಬೇಕಿತ್ತು. ಅದು ಇದೆಂದು ನನಗಂತೂ ಅನಿಸಿದೆ. ನಾನು ತಪ್ಪಿರಬಹುದು, ಆದರೆ ಅದನ್ನು ಯಾರಾದರೂ ಹೇಳಬೇಕಾಗುತ್ತದೆ.

ಬದುಕಿನ ನಿರರ್ಥಕತೆ, ಅರ್ಥಹೀನತೆ ಇಲ್ಲಿನ ಕೇಂದ್ರಪ್ರಜ್ಞೆಯಾಗಿದೆ, ಕೇಂದ್ರ ಸಮಸ್ಯೆಯಾಗಿದೆ. ಹೇಗೆ ಬದುಕಿದರೂ ಒಂದೇ. ಹುಟ್ಟಿನ ಮೊದಲು ಮತ್ತು ಮರಣದ ನಂತರ ಏನೆಂದು ಗೊತ್ತಿಲ್ಲದ ವ್ಯಕ್ತಮಧ್ಯಕ್ಕೆ ಅವ್ಯಕ್ತದ ಹಂಗಿಲ್ಲ ಎಂದೇ ತಿಳಿದುಕೊಂಡರೂ ಅಷ್ಟೇ, ಆಕಡೆ ಈಕಡೆ ಏನೋ ಮಹತ್ವದ್ದು ಇದೆ ಎಂದುಕೊಂಡರೂ ಅಷ್ಟೇ. ಬದುಕು ಅರ್ಥಹೀನ ಮತ್ತು ನಿರರ್ಥಕ. ಒಂದಷ್ಟು ವರ್ಷ ನಿತ್ಯ ತಿಂದು, ಹೇತು, ಆಡಿ, ಹಾಡಿ, ಮಲಗಿ, ಎದ್ದು ಆಗುದುದೇನಿಲ್ಲ. "ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು" ಎನ್ನುವುದಕ್ಕೆ ಸಾಕ್ಷ್ಯ ಹೇಗಿಲ್ಲವೋ ಹಾಗೆಯೇ ಈ ಜನ್ಮದಲ್ಲಿ ಸಾಲ ಮಾಡದೇ ಇದ್ದರೆ ಮುಂದಿನ ಜನ್ಮದ ಹಂಗಿಲ್ಲ ಎಂಬ ವಾದದಲ್ಲೂ ಹುರುಳಿಲ್ಲ. ಹಾಗಾದರೆ "ಹೇಗೆ ಬದುಕುವುದೋ ಯಾರಿಗೆ ಗೊತ್ತು!"? ಒಂದಷ್ಟು ಅನುಭವಗಳ ಭಾರ ಬಿಟ್ಟರೆ ಬೇರೇನಿದೆ ಇಲ್ಲಿ? (ಮನುಷ್ಯ ಅನುಭವದ ಭಾರಕ್ಕೆ ಹೆದರುತ್ತಾನಂತೆ, ಪುರು ಹೇಳುವ ಮಾತು, ಕಾರ್ನಾಡರ ಯಯಾತಿಯಲ್ಲಿ.)


ಒಂದು ಕಡೆ ರಂಗನಾಥ ಪೂರ್ತಿ ಬೆತ್ತಲಾಗಿ, ತನ್ನೆದುರು ಒಂದು ಕನ್ನಡಿ ಇಟ್ಟುಕೊಂಡು, ತಲೆಗೆ ಕಿರೀಟ ಇಟ್ಟುಕೊಂಡು ತನಗೆ ತಾನೇ ಆರತಿ ಮಾಡಿಕೊಳ್ಳುತ್ತಿರುತ್ತಾನೆ. ಈ ದೃಶ್ಯದೊಂದಿಗೆ ಕಾದಂಬರಿಯ ಕೊನೆಯ ದೃಶ್ಯದ ಪರಿಪ್ರೇಕ್ಷ್ಯ ಅಗತ್ಯವಾಗುತ್ತದೆ. ಈ ಬಿಂಬ ಪ್ರತಿಬಿಂಬದ ಪರಿಕಲ್ಪನೆಯ ಜೊತೆ ಹುಚ್ಚು ಎನ್ನುವ ನಿಲುವು ಹೇಗೆ ಸಾಧ್ಯವೋ, ಆತ್ಮ-ಪರಮಾತ್ಮ ಪರಿಕಲ್ಪನೆ ಕೂಡ ಅಷ್ಟೇ ಸಮರ್ಪಕವಾಗಿ ಸಾಧ್ಯವಿದೆ. ಪಾಪ ಮಾಡಿಯೂ ಪಾಪಪ್ರಜ್ಞೆಯಿಂದ ಮುಕ್ತನಾಗಿ ಇರುವುದು ನಮ್ಮ ಮನಸ್ಸಿಗೆ ಸಾಧ್ಯವಾಗುವುದಾದರೆ ನಾವು ದೇವರಾಗಿ ಬಿಡಬಹುದು. ಅಥವಾ ಕನಿಷ್ಠ ದೇವರು ಎನ್ನುವ ಪರಿಕಲ್ಪನೆಯ ಹಿಂದಿರುವ ಆದರ್ಶ ಇಷ್ಟೇ ಎಂದು ಅದನ್ನು ನಿರಾಕರಿಸಿ ಬಿಡಲು ಅಗತ್ಯವಾದ ಧೈರ್ಯವನ್ನು ಮೈಗೂಡಿಸಿಕೊಳ್ಳಬಹುದು ಎನ್ನುವುದನ್ನು ಕೊಂಚ ಯೋಚಿಸಿ ನೋಡಿ.

ಆದರೆ, ದೇವರು ಎನ್ನುವ ಪರಿಕಲ್ಪನೆಯೇ ನಮ್ಮ ಆದರ್ಶದ, ಮೌಲ್ಯಗಳ ಮತ್ತು ನೈತಿಕತೆಯ ಮೂರ್ತರೂಪ ಎನ್ನುವುದನ್ನು ಆಗಲೂ ಅಲ್ಲಗಳೆಯಲಾಗದು. ಇದು ಆಸ್ತಿಕತೆ. ಇದು ನಂಬಿಕೆ. ಇದು ಶ್ರದ್ಧೆ. ಆದರೆ ಇದೇ ಮೂಢನಂಬಿಕೆಯೂ ಆಗಿರುವುದು ವಾಸ್ತವ. ಮನುಷ್ಯನಿಗೆ ತುಂಬ ಚೆನ್ನಾಗಿ ಬದುಕಬೇಕೆಂಬ ಆಸೆ. ಅದು ದುರಾಸೆ ಕೂಡ ಆಗಬಹುದೆಂಬ ಭಯ. ಎರಡೂ ಒಟ್ಟೊಟ್ಟಿಗೇ ಇರುವುದರಿಂದ ಅವನು ಸದಾ ಅಸುಖಿ ಕೂಡ. ಹಸಿವು, ನಿದ್ದೆ, ಮೈಥುನಗಳನ್ನೆಲ್ಲ ಕಾಂಪ್ಲಿಕ್ಟೇಟ್ ಮಾಡಿಕೊಂಡು ನರಳುತ್ತಿರುವ ಮನುಷ್ಯ ತನ್ನದೇ ಸ್ವಯಂಭೂ ವಾದ ಮತ್ತು ಸ್ವಯಂಭೂ ಪ್ರತಿವಾದಗಳನ್ನಿಟ್ಟುಕೊಂಡು ಸಿಂಥೆಸೈಸ್ಡ್ ಸಂಕೀರ್ಣತೆಯ ಮಜಾ ತೆಗೆದುಕೊಳ್ಳಬಲ್ಲ ಎನ್ನುವುದನ್ನು ಮರೆಯದೇ ಇದ್ದರೆ ನಮಗೆ ಕನ್ನಡಿಯೆದುರು ಬೆತ್ತಲೆ ಕೂತು, ತಲೆಯ ಮೇಲೊಂದು ಕಿರೀಟ ಬೇರೆ ಇಟ್ಟುಕೊಂಡು ಆರತಿ ಎತ್ತುವ ಸ್ಥಿತಿಯಿಂದ ಯಾವತ್ತಿಗೂ ಮುಕ್ತಿಯಿಲ್ಲ.

ಜೋಗಿಯವರು ಇಷ್ಟವಾಗುವುದು, ಮುಖ್ಯವಾಗುವುದು ಇಲ್ಲೇ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ