Tuesday, October 8, 2019

ಪೊರೆಯೆ ಮರವೇಕೆ ಬೇಕು, ಒಂದೆಲೆ ಸಾಕು....

2011ರ ಸುರುವಾತಿನಲ್ಲೇ ಪ್ರಕಟವಾದ ‘ಚೌಕಟ್ಟಿನಾಚೆಯವರು’ ಕಥಾಸಂಕಲನದ ಕತೆಗಳು ಈಗ ಸುಮಾರು ಒಂದು ದಶಕದಷ್ಟು ಹಳೆಯವು. ಈ ಕತೆಗಳು 2009ರ ಸಾಲಿನ ಡಾ.ಪಾಟೀಲ ಪುಟ್ಟಪ್ಪ ಕಥಾಪ್ರಶಸ್ತಿಯಿಂದ ಪುರಸ್ಕೃತಗೊಂಡಿವೆ. ಆದರೆ ಈ ಸಂಕಲನದಲ್ಲಿ ಅನಾವರಣಗೊಂಡಿರುವ ಗೀತಾ ವಸಂತರ ಕಥನ ಕೌಶಲ ಮತ್ತು ನಿರೂಪಣಾ ಪ್ರತಿಭೆ, ಅನುಭವವನ್ನು - ಮುಖ್ಯವಾಗಿ ಉತ್ತರಕನ್ನಡದ ಹವ್ಯಕ ಸಮಾಜದ ಅಡುಗೆಮನೆ ಮತ್ತು ಹಿತ್ತಲ ದೈನಂದಿನ ವಿವರಗಳನ್ನು ಎಲ್ಲ ಸೂಕ್ಷ್ಮಗಳಲ್ಲಿ ಹಿಡಿದಿಡಬಲ್ಲ ಅವರ ಸಾಮರ್ಥ್ಯ ಒಂದೇ ಸಂಕಲನಕ್ಕೆ ನಿಂತು ಹೋದಂತೆ ಕಾಣುತ್ತಿದೆ. ಅವರ ಪ್ರತಿಭೆ ನಿಶ್ಚಯವಾಗಿ ಈ ಸಂಕಲನ ಹೊರಬಂದ ನಂತರ ಬಂದ, ಬಂದು ಖ್ಯಾತಿ ಮತ್ತು ಸ್ಥಾನಮಾನ ಎರಡನ್ನೂ ಪಡೆದುಕೊಂಡ ಹತ್ತಾರು ಹೊಸ ಕತೆಗಾರರನ್ನು ಮೀರಿಸುವಂತಿದ್ದರೂ ಅವರು ಪಡೆಯ ಬೇಕಿದ್ದ ಮನ್ನಣೆ, ರೆಕಗ್ನಿಶನ್ ಪಡೆಯದೇ ಹೋದುದೇ ಇದಕ್ಕೆ ಕಾರಣವಿರಬಹುದೆನ್ನಿಸುತ್ತದೆ. 2002, 2003 ಮತ್ತು 2004ರಲ್ಲಿ ವಿಜಯಕರ್ನಾಟಕ ಮತ್ತು ಅಂಕಿತ ಪುಸ್ತಕ ಜಂಟಿಯಾಗಿ ಆರಂಭಿಸಿ ನಡೆಸಿದ ಯುಗಾದಿ ಕಥಾಸ್ಪರ್ಧೆ ಹೊಸದೊಂದು ಸಂಚಲನವನ್ನೇ ಹುಟ್ಟಿಸಿದ್ದು ಸುಳ್ಳಲ್ಲ. 2004ರ ವಿಜೇತರ ಕತೆಗಳ ಸಂಕಲನ ’ತಾಜಮಹಲ್’ ನಲ್ಲಿ ಗೀತಾವಸಂತರ ‘ಚೌಕಟ್ಟಿನಾಚೆಯವರು’ ಕತೆ ಇರುವುದನ್ನು ಇಲ್ಲಿ ಗಮನಿಸಬಹುದು.

ಈ ಸಂಕಲನದ ಮೊದಲ ಕತೆ ‘ಚೌಕಟ್ಟಿನಾಚೆಯವರು’ ಮತ್ತು ಎರಡನೆಯ ಕತೆ ’ಮಳೆ ಬಂತೋ ಮಾರಾಯಾ...’ ನಮ್ಮನ್ನು ಇನ್ನಿಲ್ಲದಂತೆ ಹಿಡಿದಿಡಲು ಇರುವ ಕಾರಣವಾದರೂ ಏನು ಎಂದು ತಲೆಕೆಡಿಸಿಕೊಂಡಿದ್ದೇನೆ. ಕಾವ್ಯಾತ್ಮಕವಾಗಿ ಬರೆಯುವುದು, ಬಾಲ್ಯದ ನೆನಪುಗಳ ನಾಸ್ಟಾಲ್ಜಿಯಾದಿಂದ ಓದುಗನನ್ನು ಮರುಳು ಮಾಡುವುದು - ಎರಡನ್ನೂ ಮೀರಿದ ಏನೋ ಒಂದು ಈ ಎರಡೂ ಕತೆಗಳಲ್ಲಿದೆ. ಬಾಲ್ಯದ ಸಮೃದ್ಧ ನೆನಪುಗಳ ಮಹಾಪೂರ ಮತ್ತು ನಿರುದ್ದಿಶ್ಯವೆನಿಸುವಂತೆ ಕಾಡುವ ನಾಸ್ಟಾಲ್ಜಿಯಾ ಗೀತಾ ವಸಂತರ ಎಲ್ಲಾ ಕತೆಗಳಿಗೆ ತೀವ್ರತೆ ತಂದುಕೊಟ್ಟಿರುವುದು ನಿಜವೇ. ಆದರೆ ಗೀತಾ ವಸಂತರು ತಮ್ಮ ಕತೆಗಳಲ್ಲಿ ಬಿಚ್ಚಿಡುವ ಯಾವತ್ತೂ ನೆನಪುಗಳಲ್ಲಿ ಮೇಲೆ ಹೇಳಿದ ತುಂಬು ಕುಟುಂಬದ ಚಿತ್ರಗಳು, ಅಲ್ಲಿ ನೋವುಂಡು ಮನೆಯ ದೀಪ ಬೆಳಗಿದ ಹೆಣ್ಣುಮಕ್ಕಳು ಬರುತ್ತಾರೆ. ಇಷ್ಟೇ ಆಗಿದ್ದರೆ ಅದರಲ್ಲಿ ಅಂಥ ವಿಶೇಷವೇನಿರಲಿಲ್ಲ. ಭಾವ ತೀವ್ರತೆಯಿಂದ ಕಾವ್ಯ ಹುಟ್ಟುತ್ತದೆ ಮತ್ತು ಕಾವ್ಯ ನೇರವಾಗಿ ಹೃದಯವನ್ನೇ ತಟ್ಟುತ್ತದೆ ಎನ್ನುವುದು ನಿಜವಾದರೂ ಭಾವದ ಆಯಸ್ಸು ಕಡಿಮೆ ಎನ್ನುವುದು ಕೂಡಾ ಅಷ್ಟೇ ನಿಜ. ಆದರೆ ಭಾವಸ್ಪಂದನವೇ ಇಲ್ಲದ ಕಡೆ ಏನೂ ಹುಟ್ಟುವುದಿಲ್ಲ ಎನ್ನುವುದು ಕೂಡಾ ಅದಕ್ಕಿಂತ ದೊಡ್ಡ ನಿಜ!

ಇಲ್ಲಿ ಗೀತಾ ಅವರು ಭಾವ ತೀವ್ರತೆ ಮತ್ತು ಕಾವ್ಯಾತ್ಮಕತೆಗಳನ್ನು ಬಿಟ್ಟು ಕೊಡದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಅಡುಗೆ ಮನೆ ಮತ್ತು ಹಿತ್ತಲ ಜಗತ್ತಿನಲ್ಲೇ ನೀವು ಕೊಂಚ ಸೂಕ್ಷ್ಮವಾದ ಒಳನೋಟಗಳನ್ನು ಕಾಣಬಹುದಾದ ಕಣ್ಣು ಹೊಂದಿದ್ದರೆ ಗುರುತಿಸಬಹುದಾದ ವೈರುಧ್ಯಗಳನ್ನು ಜತನದಿಂದ ನಿರೂಪಣೆಯ ತೆಕ್ಕೆಗೆ ತರುತ್ತ ಹೋಗುತ್ತಾರೆ. ಉದಾಹರಣೆಗೆ, ಮಾಲ್ತಕ್ಕನ ಒಂದು ಪಾತ್ರವೇ ಕೇಂದ್ರದಲ್ಲಿರುವ ‘ಚೌಕಟ್ಟಿನಾಚೆಯವರು’ ಕತೆಯಲ್ಲಿ ಅಷ್ಟೇ ಪೋಷಣೆ ಪಡೆಯುವ ದುರ್ಗಿಯ ಪಾತ್ರವಿದೆ. ಅದರಾಚೆಗೆ ಈ ಕತೆಗೊಬ್ಬಳು ನಿರೂಪಕಿಯಿದ್ದಾಳೆ. ಅವಳು ನಮಗೆ ಒಂದು ದೃಶ್ಯವನ್ನಷ್ಟೇ ಕಾಣಿಸಿ ಪ್ರಶ್ನೆಯೊಂದನ್ನು ಮನದಕೊಳದಲ್ಲಿ ಕಲ್ಲೆಸೆದಂತೆ ಎಸೆದು ಕತೆಯನ್ನು ಮುಗಿಸುತ್ತಿದ್ದಾಳೆ. ಹಾಗಿದ್ದೂ ತಾನು ಕತೆಯ ಕೇಂದ್ರವಲ್ಲ ಎನ್ನುತ್ತಿದ್ದಾಳೆ. ಚೊಚ್ಚಲ ಹೆರಿಗೆ ಮುಗಿಸಿಕೊಂಡು ಬಾಣಂತನಕ್ಕೆ ಬಂದು ಮಲಗಿದ, ದೊಡ್ಡಮ್ಮನ ಕೈಲಿ ತನ್ನ ಸೇವೆ ಮಾಡಿಸಿಕೊಳ್ಳುತ್ತಿರುವ ಹೆಣ್ಣೊಬ್ಬಳ ಸ್ವಾಭಿಮಾನ, ಆತ್ಮಗೌರವಕ್ಕೆ ನೋವುಂಟಾಗುವ ಸಂದರ್ಭಗಳನ್ನು ಊಹಿಸಬಹುದು. ಆದರೆ ಹೆಣ್ಣಿನ ನೋವಿನ ಆರಂಭ ಮಾತ್ರ ನಮ್ಮ ಕಣ್ಣಿಗೆ ಒಡೆದು ಕಾಣಬಹುದೇ ಹೊರತು ಅದು ಟ್ರಿಗರ್ ಮಾಡಿದ ಅವಳ ಇನ್ನೂ ಹತ್ತು ಹಲವು ನೋವುಗಳ ಹೆಣಿಗೆ ನಮ್ಮ ಕಣ್ಣಿಗೆ ಎಂದೂ ಕಾಣುವುದಿಲ್ಲ ಮಾತ್ರವಲ್ಲ ಅವಳ ಬದುಕಿನ ನೋವುಗಳ ಅರಿವಿಲ್ಲದವರ ಮನಸ್ಸಿಗೂ ಅವು ಕಾಣುವುದಿಲ್ಲ. ಇದಕ್ಕಿಂತ ಹೆಚ್ಚಿನ ಕುರುಡು ಯಾವುದೆಂದರೆ, ಅವುಗಳನ್ನೆಲ್ಲ ಸಂಭಾಳಿಸಿಕೊಂಡು ನಿಲ್ಲುವ ಅವಳ ವ್ಯಕ್ತಿತ್ವದ ನೆಲೆ ಯಾವುದೆಂದು ನಮಗೆ ಅರಿವು ಹತ್ತದೇ ಹೋಗುವುದು.

ಅವಳು ಮನೆಯೊಳಗೆ ದುಡಿಯುತ್ತಿರಲಿ, ಹೊರಗೆ ದುಡಿಯುತ್ತಿರಲಿ, ಎಷ್ಟೇ ಸಂಪಾದಿಸಲಿ, ಏನನ್ನೇ ಗಳಿಸಲಿ ಎಲ್ಲವನ್ನೂ ಒಂದು ಮರದಂತೆ ತನ್ನ ನೆರಳಿಗೆ ಬಂದವರಿಗೇ ಕೊಟ್ಟು ತಾನು ಬರಿದಾಗಿ ನಿಲ್ಲುವ ಒಂದು ಅನನ್ಯ ಚೇತನವಾಗಿಯೇ ಉಳಿಯುತ್ತಾಳೆ. ಇದನ್ನು ಸಾಮಾನ್ಯವಾಗಿ ನಾವು ಕಾಣುವುದೇ ಇಲ್ಲ. ಅವಳನ್ನು ಸ್ವಾರ್ಥಿ ಎಂದು, ಚಿನ್ನಬಣ್ಣಕ್ಕೆ ಆಸೆಪಡುವವಳು ಎಂದು, ಅಸೂಯೆಪಡುವವಳೆಂದು, ಸಣ್ಣಬುದ್ಧಿಯವಳೆಂದು, ಲೋಕಜ್ಞಾನವಿಲ್ಲದವಳೆಂದು ಜರೆಯುವ ಎಲ್ಲರೂ ಅವಳ ಎಲ್ಲಾ ಇತಿಮಿತಿಗಳಾಚೆಗೂ ನಮಗೆ ಸಾಧ್ಯವೇ ಇಲ್ಲದ ಒಂದು ಅದ್ಭುತ ಔದಾರ್ಯವನ್ನು, ತಾಯ್ತನವನ್ನು ತನ್ನ ವ್ಯಕ್ತಿತ್ವದಲ್ಲಿ ಸದಾ ಜೀವಂತವಾಗಿರಿಸಿಕೊಂಡು ತನ್ನ ನೆರಳಿಗೆ ಬಂದವರನ್ನೆಲ್ಲ ಪೊರೆಯುತ್ತಿರುತ್ತಾಳೆ ಎನ್ನುವುದನ್ನು ಅವಗಣಿಸಿ ಬಿಡುತ್ತೇವೆ, ದೈನಂದಿನದ ಜಂಜಾಟದಲ್ಲಿ ಮರೆಯುತ್ತೇವೆ. ಗೀತಾ ವಸಂತರ ಎಲ್ಲಾ ಕತೆಗಳ ಆತ್ಮ ಅವಳ ಈ ಗುಣವನ್ನು ಮರೆಯದೇ ಅವಳನ್ನು ಈ ನೆಲೆಯಿಂದ ಮರುನಿರೂಪಿಸುವುದರಲ್ಲಿಯೇ ಇದೆ ಅನಿಸುತ್ತದೆ.

‘ಚೌಕಟ್ಟಿನಾಚೆಯವರು’ ಕತೆಯ ದುರ್ಗಿ, ‘ಮಳೆ ಬಂತೋ ಮಾರಾಯ...’ದ ಅಹಲ್ಯೆ, ‘ಚಿಕ್ಕ ಚಿಕ್ಕ ನವಿಲೇ’ ಕತೆಯ ಪುಟ್ಟಿ, ‘ಹಸಿರು ರೇಷ್ಮೆ ಸೀರೆ’ ಯ ತುಂಗ್ ಚಿಕ್ಕಿ, ‘ಒಂದು ಅರಳೀ ಎಲೆ ಸಾಕು’ ಕತೆಯ ಸುನಂದತ್ತೆ, ‘ಇದು ಬರಿ ಬೆಳಗಲ್ಲೋ ಅಣ್ಣಾ’ ಕತೆಯ ನಮ್ರತಾ, ‘ಬೇಟೆ’ ಕತೆಯ ಜಾನಕಿ ಎಲ್ಲರಲ್ಲೂ ಇರುವ ಅದಮ್ಯ ಜೀವನ್ಮುಖಿ ಧೋರಣೆಯ ಹಿಂದಿರುವ ಚೈತನ್ಯ ತಾನು ಬದುಕಬೇಕು ಎನ್ನುವುದಲ್ಲವೇ ಅಲ್ಲ. ಹಾಗೆ ಕಾಣುವುದು ನಮ್ಮ ಸಂಕುಚಿತ ದೃಷ್ಟಿಗೆ. ಅವಳ ಚೈತನ್ಯದ ಸೆಲೆ, ತನ್ನವರನ್ನು ಬದುಕಿಸಬೇಕು, ಬದುಕಿಸುತ್ತೇನೆ ಎನ್ನುವುದೇ. ಇದನ್ನು ಗುರುತಿಸಿ, ತಮ್ಮ ಕತೆಗಳಲ್ಲಿ ತಂದಿರುವ ಗೀತಾ ವಸಂತರು ಅಭಿನಂದನಾರ್ಹರು. ಆದರೆ ಅವರು ಅಲ್ಲಿಗೇ ನಿಂತುಬಿಟ್ಟರೇಕೆ!?

ಅಡುಗೆ ಮನೆ ಮತ್ತು ಹಿತ್ತಲ ಜಗತ್ತಿನ ವೈರುಧ್ಯಗಳ ಮಾತೆತ್ತಿದೆ. ಮಾಲ್ತಕ್ಕನಿಗೆ ದುರ್ಗಿಯ ಪಾತ್ರ ಇರುವಂತೆಯೇ ದೊಡ್ಡಮ್ಮನ ಪಾತ್ರವೂ ಅಲ್ಲಿದೆ. ಈ ಮೂರೂ ಪಾತ್ರಗಳಲ್ಲಿರುವ ವೈರುಧ್ಯ ಇಲ್ಲಿನ ನಿರೂಪಕಿಯ ಪ್ರಜ್ಞೆಯಲ್ಲಿ ಎಬ್ಬಿಸುವ ಪ್ರಶ್ನೆಗಳೇ ಅವಳ ಮಟ್ಟಿಗೆ ಈ ಕತೆಯ ಕೇಂದ್ರವಾಗಿದೆ. ಆದರೆ ಓದುಗರು ಸ್ವಲ್ಪ ಅವಸರಿಸಿದರೆ ಈ ಕತೆಯ ಹಲವು ಆಯಾಮಗಳಲ್ಲಿ ಕೆಲವನ್ನು ಮಿಸ್ ಮಾಡಿಕೊಳ್ಳುವುದು ಖಚಿತ. ಹಾಗೆಯೇ, ‘ಮಳೆ ಬಂತೋ ಮಾರಾಯ...’ ಕತೆಯಲ್ಲಿಯೂ ನಿರೂಪಕಿಗೆ ಅವಳದೇ ಆದ ಜಂಜಾಟಗಳಿವೆ. ಜೊತೆಗೆ ಅಹಲ್ಯೆಯ ಕತೆಯಿದೆ. ಇವೆರಡೂ ಅಲ್ಲದೆ ಇನ್ನೊಂದು ವೈರುಧ್ಯವೂ ಈ ಕತೆಯಲ್ಲಿಯೇ ಇದೆ. ಅದನ್ನು ಸಂಕದ ಮನೆ ಅಮ್ಮನ ಪಾತ್ರ ನಿರ್ವಹಿಸುತ್ತಿದೆ. ಕತೆಯ ನಿಜವಾದ ಸಂಕೀರ್ಣ ಮ್ಯಾಟ್ರಿಕ್ಸ್ ಗುರುತಿಸದೇ ಹೋದರೆ ಎಲ್ಲ ಸ್ತ್ರೀವಾದಿ ಲೇಖಕಿಯರ ಸಾಲಿಗೇ ನಾವು ಗೀತಾವಸಂತರನ್ನೂ ಸೇರಿಸುವ ಅಪಾಯವಿದೆ.

ಇನ್ನು ’ಚಿಕ್ಕ ಚಿಕ್ಕ ನವಿಲೇ’ ಕತೆಯಲ್ಲಿಯೂ ಕಲಾವತಿ ಮತ್ತು ಅನಿತಾ ಪಾತ್ರಗಳಂತೂ ನಿಚ್ಚಳವಾಗಿಯೇ ಪರಸ್ಪರ ಸಂವಾದಿಯಾದ ಪಾತ್ರಗಳೇ. ಆದರೆ ಇಲ್ಲಿ ಈ ಎರಡೂ ಪಾತ್ರಗಳಿಗೆ ಸಮಾನಾಂತರದಲ್ಲಿ ಶೇಷಜ್ಜಿ ಮತ್ತು ಪುಟ್ಟಿಯ ಪಾತ್ರಗಳಿವೆ. ಪುಟ್ಟಿ ಚಿಕ್ಕ ಮಗುವಾಗಿದ್ದರೂ ಅವಳ ಸ್ಥಿತಿ ಅವಳಿಗೆ ಒಂದು ಪ್ರಬುದ್ಧತೆಯನ್ನು ಶೈಶವದಲ್ಲೇ ದಯಪಾಲಿಸಿ ಬಿಡುವ ಕ್ರೌರ್ಯವೂ ಗೀತಾ ವಸಂತರ ಸೂಕ್ಷ್ಮ ಕಣ್ಣುಗಳಿಂದ ಮಿಸ್ ಆಗುವುದಿಲ್ಲ ಎನ್ನುವುದೇ ನಾವು ಗಮನಿಸಬೇಕಾದ ಅಂಶ. ಇಲ್ಲಿ ಪುಟ್ಟಿಯೇ ಇಡೀ ಕತೆಯ ಆತ್ಮವನ್ನು ಪೊರೆಯುವ ಪಾತ್ರವಾಗಿ ನಿಲ್ಲುವುದು ಇಂಥ ಕಾರಣಗಳಿಂದ.

‘ಹಸಿರು ರೇಷ್ಮೆ ಸೀರೆ’ ಕತೆಯಲ್ಲಿ ನಾನು ಹೇಳುತ್ತ ಬಂದ ಅಂಶ ಹೆಚ್ಚು ನಿಚ್ಚಳವಾಗಿ ತೆರೆದುಕೊಂಡಿರುವುದನ್ನು ಗಮನಿಸಬಹುದು. ಐಸಿಯುನಲ್ಲಿರುವ ತುಂಗ್‌ಚಿಕ್ಕಿ ‘ಹಸಿರು ರೇಷ್ಮೆ ಸೀರೆ, ಹರಕೆ ಒಪ್ಪಿಸುವುದಿತ್ತು’ ಎಂದೆಲ್ಲ ಬಡಬಡಿಸುವುದನ್ನು ಕೇಳಿ ಆಕೆಯ ಪತಿ, ನಿರೂಪಕಿ ಎಲ್ಲರೂ ಅದು ತುಂಗ್‌ಚಿಕ್ಕಿಗೆ ಹಸಿರು ರೇಷ್ಮೆ ಸೀರೆ ಉಡುವ ಸುಪ್ತ ಬಯಕೆಯಿತ್ತೇನೋ ಎಂದೇ ಅರ್ಥೈಸುತ್ತಾರೆ. ಹೆಚ್ಚೆಂದರೆ, ತುಂಗ್‌ಚಿಕ್ಕಿ ಯಾವುದೋ ಹರಕೆ ಹೊತ್ತಿರಬಹುದು ಎನ್ನುವುದು ಅವರ ಲೆಕ್ಕಾಚಾರ. ಅದು ನಿಜವೇ. ಅಂಥ ಹರಕೆಯೊಂದನ್ನು ಅವಳು ಹೊತ್ತಿದ್ದಳು ಎನ್ನುವುದು ನಿಜವೇ. ಆದರೆ ಯಾರ ಸಲುವಾಗಿ ಎನ್ನುವಲ್ಲಿಯೇ ಹೆಣ್ಣಿನ ‘ಪರೋಪಕಾರಾರ್ಥಂ ಇದಂ ಶರೀರಂ’ ತತ್ವ ನಮಗೆ ಕಾಣುವುದು. ಅದು ಹೆಣ್ಣು. ಅದೇ ಅರ್ಥದಲ್ಲಿ ದೇವೀ ಗುಡಿಯಲ್ಲಿ ನಿರೂಪಕಿ ತುಂಗ್‌ಚಿಕ್ಕಿಯಲ್ಲಿಯೇ ದೇವಿಯ ಚೈತನ್ಯವನ್ನು ಕಾಣುವ, ತನಗೂ ಅದನ್ನು ಕೊಡೇ ಎಂದು ಪ್ರಾರ್ಥಿಸುವ ದೃಶ್ಯವಿದೆ ಎನ್ನುವುದನ್ನು ಗಮನಿಸಿದರೆ ಇದು ಕಣ್ಣಿಗೆ ಹೊಡೆದು ಕಾಣುತ್ತದೆ.

‘ಒಂದು ಅರಳೀ ಎಲೆ’ ಕತೆಯಲ್ಲಿ ಗೀತಾವಸಂತರ ಅಡಕ ತತ್ವದ ಪರಿಪೂರ್ಣ ಬಳಕೆಯನ್ನು ನಾವು ಸ್ಪಷ್ಟವಾಗಿಯೇ ಕಾಣಬಹುದು. ಗೀತಾ ವಸಂತ ಅವರು ಒಂದು ಕತೆಯನ್ನು ಒಂದೇ ಪಾತಳಿಯಲ್ಲಿ ಕಟ್ಟುವುದಿಲ್ಲ. ಇದನ್ನು ನಾವು ಅವರ ಎಲ್ಲಾ ಕತೆಗಳಲ್ಲೂ ಕಾಣುವುದು ಸಾಧ್ಯವಿದೆ. ಉದಾಹರಣೆಗೆ, ಈ ಕತೆಯಲ್ಲಿ ಅರಳೀ ಎಲೆ ಕೂಡ ಒಂದು ಮೆಟಾಫರ್ ಆಗಿಯೇ ಕೆಲಸ ಮಾಡುತ್ತಿದೆ. ಅರಳಿ ಎಲೆ ನಮಗೆ ಅತ್ಯಗತ್ಯವಾದ ಆಮ್ಲಜನಕವನ್ನು ಧಾರಾಳವಾಗಿ ಉತ್ಪಾದಿಸಬಲ್ಲ ಎಲೆ ಎನ್ನುವುದು ಎಲ್ಲರಿಗೂ ಗೊತ್ತು. ಹೆಣ್ಣಿಗೆ ಗಾಳಿ-ಬೆಳಕುಗಳೇ ಬದುಕಿನ ಅತಿಮುಖ್ಯ ಅಗತ್ಯಗಳಾಗಿ ಬಿಟ್ಟ, ಅವೇ ಸಿಗಲಾರದಂಥ ದಿನಗಳಿದ್ದವು ಎನ್ನುವುದನ್ನು ಎಲ್ಲರೂ ಬಲ್ಲೆವು. ಅದಲ್ಲದೆಯೂ ಅರಳಿ ಮರಕ್ಕೆ ಇನ್ನೂ ಕೆಲವು ವಿಚಿತ್ರ ಗುಣಲಕ್ಷಣಗಳಿವೆ. ನಮಗೆಲ್ಲ ತಿಳಿದಿರುವಂತೆ ಅರಳೀ ಮರದ ಬೀಜವನ್ನು ಯಾರೂ ನೆಟ್ಟು ಮೊಳಕೆ ಬರಿಸಿ ಬೆಳೆಸುವುದಿಲ್ಲ. ಅದು ಸ್ವಚ್ಛಂದವಾಗಿ ತನಗೆ ಬೇಕಾದಲ್ಲಿ ತಾನೇ ತಾನಾಗಿ ಚಿಗುರೊಡೆವ ಸಸಿ. ಅದು ಬೆಟ್ಟದ ತುದಿಯಲ್ಲಾದರೂ ಸರಿ, ಗುಡ್ಡದ ಕೊರಕಲ್ಲಿನಲ್ಲಾದರೂ ಸರಿ, ಕಟ್ಟೆಯನು ಕಟ್ಟಿ ನೀರೆರೆವವರಿಗಾಗಿ ಕಾಯುವ ಜಾಯಮಾನದ ಬೀಜವಲ್ಲ ಅದು. ಹಾಗೆಯೇ ಅರಳಿ ಮರವೇ ಒಂದು ಸ್ವಚ್ಛಂದವನ್ನು ಮನಸ್ಸಿಗಿಳಿಸಬಲ್ಲ ಮರ. ನೀವು ಇನ್ನೂ ಚುಮುಚುಮು ಬೆಳಕು ಹರಿಯುವ ಮುನ್ನವೇ ಅದರ ಎಲೆಗಳು ಫಡಫಡಿಸಿ ಹೊಮ್ಮಿಸುವ ಗಾಳಿಯ ಸುಖವನ್ನು ಬಲ್ಲವರೇ ಆದಲ್ಲಿ ಈ ಬಗ್ಗೆ ಹೆಚ್ಚೇನೂ ಹೇಳಬೇಕಾದ್ದಿಲ್ಲ. ಇಲ್ಲಿನ ಪ್ರಜ್ಞಾಗೆ ಬೀಜ, ಮೊಳಕೆ, ಹುಟ್ಟು ಎಲ್ಲವೂ ಪ್ರಶ್ನೆಯಾಗಿದೆ ಮತ್ತು ಸುನಂದತ್ತೆಯ ಬದುಕಿನ ಹೋರಾಟ -ಸಂಘರ್ಷಗಳ ಚಿತ್ರ ಅವಳಿಗೆ ತನ್ನ ಮುಂದಿರುವ ದಾರಿಯನ್ನು ನಿಚ್ಚಳಗೊಳಿಸಿದೆ. ತವರಿನಲ್ಲೂ, ಗಂಡನ ಮನೆಯಲ್ಲೂ ಇದ್ದ ಅರಳೀಮರ ಇಲ್ಲಿ ಇಲ್ಲವಲ್ಲ ಎಂದಾಗ ಪ್ರಜ್ಞಾ ಉತ್ತರಿಸುವುದಿಷ್ಟೇ, ‘ನೀ ಇದ್ದರೆ ಸಾಕು’. ಅಂದರೆ, ಇಲ್ಲಿ ಸುನಂದತ್ತೆಯೇ ಆ ಅರಳೀಮರವಾಗಿದ್ದಾಳೆ. ಹೆಣ್ಣು ಮರವಾಗಿ ಪೊರೆಯುವುದು ಎಂದರೆ ಇದೇ. ಪೊರೆಯುವುದೇ ಆದಲ್ಲಿ ಅದಕ್ಕೆ ಇಡೀ ಮರವೇ ಬೇಕೆಂದಿಲ್ಲ, ಒಂದೆಲೆ ಸಾಕು. ಪ್ರಳಯಕಾಲದಲ್ಲಿ ಶ್ರೀಹರಿಯನ್ನು ಪೊರೆದಿದ್ದು ಕೂಡಾ ಒಂದೇ ಒಂದು ಎಲೆಯಂತೆ, ಮರವಲ್ಲ!

‘ಇದು ಬರಿ ಬೆಳಗಲ್ಲೋ ಅಣ್ಣಾ’ ಕತೆಯಲ್ಲೂ ನಮ್ರತಾ ತಳೆಯುವ ಒಂದು ನಿರ್ಧಾರದ ಬೆನ್ನಿಗೇ ಅತ್ತೆಯ ಆಸ್ಪತ್ರೆಯ ಭೇಟಿಗೆ ಹಾದಿ ಸುಗಮವಾಗುವುದು, ಮಕ್ಕಳ ಚೈತನ್ಯ ಪುಟಿಯುವುದು ಮಾತ್ರವಲ್ಲ, ವರ್ಷಗಟ್ಟಲೆ ಹಾಸಿಗೆ ಹಿಡಿದಿದ್ದ ಮಾವ ಎದ್ದು ಬಂದು ತಾನೂ ತೋಟಕ್ಕೆ ಬರುತ್ತೇನೆ, ಅಲ್ಲಿನ ಕೆಲಸ ಕಾರ್ಯಗಳ ಮೇಲುಸ್ತುವಾರಿಗೆ ಸಹಾಯ ಮಾಡುತ್ತೇನೆ ಎನ್ನುವ ಮಟ್ಟಿಗೆ ಸುಧಾರಿಸುವುದು ಎಲ್ಲವೂ ಈ ಅರಳೀಮರದ ಜೀವದಾಯಿನಿ ಗಾಳಿಯನ್ನೇ ಸೂಚಿಸುವಂತಿದೆ.

‘ಬೇಟೆ’ ಕತೆಯಲ್ಲಂತೂ ಜಾನಕಿ ಬರೆಯುವ ಪತ್ರ ನನ್ನ ಪ್ರತಿಪಾದನೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ, ಅದಕ್ಕೆ ಹೆಚ್ಚು ಪರಿಪಕ್ವವಾದ ಅರ್ಥವ್ಯಾಪ್ತಿಯನ್ನೇ ತೆರೆಯುತ್ತಿದೆ. "ರೂಪ, ರಸ, ಗಂಧಗಳು ಸೇರಿ ಪ್ರಕೃತಿ. ಮೂಳೆ, ಮಾಂಸ, ರಕ್ತ, ಚರ್ಮಗಳು ಸೇರಿ ಪ್ರಾಣಿ, ಮನುಷ್ಯ.....ಮಾಂಸಲ ಭಾಗ ಹೆಚ್ಚಾಗಿದ್ದರೆ ಹೆಣ್ಣು..." ಎಂದು ತೊಡಗುವ ಜಾನಕಿಯ ಪತ್ರ ಅಮ್ಮನಿಗಾಗಿ, ತಮ್ಮನಿಗಾಗಿ ಸಾವಿನಂಚಿನ ಜೀವದ ಜೋಕಾಲಿ ಕೂಡ ತನಗೆ ಸಹ್ಯವೇ, ಸ್ವೀಕಾರಾರ್ಹವೇ ಎನ್ನುತ್ತದೆ.

ಇಲ್ಲಿ ಉಳಿದ ಇನ್ನೆರಡು ಕತೆಗಳ ಬಗ್ಗೆ ಏನೂ ಹೇಳಲಿಲ್ಲ. ಅವು, ‘ಉರಿಯ ವಾಸನೆ’ ಮತ್ತು ‘ಕಾಗದದ ನೋಟು’. ಎರಡೂ ಮೇಲೆ ಹೇಳಿದ ಚೌಕಟ್ಟಿನೊಳಗೆ ಕೂರದ ಕತೆಗಳಂತೆ ಇವೆಯಾದರೂ ಹಾಗೆ ಹೇಳುವುದು ಅಷ್ಟು ಸರಿಯಲ್ಲ. ಇವುಗಳನ್ನೂ ಬರೆದ ಹೆಣ್ಣು, ಗೀತಾ ವಸಂತರೇ. ಅವರ ಆತ್ಮದ ಛಂದಸ್ಸು ಇಲ್ಲಿ ಇಲ್ಲ ಎನ್ನುವುದು ಹೇಗೆ? ಅದು ಇದ್ದೇ ಇರುತ್ತದೆ. ಆದರೆ ಕಥಾನಕದ ಹಂದರ, ವಸ್ತು ಮತ್ತು ಅದರ ಗಮ್ಯ ಕೊಂಚ ವಿಭಿನ್ನವಾಗಿದೆ ಅಷ್ಟೇ. ಎರಡೂ ಕತೆಗಳ ಪ್ರಧಾನ ಎನ್ನಬಹುದಾದ ಪಾತ್ರ ಗಂಡು. ‘ಉರಿಯವಾಸನೆ’ಯಲ್ಲಿ ನಾಟಕದ, ನಾಟಕದ ಗೋದೂಬಾಯಿಯ ಹುಚ್ಚಿಗೆ ಬಿದ್ದು ಮನೆಯ ವಹಿವಾಟಿನಲ್ಲಿ ‘ಮಾತು’ ಕಳೆದುಕೊಂಡ ತಿಮ್ಮಪ್ಪನ ಇಡೀ ಬದುಕಿನ ಕತೆ ಬಿಚ್ಚಿಕೊಳ್ಳುತ್ತದೆ. ತಲೆಮಾರುಗಳ ಕತೆಯನ್ನು ಬಿಚ್ಚಿಡುವ ಈ ಕತೆಯ ಹರಹು ದೊಡ್ಡದು ಮತ್ತು ಅದು ಸಂಕೀರ್ಣವಾಗಿಯೂ ಇದೆ, ಸಂಘರ್ಷಮಯವಾಗಿಯೂ ಇದೆ. ಮೇಲೆ ಹೇಳಿದ ವೈರುಧ್ಯದ ಚಿತ್ರಣ ಇಲ್ಲಿಯೂ ನಮಗೆ ಸಿಗುತ್ತದೆ ಮತ್ತು ಅದು ಬದುಕಿನ ವೈಚಿತ್ರ್ಯಗಳತ್ತ, ಸಾಮಾನ್ಯ ನಿರ್ಣಯಗಳಿಗೆ ಬರಲು ಬಿಡದ ಅದರ ನಡೆಗಳತ್ತ ಕೌತುಕದ ಚಿತ್ರವೊಂದನ್ನು ಕೊಡುತ್ತಿದೆ. ‘ಕಾಗದದ ನೋಟು’ ಕತೆಯಲ್ಲಿ ಕೇಂದ್ರ ಎನ್ನಬಹುದಾದ ಪಾತ್ರವೂ ಗಂಡು, ಶ್ರೀಪಾದ. ಇವನೊಂದಿಗೆ ಏಗುವ ಶೋಭಾಳ ಕತೆ ಇದು. ಅತ್ತೆ-ಮಾವ, ತನ್ನ ಗಂಡ ಮತ್ತು ಅವನ ವಯಸ್ಸಿನ ಇತರರು ಶೋಭಾ ಕಂಡ ದಾಂಪತ್ಯದ ಕನಸಿಗೆ ಅಷ್ಟಾಗಿ ಹೊಂದದೆ ಅವಳಲ್ಲಿ ಹುಟ್ಟುವ ಅಸಮಾಧಾನ ಸಂಸಾರದಲ್ಲಿ ಹುಟ್ಟು ಹಾಕುವ ಸಮಸ್ಯೆಗಳು ಕತೆಯ ವಸ್ತು.

ಈ ಸಂಕಲನವನ್ನು ಓದಿ ಮುಗಿಸಿದಾಗಲೂ, ಮೊದಲ ಎರಡು ಕತೆಗಳನ್ನು ಓದಿ ಮುಗಿಸುತ್ತಲೇ ಬಡಿದ ಪ್ರಶ್ನೆಯೊಂದಿಗೇ ನಾನು ನಿಂತಿದ್ದೇನೆ. ಕನ್ನಡಕ್ಕೆ ಮತ್ತೊಬ್ಬ ವೈದೇಹಿಯೋ, ಅವರನ್ನು ಮೀರಿ ಬೆಳೆಯುವ ಸಾಧ್ಯತೆಯನ್ನು ಕಾಣಿಸಬಹುದಾಗಿದ್ದ ಕತೆಗಾರ್ತಿಯೋ ಸಿಗುವ ಸಂಭವವೊಂದು ಯಾಕೆ ನಿಜವಾಗಲಿಲ್ಲ... ಇನ್ನಾದರೂ ಆಗಬಹುದಲ್ಲ ಎನ್ನುವುದೇ. ಇನ್ನೀಗ ಗೀತಾ ವಸಂತರ ಹೊಸ ಕಥಾಸಂಕಲನಕ್ಕೆ, ಕಾದಂಬರಿಗೆ ನಾವು ಕಾದೇ ಕಾಯುತ್ತೇವೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, October 7, 2019

ಎಂದು ಬರುವುದು ಮಹಾನವಮಿ?

ಬೆಂಗಳೂರು ಅಥವಾ ಮಂಗಳೂರಿನಂಥ ಜಿಲ್ಲಾ ಕೇಂದ್ರಗಳಲ್ಲಿರುವವರಿಗೂ ಮಲೆನಾಡು, ಉತ್ತರಕನ್ನಡದ ಹಳ್ಳಿಗಳು, ಧಾರವಾಡದ ಅಸುಪಾಸಿನ ವಾತಾವರಣ ಎಂದೆಲ್ಲ ಏನೇನೋ ಆಕರ್ಷಣೆಗಳಿರುತ್ತವೆ. ಕುವೆಂಪು ಕಟ್ಟಿಕೊಟ್ಟ ಮಲೆನಾಡು, ತೇಜಸ್ವಿಯವರ ಮೂಡಿಗೆರೆ, ಆ ಮಂದಣ್ಣ, ಅಲ್ಲಿನ ವಿಜ್ಞಾನಿ ಕರ್ವಾಲೊ, ಕೆಸರೂರಿನ ಕೃಷಿಕೇಂದ್ರದ ಜೋಗಿಹಾಳರು, ಆರ್ ಕೆ ನಾರಾಯಣರ ಮಾಲ್ಗುಡಿಯ ಮಂದಿ, ಮೊಗಸಾಲೆಯವರ ಸೀತಾಪುರದ ಹೋಟೆಲು-ಬಸ್‌ಸ್ಟ್ಯಾಂಡು, ಗ್ರಾಮಾಯಣದ ಪಾದಳ್ಳಿ, ಲಾರಾ ಇಂಗಲ್ಸ್ ವೈಲ್ಡರ್ ಕಾಲದ ಇಂಡಿಯನ್ನರು ಬದುಕುತ್ತಿದ್ದ ಕಾಡುಮೇಡುಗಳು ಮುಂತಾಗಿ ನಮಗೆ ಅಲ್ಲಿಗೇ ಹೋಗಿ ಅವರೊಂದಿಗೇ ಬದುಕುವಾ ಅನಿಸುವಂಥ ಒಂದು ಭಾವ ಈ ಕೃತಿಗಳನ್ನು ಓದಿ ಮುಗಿಸಿದ ಮೇಲೂ ಕಾಡುತ್ತ ಇರುತ್ತದೆ ಎನ್ನುವುದು ನಿಜವೇ. ಒಂದರ್ಥದಲ್ಲಿ ಇದಕ್ಕೆ, ನಮಗೆ ಸದ್ಯ ನಾವು ಬದುಕುತ್ತಿರುವ ಜಗತ್ತು, ಅಲ್ಲಿನ ಮಂದಿ ಅಷ್ಟೇನೂ ಸರಿಯಿಲ್ಲ ಅನಿಸುವುದು ಮತ್ತು ಇನ್ನೆಲ್ಲೋ ನಮಗಿಷ್ಟವಾದ ಪರಿಸರ, ಮಂದಿ ಇದ್ದಾರೆ ಎನ್ನುವ ನಂಬುಗೆ ಇರುವುದು ಕಾರಣವೇ ಹೊರತು ಇನ್ನೇನಲ್ಲ. ಆದರೆ ಇಂಥ ಕಲ್ಪನೆಯಲ್ಲೇ ಐಬಿರುತ್ತದೆ. ಒಂದು ಕಚೇರಿಗಳಲ್ಲಿ ದುಡಿಯುತ್ತಿರುವ ಮಂದಿಗೆ ಇವತ್ತೇ ರಿಸೈನ್ ಮಾಡಿ ಬೇರೆಲ್ಲಾದರೂ ಕೈಗೆ ಸಿಕ್ಕಿದ ಕೆಲಸ ಮಾಡಿಕೊಂಡಿರುವಾ ಅನಿಸುವಂಥ ಗಳಿಗೆಗಳಿರುತ್ತವೆ. ಇನ್ನೂ ಕೆಲವರಿಗೆ ಈ ಮನೆಯನ್ನೇ ಬಿಟ್ಟು ದೇಶಾಂತರ ಹೋಗಿ ಬಿಡಬೇಕೆನ್ನಿಸುವ ದುರ್ಬರ ಸನ್ನಿವೇಶಗಳೂ ಎದುರಾಗುತ್ತಿರುತ್ತವೆ. ಆದರೆ ಹೋಗುವುದೆಲ್ಲಿಗೆ? ಎಲ್ಲಾ ಕಡೆ ಮನುಷ್ಯರೇ ಇದ್ದಾರೆ. ಎಲ್ಲಿಂದೆಲ್ಲ ಓಡಿ ಹೋಗಲು ಸಾಧ್ಯ?

ಮನುಷ್ಯರಿಂದ ದೂರ ಹೋಗಬಹುದೇ ಹೊರತು ಮನಸ್ಸಿನಿಂದ ದೂರ ಹೋಗಲು ಸಾಧ್ಯವೆ ಎನ್ನುವ ಮಾತನ್ನು ಎಲ್ಲಿಯೋ ಓದಿದ ನೆನಪು. ಕಾರ್ನಾಡರ ನಾಟಕಗಳಲ್ಲೇ ಇರಬೇಕು. ಬಹುಶಃ ಮನುಷ್ಯರಿಂದಲೂ ದೂರ ಹೋಗುವುದು ಸಾಧ್ಯವಿಲ್ಲದ ದಿನಗಳಿವು.

"ಈ ಕತೆಗಳ ಸಹವಾಸವೇ ಸಾಕು" ಎನ್ನುವ ಹೆಸರಿನ ತಮ್ಮ ಮೊದಲ ಸಂಕಲನದಲ್ಲಿ ನವಿರಾದ ಮಲೆನಾಡ ಚಿತ್ರಗಳನ್ನು ಕಟ್ಟಿಕೊಟ್ಟು ಮನಸೂರೆಗೊಂಡ ಅಲಕಾ ತೀರ್ಥಹಳ್ಳಿ ಎನ್ನುವ ಹೆಸರಿನಲ್ಲಿ ಬರೆಯುವ ಎಚ್ ವಿ ಲಕ್ಷ್ಮೀನಾರಾಯಣರು ಮುಂದೆ "ನವಿಲೆಸರ" ಎನ್ನುವ ಹೆಸರಿನ ತಮ್ಮ ಎರಡನೇ ಕಥಾಸಂಕಲನವನ್ನೂ ಹೊರತಂದರು. ನೀವು ಒಂದು ಊರಿನಲ್ಲಿ ಸಾಕಷ್ಟು ಕಾಲ ನೆಲೆಯೂರಿದ ಸಂದರ್ಭದಲ್ಲಿ ನಿಮಗೆ ಹೊಳೆಯುವ ಕತೆ-ಪ್ರಸಂಗ-ಸನ್ನಿವೇಶಗಳು ಅವಿನಾಭಾವದಿಂದ ಆ ಕತೆ/ಪ್ರಸಂಗ/ಸನ್ನಿವೇಶ ಘಟಿಸಿದ ಊರು-ಕೇರಿ ಮತ್ತು ಆ ಜನರ ರೀತಿ ನೀತಿ, ಪರಂಪರೆ, ಸಂಪ್ರದಾಯ, ಭಾಷೆ, ದೈನಂದಿನ, ವೃತ್ತಿ-ಪ್ರವೃತ್ತಿ ಮತ್ತು ಸಾಮಾಜಿಕ, ರಾಜಕೀಯ, ಆರ್ಥಿಕ ಆಗುಹೋಗುಗಳ ಪಸೆಯನ್ನು ಹೊತ್ತೇ ಇರುತ್ತವೆ. ದೇಶ-ಕಾಲ ಪ್ರಜ್ಞೆಯನ್ನು ಬಿಟ್ಟುಕೊಡದೇ ಬರೆಯುವ ಪ್ರತಿಯೊಬ್ಬ ಸಾಹಿತಿಯೂ ಆ ಪರಿಸರದ ಪ್ರಾಕೃತಿಕ ಶ್ರೀಮಂತಿಕೆಯನ್ನೂ, ಸಾಮಾನ್ಯ ಜನಜೀವನದ ಮೇಲೆ ಸ್ಥಳೀಯ ಆಗುಹೋಗುಗಳು ಉಂಟುಮಾಡಿದ ತಲ್ಲಣಗಳನ್ನೂ ತನ್ನ ನಿರೂಪಣೆಯಿಂದ ಹೊರಗಿಟ್ಟು ಬರೆಯಲಾರ. ಆದರೆ ಅಂಥ ಬದುಕಿನ ಹಿನ್ನೆಲೆಯಿಲ್ಲದೆ ಊರಿಂದ ಊರಿಗೆ ವಲಸೆಯಾಗುತ್ತ ಬೆಳೆದ ವ್ಯಕ್ತಿಯಿಂದ ಅಂಥದ್ದನ್ನು ನಿರೀಕ್ಷಿಸುವುದು ಕಷ್ಟ. ಬಾಲ್ಯದ ಸ್ಮೃತಿಗಳು ಎಲ್ಲರನ್ನೂ ನಿಡುಗಾಲದ ಸಾಹಿತ್ಯಕೃಷಿಗೆ ಬೆನ್ನೆಲುಬಾಗಿ ನಿಂತು ಪೊರೆಯದೇ ಹೋಗುವ ಸಂಭವವಿದೆ. ಎಲ್ಲರಿಗೂ ತನ್ನ ಕತೆಯ ಬೇರುಗಳನ್ನು ಅದಕ್ಕಂಟಿಕೊಂಡ ಮಣ್ಣ ಹೆಂಟೆಗಳ ಜೊತೆಗೇ ಗಿಡದ ಜೀವಂತಿಕೆಯ ವಾಸನೆಯಿನ್ನೂ ನಳನಳಿಸುತ್ತಿರುವಾಗಲೇ ಕಿತ್ತು ಅಕ್ಷರ ಲೋಕದ ಭೂಮಿಕೆಯಲ್ಲಿ ನೆಟ್ಟು ನೀರೆರೆದು ಪೋಷಿಸಿ ಬೆಳೆಸುವ ಕಲೆ ಸಿದ್ಧಿಸಿರುವುದೂ ಇಲ್ಲ.

ಹೊಟ್ಟೆಪಾಡಿಗಾಗಿ ತಾರುಣ್ಯದಲ್ಲೇ ನಗರ ಸೇರಿಕೊಂಡ ಅನೇಕ ಸಾಹಿತಿಗಳು ತಮ್ಮ ಬಾಲ್ಯದ ಸ್ಮೃತಿಯನ್ನೇ ನೆಚ್ಚಿ ಕಟ್ಟಿಕೊಡುವ ಊರು, ಪರಿಸರ ಯಾವುದೂ ಸಹಜಕೃಷಿಯಾಗದೆ ಬೊನ್ಸಾಯ್ ತೋಟವಾಗಿ ಬಿಡುವುದು ಹೆಚ್ಚು. ಇವರ ಬೇರುಗಳಿಗೆ ಸರಿಗೆ ಸುತ್ತಿ ಅದರ ಬೆಳವಣಿಗೆಯನ್ನು ಕೃತಕ ವಿಧಾನದಲ್ಲಿ ಕುಂಠಿತಗೊಳಿಸಿರುತ್ತಾರೆ. ಇದು ನಮ್ಮ ಅರಿವಿಗೆ ಬರಬೇಕಾದರೂ ನಮಗೆ ಆಯಾ ಊರಿನ ಹೊಕ್ಕುಬಳಕೆಯಿದ್ದು ಅಲ್ಲಿನ ಜನಜೀವನ ನಿಜಕ್ಕೂ ಹೇಗಿದೆ ಎಂಬ ನೇರವಾದ ಅರಿವು, ಮಾಹಿತಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಎಲ್ಲರೂ ಒಂದು ಭ್ರಮೆಯಲ್ಲೇ ಸುಖವಾಗಿ ತೇಲುತ್ತ ಬಹುಕಾಲ ಇದ್ದು ಬಿಡಬಹುದು. ಇಲ್ಲ ಅದು ವಾಸ್ತವವಾಗಿ ಹಾಗಿಲ್ಲ ಎನ್ನುವವರದ್ದೇ ಅಪಸ್ವರವಾಗಿ ಕೇಳಿಸಲೂ ಬಹುದು.

ಒಂದು ಊರು, ಪರಿಸರವನ್ನು ತನ್ನ ಕತೆಯ ಕಥಾಜಗತ್ತನ್ನಾಗಿ ರೂಪಿಸಿಕೊಂಡ ಕತೆಗಾರ ಆಯಾ ಊರಿನ ನಿಜವಾದ ಘಟಕಗಳೆನ್ನಬಹುದಾದ ಅಲ್ಲಿನ ಪರಿಸರದ ಚಿತ್ರ, ನದಿ, ಕಾಲುವೆ, ಸೇತುವೆ, ಶಾಲೆ, ಆಸ್ಪತ್ರೆ, ದೇವಾಲಯ, ಚರ್ಚು, ಹಾದಿ ಬೀದಿಗಳು, ಅಂಗಡಿ-ಮುಂಗಟ್ಟುಗಳು, ಅಕ್ಕಪಕ್ಕದ ಊರಿಗೆ ಹೋಗಿ ಬಂದು ಮಾಡುವ ಹೆದ್ದಾರಿಗಳು, ವಾಹನ ಸೌಕರ್ಯಗಳು, ಪಂಚಾಯತು, ರಾಜಕೀಯ ಚಟುವಟಿಕೆಗಳು, ಸಾಂಸ್ಕೃತಿಕ ಜೀವಂತಿಕೆಯ ಕುರುಹುಗಳು, ಧಾರ್ಮಿಕ ಚಟುವಟಿಕೆಗಳು, ಸಂತೆ, ಜಾತ್ರೆ, ಗದ್ದಲದ ಸಭೆ-ಸಮಾರಂಭಗಳು, ಜನರ ರೀತಿ ನೀತಿ ರಿವಾಜು ಕಟ್ಟುಕಟ್ಟಳೆಗಳು, ವೃತ್ತಿ ಪ್ರವೃತ್ತಿಗಳು, ಹೊಟ್ಟೆಪಾಡಿನ ಪಡಿಪಾಟಲುಗಳು, ಸಮಾಜದ ವರ್ಗೀಕೃತ ಶ್ರೇಣಿಯ ಚಿತ್ರ ಮುಂತಾಗಿ ಸಹಜವಾಗಿ ಒದಗಿ ಬರುವ ವಿವರಗಳನ್ನು ಕಟ್ಟಿಕೊಡುವಾಗ ಅವುಗಳಿಗೂ ವಾಸ್ತವಕ್ಕೂ ಎಷ್ಟು ಮಾತ್ರಕ್ಕೂ ಸಂಬಂಧವಿಲ್ಲ ಎಂದು ಗೆರೆ ಎಳೆದು ಬಿಡುವುದು ಕಷ್ಟ.

ಬಾಲ್ಯದ ಸ್ಮೃತಿಗಳಿದ್ದೂ ಐನು ಗಳಿಗೆಗೆ ಅವೆಲ್ಲ ಒದಗಲಾರದೇ ಹೋದಲ್ಲಿ ಅಥವಾ ಅಂಥ ಅನಿವಾರ್ಯ ಸ್ಮೃತಿಗಳೇ ಇಲ್ಲದಂಥ ಬಾಲ್ಯ ನಮ್ಮದಾಗಿದ್ದಲ್ಲಿ ( ಕತೆಗಾರ ಎಂ ಎಸ್ ಶ್ರೀರಾಮ್ ಅವರು ತಮ್ಮ ಕಥೆಗಳಲ್ಲಿ ಬಾಲ್ಯದ ನಾಸ್ಟಾಲ್ಜಿಯಾ ಇಲ್ಲ ಏಕೆ ಎಂದು ಕೇಳಿದ ಒಂದು ಪ್ರಶ್ನೆಗೆ ಇಂಥ ಉತ್ತರ ಕೊಟ್ಟಿದ್ದ ನೆನಪು) ಏನು ಮಾಡಬೇಕು?

ಗಟ್ಟಿಯಾದ ಕಥಾಹಂದರವೊಂದು ತನ್ನ ಬೆನ್ನಿಗಿದೆ ಅಂದುಕೊಂಡ ಕತೆಗಾರ ಕತೆಯನ್ನೇ ನೆಚ್ಚಿ ಕಲ್ಪನೆಯ ನೆಲೆಯಲ್ಲೇ ತನಗೆ ಬೇಕಾದಂಥ ಊರು-ಕೇರಿ, ಜನ-ಮನ ಎಲ್ಲವನ್ನೂ ಕಟ್ಟಿಕೊಳ್ಳಬಲ್ಲ. ಆಗಲೂ ಅದು ಅವನ ಒಟ್ಟಾರೆ ಸಾಮಾಜಿಕ ಪ್ರಜ್ಞೆಯನ್ನು ಪೂರ್ತಿಯಾಗಿ ಕೈಬಿಟ್ಟೇ ಒಡಮೂಡಿ ಬರುವುದು ಸಾಧ್ಯವೇ ಇಲ್ಲ. ಉದಾಹರಣೆಗೆ, ಈಗ ತಮ್ಮ ಬದುಕಿನ ಅರವತ್ತರ ದಶಕವನ್ನು ಕಾಣುತ್ತಿರುವ ಅನೇಕ ಕತೆ-ಕಾದಂಬರಿಕಾರರ ಕೃತಿಗಳಲ್ಲಿ ಕಮ್ಯುನಿಸಂನ ಉಚ್ಛ್ರಾಯದ ಅವಧಿ, ಈ ದೇಶ ಕಂಡ ತುರ್ತುಪರಿಸ್ಥಿತಿ, ಇಂದಿರಾಗಾಂಧಿ ಸೇರಿದಂತೆ ನಡೆದ ಕೆಲವೊಂದು ಹತ್ಯೆಗಳು, ಕೋಮುವಾದದ ದಳ್ಳುರಿ ಪ್ರಜ್ವಲಿಸಲು ಕಾರಣವಾದ ಬಾಬ್ರಿಮಸೀದಿ ಪ್ರಸಂಗ ಮುಂತಾದ ಕೆಲವೇ ಕೆಲವಾದರೂ ವಿದ್ಯಮಾನಗಳು, ನಾಡಿಗೆ ನಾಡೇ ಏಕತ್ರ ಅನುಭವಿಸಿದ ಸಂವೇದನೆಗಳಿಗೆ ಕಾರಣವಾದ ವಿದ್ಯಮಾನಗಳು ತಪ್ಪಿಸಿಕೊಂಡಿರುವುದು ಬಹುಮಟ್ಟಿಗೆ ಅಸಾಧ್ಯವೆಂದೇ ಹೇಳಬಹುದು.

ಈ ಮಾತು ಏಕೆಂದರೆ, ಕೆಲ ಕಾಲದ ಹಿಂದೆ ನನ್ನ ಬೆಂಗಳೂರಿನ ಗೆಳೆಯರೊಬ್ಬರು ಅಲಕಾ ತೀರ್ಥಹಳ್ಳಿಯವರು ತಮ್ಮ ನಿವೃತ್ತಿಯ ಬಳಿಕ ಬೆಂಗಳೂರು ಸೇರಿಕೊಂಡಿದ್ದಾರೆ ಎಂದಾಗ ನನಗೇ ಸ್ವಲ್ಪ ಆಘಾತವಾಗಿತ್ತು. ಮುಂದೆ ಯಾವತ್ತೋ ಅವರೊಂದಿಗೆ ಮಾತನಾಡುವಾಗ ಅವರು ಹೇಳಿದ ಕೆಲವೊಂದು ವಿದ್ಯಮಾನಗಳು, ಬೆಳವಣಿಗೆಗಳು ನನಗೂ ಹೌದೆನಿಸಿದ್ದವು. ಅಂದರೆ, ಧಾರವಾಡದ ಕಡೆಯ ಒಂದು ಹಳ್ಳಿಯಲ್ಲಿ ಮನೆ, ಆಸ್ತಿ ಇರುವ ನನ್ನ ಒಬ್ಬ ಪತ್ರಕರ್ತ ಗೆಳೆಯ, ಊರಲ್ಲಿ ಸೆಟ್ಲ್ ಆಗುವುದಾದಲ್ಲಿ ತನ್ನನ್ನು ಮದುವೆಯಾಗಲು ಯಾವ ಹುಡುಗಿಯೂ ಒಪ್ಪುತ್ತಿಲ್ಲ ಎನ್ನುವ ಕಾರಣಕ್ಕೇ ಊರಿಗೆ ಮರಳಲಾರದ ಸಂಕಟದಲ್ಲಿದ್ದಾನೆ, ಉತ್ತರ ಕನ್ನಡದಲ್ಲಿ ಜಮೀನು, ಸಾಗುವಳಿ ಇದ್ದ ನನ್ನ ಓರಗೆಯ, ಕಿರಿಯ ಗೆಳೆಯರು ಅಲ್ಲಿನ ಜಮೀನು ಮಾರಿ ನಗರದಲ್ಲೇ ಬೇರೇನೇನೋ ಮಾಡುವ ಮಾತುಗಳನ್ನಾಡುತ್ತಿದ್ದಾರೆ, ಮಲೆನಾಡಿನಿಂದ ಹಿರಿಯ ಜೀವಗಳು ನಗರಕ್ಕೆ ಬಂದು ನೆಲೆಸುವುದು ವೃದ್ಧಾಪ್ಯದ ಅಗತ್ಯಗಳಿಗೆ ಅನುಕೂಲವೆಂದುಕೊಳ್ಳುತ್ತಿದ್ದಾರೆ, ಉಜಿರೆಯ ಮೂಲೆಯೊಂದರಲ್ಲಿ ಕಾಡಿನಲ್ಲಿದ್ದಾರೋ ಅನಿಸುವಂತೆ ನೆಮ್ಮದಿಯಿಂದಲೇ ಇದ್ದ ಕೆ ಟಿ ಗಟ್ಟಿಯಂಥವರು ಇಲ್ಲೇ ಮಂಗಳೂರಿನ ಹೃದಯಭಾಗದಲ್ಲಿ ಅಪಾರ್ಟ್‌ಮೆಂಟಿನಲ್ಲಿ ನೆಲೆಸಲು ಬಂದಿದ್ದಾರೆ...

ನನ್ನ ಕೈಯಲ್ಲಿ ಅಲಕಾ ತೀರ್ಥಹಳ್ಳಿಯವರದೇ ಹೊಸ ಕಾದಂಬರಿ ‘ಮುಂದೆ ಬರುವುದು ಮಹಾನವಮಿ’ ಇದೆ. ಅದರ ಓದೇ ಈ ಮೇಲಿನ ಮಾತುಗಳನ್ನೆಲ್ಲ ಬರೆಸಿದೆ. ಇದು ಕಾದಂಬರಿಯಾಗಿದೆಯೇ ಎಂಬ ಸಕಾರಣ ಅನುಮಾನಗಳೊಂದಿಗೇ ಇದನ್ನು ಬರೆದು ಮುಗಿಸಿರುವ ಅಲಕಾ ಅವರಿಗಾಗಲಿ, ಓದುಗರಿಗಾಗಲಿ ಇದು ಕಾದಂಬರಿಯೊ, ಕಥಾಸಂಕಲನವೋ, ಮಲೆನಾಡ ನುಡಿಚಿತ್ರಗಳ ಸಂಕಲನವೋ ಎನ್ನುವುದು ಅಷ್ಟು ಮುಖ್ಯ ಪ್ರಶ್ನೆ ಅಲ್ಲ ಎಂದುಕೊಳ್ಳುವೆ. ಕಾದಂಬರಿಯ ಕೊನೆಯ ಎರಡು ಮೂರು ಅಧ್ಯಾಯಗಳು ನನ್ನನ್ನು ಕೊಂಚ ಅಧೀರನನ್ನಾಗಿಸಿವೆ, ಚಿಂತೆಗೆ ದೂಡಿವೆ. ಅದಕ್ಕಿಂತ ಮುಖ್ಯವಾದದ್ದು ಅಲ್ಲ ಈ ಪ್ರಕಾರದ ಕುರಿತ ಪ್ರಶ್ನೆ.

ಸಹಜವಾಗಿಯೇ ಇಲ್ಲಿ ಅದ್ಭುತ ರಮ್ಯ ಮಲೆನಾಡ ಚಿತ್ರಗಳಿಲ್ಲ. ಅಲಕಾ ಅವರು ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತಿರುವಂತಿದೆ. ಇದು ಸದ್ಯದ ಅಗತ್ಯ ಕೂಡಾ. ಹೆಬ್ಬೈಲಮ್ಮನ ಒಂದು ಮಿಥಿಕಲ್ ಅನಿಸುವಂಥ ಕತೆಯೊಂದಿಗೆ ಆರಂಭವಾಗುವ ಈ ಕೃತಿ ಮುಂದೆ ನವಿಲೆಸರದ ಮುಖ್ಯಸ್ಥರಾದ ಮಹಾಬಲಯ್ಯನವರ ನೇತೃತ್ವದಲ್ಲಿ ಒಂದು ದೇವಿ ಗುಡಿ, ಅದಕ್ಕೊಬ್ಬರು ಯೋಗ್ಯ ಅರ್ಚಕರ ಹುಡುಕಾಟ, ಅವರಿಗೊಂದು ನೆಲೆ ಒದಗಿಸಿಕೊಡುವ ಕೆಲಸ, ಅವರ ಸಂಸಾರ ಎಂದೆಲ್ಲ ಸಾಗುತ್ತದೆ. ಕೃಷಿ ತನ್ನ ರೂಪಾಂತರವನ್ನು ಮೂರು ತಲೆಮಾರುಗಳ ಹೊಸತನದಲ್ಲಿ ಕಂಡುಕೊಳ್ಳುತ್ತ ಹೋಗುವ ಪರಿವರ್ತನೆಯ ಚಿತ್ರದಲ್ಲಿ ಹೊಸತೇ ಎನ್ನಬಹುದಾದ್ದು ಏನಿಲ್ಲ. ಮೂರು ತಲೆಮಾರುಗಳ ಹಲವು ಕಾದಂಬರಿಗಳು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಬಂದು ಹೋಗಿದ್ದು ಈಗಲೂ ಅಂಥವನ್ನು ಓದುವ ಕುತೂಹಲ, ಆಕರ್ಷಣೆ ಕನ್ನಡದ ಓದುಗರಿಗಿದ್ದೇ ಇದೆ ಎನ್ನುವುದನ್ನು ಬಿಟ್ಟರೆ ಅವು ಓದುಗನಲ್ಲಿ ಹೊಸ ತಲ್ಲಣಗಳನ್ನೇನೂ ಹುಟ್ಟಿಸುವುದಿಲ್ಲ.

ದೇವಿ ಮಾಂಸಾಹಾರಿಯೋ, ಸಸ್ಯಾಹಾರಿ/ಸಾತ್ವಿಕಾಹಾರಿಯೋ ಎನ್ನುವ ಒಂದು ಪ್ರಶ್ನೆ ಇಲ್ಲಿದ್ದು ಅದು ಕೂಡಾ ಚರ್ಚೆಗೆ ಅರ್ಹವಾದ ಸಮಕಾಲೀನ ಸಂಗತಿ ಎಂದು ನನಗಂತೂ ಅನಿಸುವುದಿಲ್ಲ.

ಮೊದಲಿಗೆ ನನ್ನ ಗಮನ ಸೆಳೆದಿದ್ದು, ಅಚ್ಚರಿ, ಕುತೂಹಲ, ಬೆರಗು ಎಲ್ಲ ಮೂಡಿಸಿದ ಒಂದು ವಿದ್ಯಮಾನವೆಂದರೆ ಮಾಧವ ಮಾಸ್ತರರ ಸಾವು, ಅವರ ಮಗ ಪುಂಡಲೀಕನ ಬದುಕಿನ ಶೈಲಿ, ತೆರೆಸಾ ಜೊತೆಗಿನ ಅವನ ವಿಲಕ್ಷಣ ಲವ್ವು, ಅವನ ತಂದೆ ಮಾಧವ ಮಾಸ್ತರ ಮತ್ತು ಫಿಲೊಮಿನಾ ಟೀಚರ್ ನಡುವೆ ಸಂಬಂಧ ಕಲ್ಪಿಸಿ ಹುಟ್ಟಿದ ಒಂದು ತಪ್ಪುಕಲ್ಪನೆಯಿಂದಾದ ಅನಾಹುತ ಇತ್ಯಾದಿಗಳು. ಇವೆಲ್ಲವನ್ನೂ ಮೀರಿ ನಿಂತ ಇನ್ನೂ ಹೆಚ್ಚಿನ ಒಂದು ವಿದ್ಯಮಾನ, ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಕೆಲವರ ಅಭಿವ್ಯಕ್ತಿ. ಇದಕ್ಕಿರುವ ಸಾಮಾಜಿಕ-ಸಾಂಸ್ಕೃತಿಕ ಮುಖಗಳು.

ಮೊದಲಿಗೆ ಬಂಗಾರಿ ನಾಯ್ಕನ ಮಾತುಗಳು. ಅವು ಹೊರಹೊಮ್ಮಿಸುವ ಊರ ರಾಜಕೀಯದ, ಪ್ರಭಾವೀ ವಲಯದ ಅಧಿಪತ್ಯವನ್ನು ಕಸಿಯಲು ಹೊಂಚು ಹಾಕುತ್ತಿರುವ ಶಕ್ತಿಗಳ ಕುರಿತು ನೀಡುವ ಭಯ-ಆತಂಕ ಮಿಶ್ರಿತ ಹೊಳಹುಗಳು, ಜಾತಿ ರಾಜಕಾರಣದ ವಿಚಿತ್ರ ಅಭಿವ್ಯಕ್ತಿಯಂತೂ ಯಾವ ಕಲೆಗೂ ಅಸಾಧ್ಯವಾದ ಒಂದು ಚಿತ್ರವೇ ಸರಿ. ಈ ಮಾತುಗಳನ್ನು ಅಲಕಾ ಅದೆಲ್ಲಿಂದ ತಂದರೋ ದೇವರೇ ಬಲ್ಲ. ಬಂಗಾರಿ ನಾಯ್ಕನ ಅಪಭ್ರಂಶ ಲೇಪಿತ ಉಚ್ಚಾರದೋಷಗಳೊಂದಿಗೇ ಆ ಜಗತ್ತಿನ ಮುಗ್ಧತೆ, ಸೆಡವು, ಕ್ರೌರ್ಯ ಮತ್ತು ಸಂಕಟಗಳನ್ನು ಒಟ್ಟೊಟ್ಟಿಗೇ ಕಟ್ಟಿಕೊಡುವ ಈ ಒಂದು ಉಪನ್ಯಾಸವೇನಿದೆ, ಅದು ಸಮಾಜಶಾಸ್ತ್ರೀಯ ಅಧ್ಯಯನಕ್ಕೆ ಯೋಗ್ಯ ಪಠ್ಯದಂತಿದೆ. ಲಂಕೇಶ್ ಒಂದೆಡೆ ಹೇಳಿದ ಮಾತುಗಳು ನೆನಪಾಗುತ್ತವೆ; "ಲೇಖಕನಾದವನು ತನ್ನ ಪಾತ್ರಗಳ ವಿಚಿತ್ರ ಸುಖ ಮತ್ತು ಕಾತರ ಕೂಡಿದ ಸ್ಥಿತಿ - ಇದನ್ನು ಬೇಕಾದರೆ ಕಾಂಪ್ಲೆಕ್ಸ್ ಅನ್ನಿ, ಹಿಡಿದಿಡಲಾರದವ ಒಳ್ಳೆಯ ಸಾಹಿತಿಯಾಗಲಾರ".

ಹಾಗೆಯೇ ತದನಂತರ ಮಾತನಾಡುವ ಮಡಿವಾಳ ಗಣಪ ಅಥವಾ ಮಳ್ ಗಣಪ್ಯಾನ ಮಾತುಗಳು ಕೂಡ ಮುಖ್ಯ. ಈತನ ಮಾತುಗಳು ಮೇಲೆ ಹೇಳಿದಂಥ ಗುರುತ್ವ ಹೊಂದಿಲ್ಲ ಎನ್ನುವುದು ನಿಜವೇ. ಗಣಪನ ಮನೋಲೋಕದ ಕ್ಯಾನ್ವಾಸಿನಲ್ಲಿ ರಾಜಕೀಯ-ಆರ್ಥಿಕ ಇಶ್ಯೂಗಳೆಲ್ಲ ಇರುವುದು ಸಾಧ್ಯವೂ ಇಲ್ಲ. ಆದರೆ ಅವನಿಗೆ ಗೊತ್ತಿದ್ದೋ ಇಲ್ಲದೆಯೋ ಒಂದು ಸಾಮಾಜಿಕ ಸ್ತರದ, ಜಾತೀಯತೆಯ ಚಿತ್ರವನ್ನಂತೂ ಈ ಮುಗ್ಧ-ಪೆದ್ದನ ಮಾತುಗಳು ಕಟ್ಟಿಕೊಡುವ ಅನನ್ಯ ಬಗೆಯಿದೆಯಲ್ಲ, ಅದು ಮನಸ್ಸನ್ನು ಆರ್ದ್ರಗೊಳಿಸುವುದು ಸುಳ್ಳಲ್ಲ. ಈ ಬಗ್ಗೆ ಹೆಚ್ಚು ಹೇಳದೆ, ಅದಕ್ಕಿರುವ ಸೋಶಿಯೋ ಇಕಾನಮಿಕ್ ಮುಖಗಳನ್ನು, ಅದು ಕರಟಿ ಹೋಗುತ್ತಿರುವ ಮುಗ್ಧ ಮಕ್ಕಳ ಬದುಕು ಭವಿಷ್ಯವನ್ನು ನಿರ್ಣಯಿಸುವ ವಿದ್ಯಮಾನವಾಗಿದೆ ಎನ್ನುವ ಸಂಗತಿಯನ್ನು ನೀವೇ ಕಂಡುಕೊಳ್ಳುವುದು, ನೀವೇ ಅದರ ಆಳ-ಅಗಲ ಕಾಣುವುದು ಸೂಕ್ತ.

ಮುಂದೆ ಇಲ್ಲಿ ದೇವೀಪ್ರಸಾದ ಮತ್ತು ದೀವ್ರ ಹುಡುಗಿ ಶೋಭಾರ ಪ್ರೇಮ ಪ್ರಸಂಗ, ಈ ಶೋಭಾ, ಅವಳ ಸಹೋದರ ರಾಜೇಶ ಮತ್ತು ಈ ದೇವೀಪ್ರಸಾದ ಮೂವರೂ ಸೇರಿ ನಡೆಸುವ ಹಳ್ಳಿಗರ ಮದ್ಯವರ್ಜನ ಪ್ರಯತ್ನಗಳು, ಅಮೆರಿಕದಿಂದ ಗಂಡ-ಮಗನಿಂದ ದೂರವಾಗಿ ಮರಳಿ ಊರಿಗೆ ಬಂದ ಮಹಾಬಲಯ್ಯನವರ ಮಗಳು ರಾಧಿಕಾ ಮತ್ತು ಅವಳ ಬಾಲ್ಯಸಖನೂ ಮೌನಪ್ರೇಮಿಯೂ ಆದ ದತ್ತು ನಡುವಿನ ನವಿರಾದ ಸ್ನೇಹ-ಪ್ರೇಮದ ಪ್ರಸಂಗಗಳು, ಈ ರಾಧಿಕಾ ನಡೆಸುವ ಕೃಷಿ ಸಂಬಂಧಿತ ಹೊಸ ಪ್ರಯತ್ನಗಳು, ಹಿಂದೆ ಹೇಳಿದ ಮಾಧವ ಮಾಸ್ತರರ ಮಗ ಪುಂಡಲೀಕನ ಅಪ್ಪೆ ಮಿಡಿ ಫ್ಯಾಕ್ಟ್ರಿಯ ಕನಸುಗಳು ಚಿಗುರೊಡೆಯುವುದು, ವೈನ್ ಬಾರಿನ ರಘು ಶೆಟ್ಟಿ, ಭಟ್ಟಿ ಹೆಂಡದ ಸರೋಜಮ್ಮ, ಸರೋಜಮ್ಮನ ಸೊಸೆ ಮುಂತಾದ ತುಂಡು ತುಂಡು ಪಾತ್ರಗಳ ಸುತ್ತ ಗಿರಕಿ ಹೊಡೆದು ಅಲ್ಲಲ್ಲೇ ಮುಗಿಯುವ ಕೆಲವು ಸ್ವಾರಸ್ಯಕರ ಪ್ರಸಂಗಗಳು, ಗೊಬ್ಬರ ತಯಾರಿಸಿ ಮಾರುವ ಮಡಿವಾಳ ಮರಿಯಪ್ಪನ ಕೆಮ್ಮು ಮತ್ತು ಮದುವೆಯ ಅವಾಂತರಗಳು, ಸೋಮಶೇಖರ ಮಾಸ್ತರ್ ಊರಲ್ಲಿ ಮೂಡಿಸುವ ಹೊಸ ಚೈತನ್ಯ ಎಲ್ಲವೂ ಏಕಸೂತ್ರದ ನೇಯ್ಗೆ ಇಲ್ಲದಿದ್ದರೂ ನಮ್ಮನ್ನು ಬೋರು ಹೊಡೆಸದೇ ಓದಿಸಿಕೊಂಡು ಹೋಗುತ್ತವೆ. ಇದೇ ಓಘದಲ್ಲಿ ಬರುವ ಸಂಬಯ್ಯ ಮತ್ತು ಅವರ ಇಬ್ಬರು ಮಕ್ಕಳು ರಾಜಾರಾಮ ಮತ್ತು ಶಾಂತಾರಾಮರ ಕತೆ ಬಹುಶಃ ನಾನು ಆರಂಭದಲ್ಲಿ ಹೇಳಿದ ವಿದ್ಯಮಾನದ ಕೇಂದ್ರ ಬಿಂದುಗಳು.

ದೂರದ ಬೆಟ್ಟ ನುಣ್ಣಗೆ ಎಂಬಂತೆ ಎಲ್ಲವೂ ನೆಮ್ಮದಿಯ, ಸೌಂದರ್ಯದ, ಆರೋಗ್ಯದ, ಚೈತನ್ಯದ ನೆಲೆವೀಡಾಗಿ, ಕಲ್ಪನೆಯ ಸ್ವರ್ಗದಂತೆಯೇ ಕಾಣುವ ಮಲೆನಾಡಿನಲ್ಲಿ (ಮಲೆನಾಡು ಇಲ್ಲಿ ಒಂದು ರೂಪಕ ಅಷ್ಟೇ. ಇದನ್ನು ಮಾಲ್ಗುಡಿಯಿಂದ ಹಿಡಿದು ಜಯಂತರ ಮುಂಬಯಿಯ ತನಕ ಅನ್ವಯಿಸಿಯೇ ಮಾತನಾಡುತ್ತಿದ್ದೇನೆ) ಕೂಡಾ ಬದುಕುತ್ತಿರುವ ಮನುಷ್ಯರಲ್ಲಿ ಸಣ್ಣತನ, ದುರಾಸೆ, ರಾಜಕೀಯ ಅಂಧಶ್ರದ್ಧೆ, ರಾಜಕೀಯ ಮೌಢ್ಯ, ಕೋಮುವಾದಿ-ಜಾತೀವಾದಿ ಪ್ರಜ್ಞೆ, ಮಠಮಾನ್ಯಗಳ ಹಸ್ತಕ್ಷೇಪದಿಂದ ಪಾರಾಗಲಾರದ ಇಬ್ಬಂದಿತನ, ಹಿಂಸೆ ಎಲ್ಲ ಇದೆ, ಮತ್ತು ಅದು ಎಷ್ಟರ ಮಟ್ಟಿಗೆ ಸಹ್ಯ ಮತ್ತು ಯಾವಾಗ ಮತ್ತು ಯಾರಿಗೆ ವಲಸೆಯೊಂದೇ ಉಳಿದ ದಾರಿ ಎನ್ನುವ ಮಟ್ಟಿಗೆ ಕುತ್ತಾಗಿ ಕಾಡುತ್ತದೆ ಎನ್ನುವುದನ್ನು ಈ ಕೊನೆಯ ಮುವ್ವತ್ತು ಪ್ಲಸ್ ಪುಟಗಳು ಕಾಣಿಸುತ್ತಿವೆ. ಬಹುಶಃ ಈ ಕೇಂದ್ರ ಪ್ರಜ್ಞೆಯನ್ನೇ ಇಡೀ ಕಾದಂಬರಿಯ ಸಶಕ್ತ ಧ್ವನಿಯನ್ನಾಗಿ ಮೂಡಿಸಿದ್ದರೆ ಇದೊಂದು ಬೇರೆಯೇ ಸ್ತರದ ಕಾದಂಬರಿಯಾಗುವುದು ಸಾಧ್ಯವಿತ್ತೇನೋ. ಇಲ್ಲಿ ನನಗೆ ಅಶೋಕ ಹೆಗಡೆಯವರ ‘ಅಶ್ವಮೇಧ’ ಕಾದಂಬರಿ ನೆನಪಾಗುತ್ತದೆ. ಆದರೆ ಅಲಕಾರ ಕಾದಂಬರಿಗೆ ಅಂಥ ಫೋಕಸ್ ದಕ್ಕದೇ ಹೋಗಿರುವುದು ಕಾಣಿಸುತ್ತದೆ.

ಕಾದಂಬರಿಯ ಕೆಲವೆಡೆ ನೇರವಾಗಿಯೇ ಕಾಂಗ್ರೆಸ್, ಬಿಜೆಪಿ, ಮಲೆನಾಡ ಪರಿಸರದ ಮಠ, ಮಂಗಗಳ ಸಾವು, ಧರ್ಮಸ್ಥಳದ ಮದ್ಯವರ್ಜನಾ ಶಿಬಿರಗಳು ಮುಂತಾದ ಕೆಲವು ಉಲ್ಲೇಖಗಳಿರುವುದು ಕಾದಂಬರಿಕಾರರ ಒಲವು ನಿಲುವುಗಳ ಬಗ್ಗೆ ಅವು ಏನನ್ನಾದರೂ ಹೇಳುತ್ತಿವೆಯೇ ಎನ್ನುವಂಥ ಪ್ರಶ್ನೆಗಳೂ ಬರುವುದು ಸಹಜವೇ ಆಗಿದೆ. ಅಲ್ಲದೆ, ಕಾದಂಬರಿಯ ಅರಂಭದ ಘಟ್ಟದಲ್ಲಿ ಕೊಂಚ ಅಪಾಯಕಾರಿ ಪಾತ್ರವೋ ಎಂಬಂತೆ, ಕೆಲವು ನಿಗೂಢ ಪ್ರಕರಣಗಳ ಹಿನ್ನೆಲೆಯಿರುವ ವ್ಯಕ್ತಿಯಂತೆ ಕಾಣುವ ಮಂಜುನಾಥನ ಪಾತ್ರವೂ ಅವಕಾಶವಾದಿತನದ ಲಕ್ಷಣಗಳನ್ನು ಕಾಣಿಸಿ ಕತೆ ಅತ್ತ ಬೆಳೆಯುವುದೇನೋ ಎಂಬ ನಿರೀಕ್ಷೆ ಹುಟ್ಟಿಸಿದರೂ ಅದು ಅಲ್ಲಿಗೇ ತಟ್ಟನೆ ಎಂಬಂತೆ ಮುಗಿದು ಬಿಡುವುದು ಅಚ್ಚರಿಯನ್ನೂ ಹುಟ್ಟಿಸುತ್ತದೆ. ಪುಂಡಲೀಕ, ತೆರೆಸಾ ನಡುವಿನ ಪ್ರೇಮ, ಅದಕ್ಕೆ ಅಡ್ಡಿಯಾಗುವ ಪುಂಡಲೀಕನ ತಂದೆ ಮಾಧವ ಮಾಸ್ತರ ಮತ್ತು ತೆರೆಸಾ ತಾಯಿ ಫಿಲೋಮಿನಾರ ನಡುವಿನ ಕಲ್ಪಿತ ಸಂಬಂಧದ ಗುಲ್ಲು, ಮುಂದೆ ಪುಂಡಲೀಕ ಪದ್ದಮ್ಮನ ಬಗ್ಗೆ ಆಡಿಕೊಳ್ಳುವ ಜನ, ಅವನ ಹೊಸ ವ್ಯವಹಾರ, ಕೊನೆಯಲ್ಲಿ ತೆರೆಸಾ ತೆಗೆದುಕೊಳ್ಳುವ ದೃಢ ನಿರ್ಧಾರ - ಎಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಮಂಜುನಾಥನ ಕತೆಯೊಂದಿಗೆ ತಳುಕು ಹಾಕಿಕೊಂಡೇ ಇರುವುದರಿಂದ (ಅವನ ಸಂತಾಪ ಭಾಷಣ, ಮಾಧವ ಮಾಸ್ತರರ ಆಸ್ತಿಯ ನಿರ್ವಹಣೆ ಇತ್ಯಾದಿ ಗಮನಿಸಿ) ಮತ್ತು ಕೊನೆಯಲ್ಲಿ ರಾಧಿಕಾಳ ಪ್ರಯತ್ನದಿಂದ ಪುಂಡಲೀಕ ಅಪ್ಪೆಮಿಡಿಯ ಫ್ಯಾಕ್ಟ್ರಿಗೆ ಸಜ್ಜಾಗುವುದರಿಂದಲೂ ಕಥಾನಕವನ್ನು ಆ ದಿಸೆಯಲ್ಲಿಯೂ ಸ್ವಲ್ಪ ಬೆಳೆಸಲು ಅಥವಾ ಆ ಎಳೆಯನ್ನೇ ಮುಂದುವರಿಸಿಕೊಂಡೇ ಬೆಳೆಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಹಾಗೆ ಮಾಡದೆ, ತೊಡಗಿದ ಎಳೆಗೆ ಹೊರಗಿನ ಹೊಸ ಎಳೆಗಳನ್ನು ಕೂಡಿಸುತ್ತ ಹೋಗಿರುವುದು ಕೂಡಾ ಒಂದು ಚೌಕಟ್ಟು ನಿರ್ಮಾಣವಾಗುವಲ್ಲಿ ತೊಡಕಾಯಿತೇನೋ ಅನಿಸದೇ ಇರದು.

ಅದೇನಿದ್ದರೂ ಈ ಕಾದಂಬರಿ ಕೆಲವೊಂದು ಪ್ರಶ್ನೆಗಳನ್ನಂತೂ ಹುಟ್ಟು ಹಾಕಿದೆ. ಮುಂದೆ ಮತ್ತೆ ಮತ್ತೆ ಮಹಾನವಮಿ ಬಂದಾಗಲೆಲ್ಲ ಅವು ಚರ್ಚೆಗೆ ಒಳಪಟ್ಟರೆ ಒಳ್ಳೆಯದು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, October 6, 2019

ಅಮರೇಶ ನುಗಡೋಣಿಯವರ ‘ದಡ ಸೇರಿಸು ತಂದೆ’

ಆಧುನಿಕತೆಯಿಂದ ಅಂತರ ಉಳಿಸಿಕೊಂಡು ಹಳ್ಳಿಗಳಲ್ಲಿ ಮತ್ತು ಅಷ್ಟಿಷ್ಟು ನಗರಗಳಲ್ಲಿಯೂ ಬದುಕುತ್ತಿರುವ, ಹೊಟ್ಟೆಪಾಡಿಗಾಗಿ ಕಚೇರಿ ಕೆಲಸ - ಬಿಸಿನೆಸ್ ಮುಂತಾದ ಹೊಸ ವೃತ್ತಿ - ಪ್ರವೃತ್ತಿಗೆ ಹೊಂದಿಕೊಂಡಿದ್ದರೂ ಹಳ್ಳಿಗಳ ಮೂಲ ಕಸುಬು, ಕೃಷಿಗಳೆಡೆ ಸ್ವಾಭಾವಿಕ ಆಕರ್ಷಣೆ, ಮೋಹ ಉಳಿಸಿಕೊಂಡಿರುವ ಮಂದಿ ನಮಗೆ ಅಮರೇಶರ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಾರೆ. ಅಲ್ಲದೆ, ಅಮರೇಶರ ಎಲ್ಲಾ ಕತೆಗಳ ಮೂಲಭೂತ ಆಕರ್ಷಣೆ ಇಂಥ ಸಾಮಾನ್ಯ ಮಂದಿಯ ಬದುಕು ಹೇಗೆ ನಡೆಯುತ್ತದೆ ಎಂಬ ಬಗ್ಗೆ ಅವರಿಗಿರುವ ಆಳವಾದ ಅರಿವು. ಅರಿವು ಮಾತ್ರವಲ್ಲ, ಅದನ್ನು ಅಕ್ಷರಗಳಲ್ಲಿ, ಕಥನಗಳಲ್ಲಿ ಹದವಾಗಿ, ಕಥನಕ್ಕೆ ಎಷ್ಟು ಅಗತ್ಯವೋ ಅಷ್ಟೇ ಅನಿಸುವಂತೆ ತರಬಲ್ಲ ಕಲೆಗಾರಿಕೆ. ಅವರ ಕತೆಗಳಲ್ಲಿ ತಂತ್ರ, ತರ್ಕ, ಸಿದ್ಧಾಂತ ಮತ್ತು ಸುಪ್ತವಾಗಿ ಕೆಲಸಮಾಡುವ ಇತರೇ ಅಂಶಗಳಿಗಿಂತ ಕಥನವೇ ಮುಖ್ಯವಾಗಿ ಅದು ಮೈತಾಳುತ್ತದೆ. ಏನನ್ನು ಹೇಳುವುದಿದೆಯೋ ಅದನ್ನು ಕಥನವೇ ಮುಂದೆ ನಿಂತು ಕಾಣಿಸುವುದೇ ಹೊರತು ಅಜೆಂಡಾ ಕತೆಗಳನ್ನು ಅವರು ಬರೆಯುವುದಿಲ್ಲ.

ಹಾಗಿದ್ದೂ ಈ ಸಂಕಲನದ ಮುನ್ನುಡಿಯಲ್ಲಿ ಅವರು ಸಮಕಾಲೀನ ಬಿಕ್ಕಟ್ಟುಗಳನ್ನು ನಮ್ಮ ಸಣ್ಣಕತೆಗಾರರು ಎತ್ತಿಕೊಂಡು, ಸಮರ್ಥವಾಗಿ ದುಡಿಸಿಕೊಂಡು, ಮುಂಗಾಣ್ಕೆಯ ಹೊಳಪಿನಿಂದ ಸಮೃದ್ಧವಾದ ಸಾಹಿತ್ಯವನ್ನು ಕಟ್ಟುವಲ್ಲಿ ಅಷ್ಟು ಸಫಲರಾಗಿಲ್ಲ/ಆಸಕ್ತಿ ವಹಿಸಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ತಮ್ಮ ಪ್ರಸ್ತುತ ಸಂಕಲನ ಜಾಗತೀಕರಣ, ಕೋಮುವಾದ, ಮರ್ಯಾದಾ ಹತ್ಯೆಗಳಂಥ ಹಿಂಸೆ/ಕ್ರೌರ್ಯ ಹಾಗೂ ಧರ್ಮ-ರಾಜಕಾರಣ ಮತ್ತು ಸಾಮಾಜಿಕ ಕಾರ್ಯಕರ್ತರ ವಲಯದಲ್ಲಿ ತನ್ನ ಗಟ್ಟಿಯಾದ ಹೆಜ್ಜೆಗುರುತುಗಳನ್ನು ಮೂಡಿಸುತ್ತಿರುವ ಭ್ರಷ್ಟಾಚಾರದ ಹೊಸ ಮುಖಗಳನ್ನು ತಾವು ಕಥನದ ಒಡಲಲ್ಲಿ ನೇಯ್ದಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಅವೆಲ್ಲವೂ ನಿಜವಿದ್ದರೂ ನುಗಡೋಣಿಯವರ ಒಂದೊಂದು ಕತೆಯೂ ತೇಜಸ್ಸಿನಿಂದ ಕಂಗೊಳಿಸುವುದು, ಚೈತನ್ಯದಿಂದ ಬೆಳಗುತ್ತಿರುವುದು ಗಟ್ಟಿಯಾದ ಕತೆ ಮತ್ತು ವಿವರಗಳ ಸಮೃದ್ಧತೆಯಿಂದಲೇ ಹೊರತು ಇನ್ನೇನಲ್ಲ. ಈ ಕತೆಗಳಿಗೆ ಪ್ರಾಪ್ತವಾಗಿರುವ ಜೀವಂತಿಕೆಯ ಅಥೆಂಟಿಸಿಟಿಯೇ ಇವುಗಳ ಪ್ಲಸ್ ಪಾಯಿಂಟ್ ಮತ್ತು ಅದಕ್ಕಾಗಿ ಅವರನ್ನು ಅಭಿನಂದಿಸಲೇ ಬೇಕು. ಏಕೆಂದರೆ, ಇಲ್ಲಿ ವಿಭಿನ್ನ ಪರಿಸರದ, ವಿಭಿನ್ನ ಮತಧರ್ಮದ, ವಿಭಿನ್ನ ಬಗೆಯ ಹೊಟ್ಟೆಪಾಡಿನ ಹಾದಿಯನ್ನು ಆರಿಸಿಕೊಂಡ ಮಂದಿ ತುಂಬಿ ತುಳುಕುತ್ತಿದ್ದಾರೆ. ಇಷ್ಟೆಲ್ಲ ವಿಭಿನ್ನ ಬದುಕುಗಳ ಸೂಕ್ಷ್ಮಾತಿಸೂಕ್ಷ್ಮ ದೈನಂದಿನವನ್ನು ಕಥನದಲ್ಲಿ ತರಲು ಅಂಥವರ ಬದುಕಿನೊಂದಿಗೆ ತಾದ್ಯಾತ್ಮದಿಂದ ಸ್ಪಂದಿಸಿದ ಒಂದು ಬಾಲ್ಯ, ಅನುಭವ ಮತ್ತು ಬದುಕಿನ ಅನುಭವ ಕತೆಗಾರನಿಗಿರಬೇಕಾಗುತ್ತದೆ ಮಾತ್ರವಲ್ಲ ಅದರ ಸ್ಮೃತಿ ಇನ್ನೂ ಹಸಿರಾಗಿ ಮನಸ್ಸಿನಲ್ಲಿ ನಿಂತಿರಬೇಕಾಗುತ್ತದೆ. ಆಗ ಮಾತ್ರ ಒಬ್ಬ ಓದುಗನಿಗೆ ಕತೆಗಾರ ಇಲ್ಲಿ ಕಟ್ಟುತ್ತಿರುವ ಕಥಾಜಗತ್ತು, ಪಾತ್ರಗಳು, ಅವರ ಬದುಕು, ಅದರ ದೈನಂದಿನ, ಅದರ ಏರುಪೇರು ಎಲ್ಲವೂ ಹೌದು ಹೌದು ಅನಿಸತೊಡಗುತ್ತದೆ. ಕತೆ ಎಷ್ಟೇ ಕೌತುಕ, ಗುರುತ್ವ, ಮಹತ್ವ ಇರಿಸಿಕೊಂಡಿದ್ದರೂ ಓದುಗನಿಗೆ ಅಂಥ ಅನುಭವವನ್ನು ಕೊಡಲು ವಿಫಲವಾದ ಯಾವ ನಿರೂಪಣೆಯೂ ಯಶಸ್ವಿಯಾಗುವುದಿಲ್ಲ. ಅಮರೇಶ ನುಗಡೋಣಿಯವರ ಬಹುದೊಡ್ಡ ಆಸ್ತಿ ಎಂದರೆ ಇದೇ. ಇದು ಅಮರೇಶ ನುಗಡೋಣಿಯವರಲ್ಲಿರುವುದು, ಅವರು ಕತೆಯಿಂದ ಕತೆಗೆ ಅದನ್ನು ಸಮೃದ್ಧವಾಗಿ ಕೊಡುತ್ತಿರುವುದು ಕನ್ನಡದ ಭಾಗ್ಯ.

ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ಈಗಾಗಲೇ ಹೇಳಿದಂತೆ, ವೈವಿಧ್ಯಮಯ ಬದುಕಿನ ಚಿತ್ರಗಳು ಈ ಸಂಕಲನದ ಪ್ರಧಾನ ಆಕರ್ಷಣೆ. ಹಾಗೆಯೇ ಕಾದಂಬರಿಯೊಂದರ ಹರಹು ಇಟ್ಟುಕೊಂಡಿರುವ, ಈಗಿನ ಕಾಲಕ್ಕೆ ನೀಳ್ಗತೆಗಳೆನ್ನಿಸುವ ಕತೆಗಳಿವು. ಯಾವುದೇ ಧಾವಂತವಿಲ್ಲದ ಕಥಾನಕದ ನಡೆ, ಎಲ್ಲಿಯೂ ಕತೆಗಾರನ ಕೈಯಿಲ್ಲ ಎನಿಸುವಂಥ ಸಹಜ-ಸರಳ ಕಥಾನಕ ಇಲ್ಲಿನ ಎಲ್ಲ ಕತೆಗಳಲ್ಲೂ ಕಾಣುತ್ತೇವೆ. ಅದೆಲ್ಲಕ್ಕಿಂತ ಮುಖ್ಯವಾಗಿ ನುಗಡೋಣಿಯವರ ಕುರಿತೂ ಅವರ ಕತೆಗಳ ಕುರಿತೂ ಹೇಳಬಹುದಾದ ಒಂದು ಮಾತಿದೆ. ಬದುಕಿನ ನಡೆಯ ಕುರಿತು ಮುಗ್ಧನೊಬ್ಬನ ಮುಗ್ಧತೆಯನ್ನೂ, ಬದುಕಿನ ವೈಚಿತ್ರಗಳತ್ತ ಕುತೂಹಲಿಯೊಬ್ಬನ ಸೋಜಿಗವನ್ನೂ, ಮನುಷ್ಯನ ವ್ಯಕ್ತಿತ್ವದ ಔದಾರ್ಯವನ್ನೂ ನೀಚತನವನ್ನೂ ಸಮಾನವಾಗಿ ಕಾಣಬಲ್ಲ ಸಂತುಲತೆಯನ್ನೂ ಕಳೆದುಕೊಳ್ಳದ ಒಂದು ಮನೋಧರ್ಮ, ಬಲು ಸಂತುಲಿತ ಮತ್ತು ನಿಯಂತ್ರಿತ ನಿರೂಪಣೆಗೆ ಸೂಕ್ತವಾದ ಒಂದು ಮನೋಧರ್ಮವಿದು. ಅದನ್ನೇ ನಿರಂತರವಾಗಿ ಈ ಕಥನಗಳು ಪೋಷಿಸಿಕೊಂಡು ಬಂದಿರುವುದರಿಂದ ಸಾಧಿಸಿರುವ ಒಂದು ಅಪೂರ್ವವಾದ ಲಯವಿದೆ. ಅದನ್ನು ನಾವು ಗುರುತಿಸಬೇಕು.

"ಈ ದಾರಿ ಕೈಲಾಸಕೆ" ಎಂಬ ಮೊದಲಿನ ಕತೆಯಲ್ಲಿ ಅಂಜನಪ್ಪನ ಕತೆಯಿದೆ. ಈತ ರಾಜಕಾರಣಿ. ಆದರೆ ಮೂಲತಃ ಸಹೃದಯಿ. ವರ್ತಮಾನದಲ್ಲಿ ಅವನು ಒಂದು ಸಮಸ್ಯೆಯ ಎದುರು ನಿಂತಿದ್ದಾನೆ. ಅದರಿಂದ ಪಾರಾಗಲು ಅವನು ದೊಡ್ಡ ಬೆಲೆ ತೆರಲು ಸಿದ್ಧನಾಗಬೇಕಿದೆ. ಆ ಬೆಲೆಯ ಗುರುತ್ವ ನಮಗೆ ತಿಳಿಯಬೇಕೆಂದಿದ್ದರೆ ನಮಗೆ ಅವನ ಇಡೀ ಬದುಕಿನ ಒಂದು ಸ್ಥೂಲಚಿತ್ರ ಸಿಗುವುದು ಅನಿವಾರ್ಯವಾಗಿದೆ. ಅವನ ಬದುಕಿನ ಆರಂಭಿಕ ಹಂತದ ಪರೋಪಕಾರಿ ಮನೋಧರ್ಮವೇ ಅವನನ್ನು ಹೇಗೆ ಜನನಾಯಕನನ್ನಾಗಿ ರೂಪಿಸುತ್ತದೆ ಮತ್ತು ನಾಯಕತ್ವದ ನಿಭಾವಣೆಯ ಸಂಕಟಗಳೇನು ಎನ್ನುವುದನ್ನು ಒಂದು ಸ್ತರದಲ್ಲಿ ಕಾಣಿಸುತ್ತಲೇ ವೈಯಕ್ತಿಕ ಬದುಕಿನ ಗೊಂದಲಗಳನ್ನೂ ಕಥಾನಕ ತೆರೆದಿಡುತ್ತ ಸಾಗುತ್ತದೆ. ಅಂಜನಪ್ಪ ಆಯ್ದುಕೊಳ್ಳುವ ಹಾದಿ, ಆ ಹಾದಿಯಲ್ಲಿ ಅವನ ಜೊತೆಗಿರುವವರು ಯಾರು, ಸಂಘರ್ಷಗಳನ್ನೊಡ್ಡುವವರು ಯಾರು ಎನ್ನುವುದರ ಅರಿವು ಓದುಗನಿಗೂ ಮೂಡುವುದರೊಂದಿಗೇ ಈ ಕತೆ ಮುಗಿದರೂ ಅದು ಓದುಗನ ಮನಸ್ಸಿನಲ್ಲಿ ಇವೇ ಪ್ರಶ್ನೆಗಳೊಂದಿಗೆ ಮರುಹುಟ್ಟು ಪಡೆದುಕೊಳ್ಳುವುದು ಸೋಜಿಗ. ಹಾಗೆಯೇ ಅಮರೇಶ ನುಗಡೋಣಿಯವರು ಈ ಕತೆಗೆ ಒಂದು ಆಧ್ಯಾತ್ಮದ ಮಗ್ಗುಲನ್ನೂ ಒದಗಿಸುತ್ತಾರೆ ಎನ್ನುವುದನ್ನು ಗಮನಿಸಬೇಕು. ಮನುಷ್ಯನ ಆಳದ ನೈತಿಕತೆ, ವ್ಯಕ್ತಿತ್ವದ ಪರಿಶುದ್ಧತೆ ನಿರ್ಣಯವಾಗುವುದು ಯಾವತ್ತೂ ನಿರ್ಮಮ, ನಿರಾಕಾರ, ನಿರ್ಗುಣದ ಎದುರಿಗೇನೆ. ಇದನ್ನು ಅಮರೇಶ ನುಗಡೋಣಿಯವರು ಈ ಕತೆಯ ಚೌಕಟ್ಟಿನಲ್ಲೇ ದುಡಿಸಿಕೊಂಡಿರುವುದು ಕಾಣುತ್ತೇವೆ.

"ಜೂಜು" ಕತೆ ಕೂಡಾ ಮುಗಿದರೂ ಮುಗಿಯದೆ, ಆರಂಭವಾಯಿತೋ ಎಂಬಂತೆ ಕಾಣುವ ಕತೆಯೇ. ನಿಜಾಮ್‌ಸಾಬ ಮೇಲ್ನೋಟಕ್ಕೆ ಕಂಡುಬರುವಂತೆ ಭೋಳೇ ಬಸವನೇನಲ್ಲ. ಅವನಿಗೆ ತನ್ನ ಸುತ್ತ ಮತ್ತು ತನ್ನದೇ ಬದುಕಿನಲ್ಲಿ ನಡೆಯುತ್ತಿರುವ ಎಲ್ಲ ತುಮುಲಗಳ ಸ್ಪಷ್ಟ ಅರಿವಿದೆ. ಆದರೆ ಅವನು ಪ್ರತಿಕ್ರಿಯಿಸುವುದು, ಪ್ರತಿಸ್ಪಂದಿಸುವುದು ಮಾತ್ರ ಅತ್ಯಲ್ಪ. ಹಾಗಿದ್ದೂ ಕಥಾನಕದ ಚಲನೆಯನ್ನು ಅಮರೇಶ್ ನುಗಡೋಣಿಯವರು ಯಾವತ್ತಿನ ಲವಲವಿಕೆಯಲ್ಲೇ ನಿಭಾಯಿಸುವುದು ಕುತೂಹಲಕರವಾಗಿದೆ, ಗಮನವಿಟ್ಟು ನೋಡಬೇಕಾದ ಬಗೆಯಲ್ಲಿದೆ. ಅಂಜನಪ್ಪನ ಪಾತ್ರದೊಂದಿಗೆ ಓದುಗರು ಸಾಧಿಸಲು ಸಾಧ್ಯವಿರುವ ಒಂದು ಕನೆಕ್ಷನ್ ನಿಜಾಮ್‌ಸಾಬನ ಪಾತ್ರದೊಂದಿಗೆ ಸಾಧ್ಯವಾಗದೇ ಇರಲು ಕಾರಣ ಅವನು ಸ್ವಲ್ಪ ಬೇಜವಾಬ್ದಾರಿಯವನಂತೆ, ಲಂಪಟನಂತೆ ಮತ್ತು ಮನಸೋ ಇಚ್ಛೆ ಬದುಕುತ್ತಿರುವಂತೆ ಕಾಣುವುದೇ ಇರಬಹುದು. ಆದರೆ ಅವೆಲ್ಲವೂ ಸುಳ್ಳೆಂಬಂತೆ ನಡೆದುಕೊಳ್ಳುತ್ತ, ವ್ಯವಸ್ಥೆಗೆ ಸಿಡಿದು ನಿಲ್ಲಬಲ್ಲ, ವೈಯಕ್ತಿಕ-ಸಾಂಸಾರಿಕ ಮಾತ್ರವೇಕೆ, ಸಾಮಾಜಿಕ ಜವಾಬ್ದಾರಿ ಕೂಡ ತನಗಿದೆ ಎಂಬಂತೆ ಅವನು ನಡೆದುಕೊಳ್ಳುವ ರೀತಿ ಸೋಜಿಗವನ್ನು ಹುಟ್ಟಿಸುತ್ತದೆ. ಹುಟ್ಟಿಸುವಲ್ಲಿಯೇ ಕತೆ ಕೊನೆಯಾಗದೆ ಓದುಗನಲ್ಲಿ ಹೊಸದಾಗಿ ಸುರುವಾಗುವುದೂ ನಡೆಯುತ್ತದೆ.

"ಹೀಗೊಂದು ಮಂದಿರ" ಕತೆಯ ನಿರೂಪಣೆಯ ಸೊಗಸು, ವಿವರ ಮನಮುಟ್ಟುವಂತಿದೆ. ಆದರೆ ಫ್ಲ್ಯಾಶ್‌ಬ್ಯಾಕ್ ಲವ್‌ಸ್ಟೋರಿಯ ಹಳಸಲು ಹಂದರ ಇಷ್ಟವಾಗುವುದಿಲ್ಲ. ಅಲ್ಲದೆ, ಇದು ಅಷ್ಟೇನೂ ಗಟ್ಟಿಯಾದ ಮತ್ತು ಹೊಸತನದಿಂದ ಕೂಡಿದ ಕಥಾನಕದ ಆಧಾರವನ್ನೂ ಹೊಂದಿರದೆ, ಹೆಸರಿನಲ್ಲೇ ಕಾಣಿಸುವ ಅಜೆಂಡಾದ ಕತೆಯಂತೆ ಭಾಸವಾಗುತ್ತದೆ. ಆದರೆ ಕಥನದ ನಿರೂಪಣೆ, ಪರಿಸರ ನಿರ್ಮಾಣಕ್ಕೆ ಒದಗಿದ ವಿವರಗಳಿಂದ ಮನಸೆಳೆವ, ಆಪ್ತವಾಗುವ ಕತೆ.

"ಯಾತ್ರೆ" ಈ ಸಂಕಲನದ ಮತ್ತೊಂದು ಯಶಸ್ವೀ ಕತೆ. ಇಲ್ಲಿರುವ ಗಟ್ಟಿಯಾದ ಕಥಾನಕ, ಸೊಗಸಾದ ನಿರೂಪಣೆ, ಕುತೂಹಲವನ್ನು ಹಿಡಿದಿಟ್ಟುಕೊಳ್ಳುವ ತಂತ್ರ, ಸಾರ್ವಕಾಲಿಕವೂ ಹೊಸತನದಿಂದಲೂ ಕೂಡಿರುವ ವಸ್ತು, ಮುಂತಾಗಿ ಎಲ್ಲಾ ವಿಷಯದಲ್ಲೂ ಮೆಚ್ಚುಗೆ ಹುಟ್ಟಿಸುವ ಕತೆಯಿದು. ಇಲ್ಲಿ ಮಠಮಾನ್ಯಗಳ ರಾಜಕಾರಣವಿದೆ, ಆಸ್ತಿ ಹೊಂಚುವ ದಾಯಾದಿತನದ ಕತೆಯಿದೆ, ಸಮಾಜದ ದುರುಳತನದ ಮುಖ ಚಿತ್ರಿಸಲ್ಪಡುತ್ತದೆ, ಶರಣರ ಬದುಕಿನ ಸಹಜ ಸುಂದರ ಚಿತ್ರಗಳಿವೆ ಮಾತ್ರವಲ್ಲ ಇವೆಲ್ಲದರೊಂದಿಗೆ ಇಡೀ ಕತೆಯ ಉದ್ದಕ್ಕೂ ಕುತೂಹಲವನ್ನು ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಲೇ ರಂಜಿಸಬಲ್ಲ ಒಂದು ಆಯಾಮವೂ ಈ ಕತೆಗಿದೆ. ಮಠದ ದೊಡ್ಡಸ್ವಾಮಿ ಮತ್ತು ಚಿಕ್ಕಸ್ವಾಮಿಗಳ ನಡುವಿನ ಶೀತಲ ವೈರುಧಕ್ಕೆ ನೀರೆರೆದು ಪೋಷಿಸುತ್ತಲೇ ತನ್ನ ಬೇಳೆ ಬೇಯಿಸಿಕೊಳ್ಳುವ ಗೌಡನಂಥವರು, ಊರ ದಾಯಾದಿಗಳ ನಡುವೆ ಸಂಬಂಧ ಹಳಸುವಂತೆ ಮಾಡಲು ಇನ್ನಿಲ್ಲದಂತೆ ಪ್ರಯತ್ನಿಸುವ, ತನ್ಮೂಲಕ ಅವರ ಆಸ್ತಿ ಹೊಡೆಯಲು ಹೊಂಚು ಹಾಕುವ ಊರ ಧನಿಕರು, ಕೌಟುಂಬಿಕ ದುರಂತಗಳಿಂದ ಹಣ್ಣಾಗಿ ಬಸವ ತತ್ವಕ್ಕೆ ಶರಣಾಗಿ ಲೋಕವಿಮುಖಿಯಾಗುವ ಸಾತ್ವಿಕರು, ಶರಣರು, ಅವರನ್ನೂ ಅವರ ಪಾಡಿಗೆ ನಿಶ್ಚಿಂತೆಯಿಂದ ಬದುಕಲು ಬಿಡದ ಸ್ವಾರ್ಥಿಗಳು ಎಲ್ಲರೂ ಇರುವ ಜಗತ್ತಿನಲ್ಲೇ ಭಕ್ತಿ-ಆಧ್ಯಾತ್ಮಗಳ ಒಂದು ಪಾತಳಿ, ಮನುಷ್ಯ ಸಂಬಂಧಗಳ, ಭಾವನೆಗಳ ಒಂದು ಪಾತಳಿ, ಸತ್ ಯಾವತ್ತಿಗೂ ಪೊರೆಯುತ್ತದೆ ಎನ್ನುವ ನಂಬುಗೆಯೇ ಹುಟ್ಟಿಸುವ ಒಂದು ಭರವಸೆಯ ಪಾತಳಿ - ಇವೆಲ್ಲವುಗಳು ಈ ಬದುಕಿಗೆ ಒದಗಿಸುವ ಒಂದು ಸೌಂದರ್ಯ ಕೂಡಾ ಇರುವುದು ಎಂಬ ಸತ್ಯವನ್ನು ಈ ಕತೆ ಎಷ್ಟೊಂದು ಸುಂದರವಾಗಿ ಕಟ್ಟಿಕೊಡುತ್ತದೆ ಎಂದರೆ ಓದು ಕೊಡುವ ಅನುಭವದಲ್ಲಿ ಇದೊಂದು ಕತೆ ಎಂದೇ ಅನಿಸುವುದಿಲ್ಲ. ಕಾದಂಬರಿಯೊಂದನ್ನು ಓದಿದ ಅನುಭೂತಿಯನ್ನು ಇದು ನೀಡುವಷ್ಟು ಸಶಕ್ತವಾಗಿದೆ, ಅಂಥ ಕಸು ಹೊಂದಿದೆ.

"ಕಟ್ಟೆಯ ಕಲ್ಲು ಕಟ್ಟೆಗೆ" ಕತೆ ಒಂದರ್ಥದಲ್ಲಿ "ಯಾತ್ರೆ" ಕತೆಯ ಮುಂದುವರಿದ ಭಾಗ. ಆದರೆ ಆ ಕತೆಯ ಹಂಗಿಲ್ಲದೆಯೂ ಇದನ್ನು ಓದಬಹುದು. ಈ ಕತೆಯ ಸ್ವತಂತ್ರ ಆಸ್ವಾದನೆಗೆ ಅಗತ್ಯವಿರುವಷ್ಟು ಹಿಂದಿನ ಕತೆಯ ವಿವರಗಳು ಇಲ್ಲಿಯೇ ಸಿಗುವಂತಿವೆ. ಆದರೆ ಒಂದು ಸಂಕಲನದಲ್ಲಿ ಎರಡೂ ಕತೆಗಳನ್ನು ಒಟ್ಟಿಗೇ ಓದುವ ಓದುಗನಿಗೆ ಇವೆರಡೂ ಕತೆಗಳಲ್ಲಿ ಸಾಕಷ್ಟು ಪುನರಾವರ್ತಿತ ವಿವರಗಳಿವೆ ಅನಿಸಿದರೆ ವಿಶೇಷವೇನಿಲ್ಲ. ಮೊದಲ ಕತೆಯಲ್ಲಿಯೇ ಮಲ್ಲಿಕಾರ್ಜುನನ ಯೌವನದಲ್ಲಿ ಆತ ತಪ್ಪು ಹೆಜ್ಜೆಯಿರಿಸಿದ ಒಂದು ಘಟನೆಯ ಬಗ್ಗೆ ದೊಡ್ಡಪ್ಪ, ದೊಡ್ಡಮ್ಮ ಮಾತ್ರವಲ್ಲ ನಿರೂಪಣೆಯಲ್ಲೂ ಮತ್ತೆಮತ್ತೆ ವಿವರವಾದ ಉಲ್ಲೇಖವೇ ಬರುತ್ತದೆ. ಅದೇ ವಿವರ ಮತ್ತೊಮ್ಮೆ ಈ ಕತೆಯಲ್ಲೂ ಬರುವುದು ಅನಿವಾರ್ಯವಾಗಿದೆ. ಇದನ್ನು ಸಹಿಸಿದರೆ ಈ ಕತೆ, ಒಂದೇ ಕತೆಯ ವಿಭಿನ್ನ ಮಜಲೊಂದನ್ನು ನಮಗೆ ತೋರಿಸುವ ವಿಚಿತ್ರಕ್ಕೆ ಬೆರಗಾಗುವ ಸರದಿ ನಮ್ಮದಾಗುತ್ತದೆ. ನಾವು ಒಂದು ಕತೆಯನ್ನು ಎಲ್ಲಿಂದ ಅಥವಾ ಯಾವ ಪಾತ್ರವನ್ನು ಕೇಂದ್ರ ಎಂದಿಟ್ಟುಕೊಂಡು ನೋಡುತ್ತೇವೆ ಎನ್ನುವುದರ ಮೇಲೆಯೇ ಅದರ (ಕತೆಯ ಮತ್ತು ಅದನ್ನು ನೋಡುವ ನಮ್ಮ) ಒಟ್ಟಾರೆ ಮನೋಧರ್ಮ ಸಿದ್ಧಗೊಳ್ಳುವುದು ವಿಚಿತ್ರವಾದರೂ ನಿಜ. ಆದರೆ ನಮ್ಮ ಬದುಕು ಹಾಗೆ ನಡೆಯುವುದಿಲ್ಲ. ಬದುಕಿನಲ್ಲಿ ನಮಗೆ ನಾವೇ ಕೇಂದ್ರವಾಗಿದ್ದರೂ, ಅದೇ ನಮಗೆ ಹೆಚ್ಚು "ಸಹ್ಯವಾದ ಸತ್ಯ"ಗಳನ್ನು ಕಾಣಿಸುವ ನೆಲೆಯಾಗಿದ್ದರೂ, ಬೇರೆಯವರನ್ನು ಕೇಂದ್ರವಾಗಿರಿಸಿಕೊಂಡು ವಸ್ತುಸ್ಥಿತಿಯನ್ನು ಅರಿಯುವ ಅಗತ್ಯ ಕೂಡಾ ನಮಗೆ ಎದುರಾಗಿಯೇ ಆಗುತ್ತದೆ. ನಮಗಾಗದವರ ಬಗ್ಗೆ ನಾವು ಅಷ್ಟು ಔದಾರ್ಯವನ್ನು ತೋರಿಸದೆ ಇದ್ದರೂ ನಮ್ಮ ವಿರುದ್ಧ ಸೆಟೆದು ನಿಲ್ಲುವ ನಮ್ಮದೇ ಬಾಳಸಂಗಾತಿಯ ವಿಷಯದಲ್ಲಿಯೋ, ಕರುಳಕುಡಿಗಳ ವಿಚಾರದಲ್ಲಿಯೋ ನಾವು ಹಾಗೆ ಕೇಂದ್ರಪಲ್ಲಟಕ್ಕೆ ಮಾನಸಿಕವಾಗಿ ಸಜ್ಜಾಗುವ ಅನಿವಾರ್ಯ ಎದುರಾಗಿಯೇ ಆಗುತ್ತದೆ. ಈ ಎರಡು ಕತೆಗಳು ಹೆಚ್ಚೂಕಡಿಮೆ ಅಂಥ ಒಂದು ಮನೋಧರ್ಮವನ್ನೇ ನಮಗೆ ಕಾಣಿಸುವಂತಿವೆ. ಮೊದಲ ಕತೆಯಲ್ಲಿ ಅಷ್ಟು ಸದ್ಭಾವಕ್ಕೆ ಕಾರಣನಾಗದ ಪಾತ್ರ ಮಲ್ಲಿಕಾರ್ಜುನನದ್ದು. ಆದರೆ ಈ ಕತೆಯಲ್ಲಿ ಅವನೇ ಕೇಂದ್ರ ಮತ್ತು ಆದರ್ಶಪಾತ್ರವೂ.

ಮೊದಲ ಕತೆಯಲ್ಲಿ ಓದುಗನೇ ತಳೆಯುವ ಕೆಲವು ಸಮಾಧಾನದ ನಿರ್ಣಯಗಳು ಈ ಕತೆಯಲ್ಲಿ ಪೂರ್ತಿಯಾಗಿ ಅಲ್ಲಗಳೆಯಲ್ಪಡುವುದು ಇನ್ನೊಂದು ಚೋದ್ಯ. ಮೊದಲ ಕತೆಯಲ್ಲಿ ಬರುವ ಕೆಲವರ ಬದುಕು ನಿರುಮ್ಮಳವಾದ ತಿರುವು ಪಡೆದಿದೆ ಎಂದುಕೊಂಡು ನಾವು ಸಹಜವಾಗಿ ನಮ್ಮದೇ ಸಮಾಧಾನಕ್ಕೆ ಬಂದಿದ್ದರೂ ಅದು ಹಾಗಾಗಿರದೇ ಹೊಸ ಆತಂಕ, ದುಗುಡಗಳಿಗೆ ಕಾರಣವಾದಂತೆ ಈ ಕತೆಯ ಆರಂಭವೇ ನಮ್ಮಲ್ಲಿ ಕೌತುಕವನ್ನು ಹೆಚ್ಚಿಸುತ್ತದೆ. ಇದನ್ನು ಎರಡೂ ಕತೆಗಳ ತಂತ್ರ ಎಂದು ಕಾಣುವುದು ಸಾಧ್ಯ ಮತ್ತು ಸರಿಯೇ, ಆದರೆ ಅದನ್ನುಳಿದಂತೆ ಈ ಕತೆಯ ಕೇಂದ್ರ ಕಥಾನಕ ಬೇರೆಯೇ ಪಾತಳಿಯ ಮೇಲೆ ಬೆಳೆಯುವುದರಿಂದ ನಮಗೆ ತಾದ್ಯಾತ್ಮವೊದಗಿದ ಹಿಂದಿನ ಕತೆಯ ಪಾತ್ರಗಳ ಬದುಕು-ಭವಿಷ್ಯದ ಪ್ರಶ್ನೆ ಕೊಂಚ ಮಸುಕಾಗುವುದನ್ನು ನಾವು ಸಾಹಿತ್ಯದ ಓದುಗರಾಗಿಯೂ, ಕೇವಲ ಮನುಷ್ಯರಾಗಿಯೂ ಗಮನಿಸಬೇಕು. ಕಥನದ ಅಗತ್ಯ, ನಿರೂಪಣೆಯ ತಂತ್ರವೇನೇ ಇರಲಿ, ಬದುಕಿನ ನೆಲೆಯಲ್ಲಿ ಮತ್ತು ಕತೆಯ ಪಾತ್ರಗಳಾಗಿ ಓದುಗನಿಗೆ ಹತ್ತಿರದವರಾದ, ಅವನು ಕನೆಕ್ಟ್ ಮಾಡಿಕೊಂಡ ಪಾತ್ರಗಳ ವಿಚಾರದಲ್ಲಿ ಅವನ ಮನೋಧರ್ಮ ಬದಲಾಗುವುದು - ಕತೆಗಾರನ ನಿರ್ದೇಶನದಲ್ಲಿಯೇ ಆದಾಗ್ಯೂ - ಒಂದು ಹೊಸತೇ ಆದ ಒಳನೋಟಕ್ಕೆ ಕಾರಣವಾಗಬೇಕು.

"ದಡ ಸೇರಿಸು ತಂದೆ" ಕತೆಯಲ್ಲಿ ವಿಭಿನ್ನವಾದ ಕಥಾಜಗತ್ತೊಂದು ತೆರೆದುಕೊಳ್ಳುತ್ತದೆ. ಕೊಂಚ ಅಂಜನಪ್ಪನ ಪಾತ್ರದ ಹೋಲಿಕೆ ಕಾಣುವ ಈ ಕತೆಯ ಸಂಗಮ್ ಸಾಮಾಜಿಕ ಕಾರ್ಯಕರ್ತನ ತರ ಬದುಕುತ್ತಿರುವ, ನಗರ ಜೀವನದಿಂದ ಕೊಂಚ ಪ್ರತ್ಯೇಕಗೊಂಡಂತಿರುವ, ಮುಳುಗಡೆಯ ಕಾರಣಕ್ಕೆ ದ್ವೀಪದಂತಾದ ಭೂಪ್ರದೇಶಕ್ಕೆ ಸೇರಿದವನು. ಆದರ್ಶ, ಸಿದ್ಧಾಂತಗಳಿಗೆ ತೆತ್ತುಕೊಂಡು ಬದುಕುವ ಜೋಡಿ ಇವನದ್ದೂ ಮತ್ತು ಈತನ ಸಂಗಾತಿ ಮೌನೇಶ್ವರಿಯದ್ದೂ. ಆದರೆ ಭೂಮಾಫಿಯಾದ ಧನದಾಹಿತನದ ಎದುರು ಉಪಕೃತ ಜನಮತವೇ ಕೃತಜ್ಞತೆಯಿಲ್ಲದೇ ಬೆಂಬಲಕ್ಕೆ ನಿಲ್ಲಲು ಅಶಕ್ತವಾಗಿರುವಾಗ ಆದರ್ಶ, ಸಿದ್ಧಾಂತಗಳು ಒಂಟಿಯಾಗಿ ಹೇಗೆ ನಿಲ್ಲುತ್ತವೆ/ಗೆಲ್ಲುತ್ತವೆ? ಆದರೆ ಈ ಕತೆಯ ಆತ್ಮ ಇಂಥ ಅಜೆಂಡಾಕ್ಕೆ ತೆತ್ತುಕೊಂಡಿಲ್ಲದೇ ಇರುವುದು ಗಮನಾರ್ಹ ಬೆಳವಣಿಗೆ. ಇಲ್ಲವಾದಲ್ಲಿ ಈ ಕತೆ ಕೂಡ ಇನ್ನೊಂದು ‘ಹೀಗೊಂದು ಮಂದಿರ’ ಕತೆಯಂತೆಯೇ ಪೇಲವವಾಗುವ ಅಪಾಯ ಇದ್ದೇ ಇತ್ತು. ಆದರೆ ನುಗಡೋಣಿಯವರ ಕೈಯಲ್ಲಿ ಈ ಕತೆ ಪಡೆದ ಪೋಷಣೆಯಿಂದಾಗಿಯೇ ಇದು ಅಂಥ ಅಪಾಯದಿಂದ ಪಾರಾಗಿದೆ ಮಾತ್ರವಲ್ಲ ಹೊಸತೇ ಆದ ಒಂದು ನಿಟ್ಟಿಗೆ ಚಾಚಿಕೊಂಡು ಮುಗಿಯುತ್ತದೆ. ತುಂಬು ಬಸುರಿ ಏಕಾಂಗಿಯಾಗಿ ‘ದಡ ಸೇರಿಸು ತಂದೆ’ ಎಂದು ಭವಸಾಗರವನ್ನು ಈಜಿ ಜೈಸಲು ಹೊರಡುವುದು ಈ ಕತೆಗೆ ಕೊಟ್ಟಿರುವ ಹೊಳಪು ಕಡಿಮೆಯದೇನಲ್ಲ. ಹಾಗೆಯೇ ಈ ಕತೆ ಸಂಕಲನಕ್ಕೆ ತನ್ನದೇ ಹೆಸರನ್ನೂ ಒದಗಿಸಿದೆ.

"ತಮಂಧದ ಅವಸಾನ" ಕತೆಯೊಂದಿಗೆ ತಪ್ಪದೇ ನೆನಪಾಗುವ ಕತೆ ಅಮರೇಶ ನುಗಡೋಣಿಯವರದೇ "ತಮಂಧದ ಕೇಡು". ಇಲ್ಲಿ ಕೇಡು ಕಳೆದು ತಮಂಧವೇ ಅವಸಾನಗೊಂಡ ಕತೆಯೊಂದಿದೆ. ವಿಚಿತ್ರವೆಂದರೆ, ತಮಂಧಕ್ಕೆ ಅಸ್ತಿತ್ವವಿಲ್ಲ. ಇರುವುದು ತಮಂಧವಲ್ಲ, ಬೆಳಕಿನ ಗೈರು. ಬೆಳಕು ಅಸ್ತಿತ್ವದಲ್ಲಿದ್ದಲ್ಲಿ ಕತ್ತಲೆ ತಾನು ಇರುವುದಿಲ್ಲ ಅಷ್ಟೇ. ಪರಂತು ಕತ್ತಲೆಗೇ ಸ್ವತಂತ್ರವಾದ ಅಸ್ತಿತ್ವವಿಲ್ಲ. ಅಥವಾ ನೀವು ಒಂದಿಷ್ಟು ಬೆಳಕನ್ನು ತರಬಹುದೇ ಹೊರತು ಒಂದಿಷ್ಟು ಕತ್ತಲೆಯನ್ನು ಎಲ್ಲಿಂದಲೂ ತರಲಾರಿರಿ. ಕತ್ತಲೆಯನ್ನು ತರುವುದಿದ್ದರೆ ‘ಇರುವ’ ಬೆಳಕನ್ನು ಆರಿಸಿ, ತನ್ಮೂಲಕ ತರಬೇಕಾಗುತ್ತದೆ ಅಷ್ಟೆ. ಹಾಗಾಗಿ, ಇರುವುದು ಬೆಳಕು, ತಮಂಧವಲ್ಲ. ಹಾಗೆ ಈ ಕತೆಯಲ್ಲಿ ನಿರ್ಣಾಯಕವಾದ ಒಂದು ಸನ್ನಿವೇಶ ನಡೆಯುವುದು ಕಗ್ಗತ್ತಲ ಖತಲ್ ರಾತ್ರಿ (ತಮಂಧ) ಧಗಧಗನೆ ಉರಿಯುವ ಕೆಂಡದ (ಬೆಳಕು) ಜೊತೆ ಮಿಂಚು ಗುಡುಗುಗಳ ಧಾರಾಕಾರ ಮಳೆಯೂ ಸುರಿಯುವಾಗ. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ನೆನೆದುಕೊಳ್ಳಿ. ಇಲ್ಲಿಯೂ ಅಂಥದೇ ದ್ವೇಷದ, ಹಿಂಸೆಯ, ಕ್ರೌರ್ಯದ ‘ಅಗ್ನಿ’ಯಿದೆ. ಪ್ರೀತಿಯ ಪ್ರತಿಮೆಯಾದ ‘ಮಳೆ’ಯೂ ಇದೆ. ಖತಲ್ ರಾತ್ರಿ ನೆನಪಿಸುವ ಗಾಢಾಂಧಕಾರವೂ ಇದೆ, ಉರಿವ ಕೆಂಡದ ಬೆಳಕಿನ ಜೊತೆ ಮಿಂಚಿನ ಹೊಳಪೂ ಇದೆ. ಅಂಧಕಾರ ಮನಸ್ಸಿನ ಅಂಧಕಾರವೂ ಆಗಬಹುದು. ಆಧ್ಯಾತ್ಮಿಕ ಕತ್ತಲೆ ಕೂಡಾ ತಮಸ್ಸೇ. ಮಿಂಚು ಎಂಥ ತಮಂಧವನ್ನಾದರೂ ನಾಶಪಡಿಸಬಲ್ಲ ಜ್ಯೋತಿರ್ಮಯಿಯಾಗಬಲ್ಲುದು. ಏಕೆಂದರೆ, ಅರಿವಿನ ಬೆಡಗೇ ಹಾಗೆ, ಅರಿವು ಬಂದಾಗ ಅಜ್ಞಾನವೆನ್ನುವುದೇ ಇರುವುದಿಲ್ಲ. ಬೆಳಕು ಬಂದಾಗ ಕತ್ತಲೆಯೆನ್ನುವುದೇ ಇರುವುದಿಲ್ಲ. ಅದು ಇಷ್ಟಿಷ್ಟೇ ಇಷ್ಟಿಷ್ಟೇ ಇಲ್ಲವಾಗುವುದಲ್ಲ್, ಒಮ್ಮೆಗೇ ಮಿಂಚಿನಂತೆ ಇಲ್ಲವಾಗುತ್ತದೆ ಎನ್ನುವುದೇ ಅದರ ವಿಚಿತ್ರ ಸತ್ಯ. ಹಾಗೆಯೇ ಗುಡುಗು ಮನುಷ್ಯನೆದೆಯ ಪಾಪವನ್ನು ನಡುಗಿಸಬಲ್ಲದು. ಮೇಲ್ನೋಟಕ್ಕೆ ಇಲ್ಲಿರುವುದು ಲಂಕೇಶರ ‘ಕಲ್ಲು ಕರಗುವ ಸಮಯ’ವನ್ನು ನೆನಪಿಸುವ ಒಂದು ಮುಗ್ಧ ಪ್ರೇಮವೇ ಆದರೂ ಕಾಗೆಯ ಪ್ರಸಂಗದೊಂದಿಗೆ ಇಡೀ ಕಥಾನಕಕ್ಕೆ ದೊರಕುವ ಒಂದು ಹೊಸತೇ ಆದ ಪಾತಳಿ ನಾವು ಅದುವರೆಗೂ ನೋಡುತ್ತಲೇ ಬಂದ ಅವೇ ಮನುಷ್ಯರನ್ನು ನೋಡುವ, ನೋಡಬಹುದಾದ ಹೊಸ ಕೋನವೊಂದನ್ನು ನಿರ್ಮಿಸಿಬಿಡುತ್ತದೆ ಎನ್ನುವುದೇ ಒಂದು ಹೊಸ ದರ್ಶನ! ಅಮರೇಶರ ಅದ್ಭುತ ಕಾಣ್ಕೆಗಳಲ್ಲಿ ಈ ಕತೆಯೂ ಒಂದಾಗಿ ಸೇರಿಬಿಡುತ್ತದೆ.

"ಕರುಳ ಬಂಧ" ಈ ಸಂಕಲನದ ಕೊನೆಯ ಕತೆ. ಅಮರೇಶ ನುಗಡೋಣಿಯವರ ಅನೇಕ ಕತೆಗಳಲ್ಲಿ ಕೊನೆಯಲ್ಲಿ ಬರುವ ಒಂದು ತಿರುವು, ಘಟನೆ ಇಡೀ ಕತೆಗೆ ಒಂದು ಗಮ್ಯ ಒದಗಿಸುವುದು ಸತ್ಯ. ಹೆಚ್ಚಿನೆಲ್ಲಾ ಕತೆಗಾರರ ಕತೆಗಳಿಗೂ ಇದು ನಿಜವೇ. ಸಣ್ಣಕತೆಯ ಒಂದು ಅನಿವಾರ್ಯ ಲಕ್ಷಣವೋ ಎಂಬಂತೆ ಅದರ ಪಂಚ್‌ಲೈನ್, ಅದರ ಕೊನೆಯ ತಿರುವು, ಕ್ಲೈಮ್ಯಾಕ್ಸ್ - ‘ಇದುವರೆಗೂ ನಾನು ಹೇಳಹೊರಟಿದ್ದು ಇದನ್ನೇ ಆಗಿತ್ತು’ ಎಂಬಂಥ ಭರತವಾಕ್ಯವಾಗುವುದು ಇದ್ದಿದ್ದೇ. ಅದರಲ್ಲಿ ಅಂಥ ವಿಶೇಷವೇನಿಲ್ಲ. ಆದರೆ ಅಪರೂಪಕ್ಕೆಂಬಂತೆ ಕೇಶವ ಮಳಗಿಯಂಥವರ ಕೈಯಲ್ಲಿ, ಅಮರೇಶ ನುಗಡೋಣಿಯಂಥವರ ಕೈಯಲ್ಲಿ ಇಡೀ ಕತೆಯ ನಿರೂಪಣೆಯ ಗುರುತ್ವ, ಅದರ ಇಡೀ ಒಡಲ ಸೌಂದರ್ಯ, ಅದರ ಆತ್ಮ ಈ ಒಂದು ಕೊನೆಗೆ ಮುಖಮಾಡಿದಂತೆ ಓಟ ಹೂಡಿರುವುದೇ ಇಲ್ಲ ಎನ್ನುವುದನ್ನು ಎಚ್ಚರಿಕೆಯಿಂದ, ಸೂಕ್ಷ್ಮವಾಗಿ ಗಮನಿಸಬೇಕು. ಇವರ ಕತೆಯಲ್ಲಿ ಅಂಥ ಪಂಚ್‌ಲೈನ್ ಅಥವಾ ತಿರುವು ಅಥವಾ ಕ್ಲೈಮ್ಯಾಕ್ಸ್ ರಂಜನೆಗಾಗಿಯೋ ಎಂಬಂತೆ ಬಂದರೂ ಅದು ಇದ್ದೂ ಇಲ್ಲದಂತೆ ಗೌಣವಾಗಿ ಬಿಡುವುದಿದ್ದರೆ ಅದಕ್ಕೆ ಕಾರಣವಾದದ್ದು ನಾನು ಮೇಲೆ ಹೇಳಿದಂತೆ ಇಡೀ ಕಥೆಯ ಒಟ್ಟಾರೆ ಚಂದ, ಬಿಗು, ಸಂಯಮ ಮತ್ತು ಸಂತುಲನ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, October 4, 2019

ರಕ್ತ, ಹಿಂಸೆ, ಕ್ರೌರ್ಯ ಮತ್ತು ಮರವಾಗಿ ನಿಲ್ಲುವ ಬಯಕೆ

ಕೊರಿಯಾದ ಹಾನ್ ಕಾಂಗ್ ಬರೆದ "ದ ವೆಜಿಟೇರಿಯನ್" ಎಂಬ ಕಾದಂಬರಿಗೆ 2016ರ ಮ್ಯಾನ್ ಬುಕರ್ ಪ್ರಶಸ್ತಿ ಬಂದ ಮೇಲೆ ಅವರ ಇನ್ನೊಂದು ಕಾದಂಬರಿ "ಹ್ಯೂಮನ್ ಆಕ್ಟ್" ಕೂಡಾ ಇಂಗ್ಲೀಷಿಗೆ ಬಂತು. ಈಗ "ದ ವೈಟ್ ಬುಕ್" ಕೂಡಾ ಇಂಗ್ಲೀಷಿನಲ್ಲಿ ಓದಲು ಸಿಗುತ್ತಿದೆ. ಫೆಬ್ರವರಿ 2017ರ "ಮಯೂರ" ಮಾಸ ಪತ್ರಿಕೆಯಲ್ಲಿ ಜ ನಾ ತೇಜಶ್ರೀಯವರು ಹಾನ್ ಕಾಂಗ್ ಅವರ ಸೃಜನಶೀಲ ಅಭಿವ್ಯಕ್ತಿಯ ಹಿಂದಿನ ಮೂಲಭೂತ ಪ್ರಶ್ನೆಗಳೆಂದು ಹೇಳಬಹುದಾದ ಮನುಷ್ಯ, ಮನುಷ್ಯತ್ವ, ಹಿಂಸೆ, ಕ್ರೌರ್ಯ, ಸ್ತ್ರೀಮತ ಇತ್ಯಾದಿಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ.

"ದ ವೆಜಿಟೇರಿಯನ್" ಕಾದಂಬರಿಯ ಮುಖ್ಯ ಮೂರು ಆಯಾಮಗಳನ್ನು ಹೀಗೆ ಗುರುತಿಸಬಹುದಾದರೆ ಅವು
1. ಮನುಷ್ಯನ ಪ್ಯೂರಿಟಿಯ ಪರಿಕಲ್ಪನೆ
2. ಅದು ಮಾನಸಿಕ ಕಾಯಿಲೆಯಾಗಬಹುದಾದ ಹಂತ
3. ಮನುಷ್ಯನಾಗಿರುವುದಕ್ಕಿಂತ ಮರವಾಗುವುದು ಶ್ರೇಷ್ಠ ಎಂಬ ಪರಿಕಲ್ಪನೆಗಿರುವ ವ್ಯಾಪಕತೆ.

ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಹಿಂಸೆಯನ್ನು, ಕ್ರೌರ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಹಾಗಾಗಿ ನೀಚ ಎನ್ನುವುದು ಅವನ ಪ್ಯೂರಿಟಿ ಕುರಿತ ಪರಿಕಲ್ಪನೆಯಿಂದಲೇ ಹುಟ್ಟಿರುವಂಥದ್ದು. ಹಾಗೆ ನೋಡಿದರೆ ಸಸ್ಯಕ್ಕೆ ಕೂಡ ಜೀವವಿದೆ. ಅದನ್ನು ಅದರ ಬೇರಿನಿಂದ, ಅದರ ಸಹಜ ಸಾವಿಗೂ ಮುನ್ನ ಕಡಿದೇ ಮನುಷ್ಯ ಅದನ್ನು ಬಳಸುತ್ತಾನೆ. ಹಣ್ಣು, ಹೂವು, ದ್ವಿದಳ ಧಾನ್ಯದ ಕೋಡುಗಳು ಮುಂತಾದ ಹಣ್ಣು ಮತ್ತು ತರಕಾರಿಗಳನ್ನು ಬಳಸುವಾಗ ಸಸ್ಯದ ಜೀವ ನಷ್ಟವಾಗದಿರಬಹುದು. ಅಥವಾ ಅವು ಕೇವಲ ಒಮ್ಮೆ ಮಾತ್ರ ಫಲ ಕೊಡುವ ಗಿಡಗಳಾಗಿದ್ದರೆ ಅದರೊಂದಿಗೇ ಅದರ ಬದುಕು ಮುಗಿಯುತ್ತದೆ. ನೆಲದಡಿ ಬೆಳೆಯುವ ಗಡ್ಡೆಗಳು, ಬೀಜ ಇತ್ಯಾದಿಗಳನ್ನು ಬಳಸುವಾಗ ಜೀವ ಹತ್ಯೆಯಾಗುತ್ತದೆ. ಅದೇ ರೀತಿ, ಜೀವ ಹತ್ಯೆಯಾಗುತ್ತದೆ ಎಂದು ಬೆಳೆದು ನಿಂತ ಭತ್ತದ ಸಸಿಯನ್ನು ಕಟಾವು ಮಾಡದಿದ್ದರೂ ಅದು ಸಾಯುತ್ತದೆ.

ಮನುಷ್ಯನನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಜೀವಿ ಬೆಳೆದ ಬಳಿಕವೂ ಇನ್ನೊಂದು ಪ್ರಾಣಿಯ ಹಾಲನ್ನು ಸೇವಿಸುವುದಿಲ್ಲ. ಒಂದು ಹಸು ತಾನು ಉತ್ಪಾದಿಸುವ ಹಾಲನ್ನು ತನ್ನ ನವಜಾತ ಕರುವಿಗಾಗಿ ಹಿಡಿದಿಟ್ಟುಕೊಳ್ಳಲು ಎಷ್ಟು ಸಾಹಸ ಪಡುತ್ತದೆಂದರೆ, ಅದು ತನ್ನ ಕೆಚ್ಚಲಿನಿಂದ ಹಾಲನ್ನು ಸರಾಗ ಸುರಿಸಲಿ ಎಂದೇ ಕರುವನ್ನು ಬಿಟ್ಟ ನಾಟಕ ಮಾಡಿ, ತಕ್ಷಣವೇ ಅದನ್ನು ಕಟ್ಟಿ ಹಾಕಿ ಹಾಲು ಕರೆದುಕೊಳ್ಳಲಾಗುತ್ತದೆ. ಈಗ ಬಿಡಿ, ಎಲ್ಲ ಹೈಬ್ರಿಡ್ಡುಗಳ ಕಾಲ. ಆದರೆ ಬೇಕೆಂದರೆ ಇಲ್ಲಿಯೂ ಹಿಂಸೆಯನ್ನು ಕಾಣಲು ಸಾಧ್ಯವಿದೆ.

ಇದೇ ಮಾತನ್ನು ಪ್ರಾಣಿಗಳಿಗೂ ಅನ್ವಯಿಸಬಹುದು. ಮೊಟ್ಟೆ ಮುಂದೆ ಕೋಳಿಯಾಗುವುದೋ, ತಟ್ಟೆಯ ಮೇಲೆ ಫ್ರೈಯಾಗುವುದೋ ಎಂಬ ಪ್ರಶ್ನೆಯೊಂದೇ ಹಿಂಸೆಯನ್ನು ನಿರ್ಧರಿಸುವುದಿಲ್ಲ. ಕೋಳಿಯನ್ನು ಯಾರೂ ತಿನ್ನುವುದೇ ಇಲ್ಲ ಎಂದು ನಿರ್ಧರಿಸಿದರೆ ಸಹ ಅದರ ಸಾವು ತಪ್ಪುವುದಿಲ್ಲ. ಹಾಗೆಂದು ಮನುಷ್ಯ ಸತ್ತ ಕೋಳಿಯನ್ನಷ್ಟೇ ತಿನ್ನುವುದು ಕೂಡ ಸಾಧ್ಯವಿಲ್ಲ. ಇನ್ನು ದನ, ಒಂಟೆಯಂಥ ಪ್ರಾಣಿಗಳ ವಿಷಯಕ್ಕೆ ಬಂದರೆ ಅದಕ್ಕೆ ಇನ್ನಷ್ಟು ‘ಶವ ವಿಲೇವಾರಿ’ಯ ಸಮಸ್ಯೆಗಳೆಲ್ಲ ಗಂಟು ಬೀಳುತ್ತವೆ.

ಪುಣ್ಯಕೋಟಿಯನ್ನು ತನ್ನ ಕರುವಿನೊಂದಿಗೆ ಬದುಕಲು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ಖೂಳವ್ಯಾಘ್ರ ನಮಗೆಲ್ಲ ಆದರ್ಶವಾಗಿ ಎಷ್ಟೇ ಇಷ್ಟವಾದರೂ ವ್ಯಾಘ್ರಗಳೆಲ್ಲ ಹುಲ್ಲು ತಿಂದುಂಡು ಸುಖವಾಗಿರಲು ಸಾಧ್ಯವಿಲ್ಲ ಎನ್ನುವುದು ಕೂಡ ಗೊತ್ತಿರುತ್ತದೆ. ಮಹಾನ್ ಸಸ್ಯಾಹಾರಿ ಕೂಡ ಬಾಂಬುಗಳನ್ನು ಸಿಡಿಸಿ ನೂರಾರು ಜನರ ಸಾವಿಗೆ ಕಾರಣನಾಗಬಲ್ಲ ಎನ್ನುವುದು ಕೂಡ ನಮಗೆ ಗೊತ್ತು. ಹಿಂಸೆ ಮತ್ತು ಕ್ರೌರ್ಯ ನಾವು ತಿನ್ನುವ ಆಹಾರದಲ್ಲಿದೆಯೇ ಅಥವಾ ನಮ್ಮ ಸ್ವಭಾವದಲ್ಲಿದೆಯೇ ಮತ್ತು ನಮ್ಮ ಸ್ವಭಾವ ಮತ್ತು ಆಹಾರಕ್ಕೆ ಇರುವ ನಂಟು ಬರೀ ಭೌತಿಕ ಆಹಾರಕ್ಕಷ್ಟೇ ಸೀಮಿತವಾಗಿದೆಯೇ, ಮನಸ್ಸು-ಮೆದುಳು ತಿನ್ನುವ ಸಂಗತಿಗಳನ್ನೆಲ್ಲ ವೆಜ್-ನಾನ್‌ವೆಜ್ ಎಂದು ವಿಂಗಡಿಸಲು ಸಾಧ್ಯವೇ ಎಂಬ ಪ್ರಶ್ನೆಗಳೆಲ್ಲ ಇವೆ.

ಸಸ್ಯಾಹಾರ ದೇಹಕ್ಕೆ ಪ್ಯೂರಿಟಿ ಒದಗಿಸುತ್ತದೆ ಎನ್ನುವ ಭ್ರಮೆಯಿಂದಲೇ ನಾವೇನು ತಿನ್ನುತ್ತೇವೆ, ತಿನ್ನಬೇಕು ಎನ್ನುವ ಆದರ್ಶಗಳು ಹುಟ್ಟಿಕೊಂಡಿರಬೇಕು ಅನಿಸುತ್ತದೆ. ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು ಅವರಂಥ ಮೇಲ್ಜಾತಿಯವರಾಗುವ ಆದರ್ಶಕ್ಕೆ ಬಿದ್ದವರು ಮಾಂಸಾಹಾರ ತ್ಯಜಿಸುವುದು ಕಂಡು ಬರುತ್ತದೆ. ಕುವೆಂಪು ಅವರ ಹೂವಯ್ಯನನ್ನು ಅವನ ದಾಯದಿಗಳು ತಮಾಷೆ ಮಾಡುವುದು, ಹಂಗಿಸುವುದು ನೆನಪಾಗುತ್ತದೆ.

ಮಾಂಸಾಹಾರ ಜೀರ್ಣಗೊಂಡು, ಅದರ ಅನಗತ್ಯ ಅಂಶಗಳು ದೇಹದಿಂದ ವಿಸರ್ಜಿಸಲ್ಪಡಲು ಹಿಡಿಯುವ ಕಾಲಾವಧಿಗೂ, ಸಸ್ಯಾಹಾರಕ್ಕೆ ಹಿಡಿಯುವ ಕಾಲಾವಧಿಗೂ ನಮ್ಮ ಕರುಳಿನ ಐದಾರು ಅಡಿ ಉದ್ದಳತೆಗೂ ಒಂದು ಅನುಪಾತ ಹಾಕಿ, ಪ್ರಾಣಿಗಳಿಗೆ ಹಾಗಿಲ್ಲ, ಮನುಷ್ಯ ಮೂಲಭೂತವಾಗಿ ಮಾಂಸಾಹಾರಿಯಲ್ಲ, ಅದು ಅವನ ಆಹಾರ ಪದ್ಧತಿಯಾಗಲು ಸೂಕ್ತವಾಗಿಲ್ಲ ಎನ್ನುವ ವೈಜ್ಞಾನಿಕ ವಿಶ್ಲೇಷಣೆಯನ್ನು ಕೂಡ ಆಗಾಗ ಕೇಳುತ್ತೇವೆ. ಇದೆಲ್ಲ ನಿಜವಿರಬಹುದು. ಮಲಬದ್ಧತೆ ಮತ್ತು ಅಂಥವೇ ಕೆಲವು ಸಮಸ್ಯೆಗಳಿರುವವರು ಸಸ್ಯಾಹಾರವನ್ನೂ ತಿನ್ನಬಾರದು ಎಂದು ಇದೇ ಕಾರಣಕ್ಕೆ ಸಲಹೆ ಕೊಡಲು ಅಡ್ಡಿಯಿಲ್ಲ.

ಆದರೆ ನಾವೆಷ್ಟೇ ಬಾರಿ ಸ್ನಾನ ಮಾಡಿ, ರೇಷ್ಮೆಯ ಮಡಿಯುಟ್ಟು, ಶರ್ಟು ಬನಿಯನ್ನು ಕಳಚಿ (ಇದು ಜನಿವಾರ ಇದೆಯಾ ಇಲ್ಲವಾ ಎಂದು ತಿಳಿಯುವುದಕ್ಕೆ ಅಷ್ಟೆ) ಕ್ಯೂನಲ್ಲಿ ನಿಂತರೂ ನಾವು ನಿನ್ನೆ-ಮೊನ್ನೆ ತಿಂದಿದ್ದು ಮಲವಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ನಮ್ಮ ಕರುಳಿನಲ್ಲಿ ಜಾರಿಯಿರುತ್ತದೆ ಎನ್ನುವುದು ಸತ್ಯ. ಹಾಗಾಗಿ ಸ್ವಿಚ್ ಒತ್ತಿದಂತೆ ನಮ್ಮ ದೇಹದಲ್ಲಿ ಮಲ ತಯಾರಾಗುವ ಕಾಲ ಬರುವವರೆಗೂ ನಾವು ನಮ್ಮ ದೇಹ ಪುಟ್ಟ ಲ್ಯಾವೆಟ್ರಿಯನ್ನು ಹೊತ್ತಿರುತ್ತದೆ ಎನ್ನುವುದನ್ನು ಇಷ್ಟವಾಗದಿದ್ದರೂ ಒಪ್ಪಿಕೊಳ್ಳಲೇ ಬೇಕು. ಅಂದ ಮೇಲೆ ಪ್ಯೂರಿಟಿ ಎಲ್ಲಿಂದ ಬಂತು ದೇಹಕ್ಕೆ! ಅಲ್ಲದೆ, ಬೆವರಿದರೆ, ಸೀನಿದರೆ, ಕೆಮ್ಮಿದರೆ, ಅಪಾನವಾಯು ಬಿಟ್ಟರೆ, ತೇಗಿದರೆ, ಉಗಿದರೆ, ಮಲಗಿದರೆ, ಲೈಂಗಿಕ ಉದ್ರೇಕವಾದರೆ, ಕೆಲವೊಂದು ಜಾತಿಯವರೊಂದಿಗೆ ಮತ್ತು ಋತುಸ್ರಾವದ ಅವಧಿಯಲ್ಲಿರುವ ಹೆಣ್ಣಿನೊಂದಿಗೆ ಮಾತನಾಡಿದರೆ - ಅಥವಾ ಅವರನ್ನು ಮುಟ್ಟಿದರೆ ಮಡಿ ಹಾಳಾಗುವುದಂತೆ. ಹಾಗಾಗಿ ಅಂಥ ಸಂದರ್ಭಗಳಲ್ಲೆಲ್ಲ ಪುನಃ ಸ್ನಾನ ಅಗತ್ಯವಾಗುತ್ತದೆ. ಹಾಗಾಗಿ ಕೊಂಕಣಿಯಲ್ಲಿ ಚರ್ಮ ತೊಳೆದರೆ ಕರ್ಮ ಬಿಡುತ್ತಾ ಎನ್ನುವ ಗಾದೆಯೊಂದಿದೆ. ಸಾವಿನ ಸುದ್ದಿ ಕೇಳಿದರೆ ಸ್ನಾನದೊಂದಿಗೆ ಜನಿವಾರವನ್ನೂ (ಹಳೆಯದು ಇದ್ದವರು) ಬದಲಿಸಬೇಕಾಗುತ್ತದೆ. ಈ ಲಿಸ್ಟಿನಲ್ಲಿ ಮನಸ್ಸು ಎಂಥೆಂಥ ಕೊಳಕನ್ನೆಲ್ಲ ತಿನ್ನುತ್ತ, ಮೆಲ್ಲುತ್ತ, ನುಂಗುತ್ತ ಇರಬಹುದು ಎನ್ನುವ ಬಗ್ಗೆ ಉಲ್ಲೇಖಗಳಿಲ್ಲ. ಮುಖ್ಯ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಉಪವಾಸ ಮಾಡುವವರನ್ನು ಕಂಡಾಗ ಇದೆಲ್ಲ ಬೇಡವೆಂದರೂ ನೆನಪಾಗುತ್ತದೆ. ಹಾಗಂತ ಮನಸ್ಸು ಕೇಳದಿದ್ದರೂ ಉಪವಾಸ ದೇಹಕ್ಕೆ ಒಳ್ಳೆಯದೇ ಎನ್ನುತ್ತಾರೆ.

ಹೋಗಲಿ ಎಂದರೆ, ನಮಗೆಲ್ಲ (ಮಾಂಸಾಹಾರಿಗಳಿಗೆ) ಇಷ್ಟವಾದ ಚಿಕನ್‌ಗೆ ನಿಜವಾಗಲೂ ನಮಗಿಷ್ಟವಾದ ಟೇಸ್ಟ್ ಬರುವುದು ಕೋಳಿ ಸತ್ತು, ಅದರ ದೇಹದಲ್ಲಿನ ಮಲಮೂತ್ರಗಳೆಲ್ಲ ಕೊಳೆತು, ಅದರ ದೇಹದಲ್ಲಿರುವ ಬ್ಯಾಕ್ಟೀರಿಯಾಗಳು ಕೂಡ ಕೊಳೆತ ಬಳಿಕವಷ್ಟೇ ಅಂತೆ! ಮನೆಯಲ್ಲೇ ಕೊಂದ ಕೋಳಿಯನ್ನು ತಕ್ಷಣವೇ ಬೇಯಿಸಿ ತಿಂದರೆ ಹೋಟೇಲ್ ಚಿಕನ್ನಿನ ಟೇಸ್ಟ್ ಅದಕ್ಕಿರುವುದೇ ಇಲ್ಲವಂತೆ! ಈ ಕಾರಣಕ್ಕೂ ನಾವು ಚಿಕನ್ ತಿನ್ನುವುದನ್ನೇ ಬಿಟ್ಟು ಬಿಡಬಹುದು.

ಆದರೆ ಪ್ಯೂರಿಟಿ ಎನ್ನುವ ಭ್ರಮೆಗೆ ಬಿದ್ದರೆ ಏನೇನಾಗಬಹುದು ಎನ್ನುವುದಕ್ಕೆ ಹಾನ್‌ಕಾಂಗ್ ಬರೆದ "ದ ವೆಜಿಟೇರಿಯನ್" ಕಾದಂಬರಿ ಒಂದು ಒಳ್ಳೆಯ ಉದಾಹರಣೆಯೇ ಆಗಿದೆ, ಅವರ ಮೂಲ ಉದ್ದೇಶ ಅದಲ್ಲದಿದ್ದರೂ. ಅದಕ್ಕೆ ಹೊರಳುವುದಕ್ಕೂ ಮುನ್ನ ಇನ್ನೆರಡು ವಿಚಾರಕ್ಕೆ ಮನಸ್ಸು ಹರಿಸಬೇಕಿದೆ. ಒಂದು ಮುಟ್ಟು ಮತ್ತೊಂದು ಲೈಂಗಿಕ ಪ್ಯೂರಿಟಿ.

ಪುರೋಹಿತರೊಬ್ಬರು ತಮಗೆ ಸೂಕ್ತ ವಧು ಸಿಗದೇ ಹೋದ ಸಂದರ್ಭದಲ್ಲಿ ಮಾಂಸಾಹಾರಿ ಕುಟುಂಬವೊಂದರ ಹೆಣ್ಣನ್ನು ಮಾಡಿಕೊಳ್ಳುವುದರಲ್ಲಿದ್ದರು. ಅವರ ಜೊತೆ ಮಾತನಾಡುತ್ತ ಅವರು ಹೇಳಿದ್ದು, ಶುದ್ಧಾಚಾರಕ್ಕೆ ಮಾಂಸಾಹಾರದಿಂದ ಅಂಥ ಭಂಗವೇನಿಲ್ಲವಂತೆ. ಆದರೆ ಹೆಣ್ಣು ಬಹಿಷ್ಠೆಯಾದಾಗ ಮಾತ್ರ ತುಂಬ ಎಚ್ಚರ ವಹಿಸಬೇಕಂತೆ. ಅಂದರೆ, ಸ್ಪಷ್ಟವಾಗಿಯೇ ಮಾಂಸಾಹಾರದಿಂದ ಉಂಟಾಗಬಹುದಾದ ಅಶುದ್ಧಿಗಿಂತಲೂ ಮುಟ್ಟಾದ ಹೆಣ್ಣಿನಿಂದಾಗುವ ಅಶುದ್ಧಿ ದೊಡ್ಡದು. ದೇಹದಿಂದ ಹೊರಕ್ಕೆ ಸೃವಿಸುವ ಯಾವುದನ್ನೇ ಆದರೂ ಅಶುದ್ಧಿ ಎಂದು ಒಪ್ಪಿಕೊಂಡೆವು ಎಂದೇ ಇಟ್ಟುಕೊಳ್ಳಿ. ಇಂಥವೇ ಕೆಲವು ಸ್ರಾವಗಳನ್ನು ಹೊಂದಿರುವ ಗಂಡಸರು ನನಗೆ ಗೊತ್ತು. ಉದಾಹರಣೆಗೆ ಕೆಲವೊಂದು ಅಸಹ್ಯಗಳನ್ನಿಲ್ಲಿ ಹಂಚಿಕೊಳ್ಳುತ್ತೇನೆ.

ನಾನು ಪ್ರತಿನಿತ್ಯ ಪ್ರಯಾಣಿಸುವ ಬಸ್ಸಿಗೆ ನನ್ನದೇ ಸ್ಟಾಪಿನಲ್ಲಿ ಕಾಯುವ ಇನ್ನೊಬ್ಬ ವ್ಯಕ್ತಿ ನನಗೆ ಗೊತ್ತು. ಈತ ಬಸ್ ಬರುವುದಕ್ಕೂ ತುಂಬ ಮೊದಲೇ ಬಂದು ಸ್ಟ್ಯಾಂಡಿನಲ್ಲಿ ನಿಂತಿರುತ್ತಾನೆ. ನಾನು ಸ್ಟ್ಯಾಂಡಿಗೆ ಬರುವ ಪ್ರತಿ ಸಂದರ್ಭದಲ್ಲೂ ನೋಡಿದಂತೆ ಈತ ಅತೀವ ಏಕಾಗ್ರತೆಯಿಂದ ತನ್ನ ಎರಡೂ ಮೂಗಿನ ಹೊಳ್ಳೆಗಳೊಳಗೆ ತನ್ನ ಬೆರಳನ್ನು ಸಾಧ್ಯವಾದಷ್ಟೂ ಒಳಕ್ಕೆ ತೂರಿ ಅಲ್ಲಿ ಸಿಗುವ ಸಾಮಾಗ್ರಿಯನ್ನು ಹೊರತೆಗೆದು ಒಮ್ಮೆ ಪರಿಶೀಲಿಸಿ ಎಸೆಯುತ್ತಿರುತ್ತಾನೆ. ಬಸ್ ಬರುವ ತನಕವೂ ಇದು ಮುಂದುವರಿಯುತ್ತದೆ. ಆಮೇಲೆ ಆ ದಿವ್ಯ ಹಸ್ತ ಬಸ್ಸಿನ ಹಿಡಿಕೆ, ಮೇಲಿನ ರಾಡು ಸವರಿಕೊಂಡೇ ಐದಾರು ಅಡಿ ಸರಿಯುತ್ತದೆ ಮತ್ತು ಆತನ ಹಿಂದಿನಿಂದ ನಾವು ಅದೇ ರಾಡನ್ನು ಸವರುತ್ತ ಪುನೀತರಾಗುತ್ತೇವೆ. ಆಫೀಸು ಹೊಕ್ಕ ತಕ್ಷಣ ನಮ್ಮಲ್ಲಿ ಯಾರೋ ಬರ್ತ್‌ಡೇ ಅಂತಲೋ, ಹೆರಿಗೆ ಸುಸೂತ್ರ ಆಯಿತೆಂದೋ, ತಿರುಪತಿಗೆ ಹೋಗಿ ಬಂದೆವು ಅಂತಲೋ ಲಡ್ಡು, ಜಿಲೇಬಿ, ಪಂಚಕಜ್ಜಾಯ ಕೈಗಿತ್ತು ಹೋಗುತ್ತಾರೆ. ಕೈ ತೊಳೆಯುವುದನ್ನು ಮರೆತಿದ್ದ ನಾವು ಅದನ್ನು ತಿನ್ನುತ್ತೇವೆ.

ಮಳೆಗಾಲದಲ್ಲೊಮ್ಮೆ ನನ್ನೆದುರು ಸೀಟಿನಲ್ಲಿ ಕುಳಿತ ಸುಶಿಕ್ಷಿತ ಎನಿಸುವಂತೆ ದಿರಿಸು ತೊಟ್ಟಿದ್ದ ವ್ಯಕ್ತಿ ಬಾಯಲ್ಲಿ ಗುಟ್ಕಾವನ್ನೊ, ಬೀಡವನ್ನೊ ಅಗಿಯುತ್ತಿದ್ದ. ಹಾದಿಯಲ್ಲಿ ಅವನಿಗೆ ಉಗಿಯುವ ತುರ್ತು ಹುಟ್ಟಿಕೊಂಡಿತು. ಮಂಗಳೂರಿನ ನಿವಾಸಿಗಳಿಗೆ ಇದರಲ್ಲಿ ಯಾವ ವಿಶೇಷವೂ ಕಾಣುವುದಿಲ್ಲ ಎನ್ನುವುದು ಬಲ್ಲೆ. ಆದರೆ ಹೊರಗೆ ಭಾರೀ ಮಳೆ ಸುರಿಯುತ್ತಿದ್ದುದರಿಂದ ಎರಡೂ ಕಡೆ ಟರ್ಪಾಲು ಇಳಿಬಿಟ್ಟಿದ್ದರು ಮತ್ತು ಟರ್ಪಾಲು ಎತ್ತದೆ ಉಗಿಯುವುದಕ್ಕೆ ಸಾಧ್ಯವಿರಲಿಲ್ಲ. ಅವನು ಜಾಣ. ಅಲ್ಲೇ ಟರ್ಪಾಲಿನಲ್ಲಿ ಒಂದು ರೂಪಾಯಿ ನಾಣ್ಯದಷ್ಟು ದೊಡ್ಡ ತೂತು ಕಂಡು ಹಿಡಿದು, ತಕ್ಷಣ ತುಟಿಗೆ ಎರಡು ಬೆರಳಿನ ಚೌಕಟ್ಟು ಹಾಕಿ ಗುರಿಯಿಟ್ಟು ಪಿಚಕ್ ಎಂದು ಉಗಿದೇ ಬಿಟ್ಟ. ದುರಾದೃಷ್ಟವಶಾತ್ ಗುರಿ ತಪ್ಪಿತು, ಆತನ ಜೊಲ್ಲಿನೊಂದಿಗೆ ಗುಟ್ಕಾದ ರಸ ತೂತಿನಿಂದ ಹೊರಹೋಗದೆ ಟರ್ಪಾಲಿಗೆ ಬಡಿದು ನಿಧಾನಕ್ಕೆ ಟರ್ಪಾಲಿನ ತುಂಬ ಹರಡಿಕೊಂಡು ಕೆಳಕ್ಕಿಳಿಯತೊಡಗಿತು. ಆತ ಎದ್ದು ಹೋಗುತ್ತಾನೆ, ಇನ್ನೊಬ್ಬನೊ ಇನ್ನೊಬ್ಬಳೋ ಬಂದು ಕುಳಿತುಕೊಳ್ಳುತ್ತಾಳೆ, ಮಳೆ ನಿಲ್ಲುತ್ತದೆ, ಹೊರಗೆ ಹೇಗಿದೆ ನೋಡಬೇಕೆಂದು ಮುತುವರ್ಜಿಯಿಂದ ಟರ್ಪಾಲನ್ನು ಮಡಚಲು ಮುಂದಾಗುತ್ತಾರೆ.

ಸ್ವಿಮ್ಮಿಂಗ್ ಪೂಲಿನಲ್ಲಿ ಉಚ್ಚೆ ಹೊಯ್ಯುವವರು ಸೇರಿದಂತೆ ಹಲವು ಹತ್ತು ಬಗೆಯ ಸ್ರಾವಗಳನ್ನು ನಾವು ದಿನನಿತ್ಯ ಸ್ವೀಕರಿಸಿಕೊಂಡೇ ಬದುಕುತ್ತಿರುವುದು ಸತ್ಯ. ಎಷ್ಟು ಮಂದಿ ಕೆಮ್ಮುವಾಗ, ಆಕಳಿಸುವಾಗ ಬಾಯಿಗೆ ಏನಾದರೂ ಅಡ್ಡ ಹಿಡಿಯುತ್ತಾರೆ ಹೇಳಿ? ಎಷ್ಟು ಮಂದಿ ಪುಟ ತಿರುವುವಾಗ ಅಯಾಚಿತ ಬಾಯಿಗೆ ಕೈಯಿಕ್ಕಿ ತಮ್ಮ ಜೊಲ್ಲನ್ನು ಆ ಪುಟಕ್ಕೆ ಸವರುವುದಿಲ್ಲ ಹೇಳಿ? ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈಗಲೂ ಮಂಗಳೂರಿನ ಎಂಜಿ ರೋಡಿನಲ್ಲಿರುವ ಒಂದು ಪ್ರತಿಷ್ಠಿತ ಟ್ರಾವೆಲ್ ಏಜೆನ್ಸಿಯ ಮಹಿಳಾ ಸಿಬ್ಬಂದಿ ತಾವು ಮುಟ್ಟಾದಾಗ ಬಾಸ್ ಕ್ಯಾಬಿನ್ನೊಳಗೆ ಪ್ರವೇಶಿಸುವಂತಿಲ್ಲ! ಎಜುಕೇಟೆಡ್ಡುಗಳು ಪ್ಯೂರು, ಅನ್‌ಎಜುಕೇಟೆಡ್ದುಗಳು ಗಲೀಜು. ಮುಟ್ಟಿನ ಸ್ರಾವ ಅನಾರೋಗ್ಯಕರ, ಉಳಿದವೆಲ್ಲ, ಮುಖ್ಯವಾಗಿ ಗಂಡಸರದ್ದು ಆರೋಗ್ಯಕರ. ಇಡೀ ಮಂಗಳೂರಿನ ತುಂಬ ಗುಟ್ಕಾ ತಿಂದು ಉಗುಳುತ್ತಿದ್ದ ಉಗುಳುಭಟರದ್ದೇ ಸಾಮ್ರಾಜ್ಯವಾಗಿ ಬಿಟ್ಟಿದ್ದ ಕಾಲವೊಂದಿತ್ತು. ಈಗ ಅದು ಅಲ್ಪ ಸ್ವಲ್ಪ ಸುಧಾರಿಸಿದೆ ಎನ್ನುವುದು ನಿಜ. ಆದರೆ ಸ್ರಾವ ಪೂರ್ತಿ ನಿಂತಿಲ್ಲ.

ಇನ್ನು ಕಾಮ. ಕಾಮಕ್ಕೂ ಕ್ರೌರ್ಯಕ್ಕೂ, ಹಿಂಸೆಗೂ ಪುರಾತನವಾದೊಂದು ನಂಟಿದೆ. ಟಾಲ್ಸ್‌ಸ್ಟಾಯ್ ಅವರ ‘ಕ್ರೊಯತ್ಸರ್ ಸೊನಾಟ’ ಕತೆಯಲ್ಲಿ ಕಾಮ ಮಹಾ ಹಿಂಸೆ ಎನ್ನುವ ಚಿತ್ರವಿದೆ. ಕಾಮ ಸಹಜವಾದದ್ದಲ್ಲವೇ ಅಲ್ಲ, ಯಾವ ಹೆಣ್ಣೂ ಅದನ್ನು ಮನಸಾ ಬಯಸುವುದಿಲ್ಲ, ಅನಿವಾರ್ಯವೆಂದು ಒಪ್ಪಿಕೊಳ್ಳುತ್ತಾಳಷ್ಟೆ ಎನ್ನುವ ಒಂದು ನಿಲುವು ಅಲ್ಲಿನ ಒಂದು ಪಾತ್ರಕ್ಕಿದೆ. ವಿಚಿತ್ರವೆಂದರೆ ಹೆರಿಗೆಯ ಹಿಂಸೆಯನ್ನೂ ಕಾಮಕ್ಕೇ ತಳುಕು ಹಾಕುವುದು ಮತ್ತು ಅದಕ್ಕೆ ಕಾರಣವಾಗುವ ಕಾಮ ಹಿಂಸೆಯಲ್ಲದೇ ಇನ್ನೇನು ಎನ್ನುವ ತರ್ಕ ಹೂಡುವುದು. ಇನ್ನೊಂದೆಡೆ ತಾಯಾಗುವ ಸಂಭ್ರಮವನ್ನು, ಹೆಣ್ಣಿನ ಬದುಕಿನ ಸಾರ್ಥಕತೆಯನ್ನು ಅದಕ್ಕೆ ಗಂಟು ಹಾಕಿ ಹಬ್ಬ ಮಾಡುವುದು.

ಗಾಂಧಿಯವರಿಗೂ ಅದೇ ಅಭಿಪ್ರಾಯವಿತ್ತು. ತಮ್ಮ ಕೊನೆಯ ದಿನಗಳಲ್ಲಿ ಅವರು ಹರೆಯದ ಹುಡುಗಿಯರ ನಡುವೆ ನಗ್ನವಾಗಿ ಮಲಗಿ ತಮಗೆ ಕಾಮ ನಿಗ್ರಹ ಸಾಧ್ಯವಾಗಿದೆಯೇ ಎಂದು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುತ್ತಿದ್ದರಂತೆ. ಅಂದರೆ, ಕಾಮ ನಿಗ್ರಹ ಸಾಧ್ಯವಾಗದೆ ತಾವು ಹಿಂಸೆಯನ್ನು ಮೀರಿದ್ದೇವೆ ಎಂದುಕೊಳ್ಳುವುದು ತಪ್ಪು ಎನ್ನುವುದು ಕೂಡ ಅವರ ನಿಲುವಾಗಿತ್ತು. ಕಾಮ ಮತ್ತು ಹಿಂಸೆ ಅಥವಾ ಕ್ರೌರ್ಯಕ್ಕೆ ಒಂದು ಸಂಬಂಧ ಇದೆ. ಆದರೆ ಪರಸ್ಪರ ಸಮ್ಮತಿಯಿಂದ ಆಗುವ ಲೈಂಗಿಕ ಸಂಸರ್ಗದಲ್ಲಿ ಕ್ರೌರ್ಯ ಅಥವಾ ಹಿಂಸೆ ಇರುವುದಿಲ್ಲ, ಬಹುಶಃ. ಸಮ್ಮತಿಯಿಲ್ಲದೇ (ಮುಖ್ಯವಾಗಿ ಹೆಣ್ಣಿನದು) ನಡೆಯುವ ಲೈಂಗಿಕ ಅತಿಕ್ರಮಣವನ್ನು ರೇಪ್, ದೌರ್ಜನ್ಯ, ಅತ್ಯಾಚಾರ, ಕ್ರೌರ್ಯ ಎಂದು ಎಲ್ಲರೂ ಒಪ್ಪುತ್ತಾರೆ.

ಬ್ರಹ್ಮಚರ್ಯಕ್ಕೆ ಇರುವ ಶ್ರೇಷ್ಠ ಸ್ಥಾನವನ್ನೂ ಇಲ್ಲಿಯೇ ಗಮನಿಸಬೇಕು. ಬಹುಶಃ ಯಾವುದು ನೈಸರ್ಗಿಕವಾಗಿ ಅಸಹಜವೋ ಅದು ಶ್ರೇಷ್ಠ ಎನ್ನುವ ಒಂದು ಭ್ರಮೆ ಕೂಡಾ ನಮ್ಮಲ್ಲಿ ತಳವೂರಿದೆ. ಸಂನ್ಯಾಸಿಗಳು, ಬ್ರಹ್ಮಚಾರಿಗಳು ನಮಗೆ ಪವಿತ್ರದೇಹಿಗಳು. ಗಾಂಧಿ ಕೂಡ ಇಂಥ ನಿಲುವು ಹೊಂದಿದ್ದರು. ಶಿವರಾಮ ಕಾರಂತರು ಇಲ್ಲಿನ ಕೆಲವು ವೇಶ್ಯೆಯರ ಕುಟುಂಬದಿಂದ ಬಂದ ಹೆಮ್ಮಕ್ಕಳಿಗೆ ಮದುವೆ ಮಾಡಿಸುವ ಪ್ರಯತ್ನದಲ್ಲಿ ತೊಡಗಿ ಅದಕ್ಕೆ ಗಾಂಧಿ ಅನುಯಾಯಿಗಳ ಬೆಂಬಲ ಕೋರಿ ಪತ್ರ ಬರೆದಾಗ ಗಾಂಧಿಯವರು ಕೊಟ್ಟ ಪರಿಹಾರ ‘ಅವರು ಯಾವತ್ತೂ ಆಜನ್ಮ ಬ್ರಹ್ಮಚಾರಿಗಳಾಗಿ ಬದುಕು ಮುಂದುವರಿಸಲಿ’ ಎಂಬುದೇ ಆಗಿತ್ತು. ಕಾರಂತರು ಆಗ "ಈ ಮನುಷ್ಯನಿಗೆ ಬದುಕು ಹೇಗೆ ನಡೆಯುತ್ತದೆ ಎಂಬ ಅರಿವಿಲ್ಲ" ಎಂದು ನಿರ್ಧರಿಸಿ ತಮ್ಮದೇ ಹಾದಿ ತುಳಿಯುತ್ತಾರೆ.

ಒಟ್ಟಾರೆಯಾಗಿ ಮಾಂಸಾಹಾರ, ಕಾಮ ಎರಡೂ ಹಿಂಸೆ ಮತ್ತು ಕ್ರೌರ್ಯದ ಅಂಶಗಳನ್ನು ಹೊಂದಿದೆ. ಮುಟ್ಟು ಇದಕ್ಕೆ ಸಾಂಕೇತಿಕವಾದ ಒಂದು ಪ್ರತಿಮೆಯಾಗಿರುವುದು ಕೂಡ ವಿಚಿತ್ರವಾದರೂ ಸತ್ಯ. ನೀವು "ಪೂಮರಂ" ಎಂಬ ಸಿನಿಮಾವನ್ನು ನೋಡಿರದಿದ್ದರೆ ಅವಶ್ಯ ನೋಡಿ. ಇದು ಯೂಟ್ಯೂಬಿನಲ್ಲಿ ಸಿಗುತ್ತದೆ. ಸ್ತ್ರೀ ಸೂಕ್ತ ವಯಸ್ಸಿನಲ್ಲಿ ಋತುಮತಿಯಾಗುವುದು, ತಾಯಿಯಾಗುವ ಫಲವತ್ತತೆ ಪಡೆಯುವುದು ಎಲ್ಲವನ್ನೂ ಇಲ್ಲಿ ಒಂದು ಮರಕ್ಕೆ ಅನುಸಂಧಾನಗೊಳಿಸಿ ಹೇಳಲಾಗಿದೆ. ಮೂದೇವಿ-ಶ್ರೀದೇವಿ ಪರಿಕಲ್ಪನೆ, ಮರ ಹೂಬಿಡುವ, ಬಿಡದಿರುವ ಮೆಟಾಫಾರ್ ಎಲ್ಲ ಇರುವ ಈ ಸಿನಿಮಾದಲ್ಲಿ ರಕ್ತ ಮತ್ತು ಮುಟ್ಟಾಗುವುದಕ್ಕೆ ಒಂದು ಸಂಬಂಧವಿದೆ. ಹಾಗೆಯೇ ಮುಟ್ಟಾಗುವುದು ಮೂಲಭೂತವಾಗಿ ಪುರುಷನ ಕ್ರೌರ್ಯದಿಂದಲೇ ಸುರುವಾಯಿತು ಎನ್ನುವ ಚಿತ್ರವೂ ಇದೆ. ಇದನ್ನೆಲ್ಲ ಕುತೂಹಲಕ್ಕಾಗಿ ಹೇಳುತ್ತಿದ್ದೇನೆ, ಯಾವುದೇ ನಿಲುವು ಇಟ್ಟುಕೊಂಡು ಮಾತನಾಡುತ್ತಿಲ್ಲ.

*****

ನಾವು ಒಬ್ಬ ವ್ಯಕ್ತಿ ಉಳಿದ ಎಲ್ಲರ ಹಾಗೇ ವರ್ತಿಸದಿದ್ದರೆ ಅವನನ್ನು ಹುಚ್ಚ ಎಂದು ಕರೆಯುತ್ತೇವೆ. ಒಬ್ಬ ಹುಚ್ಚ ಅನಿಸಿಕೊಳ್ಳಲು ಮೂಲಭೂತವಾಗಿ ನಮಗಿರುವ ಮಾನದಂಡ ಇದಿಷ್ಟೇ. ಎಲ್ಲರ ಹಾಗಿದ್ದರೆ, ಆ ಎಲ್ಲರೂ ಎಷ್ಟೇ ಮೂರ್ಖರಂತೆ ವರ್ತಿಸಲಿ, ಆತ ಹುಚ್ಚನಲ್ಲ. ಎಲ್ಲರ ಹಾಗಿಲ್ಲದಿದ್ದರೆ, ಆತ ಎಷ್ಟೇ ಲಾಜಿಕಲಿ ತರ್ಕಶುದ್ಧವಾಗಿ ವರ್ತಿಸುತ್ತಿರಲಿ, ಆತ ಹುಚ್ಚ. ಇತಿಹಾಸ ಕೂಡ ಇದನ್ನು ಒಪ್ಪುತ್ತದೆ.

ನಾನು ಮೇಲೆ ಸವಿಸ್ತಾರವಾಗಿ ಮಾಂಸಾಹಾರ, ಹಿಂಸೆ, ಕ್ರೌರ್ಯ, ಕಾಮ ಮತ್ತು ಪ್ಯೂರಿಟಿ ಬಗ್ಗೆ ಕೊರೆದಿದ್ದಕ್ಕೆ ಕಾರಣವಿಷ್ಟೇ. ಇವುಗಳನ್ನೆಲ್ಲ ನಾವು ತೀರ ಹಿಂಜುತ್ತ ಹೋದರೆ ಏನು ಹುಟ್ಟುತ್ತದೆ? ಮನೋರೋಗ. ಅದು ಈ ಕಾದಂಬರಿಯ ವಸ್ತು.

ಮನುಷ್ಯ ಮೂಲಭೂತವಾಗಿ ಕೊಳಕ. ಭೌತಿಕವಾಗಿ ಅವನ ದೇಹ ನವರಂಧ್ರಗಳನ್ನು ಹೊಂದಿದ ಒಂದು ಕೊಳಕು ಚೀಲವೇ. ಸೋಪು, ಸ್ನಾನ, ಸೆಂಟಿನ ಬಾಟಲು, ಕಾಸ್ಮೆಟಿಕ್ಸ್ ಎಲ್ಲ ಬಳಸಿದ ಬಳಿಕವೂ ಅದು ಅಷ್ಟೇ. ಹಾಗೆಯೇ ನಾವೇನು ತಿನ್ನುತ್ತೇವೆ ಎನ್ನುವುದು ನಮಗೆ ನಮ್ಮ ನಾಲಿಗೆ ಮತ್ತು ಆರೋಗ್ಯಕರ ದೇಹಕ್ಕೆ ಯಾವುದು ಹಿತವಾಗಿ ಕಾಣುತ್ತದೆ ಅಥವಾ ಇಲ್ಲ ಎನ್ನುವುದಕ್ಕೆ ಸಂಬಂಧಿಸಿದ್ದು. ಅದೇ ರೀತಿ ನೀವು ನಿಮ್ಮ ಲೈಂಗಿಕ ಕಾಮನೆಗಳನ್ನು ಹೇಗೆ ನೀಗಿಕೊಳ್ಳುತ್ತೀರಿ ಎನ್ನುವುದು ಕೂಡ. ನೀವು ಮುಷ್ಠಿಮೈಥುನ ಮಾಡಿಕೊಂಡಿರುತ್ತೀರೋ, ನಿಮ್ಮದೇ ಲಿಂಗದವರೊಟ್ಟಿಗೆ ಮಲಗುತ್ತೀರೋ, ವಿರುದ್ಧ ಲಿಂಗಿಯ ಜೊತೆ ಸುಖ ಕಾಣುತ್ತೀರೋ ಎನ್ನುವುದೆಲ್ಲ ನನಗೆ ಯಾಕೆ? ನೀವು ನನ್ನಿಂದ ಅದನ್ನು ಅಪೇಕ್ಷಿಸಿ ಬರುವ ತನಕ ಮತ್ತು ಸಮಾಜದ ‘ಬದುಕು-ಬದುಕಲು ಬಿಡು’ ಎಂಬಂಥ ಸಾಮಾನ್ಯ ಮಾನದಂಡಗಳಿಗೆ ಬದ್ಧವಾಗಿರುವ ತನಕ ಅದು ನನಗೆ ಹೇಗೆ ಸಂಬಂಧಿಸಿದ್ದು? ನಾವು ಅದರಲ್ಲಿ ಇನ್‌ಫೀರಿಯಾರಿಟಿ-ಸುಪೀರಿಯಾರಿಟಿ ಎಲ್ಲ ಇದೆ ಎಂದುಕೊಳ್ಳುವುದು ಮತ್ತು ಅದನ್ನು ನೀಗಲು ಇನ್ನೇನೋ ಮಾಡುವುದು ಕೂಡ ಇದೇ ಸಾಲಿನಲ್ಲಿ ಬರುತ್ತದೆ.

ಈ ಕಾದಂಬರಿಯ ನಾಯಕಿಗೆ ಇದ್ದಕ್ಕಿದಂತೆ ಕನಸು ಬೀಳತೊಡಗುತ್ತದೆ ಮತ್ತು ತಕ್ಷಣವೇ ಅವಳು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾಗುತ್ತಾಳೆ. ಆಗಿಕೊಳ್ಳಲಿ ಎಂದು ಅವಳ ಪತಿ ತೆಪ್ಪಗಿರದೆ ಅದನ್ನೊಂದು ಇಶ್ಯೂ ಮಾಡುತ್ತಾನೆ. ಮಾಡುವಂತೆ ಅವಳು ಬ್ರಾ ತೊಟ್ಟುಕೊಳ್ಳದೆ, ತನ್ನ ಮೊಲೆಯನ್ನು ಮಂದಿ ಕಾಣುವ ಹಾಗೆ ತೆಳ್ಳಗಿನ ಬಟ್ಟೆ ತೊಟ್ಟು ಅವನೊಂದಿಗೆ ಪಾರ್ಟಿಗೆ, ಪೇಟೆಗೆ ಬರುವುದು ಮಾಡುತ್ತಾಳೆ. ಇದಕ್ಕೂ ಅವಳ ಸಸ್ಯಾಹಾರದ (ಅಹಿಂಸಾತ್ಮಕ, ಕ್ರೌರ್ಯವಿಲ್ಲದ ರೀತಿ ನೀತಿಯ) ಮಾರ್ಗಕ್ಕೂ ಅದೇನು ಸಂಬಂಧವಿದೆಯೋ ತಿಳಿಯದು. ಆಮೇಲೆ ಮನೆಯೊಳಗೆ ತಂಪಾಗಿರುವ ದಿನಗಳಲ್ಲೇ ಸೆಕೆ ಎನ್ನುವ ಕಾರಣ ಕೊಟ್ಟು ತೆರೆದೆದೆಯಲ್ಲೇ ಇರುವುದನ್ನು ಸುರು ಮಾಡುತ್ತಾಳೆ. ಆ ಹೊತ್ತಿಗಾಗಲೇ ತೀರ ಕೃಶಕಾಯದ ಅವಳು ಮತ್ತಷ್ಟು ಕೃಶಳಾಗಿ ಅವಳು ಬಟ್ಟೆ ತೊಟ್ಟಿದ್ದರೂ ತೊಡದಿದ್ದರೂ ಅಂಥ ವ್ಯತ್ಯಾಸವೇನಾಗದ ಮಟ್ಟಿಗೆ ಅವಳ ದೇಹ ಸಪಾಟಾಗಿರುತ್ತದೆ.

ಅವಳ ತಂದೆ, ತಾಯಿ, ಸಹೋದರಿ, ಭಾವ ಎಲ್ಲ ಒಂದೆಡೆ ಸೇರಿದ ಒಂದು ದಿನ ಇದರ ಎನ್‍ಕ್ವಯರಿ ಆಗುತ್ತದೆ ಮತ್ತು ಅದು ಅನಾವಶ್ಯಕ ದೈಹಿಕ ಹಿಂಸೆಗೆ ತಿರುಗಿ ಅವಳನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಅಲ್ಲಿಂದ ಅವಳಿಗೆ ಸೈಕಿಯಾಟ್ರಿಸ್ಟ್ ಬಳಿ ಮೆಡಿಕೇಶನ್ ಸುರುವಾಗುತ್ತದೆ. ಗಂಡ ಅವಳಿಂದ ಬೇರ್ಪಟ್ಟು ವಿಚ್ಛೇದನ ಪಡೆಯುತ್ತಾನೆ.

ಈಗ ಅವಳ ಸಹೋದರಿಯ ಪತಿಗೆ ಮೊದಲಿನಿಂದಲೂ ಈಕೆಯ ಮೇಲಿದ್ದ ಆಕರ್ಷಣೆಯ ವಿಷಯ ನಮಗೆ ತಿಳಿಯುತ್ತದೆ. ಅವನೊಬ್ಬ ಕಲಾವಿದ. ಅವಳ ನಗ್ನ ದೇಹದ ಮೇಲೆ ಹೂವುಗಳ ಪೇಯಿಂಟಿಂಗ್ ಮಾಡಿ ಅದನ್ನು ಕ್ಯಾಮ್‌ಕಾರ್ಡರ್ ಮೂಲಕ ರೆಕಾರ್ಡ್ ಮಾಡುವ ಅವನ ಕಲೆಯ ಮೂಲಕ ನಮಗೆ ತಿಳಿಯುವುದೇನೆಂದರೆ, ಕಲೆಗೆ ಸಂಬಂಧಿಸಿದ ಮಟ್ಟಿಗೆ ಅವನ ನಿಷ್ಠೆ ನಂಬಲರ್ಹವಾದುದೇ. ಅವನು ಅವಳನ್ನು ದೈಹಿಕವಾಗಿ ಬಳಸಿಕೊಳ್ಳದೆ, ಅವಳ ದೇಹವನ್ನು ಅವನ ಕಲೆಗಾಗಿ ಮಾತ್ರ ಬಳಸಿಕೊಳ್ಳುವುದು, ಆಕೆ ಅವನೊಂದಿಗೆ ಏಕಾಂತದಲ್ಲಿ ನಗ್ನವಾಗಿದ್ದಾಗಲೂ ಅವನು ಅವಳನ್ನು ಆಕ್ರಮಿಸದೇ ಇರುವುದು ಇದಕ್ಕೆ ಪೂರಕವಾಗಿಯೇ ಇದೆ. ಮುಂದೆ ತನ್ನ ಸಹವರ್ತಿ ಜೆ ಜೊತೆಗೆ ಸೇರಿ ಅವರಿಬ್ಬರ ನಗ್ನದೇಹದ ತುಂಬ ಬಣ್ಣಬಣ್ಣದ ಹೂವುಗಳನ್ನು ಬಿಡಿಸಿ ಗಂಡು ಹೆಣ್ಣಿನ ಸಮಾಗಮದ ರೆಕಾರ್ಡಿಂಗ್ ಮಾಡಲು ಮುಂದಾದಾಗಲೂ ಅವನಾಗಲೀ ಜೆ ಆಗಲಿ ಸಂಯಮ ಮೀರದೇ ವರ್ತಿಸುವುದು ಮತ್ತು ಬಹುತೇಕ ಆ ಅವಧಿಯಲ್ಲಿಯೇ ಅವಳು ಮಾನಸಿಕವಾಗಿ ಸಮತೋಲನ ಪ್ರದರ್ಶಿಸುವುದು ಕಾಣುತ್ತೇವೆ ಎನ್ನುವುದು ನಿಜ.

ಈ ಹಂತದಲ್ಲಿ ಮನುಷ್ಯ ದೇಹದಿಂದ ಬರುವ, ಮನುಷ್ಯನ ಬೆವರಿನಿಂದಲೂ ಬರುವ ಮಾಂಸದ, ರಕ್ತದ (ತಿಂದ ಆಹಾರದ) ವಾಸನೆಗೆ ವಾಕರಿಸುವ ಆಕೆ ದೇಹದ ತುಂಬ ಚಿತ್ರ ಬಿಡಿಸಿದಾಗ ಅದು ಬರದೇ ಇರುವುದರಿಂದ ಮತ್ತು ಅವಳ ಸಸ್ಯಾಹಾರದ, ಸಸ್ಯಪ್ರೀತಿಯ ಮನೋಧರ್ಮಕ್ಕೆ ಸಹಜವಾದ ಹೂವುಗಳ ದೇಹ ಹಿಡಿಸುವುದರಿಂದ ದೈಹಿಕ ಸಮಾಗಮಕ್ಕೂ ದೈಹಿಕವಾಗಿ ಸಜ್ಜಾಗುವುದು ಗಮನಾರ್ಹವಾದ ಒಂದು ಬೆಳವಣಿಗೆ. ಆದರೆ ಕೃತಿಕಾರನಿಗೆ ಈ ಬೆಳವಣಿಗೆ ಬೇಕಾಗಿಲ್ಲ. ಈ ಹಂತದಲ್ಲಿ ಅವಳು ತನ್ನ ಮನೋರೋಗವನ್ನು ಕಾಣಬಲ್ಲ ಸ್ಥಿತಿಗೆ ತಲುಪಿರುತ್ತಾಳೆ. ಒಂದು ಸಂದರ್ಭದಲ್ಲಿ ಅವನ ಬಳಿ ತಾನೇಕೆ ಸಸ್ಯಾಹಾರಕ್ಕೆ ನಿಷ್ಠಳಾದೆ, ಯಾಕೆ ಮಾಂಸಾಹಾರ ತನಗೆ ಕಷ್ಟವಾಯಿತು, ತನಗೇನು ಕನಸು ಬಿತ್ತು ಎಂದೆಲ್ಲ ವಿವರಿಸಬಲ್ಲಷ್ಟು ಮಾನಸಿಕ ಸ್ಪಷ್ಟತೆಯನ್ನೂ ತೋರುತ್ತಾಳೆ.

ಮಾನಸಿಕ ರೋಗಿಯ ಬಗ್ಗೆ ನಿಮಗೆ ನಿಜವಾದ ಕಾಳಜಿ ಇದ್ದಲ್ಲಿ, ಆತ ಅಥವಾ ಆಕೆ ತನ್ನ ರೋಗವನ್ನು ಗುರುತಿಸುವ ಮಟ್ಟಿಗೆ ಪ್ರಗತಿ ಸಾಧಿಸಿದಾಗ ಅದನ್ನು ಪೊರೆಯಬೇಕು. ಈ ಹಂತಕ್ಕೆ ರೋಗಿ ಬಂದಾಗ ಅವನು ಅರ್ಧ ಗುಣವಾದಂತೆಯೇ. ಉದಾಹರಣೆಗೆ, ನಮ್ಮಲ್ಲೂ ಇದ್ದೇ ಇರುವ ರೋಗಲಕ್ಷಣಗಳನ್ನು ನಾವು ಆಗಾಗ ಹೀಗೆ ಕಂಡುಕೊಳ್ಳುತ್ತ ಇರುವುದರಿಂದಲೇ ನಾವಿನ್ನೂ ನಿಮ್ಮಿಂದ ಹುಚ್ಚ ಎನ್ನುವ ಲೇಬಲ್ ಅಂಟಿಸಿಕೊಳ್ಳದೇ ನಿಮ್ಮೊಂದಿಗೇ ಬದುಕಲು ಸಾಧ್ಯವಾಗಿರುವುದು ಎನ್ನುವುದೇ ನಿಜ. ಸೇನ್ ಎನ್ನಿಸಿಕೊಳ್ಳಲು ಹಾತೊರೆಯುತ್ತಿರುವ ಅರೆಹುಚ್ಚರೆಲ್ಲ ಇತರರನ್ನು ಹುಚ್ಚರ ಸಾಲಿಗೆ ಸೇರಿಸಲು ತುದಿಗಾಲಲ್ಲಿ ನಿಂತಿರುತ್ತಾರೆನ್ನುವುದು ಗೊತ್ತೇ ಇರುವುದರಿಂದ ಮಂದಿ ಎಕ್ಸ್‌ಟ್ರಾ ಕ್ಯಾರ್‌ಫುಲ್ ಆಗಿರುವುದು, ಕೇರ್ ಮಾಡದೆ ಬದುಕುವುದು ಎರಡೂ ಸುರುವಾಗಿದೆ ಎನ್ನಿ.

ತನ್ನ ಪತಿ ತನ್ನ ಸಹೋದರಿಯ ಅರೆಹುಚ್ಚಿ ಪತ್ನಿಯೊಂದಿಗೆ ಲೈಂಗಿಕ ಶೋಷಣೆ ನಡೆಸುತ್ತಿದ್ದಾನೆ ಎನ್ನುವ ಆತುರದ ನಿರ್ಧಾರಕ್ಕೆ ಬರುವ ಪತ್ನಿ ಇಬ್ಬರನ್ನೂ ಹುಚ್ಚಾಸ್ಪತ್ರೆಗೆ ಸೇರಿಸುತ್ತಾಳೆ. ಅಲ್ಲಿ, ಪತಿಗೆ ಹುಚ್ಚು ಗಿಚ್ಚು ಏನಿಲ್ಲ ಎನ್ನುವುದು ತೀರ್ಮಾನವಾಗಿ ಆತನಿಗೆ ಸ್ವಲ್ಪ ಜೈಲು ಶಿಕ್ಷೆಯಾಗುತ್ತದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ತಲೆಮರೆಸಿಕೊಳ್ಳುತ್ತಾನೆ. ಆದರೆ ನಮ್ಮ ನಾಯಕಿಯ ಪಾಡು ಶೋಚನೀಯವಾಗುತ್ತ ಹೋಗುತ್ತದೆ.

*****

ಸಸ್ಯಾಹಾರದ ಭ್ರಾಂತಿ ಯಾವ ಮಟ್ಟಕ್ಕೆ ಹೋಗುತ್ತದೆಂದರೆ, ತಾನು ಇದುವರೆಗೂ ತಿಂದ ಪ್ರಾಣಿ,ಪಕ್ಷಿಯ ದೇಹ,ರಕ್ತ, ಮಾಂಸಗಳೆಲ್ಲ ತನ್ನ ದೇಹದಲ್ಲಿರುವುದರಿಂದ ಅದು ಶುದ್ಧವಾಗಬೇಕೆಂಬ ಭ್ರಾಂತಿಗೆ ಆಕೆ ಸರಿಯುತ್ತಾಳೆ. ತಾನು ಸ್ವತಃ ಸಸ್ಯವಾಗುವುದೇ ಸರಿ, ವಾಸ್ತವವಾಗಿ ತಾನೊಂದು ಸಸ್ಯ ಎಂದೇ ಅವಳು ಪರಿಭಾವಿಸತೊಡಗುತ್ತಾಳೆ ಮತ್ತು ಸೂರ್ಯರಶ್ಮಿ, ಮಳೆ, ನೀರು ಬಿಟ್ಟರೆ ಬೇರಾವುದೇ ಆಹಾರ ಸೇವಿಸುವುದನ್ನು ಪೂರ್ತಿಯಾಗಿ ಬಿಟ್ಟು ಬಿಡುತ್ತಾಳೆ. ಇದು ಮಾರಣಾಂತಿಕವಾಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.

ಇಲ್ಲಿ ಆಕೆಯ ಸಹೋದರಿ ಸ್ವಲ್ಪ ಮಟ್ಟಿಗೆ ಇಡೀ ವಿದ್ಯಮಾನವನ್ನು ಸಿಂಹಾವಲೋಕವೆಂಬಂತೆ ಅನಲೈಸ್ ಮಾಡುತ್ತ ಕೊಂಚ ಮಟ್ಟಿಗೆ ಎಲ್ಲಿ ತಪ್ಪಿದೆವು ಎನ್ನುವುದನ್ನು ಕಂಡುಕೊಳ್ಳುವ ಪುಟ್ಟ ಪ್ರಯತ್ನ ಇದೆಯಾದರೂ ಅದರಿಂದ ಕಾದಂಬರಿಗಾಗಲೀ, ಅದರ ನಾಯಕಿಗಾಗಲೀ ಹೆಚ್ಚಿನ ಸಹಾಯವೊದಗಿದಂತೆ ಕಂಡು ಬರುವುದಿಲ್ಲ. ಅಸಲಿಗೆ ಅವಳ ವಿಶ್ಲೇಷಣೆಯೇ ವ್ಯಕ್ತಿಗತ ನೆಲೆಯನ್ನು ಬಿಟ್ಟು ಮೇಲೇಳುವುದಿಲ್ಲ ಮಾತ್ರವಲ್ಲ ಅದು ಅಷ್ಟು ಪಕ್ವವಾಗಿಯೂ ಇಲ್ಲ.

ತಾನೊಂದು ಮರವಾಗುವ ಅಭೀಪ್ಸೆ ಬಹುಶಃ ಹೆಣ್ಣಿಗೆ ಮಾತ್ರ ಬರುತ್ತದೇನೋ. ಹೆಣ್ಣಾಗಿ ಹುಟ್ಟುವ ಬದಲು ಮಣ್ಣಾಗಿ, ಮಣ್ಣ ಮೇಲೊಂದು ಮರವಾಗಿ, ಮಂದಿಗೆ ನೆರಳಾಗಿ ಹುಟ್ಟಬಹುದಿತ್ತು ಎಂದು ಹಲಬುವ ಜಾನಪದ ಜಗತ್ತಿನ ನಾರಿಯಿಂದ ತೊಡಗಿ "ಹೌ ಐ ಬಿಕೇಮ್ ಎ ಟ್ರೀ" ಎಂಬ ಪುಸ್ತಕ ಬರೆದ ಇಪ್ಪತ್ತೊಂದನೆಯ ಶತಮಾನದ ಸುಮನಾ ರಾಯ್ ತನಕ ಮರವಾಗುವ ಮೋಹವನ್ನು ಹೆಣ್ಣು ಆಗಾಗ ವ್ಯಕ್ತಪಡಿಸುತ್ತಲೇ ಬಂದಿದ್ದಾಳೆ. ಅದೇ ಗಂಡು ಕಲ್ಲಾಗುವ ಬಯಕೆ ತೋರ್ಪಡಿಸಿದ್ದೇ ಹೆಚ್ಚು! ತಿರುಪತಿಯ ಶ್ರೀನಿವಾಸ ಇಬ್ಬರು ಹೆಂಡಿರ ಕಾಟಕ್ಕೆ ಕಲ್ಲಾದ ಕತೆಯಿದೆ. ಅವನಿಗೆ ಮೈತುಂಬ ಸಾಲವೂ ಇತ್ತೆನ್ನಿ. ಇನ್ನು ನಮ್ಮ ಬಾಹುಬಲಿ ಕೂಡ ಸದ್ಯ ಕಲ್ಲೇ ಆಗಿ ನಿಂತಿದ್ದಾನೆ. ಜಗತ್ತಿನಾದ್ಯಂತ ಉರುಳುತ್ತಿರುವ ಅಥವಾ ಸ್ಥಾಪನೆಯಾಗುತ್ತಿರುವ ಪ್ರತಿಮೆಗಳಲ್ಲೆಲ್ಲ ಪುರುಷರ ಪಾಲೇ ಹೆಚ್ಚು.

ಕನ್ನಡದ ಒಂದು ಜಾನಪದ ಕತೆ ಎಂದು ಎ ಕೆ ರಾಮಾನುಜನ್ ಆರಿಸಿರುವ ಕತೆಯಲ್ಲೂ ಹೆಣ್ಣು ಮತ್ತೆ ಮತ್ತೆ ಮರವಾಗುತ್ತಾಳೆ, ಹೂ ಬಿಡುತ್ತಾಳೆ. "ಫ್ಲವರಿಂಗ್ ಟ್ರೀ" ಎಂಬ ಹೆಸರಿನ ಈ ಕತೆಯ ಕನ್ನಡಾನುವಾದ "ಹೂ ಬಿಡುವ ಮರ". ಗಿರೀಶ್ ಕಾರ್ನಾಡರು ಇದನ್ನು "ಚೆಲುವಿ" ಎನ್ನುವ ಹೆಸರಿನ ಚಲನಚಿತ್ರವಾಗಿಯೂ ತೆರೆಗೆ ತಂದಿರುವುದು ವಿಶೇಷ. ಈ ಕತೆ, ಸಿನಿಮಾಗಳೊಂದಿಗೆ ಮೇಲೆ ಹೇಳಿದ "ಪೂಮರಂ" ಕೂಡಾ ತಪ್ಪದೇ ನೋಡಿ. ಸ್ವತಃ ಹಾನ್ ಕಾಂಗ್ ಅವರೇ ಬರೆದ ಒಂದು ಇಂಥದೇ ಕತೆಯಿಂದ ಪೂರ್ತಿ ತೃಪ್ತಿ ಸಿಗದೇ ತಾವು ಈ ಕಾದಂಬರಿಯನ್ನು ಬರೆದುದಾಗಿ ಅವರೇ ಹೇಳಿಕೊಂಡಿದ್ದಾರೆ.

ಹೆಣ್ಣಿನ ಮೇಲೆ ಶತಶತಮಾನಗಳಿಂದ ಮುಖ್ಯವಾಗಿ ಪುರುಷ ಮತ್ತು ಒಟ್ಟಾರೆ ಸಮಾಜ ನಡೆಸುತ್ತಲೇ ಬಂದ ಒಂದು ವಿಧವಾದ ಹಿಂಸೆ, ಶೋಷಣೆ ಮತ್ತು ಅವಳನ್ನು ಸದಾ ಜ್ಞಾನದಿಂದ, ಬೆಳಕಿನಿಂದ, ಬದುಕಿನಿಂದಲೂ ದೂರವಿರಿಸಿ ಮಾಡಿದ ಅನ್ಯಾಯ, ಬಿತ್ತಿದ ಬೆಳೆಯಂತೆ ಅದರ ಫಲವನ್ನು ಅವನಿಗೇ/ಅದಕ್ಕೇ ತಿನ್ನಿಸಿದೆ, ತಿನ್ನಿಸುತ್ತಿದೆ. ತನಗೊದಗಿದ ಸ್ಥಿತಿಯಿಂದ ಮುಕ್ತಳಾಗುವುದಕ್ಕೆ ಅವಳು ಕಂಡುಕೊಂಡ ಒಂದು ಹತಾಶ ಯತ್ನದ ಪ್ರತೀಕದಂತೆ ಅವಳ ಈ ಮರವಾಗುವ ಬಯಕೆ ಕಾಣುತ್ತದೆ. ಅಷ್ಟರಮಟ್ಟಿಗೆ ಇದು ಎಲ್ಲರಿಗೂ ಅರ್ಥವಾಗುತ್ತದೆ. ಆದರೆ ಈ ಕಾದಂಬರಿಯಲ್ಲಿ ಹಿಂಸೆ, ಕ್ರೌರ್ಯ ಮತ್ತು ದೌರ್ಜನ್ಯವನ್ನು ಪ್ಯೂರಿಟನ್ ಕಾನ್ಸೆಪ್ಟ್ ಜೊತೆ ಅಥವಾ ಅಂಥ ಒಂದು ಮಾರ್ಗದಿಂದ ಮೀರಬಹುದು ಎನ್ನುವಂತೆ ಚಿತ್ರಿಸಿದ್ದು ಮಾತ್ರ ಹಳಿತಪ್ಪಿದ ತರ್ಕಸರಣಿಯ ಹಾಗೆ ಕಾಣಿಸುತ್ತದೆ. ಮೊದಲಿಗೆ ಮಾಂಸಾಹಾರವನ್ನು ಹಿಂಸೆ ಮತ್ತು ಕ್ರೌರ್ಯದೊಂದಿಗೆ ಸಮೀಕರಿಸಿ ಸಸ್ಯಾಹಾರವನ್ನು ಅದಕ್ಕೆ ಪರ್ಯಾಯವಾಗಿಸಿದಾಗಲೇ ತರ್ಕ ಹಳಿತಪ್ಪಿದೆ. ನಂತರ ಕಾಮವನ್ನು ಹಿಂಸೆ ಮತ್ತು ಕ್ರೌರ್ಯದೊಂದಿಗೆ ಸಮೀಕರಿಸುವ ಅಷ್ಟು ಸಮರ್ಥನೀಯವಾಗಿ ಮೂಡಿಬರದ ಒಂದು ಚಿತ್ರದೊಂದಿಗೆ ಮುಗಿಸಿದ್ದಾರೆ. ಮಾನಸಿಕವಾಗಿ ಅಸ್ವಸ್ಥಳಾದ, ಇನ್ನೂ ಚಿಕಿತ್ಸೆಯ ಹಂತದಲ್ಲೇ ಇರುವ ಹೆಣ್ಣಿನೊಂದಿಗೆ ತನ್ನ ಕಲೆಯ ಹೆಸರಿನ ಪ್ರಯೋಗಗಳಿಗೆ ಇಳಿದಿದ್ದು ಮತ್ತು ಆಕೆಯ ಮುಗ್ಧತೆಯನ್ನು ಬಳಸಿಕೊಂಡಿದ್ದು ಎರಡೂ ತಪ್ಪು ಎನ್ನುವುದು ಯಾರಿಗಾದರೂ ತಿಳಿದೇ ತಿಳಿಯುತ್ತದೆ. ಆದರೆ ಅದಕ್ಕೆ ಅವನ ಪತ್ನಿ, ಆಕೆಯ ಸಹೋದರಿ ಪ್ರತಿಕ್ರಿಯಿಸಿದ ತೀವ್ರತೆ ಏನಿದೆ, ಅದು ಕ್ರಿಯೆಗಿಂತ ಹೆಚ್ಚಿನ ಡ್ಯಾಮೇಜ್ ಪ್ರತಿಕ್ರಿಯೆಯೇ ಮಾಡಿರುವಂತಿದೆ ಎನ್ನುವುದನ್ನೂ ನಾವು ಕಾದಂಬರಿಯ ಚೌಕಟ್ಟಿನಲ್ಲೇ ಕಾಣುತ್ತೇವೆ.

ಕಾದಂಬರಿ ಕೊನೆಗೂ ಒಂದಿಷ್ಟು ಗೊಂದಲಗಳಿಗೆ, ಪ್ರಶ್ನೆಗಳಿಗೆ ನಮ್ಮನ್ನು ಮುಖಾಮುಖಿಯಾಗಿಸುವುದರೊಂದಿಗೆ ಮುಗಿಯುತ್ತದೆ. ತನ್ನ ಸಹೋದರಿಯ ಮಾನಸಿಕ ಚೇತರಿಕೆಗಾಗಿ ತಾನು ಅವಳೊಂದಿಗೆ ಇರಲು ನಿರ್ಧರಿಸುವ ಅಕ್ಕ ಈ ಕಾದಂಬರಿಯಲ್ಲಿ ಸದ್ದಿಲ್ಲದೆ ತೇಜೋಮಯವಾಗಿ ಕಂಗೊಳಿಸುತ್ತಾಳೆ. ಇಂಥ ಕ್ರಿಯೆಗಿಂತ ಸಾಹಿತ್ಯ, ಸಾಹಿತಿಯ ಹೇಳಿಕೆಗಳು ಪೇಲವ, ಢೋಂಗಿತನದ ಪ್ರದರ್ಶನ.

ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ ಒಂದು ಮರಕ್ಕಿಂತ ಹೆಚ್ಚೇ ಆಗಿಲ್ಲವೆ? ಮರವೇ ಆಗಿ ಅವಳು ಇದಕ್ಕಿಂತ ಹೆಚ್ಚಿನದ್ದೇನಾದರೂ ಸಾಧಿಸುವುದಿದೆಯೆ?
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, October 2, 2019

ಮನವೇ ನೀನಿಲ್ಲಿರು, ಹಾರದಿರು ಹೀಗೆ, ಈಗ ಈ ಕ್ಷಣ ಬಾ ಇಲ್ಲಿರು....

ಕೆಲವೊಮ್ಮೆ ಒಂದೂ ಇಪ್ಪತ್ತು, ಒಂದೂವರೆಯ ನಡುವೆ ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ. ನಿದ್ದೆಗಣ್ಣಲ್ಲೆ ಎದ್ದು ಬಾತ್‌ರೂಮಿಗೆ ಹೋಗಿ ಬಂದು ಮತ್ತೆ ಜೀವಚ್ಛವದಂತೆ ಬಿದ್ದುಕೊಳ್ಳುತ್ತೇನೆ. ಕೆಲವೊಮ್ಮೆ ಮೂರೂ ಇಪ್ಪತ್ತೇಳಕ್ಕೆ, ನಾಲ್ಕೂ ಐದಕ್ಕೆ. ನಾಲ್ಕರ ನಂತರ ಎಚ್ಚರವಾದರೆ ಸ್ವಲ್ಪ ಬೇಸರವೂ ಆಗುತ್ತದೆ. ನಾಲ್ಕೂವರೆಗೆ ನಾನು ಅಂತಿಮವಾಗಿ ಎದ್ದೇಳಲೇ ಬೇಕಾದ ಸಮಯ. ಎದ್ದು ಮಲಗುವ ಹೊತ್ತಲ್ಲಿ ನಾಲ್ಕೂವರೆಗೆ ಎಷ್ಟು ಹೆಚ್ಚು ಕಾಲಾವಧಿ ಉಳಿದಿರುತ್ತೋ ಅಷ್ಟು ಖುಶಿ. ಒಂದೂ ಇಪ್ಪತ್ತು, ಮೂರೂ ಇಪ್ಪತ್ತಕ್ಕೆಲ್ಲ ಎಚ್ಚರವಾದರೆ ಒಳಗೊಳಗೇ ಒಂಥರಾ ಖುಶಿಯಿರಲು ಇದೇ ಕಾರಣ. ಹಿಂದೆ, ನಾಲ್ಕೂ ಐದಕ್ಕೆ, ನಾಲ್ಕೂ ಹತ್ತಕ್ಕೆ ಎಚ್ಚರವಾದಾಗಲೆಲ್ಲ ಒಂಥರಾ ಭಯವಾಗುವುದೂ ಇತ್ತು. ಅದು ರೂಪಾ ಆತ್ಮಹತ್ಯೆ ಮಾಡಿಕೊಂಡ ಸಮಯ.

ಅಪರಾಹ್ನ ಊಟವಾದ ಮೇಲೆ ಒಂದು ಗಳಿಗೆ ಕಣ್ಣು ಮುಚ್ಚುವುದಿದೆ. ಎರಡು ಗಂಟೆಗೆ ಎದ್ದು ನೆಟ್ಟಗೆ ಕೂರಬೇಕು. ಕೂರುವುದು ಎಂದರೆ ಕುಂದಾಪುರ ಕನ್ನಡದಲ್ಲಿ ತೂಕಡಿಸುವುದು ಅಂತ! ಶುದ್ಧ ಕನ್ನಡದಲ್ಲಿ ಕುಳಿತುಕೊಳ್ಳುವುದು. ಹಿಂದೆ, ಸ್ವಲ್ಪ ಅನುಕೂಲಕರ ಪರಿಸ್ಥಿತಿಯಿದ್ದಾಗ ಖಾಲಿ ಕ್ಲಾಸ್ ರೂಮಿನ ಒಳಗೆ, ಲೈಟುಗಳನ್ನೆಲ್ಲ ಆರಿಸಿ, ಎಸಿ ಹಾಕಿಕೊಂಡು, ಹುಡುಗರ ಬೆಂಚುಗಳ ಮೇಲೆ ಆರಾಮವಾಗಿ ಕಾಲುಚಾಚಿ ಎರಡೂವರೆ ತನಕ ಮಲಗುವುದಿತ್ತು. ಈಗ ಕುಳಿತಲ್ಲೆ ಡೆಸ್ಕಿಗೆ ತಲೆಯಾನಿಸಿ ಮಲಗಿದ ಶಾಸ್ತ್ರ ಮಾಡಬೇಕು. ಆದರೆ ನನಗೆ ಹುಟ್ಟಿನಿಂದಲೇ ಅತಿ ಎನಿಸುವ ಲೊ ಬೀಪಿ ಇರುವುದರಿಂದಲೋ ಏನೋ, ಎಲ್ಲಿ ತಲೆಯೂರಿದರೂ ಅದೇ ಕ್ಷಣಕ್ಕೆ ನಿದ್ದೆಯಾವರಿಸಿ ಬಿಡುತ್ತದೆ.

ಭಾನುವಾರ ಮನೆಯಲ್ಲೇ ಇರುವಾಗ ಹೊತ್ತುಗೊತ್ತಿಲ್ಲದೆ ಮಲಗುವುದಿದೆ. ಪ್ರತಿದಿನ ಮುಸ್ಸಂಜೆ ಕಳೆದು ಏಳು-ಏಳೂವರೆ ಎನ್ನುವಷ್ಟರಲ್ಲಿ ನನಗೆ ಯಮನಿದ್ದೆ ಆವರಿಸುತ್ತದೆ. ಎಂಟೂವರೆ-ಒಂಭತ್ತರ ತನಕ ಮಲಗುವುದೇ. ಆಗ ಊಟಕ್ಕೆ ಯಾರಾದರೂ ಎಚ್ಚರಿಸಬೇಕು.

ಯಾಕಿದನ್ನೆಲ್ಲ ಹೇಳಿದೆನೆಂದರೆ, ಪ್ರತಿದಿನ ಸರಿಯಾದ ಹೊತ್ತಿಗೆ ಮಲಗಿ ಏಳುವವರನ್ನು ಬಿಟ್ಟು ನಮ್ಮಂಥವರೆಲ್ಲ ಹೀಗೆ ಎರ್ರಾಬಿರ್ರಿ ಗಾಢವಾಗಿ ಮಲಗಿ ಎದ್ದಾಗಲೆಲ್ಲ ದೇಶ-ಕಾಲ ಕಳೆದುಕೊಂಡು, ಅನಾಥರಂತೆ ಕಂಗಾಲಾಗಿ ಬಿಡುವುದನ್ನು ಅನುಭವಿಸುತ್ತ ಬಂದಿದ್ದೇನೆ. ಮಲಗಿದ್ದು ಎಷ್ಟು ಹೊತ್ತಿಗೆ, ಏಳಬೇಕಾಗಿದ್ದು ಎಷ್ಟು ಹೊತ್ತಿಗೆ, ಹೀಗೆ ಅಚಾನಕ್ಕು ಮಲಗಿದ್ದರಿಂದ ಏನೆಲ್ಲ ಕೆಲಸ ಬಾಕಿಯಾಗಿ ಹೋಯ್ತು, ಇವತ್ತು ಯಾವ ವಾರ, ಈಗ ಟೈಮೆಷ್ಟು, ಎಲ್ಲಿದ್ದೇನೆ, ಯಾಕೆ ಮಲಗಿದೆ, ಯಾಕೆ ಎದ್ದೆ ಎನ್ನುವ ಪ್ರಶ್ನೆಗಳೆಲ್ಲ ಒಮ್ಮೆಗೇ ಎದ್ದು ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಇರುತ್ತದೆ ಎಂದು ಗೊತ್ತಿರುವುದರಿಂದ ನಾನು ಅದನ್ನೆಲ್ಲ ಯೋಚಿಸಲಿಕ್ಕೇ ಹೋಗುವುದಿಲ್ಲ. ಆದರೆ ಹೀಗೆ ಆಗುವುದಿದೆ ಕೆಲವರಿಗೆ. ಅವರಿಗೆ ಪ್ರಶ್ನೆಗಳು ಇನ್ನೂ ಮೊಟ್ಟೆಯೊಡೆದು ಈಚೆಗೆ ಬರಲೊಲ್ಲದ ಪಕ್ವ ಭ್ರೂಣದಂತೆ ಚಡಪಡಿಸುತ್ತ ಕೊಡುವ ಸಂಕಟ ನನಗೆ ಅರ್ಥವಾಗುತ್ತದೆ. ಆಮ್ಲೆಟ್ಟು ಮಾಡುವುದಿದ್ದರೂ ಸರಿಯೇ, ಮೊಟ್ಟೆ ಒಡೆಯಲೇ ಬೇಕು. ಇದು, ಡೇ ಬ್ರೇಕ್ ಅಂತ ಒಂದು ಕವನ, ಶ್ರೀದಲಾ ಸ್ವಾಮಿದ್ದು.

ಬಹುಶಃ ನಮ್ಮೆಲ್ಲರ ಪಯಣ ಹೀಗೆ ಸುರುವಾಗುತ್ತದೆ. ಅಂಬೆಗಾಲಿಕ್ಕುವ ಮಗು, ಕುಂಡೆಯಲ್ಲಿ ಬಲ ರೂಢಿಸಿಕೊಳ್ಳುತ್ತ ನೆಟ್ಟಗೆ ನಿಲ್ಲಲು ಹವಣಿಸುವ ಕಂದಮ್ಮ, ತತ್ತಥೈಯ್ಯ ಥೈಯ್ಯ ಎನ್ನುತ್ತ ಒಂದರ ಮೇಲೊಂದು ಹೆಜ್ಜೆ ಇಕ್ಕಲು ಒದ್ದಾಡುವ ಕೂಸು, ಹೊಸಿಲು ದಾಟಿ, ಜಗಲಿ ಹಾದು, ಬೀದಿಯ ತನಕ ಹೋಗಿಬಿಟ್ಟ ಪುಂಡ, ಶಾಲೆಗೆ ಹೋದವ ನೆಟ್ಟಗೆ ಮನೆಗೆ ಬಾರದೆ ಊರು ಸುತ್ತಿ ಬರಲು ಸುರುಮಾಡಿದ ಪೋಕ್ರಿ, ಮೊದಲ ಸಲ ಗೆಳೆಯನೇ ಹೊಡೆಯುತ್ತಿದ್ದ ಎತ್ತಿನ ಗಾಡಿ ಹತ್ತಿ ಕೂತಿದ್ದು, ಕೃಷ್ಣಮೂರ್ತಿಯ ಭೀಕರ ತೊಡೆಗಳ ನಡುವಿನ ಸಪೂರ ರಾಡಿನ ಮೇಲೆ ರಕ್ತ ಹೆಪ್ಪುಗಟ್ಟಿ ಒಂದು ಕಾಲು ಮರಗಟ್ಟುವವರೆಗೂ ಸೈಕಲ್ಲಿನಲ್ಲಿ ರೈಡ್ ಹೋಗಿದ್ದು, ಊರಿನ ವಿಜಯಾ ಬ್ಯಾಂಕ್ ಮ್ಯಾನೇಜರ್ ಸಂಕಪ್ಪ ಶೆಟ್ರರ ಲ್ಯಾಂಬಿ ಸ್ಕೂಟರಿನ ಮೇಲೆ ಮೊದಲ ಬಾರಿ ಆ ಡುಮ್ಮ ಗಣೇಶನ ಹೊಟ್ಟೆಯ ನಡುವೆ ಸಿಕ್ಕಿಹಾಕಿಕೊಂಡಂತೆ ಕೂತು ಒತ್ತಿನೆಣೆಯ ತನಕ ಪ್ರಯಾಣಿಸುವ ಛಾನ್ಸ್ ಹೊಡೆದಿದ್ದು, ಮೊದಲ ಸಲ ಸಿಟಿಬಸ್ಸಿನಲ್ಲಿ ಬಸ್ರೂರಿನ ತನಕ ಹೋಗಿದ್ದು, ಮೊತ್ತ ಮೊದಲ ಸಲ ಹೊಳೆಯಲ್ಲಿ ನೀರು ಏರುವ ಭರತದ ಸಮಯ ಎಂದು ಹೆದರಿಸಿದ್ದರಿಂದ ಮನಸ್ಸಿಲ್ಲದಿದ್ದರೂ ದೋಣಿಗೆ ದುಡ್ಡು ಕೊಡಲು ಮನಸ್ಸು ಮಾಡಿದ ಅಮ್ಮನ ಜೊತೆ ದೋಣಿ ಹತ್ತಿದ್ದು, ಅಪ್ಪನ ಕಾಸರಗೋಡಿಗೆ ಹೋಗಲೆಂದು ರೈಲು ಹತ್ತಿ ಕುಳಿತಿದ್ದು.....

ಈಗಂತೂ ವಿಮಾನ ಪ್ರಯಾಣಗಳ ಕಾಲ. ಹಾರುವ ಕಾಲ. ಬೆಳಿಗ್ಗೆ ವಾಷಿಂಗ್ಟನ್ ಡಿಸಿಯಲ್ಲಿದ್ದವಳು ಈಗ ಬೋಸ್ಟನ್ನಿನಲ್ಲಿದ್ದೇನೆ ಎನ್ನುತ್ತಲೇ ಮಾತಿಗೆ ತೊಡಗಿದಳು ಅವಳು, ಓಲ್ಗಾ ತೊಕಾರ್ಝುಕ್... ಅವಳ ಕಾದಂಬರಿ ಫ್ಲೈಟ್ಸ್ ಬಗ್ಗೆ ಮಾತನಾಡುತ್ತಿದ್ದೇನೆ. ಇದಕ್ಕೆ 2018ರ ಮ್ಯಾನ್ ಬುಕರ್ ಪ್ರಶಸ್ತಿ ಬಂದಿದೆ. 2004-2006ರ ಅವಧಿಯಲ್ಲಿ ಅವಳ ಹಾಲೆಂಡಿನಲ್ಲಿ ಕೂತು ಬರೆದ ಇದನ್ನು ಇಂಗ್ಲೀಷಿಗೆ ತಂದಿದ್ದು ಕೊಂಚ ತಡವಾಗಿ. ಪ್ರಯಾಣ ಎನ್ನುವುದು ಜಂಪಿಂಗ್ ಆಗಿಬಿಟ್ಟಿದೆ, ಜಂಪ್ ಫ್ರಮ್ ಒನ್ ಪಾಯಿಂಟ್ ಟು ಅದರ್ ಪಾಯಿಂಟ್.

****

ದೇಹ ಒಂದು ಮಾಧ್ಯಮ. ಬದುಕು ಒಂದು ಯಾತ್ರೆ. ಜನನ, ಶೈಶವ, ಬಾಲ್ಯ, ತಾರುಣ್ಯ, ಯೌವನ, ಪ್ರೌಢ, ನಡುವಯಸ್ಸು, ಪ್ರಬುದ್ಧ, ಇಳಿವಯಸ್ಸು, ವೃದ್ಧಾಪ್ಯ, ಮರಣದ ವರೆಗಿನ ಪಯಣಕ್ಕೆ ದೇಹವೇ ವಾಹನ.

ದೇಹ ಮತ್ತು ಮನಸ್ಸು, ದೇಹ ಮತ್ತು ಆತ್ಮ, ದೇಹದ ವಿಲೇವಾರಿ - ಇವೆಲ್ಲ ಸಂಕೀರ್ಣ ಸಮಸ್ಯೆಗಳು ನಮಗೆ. ಕೆಲವರ ದೇಹಗಳನ್ನು ಸತ್ತ ಮೇಲೂ ಕೆಡದಂತೆ ಕಾಪಿಡುವ ಕ್ರಮ ಕಾಣುತ್ತೇವೆ. ಭ್ರೂಣಗಳನ್ನು, ಪೂರ್ತಿ ಬೆಳೆಯದ, ಬೆಳೆದು ಬೇಡವೆನ್ನಿಸಿ ತೆಗೆದ, ಎರಡು ತಲೆಗಳ, ಎರಡು ದೇಹ ಒಂದೇ ತಲೆಯ, ಚಿತ್ರವಿಚಿತ್ರವಾದ ಭ್ರೂಣಗಳು. ಇವನ್ನೆಲ್ಲ ಪ್ರಿಸರ್ವ್ ಮಾಡಿಡಲಾದ ಒಂದು ಲ್ಯಾಬಿನಲ್ಲಿ ಅಥವಾ ಮ್ಯೂಸಿಯಮ್ಮಿನಲ್ಲಿ ಸುತ್ತು ಹೊಡೆಯುತ್ತಾ ಮನುಷ್ಯ ಜೀವನ, ಈ ಬದುಕು, ಉಸಿರೇ ಭಾರವಾಗಿರುವ ಈ ದೇಹ, ಪ್ರಿಸರ್ವೇಟಿವ್ ದ್ರಾವಣಗಳಲ್ಲಿ ತೇಲುತ್ತಿರುವ ದೇಹದ ಅಸ್ತಿತ್ವ - ದೇಹವಾಗಿ ಅಥವಾ ಆತ್ಮವಾಗಿ ಏನು ಎಂದೆಲ್ಲ ಯೋಚಿಸುತ್ತಾ....

ಅಪಘಾತದಲ್ಲಿ ಕತ್ತರಿಸಿ ತೆಗೆಯಲಾದ ಕೈ, ಕಾಲು, ಬೆರಳು ಎಲ್ಲದರ ಮೇಲೂ ಒಂದು ಅವಿನಾಭಾವ ಅನುಬಂಧ ಇರುವುದಿಲ್ಲವೆ? ಕಳಚಿ ಬಿದ್ದ ಹಲ್ಲಿನೊಂದಿಗೇ ಇರುವಾಗ!

ಅನುಬಂಧ ಯಾವುದರೊಂದಿಗೆ? ಶೇಷ ಶರೀರದೊಂದಿಗಾ, ಮನಸ್ಸಿನೊಂದಿಗಾ, ಆತ್ಮಕ್ಕಾ?

ಕತ್ತರಿಸಿ ತೆಗೆಯಲಾದ ದೇಹದ ಭಾಗಗಳು ಮತ್ತು ಆ ಭಾಗ ಲುಪ್ತವಾದ ದೇಹದೊಂದಿಗೆ ಬದುಕು ಮುಂದುವರಿಸಿದ ವ್ಯಕ್ತಿಯ ದೇಹದ ಭಾಗಗಳು ಹೊಂದಿರುವ ಪರಸ್ಪರ ದೈಹಿಕವಾದ, ಭೌತಿಕವಾದ ಒಂದು ಸಂಬಂಧ. ಮಾನಸಿಕವಾದ ಸಂಬಂಧ. ನಿದ್ದೆಯಲ್ಲಿ, ಮಂಪರಿನಲ್ಲಿ ಆ ಭಾಗವನ್ನು ಮನಸ್ಸು ಇದೆಯೆಂದೇ ನಂಬಿ ವರ್ತಿಸುವುದಂತೆ. ಸತ್ತ ಮೇಲೂ ಹಾಗೆಯೇ ಭಾವಿಸುವುದೆ? ಆತ್ಮದ ಪರಿಕಲ್ಪನೆಯಲ್ಲಿ ಇಡಿಯಾದ ಪರಿಪೂರ್ಣ ದೇಹ ಮತ್ತು ವೈಕಲ್ಯಕ್ಕೊಳಗಾದ ದೇಹದ ಅನುಪಾತ ಹೊಂದಿಕೆಯಾಗುವುದು ಹೇಗೆ? Absence (ಗೈರು) ಕೂಡಾ ಒಂದು ಸಂಬಂಧದ ತಂತುವಿನೊಂದಿಗೆ ತೇಲುತ್ತಿರುವುದಿಲ್ಲವೆ? ಸುಡುವ ಅಥವಾ ಹೂಳುವ ಕಾಲ ಬಂದಾಗ ಪ್ರಿಸರ್ವೇಟಿವ್ಸ್ ದ್ರಾವಣದಲ್ಲೇ ಉಳಿದು ಬಿಡುವ ಈ ಭಾಗಗಳು - ಧಾರ್ಮಿಕ ವಿಧಿವಿಧಾನಗಳಿಗೆ, ನಂಬುಗೆಗಳಿಗೆ ಇವು ಒಡ್ಡುವ ಸವಾಲು, ಸಂಘರ್ಷ.

ದೇಹ - ಮನಸ್ಸು - ಆತ್ಮಗಳ ‘ಸಂಪೂರ್ಣ’ತ್ವದ ಸಂಬಂಧದಲ್ಲಿ ಹೀಗೆಲ್ಲ ಮಾಡಿದರೆ ಊನವುಂಟಾಗದೇ? ಮಣ್ಣಲ್ಲಿ ಹೂತು (ಬೀಜ ನೆಟ್ಟಂತೆ ಎಂದರು ಬೇಂದ್ರೆ) (ಮಣ್ಣು ಸೇರಿತು ಬೀಜ ಎಂದರೆ ನುಗಡೋಣಿ) ಅಥವಾ ಬೆಂಕಿಯಲ್ಲಿ ಸುಟ್ಟು ಅಥವಾ ಪಕ್ಷಿಗಳಿಗೆ ಆಹಾರವಾಗಿ ಪಂಚಭೂತಗಳೊಂದಿಗೆ ಲೀನವಾಗಬೇಕಾದ ದೇಹವೊಂದು ಇಲ್ಲದೆ ಆತ ಚಿತ್ರಗುಪ್ತನ ಎದುರು ಪಂಚನಾಮೆಗೆ ಹಾಜರಾಗುವುದಾದರೂ ಹೇಗೆ? ಕ್ರಿಶ್ಚಿಯನ್ನರಲ್ಲೂ ಇಂಥದ್ದಕ್ಕೆ ಸಂವಾದಿಯಾದ ಕಲ್ಪನೆ, ನಂಬುಗೆಗಳಿವೆ.

ಇಡಿಯಾದ ವಾಹನವಿಲ್ಲದೇ ಪಯಣ ಪರಿಪೂರ್ಣವಾಗುವುದೆ?

ಇಡೀ ದೇಹವನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿ ಶಾಶ್ವತವಾಗಿ ಉಳಿಸಿಕೊಂಡ ಪ್ರಸಂಗಗಳಿವೆಯಲ್ಲ. ಅಪರಕ್ರಿಯೆಯಿಂದ ವಂಚಿತವಾದ ಅವುಗಳ ಆತ್ಮಗಳು, ಅಂಥದ್ದು ಇದ್ದರೆ, ಅವು ಅತಂತ್ರಗೊಳ್ಳುತ್ತವೆಯೆ? ಅವುಗಳಿಗೆ ಶಾಸ್ತ್ರಗಳು ಹೇಳುವ ಮುಕ್ತಿ ಇಲ್ಲವೆ? ಕುಟುಂಬಸ್ಥರು ತಮ್ಮ ಪೂರ್ವಜರ ಈ ದೇಹಗಳನ್ನು ನಮಗೆ ಮರಳಿಸಿ ಎಂದು ಹಕ್ಕು ಮಂಡಿಸಬಹುದೆ?"

ದೇಹದಾನ, ನೇತ್ರದಾನ, ಕಿಡ್ನಿದಾನ - ಎಲ್ಲದರ ವಿಚಾರ ಹೇಗೆ ಹಾಗಾದರೆ? ಈ ದೇಹದ ಮೇಲಿನಹಕ್ಕು ನಮಗೇ ಸೇರಿದೆ ಎನ್ನುವುದು ಖಾತ್ರಿಯೆ? ಈ ದೇಹವನ್ನು ನಮಗೆ ಹೇಗೆ ಸರಿಯೆನ್ನಿಸುತ್ತದೆಯೋ ಹಾಗೆ ವಿಲೇವಾರಿ ಮಾಡುವ ಅಧಿಕಾರ ನಮಗಿದೆಯಾ? ವಾಹನ ಮಾರಿಕೊಂಡು ಕೂತರೆ ಪಯಣ ಸಾಗುವುದು ಹೇಗೆ, ಗುರಿ ಮುಟ್ಟುವುದು ಹೇಗೆ, ಯಾವಾಗ? ಪೆಟ್ರೋಲು ಮುಗಿಯಿತು ಅಂತ ವಾಹನ ಪರಿತ್ಯಜಿಸಲು ಬರುವುದೆ? ಮನುಷ್ಯ ಒಳ್ಳೆಯವನೆಂದು ಸ್ಟೇರಿಂಗ್ ವ್ಹೀಲ್ ಬಿಟ್ಟುಕೊಡಲು ಬರುತ್ತಾ?

ದೇಹದಾನ ಮಾಡಿದವರ ಕುಟುಂಬಸ್ಥರಿಗೆ ಅಪರಕ್ರಿಯೆಗೆ ಅನುಕೂಲವಾಗಲೆಂದು ಬೇಕಿದ್ದರೆ ಒಂದು ಬೆರಳನ್ನು ಕಟ್ ಮಾಡಿ ಕೊಡುತ್ತಾರಂತೆ.....ಈಚೆಗೆ ನನ್ನ ಸಹೋದ್ಯೋಗಿಯೊಬ್ಬರ ತಂದೆ ಗತಿಸಿದಾಗ ಈ ವಿಷಯ ತಿಳಿಯಿತು.

ಕಳೆದು ಹೋಗುವ ದೇಹಗಳು? ಮಿಸ್ಸಿಂಗ್ ಎಂದು ಪೇಪರಿನಲ್ಲಿ ಬರುತ್ತಲ್ಲ? ಆ ದೇಹ, ಮನಸ್ಸು, ಆತ್ಮಗಳೊಂದಿಗೆ ಒಂದು ಕಾಲದ ಸಹವರ್ತಿಗಳಿಗಿರುವ ಸಂಬಂಧ? ಪರಸ್ಪರ ದೂರವಾಗಿ - ವಿಧಿವತ್ತಾದ ವಿದಾಯದ ನಂತರವೋ ಅಥವಾ ಅಂಥದ್ದೇನೂ ಇಲ್ಲದೆಯೂ ಮರೆತು ಬಿಟ್ಟ, ಮರೆತೇ ಬಿಟ್ಟು ಬದುಕಿಯೂ ಮುಂದೊಂದು ದಿನ ಅಚಾನಕ್ಕಾಗಿ ಮುಖಾಮುಖಿಯಾದಾಗಲೇ, ಸಂಪರ್ಕವೇರ್ಪಟ್ಟಾಗಲೇ ನೆನಪುಗಳೆಲ್ಲ ಮರುಕಳಿಸಿ ಸಂಬಂಧವೊಂದು ಮರು ಜೀವಂತಗೊಳ್ಳಲು ಚಡಪಡಿಸುವ ಆ ಪ್ರಸವವೇದನೆಯನ್ನು ಅನುಭವಿಸುವ ಸಂಬಂಧಗಳು...

*****

ಟ್ರಾವೆಲ್ ಸೈಕಾಲಜಿಯ ಬಗ್ಗೆ ಮಾತನಾಡುತ್ತಾರೆ ಓಲ್ಗಾ. ಪ್ರಾಣಿಗಳ ಡಿಸೆಕ್ಷನ್, ಮರಗಳ ಬದುಕು, ಮಾತು ತಲೆಯೆತ್ತುವ ಬಗೆ, ಮಾತಿನ ಪಯಣ - ಶಬ್ದವಾಗಿ, ಅಕ್ಷರವಾಗಿ, ಪತ್ರವಾಗಿ, ಸಾಹಿತ್ಯವಾಗಿ, ಇತಿಹಾಸವಾಗಿ....

ಮನುಷ್ಯ ಸಂಬಂಧಗಳು ಅರಳುವ, ಮುದುಡುವ ನಡುವೆ ಒಂದು ಜೀವ ಇನ್ನೊಂದು ಜೀವದೆಡೆಗೆ ಹೊರಡುವ ಪಯಣವಿದೆ. ಸಂಗಮ ಸ್ಥಾನವಿದೆ, ಬಿರುಕಿನ ತಿರುವಿದೆ, ಕವಲಿದೆ, ಸರ್ಕಲ್ಲುಗಳು, ಮೂರ್ಕೈಗಳಿವೆ. ವಿದಾಯ-ವಿಸ್ಫೋಟ-ಘಟಸ್ಫೋಟದ ಬಳಿಕ ವಿರುದ್ಧ ಮುಖಿ ಚಲನೆಯಿದೆ. ದೇಹದ ಪಯಣ ಮತ್ತು ಮನಸ್ಸಿನ ಪಯಣಗಳ ದಿಕ್ಕು ಕೂಡಾ ಒಂದೇ ಆಗಿರಬೇಕಾದ್ದಿಲ್ಲವಲ್ಲ. ವ್ಯಾಸರು ಹೇಳಿದ್ದರು ಒಮ್ಮೆ, ಒಂದು ಬೀದಿಯಲ್ಲಿ ಒಂದೇ ದಿಕ್ಕಿಗೆ ಹೋಗುತ್ತಿರುವವರೆಲ್ಲ ಒಂದೇ ಕಡೆಗೆ ಹೋಗ್ತಿರುವುದಿಲ್ಲ ನರೇನ್....

ನೆನಪುಗಳ ಪಯಣ. ಭೂತಕಾಲ-ವರ್ತಮಾನ ಕಾಲ-ಭವಿಷ್ಯತ್ ಕಾಲಗಳ ಪರಿಕಲ್ಪನೆ ಅಥವಾ ಭ್ರಮೆ ಅಥವಾ ಸಂಯೋಜನೆಯ ಅನುಕ್ರಮಣಿಕೆ - ಬದಲಿಸಲಾಗದ್ದೆ? ಅಥವಾ ಮನುಷ್ಯ ಕಾಣುವ ರೀತಿ ಬದಲಾಗಬೇಕಿದೆಯೆ? ಬದಲಾದಲ್ಲಿ ಈ ಅನುಕ್ರಮಣಿಕೆಗಳು ಬದಲಾಗಲಿವೆಯೆ?

ಇದು ಇಪ್ಪತ್ತೊಂದನೆಯ ಶತಮಾನದ ಪ್ರಯಾಣಗಳ ಕುರಿತ ಕಾದಂಬರಿ. ಇದು ಹ್ಯೂಮನ್ ಅನಾಟಮಿಯ ಕುರಿತ ಕಾದಂಬರಿ ಕೂಡ. ಬದುಕು, ಸಾವು, ಚಲನೆ ಮತ್ತು ವಲಸೆಯ ಬಗ್ಗೆ ಮಾತನಾಡುವ ಕೃತಿಯಿದು. ಇಲ್ಲಿ ಹದಿನೇಳನೆಯ ಶತಮಾನದ ಡಚ್ ಅನಾಟಮಿಸ್ಟ್ ಫಿಲಿಪ್ ಇದ್ದಾನೆ, ಅವನ ಕತೆಯಿದೆ. ಅವನು ತನ್ನ ಕತ್ತರಿಸಿ ತೆಗೆಯಲಾದ ತನ್ನದೇ ಕಾಲಿನ ಪೇಯಿಂಟಿಂಗ್ ಮಾಡುತ್ತಾನೆ. ಅವನ ಇಚ್ಛೆಗೆ ವಿರುದ್ಧವಾಗಿ ಅವನ ಮರಣಾನಂತರ ಅವನ ದೇಹವನ್ನು ಆ ಕಾಲಿಲ್ಲದೆಯೇ ಹೂಳಲಾಗುತ್ತದೆ. ಮೂಲತಃ ಆಫ್ರಿಕಾದಿಂದ ಒಬ್ಬ ಗುಲಾಮನಾಗಿ ಬಂದು ದೊರೆಯ ವಿಶೇಷ ಕೃಪೆಗೆ ಪಾತ್ರನಾಗಿ ಉನ್ನತ ಹುದ್ದೇಗೇರಿದ ಹದಿನೆಂಟನೆಯ ಶತಮಾನದ ಒಬ್ಬನ ಕತೆಯಿದೆ ಇಲ್ಲಿ. ಅವನ ದೇಹವನ್ನು ಸಂರಕ್ಷಿಸಿ ಪ್ರದರ್ಶನಕ್ಕಿಡಲಾಗಿದೆ. ಅವನ ಕುಟುಂಬಸ್ಥರು ಆ ದೇಹವನ್ನು ಬಿಟ್ಟುಕೊಡಿ ನಮಗೆ, ಅದಕ್ಕೆ ಅಪರಕ್ರಿಯೆಗಳ ಸಂಸ್ಕಾರವಾಗಬೇಕಿದೆ ಎಂದು ಪತ್ರಬರೆಯ ತೊಡಗಿದ್ದಾರೆ. ಹತ್ತೊಂಭತ್ತನೆಯ ಶತಮಾನದ ಒಬ್ಬನ ಹೃದಯ ಮೃತದೇಹದಿಂದ ಪ್ರತ್ಯೇಕಿಸಲ್ಪಟ್ಟು ಪ್ಯಾರಿಸ್ಸಿಂದ ವಾರ್ಸಾಗೆ ಪ್ರಯಣಿಸುವ ಕತೆಯಿದೆ ಇಲ್ಲಿ. ಕ್ರೋಶಿಯಾದ ದ್ವೀಪವೊಂದಕ್ಕೆ ವಿಹಾರಕ್ಕೆ ಬಂದ ಗಂಡ ಹೆಂಡತಿ ಮಗುವಿನ ಕತೆಯಿದೆ. ಅವಳು ಹೀಗೇ ಕಾರಿನಿಂದಿಳಿದು ಮಗುವಿನೊಂದಿಗೆ ನಾಲ್ಕು ಹೆಜ್ಜೆ ಹಾಕಿದವಳು ಕಣ್ಮರೆಯಾಗಿದ್ದಾಳೆ. ಹತ್ತು ಕಿಲೋಮೀಟರ್ ಉದ್ದಗಲದ ಇಡೀ ದ್ವೀಪವನ್ನು ಹೆಲಿಕಾಪ್ಟರ್ ತರಿಸಿ ಹುಡುಕಾಡಿದರೂ, ಪೋಲೀಸ್ ನಾಯಿಗಳನ್ನು ಬಿಟ್ಟು ಹುಡುಕಾಡಿದರೂ ಅವರಿಬ್ಬರೂ ಪತ್ತೆಯಾಗದ ವಿಚಿತ್ರ ಜರುಗುತ್ತದೆ. ಕಾದಂಬರಿಯ ಕೊನೆಯಲ್ಲೆಲ್ಲೋ ಮೂರು ದಿನಗಳ ನಂತರ ಇದ್ದಕ್ಕಿದ್ದಂತೆ ಮನೆಗೆ ಬರುವ ಅವಳು ಮೂರು ವರ್ಷದ ಕೂಸಿನೊಂದಿಗೆ ಹೋಗಿದ್ದಾದರೂ ಎಲ್ಲಿಗೆ, ಯಾಕೆ ಎನ್ನುವುದು ಕೊನೆಗೂ ಯಾರಿಗೂ (ಅವಳಿಗೂ?!) ಗೊತ್ತಾಗುವುದಿಲ್ಲ.

ಸಾವು ತನ್ನ ಸ್ಥಾಪಿತ ಪಾರಂಪರಿಕ ಅರ್ಥ ಕಳೆದುಕೊಳ್ಳಲಿದೆಯೆ?

- ಕೆಲವು ಸ್ಯಾಂಪಲ್ಲುಗಳಷ್ಟೇ. ಹೇಳುತ್ತ ಹೋದರೆ ಏಕಸೂತ್ರದ ಕತೆಯೇ ಇಲ್ಲದ, ಪಾರಂಪರಿಕ ಮಾದರಿಯ ಕಾದಂಬರಿ/ಪ್ರವಾಸ ಕಥನ/ ನೆನಪುಗಳ ನುಡಿಚಿತ್ರ/ಅಂಕಣ ಬರಹ - ಯಾವುದೇ ಒಂದು ನಿರ್ದಿಷ್ಟ ಪ್ರಕಾರದ ಚೌಕಟ್ಟಿನಲ್ಲಿ ಇದಕ್ಕಾಗಿಯೇ ಮಾಡಿಸಿದ ಹಾಗೆ ಹೊಂದಿಕೊಂಡು ಕೂರದ ಈ ಚಿತ್ರ, ಅವೆಲ್ಲವೂ ಆಗಲು ಹವಣಿಸುವ ತೀವ್ರತೆಯನ್ನು ಹೊಂದಿದೆ. ಜೋಗಿಯವರ ಕವನವದು, ಹೀಗಿದೆ:

ಹುಡುಗಿಯರೇ ಹಾಗೆ
ಖಾಲಿ ಫ್ರೇಮಿನ ಹಾಗೆ
ಯಾವ ಚಿತ್ರವಿರಿಸಿದರೂ
ಹೊಂದಿಕೊಳ್ಳುತ್ತಾರೆ
ಅದಕ್ಕಾಗೇ ಮಾಡಿಸಿದ ಹಾಗೆ

ಒಂದೇ ಕಾಲಕ್ಕೆ ಈ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ, ಆ ದೇಶಗಳ ಶಾಲೆ, ದೇವಸ್ಥಾನ, ಆಸ್ಪತ್ರೆ, ಜಾತ್ರೆ, ಸಮಾರಂಭ, ಸ್ಮಶಾನಗಳಲ್ಲಿ ಏನೇನೇನೇಲ್ಲ ಸಾಗುತ್ತಿರುವಾಗ ಮನುಷ್ಯ ಸ್ವಕೇಂದ್ರಿತನಾಗಿ ತನ್ನದೇ ಸಮಸ್ಯೆಗಳಲ್ಲಿ ಮುಳುಗಿರುತ್ತಾನಲ್ಲ, ಆಗ ಎಲ್ಲೋ ಸಂಜೆಯಾಗಿದ್ದರೆ ಇನ್ನೆಲ್ಲೋ ಸುಡು ಮಧ್ಯಾಹ್ನ, ಇನ್ನೊಲ್ಲೋ ಮಳೆ ಸುರಿಯುತ್ತಿದ್ದರೆ ಇನ್ನೆಲ್ಲೋ ಮೋಡ ಕವುಚಿದ ಅಪಶಕುನ. ಅವನು ಪಯಣ ಹೋಗುತ್ತಿರುವುದಾದರೂ ಎಲ್ಲಿಗೆ, ಇದನ್ನೆಲ್ಲ ಏಕಕಾಲಕ್ಕೆ ಕಾಣಲಾರದೇ ಹೋದರೆ!

ಎಲ್ಲಿಗೆ ಪಯಣ, ಯಾವುದೋ ದಾರಿ? ಏಕಾಂಗಿ ಸಂಚಾರಿಯ ಸಂತೆಯಲ್ಲಿನ ಈ ಅಲೆದಾಟದ ಅರ್ಥವೇನು?

ಕೊನೆಗೂ ನಾವು ಎಲ್ಲಿಗೂ ಪಯಣಿಸುವುದೇ ಇಲ್ಲ ಎನ್ನುವುದೇ ನಿಜವಿರಬಹುದೆ? ಇಡೀ ಬ್ರಹ್ಮಾಂಡದ ಪರಿಕಲ್ಪನೆಯಲ್ಲಿ ಅವನ ಮೈಲುಗಟ್ಟಲೆ ಚಲನೆಗೆ ಯಾವ ಅರ್ಥವೂ ಇಲ್ಲ. ಅವನು ಚಂದ್ರನಲ್ಲಿಗೆ, ಮಂಗಳನಲ್ಲಿಗೆ ಪ್ರಯಾಣ ಹೂಡಿದರೂ ಅದಕ್ಕೆ ವಿಶೇಷ ಅರ್ಥವೇನಿಲ್ಲ. ಗುರಿಯಿಲ್ಲದ, ಉದ್ದೇಶಗಳಿಲ್ಲದ, ಸಾಧನೆಗಳಿಲ್ಲದ, ಇದ್ದಲ್ಲೇ ಇದ್ದರೂ ವ್ಯತ್ಯಾಸಗೊಳ್ಳದ ಪಯಣಗಳು ಎಷ್ಟಿಲ್ಲ.

ಮನಸ್ಸಿನ ಚಲನೆಗಳು, ಮನಸ್ಸಿನ ಪಯಣಗಳು ಇನ್ನೊಂದೇ ತರ. ಇವಕ್ಕೆ ಟಿಕೇಟಿನ, ಪಾಸ್‌ಪೋರ್ಟು ವೀಸಾ, ಭಾಷೆ, ಬ್ಯಾಂಕ್ ಅಕೌಂಟು, ಇನ್‌ಕಮ್ ಟ್ಯಾಕ್ಸ್ ಕ್ಲಿಯೆರೆನ್ಸ್, ಆಸ್ತಿಯ ಗ್ಯಾರೆಂಟಿ, ಏರ್‌ಪೋರ್ಟಿನ ಎದುರು ಕ್ಯೂ, ವಿಮಾನಗಳ ಆಗಮನ-ನಿರ್ಗಮನ ಯಾವುದರ ತೊಡಕೂ ಇಲ್ಲ. ಭಾಷೆಯ ಹಂಗಿಲ್ಲ. ಈ ಭಾಷೆಯ ವಿಚಿತ್ರ ಗಮನಿಸಿ. ಎಷ್ಟೆಲ್ಲ ದೇಶದಲ್ಲಿ ಎಷ್ಟೆಲ್ಲ ಭಾಷೆಗಳು. ಆದರೂ ಸಂಚಾರಿಯಾದ ಮನುಷ್ಯ ಎಲ್ಲ ಕಡೆಯೂ ಕಾಮನ್ ಆದ ಒಂದೇ ಭಾಷೆಯನ್ನು ಬಳಸುತ್ತ ಓಡಾಡಬಲ್ಲ. ಎಲ್ಲ ದೇಶಗಳಲ್ಲೂ ಕಾರನ್ನು ಚಲಾಯಿಸುವ, ಬಸ್ಸು ರೈಲು ಹತ್ತಿ ಇಳಿಯುವ, ಲಿಫ್ಟ್ ಬಳಸುವ ಭಾಷೆ ಒಂದೇ. ಸಂವೇದನೆಗಳು, ಭಾವನೆಗಳು, ನೈತಿಕತೆಯ ಭಾಷೆ ಒಂದೇ. ಸ್ವಿಚ್ಚುಗಳನ್ನು ಒತ್ತಲಾಗುತ್ತದೆ, ನಳ್ಳಿಯನ್ನು ತಿರುವಲಾಗುತ್ತದೆ.

ಆದರೆ ಸಂಚಾರಿಗಳೆಂದರೆ ಅವನಲ್ಲಿ ಅವ್ಯಕ್ತ ಭಯವಿದೆ. ಯಾಕೆ ಮತ್ತು ಯಾವಾಗ ಅವನು ಒಂದೆಡೆ ಸೆಟ್ಲ್ ಆಗಿ ಬದುಕುವ ಅಗತ್ಯ ಕಂಡುಕೊಂಡನೋ ಆಗಲೇ ಆಸ್ತಿ, ದೇಶ, ಧ್ವಜ, ಗಡಿ, ಸೈನ್ಯ ಎಲ್ಲ ಹುಟ್ಟಿಕೊಳ್ಳುವುದು ಅನಿವಾರ್ಯವಾಯಿತು. ಸಂಚಾರಿಗಳತ್ತ, ವಲಸೆ ಜೀವಿಗಳತ್ತ ಮನುಷ್ಯನಿಗಿರುವ ಭಯ ಈ ಮೂಲದ್ದು. ಅವನು ವಲಸೆ ಬರುವವರನ್ನು ದ್ವೇಷಿಸುತ್ತಾನೆ. ಶಾಶ್ವತವಾಗಿ ಒಂದೇ ಕಡೆ ನೆಲೆಯಾದವರು ತಮ್ಮ ಸ್ವಾತಂತ್ರ್ಯವನ್ನು ಬಹುಮಟ್ಟಿಗೆ ಅಡವಿಡುತ್ತಾರೆ. ಹಾಗಾಗಿ ಅವರು ಪೇಲವಗೊಳ್ಳುತ್ತಾರೆ. ಹಾಗಾಗಿ ಅವರಲ್ಲಿ ಮನುಷ್ಯನಿಗೆ ಹೆಚ್ಚು ನಂಬುಗೆ, ವಿಶ್ವಾಸ, ಧೈರ್ಯ. ಚಲನೆ ಮನುಷ್ಯನಿಗೆ ವಿಚಿತ್ರ ಶಕ್ತಿಯನ್ನು ಕೊಡುತ್ತದೆ. ಪ್ರಯಾಣವೇ ಬದುಕು, ಅದೇ ಅವನ ಶಕ್ತಿಯ ಮೂಲ. ಆದರೆ ಅಂಥ ಸಂಚಾರಿಗಳನ್ನು ಅನುಮಾನದಿಂದ, ಭಯದೊಂದಿಗೆ ಕಾಣಲಾಗುತ್ತದೆ.

*****

ಈ ಪುಸ್ತಕದ ಪುಟಪುಟಗಳಲ್ಲೂ ಕೋಟ್ ಮಾಡಬಹುದಾದ, ಅನುವಾದಿಸಿ ಕೊಡಬೇಕಿಲ್ಲಿ ಅನಿಸುವಂಥ ಉತ್ಸಾಹ ಮೂಡಿಸುವ ಪರಿಚ್ಛೇದಗಳು ತುಂಬಿವೆ. ಮತ್ತೆ ಮತ್ತೆ ಓದಬೇಕನಿಸುವ ಪುಟ್ಟ ಪುಟ್ಟ ಅಧ್ಯಾಯಗಳು, ಪ್ಯಾರಾಗಳು ಪುಟಪುಟಗಳಲ್ಲೂ ಎದುರಾಗುತ್ತಲೇ ಹೋಗುತ್ತವೆ. 410 ಪುಟಗಳ ಈ ಕಾದಂಬರಿಯ ಪುಟಗಳನ್ನು, ಅಧ್ಯಾಯಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತ, ಅದರ ಸೌಂದರ್ಯಕ್ಕೆ, ಅಂಥ ಹೊಳಹುಗಳನ್ನು ಒಬ್ಬ ಬರಹಗಾರನಿಗೆ ಅಚಾನಕ್ಕಾಗಿ ದಕ್ಕಿಸಬಲ್ಲ ಈ ಬದುಕಿನ ವಿಚಿತ್ರಕ್ಕೆ ವಿಸ್ಮಯಪಡುತ್ತ, ಅಂಥ ಸಾಂದ್ರತೆಯೊಂದಿಗೆ ಈ ಕೃತಿಯನ್ನು ದಯಪಾಲಿಸಿದ ಓಲ್ಗಾ ತೊಕಾರ್ಝುಕ್ಕಳ ಬಗ್ಗೆ ಅಭಿಮಾನ ಪಡುತ್ತ, ಸಂಪರ್ಕಕ್ಕೆ ಬಂದವರಿಗೆಲ್ಲ ಇದನ್ನು ಓದಿ ಎಂದು ಕೊರೆಯುತ್ತ ಬಂದಿದ್ದೇನೆ. ರಾತ್ರಿ ಕತ್ತಲಲ್ಲೇ ಆಡಿಯೋ ಬುಕ್ ಕೇಳುತ್ತ ಮನೆ ತುಂಬ ಪ್ರೇತದಂತೆ ಓಡಾಡುವುದು ನನ್ನ ಅಭ್ಯಾಸ. ಹಾಗೆ ಮಾಡುತ್ತ ನನ್ನೊಂದಿಗೆ ಈ ಕಾದಂಬರಿಯ ಪಾತ್ರಗಳ ನೆರಳುಗಳು, ನನ್ನ ಗತ ಬದುಕಿನ ಗೆಳೆಯ ಗೆಳೆಯತಿಯರು ಚಲಿಸಿದಂತೆ, ಅಲ್ಲಿ ಯಾರೋ ನಿಂತಂತೆ, ಇಲ್ಲಿ ಯಾರೋ ಸರಿದು ಹೋದಂತೆಲ್ಲ ಆಗಿ ಬೆಚ್ಚಿ ಬಿದ್ದಿದ್ದೇನೆ, ಖುಶಿ ಪಟ್ಟಿದ್ದೇನೆ. ಅವರಲ್ಲಿ ಸತ್ತವರೂ, ನೆನಪುಗಳಲ್ಲಷ್ಟೇ ಜೀವಂತವಾಗಿರುವವರು, ಈಗ ಪೂರ್ತಿಯಾಗಿ ದೂರವಾದವರು ಎಲ್ಲ ಇದ್ದಾರೆ.

ಇಲ್ಲಿ ಏಕಸೂತ್ರದ ಕಥಾನಕವಿಲ್ಲ. ಇಲ್ಲವೇ ಇಲ್ಲ ಎಂದರೆ ಇದೆ. ಯಾವುದೋ ದೇಶದ ಯಾವುದೋ ಒಂದಿಷ್ಟು ಪಾತ್ರಗಳ ಕತೆ ಇನ್ಯಾವುದೋ ಒಂದು ದೇಶದ ಇನ್ಯಾವುದೋ ಒಂದಿಷ್ಟು ಪಾತ್ರಗಳ ಬದಲಾದ ಸನ್ನಿವೇಶ, ಕಾಲ, ಸಂದರ್ಭಗಳಲ್ಲಿ ಮುಂದುವರಿಯಬಹುದಲ್ಲವೆ? ಅಥವಾ ಅವೇ ಪಾತ್ರಗಳು ಇನ್ನೆಲ್ಲೋ ಪ್ರತ್ಯಕ್ಷಗೊಂಡು ನೆನಪುಗಳಲ್ಲಿ ಸತ್ತ, ಜೀವಂತಗೊಂಡ ಅನುಭವವನ್ನು ದಯಪಾಲಿಸಬಹುದಲ್ಲವೆ? ಕತೆ ಇದೆ ಮತ್ತು ಇಲ್ಲ. ಆದರೆ ನೀವಂತೂ ಇಡೀ ಕೃತಿಗೆ ನಿಮ್ಮ ಫೋಕಸ್, ಏಕಾಗ್ರತೆ ಸಾಣೆ ಹಿಡಿಯುತ್ತ ಬರಬೇಕಾಗುತ್ತದೆ, ನಾನೂರ ಹತ್ತು ಪುಟಗಳ ಮಟ್ಟಿಗಾದರೂ....

ಹಾಗೆಯೇ ಇದು ಪ್ರವಾಸ ಕಥನವೆ, ಆತ್ಮಾನುಗತ ಸ್ವಗತವೆ, ಕಾದಂಬರಿಯೆ, ಟಿಪ್ಪಣಿಗಳ ಸಂಗ್ರಹವೆ ಎಂದರೆ ಅವೆಲ್ಲವೂ ಹೌದು. ಇವತ್ತಿನ ಆಧುನಿಕ ಮನುಷ್ಯನ ಫೋಕಸ್ ಮಾಡಲಾರದ ಚಿತ್ತವೃತ್ತಿಯ ಯಥಾವತ್ ಚರ್ವಿತ ಚರ್ವಣದಂತಿದ್ದೂ ನಿರಂತರವಾದ ಏಕಾಗ್ರತೆಯನ್ನು ಡಿಮ್ಯಾಂಡ್ ಮತ್ತು ಕಮಾಂಡ್ ಮಾಡುವ ಕೃತಿಯಿದು. ಕ್ಷಣ ಕಳೆದರೆ, ಸಾಲು ಜಾರಿದರೆ, ಮನಸ್ಸೊಮ್ಮೆ ಅತ್ತ ಸರಿದರೆ You miss it.


ಇದೇ ಕಾರಣಕ್ಕೆ ಇದೊಂದು MUST READ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ