ಮನಸ್ಸು ಮೃದುಗೊಳಿಸುವ, ಓದುಗನ ಹೃದಯ ಒಲಿಸಿಕೊಳ್ಳುವ, ಓಲೈಕೆಯ ಕ್ರಮವನ್ನು ಅನುಸರಿಸಿ ಕವಿತೆಯ ಅನುಭೂತಿಯನ್ನು ಓದುಗನಲ್ಲಿ ಉಂಟು ಮಾಡುವುದು ಸಾಮಾನ್ಯವಾಗಿ ಕವಿಗಳು ಅನುಸರಿಸುವ ಕ್ರಮ. ಆದರೆ ಎಸ್ ದಿವಾಕರ್ ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವಂತೆ, ಅವರು ಪ್ರಯೋಗಶೀಲರು, ಸದಾ ಹೊಸತನ್ನು ಬಯಸುವವರು, ಹೊಸತನ್ನೇ ಹುಡುಕುವವರು, ಹೊಸತನ್ನೇ ಕೊಡುವವರು. ಪ್ರಾಯೋಗಿಕತೆಯಿಲ್ಲದ ಸೃಷ್ಟಿಕ್ರಿಯೆಯಲ್ಲಿ ಜೀವಂತಿಕೆಯಿರುವುದಿಲ್ಲ, ಕನ್ನಡದಲ್ಲಿ ಅಭಿವ್ಯಕ್ತಿಯ ಹೊಸ ಹೊಸ ಮಾರ್ಗಗಳ ಅನ್ವೇಷಕ ಪ್ರಜ್ಞೆ ಜಾಗೃತಗೊಂಡ ಎಲ್ಲಾ ಸಂದರ್ಭಗಳಲ್ಲೂ ಪ್ರಯೋಗಶೀಲತೆಯೇ ಅದಕ್ಕೆ ಕಾರಣವಾಗಿದ್ದನ್ನು ಗಮನಿಸಬಹುದು ಎನ್ನುತ್ತಾರೆ ಅವರು. ಪ್ರಯೋಗಶೀಲತೆಯೇ ಬೇಂದ್ರೆಯವರ ಜೀವಧಾತು, ಅಡಿಗರ ಜೀವಧಾತು, ಎ ಕೆ ರಾಮಾನುಜನ್ ಕಾವ್ಯದ ಜೀವಧಾತು ಎಂದು ಅವರು ಬೆರಗು ಹುಟ್ಟಿಸುವ ಸಂಗತಿಗಳನ್ನು ಕಾಣಿಸುತ್ತ ಹೋಗುತ್ತಾರೆ.
ಈ ಸಂಕಲನದಲ್ಲಿ ನಮಗೆದುರಾಗುವುದು ಅದೇ ಹೊಸತನ.
ಆಧುನಿಕ ಕವಿತೆ ಒಂದು ಸಂದಿಗ್ಧ ಮನಸ್ಥಿತಿಯನ್ನು ಭಾಷೆಯಲ್ಲಿ ಕಟ್ಟಿಕೊಡಲು ಪ್ರಯತ್ನಿಸುವಾಗಲೆಲ್ಲ ಹೊಸ ಪ್ರತಿಮೆಗಳನ್ನು, ಬಿಂಬಗಳನ್ನು ಮತ್ತು ಪರಿಪ್ರೇಕ್ಷ್ಯಗಳನ್ನು ಕಟ್ಟಿಕೊಡುವ ಮುಖೇನ ಅದನ್ನು ಸಾಧಿಸಲು ನೋಡಿದೆ. ಸರ್ರಿಯಲಿಸಂನ ಛಾಯೆ ಈ ಪ್ರಯೋಗಗಳಲ್ಲಿ ಕಂಡುಬರುವುದಾದರೂ ಕಾವ್ಯಕ್ಕೆ ಅಂಥ ಲೇಬಲ್ಲುಗಳ ಮಿತಿ ತೊಡಿಸದೇ ಇರುವುದು ಹೆಚ್ಚು ಔಚಿತ್ಯಪೂರ್ಣ. ಅಜಿತನ್ ಕುರುಪ್ ಕವಿತೆಗಳು ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆ ಎನಿಸುತ್ತದೆ. ಕನ್ನಡದಲ್ಲಿ ಇಂಥ ಪ್ರಕ್ರಿಯೆ, ಎ.ಕೆ.ರಾಮಾನುಜನ್ ಬಳಿಕ, ಅಂದರೆ ಇತ್ತೀಚಿನ ದಿನಗಳಲ್ಲಿ ಕಂಡುಬರದಿದ್ದರೂ ಭಾರತೀಯ ಇಂಗ್ಲೀಷ್ ಕಾವ್ಯವನ್ನು ಗಮನಿಸಿದರೆ ಅರುಣ್ ಕೋಲಟ್ಕರ್ ಆದಿಯಾಗಿ ಶ್ರೀದಲಾ ಸ್ವಾಮಿ, ನಬ್ನೀತಾ ಕನುಂಗೊ, ಅಥೆನಾ ಕಶ್ಯಪ್ ಮುಂತಾದ ಎಳೆಯರು ಕೂಡ ಸಾಕಷ್ಟು ಪ್ರಯೋಗಶೀಲತೆ ತೋರಿರುವುದುಂಟು. ಬಹುಶಃ ನಮ್ಮ ಕತೆಗಾರ ಎಂ ಎಸ್ ಕೆ ಪ್ರಭು ಇದೇ ಬಗೆಯ ಒಂದು ಹಾದಿಯನ್ನು ಗದ್ಯಸಾಹಿತ್ಯದಲ್ಲಿ ತುಳಿದಿದ್ದು ಇಲ್ಲಿ ಉಲ್ಲೇಖನೀಯ. ಆ ಬಳಿಕ ಸ್ವಲ್ಪ ಮಟ್ಟಿಗೆ ಎಸ್ ಸುರೇಂದ್ರನಾಥ್ ಕೂಡ ತಮ್ಮ ಕೆಲವು ಕತೆಗಳಲ್ಲಿ ಇಂಥ ತಂತ್ರ ಬಳಸಿದ್ದುಂಟು. ನಾತಲೀಲೆಯ ಮಾಸ್ತರರ ಅಪಾನವಾಯು ಹಸಿರು ಬಣ್ಣದ ಬಲೂನಾಗಿ ಲೋಕಕ್ಕೆಲ್ಲ ಕಾಣಲು ಸಿಗುವುದು, ಶನಿಕಾಟವನ್ನು ಬದಲಾಯಿಸಿಕೊಳ್ಳುವ ಎಕ್ಸ್ಚೇಂಜ್ ಆಫರ್ ಇರುವ ಅಂಗಡಿಯೊಂದು ಇರುವುದು, ಗೋಡೆಯೊಳಗೆ ಸುಲಭವಾಗಿ ತೂರಿಕೊಂಡು ಎಲ್ಲೆಂದರಲ್ಲಿ ಎಂಟ್ರಿ ಪಡೆಯಬಲ್ಲ ವ್ಯಕ್ತಿಯೊಬ್ಬ ತಿಂದ ಗುಳಿಗೆಯಿಂದ ಗೋಡೆಯೊಳಗೇ ಸಿಕ್ಕಿಕೊಂಡು ಖಾಯಂ ಬಂಧಿಯಾಗುವುದು ಸುರೇಂದ್ರನಾಥ್ ಕತೆಗಳಲ್ಲಷ್ಟೇ ಸಾಧ್ಯ. ಕಾವ್ಯ ಪ್ರಕಾರದಲ್ಲಿ ಇಂಥ ಅಭಿರುಚಿ ತೋರಿಸಿದ್ದು ಬಹುಶಃ ಎಸ್ ದಿವಾಕರ್ ಒಬ್ಬರೇ ಇರಬೇಕು.
ಅಸಂಗತವೂ, ಅಸಂಭವವೂ ಅನಿಸುವ ಒಂದು ಪ್ರತಿಮೆಯ ಮೂಲಕವೇ ಬೆಚ್ಚಿ ಬೀಳಿಸುತ್ತ ಸಂವೇದನೆಗಳನ್ನು ಇದ್ದಕ್ಕಿದ್ದಂತೆ ಜಾಗೃತಗೊಳಿಸಿ ಒಂದು ಸೂಕ್ಷ್ಮ ಅನುಭವವನ್ನು, ಅದರ ಅನುಭೂತಿಯನ್ನು ದೃಢವಾಗಿ, ದಟ್ಟವಾಗಿ ಮತ್ತು ಮರೆಯಲಾಗದಂತೆ ಓದುಗನಲ್ಲಿ ಉಂಟು ಮಾಡುವ ಕಾವ್ಯಕ್ರಮವನ್ನು ಅನುಸರಿಸುತ್ತ ಎಸ್ ದಿವಾಕರ್ ತಮ್ಮ ಕವಿತೆಗಳನ್ನು ಅತ್ಯಂತ ಎಚ್ಚರದಿಂದ ಕಟ್ಟುತ್ತಾರೆ. ಮೇಲ್ನೋಟಕ್ಕೆ ಪ್ರಾಯೋಗಿಕತೆಯಷ್ಟೇ ಆಗಿ ಕಾಣಬಹುದಾದ ಈ ಮಾರ್ಗದ ಕವಿತೆಯನ್ನು ಕಟ್ಟುವುದು ಮಹಾ ಪ್ರಯಾಸದ ಕೆಲಸ ಎನ್ನುವುದು ಅರ್ಥವಾಗಬೇಕಾದರೆ ಕಾವ್ಯದ ಮೂಲಧರ್ಮವಾದ ಕವಿ ಭಾವ ಪ್ರತಿಮಾ ಪುನಃಸೃಷ್ಟಿಯತ್ತ ಸೂಕ್ಷ್ಮ ಅವಲೋಕನ ಪ್ರತಿಯೊಂದು ಹೆಜ್ಜೆಯಲ್ಲೂ ಇರಬೇಕಾದ ಅನಿವಾರ್ಯದ ಅರಿವೂ ನಮಗಿರಬೇಕಾಗುತ್ತದೆ. ಇದು ಬರೀ input based ಸೃಷ್ಟಿಯಲ್ಲ. ಪೂರ್ತಿಯಾಗಿ output based ಸೃಷ್ಟಿ. ಯಾವ ಅನುಭವ ಅಥವಾ ಅನುಭೂತಿಯನ್ನು ಓದುಗನಿಗೆ ದಾಟಿಸಲು ಯಾವ ಪ್ರತಿಮೆ/ಬಿಂಬ/ರೂಪಕ ಅತ್ಯಂತ ಸೂಕ್ತವಾದೀತು ಎನ್ನುವುದನ್ನು ಶಬ್ದದ ಪರಿಣಾಮವನ್ನು, ನಾದದ ಪ್ರಭಾವವನ್ನು, ಕಣ್ಮುಂದೆ ಮೂಡುವ ಚಿತ್ರದ ಅನುಭೂತಿಯನ್ನು ಊಹಿಸಿ ಆರಿಸಬೇಕಾಗುತ್ತದೆ ಇಲ್ಲಿ. ಇದೊಂದು ರೀತಿ ಅಮೂರ್ತವಾದ ರಾಗದಿಂದ ಭಾವದೀಪ್ತಿ ಬೆಳಗಿದಂತೆ.
ಮೇಲೆ ಹೇಳಿದ ಮೊದಲ ಕ್ರಮದಲ್ಲಿ ಓಲೈಕೆಯಿಂದ ಓದುಗನನ್ನು ಒಲಿಸಿಕೊಂಡು ಹೇಳುವುದರಿಂದ ಕವಿಯ ಗೆಲುವು ಕೊಂಚ ಸುಲಭ. ಆದರೆ ಇಲ್ಲಿ ಸವಾಲುಗಳು ಹೆಚ್ಚು, ಗೆಲುವು ಅದೃಷ್ಟದ್ದು! ಹಾಗಿದ್ದೂ ಎಸ್ ದಿವಾಕರ್ ಸಾಧಿಸಿರುವುದನ್ನು ಗಮನಿಸಿದರೆ ಅವರ ಧೀಃಶಕ್ತಿಯ ಬಗ್ಗೆ ಅಚ್ಚರಿಯೂ, ಮೆಚ್ಚುಗೆಯೂ, ಹೆಮ್ಮೆಯೂ ಹುಟ್ಟುತ್ತದೆ.
ಎಸ್ ದಿವಾಕರ್ ಅವರು ಇದನ್ನು ತೊಡಗಿದ್ದು ಇಂದು ನಿನ್ನೆಯಲ್ಲ. ದಿವಾಕರರ ಮೊತ್ತ ಮೊದಲ ಕವನ ಸಂಕಲನದಲ್ಲಿಯೇ ಅವರು ನಿರಂತರ ಪ್ರಯೋಗಶೀಲತೆಯ ತಮ್ಮ ಅಭಿಜಾತ ಪ್ರತಿಭೆಯನ್ನು ಭರಪೂರ ಮೆರೆದವರೇ. ಆ ಸಂಕಲನ, "ಆತ್ಮಚರಿತ್ರೆಯ ಕೊನೆಯ ಪುಟ" ಹೊರಬಂದಿದ್ದು 1998ರಲ್ಲಿ. ಅಲ್ಲಿನ ಕವಿತೆಗಳನ್ನು ಗಮನಿಸಿದರೆ ಈ ಅಂಶ ನಿಚ್ಚಳವಾಗುತ್ತದೆ.
ಯಾರೀ ಮನುಷ್ಯ ನಿಂತಿದ್ದಾನೆ ಬತ್ತಲೆ:
ಉರಿಯುತ್ತಿವೆ ಇವನ ಕಣ್ಣು
ಸುರಿಯುತ್ತಿರುವ ಮಳೆಯಲ್ಲಿ;
ತುರುಕಿಟ್ಟಿದ್ದಾನೆ ತನ್ನ ತಲೆಯನ್ನೊಂದು ಚೀಲದಲ್ಲಿ. (ನಿಗೂಢ)
ಹುಲ್ಲುಗಾವಲಿನಲ್ಲಿ ಸತ್ತುಬಿದ್ದಿದೆ ಕರು
ಕಣ್ಣಿಲ್ಲದ ತಲೆ, ಹುಲ್ಲಿನ ಮೇಲೆ ದವಡೆಬಿಟ್ಟುಕೊಂಡ
ಮೌನ. ಹೊಟ್ಟೆಯ ಕೆಳಗೆ ಅರಳಿಕೊಂಡ ನೆರಳು
ನೋವಿನ ನೂಲಾಗಿ ಸಿಂಬಿಸುತ್ತಿದ ಕರುಳು. (ಹುಲ್ಲುಗಾವಲಿನಲ್ಲಿ ಸತ್ತ ಕರು)
ಈ ಸಂಕಲನಕ್ಕೆ ಹೆಸರು ಕೊಟ್ಟ "ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ" ಕವಿತೆ ಆ ಸಂಕಲನದಲ್ಲಿ "ನಿರೀಕ್ಷೆ" ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿರುವುದೇ. ಅಂದರೆ, ಎಸ್ ದಿವಾಕರ್ ಅವರ ಕಾವ್ಯದ ಲಯ, ನೆಲೆ ಮತ್ತು ಪರಿಭಾಷೆಗಳು ಸದಾ ಹೊಸತನಕ್ಕೆ, ಪ್ರಾಯೋಗಿಕತೆಗೆ ಮತ್ತು ಪರಿಣಾಮಕಾರತ್ವವನ್ನು ಸಾಧಿಸುವ ಹಲವು ಬಗೆಯ ಮಾರ್ಗಗಳ ಬಗ್ಗೆ ಯಾವತ್ತಿನಿಂದಲೂ ಮುಕ್ತವಾಗಿ ತೆರೆದುಕೊಂಡೇ ಇದ್ದವು.
ಅಜಿತನ್ ಕುರುಪ್ ಮತ್ತು ಎಸ್ ದಿವಾಕರ್ ಕವಿತೆಗಳ ನಡುವಿನ ಪ್ರಧಾನ ವ್ಯತ್ಯಾಸವೆಂದರೆ, ಅಜಿತನ್ ತನ್ನ ವಿಲಕ್ಷಣ ಪ್ರತಿಮೆ/ಬಿಂಬ/ಪರಿಪ್ರೇಕ್ಷ್ಯಗಳನ್ನು ಇಡೀ ಕವಿತೆಯುದ್ದಕ್ಕೂ ಬೆಳೆಸುತ್ತಾ ಹೋದರೆ ದಿವಾಕರ್ ಹಲವಾರು ಕಡೆ ತಮ್ಮ ಒಂದೇ ಕವಿತೆಯಲ್ಲಿ ಇಂಥ ಹತ್ತಾರು ಪ್ರತಿಮೆ/ಬಿಂಬ/ಪರಿಪ್ರೇಕ್ಷ್ಯಗಳನ್ನು ದುಡಿಸಿಕೊಳ್ಳುತ್ತ ಹೋಗುತ್ತಾರೆ. ದಿವಾಕರ್ ಅವರಲ್ಲಿ ಹೀಗೆ ನಮಗೆ ಎರಡೂ ಬಗೆಯ ಪ್ರಯತ್ನಗಳು ಕಾಣಸಿಗುತ್ತವೆ. ಉದಾಹರಣೆಗೆ, "ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ" ಕವಿತೆಯಲ್ಲಿ ಅವರು ಒಂದು ವಾತಾವರಣವನ್ನು ಹತ್ತಾರು ವಿಭಿನ್ನ ಪ್ರತಿಮೆಗಳ ಮುಖೇನ ಪುನರ್ ಸೃಜಿಸುವ ಮೂಲಕವೇ ಒಂದು ಮನಸ್ಥಿತಿಯನ್ನು ಸೃಜಿಸಲು ಪ್ರಯತ್ನಿಸಿದರೆ, "ಕಪ್ಪೆ" ಕವಿತೆಯಲ್ಲಿ ಒಂದೇ ಪ್ರತಿಮೆಗೆ ಅಂಟಿಕೊಳ್ಳುತ್ತಾರೆ. ಎರಡೂ ವಿಧಾನದಿಂದ ಸಾಧಿಸಬಹುದಾದ್ದು ಒಂದೇ, ತಕ್ಷಣಕ್ಕೆ ಸವಕಲು ಭಾಷೆ ಮತ್ತು ಪ್ರತಿಮಾವಿಧಾನಗಳಿಂದ ಜಡಗಟ್ಟಿದ ಮನಸ್ಸಿಗೆ ಒಂದು ಧಕ್ಕೆ ಕೊಟ್ಟೇ ಅದನ್ನು ಚುರುಕುಗೊಳಿಸಿ, ಹೊಸ ಸಂವೇದನೆಗೆ ಸಜ್ಜುಗೊಳಿಸುವುದು ಮತ್ತು ಅನುಭವದ ಪುನರ್ಸೃಷ್ಟಿ ಸಾಧ್ಯಗೊಳಿಸುವುದು. ಕವಿ ಯಾವ ಲಯದಲ್ಲಿ ಮಾತನಾಡಿದರೂ ಓದುಗನಾಗಿ ಅವನ ಲಕ್ಷ್ಯ ಕವಿತೆಯ ಪರಮೋದ್ದೇಶದ ಕಡೆಗೇ ಇರುತ್ತದೆ ಮತ್ತದು ಇಡೀ ಕವಿತೆ ಕಟ್ಟಿಕೊಡುವ ಭಾವ, ಉದ್ದೀಪಿಸುವ ಸಂವೇದನೆ ಮತ್ತು ಜಾಗೃತಗೊಳಿಸುವ ಅನುಭವ. ಅನುಭವ ನಮಗೆ ದಕ್ಕುವುದು ಪಂಚೇಂದ್ರಿಯಗಳ ಮೂಲಕ ಮತ್ತು ಅದಕ್ಕೆ ಭಾಷೆಯ ಹಂಗೇ ಇಲ್ಲ. ಹಾಗಾಗಿ ಅನುಭವ ಭಾಷೆಯ ಮೂಲಕ ಇನ್ನೊಬ್ಬರಿಗೆ ಅರ್ಥವಾಗಬೇಕಿಲ್ಲ, ಅನುಭವವಾದರೆ ಸಾಕು. ಕವಿತೆಯ ಪರಮೋದ್ದೇಶ ಇರುವುದೇ ಈ ಮೂಲ ನೆಲೆಯಲ್ಲಿ. ಬೇಂದ್ರೆಯವರು ಅರ್ಥದ ಹಂಗಿನಿಂದ ಭಾಷೆಯನ್ನು ಬಿಡುಗಡೆಗೊಳಿಸಿದ್ದು ಕೂಡಾ ಇಂತಹುದೇ ಒಂದು ವಿಧಾನದಲ್ಲಿ. ಅಡಿಗರು ನವೋದಯದ ಎಲ್ಲ ಆಕಾಶರಾಯರಿಂದ ಕವಿತೆಯನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದು ಕೂಡಾ ಇದೇ ದಾರಿಯಲ್ಲಿ. ಏಕೆಂದರೆ, ಎಲ್ಲ ಕವಿಗಳ ಕೈಯಲ್ಲೂ ಇರುವ ಹತ್ಯಾರ ಭಾಷೆ ಮತ್ತು ಭಾಷೆ ಮಾತ್ರ. ಅವರ ಕೃಷಿ, ಉಳುಮೆ, ಸೃಷ್ಟಿ, ಹೋರಾಟ, ಯುದ್ಧ ಎಲ್ಲವೂ ನಡೆಯಬೇಕಾಗಿರುವುದು ಅದೊಂದರಿಂದಲೇ.
ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯ
ಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳು
ಇಮ್ಮಡಿಸುತ್ತವೆ ಪುಸ್ತಕದ ಪುಟಗಳು
ಪುಟಗಳಲ್ಲಿರುವ ಎಲ್ಲವೂ
- ಇದು ಕವಿತೆ.
ಇಲ್ಲಿ ಪುಸ್ತಕವೇ ಕೈಯನ್ನು ಬೆಳೆಸಿಕೊಳ್ಳುವುದರ ಬಗ್ಗೆ ಯೋಚಿಸದೇ ಇರಲು ಸಾಧ್ಯವಿಲ್ಲ. ಪುಸ್ತಕಗಳು ಮನುಷ್ಯನನ್ನೇ ಬೆಳೆಸುತ್ತವೆ. ಹಾಗಿರುವಾಗ ಕೈಯನ್ನು ಬೆಳೆಸದೇ ಇರುತ್ತವೆಯೆ? ಅವನ ಕಬಂಧ ಬಾಹುಗಳಿಗೆ ಆಗ ಏನೇನೆಲ್ಲ ಬೇಕಾಗಬಹುದೋ ಹೇಳುವುದು ಕಷ್ಟವೇ. ಅಥವಾ ಇದನ್ನು ‘ಕೈಯ ಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳು’ ಎಂದೂ ಓದಬಹುದು. ಕೈಯ ಪುಳಕಕ್ಕೆ ಅಕ್ಷರಗಳು ವಾಕ್ಯಗಳು ಒಳಗಾಗುವ ಸಂದರ್ಭವಿದು. ಹೌದಲ್ಲವೆ? ಓದುಗನ ಸ್ಪರ್ಶ, ನೋಟ, ಓದಿನ ಮೂಲಕ ಅವನದ್ದಾಗಲಿರುವ ಒಂದು ಅಕ್ಷರ-ವಾಕ್ಯ ಹೊಂದಲಿರುವ ಸಂಸರ್ಗದ ಸುಖ ಪುಳಕವನ್ನು ನೀಡದಿರುವುದೆ? ಪುಸ್ತಕವನು ಓದುಗನು ತಬ್ಬಿದಾಗ ಪುಳಕಗೊಳ್ಳದೆ ಪುಸ್ತಕ ಝುಮ್ಮನೆ? ಹಾಗೆ ಹುಟ್ಟಿದ ಪುಳಕದಿಂದಲೇ ಪುಸ್ತಕದ ಪುಟಗಳು ಇಮ್ಮಡಿಸುತ್ತವೆ, ಪುಟಗಳಲ್ಲಿರುವ ಎಲ್ಲವೂ ಇಮ್ಮಡಿಸುತ್ತದೆ.
- ಈ ಕವಿತೆಯಲ್ಲಿರುವ ಪ್ರತಿ ಚರಣವೂ ಇದೇ ರೀತಿ ಕೈಲಿರುವ ಪುಸ್ತಕ ಬೆಳೆಯುವುದನ್ನು, ಬೆಳೆಸುವುದನ್ನು ಕಾಣಿಸುತ್ತ ಹೋಗುತ್ತದೆ.
‘ಎಲ್ಲಿ ಹೋಯಿತು ರುಂಡ?’ ಎನ್ನುವ ಕವಿತೆಯಲ್ಲಿ ರುಂಡಗಳು ಕಳೆದು ಹೋಗುವ ಚಿತ್ರವಿದೆ. ರುಂಡಗಳಿಲ್ಲದ ಮುಂಡಗಳು ಸಿಗುತ್ತಿವೆ ಅಲ್ಲಲ್ಲಿ. ಯಾರು ಆ ರುಂಡಗಳನ್ನು ಕೊಂಡೊಯ್ಯುತ್ತಿದ್ದಾರೆಂಬುದು ಗೊತ್ತಿಲ್ಲ. ಹುಡುಕಿ ತಂದರೂ ಯಾವ ಮುಂಡಕ್ಕೆ ಯಾವ ರುಂಡ ಎಂದು ಹೊಂದಿಸಬೇಕು ಯಾರು! ಇದೊಂದು ವಿಚಿತ್ರ ಸಮಸ್ಯೆ. ಬೌದ್ಧರ ಮಾಧ್ಯಮಿಕ ಪಠ್ಯದಲ್ಲೊಂದು ಕತೆ ಇದೆಯಂತೆ. ದೂರದೂರಿಗೆ ಹೋಗಿದ್ದ ಒಬ್ಬ ವ್ಯಕ್ತಿ ಮನೆಗೆ ಮರಳುತ್ತ ದಾರಿಯ ನಡುವೆಯೇ ಕತ್ತಲಾಗುತ್ತದೆ. ಆ ರಾತ್ರಿಯನ್ನು ಅಲ್ಲೇ ಎಲ್ಲಾದರೂ ಕಳೆದು ಮರುದಿನ ಮುಂದುವರಿದರಾಯಿತೆಂದು ಯಾವುದಾದರೂ ಮನೆ ಮಠ ಸಿಗುವುದೇ ಎಂದು ಅರಸುತ್ತ ಹೋದಾಗ, ಯಾರೂ ಇಲ್ಲದ ಪರಿತ್ಯಕ್ತ ಪಾಳುಮನೆಯೊಂದು ಕಣ್ಣಿಗೆ ಬೀಳುತ್ತದೆ. ಆ ರಾತ್ರಿ ಅಲ್ಲಿಯೇ ಕಳೆದರಾಯಿತೆಂದು ಮಲಗಲು ಸಿದ್ಧನಾಗುತ್ತಿರುವಾಗ ವಿಚಿತ್ರವೊಂದು ಘಟಿಸುತ್ತದೆ. ನರಭಕ್ಷಕನೊಬ್ಬ ಒಂದು ಶವವನ್ನು ಹೊತ್ತು ಯಾರೋ ಅಟ್ಟಿಸಿಕೊಂಡು ಬಂದಂತೆ ಏದುಸಿರು ಬಿಡುತ್ತ ಆ ಮನೆಗೆ ಬರುತ್ತಾನೆ ಹಾಗೂ ಆ ಶವವನ್ನು ಈತ ಮಲಗಿದಲ್ಲಿಯೇ ಮಲಗಿಸಿ ಅದನ್ನು ಭಕ್ಷಿಸುವುದಕ್ಕೆ ಮುಂದಾಗುತ್ತಾನೆ. ಅಷ್ಟರಲ್ಲಿ ಇನ್ನೊಬ್ಬ ನರಭಕ್ಷಕ ಇವನನ್ನೇ ಅಟ್ಟಿಸಿಕೊಂಡು ಅಲ್ಲಿಗೆ ಬಂದು ತಲುಪುತ್ತಾನೆ. ಈಗ ಆ ಶವ ಯಾರಿಗೆ ಸಲ್ಲಬೇಕೆಂಬುದರ ಬಗ್ಗೆ ಇಬ್ಬರು ನರಭಕ್ಷಕರ ನಡುವೆ ಜಗಳ ಸುರುವಾಗುತ್ತದೆ. ಇಬ್ಬರೂ ನರಭಕ್ಷಕರು ಮನೆಯೊಳಗೆ ಪ್ರವೇಶಿಸುವುದನ್ನು ಕಣ್ಣಾರೆ ಕಂಡಿದ್ದ ಈ ಮನುಷ್ಯನನ್ನೇ ತಮ್ಮ ಜಗಳ ಪರಿಹರಿಸುವಂತೆ ಕೇಳಿಕೊಳ್ಳುತ್ತಾರೆ. ಮನುಷ್ಯನ ಕಷ್ಟ ನಿಮಗೆ ಅರ್ಥವಾಗಿರುತ್ತದೆ. ಸುಳ್ಳು ಹೇಳುವಂತಿಲ್ಲ, ನಿಜ ನುಡಿಯುವಂತಿಲ್ಲ. ಯಾವೊಬ್ಬ ನರಭಕ್ಷಕನಿಗೆ ಸಿಟ್ಟು ಬಂದರೂ ತಾನು ಇಬ್ಬರಲ್ಲಿ ಒಬ್ಬರ ಆಹಾರವಾಗುವುದು ಖಚಿತ. ಹಾಗಾಗಿ ಅವನು ಸತ್ಯವನ್ನೇ ಹೇಳುತ್ತಾನೆ. ಮೊದಲು ಬಂದ ನರಭಕ್ಷಕ ಶವವನ್ನು ಹೊತ್ತು ತಂದವನು. ತಕ್ಷಣವೇ ನಂತರ ಬಂದ ನರಭಕ್ಷಕ ಈ ಮಾನವನ ಒಂದು ತೋಳನ್ನು ಸೆಳೆದು ಕಿತ್ತು ತಿಂದು ಬಿಡುತ್ತಾನೆ. ಮೊದಲು ಬಂದ ನರಭಕ್ಷಕ ತಕ್ಷಣವೇ ಶವದ ಒಂದು ತೋಳನ್ನು ಕಿತ್ತು ತೆಗೆದು ಮನುಷ್ಯನ ತೋಳಿದ್ದ ಜಾಗಕ್ಕೆ ಜೋಡಿಸುತ್ತದೆ. ಆ ನರಭಕ್ಷಕ ಇನ್ನೊಂದು ತೋಳನ್ನು ತೆಗೆಯುತ್ತದೆ, ಈ ನರಭಕ್ಷಕ ತಕ್ಷಣವೇ ಶವದ ತೋಳನ್ನು ಜೋಡಿಸುತ್ತದೆ. ಈ ರೀತಿ ಕಾಲು, ಎದೆ, ಹೊಟ್ಟೆ ಎಂದೆಲ್ಲ ಒಂದೊಂದೇ ಭಾಗ ಕಿತ್ತು ತಿನ್ನುವುದು, ಶವದ ದೇಹಭಾಗವನ್ನು ಜೋಡಿಸುವುದು ನಡೆಯುತ್ತದೆ. ಕಟ್ಟಕಡೆಯದಾಗಿ ತಲೆಯ ಗತಿಯೂ ಅದೇ ಆಗುತ್ತದೆ. ಹೀಗೆ ಶವದ ಯಾವತ್ತೂ ಭಾಗ ಪರಿಸಮಾಪ್ತಿಯಾಗುತ್ತಲೇ ಇಬ್ಬರೂ ನರಭಕ್ಷಕರು ಅಲ್ಲಿಂದ ಹೊರಟು ಹೋಗುತ್ತಾರೆ.
ಮರುದಿನ ಈ ಮನುಷ್ಯ ಬದುಕಿದೆಯಾ ಬಡ ಜೀವವೇ ಎಂದು ಓಡೋಡಿ ತನ್ನ ಊರಿಗೆ ಬಂದರೆ ಅವನ ಹೆಂಡತಿ ಮಕ್ಕಳಾದಿಯಾಗಿ ಯಾರೂ ಅವನನ್ನು ಗುರುತಿಸದೇ ಹೋಗುತ್ತಾರೆ. ಈಗ ಈ ಮನುಷ್ಯ ನಿಜಕ್ಕೂ ಯಾರು? ದೈಹಿಕವಾಗಿ ಅವನು ಶವವಾಗಿದ್ದ ದೇಹವನ್ನು ಪಡೆದಿರುವ ವ್ಯಕ್ತಿ. ಮಾನಸಿಕವಾಗಿ ಅವನು ತನ್ನದಾಗಿದ್ದ ದೇಹವನ್ನು ಕಳೆದುಕೊಂಡಿರುವ ಮೊದಲಿನ ಮನುಷ್ಯ. ಒಟ್ಟಾರೆಯಾಗಿ ಅವನು ಯಾರು? ಬುದ್ಧ ಭಿಕ್ಷು ಅವನಿಗೆ ಅವನ ಪ್ರಶ್ನೆಯನ್ನೇ ಕೊಡುತ್ತಾನೆ, "ನೀನು ಯಾರು?"
ಎಸ್ ದಿವಾಕರರ ‘ಎಲ್ಲಿ ಹೋಯಿತು ರುಂಡ’ ಕವಿತೆಗೆ ಈ ಮುಖವಿದೆ. ಹಿಂಸೆಯ ಮುಖವಿದೆ. ರುಂಡವಿಲ್ಲದ ದೇಹಗಳಿಗೆ ಐಡೆಂಟಿಟಿ ಇಲ್ಲ ಎನ್ನುವುದು ಇಲ್ಲಿ ಸೂಚ್ಯ. ಐಡೆಂಟಿಟಿ ಎಂದರೇನು? ಜಾತಿ, ಧರ್ಮ, ದೇಶ, ಭಾಷೆ ಯಾವುದೂ ಇಲ್ಲ ಅದಕ್ಕೆ! ಆಧಾರ್ ಕಾರ್ಡ್ ತಂದರೂ, ಪಾಸ್ಪೋರ್ಟ್, ಓಟರ್ ಐಡಿ ಏನು ತಂದರೂ ಅದರ ಪೌರತ್ವ ಸಾಬೀತಾಗುವುದು ಕಷ್ಟವೇ!
ಒಂದು ಕವಿತೆ ಏಕಕಾಲಕ್ಕೆ ಆಧ್ಯಾತ್ಮವನ್ನೂ, ಸಮಕಾಲೀನ ರಾಜಕೀಯ ಸಮಸ್ಯೆಯನ್ನೂ, ಸಾಮಾಜಿಕ ದುರಂತವನ್ನೂ ಧ್ವನಿಸಬಲ್ಲ ಶಕ್ತಿಯನ್ನು ಪಡೆಯಿತೆಲ್ಲಿಂದ?
ಕನಸುಗಳು ಓಡುತ್ತಿವೆ ಕೊಡೆಗಳ ಹಿಡಿದುಕೊಂಡು
ಬೆಳದಿಂಗಳ ಜೊತೆ ಹೆಜ್ಜೆ ಹಾಕುತ್ತಿದೆ ಹೆಜ್ಜೇಡ
ಗಾಳಿ ಎಷ್ಟು ದುರ್ಬಲ ಸೋತು ಕೂತು ಬಿಟ್ಟಿದೆ ಚಿಟ್ಟೆ
- ವಾಹ್!
ಈ ಸಂಕಲನದ ಇನ್ನೊಂದು ಸುಂದರ ಕವಿತೆ ‘ಸ್ತಬ್ಧಚಿತ್ರ’.
ಗೋಡೆಗೆ ತೂಗುಬಿದ್ದಿರುವ ಫೋಟೋದಲ್ಲಿ
ನರಳುತ್ತಲೇ ಘನಿಸಿಬಿಟ್ಟಂತಿರುವ ಮೌನ. ಸಣ್ಣಗೆ
ಉರಿಯುತ್ತಿರುವ ದೀಪ ತೂರಿಸುತಿದೆ ಮೂಗು ಎಲ್ಲ ಕಡೆ.
ಹಾಡದೆಯೆ ಕುಳಿತಿರುವ ಗಾಯಕನಿಲ್ಲಿ ನಿಶ್ಚಲ. ಗಂಧದ ಧೂಪ;
ಯಾರಿಗೋ ನಿಮಿಷಗಳನಡವಿಟ್ಟ ಗಡಿಯಾರ.
ಇಲ್ಲಿರುವ ಎಲ್ಲ ಮುವ್ವತ್ತಾರು ಕವಿತೆಗಳನ್ನು ಓದಲು ತುಂಬ ಸಮಯವಂತೂ ಬೇಕು. ಒಂದೊಂದು ಕವಿತೆಯೂ ನಮ್ಮನ್ನು ಮುಂದಿನ ಕವಿತೆಗೆ ಹಾಯಲು ಬಿಡದಂತೆ ಕಟ್ಟಿ ಹಾಕುತ್ತವೆ. ಓದಿದ ಕವಿತೆಯೊಂದಿಗೆ ಸಾಕಷ್ಟು ಕಾಲ ಗುದ್ದಾಡಬೇಕಾಗುತ್ತದೆ, ವಿರಮಿಸಬೇಕಾಗುತ್ತದೆ, ರಮಿಸಬೇಕಾಗುತ್ತದೆ. ಕೆಲವೊಮ್ಮೆ ಅದು ಕೇವಲ ಮೌನದಲ್ಲಿ ನಮ್ಮನ್ನು ಅದ್ದಿ ಬಿಟ್ಟರೆ ಕೆಲವೊಮ್ಮೆ ವಿಹ್ವಲಗೊಳಿಸುತ್ತದೆ. ಮತ್ತೆ ಕೆಲವೊಮ್ಮೆ ಅದರ ಬಣ್ಣ ವಿಷಣ್ಣ!
ಆದರೆ ಬರೀ ಭಾಷೆಯ ಹೊಸತನದಿಂದಲೇ ಕವಿತೆಯ ಉದ್ದೇಶ ಸಫಲವಾಗುವುದಿಲ್ಲ ಮತ್ತು ಇಂಥ ಸಾಹಸಕ್ಕೆ ಕೈಯಿಕ್ಕುವ ಪ್ರತಿಯೊಬ್ಬ ಕವಿಯೂ ಎದುರಿಸುವ ಅಪಾಯ ಮತ್ತು ಸೋಲಿನ ಸಂಭವನೀಯತೆಯ ಪ್ರಮಾಣ ಕೂಡ ಅಧಿಕ. ಅಷ್ಟೇ ಅಲ್ಲ, ಬಹುಶಃ ಒಂದು ಪ್ರಮಾಣದಾಚೆ ಇದೂ ತನ್ನ ಮೊನಚು ಕಳೆದುಕೊಂಡರೆ ಅಚ್ಚರಿಯೇನಿಲ್ಲ. ಕನಕದಾಸರ ಮುಂಡಿಗೆಗಳು ಸಾಧಿಸಿದ ಯಶಸ್ಸು ಅಥವಾ ಜನಪ್ರಿಯತೆಯ ಪ್ರಮಾಣ ಇದಕ್ಕೆ ಸೀಮಿತ ನೆಲೆಯಲ್ಲಿ ಹತ್ತಿರದ ಉದಾಹರಣೆ. ಅಲ್ಲಮಪ್ರಭುವಿನ ವಚನಗಳಲ್ಲಿ ಕೂಡಾ ಈ ಬಗೆಯ ಪ್ರಯೋಗಶೀಲತೆಯಿದೆಯಾದರೂ ಈ ಎರಡೂ ಬಗೆಯ ರಚನೆಗಳಲ್ಲಿ ಆಧ್ಯಾತ್ಮ, ಆತ್ಮೋನ್ನತಿಯ ಕಡೆಗೆ ಹೆಚ್ಚಿನ ಒತ್ತು ಇರುವುದರಿಂದ ಆಧುನಿಕ ಕಾವ್ಯದೊಂದಿಗೆ ಹೋಲಿಕೆ ಅಷ್ಟು ಸರಿಯಲ್ಲ. ಕನ್ನಡದ ಹೊಸಬರಲ್ಲಿ ರಾಜಶೇಖರ ಬಂಡೆ ಇಂಥ ಹೊಸತನಕ್ಕೆ ಎದೆಯೊಡ್ಡಿದ ಕವಿ. ಈ ನೆಲೆಯಿಂದ ಎಸ್ ದಿವಾಕರ್ ಅವರು ಕವಿತೆಯನ್ನೇ ತಮ್ಮ ಅಭಿವ್ಯಕ್ತಿಯ ಪ್ರಧಾನ ಪ್ರಕಾರವನ್ನಾಗಿ ಆರಿಸಿಕೊಂಡಿದ್ದರೆ, ಕಳೆದ ಹತ್ತು ವರ್ಷಗಳಿಂದ ಕವಿತೆಯನ್ನೇ ಬರೆಯುತ್ತ ಬಂದಿದ್ದರೆ ಇವತ್ತು ಯಾವ ಬಗೆಯ ಕವಿತೆಗಳನ್ನು ಬರೆಯುತ್ತಿದ್ದರೋ ಎಂಬ ಕೌತುಕ ಮಾತ್ರ ಉಳಿದು ಬಿಡುತ್ತದೆ.