Friday, January 17, 2020

ಸಮಕಾಲೀನ ಸತ್ಯಗಳಿಗೆ ಇತಿಹಾಸದ ಲೇಪ

ಇತಿಹಾಸವನ್ನು ಹಿಂದಿರುಗಿ ನೋಡುವ ಮನುಷ್ಯನ ಬಯಕೆಗೆ ತುಂಬ ಅರ್ಥವಿದೆ. ಬುದ್ಧಿ ತಿಳಿದಾಗಿನಿಂದ ಅವನು ನಿರಂತರವಾಗಿ ತನಗೆ ದತ್ತವಾದ ಬದುಕನ್ನು, ಅದು ಅವ್ಯಕ್ತ ಮಧ್ಯವೆಂದು ತಿಳಿದೂ ಅರ್ಥಮಾಡಿಕೊಳ್ಳಲು ಹೆಣಗುತ್ತಲೇ ಇದ್ದಾನೆ. ಬದುಕು, ಮನಸ್ಸು ಮತ್ತು ಮನುಷ್ಯ ಎನ್ನುವ ವೈಚಿತ್ರ್ಯ ಸುಲಭವಾದ ವ್ಯಾಖ್ಯಾನಗಳಿಗೆ ಸಿಲುಕುವಂಥದ್ದಲ್ಲ ಎಂದು ತಿಳಿದು ಸೋಜಿಗಪಟ್ಟಿದ್ದಾನೆ. ಕತೆಗಾರರಾಗಿ, ಪ್ರಬಂಧಕಾರರಾಗಿ ಸಾಕಷ್ಟು ಹೆಸರು ಮಾಡಿರುವ ವಸುಧೇಂದ್ರ ಅವರು ಸುಮಾರು ದಶಕದ ಹಿಂದೆ ಹರಿಚಿತ್ತ ಸತ್ಯ ಎಂಬ ಒಂದು ಕಿರು ಕಾದಂಬರಿಯನ್ನು ಬರೆದಿದ್ದರು ಎನ್ನುವುದನ್ನು ಗಣನೆಗೆ ತೆಗೆದುಕೊಂಡರೆ ತೇಜೋ ತುಂಗಭದ್ರಾ ಅವರ ಎರಡನೆಯ ಕಾದಂಬರಿ. ಇದರ ಭಿತ್ತಿಯಲ್ಲಿ ಹದಿನೈದನೆಯ ಶತಮಾನದ ಕೊನೆಯಿಂದ ಹದಿನಾರನೆಯ ಶತಮಾನದ ಆದಿಭಾಗ ಇದೆ. ಆ ಕಾಲದ ಲಿಸ್ಬನ್, ವಿಜಯನಗರ ಮತ್ತು ಗೋವಾ ಈ ಕಾದಂಬರಿಯ ಕಥಾಕ್ಷೇತ್ರ. ಹಾಗಾಗಿ ಆ ಕಾಲ-ದೇಶದ ಜನಜೀವನ, ರೀತಿ-ನೀತಿ, ಕಾಯ್ದೆ ಕಟ್ಟಳೆ, ಗಡಿ-ಭಾಷೆ-ನದಿ-ನೆಲ, ವೃತ್ತಿ-ಪ್ರವೃತ್ತಿ, ಧರ್ಮ-ಕರ್ಮ ಸಂಯೋಗದಂಥ ಹತ್ತು ಹಲವು ಸಂಗತಿಗಳು ಇಲ್ಲಿ ಬರುವುದು ಅನಿವಾರ್ಯ. ಮೂಲತಃ ಹಂಪಿಯ ಸನಿಹದ ಬಳ್ಳಾರಿಯವರಾದ ವಸ್ತುಧೇಂದ್ರ ತಮ್ಮ ವೃತ್ತಿ-ಪ್ರವೃತ್ತಿಗಳಿಂದಾಗಿ ದೇಶ-ವಿದೇಶ ಸುತ್ತಿದವರು. ವಿಜಯನಗರದ ಇತಿಹಾಸವನ್ನು ಆಳವಾಗಿಯೇ ಅಧ್ಯಯನದ ಶಿಸ್ತಿನಿಂದ ಅವರು ಓದುತ್ತಿದ್ದುದನ್ನು ಕೆಲವು ವರ್ಷಗಳ ಹಿಂದೆ ಸ್ವತಃ ಕಂಡಿದ್ದೆ. ಈ ಕಾದಂಬರಿ ಅವರ ಈ ಎಲ್ಲ ದೇಶ ಸುತ್ತಿದ, ಕೋಶ ಓದಿದ ಪರಿಶ್ರಮದ ಫಲ ಮಾತ್ರವಲ್ಲ, ಒಬ್ಬ ನುರಿತ ಕತೆಗಾರರಾಗಿ, ಸಾಹಿತಿಯಾಗಿ ಅವರು ಸಾಧಿಸಿದ ಕೌಶಲದ ಪ್ರತಿಬಿಂಬ ಕೂಡ ಹೌದು.

ಪೋರ್ಚುಗಲ್‌ನ ಲಿಸ್ಬನ್ ನಗರ, ಅದರ ಸುತ್ತ ಹರಿಯುವ ನದಿ ತೇಜೋ, ಅಲ್ಲಿನ ಶಿಲ್ಪಿ ಆಂಟೋನಿಯೋ ಮಗ ಗೇಬ್ರಿಯಲ್ ನಮಗೆ ಮೊದಲು ಎದುರಾಗುವ ಪಾತ್ರ. ಆಗ ಕಾಸ್ಟಿಲ್ ಎಂದು ಕರೆಸಿಕೊಳ್ಳುತ್ತಿದ್ದ, ಸ್ಪೇನಿನ ರಾಣಿ ಇಸಾಬೆಲ್ಲಾ ತನ್ನ ದೇಶದಿಂದ ಕ್ರಿಸ್ತನ ಸಾವಿಗೆ ಕಾರಣರಾದ ಯಹೂದಿಗಳನ್ನು ಹೊರದಬ್ಬಿದಾಗ ಪೋರ್ಚುಗಲ್ಲಿನ ರಾಜ ಜೋಅಓ ಅವರಿಗೆ ತನ್ನ ದೇಶದಲ್ಲಿ ಆಶ್ರಯ ನೀಡುತ್ತಾನೆ. ಹಾಗೆ ಒಳಬಂದ ಬೆಲ್ಶಾಮ್ ಮಗಳು ಬೆಲ್ಲಾ. ಗೇಬ್ರಿಯಲ್ ಮತ್ತು ಬೆಲ್ಲಾ ಪ್ರೇಮಿಗಳು.


ವಿಜಯನಗರದ ಪಕ್ಕದ ಒಂದು ಊರು ತೆಂಬಕಪುರಿ. ಅಲ್ಲಿ ಕುಲಾವಿ ಹೊಲಿದು ಮಾರಿ ಬದುಕು ಕಟ್ಟಿಕೊಂಡ ಗಣಪಯ್ಯ ಗೌಂಡನ ಮಗಳು ಹಂಪಮ್ಮ ಅನುಪಮ ಸುಂದರಿ. ಇವಳನ್ನು ತನಗೆ ಗಂಡು ಸಂತಾನವಾಗಲಿಲ್ಲ ಎಂಬ ಕಾರಣಕ್ಕೆ ಎರಡನೆ ಮದುವೆಗೆ ಬಯಸುವ ಒಡ್ಡಜಟ್ಟಿ ಮಾಪಳನಾಯಕ ತೆಂಬಕ್ಕನ ಪತಿ. ಹಂಪಮ್ಮನನ್ನು ಬಯಸಿದ ಯುವ ಶಿಲ್ಪಿ ಕೇಶವನಲ್ಲಿ ಹಂಪಮ್ಮನಿಗೂ ಒಲವು. 

ಲಿಸ್ಬನ್ ಮತ್ತು ವಿಜಯನಗರದ ನಡುವಿನ ತಂತು ಕರಿಮೆಣಸು, ದಾಲ್ಚಿನ್ನಿ, ಲವಂಗದಂಥ ಸಂಬಾರ ಜೀನಸುಗಳು. ಸೂಯೆಜ್ ಕಾಲುವೆ ಮುಚ್ಚಿದ್ದೇ ಯುರೋಪಿನೊಂದಿಗೆ ಭಾರತದ ವ್ಯಾಪಾರ ಸಂಬಂಧ ಮುರಿದು ಬಿದ್ದ ಬಳಿಕ ಯುರೋಪಿನ ಪೋರ್ಚುಗೀಸರು, ಫ್ರೆಂಚರು, ಸ್ಪಾನಿಶ್ ನಾವಿಕರು ನಿರಂತರವಾಗಿ ಭಾರತದೊಂದಿಗೆ ಮರಳಿ ಸಂಪರ್ಕ ಸಾಧಿಸುವುದಕ್ಕಾಗಿ ಹೊಸ ಸಮುದ್ರ ಮಾರ್ಗದ ಶೋಧಕ್ಕೆ ತೊಡಗಿದ್ದು ನಮಗೆಲ್ಲ ಗೊತ್ತೇ ಇದೆ. ಇದು ಮುಂದೆ ವಾಣಿಜ್ಯದೊಂದಿಗೆ ಧರ್ಮ, ರಾಜಕೀಯ, ಅಧಿಕಾರ ಮತ್ತು ಯುದ್ಧಗಳನ್ನು ಬೆಸೆದಿದ್ದು ಈಗ ಇತಿಹಾಸ. ಈ ಹಿನ್ನೆಲೆ ಇರಿಸಿಕೊಂಡೇ ಈ ಎರಡೂ ಭೂಖಂಡಗಳ ಒಂದು ಸರಳ ಪ್ರೇಮಗಾಥೆಯನ್ನು ತನ್ನ ಕಾದಂಬರಿಯೆಂಬ ಹೂವಿನ ಹಾರಕ್ಕೆ ನಾರು ಮಾಡಿಕೊಂಡ ವಸುಧೇಂದ್ರ ಅವರು ಅದ್ಭುತವಾದ ಕಲಾತ್ಮಕತೆಯೊಂದಿಗೆ ಹಾರ ನೇಯುತ್ತ ಎಂಥೆಂಥಾ ಹೂವುಗಳನ್ನೆಲ್ಲ ಆರಿಸಿ ಅದನ್ನು ಕಟ್ಟಿದ್ದಾರೆಂಬುದರಲ್ಲೇ ಈ ಕೃತಿಯ ಸ್ವಾರಸ್ಯ, ಮಹತ್ವ ಮತ್ತು ಯಶಸ್ಸು ಅಡಗಿದೆ. 

ಸಹಜವಾಗಿಯೇ ಮೊತ್ತ ಮೊದಲು ಇಲ್ಲಿ ಬರುವ ವಿದ್ಯಮಾನ ವಲಸೆ ಮತ್ತು ಪೌರತ್ವದ್ದು, ಅದಕ್ಕೆ ತಳುಕು ಹಾಕಿಕೊಂಡಂತೆ ಅರ್ಥ ಮತ್ತು ಧರ್ಮದ ಪ್ರಶ್ನೆಗಳು ಬರುತ್ತವೆ. ವಸುಧೇಂದ್ರ ಅವರ ಪ್ರಬುದ್ಧ ಮತ್ತು ಆಳವಾದ ವೈಚಾರಿಕತೆಯ ತೇಜಸ್ಸು ಈ ಹದಿನೈದನೆಯ ಶತಮಾನದ ಅವಿದ್ಯಾವಂತ ಮಂದಿಯ ಮಾತುಗಳಲ್ಲಿ ಕೊಂಚ ಅಸಹಜ ಎನಿಸಬಹುದಾದರೂ ಅವುಗಳ ಸಮಕಾಲೀನ ಅರ್ಥಪೂರ್ಣತೆ ಮತ್ತು ಅಗತ್ಯ ಎರಡೂ ನಿರ್ಲಕ್ಷಿಸಲಾರದಷ್ಟು ಮಹತ್ವ ಹೊಂದಿದೆ.

"ಕಣ್ಣುಗಳಲ್ಲಿ ಇನ್ನಿಲ್ಲದ ಭಯ, ಭವಿಷ್ಯದ ಕುರಿತು ಆತಂಕ, ಎಷ್ಟೆಂದು ಸಂಸಾರವನ್ನು ಗಂಟಿನಲ್ಲಿ ಕಟ್ಟಿಕೊಂಡು ವಲಸೆ ಹೋಗಲು ಸಾಧ್ಯ? ಈ ವಲಸೆ ಇಲ್ಲಿಗೆ ಮುಕ್ತಾಯವಾದೀತೆ ಅಥವಾ ಮುಂದೆ ಮತ್ತೊಂದು ಕಡೆಗೆ ಹೋಗಬೇಕಾದೀತೆ? ನಮ್ಮದೇ ಎನ್ನುವ ದೇಶ, ನಮ್ಮವನೇ ಆದ ರಾಜ; ನಮ್ಮವರೇ ಇರುವ ಅಧಿಕಾರವರ್ಗ ಇಲ್ಲದೇ ಇರುವ ಜನರ ಬದುಕು ಅತ್ಯಂತ ಹೀನಾಯವಾದದ್ದು. ದೇಹಿ ಎನ್ನುತ್ತಲೇ ಎಲ್ಲಾ ಕಡೆಯೂ ಬದುಕಬೇಕು. ಎಷ್ಟೇ ಒಳ್ಳೆಯವರಾಗಿದ್ದರೂ ಅವರನ್ನು ಸ್ಥಳೀಯರು ಅನುಮಾನದಿಂದಲೇ ನೋಡುತ್ತಾರೆ. ಎಷ್ಟೇ ಸಾಧನೆ ಮಾಡಿದರೂ ಅದು ಇತರರ ಕಣ್ಣಿಗೆ ಕ್ಷುಲ್ಲಕವಾಗಿಯೇ ಕಾಣುತ್ತದೆ. ಕುದುರೆಗೆ ಹೇರಿದ ಮೂಟೆಗಳಿಂದ ವಸ್ತುಗಳು ಸಂದಿ-ಗೊಂದಿಗಳಿಂದ ಜಾರುತ್ತಲೇ ಹೋಗುವ ಹಾಗೆ ಯಾವತ್ತೂ ಬದುಕು ಗಟ್ಟಿಗೊಳ್ಳುವುದಿಲ್ಲ. ಬರೀ ನಮ್ಮ ಜೀವಿತಕಾಲವೊಂದೇ ಅಲ್ಲ, ನಮ್ಮ ಮಕ್ಕಳ ಜೀವನಕ್ಕೂ ಈ ಪರಕೀಯತೆ ಕಂಟಕಗಳನ್ನು ಒಡ್ಡುತ್ತಲೇ ಹೋಗುತ್ತದೆ. ಒಂದು ಭೂಭಾಗಕ್ಕೆ ನಾವು ಸ್ಥಳೀಯರಾಗಲು ಎಷ್ಟು ಕಾಲ ಬೇಕು? ಅದನ್ನು ನಿರ್ಧರಿಸುವವರು ಯಾರು?" (ಪುಟ 10)

ಯಹೂದಿಗಳ ಸಮಸ್ಯೆಯ ಬಗ್ಗೆ, ಅವರ ಜಾಣತನ, ಆರ್ಥಿಕ ಮುಂಗಾಣುವಿಕೆಯ ಕೌಶಲ ಮುಂತಾದರ ಬಗ್ಗೆ ಹೇಳುತ್ತಲೇ ಇಲ್ಲಿ ನಮಗೆ ಹಿಟ್ಲರನ ಉಗಮದ ಬೀಜಗಳು ಆಗಲೇ ಹೇಗೆ ಮೊಳಕೆಯೊಡೆಯ ತೊಡಗಿದ್ದವು ಎನ್ನುವುದನ್ನೂ ಕಾಣಿಸುತ್ತಿದ್ದಾರೆ ಅವರು.

ಜಾತೀಯತೆ, ಧರ್ಮ, ಮೂಲಭೂತವಾದ ಹೇಗೆ ಆಳುವ ವರ್ಗಕ್ಕೆ ಕೇವಲ ಅಧಿಕಾರಗ್ರಹಣದ, ಆರ್ಥಿಕ ಹಿಡಿತದ ಪ್ರಶ್ನೆಯಷ್ಟೇ ಆಗಿರುತ್ತದೆ ಎನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿಡುವ ಯಹೂದಿ ಮುದ್ರಕ ಬೆಲ್ಶಾಮ್, ಅದೇ ಧರ್ಮ, ಜಾತೀಯತೆ, ಸಂಪ್ರದಾಯ, ನಂಬುಗೆ, ಶ್ರದ್ಧೆ, ಪರಂಪರೆ ಮುಂತಾದವು ತೊಡಿಸುವ ತೊಡಕುಗಳು, ಕಟ್ಟುಕಟ್ಟಲೆಗಳು ಒಬ್ಬ ಸಾಮಾನ್ಯ ಮನುಷ್ಯನ ಬದುಕನ್ನು, ಒಬ್ಬ ವ್ಯಾಪಾರಿಯ ವ್ಯವಹಾರವನ್ನು, ಒಬ್ಬ ಶ್ರಮಿಕನ ಅನ್ನವನ್ನು ಬೇರೆಬೇರೆ ಸ್ತರಗಳಲ್ಲಿ ತಡಕಾಡುವ ಬಗೆಯನ್ನು ನಮಗೆ ಕಾಣಿಸಬಲ್ಲ. ತಾವು ಯಹೂದಿಗಳು ಜಾಣರಾಗದೇ ಇರುತ್ತಿದ್ದರೆ, ವ್ಯಾಪಾರದಲ್ಲಿ ಕುಶಾಗ್ರಮತಿಗಳಾಗಿರದೇ ಇದ್ದಿದ್ದರೆ ತಮ್ಮ ಧರ್ಮ ಇಷ್ಟೊಂದು ಕಾಡಬಲ್ಲ ಸಂಗತಿ ಆಗುತ್ತಿರಲೇ ಇಲ್ಲವೇನೋ ಎನ್ನುವ ಅವನ ಮಾತುಗಳಲ್ಲಿ ಸತ್ಯವಿರುವಂತಿದೆ. ಅವನ ಕ್ರಿಶ್ಚಿಯನ್ ಗೆಳೆಯ ಆಂಟೋನಿಯೋ ಕೇಳುವ ಒಂದು ಪ್ರಶ್ನೆಯಲ್ಲಿ ಎಷ್ಟೆಲ್ಲ ಅರ್ಥ ಅಡಗಿದೆ ಎನ್ನುವುದನ್ನು ಕಂಡುಕೊಂಡರೆ ಇದು ನಮಗೆ ಅರ್ಥವಾಗುತ್ತದೆ.

"ಬೆಲ್ಶಾಮ್, ಬದುಕು ಮತ್ತು ಧರ್ಮದ ನಡುವೆ ನಿನ್ನ ಆಯ್ಕೆ ಯಾವುದು? ಬದುಕಿಗಾಗಿ ಧರ್ಮವೋ ಅಥವಾ ಧರ್ಮಕ್ಕಾಗಿ ಬದುಕೋ?" (ಪುಟ 42)

ಸ್ಪೇನಿನ ರಾಜಕುಮಾರಿ ಇಸಾಬೆಲ್ಲಾಳ ಜೊತೆಗಿನ ಮದುವೆಯೇ ಮುಖ್ಯವೆನಿಸಿ ತನ್ನ ದೇಶದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಯಹೂದಿಗಳ ಬಲಾತ್ಕಾರದ ಸಾಮೂಹಿಕ ಮತಾಂತರಕ್ಕೆ ಮುಂದಾಗುವ ಪೋರ್ಚುಗಲ್ಲಿನ ರಾಜ ಮ್ಯಾನ್ಯುಯಲ್ ನಮಗೆ ವಿವೇಚನೆಯಿಲ್ಲದವನಂತೆ ಕಂಡರೆ ಅದು ನಮ್ಮ ತಪ್ಪು. ಅವನ ಈ ನಿರ್ಧಾರಕ್ಕೆ ಹೆಣ್ಣು, ಕಾಮ, ಸ್ವಾರ್ಥಗಳಿಗಿಂತ ದೇಶದ ಹದಗೆಟ್ಟ ಆರ್ಥಿಕ ಸ್ಥಿತಿ ಸೃಷ್ಟಿಸಿದ ಅನಿವಾರ್ಯ ಪರಿಸ್ಥಿತಿ ಕಾರಣ ಎನ್ನುವತ್ತ ನಮ್ಮ ಗಮನ ಸೆಳೆಯುವ ಕಾದಂಬರಿ, ಒಂದು ಪ್ರಭುತ್ವಕ್ಕೆ ಮತಾಂತರ ಎಂಬುದು ಎಷ್ಟು ಅರ್ಥಹೀನ ಮತ್ತು "ಅರ್ಥ"ಪೂರ್ಣ ಎರಡೂ ಆಗಿರುತ್ತದೆ ಎನ್ನುವುದನ್ನು ಜೀವಂತ ಉದಾಹರಣೆಯ ಮೂಲಕ ಮನಗಾಣಿಸುತ್ತದೆ. ಒಮ್ಮೆ ಮತಾಂತರವನ್ನು ವಿರೋಧಿಸಿದ ಮೂವರು ಯಹೂದಿಗಳ ಶಿರಚ್ಛೇದನದ ಮೂಲಕ (ಪುಟ 45) ಮತ್ತು ಮತ್ತೊಮ್ಮೆ ಅಂತಹುದೇ ಬಲವಂತದ ಮತಾಂತರವನ್ನು ಒಲ್ಲದ ಕ್ರಿಶ್ಚಿಯನ್ ಒಬ್ಬನ ಎರಡೂ ಕಣ್ಣುಗಳಿಗೆ ಕಾದ ಕಬ್ಬಿಣದ ಸರಳು ಚುಚ್ಚುವುದರ ಮೂಲಕ (ಪುಟ 408). ಧರ್ಮ ಎನ್ನುವುದರ ಅರ್ಥವೇ ಇಲ್ಲಿ ಅರ್ಥಹೀನವಾಗುತ್ತಿದ್ದರೂ ಅರ್ಥದ ನೆಲೆಯಲ್ಲಿ ಅಧಿಕಾರದ ದರ್ಪ ಅರ್ಥಪೂರ್ಣವಾಗುವುದು ಎಂದರೆ ಇದೇ. ತೀರ್ಥ ನೀಡಿ, ಹಣೆಯ ಮೇಲೆ ಶಿಲುಬೆಯ ಗುರುತು ಮಾಡಿ, ಹೊಸ ಹೆಸರು ಕೊಟ್ಟು, ಸುನ್ನಿ ಮಾಡಿ, ಏಸುವೇ ಏಕಾಮೇವಾದ್ವಿತೀಯ ದೇವದೂತನೆಂದೋ, ಅಲ್ಲ ಅದು ಪೈಗಂಬರ್ ಎಂದೋ ಹೇಳಿಸಿ, ಪ್ರಮಾಣ ಮಾಡಿಸಿ ಧರ್ಮ ಬದಲಿಸಿಬಿಡಬಹುದು ಎಂಬ ಶಾಸ್ತ್ರ, ರಿಚ್ಯುವಲ್ ಎಷ್ಟು ಹಾಸ್ಯಾಸ್ಪದ ಎನ್ನುವುದು ಪ್ರಭುತ್ವಕ್ಕೂ ಗೊತ್ತು. ಆದರೆ ಅದು ಆ ಹಾಸ್ಯಾಸ್ಪದ ಪ್ರಕ್ರಿಯೆಯನ್ನು ಅಷ್ಟೊಂದು ಕಟ್ಟುನಿಟ್ಟಾಗಿ, ಅಧಿಕಾರದಿಂದ, ಬಲಪ್ರಯೋಗದಿಂದ ಯಾಕೆ ನಡೆಸುತ್ತದೆ ಎಂದು ನಾವು ಯೋಚಿಸುವುದಿಲ್ಲ. ಯೋಚಿಸಿದರೂ ಧರ್ಮದ ನೆಲೆಯಿಂದಲೇ ಯೋಚಿಸುವಂತೆ ಪ್ರಭುತ್ವ ನೋಡಿಕೊಳ್ಳುತ್ತದೆ. ಅದರ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಮುಖಗಳತ್ತ, ಒತ್ತಡಗಳತ್ತ ಅಷ್ಟಾಗಿ ಗಮನ ಹರಿಸುವುದಿಲ್ಲ. ವಸುಧೇಂದ್ರರ ಈ ಕಾದಂಬರಿ ಇದನ್ನು ಅತ್ಯಂತ ಸಮರ್ಥವಾಗಿ, ಆಳವಾಗಿ ಮತ್ತು ಪರಿಪೂರ್ಣವಾಗಿ ಮಾಡುತ್ತ ಸಾಗುತ್ತದೆ.

"ಇಬ್ಬರೂ ಮಲ್ಲರು ತುಂಗಮ್ಮನ ಒಡಲಿನಾಗೆ ಅಷ್ಟು ಚಂದ ಈಜಾಡುತ್ತಾರೆ. ನಾವು ಇಂಥಾ ಜಾತಿ, ಇಂಥಾ ಧರ್ಮ ಅಂತ ಹಚ್ಚೋ ಉದ್ದಪಟ್ಟಿ, ಅಡ್ಡಪಟ್ಟಿ, ಕುಂಕುಮ, ಮುದ್ರೆ, ಗಂಧ, ಅಕ್ಷತೆ ಎಲ್ಲವನ್ನೂ ತುಂಗಮ್ಮ ತನ್ನ ನೂರಾರು ಕೈಗಳಿಂದ ಅಳಿಸಿ ಹಾಕ್ತಾಳೆ. ಹಾಕಿರೋ ಜನಿವಾರ, ಶಿವದಾರ ಎಲ್ಲಾ ಪಿಸಿದು ಹೋಗೋ ಹಾಗೆ ಮಾಡ್ತಾಳೆ. ಪ್ರತಿನಿತ್ಯ ನದಿಯಲ್ಲಿ ಸ್ನಾನ ಮಾಡಿದ ತಕ್ಷಣ ನಾವೆಲ್ಲ ಒಂದೇ ಅಂತ ಬುದ್ಧಿ ಹೇಳ್ತಾಳೆ. ಆದರೆ ಮನುಷ್ಯನ ಗುಣ ನಾಯಿಬಾಲ. ನದಿಯಿಂದ ಹೊರಗೆ ಬಂದ ತಕ್ಷಣ ಹೊಸದಾಗಿ ನಾಮ, ಮುದ್ರೆ, ವಿಭೂತಿ, ಕುಂಕುಮ, ಅಕ್ಷತೆ ಹಚ್ಚಿ, ಜನಿವಾರ, ಶಿವದಾರ ಹಾಕಿ ಸಣ್ಣತನ ಶುರು ಮಾಡ್ತಾನೆ. ನಾನು ಹೆಚ್ಚು, ನೀನು ಕಮ್ಮಿ ಅಂತ ಬಡಿದಾಟ ಶುರು ಮಾಡ್ತಾನೆ. ಯಾರಿಗೂ ತುಂಗಮ್ಮನ ಕಳಕಳಿ ಅರ್ಥ ಆಗಲ್ಲ." (ಪುಟ 145)

- ಈ ಮಾತುಗಳನ್ನು ಆಡುವವಳು ಗುಣಸುಂದರಿ ಎಂಬ ದೇವಸಾಸಿ, ಸುಶಿಕ್ಷಿತೆ. 

ತೀರ ಕೆಳಜಾತಿಯ ವ್ಯಕ್ತಿಯೋರ್ವ ಅಕಸ್ಮಾತ್ ಪೋರ್ಚುಗೀಸರ ಸೆರೆಯಾಳಾಗಿ, ಬಲವಂತದ ಮತಾಂತರಕ್ಕೊಳಗಾಗಿ, ಅವರ ಭಾಷೆಯನ್ನೂ ಕಲಿತು, ಅದರಿಂದಲೇ ದುಭಾಷಿಯಾಗುವ ಅವಕಾಶವನ್ನು ಪಡೆದು, ವರ್ಷಗಳ ಬಳಿಕ ಅವರೊಂದಿಗೇ ಮರಳಿ ಭಾರತಕ್ಕೆ ಬಂದಾಗ ಅವನು ಮಾತ್ರ ಅಂತ್ಯಜನಾಗಿಯೇ ಉಳಿಯುತ್ತಾನೆ ಎನ್ನುವುದು ಆ ವಿದೇಶೀಯರಿಗೂ ಅರ್ಥವಾಗದ ಚೋದ್ಯ. 

"ಹುಟ್ಟುಗುಣವನ್ನು ಬದಲಾಯಿಸಬಹುದು ಒಡೆಯ. ಆದರೆ ಭಾರತದಲ್ಲಿ ಹುಟ್ಟು ಜಾತಿಯನ್ನು ಬದಲಾಯಿಸುವುದು ಸಾಧ್ಯವಿಲ್ಲ. ಒಮ್ಮೆ ಒಂದು ಕುಲದಲ್ಲಿ ಹುಟ್ಟಿದರೆ ತೀರಿತು. ನಮ್ಮ ಜಾತಿಯೆಂಬುದು ರಕ್ತದೊಳಗೆ ಬೆಸೆತುಕೊಂಡು ಬಿಡುತ್ತದೆ. ಯಾರೂ ಅದನ್ನು ಮರೆಯುವುದಿಲ್ಲ. ಬೇರೆಯದೇ ದೇಶದಲ್ಲಿ ಹುಟ್ಟಿ ಬದುಕಿದ ನಿನಗೆ ಈ ಜಾತಿಯ ಸಂಕೀರ್ಣತೆ ಅರಿವಾಗುವುದಿಲ್ಲ. ಅದನ್ನು ಅನುಭವಿಸಿದವನು ಮಾತ್ರ ಅರ್ಥಮಾಡಿಕೊಳ್ಳಬಲ್ಲ." (ಪುಟ 222)

- ಈ ಮಾತುಗಳನ್ನಾಡುವ ವ್ಯಕ್ತಿ 15ನೆಯ ಶತಮಾನದ ದಲಿತ (ಕ್ರಿಶ್ಚಿಯನ್) ಜಾಕೋಮ್.

ಇಲ್ಲಿಯೇ ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ಈ ದೊರೆಗಳ ಕಾಲದಲ್ಲಿ ಎಲ್ಲ ಕಡೆಯೂ ಅಪರಾಧಗಳಿಗೆ ಘೋರವಾದ ಶಿಕ್ಷೆಯೇ ಇತ್ತು. ಮ್ಯಾನ್ಯುಯಲ್, ಕೃಷ್ಣದೇವರಾಯ, ಅಲ್ಬುಕರ್ಕ್, ಆದಿಲ್‌ಷಾಹಿ - ಯಾರೂ ಇದಕ್ಕೆ ಅಪವಾದವಲ್ಲ. ಕಣ್ಣು ಕೀಳಿಸುವುದು, ಆನೆಯಿಂದ ತುಳಿಸಿ ಸಾಯಿಸುವುದು, ನಾಲಗೆ ಕತ್ತರಿಸುವುದು ಇತ್ಯಾದಿ ಇತ್ಯಾದಿ. ಆದರೆ ಧಾರ್ಮಿಕ ಹಿಂಸಾಚಾರ ಎಂದು ಕರೆಯಬಹುದಾದ ಮತಾಂತರದ ಸಂದರ್ಭದ ಹಿಂಸೆ, ಕೆಳಜಾತಿಯವರೋ, ಮಹಿಳೆಯರೋ ಧಾರ್ಮಿಕ/ಪಾರಂಪರಿಕ/ಸಾಂಪ್ರದಾಯಿಕ/ಶಾಸ್ತ್ರಸಿದ್ಧ ಕಟ್ಟುಪಾಡು ಮೀರಿ ನಡೆದುಕೊಂಡ ಸಂದರ್ಭದ ಶಿಕ್ಷೆಯ ರೂಪದಲ್ಲಿರುವ ಹಿಂಸೆ, ಗಲಬೆ, ದೊಂಬಿ ಮತ್ತು ಯುದ್ಧಖೈದಿಗಳ ಜೊತೆ ಅವರು ಅನ್ಯಧರ್ಮೀಯರಾಗಿದ್ದಾಗ ನಡೆಯುವ ಹಿಂಸೆ - ಇವುಗಳಲ್ಲಿ ವೈಭವೀಕರಣ ತಪ್ಪು. ಅದಕ್ಕೆ ಮನಸ್ಸು ಕೆರಳಿಸಬಲ್ಲ, ಪ್ರಚೋದನಕಾರಿಯಾಗಬಲ್ಲ ಗುಣವಿರುತ್ತದೆ. ಅದೃಷ್ಟವಶಾತ್ ವಸುಧೇಂದ್ರ ಅವರು ಸ್ಪಷ್ಟವಾಗಿ ತಾವು ಅಧ್ಯಯನ ಮಾಡಿದ್ದು ಇತಿಹಾಸ, ಬರೆದಿದ್ದು ಕಾದಂಬರಿ ಎಂದು ಹೇಳುತ್ತಲೇ ಬಂದಿದ್ದಾರೆ. ನಮ್ಮಲ್ಲಿ ಇತಿಹಾಸ, ಚರಿತ್ರೆ ಅಧ್ಯಯನ ಮಾಡಿ ಕಾದಂಬರಿ ಬರೆದು, ತಾವು ಬರೆದಿರುವುದು ಐತಿಹಾಸಿಕ ಕಾದಂಬರಿ, ಅದರಲ್ಲಿರುವುದೆಲ್ಲಾ ಚಾರಿತ್ರಿಕ ಸತ್ಯ ಎಂದು ಆ ಕಾಲಘಟ್ಟದಲ್ಲಿ ಸ್ವತಃ ಬದುಕಿದ್ದು, ಏನೆಲ್ಲ ನಡೆಯಿತೋ ಅದನ್ನು ಕಣ್ಣಾರೆ ಕಂಡುಬಂದವರ ಧಾಟಿಯಲ್ಲಿ ವಾದಿಸುವವರಿಗೆ ಕೊರತೆಯಿಲ್ಲ. ಸ್ಪಷ್ಟವಾಗಿಯೇ ಅಂಥವರ ಉದ್ದೇಶ ಓದುಗರ ಸೂಕ್ಷ್ಮ ಭಾವನಾತ್ಮಕ ಸಂವೇದನೆಗಳನ್ನು ಕೆರಳಿಸಿ, ಪ್ರಚೋದಿಸುವುದೇ ಆಗಿರುತ್ತದೆ ಎನ್ನುವುದಕ್ಕೆ ಹೆಚ್ಚಿನ ಸಾಕ್ಷಿ ಬೇಕಾಗಿಯೇ ಇಲ್ಲ. ವಸುಧೇಂದ್ರರ ಕಾದಂಬರಿಯಲ್ಲಿ ಒಂದೆಡೆ ಚರ್ಚು, ಪಾದ್ರಿಗಳ ಸ್ಪಷ್ಟ ಕುಮ್ಮಕ್ಕಿನಿಂದಲೇ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿದ್ದರೂ ಶಂಕಿತ ಧಾರ್ಮಿಕ ನಿಷ್ಠೆ ಪ್ರದರ್ಶಿಸಿದ, ಮೂಲತಃ ಯಹೂದಿಗಳಾಗಿದ್ದವರ ವಿರುದ್ಧ ಹಿಂಸಾಚಾರ ನಡೆಯುವ ಪ್ರಸಂಗ ಬರುತ್ತದೆ. 

"ದ್ವೇಷ ಅದೆಷ್ಟು ಭೀಕರವಾಗಿತ್ತೆಂದರೆ, ಯಾರೋ ಒಬ್ಬ ಪೋರ್ಚುಗೀಸ್ ಯುವಕ ತುಂಬು ಬಸುರಿಯನ್ನು ಕೊಂದಿದ್ದೂ ಅಲ್ಲದೆ, ಆಕೆಯ ಹೊಟ್ಟೆಯನ್ನು ಬಗೆದು ಆ ಹುಟ್ಟದ ಮಗುವಿನ ತಲೆಯನ್ನು ಕಡಿದು ಬಿಟ್ಟ." (ಪುಟ 242)

ಇಂಥವಕ್ಕೆಲ್ಲ ಶಾಸನದ, ಇತಿಹಾಸದ ಪುರಾವೆ ಇದ್ದರೂ ಕಾದಂಬರಿಗಳಲ್ಲಿ ಅವುಗಳನ್ನು ಕೈಬಿಟ್ಟರೆ ಒಳ್ಳೆಯದೇನೋ ಅನಿಸುತ್ತದೆ.

ಕಾದಂಬರಿಯ ಮತ್ತೊಂದು ಪ್ರಧಾನ ಹೈಲೈಟ್ ಕಾದಂಬರಿಯ ಉದ್ದಕ್ಕೂ ಸಹಜವಾಗಿ ಕಾಣಸಿಗುವ ಸ್ತ್ರೀಪರ ದೃಷ್ಟಿಕೋನ; ಆಕೆಯ ಶೋಷಣೆ, ಅವಳ ಮೇಲಿನ ದೌರ್ಜನ್ಯ, ಹಿಂಸೆ ಮತ್ತು ಅವಳನ್ನು ಕೇವಲ ಭೋಗದ ವಸ್ತು ಎಂಬಂತೆ ಪರಿಗಣಿಸುತ್ತಿದ್ದ ಬಗ್ಗೆ ಎದ್ದು ಕಾಣುವ ಪ್ರತಿರೋಧ. 

ಬೆಲ್ಲಾಳ ವ್ಯಕ್ತಿತ್ವದಲ್ಲಿಯೇ ಈ ಅಂಶ ಸಾಕಷ್ಟು ಸೂಚ್ಯವಾಗಿ ನಮಗೆ ಕಂಡು ಬಂದರೂ, ಅದು ಸ್ಪಷ್ಟವಾಗುತ್ತ ಹೋಗುವುದು ಹಂಪಮ್ಮ, ಗುಣಸುಂದರಿ, ಚಂಪಕ್ಕ, ಅಗ್ವೇದ (ಆನ್ರಿಕ್), ತೆಂಬಕ್ಕ ಮುಂತಾದವರ ಜೀವನಗಾಥೆಯ ಸಂದರ್ಭದಲ್ಲಿಯೇ. ವಸುಧೇಂದ್ರ ಅವರು ತಮ್ಮ ಕದಂಬರಿಯ ಕಥಾನಕದ ಓಟಕ್ಕೆ, ಓಘಕ್ಕೆ ಕಿಂಚಿತ್ತೂ ಊನ ಬರದಂತೆ, ಅದರ ನಿರೂಪಣೆಯ ಸೌಂದರ್ಯ ಮತ್ತಷ್ಟು ಹೆಚ್ಚುವಂತೆ ಈ ವಿದ್ಯಮಾನಗಳನ್ನೆಲ್ಲ ಸಹಜವಾಗಿ ಅದರ ಚೌಕಟ್ಟಿನಲ್ಲಿರಿಸುತ್ತ ಸಾಗುವ ಬಗೆಯೇ ಅವರ ಕೌಶಲದ ಬಗ್ಗೆ ಅಚ್ಚರಿ ಮತ್ತು ಮೆಚ್ಚುಗೆ ಹುಟ್ಟಿಸುತ್ತದೆ.

ಮೊದಲಿಗೆ ಹಣುಮನಾಗಿದ್ದ ಚಂಪಕ್ಕ ಮದುವೆಯಾದ ಬಳಿಕ ಖೊಜ್ಜ ಎಂದು ಅರಿವಾಗಿ, ತನ್ನ ಪತ್ನಿ ಕಮಲಿಯನ್ನು ತೊರೆದು, ವಿಜಯನಗರದ ಕೃಷ್ಣದೇವರಾಯನ ಅಂತಃಪುರದಲ್ಲಿ ಚಂಪಕ್ಕನಾಗಿ ಸೇವೆ ಸಲ್ಲಿಸುವ ಕತೆಗೆ ಸಂಬಂಧಿಸಿದಂತೆ ಬರುವ ವಿವರಗಳು ತುಂಬ ಮಹತ್ವದ್ದಾಗಿವೆ. ಮೊದಲಿಗೆ ಒಂದು ಗಂಡು ಸ್ವತಃ ಹೆಣ್ಣಾಗಿ ಹೆಣ್ಣಿನ ಕಷ್ಟಕಾರ್ಪಣ್ಯಗಳನ್ನು ವಿವರಿಸುವ ತಂತ್ರದ ಹೊಸತನವೇ ಒಂದು ವಿನೂತನ ಪ್ರಯೋಗ. ಅದರ ಮೇಲೆ, ಇದು ತನ್ನ ಹೆಂಡತಿ ಕಮಲಿಯೇ ಕಣ್ಣೆದುರೇ ದೌರ್ಜನ್ಯಕ್ಕೆ ತುತ್ತಾಗುವುದನ್ನು ಮೂಕಪಶುವಿನಂತೆ ಕಾಣುತ್ತ ಉಳಿಯಬೇಕಾದ ದುರ್ಧರ ಪ್ರಸಂಗವನ್ನು ಎದುರಿಸುವುದು ವಿಚಿತ್ರ ವೇದನೆಗೆ ತಳ್ಳುವಂತಿದೆ. ಅಷ್ಟಾಗಿಯೂ ಈ ಪತ್ನಿ ತನ್ನ ಪತಿಯನ್ನು ’ನೀನು ಚೆನ್ನಾಗಿದ್ದೀಯಾ ಹಣುಮಾ’ ಎಂದು ಕೇಳುವುದಿದೆಯಲ್ಲ, ಅದು ಚಂಪಕ್ಕನ ಹೃದಯವನ್ನೇ ಛಿದ್ರಗೊಳಿಸುತ್ತದೆ.

ಈ ಚಂಪಕ್ಕ ಯಾಕೆ ವಿಜಯನಗರವನ್ನು ತೊರೆದು ಬಂದಳು ಎಂಬ ಪ್ರಸಂಗದ ವಿವರ ಪುಟ 141ರಲ್ಲಿ ಬರುತ್ತದೆ. ಅದು ತೆರೆದಿಡುವ ಹೆಣ್ಣಿನ ಬದುಕಿನ ಒಂದು ನೋಟ ಬೆಚ್ಚಿ ಬೀಳಿಸುವಂತಿದೆ.

ದೇವದಾಸಿಯಾಗಿ ಬದುಕುತ್ತಿರುವ ಗುಣಸುಂದರಿ ಸುಶಿಕ್ಷಿತೆ, ಸುಸಂಸ್ಕೃತೆ. ಇವಳ ಬಳಿ ಸ್ವತಃ ಕೃಷ್ಣದೇವರಾಯನೇ ತನ್ನ ಕೃತಿ ‘ಅಮುಕ್ತ ಮೌಲ್ಯದ’ ಬಗ್ಗೆ ವಿಮರ್ಶಾತ್ಮಕ ಟೀಕೆ ಟಿಪ್ಪಣೆ ಬಯಸಿ ಕೇಳುವ ಸಂದರ್ಭವೂ ಕಾದಂಬರಿಯಲ್ಲಿ ಬರುತ್ತದೆ. ಹಂಪಮ್ಮ ಮತ್ತು ಈ ಗುಣಸುಂದರಿಯ ನಡುವೆ ತುಂಬ ಸ್ವಾರಸ್ಯಕರವಾದ ಒಂದು ಚರ್ಚೆ ಪುಟ 145 ರಿಂದ ತೊಡಗಿ 147 ರ ತನಕ ಬಂದಿದೆ. ಮನುಸ್ಮೃತಿಯಿಂದ ತೊಡಗಿ, ಧರ್ಮ, ಶಾಸ್ತ್ರ, ಲೋಕಶಾಂತಿಯ ಮಾತುಗಳೆಲ್ಲ ಅಲ್ಲಿ ಚರ್ಚೆಗೆ ಬರುತ್ತವೆ. 

"ಗಂಡಿನ ಆಯ್ಕೆಯಲ್ಲಿ ನಿನಗೆ ಅಡ್ಡಿಗಳಿಲ್ಲ. ಶಾಸ್ತ್ರ ಓದುವುದರಲ್ಲಿ ಅಡ್ಡಿಯಿಲ್ಲ. ಸಂಗೀತ ಹೇಳುವುದಕ್ಕೆ, ನೃತ್ಯ ಮಾಡುವುದಕ್ಕೆ ಅಡ್ಡಿಯಿಲ್ಲ. ಆದರೆ ಎಲ್ಲಾ ಅಡ್ಡಿಗಳು ನನಗೆ ಮಾತ್ರ ಯಾಕೆ ಮಾಡಿದ್ದಾರೆ ಸುಂದ್ರವ್ವಾ?" ಎಂದು ಪ್ರಶ್ನಿಸುವ ಹಂಪಮ್ಮನಿಗೆ ಗುಣಸುಂದರಿ ಖಾರವಾಗಿಯೇ ಈ ಸ್ವಾತಂತ್ರ್ಯವನ್ನೆಲ್ಲ ಅನುಭವಿಸುವುದಕ್ಕಾಗಿ "ನೀನೂ ದೇವದಾಸಿ ಆಗ್ತೀಯಾ?" ಎಂದು ಕೇಳುತ್ತಾಳೆ. 

- ಈ ಪ್ರಶ್ನೆಗೆ ಆಗ, ತಕ್ಷಣಕ್ಕೆ ಉತ್ತರಿಸದ ಹಂಪಮ್ಮ ಮುಂದೆ, ಸಹಗಮನದ ಕಾಲದಲ್ಲಿ ತನ್ನದೇ ಮಗುವಿನಂತಿದ್ದ ಈಶ್ವರಿಯನ್ನು ಇದೇ ಗುಣಸುಂದರಿಗೆ ಪರಭಾರೆ ಮಾಡುತ್ತ ಆಡುವ ಮಾತಿನಲ್ಲಿ ಉತ್ತರಿಸಿದ್ದಾಳೆ. 

"ಈವತ್ತಿನಿಂದ ಈಶ್ವರಿಯ ಜವಾಬ್ದಾರಿ ನೀನು ನೋಡಿಕೋ... ಅವರಮ್ಮಗೆ ನಾನು ಮಾತುಕೊಟ್ಟಿದ್ದೆ. ಆದರೆ ಮಾತು ಪೂರ್ತಿ ನಡೆಸಲು ತೆಂಬಕಸ್ವಾಮಿ ಅವಕಾಶ ಕೊಡಲಿಲ್ಲ. ಅವಳ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ರವಾನಿಸದಿದ್ದರೆ ಮೇಲಿರುವ ತೆಂಬಕ್ಕನ ಮನಸ್ಸು ನೋಯುತ್ತದೆ, ಶಾಪಕೊಡುತ್ತಾಳೆ. ಆದರೆ ಒಂದು ಮಾತು. ನನ್ನಂತೆ ಅವಳನ್ನು ಯಾರಿಗೂ ಮದುವೆ ಮಾಡಿಕೊಡಬೇಡ; ಮುತ್ತೈದೆಯಾಗಿ ಮಾಡುವುದು ಬೇಡ. ಆಕೆಗೆ ಹಾಡುವುದನ್ನು ಕಲಿಸು, ನರ್ತಿಸುವುದನ್ನು ಕಲಿಸು, ಗ್ರಂಥಗಳನ್ನು ಓದುವುದನ್ನು ಕಲಿಸು. - ಆಕೆಯನ್ನು ದೇವದಾಸಿ ಮಾಡು. ಜನರು ಬೇಕಾದರೆ ಅವಳ ಹೆಸರನ್ನು ದೇವಸ್ಥಾನದ ಶಾಸನದ ಶಾಪಾಶಯದಲ್ಲಿ ಬರೆಯಲಿ. ಅದರಿಂದ ಯಾವ ತೊಂದರೆಯೂ ಇಲ್ಲ. ಇರುವಷ್ಟು ದಿನ ಅವಳು ಸುಖವಾಗಿರಲಿ." (ಪುಟ 360)

ಸಹಗಮನದ ಮೂರು ಪ್ರಕರಣಗಳು ಕಾದಂಬರಿಯಲ್ಲಿ ಬರುತ್ತವೆ. ತೆಂಬಕ್ಕನದು, ಹಂಪಮ್ಮನದ್ದು ಮತ್ತು ಕೊನೆಯಲ್ಲಿ ಹೆಸರಿಲ್ಲದ - ಅಲ್ಬುಕರ್ಕನಿಂದಾಗಿ ಭಂಗವಾಗುವ ಇನ್ನೊಂದು. ಮೂರೂ ವಿವರವಾಗಿ ಚಿತ್ರಿಸಲ್ಪಟ್ಟಿವೆ. ಒಂದೆಡೆ ಅಂಣಂ ಭಟ್ಟರಿಗೂ ಗುಣಸುಂದರಿಗೂ ಸತೀ ಸಹಗಮನದ ಅರ್ಥ, ಉದ್ದೇಶಗಳ ಬಗ್ಗೆ ನಡೆಯುವ ಚರ್ಚೆ (ಪುಟ 355-357) ಕೂಡ ಇಲ್ಲಿ ಗಮನಾರ್ಹವಾಗಿದೆ.

ಬೆಲ್ಲಾ ಮತ್ತು ಗೇಬ್ರಿಯಲ್ ನಡುವೆ ನಡೆಯುವ ಕೆಲವು ಸೂಕ್ಷ್ಮವೂ ಭಾವುಕವೂ ಆದ ಪ್ರಸಂಗಗಳು (ಪುಟ 38), ಮೀನುಗಳನ್ನು ಕಾಣುತ್ತ ಬೆಲ್ಲಾಳ ನೆನಪಿನಲ್ಲಿ ಭಾವುಕನಾಗುವ ಗೇಬ್ರಿಯಲ್ (ಪುಟ 431) ತರವೇ ಮಗು ಈಶ್ವರಿಯೇ ಕೇಂದ್ರವೆಂಬಂತಿರುವ ಈ ಭಾಗದಲ್ಲಿಯೂ ಹೃದಯ ಕಲಕುವಂಥ, ಸೂಕ್ಷ್ಮಸಂವೇದನೆಯ ನವಿರಾದ ನಿರೂಪಣೆಯಿದೆ. ಈ ಭಾಗಗಳು ಯಾರನ್ನಾದರೂ ವಿಚಲಿತಗೊಳಿಸುವಷ್ಟು ತೀವ್ರವೂ, ಗಾಢವೂ ಆಗಿ ಮೂಡಿಬಂದಿರುವುದು ವಿಶೇಷ ಮೆಚ್ಚುಗೆಗೆ ಕಾರಣವಾಗುತ್ತವೆ.

ಗೇಬ್ರಿಯಲ್ ಭಾರತಕ್ಕೆ ಪ್ರಯಾಣಿಸುವ ನಾವೆಯಲ್ಲಿ ಸಿಗುವ ಮೂಕ ಸೇವಕ ಆನ್ರಿಕ್ ಕತೆಯೂ ಸ್ತ್ರೀವಾದದ ಇನ್ನೊಂದು ರೂಪಕವಾಗಿ, ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ. ಇದನ್ನು ಹಣುಮನಾಗಿದ್ದ ಚಂಪಕ್ಕನ ಕತೆಯೊಂದಿಗೆ ಇಟ್ಟು ಕೂಡ ನೋಡಲು ಸಾಧ್ಯವಿದೆ. ಮುಂದೆ ಅಗ್ವೇದ ಬಸುರಿಯಾಗಿ, ಹಡಗಿನ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು, ಹಡಗಿನಲ್ಲಿಯೇ ವಿಚಾರಣೆಗೂ, ಶಿಕ್ಷೆಗೂ ಗುರಿಯಾಗುವ ಸಂದರ್ಭ ಬಂದಾಗ ಅವಳು ದಿಟ್ಟತನದಿಂದಲೂ, ಅಪೂರ್ವ ಸ್ಪಷ್ಟತೆಯಿಂದಲೂ ನ್ಯಾಯದಾನಕ್ಕೆ ಮುಂದಾದವರನ್ನು ಪ್ರಶ್ನಿಸುತ್ತಾಳೆ. ಹಡಗಿನಲ್ಲಿ ಗಂಡಸರು ಜೂಜಾಡಿದರೆ ಅದು ಕಾನೂನಿನಡಿ ಶಿಕ್ಷಾರ್ಹ ಅಪರಾಧವಾಗಿದ್ದೂ ನಿರ್ಲಕ್ಷಿಸಬಹುದಾದ ತಪ್ಪು ಅನಿಸಿಕೊಳ್ಳುತ್ತದೆ. ರಾತ್ರಿ ಹೊತ್ತು ಹಡಗಿನ ತುಂಬಾ ಗಂಡಸರು ಸಲಿಂಗರತಿಯಲ್ಲಿ ತೊಡಗಿರುವುದು ಕಣ್ಣಿಗೆ ಹೊಡೆದು ಕಾಣುವಂತಿದ್ದರೂ, ಕಂಡೂ ಕಾಣದಂತಿದ್ದು ಅದನ್ನು ಕ್ಷಮಾರ್ಹ ಅಪರಾಧವೆಂದೇ ಬಾಯ್ಮುಚ್ಚಿಕೊಂಡಿರುವುದು ನಡೆದಿದೆ. ಆದರೆ ಹೆಣ್ಣಾದ ತಾನು ಪ್ರಕೃತಿ ಸಹಜವಾಗಿ ಬಸುರಾದರೆ ಅದು ತಕ್ಷಣವೇ ಶಿಕ್ಷಿಸಲ್ಪಡಬೇಕಾದ ಘೋರ ಅಪರಾಧ ಎಂಬ ಒಕ್ಕೊರಲ ಒತ್ತಾಯ ಬರುತ್ತದೆ. ಅದನ್ನು ಪ್ರಶ್ನಿಸುವುದು ಅಧಿಕಪ್ರಸಂಗಿತನ, ತಪ್ಪು ಎನಿಸಿಕೊಳ್ಳುತ್ತದೆ. (ಪುಟ 254)

ಸಾಮಾನ್ಯವಾಗಿ ಮದಾಂಧನಂತೆ ವರ್ತಿಸುವ, ಹಠಮಾರಿಯಾದ ಅಲ್ಬುಕರ್ಕ್ ಕೂಡ ಒಂದು ಸಂದರ್ಭದಲ್ಲಿ ಮಾತ್ರ ತೀರ ವ್ಯತಿರಿಕ್ತವಾಗಿ ಒಬ್ಬ ಸ್ತ್ರೀವಾದಿಯ ಸೋಗಿನಲ್ಲಿ ಸಹಗಮನವನ್ನು ತಡೆದು ಒಬ್ಬ ಸ್ತ್ರೀಗೆ ಆಶ್ರಯವನ್ನೂ ನೀಡುವ ಔದಾರ್ಯವನ್ನು ಪ್ರದರ್ಶಿಸುತ್ತಾನೆ. ಆಗ ಅವನಾಡುವ ಕೆಲವು ಮಾತುಗಳು ವಿಚಾರಪೂರ್ಣವಾಗಿವೆ.

"ಜೀವಂತ ಹೆಣ್ಣುಮಗಳು ಬೆಂಕಿಯಲ್ಲಿ ಬಿದ್ದು ಸಾಯೋದು ಅದು ಹೇಗೆ ಧರ್ಮದ ಸಂಗತಿ ಆಗ್ತದೆ?"

"ಸಾಧ್ಯವೇ ಇಲ್ಲ! ನಿಮ್ಮ ಧರ್ಮ ಅದೆಷ್ಟು ಪುರಾತನದ್ದೇ ಆಗಿರಲಿ, ಇಂತಹ ಹೀನ ಸಂಗತಿಯನ್ನು ಮಾಡುವುದನ್ನು ನಾನು ವಿರೋಧಿಸುತ್ತೇನೆ. ಇದು ಪೋರ್ಚ್‌ಗೀಸರ ನಾಡು. ಇಲ್ಲಿ ಇಂತಹ ಮಾನವ ವಿರೋಧಿ ಸಂಗತಿಗಳು ನಡೆಯುವಂತಿಲ್ಲ."

"ನಾನು ಜನರನ್ನು ಕೊಂದಿದ್ದು ಯುದ್ಧದಲ್ಲಿ. ಅದು ರಾಜಕೀಯ ಧರ್ಮ. ಆದರೆ ಇದು ಜನಜೀವನ. ಇಲ್ಲಿ ಹೆಣ್ಣೊಬ್ಬಳು ಅಕಾರಣವಾಗಿ ಜೀವಂತ ದಹನವಾಗುವುದು ಹೀನ ಕೃತ್ಯವಾಗುತ್ತದೆ. ಅದನ್ನು ನೋಡಿಯೂ ತಡೆಯದೆ ಹೋದರೆ ನಾವೆಲ್ಲಾ ಹೇಡಿಗಳಾಗುತ್ತೇವೆ." (ಪುಟ 396)

ತಿಮ್ಮೋಜಿಗೆ ಅಲ್ಬುಕರ್ಕನ ಈ ನಡೆ ಒಗಟಾಗಿಯೇ ಉಳಿಯುತ್ತದೆ. ಸತಿಯಾಗುತ್ತಿದ್ದ ಹೆಣ್ಣು ಅಷ್ಟೊಂದು ಚೆಲುವೆಯಾಗದೇ ಇರುತ್ತಿದ್ದಲ್ಲಿ ಅವನ ನಡೆ ಹೀಗೆಯೇ ಇರುತ್ತಿತ್ತೆ ಎನ್ನುವುದು ಅವನ ಅನುಮಾನ. ಚೆಲುವು, ಲಾಭ (ಹೆಣ್ಣು-ಹೊನ್ನು-ಮಣ್ಣು) ಎಂಥವರನ್ನಾದರೂ ವಿಚಲಿತರನ್ನಾಗಿಸುತ್ತದೆ ಎನ್ನುವುದು ಎಲ್ಲರೂ ಬಲ್ಲ ವಿಚಾರವೇ. ಈ ಪ್ರಸಂಗದ ವಿರೋಧಾಭಾಸ ಈ ತರ್ಕದಿಂದ ಶುದ್ಧವಾಗುವುದಿಲ್ಲ. ಅಲ್ಬುಕರ್ಕನ ನಡೆ ಆ ಕ್ಷಣದ ಆಕರ್ಷಣೆಯಿಂದ ಹುಟ್ಟಿದ್ದಾಗಿದ್ದರೆ ಅದು ಇನ್ನೊಂದು ಬಗೆಯ ಶೋಷಣೆಯೇ ಆಯಿತೆನ್ನಬಹುದು. ಹಾಗಲ್ಲದಿದ್ದರೂ ಅಲ್ಬುಕರ್ಕನ ಒಟ್ಟಾರೆ ಪಾತ್ರಚಿತ್ರಣದಲ್ಲಿ ಈ ಒಂದೇ ಒಂದು ಪ್ರಸಂಗ ಅಪಭ್ರಂಶವೆನ್ನುವಂತೆ ಬರುತ್ತದೆ. ಆತ ಕ್ರೂರಿ, ಹಠಮಾರಿ, ತನ್ನವರದೇ ಹಸಿವು, ನೋವು, ಸಾವಿಗೆ ಕೂಡ ಕರಗದ, ಸ್ಪಂದಿಸದ ಕಠಿಣ ಹೃದಯಿ ಎನ್ನುವುದಕ್ಕೆ ಕಾದಂಬರಿಯಲ್ಲೇ ಸಾಕಷ್ಟು ದೃಷ್ಟಾಂತಗಳು ನಮಗೆ ಸಿಗುತ್ತವೆ. ಹಾಗಾಗಿ, ಪ್ರಾಸಂಗಿಕವಾಗಿ ಈ ಸನ್ನಿವೇಶ ಎಷ್ಟೇ ಮೆಚ್ಚುಗೆಗೆ ಪಾತ್ರವಾದರೂ ಕೃತಿಯ ಒಟ್ಟಾರೆ ಚೌಕಟ್ಟಿನಲ್ಲಿ ಹೊಂದಿಕೊಳ್ಳದೆ ಉಳಿಯುವ ಪ್ರಸಂಗವಾಗಿಯೇ ಇದೆ.

ಈ ರೀತಿಯ ಇನ್ನೂ ಕೆಲವು ಸಂದರ್ಭ, ಸನ್ನಿವೇಶಗಳು ಈ ಕಾದಂಬರಿಯಲ್ಲಿ ನಮಗೆ ಸಿಗುತ್ತವೆ. ಪುಟ್ಟ ಕೂಸು ಈಶ್ವರಿಯ ಬಾಯಲ್ಲಿ ಬರುವ ವಯಸ್ಸಿಗೆ ಮೀರಿದ ಪ್ರಬುದ್ಧವೂ ಗಂಭೀರವೂ ಆದ ಮಾತುಗಳು ತಕ್ಷಣಕ್ಕೆ ಹುಟ್ಟಿಸುವ ಅಭಿಮಾನ, ಮೆಚ್ಚುಗೆಯಾಚೆಗೂ ಮಗುವಿನ ಮಾತಾಗಿಯೇ ಮನಸ್ಸಿನಲ್ಲಿ ನಿಲ್ಲುವುದಿಲ್ಲ. ತರ್ಕ ಜಾಗೃತವಾದಂತೆಲ್ಲ ಕೃತಿಕಾರನ ಆಶಯಗಳು ಪಾತ್ರದ ಅಭಿವ್ಯಕ್ತಿಯಲ್ಲಿ ಮೇಲೆದ್ದು ಬಂದ ಅನುಭವ ಆಗುತ್ತಿರುತ್ತದೆ.

ಹಾಗೆಯೇ ಗೇಬ್ರಿಯಲ್ ಮತ್ತು ಬೆಲ್ಲಾ, ತುಂಗೆಯ ಮಡಿಲಲ್ಲಿ ಬಂಗಾರವರ್ಣದ ಮೀನುಗಳ ಕುಟುಂಬ, ಅಡವಿಸಾಮಿಯ ಮರುಭೇಟಿಗಳಾಗಲಿ, ಅಡವಿಸಾಮಿ ಹಚ್ಚೆ ತಿದ್ದುವ ಪ್ರಸಂಗವಾಗಲಿ ತಾಂತ್ರಿಕ ಸಂಯೋಜನೆಯ ದೃಷ್ಟಿಯಿಂದ ಮೆಚ್ಚುಗೆಯಾದರೂ ಕೊಂಚ ಸಿನಿಮೀಯ ಎನಿಸುವುದು ಸುಳ್ಳಲ್ಲ.

ಈ ಕಾದಂಬರಿಯ ಇನ್ನೊಂದು ಕುತೂಹಲಕರ ಅಂಶವನ್ನು ಗಮನಿಸುವುದರೊಂದಿಗೆ ಈ ಟಿಪ್ಪಣಿಯನ್ನು ಮುಗಿಸುತ್ತೇನೆ. ಇಡೀ ಕಾದಂಬರಿಯಲ್ಲಿ, ಅದು ಪೋರ್ಚುಗಲ್ಲಿನ ಲಿಸ್ಬನ್ ಆಗಿರಲಿ, ಕರ್ನಾಟಕದ ವಿಜಯನಗರವಾಗಿರಲಿ, ಕರ್ಮಸಿದ್ಧಾಂತದ ಪ್ರತಿಪಾದನೆ ಎದ್ದು ಕಾಣುವಂತಿರುವುದು ಗಮನಾರ್ಹ. ಇದರ ಪರ-ವಿರೋಧ ಚರ್ಚೆಗಿಳಿಯದೆ, ಕೇವಲ ಇದರ ಇರವನ್ನು ಮಾತ್ರ ಗಮನಿಸುವುದು ನನ್ನ ಉದ್ದೇಶ. ನಾವು ನ್ಯಾಯವಾಗಿ, ಧರ್ಮದಿಂದ ಬದುಕಬೇಕು, ಇನ್ನೊಬ್ಬರಿಗೆ ನಮ್ಮಿಂದ ನೋವು, ಅನ್ಯಾಯ, ಅಪಚಾರ ಆಗಬಾರದು. ತಿಳಿದೋ ತಿಳಿಯದೆಯೋ ಹಾಗಾದಲ್ಲಿ ಅವರ ಕ್ಷಮೆಗಾಗಿ ಬೇಡಿಕೊಳ್ಳಬೇಕು. ಇಲ್ಲವಾದಲ್ಲಿ ನೊಂದ ಹೃದಯದ ನೋವು ಶಾಪವಾಗಿ ಕಾಡುತ್ತದೆ - ಎಂಬ ಒಂದು ನಂಬುಗೆ ಈ ಕಾದಂಬರಿಯ ಬಹುತೇಕ ಎಲ್ಲ ಪಾತ್ರಗಳಲ್ಲೂ ಇರುವಂತಿದೆ. ಇದೇ ಈ ಕಾದಂಬರಿಯನ್ನು ಪೊರೆಯುವ ನಿಜವಾದ ಮಾನವ ಧರ್ಮ ಮತ್ತು ಈ ಜಗತ್ತು ಹೇಗೆ ನಡೆಯುತ್ತದೆ ಎಂಬ ಬಗ್ಗೆ ಕೃತಿಕಾರನಿಗಿರುವ ಸ್ಥೂಲ ಲಾಜಿಕಲ್ ಪರಿಕಲ್ಪನೆ ಎಂದರೆ ತಪ್ಪಾಗಲಾರದು. ನೀನು ಈ ಜಗತ್ತಿಗೆ, ಪರರಿಗೆ, ನಿನ್ನ ಸಹಜೀವಿಗೆ ಏನನ್ನು ಕೊಡುವಿಯೋ ಅದೇ ನಿನಗೆ ಮರಳಿ ಬರುತ್ತದೆ, ಪೊರೆಯುತ್ತದೆ ಇಲ್ಲವೇ ತರಿಯುತ್ತದೆ ಎನ್ನುವ ತತ್ವ. ಉಳಿದಿದ್ದೆಲ್ಲವೂ ಲೊಳಲೊಟ್ಟೆ ಎಂಬಂತೆ ಇಡೀ ಕಾದಂಬರಿಯನ್ನು ನೇಯಲಾಗಿರುವುದು ವಿಶೇಷ.

ವಸುಧೇಂದ್ರ ಅವರು ಕಾದಂಬರಿಯ ಬಗ್ಗೆ ಮಾತನಾಡುತ್ತ ಹೇಳಿದ್ದರು; ಇವತ್ತು ಇಲ್ಲಿ ನಿಂತು ನಾವು ಇತಿಹಾಸವನ್ನು ಹೊರಳಿ ನೋಡುವಾಗ ನಮಗೆ ಅದು ಕಾಣಿಸುವ ರೀತಿ ಆಗ ಅವರಿಗೆ ಕಂಡಿರಲಾರದು ಎನ್ನುವುದು ನಿರ್ವಿವಾದ. ಹಾಗಾಗಿ ನಾವು ಹೇಳುವುದು ಎಷ್ಟು ಸರಿಯೋ ತಪ್ಪೋ ಗೊತ್ತಿಲ್ಲ. ಆದರೂ ಆವತ್ತು ಕೃಷ್ಣದೇವರಾಯ, ಪರ್ಷಿಯಾದ ಕುದುರೆಗಳಿದ್ದರೆ ಯಾವ ಯುದ್ಧವನ್ನಾದರೂ ಸುಲಭವಾಗಿ ಗೆಲ್ಲಬಹುದು ಎನ್ನುವ ಭರವಸೆಯಲ್ಲಿ ಅವರಿಗೆ ಇನ್ನಿಲ್ಲದ ಮಹತ್ವ ಕೊಟ್ಟು, ಕೇರಳದ ಒಬ್ಬ ದೊರೆಯ ಕಿವಿಮಾತನ್ನೂ ಲೆಕ್ಕಿಸದೆ ಪರಕೀಯರಿಗೆ ದೇಶದಲ್ಲಿ ತಳವೂರಲು ಕೊಂಚ ಸಂಭ್ರಮದಿಂದಲೇ ಸರ್ವವಿಧದ ಸಹಕಾರ ಸವಲತ್ತು ಕೊಡದೇ ಹೋಗಿದ್ದರೆ, ಆವತ್ತೇ ಅವರನ್ನು ದೇಶದಿಂದ ಹೊರಕ್ಕೆ ದಬ್ಬಿದ್ದರೆ ಮುಂದೆ ಈ ದೇಶ ಶತಶತಮಾನಗಳ ದಾಸ್ಯಕ್ಕೆ, ಗುಲಾಮಗಿರಿಗೆ ಗುರಿಯಾಗಿ ನರಳುವುದು ತಪ್ಪುತ್ತಿತ್ತು ಎಂದು ಅನಿಸಿಯೇ ಅನಿಸುತ್ತದೆ. ಬ್ರಿಟಿಷರಿಂದ ಒಂದು ಭಾಷೆ, ಒಂದು ನಾಗರೀಕತೆ, ಅದರ ಶಿಕ್ಷಣ ಪದ್ಧತಿ, ಕಾನೂನು ಪದ್ಧತಿ ನಮಗೊದಗಿತು. ಇಲ್ಲಿನ ಸಾಕಷ್ಟು ಧಾರ್ಮಿಕ/ಸಾಮಾಜಿಕ ಮೌಢ್ಯದ ನಿವಾರಣೆ ಸಾಧ್ಯವಾಯಿತು. ಆರ್ಥಿಕ, ನೈಸರ್ಗಿಕ, ರಾಜತಾಂತ್ರಿಕ ಕಷ್ಟನಷ್ಟಗಳೂ ಆಗಿವೆ. ಚರಿತ್ರೆ ನಮಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ. ನಾವು ಅದನ್ನೆಲ್ಲ ಕಲಿತಿದ್ದೇವೆ ಮತ್ತು ಮರೆತಿದ್ದೇವೆ ಕೂಡ. ಅದರತ್ತ ಹಲವು ವಿಧದ, ಹಲವು ಕೋನದ ಹಿನ್ನೋಟ ಸಾಧ್ಯವಿದೆ. ಎಲ್ಲಿ ನಿಂತು ನೋಡುತ್ತಿದ್ದೀರಿ, ಯಾವಾಗ ನೋಡುತ್ತಿದ್ದೀರಿ, ಹೇಗೆ ನೋಡುತ್ತಿದ್ದೀರಿ ಮತ್ತು ಯಾಕಾಗಿ ನೋಡುತ್ತಿದ್ದೀರಿ ಎನ್ನುವುದರ ಮೇಲೆ ನಿಮ್ಮ ಹೊರಳು ನೋಟ ನಿಮಗೆ ನಿಮ್ಮ ನಿಮ್ಮ ಸತ್ಯವನ್ನು ಕಾಣಿಸುತ್ತದೆ. ನಿರೂಪಕ ಮತ್ತು ನಿರೂಪಣೆ ಎರಡೂ ಪರಸ್ಪರ ಅಲಿಪ್ತವಲ್ಲ ಎನ್ನುವುದು ಹೇಗೆ ನಿಜವೋ ಹಾಗೆಯೇ ದೃಶ್ಯ ಮತ್ತು ನೋಡುಗ ಕೂಡಾ ವರ್ಣಲಿಪ್ತ. ಹಾಗಿದ್ದೂ ಹೊರಳಿ ನೋಡುವುದು ಒಳ್ಳೆಯದೇ. ಅದು ಆಗಾಗ ಆಗಸವನ್ನು ನಿಟ್ಟಿಸಿದಂತೆ, ಸಾಗರವನ್ನು ದಿಟ್ಟಿಸಿದಂತೆ. ಅದರ ಅಗಾಧತೆ ನಮಗೆ ಕೊನೆಗೂ ಅರ್ಥವಾಗದೇ ಹೋಗಬಹುದು. ಆದರೆ ಏನಿಲ್ಲವೆಂದರೂ, ನಿಶ್ವಯವಾಗಿಯೂ ಅದು ನಮ್ಮ ಅಸ್ತಿತ್ವದ ನಗಣ್ಯತನವನ್ನು ಅದರ ಅಗಾಧತೆಯ ಹಿನ್ನೆಲೆಯಲ್ಲಿ ನಮ್ಮದೇ ಅರಿವಿಗೆ ತರದೇ ಇರುವುದಿಲ್ಲ. ಚರಿತ್ರೆಯ ಹೊರಳುನೋಟ ಅಂಥ ದರ್ಶನವೊಂದನ್ನು ದಯಪಾಲಿಸಬೇಕು ಎನ್ನುವುದಾದರೆ ವಸುಧೇಂದ್ರರ ಈ ಕಾದಂಬರಿ ಅದನ್ನು ಯಶಸ್ವಿಯಾಗಿ ಮಾಡುತ್ತದೆ.

(ಈ ಲೇಖನದ ಸಂಕ್ಷಿಪ್ತ ರೂಪ ಮಾರ್ಚ್ ತಿಂಗಳ ‘ಮಯೂರ’ದಲ್ಲಿ ಪ್ರಕಟವಾಗಿದೆ.)

No comments: