Sunday, February 9, 2020

ಹೊಸದನಿಯ ಹಾಡುಹಕ್ಕಿಯ ‘ಪಾದಗಂಧ’

ಭಾಗ್ಯಜ್ಯೋತಿ ಹಿರೇಮಠ ಅವರ ಮೊದಲ ಕವನ ಸಂಕಲನ ‘ಪಾದಗಂಧ’ದಲ್ಲಿ ಮೂರು ಬಗೆಯ ಕವಿತೆಗಳಿವೆ. ಒಂದು, ತೀರ ವ್ಯಕ್ತಿಗತ ನಿವೇದನೆಯಂತೆ ಕಾಣುವ, ಆದರೆ ವ್ಯಕ್ತಿ, ಸಮಾಜದ ಅನಿವಾರ್ಯ ಘಟಕ ಎಂಬ ಪ್ರಜ್ಞೆಯನ್ನಿಟ್ಟುಕೊಂಡೇ ವೈಯಕ್ತಿಕವಾದದ್ದು ಸಾಮಾಜಿಕವೂ ಹೌದು ಎಂಬ ಅರಿವಿಗೆ ವಿಸ್ತಾರಗೊಳ್ಳುವಂಥ ಉತ್ಕಟ ಪ್ರೇಮ, ವಿಯೋಗ ಮತ್ತು ಪ್ರತಿರೋಧ ಸೂಸುವ ಕವಿತೆಗಳು. ಇವುಗಳಲ್ಲೇ ಸ್ತ್ರೀವಾದದ ಸ್ಪಷ್ಟ ಧ್ವನಿಯನ್ನು ಗುರುತಿಸುವುದು ಸಾಧ್ಯವಿದೆ ಮತ್ತು ಅದನ್ನು ಈ ಕವಿತೆಗಳಿಗೆ ಸೊಗಸಾದ ಮುನ್ನುಡಿ ಬರೆದಿರುವ ಡಾ. ಎಚ್ ಎಲ್ ಪುಷ್ಪ ಅವರು ಸಮರ್ಥವಾಗಿ ಮಾಡಿದ್ದಾರೆ. ಎರಡನೆಯದು ಕೊಂಚ ಅಮೃತಾ ಪ್ರೀತಂ ಅವರ ಪ್ರಭಾವದ ಛಾಯೆಯುಳ್ಳ, ಸೊಗಸಾದ ಪ್ರತಿಮೆಗಳ ವಿಷಾದದ ಛಾಯೆಯಿರುವ ಪ್ರೇಮ ಕವಿತೆಗಳು. ನನಗೆ ಮುಖ್ಯವೆನಿಸಿದ ಕವಿತೆಗಳು ಮೂರನೆಯ ಬಗೆಯವು. ಈ ಬಗೆಯ ಕವಿತೆಗಳಲ್ಲಿ ಭಾಗ್ಯ ಅವರು ಬಳಸುವ ಭಾಷೆಯ, ಮಾತ್ರವಲ್ಲ ತಮ್ಮ ಕವನದ ಪ್ರಸ್ತುತಿಯಲ್ಲಿನ ಹೊಸತನ, ಅಲ್ಲಿ ಗಾಢವಾಗಿರುವ ಭಾವ ಮತ್ತು ಆಯ್ದುಕೊಂಡ ನೆಲೆಗಳ ತಾಜಾತನ ಮನಸೆಳೆಯುವಂತಿವೆ.


ಭಾಗ್ಯ ಅವರ ಭಾಷೆ ಸೊಗಸಾಗಿದೆ. ಕಲ್ಲಿನಲ್ಲಿ ಕೆತ್ತಿದಂತೆ ಬರುವ ಪದಪ್ರಯೋಗ, ಹೊಸ ನುಡಿಗಟ್ಟು, ಭಾಷಾಪ್ರಯೋಗಗಳಿಂದ ತುಂಬಿದೆ. ಇಲ್ಲಿ ಮಡುಗಟ್ಟಿದ ನೋವಿದೆ, ಬಗೆಬಗೆಯ ಮಾನಸಿಕ ಶೋಷಣೆ, ಭಾವನೆಗಳೊಂದಿಗೆ ಹಗುರವಾಗಿ ವ್ಯವಹರಿಸುವ ಮಂದಿ ಕೊಟ್ಟ ಪೆಟ್ಟಿಗೆ ಕುಂದದೆ, ಮೌನದೊಂದಿಗೇ ಸೆಟೆದ ಮನೋಧರ್ಮ ಎದ್ದು ಕಾಣುತ್ತದೆ. ಇದು ಸ್ತ್ರೀವಾದಿ ಧೋರಣೆ ಎಂದೆನಿಸಿದರೆ ತಪ್ಪೇನಿಲ್ಲ. ಹಾಗೆ ಕಾಣುವಾಗ ಕೊಂಚ ಘೋಷಣೆಯ ತೀವ್ರತೆಯನ್ನು ಪಡೆದುಕೊಳ್ಳುವ ಕವಿತೆಗಳು ಸಾಕಷ್ಟು ಪವರ್‌ಫುಲ್ ಆಗಿಯೇ ರೂಪುಗೊಂಡಿವೆ. 

ಅವಳ ಪ್ರೇಮಧಾರೆಗೆ ಅಗ್ನಿದೇವ
ಕುದಿಯುತ್ತಿದ್ದಾನೆ ಕೊತಕೊತನೆ
ಎಲ್ಲವೂ ನೀನೇ ಅಂದವಳಿಗೆ
ಬೂದಿಗುರುತು ಉಳಿಯದಂತೆ
ಸಾರಿಸಿದ್ದಾನೆ ಅಂಗೈಯಿಂದ
(ರಕ್ತಚಂದ್ರ)

......ಕಟ್ಟುತ್ತೇನೆ ಗೆಜ್ಜೆ
ಹೂ ಕಟ್ಟಿದ ಕೈಯ ಶರಾಬು
ಎದೆಯಿಂದ ಹೊಕ್ಕಳ ಗೆರೆದಾಟುವ ತನಕ
ಕುಣಿಯುತ್ತೇನೆ
..................
..................
..................

ನನ್ನವರು, ಮಕ್ಕಳು ಕಾಯುತ್ತಿದ್ದಾರೆ
ನನ್ನವ್ವ ಹೊಟ್ಟೆತುಂಬ ಊಟ
ಚೆಂದಾನ ಅಂಗಿ ತೊಡಿಸಿ ಊರ ಸುತ್ತಿಸಿ ಕುಣಿಸುವಳೆಂದು
ಕಟ್ಟಿದ ಗೆಜ್ಜೆ ಕರುಳಕಿತ್ತು
ನಿಮ್ಮ ಅವ್ವ-ಮಕ್ಕಳ ಮುಂದಿಡಲು ಕುಣಿಯುತ್ತೇನೆ
(ಕುಣಿಯುವ ಗೆಜ್ಜೆ)

ಮುಂಗೈಗೆ ಮಲ್ಲಿಗೆಯ ಮಾಲೆ ಸುತ್ತಿಕೊಂಡವನ ಕೈಗೆ ಶರಾಬಿನ ವಾಸನೆಯಿದೆ. ಆದರೆ ಆ ವಾಸನೆ ಎದೆಯಿಂದ ಹೊಕ್ಕಳ ಗೆರೆ ದಾಟುವ ತನಕ ಕುಣಿಯುತ್ತೇನೆ ಎನ್ನುವಲ್ಲಿ ಬರುವ ಎದೆ ಮತ್ತು ಹೊಕ್ಕಳ ಸಂಬಂಧ ಧ್ವನಿಪೂರ್ಣವಾಗಿದೆ. ಅದು ಹೆಣ್ಣಿನ ದೇಹದ ಎದೆ ಮತ್ತು ಹೊಕ್ಕಳು ಕೊಡುವ ಕಾಮುಕ ಭಾವದ ಜೊತೆಗೇ ತಾಯಿಯ ಎದೆ ಮತ್ತು ಹೊಕ್ಕಳಬಳ್ಳಿಯ ನೆನಪುಗಳಲ್ಲಿ ಹೆಣ್ಣನ್ನು ಮಾತೃತ್ವಕ್ಕೆ ಏರಿಸಿ ಕೊಡುವ ಏಟು ಕೂಡ ಸಣ್ಣದಲ್ಲ. ಇದೇ ಕವನದಲ್ಲಿ ಮುಂದೆ ತಾಯಿಯೇ ಸಾಕ್ಷಾತ್ಕರಿಸುತ್ತಾಳೆ. ಕಟ್ಟಿದ ಗೆಜ್ಜೆ ಹೆತ್ತ ಕರುಳಿನ ಬಳ್ಳಿಯಾಗಿ ತೋರುವ ರೂಪಕದಲ್ಲಿ ಅದು ಸಂಪನ್ನಗೊಂಡಿದೆ.

ಇಲ್ಲಿಯೇ ಬರುವ ‘ಬನದ ಹೋರಿ’ ಕವಿತೆಯ ಪ್ರತಿಮೆಗಳು, ಚಿತ್ರಗಳು ಭೀಭತ್ಸವಾಗಿವೆ. ಭಾಗ್ಯಜ್ಯೋತಿಯವರು ಇಂಥಲ್ಲಿ ಬಳಸುವ ಭಾಷೆಗೆ ಒಂದು ಠೇಂಕಾರವಿದೆ, ರೊಚ್ಚಿದೆ. (ಬತ್ತಿದ ಮೊಲೆಗಳ| ಕಿತ್ತು ತಿಂದು ರಕ್ತ ಕುಡಿ), (ಸತ್ತ ಹೆಣಗಳ ಕಿತ್ತು ತಿನ್ನುವ| ನಾಯಿಗೆ ರುಚಿಸದು ಹೋಳಿಗೆ) ಸಾಲುಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಇದಕ್ಕೆ ಒಂದು ವಿಧದ ಗೇಯತೆ ಕೂಡ ಸಾಧ್ಯವಿದೆ ಎನ್ನುವುದನ್ನು ಸುಲಭವಾಗಿ ಊಹಿಸಬಹುದಾಗಿದೆ.

ಗುಪ್ತಾಂಗದ ನಕಾಶೆಗೆ| ಯೋನಿಮಾರ್ಗ ಅಪಾಯಕಾರಿ
ಬಾಯಿ ಮೂಗಿನ ಗಾಳಿ| ಎದೆಯಕೊಂಡಿ ಕಳಚಿ
ಬಸಿದ ದೇಹ ನೆಕ್ಕಲು| ಮಣ್ಣಹುಳುಗಳು
ನುಂಗಿವೆ, ಕುಕ್ಕಿವೆ
(ಬನದ ಹೋರಿ)

ಸ್ತ್ರೀವಾದಿ ಚಳವಳಿ, ಹೋರಾಟದ ವೇದಿಕೆಗಳಲ್ಲಿ ಗಟ್ಟಿ ಧ್ವನಿಯಲ್ಲಿ ಓದಲು ಸೂಕ್ತವೆನಿಸುವ ಇಂಥ ರಚನೆಗಳಿಗೆ ಬ್ರ್ಯಾಂಡ್ ಆಗುವ ಅಪಾಯದಿಂದ ಬಹುಬೇಗ ಇವರು ಹೊರಬಂದಂತೆ ಕಾಣುವುದು ಮುಂದಿನ ಕವಿತೆಗಳಲ್ಲಿ ಸಾಧ್ಯವಾಗಿದೆ.

‘ಬನದ ಹೋರಿ’ ಕವಿತೆಯ ಮುಂದುವರಿಕೆಯಂತೆ ಬರುವ ‘ಹೆಜ್ಜೆ ಗುರುತಿಗೆ’ ಕವಿತೆಯೂ ಸಾಕಷ್ಟು ರೊಚ್ಚು-ಕೆಚ್ಚು ಸಹಿತವಾದ ಭಾಷೆಯನ್ನು ಬಳಸುತ್ತ ತೀವ್ರವಾದ ಭಾವನೆಗಳನ್ನು ಅಕ್ಷರಕ್ಕಿಳಿಸುತ್ತದೆ. ‘ಕೊನೆಯ ಜನ್ಮದ ಪ್ರೀತಿ’ ಕವಿತೆಯನ್ನು ಗಮನಿಸಿದರೆ ಇವರು ಗಂಡು ಹೆಣ್ಣು ಸಂಬಂಧದ ಒಂದು ಹಳೆಯ ಸಮಸ್ಯೆಯನ್ನೇ ಹೊಸತನದ ಭಾಷೆ, ನುಡಿಗಟ್ಟುಗಳಲ್ಲಿ ಅಭಿವ್ಯಕ್ತಿಸಿರುವುದು ಕಾಣುತ್ತದೆ. ‘ಕೊನೆಯ ಜನ್ಮದ’ ಎನ್ನುವಲ್ಲಿ ಇವರು ಅದನ್ನು ಕಳೆದ ಜನ್ಮದ, ಹೋದ ಜನ್ಮದ ಎನ್ನುವ ಅರ್ಥದಲ್ಲಿ ಬಳಸುತ್ತಾರೆ ಅನಿಸುತ್ತದೆ.

ಇಂದಾದರೂ ನೀ ಬಂದು
ನನ್ನವಳು ಇವಳೇ ಎನ್ನುತ್ತಿಯೆಂದು
ಕಾಯುತ್ತಿರುವೆ ಈಗಲೂ
ಕಣ್ಮುಚ್ಚುವಾಗ ಪ್ರತಿಬಾರಿ
ಬೆಂಕಿಮೂಟೆ ಹೊತ್ತ ಒಡಲು
ಕಾವು ಹೆಚ್ಚಾಗದಂತೆ ತಾಕಿಸುತ್ತಲೇಯಿದೆ ದಡದ ನೀರು
ನಿನ್ನ ಸುಳಿವು ಸಿಕ್ಕಲ್ಲೆಲ್ಲ ಸುತ್ತಿಯಾಯಿತು
ಮಿಸುಕಾಡಿದರೆ ನೆಲದ ಒಳಪದರು
ಹರಿಯುತ್ತದೆ ಇಂದಲ್ಲ ನಾಳೆ
ತಡವಿಲ್ಲ ಬೇರಿಗಂಟಿದ ಮಣ್ಣು ಕಳಚುವುದು
ಯಾರ ಕಣ್ಣೂ ಕೆಣಕದಂತೆ ಕರುಳು ಸುತ್ತಾಡುತ್ತಿವೆ
ಬಯಲದಾರಿಗೆ ಬೆಂಕಿ ಹಚ್ಚಿಕೊಂಡು
(ಕೊನೆಯ ಜನ್ಮದ ಪ್ರೀತಿ)

ಮುಂದೆ ಬರುವ ‘ಬಯಲದಾರಿ’ ಕವಿತೆಯಲ್ಲೂ ತೀವ್ರ ಭಾವನೆ,ಮಡುಗಟ್ಟಿದ ನೋವು ಮತ್ತು ವ್ಯಕ್ತಿಗತ ನೆಲೆಯ ಸ್ವಗತದಂಥ ಮಾತುಗಳು ಕಾಣಸಿಗುತ್ತವೆ. ಇಂಥ ಯಾವತ್ತೂ ಕವಿತೆಗಳು ಆತ್ಮಮರುಕದಿಂದಾಗಲೀ, ಹತಾಶೆಯಿಂದಾಗಲೀ ಮುಗಿಯದೆ ಹೊಸ ಭರವಸೆ, ಆತ್ಮವಿಶ್ವಾಸ, ಛಲದೊಂದಿಗೇ ನಿಲ್ಲುವುದು ಗಮನಾರ್ಹ. ‘ಭಾನುವಾರದ ಬಾಣಸಿಗ’ದಂಥ ಲಘುವೆನಿಸುವ, ಕೊಂಚ ತಮಾಶೆಯ ಕವನಗಳೂ ಧ್ವನಿಸುವುದು ಸ್ತ್ರೀವಾದ ನೆಲೆಗಳನ್ನೆ ಎನ್ನುವುದು ನಿಜ. 

ಎದುರಾದಾಗ ಇನ್‌ಸ್ಟಂಟ್ ದೇವರು ನೀನು
ಮಾತು ಬಾರದೇ ಬಿಕ್ಕಳಿಸಿದ ಭಕ್ತ ನಾನು
ಕಾಲಿಗೆ ಬಿದ್ದಾದರೂ ಕಾರ್ಯಸಾಧಿಸೋಣವೆಂದರೆ
ಇದ್ದಕ್ಕಿದ್ದಂತೆ ಜಾಗೃತವಾಗುತ್ತದೆ ಇಗೋ ಒಳಒಳಗೆ
ಭೇಟಿಯಾದಾಗಲೊಮ್ಮೆ ಹೊಸ ನಮೂನೆ ನೀನು
ಇರಬಹುದೇನೋ ಖುದ್ದಾಗುವುದು ಮತ್ತೆ - ಮತ್ತೆ ನಾನೂನು
(ಒಲುಮೆಗೆ)

ಈ ಕವಿತೆಯಲ್ಲಿ ಇವರು ಬಳಸುವ ‘ಭೇಟಿಯಾದಾಗಲೊಮ್ಮೆ ಹೊಸ ನಮೂನೆ ನೀನು’ ಎಂಬ ಸಾಲು ಧ್ವನಿಸುವುದು ಒಂದೊಂದು ಸಲ ಭೇಟಿಯಾದಾಗಲೂ ಅವನು ಹೊಸದೇ ವ್ಯಕ್ತಿಯಾಗಿರುವ ಸೋಜಿಗವನ್ನು. ಹಾಗೆಯೇ ಖುದ್ದಾಗುವುದು ಎನ್ನುವಾಗ ‘ನಾನು ನಾನೇ ಆಗುವುದು’ ಎಂಬ ಅರ್ಥವಿದೆ. ಸವಕಲಾದ ಭಾಷೆಯ ನುಡಿಗಟ್ಟುಗಳನ್ನು ಬಿಟ್ಟುಕೊಟ್ಟು ಬರೆಯುವ ಭಾಗ್ಯ ಅವರು ಬಳಸುವ ಭಾಷೆಯಲ್ಲಿ ಒಂದು ವಿಧದ ತಾಜಾತನವಿದೆ. ಹಾಗೆಯೇ ಅವರ ಬಹುತೇಕ ಕವಿತೆಗಳು ಗಂಡು ಹೆಣ್ಣಿನೊಂದಿಗೆ ಆಡುತ್ತಿರುವುದೇ ಅಥವಾ ಹೆಣ್ಣು ಗಂಡಿಗೆ ಹೇಳುತ್ತಿರುವುದೇ ಎಂಬ ಗುಟ್ಟನ್ನು ಕೂಡ ಬಿಟ್ಟುಕೊಡದ ಹಾಗಿವೆ!

ಈ ಪದಪ್ರಯೋಗಗಳನ್ನು ಗಮನಿಸಿ:

ಉಸಿರು ಜಾರದಂತೆ
ಜಾಗರಣೆ ವಹಿಸುವೆ
ಅಂಟಿನೆಳೆಯಂತಹ
ನಿನ್ನ ನಾಜೂಕು ಒಲವನ್ನು
ರಸ್ತೆದಾರಿಗುಂಟ ಎಳೆತಪ್ಪದಂತೆ

..............
..............
..............

ಕಾಂಕ್ರೀಟಿನ ಸಹವಾಸ
ಅಲರ್ಜಿಯಾಗಿ
ಕಡಲು ಗರ್ಭ ಧರಿಸಲು
ಉಗುರುಕಣ್ಣು ಮಣ್ಣು ಸಂಗ್ರಹಿಸಿದೆ
(ಮಂದ ಮೈ)

ಮೂರನೆಯ ಬಗೆಯ ಕವಿತೆಗಳಲ್ಲಿ ಗಮನಿಸ ಬೇಕಾದ ಮಹತ್ವದ ರಚನೆಗಳು ‘ಮಣ್ಣ ಹನಿ’, ‘ನನ್ನ ಕ್ರಶ್’ ‘ಪಾದಗಂಧ’, ‘ಎದೆಗಂಟಿದ ಕಣ್ಣು’ ‘ದ್ರವಿಸುವ ಅವನು’, ‘ಒಪ್ಪಂದಕ್ಕೆ ಸಹಿ ಹಾಕಿದ ವರ್ಣತಂತುಗಳು’, ‘ಕತ್ತಲೊಂದಿಗೆ’, ‘ಕನವರಿಕೆಗಳು’ ಮತ್ತು ‘ಇನ್‌ಸ್ಟಂಟ್ ಕವಿ’ ಮುಖ್ಯವಾದವು. ಇವುಗಳಲ್ಲಿ ಒಂದನ್ನೂ ನಾನಿಲ್ಲಿ ಕೊಡುತ್ತಿಲ್ಲ. ಈ ರಚನೆಗಳು ಅದೆಷ್ಟು ಅದ್ಭುತವಾಗಿ ಮೂಡಿವೆ ಎಂದರೆ ಅವುಗಳನ್ನು ಅಷ್ಟಿಷ್ಟು ಕೋಟ್ ಮಾಡುವಂತಿಲ್ಲ. ಇಡೀ ಕವಿತೆಯೇ ಒಂದು ಸುಂದರ ಆಕೃತಿಯಾಗಿ ಮನಸ್ಸಲ್ಲಿ ಮೂಡಿಸುವ ಪ್ರತಿಮೆ, ಚಿತ್ರ, ಭಾವ ಎಲ್ಲವೂ ಅನನ್ಯವೂ ವಿಶಿಷ್ಟವೂ ಆಗಿವೆ ಎಂದಷ್ಟೇ ಹೇಳಬಲ್ಲೆ. ಇವುಗಳಲ್ಲಿ ಒಂದು ತಾಜಾತನದ ಘಮವಿದೆ. ಹೊಸತನವಿದೆ. ಕವಿತೆ ಸಾಧಿಸಬೇಕಾದ ಅನೂಹ್ಯ, ಅಗಮ್ಯ ಹೊಳಹುಗಳನ್ನು ಇವು ಸಮೃದ್ಧವಾಗಿಯೇ ಸ್ಪರ್ಶಿಸಿವೆ. ಈ ಕವಿತೆಗಳೊಂದಿಗೆ ನಾವು ವಿರಮಿಸದೇ ಮುಂದೆ ಹೋಗುವುದು ಅಸಾಧ್ಯವಾಗುವಷ್ಟು ಮೌನ ಈ ಕವಿತೆಗಳಲ್ಲಿದೆ. ಇಂಥ ಕವಿತೆಗಳನ್ನು ಇಷ್ಟಪಡುವ ನನಗೆ ಇವು ಭಾಗ್ಯಜ್ಯೋತಿಯವರ ಅಪ್ಪಟ ರಚನೆಗಳೆಂದು ಅನಿಸಿವೆ.

No comments: