Sunday, February 16, 2020

ಲೇಖಕನೊಬ್ಬನ ಸಮೃದ್ಧ ಸ್ಮೃತಿಜಗತ್ತು

ಟಿ ಎಸ್ ಗೊರವರ ಅವರ "ಆಡು ಕಾಯೋ ಹುಡುಗನ ದಿನಚರಿ" ಎರಡು ಕಾರಣಗಳಿಗಾಗಿ ಒಂದು ಮಹತ್ವದ ಕೃತಿ. ಒಂದು, ಇದರ ಅಸಾಹಿತ್ಯಿಕ ನೆಲೆಯ ಶುದ್ಧ, ತಾಜಾ ಬರವಣಿಗೆಯ ಸೊಗಡಿಗಾಗಿ ಮತ್ತು ಅದು ತೆರೆದಿಡುವ ಅಪ್ಪಟವಾದ ಒಂದು ಬದುಕಿನ ಚಂದಕ್ಕಾಗಿ. ಇನ್ನೊಂದು, ಟಿ ಎಸ್ ಗೊರವರ ಅವರ ಒಟ್ಟು ಬರವಣಿಗೆಯಲ್ಲಿ ಮಹತ್ವದ ತಿರುವಾದ "ಕುದರಿ ಮಾಸ್ತರ" ಕಥಾಸಂಕಲನದ ವರೆಗಿನ ಅವರ ಬರಹದ ಮೂಲ ಸೆಲೆಯಾದ ಇದು ಅವರ "ಕುದರಿ ಮಾಸ್ತರ", "ರೊಟ್ಟಿ ಮುಟಗಿ" ಮತ್ತು "ಮಲ್ಲಿಗೆ ಹೂವಿನ ಸಖ"ದಂಥ ಮುಂದಿನ ಕೃತಿಗಳಲ್ಲಿ ಹೇಗೆ ಹೊಸ ಬಗೆಯ ಅಭಿವ್ಯಕ್ತಿಗೆ ಅವರನ್ನು ಸಿದ್ಧಗೊಳಿಸಿತು ಎನ್ನುವುದನ್ನು ಅರಿಯಲು ಸಿಗುವ ಅಪರೂಪದ ಆಕರ ಗ್ರಂಥವಾಗಿ.


ಟಿ ಎಸ್ ಗೊರವರ ಅವರು "ಆಡು ಕಾಯೋ ಹುಡುಗನ ದಿನಚರಿ"ಯನ್ನು ಮೊದಲು ಪ್ರಕಟಿಸಿದ್ದು 2011ರಲ್ಲಿ. 2015ರಲ್ಲಿ ಇದರ ಮರು ಮುದ್ರಣವಾಗಿದೆ. ಟಿ ಎಸ್ ಗೊರವರ ಅವರು ಈ ವರೆಗೆ "ಭ್ರಮೆ" (2007), "ಕುದರಿ ಮಾಸ್ತರ" (2012) ಎಂಬ ಎರಡು ಕಥಾಸಂಕಲನಗಳನ್ನೂ, "ರೊಟ್ಟಿ ಮುಟಗಿ" (2016) ಎಂಬ ಒಂದು ಕಾದಂಬರಿಯನ್ನೂ ಬರೆದಿದ್ದಾರಲ್ಲದೆ 2018ರಲ್ಲಿ "ಮಲ್ಲಿಗೆ ಹೂವಿನ ಸಖ" ಎಂಬ ಕಥಾಸಂಕಲನವನ್ನೂ ಪ್ರಕಟಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನ ಕೃತಿಗಳು ಎರಡನೇ ಮುದ್ರಣದ ಸೌಭಾಗ್ಯವನ್ನೂ ಕಂಡಿವೆ ಎನ್ನುವುದು ಗಮನಾರ್ಹ. 

"ಆಡು ಕಾಯೋ ಹುಡುಗನ ದಿನಚರಿ"ಯಲ್ಲಿ ನಿರೂಪಿತವಾಗಿರುವುದು ಬಾಲ್ಯಕಾಲ. ಕ್ರಮೇಣ ವಿದ್ಯೆಯ ಮಹತ್ವ ಅರಿವಾಗಿ, ಶಿಕ್ಷಣದ ರುಚಿ ಹತ್ತಿ, ಕಲಿತು, ಬದುಕಲ್ಲಿ ನೆಲೆಯಾಗುವ ಹಂತಕ್ಕೇರಿದ್ದು ಇಲ್ಲಿಲ್ಲ. ಆದರೆ ಅದರ ಹೊಳಹುಗಳೊಂದಿಗೆ ಇದು ಮುಗಿಯುತ್ತದೆ. ಇಲ್ಲಿನ ಒಟ್ಟು ಹದಿನಾರು ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಆಡು ಕಾಯುತ್ತ, ಆಡು ಕಾಯುವವರೊಂದಿಗೆ ಮತ್ತು ದನ ಕಾಯುವವರೊಂದಿಗೆ ಕಳೆದ ದಿನಗಳು ಸಹಜವಾಗಿ, ಮುಗ್ಧವಾಗಿ ಮತ್ತು ನಿರೂಪಕನ ಸಾಮಾಜಿಕ, ಸಾಂಸಾರಿಕ ಬಿಕ್ಕಟ್ಟುಗಳ ನೆಲೆಯಲ್ಲೇ ಚಿತ್ರಿತಗೊಂಡಿವೆ. ಶಾಲೆ ತಪ್ಪಿಸಿ, ಜೇನು ಬಿಡಿಸುವುದು, ಕೆರೆಯಲ್ಲಿ ಈಸು ಹೊಡೆಯುವುದು, ನಾನಾ ಬಗೆಯ ಹಣ್ಣು, ತಿನಿಸುಗಳ ಹಿಂದೆ ಬಿದ್ದು, ಏಡಿ ಹಿಡಿದು, ಸುಟ್ಟು ತಿನ್ನಲು ಕಲಿತಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಕಳ್ಳತನಕ್ಕೆ ಕೈಯಿಕ್ಕಿದ್ದು, ಮೊದಲ ಲೈಂಗಿಕ ಪ್ರಜ್ಞೆಯ ಹೊಳಹುಗಳನ್ನು ಕಂಡಿದ್ದು, ದೊಡ್ಡವರ ಜಗಳ-ಕಿರಿಕಿರಿಗಳಲ್ಲೂ ಅದರ ಹಿಂದಿನ ಬಡತನದ ಒತ್ತಡಗಳನ್ನು ಗುರುತಿಸಿದ್ದು ಮತ್ತು ತಂದೆಯ ಗುಣಾವಗುಣಗಳ ವಿಮರ್ಶೆ ಎಲ್ಲ ಇವೆ. ಅಂದರೆ, ನಿಶ್ಚಿತವಾಗಿಯೂ ಇದನ್ನು ಬರೆಯುತ್ತಿರುವ ಪ್ರಜ್ಞೆ ಬಾಲ್ಯದ್ದಲ್ಲ. ಆದರೆ ಚಿತ್ರಗಳೆಲ್ಲವೂ ಬಾಲ್ಯದ್ದೇ, ಆ ವಯೋಮಾನಕ್ಕನುಗುಣವಾದ ಮುಗ್ಧ ಮತ್ತು ಸಹಜ ಮನೋಧರ್ಮದ್ದೇ. 

ಬರಹಗಾರನೊಬ್ಬ ಅವನು ಯಾವ ವಯೋಮಾನದಲ್ಲೇ ಬರೆಯುತ್ತಿರಲಿ, ಅವನ ಕಥಾಲೋಕವನ್ನು ಜೀವಂತಿಕೆಯಿಂದ ನಳನಳಿಸುವಂತೆ ಮಾಡುವುದು, ಅವನಿಗೆ ಬೇಕಾದ ಬದುಕಿನ ಸಣ್ಣಪುಟ್ಟ ವಿವರಗಳನ್ನು ಕೊಟ್ಟು ಪೊರೆಯುವುದು, ಮನುಷ್ಯ ಸಂಬಂಧದ ಸೂಕ್ಷ್ಮಗಳ ಅರಿವನ್ನು ಉದ್ದೀಪಿಸುವುದು ಬಾಲ್ಯವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಆನಂತರದ ಅವನ ಪ್ರಬುದ್ಧಾವಸ್ಥೆಯ ಬದುಕಿನ ಚಿತ್ರಗಳನ್ನು ಕಟ್ಟಿಕೊಡುವಾಗಲೂ ಸುಪ್ತವಾಗಿ ಅವನನ್ನು ಕಾಪಾಡುವುದು ಬಾಲ್ಯದ ಗ್ರಹಿಕೆಗಳೇ, ಆಗ ರೂಢಿಸಿಕೊಂಡ ಬದುಕನ್ನು ಗ್ರಹಿಸುವ ಕ್ರಮಗಳೇ. ಸಮೃದ್ಧವಾದ, ಸೂಕ್ಷ್ಮವಾದ ಮತ್ತು ಸಂವೇದನೆಗಳನ್ನು ಸಂಭಾಳಿಸುವಂಥ ಶ್ರೀಮಂತ ಬಾಲ್ಯ ಮತ್ತು ಅಂಥ ಬಾಲ್ಯದ ದಟ್ಟ ಸ್ಮೃತಿ ಲೇಖಕನೊಳಗೆ ಜೀವಂತವಾಗಿ ಮಿಡಿಯುತ್ತಲೇ ಇರದಿದ್ದಲ್ಲಿ ಅವನು ಲೇಖಕನಾಗಿ ಯಶಸ್ವಿಯಾಗಲಾರ. ಇದಕ್ಕೆ ಸಮರ್ಥನೆಯಾಗಿ ಎರಡು ಉದಾಹರಣೆಗಳನ್ನು ಕೊಡಬಹುದು. ಒಂದು, ನಮಗೆ ಸಿಕ್ಕ ಬಾಲ್ಯದ ಸ್ನೇಹವನ್ನು ಮೀರಿಸಬಲ್ಲ ಒಂದೇ ಒಂದು ಸ್ನೇಹ ಸಂಬಂಧ ನಾವು ಪ್ರಬುದ್ಧರಾದ ನಂತರದಲ್ಲಿ ಸಾಧಿಸುವುದು ನಮಗೆ ಸಾಧ್ಯವಾಗುವುದಿಲ್ಲ ಎನ್ನುವುದು. ಒಂದು ವಯಸ್ಸಿನ ಬಳಿಕ ಹದಿಹರಯದಲ್ಲಿ ಸಾಧ್ಯವಾಗುವಂಥ "ಹುಚ್ಚು ಪ್ರೇಮ" ನಮಗೆ ಸಾಧ್ಯವಾಗುವುದಿಲ್ಲ ಎನ್ನುವುದು. ಹಾಗಾಗಿಯೇ ಮೊದಲ ಪ್ರೇಮಕ್ಕೆ ಇನ್ನಿಲ್ಲದ ಮಹತ್ವ ದಕ್ಕುವುದೂ ಎಂದು ಕಾಣುತ್ತದೆ.

ಆದರೆ ಇಲ್ಲೊಂದು ತೊಡಕೂ ಇದೆ. ಸಮೃದ್ಧವಾದ ಬಾಲ್ಯಕಾಲ, ಅದರ ಸ್ಮೃತಿ ಒಬ್ಬ ಲೇಖಕನನ್ನು ಎಷ್ಟರ ಮಟ್ಟಿಗೆ ಪೊರೆಯುತ್ತದೆ ಎನ್ನುವುದು ಒಂದು ಸವಾಲು. ಈ ಸ್ಮೃತಿ ವಯಸ್ಸಿನೊಂದಿಗೆ ಮತ್ತು ಹೊಸ ಹೊಸ ಅನುಭವ, ಒತ್ತಡ, ಚಿಂತೆ, ಸಮಸ್ಯೆ ಮತ್ತು ಜಂಜಾಟಗಳ ಯೌವನ, ಸಂಸಾರ ಮತ್ತು ಉದ್ಯೋಗಗಳ ನಡುವೆ ನಷ್ಟವಾಗತಕ್ಕದ್ದೇ. ಅಪರೂಪಕ್ಕೆ ಕೆಲವೇ ಕೆಲವು ಬರಹಗಾರರು ತಮ್ಮ ಈ ಸ್ಮೃತಿಸಂಪತ್ತಿನ ನಿಧಿಯಿಂದ ಅನರ್ಘ್ಯ ರತ್ನಗಳನ್ನು ಬೇಕು ಬೇಕೆಂದಾಗ ಎತ್ತಿ ಮೊಗೆದು ತರಬಲ್ಲರೇ ವಿನಃ ಎಲ್ಲರಿಗೂ, ಎಲ್ಲರಿಂದಲೂ ಸಾಧ್ಯವಾಗಬಹುದಾದ ಸುಲಭದ ಕೆಲಸವೇನಲ್ಲ ಅದು. ಅದರಲ್ಲೂ ಹಲವರಿಗೆ ಈ ನೆನಪುಗಳಿಗೆ ಮತ್ತೆ ಮತ್ತೆ ಮರಳುವುದು ಬೇಡ ಅನಿಸಲೂ ಬಹುದು. ಏಕೆಂದರೆ, ವಯಸ್ಸಿನ ದೂರ ಸಮೀಪಗಳ ನಡುವೆ ಹಿಂದಕ್ಕೆ ಚಲಿಸಿ ಬರುವುದೆಂದರೆ ಅದೇನೂ ನೇರವಾಗಿ ವಿಮಾನದಿಂದ ಇಳಿದಂತೆ ಅಲ್ಲ. ಕಾಲ್ನಡಿಗೆಯಲ್ಲಿ ಹಿಂದಕ್ಕೂ ಮುಂದಕ್ಕೂ ಸಾಗಿದಂತೆ. ಸಿಗುವ ನಿಲ್ದಾಣಗಳು ನಮ್ಮ ಆಯ್ಕೆಯವೇ ಅಗಿರುತ್ತವೆಂದೇನೂ ಇಲ್ಲವಲ್ಲ. ಎಲ್ಲ ನೆನಪುಗಳೂ ಆಪ್ಯಾಯಮಾನ ನೆನಪುಗಳಾಗಬೇಕೆಂದೇನಿಲ್ಲವಲ್ಲ. ಸೃಜನಶೀಲ ಉತ್ಸಾಹವನ್ನು ಇಂಗಿಸುವ ನೆನಪುಗಳಿಗೂ ಬದುಕಿನಲ್ಲಿ ಕೊರತೆ ಎಂಬುದಿರುವುದಿಲ್ಲ. ಹಾಗಾಗಿ ನೆನಪುಗಳ ಮಾತು ಸದಾ ಮಧುರವಾಗಿಯೇ ಇರುವುದಿಲ್ಲ.


ಇದಲ್ಲದೆ ಎದುರಾಗುವ ಇನ್ನೊಂದು ತೊಡಕು ನಶಿಸುವ ನೆನಪುಗಳದ್ದು. ನೆನಪು ನಶಿಸಿಲ್ಲ ಎನ್ನುವವರಿಗೂ ಆ ನೆನಪಿಗಿರುವ ಶಬ್ದ, ವಾಸನೆ, ಸ್ಪರ್ಶ, ರುಚಿ ಮತ್ತು ಅದು ಮನೋಭಿತ್ತಿಯಲ್ಲಿ ಕಟ್ಟುವ ಚಿತ್ರಚಿತ್ತಾರಗಳ ನೇಯ್ಗೆ ತನ್ನ ಸಮೃದ್ಧಿಯೊಂದಿಗೆ ನೆನಪಾಗುವುದು ಎಂದರೇನು ಎನ್ನುವ ಪ್ರಜ್ಞೆ ಅಷ್ಟಾಗಿ ಇರುವುದಿಲ್ಲ. ಒಬ್ಬ ಲೇಖಕನಿಗೆ ಬೇಕಾದ ನೆನಪುಗಳು ಹಾಗೆ ಪಂಚೇಂದ್ರಿಯಗಳಿಗೂ ಪೂರ್ಣವಾಗಿ ತನ್ನ ಸದ್ಯೋಜಾತ ವರ್ತಮಾನದಲ್ಲಿ ದಕ್ಕುವಂತಿರಬೇಕಾಗುತ್ತದೆ. ಉದಾಹರಣೆಗೆ, ವಿವೇಕ ಶಾನಭಾಗ ಅವರಿಗೆ "ಘಾಚರ್ ಘೋಚರ್" ಬರೆಯುವ ಹೊತ್ತಿಗೆ ದಕ್ಕಿದ ಮಧ್ಯಮವರ್ಗದ, ಆರ್ಥಿಕ-ಸಾಂಸಾರಿಕ ಬಿಕ್ಕಟ್ಟುಗಳಿದ್ದ ಒಂದು ಕುಟುಂಬದ ದೈನಂದಿನದ ಜೀವಂತ ವಿವರಗಳು. ಸ್ವತಃ ದೇಶವಿದೇಶ ಸುತ್ತುತ್ತ ಕಾರ್ಪೊರೇಟ್ ಜಗತ್ತಿನ ಉತ್ತುಂಗದ ಸ್ಪರ್ಶದಲ್ಲಿದ್ದ ವರ್ತಮಾನದಲ್ಲಿ, ವಯಸ್ಸಿನ ಐವತ್ತು ವರ್ಷಗಳು ದಾಟಿದ ದಿನಗಳಲ್ಲಿ ದಕ್ಕಿದ ಹಾಗೆ ಅದು. ಒಬ್ಬ ಲೇಖಕ ಗ್ರೇಟ್ ಅನಿಸುವುದು ಅಂಥ ಸೂಕ್ಷ್ಮ ಸಾಧ್ಯತೆಗಳನ್ನು ಜೀವಂತವಾಗಿ ಉಳಿಸಿಕೊಂಡಾಗಲಷ್ಟೇ. ನೆನಪು ಎಂದರೆ ಬರಿಯ ನೆನಪಲ್ಲ ಮತ್ತೆ.

ವಯಸ್ಸಾದ ನಂತರವೂ ತಮ್ಮ ಬಾಲ್ಯದ ಸ್ಮೃತಿಗಳೇ ಪೊರೆದು ಸಮೃದ್ಧಗೊಳಿಸಿದಂಥ ಸೂಕ್ಷ್ಮ ವಿವರಗಳ ಜೀವಂತ ಬದುಕನ್ನು ಕಟ್ಟಿಕೊಡಬಲ್ಲ ತಮ್ಮ ನೆನಪುಗಳಿಗೆ ಮರಳಿ ಅನನ್ಯವಾಗಿ ಬರೆದ ಅಪರೂಪದ ಲೇಖಕ ನಮ್ಮ ಶ್ರೀನಿವಾಸ ವೈದ್ಯರು. ಇಂಥ ಉದಾಹರಣೆಗಳು ವಿರಳಾತಿ ವಿರಳ. ಇದೇ ವಿಷಯವಾಗಿ ಮಾತನಾಡುತ್ತ ನನಗೆ ಜೋಸ್ ಸಾರಾಮೊಗೊ ಎಂಬ ಅದ್ಭುತ ಲೇಖಕನ ಸಾಹಿತ್ಯಿಕ ಜಗತ್ತನ್ನು ಪರಿಚಯಿಸಿದವರು ಕೂಡ ವಿವೇಕ್ ಶಾನಭಾಗ್ ಅವರೇ.

"ಆಡು ಕಾಯೋ ಹುಡುಗನ ದಿನಚರಿ"ಯನ್ನು ಈ ಎಲ್ಲ ವಿಶ್ಲೇಷಣೆಗಳ ಹಂಗಿಲ್ಲದೆ, ಲಘುವಾಗಿಯೂ ಕೇವಲ ಮನಸ್ಸಂತೋಷಕ್ಕಾಗಿ ಎಂಬಂತೆ ಓದಬಹುದು. ಇಲ್ಲಿನ ಬರಹಗಳು ಕಿಂಚಿತ್ತೂ ಬೋರಾಗದಂತೆ, ಯಾವುದೇ ವಯೋಮಾನದವರನ್ನೂ ರಂಜಿಸಬಲ್ಲ ಕಸು, ಭಾಷೆ ಮತ್ತು ತಾಜಾತನದಿಂದ ಕಂಗೊಳಿಸುತ್ತವೆ. ಅವು ಮೊದಲೇ ಹೇಳಿದಂತೆ ನಿರಾಭರಣ ಸುಂದರಿಯ ಸೊಗಡನ್ನು ಹೊಂದಿರುವ ಅದ್ಭುತ ಬರಹಗಳು ಎನ್ನುವುದನ್ನು ಹೇಳಬೇಕಾಗಿಯೇ ಇಲ್ಲ. ಅಂಥ ಖ್ಯಾತಿಯೂ ಜನಪ್ರಿಯತೆಯೂ ಈ ಕೃತಿಗೆ ಅದಾಗಲೇ ಒಲಿದು ಬಂದಿದೆ.

No comments: