Wednesday, February 19, 2020

ರುಲ್ಫೋನ ದುರ್ಬಲ ಅನುಕರಣೆ ಮತ್ತು ಅಧ್ವರ್ಯುಗಳ ಉಧೋಉಧೋ

ವಿಮರ್ಶೆಯ ಬಗ್ಗೆ ಎಲ್ಲ ನಿಟ್ಟಿನಿಂದಲೂ ಅವಹೇಳನ, ತಿರಸ್ಕಾರ ಮತ್ತು ಟೀಕೆಗಳು ಕೇಳಿಬರುತ್ತಿರುವ ಕಾಲವಿದು. ಯಾವ ಕೃತಿಯ ಬಗ್ಗೆಯಾದರೂ ಮಾತನಾಡಲು ನಮಗೇನು ಹಕ್ಕಿದೆ ಎಂಬ ಪ್ರಶ್ನೆ ನನ್ನಂಥವರ ಎದುರಿಗಿದೆ. ಆದರೆ ಒಂದು ಸಾಹಿತ್ಯ ಕೃತಿ ಇರುವುದು ಓದುಗರಿಗಾಗಿ. ಓದುಗ ಅದನ್ನು ಹಣಕೊಟ್ಟು ಕೊಳ್ಳುತ್ತಾನೆ, ತನ್ನ ಸಮಯ ವ್ಯಯಿಸಿ ಓದುತ್ತಾನೆ. ಇವತ್ತು ಓದುವುದು ತೀರ ಸರಳವಾದ ಮನರಂಜನೆಯ ಮಾರ್ಗವಾಗಿ ಉಳಿದೇ ಇಲ್ಲ. ಹಾಗಾಗಿ, ಹಣ, ಸಮಯ ಮತ್ತು ಶ್ರಮ ವ್ಯಯಿಸಿ ಓದಿದ ಓದುಗನಿಗೆ ಒಂದು ಕೃತಿ ತನಗೆ ಇಷ್ಟವಾಯಿತೇ ಇಲ್ಲವೇ ಎಂದು ಹೇಳುವ ಹಕ್ಕು ಖಂಡಿತವಾಗಿಯೂ ಇದೆ ಎಂದುಕೊಳ್ಳುತ್ತೇನೆ.


ನಮ್ಮಲ್ಲಿ ಕೃತಿಯ ಬಗ್ಗೆ ಮಾತನಾಡುವ ಪಾತಳಿಯ ಕುರಿತೇ ಕೆಲವು ಸಂಪ್ರದಾಯಗಳಿವೆ. ಮುನ್ನುಡಿ ಹೇಗಿರಬೇಕು, ಬೆನ್ನುಡಿ ಹೇಗಿರಬೇಕು, ಪುಸ್ತಕ ಪರಿಚಯ ಹೇಗಿರಬೇಕು, ವಿಮರ್ಶೆ ಹೇಗಿರಬೇಕು ಎನ್ನುವ ಹಂತಗಳೆಲ್ಲ ಇವೆ. ಇವುಗಳನ್ನೆಲ್ಲ ಮೀರಿಸಿ ಇನ್ನೊಂದು ಉಪದೇಶವೂ ಸಿಗುತ್ತಿರುತ್ತದೆ. ಹೊಸಬರ ಕೃತಿಯೊಂದು ಇಷ್ಟವಾಗದೇ ಇದ್ದರೆ ಸುಮ್ಮನಿರಬೇಕು ಎನ್ನುವುದೇ ಆ ನಿಯಮ. ಈ ಉಪದೇಶವನ್ನು ನಾನು ದೊಡ್ಡ ಮನುಷ್ಯರೊಬ್ಬರು ಸಂಪಾದಕರಾಗಿದ್ದ ವೆಬ್‌ಪತ್ರಿಕೆಯಿಂದ ಪಡೆದೆ. ಕರಣಂ ಪವನ್ ಪ್ರಸಾದ್ ಅವರ ಕರ್ಮ ಕಾದಂಬರಿಯ ಬಗ್ಗೆ ನಾನು ಬರೆದ ಒಂದು ಲೇಖನವನ್ನು ‘ನಿಮ್ಮ ಲೇಖನವನ್ನು ಮೊದಲು ನಮಗೆ ಕೊಡಿ, ನಾವು ಹಾಕಿದ ಬಳಿಕ ನಿಮ್ಮ ಬ್ಲಾಗಿನಲ್ಲಿ ಬೇಕಾದರೆ ಹಾಕಿಕೊಳ್ಳಿ’ ಎಂದು ಕೇಳಿಕೊಂಡಿದ್ದ ವೆಬ್‌ಪತ್ರಿಕೆಗೆ ಕಳಿಸಿದಾಗ ಅದು ಸಿಕ್ಕಿತು. ನಮ್ಮ ಗೌರವ ಸಂಪಾದಕರು ಹೀಗೆ ಹೇಳಿದರು, ಹಾಗಾಗಿ ನಾವು ಹಾಕುತ್ತಿಲ್ಲ ಎನ್ನುವ ಉತ್ತರ. ಮುಂದೆ, ಕರಣಂ ಪವನ್ ಪ್ರಸಾದ್ ಅವರೇ ನನ್ನ ಬರಹಕ್ಕೆ ಪ್ರತಿಕ್ರಿಯಿಸಿ, ಒಬ್ಬ ಪ್ರಬುದ್ಧ ಕಾದಂಬರಿಕಾರ ನಡೆದುಕೊಳ್ಳಬಹುದಾದ ಅತ್ಯಂತ ಸೌಜನ್ಯದ ಮಾದರಿ ತೋರಿಸಿಕೊಟ್ಟರು. ಅಲ್ಲದೆ ಈ ‘ಹಾಣಾದಿ’ ಕೃತಿಯ ಬಗ್ಗೆ ಆಶೀರ್ವಚನ ನೀಡಿರುವ ಹಿರಿಯರೊಬ್ಬರು ನನಗೊಮ್ಮೆ ಹೇಳಿದ್ದರು, ‘ಹೊಸಬರ ಕೃತಿ ನಿಮಗೆ ಇಷ್ಟವಾಗದಿದ್ದರೆ ನೋಡಪ್ಪ, ಇಂಥಿಂಥ ತಪ್ಪು ಮತ್ತೆ ಮಾಡಬೇಡ, ತಿದ್ದಿಕೊ’ ಅಂತ ಅವನಿಗೆ ಗುಟ್ಟಾಗಿ ಹೇಳಬಹುದಿತ್ತು, ಅದನ್ನು ಢಣಾಢಂಗೂರ ಹೊಡೆದು ಡ್ಯಾಮೇಜ್ ಮಾಡಬಾರದು’ ಎಂದು. ಇದು ಸರಿಯಾದ ಮಾತು.

ಆದರೆ ಒಂದು ಅಷ್ಟೇನೂ ಅದ್ಭುತವಲ್ಲದ ಕೃತಿಯನ್ನು ತಲೆಯ ಮೇಲಿಟ್ಟು ಕೊಂಡಾಡುವ ಕೈಂಕರ್ಯದಲ್ಲಿ ನಾಡಿನ ಹಿರಿಯರೂ, ವಿಮರ್ಶಕರೂ, ಪ್ರಾಜ್ಞರೂ, ಪತ್ರಿಕಾ ಸಂಪಾದಕರೂ ತೊಡಗಿಕೊಂಡರೆ, ಬೇರೆ ಹೊಸಬರಿಲ್ಲವೆ, ಬರೆಯುತ್ತಿರುವವರು? ಅವರಿಗೆ ಡ್ಯಾಮೇಜು ಆಗುವುದಿಲ್ಲವೆ? ಪ್ರತಿ ಬಾರಿ ಯಾರೋ ಮೂವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಘೋಷಿಸುವಾಗಲೂ ಬಹುಮಾನವನ್ನು ನಿರೀಕ್ಷಿಸಿ ಕಳೆದುಕೊಂಡ ಉಳಿದ ಮೂರಕ್ಕಿಂತ ಹೆಚ್ಚು ಮಂದಿಗೆ ಡ್ಯಾಮೇಜಾಗಿರುತ್ತದೆ. ಒಂದು ಸಾಹಿತ್ಯ ಕೃತಿಯನ್ನು ಶ್ರೇಷ್ಠ ಮತ್ತು ಶ್ರೇಷ್ಠವಲ್ಲದ್ದು ಎಂದು ವಿಂಗಡಿಸುವಲ್ಲಿಯೇ ಅನ್ಯಾಯ ನಡೆದು ಬಿಟ್ಟಿರುತ್ತದೆ. ಎಲ್ಲ ಹೊಸಬರಿಗೂ ನ್ಯಾಯ ಸಿಗಬೇಕಲ್ಲವೆ?

ಈಗಲೂ ಹಾಣಾದಿ ಬಗ್ಗೆ ಬರೆಯುವಾಗ ಇಂಥದೇ ಸಮಸ್ಯೆ ಎದುರಿಗಿದೆ. ಕಪಿಲ ಹುಮನಾಬಾದೆ ಅವರ ಮೊತ್ತಮೊದಲ ಕಾದಂಬರಿಯಿದು. ಸ್ಪಷ್ಟವಾಗಿಯೇ ನನಗೆ ಇಷ್ಟವಾಗಿಲ್ಲ. ಸುಮ್ಮನಿರಬಹುದು. ಆದರೆ ಬಾಳಾಸಾಹೇಬ ಲೋಕಾಪುರ, ಕೇಶವ ಮಳಗಿ, ಎಚ್ ಎಸ್ ರಾಘವೇಂದ್ರ ರಾವ್ ಮತ್ತು ರಘುನಾಥ ಚ ಹ ಅವರ ಪ್ರತಿಸ್ಪಂದನ ಗಮನಿಸಿದರೆ ನನಗೇಕೆ ಈ ಕಾದಂಬರಿ ಇಷ್ಟವಾಗಿಲ್ಲ ಎನ್ನುವುದನ್ನು ದಾಖಲಿಸದೇ ಇರುವುದು ತಪ್ಪಾಗುತ್ತದೆ ಎಂದು ಸ್ಪಷ್ಟವಾಗುತ್ತದೆ. ಹೀಗೆ, ಈ ಬರಹ ಒಂದು ರೀತಿಯಲ್ಲಿ ವಿಮರ್ಶೆಯಿಂದಲೇ ಹುಟ್ಟಿದ್ದು, ಕಾದಂಬರಿ ಪ್ರೇರಿತ ಅಲ್ಲ.

ಹಾಗೆ ನೋಡಿದರೆ ಈ ಕಾದಂಬರಿ ಈಗಾಗಲೇ ಎರಡನೇ ಮುದ್ರಣ ಕಂಡಿದೆ, ಸಾಕಷ್ಟು ಪ್ರಶಂಶೆ, ಖ್ಯಾತಿ ಗಳಿಸಿದೆ. ಹಾಗಾಗಿ ನನ್ನ ಮಾತು ಅತ್ಯಂತ ಕ್ಷೀಣವೂ ನಗಣ್ಯವೂ ಆಗಿದ್ದು ಕಾದಂಬರಿಯ ಮಾರಾಟಕ್ಕೆ ತೊಡಕಾಗದು, ಬದಲಿಗೆ ಹೆಚ್ಚೇ ಆಗಬಹುದು. ಏಕೆಂದರೆ ನಮಗೆ ವಿವಾದಗಳೇ ಹೆಚ್ಚು ಇಷ್ಟ. ಇನ್ನು ಅದೇ ಕಾರಣಕ್ಕೆ ಇದು ಹೊಸ ಕಾದಂಬರಿಕಾರನ ಸೃಜನಶೀಲ ಉತ್ಸಾಹವನ್ನು ಕುಂದಿಸುವಂಥ ಸಾಧ್ಯತೆ ಇಲ್ಲ. ಪದ್ಮನಾಭ ಭಟ್ ಶೇವ್ಕಾರ ಅವರಿಗೆ, ಶಾಂತಿ ಕೆ ಅಪ್ಪಣ್ಣ ಅವರಿಗೆ ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಲೇಖಕ ಪುರಸ್ಕಾರ ಬಂದಾಗ ತುಂಬ ಅಪಸ್ವರಗಳೆದ್ದಿದ್ದವು. ಕೆಲವೊಂದು ಪತ್ರಿಕೆಗಳು ಛಂದ ಪುಸ್ತಕದ ಪ್ರಕಾಶಕ ವಸುಧೇಂದ್ರ ಅವರ ಕೈವಾಡದ ಬಗ್ಗೆ ಬರೆದು ಕೆಸರೆರಚಿದ್ದೂ ನಡೆದಿತ್ತು. ಆಗಲೂ ಆ ಇಬ್ಬರು ಲೇಖಕರು ಹೊಸ ಬರಹಗಾರರೇ ಆಗಿದ್ದರು ಮಾತ್ರವಲ್ಲ ಅವರ ಮೊದಲ ಪ್ರಕಟಿತ ಪುಸ್ತಕಗಳಿಗೇ ಪ್ರಶಸ್ತಿ ಬಂದಿತ್ತು. ಶ್ರೀಧರ ಬನವಾಸಿ ಅವರ ಮೊತ್ತಮೊದಲ ಕಾದಂಬರಿಗೆ ಎಂ ಎಸ್ ಶ್ರೀರಾಮ ಅವರು ಸ್ವತಃ ಕಾದಂಬರಿಕಾರರಿಗೇ ಇಷ್ಟವಾಗದಂಥ ಮುನ್ನುಡಿ ಬರೆದು, ಅದನ್ನು ಕಾದಂಬರಿಕಾರರು ಪ್ರಕಟಿಸದೇ ಕೈಬಿಟ್ಟಾಗ ಎಂ ಎಸ್ ಶ್ರೀರಾಮ ಅವರೇ ಬೇರೆಡೆ ಪ್ರಕಟಿಸಿದ್ದರು. ಆದರೂ ಆ ಕಾದಂಬರಿಗೆ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ಬಂದವು. ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಲೇಖಕ ಪ್ರಶಸ್ತಿ ಕೂಡಾ ಬಂತು, ಯಾವ ವಿವಾದವಿಲ್ಲದೆ ಎನ್ನುವುದೇನೂ ಸಣ್ಣ ಸಂಗತಿಯಲ್ಲ. ಹಾಗಾಗಿ, ವಿಮರ್ಶೆಯಿಂದ ಆಗುವುದು ಹೋಗುವುದು ಏನೇನೂ ಇಲ್ಲ.

‘ಹಾಣಾದಿ’ ಕಾದಂಬರಿಯ ಐದಾರು ಪುಟಗಳನ್ನು ಓದುತ್ತಿದ್ದಂತೆ ಮನಸ್ಸಿಗೆ ಬಂದಿದ್ದು ಓ ಎಲ್ ನಾಗಭೂಷಣ ಸ್ವಾಮಿ ಅವರು ಅನುವಾದಿಸಿದ ಹ್ವಾನ್ ರುಲ್ಫೋನ ಕಾದಂಬರಿ ‘ಪೆದ್ರೊ ಪರಾಮೊ’. ನಾನು ಅದನ್ನೇ ಮತ್ತೆ ಓದುತ್ತಿದ್ದೇನಾ ಅನಿಸಿ ಆ ಕಾದಂಬರಿಯನ್ನು ಹೊರತೆಗೆದು ನೋಡಿದೆ. ‘ಹಣಾದಿ’ಯ ಮೊದಲ ನಲವತ್ತೈದು ಪುಟಗಳು ಈ ಅನುವಾದದ ದುರ್ಬಲ ಅನುಕರಣೆ. ಅಪ್ಪನನ್ನು ಹುಡುಕಿಕೊಂಡು ಹೊರಡುವ ಮಗ ಮತ್ತು ಅವನಿಗೆ ಸಿಗುವ ಅಜ್ಜಿ, ಪಾಳುಬಿದ್ದ ಊರು ಮಾತ್ರವಲ್ಲ, ಕಾದಂಬರಿಯ ಮೊದಲ ಪುಟದಲ್ಲೇ ಇರುವ ಕಪ್ಪುಬಿಳುಪು ಫೋಟೋದ ಕಲ್ಲುಗಳ ಚಿತ್ರವೂ ಓಎಲ್ಲೆನ್ ಅವರ ಪುಸ್ತಕದ ಮುಖಪುಟದ ಕಲ್ಲುಗಳಿಗೆ ಹೋಲುವಷ್ಟು ಅನುಕರಣೆಯೇ ಕಾಣಿಸುತ್ತದೆ. ಅನುವಾದದ ಅನುಕರಣೆ ಎಂದು ಸ್ಪಷ್ಟವಾಗಿ ಹೇಳುತ್ತಿರುವುದೇಕೆಂದರೆ, ಹಾಣಾದಿಯ ಅಜ್ಜಿ ಬಳಸುವ ಭಾಷೆ ಕೂಡ ಓಎಲ್ಲೆನ್ ತಮ್ಮ ಅನುವಾದಕ್ಕೆ ರೂಢಿಸಿಕೊಂಡ ಭಾಷೆಯೇ ಅಗಿರುವುದರಿಂದ. ದುರ್ಬಲ ಅನುಕರಣೆ ಏಕೆಂದರೆ, ಓಎಲ್ಲೆನ್ ಇಡೀ ಕಾದಂಬರಿಯಲ್ಲಿ ಅದೇ ಭಾಷೆಯ ಲಯವನ್ನು ಕಾಪಾಡಿಕೊಂಡು ಬಂದಿದ್ದರೆ ಇಲ್ಲಿ ಆ ಭಾಷೆ ಅಧ್ಯಾಯ 11 (ಪುಟ 61) ರಿಂದ ಹಳಿ ತಪ್ಪಿ ಶಿಷ್ಟ ಕನ್ನಡಕ್ಕೆ ಹೊರಳುತ್ತದೆ. ಕೆಲವು ಕಡೆ ಹೇಳಿದ್ದುಂಟು, ಮಾಡಿದ್ದುಂಟು, ಎಂಬ ನುಡಿಕಟ್ಟು ಬರುತ್ತದೆ. ಅದು ಅಪ್ಪಟ ಮಂಗಳೂರು ಕನ್ನಡದ್ದು.

ಒಂದು ಕಾದಂಬರಿಯ ಪಾತ್ರ ಬಳಸುವ ಭಾಷೆ ಕೂಡ ಅದರ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುತ್ತದೆ. ಅದು ಒಂದೊಂದು ಅಧ್ಯಾಯದಲ್ಲಿ ಒಂದೊಂದು ಲಯದಲ್ಲಿ ಮಾತನಾಡುತ್ತಿದ್ದರೆ ಅದು ನಿರೂಪಕನೇ ಮಾತನಾಡಿದಂತೆ ಕೇಳುತ್ತಿರುತ್ತದೆಯೇ ಹೊರತು ಪಾತ್ರ ಓದುಗನ ಮನಸ್ಸಿಗಿಳಿಯುವುದಿಲ್ಲ. ಓಎಲ್ಲೆನ್ ಸಾಧಿಸಿದ ಲಯವನ್ನು ಇಲ್ಲಿ ನಿರೀಕ್ಷಿಸುವುದು ತಪ್ಪಾದೀತು ಎಂದೇನಲ್ಲ. ಕಾದಂಬರಿಯ ಕನಿಷ್ಠ ಅಗತ್ಯಗಳಲ್ಲಿ ಅದೊಂದು. ಹಾಗಾಗಿ ಇಲ್ಲಿನ ಅನುಕರಣೆ ಕೂಡ ದುರ್ಬಲ ಎನ್ನಬೇಕಾಗಿದೆ.

ಆದರೆ, ಕಾದಂಬರಿಕಾರರಾಗಲಿ, ಬಾಳಾಸಾಹೇಬ ಲೋಕಾಪುರರಾದಿಯಾಗಿ ಕೇಶವ ಮಳಗಿ, ಎಚ್ ಎಸ್ ರಾಘವೇಂದ್ರ ರಾವ್ ಮತ್ತು ರಘುನಾಥ ಚ ಹ ಅವರಲ್ಲಿ ಯಾರೊಬ್ಬರಾಗಲಿ ಇದನ್ನು ಉಲ್ಲೇಖಿಸುವುದೇ ಇಲ್ಲ. ಅವರು ಓಎಲ್ಲೆನ್ ಅನುವಾದದ ರುಲ್ಫೋನ ಕಾದಂಬರಿಯನ್ನು ಓದಿಯೇ ಇಲ್ಲವೊ ಅಥವಾ ಅದು ಅವರಿಗೆ ಮರವೆಯಾಗಿದೆಯೋ ಎನ್ನುವ ಅನುಮಾನ ಬರುತ್ತದೆ. ಓದಿದ ಯಾರಿಗೇ ಆದರೂ ಈ ಕಾದಂಬರಿಯ ಆರಂಭದಲ್ಲೇ ಎಲ್ಲೋ ಓದಿದಂತಿದೆಯಲ್ಲ ಅನಿಸದೇ ಇರದು. ಆದರೆ ಇದನ್ನು ಯಾರೂ ಉಲ್ಲೇಖಿಸದೇ ಇರುವುದರಿಂದ ಈಗ ನಾನು ಹೇಳುವುದು ಸುಳ್ಳು ಎನಿಸುವುದು ಸಹಜ. ಹಾಗಾಗಿ ಈ ಕಾದಂಬರಿ ಓದಿದಿರಾ, ಹೇಗಿದೆ ಎಂದು ನನ್ನನ್ನು ಕೇಳುವವರ ಬಳಿ ಅಲ್ಲಿ ಇಲ್ಲಿ ಇಂಥ ಮಾತನ್ನು ನಾನು ಆಡುವುದಕ್ಕಿಂತ ಬಹಿರಂಗವಾಗಿ ನನ್ನ ಅನಿಸಿಕೆಯನ್ನು ದಾಖಲಿಸುವುದೇ ಸರಿಯಾದ ಮಾರ್ಗವೆಂದು ತಿಳಿದು ಬರೆಯಬೇಕಾಯಿತು. 

ಎರಡನೆಯದಾಗಿ ತಕ್ಷಣಕ್ಕೆ ಗಮನಕ್ಕೆ ಬರುವುದು ಈ ಕಾದಂಬರಿಕಾರರ ಕನ್ನಡ. ಬಾಳಾಸಾಹೇಬ ಲೋಕಾಪುರ ಅವರು ಒಂದೆಡೆ ಈ ಕಾದಂಬರಿಯ ಕತೆಯನ್ನು ಪ್ರಥಮಾ ವಿಭಕ್ತಿಯಲ್ಲಿ ಪ್ರಾರಂಭ ಮಾಡಿದ್ದಾರೆ ಎನ್ನುತ್ತಾರೆ. ವಿಭಕ್ತಿ ಪ್ರತ್ಯಯಗಳಲ್ಲಿ ಕಾದಂಬರಿ ಹೇಳಬಹುದು ಎನ್ನುವುದೇ ಒಂದು ಹೊಸ ವಿಚಾರ. ಅದಿರಲಿ, ಅವರು ಎರಡನೇ ವಿಭಕ್ತಿಯ ಕಡೇ ಅದೇ ಮಟ್ಟದ ಗಮನ ಕೊಟ್ಟಿಲ್ಲದಿರುವುದು ಆಶ್ಚರ್ಯವೇ. ಏಕೆಂದರೆ, ಈ ಕಾದಂಬರಿಯ ಲೇಖಕರಿಗೂ ದ್ವಿತೀಯಾ ವಿಭಕ್ತಿ ಒಂದಿದೆ ಎನ್ನುವುದೇ ಗೊತ್ತಿದ್ದಂತಿಲ್ಲ. ಇಲ್ಲಿನ ಕೆಲವು ಪ್ರಯೋಗಗಳನ್ನು ಗಮನಿಸಿ:

ನಿಮ್ಮಪ್ಪನಿಗೆ ಮಾತಾಡಿಸಿ ಬಾ
ಅಪ್ಪನ ಪಾದಗಳು ನೋಡಬೇಕೆನಿಸಿತು
ಅಪ್ಪನಿಗೆ ಭೇಟಿಯಾಗಿಯೇ ಹೋಗಬೇಕೆಂದು
ಅಪ್ಪನಿಗೆ ಭೇಟಿಯಾಗುತ್ತಿದ್ದೆ
ಮನೆಗಳು ನೋಡಿ ಗಾಭರಿಯಾಯಿತು
ಧುತ್ತನೆ ಅಂಗಳದಲ್ಲಿ ಬಂದು ನಿಂತವನಿಗೆ ಮಾತನಾಡಿಸುತ್ತಾನೋ ಇಲ್ಲವೋ!?
ಅಜ್ಜಿಗೆ ನೋಡಿದರೆ ಯಾವ ಪ್ರಶ್ನೆಗಳು ಕೇಳುವ ಮನಸ್ಸಾಗಲಿಲ್ಲ
ಇಳಿಜಾರ ಬಯಲಲ್ಲಿ ಗಿಡಗಳು ಸಾಲಾಗಿ ನೆಟ್ಟಿದ್ದರು
ಗುಬ್ಬಿ ಆಯಿಗೆ ನನ್ನೆಲ್ಲ ಪ್ರಶ್ನೆಗಳು ಕೇಳಿಬಿಡಬೇಕೆನ್ನುವ ಉತ್ಸಾಹದಲ್ಲಿದ್ದೆ
ಮಲಕೊಂಡ ಅಡಿ ಪ್ರಾಣಿಗಳಿಗೆಲ್ಲ ಎಬ್ಬಿಸುತಿಯೇನೋ?!
ಅಪ್ಪನಿಗೆ ನೋಡೋದೇ ಒಂದು ಕುತೂಹಲ.
ಆದರೂ ನೋಡು ನಾ ಹೆಚ್ಚು ಜನರಿಗೆ ನೋಡಿರುವೆ
ಎಳೆ ವಯಸ್ಸಲ್ಲೇ ನಿಮ್ಮಕ್ಕನಿಗೆ ಗಂಡನ ಮನೆಗೆ ತುರುಕಿದರು
ಈ ಜನರಿಗೊಂದು ಸುದ್ದಿ ಬೇಕು, ಹುಟ್ಟಿಸುತ್ತಾರೆ. ಇನ್ನೊಂದು ಬಂತೋ ಹಳೆಯದಕ್ಕೆ ಸಂದೂಕಿನಲ್ಲಿಟ್ಟಿರುತ್ತಾರೆ
ಅದೊಂದು ಗಿಡ ಕಡಿದು ಬಿಡು, ಬೇಕಾದರೆ ನಿನ್ನ ಹೊಲದ ಸುತ್ತ ಹಚ್ಚಿಕೋ. ಈ ಊರಿಗೆ ಬಲಿಕೊಡಬೇಡ
ನಾ ಅವಳಿಗೆ ಮಾತಾಡಿಸಿಕೊಂಡು ಬರಲು ಹೋಗಿದ್ದೆ
ನಿಮ್ಮಪ್ಪನಿಗೆ ನೋಡಿ ನನ್ನ ಕಣ್ಣಲ್ಲಿಯೂ ನೀರು ತಡಿಯಲಿಲ್ಲ
ಊರ ಮಂದಿಯೇ ಅವನಿಗೆ ನೋಡಿ ಮರುಗಿ ಹೋದರು
ನಮ್ಮಪ್ಪನಿಗೆ ನನ್ನೊಳಗೆ ಹುಡುಕುತ್ತಿದ್ದೆ
ಕಂಟಿಯ ಮಗನಿಗೆ ಕಳುಹಿಸಲು ನೋಡಿದೆ

ಭಾಷೆಯ ಕುರಿತು ಕಾದಂಬರಿಕಾರರಿಗೆ ಎಚ್ಚರ ಇದೆ ಎಂದು ವಿಕ್ರಮ ವಿಸಾಜಿಯವರು ಬರೆದಿದ್ದನ್ನು ನಂಬುವುದು ಕಷ್ಟವಾಗುತ್ತದೆ. ‘ಅನ್ನು’ ಎನ್ನುವ ವಿಭಕ್ತಿ ಪ್ರತ್ಯಯ ಕನ್ನಡದಲ್ಲಿದೆ ಎನ್ನುವುದೇ ಇವರಿಗೆ ಗೊತ್ತಿಲ್ಲವೇನೋ ಅಂದುಕೊಳ್ಳುತ್ತಿರುವಾಗಲೇ ಅದನ್ನು ಅಲ್ಲಗಳೆಯುವಂಥ ಒಂದು ಉದಾಹರಣೆಯೂ ಸಿಕ್ಕಿತು. ಅದು 23ನೆಯ ಪುಟದಲ್ಲಿದೆ. "ಇಷ್ಟು ನಿಶ್ಶಬ್ದತೆಯನ್ನು ನನ್ನೂರಲ್ಲಿ ಕಂಡಿರಲಿಲ್ಲ." 

ಮೂರನೆಯದಾಗಿ, ನಮಗೆಲ್ಲ ತಿಳಿದಿರುವಂತೆ ಎಲ್ಲ ಊರುಗಳಲ್ಲೂ ದೆವ್ವ ಇರುವ ಮರಗಳಿದ್ದೇ ಇರುತ್ತವೆ. ಚಂದಮಾಮದ ಕಾಲದಿಂದಲೂ ಇದು ಎಲ್ಲರಿಗೂ ಗೊತ್ತಿರುವಂಥದೇ. ಊರಿನ ಹುಣಸೆ ಮರ, ಆಲದ ಮರ, ನೇರಳೆ ಹಣ್ಣಿನ ಮರಗಳೆಲ್ಲ ಇಂಥವಕ್ಕೆ ಕುಖ್ಯಾತ. ಬ್ರಹ್ಮರಾಕ್ಷಸಗಳಿರುವುದೇ ಅರಳೀಮರದಲ್ಲಿ ಎನ್ನುವ ಪ್ರತೀತಿಯೂ ಇದೆ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿದು ಬರುವ ಸತ್ಯವೆಂದರೆ, ಇಂಥ ವದಂತಿಗಳನ್ನು ಹಬ್ಬಿಸಿರುವುದೇ ಆ ಮರಗಳನ್ನು ಜನ ಕಡಿಯದಿರಲಿ ಎನ್ನುವ ಕಾರಣಕ್ಕಿದ್ದೀತು ಎಂಬುದು. ದೆವ್ವಗಳಿವೆ ಎನ್ನುವ ಕಾರಣಕ್ಕೇ ಯಾರಾದರೂ ಎಲ್ಲಾದರೂ ಯಾವುದಾದರೂ ಮರ ಕಡಿದು ಹಾಕಿದ ನಿದರ್ಶನ ನನಗಂತೂ ದೊರೆತಿಲ್ಲ. ಮರ ಕಡಿದ ಮಾತ್ರಕ್ಕೆ ಅದರಲ್ಲಿ ವಾಸವಿದ್ದ ದೆವ್ವಗಳು ಊರು ಬಿಟ್ಟು ಹೋಗುತ್ತವೆ ಎಂದು ಯಾರೂ ನಂಬಿದಂತೆಯೂ ಇಲ್ಲ. ಆದರೆ ಅಂಥ ವಿಪರೀತಗಳೆಲ್ಲ ಈ ಕಾದಂಬರಿಯಲ್ಲಿ ಘಟಿಸುತ್ತವೆ. ಮರದಲ್ಲಿ ದೆವ್ವವಿದೆ ಎಂಬ ಕಾರಣಕ್ಕೇ ಅದನ್ನು ಕಡಿಯುವುದು, ಅದನ್ನು ಕಡಿದಿದ್ದೇ ಊರು ನಾಶವಾಗುವುದು ಎರಡೂ ಇಲ್ಲಿ ಚಕಚಕನೆ ನಡೆದು ಬಿಡುತ್ತದೆ. ಊರು ನಾಶವಾಗುವುದು ರುಲ್ಫೋನ ಕಾದಂಬರಿಯಲ್ಲೂ ಇದೆ. ಆದರೆ ಅಲ್ಲಿ ಅದು ಘಟಿಸುವುದು ಅತ್ಯಂತ ಸಂಕೀರ್ಣ ಕಾರಣಗಳಿಂದ. ದಂಗೆ, ಯುದ್ಧ ಮುಂತಾದ ಮೆಕ್ಸಿಕನ್ ಇತಿಹಾಸದ ನೆರಳಲ್ಲಿ ನಡೆಯುವ ವಿದ್ಯಮಾನಗಳೆಲ್ಲ ‘ಪೆದ್ರೊ ಪರಾಮೊ’ದಲ್ಲಿವೆ. ಅಂಥ ಸಂಕೀರ್ಣತೆಯೆಲ್ಲ ಇಲ್ಲಿಲ್ಲ. ಇಲ್ಲಿರುವುದೆಲ್ಲಾ ಬಾದಾಮ ಗಿಡವೊಂದರಲ್ಲಿ ದೆವ್ವವಿದೆ ಎನ್ನುವ ವದಂತಿ ಮತ್ತು ಅದನ್ನು ಕಡಿಯುವುದರಿಂದ ಉಂಟಾದ ಅನಾಹುತ. ಆ ಅನಾಹುತವೆಂದರೆ ಊರ ಮಂದಿಯೆಲ್ಲಾ ತಮ್ಮ ತಮ್ಮ ಮನೆಯನ್ನು ತಾವೇ ಕೆಡವಿ ಹಾಕಿ, ಊರು ಬಿಟ್ಟು ಹೋಗುವುದು. ಹಾಗೆ ಮಾಡಬೇಕೆಂದು ಹೇಳುವುದು ಮೈಮೇಲೆ ದೇವರು ಬರುವ ಅನಸೂಯ ಎಂಬಾಕೆ. 

ಇನ್ನು ಇಲ್ಲಿ ಸಾವು ನೋವು, ದುರಂತಗಳ ಸರಮಾಲೆಯಿದೆ ಎಂದು ಕೆಲವರು ತಮ್ಮ ಪ್ರತಿಕ್ರಿಯೆ ದಾಖಲಿಸುತ್ತ ಬರೆದಿದ್ದಾರೆ. ನಿರೂಪಕನ ಅಪ್ಪ ಸುಟ್ಟುಕೊಂಡು ಸಾಯುವುದು ಮರ ಕಡಿದಾದ ನಂತರವೇ ಹೊರತು ಅದು ಮರ ಕಡಿಯುವುದಕ್ಕೆ ಕಾರಣವಾದ ದುರಂತವೇನಲ್ಲ. ಅದನ್ನು ಬಿಟ್ಟರೆ ಇನ್ನೊಬ್ಬ ಈ ಮರದ ತುದಿಯ ತನಕ ಏರಿ ಹೋಗಿ, ಅಲ್ಲಿ ಕುಣಿಯುತ್ತ ಆಯ ತಪ್ಪಿ ಕೆಳಗೆ ಬಿದ್ದು ಸಾಯುತ್ತಾನೆ. ಇದು ಯಾವ ಬಗೆಯ ದುರಂತ? ಇದನ್ನು ಹುಚ್ಚು ಸಾಹಸ ಅಥವಾ ಆತ್ಮಹತ್ಯೆ ಎನ್ನುತ್ತಾರಲ್ಲವೆ? ಆದರೆ ಬಹಳಷ್ಟು ಮಂದಿ ಬರೆದ ಸಾವು ನೋವು, ದುರಂತಗಳ ಸರಮಾಲೆ - ಸಾಮಾಜಿಕ ಆಯಾಮವುಳ್ಳದ್ದು - ಎಲ್ಲಿ ಸಿಕ್ಕಿತು ಅವರಿಗೆ?

ಮರದ ಕಟ್ಟೆಯ ಮೇಲೆ ಮಲಗಿದಾಗ ಮೈತುಂಬ ಇರುವೆ ಮುತ್ತಿಕೊಳ್ಳುವ ಒಂದು ಪ್ರಸಂಗವಿದೆ ಈ ಕಾದಂಬರಿಯಲ್ಲಿ. ಬಾದಾಮ ಮರದಲ್ಲಿ ದೆವ್ವವಿದೆ ಎನ್ನುವ ವದಂತಿ ಹುಟ್ಟುವುದೇ ಈ ಪ್ರಸಂಗದ ಬಳಿಕ. ಆದರೆ ಇರುವೆಗಳು ಪ್ರಜ್ಞಾಹೀನತೆ ಮತ್ತು ದೇಹದ ಮೇಲಿನ ಸ್ವಯ ತಪ್ಪಿದಂಥ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕೈಬೆರಳು, ಕಾಲ ಬೆರಳುಗಳನ್ನು ತಿನ್ನುವುದಿದೆ. ಇಲ್ಲವೆಂದಲ್ಲ. ಆದರೆ ಈ ಇರುವೆಗಳಿಗೆ ದೇಹ ಯಾವುದು, ಮರ ಯಾವುದು ಎನ್ನುವುದೇ ತಿಳಿಯಲಿಲ್ಲವೇನೋ ಎನ್ನುವುದು ಹಾಸ್ಯಾಸ್ಪದ ಮಾತು. ಕ್ರಿಮಿಕೀಟಗಳಿಗೆ ಅದು ಮನುಷ್ಯರಿಗಿಂತ ಚೆನ್ನಾಗಿ ತಿಳಿಯುತ್ತದೆ. ಮನುಷ್ಯ ದೇಹದ ರಕ್ತದ ವಾಸನೆಯನ್ನು ಸೊಳ್ಳೆಯೊಂದು ದೂರದಿಂದಲೇ ಗ್ರಹಿಸಬಲ್ಲದು ಎನ್ನುವುದು ನಮಗೆ ಗೊತ್ತಿಲ್ಲ ಎಂದರೆ ಒಪ್ಪಬಹುದು, ಅವುಗಳಿಗೆ ಗೊತ್ತಿಲ್ಲ ಎಂದು ಹೇಳುವುದು ಆ ಬಗ್ಗೆ ನಮಗಿರುವ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಅಂತೂ ಇರುವೆ ಪ್ರಸಂಗದಿಂದ ಮನೆಬಿಟ್ಟು ಹೋದ ತಾಯಿಯ ಬಗ್ಗೆ ಒಂದು ಮಾತೂ ಈ ಕಾದಂಬರಿಯಲ್ಲಿಲ್ಲ. ‘ಅಪ್ಪನಿಗೆ’ ಕಂಡು ಬರಲು ಹೊರಟ ಮಗನಿಗೆ ಅಮ್ಮನ ಬಗ್ಗೆ ಕಾಳಜಿಯಿಲ್ಲ.

ರುಲ್ಫೋನ ಕಾದಂಬರಿಯ ದುರ್ಬಲ ಅನುಕರಣೆಯಿದು ಎಂದು ತಿಳಿಯುತ್ತಲೇ ದೆವ್ವಗಳ ಬಗ್ಗೆ, ಕತೆಯ ವಿವರಗಳಲ್ಲಿ ಮೂಡುವ ಹಂದರದ ಬಗ್ಗೆ ಇರುವ ಬೆರಗು, ಕುತೂಹಲ ತಣ್ಣಗಾಗುತ್ತದೆ. ಹೆಚ್ಚಿನ ವಿಮರ್ಶಕರು, ಓದುಗರು ‘ಉಧೋ ಉಧೋ’ ಎಂದು ಹೊಗಳಿರುವುದು ಇದನ್ನೇ. ಇಲ್ಲಿ ಒಂದು ಊರು ಹೇಗೆ ಕ್ರಮೇಣ ನಾಶವಾಗುತ್ತದೆ ಎನ್ನುವ ಚಿತ್ರಣ ಸಿಗುತ್ತದೆ ಎಂದೂ ಕೆಲವರು ಬರೆದಿದ್ದಾರೆ. ನನಗಂತೂ ಅಂಥವೆಲ್ಲ ಸಿಗಲಿಲ್ಲ. ಅದು ರುಲ್ಫೋನ ಕಾದಂಬರಿಯಲ್ಲಿದೆ ಎನ್ನುವುದು ನಿಜವೇ. 

ಇಷ್ಟಾಗುತ್ತ ನನಗೊಂದು ಹೊಸ ಅನುಮಾನವೂ ಬಂದಿದೆ. ನಾನು ಓದಿದ ‘ಹಾಣಾದಿ’ ಕಾದಂಬರಿಯೇ ಬೇರೆ ಇದ್ದು ಇದನ್ನು ಹಾಡಿ ಹೊಗಳಿದ ನೂರಾರು ಮಂದಿ ಓದಿದ ಕಾದಂಬರಿಯೇ ಬೇರೆ ಇರಬಹುದೆ? ಅದಾದರೆ ನಿಜವಾದ ಅಚ್ಚರಿ!

9 comments:

ಅಶೋಕವರ್ಧನ ಜಿಎನ್ said...

ತುಂಬ ಚೆನ್ನಾಗಿ ಹೇಳಿದ್ದೀರಿ.ಇಂಥದ್ದೇ ಕಾರಣಗಳಿಗೆ ನಾನು ಸಾರ್ವಜನಿಕ ಮಾಧ್ಯಮಗಳನ್ನು ಬಿಟ್ಟು ಸ್ವಂತ ಜಾಲತಾಣದಲ್ಲಿ ತೃಪ್ತನಾಗಿರುವುದು. ಕೃತಿ ಚೋರ ಕಜೆಕಾರು ನೇಮಿರಾಜ ಕೊಂಡೆ, ಸಿದ್ಧಯ್ಯ ಪುರಾಣಿಕರ ಬಗ್ಗೆ (ತಂದೆ ಸೌಜನ್ಯಕ್ಕಾಗಿ ಹೇಳದುಳಿದ ಮಾತು)ನಾನು ಧಾರಾಳ ಬರೆದದ್ದು.

ಪ್ರಕಾಶ್ ನಾಯಕ್ said...

Pedro Páramo ಓದುವಾಗ ಇಂತಹುದೊಂದು ಕನ್ನಡ ಕಾದಂಬರಿ - ಭಾಷೆ, ಹರಿವು ಮತ್ತು ಚಿತ್ರಣದಲ್ಲಿ, ಇದ್ದಿದ್ದರೆ ಎಂದು ಆಸೆ-ಆಶ್ಚರ್ಯಪಟ್ಟಿದ್ದೆ. ಮಹತ್ವದ ಕಾದಂಬರಿಗಳನ್ನು ಓದುವಾಗ ಇಂತಹ ಪ್ರತಿಕ್ರಿಯೆ ಹುಟ್ಟುವುದು ಸಹಜ. ಅನುವಾದ ಮಾಡಲೂ ಕಠಿಣವಾಗಬಹುದಾದ ಕಾದಂಬರಿ. ನಾನಿನ್ನೂ ಹಾಣಾದಿ ಓದಿಲ್ಲ. ಆದರೆ ಇಂತಹ ಕಾದಂಬರಿಯನ್ನು ಅನುಕರಣೆ ಮಾಡುವ, ಮಾಡಿ ದಕ್ಕಿಸಿಕೊಳ್ಳುವ, ದುಸ್ಸಾಹಸವನ್ನು ಸಾರ್ವಜನಿಕವಾಗಿ ಹೇಳಬೇಕಾದದ್ದು ಯಾರದ್ದಲ್ಲದಿದ್ದರೂ ವಿಮರ್ಶಕರ ಕರ್ತವ್ಯ. ಆ ಕಾರಣಕ್ಕಾಗಿ ಈ ಲೇಖನ ಸ್ತುತ್ಯರ್ಹ. ಪ್ರಭಾವವೋ, ಅನುಕರಣೆಯೋ, ಕೃತಿಚೌರ್ಯವೋ - ನಿರ್ಧಾರ ಮುಂದಿನ ಓದುಗನಿಗೆ ಬಿಟ್ಟಿದ್ದು.

Kaligananath Gudadur said...

ಸರ್ ಸರಿಯಾದ ಗ್ರಹಿಕೆ

Anonymous said...

Narendra Pai ನರೇಂದ್ರ ಪೈ ಸರ್ ನೀವು ಹೇಳಿದ್ದರಲ್ಲಿ ತಪ್ಪಿಲ್ಲ. ಹೌದು ನಿಜಕ್ಕೂ "ಪೆದ್ರೊ ಪರಮೊ" ಹಾಣಾದಿಗೆ ಪ್ರೇರಣೆ ಆಗಿದೆ. ಓ ಎಲ್ ಎನ್ ಅವರ ಗಮನಕ್ಕೂ ತಂದಿರುವೆ. ಒಂದೆರಡು ಕಡೆ ನಾನೇ ಈ ಅಂಶ ಹೇಳಿರುವೆ. ಜಸ್ಟ್ ಕ್ರಿಕೆಟ್ ಆಡೋಕೆ ಹೋಗಿದ್ದೆ ಈ ಚರ್ಚೆಗಳು ಗಮನಿಸಲಿಲ್ಲ. ಸಂಜೆ ನನ್ನ ಫೆಸ್ಬುಕನಲ್ಲಿ ಹಂಚಿಕೊಳ್ಳುವೆ ರುಲ್ಪೋ ಬಗ್ಗೆ. ಅದು ಹಾಣಾದಿ ಕೃತಿಗೆ ಪ್ರಭಾವಸಿದ ಬಗ್ಗೆ.

ಆದರೆ ಅದೊಂದೆ ಕೃತಿ ನನ್ನ ಫ್ರಾರಂಭದ ಈ ಬರವಣಿಗೆಗೆ ಪ್ರಭಾವ ಬೀರಿಲ್ಲ. ಮೂಕಜ್ಜಿಯ ಕನಸುಗಳು, ಸರಸಮ್ಮನ ಸಮಾಧಿ, ಕಿರಗೂರಿನ ಗಯ್ಯಾಳಿಗಳು, ಗಣೇಶಯ್ಯನವರ ಕೂತೂಹಲ ಕಾಯುಸುವ ತಂತ್ರ, ಕುಂ ವೀ ಕಥೆಗಳು, ಕೃಷ್ಣೇಗೌಡನ ಆನೆ, ಕುಡಿಯರ ಕೂಸು, ಕೆಲವು ಮ್ಯಾಜಿಕ್ ರಿಯಲಿಸಂ ತಂತ್ರಗಳಿರುವ ಕೃತಿಗಳು ಸೇರಿದಂತೆ ಒಟ್ಟಾರೆ ನನ್ನ ಹಾಣಾದಿ ಕಾದಂಬರಿಗೆ ಪ್ರಭಾವ ಬೀರಿವೆ. ಪ್ರೇರಣೆ ಸಹ ಆಗಿವೆ.

ಇದರಾಚೆಗೂ ನಾ ಓದಿರುವ ಅಸಂಖ್ಯಾತ ಪುಸ್ತಕಗಳ ಪ್ರಭಾವ, ನೋಡಿರುವ ಬದುಕು ಇದರೊಳಗಿದೆ. ನಾ ರುಲ್ಫೋನನ್ನು ಒಂದೇ ಉಲ್ಲೇಖಿಸಿ ಉಳಿದ ಪ್ರೇರಣೆಗಳು ಕೇಬಿಟ್ಟರೆ ಹೇಗೆ ?

ಮುಚ್ಚಿಡುವ ಪ್ರಯತ್ನವಲ್ಲ ಸರ್, ಪ್ರಭಾವಗಳಿಂದ ಬಿಡಿಸಿಕೊಂಡು ನನ್ನದೇ ಬರಹಕ್ಕೆ ಜಾರುತ್ತಿರುವ ಪ್ರಯತ್ನದಲ್ಲಿರುವ ಬರಹಗಾರ ನಾನು ಈಗಾಗಲೇ ಆಕೃತಿ ಗುರು ಅವರು ಪೆದ್ರೊ ಪರಮೊ ಪ್ರಭಾವ ಇದೆಯೆಂದು ಹಿಂದೆಯೇ ಹೇಳಿದ್ದಾರೆ ನೀವು ಗಮನಿಸಿಲ್ಲಷ್ಟವೇ..

ನನ್ನ ಗೆಳೆಯರಿಗೂ ಪೆದ್ರೊ ಪರಮೊ ಓದಲು ಹೇಳಿರುವೆ. ಈಗ ಹಾಣಾದಿ ಜೊತೆ ಎಲ್ಲರೂ ಪೆದ್ರೊ ಪರಮೊ ಓದಲಿ...

ನಿಜಕ್ಕೂ ನೀವು ಯಾವ ಕಾರಣಕ್ಕೂ ಪೊಸ್ಟ್ ಡಿಲಿಟ್ ಮಾಡಬೇಡಿ. ಯಾರಾದರೂ ಒಬ್ಬ ವಿಮರ್ಶಕ ಅದು ಗುರುತಿಸುವ ಕೆಲಸ ಮಾಡಬೇಕಿತ್ತು ಅದನ್ನು ನೀವು ಮಾಡಿರುವಿರಿ. ನನಗೆ ಅತ್ಯಂತ ಖುಷಿ ಸಹ ಇದೆ.

ಇದರಾಚೆಗೂ ನಿಮ್ಮ ಲೇಖನ ಕೃತಿ ನಿಷ್ಠವಾಗಿಲ್ಲವೆಂಬುದಷ್ಟೇ ನನ್ನ ತಕರಾರು. ಅದರಾಚೆ ಎಲ್ಲೋ ಹೋಗಿದೆ. ಇಲ್ಲದಿದ್ದರೆ ನೀವು ಹೇಗೆ ಬರೆದಿದ್ದರೂ ಈ ಲೇಖನ ಖುಷಿಯಿಂದ ಶೇರ್ ಮಾಡ್ತಿದ್ದೆ. ಒಂದೆರಡು ಅಂಶಗಳು ನೀವು ಬಹಳ ಕೆಳಮಟ್ಟಕ್ಕಿಳಿದು ವಿಮರ್ಶಿಸಿದ್ದಿರಿ ಅನಿಸಿತು...

ಒಟ್ಟಾರೆ ಹಾಣಾದಿ ಕಾದಂಬರಿ ಮತ್ತು ಪೆದ್ರೊ ಪರಮೊ ಅಕ್ಕಪಕ್ಕವಿಟ್ಟು ಯಾವ ಸನ್ನಿವೇಶದಲ್ಲಿ, ಘಟನೆಗಳಲ್ಲಿ ಆ ಪ್ರಭಾವ ಇದೆಯೆಂದು ವಿವರವಾಗಿ ಬರೆಯಿರಿಯಂದು ಕೇಳಿಕೊಳ್ಳುವೆ. ನೀವು ಆ ಕೆಲಸಕ್ಕೆ ಎರಡು ಕೃತಿಯಲ್ಲಿ ಸಾಮ್ಯತೆ ಇರುವ ಚಿತ್ರಗಳು ಬಳಸಿದ್ದು ನಿಮ್ಮಿಂದ ನಾ ನಿರೀಕ್ಷಿಸಿದ್ದ ಗಂಭೀರ ವಿಮರ್ಶೆಗೆ ಉತ್ತರವೆನಿಸಲಿಲ್ಲ.

ನೀವು ಬರೆದಿದ್ದು ಒಳ್ಳೆತದಾಯ್ತು ಸರ್. ಓ ಎಲ್ ಎನ್ ಅವರ ಗಮನಕ್ಕೆ ಹಾಣಾದಿ ಮೂರು ತಿಂಗಳ ಹಿಂದೆಯೇ ತಂದಿರುವೆ. ಮುಚ್ಚಿಡುವ ಪ್ರಯತ್ನವಾಗಿದ್ದರೆ ಅವರಿಗ್ಯಾಕೆ ಓದಿ ಸುತ್ತಿದ್ದೆ ?

ಮ್ಯಾಜಿಕ್ ರಿಯಲಿಸಂ ತಂತ್ರ ಹೊರಗಿನದು ಅದು ಬಳಸಿಕೊಂಡಿರುವ ನನಗೆ ಹೊರಗಿನ ಪ್ರೇರಣೆ ಆಗಿದೆ.

ಒಟ್ಟಾರೆ ಹಾಣಾದಿ ಕಥೆಯೇ ಭಿನ್ನವಾಗಿದೆ ಪ್ರಾರಂಭದಿಂದ ಅಂತ್ಯದವರೆಗೂ. ಕಥೆ ಹೇಳುವ ತಂತ್ರಕ್ಕೆ ಪ್ರಭಾವ ಬೀರಿರುಬಹುದು..

ಇನ್ನೊಂದು ಮಾತು ಸರ್. ನನ್ನ ಪರವಾಗಿಯೋ ಅಥವಾ ವಿರುದ್ಧವಾಗಿಯೋ ಬರೆಯುವ ಎರಡು ಕಡೆ ನಾನಿಲ್ಲಿ. ನನ್ನಗಿಂದಿಗೂ ಒಬ್ಬ ಸಾಮಾನ್ಯ ಓದುಗ ಮುಖ್ಯನೆನಿಸುತ್ತಾನೆ.

ಉಳಿದಂತೆ ನನ್ನ ಹಾಣಾದಿ ಪ್ರಕಟಿಸಿರುವ ಗುರುಗಳಾದ ಅಬ್ದುಲ್ ಹೈ ತೋರಣಗಲ್ಲು ಅವರ ಮಾತುಗಳು ಸಹ ನಿಮ್ಮದು ಕೃತಿನಿಷ್ಠೆ ವಿಮರ್ಶೆ ಇರಬೇಕಿತ್ತು ಎಂಬುವುದನ್ನೇ ಹೇಳುತ್ತಿದ್ದಾರೆ. ವಂದನೆಗಳು ಸರ್...

ಸಂಜೆ ನಾನೇ ನನ್ನ ಫೆಸ್ ಬುಕ್ಕಿನಲ್ಲಿ ಈ ಪ್ರಭಾವಗಳ ಬಗ್ಗೆ, ಪ್ರೇರಣೆಗಳ ಬಗ್ಗೆ ಬರೆದುಕೊಳ್ಳುವೆ. ಉಳಿದಂತೆ ನಿಮ್ಮ ವಿಮರ್ಶೆ ನಿಜಕ್ಕೂ ಸ್ವಾಗತಾರ್ಹ...
ಮತ್ತೆ ಹೇಳುತ್ತಿದ್ದೆನೆ ಕೃತಿ ನಿಷ್ಠೆಯಾಚಿಗಿನ ಅಂಶಗಳು ಬಿಟ್ಟು...

ನಿಮ್ಮ ಈ ನೇರ,ನಿಷ್ಠುರ, ಪ್ರಾಮಾಣಿಕ ವಿಮರ್ಶೆ ಸದಾ ಇರಲಿ. ಕನ್ನಡಕ್ಕೊಬ್ಬರಾದರೂ ಹೀಗಿರಬೇಕು. ಬರೀ ಹಾಣಾದಿಗಲ್ಲ...

# ಕಪಿಲ ಪಿ ಹುಮನಾಬಾದೆ

ಎಸ್.ಎಸ್.ಅಲಿ said...

ಗೌರಾನ್ವಿತ ನರೇಂದ್ರ ಪೈ ಸಾರ್ ಹಾಣಾದಿ ಬಗ್ಗೆ ನಿಮ್ಮ ನೇರ ಅಭಿಪ್ರಾಯ (ವಿಮರ್ಶೆಗಳ ಮೇಲಿನ ವಿಮರ್ಶೆ) ನೀವು ಪೆದ್ರೊ ಪೆರಮೊ ಬಗ್ಗೆ ಉಲ್ಲೇಖ ಮಾಡುತ್ತಾ ಹೇಳಿದ್ದೀರಿ ಹಾಗಾಗಿ ಈ ಚರ್ಚೆ ಗಂಭೀರತೆಯನ್ನೂ ಹೊಂದಿದೆ. ಅಧ್ಯಾಯ ೧೧ ಪುಟ ೬೨ ರನ್ನು ಉಲ್ಲೇಖಿಸಿದ್ದೀರಿ, ನಿಮಗೆ ಅನುಮಾನಿಸಿದ ಪುಟದ ಫೋಟೊ ಕೊಂಚ ಹಾಕಿದರೆ ಚೆಂದಿತ್ತು ನಾವೂ ಗಮನಿಸಬಹುದಿತ್ತು, ಪ್ರೇರಣೆ, ಪ್ರಭಾವ, ಅನುಕರಣೆ, ಕೃತಿಚೌರ್ಯ ಎಲ್ಲವಕ್ಕೂ ವ್ಯತ್ಯಾಗಳಿವೆ ಹಾಗಾಗಿ ಹೇಳಬೇಕಾಯಿತು, ಹಾಗೂ ಹಿರಿಯ ಸಾಹಿತಿಗಳೂ ಇದಕ್ಕೆ ತಮ್ಮ ಅಭಿಪ್ರಾಯ ಬರೆದಿದ್ದಾರೆ ಅವರ ಹೆಸರನ್ನೂ ನೀವು ಉಲ್ಲೇಖಿಸಿದ್ದೀರಿ ಅವರೂ ಇಂತಹ ಅಭಿಪ್ರಾಯ ಏಕೆ ಕೊಟ್ಟಿಲ್ಲ ಎಂಬುದು ನನಗೂ ಅರ್ಥವಾಗದ ಸಂಗತಿ, ಈ ಬಗ್ಗೆ ಲೇಖಕ ಹಾಗೂ ನಿಮ್ಮ ನಡುವಿನ ಕಾದಂಬರಿ ವಿಮರ್ಶೆ ಚರ್ಚೆಗೆ ಕಾಯುತ್ತೇನೆ ನನಗೂ ಅನುಮಾನಗಳು ಪರಿಹಾರವಾಗುತ್ತವೆ

ನರೇಂದ್ರ ಪೈ said...

ಮಾನ್ಯ ಎಸ್ ಎಸ್ ಅಲಿಯವರಿಗೆ,
ತಮ್ಮ ಅನಿಸಿಕೆ ದಾಖಲಿಸಿದ್ದಕ್ಕಾಗಿ ವಂದನೆಗಳು ಸರ್. ಇಲ್ಲಿ ಪ್ರತಿಕ್ರಿಯೆ ದಾಖಲಿಸಲು ಪದಮಿತಿ ಇರುವುದರಿಂದ ತಮಗೆ ಒಟ್ಟು ಮೂರು ಭಾಗಗಳಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ, ಇದು ಒಡ್ಡುವ ತೊಂದರೆಗಳಿಗಾಗಿ ಕ್ಷಮಿಸಿ.

ಪುಟ ೬೨ರ ಉಲ್ಲೇಖ ಬಂದಿರುವುದು ಭಾಷೆಯ ಲಯ ಬದಲಾದ ಬಗ್ಗೆ. ಹಾಗಾಗಿ ಪುಟದ ಫೋಟೋ ಹಾಕಿಲ್ಲ. ಪುಟ ೬೨ರ ವರೆಗಿನ ಗುಬ್ಬಿ ಆಯಿಯ ಭಾಷೆ ಗ್ರಾಮ್ಯ ಲಯದಲ್ಲಿದ್ದರೆ ೬೨ರ ಸುರುವಿಗೆ ಅದು ಶಿಷ್ಟ ಭಾಷೆಗೆ ಹೊರಳುತ್ತದೆ. ಇದನ್ನು ಮನಗಾಣಿಸಲು ಫೋಟೋ ಹಾಕುವುದಾದರೆ ಹಿಂದಿನ ಪುಟಗಳದ್ದೂ ಹಾಕಬೇಕಾಗುತ್ತದೆ. ಕಾದಂಬರಿಯನ್ನು ಓದುವಾಗ ಇದು ಸುಲಭವಾಗಿ ಗಮನಕ್ಕೆ ಬರುವಂಥ ಒಂದು ಅಂಶ.

ಇನ್ನು ಪ್ರೇರಣೆ, ಪ್ರಭಾವ, ಅನುಕರಣೆ, ಕೃತಿಚೌರ್ಯ ಎಲ್ಲವೂ ಬೇರೆ ಬೇರೆ ಎನ್ನುವುದು ನನ್ನ ಮಾತು ಕೂಡ. ಆದರೆ, ಕೃತಿಚೌರ್ಯ ಒಂದನ್ನು ಹೊರತು ಪಡಿಸಿ ಉಳಿದ ಎಲ್ಲವುಗಳ ಸಂದರ್ಭದಲ್ಲಿ ಯಾವುದು ಯಾವ ಮಟ್ಟದಲ್ಲಿ ಆಗಿದೆ ಎನ್ನುವುದು ಲೇಖಕರ ವಿವೇಚನೆಗೇ ಬಿಟ್ಟ ಸಂಗತಿಯಾಗುತ್ತದೆ. ನೀವು ಲೇಖಕರ ಜೊತೆಗಿನ ಚರ್ಚೆಯ ಬಗ್ಗೆ ಬರೆದಿದ್ದೀರಿ. ಅವರ ಒಂದು ಸುದೀರ್ಘ ಉತ್ತರ ಇಲ್ಲಿ ಲಭ್ಯವಿದೆ, ತಾವು ಅದನ್ನು ಗಮನಿಸಬಹುದು. ಅಲ್ಲದೆ ಈ ವಿಚಾರವಾಗಿ ಫೇಸ್‌ಬುಕ್ಕಿನಲ್ಲಿ ಹತ್ತು ಹಲವು ಮಂದಿ ಚರ್ಚಿಸಿದ್ದು ಅದನ್ನು ಗಮನಿಸಿದರೆ ಕೆಲವೊಂದು ವಿಷಯಗಳು ಸ್ಪಷ್ಟವಾಗುತ್ತವೆ. ಸಾಧ್ಯವಾದಲ್ಲಿ ಗಮನಿಸಿ. ಸಂಕ್ಷಿಪ್ತವಾಗಿ ನಾನು ಅವುಗಳ ಒಂದು ಸ್ಥೂಲ ಚಿತ್ರ ಒದಗಿಸಲು ಇಲ್ಲಿ ಪ್ರಯತ್ನಿಸುತ್ತೇನೆ.

ನಾನು ಅನುಕರಣೆ ಎಂದು ಹೇಳಿರುವುದನ್ನು ಲೇಖಕರು ಪ್ರಭಾವದೊಂದಿಗೆ ಸಮೀಕರಿಸಿ ತಮಗೆ ಮೂಕಜ್ಜಿಯ ಕನಸುಗಳು, ಸರಸಮ್ಮನ ಸಮಾಧಿ, ಕಿರಗೂರಿನ ಗಯ್ಯಾಳಿಗಳು, ಗಣೇಶಯ್ಯನವರ ಕೂತೂಹಲ ಕಾಯುಸುವ ತಂತ್ರ, ಕುಂ ವೀ ಕಥೆಗಳು, ಕೃಷ್ಣೇಗೌಡನ ಆನೆ, ಕುಡಿಯರ ಕೂಸು, ಕೆಲವು ಮ್ಯಾಜಿಕ್ ರಿಯಲಿಸಂ ತಂತ್ರಗಳಿರುವ ಕೃತಿಗಳು, ನಾ ಓದಿರುವ ಅಸಂಖ್ಯಾತ ಪುಸ್ತಕಗಳ ಪ್ರಭಾವ, ನೋಡಿರುವ ಬದುಕು ಎಲ್ಲದರ ಪ್ರೇರಣೆ ಇತ್ತು ಎಂದಿದ್ದಾರೆ.

ನಾನು ಇಂಥ ಪ್ರಭಾವದ ಬಗ್ಗೆ ಬರೆದೇ ಇಲ್ಲ. ಪ್ರಭಾವ ಬೇರೆ, ಪ್ರೇರಣೆ ಎಂದು ಒಬ್ಬ ಲೇಖಕ ಉಲ್ಲೇಖಿಸುವುದೇ ಬೇರೆ. ಇದನ್ನು ಗುರುತಿಸಲು ಮೊತ್ತಮೊದಲನೆಯದಾಗಿ ‘ಹಾಣಾದಿ’ ಕಾದಂಬರಿಯೊಂದಿಗೆ ಓ ಎಲ್ ನಾಗಭೂಷಣ ಸ್ವಾಮಿಯವರು ಅನುವಾದಿಸಿದ ರುಲ್ಫೋನ ‘ಪೆದ್ರೊ ಪರಮೊ’ ಕಾದಂಬರಿಯ ಆವೃತ್ತಿಯನ್ನೂ ಓದಿರಬೇಕಾಗುತ್ತದೆ. ಇಲ್ಲವಾದಲ್ಲಿ ಇದೆಲ್ಲ ಗಾಳಿಯಲ್ಲಿ ಗುದ್ದಾಡಿದಂತೆ ಅಷ್ಟೆ.

ನರೇಂದ್ರ ಪೈ said...

ನಾನು ಬರೆದ ಪ್ರೇರಣೆ ಯಾವ ಬಗೆಯದು ಎಂದು ಸೂಚಿಸಲು ಶ್ರೀ ಪ್ರಸನ್ನ ಸಂತೆಕಡೂರು ಅವರು ಬರೆದಿರುವುದನ್ನು ಗಮನಿಸಿ:
-------------------------------------------------------------------------------------------
ಪ್ರಸನ್ನ ಸಂತೆಕಡೂರು
"ಕಪಿಲ ಪಿ. ಹುಮನಾಬಾದೆ ಅವರ “ಹಾಣಾದಿ” ಕಾದಂಬರಿಯ ಬಗ್ಗೆ ನರೇಂದ್ರ ಪೈ ಅವರು ಬರೆದಿರುವ ವಿಮರ್ಶೆಯ ಬಗ್ಗೆ ಎರಡು ಮಾತು.
ಮೆಕ್ಸಿಕನ್ ಸಾಹಿತ್ಯದ ಬಗ್ಗೆ ಅಪಾರ ಒಲವಿರುವುದರಿಂದ ಕಾರ್ಲೋಸ್ ಫ್ಲ್ಯೂಎಂಟ್ ಮತ್ತು ಹ್ವಾನ್ ರೂಲ್ಫೋ ಅವರ ಅಭಿಮಾನಿಯಾಗಿರುವುದರಿಂದ “ಪೆದ್ರೊ ಪರಾಮೊ” ಮೊದಲೇ ಓದಿದ್ದೆ. ಭಾರತಕ್ಕೆ ಬಂದಾದ ಮೇಲೆ ಓ.ಎಲ್.ಎನ್. ಅವರ ಅನುವಾದವನ್ನು ಓದಿ ಆ ಕಾದಂಬರಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೆ. ಇತ್ತೀಚೆಗೆ ಹಾಣಾದಿ ಕಾದಂಬರಿಯ ಬಗ್ಗೆ ಉತ್ತಮ ಮಾತುಗಳು ಕೇಳಿ ಬರುತ್ತಿರುವುದರಿಂದ ಅದನ್ನು ಓದಬೇಕೆಂದು ಕೊಂಡುಕೊಂಡು ಬಂದಿದ್ದೆ. ಈಗ ಅದನ್ನು ಓದಿ ಬರೆಯುತ್ತಿದ್ದೇನೆ.

ನರೇಂದ್ರ ಪೈ ಅವರು ವಿಮರ್ಶಿಸಿರುವ ಹಾಗೆ ಕಾದಂಬರಿ ನೇರವಾಗಿಯೇ ಪೆದ್ರೊ ಪರಾಮೊವನ್ನು ಅನುಕರಿಸಿದೆ. ಅಲ್ಲಿ ಬರುವ ಮೆಕ್ಸಿಕೋದ ಬೆಟ್ಟ ಗುಡ್ಡಗಳ ಹಿನ್ನೆಲೆ, ಮುದುಕಿ ಎಲ್ಲವೂ ಇಲ್ಲಿಯೂ ಬರುತ್ತವೆ. ಅಲ್ಲಿಯೂ ನಿರೂಪಕ ತನ್ನ ತಂದೆಯನ್ನು ಹುಡುಕಿಕೊಂಡು ಹೋಗುತ್ತಾನೆ. ಇಲ್ಲಿಯೂ ಹಾಗೆ ಇದೆ. ಮೊದಲಿಗೆ ಇದು ಅದರ ರೂಪಾಂತರವೇ ಎಂದು ಅನಿಸುತ್ತದೆ. ಇದನ್ನು ಕಪಿಲ ಪಿ. ಹುಮನಾಬಾದೆ ಅವರು ನೇರವಾಗಿ ಒಪ್ಪಿಕೊಂಡಿದ್ದರೆ ಅಥವಾ ಹೇಳಿಕೊಂಡಿದ್ದರೆ ಚೆನ್ನಾಗಿರುತಿತ್ತು ಎಂದು ನನಗೆ ಅನಿಸುತ್ತದೆ."
-------------------------------------------------------------------------------------------
ಎರಡನೆಯದಾಗಿ ಲೇಖಕರೇ ಫೇಸ್‌ಬುಕ್ಕಿನಲ್ಲಿ ಮೊದಲು ದಾಖಲಿಸಿದ ಪ್ರತಿಕ್ರಿಯೆ ಗಮನಿಸಿ. ಇದರಲ್ಲಿ ಅವರು ಗುರು ಆಕೃತಿಯವರು ರುಲ್ಫೋನ ಪ್ರೇರಣೆಯನ್ನು ಗುರುತಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಪ್ರತಿಕ್ರಿಯೆಯ ಇತರ ಅಂಶಗಳ ಬಗ್ಗೆ ಮುಂದೆ ಉಲ್ಲೇಖಿಸುತ್ತೇನೆ.
-------------------------------------------------------------------------------------------
ಕಪಿಲ ಪಿ.ಹುಮನಾಬಾದೆ
ಕಪಿಲ ಪಿ.ಹುಮನಾಬಾದೆ ನರೇಂದ್ರ ಪೈ ಸರ್ ಅವರು ಹೊಸ ಬರಹಗಾರನ ಕೃತಿ ಓದಿದ್ದಕ್ಕೆ ಮೊದಲಿಗೆ ಧನ್ಯವಾದಗಳು. ಅವರ ಅಭಿಪ್ರಾಯ ಏನೇ ಇರಲಿ ಗೌರವಿಸುವೆ. ಒಬ್ಬೊಬ್ಬರ ಕಣ್ಣಿಗೆ ಒಂದೊಂದು ತರಹ ಕಾಣಸ್ತಿರೋ ಹಾಣಾದಿ ಎಲ್ಲಾ ಕಡೆ ಭಿನ್ನ ಭಿನ್ನವಾಗಿಯೇ ಕಂಡಿದ್ದು ಇಷ್ಟವಾಯ್ತು.

ಪೆದ್ರೊ ಪರಮೊ ಅಥವಾ ರುಲ್ಫೋನ ಪ್ರಭಾವ ಈಗಾಗಲೇ ಈ ಕೃತಿಯಲ್ಲಿ ಕಂಡಿದೆ ಎಂಬುವುದು ಯಾರು ಎಲ್ಲಿಯೂ ಯಾಕೆ ಹೇಳಿಲ್ಲವೆಂಬುವುದೆ ನರೇಂದ್ರ ಪೈ ಅವರಿಗೆ ಕಾಡುತ್ತಿರುವ ಪ್ರಶ್ನೆಯಾಗಿರಬಹುದು ಆದರೆ ಅವರು ಹಾಣಾದಿ ಕುರಿತು ಬಂದಿರುವ ಎಲ್ಲಾ ವಿಮರ್ಶೆಗಳು ಮಾತುಗಳು ಗಮನಿಸಿಲ್ಲವೆಂದಾಯ್ತು. ಇನ್ನೊಂದು ವಿಚಾರ ಮರಗಳಲ್ಲಿ ದೆವ್ವ ವಿದೆಯಂದು ಮರ ಕಡಿಯುವ ಪ್ರಸಂಗಗಳು ನೀವು ನೋಡಿಲ್ಲವಾದರೆ ನಮ್ಮೂರಿಗೆ ಬನ್ನಿ. ಜನರ ಬಾಯಿಯಿಂದಲೇ ನೀವು ಕಂಡಿರದ ನಿದರ್ಶನಗಳು ತೋರಿಸುವೆ. ಇದರಾಚೆಗೆ ಉಳಿದದ್ದು ನಾ ಗೌರವಿಸುವೆ.

1.ಗುರು ಆಕೃತಿಯವರು ಹಾಣಾದಿಯಲ್ಲಿ ರುಲ್ಪೋನ ಪ್ರೇರಣೆ ಇದೆಯೆಂದು ಈಗಾಗಲೇ ಅವರ ಲೇಖನದಲ್ಲಿ ಹೇಳಿದ್ದಾರೆ. ಒಂದು ತಿಂಗಳ ಹಿಂದೆಯೇ !
2.ನಾನು ಓ ಎಲ್ ನಾಗಭೂಷಣ ಸ್ವಾಮಿ ಅವರ ಗಮನಕ್ಕೆ ಹಾಣಾದಿ ಮೂರು ತಿಂಗಳ ಹಿಂದೆಯೇ ತಂದಿದ್ದೆ ಮತ್ತು ಅವರು ಈಗಾಗಲೇ ಅದು ಓದಿ ರಿಪ್ಲೆ ಸಹ ಮಾಡಿದಾರೆ. ಹಾಣಾದಿಯೂ ಓದದೆ ರುಲ್ಪೋ ಸಹ ಓದದೆ. ಅಥವಾ ಎರಡರಲ್ಲೊಂದು ಓದಿದವರಿಗೆ ಓ ಎಲ್ ಎನ್ ಅವರು ಕೆಲವು ತಿಂಗಳ ಹಿಂದೆ ಬರೆದ ಮಾತುಗಳೆ, ಅವರ ಅಸ್ಪಷ್ಟಕ್ಕೆ ಸ್ಪಷ್ಟವಾಗಬಹುದು.
3. ನನಗೆ ಅತ್ಯಂತ ಪ್ರಭಾವ ಬೀರಿರುವ ಪೆದ್ರೊ ಪರಮೊ ಕಾದಂಬರಿ ಅನುವಾದಿಸಿರುವ ಮತ್ತು ಹಾಣಾದಿ ಸಹ ಓದಿ ಓ ಎಲ್ ಎನ್ ಅವರು ಬರೆದಿರುವಾಗ, ನರೇಂದ್ರ ಪೈ ಸರ್ ಅವರ ಲೇಖನದಾಚೆಗೂ ಸುಮ್ಮನೆ ಎರಡು ಕೃತಿ ಓದದೆ ಎಳೆದಾಡುತ್ತಿರುವವ ಬಗ್ಗೆ ಕನಿಕರವಿದೆ ಅಷ್ಟೇ !
4.*ಓ ಎಲ್ ನಾಗಭೂಷಣ ಸ್ವಾಮಿ ಅವರ ಹಾಣಾದಿ ಕಾದಂಬರಿ ಕುರಿತು ಮಾತುಗಳು* :-
10/12/2019
ಪ್ರಿಯ ಕಪಿಲ ಹುಮ್ನಾಬಾದೆ ಅವರಿಗೆ ನಮಸ್ಕಾರ. ಹಾಣಾದಿ ಓದಿ ಮುಗಿಸಿದೆ. ಇಷ್ಟವಾಯಿತು. ತುಂಬ ಚೆನ್ನಾಗಿದೆ. ಕಥೆಯಲ್ಲಿನ ವಾತಾವರಣವನ್ನು ಬಹಳ ಚೆನ್ನಾಗಿ ಸೃಷ್ಟಿಸಿದ್ದೀರಿ. ಕೃತಿಯ ಯಶಸ್ಸಿಗೆ ಅದೇ ಮುಖ್ಯ ಕಾರಣವಾಗಿ ತೋರುತ್ತದೆ. ನೀವು ಹ್ವಾನ್ ರುಲ್ಫೋನನ್ನು ಅನುಕರಿಸದೆ, ಅನುವಾದಿಸದೆ ಜೀರ್ಣಮಾಡಿಕೊಂಡು ನಿಮ್ಮದೇ ಕಥಾಲೋಕ ಕಟ್ಟಿದ್ದೀರಿ. ಅನ್ಯಭಾಷೆಯ ಲೇಖಕರನ್ನು ಒಳಗೊಳ್ಳಬೇಕಾದದ್ದೇ ಹೀಗೆ. ಓದಿನ ಮೂಲಕವೇ ಹೊಸ ಹಾದಿ ಕಂಡುಕೊಳ್ಳುತ್ತಿದ್ದೀರಲ್ಲ, ಇದು ಬಹಳ ಮೆಚ್ಚಬೇಕಾದ ಸಂಗತಿ. ನಿಮ್ಮ ಬರವಣಿಗೆಯ ಕಾರಣದಿಂದಲೇ ನೀವು ಕನ್ನಡದ ಮುಖ್ಯ ಲೇಖಕರಾಗುವ ಸಾರ್ಮರ್ಥ್ಯ ಇರುವವರು.
ಭಾಷೆ ಇನ್ನೊಂದಷ್ಟು ಮೊನಚಾಗಬೇಕಾಗಿತ್ತು. ಆದರೆ, -ಗಳು, ಇಂಥವನ್ನು ಕೈಬಿಟ್ಟರೆ ಒಳ್ಳೆಯದು. ಹಾಗೇ, 'ತೊಡಗಿತು,' 'ತೊಡಗಿದ,' 'ತೊಡಗಿದೆ'ಇಂಥ ತೀರ ಜಳ್ಳು ಕ್ರಿಯಾಪದಗಳಿಂದ ಕೊನೆಯಾಗುವ ವಾಕ್ಯಗಳು ಇಡೀ ಬರವಣಿಗೆಯನ್ನು ಶಿಥಿಲಗೊಳಿಸುತ್ತವೆ. ನಿಮ್ಮ ಈ ರೀತಿಯ ಬರವಣಿಗೆಗೆ ಪ್ರಬುದ್ಧ ಓದುಗರು ಬೇಕು. ಅಂಥ ಪ್ರಬುದ್ಧ ಓದುಗರು ಅನಗತ್ಯವಾದ ಒಂದು ಪದವೂ ಇಲ್ಲದ ಬಿಗಿಯಾದ, ಫಿಟ್ ಆಗಿರುವ ವಾಕ್ಯಗಳ ಜೋಡಣೆ ಅಪೇಕ್ಷಿಸುತ್ತಾರೆ.
ಇದೇ ರೀತಿಯಲ್ಲಿ ಎಲ್ಲ ಕಥೆ, ಕಾದಂಬರಿಗಳನ್ನೂ ಬರೆಯಲಾಗುವುದಿಲ್ಲ. ಹೊಸ ಪ್ರಯೋಗಗಳಿಗೆ ನೀವು ಒಡ್ಡಿಕೊಳ್ಳುತ್ತೀರೆಂಬ ವಿಶ್ವಾಸ ನನಗಿದೆ. ನಿಮ್ಮ ಕಥನಕ್ಕೆ ನಿಮ್ಮದೇ ಭಾಷೆ, ನಿಮ್ಮದೇ ವಿನ್ಯಾಸ ದೊರೆಯಲಿ, ಈ ಮೊದಲ ಪ್ರಯೋಗ ಮುಂದಿನ ಮಹತ್ವದ ಬರವಣಿಗೆಗೆ ಹೊಸ್ತಿಲಾಗಲಿ ಎಂದು ಹಾರೈಸುತ್ತೇನೆ.
ನಿಮ್ಮ ಪುಸ್ತಕದ ಬಗ್ಗೆ ಮಯೂರಕ್ಕೆ ಬರೆಯಬೇಕೆಂದಿದ್ದೆ. ಎಚ್. ಎಸ್. ಆರ್. ಬರೆಯುತ್ತಾರೆಂದು ತಿಳಿಯಿತು.
sincerely
olnswamy
10/12/2019
ಕಪಿಲ ಪಿ ಹುಮನಾಬಾದೆ.
20/02/2020
8660098545
-------------------------------------------------------------------------------------------

ನರೇಂದ್ರ ಪೈ said...

ಮೂರನೆಯದಾಗಿ, ನಾಗೇಗೌಡ ಕೀಲಾರ ಶಿವಲಿಂಗಯ್ಯ ಎನ್ನುವವರು ಬರೆದ ಒಂದು ಪ್ರತಿಕ್ರಿಯೆಯನ್ನು ಧನಂಜಯ ಎನ್ ಎನ್ನುವವರು ತಮ್ಮ ಫೇಸ್‍ಬುಕ್ ಪುಟದಲ್ಲಿ ಕಾಣಿಸಿದ್ದರು. (ಈಗ ಅದನ್ನು ತೆಗೆದಿದ್ದಾರೆ. ಆದರೆ ನನ್ನ ಬಳಿ ಅದರ ಸ್ಕ್ರೀನ್ ಶಾಟ್ಸ್ ಇವೆ) ಅಲ್ಲಿ ಅವರು ಹೀಗೆ ಬರೆದಿದ್ದಾರೆ:
-------------------------------------------------------------------------------------------
ನಾಗೇಗೌಡ ಕೀಲಾರ ಶಿವಲಿಂಗಯ್ಯ
ಹಾಣಾದಿ ಅನ್ನುವ ಒಂದು ಹೊಸ ಕಾದಂಬರಿ ಬಂದಿದೆ ಓದಿ ಎಂದು ಧನಂಜಯ ಎನ್ ನನಗೆ ಸಜೆಸ್ಟ್ ಮಾಡಿದ್ದ. ಸರಿ ಎಂದು ಆಕೃತಿ ಪುಸ್ತಕ ಮಳಿಗೆಯಲ್ಲಿ ಕೊಂಡು ಓದಿದೆ.
ಓದಿದ ನಂತರ ಧನಂಜಯ್‌ಗೆ ನಾನು ಮೊದಲು ಹೇಳಿದ ಮಾತೇ ಈ ಕಾದಂಬರಿಯ ಮೊದಲಷ್ಟು ಪುಟಗಳು ಮತ್ತೊಂದು ಅನುವಾದಿತ ಕಾದಂಬರಿಯಂತೆ ಅನಿಸುತ್ತದೆ ಎಂದು. ಆದರೆ ಆ ಕಾದಂಬರಿಯ ಹೆಸರು ನನಗೆ ನೆನಪಿಗೆ ಬರಲಿಲ್ಲ.
ಇವತ್ತು ಆ ಕಾದಂಬರಿ ಬಗ್ಗೆ ಬಂದ ಒಂದು ವಿಮರ್ಶೆಯ ಲಿಂಕ್‌ನ್ನು ಧನಂಜಯ ಕಳಿಸಿದಾಗ, ಆ ವಿಮರ್ಶೆ ಓದಿದ ಮೇಲೆ ನಾನು ಮರೆತಿದ್ದ ಕಾದಂಬರಿ ಪೆದ್ರೊ ಪರಾಮೊ ಎನ್ನುವುದು ಗೊತ್ತಾಯಿತು.
-------------------------------------------------------------------------------------------
- ಪ್ರಸನ್ನ ಸಂತೇಕಡೂರು ಅವರಿಗೆ, ಆಕೃತಿ ಗುರು ಅವರಿಗೆ ಮತ್ತು ನಾಗೇಗೌಡರಿಗೆ ಅನಿಸಿದ್ದು ಪ್ರಭಾವ ಅಲ್ಲ. ಉಳಿದಂತೆ ಎಲ್ಲ ಸ್ಪಷ್ಟವಾಗಿಯೇ ಇದೆ, ನಾನು ವಿವರಿಸಬೇಕಾದ್ದೇನಿಲ್ಲ.

ಇನ್ನು ಓ ಎಲ್ಲೆನ್ ಅವರೇ ಕೊಟ್ಟಿರುವ ಸರ್ಟಿಫಿಕೇಟ್ ಬಗ್ಗೆ ಎರಡು ಮಾತು. ನಾನು ಮುನ್ನುಡಿ, ಬೆನ್ನುಡಿ ಎಂದೆಲ್ಲ ನಾಲ್ಕು ಮಂದಿಯನ್ನು ಹೆಸರಿಸಿದ್ದೇನೆ. ಇವರೂ ಅವರ ಸಾಲಿನಲ್ಲೇ ಇದ್ದಾರೆನ್ನುವುದನ್ನಷ್ಟೇ ಅವರ ಮಾತು ಸ್ಪಷ್ಟಪಡಿಸುತ್ತದೆಯೇ ಹೊರತು ಇನ್ನೇನಲ್ಲ. ಅಷ್ಟಕ್ಕೂ ಮೂಲ ಕೃತಿ ರುಲ್ಫೋನದ್ದು, ಓಎಲ್ಲೆನ್ ಅವರದ್ದಲ್ಲ. ಅಲ್ಲದೆ ಒಂದು ಕೃತಿಯ ಅನುಕರಣೆ ಆಗಿದೆ ಅಥವಾ ಇಲ್ಲ ಎನ್ನುವುದನ್ನು ಹೇಳಲು ಯಾರಿಗೂ ಓಎಲ್ಲೆನ್ ಅಥವಾ ಇನ್ಯಾರದೋ ಸಲಹೆ/ಅನುಮತಿಯ ಅಗತ್ಯವಿಲ್ಲ. ಅವರವರಿಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳಬಹುದು. ಆದರೆ ಲೇಖಕರು ಓಎಲ್ಲೆನ್ ಅವರೇ ಅನುಕರಣೆಯಾಗಿಲ್ಲ ಎಂದಿರುವಾಗ ನಿಮ್ಮದೇನು ಎನ್ನುವ ಧೋರಣೆ ತೋರಿಸಿರುವುದು ಏನನ್ನು ಸೂಚಿಸುತ್ತದೆ ಎಂದು ಯೋಚಿಸಬೇಕು.

ನರೇಂದ್ರ ಪೈ said...

ಇನ್ನು ಶ್ರೀ ಪ್ರಸನ್ನ ಲಕ್ಷ್ಮೀಪುರ ಅವರು ಒಂದು ಪ್ರತಿಕ್ರಿಯೆ ದಾಖಲಿಸಿದ್ದರು. ಅದು ಹೀಗಿದೆ:
-------------------------------------------------------------------------------------------------------------------------------
ಶ್ರೀ ಪ್ರಸನ್ನ ಲಕ್ಷ್ಮೀಪುರ
೧) ದ್ವೀತಿಯ ವಿಭಕ್ತಿ ಬಳಕೆಯೇ ಇಲ್ಲ ಎಂದು ಉಲ್ಲೇಖಿಸಿರುವ ವಾಕ್ಯಗಳ ಬಗ್ಗೆ .
ಬೀದರ್ ಮತ್ತು ಕಲ್ಬುರ್ಗಿ ಕನ್ನಡದ ಮೇಲೆ ಉರ್ದು ಪ್ರಭಾವದಿಂದ ದ್ವೀತಿಯ ವಿಭಕ್ತಿ ಬಳಸುವುದು ಬಹುತೇಕ ಇಲ್ಲ. ಉರ್ದು ನುಡಿಯವರು ಕನ್ನಡ ಮಾತನಾಡುವುದ ಗಮನಿಸಿ. ಹೆಚ್ಚಿನ ಮಾಹಿತಿಗೆ ಕೆ ವಿ ನಾರಾಯಣರ ತೊಂಡು ಮೇವು ಕೃತಿಗಳ ಓದಬಹುದೇನೋ ಸಾರ್.
೨) ಉಂಟು ಅನ್ನುವ ಪದ ಮಂಗಳೂರು ಕಡೆ ಮಾತ್ರ ಅಲ್ಲ ನಮ್ಮ ಬೆಂಗಳೂರು , ಬಳ್ಳಾಪುರ ಮುಂತಾದೆಡೆ ಬಳಸುತ್ತೇವೆ.
ಉಳ್ಳವರು ಶಿವಾಲಯ ಮಾಡುವರು ವಿನ ಉಳ್ಳ ಮತ್ತು ಉಂಟು ಪದಗಳಿಗೆ ಸಂಬಂಜವಿದೆಯಂತ ನುಡಿಯರಿಮೆಗಾರರು ಹೇಳಿರುವ ನೆನಪು.
-------------------------------------------------------------------------------------------------------------------------------

ಸಾಮಾನ್ಯವಾಗಿ ಒಂದು ಕೃತಿಯಲ್ಲಿ ಸಂಭಾಷಣೆಗೆ ಗ್ರಾಮ್ಯವನ್ನೂ, ಸಾಮಾನ್ಯ ನಿರೂಪಣೆಗೆ ಶಿಷ್ಟ ಕನ್ನಡವನ್ನೂ ಬಳಸುವ ಕ್ರಮವಿದೆ. ದೇವನೂರ ಮಹದೇವ ಅವರ ಕುಸುಮಬಾಲೆಯಂಥ ಕೃತಿ ಪೂರ್ತಿಯಾಗಿ ಗ್ರಾಮ್ಯವನ್ನೇ ನೆಚ್ಚಿಕೊಂಡಿರುವ ಒಂದು ಕೃತಿ. ಹಾಗಾಗಿ, ಮೊದಲು ಹೇಳಿದ ಕ್ರಮ ಅನುಸರಿಸುವ ಕೃತಿಯಲ್ಲಿ, ನಿರೂಪಣೆಗೆ ಪ್ರಾದೇಶಿಕ ಮಾದರಿಯನ್ನು ಬಳಸದಿರುವುದು, ಸಂಭಾಷಣೆ ಮತ್ತು ಶಿಷ್ಟವಲ್ಲದ ಭಾಷೆಯಲ್ಲಿ ಮಾತನಾಡುವಾಗ ಪ್ರಾದೇಶಿಕ ಮಾದರಿಯನ್ನು ಬಳಸುವುದು ನಾನು ಕಂಡುಬಂದ ಕ್ರಮ. ‘ಹಾಣಾದಿ’ ಯಲ್ಲಿ ಎರಡೂ ಬಗೆಯ ಕನ್ನಡದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯದ ಬಳಕೆಯೇ ಇಲ್ಲದಿರುವುದನ್ನು ಗಮನಿಸಿಯೇ ಅಷ್ಟೊಂದು ಉದಾಹರಣೆಗಳನ್ನು ಕೊಡಬೇಕಾಯಿತು. ಬೀದರ್ ಕಲ್ಬುರ್ಗಿ ಕಡೆಯ ಇತರ ಕನ್ನಡ ಬರಹಗಾರರಲ್ಲಿ, ಸಾಮಾನ್ಯವಾಗಿ ಶಿಷ್ಟ ಭಾಷೆಯ ನಿರೂಪಣೆಯಲ್ಲಿ ನಾನಿದನ್ನು ಗಮನಿಸಿಲ್ಲವಾದ್ದರಿಂದ ಅದನ್ನು ಉಲ್ಲೇಖಿಸಿದೆ. ತಪ್ಪಾಗಿರಬಹುದು, ಕ್ಷಮಿಸಿ.

ಇನ್ನು ಉಂಟು ಎನ್ನುವ ಪದವೇ ಮಂಗಳೂರಿನದ್ದು ಎಂದಿಲ್ಲ. ಅದರ ಎರಡು ಬಳಕೆಯ ಕ್ರಮವನ್ನು ಗಮನಿಸಿ ಬರೆದಿದ್ದಷ್ಟೆ. ಉದಾಹರಣೆಗೆ "ಇದು ನಿಮಗೆ ಗೊತ್ತೊಂಟೋ", "ನನ್ನನ್ನು ಹಾಗಂತ ಕರೆದದ್ದುಂಟು" ಮುಂತಾದ ಬಗೆಯ ಬಳಕೆಯಲ್ಲಿ ಬರುವ ಉಂಟು ಇದೆಯಲ್ಲ, ಅದು ಮಂಗಳೂರು ಕಡೆಯ ಬಳಕೆ ಎನ್ನುವ ಅರ್ಥದಲ್ಲಿ ಬರೆದಿದ್ದೆ.

ಉಳಿದಂತೆ ಫೇಸ್‍ಬುಕ್ಕಿನ ಬಳಕೆದಾರರು ತಾವಾಗಿದ್ದಲ್ಲಿ ಅಲ್ಲಿ ನನ್ನ ಈ ಲೇಖನಕ್ಕೆ ಬಂದಿರುವ ಕೆಲವು ಪ್ರತಿರೋಧದ ಲೇಖನಗಳನ್ನು ಗಮನಿಸಬಹುದು. ನನಗೆ ಓರಗೆಯ ವಿಮರ್ಶಕರ ಬಗ್ಗೆ ಅಸೂಯೆಯಿದೆ, ಇದು ಈ ಕಾದಂಬರಿಯನ್ನು ಮತ್ತು ಲೇಖಕನನ್ನು ಹಣಿಯುವುದಕ್ಕಾಗಿಯೇ ಬರೆದ ಲೇಖನ, ಈ ಕಾದಂಬರಿಗೆ ಇಷ್ಟರಲ್ಲೇ ಬರಲಿದ್ದ ಬಹುದೊಡ್ಡ ಪ್ರಶಸ್ತಿಯೊಂದನ್ನು ತಪ್ಪಿಸಲೆಂದೇ (ಈ ಮಾತು ಬರೆದಿರುವುದು ಪ್ರಕಾಶಕರೇ ಆಗಿರುವುದರಿಂದ ತುಂಬ ಕುತೂಹಲಕರ ಅಂಶಗಳನ್ನು ಈ ಮಾತು ಹೊಂದಿರುವುದನ್ನು ಗಮನಿಸಿಯೇ ಇದನ್ನು ಉಲ್ಲೇಖಿಸುತ್ತಿದ್ದೇನೆ) ನಾನು ಮಾಡಿರುವ ಕುತಂತ್ರ ಎಂದೆಲ್ಲ ಟೀಕೆಗಳು ಬಂದಿವೆ. ಈ ಮಾತುಗಳ ಬಗ್ಗೆ ನನಗೇನೂ ಹೇಳುವುದಕ್ಕಿಲ್ಲ. ಇಂಥ ಮಾತುಗಳ ಸತ್ಯಾಸತ್ಯತೆ ತಿಳಿಯದೇ ಇರುವವರಿಗೆ ಇದನ್ನೆಲ್ಲ ಕಾಲ ನಿರ್ಧರಿಸುತ್ತದೆ ಎಂದಷ್ಟೇ ಹೇಳಲು ಇಚ್ಛಿಸುತ್ತೇನೆ. ಇನ್ನು ಕೆಲವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ಕಾದಂಬರಿಗೆ ಪ್ರಚಾರ ದೊರಕಿಸಿಕೊಡಲೆಂದೇ ಇದನ್ನು ಬರೆದಿದ್ದೇನೆಂದೂ ಹೇಳಿದ್ದಾರೆ. ಯಾರಿಗೆ ಏನು ಹೇಳಬೇಕೆನಿಸುವುದೋ ಅದನ್ನು ಮುಕ್ತವಾಗಿಯೇ ಹೇಳಿದರೆ ಒಳ್ಳೆಯದು. ನಮ್ಮ ಮಾತುಗಳು ಮೊದಲಿಗೆ ಬೇರೆಯವರನ್ನು ತೋರಿಸಿದರೂ ಅಂತಿಮವಾಗಿ ಅದು ತೋರಿಸುವುದು ನಮ್ಮನ್ನೇ, ಆಡಿದವರನ್ನೇ.

ನಾನು ಈ ಎಲ್ಲ ಚರ್ಚೆಯ ಬಳಿಕವೂ ನನ್ನ ನಿಲುವಿಗೆ ಬದ್ಧನಾಗಿಯೇ ಇದ್ದೇನೆ. ಕೃತಿಕಾರ ತನಗೆ ಪ್ರೇರಣೆಯಾಗಿ ಸಹಾಯಕ್ಕೆ ಒದಗಿದ ಕೃತಿಯ ಬಗ್ಗೆ ಕೃತಿಯಲ್ಲಿ ಉಲ್ಲೇಖಿಸಬೇಕು ಮಾತ್ರವಲ್ಲ ತನಗೆ ಮುನ್ನುಡಿ/ಹಿನ್ನುಡಿ ಬರೆಯುವವರ ಗಮನಕ್ಕೂ ತರಬೇಕು. ಅವರೂ ತಮಗೆ ಅಂಥ ಪ್ರೇರಣೆ ಕಂಡು ಬಂದಲ್ಲಿ ಅದನ್ನು ತಮ್ಮ ಮಾತುಗಳಲ್ಲಿ ಉಲ್ಲೇಖಿಸಬೇಕು. ರುಲ್ಫೋನಂಥ ಲೇಖಕನ ಬಗ್ಗೆ ಗೊತ್ತಿಲ್ಲ ಎಂದರೆ ಯಾರೂ ನಂಬಲಾರರು. (ಆತನ ಬಗ್ಗೆ ತಿಳಿಯಬೇಕಿದ್ದರೆ ನಾನು ಅನುವಾದಿಸಿರುವ ಒಂದು ಲೇಖನವನ್ನು ತಾವೂ ಗಮನಿಸಬಹುದು.) ಹಾಗಾಗಿಯೇ ನಾನು ನನ್ನ ಅನುಮಾನಗಳು ಸಕಾರಣ ಎಂದು ನಂಬಿದ್ದೇನೆ.