Sunday, February 16, 2020

ಜನಜೀವನದ ಪಲ್ಲಟಗಳೆದುರು ‘ಕುದರಿ ಮಾಸ್ತರ’

ಟಿ ಎಸ್ ಗೊರವರ ಅವರು ತಮ್ಮ ಗ್ರಾಮೀಣ ಬದುಕಿನ ಅನುಭವ ದ್ರವ್ಯವನ್ನೇ ಎರಕ ಹೊಯ್ದು ಬರೆಯುತ್ತಿದ್ದ ಟಿಪ್ಪಣಿಗಳ, ಕತೆಗಳ ಆಕೃತಿಯ ಪ್ರಶ್ನೆಯನ್ನು ಎದುರಿಸುತ್ತಲೇ ನಿರಚನಾವಾದ ಮತ್ತು ರಾಚನಿಕ ಸಮಸ್ಯೆಯನ್ನು ಕೊನೆಗೂ ಬಗೆಹರಿಸಿಕೊಂಡಂತೆ ಕಾಣಿಸುವ ಕತೆಗಳಿರುವ ಸಂಕಲನ ‘ಕುದರಿ ಮಾಸ್ತರ’. ಇಲ್ಲಿರುವ ಎಲ್ಲ ಒಂಬತ್ತು ಕತೆಗಳಲ್ಲೂ ಸ್ಪಷ್ಟವಾಗಿಯೇ ಆಕೃತಿ, ವಸ್ತು, ತಂತ್ರ ಮತ್ತು ನಿರೂಪಣಾ ವಿಧಾನದಲ್ಲಿ ಗೊರವರ ಅವರು ಹೊಸತನದ ಹಾದಿ ತುಳಿದಿರುವುದು ಕಾಣುತ್ತದೆ. ಹಾಗಿದ್ದರೂ ಅವರು ಮೂಲಭೂತವಾಗಿ ತಮ್ಮ ಬಾಲ್ಯದ ಸಮೃದ್ಧ ದೈನಂದಿನದ ವಿವರಗಳನ್ನೇ ನಿರೂಪಣೆ, ಕಥಾ ಪರಿಸರ ಮತ್ತು ಪಾತ್ರ ಪೋಷಣೆಗೆ ಬಳಸಿಕೊಂಡಿರುವುದು ಗಮನಾರ್ಹವಾಗಿದೆ.


ಇಲ್ಲಿನ ಎಲ್ಲ ಕತೆಗಳೂ ಒಂದಲ್ಲಾ ಒಂದು ಅರ್ಥದಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಸಾಮಾನ್ಯನ ದೈನಂದಿನದ ಅಗತ್ಯಗಳು, ಅವನ ಬದುಕಿನ ಪದ್ಧತಿಯಲ್ಲಿ ಕಂಡುಬರುತ್ತಿರುವ ಪಲ್ಲಟಗಳ ಸುತ್ತಲೇ ಇವೆ. ಆದರೆ ಪಾತ್ರಗಳ ವಿಷಯಕ್ಕೆ ಬಂದರೆ ಇಲ್ಲಿಯೂ ಕುರಿ ಕಾಯೋ ರಂಗ, ಕುದರಿ ಮಾಸ್ತರ, ಹೆರಿಗೆ ಮಾಡಿಸುವ ಬೂಬಮ್ಮ, ಕ್ಷೌರದ ಗುಣವಂತ, ಎಗ್‌ರೈಸ್ ಅಂಗಡಿಯ ಹುಸೇನಪ್ಪ ಮುಂತಾದ, ಟಿ ಎಸ್ ಗೊರವರ ಅವರ ಬಾಲ್ಯದ ನೆನಪುಗಳಿರುವ ‘ಆಡು ಕಾಯೋ ಹುಡುಗನ ದಿನಚರಿ’ಯ ಪುಟಗಳಿಂದಲೇ ಎದ್ದು ಬಂದಂತಿರುವ ಪಾತ್ರಗಳಿವು. ಇಲ್ಲಿನ ಜನಜೀವನದ ವಿವರಗಳು ಮತ್ತೆಮತ್ತೆ ನಾವು ಹಿಂದೆ ಎದುರಾದಂಥವೇ ಆಗಿವೆ. ಬಸ್ಸಿನಲ್ಲಿ ಪೆಪ್ಪರಮೆಂಟು ತಿನ್ನಲು ಬಯಸುವ ಯುವಕ, ಹೈಸ್ಕೂಲು-ಕಾಲೇಜಿಗೆ ಹೊರಟ ಹುಡುಗಿಯರನ್ನು ಬಿಟ್ಟ ಕಣ್ಣು ಬಿಟ್ಟ ಬಾಯಿ ಬಿಟ್ಟಂತೆಯೇ ನಿಟ್ಟಿಸುವ ಕುರಿ ಕಾಯುವ ರಂಗ, ಇಸ್ಪೀಟ್ ಆಡಿ ದಾರಿ ತಪ್ಪಿದ ಹುಸೇನಪ್ಪನ ಮಗ ಬಂದಿರುವುದು ಅದೇ ಕಥಾ ಪರಿಸರ, ಕಥಾಜಗತ್ತಿನಿಂದ. ಆದರೆ ಅಲ್ಲಿಯೇ ಈಗ ನಮಗೆ ಹೈಸ್ಕೂಲು ಕಾಲೇಜು ಎಂದು ಹೊರಟು ನಿಂತ ಚಂದದ ಹೆಣ್ಣುಮಕ್ಕಳು, ಅದರಲ್ಲೂ ಜೀನ್ಸ್ ಪ್ಯಾಂಟು ತೊಟ್ಟವರು ಎದುರಾಗುತ್ತಾರೆ. ತನ್ನೂರಿನ ಮಕ್ಕಳಿಗೆ ಪುಕ್ಕಟೆ ಟ್ಯೂಷನ್ ಕೊಡಲು ಮುಂದಾದ ರಮೇಶನಂಥ ಪೋಸ್ಟ್ ಗ್ರ್ಯಾಜ್ಯುಯೇಟ್ಸ್ ಕಾಣಸಿಗುತ್ತಾರೆ. ಲೂನಾ ಕೊಳ್ಳುವಂತೆ ಒತ್ತಡ ತರುವ ಮಾಸ್ತರರ ಮಗ ಸಿಗುತ್ತಾನೆ. ಕ್ಷೌರದ ಗುಣವಂತನಿಗೆ ಗೋವಾ ಸಲೂನ್ ಸವಾಲೊಡ್ಡುತ್ತದೆ.

ಈ ಎಲ್ಲ ಕತೆಗಳೂ ಹಿಂದಿನ ಸಂಕಲನದ ಕತೆಗಳಂತೆ ಆಕೃತಿಗಾಗಿ ತುಡಿಯದೇ ತುಂಡು ತುಂಡು ಚಿತ್ರಗಳಾಗಿಯೇ ಉಳಿಯದ, ನಿರ್ದಿಷ್ಟ ಆಕೃತಿಯೊಂದಿಗೆ ಸಂಪನ್ನವಾಗುವ ರಚನೆಗಳೇ ಆಗಿರುವುದು ಇನ್ನೊಂದು ಗಮನಿಸಬೇಕಾದ ಅಂಶ. ಕುದರಿ ಮಾಸ್ತರ, ಸೂಲಗಿತ್ತಿ, ಇದಿಮಾಯಿ ಕತ್ತಲು, ಗುಣವಂತಪ್ಪನ ಕ್ಷೌರದ ಪೆಟ್ಟಿಗೆ, ದುಃಖದ ಬಿಕ್ಕುಗಳು ಕತೆಗಳಲ್ಲಿ ಆಧುನಿಕತೆ ಒಡ್ಡಿದ ಸವಾಲುಗಳು ಮತ್ತು ಅದಕ್ಕೆ ಮುಖಾಮುಖಿಯಾಗುವ ಹಳೆಯ ತಲೆಮಾರೇ ಇವೆ. ಅದು ಜೀವನ ಸೌಕರ್ಯವನ್ನು ಹೆಚ್ಚಿಸುವ ಒಂದು ಯಂತ್ರವೊ, ವಾಹನವೋ ಆಗಿರಬಹುದು, ಜಾತೀಯತೆಯನ್ನು ಮೀರಲು ಅಗತ್ಯವಿರುವ ಒಂದು ಮನೋಧರ್ಮವಾಗಿರಬಹುದು, ಶಿಕ್ಷಣ ಮತ್ತು ಜೀವನಮಟ್ಟ ಸುಧಾರಿಸುವ ಮಾರ್ಗೋಪಾಯಗಳತ್ತ ಚಲಿಸುವ ಒಂದು ಸಾಮಾಜಿಕ ಚಳವಳಿಯಾಗಿರಬಹುದು, ಆಧುನಿಕ ಶೈಲಿಯ ಎದುರು ನಶಿಸುತ್ತಿರುವ ಹೊಟ್ಟೆಪಾಡಿನ ಒಂದು ವೃತ್ತಿಯಾಗಿರಬಹುದು, ಇಸ್ಪೀಟು, ಓಸಿ, ಲಾಟರಿ ಟಿಕೇಟು ಎಂದು ಜೂಜಿನ ವಿವಿಧ ಮಾದರಿಗಳ ಹಿಂದೆ ಬಿದ್ದು ಹಾದಿ ತಪ್ಪುತ್ತಿರುವ ಯುವಜನಾಂಗವಾಗಿರಬಹುದು ಒಟ್ಟಾರೆಯಾಗಿ ಆಧುನಿಕತೆ, ಬದಲಾದ ಜೀವನಶೈಲಿ, ಬದಲಾಗುತ್ತಿರುವ ಜೀವನಪದ್ಧತಿಯ ಎದುರು ಒಂದು ಮುಖಾಮುಖಿಗೆ ಸಜ್ಜಾಗಲೇ ಬೇಕಾದ ಗೊರವರ ಅವರ ಇದುವರೆಗಿನ ಕಥಾನಕಗಳಲ್ಲಿ ನಾವು ಎದುರಾಗುತ್ತ ಬಂದ ಕಥಾಜಗತ್ತು, ಕಥಾಪರಿಸರ ಮತ್ತು ಕಥಾವ್ಯಕ್ತಿಗಳು ನಮಗಿಲ್ಲಿಯೂ ಸಿಗುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

‘ಸೊಂಪಾಗಿ ಸುರಿದರೆ ಸಾಕಿತ್ತೋ ಮಳೆರಾಯ’ ಕತೆ ಮಾತ್ರ ಟಿ ಎಸ್ ಗೊರವರ ಅವರ ಇದುವರೆಗಿನ ರಚನೆಗಳೊಂದಿಗೆ ನಿಲ್ಲುವ ಕತೆಯಾಗಿದೆ. ಇಲ್ಲಿ ಮತ್ತೊಮ್ಮೆ ಕಥಾನಕದ ಹಂದರ ಹಿಂದಾಗಿ, ಅನುಭವದ ರೂಪಕವನ್ನು ಕಟ್ಟುವುದು ಮುಖ್ಯವಾಗಿದೆ. ಈ ಕತೆ ಇದೇ ಸಂಕಲನದಲ್ಲಿ ಲಭ್ಯವಿರುವುದರ ಜೊತೆಗೆ ಹಿಂದಿನ ಸಂಕಲನದ ‘ಚವರಿ ಮಾರೋ ದುಗ್ಗಿ ಕತೆ’ ಮತ್ತು ‘ಕಾಡು ಕುಸುಮ’ ಕತೆಗಳೂ ಇರುವುದು ಗಮನಿಸಬೇಕು. ಇದರಿಂದಲೇ ನಾವು ಟಿ ಎಸ್ ಗೊರವರ ಅವರ ಮೂಲ ಅನುಭವ ದ್ರವ್ಯವಾದ ‘ಆಡು ಕಾಯೊ ಹುಡುಗನ ದಿನಚರಿ’ ಹೇಗೆ ಬೇರೆ ಬೇರೆ ಸ್ತರದಲ್ಲಿ, ರೂಪದಲ್ಲಿ ಮತ್ತು ಸಿದ್ಧ ಮಾದರಿಯ ಕಥೆಯ ಆಕೃತಿ, ಚೌಕಟ್ಟು ಮತ್ತು ವಸ್ತುವಿನ ವೈವಿಧ್ಯಮಯ ಆಯ್ಕೆಯಲ್ಲಿ ಅಭಿವ್ಯಕ್ತಿ ಪಡೆಯುತ್ತದೆ ಎನ್ನುವುದನ್ನೂ, ಗೊರವರ ಅವರ ರಾಚನಿಕ ಪ್ರಯೋಗಗಳಲ್ಲಿ ಕಾಣುವ ಹೊರಳುವಿಕೆಯನ್ನೂ ಸೂಕ್ಷ್ಮವಾಗಿ ಗಮನಿಸುವುದು ಸಾಧ್ಯವಾಗುತ್ತದೆ.


ಇಲ್ಲಿನ ಕತೆಗಳನ್ನು ಟಿ ಎಸ್ ಗೊರವರ ಅವರು ಹಿಂದಿನಂತೆ ಚುಟುಕಾಗಿ ಮುಗಿಸುವುದಿಲ್ಲ. ನಿರೂಪಣೆ ಹೆಚ್ಚಿನ ಪೋಷಣೆಯನ್ನೂ, ಭಾಷೆ ಹೆಚ್ಚಿನ ಎಚ್ಚರವನ್ನೂ ಪಡೆದು ಸಂಪನ್ನವಾಗುವುದರತ್ತ ತುಡಿಯುತ್ತಿರುವುದನ್ನು ಕಾಣುತ್ತೇವೆ. ಅನುಭವವನ್ನು ದಾಟಿಸುವ ನಿಟ್ಟಿನಲ್ಲಿ ಅವರು ಸಾರ್ಥಕ ರೂಪಕಗಳನ್ನೂ, ಗ್ರಾಮೀಣ ಸೊಗಡಿನ ಚಿತ್ರಗಳನ್ನೂ ಬಳಸಿಕೊಳ್ಳುತ್ತಲೇ ಕಥೆಯ ರಾಚನಿಕ ಅಗತ್ಯಗಳತ್ತಲೂ ಗಮನ ನೀಡುತ್ತಾರೆ. ಆದರೆ ಎಷ್ಟು ಮತ್ತು ಹೇಗೆ ಎನ್ನುವುದು ತುಂಬ ಸೂಕ್ಷ್ಮ ವಿಚಾರವೇ ಆಗಿದೆ. ಇದರ ಸ್ಪಷ್ಟ ಚಿತ್ರ ನಮಗೆ ಟಿ ಎಸ್ ಗೊರವರ ಅವರ ಮುಂದಿನ ಸಂಕಲನ ‘ಮಲ್ಲಿಗೆ ಹೂವಿನ ಸಖ’ದಲ್ಲಿ ದೊರೆಯುವುದಾದರೂ ಅದರ ಬೀಜಗಳೆಲ್ಲ ಈ ಸಂಕಲನದಲ್ಲೇ ಬಿತ್ತಲ್ಪಟ್ಟಿವೆ ಎನ್ನುವುದು ನಿಜ. ಉದಾಹರಣೆಗೆ ಇಲ್ಲಿನ ‘ಕುರಿ ಕಾಯೋ ರಂಗನ ಕತೆ’, ‘ಕುದರಿ ಮಾಸ್ತರ’, ‘ಇದಿಮಾಯಿ ಕತ್ತಲು’, ‘ದುಃಖದ ಬಿಕ್ಕುಗಳು’ ಕತೆಯ ಅಂತ್ಯವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.

ರಂಗ ತನಗೆ ಜ್ವರ ಬಂದಿರಬಹುದೆಂಬ ಭ್ರಮೆಯಲ್ಲಿ ಕೌದಿ ಹೊದ್ದು ಜೊತೆಗಾರರು ಬರುವುದನ್ನೇ ಕಾಯುವುದರೊಂದಿಗೆ ಅವನ ಕತೆ ಮುಗಿಯುತ್ತದೆ. ಕುದರಿ ಮಾಸ್ತರರನ್ನು ಹಾದಿಯಲ್ಲಿನ ಸೆಗಣಿ ಅಣಕಿಸುತ್ತಿರುವಂತೆ ತೋರುತ್ತದೆ. ಇದಿಮಾಯಿ ಕತ್ತಲು ಕತೆಯ ಕತ್ತಲಿಗೆ ರಕ್ತದಾಹ ಇಂಗಿಲ್ಲ ಎನ್ನುವ ಅಥವಾ ಅದು ಇಂಗುವಂಥದ್ದಲ್ಲ ಎನ್ನುವಂಥ ಮಾತಿನ ಅಂತ್ಯವಿದೆ. ‘ದುಃಖದ ಬಿಕ್ಕುಗಳು’ ಕತೆಗೆ ಲಘುವಾದ ನಗೆಯ ಅಂತ್ಯವಿದೆ. ಈ ಬಗೆಯ ಅಂತ್ಯಗಳಿಗೇ ಇರುವ ಒಂದು ಅನುರಣನ ಶಕ್ತಿಯತ್ತ ನೋಡಿ. ಈ ಯಾವ ಅಂತ್ಯವೂ ಕತೆಗೆ ಕೊಡುವ ತಾತ್ಪೂರ್ತಿಕ ಅಂತ್ಯದಾಚೆಗೂ ಅಂತ್ಯವಿಲ್ಲದಂತೆ ಉಳಿಯುವ, ಓದುಗನ ಮನಸ್ಸಿನಲ್ಲಿ ಕಂಪನಗಳ ತೆರೆಯನ್ನು ಎಬ್ಬಿಸುತ್ತಲೇ ಇರುವ ಶಕ್ತಿಯಿದೆ. ಟಿ ಎಸ್ ಗೊರವರ ಅವರು ಈ ವಿಧಾನವನ್ನು ಹೆಚ್ಚು ಕಲಾತ್ಮಕವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ತಮ್ಮ ಮುಂದಿನ ಸಂಕಲನದಲ್ಲಿ ಬಳಸಿಕೊಂಡಿರುವುದನ್ನು ಕಾಣುತ್ತೇವೆ.

ಕತೆ, ಕವಿತೆ ಅಥವಾ ಪ್ರಬಂಧ ಹೀಗೆಯೇ ಇರಬೇಕು ಎನ್ನುವ ನಿಯಮಗಳನ್ನು ಯಾರೂ ಮಾಡುವುದಿಲ್ಲ. ಪ್ರಾಯೋಗಿಕತೆ ಮತ್ತು ಹೊಸತನದ ಹುಡುಕಾಟಗಳೇ ಅದನ್ನು ಕಾಲಕಾಲಕ್ಕೆ ಮರುವ್ಯಾಖ್ಯಾನಕ್ಕೊಡ್ಡುತ್ತಾ, ಹತ್ತೂ ದಿಕ್ಕಿಗೆ ಬೆಳೆಸುತ್ತಾ ತನ್ನ ದಾರಿಯನ್ನು ತಾನೇ ಕಂಡುಕೊಳ್ಳುತ್ತಿರುತ್ತದೆ. ಈ ನಿಟ್ಟಿನಲ್ಲಿ ಟಿ ಎಸ್ ಗೊರವರ ಅವರ ನಿರಂತರವಾಗಿರುವ ಪ್ರಾಯೋಗಿಕತೆ ಮತ್ತು ಪ್ರಯತ್ನಗಳನ್ನು ಗಮನಿಸುವುದು ಕುತೂಹಲಕರವಾಗಿದೆ.

No comments: