Sunday, February 16, 2020

ಕಥನದ ರಾಚನಿಕ ಹುಡುಕಾಟದಲ್ಲಿರುವ ‘ಭ್ರಮೆ’

ಟಿ ಎಸ್ ಗೊರವರ ಅವರ ಒಟ್ಟು ಸಾಹಿತ್ಯದ ಸಂದರ್ಭದಲ್ಲಿ ಅವರ ಮೊದಲ ಕಥಾಸಂಕಲನ "ಭ್ರಮೆ"ಗೆ ಅಷ್ಟೇನೂ ಮಹತ್ವವಿಲ್ಲ ಎನಿಸಬಹುದು. ಸ್ವತಃ ಗೊರವರ ಅವರೇ ಈ ಸಂಕಲನದ ಬಗ್ಗೆ ಕೇಳಿದಾಗ ಅಷ್ಟು ಉತ್ಸಾಹ ತೋರಲಿಲ್ಲ. ನಮ್ಮ ಹೆಚ್ಚಿನ ಲೇಖಕರಿಗೆ ತಮ್ಮ ಮೊದಲ ಕಥಾಸಂಕಲನದ ಬಗ್ಗೆ ಅಷ್ಟೇನೂ ಉತ್ಸಾಹವಿಲ್ಲ ಎನ್ನುವುದು ಕೂಡಾ ಅಷ್ಟೇ ನಿಜ. ಟಿ ಎಸ್ ಗೊರವರ ಅವರು ಮುಂದೆ ತಮ್ಮ ಎರಡನೆಯ ಕಥಾಸಂಕಲನ "ಕುದರಿ ಮಾಸ್ತರ" ಹೊರತಂದಾಗಲೂ ಈ ಸಂಕಲನದಿಂದ ಆಯ್ದ ಕತೆಗಳು ಎರಡೇ. ಅವುಗಳಲ್ಲಿ ಒಂದು, ಕಾಡು ಕುಸುಮ ಎನ್ನುವ ಕತೆ. ಅವರಿಗೆ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದ ಬಹುಮಾನ ತಂದುಕೊಟ್ಟ ಕತೆಯದು. ಇನ್ನೊಂದು ಚವರಿ ಮಾರೊ ದುಗ್ಗಿ ಕತೆ. ಸ್ವತಃ ಟಿ ಎಸ್ ಗೊರವರ ಅವರೂ ಮುಂದೆ ಇಲ್ಲಿ ಸಿಗುವ ಮಾದರಿಯ ಕತೆಗಳನ್ನು ಬರೆಯಲಿಲ್ಲ ಎನ್ನುವುದು ಕೂಡ ಮಹತ್ವದ ಅಂಶವೇ. ಆದರೆ ಈ ಸಂಕಲನದ ಬಗ್ಗೆ ಅಷ್ಟೇನೂ ನಿರುತ್ಸಾಹ ತೋರುವ ಅಗತ್ಯವಿಲ್ಲ ಎನಿಸುತ್ತದೆ.


ಒಂದು ಕಥಾಸಂಕಲನದ ಕತೆಗಳಲ್ಲಿ ನಾವು ನಿಜಕ್ಕೂ ಕಾಣಬಯಸುವುದೇನನ್ನು? ಹೊಸಬಗೆಯ ಜೀವನಾನುಭವಗಳಿಗೆ ನಮ್ಮನ್ನು ಕೊಂಡೊಯ್ಯಬಲ್ಲ ಕತೆಗಳಿಗಾಗಿಯೆ, ಮನಸ್ಸನ್ನು ಮುದಗೊಳಿಸಬಲ್ಲ ವಿವರಗಳಿಗಾಗಿಯೆ, ಯಾವುದೇ ಅರ್ಥ, ಆಕೃತಿ, ಹಣೆಬರಹ-ನಸೀಬುಗಳಂಥ ಅಮೂರ್ತ ಸಾಂತ್ವನದ ಉದ್ದೇಶಕ್ಕೆ ಹೊರತಾಗಿ ಕಾಣಬಲ್ಲ ಯಾವುದೇ ಕಾರ್ಯಕಾರಣ ಸಂಬಂಧಗಳೇ ಇಲ್ಲದ ಘಟನಾವಳಿಗಳು ತುಂಬಿದ ಈ ಬದುಕಿಗೆ ಒಂದು ಅರ್ಥ, ಇಲ್ಲಿನ ನೋವು ನಲಿವುಗಳಿಗೆಲ್ಲಾ ಒಂದು ತಾತ್ವಿಕತೆ ಇತ್ಯಾದಿ ಒದಗಿಸಬಲ್ಲಂತೆ ಸರಿಹೊಂದಿಸಿ, ಮರುಜೋಡಿಸಿ ವಿವರಿಸಬಲ್ಲ ಒಂದು ತಂತ್ರಕ್ಕಾಗಿಯೆ, ಮನೋಜಗತ್ತಿನ ಹೊಸ ಎಲ್ಲೆಕಟ್ಟುಗಳನ್ನು ಮುಕ್ತವಾಗಿ ತೆರೆಯಬಲ್ಲ ಒಂದು ಹೊಸದೇ ಅನುಭವಕ್ಕಾಗಿಯೆ?

ಟಿ ಎಸ್ ಗೊರವರ ಅವರ "ಭ್ರಮೆ" ಸಂಕಲನದಲ್ಲಿ ಒಟ್ಟು ಒಂಬತ್ತು ಕತೆಗಳಿವೆ. ಓದುಗರಿಗೆ ಕಿಂಚಿತ್ತೂ ಹೊರೆಯಾಗದಂತೆ, ಹೆಚ್ಚೆಂದರೆ ಎರಡೂವರೆ ಮೂರು ಪುಟಗಳಲ್ಲಿ ಮುಗಿದು ಬಿಡುವ ಕತೆಗಳೇ ಎಲ್ಲವೂ. ಅಷ್ಟೊಂದು ಸೀಮಿತ ಪದಗಳ ಇತಿಮಿತಿಯಲ್ಲಿ ಬರೆದ ಗೊರವರ ಅವರು ಖಡಾಖಂಡಿತವಾಗಿ ಹೇಳಬೇಕೆಂದರೆ ಕಥಾನಕವೇ ಇಲ್ಲದ ಚಿತ್ರಗಳನ್ನು ಕೂಡ ಇಲ್ಲಿ ಹಾಗೆಯೇ ಬಿಟ್ಟಂತಿರುವ ಉದಾಹರಣೆಗಳೂ ಇವೆ. ಹಾಗೇಕೆ ಮಾಡಿದ್ದಾರೆ ಇವರು, ಬಯಸಿದ್ದರೆ ಇವುಗಳನ್ನು ಮತ್ತಷ್ಟು ಬೆಳೆಸಿ, ಕೆಲವು ಪಾತ್ರಗಳನ್ನು, ಸನ್ನಿವೇಶಗಳನ್ನು, ಘಟನೆಗಳನ್ನು, ಗ್ರಾಮೀಣ ಬದುಕಿನ ಇನ್ನಷ್ಟು ವಿವರಗಳನ್ನು ಸೇರಿಸಿ ಒಂದು ಆಕೃತಿ, ಒಂದು ಕೇಂದ್ರ, ಒಂದು ಉದ್ದೇಶ ಇತ್ಯಾದಿ ಆರೋಪಿಸುವುದು ಕಷ್ಟವಿತ್ತೆ? ಹಾಗಿದ್ದೂ ಇವುಗಳೆಲ್ಲ ಈಗಿರುವ ರೂಪದಲ್ಲೇ ಉಳಿದಿರುವುದರ ಹಿನ್ನೆಲೆ ಏನಿರಬಹುದು ಎಂದು ಯೋಚಿಸಬೇಕೆನಿಸುತ್ತದೆ.

ಮುಂದೆ ಒಂದೆಡೆ ಟಿ ಎಸ್ ಗೊರವರ ಅವರು ಹೇಳುತ್ತಾರೆ, "ಎದುರಿಗಿರುವವನ ಮನೋಲೋಕದ ಬಣ್ಣಗಳು ಅಷ್ಟು ಸುಲಭಸಾಧ್ಯವಾಗಿ ಯಾರ ಅಂಕೆಗೂ ಸಿಗಲಾರವು, ಯಾರ ಮನಸ್ಸನ್ನು ಯಾರೂ ಪೂರ್ತಿ ಓದಲಾಗುವುದಿಲ್ಲ. ಅಂತೆಯೇ ಒಂದು ಅನುಭವವನ್ನು ದಾಟಿಸುವಾಗ ಆ ಮೂಲ ಅನುಭವ ರೂಪಾಂತರಗೊಳ್ಳುತ್ತದೆ. ಕೊನೆ ಕೊನೆಗೆ ದಕ್ಕಿದ ಅನುಭವ ಪೂರ್ತಿಯಾಗಿ ಎದೆ ದಾಟದೆ ಅಲ್ಲೇ ಪತರುಗುಟ್ಟುತ್ತದೆ. ಇಲ್ಲಿನ ಕತೆ ಹೇಳ ಹೊರಟ ನನ್ನ ಅತ್ಮವೂ ಅಂದುಕೊಂಡ ಎಲ್ಲವನ್ನೂ ಹೇಳಲಾಗದೆ ಪತರುಗುಟ್ಟುತ್ತಿದೆ. ಒಂದು ವಿಲವಿಲ ಹಾಗೇ ಉಳಿದು ಒಳಗೊಳಗೆ ಮೋಜು ನೋಡುತ್ತಿದೆ; ಕಾಲೊಳಗೆ ಮುರಿದುಕೊಂಡ ಮುಳ್ಳು ಚಿಟಮುಳ್ಳಾಡಿಸುತ್ತದಲ್ಲ ಹಾಗೆ."

ಒಂದು ಸಣ್ಣಕತೆಯ ಸಂದರ್ಭದಲ್ಲಿ ಕತೆಯನ್ನು ನೀವು ಹೇಗೆ ಮುಗಿಸುತ್ತೀರಿ ಎನ್ನುವುದರಲ್ಲಿ ಈ ಚಿಟಮುಳ್ಳಾಡಿಸುವ ಪ್ರಕ್ರಿಯೆ ಸುರುವಾಗುತ್ತದೆ ಎನ್ನಬಹುದು. ಕಾದಂಬರಿಯಲ್ಲಿ ಈ ಪ್ರಕ್ರಿಯೆ ಸಿದ್ಧಿಸುವ ಬಗೆ ಬೇರೆಯೇ ಇರುತ್ತದೆ. ಈ ನಿಟ್ಟಿನಿಂದ ಗೊರವರ ಅವರ ಕತೆಗಳನ್ನು ಗಮನಿಸುತ್ತ ಬಂದರೆ, "ಭ್ರಮೆ" ಬರೆಯುವ ಹೊತ್ತಿಗೆ ಅವರು ಒಂದು ಅನುಭವವನ್ನು ಕೊಟ್ಟ ಘಟನೆ ಅಥವಾ ಸನ್ನಿವೇಶಕ್ಕೆ ’ಕೈಯಿಂದ’ ಏನನ್ನೂ ಹಾಕದಿರುವ ನಿರ್ಧಾರ ತಳೆದಿದ್ದಂತೆಯೂ ಕಾಣುತ್ತದೆ. ಇಲ್ಲಿ ಒಂದು ಸ್ಪಷ್ಟ ಆಕೃತಿ ಇರುವ ಕತೆಯಾಗಿ ಕಂಡು ಬರುವುದು ‘ಚವರಿ ಮಾರೊ ದುಗ್ಗಿ ಕತೆ’, ‘ಕನಸು ಕರಗಿದಾಗ’ ಮತ್ತು ‘ಭ್ರಮೆ’ ಮಾತ್ರ. 

ಮನ್ನಣೆ, ಗೌರವ, ಸ್ಥಾನಮಾನ ಎಲ್ಲ ಪಡೆಯುವ ಕೆಲವೇ ಕೆಲವು ಪ್ರತಿಭಾನ್ವಿತರ ಸಾಲಿನಲ್ಲೇ ಪ್ರತಿಭೆ, ಕೌಶಲ ಎಲ್ಲ ಇದ್ದೂ ಯಾರ ಗಮನಕ್ಕೂ ಬಾರದುಳಿವ ಮಂದಿಯ ಕತೆಯನ್ನೇ ಸಾಂಕೇತಿಕವಾಗಿ, ಕಾವ್ಯಮಯವಾಗಿ, ಯಾವುದೋ ದೊಡ್ಡ ಕತೆಯ ನಡುವಿನಲ್ಲಿ ಬರುವ ಸಣ್ಣಪಾತ್ರದ ಒಂದು ಹಾಡೋ ಎಂಬಂತೆ ನಿರೂಪಿಸುವ ‘ಕಾಡು ಕುಸುಮ’ ಪೂರ್ಣಪ್ರಮಾಣದ ಕತೆಯೇನಲ್ಲ. ಸಂಕಲನದ ಅತ್ಯಂತ ಸುಂದರ ಕತೆ ‘ಮೌನ ಮುರಿಯುವ ಮುನ್ನ’ ಎಲ್ಲ ಕನಸುಗಂಗಳ ಯುವಕರ ಬದುಕಿನಲ್ಲಿಯೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಡೆದಿರುವಂಥದ್ದೇ. ಆದರೆ ಅದು ಒಂದು ಕತೆಯಾಗಬಹುದೆಂದು ಯಾರೂ ಭಾವಿಸಿರಲಿಕ್ಕಿಲ್ಲ. ಆಗಿದ್ದರೂ ಮಹತ್ವಾಕಾಂಕ್ಷೆಯ, ಹಿಂದು ಮುಂದು ಸಾಕಷ್ಟು ಬೆಳವಣಿಗೆಗಳೆಲ್ಲ ಇರುವ ಒಂದು ಪ್ರೇಮಕತೆಯ ನಡುವಿನ ಪುಟ್ಟ ದೃಶ್ಯವಾಗಿ ಎನ್ನುವುದು ನಿಜ.

‘ಲಾಟರಿ’ ಕತೆಯಲ್ಲೂ ನಾವು ಕಾಣುವುದು ಒಂದು ಪುಟ್ಟ ವಸ್ತುಸ್ಥಿತಿಯನ್ನೇ ಹೊರತು ಕಥನವನ್ನಲ್ಲ ಎನ್ನುವುದನ್ನು ಗಮನಿಸಿ. ಇಂಥ ಸ್ಟಾಟಿಕ್ ಆದ, ಕಥನದ ದೃಷ್ಟಿಯಿಂದ ಚಲನೆಯಿರದ ವಿದ್ಯಮಾನಗಳನ್ನೇ ‘ಕೆರೆಯ ದಂಡೆಯ ಮೇಲೆ ಕುಳಿತು’, ‘ವಾಸ್ತವ’ ಮತ್ತು ‘ದಿನಚರಿಯ ಪುಟಗಳು’ ನಮಗೆ ಕಟ್ಟಿಕೊಡುತ್ತಿವೆ. ಯಾಕೆ, ಇವುಗಳನ್ನೇ ಸಮೃದ್ಧವಾದ ಕಥಾನಕದ ಆವರಣದಲ್ಲಿಟ್ಟು ಅಥವಾ ಬೆಳೆಸಿ ಕೊಡುವುದು ಸಾಧ್ಯವಿರಲಿಲ್ಲವೆ? ಇತ್ತು. ಆದರೆ ಟಿ ಎಸ್ ಗೊರವರ ಅವರು ಅದನ್ನು ಮಾಡುವುದಿಲ್ಲ. ಅವರಿಗೆ ಹಾಗೆ ಮಾಡುವುದು ಕೃತಕ ಅನಿಸಿದೆ. ಆದರೆ ಹಾಗನಿಸಿದ್ದು ‘ಅಲ್ಲಿ ನಡೆದಿದ್ದೇ ಅಷ್ಟು, ಹಾಗಾಗಿ ನಾನು ಅಷ್ಟನ್ನೇ ಬರೆದೆ’ ಎಂಬ ಹುಂಬ ಕಾರಣಕ್ಕಾಗಿ ಅಲ್ಲ ಎನ್ನುವುದನ್ನೂ ನಾವು ತಪ್ಪದೇ ಗಮನಕ್ಕೆ ತಂದುಕೊಳ್ಳಬೇಕು. ನಮ್ಮ ಕೆಲವು ಕತೆಗಾರರಿಗೆ ಅಂಥ ಒಂದು ಭ್ರಮೆಯಿದೆ. ನಾನು ವಾಸ್ತವವಾಗಿ ನಡೆದಿದ್ದನ್ನಷ್ಟೇ ಕತೆಯಾಗಿಸುತ್ತೇನೆ ಮತ್ತು ಹಾಗೆ ಮಾಡುವುದರಿಂದ ವಾಸ್ತವಕ್ಕೆ ಅತ್ಯಂತ ನಿಷ್ಠನಾಗಿ ಬರೆಯುವುದರಿಂದ ಶ್ರೇಷ್ಠ ಕತೆಯೊಂದನ್ನು ಬರೆಯುತ್ತೇನೆ/ಬರೆದಿದ್ದೇನೆ ಎಂಬ ಭ್ರಮೆಯದು. ಟಿ ಎಸ್ ಗೊರವರ ಅವರದ್ದು ಈ ಹುಂಬತನವಲ್ಲ. ಬದಲಿಗೆ ಅವರಿಗೆ ಅನುಭವವನ್ನು ದಾಟಿಸುವ ಸಶಕ್ತ ಮಾರ್ಗವೇ ಇದಾಗಿ ಕಂಡಿದೆ ಎನ್ನುವುದನ್ನು ನಾವು ಅರಿಯದೇ ಹೋದರೆ ಮೋಸ ಹೋಗುವ ಅಪಾಯವಿದೆ.

ಒಂದು ನೋವು ಅಥವಾ ಇಡೀ ಸಂಸಾರದ ಸಂಕಷ್ಟ, ಸಂಘರ್ಷಗಳಿಗೆ ಮೂಲವಾದ ವಿದ್ಯಮಾನವನ್ನು ಕತೆಯ ಹೊದಿಕೆಯಲ್ಲಿ ಮುಚ್ಚಿಹಾಕಿ ಕತೆಗಾರನ ನೈಪುಣ್ಯ, ಕಲೆ ಮತ್ತು ಪ್ರತಿಭೆಯ ಪ್ರದರ್ಶನದಲ್ಲಿ ಮೆರೆಸುವ ವಿಧಾನಕ್ಕೆ ಟಿ ಎಸ್ ಗೊರವರ ಮುಂದಾಗದೇ ಇರುವುದನ್ನಷ್ಟೇ ಇಲ್ಲಿ ಕಾಣುತ್ತೇವೆ. ಇದು ಟಿ ಎಸ್ ಗೊರವರ ಅವರಲ್ಲಿನ ಕತೆಗಾರನ ಸೋಲಲ್ಲ, ಬದಲಿಗೆ ಅನುಭವವನ್ನು ದಾಟಿಸುವ ಯುಕ್ತಾಯುಕ್ತ ಮಾರ್ಗದ ಶೋಧನೆಯ ಒಂದು ಪ್ರಯೋಗವಾಗಿ, ಮಾನವೀಯತೆಯ ಮೇಲ್ಗೈಯಾಗಿ ಕತೆಗಾರನ ಗೆಲುವೇ ಎಂದು ತಿಳಿಯಬೇಕು. ಇದನ್ನು ನಿಸ್ಸಂದಿಗ್ಧವಾಗಿ ಸಾಬೀತು ಪಡಿಸುವಂಥ ಕತೆಗಳನ್ನು ಮುಂದೆ ಗೊರವರ ಅವರೇ ಬರೆದಿರುವುದು ನನ್ನ ಮಾತನ್ನು ಸಮರ್ಥಿಸುವಂತಿದೆ.

No comments: