Sunday, February 16, 2020

ಅಪರೂಪದ ಕಾದಂಬರಿ ‘ರೊಟ್ಟಿ ಮುಟಗಿ"

ಹಲವು ಕಾರಣಗಳಿಗಾಗಿ ಟಿ ಎಸ್ ಗೊರವರ ಅವರ ಕಾದಂಬರಿ ‘ರೊಟ್ಟಿ ಮುಟಗಿ’ ಮುಖ್ಯವಾಗುತ್ತದೆ.


ಮೊದಲಿಗೆ ಇದು ಕಟ್ಟಿಕೊಡುವ ಒಂದು ಗ್ರಾಮೀಣ ಬದುಕಿನ ಚಿತ್ರವೇನಿದೆ, ಅದು ಪರಿಪೂರ್ಣವಾಗಿ ಇದರಲ್ಲಿ ಮೂಡಿ ಬಂದಿದೆ ಎನ್ನುವುದಕ್ಕೆ ಟಿ ಎಸ್ ಗೊರವರ ಅವರದೇ ‘ಆಡು ಕಾಯೋ ಹುಡುಗನ ದಿನಚರಿ’ ನಮಗೆ ಸಾಕ್ಷ್ಯ ಒದಗಿಸುತ್ತದೆ. ಆಡು ಕಾಯೋ ಹುಡುಗನ ದಿನಚರಿಗೆ ಕೆಲವು ಇತಿಮಿತಿಗಳಿದ್ದವು. ಮೊದಲಿಗೆ ಅದು ಫಿಕ್ಷನಲ್ ಆಗಿರಲಿಲ್ಲ. ಆತ್ಮಚರಿತ್ರೆ ಬರೆಯುವ ಪ್ರತಿಯೊಬ್ಬರೂ ಎದುರಿಸುವ ಕೆಲವೊಂದು ಕಟ್ಟುಪಾಡು, ಇತಿಮಿತಿ ಅದಕ್ಕಿದ್ದೇ ಇತ್ತು. ಮೇಲಾಗಿ ಅದನ್ನು ಬರೆಯುತ್ತಿದ್ದ ಲೇಖಕ ಆಗಿನ್ನೂ ಯುವಕ. ಹಾಗಾಗಿ ಅಲ್ಲಿದ್ದ ಚಿತ್ರ ಮುಖ್ಯವಾಗಿ ಬಾಲ್ಯದ್ದು. ಅದರಾಚೆಯದನ್ನು ಕಾಣಲಾರದ/ಹೇಳಲಾರದ ತೊಡಕು ಅದಕ್ಕಿತ್ತು. ಇವನ್ನೆಲ್ಲ ಮೀರಲು ಸಾಧ್ಯವಾಗುವುದು ತನ್ನ ಬಾಲ್ಯದ ಸಮೃದ್ಧ ಅನುಭವ ಮತ್ತು ಗ್ರಹಿಕೆಗಳನ್ನು ಕಲ್ಪನೆಯ ಮೂಸೆಯಲ್ಲಿಟ್ಟು ವ್ಯಕ್ತಿ ಮತ್ತು ಘಟನೆಗಳನ್ನು ಮೀರಿ ಬದುಕನ್ನು ಕಾಣುವ ಪ್ರಯತ್ನಕ್ಕೆ ತೊಡಗಿದಾಗಲೇ. ‘ರೊಟ್ಟಿ ಮುಟಗಿ’ಯಲ್ಲಿ ಟಿ ಎಸ್ ಗೊರವರ ಅವರು ಮಾಡಿರುವುದು ಅದನ್ನೇ. ಟಿ ಎಸ್ ಗೊರವರ ಅವರ ಬಾಲ್ಯದ ಒಂದು ಸುಂದರ ಚಿತ್ರ ನಮಗೆ ಅವರ ‘ಆಡು ಕಾಯೋ ಹುಡುಗನ ದಿನಚರಿ’ಯಲ್ಲಿ ದೊರಕಿರುವುದರಿಂದ ನಮಗಿದನ್ನು ಹೆಚ್ಚು ಆಪ್ತವಾಗಿ ಗ್ರಹಿಸಲು ಸಾಧ್ಯವಾಗುವುದು ಒಂದು ಹೆಚ್ಚುವರಿ ಲಾಭ.

‘ರೊಟ್ಟಿ ಮುಟಗಿ’ ಕಾದಂಬರಿ ಬಹುಶಃ ತನಗೇ ತಿಳಿಯದ ಹಾಗೆ ಒಂದು ದುಷ್ಟವ್ಯವಸ್ಥೆಯ ಸುಪ್ತ ನಿಯಂತ್ರಣಕ್ಕೊಳಗಾಗಿ ಬದುಕು ಕರಟಿದವರ ಕಥಾನಕವಾಗಿಯೂ ಬಹುಮುಖ್ಯ ಕೃತಿಯಾಗಿದೆ. ಇದನ್ನು ಸ್ವಲ್ಪ ವಿವರಿಸಬೇಕು. ಇತ್ತೀಚೆಗೆ ನನ್ನ ಸಹೋದ್ಯೋಗಿಯೊಬ್ಬರ ತಾಯಿ, ಎಂಬತ್ಮೂರರ ವೃದ್ಧೆ ಬಿದ್ದು ತೋಳು ಮತ್ತು ತೊಡೆಯ ಒಂದು ಮೂಳೆ ಮುರಿದುಕೊಂಡರು. ಯಾವತ್ತೂ ಜಿಲ್ಲೆಯಿಂದ ಹೊರಗೆ ಹೋಗಿರದ ನನ್ನ ಸಹೋದ್ಯೋಗಿ ಮೊನ್ನೆ ಅನಿವಾರ್ಯವಾಗಿ ಶನಿವಾರ ಮತ್ತು ಸೋಮವಾರ ರಜೆ ಹಾಕಿ, ಭಾನುವಾರದ ರಜೆ ಹೊಂದಿಸಿಕೊಂಡು ಪತ್ನಿ ಮತ್ತು ಮಕ್ಕಳ ಸಮೇತ ಗೋವಕ್ಕೆ ಹೋಗಿದ್ದರು. ಮನೆಯಲ್ಲಿ ತಾಯಿಯೊಬ್ಬರೇ ಇದ್ದರು. ಆಗಲೇ ಭಾನುವಾರ ಚರ್ಚಿಗೆ ಹೋಗಿ ಮರಳುವವರು ಪರಿಚಯದವರೊಬ್ಬರ ಕಾರಿನಲ್ಲಿ ಹಿಂದಿರುಗಿ, ಸ್ವಲ್ಪ ಬೇರೆ ಹಾದಿಯಿಂದ ತಮ್ಮ ಮನೆಗೆ ನಡೆದು ಬರುತ್ತಿದ್ದರು. ಮೆಟ್ಟಿಲು ಇಳಿಯುವಾಗ ಆಯ ತಪ್ಪಿ ಬಿದ್ದರು. ಯಾರೋ ಪುಣ್ಯಾತ್ಮರು ಮನೆ ಸೇರಿಸಿದರೂ ಮನೆಯಲ್ಲಿ ಯಾರೂ ಇರಲಿಲ್ಲವಲ್ಲ. ಸೋಮವಾರ ರಾತ್ರಿ ಹಿಂದಿರುಗಿದ ಮಗ, ಸೊಸೆ ಎಲ್ಲರಿಗೂ ಗಾಭರಿಯಾದರೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ತೊಡಗಿದ್ದು ಮಂಗಳವಾರ. ಬಳಿಕ ಸರ್ಜರಿ ಮಾಡಬೇಕಾಯ್ತು. ನಡೆಯುವುದು ಸಾಧ್ಯವಿಲ್ಲದ್ದರಿಂದ ಒಬ್ಬರು ಸದಾ ಹತ್ತಿರ ಇರಬೇಕಾಯಿತು. ಮಗ ಸೊಸೆ ಇಬ್ಬರೂ ಕೆಲಸದಲ್ಲಿರುವುದರಿಂದ ಒಬ್ಬ ಹೋಮ್‌ನರ್ಸ್ ಸೇವೆ ಪಡೆಯಬೇಕಾಯ್ತು, ಸರ್ಜರಿಯ ಬಳಿಕ ಫಿಸಿಯೋಥೆರಪಿ ಅತ್ಯಂತ ಅಗತ್ಯವಿದ್ದು, ಈಕೆ ನಡೆಯಲಾರದ್ದರಿಂದ ಮನೆಗೇ ಬರುವ ಫಿಸಿಯೋಥೆರಪಿಸ್ಟ್‍ಗೆ ದಿನಕ್ಕೆ ಏಳು ನೂರು ರೂಪಾಯಿ ತೆರಬೇಕಾಗುತ್ತದೆ. ಅವರು ಸಾಕಷ್ಟು ಸ್ಥಿತಿವಂತರಾದ್ದರಿಂದ ಇದೆಲ್ಲ ಅವರಿಗೆ ಸಾಧ್ಯವಿದೆ. 

ನಿನ್ನೆ ಆಫೀಸಿನಿಂದ ಮನೆಗೆ ಬರುತ್ತಿರ ಬೇಕಾದರೆ ನಮ್ಮ ಸಿಟಿ ಬಸ್ಸಿನ ಕೊನೆಯ ಸಾಲಿನಲ್ಲಿ ಒಬ್ಬ ನಡುವಯಸ್ಸಿನ ಗಂಡಸನ್ನು ಕಂಡೆ. ಪಕ್ಕದ ಸೀಟು ಖಾಲಿಯಾದರೂ ನಿಂತಿದ್ದವರಲ್ಲಿ ಯಾರೂ ಅಲ್ಲಿ ಕೂರಲು ತಯಾರಿಲ್ಲದ್ದನ್ನು ಕಂಡು ಅವನನ್ನು ಗಮನಿಸಿದೆ. ಮೊದಲಿಗೆ ಆತ ಸ್ವಲ್ಪ ಕೊಳಕಾಗಿದ್ದ ಅನಿಸಿದರೂ ಸೂಕ್ಷ್ಮವಾಗಿ ಗಮನಿಸಿದರೆ ಸ್ವಚ್ಛವಾಗಿಯೇ ಇದ್ದ. ಆದರೆ ಅವನ ಎಡಗೈ ಸೊಟ್ಟಗಾಗಿತ್ತು. ಬಹುಶಃ ಅವನು ಅದನ್ನು ಎಲ್ಲಿಯೋ ಬಿದ್ದು ಮುರಿದುಕೊಂಡಿದ್ದ. ಅದನ್ನು ಜೋಡಿಸಿದ್ದರೂ ಸರಿಯಾದ ಫಿಸಿಯೋಥೆರಪಿ ನಡೆಯದೆ ಅದು ಸೊಟ್ಟಗಾಗಿಯೇ ಗಟ್ಟಿಯಾಗಿಬಿಟ್ಟಿತ್ತು ಅಂತ ಅನಿಸಿತು. ಆತ ಆ ಕೈಯಿಂದಲೇ ತನ್ನ ಶೇಷಾಯುಷ್ಯವನ್ನೆಲ್ಲ ಕಳೆಯಬೇಕು, ಸರಿಯಾಗಿ, ಚುರುಕಾಗಿ ಯಾವುದೇ ಕೆಲಸವನ್ನು ಆತ ಮಾಡುವುದು ಕಷ್ಟ ಎಂದೆಲ್ಲ ಅನಿಸುತ್ತಿರುವಾಗಲೇ ಅವನು ಈ ಜಿಲ್ಲೆಯವನಾಗಿರದೆ ಉತ್ತರ ಕರ್ನಾಟಕದ ಯಾವುದೋ ಊರಿನಿಂದ ಗುಳೆ ಬಂದವನೇ ಇರಬೇಕು ಅನಿಸತೊಡಗಿತು. ಆತನೊಂದಿಗೆ ಮಾತನಾಡತೊಡಗಿದಂತೆ ತಿಳಿದಿದ್ದೆಂದರೆ ಅದು ನಿಜವಾಗಿತ್ತು. ಸರಿಯಾದ ಸಮಯಕ್ಕೆ ಸರಿಯಾದ ರೀತಿ ಕೇರ್ ತೆಗೆದುಕೊಳ್ಳುವುದಕ್ಕೆ ಯಾರೂ ಇರಲಿಲ್ಲ ಅಥವಾ ಇದ್ದವರಿಗೆ ಪುರುಸೊತ್ತೂ ಇರಲಿಲ್ಲ. ಹೊಟ್ಟೆಪಾಡು ಇವನ ಕೈಯ ರೂಪುರೇಶೆಗಿಂತ ಅವರೆದುರಿಗಿದ್ದ ದೊಡ್ಡ ಪ್ರಶ್ನೆಯಾಗಿತ್ತು.

ನಮಗೆ, ನಗರದಲ್ಲಿದ್ದು ಹೆಚ್ಚು ಕಷ್ಟವಿಲ್ಲದೆ ಹೆಲ್ತ್‌ಕೇರ್ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವವರಿಗೆ ಇದೆಲ್ಲ ಸಮಸ್ಯೆ ಅನಿಸುವುದಿಲ್ಲವೇನೋ, ಗೊತ್ತಿಲ್ಲ. ಆದರೆ ಟಿ ಎಸ್ ಗೊರವರ ಅವರು ಚಿತ್ರಿಸುತ್ತ ಬಂದ ಒಂದು ಜಗತ್ತಿನ ಪಾತ್ರಗಳೇನಿವೆ, ಅವು ಹೆಚ್ಚಿನೆಲ್ಲಾ ಸೌಕರ್ಯ/ಸವಲತ್ತುಗಳಿಗೆ ಹೊರತಾದ ಒಂದು ಜಗತ್ತಿನಲ್ಲಿ ಬದುಕುತ್ತಿರುವವರು. ಅವರಿಗೆ ಇಂಥವೆಲ್ಲ ಜಗತ್ತಿನಲ್ಲಿವೆ ಎನ್ನುವುದೇ ಎಷ್ಟೋ ಬಾರಿ ಗೊತ್ತಿಲ್ಲ. ಕೂಪಮಂಡೂಕಗಳೆಂದು ಸುಲಭವಾಗಿ ಮೂತಿ ತಿರುವಬಹುದಾದರೂ ಅವರ ಈ ಸ್ಥಿತಿಗೆ ನಾವು ಮುಖ್ಯವಾಗಿ ಕಾರಣರಾಗಿದ್ದೇವೆಂಬ ಅರಿವು ನಮಗಿರಬೇಕಾಗಿದೆ. ಆ ಬಗ್ಗೆ ನಾವು ತಲೆತಗ್ಗಿಸಬೇಕಾದ್ದಿದೆ.


Curtailed Life ಹೇಗಿರುತ್ತದೆ ಎನ್ನುವುದರ ಸರಳ ನೇರ ಚಿತ್ರಗಳಿಗಾಗಿಯೇ ನಾವೆಲ್ಲ ಗೊರವರ ಅವರಿಗೆ ಕೃತಜ್ಞರಾಗಿರಬೇಕು. ಕನ್ನಡದ ಇನ್ಯಾವುದೇ ಲೇಖಕ ಇದನ್ನು ಈ ರೀತಿ ಮಾಡಿದ್ದು ನನಗೆ ತಿಳಿದಿಲ್ಲ. ಶಿಕ್ಷಣಕ್ಕೆ, ಆರೋಗ್ಯಕರ ಆಹಾರಕ್ಕೆ, ಆರೋಗ್ಯಕರ ಜೀವನ ಪದ್ಧತಿ/ಶೈಲಿ ಎಲ್ಲಕ್ಕೂ ಇವರಿಗೆ ಹೆಬ್ಬಾಗಿಲು ಜಡಿದವರು ಇನ್ಯಾರೂ ಅಲ್ಲ, ನಾವೇ. ಗೊರವರ ಅವರ ಒಂದು ಕತೆಯಲ್ಲಿ, ‘ಸೊಂಪಾಗಿ ಸುರಿದರೆ ಸಾಕಿತ್ತೊ ಮಳೆರಾಯ’ ಕತೆಯಲ್ಲಿ, ಊರ ಹಿರಿಯ/ಮುಖಂಡನಂತಿರುವ ಒಂದು ಪಾತ್ರ ಒಂದು ಸಹಾಯ ಮಾಡೆಂದು ಬೇಡಿಕೊಳ್ಳುತ್ತದೆ. ಐನೂರು ರೂಪಾಯಿ ಪರಿಹಾರ ಕೊಟ್ಟಿದ್ದಾರೋ ಮಹರಾಯ, ಏನಾದರೂ ಮಾಡಿ ಸ್ವಲ್ಪ ಪರಿಹಾರ ಕೊಡಿಸೋ ಎಂದು ಅಲವತ್ತುಕೊಳ್ಳುತ್ತದೆ. ಆ ಮಂದಿ ಬಸ್‌ಸ್ಟ್ಯಾಂಡುಗಳಲ್ಲಿ ಮನೆ ಮಾಡಿಕೊಂಡು, ನಿಂತ ಮಳೆನೀರಿನಲ್ಲೇ ನಿಂತುಕೊಂಡೇ ಶೌಚವನ್ನು ಮಾಡಿ, ಅದೇ ನೀರನ್ನೂ ಕುಡಿಯುವುದಕ್ಕೂ ಬಳಸುತ್ತ ದಿನ ಕಳೆಯುತ್ತಿರುವ ಚಿತ್ರವಿದೆ. ಅಲ್ಲಿ ಅದೆಲ್ಲ ದೈನಂದಿನವಾಗಿದ್ದ ಹೊತ್ತಿನಲ್ಲೇ ಇಲ್ಲಿ ಮಂತ್ರಿಯಾಗುವುದಕ್ಕೆಂದು ಸರಕಾರ ಕೆಡಹುವ, ಕಟ್ಟುವ ಕಾಯಕದಲ್ಲಿ ನಮ್ಮ ಜನಪ್ರತಿನಿಧಿಗಳು ವ್ಯಸ್ತರಾಗಿದ್ದರು. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಎನ್ನುತ್ತ ಪರಿಹಾರಕ್ಕೆ ಪಂಗನಾಮ ಬಿತ್ತು.

ಗೊರವರ ಅವರ ಕತೆಗಳಲ್ಲಿ ಅನಗತ್ಯ ದುರಂತಗಳು ಎದುರಾಗುತ್ತವೆ ಎಂದು ನಮಗೆ ಅನಿಸುವ ಸ್ಥಿತಿಯಿದೆ. ಯಾಕೆ ಇಲ್ಲಿ ಗೊರವರ ಅವರು ಆ ಪಾತ್ರವನ್ನು ಕೊಂದು ಬಿಟ್ಟರು ಅನಿಸುವುದಿದೆ. ಆದರೆ ಅವರು ಬದುಕನ್ನು ಹತ್ತಿರದಿಂದ ಕಂಡವರು, ಬದುಕಿನ ಸಂಕಟ, ಅಸಹಾಯಕತೆ, ನೋವು, ದುರಂತ ಎಲ್ಲ ಹೇಗೆ, ಎಲ್ಲಿಂದ ವಕ್ಕರಿಸುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಕಂಡು ಅನುಭವಿಸಿದವರು. ಕುಟುಂಬದ ಆಧಾರಸ್ತಂಭವನ್ನು ಎಲ್ಲ ಸುಖದಿಂದ ನೆಮ್ಮದಿಯಿಂದ ಇದ್ದಾರೆನ್ನುವಾಗಲೇ ಅವರು ಕೆಡವಿ ಬೀಳಿಸುತ್ತಾರೆ. ಹಾತೊರೆದು ಕಾದು ತಿನ್ನಲು ಬಾಯ್ತೆರೆದ ಪೆಪ್ಪರಮೆಂಟೋ, ಐಸ್‌ಕೀಮೋ ಮಗುವಿನ ಸಾವಿನಲ್ಲಿ ಕರಗುತ್ತದೆ. ಪ್ರೀತಿಸಿದ ಮಡದಿಯೊಂದಿಗೆ ರಸಿಕ ಬದುಕು ಸೆಲೆಯೊಡೆಯುತ್ತಿರುವಾಗಲೇ ಹಾವು ಕಡಿಯುತ್ತದೆ ಅಥವಾ ಬೆಂಕಿಗೆ ರಕ್ತದ ರುಚಿ ಹತ್ತುತ್ತದೆ. ಬದುಕು ಛಿದ್ರವಾಗುತ್ತದೆ.

‘ರೊಟ್ಟಿ ಮುಟಗಿ’ಯಲ್ಲಿ ನಿರೂಪಣೆಯ ಸೊಗಡು ಒಂದು ಪಟ್ಟು ಹೆಚ್ಚು ಸುಂದರವಿದೆ, ಲಾಲಿತ್ಯದಿಂದ ಮನಸೆಳೆಯುತ್ತದೆ. ಕಥಾನಕ ನೇರವಿದೆ, ಚುರುಕಾಗಿದೆ, ಮನಮುಟ್ಟುವಂತಿದೆ. ಒಂದರ್ಥದಲ್ಲಿ ಈ ಕಾದಂಬರಿಯಲ್ಲಿ ಎಲ್ಲ ನವರಸಗಳೂ ಮೇಳೈಸಿವೆ. ಇದೊಂದು ಎಲ್ಲ ನಿಟ್ಟಿನಿಂದಲೂ ಸುಂದರವಾದ ಕೃತಿ. ಆದರೆ ಟಿ ಎಸ್ ಗೊರವರ ಅವರ ಉದ್ದೇಶ ಮಾತ್ರ ಒಂದು ಕಾದಂಬರಿ ಬರೆದು ಮನರಂಜಿಸಿ ಮೈಮರೆಸುವುದಲ್ಲ, ತಾವು ತನ್ಮೂಲಕ ಖ್ಯಾತಿಯನ್ನೆದಿ ಮೆರೆಯುವುದೂ ಅಲ್ಲ. ಅಷ್ಟರಮಟ್ಟಿಗೆ ಅವರ ಕಾಳಜಿ, ಕಳಕಳಿ ಸ್ತುತ್ಯ, ಮಾನವಿಕ ಮತ್ತು ಸ್ಪಷ್ಟ.

‘ರೊಟ್ಟಿ ಮುಟಗಿ’ ಯನ್ನು ಬಿಡಿಯಾಗಿ ಓದಿದರೆ ಬಹುಶಃ ಗದಗ ಸೀಮೆಯ ಗ್ರಾಮೀಣ ಬದುಕಿನ ಒಂದು ಸುಂದರ ರಮ್ಯ ದೃಶ್ಯದ ನೋಟವಷ್ಟೇ ದಕ್ಕಬಹುದೇನೋ. ಅವರ ಕೆಲವಾದರೂ ಕಥಾಸಂಕಲನಗಳೊಂದಿಗೆ, ಮುಖ್ಯವಾಗಿ ‘ಆಡುಕಾಯೋ ಹುಡುಗನ ದಿನಚರಿ’ಯೊಂದಿಗೆ ಓದಿದರೆ ಅದು ತೆರೆದಿಡುವ ಬದುಕು ಬವಣೆಗಳ ಚಿತ್ರ ಪೂರ್ಣವಾದೀತು.

No comments: