Sunday, February 16, 2020

ಹೊಸ ಮಾದರಿಯ ಕತೆಗಳು: ಮಲ್ಲಿಗೆ ಹೂವಿನ ಸಖ

ತುಂಬ ಸುದ್ದಿ ಮಾಡಿದ, ಬಹುಪ್ರಶಂಸೆಗೆ ಭಾಜನವಾದ ಕಥಾಸಂಕಲನ ಟಿ ಎಸ್ ಗೊರವರ ಅವರ ‘ಮಲ್ಲಿಗೆ ಹೂವಿನ ಸಖ’. ಇದಕ್ಕೂ ಮುನ್ನ ಅವರು ‘ರೊಟ್ಟಿ ಮುಟಗಿ’ ಎನ್ನುವ ಒಂದು ಕಾದಂಬರಿಯನ್ನೂ ಪ್ರಕಟಿಸಿದ್ದು ಅದೂ ಸಾಕಷ್ಟು ಖ್ಯಾತಿಯನ್ನೂ, ಓದುಗರ ಪ್ರೀತಿಯನ್ನೂ ಪಡೆದಿತ್ತು ಎನ್ನುವುದು ಇಲ್ಲಿ ಉಲ್ಲೇಖನಾರ್ಹ.

‘ಮಲ್ಲಿಗೆ ಹೂವಿನ ಸಖ’ ಸಂಕಲನದಲ್ಲಿ ಒಟ್ಟು ಆರು ಕತೆಗಳಿವೆ. ಈ ಆರೂ ರಚನೆಗಳು ಕತೆಯ ವಸ್ತು, ತಂತ್ರ, ಆಕೃತಿ, ನಿರೂಪಣೆ ಮತ್ತು ಕಥಾಜಗತ್ತಿನ ನೆಲೆಯಿಂದ ತೀರ ಹೊಸಬಗೆಯ ಕತೆಗಳು, ಟಿ ಎಸ್ ಗೊರವರ ಅವರ ದೃಷ್ಟಿಯಿಂದಲೂ, ಅಲ್ಲದೆಯೂ. ಇವುಗಳಲ್ಲಿ ಒಂದು ವಿಧದ ಕಾವ್ಯಮಯತೆ ಎದ್ದು ಕಾಣುವ ಗುಣ. ಹಾಗೆಯೇ ಇಲ್ಲಿ ‘ಕತ್ತಲಿನಾಚೆ’ ಕತೆಯನ್ನು ಹೊರತು ಪಡಿಸಿದರೆ ಹೇಳುವಂಥ ಕಥಾನಕದ ಚಲನೆಯನ್ನು ದಾಖಲಿಸುವಂಥ ಕಥಾನಕವೇ ಇಲ್ಲ. ಹೆಚ್ಚಿನೆಲ್ಲಾ ಕತೆಗಳು ಮೊದಲ ಕತೆಯ ಹೆಸರು ‘ಮನಸಿನ ವ್ಯಾಪಾರ’ ಹೇಳುವಂತೆ ಮನಸ್ಸಿನ ವ್ಯಾಪಾರದ ಕುರಿತೇ ಇರುವುದು ಆಶ್ಚರ್ಯವಾದರೂ ನಿಜ. ಈ ಮನಸ್ಸಿನ ವ್ಯಾಪಾರ ಎಂಬುದು ಕತೆಗಾರನ, ಕತೆಯ ಪಾತ್ರದ ಮತ್ತು ಓದುಗವರ್ಗದ ಮನಸ್ಸಿನ ವ್ಯಾಪಾರ ಕೂಡಾ ಆಗುವುದು ನಿಜವಾದ ತ್ರೀಡೈಮೆನ್ಷನಲ್ ಪ್ರಕ್ರಿಯೆಯಾಗಿದೆ.


[ಟಿ ಎಸ್ ಗೊರವರ ಅವರ ಮೊದಲ ಕಥಾಸಂಕಲನ ‘ಭ್ರಮೆ’ ಕುರಿತು ಬರೆಯುತ್ತ ಲಕ್ಕೂರು ಸಿ ಆನಂದ ಅವರು ಕತೆಯೊಂದನ್ನು ಓದುವಾಗ ಅದು ನಮ್ಮ ಕತೆಯೂ ಆಗಿರುವ ಅನುಭವವಾಗುವುದೇ ತ್ರೀಡೈಮೆನ್ಷನಲ್ ಪ್ರಕ್ರಿಯೆ ಎಂದೆಲ್ಲ ಬರೆದಿರುವುದನ್ನು ಗಮನಿಸಿ ಹೇಳಿದೆ ಅಷ್ಟೆ. ಇಂಥ ಬರಹಗಳು ಸಂಕಲನದೊಳಗೇ ಓದಲು ಸಿಗುವಾಗ ಅವುಗಳಿಗೆ ಪ್ರತಿಕ್ರಿಯೆಯನ್ನೂ ಕೃತಿಗೆ ಸ್ಪಂದಿಸುವಾಗಲೇ ದಾಖಲಿಸದೆ ನಿರ್ವಾಹವಿಲ್ಲ. ಕತೆಯೊಂದನ್ನು ಓದುವಾಗ ಅದು ಓದುಗನ ಅನುಭವವೂ ಆಗಿ ಜೀವಂತಿಕೆ ಪಡೆಯಬೇಕಿರುವುದು ಒಂದು ಒಳ್ಳೆಯ ಕತೆಯ ಸಾಮಾನ್ಯ ಲಕ್ಷಣ ಅಷ್ಟೆ. ಅಷ್ಟನ್ನೂ ಮಾಡಲಾರದ ಕತೆಯನ್ನು ಓದುವ ಅಗತ್ಯವಾದರೂ ಏನಿದೆ!

‘ಅನುಭವದ ವಿಸರ್ಜನೆಯಲ್ಲಿಯೇ ನಿಜವಾದ ಅನುಭವದ ಆರಂಭವಿದೆ’ ಎಂದೂ ಲಕ್ಕೂರು ಸಿ ಆನಂದ ಅವರು ಬರೆಯುತ್ತಾರೆ. ವಿಮರ್ಶೆಯ ಬಗ್ಗೆ ಟಿ ಎಸ್ ಗೊರವರ ಅವರಿಗೆ ಮುನ್ನುಡಿ/ಹಿನ್ನುಡಿ ಬರೆದಿರುವ ಅನೇಕರು, ಸ್ವತಃ ಗೊರವರ ಅವರೂ ಒಂದೆಡೆ ‘ಸೃಜನಶೀಲ ಸಾಹಿತ್ಯದ ಜೀವಂತಿಕೆ ವಿಮರ್ಶಾ ವಲಯಕ್ಕಿಲ್ಲ’ ಎಂಬ ಮಾತನ್ನು ಬರೆಯುವ ಮೂಲಕ ವಿಮರ್ಶೆಯನ್ನು ಟೀಕಿಸುತ್ತಾರೆ. ಆದರೆ ಅರ್ಥವಾಗದ (ಮೂಲಭೂತವಾಗಿ ಅರ್ಥವಿಲ್ಲದ) ಮಾತುಗಳನ್ನು ಬರೆದು ವಿಮರ್ಶೆಯ ಮುಖಕ್ಕೆ ಕೈವೊರೆಸಿದವರು ಸಹಬರಹಗಾರರೇ ಹೊರತು ವಿಮರ್ಶಕರಲ್ಲ ಎನ್ನುವುದನ್ನು ನಮ್ಮ ಹೆಚ್ಚಿನ ಲೇಖಕರೇ ಮರೆಯುವುದು ವಿಚಿತ್ರವಾಗಿದೆ. ಅಮರೇಶ ನುಗಡೋಣಿಯವರು ಇದನ್ನು ಸ್ಪಷ್ಟವಾಗಿಯೇ ಗುರುತಿಸಿದ್ದಾರೆ. 

"ನನ್ನ ಕಥೆಗಳನ್ನು ಓದುಗರು, ವಿಮರ್ಶಕರು ಅಷ್ಟಾಗಿ ಮೇಲಿನಂತೆ ತಕರಾರು ತೆಗೆದು ಮಾತನಾಡಿಲ್ಲ. ಕನ್ನಡದ ಕೆಲ ಕಥೆಗಾರರೇ ಒಮ್ಮೊಮ್ಮೆ ವಿಮರ್ಶಕರ ವೇಷ ಹಾಕಿಕೊಂಡು ತಕರಾರು ತೆಗೆಯುತ್ತಾರೆ. ವಿಮರ್ಶಕರ ಸಾಹಿತ್ಯ ವಿಮರ್ಶೆ ಸರಿದಾರಿಯಲ್ಲಿರುತ್ತದೆ. ಕನ್ನಡದಲ್ಲಿ ಕೆಲ ಕಥೆಗಾರರಿದ್ದಾರೆ. ಅವರು ವಿಮರ್ಶಕರಾದಾಗ ಸಾಹಿತ್ಯ ವಿಮರ್ಶೆ ದಾರಿ ತಪ್ಪಿದೆ ಅಂತ ನನಗೆ ಅನ್ನಿಸಿದೆ." (‘ಸವಾರಿ’ ಸಂಕಲನದ ಮುನ್ನುಡಿ, 2007)

ಇನ್ನು ಮುನ್ನುಡಿ ಹಿನ್ನುಡಿಗಳನ್ನು ತಮ್ಮ ನಂಜಿನ ಮಾತುಗಳನ್ನಾಡಲು ಬಳಸಿಕೊಳ್ಳುವ ಒಂದು ಪರಂಪರೆಯೂ ಇರುವಂತಿದೆ. ಇಂಥದ್ದನ್ನು ನಮ್ಮ ಕತೆಗಾರರು, ಪತ್ರಿಕೆಗಳ ಸಂಪಾದಕರು ಉತ್ತೇಜಿಸದಿದ್ದರೆ ಕನ್ನಡದ ವಾತಾವರಣಕ್ಕೆ ಒಳ್ಳೆಯದು. ‘ಮಹಾಸೃಜನಶೀಲರೆಂದು ಕೂಗು ಹೊಡೆಯುವ ಅಕಾಡೆಮಿಕ್ ದರಿದ್ರರ ಮುಖಕ್ಕೆ ತಿಕ್ಕಿದ ಕನ್ನಡಿ ಹಿಡಿದಂತಿದೆ’ ಎಂದು ಟಿ ಎಸ್ ಗೊರವರ ಅವರ ಕತೆಗಳ ಬಗ್ಗೆ ಬರೆಯುವ ಲಂಕೇಶ್ ಸಹವರ್ತಿ ಎಸ್ ಎಫ್ ಯೋಗಪ್ಪನವರ್ ಅಂಥ ಒಬ್ಬ ದರಿದ್ರನ ಹೆಸರನ್ನಾದರೂ ಉಲ್ಲೇಖಿಸಿದ್ದರೆ ಅಂಥ ಮಾತಿಗೆ ಹೆಚ್ಚಿನ ತೂಕ, ಗೌರವ ಒದಗುತ್ತಿತ್ತೇ ಹೊರತು, ಸುಮ್ಮನೇ ಅಡ್ಡಗೋಡೆಯ ಮೇಲೆ ದೀಪವಿಡಲು ಮುನ್ನುಡಿಯನ್ನು ಬಳಸಿಕೊಳ್ಳಬಹುದೆ?]

ಮೊದಲ ಕತೆ ‘ಮನಸಿನ ವ್ಯಾಪಾರ’ವನ್ನು ಗಮನಿಸಿದರೆ ಅಲ್ಲಿನ ಎಲ್ಲಾ ಘಟನಾವಳಿಗಳ ಕೇಂದ್ರದಲ್ಲೂ ಇರುವುದು ಒಂದು ಇರಿಟೇಟಿಂಗ್ ಆದ ಕನಸು. ಈ ಕನಸು ಇಡೀ ದಿನದ ಒಂದು ಕ್ರಿಯೆ-ಪ್ರತಿಕ್ರಿಯೆ ನಡುವಣ ಸರಪಳಿಯನ್ನೇ ನಿರ್ಮಿಸುತ್ತ ಹೋಗುವುದೇ ಇಲ್ಲಿನ ವಸ್ತು. ಸೂಕ್ಷ್ಮವಾಗಿ ಗಮನಿಸಿದರೆ ಇದು ಕತೆಗಾರ ಟಿ ಎಸ್ ಗೊರವರ ಅವರ ಕತೆಯ ಒಂದು ತಂತ್ರ. ಅದೇ ಸಮಯಕ್ಕೆ ಕತೆಯ ಪಾತ್ರವಾದ ಮಾಸ್ತರ ಪರಮೇಶಿಯ ವಾಸ್ತವ ಇದು. ಕತೆಯ ಪಾತ್ರವಾದ ಪರಮೇಶಿಯ ವಾಸ್ತವ ವರ್ತಮಾನವೊಂದರ ನಿರೂಪಣೆಯ ಹದ ಯಾವ ಪರಿಯಲ್ಲಿದೆ ಎಂದರೆ ಓದುಗನ ಮನಸ್ಸಿನ ಮೇಲೆ ಇದು ಅಚ್ಚಳಿಯದ ಪರಿಣಾಮ ಬೀರುತ್ತದೆ ಮಾತ್ರವಲ್ಲ ಅನುಭವವನ್ನು ದಾಟಿಸುವಲ್ಲಿಯೂ ಈ ತಂತ್ರ ಅತ್ಯಂತ ಯಶಸ್ವಿಯಾಗುತ್ತದೆ. 

ಈ ತಂತ್ರ, ಹೊಸತನ ಇಲ್ಲಿನ ಹೆಚ್ಚಿನ ಎಲ್ಲಾ ಕತೆಗಳಲ್ಲೂ ಫಲಪ್ರದವಾಗಿ ಬಳಕೆಯಾದಂತಿದೆ. ‘ಕತ್ತಲಿನಾಚೆ’ ಕತೆಯಲ್ಲಿ ಒಂದು ಕ್ರಿಯೆ ಅಥವಾ ಪ್ರತಿಕ್ರಿಯೆ ಎದುರಿನ ವ್ಯಕ್ತಿಯ ಮನಸ್ಸಿನ ಮೇಲೆ ಉಂಟು ಮಾಡಬಹುದಾದ ಪರಿಣಾಮದ ಕುರಿತೇ ಇದ್ದು, ಅಂಥ ಪರಿಣಾಮವನ್ನೇ ಗಮ್ಯವಾಗಿರಿಸಿಕೊಂಡು ನಿರೂಪಿಸಲ್ಪಟ್ಟಿದೆ. ಮೊದಲಿಗೆ ಅದು ಮಗು ಆಗಿಲ್ಲ ಎಂಬ ಕಾರಣಕ್ಕೆ ಅವಗಣಿಸಲ್ಪಡುವ ಕುಟುಂಬದ ಸದಸ್ಯೆಯಾಗಿ ಪದ್ಮಳ ಮನಸ್ಸಿನ ಮೇಲೆ ಕುಟುಂಬದ ಇತರ ಸದಸ್ಯರ ವರ್ತನೆ ಬೀರುವ ಪರಿಣಾಮದತ್ತ ಕೇಂದ್ರೀಕೃತವಾಗಿದೆ. ಕತೆಯ ಕೊನೆಗೆ ಬರುವ ಹೊತ್ತಿಗೆ ಈ ಪರಿಣಾಮದ ವಕ್ರೀಭವನವೂ ಸಂಭವಿಸುತ್ತದೆ. ಪದ್ಮಳ ಪತಿ ದೇವರಾಜನಿಗೆ ತಗುಲಿಕೊಳ್ಳುವ ಸಂಶಯದ ಪಿಶಾಚಿ ಅವನು ಕತ್ತಲಿನಾಚೆ ಇರುವ ಕತ್ತಲನ್ನೇ ಗುರಿಯಾಗಿಸಿಕೊಂಡು ಗುದ್ದಾಡುವ ಮಟ್ಟಕ್ಕೆ ತಳ್ಳುತ್ತದೆ. ಇಲ್ಲಿ ಓದುಗನ ಭಾಗವಹಿಸುವಿಕೆಯೂ ಇದೆ, ಇರಲೇಬೇಕು. ಸ್ಪಷ್ಟವಾಗಿಯೇ ದೇವರಾಜನಿಗೆ ಮಗು ತನ್ನದಲ್ಲ ಎನ್ನುವುದು ಗೊತ್ತೇ ಇದೆ, ಅಲ್ಲವೆ? ಹಾಗಿದ್ದರೂ ಅವನೇಕೆ ಮಗುವಿನ ತಂದೆ ಯಾರು ಎಂಬ ಹುಡುಕಾಟಕ್ಕೆ ತೊಡಗುತ್ತಾನೆ? ಇದು ದೇವರಾಜನ ಮನಸ್ಸಿನ ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರ ಎನ್ನುವುದು ಎಷ್ಟು ನಿಜವೋ ಅಷ್ಟೇ ಮುಖ್ಯವಾದದ್ದು ಮನಸ್ಸಿನ ಸೂಕ್ಷ್ಮ ಲಯಬದ್ಧತೆಯನ್ನು ಓದುಗ ಗುರುತಿಸುವುದು. ಕತೆಗಾರರು ಇಂಥ ತಂತ್ರವನ್ನು ಬಳಸಿ ಕತೆ ಬರೆದಿರುವುದು ಬಹುಶಃ ಇದೇ ಮೊದಲು ಅನಿಸುತ್ತದೆ.

ಟಿ ಎಸ್ ಗೊರವರ ಅವರ ಕತೆಗಳಲ್ಲಿ ಮಕ್ಕಳು ಪೆಪ್ಪರುಮೆಂಟಿಗಾಗಿ, ಬರ್ಫಕ್ಕಾಗಿ (ಐಸ್‌ಕ್ಯಾಂಡಿ) ಚಂಡಿ ಹಿಡಿದಂತೆ ವರ್ತಿಸುವುದು ಮತ್ತೆ ಮತ್ತೆ ಬರುತ್ತಿರುತ್ತದೆ. ಅದರಲ್ಲೇನೂ ಅಂಥ ವಿಶೇಷವಿಲ್ಲ. ಆದರೆ ಇಲ್ಲಿನ ಪೆಪ್ಪರುಮಂಟ ಕತೆಯಲ್ಲಿ ಅದರ ಕೊನೆಯೇ ಒಂದು ವಿಶೇಷ, ವಿಚಿತ್ರ. ಇದೇ ಬಗೆಯ ಒಂದು ತಂತ್ರ ಇವರ ಕಾದಂಬರಿ ‘ರೊಟ್ಟಿ ಮುಟಗಿ’ಯಲ್ಲೂ ಇದ್ದು, ಕಾದಂಬರಿಗೆ ಮುನ್ನುಡಿ ಬರೆದಿರುವ ಎಸ್ ದಿವಾಕರ್ ಅವರು ಕಾದಂಬರಿಯ ಅಂತ್ಯದ ಕುರಿತು ಬರೆಯುತ್ತ, ಅದು ಕನಸೋ ವಾಸ್ತವವೋ ಸ್ಪಷ್ಟವಿಲ್ಲ ಎನ್ನುತ್ತಲೇ "ಸಂಕೇತವೊಂದು ಸಾರ್ಥಕವಾದಾಗ ವಿವರಗಳೇ ಅಗತ್ಯವಿಲ್ಲ" ಎನ್ನುತ್ತಾರೆ. ಈ ಕತೆಯಲ್ಲಿಯೂ ಮಗುವಿನ ಪೆಪ್ಪರಮೆಂಟಿನ ಆಸೆ ಹೇಗೆ ಕೊನೆಗೊಳ್ಳುತ್ತದೆ ಎನ್ನುವಲ್ಲೇ ಅದು ಓದುಗನ ಮೇಲೆ ಬೀರುವ ಪರಿಣಾಮವೊಂದೇ ಹೆಚ್ಚು ಮುಖ್ಯವಾಗಿ ನಿಲ್ಲುತ್ತದೆ. ಕತೆಯ ಪಾತ್ರ ಮತ್ತು ಒಟ್ಟಾರೆ ಕತೆಯ ಯಶಸ್ಸು ಎರಡನ್ನೂ ಮೀರಿದ ಈ ಅಂತಃಶ್ಶಕ್ತಿ ಒಂದು ಕತೆಗೆ ಪ್ರಾಪ್ತವಾಗುವುದು ಗಮನಾರ್ಹವಾದ ಒಂದು ಪ್ರಯೋಗವಾಗಿದೆ.

‘ಮಲ್ಲಿಗೆ ಹೂವಿನ ಸಖ’ ಕತೆಯಲ್ಲೂ ಮೇಲೆ ವಿವರಿಸಿದ ತಂತ್ರವೇ ಪರಿಣಾಮಕಾರಿಯಾಗಿ ಬಳಸಲ್ಪಟ್ಟಿದೆ. ‘ದೇವರಾಟ’ ಕತೆಯಲ್ಲಿ ಕಥಾನಕದ ಮೇಲ್ಗೈ ಇದ್ದರೂ ಕತೆಯ ಅಂತ್ಯವನ್ನು ಕೊಂಚ ನಿಗೂಢವಾಗಿಟ್ಟು ನಿಭಾಯಿಸುವ ಕತೆಗಾರರು ಉಳಿದ ಕತೆಗಳಲ್ಲಿ ಸಾಧಿಸಿದ ಪರಿಣಮಕಾರತ್ವವನ್ನೇ ಇಲ್ಲಿಯೂ ತರಲು ಪ್ರಯತ್ನಿಸಿದ್ದಾರಾದರೂ ಅದು ಬೇರೆಯೇ ಕಾರಣಗಳಿಂದ ಅಷ್ಟು ಸಫಲವಾಗಿಲ್ಲ.

ಸಂಕಲನದ ಕೊನೆಯ ಕತೆ ‘ಕದ್ದು ನೋಡುವ ಚಂದಿರ’ ಇದೇ ಸಂಕಲನದ ಉಳಿದ ಕತೆಗಳೆದುರು ಸಪ್ಪೆಯಾಗಿದೆ. 

ಕೇವಲ ತಂತ್ರವೇ ಈ ಕತೆಗಳ ಯಶಸ್ಸಿಗೆ ಏಕಮಾತ್ರ ಕಾರಣ ಎನ್ನುವ ಅಭಿಪ್ರಾಯಕ್ಕೆ ಮೇಲಿನ ಮಾತುಗಳು ಕಾರಣವಾಗಿದ್ದರೆ, ಅದು ತಪ್ಪು. ಈ ಕತೆಗಳ ಹಿಂದೆ ‘ಆಡು ಕಾಯೋ ಹುಡುಗನ ದಿನಚರಿ’ಯಿಂದ ಬೆಳೆದು ಬಂದ ಒಂದು ತಂತುವಿದೆ. ನಿರೂಪಣೆಯ ಸೊಗಸು, ಗ್ರಾಮೀಣ ಜನಜೀವನದ ತಲಸ್ಪರ್ಶಿ ಅರಿವು/ಅನುಭವ ಕೊಟ್ಟ ಸೋಸಿ ತೆಗೆದ ಸುಗಂಧ, ಸಂಕಲನದಿಂದ ಸಂಕಲನಕ್ಕೆ ಪುಷ್ಠಿಗೊಳ್ಳುತ್ತ ಬಂದ ಟಿ ಎಸ್ ಗೊರವರ ಅವರ ಭಾಷೆ, ಕಥನದ ಹೊಸ ಹೊಸ ಪಟ್ಟುಗಳಿಗೆ ತೆರೆದುಕೊಂಡಿರುವ ಅವರ ಮುಕ್ತ ಮನಸ್ಸು ಎಲ್ಲ ಈ ಕತೆಗಳನ್ನು ಒಂದು ಹದದಲ್ಲಿ ನೇಯ್ದಿಟ್ಟಿದೆ.

No comments: