ಮೇಲೆ ಹೇಳಿದ ಎಲ್ಲ ಐದು ಅಂಶಗಳೂ ಒಂದೇ ಎಂದು ಮೇಲ್ನೋಟಕ್ಕೆ ಅನಿಸಿದರೂ ಅವರ ಪ್ರತಿಯೊಂದು ಕತೆಯನ್ನು ಗಮನಿಸುತ್ತ ಬಂದರೆ ಅವುಗಳನ್ನು ಅವರು ಪ್ರತ್ಯಪ್ರತ್ಯೇಕವಾಗಿಯೇ ದುಡಿಸಿಕೊಂಡು ಬಂದಿರುವುದನ್ನು ಕಾಣಬಹುದು ಹೇಗೋ, ಅವುಗಳಿಗೆ ಅಪವಾದವಾಗಿ ನಿಲ್ಲಬಲ್ಲ ಕತೆಗಳನ್ನೂ ಅವರು ಆಗೊಮ್ಮೆ ಈಗೊಮ್ಮೆ ಬರೆದಿರುವುದು ನಮ್ಮ ಗಮನಕ್ಕೆ ಬಂದೇ ಬರುತ್ತದೆ. ಹಾಗಾಗಿ, ವ್ಯಾಕರಣವನ್ನು ಕಲಿತೂ ಒಂದು ಭಾಷೆಯನ್ನು ಬಳಸುವಾಗ ಅದನ್ನು ಮರೆತು ಬಳಸಬೇಕು ಎಂಬಂತೆ ಬಳಗಾರರ ಕತೆಗಳನ್ನು ಓದುವಾಗ ಅದರ ಸವಿಯೊಂದೇ ನನ್ನ ಗಮನದಲ್ಲಿರುತ್ತದೆ. ಶ್ರೀಧರ ಬಳಗಾರ ನನಗೆ ಇಷ್ಟವಾಗುವುದು ಅವರ ನಿರೂಪಣೆಯಲ್ಲಿ ನಮಗೆ ಸದಾ ಸಿಗುವ ಅಪರೂಪದ ಚಿತ್ರ ಮತ್ತು ಅವುಗಳಿಗಿರುವ ಧ್ವನಿಶಕ್ತಿಗಾಗಿ. ಉದಾಹರಣೆಗೆ ‘ಮೃಗಶಿರಾ’ ಕಾದಂಬರಿಯ ಮೊತ್ತ ಮೊದಲ ದೃಶ್ಯದಲ್ಲಿ ನಿರೂಪಕ ತೆರೆದೇ ಇದ್ದ ಗೇಟು ತೆರೆಯಲು ನಡೆಸುವ ವಿಫಲ ಪ್ರಯತ್ನಗಳನ್ನು ಗಮನಿಸಿ. ಬಹುತೇಕ ಇಡೀ ಕಾದಂಬರಿಗೇ ಇದೊಂದು ರೂಪಕದಂತಿದೆ ಎಂದು ತಿಳಿಯುವುದು ಇಡೀ ಕಾದಂಬರಿಯನ್ನು ಓದಿ ಮುಗಿಸಿ ಮಥಿಸುವಾಗಲೇ. ಅವರು ಕಟ್ಟಿಕೊಡುವ ಮನೆಯ ವಾಸ್ತುವಿನ, ಹಿತ್ತಲಲ್ಲಿ ಇರುವ ಮರಗಿಡ ಬಳ್ಳಿಗಳ, ಚಿಟ್ಟೆ, ದುಂಬಿಗಳ, ಹೂವು, ಹಣ್ಣುಗಳ ವಿವರ ಗಮನಿಸಿ. ಅವರು ಏನನ್ನು ವಿವರಿಸ ತೊಡಗಿದರೂ ಅದು ಅಥೆಂಟಿಕ್ ಆಗಿಯೇ ಇರುತ್ತದೆ ಎನ್ನುವುದು ಅವರ ನಿರೂಪಣೆಯ ದೊಡ್ಡ ಪ್ಲಸ್ ಪಾಯಿಂಟ್. ಹಾಗೆಯೇ ಅದು ದೊಡ್ಡ ಮೈನಸ್ ಪಾಯಿಂಟ್ ಕೂಡಾ ಆಗುವ ಅಪಾಯವನ್ನು ಅವರು ಮೈಮೇಲೆಳೆದುಕೊಂಡಿರುವುದೂ ಅದರಿಂದಲೇ. ಅಂದರೆ, ಅವರು ತಮ್ಮ ಕಥಾನಕದ ಕೇಂದ್ರ ಧ್ವನಿ, ತಮ್ಮ ಕಥನದ ಸಾಮಾಜಿಕ, ರಾಜಕೀಯ, ತಾತ್ವಿಕ ಆಯಾಮ ಮತ್ತು ಅರ್ಥಪೂರ್ಣತೆಯನ್ನು ಸ್ವಲ್ಪ ಹೆಚ್ಚೇ ನಿರ್ಲಕ್ಷಿಸುತ್ತಾರಲ್ಲವೆ ಅನಿಸಲು ಅವರ ಗಮನವೆಲ್ಲಾ ತಮ್ಮ ಸಾಮರ್ಥ್ಯದ ಗುಣಾತ್ಮಕ ನೆಲೆಗಳತ್ತ ಮಾತ್ರ ಹರಿದಿದ್ದು ಅಥವಾ, ಅಷ್ಟು ಸಾಕು ಅಂದುಕೊಂಡಿದ್ದೇ ಕಾರಣವಾಗಿರಬಹುದೇ ಎಂಬ ಅನುಮಾನವಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ
ಬಹುದೀರ್ಘಕಾಲದಿಂದ ನಾನು ಗಮನಿಸುತ್ತ ಬಂದಂತೆ ಶ್ರೀಧರ ಬಳಗಾರರ ಕತೆ, ಕಾದಂಬರಿಗಳಲ್ಲಿ ಕಥನಕೇಂದ್ರ ಕಂಡು ಬರುವುದು ಸ್ವಲ್ಪ ಕಡಿಮೆ. ಕತೆಗಳಿಗಿಂತ ಕಾದಂಬರಿಗೆ ಇದು ಹೆಚ್ಚು ಅನ್ವಯಿಸುವ ಮಾತು. ಒಂದು ನಿರ್ದಿಷ್ಟ ಕತೆ, ಅವರ ಇಡೀ ನಿರೂಪಣೆಯ ಕೇಂದ್ರ ಮುದ್ದೆ ಇದೇ ಎಂದು ಗುರುತಿಸುವುದು, ನೆನಪಿಸಿ ಹೇಳಬಹುದಾದ್ದು ಸಿಗುವುದು ಕಷ್ಟ. ಹಾಗಾಗಿಯೇ, ಕೊನೆಗೂ ಓದುಗರಾಗಿ ನಮ್ಮ ನೆನಪಿನಲ್ಲುಳಿಯುವುದು ಅವರು ಸೃಷ್ಟಿಸಿರುವ ಒಂದು ಕಥಾಜಗತ್ತು, ಅಲ್ಲಿನ ಪಾತ್ರಗಳ ಶ್ರೀಸಾಮಾನ್ಯ ಗುಣ ಮತ್ತು ಪರಿಸರದ ಅನನ್ಯತೆಯೇ ಹೊರತಾಗಿ ಕಥಾನಕದ ಹಂದರವಲ್ಲ. ಅಥವಾ, ಕಥನಕೇಂದ್ರವನ್ನೂ ಮೀರಿ ಅವರ ಕಥಾಜಗತ್ತು, ಅದರ ಪರಿಸರ ಮತ್ತು ಪಾತ್ರಪೋಷಣೆ ಮೇಲ್ಗೈ ಪಡೆದಿದ್ದರ ಒಟ್ಟಾರೆ ಪರಿಣಾಮವೂ ಇದು ಆಗಿದ್ದೀತು.
ಮೃಗಶಿರಾ ಓದಲಾರಂಭಿಸಿದಂತೆ ನನ್ನ ಗಮನಕ್ಕೆ ಬಂದಿದ್ದು ನಿರೂಪಣೆಯಲ್ಲಿ ಹಿಂದೆಂದೂ ಕಾಣದಿದ್ದ ಆರ್ದ್ರತೆಯೇ. ತುಂಬ ಲವಲವಿಕೆಯ, ಎಂದಿನ ಶಿಸ್ತುಬದ್ಧ ಚಲನೆಯ ಗಾಂಭೀರ್ಯ ಬಿಟ್ಟುಕೊಟ್ಟ ಲಘುಧಾಟಿ ತುಂಬ ಹೊಸತೆನಿಸಿ ಶ್ರೀಧರ ಬಳಗಾರರು ಹೊಸತೇನೋ ಮಾಡಲು ಹೊರಟಿದ್ದಾರೆನಿಸಿತು. ಕಥಾನಕವನ್ನು ಗಮನಿಸುತ್ತ ಬಂದಂತೆ ನಿಜಕ್ಕೂ ಇದು ಬಳಗಾರರ ಆರಂಭಿಕ ಕಾದಂಬರಿಯಿರಬಹುದೇ ಅನಿಸಿದ್ದು ಸುಳ್ಳಲ್ಲ. ಯಾಕೆಂದರೆ, ಒಂದು ಹಂತದಲ್ಲಿ ನನಗೆ ಇದು ಶ್ರೀಧರ ಬಳಗಾರರು ಬರೆಯಬಹುದಾದ ಕಾದಂಬರಿಯೇ ಅಲ್ಲ ಅನಿಸಿಬಿಟ್ಟಿತು. ಇದನ್ನು ವಿವರಿಸಬೇಕು.
ಸ್ಥೂಲವಾಗಿ, ಚಳವಳಿಗಾರ ಗಡಿಮನೆ ಸುಬ್ರಾಯಪ್ಪನವರ ಜೀವನ ಚರಿತ್ರೆ ಬರೆಯುವ ಉದ್ದೇಶದ ನಿರೂಪಕನ ಉಪದ್ವಾಪ್ಯಕ್ಕೆ ಎದುರಾಗುವ ಸಾಮಾನ್ಯ ವಿರೋಧದಲ್ಲೇ ಅದು ಕೊನೆಗೂ ಕಂಡುಕೊಳ್ಳುವ ಕೇಂದ್ರದ ಸ್ಪಷ್ಟ ಸೂಚನೆ ಇದೆ. ಒಂದು, ಹ್ಯಾಂಗ ಬರೆದ್ರೂ ಅದು ವಿವಾದ ಅಪ್ಪುದೇ ಎಂಬ ಹೆಂಡತಿಯ ಮಾತಲ್ಲೇ ನಮಗೆ ವಿವಾದದ ಸುಳಿ ಬಿಡಿಸುವ ಕೆಲಸವಿದು ಎಂಬ ಸುಳಿವು ಸಿಗುತ್ತದೆ. ಮುಂದೆ ಶಂಕ್ರ ಕೌತುಕವನ್ನು ಇನ್ನಷ್ಟು ಹೆಚ್ಚಿಸಲು ಆಡುವ ಕೆಲವು ಮಾತುಗಳು ಇದು ಊರಿನ ಎಲ್ಲರಿಗೂ ಗೊತ್ತಿದ್ದೂ ಯಾರೂ ಇದಂಇತ್ಥಂ ಎಂದು ಆಡಲು ತಯಾರಿಲ್ಲದ ಒಂದು ವಿವಾದ ಎನ್ನುವುದು ಗೊತ್ತಾಗುತ್ತದೆ. ಒಟ್ಟಾರೆಯಾಗಿ ಗಡಿಮನೆ ಸುಬ್ರಾಯಪ್ಪನವರೇ ಈಗ, ಅಂದರೆ ವಿಷಯ ಕೋರ್ಟು ಮೆಟ್ಟಿಲು ಹತ್ತಿ, ಗಡಿಮನೆ ಮತ್ತು ಹೊಸ್ಮನೆ ನಡುವಿನ ವೈಮನಸ್ಯ ಸ್ಥಾಪಿಸಲ್ಪಟ್ಟ ಬಳಿಕದ ಒಂದು ವರ್ತಮಾನದಲ್ಲಿ ನಿಜಕ್ಕೂ ಏನು ನಡೆಯಿತು ಎನ್ನುವುದನ್ನು ಪ್ರಾಮಾಣಿಕವಾಗಿ ಹೇಳುವುದರ ಮುಖೇನ ಅವರ ವ್ಯಕ್ತಿತ್ವ ಸ್ಫುಟವಾಗುವುದು, ಹಾಗೆ ಸ್ಫುಟಗೊಳಿಸುವುದು ಈ ಆತ್ಮಚರಿತ್ರೆಯನ್ನು ದಾಖಲಿಸಲು - ಅಸ್ಪಷ್ಟ ಹಿಂಜರಿಕೆ/ವಿರೋಧಗಳ ನಡುವೆಯೂ ಮುಂದಾದ ನಿರೂಪಕನ ಉದ್ದೇಶ ಎನ್ನುವುದು ನಮಗೆ ಅರಿವಾದರೂ ನಿರೂಪಕನ ಉದ್ದೇಶದಲ್ಲಿ ಈ ಹಂತದಲ್ಲಿ ಕಾಣುವ ಈ ನಿರ್ಮಮ, ನಿರ್ವಿಕಾರ, ನಿಷ್ಕಲ್ಮಶ ಉದ್ದೇಶದಾಚೆಯದ್ದೇನೂ ಇರಲಾರದು ಅಂದುಕೊಂಡ ಓದುಗನ ಭರವಸೆಯನ್ನು ಕಾದಂಬರಿ ಉಳಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಸರಳ. ಈ ಉದ್ದೇಶದ ಕೇಂದ್ರವೇ ಅಷ್ಟು ಮಾನವೀಯವಾದದ್ದಲ್ಲ. ಇಲ್ಲಿ ವಿವಾದ, ನಿಜಕ್ಕೂ ನಡೆದಿದ್ದಾದರೂ ಏನು ಎಂಬ ಕೌತುಕ ಎಲ್ಲವೂ ಮೊಗಮಾಡಿರುವುದಾದರೂ ಯಾವುದರ ಕಡೆಗೆ?
ಗಡಿಮನೆ ಸುಬ್ರಾಯಪ್ಪನವರನ್ನು ಒಬ್ಬ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲಾದರೂ ಅದರಲ್ಲಿ ಅಂಥ ಹುರುಳಿದ್ದಂತೆ ಅನಿಸುವುದಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಈ ಕಾದಂಬರಿಯ ನಿಜವಾದ ಕೇಂದ್ರವಾಗ ಬೇಕಿದ್ದ ವ್ಯಕ್ತಿ ಅನಸೂಯತ್ತೆಯೇ ಹೊರತು ಸುಬ್ರಾಯಪ್ಪ ಅಲ್ಲ. ಬದುಕನ್ನು ನಿಜವಾಗಿಯೂ ಎದುರಿಸಿದಾಕೆ ಅವಳೇ. ಸುಬ್ರಾಯಪ್ಪ ಇಡೀ ಕಾದಂಬರಿಯ ಒಂದು ಮ್ಯೂಟ್ ಪಾತ್ರವಾಗಿಯೇ ಕಂಡು ಬರುವ, ಹೆಚ್ಚಿನ ಯಾವ ನಡೆ, ನಿರ್ಧಾರ, ನಿಲುವು ಪ್ರದರ್ಶಿಸದ ವ್ಯಕ್ತಿ. ಅಲ್ಲದೆ, ಅವರು ತೆಗೆದುಕೊಳ್ಳುವ ಒಂದು ಮಹತ್ವದ ನಿರ್ಧಾರಕ್ಕೆ ಗಾಂಧಿಯ ಬ್ರಹ್ಮಚರ್ಯ ಪಾಲನೆಯ ಆದರ್ಶ ಹೇಗೆ ಕಾರಣವಾಗಿರಬಹುದೆಂಬ ಕೌತುಕಕ್ಕೂ ತಕ್ಕ ಸಮಾಧಾನ ನಮಗೆಲ್ಲಿಯೂ ಸಿಗದಿರುವುದು, ಅದೇ ಅವರ ಜೀವನ ಚರಿತ್ರೆಯ ಪ್ರಮುಖ ಘಟ್ಟ ಅನಿಸಿಕೊಳ್ಳದಿರುವುದು ಇನ್ನೊಂದು ವಿಶೇಷ.
ಈ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿಯೇ ನಮ್ಮ ಬಸ್ರೂರು, ಬಾರ್ಕೂರು ಮುಂತಾದೆಡೆ, ವಿದೇಶಿಯರು ನೌಕಾಯಾನದ ಮುಖೇನ ಬಂದು ತಂಗುತ್ತಿದ್ದ ರೇವುಪಟ್ಟಣಗಳಲ್ಲಿ ಸೂಳೆಗಾರಿಕೆ ಸಾಕಷ್ಟು ವಿಜೃಂಭಿಸುತ್ತಿದ್ದ ಒಂದು ಉದ್ಯಮ. ‘ಬಸ್ರೂರು ಭಾಗ್ಯ’ ಎಂಬ ಒಂದು ಯಕ್ಷಗಾನ ಪ್ರಸಂಗ ಕೂಡ ಈ ಭಾಗದಲ್ಲಿ 1980-90ರ ಕಾಲಘಟ್ಟದಲ್ಲಿ ತುಂಬ ಪ್ರಚಲಿತದಲ್ಲಿತ್ತು ಎಂದರೆ ಅದರ ಖ್ಯಾತಿಯನ್ನು ಊಹಿಸಬಹುದು. ಆಗ, ಅಂದರೆ ಸ್ವಾತಂತ್ರ್ಯಪೂರ್ವ ಘಟ್ಟದಲ್ಲಿಯೇ, ಡಾ||ಕೆ ಶಿವರಾಮ ಕಾರಂತರು ಸ್ವತಃ ತಾವೇ ಮುಂದೆ ನಿಂತು ಇಂಥ ಅನೇಕ ವೇಶ್ಯೆಯರ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ, ಅವರನ್ನು ವಂಶಪಾರಂಪರಿಕೆಯ ಆ ವೃತ್ತಿಯಿಂದ ನಿವಾರಿಸಲು ಪ್ರಯತ್ನಿಸುತ್ತಾರೆ. ಅದರಲ್ಲಿ ಸಾಕಷ್ಟು ಸಫಲರೂ ಆದ ಅವರ ಫೋಟೋವನ್ನು ಇವತ್ತಿಗೂ ದೇವರ ಫೋಟೋ ಎಂಬಂತೆ ಪೂಜಿಸುವ ಮನೆಗಳಿದ್ದಾವೆ ಎಂದು ಕೇಳಿದ್ದೇನೆ. ಆದರೆ ಅದೆಲ್ಲ ಅಷ್ಟು ಸುಲಭವಾಗಿರಲಿಲ್ಲ. ಆಗ ಅವರು ಗಾಂಧಿಯವರಿಗೆ ಅವರ ಅನುಯಾಯಿಗಳು, ಸ್ವಯಂಸೇವಕರು ಈ ಪುನರ್ವಸತಿ ಕಲ್ಪಿಸುವ ಕಾಯಕಕ್ಕೆ ನೆರವಾಗಬಹುದೆಂಬ ಆಸೆಯಿಂದ ಪತ್ರ ಬರೆಯುತ್ತಾರೆ. ಆದರೆ ಗಾಂಧಿಯವರು ಅದಕ್ಕೆ, ಅಂಥವರು ಯೋಗ್ಯ ವರ ಸಿಗದೇ ಹೋದ ಪಕ್ಷದಲ್ಲಿ ಯಾವಜ್ಜೀವ ಬ್ರಹ್ಮಃಶ್ಚರ್ಯ ಪಾಲಿಸಲಿ ಎಂದು ಉತ್ತರಿಸುತ್ತಾರೆ. ಕಾರಂತರು, ‘ಈ ಮನುಷ್ಯನಿಗೆ ಬದುಕು ಹೇಗೆ ನಡೆಯುತ್ತದೆ ಎಂಬ ಅರಿವಿಲ್ಲ’ ಎಂಬ ತೀರ್ಮಾನಕ್ಕೆ ಬಂದು ಗಾಂಧಿಯವರ ನೆರವಿನ ಆಸೆ ಕೈಬಿಡುತ್ತಾರೆ. ಈ ಯಾವಜ್ಜೀವ ಬ್ರಹ್ಮಶ್ಚರ್ಯದ ಆದರ್ಶ ಗಾಂಧಿಯವರದ್ದು. ಆದರೆ, ವಿಪರ್ಯಾಸವೆಂಬಂತೆ ಅದನ್ನು ಸುಬ್ರಾಯಪ್ಪನವರು ಅನುಸರಿಸುವುದು ತಮ್ಮ ಹೆಂಡತಿಯ ನೈಷ್ಟಿಕ ಪರಿಶುದ್ಧತೆಯ ಕುರಿತಾದ ಅಸಹ್ಯದಿಂದ. ಅಂದರೆ, ಸಹಜೀವಿಯೊಂದು ಪರಪುರುಷನ ಸಂಸರ್ಗದಿಂದ ಅಪವಿತ್ರವಾಗಿದೆ ಎಂಬ ಕಾರಣಕ್ಕೆ ಕೊಡುವ ಶಿಕ್ಷೆಯಾಗಿ, ಅಂಥ ಮನೋಧರ್ಮದ ಹಿಂದಿನ, ತನ್ನ ಪರಿಶುದ್ಧತೆಯ ಕುರಿತಾದ ಅಹಂಕಾರವಾಗಿ. ಈ ಅಂಶ ಕಾದಂಬರಿಯಲ್ಲಿ ಅಷ್ಟಾಗಿ ಜಿಜ್ಞಾಸೆಗೆ ಒಳಪಡುವುದೇ ಇಲ್ಲ. ಪ್ಯೂರಿಟನ್ ಕಾನ್ಸೆಪ್ಟೇ ಕಾದಂಬರಿಯ ಕೇಂದ್ರ ನೆಲೆಯಲ್ಲಿದ್ದೂ, ದೇಹ, ಮನಸ್ಸುಗಳ ಕುರಿತ ಯಾವುದೇ ಪ್ರಶ್ನೆ ಯಾರಲ್ಲೂ ಏಳುವುದಿಲ್ಲ. ಶ್ರೀಧರ ಬಳಗಾರರು ಈ ಕಾದಂಬರಿ ಬರೆದ ಕಾಲದ ಮಾತು ಬಿಡಿ, ಈ ಕಾದಂಬರಿಯ ಕಾಲಘಟ್ಟದಲ್ಲೇ (1930-33 ರಿಂದ ತೊಡಗುವ ಕಥಾನಕ ಎನ್ನಬಹುದು) ಕನ್ನಡದಲ್ಲಿ ಬಂದ ಹಲವಾರು ಕಾದಂಬರಿಗಳಲ್ಲಿ ಇದ್ದ ಕೇಂದ್ರ ವಸ್ತು, ವಿಷಯ ಇದೇ ಆಗಿತ್ತು ಎಂಬುದು ತುಂಬ ಕುತೂಹಲಕರ. 1935ರಲ್ಲಿ ಬಂದ "ಧರ್ಮಸೆರೆ" (ಜಡಭರತ) ಮತ್ತು ಸಂಧ್ಯಾರಾಗ(ಅನಕೃ), 1936ರಲ್ಲಿ ಬಂದ "ಧೂಮಕೇತು" (ಕಡೆಂಗೋಡ್ಲು ಶಂಕರಭಟ್ಟ), 1937ರಲ್ಲಿ ಬಂದ "ಕಾನೂರು ಹೆಗ್ಗಡತಿ"(ಕುವೆಂಪು), ಅನಕೃ ಅವರ "ಮಂಗಳ ಸೂತ್ರ"(1940), "ಸಾಹಿತ್ಯರತ್ನ"(1943),"ಹೊಸಿಲು ದಾಟಿದ ಹೆಣ್ಣು"(1946),"ಮುಯ್ಯಿಗೆ ಮುಯ್ಯಿ"(1947), "ಕಣ್ಣೀರು"(1947), "ನಟಸಾರ್ವಭೌಮ"(1949) ಅಲ್ಲದೆ 1948ರಲ್ಲಿ ಬಂದ "ಹೇಮಾವತಿ" (ಗೊರೂರು ರಾಮಸ್ವಾಮಿ ಐಯಂಗಾರ್),1950ರಲ್ಲಿ ಬಂದ "ಸರ್ವಮಂಗಳಾ" (ಚದುರಂಗ) ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣಿನ ಪಾತಿವ್ರತ್ಯ, ವಿಷಮ ಸಂಬಂಧ, ಗಂಡು ಹೆಣ್ಣಿನ ದೈಹಿಕ-ಮಾನಸಿಕ ಸಂಬಂಧ - ಇವುಗಳ ಸುತ್ತವೇ ಇರುವುದನ್ನು ಕಾಣುತ್ತೇವೆ. ಆದರೆ, ಆ ಕೃತಿಗಳಲ್ಲಿ ಕಂಡು ಬರುವ ಆಧುನಿಕವೆನ್ನಿಸುವ ನಿಲುವು, ಈ ಕಾದಂಬರಿಯ ಪಾತ್ರಗಳಲ್ಲಿ ಒಂದಕ್ಕೂ ಇಲ್ಲ. ನರಕದಲ್ಲಿ ಕುದಿಯುವ ಎಣ್ಣೆಯ ಬಾಣಲಿಯಲ್ಲಿ ಕೂರಿಸುವ ಬಗ್ಗೆ ಅಂತತ್ತೆ ಚಿಂತಿತಳಾಗಿದ್ದರೆ, ಕಟ್ಟುನಿಟ್ಟಿನ ಆದರ್ಶಗಳ ಅಹಂಕಾರದಲ್ಲಿ ಸುಬ್ರಾಯಪ್ಪ ಸೆಟೆದುಕೊಳ್ಳುತ್ತ ಬದುಕುತ್ತಾರೆ. ಈ ನಡುವೆ ಬರುವ ಕಾಶಿಯ ಅವರ ಮದುವೆಯ ಪ್ರಕರಣಕ್ಕೆ ಹೆಚ್ಚಿನ ಸವಾಲೊಡ್ಡುವ ಆತ್ಮಸಾಕ್ಷಿಯ ಪ್ರಶ್ನೆ ಕೂಡ ಗೌಣವಾಗಿದೆ. ಬದಲಿಗೆ, ವಿವಾದಿತ ಎನಿಸಿಕೊಂಡ ರಾತ್ರಿ ನಿಜಕ್ಕೂ ನಡೆದಿದ್ದು ಏನು ಎಂಬುದನ್ನು ನಿರೂಪಿಸಿದ ಬಳಿಕ ಮುಂದೇನಾಯಿತು ಎಂಬ ಕಡೆ ಮಾತ್ರ ಅದು ಎಲ್ಲಿಲ್ಲದ ಧಾವಂತದಿಂದ ಧಾವಿಸುತ್ತದೆ. ಒಮ್ಮೆ ಅಪರಾಧಿ, ಅಪರಾಧದಲ್ಲಿ ಭಾಗವಹಿಸಿದವರು ಮತ್ತು ಅದರ ಫಲ ನಿರ್ಧಾರವಾಗಿದ್ದೇ ಶಿಕ್ಷೆ ಮತ್ತು ಪರಿಹಾರದ ಕಡೆಗಷ್ಟೇ ಅದರ ಗಮನವಿದೆ.
ಹೀಗಾಗಿ, ಇಡೀ ಕಾದಂಬರಿಯ ಕೇಂದ್ರದಂತೆ ಕಾಣುವ ಸುಬ್ರಾಯಪ್ಪ ನಿಜಕ್ಕೂ ಇಲ್ಲಿ ಕೇಂದ್ರವಲ್ಲ. ಕೇಂದ್ರ ಎನ್ನಬಹುದಾದ್ದು ಎರಡು ವಿದ್ಯಮಾನಗಳ ಹಿಂದಿನ ಸತ್ಯ ಏನು ಎಂಬುದಷ್ಟೇ. ಇನ್ನೊಂದು ಅರ್ಥದಲ್ಲಿ ಈ ಕಥನದ ಕೇಂದ್ರ ಅನಸೂಯತ್ತೆಯ ಪಾತ್ರವೇ ಆಗಿದೆ. ಆದರೆ ಸ್ವಾಭಾವಿಕವಾಗಿಯೇ ಕಾದಂಬರಿಯ ಕೇಂದ್ರವಾಗಿ ಅನಸೂಯತ್ತೆ ಕಾಣಿಸಿಯೂ ಅವಳ ಪಾತ್ರಕ್ಕೆ ಅಭಿವ್ಯಕ್ತಿಯಿಲ್ಲ. ಅಡುಗೆಮನೆಯಲ್ಲಿ ದುಡಿಯುವ ವ್ಯಕ್ತಿಗೆ ಯಾವುದೇ ಮಹತ್ವವಿಲ್ಲ ಎನ್ನುವ ಒಂದು ಗುರುತ್ವದ ನುಡಿಯಾಚೆ ಅವಳಿಗೆ ಧ್ವನಿಯಿಲ್ಲ. ಏಕೆಂದರೆ, ಒಂದು ಇರುಳಿನ ಆಕಸ್ಮಿಕದ ಹಿಂದಿನ ರಹಸ್ಯ ಒಡೆಯುತ್ತಲೇ ಕತೆಯ ಕೇಂದ್ರ ಸುಬ್ರಾಯಪ್ಪನ ಜೀವನ ಚರಿತ್ರೆಯ ಹೆಸರಿನಲ್ಲಿ ಒಂದು ಕೊಲೆಯ ನಿಗೂಢವನ್ನು ಬೇಧಿಸುವತ್ತ ತನ್ನ ಓಟವನ್ನು ಹೂಡುತ್ತದೆ. ಅದಂತೂ ಸುಬ್ರಾಯಪ್ಪ ಮತ್ತು ಅನಸೂಯತ್ತೆ ಇಬ್ಬರನ್ನೂ ಮೀರಿದ ಧಾವಂತವನ್ನು ಹೊಂದಿರುವ ಕಥಾನಕ. ಆದರೆ ಕೊಲೆಯ ಹಿಂದಿನ ನಿಗೂಢತೆ ಏನೇ ಇದ್ದರೂ ಅದರಿಂದ ಸುಬ್ರಾಯಪ್ಪನ ಚರಿತ್ರೆಗಾಗಲಿ, ಚಾರಿತ್ರ್ಯಕ್ಕಾಗಲಿ ಆಗುವ ಲಾಭ ಅಥವಾ ನಷ್ಟ ಎರಡೂ ಗೌಣವೆಂದೇ ಕಾಣುತ್ತದೆ. ಎಂದೋ ಆಗಿ ಹೋದ, ಕೋರ್ಟಿನಲ್ಲಿ ಇತ್ಯರ್ಥವಾದ ಒಂದು ವಿವಾದವನ್ನು ಮತ್ತೆ ಕೆದಕುವುದರಿಂದ ನಮ್ಮ ನಡುವೆ ಬಾಳಿ ಬದುಕಿದ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೇರೆಯೇ ಆಯಾಮ ಒದಗುವುದೆಂಬುದೇ ಒಂದು ಭ್ರಮೆ. ಇದಕ್ಕೆ ಅತ್ಯಂತ ಒಳ್ಳೆಯ ಉದಾಹರಣೆ ನಮ್ಮ ಸುನಿಲ್ ದತ್ ಮಗ ಸಂಜಯ್ ದತ್. ಈ ಸಂಜಯ್ ದತ್ ಒಬ್ಬ ಒಳ್ಳೆಯ ನಟ. ಅವನ ಸಿನಿಮಾಗಳು ಮಂದಿಗೆ ಇಷ್ಟ. ಆದರೆ ಅವನು ದೇಶದ್ರೋಹಿ ಇರಬಹುದು, ಅವನ ಮನೆಯಲ್ಲಿ ಎ ಕೆ 47 ರೈಫಲ್ ಸಿಕ್ಕಿತ್ತು, ಮುಂಬಯಿ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಅವನು ಕಾಣಿಸುವಷ್ಟು ಸಾಚಾ ಆಗಿರಲಿಕ್ಕಿಲ್ಲ ಎಂಬ ಬಗ್ಗೆ ಅದೇ ಮಂದಿಗೆ ಅನುಮಾನವಿದೆ. ಕೋರ್ಟು ಅವನಿಗೆ ಶಿಕ್ಷೆ ನೀಡಿದರೂ, ಜಾಮೀನು ನೀಡಿದರೂ, ಖುಲಾಸೆ ಮಾಡಿದರೂ ಅವನ ವ್ಯಕ್ತಿತ್ವ ಸದಾ ಕಳಂಕದ ಕಲೆಯಿಂದ ಮುಕ್ತಿ ಪಡೆಯುವುದು ಸಾಧ್ಯವೇ ಇಲ್ಲ. ಅದು ಒಂದು ಬೌದ್ಧ ಕತೆಯಂತಿದೆ.
ಒಬ್ಬ ಶಿಷ್ಯ ಮೇಲಿಂದ ಮೇಲೆ ತಪ್ಪುಗಳನ್ನೇ ಮಾಡುತ್ತಿದ್ದನಂತೆ. ಅವನು ಪ್ರತಿಬಾರಿ ತಪ್ಪು ಮಾಡಿದಾಗಲೂ ಬುದ್ಧ ಒಂದು ಖಾಲಿ ಗೋಡೆಗೆ ಒಂದು ಮೊಳೆ ಹೊಡೆಯುತ್ತಿದ್ದನಂತೆ. ಎಂದೋ ಆ ಶಿಷ್ಯನಿಗೆ ತಾನು ಇದುವರೆಗೂ ಮಾಡುತ್ತ ಬಂದ ತಪ್ಪು ಆ ಗೋಡೆ ತುಂಬ ತುಂಬಿದ ಮೊಳೆಗಳ ರೂಪದಲ್ಲಿ ಕಾಡತೊಡಗಿರಬೇಕು. ಅವನು ಬದಲಾದನಂತೆ. ತಪ್ಪು ಮಾಡುವುದಿರಲಿ, ಸದಾ ಒಳ್ಳೆಯ ಕೆಲಸ ಮಾಡುತ್ತ ಬುದ್ಧನ ಪ್ರೀತಿ ಪಡೆಯಲು ಪ್ರಯತ್ನಿಸತೊಡಗುತ್ತಾನೆ. ಆಗೆಲ್ಲ ಬುದ್ಧ ಒಂದೊಂದಾಗಿ ಮೊಳೆಯನ್ನು ಕೀಳುತ್ತ ಬಂದನಂತೆ. ಅಂತೂ ಒಂದು ದಿನ ಇಡೀ ಗೋಡೆಯಲ್ಲಿ ಒಂದೇ ಒಂದು ಮೊಳೆ ಉಳಿಯದ ಹಾಗಾಯಿತು. ಆದರೆ ಶಿಷ್ಯ ಬಂದು ನೋಡಿದಾಗ ನಿರಾಶನಾಗುತ್ತಾನೆ. ಮೊಳೆಗಳಿಲ್ಲದಿದ್ದರೇನಂತೆ, ಗೋಡೆ ಮೊಳೆ ಹೊಡೆದ ಮತ್ತು ಕಿತ್ತ ಕಲೆಗಳಿಂದ ಗಬ್ಬೆದ್ದು ಹೋಗಿದೆ. ಅದನ್ನೆಂತು ಸರಿಪಡಿಸುವುದು? ತಪ್ಪು ಹೆಜ್ಜೆ, ತಪ್ಪು ನಿರ್ಧಾರ, ಇನ್ನೊಬ್ಬರನ್ನು ನೋಯಿಸಿದ ಕೆಲಸ ಎಂದಿದ್ದರೂ ಹೀಗೆಯೇ ಉಳಿದು ಬಿಡುತ್ತದೆ. ಹಾಗಾಗಿ, ತಪ್ಪುಗಳ ಕಾರ್ಯಕಾರಣ ಸಂಬಂಧ ಹುಡುಕಿ, ಶಿಕ್ಷೆ ಕೊಟ್ಟು ಅಥವಾ ಸೇಡು ಸಾಧಿಸಿ ಆಗುವುದೇನಿದೆ?
ಈ ಕಾದಂಬರಿಯಲ್ಲಿ ಅನಸೂಯತ್ತೆಯ ಕಾರಣಕ್ಕೆ ಸುಬ್ರಾಯಪ್ಪನವರು ಬೇರೊಂದು ಕೊಲೆ ಮಾಡಿದರೋ, ಮಾಡಿಸಿದರೋ, ಬಯಸಿದರೋ ಅಥವಾ ಇಲ್ಲವೋ ಎಂಬುದಕ್ಕಿಂತ ಅವರು ಅನಸೂಯತ್ತೆಗೆ ಕೊಟ್ಟ ಜೀವಾವಧಿ ಶಿಕ್ಷೆ ಯಾವ ರೀತಿಯಲ್ಲಿ ಕಡಿಮೆ? ಅಂಥ ಕ್ಷುಲ್ಲಕತನ, ಕ್ಷುದ್ರತೆ ತೋರಿದ ವ್ಯಕ್ತಿ ಹೇಗೆ ನಾಯಕನಾದಾನು! ಈ ರೀತಿ ನಡೆದುಕೊಂಡ ಬಗ್ಗೆ ಸುಬ್ರಾಯಪ್ಪನಲ್ಲಿ ಒಂದು ತೆಳ್ಳನೆಯ ಗೆರೆಯಂಥ ವಿಷಾದವಿದೆ. ಆದರೆ ತಾನೂ ಸಹಜವಾಗಿ ಬದುಕದೆ ತನ್ನವಳನ್ನೂ ಬದುಕಿಸದೆ, ಪಾಪ-ಪುಣ್ಯ, ನೈತಿಕತೆ-ಅನೈತಿಕತೆ, ಯಾರಿಗೂ ಉಪಯೋಗಕ್ಕೆ ಬರದ ಮತ್ತು ಮಾನವೀಯವೆನಿಸಿಕೊಳ್ಳದ ಗೊಡ್ಡು ಆದರ್ಶ ಮತ್ತು ಅದು ಕೊಡುವ ಅಹಂಕಾರದೊಂದಿಗೆ ವ್ಯರ್ಥ ಕಳೆದ ಬದುಕಿಗೆ ವಿವಾದಗಳು ಬಿಟ್ಟರೆ ಸಾರ್ಥಕತೆ ತಂದುಕೊಟ್ಟಿದ್ದೆಲ್ಲವೂ ಸಾರ್ವಜನಿಕ ಬದುಕೇ. ಕನಿಷ್ಠ, ಆದರ್ಶಗಳು ಮನುಷ್ಯನಿಗೆ ದಯಪಾಲಿಸುವ ಒಣ ಅಹಂಕಾರಕ್ಕಿಂತ ನೈಸರ್ಗಿಕ ತುಡಿತಗಳಿಗೆ ಸೋತು, ತಾನು ಸೋತೆ ಎಂಬ ಭಾವ ತರುವ ವಿನಯ, ತಾನು ಪುರುಷೋತ್ತಮನಲ್ಲ, ಬದಲಿಗೆ ಕೇವಲ ಮನುಷ್ಯ ಎಂಬ ಸತ್ಯ ದಯಪಾಲಿಸುವ ಸಹಜತನ ಯಾವ ಬಗೆಯಲ್ಲಿ ದ್ವಿತೀಯ ದರ್ಜೆಯದು? ಮನುಷ್ಯ ತಾನು ಯಾವುದಲ್ಲವೋ ಅಂಥ ದೇವರಾಗುವುದಕ್ಕಿಂತ ತನ್ನ ಇತಿಮಿತಿಗಳ ಸಾಮಾನ್ಯ ಮನುಷ್ಯನಾಗುವುದೇ ದೊಡ್ಡದಲ್ಲವೆ? ಜೀವ ವಿರೋಧಿ ಆದರ್ಶಗಳ ಮೆರವಣಿಗೆಯಿಂದೇನು ಬಂತು?
ಆದರೆ ಈ ಪ್ರಶ್ನೆ ಕಾದಂಬರಿಯ ಚೌಕಟ್ಟಿನಲ್ಲಿ ಏಳುವುದಿಲ್ಲ. ನಿರೂಪಕ ಇಲ್ಲಿ ಹಾಕಿಯೇ ಇಲ್ಲದ ಗೇಟನ್ನು ತೆರೆಯಲು ಇಡೀ ಕಾದಂಬರಿಯುದ್ದಕ್ಕೂ ಪ್ರಯತ್ನಿಸಿದಂತಿದೆ. ಗೇಟು ತೆರೆದೇ ಇತ್ತು ಎನ್ನುವುದು ಓದುಗನಿಗೆ ಕೊನೆಗಾದರೂ ಅರಿವಾಗದೇ ಇರದು. ಹಾಗಾಗಿ ವಸ್ತು, ಕೇಂದ್ರ, ತಾತ್ವಿಕ ಆಯಾಮ ಮತ್ತು ದರ್ಶನದ ನಿಟ್ಟಿನಿಂದ ಕಾದಂಬರಿ ತೆಗೆದುಕೊಳ್ಳಬಹುದಾಗಿದ್ದ ಒಂದು ಆಯಾಮವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಿಲ್ಲವಲ್ಲ ಅನಿಸುತ್ತದೆ. ಆದರೆ ನಿರೂಪಣೆಯ ಸೊಗಸು, ಭಾಷೆಯ ಸೌಂದರ್ಯ, ವಿವರಗಳ ಗಾಢ ಜೀವಂತಿಕೆ, ತಾಂತ್ರಿಕವಾಗಿ ನಿಗೂಢತೆಯನ್ನು ಕಾಯ್ದುಕೊಂಡು ಕಥನವನ್ನು ಕೊಂಡೊಯ್ದ ಬಗೆ, ಸಹಜವೆಂಬಂತೆ ಸಾಗುವ ವಿಷಯ ಸಂಗ್ರಹದ ಕಷ್ಟನಷ್ಟಗಳು ಕಥಾನಕದ ಚೌಕಟ್ಟಿನಲ್ಲಿ ಬಂದಿರುವ ಬಗೆ ಎಲ್ಲವೂ ಇಷ್ಟವಾಗುತ್ತದೆ, ತುಂಬ ಚೆನ್ನಾಗಿಯೇ ಇದೆ. ಹಾಗಿದ್ದೂ ಶ್ರೀಧರ ಬಳಗಾರರಂಥ ನುರಿತ, ಸಮರ್ಥ ಕಥನಕಾರರಿಂದ ನಾವು ಸದಾ ಇನ್ನಷ್ಟು ಹೆಚ್ಚಿನದನ್ನೇ ನಿರೀಕ್ಷಿಸುತ್ತ ಇರುತ್ತೇವೆ ಮತ್ತು ಅವರು ಸದಾ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುವ ಅತೃಪ್ತ ಆತ್ಮಗಳಿಗೆ ಶಾಕ್ ಕೊಡುವಂಥ ಕೃತಿಗಳನ್ನು ಕೊಡುತ್ತಿರಬೇಕಾಗುತ್ತದೆ.