Thursday, April 16, 2020

ವಿಶಿಷ್ಟ ಪ್ರಾಯೋಗಿಕ ಕತೆಗಳ ‘ಅಸ್ಮಿತೆ’

ಕನ್ನಡ ಹಾಗೂ ಇಂಗ್ಲೀಷಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕೃಷ್ಣಮೂರ್ತಿ ಚಂದರ್ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿದ್ದವರು, ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದವರು. ‘ಅಸ್ಮಿತೆ’ ಚಂದರ್ ಅವರ ನಾಲ್ಕನೆಯ ಕಥಾಸಂಕಲನ. ಕನ್ನಡ ಸಣ್ಣಕಥಾ ಪರಂಪರೆಯಲ್ಲಿ ಅಷ್ಟಾಗಿ ಚರ್ಚಿತವಲ್ಲದ ಈ ಹೆಸರು ಮೊದಲಿಗೆ ಯಾರೋ ಉದಯೋನ್ಮುಖ ಕತೆಗಾರನದ್ದಿರಬಹುದೆಂದು ಭಾವಿಸುವ ಸಂಭವ ಇದೆ ಎನಿಸುವುದರಿಂದ ಈ ಪರಿಚಯ ಮುಖ್ಯ. 

"ಈಗೊಂದು ಅರ್ಧಶತಮಾನದಿಂದ ಕನ್ನಡದಲ್ಲಿ ಜೋಲುಮೋರೆ ಸಾಹಿತ್ಯಕ್ಕೆ ಹೆಚ್ಚು ಹೆಚ್ಚು ಬೆಲೆ ಬಂದಿದೆ. ಜಗತ್ತಿನ ಕ್ಲಿಷ್ಟತೆ, ಸಂಕೀರ್ಣತೆ, ವಿಶ್ವದುಃಖ, ಅದಕ್ಕೆ ಬುದ್ಧನ ಮುಲಾಮು ವಗೈರೆ ವಗೈರೆ, ದೊಡ್ಡ ಹೊರೆಯಾಗಿ ಕನ್ನಡದ ತಲೆಯ ಮೇಲೆ ಕೂತಿದೆ. ಇಂತಹ ಕರುನಾಡ ಕರಿಮೋಡಗಳ ನೆರಳಿನಿಂದ ಕೊಂಚ ಹೊತ್ತು ಅಪ್ಪಿತಪ್ಪಿ ಬಿಸಿಲು ಬಂದರೂ ಅದು ಗಮನಾರ್ಹ, ಸ್ವಾಗತಾರ್ಹ ಅನ್ನೋಣವೇ? ..... ನಮ್ಮ ದೊಡ್ಡ ದೊಡ್ಡ ಹೆಸರಿನ ಬರಹಗಾರರ ಕೃತಿಗಳನ್ನು ಓದಿ ನಾನು ಬಗ್ಗಲಿಲ್ಲವಾದರೂ ಕುಗ್ಗಿದ್ದೆ. ಚಂದರ್‌ನ ಕಥೆಗಳು ನನಗೆ ಭೇಷಾಗಿ ಚಾಚಿ ಮೈಮುರಿದ ಖುಷಿ ಕೊಟ್ಟವು." ಎನ್ನುತ್ತಾರೆ ಪಂಡಿತ್ ರಾಜೀವ ತಾರಾನಾಥರು ಈ ‘ಅಸ್ಮಿತೆ’ ಸಂಕಲನದ ಕತೆಗಳ ಬಗ್ಗೆ.

ಸಂಕಲನದ ಹೆಸರಿಗೆ ತಕ್ಕಂತೆ ಇಲ್ಲಿನ ಹನ್ನೆರಡೂ ಕತೆಗಳಲ್ಲಿ ಮನುಷ್ಯನ ಅಸ್ಮಿತೆಯ ಕುರಿತಾದ ಜಿಜ್ಞಾಸೆ ಮತ್ತು ಹುಡುಕಾಟವೇ ವಿಭಿನ್ನವಾದ ನೆಲೆಗಳಲ್ಲಿ ಸಾಗುತ್ತದೆ. ಆದರೆ, ಇಂಥ ‘ಯೋಜಿತ’ ಕತೆಗಳ ತಾಂತ್ರಿಕ-ರಾಚನಿಕ ಕುರುಹುಗಳು ಕಣ್ಣಿಗೆ ಎದ್ದು ಕಾಣಿಸದಷ್ಟು ಈ ಕತೆಯ ನಿರೂಪಣೆಯ ತಿಳಿಹಾಸ್ಯ, ಲಘು ಲಯದ ಕಥನ ಮತ್ತು ಸಾಮಾನ್ಯನೊಬ್ಬನ ದೈನಂದಿನಗಳ ಮೂಲಕವೇ ಸಾಗುವ ಕಥಾನಕದ ಹಂದರ ಮನಸೆಳೆಯುತ್ತದೆ ಎನ್ನುವುದೇ ಈ ಕತೆಗಳ ನಿಜವಾದ ಯಶಸ್ಸು. ರಾಜೀವ ತಾರಾನಾಥರ ಖುಶಿಗೆ ಕಾರಣವಾದ ಈ ಅಂಶದ ಜೊತೆಗೇ ಈ ಕತೆಗಳಲ್ಲಿ ಮಹತ್ವಾಕಾಂಕ್ಷೆಯ ಹಂಬಲವೂ ಇದೆಯೆನ್ನುವುದನ್ನು ನಾವು ಮರೆಯುವಂತಿಲ್ಲ. ಈ ಕತೆಗಳನ್ನು ಓದುವಾಗ ಮತ್ತೆ ಮತ್ತೆ ನೆನಪಾಗುವ ಕನ್ನಡದ ಇಬ್ಬರು ಕತೆಗಾರರೆಂದರೆ ವಿವೇಕ್ ಶಾನಭಾಗ ಮತ್ತು ಎಸ್ ಸುರೇಂದ್ರನಾಥ್. ಇದನ್ನು ವಿವರಿಸುವುದರ ಮೂಲಕವೇ ಕೃಷ್ಣಮೂರ್ತಿ ಚಂದರ್ ಅವರ ಕತೆಗಳನ್ನು ಗ್ರಹಿಸುವುದು ಸರಿಯೇನೋ. 

ವಿವೇಕ ಶಾನಭಾಗರ ‘ನಿಲುಕು’ (‘ಲಂಗರು’ ಸಂಕಲನ), ‘ಇನ್ನೂಒಂದು’ (ಕಾದಂಬರಿ), ‘ಮತ್ತೊಬ್ಬನ ಸಂಸಾರ’ ಮತ್ತು ‘ಥೂ ಕೃಷ್ಣ’ (ಎರಡೂ ‘ಮತ್ತೊಬ್ಬನ ಸಂಸಾರ’ ಸಂಕಲನ), ‘ನಿರ್ವಾಣ’, ‘ಕೋಳಿ ಕೇಳಿ ಮಸಾಲೆ’, ‘ವಿಚಿತ್ರಕತೆ’ (‘ಘಾಚರ್ ಘೋಚರ್’ ಸಂಕಲನ) ಮುಂತಾದ ಕತೆಗಳನ್ನು ಓದಿರುವವರಿಗೆ ಈ ‘ಅಸ್ಮಿತೆ’ ಸಂಕಲನದಲ್ಲಿ ಕೃಷ್ಣಮೂರ್ತಿ ಚಂದರ್ ಅವರು ನಡೆಸುತ್ತಿರುವ ಮನುಷ್ಯನ ಅಸ್ಮಿತೆಯ ಶೋಧದ ನೆಲೆಗಳು ಕೊಂಚ ಸುಲಭವಾಗಿ ಅರ್ಥವಾಗುತ್ತವೆ. ಮನುಷ್ಯನಿಗೆ ಒಂದು ನಿರ್ದಿಷ್ಟ ಚಹರೆ, ಗುರುತು, ಅಸ್ಮಿತೆ ಲಭಿಸುವುದು ಯಾವುದರಿಂದ? ದೇಹ, ಮನಸ್ಸು, ಯೋಚನಾಕ್ರಮ ಯಾವುದು ನಮ್ಮ ಪರಿಕಲ್ಪನೆಯ ವ್ಯಕ್ತಿತ್ವಕ್ಕೆ ಮೂರ್ತ ವ್ಯಕ್ತಿಯನ್ನು ಜೋಡಿಸುವಂಥ ತಂತು? ಇದನ್ನು ಹೇಳುವುದು ಕಷ್ಟ. ಬದುಕಿನಲ್ಲಿ ಎಲ್ಲವೂ ಅರ್ಥವಾಗುವುದಿಲ್ಲ, ವ್ಯಾಖ್ಯಾನಕ್ಕೆ ದಕ್ಕುವುದಿಲ್ಲ ಎನ್ನುವುದು ನಿಜ. ಮೂರ್ತವಾಗಿ ಇರುವುದರ ಮೂಲಕ, ಅದನ್ನೇ ಆಧಾರವಾಗಿಟ್ಟುಕೊಂಡು ಅಮೂರ್ತವಾದ ಕೆಲವೊಂದು ಹೊಳಹುಗಳ ಜೊತೆ, ಅನೂಹ್ಯಗಳ ಜೊತೆ ಅದನ್ನು ಜೋಡಿಸಿಯೇ ಇದನ್ನು ಅರ್ಥಮಾಡಿಕೊಳ್ಳಬೇಕಾದ ಅನಿವಾರ್ಯ ನಮಗಿದೆ. ಈ ಸಂಕಲನದ ‘ಅಸ್ಮಿತೆ’, ‘ಪಿತೃಪಕ್ಷ’, ‘ಭುವನ’, ‘ಭ್ರಮೆಯೊಳಗಿನ ವಾಸ್ತವ’, ಮತ್ತು ‘ನವ್ಯೋತ್ತರ’ ಕತೆಗಳು ಒಂದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ಮನುಷ್ಯನ ಐಡೆಂಟಿಟಿಯ ಸುತ್ತ ಗಿರಕಿ ಹೊಡೆಯುತ್ತವೆ. ನಾನು ಪ್ರಜ್ಞಾಪೂರ್ವಕ ಇನ್ನೊಬ್ಬನಾಗುವ, ನನಗೆ ನಾನು ನಿಜಕ್ಕೂ ಆ ಇನ್ನೊಬ್ಬನಾಗಿರಬಹುದಾದ ಅನುಮಾನ ಬರುವ, ನಾನು ಉದ್ದೇಶಪೂರ್ವಕ ಇನ್ಯಾರೋ ಆಗಲು ಹೊರಡುವ, ಥಟ್ಟನೇ ನಿನ್ನೆಯಿಂದ ಕಳಚಿಕೊಂಡು ಇವತ್ತು ಇನ್ನೊಬ್ಬನೇ ಆಗಿಬಿಡುವ, ಯಾರನ್ನೋ ನೋಡಿದಾಗ ಇನ್ಯಾರನ್ನೋ ಕಂಡಂತಾಗುವ, ಅವರೇ ಇವರೋ ಅಥವಾ ಇವರೇ ಅವರೋ ಎಂಬುದು ಒಗಟಾಗಿ ಬಿಡುವ ಸೋಜಿಗವನ್ನು ಬದುಕಿನ ಬಹುಮುಖ್ಯ ಮತ್ತು ಶಾಶ್ವತ ಸತ್ಯಗಳ ನೆರಳಿನಲ್ಲಿ ಕಾಣಿಸುವ ಕತೆಗಳು ತಮ್ಮದೇ ಆದ ದರ್ಶನ, ಒಳನೋಟ, ಕಾಣ್ಕೆ ಒದಗಿಸಬಲ್ಲ ಶಕ್ತಿಯನ್ನೂ ಹೊಂದಿವೆ, ಅದನ್ನು ಮೀರಿಸಬಲ್ಲ ಮಿತಿಯನ್ನೂ ಹೊಂದಿವೆ. ಈ ಮಿತಿಯನ್ನು ಲವಲವಿಕೆಯ ನಿರೂಪಣೆ, ಕಥನವನ್ನು ಅಥೆಂಟಿಕ್ ಆಗಿಸುವಷ್ಟು ದಟ್ಟವಾದ ನೈಜ ವಿವರಗಳು, ಮುದ ನೀಡಬಲ್ಲ ಭಾಷೆಯ ಸೊಗಡು ಇತ್ಯಾದಿ ಮೀರಬಲ್ಲದು ಎನ್ನುವುದು ನಿಜ. ಬಹುಶಃ ಕೃಷ್ಣಮೂರ್ತಿ ಚಂದರ್ ಅವರ ಕತೆಗಳ ನಿಜವಾದ ಆಕರ್ಷಣೆ ಅದು. 

ಇಲ್ಲಿ ಎಸ್ ಸುರೇಂದ್ರನಾಥ್ ನೆನಪಾಗುತ್ತಾರೆ. ಕೃಷ್ಣಮೂರ್ತಿ ಚಂದರ್ ಅವರ ಕತೆಗಳಲ್ಲಿ ಬರುವ ಅಗ್ರಹಾರದ ರಾಯರು ಮತ್ತು ಅವರ ಪತ್ನಿ ಶಾರದಮ್ಮ, ರಿಟೈರ್ಡ್ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್ ಎ. ನರಸಿಂಹ ಶಾಸ್ತ್ರಿಗಳು, ಎ.ರಾಮಣ್ಣ ಬೀದಿಯ ವಠಾರದಲ್ಲಿ ವಾಸವಾಗಿರುವ ವಾಸುದೇವರಾಯರು ಮತ್ತವರ ಪತ್ನಿ ಲಕ್ಷ್ಮಮ್ಮ, ತೊಗರಿಬೀದಿ ಆರನೇ ಕ್ರಾಸಿನ ಮೂಲೆಯ ಹಂಚಿನ ಮನೆಯ ರಂಗ ಅಯ್ಯಂಗಾರ್ರರು ಮತ್ತು ಅವರ ಧರ್ಮಪತ್ನಿ ಅಂಡಾಳಮ್ಮನವರು, ಶ್ರೀನಿವಾಸರಾಯರು ಮತ್ತು ಅವರ ಪತ್ನಿ ಅಹಲ್ಯಾಬಾಯಿ, ತೆಲುಗು-ತಮಿಳು-ಕನ್ನಡ ಎಲ್ಲ ಮಿಶ್ರವಾಗಿರುವ ಭಾಷೆಯಲ್ಲಿ ಮಾತನಾಡುತ್ತ ಕಟ್ಟಿಕೊಡುವ ಇಳಿವಯಸ್ಸಿನ ದಾಂಪತ್ಯದ ಒಂದು ಚಿತ್ರವೇನಿದೆ, ಅದನ್ನು ಮನಸ್ಸಲ್ಲಿ ಅಚ್ಚಾಗುವಂತೆ, ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದವರು ಎಸ್ ಸುರೇಂದ್ರನಾಥ್ ಅವರೆಂದರೆ ತಪ್ಪಾಗಲಾರದು. ಈ ಯಾವತ್ತೂ ವ್ಯಕ್ತಿಗಳು, ದಂಪತಿಗಳು, ಅವರ ಬದುಕು ಎಲ್ಲರಂತೆ ಸ್ವಸ್ಥವಾದದ್ದಲ್ಲ, ಅದರಲ್ಲೇನೋ ಅಸಡ್ಡಾಳತನ, ವಿಕಾರ, ವಕ್ರೀಭವನ ಇದೆ. ಅದು ಮೇಲ್ನೋಟಕ್ಕೆ ಲಘುವಾಗಿ, ಹಾಸ್ಯಾಸ್ಪದ ಎನಿಸಿದರೂ ಅದು ನಮ್ಮದೂ ಆಗಿರುವುದು ಗಮನಕ್ಕೆ ಬಂದಂತೆಲ್ಲ ಸಹಜವಾಗಿಯೇ ಗಂಭೀರ ಎನಿಸತೊಡಗುತ್ತದೆ. ಇದೊಂದು ಬಗೆಯ ವಾಸ್ತವದಲ್ಲಿ ಕಂಡೂ ಕಾಣದಂತಿರುವ ನಾಟಕೀಯತೆಯನ್ನು ಎತ್ತಿ ತೋರಿಸುವ ಮೂಲಕ ಸತ್ಯದರ್ಶನ ಮಾಡುವ ಪರಿ. ಎಸ್ ಸುರೇಂದ್ರನಾಥ್ ಅವರು ಸ್ವತಃ ನಾಟಕಕಾರರಾಗಿರುವುದರಿಂದ ಅವರಿಗಿದು ಸುಲಭವೂ ಸಹಜವೂ ಆಗಿತ್ತು ಎನ್ನಬಹುದೇನೋ. ಅವರ ‘ಕುರುವಿನ ಗುಲಾಮ’, ‘ನಾತಲೀಲೆ’, ‘ಗಿರಿಜಾಕಲ್ಯಾಣ’, ‘ಗುಪ್ತಸಮಾಲೋಚನೆ’, ‘ಶನಿಕಾಟದ ಅಂಗಡಿ’, ‘ಕರುಣಾಳು ಬೆಳಕೇ ತೊಲಗು’ ಕತೆಗಳ ಹೆಸರೇ ಸೂಚಿಸುವಂತೆ ಮನುಷ್ಯನ ಬದುಕಿನ ಮೇಲೆ ಒಂದು ಬಗೆಯ ವಾರೆನೋಟ ಬೀರುವ ಕತೆಗಳಿವು. ಹಾಗೆ ಮಾಡುತ್ತಲೇ ಅವನ ಅಸ್ಮಿತೆಯ ಪ್ರಶ್ನೆಯನ್ನು ತುಂಬ ಸುಪ್ತವಾಗಿ ತಡಕುತ್ತಿವೆ ಎಂದರೂ ತಪ್ಪಿಲ್ಲ. ಕೃಷ್ಣಮೂರ್ತಿ ಚಂದರ್ ಅವರಂತೂ ಅಸ್ಮಿತೆಯ ಪ್ರಶ್ನೆಯನ್ನೇ ಇಟ್ಟುಕೊಂಡು ಇಂಥ ಸಂಸಾರಗಳನ್ನು, ದಂಪತಿಗಳನ್ನು ಚಿತ್ರಿಸುತ್ತ ಕತೆಗೆ ಒಂದು ಬಗೆಯ ನವಿರಾದ ಹಾಸ್ಯದ ಲೇಪವನ್ನೂ, ಓದುಗನಿಗೆ ಓದು ಒಜ್ಜೆಯಾಗದ ಲಘುಭಾವವನ್ನೂ ನೀಡಲು ಬಳಸಿಕೊಳ್ಳುತ್ತಾರೆ. ಎಸ್ ಸುರೇಂದ್ರನಾಥ್ ಅವರ ಕತೆಗಳ ಅಂತರಾತ್ಮವೇ ಆಗಿರುವ ಒಂದು ವಿಧಾನ ಕೃಷ್ಣಮೂರ್ತಿ ಚಂದರ್ ಅವರಿಗೆ ಒಂದು ತಂತ್ರವಷ್ಟೇ ಆಗಿ ಒದಗಿದಂತಿದೆ ಎಂದರೂ ತಪ್ಪಾಗಲಾರದು. 

ಹೀಗಾಗಿ, ನಮಗೆ ಎರಡು ಬಗೆಯ ಕತೆಗಳ ಒಂದು ಹೈಬ್ರಿಡ್ ತಳಿ ಇಲ್ಲಿ ಸಿಗುತ್ತಿದೆ. ‘ಅಸಂವಹನ’ ಎಂಬ ಒಂದು ಕತೆ ಚಿತ್ತಾಲರ ‘ಪಯಣ’ ಕತೆಯನ್ನು ನೆನಪಿಸುವುದಾದರೂ ಕೇಂದ್ರದಲ್ಲಿ ಈ ಕತೆಯ ಗಮ್ಯ ಕೊಂಚ ಬೇರೆಯಿರುವಂತೆ ಕಾಣುತ್ತದೆ. ಹೀಗೆ ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಪಂಡಿತ ರಾಜೀವ ತಾರಾನಾಥರು ಕತೆಗಾರರಿಗೆ ಹೇಳಿದ ಮೂರು ಕತೆಗಳ ನಿರೂಪಣೆಯೂ ಹೆಚ್ಚುವರಿಯಾಗಿ ಈ ಸಂಕಲನದಲ್ಲಿ ನಮಗೆ ಸಿಗುತ್ತಿದ್ದು ಇವು ಸ್ವತಃ ತಾರಾನಾಥರೇ ಎದುರಿಗಿದ್ದು ನೇರವಾಗಿ ನಮಗೇ ಹೇಳಿದಷ್ಟು ಆಪ್ತವಾದ ನಿರೂಪಣೆಯಲ್ಲಿರುವುದು ಈ ಸಂಕಲನದ ಒಂದು ವಿಶೇಷ. ಇಲ್ಲಿನ ಕೊನೆಯ ಎರಡು ಕತೆಗಳಲ್ಲಿ ಪ್ರತಿಯೊಂದೂ ಸ್ವತಂತ್ರವಾದ ಹಲವು ಕತೆಗಳಾಗಬಹುದಾದ ಮತ್ತು ಒಂದರಿಂದ ಒಂದು ತೀರ ಭಿನ್ನವಾದ ಕತೆಗಳೇ ಆಗುವಂಥ ಸಂಗತಿಗಳಿವೆ. ಹಾಗಾಗಿ ಕೇಂದ್ರ ಎನ್ನುವುದು ಚದುರುತ್ತದೆ. ಸಣ್ಣಕತೆ ಯಾವತ್ತೂ ಚದುರಿದ್ದನ್ನು ಏಕತ್ರಗೊಳಿಸುತ್ತ ಹೋಗುವ ಪ್ರಕಾರವೆಂದೇ ನಾವು ತಿಳಿದಿದ್ದೇವೆ. ಇಲ್ಲಿ ಅಂಥ ಪ್ರಯತ್ನ ಸಾಧ್ಯವಾಗುವುದಿಲ್ಲ. ಬದಲಿಗೆ ಇದೊಂದು ಲೋಕಾಭಿರಾಮದ ಹರಟೆಯಂತೆ ಸಾಗಿಯೂ ಒಂದು ವಿಚಿತ್ರ ಆಕರ್ಷಣೆಯನ್ನೂ ಹೊಂದಿರುವುದು ನಿಜ. 

ಇತ್ತೀಚೆಗೆ ಬಂದ ಕಥಾಸಂಕಲನಗಳಲ್ಲಿ ಗಮನಿಸಬೇಕಾದ, ಚರ್ಚಿಸಬಹುದಾದಂಥ ಕಥಾ ಹಂದರ, ವಸ್ತು, ನಿರೂಪಣಾ ತಂತ್ರಗಳೆಲ್ಲ ಇರುವ ಬಹುಮುಖ್ಯ ಕೃತಿಯಿದು ಎನ್ನುವುದರಲ್ಲಿ ಅನುಮಾನವಿಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ