Wednesday, May 6, 2020

ಸತೀಶ್ ಚಪ್ಪರಿಕೆಯವರ ಕಥಾಸಂಕಲನ ವರ್ಜಿನ್ ಮೊಹಿತೊ

 ಒಂದು ಸಣ್ಣಕತೆ ಅತ್ಯುತ್ತಮ ಸಣ್ಣಕತೆಯೆಂದೋ, ಯಶಸ್ವೀ ಸಣ್ಣಕತೆಯೆಂದೋ,   ಓದಿದಾಗ ವಾಹ್! ಅನಿಸುವುದೋ ಯಾವಾಗ ಎಂಬ ಪ್ರಶ್ನೆಗೆ ಪೀಟರ್ ಆರ್ನರ್   ‘ಅದರಲ್ಲಿ ರಕ್ತವಿದ್ದು ಎನರ್ಜಿ ಸಂಚಲಿಸುತ್ತಿರುವುದು ನಮ್ಮ ಅನುಭವಕ್ಕೂ ಬಂದಾಗ’   ಎಂಬರ್ಥದ ಉತ್ತರ ಕೊಡುತ್ತಾನೆ. ತುಂಬ ಕ್ಲಿಷ್ಟವಾದ ಪ್ರಶ್ನೆಗೆ ತುಂಬ ಸರಳವೆನಿಸುವ   ಕ್ಲಿಷ್ಟ ಉತ್ತರವಿದು. 

  ಚಪ್ಪರಿಕೆಯವರ ಕತೆಗಳನ್ನು ಓದಿದಾಗ ನನಗನಿಸಿದ್ದು ಇಲ್ಲಿನ ಎಲ್ಲಾ   ಕತೆಗಳೂ ಆಡಿಬಲ್ ಕತೆಗಳು, ಗಟ್ಟಿಯಾಗಿ ಓದಬಹುದಾದಂಥ ಕತೆಗಳು. ಅಂದರೆ   ಇಲ್ಲಿ  ಭಾಷೆಯ ಸೊಗಡಿಗೆ, ಅನುಭವವನ್ನು ಭಾಷೆಯಲ್ಲಿ ಕಟ್ಟುವುದಕ್ಕೆ ಹೆಚ್ಚು ಒತ್ತು   ನೀಡಲಾಗಿದೆ. ಪ್ರೆಸೆಂಟೇಶನ್ ಮತ್ತು ಅದರ ಚಂದಕ್ಕೆ ಮಹತ್ವ ಕೊಟ್ಟು ಬರೆಯುವುದೇ   ಕತೆಗಾರಿಕೆಯ ಕೌಶಲದ ಪ್ರಧಾನ ಗುಣ ಎಂದು ಪ್ರಜ್ಞಾಪೂರ್ವಕ ಒಪ್ಪಿಕೊಂಡು   ಬರೆಯುವ ಒಂದು ಕ್ರಮವಿದೆ. ಆದರೆ ನವ್ಯೋತ್ತರ ಸಣ್ಣಕತೆಗಳನ್ನು ಗಮನಿಸುತ್ತ   ಬಂದರೆ ಅದು ಸಾಕಷ್ಟು ಪ್ರಯೋಗಶೀಲ ಪ್ರಯತ್ನಗಳಿಗೆ ತನ್ನನ್ನು ತಾನು ಒಡ್ಡಿಕೊಂಡು   ಅಗಾಧವಾಗಿ ಬೆಳೆದು ಬಂದ ಒಂದು ಪ್ರಕಾರವಾಗಿದೆ. ಗಂಭೀರವಾಗಿ ಸಣ್ಣಕತೆಗಳನ್ನು ಬರೆಯಲು ಹೊರಟ ಕನ್ನಡದ ಕತೆಗಾರನಿಗೆ ಅದರ ಸ್ಥೂಲ ಅರಿವು ಇರುವುದು ಅಗತ್ಯ. ಏಕೆಂದರೆ, ಮೇಲೆ ಹೇಳಿದಂತೆ ಬರೆಯುವ ಕ್ರಮದ ಜೊತೆಜೊತೆಗೇ ಇನ್ನೂ ಮೂರು ಕ್ರಮಗಳಲ್ಲಿ ಕನ್ನಡದಲ್ಲಿ ಸಣ್ಣಕತೆಗಳು ಬರುತ್ತಿವೆ, ಏಕಕಾಲಕ್ಕೆ ಎನ್ನುವುದನ್ನು ಕೂಡ ಮರೆಯಲಾಗದು ಮತ್ತು ಅದು ಎಲ್ಲಾ ಕತೆಗಾರರ ಗಮನದಲ್ಲಿರುವುದು ಒಳ್ಳೆಯದು. 

ಅದನ್ನು ನಾನು ನನ್ನ ಅಧ್ಯಯನದ ಇತಿಮಿತಿ ಮತ್ತು ಅಗತ್ಯಕ್ಕೆ ಹೊಂದುವಂತೆ ಲಂಕೇಶ್ ಕ್ರಮ, ಜಯಂತ್ ಕಾಯ್ಕಿಣಿ ಕ್ರಮ, ವಿವೇಕ್ ಶಾನಭಾಗ್ ಕ್ರಮ ಎಂದು ವಿಂಗಡಿಸಿಕೊಳ್ಳುತ್ತೇನೆ. ಲಂಕೇಶ್ ಕ್ರಮದಲ್ಲಿಯೇ ರಾಘವೇಂದ್ರ ಪಾಟೀಲರು, ಅಮರೇಶ ನುಗಡೋಣಿಯವರು, ದೇವನೂರ ಮಹದೇವರು ಪ್ರಯೋಗಗಳನ್ನು ನಡೆಸಿದರೆ, ಜಯಂತ್ ಮತ್ತು ವಿವೇಕ್ ವಿಭಿನ್ನವಾದ ಎರಡು ಕ್ರಮಗಳನ್ನು ನಮಗೆ ಒದಗಿಸಿದರು. ಬಹುತೇಕ ಉತ್ತರಕನ್ನಡದ ಕತೆಗಾರರು ಮತ್ತು ಅಂಕಿತ-ವಿಜಯಕರ್ನಾಟಕ ಕಥಾಸ್ಪರ್ಧೆಯ ಮೂರು ವರ್ಷಗಳ ಪರ್ವ ಆರಂಭವಾದಂದಿನಿಂದಲೂ ಆ ಕಾಲಘಟ್ಟದ ಹೊಸ ಕತೆಗಾರರು ಜಯಂತ್ ಮಾರ್ಗದ ಅನುಸರಣೆ ಮಾಡಿದ್ದು ಕಂಡುಬಂದರೆ ವಿವೇಕ್ ಮಾರ್ಗಕ್ಕೆ ಅಭಿಮಾನಿಗಳು ಸಾಕಷ್ಟಿದ್ದರೂ ಚಂದಾದಾರರು ಕಡಿಮೆ. 

ಲಂಕೇಶ್ ಕ್ರಮದಲ್ಲಿ ಕಥನಕ್ಕಿಂತ ಕಥಾಜಗತ್ತಿನ ಜೀವಂತಿಕೆಗೆ ಹೆಚ್ಚು ಒತ್ತು. ಅಲ್ಲಿನ ಪಾತ್ರಗಳು, ಆ ಪಾತ್ರಗಳ ನಿರ್ದಿಷ್ಟ ಗುಣಲಕ್ಷಣಗಳು, ದೇಹಮೂಲವಾದ ಗುರುತು, ಚಹರೆಗಳ ಚೌಕಟ್ಟು, ಪಾತ್ರಗಳು ಮಾತನಾಡುವ, ನಡೆಯುವ, ದಿರಿಸು ಧರಿಸುವ, ಸ್ವಭಾವದ ಚಿತ್ರ, ಪಾತ್ರಗಳ ಹೊಟ್ಟೆಪಾಡು, ಅದಕ್ಕಾಗಿ ಅವಲಂಬಿಸಿದ ವೃತ್ತಿಯ ಏಳುಬೀಳುಗಳು, ಪಾತ್ರಗಳು ಆಡುವ ಭಾಷೆ, ಅವು ಬದುಕುವ ಕ್ರಮ, ಅವುಗಳ ದೈನಂದಿನ, ಅವರ ಊರಿನ ಚಿತ್ರ, ಆ ಊರಿನ ಶಾಲೆ, ಆಸ್ಪತ್ರೆ, ಬೀದಿ-ಓಣಿ-ಗಲ್ಲಿ, ಮಕ್ಕಳ ಆಟ, ಊರ ಗುಡಿ, ಅಲ್ಲಿನ ಜಾತ್ರೆ, ಮದುವೆ-ಮುಂಜಿ ಹೀಗೆ ವಾತಾವರಣವನ್ನೂ, ಪಾತ್ರಗಳನ್ನೂ ಒಟ್ಟಾಗಿಯೇ ಗ್ರಹಿಸುತ್ತ ಕಥನ ಕಟ್ಟುವ ಕ್ರಮವಿದು. ಇಲ್ಲಿ ಕಥನವೇ subtle ಆಗಿಬಿಡುವುದು ಮತ್ತು ಅದೇ ಕತೆಯ ಯಶಸ್ಸಿಗೂ ಕಾರಣವಾಗುವುದು ಗಮನಾರ್ಹ. ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆಯಾಗಲಿ, ಮುಟ್ಟಿಸಿಕೊಂಡವನು ಕತೆಯಾಗಲಿ, ಸಹಪಾಠಿ, ಕಲ್ಲುಕರಗುವ ಸಮಯವಾಗಲಿ, ಡಿಸೋಜನ ಊವಿನ ವೃತ್ತಿಯಾಗಲಿ, ದೇವಿಯ, ಸ್ಟೆಲ್ಲಾಳ ಕತೆಯಾಗಲಿ ಶಾಶ್ವತವಾಗಿ ಮನಸ್ಸಿನಲ್ಲಿ ನಿಂತುಕೊಳ್ಳುವಂತೆ ಸೃಷ್ಟಿಯಾಗಿರುವ ಹಿಂದಿನ ಕಲೆಗಾರಿಕೆ ಇದು. ಇದೇ ಮಾತನ್ನು ರಾಘವೇಂದ್ರ ಪಾಟೀಲರ, ಅಮರೇಶ ನುಗಡೋಣಿಯವರ, ದೇವನೂರ ಮಹದೇವ ಅವರ ಕತೆಗಳಿಗೂ ಅನ್ವಯಿಸಿ ಹೇಳಲು ಸಾಧ್ಯವಿದೆ. 

ಲಂಕೇಶ್ ಕ್ರಮಕ್ಕೆ ಹೋಲಿಸಿದರೆ ಜಯಂತರ ಕ್ರಮದಲ್ಲಿ ಇರುವ ಮೂಲಭೂತ ವ್ಯತ್ಯಾಸವೇ ಅವರ ಕಥಾಜಗತ್ತು ಮತ್ತು ಅಲ್ಲಿನ ಪಾತ್ರಗಳೇ ಕಾಲ-ದೇಶ ಮೀರಿ ನಿಂತಿರುವುದರಲ್ಲಿ ಹಾಗೂ ಸಣ್ಣಕತೆಯ ನಿರೂಪಣೆಗೆ ರೂಪಕ ಭಾಷೆಯ ಮುಖೇನ ಕಾವ್ಯಾತ್ಮಕ ಲಯವೊಂದನ್ನು ಒದಗಿಸುವುದರಲ್ಲಿ ಇದೆ. ಹೀಗಾಗಿ ಜಯಂತರ ಕತೆಗಳಲ್ಲಿ ನಮಗೆ ಸಮಕಾಲೀನ ವಿದ್ಯಮಾನಗಳು ಅಷ್ಟಾಗಿ ಎದುರಾಗುವುದಿಲ್ಲ. ಅಂದರೆ, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ನುಗಡೋಣಿ ಮುಂತಾದವರ ಕತೆಗಳಲ್ಲಿ ಬರುವ ಪ್ಲೇಗ್, ಬರ, ತುರ್ತುಪರಿಸ್ಥಿತಿ, ಹಿಟ್ಲರ್, ಜಾಗತಿಕ ಯುದ್ಧಗಳು, ಕಮ್ಯುನಿಸಂ ಕಾಲೂರಿದ ಸಂದರ್ಭ, ನಕ್ಸಲ್ ಚಟುವಟಿಕೆಗಳು, ರೈತ, ಗೋಕಾಕ್ ಚಳುವಳಿಯ ಸಂದರ್ಭ ಇತ್ಯಾದಿಗಳೆಲ್ಲ ಕಥಾನಕದ ಹಿನ್ನೆಲೆಯ ಎಳೆಯಾಗಿ ಕೂಡಾ ಜಯಂತರಲ್ಲಿ ಸಿಗುವುದಿಲ್ಲ. ಉದಾಹರಣೆಗೆ, ಜಯಂತರ ಮುಂಬಯಿಯಲ್ಲಿ ಬಾಳಠಾಕ್ರೆಯ ಅಟ್ಟಹಾಸ, ಸಂಜಯ್ ಗಾಂಧಿಯ ಸುಂದರ ಸಿಟಿ (ಕೊಳೆಗೇರಿ ನಿರ್ಮೂಲನ)ನಿರ್ಮಾಣ, ಕೈಗಾರಿಕಾ ರಂಗದ ಯೂನಿಯನ್ನುಗಳ ಹುಟ್ಟು, ಬಾಂಬ್ ಬ್ಲಾಸ್ಟ್, ಸಂತಾನಹರಣ ಚಿಕಿತ್ಸೆಯ ವ್ಯಂಗ್ಯ ಅಭಿಯಾನ ಇತ್ಯಾದಿಗಳೆಲ್ಲ ಇಲ್ಲ. ಹಾಗಾಗಿಯೇ, ಜಯಂತರ ಕತೆಗಳು ಎಲ್ಲಿಯೂ ಘಟಿಸಬಹುದಾದ ಸಾರ್ವತ್ರಿಕತೆಯನ್ನು ಮೈಗೂಡಿಸಿಕೊಂಡು ಬಿಡುತ್ತವೆ. ಆದರೆ ಈ ಸಾರ್ವತ್ರಿಕತೆಗೆ ಅದೊಂದೇ ಕಾರಣವಾಗಿಲ್ಲ. ಜಯಂತರು ಸಾಮಾನ್ಯವಾಗಿ ಆರಿಸಿಕೊಳ್ಳುವ ಕೇಂದ್ರ ಮನುಷ್ಯ ಸಂಬಂಧಗಳ, ಅಂತಃಕರಣದ, ಸಜ್ಜನಿಕೆಯ ಮಾನವೀಯ ತುಡಿತಗಳಿಗೆ ಸಂಬಂಧಿಸಿದ್ದು. ಜಯಂತರ ಪಾತ್ರಗಳೂ ನಮ್ಮ ನಿಮ್ಮ ವಾಸ್ತವ ಜಗತ್ತಿನಲ್ಲಿ ನಿತ್ಯ ಕಾಣಬಹುದಾದ ಮನೋಧರ್ಮದವಲ್ಲ. ನಾವು ಕನಸುವಂಥವು, ನಾವೇ ಆಗಲು ಬಯಸುವಂಥವು ಹೊರತು ನಾವು "ಆಗಿರುವ" ವ್ಯಕ್ತಿತ್ವದವಲ್ಲ. ಹೀಗೆ ಪರಂಪರಾನುಗತ ಕಥನ ಕ್ರಮವನ್ನು ಬಿಟ್ಟುಕೊಟ್ಟೂ ಜಯಂತರು ‘ನೀರು’ ತರದ, ‘ಚಾರ್ಮಿನಾರ್’ ತರದ ಅತ್ಯಂತ ಸಮಕಾಲೀನ (ವರ್ತಮಾನದ) ಸಮಸ್ಯೆಗೆ ಸ್ಪಂದಿಸಿ ಬರೆಯುತ್ತಾರೆನ್ನುವುದನ್ನು ಗಮನಿಸಬೇಕು. ಇದು ಸುಲಭದ ಸವಾಲೂ ಅಲ್ಲ, ಜಯಂತರ ಹೊರತು ಅನ್ಯರಿಗೆ ಸುಲಭಸಾಧ್ಯವೂ ಅಲ್ಲ. ಹಾಗಾಗಿ ಜಯಂತರ ಮಾದರಿಗೆ ಶಿಷ್ಯರು ಸಾಕಷ್ಟಿದ್ದರೂ ಅದು ಕ್ರಮೇಣ ಅವರ ಕತೆಗಾರಿಕೆಯ ಮಿತಿಯಾಗಿ ನಿಂತಿತೇ ಹೊರತು ಜಯಂತರಂತೆ ತಮ್ಮದೇ ಮಿತಿಯನ್ನು ತಾವೇ ಮೀರುವ ಅವಕಾಶವಾಗಿ ತೆರೆದುಕೊಳ್ಳಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ಜಯಂತರ ಇತ್ತೀಚಿನ ಕತೆ "ಒನ್ ಟೂ ತ್ರೀ ಮೈಕ್ ಟೆಸ್ಟಿಂಗ್’ ನ್ನು ಸೂಕ್ಷ್ಮವಾಗಿ ಗಮನಿಸಬೇಕು. ಒಂದು ನಿಟ್ಟಿನಿಂದ ಜಯಂತ್ ಬರೆಯಬಹುದಾದ ಕತೆಯೇ ಅಲ್ಲ ಅದು. ಆದರೆ ರಾವ್‌ಬೈಲ್, ಮಾರಿಯೋ ಮಿರಾಂಡ, ಮಿಮಿಕ್ರಿ, ಪಿಯಾನೋ, ಸಂಗೀತ ಎಲ್ಲ ಬಳಸಿಕೊಂಡು ಶಬ್ದದೊಳಗಿನ ನಿಶ್ಶಬ್ದದ ಕುರಿತೇ ಕತೆ ಬರೆಯುವ ಜಯಂತ್ ಅಚ್ಚರಿ ಹುಟ್ಟಿಸುತ್ತಾರೆ. ಸರಿಸುಮಾರು ಅದೇ ಹೊತ್ತಿಗೆ ಇನ್ನೊಂದು ಕಡೆ ಅವರು ಭಾಮೆ ಕೇಳೆಂದ ತರದ, ನಿರೂಪಣೆಯಲ್ಲಿ ಗದ್ದಲವೇ ಹೆಚ್ಚಿರುವ ಕತೆಯನ್ನು ಕೂಡಾ ಬರೆಯಬಲ್ಲವರು ಎನ್ನುವಲ್ಲಿಯೇ ಅವರ ಪ್ರತಿಭೆ ಮತ್ತು ಸಾಧ್ಯತೆಗಳ ಅಗಾಧತೆಯ ಕಲ್ಪನೆ ನಮಗೆ ಸಿಗಬೇಕು. ಸ್ಪಷ್ಟವಾಗಿಯೇ ಹೇಳಬೇಕೆಂದರೆ ಜಯಂತ್ ಕತೆಗಾರಿಕೆಯ, ಸೃಜನಶೀಲ ಪ್ರಕ್ರಿಯೆಯ ಸರಿಯಾದ ಅಂದಾಜು ಕನ್ನಡದ ಸಣ್ಣಕತೆಯ ಅಧ್ಯಯನಕಾರರಿಗೆ ಇನ್ನೂ ದಕ್ಕಿಯೇ ಇಲ್ಲ. ಜಯಂತ್ ಯಾವತ್ತೂ ತಮ್ಮೊಳಗಿನ ಕತೆಗಾರನ ಮೌನಕ್ಷಣಗಳ ಕುರಿತು ಎಲ್ಲಿಯೂ ಮಾತನಾಡಿದ್ದಿಲ್ಲ ಎನ್ನುವುದನ್ನು ಗಮನಿಸಿ. 

ವಿವೇಕ್ ಶಾನಭಾಗ್ ಕ್ರಮವೇ ಹೊಸ ತಲೆಮಾರಿನ ಕತೆಗಾರರ ಸದ್ಯದ ಸವಾಲಾಗಿದೆ ಎಂದು ವೈಯಕ್ತಿಕವಾಗಿ ನಾನು ತಿಳಿದಿದ್ದೇನೆ. ಆದರೆ ಇದಕ್ಕೆ ಬಹುದೊಡ್ಡ ಅಪವಾದವಿದೆ ಎನ್ನುವುದನ್ನು ನಾನು ಮರೆತಿಲ್ಲ. ವಿವೇಕರ ಮಾದರಿಯಲ್ಲಿ ಯಾವುದನ್ನೂ ಗಟ್ಟಿಯಾಗಿ ಸದ್ದು ಮಾಡಿ ಹೇಳಲಾಗುವುದಿಲ್ಲ. Subtle ಆದುದನ್ನು ವಸ್ತುವಾಗಿ ಎತ್ತಿಕೊಳ್ಳುವ ಈ ಬಗೆಯ ಕತೆಗಳು ನಮ್ಮ ಬದುಕಿನ ಸೂಕ್ಷ್ಮಾತಿಸೂಕ್ಷ್ಮ ವಿದ್ಯಮಾನಗಳನ್ನು ಅಷ್ಟೇ ನಾಜೂಕಿನಿಂದ ನಿರ್ವಹಿಸುತ್ತವೆ. ಅಂದರೆ, ಬದುಕಿನ ಒಂದು ನಿರ್ದಿಷ್ಟ ಘಳಿಗೆ (ಕಾದು ಕೂತ ಮುಹೂರ್ತದಂತೆ - ಚಿತ್ತಾಲ) ತನಗೆ ಒದಗಿಸಿದ ಒಂದು ಸಂವೇದನೆಗೆ ಇವರು ಹೆಚ್ಚಿನ ಮಹತ್ವ ಕೊಡುತ್ತಾರೆ. ಅಂಥದ್ದಕ್ಕೆ ಪ್ರೇರಣೆ/ಕಾರಣವಾಗಿರಬಹುದಾದ ಭೌತಿಕ ಮತ್ತು ಅಮೂರ್ತ ಎರಡೂ ಆಗಿರಬಹುದಾದ ವಿದ್ಯಮಾನವನ್ನು ಕುರಿತು ಧ್ಯಾನಿಸಿ ಹುಟ್ಟಿದ ಕತೆಗಳಿವು. ತಮ್ಮ ಕತೆಯಲ್ಲಿ ಅದನ್ನು ತರುವಾಗ ಯಾವೆಲ್ಲ ಸಾಹಿತ್ಯಿಕ ಪರಿಕರಗಳನ್ನು (ಭಾಷೆ, ತಂತ್ರ, ವಸ್ತು, ಕಥಾಜಗತ್ತು, ನಿರೂಪಣೆಯ ನೆಲೆಗಳು ಇತ್ಯಾದಿ. ‘ಎಲ್ಲಿ ನಿಂತು ನೋಡುತ್ತೀರಿ, ಏನನ್ನು ನೋಡುತ್ತೀರಿ ಮತ್ತು ನೋಡಿದ್ದನ್ನು ಹೇಗೆ ವಿವರಿಸುತ್ತೀರಿ’ - ವಿವೇಕ್. ವಿವೇಕ್ ಆಗಾಗ ಹೇಳುವ ಜೇಮ್ಸ್ ಜಾಯ್ಸ್‌ನ ಸಿಗ್ನಿಫಿಕೆಂಟ್ ಡಿಟೇಲ್ಸ್) ಉಪಯೋಗಿಸಿಕೊಂಡು ಹೇಳಿದರೆ ಓದುಗನಲ್ಲೂ ಅದೇ ಅಥವಾ ತತ್ಸಮಾನ ಸಂವೇದನೆಯನ್ನು ಮರುಸೃಜಿಸಬಹುದು ಎನ್ನುವ ಬಗ್ಗೆ ತಾರ್ಕಿಕವಾಗಿ ಯೋಚಿಸಿಯೇ ನಿರ್ಧರಿಸಲ್ಪಡುವ ನಿರೂಪಣೆಯ ಧಾಟಿ, ಕಥಾಜಗತ್ತಿನ ಪರಿಕಲ್ಪನೆ, ಕಥಾಪಾತ್ರಗಳು, ಆ ಕಥಾಪಾತ್ರಗಳ ತಕ್ಷಣದ ಜಗತ್ತು-ವೃತ್ತಿ-ಚೌಕಟ್ಟು ಮತ್ತೆ ಮತ್ತೆ ಪರಿಷ್ಕರಣೆಗೊಳ್ಳುವಂಥಾದ್ದು, ಮತ್ತು ಹಾಗೆ ಪರಿಷ್ಕರಣೆಗಳಿಂದಲೇ ಅಂತಿಮವಾಗಿ ಸಿದ್ಧಗೊಳ್ಳುವಂಥಾದ್ದು. ಇದು ಬರಹವನ್ನು ಗಂಭೀರವಾಗಿ ಪರಿಗಣಿಸಿ ಹೊರಡುವ ಕ್ರಮ. ಈ ಕ್ರಮ, ಲಂಕೇಶ್ ಕ್ರಮವನ್ನು ಒಳಗೊಂಡು ಬೆಳೆಯುತ್ತದೆ ಎನ್ನುವುದು ನಿಜವಾದರೂ ಅದೊಂದೇ ತಾವು ಹೇಳಲು ಹೊರಟಿರುವುದಕ್ಕೆ ಸಾಕು ಎಂದು ತಿಳಿಯುವುದಿಲ್ಲ. ಇದೇಕೆಂದರೆ, ಲಂಕೇಶ್ ಕ್ರಮದ ಕತೆಗಳ ಹಾಗೆ ಈ ಕತೆಗಳು ಬದುಕಿನಲ್ಲಿ subtle ಆಗಿರುವ ಅಂಶದ ಕುರಿತಷ್ಟೇ ಹೇಳದೆ, ಅವುಗಳಾಚೆಗೂ ಒಂದು ಲೀಪ್ ತೆಗೆದುಕೊಳ್ಳುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತವೆ. ಘಾಚರ್ ಘೋಚರ್ ಅಥವಾ ಬಹುರೂಪಿ ಅಥವಾ ಶರವಣ ಎಕ್ಸ್‌ಪ್ರೆಸ್ ಯಾವುದನ್ನುಗಮನಿಸಿದರೂ (ಅಂದರೆ ಕಾದಂಬರಿ/ನಾಟಕ/ಕತೆ) ಈ ಅಂಶ ಸ್ಪಷ್ಟವಾಗುತ್ತದೆ. ಇವುಗಳಲ್ಲಿ obvious ಅಲ್ಲದ ಒಂದು ಸುಪ್ತಲಯ ಕತೆಯ ನಿರೂಪಣೆಯ ಉದ್ದಕ್ಕೂ ಕೆಲಸ ಮಾಡುತ್ತಲೇ ಇರುತ್ತದೆ ಮತ್ತು ಇದರ ಹೊಳಹು ಓದುಗರಿಗೂ ಅಂತರ್ಜಲದಂತೆ ಸಿಗುತ್ತದೆ. ಎಷ್ಟು ಸಿಗುತ್ತದೆ ಎನ್ನುವುದು ಕೆಲವೊಮ್ಮೆ ಸಾಪೇಕ್ಷ ಸತ್ಯ. ಏಕೆಂದರೆ, ನಿದ್ದೆಯಲ್ಲಿ ಕಂಡ ಕನಸನ್ನು ಮರುದಿನ ಬೆಳಿಗ್ಗೆ ವಿವರಿಸುವ ಕಷ್ಟವನ್ನು ಎಲ್ಲರೂ ಬಲ್ಲವರೇ. ಇಂಥ ಕತೆಗಳು ಕೊಡುವ ಒಳನೋಟ/ದರ್ಶನ/ಕಾಣ್ಕೆ ಕೂಡ ಹಾಗೆಯೇ. ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ಕೊಡಬಹುದಾದ ಕತೆ ಶಾಂತಿ ಕೆ ಅಪ್ಪಣ್ಣ ಅವರ ಈ ಕತೆಗೆ ಹೆಸರಿಲ್ಲ ಕತೆ. ಇದೊಂದು ಸುಂದರವಾದ ಅಪ್ಪಟ ಕತೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದುಕಿನ ದೈನಂದಿನದ subtle ಮತ್ತು ಕತೆಯೊಳಗೇ ಹುದುಗಿಕೊಂಡ ಹೊಳಹುಗಳ ಒಂದು ಸೂಕ್ಷ್ಮ ನಮಗೆ ಕಾಣುತ್ತದೆ. 

ಸ್ಪಷ್ಟವಾಗಿಯೇ ಈ ಕತೆಗಳು ಹೇಳಲು ಹೊರಡುವುದು ಭಾವನಾತ್ಮಕ ಸತ್ಯವನ್ನಲ್ಲ, ಬದಲಿಗೆ ತಾರ್ಕಿಕ ಸತ್ಯವನ್ನು. ಹಾಗಾಗಿ ಜಯಂತರ ಕಾವ್ಯಾತ್ಮಕ ಅಥವಾ ರೂಪಕದ ಭಾಷೆಯನ್ನು ಇವು ಒಂದು ಮಿತಿಯಾಚೆ ಬಳಸಿಕೊಳ್ಳುವುದಿಲ್ಲ. ಅಲ್ಲದೆ, ತಾರ್ಕಿಕ ಸತ್ಯವನ್ನು ಹೇಳಲು ಇವರು ಸಿದ್ಧಿಸಿಕೊಳ್ಳುವ ಭಾಷೆಯ ಲಯಕ್ಕೆ ಗದ್ಯದ ಒರಟುತನವೂ, ಪದ್ಯದ ನಯಗಾರಿಕೆಯೂ ಸಾಂದರ್ಭಿಕವಾಗಿ ಒದಗುವ ಪರಿಕರಗಳೇ ಹೊರತು ಅದೇ ಈ ಕ್ರಮದ ಕತೆಗಳ/ಕತೆಗಾರರ ಪ್ರಧಾನ ಭೂಮಿಕೆಯಲ್ಲ. ಹಾಗಾಗಿ ಇವರಲ್ಲಿ ನಿರೂಪಣೆಯ ಭಾಷೆಯ ಲಯಕ್ಕೆ, ನಾದಕ್ಕೆ, ಶೃತಿಗೆ ಮಹತ್ವವಿದೆ, ಆದರೆ ಅದರೊಂದಿಗೇ ರಮಿಸಲು ಪರವಾನಗಿ ಇಲ್ಲ. ಹಾಗೆಂದ ಮಾತ್ರಕ್ಕೆ, ತಾರ್ಕಿಕ ಸತ್ಯವನ್ನು ಹೇಳಲು ಹೊರಟಾಗಲೂ ಅದು ಭಾವನಾತ್ಮಕವಾಗಿ ಸುಳ್ಳಾಗಿರಬೇಕಿಲ್ಲ ಎನ್ನುವುದನ್ನು ನಾವು ಮರೆಯಬಾರದು. ಹಾಗಾಗಿ ಈ ಕತೆಗಳಿಗೆ ಭಾವನಾತ್ಮಕ ನೆಲೆಯೂ ಒಂದಿದೆ ಮತ್ತು ಅದನ್ನು ಈ ಕ್ರಮದ ಕತೆಗಳು ನಿಭಾಯಿಸುವುದನ್ನು ಹೆಚ್ಚು ಗಮನವಿಟ್ಟು ನೋಡಬೇಕಾದ ಅಗತ್ಯವಿದೆ. ಏಕೆಂದರೆ, ಈ ಕ್ರಮದ ದೊಡ್ಡ ಸವಾಲುಗಳ ಪೈಕಿ ಇದೂ ಒಂದು. ‘ಕಾರಣ’ ಕತೆಯನ್ನು, ಸುಧೀರನ ತಾಯಿ ಕತೆಯನ್ನು, ಊರುಭಂಗ ಕಾದಂಬರಿಯನ್ನು ಇದಕ್ಕಾಗಿಯೇ ವಿಶೇಷವಾಗಿ ಗಮನಿಸಬಹುದು. ವಿವೇಕರ ಇತ್ತೀಚಿನ ಕತೆ ಕ್ರಾಂತಿಜೀವಿ ತರಂಗಿಣಿ ಗಮನಿಸಿ. ಇಲ್ಲೊಂದು ಭಾವನಾತ್ಮಕ ಸತ್ಯವಿದೆ. ಮನುಷ್ಯ ಸಂಬಂಧಕ್ಕೆ, ಅದು ದೈಹಿಕವಿರಲಿ, ಮಾನಸಿಕವಿರಲಿ ಒಂದು ಹಂಬಲ, ತಹತಹ ಇಲ್ಲಿನ ತರಂಗಿಣಿಯಲ್ಲೂ ನಿರೂಪಕನಲ್ಲೂ ಜೀವಂತವಾಗಿಯೇ ಇದೆ. ಆದರೆ ಭಾಷೆಯಲ್ಲಿ- ಕತೆಯ ನಿರೂಪಣೆಯ ಭಾಷೆಯಲ್ಲೂ, ಪಾತ್ರಗಳ ಮಾತಿನಲ್ಲೂ ಅದರ ನಿರಾಕರಣವೇ ಎದ್ದು ಕಾಣುತ್ತಿದೆ. ಈ ಮಂಜುಗಡ್ಡೆಯನ್ನು ಒಡೆದು ಬರಲಾಗದೆ ಇಡೀ ಕತೆ ಚಡಪಡಿಸುತ್ತಿರುವುದನ್ನು ಓದುಗನೂ ಅನುಭವಿಸುತ್ತಾನೆ. ಆದರೆ ಕತೆಯ ಗಮ್ಯ ಅದಲ್ಲ ಅನಿಸುತ್ತದೆ ಎನ್ನುವಲ್ಲಿಯೇ ವಿವೇಕರು ಎತ್ತಿಕೊಂಡ ಸವಾಲು ನಮಗೆ ಅರ್ಥವಾಗುತ್ತದೆ. 

ಹಾಗೆಯೇ ಊರುಭಂಗ ಕಾದಂಬರಿಯಲ್ಲಿ ಕಿಮಾನಿ ವಕೀಲರ ಸಂಸಾರದ ದೈನಂದಿನ ವಿವರಗಳಿಗೆ ಸಿಕ್ಕ ಪೋಷಣೆ ಸ್ವತಃ ನಿರೂಪಕನ ಮನೆಗೆ ಸಿಗುವುದಿಲ್ಲ ಎನ್ನುವುದನ್ನು ಗಮನಿಸಿ, ಇಲ್ಲಿ ಕೊನೆಗೂ ನಮಗೆ ನಿರೂಪಕನ ಪತ್ನಿ ಒಂದು ನೆರಳಿನಷ್ಟೇ ಸ್ಕೆಚೀ ಆಗಿ ಉಳಿಯುತ್ತಾಳೆ. ಏಕೆ, ನಿರೂಪಕನ ವ್ಯಾಮೋಹದ ಹುಡುಗಿಯ ಕುರಿತೂ ಬೇಕೆಂದರೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಏನನ್ನು ಹೇಳಬೇಕು, ಎಷ್ಟನ್ನು ಹೇಳಬೇಕು ಮತ್ತು ಎಲ್ಲಿ ಹೇಳಬೇಕು ಎನ್ನುವುದೆಲ್ಲ ಇಲ್ಲಿ ಮಹತ್ವದ ಪ್ರಶ್ನೆಗಳು. ಇಲ್ಲಿ ರಾಜಿಯಾಗಲಿ, ಚಲ್ತಾ ಹೆ ಧೋರಣೆಯಾಗಲಿ ಇಲ್ಲ. 

‘ರಸ್ತೆನಕ್ಷತ್ರ’, ‘ರೆಕ್ಕೆ ಹಾವು’ ಸಂಕಲನಗಳ ಟಿ ಕೆ ದಯಾನಂದ್ ಮತ್ತು ಮಾಯಾ ಕೋಲಾಹಲ ಸಂಕಲನದ ಮೌನೇಶ್ ಬಡಿಗೇರ ಈ ಕ್ರಮವನ್ನೇ ಅನುಸರಿಸಿ ಕತೆಗಳನ್ನು ಬರೆದರು ಅನಿಸುತ್ತದೆ. ವಿವೇಕರು ಲಂಕೇಶ್ ಕ್ರಮವನ್ನು ಬೆಳೆಸುತ್ತಲೇ ಚಿತ್ತಾಲ ಮತ್ತು ಅನಂತಮೂರ್ತಿಯವರತ್ತ ಹೆಚ್ಚಿನ ಒಲವನ್ನು ಹೊಂದಿರುವಂತೆ ಕಂಡರೆ, ದಯಾನಂದ್ ತೇಜಸ್ವಿಯವರನ್ನು ಈ ಕ್ರಮಕ್ಕೆ ಕಸಿ ಮಾಡಿದಂತೆ ಬರೆಯತೊಡಗಿದ್ದು ಕುತೂಹಲಕರ. ಬಹುಶಃ ಮುಂದೆ ಇನ್ನಷ್ಟು ಸಂಕೀರ್ಣವಾದ ಸಣ್ಣಕತೆಯ ರಾಚನಿಕ ಮಾದರಿಗಳು ನಮಗೆ ಒದಗಬಹುದು ಅಥವಾ ಬೇರೆಯೇ ಹೊರಳುದಾರಿ ಕನ್ನಡದ ಸಣ್ಣಕತೆಗಳಿಗೆ ಒದಗಬಹುದು. 

ಇದನ್ನೆಲ್ಲ ಏಕೆ ವಿವರಿಸ ಬೇಕಾಯಿತೆಂದರೆ, ಇವತ್ತು ಬರುತ್ತಿರುವ ಹೆಚ್ಚಿನ ಕಥಾಸಂಕಲನಗಳು ಈ ಮೇಲಿನ ಯಾವುದೇ ಕ್ರಮದ ಕೆಟಗರಿಯಲ್ಲೂ ಇಲ್ಲ ಮಾತ್ರವಲ್ಲ ಹೊಸದೇ ಆದ ಒಂದು ಗಮನಾರ್ಹ ಕೆಟಗರಿಯನ್ನೂ ಸೂಚಿಸುವಂತಿಲ್ಲ. ಹೆಚ್ಚಿನ ಎನ್ನುವ ಮಾತಿಗೆ ಸ್ವಲ್ಪ ಹೆಚ್ಚೇ ಒತ್ತು ನೀಡದಿದ್ದರೆ ತಪ್ಪಾಗುವುದೇನೋ. ಏಕೆಂದರೆ, ಕಣ್ಣಿಗೆ ಕುಕ್ಕುವ ಪ್ರಚಾರದ ಹೊಳಪು ಮತ್ತು ಪ್ರಶಸ್ತಿಯ ಥಳುಕು ಇಲ್ಲದ ಸಂಕಲನಗಳು ಗಮನಕ್ಕೇ ಬರದಂತೆ ಉಳಿದು ಹೋಗುತ್ತಿರುತ್ತವೆ ಮತ್ತು ಅವುಗಳತ್ತ ನಮ್ಮ ಗಮನ ಹರಿಯುವುದು ವಿಳಂಬವಾಗುತ್ತದೆ ಎನ್ನುವುದು ಅನುಭವದ ಮಾತು. ಜೀವಂತಿಕೆಯಾಗಲಿ, ಬದುಕಿನ ಸತ್ಯಗಳ ಅನಾವರಣವಾಗಲಿ ಇಲ್ಲದ, ಅನುಭವವಾಗಲಿ, ಅನುಭೂತಿಯಾಗಲಿ ಕಾಣದ ಕೇವಲ ಹೆಸರು ದಾಖಲಿಸುವ ಉತ್ಸಾಹವೇ ಸೃಜನಶೀಲತೆ ಎಂಬ ನಂಬಿಕೆಯಿಂದ ಹೊರಡುವ ಪುಂಖಾನುಪುಂಖ ಸಂಕಲನಗಳು ಹುಸಿ ಜನಪ್ರಿಯತೆಯನ್ನೂ, ಮನ್ನಣೆಯನ್ನೂ ಪಡೆದು ಬೀಗುತ್ತಿವೆ. ಇದನ್ನು ಗಮನಿಸಿದಾಗ ನಮಗೆ ಮಾತನಾಡಲು ಮತ್ತು ಬರೆಯಲು ಬರುತ್ತದೆ ಎಂಬ ಕಾರಣಕ್ಕೇ ನಮ್ಮ ಉತ್ಸಾಹ ಅನೇಕ ಬಾರಿ ಮೌನದಿಂದಲೂ ಹೇಳಬಹುದಾದ್ದನ್ನು ಕೂಡ ಭಾಷೆಯಲ್ಲಿ ಹಿಡಿದುಕೊಡಲು ಮತ್ತು ಅದನ್ನೇ ಪರಿಣತಿ, ಕೌಶಲ ಎಂದು ಭ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತದೇನೋ ಅನಿಸುತ್ತದೆ. Subtle ಎನ್ನುವುದು ದಿನದ ಇಪ್ಪತ್ನಾಲ್ಕು ಗಂಟೆಗಳು ಸಾಲದೆನಿಸುವಷ್ಟು ಬ್ಯುಸೀ ಆಗಿರುವ ಆಧುನಿಕ ಮನುಷ್ಯನ ಬದುಕಿನಿಂದಲೂ, ಅವನು ಓದಬಯಸುವ ಸಾಹಿತ್ಯದಿಂದಲೂ ಮರೆಯಾಗುವ ದಿನಗಳಲ್ಲಿ ನಾವಿದ್ದೇವೆ ಎಂದೂ ಅನಿಸುತ್ತದೆ. ಇಂಥಲ್ಲಿ ಸಕ್ಸೆಸ್‌ಫುಲ್ ಅನಿಸಿಕೊಳ್ಳುವ ಸಾಹಿತ್ಯ ಬೇರೆಯೇ ಇದೆ. 

ಈ ಬಗೆಯ ಸಂಕ್ರಮಣ ಘಟ್ಟದಲ್ಲಿ ಬರೆಯಬೇಕೇ ಬೇಡವೇ ಎಂಬ ಸಂದಿಗ್ಧವನ್ನೂ ತೋಡಿಕೊಂಡಿರುವ ಸತೀಶ್ ಚಪ್ಪರಿಕೆಯವರ ಕಥಾಸಂಕಲನ ವರ್ಜಿನ್ ಮೊಹಿತೊ ಕೈಸೇರಿದೆ. ಈ ಕತೆಗಳನ್ನು ಕುರಿತು ಆಡುವ ಮಾತು, ಟೀಕೆ ಸತೀಶ್ ಚಪ್ಪರಿಕೆಯವರ ಉತ್ಸಾಹವನ್ನು ಹೆಚ್ಚಿಸುವ ಅಥವಾ ಕುಗ್ಗಿಸುವ ಸರಳವಾದ ಉದ್ದೇಶಕ್ಕಿಂತ ಸದ್ಯದ ಸಂಕಲನದಲ್ಲಿ ಅವರು ತೋರಿಸಿರುವ ಅವರ ಪೊಟೆನ್ಷಿಯಲ್ ಗಮನಿಸಿಯೇ ಅವರ ಮುಂದಿನ ಕತೆಗಳಲ್ಲಿ ಅವರು ಏನನ್ನು ಸಾಧಿಸಬೇಕು ಎನ್ನುವ ನಿರೀಕ್ಷೆ ನನ್ನಂಥ ಓದುಗನಿಗಿದೆ ಎನ್ನುವುದನ್ನು ಸೂಚಿಸುವುದೇ ಆಗಿದೆ. ಹಾಗಾಗಿ ನಾನಿಲ್ಲಿ ಪ್ರಯತ್ನ ಪಟ್ಟಿರುವುದು ಅವರ ಕತೆಗಾರಿಕೆಯ ಯಶಸ್ವಿ ಮತ್ತು ಮೆಚ್ಚುಗೆ ಪಡಬಹುದಾದ ಅಂಶಗಳನ್ನು ಎತ್ತಿ ತೋರಿಸುವುದಕ್ಕೆ ಅಲ್ಲ. ಅದನ್ನು ಅವರು ನಿರೀಕ್ಷಿಸುತ್ತಿಲ್ಲ ಎಂದು ನಂಬುವೆ. 

ಅವರ ಸಂಕಲನದ ಬಗ್ಗೆ ಈಗಾಗಲೇ ಸಾಕಷ್ಟು ಮಂದಿ ನುರಿತ ಕತೆಗಾರರು, ವಿಮರ್ಶಕರು ಅಲ್ಲಲ್ಲಿ ಬರೆದಿದ್ದಾರೆ. ನನ್ನ ಸ್ವರ (ಅಪಸ್ವರ)ವನ್ನೂ ಅದಕ್ಕೆ ಸೇರಿಸುವುದು ಬೇಡವೆಂದೇ ಅನಿಸಿತ್ತು. ಸತೀಶ್ ಚಪ್ಪರಿಕೆಯವರು ಬೆಳೆಯಬೇಕೆಂದುಕೊಂಡಿರುವ ಕತೆಗಾರರು. ಹಾಗೆಂದ ಮಾತ್ರಕ್ಕೆ ಅವರಿಗೆ ಪುಗಸಟ್ಟೆಯಾಗಿ ನನ್ನಂಥವರು ಕೊಡುವ ಮಣಗಟ್ಟಲೆ ಸಲಹೆಗಳನ್ನೆಲ್ಲಾ ಅವರು ಮುಖಬೆಲೆಗೇ ಕೊಂಡುಕೊಳ್ಳಬೇಕೆಂದಿಲ್ಲ. ನಮಗೆ ಸ್ವತಃ ನಮಗಿಂತ ಒಳ್ಳೆಯ ವಿಮರ್ಶಕರು ಬೇರೆ ಯಾರೂ ಇಲ್ಲ. ಏಕೆಂದರೆ, ನಮ್ಮ ನಮ್ಮ ನಿಜವಾದ ಇತಿಮಿತಿಗಳು ನಮಗೇ ಚೆನ್ನಾಗಿ ಗೊತ್ತಿರುತ್ತವೆ. ಹಾಗಾಗಿ ಸತೀಶ್ ಚಪ್ಪರಿಕೆಯವರು ನನ್ನ ಮಾತುಗಳನ್ನು ಒಂದು ಖಚಿತ ಮಿತಿಯಿಂದ ಹುಟ್ಟಿದವು ಎಂತಲೇ ಗಮನಿಸಿ ಹಂಸಕ್ಷೀರ ನ್ಯಾಯದಲ್ಲಿ ಸ್ವೀಕರಿಸುವುದು ಅಗತ್ಯ. 

ಮೊದಲ ಕತೆ ‘ಬೊಂಬಾಯಿ ಪೆಟ್ಟಿಗೆ’ಯ ಕಥನ ಕ್ರಮವನ್ನೂ ಕತೆಯನ್ನೂ ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಪತ್ರಕರ್ತನಾಗಿ ವಿಫಲನಾದ ಒಬ್ಬ ಯುವಕ ಹುಟ್ಟಿದ ಊರಿಗೆ ವಾಪಾಸು ಹೊರಟು ನಿಂತ ರಾತ್ರಿ ಬಸ್‌ಸ್ಟ್ಯಾಂಡಿನಲ್ಲಿ ಒಂದು ಕಳೆದು ಹೋದ ಕೂಸನ್ನು ಕಾಣುತ್ತಾನೆ. ಅದನ್ನು ಹೆತ್ತವರ ಮಡಿಲು ಸೇರಿಸುವ ಪುಣ್ಯಕಾರ್ಯದಲ್ಲಿ ತೊಡಗಿ ಯಶಸ್ವಿಯೂ ಆಗುತ್ತಾನೆ. ಊರಕಡೆಗೆ ಸಾಗುತ್ತಿರುವ ಬಸ್ಸಿನಲ್ಲಿ ಕುಳಿತು ತನ್ನದೇ ಬದುಕಿನಲ್ಲಿ ನಡೆದ ಒಂದು ಪ್ರಸಂಗವನ್ನು ನೆನೆಯುತ್ತಾನೆ. ನನಗೆ ಇಲ್ಲಿ ವಿಚಿತ್ರ ಎನಿಸಿದ್ದು, ಬಸ್‌ಸ್ಟ್ಯಾಂಡಿನಲ್ಲಿ ಕಳೆದುಹೋದ ಕೂಸನ್ನು ಕಂಡ ಕ್ಷಣವೇ ಯಾಕೆ ತನ್ನದೇ ಬದುಕಿನ ಪ್ರಸಂಗ ಬರುವುದಿಲ್ಲ ಎನ್ನುವುದೇ. ಇದನ್ನು ತಾಂತ್ರಿಕ ಹೊಂದಾಣಿಕೆ ಎಂದು ಒಪ್ಪುವುದಾದರೆ ಅದರ ಉದ್ದೇಶವೇನು ಎನ್ನುವುದು. 

ನಾನೊಮ್ಮೆ ಊರಕಡೆ ಹೋದಾಗ ನನ್ನೊಬ್ಬ ಬಾಲ್ಯದ ಗೆಳೆಯನನ್ನು ಕಂಡು ತೀರ ಸಲಿಗೆಯಿಂದ ಕೈಬೀಸಿ ಕರೆದೆ. ಆತ ಅನುಮಾನಿಸಿದಾಗ ಕಣ್ಣು ಅಗಲಿಸಿ ಗದರಿ ಹತ್ತಿರಕ್ಕೆ ಕರೆದು, ನನ್ನ ಎಂದಿನ ಅಭ್ಯಾಸದಂತೆ ಪಟ್ಟನೆ ಒಂದೇಟು ಬಿಗಿದು, ಬಡ್ಡಿಮಗನೆ, ಹೆಂಡ್ತಿ ಪಕ್ಕ ಬಿಟ್ಟು ಬರಲು ಅಷ್ಟು ಹೆದರಿಕೆಯೇನೋ ಎಂದು ಕುಶಾಲು ಮಾಡಿದೆ. ಆದರೆ ಆ ವ್ಯಕ್ತಿ ನನ್ನ ಬಾಲ್ಯದ ಗೆಳೆಯನಾಗಿರದೇ, ಕುಂದಾಪುರದ ಹೆಸರಾಂತ ವೈದ್ಯರಾಗಿದ್ದರು! ನಾನು ನಂಬಲಾರದೆ ನನ್ನ ಮೊಬೈಲ್ ಹುಡುಕಿ ನನ್ನ ಗೆಳೆಯನ ಫೋಟೋ ಹುಡುಕಿ ತೆಗೆದು ತೋರಿಸಿದೆ. ಅವರು ತಣ್ಣಗೆ ‘ಸರ್, ಇದು ಎಷ್ಟು ವರ್ಷ ಹಿಂದಿನ ಫೋಟೋ?’ ಎಂದು ಕೇಳಿದರು. 1987ರಲ್ಲಿ ನನ್ನ ಗೆಳೆಯ ಹೇಗಿದ್ದನೋ ಹಾಗೆ 2019ರಲ್ಲಿ ನನ್ನೆದುರಿಗಿದ್ದ ವೈದ್ಯರಿದ್ದರು! ನನ್ನ ತಲೆಗೂದಲು ಪೂರ್ತಿ ಬಿಳಿಯಾಗಿದ್ದು ನನಗೇ ಮರೆತು ಹೋಗಿತ್ತು! ನನ್ನ ಅದೃಷ್ಟ, ಆ ವೈದ್ಯ ದಂಪತಿಗಳು ನನ್ನ ಉತ್ಸಾಹವನ್ನು ತಪ್ಪಾಗಿ ತಿಳಿಯದೆ (ಕನಿಷ್ಠ ನನ್ನೆದುರು!) "ನೀವು ನಿಮ್ಮ ಗೆಳೆಯನ ಬಳಿ ನೇರವಾಗಿ ಮಾತನಾಡದೆ ತುಂಬ ಕಾಲವಾಯಿತು ಅಂತ ಕಾಣುತ್ತದೆ, ಫೋನ್ ಮಾಡಿ ಮಾತನಾಡಿ" ಎಂದಷ್ಟೇ ಹೇಳಿ ಹೊರಟು ಹೋದರು. 

ನಮ್ಮ ಪ್ರಿಯ ವ್ಯಕ್ತಿ ನಮ್ಮ ಕಣ್ಣೆದುರು ಕಾಣಿಸಿದಂತಾದಾಗ ನಮಗೆ ದೇಶ-ಕಾಲ ಎರಡೂ ಮರೆತು ಹೋಗುತ್ತದೆ ಎನ್ನುವುದಕ್ಕೆ ನನ್ನ ಅನುಭವವೇ ನನಗೆ ಸಾಕ್ಷಿ. ಆದರೆ, ಇಲ್ಲಿ ಸ್ವತಃ ಒಂದು ಜಾತ್ರೆಯಲ್ಲಿ ತನ್ನ ಒಡಹುಟ್ಟಿದ ತಂಗಿಯನ್ನು ಕಳೆದುಕೊಂಡ ಕಥಾನಾಯಕನಿಗೆ ಬಸ್‌ಸ್ಟ್ಯಾಂಡಿನಲ್ಲಿ ಕಳೆದುಹೋದ ಕೂಸನ್ನು ಕಂಡಿದ್ದೇ ತನ್ನ ತಂಗಿಯ ನೆನಪು ಒತ್ತರಿಸಿ ಬರುವುದಿಲ್ಲ. ವಿಳಂಬವಾಗಿ ಬರುತ್ತದೆ. ಆದರೆ ಆ ಹೊತ್ತಿಗಾಗಲೇ ಕೂಸು ತನ್ನ ಹೆತ್ತವರ ಮಡಿಲು ಸೇರಿಯಾಗಿದೆ, ಓದುಗನ ಆತಂಕ,ಕುತೂಹಲ ಎಲ್ಲ ತಣಿದಿದೆ. ಅವನಲ್ಲಿ ಈಗ ಯಾವುದೇ ಭಾವನಾತ್ಮಕ ತಾಕಲಾಟಗಳು ಇನ್ನೂ ಬಾಯ್ತೆರೆದೇ ಉಳಿದಿರುವ ಸಂಭವ ಇಲ್ಲ. ಅಲ್ಲದೆ ಇಲ್ಲಿನ ನಿರೂಪಣೆಯ ಲಯ ಮತ್ತು ಕೇಂದ್ರ ಪಾತ್ರವನ್ನು ನಮಗೆ ಪರಿಚಯಿಸುವ ರೀತಿ ಎರಡೂ ಕತೆಗೆ ಸಾಧ್ಯವಿದ್ದ ಒಂದು ಭಾವನಾತ್ಮಕ ಆಯಾಮಕ್ಕೆ ಓದುಗನ ಮನಸ್ಸನ್ನು ಸಜ್ಜುಗೊಳಿಸುವುದಕ್ಕೆ ಪೂರಕವಾಗಿ ದುಡಿಯುತ್ತಿಲ್ಲ. ಇವೆಲ್ಲ ಕಾರಣಗಳಿಂದ ಇಡೀ ಕತೆಯಲ್ಲಿ ಏನೂ ‘ಸಂಭವಿಸುತ್ತಿಲ್ಲ’ ಬದಲಿಗೆ ನಡೆದಿದ್ದರ ವರದಿಯಷ್ಟೇ ಇರುವಂತೆ ಭಾಸವಾಗುತ್ತದೆ. ವರದಿ ಎಂದು ಏಕೆ ಹೇಳುತ್ತೇನೆಂದರೆ, ಇಲ್ಲಿನ ನಿರೂಪಣೆಯಲ್ಲಿ ಕತೆಗಾರನ ಪರಿಕಲ್ಪನೆಯಲ್ಲಿ ಯಾವುದು ಹೇಗೆ ನಡೆಯಬೇಕೆಂದಿದೆಯೋ ಅದು ಇದೆಯೇ ಹೊರತು ಅದು ನಮ್ಮ ಲೋಕವ್ಯಾಪಾರದಲ್ಲಿ ಸಹಜವಾಗಿ ನಡೆಯಬಹುದಾಗಿದ್ದ ಒಂದು ಭಾವನಾತ್ಮಕ ಪಾತಳಿಯೇ ಮಿಸ್ ಆಗಿಬಿಟ್ಟಿದೆ ಅನಿಸುವುದರಿಂದ. ಬದಲಿಗೆ ನಿರೂಪಣೆಯ ಗಮನ ಚಾನೆಲ್ಲುಗಳ, ಮಾಧ್ಯಮದವರ ತರಾತುರಿಯನ್ನು ಕೊಂಚ ವ್ಯಂಗ್ಯವಾಗಿ ಗಮನಿಸುವತ್ತ ಹರಿದಿದೆ. ಇದರಿಂದಾಗಿ ಕತೆಗೆ ಎರಡು ಕೇಂದ್ರಗಳು ಸಂಭಾವ್ಯ ಸಾಧ್ಯತೆಗಳಾಗಿ ತೆರೆದುಕೊಳ್ಳುತ್ತವೆ. ಒಂದು, ಮಾಧ್ಯಮದ ‘ಸ್ಟೋರಿ’ಗಮ್ಯ ತರಾತುರಿಯನ್ನು ಚಿತ್ರಿಸುವುದು ಅಥವಾ ತಾನು ಬಾಲ್ಯದಲ್ಲಿ ಕಳೆದುಕೊಂಡ ಒಡಹುಟ್ಟಿದವಳ ಕುರಿತು ತನ್ನ ಮನಸ್ಸಿನಲ್ಲಿ ಮಡುಗಟ್ಟಿನಿಂತ ನಿರಂತರ ಶೋಕವೇ ಇಲ್ಲಿ ಒಂದು ಸಾರ್ಥಕ ಭಾವದೊಂದಿಗೆ ಪರಿಸಮಾಪ್ತಿಯಾಗುವುದು. ಎರಡನ್ನೂ ಅಷ್ಟಿಷ್ಟು ಪ್ರಯತ್ನಿಸುವ ಕತೆ ಯಾವುದನ್ನೂ ಸಾಧಿಸುವುದಿಲ್ಲ ಅನಿಸುತ್ತದೆ. 

ಅತ್ಯುತ್ತಮ ನಿರೂಪಣೆಗೆ ಒಂದು ಉದಾಹರಣೆಯಾಗಿ ನಿಲ್ಲುವಂಥ ಕತೆ ‘ಹೈಡ್ ಪಾರ್ಕ್’. ಆದರೆ ಇಲ್ಲಿ ಕಥಾನಕದ ಎಳೆ ತುಂಬ ದುರ್ಬಲವಾಗಿದೆ. ಕತೆಯಲ್ಲಿ ಮೊತ್ತಮೊದಲು ಬರುವ ಒಂದು ಪ್ಯಾರಾವೇ ಅದರ ಜೀವಾಳ, ಅಂತರಾತ್ಮ ಎಲ್ಲವೂ ಆಗಿರುವುದನ್ನು ಗಮನಿಸಬೇಕು. ಸಹಜೀವನದ ಇತಿಮಿತಿಗಳನ್ನೂ, ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಅಗತ್ಯವೆ ಅಥವಾ ಅನಿವಾರ್ಯವೆ, ಎರಡರಲ್ಲಿ ಒಂದು ಹೌದು ಎಂದಾದರೂ ಹೌದು ಏಕೆ, ಎಷ್ಟು, at what cost ಎನ್ನುವುದನ್ನೆಲ್ಲ ಪ್ರಶ್ನಿಸಬಯಸುವ ಈ ಕತೆ ಆ ಯಾವತ್ತೂ ಆಯಾಮಗಳನ್ನು ಹೆಚ್ಚು ತಡಕದೆ ಇಬ್ಬರು ಮದುವೆಯಾಗುವರೆ ಇಲ್ಲವೆ ಎನ್ನುವ ಕೌತುಕದ ಪ್ರಶ್ನೆಯೊಂದಕ್ಕೇ ಜೋತುಬಿದ್ದಂತೆ ಇರುವುದು (ಆಗಿರುವುದು) ಏಕೆ? ವಂದನಾ ತನ್ನ ಬದುಕನ್ನು, ದೇಹದ ಅಗತ್ಯಗಳನ್ನು, ಮನಸ್ಸಿನ ಅಗತ್ಯಗಳನ್ನು ನಿರ್ವಹಿಸಿಕೊಂಡಂತೆ ನಿರ್ವಹಿಸಿಕೊಳ್ಳುವುದೇ ಸುಖದ, ನೆಮ್ಮದಿಯ ಹಾದಿಯೆಂದಾದರೆ (ಸದ್ಯದ ಯುವಪೀಳಿಗೆಯ ಯೋಚನಾಕ್ರಮ ಹೀಗೆಯೇ ಇದೆ ಅನಿಸುವುದರಿಂದ) ಚಿರುಗೆ ಏಕೆ ಆ ಹಾದಿ ಸಾಕು ಅನಿಸಲಿಲ್ಲ ಎಂಬ ಪ್ರಶ್ನೆ ಉಳಿಯುತ್ತದೆ. ಇಲ್ಲೊಂದು ತಮಾಶೆಯಿದೆ. ವಂದನಾ ಒಪ್ಪಿಗೆಯಿಲ್ಲದೇ ಇದ್ದಲ್ಲಿ ಅವರು ಹೆಚ್ಚೂಕಡಿಮೆ ವಂದನಾ ನಿರ್ವಹಿಸಿದಂತೆಯೇ ತಮ್ಮತಮ್ಮ ಅಗತ್ಯಗಳನ್ನು ನಿರ್ವಹಿಸಲು ಸಿದ್ಧರಿದ್ದಾರೆ. ಹಾಗಿದ್ದೂ ಮದುವೆ ಎಂಬ ರಿಚ್ಯುಯಲ್ ಅವರಿಗೇಕೆ ಇರಲಿ ಅನ್ನಿಸಿದೆ ಎಂಬ ಪ್ರಶ್ನೆಯನ್ನು ಕತೆ ತಡಕುವುದಿಲ್ಲ. ಅಥವಾ ಅಂಥ ನೆಲೆಗೆ ಸೂಕ್ತ ಅವಕಾಶವನ್ನೂ ಒದಗಿಸುವುದಿಲ್ಲ. ಈ ಎಲ್ಲ ಅಂಶಗಳಾಚೆಗೂ ಈ ಕತೆ ಒಂದು ಮ್ಯಾಗಝೀನ್ ಕತೆಯಂತೆ ಯಶಸ್ವಿಯಾಗುವುದು ಸುಳ್ಳಲ್ಲ. 

‘ದಾಸ’ ಕತೆಯನ್ನು ಬಹುಶಃ, (ಇದು ನನ್ನ ವೈಯಕ್ತಿಕ ಅನಿಸಿಕೆ) ಬಾಲಪ್ರಜ್ಞೆಯಲ್ಲೇ ನಿರೂಪಿಸುವ ಸವಾಲನ್ನು ಎತ್ತಿಕೊಂಡಿದ್ದರೆ ಅದು ಹೆಚ್ಚು ಯಶಸ್ವಿಯಾಗುತ್ತಿತ್ತು. ಇಲ್ಲಿ ಮೆಮೊಯರ್‌ನ ಶೈಲಿಯ ನಿರೂಪಣೆಯಿದೆ. ಹರಹು ತೀರ ವಿಶಾಲವಾಗಿದೆ ಮತ್ತು ಸಣ್ಣಕತೆಯ ಚೌಕಟ್ಟಿಗೆ ಅಷ್ಟಾಗಿ ಹೊಂದದ ಕಥನದ ನೆಲೆಗಳು ಕಾಣುತ್ತವೆ. ಎರಡೆರಡು ಬಾರಿ ‘ನಾನು ಬೋರ್ ಹೊಡೆಸುತ್ತಿದ್ದೇನಾ’ ಎಂಬ ಪ್ರಶ್ನೆಯೇ ಕತೆಗಾರರಿಗೆ ಅಂಥ ಉದ್ದೇಶವಿದೆ ಅನಿಸುವಂತೆ ಮಾಡುತ್ತದೆ. ಅದು ಅಗತ್ಯವಿರಲಿಲ್ಲ. ಇಲ್ಲಿ ನಿರೂಪಣೆಯ ಒಂದು ದೋಷ ಎನ್ನಬಹುದಾದಂಥ ಒಂದು ಅಂಶದತ್ತ ಗಮನ ಹರಿಸುವುದು ಒಳ್ಳೆಯದು. ನಾಯಿಮರಿಯನ್ನು ಮನೆಗೆ ಎತ್ತಿಕೊಂಡು ಬಂದ ಹುಡುಗ, ಅಪ್ಪ ಅದನ್ನು ಒಪ್ಪಿಕೊಳ್ಳುವನೆ ಇಲ್ಲವೆ ಎನ್ನುವ ಭಯದಲ್ಲಿ ಹೊರಗೇ ಕಾದಿರುತ್ತಾನೆ. ಇಲ್ಲಿ ಇದ್ದಕ್ಕಿದ್ದಂತೆ ಚೆನ್ನೈನ ಅಮೆರಿಕ ಎಂಬೆಸಿಯಲ್ಲಿ ವೀಸಾ ಪಡೆಯಲು ನಿಂತ ಬಡ ಭಾರತೀಯನ ರೂಪಕವನ್ನು ತರಲಾಗಿದೆ. ಒಂದು ಗ್ರಾಮ್ಯ ಪರಿಸರದ ಕಥಾನಕದಲ್ಲಿ ದೇಶ-ಕಾಲ ಯಾವುದಕ್ಕೂ ಹೊಂದದ ಒಂದು ರೂಪಕವನ್ನು ತರುವುದರಿಂದ ಕಥನಕ್ಕೆ ತತ್ಕಾಲಕ್ಕೆ ಅಗತ್ಯವಾದ ಒಂದು ವಾತಾವರಣ ನಿರ್ಮಾಣ ಅಸಂಭವಾಗಿ ಬಿಡುತ್ತದೆ. ಕತೆಗಾರ ಕತೆಯನ್ನು ಹೇಳುತ್ತಿರುವುದು ವರ್ತಮಾನದಲ್ಲಿ ನಿಂತು, ಪ್ರಬುದ್ಧ ಮನಸ್ಥಿತಿಯಿಂದ ಹಿಂದಿರುಗಿ ನೋಡುತ್ತ ಇಪ್ಪತ್ತು ಮುವ್ವತ್ತು ವರ್ಷಗಳ ಹಿಂದಿನ ನೆನಪನ್ನು ತೆರೆದಿಡುತ್ತಿರುವುದು ಎಲ್ಲವೂ ಹೌದಾದರೂ ಆಯಾ ಕಾಲಘಟ್ಟದ, ಪರಿಸರದ ಕಥನಕ್ಕೆ ಅಲ್ಲಿಯವೇ ಆದ ರೂಪಕಗಳಿದ್ದರೆ ಹೆಚ್ಚು ಪೂರಕ ಅನಿಸುತ್ತದೆ ನನಗೆ. 

‘ಗರ್ಭ’ ಕತೆ ಕೂಡ ನಿರೂಪಣೆಯ ಸೊಗಸಿಗಾಗಿ ಮೆಚ್ಚುಗೆಯಾಗುವ ಕತೆ. ಕಥನದ ವಾತಾವರಣವನ್ನು ಬಹು ಸುಪುಷ್ಟವಾಗಿ ಇಲ್ಲಿ ನಿರ್ಮಿಸಲಾಗಿದೆ. ಆದರೆ ವಸ್ತುವಿಗೆ ಸಂಬಂಧಿಸಿದಂತೆ ಕತೆಯ ಕೇಂದ್ರ ಪಾತ್ರವನ್ನು ಕತೆಯ ಒಡಲಿನಿಂದ ಪೂರ್ತಿಯಾಗಿಯೇ ಎನ್ನುವಷ್ಟು ಹೊರಗಿಟ್ಟು ಇದನ್ನು ನಿರೂಪಿಸಿರುವ ಉದ್ದೇಶವೂ ಸ್ಪಷ್ಟವಾಗುವುದಿಲ್ಲ. ಆಸ್ಪತ್ರೆಯ ಹಾಸಿಗೆಯ ಮೇಲೆ ನೋಯುತ್ತಿರುವ ಜೀವ, ಹೊರಗೆ ಕೂತು ಕಾಯುತ್ತಿರುವ ಜೀವದೊಂದಿಗೆ ಹೊಂದಿದ ನಂಟನ್ನು ಯಾವುದೇ ಬಗೆಯಲ್ಲಿ ಮೀಟದೆ ಇಲ್ಲಿನ ಕಥನ ಅದೇ ಆಸ್ಪತ್ರೆಯಲ್ಲಿ ತಮ್ಮತಮ್ಮ ಆಪ್ತ ಜೀವದ ನೋವನ್ನೇ ತಾವು ಆವಾಹಿಸಿಕೊಂಡು ನರಳುತ್ತಿರುವ ಇನ್ನಷ್ಟು ವ್ಯಕ್ತಿಗಳತ್ತ ನಮ್ಮ ಗಮನ ಹರಿಸುವಂತೆ ಮಾಡುವುದರಲ್ಲೇ ವ್ಯಸ್ತವಾಗುತ್ತದೆ. 

ಮೂರು ಮುಖಗಳು, ಕಾಣದ ಕೈಗಳ ಆಟ ಮತ್ತು ವರ್ಜಿನ್ ಮೊಹಿತೊ - ಮೂರೂ ಕತೆಗಳು ಈ ಸಂಕಲನದ ಅತ್ಯಂತ ಸಫಲ ಕತೆಗಳು. ಈ ಕತೆಗಳ ಬಂಧ, ನಿರೂಪಣೆ, ಭಾಷೆ, ವಸ್ತು ಅಥವಾ ತಾಂತ್ರಿಕ ರಚನೆಯಲ್ಲಿ ನನಗೆ ಯಾವುದೇ ಅರೆಕೊರೆ ಕಂಡಿಲ್ಲ. 

ಸತೀಶ್ ಚಪ್ಪರಿಕೆಯವರು ಇನ್ನಷ್ಟು ಹೊಸ ಕತೆಗಳನ್ನು ಬರೆಯಲಿ, ಕಾದಂಬರಿಯೂ ಆದಷ್ಟು ಬೇಗನೆ ಬೆಳಕು ಕಾಣಲಿ ಎಂದು ಹಾರೈಸುತ್ತ, ಹೊಸ ಸಂಕಲನದ ಓದು ಕರುಣಿಸಿದ್ದಕ್ಕೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ