Friday, June 5, 2020

ರೈನಾ ಮರಿಯಾ ರಿಲ್ಕನ ಕವಿತೆಗಳು

 ಎಚ್ ಎಸ್ ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ತಂದಿರುವ ರೈನಾ   ಮರಿಯಾ ರಿಲ್ಕನ ಕವಿತೆಗಳ ಸಂಕಲನ "ಮಂಜಿನ ಶಿವಾಲಯಕ್ಕೆ..." ಕನ್ನಡ   ಸಾಹಿತ್ಯಕ್ಕೆ, ನಿರ್ದಿಷ್ಟವಾಗಿ ಕನ್ನಡ ಕಾವ್ಯಪರಂಪರೆಗೆ ಮತ್ತು ಅದೇ ಕಾಲಕ್ಕೆ   ರಿಲ್ಕ ಸುರುಹಚ್ಚಿದ ಹೊಸಬಗೆಯ ಒಂದು ಜಿಜ್ಞಾಸೆಯ ನೆಲೆಯಿಂದಲೂ   ಒಂದು ಮಹತ್ವದ ಕೊಡುಗೆಯಾಗಿದೆ. ಇದನ್ನು   ಅರ್ಥಮಾಡಿಕೊಳ್ಳಬೇಕಾದರೆ   ಮತ್ತು ಎಚ್ಚೆಸ್ಸಾರ್ ಅವರ ಕೊಡುಗೆಯ   ನಿಜವಾದ ಗುರುತ್ವ ಅರಿಯಬೇಕಾದರೆ ರಿಲ್ಕನ ಬಗ್ಗೆ ಮತ್ತು ಹೊಸದಾಗಿ   ಕನ್ನಡಕ್ಕೆ ಬಂದಿರುವ ಅವನ ಕವಿತೆಗಳ ಬಗ್ಗೆ ಸ್ವಲ್ಪ ವಿವರಿಸಬೇಕಾಗುತ್ತದೆ.   

  ರಿಲ್ಕ ತುಂಬ ಸಂಕೀರ್ಣ ವ್ಯಕ್ತಿತ್ವದವನು. ಅವನ ಕಾಲಕ್ಕೇ ಅವನು   ಪುರಾತನದ ಸಂಕೇತದಂತಿದ್ದ ಎನ್ನುವವರಿದ್ದಾರೆ. ಬೇರೊಂದು ನೆಲೆಯಲ್ಲಿ   ಅಷ್ಟೇ ಆಧುನಿಕನು ಕೂಡ ಹೌದು. ಅವನು ಯಾವ ಧರ್ಮದ ನೆರಳೂ ಇಲ್ಲದ   ಅವನದೇ ಆದ ಒಂದು ಪಾರಮಾರ್ಥಿಕ ನೆಲೆಯಿಂದ ದೇವರ ಬಗ್ಗೆ   ಮಾತನಾಡುತ್ತಿದ್ದ. ಆದರೆ ಉತ್ಕಟ ಪ್ರೇಮಿಯೂ ಆಗಿದ್ದ ಅವನಲ್ಲಿ ಭೌತಿಕದ ನಿರಾಕರಣೆಯಿರಲಿಲ್ಲ. ಮನುಷ್ಯನ ಬದುಕಿನ ದೈನಂದಿನಗಳಿಂದ ಕಳಚಿಕೊಂಡ ಕಾವ್ಯ ಅವನದಲ್ಲ. ಈ ಸಂಕಲನದ ಮಹತ್ವದ ಕಾಣ್ಕೆ ಇರುವುದೇ ಎಚ್ಚೆಸ್ಸಾರ್ ಅವರು ಅನುವಾದಿಸಿರುವ ಎಲಿಜಿಗಳು ಮತ್ತು ಆರ್ಫಿಯಸ್ ಸಾನೆಟ್ಟುಗಳಲ್ಲಿ. ಹತ್ತು ಹದಿನೈದು ದಿನಗಳ ಅವಧಿಯಲ್ಲಿ ತನ್ನಿಂದ ಬರೆಸಿಕೊಂಡ ಕವಿತೆಗಳು ಎಂದು ಅವನು ಹೇಳಿಕೊಂಡಿರುವ ಈ ಎಲಿಜಿಗಳಾಗಲಿ, ಆರ್ಫಿಯಸ್ ಸಾನೆಟ್ಟುಗಳಾಗಲಿ ದಕ್ಕಬೇಕಾದರೆ ಒಂದು ಬಗೆಯ ‘ಪೂರ್ಣ ಶರಣಾಗತಿ’ಯನ್ನು ನಿರೀಕ್ಷಿಸುತ್ತವೆ. ನಿರಾಕರಣೆಯಿಂದಾಗಲೀ ರಿಲ್ಕನ ನಿಲುವುಗಳನ್ನು ತರ್ಕಕ್ಕೆ ಒಡ್ಡುವುದರಿಂದಾಗಲೀ ಆತನ ಈ ಬಗೆಯ ಕವಿತೆಗಳು ದಕ್ಕುವುದು ಸಾಧ್ಯವಿಲ್ಲ. ಅಂದಮಾತ್ರಕ್ಕೆ ಅವು ತರ್ಕಾತೀತವೆಂದಲ್ಲ, ತರ್ಕ ಮತ್ತು ಜಿಜ್ಞಾಸೆ ಅವು ದಕ್ಕಿದ ತರುವಾಯದ ಮಾತು. ಅದಕ್ಕೂ ಮುನ್ನ ಕೇವಲ ಪ್ರೀತಿಯಿಂದ, ಆಪ್ತಸಂವಾದದಂಥ ಈ ಕವಿತೆಗಳಿಗೆ ನಾವು ಒಳಗಾಗುವುದು ಅನಿವಾರ್ಯ ಪಥ. 

ಬಹುಶಃ ಇದೇ ಕಾರಣಕ್ಕೆ "ಅರ್ಥವಾದ ಮತ್ತು ನಿರಂತರ ಸಾಗುತ್ತಿರುವ ಅರ್ಥದ ಶೋಧದ ನಡುವೆಯೂ, ಪ್ರಜ್ಞಾಪೂರ್ವಕವಾದ ಮತ್ತು ಸುಶುಪ್ತಿಗೆ ಸಲ್ಲುವ ಸಂಗತಿಗಳ ನಡುವೆಯೂ, ಹೊಸದಾಗಿ ದಕ್ಕಿಸಿಕೊಂಡ ಮತ್ತು ಅದಾಗಲೇ ದತ್ತವಾದ ತತ್ವಗಳ ನಡುವೆಯೂ" ರಿಲ್ಕನ ಕವಿತೆಗಳು ತುಯ್ಯುತ್ತಿರುತ್ತವೆ ಎನ್ನುತ್ತಾರೆ ವಿಮರ್ಶಕರು. ಈ ಮಾತಿಗೆ ಇಹ ಮತ್ತು ಪರದ ನಡುವೆಯೂ, ದೇಹದ ಮತ್ತು ದೇಹವಿಹೀನದ ನಡುವೆಯೂ, ದೃಶ್ಯ ಮತ್ತು ಅದೃಶ್ಯದ ನಡುವೆಯೂ ಬಂದು ಹೋಗು ಮಾಡುವ ಕವಿತೆಗಳು ಇವು ಎಂದು ಸೇರಿಸಬಹುದು. 

ಹೀಗಾಗಿ, ಅಮೂರ್ತ ಮತ್ತು ಅನೂಹ್ಯ ಜಗತ್ತಿನ ಕುರಿತು ಬರೆದೂ, ಬಹುಶಃ ಅದೇ ಕಾರಣಕ್ಕೆ ಇವತ್ತಿಗೂ ಅವನು ಮತ್ತೆ ಮತ್ತೆ ಅನುವಾದಿಸಲ್ಪಡುತ್ತಲೇ ಇದ್ದಾನೆ ಎನ್ನುವುದರಲ್ಲೇ ರಿಲ್ಕನ ಆಧುನಿಕತೆಯೂ ಇರುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕನ್ನಡದ ಮಟ್ಟಿಗೆ ನಾವು ಸ್ವಲ್ಪ ಅದೃಷ್ಟವಂತರೆಂದೇ ಹೇಳಬೇಕು. ಈಗಾಗಲೇ ಕೆ ವಿ ತಿರುಮಲೇಶ್, ಓಎಲ್ಲೆನ್, ಡಾ||ಯು ಆರ್ ಅನಂತಮೂರ್ತಿ, ಎಸ್ ಮಂಜುನಾಥ್ , ಅಬ್ದುಲ್ ರಶೀದ್ ರಿಲ್ಕನ ಗದ್ಯ ಅಥವಾ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಗತ್ತಿನಾದ್ಯಂತ ಕೂಡ ರಿಲ್ಕ ಮತ್ತೆಮತ್ತೆ ಅನುವಾದಗೊಳ್ಳುತ್ತಲೇ ಇದ್ದಾನೆ. ಆದಿ ಶಂಕರರ ಅದ್ವೈತವನ್ನೂ, ನಾರಾಯಣಗುರುಗಳ ಸಮಬಾಳು ಸಮಪಾಲು ತತ್ವವನ್ನೂ, ಪರಮಹಂಸರ ಭಕ್ತ-ದೈವ ಸಂಬಂಧವನ್ನೂ ರಿಲ್ಕನ ಕವಿತೆಗಳಲ್ಲಿ ಅರಸುವ ಡಾ|| ಯು ಆರ್ ಅನಂತಮೂರ್ತಿಯವರು ಶಂಕರರು ಮುಖಾಮುಖಿಯಾದ ಚಾಂಡಾಲನ ಕತೆಗೆ ನಾರಾಯಣ ಗುರುಗಳು ಕೊಟ್ಟ ವ್ಯಾಖ್ಯಾನದ ಬಗ್ಗೆ ತಮ್ಮ ಗೆಳೆಯ ಇಸ್ಮಾಯಿಲ್‌ರಿಂದ ತಿಳಿದುಕೊಂಡು ಅದನ್ನು ರಿಲ್ಕನಿಗೆ ಕನೆಕ್ಟ್ ಮಾಡುತ್ತಾರೆ! 

ಮೂಲತಃ ಜರ್ಮನ್ ಭಾಷೆಯಲ್ಲಿ ಬರೆದ ರಿಲ್ಕ ಇಂಗ್ಲೀಷಿಗೆ ಬಂದು ಕನ್ನಡಕ್ಕೆ ಬರಬೇಕು. ಈ ನೆಲೆಯಲ್ಲೇ ಅನಂತಮೂರ್ತಿಯವರು ನಮಗೆ ದಕ್ಕಬಹುದಾದ ರಿಲ್ಕೆಯ ಕುರಿತು ಸದಾ ಉಳಿದು ಬಿಡುವ ಒಂದು ಭಾಷೆಯ ಮಿತಿ ಅನುವಾದಕನಲ್ಲಿ ಮೂಡಿಸುವ ವಿನಯದ ಬಗ್ಗೆ ಮತ್ತು ಅದರ ಅಗತ್ಯದ ಬಗ್ಗೆ ಹೇಳುತ್ತಾರೆ. ಎಚ್ಚೆಸ್ಸಾರ್ ಅವರು ಕೂಡ ಇದೇ ಬಗೆಯ ಮಾತನ್ನು ವಿಸ್ತರಿಸುತ್ತ ಮತ್ತಷ್ಟು ಅನುವಾದಗಳು ಹುಟ್ಟಿಕೊಳ್ಳಬೇಕು, ಇಂಗ್ಲೀಷ್ ಅಥವಾ ಜರ್ಮನ್‍ನಲ್ಲೇ ರಿಲ್ಕನನ್ನು ದಕ್ಕಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಬಹುಶಃ ರಿಲ್ಕ ಒಂದು ಅನುವಾದದಲ್ಲಿ ದಕ್ಕುವುದು ಕಷ್ಟ ಎಂಬ ಹಲವು ಅನುವಾದಕರ ಮಾತು ಸರಿ. ಹತ್ತು ಹಲವು ಅನುವಾದಗಳು ಅವನನ್ನು ದಕ್ಕಿಸಿಕೊಳ್ಳಲು ಅನಿವಾರ್ಯ. 

ಒಂದು ಕಾದಂಬರಿಯನ್ನು ಅನುವಾದಿಸುವುದಕ್ಕೂ ಒಂದು ಕವಿತೆಯನ್ನು ಅನುವಾದಿಸುವುದಕ್ಕೂ ಮೂಲಭೂತ ವ್ಯತ್ಯಾಸವೊಂದಿದೆ. ಇದು ಕವಿತೆಯನ್ನು ಓದುವ ಪ್ರಕ್ರಿಯೆಗೂ ಅನ್ವಯಿಸುವ ಮಾತು. ಹಾಗಾಗಿ ಕವಿತೆಯ ಅನುವಾದ ಅಥವಾ ಓದು ಕೂಡ ಒಂದು ವಿಚಿತ್ರವಾದ, ವಿಶಿಷ್ಟವಾದ ಅನುಭವ. ಒಂದು ಕವಿತೆಯಲ್ಲಿನ ಎಲ್ಲಾ ಶಬ್ದಗಳನ್ನೂ, ಅರ್ಥಕ್ಕೆ ಚ್ಯುತಿಯಿಲ್ಲದಂತೆ ಅನುವಾದಿಸಿದಾಗಲೂ ಕವಿ ಏನನ್ನು ಹಾಡಿದ್ದನೋ ಅದು ಇನ್ನೊಂದು ಭಾಷೆಯಲ್ಲಿ ಮೂಡದೇ ಹೋಗಬಹುದು. ಇಂಥ ಅಪಾಯ ಕಾದಂಬರಿಗೆ ಕಡಿಮೆ. ಏಕೆಂದರೆ, ಒಂದು ಕವಿತೆ ಅದನ್ನು ಬರೆದ ಪದಗಳಲ್ಲಿ ಇರುವುದಕ್ಕಿಂತ, ಕವಿ ಅಲ್ಲಿ ಬರೆಯದೇ ಬಿಟ್ಟಿರುವುದರಲ್ಲಿ, ಬರೆದ ಪದಗಳ ಸುತ್ತ ಇರುವ ಮೌನ, ನಿಶ್ಶಬ್ದಗಳಲ್ಲಿ ಇರುವುದೇ ಹೆಚ್ಚು. ಅವನು ಬರೆಯದೇ ಬಿಟ್ಟ ಚಿತ್ರ ಮತ್ತು ಬಿಟ್ಟಿರುವುದರಿಂದಲೇ ಸಿಗುತ್ತಿರುವ ಕವಿತೆಯ ಒಂದು ಅನುಭೂತಿ ಎರಡೂ ಅಮೂರ್ತವಾದುದು, ಊಹೆಗೆ ಬಿಟ್ಟಿದ್ದು ಮತ್ತು ಹಾಗಿದ್ದೂ ಒಂದು ನೆಲೆಯಲ್ಲಿ ನಿರ್ದಿಷ್ಟವಾದದ್ದು. ಆದರೆ ಅದನ್ನು ತಲುಪುವುದು ಹೇಗೆ? ತಲುಪುವುದಕ್ಕೆ ಅವನು ಬರೆದಿರುವ ಪದಗಳೇ ಆಧಾರವಾಗಿದ್ದೂ ಅವುಗಳನ್ನು ಮೀರುವುದು ಹೇಗೆ? ಅದನ್ನು ಸುಲಭಗೊಳಿಸುವ, ಅರ್ಥದ ಹಂಗಿನಿಂದ ಪಾರಾದ ಕಾವ್ಯಭಾಷೆಯೊಂದು ಓದುಗನಿಗೆ ಸಿಗಬಹುದೇ? 

ಇದಕ್ಕೆ ಬಹುಶಃ ಕವಿಯನ್ನು ಅರಿಯದೇ ಅವನ ಕವಿತೆಯನ್ನು ಅರಿಯುವುದು ಕಷ್ಟ ಮತ್ತು ಕವಿತೆಯನ್ನು ಈ ರೀತಿ ಅರಿಯದೇ ಅದನ್ನು ಇನ್ನೊಂದೇ ಭಾಷೆಯಲ್ಲಿ ಮರುನುಡಿಯುವುದು ಕೂಡ ಕಷ್ಟ. ಎಚ್ ಎಸ್ ರಾಘವೇಂದ್ರ ರಾವ್ ಅವರು ರಿಲ್ಕನ ಕವಿತೆಗಳನ್ನು ಅನುವಾದಕ್ಕೆ ಕೈಗೆತ್ತಿಕೊಂಡ ಹಿನ್ನೆಲೆ ಇದು, ಅವರು ಸಾಧಿಸಿದ ತಪಸ್ಸು ಇದು ಎಂದು ಅನಿಸುತ್ತದೆ, ಇಲ್ಲಿನ ಅನುವಾದಗಳಲ್ಲಿ ಅವರಿಗೆ ಸಿದ್ಧಿಸಿದ ರಿಲ್ಕೆಯನ್ನು ಆವಾಹಿಸಿಕೊಳ್ಳುವಾಗ. ಸಂಕೀರ್ಣ ವ್ಯಕ್ತಿತ್ವದ ರಿಲ್ಕನ ಮಹತ್ವದ ಕವಿತೆಗಳು ಆಧ್ಯಾತ್ಮದ, ಸಾವಿನ, ಇಡೀ ಬದುಕಿನ ನಿರರ್ಥಕತೆ-ಅರ್ಥಹೀನತೆ ಮತ್ತು ವ್ಯರ್ಥಾಲಾಪಗಳ ಹಿನ್ನೆಲೆಯಲ್ಲಿಯೇ, ಅದನ್ನು ಬದುಕಿನ ಸಹಜ ಭಾಗವೆಂದೇ ಒಪ್ಪಿಕೊಂಡು ಅರಿಯುವ ಪ್ರಯತ್ನದಂತಿವೆ. ಇವುಗಳನ್ನು ಇಷ್ಟಪಟ್ಟು ತನ್ನ ಭಾಷೆಗೆ ತರಬೇಕೆಂಬ ಸಾಹಸಕ್ಕೆ ಇಳಿಯುವುದೆಂದರೆ ಒಂದು ದೀರ್ಘಾವಧಿ ತಪಸ್ಸಿಗೆ ಸಿದ್ಧರಾದಂತೆಯೇ ಸರಿ. ಎಚ್ಚೆಸ್ಸಾರ್ ಇದನ್ನು ಮಾಡಿದ್ದು, ಈಗವರು ನಮ್ಮ ಕೈಗಿತ್ತಿರುವ ಪುಸ್ತಕ ಅಂಥ ಒಂದು ಸಿದ್ಧಿಯ ಮಂತ್ರಫಲದಂತಿದೆ. 

ಇದನ್ನವರು "ಮಂಜಿನ ಶಿವಾಲಯಕ್ಕೆ..." ಎಂದು ಕರೆದಿರುವುದು ಕೂಡ ಅತ್ಯಂತ ಅರ್ಥಪೂರ್ಣವಾಗಿದೆ. ಶಿವನು ಸತ್ಯ ಮತ್ತು ಸೌಂದರ್ಯದ ಪ್ರತೀಕ. ಕಾವ್ಯದ ಗಮ್ಯವೂ ಸತ್ಯ ಮತ್ತು ಸೌಂದರ್ಯವೇ. ಶಿವನು ಲಯಕರ್ತ ಮತ್ತು ಆ ನೆಲೆಯಲ್ಲಿ ಸಾವಿಗೆ, ಮರಣಾಂತರದ ಜಗತ್ತಿಗೆ ಒಂದು ರೂಪಕ. ರಿಲ್ಕೆಯ ಶೋಧದ ನೆಲೆಗಳು ಕೂಡ ಸಾವು ಮತ್ತು ಬದುಕಿನ ಅಂಚಿನಲ್ಲೇ ನಡೆಯುತ್ತವೆ. ಇನ್ನು ಮಂಜಿನ ಶಿವಾಲಯ ಎನ್ನುವಲ್ಲೇ ಅದು ಕ್ಷಣಭಂಗುರ ಆಲಯವೆಂಬ ಹೊಳಹು ಕೂಡ ಇದೆ. ಮಂಜು ಕರಗುವಂಥದ್ದು, ನೀರಾಗಿ ಹರಿಯುವಂಥದ್ದು. ಹಾಗಾಗಿ ಅದರ ಆಲಯವೇ ಬಯಲು ಕೂಡ ಹೌದು. ಮಂಜು, ಶಿವ ಮತ್ತು ಆಲಯ ಎನ್ನುವಲ್ಲಿಯೇ ಒಂದು ವಿಚಿತ್ರ ಸಂಯೋಗವೂ, ಅದ್ವೈತವೂ ಇದೆ. ಚಾಂಡಾಲನ ಕತೆಯೂ ಇಲ್ಲಿ ಮತ್ತೆ ನೆನಪಾಗುತ್ತದೆ. ಶಂಕರರಿಗೆ ಎದುರಾಗಿದ್ದು ಒಬ್ಬ ಸಾಮಾನ್ಯ ಚಾಂಡಾಲನಷ್ಟೇ, ಶಿವನಲ್ಲ ಎನ್ನುವುದು ತರ್ಕಶುದ್ಧ ಸತ್ಯ. ಆದರೆ ಅವನನ್ನು ಶಿವನೇ ಎಂದು ತಿಳಿಯುವುದು ಕೂಡ ಆಧ್ಯಾತ್ಮಿಕ ಅಗತ್ಯ. ಚಾಂಡಾಲನನ್ನು ಶಿವನೆಂದು ಕಾಣುವ ಮನೋಧರ್ಮವೇ ನಿಜವಾದ ಅದ್ವೈತ ಕೂಡ ಆಗಿದ್ದು, ಗ್ರಹಿಕೆಯ ನೆಲೆಗಳನ್ನು ವಿಸ್ತರಿಸುವ ಪ್ರಜ್ಞೆಯಾಗಿ ನಮಗೆ ದಕ್ಕಬೇಕು. ಇದು ಡಾ|| ಯು ಆರ್ ಅನಂತಮೂರ್ತಿಯವರ ದೃಷ್ಟಿ. ಇದೇ ದೃಷ್ಟಿಯಿಂದ ಅವರು ಕೆ ವಿ ತಿರುಮಲೇಶರಿಗೆ ಗೆದ್ದೆ ಎನಿಸಿಯೂ ನಿರರ್ಥಕತೆಯಲ್ಲಿ ಕಾಡಿದ ಬೆಕ್ಕು(ಮುಖಾಮುಖಿ), ಪರಮಹಂಸರಿಗೆ ನೈವೇದ್ಯ ಸ್ವೀಕರಿಸಲು ಬಂದ ತಾಯಿಯಾಗಿ ಕಂಡ ಬೆಕ್ಕು ಮತ್ತು ರಿಲ್ಕನ ಬೆಕ್ಕು - ಮೂರನ್ನೂ ಕನೆಕ್ಟ್ ಮಾಡಿ ರಿಲ್ಕ ಹೇಳುವ "ನೋಡುವ ವಸ್ತು ನೀನೇ ಆಗಿಬಿಡು" ಎಂಬ ಮಾತನ್ನು ದಕ್ಕಿಸಿಕೊಳ್ಳಲು ಯತ್ನಿಸುತ್ತಾರೆ. ಬಹುಶಃ ಕಾವ್ಯದ ಅನುಸಂಧಾನ ಎಂದರೆ ಇದೇ. ಕಾವ್ಯ ಕಟ್ಟುವ ಪರಾಸತ್ಯದ ಚೌಕಟ್ಟು ಕೂಡ ಹಾಗೆಯೇ, ಹೌದೆಂದರೆ ಹೌದು, ಅಲ್ಲ ಎಂದರೆ ಅಲ್ಲ. ಹಾಗಾಗಿ ರಿಲ್ಕೆಯ ಕವಿತೆಗಳು ಭಾಷೆಯಲ್ಲಿ ಮತ್ತಷ್ಟು ಸಂಕೀರ್ಣ, ಕ್ಲಿಷ್ಟಾರ್ಥದ ಅನುಭೂತಿ. ಆದಾಗ್ಯೂ ಒಂದು ಅದ್ಭುತ ಭಾಷಾಲಯದಲ್ಲಿ ಇದನ್ನು ಕನ್ನಡಿಸುತ್ತಾರೆ ಎಚ್ಚೆಸ್ಸಾರ್. ಅವರ ಭಾಷೆಯ ಒಂದು ಉತ್ಕಟ ಲಯ, ಭೌತಿಕ ಬದುಕಿನ ಚಲನೆಯಲ್ಲೇ ಪ್ರಾಫೆಟಿಕ್ ಆದ ಒಂದು ಅರ್ಥಶೋಧದ ಹಾದಿಯಲ್ಲಿರುವ ರಿಲ್ಕೆಯ ಉತ್ಕಟತೆಯನ್ನು ಹಿಡಿಯುವ ಹೆಬ್ಬಯಕೆಯಿಂದ ಹೊರಟ ಲಯವದು. ಅನೇಕ ಕಡೆಗಳಲ್ಲಿ ಎಚ್ಚೆಸ್ಸಾರ್ ಅವರು ಇಲ್ಲಿ ಸಾಧಿಸಿರುವುದು ಅಚ್ಚರಿಯನ್ನೂ ಮೆಚ್ಚುಗೆಯನ್ನೂ ತರುತ್ತವೆ. ಎಚ್ಚೆಸ್ಸಾರ್ ಅವರ ಈ ಅನುವಾದದ ಸಾರ್ಥಕತೆ ಮಡುಗಟ್ಟಿರುವುದು ಅವರು ರಿಲ್ಕನ ಎಲಿಜಿಗಳನ್ನೂ ಆರ್ಫಿಯಸ್ ಸಾನೆಟ್ಟುಗಳನ್ನೂ ಕನ್ನಡಿಸಿದ ರೀತಿಯಲ್ಲಿ. ಆ ಒಂದೊಂದು ಕವಿತೆಯೂ ಸುದೀರ್ಘ ಗಾತ್ರದ್ದು ಮತ್ತು ಅಲ್ಲಿನ ವಾಕ್ಯಬಂಧಗಳೂ ಎರಡು-ಮೂರು ಸಾಲಿನಲ್ಲಿ ಕಟ್ಟಿರುವಂಥವು. 

ಏಳನೆಯ ಎಲಿಜಿಯಿಂದ ಆರಿಸಿದ ಈ ಕೆಲವು ಸಾಲುಗಳನ್ನು ಗಮನಿಸಿ. ಈ ಸಾಲುಗಳಲ್ಲೊಂದು ತೀವ್ರತೆಯಿದೆ. ಬಯಕೆಯೂ ಇದೆ, ಬದುಕಿನಲ್ಲಿ ಬಯಕೆಯೊಡ್ಡುವ ದುರಂತಗಳ ಪ್ರಜ್ಞೆಯೂ ಇದೆ. ರಿಲ್ಕ ಕತ್ತಲೆಯನ್ನು ಸ್ವೀಕರಿಸುತ್ತಾನೆ, ಬೆಳಕಿನ ದೆಸೆಯಿಂದ. ಅನಿಶ್ಚಿತವನ್ನು ಒಪ್ಪಿಕೊಳ್ಳುತ್ತಾನೆ, ನಿಶ್ಚಿತದ ನಿರೀಕ್ಷೆಯಲ್ಲಿ. ಉತ್ತರಗಳಿಗಿಂತ ಪ್ರಶ್ನೆಗಳೇ ಮುಖ್ಯವಾಗುತ್ತವೆ, ಅವುಗಳಲ್ಲೇ ಅಡಗಿರುವ ಸತ್ಯಕ್ಕಾಗಿ. ಎಚ್ಚೆಸ್ಸಾರ್ ಅವರ ಅನುವಾದ ಇದನ್ನೆಲ್ಲ ಹಿಡಿದಿಟ್ಟಿರುವ ಪರಿ ಗಮನಿಸಿ: 

ಇಲ್ಲ, ನಾನು ನಿನ್ನನ್ನು ಓಲೈಸುತಿಲ್ಲ. 
ಹಾಗೆ ಯೋಚಿಸಬೇಡ. ಓಲೈಸಿದರು ಕೂಡ ನೀ ಬರುವುದಿಲ್ಲ. ಏಕೆಂದರೆ, ನನ್ನ 
ಕರೆಯಲ್ಲಿಯೇ ತುಂಬಿದೆ ‘ಬೇಡ, ಬರಬೇಡ’ವೆಂಬ ಅಹವಾಲು. ಬರಲಾರೆ ನೀನು 
ಆ ಪ್ರಬಲ ನೆರೆಯೆದುರು ಈಜಿ. ಬರುವವರಿಗೆ ಅಡ್ಡವಾಗಿ ಚಾಚಿದ ತೋಳಿನಂತೆ ನನ್ನ ಕರೆ. 
ಮತ್ತು ನನ್ನ ಕೈ ತೆರೆದಿದೆ, ಇಷ್ಟಗಲ, ಅದು ಚಾಚಿದೆ ಮೇಲೆ. ಹಿಡಿಯಲೆತ್ನಿಸಿದೆ 
ಏನನ್ನೋ…ಆತ್ಮರಕ್ಷಣೆಗೊ ಅಥವಾ ಅದು ಎಚ್ಚರಿಕೆಯ ದನಿಯೊ? 
ಅಲ್ಲಿ ಮೇಲಿರುವ, ಉಪಮಿಸಬಾರದ ಘನವೇ. 

ರಿಲ್ಕನ ಅತ್ಯಂತ ಸುಂದರವಾದೊಂದು ರಚನೆ, ಹಕ್ಕಿ ಸುಳಿದಾಡುವ ಬಯಲ ಗಾಳಿ ಖಾಸಗಿಯೇನಲ್ಲ ಎನ್ನುವ ಅರ್ಥದ್ದು. (What birds plunge through is not the intimate space) ಇದನ್ನು ಎಚ್ಚೆಸ್ಸಾರ್ ಹಕ್ಕಿ ಸುಳಿಯುವ ಗಾಳಿ ಎಂದು ಅನುವಾದಿಸಿದ್ದಾರೆ. 

ಹಕ್ಕಿ ಸುಳಿಯುವ ಗಾಳಿ........... 
 ಕಣ್ಣು ಕಾಣುತ್ತಿರುವ ಹಲವು ವಸ್ತುಗಳನ್ನು 
ತೀವ್ರತಮರೂಪದಲಿ ತೆರೆದು ತೋರಿಸುವಂಥ 
ಅಂತರಂಗದ ಬಯಲು,
ಹಕ್ಕಿ ಸುಳಿಯುವ ಗಾಳಿಯಲ್ಲ. 
(ಜಗದ ಜಂಜಡದಲ್ಲಿ ಕಳೆದುಹೋಗುವೆ ನೀನು 
ಆ ನೋಟ ಕಲುಷಿತವು ಅದು ನಿನ್ನದಲ್ಲ) 

ಬಯಲು ಮೂಡುವ ತಾಣ ನಮ್ಮ ಒಳಗಡೆಯೆ ಇದೆ 
ಅದು ಕಟ್ಟಿಕೊಡುವುದೇ ದಿಟದ ಲೋಕ: 
ಇಲ್ಲಿರುವ ಈ ಮರವ ಅದರ ಇಡಿತನದಲ್ಲಿ 
ತಿಳಿಯಬಯಸುವೆಯೇನು ನೀನು? 
ನಿನ್ನ ಒಳಗಿನ ಒಳಗೆ ತುಂಬಿರುವ ಸಿರಿಬಯಲ 
ಅದರ ಸುತ್ತಲು ಹರಡು ಕೋಟೆಯಂತೆ. 
ಅದನು ಆವರಿಸಿರಲಿ ಸಂಯಮದ ಗಡಿಸೀಮೆ 
ಅದು ಅಮಿತ ಅಲ್ಲ ಅದು ಪರಿಮಿತದ ಬೊಂತೆ. 
ಅಂಟಿರದ ನಂಟಿನಲಿ ಮನೆಯ ಮಾಡುವ ತನಕ 
ಅದಕೆ ಇಲ್ಲವೆ ಇಲ್ಲ, ಯಾವುದೇ ಇರವು. 

ಇಲ್ಲಿ ತಪ್ಪದೇ ನಮಗೆ ನೆನಪಾಗುವುದು ಅಡಿಗರ ಭೂಮಿಗೀತದ ಸಾಲು, ಬತ್ತಲಾಗದೆ ಬಯಲು ಸಿಕ್ಕದಿಲ್ಲಿ. ರಿಲ್ಕನ ಇಡೀ ಕವಿತೆಯನ್ನು ಅಡಿಗರು ಎಷ್ಟು ಅಡಕವಾಗಿ ಒಂದು ಸಾಲಿನಲ್ಲಿ ಇಟ್ಟುಬಿಡುತ್ತಾರಲ್ಲವೆ! ನಮ್ಮ ಕನಕದಾಸರ ಸಾಲು "ಆಲಯವು ಬಯಲೊಳಗೊ| ಬಯಲು ಆಲಯದೊಳಗೊ" ಕೂಡ ಇಲ್ಲಿದೆ. ಎಚ್ಚೆಸ್ಸಾರ್ ಸಾಲುಗಳನ್ನು "ಅದು ಅಮಿತ, ಅಲ್ಲ ಅದು ಪರಿಮಿತದ ಬೊಂತೆ" ಎಂದು ಓದಿಕೊಂಡರೆ ಸಿಗುವ ಅರ್ಥ ಒಂದಾದರೆ, "ಅದು ಅಮಿತ ಅಲ್ಲ, ಅದು ಪರಿಮಿತದ ಬೊಂತೆ" ಎಂದು ಓದಿಕೊಂಡಾಗ ಸಿಗುವ ಅರ್ಥವೇ ಬೇರೆ. ರಿಲ್ಕನೂ ಅಮಿತ ಪರಿಮಿತಗಳನ್ನು ಒಮ್ಮೆಗೇ ಗ್ರಹಿಕೆಯ ಆಪೋಶನಕ್ಕೆ ಧಾರೆಯೆರೆಯುವ ಕವಿ. ಇದು ರೋಡಿನ್ ಕೊಟ್ಟ ದೀಕ್ಷೆ ರಿಲ್ಕನಿಗೆ. ಹಾಗೆಯೇ ರಿಲ್ಕನ ಕವಿತೆಗಳುದ್ದಕ್ಕೂ ನಮಗೆ ಮತ್ತೆ ಮತ್ತೆ ನೆನಪಾಗುವುದು ಈ ಎಂ ಪಾರ್ಸ್ಟರನ ಓನ್ಲಿ ಕನೆಕ್ಟ್ ಪ್ರಬಂಧ. ಕಲೆಯೆಂದರೇ ಕನೆಕ್ಟ್ ಮಾಡುತ್ತ ಹೋಗುವುದು ಎನ್ನುತ್ತಾನೆ ಅವನು. ರಿಲ್ಕನಲ್ಲಿ ನಾವು ಅದರ ಸಾಕ್ಷಾತ್ಕಾರವನ್ನು ಕಾಣುತ್ತೇವೆ. 

ಪುಟ್ಟ ಚಿಟ್ಟೆ: ಮೈಯೆಲ್ಲ ನಡುಗುತ್ತಿದೆ, ಉನ್ಮಾದದಿಂದ. ಅವಳು ದೀಪದ ಬಳಿ ಬಂದಳು. ಆ ಕಡೆ ಈ ಕಡೆ ಹಾರಾಡಿಸುವ ಅವಳದೆ ತಲೆತಿರುಗು ಒಂದು ಕ್ಷಣ ಜೀವದಾನ ಮಾಡಿತು. ಅಗೊ, ಬೆಂಕಿಯ ಬೆರಗಿನಲ್ಲಿ ತಾನೂ ಉರಿಯಾದಳು. ಹಸಿರು ಟೇಬಲ್ ಕ್ಲಾತ್ ಮೇಲೆ ಅಡಿಮೇಲಾಗಿ ಬಿದ್ದಳು. ಒಂದು ಕ್ಷಣ ಮೈಚಾಚಿದಳು.(ಅವಳ ಕಾಲದ ಅಳತೆಯಲ್ಲಿ ಒಂದು ಕ್ಷಣವೆಂದರೆಷ್ಟು? ನಮಗೇನು ಗೊತ್ತು?) ಆ ಕ್ಷಣದಲ್ಲಿ ಅವಳು ಅನೂಹ್ಯ ಅನೂಹ್ಯ ವೈಭವದ ಒಂದು ಝಲಕು. ರಂಗಮಂದಿರಕ್ಕೆ ಹೋಗುವ ಹಾದಿಯಲ್ಲಿ ಹೃದಯಾಘಾತವಾದ ಪುಟ್ಟ ಮಹಿಳೆಯಂತೆ ಕಾಣುತ್ತಿದ್ದಾಳೆ. ಆಕೆ ಅಲ್ಲಿಗೆ ತಲುಪುವುದೇ ಇಲ್ಲ. ಇಷ್ಟಕ್ಕೂ ಇಂತಹ ದುರ್ಬಲ ಪುಟಾಣಿ ಪ್ರೇಕ್ಷಕರಿಗೆ ಎಲ್ಲಿದೆ ರಂಗಮಂದಿರ?...... ಚಿನ್ನದ ಬಣ್ಣದ ಎಳಗಳನ್ನು ಹೆಣೆದಿರುವ ಅವಳ ರೆಕ್ಕೆಗಳು ಜೋಡಿ ಬೀಸಣಿಕೆಯಂತೆ ಪಟಪಟ ಹೊಡೆದುಕೊಳ್ಳುತ್ತವೆ. ಆ ಗಾಳಿಯನ್ನು ಅನುಭವಿಸುವ ಮುಖ ಇಲ್ಲ. ಈ ರೆಕ್ಕೆಗಳ ನಡುವೆ ಕಡ್ಡಿಯಂತಹ ದೇಹ. ಅದರ ತುದಿಯಲ್ಲಿ ಹಸಿರುಮಣಿಗಳಂತೆ ಹೊಳೆಯುತ್ತಿರುವ ಕಣ್ಣುಗಳು. 

ನನ್ನ ಮುದ್ದು ಚಿಟ್ಟೆಯೇ, ಈಗ ಈ ಕ್ಷಣದಲ್ಲಿ ದೇವರು ಸಂಪೂರ್ಣವಾಗಿ ದಣಿದುಹೋಗಿದ್ದಾನೆ, ಖಾಲಿಯಾಗಿದ್ದಾನೆ. ಕಳೆದುಹೋದ ಶಕ್ತಿಯಲ್ಲಿ ಇನಿತಾದರೂ ಮರಳಿ ಬರಲೆಂದು ನಿನ್ನನ್ನು ಬೆಂಕಿಯೊಳಗೆ ಎಸೆಯುತ್ತಾನೆ.(ಮಣ್ಣಿನ ಪಿಗ್ಗಿಬ್ಯಾಂಕಿನಲ್ಲಿ ಕೂಡಿಟ್ಟ ಹಣಕ್ಕಾಗಿ, ಹುಡುಗನು ಅದನ್ನು ಒಡೆಯುವ ಹಾಗೆ.) 

ಬಹುಶಃ ಮನುಷ್ಯರ ಬದುಕಿನ ನಿರರ್ಥಕತೆ, ಅರ್ಥಹೀನತೆ ಮತ್ತು ವ್ಯರ್ಥಪ್ರಲಾಪಗಳನ್ನೆಲ್ಲ ಇಷ್ಟೊಂದು ಸೂಚ್ಯವಾಗಿ ಕಟ್ಟಿಕೊಡುವ ಕವಿತೆ ಬೇರೊಂದು ಇರಲಾರದು. ಮಣ್ಣಿನ ಪಿಗ್ಗಿಬ್ಯಾಂಕಿನ ಉಪಮೆಯನ್ನು ನೋಡಿ. ಇಲ್ಲಿ ಎಚ್ಚೆಸ್ಸಾರ್ ಬಳಸುವ ಭಾಷೆಯಲ್ಲೇ ಒಂದು ವಿಧವಾದ ವೈಶಿಷ್ಟ್ಯ ಎದ್ದು ಕಾಣುತ್ತದೆ. 

ಈ ಖಾಲಿತನ, ಈ ಅಳಲು ಇದು ಒಂದು ಉಸಿರು.
ಅಗೋ ಅಲ್ಲಿ ಚಿಗುರುತ್ತಿರುವ ಆ ಮರಗಳ, 
ನಾಳೆ ಬರಲಿರುವ ಹಸಿಹಸಿರು ಮೆರವಣಿಗೆ. 
ಅದು ಇನ್ನೊಂದು ಉಸಿರು. 
ಈ ಇಂಥ ಉಸಿರುಗಳು ನಮ್ಮನಾವರಿಸಿವೆ ಒಳಗೆ, 
ಹೊರಗೆ ಮತ್ತೆ ಒಳಗೆ. 
ಈಗಲೂ ಈಗಲೂ ನಮ್ಮ ಮೇಲೆ. 
ಇದು ಈ ಭೂಮಿಯ ನಿಧಾನಶ್ರುತಿಯ ಉಸಿರಾಟ.
ಇಂಥ ಉಸಿರುಗಳನ್ನು ನಾವು ಎಣಿಸುತ್ತೇವೆ, 
ವರ್ಷ ಚಮಚಗಳಲ್ಲಿ ಅಳೆದು ಸುರಿದು. 
ಈ ಲೋಕದಲ್ಲಿ ಆತುರ ನಮ್ಮದು ಮಾತ್ರವೇ. 
ಗಡಿಬಿಡಿಯಲ್ಲಿ ಮೂಡಿ ಆತುರದಲ್ಲಿ ಮುಳುಗುವುದು 
ನಾವು ಮಾತ್ರವೇ.. 
(‘O, Lacrimosa’, 1905, Un Collected Poems ಆಯ್ದ ಭಾಗ) 

ಏಸುವಿನ ಕಳೇಬರದ ಬಳಿ ಕಂಬನಿ ಸುರಿಸುತ್ತಾ ಕುಳಿತ ಅವನ ತಾಯಿ ಮೇರಿಯನ್ನು ಸೂಚಿಸಲು ಬಳಸುವ ಈ ‘ಓ, ಕಂಬನಿ ತುಂಬಿದ ಹೆಣ್ಣೆ’ ಎಂಬ ಪ್ರಯೋಗ ಇರುವ ಕವಿತೆಯಲ್ಲಿ ಪ್ರಕೃತಿ ಪುರುಷ ಸಮನ್ವಯದ ಒಂದು ತತ್ವವಿದೆ. ಮನುಷ್ಯನ ಉಸಿರು, ಜಗತ್ತಿನ ಉಸಿರು ಮತ್ತು ಕಾಲದ ಪರಿಕಲ್ಪನೆಯ ಸಂಯೋಜನೆಯೊಂದನ್ನು ವಿವರಿಸುವ ತತ್ವವಿದೆ. ಅದನ್ನು ಹೇಳುತ್ತಲೇ ಸಾವು, ವಿಯೋಗಗಳಂಥ ನಿಯತಿಯನ್ನು ವಿವರಿಸುವ ರಿಲ್ಕೆಗೆ ಮನುಷ್ಯನ ಅಸ್ತಿತ್ವಕ್ಕೆ ಅವನ ಭೌತಿಕವಾದ ಅಸ್ಮಿತೆಯೊಂದೇ ಆಧಾರ ಎನ್ನುವುದರಲ್ಲಿ ವಿಶ್ವಾಸವಿಲ್ಲ ಮತ್ತು ಹಾಗಾಗಿ ಸಾವನ್ನು ಅವನು ಅಂತ್ಯ ಎಂಬಂತೆ ಕಾಣುವುದೂ ಇಲ್ಲ. ಅವನ ಮಟ್ಟಿಗೆ ಅದು ದೃಶ್ಯದಿಂದ ಅದೃಶ್ಯಕ್ಕೆ ಹೊರಳುವ ಒಂದು ಊರ್ಧ್ವಮುಖಿ ಚಲನೆ, ಅಷ್ಟೇ. ಈ ಗಹನ ತತ್ವವನ್ನು ಎಷ್ಟೊಂದು ಸರಳವಾಗಿ ಎಚ್ಚೆಸ್ಸಾರ್ ಅವರು ಕನ್ನಡಕ್ಕೆ ತಂದಿದ್ದಾರೆನ್ನುವುದಕ್ಕೆ ಈ ಕವಿತೆ ಒಂದು ಸಾಕ್ಷಿ ಎಂಬಂತಿದೆ. 

ಭಾಷೆ, ಪ್ರಕಾರ, ಎಲಿಜಿಯಂಥ ಕಾವ್ಯದಲ್ಲಿ ಕಂಡುಬರುವ ರಿಲ್ಕನ ಮನೋಧರ್ಮ, ಬಹುವಿಶಿಷ್ಟವಾದ ಈ ಕವಿತೆಗಳ ಕೇಂದ್ರ ಅಥವಾ ಗಮ್ಯ ಎಲ್ಲವೂ ಒಡ್ಡುವ ಹತ್ತು ಹಲವು ಮಿತಿಗಳನ್ನಿಟ್ಟುಕೊಂಡು ಎಚ್ಚೆಸ್ಸಾರ್ ಅವರು ಇಲ್ಲಿ ಸಾಧಿಸಿರುವುದು ಮಹತ್ತರವಾದದ್ದು. ಅವರು ಬಳಸುವ ಭಾಷೆ, ಕಟ್ಟುವ ಪದಬಂಧ, ಒಂದೊಂದು ಸಾಲೂ ರಾಚನಿಕವಾಗಿ ಅದರ ಒಟ್ಟಂದದಲ್ಲಿ ಕೊಡುವ ಅನುಭೂತಿ ನಮಗೆ ಕನ್ನಡದ ಒಬ್ಬ ರಿಲ್ಕೆಯನ್ನು ಕಟ್ಟಿಕೊಟ್ಟಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ರಿಲ್ಕೆಯನ್ನು, ಅವನ ಕಾವ್ಯಾನುಭೂತಿಯನ್ನು ಮತ್ತು ತನ್ಮೂಲಕ ಕಾವ್ಯದ ಅಸಲಿ ಕಸುಬನ್ನು ಅರಿಯಲು ಬಹು ಮಹತ್ವದ ಆಕರವಾಗಿ ಕನ್ನಡಕ್ಕೆ ಒದಗಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ