Saturday, July 4, 2020

ಪ್ರಸನ್ನ ಸಂತೇಕಡೂರು ಅವರ ಕಾದಂಬರಿ ‘ಸು’

  ಪ್ರೀತಿಯ ಪ್ರಸನ್ನ ಅವರಿಗೆ, 

  ವಂದನೆಗಳು. 

 ನಿಮ್ಮ ಚೊಚ್ಚಲ ಕಾದಂಬರಿ ‘ಸು’ ಓದಿದೆ. ಇಷ್ಟವಾಯಿತು, ಅಭಿನಂದನೆಗಳು.   ಕಾದಂಬರಿಗೆ ವಸ್ತುವಾಗಬಲ್ಲ, ತಿರುವುಗಳು, ಕೌತುಕಗಳು, ನವರಸಗಳು ಇತ್ಯಾದಿ   ಇಲ್ಲದ, ಹೊರಗಿನಿಂದ ಕಂಡರೆ ಒಂದು ಸಾಮಾನ್ಯ ಬದುಕು ಎನಿಸಬಹುದಾದ   ವಸ್ತುವನ್ನಿಟ್ಟುಕೊಂಡು, ಅದನ್ನೇ ಇಷ್ಟೊಂದು ಚೆನ್ನಾಗಿ ಒಂದು ಕಥನವನ್ನಾಗಿ   ನಿರೂಪಿಸಿದ ನಿಮಗೆ ಅಭಿನಂದನೆಗಳು. 

 ಎಲ್ಲಿಯೂ ಅಗತ್ಯಕ್ಕಿಂತ ಹೆಚ್ಚು ವಾಚಾಳಿತನ ತೋರದೆ, ಅಸಂಗತ ಕಥನಕ್ಕೆ   ಇಳಿಯದೆ,  ಎಷ್ಟು ಅಗತ್ಯವೋ ಅಷ್ಟೇ ವಿವರಗಳಲ್ಲಿ ಇದನ್ನು ನೀವು ಕಟ್ಟಿಕೊಟ್ಟಿರುವುದು   ಅಭಿಮಾನಕ್ಕೆ ಕಾರಣವಾಗಬೇಕಾದ ಸಂಗತಿ. ಪ್ರಬುದ್ಧ ಬರಹಗಾರನಂತೆ, ಎಲ್ಲಿಯೂ   ಒಂದು ಪೂರ್ವನಿರ್ಧಾರಿತ ನಿರ್ದಿಷ್ಟ ಗಾತ್ರಕ್ಕೆ ಕೃತಿಯನ್ನು ಹಿಗ್ಗಿಸುವ ಕೃತಕ ಪ್ರಯತ್ನವಿಲ್ಲದೇ, ವಸ್ತುನಿಷ್ಠವಾಗಿ ನಿರೂಪಣೆಯ ಹದ ಕಾಯ್ದುಕೊಂಡು ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. 

ಸು ನ ಬದುಕಿನಲ್ಲಿ ಮತ್ತೆ ಮತ್ತೆ ಸವಾಲೊಡ್ಡುವಂತೆ ಮುಖಾಮುಖಿಯಾಗುವ ಕ್ಯಾನ್ಸರ್ ಕಾಯಿಲೆಯ ಸನ್ನಿವೇಶಗಳು, ಅವನು ಅದನ್ನೇ ಬೆನ್ನಟ್ಟಿಕೊಂಡು ನಡೆಸುವ ಸಂಶೋಧನೆಯ ಮಹತ್ಸಾಧನೆಗೆ ಪ್ರೇರಣೆಯನ್ನಾಗಿ ಈ ಸನ್ನಿವೇಶಗಳನ್ನು ನೀವು ಚಿತ್ರಿಸಿದ ರೀತಿ ತುಂಬ ಸಂತುಲಿತವಾಗಿ ಬಂದಿದೆ. ಹೆಂಡತಿ, ಸಂಬಂಧಿ, ಟಿಬೆಟ್ಟಿನಲ್ಲಿ ಮತ್ತೆ ಅದೇ ತರ ಎದುರಾಗುವ ಕ್ಯಾನ್ಸರ್ - ಹೀಗೆ ಒಂದು ಸರಪಳಿಯಾಗಿ ಅದು ಮತ್ತೆ ಮತ್ತೆ ಇಣುಕುವುದು ಅರ್ಥಪೂರ್ಣವಾಗಿದೆ. ಇವತ್ತು ನಮ್ಮ ಸುತ್ತಮುತ್ತ ಕ್ಯಾನ್ಸರ್ ಎಷ್ಟು ವ್ಯಾಪಕವಾಗಿದೆ ಎಂದರೆ ಅದು ಶೀತ ನೆಗಡಿಯಷ್ಟೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಅದು ಒಂದು ಮಹತ್ಸಾಧನೆಗೆ ಪ್ರೇರಣೆ ಒದಗಿಸುವುದು ಇಲ್ಲಿ ಒಂದು ಒಳ್ಳೆಯ ಕಾದಂಬರಿಗೆ ಕಾರಣವಾಗಿರುವುದು ಸಹಜ - ಸುಂದರವಾಗಿದೆ. 

ಅದೇ ರೀತಿ ಅಲ್ಲಲ್ಲಿ ನೀವು ಕನಸು, ಭ್ರಮೆ, ಮಿಥಿಕ್ ಮತ್ತು ಇತಿಹಾಸವನ್ನು ಸೂಕ್ಷ್ಮವಾಗಿ ಬಳಸಿಕೊಂಡು ನಿರೂಪಣೆಗೆ ಸೊಗಸು ತಂದಿರುವ ರೀತಿ ಕೂಡ ತುಂಬ ಮೆಚ್ಚುಗೆ ಹುಟ್ಟಿಸಿತು. ವಿಶೇಷವಾಗಿ ಆತ ಹೆಂಡತಿಯನ್ನು ಕಳೆದುಕೊಂಡು ಮಲಗಿದ್ದಾಗ ಬೀಳುವ ಕನಸು, ಅಲ್ಲಲ್ಲಿ ಬರುವ ಅಲೆಗ್ಸಾಂಡರ್‌ನ ಉಲ್ಲೇಖ, ಸು ನಡೆಸುವ ಆತ್ಮಾವಲೋಕನದ ಚಿತ್ರ, ದೇಹದೊಳಗೆ ಅವನ ರೋಚಕ ಪ್ರಯಾಣ, ಅವನು ಚೀನೀಯಾಗಿದ್ದೂ ನಿರೂಪಕ ಭಾರತೀಯನಾಗಿರುವುದರಿಂದಲೇ ಬರುವ ಯಮನ ರೂಪಕ, ಸು ಗೆ ಒಮ್ಮೆ ಪ್ರಯೋಗಾಲಯದಲ್ಲಿ ಹೇಲಾ ಕಂಡಂತಾಗುವ ಪ್ರಸಂಗ ಎಲ್ಲವೂ ಚೆನ್ನಾಗಿ ಹೊಂದಾಣಿಕೆಯಾಗಿ ಬಂದಿದೆ. 

ಟಿಬೆಟ್ಟಿಯನ್ನರ ದೇಹ ಸಂಸ್ಕಾರದ ವಿಚಿತ್ರ ಬಗೆಯ ಬಗ್ಗೆ ಗೊತ್ತಿರಲಿಲ್ಲ. ಹಾಗೆಯೇ ಕ್ಯಾನ್ಸರ್ ಕುರಿತ ಎಷ್ಟೋ ಸಂಗತಿಗಳು. ನನ್ನ ಅಕ್ಕಪಕ್ಕದಲ್ಲಿಯೇ ಈ ಕಾಯಿಲೆಗೆ ತುತ್ತಾದ ಹತ್ತಾರು ಮಂದಿ ಇದ್ದರೂ, ಎಷ್ಟೋ ಸಲ ನನ್ನ ಆತ್ಮೀಯರ ಪರವಾಗಿ ನಾನೇ ಲ್ಯಾಬುಗಳಿಗೆ, ವೈದ್ಯರೊಂದಿಗೆ ಈ ಬಗ್ಗೆ ಚರ್ಚೆಗೆ ಹಾಜರಾಗಬೇಕಾಗಿ ಬಂದಿದ್ದರೂ ನನಗೆ ಇಷ್ಟು ಸರಳವಾಗಿ ಮತ್ತು ಪೂರ್ಣವಾಗಿ ಅದರ ಹುನ್ನಾರಗಳ ಅರಿವಿರಲಿಲ್ಲ. ನಿಮ್ಮ ಕಾದಂಬರಿ ಪರೋಕ್ಷವಾಗಿ ಹೇಲಾಳ ಕುರಿತು, ಜೀವಕೋಶಗಳ ಬಳಕೆ ಕುರಿತು, ನೆಲಗಡಲೆಯ ವಂಶಾಭಿವೃದ್ಧಿಯ ಕುರಿತು ತುಂಬ ರೋಚಕವೂ, ಕುತೂಹಲಕರವೂ ಆದ ಮಾಹಿತಿಯನ್ನೂ, ಅದು ಮಾಹಿತಿ ಅನಿಸದ ಹಾಗೆ ಕಥನದ ಹೂರಣ ಕಟ್ಟಿ, ನಮಗೆ ಕೊಟ್ಟಿದೆ. ಮತ್ತೊಮ್ಮೆ ನಿಮಗೆ ಇದಕ್ಕಾಗಿ ಅಭಿನಂದನೆಗಳು. 

ಇಡೀ ಕಾದಂಬರಿ ಚೀನಾದ ಕುರಿತು ಒಂದು ರಾಜಕೀಯ ನೆಲೆಯ ನಿಲುವನ್ನೂ ಪರಾಮರ್ಶಿಸುತ್ತ ಸಾಗಿರುವುದು ತುಂಬ ವಿಶೇಷವಾಗಿ ನನಗೆ ಹಿಡಿಸಿತು. ಪ್ರಸ್ತುತ ದಿನಗಳಲ್ಲಿ ಬಹುಶಃ ಇದು ತುಂಬ ಮುಖ್ಯವಾದ ಸಂಗತಿ. ಆದರೆ ನೀವಿದನ್ನು ತೀರಾ ಬೇರೆಯೇ ಆದ ವಸ್ತು, ಹಂದರ ಮತ್ತು ಕೇಂದ್ರ ಇರುವ ಒಂದು ಕಥನದ ಜೊತೆ ನೇಯ್ದಿರುವುದು ನಿಜವಾಗಿಯೂ ನಿಮ್ಮ ಪ್ರತಿಭೆಗೆ ಪುಟವಿಟ್ಟಂತಿದೆ. ಬಾಲ್ಯದಿಂದ ಅವನಲ್ಲಿ ಚೀನಿಯರ ಬಗ್ಗೆ ಇರುವ ದ್ವೇಷ, ಟಿಬೆಟ್ಟಿಯನ್ನರ ಬದುಕಿನ ವಾಸ್ತವದ ಹಿನ್ನೆಲೆಯಲ್ಲಿ ಅದು ಗಟ್ಟಿಗೊಳ್ಳುತ್ತ ಹೋಗುವುದು, ಬೈಲಕುಪ್ಪೆಯ (otherwise ಅನಗತ್ಯವಾಗಿರುವ) ಅಧ್ಯಾಯದ ಮಹತ್ವ, ಕ್ರಮೇಣ ಸು ಮೂಲಕ ಮೃದುವಾಗುವ ಮತ್ತು ಕೊನೆಯ ಚೀನಾ ಭೇಟಿಯಲ್ಲಿ ಪ್ರಬುದ್ಧವಾಗಿ ಮಾಗುವ ನಿಲುವು ನನಗೆ ತುಂಬ ಇಷ್ಟವಾದ ಸಂಗತಿ. ಒಬ್ಬ ಕಾದಂಬರಿಕಾರ (ಅಥವಾ ಕತೆಗಾರ) ಹೀಗೆ ತನ್ನ ಕಥನದ ಸಾಮಾಜಿಕ, ರಾಜಕೀಯ, ದೇಶ-ಕಾಲ ಪ್ರಜ್ಞೆಯನ್ನು ಕೃತಿಯ ಒಡಲಿನಲ್ಲೇ ದಾಖಲಿಸುತ್ತ ಸಾಗಬೇಕೆಂಬುದು ನನ್ನ ನಿರೀಕ್ಷೆ ಕೂಡ. 

ಹಾಗೆಯೇ ಒಬ್ಬ ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಬರುವ ದೈನಂದಿನಗಳ, ಊರು ಕೇರಿಗಳ ವಿವರಗಳಿಲ್ಲದೇ ಹೋದರೆ ಕೃತಿಯ ಪಾತ್ರಗಳು, ಆ ಕಥನದ ವಾತಾವರಣ ಎಲ್ಲವೂ ಕಾಗದದ ಕಟಿಂಗ್ಸ್ ತರ ಉಳಿಯುತ್ತವೇ ಹೊರತು ಓದುಗನೊಂದಿಗೆ ಅವನ ಓದು ಮುಗಿದ ಬಳಿಕವೂ ಒಂದಷ್ಟು ಕಾಲ ಜೀವಂತವಾಗಿ ನಿಲ್ಲುವುದಿಲ್ಲ. ಇದೇ ನೆಲೆಯಲ್ಲಿ ನೀವು ಬೆಕ್ಕನ್ನು ಕಥನದಲ್ಲಿ ತಂದಿರುವ ಬಗೆ ಕೂಡ ನನಗೆ ಇಷ್ಟವಾಯಿತು. 

ಒಂದೆರಡು ಕಡೆ ನಿಮ್ಮ ವಾಕ್ಯಬಂಧ ನನಗೆ ಅಷ್ಟು ಹಿಡಿಸಲಿಲ್ಲ. ಅವೇ ಶಬ್ದಗಳನ್ನು ರೀ-ಅರೇಂಜ್ ಮಾಡಿದ್ದರೆ ಅವು ಹೆಚ್ಚು ಸಹಜವಾಗಿರುತ್ತಿದ್ದವು ಅನಿಸಿತು. ಆದರೆ ಅದೇನೂ ಅಷ್ಟು ಮಹತ್ವದ ವಿಷಯವಲ್ಲ. ನೀವು ಹೆಚ್ಚು ಹೆಚ್ಚು ಕನ್ನಡದ ಬರವಣಿಗೆ (ರಿಯಾಜ್ ತರ ದಿನಕ್ಕೆ ಒಂದಷ್ಟು ಪುಟಗಳನ್ನು) ಮಾಡಿದಂತೆಲ್ಲ ಇದು ಸರಿಹೋಗುತ್ತದೆ. ನನ್ನ ಬರವಣಿಗೆಯಲ್ಲೂ ಇದನ್ನು ನಾನು ಗಮನಿಸಿದ್ದೇನೆ. ನಾವು ನಮ್ಮ ದೈನಂದಿನದಲ್ಲಿ ಕನ್ನಡದ ಬಳಕೆಯಿಂದ ದೂರವಿರುವುದರ ಪರಿಣಾಮ ಇದು ಎಂದುಕೊಂಡಿದ್ದೇನೆ. 

ನಿಮ್ಮಿಂದ ಮತ್ತಷ್ಟು ಮಹತ್ವದ ಕೃತಿಗಳನ್ನು ನಿರೀಕ್ಷಿಸುವೆ, ನಿಮಗೆ ಎಲ್ಲ ರೀತಿಯ ಯಶಸ್ಸು, ಹೆಸರು, ಕೀರ್ತಿ ಮತ್ತು ಸಾರ್ಥಕತೆ ಸಿದ್ಧಿಸಲಿ ಎಂದು ಹಾರೈಸುತ್ತೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ