Tuesday, August 25, 2020

ಹಾಡು ಕಳೆದುಕೊಂಡ ಹಕ್ಕಿಗಳ ಕತೆ

ಕರ್ಕಿ ಕೃಷ್ಣಮೂರ್ತಿಯವರ ಹೊಸ ಕಾದಂಬರಿ ‘ಚುಕ್ಕಿ ಬೆಳಕಿನ ಜಾಡು’ ಈಚೆಗೆ ಬಂದಿರುವ ಒಂದು ಗಮನಾರ್ಹ ಕಾದಂಬರಿ. ಇದರ ನಾಯಕನ ಚಹರೆ ಮೂಡಿಸುತ್ತಲೇ ಒಂದು ದೇಶದ ‘ಹೊರಗಿನವರ’ ಮತ್ತು ‘ಒಳಗಿನವರ’ ಪಂಕ್ತಿಭೇದದ ಸಮಸ್ಯೆ ಕಾಣಿಸಲು ಅವರು ಪ್ರಯತ್ನಿಸುತ್ತಾರೆ ಮತ್ತು ಹಾಗೆ ಮಾಡುತ್ತಲೇ ನಮ್ಮದೇ ದೇಶದ ಸಮಾನತೆಯ ಕೂಗನ್ನು ಹೊಸದೇ ಆದ ಒಂದು ನಿಟ್ಟಿನಿಂದ ಮುಖಾಮುಖಿಯಾಗುತ್ತಾರೆ. ಈ ಕಾರಣಕ್ಕೆ ಕರ್ಕಿ ಕೃಷ್ಣಮೂರ್ತಿಯವರ ಈ ಕಾದಂಬರಿ ಮುಖ್ಯವೆನಿಸುತ್ತದೆ. 

ಈ ಶತಮಾನದ ಆದಿಯಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್‌ನ ಪತನವಾದ ಬಳಿಕ ಜಾಗತಿಕ ವಲಸೆ ಕುರಿತು ಬಂದಿರುವ ಕೃತಿಗಳು ಅಸಂಖ್ಯ. ಇವತ್ತಿಗೂ ಅದು ಮುಂದುವರಿದಿದ್ದು ಪ್ರಖ್ಯಾತ ಇಸಾಬೆಲ್ಲ ಅಯ್ಯಂಡೆಯ ಇತ್ತೀಚಿನ ಕಾದಂಬರಿ ‘ಅ ಲಾಂಗ್ ಪೆಟಲ್ ಆಫ್ ದ ಸೀ’ ಕೂಡ ಜಾಗತಿಕ ಸಮರದ ಹಿನ್ನೆಲೆಯಲ್ಲಿದ್ದೂ ಇಂಥ ವಲಸೆಯ ಕುರಿತಾಗಿಯೇ ಇದೆ. ಕನ್ನಡದಲ್ಲಿ ಎಂ ಆರ್ ದತ್ತಾತ್ರಿಯವರ ‘ದ್ವೀಪವ ಬಯಸಿ’, ವಸುಧೇಂದ್ರ ಅವರ ‘ತೇಜೋತುಂಗಭದ್ರಾ’ ಬಿಟ್ಟರೆ ಜಾಗತಿಕ ವಲಸೆಯ ವಸ್ತುವನ್ನಿರಿಸಿಕೊಂಡು ಬಂದ ಕೃತಿಗಳು ಕಡಿಮೆ. ಕರ್ಕಿ ಕೃಷ್ಣಮೂರ್ತಿಯವರ ಕೃತಿ ಎರಡು ಸ್ತರದಲ್ಲಿ ಕೆಲಸ ಮಾಡುತ್ತದೆ. ಒಂದು, ಬೇರೊಂದು ದೇಶದಲ್ಲಿ ನೆಲೆಯಾದವರು ಕ್ರಮೇಣ ಅನುಭವಿಸುವ ‘ನಿಮ್ಮೊಡನಿದ್ದೂ ನಿಮ್ಮಂತಾಗದ’ ವಿದ್ಯಮಾನದ ಸುತ್ತ. ಇನ್ನೊಂದು, ಮನುಷ್ಯ ಎಲ್ಲಿ ನೆಲೆಯಾಗುತ್ತಾನೋ ಅಲ್ಲಿ, ಒಂದಲ್ಲಾ ಒಂದು ಹಂತದಲ್ಲಿ ಸಮಾನತೆಯನ್ನು ಬಯಸುತ್ತಾನೆ ಮತ್ತು ಅದು ಸುಲಭಸಾಧ್ಯ ವಸ್ತು ಅಲ್ಲ ಎನಿಸಿದಾಗ ಅದಕ್ಕಾಗಿ ಹೋರಾಡುತ್ತಾನೆ ಎನ್ನುವುದರ ಸುತ್ತ. ಇದೊಂದು ಇನ್‌ಸೈಡರ್-ಔಟ್‌ಸೈಡರ್ ಪ್ರಕ್ರಿಯೆ. 

ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು 
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು 
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ 
ಮುರಿದು ಹೋಯಿತೇ ಈಗ ಆ ಪುಟ್ಟ ಗೂಡು 
 - ದೇಶ ಕುಲಕರ್ಣಿ 

ಈ ಕವಿತೆ ಕರ್ಕಿಯವರ ಕಾದಂಬರಿಯ ಎಪಿಗ್ರಾಫ್. ಇಡೀ ಕಾದಂಬರಿಯನ್ನು ಓದಿದ ಬಳಿಕವೂ ಮನಸ್ಸಿನಲ್ಲಿ ಉಳಿಯುವ ಕವಿತೆಯಿದು. ಹಾಗಾಗಿ ಇದನ್ನು ಅವರು ಕೇವಲ ತೇಜಸ್ಸಿಗಾಗಿ ಬಳಸಿಲ್ಲ. ಇಡೀ ವಿಶ್ವವನ್ನೇ ತಮ್ಮ ಮನೆಯನ್ನಾಗಿಸಿಕೊಂಡು ಋತುಮಾನಕ್ಕನುಗುಣವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ, ತಮ್ಮ ನಾಡಗೂಡಿಗೆ ಮರಳುವ ಹಕ್ಕಿಗಳು ಚುಕ್ಕಿ ಬೆಳಕಿನ ಜಾಡನ್ನೂ ಅನುಸರಿಸುತ್ತವೆ ಎನ್ನುವುದೊಂದು ಪ್ರತೀತಿ. ಹಾಗೆಯೇ ಸುವಿಶಾಲ ಕಡಲಿನಲ್ಲಿ ಚಲಿಸುವ ಹಡಗುಗಳೂ ನಕ್ಷತ್ರಗಳ ಸ್ಥಾನ ಆಧರಿಸಿ ದಿಕ್ಕು, ಯಾನದ ಮಾರ್ಗ ನಿರ್ಧರಿಸುವುದಿದೆ ಎಂದು ಕೇಳಿದ್ದೇವೆ. ಇಲ್ಲಿ ಅಂಥ ಒಂದು ಜಾಡು ತಪ್ಪಿದ ಹಕ್ಕಿಯ ಹಾಡು ಇನ್ನಿಲ್ಲವಾಗುವ ಸನ್ನಿವೇಶವಿದೆ. ಅದಕ್ಕೆ ತಪ್ಪಿ ಹೋಗಿರುವುದು ಕೇವಲ ಜಾಡು ಮಾತ್ರವಲ್ಲ, ಅದರ ಗೂಡು ಕೂಡ ಎನ್ನುವುದು ದುರಂತ ಎನಿಸಿದರೂ, ನಿಜವಾದ ದುರಂತವಿರುವುದು ಅದು ಕಳೆದುಕೊಂಡ ಜಾಡು ಅಥವಾ ಗೂಡಿನಲ್ಲಲ್ಲ. ಅದು, ಅದಕ್ಕೆ ಸಹಜವಾದ ಹಾಡನ್ನು ಕಳೆದುಕೊಂಡಿದ್ದರಲ್ಲಿ. 

ಕರ್ಕಿಯವರು ಇಲ್ಲಿ ವಲಸೆ ಹಕ್ಕಿಗೆ ಸಂವಾದಿಯಾಗಿ ವಿಶ್ವಮುಖಿಯಾದ ಮನುಷ್ಯನನ್ನು ಇಟ್ಟು ಅವನು ಕಳೆದುಕೊಳ್ಳುತ್ತ ಸಾಗಿದ ಜಾಡು, ಗೂಡು, ಪಾಡು, ಮತ್ತು ಮುಖ್ಯವಾಗಿ ಹಾಡುಗಳ ಕತೆಯನ್ನು ಹೇಳುತ್ತಿದ್ದಾರೆ. ಇದು ನಿರಂಜನನೊಬ್ಬನ ಕತೆಯಾಗದೆ, ಅವನ ಸಂಪರ್ಕಕ್ಕೆ ಬರುವ, ಕೊನೆಗೂ ಒಂದಲ್ಲಾ ಒಂದರ್ಥದಲ್ಲಿ OUTSIDER ಗಳೇ ಆಗಿ ಉಳಿದಿರುವ ಬಹಳಷ್ಟು ಮಂದಿಯ ಕತೆ ಕೂಡ. ಇದು ಯಾವುದೇ ಒಂದು ದೇಶಕ್ಕೆ ಸೀಮಿತವಾದ, ಯಾವುದೇ ಒಂದು ದೇಶಕ್ಕೆ ಹೊರಗಿನಿಂದ ಬಂದ ಮಂದಿಗೆ ಸೀಮಿತವಾದ ಅಥವಾ ಈ ದೇಶದಿಂದ ಹೊರಗೆ ನೆಲೆಯರಸಿ ಹೋದ ಮಂದಿಗೆ ಸೀಮಿತವಾದ ಕತೆಯಲ್ಲ. ನಾವು ಇದ್ದಲ್ಲೇ ನಮಗೆ ಹೊರಗಿನವರಾಗಿ ಬಿಟ್ಟಂತಿರುವ ದೇಶ-ಕಾಲದ ಕತೆ. 

ತುಂಬ ಹಿಂದೆ ಜೋಸೆಫ್ ಓನೀಲ್ ಅವರ ‘ನೆದರ್ಲ್ಯಾಂಡ್’ ಎನ್ನುವ ಕಾದಂಬರಿಯೊಂದು ಬಂದಿತ್ತು. ಕರ್ಕಿ ಕೃಷ್ಣಮೂರ್ತಿಯವರ ಕಾದಂಬರಿಯ ನಾಯಕನ ದಾಂಪತ್ಯ, ಅವನ ಟ್ಯಾಕ್ಸಿ ಡ್ರೈವರ್ ದೊರೈ ಮತ್ತು ಫ್ರೀ ರೈಡ್‌ಗೆ ಬಳಸಿಕೊಳ್ಳುವ ಜೋಮೋ ಎಲ್ಲರೂ ಆ ಕಾದಂಬರಿಯನ್ನು ನೆನಪಿಸಿದರೆ ಜೋಮೋನ ಪಾತ್ರವಂತೂ ಅಲ್ಲಿನ ಚಕ್ ರಾಮ್‌ಕಿಸೂನ್ ಎಂಬ ವಿಶಿಷ್ಟ ಪಾತ್ರವನ್ನು ನೆನಪಿಸುತ್ತದೆ. ಎರಡೂ ಕಾದಂಬರಿಗಳ ಕೇಂದ್ರ ವಸ್ತುವಿನಲ್ಲೂ ಸಾಮ್ಯತೆಯಿದೆ. ಆದರೆ ಕರ್ಕಿ ಕೃಷ್ಣಮೂರ್ತಿಯವರ ಕಾದಂಬರಿ ಪ್ರಯತ್ನಿಸಿದ ಒಂದು ಹೊಸ ಆಯಾಮ ಮತ್ತು ಅದನ್ನು ಪ್ರಯತ್ನಿಸಿದ ಹೊಸದೇ ಆದ ರೀತಿ ಎರಡೂ ಆ ವಸ್ತುವಿನ ಹೊಸ ಸಾಧ್ಯತೆಯೊಂದನ್ನು ತೆರೆದಿಟ್ಟಿದೆ. 

ನಾವು ಕೆಲವು ವ್ಯಕ್ತಿಗಳನ್ನು ಡಿಫೈನ್ ಮಾಡಬಲ್ಲ ಕೆಲವು ವಿಶಿಷ್ಟ ಪದಗಳನ್ನು ಬಳಸುವ ರೂಢಿಯಿದೆ. ಅವನು ಮಹಾ ಕಂತ್ರಿ, ಪಿಸುಣ ಹೀಗೆ. ಈ ಶಬ್ದಗಳ ನಿಖರವಾದ ಅರ್ಥವೇನೆಂದು ಬಳಸುವವರಿಗಾಗಲಿ, ಕೇಳಿಸಿಕೊಳ್ಳುವವರಿಗಾಗಲಿ ಗೊತ್ತಿರದಿದ್ದರೂ ಏನೋ ಒಂದು ಹೊಳಹು ಸಿಕ್ಕಿದಂತೆ ಓ! ಹೌದಾ ಮಾರಾಯ ಎನ್ನುವುದು ಕ್ರಮ. ಕೊಂಕಣಿಯಲ್ಲಂತೂ ಇಂಥ ತುಂಬ ಶಬ್ದಗಳಿವೆ. ಜಳ್ಕೆಪಿಶ್ಶೆ ಎನ್ನುವುದು ಮಂಗಳೂರಿಗೆ ಬಂದ ಹೊಸದರಲ್ಲಿ ನಾನು ಕೇಳಿದ ಅಂಥ ಒಂದು ಶಬ್ದ. ತುಳುವಿನಲ್ಲಿ ಕುರೆ ಎನ್ನುವ ಶಬ್ದವಿದೆ. ಉಡುಪಿ-ಕುಂದಾಪುರ ಕಡೆ ಕುಸ್ಡೊ ಎನ್ನುವ ಒಂದು ಶಬ್ದವಿದೆ. ಮೊನ್ನೆ ಒಬ್ಬರು ವ್ಯಾಟ್ಸಪ್‌ನಲ್ಲಿ ಹೀ ಈಸ್ ಕುಸ್ಡೊ ಎಂದು ಮೆಸೇಜ್ ಕಳಿಸಿದರು. ತುಂಬ ಸಮಯವಾಗಿತ್ತು ಅದನ್ನು ಬಳಸದೆ, ಬೇರೆಯವರು ಬಳಸಿದ್ದನ್ನು ಕೇಳದೆ. ಹಾಗಾಗಿ ಒಮ್ಮೆಗೇ ಕುಶಿಗೊಂಡು, ಅರೆರೆ ಈ ಕುಸ್ಡೊ ಎಂದರೆ ಏನೆಲ್ಲ ಅರ್ಥವಿದೆ ಎಂದೇ ಯೋಚಿಸತೊಡಗಿದೆ. 

ಕುಸ್ಡೊ ಎಂದರೆ, ತನಗೆ ಬೇಡದಿದ್ದರೂ ಒಂದು ವಸ್ತು ಇನ್ನೊಬ್ಬನಿಗೆ ಸಿಗಬಾರದು ಎಂದು ಬಯಸುತ್ತಾರಲ್ಲ, ಆ ಗುಣ. ಉದಾಹರಣೆಗೆ, ಇರುವೆಗಳು ಹೊತ್ತೊಯ್ಯುತ್ತಿರುವ ಯಾವುದೋ ಸತ್ತ ನೊಣವೋ, ಹುಳವೋ ಅವುಗಳಿಗೆ ಸಿಗದ ಹಾಗೆ ಮಾಡಿ ಮಜಾ ಪಡೆಯುವುದು. ಇನ್ಯಾರಿಗೋ, ಸಾಮಾನ್ಯವಾಗಿ ತನಗಿಂತ ಆರ್ಥಿಕವಾಗಿಯೋ, ದೈಹಿಕವಾಗಿಯೋ (ಇವೆರಡು ಮಾತ್ರ ಬಹುಶಃ ಮನುಷ್ಯ ನಿರ್ಮಿತವಲ್ಲದ ಅಸಮಾನತೆ ಎಂದಿಟ್ಟುಕೊಂಡು) ಬಲಹೀನರಾದವರಿಗೆ ಒದಗಿ ಬರುವ, ಇನ್ಯಾರೋ ಮಾಡಲು ಮುಂದಾಗಿರುವ ಯಾವುದೋ ಸಹಾಯವನ್ನು ಹೇಗಾದರೂ ಮಾಡಿ ತಪ್ಪಿಸುವುದು. ತನ್ನವರಿಗೇ ತಾನು ಅನ್ಯಾಯ ಮಾಡಿ ಆ ಬಗ್ಗೆ ತಾನೇ ಹೆಮ್ಮೆ, ಖುಶಿ ಪಡುವುದು. 

ಛೇಛೇ, ಅದರ ಅರ್ಥ ಇದೆಲ್ಲ ಅಲ್ಲವೇ ಅಲ್ಲ ಎನ್ನುವವರು ಈಗ ಹುಟ್ಟಿಕೊಳ್ಳಬಹುದು. ಏಕೆಂದರೆ, ಕುಸ್ಡೊ ಎನ್ನುವುದನ್ನು ಒಬ್ಬ ಡಿಫೈನ್ ಮಾಡತೊಡಗಿದ್ದೇ ಇನ್ನೊಬ್ಬರು ಅವರದೇ ಆದ ಕ್ರಮದಲ್ಲಿ ಅದನ್ನು ರೀ-ಡಿಫೈನ್ ಮಾಡುವ ಸಾಧ್ಯತೆ ಹುಟ್ಟಿಕೊಳ್ಳುತ್ತದೆ! 

ಹಾಗೆ ಈ ಶಬ್ದಗಳೆಲ್ಲ ಕವಿತೆ ಇದ್ದ ಹಾಗೆ! ಪ್ರತಿಯೊಬ್ಬ ಓದುಗನೂ ಒಬ್ಬ ಪ್ರತ್ಯೇಕ ಅನುವಾದಕ ಮತ್ತು ಪ್ರತಿಯೊಂದು ಅನುವಾದವೂ ಒಂದೊಂದು ಸ್ವತಂತ್ರ ಕವಿತೆ! ಹೆಸರು ಮಾತ್ರ ಅದೇ, ಕುಸ್ಡೊ!!! ಆದರೆ ಇಷ್ಟೆಲ್ಲ ವಿವರಣೆಗಳೇ ಇಲ್ಲದೆ ಈ ಕುಸ್ಡೊ ಶಬ್ದ ಅದೆಲ್ಲವನ್ನೂ ಹೇಳಬಲ್ಲ ಶಕ್ತಿಯೊಂದನ್ನು ಪಡೆದಿದ್ದಾರೂ ಎಲ್ಲಿಂದ?! 

 **** 

ಅಮೆರಿಕಾ ಹೊಸದಾಗಿ ನಿರ್ಮಾಣಗೊಂಡಾಗ ಅಲ್ಲಿನ ಮೂಲ ನಿವಾಸಿಗಳಾದ ರೆಡ್‌ಇಂಡಿಯನ್ನರನ್ನು ಹೇಳ ಹೆಸರಿಲ್ಲದಂತೆ ನಿರ್ನಾಮ ಮಾಡಲಾಯಿತು ಎನ್ನುವುದು ನಮಗೆಲ್ಲ ಗೊತ್ತು. (ಆಸಕ್ತರು ಈ ಮೂಲನಿವಾಸಿಗಳ ಜಾನಪದ ಕತೆಗಳೆಲ್ಲ ಇರುವ ಎಚ್ ವೈ ರಾಜಗೋಪಾಲ್ ಅವರ ಸೃಷ್ಟಿ - ನಾಲ್ಕು ಜಗತ್ತುಗಳು ಎಂಬ ಪುಸ್ತಕ ಗಮನಿಸಬಹುದು. ಇದನ್ನು ಅಭಿನವ ಪ್ರಕಟಿಸಿದೆ.) ಆ ಬಳಿಕ ಅಲ್ಲಿದ್ದ ಗುಲಾಮಿ ಪದ್ಧತಿಯನ್ನು ನಿಷೇಧಿಸಬೇಕಾದರೆ ಅಬ್ರಹಾಂ ಲಿಂಕನ್ ಬರಬೇಕಾಯಿತು. ಹಿಟ್ಲರ್ ಇಡೀ ಮಾನವ ಜನಾಂಗದಲ್ಲಿ ಆರ್ಯನ್ನರು ಮಾತ್ರ ಬದುಕಲು ಅರ್ಹರು ಮತ್ತು ಯಹೂದಿಗಳೇ ಮನುಕುಲಕ್ಕೆ ಕಳಂಕ ಇದ್ದಂತೆ, ಅವರನ್ನು ನಿರ್ನಾಮ ಮಾಡುವುದೊಂದೇ ಮನುಕುಲವನ್ನು ಉಳಿಸಲು ಇರುವ ಮಾರ್ಗ ಎಂದು ಸಾರಿದ್ದನ್ನು ಅಕ್ಷರಶಃ ನಂಬಿ ಅವನನ್ನು ಬೆಂಬಲಿಸಿದವರು ಸಾಕಷ್ಟು ಮಂದಿ ಇದ್ದರು ಎನ್ನುವುದನ್ನು ಮರೆಯಲು ಸಾಧ್ಯವೆ? ಇಂದಿಗೂ ಅಮೆರಿಕದಲ್ಲಿ ಕರಿಯರ ಮತ್ತು ಬಿಳಿಯರ ನಡುವೆ ಶೀತಲ ಸಮರ ನಡೆದೇ ಇದೆ ಮಾತ್ರವಲ್ಲ, ಅಮೆರಿಕಕ್ಕೆ ಹೊರಗಿನಿಂದ ಬರುವವರ ಬಗ್ಗೆ ಒಂದು ಬಗೆಯ ಪ್ರತಿರೋಧ ಅಲ್ಲಿನ ಗಾಳಿಯಲ್ಲೇ ಇದೆ. ಈ ಸ್ಥಿತಿ ಇಂಗ್ಲೆಂಡಿನಲ್ಲೂ ಇದೆ. ಆಸ್ಟ್ರೇಲಿಯಾದಲ್ಲೂ ಇದೆ. ಶ್ರೀಲಂಕಾದಲ್ಲಿದೆ. ಜಗತ್ತಿನ ಇನ್ನೂ ಅನೇಕ ರಾಷ್ಟ್ರಗಳಲ್ಲಿ ‘ಹೊರಗಿನಿಂದ’ ಬರುವವರ ಬಗ್ಗೆ ಅಷ್ಟೇನೂ ಉತ್ಸಾಹ ಉಳಿದಿಲ್ಲ. ನಮ್ಮದೇ ದೇಶದಲ್ಲಿ ಬಾಂಗ್ಲಾ ದೇಶದಿಂದ ನುಸುಳುತ್ತಿದ್ದಾರೆ, ಟಿಬೆಟ್ಟಿಯನ್ನರಿಗೆ ಆಶ್ರಯ ನೀಡಬಾರದು ಇತ್ಯಾದಿ ಇತ್ಯಾದಿ ಗೊಣಗಾಟ ಇದ್ದೇ ಇದೆ. ಬೆಂಗಳೂರಿನಲ್ಲಿ ತಮಿಳರು ಹೆಚ್ಚುತ್ತಿದ್ದಾರೆ ಎನ್ನುವ ಕೂಗು ಕಾವೇರಿ ವಿವಾದದ ಹೊತ್ತಿಗೆ ಹೊತ್ತಿ ಉರಿದಿದ್ದು ನಮಗೆ ಗೊತ್ತು. 

ಧರ್ಮ, ಜಾತಿ, ಲಿಂಗ, ದೇಶ, ಭಾಷೆ, ಬಣ್ಣ, ಆಹಾರ ಮೊದಲಾದ ಸಂಗತಿಗಳ ಆಧಾರದ ಮೇಲೆ ನಾವು ಮಾನವ ಜನಾಂಗವನ್ನು ವಿಂಗಡಿಸುತ್ತ, ಒಂದಲ್ಲಾ ಒಂದು ಆಧಾರದ ಮೇಲೆ ಯಾರನ್ನಾದರೂ ಹೀಗಳೆಯುತ್ತ ಬರಬಹುದು. ಮಾನವ ಜನಾಂಗ ತನ್ನ ಇತಿಹಾಸದುದ್ದಕ್ಕೂ ಇದನ್ನು ಮಾಡುತ್ತಲೇ ಬಂದಿದೆ. 

ಕವಿ ಬಿ ಆರ್ ಲಕ್ಷ್ಮಣರಾವ್ ಅವರು ರಾಬರ್ಟ್ ಪ್ರಾಸ್ಟ್‌ನ ‘ಮೆಂಡಿಂಗ್ ವಾಲ್’ ಎನ್ನುವ ಒಂದು ಕವಿತೆಯನ್ನು ಕನ್ನಡಕ್ಕೆ ತಂದಿದ್ದಾರೆ. ಅದರಲ್ಲಿ ಇಬ್ಬರು ತಮ್ಮ ತಮ್ಮ ತೋಟದ ನಡುವೆ ನಿರ್ಮಿಸಿರುವ ಒಂದು ಗೋಡೆಯನ್ನು ದಿನವೂ ಗಮನಿಸುತ್ತಾ ವಾಕ್ ಹೋಗುವ ಒಂದು ಪ್ರಸಂಗವಿದೆ. ಆ ಗೋಡೆ ಆಗಾಗ ಅಲ್ಲಲ್ಲಿ ಬಿದ್ದು ಹೋಗುತ್ತ, ಅದರಲ್ಲಿ ಇಲಿಗಳೋ, ಮೊಲಗಳೋ ಬಿಲ ತರಿಯಲು ಪ್ರಯತ್ನಿಸಿ ನಿರ್ಮಿಸಿದ ತೂತುಗಳು ಹುಟ್ಟಿಕೊಳ್ಳುತ್ತ ಇರುತ್ತದೆ. ಇವರು ಆಚೆಯಿಂದ ಒಬ್ಬರು ಈಚೆಯಿಂದ ಒಬ್ಬರು ಕುಶಲೋಪರಿ ಮಾತನಾಡಿಕೊಳ್ಳುತ್ತ ಗೋಡೆಯನ್ನು ಕೈಲಾದ ಮಟ್ಟಿಗೆ ಸರಿಪಡಿಸುತ್ತ ಇರುತ್ತಾರೆ. ಇದೊಂದು ನಿರಂತರ ಪ್ರಕ್ರಿಯೆ. ಇವನಿಗೋ ಈ ಗೋಡೆ ಬೇಕಾದರೂ ಯಾಕೆ ಎನ್ನುವ ಭಾವ. ಆದರೆ ಅವನಲ್ಲಿ ಬಲವಾದ ಗೋಡೆಯೇ ಉತ್ತಮ ನೆರೆಹೊರೆಯ ಬಾಂಧವ್ಯಕ್ಕೆ ಕಾರಣ ಎನ್ನುವ ವಿಶ್ವಾಸ. ಎಲ್ಲೋ ಒಂದು ಹಂತದಲ್ಲಿ ಇಬ್ಬರಲ್ಲಿ ಯಾರು ಒಳಗಿದ್ದಾರೆ, ಯಾರು ನಿಜಕ್ಕೂ ಹೊರಗಿದ್ದಾರೆ ಎನ್ನುವ ಪ್ರಶ್ನೆ ಏಳುತ್ತದೆ! 

ಹೊಟ್ಟೆಪಾಡಿಗಾಗಿ ಇಡೀ ಜಗತ್ತಿನಾದ್ಯಂತ ಲಭ್ಯವಿರುವ ಯಾವತ್ತೂ ಅವಕಾಶಗಳನ್ನು ಬಳಸಿಕೊಳ್ಳಲು ಅವನು ತನ್ನ ಬಾಹುಗಳನ್ನು ಚಾಚಿ ವಾಮನ ತ್ರಿವಿಕ್ರಮನಾಗಲು ಹವಣಿಸಿದ್ದು ಇಂದು ನಿನ್ನೆಯ ಬೆಳವಣಿಗೆಯೇನಲ್ಲ. ಸಹಜವಾಗಿಯೇ ಇದಕ್ಕೆ ಹತ್ತು ಹಲವು ಮುಖಗಳಿರುವುದು ಸಾಧ್ಯ. ಪ್ರತಿಭೆ, ಅವಕಾಶ, ಯಶಸ್ಸು ಮತ್ತು ಮನೋಧರ್ಮ ಈ ನಾಲ್ಕರ ನಡುವೆ ಒಂದು ಅನುಪಾತವಿದೆಯೆ? ಇದೆ ಎಂದು ನಂಬುವುದಾದರೆ ನಾವು ಜಗತ್ತಿನ ಅಸಮಾನತೆಯ ಪ್ರಶ್ನೆಯನ್ನು ಎದುರಿಸಬೇಕಾದ ನೆಲೆ ಯಾವುದು? ಹಾಗೆಯೇ, ಸಮಾನತೆಯನ್ನು ಬಯಸುವವರು ನೆಲೆಗೊಳಿಸಬೇಕೆಂದಿರುವ ಸಮಾನತೆಯ ವಾಸ್ತವವಾದಿ ಪರಿಕಲ್ಪನೆ ಏನು? ಇವರ ಪ್ರಕಾರ ಸಮಾನತೆ ಯಾವಾಗ ನೆಲೆಗೊಳ್ಳುತ್ತದೆ? 

ಸೀಮಿತ ಸಂಪನ್ಮೂಲಗಳು ಮತ್ತು ಅನಿಯಮಿತ ಬೇಡಿಕೆ ಈ ಅಸಮಾನತೆಗೆ ಕಾರಣವೆ? ಅದೊಂದೇ ಕಾರಣವೆ? ಮನುಷ್ಯನ ಕುಸುಡುತನ ಎಷ್ಟರಮಟ್ಟಿಗೆ ಇದಕ್ಕೆ ಕಾರಣ? ಕಾರ್ಯಕಾರಣ ಸಂಬಂಧಗಳೇನೇ ಇರಲಿ, ನಮ್ಮನ್ನು ನಾವು ಯಾವುದೋ ಒಂದು ಆಧಾರದ ಅನುಸಾರ ವಿಂಗಡಿಸಿಕೊಂಡು ಮತ್ತು ಹಾಗೆ ಮಾಡುವಾಗಲೇ ಅದೇ ಆಧಾರದ ಅನುಸಾರ ತಮ್ಮದೇ ಒಂದು ಗುಂಪು ನಿರ್ಮಿಸಿಕೊಂಡು ಸುರು ಮಾಡುವ ಕ್ಯಾತೆ ಹೇಗಿರುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮನುಷ್ಯ ಕಳೆದುಕೊಂಡ ಚುಕ್ಕಿ ಬೆಳಕಿನ ಜಾಡೂ, ಅವನ ಅಂತರಾತ್ಮದ ಬೆಳಕಿನ ಹಾಡೂ ತನ್ನ ಅಸ್ಪಷ್ಟ ಹೊಳಹುಗಳನ್ನು ಕೊಡುವುದು ಸಾಧ್ಯವಿದೆ. ಆದರೆ ಸಾಕಷ್ಟು ಕುಸುಡುತನ ಮೈಗೂಡಿಸಿಕೊಂಡಿರುವ ಆಧುನಿಕ ಮನುಷ್ಯನಿಗೆ ಅಷ್ಟು ವ್ಯವಧಾನವಿದೆಯೆ? 

ಕಾದಂಬರಿಯ ಮೊದಲ ಸ್ತರದಲ್ಲಿ ಕರ್ಕಿ ಕೃಷ್ಣಮೂರ್ತಿಯವರು ಕಟ್ಟುವ ನಾಯಕನ ಪಾತ್ರವೇನಿದೆ ಅದರ ವೈಶಿಷ್ಟ್ಯವೇ ಪ್ರಧಾನವಾಗಿದೆ. ಈ ನಿರಂಜನ ಒಬ್ಬ ವಿವಾಹಿತ ಮಹತ್ವಾಕಾಂಕ್ಷಿ. ಅವನು ಕಷ್ಟಪಟ್ಟು ಕಲಿತವನಲ್ಲ, ಆದರೆ ಅವನಲ್ಲಿ ಕೌಶಲವಿದೆ, ಪ್ರತಿಭೆ ಎನ್ನಲಾಗದ ಕಾರಕೂನಿ ಜಾಣತನ ಇದೆ. ವಿಪರೀತ ಸೆಲ್ಫ್ ಸೆಂಟರ್ಡ್ ತರ ಕಾಣಿಸುವ ಅವನಲ್ಲಿ ಸಹಜೀವಿಯ ನೋವು, ಸಂಕಟದ ಬಗ್ಗೆ ನಾಗರಿಕ ನಿರ್ಲಿಪ್ತಿಯಿದೆ. ಅವನಲ್ಲೂ ಎದುರಾಗುವ ಅವಕಾಶಗಳನ್ನು ತತ್‌ಕ್ಷಣ ಗುರುತಿಸಬಲ್ಲ ಮತ್ತು ಅದನ್ನು ಪೂರ್ತಿಯಾಗಿ ಬಳಸಿಕೊಂಡು ಬೆಳೆಯಲು ಬೇಕಾದ ತಂತ್ರ ಹೆಣೆಯಬಲ್ಲ ಚಿಂತಕನೊಬ್ಬನಿದ್ದಾನೆ. ತನ್ನ ಸ್ವಂತದ ಖುಶಿ, ಮನರಂಜನೆ ಮತ್ತು ತೃಪ್ತಿಗೆ ತನಗೆ ಬೇಕಾದ ನೆಲೆಯಿಂದ ಸಹಜೀವಿಯ ನೋವು, ಅವಮಾನ, ಸೋಲುಗಳನ್ನು ಕೂಡ ಬಳಸಿಕೊಳ್ಳಬಲ್ಲ, ಸ್ವತಃ ಅದೇ ಆಗಿರುವವರಿಗೂ ಮೇಲ್ನೋಟಕ್ಕೆ ಸ್ಯಾಡಿಸ್ಟ್ ಅನಿಸಬಹುದಾದ, ಸಹಜಸಿದ್ಧ ಆಧುನಿಕ ಮನೋಧರ್ಮವಿದೆ. ದಿನನಿತ್ಯ ಮಾಧ್ಯಮಗಳಲ್ಲಿ ದುರಂತಗಳನ್ನು, ಸಾವು ನೋವನ್ನು, ದುರ್ಘಟನೆಗಳನ್ನು ನಿರ್ಲಿಪ್ತಿಯಿಂದಲೂ, ಅಷ್ಟಿಷ್ಟು ಮನರಂಜಕ ನೆಲೆಯಿಂದಲೂ ಗಮನಿಸಿಕೊಳ್ಳುವ, ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚಿಸಲು ಯಾವುದು ಹೆಚ್ಚು ಯೋಗ್ಯ ಎಂಬುದರಾಚೆ ತಲೆಕೆಡಿಸಿಕೊಳ್ಳದ ಯಾರೂ ಈ ನಾಯಕನನ್ನು ಕೀಳಾಗಿ ಕಾಣಬೇಕಾದ್ದಿಲ್ಲ. ಅವನೊಳಗೊಬ್ಬ ದೇಶ, ಭಾಷೆ, ಬಣ್ಣ, ಧರ್ಮ ಮುಂತಾದುವುಗಳನ್ನು ಜಾಣತನದಿಂದ ಬಳಸಿಕೊಳ್ಳಬಲ್ಲ ಅಪ್‌ಟುಡೇಟ್ ದೇಶಪ್ರೇಮಿಯಿದ್ದಾನೆ. ಇವನಿಗೆ ವಿದೇಶೀ ನೌಕರಿ ಹಿಡಿದು, ವಿದೇಶದಲ್ಲಿ ಸೆಟ್ಲ್ ಆಗಿ ಹೈಕ್ಲಾಸ್ ಎನ್ನುತ್ತೇವಲ್ಲ, ಆ ತರ ಬದುಕಬೇಕೆಂಬ ಕನಸಿದೆ. ಇಂಥ ಒಬ್ಬ ನಾಯಕ, ನಿರಂಜನ ಈ ಕಾದಂಬರಿಯ ಕೇಂದ್ರ ಪಾತ್ರ. ಇದು ಒಂದು ವ್ಯವಸ್ಥೆಯ ಬಳುವಳಿ ಎನ್ನುವುದನ್ನು ಮರೆಯದೇ ಸ್ವೀಕರಿಸುವುದು ಉಚಿತ. 

ಇಂಥ ನಾಯಕನನ್ನಿಟ್ಟುಕೊಂಡು ಹೊರಟ ಕಾದಂಬರಿಯ ಕಾರ್ಯಕ್ಷೇತ್ರ ಮಲೇಶ್ಯಾ. ಇವನು ವಾಸ್ತವ್ಯ ಹೂಡುವ ಮನೆಯ ಮಾಲಕ ಕಣ್ಣದಾಸನ್, ಅವನ ಪತ್ನಿ ರೇವತಿ, ಅವರ ಬದುಕಿನ ಒಂದು ಪುಟ್ಟ ಹಿನ್ನೋಟ, ಇವನು ಓಡಾಡಲು ಬಳಸುವ ಟ್ಯಾಕ್ಸಿಯ ಡ್ರೈವರ್ ದೊರೈ, ಅವನ ಪುಟ್ಟ ಹಿನ್ನೆಲೆ, ದೊರೈಯಿಂದಾಗಿಯೇ ಪರಿಚಯವಾಗುವ ಜೋಮೋ, ಈ ಯಾವತ್ತೂ ವ್ಯಕ್ತಿಗಳೊಂದಿಗಿನ ಒಡನಾಟದಲ್ಲೇ ತೆರೆದುಕೊಳ್ಳುವ ನಿರಂಜನನ ಪಿಸುಣತನ, ಕುಸುಡುತನದ ವ್ಯಕ್ತಿತ್ವ - ಇವೆಲ್ಲ ಈ ಕಾದಂಬರಿಯನ್ನು ಸಮೃದ್ಧವಾಗಿಸುತ್ತ ಹೋಗುತ್ತವೆ. ಸ್ವತಃ ನಿರಂಜನ, ಕಣ್ಣದಾಸನ್ ಮತ್ತು ಅವನ ಪತ್ನಿ ರೇವತಿ ಮಲೇಶ್ಯಾದಲ್ಲಿ ನೆಲೆ ಕಂಡುಕೊಳ್ಳಲು ನಡೆಸುವ ತಮ್ಮದೇ ಬಗೆಯ ಹೋರಾಟದ ಕತೆ ಒಂದು ತೆರದ್ದಾದರೆ ದೊರೈ ಮತ್ತು ಜೋಮೋರಿಂದ ನಮ್ಮೆದುರು ತೆರೆದುಕೊಳ್ಳುವ ಜಗತ್ತು ಇನ್ನೊಂದೇ ತೆರದ್ದು ಮತ್ತು ಹೆಚ್ಚು ಮುಖ್ಯವಾದದ್ದು. 

ಸ್ವಾಭಾವಿಕ ವ್ಯವಸ್ಥೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಲು ಆಧುನಿಕ ಮನುಷ್ಯನ ಜೀವನಕ್ರಮದಲ್ಲಿ ಧರ್ಮ, ಜಾತಿ, ಲಿಂಗ, ದೇಶ, ಭಾಷೆ, ಬಣ್ಣ, ಆಹಾರ ಮುಂತಾಗಿ ಪ್ರತಿಯೊಂದೂ ಬೆಸೆಯುವ ಮತ್ತು ಒಡೆಯುವ ಕೆಲಸಗಳಿಗೆ ಬಳಕೆಯಾಗುತ್ತ ಬಂದಿವೆ. ಮೂಲತಃ ಬೆಸೆಯುವುದಕ್ಕೆಂದೇ ಹುಟ್ಟಿರಬಹುದಾದ ಈ ಯಾವತ್ತೂ ಅಂಶಗಳು ಕ್ರಮೇಣ ಒಡೆಯುವುದಕ್ಕೇ ಹೆಚ್ಚು ಹೆಚ್ಚಾಗಿ ಬಳಸಲ್ಪಡುತ್ತಿರುವುದು ಆಧುನಿಕತೆಯ ಒಂದು ಲಕ್ಷಣಗಾಗಿ ದಾಖಲಾಗಿದೆ ಎನ್ನುವುದು ಕೂಡ ಅಷ್ಟೇ ನಿಜ. ಹಾಗಾಗಿ ಅವನು ಎಲ್ಲೆಲ್ಲಿ ಹೆಜ್ಜೆಯಿರಿಸುತ್ತಾನೋ ಅಲ್ಲೆಲ್ಲ ಬಯಸುವ ಸಮಾನತೆಯ ನೆಲೆಗಳು ಯಾವುದು, ಅದು ಸಾಮುದಾಯಿಕವೆ ವೈಯಕ್ತಿಕವೆ ಎನ್ನುವುದು ಮೇಲ್ನೋಟಕ್ಕೆ ಅಸ್ಪಷ್ಟ. ಹಾಗಾಗಿ ಅವನ ಕೂಗಿನಲ್ಲಿ ಬೇಡಿಕೆ ಇದೆಯೇ, ದರ್ಪವಿದೆಯೇ ಎನ್ನುವುದು ಮುಖ್ಯವಾಗುತ್ತದೆ. 

ನನಗೆ ಸಿಗಬೇಕಾದುದು ಸಿಗುತ್ತಿಲ್ಲ ಎನ್ನುವವನ ಮಾತು ಗಮನಿಸಿ. ಏನು ಸಿಗಬೇಕಾದುದು? ಅದಕ್ಕೆ ಮಾನದಂಡವೇನು? ಕನಿಷ್ಠ ಅಗತ್ಯಗಳೆಂದೇ ಇಟ್ಟುಕೊಳ್ಳಿ. ಆಹಾರ, ಸೂರು, ಶಿಕ್ಷಣ, ವೈದ್ಯಕೀಯ ನೆರವು ಇತ್ಯಾದಿ. ಆದರೆ ಇಷ್ಟಿದ್ದರೆ ಸಾಕೆ? ಇಲ್ಲ, ಇತರರಿಗೆ ಸಿಗುತ್ತಿರುವುದು ತನಗೂ ಸಿಗಬೇಕು ಎನ್ನುವುದು, ಸಮಾನತೆಯನ್ನು ಬಯಸುವುದು ತಪ್ಪೆ? ಖಂಡಿತಾ ತಪ್ಪಲ್ಲ. ಆದರೆ ಈ ಸಮಾನತೆ ಯಾರೋ ಒಬ್ಬನಿಗೆ ಸಿಗಬೇಕಾದುದೇ ಅಥವಾ ಇಡೀ ಸಮುದಾಯಕ್ಕೆ ಸಿಗಬೇಕಾದುದೇ ಎನ್ನುವಲ್ಲಿ ಒಡಕುಗಳು, ಬಿರುಕುಗಳು ಯಾಕಿವೆ? ಅವನು ಎಷ್ಟು ಜಾಣನೆಂದರೆ, ತನಗೆ ಸಿಗದೇ ಹೋದುದನ್ನು ಪಡೆಯಲು ಸಮುದಾಯವನ್ನು ಬಳಸಿಕೊಳ್ಳುತ್ತಾನೆ ಮತ್ತು ತನ್ನ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಕೂಗತೊಡಗುತ್ತಾನೆ. ಆದರೆ ಅವನ ಅಗತ್ಯ ವೈಯಕ್ತಿಕವಷ್ಟೇ ಆಗಿರುತ್ತದೆ ಮತ್ತು ವೈಯಕ್ತಿಕ ಅಗತ್ಯ ಪೂರೈಕೆಯಾಗುತ್ತಲೇ ಸಮುದಾಯವನ್ನು, ಸಾಮುದಾಯಿಕ ಸಿದ್ಧಾಂತವನ್ನು, ಅದರ ಹಿತವನ್ನು ಕೂಡ ಮರೆಯುತ್ತಾನೆ. ಇಲ್ಲಿನ ದೊರೈ ಮತ್ತು ಜೋಮೋ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸತ್ಯ ಯಾರಿಗಾದರೂ ಹೊಳೆದು ಬಿಡುತ್ತದೆ. ಕಣ್ಣಿನ ಸಮಸ್ಯೆ ಇರುವವರಿಗೆ ಕನ್ನಡಕ ಹಂಚುವ ಸರಕಾರದ ನಿರ್ಧಾರವನ್ನು ಸಮಾನತೆಯ ನೆಲೆಯಲ್ಲಿ ಪ್ರಶ್ನಿಸಲಾಗುತ್ತದೆ. ಕೊನೆಗೆ ಸಮಾನತೆಯ ನೆಲೆಯಲ್ಲಿ ಎಲ್ಲರಿಗೂ ಕೂಲಿಂಗ್ ಗ್ಲಾಸ್ ಹಂಚಲಾಗುತ್ತದೆ ಮತ್ತು ದೊರೈ ತರದ ಎಲ್ಲರೂ ಇದರಿಂದ ತೃಪ್ತರಾಗುತ್ತಾರೆ! ಇದನ್ನು ಪ್ರಶ್ನಿಸುವ ಜೋಮೋ ಕೊಡುವವರ ಮತ್ತು ಪಡೆಯುವವರ ಇಬ್ಬರ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ. 

ಜೋಮೋ ಪಾತ್ರ ಒಂದು ತರದ ಸಾಮಾಜಿಕ ಚಳವಳಿಕಾರನದ್ದು, ಹೋರಾಟಗಾರನದ್ದು. ಕ್ರಾಂತಿಕಾರಿಯ, ಆದರ್ಶವಾದಿಯ ಲಕ್ಷಣಗಳೆಲ್ಲ ಇರುವ ಜೋಮೋಗೆ ಮಲೇಶ್ಯಾದ ತಮಿಳರ ಶಿಕ್ಷಣ, ಉದ್ಯೋಗ, ರಾಜಕೀಯ ಧ್ವನಿ ಮುಖ್ಯ. ಸಂಸಾರ, ಸ್ವಾರ್ಥ ಇಲ್ಲದವನಂತೆ ಕಾಣುವ ಅವನಿಗೆ ವೈಯಕ್ತಿಕ ಹೆಬ್ಬಯಕೆಗಳಿಲ್ಲ. ಆದರೆ ದೊರೈಗೆ ತನ್ನ ಜೀವಮಾನದಲ್ಲಿ ಒಮ್ಮೆ ಚೆನ್ನೈಯ ಟಾಕೀಸಿನಲ್ಲೇ ಕುಳಿತು ರಜನೀಕಾಂತ್ ಸಿನಿಮಾ ನೋಡಬೇಕು, ಶಬರಿಮಲೈಗೆ ಭೇಟಿಕೊಡಬೇಕು ಮತ್ತು ಮಸಿ ಕೊಡಬಲ್ಲ ಕರ್ಪೂರ ತರಬೇಕೆಂಬ ಸಣ್ಣಪುಟ್ಟ ಆಸೆಗಳೇ ಮುಖ್ಯ. ಈ ಆಸೆಗಳಿಗೆ ಸಾಮಾಜಿಕ ಮುಖವಿಲ್ಲ. ಸೂಕ್ಷ್ಮವಾಗಿ ನೋಡಿ, ದೇಶ ನಡೆಸುವ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಜೋಮೋನ ಆಶೋತ್ತರಗಳ ಈಡೇರಿಕೆ ಕಷ್ಟ. ದೊರೈಯನ್ನು ತೃಪ್ತಿಗೊಳಿಸುವುದು ಸುಲಭ. ದೊರೈಯಂಥವರ ರಜನೀಕಾಂತ್, ಒಂದು ದೇವಸ್ಥಾನದ ಆಸೆಗಳನ್ನು ಪೂರೈಸುವುದರಿಂದ ಸಮುದಾಯದ ಆಶೋತ್ತರಗಳನ್ನು ಈಡೇರಿಸಿದ್ದೇವೆ ಎನ್ನುವಂತೆ ಫೋಸ್ ಕೊಡಲು ಸಾಧ್ಯವಾದರೆ ಅದು ಅದಕ್ಕೆ ಇಷ್ಟ. ಜೋಮೋ ಬಯಸುವುದನ್ನೆಲ್ಲ ಪೂರೈಸಿದರೆ ಅದು ಅವರ ಬುಡಕ್ಕೇ ಬರುತ್ತದೆ. ಕೂಲಿಂಗ್ ಗ್ಲಾಸ್ ಹಂಚುವುದು ಇದಕ್ಕೊಂದು ರೂಪಕದಂತಿದೆ. 

ಜೋಮೋನಿಂದಲೇ ವಿವರಿಸಲ್ಪಡುವ, ಸ್ಥಳೀಯ ತಮಿಳರ ಬದುಕಿನ ಏರಿಳಿತಗಳಿಗೆ ಕಾರಣವಾಗುತ್ತಿರುವ ಮಲೇಶ್ಯಾದ ರಾಜಕೀಯ-ಧಾರ್ಮಿಕ-ಶೈಕ್ಷಣಿಕ ಮುಖಗಳು ಪೂರ್ತಿ ನಿಜವಲ್ಲ ಎನ್ನುವ ದೊರೈಗೆ ದೂರದೃಷ್ಟಿಯಾಗಲೀ, ತನಗೆ ನಿಜಕ್ಕೂ ಬೇಕಾಗಿರುವುದೇನು ಎಂಬ ಬಗ್ಗೆ ಸ್ಪಷ್ಟತೆಯಾಗಲಿ ಇಲ್ಲ. ಆದರೆ ಅವನಿಗೂ ತಮಿಳರ ಮಕ್ಕಳಿಗೆ ಸರಿಯಾದ ಸವಲತ್ತುಗಳಿರುವ ಶಾಲೆಗಳಿಲ್ಲ, ಉದ್ಯೋಗ ಸಿಗುತ್ತಿಲ್ಲ, ಸಣ್ಣಪುಟ್ಟ ತಪ್ಪುಗಳಿಗೂ ಸೆರೆವಾಸ, ಸಾವು ಖಾತ್ರಿಯಾಗಿದೆ ಎನ್ನುವ ನೋವುಗಳೆಲ್ಲ ಇವೆ. ಆದರೆ ಸಾಮುದಾಯಿಕ ನೆಲೆಯ ನಿರೀಕ್ಷೆಗಳಂತೆ ಕಾಣುವ ಈ ಯಾವತ್ತೂ ಪ್ರಶ್ನೆಗಳು ದೊರೈಗೆ ವೈಯಕ್ತಿಕ ನೆಲೆಯ ಪ್ರಶ್ನೆಗಳಷ್ಟೇ. ಅವನಿಗೆ ನೆಮ್ಮದಿಯ ಬದುಕು ಸಿಕ್ಕಿದ ಕ್ಷಣದಲ್ಲೇ ಅವನ ಧ್ವನಿ ಬದಲಾಗುತ್ತದೆ. ಅವನ ಕೂಗು, ಒತ್ತಡಗಳೆಲ್ಲವೂ ನಾಟಕೀಯ ತಿರುವು ಪಡೆಯುತ್ತದೆ. ವೈಯಕ್ತಿಕ ಅಗತ್ಯಗಳಿಗೆ ಸಮುದಾಯಕ್ಕಾದ ಅನ್ಯಾಯವನ್ನು ಮುಂದಿಟ್ಟು ತನ್ನ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅವನು ಕಲಿಯುತ್ತಾನೆ. ಸಮುದಾಯ ಕೂಡ ಯಾರಿಗೋ ಸಿಗುವ ವೈಯಕ್ತಿಕ ಲಾಭದಿಂದ ತನಗಾದ ಒಳಿತೇನು ಎನ್ನುವುದನ್ನು ಪ್ರಶ್ನಿಸಿಕೊಳ್ಳದೆ ಕುರಿಮಂದೆಯಾಗುತ್ತದೆ! ಇಲ್ಲಿನ ತಮಿಳರಲ್ಲೇ ರಾಜಕಾರಣಿಗಳು, ಅಧಿಕಾರಸ್ತರು, ಶ್ರೀಮಂತ ಉದ್ಯಮಿಗಳು ಇದ್ದಾರೆ. ದೊರೈ ತರದ ದಿನದ ಅನ್ನವನ್ನು ದಿನ ದಿನ ಸಂಪಾದಿಸಿಕೊಳ್ಳುವವರೂ ಇದ್ದಾರೆ. ಕಣ್ಣದಾಸ್, ರೇವತಿ ತರದವರೂ ಇದ್ದಾರೆ. ಮತ್ತು ಎಲ್ಲಿಗೂ ಸಲ್ಲದ ಜೋಮೋ ತರದವರೂ ಇದ್ದಾರೆ. ದೇವಸ್ಥಾನ, ಸಮುದಾಯದ ನಾಯಕನ ಪ್ರತಿಮೆ, ರಜನೀಕಾಂತನ ಕೂಲಿಂಗ್‌ಗ್ಲಾಸ್ ದೊರೈಯಂಥವರನ್ನು ಮರುಳುಮಾಡಬಲ್ಲ ಸಂಗತಿಗಳಾಗಿರುವುದರಿಂದಲೇ ಅಲ್ಲಿನ ತಮಿಳು ನಾಯಕರು, ಪ್ರಭಾವಿಗಳು, ಶ್ರೀಮಂತರು ತಮ್ಮವರ ಏಳಿಗೆಗಾಗಿ ಪ್ರಯತ್ನಿಸುವುದನ್ನು ಬಿಟ್ಟುಕೊಟ್ಟು ತಮ್ಮ ತಮ್ಮ ಬೇಳೆ ಬೇಯಿಸಿಕೊಂಡು ಹಾಯಾಗಿರುವುದು ಸಾಧ್ಯವಾಗಿದೆ. ಇದರೊಂದಿಗೆ ಕಾದಂಬರಿ ಒದಗಿಸುವ ಚೀನೀಯರ ಪರಿಪ್ರೇಕ್ಷ್ಯವನ್ನು ತಪ್ಪದೇ ಗಮನಿಸಬೇಕು. 

ಇನ್ನೀಗ ಇದನ್ನು ನಮ್ಮದೇ ದೇಶಕ್ಕೆ ಅನ್ವಯಿಸದೇ ಇರುವುದು ಹೇಗೆ! ಇಲ್ಲಿಯೂ ನಡೆಯುತ್ತಿರುವುದು ಇದೇ ಅಲ್ಲವೆ? 

ಇದೆಲ್ಲ ಇದ್ದೂ ನಾನು ಕಂಡಂತೆ ಈ ಕೃತಿಯ ಮುದ್ದೆಯಿರುವುದು ಮನುಷ್ಯನ ವಿಸ್ಮೃತಿಗೆ ಗುರಿಯಾಗಿರುವ ಮನುಕುಲದ ಹಾಡೇ. ಆದರೆ ಅದೆಷ್ಟು subtle ಆಗಿದೆಯೆಂದರೆ, ಅದನ್ನು ಗುರುತಿಸಲಾರದಷ್ಟು ಆಧುನಿಕ ಮನುಷ್ಯ ಜಾಣನೂ ಆಗಿದ್ದಾನೆ, ವಿಸ್ಮೃತಿಗೂ ಒಳಗಾಗಿದ್ದಾನೆ ಅನಿಸುತ್ತದೆ. ಅವನು ನಾಚಿಕೆ ಪಡಬೇಕಾದ ಸಂಗತಿಗಳಿಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವುದನ್ನು ಕಾಣುತ್ತ ಈ ಮಾತನ್ನಾಡದೆ ವಿಧಿಯಿಲ್ಲ. ಹಾಗಾಗಿ ‘ಚುಕ್ಕಿ ಬೆಳಕಿನ ಜಾಡು’ ಅವನಿಗೆ ಕನ್ನಡಿಯಾಗುವುದೋ, ಕಿಟಕಿಯಾಗುವುದೋ ಎಂಬ ಬಗ್ಗೆ ಭರವಸೆ ಇಟ್ಟುಕೊಳ್ಳಲಾಗದಿದ್ದರೂ ಕರ್ಕಿ ಕೃಷ್ಣಮೂರ್ತಿಯವರ ಪ್ರಯತ್ನವಂತೂ ಮೆಚ್ಚುಗೆ ಮೂಡಿಸುತ್ತದೆ, ಇಷ್ಟವಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ