Wednesday, September 16, 2020

ಆಚಾರ ಹೇಳುವುದಕ್ಕೆ - ಬದನೇಕಾಯಿ ತಿನ್ನುವುದಕ್ಕೆ

ಮನುಷ್ಯ ಮೊದಲಿಗೆ ಪ್ರಕೃತಿಯನ್ನು, ಪಂಚಭೂತಗಳನ್ನು ಪೂಜಿಸತೊಡಗಿದವನು ಕ್ರಮೇಣ ದೇವರನ್ನು ಸೃಷ್ಟಿಸಿಕೊಂಡ. ಮನುಷ್ಯ ಸೃಷ್ಟಿಸಿಕೊಂಡ ದೇವರು ಮನುಷ್ಯಸೃಷ್ಟಿಯ ಇತಿಮಿತಿಗಳನ್ನು ಮೀರಲು ಸಾಧ್ಯವಿರಲಿಲ್ಲ. ಹಾಗಾಗಿ ಎರಡು ಕೈಗಳ ಬದಲಿಗೆ ನಾಲ್ಕು- ಎಂಟು - ಹದಿನಾರು ಕೈಗಳನ್ನು ಸೃಷ್ಟಿಸಿದರೂ ಅವು ಮನುಷ್ಯನಿಗೂ ಇದ್ದ ಎರಡು ಕೈಗಳೇ. ಅಕಸ್ಮಾತ್ ತನಗೇ ಎರಡರ ಬದಲಿಗೆ ನಾಲ್ಕು ಕೈಗಳು ಮೂಡಿದರೆ ಸುಧಾರಿಸುವುದು ಹೇಗೆಂಬುದು ಮನುಷ್ಯನಿಗಿನ್ನೂ ಗೊತ್ತಿಲ್ಲ. ಶಿಶುಪಾಲನಿಗಾದಂತೆ ಅವು ತಾವಾಗೇ ಬಿದ್ದು ಹೋದರೆ ಸಾಕೆಂದು ನಾವೇ ಸೃಷ್ಟಿಸಿದ ಆ ದೇವರನ್ನೇ ಬೇಡಿಕೊಳ್ಳಬೇಕೇನೋ! 

ವಿಷ್ಣುವಿನ ದಶಾವತಾರದಲ್ಲಿ ಜೀವವಿಕಾಸದ ಹಂತಗಳನ್ನು ಗುರುತಿಸುವವರಿದ್ದಾರೆ. ಮೊದಲು ಬರೀ ನೀರಿನಲ್ಲಿರಬಲ್ಲ ಮತ್ಸ್ಯ, ಬಳಿಕ ನೀರಲ್ಲೂ ನೆಲದ ಮೇಲೂ ಇರಬಲ್ಲ ಕೂರ್ಮ, ಬಳಿಕ ಸಸ್ತನಿ, ಬಳಿಕ ಅರ್ಧ ಮನುಷ್ಯ ಅರ್ಧ ಪ್ರಾಣಿ, ಬಳಿಕ ರಾಮನಂಥವ, ಕೊನೆಗೆ ಪರಿಪೂರ್ಣನಾದಂಥ ಕೃಷ್ಣ ಅಂತೆಲ್ಲ ಹೇಳುವವರಿದ್ದಾರೆ. ಪ್ರಾಣಿಯ ತಲೆ, ಮನುಷ್ಯ ದೇಹ ಮಾಡಿದರೂ ಅದಕ್ಕೆ ಮನುಷ್ಯ ಸೃಷ್ಟಿಯ ಇತಿಮಿತಿಗಳಿದ್ದೇ ಇದ್ದವು. ನಂತರ ಸಂಜಯನಿಗೂ, ಅರ್ಜುನನಿಗೂ ಮಾತ್ರ ಕಂಡ, ದಿವ್ಯದೃಷ್ಟಿಯಿಲ್ಲದೆ ಯಾರಿಗೂ ಕಾಣಲಾಗದ ವಿಶ್ವರೂಪ! ಅದಕ್ಕೂ ಅವೇ ಇತಿಮಿತಿಗಳು! ಕಾರಂತರು ‘ಮೂಕಜ್ಜಿಯ ಕನಸು’ಗಳಲ್ಲಿ ದೇವ-ದೇವಿಯರ ರೂಪಾಂತರಗಳ ಬಗ್ಗೆಯೂ ವಿವರಿಸುತ್ತಾರೆ. ಎ ಎನ್ ಮೂರ್ತಿರಾಯರು ತಮಗೆ ಈಗ ಇರುವಂಥ ‘ದೇವರು’ ಬೇಡ, ಅವನು ಇರುವುದೇ ಆದರೆ ಜಗತ್ತಲ್ಲಿ ಎಲ್ಲವೂ ಈಗ ಇರುವಂತೆ ಇರಲು ಸಾಧ್ಯವಿರಲಿಲ್ಲ; ಹಾಗಾಗಿ ಅವನು ಇರುವುದನ್ನು ಒಪ್ಪಲಾರೆ ಎಂದರು. ಜೋಗಿಯವರು ‘ದೇವರ ಹುಚ್ಚಿ’ನ ಬಗ್ಗೆ ಬರೆದಿದ್ದಾರೆ. ನಾವು ಬಯಸಿದ್ದು ನಡೆದಾಗ ಅವನು ಇರುವಂತೆಯೂ, ಬಯಸಿ ಬೇಡಿದ್ದರೂ ನಡೆಯದೇ ಹೋದಾಗ ಅವನಿರುವುದೇ ಸುಳ್ಳು ಎಂತಲೂ ಅನಿಸುವುದು ಸಹಜವೇ. ಆದರೆ ಮಹಾ ಪುಣ್ಯಕ್ಷೇತ್ರಗಳ ಮೂಲಮೂರ್ತಿಯನ್ನು ಪೂಜಿಸುವ ಅರ್ಚಕರು ವರ್ತಿಸುವುದನ್ನು ಕಂಡಾಗ, ಕೆಲವು ಸಾಧು ಸಂತರ ನಡತೆ ಗಮನಿಸಿದಾಗ ಅವರಿಗೆಲ್ಲ ದೇವರಾಣೆ ದೇವರಿಲ್ಲ ಎನ್ನುವ ಸತ್ಯ ಸಾಕ್ಷಾತ್ಕಾರವಾಗಿದೆ ಎಂಬ ಬಗ್ಗೆ ನಮಗೆ ಬಲವಾದ ನಂಬುಗೆ ಮೂಡುವುದು ಸತ್ಯ. 

ಕಾರ್ನಾಡರ ‘ಅಗ್ನಿ ಮತ್ತು ಮಳೆ’ಯ ಯವಕ್ರೀತ ಇಂದ್ರನ ಬಳಿ ಸಮ್ಯಕ್ ಜ್ಞಾನ ಕೇಳಲು ಹೋಗಿ ತಪಸ್ಸಿಗೆ ನಿಂತು, ಸೊಳ್ಳೆ, ಚಿಗಟಗಳಿಂದ ಕಚ್ಚಿಸಿಕೊಂಡು ಹೈರಾಣಾದಾಗಲೂ, ಇಂದ್ರ ಪ್ರತ್ಯಕ್ಷನಾಗಿ ಮರಳಿದ ಮೇಲೆ, ಮೂರ್ಛೆ ತಿಳಿದು ಎದ್ದಾಗ ಅವನ ಕಣ್ಣುಗಳ ಮುಂದೆ ಇದ್ದಿದ್ದು ಎರಡು ಮೊಲೆಗಳು ಎಂದು ವಿಶಾಖ ಅವನನ್ನು ಹಂಗಿಸುತ್ತಾಳಲ್ಲವೆ! ಮನುಷ್ಯನ ಸ್ಥಿತಿ ಬಹುಶಃ ಹುತ್ತಗಟ್ಟಿದರೂ ಅಷ್ಟೇ! 

ದೇವರನ್ನು ಸೃಷ್ಟಿಸಿದ ಮನುಷ್ಯನಿಗೆ ದೇವರು ಒಂದು ಆದರ್ಶ. ಅವನು ತನ್ನ ಚಿತ್ತದಲ್ಲೇ ಪುರುಷೋತ್ತಮನ ರೂಪುರೇಷೆಗಳನ್ನು ಕೆತ್ತಿ ತಾನು ಅವನಂತಾಗಲು ಹೊರಡುತ್ತಾನೆ, ಹುತ್ತಗಟ್ಟಲು ಕೂಡ ಸಿದ್ಧನಾಗುತ್ತಾನೆ. ಆದರೆ ಮನುಷ್ಯ ಹುತ್ತಗಟ್ಟಲು ಹುಟ್ಟಿದವನಲ್ಲ. ಅವನು ಎಲ್ಲ ತರುಲತೆ ನದಿನದ ಪ್ರಾಣಿಪಕ್ಷಿಗಳಂತೆ ಈ ಸೃಷ್ಟಿಯ ಒಂದು ಘಟಕವಾಗಿ ಬದುಕಲು ಹುಟ್ಟಿದ್ದಾನೆ. ನಾನು ಯಾರು, ಯಾಕೆ ಹುಟ್ಟಿದೆ, ಈ ಜೀವನದ ಉದ್ದೇಶವೇನು, ಸಾವು ಎಂದರೇನು, ಸತ್ತ ಮೇಲೆ ಏನಾಗುತ್ತೇನೆ ಎಂದೆಲ್ಲ ಉತ್ತರವಿಲ್ಲದ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ನಮಗೆ ಬದುಕು ಸಿಕ್ಕಿದೆ, ಅದನ್ನು ಚೆನ್ನಾಗಿ ನಾಲ್ಕು ಜನಕ್ಕೆ ಉಪಯೋಗವಾಗುವ ಹಾಗೆ ಬದುಕುವುದು ಮುಖ್ಯ ಎಂದ ಕಾರಂತರದು ಒಪ್ಪತಕ್ಕ ಮಾತೇ. 

ಇಲ್ಲೊಂದು ಕವಿತೆಯಿದೆ. ಅದು ಮನುಷ್ಯ ತಾನು ತಾನೇ ಸೃಷ್ಟಿಸಿದ ದೇವರಾಗಲು ಬಯಸುವ ಮತ್ತು ತಾನು ಸೃಷ್ಟಿಸಿದ ದೇವರನ್ನು ಮನುಷ್ಯನನ್ನಾಗಿಸಿ ತನಗೊಂದು ಮಾನದಂಡವಾಗಿಸಿಕೊಳ್ಳುವ ತರಾವರಿ ಪ್ರಯತ್ನಗಳನ್ನೆಲ್ಲ ಕುರಿತು ಹೇಳಹೊರಟಂತಿದೆ. ಹೊರಟಂತಿದೆ ಏಕೆಂದರೆ ಅದು ಕವಿತೆ. ಕವಿತೆ ಯಾವತ್ತೂ ಅಷ್ಟಿಷ್ಟು ಅವಿತೇ ಕೈಗೆ ಹತ್ತಬೇಕು. ಅದು ದೇವರಂತೆ, ಪೂರ್ತಿ ಕೈಗೆ ಹತ್ತಬಾರದು, ಚಿತ್ತ ಹುತ್ತಗಟ್ಟಿಸಬೇಕು. ಅದನ್ನೂ ಇವರದೇ ಇನ್ನೊಂದು ಕವಿತೆ ಹೇಳುತ್ತದೆ ಕೂಡ. ಈ ಕವಿತೆ ಹುಟ್ಟಿಸುವ ವಿಚಾರ ಲಹರಿಗೆ ಅಂತ್ಯವಿಲ್ಲ. ಆದರೆ ಅಂಥ ಉದ್ದೇಶವೇ ತನಗಿಲ್ಲ ಎಂಬಷ್ಟು ತಣ್ಣಗಿದೆ ಇದು. ಈ ಕವಿತೆ ಇರುವ ಸಂಕಲನದಲ್ಲೇ ಇವರ ಇನ್ನೊಂದು ಕವಿತೆಯಿದೆ, ಕಪ್ಪು ದೆಹಲಿ ಮತ್ತು ಬಿಳೀ ದೆಹಲಿಯ ಬಗ್ಗೆ. ಅದೂ ಈ ಕವಿತೆಯಷ್ಟೇ ಅರ್ಥಗರ್ಭಿತ, ಗಹನ ಮತ್ತು ವಿಸ್ತಾರ ವ್ಯಾಪ್ತಿಯದ್ದು. ಎರಡನ್ನೂ ಓದಿ. ಮನುಷ್ಯನ ದೇಹ ಮತ್ತು ಮನಸ್ಸು ಅವನ ಮಾತು ಮತ್ತು ಮಾತಿನ ಅರ್ಥ ಇದ್ದಂತೆ ಎಂದ, ಅಥವಾ ಗಂಡ ಹೆಂಡತಿ ಕೂಡಾ ಮಾತು ಮತ್ತು ಅದರ ಅರ್ಥ ಇದ್ದ ಹಾಗೆ ಎಂದ ಈ ರಸಿಕ ಕವಿ ಸುಬ್ರಾಯ ಚೊಕ್ಕಾಡಿ. 

 ದೇವ - ಮಾನವ 

ದೇವರನ್ನು ದೇವರೆಂದು ಕರೆಯದೆ 
ಮನುಷ್ಯನೆಂದು ಕರೆಯಲಾದೀತೇ? 

ಆದರೆ ದೇವರಿಗೋ ಮನುಷ್ಯನಾಗುವ ಆಸೆ 
ಹಾಗೆಂದೇ ಆತ 
ಮನುಷ್ಯನಾಗಿ ಹುಟ್ಟಿ ಬಂದಿದ್ದಾನೆ ಅನೇಕ ಸಲ 
ಬದುಕಲು ಯತ್ನಿಸಿದ್ದಾನೆ 
ನಮ್ಮ ನಿಮ್ಮಂಥ ಮನುಷ್ಯನಂತೆಯೇ: 
ಅದೇ ರಾಗ-ದ್ವೇಷಗಳು, ತಂತ್ರ-ಕುತಂತ್ರಗಳ 
ಹೆಣ್ಣು -ಹೊನ್ನು -ಮಣ್ಣುಗಳ ಬಯಕೆಯ ಬಾಳು ಬಾಳುತ್ತಾ 
ಹುಟ್ಟು ಸಾವುಗಳ ಚಕ್ರದಲಿ ಸಿಲುಕಿ ಚಲಿಸುತ್ತಾ 
ಮರೆಯಾಗಿದ್ದಾನೆ. ಆದರೂ ಅವನನ್ನು 
ಮನುಷ್ಯನೆಂದು ಕರೆಯಲಾದೀತೇ? 

 ಮನುಷ್ಯನನ್ನು ಮನುಷ್ಯನೆಂದು ಕರೆಯದೆ 
ದೇವರೆಂದು ಕರೆಯಲಾದೀತೇ? 

ಮನುಷ್ಯನಿಗೋ ದೇವರಾಗುವ ಆಸೆ 
ವ್ರತ, ಪೂಜೆ, ಧ್ಯಾನ, ತಪಸ್ಸಲಿ ತೊಡಗಿ 
ಕಾವಿಯ ತೊಟ್ಟು, ಕೆಲವೊಮ್ಮೆ ದಿಗಂಬರನೂ ಆಗಿ 
ಹೆಣ್ಣು ಹೊನ್ನು ಮಣ್ಣುಗಳ ಮೋಹ ತ್ಯಜಿಸಿಯೂ 
ತ್ಯಜಿಸದ ಬಾಳು ಬಾಳಿ, 
ಕೆಲವೂಮ್ಮೆ ದೇವರೆಂದು ಗುಡಿಕಟ್ಟಿ ಪೂಜಿಸಲ್ಪಟ್ಟೂ 
ದೇವನಾಗಲು ಹೊರಟು ದೆವ್ವವಾಗಿ 
ಮರೆಯಾಗಿದ್ದಾನೆ 

 ದೇವರಂತಾಗಿಯೂ ಅವನನ್ನು 
 ದೇವರೆಂದು ಕರೆಯಲಾದೀತೇ? 

 ಏನಾಗಿಯೂ ಕೂಡಾ 
ದೇವರು ದೇವರೇ 
ಮನುಷ್ಯ ಮನುಷ್ಯನೇ.... 

 - ಸುಬ್ರಾಯ ಚೊಕ್ಕಾಡಿ
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ