Friday, November 13, 2020

ಅಶ್ವತ್ಥಾಮ ಎಂಬ ಒಂದು ಉತ್ತರವೇ ಇಲ್ಲದ ಪ್ರಶ್ನೆ

ಜೋಗಿಯವರ ಬಗ್ಗೆ ನನ್ನದೊಂದು ತಕರಾರಿದೆ. ಅವರು ತಮ್ಮ ಕಾದಂಬರಿಗಳಲ್ಲಿ ಈ ಬದುಕಿನ ಕುರಿತು, ಮನುಷ್ಯನ ಕುರಿತು, ಮನಸ್ಸಿನ ಕುರಿತು, ಮನುಷ್ಯ ಸಂಬಂಧಗಳ ಕುರಿತು, ತಾತ್ವಿಕ ಜಿಜ್ಞಾಸೆಗಳ ಕುರಿತು ಅದ್ಭುತವಾದ ಪ್ರಶ್ನೆಗಳನ್ನು ಎತ್ತುತ್ತಾರೆ, ಆದರೆ ಅವುಗಳನ್ನು ಸರಿಯಾಗಿ ಹಿಂಜಿ ದಡ ಮುಟ್ಟಿಸುವ ಮೊದಲೇ ಕೈಬಿಡುತ್ತಾರೆ ಎನ್ನುವುದು. ಅದು ನನ್ನ ಗ್ರಹಿಕೆಯಿರಬಹುದು, ನನ್ನ ಗ್ರಹಿಕೆ ತಪ್ಪಾಗಿರಬಹುದು. ಹಾಗೆಯೇ ಜೋಗಿಯವರ ಪುಸ್ತಕಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವ ಮತ್ತು ಗಂಭೀರವಾಗಿ ಪರಿಗಣಿಸಿದರೆ ಅದೇ ಒಂದು ಅತಿರೇಕ ಎಂಬಂತೆ ಕಾಣುವ ಮಂದಿಯ ಕುರಿತೂ ನನ್ನ ತಕರಾರಿದೆ. ಜೋಗಿಯವರು ಬರೆದಿದ್ದನ್ನೇ ಮಿಲನ್ ಕುಂದೇರಾ ಬರೆದಿದ್ದರೆ ನಮ್ಮವರೇ ಅಂಥ ಕೃತಿಯನ್ನು ತಲೆಯ ಮೇಲೆ ಹೊತ್ತು ಕುಣಿದಾಡುತ್ತಿದ್ದರು, ಕುಣಿದಾಡಿದ್ದಿದೆ. ಆದರೆ ಜೋಗಿ ಬರೆದಿದ್ದು ಎಂದರೆ ಅದರಲ್ಲೇನಿರಲಿಕ್ಕಿಲ್ಲ ಎಂಬ ಪೂರ್ವಾಗ್ರಹ ಕೂಡ ಹಲವರಿಗಿದೆ. ಯಾರಿಗೇನಾಗಬೇಕಿದೆ ಹೇಳಿ. ನಷ್ಟ ಯಾರಿಗೆ!

ಜೋಗಿಯವರು ಅಶ್ವತ್ಥಾಮನ್ ಕಾದಂಬರಿ ಬರೆದು ಮುಗಿಸಿದ್ದೇ ನಾನದನ್ನು ಓದಿದ್ದೆ. ಬರೆಯಬೇಕೆಂದು ಕುಳಿತಾಗ ಜೋಗಿಯವರದು ಯಾವ ಜಾತಿ ಎಂಬ ಪ್ರಶ್ನೆ ಥಟ್ಟನೆ ಎದುರಾಗಿ, ಹಾಗೆ ಎದುರಾದ ಬಗೆಗೇ ಅಸ್ಯಹಿಸಿ, ಆಗ ನಾನು ಒಂದೊಂದಾಗಿ ಬರೆಯಬೇಕೆಂದೇ ಕೊಂಡಿದ್ದ ಸುಮಾರು ಇಪ್ಪತ್ತೈದು ಪುಸ್ತಕಗಳ ಬಗ್ಗೆ ಬರೆಯುವ ಮನಸ್ಸು ಮುರಿದು ತೆಪ್ಪಗೆ ಕುಳಿತು ಬಿಟ್ಟೆ. ಅವುಗಳನ್ನು ಓದಲೂ ಹೋಗಲಿಲ್ಲ, ಹಾಗೇ ಎತ್ತಿ ಬೇರೆಯವರಿಗೆ ಕೊಟ್ಟುಬಿಟ್ಟೆ. ನನಗೆ ಜೋಗಿಯವರ ಜಾತಿ ಗೊತ್ತೇ ಇತ್ತು. ಪ್ರಶ್ನೆ ಮಾತ್ರ ಹೊಸದಾಗಿ ಮೂಡಿತ್ತು. ಆಗಲೇ ನನಗೆ ನಾನು ಯಾವತ್ತೂ ಲೇಖಕನ ಜಾತಿ ನೋಡುತ್ತಿರಲಿಲ್ಲ ಎನ್ನುವ, ನನಗೆ ಮುಖ್ಯ ಎಂದು ಯಾವತ್ತೂ ಅನಿಸದ ಸಂಗತಿ ಗಮನಕ್ಕೆ ಬಂದಿದ್ದು. ಅದೇನೂ ದೊಡ್ಡಸ್ತಿಕೆ ಎಂದು ಹೇಳಿಕೊಳ್ಳುತ್ತಿಲ್ಲ. ನನಗದು ನಾರ್ಮಲ್ ಅಷ್ಟೆ. ಆದರೆ ಅಬ್‌ನಾರ್ಮಲ್ ಗಳ ಜೊತೆ, ಸಣ್ಣಮನಸ್ಸಿನವರೊಂದಿಗೆ, ತುಂಬ ಕುತ್ಸಿತ ಮನೋಭಾವದವರೊಂದಿಗೆ ಮತ್ತು ಕುಹಕಿಗಳ ಜೊತೆ ಮಾತಿಗೆ ನಿಂತರೆ ಕ್ರಮೇಣ ನಾವೂ ಅದೇ ಆಗಿ ಬಿಡುವ ಅಪಾಯವಿದೆ ಎನಿಸಿ ಸಾಕಷ್ಟು ಮಂದಿಯನ್ನು ನನ್ನ ಫೇಸ್‌ಬುಕ್ ಖಾತೆಗೆ ಬ್ಲಾಕ್ ಮಾಡಿಬಿಟ್ಟೆ. ಅಂಬೇಡ್ಕರ್, ಬುದ್ಧ ಮತ್ತು ಬಸವನ ಫೋಟೋ ಹಾಕಿಕೊಂಡ ಮಾತ್ರಕ್ಕೆ ಯಾರೂ ಗೋಳ್ವಾಲ್ಕರ್, ಹೆಗಡೇವಾರ್, ಗೋಡ್ಸೆಯ ಮನಸ್ಥಿತಿಯಿಂದ ಪೂರ್ತಿಯಾಗಿ ಪಾರಾಗಿರುತ್ತಾರೆ ಎಂದುಕೊಳ್ಳುವ ಅಗತ್ಯವಿಲ್ಲ ಎನ್ನುವ ಸತ್ಯ ಮನವರಿಕೆಯಾಗಿದ್ದು ಇಲ್ಲಿ, ಫೇಸ್‌ಬುಕ್ಕಿನಲ್ಲಿ.

******
ಒಬ್ಬ ನಟನಾಗಿ ಖ್ಯಾತಿ ಮತ್ತು ಅಸ್ಮಿತೆಯನ್ನು ದಕ್ಕಿಸಿಕೊಂಡ ಒಬ್ಬ ವ್ಯಕ್ತಿಗೆ ತನ್ನನ್ನು ತಾನು ನಿಜಕ್ಕೂ ಯಾರೆಂದು ಅರಿಯಬೇಕೆಂಬ ಆಸೆ ಹುಟ್ಟುವುದೇ ಒಂದು ಹಂತ. ನಮಗೆ ನಿಜಕ್ಕೂ ಅಗತ್ಯವಿರುವುದು ಉತ್ತರಗಳಲ್ಲ, ಆದರೆ ಪ್ರಶ್ನೆಗಳು. ಬರೀ ಪ್ರಶ್ನೆಗಳಿದ್ದರೆ ಸಾಕು, ನಿರ್ಧಾರಾತ್ಮಕ ಉತ್ತರಗಳು, ಅರ್ಥಗಳು, ಖಚಿತವಾದ ಆಕೃತಿ ಬೇಕೆಂಬ ಹಠ ಬಿಡಬೇಕು. (ಇದು ನನ್ನ ಮಾತೇನಲ್ಲ). ಆದರೆ ಸಾಮಾನ್ಯವಾಗಿ ನಾವೆಲ್ಲರೂ ಹುಡುಕುವುದು, ಹಠಕ್ಕೆ ಬೀಳುವುದು ತದ್ವಿರುದ್ಧವಾದುದಕ್ಕೆ, ಇರಲಿ. 

ಇದ್ದಕ್ಕಿದ್ದಂತೆ ಬಿದ್ದು, ದೇಹದ ಒಂದು ಭಾಗ ನಿಷ್ಕ್ರಿಯ (ಸೊಂಟದ ಮೇಲೆ) ವಾಗಿಬಿಟ್ಟ ಮೇಲೆ ಅಶ್ವತ್ಥಾಮನ್ ಮಾಡಬಹುದಾದ್ದೆಲ್ಲ ಯೋಚನೆ. ದೇಹದ ಕ್ರಿಯೆ ನಿಧಾನಗೊಂಡಿದ್ದೇ ಮನಸ್ಸು ಹೆಚ್ಚು ಕ್ರಿಯಾಶೀಲವಾಗುತ್ತದೆ. ಆದರೆ ಓದುಗರಾದ ನಮಗೆ ಆಗಲೂ ಭೌತಿಕ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಅಶ್ವತ್ಥಾಮನ್ನನ ಪಾರ್ಶ್ವವಾಯು ಪೂರ್ವಯೋಜಿತವೇ, ಯಾರಾದರೂ ಅವನನ್ನು ಕೊಲ್ಲಲು ಅಥವಾ ಹೀಗೆ ಹಾಸಿಗೆ ಹಿಡಿದು ಮಲಗುವಂತೆ ಮಾಡಲು ಬಲೆ ನೇಯ್ದಿದ್ದರೆ, ನೇಯ್ದಿದ್ದರೆ ಅದು ಯಾರು, ಅವನ ಹೆಂಡತಿಯೇ, ಅವನಿಗೆ ಸದ್ಯ ಆಶ್ರಯ ಕೊಟ್ಟಿರುವ ರಾಜೇಂದ್ರನೆ, ಬೇರೆ ಯಾರೋ ಪ್ರೊಡ್ಯೂಸರ್ ಅಥವಾ ನಿಗೂಢ ವ್ಯಕ್ತಿಯೇ, ವಿಚಿತ್ರವೆನಿಸುವ ಮಸಾಜ್ ಒಂದು ಪೂರ್ವನಿಯೋಜಿತ ಸಂಚಾಗಿತ್ತೇ, ಅವನು ತನ್ನ ಟ್ಯಾಬ್ಲೆಟ್ಸ್ ಸೇವಿಸದೇ ಇದ್ದಿದ್ದು ಒಳ್ಳೆಯದಕ್ಕಾ ಅಥವಾ ಅದರಿಂದಲೇ ಅವನು ಸುಧಾರಿಸಬಹುದಾಗಿದ್ದ ಅವಕಾಶ ಮಸುಕಾಯಿತೇ, ಅವನ ಅನುಮಾನ ಯಾರ ಮೇಲಿತ್ತು, ಸ್ವತಃ ನ್ಯೂರೋ ಸರ್ಜನ್ ಆಗಿರುವ ಹೆಂಡತಿಯ ಮೇಲಾ, ರಾಜೇಂದ್ರ ಮತ್ತು ಅವಳು ನಿಯೋಜಿಸಿದ ವೈದ್ಯನ ಮೇಲಾ ಎಂದೆಲ್ಲ, ಒಂದೆರಡಲ್ಲ, ಸಾವಿರ ಪ್ರಶ್ನೆಗಳ ಸಂಶಯ ಪಿಶಾಚಿ ಮನಸ್ಸಿನ ಹತ್ತೂ ಮೂಲೆಗೆ ಶತಪಥ ಹಾಕುತ್ತಿರುವಾಗಲೇ ಅಶ್ವತ್ಥಾಮ ‘ತನ್ನನ್ನು ತಾನು ಅರಿಯುವ’ ಪ್ರಯತ್ನ - ಆತ್ಮಕಥೆಯ, ಆತ್ಮನಿವೇದನೆಯ, ಹಿಂದಿರುಗಿ ನೋಡುವ ಪ್ರಯತ್ನಗಳ ಮುಖೇನ ಜಾರಿಯಲ್ಲಿಡುತ್ತಾನೆ. ಆದರೆ ತನ್ನನ್ನು ತಾನು ಅರಿಯುವ ಯಾವ ಕ್ರಮವೂ ಇದಲ್ಲ ಎನ್ನುವುದು ನಮಗಾಗಲೀ, ಸ್ವತಃ ಜೋಗಿಗಾಗಲಿ ತಿಳಿದಿಲ್ಲ ಎಂದುಕೊಳ್ಳಲು ನಾವೇನು ಮೂರ್ಖರೆ!? ಅಶ್ವತ್ಥಾಮನಿಗಾದರೂ ಗೊತ್ತಿಲ್ಲ ಎನ್ನುತ್ತೀರಾ?

`ನಿನ್ನ ಕತೆ ನಿಂಗೊತ್ತಲ್ವ? ಮತ್ಯಾಕೆ ಅದನ್ನೆಲ್ಲ ಹೇಳೋದು, ಬರಿಯೋದು?’ ಅಂದೆ.
‘ಕತೆ ಗೊತ್ತು. ತಾತ್ವಿಕತೆ ಗೊತ್ತಿಲ್ಲ. ನಾವೆಲ್ಲ ಹುಡುಕೋದು ಅದನ್ನೇ ಅಲ್ವ? ಒಬ್ಬೊಬ್ಬನ ಬದುಕಿಗೂ ಸಾವಿಗೂ  ಅವನದೇ ಆದ ದರ್ಶನ ಇರುತ್ತಲ್ವ? ನನ್ನ ಜೀವನ ದರ್ಶನ ಏನೂಂತ ನಂಗೆ ಗೊತ್ತಾಗಬೇಕು. ಪ್ಲೀಸ್’ ಅಂದ. ಎಡಗೈ ಮುಂದೆ ಚಾಚಿದ.  

ಇದು ನಿಜವಾದ ತಮಾಶೆ. ತಾನು ಏನೆಂದು ತನಗೆ ಗೊತ್ತಿರುತ್ತದೆ, ಗೊತ್ತಿಲ್ಲದೇ ಇದ್ದರೆ ಅದನ್ನು ತನ್ನೊಳಗೆ ತಾನಿಳಿದು ಕಂಡುಕೊಳ್ಳಬೇಕೇ ಹೊರತು ಹೊರಗಿನ ವಿವರಗಳಲ್ಲಿ ಅದನ್ನು ಕಟ್ಟುವುದು ಮತ್ತೆ ಅದುವರೆಗೂ ಮಾಡಿದ ಪ್ರದರ್ಶನದ ಪುನರಾವರ್ತನೆ ಆಗುತ್ತದೆಯೇ ಹೊರತು ಆ ಪ್ರದರ್ಶನದ ನೇಪಥ್ಯದ ಚಿತ್ರ ಸಿಗುವುದಿಲ್ಲ. ಇನ್ನೊಬ್ಬನನ್ನು ಉದ್ದೇಶಿಸಿ ಹೇಳುವುದೆಲ್ಲವೂ ಪ್ರದರ್ಶನವೇ, ದರ್ಶನ ಅಲ್ಲ. ಪ್ರದರ್ಶನದ ಶೋಕಿಯೇ ಇಲ್ಲದ ನಮ್ಮನ್ನು ನಾವು ಕಾಣಬೇಕಾದರೆ ಕಣ್ಣಿನ ದೃಷ್ಟಿ ಹೊರಗೆ ಅರಸುವುದನ್ನು ಬಿಟ್ಟು ಒಳಗೆ ಅರಸಲು ಸುರು ಮಾಡಬೇಕಾಗುತ್ತದೆ. ಹುಡುಕಾಟ ಹೊರಗಿನಿಂದ ಬರಬಹುದಾದ್ದರ ಕುರಿತು ನಡೆಯದೇ, ನಮ್ಮೊಳಗೇ ಇರುವುದರ ಕುರಿತು ನಡೆಯಬೇಕಾಗುತ್ತದೆ. ಇದು ಕನ್ನಡಿಯೂ ಅಲ್ಲ, ಕಿಟಕಿಯೂ ಅಲ್ಲ. ಕನ್ನಡಿ ಮತ್ತು ಕಿಟಕಿ ಎರಡೂ ಪರಿಣಾಮದಲ್ಲಿ ಇಲ್ಲಿ ಒಂದೇ. ಅಂತಃಚಕ್ಷು ಎನ್ನುತ್ತೇವಲ್ಲ, ಗಮನಿಸುವ ಯಾರೂ ಇಲ್ಲದಾಗ, ನಮ್ಮ ಮಾತುಗಳನ್ನು ಕೇಳುವವರು ಯಾರೂ ಇಲ್ಲದಾಗ, ನಾವು ಬರೆದಿದ್ದನ್ನು ಓದುವವರು ಯಾರೂ ಇಲ್ಲದಾಗ ನಾವು ಮಾಡುವ ಕ್ರಿಯೆ, ಆಡುವ ಮಾತು, ಬರೆಯುವ ಸತ್ಯ ಏನಿರುತ್ತದೆ? ಸ್ವಲ್ಪ ಕಷ್ಟದ ಸ್ಥಿತಿ ಇದು. ಮುಷ್ಠಿಮೈಥುನ ಮಾಡಿಕೊಳ್ಳುವಾಗಲೂ ನಮ್ಮ ಮನಸ್ಸಿನ ಕಲ್ಪನೆಯಲ್ಲಿ ಯಾರೋ ರತಿಸುಖದ ಪರಾಕಾಷ್ಠೆಯಲ್ಲಿ ಹಿತವಾಗಿ ನರಳುತ್ತಿರುತ್ತಾರೆ! ಅಂದಮೇಲೆ, ನಾವು ಮಾಡುವುದು, ಆಡುವುದು, ಬರೆಯುವುದು ಎಲ್ಲವೂ ಆ ಇನ್ನೊಬ್ಬರ ಮೆಚ್ಚುಗೆಗಾಗಿಯೇ, ಪ್ರಶಂಸೆಗಾಗಿಯೇ ಎನ್ನುವುದು ಸತ್ಯ. ಆದರೆ ಅಸಾಧ್ಯವಾದ ಸ್ಥಿತಿಯೇನಲ್ಲ. 

ಸಮಸ್ಯೆ ಎಂದರೆ ನಮಗೆ ಸದಾ ನಮ್ಮ ಪ್ರದರ್ಶನದ ಪರಿಣಾಮ ತಿಳಿಯುವ ಉತ್ಸುಕತೆಯೇ ಹೊರತು ಅದರಾಚೆಯ ಸತ್ಯ ಬೇಡ. ಒಬ್ಬ ಕೃತಿಕಾರನಿಗೆ ತನ್ನ ಕೃತಿ ಏನೆಂದು ಪ್ರಾಮಾಣಿಕವಾಗಿ ಗೊತ್ತಿರುತ್ತದೆ. ಗೊತ್ತಿಲ್ಲ ಎಂಬಂತೆ ಕಾಣಿಸಿಕೊಳ್ಳಲು ನಮಗೆ ಇಷ್ಟ.  ಎಲ್ಲರಿಗೂ ವಿಮರ್ಶಕರ, ಓದುಗರ ಮಾತು ಕೇಳಲು ಇಷ್ಟ. ತನ್ನ ವ್ಯಕ್ತಿತ್ವದ ಬಗ್ಗೆ ಜ್ಯೋತಿಷಿಗಳು, ನ್ಯೂಮರಾಲಜಿಸ್ಟರು, ಹಸ್ತಸಾಮುದ್ರಿಕದವರು, ಸೈಕಿಯಾಟ್ರಿಸ್ಟರು, ಹಕ್ಕಿಶಾಸ್ತ್ರದವರು ಹೇಳುವುದನ್ನೆಲ್ಲ ಕೇಳಲು ಕಿವಿ ನಿಮಿರಿಯೇ ಇರುತ್ತದೆ. ಕೊನೆಗೆ ಯಾವುದೋ ವೆಬ್‌ಸೈಟು ನೀವು ಹೋದ ಜನ್ಮದಲ್ಲಿ ಏನಾಗಿದ್ದೀರೆಂದು ಹೇಳುತ್ತೇವೆ, ನಿಮ್ಮ ನೈಜ ಸ್ವಭಾವ ಏನೆಂದು ಹೇಳುತ್ತೇವೆ ಎಂದರೆ ತಿಳಿದೇ ಬಿಡುವ ಕುತೂಹಲಕ್ಕೆ ಧುಡುಮ್ಮನೆ ದುಡುಕುತ್ತೇವೆ. ಇದು ಆತ್ಮಪ್ರಶಂಸೆಗೆ ಹಾತೊರೆಯುತ್ತಿರುವುದರ ಲಕ್ಷಣವೇ ಹೊರತು ಇನ್ನೇನಲ್ಲ. ಆತ್ಮಕಥೆಯ, ಆತ್ಮನಿವೇದನೆಯ, ತನ್ನದೇ ವ್ಯಕ್ತಿತ್ವವನ್ನು ಹಿಂದಿರುಗಿ ನೋಡುವ ಇಚ್ಛೆಯ ಹಿಂದೆಯೂ ಇರುವುದು ಇದೇ ಹಾತೊರೆಯುವಿಕೆಯಾದಲ್ಲಿ ಅದರಿಂದ ಯಾರಿಗೇನು ಉಪಯೋಗ ಅಶ್ವತ್ಥಾಮ?

ಸಿನಿಮಾದಲ್ಲಿ ಹೀರೋ ಗೆಲ್ಲಬೇಕು, ಖಳನಾಯಕ ಸೋಲಬೇಕು. ಸಾಮರ್ಥ್ಯಕ್ಕನುಗುಣವಾಗಿ ಅಲ್ಲ, ಪಾತ್ರಕ್ಕನುಗುಣವಾಗಿ. ಬದುಕಿನಲ್ಲಿ ನಮ್ಮ ಪಾತ್ರ ನಿರ್ಧಾರವಾಗುವುದು ಹೇಗೆ, ಸೋತವನು ಖಳನಾಯಕ, ಗೆದ್ದವನು ನಾಯಕ ಎಂದೆ? ಸೋಲು ಗೆಲುವು ಮೊದಲು ನಿರ್ಣಯಿಸಲ್ಪಡುತ್ತದೆಯೇ ಅಥವಾ ನಾಯಕ ಹೌದೋ ಅಲ್ಲವೋ ಎನ್ನುವುದು ಮೊದಲು ನಿರ್ಣಯಿಸಲ್ಪಡುತ್ತದೆಯೆ?

ಲೈಂಗಿಕ ವಾಂಛೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಗಂಡನ್ನು ಗೆಲ್ಲುವ ಹೆಣ್ಣು ಗೆಲ್ಲುವುದು ಯಾವಾಗ? ಅವಳ ಆಹ್ವಾನಿಸುವ ಯೌವನ ತುಂಬಿದ ದೇಹದೆದುರೇ ಮೂರು  ಬಾರಿ ಹಸ್ತಮೈಥುನ ಮಾಡಿಕೊಂಡ ಗಂಡಿನ ಗೆಲುವೇ ಅವಳ ಸೋಲೆ ಅಥವಾ ಸೋತಿದ್ದು ಗಂಡೆ? ಭಯಂಕರ ಹಸಿವಿದ್ದರೂ ಎದುರಿಗೆ ಬಡಿಸಿದ ಎಲೆಯ ಮುಂದೆ ಉಪವಾಸ ಸಾಧಿಸುವುದು ಗೆಲುವೆ ಅಥವಾ ಉಂಡು ತಣ್ಣಗಿರುವುದು ಗೆಲುವೆ? ವೃತನಿಷ್ಠೆ ಗೆಲುವು ಅಂದುಕೊಂಡಿದ್ದೇವಲ್ಲ, ಆ ಗೆಲುವು ಕೊಡುವ ಅಹಂಕಾರ ಕೂಡಾ ಗೆಲುವೇ ಅಥವಾ ಸೋಲೆ?

ಕಟ್ಟುನಿಟ್ಟಿನ ಬ್ರಹ್ಮಶ್ಚರ್ಯ ಪಾಲಿಸಿದವನಿಗೆ ತಾನು ಅಖಂಡ ಬ್ರಹ್ಮಚಾರಿ ಎಂಬ ಹೆಮ್ಮೆ, ಎಂದೂ ಮಾಂಸಾಹಾರ ಮುಟ್ಟಿಲ್ಲ, ಮದ್ಯಪಾನ ಮಾಡಿಲ್ಲ, ಸಿಗರೇಟು-ಬೀಡಿ ಎಳೆದಿಲ್ಲ, ಸೂಳೆಯರ ಸಹವಾಸ ಮಾಡಿಲ್ಲ, ಜೂಜು ಆಡಿಲ್ಲ, ಕೊಲೆ ಮಾಡಿಲ್ಲ, ಅನ್ಯಾಯ ಮಾಡಿಲ್ಲ, ಪಾಪ ಮಾಡಿಲ್ಲ ಎಂಬ ಬಗ್ಗೆ ಇರುವ ಮಹದಾಕಾರದ ಅಹಂಕಾರವೇ ಎಲ್ಲ ಗೆಲುವಿನ ಸ್ಫೂರ್ತಿಯೇ, ಫಲಶ್ರುತಿಯೇ? ಅದಕ್ಕಿಂತ ದೇಹದ ಹಸಿವಿಗೆ, ಆಸೆಗೆ, ಬಯಕೆಗೆ, ವಾಂಛೆಗೆ ಸೋತವನ ಸೋಲು, ವಿನಯ ಹೇಗೆ ಎರಡನೆಯ ದರ್ಜೆಯದು ಅಶ್ವತ್ಥಾಮ?

"ಬಡವರೂ ಶ್ರೀಮಂತರೂ ಸಮಾನರು ಅಂತ ಹೇಳಿ. ಸಮಾನವಾಗಿ ನೋಡಬೇಕು ಅಂತ ಹೇಳೋದಕ್ಕೆ ನೀವ್ಯಾರು? ನೀವೆಲ್ಲಿ ನಿಂತು ಮಾತಾಡುತಿದ್ದೀರಿ? ಬಡವರ ಕೊಟ್ಟಿಗೆಯಲ್ಲೋ ಶ್ರೀಮಂತರ ದೊಡ್ಡಿಯಲ್ಲೊ? ನಿಮ್ಮ ಜಾಗ ಯಾವುದು ಅಂತ ಮೊದಲು ಖಚಿತಪಡಿಸಿಕೊಳ್ಳಿ" ಎಂದ ನಿನಗೆ ಇಲ್ಲಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಕ್ಕೆ ಬದ್ಧವಾದ ದೇಹವನ್ನು ಹೊಂದಿದ ಮನುಷ್ಯ - ಅವು ಅರಿಗಳೆಂತೋ ಅರಿಯೆವು ಎನ್ನುವುದನ್ನು ಬದಿಗಿರಿಸಿ ನೋಡುತ್ತ - ಅರಿಗಳನ್ನು ಗೆಲ್ಲುವುದೇ ಗೆಲುವು, ಅವುಗಳಿಗೆ ಶರಣಾಗುವುದೇ ಸೋಲು ಎಂಬ ಒಂದು ನಿರ್ಧಾರಕ್ಕೆ ಬಂದಿರುವುದು ಯಾರು ಹೇರಿದ ಮೌಲ್ಯ? ಎಲ್ಲಿ ನಿಂತು ಹೇರಿದ ಮೌಲ್ಯ ಎನ್ನುವ ಪ್ರಶ್ನೆ ನಿನ್ನಲ್ಲಿ ಏಳುವುದಿಲ್ಲ ಯಾಕೆ ಅಶ್ವತ್ಥಾಮ? 

"ಆವತ್ತು ನಾನು ರಮಣಿಗೆ ಸೋತಿದ್ದರೆ, ಮಾರನೇ ದಿನ ಅವಳು ನನ್ನನ್ನು ಸೋಲಿಸುತ್ತಾಳೆ ಅನ್ನುವುದು ನನಗೆ ಖಾತ್ರಿಯಾಗಿತ್ತು. ಹೆಣ್ಣು ಸೋಲಿಸುವುದಕ್ಕಲ್ಲದೇ ಮತ್ಯಾಕೆ ಬರುತ್ತಾಳೆ? ಅವಳಿಗೆ ಸದಾ ಗೆಲ್ಲುವ ಆಸೆ, ಪ್ರಕೃತಿಯ ಹಾಗೆ. ಅವಳನ್ನು ಗಂಡಸು ಸೋಲಿಸೋಕೆ ಹೋಗಬಾರದು. ಗೆಲ್ಲಲೂ ಬಿಡಬಾರದು. ಅದನ್ನು ನಾನು ಬಹುಬೇಗ ಅರ್ಥಮಾಡಿಕೊಂಡಿದ್ದೆ."

ದೇಹವನ್ನು ಹಂಚಿಕೊಳ್ಳುವಾಗ, ಇನ್ನೊಂದು ನಗ್ನ ದೇಹದೆದುರು ನಗ್ನವಾಗುವುದಕ್ಕೆ, ಮುಚ್ಚಿಟ್ಟುಕೊಳ್ಳುವುದಕ್ಕೆ ಯಾವ ದೌರ್ಬಲ್ಯವೂ ಇಲ್ಲದಂತೆ ಬಟಾಬಯಲಾಗಿ, ಅಥವಾ ಬತ್ತಲಾಗಿ ಬಯಲು ದಕ್ಕಿಸಿಕೊಳ್ಳುವುದಕ್ಕೆ ಮನುಷ್ಯ ವಿನಯಿಯಾಗಬೇಕಾಗುತ್ತದೆ. ಅಹಂಕಾರ ತ್ಯಜಿಸಬೇಕಾಗುತ್ತದೆ. ಆಗಷ್ಟೇ ಅವನು ಬಾಹುಬಲಿಯಷ್ಟು ಬಲಶಾಲಿಯಾಗಬಲ್ಲ ಎನ್ನುವುದನ್ನು ಬಲ್ಲ ಅಶ್ವತ್ಥಾಮನೇ ಇದನ್ನೂ ಹೇಳುತ್ತಾನೆ ಎನ್ನುವುದನ್ನು ಮರೆಯಬಾರದು. ಅವನಲ್ಲಿ ದ್ವಂದ್ವವಿದೆ. ರಮಣಿಗೆ ಸೋಲುವುದು, ಸಂಯುಕ್ತಾಗೆ ಸೋಲುವುದು, ಸರೋಜಿನಿಗೆ ಸೋಲುವುದು, ಅಮೃತಮತಿಗೆ ಸೋಲುವುದು, ಶುಭಾಂಗಿನಿಗೆ ಸೋಲುವುದು, ನಳಿನಾಕ್ಷಿಗೆ ಸೋಲುವುದು, ಸರೋಜಿನಿ ಶುಭಾಂಗಿನಿಯನ್ನು ಗೆಲ್ಲುವುದು ಅಥವಾ ಸೋಲಿಸುವುದು ಎಂದೇ ತಿಳಿಯುವ ಅಶ್ವತ್ಥಾಮನಿಗೆ ಈ ಯಾವುದೂ ಸೋಲಲ್ಲ ಅಥವಾ ಬದುಕಿನಲ್ಲಿ ಸೋಲದಿರುವುದೇ ಗೆಲುವಲ್ಲ ಎನ್ನುವುದು ಗೊತ್ತು. ಸೋಲಿನಿಂದ ಕಲಿಯಬಹುದಾದ್ದು ಗೆಲುವಿನಿಂದ ಕಲಿಯಬಹುದಾದ್ದಕ್ಕಿಂತ ಹೆಚ್ಚು ಎನ್ನುವುದು ಗೊತ್ತು. ಆದರೆ ಮಹಾಜಾಣನೂ, ಮಹಾ ಜಾಗೃತನೂ ಆಗಿರುವಂತೆ ಕಾಣುವ ಅವನಿಗೂ ತಾನು ಹೊರಗಿನ ಬದುಕಿನಷ್ಟು ಒಳಗಿನ ಬದುಕು ಗೆದ್ದಿಲ್ಲ ಎನ್ನುವ ಅರಿವಿದೆ. ಪಾರಾಲಿಸಿಸ್ ಆಗಿ ಕೂತಾಗ, ಅಥವಾ ಐವಾನ್ ಇಲಿಚ್ಯನಂತೆ ಸಾವಿಗೆ ಎದುರಾಗಿ ಕೂತಾಗ ಇಡೀ ಬದುಕನ್ನು ಮತ್ತೆ ಬದುಕುವ ಅವಕಾಶವನ್ನು ಪಡೆದವನಂತೆ ಬೀರುವ ಹಿನ್ನೋಟದಿಂದ ಅವನು ಪಡೆಯಬೇಕೆಂದಿರುವ ದರ್ಶನಕ್ಕೆ ಸಾಕಷ್ಟು, ಅಗತ್ಯವಿರುವಷ್ಟು ನೋಡಿದನೆ ಕೊನೆಗಾದರೂ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಉತ್ತರವೇ ಗೆಲುವಲ್ಲ, ಬರಿಯ ಪ್ರಶ್ನೆಯೊಂದಿಗೇ ಉಳಿದುಬಿಡುವುದು ಸೋಲಲ್ಲ.  

ಹಿಟ್ಟಿನ ನೀರನ್ನೇ ಹಾಲೆಂದು ನಂಬಿ ಮೋಸಹೋದವನಿಗೆ ತಾನು ಮೋಸಹೋದದ್ದು ತಿಳಿದ ಮೇಲೆ ನಂಬುಗೆ ಕಷ್ಟದ ಸರಕಾಗುತ್ತದೆ ಎನ್ನುವುದನ್ನು ಸರೋಜಿನಿಯೇ ಗಮನಿಸಿ ಹೇಳುತ್ತಾಳೆ. ಈ ಬಗೆಯ ಅಪನಂಬಿಕೆ ಎಲ್ಲ ಮಹಾಚಾಣಾಕ್ಷರಿಗೆ, ಸದಾ ಜಾಗೃತರಿಗೆ ಅನಿವಾರ್ಯವೋ ಏನೋ. ಆದರೆ ಈ ಮಹಾಚಾಣಾಕ್ಷತೆ, ನಿದ್ದೆ ಎಚ್ಚರ ಸುಷುಪ್ತಿಯಲ್ಲೂ ಸಾಧಿಸುವ ಮಹಾ ಜಾಗೃತ್ ಅವಸ್ಥೆಯಿಂದ ತನ್ನೊಳಗೆ ತಾನಿಳಿದು ತನ್ನನ್ನು ತಾನರಿವ ಸಾಧ್ಯತೆ ಮೊಂಡಾಗುತ್ತ ಹೋಗುತ್ತದೆಯೆ? ತಮ್ಮದೇ ಕಟೌಟು, ಪ್ರತಿಮೆ, ಸೆಲ್ಫಿಫೋಟೋಗಳಲ್ಲಿ ಇಂಥ ಮಂದಿ ಮೈಮರೆಯುತ್ತಾರೆಯೆ? 

ಜೊತೆಯ ಜೀವದ ರತಿಸುಖವನ್ನು ಗಮನಿಸಿ ತನ್ನ ಸುಖ ನಿರ್ಧರಿಸುವ ಪುರುಷನಿಗೆ ಸ್ವಂತ ರುಚಿ ಎನ್ನುವುದೇ ಇರುವುದಿಲ್ಲ ಎನ್ನುವುದೂ ಸರೋಜಿನಿಯೇ. ಅವನು ರಮಣಿಗೆ, ಅಮೃತಮತಿಗೆ ಸೋಲದೆ, ಅವಳೆದುರೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ಇಲ್ಲಿ ನೆನಪಿಸಿಕೊಳ್ಳಿ. ಲೈಂಗಿಕತೆಯ ಸುಖವೆಲ್ಲವೂ ಇರುವುದು ಕಲ್ಪನೆಯಲ್ಲೇ ಹೊರತು ದೇಹದಲ್ಲಲ್ಲ. ‘ಕಾಮವೂ ಹುಟ್ಟುವುದು ಮನಸ್ಸಿನಲ್ಲೇ, ದೇಹ ಅದರ ಅಭಿವ್ಯಕ್ತಿ ಮಾಧ್ಯಮ ಅಷ್ಟೇ’ (ನನ್ನ ಮಾತಲ್ಲ, ಟಿ ಎಂ ಸುಬ್ಬರಾಯ ಅವರ ಅಂಬೆ ಎಂಬ ನೀಳ್ಗತೆಯಲ್ಲಿ ಬರುವ ಮಾತಿದು.). ಹಾಗಾದಲ್ಲಿ, ಹಸ್ತಮೈಥನದಲ್ಲಿ ತೊಡಗಿದ ವ್ಯಕ್ತಿಯ ಗಮನದಲ್ಲಿ ಇರುವುದು ತನ್ನದೇ ಸುಖವೇ ಅಥವಾ ತಾನು ಇನ್ನೊಂದು ವ್ಯಕ್ತಿಗೆ ಸುಖ ಕೊಡುತ್ತಿದ್ದೇನೆ ಎಂಬ ಕಲ್ಪನೆಯೆ? ಅಮೃತಮತಿಯೊಂದಿಗೆ ಲೈಂಗಿಕವಾಗಿ ಸುಖಿಸದೆ, ಅವಳ ಆಹ್ವಾನವನ್ನು ಖೆಡ್ಡಾ ಎಂಬಂತೆ ತಿರಸ್ಕರಿಸಿ, ತಿರಸ್ಕರಿಸುವುದಕ್ಕಾಗಿಯೇ (ಅನಿವಾರ್ಯವಾದ?!) ಹಸ್ತಮೈಥುನ ಮಾಡಿಕೊಂಡು (ಅವಳೆದುರೇ) ಸಾಧಿಸುವ ಗೆಲುವಿನಲ್ಲಿ ನಿಜಕ್ಕೂ ಗೆಲುವಿತ್ತೆ, ಸೋಲಿತ್ತೆ ಅಥವಾ ಕೇವಲ ವೃತದ ನಿಷ್ಠೆ ಕೊಡುವ ಅಹಂಕಾರದ ಪುಷ್ಟೀಕರಣವಿತ್ತೆ ಗಮನಿಸಬೇಕು.

ಕೊನೆಗೂ ಜೋಗಿ ಬರೆಯುವ ಆತ್ಮಚರಿತ್ರೆ ಇಷ್ಟವಾಗದೆ, ಅದರ ಒಂದು ಸಾಲೂ ತನ್ನದಲ್ಲ ಎಂದುಕೊಳ್ಳುವ ಅಶ್ವತ್ಥಾಮನ್ ತನ್ನ ಕತೆಯನ್ನು ತಾನೇ ಬರೆಯಬೇಕು ಎಂದು ಕುಳಿತುಕೊಳ್ಳುತ್ತಾನೆ. ಎಡಗೈಯಲ್ಲಿ ಬರೆಯತೊಡಗುತ್ತಾನೆ.

"ಆತ್ಮಚರಿತ್ರೆ ಗೆಲುವಿನ ಕುರಿತಾಗಿರುತ್ತದೋ ಸೋಲನ್ನು ಹೇಳಬೇಕೋ ನನಗೆ ಗೊತ್ತಿಲ್ಲ. ಸೋತವನಿಗೂ ಆತ್ಮಚರಿತ್ರೆ ಇರುತ್ತದೆಯೇ? ಇದ್ದರೆ ಅದನ್ನು ಯಾರಾದರೂ ಯಾಕೆ ಓದುತ್ತಾರೆ? ಸೋಲುವ ವಿಧಾನಗಳನ್ನು ಕಲಿಯುವ ಆಸೆಯಾದರೂ ಯಾರಿಗಿರುತ್ತದೆ?" ಎನ್ನುವಲ್ಲಿಯೂ ಅಶ್ವತ್ಥಾಮನಿಗೆ ಬದುಕು ಒಂದೋ ಸೋಲು ಇಲ್ಲವೇ ಗೆಲುವು ಅನಿಸಿತ್ತೆ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತದೆ ನಮಗೆ.

ಇಡೀ ಕಾದಂಬರಿಯ ಕೊನೆಯ ದೃಶ್ಯ ತುಂಬ ಮುಖ್ಯವಾಗುವುದು ಬೇರೆಯೇ ಕಾರಣಕ್ಕೆ. ಇಲ್ಲಿ ಇದ್ದಕ್ಕಿದ್ದಂತೆ ಅಶ್ವತ್ಥಾಮನ ಲಕ್ವ ಒಂದು ಪಾತ್ರದ ಲಕ್ವವಾಗಿ ಬದಲಾಗುತ್ತದೆ. ಅಶ್ವತ್ಥಾಮನಿಗೆ ಲಕ್ವ ಹೊಡಿದಿಲ್ಲ, ಬದಲಿಗೆ ಅವನು ಲಕ್ವ ಬಡಿದ ಒಬ್ಬನ ಪಾತ್ರವನ್ನು ಮಾಡುತ್ತಿದ್ದಾನೆ. ಅದರಿಂದ ಹೊರಬರಲು ಅವನಿಗೆ ಹೊಸದೊಂದು ಪಾತ್ರ ಸಿಗಬೇಕು, ಇಲ್ಲದಿದ್ದರೆ ಅವನಿಗೆ ಹಿಂದಿನ ಪಾತ್ರದ ಗುಂಗಿನಿಂದ ಹೊರಬರಲು ಸಾಧ್ಯವಿಲ್ಲ. ಹೀಗನ್ನುವಾಗಲೇ ಅವನಿಗೆ ಚಕ್ರವರ್ತಿಯ ಪಾತ್ರವೊಂದು ಸಿಕ್ಕಿ ಬಿಡುತ್ತದೆ ಮತ್ತು ನೋಡನೋಡುತ್ತಿದ್ದಂತೆ ರಾಜೇಂದ್ರ, ಸಂಯುಕ್ತಾ, ಜೋಗಿ ಎಲ್ಲರೂ ಆ ದೃಶ್ಯದಲ್ಲಿ ಸೈನ್ಯಾಧಿಪತಿ, ಆಸ್ಥಾನಕವಿ ಇತ್ಯಾದಿ ಇತ್ಯಾದಿಗಳಾಗಿ ಬದಲಾಗುತ್ತಾರೆ. ನಾಟಕದ ಒಂದು ಸೀನ್ ಎಂಬಂತೆ ಒದಗುವ ಈ ಅಂತ್ಯದೊಂದಿಗೇ ಕಾದಂಬರಿ ಮುಗಿಯುತ್ತದೆ.

ಇದನ್ನೀಗ ಇಡೀ ಬದುಕಿಗೆ ಅನ್ವಯಿಸಬಹುದು. ಅನ್ವಯಿಸಿ ಹೊಸ ಅರ್ಥ, ಹೊಳಹು, ದರ್ಶನ ಹುಡುಕಬಹುದು. ಆದರೆ ಅದೆಲ್ಲ ಬೇಡ. ನಾನು ಅಶ್ವತ್ಥಾಮನ ಮೂಲ ಉದ್ದೇಶಕ್ಕೇ ಅಂಟಿಕೊಳ್ಳುತ್ತೇನೆ ಮತ್ತು ನಟನಾದ ಅವನಿಗೆ ನಟನ ಪಾತ್ರದಾಚೆ, ನಟಿಸುವುದರ ಆಚೆ ಇದ್ದ (ಇದ್ದಿದ್ದರೆ ಮತ್ತು ಇದೆ ಎಂದುಕೊಂಡು ಯೋಚಿಸುವುದಾದರೆ) ಅಸ್ತಿತ್ವವಾದರೂ ಏನು ಎಂಬುದು ಆ ಪ್ರಶ್ನೆ. 

ಬಳಿಕ ಅಪ್ಪ-ಅಮ್ಮನ ಕತೆಯಿದೆ. ಅವರ ಲೈಂಗಿಕತೆ, ಅಪ್ಪನ ವಿಷಯದಲ್ಲಿ ಪೋಲೀಸರ ಜೊತೆ ನಡೆದುಕೊಂಡ ಘಟನೆ, ಕಾರು ಹಾರಿಸಿ ಅಪ್ಪನನ್ನು ಹೆದರಿಸಿದ್ದು ಇತ್ಯಾದಿ. ಅಶ್ವತ್ಥಾಮ ತನ್ನ ಅಪ್ಪನಲ್ಲಿ ಅತ್ಯಂತ ದ್ವೇಷಿಸುವ ಅಂಶ ಯಾವುದು? ಆತನ ಲೈಂಗಿಕ ಅತಿರೇಕವೆಂದಾದರೆ ಅದು ಪುನರಾವರ್ತನೆಯಾದ ಬಗ್ಗೆ ಕಾದಂಬರಿಯಲ್ಲಿ ಉಲ್ಲೇಖವೇನಿಲ್ಲ. ಅಪ್ಪ-ಅಮ್ಮನ ದಾಂಪತ್ಯ ತೀರ ದಾರುಣವಾಗಿತ್ತೆನ್ನಲೂ ಪುರಾವೆಗಳಿಲ್ಲ. ಲೈಂಗಿಕ ಪಿಪಾಸುವೊಬ್ಬ ಮದುವೆಯಾಗಿ ನಾಲ್ಕೈದು ಹೆಮ್ಮಕ್ಕಳನ್ನು ಹುಟ್ಟಿಸಿ, ಅವರ ಬೆಳವಣಿಗೆ, ಓದು, ಮದುವೆ ಯಾವುದರ ಬಗ್ಗೆಯೂ ಕಾಳಜಿ ವಹಿಸದೆ ತನ್ನ ಸಂಪಾದನೆಯನ್ನೆಲ್ಲ ಸೂಳೆಯರಿಗೆ ಸುರಿಯುತ್ತಾ ಕುಡಿದು, ರೋಗ ಹಿಡಿದು ಸತ್ತ ಅನೇಕ ಪ್ರಕರಣಗಳು ನಮಗೆ ಗೊತ್ತಿವೆ. ಅಂಥವರ ಹೆಮ್ಮಕ್ಕಳೇ ಹೆಚ್ಚಾಗಿ ದಾರಿತಪ್ಪಿ, ಸಂಪಾದನೆಗೆ, ಎರಡು ಹೊತ್ತಿನ ಅನ್ನಕ್ಕೆ ಏನೇನೋ ಹಿಡಿಯಬಾರದ ಮಾರ್ಗ ಹಿಡಿದು ನರಳುವುದು. ಆದರೆ ಅಶ್ವತ್ಥಾಮನ ಅಪ್ಪನಾದರೂ ಅಂಥ ಹೆಮ್ಮಕ್ಕಳನ್ನು ಬೀದಿಪಾಲು ಮಾಡಿದ ವಿವರಗಳಿಲ್ಲ ಇಲ್ಲಿ. ಇನ್ನು ಲೈಂಗಿಕ ಸಂಬಂಧಗಳ ವಿಚಾರಕ್ಕೆ ಬಂದರೆ ಸ್ವತಃ ಅಶ್ವತ್ಥಾಮನಾದರೂ ಇನ್ನೊಬ್ಬ ವ್ಯಕ್ತಿಯನ್ನು ನೈತಿಕ ನೆಲೆಯಲ್ಲಾಗಲೀ, ಸಾಮಾಜಿಕ ನೆಲೆಯಲ್ಲಾಗಲೀ ಪ್ರಶ್ನಿಸಬಲ್ಲ ಧೀಮಂತ ನಡವಳಿಕೆ ತೋರಿಸಿದ್ದನೆ ಎನ್ನುವುದು ಪ್ರಶ್ನೆ.

ಹೆಸರೇ ಇಲ್ಲದೆ ಮಹಿಳೆಯೊಂದಿಗಿನ ಇಪ್ಪತ್ತನಾಲ್ಕು ಗಂಟೆಗಳ ದಾಂಪತ್ಯವೊಂದರ ಪ್ರಕರಣ ಸ್ವಲ್ಪ ಭಿನ್ನವಾಗಿರುವುದನ್ನು ಗಮನಿಸಿ. ಇದು ಒಂದು ಶುದ್ಧ ದಾಂಪತ್ಯಕ್ಕೆ ಒದಗಿಸಿದ ಸಾಪೇಕ್ಷದಂತಿದ್ದೂ ಅಂಥ ಉದ್ದೇಶವನ್ನು ಈಡೇರಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಕಷ್ಟ ಏಕೆಂದರೆ, ಶುಭಾಂಗಿನಿ, ಸರೋಜಿನಿ, ಸಂಯುಕ್ತಾ, ಅಮೃತಮತಿ, ರಮಣಿ, ನಳಿನಾಕ್ಷಿ, ನಿರುಪಮಾ - ಇಷ್ಟು ಮಂದಿಯಲ್ಲಿ ಶುಭಾಂಗಿನಿ, ಸರೋಜಿನಿ ಮತ್ತು ಸಂಯುಕ್ತಾ ಜೊತೆ ಮದುವೆಯಾಗಿತ್ತು ಎಂಬ ಮಾತುಗಳಿವೆ. ಈ ಮದುವೆಗೆ ಇಪ್ಪತ್ತನಾಲ್ಕು ಗಂಟೆಗಳ ದಾಂಪತ್ಯ ಯಾವ ವಿಧದಲ್ಲೂ ಸಾಪೇಕ್ಷವಾಗದು ಅನಿಸುತ್ತದೆ. ಏಕೆಂದರೆ, ಸಿನಿಮಾದ ಮೂರು ಗಂಟೆಗಳ ಅಮರ ಮಧುರ ಪ್ರೇಮವಾಗಲಿ, ಇಂಥ ಇಪ್ಪತ್ತನಾಲ್ಕು ಗಂಟೆಗಳ ಕಾಲಮಿತಿಯ ದಾಂಪತ್ಯವಾಗಲಿ ಬದುಕಿಗೆ ಸಾಪೇಕ್ಷ ಒದಗಿಸುವಲ್ಲಿ ಸೋಲುತ್ತವೆ. ಹಾಗಾಗಿಯೇ ಸಿನಿಮಾ ಸಿನಿಮಾವೇ, ಕತೆ ಕತೆಯೇ, ಕಾದಂಬರಿ ಕಾದಂಬರಿಯೇ.  ಇನ್ನು ಅಶ್ವತ್ಥಾಮನ ದಾಂಪತ್ಯ ಒಂದು ವಿಫಲ ದಾಂಪತ್ಯ ಎಂದು ಕಾಣಬೇಕಾದ ಅಗತ್ಯವೇ ಇಲ್ಲ ಎನಿಸುತ್ತದೆ. ಜಗತ್ತಿನ ಎಲ್ಲಾ ದಾಂಪತ್ಯವೂ ಇವನದರಷ್ಟೇ ವಿಫಲ ಅಥವಾ ಸಫಲ ಎನ್ನುವುದೇ ಅದಕ್ಕೆ ಕಾರಣ. ಸುಶೀಲಾ ಎಂಬವಳಿಂದ ದಾಂಪತ್ಯ ಎನ್ನುವುದೇ ಕುಲುಮೆ ಎನ್ನುವ ಪಾಠ ಕಂಡುಕೊಂಡೆ ಎಂದು ಒಂದು ಕಡೆ ಅಶ್ವತ್ಥಾಮನ್ ಹೇಳುತ್ತಾನೆ. ಅದು ಬದುಕಿಗೆ ಹೆಚ್ಚು ಹತ್ತಿರವಿರುವ, ಹೆಚ್ಚು ಸಮೃದ್ಧ ಪರಿಪ್ರೇಕ್ಷ್ಯವನ್ನೊದಗಿಸಬಲ್ಲ ಒಂದು ಸತ್ಯದರ್ಶನ. ಬಹುಶಃ ಬದುಕನ್ನು ಅರ್ಥ ಮಾಡಿಕೊಂಡ ಎಲ್ಲರಿಗೂ ಆಗಿರುವ ಸತ್ಯದರ್ಶನವೇ.

ಕೊನೆಗೆ ಧರ್ಮ ಠಾಕೂರ್ ಎಂಬ ದೇವರ ಕತೆಯೊಂದಿದೆ. ಅದು ಅಶ್ವತ್ಥಾಮನ ನಟನೆಗೆ ಸಂಬಂಧಿಸಿದ್ದು. ಇಷ್ಟರಲ್ಲಾಗಲೇ ನಮಗೆ ಅಶ್ವತ್ಥಾಮನ್ ಒಬ್ಬ ಹುಟ್ಟು ನಟ, ಅವನು ಬದುಕನ್ನು ಕೂಡಾ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತಾ ನಿಭಾಯಿಸಬೇಕಾದ ಒಂದು ಸಿನಿಮಾದ ಹಾಗೆ ಎಂದು ಭಾವಿಸಿರುವ ಬಗ್ಗೆ ನಮಗೆ ಮನದಟ್ಟಾಗಿರುತ್ತದೆ. ಹಾಗೆ ನೋಡಿದರೆ, ಇಲ್ಲಿ ನಾವೆಲ್ಲರೂ ನಟರೇ. ಜೀವನ ಒಂದು ರಂಗಭೂಮಿಯೇ. ನಮ್ಮ ನಮ್ಮ ಪಾತ್ರವನ್ನು ನಿಭಾಯಿಸಿ ನೇಪಥ್ಯಕ್ಕೆ ಸರಿಯುವುದೇ ನಮಗಿರುವ ಆಯ್ಕೆ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರುವ ಸತ್ಯವೇ. ಹಾಗಾಗಿ ಧರ್ಮ ಠಾಕೂರ್ ಎಂಬ ದೇವರ ಪ್ರಕರಣ ತುಂಬ ಕೌತುಕದ್ದು, ರೋಚಕವಾದದ್ದು ಎನ್ನುವುದು ಬಿಟ್ಟರೆ ಅದು ಹೊಸ ದರ್ಶನವನ್ನೇನೂ ಕಾಣ್ಕೆಯಾಗಿ ಒದಗಿಸಿಲ್ಲ ಎನ್ನಬಹುದು.

ಇಲ್ಲಿ ಪುರಾಣದ ಅಶ್ವತ್ಥಾಮನ ನೆರವನ್ನೂ ಪಡೆಯಬೇಕು ನಾವು, ಟು ದ ಎಕ್ಸ್‌ಟೆಂಟ್ ಪಾಸಿಬಲ್. 

ಬಹುಶಃ ಮಹಾಭಾರತದ ಅತ್ಯಂತ ದೌರ್ಭಾಗ್ಯದ ಪಾತ್ರವೆಂದರೆ ಅದು ಅಶ್ವತ್ಥಾಮನದ್ದೇ ಇರಬೇಕು. ಶಿವನಿಂದಲೇ ಚಿರಂಜೀವಿ ಎಂದು ವರವನ್ನು ಪಡೆದ, ಹಣೆಯ ಮೇಲೆ ಭಾಗ್ಯದ ಮಣಿಯನ್ನೂ ಹೊಂದಿದ ವರಪುತ್ರ ಅಶ್ವತ್ಥಾಮ ಎನ್ನುತ್ತಾರೆ. ಇದನ್ನು ನಂಬಬಹುದು ಅಥವಾ ಬಿಡಬಹುದು. ಏಕೆಂದರೆ, ಶಿವ ವರಕೊಟ್ಟಿದ್ದರೆ ಅದನ್ನು ಐನು ಇಕ್ಕಟ್ಟಿನ ಘಳಿಗೆಯಲ್ಲಿ ದ್ರೋಣ ಮರೆತನೇಕೆ ಎಂಬ ಪ್ರಶ್ನೆ ಉಳಿಯುತ್ತದೆ. ಅಲ್ಲದೆ, ಶ್ರೀಕೃಷ್ಣನೇ ಕೊಟ್ಟ ಶಾಪ, ಅಶ್ವತ್ಥಾಮನ ಚಿರಂಜೀವತ್ವ ಎನ್ನುವ ಕತೆಯೂ ಇದೆ, ಇದಕ್ಕೆ ವ್ಯತಿರಿಕ್ತವಾಗಿ. ಅದೇನೇ ಇರಲಿ, ದ್ರೋಣ ಪುತ್ರನಾತ. ಬ್ರಾಹ್ಮಣ, ಅಂದರೆ ಜ್ಞಾನಕ್ಕೆ ಅಧಿಕಾರ ಹೊಂದಿದ್ದವ. ದ್ರೋಣ ಸ್ವತಃ ಕ್ಷತ್ರಿಯ ವಿದ್ಯಾಗುರು. ಅಂದರೆ ಶಸ್ತ್ರಾಸ್ತ್ರ ವಿದ್ಯೆಗೂ ಸಹಜವಾಗಿ ಅಧಿಕಾರ ಪಡೆದಿದ್ದ. ಮೇಲಾಗಿ ಯೌವನದಲ್ಲಿ ದುರ್ಯೋಧನನಂಥ ಕುರುಸಾಮ್ರಾಜ್ಯಾಧಿಪತಿಯ ಸ್ನೇಹ. ಆದರೆ ಅಶ್ವತ್ಥಾಮನ ನಸೀಬಿನಲ್ಲಿ ಏನಿತ್ತು ನೋಡಿ.

ಬಾಲ್ಯವನ್ನೆಲ್ಲ ಹಿಟ್ಟಿನಲ್ಲಿ ಕಲಸಿದ ನೀರನ್ನೇ ಹಾಲೆಂದು ನಂಬಿ, ಅದನ್ನೇ ಕುಡಿದು ಬೆಳೆದ. ಚಿರಂಜೀವಿ ಎಂದು ಶಿವನಿಂದ ವರ ಪಡೆದ ತಂದೆಯೇ ಮಗನ ಸಾವಿನ ಸುಳ್ಳು ಸುದ್ದಿಯನ್ನು ನಂಬಿ ಸಾಯುತ್ತಾನೆ, ಅಂದರೆ, ಒಂದರ್ಥದಲ್ಲಿ ಅಪ್ಪನ ಸಾವಿಗೆ ಮಗನೇ ಕಾರಣನೂ ಆದ. ದುರ್ಯೋಧನನ ಸ್ನೇಹಿತನಾಗಿದ್ದೂ ಸದಾ ಅವನ ಹಿತವನ್ನು ಬಯಸಿ ಆಡಿದ ಮಾತು ಅವನಿಗೇ ಅಪಥ್ಯ ಆಗಿರುತ್ತಿತ್ತು. ಅಂದರೆ, ನಿಜವಾದ ಹಿತ ಬಯಸುವ ಸ್ನೇ-ಹಿತನಾಗಿಯೂ ದುರ್ಯೋಧನ ಅದನ್ನು ಅರಿಯದೇ ಹೋಗುತ್ತಾನೆ. ದುರ್ಯೋಧನ ಇವನ ಮಾತಿಗೆ ಒಂದಿಷ್ಟಾದರೂ ಕಿವಿಕೊಡುತ್ತಿದ್ದನಂತೆ, ಆ ಮಾತು ಬೇರೆ. ಆದರೆ ಅದರಿಂದಾದ ಲಾಭವೇನು? ಕೊನೆಗೂ ಅವನು ತೊಡೆ ಮುರಿದುಕೊಂಡು ಬಿದ್ದಾಗ ಅವನನ್ನು ಖುಶಿಪಡಿಸಲು ದುಡುಕಿ ತಾನು ಶಿಶುಹತ್ಯಾ ದೋಷಕ್ಕೆ ಈಡಾಗುತ್ತಾನೆ. ಉಪಪಾಂಡವರ ಕತ್ತು ಕೊಯ್ದು ನಿಂದ್ಯನಾಗುತ್ತಾನೆ. ಅಷ್ಟು ಸಾಲದೆಂಬಂತೆ, ಉತ್ತರೆಯ ಗರ್ಭನಾಶಕ್ಕೆ ಬ್ರಹ್ಮಾಸ್ತ್ರ ಉಪಯೋಗಿಸುವ ಅವಿವೇಕ. ಕೊನೆಗೆ ಕೇಶಮುಂಡನ, ಮಣಿ ಛೇದ. 

ಯೋಚಿಸಿ ನೋಡಿ, ಅಶ್ವತ್ಥಾಮನ ಯಾವುದೇ ಅವಿವೇಕದಲ್ಲೂ ಸ್ವಾರ್ಥ ಇರಲಿಲ್ಲ. ಇನ್ನೊಬ್ಬರ ಮೆಚ್ಚುಗೆ ಪಡೆಯಲು, ಇನ್ನೊಬ್ಬರ ಪ್ರೀತಿಗಾಗಿ ಅವನು ಏನೇನೋ ಮಾಡುತ್ತ ಹೋದನೇ ಹೊರತು ಸ್ವಂತಕ್ಕಾಗಿ ಏನೂ ಮಾಡಿರಲಿಲ್ಲ. ಆದರೆ ಮಾಡಿದ್ದೆಲ್ಲ ಅವಿವೇಕದ ಪರಮಾವಧಿ. ಈ ಪಾತ್ರವನ್ನು ತಾರ್ಕಿಕವಾಗಿ ಅರ್ಥಮಾಡಿಕೊಳ್ಳುವುದೇ ಕಷ್ಟ. ಅಶ್ವತ್ಥಾಮನದ್ದು ವಿಧಿಯೆ? ಬಯಸಿದರೂ ಸಾವು ಬರದೆ, ಸದಾ ಪರಿತಪಿಸುತ್ತ ಬದುಕು ಎಂದೇ ಶ್ರೀಕೃಷ್ಣ ಇವನನ್ನು ವಧಿಸದೇ ಬಿಟ್ಟುಬಿಡುತ್ತಾನೆ. ವಧಿಸಿದರೆ ಬ್ರಹ್ಮಹತ್ಯಾ ದೋಷ! ಅಶ್ವತ್ಥಾಮ ಒಬ್ಬ ಬ್ರಾಹ್ಮಣ.

ಜೋಗಿಯವರ ಅಶ್ವತ್ಥಾಮನೂ ಬಹುತೇಕ ಒಬ್ಬ ಅಂತರ್ಪಿಶಾಚಿಯಂತೆ, ತನ್ನನ್ನೇ ತಾನು ಅರಿಯಲಾರದೇ ಹೋಗುವ, ತಾನು ಇಲ್ಲಿ ಕೇವಲ ಒಬ್ಬ ನಟನಷ್ಟೇ ಎಂದು ಕಂಡುಕೊಂಡ, ಅಪರಾಧ ಎನಗಿಲ್ಲ, ಅಪರಾಧಿ ನಾನಲ್ಲ ಎಂಬ ಪ್ರಜ್ಞೆ ಇದ್ದ, ಇದ್ದುದರಿಂದಲೇ ಪಾಪಪ್ರಜ್ಞೆಯಿಂದ ಮುಕ್ತನಾಗಿದ್ದ ಜ್ಞಾನಿಯ ತರ ಕಾಣಿಸಿಯೂ ಸದಾ ತೊಳಲಾಟದಲ್ಲೇ ಇರುವಂತೆ ಕಾಣುತ್ತಾನೆ. ಅಶ್ವತ್ಥಾಮನ ಒಂದಂಶ ನನ್ನ ನಿಮ್ಮಲ್ಲೂ ಇರುವುದರಿಂದಲೇ ಈ ಅಶ್ವತ್ಥಾಮ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಾನೆ, ಕಾಡಬೇಕು. ಜೋಗಿಯವರ ಈ ಕಾದಂಬರಿ ಅದನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ.  

ಅಶ್ವತ್ಥಾಮೋ ಬಲಿರ್ವ್ಯಾಸಃ ಎಂದು ಸುರುವಾಗುವ ಮಂತ್ರವನ್ನು ನೀವು ಒಮ್ಮೆಯಾದರೂ ಕೇಳಿರುತ್ತೀರಿ. ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪ ಮತ್ತು ಪರಶುರಾಮ ಎಂಬ ಏಳು ಮಂದಿ ಚಿರಂಜೀವಿಗಳನ್ನು ನೆನೆಯುವುದಕ್ಕೆ ಸನಾತನಿಗಳಲ್ಲಿ ಪ್ರಾಶಸ್ತ್ಯವಿದೆ. ಬಹುಶಃ ಅಮರತ್ವದ ಬಯಕೆಯುಳ್ಳವರಿಗೆ ಅದು ಪ್ರಾಪ್ತಿಯಾಗಲಿ ಎಂದಿರಬಹುದು. ಸಾವು ಯಾರಿಗೂ ಆಪ್ಯಾಯಮಾನವೇನಲ್ಲ ಬಿಡಿ. ಹಾಗಂತ, ಯಾರಿಗೂ ಚಿರಂಜೀವಿಯಾಗುವ ಆಸೆ ಕೂಡಾ ಇದ್ದಂತಿಲ್ಲ, ಅದರ ಸೈಡ್ ಅಫೆಕ್ಟುಗಳ ಬಗ್ಗೆ ಗೊತ್ತಿರುವುದರಿಂದ. ಅಂದರೆ, ಚಿರಂಜೀವತ್ವವೇ ಒಂದು ವಿಧದ ಶಾಪ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಗೊತ್ತಿಲ್ಲದಿದ್ದರೆ ವೆಂಟಿಲೇಟರುಗಳಲ್ಲಿ ತಿಂಗಳಾನುಗಟ್ಟಲೆ ಸತ್ತೂ ಉಸಿರಾಡುವ ದೇಹಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಸ್ವಲ್ಪ ವಿಚಿತ್ರ ಅನಿಸುವುದೆಂದರೆ, ಈ ಅಶ್ವತ್ಥಾಮನಿಂದಲೇ ಸುರುವಾಗುವ ಚಿರಂಜೀವಿಗಳ ಲಿಸ್ಟು ಗಮನಿಸಿದರೆ, ಅಶ್ವತ್ಥಾಮನೊಬ್ಬನನ್ನು ಬಿಟ್ಟರೆ ಉಳಿದವರು ಯಾಕೆ ಚಿರಂಜೀವಿಗಳಾಗುವ ಶಾಪ / ವರ ಹೊತ್ತರೋ ಅರ್ಥವಾಗುವುದಿಲ್ಲ.  ಬದುಕಿನಲ್ಲೂ ಯಾವುದು ಶಾಪ, ಯಾವುದು ವರ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಗೊತ್ತಾಗುವಾಗ ಶಾಪವನ್ನು ಬೇಡಿ ಪಡೆದಿರುತ್ತೇವೆ, ವರವನ್ನು ಶಾಪವೆಂದು ಹಿಡಿಶಾಪ ಹಾಕಿ ಬದುಕಿರುತ್ತೇವೆ. ಆದರೆ ತಿರುಗಿ ನೋಡುವ ವ್ಯವಧಾನವೂ ಇಲ್ಲದವರಿಗೆ ಶಾಪ, ವರ, ಸಾವು ಮತ್ತು ಚಿರಂಜೀವತ್ವದ ರಹಸ್ಯಗಳು ಗೊತ್ತೇ ಆಗದ ಹಾಗೆ ಬದುಕು ಮುಗಿದಿರುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, November 5, 2020

ಮೂರೂ ಬದಿ ಕಡಲು, ಕುಡಿಯಲು ಹನಿಯಿಲ್ಲ!

ಈಚೆಗೆ ಫೇಸ್‍ಬುಕ್ಕಿನಲ್ಲಿ ಜೋಗಿಯವರು ಒಂದು ಪೋಸ್ಟ್ ಹಾಕಿದರು. ಅದು ಇಲ್ಲಿದೆ:

"ಕನ್ನಡದಲ್ಲಿ ಎಷ್ಟೊಂದು ಕಾದಂಬರಿಗಳು ಬರುತ್ತಿವೆ ಅಂದರೆ ಓದುವುದಕ್ಕೆ ಹಬ್ಬವೋ ಹಬ್ಬ. ಮಾರ್ಚ್ ಒಂದರಂದು ನನ್ನ ಅಶ್ವತ್ಥಾಮನ್ ಬಿಡುಗಡೆ ಆಯಿತು. ಆ ನಂತರ ಬಂದ ಕಾದಂಬರಿಗಳ ಪೈಕಿ ಈಗ ನನ್ನ ಕೈಯಲ್ಲಿ ಸುಮಾರು ಇಪ್ಪತ್ತೈದು ಕಾದಂಬರಿಗಳಿವೆ.. ನೀವು ಕಂಡ, ಈ ಪಟ್ಟಿಯಲ್ಲಿಲ್ಲದ, 2020ರಲ್ಲಿ ಬಂದ ಕಾದಂಬರಿಗಳನ್ನು ಸೇರಿಸುತ್ತಾ ಬನ್ನಿ. 

 1. ಸಂಸ - ಮಲೆಯೂರು ಗುರುಸ್ವಾಮಿ 
 2. ಗೈರ ಸಮಝೂತಿ- ರಾಘವೇಂದ್ರ ಪಾಟೀಲ 
 3. ಚುಕ್ಕಿ ಬೆಳಕಿನ ಹಾಡು - ಕರ್ಕಿ ಕೃಷ್ಣಮೂರ್ತಿ 
 4. ಕಾಲಯಾತ್ರೆ- ಕೃಷ್ಣಮೂರ್ತಿ ಹನೂರು 
 5. ಬೂಬರಾಜ ಸಾಮ್ರಾಜ್ಯ- ಜನಾರ್ದನ ಭಟ್ 
 6. ಅಂತು- ಪ್ರಕಾಶ್ ನಾಯಕ್ 
 7. ಋಷ್ಯಶೃಂಗ- ಹರೀಶ ಹಾಗಲವಾಡಿ 
 8. ರಾಯಕೊಂಡ- ಕರಣಂ ಪವನ ಪ್ರಸಾದ್ 
 9. ಕಾಡ ಸೆರಗಿನ ಸೂಡಿ- ಮಂಜುನಾಥ ಚಾಂದ್ 
10. ಕೆಂಪು ಮುಡಿಯ ಹೆಣ್ಣು- ಪಾಮುಕ್/ಓಎಲ್ಲೆನ್ 
11. ಪತ್ಮಂದೆ- ಅನುಬೆಳ್ಳೆ 
12. ನೂರ್ ಜಹಾನ್- ವಿಜಯ ಸುಬ್ಬರಾಜ್ 
13. ಕರ್ತೃ- ಶ್ರುತಿ ಬಿಎಸ್ 
14. ಕಾದಂಬರಿ- ಸುಪ್ರೀತ್ ಕೆ ಎನ್ 
15. ಪ್ರತಿಜ್ಞೆ -ಗುರುರಾಜ ಕೋಡ್ಕಣಿ 
16. ಪುಂಸ್ತ್ರೀ - ಪ್ರಭಾಕರ ಶಿಶಿಲ 
17. ಮಧ್ಯಘಟ್ಟ- ಶಿವಾನಂದ ಕಳವೆ 
18. ವಿಳಾಸ ಬದಲಾಗುತ್ತಿದೆ- ವಸುಮತಿ ಉಡುಪ 
19. ದಂದುಗ -ಅಮರೇಶ ನುಗಡೋಣಿ 
20. ಜನನಾಯಕ- ಅಚಿಬೆ/ವಿಕ್ರಂ ಚದುರಂಗ 
21. ಪಾತಾಳಗರಡಿ- ಎನ್ ಎಸ್ ಕೇಶವರಾಜು 
22. ರಾಜಾವಾರ್ಡ್- ನಿಡಸಾಲೆ ಪುಟ್ಟಸ್ವಾಮಯ್ಯ 
23. ಮಂಜಿ ಮಹಾದೇವನ ಗಂಜೀ ಪುರಾಣ- ಜಿ ಎಸ್ ಭಟ್ಟ ಸಾಗರ 
24. ರುಧಿರಾಭಿಷೇಕ- ಬಾಬು ಕೃಷ್ಣಮೂರ್ತಿ 
25. ಶೋಷಣೆ- ವಿಶ್ವಾಸ ಪಾಟೀಲ/ಚಂದ್ರಕಾಂತ ಪೋಕಳೆ 
26. ತೇಜೋ ತುಂಗಭದ್ರಾ- ವಸುಧೇಂದ್ರ 
27. ಹುಲಿ ಪತ್ರಿಕೆ- ಅನುಷ್ ಶೆಟ್ಟಿ 
28. ಅಶ್ವತ್ಥಾಮನ್ - ಜೋಗಿ" 

ಆಮೇಲೆ ಕೆಲವು ಓದುಗರು ಸೇರಿಸುತ್ತ ಬಂದ ಕೃತಿಗಳು, ನಾನು ಸೇರಿಸಿದ ಕೆಲವೂ ಸೇರಿ ಪಟ್ಟಿ ಬೆಳೆಯುತ್ತ ಹೋಯಿತು. 
 29. ಸು - ಪ್ರಸನ್ನ ಸಂತೇಕಡೂರು 
 30. ಮಿತಿ - ಧೀರಜ್ ಪೊಯ್ಯೆಕೊಂಡ 
 31. ಕಾಲಾಯ ತಸ್ಮೈನಮಃ - ಕೌಶಿಕ್ ಕೂಡುರಸ್ತೆ 
 32. ಕಾಡಿಗೊಂದು ಕಿಟಕಿ - ಎಂ. ದಾನೀಶ್ 
 33. ಹುಳ - ಪೂರ್ಣಿಮಾ ಮಾಳಿಗಿಮನಿ 
 34. ಪ್ರತಿಷ್ಠೆ - ನಾ ಮೊಗಸಾಲೆ 
 35. ಗೌರಿಯರು - ಅಮರೇಶ ನುಗಡೋಣಿ 
 ================ 

ಕನ್ನಡಿಗರಿಗೆ ಕಾದಂಬರಿ ಅಂದಾಗ ನೆನಪಾಗುವ ಕೃತಿಗಳು ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’, ಕಾರಂತರ ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’, ‘ಮೈಮನಗಳ ಸುಳಿಯಲ್ಲಿ’, ‘ಅಳಿದ ಮೇಲೆ’, ‘ಮೂಕಜ್ಜಿಯ ಕನಸುಗಳು’, ಮಾಸ್ತಿಯವರ ‘ಚಿಕವೀರ ರಾಜೇಂದ್ರ’, ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ ಮತ್ತು ‘ಅವಧೇಶ್ವರಿ’, ಶಾಂತಿನಾಥ ದೇಸಾಯಿಯವರ ‘ಮುಕ್ತಿ’, ರಾವ್ ಬಹದ್ದೂರರ ‘ಗ್ರಾಮಾಯಣ’, ಮಿರ್ಜಿ ಅಣ್ಣಾರಾಯ ಅವರ ‘ನಿಸರ್ಗ’, ತರಾಸು ಅವರ ‘ದುರ್ಗಾಸ್ತಮಾನ’, ಎಸ್ ಎಲ್ ಭೈರಪ್ಪನವರ ‘ಗೃಹಭಂಗ’ ಮತ್ತು ‘ವಂಶವೃಕ್ಷ’, ತೇಜಸ್ವಿಯವರ ‘ಕರ್ವಾಲೊ’ ಮತ್ತು ‘ಚಿದಂಬರ ರಹಸ್ಯ’, ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’, ವ್ಯಾಸರಾಯ ಬಲ್ಲಾಳರ ‘ಬಂಡಾಯ’, ಯಶವಂತ ಚಿತ್ತಾಲರ ‘ಶಿಕಾರಿ’ ಮತ್ತು ‘ಪುರುಷೋತ್ತಮ’, ಯು ಆರ್ ಅನಂತಮೂರ್ತಿಯವರ ‘ಸಂಸ್ಕಾರ’, ಚದುರಂಗರ ‘ವೈಶಾಖ’, ನಿರಂಜನರ ‘ಮೃತ್ಯುಂಜಯ’, ಶ್ರೀಕೃಷ್ಣ ಆಲನಹಳ್ಳಿಯವರ ‘ಭುಜಂಗಯ್ಯನ ದಶಾವತಾರಗಳು’ ಮುಂತಾದ ಕೆಲವೇ ಕೆಲವು ಕೃತಿಗಳು. ಬಹುಶಃ ಕನ್ನಡದ ಮೊದಲ ಇಪ್ಪತ್ತು - ಇಪ್ಪತ್ತೈದು ಕಾದಂಬರಿಗಳಾಗಿ ಸದಾ ಕಾಲ ನಿಲ್ಲಬಲ್ಲ ಕೃತಿಗಳಿವು. 

ಅದೇ ನವ್ಯೋತ್ತರ ಘಟ್ಟಕ್ಕೆ ಬಂದರೆ ಅಂಥ ಕಾದಂಬರಿಗಳು ಎಷ್ಟಿವೆ ಎಂದು ಕೇಳಿದರೆ, ಅಂಥ ಎಂದರೆ ಯಾವ ಬಗೆಯವು ಎಂಬ ಪ್ರಶ್ನೆಯೇ ಮುಖ್ಯವಾಗಿ ಎದ್ದು ನಿಲ್ಲುತ್ತದೆ. 

ಕಾದಂಬರಿಯ ಕುರಿತು ಅದೊಂದು ಪ್ರಕಾರ ಎಂದು ನೋಡುವಾಗ ನಮಗೆ ಹುಟ್ಟುವ ಪರಿಕಲ್ಪನೆ ಏನು? ಅದೇ ಒಂದು ಕಾದಂಬರಿಯ ಓದು ಕೊಡಬೇಕಾದ ಒಟ್ಟಾರೆ ಅನುಭೂತಿಯನ್ನು ಗಮನಿಸಿ ಹೇಳುವುದಾದಲ್ಲಿ ಅದು ಇರಬೇಕಾದ್ದು ಹೇಗೆ ಎಂಬ ಪ್ರಶ್ನೆಗಳು ತೀರ ಸಾಪೇಕ್ಷವಾದವು. ಹೋಲಿಕೆಯೇ ಇಲ್ಲದಿದ್ದಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವುದೂ ಇಲ್ಲ ಎನ್ನುವುದನ್ನು ಒಪ್ಪಿಕೊಂಡರೆ, ಕೆಲವೊಂದು ಕೃತಿಗಳನ್ನೇ ಮಾನದಂಡವಾಗಿಟ್ಟುಕೊಂಡು ನಾವು ಈ ಪ್ರಶ್ನೆಯನ್ನು ಎದುರಿಸುವುದು ಅನಿವಾರ್ಯ ಎನ್ನುವುದನ್ನೂ ಒಪ್ಪಿಕೊಂಡಂತೆ. 

ಕಾದಂಬರಿ ಎಂದರೇನು, ಸಣ್ಣಕತೆಗಿಂತ ಅದು ಹೇಗೆ ಭಿನ್ನ ಎನ್ನುವ ಬಗ್ಗೆ ವಿವೇಕ್ ಶಾನಭಾಗ್ ಅವರು ಶಾಂತಿನಾಥ ದೇಸಾಯಿಯವರ ಮಾತುಗಳನ್ನು ಉಲ್ಲೇಖಿಸುತ್ತ ವಿವರಿಸಿದ್ದರು. 

“ನಾನು ಯಾವಾಗ್ಲು ಈ ಉದಾಹರಣೆಯನ್ನ ಕೊಡ್ತ ಇರ್ತೇನೆ; ಅದನ್ನು ಶಾಂತಿನಾಥ ದೇಸಾಯಿ ಹೇಳಿದ್ರು. ಅದೇನಂದ್ರೆ, ಕತೆಯಂದ್ರೆ ಒಂದು ಮರದ ಮೇಲೆ ಹತ್ತಿ ಅದ್ರ ಹಣ್ಣು ತಿಂದ್ಹಂಗೆ, ಕಾದಂಬರಿ ಅಂದ್ರೆ ಇಡೀ ತೋಟದಲ್ಲೆ ಓಡಾಡಿ, ನಿಮ್ಗೆ ಬೇಕಾದ ಹಣ್ಣು ಕಿತ್ಹಂಗೆ ಅಂತ. ಅಂದ್ರೆ ನಿಮಗೆ ಹೇಳ್ಬೇಕಾಗಿದ್ದೇನಂದ್ರೆ, ಒಟ್ಟು ಎರಡೂ ಮಾಧ್ಯಮ ಇದ್ಯಲ್ಲ, ಅದಕ್ಕದಕ್ಕೆ ಭಿನ್ನವಾದ ಒಂದು ಜೀವನದೃಷ್ಟಿ ಬೇಕಾಗತ್ತೆ. ಎರಡನ್ನು ಬರೀಬೇಕಾದ್ರೆ ನಮ್ಮ ಮನಸ್ಥಿತಿ, ಅದಕ್ಕೆ ಬೇಕಾದ ಸಿದ್ಧತೆ ಮತ್ತು ಅದಕ್ಕೆ ಬೇಕಾದ ಲೋಕದೃಷ್ಟಿ ಎಲ್ಲವೂ ತುಂಬ ಭಿನ್ನವಾದದ್ದು. ಆದ್ರಿಂದ ಒಂದು ಕತೆ ಬರೀತ ಬರೀತ ಕಾದಂಬರಿಯಾಗೋದಿಲ್ಲ ಅಥ್ವಾ ಒಂದು ಉದ್ದ ಕತೆ ಕಾದಂಬರಿಯಾಗೋದಿಲ್ಲ. ಕಾದಂಬರಿಗೆ ತುಂಬ ಆಳ ಬೇಕು. ಅಂದ್ರೆ, it is about total experience... ಅಂಥ ಒಂದು ಪೂರ್ಣ ಅನುಭವದ ಒಂದು ಮಾಧ್ಯಮ ಅದು. ಆದ್ರೆ ಕತೆ ಅಂದ್ರೆ ಹಾಗಲ್ಲ. ಅದರ ಅಳತೆ ಚಿಕ್ಕದು, ಆಮೇಲೆ ಅದ್ರಲ್ಲಿ ನೀವು ಹೇಳಬೇಕಾದ ಸಂಗತಿಗಳನ್ನ ಚುರುಕಾಗಿ ಹೇಳ್ಬೇಕು, ಒಂದು ಮಾಧ್ಯಮ ಆಗಿ ಅದು ಬೇರೆ. ಹಾಗಾಗಿ ಕತೆಗಾರನಿಗೆ ಮತ್ತು ಕಾದಂಬರಿಕಾರನಿಗೆ ಇರಬೇಕಾದ ಮನಸ್ಥಿತಿ ಎರಡೂ ಬೇರೆ ಬೇರೆ. ಆಮೇಲೆ ಕಾದಂಬರಿ ಬರೆಯುವಾಗ ಹೆಚ್ಚು ಸಾವಧಾನ ಬೇಕು ಅಂತ ನನಗನಿಸುತ್ತೆ. ಅಂದ್ರೆ ಸಾವಧಾನ ಅನ್ನೋದು ನಾನು ನಿಮಗೆ ಒಂದನ್ನ ತಿಳ್ಕೊಂಡು, ಒಂದನ್ನ ಅರಗಿಸಿಕೊಂಡು, ಒಂದನ್ನ ಸಮಾಧಾನವಾಗಿ ಹೇಳುವ ರೀತಿ. ಸಮಾಧಾನ ಅನ್ನೋದನ್ನ ತುಂಬ metaphoricalಆದ ಅರ್ಥದಲ್ಲಿ ನೀವದನ್ನ ತಗೊಳ್ಬೇಕು. ಸಮಾಧಾನಕರವಾದ ರೀತಿಯಲ್ಲಿ ಅದನ್ನ ಹೇಳ್ಬೇಕು. ಸೊ, ಈ ಎಲ್ಲ ರೀತಿಯಿಂದ ಎರಡೂ ಸಂಪೂರ್ಣ ಭಿನ್ನವಾದ ಮಾಧ್ಯಮಗಳಂತ್ಲೆ ನನಗೆ ಅನ್ಸುತ್ತೆ. ಆಮೇಲೆ ನಾನು ಈ ಕಾದಂಬರಿಗಳನ್ನ ಬರೀತಾ ಇರೋದಿಕ್ಕೂ ಮತ್ತೆ ಆ ತರ ಈ ಕ್ಷೇತ್ರದಲ್ಲಿ ನಾನು ಈಗ ಎರಡು ಕಾದಂಬರಿಗಳನ್ನ ಬರೆಯೋದಿಕ್ಕು ಇದೇ ಒಂದು ಕಾರಣ; ಯಾಕಂದ್ರೆ ಅದು ನನಗೆ ಅದು ಹೆಚ್ಚು space ಕೊಡುತ್ತೆ ಅಂತ ನನಗನಿಸಿದೆ.” 

2003ರ ನವೆಂಬರ್‌ನಲ್ಲಿ ಹರೀಶ್ ಕೇರ ಅವರು ಉದಯವಾಣಿ ಸಾಪ್ತಾಹಿಕದಲ್ಲಿ ಬರೆಯುವ ಮತ್ತು ಬರೆಯದಿರುವ ಕಷ್ಟ ಎಂಬ ಹೆಸರಿನಲ್ಲಿ ಒಂದು ಸಂವಾದ ಆರಂಭಿಸಿದರು. ಈ ಲೇಖನ ಬಹು ಮುಖ್ಯವಾದ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿತ್ತು.

"ಮರೀಚಿಕೆಯಾದ ಕೆಲವೇ ಏಕಾಂತದ ಘಳಿಗೆಗಳು ದೊರಕಿದಾಗ ಅವುಗಳನ್ನು ಕ್ಷಿಪ್ರ, ಸರಳ ಮತ್ತು ಅಷ್ಟೇನೂ ಆತ್ಮವಿಲ್ಲದ ಬರಹಗಳು ನುಂಗುತ್ತವೆ............ಅಂದರೆ ಅರ್ಥ ಇಷ್ಟೆ. ಇದು ಚೆದುರಿ ಹೋದ ಕಥನಗಳ ಯುಗ. ಇಲ್ಲಿ ಇಡಿ ಇಡೀ ಘನೀಕೃತವಾದ ಕಾದಂಬರಿ, ಒಂದು ಜೀವನ ದರ್ಶನವನ್ನು ಒಂದು ಬೀಸಿನಲ್ಲಿ ಕೊಡಬಹುದಾದ ಕೃತಿಗಳು - ಅಂದರೆ ಮರಳಿ ಮಣ್ಣಿಗೆ, ಮಲೆಗಳಲ್ಲಿ ಮದುಮಗಳು, ಗ್ರಾಮಾಯಣದಂಥ ಕೃತಿಗಳು ವರ್ತಮಾನ ಕಾಲದಲ್ಲಿಲ್ಲ." 

ಹದಿನೇಳು ವರ್ಷಗಳ ಹಿಂದಿನ ಅದೇ ಪ್ರಶ್ನೆ ಇವತ್ತಿಗೂ ಪ್ರಸ್ತುತವೇ ಅನಿಸುವುದು ನಿಜ. 

ಈಗ ಕಾದಂಬರಿಯ ಪರಿಕಲ್ಪನೆ ಸಾಕಷ್ಟು ಬದಲಾಗಿರುವಂತೆಯೂ ಕಾಣುತ್ತದೆ. ಸಣ್ಣಕತೆಯೊಂದು ಕಾದಂಬರಿಯಾಗಿ ಬದಲಾದ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ನಾ ಮೊಗಸಾಲೆಯವರು ತಮ್ಮ ‘ಧಾತು’ ಕೃತಿಯ ಬಗ್ಗೆ ವಿವರಿಸುತ್ತ ಹೇಳಿದ ಮಾತುಗಳು, ಕೃಷ್ಣಮೂರ್ತಿ ಹನೂರ ಅವರು ತಮ್ಮ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯ ಬಗ್ಗೆ ಹೇಳಿಕೊಂಡಿರುವ ಮಾತುಗಳು, ಅವರು ಮತ್ತೆ ತಮ್ಮ ‘ಕಾಲ ಯಾತ್ರೆ’ ಕಾದಂಬರಿಯ ಮೊದಲಿಗೆ ಹೇಳಿಕೊಂಡಿರುವ ಮಾತುಗಳು, ಮೊಗಳ್ಳಿ ಗಣೇಶ್ ಅವರು ತಮ್ಮ ಕಾದಂಬರಿ ‘ಕಿರೀಟ’ದ ಬಗ್ಗೆ ಹೇಳಿಕೊಂಡಿರುವ ಮಾತುಗಳು, ಕರ್ಕಿ ಕೃಷ್ಣಮೂರ್ತಿಯವರು ತಮ್ಮ ‘ಚುಕ್ಕಿ ಬೆಳಕಿನ ಜಾಡು’ ಕಾದಂಬರಿಯ ಬಗ್ಗೆ ಹೇಳಿಕೊಂಡಿರುವ ಮಾತುಗಳೆಲ್ಲವೂ ಅವರ ಕಾದಂಬರಿ ಅವರದೇ ಇನ್ನೊಂದು ಸಣ್ಣಕತೆಯತ್ತ ನಮ್ಮ ಗಮನ ಸೆಳೆಯುವಂತಿವೆ. 

ಅಲ್ಲದೆ ಇವತ್ತು ಪುಂಖಾನುಪುಂಖ ಬರುತ್ತಿರುವ ಸಾಕಷ್ಟು ಕಾದಂಬರಿಗಳು ಒಟ್ಟಾರೆ ಅನುಭೂತಿಯಲ್ಲಿ ಒಂದು ಸಣ್ಣಕತೆಗಿಂತ ಹೆಚ್ಚಿನದ್ದೇನನ್ನೂ ದಯಪಾಲಿಸದ ಮಟ್ಟದಲ್ಲಿಯೇ ಇರುವುದು ಕೂಡ ಸುಳ್ಳಲ್ಲ. ಅವುಗಳಲ್ಲಿ ಒಂದೆರಡು ಪಾತ್ರಗಳ ಸರಳವಾದ ಒಂದು ಕತೆಯಷ್ಟೇ ಇರುತ್ತದೆ. ಆ ಪಾತ್ರಗಳ ಬದುಕಿನಲ್ಲಿ ನಡೆಯುತ್ತಿರಬಹುದಾದ ಯಾವತ್ತೂ ಕತೆಗಳು ಸದ್ಯಕ್ಕಂತೂ ಹಿನ್ನೆಲೆಗೆ ಸೇರುತ್ತವೆ ಮಾತ್ರವಲ್ಲ, ಈ ಕತೆ ಮುಗಿಯುವವರೆಗೆ ಅಮಾನತ್ತಿನಲ್ಲೇ ತೆಪ್ಪಗೆ ನಿಲ್ಲುತ್ತವೆ. ಹಾಗಾಗಿ ಬೇರಾವುದೇ ಪಾತ್ರಗಳು ಅಲ್ಲಿ ಎಂಟ್ರಿ ಪಡೆಯುವುದಿಲ್ಲ. ಊರಿನ ಶಾಲೆ, ಆಸ್ಪತ್ರೆ, ದೇವಸ್ಥಾನ, ಹಿರಿಯರು, ಮಕ್ಕಳು, ದನಕರುಗಳು, ಸಾಕುಪ್ರಾಣಿಗಳು, ಹವಾಮಾನದ ಏರಿಳಿತಗಳು, ರಾಜಕೀಯ ಚಟುವಟಿಕೆಗಳು, ಹಬ್ಬ ಹರಿದಿನಗಳು ಯಾವುವೂ ಅವರ ಕಾದಂಬರಿಯ ಚೌಕಟ್ಟಿನೊಳಗೆ ಬರುವುದಿಲ್ಲ. ಒಂದು ಪೂರ್ವನಿರ್ಧಾರಿತ ಕತೆಯ ಸೆಳೆತಕ್ಕೆ ಸಿಕ್ಕ ದರಗಲೆಯಂತೆ ಧಾವಂತದಿಂದ ಪಾತ್ರಗಳು ಚಲಿಸುತ್ತವೆ ಮತ್ತು ಆ ಕತೆಯೊಂದಿಗೆ ಅವು ಒಮ್ಮೆಗೇ ತಣ್ಣಗಾಗಿ ಬಿಡುತ್ತವೆ. ಆದರೆ ನಮ್ಮ ಬದುಕು ಹೀಗೆ ನಡೆಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿಯೇ, ಸ್ವಲ್ಪ ಕಾಲದ ಬಳಿಕ ಓದುಗನಿಗೆ ಬೇಕೆಂದರೂ ಆ ಕಾದಂಬರಿಯ ಯಾವ ಪಾತ್ರವೂ, ಕತೆಯೂ ನೆನಪಿಗೆ ಬರುವುದಿಲ್ಲ. ನಾವು ಓದಿದ ಮಹತ್ವದ ಕೆಲವು ಲೇಖಕರ ಎಷ್ಟು ಕತೆ ಅಥವಾ ಪಾತ್ರಗಳು ನಮಗೆ ಥಟ್ಟನೆ ಬೇಕೆಂದಾಗ ನೆನಪಾದಾವು? ಹಾಗೆಯೇ ಎಷ್ಟು ಕಾದಂಬರಿಗಳು ನಮ್ಮ ನೆನಪಿನಲ್ಲಿ ನಿಂತಿವೆ? ಅದೇ ಮೇಲೆ ಹೆಸರಿಸಿದ ಕನ್ನಡದ ಇಪ್ಪತ್ತು-ಇಪ್ಪತ್ತೈದು ಕಾದಂಬರಿಗಳ ಹೆಸರು ಕೇಳಿದ್ದೇ ಆ ಕೃತಿಯ ಯಾವುದಾದರೂ ಒಂದಂಶ ಪ್ರತಿಯೊಬ್ಬನ ಮನಸ್ಸಿನಲ್ಲೂ ಹಾದು ಹೋಗದೇ ಇರಲು ಸಾಧ್ಯವೆ? 

ಕಾದಂಬರಿಯ ಸ್ವರೂಪವೇ ಡೈಲ್ಯೂಟ್ ಆಗುತ್ತಾ ಅದು ಸಣ್ಣಕತೆಯದೇ ವಿಸ್ತರಿತ ರೂಪವಾಗಿ ಬದಲಾಗುವುದರಲ್ಲಿ ಮೂರು-ಮೂರೂವರೆ ಸಾವಿರ ಪದಗಳ ಇತಿಮಿತಿಯಲ್ಲಿದ್ದ ಸಣ್ಣಕತೆಯ ಗಾತ್ರವನ್ನು ಇದ್ದಕ್ಕಿದ್ದಂತೆ ಒಂದೂವರೆ ಪದಮಿತಿಗಿಳಿಸಿದ ಮತ್ತೀಗ ಸಣ್ಣಕತೆಗಳಿಗೇ ಕೊಕ್ ಕೊಟ್ಟಿರುವ ಪತ್ರಿಕೆಗಳ ಪಾತ್ರವೂ ಇರುವಂತಿದೆ. 

ಇದಲ್ಲದಿದ್ದರೂ ಕಾದಂಬರಿಯ ಓದು ಒಂದು ಸಾಮಾನ್ಯ ಸಣ್ಣಕತೆಯ ಓದಿನ ಮಟ್ಟದ ಅನುಭೂತಿಯನ್ನಾದರೂ ಕೊಡಲು ಸಮರ್ಥವಾದ ಉದಾಹರಣೆಗಳು ಹೆಚ್ಚಿಲ್ಲ ಎನ್ನುವುದು ದಿನದಿನಕ್ಕೆ ಮನದಟ್ಟಾಗುತ್ತಿರುವ ಹೊತ್ತಲ್ಲಿ ಬರುತ್ತಿರುವ ಕಾದಂಬರಿಗಳ ಸಂಖ್ಯೆ ಹೊಸ ಭರವಸೆ ಹುಟ್ಟಿಸಬೇಕೋ, ಅನುಭವ ಕಲಿಸಿದ ಪಾಠದಿಂದ ಇವುಗಳ ಬಗ್ಗೆ ಒಂದು ಪೂರ್ವಾಗ್ರಹೀತ ಮನೋಭಾವ ತಾಳಬೇಕೇ ಹೇಳುವುದು ಕಷ್ಟ. ಏಕೆಂದರೆ, ಸೃಜನಶೀಲ ಸಾಹಿತ್ಯ ಸೃಷ್ಟಿಯ ಬಗ್ಗೆ ಯಾರೂ ಯಾರಿಗೂ ಮುಂಗಡವಾಗಿ ಗ್ಯಾರೆಂಟಿ/ವಾರಂಟಿ ಕೊಡಲಾರರು. ಒಂದು ಬರಹ ಚೆನ್ನಾಗಿ ಬಂದರೆ ಅದು ಎಷ್ಟೋ ಬಾರಿ ಅದೃಷ್ಟದ ಫಲ! ನಾನು ಚೆನ್ನಾಗಿಯೇ ಬರೆಯುತ್ತೇನೆಂದಾಗಲೀ, ಓದುಗನ ಎಲ್ಲಾ ನಿರೀಕ್ಷೆಗಳನ್ನು ಪೂರೈಸುವೆನೆಂದೋ ಬರಹಗಾರ ವಾಗ್ದಾನ ಮಾಡಲು ಸಾಧ್ಯವೆ ಎಂಬ ಪ್ರಶ್ನೆಯಿದೆ. ಆದರೆ, ಓದುಗನಿಗೂ ಚೆನ್ನಾಗಿಲ್ಲದ್ದನ್ನು ಚೆನ್ನಾಗಿಲ್ಲ ಎನ್ನುವ ಸ್ವಾತಂತ್ರ್ಯವಿದೆಯಲ್ಲವೆ! ಅವನು ಅದನ್ನು ಹೇಳದೇ (ಯಾರಿಗೂ ಬೇಜಾರು ಉಂಟು ಮಾಡದೆ) ಬಾಯಿ ಮುಚ್ಚಿಕೊಂಡಿದ್ದರೆ ಚೆನ್ನ ಎಂದಾದರೆ, ಬಾಯಿ ತೆರೆಯಬೇಕು ಯಾರು! 

ಮೂಲತಃ ನಮಗೆ ಸಾಹಿತ್ಯ ಯಾಕೆ ಬೇಕು? ಸಾಹಿತ್ಯದಿಂದ ಸಾಮಾನ್ಯ ಮನುಷ್ಯನಿಗೆ ಏನು ಉಪಯೋಗವಿದೆ ಎನ್ನುವಂಥ ಮೂಲಭೂತ ಪ್ರಶ್ನೆಗಳಿಗೆ ಮತ್ತೆ ಹಿಂದಿರುಗುವ ಅಗತ್ಯ ಈಗ ಇನ್ನೊಂದೇ ಬಗೆಯಲ್ಲಿ ಕಾಡುತ್ತಿದೆ. ಸಾಹಿತ್ಯದಿಂದ ಮನುಷ್ಯ ಹೆಚ್ಚು ಪ್ರಬುದ್ಧ, ಹೆಚ್ಚು ಉದಾರ, ಹೆಚ್ಚು ಮಾನವೀಯ, ಹೆಚ್ಚು ವಿಶಾಲ ಮನೋಭಾವದವ ಮತ್ತು ಸಹಿಷ್ಣು ಆಗುತ್ತಾನೆಂದು ಒಪ್ಪುವುದಾದರೆ ನಮ್ಮ ಸಾಹಿತಿಗಳೇ ಯಾಕೆ ಹಾಗೆ ಆಗಿಲ್ಲ? 

ಸಾಹಿತ್ಯದ ಓದು ಮನುಷ್ಯನ ಭಾವಕೋಶವನ್ನು ವಿಸ್ತರಿಸುತ್ತದೆ, ಅವನಿಗೆ ಅವನ ವೈಯಕ್ತಿಕವೆನ್ನಬಹುದಾದ ಒಂದು ಸ್ಪೇಸ್ ನಿರ್ಮಿಸಿಕೊಡುತ್ತದೆ, ಅವನ ಮನಸ್ಸಿನ ಲಹರಿಗೆ ಭಾಷೆಯ ನೆರವನ್ನು ಒದಗಿಸಿ ಅವನನ್ನು ಅವನಿಗೆ ತೋರಿಸಿಕೊಡುವ ಕೆಲಸ ಮಾಡುತ್ತದೆ ಎನ್ನುವುದೆಲ್ಲ ನಿಜವಾದರೆ ಮೊದಲು ಅದರ ಫಲಾನುಭವಿ ಸ್ವತಃ ಸಾಹಿತಿಯೇ ಆಗಬೇಕಲ್ಲವೆ? ಅವನಿಗೇ ದಕ್ಕದೇ ಹೋದುದನ್ನು, ಅವನ ಬಳಿಯೇ ಇಲ್ಲದ್ದನ್ನು ಅವನು ಇನ್ನೊಬ್ಬರಿಗೆ ಹೇಗೆ ಕೊಡಬಲ್ಲ? 

ಒಂದು ಕಾಲಕ್ಕೆ ಸಾಹಿತಿಗಳು ಹಾಗಿರುತ್ತಾರೆ ಎಂದುಕೊಂಡು ಜನ ಅವರನ್ನು ಗೌರವಿಸುತ್ತಿದ್ದರು, ಆರಾಧನಾ ಮನೋಭಾವದಿಂದ ಕಾಣುತ್ತಿದ್ದರು. ಆದರೆ ಅದೇ ಜನ, ಮಠಾಧೀಶರು ರಾಜಕೀಯದ ಮಾತನಾಡುವುದನ್ನು ಸಹಿಸಿದವರು, ಸಾಹಿತಿಗಳು ಧರ್ಮ, ರಾಜಕೀಯ, ದೇಶ ಮುಂತಾದ ವಿಷಯದ ಬಗ್ಗೆ ಮಾತನಾಡದೆ ಬಾಯ್ಮುಚ್ಚಿಕೊಂಡಿರಬೇಕು ಎಂದೂ ಬಯಸಿದರು. ಅಂದರೆ, ಸ್ಥೂಲವಾಗಿ ಜೀವನಾನುಭವವನ್ನು ಓದು ಕೊಡುತ್ತದೆ ಮತ್ತು ಜೀವನಾನುಭವ ಇರುವವರು ಬರೆಯುತ್ತಾರೆ ಎನ್ನುವ ಸಾಮುದಾಯಿಕ ನಂಬುಗೆ ಛಿದ್ರಗೊಂಡಿದ್ದನ್ನು ನಾವು ಕಳೆದ ದಶಕದಲ್ಲಿ ಗಮನಿಸಿದ್ದೇವೆ. ಈ ಅವಧಿಯಲ್ಲಿ ಸಾಹಿತಿಗಳಷ್ಟು ಅವಹೇಳನಕ್ಕೆ ಗುರಿಯಾದ ಇನ್ನೊಂದು ವರ್ಗ ಬಹುಶಃ ನಮ್ಮ ಸಾಂಸ್ಕೃತಿಕ ವಲಯದಲ್ಲಿಲ್ಲ. ಈ ಬಗೆಯ ಬದಲಾವಣೆಗೆ ದೇಶದ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಪಲ್ಲಟಗಳು ಎಷ್ಟರಮಟ್ಟಿಗೆ ಕಾರಣವೋ ಅಷ್ಟೇ ಸಾಹಿತಿ ಸ್ವಕೇಂದ್ರಿತನಾಗಿ, ತನ್ನ ಪ್ರಸಿದ್ಧಿ/ಪ್ರಚಾರ/ಪ್ರಶಸ್ತಿ ಎಂದೆಲ್ಲ ರಾಜಕೀಯ ನಡೆಸುತ್ತ ಜನಮನದಲ್ಲಿ ಕುಸಿದಿದ್ದು ಕೂಡ ಕಾರಣ. ಅವನು ಸಾಹಿತ್ಯವನ್ನು ಬಳಸಿಕೊಂಡು ಫಲಾನುಭವಿಯಾಗಲು ಪ್ರಯತ್ನಿಸಿದಷ್ಟು ಸ್ವತಃ ಸಾಹಿತ್ಯದಿಂದ ಬೆಳೆಯಲಿಲ್ಲ. ಇಂಥವರು ಒಂದು ಸಮುದಾಯಕ್ಕೆ ಸಾಹಿತ್ಯದಿಂದ ಕೊಡಬಹುದಾದ್ದು ಏನು ಎಂಬ ಬಗ್ಗೆ ಜನ ನಿರ್ಧರಿಸಿದ್ದರಿಂದ ಸಾಹಿತಿ ಮತ್ತು ಸಾಹಿತ್ಯದ ಘನತೆಗೂ ಧಕ್ಕೆಯಾಯಿತು. ಅದೇ ಹೊತ್ತಿಗೆ ಸಾಹಿತಿಯೊಬ್ಬ ತನಗೆ ವ್ಯಕ್ತಿಗತವಾಗಿ ಸಿಗುವ ಪುರಸ್ಕಾರ, ಪ್ರಶಸ್ತಿ, ಲಾಭಗಳಿಗೆ ತನ್ನ ಸಮುದಾಯ ಮತ್ತು ಪ್ರಾದೇಶಿಕ ಪ್ರಾತಿನಿಧಿತ್ವವಹಿಸಿಕೊಳ್ಳಲು ಉತ್ಸುಕತೆ ತೋರುತ್ತಿದ್ದ. ಒಬ್ಬ ಸಾಹಿತಿಗೆ ಪ್ರಶಸ್ತಿ, ಪುರಸ್ಕಾರ ಸಿಕ್ಕರೆಷ್ಟು ಬಿಟ್ಟರೆಷ್ಟು, ಒಂದಲ್ಲಾ ಒಂದು ಬಗೆಯ ಲಾಬಿ ಮಾಡಿಯೇ ಗಳಿಸಿರಬಹುದಾದ ಅದನ್ನು ಅವನು ಹಿಂದಿರುಗಿಸಿದರೆಷ್ಟು ಇಟ್ಟುಕೊಂಡರೆಷ್ಟು ಎಂದು ಜನ ಅದಾಗಲೇ ತೀರ್ಮಾನಿಸಿದ್ದರಿಂದ ಅವನು ತನ್ನ ಸಾಮಾಜಿಕ ಮುಖವನ್ನೇ ಕಳಚಿ ಇಡಬೇಕಾಯಿತು. 

ಆದರೆ, ಸಾಹಿತಿ ಎಂಥ ನೀಚನೇ ಆಗಿರಲಿ, ಬರೆಯಲು ಕೂತಾಗ ಅವನು ಬೇರೆಯೇ ವ್ಯಕ್ತಿ. ಅವನಿಗೆ ಪಾಪಲೇಪವಿಲ್ಲ. ಸೃಜನಶೀಲ ವ್ಯಕ್ತಿತ್ವ ಬೇರೆ, ನಾವು ಕಾಣುವ ಬರಹಗಾರನ ವ್ಯಕ್ತಿತ್ವ ಬೇರೆ. ಇದನ್ನು ತಮ್ಮನ್ನು ತಾವು ಕಳೆದುಕೊಂಡು ಬರವಣಿಗೆಯಲ್ಲಿ ತನ್ಮಯರಾದ ಪ್ರತಿಯೊಬ್ಬ ಬರಹಗಾರನೂ ಒಪ್ಪುತ್ತಾನೆ. ಆದರೆ ಇವತ್ತು ಅಂಥ ಬರಹಗಾರನ ಜೊತೆಜೊತೆಗೇ ಇನ್ನೊಂದು ಬಗೆಯ ಬರಹಗಾರರ ತಳಿಯೂ ಹುಲುಸಾಗಿದೆ. ನಾವು ನೀವೆಲ್ಲ ಎಲಿಮೆಂಟರಿ ಶಾಲೆಯಲ್ಲಿ ತೆಂಗಿನಮರ (ದ ಮೇಲೆ) ದ ಕುರಿತು ಅಥವಾ ಬೇಸಿಗೆಯ ರಜೆಯ ಬಗ್ಗೆಯೋ ಪ್ರಬಂಧ ಬರೆದ ಹಾಗೆ ಕತೆ-ಕಾದಂಬರಿ ಬರೆಯುವವರು! ಇವರಿಗೆ ಆ ತನ್ಮಯತೆ ಎಂದರೇನೆಂದೇ ಅರ್ಥವಾಗುವುದಿಲ್ಲ. ಇವರಿಗೆ ಕತೆ, ಸಿನಿಮಾ ಕತೆಯಿದ್ದ ಹಾಗೆ ಮುಖ್ಯಾತಿ ಮುಖ್ಯ. ಹುಡುಕಾಟವೇನಿಲ್ಲ ಸಾಹಿತ್ಯ ಸೃಷ್ಟಿಯಲ್ಲಿ. ಕತೆಯನ್ನು ಚೆನ್ನಾಗಿ ಹೇಳಿಬಿಡುವುದು ಮುಖ್ಯ. ಹಾಗಾಗಿ ಇವರು ಎಲ್ಲಿಯೂ ಮೈಮರೆಯುವುದಿಲ್ಲ. ಇವರ ಮಟ್ಟಿಗೆ ಸೃಜನಶೀಲ ವ್ಯಕ್ತಿತ್ವ ಮತ್ತು ಸಾಮಾಜಿಕ ವ್ಯಕ್ತಿತ್ವ ಎನ್ನುವುದೆಲ್ಲ ಇರುವುದಿಲ್ಲ. ಇರುವುದೆಲ್ಲ ಮಹಾನ್ ಲೇಖಕನ ಫೋಸು ಒಂದೇ. 

ಮೊದಲಿಗೆ ಸಾಹಿತಿ ಈ ಅವಧಿಯಲ್ಲಿ ತನ್ನದೇ ಸಮುದಾಯದಿಂದ ದೂರವಾಗಿದ್ದನ್ನು ನಾವು ಗಮನಿಸಬೇಕು. ಕಾರಂತರು ಕಾಲ್ನಡಿಗೆಯಲ್ಲಿ ಪುತ್ತೂರು, ಸುಳ್ಯ, ವಿಟ್ಲ ಸೀಮೆಯನ್ನು ಸುತ್ತಿದವರು. ಬ್ರಹ್ಮಾವರ, ಬಾರ್ಕೂರು, ಸಿದ್ಧಾಪುರ ಸೀಮೆಯನ್ನು ಸುತ್ತಿದವರು. ಬೈಂದೂರು, ಭಟ್ಕಳ, ಕುಮುಟಾ ಸುತ್ತಿದವರು. ಊರೂರು ಸುತ್ತುವಾಗ ಮಂದಿ ತಮ್ಮ ಸಂಬಂಧಿಕರ ಅಥವಾ ಪರಿಚಯಸ್ಥರ, ಅದೂ ಸಾಧ್ಯವಿಲ್ಲದಿದ್ದರೆ ಊರಿನ ಅನುಕೂಲಸ್ಥರ ಮನೆಯಲ್ಲಿ ತಂಗುತ್ತಿದ್ದ, ಹೋಟೇಲು, ಲಾಡ್ಜುಗಳಿಲ್ಲದ ದಿನಗಳವು. ಕಾರಂತರಲ್ಲಿಗೆ ಶಿಕ್ಷಣಕ್ಕೋ, ಬಡತನಕ್ಕೋ ನೆರವು ಕೇಳಿ ಬರುತ್ತಿದ್ದ ಮಂದಿಯನ್ನು ಕೂಡಾ ಕೂರಿಸಿಕೊಂಡು, ನಿನ್ನ ಮನೆ ಎಲ್ಲಾಯಿತು, ಅಲ್ಲಿಯೇ ಹುಟ್ಟಿ ಬೆಳೆದವರೋ ಬೇರೆ ಕಡೆಯಿಂದ ಬಂದು ನೆಲೆಯಾದವರೋ, ಮೂಲ ಸ್ಥಳದಲ್ಲಿ ಈಗ ಯಾರಿದ್ದಾರೆ, ನಿನ್ನ ತಂದೆ ಏನು ಮಾಡುತ್ತಾರೆ, ತಾಯಿ ಎಷ್ಟು ಕಲಿತಿದ್ದಾರೆ, ನೀವು ಒಟ್ಟಿಗೆ ಎಷ್ಟು ಮಕ್ಕಳು, ಅವರೆಲ್ಲ ಎಲ್ಲಿದ್ದಾರೆ, ಏನೇನು ಮಾಡಿಕೊಂಡಿದ್ದಾರೆ, ಮುಂದೇನು ಮಾಡಬೇಕಂತ ಇದ್ದಿ ಎಂದೆಲ್ಲ ಎಷ್ಟು ಕುತೂಹಲ ಮತ್ತು ಆಪ್ತಭಾವದಿಂದ ವಿಚಾರಿಸುತ್ತಿದ್ದರೆಂದರೆ ಯಾರಿಗೂ ಯಾವತ್ತೂ ಈಯಪ್ಪ ನಾಲ್ಕು ಕಾಸು ಕೊಡಲು ಎಷ್ಟೆಲ್ಲ ಕೇಳುತ್ತಾರಪ್ಪ ಅನಿಸುತ್ತಿರಲಿಲ್ಲ, ಬದಲಿಗೆ ತಾವು ಎಂದಾದರೂ ಅವರ ಕಾದಂಬರಿಯ ಪಾತ್ರಗಳಾಗಬಹುದೇನೋ ಎಂಬ ಆಸೆಯೇ ಮೊಳೆಯುತ್ತಿತ್ತು! ಆದರೆ ಕಾರಂತರ ಕುತೂಹಲಕ್ಕೆ ಅಂಥ ಉದ್ದೇಶಗಳಿದ್ದವೋ ಇಲ್ಲವೊ, ಆದರೆ ಅವರ ಜೀವನ ಪ್ರೀತಿಯಂತೂ ಅದರಲ್ಲಿ ಎದ್ದು ಕಾಣುತ್ತಿತ್ತು. ಆದರೆ ಇವತ್ತು ನಮ್ಮ ವೈದ್ಯರು ಕೂಡ ನಾವು ವಿವರಿಸುವುದನ್ನು ಕೇಳುವ ಸಹನೆ ತೋರಿಸುವುದಿಲ್ಲ. ಅವರಿಗೆ ನಾವೇನು ತಿಂದೆವು, ನಾವು ಸಸ್ಯಾಹಾರಿಗಳೇ, ಮಾಂಸಾಹಾರಿಗಳೇ, ನಮ್ಮ ಜೀವನ ಶೈಲಿ ಹೇಗಿದೆ ಎಂಬುದೆಲ್ಲ ಬೇಕಾಗಿಯೇ ಇಲ್ಲ. ಅತ್ಯಾಧುನಿಕ ಯಂತ್ರಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಕೊಡುವ ರಿಪೋರ್ಟುಗಳಿದ್ದರೆ ಸಾಕು. 

ಆಗಲೂ ಸಾಹಿತಿಗಳ ನಡುವೆ ಸಾಹಿತ್ಯಿಕ ಜಗಳಗಳಿದ್ದವು, ಮನಸ್ತಾಪಗಳಿದ್ದವು. ಆದರೂ ಒಂದು ಮಟ್ಟದ ಹೊಂದಾಣಿಕೆ ಕೂಡಾ ಇತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಯಾವುದೇ ಒಂದು ಕೃತಿಯ ಬಗ್ಗೆ ಅಪಸ್ವರ ಎದ್ದ ನೆನಪಿದೆಯೆ ನಿಮಗೆ? ಎಸ್ ಎಲ್ ಭೈರಪ್ಪನವರ ಕಾದಂಬರಿಯ ಬಗ್ಗೆ ಯು. ಆರ್. ಅನಂತಮೂರ್ತಿಯವರು ಎತ್ತಿದ ಅಪಸ್ವರವೇ ಕೊನೆಯದು. ಅಂದರೆ, ಎಲ್ಲಿ ಕಟುವಾದ ವಿಮರ್ಶೆ, ನಿಷ್ಠುರ ಪ್ರತಿಸ್ಪಂದನ ಇಲ್ಲವೋ ಅಲ್ಲಿ ನೀರು ಕೂಡ ಸರಾಗವಾಗಿ ಹರಿಯುವುದಿಲ್ಲ. ಹಾಗಾಗಿ ಈಗಿನ ವ್ಯಾಟ್ಸಪ್ ಗ್ರೂಪುಗಳಲ್ಲಿ ನಡೆಯುತ್ತಿರುವುದು ಏನೆಂಬುದನ್ನು ಅದರ ಸದಸ್ಯರ ಮನೋಧರ್ಮ ಗಮನಿಸಿದರೆ ಅರ್ಥವಾಗುತ್ತದೆ. ಪರಸ್ಪರರನ್ನು ನೇವರಿಸಿಕೊಳ್ಳುವುದರಲ್ಲಿಯೇ ಈ ಮಂದಿ ಮುಳುಗಿದಂತೆ ಕಾಣುತ್ತಿದೆ. 

ಅಂದರೆ ಆ ಮುಂದಿನ ತಲೆಮಾರು ಹೆಚ್ಚು ಹೆಚ್ಚು ಸ್ವ-ಕೇಂದ್ರಿತವಾಗುತ್ತ ಹೋಗಿದ್ದನ್ನು ಕಾಣುತ್ತೇವೆ. ಇವತ್ತು ಸಿಟಿ ಬಸ್ಸುಗಳಲ್ಲಿ ಓಡಾಡುವ ಸಾಹಿತಿಗಳು, ವಠಾರದ/ಬಾಡಿಗೆ ಮನೆಗಳಲ್ಲಿ ವಾಸಿಸುವ ಸಾಹಿತಿಗಳು ಇದ್ದಾರೆಯೇ ಎನ್ನುವುದೇ ಅನುಮಾನ! ಇವರು ಯಾವತ್ತೂ ಸಿಟಿಬಸ್ಸಿನ ಕಂಡೆಕ್ಟರು/ಡ್ರೈವರುಗಳ ಜೊತೆ ಲೋಕಾಭಿರಾಮ ಮಾತನಾಡಲಾರರು. ತಮ್ಮದೇ ಕಚೇರಿಯ ಕಸಗುಡಿಸುವ, ನೆಲ ಒರೆಸುವ ಮಂದಿಯ ಕಷ್ಟಸುಖ ಕೇಳಲಾರರು. ಅಂಥವರ ಬಳಿ ಮಾತನಾಡುವುದೇ ತಮ್ಮ ಗೌರವಕ್ಕೆ ಕಡಿಮೆ ಎಂಬ ಭಾವದ ಜೊತೆ ಅವರೇನಾದರೂ ಸಹಾಯ ಕೇಳಿದರೆ ಎಂಬ ಭಯವೂ ಸೇರಿರುತ್ತದೆ. ಹೆಚ್ಚಿನ ಮಹತ್ವದ ಬರಹಗಾರರೆಲ್ಲರೂ ಬೆಂಗಳೂರು ಅಥವಾ ಅಂಥವೇ ಜಿಲ್ಲಾಕೇಂದ್ರಗಳಲ್ಲಿ, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವ ಪ್ರತಿಷ್ಠಿತರು. ಅವರು ಸದಾ ಬಾಗಿಲು ಮುಚ್ಚಿರುವ ಫ್ಲ್ಯಾಟುಗಳಲ್ಲಿಯೋ, ಹತ್ತಡಿ ಎತ್ತರದ ಕಾಂಪೌಂಡು ಗೋಡೆಯೊಳಗಿನ ಬಂಗಲೆಯಲ್ಲಿಯೋ ಇರುತ್ತಾರೆ. ಅವರ ಓಡಾಟವೆಲ್ಲ ಎಸಿ ಕಾರುಗಳಲ್ಲಿ. ಎಸಿ ಕಾರಿನ ಬಾಗಿಲಿನಿಂದ ಇಳಿದವರೇ ಲಿಫ್ಟುಗಳ ಬಾಗಿಲುಗಳಲ್ಲಿ ಮುಚ್ಚಿಕೊಳ್ಳುತ್ತಾರೆ. ಲಿಫ್ಟುಗಳ ಬಾಗಿಲಿನಿಂದ ಹೊರಬಿದ್ದಿದ್ದೇ ಫ್ಲ್ಯಾಟು ಅಥವಾ ಕಚೇರಿಯ ಬಾಗಿಲುಗಳಲ್ಲಿ ಮುಚ್ಚಿ ಹೋಗುತ್ತಾರೆ. ಇವರಿಗೆ ಸಾಮಾನ್ಯ ಜನ ಯಾವುದರ ಬಗ್ಗೆ ಮಾತನಾಡುತ್ತಾರೆ, ಅವರ ಭಾಷೆ ಹೇಗೆ ಬದಲಾಗಿದೆ, ಅವರ ಬದುಕು ಹೇಗಿದೆ ಎನ್ನುವ ವಾಸ್ತವ ಚಿತ್ರವೇ ಗೊತ್ತಿಲ್ಲ. ಆದರೆ ಅವರ ಕುರಿತು ಬರೆಯುವ ಮತ್ತು ತಾವು ಬರೆಯುತ್ತಿರುವಂತೆಯೇ ಅವರ ವಾಸ್ತವ ಇದೆ ಎಂದು ಭಾವಿಸುವ ಮಟ್ಟಕ್ಕೆ ಹೋಗುತ್ತಾರೆ. ಹಾಗಾಗಿ ಒಂದು ಅಥೆಂಟಿಕ್ ಜಗತ್ತನ್ನು ಸೃಷ್ಟಿಸುವಲ್ಲಿ ಮುಗ್ಗರಿಸುತ್ತಾರೆ. ಇವರು ಬರೆಯುವ ಸಾಹಿತ್ಯ ಓದಿದರೆ, ನಿಮಗೆ ಇವರೆಲ್ಲ ಚಿತ್ರಿಸುವ ಅದೇ ಸಾಮಾನ್ಯ ಮನುಷ್ಯನ ಬದುಕು ಹೇಗಿದೆ ಎನ್ನುವುದರ ವಾಸ್ತವ ಪ್ರಜ್ಞೆ ಇದ್ದರೆ, ತಕ್ಷಣ ಇವರು ಬದುಕುತ್ತಿರುವ ಜಗತ್ತು ನೆಲಬಿಟ್ಟು ಎಷ್ಟು ಕಾಲವಾಗಿರಬಹುದೆನ್ನುವುದರ ಅರಿವು ಹುಟ್ಟುತ್ತದೆ. 

ಆದರೆ ಇದರ ಅರಿವು ಓದುಗರಿಗೂ ಇಲ್ಲದಿರುವುದು ಇನ್ನೊಂದು ತಮಾಶೆ ಅಥವಾ ವಿಪರ್ಯಾಸ! ಏಕೆಂದರೆ, ಇವತ್ತು ಪುಸ್ತಕಗಳನ್ನು ಓದುವ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ಸ್ವತಃ ಬರಹಗಾರರು ಮತ್ತು ಹತ್ತನೆಯವನು ಬರಹಗಾರನಾಗುವ ಕನಸು ಕಾಣುತ್ತಿರುತ್ತಾನೆ. ಈ ಓದುಗರು ಕೂಡ ಬರಹಗಾರರು ಬರೆಯುತ್ತಿರುವುದೇ ವಾಸ್ತವ ಎಂದು ನಂಬಿದ್ದಾರೆಯೇ, ಅಥವಾ ಹಾಗೆ ಬರೆಯುವುದೇ ಸರಿ ಎಂದುಕೊಂಡಿದ್ದಾರೆಯೇ, ಅಥವಾ ಅವರಿಗಿರುವ ಜೀವನಾನುಭವವೂ ಅದೇ ನೆಲೆಯದ್ದೇ ಎನ್ನುವುದು ಪ್ರಶ್ನೆ. ಏಕೆಂದರೆ ಹೊಸ ತಲೆಮಾರು ಸೃಷ್ಟಿಸುತ್ತಿರುವ ಸಾಹಿತ್ಯ ಕೂಡ ಅದೇ ಅಚ್ಚಿನಲ್ಲಿ ಎರಕ ಹೊಯ್ದಂತೆ ಇರುವುದು, ತೀರ ಹೊಸತನದ ಯಾವುದೂ ಬರುತ್ತಿಲ್ಲ ಎನಿಸುತ್ತಿರುವುದು ನಿಜ. ಏನನ್ನೂ ಬರೆಯದ, ಬರೆಯುವ ಅಭಿಲಾಶೆಯಿಲ್ಲದ ಒಬ್ಬ ಓದುಗ ನಿಮಗೆ ಸಿಕ್ಕಿದರೆ, ಅವನನ್ನು ತಲುಪುವ ಉದ್ದೇಶ ಕೂಡ ನಮ್ಮ ಸಾಹಿತಿಗೆ ಇಲ್ಲ. ನಮ್ಮ ಸಾಹಿತಿಗಳಿಗೆ ಈಗ ಹೆಚ್ಚು ಹೆಚ್ಚು ಪ್ರಶಸ್ತಿಗಳ ಒಂದು ಪಟ್ಟಿ ಇದ್ದರೆ ಸಾಕೆಂಬ ಭಾವನೆಯಿದೆ. ಹಿಂದೆ ವಿಮರ್ಶೆಗಿದ್ದ ಮಹತ್ವ ಈಗ ಪ್ರಶಸ್ತಿಗಳಿಂದ ತುಂಬಲ್ಪಡುತ್ತಿದೆ. ಆದರೆ ಸಾಕಷ್ಟು ಪ್ರಶಸ್ತಿಗಳಿಸಿದ ಪುಸ್ತಕವನ್ನು ಕೂಡಾ ಓದಿದವರು ಸಿಗುತ್ತಿಲ್ಲ. ಅಥವಾ, ಆ ಪುಸ್ತಕವನ್ನು ಕೂಡಾ ನೀವು ಆ ಸಾಹಿತಿಯನ್ನು ಸಂಪರ್ಕಿಸಿಯೇ ಪಡೆಯಬೇಕಾದ ಅನಿವಾರ್ಯ ಸ್ಥಿತಿ. ಸಾಹಿತಿಗೆ ಈ ಬಗ್ಗೆ ಯಾವುದೇ ಬೇಸರವೂ ಇಲ್ಲ! ಬಹುಶಃ ಹೆಚ್ಚು ಮಂದಿ ಓದಿ ಕೃತಿಯನ್ನು ಚೆನ್ನಾಗಿಲ್ಲ ಎಂದು ಬಿಟ್ಟರೆ ಎಂಬ ಭಯವೂ ಇರಬಹುದು ಅನಿಸುವಂತೆ ಆ ಕೃತಿಗಳೂ ಇರುತ್ತವೆ. ಹಾಗಿದ್ದೂ ಅದನ್ನು ಓದದೆಯೇ ಅಂಥ ಸಾಹಿತಿಯನ್ನು ರೆಕಮಂಡ್ ಮಾಡುವ, ಅಂಥವರಿಗೆ "ಸಿಗಬೇಕಾದ್ದು ಸಿಗಲಿಲ್ಲ" ಎಂದು ತಾವೇ ಡಂಗೂರ ಸಾರುವ ಹಿರಿಯ ಸಾಹಿತಿಗಳೂ ಇದ್ದಾರೆಂದರೆ ಈ ಸಾಹಿತಿ-ಓದುಗ ಸರಪಳಿಯ ದುರ್ಬಲ ಕೊಂಡಿಗಳು ಕಣ್ಣಿಗೆ ರಾಚದೇ ಇರುವುದು ಹೇಗೆ? ಒಬ್ಬ ಸಾಹಿತಿಗೆ "ಸಿಗಬೇಕಾದ್ದು" ಆತ ಆ ಕೃತಿಯನ್ನು ಬರೆಯುತ್ತಿರುವಾಗಲೇ ಸಿಗಲಿಲ್ಲ ಎಂದಾದರೆ ಇನ್ನೆಂದಿಗೂ ಅದು ಸಿಗುವ ಸಂಭವವೇ ಇಲ್ಲ. ಓದುಗನಿಗೆ ಸಿಗುವುದಂತೂ ದೂರದ ಮಾತಾಯಿತು. 

ಓದುಗ ಬೇಡ, ವಿಮರ್ಶೆ ಬೇಡ, ಪ್ರಶಸ್ತಿ ಪುರಸ್ಕಾರಗಳು ಮತ್ತು ನನ್ನ ಹೆಸರಿನಲ್ಲೊಂದು ಪುಸ್ತಕ ಇಷ್ಟು ಸಾಕು ಎನ್ನುವ ಮನೋಧರ್ಮದ ಸಾಹಿತಿ-ಓದುಗ ಚಕ್ರದಲ್ಲಿ ಕನ್ನಡ ಪುಸ್ತಕೋದ್ಯಮ ಸಿಕ್ಕಿಕೊಂಡಿದೆ ಎನಿಸುತ್ತದೆ. ಹಾಗಾಗಿಯೇ, ಇವತ್ತಿಗೂ ಆರೂವರೆ ಕೋಟಿ ಕನ್ನಡಿಗರಲ್ಲಿ ಮೊದಲ ಆವೃತ್ತಿಯ ಒಂದು ಸಾವಿರ ಪ್ರತಿಗಳು ಹಂಚಿ ಹೋಗುವುದು ಕಷ್ಟವೇ ಆಗಿದೆ. ಈ ಒಂದೆರಡು ಆವೃತ್ತಿಯ ಒಂದೆರಡು ಸಾವಿರ ಪ್ರತಿಗಳ ಖಾಸಾ ಓದುಗರು ಕೇವಲ ಸಾಹಿತಿಗಳೇ ಎನ್ನುವುದಕ್ಕೆ ಬೇರೆ ಸಾಕ್ಷ್ಯ ಬೇಕೆ?  
ಇನ್ನೊಂದು, ನಮ್ಮ ಹೆಚ್ಚಿನ ಸಾಹಿತಿಗಳು, ಹಿರಿಯರು ಕೂಡಾ, ಇಂಡಲ್ಜೆಂಟ್ ಆಗಿದ್ದಾರೆ ಎನಿಸುತ್ತದೆ. ಇದನ್ನು ಅನ್ಯಮನಸ್ಕರು ಎಂದು ಹೇಳಬಹುದಾದರೂ ಅನ್ಯಮನಸ್ಕತೆಯನ್ನು ನಾವು ಶೂನ್ಯಮನಸ್ಕತೆ ಎಂದು ಪರಿಭಾವಿಸುವ ಅಪಾಯವಿದೆ. ನಾನು ಹೇಳುತ್ತಿರುವುದು ಅದನ್ನಲ್ಲ. ನಮ್ಮ ಸಾಹಿತಿಗಳಲ್ಲಿ ಏಕಾಗ್ರತೆಯಿಲ್ಲ, ಅವರ ಫೋಕಸ್ ಮಾಡಬಲ್ಲ ಸಾಮರ್ಥ್ಯ ಕುಂದಿದೆ, ತಾವು ಭಾಷೆಯಲ್ಲಿ ಕಟ್ಟುತ್ತಿರುವ ಜಗತ್ತಿನೊಳಗೆ ಮತ್ತೆ ಮತ್ತೆ ಇಳಿಯಬಲ್ಲ ಅವರ ಸಾಧ್ಯತೆಯಿಂದ ಅವರು ದೂರವಾಗುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಇದನ್ನು ಹೇಳುತ್ತಿದ್ದೇನೆ. ಅಂದರೆ ಅವರ ಆಸಕ್ತಿ ಬೇರೆ ಹತ್ತಾರು ಕಡೆ ಹರಿದು ಹಂಚಿ ಹೋಗುತ್ತಿದೆಯೇ ಹೊರತು ಸಾಹಿತ್ಯದತ್ತ ಅವರ ಕನ್‌ವಿಕ್ಷನ್ ಕಡಿಮೆಯಿದೆ. ಆದರೆ, ಒಬ್ಬ ಸಾಹಿತಿಗೆ ಇದು ತೀರ ಅಗತ್ಯದ ಗುಣ. ಅದು ಇಲ್ಲದವರು ಅದನ್ನು ರೂಢಿಸಿಕೊಳ್ಳಬೇಕು ಮತ್ತು ಇದ್ದವರು ಕಳೆದುಕೊಳ್ಳಬಾರದು. ಏಕೆಂದರೆ, ಸಾಹಿತ್ಯಕ್ಕೆ ಗುರುಗಳಿಲ್ಲ. ಭಾಷೆ ಬರುವ ಯಾರೂ ಬರೆಯಬಹುದು ಎಂಬ ಒಂದು ಮೂಢನಂಬಿಕೆ ಎಲ್ಲರಲ್ಲಿದೆ. ಆದರೆ ಅದು ಅಷ್ಟು ನಿಜವಲ್ಲ. ಸಾಹಿತ್ಯ ರಚನೆಗೆ ಓದು ತೀರ ಅಗತ್ಯ. ಎಷ್ಟು ಅಗತ್ಯವೆಂದರೆ, ಕನಿಷ್ಠ ಉದ್ದದ ಸಣ್ಣಕತೆಯೇ ಕಾದಂಬರಿ ಅಲ್ಲ ಎಂದು ಇನ್ನೊಬ್ಬರು ಹೇಳದೆಯೇ ತಿಳಿದುಕೊಳ್ಳುವಷ್ಟು. ತಾವು ಬರೆಯುತ್ತಿರುವುದರ ಬಹಳ ಪ್ರಬುದ್ಧ ಆವೃತ್ತಿಯನ್ನು ಕನ್ನಡದಲ್ಲಿ ಈಗಾಗಲೇ ಹಿರಿಯರು ಬರೆದಿದ್ದಾರೆ ಎನ್ನುವುದಾದರೂ ಗೊತ್ತಿರುವಷ್ಟು. ಇಲ್ಲವಾದಲ್ಲಿ ಈ ಕನ್ವಿಕ್ಷನ್, ಫೋಕಸ್ ಮತ್ತು ತನ್ಮಯತೆ ಎನ್ನುವುದರ ಅಗತ್ಯ ಅರ್ಥವಾಗುವುದು ಕಷ್ಟ. 

ತುಂಬ ಹಿಂದೆ ವಿವೇಕ್ ಶಾನಭಾಗರ ಜೊತೆ ಮಾತನಾಡುತ್ತಿದ್ದಾಗ, ಸುದೀರ್ಘ ಬರವಣಿಗೆಯನ್ನು ತಿದ್ದುವ, ಒಟ್ಟು ಆಕೃತಿಯ ಪರಿಕಲ್ಪನೆಯಲ್ಲಿ ಅದನ್ನು ಪುನರ‍್ರಚಿಸುವ ಸಂಕಷ್ಟಗಳ ಬಗ್ಗೆ ಮಾತು ಬಂದಿತ್ತು. ಆಗ ಅವರು ಆಡಿದ ಮಾತುಗಳಿವು:

"...........ಕಾದಂಬರಿಯ ಪರಿಷ್ಕರಣೆಯ ಬಗ್ಗೆ. ಅಂದರೆ, ಒಂದು ದೀರ್ಘ ಕಾದಂಬರಿಯನ್ನು ಬರೆದು ಆದ ಮೇಲೆ ಅದರ ಒಳಗಡೆ ತುಂಬ ಸಂಕೀರ್ಣವಾದ ಒಂದು ಕಟ್ಟಡ ಇರುತ್ತದೆ ಅದರ ಒಳಗಡೆ. ಅಂದರೆ, ನೀವು ಆ ಸಂದರ್ಭಗಳನ್ನು, ಅದರ ಅಧ್ಯಾಯಗಳನ್ನ ನೋಡಿದರೆ, ಅದು ವರ್ಷದ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಋತುಮಾನಗಳಲ್ಲಿ, ಬೇರೆ ಬೇರೆ ಬೆಳಕಿನಲ್ಲಿ, ದಿನದ ಬೇರೆ ಬೇರೆ ಜಾಗಗಳಲ್ಲಿ ಜರುಗುವಂಥದ್ದು. ಸೊ, ಅಷ್ಟೊಂದು ಕಾಂಪ್ಲೆಕ್ಸನ್ನ ನಾನು ಮತ್ತೆ, ಅದನ್ನ ಬರೆದು ಒಂದೆರಡು ವರ್ಷ ಬಿಟ್ಟು ಮತ್ತೆ ಅದನ್ನ ಪರಿಷ್ಕರಣೆ ಮಾಡೋದಿದ್ಯಲ್ಲ, ಆವಾಗ ಅದು, ಅದರ ಒಳಗೆ ಪ್ರವೇಶ ಪಡೆಯುವುದಕ್ಕೇ ಒಂದು ವಾರ ಬೇಕಾಗುತ್ತದೆ. ಅಂದ್ರೆ, ಅದೇ ಮನಸ್ಥಿತಿಯಲ್ಲಿ ಮತ್ತೆ ಅದನ್ನೆಲ್ಲ ನೋಡಿ, ಆ ಪರಿಸ್ಥಿತಿಗೆ ಒಗ್ಗಿಕೊಳ್ಳಲಿಕ್ಕೆ, ಆವಾಹಿಸಿಕೊಳ್ಳಲಿಕ್ಕೆ ಅಗತ್ಯವಾದಂಥಾ ಒಂದು process ಇದ್ಯಲ್ಲ, ಅದು ತುಂಬ ಡಿಮಾಂಡಿಂಗ್ ಆಗಿರುತ್ತದೆ. ಅಂದರೆ ಮತ್ತೊಮ್ಮೆ ಕಾಣುವಾಗ ಕೆಲವೊಂದು ಸಂಗತಿಗಳು ಮೊದಲು ಕಂಡ ತೀವೃತೆಯಲ್ಲಿ ಕಾಣಿಸೋದಿಲ್ಲ, ಅಥವಾ ಆ ತೀವೃತೆಯಲ್ಲಿ ಆವಾಗ ನಾವು ಅದು ಅನಗತ್ಯ ಅಂತ ತಿಳ್ಕೊಂಡಿರ್ತೀವಿ, ಅಥವಾ ಬರೆಯುವಾಗ ಏನೋ ಒಂದು ಮನ್ಸಲ್ಲಿರುತ್ತೆ, ಬರೆಯುವಾಗ ಯಾವ್ದಾದರೂ ಕೆಲವು ಮುಖ್ಯ ಅಂತ ಅನಿಸಿರುವ ಸಂಗತಿಗಳಿರ್ತಾವಲ್ಲ, ಅಂದ್ರೆ ಮುಖ್ಯ ಅಂತ ಕಾದಂಬರಿಯ ಚೌಕಟ್ಟಿನ ಒಳ್ಗಡೆ; ಅದು ಕಾಲಾಂತರದಲ್ಲಿ, ಈ ಎಲ್ಲ ಬದಲಾವಣೆಗಳಿಂದ ಅದು ಬೇರೆಯೇ ತರ ಕಾಣಬಹುದು...." 

ದಿನಗಳೆದಂತೆ ನಮ್ಮ ಸಾಹಿತಿಗಳು ಈ ಏಕಾಗ್ರತೆಯ, ಫೋಕಸಿಂಗ್‌ನ, ತಮ್ಮ ಕಥಾಜಗತ್ತಿನೊಳಗೆ ಇಳಿದು ಅಲ್ಲಿನ ವ್ಯಕ್ತಿಗಳೊಂದಿಗೆ, ಸನ್ನಿವೇಶಗಳೊಂದಿಗೆ ಮೈಮರೆತು ಸೃಷ್ಟಿಕ್ರಿಯೆಯಲ್ಲಿ ಕಳೆದು ಹೋಗಬಲ್ಲ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಮತ್ತು ಇದಕ್ಕೆ ಅವರನ್ನು ಆಕರ್ಷಿಸುತ್ತಿರುವ ಜೀವ ಜಗತ್ತಿನ ಸಕಲೆಂಟು ಸಂಗತಿಗಳು ಕಾರಣ ಅನಿಸುತ್ತಿದೆ. ಇದರ ಒಟ್ಟಾರೆ ಪರಿಣಾಮ ಅವರು ಸೃಷ್ಟಿಸುತ್ತಿರುವ ಕಾದಂಬರಿಗಳ ಮೇಲೆ ಸಹಜವಾಗಿಯೇ ಆಗುತ್ತಿದೆ. 

ಇದು ನಮ್ಮ ಗಮನಕ್ಕೆ ನೇರವಾಗಿ ಬರುವುದು ನಾವು ಕನ್ನಡದೊಂದಿಗೆ ಓದುತ್ತಿರುವ ಬೇರೆ ಸಾಹಿತ್ಯದೊಂದಿಗೆ ತೌಲನಿಕವಾಗಿ ನೋಡುವಾಗಲೇ ಎನ್ನುವುದು ನಿಜ. ಅಂದರೆ, ಇಂಗ್ಲೀಷ್ ಮತ್ತು ಕನ್ನಡಕ್ಕೆ ಅನುವಾದಗೊಂಡು ಬರುತ್ತಿರುವ ಅನ್ಯಭಾಷಿಕ ಕೃತಿಗಳ ಜೊತೆಗೇ ಕನ್ನಡದ ಕೃತಿಗಳನ್ನಿಟ್ಟು ಕಾಣುವಾಗ ಹುಟ್ಟುವ ಮಾತುಗಳಿವು. ಆದರೆ ಈ ಹೊರಗಿನ ಸಾಹಿತ್ಯ ಕೃತಿಗಳು ಸದಾ ಕೆನೆಪದರದ, ಸಾಕಷ್ಟು ಸೋಸಿ, ಶೋಧಿಸಿ ಆಯ್ದ ಕೃತಿಗಳೇ ಆಗಿರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ ಕನ್ನಡದ ಕೃತಿಗಳನ್ನು ಅನ್ಯಭಾಷೆಯ ಶ್ರೇಷ್ಠ ಕೃತಿಗಳ ಜೊತೆಗಿಟ್ಟು ನೋಡುವುದು ಮತ್ತು ಮಾತನಾಡುವುದು ಸರಿಯೇ ಎಂಬ ಪ್ರಶ್ನೆ ಇದ್ದೇ ಇದೆ. ಆದರೆ, ಪರ್ಯಾಯದ ಲಭ್ಯತೆಯಿರುವಾಗ ಕನ್ನಡದ ಕೃತಿಗಳು ಸ್ಪರ್ಧಿಸಿ ಗೆಲ್ಲಬೇಕಾದ, ತಮ್ಮ ಹೆಚ್ಚುಗಾರಿಕೆಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯವೂ ಇದ್ದೇ ಇದೆ. ಹಾಗಾಗಿ, ವಸುಧೇಂದ್ರರ ‘ತೇಜೋ ತುಂಗಭದ್ರಾ’ ಇಸಬೆಲ್ಲಾ ಅಯ್ಯಂಡೆಯ ‘ಅ ಲಾಂಗ್ ಪೆಟಲ್ ಇನ್ ದ ಸೀ’ ಜೊತೆ ನಿಂತು ಗೆಲ್ಲಬೇಕಾಗುತ್ತದೆ. ಅಮರೇಶ ನುಗಡೋಣಿಯವರ ‘ದಂದುಗ’ ಜೊಸೆ ಸಾರಾಮೊಗೊನ ‘ಬ್ಲೈಂಡ್‌ನೆಸ್’ ಜೊತೆ ಸೆಣಸಬೇಕಾಗುತ್ತದೆ. ಹರೀಶ ಹಾಗಲವಾಡಿಯವರು ಹರ್ಮನ್ ಹೆಸ್ ಜೊತೆ ನಿಲ್ಲಬೇಕಾಗುತ್ತದೆ. ದೇಶ-ಕಾಲ ಮೀರಿ ಇದು ಅನಿವಾರ್ಯ. ಏಕೆಂದರೆ, ಸರಳವಾಗಿ ಇವತ್ತು ನನಗೆ ಪರ್ಯಾಯ ಆಯ್ಕೆಗಳಿವೆ ಎನ್ನುವುದೇ ಉತ್ತರ ಅದಕ್ಕೆ. ಹಾಗಾಗಿ ಸಾಹಿತ್ಯದ ವಿಚಾರದಲ್ಲಿ ಯಾರಾದರೂ ‘ನಾನು ಹಿಂದುಳಿದ ಜಾತಿಯ ಸಾಹಿತಿ, ನಾನು ಹಿಂದುಳಿದ ಪ್ರದೇಶದಿಂದ ಬಂದಿರುವ ಸಾಹಿತಿ, ಹಾಗಾಗಿ ನನಗೆ ನನ್ನ ಬರವಣಿಗೆಯ ಗುಣಮಟ್ಟ ಗಮನಿಸದೆ, ಕೊಂಚ ಮೀಸಲಾತಿ, ರಿಯಾಯಿತಿ ಕೊಡಿ’ ಎಂದು ಕೇಳಿದರೆ ಅದು ಹಾಸ್ಯಾಸ್ಪದವಾಗಿರುತ್ತದೆ. ಮೇಲ್ಜಾತಿಯವರ ಕಪಿಮುಷ್ಠಿಯಲ್ಲಿರುವ ಮಾಧ್ಯಮಗಳು, ಪ್ರಕಾಶನ ಸಂಸ್ಥೆಗಳು, ಅವಕಾಶದ ಹತ್ತು ಹಲವು ವೇದಿಕೆಗಳು ನಡೆಸುವ ರಾಜಕೀಯ, ಅನ್ಯಾಯ, ಸ್ವಜನಪಕ್ಷಪಾತ, ಜಾತೀಯತೆಯನ್ನು ಎದುರಿಸಲು ನಾವು ಬೇರೆಯೇ ಹತಾರಗಳನ್ನು ಕಂಡುಕೊಳ್ಳಾಬೇಕಿದೆಯೇ ಹೊರತು ಸುಲಭದಲ್ಲಿ ನುಸುಳಿಕೊಳ್ಳುವ ಸಂದುಗಳನ್ನು ಹುಡುಕಬರದು. ಆದರೆ ಸದ್ಯ ಕನ್ನಡದ ಸ್ಥಿತಿ ಇದು. 

ಬಹುಶಃ ಈ ಚಕ್ರದಿಂದ ಮುಕ್ತರಾಗಿ, ವರ್ಚ್ಯುಯಲ್ ಸಮುದಾಯದೊಂದಿಗೆ ತಮ್ಮನ್ನು ತಾವು ಕನೆಕ್ಟ್ ಮಾಡಿಕೊಳ್ಳುವ, ಹೆಚ್ಚು ವಿಶಾಲವಾದ ವಸ್ತು, ವಿಶಾಲವಾದ ಕ್ಯಾನ್ವಾಸಿಗೆ ಮಾತ್ರವೇ ಒಗ್ಗುವ ಕಥಾನಕ, ಸಣ್ಣಕತೆಗಿಂತ ಹೆಚ್ಚಿನದಕ್ಕೆ ಚಾಚಿಕೊಳ್ಳಬಲ್ಲ ಸಾಧ್ಯತೆಯುಳ್ಳ ಪ್ರಕಾರಕ್ಕೆ ತುಡಿಯುತ್ತಿರುವ ಲಕ್ಷಣದ ಅಭಿವ್ಯಕ್ತಿಯಾಗಿರಬಹುದೇ ಈ ಕಾದಂಬರಿ ಬರೆಯುವ ತುಡಿತ? ವಾಸ್ತವದ ಬದುಕಿನಲ್ಲಿ ಸಿಗಲಾರದೇ ಹೋದುದನ್ನು ಸೃಷ್ಟಿಕ್ರಿಯೆಯ ಮೂಲಕ ಪಡೆಯುವ ಅವನ ಹೊಸ ತಂತ್ರವಿರಬಹುದೇ ಈ ಸೃಜನಶೀಲ ಕ್ರಿಯಾಶೀಲತೆಯ ಹಿಂದೆ? ಸುದೀರ್ಘವಾದ ಬರಹದಲ್ಲಿ ತನ್ಮಯತೆಯಿಂದ ತೊಡಗಿಕೊಳ್ಳುವ ಮೂಲಕವೇ ಅವನು ಪಡೆದುಕೊಳ್ಳ ಬಯಸುವ ಏನನ್ನೋ ಈ ಕಾದಂಬರಿಯ ರಚನೆ ಅವನಿಗೆ ಕೊಡುತ್ತಿರಬಹುದೆ? 

ಬಹುಶಃ ಹೌದೆನ್ನಿಸುತ್ತದೆ. ಕಾದಂಬರಿ ಅವನಿಗೆ ಒಡ್ಡುವ ಸವಾಲು ಆ ಬಗೆಯದು. ಅದು ಕೊಡುವ ಸುಖವೂ ಅಂತಹುದೇ. ಮೂಲತಃ ನಮಗೆ ಸಾಹಿತ್ಯ ಯಾಕೆ ಬೇಕು? ಸಾಹಿತ್ಯದಿಂದ ಸಾಮಾನ್ಯ ಮನುಷ್ಯನಿಗೆ ಏನು ಉಪಯೋಗವಿದೆ ಎನ್ನುವಂಥ ಮೂಲಭೂತ ಪ್ರಶ್ನೆಗಳಿಗೆ ಮತ್ತೆ ಹಿಂದಿರುಗುವ ಅಗತ್ಯ ಈಗ ಇನ್ನೊಂದೇ ಬಗೆಯಲ್ಲಿ ಕಾಡುತ್ತಿದೆ. ಸಾಹಿತ್ಯದಿಂದ ಮನುಷ್ಯ ಹೆಚ್ಚು ಪ್ರಬುದ್ಧ, ಹೆಚ್ಚು ಉದಾರ, ಹೆಚ್ಚು ಮಾನವೀಯ, ಹೆಚ್ಚು ವಿಶಾಲ ಮನೋಭಾವದವ ಮತ್ತು ಸಹಿಷ್ಣು ಆಗುತ್ತಾನೆಂದು ತಿಳಿಯುತ್ತೇವೆ. ಸಾಹಿತ್ಯದ ಓದು ಮನುಷ್ಯನ ಭಾವಕೋಶವನ್ನು ವಿಸ್ತರಿಸುತ್ತದೆ, ಅವನಿಗೆ ಅವನ ವೈಯಕ್ತಿಕವೆನ್ನಬಹುದಾದ ಒಂದು ಸ್ಪೇಸ್ ನಿರ್ಮಿಸಿಕೊಡುತ್ತದೆ, ಅವನ ಮನಸ್ಸಿನ ಲಹರಿಗೆ ಭಾಷೆಯ ನೆರವನ್ನು ಒದಗಿಸಿ ಅವನನ್ನು ಅವನಿಗೆ ತೋರಿಸಿಕೊಡುವ ಕೆಲಸ ಮಾಡುತ್ತದೆ ಕೂಡ. ಹಾಗಾಗಿ ಕಾದಂಬರಿ ಬರೆಯುವುದರ, ಅದನ್ನು ತಿದ್ದುವುದರ ಹಿಂದಿನ ಎಲ್ಲ ಶ್ರಮ, ಕಷ್ಟ, ತ್ರಾಸದ ಜೊತೆಗೇ ಅದು ಕೊಡುವ ಸಂತೃಪ್ತಿ, ಸಿದ್ಧಿ ಬಹುಶಃ ಕಾದಂಬರಿ ಪ್ರಕಾರದ ಅದಮ್ಯ ಆಕರ್ಷಣೆಯಾಗಿರಬೇಕು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ