Friday, November 13, 2020

ಅಶ್ವತ್ಥಾಮ ಎಂಬ ಒಂದು ಉತ್ತರವೇ ಇಲ್ಲದ ಪ್ರಶ್ನೆ

ಜೋಗಿಯವರ ಬಗ್ಗೆ ನನ್ನದೊಂದು ತಕರಾರಿದೆ. ಅವರು ತಮ್ಮ ಕಾದಂಬರಿಗಳಲ್ಲಿ ಈ ಬದುಕಿನ ಕುರಿತು, ಮನುಷ್ಯನ ಕುರಿತು, ಮನಸ್ಸಿನ ಕುರಿತು, ಮನುಷ್ಯ ಸಂಬಂಧಗಳ ಕುರಿತು, ತಾತ್ವಿಕ ಜಿಜ್ಞಾಸೆಗಳ ಕುರಿತು ಅದ್ಭುತವಾದ ಪ್ರಶ್ನೆಗಳನ್ನು ಎತ್ತುತ್ತಾರೆ, ಆದರೆ ಅವುಗಳನ್ನು ಸರಿಯಾಗಿ ಹಿಂಜಿ ದಡ ಮುಟ್ಟಿಸುವ ಮೊದಲೇ ಕೈಬಿಡುತ್ತಾರೆ ಎನ್ನುವುದು. ಅದು ನನ್ನ ಗ್ರಹಿಕೆಯಿರಬಹುದು, ನನ್ನ ಗ್ರಹಿಕೆ ತಪ್ಪಾಗಿರಬಹುದು. ಹಾಗೆಯೇ ಜೋಗಿಯವರ ಪುಸ್ತಕಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವ ಮತ್ತು ಗಂಭೀರವಾಗಿ ಪರಿಗಣಿಸಿದರೆ ಅದೇ ಒಂದು ಅತಿರೇಕ ಎಂಬಂತೆ ಕಾಣುವ ಮಂದಿಯ ಕುರಿತೂ ನನ್ನ ತಕರಾರಿದೆ. ಜೋಗಿಯವರು ಬರೆದಿದ್ದನ್ನೇ ಮಿಲನ್ ಕುಂದೇರಾ ಬರೆದಿದ್ದರೆ ನಮ್ಮವರೇ ಅಂಥ ಕೃತಿಯನ್ನು ತಲೆಯ ಮೇಲೆ ಹೊತ್ತು ಕುಣಿದಾಡುತ್ತಿದ್ದರು, ಕುಣಿದಾಡಿದ್ದಿದೆ. ಆದರೆ ಜೋಗಿ ಬರೆದಿದ್ದು ಎಂದರೆ ಅದರಲ್ಲೇನಿರಲಿಕ್ಕಿಲ್ಲ ಎಂಬ ಪೂರ್ವಾಗ್ರಹ ಕೂಡ ಹಲವರಿಗಿದೆ. ಯಾರಿಗೇನಾಗಬೇಕಿದೆ ಹೇಳಿ. ನಷ್ಟ ಯಾರಿಗೆ!

ಜೋಗಿಯವರು ಅಶ್ವತ್ಥಾಮನ್ ಕಾದಂಬರಿ ಬರೆದು ಮುಗಿಸಿದ್ದೇ ನಾನದನ್ನು ಓದಿದ್ದೆ. ಬರೆಯಬೇಕೆಂದು ಕುಳಿತಾಗ ಜೋಗಿಯವರದು ಯಾವ ಜಾತಿ ಎಂಬ ಪ್ರಶ್ನೆ ಥಟ್ಟನೆ ಎದುರಾಗಿ, ಹಾಗೆ ಎದುರಾದ ಬಗೆಗೇ ಅಸ್ಯಹಿಸಿ, ಆಗ ನಾನು ಒಂದೊಂದಾಗಿ ಬರೆಯಬೇಕೆಂದೇ ಕೊಂಡಿದ್ದ ಸುಮಾರು ಇಪ್ಪತ್ತೈದು ಪುಸ್ತಕಗಳ ಬಗ್ಗೆ ಬರೆಯುವ ಮನಸ್ಸು ಮುರಿದು ತೆಪ್ಪಗೆ ಕುಳಿತು ಬಿಟ್ಟೆ. ಅವುಗಳನ್ನು ಓದಲೂ ಹೋಗಲಿಲ್ಲ, ಹಾಗೇ ಎತ್ತಿ ಬೇರೆಯವರಿಗೆ ಕೊಟ್ಟುಬಿಟ್ಟೆ. ನನಗೆ ಜೋಗಿಯವರ ಜಾತಿ ಗೊತ್ತೇ ಇತ್ತು. ಪ್ರಶ್ನೆ ಮಾತ್ರ ಹೊಸದಾಗಿ ಮೂಡಿತ್ತು. ಆಗಲೇ ನನಗೆ ನಾನು ಯಾವತ್ತೂ ಲೇಖಕನ ಜಾತಿ ನೋಡುತ್ತಿರಲಿಲ್ಲ ಎನ್ನುವ, ನನಗೆ ಮುಖ್ಯ ಎಂದು ಯಾವತ್ತೂ ಅನಿಸದ ಸಂಗತಿ ಗಮನಕ್ಕೆ ಬಂದಿದ್ದು. ಅದೇನೂ ದೊಡ್ಡಸ್ತಿಕೆ ಎಂದು ಹೇಳಿಕೊಳ್ಳುತ್ತಿಲ್ಲ. ನನಗದು ನಾರ್ಮಲ್ ಅಷ್ಟೆ. ಆದರೆ ಅಬ್‌ನಾರ್ಮಲ್ ಗಳ ಜೊತೆ, ಸಣ್ಣಮನಸ್ಸಿನವರೊಂದಿಗೆ, ತುಂಬ ಕುತ್ಸಿತ ಮನೋಭಾವದವರೊಂದಿಗೆ ಮತ್ತು ಕುಹಕಿಗಳ ಜೊತೆ ಮಾತಿಗೆ ನಿಂತರೆ ಕ್ರಮೇಣ ನಾವೂ ಅದೇ ಆಗಿ ಬಿಡುವ ಅಪಾಯವಿದೆ ಎನಿಸಿ ಸಾಕಷ್ಟು ಮಂದಿಯನ್ನು ನನ್ನ ಫೇಸ್‌ಬುಕ್ ಖಾತೆಗೆ ಬ್ಲಾಕ್ ಮಾಡಿಬಿಟ್ಟೆ. ಅಂಬೇಡ್ಕರ್, ಬುದ್ಧ ಮತ್ತು ಬಸವನ ಫೋಟೋ ಹಾಕಿಕೊಂಡ ಮಾತ್ರಕ್ಕೆ ಯಾರೂ ಗೋಳ್ವಾಲ್ಕರ್, ಹೆಗಡೇವಾರ್, ಗೋಡ್ಸೆಯ ಮನಸ್ಥಿತಿಯಿಂದ ಪೂರ್ತಿಯಾಗಿ ಪಾರಾಗಿರುತ್ತಾರೆ ಎಂದುಕೊಳ್ಳುವ ಅಗತ್ಯವಿಲ್ಲ ಎನ್ನುವ ಸತ್ಯ ಮನವರಿಕೆಯಾಗಿದ್ದು ಇಲ್ಲಿ, ಫೇಸ್‌ಬುಕ್ಕಿನಲ್ಲಿ.

******
ಒಬ್ಬ ನಟನಾಗಿ ಖ್ಯಾತಿ ಮತ್ತು ಅಸ್ಮಿತೆಯನ್ನು ದಕ್ಕಿಸಿಕೊಂಡ ಒಬ್ಬ ವ್ಯಕ್ತಿಗೆ ತನ್ನನ್ನು ತಾನು ನಿಜಕ್ಕೂ ಯಾರೆಂದು ಅರಿಯಬೇಕೆಂಬ ಆಸೆ ಹುಟ್ಟುವುದೇ ಒಂದು ಹಂತ. ನಮಗೆ ನಿಜಕ್ಕೂ ಅಗತ್ಯವಿರುವುದು ಉತ್ತರಗಳಲ್ಲ, ಆದರೆ ಪ್ರಶ್ನೆಗಳು. ಬರೀ ಪ್ರಶ್ನೆಗಳಿದ್ದರೆ ಸಾಕು, ನಿರ್ಧಾರಾತ್ಮಕ ಉತ್ತರಗಳು, ಅರ್ಥಗಳು, ಖಚಿತವಾದ ಆಕೃತಿ ಬೇಕೆಂಬ ಹಠ ಬಿಡಬೇಕು. (ಇದು ನನ್ನ ಮಾತೇನಲ್ಲ). ಆದರೆ ಸಾಮಾನ್ಯವಾಗಿ ನಾವೆಲ್ಲರೂ ಹುಡುಕುವುದು, ಹಠಕ್ಕೆ ಬೀಳುವುದು ತದ್ವಿರುದ್ಧವಾದುದಕ್ಕೆ, ಇರಲಿ. 

ಇದ್ದಕ್ಕಿದ್ದಂತೆ ಬಿದ್ದು, ದೇಹದ ಒಂದು ಭಾಗ ನಿಷ್ಕ್ರಿಯ (ಸೊಂಟದ ಮೇಲೆ) ವಾಗಿಬಿಟ್ಟ ಮೇಲೆ ಅಶ್ವತ್ಥಾಮನ್ ಮಾಡಬಹುದಾದ್ದೆಲ್ಲ ಯೋಚನೆ. ದೇಹದ ಕ್ರಿಯೆ ನಿಧಾನಗೊಂಡಿದ್ದೇ ಮನಸ್ಸು ಹೆಚ್ಚು ಕ್ರಿಯಾಶೀಲವಾಗುತ್ತದೆ. ಆದರೆ ಓದುಗರಾದ ನಮಗೆ ಆಗಲೂ ಭೌತಿಕ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಅಶ್ವತ್ಥಾಮನ್ನನ ಪಾರ್ಶ್ವವಾಯು ಪೂರ್ವಯೋಜಿತವೇ, ಯಾರಾದರೂ ಅವನನ್ನು ಕೊಲ್ಲಲು ಅಥವಾ ಹೀಗೆ ಹಾಸಿಗೆ ಹಿಡಿದು ಮಲಗುವಂತೆ ಮಾಡಲು ಬಲೆ ನೇಯ್ದಿದ್ದರೆ, ನೇಯ್ದಿದ್ದರೆ ಅದು ಯಾರು, ಅವನ ಹೆಂಡತಿಯೇ, ಅವನಿಗೆ ಸದ್ಯ ಆಶ್ರಯ ಕೊಟ್ಟಿರುವ ರಾಜೇಂದ್ರನೆ, ಬೇರೆ ಯಾರೋ ಪ್ರೊಡ್ಯೂಸರ್ ಅಥವಾ ನಿಗೂಢ ವ್ಯಕ್ತಿಯೇ, ವಿಚಿತ್ರವೆನಿಸುವ ಮಸಾಜ್ ಒಂದು ಪೂರ್ವನಿಯೋಜಿತ ಸಂಚಾಗಿತ್ತೇ, ಅವನು ತನ್ನ ಟ್ಯಾಬ್ಲೆಟ್ಸ್ ಸೇವಿಸದೇ ಇದ್ದಿದ್ದು ಒಳ್ಳೆಯದಕ್ಕಾ ಅಥವಾ ಅದರಿಂದಲೇ ಅವನು ಸುಧಾರಿಸಬಹುದಾಗಿದ್ದ ಅವಕಾಶ ಮಸುಕಾಯಿತೇ, ಅವನ ಅನುಮಾನ ಯಾರ ಮೇಲಿತ್ತು, ಸ್ವತಃ ನ್ಯೂರೋ ಸರ್ಜನ್ ಆಗಿರುವ ಹೆಂಡತಿಯ ಮೇಲಾ, ರಾಜೇಂದ್ರ ಮತ್ತು ಅವಳು ನಿಯೋಜಿಸಿದ ವೈದ್ಯನ ಮೇಲಾ ಎಂದೆಲ್ಲ, ಒಂದೆರಡಲ್ಲ, ಸಾವಿರ ಪ್ರಶ್ನೆಗಳ ಸಂಶಯ ಪಿಶಾಚಿ ಮನಸ್ಸಿನ ಹತ್ತೂ ಮೂಲೆಗೆ ಶತಪಥ ಹಾಕುತ್ತಿರುವಾಗಲೇ ಅಶ್ವತ್ಥಾಮ ‘ತನ್ನನ್ನು ತಾನು ಅರಿಯುವ’ ಪ್ರಯತ್ನ - ಆತ್ಮಕಥೆಯ, ಆತ್ಮನಿವೇದನೆಯ, ಹಿಂದಿರುಗಿ ನೋಡುವ ಪ್ರಯತ್ನಗಳ ಮುಖೇನ ಜಾರಿಯಲ್ಲಿಡುತ್ತಾನೆ. ಆದರೆ ತನ್ನನ್ನು ತಾನು ಅರಿಯುವ ಯಾವ ಕ್ರಮವೂ ಇದಲ್ಲ ಎನ್ನುವುದು ನಮಗಾಗಲೀ, ಸ್ವತಃ ಜೋಗಿಗಾಗಲಿ ತಿಳಿದಿಲ್ಲ ಎಂದುಕೊಳ್ಳಲು ನಾವೇನು ಮೂರ್ಖರೆ!? ಅಶ್ವತ್ಥಾಮನಿಗಾದರೂ ಗೊತ್ತಿಲ್ಲ ಎನ್ನುತ್ತೀರಾ?

`ನಿನ್ನ ಕತೆ ನಿಂಗೊತ್ತಲ್ವ? ಮತ್ಯಾಕೆ ಅದನ್ನೆಲ್ಲ ಹೇಳೋದು, ಬರಿಯೋದು?’ ಅಂದೆ.
‘ಕತೆ ಗೊತ್ತು. ತಾತ್ವಿಕತೆ ಗೊತ್ತಿಲ್ಲ. ನಾವೆಲ್ಲ ಹುಡುಕೋದು ಅದನ್ನೇ ಅಲ್ವ? ಒಬ್ಬೊಬ್ಬನ ಬದುಕಿಗೂ ಸಾವಿಗೂ  ಅವನದೇ ಆದ ದರ್ಶನ ಇರುತ್ತಲ್ವ? ನನ್ನ ಜೀವನ ದರ್ಶನ ಏನೂಂತ ನಂಗೆ ಗೊತ್ತಾಗಬೇಕು. ಪ್ಲೀಸ್’ ಅಂದ. ಎಡಗೈ ಮುಂದೆ ಚಾಚಿದ.  

ಇದು ನಿಜವಾದ ತಮಾಶೆ. ತಾನು ಏನೆಂದು ತನಗೆ ಗೊತ್ತಿರುತ್ತದೆ, ಗೊತ್ತಿಲ್ಲದೇ ಇದ್ದರೆ ಅದನ್ನು ತನ್ನೊಳಗೆ ತಾನಿಳಿದು ಕಂಡುಕೊಳ್ಳಬೇಕೇ ಹೊರತು ಹೊರಗಿನ ವಿವರಗಳಲ್ಲಿ ಅದನ್ನು ಕಟ್ಟುವುದು ಮತ್ತೆ ಅದುವರೆಗೂ ಮಾಡಿದ ಪ್ರದರ್ಶನದ ಪುನರಾವರ್ತನೆ ಆಗುತ್ತದೆಯೇ ಹೊರತು ಆ ಪ್ರದರ್ಶನದ ನೇಪಥ್ಯದ ಚಿತ್ರ ಸಿಗುವುದಿಲ್ಲ. ಇನ್ನೊಬ್ಬನನ್ನು ಉದ್ದೇಶಿಸಿ ಹೇಳುವುದೆಲ್ಲವೂ ಪ್ರದರ್ಶನವೇ, ದರ್ಶನ ಅಲ್ಲ. ಪ್ರದರ್ಶನದ ಶೋಕಿಯೇ ಇಲ್ಲದ ನಮ್ಮನ್ನು ನಾವು ಕಾಣಬೇಕಾದರೆ ಕಣ್ಣಿನ ದೃಷ್ಟಿ ಹೊರಗೆ ಅರಸುವುದನ್ನು ಬಿಟ್ಟು ಒಳಗೆ ಅರಸಲು ಸುರು ಮಾಡಬೇಕಾಗುತ್ತದೆ. ಹುಡುಕಾಟ ಹೊರಗಿನಿಂದ ಬರಬಹುದಾದ್ದರ ಕುರಿತು ನಡೆಯದೇ, ನಮ್ಮೊಳಗೇ ಇರುವುದರ ಕುರಿತು ನಡೆಯಬೇಕಾಗುತ್ತದೆ. ಇದು ಕನ್ನಡಿಯೂ ಅಲ್ಲ, ಕಿಟಕಿಯೂ ಅಲ್ಲ. ಕನ್ನಡಿ ಮತ್ತು ಕಿಟಕಿ ಎರಡೂ ಪರಿಣಾಮದಲ್ಲಿ ಇಲ್ಲಿ ಒಂದೇ. ಅಂತಃಚಕ್ಷು ಎನ್ನುತ್ತೇವಲ್ಲ, ಗಮನಿಸುವ ಯಾರೂ ಇಲ್ಲದಾಗ, ನಮ್ಮ ಮಾತುಗಳನ್ನು ಕೇಳುವವರು ಯಾರೂ ಇಲ್ಲದಾಗ, ನಾವು ಬರೆದಿದ್ದನ್ನು ಓದುವವರು ಯಾರೂ ಇಲ್ಲದಾಗ ನಾವು ಮಾಡುವ ಕ್ರಿಯೆ, ಆಡುವ ಮಾತು, ಬರೆಯುವ ಸತ್ಯ ಏನಿರುತ್ತದೆ? ಸ್ವಲ್ಪ ಕಷ್ಟದ ಸ್ಥಿತಿ ಇದು. ಮುಷ್ಠಿಮೈಥುನ ಮಾಡಿಕೊಳ್ಳುವಾಗಲೂ ನಮ್ಮ ಮನಸ್ಸಿನ ಕಲ್ಪನೆಯಲ್ಲಿ ಯಾರೋ ರತಿಸುಖದ ಪರಾಕಾಷ್ಠೆಯಲ್ಲಿ ಹಿತವಾಗಿ ನರಳುತ್ತಿರುತ್ತಾರೆ! ಅಂದಮೇಲೆ, ನಾವು ಮಾಡುವುದು, ಆಡುವುದು, ಬರೆಯುವುದು ಎಲ್ಲವೂ ಆ ಇನ್ನೊಬ್ಬರ ಮೆಚ್ಚುಗೆಗಾಗಿಯೇ, ಪ್ರಶಂಸೆಗಾಗಿಯೇ ಎನ್ನುವುದು ಸತ್ಯ. ಆದರೆ ಅಸಾಧ್ಯವಾದ ಸ್ಥಿತಿಯೇನಲ್ಲ. 

ಸಮಸ್ಯೆ ಎಂದರೆ ನಮಗೆ ಸದಾ ನಮ್ಮ ಪ್ರದರ್ಶನದ ಪರಿಣಾಮ ತಿಳಿಯುವ ಉತ್ಸುಕತೆಯೇ ಹೊರತು ಅದರಾಚೆಯ ಸತ್ಯ ಬೇಡ. ಒಬ್ಬ ಕೃತಿಕಾರನಿಗೆ ತನ್ನ ಕೃತಿ ಏನೆಂದು ಪ್ರಾಮಾಣಿಕವಾಗಿ ಗೊತ್ತಿರುತ್ತದೆ. ಗೊತ್ತಿಲ್ಲ ಎಂಬಂತೆ ಕಾಣಿಸಿಕೊಳ್ಳಲು ನಮಗೆ ಇಷ್ಟ.  ಎಲ್ಲರಿಗೂ ವಿಮರ್ಶಕರ, ಓದುಗರ ಮಾತು ಕೇಳಲು ಇಷ್ಟ. ತನ್ನ ವ್ಯಕ್ತಿತ್ವದ ಬಗ್ಗೆ ಜ್ಯೋತಿಷಿಗಳು, ನ್ಯೂಮರಾಲಜಿಸ್ಟರು, ಹಸ್ತಸಾಮುದ್ರಿಕದವರು, ಸೈಕಿಯಾಟ್ರಿಸ್ಟರು, ಹಕ್ಕಿಶಾಸ್ತ್ರದವರು ಹೇಳುವುದನ್ನೆಲ್ಲ ಕೇಳಲು ಕಿವಿ ನಿಮಿರಿಯೇ ಇರುತ್ತದೆ. ಕೊನೆಗೆ ಯಾವುದೋ ವೆಬ್‌ಸೈಟು ನೀವು ಹೋದ ಜನ್ಮದಲ್ಲಿ ಏನಾಗಿದ್ದೀರೆಂದು ಹೇಳುತ್ತೇವೆ, ನಿಮ್ಮ ನೈಜ ಸ್ವಭಾವ ಏನೆಂದು ಹೇಳುತ್ತೇವೆ ಎಂದರೆ ತಿಳಿದೇ ಬಿಡುವ ಕುತೂಹಲಕ್ಕೆ ಧುಡುಮ್ಮನೆ ದುಡುಕುತ್ತೇವೆ. ಇದು ಆತ್ಮಪ್ರಶಂಸೆಗೆ ಹಾತೊರೆಯುತ್ತಿರುವುದರ ಲಕ್ಷಣವೇ ಹೊರತು ಇನ್ನೇನಲ್ಲ. ಆತ್ಮಕಥೆಯ, ಆತ್ಮನಿವೇದನೆಯ, ತನ್ನದೇ ವ್ಯಕ್ತಿತ್ವವನ್ನು ಹಿಂದಿರುಗಿ ನೋಡುವ ಇಚ್ಛೆಯ ಹಿಂದೆಯೂ ಇರುವುದು ಇದೇ ಹಾತೊರೆಯುವಿಕೆಯಾದಲ್ಲಿ ಅದರಿಂದ ಯಾರಿಗೇನು ಉಪಯೋಗ ಅಶ್ವತ್ಥಾಮ?

ಸಿನಿಮಾದಲ್ಲಿ ಹೀರೋ ಗೆಲ್ಲಬೇಕು, ಖಳನಾಯಕ ಸೋಲಬೇಕು. ಸಾಮರ್ಥ್ಯಕ್ಕನುಗುಣವಾಗಿ ಅಲ್ಲ, ಪಾತ್ರಕ್ಕನುಗುಣವಾಗಿ. ಬದುಕಿನಲ್ಲಿ ನಮ್ಮ ಪಾತ್ರ ನಿರ್ಧಾರವಾಗುವುದು ಹೇಗೆ, ಸೋತವನು ಖಳನಾಯಕ, ಗೆದ್ದವನು ನಾಯಕ ಎಂದೆ? ಸೋಲು ಗೆಲುವು ಮೊದಲು ನಿರ್ಣಯಿಸಲ್ಪಡುತ್ತದೆಯೇ ಅಥವಾ ನಾಯಕ ಹೌದೋ ಅಲ್ಲವೋ ಎನ್ನುವುದು ಮೊದಲು ನಿರ್ಣಯಿಸಲ್ಪಡುತ್ತದೆಯೆ?

ಲೈಂಗಿಕ ವಾಂಛೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಗಂಡನ್ನು ಗೆಲ್ಲುವ ಹೆಣ್ಣು ಗೆಲ್ಲುವುದು ಯಾವಾಗ? ಅವಳ ಆಹ್ವಾನಿಸುವ ಯೌವನ ತುಂಬಿದ ದೇಹದೆದುರೇ ಮೂರು  ಬಾರಿ ಹಸ್ತಮೈಥುನ ಮಾಡಿಕೊಂಡ ಗಂಡಿನ ಗೆಲುವೇ ಅವಳ ಸೋಲೆ ಅಥವಾ ಸೋತಿದ್ದು ಗಂಡೆ? ಭಯಂಕರ ಹಸಿವಿದ್ದರೂ ಎದುರಿಗೆ ಬಡಿಸಿದ ಎಲೆಯ ಮುಂದೆ ಉಪವಾಸ ಸಾಧಿಸುವುದು ಗೆಲುವೆ ಅಥವಾ ಉಂಡು ತಣ್ಣಗಿರುವುದು ಗೆಲುವೆ? ವೃತನಿಷ್ಠೆ ಗೆಲುವು ಅಂದುಕೊಂಡಿದ್ದೇವಲ್ಲ, ಆ ಗೆಲುವು ಕೊಡುವ ಅಹಂಕಾರ ಕೂಡಾ ಗೆಲುವೇ ಅಥವಾ ಸೋಲೆ?

ಕಟ್ಟುನಿಟ್ಟಿನ ಬ್ರಹ್ಮಶ್ಚರ್ಯ ಪಾಲಿಸಿದವನಿಗೆ ತಾನು ಅಖಂಡ ಬ್ರಹ್ಮಚಾರಿ ಎಂಬ ಹೆಮ್ಮೆ, ಎಂದೂ ಮಾಂಸಾಹಾರ ಮುಟ್ಟಿಲ್ಲ, ಮದ್ಯಪಾನ ಮಾಡಿಲ್ಲ, ಸಿಗರೇಟು-ಬೀಡಿ ಎಳೆದಿಲ್ಲ, ಸೂಳೆಯರ ಸಹವಾಸ ಮಾಡಿಲ್ಲ, ಜೂಜು ಆಡಿಲ್ಲ, ಕೊಲೆ ಮಾಡಿಲ್ಲ, ಅನ್ಯಾಯ ಮಾಡಿಲ್ಲ, ಪಾಪ ಮಾಡಿಲ್ಲ ಎಂಬ ಬಗ್ಗೆ ಇರುವ ಮಹದಾಕಾರದ ಅಹಂಕಾರವೇ ಎಲ್ಲ ಗೆಲುವಿನ ಸ್ಫೂರ್ತಿಯೇ, ಫಲಶ್ರುತಿಯೇ? ಅದಕ್ಕಿಂತ ದೇಹದ ಹಸಿವಿಗೆ, ಆಸೆಗೆ, ಬಯಕೆಗೆ, ವಾಂಛೆಗೆ ಸೋತವನ ಸೋಲು, ವಿನಯ ಹೇಗೆ ಎರಡನೆಯ ದರ್ಜೆಯದು ಅಶ್ವತ್ಥಾಮ?

"ಬಡವರೂ ಶ್ರೀಮಂತರೂ ಸಮಾನರು ಅಂತ ಹೇಳಿ. ಸಮಾನವಾಗಿ ನೋಡಬೇಕು ಅಂತ ಹೇಳೋದಕ್ಕೆ ನೀವ್ಯಾರು? ನೀವೆಲ್ಲಿ ನಿಂತು ಮಾತಾಡುತಿದ್ದೀರಿ? ಬಡವರ ಕೊಟ್ಟಿಗೆಯಲ್ಲೋ ಶ್ರೀಮಂತರ ದೊಡ್ಡಿಯಲ್ಲೊ? ನಿಮ್ಮ ಜಾಗ ಯಾವುದು ಅಂತ ಮೊದಲು ಖಚಿತಪಡಿಸಿಕೊಳ್ಳಿ" ಎಂದ ನಿನಗೆ ಇಲ್ಲಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಕ್ಕೆ ಬದ್ಧವಾದ ದೇಹವನ್ನು ಹೊಂದಿದ ಮನುಷ್ಯ - ಅವು ಅರಿಗಳೆಂತೋ ಅರಿಯೆವು ಎನ್ನುವುದನ್ನು ಬದಿಗಿರಿಸಿ ನೋಡುತ್ತ - ಅರಿಗಳನ್ನು ಗೆಲ್ಲುವುದೇ ಗೆಲುವು, ಅವುಗಳಿಗೆ ಶರಣಾಗುವುದೇ ಸೋಲು ಎಂಬ ಒಂದು ನಿರ್ಧಾರಕ್ಕೆ ಬಂದಿರುವುದು ಯಾರು ಹೇರಿದ ಮೌಲ್ಯ? ಎಲ್ಲಿ ನಿಂತು ಹೇರಿದ ಮೌಲ್ಯ ಎನ್ನುವ ಪ್ರಶ್ನೆ ನಿನ್ನಲ್ಲಿ ಏಳುವುದಿಲ್ಲ ಯಾಕೆ ಅಶ್ವತ್ಥಾಮ? 

"ಆವತ್ತು ನಾನು ರಮಣಿಗೆ ಸೋತಿದ್ದರೆ, ಮಾರನೇ ದಿನ ಅವಳು ನನ್ನನ್ನು ಸೋಲಿಸುತ್ತಾಳೆ ಅನ್ನುವುದು ನನಗೆ ಖಾತ್ರಿಯಾಗಿತ್ತು. ಹೆಣ್ಣು ಸೋಲಿಸುವುದಕ್ಕಲ್ಲದೇ ಮತ್ಯಾಕೆ ಬರುತ್ತಾಳೆ? ಅವಳಿಗೆ ಸದಾ ಗೆಲ್ಲುವ ಆಸೆ, ಪ್ರಕೃತಿಯ ಹಾಗೆ. ಅವಳನ್ನು ಗಂಡಸು ಸೋಲಿಸೋಕೆ ಹೋಗಬಾರದು. ಗೆಲ್ಲಲೂ ಬಿಡಬಾರದು. ಅದನ್ನು ನಾನು ಬಹುಬೇಗ ಅರ್ಥಮಾಡಿಕೊಂಡಿದ್ದೆ."

ದೇಹವನ್ನು ಹಂಚಿಕೊಳ್ಳುವಾಗ, ಇನ್ನೊಂದು ನಗ್ನ ದೇಹದೆದುರು ನಗ್ನವಾಗುವುದಕ್ಕೆ, ಮುಚ್ಚಿಟ್ಟುಕೊಳ್ಳುವುದಕ್ಕೆ ಯಾವ ದೌರ್ಬಲ್ಯವೂ ಇಲ್ಲದಂತೆ ಬಟಾಬಯಲಾಗಿ, ಅಥವಾ ಬತ್ತಲಾಗಿ ಬಯಲು ದಕ್ಕಿಸಿಕೊಳ್ಳುವುದಕ್ಕೆ ಮನುಷ್ಯ ವಿನಯಿಯಾಗಬೇಕಾಗುತ್ತದೆ. ಅಹಂಕಾರ ತ್ಯಜಿಸಬೇಕಾಗುತ್ತದೆ. ಆಗಷ್ಟೇ ಅವನು ಬಾಹುಬಲಿಯಷ್ಟು ಬಲಶಾಲಿಯಾಗಬಲ್ಲ ಎನ್ನುವುದನ್ನು ಬಲ್ಲ ಅಶ್ವತ್ಥಾಮನೇ ಇದನ್ನೂ ಹೇಳುತ್ತಾನೆ ಎನ್ನುವುದನ್ನು ಮರೆಯಬಾರದು. ಅವನಲ್ಲಿ ದ್ವಂದ್ವವಿದೆ. ರಮಣಿಗೆ ಸೋಲುವುದು, ಸಂಯುಕ್ತಾಗೆ ಸೋಲುವುದು, ಸರೋಜಿನಿಗೆ ಸೋಲುವುದು, ಅಮೃತಮತಿಗೆ ಸೋಲುವುದು, ಶುಭಾಂಗಿನಿಗೆ ಸೋಲುವುದು, ನಳಿನಾಕ್ಷಿಗೆ ಸೋಲುವುದು, ಸರೋಜಿನಿ ಶುಭಾಂಗಿನಿಯನ್ನು ಗೆಲ್ಲುವುದು ಅಥವಾ ಸೋಲಿಸುವುದು ಎಂದೇ ತಿಳಿಯುವ ಅಶ್ವತ್ಥಾಮನಿಗೆ ಈ ಯಾವುದೂ ಸೋಲಲ್ಲ ಅಥವಾ ಬದುಕಿನಲ್ಲಿ ಸೋಲದಿರುವುದೇ ಗೆಲುವಲ್ಲ ಎನ್ನುವುದು ಗೊತ್ತು. ಸೋಲಿನಿಂದ ಕಲಿಯಬಹುದಾದ್ದು ಗೆಲುವಿನಿಂದ ಕಲಿಯಬಹುದಾದ್ದಕ್ಕಿಂತ ಹೆಚ್ಚು ಎನ್ನುವುದು ಗೊತ್ತು. ಆದರೆ ಮಹಾಜಾಣನೂ, ಮಹಾ ಜಾಗೃತನೂ ಆಗಿರುವಂತೆ ಕಾಣುವ ಅವನಿಗೂ ತಾನು ಹೊರಗಿನ ಬದುಕಿನಷ್ಟು ಒಳಗಿನ ಬದುಕು ಗೆದ್ದಿಲ್ಲ ಎನ್ನುವ ಅರಿವಿದೆ. ಪಾರಾಲಿಸಿಸ್ ಆಗಿ ಕೂತಾಗ, ಅಥವಾ ಐವಾನ್ ಇಲಿಚ್ಯನಂತೆ ಸಾವಿಗೆ ಎದುರಾಗಿ ಕೂತಾಗ ಇಡೀ ಬದುಕನ್ನು ಮತ್ತೆ ಬದುಕುವ ಅವಕಾಶವನ್ನು ಪಡೆದವನಂತೆ ಬೀರುವ ಹಿನ್ನೋಟದಿಂದ ಅವನು ಪಡೆಯಬೇಕೆಂದಿರುವ ದರ್ಶನಕ್ಕೆ ಸಾಕಷ್ಟು, ಅಗತ್ಯವಿರುವಷ್ಟು ನೋಡಿದನೆ ಕೊನೆಗಾದರೂ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಉತ್ತರವೇ ಗೆಲುವಲ್ಲ, ಬರಿಯ ಪ್ರಶ್ನೆಯೊಂದಿಗೇ ಉಳಿದುಬಿಡುವುದು ಸೋಲಲ್ಲ.  

ಹಿಟ್ಟಿನ ನೀರನ್ನೇ ಹಾಲೆಂದು ನಂಬಿ ಮೋಸಹೋದವನಿಗೆ ತಾನು ಮೋಸಹೋದದ್ದು ತಿಳಿದ ಮೇಲೆ ನಂಬುಗೆ ಕಷ್ಟದ ಸರಕಾಗುತ್ತದೆ ಎನ್ನುವುದನ್ನು ಸರೋಜಿನಿಯೇ ಗಮನಿಸಿ ಹೇಳುತ್ತಾಳೆ. ಈ ಬಗೆಯ ಅಪನಂಬಿಕೆ ಎಲ್ಲ ಮಹಾಚಾಣಾಕ್ಷರಿಗೆ, ಸದಾ ಜಾಗೃತರಿಗೆ ಅನಿವಾರ್ಯವೋ ಏನೋ. ಆದರೆ ಈ ಮಹಾಚಾಣಾಕ್ಷತೆ, ನಿದ್ದೆ ಎಚ್ಚರ ಸುಷುಪ್ತಿಯಲ್ಲೂ ಸಾಧಿಸುವ ಮಹಾ ಜಾಗೃತ್ ಅವಸ್ಥೆಯಿಂದ ತನ್ನೊಳಗೆ ತಾನಿಳಿದು ತನ್ನನ್ನು ತಾನರಿವ ಸಾಧ್ಯತೆ ಮೊಂಡಾಗುತ್ತ ಹೋಗುತ್ತದೆಯೆ? ತಮ್ಮದೇ ಕಟೌಟು, ಪ್ರತಿಮೆ, ಸೆಲ್ಫಿಫೋಟೋಗಳಲ್ಲಿ ಇಂಥ ಮಂದಿ ಮೈಮರೆಯುತ್ತಾರೆಯೆ? 

ಜೊತೆಯ ಜೀವದ ರತಿಸುಖವನ್ನು ಗಮನಿಸಿ ತನ್ನ ಸುಖ ನಿರ್ಧರಿಸುವ ಪುರುಷನಿಗೆ ಸ್ವಂತ ರುಚಿ ಎನ್ನುವುದೇ ಇರುವುದಿಲ್ಲ ಎನ್ನುವುದೂ ಸರೋಜಿನಿಯೇ. ಅವನು ರಮಣಿಗೆ, ಅಮೃತಮತಿಗೆ ಸೋಲದೆ, ಅವಳೆದುರೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ಇಲ್ಲಿ ನೆನಪಿಸಿಕೊಳ್ಳಿ. ಲೈಂಗಿಕತೆಯ ಸುಖವೆಲ್ಲವೂ ಇರುವುದು ಕಲ್ಪನೆಯಲ್ಲೇ ಹೊರತು ದೇಹದಲ್ಲಲ್ಲ. ‘ಕಾಮವೂ ಹುಟ್ಟುವುದು ಮನಸ್ಸಿನಲ್ಲೇ, ದೇಹ ಅದರ ಅಭಿವ್ಯಕ್ತಿ ಮಾಧ್ಯಮ ಅಷ್ಟೇ’ (ನನ್ನ ಮಾತಲ್ಲ, ಟಿ ಎಂ ಸುಬ್ಬರಾಯ ಅವರ ಅಂಬೆ ಎಂಬ ನೀಳ್ಗತೆಯಲ್ಲಿ ಬರುವ ಮಾತಿದು.). ಹಾಗಾದಲ್ಲಿ, ಹಸ್ತಮೈಥನದಲ್ಲಿ ತೊಡಗಿದ ವ್ಯಕ್ತಿಯ ಗಮನದಲ್ಲಿ ಇರುವುದು ತನ್ನದೇ ಸುಖವೇ ಅಥವಾ ತಾನು ಇನ್ನೊಂದು ವ್ಯಕ್ತಿಗೆ ಸುಖ ಕೊಡುತ್ತಿದ್ದೇನೆ ಎಂಬ ಕಲ್ಪನೆಯೆ? ಅಮೃತಮತಿಯೊಂದಿಗೆ ಲೈಂಗಿಕವಾಗಿ ಸುಖಿಸದೆ, ಅವಳ ಆಹ್ವಾನವನ್ನು ಖೆಡ್ಡಾ ಎಂಬಂತೆ ತಿರಸ್ಕರಿಸಿ, ತಿರಸ್ಕರಿಸುವುದಕ್ಕಾಗಿಯೇ (ಅನಿವಾರ್ಯವಾದ?!) ಹಸ್ತಮೈಥುನ ಮಾಡಿಕೊಂಡು (ಅವಳೆದುರೇ) ಸಾಧಿಸುವ ಗೆಲುವಿನಲ್ಲಿ ನಿಜಕ್ಕೂ ಗೆಲುವಿತ್ತೆ, ಸೋಲಿತ್ತೆ ಅಥವಾ ಕೇವಲ ವೃತದ ನಿಷ್ಠೆ ಕೊಡುವ ಅಹಂಕಾರದ ಪುಷ್ಟೀಕರಣವಿತ್ತೆ ಗಮನಿಸಬೇಕು.

ಕೊನೆಗೂ ಜೋಗಿ ಬರೆಯುವ ಆತ್ಮಚರಿತ್ರೆ ಇಷ್ಟವಾಗದೆ, ಅದರ ಒಂದು ಸಾಲೂ ತನ್ನದಲ್ಲ ಎಂದುಕೊಳ್ಳುವ ಅಶ್ವತ್ಥಾಮನ್ ತನ್ನ ಕತೆಯನ್ನು ತಾನೇ ಬರೆಯಬೇಕು ಎಂದು ಕುಳಿತುಕೊಳ್ಳುತ್ತಾನೆ. ಎಡಗೈಯಲ್ಲಿ ಬರೆಯತೊಡಗುತ್ತಾನೆ.

"ಆತ್ಮಚರಿತ್ರೆ ಗೆಲುವಿನ ಕುರಿತಾಗಿರುತ್ತದೋ ಸೋಲನ್ನು ಹೇಳಬೇಕೋ ನನಗೆ ಗೊತ್ತಿಲ್ಲ. ಸೋತವನಿಗೂ ಆತ್ಮಚರಿತ್ರೆ ಇರುತ್ತದೆಯೇ? ಇದ್ದರೆ ಅದನ್ನು ಯಾರಾದರೂ ಯಾಕೆ ಓದುತ್ತಾರೆ? ಸೋಲುವ ವಿಧಾನಗಳನ್ನು ಕಲಿಯುವ ಆಸೆಯಾದರೂ ಯಾರಿಗಿರುತ್ತದೆ?" ಎನ್ನುವಲ್ಲಿಯೂ ಅಶ್ವತ್ಥಾಮನಿಗೆ ಬದುಕು ಒಂದೋ ಸೋಲು ಇಲ್ಲವೇ ಗೆಲುವು ಅನಿಸಿತ್ತೆ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತದೆ ನಮಗೆ.

ಇಡೀ ಕಾದಂಬರಿಯ ಕೊನೆಯ ದೃಶ್ಯ ತುಂಬ ಮುಖ್ಯವಾಗುವುದು ಬೇರೆಯೇ ಕಾರಣಕ್ಕೆ. ಇಲ್ಲಿ ಇದ್ದಕ್ಕಿದ್ದಂತೆ ಅಶ್ವತ್ಥಾಮನ ಲಕ್ವ ಒಂದು ಪಾತ್ರದ ಲಕ್ವವಾಗಿ ಬದಲಾಗುತ್ತದೆ. ಅಶ್ವತ್ಥಾಮನಿಗೆ ಲಕ್ವ ಹೊಡಿದಿಲ್ಲ, ಬದಲಿಗೆ ಅವನು ಲಕ್ವ ಬಡಿದ ಒಬ್ಬನ ಪಾತ್ರವನ್ನು ಮಾಡುತ್ತಿದ್ದಾನೆ. ಅದರಿಂದ ಹೊರಬರಲು ಅವನಿಗೆ ಹೊಸದೊಂದು ಪಾತ್ರ ಸಿಗಬೇಕು, ಇಲ್ಲದಿದ್ದರೆ ಅವನಿಗೆ ಹಿಂದಿನ ಪಾತ್ರದ ಗುಂಗಿನಿಂದ ಹೊರಬರಲು ಸಾಧ್ಯವಿಲ್ಲ. ಹೀಗನ್ನುವಾಗಲೇ ಅವನಿಗೆ ಚಕ್ರವರ್ತಿಯ ಪಾತ್ರವೊಂದು ಸಿಕ್ಕಿ ಬಿಡುತ್ತದೆ ಮತ್ತು ನೋಡನೋಡುತ್ತಿದ್ದಂತೆ ರಾಜೇಂದ್ರ, ಸಂಯುಕ್ತಾ, ಜೋಗಿ ಎಲ್ಲರೂ ಆ ದೃಶ್ಯದಲ್ಲಿ ಸೈನ್ಯಾಧಿಪತಿ, ಆಸ್ಥಾನಕವಿ ಇತ್ಯಾದಿ ಇತ್ಯಾದಿಗಳಾಗಿ ಬದಲಾಗುತ್ತಾರೆ. ನಾಟಕದ ಒಂದು ಸೀನ್ ಎಂಬಂತೆ ಒದಗುವ ಈ ಅಂತ್ಯದೊಂದಿಗೇ ಕಾದಂಬರಿ ಮುಗಿಯುತ್ತದೆ.

ಇದನ್ನೀಗ ಇಡೀ ಬದುಕಿಗೆ ಅನ್ವಯಿಸಬಹುದು. ಅನ್ವಯಿಸಿ ಹೊಸ ಅರ್ಥ, ಹೊಳಹು, ದರ್ಶನ ಹುಡುಕಬಹುದು. ಆದರೆ ಅದೆಲ್ಲ ಬೇಡ. ನಾನು ಅಶ್ವತ್ಥಾಮನ ಮೂಲ ಉದ್ದೇಶಕ್ಕೇ ಅಂಟಿಕೊಳ್ಳುತ್ತೇನೆ ಮತ್ತು ನಟನಾದ ಅವನಿಗೆ ನಟನ ಪಾತ್ರದಾಚೆ, ನಟಿಸುವುದರ ಆಚೆ ಇದ್ದ (ಇದ್ದಿದ್ದರೆ ಮತ್ತು ಇದೆ ಎಂದುಕೊಂಡು ಯೋಚಿಸುವುದಾದರೆ) ಅಸ್ತಿತ್ವವಾದರೂ ಏನು ಎಂಬುದು ಆ ಪ್ರಶ್ನೆ. 

ಬಳಿಕ ಅಪ್ಪ-ಅಮ್ಮನ ಕತೆಯಿದೆ. ಅವರ ಲೈಂಗಿಕತೆ, ಅಪ್ಪನ ವಿಷಯದಲ್ಲಿ ಪೋಲೀಸರ ಜೊತೆ ನಡೆದುಕೊಂಡ ಘಟನೆ, ಕಾರು ಹಾರಿಸಿ ಅಪ್ಪನನ್ನು ಹೆದರಿಸಿದ್ದು ಇತ್ಯಾದಿ. ಅಶ್ವತ್ಥಾಮ ತನ್ನ ಅಪ್ಪನಲ್ಲಿ ಅತ್ಯಂತ ದ್ವೇಷಿಸುವ ಅಂಶ ಯಾವುದು? ಆತನ ಲೈಂಗಿಕ ಅತಿರೇಕವೆಂದಾದರೆ ಅದು ಪುನರಾವರ್ತನೆಯಾದ ಬಗ್ಗೆ ಕಾದಂಬರಿಯಲ್ಲಿ ಉಲ್ಲೇಖವೇನಿಲ್ಲ. ಅಪ್ಪ-ಅಮ್ಮನ ದಾಂಪತ್ಯ ತೀರ ದಾರುಣವಾಗಿತ್ತೆನ್ನಲೂ ಪುರಾವೆಗಳಿಲ್ಲ. ಲೈಂಗಿಕ ಪಿಪಾಸುವೊಬ್ಬ ಮದುವೆಯಾಗಿ ನಾಲ್ಕೈದು ಹೆಮ್ಮಕ್ಕಳನ್ನು ಹುಟ್ಟಿಸಿ, ಅವರ ಬೆಳವಣಿಗೆ, ಓದು, ಮದುವೆ ಯಾವುದರ ಬಗ್ಗೆಯೂ ಕಾಳಜಿ ವಹಿಸದೆ ತನ್ನ ಸಂಪಾದನೆಯನ್ನೆಲ್ಲ ಸೂಳೆಯರಿಗೆ ಸುರಿಯುತ್ತಾ ಕುಡಿದು, ರೋಗ ಹಿಡಿದು ಸತ್ತ ಅನೇಕ ಪ್ರಕರಣಗಳು ನಮಗೆ ಗೊತ್ತಿವೆ. ಅಂಥವರ ಹೆಮ್ಮಕ್ಕಳೇ ಹೆಚ್ಚಾಗಿ ದಾರಿತಪ್ಪಿ, ಸಂಪಾದನೆಗೆ, ಎರಡು ಹೊತ್ತಿನ ಅನ್ನಕ್ಕೆ ಏನೇನೋ ಹಿಡಿಯಬಾರದ ಮಾರ್ಗ ಹಿಡಿದು ನರಳುವುದು. ಆದರೆ ಅಶ್ವತ್ಥಾಮನ ಅಪ್ಪನಾದರೂ ಅಂಥ ಹೆಮ್ಮಕ್ಕಳನ್ನು ಬೀದಿಪಾಲು ಮಾಡಿದ ವಿವರಗಳಿಲ್ಲ ಇಲ್ಲಿ. ಇನ್ನು ಲೈಂಗಿಕ ಸಂಬಂಧಗಳ ವಿಚಾರಕ್ಕೆ ಬಂದರೆ ಸ್ವತಃ ಅಶ್ವತ್ಥಾಮನಾದರೂ ಇನ್ನೊಬ್ಬ ವ್ಯಕ್ತಿಯನ್ನು ನೈತಿಕ ನೆಲೆಯಲ್ಲಾಗಲೀ, ಸಾಮಾಜಿಕ ನೆಲೆಯಲ್ಲಾಗಲೀ ಪ್ರಶ್ನಿಸಬಲ್ಲ ಧೀಮಂತ ನಡವಳಿಕೆ ತೋರಿಸಿದ್ದನೆ ಎನ್ನುವುದು ಪ್ರಶ್ನೆ.

ಹೆಸರೇ ಇಲ್ಲದೆ ಮಹಿಳೆಯೊಂದಿಗಿನ ಇಪ್ಪತ್ತನಾಲ್ಕು ಗಂಟೆಗಳ ದಾಂಪತ್ಯವೊಂದರ ಪ್ರಕರಣ ಸ್ವಲ್ಪ ಭಿನ್ನವಾಗಿರುವುದನ್ನು ಗಮನಿಸಿ. ಇದು ಒಂದು ಶುದ್ಧ ದಾಂಪತ್ಯಕ್ಕೆ ಒದಗಿಸಿದ ಸಾಪೇಕ್ಷದಂತಿದ್ದೂ ಅಂಥ ಉದ್ದೇಶವನ್ನು ಈಡೇರಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಕಷ್ಟ ಏಕೆಂದರೆ, ಶುಭಾಂಗಿನಿ, ಸರೋಜಿನಿ, ಸಂಯುಕ್ತಾ, ಅಮೃತಮತಿ, ರಮಣಿ, ನಳಿನಾಕ್ಷಿ, ನಿರುಪಮಾ - ಇಷ್ಟು ಮಂದಿಯಲ್ಲಿ ಶುಭಾಂಗಿನಿ, ಸರೋಜಿನಿ ಮತ್ತು ಸಂಯುಕ್ತಾ ಜೊತೆ ಮದುವೆಯಾಗಿತ್ತು ಎಂಬ ಮಾತುಗಳಿವೆ. ಈ ಮದುವೆಗೆ ಇಪ್ಪತ್ತನಾಲ್ಕು ಗಂಟೆಗಳ ದಾಂಪತ್ಯ ಯಾವ ವಿಧದಲ್ಲೂ ಸಾಪೇಕ್ಷವಾಗದು ಅನಿಸುತ್ತದೆ. ಏಕೆಂದರೆ, ಸಿನಿಮಾದ ಮೂರು ಗಂಟೆಗಳ ಅಮರ ಮಧುರ ಪ್ರೇಮವಾಗಲಿ, ಇಂಥ ಇಪ್ಪತ್ತನಾಲ್ಕು ಗಂಟೆಗಳ ಕಾಲಮಿತಿಯ ದಾಂಪತ್ಯವಾಗಲಿ ಬದುಕಿಗೆ ಸಾಪೇಕ್ಷ ಒದಗಿಸುವಲ್ಲಿ ಸೋಲುತ್ತವೆ. ಹಾಗಾಗಿಯೇ ಸಿನಿಮಾ ಸಿನಿಮಾವೇ, ಕತೆ ಕತೆಯೇ, ಕಾದಂಬರಿ ಕಾದಂಬರಿಯೇ.  ಇನ್ನು ಅಶ್ವತ್ಥಾಮನ ದಾಂಪತ್ಯ ಒಂದು ವಿಫಲ ದಾಂಪತ್ಯ ಎಂದು ಕಾಣಬೇಕಾದ ಅಗತ್ಯವೇ ಇಲ್ಲ ಎನಿಸುತ್ತದೆ. ಜಗತ್ತಿನ ಎಲ್ಲಾ ದಾಂಪತ್ಯವೂ ಇವನದರಷ್ಟೇ ವಿಫಲ ಅಥವಾ ಸಫಲ ಎನ್ನುವುದೇ ಅದಕ್ಕೆ ಕಾರಣ. ಸುಶೀಲಾ ಎಂಬವಳಿಂದ ದಾಂಪತ್ಯ ಎನ್ನುವುದೇ ಕುಲುಮೆ ಎನ್ನುವ ಪಾಠ ಕಂಡುಕೊಂಡೆ ಎಂದು ಒಂದು ಕಡೆ ಅಶ್ವತ್ಥಾಮನ್ ಹೇಳುತ್ತಾನೆ. ಅದು ಬದುಕಿಗೆ ಹೆಚ್ಚು ಹತ್ತಿರವಿರುವ, ಹೆಚ್ಚು ಸಮೃದ್ಧ ಪರಿಪ್ರೇಕ್ಷ್ಯವನ್ನೊದಗಿಸಬಲ್ಲ ಒಂದು ಸತ್ಯದರ್ಶನ. ಬಹುಶಃ ಬದುಕನ್ನು ಅರ್ಥ ಮಾಡಿಕೊಂಡ ಎಲ್ಲರಿಗೂ ಆಗಿರುವ ಸತ್ಯದರ್ಶನವೇ.

ಕೊನೆಗೆ ಧರ್ಮ ಠಾಕೂರ್ ಎಂಬ ದೇವರ ಕತೆಯೊಂದಿದೆ. ಅದು ಅಶ್ವತ್ಥಾಮನ ನಟನೆಗೆ ಸಂಬಂಧಿಸಿದ್ದು. ಇಷ್ಟರಲ್ಲಾಗಲೇ ನಮಗೆ ಅಶ್ವತ್ಥಾಮನ್ ಒಬ್ಬ ಹುಟ್ಟು ನಟ, ಅವನು ಬದುಕನ್ನು ಕೂಡಾ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತಾ ನಿಭಾಯಿಸಬೇಕಾದ ಒಂದು ಸಿನಿಮಾದ ಹಾಗೆ ಎಂದು ಭಾವಿಸಿರುವ ಬಗ್ಗೆ ನಮಗೆ ಮನದಟ್ಟಾಗಿರುತ್ತದೆ. ಹಾಗೆ ನೋಡಿದರೆ, ಇಲ್ಲಿ ನಾವೆಲ್ಲರೂ ನಟರೇ. ಜೀವನ ಒಂದು ರಂಗಭೂಮಿಯೇ. ನಮ್ಮ ನಮ್ಮ ಪಾತ್ರವನ್ನು ನಿಭಾಯಿಸಿ ನೇಪಥ್ಯಕ್ಕೆ ಸರಿಯುವುದೇ ನಮಗಿರುವ ಆಯ್ಕೆ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರುವ ಸತ್ಯವೇ. ಹಾಗಾಗಿ ಧರ್ಮ ಠಾಕೂರ್ ಎಂಬ ದೇವರ ಪ್ರಕರಣ ತುಂಬ ಕೌತುಕದ್ದು, ರೋಚಕವಾದದ್ದು ಎನ್ನುವುದು ಬಿಟ್ಟರೆ ಅದು ಹೊಸ ದರ್ಶನವನ್ನೇನೂ ಕಾಣ್ಕೆಯಾಗಿ ಒದಗಿಸಿಲ್ಲ ಎನ್ನಬಹುದು.

ಇಲ್ಲಿ ಪುರಾಣದ ಅಶ್ವತ್ಥಾಮನ ನೆರವನ್ನೂ ಪಡೆಯಬೇಕು ನಾವು, ಟು ದ ಎಕ್ಸ್‌ಟೆಂಟ್ ಪಾಸಿಬಲ್. 

ಬಹುಶಃ ಮಹಾಭಾರತದ ಅತ್ಯಂತ ದೌರ್ಭಾಗ್ಯದ ಪಾತ್ರವೆಂದರೆ ಅದು ಅಶ್ವತ್ಥಾಮನದ್ದೇ ಇರಬೇಕು. ಶಿವನಿಂದಲೇ ಚಿರಂಜೀವಿ ಎಂದು ವರವನ್ನು ಪಡೆದ, ಹಣೆಯ ಮೇಲೆ ಭಾಗ್ಯದ ಮಣಿಯನ್ನೂ ಹೊಂದಿದ ವರಪುತ್ರ ಅಶ್ವತ್ಥಾಮ ಎನ್ನುತ್ತಾರೆ. ಇದನ್ನು ನಂಬಬಹುದು ಅಥವಾ ಬಿಡಬಹುದು. ಏಕೆಂದರೆ, ಶಿವ ವರಕೊಟ್ಟಿದ್ದರೆ ಅದನ್ನು ಐನು ಇಕ್ಕಟ್ಟಿನ ಘಳಿಗೆಯಲ್ಲಿ ದ್ರೋಣ ಮರೆತನೇಕೆ ಎಂಬ ಪ್ರಶ್ನೆ ಉಳಿಯುತ್ತದೆ. ಅಲ್ಲದೆ, ಶ್ರೀಕೃಷ್ಣನೇ ಕೊಟ್ಟ ಶಾಪ, ಅಶ್ವತ್ಥಾಮನ ಚಿರಂಜೀವತ್ವ ಎನ್ನುವ ಕತೆಯೂ ಇದೆ, ಇದಕ್ಕೆ ವ್ಯತಿರಿಕ್ತವಾಗಿ. ಅದೇನೇ ಇರಲಿ, ದ್ರೋಣ ಪುತ್ರನಾತ. ಬ್ರಾಹ್ಮಣ, ಅಂದರೆ ಜ್ಞಾನಕ್ಕೆ ಅಧಿಕಾರ ಹೊಂದಿದ್ದವ. ದ್ರೋಣ ಸ್ವತಃ ಕ್ಷತ್ರಿಯ ವಿದ್ಯಾಗುರು. ಅಂದರೆ ಶಸ್ತ್ರಾಸ್ತ್ರ ವಿದ್ಯೆಗೂ ಸಹಜವಾಗಿ ಅಧಿಕಾರ ಪಡೆದಿದ್ದ. ಮೇಲಾಗಿ ಯೌವನದಲ್ಲಿ ದುರ್ಯೋಧನನಂಥ ಕುರುಸಾಮ್ರಾಜ್ಯಾಧಿಪತಿಯ ಸ್ನೇಹ. ಆದರೆ ಅಶ್ವತ್ಥಾಮನ ನಸೀಬಿನಲ್ಲಿ ಏನಿತ್ತು ನೋಡಿ.

ಬಾಲ್ಯವನ್ನೆಲ್ಲ ಹಿಟ್ಟಿನಲ್ಲಿ ಕಲಸಿದ ನೀರನ್ನೇ ಹಾಲೆಂದು ನಂಬಿ, ಅದನ್ನೇ ಕುಡಿದು ಬೆಳೆದ. ಚಿರಂಜೀವಿ ಎಂದು ಶಿವನಿಂದ ವರ ಪಡೆದ ತಂದೆಯೇ ಮಗನ ಸಾವಿನ ಸುಳ್ಳು ಸುದ್ದಿಯನ್ನು ನಂಬಿ ಸಾಯುತ್ತಾನೆ, ಅಂದರೆ, ಒಂದರ್ಥದಲ್ಲಿ ಅಪ್ಪನ ಸಾವಿಗೆ ಮಗನೇ ಕಾರಣನೂ ಆದ. ದುರ್ಯೋಧನನ ಸ್ನೇಹಿತನಾಗಿದ್ದೂ ಸದಾ ಅವನ ಹಿತವನ್ನು ಬಯಸಿ ಆಡಿದ ಮಾತು ಅವನಿಗೇ ಅಪಥ್ಯ ಆಗಿರುತ್ತಿತ್ತು. ಅಂದರೆ, ನಿಜವಾದ ಹಿತ ಬಯಸುವ ಸ್ನೇ-ಹಿತನಾಗಿಯೂ ದುರ್ಯೋಧನ ಅದನ್ನು ಅರಿಯದೇ ಹೋಗುತ್ತಾನೆ. ದುರ್ಯೋಧನ ಇವನ ಮಾತಿಗೆ ಒಂದಿಷ್ಟಾದರೂ ಕಿವಿಕೊಡುತ್ತಿದ್ದನಂತೆ, ಆ ಮಾತು ಬೇರೆ. ಆದರೆ ಅದರಿಂದಾದ ಲಾಭವೇನು? ಕೊನೆಗೂ ಅವನು ತೊಡೆ ಮುರಿದುಕೊಂಡು ಬಿದ್ದಾಗ ಅವನನ್ನು ಖುಶಿಪಡಿಸಲು ದುಡುಕಿ ತಾನು ಶಿಶುಹತ್ಯಾ ದೋಷಕ್ಕೆ ಈಡಾಗುತ್ತಾನೆ. ಉಪಪಾಂಡವರ ಕತ್ತು ಕೊಯ್ದು ನಿಂದ್ಯನಾಗುತ್ತಾನೆ. ಅಷ್ಟು ಸಾಲದೆಂಬಂತೆ, ಉತ್ತರೆಯ ಗರ್ಭನಾಶಕ್ಕೆ ಬ್ರಹ್ಮಾಸ್ತ್ರ ಉಪಯೋಗಿಸುವ ಅವಿವೇಕ. ಕೊನೆಗೆ ಕೇಶಮುಂಡನ, ಮಣಿ ಛೇದ. 

ಯೋಚಿಸಿ ನೋಡಿ, ಅಶ್ವತ್ಥಾಮನ ಯಾವುದೇ ಅವಿವೇಕದಲ್ಲೂ ಸ್ವಾರ್ಥ ಇರಲಿಲ್ಲ. ಇನ್ನೊಬ್ಬರ ಮೆಚ್ಚುಗೆ ಪಡೆಯಲು, ಇನ್ನೊಬ್ಬರ ಪ್ರೀತಿಗಾಗಿ ಅವನು ಏನೇನೋ ಮಾಡುತ್ತ ಹೋದನೇ ಹೊರತು ಸ್ವಂತಕ್ಕಾಗಿ ಏನೂ ಮಾಡಿರಲಿಲ್ಲ. ಆದರೆ ಮಾಡಿದ್ದೆಲ್ಲ ಅವಿವೇಕದ ಪರಮಾವಧಿ. ಈ ಪಾತ್ರವನ್ನು ತಾರ್ಕಿಕವಾಗಿ ಅರ್ಥಮಾಡಿಕೊಳ್ಳುವುದೇ ಕಷ್ಟ. ಅಶ್ವತ್ಥಾಮನದ್ದು ವಿಧಿಯೆ? ಬಯಸಿದರೂ ಸಾವು ಬರದೆ, ಸದಾ ಪರಿತಪಿಸುತ್ತ ಬದುಕು ಎಂದೇ ಶ್ರೀಕೃಷ್ಣ ಇವನನ್ನು ವಧಿಸದೇ ಬಿಟ್ಟುಬಿಡುತ್ತಾನೆ. ವಧಿಸಿದರೆ ಬ್ರಹ್ಮಹತ್ಯಾ ದೋಷ! ಅಶ್ವತ್ಥಾಮ ಒಬ್ಬ ಬ್ರಾಹ್ಮಣ.

ಜೋಗಿಯವರ ಅಶ್ವತ್ಥಾಮನೂ ಬಹುತೇಕ ಒಬ್ಬ ಅಂತರ್ಪಿಶಾಚಿಯಂತೆ, ತನ್ನನ್ನೇ ತಾನು ಅರಿಯಲಾರದೇ ಹೋಗುವ, ತಾನು ಇಲ್ಲಿ ಕೇವಲ ಒಬ್ಬ ನಟನಷ್ಟೇ ಎಂದು ಕಂಡುಕೊಂಡ, ಅಪರಾಧ ಎನಗಿಲ್ಲ, ಅಪರಾಧಿ ನಾನಲ್ಲ ಎಂಬ ಪ್ರಜ್ಞೆ ಇದ್ದ, ಇದ್ದುದರಿಂದಲೇ ಪಾಪಪ್ರಜ್ಞೆಯಿಂದ ಮುಕ್ತನಾಗಿದ್ದ ಜ್ಞಾನಿಯ ತರ ಕಾಣಿಸಿಯೂ ಸದಾ ತೊಳಲಾಟದಲ್ಲೇ ಇರುವಂತೆ ಕಾಣುತ್ತಾನೆ. ಅಶ್ವತ್ಥಾಮನ ಒಂದಂಶ ನನ್ನ ನಿಮ್ಮಲ್ಲೂ ಇರುವುದರಿಂದಲೇ ಈ ಅಶ್ವತ್ಥಾಮ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಾನೆ, ಕಾಡಬೇಕು. ಜೋಗಿಯವರ ಈ ಕಾದಂಬರಿ ಅದನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ.  

ಅಶ್ವತ್ಥಾಮೋ ಬಲಿರ್ವ್ಯಾಸಃ ಎಂದು ಸುರುವಾಗುವ ಮಂತ್ರವನ್ನು ನೀವು ಒಮ್ಮೆಯಾದರೂ ಕೇಳಿರುತ್ತೀರಿ. ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪ ಮತ್ತು ಪರಶುರಾಮ ಎಂಬ ಏಳು ಮಂದಿ ಚಿರಂಜೀವಿಗಳನ್ನು ನೆನೆಯುವುದಕ್ಕೆ ಸನಾತನಿಗಳಲ್ಲಿ ಪ್ರಾಶಸ್ತ್ಯವಿದೆ. ಬಹುಶಃ ಅಮರತ್ವದ ಬಯಕೆಯುಳ್ಳವರಿಗೆ ಅದು ಪ್ರಾಪ್ತಿಯಾಗಲಿ ಎಂದಿರಬಹುದು. ಸಾವು ಯಾರಿಗೂ ಆಪ್ಯಾಯಮಾನವೇನಲ್ಲ ಬಿಡಿ. ಹಾಗಂತ, ಯಾರಿಗೂ ಚಿರಂಜೀವಿಯಾಗುವ ಆಸೆ ಕೂಡಾ ಇದ್ದಂತಿಲ್ಲ, ಅದರ ಸೈಡ್ ಅಫೆಕ್ಟುಗಳ ಬಗ್ಗೆ ಗೊತ್ತಿರುವುದರಿಂದ. ಅಂದರೆ, ಚಿರಂಜೀವತ್ವವೇ ಒಂದು ವಿಧದ ಶಾಪ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಗೊತ್ತಿಲ್ಲದಿದ್ದರೆ ವೆಂಟಿಲೇಟರುಗಳಲ್ಲಿ ತಿಂಗಳಾನುಗಟ್ಟಲೆ ಸತ್ತೂ ಉಸಿರಾಡುವ ದೇಹಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಸ್ವಲ್ಪ ವಿಚಿತ್ರ ಅನಿಸುವುದೆಂದರೆ, ಈ ಅಶ್ವತ್ಥಾಮನಿಂದಲೇ ಸುರುವಾಗುವ ಚಿರಂಜೀವಿಗಳ ಲಿಸ್ಟು ಗಮನಿಸಿದರೆ, ಅಶ್ವತ್ಥಾಮನೊಬ್ಬನನ್ನು ಬಿಟ್ಟರೆ ಉಳಿದವರು ಯಾಕೆ ಚಿರಂಜೀವಿಗಳಾಗುವ ಶಾಪ / ವರ ಹೊತ್ತರೋ ಅರ್ಥವಾಗುವುದಿಲ್ಲ.  ಬದುಕಿನಲ್ಲೂ ಯಾವುದು ಶಾಪ, ಯಾವುದು ವರ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ಗೊತ್ತಾಗುವಾಗ ಶಾಪವನ್ನು ಬೇಡಿ ಪಡೆದಿರುತ್ತೇವೆ, ವರವನ್ನು ಶಾಪವೆಂದು ಹಿಡಿಶಾಪ ಹಾಕಿ ಬದುಕಿರುತ್ತೇವೆ. ಆದರೆ ತಿರುಗಿ ನೋಡುವ ವ್ಯವಧಾನವೂ ಇಲ್ಲದವರಿಗೆ ಶಾಪ, ವರ, ಸಾವು ಮತ್ತು ಚಿರಂಜೀವತ್ವದ ರಹಸ್ಯಗಳು ಗೊತ್ತೇ ಆಗದ ಹಾಗೆ ಬದುಕು ಮುಗಿದಿರುತ್ತದೆ.

2 comments:

Vishnu Bhat Hosmane said...

ಸುದೀರ್ಘವಾಗಿ ಹೇಳಿದ್ದೀರಿ. ಈ ಒಳ ಆಳ ನೋಟ ಇಷ್ಟವಾಯಿತು

Ash said...

ವಿವರ ಆಸಕ್ತಿಕರವಾಗಿದೆ. ಸೋತವನ ಆತ್ಮಕಥೆಯೂ ಅನೇಕರಿಗೆ ಹೇಗಿರಬಾರದೆಂಬ ನಿಟ್ಟಿನಲ್ಲಿ ಪ್ರೇರಕವಾಗಬಹುದು.