Sunday, January 31, 2021

ಅಭಿವ್ಯಕ್ತಿಯ ಹೊಸ ಸಾಧ್ಯತೆಗಳು

ಡಾ.ಶ್ರುತಿ ಬಿ ಆರ್ ಅವರ ಕವನ ಸಂಕಲನ ‘ಜೀರೋ ಬ್ಯಾಲೆನ್ಸ್’ ಮುವ್ವತ್ತೇಳು ವಿಭಿನ್ನ ಕವಿತೆಗಳ ಸಂಗ್ರಹ. ಇವುಗಳಲ್ಲಿ ಪ್ರಕೃತಿ, ಪ್ರೇಮ, ಭಾವುಕತೆ, ಸಾಮಾಜಿಕ ಮತ್ತು ಸಮಕಾಲೀನ ವಸ್ತು ವೈವಿಧ್ಯ ಇದ್ದು ಇವರ ಆಸಕ್ತಿಯ ಹರಹು ಮೆಚ್ಚುಗೆ ಹುಟ್ಟಿಸುವಂತೆಯೇ, ಈ ಕವಿತೆಗಳ ಓದು ಕೂಡ ಏಕತಾನತೆಯಿಂದ ಮುಕ್ತವಾಗಿ, ಪ್ರತಿಯೊಂದು ಕವಿತೆಯೂ ಹೊಸ ಬಗೆಯ ಅನುಭವಕ್ಕೆ ನಮ್ಮನ್ನು ತೆರೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಹಾಗಾಗಿ ಈ ಸಂಕಲನ ಚೊಚ್ಚಲ ಕೃತಿಯಾಗಿದ್ದರೂ ಸಾಕಷ್ಟು ಸಮೃದ್ಧವಾಗಿದೆ. 

ನನಗೆ ತುಂಬ ಇಷ್ಟವಾದ ಕವಿತೆ ‘ಬರೀ ಆಟ’ ಎನ್ನುವ ಕವಿತೆ.

ಕುಂಟೆಬಿಲ್ಲೆಯಾಟದಲ್ಲಿ 
ಮೈಮರೆತವರಿಗೆ, ನಿಯಮ 
ಮುರಿದು ಗೆರೆ ತುಳಿದವರು 
ಯಾರೆಂದು ತಿಳಿಯಲೇ ಇಲ್ಲ! 
ಕುಂಟಿ ಕುಂಟಿ ದಣಿದರೂ 
ಯಾರೂ ಸೋಲೊಪ್ಪಲೇ ಇಲ್ಲ... 

ಗೊಂಬೆಯಾಟವಾಡುತ್ತಾ 
ಗೊಂಬೆಗಳ ಬದಲಿಗೂ 
ತಾವೇ ಮಾತನಾಡುತ್ತಾ, ಆಡುತ್ತಾ 
ಬಳಲಿ ಬೆಂಡಾದರೂ
ಈ ಮಾತುಕತೆ ಮುಗಿಯಲೇ ಇಲ್ಲ, 
ಗೊಂಬೆ ಮದುವೆ ನಡೆಯಲಿಲ್ಲ... 

ಕಣ್ಣಾಮುಚ್ಚೆ ಕಾಡೇ ಗೂಡೇ... 
ಬಿಟ್ಟೇ-ಬಿಟ್ಟೇ ಹೇಳಿ ಕಣ್ತೆರೆವಾಗ 
ಇದ್ದ ಗದ್ದಲವಾವುದೂ, 
ಕಣ್ಣ ಬಿಟ್ಟಮೇಲೆ ಇಲ್ಲವೇ ಇಲ್ಲ! 
ಅಡಗಿದವರೇ ತಾವಾಗಿ 
ಹೊರಬರಲಿ ಹಿಡಿದರಾಯಿತೆಂದು, 
ಸೋಮಾರಿ ಆಟಗಾರನು 
ಕಾಯುತ್ತಾ ನಿದ್ದೆ ಹೋಗಿದ್ದಾನೆ! 
ಬಚ್ಚಿಟ್ಟುಕೊಂಡವರು ಕಾಯುತ್ತಾ, 
ಇವನನ್ನೇ ಶಪಿಸುತ್ತಿದ್ದಾರೇನೋ? 

ಆಡಿ ಆಡಿ ದಣಿದವರೆಲ್ಲ 
ಮಲಗುವ ಮುನ್ನ 
ಕಥೆ ಕೇಳಲು ಅಜ್ಜಿಯ 
ಬಳಿ ಸೇರಿದ್ದಾರೆ... 
ತಮ್ಮದೇ ಕಥೆ ಕೇಳುತ್ತಾ 
ಕುಳಿತವರಿಗೆ, 
ನಿದ್ದೆ ಆವರಿಸಿದ ಅರಿವೇ ಇಲ್ಲ, 
ಕನಸಲ್ಲೂ ಕಥೆ ಕೇಳುತ್ತಲೇ ಇದ್ದಾರೆ, 
ಹೂಂಗುಟ್ಟುತ್ತಲೇ ಇದ್ದಾರೆ! 
ಮುದುಕಿ ಹೇಳುತ್ತಲೇ ಇದ್ದಾಳೆ... 

 -ನಿಜಕ್ಕೂ ಒಂದು ಅದ್ಭುತವಾದ ಅನುಭವಕ್ಕೆ ನಮ್ಮನ್ನು ತೆರೆಯುವ ಕವಿತೆಯಿದು. ಇಲ್ಲಿನ ಎಲ್ಲಾ ಕ್ರಿಯೆಗಳಲ್ಲೂ ತೊಡಗಿಕೊಂಡಿರುವವರು ಮಕ್ಕಳು ಎಂದು ಮೇಲ್ನೋಟಕ್ಕೆ ನಮಗೆ ಅನಿಸುತ್ತದೆ ಅಲ್ಲವೆ? ಕುಂಟೆಬಿಲ್ಲೆಯಾಟ, ಗೊಂಬೆಗಳ ಆಟ ಮತ್ತು ಕಣ್ಣಾಮುಚ್ಚಾಲೆಯಾಟ ಎಲ್ಲವೂ ಮಕ್ಕಳಾಟಗಳೇ. ಕೊನೆಗೆ ಅಜ್ಜಿಯ ಬಳಿ ಕತೆ ಕೇಳಲು ಸೇರಿದವರಂತೂ ಮಕ್ಕಳೇ. ಆದರೆ ಇವು ಬರೀ ಮಕ್ಕಳಾಟದ ಪ್ರತಿಮೆಗಳಲ್ಲ ಅನಿಸುತ್ತದೆ. ನಿಯಮ ಮುರಿದು ಗೆರೆ ತುಳಿದವರು, ಮದುವೆ ನಡೆಯದ ಮಟ್ಟಿಗೆ ಮಾತುಕತೆ ಮುಂದುವರಿಯುವುದು, ಬಚ್ಚಿಟ್ಟುಕೊಂಡವರು ಶಪಿಸುತ್ತಿರುವುದು ಮತ್ತು ಮುದುಕಿಯ ಕತೆ ಕನಸಲ್ಲೂ ಮುಂದುವರಿಯುತ್ತಿದ್ದರೂ ತಮ್ಮದೇ ಕತೆಯನ್ನು ಕೇಳಬೇಕಾದವರು ನಿದ್ದೆಗೆ ಶರಣಾಗಿರುವುದು ನಮ್ಮನ್ನು ಯಾಕೆಂದೇ ತಿಳಿಯದ ಕಾರಣಕ್ಕೆ ಸಣ್ಣಗೆ ಬೆಚ್ಚಿಬೀಳಿಸುತ್ತದೆ. 

 ಅಲ್ಲಿ ನಿಯಮ ಮುರಿದು ಗೆರೆ ತುಳಿದವರು ಯಾರೆಂದು ಕೊನೆಗೂ ತಿಳಿಯುವುದೇ ಇಲ್ಲ ಮಾತ್ರವಲ್ಲ ಯಾರೂ ಸೋಲೊಪ್ಪಿಕೊಳ್ಳಲು ತಯಾರೂ ಇಲ್ಲ. ಮಕ್ಕಳಾಟದಲ್ಲೇನೋ ಇದು ಸ್ವಾಭಾವಿಕವೇ. ಆದರೆ ದೊಡ್ಡವರ ಆಟದಲ್ಲೂ ನಡೆಯುತ್ತಿರುವುದು ಇದೇ ಅಲ್ಲವೆ? ಗೊಂಬೆಗಳ (ವಧೂವರರ) ಬದಲಿಗೆ ತಾವೇ ಮಾತನಾಡುತ್ತಾ ಆಡುತ್ತಾ ಬಳಲಿ ಬೆಂಡಾದರೂ ಮಾತುಕತೆ ಮುಗಿಯಲೇ ಇಲ್ಲ, ಗೊಂಬೆ ಮದುವೆ ನಡೆಯಲೇ ಇಲ್ಲ. ಕಣ್ಣು ಮುಚ್ಚಿದ್ದಾಗ ಇದ್ದ ಗದ್ದಲವಾವುದೂ ಕಣ್ತೆರೆದಾಗ ಇಲ್ಲವೇ ಇಲ್ಲ ಎನ್ನುವ ಮಾತನ್ನು ಗಮನಿಸಿ! ನಿಜಕ್ಕಾದರೆ ಕಣ್ತೆರೆದಾಗ ಇದ್ದ ಗದ್ದಲವೆಲ್ಲವೂ ಕಣ್ಮುಚ್ಚಿದಾಗ ನಿಲ್ಲುತ್ತದೆ, ಇದು ಜಗತ್ತಿನ ನಿಯಮ. ಆದರೆ ಇಲ್ಲಿ ಉಲ್ಟಾ ವಿದ್ಯಮಾನವೇ ನಿಜ! ಹಾಗೆಯೇ, ಅಡಗಿಕೊಂಡವರನ್ನು ಹುಡುಕಿ ತೆಗೆಯಬೇಕಾದವನಿಗೆ ಸೋಮಾರಿತನ, ನಿದ್ದೆ. ವ್ಯವಸ್ಥೆಯ ವಿಡಂಬನೆಯೇ ಇದು? ಇನ್ನು ಅಡಗಿಕೊಂಡಿರುವವರಿಗೆ ಹೊರಬರುವ ಧೈರ್ಯವಿಲ್ಲ, ಅವರು ಹಕ್ಕಿಗಳನ್ನು ಹಾರಿ ಬಿಟ್ಟ ಪಂಜರದವನ ಭಯದಲ್ಲಿ ಶಪಿಸುತ್ತಾ ಅಡಗಿಕೊಂಡೇ ಇದ್ದಾರೆ! ಒಂಥರಾ ಕ್ವಾರಂಟೈನ್ ನೆನಪುಗಳನ್ನು ತರುತ್ತದೆಯಲ್ಲವೆ ಇದು! 

ಕಥೆ ಕೇಳುವ ಪ್ರಸಂಗವಂತೂ ತುಂಬ ಅದ್ಭುತವಾಗಿದೆ. ತಮಾಶೆಯೆಂದರೆ ಇಲ್ಲಿ ಕತೆ ಹೇಳುತ್ತಿರುವ ಮುದುಕಿ ಇನ್ನೂ ಎಚ್ಚರವಾಗಿಯೇ ಇದ್ದಾಳೆ, ಅವಳು ಕತೆ ಹೇಳುತ್ತಲೇ ಇದ್ದಾಳೆ. ಜಗತ್ತಿನ ಕತೆ ನಿರಂತರವಾಗಿ ಸಾಗುತ್ತಲೇ ಇರುತ್ತದೆ, ಅದಕ್ಕೆ ಮುಕ್ತಾಯವೆಂಬುದೇ ಇಲ್ಲ. ಆದರೆ ಕತೆ ಕೇಳುವವರೆಲ್ಲ ಆಗಲೇ ನಿದ್ರಾಲೋಕಕ್ಕೆ ಜಾರಿದ್ದಾರೆ. ಮತ್ತಿದು ಅವರದೇ ಕತೆ! ತಮ್ಮದೇ ಕತೆಯನ್ನು ಕೇಳುತ್ತ ನಿದ್ದೆ ಹೋಗಿದ್ದಾರವರು. ಆದರೂ ಆ ನಿದ್ದೆಯಲ್ಲೂ ಅವರು ಕತೆ ಕೇಳಿಸಿಕೊಳ್ಳುತ್ತಾ, ಹೂಂಗುಡುತ್ತಾ ಇದ್ದಾರೆ! ಆತ್ಮರತಿ ಹೇಗಿರುತ್ತದೆಂದರೆ ನಮ್ಮನಮ್ಮದೇ ಕತೆಗೆ ಬಹುಶಃ ನಿದ್ದೆಯಲ್ಲೂ ನಾವು ಸ್ಪಂದಿಸುತ್ತೇವೆ, ಅಲ್ಲವೆ? ಅವರಿಗೆ ನಿದ್ದೆ ಆವರಿಸಿದ ಅರಿವೇ ಇಲ್ಲ ಎನ್ನುವಾಗ ಯಾಕೋ ಕಣ್ಣಾಮುಚ್ಚಾಲೆಯ ಆಟದಲ್ಲಿ ಹೊರಬರಲು ಹೆದರಿ ಅಡಗಿ ಕೂತವರ ನೆನಪಾಗುತ್ತದೆ! ನಿದ್ದೆ ಎಂಬುದು ಸಾವಿನ ತರ ಕೂಡ. 

ಒಂದು ಆಧ್ಯಾತ್ಮಿಕವಾದ, ಅತಿವಾಸ್ತವದ ಪದರವಿದೆ ಈ ಕವಿತೆಗೆ. ಅದನ್ನು ಇದೇ ಎಂದು ವಿವರಿಸುವುದು ಕಷ್ಟ! ವಿವರಿಸಲು ಹೋದಷ್ಟೂ ಅದು ನಿಮ್ಮ ಕೈಯಿಂದ ನುಣುಚಿಕೊಂಡೇ ಉಳಿಯುತ್ತದೆ. ಇದಲ್ಲವೇ ಒಂದು ಅತ್ಯುತ್ತಮ ಕವಿತೆಯ ನಿಜವಾದ ಲಕ್ಷಣ? 

‘ಅಂತರ’ ಎಂಬ ಇನ್ನೊಂದು ಕವಿತೆಯೂ ತುಂಬ ಚೆನ್ನಾಗಿದೆ. 

ನನ್ನೊಳಗೆ ಮಾತುಗಳು ಹುಟ್ಟಲಾಗದ ಹೊತ್ತು 
ತಪ್ತ ಮೌನ, ಆಳದ ಬಿಕ್ಕು, ಬಿಸಿಯುಸಿರು 
ನಿನ್ನ ತಾಗಲಾರದೇ ನನ್ನೊಳಗೇ ಉಳಿದು 
ನಾಲ್ಕು ಗೋಡೆಗಳ ನಡುವೆ, 
ಅಕ್ಕಪಕ್ಕ ಇದ್ದೂ ಅಪರಿಚಿತರಾದವು... 

ನಾಲ್ಕು ಗೋಡೆಗಳೂ ಅಕ್ಕಪಕ್ಕವೇ ಇರುತ್ತವೆ, ಅಲ್ಲವೆ! ಅಕ್ಕಪಕ್ಕ ಇದ್ದೂ ಅವುಗಳ ದಿಕ್ಕು ಬೇರೆ! ಬಹುಶಃ ಬಹುಮಟ್ಟಿಗೆ ಅವು ಅಕ್ಕಪಕ್ಕ ಇದ್ದೂ ಪರಸ್ಪರ ಅಪರಿಚಿತವೇ ಏನೋ! ಎಲ್ಲೋ ಮೊಳೆ ಹೊಡೆದು ಎಳೆದ ಬಟ್ಟೆ ಒಣಗಿಸುವ ಹಗ್ಗವೋ, ಗೋಡೆಯೊಳಗಿನಿಂದಲೇ ಹರಿದ ಯಾವುದೋ ಇಲೆಕ್ಟ್ರಿಕ್ ವೈರೋ ಅವುಗಳ ನಡುವೆ ಸಂಬಂಧ ಬೆಸೆಯಲು ಪ್ರಯತ್ನಿಸಿದರೂ ಬಹುಶಃ ಅವು ಒಂಥರಾ ವೈರುಧ್ಯವನ್ನೇ ನುಡಿಸುತ್ತಿರುತ್ತವೆ ಅನಿಸುತ್ತದೆ. ಅವುಗಳ ನಡುವಿನ ತಂತು ಪರಸ್ಪರ ಎಳೆದಾಡಿಕೊಂಡಂತಿರುತ್ತದೆಯೇ ಹೊರತು ಪರಸ್ಪರ ಕೊಟ್ಟು - ಕಳೆದು - ಕೊಂಡಂತೆ ಇರುವುದಿಲ್ಲ. ಇಲ್ಲಿಯೂ ಒಂದು ಜೀವದ ತಪ್ತ ಮೌನವಾಗಲೀ, ಆಳದ ಬಿಕ್ಕಾಗಲೀ, ಬಿಸಿಯುಸಿರಾಗಲೀ ಅಕ್ಕಪಕ್ಕವಿದ್ದರೂ ಅವು ಇನ್ನೊಂದು ಜೀವವನ್ನು ತಾಗಲಾರದೇ ಉಳಿದುಬಿಡುತ್ತವೆ. ಆದರೆ ಕವಿಯ ಮೂಲ ಉದ್ದೇಶ ಗೋಡೆಗಳ ನಡುವಿನ ಸಂಬಂಧದ ಕುರಿತು ಹೇಳುವುದಲ್ಲ. ಅಲ್ಲಿ ಎರಡು ಜೀವಗಳ ನಡುವಿನ ಸಂಬಂಧವೇ ವಸ್ತು ಎನ್ನುವುದು ನಿಜ. ಆದರೆ ಅದನ್ನು ಹೇಳುವ ಬಗೆ ನಮ್ಮ ವಿಶೇಷ ಗಮನ ಸೆಳೆಯುತ್ತದೆ ಮಾತ್ರವಲ್ಲ, ಮನಸ್ಸಿನಲ್ಲಿ ಒಂದು ವಿಶಿಷ್ಟವಾದ ಮುದ್ರೆಯನ್ನೊತ್ತಿ ಅನುಭವವನ್ನು ದಾಟಿಸುತ್ತದೆ. 

ಅದ್ಭುತವಾದ ಇನ್ನೊಂದು ಕವಿತೆ ‘ರೂಪಾಂತರ’. ಅದರ ಕೊನೆಯಲ್ಲಿ ಮತ್ತೆ ಪುನಃ ಕವಿತೆಯ ನಡುವೆಲ್ಲೋ ಬಂದು ಹೋದ ಪ್ರತಿಮೆಗಳೇ ಪುನರಾವತಾರವೆತ್ತಿ ಬರುವುದು, ಕಾಫಿ ಲೋಟವೇ ಸ್ಥಾಯಿಯಾಗುವಂತೆ ನಡುವೆ ಇದೆಲ್ಲವೂ ಅಲ್ಲಿಯೇ ಇತ್ತೆಂಬಂತೆ ಮತ್ತೆ ಮರಳುವುದು ನಿಜಕ್ಕೂ ಅದ್ಭುತವಾದ ಪರಿಕಲ್ಪನೆಯ ಪರಿಪೂರ್ಣ ಬಳಕೆ. ಈ ಮಾಯಕ ಕವಿತೆಯನ್ನು ನೀವೇ ಸ್ವತಃ ಓದಿ ಅನುಭವಿಸಬೇಕು, ಅದಕ್ಕಾಗಿ ಈ ಸಂಕಲನವನ್ನೇ ತೆರೆದು ಓದಬೇಕು. 

‘ಅವಳು’ ಕವಿತೆ ಕೂಡ ನನಗಿಷ್ಟವಾದ ಇನ್ನೊಂದು ಕವಿತೆ. ಈ ಕವಿತೆಗೆ ಬಿಡಿಸಿದ ಚಿತ್ರದಷ್ಟೇ (ಶ್ರೀ ಮಹಾಂತೇಶ ದೊಡ್ಡಮನಿ ಇಲ್ಲಿನ ಚಿತ್ರ ಕಲಾವಿದ) ಮೋಹಕವೂ, ನಿಗೂಢವೂ ಮತ್ತು ಅರ್ಥಪೂರ್ಣವೂ ಆದ ಕವಿತೆಯಿದು. 

‘ಅವನ ಬಗ್ಗೆ ಒಂದಿಷ್ಟು’ ಕವಿತೆ ತನ್ನ ತಾಜಾತನದಿಂದಲೂ, ಹೊಸ ಬಗೆಯ ರೂಪಕ/ಪ್ರತಿಮೆಗಳಿಂದಲೂ ಮೆಚ್ಚುಗೆ ಹುಟ್ಟಿಸುತ್ತದೆ. 

 ‘ಋತುಸಂಕಟ’ ಕವಿತೆ, ಮುಟ್ಟಿನ ಬಗ್ಗೆ ಬರೆದ ಮತ್ತು ನನ್ನ ಗಮನಕ್ಕೆ ಬಂದ ಯಾವತ್ತೂ ಕತೆ/ಕವನಗಳಲ್ಲಿ ಅತ್ಯಂತ ಮನೋಜ್ಞವಾದ ರಚನೆ. ಬಹುಶಃ ಆ ಎಲ್ಲರಿಗೂ ಹೇಳಲಿಕ್ಕೆ ಇದ್ದಿದ್ದು ಇಷ್ಟೇ. ಇದನ್ನೇ ಅಚ್ಚುಕಟ್ಟಾಗಿ ಹೇಳಿದ್ದರೆ ಎಷ್ಟು ಸುಂದರವಾಗಿ ಮತ್ತು ಅದೇ ಕಾಲಕ್ಕೆ ಯಾತನೆಯೂ ಆಗಿ ನಮ್ಮನ್ನು ಅದು ತಲುಪುವುದು ಸಾಧ್ಯವಿತ್ತೋ ಅದು ಉಳಿದವರಲ್ಲಿ ಆಗಲಿಲ್ಲ. ‘weep, cry if you want, cry as much as you want. But rejoice' ಎನ್ನುತ್ತದೆ ಒಂದು ಪಾತ್ರ, ತನ್ನೆಲ್ಲಾ ಮಕ್ಕಳನ್ನು ಕಳೆದುಕೊಂಡು, ಕಟ್ಟಕಡೆಯ ಮಗನ ಸಾವನ್ನು ನೆನೆದು ಅಳುತ್ತಿರುವ ತಾಯಿಗೆ. ಆ ಮಾತು ಹುಟ್ಟಿಸುವ ಭಾವವನ್ನು ವಿವರಿಸುವುದು ಕಷ್ಟ. ದುಃಖದಲ್ಲಿ ಒಂದು ವಿಧವಾದ ಸುಖವಿದೆ, ನಮ್ಮನ್ನು ಲೋಕದಿಂದ, ಪಾಪದಿಂದ ಮುಕ್ತಗೊಳಿಸುವ ಸುಖವದು. ದುಃಖದಿಂದಲ್ಲದೇ ಸಿಗಲಾರದ ಸುಖವದು. ‘ಋತುಸಂಕಟ’ ಕವಿತೆ ಅಂಥ ಒಂದು ಸಂಕಟವನ್ನೂ ಸುಖವನ್ನೂ ಏಕಕಾಲಕ್ಕೆ ನುಡಿಸುತ್ತಿರುವ ಅಪ್ಪಟ ಕವಿತೆ. 

ಎಂ ಎಸ್ ಆಶಾದೇವಿಯವರು ಬರೆದ ವಿವರವಾದ ಮುನ್ನುಡಿ, ಡಾ. ಎಚ್ ಎಲ್ ಪುಷ್ಪಾ ಅವರ ಬೆನ್ನುಡಿ ಎರಡೂ ಈ ಕವಿತೆಗಳ ಮಹತ್ವವನ್ನು ಮತ್ತಷ್ಟು ಸ್ಫುಟವಾಗಿ ಕಾಣಿಸುವಂತಿವೆ. ಅಚ್ಚುಕಟ್ಟಾದ ಮುದ್ರಣ, ಚಿತ್ರಗಳು, ಬಳಸಿದ ಕಾಗದವೂ ಸೇರಿ ಪ್ರತಿಯೊಂದೂ ಗಮನ ಸೆಳೆಯುವಷ್ಟು ಆಕರ್ಷಕವಾಗಿವೆ. 

ಇನ್ನಷ್ಟು ಒಳ್ಳೆಯ ಮತ್ತು ನಿಜವಾದ ಕವಿತೆಗಳನ್ನು ಬರೆಯಿರಿ ಎಂದು ಅಭಿನಂದಿಸುತ್ತಾ ನಿಮಗೆ ಶುಭಕೋರುವೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, January 26, 2021

ಕವಿತೆಗೊಲಿದ ಕವಿ

ಕವಿಭಾವ ತೀರ ಅಮೂರ್ತವಾದದ್ದು. ಅದಕ್ಕೆ ಭಾಷೆಯ ಹಂಗಿಲ್ಲ, ಅರ್ಥದ ಹಂಗಿಲ್ಲ ಮತ್ತು ಅದು ತೀರ ಕ್ಷಣಭಂಗುರವಾದದ್ದು ಕೂಡ. ಹೇಳಬೇಕೆಂದರೆ, ಕನಸಲ್ಲಿ ಕಂಡ ಯಾವುದೋ ಒಂದು ಬಿಂಬ, ದೃಶ್ಯ ಅಥವಾ ಭಾವನೆಯಂತೆ. ಅದನ್ನು ಅದೇ ಕ್ಷಣ ಬುದ್ಧಿಯಿಂದ ಗ್ರಹಿಸುವುದು ಎಲ್ಲರಿಗೂ ಸಾಧ್ಯವಾಗುವಂಥದ್ದಲ್ಲ. ಸಾಧ್ಯವಾದಾಗಲೂ, ಆ ಕವಿಭಾವಕ್ಕೆ ಭಾಷೆಯ ಬಟ್ಟೆ ತೊಡಿಸುವಾಗ ಆಗುವ ಎಡವಟ್ಟುಗಳಿಂದ ತಪ್ಪಿಸಿಕೊಳ್ಳುವುದು ಕೂಡ ಸುಲಭವಲ್ಲ. ಒಂದೋ ನೀವು ಅದ್ಭುತ ಭಾಷೆಯ ಪ್ರಾವೀಣ್ಯವುಳ್ಳವರಾಗಿದ್ದರೆ, ಭಾಷೆಯ ಮೋಹಕತೆಯಲ್ಲಿ ಮಾಯವಾಗಿ ಬಿಡಬಹುದು; ಅಥವಾ ನಿಮ್ಮ ಭಾಷೆ ಪಳಗಿಲ್ಲವಾದಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಹೇಳಿಬಿಡಬಹುದು. ಎರಡೂ ಪ್ರಸಂಗಗಳಲ್ಲಿ ಹೊಗಳುಭಟ್ಟರ ಸೇವೆಯಿಂದ ಬಚಾವಾಗಲು ಸೋತರೆ ಕತೆ ಮುಗಿದಂತೆಯೇ. 

ಗುರುಗಣೇಶ ಅವರ ಕೆಲವೇ ಕೆಲವು ಕವಿತೆಗಳನ್ನು ಓದಿದಾಗ ನನಗೆ ಮೊದಲಿಗೆ ಅನಿಸಿದ್ದು ಈ ಹುಡುಗ ಭಾವವನ್ನು ಭಾಷೆಯ ಋಣಕ್ಕೆ ಬೀಳದೆ ವ್ಯಕ್ತಪಡಿಸಲು ತುಡಿಯುತ್ತಿರುವ ಒಂದು ಕವಿಚೇತನ ಎಂದೇ. ಹಾಗಾಗಿ ಇವನು ನನಗೆ ಇಷ್ಟ. ಹಾಗಾಗಿಯೇ ಈ ಕವಿತೆಗಳ ಬಗ್ಗೆ ಮಾತನಾಡುವುದು ತುಂಬ ಕಷ್ಟ ಕೂಡ. ಇದು ಗಾಜಿನಂತೆ ಕಾಣುವ ನೀರಿನ ಹಲಗೆಯ ಮೇಲೆ ಕಾಲಿಟ್ಟು, ನನ್ನ ಮಾತಿನ ಭಾರವನ್ನು ಅದರ ಮೇಲಿಕ್ಕದೇ ನಡೆಯಬೇಕಾದ ಸವಾಲು. ಒಬ್ಬ ಕವಿಯಷ್ಟೇ ನಿಭಾಯಿಸಬಲ್ಲ ಈ ಸವಾಲಿಗೆ ನಾನು ಶುದ್ಧ ಅಪಾತ್ರ; ಅನಿವಾರ್ಯಕ್ಕೆ ಸಿಕ್ಕ ಕವಿಮಿತ್ರ. 

ನಾನು ಇವರ ಕೆಲವು ಕವಿತೆಗಳನ್ನೇ ಉಲ್ಲೇಖಿಸುತ್ತ ಈ ಹುಡುಗನ ಬಗ್ಗೆ ನನ್ನ ಮೆಚ್ಚುಗೆಯನ್ನು ಹಂಚಿಕೊಳ್ಳುವುದಷ್ಟೇ ಬಹುಶಃ ನಾನು ಮಾಡಬಹುದಾದ್ದು. ಏಕೆಂದರೆ, ಈ ಕವಿತೆಗಳಿಗೆ ಟ್ಯೂನ್ ಆಗಬಲ್ಲ ಹೃದಯ ನಿಮಗಿದ್ದರೆ, ಮುನ್ನುಡಿಯ ಭಾರವನ್ನು ಅದು ಹೊರಬೇಕಾದ್ದಿಲ್ಲ. ಯಾರೂ ಬಹುಬೇಗ ಟ್ಯೂನ್ ಆಗಬಲ್ಲ ಆಕರ್ಷಣೆಯುಳ್ಳ ಈ ಕವಿತೆಗಳ ಮಟ್ಟಿಗೆ ಆಂಟೆನಾ ಬೇಕಿಲ್ಲ. 

ಹಗಲು 
ಅಟ್ಟದ ಮೇಲೆ ಕೂತು ಕಾಯಿಸಿದ ಬಿಸಿಲು 

ರಾತ್ರಿ 
ಕೊಡಚಾದ್ರಿ ಶ್ರೇಣಿಯ ಘಟ್ಟ ಇಳಿಜಾರು 

ಕೇಳಿಸಿದ್ದು -
ಒಂಟಿಸಲಗದ ಘೀಳು 
ಜವಟೆ ಏರುನಾದ, ಢಣಢಣ ಸದ್ದು 

ಸರ್ಕಾರ ಅತಿಕ್ರಮಣ ನಿಷೇಧಿಸಿದೆ. 

 - ಈ ಕವಿತೆಯ ಸೌಂದರ್ಯವೆಲ್ಲಾ ಇರುವುದು ಅದರಲ್ಲಿ ಮನುಷ್ಯನ ಇರುವಿಕೆಯೇ ಇಲ್ಲದ ಪ್ರಕೃತಿಯನ್ನು ಕವಿ ಗುರುತಿಸಿದ್ದರಲ್ಲಿ ಮತ್ತು ಅದನ್ನು ಪದಗಳಲ್ಲಿ ಹಿಡಿದಿಟ್ಟಿರುವ ಬಗೆಯಲ್ಲಿ. ಹಗಲು ಮತ್ತು ರಾತ್ರಿ ಅನುಭವಕ್ಕೆ ಬರುವುದು ಬಿಸಿಲು ಮತ್ತು ಘಟ್ಟದ ಇಳಿಜಾರಿನಲ್ಲಿ. ಇಲ್ಲಿ ಅಟ್ಟದ ಮೇಲೆ ಕೂತು ಬಿಸಿಲು ಕಾದಿದ್ದು ಕವಿಯೇ ಅಥವಾ ಬಿಸಿಲೇ ಅಟ್ಟದ ಮೇಲೆ ಕೂತು ಬೆಚ್ಚಗಾಯಿತೇ, ಅದು ನಿಮ್ಮ ಮನಸ್ಸಿನ ಸ್ಪೇಸ್‌ಗೆ ಬಿಟ್ಟುಬಿಡಿ. ಹಾಗೆಯೇ, ಘಟ್ಟ ಇಳಿಜಾರು ಕವಿಯ ಮನಸ್ಸಿನಲ್ಲಿ ಹಾದು ಹೋದ ಒಂದು ಚಿತ್ರವೇ ಅಥವಾ ರಾತ್ರಿ ಹಾಗೆ ಇಳಿಯುತಿತ್ತೇ (ಸೂರ್ಯ ಭುವಿಯ ಬೆನ್ನ ಮೇಲೆ ಜಾರಿದ ಹಾಗೆ) ಎನ್ನುವುದು ಕೂಡಾ ನಿಮ್ಮ ಮನಸ್ಸಿನಲ್ಲಿ ಹಾಯಲಿ, ನಿರ್ಧರಿಸಬೇಡಿ. ಸುಮ್ಮನೇ ಈ ಸಾಲುಗಳನ್ನು ಅವು ಹೇಗಿವೆಯೋ ಹಾಗೆ ಅನುಭವಿಸುತ್ತ ಬನ್ನಿ. 

ಈಗ ಕೇಳಿಸಿತಲ್ಲ, ಒಂಟಿಸಲಗದ ಘೀಳು, ಬೆನ್ನಿಗೇ ಜವಟೆಯ ಏರುನಾದ, ಢಣಢಣಢಣಢಣ.....ಇದು ಅತಿಕ್ರಮಣ. ಯಾರದ್ದು? ಒಂಟಿಸಲಗದ್ದೇ? ರೈತನನ್ನು ಕೇಳಿ ಹೌದೆನ್ನುತ್ತಾನೆ. ಬೇಡ, ಆನೆಯನ್ನು ಕೇಳುತ್ತೀರಾ? 

ಇನ್ನೊಂದು ಕವಿತೆ: 

ಮರದ ಕೊಂಬೆಯಲ್ಲಿ 
ಗರಿ 

ಕೆಳಗೆ ಬೀಳುವ ಎಲೆ 
ಕಾಯಿ ಹಣ್ಣು ಹಾರುವ ಹಕ್ಕಿ 
ದೃಷ್ಟಿ ನೆಲದ ಕಡೆ 

ಮಧ್ಯೆ ಮರ, 
ಆಕಾಶ ನೋಡುತ್ತ 

ನೆಲದ ಬಳಿಗೆ ಹಕ್ಕಿ ಹಾರಿ 
ರೆಕ್ಕೆ ಬಿಚ್ಚಿ ಹಣ್ಣು ನುಂಗಿದ 
ಊದ್ದ ತೇಗು ನನಗೂ ಕೇಳಿಸಿತು 

ಪಿಶ್ಶಿ ಅಂಗಿಯ ಮೇಲೆ ಪಿಚ್ಚಕ್ಕ 
ಕಲೆ ಒಳ್ಳೆಯದೇ... 

ಮತ್ತೊಂದು ದಿನ 
ನೆರೆಯವನ ಅಂಗಳದಲ್ಲಿ 
ಒಂದು ಗಿಡ ನಕ್ಕಿತು 

ಯಾವ ಪತ್ರಿಕೆಯಲ್ಲೂ ವರದಿ ಕಾಣಲಿಲ್ಲ. 

- ಮತ್ತೆ ಮತ್ತೆ ಓದಿದಾಗಲೆಲ್ಲ ಎಷ್ಟು ಚಂದ ಅನಿಸಿ ಸುಮ್ಮನಿದ್ದು ಬಿಡಬೇಕು ಅನಿಸುತ್ತದೆ ನನಗೆ. ವಿವರಿಸುವುದು ಅಸಹ್ಯ. ಈ ಪ್ರಕೃತಿಯ ನಾದಕ್ಕೆ ನನ್ನ ಗೊಗ್ಗರು ಕಂಠದ ಕಲಬೆರಕೆಯಾಗಬೇಕೆ? 

ಮರದ ಕೊಂಬೆಯಲ್ಲಿ ನೀವು ಕಾಣುತ್ತಿರುವುದು ಗರಿ. ಒಣಗಿದ ಎಲೆಯೋ, ಹಸಿರೆಲೆಯೋ ಅಲ್ಲ. ಅದು ಯಾವುದೋ ಹಕ್ಕಿಯ ಗರಿ ಇರಬಹುದು ಎಂದುಕೊಳ್ಳಿ. ನಂತರ ಅಲ್ಲಿ ಕೆಳಗೆ ಬೀಳುವ ಎಲೆ ಇದೆ. ಅದು ಬೀಳುತ್ತಿದೆ ಎಂದೇನೂ ಕವಿ ಹೇಳುತ್ತಿಲ್ಲ. ಬೀಳುವ ಎಲೆ ಅಷ್ಟೆ. ಅದು ನಿರಂತರವಾಗಿ ಕಳೆದ ಶತಮಾನದಿಂದ ಬೀಳುತ್ತಿದೆ ಮತ್ತು ಮುಂದಿನ ಹಲವಾರು ಶತಮಾನಗಳ ವರೆಗೆ ಹಾಗೆ ಬೀಳುತ್ತಲೇ ಇರುತ್ತದೆ ಎಂದಿಟ್ಟುಕೊಳ್ಳಲು ಇದೇ ಆಧಾರ. ಇದರ ಜೊತೆಗೆ ಸಾಥ್ ಕೊಡಲು ಕಾಯಿ, ಹಣ್ಣು, ನೆಲದ ಕಡೆಗೆ ನೆಟ್ಟ ಹಾರುವ ಹಕ್ಕಿದೃಷ್ಟಿ - ಇದೆ. ಮಧ್ಯೆ ಮರ ಆಕಾಶ ನೋಡುತ್ತ ವೃಕ್ಷದೃಷ್ಟಿಯಿದೆ. ಕೆಳಗೆ ಬೀಳುವ ಎಲೆಗೆ ಎಷ್ಟೊಂದು ಸಾಕ್ಷಿಗಳು ನೋಡಿ! ಹಾರುವ ಹಕ್ಕಿಯ ದೃಷ್ಟಿ ನೆಲದ ಕಡೆಗೆ ಇದ್ದರೆ, ಸ್ಥಾವರವಾದ ಮರದ ದೃಷ್ಟಿ ಆಕಾಶದ ಕಡೆಗಿದೆ. ನಡುವೆ ಬೀಳುವ ಎಲೆ ಇದೆ. ಬಹುಶಃ ಅದಕ್ಕೆ ಗೊತ್ತಿದೆ, ಇವತ್ತಲ್ಲಾ ನಾಳೆ ನಾನು ಬೀಳುವುದೇ ನಿಶ್ಚಯವಾದದ್ದು ಎಂಬ ಸತ್ಯ, ಅಲ್ಲವೆ? 

ಇಲ್ಲಿ ಗರಿ ಅಂದ ತಕ್ಷಣವೇ ನಮಗೆ ನೆನಪಾಗುವುದು ಬೇಂದ್ರೆಯವರ ‘ಗರಿ’. ಈ ಕವಿತೆಯ ಬಗ್ಗೆ ಎಸ್ ದಿವಾಕರ್ ಅವರ ಒಂದು ಸುಂದರ ಪ್ರಬಂಧದಲ್ಲಿ ಉಲ್ಲೇಖವಿದೆ. ಅದರ ಹೆಸರು ‘ಹಕ್ಕಿ ಮೈಯ ಬದುಕು’, (‘ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ’ ಕೃತಿಯಲ್ಲಿದೆ). ಹಾರಲೆಂದೇ ಹುಟ್ಟಿದ ಹಕ್ಕಿಮೈಯ ಬದುಕದು ಎಂದಿದ್ದಾರೆ ಬೇಂದ್ರೆ, ಗರಿಯ ಬಗ್ಗೆ. ಗರಿ ಎಂದೂ ನೆಲಕ್ಕೆ ಬಿದ್ದರೂ ತನ್ನ ಹಾರುವ ಗುಣ ಕಳೆದುಕೊಳ್ಳುವುದಿಲ್ಲವಂತೆ. ಬಿದ್ದ ಪುಚ್ಚಗಳಲ್ಲೂ ಅವರು ಹಾರಿ ಹೋಗುವ ಹಕ್ಕಿಯ ಹುಡುಕುವವರು. ಪುಣೇಕರ ಅವರ ವಿಶ್ಲೇಷಣೆಯನ್ನು ಉಲ್ಲೇಖಿಸುವ ಎಸ್ ದಿವಾಕರ್ ಅವರು, ಭಾವಸಾಮ್ರಾಜ್ಯದಲ್ಲಿ ಪ್ರವಹಿಸುತ್ತಲೇ ಇರುವ ಹಕ್ಕಿಗಾಳಿಯ ಬಗ್ಗೆ ವಿಶೇಷ ಗಮನ ಸೆಳೆಯುತ್ತಾರೆ. ಒಂದು ಗರಿ ಎಂದರೆ ಹಾರಲೆಂದೇ ಹುಟ್ಟಿದ ಹಕ್ಕಿಮೈಯ ಬದುಕು ಹೇಗೋ, ಕವಿಯ ಭಾವಸಾಮ್ರಾಜ್ಯದಲ್ಲಿ ಸದಾ ಪ್ರವಹಿಸುತ್ತಿರುವ ಹಕ್ಕಿಗಾಳಿಯ ಪ್ರತೀಕ ಕೂಡ ಹೌದು. ಹಾಗಾಗಿ ಗರಿಗಳೆಲ್ಲ ಕವಿತೆಗಳಾದವು! 

ಎಸ್ ದಿವಾಕರ್ ಅವರದೇ ಇನ್ನೊಂದು ಪುಸ್ತಕ ‘ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ’ ಸಂಕಲನದ ಒಂದು ಅನುವಾದಿತ ಕತೆ, ‘ಬೀಳುತ್ತಿದ್ದಾಳೆ ಹುಡುಗಿ ಮೇಲಿನಿಂದ ಕೆಳಕ್ಕೆ’ ಕೂಡ ನನಗೆ ಗುರುಗಣೇಶರ ಈ ಕವಿತೆ ಓದುವಾಗ ನೆನಪಾಗುತ್ತದೆ. ‘ಕೆಳಗೆ ಬೀಳುವ ಎಲೆ’ ಎಂಬ ಪದಪ್ರಯೋಗದ ವಿಶಿಷ್ಟ ಧ್ವನಿಯನ್ನು ನಾನು ಗ್ರಹಿಸಿದ್ದು ದೀನೋ ಬುತ್ಸಾತಿಯ ಈ ಕತೆಯ ಹಿನ್ನೆಲೆಯಲ್ಲಿಯೇ. ಈ ಕತೆಯಲ್ಲಿ ಹತ್ತೊಂಬತ್ತು ವರ್ಷದ ಹುಡುಗಿ ಗಗನಚುಂಬಿ ಕಟ್ಟಡದ ತುದಿಯಿಂದ ಅಕಸ್ಮಾತ್ತಾಗಿ ಬಿದ್ದು, ನೂರೈವತ್ತು-ಇನ್ನೂರು ಮಹಡಿಗಳ ಬೇರೆ ಬೇರೆ ಅಂತಸ್ತಿನ ಫ್ಲ್ಯಾಟುಗಳ ಬದುಕನ್ನು ಕಾಣುತ್ತಲೇ ನೆಲ ತಲುಪುವಷ್ಟರಲ್ಲಿ ಇಡೀ ಬದುಕಿನ ನಾನಾ ಸ್ತರಗಳನ್ನು ಅನುಭವಿಸಿ ಮಾಗುತ್ತಾಳೆ. ಹಾಗೆ ಕೊನೆಗೂ ಅವಳು ಸತ್ತಾಗ ಹಣ್ಣುಹಣ್ಣು ಮುದುಕಿಯಾಗಿರುತ್ತಾಳೆ. ಅದೇ ರೀತಿ ಗುರುಗಣೇಶರ ಈ ಕೆಳಗೆ ಬೀಳುವ ಎಲೆ ಸದ್ಯದ ಕ್ಷಣದಲ್ಲಿ ಬೀಳುತ್ತಿದೆಯೇ, ಬಿದ್ದಿದೆಯೆ, ಇನ್ಯಾವತ್ತೋ ಬೀಳಲಿದೆ ಎನ್ನುತ್ತಿದ್ದಾರೆಯೆ ಎಂಬುದು ಅನೂಹ್ಯವಾಗಿಯೇ ಉಳಿಯುತ್ತದೆ. ಹಾಗಾಗಿಯೇ ಅದು ಹೆಚ್ಚಿನ ಗುರುತ್ವವನ್ನು ಮೈಗೂಡಿಸಿಕೊಂಡು ಸದ್ಯಕ್ಕೆ ಸಾಕ್ಷಿಯಾಗುವ ಗುಣ ಪಡೆದುಕೊಂಡು ಬಿಡುತ್ತದೆ. 

ಈಗ ಈ ನೆಲದ ಮಾತಿಗೆ ಬನ್ನಿ. ನೆಲದ ಬಳಿಗೆ ಹಾರಿ ಬಂದ ಹಕ್ಕಿ, ರೆಕ್ಕೆ ಬಿಚ್ಚಿ ಹಣ್ಣು ನುಂಗಿ ತೇಗಿದ್ದು ಕೇಳಿ. ಆಮೇಲೆ ಅದು ನೆಲದ ಋಣ ಇಟ್ಟುಕೊಳ್ಳುವುದಿಲ್ಲ. ಪಿಶ್ಶಿ ಮತ್ತೆ ನೆಲಕ್ಕೇ, ಪಿಚ್ಚಕ್ಕ. ಕವಿಯ ಅಂಗಿ ಮೇಲೆ ಬಿದ್ದರೆ ಅದು ಕಲೆಯಾಗಿ ಒಳ್ಳೆಯದಾಗುತ್ತದೆ. ನೆಲಕ್ಕೆ ಬಿದ್ದರೆ ಗೊಬ್ಬರವಾಗುತ್ತದೆ. ಆಕಾಶದ ಕಡೆಗೆ ದೃಷ್ಟಿ ಇಟ್ಟಿರುವ ಮರದ ಕತೆಗೂ ಒಂದು ಸಾರ್ಥಕತೆಯನ್ನು ಕವಿ ಕೊಡುವುದು ಇಲ್ಲಿಯೇ. ಹಕ್ಕಿ ಹಾಕಿದ ಪಿಶ್ಶಿ ಕೂಡ ನೆಲ ಸೇರಿದರೆ ಹೊಸದೊಂದು ಗಿಡವಾಗಿ ಮೊಳಕೆಯೊಡೆಯದೇ, ಅದು ಚಿಗುರಿ ನಳನಳಿಸಿ ನಗಲಾರದೇ? ಹೌದು, ನೆರೆಯವನ ಅಂಗಳದಲ್ಲಿ ಸಂಭವಿಸಿತು ನೋಡಿ! ಗಿಡ ನಕ್ಕಿತು! ಆದರೆ ಅದರ ವರದಿ ನಿಮ್ಮ ಮನಸ್ಸು, ಹೃದಯದಲ್ಲಾಗಬೇಕಿದೆ. ಅಷ್ಟು ಮಾತ್ರ ಬಾಕಿ. ಅದಕ್ಕಾಗಿ ಪತ್ರಿಕೆಯ ಸುದ್ದಿ ಕಾಯಬೇಡಿ, ಮರದ ಕೊಂಬೆಯ ಗರಿಯಂತೆ, ಕಾಯಿ, ಹಣ್ಣಿನಂತೆ ಇದಕ್ಕೆ ಸಾಕ್ಷಿಯಾಗಿ. ಆಗ ನಿಮ್ಮನ್ನು ನೋಡಿ ನೆರೆಯವನ ಅಂಗಳದ ಗಿಡ ನಗುವುದು ಖಾತ್ರಿ! 

ಇನ್ನೊಂದು ಅದ್ಭುತ ಕವಿತೆ ನೋಡಿ: 

ಸಂಜೆಹೊತ್ತಿನ ಹೊಳೆ 
ನಿಧಾನ ನಿಧಾನವಾಗಿ ಹರಿಯುತ್ತದೆ 

ಸ್ವಲ್ಪ ತಡವಾದರೆ 
ಮಕ್ಕಳು ಕಿರುಚಿ ಅತ್ತು ಕಾದುಕಾದು 
ನಿದ್ದೆ ಮಾಡಿ, ಕೊನೆಗೆ 
ಅವಳೂ ಬೈದು. 

ಅಷ್ಟರಲ್ಲಿ ಬಂದರೆ ಬಾಗಿಲು ತೆರೆಯುವವರಿಲ್ಲ 
ದೇ ಸಿಟ್ಟು ಬಂದು 

ಇರುಳ ಒಳಗೆ ಹೇಗೋ 
ಮಿದುವಾಗಿ ನುಸುಳಿ 
ಉಂಡು 
ಹಾಸಿಗೆ ಹಾಸಿ ಗಿಡ ನೆಟ್ಟೆ. 
ನೀರು ಜಳಜಳ ಹರಿಯಿತು. 

ಕೊನೆಗೆ ಡಾಕ್ಟರು ಅಂದರು 
ನಿಮ್ಮ ಹೊಳೆ ಬಸುರಿ 

 - ವಿವರಿಸುವ ಅಗತ್ಯವಿದೆಯೆ? ಕವಿ ಲೌಕಿಕವನ್ನೂ, ಪ್ರಕೃತಿ ದೇವಿಯ ನುಡಿಯನ್ನೂ ಒಟ್ಟಿಗಿರಿಸುವ ಬಗೆಯ ಕೌತುಕ ಗಮನಿಸಿ. ಈ ಕವಿ ಎಷ್ಟು ಭಾವವಶನಾಗಿ ಪ್ರಕೃತಿಯನ್ನು, ಮಳೆಯನ್ನು, ಆಕಾಶವನ್ನು ಗಮನಿಸುತ್ತಾನೆಯೋ, ಅಷ್ಟೇ ಅವನ ಕಾಲುಗಳು ಮಣ್ಣಿನ ಒದ್ದೆ ನೆಲದ ಮೇಲೆ ಬಲವಾಗಿ ಊರಿಕೊಂಡಿವೆ. ಈ ಕವಿ ಮಹತ್ವದ ಕಾಣ್ಕೆ ಕೊಡಬಲ್ಲ ಅನಿಸುವುದು ಇದೊಂದೇ ಕಾರಣಕ್ಕೆ. ಸಿದ್ದಿ ಜನರ ನಡುವೆ ಓಡಾಡುತ್ತ, ಬಡತನ, ಆ ಬಡತನದೊಳಗಿನ ಸಮೃದ್ಧಿಯನ್ನು ಕಾಣಬಲ್ಲ ಕೇವಲ ಬಡವರಿಗಷ್ಟೇ ಸಾಧ್ಯವಿರುವ ಸಿದ್ಧಿ, ಆ ಸಮೃದ್ಧಿಯ ಸಂತೃಪ್ತ ನಗುವಿನ ಹಿಂದಿರುವ ಔದಾರ್ಯವನ್ನು ಅನುಭವಿಸಿದ ಮನುಷ್ಯ ಮಾತ್ರ ಗುರುತಿಸಬಲ್ಲ, ಭಾಷೆಗೆ ಮೀರಿದ ಒಂದು ಅನುಭೂತಿಯನ್ನಾಗಿ ದಕ್ಕಿಸಿಕೊಳ್ಳಬಲ್ಲ ಮತ್ತು ಇಂಥ ಕವಿತೆಗಳನ್ನು ಕೊಡಬಲ್ಲ, - ಸಬ್ಜೆಕ್ಟ್ ಹೌವೆವರ್ ಟು - ಭಾಷೆಯ ಇತಿಮಿತಿಗಳ ಮತ್ತು ಸುತ್ತಲಿನ ಮಂದಿಯ ಬಗ್ಗೆ ಎಚ್ಚರವಿದ್ದರೆ. 

ಇಲ್ಲಿ ಹೊಳೆ ಎಂಬವಳು ಅವನ ಹೆಂಡತಿ ಕೂಡ, ಊರಿನ ನದಿ ಕೂಡ. ಸಂಜೆ ಹೊತ್ತಿನ ಹೊಳೆ ನಿಧನಿಧಾನವಾಗಿ ಹರಿಯುತ್ತದೆ ಎನ್ನುವಲ್ಲಿ ಕೂಡಾ ಅದು ಅವನ ಹೆಂಡತಿಯ ಮನಸ್ಸಿನ ಬಗ್ಗೆ ಹೇಳುತ್ತಿದ್ದಾನೋ, ಅವನ ಹಾದಿಯಲ್ಲಿ ಸಿಕ್ಕ ನದಿಯ ಬಗ್ಗೆ ಹೇಳುತ್ತಿದ್ದಾನೋ ಎಂಬುದು ಮನಸ್ಸಿನಲ್ಲಿ ಹಾಗೇ ಸರಿದು ಹೋಗುವ ಒಂದು ಯೋಚನೆ. ಉತ್ತರ ಬೇಡ ಅದಕ್ಕೆ. ಮುಂದಿನ ನಾಲ್ಕು ಸಾಲಂತೂ ಮನೆಯಲ್ಲಿ ಕಾಯುತ್ತಿರುವ ಮಕ್ಕಳು ಮತ್ತು ಹೆಂಡತಿಯ ಬಗ್ಗೆಯೇ. ಆ ಸಾಲು ಕೊನೆಗೊಳ್ಳುವ ಬಗೆ ಗಮನಿಸಿ. ಬೈದು ಎನ್ನುತ್ತಲೇ ಅದು ಮುಗಿಯುತ್ತದೆ. ಏಕೆಂದರೆ, ಅಲ್ಲಿ ಅದು ಸುರುವಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿ ಕವಿ ಮೌನವಾಗುತ್ತಾನೆ. ಹೀಗೆ ಎಲ್ಲಿ, ಯಾವಾಗ ಮೌನವಾಗಬೇಕು ಎನ್ನುವುದನ್ನು ಬಲ್ಲ ಕವಿ ಇವರು.  

ಆದರೆ ಅವನೇನಾದರೂ ಬೇಗ ಬಂದರೆ? ಬಾಗಿಲು ತೆರೆಯುವವರಿಲ್ಲ. ಅವಳಿನ್ನೂ ಮನೆಗೆ ವಾಪಾಸಾಗಿಲ್ಲ ಬಹುಶಃ. ಬಾಗಿಲು ತೆರೆಯುವವರಿಲ್ಲದೇ ಸಿಟ್ಟು ಬಂದು. - ವಾಕ್ಯ ನಿಲ್ಲುವ ಬಗೆ ನೋಡಿ! 

ಕವಿತೆ ಎಲ್ಲಿದೆ ಎನ್ನುವುದನ್ನು ನೋಡಿ, ಅದು ಇಲ್ಲಿದೆ! 

ಇರುಳ ಒಳಗೆ ಹೇಗೋ 
ಮಿದುವಾಗಿ ನುಸುಳಿ 
ಉಂಡು 
ಹಾಸಿಗೆ ಹಾಸಿ ಗಿಡ ನೆಟ್ಟೆ. 
ನೀರು ಜಳಜಳ ಹರಿಯಿತು. 

- ಎಂಥ ಪೋಲಿ ಸಾಲುಗಳು ಎನಿಸುವಾಗಲೇ ಅದನ್ನಾಡುವ ನವಿರು ಗಮನಿಸಿ. ಇರುಳ ಒಳಗೆ ಹೇಗೋ ಮಿದುವಾಗಿ ನುಸುಳುತ್ತಾನವ. ಅದೇಕೆ ಮಿದುವಾಗಿ ನುಸುಳುತ್ತಾನೆ? ಶಬ್ದದ ಬಳಕೆ ಗಮನಿಸಿ. ನುಸುಳಿದ್ದು ಚಾದರದ ಒಳಗಲ್ಲ ಮತ್ತೆ, ಎಚ್ಚರ! ಹಾಗೆ ಇರುಳ ಒಳಗೆ ಮಿದುವಾಗಿ ನುಸುಳಿ ಉಣ್ಣುತ್ತಾನೆ! ಅಷ್ಟೇ ಅಲ್ಲ, ಹಾಸಿಗೆ ಹಾಸಿ ಗಿಡ ನೆಟ್ಟ ಚೋರ. ಗಿಡ ನೆಟ್ಟ ಮೇಲೆ ನೀರು ಹನಿಸಬೇಡವೆ? ನೀರು ಜಳಜಳ ಹರಿಯಿತು. ಸಂಜೆ ಹೊತ್ತಿನ ಹೊಳೆ ನಿಧಾನ ನಿಧಾನವಾಗಿ ಹರಿಯುತ್ತದೆ. 

ಇಡೀ ಕವಿತೆಯ ಗುಟ್ಟು ಬಯಲಾಗುವುದು ಡಾಕ್ಟರು ಹೇಳಿದಾಗಲೇ, ನಿಮ್ಮ ಹೊಳೆ ಬಸುರಿ! 

ಬಿಟ್ಟರೆ ಬಹುಶಃ ನಾನು ಇವರ ಒಂದೊಂದು ಕವಿತೆಯನ್ನೂ ಇಲ್ಲಿಯೇ ಮತ್ತೆ ಮತ್ತೆ ಬರೆದು ಮುಗಿಸುತ್ತೇನೇನೋ. ನೀವು ಸಂಕಲನವನ್ನು ಓದಬೇಕಾಗಿಯೇ ಬರುವುದಿಲ್ಲ ಆಮೇಲೆ. ಅದೆಲ್ಲ ಬೇಡ. ನನಗೆ ಇವರ ಒಂದೊಂದು ಕವಿತೆಯೂ ಇಷ್ಟ, ತುಂಬ, ತುಂಬ ಇಷ್ಟ. ಇಂಥ ಒಬ್ಬ ಕವಿಯನ್ನು ನಾನು ಕಾಯುತ್ತಿದ್ದೆನೇನೋ ಎಂಬಷ್ಟು. ಭಾಷೆಯನ್ನು ಅದರ ರೂಢಿಗತ ನೆಲೆಯಿಂದ ಬಿಡಿಸಿ ಬಳಸಿದ ಕವಿ. ಭಾವವನ್ನು ಭಾಷೆಯ ಹಳಿಯ ಗುಂಟ ಓಡಿಸದೆ, ತಾನು ನಡೆದದ್ದೇ ಹಾದಿ, ಎಂದ ಕವಿ. ಅನುಭವ ತಾಜಾತನವನ್ನು ಕಾಯ್ದುಗೊಂಡ ಗಂಡೆದೆ. ಅದಕ್ಕೇ ಇಷ್ಟ ನನಗೆ. 

ಈ ಸಂಕಲನದ ಎಲ್ಲ ಕವಿತೆಗಳೂ ಚೆನ್ನಾಗಿವೆ. ಇಡೀ ಸಂಕಲನ ಜೀವಂತಿಕೆಯಿಂದಲೂ, ಹೊಸತನದಿಂದಲೂ ಮತ್ತು ಅದರ ಮುಗ್ಧತೆಯಿಂದಲೂ ನಳನಳಿಸುತ್ತಿವೆ. ಈ ಮುಗ್ಧತೆ ಎಂದರೆ ಮನುಷ್ಯನ ಮುಗ್ಧತೆಯಲ್ಲ, ಪ್ರಕೃತಿಯ ಮುಗ್ಧತೆ. ಹಾಗಾಗಿ, ಈ ಕವಿತೆಗಳು ಮಹತ್ವಾಕಾಂಕ್ಷೆಯ ರಚನೆಗಳೇನಲ್ಲ. ತನಗೆ ಖುಶಿಕೊಟ್ಟ ಪ್ರಕೃತಿಯ ಮಡಿಲಲ್ಲಿ ಸುಮ್ಮನೇ ಒಂದು ಹಕ್ಕಿ ಹಾಡಿದಂತೆ ಇವೆ ಇವು. ಅಷ್ಟು ಮುಗ್ಧ ಮತ್ತು ಅಷ್ಟು ಮಹತ್ವಾಕಾಂಕ್ಷೆಯಿಂದ ಮುಕ್ತ. ಹಾಗಾಗಿಯೇ ಸುಂದರ. 

ಇಡೀ ಸಂಕಲನದಲ್ಲಿ ನನಗೆ ಅತ್ಯಂತ ಇಷ್ಟವಾದ ಕವಿತೆ "ಅದು ಮನೆಯಂಥದೇ ಒಂದು ಜಾಗ". ಅದನ್ನು ವಿವರಿಸುವ ಅಗತ್ಯವೇ ಇಲ್ಲ. ಇಲ್ಲಿನ ಎಲ್ಲ ಕವಿತೆಗಳಂತೆಯೇ ಅದು ನೇರವಾಗಿ ಹೃದಯದ ಭಾಷೆಯಲ್ಲಿದೆ, ಬೇರಾವ ಭಾಷೆಯ ಅನುವಾದವೂ ಅಗತ್ಯವಿಲ್ಲದೆ ನೇರವಾಗಿ ನಿಮ್ಮ ಹೃದಯದೊಂದಿಗೆ ಮಾತನಾಡಬಲ್ಲ ಕವಿತೆಯದು. 

ಮೀನು ಈಜುವ ಮುನ್ನ 
ನೀರು 
ಎಲೆ ಚಿಗುರುವ ಮುನ್ನ 
ಬೇರು 
ಭಕ್ತ ಕೈಮುಗಿವ ಮುನ್ನ 
ದೇವರು 
ನಾನು ಬರೆಯುವ ಮುನ್ನ 
ಕವಿತೆ 

ಇರುತ್ತದೆ 
ಇರಬೇಕು 

 - ಎಂದು ಅರಿತಿರುವ ಈ ಕವಿಗೆ 

ಆ ಮುಸ್ಸಂಜೆ 
ದೇವರಿಗೆ ಶಂಭೋ ಮಾಡಲು 
ಹಟಮಾಡಿದ 
ಎಳೆಗನ್ನೆಯ ಕೂಸಿಗೆ 
ದೇವರು ಶಾಪವನ್ನೇನೂ ಕೊಡಲಿಲ್ಲ 

ಪಾಪ 
ಅಮಾಯಕ ದೇವರು 

ಕಾಣಿಸಿದ್ದಾನೆ. ಹಾಗಾಗಿ ಈ ಕವಿ ಶಂಭೋ ಮಾಡಲು ಹಟಮಾಡದೆ, ತಾನು ಬರೆಯುವ ಮುನ್ನ ಇದ್ದ ಕವಿತೆಗಳನ್ನು ಅವು ಹೇಗಿದ್ದವೋ ಹಾಗೆ ನಮಗೆ ಕೇಳಿಸಲಿ, ಕೇಳಿಸುತ್ತಲೇ ಇರಲಿ. ಇವರಿಂದ ಮತ್ತಷ್ಟು, ಮೊಗೆದಷ್ಟೂ ಇಂಥ ರಚನೆಗಳು ಬರಲಿ, ಅವು ಪ್ರಕೃತಿ, ಪುರುಷ, ಬದುಕು, ಬವಣೆ, ಸಮಾಜ, ದೇಶ ಕಾಲ ಎಲ್ಲವನ್ನೂ ತನ್ನ ತೆಕ್ಕೆಗೆ ತಗೊಂಡು, ತಗೊಂಡೂ ಈ ಗರಿಕೆ ಹುಲ್ಲ ಸಸಿತನ ಕಳೆದುಕೊಳ್ಳದೇ ಮರವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, January 24, 2021

ಪುಟ್ಟ ಗುಬ್ಬಿಯ ಸಾಮಾನ್ಯ-ತೆ

ಇವತ್ತು ವಿಜಯಕರ್ನಾಟಕದಲ್ಲಿ ಬಿ ಆರ್ ಲಕ್ಷ್ಮಣರಾವ್ ಅವರ ಒಂದು ಕವಿತೆಯನ್ನು ಓದಿದೆ. ತುಂಬ ಪುಟ್ಟ ಕವಿತೆಯದು. ಅದರ ಚಿತ್ರ ಇಲ್ಲಿದೆ, ಓದಿ. 

 ಮಾರ್ಚ್ ತಿಂಗಳ ಕೊನೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದಾಗ ಇದೆಲ್ಲ ಒಂದೆರಡು ವಾರ ಎಂದು ಮನೆ ಸೇರಿಕೊಂಡ ನಮಗೆ ಅದು ಮುಂದುವರಿಯುತ್ತ ಹೋದಂತೆಲ್ಲ ಒಂದು ಬಗೆಯ ಅಕಾಲ ನಿವೃತ್ತಿಯನ್ನು, ಸ್ಮಶಾನ ಸದೃಶ ಜಗತ್ತನ್ನು, ಕ್ರಿಯಾಶೂನ್ಯತೆಯನ್ನು, ಮೌನವನ್ನು, ಮನೆಯೊಳಗೆ ಬಂದ ಗಾಳಿಯಿಂದ ತೊಡಗಿ ಪ್ರತಿಯೊಂದರಲ್ಲೂ ಮೃತ್ಯು ಅಡಗಿಕೊಂಡಿರಬಹುದೇ ಎಂಬ ಭೀತಿಯನ್ನು ಬದುಕುತ್ತಿರುವ ಅನುಭವ. ಸಿಟೌಟಿಗೆ ಬಂದು ನಿಂತರೆ ಊರಲ್ಲಿ ಮಂದಿಯಿಲ್ಲ ಅನಿಸುವುದು. ಬೆಳಿಗ್ಗಿನ ಯೋಗದಿಂದ ಮುಸ್ಸಂಜೆಯ ಕರಾಟೆಯ ತನಕ, ಸೀಮಂತದಿಂದ ವೈಕುಂಠ ಸಮಾರಾಧನೆಯ ತನಕ ಒಂದಿಲ್ಲೊಂದು ಗದ್ದಲದಲ್ಲಿ ಮುಳುಗಿರುತ್ತಿದ್ದ ಪಕ್ಕದ ಮದುವೆ ಹಾಲ್ ಸ್ತಬ್ಧ. ನಮ್ಮ ಅಪಾರ್ಟ್‌ಮೆಂಟಿನಲ್ಲಿ ಯಾರೂ ಬೆಳಗ್ಗಿನ ಸುಪ್ರಭಾತ, ಭಕ್ತಿಗೀತೆ ಕೂಡ ಇಡುತ್ತಿರಲಿಲ್ಲ. ಇಲ್ಲವೆಂದು ಗೊತ್ತಿದ್ದೂ ರಿಸ್ಕ್ ಯಾಕೆ ಎಂಬ ಒಂದೇ ಕಾರಣಕ್ಕೆ ಭಕ್ತಿಯನ್ನೂ ಆಚರಿಸುತ್ತಿದ್ದ ಮಂದಿ ಕೂಡ ಇನ್ನು ದೇವರಿಗೂ ಹೆದರಿ ಉಪಯೋಗವಿಲ್ಲ ಎಂದು ಕಂಡುಕೊಂಡಂತಿತ್ತು. ನಮ್ಮ ಸಾಹಿತ್ಯ, ಓದು, ಬರವಣಿಗೆ ಎಲ್ಲ ಏಕಾಎಕಿ ಅರ್ಥ ಕಳೆದುಕೊಂಡಂತೆ ಕಪಾಟಿನಲ್ಲಿನ ಪುಸ್ತಕಗಳು ಏಕಾಗ್ರತೆಯನ್ನಾಗಲೀ, ಓದುವ ತನ್ಮಯತೆಯನ್ನಾಗಲೀ ಕೊಡಲಾರದೆ ಮೌನ ತಾಳಿದಂತಿದ್ದವು. 

ಇದನ್ನು ಓದುತ್ತಿರುವ ನನ್ನ ಗೆಳೆಯರಿಗೆಲ್ಲ ಕರೋನಾ ವಿಧಿಸಿದ ಗೃಹಬಂಧನ ಹೊಸತೇ ಆಗಿತ್ತು ಎನ್ನಲಾರೆ. ಮೊದಲಿನಿಂದಲೂ ನಾವು, ಓದುವ-ಬರೆಯುವ ಚಟದವರು ಗೃಹಬಂಧಿಗಳೇ. ನಮಗೆ ಮೌನವೇ ಅತ್ಯಂತ ಪ್ರಿಯವಾದದ್ದು. ಗದ್ದಲ, ಗೌಜಿ, ಫಂಕ್ಷನ್ನು, ಹಬ್ಬ-ಜಾತ್ರೆ, ಲೌಡ್‌ಸ್ಪೀಕರಿನ ಅಬ್ಬರ ನಮಗ್ಯಾರಿಗೂ ಪ್ರಿಯವಲ್ಲ. ಹಾಗಾಗಿ ಉಳಿದೆಲ್ಲ ಸಂಗತಿಗಳು ಅನುಕೂಲಕರವಾಗಿದ್ದಾಗಲೂ ಕ್ರಿಯಾಶೀಲವಾಗಿ ತೊಡಗಿಕೊಂಡು, ತನ್ಮಯತೆಯಿಂದ ಮುಳುಗುವುದಕ್ಕೆ ಬಿಡದೇ ಇದ್ದ ಆ ಭಾರ ಯಾವುದು? 

ಅದು, ಇದು. ವಿಷಯವೇನೆಂದರೆ, ಒಂದೂ ಗುಬ್ಬಿ ಹಾರಿ ಮನೆಯೊಳಗೆ ಬರಲಿಲ್ಲ! 

ನಾವು, ಮನುಷ್ಯರೆಲ್ಲ ಏಕಾಎಕಿ ಭೂಗತರಾದಂತೆ ಮನೆಯೊಳಗೆ ಸೇರಿಕೊಂಡಾಗ ಏನೋ ಅಸಹಜವಾದುದನ್ನು ಈ ಕಾಗೆಗಳು, ಬೀದಿ ನಾಯಿಗಳು, ಪಾರಿವಾಳಗಳು, ಚಿಟ್ಟೆ-ದುಂಬಿ-ಹಾತೆಗಳೂ, ಏಕೆ, ಗಿಡಮರಗಳೂ ಅನುಭವಿಸಿರಬೇಕಲ್ಲವೆ? ಈ ಅಸಹಜತೆ ಅವುಗಳಲ್ಲೂ ಒಂದು ನಿಗೂಢ ಆತಂಕ, ದುಗುಡವನ್ನು ಹುಟ್ಟುಹಾಕಿರಬೇಕಲ್ಲವೆ? ಕರೋನಾ ಹಿನ್ನೆಲೆಯಲ್ಲೆ ಏನೇನೆಲ್ಲ ಮಾತನಾಡಿಕೊಂಡೆವು. ಮಾಧ್ಯಮಗಳು ಸಾಹಿತಿಗಳನ್ನೋ, ನಟರನ್ನೋ ಈ ಬಗ್ಗೆ ಮಾತನಾಡಿಸಿದವು ಕೂಡ. ಆದರೆ ಗುಬ್ಬಿಯೊಂದು ಹೀಗೆ ಪುರ್ರನೆ ಹಾರಿ ಮನೆಯೊಳಗೆ ಬಂದಿದ್ದರೆ ಎಷ್ಟು ಹಗುರವಾಗುತ್ತಿತ್ತು ನಮ್ಮ ಮನಸ್ಸು! 

ನಾನು ಕವಿತೆಗಳನ್ನು ಓದುವ ಕ್ರಮವೊಂದಿದೆ. ಇದ್ದಕ್ಕಿದ್ದಂತೆ ಯಾರದೋ ಯಾವುದೋ ಒಂದು ಕವಿತೆಯನ್ನು ಹಿಡಿದುಕೊಂಡು ನನ್ನ ಒಂದು ದಿನವನ್ನು ಸಂಪನ್ನಗೊಳಿಸಿಕೊಳ್ಳಲು ನೋಡುವುದು ಆ ಕ್ರಮ. ಇಡೀ ಸಂಕಲನವನ್ನು ಒಂದೇಟಿಗೆ ಓದುವುದು ನನಗೆ ಕಷ್ಟ, ಬಹುತೇಕ ಎಲ್ಲರಿಗೂ. ಬಿ ಆರ್ ಲಕ್ಷ್ಮಣರಾವ್ ಅವರ ಈ ಗುಬ್ಬಿ ಹಾರಿ ಮನೆಯೊಳಗೆ ಬಂದು ಎದೆ ಮೇಲಿನ ಭಾರ ಇಳಿಸಿದ್ದೇ ಅವರ ಇತ್ತೀಚಿನ ಸಂಕಲನ "ನವೋನ್ಮೇಷ" ದ ಕವಿತೆಗಳನ್ನು ತೆರೆದೆ.
  
  ‘ಸಣ್ಣ ಸಂಗತಿ’ ಎಂಬ ಒಂದು ಕವಿತೆಯಿದೆ ಇದರಲ್ಲಿ.       ಅದನ್ನೋದಿದ ಮೇಲೆ ಮತ್ತೆ ಎದೆ ಭಾರವಾಗುತ್ತದೆ. ಆದರೆ   ಸಂಗತಿ ತುಂಬ ಸಣ್ಣದು. ಲಕ್ಷ್ಮಣರಾಯರು ಬರೆದಿರುವುದೆಲ್ಲ   ಸಣ್ಣಪುಟ್ಟ ಸಂಗತಿಗಳ ಕುರಿತೇ. ದೊಡ್ಡದೊಡ್ಡ ಸಂಗತಿಗಳನ್ನು     ಅವರು ಎತ್ತಿಕೊಂಡಿದ್ದು ಕಡಿಮೆ. ಚಿಂತೆ ಕೂಡಾ ಬಿಡಿಹೂವು   ಮುಡಿದಂತಿರಬೇಕು ಅವರಿಗೆ. ಮಗುವನ್ನೆತ್ತಿಕೊಂಡಷ್ಟೇ   ಜತನದಿಂದ,ಪ್ರೀತಿಯಿಂದ ಎತ್ತಿಕೊಳ್ಳುವ ಅವರಿಗೆ ಎಲ್ಲ   ಭಾರವನ್ನೂ ಗುಬ್ಬಿಯಷ್ಟು ಹಗುರಗೊಳಿಸುವುದು ಗೊತ್ತು. 

   ಈ   ಕವಿತೆಗಳ ನಡುವೆಯೇ ಮತ್ತೆ ಲೋಲೀಟ ಬರುತ್ತಾಳೆ.   ವಯೋವೃದ್ಧ ಕವಿಗೆ ಅವನ ತಾರುಣ್ಯದ, ಯೌವನದ ನೆನಪುಗಳನ್ನು ಕೊಟ್ಟು "ಕೈಕೊಟ್ಟೆ" ಎನ್ನುತ್ತಾಳೆ. ಕವಿಗೆ ಅವಳ ಮಾತಲ್ಲಿ ನಂಬಿಕೆಯಿಲ್ಲ. ಅವಳೋ ನಿತ್ಯಕನ್ಯೆ, ಸದಾ ಯುವಕರು ಅವಳ ಸುತ್ತಮುತ್ತ ಮುಕುರಿಕೊಂಡಿರುವಷ್ಟು ಚೆಲುವೆ. ತಾನೇನೋ ಏರು ಯೌವನದಲ್ಲಿ ಮಾಡಿದ ತುಂಟಾಟಕ್ಕೆ ಅವಳೂ ಮಹತ್ವಕೊಟ್ಟಿದ್ದಳು ಎನ್ನುವುದು ಭ್ರಮೆಯೆಂದೇ ಅವರ ತರ್ಕ. ಆದರೆ ಈಗವಳು ಪಾಪಪ್ರಜ್ಞೆ ಹುಟ್ಟಿಸುವುದಕ್ಕೇ ಎಂಬಂತೆ ಬಂದು, ತಾನಿನ್ನೂ ಕಾಯುತ್ತಿರುವುದಾಗಿ ಹೇಳಿಬಿಡುತ್ತಾಳೆ! 

ಕವಿ, 

 ಮುಗಿದಿದೆ ಪುಸ್ತಕ, ನನಗುಳಿದಿಲ್ಲ 
 ಬರೆಯಲು ಹಾಳೆಗಳು

 - ಎಂದರೆ, 

ಅವಳಂದಳು, "ಸಾರ್, ಅಷ್ಟೇ ತಾನೆ? 
ಅದಕ್ಕೇಕೆ ಚಿಂತೆ? 
ತಗೊಳ್ಳಿ ನನ್ನೀ ನೋಟ್ಬುಕ್ಕನ್ನು, 
ಬರೀರಿ, ಖಾಲಿಯಿದೆ" 

 ಆ ಕೊನೆಯ ಮಾತು ತುಂಬ ಕಾಡುವಂಥದ್ದು. ಅವಳು ಕಾಯುತ್ತಿದ್ದೇನೆ ಎಂದಾಗ ಅದನ್ನು ಕವಿಯೇಕೆ, ನಾವೂ ನಂಬುವುದಿಲ್ಲ. ಸಹಜವಾಗಿ ತುಂಟಿಯವಳು, ಕವಿಯನ್ನು ಕಾಡುವುದಕ್ಕೇ ಹೇಳುತ್ತಿರಬಹುದು, ತಮಾಶೆ ಮಾಡುತ್ತಿರಬಹುದು, ಒಳಗೊಳಗೇ ನಗುತ್ತಿರಬಹುದು ಎಂದೆಲ್ಲ ಅಂದುಕೊಳ್ಳುತ್ತೇವೆ. ಆದರೆ ನೋಟ್‍ಬುಕ್ಕಿನ ಖಾಲೀ ಹಾಳೆಗಳು? ಅವು ಸುಳ್ಳು ಹೇಳಲು ಸಾಧ್ಯವಿಲ್ಲವಲ್ಲ!

ಬಿ ಆರ್ ಲಕ್ಷ್ಮಣರಾವ್ ಅವರ ಪ್ರತಿಯೊಂದು ಕವಿತೆಯೂ ನಮ್ಮನ್ನು ಇನ್ನಿಲ್ಲದಂತೆ ಕಾಡುವುದು ಅದರ ಸಾಮಾನ್ಯತನದಿಂದಲೇ. ಅವರು ಹೇಳುತ್ತಿರುವುದರಲ್ಲಿ ನಮ್ಮದಲ್ಲದ್ದು ಏನೂ ಇಲ್ಲ. ಆದರೆ, ಆ ಸಾಮಾನ್ಯ ಸಂಗತಿ ನಮ್ಮೊಳಗೆ ಉಳಿಸಿ ಹೋದ ಹೆಜ್ಜೆ ಗುರುತು, ಪುಟ್ಟ ಕಲೆ, ಸಣ್ಣ ನಿಟ್ಟುಸಿರು, ಏನೋ ಭಾರ ಅಥವಾ ಒಮ್ಮೆಗೇ ಗರಿಬಿಚ್ಚಬೇಕನಿಸುವಂತೆ ಮಾಡಿದ ಪುಟ್ಟ ಸಂಭ್ರಮ, ಕಾರಣವೇ ಇಲ್ಲದೆ ಅನುಭವಿಸಿದ ಪೆಚ್ಚು, ವ್ಯಗ್ರಗೊಂಡಾಗ ಎಬ್ಬಿಸಿದ ಧಾಂಗುಡಿ ಮತ್ತೆ ನಮ್ಮಲ್ಲೇ ಹುಟ್ಟಿಸಿದ ಅವಮಾನ ಮಿಶ್ರಿತ ಲಜ್ಜೆ, ನಿರಾಸೆ, ಯಾರಾದರೂ ಒಮ್ಮೆ ನೇವರಿಸಲಿ ಎನಿಸಿದ ದುರ್ಬರ ಕ್ಷಣ ಮತ್ತು ಅದನ್ನಾವರಿಸಿದ ಯಾರೂ ಬೇಡ ಎಂಬ ಅಹಂಕಾರ... ಎಲ್ಲವೂ ಸಣ್ಣ ಸಂಗತಿಗಳೇ, ಏನು ವಿಶೇಷ ಎಂದರೆ ಏನಿಲ್ಲ ಎನ್ನಬಹುದಾದ ಮಾತೇ, ದಿನನಿತ್ಯದ ಭಾರವೇ. ನನ್ನ ಮೌನ ಮತ್ತು ಏಕಾಂತದಲ್ಲಿ ನನ್ನದೇ ಅಂತರಂಗ ತನ್ನೆಲ್ಲ ಡಿಗ್ನಿಟಿ, ನಾಗರಿಕ ಸೌಜನ್ಯ ಮತ್ತು ನಡಾವಳಿ, ಡಾಂಭಿಕತೆಗಳಿಂದ ಕಳಚಿಕೊಂಡು ಯಾರಿಗೂ ಕೇಳದಂತೆ ಹುಯಿಲಿಟ್ಟ ಮೊರೆಗಳೇ ಈ ಕವಿಯಲ್ಲಿ ಕವಿತೆಗಳಾಗಿವೆ. ಆದರೆ ಈ ಯಾವುದೂ ದುರ್ಬೀನು ಹಿಡಿದು ಕಾಣಬಯಸುವ ಕಣ್ಣುಗಳಿಗೆ ಕಾಣಿಸುವುದೇ ಇಲ್ಲ! ಅವರು ಹೇಳುವುದೆಲ್ಲಾ obvious ಅನಿಸುವ ವಿವರಗಳನ್ನು, ಮನುಷ್ಯ ಹುಟ್ಟಿಸುವ ಸದ್ದುಗಳನ್ನು, ಒಟ್ಟು ಕ್ಯಾಮೆರಾಕ್ಕೆ ಕಾಣುವುದನ್ನೇ. ಆದರೆ ಮುಗಿಸಿದ್ದೇ ನಮ್ಮನ್ನು ಆವರಿಸುವುದು ತೀರ subtle ಆದದ್ದು, ಅವರು ಹೇಳಿಯೇ ಇಲ್ಲ ಎಂಬಂತೆ ಮಿಣ್ಣಗಿರುವುದು, ಗುಪ್ತಗಾಮಿನಿಯಂತೆ ಅವರ ಎದೆಗೂ ನಮ್ಮ ಎದೆಗೂ ಹರಿಯುತ್ತಿರುವುದು. 

ಅವರದೇ ಹಿಂದಣ ಸಾಲಿಗೆ, ಎರಡು ಸಾಲು ಹಿಂದಿನ ಕೊನೇ ಪದಕ್ಕೆ, ಪ್ರತಿಯಾಗಿ ಉತ್ಪನ್ನಗೊಂಡ ಅದ್ಭುತವಾದೊಂದು ಶಬ್ದಸಂಪತ್ತಿನ (ಅದಕ್ಕಾಗಿ ಅವರೆಷ್ಟು ಕಾದಿರಬಹುದೋ ಗೊತ್ತಿಲ್ಲ) ಮೋಡಿಯಾಗಿ ಅವರ ಕವಿತೆ ‘ವಾಹ್’ ಅನಿಸುವಂತಿರುತ್ತದೆ. ಆದರೆ ಆ ‘ವಾಹ್’ ಅದರ ಕೊನೆಯಲ್ಲ. ಅದು ಬರೀ ಮೆರುಗು. ಆ ವಾಹ್ ಹಿಂದೆ ಒಂದು ಅಯ್ಯೊ ಎಂಬ ನಿಶ್ಶಬ್ದ ಚೀರುವಿಕೆಯೂ ಇದೆಯಲ್ಲವೆ? ಅದು ಎಷ್ಟೋ ಬಾರಿ ಕೇಳಿಸುವುದೇ ಇಲ್ಲ. ಅದು ಇವರ ತಂತ್ರವೆ?

ಎಲ್ಲ ಗಹನವನ್ನೂ ಮಂದಹಾಸದೊಂದಿಗೆ ಕಾಣಬಲ್ಲ ದಾರ್ಶನಿಕ ಸ್ವಾಸ್ಥ್ಯದಿಂದ, ಸರಳ content ಮತ್ತು form ಇಟ್ಟುಕೊಂಡು ಬರೆದು ಛೇಡಿಸಿಯೂ ಛೇಡಿಸದೆ ಸಾಂತ್ವನ ಹೇಳಿದಂತೆ ಬರೆಯುವ ಲಕ್ಷ್ಮಣರಾವ್ ಅಚ್ಚರಿ ಹುಟ್ಟಿಸುತ್ತಾರೆ. ಬದುಕನ್ನು ತೀವ್ರವಾಗಿ ಬದುಕದೇ ಬರಲಾರದ ಈ ಆಳ ಅನುಭವ ಮತ್ತು ಸೂಕ್ಷ್ಮಸಂವೇದಿ ಮನೋಧರ್ಮವನ್ನು ಅವರು ಪ್ರದರ್ಶನಕ್ಕಿಡಲಿಲ್ಲ, ಅನ್ಯ ಸಾಹಿತಿಗಳಂತೆ, ನನ್ನಂತೆಯೂ. ಹಾಗಾಗಿ ಅವರಿಗೆ ಈ ಸಾಮಾನ್ಯತನ, ಹೃದಯ ಹಿಂಡಿ ಬರೆಯಬಲ್ಲ, ಓದಿದವರ ಹೃದಯ ಹಿಂಡಬಲ್ಲ ಸಾಮಾನ್ಯತನ ಸಿದ್ಧಿಸಿತೋ ಅನಿಸುತ್ತದೆ. ದಾಸ್ತೊವಸ್ಕಿಯನ್ನು ಓದುವಾಗಲೆಲ್ಲ ಇವನನ್ನೊಬ್ಬನನ್ನು ಓದಿದರೆ ಸಾಕು ಬದುಕು ಅರ್ಥವಾಗುತ್ತದೆ ಅನಿಸೋದು. ಇವರನ್ನು ಓದುವಾಗಲೂ, ಇವರ ಎಲ್ಲಾ ಕವಿತೆಗಳನ್ನು ಆಗಾಗ ತೆರೆದು ಓದುತ್ತಿದ್ದರೂ ಸಾಕು ಅನಿಸುತ್ತಿದೆ. ನಾವು ಬದುಕನ್ನು ತೀರ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಒಂದು ವಯಸ್ಸು ದಾಟುತ್ತಲೇ ಆಕಾಶ ನಮ್ಮ ತಲೆಯ ಮೇಲೆಯೇ ನಿಂತಿದೆಯೇನೋ ಎಂಬಂತೆ ಚಡಪಡಿಸುತ್ತ, ಹುಬ್ಬುಗಂಟಿಕ್ಕಿಕೊಂಡೇ, ಸದಾ ಗಡಿಬಿಡಿಯಲ್ಲೋ, ನಾಳಿನ ಚಿಂತೆಯಲ್ಲೋ, ಯಾರಿಗೂ ಇಲ್ಲದ ಜವಾಬ್ದಾರಿಯೆಲ್ಲ ತಮಗೊಬ್ಬರಿಗೇ ಇದೆ ಎಂಬಂತೆಯೋ, ಆಗಲೇ ಕತ್ತಲಾಯ್ತೋ ಎಂಬಂತೆ ಓಡಾಡುತ್ತಿರುತ್ತೇವೆ. ನಮಗೆ ಕೊಂಚ ಲೇವಡಿ, ಕಿಚಾಯಿಸುವಿಕೆ, ಕಾಲೆಳೆಯುವಿಕೆ, ಕಚಗುಳಿಯ ಅಗತ್ಯವಿದೆ. ಆಕಾಶ ಹೊತ್ತೂ ಹೊತ್ತೂ ಬೋಳಾದ ತಲೆಯ ಮೇಲೆಯೇ ಕೈಯಾಡಿಸಿ ಒಂದು ನಗು ಅರಳಿಸುವ ಅಗತ್ಯವಿದೆ. ಹಗುರಾಗಬೇಕು, ನಿಂತು ನೋಡಬೇಕು, ಕುಳಿತು ನೀರು ಕುಡಿಯಬೇಕು ಅನಿಸುವ ಅಗತ್ಯವಿದೆ. ಆಗಷ್ಟೇ ‘ನೀರಿನ ರುಚಿ’ ನಮಗೂ ಸಿಕ್ಕೀತು...

ಲಘುವಾಗೆಲೆ ಮನ ಗೆಲವಾಗೆಲೆ ಮನ 
ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು

ಎನ್ನುವ ಕವಿ ನಮ್ಮ ನಿಜವಾದ ಅಗತ್ಯ, ತುರ್ತು. ಪುತಿನ ಅವರಿಗೆ ಹರಿ, ಸರಿ. ಲಕ್ಷ್ಮಣರಾವ್ ಅವರು ಇದೇ ಹಾದಿಯಲ್ಲಿ ಸಾಗುತ್ತ ಕನ್ನಡಕ್ಕೆ ಕೊಟ್ಟಿರುವುದನ್ನು ಯಾರೂ ಗಮನಿಸದೇ ಇರಲಿ ಎಂದು ಬಹುಶಃ ಅವರೇ ಬಯಸಿದಂತಿದೆ. ಕೆಲವರಿಗೆ ಕಣ್ಣಿಗೆ ಬೀಳುವುದು ಬೇಡ ಅಂತ ಇರುತ್ತದಲ್ಲ, ಆ ತರ. ಹಾಗಾಗಿ ಅವರು ಬರೀ ಪನ್, ತುಂಟತನ, ಲಘುವಾದ ನೋಟ ಕೊಡುತ್ತಿರುವಂತೆಯೇ ಕಾಣಿಸಿಕೊಳ್ಳುತ್ತ ಬಂದ ಹಾಗಿದೆ. ಆದರೆ ತೀವ್ರವಾಗಿ ಬದುಕಿ ಅನುಭವಿಸಿದವರಿಗೆ ಅವರು, ಅವರ ಕವಿತೆಗಳು ಮೇಲ್ನೋಟಕ್ಕೆ ಕಾಣಿಸಿದಷ್ಟು ಸರಳ ರಚನೆಗಳೇನೂ ಅಲ್ಲ ಎನ್ನುವುದು ಸ್ಪಷ್ಟವಾಗಿಯೇ ಅರ್ಥವಾಗುತ್ತದೆ. ಮೌನದಲ್ಲಿ ಧೇನಿಸಿ ಕಂಡುಕೊಂಡ ಅನುಭವದ ಪಾಕ ಹುಟ್ಟಿಸಿದ ಒಂದು ಸ್ವಸ್ಥ ಮನೋಧರ್ಮ ಇದರ ಹಿಂದೆ ಇರುವುದು ಸ್ಪಷ್ಟ. ಈ ಬದುಕನ್ನು, ಅದರ ಸಂಕೀರ್ಣ, ಸಂಘರ್ಷಮಯ, ಕುಗ್ಗಿಸುವ ಗುಣದ ಗ್ರೇ ಏರಿಯಾ ಎನ್ನುತ್ತೇವಲ್ಲ, ಅದನ್ನು ಕೊಂಚ ಲಘುವಾಗಿ ಕಂಡು, ತೀರ ಕುಗ್ಗದೆ, ಪೂರ್ತಿ ಕರಗದೆ ನಿಭಾಯಿಸಲು ಕಲಿಸುವಂತೆ ಬರೆಯಲು ಬೇಕಾದ ಒಂದು ಹದ ಎಲ್ಲರಿಗೂ ಸಿದ್ಧಿಸುವುದಿಲ್ಲ. ಬಿ ಆರ್ ಲಕ್ಷ್ಮಣರಾವ್ ಮುಖ್ಯ ಎನಿಸುವುದು ಈ ಕಾರಣಕ್ಕಾಗಿ. ಹಾಗಾಗಿ ಅವರ ಕವಿತೆಯ ಹಿಂದಿನ ಸ್ಥಾಯೀ ಭಾವವನ್ನು ಅದರ ಮೂಲದಲ್ಲಿ ಕಂಡುಕೊಂಡವರಿಗೆ ಅವರು ಸ್ವಂತದವರಾಗಿ ಬಿಡುತ್ತಾರೆ. ಲಂಕೇಶ್ ಆಗಾಗ ಹೇಳುತ್ತಿದ್ದರು, ಒಂದು ಪುಟ್ಟ ಹಕ್ಕಿಯಂತೆ ಹಾಡಲಾರದ, ಹಾರಲಾರದ ಮನುಷ್ಯ... ಎಂದು. ಒಂದು ಗುಬ್ಬಿಯಿಂದ ಕಲಿಯಬಲ್ಲ ಮನುಷ್ಯನಿಗಷ್ಟೇ ಅದು ಕಾಣುತ್ತದೆ.

ಅವರ ಯಾವ ಕವಿತೆಯ ಬಗ್ಗೆ ಬರೆಯಲಿ, ಯಾವುದನ್ನು ಬಿಡಲಿ ಅನಿಸುತ್ತದೆ. ಯಾವುದನ್ನೂ ತುಂಡು ಮಾಡುವಂತಿಲ್ಲ. ಮತ್ತು ಇಡಿಇಡಿಯಾಗಿ ಹೇಳಿದ ಮೇಲೆ ಯಾರಿಗೆ ಯಾರೂ ಏನನ್ನೂ ವಿವರಿಸುವ ಅಗತ್ಯವೇ ಉಳಿದಿರುವುದಿಲ್ಲವಲ್ಲ!!! 

ಹ್ಯಾಟ್ಸಾಪ್ ಟು ಯು ಸರ್. ಬಹುಶಃ ಹೇಳಬಹುದಾದ್ದು ಇದನ್ನಷ್ಟೇ ಅನಿಸುತ್ತದೆ!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, January 10, 2021

ಕಥನ ಪ್ರಧಾನ ಕತೆಗಳಲ್ಲಿ ಬದುಕಿನ ಸೂಕ್ಷ್ಮಗಳ ಹೊಳಹು

  ಡಾ.ಆನಂದ್ ಋಗ್ವೇದಿಯವರು "ಸಮಕಾಲೀನ ಕನ್ನಡ ಕತೆಗಳ ಸಾಂಸ್ಕೃತಿಕ           ಸ್ವರೂಪಗಳು: ಒಂದು ಅಧ್ಯಯನ" ಎಂಬ ವಿಷಯವನ್ನಾಯ್ದುಕೊಂಡು ಡಾಕ್ಟರೇಟ್   ಪಡೆದವರು. ಇನ್ನಿಲ್ಲದಂತೆ ಹೊಸಬರ ಕೃತಿಗಳ ಬಗ್ಗೆ ಪ್ರೋತ್ಸಾಹದಾಯಕವೂ,   ಮಾರ್ಗದರ್ಶಕವೂ ಆದ ವಿಮರ್ಶೆಯನ್ನು ಬರೆದು ಸಾಮಾಜಿಕ ಜವಾಬ್ದಾರಿಯನ್ನೂ   ಮೆರೆದವರು. ಪ್ರಸ್ತುತ "ಕರಕೀಯ ಕುಡಿ" ಕಥಾಸಂಕಲನ ಅವರ ಮೂರನೆಯ   ಕಥಾಸಂಕಲನ. ಅವರು ವಿಮರ್ಶೆ, ಕವಿತೆ, ನಾಟಕ ಮತ್ತು ಅಧ್ಯಯನಪೂರ್ಣ   ಸಂಶೋಧನಾ ಪ್ರಬಂಧಗಳು ಎಂದೆಲ್ಲ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ನುರಿತ   ಬರಹಗಾರ ಕೂಡ. ಹಾಗಿದ್ದೂ, ಸೋಶಿಯಲ್ ಮೀಡಿಯಾದಲ್ಲಿ ಗಮನಿಸಿದಂತೆ   ನಮ್ಮೊಳಗೇ ಒಬ್ಬರಾಗಿ ತಮ್ಮ ಮನದಿಂಗಿತವನ್ನೂ, ಲಹರಿಯನ್ನೂ, ಬದುಕಿನ ನೋವು   ನಲಿವನ್ನೂ ಸದಾ ಉತ್ಸಾಹ, ನವಿರು ಹಾಸ್ಯ ಮತ್ತು ಹರಟೆಯ ಲವಲವಿಕೆಯೊಂದಿಗೆ   ಹಂಚಿಕೊಳ್ಳುತ್ತಿರುತ್ತಾರೆ ಮತ್ತು ಹಾಗಾಗಿ ಆತ್ಮೀಯ ಗೆಳೆಯ ಎನಿಸುವಂತಾಗಿದ್ದಾರೆ. ಈ   ಚೈತನ್ಯ ಮತ್ತು ಉಲ್ಲಾಸವನ್ನು ಕುಂದದಂತೆ ಉಳಿಸಿಕೊಂಡು ಸಾಹಿತ್ಯದ ಮಾತುಗಳನ್ನಾಡುವುದೇ ದುಸ್ತರ ಎನಿಸುವ ಈ ದಿನಗಳಲ್ಲಿ ಅವರು ಒಂದು ಆದರ್ಶದಂತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕಾಗಿ ಅವರನ್ನು ನಾನು ಮೊದಲಿಗೆ ಅಭಿನಂದಿಸಿ ಅವರ ಸಂಕಲನದತ್ತ ಹೊರಳುತ್ತೇನೆ. 

ಡಾ.ಆನಂದ್ ಋಗ್ವೇದಿಯವರ ಕಥಾಸಂಕಲನ "ಕರಕೀಯ ಕುಡಿ"ಯಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಈ ಎಲ್ಲಾ ಕತೆಗಳಲ್ಲೂ ಕಥನವೇ ಪ್ರಧಾನವಾಗಿರುವುದು ಎದ್ದು ಕಾಣುತ್ತದೆ. ಪ್ರತಿಯೊಂದು ಕತೆಯೂ ಅದರದೇ ಆದ ರೀತಿಯಲ್ಲಿ ವಿಭಿನ್ನವಾಗಿದೆ, ಕುತೂಹಲಕರವಾಗಿದೆ ಮತ್ತು ಅವುಗಳ ಓದು ನಮ್ಮನ್ನು ಬೆರಗು, ಅರಿವು, ಹೊಳಹು ಮತ್ತು ಚಿಂತನೆಯ ಮೌನದಲ್ಲಿ ಉಳಿಯುವಂತೆ ಮಾಡುತ್ತವೆ. 

ಕೆ ಸತ್ಯನಾರಾಯಣ ಅವರು ನನಗೊಂದು ಕಿವಿಮಾತು ಹೇಳಿದ್ದರು. ಬದುಕಿನ ಅನಾಲೈಸಿಸ್‌ನಿಂದ ಕತೆ ಹುಟ್ಟಬೇಕು, ಕತೆಯೇ ಬದುಕಿನ ಅನಲಿಸಿಸ್ ಆಗಬಾರದು ಎಂದು. ನಾವು ಯಾವಾಗ ಏನೂ ಅನಲೈಸ್ ಮಾಡದೆ ಸುಮ್ಮನೇ ಬಂದದ್ದು ಬರಲಿ ಎಂಬಂತೆ ಬದುಕುತ್ತಿರುತ್ತೇವೆ, ಯಾವಾಗ ಎಲ್ಲವನ್ನೂ ಅಳೆದು ತೂಗಿ ಬದುಕುತ್ತೇವೆ ಮತ್ತು ಯಾವಾಗ ನಮ್ಮ ಗತವನ್ನು ಮತ್ತೊಮ್ಮೆ ಹಿಂದಿರುಗಿ ನೋಡಿ ನಮ್ಮ ತಪ್ಪುಒಪ್ಪುಗಳ ಅನಲಿಸಿಸ್ ಮಾಡತೊಡಗುತ್ತೇವೆ ಎನ್ನುವುದನ್ನೆಲ್ಲ ಟೈಮ್‌ಟೇಬಲ್ ಹಾಕಿದಂತೆ ನಿರ್ಧರಿಸಲಾಗುವುದಿಲ್ಲ. ಲೆಕ್ಕಾಚಾರಗಳು ಕೈಕೊಡುವುದೂ, ಕೈ ಹಿಡಿಯುವುದೂ ಇರುವಂತೆಯೇ ಬದುಕು ಒಂದು ಅಸಂಖ್ಯ ವೇರಿಯೇಬಲ್ಸ್ ಸೇರಿ ಘಟಿಸುವ ಪ್ರೊಬ್ಯಾಬಿಲಿಟಿ ಎನ್ನುವುದು ಅರ್ಥವಾಗುತ್ತ ಬಂದಂತೆಲ್ಲ ಅಂಥ ಲೆಕ್ಕಾಚಾರಗಳೂ ವ್ಯರ್ಥ ಎನಿಸಿತೊಡಗುವುದು ಸುಳ್ಳಲ್ಲ. ಕೊನೆಗೆ ಈ ಬದುಕಿನ ಬಗ್ಗೆ ಉಳಿಯುವುದು ಒಂದು ಮುಗ್ಧ ಅಚ್ಚರಿ, ವಿಸ್ಮಯ, ಬೆರಗು, ಅರಿವು, ಹೊಳಹು, ನಿಟ್ಟುಸಿರು ಮತ್ತು ಧ್ಯಾನದಂತೆ ಭಾಸವಾಗುವ ಮೌನ. ಋಗ್ವೇದಿಯವರ ಕತೆಗಳೂ ನಮಗೆ ದಯಪಾಲಿಸುವುದು ಅದನ್ನೇ. "ತೊರೆಯ ತೇವ" ಕತೆಯಲ್ಲಿ ಅವಿನಾಶ್ ಒಂದು ಮಾತು ಹೇಳುತ್ತಾನೆ. "ನೀವು ಏನೇ ಹೇಳಿ ಪ್ರೊಫೆಸರ್, ಬದುಕನ್ನು ನಮ್ಮ ಯಾವ ಸೋಶಿಯಲಾಜಿಕಲ್ ಥಿಯರಿ, ಸೃಜನಶೀಲ ಸಾಹಿತ್ಯದಿಂದಲೂ ಪೂರ್ಣವಾಗಿ ವ್ಯಾಖ್ಯಾನಿಸಲಾಗಿಲ್ಲ". ಬಹುಶಃ ಇಡೀ ಸಂಕಲನವನ್ನು ಓದಿ ಮುಗಿಸಿದ ಬಳಿಕವೂ ಸ್ಥಾಯಿಯಾಗಿ ನಿಲ್ಲುವ ಮಾತೇ ಇದು ಎಂದು ಒಪ್ಪಬೇಕಾದರೂ, ಬದುಕಿನ ಒಂದು ವಿರಾಟ್ ದರ್ಶನವನ್ನು ಡಾ.ಆನಂದ್ ಋಗ್ವೇದಿಯವರ ಕತೆಗಳು ನಮಗೆ ಮಾಡಿಸುತ್ತಿರುವುದು ಸುಳ್ಳಲ್ಲ. 

ತಮ್ಮ ಕಥಾಜಗತ್ತಿನ ಪಾತ್ರಗಳನ್ನು ಅವರ ತಂದೆ-ತಾಯಿಯಿಂದ ತೊಡಗಿ, ಕೆಲವೊಮ್ಮೆ ಅಜ್ಜನಿಂದ ತೊಡಗಿ ಸುರುವಾಗುವ ವಂಶಾವಳಿ, ಈ ತಲೆಮಾರಿಗೆ ಬೆಳೆದು ಬಂದಿರುವ ಊರಿನ-ಪರವೂರಿನ ನಂಟು, ಅವರ ವೃತ್ತಿಯ, ಅದು ನಡುವೆ ಬದಲಾಗಿದ್ದರೆ ಅದರ ವಿವರ, ಪಾತ್ರದ ದೈಹಿಕ ನಿಲುವು-ಗತ್ತುಗಳ ವಿವರ ಎಲ್ಲ ಸೇರಿಕೊಂಡೇ ಪರಿಚಯಿಸುತ್ತಲೇ ಅವರ ಬದುಕಿನ ಏರುಪೇರುಗಳನ್ನು ಓದುಗರಿಗೆ ಕಟ್ಟಿಕೊಡುವುದು ಋಗ್ವೇದಿಯವರ ಕ್ರಮ. 

ಹಾಗೆಯೇ ಅವರು ಸಂಭಾಷಣೆಯಲ್ಲಿ ಕಥನವನ್ನು ಮುನ್ನಡೆಸುವ ತಂತ್ರವನ್ನು ಹೆಚ್ಚಾಗಿ ನೆಚ್ಚಿರುವುದು ಕಂಡು ಬರುತ್ತದೆ. ಇದರಿಂದ ಎರಡು ಬಗೆಯ ಲಾಭವನ್ನೂ ಅವರು ಎತ್ತುತ್ತಾರೆ. ಒಂದು, ಸಂಭಾಷಣೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಬಲ್ಲ ಒಬ್ಬ ಕತೆಗಾರ ತನ್ನ ನಿರೂಪಣೆಗೆ ಎಲ್ಲಿಲ್ಲದ ಲವಲವಿಕೆಯನ್ನೂ, ಕಥನದ ನಡೆಗೆ ಹೊಸ ಜೀವಂತಿಕೆಯನ್ನೂ ತಂದುಕೊಳ್ಳಬಲ್ಲ ಎನ್ನುವುದು. ಇನ್ನೊಂದು, ನಿರೂಪಕನ ನಿರೂಪಣೆಯಲ್ಲಿ ಜಡವಾಗಿ ಬಿಡಬಹುದಾದ, ಕೃತಕ ಎನಿಸಬಹುದಾದ ಒಂದು ತಿರುವು, ಘಟನೆ, ಗತದ ವಿವರ ಎಲ್ಲವನ್ನೂ ಹೆಚ್ಚಿನ ವಿವರಣೆಯೇ ಇಲ್ಲದೆ ಓದುಗನಿಗೆ ಮುಟ್ಟಿಸಿಬಿಡಬಹುದಾದ ಜಾಣತನ. 

ಮೂರನೆಯದಾಗಿ ಆನಂದ್ ಋಗ್ವೇದಿಯವರ ಕತೆಗಳಲ್ಲಿ ಬರುವ ಅನಿರೀಕ್ಷಿತಗಳು. ಇವತ್ತು ಈ ರೀತಿ ಕಥನವೇ ಪ್ರಧಾನವಾಗಿರುವ ಕತೆಗಳನ್ನು ಬರೆಯುವುದು ಬಹುದೊಡ್ಡ ಸವಾಲಾಗಿ ಬಿಟ್ಟಿದೆ. ನಮ್ಮ ಟೀವಿಗಳಲ್ಲಿ, ಪತ್ರಿಕೆಗಳಲ್ಲಿ ಸಾಮಾನ್ಯ ಮನುಷ್ಯನ ದೈನಂದಿನ ಸಮಸ್ಯೆಗಳು, ಅವಗಢಗಳು, ವಿದ್ಯಮಾನಗಳು ಎಲ್ಲವೂ ಸ್ಟೋರಿಗಳಾಗಿ, ಹತ್ತು ಹಲವು ಬಗೆಯ ರಂಗು ರಂಗಿನ ಆಯಾಮಗಳಲ್ಲಿ ಒಂದನ್ನೂ ಬಿಡದೆ, ಸಾಧ್ಯವಿರುವ ಯಾವತ್ತೂ ಕಲ್ಪನೆ, ಕಟ್ಟುಕತೆ, ವದಂತಿ ಎಲ್ಲವನ್ನೂ ವಾಸ್ತವದೊಂದಿಗೆ ಕಲಸುಮೇಲೋಗರ ಮಾಡಿ ವಿವರಿಸುವುದನ್ನು ಕಂಡಿರುವ ನಮಗೆ ಬಹುಶಃ ಯಾವ ಕತೆಯೂ ಕೌತುಕ, ವಿಸ್ಮಯ, ಅಚ್ಚರಿ ಹುಟ್ಟಿಸಲಾರದ ಒಂದು ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಥನವೇ ಪ್ರಧಾನವಾಗಿರುವ ನಿರೂಪಣೆಗಳು ಒಂದೆರಡು ಪುಟಗಳಲ್ಲೇ ಪೂರ್ವನಿರ್ಧಾರಿತ ಜಾಡು ಹಿಡಿದು ಸಾಗುತ್ತವೆ ಎಂಬ ನಿರೀಕ್ಷೆಯಲ್ಲಿ ಕುತೂಹಲವನ್ನು ಉಳಿಸಿಕೊಳ್ಳಲು ಸೋಲುವ ಅಪಾಯವನ್ನು ಎದುರಿಸಬೇಕಾಗುತ್ತದೆ. ಆದರೆ, ಮೆಚ್ಚುಗೆ ಹುಟ್ಟುವ ಹಾಗೆ ಆನಂದ್ ಋಗ್ವೇದಿಯವರಲ್ಲಿ ಹಾಗಾಗುವುದಿಲ್ಲ ಎನ್ನುವುದೇ ಒಂದು ವಿಸ್ಮಯ! 

ನಾಲ್ಕನೆಯದಾಗಿ ಡಾ. ಆನಂದ್ ಋಗ್ವೇದಿಯವರ ಕತೆಗಳಲ್ಲಿ ಕಥಾನಕದ ಸಹಜ ನಡೆಗೆ ಪ್ರಾಧಾನ್ಯ. ಅವರು ಎಲ್ಲಿಯೂ ತಮ್ಮ ನಿಲುವು, ಸಿದ್ಧಾಂತ ಅಥವಾ ರಾಚನಿಕ ಯೋಜನೆಗೆ ಬದ್ಧವಾಗಿ ಒಂದು ಕತೆಯನ್ನು ಬೆಳೆಸಿದಂತೆ ಭಾಸವಾಗುವುದಿಲ್ಲ. ಬದಲಿಗೆ, ತಾವು ಕಥಾನಕದ ನಡೆಯಲ್ಲಿ ಮೂಗು ತೂರಿಸದೇ, ದೂರನಿಂತು, ಓದುಗನೊಂದಿಗೆ ತಾವೂ ಒಬ್ಬ ಓದುಗನಾಗಿ ಕಥನವನ್ನು ಗಮನಿಸುತ್ತಿರುವಂತೆ ಕಾಣುತ್ತದೆ. ಇದೇ ಬಹುಶಃ ಅವರ ಎಲ್ಲಾ ಕತೆಗಳ ಯಶಸ್ಸಿನ ಸೂತ್ರವೆಂದು ನನಗನಿಸಿದೆ. 

ಕೆಲವೊಂದು ಕತೆಗಳಲ್ಲಿ ಕಥನವೇ ಎಷ್ಟೊಂದು ಸಂಕೀರ್ಣವೂ ಸಮೃದ್ಧವೂ ಆಗಿ ಇಡಿಕ್ಕಿರಿದಿದೆ ಎಂದರೆ, ಅಲ್ಲಿ ಅದೆಲ್ಲವನ್ನೂ ಹೇಳುವುದೇ ಒಂದು ಸವಾಲಾಗುವ ಮಟ್ಟದಲ್ಲಿದೆ. ಬಹುಶಃ ಅನಾಯಾಸವಾಗಿ ಕಾದಂಬರಿಯನ್ನಾಗಿಸಬಹುದಾದಷ್ಟು ಕಥನಕ್ರಿಯೆ ಒಂದು ಪುಟ್ಟ ಕತೆಯ ಪುಟಮಿತಿಯಲ್ಲಿ ನಡೆದು ಬಿಡುತ್ತದೆ ಆನಂದ್ ಋಗ್ವೇದಿಯವರ ಕತೆಯಲ್ಲಿ. ಕಥನದ ಆಕೃತಿ ಮತ್ತು ಇತಿಮಿತಿಯಲ್ಲಿ ಇದನ್ನು ನಿಭಾಯಿಸುವುದು ನಿಜಕ್ಕೂ ಒಂದು ಸವಾಲೇ. ಆದರೆ ಆನಂದ್ ಋಗ್ವೇದಿಯವರು ಇದನ್ನು ಅನಾಯಾಸ ಸಾಧಿಸುತ್ತಾರೆ ಎನ್ನುವುದನ್ನು ನಾನು ಕೊಂಚ ಅಚ್ಚರಿಯಿಂದಲೇ ಗಮನಿಸಿದ್ದೇನೆ. 

"ತೇರು" ಕತೆಯಲ್ಲಿ ಒಂದು ವಿಶೇಷವಿದೆ. ಇಲ್ಲಿ ಚಿದಂಬರ, ಹನುಮಂತ ಮತ್ತು ಚಂದ್ರಕಲಾ ನಡುವಣ ಒಂದು ಅವ್ಯಕ್ತ ಸಂಬಂಧವಿದೆ. ಅದು ತುಂಬ ಅಮೂರ್ತವೂ, ಮಾತಿನಲ್ಲಿ ಹೇಳಲಾಗದ್ದೂ ಅನಿಸುವಂತಿದೆ. ಆನಂದ್ ಋಗ್ವೇದಿಯವರೂ ಅದನ್ನು ಅಷ್ಟೇ ಸೂಕ್ಷ್ಮವಾಗಿ ನಿಭಾಯಿಸುತ್ತಾರೆ. ಡಾ||ಯು ಆರ್ ಅನಂತಮೂರ್ತಿಯವರು ಒಮ್ಮೆ ನಿರೂಪಣೆಯ ಹದದ ಕಷ್ಟಗಳನ್ನು ವಿವರಿಸುತ್ತ ಇದನ್ನು ಮದುವೆ ಮನೆಯಲ್ಲಿ ಬಂದ ಅತಿಥಿಗಳಿಗೆ ಸಿಂಪಡಿಸುವ ಪನ್ನೀರಿನಂತೆ ಎಂದಿದ್ದರು. ಸಿಂಪಡಿಸಿದ ಪನ್ನೀರು ಸ್ವಲ್ಪ ಹೆಚ್ಚಾದರೆ, ಅದು ಮುಜುಗರ ಹುಟ್ಟಿಸುತ್ತದೆ. ತೀರ ಕಡಿಮೆಯಾದರೆ ಅದು ಹರಕೆಗಷ್ಟೇ ಸಿಂಪಡಿಸಿದಂತಾಗುತ್ತದೆ. ಯಾವ ಹದದಲ್ಲಿ ಅದನ್ನು ಸಿಂಪಡಿಸಬೇಕು ಎನ್ನುವುದೇ ಒಂದು ಕಲೆ! ಇದನ್ನು ನಾವು ಆನಂದ್ ಋಗ್ವೇದಿಯವರಲ್ಲಿ ಕಾಣುತ್ತೇವೆ. "ತೇರು" ಕತೆ ಮಾತ್ರವಲ್ಲ, "ವಿರಾಟಪರ್ವ" ಕತೆಯಲ್ಲೂ ಅವರು ಇಂತಹುದೇ ಒಂದು ಸನ್ನಿವೇಶವನ್ನು ಬಹು ಅದ್ಭುತವಾಗಿ ನಿಭಾಯಿಸುತ್ತಾರೆ. "ವಿರಾಟಪರ್ವ" ಕತೆಯಲ್ಲಿ ಪ್ರೇಮ, ಕಾಮ, ದಾಂಪತ್ಯ ಮೂರನ್ನೂ ಅದೆಷ್ಟು ನವಿರಾಗಿ ಸ್ಪರ್ಶಿಸಿಯೂ ಸಾಂಗತ್ಯವಿಲ್ಲದ ಅಂತರದಲ್ಲಿ ನಿರೂಪಿಸುತ್ತಾರೆಂದರೆ, ಅದನ್ನು ಮತ್ತೆ ಮತ್ತೆ ಓದಬೇಕನಿಸುತ್ತದೆ. ಇದೇ ರೀತಿ "ಅನುಸಂಧಾನ" ಕತೆಯಲ್ಲೂ ನಿರೂಪಣೆಯ ಒಂದು ಅನುಸಂಧಾನವಿದೆ. ಆದರೆ "ಸನ್ನಿವೇಶ" ಕತೆಯಲ್ಲಿ ಅದು ಕೊಂಚ ಕೃತಕವೆಂಬಂತೆ ಬಂದಿರುವುದನ್ನು ಕೂಡಾ ನಾವು ಸೂಕ್ಷ್ಮವಾಗಿ ಗಮನಿಸಬೇಕು. "ಸುಲಗ್ನಾ ಸಾವಧಾನ" ಕತೆ ಕೂಡಾ ಒಂದು ರೀತಿಯಲ್ಲಿ "ವಿರಾಟಪರ್ವ" ಕತೆಯೊಂದಿಗೆ ವಿಚಿತ್ರ ಸಾಮ್ಯ ಹೊಂದಿದೆ. ಎರಡೂ ಕತೆಗಳ ಅಂತ್ಯವನ್ನು ಆನಂದ್ ಋಗ್ವೇದಿಯವರು ನಿರ್ವಹಿಸಿದ ಬಗೆ ಹೊಸ ಬರಹಗಾರರಿಗೆ ಅಧ್ಯಯನಕ್ಕೆ ಅರ್ಹವಾದ ನಿರೂಪಣೆಯ ವಿಧಾನಗಳನ್ನು ಕಾಣಿಸುತ್ತಿದೆ.

ಈ ಸಂಕಲನದ ಹೆಚ್ಚಿನ ಎಲ್ಲಾ ಕತೆಗಳಲ್ಲಿ ಲೈಂಗಿಕ ಬದುಕಿನ ಏರುಪೇರುಗಳು ಪ್ರಧಾನವಾಗಿ ಕಂಡುಬರುತ್ತವೆ. ವಿಷಮ ದಾಂಪತ್ಯ, ಲೈಂಗಿಕ ಅಸಾಮರ್ಥ್ಯ, ಅತಿಕಾಮಿ, ಪಾವಿತ್ರ್ಯದ ಕುರಿತಾದ ಸಂಶಯವೇ ಮೂಲವಾಗಿ ಉದ್ಭವಿಸುವ ಬಿರುಕು, ದಾಂಪತ್ಯ ನಿಷ್ಠೆಯನ್ನು ಮೀರಿ ನಡೆದುಕೊಳ್ಳುವ ಮತ್ತು ಅದನ್ನು ಯಾವುದೋ ಅನಿವಾರ್ಯಕ್ಕೆ ಬಿದ್ದು ಸಹಿಸುವ ವಿದ್ಯಮಾನ, ಒಂದು ಅಸಮತೋಲನದ ದಾಂಪತ್ಯ ಇನ್ನೊಂದು ಅಂತಹುದೇ ದಾಂಪತ್ಯದ ಜೊತೆ ಹೇಗೋ ಸಂತುಲಿತಗೊಂಡು ಕೊನೆಯಲ್ಲಿ ಮೂಡಿ ಬರುವ ಒಂದು ಹೊಸ ಹೊಂದಾಣಿಕೆಗೆ ಕಾರಣವಾಗುವುದು ಮುಂತಾದ ವಸ್ತು ಇಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡು ಒಂದು ಹೊಸತೇ ಆದ ಜೀವನದರ್ಶನವನ್ನು ಕಾಣಿಸುತ್ತಿದೆ ಅನಿಸುತ್ತದೆ. 

ಸಂಸರ್ಗದಿಂದ ದೇಹ ಅಪವಿತ್ರವಾಗುತ್ತದೆ ಎನ್ನುವುದನ್ನು ಈ ಕತೆಗಳು ನಂಬುವುದಿಲ್ಲ. ಹಾಗೆಯೇ ಕಾಮವನ್ನು, ಲೈಂಗಿಕತೆಯನ್ನು ನಿರಾಕರಿಸುವುದೂ ಇಲ್ಲ. ರಸಿಕತೆ, ದೈಹಿಕ ಆಕರ್ಷಣೆ, ಲೈಂಗಿಕತೆ ಮತ್ತು ಕಾಮವನ್ನು ಈ ಕತೆಗಳು ಸಂಭ್ರಮದಿಂದಲೇ ಆಚರಿಸುತ್ತವೆ. ಆದರೆ ದಾಂಪತ್ಯ ನಿಷ್ಠೆ, ಪ್ಯೂರಿಟನ್ ಕಾನ್ಸೆಪ್ಟ್ ಮತ್ತು ಲೈಂಗಿಕ ನಡವಳಿಕೆಯೇ ಶೀಲವನ್ನು ನಿರ್ಧರಿಸುವ ಅಂಶ ಮುಂತಾದ ಸನಾತನಿ ನಿಲುವಿನಲ್ಲಿ ಅದಕ್ಕೆ ಭರವಸೆಯಿಲ್ಲ. ಊಟ, ನಿದ್ದೆ, ಮೈಥುನವನ್ನು ಸಮಾಜದ ಮತ್ತು ಮುಂದಿನ ಪೀಳಿಗೆಯ ಸ್ವಾಸ್ಥ್ಯಕ್ಕೆ ಚ್ಯುತಿಯಾಗದ ಒಂದು ಇತಿಮಿತಿಯಲ್ಲಿ ಸ್ವತಂತ್ರವಾಗಿ ನಡೆಯಬೇಕಾದ ನಿಸರ್ಗ ಸಹಜ ಪ್ರಕ್ರಿಯೆಗಳು ಎಂಬ ಆರೋಗ್ಯಕರ ನಿಲುವಿನಿಂದ ಈ ಕತೆಗಳು ಹೊರಟಿವೆ. ಹಾಗೆ ಹೇಳುವಾಗಲೂ ಇದನ್ನು ಇದಂಮಿತ್ಥಂ ಎಂದು ಅವು ಹೇಳುತ್ತಿಲ್ಲ. 

ಬಹುಶಃ ನನಗೆ ಕಂಡಿದ್ದು ಹಾಗೆ. ಪ್ರಕೃತಿಯನ್ನು ಪ್ರತಿದಿನ, ಒಂದು ನಿಶ್ಚಿತ ಸಮಯಕ್ಕೆ, ಒಂದೆಡೆ ನಿಂತು ನೋಡುತ್ತಿದ್ದರೂ ಅದು ಪ್ರತಿದಿನವೂ ನಿತ್ಯನೂತನೆಯಾಗಿಯೇ ಕಾಣುತ್ತದೆ ಎನ್ನುವುದು ಸತ್ಯ. ಅದು ಕಡಲೋ, ಆಕಾಶವೋ ಆಗಿದ್ದರೂ ಸರಿಯೇ. ನಿನ್ನೆ ಕಂಡ ಕಡಲು ಇವತ್ತು ಮತ್ತೆ ಬೇಕೆಂದರೆ ಸಿಗುವುದಿಲ್ಲ. ನಿನ್ನೆ ಕಂಡ ಆಕಾಶವಲ್ಲ, ಇವತ್ತು ಕಾಣುತ್ತಿರುವುದು. ಹಾಗೆಯೇ ಕತೆಗಳೂ. ಇವತ್ತು ಯಾವುದೋ ಒಂದು ಮನಸ್ಥಿತಿಯಲ್ಲಿ, ಎಲ್ಲೋ ಕೂತು, ಯಾವುದೋ ಹೊತ್ತಲ್ಲಿ, ಹೇಗೋ ಓದಿದಾಗ ಅನಿಸಿದ್ದು ಹೀಗೆ. ನಾಳೆ ಇನ್ನು ಹೇಗೋ ಹೇಳಲಾರೆವು. ಇನ್ನೊಬ್ಬರಿಗೆ ಹೇಗೋ ಹೇಳಲಾರೆವು. ಬದುಕೂ ಹಾಗೆ, ಕತೆಯೂ ಹಾಗೆ. 

ಒಂದು ಚೇತೋಹಾರಿ ಓದನ್ನು ಕೊಟ್ಟ ಡಾ.ಆನಂದ್ ಋಗ್ವೇದಿಯವರಿಗೆ ನನ್ನ ವಂದನೆಗಳು, ಅಭಿನಂದನೆಗಳು. ಇಲ್ಲಿನ ಕೆಲವಾದರೂ ಕಥನಗಳನ್ನು ಕಾರಂತರಂತೆ, ವಿವರ ವಿವರವಾಗಿ, ಸಕಲೆಂಟು ವಿವರ-ವೈವಿಧ್ಯಗಳೊಂದಿಗೆ ತೋಡಿಕೊಳ್ಳುತ್ತಾ ಹೇಳಿದ್ದರೆ ಅವು ಕನ್ನಡದ ಸುಂದರ ಕಾದಂಬರಿಗಳಾಗಿ ಮೂಡುತ್ತಿದ್ದವು ಅನಿಸಿದ್ದನ್ನು ಹೇಳದೇ ಇರಲಾರೆ, ಹಾಗೆಲ್ಲ ಸೂಚಿಸುವುದು ನನ್ನ ಧರ್ಮವಲ್ಲ ಎನ್ನುವುದು ಗೊತ್ತಿದ್ದರೂ...
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, January 3, 2021

ಹೊಸತನ ಮೈವೆತ್ತು ಬಂದಿರುವ ಕತೆಗಳು

 ಪ್ರೀತಿಯ ಅಮರೇಶ ಗಿಣಿವಾರ ಅವರಿಗೆ, 
 ವಂದನೆಗಳು. 

 ನಿಮ್ಮ ‘ಹಿಂಡೆಕುಳ್ಳು’ ಕಥಾಸಂಕಲನವನ್ನು ಓದಿದೆ, ತುಂಬ ಇಷ್ಟವಾಯಿತು. ನಿಮ್ಮಿಂದ   ಕಥನದ ಕೆಲವು ವಿಶಿಷ್ಟ ಮತ್ತು ಹೊಸತನದ ವಿಧಾನಗಳನ್ನು ಕಲಿತೆ ಎನ್ನಬಹುದು.   ಬಹುಶಃ ಅವು ನಿಮ್ಮ ಮುಂದಿನ ಕತೆಗಳಲ್ಲಿ ಹೆಚ್ಚು ವಿಕಾಸಗೊಂಡು, ಹೆಚ್ಚು ಸ್ಪಷ್ಟವಾದ   ಚೌಕಟ್ಟನ್ನು ಕಂಡುಕೊಳ್ಳಬಹುದು ಅನಿಸುತ್ತದೆ. ಆ ಬಗ್ಗೆ ಎರಡು ಮಾತು. 

 ನಿಮ್ಮ   ಕತೆಗಳಲ್ಲಿ ಸಿದ್ಧಮಾದರಿಯ ಕತೆಗಳಲ್ಲಿ ಕಂಡು ಬರುವಂಥ ಪೂರ್ಣಮಟ್ಟದ ಕತೆ   ಎನ್ನುವುದಿಲ್ಲ. ಆದರೆ, ನಿರೂಪಣೆಯಲ್ಲಿ ಬರದೇ ಇರುವ, ಕಥಾನಕದ ಹಿಂದಿನ ಮತ್ತು   ಕೆಲವೊಮ್ಮೆ ಮುಂದಿನ ಕತೆಗಳ ಹೊಳಹುಗಳನ್ನು ಸ್ಪಷ್ಟವಾಗಿ ಕಾಣಿಸುತ್ತೀರಿ. ಹಾಗೆ     ಕಾಣಿಸುವುದರ ಮೂಲಕವೇ ಪೂರ್ಣಮಟ್ಟವನ್ನು ಹೊಂದಿವೆ ಎನ್ನುವ ಭಾವ   ಕಟ್ಟಿಕೊಡುವಲ್ಲಿ ನಿಮ್ಮ ಭಾಷೆ ಮತ್ತು ವಿವರಗಳು ಸಶಕ್ತವಾಗಿರುವುದು ಅಚ್ಚರಿ ಹುಟ್ಟಿಸುವಷ್ಟು ಆಕರ್ಷಕವಾಗಿವೆ. ಹೀಗೆ, ನಿಮ್ಮ ಕತೆಗಳಲ್ಲಿ ಒಂದು ನಿರ್ದಿಷ್ಟ ಚಿತ್ರವಷ್ಟೇ ಇದೆ. ಇದು ನನಗೆ ಒಂದು ಸ್ಥಿರಚಿತ್ರ, ಅದನ್ನು ನೋಡುವ ವೀಕ್ಷಕನಲ್ಲಿ ಮೂಡಿಸುವ ಹಿಂದು-ಮುಂದಿನ ಕಥನದ ಪ್ರತಿಮಾವಿಧಾನವನ್ನು ಸಶಕ್ತವಾಗಿ ಬಳಸಿಕೊಳ್ಳುವ ಕಥನಕ್ರಮದಂತೆ ಕಂಡಿದೆ. ಇದು ಕನ್ನಡಕ್ಕೆ ಹೊಸದು ಮತ್ತು ನಿಮ್ಮ ಸಾಮರ್ಥ್ಯಕ್ಕೆ ನಿಜವಾದ ಒರೆಗಲ್ಲು ಕೂಡಾ. ಅದರಲ್ಲಿ ನೀವು ಗೆದ್ದಿದ್ದೀರಿ, ಅಭಿನಂದನೆಗಳು. 

‘ಶಿವನ ಕುದುರೆ’ ಕತೆಯನ್ನು ಗಮನಿಸಿದರೆ, ಇದು ತಂದೆಯನ್ನು ಮೀರಲು ಹೊರಟ ಮಗನ ಕತೆಯಂತೆ ಭಾಸವಾಗುವುದು. ಇಂಥ ಅನೇಕ ಕತೆಗಳು ಕನ್ನಡದಲ್ಲಿ ಇವೆ. ಉದಾಹರಣೆಗೆ, ಜಯಂತರ ‘ತೆರೆದಷ್ಟೇ ಬಾಗಿಲು’, ಅಶೋಕ ಹೆಗಡೆಯವರ ‘ಉಳಿದದ್ದೆ ದಾರಿ’, ‘ಹೊಳೆದದ್ದೆ ತಾರೆ’, ವಿ ಆರ್ ಕಾರ್ಪೆಂಟರ್ ಅವರ ‘ನನ್ನ ಅಪ್ಪನ ಪ್ರೇಯಸಿ’, ಪದ್ಮನಾಭ ಭಟ್ ಶೇವ್ಕಾರ ಅವರ ‘ಕತೆ’ ಇತ್ಯಾದಿ ಹಲವಾರು ಕತೆಗಳು ತಂದೆ ಮಗನ ನಡುವಿನ ಒಂದು ‘ಲವ್-ಹೇಟ್’ ಸಂಬಂಧದ ನೆಲೆಗಟ್ಟನ್ನು ಹೊಂದಿರುವ ಕತೆಗಳೇ. ಆದರೆ ನೀವು ಅದನ್ನು ಇಷ್ಟೊಂದು ಸಂಕ್ಷಿಪ್ತವಾಗಿ ಮತ್ತು ಸಾಕಷ್ಟು ಸಂಕೀರ್ಣವಾಗಿ ಕೂಡ ಕಟ್ಟಿಕೊಟ್ಟಿರುವುದು ಮೆಚ್ಚುಗೆ ಹುಟ್ಟಿಸುತ್ತದೆ. 

‘ನರಿಮಳೆ’ ಕತೆ ತೀರ ಸಾಮಾನ್ಯ ಎಳೆಯನ್ನು ಹೊಂದಿರುವ ಕತೆ. ಆದರೆ ಅದರ ದೈನಂದಿನಗಳ ವಿವರಗಳಲ್ಲಿ ಸಾಕಷ್ಟು ಹೊಸತನವಿದೆ, ಕನ್ನಡ ಕಥಾ ಸಾಹಿತ್ಯದಲ್ಲಿ ಇದುವರೆಗೂ ಬಂದಿರದ ಒಂದು ಬದುಕು ಇಲ್ಲಿ ಅನಾವರಣಗೊಳ್ಳುತ್ತಿದೆ ಎನ್ನುವುದರಿಂದ ಓದು ಖುಶಿಕೊಡುತ್ತದೆ. 

‘ಹಿಂಡೆಕುಳ್ಳು’ ಕಥಾನಕ ಕೂಡ“ನರಿಮಳೆ’ ಕತೆಯದೇ ಇನ್ನೊಂದು ಮಗ್ಗುಲನ್ನು ತೋರಿಸುತ್ತಿದೆಯಾದರೂ ಇಲ್ಲಿ ನೇರವಾಗಿ ಗಂಡನ ಸಾವು - ಬದುಕುಳಿವ ಹೆಂಡತಿ, ಮಕ್ಕಳ ಬದುಕಿಗೆ ಲಿಬರೇಟಿಂಗ್ ಆಗಿಬಿಡುವುದೇ ಬಹಳ ಮುಖ್ಯವಾದ ಸಂಗತಿ ಅನಿಸುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ ಎನ್ನುವ ಕಾರಣಕ್ಕೆ ಸತ್ಯ ಸುಳ್ಳಾಗುವುದಿಲ್ಲ. ಈ ಕತೆ ಹೆಚ್ಚು ವಾಸ್ತವಿಕ ನೆಲೆಗಟ್ಟಿನಿಂದ, ಮಗುವಿನ ಮೂಲಕ ಸತ್ಯ ಹೇಳಿಸುವ ತಂತ್ರದ ಮೂಲಕವೂ ಗಮನ ಸೆಳೆಯುತ್ತದೆ. 

‘ಗೋಡೆಗಳ ಸೇಡು’ ಕತೆ ದಾಯಾದಿ ಕಲಹದ ಸಾಮಾನ್ಯ ವಸ್ತುವನ್ನೇ ಹೊಂದಿದೆಯಾದರೂ ಅದನ್ನು ವಿವರ ವಿವರವಾಗಿ ತೆರೆದಿಟ್ಟಿರುವ ರೀತಿ ಮತ್ತು ಕ್ರಿಯೆಯಲ್ಲಿ ಕಾಣಿಸದ ಅದರ ಕ್ರೌರ್ಯವನ್ನು, ಅದೂ ಹೆಣ್ಣಿನ ಮನಸ್ಸಿನ ನಂಜಿನ ಮೂಲಕವೇ ಕಾಣಿಸಿರುವ ರೀತಿ ಮೆಚ್ಚುಗೆ ಹುಟ್ಟಿಸುತ್ತದೆ. 

‘ದೀಗಿ’ ಕತೆ ಸಣ್ಣಪುಟ್ಟ ಸಂತೋಷಗಳಿಗೂ ಎರವಾಗುವ ಬಾಲ್ಯದ ಕುರಿತಾಗಿದ್ದರೂ ಇಲ್ಲಿ ಕೆಲಸ ಮಾಡುವ ಪ್ರಜ್ಞೆ ಬೆಳೆದವರದ್ದೇ. ಮತ್ತು ಅದಕ್ಕೆ ‘ದೊಡ್ಡವರಾಗುವ’ ಒಂದು ಹಂತವನ್ನೇ ಆರಿಸಿಕೊಂಡಿರುವುದು ಹೆಚ್ಚು ಸಮಂಜಸವಾಗಿದೆ. ಪ್ರಬುದ್ಧರ, ಹಿರಿಯರ ಬದುಕಿನ ಅತ್ಯಂತ ದೊಡ್ಡ ನೋವು ಕೂಡ ಇಂಥ ಬಾಲ್ಯದ ಸಣ್ಣಪುಟ್ಟ ಖುಶಿಗಳಿಗೆ ಎರವಾಗಿ ಬೆಳೆದ ಹಂತದೊಂದಿಗೇ ತಳುಕು ಹಾಕಿಕೊಂಡಿರುತ್ತದೆ ಎನ್ನುವುದು ಸುಳ್ಳಲ್ಲ. ಈ ಕಾರಣಕ್ಕಾಗಿಯೇ ತುಂಬ ಮಹತ್ವದ ಕತೆಯಿದು. 

‘ಪಾತ್ರಧಾರಿ’ ಕತೆಯ ನಿರೂಪಣೆಯಲ್ಲಿ ಹೆಚ್ಚು ಲಘುವಾದ ಮನೋಧರ್ಮವೊಂದು ಕೆಲಸ ಮಾಡಿದೆ. ಗಂಭೀರವಾದ ದೈನಂದಿನವನ್ನು ಕೂಡ ತಮಾಶೆಯಾಗಿ ಗಮನಿಸುತ್ತ ಅದರ ಗಹನತೆಯನ್ನು ಮನಗಾಣಿಸುವಲ್ಲಿ ಕತೆ ಯಶಸ್ವಿಯಾಗಿದೆ. 

ರಂಗೋಲಿ ಹಾಕಿದರೆ ಗಂಗೂಲಿ ಬರೋದಿಲ್ಲಾ, 
ರಂಗೋಲಿಯಾಕ ನಮ್ಮನಿಗಿ, 
ರಂಗೋಲಿಯಾಕ ನಮ್ಮನಿಗಿ ನಾಗೇಂದ್ರ, 
ಅಂಗೈಲಿ ಒಂದು ಮರಿ ಬೇಕು 

 - ಎಂಬ ಜಾನಪದ ಹಾಡಿನ ಸೊಲ್ಲಿನಲ್ಲಿ ಎಷ್ಟೆಲ್ಲ ಸತ್ಯವಡಗಿದೆ ಮತ್ತು ಅದೇ ಕಾಲಕ್ಕೆ ಅದೆಷ್ಟು ತಮಾಶೆಯಾಗಿಯೂ ಇದೆ ಎನ್ನುವುದನ್ನು ಕಂಡುಕೊಂಡರೆ, ನಿಮ್ಮ ಕಥನದ ತಂತ್ರಗಳು, ಪಟ್ಟುಗಳು ಮತ್ತು ಬದುಕನ್ನು ನೋಡುವ ಮನೋಧರ್ಮ ಎಲ್ಲವೂ ಅರ್ಥವಾಗುತ್ತದೆ ಅನಿಸುತ್ತದೆ. ಇದು ಮುಂದೆ ನಿಮ್ಮಲ್ಲಿ ಹೇಗೆ ಹೊಸ ಹೊಸ ಬಗೆಯ, ಹೊಸಹೊಸ ವಸ್ತು, ನಿರೂಪಣೆ ಮತ್ತು ತಂತ್ರಗಳಿಗೆ ನೀರೆರೆದು ಪೋಷಿಸಬಹುದು ಎಂಬುದು ತುಂಬ ಕುತೂಹಲಕರವಾಗಿ ಕಾಣುತ್ತದೆ. 

‘ಮನೆ ನಂಬರ್ 84’ ಕೂಡ ಮೇಲಿನ ಮಾತುಗಳಿಗೆ ಪುಷ್ಟಿಕೊಡುವಂಥದೇ ಕತೆ. ಇಲ್ಲಿ ಸಂಘಟನೆಯಿದೆ, ಕಾರ್ಮಿಕರಿದ್ದಾರೆ, ವರ್ಗ ಸಂಘರ್ಷವಿದೆ, ಓಸಿ ಮತ್ತು ಭ್ರಷ್ಟಾಚಾರವೂ ಇದೆ. ಎಲ್ಲವೂ ಎಲ್ಲರಲ್ಲೂ ಇದೆ ಎನ್ನುವುದು ಹೆಚ್ಚು ವಿಶೇಷವಾದದ್ದು. ಆದರೆ ಕತೆಯಲ್ಲಿ ಎಲ್ಲಿಯೂ ಇದನ್ನೆಲ್ಲ ಅರಿತು, ಪ್ರಜ್ಞಾಪೂರ್ವಕವಾಗಿ ಕಾಣಿಸಲು ಹೊರಟಿದ್ದೇನೆ ಎಂಬ ಧಾಟಿ ಇಲ್ಲ. ಇದನ್ನು ನೀವು ನಿಭಾಯಿಸಿರುವುದು ನಿಮ್ಮನ್ನು ಪ್ರಬುದ್ಧ ಕತೆಗಾರರ ಸಾಲಿನಲ್ಲಿ ನಿಲ್ಲಿಸುತ್ತದೆ. 

‘ನಶಿಪುಡಿ’ ಕತೆಯಲ್ಲಿ ಮತ್ತೆ ಮೇಲಿನ ಸಂಗತಿಗಳೇ ಬೇರೊಂದು ನೆಲೆಯಲ್ಲಿ ಮರುಕಳಿಸುತ್ತವೆ. ಇಲ್ಲಿ ನಕ್ಸಲೈಟ್ ಚಳವಳಿ, ಸರಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದೆ ಎಂದು ತೋರಿಸಿಕೊಳ್ಳುವುದಕ್ಕೆಂದೇ ಲೆಕ್ಕ ಕೊಡುವ ಅಭಿವೃದ್ಧಿ ಕಾರ್ಯಕ್ರಮದ ಲಕ್ಷಾಂತರ ರೂಪಾಯಿಗಳ ಬಿಡುಗಡೆ, ಅದನ್ನು ನುಂಗಿ ನೀರು ಕುಡಿಯಲು ಕಾದಿರುವ ಹಲವು ಹಂತದ ಆಡಳಿತ ವ್ಯವಸ್ಥೆಯ ಮೆಟ್ಟಿಲುಗಳು ಮತ್ತು ತೀರ ತಳಮಟ್ಟದಲ್ಲಿ ನಕ್ಸಲೈಟ್ ಎಂದು ಉಚ್ಚರಿಸಲು ಕೂಡ ಬಾರದ ದರಿದ್ರ ಮಂದಿ ಎಲ್ಲರೂ ಇದ್ದಾರೆ. ಆದರೆ ಎಲ್ಲಿಯೂ ಯಾವುದನ್ನೂ ಹೆಚ್ಚು ತಿದ್ದಿ ದಪ್ಪಕ್ಷರಗಳಲ್ಲಿ ಕಾಣಿಸುವ ಯತ್ನವಿಲ್ಲ. ಗಾತ್ರದಲ್ಲಿ ಯಾವ ಕತೆಯೂ ಐದಾರು ಪುಟ ಮೀರುವುದಿಲ್ಲ. 

‘ವಾಪಾಸು ಬಂದ ಪತ್ರ’ ಕತೆ ನಿಮ್ಮ ತಂತ್ರಗಾರಿಕೆಯನ್ನು ಕಾಣಿಸುವ ಒಂದು ಸಾಮಾನ್ಯ ಪ್ರೇಮಕತೆ ಅನಿಸಿದರೂ ಇಲ್ಲಿ ಇರುವುದು ಒಂದು ಸರಳ ಪ್ರೇಮದ ಕತೆಯಲ್ಲ ಎನ್ನುವುದು ಯಾರಿಗೂ ಅರ್ಥವಾಗುವಂಥದ್ದೇ. ಅದರ ಒಟ್ಟಾರೆ ಚಂದ ಇರುವುದೇ ಅದು ಯಾಕೆ ವಾಪಾಸು ಮರಳಿತು ಎನ್ನುವುದರಲ್ಲೇ ಎನ್ನುವುದು ನಿಜವಾದರೂ ಅದು ಮರಳಿ ಬರಬಹುದಾದ ಹಲವು ಸಾಧ್ಯತೆಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವುದು ಪತ್ರವನ್ನು ಓದುತ್ತಿದ್ದಂತೆ ಓದುಗನಿಗೂ ಅರಿವಾಗುವುದರಲ್ಲೇ ಅದರ ಗುರುತ್ವ ಇದೆ. ಹಾಗಾಗಿ ಅಂತ್ಯದ ಆಕರ್ಷಕ ಅಂಶದ ಹೊರತಾಗಿಯೂ, ಒಂದು ತೆಳ್ಳನೆಯ ಕತೆಯಾಗಬಹುದಾಗಿದ್ದ ಇದು ಹೆಚ್ಚು ಸಾಂದ್ರವಾಗಿ ಮನಸ್ಸಿನಲ್ಲಿ ಉಳಿಯುವಂತಾಗಿದೆ. 

‘ಹಳ್ಳ ತೋರಿಸಿದರು’ ಕತೆಯಲ್ಲಿಯೂ ನನಗೆ ‘ನರಿಮಳೆ’, ‘ಪಾತ್ರಧಾರಿ’ ಮತ್ತು ‘ಹಿಂಡೆಕುಳ್ಳು’ ಕತೆಗಳ ಅಸಮ ದಾಂಪತ್ಯದ ನೆರಳು ಕಾಣಿಸಿದೆ. ಆದರೆ ಅಂಥ ಬದುಕಿನ ಇನ್ನೊಂದು ಮಗ್ಗಲನ್ನು ಇದು ಕಾಣಿಸುತ್ತಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಸಂಕ್ಷಿಪ್ತವಾಗಿ ನೀವು ಕಟ್ಟಿಕೊಡುವ ಕಥಾನಕದ ನಡುವಿನ ಒಂದು ‘ಆಯ್ದ ಚಿತ್ರ’ ಏನಿದೆ, ಅದು ಮಾತ್ರ ನಮಗೆ ಈ ಕತೆಗಳಲ್ಲಿ ಸಿಗುತ್ತಿದೆ. ಕತೆಯ ಇಡೀ ಮೈ ಇಲ್ಲಿ ಇಲ್ಲ ಅನಿಸುತ್ತದೆ. ಆದರೆ ಇಡೀ ಮೈ ಇಲ್ಲದೇನೆ ಅದನ್ನು ಹೊಳಹುಗಳಲ್ಲಿ ಮರುಕಲ್ಪಿಸಬಹುದು ಎಂಬ ನಿಮ್ಮ ನಂಬುಗೆ ನನಗೆ ತುಂಬ ಇಷ್ಟವಾದ ಸಂಗತಿ. ಇದು ಬಹುಶಃ ಇವತ್ತಿನ ಕಥನದ ಅಗತ್ಯ ಕೂಡ. ಹಾಗೆಯೇ ಇದನ್ನು ಸಾಧಿಸಲು ಕೇವಲ ನಂಬುಗೆ ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಅದಕ್ಕೆಲ್ಲ ಒಂದು ಸಶಕ್ತ ಭಾಷೆ, ಜಾಣ್ಮೆಯಿಂದ ಆಯ್ದ ವಿವರಗಳು ಮತ್ತು ಅಭಿವ್ಯಕ್ತಿಯಲ್ಲಿ ಚುರುಕು ಮುಟ್ಟಿಸಬಲ್ಲ ಅನುಭವದ ಕಸು ಅಗತ್ಯ ಎಂಬ ಅರಿವೂ ನಿಮಗಿದ್ದೇ ಇದೆ. ಹಾಗಾಗಿಯೇ ನಿಮ್ಮ ಎಲ್ಲ ಕತೆಗಳೂ ಯಶಸ್ವಿಯಾಗಿವೆ. 

ಆದರೆ ನನಗೆ ಇವತ್ತಿನ ಓದುಗನ ಬಗ್ಗೆ ಅಂಥ ಭರವಸೆಯೇನಿಲ್ಲ. ಅವನ ಓದಿನ ವೇಗ, ಯಾವುದನ್ನು ಹೇಗೆ ಓದಬೇಕೆಂಬುದರ ಕುರಿತಾಗಿರುವ ಅವಜ್ಞೆ ಎರಡೂ ಬಹುತೇಕ ಒಳ್ಳೆಯ ಕತೆಗಳನ್ನು, ವಾಚ್ಯವಾಗದೆ ಸೂಚ್ಯವಾಗಿ ಮುಗಿಯುವ ಕತೆಗಳನ್ನು, ಕವಿತೆಯಂಥ ಕತೆಗಳನ್ನು ಸೋಲಿಸಬಲ್ಲುದು ಎನ್ನುವ ಅರಿವು ನನಗೆ ಸ್ವಲ್ಪ ತಡವಾಗಿಯಾದರೂ ಆಗಿದೆ. ಬಹುಶಃ ನಿಮಗೂ ಆಗಲಿದೆಯೆ, ಅಥವಾ ನನ್ನ ಅರಿವು ತಪ್ಪಾಗಿದೆಯೆ ಎನ್ನುವುದು ನನ್ನ ಕುತೂಹಲ. ಹಾಗಾಗಿ ನಿಮ್ಮ ಮುಂದಿನ ಕತೆಗಳನ್ನು ಕಾಯುವೆ. ಒಳ್ಳೆಯ ಕತೆಗಳನ್ನು ನೀಡಿರುವುದಕ್ಕೆ ಮತ್ತೊಮ್ಮೆ ಅಭಿನಂದನೆಗಳು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ