Tuesday, January 26, 2021

ಕವಿತೆಗೊಲಿದ ಕವಿ

ಕವಿಭಾವ ತೀರ ಅಮೂರ್ತವಾದದ್ದು. ಅದಕ್ಕೆ ಭಾಷೆಯ ಹಂಗಿಲ್ಲ, ಅರ್ಥದ ಹಂಗಿಲ್ಲ ಮತ್ತು ಅದು ತೀರ ಕ್ಷಣಭಂಗುರವಾದದ್ದು ಕೂಡ. ಹೇಳಬೇಕೆಂದರೆ, ಕನಸಲ್ಲಿ ಕಂಡ ಯಾವುದೋ ಒಂದು ಬಿಂಬ, ದೃಶ್ಯ ಅಥವಾ ಭಾವನೆಯಂತೆ. ಅದನ್ನು ಅದೇ ಕ್ಷಣ ಬುದ್ಧಿಯಿಂದ ಗ್ರಹಿಸುವುದು ಎಲ್ಲರಿಗೂ ಸಾಧ್ಯವಾಗುವಂಥದ್ದಲ್ಲ. ಸಾಧ್ಯವಾದಾಗಲೂ, ಆ ಕವಿಭಾವಕ್ಕೆ ಭಾಷೆಯ ಬಟ್ಟೆ ತೊಡಿಸುವಾಗ ಆಗುವ ಎಡವಟ್ಟುಗಳಿಂದ ತಪ್ಪಿಸಿಕೊಳ್ಳುವುದು ಕೂಡ ಸುಲಭವಲ್ಲ. ಒಂದೋ ನೀವು ಅದ್ಭುತ ಭಾಷೆಯ ಪ್ರಾವೀಣ್ಯವುಳ್ಳವರಾಗಿದ್ದರೆ, ಭಾಷೆಯ ಮೋಹಕತೆಯಲ್ಲಿ ಮಾಯವಾಗಿ ಬಿಡಬಹುದು; ಅಥವಾ ನಿಮ್ಮ ಭಾಷೆ ಪಳಗಿಲ್ಲವಾದಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಹೇಳಿಬಿಡಬಹುದು. ಎರಡೂ ಪ್ರಸಂಗಗಳಲ್ಲಿ ಹೊಗಳುಭಟ್ಟರ ಸೇವೆಯಿಂದ ಬಚಾವಾಗಲು ಸೋತರೆ ಕತೆ ಮುಗಿದಂತೆಯೇ. 

ಗುರುಗಣೇಶ ಅವರ ಕೆಲವೇ ಕೆಲವು ಕವಿತೆಗಳನ್ನು ಓದಿದಾಗ ನನಗೆ ಮೊದಲಿಗೆ ಅನಿಸಿದ್ದು ಈ ಹುಡುಗ ಭಾವವನ್ನು ಭಾಷೆಯ ಋಣಕ್ಕೆ ಬೀಳದೆ ವ್ಯಕ್ತಪಡಿಸಲು ತುಡಿಯುತ್ತಿರುವ ಒಂದು ಕವಿಚೇತನ ಎಂದೇ. ಹಾಗಾಗಿ ಇವನು ನನಗೆ ಇಷ್ಟ. ಹಾಗಾಗಿಯೇ ಈ ಕವಿತೆಗಳ ಬಗ್ಗೆ ಮಾತನಾಡುವುದು ತುಂಬ ಕಷ್ಟ ಕೂಡ. ಇದು ಗಾಜಿನಂತೆ ಕಾಣುವ ನೀರಿನ ಹಲಗೆಯ ಮೇಲೆ ಕಾಲಿಟ್ಟು, ನನ್ನ ಮಾತಿನ ಭಾರವನ್ನು ಅದರ ಮೇಲಿಕ್ಕದೇ ನಡೆಯಬೇಕಾದ ಸವಾಲು. ಒಬ್ಬ ಕವಿಯಷ್ಟೇ ನಿಭಾಯಿಸಬಲ್ಲ ಈ ಸವಾಲಿಗೆ ನಾನು ಶುದ್ಧ ಅಪಾತ್ರ; ಅನಿವಾರ್ಯಕ್ಕೆ ಸಿಕ್ಕ ಕವಿಮಿತ್ರ. 

ನಾನು ಇವರ ಕೆಲವು ಕವಿತೆಗಳನ್ನೇ ಉಲ್ಲೇಖಿಸುತ್ತ ಈ ಹುಡುಗನ ಬಗ್ಗೆ ನನ್ನ ಮೆಚ್ಚುಗೆಯನ್ನು ಹಂಚಿಕೊಳ್ಳುವುದಷ್ಟೇ ಬಹುಶಃ ನಾನು ಮಾಡಬಹುದಾದ್ದು. ಏಕೆಂದರೆ, ಈ ಕವಿತೆಗಳಿಗೆ ಟ್ಯೂನ್ ಆಗಬಲ್ಲ ಹೃದಯ ನಿಮಗಿದ್ದರೆ, ಮುನ್ನುಡಿಯ ಭಾರವನ್ನು ಅದು ಹೊರಬೇಕಾದ್ದಿಲ್ಲ. ಯಾರೂ ಬಹುಬೇಗ ಟ್ಯೂನ್ ಆಗಬಲ್ಲ ಆಕರ್ಷಣೆಯುಳ್ಳ ಈ ಕವಿತೆಗಳ ಮಟ್ಟಿಗೆ ಆಂಟೆನಾ ಬೇಕಿಲ್ಲ. 

ಹಗಲು 
ಅಟ್ಟದ ಮೇಲೆ ಕೂತು ಕಾಯಿಸಿದ ಬಿಸಿಲು 

ರಾತ್ರಿ 
ಕೊಡಚಾದ್ರಿ ಶ್ರೇಣಿಯ ಘಟ್ಟ ಇಳಿಜಾರು 

ಕೇಳಿಸಿದ್ದು -
ಒಂಟಿಸಲಗದ ಘೀಳು 
ಜವಟೆ ಏರುನಾದ, ಢಣಢಣ ಸದ್ದು 

ಸರ್ಕಾರ ಅತಿಕ್ರಮಣ ನಿಷೇಧಿಸಿದೆ. 

 - ಈ ಕವಿತೆಯ ಸೌಂದರ್ಯವೆಲ್ಲಾ ಇರುವುದು ಅದರಲ್ಲಿ ಮನುಷ್ಯನ ಇರುವಿಕೆಯೇ ಇಲ್ಲದ ಪ್ರಕೃತಿಯನ್ನು ಕವಿ ಗುರುತಿಸಿದ್ದರಲ್ಲಿ ಮತ್ತು ಅದನ್ನು ಪದಗಳಲ್ಲಿ ಹಿಡಿದಿಟ್ಟಿರುವ ಬಗೆಯಲ್ಲಿ. ಹಗಲು ಮತ್ತು ರಾತ್ರಿ ಅನುಭವಕ್ಕೆ ಬರುವುದು ಬಿಸಿಲು ಮತ್ತು ಘಟ್ಟದ ಇಳಿಜಾರಿನಲ್ಲಿ. ಇಲ್ಲಿ ಅಟ್ಟದ ಮೇಲೆ ಕೂತು ಬಿಸಿಲು ಕಾದಿದ್ದು ಕವಿಯೇ ಅಥವಾ ಬಿಸಿಲೇ ಅಟ್ಟದ ಮೇಲೆ ಕೂತು ಬೆಚ್ಚಗಾಯಿತೇ, ಅದು ನಿಮ್ಮ ಮನಸ್ಸಿನ ಸ್ಪೇಸ್‌ಗೆ ಬಿಟ್ಟುಬಿಡಿ. ಹಾಗೆಯೇ, ಘಟ್ಟ ಇಳಿಜಾರು ಕವಿಯ ಮನಸ್ಸಿನಲ್ಲಿ ಹಾದು ಹೋದ ಒಂದು ಚಿತ್ರವೇ ಅಥವಾ ರಾತ್ರಿ ಹಾಗೆ ಇಳಿಯುತಿತ್ತೇ (ಸೂರ್ಯ ಭುವಿಯ ಬೆನ್ನ ಮೇಲೆ ಜಾರಿದ ಹಾಗೆ) ಎನ್ನುವುದು ಕೂಡಾ ನಿಮ್ಮ ಮನಸ್ಸಿನಲ್ಲಿ ಹಾಯಲಿ, ನಿರ್ಧರಿಸಬೇಡಿ. ಸುಮ್ಮನೇ ಈ ಸಾಲುಗಳನ್ನು ಅವು ಹೇಗಿವೆಯೋ ಹಾಗೆ ಅನುಭವಿಸುತ್ತ ಬನ್ನಿ. 

ಈಗ ಕೇಳಿಸಿತಲ್ಲ, ಒಂಟಿಸಲಗದ ಘೀಳು, ಬೆನ್ನಿಗೇ ಜವಟೆಯ ಏರುನಾದ, ಢಣಢಣಢಣಢಣ.....ಇದು ಅತಿಕ್ರಮಣ. ಯಾರದ್ದು? ಒಂಟಿಸಲಗದ್ದೇ? ರೈತನನ್ನು ಕೇಳಿ ಹೌದೆನ್ನುತ್ತಾನೆ. ಬೇಡ, ಆನೆಯನ್ನು ಕೇಳುತ್ತೀರಾ? 

ಇನ್ನೊಂದು ಕವಿತೆ: 

ಮರದ ಕೊಂಬೆಯಲ್ಲಿ 
ಗರಿ 

ಕೆಳಗೆ ಬೀಳುವ ಎಲೆ 
ಕಾಯಿ ಹಣ್ಣು ಹಾರುವ ಹಕ್ಕಿ 
ದೃಷ್ಟಿ ನೆಲದ ಕಡೆ 

ಮಧ್ಯೆ ಮರ, 
ಆಕಾಶ ನೋಡುತ್ತ 

ನೆಲದ ಬಳಿಗೆ ಹಕ್ಕಿ ಹಾರಿ 
ರೆಕ್ಕೆ ಬಿಚ್ಚಿ ಹಣ್ಣು ನುಂಗಿದ 
ಊದ್ದ ತೇಗು ನನಗೂ ಕೇಳಿಸಿತು 

ಪಿಶ್ಶಿ ಅಂಗಿಯ ಮೇಲೆ ಪಿಚ್ಚಕ್ಕ 
ಕಲೆ ಒಳ್ಳೆಯದೇ... 

ಮತ್ತೊಂದು ದಿನ 
ನೆರೆಯವನ ಅಂಗಳದಲ್ಲಿ 
ಒಂದು ಗಿಡ ನಕ್ಕಿತು 

ಯಾವ ಪತ್ರಿಕೆಯಲ್ಲೂ ವರದಿ ಕಾಣಲಿಲ್ಲ. 

- ಮತ್ತೆ ಮತ್ತೆ ಓದಿದಾಗಲೆಲ್ಲ ಎಷ್ಟು ಚಂದ ಅನಿಸಿ ಸುಮ್ಮನಿದ್ದು ಬಿಡಬೇಕು ಅನಿಸುತ್ತದೆ ನನಗೆ. ವಿವರಿಸುವುದು ಅಸಹ್ಯ. ಈ ಪ್ರಕೃತಿಯ ನಾದಕ್ಕೆ ನನ್ನ ಗೊಗ್ಗರು ಕಂಠದ ಕಲಬೆರಕೆಯಾಗಬೇಕೆ? 

ಮರದ ಕೊಂಬೆಯಲ್ಲಿ ನೀವು ಕಾಣುತ್ತಿರುವುದು ಗರಿ. ಒಣಗಿದ ಎಲೆಯೋ, ಹಸಿರೆಲೆಯೋ ಅಲ್ಲ. ಅದು ಯಾವುದೋ ಹಕ್ಕಿಯ ಗರಿ ಇರಬಹುದು ಎಂದುಕೊಳ್ಳಿ. ನಂತರ ಅಲ್ಲಿ ಕೆಳಗೆ ಬೀಳುವ ಎಲೆ ಇದೆ. ಅದು ಬೀಳುತ್ತಿದೆ ಎಂದೇನೂ ಕವಿ ಹೇಳುತ್ತಿಲ್ಲ. ಬೀಳುವ ಎಲೆ ಅಷ್ಟೆ. ಅದು ನಿರಂತರವಾಗಿ ಕಳೆದ ಶತಮಾನದಿಂದ ಬೀಳುತ್ತಿದೆ ಮತ್ತು ಮುಂದಿನ ಹಲವಾರು ಶತಮಾನಗಳ ವರೆಗೆ ಹಾಗೆ ಬೀಳುತ್ತಲೇ ಇರುತ್ತದೆ ಎಂದಿಟ್ಟುಕೊಳ್ಳಲು ಇದೇ ಆಧಾರ. ಇದರ ಜೊತೆಗೆ ಸಾಥ್ ಕೊಡಲು ಕಾಯಿ, ಹಣ್ಣು, ನೆಲದ ಕಡೆಗೆ ನೆಟ್ಟ ಹಾರುವ ಹಕ್ಕಿದೃಷ್ಟಿ - ಇದೆ. ಮಧ್ಯೆ ಮರ ಆಕಾಶ ನೋಡುತ್ತ ವೃಕ್ಷದೃಷ್ಟಿಯಿದೆ. ಕೆಳಗೆ ಬೀಳುವ ಎಲೆಗೆ ಎಷ್ಟೊಂದು ಸಾಕ್ಷಿಗಳು ನೋಡಿ! ಹಾರುವ ಹಕ್ಕಿಯ ದೃಷ್ಟಿ ನೆಲದ ಕಡೆಗೆ ಇದ್ದರೆ, ಸ್ಥಾವರವಾದ ಮರದ ದೃಷ್ಟಿ ಆಕಾಶದ ಕಡೆಗಿದೆ. ನಡುವೆ ಬೀಳುವ ಎಲೆ ಇದೆ. ಬಹುಶಃ ಅದಕ್ಕೆ ಗೊತ್ತಿದೆ, ಇವತ್ತಲ್ಲಾ ನಾಳೆ ನಾನು ಬೀಳುವುದೇ ನಿಶ್ಚಯವಾದದ್ದು ಎಂಬ ಸತ್ಯ, ಅಲ್ಲವೆ? 

ಇಲ್ಲಿ ಗರಿ ಅಂದ ತಕ್ಷಣವೇ ನಮಗೆ ನೆನಪಾಗುವುದು ಬೇಂದ್ರೆಯವರ ‘ಗರಿ’. ಈ ಕವಿತೆಯ ಬಗ್ಗೆ ಎಸ್ ದಿವಾಕರ್ ಅವರ ಒಂದು ಸುಂದರ ಪ್ರಬಂಧದಲ್ಲಿ ಉಲ್ಲೇಖವಿದೆ. ಅದರ ಹೆಸರು ‘ಹಕ್ಕಿ ಮೈಯ ಬದುಕು’, (‘ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ’ ಕೃತಿಯಲ್ಲಿದೆ). ಹಾರಲೆಂದೇ ಹುಟ್ಟಿದ ಹಕ್ಕಿಮೈಯ ಬದುಕದು ಎಂದಿದ್ದಾರೆ ಬೇಂದ್ರೆ, ಗರಿಯ ಬಗ್ಗೆ. ಗರಿ ಎಂದೂ ನೆಲಕ್ಕೆ ಬಿದ್ದರೂ ತನ್ನ ಹಾರುವ ಗುಣ ಕಳೆದುಕೊಳ್ಳುವುದಿಲ್ಲವಂತೆ. ಬಿದ್ದ ಪುಚ್ಚಗಳಲ್ಲೂ ಅವರು ಹಾರಿ ಹೋಗುವ ಹಕ್ಕಿಯ ಹುಡುಕುವವರು. ಪುಣೇಕರ ಅವರ ವಿಶ್ಲೇಷಣೆಯನ್ನು ಉಲ್ಲೇಖಿಸುವ ಎಸ್ ದಿವಾಕರ್ ಅವರು, ಭಾವಸಾಮ್ರಾಜ್ಯದಲ್ಲಿ ಪ್ರವಹಿಸುತ್ತಲೇ ಇರುವ ಹಕ್ಕಿಗಾಳಿಯ ಬಗ್ಗೆ ವಿಶೇಷ ಗಮನ ಸೆಳೆಯುತ್ತಾರೆ. ಒಂದು ಗರಿ ಎಂದರೆ ಹಾರಲೆಂದೇ ಹುಟ್ಟಿದ ಹಕ್ಕಿಮೈಯ ಬದುಕು ಹೇಗೋ, ಕವಿಯ ಭಾವಸಾಮ್ರಾಜ್ಯದಲ್ಲಿ ಸದಾ ಪ್ರವಹಿಸುತ್ತಿರುವ ಹಕ್ಕಿಗಾಳಿಯ ಪ್ರತೀಕ ಕೂಡ ಹೌದು. ಹಾಗಾಗಿ ಗರಿಗಳೆಲ್ಲ ಕವಿತೆಗಳಾದವು! 

ಎಸ್ ದಿವಾಕರ್ ಅವರದೇ ಇನ್ನೊಂದು ಪುಸ್ತಕ ‘ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ’ ಸಂಕಲನದ ಒಂದು ಅನುವಾದಿತ ಕತೆ, ‘ಬೀಳುತ್ತಿದ್ದಾಳೆ ಹುಡುಗಿ ಮೇಲಿನಿಂದ ಕೆಳಕ್ಕೆ’ ಕೂಡ ನನಗೆ ಗುರುಗಣೇಶರ ಈ ಕವಿತೆ ಓದುವಾಗ ನೆನಪಾಗುತ್ತದೆ. ‘ಕೆಳಗೆ ಬೀಳುವ ಎಲೆ’ ಎಂಬ ಪದಪ್ರಯೋಗದ ವಿಶಿಷ್ಟ ಧ್ವನಿಯನ್ನು ನಾನು ಗ್ರಹಿಸಿದ್ದು ದೀನೋ ಬುತ್ಸಾತಿಯ ಈ ಕತೆಯ ಹಿನ್ನೆಲೆಯಲ್ಲಿಯೇ. ಈ ಕತೆಯಲ್ಲಿ ಹತ್ತೊಂಬತ್ತು ವರ್ಷದ ಹುಡುಗಿ ಗಗನಚುಂಬಿ ಕಟ್ಟಡದ ತುದಿಯಿಂದ ಅಕಸ್ಮಾತ್ತಾಗಿ ಬಿದ್ದು, ನೂರೈವತ್ತು-ಇನ್ನೂರು ಮಹಡಿಗಳ ಬೇರೆ ಬೇರೆ ಅಂತಸ್ತಿನ ಫ್ಲ್ಯಾಟುಗಳ ಬದುಕನ್ನು ಕಾಣುತ್ತಲೇ ನೆಲ ತಲುಪುವಷ್ಟರಲ್ಲಿ ಇಡೀ ಬದುಕಿನ ನಾನಾ ಸ್ತರಗಳನ್ನು ಅನುಭವಿಸಿ ಮಾಗುತ್ತಾಳೆ. ಹಾಗೆ ಕೊನೆಗೂ ಅವಳು ಸತ್ತಾಗ ಹಣ್ಣುಹಣ್ಣು ಮುದುಕಿಯಾಗಿರುತ್ತಾಳೆ. ಅದೇ ರೀತಿ ಗುರುಗಣೇಶರ ಈ ಕೆಳಗೆ ಬೀಳುವ ಎಲೆ ಸದ್ಯದ ಕ್ಷಣದಲ್ಲಿ ಬೀಳುತ್ತಿದೆಯೇ, ಬಿದ್ದಿದೆಯೆ, ಇನ್ಯಾವತ್ತೋ ಬೀಳಲಿದೆ ಎನ್ನುತ್ತಿದ್ದಾರೆಯೆ ಎಂಬುದು ಅನೂಹ್ಯವಾಗಿಯೇ ಉಳಿಯುತ್ತದೆ. ಹಾಗಾಗಿಯೇ ಅದು ಹೆಚ್ಚಿನ ಗುರುತ್ವವನ್ನು ಮೈಗೂಡಿಸಿಕೊಂಡು ಸದ್ಯಕ್ಕೆ ಸಾಕ್ಷಿಯಾಗುವ ಗುಣ ಪಡೆದುಕೊಂಡು ಬಿಡುತ್ತದೆ. 

ಈಗ ಈ ನೆಲದ ಮಾತಿಗೆ ಬನ್ನಿ. ನೆಲದ ಬಳಿಗೆ ಹಾರಿ ಬಂದ ಹಕ್ಕಿ, ರೆಕ್ಕೆ ಬಿಚ್ಚಿ ಹಣ್ಣು ನುಂಗಿ ತೇಗಿದ್ದು ಕೇಳಿ. ಆಮೇಲೆ ಅದು ನೆಲದ ಋಣ ಇಟ್ಟುಕೊಳ್ಳುವುದಿಲ್ಲ. ಪಿಶ್ಶಿ ಮತ್ತೆ ನೆಲಕ್ಕೇ, ಪಿಚ್ಚಕ್ಕ. ಕವಿಯ ಅಂಗಿ ಮೇಲೆ ಬಿದ್ದರೆ ಅದು ಕಲೆಯಾಗಿ ಒಳ್ಳೆಯದಾಗುತ್ತದೆ. ನೆಲಕ್ಕೆ ಬಿದ್ದರೆ ಗೊಬ್ಬರವಾಗುತ್ತದೆ. ಆಕಾಶದ ಕಡೆಗೆ ದೃಷ್ಟಿ ಇಟ್ಟಿರುವ ಮರದ ಕತೆಗೂ ಒಂದು ಸಾರ್ಥಕತೆಯನ್ನು ಕವಿ ಕೊಡುವುದು ಇಲ್ಲಿಯೇ. ಹಕ್ಕಿ ಹಾಕಿದ ಪಿಶ್ಶಿ ಕೂಡ ನೆಲ ಸೇರಿದರೆ ಹೊಸದೊಂದು ಗಿಡವಾಗಿ ಮೊಳಕೆಯೊಡೆಯದೇ, ಅದು ಚಿಗುರಿ ನಳನಳಿಸಿ ನಗಲಾರದೇ? ಹೌದು, ನೆರೆಯವನ ಅಂಗಳದಲ್ಲಿ ಸಂಭವಿಸಿತು ನೋಡಿ! ಗಿಡ ನಕ್ಕಿತು! ಆದರೆ ಅದರ ವರದಿ ನಿಮ್ಮ ಮನಸ್ಸು, ಹೃದಯದಲ್ಲಾಗಬೇಕಿದೆ. ಅಷ್ಟು ಮಾತ್ರ ಬಾಕಿ. ಅದಕ್ಕಾಗಿ ಪತ್ರಿಕೆಯ ಸುದ್ದಿ ಕಾಯಬೇಡಿ, ಮರದ ಕೊಂಬೆಯ ಗರಿಯಂತೆ, ಕಾಯಿ, ಹಣ್ಣಿನಂತೆ ಇದಕ್ಕೆ ಸಾಕ್ಷಿಯಾಗಿ. ಆಗ ನಿಮ್ಮನ್ನು ನೋಡಿ ನೆರೆಯವನ ಅಂಗಳದ ಗಿಡ ನಗುವುದು ಖಾತ್ರಿ! 

ಇನ್ನೊಂದು ಅದ್ಭುತ ಕವಿತೆ ನೋಡಿ: 

ಸಂಜೆಹೊತ್ತಿನ ಹೊಳೆ 
ನಿಧಾನ ನಿಧಾನವಾಗಿ ಹರಿಯುತ್ತದೆ 

ಸ್ವಲ್ಪ ತಡವಾದರೆ 
ಮಕ್ಕಳು ಕಿರುಚಿ ಅತ್ತು ಕಾದುಕಾದು 
ನಿದ್ದೆ ಮಾಡಿ, ಕೊನೆಗೆ 
ಅವಳೂ ಬೈದು. 

ಅಷ್ಟರಲ್ಲಿ ಬಂದರೆ ಬಾಗಿಲು ತೆರೆಯುವವರಿಲ್ಲ 
ದೇ ಸಿಟ್ಟು ಬಂದು 

ಇರುಳ ಒಳಗೆ ಹೇಗೋ 
ಮಿದುವಾಗಿ ನುಸುಳಿ 
ಉಂಡು 
ಹಾಸಿಗೆ ಹಾಸಿ ಗಿಡ ನೆಟ್ಟೆ. 
ನೀರು ಜಳಜಳ ಹರಿಯಿತು. 

ಕೊನೆಗೆ ಡಾಕ್ಟರು ಅಂದರು 
ನಿಮ್ಮ ಹೊಳೆ ಬಸುರಿ 

 - ವಿವರಿಸುವ ಅಗತ್ಯವಿದೆಯೆ? ಕವಿ ಲೌಕಿಕವನ್ನೂ, ಪ್ರಕೃತಿ ದೇವಿಯ ನುಡಿಯನ್ನೂ ಒಟ್ಟಿಗಿರಿಸುವ ಬಗೆಯ ಕೌತುಕ ಗಮನಿಸಿ. ಈ ಕವಿ ಎಷ್ಟು ಭಾವವಶನಾಗಿ ಪ್ರಕೃತಿಯನ್ನು, ಮಳೆಯನ್ನು, ಆಕಾಶವನ್ನು ಗಮನಿಸುತ್ತಾನೆಯೋ, ಅಷ್ಟೇ ಅವನ ಕಾಲುಗಳು ಮಣ್ಣಿನ ಒದ್ದೆ ನೆಲದ ಮೇಲೆ ಬಲವಾಗಿ ಊರಿಕೊಂಡಿವೆ. ಈ ಕವಿ ಮಹತ್ವದ ಕಾಣ್ಕೆ ಕೊಡಬಲ್ಲ ಅನಿಸುವುದು ಇದೊಂದೇ ಕಾರಣಕ್ಕೆ. ಸಿದ್ದಿ ಜನರ ನಡುವೆ ಓಡಾಡುತ್ತ, ಬಡತನ, ಆ ಬಡತನದೊಳಗಿನ ಸಮೃದ್ಧಿಯನ್ನು ಕಾಣಬಲ್ಲ ಕೇವಲ ಬಡವರಿಗಷ್ಟೇ ಸಾಧ್ಯವಿರುವ ಸಿದ್ಧಿ, ಆ ಸಮೃದ್ಧಿಯ ಸಂತೃಪ್ತ ನಗುವಿನ ಹಿಂದಿರುವ ಔದಾರ್ಯವನ್ನು ಅನುಭವಿಸಿದ ಮನುಷ್ಯ ಮಾತ್ರ ಗುರುತಿಸಬಲ್ಲ, ಭಾಷೆಗೆ ಮೀರಿದ ಒಂದು ಅನುಭೂತಿಯನ್ನಾಗಿ ದಕ್ಕಿಸಿಕೊಳ್ಳಬಲ್ಲ ಮತ್ತು ಇಂಥ ಕವಿತೆಗಳನ್ನು ಕೊಡಬಲ್ಲ, - ಸಬ್ಜೆಕ್ಟ್ ಹೌವೆವರ್ ಟು - ಭಾಷೆಯ ಇತಿಮಿತಿಗಳ ಮತ್ತು ಸುತ್ತಲಿನ ಮಂದಿಯ ಬಗ್ಗೆ ಎಚ್ಚರವಿದ್ದರೆ. 

ಇಲ್ಲಿ ಹೊಳೆ ಎಂಬವಳು ಅವನ ಹೆಂಡತಿ ಕೂಡ, ಊರಿನ ನದಿ ಕೂಡ. ಸಂಜೆ ಹೊತ್ತಿನ ಹೊಳೆ ನಿಧನಿಧಾನವಾಗಿ ಹರಿಯುತ್ತದೆ ಎನ್ನುವಲ್ಲಿ ಕೂಡಾ ಅದು ಅವನ ಹೆಂಡತಿಯ ಮನಸ್ಸಿನ ಬಗ್ಗೆ ಹೇಳುತ್ತಿದ್ದಾನೋ, ಅವನ ಹಾದಿಯಲ್ಲಿ ಸಿಕ್ಕ ನದಿಯ ಬಗ್ಗೆ ಹೇಳುತ್ತಿದ್ದಾನೋ ಎಂಬುದು ಮನಸ್ಸಿನಲ್ಲಿ ಹಾಗೇ ಸರಿದು ಹೋಗುವ ಒಂದು ಯೋಚನೆ. ಉತ್ತರ ಬೇಡ ಅದಕ್ಕೆ. ಮುಂದಿನ ನಾಲ್ಕು ಸಾಲಂತೂ ಮನೆಯಲ್ಲಿ ಕಾಯುತ್ತಿರುವ ಮಕ್ಕಳು ಮತ್ತು ಹೆಂಡತಿಯ ಬಗ್ಗೆಯೇ. ಆ ಸಾಲು ಕೊನೆಗೊಳ್ಳುವ ಬಗೆ ಗಮನಿಸಿ. ಬೈದು ಎನ್ನುತ್ತಲೇ ಅದು ಮುಗಿಯುತ್ತದೆ. ಏಕೆಂದರೆ, ಅಲ್ಲಿ ಅದು ಸುರುವಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿ ಕವಿ ಮೌನವಾಗುತ್ತಾನೆ. ಹೀಗೆ ಎಲ್ಲಿ, ಯಾವಾಗ ಮೌನವಾಗಬೇಕು ಎನ್ನುವುದನ್ನು ಬಲ್ಲ ಕವಿ ಇವರು.  

ಆದರೆ ಅವನೇನಾದರೂ ಬೇಗ ಬಂದರೆ? ಬಾಗಿಲು ತೆರೆಯುವವರಿಲ್ಲ. ಅವಳಿನ್ನೂ ಮನೆಗೆ ವಾಪಾಸಾಗಿಲ್ಲ ಬಹುಶಃ. ಬಾಗಿಲು ತೆರೆಯುವವರಿಲ್ಲದೇ ಸಿಟ್ಟು ಬಂದು. - ವಾಕ್ಯ ನಿಲ್ಲುವ ಬಗೆ ನೋಡಿ! 

ಕವಿತೆ ಎಲ್ಲಿದೆ ಎನ್ನುವುದನ್ನು ನೋಡಿ, ಅದು ಇಲ್ಲಿದೆ! 

ಇರುಳ ಒಳಗೆ ಹೇಗೋ 
ಮಿದುವಾಗಿ ನುಸುಳಿ 
ಉಂಡು 
ಹಾಸಿಗೆ ಹಾಸಿ ಗಿಡ ನೆಟ್ಟೆ. 
ನೀರು ಜಳಜಳ ಹರಿಯಿತು. 

- ಎಂಥ ಪೋಲಿ ಸಾಲುಗಳು ಎನಿಸುವಾಗಲೇ ಅದನ್ನಾಡುವ ನವಿರು ಗಮನಿಸಿ. ಇರುಳ ಒಳಗೆ ಹೇಗೋ ಮಿದುವಾಗಿ ನುಸುಳುತ್ತಾನವ. ಅದೇಕೆ ಮಿದುವಾಗಿ ನುಸುಳುತ್ತಾನೆ? ಶಬ್ದದ ಬಳಕೆ ಗಮನಿಸಿ. ನುಸುಳಿದ್ದು ಚಾದರದ ಒಳಗಲ್ಲ ಮತ್ತೆ, ಎಚ್ಚರ! ಹಾಗೆ ಇರುಳ ಒಳಗೆ ಮಿದುವಾಗಿ ನುಸುಳಿ ಉಣ್ಣುತ್ತಾನೆ! ಅಷ್ಟೇ ಅಲ್ಲ, ಹಾಸಿಗೆ ಹಾಸಿ ಗಿಡ ನೆಟ್ಟ ಚೋರ. ಗಿಡ ನೆಟ್ಟ ಮೇಲೆ ನೀರು ಹನಿಸಬೇಡವೆ? ನೀರು ಜಳಜಳ ಹರಿಯಿತು. ಸಂಜೆ ಹೊತ್ತಿನ ಹೊಳೆ ನಿಧಾನ ನಿಧಾನವಾಗಿ ಹರಿಯುತ್ತದೆ. 

ಇಡೀ ಕವಿತೆಯ ಗುಟ್ಟು ಬಯಲಾಗುವುದು ಡಾಕ್ಟರು ಹೇಳಿದಾಗಲೇ, ನಿಮ್ಮ ಹೊಳೆ ಬಸುರಿ! 

ಬಿಟ್ಟರೆ ಬಹುಶಃ ನಾನು ಇವರ ಒಂದೊಂದು ಕವಿತೆಯನ್ನೂ ಇಲ್ಲಿಯೇ ಮತ್ತೆ ಮತ್ತೆ ಬರೆದು ಮುಗಿಸುತ್ತೇನೇನೋ. ನೀವು ಸಂಕಲನವನ್ನು ಓದಬೇಕಾಗಿಯೇ ಬರುವುದಿಲ್ಲ ಆಮೇಲೆ. ಅದೆಲ್ಲ ಬೇಡ. ನನಗೆ ಇವರ ಒಂದೊಂದು ಕವಿತೆಯೂ ಇಷ್ಟ, ತುಂಬ, ತುಂಬ ಇಷ್ಟ. ಇಂಥ ಒಬ್ಬ ಕವಿಯನ್ನು ನಾನು ಕಾಯುತ್ತಿದ್ದೆನೇನೋ ಎಂಬಷ್ಟು. ಭಾಷೆಯನ್ನು ಅದರ ರೂಢಿಗತ ನೆಲೆಯಿಂದ ಬಿಡಿಸಿ ಬಳಸಿದ ಕವಿ. ಭಾವವನ್ನು ಭಾಷೆಯ ಹಳಿಯ ಗುಂಟ ಓಡಿಸದೆ, ತಾನು ನಡೆದದ್ದೇ ಹಾದಿ, ಎಂದ ಕವಿ. ಅನುಭವ ತಾಜಾತನವನ್ನು ಕಾಯ್ದುಗೊಂಡ ಗಂಡೆದೆ. ಅದಕ್ಕೇ ಇಷ್ಟ ನನಗೆ. 

ಈ ಸಂಕಲನದ ಎಲ್ಲ ಕವಿತೆಗಳೂ ಚೆನ್ನಾಗಿವೆ. ಇಡೀ ಸಂಕಲನ ಜೀವಂತಿಕೆಯಿಂದಲೂ, ಹೊಸತನದಿಂದಲೂ ಮತ್ತು ಅದರ ಮುಗ್ಧತೆಯಿಂದಲೂ ನಳನಳಿಸುತ್ತಿವೆ. ಈ ಮುಗ್ಧತೆ ಎಂದರೆ ಮನುಷ್ಯನ ಮುಗ್ಧತೆಯಲ್ಲ, ಪ್ರಕೃತಿಯ ಮುಗ್ಧತೆ. ಹಾಗಾಗಿ, ಈ ಕವಿತೆಗಳು ಮಹತ್ವಾಕಾಂಕ್ಷೆಯ ರಚನೆಗಳೇನಲ್ಲ. ತನಗೆ ಖುಶಿಕೊಟ್ಟ ಪ್ರಕೃತಿಯ ಮಡಿಲಲ್ಲಿ ಸುಮ್ಮನೇ ಒಂದು ಹಕ್ಕಿ ಹಾಡಿದಂತೆ ಇವೆ ಇವು. ಅಷ್ಟು ಮುಗ್ಧ ಮತ್ತು ಅಷ್ಟು ಮಹತ್ವಾಕಾಂಕ್ಷೆಯಿಂದ ಮುಕ್ತ. ಹಾಗಾಗಿಯೇ ಸುಂದರ. 

ಇಡೀ ಸಂಕಲನದಲ್ಲಿ ನನಗೆ ಅತ್ಯಂತ ಇಷ್ಟವಾದ ಕವಿತೆ "ಅದು ಮನೆಯಂಥದೇ ಒಂದು ಜಾಗ". ಅದನ್ನು ವಿವರಿಸುವ ಅಗತ್ಯವೇ ಇಲ್ಲ. ಇಲ್ಲಿನ ಎಲ್ಲ ಕವಿತೆಗಳಂತೆಯೇ ಅದು ನೇರವಾಗಿ ಹೃದಯದ ಭಾಷೆಯಲ್ಲಿದೆ, ಬೇರಾವ ಭಾಷೆಯ ಅನುವಾದವೂ ಅಗತ್ಯವಿಲ್ಲದೆ ನೇರವಾಗಿ ನಿಮ್ಮ ಹೃದಯದೊಂದಿಗೆ ಮಾತನಾಡಬಲ್ಲ ಕವಿತೆಯದು. 

ಮೀನು ಈಜುವ ಮುನ್ನ 
ನೀರು 
ಎಲೆ ಚಿಗುರುವ ಮುನ್ನ 
ಬೇರು 
ಭಕ್ತ ಕೈಮುಗಿವ ಮುನ್ನ 
ದೇವರು 
ನಾನು ಬರೆಯುವ ಮುನ್ನ 
ಕವಿತೆ 

ಇರುತ್ತದೆ 
ಇರಬೇಕು 

 - ಎಂದು ಅರಿತಿರುವ ಈ ಕವಿಗೆ 

ಆ ಮುಸ್ಸಂಜೆ 
ದೇವರಿಗೆ ಶಂಭೋ ಮಾಡಲು 
ಹಟಮಾಡಿದ 
ಎಳೆಗನ್ನೆಯ ಕೂಸಿಗೆ 
ದೇವರು ಶಾಪವನ್ನೇನೂ ಕೊಡಲಿಲ್ಲ 

ಪಾಪ 
ಅಮಾಯಕ ದೇವರು 

ಕಾಣಿಸಿದ್ದಾನೆ. ಹಾಗಾಗಿ ಈ ಕವಿ ಶಂಭೋ ಮಾಡಲು ಹಟಮಾಡದೆ, ತಾನು ಬರೆಯುವ ಮುನ್ನ ಇದ್ದ ಕವಿತೆಗಳನ್ನು ಅವು ಹೇಗಿದ್ದವೋ ಹಾಗೆ ನಮಗೆ ಕೇಳಿಸಲಿ, ಕೇಳಿಸುತ್ತಲೇ ಇರಲಿ. ಇವರಿಂದ ಮತ್ತಷ್ಟು, ಮೊಗೆದಷ್ಟೂ ಇಂಥ ರಚನೆಗಳು ಬರಲಿ, ಅವು ಪ್ರಕೃತಿ, ಪುರುಷ, ಬದುಕು, ಬವಣೆ, ಸಮಾಜ, ದೇಶ ಕಾಲ ಎಲ್ಲವನ್ನೂ ತನ್ನ ತೆಕ್ಕೆಗೆ ತಗೊಂಡು, ತಗೊಂಡೂ ಈ ಗರಿಕೆ ಹುಲ್ಲ ಸಸಿತನ ಕಳೆದುಕೊಳ್ಳದೇ ಮರವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.

No comments: