Sunday, January 31, 2021

ಅಭಿವ್ಯಕ್ತಿಯ ಹೊಸ ಸಾಧ್ಯತೆಗಳು

ಡಾ.ಶ್ರುತಿ ಬಿ ಆರ್ ಅವರ ಕವನ ಸಂಕಲನ ‘ಜೀರೋ ಬ್ಯಾಲೆನ್ಸ್’ ಮುವ್ವತ್ತೇಳು ವಿಭಿನ್ನ ಕವಿತೆಗಳ ಸಂಗ್ರಹ. ಇವುಗಳಲ್ಲಿ ಪ್ರಕೃತಿ, ಪ್ರೇಮ, ಭಾವುಕತೆ, ಸಾಮಾಜಿಕ ಮತ್ತು ಸಮಕಾಲೀನ ವಸ್ತು ವೈವಿಧ್ಯ ಇದ್ದು ಇವರ ಆಸಕ್ತಿಯ ಹರಹು ಮೆಚ್ಚುಗೆ ಹುಟ್ಟಿಸುವಂತೆಯೇ, ಈ ಕವಿತೆಗಳ ಓದು ಕೂಡ ಏಕತಾನತೆಯಿಂದ ಮುಕ್ತವಾಗಿ, ಪ್ರತಿಯೊಂದು ಕವಿತೆಯೂ ಹೊಸ ಬಗೆಯ ಅನುಭವಕ್ಕೆ ನಮ್ಮನ್ನು ತೆರೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಹಾಗಾಗಿ ಈ ಸಂಕಲನ ಚೊಚ್ಚಲ ಕೃತಿಯಾಗಿದ್ದರೂ ಸಾಕಷ್ಟು ಸಮೃದ್ಧವಾಗಿದೆ. 

ನನಗೆ ತುಂಬ ಇಷ್ಟವಾದ ಕವಿತೆ ‘ಬರೀ ಆಟ’ ಎನ್ನುವ ಕವಿತೆ.

ಕುಂಟೆಬಿಲ್ಲೆಯಾಟದಲ್ಲಿ 
ಮೈಮರೆತವರಿಗೆ, ನಿಯಮ 
ಮುರಿದು ಗೆರೆ ತುಳಿದವರು 
ಯಾರೆಂದು ತಿಳಿಯಲೇ ಇಲ್ಲ! 
ಕುಂಟಿ ಕುಂಟಿ ದಣಿದರೂ 
ಯಾರೂ ಸೋಲೊಪ್ಪಲೇ ಇಲ್ಲ... 

ಗೊಂಬೆಯಾಟವಾಡುತ್ತಾ 
ಗೊಂಬೆಗಳ ಬದಲಿಗೂ 
ತಾವೇ ಮಾತನಾಡುತ್ತಾ, ಆಡುತ್ತಾ 
ಬಳಲಿ ಬೆಂಡಾದರೂ
ಈ ಮಾತುಕತೆ ಮುಗಿಯಲೇ ಇಲ್ಲ, 
ಗೊಂಬೆ ಮದುವೆ ನಡೆಯಲಿಲ್ಲ... 

ಕಣ್ಣಾಮುಚ್ಚೆ ಕಾಡೇ ಗೂಡೇ... 
ಬಿಟ್ಟೇ-ಬಿಟ್ಟೇ ಹೇಳಿ ಕಣ್ತೆರೆವಾಗ 
ಇದ್ದ ಗದ್ದಲವಾವುದೂ, 
ಕಣ್ಣ ಬಿಟ್ಟಮೇಲೆ ಇಲ್ಲವೇ ಇಲ್ಲ! 
ಅಡಗಿದವರೇ ತಾವಾಗಿ 
ಹೊರಬರಲಿ ಹಿಡಿದರಾಯಿತೆಂದು, 
ಸೋಮಾರಿ ಆಟಗಾರನು 
ಕಾಯುತ್ತಾ ನಿದ್ದೆ ಹೋಗಿದ್ದಾನೆ! 
ಬಚ್ಚಿಟ್ಟುಕೊಂಡವರು ಕಾಯುತ್ತಾ, 
ಇವನನ್ನೇ ಶಪಿಸುತ್ತಿದ್ದಾರೇನೋ? 

ಆಡಿ ಆಡಿ ದಣಿದವರೆಲ್ಲ 
ಮಲಗುವ ಮುನ್ನ 
ಕಥೆ ಕೇಳಲು ಅಜ್ಜಿಯ 
ಬಳಿ ಸೇರಿದ್ದಾರೆ... 
ತಮ್ಮದೇ ಕಥೆ ಕೇಳುತ್ತಾ 
ಕುಳಿತವರಿಗೆ, 
ನಿದ್ದೆ ಆವರಿಸಿದ ಅರಿವೇ ಇಲ್ಲ, 
ಕನಸಲ್ಲೂ ಕಥೆ ಕೇಳುತ್ತಲೇ ಇದ್ದಾರೆ, 
ಹೂಂಗುಟ್ಟುತ್ತಲೇ ಇದ್ದಾರೆ! 
ಮುದುಕಿ ಹೇಳುತ್ತಲೇ ಇದ್ದಾಳೆ... 

 -ನಿಜಕ್ಕೂ ಒಂದು ಅದ್ಭುತವಾದ ಅನುಭವಕ್ಕೆ ನಮ್ಮನ್ನು ತೆರೆಯುವ ಕವಿತೆಯಿದು. ಇಲ್ಲಿನ ಎಲ್ಲಾ ಕ್ರಿಯೆಗಳಲ್ಲೂ ತೊಡಗಿಕೊಂಡಿರುವವರು ಮಕ್ಕಳು ಎಂದು ಮೇಲ್ನೋಟಕ್ಕೆ ನಮಗೆ ಅನಿಸುತ್ತದೆ ಅಲ್ಲವೆ? ಕುಂಟೆಬಿಲ್ಲೆಯಾಟ, ಗೊಂಬೆಗಳ ಆಟ ಮತ್ತು ಕಣ್ಣಾಮುಚ್ಚಾಲೆಯಾಟ ಎಲ್ಲವೂ ಮಕ್ಕಳಾಟಗಳೇ. ಕೊನೆಗೆ ಅಜ್ಜಿಯ ಬಳಿ ಕತೆ ಕೇಳಲು ಸೇರಿದವರಂತೂ ಮಕ್ಕಳೇ. ಆದರೆ ಇವು ಬರೀ ಮಕ್ಕಳಾಟದ ಪ್ರತಿಮೆಗಳಲ್ಲ ಅನಿಸುತ್ತದೆ. ನಿಯಮ ಮುರಿದು ಗೆರೆ ತುಳಿದವರು, ಮದುವೆ ನಡೆಯದ ಮಟ್ಟಿಗೆ ಮಾತುಕತೆ ಮುಂದುವರಿಯುವುದು, ಬಚ್ಚಿಟ್ಟುಕೊಂಡವರು ಶಪಿಸುತ್ತಿರುವುದು ಮತ್ತು ಮುದುಕಿಯ ಕತೆ ಕನಸಲ್ಲೂ ಮುಂದುವರಿಯುತ್ತಿದ್ದರೂ ತಮ್ಮದೇ ಕತೆಯನ್ನು ಕೇಳಬೇಕಾದವರು ನಿದ್ದೆಗೆ ಶರಣಾಗಿರುವುದು ನಮ್ಮನ್ನು ಯಾಕೆಂದೇ ತಿಳಿಯದ ಕಾರಣಕ್ಕೆ ಸಣ್ಣಗೆ ಬೆಚ್ಚಿಬೀಳಿಸುತ್ತದೆ. 

 ಅಲ್ಲಿ ನಿಯಮ ಮುರಿದು ಗೆರೆ ತುಳಿದವರು ಯಾರೆಂದು ಕೊನೆಗೂ ತಿಳಿಯುವುದೇ ಇಲ್ಲ ಮಾತ್ರವಲ್ಲ ಯಾರೂ ಸೋಲೊಪ್ಪಿಕೊಳ್ಳಲು ತಯಾರೂ ಇಲ್ಲ. ಮಕ್ಕಳಾಟದಲ್ಲೇನೋ ಇದು ಸ್ವಾಭಾವಿಕವೇ. ಆದರೆ ದೊಡ್ಡವರ ಆಟದಲ್ಲೂ ನಡೆಯುತ್ತಿರುವುದು ಇದೇ ಅಲ್ಲವೆ? ಗೊಂಬೆಗಳ (ವಧೂವರರ) ಬದಲಿಗೆ ತಾವೇ ಮಾತನಾಡುತ್ತಾ ಆಡುತ್ತಾ ಬಳಲಿ ಬೆಂಡಾದರೂ ಮಾತುಕತೆ ಮುಗಿಯಲೇ ಇಲ್ಲ, ಗೊಂಬೆ ಮದುವೆ ನಡೆಯಲೇ ಇಲ್ಲ. ಕಣ್ಣು ಮುಚ್ಚಿದ್ದಾಗ ಇದ್ದ ಗದ್ದಲವಾವುದೂ ಕಣ್ತೆರೆದಾಗ ಇಲ್ಲವೇ ಇಲ್ಲ ಎನ್ನುವ ಮಾತನ್ನು ಗಮನಿಸಿ! ನಿಜಕ್ಕಾದರೆ ಕಣ್ತೆರೆದಾಗ ಇದ್ದ ಗದ್ದಲವೆಲ್ಲವೂ ಕಣ್ಮುಚ್ಚಿದಾಗ ನಿಲ್ಲುತ್ತದೆ, ಇದು ಜಗತ್ತಿನ ನಿಯಮ. ಆದರೆ ಇಲ್ಲಿ ಉಲ್ಟಾ ವಿದ್ಯಮಾನವೇ ನಿಜ! ಹಾಗೆಯೇ, ಅಡಗಿಕೊಂಡವರನ್ನು ಹುಡುಕಿ ತೆಗೆಯಬೇಕಾದವನಿಗೆ ಸೋಮಾರಿತನ, ನಿದ್ದೆ. ವ್ಯವಸ್ಥೆಯ ವಿಡಂಬನೆಯೇ ಇದು? ಇನ್ನು ಅಡಗಿಕೊಂಡಿರುವವರಿಗೆ ಹೊರಬರುವ ಧೈರ್ಯವಿಲ್ಲ, ಅವರು ಹಕ್ಕಿಗಳನ್ನು ಹಾರಿ ಬಿಟ್ಟ ಪಂಜರದವನ ಭಯದಲ್ಲಿ ಶಪಿಸುತ್ತಾ ಅಡಗಿಕೊಂಡೇ ಇದ್ದಾರೆ! ಒಂಥರಾ ಕ್ವಾರಂಟೈನ್ ನೆನಪುಗಳನ್ನು ತರುತ್ತದೆಯಲ್ಲವೆ ಇದು! 

ಕಥೆ ಕೇಳುವ ಪ್ರಸಂಗವಂತೂ ತುಂಬ ಅದ್ಭುತವಾಗಿದೆ. ತಮಾಶೆಯೆಂದರೆ ಇಲ್ಲಿ ಕತೆ ಹೇಳುತ್ತಿರುವ ಮುದುಕಿ ಇನ್ನೂ ಎಚ್ಚರವಾಗಿಯೇ ಇದ್ದಾಳೆ, ಅವಳು ಕತೆ ಹೇಳುತ್ತಲೇ ಇದ್ದಾಳೆ. ಜಗತ್ತಿನ ಕತೆ ನಿರಂತರವಾಗಿ ಸಾಗುತ್ತಲೇ ಇರುತ್ತದೆ, ಅದಕ್ಕೆ ಮುಕ್ತಾಯವೆಂಬುದೇ ಇಲ್ಲ. ಆದರೆ ಕತೆ ಕೇಳುವವರೆಲ್ಲ ಆಗಲೇ ನಿದ್ರಾಲೋಕಕ್ಕೆ ಜಾರಿದ್ದಾರೆ. ಮತ್ತಿದು ಅವರದೇ ಕತೆ! ತಮ್ಮದೇ ಕತೆಯನ್ನು ಕೇಳುತ್ತ ನಿದ್ದೆ ಹೋಗಿದ್ದಾರವರು. ಆದರೂ ಆ ನಿದ್ದೆಯಲ್ಲೂ ಅವರು ಕತೆ ಕೇಳಿಸಿಕೊಳ್ಳುತ್ತಾ, ಹೂಂಗುಡುತ್ತಾ ಇದ್ದಾರೆ! ಆತ್ಮರತಿ ಹೇಗಿರುತ್ತದೆಂದರೆ ನಮ್ಮನಮ್ಮದೇ ಕತೆಗೆ ಬಹುಶಃ ನಿದ್ದೆಯಲ್ಲೂ ನಾವು ಸ್ಪಂದಿಸುತ್ತೇವೆ, ಅಲ್ಲವೆ? ಅವರಿಗೆ ನಿದ್ದೆ ಆವರಿಸಿದ ಅರಿವೇ ಇಲ್ಲ ಎನ್ನುವಾಗ ಯಾಕೋ ಕಣ್ಣಾಮುಚ್ಚಾಲೆಯ ಆಟದಲ್ಲಿ ಹೊರಬರಲು ಹೆದರಿ ಅಡಗಿ ಕೂತವರ ನೆನಪಾಗುತ್ತದೆ! ನಿದ್ದೆ ಎಂಬುದು ಸಾವಿನ ತರ ಕೂಡ. 

ಒಂದು ಆಧ್ಯಾತ್ಮಿಕವಾದ, ಅತಿವಾಸ್ತವದ ಪದರವಿದೆ ಈ ಕವಿತೆಗೆ. ಅದನ್ನು ಇದೇ ಎಂದು ವಿವರಿಸುವುದು ಕಷ್ಟ! ವಿವರಿಸಲು ಹೋದಷ್ಟೂ ಅದು ನಿಮ್ಮ ಕೈಯಿಂದ ನುಣುಚಿಕೊಂಡೇ ಉಳಿಯುತ್ತದೆ. ಇದಲ್ಲವೇ ಒಂದು ಅತ್ಯುತ್ತಮ ಕವಿತೆಯ ನಿಜವಾದ ಲಕ್ಷಣ? 

‘ಅಂತರ’ ಎಂಬ ಇನ್ನೊಂದು ಕವಿತೆಯೂ ತುಂಬ ಚೆನ್ನಾಗಿದೆ. 

ನನ್ನೊಳಗೆ ಮಾತುಗಳು ಹುಟ್ಟಲಾಗದ ಹೊತ್ತು 
ತಪ್ತ ಮೌನ, ಆಳದ ಬಿಕ್ಕು, ಬಿಸಿಯುಸಿರು 
ನಿನ್ನ ತಾಗಲಾರದೇ ನನ್ನೊಳಗೇ ಉಳಿದು 
ನಾಲ್ಕು ಗೋಡೆಗಳ ನಡುವೆ, 
ಅಕ್ಕಪಕ್ಕ ಇದ್ದೂ ಅಪರಿಚಿತರಾದವು... 

ನಾಲ್ಕು ಗೋಡೆಗಳೂ ಅಕ್ಕಪಕ್ಕವೇ ಇರುತ್ತವೆ, ಅಲ್ಲವೆ! ಅಕ್ಕಪಕ್ಕ ಇದ್ದೂ ಅವುಗಳ ದಿಕ್ಕು ಬೇರೆ! ಬಹುಶಃ ಬಹುಮಟ್ಟಿಗೆ ಅವು ಅಕ್ಕಪಕ್ಕ ಇದ್ದೂ ಪರಸ್ಪರ ಅಪರಿಚಿತವೇ ಏನೋ! ಎಲ್ಲೋ ಮೊಳೆ ಹೊಡೆದು ಎಳೆದ ಬಟ್ಟೆ ಒಣಗಿಸುವ ಹಗ್ಗವೋ, ಗೋಡೆಯೊಳಗಿನಿಂದಲೇ ಹರಿದ ಯಾವುದೋ ಇಲೆಕ್ಟ್ರಿಕ್ ವೈರೋ ಅವುಗಳ ನಡುವೆ ಸಂಬಂಧ ಬೆಸೆಯಲು ಪ್ರಯತ್ನಿಸಿದರೂ ಬಹುಶಃ ಅವು ಒಂಥರಾ ವೈರುಧ್ಯವನ್ನೇ ನುಡಿಸುತ್ತಿರುತ್ತವೆ ಅನಿಸುತ್ತದೆ. ಅವುಗಳ ನಡುವಿನ ತಂತು ಪರಸ್ಪರ ಎಳೆದಾಡಿಕೊಂಡಂತಿರುತ್ತದೆಯೇ ಹೊರತು ಪರಸ್ಪರ ಕೊಟ್ಟು - ಕಳೆದು - ಕೊಂಡಂತೆ ಇರುವುದಿಲ್ಲ. ಇಲ್ಲಿಯೂ ಒಂದು ಜೀವದ ತಪ್ತ ಮೌನವಾಗಲೀ, ಆಳದ ಬಿಕ್ಕಾಗಲೀ, ಬಿಸಿಯುಸಿರಾಗಲೀ ಅಕ್ಕಪಕ್ಕವಿದ್ದರೂ ಅವು ಇನ್ನೊಂದು ಜೀವವನ್ನು ತಾಗಲಾರದೇ ಉಳಿದುಬಿಡುತ್ತವೆ. ಆದರೆ ಕವಿಯ ಮೂಲ ಉದ್ದೇಶ ಗೋಡೆಗಳ ನಡುವಿನ ಸಂಬಂಧದ ಕುರಿತು ಹೇಳುವುದಲ್ಲ. ಅಲ್ಲಿ ಎರಡು ಜೀವಗಳ ನಡುವಿನ ಸಂಬಂಧವೇ ವಸ್ತು ಎನ್ನುವುದು ನಿಜ. ಆದರೆ ಅದನ್ನು ಹೇಳುವ ಬಗೆ ನಮ್ಮ ವಿಶೇಷ ಗಮನ ಸೆಳೆಯುತ್ತದೆ ಮಾತ್ರವಲ್ಲ, ಮನಸ್ಸಿನಲ್ಲಿ ಒಂದು ವಿಶಿಷ್ಟವಾದ ಮುದ್ರೆಯನ್ನೊತ್ತಿ ಅನುಭವವನ್ನು ದಾಟಿಸುತ್ತದೆ. 

ಅದ್ಭುತವಾದ ಇನ್ನೊಂದು ಕವಿತೆ ‘ರೂಪಾಂತರ’. ಅದರ ಕೊನೆಯಲ್ಲಿ ಮತ್ತೆ ಪುನಃ ಕವಿತೆಯ ನಡುವೆಲ್ಲೋ ಬಂದು ಹೋದ ಪ್ರತಿಮೆಗಳೇ ಪುನರಾವತಾರವೆತ್ತಿ ಬರುವುದು, ಕಾಫಿ ಲೋಟವೇ ಸ್ಥಾಯಿಯಾಗುವಂತೆ ನಡುವೆ ಇದೆಲ್ಲವೂ ಅಲ್ಲಿಯೇ ಇತ್ತೆಂಬಂತೆ ಮತ್ತೆ ಮರಳುವುದು ನಿಜಕ್ಕೂ ಅದ್ಭುತವಾದ ಪರಿಕಲ್ಪನೆಯ ಪರಿಪೂರ್ಣ ಬಳಕೆ. ಈ ಮಾಯಕ ಕವಿತೆಯನ್ನು ನೀವೇ ಸ್ವತಃ ಓದಿ ಅನುಭವಿಸಬೇಕು, ಅದಕ್ಕಾಗಿ ಈ ಸಂಕಲನವನ್ನೇ ತೆರೆದು ಓದಬೇಕು. 

‘ಅವಳು’ ಕವಿತೆ ಕೂಡ ನನಗಿಷ್ಟವಾದ ಇನ್ನೊಂದು ಕವಿತೆ. ಈ ಕವಿತೆಗೆ ಬಿಡಿಸಿದ ಚಿತ್ರದಷ್ಟೇ (ಶ್ರೀ ಮಹಾಂತೇಶ ದೊಡ್ಡಮನಿ ಇಲ್ಲಿನ ಚಿತ್ರ ಕಲಾವಿದ) ಮೋಹಕವೂ, ನಿಗೂಢವೂ ಮತ್ತು ಅರ್ಥಪೂರ್ಣವೂ ಆದ ಕವಿತೆಯಿದು. 

‘ಅವನ ಬಗ್ಗೆ ಒಂದಿಷ್ಟು’ ಕವಿತೆ ತನ್ನ ತಾಜಾತನದಿಂದಲೂ, ಹೊಸ ಬಗೆಯ ರೂಪಕ/ಪ್ರತಿಮೆಗಳಿಂದಲೂ ಮೆಚ್ಚುಗೆ ಹುಟ್ಟಿಸುತ್ತದೆ. 

 ‘ಋತುಸಂಕಟ’ ಕವಿತೆ, ಮುಟ್ಟಿನ ಬಗ್ಗೆ ಬರೆದ ಮತ್ತು ನನ್ನ ಗಮನಕ್ಕೆ ಬಂದ ಯಾವತ್ತೂ ಕತೆ/ಕವನಗಳಲ್ಲಿ ಅತ್ಯಂತ ಮನೋಜ್ಞವಾದ ರಚನೆ. ಬಹುಶಃ ಆ ಎಲ್ಲರಿಗೂ ಹೇಳಲಿಕ್ಕೆ ಇದ್ದಿದ್ದು ಇಷ್ಟೇ. ಇದನ್ನೇ ಅಚ್ಚುಕಟ್ಟಾಗಿ ಹೇಳಿದ್ದರೆ ಎಷ್ಟು ಸುಂದರವಾಗಿ ಮತ್ತು ಅದೇ ಕಾಲಕ್ಕೆ ಯಾತನೆಯೂ ಆಗಿ ನಮ್ಮನ್ನು ಅದು ತಲುಪುವುದು ಸಾಧ್ಯವಿತ್ತೋ ಅದು ಉಳಿದವರಲ್ಲಿ ಆಗಲಿಲ್ಲ. ‘weep, cry if you want, cry as much as you want. But rejoice' ಎನ್ನುತ್ತದೆ ಒಂದು ಪಾತ್ರ, ತನ್ನೆಲ್ಲಾ ಮಕ್ಕಳನ್ನು ಕಳೆದುಕೊಂಡು, ಕಟ್ಟಕಡೆಯ ಮಗನ ಸಾವನ್ನು ನೆನೆದು ಅಳುತ್ತಿರುವ ತಾಯಿಗೆ. ಆ ಮಾತು ಹುಟ್ಟಿಸುವ ಭಾವವನ್ನು ವಿವರಿಸುವುದು ಕಷ್ಟ. ದುಃಖದಲ್ಲಿ ಒಂದು ವಿಧವಾದ ಸುಖವಿದೆ, ನಮ್ಮನ್ನು ಲೋಕದಿಂದ, ಪಾಪದಿಂದ ಮುಕ್ತಗೊಳಿಸುವ ಸುಖವದು. ದುಃಖದಿಂದಲ್ಲದೇ ಸಿಗಲಾರದ ಸುಖವದು. ‘ಋತುಸಂಕಟ’ ಕವಿತೆ ಅಂಥ ಒಂದು ಸಂಕಟವನ್ನೂ ಸುಖವನ್ನೂ ಏಕಕಾಲಕ್ಕೆ ನುಡಿಸುತ್ತಿರುವ ಅಪ್ಪಟ ಕವಿತೆ. 

ಎಂ ಎಸ್ ಆಶಾದೇವಿಯವರು ಬರೆದ ವಿವರವಾದ ಮುನ್ನುಡಿ, ಡಾ. ಎಚ್ ಎಲ್ ಪುಷ್ಪಾ ಅವರ ಬೆನ್ನುಡಿ ಎರಡೂ ಈ ಕವಿತೆಗಳ ಮಹತ್ವವನ್ನು ಮತ್ತಷ್ಟು ಸ್ಫುಟವಾಗಿ ಕಾಣಿಸುವಂತಿವೆ. ಅಚ್ಚುಕಟ್ಟಾದ ಮುದ್ರಣ, ಚಿತ್ರಗಳು, ಬಳಸಿದ ಕಾಗದವೂ ಸೇರಿ ಪ್ರತಿಯೊಂದೂ ಗಮನ ಸೆಳೆಯುವಷ್ಟು ಆಕರ್ಷಕವಾಗಿವೆ. 

ಇನ್ನಷ್ಟು ಒಳ್ಳೆಯ ಮತ್ತು ನಿಜವಾದ ಕವಿತೆಗಳನ್ನು ಬರೆಯಿರಿ ಎಂದು ಅಭಿನಂದಿಸುತ್ತಾ ನಿಮಗೆ ಶುಭಕೋರುವೆ.

No comments: