Sunday, February 28, 2021

ನಬ್ನೀತಾ ಕಾನುನ್ಗೊ ಎಂಬ ಕವಿತೆ


ಇಷ್ಟು ಆಳವಾಗಿ ತಡಕುವಂತೆ ಭಾಷೆಯನ್ನು ಮಣಿಸಲು ಸಾಧ್ಯವೇ ಎನಿಸಿದ್ದು ನಬ್ನಿತಾ ಕಾನುನ್ಗೊ ಕವಿತೆಗಳನ್ನು ಓದುವಾಗ. 2018 ರ ಬೆಂಗಳೂರಿನ ಕವಿತಾ ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಲು ಈಕೆ ಬಂದಾಗ ಇವರ ಬಗ್ಗೆ ಮೊದಲು ಕೇಳಿದ್ದು. ನಂತರ ಇನ್ನೊಂದು ಇಂತಹುದೇ ಕವಿಗೋಷ್ಠಿಯಲ್ಲಿ ಇವರ ಖಡಕ್ಕಾದ ಮಾತುಗಳನ್ನು, ಅಹಂಕಾರದಂತೆ ಕಾಣುವ ಮಾತುಗಳ ಹಿಂದಿರುವ ಕೀಳಿರಿಮೆ ಮೆಟ್ಟಿನಿಲ್ಲುವ ಛಾತಿಯನ್ನು ಕಂಡು ಬೆರಗಾಗಿದ್ದೆ. ಆದರೆ ಆಗ ಸಾಹಿತ್ಯ ಅಕಾಡಮಿಯಿಂದಲೇ ಪ್ರಕಟವಾಗಿದ್ದ ಇವರ ಒಂದೇ ಒಂದು ಕವನ ‘A Map of Ruins’ ಸಂಕಲನದ ಪ್ರತಿ ಎಲ್ಲಿಯೂ ಸಿಗುತ್ತಿರಲಿಲ್ಲ. ಈಗ ಇವರ ಎರಡನೆಯ ಕವನ ಸಂಕಲನವೂ ಬಂದಿದೆ. 

ಈಶಾನ್ಯ ಭಾರತದ, ಮೇಘಾಲಯದ ಶಿಲ್ಲಾಂಗಿನ ಈ ಪ್ರತಿಭೆ ಬಾಲ್ಯದಿಂದಲೂ ಅನುಭವಿಸಿದ್ದು ನಿರಂತರ ಸ್ಥಾನಪಲ್ಲಟ, ವಲಸೆ. ವಾಸ್ತವವಾಗಿ ಈಕೆ ಸದ್ಯದ ಬಾಂಗ್ಲಾ ದೇಶಕ್ಕೆ ಸೇರಿದ ಸಿಲ್ಹೆಟ್ ಎಂಬಲ್ಲಿಯವರು. ಹಾಗಾಗಿ ಭಾರತದಲ್ಲಿ ಸದಾ ಕಾಲ "ಹೊರಗಿನವರು" ಅನಿಸಿಕೊಂಡೇ, ಅಲ್ಪಸಂಖ್ಯಾತರ ಕ್ಯಾಂಪು, ಅಪಾರ್ಟ್‌ಮೆಂಟುಗಳಲ್ಲಿ ಬೆಳೆದವರು.  ಹೋದಲ್ಲಿ ಬಂದಲ್ಲಿ ‘ನೀವು ಹೊರಗಿನವರು, ಇಲ್ಲಿಗೇಕೆ ವಕ್ಕರಿಸಿದಿರಿ?’ ಎಂಬ ತಾತ್ಸಾರ, ದ್ವೇಷ, ಅಸ್ತಿತ್ವವನ್ನು ಸಹಿಸದ, ಸ್ವೀಕರಿಸುವ ಮನೋಭಾವದಿಂದ ಒಪ್ಪಿಕೊಳ್ಳಲಾರದ ವರ್ತನೆ. ಇದು ಸಹಜವಾಗಿಯೇ ಇವರ ಮನೋಧರ್ಮವನ್ನು ತಿದ್ದಿದೆ. ಅದು ಇಲ್ಲಿನ ಪ್ರತಿ ಕವನದಲ್ಲೂ ಮಡುಗಟ್ಟಿ ನಿಂತಿದೆ. ಹಾಗಾಗಿಯೇ ಈ ಕವಿತೆಗಳು ನಮಗೆ ಕೊಡುವ ಅನುಭವ, ಒಂದರ್ಥದಲ್ಲಿ ನಮಗೆ ಅನ್ಯವಾದದ್ದು, ಸ್ವಾಭಾವಿಕವಲ್ಲದ್ದು ಮತ್ತು ಮನಸ್ಸಿಗಿಳಿಯಲು ಕೊಂಚ ಕಷ್ಟದ್ದು. ಅಲ್ಲದೆ ಮುಂದೆ ಬೆಳೆದ ಮೇಲೆಯೂ, ಭವಿಷ್ಯ ರೂಪಿಸಿಕೊಳ್ಳಲೇ ಬೇಕಂತಿದ್ದರೆ ಶಿಲ್ಲಾಂಗ್ ಬಿಟ್ಟು ಹೋಗಲೇ ಬೇಕು ಎನ್ನುವಂಥ ಪರಿಸ್ಥಿತಿಯೇ ಮುಂದುವರಿದು ಬದುಕಿನಲ್ಲಿ ವಲಸೆಯನ್ನೇ ಸ್ಥಾಯಿಯಾಗಿಸಿದ್ದು ಇನ್ನೊಂದು ಅಂಶ. 

ಮನುಷ್ಯನ ಈ ಒಳಗಿನವರು ಮತ್ತು ಹೊರಗಿನವರು ಎಂದು ಪ್ರತ್ಯೇಕಿಸಿ ನೋಡುವ ಚಟ ಬಹಳ ಹಳೆಯದು. ಬಹುಶಃ ಅವನಿಗೆ ಸದಾಕಾಲ ದ್ವೇಷಿಸುತ್ತಲೇ ಇರಲು ಯಾರಾದರೂ ಬೇಕೇ ಬೇಕೇನೋ ಅನಿಸುವಷ್ಟು ಹಳೆಯದು. ನಮ್ಮ ದೇಶದವರೇ ಆದ ಕಾಜಿ ನಝ್ರುಲ್ ಇಸ್ಲಾಮ್ ಕೂಡ ಬಾಂಗ್ಲಾ ದೇಶ ರೂಪುಗೊಳ್ಳುವ ಸಂದರ್ಭದಲ್ಲಿ ನಮಗೆ ವಿದೇಶಿಯಾಗಿ ಬಿಟ್ಟರು. ಬಾಂಗ್ಲಾ ದೇಶ ಇವರನ್ನು ತನ್ನ ರಾಷ್ಟ್ರಕವಿ ಎಂದು ಘೋಷಿಸಿ ಪೊರೆಯಿತು. ಬಂಗಾಳಿಯ ಇವರ ಕವಿತೆಗಳನ್ನು ನಾವು ವಿದೇಶೀ ಕವಿತೆಗಳೆಂದು ಓದಬೇಕು!

ಸದಾ ಹಿಂಸೆ, ದೌರ್ಜನ್ಯ, ಬಿಕ್ಕಟ್ಟುಗಳನ್ನೆದುರಿಸಿದ ಭೂಪ್ರದೇಶವಾಗಿ, ದುರ್ಗಾಪೂಜೆಯ ದಿನಗಳಲ್ಲೇ, ಕಣ್ಣೆದುರೇ ಜೀವಂತ ಮನುಷ್ಯನನ್ನು ಸುಟ್ಟಿದ್ದು ಮತ್ತು ಅದನ್ನು ಅಲ್ಲಲ್ಲೇ ಮುಚ್ಚಿ ಹಾಕಿ ಯಾವತ್ತಿನಂತೆ ದುರ್ಗಾಪೂಜೆಯ ಸಂಭ್ರಮದಲ್ಲಿ ಊರು ದುರಂತವನ್ನು ಮರೆತಿದ್ದು ‘ಅಕ್ಟೋಬರ್ 2013’ ಎಂಬ ಹೆಸರಿನ ಕವಿತೆಯಾಗಿ ಬಂದರೆ, ಪಿಎಚ್‌ಡಿ ಅಧ್ಯಯನದ ಕೊನೆಯ ಹಂತದಲ್ಲಿ ಶಿಲ್ಲಾಂಗ್ ಬಿಟ್ಟು ಹೊರಡಲೇ ಬೇಕಾದ ಅನಿವಾರ್ಯ ಎದುರಾದ ದಿನಗಳ ಮಾನಸಿಕ ತಾಕಲಾಟಗಳನ್ನು ಹೇಳುವ ಕವಿತೆ ‘ಶಿಲ್ಲಾಂಗ್ ಬಿಟ್ಟು ಹೊರಡುವಾಗ ಏನ ಒಯ್ಯಲಿ ನನ್ನೊಂದಿಗೆ’. ಮೇಘಾಲಯವಿನ್ನೂ ರಚನೆಯಾಗಿರದ ದಿನಗಳಲ್ಲಿ, ಅಸ್ಸಾಂ ಸರಕಾರ ಇವರಿಗಾಗಿ ಕೊಟ್ಟ ಇನ್ನೂರಕ್ಕೂ ಹೆಚ್ಚು ಮನೆಗಳಿದ್ದ ಅಪಾರ್ಟ್‌ಮೆಂಟನ್ನು, ತಾತ, ಅಪ್ಪ ಎಲ್ಲ ಹುಟ್ಟಿ, ಬದುಕಿ ಬಾಳಿದ ಮನೆಯನ್ನು, ಬಿಟ್ಟು ಹೊರಡಬೇಕಾದ ದಿನಗಳಲ್ಲಿ ಬರೆದ ಕವಿತೆಯೇ ’153'. ಇವರ ಇತ್ತೀಚಿನ, ಎರಡನೆಯ ಕವನ ಸಂಕಲನದ ಹೆಸರನ್ನೂ ಈ ಕವಿತೆಯೇ ನಿರ್ಧರಿಸಿದೆ. ಅಲ್ಲಿಯೇ ಹುಟ್ಟಿ, ಬಾಳಿ ಬದುಕಿದ ಒಂದು ಮನೆ ನಮ್ಮ ಮನಸ್ಸಿನಲ್ಲಿ ಕೇವಲ ಗೋಡೆ-ಮಾಡುಗಳ ಒಂದು ಸ್ಥಾವರವಷ್ಟೇ ಆಗಿರದೆ ಹೇಗೆ ಬದುಕಿನ ಸ್ಮೃತಿಯೇ ಆಗಿರುತ್ತದೆ ಎನ್ನುವುದನ್ನು ಅದ್ಭುತವಾಗಿ ಸೆರೆಹಿಡಿಯುವ ಕವಿತೆಯಿದು. ‘ನಾನಿನ್ನೆಲ್ಲೊ ಸತ್ತು ಎನ್ನ ದೇಹ ಸುಟ್ಟಾಗ ಇಲ್ಲಿ ಈ ಮನೆಯಂಗಳದಿ ಅರಳಿದ ಹೂವು ಸುಟ್ಟು ಬಾಡುವುದು’ ಎನ್ನುತ್ತಾರವರು. 

ಓಲ್ಗಾ ತೊಕಾರ್ಝುಕ್‌ಳ ಪುಸ್ತಕ "ಹೌಸ್ ಆಫ್ ದ ಡೇ, ಹೌಸ್ ಆಫ್ ದ ನೈಟ್’ ನ ಎಫಿಗ್ರಾಫ್ ಆಗಿ ಬಳಸಲ್ಪಟ್ಟ ಖಲೀಲ್ ಗಿಬ್ರಾನ್ ರಚನೆ ಹೀಗಿದೆ:
Your house is your larger body
It grows in the sun and sleeps in the stillness of the night;
and it is not dreamless.
Does not your house dream? And dreaming, leave the
city for grove or hilltop?

ಪ್ರತಿ ಪರಿಚಯದ ಸಂದರ್ಭದಲ್ಲೂ ಬೇಕಾಗಿಯೋ ಬೇಡವಾಗಿಯೋ ‘ನಾನು ಶಿಲ್ಲಾಂಗ್ ಕವಿಯಲ್ಲ, ನಾನು ಖಾಸಿ ಅಲ್ಲ’ ಎಂದು ಹೇಳಿಕೊಂಡೇ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಅನಿವಾರ್ಯವನ್ನು ಎದುರಿಸುತ್ತ, ಎದುರಿಸುವ ಛಾತಿ ತೋರುತ್ತ ಬಂದಿರುವ ನಬ್ನಿತಾ ಅವರ ಪ್ರತಿಯೊಂದು ಕವಿತೆಯೂ ಅಪ್ಪಟವಾದ, ಅನುಭವ ಸಾಂದ್ರವಾದ, ಭಾಷಿಕ ಎಚ್ಚರದ ಸೃಷ್ಟಿ. 
 
ಅಂದರೆ ಇವರ ಒಂದೊಂದು ಕವಿತೆಯೂ ಅದರ ಆಳದಿಂದ, ಶಾಬ್ಧಿಕವಾಗಿಯೂ, ಧ್ವನಿಶಕ್ತಿಯಿಂದಲೂ ಹುಟ್ಟಿಸುವ ಕಂಪನ ವಿಚಿತ್ರವಾದದ್ದು. ಅನುರಣನದ ಅದ್ವಿತೀಯ ಶಕ್ತಿಯಿಂದ ಈ ಕವಿತೆಗಳು ಎಷ್ಟು ಗಾಢವಾಗಿ ಆವರಿಸುತ್ತವೆಯೆಂದರೆ, ಅದರ ಆಘಾತದಿಂದ ಸುಧಾರಿಸಿಕೊಳ್ಳಲು ಕೊಂಚ ಸಮಯ ಹಿಡಿಯುತ್ತದೆ. ಒಂದೊಂದು ಕವಿತೆಯೂ ನಮ್ಮನ್ನು ಆವರಿಸಿಕೊಂಡು, ಮುಂದಿನ ಕವಿತೆಗೆ ಮನಸ್ಸು ತೆರೆಯುವ ಮುನ್ನ ಸಾಕಷ್ಟು ಕಾಲ ಈಗಷ್ಟೇ ಓದಿದ ಕವಿತೆಯೊಂದಿಗೇ ಒಂದು ಏಕಾಂತವನ್ನು ಸಾಧಿಸಿ ಸಾಕಷ್ಟು ಹೊತ್ತು ನಿಲ್ಲುವಂತೆ ಪ್ರೇರೇಪಿಸುತ್ತದೆ. ಈ ಕವಿತೆಗಳ ಅನುವಾದ ಕಷ್ಟ, ಅನುವಾದ ತೆಗೆದುಕೊಳ್ಳುವ ಸಮಯ ವಿಪರೀತ. ಹಾಗಾಗಿ ನಬ್ನಿತಾ ಅವರ ಕವಿತೆ ನಮ್ಮಿಂದ ಕೇಳುವ, ನಿರೀಕ್ಷಿಸುವ ಸಮಯ, ದೈನಂದಿನ ಜಂಜಾಟದಲ್ಲಿ ಕಷ್ಟಸಾಧ್ಯ. ಬಹುಶಃ ಇನ್ನೇನಲ್ಲದಿದ್ದರೂ ಈ ಕವಿತೆಗಳ ಭಾಷೆಯ ಮೂಲಕವೇ ಭಾಷೆಗೆ ಮೀರಿದ್ದನ್ನು ಕಟ್ಟುವ ವಿಚಿತ್ರಶಕ್ತಿಯೊಂದು ನಮ್ಮ ಗಮನದಿಂದ ತಪ್ಪಿ ಹೋಗಬಾರದು ಎನ್ನುವುದು ನನ್ನ ಆಶಯ. ಈ ಸಂಕಲನದ ಬಗ್ಗೆ ಕವಿ ಜಯಂತ್ ಮಹಾಪಾತ್ರ ಅವರು ಬರೆದಿರುವ ಎರಡು ಮಾತುಗಳು ನನ್ನ ಮಾತನ್ನು ಮತ್ತಷ್ಟು ಸ್ಪಷ್ಟವಾಗಿಸುವಂತಿವೆ. 

"ತೀರ ವಿಭಿನ್ನವಾದ ಒಂದು ಜಗತ್ತೇ ನಬ್ನಿತಾ ಕಾನೊಂಗೊ ಅವರ ಕವಿತೆಗಳ ಮೂಲಭಿತ್ತಿಯಾಗಿದೆ. ಈ ಜಗತ್ತು ನಮ್ಮ ಅಂತರಾಳವನ್ನು ಕಾಡುತ್ತಲೇ ಇರುವ ಒಂದು ನಾದಮಯವಾದ ಜಗತ್ತು. ಅದು ಮತ್ತೆ ಮತ್ತೆ ಆ ಜಗತ್ತಿಗೆ ಮರಳುವಂತೆ ನನ್ನನ್ನು ಕರೆಯುತ್ತದೆ, ಮಾಡುತ್ತಿದೆ. A Map of Ruins ಸಂಕಲನದಲ್ಲಿ  ಆಳವಾದ ಸಂವೇದನೆಯ, ಸಿಹಿಕಹಿ ಎರಡೂ ಇರುವ ಹಳಹಳಿಕೆಗಳು, ನೆನಪುಗಳು ಮಾತ್ರವಲ್ಲ, ಒಂದು ವಿಶಿಷ್ಟವಾದ ಮೌನವಿದೆ. ಈ ನೀರವ ಬೌದ್ಧಿಕತೆಯೇನಿದೆ, ಅದು ಈ ನಾಸ್ಟಾಲ್ಜಿಯಾದೊಂದಿಗೆ ಬೆರೆತು, ಕವಿ ನಾವು ಕಳೆದುಕೊಂಡಿರುವುದನ್ನು ಮತ್ತು ಸದ್ಯ ಹಾಯುತ್ತಿರುವ ವರ್ತಮಾನವನ್ನು ಕಟ್ಟಿಕೊಡಲು ಬಳಸಿಕೊಳ್ಳುತ್ತಾರೆ. ಹಾಗೆ ಬಳಸಿಕೊಳ್ಳುವಲ್ಲಿ ಅವರು ಅಸಾಧಾರಣ ನಾಟಕೀಯತೆಯನ್ನೂ ಮೆರೆಯುತ್ತಾರೆ. ಕಾಲ, ಪ್ರೀತಿ ಮತ್ತು ವಿದಾಯ ಇಲ್ಲಿನ ಸ್ಥಾಯೀ ಬಿಂದುಗಳಾಗಿವೆ. ಇದು, ಈ ಪಳೆಯುಳಿಕೆಗಳೇ, ಅತ್ಯಂತ ಸರಾಗವಾಗಿ, ಸಹಜವಾಗಿ ನಬ್ನೀತಾ ಕಟ್ಟಿಕೊಡುವ ಜಗತ್ತಿನ ನಕ್ಷೆಯೊಂದನ್ನು ನಿರ್ಮಿಸುವ ಪರಿಕರಗಳಾಗಿವೆ. ಈ ಪಾಳುಬಿದ್ದ ಪಳೆಯುಳಿಕೆಗಳು ನನ್ನನ್ನು ಅಸ್ವಸ್ಥಗೊಳಿಸಿವೆ, ಅವು ನನಗೆ ನಾನು ನಿಭಾಯಿಸಲು ಸಾಧ್ಯವಿರುವುದಕ್ಕಿಂತ ಹೆಚ್ಚಾದವು, ನನ್ನ ಶಕ್ತಿಗೆ ಮೀರುವಷ್ಟಿವೆ ಅಂತನಿಸುವಂತೆ ಮಾಡಿವೆ.  

ದೀರ್ಘಕಾಲ ನನ್ನೊಂದಿಗೆ ಉಳಿಯುವಂಥ, ಬಹಳ ಅಪರೂಪದ ಚೊಚ್ಚಲ ಸಂಕಲನವಿದು, ನನಗಿದು ತುಂಬ ಇಷ್ಟವಾಯಿತು."

ಹುಟ್ಟು
ಭೀತಿಯ ಬಲೆಯೊಳಗೆಲ್ಲೋ
ಬೀಜವೊಂದು ಮೊಳಕೆಯೊಡೆದಿದೆ. ಮತ್ತು ನಾನಾಗ ಹುಟ್ಟಿದೆ.
ನನ್ನಜ್ಜ ಅವನ ಗುಮಾಸ್ತಗಿರಿಯ ಸೂಟ್ಕೇಸಿನಂಥ ತಲೆಬುರುಡೆಯೊಳಗೆ
ನ್ಯಾಯವಾಗಿ ಗಳಿಸಿದ್ದ ನಿಧಿಯೊಂದಿಗೇ ನನ್ನ 
ಗುಟ್ಟಾಗಿ ತುಂಬಿ
ನಾರ್ತ್ ಈಸ್ಟ್ ಫ್ರಂಟೀಯರ್ ಏಜೆನ್ಸಿಗೆ ಹೊತ್ತೊಯ್ದ 
ಹಾಗೆ ನಕಾಶೆಯಲ್ಲಿ ನನ್ನನ್ನು ಒಂದೆಡೆ ಬಿತ್ತಲಾಯಿತು.
ನಾಗಾ ಮಂದಿಯ ಪುರೋಗಾಮಿ ದಿನಗಳ ಗಳಿಕೆಯಿತ್ತು;
ಅವನ ಕಳ್ಳಒಲೆಯೊಳಗಿನ ಬೂದಿಮುಚ್ಚಿದ ಕೆಂಡದಂತಿದ್ದೆ ನಾನು.

ನನ್ನಪ್ಪನ ಕಡುಕಷ್ಟದ ಜನ್ಮ ಕಾಲದಲ್ಲಿ ನಾನು ಹುಟ್ಟಿದೆ;
ದಾಳಿಕೋರರ ಕಿವಿಗೆ ಕೇಳಿಸದಂತೆ
ಅಮ್ಮನ ಬೊಬ್ಬಿಡುವ ಬಾಯಿಗೆ ಮಿಡ್‌ವೈಫ್ ಕೈಯೊತ್ತಿಟ್ಟ ಹೊತ್ತು
ಹಬಿಗಂಜ್ ಎಂಬಲ್ಲಿ ಬದುಕೆಂಬ ಗರ್ಭಕ್ಕೊದ್ದು ಬದುಕಿಗೆ ಒಗೆಯಲ್ಪಟ್ಟವಳು.

ಕಣ್ಣೆದುರೇ ತನ್ನ ಕರುಳಕುಡಿಯನ್ನು 
ಜೀವಂತ ಹಿಂಸಿಸಿ ಕೊಲ್ಲುವುದನ್ನು
ಕಣ್ಣಾರೆ ಕಂಡ ತಾಯ ತೊಡೆಗಳಿಂದ...
ಅವಳನ್ನು ಪಲಾಶವೃಕ್ಷಕ್ಕೆ ನಗ್ನನೇಲಿಸಿ
ಜೀವಂತ ಸುಡುವ ಕೆಲವೇ ಘಳಿಗೆ ಮೊದಲು
ನಾನು ಹುಟ್ಟಿದೆ;

ಮಣ್ಣಿನ ಕಣ್ಣುಗಳು ಮರಗಟ್ಟುತ್ತಿದ್ದ ಹೊತ್ತಲ್ಲಿ,
ಕಣ್ಣೀರು ಕನಸುಗಳೊಂದಿಗೆ ನಿರಂತರ ಸುರಿಯುತ್ತಿದ್ದ ಹೊತ್ತಲ್ಲಿ,
ಕುಡಿಕೆ ತುಂಬ ಬೇಡಿ ತಂದ ಅನ್ನ ಕಾದಿರುತ್ತಿದ್ದ ಹೊತ್ತಲ್ಲಿ,
ಬಿಡಿಗಾಸು ಬಿಡದೆ ಎಲ್ಲವನ್ನೂ  ತೆತ್ತು ಬದುಕೊಂದನ್ನು ಬೆಲೆಗೆ 
ಕೊಂಡುಕೊಂಡ ದಿನಗಳಲ್ಲಿ ನಾನೂ ಅಸ್ತಿತ್ವದಲ್ಲಿದ್ದೆ.

ಇನ್ನೂ ಕೆಲ ಕಾಲಾನಂತರ, ಬೆಟ್ಟದಲ್ಲಿ ಹುಟ್ಟಿದೆ ನಾನು
ಈ ಭೂಮಿ ನಮಗೆ ಅನ್ನವಿಕ್ಕುವುದೆಂಬ 
ಇದೇ ನಮ್ಮ ನೆಲೆ, ನಮ್ಮ ಆಶ್ರಯವೆಂಬ ಹುಸಿನಂಬಿಕೆಯಡಿ.
ಪ್ರತೀ ಕ್ಷಣ, ಪ್ರತೀ ದಿನ
ನೆನಪುಗಳ ಭಾರಕ್ಕೆ, ಭೂತದ ಸ್ಮೃತಿಗೆ ಧೃತಿತಪ್ಪಿ
ಹೆಜ್ಜೆಗಳು ಎಡವುತ್ತ, ಮನಸ್ಸು ಕುಗ್ಗುತ್ತ, ಮುಖಹೀನರಾಗಿ
ಅವರು ಉದುರಿ ಬಿದ್ದ ಕುಂಕುಮಭೂಮಿ ನಾನು.

ದಿವಾಳಿಗೊಂಡ ವ್ಯಾಪಾರದಲ್ಲಿ ಹುಟ್ಟಿಕೊಂಡೆ ನಾನು
ವಶೀಲಿಬಾಜಿಯೊಂದೇ ನಡೆವ ಕಣ್ಮರೆಯಕಾಡಿನಲ್ಲೆಲ್ಲೋ ಇದ್ದ ಮಾರುಕಟ್ಟೆಗೆ
ಪಲಾಯನ ಮಾಡಲೆಂದೇ ಪಾದಗಳನ್ನು ಬೆಳೆಸಿಕೊಂಡ 
ಪ್ರತಿಭೆಯ ಕುಡಿಯಲ್ಲಿಯೇ ನಾನೂ ಹುಟ್ಟಿಕೊಂಡೆ.
ಭೂಗೋಳದ ತೆಳ್ಳಗಿನ ಪದರದ ಮೇಲೆ, ಇತಿಹಾಸದ ಉದ್ದುದ್ದ ನಾಲಗೆಯ ಮೇಲೆ
ಇರುವುದೆಲ್ಲವನ್ನೂ ಅಳಿಸಿ ವಿರೂಪಗೊಳಿಸುವುದಕ್ಕೆಂದೇ ಎದ್ದ ತುರ್ತಿನಲ್ಲಿಯೇ
ನಾನೂ ಹುಟ್ಟಿಕೊಂಡೆ.

ಚಿಗುರಿಕೊಂಡ ಸಸಿಯನ್ನು ಕಿತ್ತುಕಿತ್ತು ಹೊಸನೆಲಕ್ಕೂರುವ
ಮೃತ್ಯುಶಯ್ಯೆಯಲ್ಲಿ ಆಗಾಗ ಕೊನೆಯುಸಿರಿನ ಎದೆಯುಬ್ಬಸ ಮರುಕಳಿಸುವ
ವ್ಯತ್ಯಾಸ, ವಿಶೇಷ.
ಅದು ಮಾತ್ರ ಬದಲಾವಣೆ, ಅಲ್ಲಿನ ನಿಶ್ಚಲ ದೈನಂದಿನದಲ್ಲಿ.
ವನ್ಯಮೃಗವನ್ನು ಕಾಡಿನಿಂದ ಅಭಯಧಾಮಕ್ಕೆ, ಅಲ್ಲಿಂದ ಮೃಗಾಲಯಕ್ಕೆ
ವರ್ಗಾಯಿಸಿದ ಹಾಗೆ.
ನಿಧಾನವಾಗಿ ಹುಚ್ಚು ಹಿಡಿಸಿ ಕೊಲ್ಲುವ ವಿಭಿನ್ನ ಮಾರ್ಗದಲ್ಲೂ ಇದ್ದ ಸಾಮಾನ್ಯಾಂಶ.
ಹಾವಿನ ಹುತ್ತದಲ್ಲೋ, ಮೊಲದ ಪೊಟರೆಯಲ್ಲೋ ಹೇಗಾದರೂ ಸರಿ ಉಸಿರು ಹಿಡಿದು
ಬದುಕಲೇ ಬೇಕೆಂಬ ಸವಾಲೆಸೆದು ಮತ್ತೆ ಮತ್ತೆ ಹುಟ್ಟಿಸುತ್ತಲೇ ಇತ್ತು ನನ್ನನ್ನು
ನಿನ್ನ ಅಸ್ತಿತ್ವವನ್ನು ಒಪ್ಪಿಕೊಳ್ಳಲಾಗದು ಎಂಬ ನಿಮ್ಮ ತಿರಸ್ಕಾರ.
ಗಾಳಿಗೊಂದು ಸುಳಿವು ನೀಡಿ...

-ಒಂದು-

ಗಾಳಿಗೊಂದು ಸುಳಿವು ನೀಡಿ
ಚಂದ್ರಮನು ಚೆಲ್ಲಿದ್ದಾನೆಲ್ಲಿ ನಮ್ಮ
ಬೆಳ್ಳಿನೆನಪುಗಳ ಚಿತ್ತಾರ

ಪ್ರಮಾಣ ಮಾಡಿ ಹೇಳಬಲ್ಲೆ, ಎಲ್ಲಿ ಬೇಕಾದರೂ
ಆಟಿಕೆಯೊಂದು ಮುರಿದ ಸದ್ದು
ಕಂದ ಎಲ್ಲೋ ಚೀರಿ ಅತ್ತ ಅಳು
ಕೇಳಿದ್ದೇನೆ ನಾನು
ಎಲ್ಲೆಂದರಲ್ಲಿ ಅದನ್ನೇ ನೋಡೀ ನೋಡಿ ಬೇಸತ್ತ ಅದೇ ಅಕ್ಕಿಡಬ್ಬದಲ್ಲಿ
ಒದ್ದೆ ಅಕ್ಕಿ ಕೆರಳಿದಂತೆ ತಡವಿ ತಡವಿ ಎಬ್ಬಿಸಿದ ಸದ್ದು

ಕರಾರು ಪತ್ರಗಳು, ಮನಸ್ಸಿಲ್ಲದ ಮನಸ್ಸಿನ ವ್ಯವಹಾರಗಳು
ಕರಾರುಪತ್ರಗಳೂ ಇಲ್ಲ, ವ್ಯವಹಾರ ವಹಿವಾಟೂ ಇಲ್ಲ
ಎಲ್ಲವೂ ಓಟ ಕಿತ್ತಿವೆ, ಆಟ ನಿಲ್ಲಿಸಿ ಪೆವಿಲಿಯನ್ ಕಡೆಗೆ
ಹತಾಶೆಗಳೂ, ಹೊಸ ಆಶೆಗಳೂ ಏಕತ್ರ ಬದುಕಿನಲೆಗಳಂತೆ
ಎಲ್ಲವೂ ಸಂಶಯಾಧಾರಿತ, ಸಾಕ್ಷಿಯ ಕೊರತೆ.

ಯಾವುದೋ ತಾಯ ಕಿತ್ತು ತೆಗೆದ ತಲೆಗೂದಲಿನಂತೆ
ಈ ಒಡಕು ಕ್ಷಣಗಳು ಅಪಸ್ವರವನ್ನೆಬ್ಬಿಸಿವೆ
ಕಿತ್ತೆಸೆದ ನೇಯ್ದ ತಾಳೆಗರಿಯೊ, ಬಿದಿರ ಎಳೆಯೋ ಸುರುಳಿಸುತ್ತಿದ ಹಾಗೆ ಬಿದ್ದಿವೆ.
ಶಿಲ್ಲಾಂಗಿನ ರಾತ್ರಿಯ ಕಡುನೀಲಿ ಆಗಸದಿಂದ ಕಿತ್ತು ತಂದ ತಾರೆಗಳನ್ನು
ನೇಯ್ದ ಹಳೆಯ ಮುದುರಿದ ಬನಾರಸ್ ಸೀರೆಯ ಹಾಗೆ.

ತಂತಮ್ಮ ಅರಿಶಿನ ಗಂಧದ ಯೌವನದ ವೈಶಾಖವನ್ನು
ಭರಣಿಗಳಲ್ಲಿ ಘಮ್ಮೆಂದು ತುಂಬಿಟ್ಟ ಮುತ್ತಜ್ಜಿಯರು
ಒಂದಿಷ್ಟೇ ಇಷ್ಟು ಬಿಸಿಲು, ಮತ್ತಿಷ್ಟು ಪುರುಸೊತ್ತು
ಸಿಕ್ಕಿದ್ದೇಯಾದರೆ ಸಿಲ್ಹೆಟ್ ನಗರವನ್ನೇ
ಉಪ್ಪಿನಕಾಯ್ಮಾಡಿ ನೆನಪುಗಳಲ್ಲಿ ತುಂಬಿಡುತಿದ್ದರು.

ಸರಿಸರಿ ಹೊರಡಿ, ನಿಮ್ಮ ನಿಮ್ಮ ಮಕ್ಕಳು
ಆಡುಕುರಿಗಳನ್ನೆಲ್ಲ ಅಟ್ಟಿಕೊಂಡು ಎದ್ದೇಳಿ
ಕಟ್ಟಿ ಗಂಟುಮೂಟೆ, ದೊರೆಗಳು ಬದಲಾದರು
ಇಲ್ಲಿಂದ ಹೊರಟು ಹೋಗಿ.

-ಎರಡು-
ಗೊಂದಲಿತ ಗೂಡುಗಳು ನೆರಳು ಆಶ್ರಯ ನೀಡವು
ವಿಳಾಸವಿಲ್ಲದ ಮಾಡಿನಡಿ ಬದುಕ ಪ್ರೀತಿಸಬಲ್ಲ ಕಾವು ನನ್ನಲ್ಲಿ ಇಲ್ಲ
ಇಲ್ಲಿ ಚಪ್ಪಡಿಕಲ್ಲು ಸೃವಿಸುತ್ತಿದೆ ನೋವು ತುಂಬಿದ ಕೀವು ರಸ
ಕುಶಿಯು ಸುರಿಯುವುದು ಆಮ್ಲಮಳೆಯಂತೆ
ಎಂದರೆ ನಾನು ಕೇಳುವುದು ಅದೊಂದು ಕವಿತೆಯಂತೆ, ಪ್ರಾಸಬದ್ಧ

ಪಾರಿವಾಳವೇ ಮೇಲು, ಅಥವಾ ಒಂದು ಕಾಗೆ
ಆದರೆ ನಾನೊ, ಕವಿಯಾಗಿಬಿಟ್ಟೆ
ಒಂದು ಮನಸ್ಸು, ಒಂದು ನಕಾಶೆ
ಜೀರ್ಣಾಂಗವೇ ಇಲ್ಲದ ಅನ್ನಾಂಗ

ಸತತ ಮಳೆನೀರು ತೊಳೆದ ಸುಣ್ಣದಕಲ್ಲುಗಳ ಸಂದುಗಳಲ್ಲಿ
ಆರ್ಕಿಡ್ ಪೊದೆಗಳಲ್ಲಿ ಅಥವಾ ಸಣ್ಣ ಪುಟ್ಟ ಮೀನುಗಳ ತೊರೆಯಲ್ಲಿ
ನಾನು ಬೆಳೆದೆ
ಇಡೀ ಮರಕ್ಕೆ ಹೆಣ್ಣಿನ ಮೊಲೆಗಳನ್ನು ಕುತ್ತಿ ಕತೆ ಕಟ್ಟಿದವರೋ
ಕುಡುಗೋಲು, ಕತ್ತಿ ಹಿಡಿದು ಬರುವವರೋ ಇರದ ಕಡೆ, ದೂರದಲ್ಲಿ.
ಕಿತ್ತಳೆ ಮಾರುವ ಮುದುಕಿ ನನ್ನ ಕದ್ದು ತಿರುಗುವ 
ಕನಸುಗಳಲ್ಲಿ ಇಣುಕುತ್ತಾಳೆ, ಕಾಡುತ್ತಾಳೆ
ನನ್ನ ಬಳಿ ಅವಳ ಮಗನ ಚಿತ್ರವಿದೆ,
ಅವನು ನನ್ನ ಸುಟ್ಟ ತುಟಿಗಳ ಮೇಲೆ ಹೂವನಿಟ್ಟಿದ್ದ.

ಗಾಳಿಗೊಂದು ಸುಳಿವು ನೀಡಿ
ಇಲ್ಲವೆಂದರೆ ಅವು ನನಗೆ ಹೇಳುವುದೇ ಇಲ್ಲ;
ಯಾರನ್ನು ದ್ವೇಷಿಸಬೇಕು ನಾನು ಬದುಕಬೇಕೆಂದರೆ, 
ಮತ್ತು ಪ್ರೀತಿಸಿದ್ದು ಯಾರನ್ನು, ಸತ್ತಿದ್ದೂ. ಕಿತ್ತ ಹಲ್ಲು
ಕಾರಣಗಳಿದ್ದವು ನೋವಾಗುವುದೆಂಬ ಅರಿವಿದ್ದೂ 
ನೋವಿನಲ್ಲೆ ಕಿತ್ತುಹಾಕಲು
ಮತ್ತೀಗ ಕಿತ್ತಹಲ್ಲು ಇದ್ದ ಜಾಗದ ಖಾಲಿತನ
ನನ್ನೊಳಗೆ ಉಳಿದೇ ಬಿಡುವ ಬೇಡದ ಒಂದು ನೆನಪು.

ಈ ನಾಲಗೆಯೊಂದು ಮಗುವಿನಂತೆ
ಅದಕ್ಕೆ ಇಲ್ಲದ ಜಾಗದಲ್ಲೇ
ಕಳೆದುಕೊಂಡ ಜಗತ್ತ
ಮತ್ತೆ ಮತ್ತೆ ಸವರಿ ಹುಡುಕುವ ಹಠ...ಚಟ.ನಿರೂಪಕ
ಯಾರು ನಾವು?
ನೋವಿನ ದಲ್ಲಾಳಿಗಳೆ?
ಒಂದೇ ಒಂದು ಮುಗುಳ್ನಗುವಿಗಾಗಿ 
ಬದುಕಿನ ನಿಯಮಗಳನ್ನು ಚೌಕಾಶಿಗಿಟ್ಟವರು.
ಎಲೆಮರೆಯಲ್ಲೆ ಗುಟ್ಟುಗಳನ್ನು ಅಡಗಿಸಿಟ್ಟು ಕಾದವರು.

ನಾವು ಸೂರ್ಯನತ್ತ ಕೈಚಾಚಲಿಲ್ಲ
ಚಂದ್ರನತ್ತ ಮೊಗಮಾಡಲಿಲ್ಲ
ನಮ್ಮ ರಾತ್ರಿಯ ಆಗಸ ಹರಡಿದ ಚಾದರದಡಿ ಕಿತ್ತುಕೊಳ್ಳಲು 
ಅಷ್ಟು ನಕ್ಷತ್ರಗಳೇ ಇದ್ದಿರಲಿಲ್ಲ.

ನಿರೀಕ್ಷೆಗಳನ್ನೇ ಮೂಟೆ ಕಟ್ಟಿಕೊಂಡು 
ರುಚಿಗಳ ಕಾಡಲ್ಲಿ ಅಂಡಲೆಯುತ್ತಿರುವಾಗ
ಬಾಯ್ತುಂಬ ಒಣಗಿದ ಆಸರಿಕೆಗೆ
ಕಿತ್ತಳೆಯ ರಸದ ಅಂಟು, ಪರಿಮಳ.
ಈ ನಮ್ಮ ಪೆದ್ದು ಸಾಹಸವೇ
ನಿಮ್ಮ ನಾಲಗೆಯ ಮೇಲೆ ಸಪ್ತವರ್ಣದ 
ಆಗಸದ ಹೊಸ ದಾಹ ತಂದಿರಬೇಕು.

ಮಜಾ ನೋಡಲು ನೆರೆದ ಜನರನ್ನು ಬೆಟ್ಟಗುಡ್ಡ ಎಂದು ತಿಳಿದು
ಅವರು ಬೊಟ್ಟು ಮಾಡಿ ತೋರುತ್ತಿದ್ದ ಕೈಬೆರಳನ್ನೆ ಹೂವಿನ ಗುಚ್ಛವೆಂದು ಎಣಿಸಿ
ಪೆದ್ದರಾದೆವು ಮತ್ತೆ ಮತ್ತೆ.

ನಾನು ಮರಗಟ್ಟಿದಾಗ ನನ್ನ ಅದೇ ಭಾವ ಕಾಡಿತೆ ನಿಮ್ಮನ್ನು ಅರೆಗಳಿಗೆ?
ಕಲ್ಲಾದ ಮನಸ್ಸಿನ ಆರ್ತ ಧ್ವನಿ ಬೆನ್ನ ಹಿಂದೆ ಕೇಳಿಸಿದಂತಾಗಲಿಲ್ಲವೆ
ನಮ್ಮ ನಡುವೆ ಏನೋ ಬಿರುಕು ಬಿಟ್ಟ ಸದ್ದು?

ಪಾದಗಳಿಂದ ಮೆತ್ತಗೆ ಹತ್ತಿ ಮೈಮೇಲೆ ಹರಿಯತೊಡಗಿದ ಸಣ್ಣ ಹೆಸರಿನ ಸೈನ್ಯ
ಯುದ್ಧ ತೊಡಗಿದ್ದು ತಿಳಿಯಲೇ ಇಲ್ಲ
ಯಾರು ಯಾವಾಗ ನಮ್ಮನ್ನು ಹೀಗೆ ಇಲ್ಲಿ ಸಾಲಾಗಿ ನಿಲ್ಲಿಸಿದರೋ
ನಮಗದರ ಅರಿವೇ ಆಗಲಿಲ್ಲ...ನಾಗರಿಕ ಪಟ್ಟ

ಹಿಂಡಿದಂತೆ ತಿರುಪಿಕೊಳ್ಳುತ್ತ 
ನಡುಕ ಹುಟ್ಟಿಸುವ ಭಯವ ಅರಿಯಲೆಳಸುತ್ತ 
ಬರೆಯುವುದೊಂದು ಚಟವಷ್ಟೇ ಆಗಿಬಿಟ್ಟಿದೆ ಈಗ

ಮುಸ್ಸಂಜೆಯೊಂದು ಧಡಕ್ಕನೆದ್ದು ಕೂರುವುದು
ಬೋಳು ಮರಕ್ಕೆ ಸಿಕ್ಕಿ ತೂಗುಬಿದ್ದಿರುವ 
ಸೂತ್ರಕಿತ್ತ ಗಾಳಿಪಟ ಹುಯಿಲಿಡುವ ಹಾಗೆ.
ಕರೆಂಟು ಕಂಬದ ತುಂಬ ಅಂಟಿಕೊಂಡ ಹಕ್ಕಿಪುಕ್ಕದ ಕುಚ್ಚಿನ ಹಾಗೆ
ನಿಶ್ಚಿತ ನೀರವ ಮೌನಕ್ಕೆ ಜೋತುಬಿದ್ದು ಪತರುಗುಟ್ಟುವ
ಅಪಶಕುನದ ಮುನ್ಸೂಚನೆಯಂತೆ
ಇಲ್ಲಿರಬೇಕಾಗಿ ಬಂದ ಘಳಿಗೆ ಕಾಣತೊಡಗಿದೆ.

ತೆರೆಯೊಂದರ ಮರೆಗಲ್ಲದೆ ಬೇರೆಲ್ಲಿಗೂ
ನಾನೀಗ ಪ್ರತಿಭಟನೆಯ ಮೆರವಣಿಗೆ ಹೊರಡಲಾರೆ
ಅಲ್ಲಿ ನಾನು ನನ್ನ ಹಕ್ಕುಗಳನ್ನು ಮಡಿಚಿಟ್ಟಿದ್ದೇನೆ, ಗಾಳಿಯನ್ನು ಕೂಡ.
ನನ್ನ ನೋವಿನ ದನಿಯನ್ನು ಪರಕೀಯತೆಯ ಹಂಗಿನಡಿ ಹೂತಿಟ್ಟಿದ್ದೇನೆ
ನನ್ನ ಕಂಗಳಲ್ಲಿ ಶಾಶ್ವತವಾಗಿ ನಿಂತುಬಿಟ್ಟಿದೆಯದು
ಮರ್ಯಾದೆಯಾಗಿ ಬಾಳುವೆ ನಡೆಸುವ ಎರಡು ಸಂ-ಭ್ರಮೆಗಳಂತೆ
ಒಮ್ಮೊಮ್ಮೆ
ಕ್ಷಿತಿಜದಂಚಲ್ಲಿ ಬಿಟ್ಟು ನಡೆದ ಅರೆ ಉಂಡ ಬಾಳೆಲೆಯಂತೆ
ಮತ್ತೊಮ್ಮೆ
ಮನೆಗಾಗಿ ಅಷ್ಟಿಷ್ಟು ಗಳಿಸಬೇಕೆಂಬ ಕೀವು ತುಂಬಿದ ಕನಸುಗಳಂತೆ

ಈ ಗೂಡು ಮಣಭಾರ ಎದೆಯ ಮೇಲೆ
ಹಳೆಯ ಮರೆಯಲಾರದ ನೆನಪುಗಳಿಗೆ
ಮೋಡ ಮುಸುಕಿದೆ, ಪಾಪಪ್ರಜ್ಞೆಯ ಗ್ರಹಣ ಹಿಡಿದಂತೆ 
ಹೊರೆ ಹೇರಿದಂತೆ ಕೂತಿವೆ ನನ್ನ ಚದುರಿದ ಚಿತ್ರಗಳಂಥ ಗತಕಾಲದ ಮೇಲೆ.
ಮಳೆಯ ನಾಡಿಗಷ್ಟೇ ಅಚ್ಚುಕಟ್ಟಾಗಿ ಹೊಂದುವ ಪುಟ್ಟ ಕುಟೀರ ನನ್ನದು.
ನನ್ನ ಡೇರೆಯ ತೂತುಗಳಿಗೆ ತೇಪೆ ಹಚ್ಚುವಷ್ಟೂ ತಲೆಯೆತ್ತದಂತೆ ಅಲ್ಲಿ ನಾನು.
ತೂರಿ ಬರುವ ತಾರೆಗಳೆನ್ನ ಕ್ಷಮಿಸಲಿ...

ನನ್ನ ನಾಗರಿಕ ಪಟ್ಟದಷ್ಟೇ
ಅವು ನಕಲಿ

ಆದರೆ ಇರುಳು ಕಣ್ಣಿಗೆ ಕಾಣುವಷ್ಟೇ ಇರುವುದಿಲ್ಲ
ಅದು ಸದಾ ಕಡುಕತ್ತಲು, ಧುತ್ತೆಂಬ ಸತ್ಯ
ಕಾಂಬ ನೋಟದಿಂದುದ್ಭವ
ಗಿರಿಯ ಮೋಹದಿಂದನುಭವ
ಒಂದು ಪುಟದಿಂದಿನ್ನೊಂದಕ್ಕೆ ತನ್ನವರ ಅರಸುತ್ತ ಅದು
ಸಾಗುವುದು ನಿರಂತರ.

ಪೆನ್ನಿನ ಮಸಿ, ಅದೆಷ್ಟೇ ಗಾಢವಾಗಿರಲೇನು,
ಮನದ ಆಗಸವ ಇಳಿಸಿ ಜಗಕೆ ಇಹದ ತಾವಾಗಿಸದು ಎಂದೂ.ಮಾಗಿಯ ಸೆರೆವಾಸ

ಮಾಗಿಯ ತೋಳುಗಳಲ್ಲಿ ಸೆರೆಯಾಗ ಬಯಸಿ ನುಗ್ಗಿದವನು ಅವನೇ
ವಸಂತದಲ್ಲೇ ಮೋಹದ ಚಳಿಯ ಅವನು ಬಿಗಿಯಾಗಿ ಅಪ್ಪಿಕೊಂಡಿದ್ದ
ಮತ್ತೆ ಶರತ್ಕಾಲದಿ ಅರಿವು ಆವರಿಸಿತವನನ್ನು. 


ಇರುಳ ನಡಿಗೆ
ಶರತ್ಕಾಲದಿ ಉದುರುವ ಎಲೆಯಂತೆ ಕಾಲದ ಇಳಿಮೊಗ, ನಿನ್ನ ಮುಖ
ಭೂಗರ್ಭದ ಕಗ್ಗತ್ತಲ ರಂಧ್ರದಲ್ಲಿ ಹೂತು ಹೋಗಲು ಹೊರಟಂತೆ
ಕಂಭದಿಂದ ಚಕ್ಕೆ ಎದ್ದಂತೆ ನಿನ್ನ ಕೈಗಳು ಮೇಲೆದ್ದಿವೆ ಚಾಚಿ
ನನ್ನ ಗುಟ್ಟುಗಳ ಬಟ್ಟೆ ಬಯಲಿಗೆಳೆವಂತೆ, ಒಂದೊಂದಾಗಿ ಕಳಚಿ.

ನಿನ್ನ ಮೊಗ ನನ್ನ ಮೈಮೇಲಿನ ಪಸೆಯಾರುವಂತೆ ಹೀರುವ ಚಂದ್ರಮ,
ಈ ಭ್ರಷ್ಟಕಾಲವನ್ನು ನನ್ನದೇ ತುಟಿಗಳಿಂದ ಕುಡಿವ ಒಂದು ನಗರದಂತೆ.
ನಿನ್ನ ಮುಗುಳ್ನಗು ಚೆಂದ, ಬೆಳಕಾಗಿ, ಮಳೆಯಾಗಿ ಅಥವಾ ಹಕ್ಕಿಯಾಗಿ
ಕರಗಿಬಿಡಬಲ್ಲ ಒಂದು ಮಾಂಸದ ಮುದ್ದೆಯೆದುರು. 

ನಿನ್ನ ಕಣ್ಣುಗಳಾಳದ ಕರಾಳ ಹುನ್ನಾರಗಳಡಿ ನನ್ನ ಕಂಗಳು ಮುಚ್ಚಿಕೊಳ್ಳುತ್ತವೆ.
ನಿನ್ನ ತೊಡೆಗಳಲ್ಲಿ ನಾನು ಈ ಇರುಳ ಛಳಕುಗಳನ್ನು ಎತ್ತೆತ್ತಿ ಬೀದಿಯಾಚೆ ಒಗೆಯುತ್ತಿದ್ದೇನೆ
ಸಾಕಷ್ಟು ನೊಂದುಂಡು ಹೈರಾಣಗೊಂಡು 
ನನ್ನ ಕನಸು ಕಲ್ಪನೆಗಳ ತೋಳುಗಳು ಖಾಲೀ ಇರುಳಿನ ಬೆರೆಳು ಹಿಡಿದು ತೆವಳುತ್ತ 
ಕುಂಟುತ್ತ ಹೊರಟಿವೆ, ನಿನ್ನನ್ನು ಅರಸುತ್ತ, ನಿನ್ನನ್ನು ಪಡೆಯಲು, ಸುವಿಶಾಲ ಜಗದಗಲ

- ಈ ಇರುಳ ನಡಿಗೆ ಎಂಬ ಕವಿತೆ ನೋಡಿ. Night’s Passing ಎಂದು ಇದರ ಹೆಸರು. ಗಂಡು ಹೆಣ್ಣಿನ ಸಮಾಗಮವಿದೆ ಇಲ್ಲಿ. ಅದೂ ಬಹುಶಃ ಪರಸ್ಪರ ಪ್ರೇಮಿಗಳ ನಡುವೆ, ಗಂಡ ಹೆಂಡಿರ ನಡುವೆ ನಡೆಯುವಂಥ ಒಂದು ಸಮಾಗಮ. ಆದರೆ ಅದೆಷ್ಟು ಭಯಾನಕವಿದೆ ಎನ್ನುವುದನ್ನು ಗಮನಿಸಿ. ಅವಳಿಗಿಲ್ಲಿ ಇದ್ದಕ್ಕಿದ್ದಂತೆ ತಾನು ಹಂಬಲಿಸಿ ಬಯಸಿದ್ದು ಇವನನ್ನಲ್ಲ ಅನಿಸಿಬಿಟ್ಟಿದೆ! ಇಲ್ಲಿ ಸೌಂದರ್ಯವೂ ಇದೆ, ಅದರ ಬೆನ್ನ ಹಿಂದಿನ ಕರಾಳ ವಾಸ್ತವವೂ ಇದೆ. ಆನಂದವೂ ಇದೆ, ಅದರ ಕ್ಷಣಭಂಗುರತೆಯ, ಅದರ ನಂತರದ ಗೋಳುಗಳ ಕುರಿತ ಅರಿವು ಮತ್ತು ಅಪಾರ ಸಂಕಟವೂ ಇದೆ. ರತಿಯ ಉನ್ಮಾದದ ಛಳಕುಗಳನ್ನು ಅವಳು ಎತ್ತೆತ್ತಿ ಬೀದಿಗೆಸೆಯುತ್ತಿದ್ದಾಳೆ ಮತ್ತು ಅವನು ಸಿಕ್ಕಿದ ಮೇಲೂ ಅವನನ್ನು ಅರಸಿ, ಇರುಳ ಬೆರಳು ಹಿಡಿದು ಕುಂಟುತ್ತ ಸಾಗಿದ್ದಾಳೆ.  

ಮಳೆ
ಟಿನ್ ಶೀಟುಗಳ ಛಾವಣಿಯ ಮೇಲದರ ಗಾನ
ಗಿಡಬಳ್ಳಿ ಹುಲ್ಲು ಹಸಿರೆಲೆಗಳ ಹುಚ್ಚೆದ್ದ ಹೊಯ್ದಾಟ
ಬಯಕೆಗಳ ಹುರಿದ ಘಾಟಿನ ಹೊಗೆ
ಕಮರಿದ ಹೂಮನದ ಪುಟ್ಟಪುಟ್ಟ ಆಸೆಗಳ ನಿಷ್ಪಾಪಿ ಮೊಗ್ಗುಗಳು
ಅರಿಯದಲೆ ನನ್ನ ಕೊಂದವೆನ್ನಲೆ....

ಅನಾಥ ಕಾಗದದ ದೋಣಿ ಮಗುಚಿಕೊಂಡಂತೆ
ಕವಿತೆಯೊಂದು ಕಣ್ಣೆದುರೆ ಲಯತಪ್ಪಿತೆ;
ಗಿಜಿಗುಡುವ ಹಾದಿಗುಂಟ ಕವಿದ ಎಣ್ಣೆಮಬ್ಬು ಕಾಮನಬಿಲ್ಲ 
ಮಬ್ಬುಕವಿದ ದಿನವೊಂದು ಓರೆನೋಟದಲೆ ದಿಟ್ಟಿಸಿದಂತೆ...

ಸಂಜೆಗಪ್ಪು ಹೆಚ್ಚಿದಂತೆಲ್ಲ ನಾನು ನನ್ನೊಳಗೊಳಗೆ
ಇಳಿವೆ ಬೆಚ್ಚಗೆ ಚಿಪ್ಪೊಳಗೆ
ಕಳೆದುಕೊಂಡ ಸ್ನೇಹ, ಕಳೆದುಹೋದ ಕವಿತೆ
ಗಳ ಹುಡುಕತೊಡಗುವೆ ಒಳಗಣ್ಣ ಕತ್ತಲಲ್ಲಿ....

ಮಾತುಗಳ ನಡುವೆ ಯಾವುದೋ ಸಿಟ್ಟು ಅರಿವಿಲ್ಲದೇ
ಸುರುಳಿಬಿಚ್ಚಿ ಬುಸುಗುಡುತ್ತದೆ
ಕಾಲದ ಹೆಜ್ಜೆಗುರುತು ವಾಚ್ಯವಾಗಿಬಿಡುತ್ತದೆ....

ಕಪ್ಪನೆಯ ಮೋಡಗಳ ನಡುವೆ ತರಚಿದ ಗಾಯದಂಥ
ಎಡೆಯೊಂದು ತೆರೆದುಕೊಳ್ಳುತ್ತದೆ;
ಸಾವಿರ ನಾಲಗೆಗಳು ಅಲ್ಲಿಂದಿಳಿದು
ಎಳೆ‍ಎಳೆಯಾಗಿ ಬಿಳಲು ಚಾಚುತ್ತವೆ 
ನನ್ನ ಒಂಟಿಕ್ಷಣಗಳ ಒಮ್ಮೆ ನೆಕ್ಕಿಬಿಡಲು.ಮೊದಲ ಮಳೆ
ಮೊದಲ ಮಳೆಗೆ ತೆರೆವ ಗಿರಿಯ ತಿಳಿ ನೇರಳೆ ಆಗಸ
ನೀನೇ ಬಂದಂತೆ ನನ್ನ ಬಳಿಗೆ
ನಿನ್ನ ಮೃದುವಾದ ಕರಗಳಲ್ಲಿ ಹಳೆಯ ನೆನಪುಗಳೆಲ್ಲ
ಕೂತು ಬಂದಂತೆ ನನ್ನದೇ ಕೈಗೆ

ಕ್ಷಣಕಾಲ ಎಟುಕಿದಂತೆ ಕೆಳಗಿಳಿದು ನಿಂತ ಮೋಡ
ಅಲ್ಲಿ ಅದರ ಏಕಾಂತ ಧ್ಯಾನ
ಕಣ್ಮುಚ್ಚಿ ಏಕತ್ರ ಪ್ರಾರ್ಥನೆ
ಮತ್ತಿಲ್ಲಿ ನೆನಪುಗಳ ಮೇಘಮಾಲೆ
ಸಪ್ತಸಾಗರದಾಚೆ ಹೂತ ಗತದ ಗರ್ಭದಲ್ಲಿ ಮಿಸುಕಾಟ
ಮಳೆ ಬಡಿದು ನಿಂತ ಅಪರಾಹ್ನದಂತೆ
ತೊಯ್ದು ತೊಪ್ಪಡಿಯಾದ ಗುಬ್ಬಚ್ಚಿಯಂತೆ

ಬಳಿಕ
ಹೊಳೆವ ಎಲೆಗಳು ತೊಳೆದಿಟ್ಟಂತೆ
ಸಂತೃಪ್ತ, ನಿಚ್ಚಳ ಸ್ವಚ್ಛ ಅಲ್ಲೆಲ್ಲ
ಆತ್ಮಗಂಧದ ಸಹವಾಸ

ಕಾಲಕೊಂಕಿದ ಕಡೆ
ಇನ್ನೂ ನಿರೀಕ್ಷೆಗಳನ್ನೇ ಚೀಪುತ್ತ ನಿಲ್ಲಲಾರೆ
ಬಸವಳಿದ ಕವಿತೆಯೊಂದಕ್ಕೆ ಮಾತ್ರ ಈ ರಾತ್ರಿ
ನನ್ನೆದೆಗೆ ಲಗ್ಗೆಯಿಕ್ಕಲು ಸಾಧ್ಯ

ಮತ್ತೆ ನಾನು ಅದೇ ಒಳಕೋಣೆ ಸೇರಿಕೊಳ್ಳಬೇಕಿತ್ತು
ಪ್ರೇಮಿಗಳು ಅವ್ಯಕ್ತ ನೋವಿನಿಂದ ನುಣುಚಿಕೊಳ್ಳುತ್ತ ಮಾಯವಾಗಲು
ಅಲ್ಲಿ ಹಾದಿ ಒಂದಿಷ್ಟೇ ಬಾಗಿದೆ, ಕಾಲಕೊಂಕುವಲ್ಲಿ.
ಮತ್ತೆ ಮಳೆ ಹೊಯ್ಯುತಿದೆ, ಎಡೆಬಿಡದೆ

ನಾನು ಮನೆಗೆ ಆ ನನ್ನ ಪರಿಮಳ ಹೊತ್ತು ಬಂದಿದ್ದೇನೆ
ಒಂದಿಷ್ಟು ಮಾಘಮಾಸ ಮತ್ತು ನೀನು
ನಾನುಟ್ಟ ದಿರಿಸಾಗಿ, ಮೈತುಂಬ ಮೈಯಾಗಿ


ಸೆಮಿನಾರ್
ಹೊಚ್ಚ ಹೊಸಾ ಸಂವೇದನೆಯ
ಹಳೇ ಪಳೆಯುಳಿಕೆಯಂಥ ತಳ ಅಂತಸ್ತಿನಲ್ಲಿ
ಕಣ್ಮರೆಯಾಗಿರುವ ಹಳ್ಳಿಗಾಡಿನ
ಬಹುಶಃ ಸ್ವಂತ ಅಸ್ತಿತ್ವದ
ಹುಡುಕಾಟದ ಒಂದು ಪ್ರಯತ್ನ

ಮಾರ್ಚಿ ತಿಂಗಳ ಬಿಸಿಲ
ಕಾಣ್ಕೆ ಬಿಟ್ಟರೆ ಬೇರೆ ಬೆಳಕೇ ಇಲ್ಲದ
ಮಬ್ಬುಗತ್ತಲ ಕೋಣೆಯದು

ಹೊರಗೆ ಎರಡು ಬರಡು ಮರ
ಏನನ್ನೂ ಕೇಳಿಸಿಕೊಳ್ಳವು.
ಧೂಳು, ಘಾಟು ತುಂಬಿದ ಕೋಣೆಯಲ್ಲೆ
ಇಬ್ಬರು ಪ್ರಮೇಯಗಳೊಂದಿಗೆ ಸರಸವಾಡುತ್ತ
ನಿಂತಿದ್ದರಲ್ಲ, ನಾನು ಅದರಾಚೆ ದೃಷ್ಟಿನೆಟ್ಟು
ಮರಗಳನ್ನೆ ನೋಡುತ್ತಿದ್ದೆ.

ಗಾಳಿಯೇನಷ್ಟಿಲ್ಲ -ದಿದ್ದರೂ
ಅಸಹನೆಯಿಂದ ಕಿಟಕಿ ತನ್ನ ಕೈಯಾಡಿಸುವುದು
ವ್ಯರ್ಥವಾಗುವುದು.
ಈ ಹಳೆಯ ಪಳೆಯುಳಿಕೆಯಂಥ ಉಗ್ರಾಣಕ್ಕೆ
ಹೀಗೆ ಆಗಾಗ ಭೇಟಿ ನಮ್ಮದು
ನಮ್ಮನಮ್ಮೊಳಗೆ ನಾವ್ನಾವಿಳಿದು.

ವಿಪರ್ಯಾಸ ಎಂಬ ಕವಿತೆ ಗಮನಿಸಿ. ಒಂದು ಸಂವೇದನೆಯಾಗಿ ಇದರಲ್ಲಿ ವಿಶಿಷ್ಟವಾದದ್ದು, ನಮಗೆ ತಿಳಿಯದೇ ಇರುವುದು ಏನೂ ಇಲ್ಲ ಇಲ್ಲಿ. ನಾಗರೀಕತೆ ನಮ್ಮ ದೈನಂದಿನದಲ್ಲಿ ಹೊರಿಸಿದ ಎಷ್ಟೋ ಕೃತಕ ಸಂಪ್ರದಾಯಗಳೂ, ಅವುಗಳತ್ತ ನಮ್ಮದೇ ಅಂತರಂಗದಲ್ಲಿರುವ ಪ್ರತಿರೋಧಗಳೂ ನಮಗೆ ಗೊತ್ತಿರುವಂಥದ್ದೇ. ಈ ಪ್ರತಿರೋಧ ಸೃಷ್ಟಿಸುವ ಮಾನಸಿಕ ಒತ್ತಡ ಅಥವಾ ಕಿರಿಕಿರಿಗಳಿಗೆ ಭಾಷೆಯಲ್ಲಿ ಒಂದು ಅಭಿವ್ಯಕ್ತಿಕೊಡಲು ಹೊರಟ ಕವಿ ಅದರ ಕುರಿತು ಧೇನಿಸಿರುತ್ತಾನೆ, ಸೂಕ್ಷ್ಮವಾಗಿ ಪ್ರತಿಸ್ಪಂದಿಸಿರುತ್ತಾನೆ ಮತ್ತು ತನ್ನದೇ ಆದ ಒಂದು ದರ್ಶನವನ್ನೂ ಪಡೆದುಕೊಂಡಿರುತ್ತಾನೆ. ಇದೇ ಎಂದೇನಲ್ಲ, ನಮ್ಮನ್ನು ಇನ್ನಿಲ್ಲದಂತೆ ಕಾಡಬಲ್ಲ ಇಂಥ ಹತ್ತು ಹಲವು ಸೂಕ್ಷ್ಮಸಂವೇದನೆಗಳು ನಮ್ಮ ನಿಮ್ಮ ದೈನಂದಿನದಲ್ಲೇ ಇವೆ. ಆದರೆ, ಇವತ್ತಿನ ದೈನಂದಿನದಲ್ಲಿ ನಮಗೆ ಈ ಬಗೆಯ ಪ್ರತಿಸ್ಪಂದನಕ್ಕೆ ಬೇಕಾದ ಒಂದು ಸ್ಪೇಸ್ ಇಲ್ಲವಾಗಿದೆ. ಹಾಗಾಗಿ ಭಾಷೆಯಲ್ಲಿ ಇದನ್ನು ಕಟ್ಟಿಕೊಡಬಲ್ಲ ಕವಿತೆಗಳೂ ಇಲ್ಲವಾಗಿವೆ. ಇಷ್ಟೇ ಇದರ ವಿಶೇಷ.

ವಿಪರ್ಯಾಸ
ಹಗಲು ಇರುಳಾಗಿ ಮಗ್ಗುಲು 
ಬದಲಿಸಿದ ಹಾಗೆ ಪದೇಪದೇ
ವ್ಯಂಗ್ಯ ಹಳಬನಂತೆ ಕುಸಿದು ಕೂರುವುದು
ಕಾಗದದ ಮೇಲೆ.
ನಾಗರೀಕತೆಯ ತಿಪ್ಪೆರಾಶಿಯ ಮೇಲಿಂದ
ಅದೇ ಗತಕಾಲ ಕೆಳಗುರುಳಿ ಬಿದ್ದು
ರೇಶಿಮೆಯ ನಯದಲ್ಲೆ ನೋವ ಅಭಿನಯಿಸುವ
ಕಲೆಯ ಚಟ ಹತ್ತಿದ ನನ್ನ
ಮಸಿಕುಡಿಕೆ, ಪೆನ್ನು ಕೂತ ಮೇಜಿನ
ಮೇಲೆ ಉಳಿಯುವುದು.
ಅಸಹಾಯಕತೆಯು ಲಜ್ಜೆಗೇಡಿತನವಾಗಿ
ರೂಪ ಬದಲಿಸುವ ಅಂತರದ ಹಂತದಲ್ಲೆ
ಅಧಃಪತನದ ಜೊತೆ ಇಡೀ ಬೀದಿ
ನನ್ನೊಂದಿಗೇ ಒಬ್ಬಂಟಿಯಾಗುವುದು,
ಚಾಚಿ ಹಬ್ಬಿದಂತೆಲ್ಲ ಅದರ ಕರಾಳ ನೆರಳು.
ನನ್ನದೆಲ್ಲದರ ಜೊತೆಗೇ ನನ್ನೊಳಗನ್ನೆಲ್ಲ ತಿಂಬ
ಈ ಸದಾಸನ್ನದ್ಧ ಸ್ವಭಾವ
ನಾ ಬಿಟ್ಟೂ ಬಿಡಲಾರೆ, ಇಟ್ಟೂ ಹಿಡಿಯಲಾರೆ
ಉಪಶಮನದ ಬಯಕೆಯೊಂದೇ ನನ್ನ ಭಾವದ
ಪುಟ್ಟ ಸ್ವಾತಂತ್ರ್ಯ.
ಹಾಗೆ ಸ್ವತಂತ್ರವಾಗಿರಲಾರೆ ನಾನೆಂಬ ಅರಿವು
ಒಂದಿಷ್ಟು ಮರುಳು, ಮತ್ತಿಷ್ಟು ಆಸೆ
ಎರಡೂ ನನಗಿತ್ತ ರೋಗ.

ಅವಳ ತೊಡೆಗಳಲ್ಲಿನ್ನೂ ಮೊಲೆವಾಲ ಘಮವಿದೆ...
ಗರ್ಭದಲ್ಲಿ ನಿರೀಕ್ಷೆಗಳನ್ನಿರಿಸಿಕೊಂಡು
ಧಾವಂತದಿಂದ ಮನೆಯಿಂದ ಹೊರ ನಡೆದ ಅವಳು
ಇನ್ನೆಲ್ಲೊ ಮರಳಿದ್ದಾಳೆ, ಖಾಲೀ ಕೊಡ ಹಿಡಿದು
ಅದರಲ್ಲಿ ಅವಳ ಕೊನೆಯ ಪ್ರಯತ್ನಗಳಿವೆ, ಬಣಗುಡುತ್ತ.

ಅವಳ ಹೆಜ್ಜೆಗಳು ಮೃದುವಾಗಿ ಎಡವಿರಬೇಕೆಲ್ಲೊ
ಒಂದಾನೊಂದು ಕಾಲಕ್ಕೆ ಯೌವನದಿಂದ ನಳನಳಿಸುತ್ತಿದ್ದ ಹಸಿರೆಲೆಗಳ
ಆದರೀಗ ಉರಿವಧರೆಯಾಗಿರುವ ಒಣದರಲೆಯ ಕಂಬಳಿಯ ಮೇಲೆ
ಗೀಚಿದಂತೆ ಬರೆದ ವಿಳಾಸಗಳು, ಸಂತ್ರಸ್ತ ಪರಿಹಾರಗಳ
ಹಳದೀ ಹಾಳೆಯಂತಾಗಿರುವ ವಿಭಜಿತ ಆಗಸದ ಅಚೆ ಮಗ್ಗುಲ ತರ ಭೂಮಿ

ಅವಳಲ್ಲಿ ಅರೆಕ್ಷಣ ನಿಂತು ಉಸಿರೆಳೆದುಕೊಂಡಿರಬೇಕೆಲ್ಲೊ
ಸಾಯಲಿರುವ ಸೂರ್ಯನ ಎದುರು ಕಪ್ಪಿಟ್ಟ
ಗಿಡಗಂಟಿಗಳ ತಿರುವಿನಲ್ಲಿ.
ಕತ್ತಲೆ ಬೆಳಕಿನ ನೆರಳಿನಾಟದಲ್ಲಿ ಕಾಣದಂತೆಯೂ ಕಂಡ ಅಂಚುಗಳ ಚಿತ್ತಾರ
ಹಾದು, ಆ ಅಪರಾಹ್ನ ರಸ್ತೆಯಲ್ಲೆದ್ದ ಧೂಳು ಈಗ ಉಸ್ಸೆಂದು ನೆಲಕೆ 
ಮರಳಿ ಒರಗುವುದ ಕಂಡು, ಸೊಕ್ಕಿದ ನದಿ ನೀರು ದಡದ ಒಡಲಿನ
ಬೆಂಕಿಯಾರಿಸಿ, ಅವಳ ಯೌವನದ ಸೊಂಟದಿ ಬಳಕಿ ಬಾಗಿದ ಕಾಲವೀಗ
ಕೊಡವುಕ್ಕಿ ಚೆಲ್ಲುವುದು ನಿಂತ ಬಳಿಕವಷ್ಟೇ ವಿರಮಿಸಿದೆ. 

ಅವಳ ತುಟಿಗಳ ಮೇಲೆ ದಿಗ್ದಿಂಗತ ದೂರ ಜೊತೆಗೇ ಬಂದ ಅವಳ ಮುದ್ದುಕೃಷ್ಣ
ಅವಳ ಜೋಗುಳದ ಲಯದಲ್ಲಿ ಅವಳಾಚೆಗೂ ಬೆಳೆದುಳಿದ ಕಂದ.

ಅವಳ ತೊಡೆಗಳಲ್ಲಿನ್ನೂ ಮೊಲೆವಾಲ ಘಮವಿದೆ
ಅವಳೆದೆಯಲ್ಲಿ ರಕ್ತವಿನ್ನೂ ಬಸಿದು ನಿಂತಿದೆ.
ನಾನ್ಯಾಕೆ ಅವಳ ಕೆರೆಯುತ್ತಿದ್ದೇನೆ ಇನ್ನೂ ಇನ್ನೂ
ಆ ಹಾಡ ಕೆನೆಯನ್ನು ಅವಳ ಸ್ರಾವದೋಕುಳಿಯಿಂದ?
ನನ್ನ ಕತೆಯ ಕಲ್ಲು ಬಿರುಕುಗಳೆಡೆಯಿಂದ ಅವಳು
ಪೂರ್ತಿಯಾಗಿ ಸೋರಿ ಬರಿದಾದ ಈ ದುರಿತಕಾಲದಲ್ಲಿ!

ಅರೆಚಿಂದಿ ಬಾವುಟದ ನಿಶ್ಶಕ್ತ ಅಲುಗಾಟದಂತೆ
ಆಘಾತದಿಂದ ಮರಗಟ್ಟಿದ ಕೈಗಳಿಂದ ಕುಟುಕು ಜೀವ
ಕೊನೆಯ ವಿದಾಯದ ಒಂದು ಅಸ್ಪಷ್ಟ ಸೂಚನೆಯನ್ನೇ
ಕಾದಿರುವಂತೆ, ಏನೋ ಅಸ್ಪಷ್ಟ ನೆನಪು, ಮರುಕಳಿಕೆ.

ಅಂದರೆ, ಗಡಿಯಲ್ಲಿ ಅವರು ಅವಳನ್ನು ಕೊಂದು ಕೆಡವಿದಾಗಲೂ
ಅವಳ ನಿರ್ಜೀವ ಮೊಲೆತೊಟ್ಟ ಮಗುವೊಂದು ಚೀಪುತ್ತಲೇ ಇತ್ತು.


(ಕವನಗಳ ಅನುವಾದಕ್ಕೆ ಮುಕ್ತ ಅನುಮತಿಯಿತ್ತು, ಏನೇ ಅನುಮಾನ ಬಂದರೂ ಕೇಳು, ವಿವರಿಸುತ್ತೇನೆ ಎಂದ ನಬ್ನೀತಾ ಕಾನುನ್ಗೊ ಅವರಿಗೆ ಕೃತಜ್ಞತೆಗಳು)
 
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, February 23, 2021

ಹೃದಯಕ್ಕೆ ಇರುವ ಅಭಿವ್ಯಕ್ತಿ ಸಾಧ್ಯತೆಗಳು


ಈಚೆಗೆ ಟಿ ಎಸ್ ಎಲಿಯಟ್ ಪೊಯೆಟ್ರಿ ಪುರಸ್ಕಾರ ಪಡೆದ ಭಾನು ಕಪಿಲ್ ಬಗ್ಗೆ ನೀವು ಓದಿರಬಹುದು. ಈ ಪುರಸ್ಕಾರ ಪಡೆದ ಪ್ರಪ್ರಥಮ ಭಾರತೀಯ ನಾರಿ ಆಕೆ. ಲಂಡನ್ನಿನಲ್ಲಿ ಪ್ರಕಟವಾದ ಪ್ರಪ್ರಥಮ ಕೃತಿಗೆ ಸಿಗುವ ಈ ಪುರಸ್ಕಾರಕ್ಕೆ ಅರ್ಹ ಕೃತಿಯನ್ನು ಆರಿಸುವವರು ಹೆಸರಾಂತ ಕವಿಗಳು. ಬಹುಮಾನದ ಮೊತ್ತ  25000 ಪೌಂಡ್ಸ್.

ಭಾನು ಕಪಿಲ್ ಕವಿತೆಗಳ ಹೆಸರು ಹೌ ಟು ವಾಶ್ ಅ ಹಾರ್ಟ್. ಹೃದಯವನ್ನು ತೊಳೆಯುವುದು ಹೇಗೆ ಎಂಬ ಸಾಕಷ್ಟು ನೇರವಾಗಿರುವ ಈ ಪ್ರಶ್ನೆಯನ್ನು ಮತ್ತು ಈ ಸಂಕಲನದ ಕವಿತೆಗಳನ್ನು ಅರ್ಥ ಮಾಡಿಕೊಳ್ಳಲು ಒಂದು ಮಟ್ಟದ ಪೂರ್ವ ಸಿದ್ಧತೆಯ ಅಗತ್ಯವಿದೆ. ಅದನ್ನು ಆಕೆ ಪುಸ್ತಕದ ಕೊನೆಯಲ್ಲಿ ಒದಗಿಸಿದ್ದಾಳೆ ಕೂಡ. ಒಂದೆರಡು ಕವಿತೆಗಳ ಅನುವಾದದ ಬಳಿಕ ಅದನ್ನು ವಿವರಿಸಿದರೆ ಚೆನ್ನಾಗಿರುತ್ತದೆ ಅನಿಸುವುದರಿಂದ ಮೊದಲಿಗೆ ಅನುವಾದಕ್ಕೇ ಹೊರಡುತ್ತೇನೆ.

1.
ಇಷ್ಟವಾಯಿತೆ ಇದು?
ಹೊರಗೆ ರಂಗಿನಲ್ಲದ್ದಿ ತೆಗೆದಂತಿದೆ
ಮತ್ತಿಲ್ಲಿ ನಾನು ಗತಕಾಲದ ಕವಿಯಂತೆ ಉಣ್ಣೆಯ ಸ್ಕಾರ್ಪ್ ತೊಟ್ಟು, ಒಳಗೆ.
ನೇರ ಹೊರಗೋಡಿ ಆ ಬೀಸಿ ಬರುವ ಗಾಳಿಗೊಡ್ಡಿ ನಿಲ್ಲುವಾಸೆಯಿದೆ ನನಗೆ.
ನಿನ್ನೆ ನೀನು ಆ ಹಿಮದ ಮೆಳೆಯೊಳಗೆ ವ್ಯಗ್ರಮೃಗದಂತೆ ಕಣ್ಮರೆಯಾದೆ, 
ವ್ಯಗ್ರಮೃಗ ನೀನು. 
ಬಹುಶಃ ನಾನೀಗ ಮತ್ತೆ ಬರೆಯಬಹುದು.
"ತೇಲಿ ಹೋದಂಥ ಭಾವವೊಂದರ ಸಾಧ್ಯತೆ’ - ಕೆ.
ಕಠಿಣ ಪದಗಳು: ಆತಿಥ್ಯ, ನಕ್ಷತ್ರಗಳು, ಮಲ್ಲಿಗೆಯ ಹೂವು
ಖಾಸಗಿತನ.
ನೀ ನಿನ್ನ ಮನೆಯೊಳಗೆ ನನಗೊಂದು ತಾವು ಕೊಟ್ಟೆ, ನನ್ನೆಲ್ಲ ಪುಸ್ತಕಗಳಿಗೆ, ಬಟ್ಟೆಬರೆಗೆ ಮತ್ತು ನಾನು

ಅದನ್ನೆಂದಿಗೂ ಮರೆಯುವುದಿಲ್ಲ.
‘ಏಶಿಯನ್ ಅನಾಥೆ’ ಎಂದೇ ನೀ ಕರೆವ
ಆ ನಿನ್ನ ದತ್ತುಪುತ್ರಿ
ಕಾಫಿಯ ಕಪ್‌ನೊಂದಿಗೇ ಬಂದು ಅಲ್ಲಿ ನನ್ನ ಮಂಚದ ಮೇಲೆ
ತುದಿಗಾಲಲ್ಲಿ ಕೂತಾಗ, ಅದೆಷ್ಟು ಖುಶಿಯಾಯ್ತು.
ಕುತಂತ್ರವೇನಿರಲಿಲ್ಲ ಅದರಲ್ಲಿ.
ಕಿಟಕಿಯಂಚಿನ ಕಪ್ಪುಗಳಿಂದ ನೀರು ಕುಡಿಯುವ ಬಗೆ
ತೋರಿಸಿಕೊಟ್ಟೆ ಅವಳಿಗೆ.

2.

ನಮ್ಮಿಬ್ಬರ ಜಂಟೀ ಗೋಟಾಳೆಯನ್ನು ವೈಭವೀಕರಿಸಲಾರೆ.
ನಿನ್ನ ರಾಸಲೀಲಾ ವಿನೋದ ಚಾಪೆ ಹಾಸಿತ್ತು, ಹೊರ ಜಗತ್ತಲ್ಲಿ ಅದೇನೇ ಆಗಿದ್ದರೂ
‘ನಾನಿದ್ದೇನೆ’ ಎನ್ನಬಲ್ಲ ನಿನ್ನ ಸಾಮರ್ಥ್ಯದ ಕುರಿತೇ ಯೋಚಿಸುತ್ತಿದ್ದೆ.
ಇಲ್ಲಿಂದ ನೀನು ಭವಿಷ್ಯದ ಬಗ್ಗೆ ಪುಂಖಾನುಪುಂಖ ಒಣಮಾತಿನ 
ಪಟಾಕಿಯನ್ನಷ್ಟೇ ಬಿಟ್ಟೆ.
ದಿನದಿಂದ ದಿನಕ್ಕೆ ನಿನಗೆ ಸಂತೋಷ ಎಂದರೇನೆಂದು ಅರಿವಾಗುತ್ತ ಹೋಯ್ತು
ನಿನ್ನ ಅತಿಥಿಯಾಗಿ ನಾನು
ನಮ್ಮಿಬ್ಬರ ಜಂಟೀ ಗೋಳುಗಳನ್ನು ವೈಭವೀಕರಿಸುವುದಕ್ಕೆ ತಯಾರಾಗುತ್ತ ಹೋದೆ.
ಕೊನೆಗೂ ಇರುಳು ಉರುಳಿದಾಗ ನಾನು
ಕತ್ತಲಕಡೆಗೆ ಹೊರಳಿದೆ, ಸಣ್ಣ ನಿಟ್ಟುಸಿರಿನೊಡನೆ.
ಅಂಡಾಣುವೊಂದು ನಷ್ಟಗೊಳ್ಳುವುದರಲ್ಲಿತ್ತು, ನೀನು
ಗುಡ್‌ನೈಟ್ ಎಂದುಸುರಿ ಮುತ್ತಿಟ್ಟಾಗ.
ಈ ಕಲ್ಪನೆಗೊಂದು ಬೊಜ್ಜ ಮಾಡಬೇಕೆಂದು
ಅನಿಸಿಬಿಟ್ಟಿತು ಆಗಲೇ.

 
3.
ನನ್ನ ಎಡಕ್ಕೆ ಹೊಳೆವ ರಂಗಿನಾಟದ ಕದವಿದೆ
ಮತ್ತು ಬಲಕ್ಕೆ ಕಟುಕನ ಬಲಿಪೀಠ
ನಿನ್ನ ಮೇಲ್ಗಡೆ ಒಂದು ಹೃದಯ
ಮಂಜುಗಡ್ಡೆಯೊಳಗೇ ಮಿಡಿವ ಹೃದಯ
ನಾನು ನನ್ನ ಈ ಪ್ರದರ್ಶನದ ಸೆಟಿಂಗ್, ಅದರ ಒಟ್ಟು ವಾತಾವರಣ
ನನ್ನನ್ನೆ ಹೋಲುತಿರಬೇಕು,
ನನ್ನ ಬಾಲ್ಯದ ಸ್ಮೃತಿಗಳ ಮನೆಗಿಂತ
ಎನಲು ವಿವರ್ಣವಾಯ್ತು ನಿನ್ನ ಮೊಗ.
ಎಲ್ಲವೂ ಮುಗಿದು ಹೋಯಿತೆನಿಸಲು
ಕಾರಣವಾದುದೇನಿಲ್ಲೀಗ?
ನಿನ್ನ ಕಂಗಳಲ್ಲಿ ಒಸರಿದ ಹಾಲು
ನನ್ನೆದೆಯ ಹಿಂಡುವುದು.
ಆ ಐನು ಕ್ಷಣದಲ್ಲೆ ಅರ್ಥವಾಯಿತು ನನಗೆ 
ನಾನನ್ನ ಅಂಗಾಂಗವನ್ನೆಲ್ಲ ನಿನ್ನೆದುರು ತೆರೆದಿಟ್ಟಿದ್ದೇಯಾದಲ್ಲಿ
ಪೂರ್ತಿಯಾಗಿ ಮುಕ್ಕಿ ಮೂರಾಬಟ್ಟೆ ಮಾಡಬಲ್ಲ
ವಿನಾಶಕಾರಿ ತೋಳ ನೀನೆಂದು.
ಅನುಮಾನವಿಲ್ಲದ ಹಾಗೆ
ನಿನ್ನ ಮುಂದಿನ ಕವಿತೆಯಲ್ಲಿ
ಕೆತ್ತಿ ಕಿತ್ತ ಹೃದಯವೊಂದರ ಪ್ರತಿಮೆ
ಹಾಜರಿಕ್ಕಿತು.

4

ಈ ಮುಗಿವ ಮಾಗಿ ಚಿಗುರುವ ಚೈತ್ರದಂಚಿನ
ಒಂದು ಮುಂಜಾನೆ ಟೀವಿಯೆದುರು ಕಾಫಿ ಹಿಡಿದು
ಮೈಮುರಿಯುತ್ತ ಈ ಪದಗಳನ್ನು ಬರೆಯುತ್ತಿರಬೇಕಾದರೆ
ಕೆನೆಗಟ್ಟಿದ ಅಗ್ನಿಯ ತೇಜ ಆವರಿಸಿಕೊಂಡಂತೆ.
ಸತ್ತಾಗ ನಾನು ಎಲ್ಲವನ್ನೂ ಕಳೆದುಕೊಳ್ಳುವ
ಒಳಗುದಿಯ ನೆನಪಾಗಲಿಲ್ಲ ನನಗೆ.
ಇನ್ಯಾರದೋ ಮನೆಯಲ್ಲಿ ಸದಾಕಾಲ ಅತಿಥಿಯಾಗಿ
ಇರುವುದೆಂದರೆ ಇಂಚಿಂಚು ಸಾಯುತ್ತಲೇ ಇರುವಂತೆ.
ಯಾವುದೇ ಸಂಕೋಚವಿಲ್ಲದೆ, ಅನಿಸಿದ್ದನ್ನು ಮುಕ್ತವಾಗಿ
ಹೇಳಿರೆಂಬ ಆತಿಥೇಯರ ಆಹ್ವಾನ
ದಾಳದಲ್ಲಿ
ಗೊತ್ತು ಅತಿಥಿಗೆ ಸದಾ ಹಾಗೂ ಹೀಗೂ ಓಲಾಡುವ ಒಂದು ಕುಣಿಕೆಯಿದೆ.
ಕತ್ತು ಕೊಟ್ಟಲ್ಲಿ ಕುತ್ತು ಬರುವುದು
ಜೀವನಸೆಲೆ ಬತ್ತಿ ಹೋಪುದು.
 
5.
ಹೃದಯವನ್ನು ತೊಳೆಯಬೇಕು ಹೇಗೆ
ಹೊರತೆಗೆದು.
ಅದು ಜೀವಿಯೆ? ಮಂಜುಗಡ್ಡೆಯೆ?
ರಂಗಕರ್ಮಿಯ ಪ್ರಶ್ನೆಯಲ್ಲೇ
ಅಧಿಕಾರಶಾಹಿಯ ಪಸೆಯಿದೆ.
ಅಧಿಕಾರವೇ ಸಂಬಂಧವೊಂದರ ಕುರುಹಾಗಿದ್ದರೆ
ನಾವೀಗ ಸರಿಯಾದ ಕಡೆ ತಲುಪಿದೆವೆನ್ನಿ.
ಏನಾದರೂ ಸ್ವಲ್ಪ ಹೆಚ್ಚೂಕಡಿಮೆಯಾಯಿತೆಂದರೆ
ಯಾರು ಅದಕ್ಕೆಲ್ಲ ಆಮೇಲೆ?
ಎನ್ನುವ ಅರ್ಥವಿದೆ, ಅದರಲ್ಲಿ. ಅದು ಇರಬೇಕಾದ್ದೇ ಹಾಗೆನ್ನಿ.
ನಿನ್ನ ಕೆಲಸ ಅರ್ಥಮಾಡಿಕೊಳ್ಳೋದು, ಫೀಡ್‌ಬ್ಯಾಕ್ ಹ್ಯಾಗಿರಬೇಕು ಅನ್ನೋದನ್ನ.
ಮನೆಯ ಹೊರಗೆ ಕಾಲ ಕಳೆಯೋದು ಅಂದರೇನೇ ಒಂದು ಖುಶಿ.
ಇದರ ಜೊತೆ ಎಲ್ಲಿಗಾದರೂ ಹೋಗೋದಾದರೂ ಹ್ಯಾಗೆ
ಮಾಡಬಹುದಾದ್ದೆಲ್ಲ ಇಷ್ಟೇ:
ಪೆಟ್ಟಿಗೆಯೊಳಗೆ ಅದಾಗಲೇ ಕರಗುತ್ತಿರೋ
ಕೆಂಬಣ್ಣದ ಮಂಜುಗಡ್ಡೆಯೊಳಗೆ
ಇಕ್ಕಿಬಿಡೋದು, ಕೈಯನ್ನ.
***********************************************************
ಇನ್ನು ಸಾಕು.

ನಿಮಗೆಲ್ಲ ರಂಗಪ್ರಯೋಗಗಳನ್ನು ಆಧರಿಸಿ ಅದಾಗಲೇ ಬರೆದ ನಾಟಕದ ಪಠ್ಯವನ್ನು ತಿದ್ದುವುದು, ಹಾಗೆ ತಿದ್ದಿ ಅಂತಿಮ ಪಠ್ಯವನ್ನು ಸಿದ್ಧಪಡಿಸುವುದು ಸಾಮಾನ್ಯ ಎನ್ನುವುದು ಗೊತ್ತು. ಹಾಗೆಯೇ ಒಬ್ಬ ಸಮರ್ಥ ನಿರ್ದೇಶಕ ನಾಟಕದ ಪಠ್ಯವನ್ನು ಓದುವಾಗಲೇ ಅದರ ರಂಗಸಾಧ್ಯತೆಗಳ ಬಗ್ಗೆ ತನ್ನದೇ ಆದ ಕಲ್ಪನೆಯನ್ನುಹರಿಯ ಬಿಡಲು ಪಠ್ಯ ಎಷ್ಟರಮಟ್ಟಿಗೆ ಅವಕಾಶಗಳನ್ನುಳಿಸಿದೆ ಎನ್ನುವುದನ್ನೂ ಲೆಕ್ಕ ಹಾಕುತ್ತಿರುತ್ತಾನೆ. ಪಠ್ಯವೇ ಎಲ್ಲವನ್ನೂ, ಅಂದರೆ ಪಾತ್ರ, ಅದರ ಗಾತ್ರ, ಅದರ ಜಗತ್ತಿನ ಗಾತ್ರ,  ಬೆಳಕು, ಸಮಯ, ಪ್ರತಿಯೊಂದರ ಅಂದರೆ ಮಾತಿನ, ಚಲನೆಯ ಕಾಲಾವಧಿ, ಇತ್ಯಾದಿ ಇತ್ಯಾದಿಗಳನ್ನು, ನಿಖರವಾಗಿ ಸೂಚಿಸುತ್ತ ನಿರ್ದೇಶಕನ ಕೈಕಾಲು ಕಟ್ಟಿಹಾಕಿದಷ್ಟೂ ಆ ನಾಟಕ ದುರ್ಬಲವಾಗುತ್ತ ಹೋಗುತ್ತದೆ. ನಾಟಕದ ಪಠ್ಯ ಸದಾ ಸಾಧ್ಯತೆಗಳ ತುದಿಗಳನ್ನು ಗೊಂಡೆ ಕಟ್ಟದೆ (ಲೂಸ್ ಎಂಡ್ಸ್) ಮುಕ್ತವಾಗಿಡುತ್ತ ಹೋಗಬೇಕು. ಕವಿತೆಗೂ, ಕತೆಗೂ ಎಲ್ಲ ಅದರೊಂದಿಗೆ, ಅಂದರೆ ಈ ಬಗೆಯ ತಂತ್ರದೊಂದಿಗೆ, ಏನೋ ಒಂದು ಬಗೆಯ ಸಂಬಂಧವಿದೆ. ಹೇಳಬೇಕು ಎಷ್ಟು, ಹೇಳಬಾರದು ಎಷ್ಟು ಎಂಬುದರ ನಡುವಣ ಒಂದು ಅನುಪಾತದಲ್ಲಿಯೇ ಕತೆಯ, ಕವಿತೆಯ ಯಶಸ್ಸು ಇರುತ್ತದೆ. ಭಾನು ಕಪಿಲ್ ಕವಿತೆಗಳ ಮಹತ್ವ ಇರುವುದೇ ಇಲ್ಲಿ. ಭಾಷೆಯನ್ನು ‘ಹೀಗೂ’ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟದ್ದಕ್ಕಾಗಿ ಆಕೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ಹೇಗೆ ಎನ್ನುವ ಬಗ್ಗೆ ಪುಸ್ತಕದ ಕೊನೆಯಲ್ಲಿ ಸ್ವತಃ ಭಾನುಕಪಿಲ್ ವಿವರಿಸಿದ್ದಾರೆ. ಅದನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.

ಗಾಳಿಯಲ್ಲಿ ಒಂದು ದೇಹದ ಆಸುಪಾಸಿನಲ್ಲೇ ಒಂದು ಹೃದಯ ತೇಲಾಡುತ್ತಿರುತ್ತದೆ. ಅಥವಾ, ಒಂದು ಬಟ್ಟೆಯಲ್ಲಿ ಸುತ್ತಿದ ಹೃದಯ. ಅದರ ಸುತ್ತ ಅಂಗಾಂಗಗಳನ್ನು ಚೌಕಟ್ಟಿನಂತೆ ಇರಿಸಲಾಗಿದೆ. ಇದು ಒಂದು ಪರಿಕಲ್ಪನೆ. 2019ರಲ್ಲಿ ಒಂದು ದೃಶ್ಯ ಪರಿಕಲ್ಪನೆಯನ್ನು ಸಂಯೋಜಿಸಲು ಆಹ್ವಾನ ಬಂದಾಗ ಭಾನು ಕಪಿಲ್ , ಸಹೋದರಿ ರೋಹಿಣಿ ಕಪಿಲ್ ಜೊತೆ ಸೇರಿಕೊಂಡು ಇನ್‌ಸ್ಟಲ್ಲೇಶನ್, ರಂಗಪ್ರಸ್ತುತಿ, ಕವಿತಾ ವಾಚನ ಎಲ್ಲವೂ ಸೇರಿಕೊಂಡಿರುವ ಒಂದು ದೃಶ್ಯ ಪರಿಕಲ್ಪನೆಯನ್ನು ಸಂಯೋಜಿಸುತ್ತಾರೆ. ಅದರ ಹೆಸರು ಹೌ ಟು ವಾಶ್ ಅ ಹಾರ್ಟ್. ಇದನ್ನು ಮಾಡುತ್ತ ಭಾನು ಕಪಿಲ್ ಅವರಿಗೆ ಕವಿತೆ ಏಕೆ ನಿಜಕ್ಕೂ ಮಹಾನ್ ಆದುದು ಎಂಬ ಸತ್ಯ ಗೋಚರಿಸಿತಂತೆ. 

ಲಂಡನ್ ತಲುಪಿದ ರಾತ್ರಿ ಅವರಿಗೆ ಅಂಕುರ್ ಕಾರಾ ಎಂಬವರಿಂದ ಒಂದು ಕವನ ಸಂಕಲನಕ್ಕೆ ಬ್ಲರ್ಬ್ ಬರೆದು ಕೊಡಬಹುದೆ ಎನ್ನುವ ಕೋರಿಕೆ ಬರುತ್ತದೆ.  ವೈಫೈ ಸರಿಯಾಗಿ ಕೆಲಸ ಮಾಡದೆ, ಕವಿತೆಗಳ ಹಸ್ತಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಸಾದ್ಯವಾಗುವುದಿಲ್ಲ. ಹಾಗಾಗಿ ಇವರು ನೇರವಾಗಿ ಕವಿಯ ಬಳಿಯೇ ಅವರ ಕವಿತೆಗಳ ಬಗ್ಗೆ ಮಾತನಾಡುವ ಅನಿವಾರ್ಯ ಹುಟ್ಟಿಕೊಳ್ಳುತ್ತದೆ. ಅಂಕುರ್ ಒಬ್ಬ ಕಾರ್ಡಿಯಾಜಲಿಸ್ಟ್. ಭಗವದ್ಗೀತೆಯಿಂದ ಸ್ಫೂರ್ತಗೊಂಡ ಪ್ರೀತಿ ಮತ್ತು ಹೃದಯ ದಂದುಗಗಳ ಬಗ್ಗೆ ಅವರ ಕವಿತೆಗಳು! ವಲಸೆಬಂದ ಹೃದಯಗಳ ಬಗ್ಗೆ ತಮಗೇನು ಗೊತ್ತು ಎಂದು ಅವರಲ್ಲಿ ವಿಚಾರಿಸುತ್ತಾರೆ ಭಾನು ಕಪಿಲ್. ಆತಂಕ ಮತ್ತು ಆಘಾತಗಳ ಹಾದಿಯದು. ಅಂಕುರ್, ಭಾನು ಅವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರ ಕಾಯಿಲೆಯಂಥ ಸ್ಥಿತಿಯ ಕುರಿತು ಹೇಳುತ್ತಾರೆ. 

ಮುಂದೆ ICA ಕಾರ್ಯಕ್ರಮದಲ್ಲಿ ಭಾನುಕಪಿಲ್ ಈ ಇ-ಮೇಲ್ ಸಂಭಾಷಣೆಯನ್ನು ಯಥಾವತ್ ಓದುವುದು, ಬಳಿಕ ಪುಸ್ತಕವನ್ನು ಹರಿದು ಶ್ರೇಷ್ಠ ರಕ್ತದಲ್ಲಿ ಅದ್ದುವುದು ಮುಂತಾದ ಕೆಲವು ರಂಗನಡೆಗಳನ್ನು ಸೇರಿಸಿಕೊಳ್ಳುತ್ತಾರೆ. ಈ ಶ್ರೇಷ್ಠ ರಕ್ತ ಎಂದರೇನು? ಅದೊಂದು ಪರಿಕಲ್ಪನೆ ಹುಟ್ಟಿದ್ದು ಕೂಡ 2002ರಲ್ಲಿ, Lygia Pape ಸುರು ಮಾಡಿದ ರಂಗ ಪರಂಪರೆಗೆ ಸಲ್ಲುವಂಥದ್ದು. ರಂಗದ ಮೇಲೆ ಇಬ್ಬರು ಮುಖಾಮುಖಿಯಾಗಿ ಕುರ್ಚಿಯಲ್ಲಿ ಕುಳಿತಿರುತ್ತಾರೆ.  ಇಬ್ಬರ ಮೇಲಕ್ಕೆತ್ತಿದ ಕೈಗಳಲ್ಲೂ ಕೆಂಪು ಬಣ್ಣದಲ್ಲಿ ಅದ್ದಿದ ಮಂಜುಗಡ್ಡೆಯಿರುತ್ತದೆ. ಮಂಜುಗಡ್ಡೆ ಕರಗಿದಂತೆಲ್ಲ ಕೈಯಲ್ಲಿರುವ (ಹೃದಯ?) ಅದರಿಂದ ರಕ್ತ ಹನಿಹನಿಯಾಗಿ ಒಸರಿದಂತಿರುತ್ತದೆ, ನೋಡುವ ಪ್ರೇಕ್ಷಕರಿಗೆ. ಯಾರ ಕೈಯಲ್ಲಿರುವ ಮಂಜುಗಡ್ಡೆ ಮೊದಲು ಕರಗುವುದೋ ಅದು ಶ್ರೇಷ್ಠರಕ್ತ. ಇಲ್ಲಿ ಪಾತ್ರಧಾರಿಗಳು ಮೌನವಾಗಿರುವ ಅಗತ್ಯವನ್ನೇನೂ ರಂಗನಡೆ ಸೂಚಿಸುವುದಿಲ್ಲವಾದರೂ ಸಾಮಾನ್ಯವಾಗಿ ರಂಗದಲ್ಲಿ ಮೌನವೇ ನೆಲೆಸಿರುವುದು ಸ್ವಾಭಾವಿಕ. ಇಲ್ಲಿ ಮೊದಲಿಗೆ ಭಾನು ಅವರಿಗಿದ್ದ ಪರಿಕಲ್ಪನೆಯ ಪ್ರಕಾರ ಆ ಹೃದಯಗಳ ಕತೆಯನ್ನು ಅವೇ ಹೇಳಿಕೊಂಡ ಹಾಗೆ ರಂಗದ ಹಿಂದಿನಿಂದ ಧ್ವನಿ ಕೊಡುವುದು. ಆದರೆ ಅದು ಕಷ್ಟದ್ದು ಅನಿಸಿ ಬೇರೊಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ಪ್ರೇಕ್ಷಕರ ಕೈಗಳಲ್ಲೇ ಕೆಂಬಣ್ಣದ ಮಂಜುಗಡ್ಡೆಯನ್ನಿರಿಸುತ್ತಾರೆ, ಅವರ ಸುಖಾಗಮನ ಬಯಸುವ ಕುರುಹಾಗಿ. ಏನನ್ನಾದರೂ ಓದುವ ಯೋಜನೆ ಇದ್ದರೂ ಅದನ್ನು ಕೈಬಿಟ್ಟು ಮೌನಕ್ಕೆ ಶರಣಾಗುತ್ತಾರೆ. ಹೀಗೆ ಬಕ್ಕಿಂಗ್‌ಹ್ಯಾಮ್ ಅರಮನೆಯಿಂದ ಕೆಲವೇ ಗಜಗಳ ಅಂತರದಲ್ಲಿ ನಡೆದ ಈ ಕಾರ್ಯಕ್ರಮಗಳು ಕೊಟ್ಟ ಅನುಭವವೇ ಈ ಸಂಕಲನದ ಪ್ರಧಾನ ಧಾರೆಯಾಗಿ ನೆರವಾಗಿದ್ದನ್ನು ಭಾನು ಕಪಿಲ್ ಸ್ಮರಿಸುತ್ತಾರೆ.

ಹೃದಯವನ್ನು ತೊಳೆಯಬೇಕು ಹೇಗೆ:
ಹೀಗೆ.
ಜೂನ್ ತಿಂಗಳ ಆರಂಭದಲ್ಲೊಂದು ದಿನ
ಬುಧವಾರ ಮುಸ್ಸಂಜೆ
ನವಿರಾದ ಪಕಳೆಯ ಹೂವು
ಬೆಳ್ಳನೆಯ ಬೆಳಕಿನಂತರಳಿ
ಮತ್ತರೆಕ್ಷಣ ಹಸಿರಾಗಿ ಹೊಳೆದು...

ICAಯ ಚೌಕಿಯಲ್ಲಿ
ಎಲ್ಲ ತಂಪಾಗಿತ್ತು.
ತಿನಿಸಿನ ಮೇಲಿನ ಜೇನಿಗೆ
ದುಂಬಿಗಳು ಬಂದಿದ್ದವು.
ನನ್ನಮ್ಮ ಗದರಿದ್ದಳು,
ಹೊತ್ತಾಗ ಒದ್ದಂತೆ ಈಗಲೂ ಒದೆಯಲು
ನಾನಿನ್ನೂ ನಿನ್ನ ಹೆತ್ತ ಗಬ್ಬದ ಚೀಲವೇನಲ್ಲ
ಬದಲು
ಕೆಂಪು ಕೆಂಪಾದ ಮಂಜುಗಡ್ಡೆಯ ಮೇಲೆ
ಬಿಸಿನೀರ ಸುರಿದುಬಿಟ್ಟೇನು.
ರಿಹರ್ಸಲ್ ಮಾಡುವಾಗೆಲ್ಲ
ಅಚ್ಚರಿಗೊಳ್ಳುವೆ ನಾನು
ಆ ಗಾಢ ಭಾವ, ಆಳ...
ಸೂಕ್ಷ್ಮ ಸಂವೇದನೆ
ಹಬೆಯಷ್ಟು ಹಗುರ....ತೇಲಿ ತೇಲಿ....

ಈ ಪುಸ್ತಕದ ಧ್ವನಿ ಇದು: ವಲಸೆ ಬಂದ ಅತಿಥಿ ಮತ್ತು ದೇಶೀಯನಾದ ಆತಿಥೇಯ.ಈ ಕವಿತೆಗಳಲ್ಲಿ ಮಾತನಾಡುವ ವ್ಯಕ್ತಿ ಕಲಾವಿದೆ. ತನ್ಮೂಲಕ ಕೆಂಪು (ರಕ್ತ),  ಹೃದಯ ಮತ್ತು ಮಂಜುಗಡ್ಡೆ ಮಾತನಾಡುತ್ತವೆ. 

ಮುಂದೆ ತುಂಬ ಕುತೂಹಲಕಾರಿಯಾದ ಒಂದು ಸಂಗತಿಯನ್ನು ಭಾನು ಕಪಿಲ್ ಹಂಚಿಕೊಳ್ಳುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ದಂಪತಿಗಳು ಓರ್ವ ವೀಸಾ ಸರಿಯಾಗಿಲ್ಲದ ವ್ಯಕ್ತಿಗೆ ಆಶ್ರಯ ನೀಡುತ್ತಾರೆ. ಅವರಿಬ್ಬರೂ ಬಿಳಿಯರು. ಇದಕ್ಕೆ ಕೆಲವೇ ವರ್ಷಗಳ ಹಿಂದೆ ಅವರು ಫಿಲಿಪ್ಪೇನ್ಸ್‌ನ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿರುತ್ತಾರೆ. ಭಾನು ಕಪಿಲ್ ಪತ್ರಿಕೆಯಲ್ಲಿ ಕಾಣಿಸಿಕೊಂಡ ಈ ದಂಪತಿಗಳ ಸಂದರ್ಶನವನ್ನು, ಮಾತನಾಡುವಾಗ ಆ ಹೆಂಗಸಿನ ಮುಖದಲ್ಲಾದ ಭಾವ ಸಂಘರ್ಷಗಳ ಏರುಪೇರನ್ನು ನೆನಪಿಸಿಕೊಳ್ಳುತ್ತ ಈಗ ಅಚ್ಚರಿಗೊಳ್ಳುತ್ತಾರೆ ಕೂಡ. ಏಕೆಂದರೆ, ಆಮೇಲೆ ಅವರೆಷ್ಟೇ ಪ್ರಯತ್ನ ಪಟ್ಟರೂ ಅಂಥ ಒಂದು ಲೇಖನ ಅವರಿಗೆ ಯಾವ ಪತ್ರಿಕೆಯಲ್ಲೂ ಸಿಗುವುದೇ ಇಲ್ಲ ಮತ್ತು ತಾನು ಅದನ್ನು ನಿಜಕ್ಕೂ ಓದಿದೆನಾ ಅಥವಾ ಅಂಥ ಭ್ರಾಂತಿಗೊಳಗಾದೆನಾ ಎಂಬ ಅನುಮಾನಕ್ಕೆ ಸ್ವತಃ ಅವರೇ ಒಳಗಾಗುತ್ತಾರೆ! 

ನಾನು ನಿಮಗೆ ಮೊದಲು ಕವಿತೆಗಳನ್ನೇ ಓದಿಸಲು ಒಂದು ಕಾರಣವಿದೆ. ಇದನ್ನೆಲ್ಲ ಹೇಳದೆಯೇ ಕವಿತೆ ಓದುವಾಗ ಅದು ಕೊಡುವ ಅರ್ಥ, ಅನುಭೂತಿಯೇ ಬೇರೆ. ಇಲ್ಲಿ ಈ ಕವಿತೆಗಳನ್ನು ಓದುತ್ತಾ ನಮಗೆ ಅನಿಸುವುದು ದಂಪತಿಗಳ ನಡುವಿನ ಕಂಡೂಕಾಣದಂತಿರುವ ಅಥವಾ ಈಗಿನ್ನೂ ರೂಪುಗೊಳ್ಳುತ್ತಿರುವ ಬಿರುಕು. ಆದರೆ ಈ ಹಿನ್ನೆಲೆ ಓದಿದ ತರುವಾಯದಲ್ಲಿ ಕಾಣುವುದು ಅಜಗಜಾಂತರ ವ್ಯತ್ಯಾಸದ ಹೊಸ ಜಗತ್ತು. ಕರಿಯ-ಬಿಳಿಯರ ಸಂಬಂಧದ ನಡುವಿನ ಸಂಘರ್ಷ, ಭಾವದ ಏರುಪೇರು, ತವಕ-ತಲ್ಲಣ. 

ನಡುವೆ ಹೃದಯದ ಮಲಿನ, ಗಂಗೆಯ ನಿರ್ಮಲೀಕರಣ. ಇದು ನಡುವೆ ಅಲ್ಲ. ಇದೇ ಇಡೀ ಕೃತಿಯ ನಾಭಿ. ಸ್ವರ ಇಲ್ಲಿಂದಲೇ ಹೊರಟಿದೆ. ಕೇಳಿಸಿಕೊಳ್ಳುವುದು ನಮಗೆ ಸೇರಿದ್ದು.

ನಿಮಗೀಗ ನಿಜಕ್ಕೂ ರಂಗಸಾಧ್ಯತೆಗಳನ್ನು ಹುಡುಕುತ್ತಾ ಹುಟ್ಟುವ ಕವಿತೆಗಳ ಬಗ್ಗೆ, ಅದು ಪಡೆದುಕೊಳ್ಳುವ ಭಾಷೆಯ ಲಯದ ಬಗ್ಗೆ, ಹಾಗೆ ಭಾಷೆಯ ಸಾಧ್ಯತೆಯನ್ನು ವಿಸ್ತರಿಸುವಂತೆ ಬರೆದ ಭಾನು ಕಪಿಲ್ ಬಗ್ಗೆ ಅಚ್ಚರಿ ಅನಿಸುವುದಿಲ್ಲವೆ? 

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, February 14, 2021

ಕವಿತೆಯಂಥಾ ಕತೆಗಳು


ಮುದಿರಾಜ ಬಾಣದ್ ಅವರು ಕತೆಗಳನ್ನು ಬರೆದಿಲ್ಲ, ತಮ್ಮ ಅನುಭವವನ್ನೇ ರಸಪಾಕದಂತೆ ತೆಗೆದು ಬಡಿಸಿದ್ದಾರೆ ಅನಿಸುತ್ತದೆ. ಪ್ರತಿಯೊಂದು ಕತೆಯೂ ತನ್ನ ಪ್ರಾಮಾಣಿಕ ಧ್ವನಿಯಿಂದ, ಸಹಜವಾದ ವಿವರಗಳಿಂದ ಜೀವಂತಿಕೆ ಪಡೆದು ಮಿಡಿಯುತ್ತವೆ. ಅವರ ಭಾಷೆ, ಒಂದು ಕತೆಯನ್ನು ಅವರು ಹೇಳುವಲ್ಲಿ ವಹಿಸುವ ಮುತುವರ್ಜಿ ಮತ್ತು ತಂತ್ರಗಾರಿಕೆ, ಮೊದಲ ಸಂಕಲನದಲ್ಲಿಯೇ ಅವರು ಸಾಧಿಸಿರುವ ಪ್ರಬುದ್ಧತೆ ಎಲ್ಲವೂ ಒಂದಕ್ಕಿಂತ ಒಂದು ಹೆಚ್ಚುಗಾರಿಕೆ ತೋರಿಸಿ ಬೆರಗು ಮೂಡಿಸುತ್ತವೆ. ಹೆಚ್ಚಿನೆಲ್ಲಾ ಕತೆಗಳು ಉತ್ತಮ ಪುರುಷದಲ್ಲೇ ಇದ್ದರೂ ಅವು ಉತ್ತಮಪುರುಷ ನಿರೂಪಣೆಯ ಋಣಾತ್ಮಕ ಅಂಶಗಳಿಂದ ಮುಕ್ತವಾಗಿವೆ. ಅವರ ಕತೆಯಲ್ಲಿ ಅವರು ಲಿಪಿಕಾರನಷ್ಟೇ ಆಗಿ ನಿರೂಪಿಸಬಲ್ಲ ಸಂಯಮ ತೋರಿರುವುದು ಅದಕ್ಕೆ ಸಾಕ್ಷಿಯಾಗಿದೆ. 

‘ಮೂಗುದಾಣ’ ಕತೆ ಅದರ ಸಹಜ, ಸರಳ ಗುಣದಿಂದಲೇ ಬಹುಮುಖ್ಯ ಕತೆಯಾಗಿ ನಿಂತಿದೆ. ಇಲ್ಲಿನ ಗ್ರಾಮ್ಯ ಭಾಷೆಗೆ ಕಾವ್ಯದ ಗುಣವಿರುವುದನ್ನು ಕಾಣುತ್ತೇವೆ. ಹಾಗಾಗಿ ಇಲ್ಲಿ ತಂದೆಯೊಬ್ಬನ ಪ್ರೀತಿ ನಮ್ಮನ್ನು ಸೆಳೆದರೂ ಊರಿನ ಮೇಲ್ವರ್ಗದವರ ತಿರಸ್ಕಾರ ಬೆರೆತ ದೃಷ್ಟಿ ಮತ್ತು ನಿಂದನಾತ್ಮಕ ಆರೋಪಗಳು ಇಡೀ ಕತೆಯ ಆತ್ಮವಾಗಿ ಈ ಕತೆಯ ಕೇಂದ್ರವಾಗಿರುವ ಒಂದು ಕುಟುಂಬವನ್ನು, ಅಷ್ಟಿಷ್ಟು ಇಡೀ ಕೇರಿಯನ್ನು (ವರ್ಗವನ್ನು) ಕೆಂಡದಲ್ಲಿಟ್ಟು ಬೇಯಿಸತೊಡಗುತ್ತದೆ. ಇದರ ತೀವ್ರತೆ ಬೆಚ್ಚಿಬೀಳಿಸುವಷ್ಟು ಗಂಭೀರವಾಗುವುದು ಅದೇ ನಿಂದಾತ್ಮಕ ಆರೋಪವನ್ನು ಒಳಗಿನವರೇ ಒಂದು ಮೂಗುದಾರವನ್ನಾಗಿ ಬಳಸಿಕೊಳ್ಳುವಷ್ಟು ಅಸೂಕ್ಷ್ಮರಾದಾಗ. ಆದರೆ ಕತೆ ಈ ಅರಿವನ್ನು ಕೂಡ ತಣ್ಣಗೆ ದಾಖಲಿಸಿ ಸುಮ್ಮನಾಗುವುದು ಈ ಕತೆಗಾರರ ಬಗ್ಗೆ ಅಭಿಮಾನ ಮೂಡಿಸುತ್ತದೆ.

‘ಸಿಂಹರಾಶಿ’ಯಲ್ಲಿ ಪುಟ್ಟ ಕೂಸು ವನ್ನೆಲ ಕಾಯಿಲೆ ಬಿದ್ದಿದ್ದಾಳೆ. ಅವಳಿಗೆ ತುರ್ತಾಗಿ ರಕ್ತ ಕೊಡಬೇಕಾಗಿದೆ. ಅವಳು ದಿನೇ ದಿನೇ ಕೃಶಳಾಗುತ್ತಿದ್ದಾಳೆ ಎಂಬ ವಿವರಗಳಷ್ಟೇ ಇವೆ. ಆದರೆ ಇಡೀ ಕತೆ ಈ ಮೂರು ಸಾಲುಗಳಲ್ಲಿ ನಿಮಗೆ ದಕ್ಕಿದ ವನ್ನೆಲಳ ಕುರಿತಾಗಿಯೇ ಇದೆ. ಅಂದರೆ, ಹೊಟ್ಟೆಯ ಮಗಳ ಬದುಕಿನ ಕುರಿತು ಹುಟ್ಟಿದ ಆತಂಕ ಹೇಗೆಲ್ಲ ಮನುಷ್ಯನ (ಅಪ್ಪನ) ಜೀವಸತ್ವವನ್ನು ಹೀರಬಹುದು, ಹೇಗೆ ಅವನಲ್ಲಿ ವಿವರಿಸಲಾಗದ ಒಂದು ದುಗುಡ, ಆತಂಕ, ತಲ್ಲಣ ತುಂಬಬಹುದು ಎನ್ನುವುದನ್ನು ಬಲ್ಲವರೇ ಬಲ್ಲರು. ಇಲ್ಲಿಯೂ ಕತೆಗಾರ ತನಗಿದು ಅರಿವಿಲ್ಲ ಎಂಬಷ್ಟು ಮುಗ್ಧತೆಯಲ್ಲಿಯೇ ‘ಏನಿದೆಯೋ ಅದನ್ನಷ್ಟೆ’ ಹೇಳಿ ಕತೆಯನ್ನು ಮುಗಿಸುತ್ತಿದ್ದಾರೆ. ಈ ಸಂಯಮ, ಈ ನಿಯಮ ಕತೆಯ ಯಶಸ್ಸಿಗೆ ಪೂರಕವಾಗಿದೆ.

‘ಹೊತ್ತು ಮುಳುಗುವ ಮುನ್ನ ಆವರಿಸಿದ ಕತ್ತಲು’ ಕತೆಯಲ್ಲಿ ಒಂದು ತಂತ್ರವಿದೆ. ಏಳುವಾಗಲೇ ಮಗುವಿನ ಅಳು, ಅದರ ಕಾಲಿಗೆ ಕಚ್ಚಿಕೊಂಡ ಕಟ್ಟಿರುವೆ, ಹೆಂಡತಿಯ ನಿರ್ಲಕ್ಷ್ಯ, ಅವಳತ್ತ ಒಗೆಯುವ ಕಟ್ಟಿಗೆ, ಅವಳ ನೋವಿನ ಚೀತ್ಕಾರ, ಬೋರ್‌ವೆಲ್ ಸುತ್ತ ಜಮಾಯಿಸಿದ ಜನರ ಗುಸಗುಸ, ಅಕ್ಕನ ಫೋನು, ಮತ್ತೆ ಒಲೆಯ ಮುಂದೆ ಕುಳಿತ ಹೆಂಡತಿಯ ಅನ್ಯಮನಸ್ಕತೆ, ಸೀದು ಹೋದ ಬೇಳೆ - ಹೀಗೆ ಚಕಚಕನೆ ಸಾಗುವ ಕತೆಯಲ್ಲಿ ಬರುವ ಎಲ್ಲಾ ಪ್ರತಿಮೆಗಳೂ ಒಡಕಲು. ಅಕ್ಕನದ್ದೇನೋ ಭಾನಗಡಿ, ಚಿಕ್ಕಮ್ಮನದ್ದೇನೋ ಭಾನಗಡಿ, ಕೈಹಿಡಿದ ಹೆಂಡತಿಯನ್ನೇ ಬೆರಕಿ ಹೆಣ್ಣು ಎಂದು ಕರೆದ ‘ಅವನ’ ಮಾತು - ಎಲ್ಲವೂ ಸೇರಿ ಇಲ್ಲೇನೋ ವಿಲಕ್ಷಣವಾದದ್ದು ಇದೆ ಅನಿಸಿದರೂ ಒಟ್ಟರ್ಥದಲ್ಲಿ ಅದು ಮನಸ್ಸಿಗಿಳಿಯುವುದು ಕೊನೆಯಲ್ಲಷ್ಟೆ. ಸಿನಿಮಾ ಟಾಕೀಸಿನಲ್ಲಿ ವ್ಯಗ್ರಗೊಂಡು ಗದ್ದಲ ಎಬ್ಬಿಸುತ್ತಾನೆ. ಹೆಂಡತಿಯ ಹೊಟ್ಟೆ ಸರಿಯಿಲ್ಲದ ಒಂದು ಪ್ರಸಂಗ ಕೂಡ ಯಾವ ಮುಲಾಜಿಲ್ಲದೆ ಬಂದು ಹೋಗುತ್ತದೆ. ಕೊನೆಗೆ ಸಮಾಗಮದಲ್ಲಿಯೂ ಅಪಸ್ವರ. ಅವನ ಬಾಯಿಗೆ ವಾಸನೆ ಎಂದು ಅವಳು, ಅವಳದು ಉಬ್ಬುಹಲ್ಲು ಎಂದು ಇವನು. ಇಡೀ ಕತೆಯ ಉದ್ದಕ್ಕೂ ಮುಂದುವರಿಯುತ್ತಲೇ ಹೋಗುವ ವಿಲಕ್ಷಣವಾದ, ಹಿತವಾದ ಏನನ್ನೂ ಕಾಣಿಸದ ಚದುರಿದ ಚಿತ್ರಗಳ ಒಂದು ಕೊಲಾಜ್ ಏನಿದೆ, ಅದರ ಹಿಂದಿನ ಉದ್ದೇಶವೇನು, ಇಡೀ ಕತೆಯ ಅಸಲು ವಿಷಯ ಏನೆಂದು ಯೋಚಿಸಿದರೆ ಈ ಕತೆಗಾರರ ಅದ್ಭುತವೆನಿಸುವ ಜಾಣ್ಮೆ ಕಣ್ಣಿಗೆ ಹೊಡೆಯುತ್ತದೆ. ಅಲ್ಲಿಯವರೆಗೂ ನಡೆಯುತ್ತಿರುವುದನ್ನೆಲ್ಲಾ ಒಂದು ಅರ್ಥಪೂರ್ಣ ಸಂಯೋಜನೆಯಲ್ಲೇ ಕತೆಗಾರ ನೇಯ್ದಿರುವುದು ಇಲ್ಲಿನ ವಿಶೇಷತೆ. 

‘ಜೂಜು’ ಕತೆಯಲ್ಲಿ ತಂದೆ ಮತ್ತು ಅವನ ನಾಲ್ಕು ಮಂದಿ ಮಕ್ಕಳಲ್ಲಿ ಒಬ್ಬ ಮಗ ಜೂಜಿನ ಚಟ ಹತ್ತಿಸಿಕೊಂಡಿದ್ದಾರೆ. ಆದರೆ ಸ್ವತಃ ಅವರೇ ಮನೆಯ ಮರ್ಯಾದೆ ಎಂದೆಲ್ಲ ಅಂಜುವುದು ಗಮನಿಸಿದರೆ ಅವರೇನೂ ವೃತ್ತಿಪರ ಜೂಜುಕೋರರು ಅನಿಸುವುದಿಲ್ಲ. ಬದುಕಿನ ಒಂದು ಮನರಂಜನೆಯ ಭಾಗದ ತರ ಅವರಿಗದು. ಆದರೆ ಅಷ್ಟನ್ನೇ ಇಟ್ಟುಕೊಂಡು ಇಡೀ ಸಂಸಾರದ ಒಂದು ಘನತೆ, ಸಮಾಜದೆದುರು ಅದರ ಮಾನ-ಮರ್ಯಾದೆಯೇ ಮೂಲವಾದ ಅಂತಸ್ತು ನಷ್ಟವಾಗುವುದನ್ನು ಮತ್ತು ಅದು ಒಂದು ಕುಟುಂಬದ ಅವನತಿಯ ಕತೆಯಾಗುವುದನ್ನು ಹೇಳಿರುವ ರೀತಿ ಚೆನ್ನಾಗಿದೆ. ‘ಇದಾದ ಮೇಲೆ ನಮ್ಮ ಸಂಬಂಧಿಕರು ನಮ್ಮಿಂದ ದೂರವಾದರು’ ಎನ್ನುವಲ್ಲಿಯೇ ಅದೆಲ್ಲವೂ ಬಂದು ಬಿಡುತ್ತದೆ. ಕತೆ ಮೂಲಭೂತವಾಗಿ ಅದರದ್ದೇ, ಅದೇ ಕೇಂದ್ರ. ಆದರೆ ಅದನ್ನು ಹೇಳಲು ಇಲ್ಲಿ ಜೂಜು, ಪ್ರೇಮ, ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗುವುದು, ಕುಡಿತ ಎಲ್ಲವೂ ಪೂರಕವಾಗಿಯೋ ಎಂಬಂತೆ ಬರುತ್ತವೆ. ಇದನ್ನು ಹೇಳುತ್ತಿರುವ ನಿರೂಪಕ ಪ್ರಜ್ಞೆಯಲ್ಲಿ ಕುಟುಂಬದ ಅವನತಿಯೇ ಪ್ರಧಾನ ಭೂಮಿಕೆಯಾಗಿರುವುದು ಒಟ್ಟು ಕತೆಯ ಧ್ವನಿಯಾಗಿ ಮೂಡಿ ಬಂದಿದೆ.

‘ಚಾನ್ನೆ’ ಕತೆ ತುಂಬ ಸಂಕೀರ್ಣವಾದ ವಸ್ತುವನ್ನಿಟ್ಟುಕೊಂಡಿದೆ. ಇಲ್ಲಿ ಅತ್ಯಂತ ಸೂಚ್ಯವಾಗಿ ಬರುವ ಲೈಂಗಿಕತೆಯ ಕುರಿತಾದ ಪ್ರತಿರೋಧ ಪ್ರಕಟವಾಗುವ ವಿಭಿನ್ನ ರೀತಿಯೇ ಕೇಂದ್ರ ವಸ್ತು. ಅಪ್ಪನ ಸಾವು ಕೊಲೆ ಕೂಡ ಆಗಿರಬಹುದಾದ ಶಂಕೆ, ಅದಕ್ಕಿರಬಹುದಾದ ಆಸ್ತಿಯ ಕಾರಣಗಳು ಎಲ್ಲವೂ ಅಸ್ಪಷ್ಟವಾಗಿಯೇ ಉಳಿದರೂ ಮೊದಲ ಹೆಂಡತಿ ಸತ್ತ ಮೇಲೆ ಅವನು ಎರಡನೆಯ ಮದುವೆಯಾದದ್ದು, ಆಕೆ ನಡುವೆ ಇನ್ಯಾರ ಜೊತೆಗೋ ಎಲ್ಲಿಗೋ ಹೋಗಿ ಮೂರು ದಿನಗಳ ನಂತರ ಬರುವುದು ನಿಗೂಢ ಅರ್ಥಗಳನ್ನು ಕೊಡುವಂತಿದೆ. ನಡುವೆಯೇ ‘ಅಪ್ಪ ಇನ್ನೊಮ್ಮೆ ತಪ್ಪು ಮಾಡಿದರೆ’ ಎಂಬ ಮಾತಿದೆ. ಆದರೆ ಅವನೇನು ‘ತಪ್ಪು’ ಮಾಡುತ್ತಿದ್ದನೋ ಅದು ನಿಗೂಢವಾಗಿದೆ. ಕತೆಯ ನಿರೂಪಕನ ಲೈಂಗಿಕತೆ ಅಸಹಜವಾಗಿರುವುದರ ಹಿನ್ನೆಲೆಯೇ ಈ ಕತೆಯ ನಿಗೂಢ ಅಂಶಗಳಿದ್ದಿರಬೇಕನಿಸುತ್ತದೆ. ಕೊನೆಯಲ್ಲಿ ಮಗಳ ಕುರಿತು ಚಿಕ್ಕಮ್ಮ ತೋರಿಸುವ ಅತಿ ಅಕ್ಕರಾಸ್ಥೆಗಳನ್ನು ಹೆಂಡತಿಯೇ ಅನುಮಾನಿಸುವುದು ಮಾತ್ರ ಕತೆಗೊಂದು ಚೌಕಟ್ಟು ದೊರಕಿಸಲು ಯತ್ನಿಸುವಂತಿದ್ದರೂ ಒಟ್ಟಾರೆಯಾಗಿ ಉಳಿದ ಕತೆಗಳಷ್ಟು ಇದು ಯಶಸ್ವಿ ಅನಿಸುವುದಿಲ್ಲ. ಮುಖ್ಯವಾಗಿ ಈ ಕತೆಯ ಕೇಂದ್ರ ಅಷ್ಟು ಮೊನಚಾಗಿಲ್ಲ. 

‘ಜೇಜಮ್ಮ’ ಕತೆಯಲ್ಲಿ ಜೇಜಮ್ಮನ ಪಾತ್ರವನ್ನು ಕಟ್ಟಿದ ಬಗೆ, ವದಂತಿಯೊಂದು ಹೇಗೆ ಅವಳನ್ನು ನಿವಾರಿಸಿತು ಎನ್ನುವ ಚೋದ್ಯ ಚೆನ್ನಾಗಿದ್ದರೂ ಇದೇ ಸಂಕಲನದ ಇತರ ಕತೆಗಳ ಎದುರು ಇದು ಸ್ವಲ್ಪ ಪೇಲವವಾಗಿ ಕಾಣುವಂತಿದೆ. ‘ಆಸರೆ’ ಮತ್ತು ‘ಅಂಬಿಕಾ’ ಕೂಡ ಸಂಕಲನ ಇತರ ಕತೆಗಳಿಗೆ ಹೋಲಿಸಿದರೆ ಉಳಿದ ಕತೆಗಳು ಕೊಡುವಷ್ಟನ್ನು ಕೊಡಲು ಸಫಲವಾಗಿಲ್ಲ ಎನ್ನಬೇಕು.

‘ಕಟ್ಟಿರುವೆ’ ಈ ಸಂಕಲನದ ಅತ್ಯಂತ ಯಶಸ್ವಿ ಕತೆಗಳಲ್ಲೊಂದು. ಇದು ಒಂದು ಕವಿತೆಯಂಥಾ ಕತೆ. ಇಲ್ಲಿ ಒಂದು ಕ್ವಾರ್ಟರ್ಸ್‌ನಲ್ಲಿರುವ ಹೆಂಗಸನ್ನು ಹುಡುಕಿಕೊಂಡು ಹೋಗುವ ವಿವರಗಳಿವೆ. ಈ ವಿವರಗಳೇ ಅಚ್ಚುಕಟ್ಟಾಗಿ ಇವರ ಕತೆಗಾರಿಕೆಯ ನೈಪುಣ್ಯದ ಸಾಕ್ಷ್ಯವೆಂಬಂತಿವೆ. ಆ ಹೆಂಗಸಿನ ಕತೆಯೇ ಈ ಕತೆಯ ಕೇಂದ್ರ. ಆಕೆಯ ಪ್ರೇಮ ಸಂಬಂಧ ಇದ್ದಿದ್ದು ಒಬ್ಬ ವಿವಾಹಿತ ವ್ಯಕ್ತಿಯ ಜೊತೆ. ಆದರೆ ಅದಕ್ಕೆ ಅದರದ್ದೇ ಆದ ಒಂದು ಪಾವಿತ್ರ್ಯವೂ ಇರುವುದನ್ನು ನಾವು ಗಮನಿಸದೇ ಹೋದರೆ ತಪ್ಪಾಗುತ್ತದೆ. ಹೆಂಡ, ಕಾಮ ಮತ್ತು ಗಂಡು ಹೆಣ್ಣು ಸಂಬಂಧಕ್ಕೆ ವೈವಾಹಿಕ ನೆಲೆಯಲ್ಲಿ ಸಂಬಂಧಕ್ಕೆ ಒದಗುವ ಮಾನ್ಯತೆ - ಈ ಎಲ್ಲಾ ದೃಷ್ಟಿಯಲ್ಲೂ ಅವರಿಬ್ಬರ ವ್ಯವಹಾರ ಶಿಷ್ಟ ಸಮಾಜದ ಚೌಕಟ್ಟಿನ ಹೊರಗೇ ಇರುವಂಥದ್ದು ಎನ್ನುವುದು ನಿಜವೇ. ಹಾಗಿದ್ದೂ ಅದರ ಸಹಜ, ಮುಗ್ಧ ಗುಣಕ್ಕಿರುವ ಸೌಂದರ್ಯ, ಶಿಷ್ಟ ಸಮಾಜದ ಉಸಿರುಕಟ್ಟಿಸುವ ರೀತಿ, ರಿವಾಜು, ಸಂಪ್ರದಾಯಬದ್ಧ ಸಂಬಂಧ ಮತ್ತು ಜೀವನಶೈಲಿಗೆ ಇರುವುದಿಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಕತೆ ಇದನ್ನು ವೈಭವೀಕರಿಸುತ್ತಿಲ್ಲ. ಹಾಗೆಯೇ ಅದರ ಕೊನೆಯನ್ನೂ ಕಾಣಿಸದೆ ಕತೆಯನ್ನು ಕೈಬಿಡುವುದಿಲ್ಲ. ಆಕೆಯ ಪ್ರೇಮಿಯೊಂದಿಗೆ ನಿರೂಪಕನಿಗಿರುವ ಸಂಬಂಧ ಕತೆಯ ಕೊನೆಯಲ್ಲಿ ಬರುವ ಬಗೆ ಅಚ್ಚುಕಟ್ಟಾಗಿದೆ. ಇಷ್ಟಿದ್ದೂ ಇಡೀ ಕತೆಗೆ ಕಾವ್ಯದ ಗಂಧ ಒದಗುವುದು ಕಟ್ಟಿರುವೆಯ ಪ್ರಸಂಗದಿಂದಲೇ. ಈ ಕಟ್ಟಿರುವೆಗಳು ಎದುರುಮನೆ ಬಸಮ್ಮ ಆಂಟಿ ಇದ್ದ ಹಾಗಿವೆ. ಅವು ಎರಡು ಬಾರಿ ಕತೆಯ ದೇಹದ ಮೇಲೆಲ್ಲ ಬುರಬುರನೆ ಹರಿದು ಬರುತ್ತವೆ, ಮಗುವಿನ ರಕ್ತ ಹೀರಲು ಪ್ರಯತ್ನಿಸುತ್ತವೆ. ಗಮನಿಸಿ ನೋಡಿ, ಎರಡೂ ಬಾರಿ ಅವು ಬರುವುದು ಲೈಂಗಿಕ ಸಮಾಗಮದ ಸಮಯದಲ್ಲೇ. ದೊಡ್ಡ ಜಾತ್ರೆಯಲ್ಲಿ ಅವನನ್ನು ಕೊಂದು ಕಾಲುವೆ ದಂಡೆಯ ಮೇಲೆ ಎಸೆದು ಹೋದ ಚಿತ್ರ ಮನಸ್ಸಿಗೆ ಕಟ್ಟುವುದು ಕೂಡ ಇಲ್ಲಿಯೇ.

‘ಪಲಾಯನವಾದ’ ಕತೆ ಸ್ವತಂತ್ರವಾಗಿ ಮುಖ್ಯವಾದ ಕತೆ ಅನಿಸದಿದ್ದರೂ ಇಡೀ ಸಂಕಲನದ ಕತೆಗಳನ್ನು ಒಟ್ಟಾಗಿ ಓದುವಾಗ ಉಳಿದ ಕತೆಗಳಿಗೆ ಪೂರಕವಾದ ಬಹಳಷ್ಟನ್ನು ತೆರೆದುಕೊಡುತ್ತಿದೆ ಅನಿಸುತ್ತದೆ ಮತ್ತು ಆ ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ಮನೆಯಲ್ಲಿ ಸಣ್ಣಪುಟ್ಟ ವಿಷಯಕ್ಕೆ ಜಗಳ, ಕಿರಿಕಿರಿಗಳು ಏಕಾಗುತ್ತವೆ ಎನ್ನುವ ಬಗ್ಗೆ ಯೋಚಿಸಬೇಕು. ಇದನ್ನು ಗಟ್ಟಿಸ್ವರದಲ್ಲಿ ಕೇಳಿದರೆ ನಮ್ಮ ಕಡೆ ನಾಗದೋಷ, ಕುಲದೇವರ ಮುನಿಸು ಎಂಬಲ್ಲಿಂದ ತೊಡಗಿ, ಯಾರೋ ಪಿತೃಗಳಿಗೆ ಸರಿಯಾಗಿ ಶ್ರಾದ್ಧಕಾರ್ಯ ಮಾಡಿಲ್ಲವೆಂದೋ, ಸಂಬಂಧಿಕರಲ್ಲಿ ಯಾರೋ ಅಕಾಲಿಕ ದುರ್ಮರಣ ಹೊಂದಿದ್ದು ಅವರಿಗೆ ಸದ್ಗತಿ ಪ್ರಾಪ್ತಿಯಾಗದೆ ಹೀಗೆಲ್ಲ ಆಗುತ್ತಿದೆ ಎಂದೋ ಹೇಳಿ ಲಕ್ಷಗಟ್ಟಲೆ ಪೀಕಲು ಪುರೋಹಿತಶಾಹಿ ಸಿದ್ಧವಾಗಿ ನಿಂತಿರುತ್ತದೆ. ಇದು ಸರಿಸುಮಾರು ಜಗತ್ತಿನ ಎಲ್ಲಾ ಕಡೆ ಹೀಗೆಯೇ ಇದೆ, ಸ್ವರೂಪದಲ್ಲಿ ಅಷ್ಟಿಷ್ಟು ವ್ಯತ್ಯಾಸವಿರುತ್ತದೆ ಅಷ್ಟೆ. ಆದರೆ ಇದಕ್ಕೆ ಲಾಜಿಕಲ್ ಪರಿಹಾರಗಳಿದ್ದೇ ಇರುತ್ತವೆ. ಅವುಗಳನ್ನು ಕಂಡುಕೊಳ್ಳಲು ಒಂದು ಸ್ವಸ್ಥ ಮನಸ್ಸು ಮತ್ತು ಆರೋಗ್ಯಕರ ಮನೋಧರ್ಮ ಅಗತ್ಯವಿರುತ್ತದೆ, ಒಬ್ಬರಲ್ಲಿ ಅಲ್ಲ - ಎಲ್ಲರಲ್ಲೂ. ಮುದಿರಾಜ ಬಾಣದ್ ಅವರ ಹೆಚ್ಚಿನ ಕತೆಗಳಲ್ಲಿ ಬರುವ ಕುಟುಂಬಗಳು ಇಂಥ ಒಂದು ಸ್ಥಿತಿಯನ್ನು ಬಹುತೇಕ ಸಹಜ ಸ್ಥಿತಿಯೆಂದೇ ಸ್ವೀಕರಿಸಿ ಬದುಕುತ್ತಿರುವಂತಿದೆ. ಆದರೆ ಅದೇನೂ ಸಹಜ ಸ್ಥಿತಿಯಲ್ಲ ಎನ್ನುವ ಅರಿವು ನಿರೂಪಕನಲ್ಲಿ ಇರುವುದೇ ಇಲ್ಲಿ ಸಮಸ್ಯೆಯನ್ನು ಕಾಣುವಂತೆ ಮಾಡುತ್ತಿದೆ. ಸ್ಥಾಗಿತ್ಯದಲ್ಲಿಯೇ ರಮಿಸುತ್ತಿರುವಂತೆ ಕಾಣುವ ಇಂಥ ಸ್ಥಿತಿಯಲ್ಲಿ ಸೃಜನಶೀಲ ಸಾಧನೆಯಾಗಲಿ, ಕೌಟುಂಬಿಕ ಅಭಿವೃದ್ಧಿಯೇ ಆಗಲಿ ಸಾಧ್ಯವಾಗುವುದಿಲ್ಲ ಎನ್ನುವುದು ನಿಜ. ಮೊದಲಿಗೆ ಇದೆಲ್ಲ ವೈಯಕ್ತಿಕವೋ, ಕೌಟುಂಬಿಕವೋ ಅನಿಸುವುದು ಕ್ರಮೇಣ ಸಾಮುದಾಯಿಕವಾಗುತ್ತದೆ ಎನ್ನುವುದಾದರೆ, ಇಂಥ ಅಸಹನೆ, ಅಸಮಾಧಾನ, ಸಾಕೊಸಾಕಾಗಿರುವುದರ ಕುರುಹುಗಳು ಬಹಳಷ್ಟನ್ನು ಹೇಳುತ್ತವೆ ಎನ್ನುವುದು ನಿಜವಾದರೂ ಈ ಮನಸ್ಸುಗಳು ಕೊನೆಗೂ ಕೇಳುವುದು ಒಂದಿಷ್ಟು ಪ್ರೀತಿಯನ್ನು ಎನ್ನುವುದೇ ಅಂತಿಮ ಸತ್ಯ. ನಾವು ಮೇಲ್ನೋಟಕ್ಕೆ ಅಹಂಕಾರದಂತೆ, ಸಿಡುಕಿನಂತೆ, ಸಣ್ಣತನದಂತೆ ಎಲ್ಲ ಕಂಡುಬರುವ ಈ ಒರಟುತನವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಅದು ಈ ಮನಸ್ಸುಗಳು ಒಂದಿಷ್ಟು ಪ್ರೀತಿಯನ್ನು ಬೇಡುತ್ತಿರುವ ವಿಧಾನ ಎನ್ನುವುದು ನಮಗೇ ಅರ್ಥವಾಗುತ್ತದೆ.

‘ಕೈಚೀಲ’ ಒಂದು ಸುಂದರ ಕತೆ. ಅದೆಷ್ಟು ಸೂಚ್ಯವಾಗಿ ಮೂಡಿ ಬಂದಿದೆ ಎಂದರೆ ಅದರ ಬಗ್ಗೆ ಮಾತನಾಡಿದರೂ ಆ ಸೂಕ್ಷ್ಮಗಳೆಲ್ಲ ಕೆಟ್ಟುಬಿಡಬಹುದು ಎಂಬ ಭಯ ಹುಟ್ಟಿಸುವಷ್ಟು!

ವಿವಾಹೇತರ ಸಂಬಂಧಗಳದ್ದು ಒಂದು ಬಗೆ. ಅದು ದಾಂಪತ್ಯದ ಜೊತೆ ಜೊತೆಗೇ ಸಮಾನಾಂತರವಾಗಿ ಸಾಗುತ್ತಿದ್ದರೆ ಅದರದ್ದು ಇನ್ನೊಂದೇ ಬಗೆ. ಅಂಥ ಒಂದು ಸಂಬಂಧ ಸಲಿಂಗಕಾಮದ ನೆಲೆಯಲ್ಲಿ ಸಾಗುತ್ತಿದ್ದರೆ ಎಂಬ ಪ್ರಶ್ನೆಯನ್ನೂ ಈಚೆಗೆ ಕತೆಗಾರರು ಎತ್ತಿಕೊಳ್ಳುತ್ತಿದ್ದಾರೆ. ತಮಾಶೆ ಎಂದರೆ ತನ್ನ ಪತಿಯ ವಿವಾಹೇತರ ಸಂಬಂಧವನ್ನು ಎಳ್ಳಷ್ಟೂ ಸಹಿಸದ ಹೆಂಡಿರನ್ನು ಕಾಣುವುದು ಸಾಮಾನ್ಯ ಎನ್ನುವಾಗಲೇ ಈ ಸಲಿಂಗರತಿಯ ವಿವಾಹೇತರ ಸಂಬಂಧಕ್ಕೆ ಅವರು ಪ್ರತಿಕ್ರಿಯಿಸುವ ಬಗೆಯ ಬಗ್ಗೆ ನಮ್ಮ ಕತೆಗಾರರಿಗೆ ಅಷ್ಟೇನೂ ವೈವಿಧ್ಯಮಯ ಪ್ರಕರಣಗಳು ದೊರೆತಿಲ್ಲ ಅನಿಸುತ್ತದೆ. ನಾನು ಓದಿರುವ ಈ ಬಗೆಯ ಎಲ್ಲಾ ಕತೆಗಳಲ್ಲಿ ಹೆಂಡತಿಗೆ ಅಸಹ್ಯ, ಅದೇ ದೇಹದೊಂದಿಗೆ ತಾನೂ ಸಮಾಗಮ ಹೊಂದಲು ಸ್ವಲ್ಪ ಕಿರಿಕಿರಿ ಎನ್ನುವುದನ್ನು ಬಿಟ್ಟರೆ ಬೇರೆ ಅದನ್ನಾಕೆ ತನ್ನ ವೈವಾಹಿಕ ನೆಲೆಗಟ್ಟಿಗೆ ಬಂದ ಬೆದರಿಕೆ ಎಂದು ತಿಳಿಯದೇ ಇರುವುದು! ಇಲ್ಲಿನ ‘ಹೇನು’ ಕತೆ ಕೂಡ ಅದಕ್ಕೆ ಅಪವಾದವಲ್ಲ ಅನಿಸುತ್ತದೆ.

ಮುದಿರಾಜ ಬಾಣದ್ ಅವರ ಸಂವೇದನೆಗಳು ಪಕ್ವಗೊಂಡಿವೆ. ಅವರ ಭಾಷೆ ಚೆನ್ನಾಗಿದೆ. ಕಥನದ ತಂತ್ರಗಳು ಕರಗತವಾಗಿರುವಂತೆ ಬರೆಯುವ ಅವರು ಅಚ್ಚರಿ ಹುಟ್ಟಿಸುತ್ತಾರೆ. ಬದುಕನ್ನು ಅವರಷ್ಟು ನಿಕಟವಾಗಿ, ಮಗುವಿನ ಮುಗ್ಧತೆಯಿಂದಲೂ ಅರಿವಿನ ಪ್ರಬುದ್ಧತೆಯಿಂದಲೂ ಗಮನಿಸುವ ಕತೆಗಾರರು ಹೊಸ ತಲೆಮಾರಿನಲ್ಲಿ ಅಷ್ಟಿಲ್ಲ. ಅವರು ಇನ್ನೂ ಹೆಚ್ಚಿನ ಏಕಾಗ್ರತೆಯಿಂದ ಮತ್ತು ಧ್ಯಾನಸ್ಥ ಸ್ಥಿತಿಯಲ್ಲಿ ತಮ್ಮ ಕೃತಿಗಳನ್ನು ಕಟ್ಟುವ ವ್ರತ ಹಿಡಿದಲ್ಲಿ ನಿಶ್ಚಯವಾಗಿ ಅದ್ಭುತವಾದ ದೀರ್ಘ ಕೃತಿಗಳನ್ನು ಕನ್ನಡಕ್ಕೆ ಕೊಡಬಲ್ಲ ಕಸು ಹೊಂದಿರುವ ಕತೆಗಾರ. 

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, February 10, 2021

ಅಂಜುಬುರುಕಿಯ ರಂಗವಲ್ಲಿ...

ಎರಡು ಕಂಬದ ನಡುವೆ 
ಒಂದು ಹಗ್ಗದ ಸಾಲು
ತೂರಾಡೋ ತಿಳಿಗಾಳಿಗೆ
ಸೋಲು ಕಾಣಲೆಂದು
ಕೈಯಲಿ ಒಂದು ಉದ್ದನೆ ಕೋಲು
ಚಿಂದಿಬಟ್ಟೆಯ ಮೇಲೆ ಸಹಿ ಮಾಡಿದೆ
ಬಡತನದ ಪ್ರತಿಬಿಂಬ
ಕಣ್ಣಲಿ ಕತ್ತಲೋಡಿಸಬೇಕೆಂಬ ಚಂದ್ರಬಿಂಬ

- ಇದು ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಕವನ ಸಂಕಲನ, ‘ಅಂಜುಬುರುಕಿಯ ರಂಗವಲ್ಲಿ’ಯಿಂದ ಆಯ್ದ ಒಂದು ಕವನ, ‘ಡೊಂಬರಾಟದ ಹುಡುಗಿ’ ಸುರುವಾಗುವ ಪರಿ. 


ಎಚ್ ಎಸ್ ಶಿವಪ್ರಕಾಶ್ ಅವರು ಕನ್ನಡಕ್ಕೆ ತಂದಿರುವ ಜಿಂಗೋನಿಯಾ ಜಿಂಗೋನೆಯ ‘ಮರೆತು ಹೋದ ದೊಂಬರಾಕೆ’ ಸಂಕಲನದ ಈ ಕವಿತೆ ನೋಡಿ:

ದೊಂಬರವಳು

ಆಯತಪ್ಪದ ಹಾಗೆ
ಚಾಚಿ ಎರಡೂ ತೋಳುಗಳನ್ನು
ಮುಗುಳುನಗುತ್ತಾ ಅಳುವಿನಲ್ಲಿ
ದೊಂಬರ ಹುಡುಗಿ
ನಡೆಯುತ್ತಿದ್ದಾಳೆ ಹಗ್ಗದ ಮೇಲೆ
ಅತ್ತಿಂದ ಇತ್ತಾ
ಇತ್ತಿಂದ ಅತ್ತಾ
ತಿರುಗಿಯೂ ನೋಡದ ಹಾಗೆ
ಹೊರಟ ಜಾಗಕ್ಕೆ ತಿರುಗಿ ಹೋಗದ ಹಾಗೆ
ಹಗ್ಗ ಹಿಗ್ಗಾಮುಗ್ಗಾ ಗಾಳಿಯಲಿ
ಬುಗುರಿ ತಿರುಗುತ್ತಿವೆ ಅವಳ ತಲೆಯಲ್ಲಿ
ಹಗ್ಗ ಹಿಂತುರುಗುತ್ತದೆ
ಖಾಲಿ ಕೇಂದ್ರದ ರಾಟೆಯೊಳಗೆ

(ಇದನ್ನು ಅಹರ್ನಿಶಿ ಪ್ರಕಟಿಸಿದೆ)

ಮಂಜುನಾಥ ನಾಯ್ಕ ಅವರ ಕವಿತೆ ಸ್ವಲ್ಪ ದೊಡ್ಡದಿದೆ, ಅದು ಮುಂದುವರಿಯುತ್ತದೆ. ಆದರೆ ನನಗೆ ಮುಖ್ಯವೆನಿಸಿದ ಅಂಶವೊಂದಿದೆ. 

ಇವರ ಯಾವತ್ತೂ ಕವಿತೆಗಳು ಧ್ವನಿಲಯವನ್ನು ಬಿಟ್ಟುಕೊಡವುದಿಲ್ಲ. ಅಷ್ಟರಮಟ್ಟಿಗೆ ಅವು ಶಬ್ದದ ನಾದಮಾಧುರ್ಯಕ್ಕೆ ನ್ಯಾಯ ಸಲ್ಲಿಸುವ ಪಣತೊಟ್ಟಂತಿವೆ. ಆದರೆ ಎಲ್ಲಿಯೂ ಅದು ತನ್ನ ನುಡಿಗೆ ತಾನೇ ಮೈಮರೆಯುವ ಹಂತಕ್ಕೆ ಹೋಗುವುದಿಲ್ಲ. ಇಲ್ಲವಾದಲ್ಲಿ ಸಾಕಷ್ಟು ಓದಿಕೊಂಡಿರುವ, ಪ್ರಾಯಪ್ರಬುದ್ಧರೂ ಆಗಿರುವ, ಭಾಷೆಯ ನೆಲೆಯಿಂದ ಸಾಕಷ್ಟು ಪಳಗಿರುವ ಮಂಜುನಾಥ ನಾಯ್ಕ ಅವರ ಕವಿತೆಗಳೆಲ್ಲಾ ಶಬ್ದಜಾಲದ ಮೋಹಕತೆಗೇ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬಹುದಾದ ಅಪಾಯ ಇದ್ದೇ ಇತ್ತು. ಆದರೆ ಇಲ್ಲಿ ಹಾಗಾಗುವುದಿಲ್ಲ ಎನ್ನುವುದೇ ಈ ಕವಿತೆಗಳ ಹೆಚ್ಚುಗಾರಿಕೆ.  

ಹೃದಯಕ್ಕೆ ಮಾತ್ರ ಅರ್ಥವಾಗುವ ಪಿಸುಮಾತಿನಲ್ಲಷ್ಟೇ ಮಾತನಾಡದ, ರೂಪಕ-ಪ್ರತಿಮೆಗಳಲ್ಲೇ ಬುದ್ಧಿಗೆ ಮಾತ್ರ ಹೊಳೆದು ಯಾವುದೋ ಸ್ಮೃತಿಕೋಶವನ್ನು ಚುಚ್ಚಿ, ಅದು ಬಡಿದೆಬ್ಬಿಸುವ ಯಾವುದೋ ಅಮೂರ್ತ ಚಿತ್ರ/ನೆನಪು/ಭಾವವನ್ನೇ ನೆಚ್ಚಿಕೊಳ್ಳದ ಕವಿತೆ ಕೂಡ ಬರೀ ಸದ್ದು ಮಾತ್ರ ಎಬ್ಬಿಸದೆ ಎದೆಗೆ ತಟ್ಟಬಹುದು ಎಂಬ ಮಾತಿನಲ್ಲಿ ವಿಶ್ವಾಸ ಚಿಗುರಿಸುವಂತೆ ಬರೆಯುತ್ತಾರೆ ಇವರು. ಇದನ್ನು ಎಳೆಯ ಯುವಕವಿಗಳೆಲ್ಲ  ಗಮನವಿಟ್ಟು ನೋಡುವ ಅಗತ್ಯವಿದೆ.

ಇವತ್ತು ತುಂಬ ಮಂದಿ ಯುವಕವಿಗಳು ಉತ್ಸಾಹದಿಂದ ಕವಿತೆಗಳನ್ನು ಬರೆಯುತ್ತಿದ್ದಾರೆ. ಅದ್ಭುತವಾದ ಶಬ್ದಗಳಿಂದ, ನುಡಿಬಂಧದ ಆಕರ್ಷಣೆಯಿಂದ, ಆಹಾ ಎನಿಸುವಂಥ ಕವಿತೆಗಳನ್ನು ಅವರು ಬರೆಯುತ್ತಿದ್ದಾರೆ. ಆದರೆ ಯಾವ ಸಾಲೂ ಎದೆಗೆ ತಲುಪುವುದಿಲ್ಲ, ಬುದ್ಧಿಗೆ ಕುಟುಕುವುದಿಲ್ಲ. ಅಂದರೆ, ಅವರ ಮೂಲ ಉದ್ದೇಶವೇ ಬಹಿರ್ಮುಖವಾದದ್ದು. ಸಮಾಜದ, ಸಾಹಿತ್ಯದ, ವರ್ತಮಾನದ ತುಡಿತಗಳಿಗೆ ನುಡಿಯಾಗುವ ತುರ್ತಿನಿಂದ ಹುಟ್ಟಿದ್ದು. ಅದಕ್ಕೆ ಚಂದದ ಮತ್ತು ತಪ್ಪಿಲ್ಲದ ಭಾಷೆ ಸಾಕಾಗುತ್ತದೆ. ಆದರೆ ಆಗ ಹುಟ್ಟುವುದನ್ನು ಕವಿತೆ ಎಂದು ತಪ್ಪಾಗಿ ತಿಳಿಯಲಾಗಿದೆ. ಅವು ಸುಂದರ ಶಬ್ದಜಾಲದ ವ್ಯಾಖ್ಯಾನಗಳಷ್ಟೇ, ಕವಿತೆಗಳಲ್ಲ.


ಕವಿತೆ ಯಾವತ್ತೂ ಒಳಗಿನಿಂದ ಹುಟ್ಟುತ್ತದೆ ಮತ್ತು ಅದು ಸದಾ ಅಂತರ್ಮುಖಿಯಾದದ್ದು. ಅಂದ ಮಾತ್ರಕ್ಕೆ ಅದು ಆಧ್ಯಾತ್ಮ, ಮೌನ, ಜ್ಞಾನ, ಭಾವನಾತ್ಮಕ ಸೂಕ್ಷ್ಮ ಮತ್ತು ಬೌದ್ಧಿಕ ಜ್ಞಾನೋದಯದ ಅಭಿವ್ಯಕ್ತಿ ಎಂದೇನಲ್ಲ. ಈ ಯಾವತ್ತೂ ಸಾಧ್ಯತೆಗಳ ಒಂದು ಮನಸ್ಸೇ ತನ್ನ ಬಹಿರಂಗದೊಂದಿಗೆ ಹೊಂದುವ ನಿರಂತರ ಮುಖಾಮುಖಿಯಿಂದ ಹುಟ್ಟಿದಾಗಲೇ ಅದು ಪರಿಪೂರ್ಣವಾಗುವುದು. ಆದರೆ ಅದರ ಜನ್ಮಸಾಂಗತ್ಯ ಶಬ್ದಲೋಕಕ್ಕೋ ಅಕ್ಷರಲೋಕಕ್ಕೋ ಸೇರಿದ್ದಲ್ಲ. ಕವಿತೆಯ ನಿಜವಾದ ಕಷ್ಟವಿರುವುದೇ ಭಾಷೆಯೊಂದಿಗೆ, ಅಕ್ಷರದೊಂದಿಗೆ, ಸದ್ದಿನಲ್ಲಿ ಸಾಕ್ಷಾತ್ಕಾರವಾಗಬೇಕಾದ ಗ್ರಹಚಾರದೊಂದಿಗೆ. ಆದರೆ ನಾವು ತಪ್ಪಾಗಿ ಕವಿತೆಯ ನಿಜವಾದ ಸುಖವಿರುವುದೇ ಭಾಷೆಯೊಂದಿಗೆ ಮತ್ತು ಅಕ್ಷರದೊಂದಿಗೆ ಎಂದು ತಿಳಿದಿದ್ದೇವೆ. ಕವಿತೆ ಈ ಅರ್ಥದಲ್ಲಿ ಪ್ರಿ-ಲಿಂಗುವಿಷ್ಟಿಕ್. ಭಾಷೆಯೊಂದು ರೂಪುಗೊಳ್ಳುವುದಕ್ಕೂ ಮೊದಲು ಇದ್ದಿದ್ದು ಕವಿತೆ. ಭಾಷೆಯಲ್ಲಿ ಅದು ಸದಾ ಸೋಲುತ್ತದೆ.

ಆದರೆ ನಮ್ಮ ಹೆಚ್ಚಿನ ಯುವ ಕವಿಗಳ ನಂಬುಗೆಯೇನೆಂದರೆ, ತಮಗೇ ಸ್ಪಷ್ಟವಾದ ಪರಿಕಲ್ಪನೆಯಿಲ್ಲದ ಅವರ ಇನ್ನೂ ಹುಟ್ಟದಿರುವ ಕವಿತೆ ಸದಾ ತಮಗೆ ಕರಗತವಾಗಿರುವ ಭಾಷೆಯಲ್ಲೇ ಗೆಲ್ಲುತ್ತದೆ ಎಂಬ ವಿಶ್ವಾಸ. ಅವರ ಸೋಲು ಕೂಡ ಇರುವುದು ಇಲ್ಲಿಯೇ. ಹಾಗಾಗಿ ಹೆಚ್ಚಿನ ಕವನ ಸಂಕಲನಗಳ ಬಗ್ಗೆ ನನಗೆ ಹೇಳುವುದಕ್ಕೇನೂ ಇರುವುದಿಲ್ಲ. ಏಕೆಂದರೆ, ಅದು ನಿಮಗೆ ಅರ್ಥವಾದಾಗ ನಾನು ಹೇಳಬೇಕಾದುದು ಏನೂ ಇರುವುದಿಲ್ಲ ಮತ್ತು ಅದು ನಿಮಗೇ ಅರ್ಥವಾಗುವ ಮೊದಲು ನಾನು ಏನು ಹೇಳಿದರೂ ನಿಮಗದು ಅರ್ಥವಾಗುವುದಿಲ್ಲ.

ಮತ್ತೆ ಮಂಜು ನಾಯ್ಕರ ಕವಿತೆಗೆ ಬರುತ್ತೇನೆ.

ಎರಡು ಕಂಬದ ನಡುವೆ 
ಒಂದು ಹಗ್ಗದ ಸಾಲು
ತೂರಾಡೋ ತಿಳಿಗಾಳಿಗೆ
ಸೋಲು ಕಾಣಲೆಂದು
ಕೈಯಲಿ ಒಂದು ಉದ್ದನೆ ಕೋಲು
ಚಿಂದಿಬಟ್ಟೆಯ ಮೇಲೆ ಸಹಿ ಮಾಡಿದೆ
ಬಡತನದ ಪ್ರತಿಬಿಂಬ
ಕಣ್ಣಲಿ ಕತ್ತಲೋಡಿಸಬೇಕೆಂಬ ಚಂದ್ರಬಿಂಬ

ಈ ಕವಿತೆಯಲ್ಲಿ ಬರುವ ಒಂದು ನುಡಿಬಂಧ, ಎರಡು ಕಂಬದ ನಡುವೆ ಒಂದು ಹಗ್ಗದ ಸಾಲು. ಈ ಎರಡು ಕಂಬ ಎನ್ನುವ ಅಂಶ ಜಿಂಗಾನಿಯೊ ಕವಿತೆಯಲ್ಲಿಯೂ ಇದೆ. ‘ಅತ್ತಿಂದ ಇತ್ತಾ| ಇತ್ತಿಂದ ಅತ್ತಾ’ ಎನ್ನುವಲ್ಲಿ ಇದೆ ಅದು. ಆದರೆ ಹಗ್ಗ ಅಲ್ಲಿ ಒಂದು ಸಾಲು ಅಲ್ಲ. ‘ಹಗ್ಗ ಹಿಂತುರುಗುತ್ತದೆ ಖಾಲಿ ಕೇಂದ್ರದ ರಾಟೆಯೊಳಗೆ’! Tight Rope Walker ಎಂಬ ಈ ಕವಿತೆಯ ಇಂಗ್ಲೀಷ್ ಆವೃತ್ತಿಯಲ್ಲಿ ಅದು ನೀಡುವ ಪರಿಕಲ್ಪನೆ ಒಂದು ತರದ ಬ್ಲ್ಯಾಕ್‌ಹೋಲ್‌ನಂಥದ್ದು. ಈ ಹಗ್ಗ ಆ ಬಗೆಯಲ್ಲಿ ಗಾಳಿಯಲ್ಲಿ ತಿರುಗಣಿ ಸುತ್ತುತ್ತ ಒಂದು ಶೂನ್ಯಕೇಂದ್ರಕ್ಕೆ ಸೆಳೆಯುತ್ತದೆ. ಆದರೆ ಕುತೂಹಲಕರ ಎಂದರೆ, ಮಂಜುನಾಥ ನಾಯ್ಕರಲ್ಲಿ ಆ ಹಗ್ಗ ಎರಡು ಕಂಬಗಳ ನಡುವಿನ ಸಾಲು. ಅಷ್ಟರಮಟ್ಟಿಗೆ ಅದು ಅವರಿಗೆ ನಿಜ, ವಾಸ್ತವ ಮತ್ತು ವರ್ತಮಾನ. ಜಿಂಗಾನಿಯೊಗೆ ಅದು ತಟ್ಟನೆ ಆಧ್ಯಾತ್ಮ ಕೂಡ!

ಈ ಎರಡು ಕಂಬ ಎನ್ನುವುದು ಬದುಕು ಮತ್ತು ಸಾವು ಇದ್ದಂತೆ. ಅದರ ನಡುವಣ ಸಾಲು ಈ ಬದುಕು. ಅದಕ್ಕೆ ಬೇಕಾದ್ದು ಒಂದು ಸಮತೋಲ. ಶಾಲೆಗೆ ಹೋಗಬೇಕಾಗಿದ್ದ, ಆಟಪಾಟಗಳಲ್ಲಿ, ತಂದೆ ತಾಯಿಯರ ಪ್ರೀತಿ ಮತ್ತು ಆರೈಕೆಯಲ್ಲಿ ಮುದ್ದಿನಿಂದ ಬೆಳೆಯಬೇಕಾಗಿದ್ದ ಪುಟ್ಟ ಪೋರಿ ಈಗ ಸಂಸಾರದ ಹೊಟ್ಟೆ ಹೊರೆಯುವ ನೊಗ ಹೊತ್ತಿದ್ದಾಳೆ. ಕವಿ ಇದನ್ನು ನೋವಿನಿಂದ, ಬೇರೆ ಬೇರೆ ರೂಪಕಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾನೆ. ಈ ಪುಟ್ಟ ಹುಡುಗಿಯ ಬದುಕೇ ಒಂದು ಗೇಣುದ್ದುದ ಹೊಟ್ಟೆ ಎಂಬ ಚೀಲ ತುಂಬುವುದಕ್ಕಾಗಿ ಮಾರ್ಪಟ್ಟ ಭಿಕ್ಷಾಪಾತ್ರೆ ಎನ್ನುವುದನ್ನು ಕವಿ ಸಶಕ್ತವಾಗಿ ಮತ್ತು ಸಶಬ್ದವಾಗಿ ಕಟ್ಟಿಕೊಡುತ್ತಾರೆ. 

ಈ ಸಶಬ್ದವಾಗಿ ಎನ್ನುವ ಮಾತೇ ನನಗೆ ಕೊನೆಗೂ ಮುಖ್ಯವಾದದ್ದು. ಅದಕ್ಕಾಗಿಯೇ ನಾನು ಕವಿತೆ ಕಟ್ಟುವುದರ ಬಗ್ಗೆ ಕೆಲವು ಮಾತುಗಳನ್ನಾಡಿದ್ದೇನೆ. ಅದಕ್ಕಾಗಿಯೇ  ಆಧ್ಯಾತ್ಮದ ಶೋಧಕ್ಕೂ ಇಳಿದಿದ್ದ ಎಚ್ ಎಸ್ ಶಿವಪ್ರಕಾಶರ ಅನುವಾದವನ್ನೇ ಆರಿಸಿಕೊಂಡಿದ್ದೇನೆ. ಅದಕ್ಕಾಗಿಯೇ ಜಿಂಗಾನಿಯೊಗೆ ಹೇಗೆ ದೊಂಬರಾಕೆ ನಡೆದಾಡುವ Tight Rope ಕೃಷ್ಣರಂಧ್ರಕ್ಕೆ ದಾರಿತೋರುವ ತಂತುವಾಗಿದೆ ಎನ್ನುವುದನ್ನು ಎತ್ತಿ ಹೇಳಿದ್ದೇನೆ.  ಜಿಂಗಾನಿಯೊಗೆ ಹುಡುಗಿಯ ವರ್ತಮಾನಕ್ಕಿಂತ ಮಿಗಿಲಾದ್ದು ಇದೆ. ಮಂಜುನಾಥ ನಾಯ್ಕ ಅವರಿಗೆ ಹುಡುಗಿಯ ವರ್ತಮಾನದ ಭೀಕರ ವಸ್ತುಸ್ಥಿತಿ ಕರುಳು ಹಿಂಡುತ್ತಿದೆ. 

ಈ ಸಂಕಲನದ ‘ಕನಸು ಮಾರುವ ಹುಡುಗ’ ಕವಿತೆ ಕೂಡ ತುಂಬ ಮನಸೆಳೆವ ಕವಿತೆ. 

ರಂಜಾನ್ ಪೇಟೆ ಪಕ್ಷಿರಾಶಿಯ ಕೇಕೆ
ನಡುವೆ ಗುಡುಗು ಬಡಿಸುವ ಹುಡುಗ
ಶಾಮಿಯಾನದ ಕಂಡಿಯೊಳಗೆ ಚಿಗುರಿದೆ
ನಲಿವ ಚಂದ್ರಯಾನದ ಧ್ಯಾನ

ಕನಸು ಹರಡಿ ಕುಳಿತಿದ್ದಾನೆ
ಕಣ್ಣು ಕದಲಿಸಿದವರಿಲ್ಲ
ಹೊನ್ನೆಂದು ತಬ್ಬಿದವರಿಲ್ಲ

ಬೇಕೆ? ನಿಮಗೊಂದಾದರೂ ಕನಸು ಬೇಕೆ?
ನಿಮಗೆ ಬಾರದ ಕನಸು ನಯನ ಜಾರದ ಕನಸು
ಬೀಗ ಜಡಿದ ಕನಸ ಮನೆಗೆ ಕೀಲಿ ಬೇಕೆ?
ಶತಶತಮಾನದ ಕಗ್ಗಲ್ಲ ಕನಸಿದು
ಕನಸು ಹೊತ್ತು ಹೋಗಿ ಶಿಲ್ಪಿಯನಿಟ್ಟು ಹೋಗಿ

ತುಂಬ ತಟ್ಟುವ, ವಿಸ್ಮಯವನ್ನು ಹುಟ್ಟಿಸುವ ಕವಿತೆಯಿದು. ಇಲ್ಲಿ ಶಬ್ದದ ತರಂಗಾಂತರದ ಪಾಲೂ ಇದೆ, ಕವಿಯ ಧ್ಯಾನದ ಪಾಲೂ ಇದೆ. ಯಾವುದರದ್ದು ಎಷ್ಟು ಎಂದು ಹೇಳುವುದು ಒಂದು ಕಷ್ಟವಾದರೆ, ಯಾವುದರಿಂದ ಯಾವುದಕ್ಕೆ ಲಾಭ ಅಥವಾ ನಷ್ಟ ಆಗಿದೆ ಎಂದು ಹೇಳುವುದು ಇನ್ನೊಂದು, ಸ್ವಲ್ಪ ಹೆಚ್ಚಿನದ್ದಾದ, ಕಷ್ಟ. ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಕವಿತೆಗಳು ಒಡ್ಡುವ ಸವಾಲು ಇದೇ. 

ರಂಜಾನ್ ಪೇಟೆ ಪಕ್ಷಿರಾಶಿಯ ಕೇಕೆ ಎಂದಾಗ ಅದೇನೋ ಸಹಜವೆಂದೇ ಅನಿಸುತ್ತದೆ. ಆದರೆ ‘ನಡುವೆ ಗುಡುಗು ಬಡಿಸುವ ಹುಡುಗ’ ಎನ್ನುವ ಸಾಲು ತನ್ನ ಡುಡುಡುಡುಗಳಿಂದಲೇ ಇಷ್ಟವಾಗುತ್ತಿದೆಯೆ ಅಥವಾ ಅದು ನಮ್ಮ ಮನಸ್ಸಿನಲ್ಲಿ ದುಗುಡ ಹೆಚ್ಚಿಸುತ್ತಿದೆಯೆ? ಎರಡನೆಯದು ಉದ್ದೇಶಪೂರ್ವಕವಾದದ್ದು, ಕವಿತೆಯ ಆತ್ಮಕ್ಕೆ ಅಗತ್ಯವಾದದ್ದು.  ‘ದೊಂಬರಾಟದ ಹುಡುಗಿ’ ಕವಿತೆಯಲ್ಲಿಯೂ ‘ತೂರಾಡೊ ತಿಳಿಗಾಳಿಗೆ| ಸೋಲು ಕಾಣಲೆಂದು| ಕೈಯಲಿ ಒಂದು ಉದ್ದನೆಯ ಕೋಲು’ ಎಂದಿದೆ. ಸೋಲು ಮತ್ತು ಕೋಲು ತನ್ನ ಪ್ರಾಸಬದ್ಧತೆಯಾಚೆಗೂ ಕೊಡುವ ಅರ್ಥ ಹೆಚ್ಚುಗಾರಿಕೆ ಹೊಂದಿದೆ ಎನ್ನುವುದನ್ನು ಗಮನಿಸಿ.

ಮುಂದಿನ ಸಾಲುಗಳೆಲ್ಲಾ ಶಬ್ದರತಿಯ ಮೋಹದಿಂದ ಮುಕ್ತವಾಗಿಯೇ ಬಂದಿರುವಂಥಾವು. ಶಾಮಿಯಾನದ ಕಿಂಡಿಯೊಳಗೆ ಚಿಗುರುವ ಚಂದ್ರಯಾನದ ಕನಸು! ಎಷ್ಟು ಚಂದವಿದೆ ಈ ಸಾಲು! ಅದೇ ರೀತಿ ಹೊನ್ನೆಂದು ತಬ್ಬಿದವರಿಲ್ಲ ಎಂಬ ನುಡಿಬಂಧ!

ಶತಶತಮಾನಗಳ ಕಗ್ಗಲ್ಲ ಕನಸಿದು
ಕನಸು ಹೊತ್ತು ಹೋಗಿ ಶಿಲ್ಪಯನಿಟ್ಟು ಹೋಗಿ

- ಎಂಬ ಮಾತು ಗಮನಿಸಿ. ಕನಸು ಶಿಲ್ಪಿಯ ಕೈಗೆ ಸಿಕ್ಕಿದ ಕಲ್ಲಿನ ಹಾಗೆ! ಅವನು ಕಲ್ಲಿನಿಂದ ಕನಸನ್ನು ಕಟೆದು ಕಾಣಿಸುತ್ತಾನೆ. ಆದರೆ ಆ ಶಿಲ್ಪಿ ಯಾರು, ಕನಸನ್ನು ಕಾಂಬ ಕಣ್ಣು ಯಾರವು ಮತ್ತು ಇಲ್ಲಿ ಕಲ್ಲು ಯಾವುದು? ಈ ಸಾಲುಗಳನ್ನು ಓದುವಾಗ ನನ್ನ ಮನಸ್ಸಿಗೆ ಡಾ|| ಬಿ ಆರ್ ಅಂಬೇಡ್ಕರರ ಚಿತ್ರವೇಕೆ ಛಕ್ಕೆಂದು ಹೊಳೆಯಿತು? - ಈ ಯಾವುದೂ ಅರ್ಥಕ್ಕೆ, ವ್ಯಾಖ್ಯಾನಕ್ಕೆ ಸಿಗುವುದಿಲ್ಲ.

ಜಯಂತ ಕಾಯ್ಕಿಣಿಯವರ ಮುನ್ನುಡಿಯ ಒಂದು ಮಾತಿನೊಂದಿಗೆ ಇದನ್ನು ಮುಗಿಸುತ್ತೇನೆ.

"ಇಲ್ಲಿ, ಸಂತೆಯಲ್ಲಿ ಕನಸು ಮಾರುವ ಹುಡುಗರಿದ್ದಾರೆ, ಭೋರ್ಗರೆವ ಮಳೆಯ ನಂತರ ಕೊಂಬೆಗೆ ಗೂಡು ಕಟ್ಟುವ ಗುಬ್ಬಿ ಇದೆ, ಅಮಾವಾಸ್ಯೆಯಿಂದಲೇ ರೂಪುಗೊಂಡು ಚಲಿಸುವ ಅಜ್ಜಯ್ಯನಿದ್ದಾನೆ, ಚಟ್ಟದ ಮನೆಯಲ್ಲಿ ಕುಂತ ಚಿಟ್ಟೆಯಿದೆ, ಅಪ್ಪನ ಕಿಸೆಯಿಂದ ಕದ್ದ ಬೀಡಿಯಿದೆ, ಹಾಯಿದೋಣಿಯಲ್ಲಿ ಕೂತ ಅಕ್ವೇರಿಯಂ ಮೀನು ಇದೆ, ಅಂಜುವ ಬೆರಳುಗಳಿಂದ ಮೂಡಿದ ನೆರಳು ಬೆಳಕಿನ ರಂಗವಲ್ಲಿ ಇದೆ, ಬೆಟ್ಟವೇರುತ್ತ ಹಗುರಾಗುವ ವಾಂಛೆಯಿದೆ." 

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, February 7, 2021

ಮೂಚಿಮ್ಮನ ಕತೆ ಹೇಳುತ್ತ...

ಸರಾಗವಾಗಿ ಓದಿಸಿಕೊಳ್ಳುವ ಗುಣ, ಕುತೂಹಲವನ್ನು ಕಾಯ್ದುಕೊಳ್ಳುವ ಜಾಣ್ಮೆ, ಸ್ಪಷ್ಟ ಮತ್ತು ಅಚ್ಚುಕಟ್ಟಾದ ನಿರೂಪಣೆ, ಸುಂದರವಾದ ಭಾಷೆ ಮತ್ತು ಎಷ್ಟು ಬೇಕೋ ಅಷ್ಟೇ ವಿವರಗಳು, ಆಧುನಿಕತೆಯನ್ನೂ ಪರಂಪರೆಯನ್ನೂ ಒಟ್ಟಿಗೇ ಕೊಂಡೊಯ್ಯುವ ಅವರ ಕಥಾನಕಗಳ ಹಿಂದಿನ ಧ್ವನಿ ಅಥವಾ ಮನೋಧರ್ಮ, ತಪ್ಪಿಲ್ಲದಂಥ ಕನ್ನಡ ಎಲ್ಲವೂ ಡಾ.ಅಜಿತ್ ಹರೀಶಿಯವರಲ್ಲಿ

ಗಮನಿಸಬೇಕಾದ ಗುಣಗಳು. ‘ಮೂಚಿಮ್ಮ’ ಅವರ ಮೊದಲನೆಯ ಸಂಕಲನವೇನಲ್ಲ. ಈಗಾಗಲೇ ಅವರು ನುರಿತ ಕತೆಗಾರ ಎಂದು ಹೆಸರಾಗಿದ್ದಾರೆ, ಕನ್ನಡ ಸಾಹಿತ್ಯಲೋಕ ಅವರನ್ನು ಗುರುತಿಸಿದೆ. ಹಾಗಾಗಿಯೇ ಅವರ ಬಗ್ಗೆ ಬರೆಯುವಾಗ ಇದೇ ಮೊದಲ ಪ್ರಯತ್ನಕ್ಕೆ ಕೈಯಿಕ್ಕಿರುವ ಹೊಸಬರ ಬಗ್ಗೆ ಬರೆಯುವಂತೆ ಮಾತನಾಡುವುದು ಸಾಧ್ಯವಿಲ್ಲ. ಬಹುಶಃ ಹೊಗಳಿಕೆಯ ನಿರೀಕ್ಷೆ ಕೂಡ ಅವರಲ್ಲಿ ಈಗ ಪ್ರಧಾನವಾಗಿ ಉಳಿದಿಲ್ಲ. ಇದು ಅವರು ಬೆಳೆಯಲು ಕಾತರಿಸುವ, ತಮ್ಮ ಕತೆಗಾರಿಕೆಯ ಕೌಶಲ್ಯವನ್ನು ಮತ್ತಷ್ಟು ಇನ್ನಷ್ಟು ವೃದ್ಧಿಸಿಕೊಂಡು ನೈಪುಣ್ಯ ಸಾಧಿಸಲು ಹಪಹಪಿಸುವ ಕಾಲ ಎಂದು ನಾನು ಭಾವಿಸುತ್ತೇನೆ. ಮತ್ತಿದಕ್ಕೆ ಅಂತ್ಯವೆನ್ನುವುದು ಇರುವುದಿಲ್ಲ, ಒಂದು ಹಂತದಲ್ಲಿ ಆರಂಭ ಮಾತ್ರ ಇರುತ್ತದೆ. ನಮ್ಮ ಕಾಲದ ಅತ್ಯಂತ ಹಿರಿಯ ಕತೆಗಾರ ಕೂಡ ಕಲಿಯುವುದು, ಪ್ರತಿ ಹೊಸಕತೆಯ ರಚನೆ ಮುಗಿದಾಗಲೂ ಅದು ಹೇಗೆ ಬಂದಿರಬಹುದು ಎಂಬ ಬಗ್ಗೆ ಇನ್ನೊಬ್ಬರ ಅನಿಸಿಕೆ ತಿಳಿಯಲು ಕಾತರದಿಂದಿರುವುದು ಸಹಜವೇ ಆಗಿದೆ. ಹಾಗಾಗಿ ನಾನು ಡಾ. ಅಜಿತ್ ಹರೀಶಿ ಅವರ ಕತೆಗಳ ಬಗ್ಗೆ ಔಪಚಾರಿಕ ಹೊಗಳಿಕೆಯ ಮಾತುಗಳನ್ನೆಲ್ಲ ಕೈಬಿಟ್ಟು, ನನ್ನನ್ನು ಅವರಲ್ಲಿ ಕಂಡುಕೊಳ್ಳುತ್ತ, ನನಗೆ ನಾನೇ ಹೇಳಿಕೊಳ್ಳಬಹುದಾದ ಕೆಲವು ಮಾತುಗಳನ್ನಷ್ಟೇ ಹೇಳಲು ಪ್ರಯತ್ನಿಸುತ್ತೇನೆ. 

‘ಮೂಚಿಮ್ಮ’ ಕತೆ, ಡಾ.ಅಜಿತ್ ಹರೀಶಿಯವರ ಇದುವರೆಗಿನ ಕತೆಗಳಲ್ಲಿಯೇ ಒಂದು ಹೆಜ್ಜೆ ಮುಂದಿರುವ, ಅವರ ಸಾಧ್ಯತೆಯನ್ನು ತೋರಿಸಿಕೊಡುವ ಕತೆ. ಇಲ್ಲಿ ಮೂಚಿಮ್ಮ ಮನೆಗೆ ಬಂದಾಗ ಸುಲೋಚನೆಗೆ ಅದು ಅಷ್ಟು ಇಷ್ಟವಾಗುವುದಿಲ್ಲ. ಆದರೆ ಮುಂದೆ ಕ್ರಮೇಣ ಒಗ್ಗಿಕೊಳ್ಳುತ್ತಾಳೆ. ಅದಕ್ಕೆ ಮೂಚಿಮ್ಮ ಬಗ್ಗೆ ರವೀಶನಿಗಿರುವ ನಂಟು ಆಕೆಗಿಲ್ಲ ಎನ್ನುವುದೂ ಒಂದು ಅಂಶ, ಮೂಚಿಮ್ಮ ತನ್ನ ವೈದ್ಯ ವಿದ್ಯೆಯನ್ನು ಮುನ್ನೆಡೆಸಿಕೊಂಡು ಹೋಗುವ ವಾರಸುದಾರಿಕೆಯನ್ನು ತನ್ನ ಪತಿಗೆ ವಹಿಸುತ್ತಾಳೆಂಬುದು ಇನ್ನೊಂದು ಅಂಶ. ಇದು ಅತ್ಯಂತ ಸಹಜವಾಗಿ ಕತೆಯಲ್ಲಿ ಬಂದಿರುವುದನ್ನು ಓದುಗ ಕಂಡುಕೊಳ್ಳುತ್ತಾನೆಯೇ ಹೊರತು ಅಜಿತರ ಬೇರೆ ಕತೆಗಳಲ್ಲಿ ಆಗುವಂತೆ ಯಾರೂ ಓದುಗನಿಗೆ ‘ಸುಲೋಚನೆಗೆ ಮೊದಲು ಸ್ವಲ್ಪ ಇರಿಸುಮುರಿಸಾಯ್ತು, ಆಮೇಲೆ ಒಗ್ಗಿಕೊಂಡಳು’ ಎಂದು ಹೇಳಿ ತಿಳಿಯುತ್ತಿಲ್ಲ. ಹಾಗಿದ್ದೂ ಕತೆಯಲ್ಲಿ ಮೂಚಿಮ್ಮನ ಕತೆ ರವೀಶನ ಬಾಯಿಂದಲೇ ಸುಲೋಚನೆ ತಿಳಿಯುತ್ತಾಳೆ ಎನ್ನುವುದು ನಿಜ. ಈ ಕತೆಯ ಎರಡನೆಯ ಧನಾತ್ಮಕ ಗುಣವೆಂದರೆ, ಮೂಚಿಮ್ಮ ಮನೆಗೆ ಬಂದಿರುವುದು ಬಾಂದುಕಲ್ಲಿನಡಿ ತಾನು ಹೂತಿಟ್ಟ ನಿಧಿಯನ್ನು ತೆಗೆದುಕೊಂಡು ಹೋಗುವುದಕ್ಕೆ, ಆದರೆ ರವೀಶನಿಗೇ ಸೇರಬಹುದಾಗಿದ್ದ ಆ ನಿಧಿಯನ್ನು ಹಾಗೆ ಕೊಡದೆ ತನ್ನ ಮೊಮ್ಮಗನಿಗೆ ಕೊಡುತ್ತಿರುವ ಬಗ್ಗೆ ಮೂಚಿಮ್ಮನಿಗೆ ಎಲ್ಲೋ ಒಂದು ಪಾಪಪ್ರಜ್ಞೆಯೂ ಇದ್ದಿರಬೇಕು. ಅದಕ್ಕಾಗಿಯೂ ಅವಳು ತನ್ನ ವೈದ್ಯಕೀಯವನ್ನು ರವೀಶನಿಗೆ ಕೊಡುತ್ತಿದ್ದಿರಬಹುದು ಅಥವಾ ಅವಳಿಗೆ ಬೇರೆ ಯೋಗ್ಯರು ಕಂಡಿಲ್ಲದ್ದರಿಂದಲೂ ಇರಬಹುದು. ಈ ಯಾವ ಅಂಶಗಳ ಬಗ್ಗೆಯೂ ಕತೆ ಮಾತನಾಡುವುದಿಲ್ಲ ಎನ್ನುವುದೇ ಇಲ್ಲಿನ ದೊಡ್ಡ ಗುಣ. ಅಷ್ಟರಮಟ್ಟಿಗೆ ಮೂಚಿಮ್ಮನ ಪಾತ್ರ ಮತ್ತು ರವೀಶನ ಪಾತ್ರ ಎರಡನ್ನೂ ಕಟ್ಟಿರುವ ಬಗೆ ಹಾಗೂ ಇವೆರಡೂ ಪಾತ್ರಗಳ ಜೊತೆಗೇ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸೂಚಿಸುವುದಕ್ಕಾಗಿಯೇ ಸುಲೋಚನೆಯ ಮೂಲಕ ಬರುವ ಕೆಲವು ನಡೆನುಡಿ - ಮೂರು ಅಚ್ಚುಕಟ್ಟಾಗಿದೆ. ಬಹುಶಃ ಎಲ್ಲೋ ಬರಬಹುದಾಗಿದ್ದ ಒಂದು ಮಾತು, ಪದ, ವಾಕ್ಯ ಈ ಬಿಗಿಯಾದ ಬಂಧವನ್ನು ಕೆಡಿಸಬಹುದಾಗಿತ್ತು. ಹಾಗಾಗದೇ ಇರುವುದನ್ನು ಮುಖ್ಯವಾಗಿ ಗಮನಿಸಬೇಕು. ಇಷ್ಟಾಗಿಯೂ ಹಣ ತನಗೆ ಸಿಗಲಿಲ್ಲ ಎಂದು ಹುಳ್ಳಗಾಗುವ ರವೀಶನ ಮನಸ್ಸು ಕತೆಗಾರನ ಗಮನದಿಂದ ತಪ್ಪಿಹೋಗುವುದಿಲ್ಲ. ತನ್ನ ನಾಯಕನನ್ನು ಹೀರೋಯಿಕ್ ಮಾಡುವ ಆಮಿಷಕ್ಕೆ ಅಜಿತ್ ಒಳಗಾಗದಿರುವುದು ದೊಡ್ಡ ಗುಣ. ಇಡೀ ಕತೆ ಓದಿದ ಮೇಲೆ ನನ್ನ ಮನಸ್ಸಿನಲ್ಲಿ ನಿಂತ ಪಾತ್ರ ಮಾತ್ರ ಮೂಚಿಮ್ಮನದ್ದಲ್ಲ, ಬದಲಿಗೆ ಗೋಯಿಂದಣ್ಣ. 

ಗಮನಿಸಿ ನೋಡಿ, ಈ ಗೋಯಿಂದಣ್ಣನಿಗೆ ಮಾತ್ರ ನಿಧಿ ಬಾಂದುಕಲ್ಲಿನ ಕೆಳಗೆ ಹೂತಿಟ್ಟ ವಿಷಯ ಗೊತ್ತಿದ್ದಿದ್ದು. ಬರೀ ಒಂದು ನಾಣ್ಯದ ಮಜೂರಿಯ ಮೇಲೆ ಮತ್ತು ಅದರ ಹಿಂದಿನ ವಿಶ್ವಾಸದ ಮೇಲೆ ನಿಂತ ರಹಸ್ಯ ಅದು. ಮನಸ್ಸು ಮಾಡಿದ್ದರೆ ಗೋಯಿಂದಣ್ಣ ಇಡೀ ಆಸ್ತಿ ಎತ್ತಿ ಹಾಕಬಹುದಾಗಿತ್ತು. ಅಥವಾ ರವೀಶನಿಗೆ ಹೇಳಬಹುದಾಗಿತ್ತು. ಆದರೆ ಮೂಚಿಮ್ಮನಿಗೆ ಕೂಡ ಅಂಥ ಸಂಶಯ ಬರುವುದಿಲ್ಲ, ಗೋಯಿಂದಣ್ಣನೂ ತಪ್ಪಿ ನಡೆದುಕೊಳ್ಳುವುದಿಲ್ಲ. ಈ ಅಂಶ ಮಾತ್ರ ನನ್ನನ್ನು ತುಂಬ ಕಲಕಿದ್ದು. ಈ ಮೌಲ್ಯ, ಈ ಒಂದು ಹಳ್ಳಿಯ ಗುಣವನ್ನು ಕತೆ ಗುರುತಿಸುತ್ತದಲ್ಲ, ಮತ್ತು ಅದನ್ನು ಸದ್ದು ಗದ್ದಲ ಮಾಡದೆ ತಣ್ಣಗೆ ಹೇಳುತ್ತದಲ್ಲ, ಅದಕ್ಕಾಗಿ ಈ ಕತೆ ಒಂದು ಮಾಸ್ಟರ್ ಪೀಸ್ ಕತೆ.

ಈ ಕತೆಯ ಯಾರೂ ಒಂದು ಕಾಲ್ಪನಿಕ ಆದರ್ಶವನ್ನು, ಹೀರೋಯಿಸಂನ್ನು ಪ್ರದರ್ಶಿಸುವುದಿಲ್ಲ. ಎಲ್ಲರೂ ‘ಕೇವಲ’ ಮನುಷ್ಯರಂತೆ ವರ್ತಿಸುತ್ತಾರೆ. ಹಾಗಾಗಿಯೇ ಗೋಯಿಂದಣ್ಣನ ದೊಡ್ಡತನವನ್ನು ಕೂಡ ಮನಸ್ಸು ಬೆರಗಿನಿಂದ ಸ್ವೀಕರಿಸಿ ನಮಿಸುತ್ತದೆ.

ಆದರೆ, ಇಂಥ ವಿಶಿಷ್ಟ ಕತೆಯನ್ನು ಬರೆಯಬಲ್ಲ ಅಜಿತ್ ಅವರು ಮ್ಯಾಗಝೀನ್ ಕತೆಗಳ ತರ ಇರುವ, ಸಿನಿಮೀಯವೆನಿಸುವ ಕತೆಗಳನ್ನೇ ಹೆಚ್ಚಾಗಿ ಬರೆಯುತ್ತಿರುವುದು ನನಗೆ ಆಶ್ಚರ್ಯ ಹುಟ್ಟಿಸುತ್ತದೆ. ಒಂದು ಕೊಂಚ ಕಷ್ಟದ, ಯಶಸ್ಸು ನಿಧಾನವಾದ ಮತ್ತು ಅಷ್ಟು ಖ್ಯಾತಿಯಿಲ್ಲದ ಮಾರ್ಗ. ಇನ್ನೊಂದು ಸುಲಭದ, ಬೇಗನೆ ಜನಪ್ರಿಯತೆ , ಖ್ಯಾತಿ ತಂದುಕೊಡಬಹುದಾದ ಮಾರ್ಗ. ಎರಡೂ ಹಾದಿಯಲ್ಲಿ ಸಾಗಿದ ಕತೆಗಾರರು/ಕಾದಂಬರಿಕಾರರು ನಮ್ಮಲ್ಲಿ ಎಲ್ಲ ಕಾಲದಲ್ಲಿಯೂ ಇದ್ದರು/ಇದ್ದಾರೆ. ಯಾವುದು ಮೇಲು ಯಾವುದು ಕೀಳು ಎಂಬ ಪ್ರಶ್ನೆಯೇ ಸಾಹಿತ್ಯದಲ್ಲಿ ಇಲ್ಲ. ವೈಯಕ್ತಿಕವಾಗಿ ಕೆಲವರಿಗೆ ಕೆಲವು ಇಷ್ಟಾನಿಷ್ಟಗಳಿರಬಹುದೇ ಹೊರತು ಇನ್ನೇನಿಲ್ಲ.

ಈ ಸಂಕಲನದ ಮೊದಲ ಕತೆ "ಆವಿ" ಡಾಕ್ಟರ್ ಶರತ್, ದಿಶಾ ಮತ್ತು ಡಾಕ್ಟರ್ ಸುನೀಲ್ ನಡುವಣ ಒಂದು ತ್ರಿಕೋನ ಪ್ರೇಮದ ಕತೆಯನ್ನೇ ವಿಸ್ತರಿಸಿದ ಕಥಾನಕ. ಇದಕ್ಕೆ ಶರತ್‌ ಮತ್ತು ದಿಶಾ ಮದುವೆಯಿಂದ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎಂಬ ಒಂದು ತೊಡಕನ್ನೊಡ್ಡಿ ದಿಶಾ ಪಾತ್ರವನ್ನು ಅವಳು ಅಂತಿಮವಾಗಿ ಏನನ್ನು ಆರಿಸಿಕೊಳ್ಳುತ್ತಾಳೆ ಎನ್ನುವ ಪ್ರಶ್ನೆಯ ಎದುರು ನಿಲ್ಲಿಸಲಾಗುತ್ತದೆ. ಅಂಥ ಒಂದು ತೊಡಕು ಇಲ್ಲದೇ ಇದ್ದರೆ ಈ ಕತೆ ಹೇಗಿರುತ್ತಿತ್ತು ಎಂದು ಯೋಚಿಸುತ್ತೇನೆ. ಅಥವಾ, ಸುನೀಲನಂಥ ಒಂದು ಸಾಧ್ಯತೆ ಕಣ್ಣೆದುರು ಇಲ್ಲದೇ ಇರುತ್ತಿದ್ದರೆ ಏನಾಗುತ್ತಿತ್ತು ಎಂದೂ ಯೋಚಿಸುತ್ತೇನೆ. ಅನೇಕ ತ್ರಿಕೋನ ಪ್ರೇಮದ ಕತೆಗಳನ್ನು, ಪತಿ ಪತ್ನಿ ಔರ್ ವೋ ಕತೆಗಳನ್ನು, ತ್ಯಾಗರಾಜರ ಕತೆಗಳನ್ನು ಈಗಾಗಲೇ ಓದಿರುವ ನಮಗೆ ಹೊಸತೇ ಆದ ಏನೂ ಇಲ್ಲಿ ಸಿಗುತ್ತಿದೆ ಅನಿಸುವುದಿಲ್ಲ.

‘ನಟ’ ಎಂಬ ಎರಡನೆಯ ಕತೆಯಲ್ಲಿ ನಟರಾಜ ಮತ್ತು ಒಬ್ಬಳು ನಟಿಯ ನಡುವೆ ಸಂಬಂಧ ಬಲಿಯುವುದು ಮತ್ತು ನಟಿ ಯುವಂತಿಕಾಳ ಕೆರಿಯರ್ ಒಬ್ಬ ನಟಿಯಾಗಿ ಸಾಗಿದ ಕತೆ ಎರಡೂ ಸಮಾನಾಂತರವಾಗಿ ಬರುವುದು ತುಂಬ ಚೆನ್ನಾಗಿದೆ. ಈ ಕತೆಗೆ ಪರಿಪ್ರೇಕ್ಷ್ಯವೋ ಎಂಬಂತೆ ಒಂದು ಜಿಂಕೆ ಮರಿಯ ಕತೆಯಿದೆ. ಅದು ಅನಾಯಾಸ ನದಿಯಲ್ಲಿ ಸಿಕ್ಕುತ್ತದೆ, ಅದನ್ನು ನಟರಾಜ ಕೆಲಕಾಲ ಪೋಷಿಸುತ್ತಾನೆ. ಆದರೆ ನೈಸರ್ಗಿಕವಾಗಿ ಅದು ಬೆಳೆಯಬೇಕಾದ ವಾತಾವರಣ ಬೇರೆ ಎನ್ನುವ ಕಾರಣಕ್ಕೂ, ನಟಿಯ ಗುಂಗಿನಲ್ಲಿ ಒಂದಿಷ್ಟು ನಿರ್ಲಕ್ಷ್ಯಕ್ಕೆ ಜಿಂಕೆಮರಿ ತುತ್ತಾಯಿತು ಎಂಬ ಪಾಪಪ್ರಜ್ಞೆಯಿಂದಲೂ ಅದನ್ನು ಕಾಡಿಗೇ ಬಿಡುವ ನಿರ್ಧಾರಕ್ಕೆ ಬರಬೇಕಾಗುತ್ತದೆ. "ಜವಾಬ್ದಾರಿಯಿಲ್ಲದೇ ಮೂಕಪ್ರಾಣಿಗಳನ್ನು ಸಾಕಬಾರದು" ಎಂಬುದು ತತ್ವವಾಕ್ಯ. ಇದು ಗಂಡು ಹೆಣ್ಣು ಸಂಬಂಧದ ಬಾಧ್ಯತೆಗೂ ಅನ್ವಯಿಸುತ್ತದೆ ಅಲ್ಲವೆ? ಒಂದು ಹೆಣ್ಣನ್ನು, ಅವಳು ನಟಿಯಾಗಿರಲಿ, ವೇಶ್ಯೆಯೇ ಆಗಿರಲಿ ಬಳಸಿಕೊಳ್ಳುತ್ತೇವೆಂದರೆ ಅಷ್ಟರಮಟ್ಟಿಗೆ ಜವಾಬ್ದಾರಿಯಿಂದ, ಬಾಧ್ಯತೆಯಿಂದ ನುಣುಚಿಕೊಂಡಂತೆಯೇ ಸರಿ. ಈ ಕತೆಯ ಹೆಸರೂ ನಟ ಮತ್ತು ನಾಯಕನ ಹೆಸರು ನಟರಾಜ. ನಿಜವಾದ ನಟಿಗಿಂತ ನಟರಾಜನ ನಟನೆಯೇ ಒಂದು ಗುಲಗಂಜಿ ತೂಕ ಹೆಚ್ಚು ಎನ್ನುವ ಧ್ವನಿಯಿದೆ ಇಲ್ಲಿ.  ಇಲ್ಲಿ ನಟಿಯ ಬಗ್ಗೆ ಕತೆಯ ಮನೋಧರ್ಮ ಕೊಂಚ ಅಫೆಂಡಿಂಗ್ ಆಗಿದೆ ಎಂದೂ ಅನಿಸುತ್ತದೆ. 

‘ವಿಲಿಪ್ತ’ ಕತೆ ಸ್ವಾಮೀಜಿ ಎನ್ನಲಾಗದಿದ್ದರೂ ಗುರುವಿನ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯ ಲೈಂಗಿಕ ಆಸಕ್ತಿಯನ್ನು ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುವ ಭಂಡರ ಮತ್ತು ಸಮಾಜ ಒಬ್ಬನ ಖಾಸಗಿ ವಿಚಾರವಾದ ಲೈಂಗಿಕ ವ್ಯವಹಾರಕ್ಕೆ ಅವನ ನೈತಿಕತೆಯನ್ನು ತಳುಕುಹಾಕಿ ನೋಡುವ ಬಗೆಯನ್ನೂ ಯಾವುದೇ ನಿಲುವುಗಳಿಲ್ಲದೇ ಚಿತ್ರಿಸುವ ಕತೆ. ಸಮಾಜದ ಈ ವಿಧಾನಕ್ಕೆ ಹೆದರುವ ಮಂದಿ ಯಾವುದೋ ಒಂದು ಹೆಜ್ಜೆ ಇಡಲು ಮುಂದಾಗುತ್ತಾರೆ. ತಾನು ಸಭ್ಯ ಎಂದು ಸಮರ್ಥಿಸಿಕೊಂಡು ಬದುಕುವ ದಾರಿ ಕೆಲವರದು. ಆತ್ಮಹತ್ಯೆ ಅಥವಾ ನಿವೃತ್ತಿ ಇನ್ನು ಕೆಲವರದ್ದು. ಈ ಕತೆಯಲ್ಲಿ ಅಜಿತ್ ಅವರು ನಮ್ಮ ವರ್ತಮಾನದ ವಿದ್ಯಮಾನವನ್ನು ಚಿತ್ರಿಸುವುದಾಚೆ ಅದನ್ನು ಬೆಳೆಸಲು ಹೋಗಿಲ್ಲ. ಮನುಷ್ಯನ ಲೈಂಗಿಕತೆ ಸಹಜವಾದದ್ದು, ಅದಕ್ಕೆ ಚೌಕಟ್ಟು ನಿರ್ಮಿಸುವ ಸಮಾಜದ ಉದ್ದೇಶ ಪ್ರಧಾನವಾಗಿ ಸಮಷ್ಠಿಯ ಸ್ವಾಸ್ಥ್ಯ. ಮದುವೆ ಮತ್ತು ವೇಶ್ಯಾವಾಟಿಕೆಯ ಹಿನ್ನೆಲೆಯಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಸಂನ್ಯಾಸ ಎಂಬುದೇ ಜೀವ ವಿರೋಧಿಯಾದ, ಅನೈಸರ್ಗಿಕವಾದ ಒಂದು ಶಿಸ್ತು. ಸ್ವತಃ ಆಯಾ ವ್ಯಕ್ತಿಗೆ ಇಷ್ಟವಿಲ್ಲದಿದ್ದರೆ ಅದರಿಂದ ಮುಕ್ತವಾಗಿ ಹೊರಬರಲು ಅವಕಾಶವಿರುವ ಒಂದು ಸಮಾಜದತ್ತ ನಾವು ಹೊರಳಬೇಕಿದೆ. ಬಹುಶಃ ಅದು ಅಸಾಧ್ಯವೂ ಅಲ್ಲ ಅಸಂಗತವೂ ಅಲ್ಲ. ಇಂಥ ನಿಲುವನ್ನೇ ದಾಂಪತ್ಯ ನಿಷ್ಠೆಯ ಪ್ರಶ್ನೆಗೂ ಅನ್ವಯಿಸಬಹುದು. ಬಹುಶಃ ಅಂಥ ಕತೆಗಳು ಕನ್ನಡದಲ್ಲಿ ಹೆಚ್ಚು ಬಂದಿವೆ. ಸಂನ್ಯಾಸದ ಬಗ್ಗೆ ಮಾತನಾಡುವಾಗ ನಮಗಿನ್ನೂ ಮಡಿವಂತಿಕೆ ಇದೆ ಅನಿಸುತ್ತದೆ.

 ‘ಪತನ’ ಕತೆ ಪರೋಕ್ಷವಾಗಿ ಧ್ವನಿಸುವುದು ದಾಂಪತ್ಯ ನಿಷ್ಠೆಯನ್ನೇ. ಆದರೆ ಇಲ್ಲಿ ಅದರ ಚೌಕಟ್ಟು ಮೀರುತ್ತಿರುವುದು ಸ್ತ್ರೀಯಾಗಿರದೆ ಪುರುಷನಾಗಿರುವುದು ಒಂದು ವಿಶೇಷ. ಪುರುಷನೊಬ್ಬ ದಾಂಪತ್ಯದ ಚೌಕಟ್ಟಿನಾಚೆ ಏನು ಮಾಡಿದರೂ ಅದನ್ನು ವಿಶೇಷ ಸಂಗತಿ ಎಂಬಂತೆ ಕಾಣುವ ಏಕೈಕ ವ್ಯಕ್ತಿ ಹೆಂಡತಿ ಮಾತ್ರ, ಸಮಾಜ ಆ ಬಗ್ಗೆ ಮೌನಿ. ಆದರೆ ಸ್ತ್ರೀಯ ವಿಚಾರದಲ್ಲಿ ಹಾಗಾಗುವುದಿಲ್ಲ. ಪತಿ ಅಂಥವಳನ್ನು ತಿರಸ್ಕರಿಸುತ್ತಾನೆ ಮತ್ತು ಸಮಾಜ ಅಂಥವಳ ಬಗ್ಗೆ ಹಕ್ಕಿನಿಂದ ಮಾತನಾಡುತ್ತದೆ. ಅಜಿತ್ ಹರೀಶಿಯವರು ಆರಿಸಿಕೊಂಡಿರುವ ವಸ್ತುವಿನಲ್ಲಿ ಹೆಚ್ಚಿನ ಸಂಘರ್ಷವೇನಿಲ್ಲ. ಇಲ್ಲಿ ಪ್ರಕೃತಿಯೇ ಅಂಥ ಪುರುಷನಿಗೆ ತಕ್ಕ ಪಾಠ ಕಲಿಸುತ್ತದೆ. ಪತ್ನಿ ಯಥಾಪ್ರಕಾರ ಕ್ಲಾಸಿಕಲ್ ಕ್ಷಮಯಾ ಧರಿತ್ರಿಯಾಗಿ ಅವನನ್ನು ಕ್ಷಮಿಸುತ್ತಾಳೆ. 

‘ದಹನ’ ಕತೆಯಲ್ಲಿ ಒಂದು ಮಹತ್ವದ ಸಂಘರ್ಷವಿದೆ. ಆದರೆ ಅದು, ಕತೆಯ ಕೇಂದ್ರ ಗಮ್ಯ ಬೇರೆಯೇ ಆಗಿರುವುದರಿಂದ ಎನಿಸುತ್ತದೆ, ಕತೆಯಲ್ಲಿ ಅಂಥ ಪೋಷಣೆಯನ್ನು ಪಡೆಯದೆ ಹೋಗಿದೆ. ಇಲ್ಲಿ ಬರುವ ಶ್ರೀ ಗಂಗಾಧರ ಅವಧೂತರು ವಾಸ್ತವವಾಗಿ ಆ ಊರಿನಲ್ಲಿ ದೋಣಿ ನಡೆಸುತ್ತಿದ್ದ ಅಂತಣ್ಣನ ಮಗ. ಅವನು ಅವಧೂತನಾಗಲು ಕಾರಣವೇ ಅವನಿಗೆ ಬೀಳುವ ಕನಸುಗಳು ಎನ್ನುವ ಕಾರಣಕ್ಕೆ ಈ ಕತೆಯಲ್ಲಿ ಅವನ ಕನಸುಗಳಿಗೊಂದು ವಿಶೇಷ ಮಹತ್ವವಿದೆ. ಇಡೀ ಕತೆ ಒಂದರ್ಥದಲ್ಲಿ ಈ ವಿಲಕ್ಷಣ ವಿದ್ಯಮಾನದ ಮೇಲೆಯೇ ನಿಂತಂತಿದೆ ಎನ್ನುವುದನ್ನು ಗಮನಿಸಬೇಕು. ‘ಮೂಚಿಮ್ಮ’ ಕತೆಯಲ್ಲಿಯೂ ಇಂಥ ಒಂದು ವಿಲಕ್ಷಣ ವಿದ್ಯಮಾನ ನುಸುಳಿಕೊಂಡಿರುವುದನ್ನು ಗಮನಿಸಬಹುದು. ಅಲ್ಲಿ ಮೂಚಿಮ್ಮ ತನ್ನ ವೈದ್ಯವಿದ್ಯೆಯನ್ನು ಒಂಥರಾ ಧಾರೆ ಎರೆದು ಕೊಟ್ಟ ಹಾಗೆ ರವೀಶನಿಗೆ ವಹಿಸುವುದು ಕಂಡು ಬರುತ್ತದೆ. ಆ ವಿದ್ಯೆಯನ್ನು ಅದಾಗಲೇ ರವೀಶ ಅಷ್ಟಿಷ್ಟು ಕಲಿತಿದ್ದರೆ ಅಥವಾ ಮೂಚಿಮ್ಮ ಅದನ್ನು ಒಂದೆರಡು ತಿಂಗಳು ಜೊತೆಗಿರಿಸಿಕೊಂಡು ಕಲಿಸಿದ್ದರೆ ಅದೊಂದು ರೀತಿ. ಮಗಳನ್ನು ಧಾರೆಯೆರೆದು ಕೊಟ್ಟಂತೆ ಜ್ಞಾನವನ್ನು, ವಿದ್ಯೆಯನ್ನು ಕೊಡಲು ಸಾಧ್ಯವೆ? ಡಾ. ಅಜಿತ್ ಹರೀಶಿಯವರು ಇಂಥ ಅಂಶಗಳ ಕುರಿತು ಹೆಚ್ಚಿನ ಗಮನ ಕೊಡುವುದು ಅಗತ್ಯವಿದೆ ಅನಿಸುತ್ತದೆ. ಅದಿರಲಿ. ಈ ಕತೆಯ ಕೇಂದ್ರ ವರ್ತಮಾನದಲ್ಲಿ ನಿರೂಪಕ ವ್ಯವಹಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಿ ನೆಲಕಚ್ಚಿದ್ದಾನೆ, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದಾನೆ  ಮತ್ತು ಗಂಗಾಧರ ಅವಧೂತರಿಗೆ ಬರೀ ಸಾಯುವ ಕನಸುಗಳೇ ಬೀಳತೊಡಗಿ ಅವರ ‘ವ್ಯವಹಾರ’ವೂ ಮುಳುಗುವ ಹಾದಿಯಲ್ಲಿದೆ. ನಾನು ಹೇಳಿದ ಸಂಘರ್ಷ ಇರುವುದೇ ಇಲ್ಲಿ. ಇಬ್ಬರ ಹಣ ಸಂಪಾದನೆಯ ಹಾದಿಯೂ ನೇರವಾದ ಹಾದಿಯಲ್ಲಿ ಸಾಗಿರಲಿಲ್ಲ. ಇಬ್ಬರ ಪತನವೂ ನ್ಯಾಯಯುತವಾಗಿಯೇ ಇದೆ. ಆದರೆ ಕತೆಯಲ್ಲಿ ಈ ಇಬ್ಬರ ಕೊನೆಯ ಹಂತದ ಮುಖಾಮುಖಿಗೆ ಯಾವುದೇ ಒಂದು ಅರ್ಥಪೂರ್ಣವೆನ್ನಬಹುದಾದ ಆಯಾಮ ದೊರಕದೇ, ಕತೆ ಸ್ವಾಮಿಗಳ ದೇಹಾಂತ್ಯದಲ್ಲಿ ಮುಗಿಯುತ್ತದೆ.

ಜನಾರ್ದನ ಮತ್ತು ಬೆಸುಗೆ ಎರಡೂ ಕತೆಗಳು ತೀರ ಸಾಧಾರಣವೆನ್ನಿಸುವ, ಓದುಗ ಸುಲಭವಾಗಿ ಎತ್ತ ಸಾಗಬಹುದೆಂಬುದನ್ನು ಊಹಿಸಬಲ್ಲ ರಚನೆಗಳು. ಒಂದು ಸಂಕಲನದಲ್ಲಿ ಕೇವಲ ಗಾತ್ರದ ಅನಿವಾರ್ಯಕ್ಕೆ ಇಂಥ ಕತೆಗಳನ್ನು ಸೇರಿಸುವ ಆಮಿಷಕ್ಕೆ ಅನೇಕ ಕತೆಗಾರರು ಬಲಿಯಾಗುವುದನ್ನು ಕಂಡಿದ್ದೇನೆ. ಆದರೆ, ಒಂದು ಸರಪಳಿಯ ಸಾಮರ್ಥ್ಯ ಅದರ ಅತ್ಯಂತ ದುರ್ಬಲ ಕೊಂಡಿಯ ಮೇಲೆಯೇ ಅವಲಂಬಿಸಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು.

‘ಪರಿವರ್ತನೆ’ ಕತೆ ಮತ್ತೊಮ್ಮೆ ಮೊದಲ ಕತೆಯ ವಸ್ತುವನ್ನೇ ಚರ್ಚೆಗೆ ಎಳೆತರುವಂತಿದೆ. ದಾಂಪತ್ಯದಲ್ಲಿ ಸೆಕ್ಸ್‌ನ ಸ್ಥಾನಮಾನದ ಕುರಿತು ಗಂಭೀರ ಪ್ರಶ್ನೆಯನ್ನು ಎತ್ತುವ ಮೊದಲ ‘ಆವಿ’ ಎಂಬ ಕತೆ  ಮತ್ತು ಈ ಕತೆಗಳು ಅವಾಸ್ತವಿಕ ಅನಿಸುವಾಗಲೇ ಅಪವಾದಗಳಿಲ್ಲವೆ ಎನ್ನುವ ಪ್ರಶ್ನೆಯನ್ನೂ ಎತ್ತುವಂತೆ ಮಾಡುತ್ತದೆ. ಬಂಜೆತನ, ನಪುಂಸಕತ್ವ, ಸಲಿಂಗಕಾಮ ಮೂರೂ ದಾಂಪತ್ಯಕ್ಕೆ ಸವಾಲೊಡ್ಡಿದ ಕತೆಗಳು. ಅದೇ ರೀತಿ ಅಕಾಲಿಕ ವೈಧವ್ಯ, ವೈವಾಹಿಕ ಚೌಕಟ್ಟಿನಾಚೆಯ ಸಂಬಂಧ, ಪತ್ನಿವಿಯೋಗ ಕೂಡ ದಾಂಪತ್ಯಕ್ಕೆ ಸವಾಲೊಡ್ಡಿದ ಕತೆಗಳೇ. ಇವು  ಓದುಗರಿಗೆ ಹೊಸದಲ್ಲ.  ಆದರೆ ರತಿಸುಖ ಅಸಾಧ್ಯ ಎಂಬುದು ಖಚಿತವಾದ ಮೇಲೂ ಕೇವಲ ಅನುಬಂಧಕ್ಕಾಗಿಯೇ ದಾಂಪತ್ಯವನ್ನು ಸ್ವೀಕರಿಸಲು ಸಿದ್ಧವಾಗುವ ಗಂಡು-ಹೆಣ್ಣುಗಳ ಕತೆ ಅಪರೂಪವೇ ಎನ್ನಬಹುದು. ಈ ಪ್ರಶ್ನೆಯನ್ನು ಸಾರ್ವತ್ರಿಕಗೊಳಿಸಿ ಅದಕ್ಕೆ ಉತ್ತರ ಕಂಡುಕೊಳ್ಳುವುದು ಸಾಧ್ಯವಿಲ್ಲ. ಮೊದಲೇ ಹೇಳಿದಂತೆ ಅದು ತೀರ ವೈಯಕ್ತಿಕವಾದ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ ವಿಚಾರ. ಆದರೆ ಕತೆಯೊಂದರಲ್ಲಿ ಅದನ್ನು ತರುವಾಗ ಅದು ಒಡ್ಡುವ ಸವಾಲುಗಳು ದೊಡ್ಡವು. ಅಂಥ ಆಯ್ಕೆ, ಓದುಗರಿಗೆ ಸಿನಿಮೀಯ ಆದರ್ಶ ಅನಿಸದೇ, ಹೌದು ಹೌದು ಅನಿಸುವಂತೆ ಬರುವುದು ಆ ಸವಾಲು. ‘ಆವಿ’ ಕತೆಯಲ್ಲಿ ಅಷ್ಟು ಕನ್ವಿನ್ಸಿಂಗ್ ಅನಿಸದೇ ಹೋದ ಅದೇ ವಸ್ತು ‘ಪರಿವರ್ತನೆ’ ಕತೆಯಲ್ಲಿ ಚೆನ್ನಾಗಿಯೇ ಮೂಡಿದೆ. ಇದಕ್ಕಿರಬಹುದಾದ ಕಾರಣಗಳ ಬಗ್ಗೆ ಯೋಚಿಸಿದರೆ ಕಥೆಯೊಂದನ್ನು ಹೇಳುವ ಮರ್ಮಗಳ ಬಗ್ಗೆ ನಮ್ಮ ಅರಿವು ಹೆಚ್ಚುತ್ತದೆ.

‘ತಾನೊಂದು ಬಗೆದರೆ’ ಕತೆ ಇದಕ್ಕೆ ಮತ್ತಷ್ಟು ಪುರಾವೆ, ಕಸು ತುಂಬುವಂಥ ಒಂದು ಕತೆ. ಇದನ್ನು ಕಥಾನಕದ ದೃಷ್ಟಿಯಿಂದ ನೋಡಿದರೆ ಬಹುಶಃ ಇದು ಅಷ್ಟು ಯಶಸ್ವಿಯಾದ ಕತೆಯೆಂದು ಅನಿಸದೇ ಇರಬಹುದು. ಆದರೆ ನಿರೂಪಣೆಯ ಹದವನ್ನೇ ಗಮನದಲ್ಲಿಟ್ಟುಕೊಂಡು ನೋಡಿದರೆ, ಇದು ನಿಜಕ್ಕೂ ಈ ಸಂಕಲನದ ಒಂದು ಉತ್ತಮ ಕತೆ. ‘ಮೂಚಿಮ್ಮ’ ಕತೆ ಸಾಧಿಸುವ ಕಥಾನಕ, ತಂತ್ರ, ಧ್ವನಿ ಮತ್ತು ಕೇಂದ್ರ ಎಲ್ಲ ಬಗೆಯ ಯಶಸ್ಸು ಈ ಕತೆಗೆ ಪ್ರಾಪ್ತಿಯಾದಂತಿಲ್ಲ. ಆದರೆ ನಿರೂಪಣೆಯ ವಿಚಾರವಾಗಿ ನನಗೆ ವೈಯಕ್ತಿಕವಾಗಿ ಬೆಸ್ಟ್ ಅನಿಸುವ, ಡಾ.ಅಜಿತ್ ಹರೀಶಿಯವರು ಸಾಧಿಸಿರುವ, ಅವರಿಗೆ ಸಾಧ್ಯವಿರುವ ಬಟ್ ಅವರು ಬಹುಶಃ ತಮ್ಮದಲ್ಲದ ಹಾದಿ ಎಂದುಕೊಂಡಿರುವ ಒಂದು ವಿಧಾನದ ಬಗ್ಗೆ ಹೇಳುವುದಷ್ಟೆ ನನ್ನ ಉದ್ದೇಶ. ಈ ಇಡೀ ಕತೆಯ ನಿರೂಪಣೆಯಲ್ಲಿ ಎಲ್ಲಿಯೂ  ತನಗೆ ಹೇಗೆ ಬೇಕೋ ಹಾಗೆ ಅದನ್ನು ನಿಯಂತ್ರಿಸಿದ ಹಾಗಿಲ್ಲ. ತನ್ನ ಕಥನವನ್ನು ಅದು ಹೇಗಿದೆಯೋ ಹಾಗೆ ಹೇಳುವ ಕೆಲಸವನ್ನಷ್ಟೇ ಇಲ್ಲಿಯ ನಿರೂಪಕ/ಕತೆಗಾರ ನಿರ್ವಹಿಸಿದಂತಿದೆ. ಹಾಗಾಗಿ ಕಥಾನಕದ ವಿಸ್ತಾರಕ್ಕೆ ಹೋಲಿಸಿದಲ್ಲಿ ಅದಕ್ಕೊಂದು ಆಕೃತಿ, ಕೇಂದ್ರ ಒದಗದೇ ಹೋಗಿರಬಹುದು. ಇದು ಗಂಗೆ ಮತ್ತು ಶಂಕರನ ನಡುವಿನ ಸಂಬಂಧದ ಕತೆಯೇ, ಅಥವಾ ಶಂಕರ ಮತ್ತು ವೆಂಕಟನ ನಡುವಿನ ಸಂಬಂಧದ ಕತೆಯೋ ಅಥವಾ ಎರಡೂ ಹೌದೆನ್ನುವ ಕತೆಯೋ ಎಂಬ ಪ್ರಶ್ನೆಯಿದೆ. ಹಾಗಿದ್ದೂ ಒಂದರ ಜೊತೆ ಇನ್ನೊಂದರ ತಥಾಕಥಿತ ಸಂಬಂಧವೇನಾದರೂ ಇದೆಯೇ ಎಂಬ ಪ್ರಶ್ನೆಯೂ ಇದೆ. ಬಯಸಿದ್ದರೆ ಅಂಥ ಒಂದನ್ನು ಈ ಕತೆಗೆ ದಕ್ಕಿಸುವುದೇನೂ ಕಷ್ಟವಿರಲಿಲ್ಲ. ಸೂಕ್ಷ್ಮವಾಗಿ ಅಂಥ ಕೆಲವು ಹೊಳಹುಗಳನ್ನು ಒಂದು ಯಥಾವತ್ ಚಿತ್ರದಲ್ಲಿಯೂ ಕಾಣಲು ಸಾಧ್ಯವಿದೆ ಕೂಡ ಅಲ್ಲವೆ? ಆದರೆ ಅದು ಮುಖ್ಯ ಪ್ರಶ್ನೆಯಲ್ಲ. 

ಕತೆಯನ್ನು ಓದಿ ಬಹಳ ಕಾಲದ ಮೇಲೂ ಮನಸ್ಸಿನಲ್ಲಿ ಕತೆಗಾರನ ಹೆಸರು, ಇಡೀ ಕತೆ, ಎಲ್ಲಿ ಓದಿದೆ, ಯಾವಾಗ ಓದಿದೆ ಎನ್ನುವುದೆಲ್ಲ ನಮ್ಮ ನೆನಪಿನಲ್ಲಿ ಉಳಿಯದೇ ಹೋಗಬಹುದು. ಆದರೆ, ಬಾಂದುಕಲ್ಲಿನಡಿ ಇರಿಸುವಾಗ, ತೆಗೆದುಕೊಡುವಾಗ ಒಂದೊಂದು ನಾಣ್ಯ ಪಡೆದು, ಹೆಚ್ಚಿನದ್ದಕ್ಕೆ ಆಶೆ ಪಡದ ಗೋಯಿಂದಣ್ಣನನ್ನು ಮನಸ್ಸು ಮರೆಯುವುದಿಲ್ಲ. ಹಾಗೆಯೇ ‘ತಾನೊಂದು ಬಗೆದರೆ’ ಕತೆ ಕಟ್ಟಿಕೊಡುವ ಒಂದು ಪರಿಸರವನ್ನೂ... 

ನಿಜವಾದ ಯಶಸ್ಸು ಎಂದು ನಾನು ತಿಳಿಯುವುದು ಅಷ್ಟನ್ನು ಮಾತ್ರ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ