Friday, February 5, 2021

ನಿಮ್ಮ ಹೊಸ ಪುಸ್ತಕ ಓದಿದೆ, ಚೆನ್ನಾಗಿದೆ. ಆದರೆ...ಒಂದು ಕೃತಿಯ ಬಗ್ಗೆ ಬಂದ ವಿಮರ್ಶೆಯು ಆ ಕಾಲದ ಎಲ್ಲ ಕೃತಿಗಳ ಕುರಿತೂ ಹೇಳುತ್ತಿರುತ್ತದೆ...
                                                                                                                       - ವಿವೇಕ್ ಶಾನಭಾಗ

ಬಹಳಷ್ಟು ಹೊಸಬರು ಬರೆಯುತ್ತಿದ್ದಾರೆ ಮತ್ತು ತಮ್ಮ ಪುಸ್ತಕಗಳನ್ನು ತುಂಬ ಪ್ರೀತಿಯಿಂದ ಕಳುಹಿಸಿಕೊಡುತ್ತಿದ್ದಾರೆ. ಕಳುಹಿಸಬೇಡಿ ಎನ್ನಲು ಮನಸ್ಸು ಬರುವುದಿಲ್ಲ. ಆದರೆ ಅವರು ಕಳುಹಿಸಿದ್ದನ್ನು ಓದುವುದೇ ಆದಲ್ಲಿ ನಾನು ಇನ್ನೂ ಎರಡು ಮೂರು ವರ್ಷ ಬೇರೇನನ್ನೂ ಓದಲು ಬರೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ನನ್ನ ಓದಿನ ಗತಿ ನಿಧಾನ. ಕನ್ನಡ ಪುಸ್ತಕಗಳನ್ನಾದರೆ ವರ್ಷಕ್ಕೆ ನೂರಿಪ್ಪತ್ತು ಪುಟಗಳ ಅರವತ್ತು ಪುಸ್ತಕಗಳನ್ನು ಓದಿಯೇನು. ನಡುವೆ ಇಂಗ್ಲೀಷ್ ಪುಸ್ತಕಗಳಿದ್ದರೆ ಒಟ್ಟು ಸಂಖ್ಯೆ ನಲವತ್ತು ಮೀರುವುದಿಲ್ಲ. ಹಾಗಾಗಿ ನನ್ನ ಕಿರಿಯ ಗೆಳೆಯರು ಬೇಸರಿಸಿಕೊಳ್ಳದಿರಲಿ ಎಂದು ಬಯಸುತ್ತೇನೆ. ನಾನು ಹಲವರ ಎರಡು ಮೂರು ಕತೆಗಳನ್ನು ಓದಿದ್ದೇನೆ. ಅದರ ಆಧಾರದ ಮೇಲೆ ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಹೇಳುವುದು, ಪುಸ್ತಕದ ಬಗ್ಗೆ ಬರೆಯುವುದು ತಪ್ಪಾಗುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲ ಸಂಕಲನಗಳಲ್ಲಿ ನನಗೆ ಸಾಮಾನ್ಯವಾಗಿ ಕಂಡು ಬಂದಿರುವ ಕೆಲವು ಲಕ್ಷಣಗಳ ಕುರಿತು ಹೇಳಲು ಬಯಸುತ್ತೇನೆ. ನಿಮಗೆ ಹೇಳುತ್ತ ನಾನು ನನ್ನ ತಪ್ಪುಒಪ್ಪುಗಳನ್ನೂ ಕಂಡುಕೊಂಡಿದ್ದೇನೆ. ಹಾಗಾಗಿ ಇದು ಒಂದು ಬಗೆಯ ಸಹಸ್ಪಂದನವೇ ಹೊರತು ಹಿರಿಯನೊಬ್ಬ ಕಿರಿಯರಿಗೆ ಕೊಡುತ್ತಿರುವ ಪ್ರವಚನ ಅಲ್ಲ. ಇದನ್ನು ಬರೆಯಲು ನನಗಿರುವ ಒಂದೇ ಒಂದು ಅರ್ಹತೆ ಎಂದರೆ ನಾನು ಈ ಹೊಸಬರಿಗಿಂತ ಕೆಟ್ಟದಾಗಿ ಕತೆಗಳನ್ನು ಬರೆಯುತ್ತಿದ್ದವನು ಮತ್ತು ಹಾಗಾಗಿ ನಿರಂತರ ಕಲಿಯುತ್ತ ಬಂದವನು ಎಂಬುದೇ. ಈಗಲೂ ನಾನು ಕಲಿಯುತ್ತಲೇ ಇದ್ದೇನೆ ಮತ್ತು ಈಗ ಹೊಸದಾಗಿ ಒಂದು ಕತೆ ಬರೆಯಬೇಕೆಂದರೂ ಅ ಆ ಇ ಈ ಯಿಂದಲೇ ಸುರುಮಾಡುತ್ತಿರುವ ಭಯ, ಆತಂಕದೊಂದಿಗೇ ಸುರು ಮಾಡಬೇಕಾಗುತ್ತದೆ ನನಗೆ. ಹಾಗಾಗಿ ಸುರು ಮಾಡುವುದಕ್ಕೇ ಹೋಗುವುದಿಲ್ಲ. ಅದಕ್ಕಿಂತ ಹೀಗೆ ಇನ್ನೊಬ್ಬರಿಗೆ ಹೀಗೆ ಮಾಡಬೇಡಿ, ಹಾಗೆ ಮಾಡಬೇಡಿ ಎಂದು ಹೇಳುವುದು ಇದ್ದುದರಲ್ಲಿ ಸುಲಭದ ಕೆಲಸ.

ಭಾಷೆ, ವಸ್ತು, ತಂತ್ರ, ವಿವರಗಳು, ಕೇಂದ್ರ, ಆಕೃತಿ, ಧ್ವನಿ, ತಾತ್ವಿಕತೆ, ಸಾಮಾಜಿಕ ಅರ್ಥಪೂರ್ಣತೆ, ಯಶಸ್ಸು - ಎಂಬ ಒಟ್ಟು ಹತ್ತು ನೆಲೆಗಳಲ್ಲಿ ಒಂದು ಕತೆಯನ್ನು ಗಮನಿಸಬಹುದು. ಭಾಷೆಯ ಬಗ್ಗೆ ಇಲ್ಲಿ ವಿವರವಾದ ಚರ್ಚೆ ಇದೆ. ಇದನ್ನು ಹದಿನೈದು ವರ್ಷಗಳ ಹಿಂದೆ ತುಂಬೆಯ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಹೋದಾಗ ತಯಾರಿಸಿಟ್ಟುಕೊಂಡಿದ್ದು. ಅದರಲ್ಲಿ ನನ್ನ ಮಾತುಗಳು ಕಡಿಮೆಯಿವೆ, ಬೇರೆ ಕತೆಗಾರರ, ಬಲ್ಲವರ ಮಾತುಗಳಿವೆ. ಅವುಗಳನ್ನು ಗಮನಿಸಿ.

ವಸ್ತುವಿನ ಬಗ್ಗೆ ಹೇಳಬೇಕಾಗಿಲ್ಲ. ಎಲ್ಲರೂ ಆಯ್ದುಕೊಂಡಿರುವ ವಸ್ತು ವೈವಿಧ್ಯಮಯವಾಗಿವೆ, ಚೆನ್ನಾಗಿವೆ.

ತಂತ್ರದಲ್ಲಿ ನಾವೀನ್ಯತೆ ಇದೆ, ಆದರೆ ಅದರ ಉದ್ದೇಶ ಸ್ಪಷ್ಟವಿಲ್ಲ. ಹೊಸ ಹೊಸ ತಂತ್ರ ಬಳಸಿ ಒಂದು ಕತೆಯನ್ನು ಹೇಳುವುದು ಆಕರ್ಷಕ ಮತ್ತು ಪ್ರಯೋಗಾತ್ಮಕ ಕೂಡ. ಆದರೆ ಒಂದು ಕತೆಗೆ ತನಗೆ ಬೇಕಾದ ತಂತ್ರವನ್ನು ತಾನೇ ಆಯ್ದುಕೊಳ್ಳುವ ಕಸು ಇರುತ್ತದೆ. ಕಾರಂತರು ಹಾಗೆಂದು ನಂಬಿದ್ದರು ಮತ್ತು ಅದು ತೊಂಬತ್ತು ಶೇಕಡ ನಿಜ. ಎಷ್ಟೋ ಸಲ, ನಾವು ಹೇಳಬೇಕಾದ ಕತೆಯನ್ನು ಆಯ್ಕೆ ಮಾಡಿದ ಮೇಲೆ ಹೊಸದಾಗಿ ತಂತ್ರವನ್ನು ಆಯ್ಕೆ ಮಾಡುವುದಕ್ಕೆ ಅವಕಾಶವೇ ಇರುವುದಿಲ್ಲ. ಈ ಬಗ್ಗೆ ಗಮನ ಹರಿಸಬೇಕಿದೆ. ನಾವು ಕೆಲವೊಮ್ಮೆ "ಕಟ್ಟುವ" ಕತೆಗಳಲ್ಲಿ ಮಾತ್ರ ತಂತ್ರವೊಂದರ ಅಗತ್ಯ ಹೆಚ್ಚಿರುತ್ತದೆ. ಆದರೆ ತಂತ್ರದ ಉಪಯೋಗ ಹೆಚ್ಚಿದಷ್ಟೂ ನಮ್ಮ ಕುರ್ಚಿಯಲ್ಲಿ ಕೀಲುಗಳು, ಮೊಳೆಗಳು ಕಣ್ಣಿಗೆ ಹೊಡೆಯುತ್ತವೆ. ವಿವೇಕ್ ಶಾನಭಾಗರ ಮಾತುಗಳಿವು. ಕುರ್ಚಿ ಮಾಡುವ ಕೌಶಲ್ಯ ಸತತವಾಗಿ ನೈಪುಣ್ಯ ಹೆಚ್ಚಿಸಿಕೊಳ್ಳುತ್ತ ಹೋಗಬೇಕು ಎನ್ನುವುದು ನಿಜ. ಆದರೆ ಕುರ್ಚಿ ಇರುವುದೇ ಕುಳಿತುಕೊಳ್ಳುವುದಕ್ಕೆ ಮತ್ತು ಕುಳಿತುಕೊಳ್ಳಲು ಬಂದವನಿಗೆ ಮೊಳೆ ಕಾಣಿಸುವಂತಿದ್ದರೆ ಅದು ಒಳ್ಳೆಯ ಕ್ರಾಫ್ಟ್‌ಮನ್‌ಶಿಪ್ ಅಲ್ಲ. ಅಂತಿಮವಾಗಿ ಒಬ್ಬ ಆರಾಮಾಗಿ ಕುಳಿತುಕೊಳ್ಳಲು ಆಗುವಂತೆ ಕುರ್ಚಿ ಮಾಡಬೇಕಾದುದೇ ಮುಖ್ಯ, ನೋಡಲು ಚೆನ್ನಾಗಿ ಕಾಣುವಂತೆ ಮಾಡುವುದಕ್ಕಿಂತ.

ವಿವರಗಳ ಬಗ್ಗೆ ಕೆಲವರಿಗೆ ಅತ್ಯಂತ ಅನಾದರವಿದೆ. ಅವು ಅನಗತ್ಯ ವಿವರಗಳು ಎನ್ನುವ ಭಾವನೆ ಕೂಡ ಕೆಲವರಲ್ಲಿದ್ದು ಅದನ್ನೆಲ್ಲ ಕಿತ್ತು ಹಾಕಿದ್ದೇನೆ ಎಂದಿದ್ದು ಕೇಳಿ ಅಚ್ಚರಿಗೊಂಡಿದ್ದೇನೆ. ಒಂದು ಸಣ್ಣಕತೆಯಲ್ಲಿ ಅನಗತ್ಯ ವಿವರಗಳು ಇರಬಾರದು ಎನ್ನುವುದು ನಿಜ. ಆದರೆ ನೀವು ಓದಿರುವ ಯಾವುದೇ ಒಳ್ಳೆಯ ಕತೆಯಲ್ಲಿ ಇರುವ ವಿವರಗಳ ಬಗ್ಗೆ ಅವು ಅನಗತ್ಯ ವಿವರಗಳು ಎಂಬ ತೀರ್ಮಾನಕ್ಕೆ ಬರಬೇಡಿ. ಬದಲಿಗೆ ಆ ವಿವರಗಳು ಯಾಕಾಗಿ ಉಳಿದುಕೊಂಡಿರಬಹುದು ಎಂಬ ಬಗ್ಗೆ ಯೋಚಿಸಿ. ಕತೆಗಾರ ನಿರ್ದಿಷ್ಟ ಉದ್ದೇಶದಿಂದಲೇ ಕೆಲವೊಂದು (ಮೇಲ್ನೋಟಕ್ಕೆ ಅನಗತ್ಯ ಎಂದು ಅನಿಸಬಹುದಾದ) ವಿವರಗಳನ್ನು ತಂದಿರುತ್ತಾನೆ. ಅದೇನೆಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಆಗ ವಿವರಗಳ ಪಾತ್ರದ ಬಗ್ಗೆ ನಿಮಗೆ ಹೆಚ್ಚು ಅರಿವು ಮೂಡುತ್ತದೆ. ಜೇಮ್ಸ್ ಜಾಯ್ಸ್ ಇದನ್ನು ಸಿಗ್ನಿಫಿಕೆಂಟ್ ಡೀಟೇಲ್ಸ್ ಎಂದು ಕರೆದಿದ್ದಾನಂತೆ. ಡಾ|| ಯು ಆರ್ ಅನಂತಮೂರ್ತಿಯವರು ಇದನ್ನು ಯಾವಾಗಲೂ ಹೇಳುತ್ತಿದ್ದರಂತೆ. ನಾವು ಹಾಗೆ ಒಂದು ಕತೆಯ ಜೀವಂತಿಕೆಗೆ, ಪಾತ್ರಗಳ ಜೀವಂತಿಕೆಗೆ, ಒಟ್ಟು ಕತೆಯ ಧ್ವನಿಯ ಜೀವಂತಿಕೆಗೆ ಇಂಥ ವಿವರಗಳನ್ನು ದುಡಿಸಿಕೊಳ್ಳಬೇಕು. ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ.


ಕತೆ ಹೇಳುವಾಗ ಕತೆಗಾರ ಅಥವಾ ನಿರೂಪಕ ಅಥವಾ ಕತೆಯೊಳಗಿನ ಉತ್ತಮ ಪುರುಷ (ನಾನು) ಎಷ್ಟನ್ನು ಆಡಬೇಕು ಎಷ್ಟನ್ನು ಆಡಬಾರದು ಎಂಬ ಬಗ್ಗೆ ಹೆಚ್ಚಿನವರಿಗೆ ಸೂಕ್ಷ್ಮವಾದ ಅರಿವಿಲ್ಲ ಅನಿಸುತ್ತದೆ. ಅಂದರೆ, ನಮ್ಮ ಕತೆಯೊಳಗಿನ ಪಾತ್ರಗಳು ನಮ್ಮವೇ ಸೃಷ್ಟಿ ಹೌದಾದರೂ, ಆ ಪಾತ್ರಗಳ ಬಗ್ಗೆ ಒಂದು ತರದ ತೀರ್ಮಾನಗಳನ್ನು, ಅಭಿಪ್ರಾಯಗಳನ್ನು ನಾವು ಓದುಗನಿಗೆ ಕೊಡುವುದು ತಪ್ಪು. ಆ ಅಧಿಕಾರ ನಮಗಿಲ್ಲ. ನಾವು ಆ ತೀರ್ಮಾನಕ್ಕೆ, ಅಭಿಪ್ರಾಯಕ್ಕೆ ಸ್ವತಃ ಓದುಗನೇ ಬರುವಂಥ ಘಟನೆಗಳನ್ನೋ, ಆ ಪಾತ್ರದ ಬಾಯಲ್ಲಿ ಬರುವ ಮಾತುಗಳನ್ನೋ, ನಡವಳಿಕೆಯನ್ನೋ ತೋರಿಸಬೇಕೇ ಹೊರತು ರೆಡಿಮೇಡ್ ಮಾತುಗಳ ಮೂಲಕ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದೆಲ್ಲ ಹೇಳಲು ಹೋಗಬಾರದು. ನಮ್ಮ ಕತೆಯೊಳಗಿನ ಒಂದು ಪಾತ್ರ ಅಂಥ ಅಭಿಪ್ರಾಯ, ತೀರ್ಮಾನ ನೀಡುವಾಗಲೂ ಅದು ಬದುಕಿನ ಸಂದರ್ಭದಲ್ಲಿ ನಾವು ಆಡುವಂಥ ಮಾತೇ ಆಗಿ ಮೂಡಿಬರಬೇಕು. ಹೆಂಡತಿ ತನ್ನ ಗಂಡನ ಬಗ್ಗೆ ಅಂಥ ಅಭಿಪ್ರಾಯ/ತೀರ್ಮಾನ ಕೊಡುತ್ತಿದ್ದರೆ, ಅದು ಓದುಗನನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕತೆಗಾರನೇ ಮಾತನಾಡುತ್ತಿರುವುದು ಎನ್ನುವ ಸೂಕ್ಷ್ಮ ಓದುಗನಿಗೆ ಹೊಳೆಯುತ್ತದೆ. ಅಂಥದ್ದನ್ನು ಮಾಡಬೇಡಿ. ನಾವು ಕತೆಯಲ್ಲಿ ಬರೆಯುವ ಪ್ರತೀ ವಾಕ್ಯವೂ ಯಾರ ಪ್ರಜ್ಞೆಯಲ್ಲಿ ಮೂಡಿಬಂದಿರುವಂಥದ್ದು ಎಂಬ ಎಚ್ಚರ ಇಟ್ಟುಕೊಂಡು ನೋಡಬೇಕು, ಕನಿಷ್ಠ ತಿದ್ದುವಾಗ. ಲೇಖಕನ ಪ್ರಜ್ಞೆಯಲ್ಲಿ ಮೂಡಿದ ಮಾತುಗಳು ಹೆಚ್ಚಿದ್ದರೆ ಅದು ಒಳ್ಳೆಯ ಕತೆ ಅನಿಸಿಕೊಳ್ಳುವುದಿಲ್ಲ. ತುಂಬ ಕಡಿಮೆ ಅಪವಾದ ಎಂಬಂತೆ ಹೆಚ್ಚಿನ ಎಲ್ಲಾ ಕತೆಗಾರರ ಕತೆಗಳಲ್ಲೂ ಆಯಾ ಕತೆಗಾರರ ಧ್ವನಿ ಕಿವಿಗೆ ಬಡಿಯುತ್ತಿದೆ ಎನ್ನುವುದನ್ನು ಬೇಸರದಿಂದಲೇ ಹೇಳಬೇಕಾಗಿದೆ. ಕೆಲವೊಮ್ಮೆ ಅದು ಅತಿರೇಕದ ಭಾಷಣ/ಉಪನ್ಯಾಸ ಮಟ್ಟಕ್ಕೆ ಹೋಗಿದೆ. ಕೆಲವೊಮ್ಮೆ ತುಂಬ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಗೊತ್ತಾಗುವಂತಿದೆ. ಅದು ಒಂದಿನಿತೂ ಇರದಂತೆ ಎಚ್ಚರ ವಹಿಸಬೇಕಾಗಿದೆ.

ಕತೆಗಾರ ಘಟನೆಗಳನ್ನು, ವಿದ್ಯಮಾನವನ್ನು ಸಾಧ್ಯವಾದಷ್ಟೂ ಅದರಿಂದ ತಾನು ದೂರನಿಂತು, ಹೇಗೆ ನಡೆಯಿತೋ ಹಾಗೆ ಹೇಳಿ ಮುಗಿಸುವುದರ ಮೂಲಕವೇ ತನ್ನ ಕತೆಗೆ ಬೇಕಾದ್ದನ್ನು ಸಾಧಿಸಿಕೊಳ್ಳುತ್ತ ಹೋಗಬೇಕೇ ಹೊರತು ತನ್ನ ಕತೆಗೆ ಬೇಕಾದ್ದನ್ನು ಸಾಧಿಸಿಕೊಳ್ಳುವುದಕ್ಕಾಗಿ ಪಾತ್ರಗಳ ಬಾಯಲ್ಲಿ ಡಯ್ಲಾಗ್ ತುರುಕುವುದು, ತನ್ನ ಕಲ್ಪನೆಗೆ ತಕ್ಕಂತೆ ಘಟನೆಯನ್ನು ವಿವರಿಸುವುದು ಮಾಡಬಾರದು. ಅದರ ಕೃತಕ ಕಟ್ಟಡ ಓದುಗನಿಗೆ ತಿಳಿದು ಬಿಡುತ್ತದೆ ಮತ್ತು ಅವನು ಒಂದು ಕತೆಯಾಗಿ ಅದನ್ನೆಲ್ಲ ಮೆಚ್ಚಿಕೊಂಡರೂ ಅದು ಬಹುಕಾಲ ಅವನ ಮನಸ್ಸಿನಲ್ಲಿ ಒಂದು ಸತ್ಯವಾಗಿ ನಿಲ್ಲುವುದಿಲ್ಲ. ಒಂದು ಒಳ್ಳೆಯ ಕತೆ ಓದುಗನ ಮನಸ್ಸಿನಲ್ಲಿ ಬೀಜದಂತೆ ಮೊಳೆಯಲು ಪ್ರಯತ್ನಿಸಬೇಕು, ಮಳೆನೀರಿನಂತೆ ಹರಿದು ಹೋಗುವುದು ಸಾಮಾನ್ಯ ಕತೆ ಎನಿಸಿಕೊಳ್ಳುತ್ತದೆ.

ಇದಕ್ಕೆ ವಿವರಗಳನ್ನು ದುಡಿಸಿಕೊಳ್ಳುವ ಕಲೆಗಾರಿಕೆಯನ್ನು ಕತೆಗಾರ ಕಲಿತುಕೊಳ್ಳುತ್ತ ಹೋಗಬೇಕಾಗುತ್ತದೆ.

ಕೇಂದ್ರ ಎನ್ನುವುದು ಒಂದು ಸಣ್ಣಕತೆಯ ಅನಿವಾರ್ಯ ಅಂಗ. ಕೆಲವೊಂದು ಕತೆಗಳಲ್ಲಿ (ಇಂಥವು ತುಂಬ ಕಡಿಮೆ ಇದ್ದವು) ಹತ್ತು ಹಲವು ವಿಚಾರಗಳತ್ತ, ಘಟನೆ ಮತ್ತು ವಿದ್ಯಮಾನಗಳತ್ತ ಏಕಕಾಲಕ್ಕೆ ಹರಿಯುವ ಕತೆಗಳನ್ನು ಕಂಡಿದ್ದೇನೆ. ಅವು ಒಂದು ಬದುಕಿನ ಸಾಮಾನ್ಯ ದೈನಂದಿನದಲ್ಲಿ ಬಂದು ಹೋಗತಕ್ಕವೇ, ಅನುಮಾನವಿಲ್ಲ. ಬಡತನ ಇದೆ, ಶೋಷಣೆ ಇದೆ, ಜೂಜಿದೆ, ಲೈಂಗಿಕತೆಯಿದೆ, ಸಣ್ಣ ಭ್ರಷ್ಟತೆಯಿದೆ ಸರಿ. ಇವೆಲ್ಲವೂ ಬದುಕಿನಲ್ಲಿ ಇರುತ್ತವೆ, ಇರುವಂಥವೇ. ಆದರೆ ನಿಮ್ಮ ಕತೆ ಯಾವುದರ ಬಗ್ಗೆ ಇದೆ ಎನ್ನುವದು ಸಣ್ಣಕತೆಯಲ್ಲಿ ಮುಖ್ಯವಾಗುತ್ತದೆ. ಒಂದೇ ಕತೆಯಲ್ಲಿ ಎಲ್ಲದರ ಬಗ್ಗೆಯೂ ತೋರಿಸುತ್ತ ಕತೆ ನಮ್ಮ ಒಟ್ಟಾರೆ ಬದುಕಿನ ಕುರಿತಾಗಿದೆ ಎಂದರೆ ಒಪ್ಪಬಹುದು. ಆದರೆ ಆಗಲೂ ಆ ಕತೆ ಮನಸ್ಸಿನಲ್ಲಿ ಉಳಿಯುವುದಕ್ಕೆ ಅಷ್ಟೆಲ್ಲಾ ಸಂಗತಿಗಳನ್ನು ಅದರ ಮೂಲಕ್ಕೆ ಧಕ್ಕೆಯಾಗದ ವಿವರಗಳಲ್ಲಿ ತರುವ ಸವಾಲು ಸಣ್ಣದಲ್ಲ. 

ನಮ್ಮ ಬದುಕಿಗೆ, ಅದರ ದೈನಂದಿನಗಳಿಗೆ ಯಾವುದೇ ಅರ್ಥವಿಲ್ಲ. ಅಂಥ ಅರ್ಥವೊಂದನ್ನು ಆರೋಪಿಸಿ, ಬದುಕಿಗೆ ಅರ್ಥವಿದೆ, ಇರಬಹುದು ಎಂಬ ಪರಿಕಲ್ಪನೆಗೆ ನಮ್ಮನ್ನು ನಾವು ದೂಡಿಕೊಳ್ಳುತ್ತ ಬಂದಿರುವುದು ಕೇವಲ ನಮಗೆ ಮೆದುಳಿದೆ ಎನ್ನುವುದರ ಬೈಪ್ರಾಡಕ್ಟ್. ಹಾಗಾಗಿ ಒಬ್ಬ ಕತೆಗಾರ ಕತೆ ಹೇಳಲು ತೊಡಗುವುದು ಕೂಡ, ಅರ್ಥಪೂರ್ಣವಾದ ಏನನ್ನೋ ಹೇಳಬೇಕು ಎಂಬ ಉದ್ದೇಶದಿಂದಲೇ. ಆ ಉದ್ದೇಶಕ್ಕೆ ಆ ಏನೋ ಎನ್ನುವುದು ಸ್ಪಷ್ಟವಿರಬೇಕಾಗುತ್ತದೆ. ಸ್ಪಷ್ಟವಿದ್ದರೆ, ಕೇಂದ್ರ ಎನ್ನುವುದು ಒಡಮೂಡುತ್ತದೆ. ಕೇಂದ್ರ ಇಲ್ಲದೇ ಇರುವುದು, ಕತೆಗಾರನಿಗೆ ಅದು ಸ್ಪಷ್ಟವಿಲ್ಲ ಎನ್ನುವುದನ್ನು ಸೂಚಿಸುವ ಮಟ್ಟಕ್ಕೆ ಹೋಗದಿದ್ದರೆ ಒಳ್ಳೆಯದು. 

ಸಾಧ್ಯವಾದ ಮಟ್ಟಿಗೆ ಒಂದು ಕತೆ ಒಂದು ಸೂಕ್ಷ್ಮವಾಗಿ ಹೊಳಹು ನೀಡಬಲ್ಲಂಥ ಕೇಂದ್ರವನ್ನು ಹೊಂದಿರುವುದು ಒಳ್ಳೆಯದು.

ಆಕೃತಿಯ ವಿಚಾರಕ್ಕೆ ಬಂದರೆ ಕನ್ನಡದ ಸಣ್ಣಕತೆಗಳು ಒಂದು ಸಂಕ್ರಮಣ ಘಟ್ಟದಲ್ಲಿರುವಂತೆ ಭಾಸವಾಗುತ್ತದೆ. ಈಗಲೇ ಈ ವಿಚಾರದ ಬಗ್ಗೆ ಚೌಕಟ್ಟುಗಳನ್ನು ಕಂಡುಕೊಳ್ಳುವುದು ಕಷ್ಟ.

ಒಂದು ಸಣ್ಣಕತೆಯ ಧ್ವನಿ, ಒಂದು ಕತೆಯಲ್ಲಿ ಕತೆಗಾರ ಬಳಸುವ ಭಾಷೆ, ಅವನ ಪಾತ್ರಗಳು, ವಸ್ತು, ಘಟನೆಗಳು, ವಿವರ ಎಲ್ಲದರತ್ತ ಸ್ವತಃ ಕತೆಗಾರನಿಗೇ ಇರುವ ಮನೋಧರ್ಮವನ್ನು ನಿರ್ಧರಿಸುತ್ತಿರುತ್ತದೆ, ಅದನ್ನು ಓದುಗನಿಗೆ ಕಾಣಿಸುತ್ತಿರುತ್ತದೆ. ಈಚಿನ ಹೆಚ್ಚಿನ ಹೊಸ ಕತೆಗಾರರಿಗೆ ಬಿಂದಾಸ್ ಎನ್ನುತ್ತೇವಲ್ಲ, ಆ ತರದ ಭಾಷೆಯನ್ನು ಬಳಸುವುದರಿಂದ ತಕ್ಷಣ ಗಮನ ಸೆಳೆಯಬಹುದು ಎಂಬ ಭ್ರಮೆ ಇದ್ದಂತಿದೆ. ಅಶ್ಲೀಲವಾದ ಭಾಷೆಯನ್ನು, ಕೆಟ್ಟ ಬೈಗುಳವನ್ನು, ಹೊಲಸು ಸೂಚಕ ಪದಗಳನ್ನು ನೇರವಾಗಿ ಸಾಹಿತ್ಯಕ್ಕೆ ಪರಿಚಯಿಸುವುದರಿಂದ ಲೇಖಕನ ಅನುಭವ ಸಮೃದ್ಧವಾಗಿದೆ, ಅವನು ಹೆಚ್ಚು ಪ್ರಬುದ್ಧನಾಗಿದ್ದಾನೆ, ಅವನಿಗೆ ಬದುಕು ಅರ್ಥವಾಗಿದೆ, ಸುವಾಸನೆ-ದುರ್ವಾಸನೆಗಳ ನಡುವೆ ತಾರತಮ್ಯಮಾಡುವ ಹಂತವನ್ನೂ ದಾಟಿ ಬೆಳೆದಿದ್ದಾನೆ ಎಂದೋ, ಕತೆ ಅತ್ಯಂತ ಡೌನ್ ಟು ಅರ್ಥ್ ಆಗಿ ಮೂಡಿಬಂದಿದೆ, ಮಣ್ಣಿನವಾಸನೆ ಮೂಗಿಗೆ ಹೊಡೆಯುತ್ತಿದೆ ಎನ್ನುವಂಥ ಪ್ರಶಂಸೆ ಬರುತ್ತದೆ ಎಂದೋ ಭಾವಿಸಿ, ಅಂಥ ನಿರೀಕ್ಷೆಯಿಂದಲೇ ಹಾಗೆ ಬರೆಯುತ್ತಿದ್ದಾರೋ ಅನಿಸುತ್ತದೆ. ಆದರೆ ಓದುಗ ಸದಾ ಕತೆಗಾರನಿಗಿಂತ ಒಂದು ಹೆಜ್ಜೆ ಮುಂದಿರುತ್ತಾನೆ. ಅವನು ಇದನ್ನೆಲ್ಲ ಕಾಣಬಲ್ಲ. ಕತೆಗಾರ ಕತೆಯ ಉದ್ದೇಶಕ್ಕೆ ಬಳಸಿದ್ದೆಷ್ಟು, ಅನಗತ್ಯವಾಗಿ ಬಳಸಿದ್ದೆಷ್ಟು ಎನ್ನುವುದನ್ನು ಅವನ ಮನಸ್ಸು ತಕ್ಷಣ ಗ್ರಹಿಸುತ್ತದೆ.

ತಾತ್ವಿಕ ಆಯಾಮ ಮತ್ತು ಸಾಮಾಜಿಕ ಅರ್ಥಪೂರ್ಣತೆಯ ಬಗ್ಗೆ:

ಜಿ ಎಚ್ ನಾಯಕ:
 
ತಾತ್ವಿಕ ಆಯಾಮವನ್ನು ಪಡೆದಿರದ ಸಾಮಾಜಿಕ ಅರ್ಥಪೂರ್ಣತೆ ಹಾಗೂ ಸಾಮಾಜಿಕ  ಅರ್ಥಪೂರ್ಣತೆಯನ್ನು ಪಡೆದಿರದ ತಾತ್ವಿಕ ನೋಟ ಇವೆರಡೂ ತಮ್ಮಷ್ಟಕ್ಕೆ ತಾವು ಎಷ್ಟೇ ಕಲಾತ್ಮಕವಾಗಿ ಸಾಹಿತ್ಯಕೃತಿಯಲ್ಲಿ ಅಭಿವ್ಯಕ್ತಿ ಪಡೆದಿದ್ದರೂ ಅಂಥ ಸಾಹಿತ್ಯ ಕೃತಿ ಶ್ರೇಷ್ಟವಾಗಲಾರದು.
( ಈ ವಿಚಾರದ ವಿಸ್ತೃತ ಚರ್ಚೆಗಾಗಿ ಗಮನಿಸಿ: ಶ್ರೀ ಡಿ ಆರ್ ನಾಗರಾಜ್ ಬರೆದ ’ಅಮೃತ ಮತ್ತು ಗರುಡ’ ಕೃತಿಯ ಸಾಹಿತ್ಯ, ತತ್ವಜ್ಞಾನ, ತಾತ್ವಿಕ ನಿಲುವುಗಳು ಇತ್ಯಾದಿ - ಪ್ರಬಂಧ.) 

ಭಾಷೆಯ ಬಗ್ಗೆ:  
ಮೂಲಭೂತವಾಗಿ ಸಾಹಿತ್ಯದ ಪ್ರಧಾನ ಆಕರಗಳು, ಭಾಷೆ, ಮನುಷ್ಯ, ಮನಸ್ಸು, ಅವನ ಭಾವ ಜಗತ್ತು ಮತ್ತು ಬದುಕು. ಹಾಗಾಗಿ, ಅದರ ಅಧ್ಯಯನ ಎಂದಿಗೂ ಮುಗಿಯದ್ದು.

ತೀರ ಆರಂಭದಲ್ಲಿ, ಸದ್ದು ಅಥವ ಶಬ್ದ ಮತ್ತು ಆಂಗಿಕ ಚಲನೆಯಿಂದ ಸಂವಹನ ಸುರುವಾಗಿರಬೇಕು. ಸದ್ದಿಗೆ ವಿವಿಧ ರಾಗ, ನಾದ ನೀಡುವುದರಿಂದ ಸಂವಹನ ಸುಲಭವಾಗುತ್ತದೆ. ಅಲ್ಲಿಂದ ಮುಂದೆ ಪದಗಳ ಸೃಷ್ಟಿಯಾಗಿರಬೇಕು. ಮಾತಿಗೆ ಪದ ಸೃಷ್ಟಿ ಅನಿವಾರ್ಯ. ಅದು ಲಿಪಿಯ ಅನ್ವೇಷಣೆಗೆ, ಭಾಷೆ ಎಂದು ನಾವು ಇವತ್ತು ಗುರುತಿಸುವ ರೂಪದ ಆವಿಷ್ಕಾರಕ್ಕೆ ನಾಂದಿಯಾದಂತೆ ಕಾಣುತ್ತದೆ. ಹೀಗೆ, ಅಕ್ಷರ, ಬರಹ ಬಳಕೆಗೆ ಬಂತು. 
 
ಇಲ್ಲಿ ಸಂಗೀತದ ಶಕ್ತಿಯನ್ನು ಗಮನಿಸಿ. ಒಂದು ರಾಗ, ನೂರು ಪುಟಗಳ ಸಾಹಿತ್ಯ ಮಾಡಲಾರದ ಭಾವ ಸೃಷ್ಟಿಯನ್ನು ನಿರಾಯಾಸವಾಗಿ ಮಾಡಬಲ್ಲುದು, ಗಮನಿಸಿದ್ದೀರಾ? ಇದು ಹೇಗೆ ಸಾಧ್ಯವಾಯಿತು? ಭಾಷೆಗಿಂತ, ಪದಗಳಿಗಿಂತ, ಅಕ್ಷರಗಳಿಗಿಂತ ರಾಗ, ನಾದ, ಸ್ವರ ಬಹಳ ಬೇಗ ಮನುಷ್ಯನ ಭಾವ ಜಗತ್ತನ್ನು ಪ್ರವೇಶಿಸಬಲ್ಲ ಮಾಂತ್ರಿಕ ಶಕ್ತಿ ಹೊಂದಿದೆ. ಭಾವ ಮೊದಲು ನಾದವಾಯಿತು. ರಾಗವಾಯಿತು. ಆನಂತರ ಬಂದಿದ್ದು ಪದ, ಭಾಷೆ, ಲಿಪಿ, ಅಕ್ಷರ, ಬರಹ ಎಲ್ಲ.  
 
ಮನುಷ್ಯನ ಭಾವ ಒಂದು ನಾದವಾಗಿ, ಆ ನಾದ ಒಂದು ಪದವಾಗಿ, ಅಕ್ಷರದಲ್ಲಿ ಬರಹವಾಗಿ ಬರುವುದೆಲ್ಲ ಮತ್ತೆ ಭಾವವಾಗಿ ಪರಿವರ್ತಿತವಾಗುವ ಹಿಮ್ಮೊಗ ಚಲನೆಯ ಪ್ರಕ್ರಿಯೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.
 
ನೀವು ಓದುವ ಅಕ್ಷರ ಸೃಷ್ಟಿಸಿದ ಪದಕ್ಕೆ ನಾದ, ರಾಗ, ಸ್ವರ ಇಲ್ಲ. ಅಥವಾ, ಇದ್ದರೆ ಅದು ಯಾರದ್ದು? ಬರಹಗಾರನದ್ದೆ ಅಥವಾ ಓದುಗನದ್ದೆ?
 
ನೀವು ಓದುವ ಅಕ್ಷರ ಸೃಷ್ಟಿಸಿದ ಪದಕ್ಕೆ ಚಿತ್ರವಿಲ್ಲ, ನೋಟವಿಲ್ಲ. ಅಥವಾ, ಇದ್ದರೆ ಅದು ಯಾರದ್ದು?        
 
 ಡಾ. ಯು ಆರ್ ಅನಂತಮೂರ್ತಿ:
 
ಮಹರ್ಷಿ ವಾಲ್ಮೀಕಿಗೆ ಬ್ರಹ್ಮ ನೀಡಿದ ವರ: ರಾಮಾಯಣದಲ್ಲಿ ಒಂದು ಪಾತ್ರ ಇನ್ನೊಂದಕ್ಕೆ ಗುಟ್ಟಿನಲ್ಲಿ ಹೇಳಿದ್ದೂ, ತಾನು ತನಗೇ ಅಂದುಕೊಂಡಿದ್ದೂ ನಿನಗೆ ಗೊತ್ತಾಗಲಿ.
ಆದರೆ ಈ ವರ ಮಾತ್ರ ಸಾಲದು. ಕಾವ್ಯವನ್ನು ಹೊತ್ತು ಹೆರುವವರೆಲ್ಲರೂ ಪಡುವ ಬಯಕೆಯೊಂದಿದೆ......
......ಪ್ರತಿಸೃಷ್ಟಿಯಲ್ಲಿ ತೊಡಗಿರುವ ಕವಿಗೆ ಎಲ್ಲವನ್ನೂ ಕಾಣಬಲ್ಲ ಶಕ್ತಿ ಮಾತ್ರ ಸಾಲದು: ಕವಿ ಕಂಡು ಹೇಳುವುದು ಕೇಳಿಸಿಕೊಂಡವನಿಗೆ ಅಷ್ಟೇ ಸತ್ಯವಾಗಿ ಕಾಣಿಸಬೇಕು; ಕಂಡದ್ದು ನಿಜ ಎನ್ನಿಸಬೇಕು. ಲಿಂಗ ಮೆಚ್ಚಿ ಅಹುದು ಅಹುದು ಎನ್ನಬೇಕು.
 
ಜಯಂತ ಕಾಯ್ಕಿಣಿ:
ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸಬಲ್ಲದ್ದು ಕಾವ್ಯ.
 
ಇದನ್ನು ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿ ಎನ್ನುತ್ತೇವೆ. ಇದು ಕಷ್ಟದ್ದು. ಓದುಗನ ಕೃಪೆಯನ್ನು ಬಯಸುವ ಸಂಗತಿ.

ಮಟ ಮಟ ಮಧ್ಯಾಹ್ನದ ಬಗ್ಗೆ ಬರೆಯುತ್ತ ರಣರಣ ಬಿಸಿಲು ಎನ್ನುತ್ತೇವೆ. ಆದರೆ ಏನು ಈ ರಣರಣ ಬಿಸಿಲು ಎಂದರೆ?
 
ಸದಾ ಎ.ಸಿ. ರೂಮಿನಲ್ಲೇ ಇರುವ ಒಬ್ಬ ವ್ಯಕ್ತಿಗೆ, ಭೀಕರ ಚಳಿಯಲ್ಲಿ ಅದನ್ನು ಓದುತ್ತಿರುವ ವ್ಯಕ್ತಿಗೆ, ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿ, ಬೆಳ್ದಿಂಗಳ ರಾತ್ರಿ ಹೊತ್ತು ಓದುವಾಗ ಅಥವಾ ಮರುಭೂಮಿಯಲ್ಲಿ ಕೂತು ಓದುವಾಗ......
 
ಓದುವಾಗ ವಿಪರೀತ ಹಸಿವಾಗಿದ್ದರೆ.... ವಿಪರೀತ ಬಾಯಾರಿದ್ದರೆ..... ಸುಸ್ತಿನಿಂದ ನಿದ್ದೆ ಬರುತ್ತಿರುವಾಗ...... ಅಥವಾ ಕದ್ದು ಮುಚ್ಚಿ ಆಫೀಸಿನಲ್ಲೋ, ಕ್ಲಾಸ್ ರೂಮಿನಲ್ಲೋ ಓದುತ್ತಿದ್ದರೆ.....
 
ಗೆಳೆಯರ ಜತೆ ಹರಟುತ್ತ ಮಧ್ಯೆ ಮಧ್ಯೆ ಓದುತ್ತಿದ್ದರೆ...... ಪ್ರಯಾಣ ಮಾಡುತ್ತ ಬಸ್ಸಿನಲ್ಲೊ, ಕಾರಿನಲ್ಲೋ ಇದ್ದರೆ...... ನಿದ್ದೆ ಬಾರದ ಕರ್ಮಕ್ಕೆ ಓದುತ್ತಿದ್ದರೆ......ನಿಲ್ದಾಣದಲ್ಲಿ ಯಾರಿಗೋ ಕಾಯುತ್ತ ಸಮಯ ಕೊಲ್ಲಲು ಓದುವ ಓದು.....  

ಯಶವಂತ ಚಿತ್ತಾಲ:
ಒಂದು ಪುಸ್ತಕವನ್ನು ಓದಲು ಕೈಗೆತ್ತಿಕೊಳ್ಳುವುದೆಂದರೆ ನಮಗೆ ಅಪರಿಚಿತನಾದ ಒಬ್ಬ ವ್ಯಕ್ತಿಯನ್ನು ಭೇಟಿಯಾಗಲು ಹೊರಟಂತೆ. ಎರಡಕ್ಕೂ ಮಾನಸಿಕ ಸಿದ್ಧತೆ ಬೇಕು. ಮುಖ್ಯವಾಗಿ ಎಲ್ಲ ಪೂರ್ವಾಗ್ರಹಗಳನ್ನೂ ಬದಿಗಿರಿಸಿ, ಮುಂದೆ ನಿಂತವನು ನನ್ನಂತೆಯೇ ಇರುವ ಇನ್ನೊಬ್ಬ ಮಾನವ ವ್ಯಕ್ತಿಯೆಂದು ಗುರುತಿಸಿ, ಸಹಜ ಸ್ಫೂರ್ತಿಯಿಂದ ಕೈ ಕುಲುಕಲು ಬೇಕಾದ ಆದರ, ಪ್ರೀತಿಗಳು ಒಂದು ಪುಸ್ತಕ ಎತ್ತಿಕೊಳ್ಳುವುದಕ್ಕೂ ಬೇಕು.

ಸೂಕ್ಷ್ಮ ಸಂವೇದಿಯಾದ ಗ್ರಹಣಶಕ್ತಿ ಇದಕ್ಕೆ ಬೇಕಾಗುತ್ತದೆ. ಇಂಗ್ಲೀಷಿನಲ್ಲಿ ಇದನ್ನು ಕನ್ಸೆಪ್ಷನ್ ಮತ್ತು ಪರ್ಸೆಪ್ಷನ್ ಎನ್ನುತ್ತೇವೆ. ನಾನು ಅಂದುಕೊಳ್ಳುತ್ತಿರುವುದು, ಅದು ನನ್ನ ಕಾಂನ್ಸೆಪ್ಟ್. ನಿಮಗೆ ನಿಮ್ಮ ಪರ್ಸೆಪ್ಷನ್‌ಗೆ ಅಂದರೆ ಗ್ರಹಿಸುವ ಶಕ್ತಿಗನುಗುಣವಾಗಿ ಅದು ಅರ್ಥವಾಗುತ್ತದೆ. ನನ್ನ ಕಾಂನ್ಸೆಪ್ಟನ್ನು ನಾನು ಭಾಷೆಯಲ್ಲಿ ಕಟ್ಟಿಕೊಡುವಾಗ ಅದರ ಮೂಲ ಸ್ವರೂಪಕ್ಕೆ ಧಕ್ಕೆ ಬರದಿರಬೇಕಾದರೆ ನನ್ನ ವಿಚಾರ ನನಗೆ ಸ್ಪಷ್ಟವಿರಬೇಕು ಮಾತ್ರವಲ್ಲ ನನ್ನ ಭಾಷೆ ನನ್ನ ವಿಚಾರವನ್ನು ಸಮರ್ಥವಾಗಿ ಸಂವಹನ ಮಾಡುವ ತ್ರಾಣವನ್ನೂ ಹೊಂದಿರ ಬೇಕಾಗುತ್ತದೆ. ನನ್ನ ಭಾಷೆ ಎಂದೆ, ಬರೀ ಭಾಷೆಯಲ್ಲ. ಭಾಷೆಗೆ ತುಂಬ ಶಕ್ತಿ ಇರಬಹುದು. ಆದರೆ ನನ್ನ ಭಾಷೆಗೂ ಆ ಶಕ್ತಿ ಇರಬೇಕಾಗುತ್ತದೆ. ಅದು ಸಾಧ್ಯವಾಗುವುದು ಓದಿನಿಂದ, ಜೀವನಾನುಭವದಿಂದ, ಬರೆಯುವ ಅಭ್ಯಾಸದಿಂದ. 

ಪಿ. ಲಂಕೇಶ್:
 
ಲೇಖಕನ ‘ಆಯ್ಕೆ’ ದಾರಿ ತಪ್ಪದಿರ ಬೇಕಾದರೆ ಅವನಿಗೆ ಈ ಭಾಷೆ ಮತ್ತು ಅನುಭವದ ಬಗ್ಗೆ ಖಚಿತ ತುಡಿತವಿರಬೇಕು; ನಿರ್ಜೀವ ಮತ್ತು ಸಜೀವದ ಬಗ್ಗೆ ಎಚ್ಚರವಿರಬೇಕು. ಅದಿಲ್ಲದೆ ಇರುವ ಎಲ್ಲ ದಾಹ ನಮ್ಮನ್ನು ಬೆಳೆಸುವ ಗುಣ ಕಳೆದುಕೊಳ್ಳುತ್ತದೆ.

ಲಕ್ಷ್ಮೀಶ ತೋಳ್ಪಾಡಿ:
 
ಅನುಭವದ ಒತ್ತಡದಿಂದ ನುಡಿಗಟ್ಟು ರೂಪುಗೊಳ್ಳುತ್ತ ಹೋಗುತ್ತದೆ. ಆದುದರಿಂದಲೇ ಅದು ಮರಳಿ ಅನುಭವವನ್ನು ಉಂಟುಮಾಡುತ್ತದೆ......
 
ಜತೆಗೆ ಅನುಭವದಿಂದ ಉಂಟಾದ ಮಾತು ಮರಳಿ ಅನುಭವವನ್ನು ಉಂಟುಮಾಡುತ್ತಾ, ಅನುಭವವನ್ನು ಶೋಧಿಸುತ್ತದೆ ಕೂಡ. ಇದೇ ಸೃಷ್ಟಿಕ್ರಿಯೆಯ ಮಹತ್ವ.
 
ಭಾಷೆ ಶಬ್ದದ ಜಗತ್ತಿನದು. ಮೌನ ಅದರ ಇನ್ನೊಂದು ಮುಖ. ಸಂವಹನದಲ್ಲಿ ಶಬ್ದದ ಪಾತ್ರದಷ್ಟೇ ಮೌನದ ಪಾತ್ರವೂ ಇದೆಯೆಂಬುದನ್ನು ಮರೆಯಬಾರದು. ಈ ಮೌನವನ್ನು ಅರಿಯುವುದು ಹೇಗೆ? 
 
ಕೆಲವೊಮ್ಮೆ ಮಾತು ಹೇಳಲಾರದ್ದನ್ನು ಮೌನ ಹೇಳುತ್ತದೆ. ಕೆಲವೊಮ್ಮೆ ಮೌನವೇ ಬಹಳಷ್ಟು ವಿಷಯಗಳನ್ನು ಓದುಗನ ಊಹೆಗೆ, ಕಲ್ಪನೆಗೆ, ವಿವೇಚನೆಗೆ ಬಿಟ್ಟುಬಿಡುವುದರಿಂದ ನಿರೀಕ್ಷೆಗೂ ಮೀರಿದ ಪರಿಣಾಮವನ್ನು ಸಾಧಿಸಲು ಸಾಧ್ಯವಾಗುತ್ತದೆ. ಮೌನದಿಂದ ಕೃತಿಯ ಅರ್ಥಸಾಧ್ಯತೆಗಳನ್ನು ಹೆಚ್ಚಿಸಲು ಸಾಧ್ಯ. ಮೌನದ ನಿಜವಾದ ನೆಲೆ ಬೆಲೆ ಅರಿತಾಗ ಮೌನವನ್ನು ಒಬ್ಬ ಲೇಖಕ ತನ್ನ ಕೃತಿಯ ಅತ್ತ್ಯುತ್ತಮ ಸ್ತರದಲ್ಲಿ ಬಳಸಿಕೊಳ್ಳಲು ಸಾಧ್ಯ. ಹೇಳಿರುವುದಕ್ಕಿಂತ ಹೇಳದೇ ಇರುವುದರಿಂದ ಲೇಖಕ ತನಗೆ ಬೇಕಾದ ಪರಿಣಾಮವನ್ನು ಪಡೆಯಲು ಸಾಧ್ಯವಿದೆ ಮತ್ತು ಇದು ಬಹಳ ಧ್ವನಿಶಕ್ತಿಯನ್ನು ಕೃತಿಗೆ ಗಳಿಸಿಕೊಡುತ್ತದೆ.

ಪಿ. ಲಂಕೇಶ್:
ನಿಮ್ಮ ಪಾಪವನ್ನೂ, ಗುಟ್ಟುಗಳನ್ನೂ, ದೌರ್ಬಲ್ಯಗಳನ್ನೂ, ಏಕಾಂತತೆಯನ್ನೂ ಎದುರಿಸುವುದನ್ನು ಕಲಿತುಕೊಳ್ಳಿ; ಹಾಗೆ ಕಲಿತೊಡನೆ ನಿಮ್ಮ ಬರವಣಿಗೆಗೆ ವಿಚಿತ್ರ ಶಕ್ತಿ ಮತ್ತು ಸೌಂದರ್ಯ ಬರುತ್ತದೆ. ಉದಾಹರಣೆಗೆ, ನಿಮ್ಮ ಏಕಾಂತ ಅಂದರೆ ಅರ್ಥ ಏನು? ನಿಮ್ಮ ಒಬ್ಬಂಟಿತನದ ಸ್ವಾರಸ್ಯ ಏನು? ಸಮಾಜದ ಎಲ್ಲ ಕಾಣ್ಕೆಯ ಸಂಪತ್ತು ಸಾಹಿತ್ಯ ಸಂಪತ್ತಾಗಿ ಬರುವುದು ಇಂಥ ಪ್ರಶ್ನೆಗಳಿಗೆ ದೊರೆತ ಗಾಢ ಉತ್ತರಗಳಿಂದ.
 
ಲೇಖಕನಾದವನು ತನ್ನ ಪಾತ್ರಗಳ ವಿಚಿತ್ರ ಸುಖ ಮತ್ತು ಕಾತರ ಕೂಡಿದ ಸ್ಥಿತಿ - ಇದನ್ನು ಬೇಕಾದರೆ ಕಾಂಪ್ಲೆಕ್ಸ್ ಎನ್ನಿ, ಹಿಡಿದಿಡಲಾಗದವನು ಒಳ್ಳೆಯ ಸಾಹಿತಿಯಾಗಲಾರ.

ಶ್ರೇಷ್ಟ ನಾಟಕಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೌನದ, (ರಂಗ) ಸಾಧ್ಯತೆಗಳ ಪರಿಣಾಮಕಾರಿ ಬಳಕೆಯ ತಂತ್ರಗಳನ್ನು ಅರಿಯಲು ಸಾಧ್ಯವಿದೆ.

ಯಶವಂತ ಚಿತ್ತಾಲ:
 
ಸಾಹಿತ್ಯದ ಸಪ್ತಧಾತುಗಳು:
೧. ಸಾಹಿತ್ಯದ ಸದಾಕಾಲದ ವಿಷಯ ಮನುಷ್ಯ.
೨. ಸಾಹಿತ್ಯ ಮನುಷ್ಯನನ್ನು, ಅವನ ಮೂಲಕ ಬದುಕನ್ನು ಭಾಷೆಯಲ್ಲಿ ಅರಿಯುವ ಅನನ್ಯ ಮಾಧ್ಯಮವಾಗಿದೆ.
೩. ಬದುಕಲ್ಪಟ್ಟ ಬದುಕು, ಅನುಭವಿಸಲ್ಪಟ್ಟ ಬದುಕು ಸಾಹಿತ್ಯದ ಮೂಲ ದೃವ್ಯವಾಗಿದೆ.
೪. ಮಾನವ ಜೀವನವನ್ನು ಅರಿಯಲು ಅವಶ್ಯವಾದ ಚೌಕಟ್ಟುಗಳಲ್ಲಿ ಸಮಾಜವೂ ಒಂದು ಚೌಕಟ್ಟು. ಆದರೆ ಏಕಮಾತ್ರ ಚೌಕಟ್ಟು ಅಲ್ಲ.
೫. ಅನುಭವ ಸಾಹಿತ್ಯದ ವಸ್ತುವಲ್ಲ; ಅದರ ದರ್ಶನೇಂದ್ರಿಯ.
೬. ಅನುಭವ, ಪ್ರಜ್ಞೆಯ ಎದುರು ತನ್ನ ಹಾಜರಿಕೊಡುವುದು ಒಂದು ಜೀವಂತ ಪ್ರತಿಮೆಯ ಮೂಲಕ.
೭. ಕತೆ-ಕಾದಂಬರಿಗಳಂಥ ಸಾಹಿತ್ಯ ಪ್ರಕಾರಗಳಿಗೆ ಇರುವ ನಿರ್ದಿಷ್ಟ ಹಾಗೂ ವಿಶಿಷ್ಟ ಆಕಾರಕ್ಕೂ ಅವು ಗ್ರಹಿಸಲು ಹೊರಟ ವಾಸ್ತವ ಸತ್ಯಕ್ಕೂ ಅನ್ಯೋನ್ಯ ಸಂಬಂಧವಿದೆ.
 
ಅಕ್ಷರಗಳೆಲ್ಲ ಸುಳ್ಳು, ಅವು ಬದುಕಿನ ಕುರಿತಂತೆ ಒಂದು ಭ್ರಮೆಯನ್ನು ಕಟ್ಟಿಕೊಡಬಲ್ಲವೇ ಹೊರತು ಬದುಕನ್ನಲ್ಲ. ಬರೆದವನ ಮಾನಸಿಕ ಪಾತಳಿಯಲ್ಲಿ ಓದುಗನೂ ಓದುವ ಕಾಲಮಾನದಲ್ಲಿ ಐಕ್ಯನಾಗುವುದು ಅಕ್ಷರಗಳ ಸಾಧನೆಯಗಿರದೇ ಅನ್ಯ ಹಲವಾರು ಸಂಗತಿಗಳ ಸಂಗಮದ  ಫಲಶೃತಿಯಾಗಿರುತ್ತದೆ.
 
T S Eliot :

But how can I  explain, how can I explain to you?
You will understand less after I have explained it
All that I could hope to make you understand
Is only events not what has happened
And people to whom nothing has ever happened
Cannot understand the unimportance of events.
  
 ಹಾಗಿದ್ದರೆ ಬರವಣಿಗೆ ಅಷ್ಟೂ ಕಷ್ಟವೆ?
 
ಇಲ್ಲಿ ನಮಗೆ ಮನುಷ್ಯನನ್ನು, ಅವನ ಮನಸ್ಸು ಮತ್ತು ಭಾವ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಬರುತ್ತದೆ. ಏನು ಅರ್ಥ ಮಾಡಿಕೊಳ್ಳುವುದೆಂದರೆ?
 
ನಾವು ಕೆಲವರನ್ನು ಅರ್ಥಮಾಡಿಕೊಳ್ಳುವುದಿಲ್ಲ; ಯಾಕೆಂದರೆ, ನಾವು ಅವರನ್ನು ಪ್ರೀತಿಸುವುದಿಲ್ಲ.
ನಾವು ಕೆಲವರನ್ನು ಪ್ರೀತಿಸುವುದಿಲ್ಲ; ಯಾಕೆಂದರೆ, ನಾವು ಅವರನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಮಾತೊಂದಿದೆ. ಅದು ಸತ್ಯ. ನಾವು ಎಲ್ಲರನ್ನೂ ಪ್ರೀತಿಸಲು ಸಾಧ್ಯವಾಗದಿದ್ದರೆ, ಅರ್ಥಮಾಡಿಕೊಳ್ಳುವುದು ಕೂಡ ಸಾಧ್ಯವಾಗುವುದಿಲ್ಲ. ಮನುಷ್ಯ ಶಾಂತಿಯಿಂದ, ಸಮಾಧಾನದಿಂದ, ಸಂತೋಷದಿಂದ, ಯಾರಲ್ಲಿಯೂ ದ್ವೇಷ, ಅಸೂಯೆ, ಸೇಡು, ಕಪಟ, ಸಿಟ್ಟು ಇಲ್ಲದ ನಿರ್ಮಲ ಮನಸ್ಸಿನಿಂದ ಇರಲು ಸಾಧ್ಯವಾದರೆ ಮಾತ್ರ ಅವನ ಸೃಜನಶೀಲತೆ ಅರಳಲು ಸಾಧ್ಯ. ಇಂಥ ವಾತಾವರಣ ಇಲ್ಲದಲ್ಲಿ, ಅಥವಾ ಇಂಥ ಮನಸ್ಥಿತಿ ಸಾಧ್ಯವಾಗದೇ ಹೋದಲ್ಲಿ ಸಾಹಿತ್ಯ, ಕಲೆ, ಸಂಗೀತ ಯಾವುದೂ ಸಾಧ್ಯವಾಗುವುದಿಲ್ಲ. ಹಾಗಾಗಿ, ಪ್ರೀತಿಯೇ ಸಕಲ ಕಲೆಗಳ ಮೂಲ ಸೆಲೆ. ಪ್ರೀತಿಯಿಂದಲ್ಲದೆ ಯಾವ ಸೃಷ್ಟಿಯೂ ಸಾಧ್ಯವಿಲ್ಲ.   

Osho Rajnish:

Bodies are separate
Minds overlap
And Soul is ONE.

ನಮ್ಮ ಒಳಗೇ ಇರುವ ಜಗತ್ತನ್ನು ಕಾಣಬಲ್ಲವರಾದರೆ, ನಮ್ಮ ಒಳಗೆ ಇರುವ ಕೆಟ್ಟದ್ದನ್ನು, ಕೆಡುಕನ್ನು, ಕೊಳಕನ್ನು, ಅಸಹ್ಯವನ್ನು ಕೂಡ ಕಾಣಬಲ್ಲವರಾದರೆ, ಅದು ನಮಗೆ ಮನುಷ್ಯನನ್ನು ಕಾಣಿಸಲು ಸಾಧ್ಯ. ನಮ್ಮ ಒಳಗಿರುವ ರಾಮನನ್ನು, ರಾವಣನನ್ನು, ಕೌರವನನ್ನು, ಕೀಚಕನನ್ನು ಗುರುತಿಸಿದಾಗ ಬಹುಷಃ ಮನುಷ್ಯ ಒಂದು ಸಾಧ್ಯತೆಗಳ ಮೊತ್ತ ಎಂಬ ಸತ್ಯದ ಅರಿವು ಮೂಡುತ್ತದೆ. ತನ್ನಂತೆಯೇ ಎಲ್ಲರೂ ಎಂಬ ಮಾತು ಅದರ ಅತ್ಯಂತ ಆಳದ ಪಾತಳಿಯಲ್ಲಿ ಅರಿವಿಗಿಳಿದರೆ ಮನುಷ್ಯ, ಮನಸ್ಸು, ಭಾವಜಗತ್ತಿನ ಮೇಲಾಟಗಳು, ಅರ್ಥವಾಗುತ್ತವೆ. ಇದಕ್ಕೆ ವಿಪುಲ ಓದು, ಮೌನದ, ಏಕಾಂತದ ಧ್ಯಾನದ ಸಾಂಗತ್ಯ ಸಹಾಯ ಮಾಡುತ್ತದೆ.
 
ತನ್ನನ್ನು ತಾನು ಅರಿಯುವ ಪ್ರಯತ್ನ, ಮತ್ತು ತನ್ಮೂಲಕ ತನ್ನ ಸುತ್ತಲಿನ ಜನರನ್ನು, ವಸ್ತುಗಳನ್ನು, ಪಶು, ಪಕ್ಷಿ, ಪ್ರಾಣಿ, ವನ, ಮರ, ಗಿಡ, ನದಿ, ಸಾಗರ, ಪ್ರಕೃತಿಯನ್ನು, ಸಮಾಜವನ್ನು ಅರ್ಥ ಮಾಡಿಕೊಳ್ಳುವುದು ಲೇಖಕನಾದವನಿಗೆ ಬಹಳ ಮುಖ್ಯವಾಗುತ್ತದೆ. ಡಾಯರಿ ಬರೆಯುವ ಹವ್ಯಾಸ ಬೆಳೆಸಿಕೊಂಡರೆ, ಬಹಳ ಉಪಯೋಗವಾಗಬಹುದು. ಅದು ತನ್ನನ್ನು ತಾನು ನೋಡಿಕೊಳ್ಳಲು ಸಹಾಯ ಮಾಡುತ್ತಲೇ, ಮನುಷ್ಯನನ್ನು ಅರ್ಥಮಾಡಿಕೊಳ್ಳಲೂ ಸಹಾಯ ಮಾಡುತ್ತದೆ. ಮಾತ್ರವಲ್ಲ, ಅದು ನಿಮ್ಮ ಭಾಷೆಯನ್ನು ಉತ್ತಮ ಪಡಿಸುತ್ತದೆ. ಅಲ್ಲಿ ನೀವು ಯಾರಿಗಾಗಿಯೋ ಬರೆಯುತ್ತಿಲ್ಲವಾದ್ದರಿಂದ, ಯಾರ ಮೆಚ್ಚುಗೆಯೂ ಅದಕ್ಕೆ ಬೇಕಾಗಿಲ್ಲದ್ದರಿಂದ, ನಿಮ್ಮ ನಿಜ ಶೈಲಿ ರೂಪುಗೊಳ್ಳುತ್ತದೆ. ಇದನ್ನು ಪ್ರಯತ್ನಿಸಿ ನೋಡಿ.      

ಕೆ.ವಿ.ಸುಬ್ಬಣ್ಣ:

ವೈಜ್ಞಾನಿಕವಾಗಿ ಪ್ರತಿಯೊಂದು  ವಸ್ತುವೂ ಅಣುವಿನಿಂದಾದುದು. ನ್ಯೂಟ್ರಾನ್, ಪ್ರೋಟಾನ್, ಎಲೆಕ್ಟ್ರಾನ್‌ಗಳ ಸಂಯುಕ್ತ ಅಣುಬಂಧದಿಂದ ಆಗಿರುವುದು. ಹಾಗಾಗಿ ಪ್ರತಿಯೊಂದನ್ನೂ ನಾವು ಅಣುವಿನ ಬಂಧ ಎಂದೇ ತಿಳಿಯಬಹುದು, ತಪ್ಪಿಲ್ಲ. ಆದರೆ, ವಸ್ತುವಿನಲ್ಲಿ ಭಾವನೆಯನ್ನಿಟ್ಟು ನೋಡುವಾಗ ನಾವು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಬೇಂದ್ರೆಯವರು ಹೇಳಿರುವ ಹಾಗೆ, ಭಾವಾ ಇದ್ದಾಂಗ ದೇವಾ.. ನಮ್ಮ ಭಾವನೆ ಹೇಗಿದೆಯೋ ಅದಕ್ಕೆ ಹೊಂದಿಕೊಂಡು ವಸ್ತು ಇರುತ್ತದೆ. ಗ್ರಹಣ ಶಕ್ತಿ ಎಂಬುದು ಹೀಗೆ ಬಹಳ ಮುಖ್ಯ.
 
ಭಾವ ಎಂಬುದು ಅಹಂನ ವಿಸ್ತೃತ ರೂಪ. ನನ್ನ ದುಃಖ, ನನ್ನ ಸಂತೋಷ ಎನ್ನುತ್ತೇವೆ. ನನ್ನ ದುಃಖ ಮತ್ತು ನಿಮ್ಮ ದುಃಖ ಬೇರೆ ಬೇರೆ. ಪೇಪರ್‌ನಲ್ಲಿ ಸಾವಿರಾರು ಜನ ಸತ್ತಾಗ ಆಗುವ ದುಃಖ ಬೇರೆ, ನನ್ನ ಮನೆಯಲ್ಲಿ ಯಾರಾದರೂ ಸತ್ತಾಗ ಆಗುವ ದುಃಖ ಬೇರೆ. ನಾಟಕದ ಒಂದು ಪಾತ್ರದ ದುಃಖ ಬೇರೆ, ಆ ನಟನ ದುಃಖ ಅಲ್ಲ ಅದು. ಪ್ರೇಕ್ಷಕನ ದುಃಖವೂ ಅಲ್ಲ ಅದು. 
 
ಭಾವದಿಂದ ಅಹಂ ನಿವೃತ್ತಿಯಾದಾಗ, ಅಲ್ಲಿ ರಸ ಸೃಷ್ಟಿಯಾಗುತ್ತದೆ. ರಸ ಸೃಷ್ಟಿ ಮಾಡುವುದು ಸೃಜನಶೀಲತೆ ಎನಿಸಿಕೊಳ್ಳುತ್ತದೆ. ಬಹುಷಃ ಭಗವದ್ಗೀತೆಯ ನಿಷ್ಕಾಮ ಕರ್ಮ, ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನ ಎಲ್ಲ ಈ ಒಂದು ವೈಚಾರಿಕ ಅಂಶವನ್ನು ಒಳಗೊಂಡಿರುವಂತೆ ಕಾಣುತ್ತದೆ.
 
   

ಬಂಕಿಮ ಚಂದ್ರ ಚಟರ್ಜಿ:
 
೧. ಯಶಸ್ಸಿಗಾಗಿ ಬರೆಯಬೇಡಿ.ಬರಹ ಚೆನ್ನಾಗಿದ್ದರೆ ಯಶಸ್ಸು ತಾನಾಗಿಯೇ ಬರುತ್ತದೆ.
 
೨. ದುಡ್ಡಿಗಾಗಿ ಬರೆಯಬೇಡಿ. ಆಗ ಮನರಂಜನೆಯೊಂದೇ ನಿಮ್ಮ ಉದ್ದೇಶವಾಗುತ್ತದೆ. ದೇಶಕ್ಕಾಗಲಿ, ಜನರಿಗಾಗಲಿ ಒಳ್ಳೆಯದಾಗುವುದಿದ್ದರೆ ಸೌಂದರ್ಯ ಸೃಷ್ಟಿಯಾಗುವುದಿದ್ದರೆ ಮಾತ್ರ ಬರೆಯಿರಿ.
 
೩. ಅಸತ್ಯ, ಅಧರ್ಮ, ಅಹಿತವಾದುದನ್ನು ಬರೆಯಬೇಡಿ, ಅದು ಪಾಪ.
 
೪. ಬರೆದುದನ್ನು ಕೊಡಲೇ ಪ್ರಕಟಿಸಬೇಡಿ. ಆಗ ಮಾತ್ರ ಅದರ ದೋಷ ಗೊತ್ತಾಗುತ್ತದೆ.
 
೫. ತಿಳಿಯದ ವಿಷಯಕ್ಕೆ ಕೈ ಹಾಕಬೇಡಿ.
 
೬. ಸಲ್ಲದ ಪಾಂಡಿತ್ಯ ಪ್ರದರ್ಶನಕ್ಕೆ ಹೋಗಬೇಡಿ.
 
೭. ಅಲಂಕಾರಕ್ಕೆ ಪ್ರಯತ್ನಿಸಬೇಡಿ, ಅಗತ್ಯವಾದರೆ ಅದೇ ಒದಗುತ್ತದೆ.
 
೮. ಬರಹವನ್ನು ಸ್ನೇಹಿತರಿಗೆ ಓದಿ. ಓದಲು ಸಂಕೋಚ ಎನಿಸಿದ್ದನ್ನು ಕಿತ್ತು ಹಾಕಿ.
 
೯. ಸರಳವಾಗಿ ಬರೆಯಿರಿ; ಅನುಕರಣ ಮಾಡಬೇಡಿ; ಸಪ್ರಮಾಣವಲ್ಲದ್ದನ್ನು ಬರೆಯಬೇಡಿ.
 
ಲೇಖನ ಬರೆಯುವಾಗ ಅದು ಒಂದು ವಿಚಾರದ ಸಮರ್ಥನೆಯಾಗಿಯೋ, ವಿರುದ್ಧವಾಗಿಯೋ ಇರಬಹುದು. ಅಥವಾ ಕೇವಲ ಮಾಹಿತಿ ನೀಡುವ ಲೇಖನ ಇರಬಹುದು. ವೈಚಾರಿಕ ಲೇಖನವಿರಬಹುದು. ಏನಿದ್ದರೂ ಈ ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. 
 
೧. ನಿಮ್ಮದೇ ಆದ ಒಂದು ಸ್ವತಂತ್ರ ನಿಲುವು ನಿಮ್ಮದಾಗಿರಲಿ.
೨. ನಿಮಗೆ ನಿಮ್ಮ ನಿಲುವು-ವಿಚಾರ ಸ್ಪಷ್ಟವಾಗಿ ತಿಳಿದಿರಲಿ.
೩. ನಿಮ್ಮ ಲೇಖನ ವಿಚಾರನಿಷ್ಟವಾಗಿರಲಿ. ಪೂರ್ವಾಗ್ರಹಗಳು, ವ್ಯಕ್ತಿನಿಷ್ಟ ನಿಲುವುಗಳನ್ನು ದೂರವಿಡಿ.
೪. ನಿಮ್ಮ ಲೇಖನಕ್ಕೆ ಆಧಾರವಾಗಿ ಸಾಕಷ್ಟು ಮಾಹಿತಿ, ವಿಷಯ ಸಂಗ್ರಹ ನಿಮ್ಮಲ್ಲಿರಲಿ. ತಜ್ಞರ ಸಲಹೆ, ಸೂಚನೆ ಅಗತ್ಯವಿದ್ದಲ್ಲಿ ಅವನ್ನೂ ಪಡೆದುಕೊಳ್ಳಿ.
೫. ಪರ-ವಿರೋಧಿ ಧೋರಣೆಗಳ ಕುರಿತು ಅರಿವು ಇಟ್ಟುಕೊಂಡು ಬರೆಯಿರಿ.
೬. ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯಿರಿ. ನಿಮ್ಮ ಲೇಖನದ ವಿಷಯ ಸಾಮಜಿಕವಾಗಿ ಪ್ರಸ್ತುತವಾಗಿರಲಿ.
೭. ಟೀಕೆ-ವಿಮರ್ಶೆಗಳಿಗೆ ತೆರೆದ ಮನಸ್ಸಿರಲಿ.
೮. ಶ್ರೀ ಬಂಕಿಮ ಚಂದ್ರರ ಸಲಹೆಗಳನ್ನು ಗಮನಿಸಿ.
೯. ಆರೋಗ್ಯಕರ ವಿಚಾರ - ಹಾಗೆಂದರೇನು?
೧೦. ನಿಮ್ಮ ಓದುಗನ ಕುರಿತು ಸ್ಪಷ್ಟ ಚಿತ್ರ ನಿಮಗಿರಲಿ.
           
 ವಿವೇಕ್ ಶಾನಭಾಗ್ ನೀಡಿದ ಸಲಹೆಯನ್ನು ಮುಖ್ಯವಾಗಿ ಹೀಗೆ ಗುರುತಿಸಿಕೊಂಡಿದ್ದೇನೆ:
 
ಮುಖಾಮುಖಿ ಕತೆಯ ಹಿನ್ನೆಲೆಯಲ್ಲಿ...
೧. ‘ನಾನು’ ಹಿಂದೆ ಸರಿದು ನಿಂತು ಕತೆಯನ್ನು ಹೇಳುವುದು. ‘ಅಹಂ’ ಬಿಟ್ಟುಕೊಳ್ಳುತ್ತಾ ಹೊರಮುಖವಾಗಿ ತೆರೆದುಕೊಳ್ಳುತ್ತಾ ಹೋಗುವುದು.
೨. ‘ಸೂಕ್ಷ್ಮ’ ವಸ್ತುವನ್ನಿಟ್ಟುಕೊಂಡು ಹೇಳುವಾಗ ಮಂದ್ರ ಸ್ಥಾಯಿಯಲ್ಲಿ ಮಾತನಾಡುತ್ತ ಓದುಗನನ್ನು ಅಂಥ ಒಂದು ಸೂಕ್ಷ್ಮಸಂವೇದಿ ಮನಸ್ಥಿತಿಗೆ ಸಿದ್ಧಗೊಳಿಸಿಕೊಳ್ಳುವುದು.
೩. ‘ವಿವರ’ಗಳಲ್ಲಿ, ಘಟನೆಗಳ ಮೂಲಕ ಹೇಳಬೇಕಾದ್ದನ್ನು ಹೇಳುವುದು.
೪. ಒಟ್ಟಾರೆಯಾಗಿ ‘ಕಾಣಿಸುವು’ದರತ್ತ ಉದ್ದಕ್ಕೂ ಕತೆಯನ್ನು ಸೂಕ್ಷ್ಮ ಪ್ರಜ್ಞೆಯ ನಿಕಃಷಕ್ಕೆ ಒಡ್ಡುತ್ತಲೇ ಹೇಳುವುದನ್ನು ಕಡಿಮೆಗೊಳಿಸಿಕೊಳ್ಳುತ್ತಾ ಬರುವುದು.

‘ಚಿಟ್ಟೆ’ ಕತೆಯ ಹಿನ್ನೆಲೆಯಲ್ಲಿ...
೧. ಇನ್ನೂ ಸೂಕ್ಷ್ಮವಾಗಬೇಕು ನೀವು.
೨. ಕ್ಲೀಷೆಯಾಗಿಬಿಟ್ಟಿರುವ ಮಾತುಗಳು...‘ಕರುಳಿನ ಕುಡಿ’, ‘ಒಂಟಿತನ’ ಇತ್ಯಾದಿ ಇನ್ನೂ ಇವೆ.
೩. ಪುನರಾವರ್ತನೆ ಇದೆ, ಬಹಳ ಕಡೆ, ಗಮನಿಸಿ. ಓದುಗ ತನಗಿಂತ ಕಡಿಮೆ ಬುದ್ಧಿವಂತ ಅಲ್ಲ. ಅವನಿಗೂ ನೀವು ಒಮ್ಮೆ ಹೇಳಿದ್ದು ತಿಳಿಯುತ್ತದೆ. 
೪. ಹೇಳಿಕೆಯಂಥ ಮಾತುಗಳು ಇವೆ...ರಾತ್ರಿಯ ನೀರವದಲ್ಲಿ ನಿರೂಪಕನ ಮನನ...
೫. ಪ್ರತಿಮೆಗಳು ಢಾಳಾಗಿ ಕಣ್ಣಿಗೆ ಹೊಡೆಯುವಂತೆ ಇರಬಾರದು. ಇಲ್ಲಿ ಬ್ರೌನಿ ವಿವರ ಸ್ವಲ್ಪ ಜಾಸ್ತಿಯಾಯ್ತೇನೋ ಅನಿಸಿದೆ.
೬. ಇದೆಲ್ಲ ಮನೆ ಕಟ್ಟಿ ಮುಗಿಸಿದ ಮೇಲೆ ಇಂಟೀರಿಯರ್ ಡೆಕೊರೇಶನ್ ಇದ್ದ ಹಾಗೆ, ಗಮನಿಸಿ.
೭. ನೀವು ಕತೆಯ ಸಮಸ್ಯೆಯನ್ನು ರೆಸಾಲ್ವ್ ಮಾಡಿಲ್ಲ. ಕತೆ ಅದನ್ನ ಮಾಡ್ಲೇ ಬೇಕು ಅಂತಲ್ಲ. ರೆಸಾಲ್ವ್ ಮಾಡ್ಬೇಕು, ಮಾಡಿದ ಹಾಗೆ ಇರಬಾರದು. ನೀವು ಕತೆಯನ್ನು ತಗೊಂಡು ಹೋದ ರೀತಿ ಹಾಗಿದೆ...ಅದ್ಕೆ ಹೇಳ್ತಾ ಇದ್ದೀನಿ. ಮೂರು ಮಹಡಿ ಮನೆ ಕಟ್ಟಿದ್ಮೇಲೆ ನೀವದಕ್ಕೆ ಮೆಟ್ಟಿಲಿಡ್ಲೇಬೇಕು...
೮. ಎಷ್ಟು ಕಡಿಮೆ ಹೇಳಕ್ಕೆ ಸಾಧ್ಯವಾ ಅಷ್ಟು ಕಡಿಮೆ ಹೇಳಿ ಉಳಿದದ್ದಕ್ಕೆ ಸ್ಪೇಸ್ ಬಿಡ್ತಾ ಹೋಗ್ಬೇಕು....ಆ ಎಳೆಗಳು ಓದಿದವರ ಮನಸ್ಸಿನಲ್ಲಿ ಬೆಳೀತಾ, ಪ್ರಶ್ನೆಗಳನ್ನ ಎಬ್ಬಿಸ್ತಾ ಹೋಗ್ಬೇಕು...
 
ಜಯಂತ್ ಕಾಯ್ಕಿಣಿ:
 
ಹೀಗೇ ನೀಡಿದ ಸಲಹೆ...
 
ನಿನ್ನ ಕತೆ ನಿನ್ನ ಕನಸಿನಂತೆ....ನೀನು ಮಾತ್ರ ಕಾಣಬಲ್ಲದ್ದು ಅದು.....ಹಾಗೆಯೇ ನಿನ್ನ ಕತೆ...ನೀನು ಮಾತ್ರ ಬರೆಯಬಲ್ಲೆ ಅದನ್ನು.....ಹಾಗಿರಬೇಕು.

ಸಿಲೆಬಸ್ ಇಟ್ಟುಕೊಂಡು, ಸಾಮಾಜಿಕ ಅರ್ಥಪೂರ್ಣತೆ, ಸಮಕಾಲೀನ ಸಾಹಿತ್ಯ, ತಾತ್ವಿಕ ಆಯಾಮ ಇತ್ಯಾದಿ ಎಲ್ಲ ಮನಸ್ಸಿನಲ್ಲಿಟ್ಟುಕೋ ಬೇಡ. 
 
ಪೋಯೆಟ್ರಿ ಓದು....ಅದು ನಮಗೆಲ್ಲ ರಿಯಾಝ್ ಇದ್ದ ಹಾಗೆ...ದಿನಾ ಈ ಸಂಗೀತಗಾರರು ಪ್ರಾಕ್ಟೀಸ್ ಮಾಡ್ತಾರಲ್ಲ...ಹಾಗೆ. ಅದು ನಮಗೆ ಕೆಲವೇ ಮಾತುಗಳಲ್ಲಿ ಬಹಳಷ್ಟನ್ನ ಹೇಳಲಿಕ್ಕೆ ಕಲಿಸುತ್ತದೆ....ಎ.ಕೆ.ರಾಮಾನುಜನ್, ಗಂಗಾಧರ ಚಿತ್ತಾಲ, ಎಸ್ ಮಂಜುನಾಥ್, ತಿರುಮಲೇಶ್...ಇವರೆಲ್ಲ ನನ್ನ ಮೆಚ್ಚಿನ ಕವಿಗಳು..ಅವರನ್ನ ಓದು.
 
ಪುತಿನ ಸಮಗ್ರ ಗದ್ಯ ಓದು....ಅವರು ಆ ಕಾಲದಲ್ಲೇ ಅಂಥ ಅದ್ಭುತ ಕತೆ ಬರೆದಿದ್ದಾರೆ....ಅವರದನ್ನ ಲಲಿತ ಪ್ರಬಂಧ ಅಂತ ಕರೆದಿದ್ದಾರೆ, ಆದ್ರೆ ಅವು ಪ್ರಬಂಧ ಅಲ್ಲ ಅವು, ಕತೆಗಳು...ಓದಿ ನೋಡು...

(ಜಯಂತ್ ಕಾಯ್ಕಿಣಿ ಮತ್ತು ವಿವೇಕ್ ಶಾನಭಾಗ ಅವರ ಮಾತುಗಳನ್ನು ನಾನು ಗ್ರಹಿಸಿದ ಮಟ್ಟಿಗೆ ಹೇಗೆ ಕಂಡವೋ ಹಾಗೆ ದಾಖಲಿಸಿದ್ದೇನೆ. ಅವು ತಪ್ಪಾಗಿದ್ದಲ್ಲಿ ಅದರ ಹೊಣೆಗಾರಿಕೆ ಅವರದಲ್ಲ, ನನ್ನದು)
 

ಯಶಸ್ಸು:
 
ಕನ್ನಡದ, ಬೇರೆ ಬೇರೆ ಭಾಷೆಗಳ ಅತ್ಯುತ್ತಮ ಕತೆಗಳ ಸಂಕಲನಗಳನ್ನು ಗಮನಿಸಿ. ನ್ಯಾಶನಲ್ ಬುಕ್ ಟ್ರಸ್ಟ್ ಭಾರತದ ಹಲವಾರು ಭಾಷೆಗಳ ಸಣ್ಣಕತೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ಜಿ ಎಚ್ ನಾಯಕ, ರಾಮಚಂದ್ರ ಶರ್ಮ, ಎಸ್ ದಿವಾಕರ್, ಕೃಷ್ಣಮೂರ್ತಿ ಹನೂರು, ಬೊಳುವಾರು ಮತ್ತು ಬಿ ಜನಾರ್ದನ ಭಟ್ ಸಂಪಾದಕತ್ವದಲ್ಲಿ ಬೇರೆ ಬೇರೆ ಹೆಸರಿನ ಶತಮಾನದ ಸಣ್ಣಕತೆಗಳು ಪ್ರಕಟವಾಗಿವೆ. ಇಂಗ್ಲೀಷಿನಲ್ಲಂತೂ ಓ ಹೆನ್ರಿ ಪ್ರೈಜ್ ಕತೆಗಳು, ಬೆಸ್ಟ್ ಬ್ರಿಟಿಷ್ ಸ್ಟೋರೀಸ್ ಎಂದೆಲ್ಲ ಇಂಥ ಅನೇಕ ಸಂಕಲನಗಳು ಬರುತ್ತಿರುತ್ತವೆ. ಅವುಗಳನ್ನು ಗಮನಿಸುತ್ತಿದ್ದರೆ ನಿಮಗೆ ಒಂದು ಕತೆ ಯಾಕೆ ಶ್ರೇಷ್ಟ ಅನಿಸಿಕೊಳ್ಳುತ್ತದೆ, ಯಶಸ್ವಿ ಅನಿಸಿಕೊಳ್ಳುತ್ತದೆ, ಯಾಕೆ ಅದು ಓದುಗರ ಮನಸ್ಸಿನಲ್ಲಿ ಒಂದು ಸಿನಿಮಾ ಅಥವಾ ಕಾದಂಬರಿಗಿಂತ ಹೆಚ್ಚು ಆಳವಾಗಿ ಬೇರೂರಿ ನಿಲ್ಲುತ್ತದೆ ಎನ್ನುವ ಅರಿವಾಗುತ್ತದೆ.

ಅಂಥ ಯಶಸ್ವಿ ಕತೆಗಳು ನಿಮ್ಮೆಲ್ಲರಿಂದ ಬರಲಿ.

2 comments:

Manjula gonal said...

ಒಟ್ಟಾರೆ ಬರಹಗಾರರಿಗೆ ಇದೊಂದು ತರ ತಳಹದಿಯ ಪಾಠ,ತುಂಬಾ ತಾತ್ವಿಕತೆಯ ವಿಚಾರಗಳು, ಅಷ್ಟೇ ಸರಳವಾಗಿ ಎಲ್ರೂ ತಿಳಿದುಕೊಳ್ಳಲು ಸಹಾಯಕವಾಗಿದೆ. ಧನ್ಯವಾದಗಳು ಸರ್. ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಿದ್ದಕ್ಕೆ..

Prema said...

ಅಬ್ಬಬ್ಬಾ...ಈ ಮಾರ್ಗದರ್ಶಿ ಅದೆಷ್ಟು ಚೆನ್ನಾಗದೆ ಎಂದರೆ ಮತ್ತೊಂದು ಹತ್ತು ಸಲ ಓದಿ ಮನನ ಮಾಡಲು ಅರಿಯಲು, ಅಳವಡಿಸಿಕೊಳ್ಳುಲು ಪ್ರಯತ್ನಿಸುತ್ತೇನೆ.ಧನ್ಯವಾದಗಳು