Sunday, February 14, 2021

ಕವಿತೆಯಂಥಾ ಕತೆಗಳು


ಮುದಿರಾಜ ಬಾಣದ್ ಅವರು ಕತೆಗಳನ್ನು ಬರೆದಿಲ್ಲ, ತಮ್ಮ ಅನುಭವವನ್ನೇ ರಸಪಾಕದಂತೆ ತೆಗೆದು ಬಡಿಸಿದ್ದಾರೆ ಅನಿಸುತ್ತದೆ. ಪ್ರತಿಯೊಂದು ಕತೆಯೂ ತನ್ನ ಪ್ರಾಮಾಣಿಕ ಧ್ವನಿಯಿಂದ, ಸಹಜವಾದ ವಿವರಗಳಿಂದ ಜೀವಂತಿಕೆ ಪಡೆದು ಮಿಡಿಯುತ್ತವೆ. ಅವರ ಭಾಷೆ, ಒಂದು ಕತೆಯನ್ನು ಅವರು ಹೇಳುವಲ್ಲಿ ವಹಿಸುವ ಮುತುವರ್ಜಿ ಮತ್ತು ತಂತ್ರಗಾರಿಕೆ, ಮೊದಲ ಸಂಕಲನದಲ್ಲಿಯೇ ಅವರು ಸಾಧಿಸಿರುವ ಪ್ರಬುದ್ಧತೆ ಎಲ್ಲವೂ ಒಂದಕ್ಕಿಂತ ಒಂದು ಹೆಚ್ಚುಗಾರಿಕೆ ತೋರಿಸಿ ಬೆರಗು ಮೂಡಿಸುತ್ತವೆ. ಹೆಚ್ಚಿನೆಲ್ಲಾ ಕತೆಗಳು ಉತ್ತಮ ಪುರುಷದಲ್ಲೇ ಇದ್ದರೂ ಅವು ಉತ್ತಮಪುರುಷ ನಿರೂಪಣೆಯ ಋಣಾತ್ಮಕ ಅಂಶಗಳಿಂದ ಮುಕ್ತವಾಗಿವೆ. ಅವರ ಕತೆಯಲ್ಲಿ ಅವರು ಲಿಪಿಕಾರನಷ್ಟೇ ಆಗಿ ನಿರೂಪಿಸಬಲ್ಲ ಸಂಯಮ ತೋರಿರುವುದು ಅದಕ್ಕೆ ಸಾಕ್ಷಿಯಾಗಿದೆ. 

‘ಮೂಗುದಾಣ’ ಕತೆ ಅದರ ಸಹಜ, ಸರಳ ಗುಣದಿಂದಲೇ ಬಹುಮುಖ್ಯ ಕತೆಯಾಗಿ ನಿಂತಿದೆ. ಇಲ್ಲಿನ ಗ್ರಾಮ್ಯ ಭಾಷೆಗೆ ಕಾವ್ಯದ ಗುಣವಿರುವುದನ್ನು ಕಾಣುತ್ತೇವೆ. ಹಾಗಾಗಿ ಇಲ್ಲಿ ತಂದೆಯೊಬ್ಬನ ಪ್ರೀತಿ ನಮ್ಮನ್ನು ಸೆಳೆದರೂ ಊರಿನ ಮೇಲ್ವರ್ಗದವರ ತಿರಸ್ಕಾರ ಬೆರೆತ ದೃಷ್ಟಿ ಮತ್ತು ನಿಂದನಾತ್ಮಕ ಆರೋಪಗಳು ಇಡೀ ಕತೆಯ ಆತ್ಮವಾಗಿ ಈ ಕತೆಯ ಕೇಂದ್ರವಾಗಿರುವ ಒಂದು ಕುಟುಂಬವನ್ನು, ಅಷ್ಟಿಷ್ಟು ಇಡೀ ಕೇರಿಯನ್ನು (ವರ್ಗವನ್ನು) ಕೆಂಡದಲ್ಲಿಟ್ಟು ಬೇಯಿಸತೊಡಗುತ್ತದೆ. ಇದರ ತೀವ್ರತೆ ಬೆಚ್ಚಿಬೀಳಿಸುವಷ್ಟು ಗಂಭೀರವಾಗುವುದು ಅದೇ ನಿಂದಾತ್ಮಕ ಆರೋಪವನ್ನು ಒಳಗಿನವರೇ ಒಂದು ಮೂಗುದಾರವನ್ನಾಗಿ ಬಳಸಿಕೊಳ್ಳುವಷ್ಟು ಅಸೂಕ್ಷ್ಮರಾದಾಗ. ಆದರೆ ಕತೆ ಈ ಅರಿವನ್ನು ಕೂಡ ತಣ್ಣಗೆ ದಾಖಲಿಸಿ ಸುಮ್ಮನಾಗುವುದು ಈ ಕತೆಗಾರರ ಬಗ್ಗೆ ಅಭಿಮಾನ ಮೂಡಿಸುತ್ತದೆ.

‘ಸಿಂಹರಾಶಿ’ಯಲ್ಲಿ ಪುಟ್ಟ ಕೂಸು ವನ್ನೆಲ ಕಾಯಿಲೆ ಬಿದ್ದಿದ್ದಾಳೆ. ಅವಳಿಗೆ ತುರ್ತಾಗಿ ರಕ್ತ ಕೊಡಬೇಕಾಗಿದೆ. ಅವಳು ದಿನೇ ದಿನೇ ಕೃಶಳಾಗುತ್ತಿದ್ದಾಳೆ ಎಂಬ ವಿವರಗಳಷ್ಟೇ ಇವೆ. ಆದರೆ ಇಡೀ ಕತೆ ಈ ಮೂರು ಸಾಲುಗಳಲ್ಲಿ ನಿಮಗೆ ದಕ್ಕಿದ ವನ್ನೆಲಳ ಕುರಿತಾಗಿಯೇ ಇದೆ. ಅಂದರೆ, ಹೊಟ್ಟೆಯ ಮಗಳ ಬದುಕಿನ ಕುರಿತು ಹುಟ್ಟಿದ ಆತಂಕ ಹೇಗೆಲ್ಲ ಮನುಷ್ಯನ (ಅಪ್ಪನ) ಜೀವಸತ್ವವನ್ನು ಹೀರಬಹುದು, ಹೇಗೆ ಅವನಲ್ಲಿ ವಿವರಿಸಲಾಗದ ಒಂದು ದುಗುಡ, ಆತಂಕ, ತಲ್ಲಣ ತುಂಬಬಹುದು ಎನ್ನುವುದನ್ನು ಬಲ್ಲವರೇ ಬಲ್ಲರು. ಇಲ್ಲಿಯೂ ಕತೆಗಾರ ತನಗಿದು ಅರಿವಿಲ್ಲ ಎಂಬಷ್ಟು ಮುಗ್ಧತೆಯಲ್ಲಿಯೇ ‘ಏನಿದೆಯೋ ಅದನ್ನಷ್ಟೆ’ ಹೇಳಿ ಕತೆಯನ್ನು ಮುಗಿಸುತ್ತಿದ್ದಾರೆ. ಈ ಸಂಯಮ, ಈ ನಿಯಮ ಕತೆಯ ಯಶಸ್ಸಿಗೆ ಪೂರಕವಾಗಿದೆ.

‘ಹೊತ್ತು ಮುಳುಗುವ ಮುನ್ನ ಆವರಿಸಿದ ಕತ್ತಲು’ ಕತೆಯಲ್ಲಿ ಒಂದು ತಂತ್ರವಿದೆ. ಏಳುವಾಗಲೇ ಮಗುವಿನ ಅಳು, ಅದರ ಕಾಲಿಗೆ ಕಚ್ಚಿಕೊಂಡ ಕಟ್ಟಿರುವೆ, ಹೆಂಡತಿಯ ನಿರ್ಲಕ್ಷ್ಯ, ಅವಳತ್ತ ಒಗೆಯುವ ಕಟ್ಟಿಗೆ, ಅವಳ ನೋವಿನ ಚೀತ್ಕಾರ, ಬೋರ್‌ವೆಲ್ ಸುತ್ತ ಜಮಾಯಿಸಿದ ಜನರ ಗುಸಗುಸ, ಅಕ್ಕನ ಫೋನು, ಮತ್ತೆ ಒಲೆಯ ಮುಂದೆ ಕುಳಿತ ಹೆಂಡತಿಯ ಅನ್ಯಮನಸ್ಕತೆ, ಸೀದು ಹೋದ ಬೇಳೆ - ಹೀಗೆ ಚಕಚಕನೆ ಸಾಗುವ ಕತೆಯಲ್ಲಿ ಬರುವ ಎಲ್ಲಾ ಪ್ರತಿಮೆಗಳೂ ಒಡಕಲು. ಅಕ್ಕನದ್ದೇನೋ ಭಾನಗಡಿ, ಚಿಕ್ಕಮ್ಮನದ್ದೇನೋ ಭಾನಗಡಿ, ಕೈಹಿಡಿದ ಹೆಂಡತಿಯನ್ನೇ ಬೆರಕಿ ಹೆಣ್ಣು ಎಂದು ಕರೆದ ‘ಅವನ’ ಮಾತು - ಎಲ್ಲವೂ ಸೇರಿ ಇಲ್ಲೇನೋ ವಿಲಕ್ಷಣವಾದದ್ದು ಇದೆ ಅನಿಸಿದರೂ ಒಟ್ಟರ್ಥದಲ್ಲಿ ಅದು ಮನಸ್ಸಿಗಿಳಿಯುವುದು ಕೊನೆಯಲ್ಲಷ್ಟೆ. ಸಿನಿಮಾ ಟಾಕೀಸಿನಲ್ಲಿ ವ್ಯಗ್ರಗೊಂಡು ಗದ್ದಲ ಎಬ್ಬಿಸುತ್ತಾನೆ. ಹೆಂಡತಿಯ ಹೊಟ್ಟೆ ಸರಿಯಿಲ್ಲದ ಒಂದು ಪ್ರಸಂಗ ಕೂಡ ಯಾವ ಮುಲಾಜಿಲ್ಲದೆ ಬಂದು ಹೋಗುತ್ತದೆ. ಕೊನೆಗೆ ಸಮಾಗಮದಲ್ಲಿಯೂ ಅಪಸ್ವರ. ಅವನ ಬಾಯಿಗೆ ವಾಸನೆ ಎಂದು ಅವಳು, ಅವಳದು ಉಬ್ಬುಹಲ್ಲು ಎಂದು ಇವನು. ಇಡೀ ಕತೆಯ ಉದ್ದಕ್ಕೂ ಮುಂದುವರಿಯುತ್ತಲೇ ಹೋಗುವ ವಿಲಕ್ಷಣವಾದ, ಹಿತವಾದ ಏನನ್ನೂ ಕಾಣಿಸದ ಚದುರಿದ ಚಿತ್ರಗಳ ಒಂದು ಕೊಲಾಜ್ ಏನಿದೆ, ಅದರ ಹಿಂದಿನ ಉದ್ದೇಶವೇನು, ಇಡೀ ಕತೆಯ ಅಸಲು ವಿಷಯ ಏನೆಂದು ಯೋಚಿಸಿದರೆ ಈ ಕತೆಗಾರರ ಅದ್ಭುತವೆನಿಸುವ ಜಾಣ್ಮೆ ಕಣ್ಣಿಗೆ ಹೊಡೆಯುತ್ತದೆ. ಅಲ್ಲಿಯವರೆಗೂ ನಡೆಯುತ್ತಿರುವುದನ್ನೆಲ್ಲಾ ಒಂದು ಅರ್ಥಪೂರ್ಣ ಸಂಯೋಜನೆಯಲ್ಲೇ ಕತೆಗಾರ ನೇಯ್ದಿರುವುದು ಇಲ್ಲಿನ ವಿಶೇಷತೆ. 

‘ಜೂಜು’ ಕತೆಯಲ್ಲಿ ತಂದೆ ಮತ್ತು ಅವನ ನಾಲ್ಕು ಮಂದಿ ಮಕ್ಕಳಲ್ಲಿ ಒಬ್ಬ ಮಗ ಜೂಜಿನ ಚಟ ಹತ್ತಿಸಿಕೊಂಡಿದ್ದಾರೆ. ಆದರೆ ಸ್ವತಃ ಅವರೇ ಮನೆಯ ಮರ್ಯಾದೆ ಎಂದೆಲ್ಲ ಅಂಜುವುದು ಗಮನಿಸಿದರೆ ಅವರೇನೂ ವೃತ್ತಿಪರ ಜೂಜುಕೋರರು ಅನಿಸುವುದಿಲ್ಲ. ಬದುಕಿನ ಒಂದು ಮನರಂಜನೆಯ ಭಾಗದ ತರ ಅವರಿಗದು. ಆದರೆ ಅಷ್ಟನ್ನೇ ಇಟ್ಟುಕೊಂಡು ಇಡೀ ಸಂಸಾರದ ಒಂದು ಘನತೆ, ಸಮಾಜದೆದುರು ಅದರ ಮಾನ-ಮರ್ಯಾದೆಯೇ ಮೂಲವಾದ ಅಂತಸ್ತು ನಷ್ಟವಾಗುವುದನ್ನು ಮತ್ತು ಅದು ಒಂದು ಕುಟುಂಬದ ಅವನತಿಯ ಕತೆಯಾಗುವುದನ್ನು ಹೇಳಿರುವ ರೀತಿ ಚೆನ್ನಾಗಿದೆ. ‘ಇದಾದ ಮೇಲೆ ನಮ್ಮ ಸಂಬಂಧಿಕರು ನಮ್ಮಿಂದ ದೂರವಾದರು’ ಎನ್ನುವಲ್ಲಿಯೇ ಅದೆಲ್ಲವೂ ಬಂದು ಬಿಡುತ್ತದೆ. ಕತೆ ಮೂಲಭೂತವಾಗಿ ಅದರದ್ದೇ, ಅದೇ ಕೇಂದ್ರ. ಆದರೆ ಅದನ್ನು ಹೇಳಲು ಇಲ್ಲಿ ಜೂಜು, ಪ್ರೇಮ, ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗುವುದು, ಕುಡಿತ ಎಲ್ಲವೂ ಪೂರಕವಾಗಿಯೋ ಎಂಬಂತೆ ಬರುತ್ತವೆ. ಇದನ್ನು ಹೇಳುತ್ತಿರುವ ನಿರೂಪಕ ಪ್ರಜ್ಞೆಯಲ್ಲಿ ಕುಟುಂಬದ ಅವನತಿಯೇ ಪ್ರಧಾನ ಭೂಮಿಕೆಯಾಗಿರುವುದು ಒಟ್ಟು ಕತೆಯ ಧ್ವನಿಯಾಗಿ ಮೂಡಿ ಬಂದಿದೆ.

‘ಚಾನ್ನೆ’ ಕತೆ ತುಂಬ ಸಂಕೀರ್ಣವಾದ ವಸ್ತುವನ್ನಿಟ್ಟುಕೊಂಡಿದೆ. ಇಲ್ಲಿ ಅತ್ಯಂತ ಸೂಚ್ಯವಾಗಿ ಬರುವ ಲೈಂಗಿಕತೆಯ ಕುರಿತಾದ ಪ್ರತಿರೋಧ ಪ್ರಕಟವಾಗುವ ವಿಭಿನ್ನ ರೀತಿಯೇ ಕೇಂದ್ರ ವಸ್ತು. ಅಪ್ಪನ ಸಾವು ಕೊಲೆ ಕೂಡ ಆಗಿರಬಹುದಾದ ಶಂಕೆ, ಅದಕ್ಕಿರಬಹುದಾದ ಆಸ್ತಿಯ ಕಾರಣಗಳು ಎಲ್ಲವೂ ಅಸ್ಪಷ್ಟವಾಗಿಯೇ ಉಳಿದರೂ ಮೊದಲ ಹೆಂಡತಿ ಸತ್ತ ಮೇಲೆ ಅವನು ಎರಡನೆಯ ಮದುವೆಯಾದದ್ದು, ಆಕೆ ನಡುವೆ ಇನ್ಯಾರ ಜೊತೆಗೋ ಎಲ್ಲಿಗೋ ಹೋಗಿ ಮೂರು ದಿನಗಳ ನಂತರ ಬರುವುದು ನಿಗೂಢ ಅರ್ಥಗಳನ್ನು ಕೊಡುವಂತಿದೆ. ನಡುವೆಯೇ ‘ಅಪ್ಪ ಇನ್ನೊಮ್ಮೆ ತಪ್ಪು ಮಾಡಿದರೆ’ ಎಂಬ ಮಾತಿದೆ. ಆದರೆ ಅವನೇನು ‘ತಪ್ಪು’ ಮಾಡುತ್ತಿದ್ದನೋ ಅದು ನಿಗೂಢವಾಗಿದೆ. ಕತೆಯ ನಿರೂಪಕನ ಲೈಂಗಿಕತೆ ಅಸಹಜವಾಗಿರುವುದರ ಹಿನ್ನೆಲೆಯೇ ಈ ಕತೆಯ ನಿಗೂಢ ಅಂಶಗಳಿದ್ದಿರಬೇಕನಿಸುತ್ತದೆ. ಕೊನೆಯಲ್ಲಿ ಮಗಳ ಕುರಿತು ಚಿಕ್ಕಮ್ಮ ತೋರಿಸುವ ಅತಿ ಅಕ್ಕರಾಸ್ಥೆಗಳನ್ನು ಹೆಂಡತಿಯೇ ಅನುಮಾನಿಸುವುದು ಮಾತ್ರ ಕತೆಗೊಂದು ಚೌಕಟ್ಟು ದೊರಕಿಸಲು ಯತ್ನಿಸುವಂತಿದ್ದರೂ ಒಟ್ಟಾರೆಯಾಗಿ ಉಳಿದ ಕತೆಗಳಷ್ಟು ಇದು ಯಶಸ್ವಿ ಅನಿಸುವುದಿಲ್ಲ. ಮುಖ್ಯವಾಗಿ ಈ ಕತೆಯ ಕೇಂದ್ರ ಅಷ್ಟು ಮೊನಚಾಗಿಲ್ಲ. 

‘ಜೇಜಮ್ಮ’ ಕತೆಯಲ್ಲಿ ಜೇಜಮ್ಮನ ಪಾತ್ರವನ್ನು ಕಟ್ಟಿದ ಬಗೆ, ವದಂತಿಯೊಂದು ಹೇಗೆ ಅವಳನ್ನು ನಿವಾರಿಸಿತು ಎನ್ನುವ ಚೋದ್ಯ ಚೆನ್ನಾಗಿದ್ದರೂ ಇದೇ ಸಂಕಲನದ ಇತರ ಕತೆಗಳ ಎದುರು ಇದು ಸ್ವಲ್ಪ ಪೇಲವವಾಗಿ ಕಾಣುವಂತಿದೆ. ‘ಆಸರೆ’ ಮತ್ತು ‘ಅಂಬಿಕಾ’ ಕೂಡ ಸಂಕಲನ ಇತರ ಕತೆಗಳಿಗೆ ಹೋಲಿಸಿದರೆ ಉಳಿದ ಕತೆಗಳು ಕೊಡುವಷ್ಟನ್ನು ಕೊಡಲು ಸಫಲವಾಗಿಲ್ಲ ಎನ್ನಬೇಕು.

‘ಕಟ್ಟಿರುವೆ’ ಈ ಸಂಕಲನದ ಅತ್ಯಂತ ಯಶಸ್ವಿ ಕತೆಗಳಲ್ಲೊಂದು. ಇದು ಒಂದು ಕವಿತೆಯಂಥಾ ಕತೆ. ಇಲ್ಲಿ ಒಂದು ಕ್ವಾರ್ಟರ್ಸ್‌ನಲ್ಲಿರುವ ಹೆಂಗಸನ್ನು ಹುಡುಕಿಕೊಂಡು ಹೋಗುವ ವಿವರಗಳಿವೆ. ಈ ವಿವರಗಳೇ ಅಚ್ಚುಕಟ್ಟಾಗಿ ಇವರ ಕತೆಗಾರಿಕೆಯ ನೈಪುಣ್ಯದ ಸಾಕ್ಷ್ಯವೆಂಬಂತಿವೆ. ಆ ಹೆಂಗಸಿನ ಕತೆಯೇ ಈ ಕತೆಯ ಕೇಂದ್ರ. ಆಕೆಯ ಪ್ರೇಮ ಸಂಬಂಧ ಇದ್ದಿದ್ದು ಒಬ್ಬ ವಿವಾಹಿತ ವ್ಯಕ್ತಿಯ ಜೊತೆ. ಆದರೆ ಅದಕ್ಕೆ ಅದರದ್ದೇ ಆದ ಒಂದು ಪಾವಿತ್ರ್ಯವೂ ಇರುವುದನ್ನು ನಾವು ಗಮನಿಸದೇ ಹೋದರೆ ತಪ್ಪಾಗುತ್ತದೆ. ಹೆಂಡ, ಕಾಮ ಮತ್ತು ಗಂಡು ಹೆಣ್ಣು ಸಂಬಂಧಕ್ಕೆ ವೈವಾಹಿಕ ನೆಲೆಯಲ್ಲಿ ಸಂಬಂಧಕ್ಕೆ ಒದಗುವ ಮಾನ್ಯತೆ - ಈ ಎಲ್ಲಾ ದೃಷ್ಟಿಯಲ್ಲೂ ಅವರಿಬ್ಬರ ವ್ಯವಹಾರ ಶಿಷ್ಟ ಸಮಾಜದ ಚೌಕಟ್ಟಿನ ಹೊರಗೇ ಇರುವಂಥದ್ದು ಎನ್ನುವುದು ನಿಜವೇ. ಹಾಗಿದ್ದೂ ಅದರ ಸಹಜ, ಮುಗ್ಧ ಗುಣಕ್ಕಿರುವ ಸೌಂದರ್ಯ, ಶಿಷ್ಟ ಸಮಾಜದ ಉಸಿರುಕಟ್ಟಿಸುವ ರೀತಿ, ರಿವಾಜು, ಸಂಪ್ರದಾಯಬದ್ಧ ಸಂಬಂಧ ಮತ್ತು ಜೀವನಶೈಲಿಗೆ ಇರುವುದಿಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಕತೆ ಇದನ್ನು ವೈಭವೀಕರಿಸುತ್ತಿಲ್ಲ. ಹಾಗೆಯೇ ಅದರ ಕೊನೆಯನ್ನೂ ಕಾಣಿಸದೆ ಕತೆಯನ್ನು ಕೈಬಿಡುವುದಿಲ್ಲ. ಆಕೆಯ ಪ್ರೇಮಿಯೊಂದಿಗೆ ನಿರೂಪಕನಿಗಿರುವ ಸಂಬಂಧ ಕತೆಯ ಕೊನೆಯಲ್ಲಿ ಬರುವ ಬಗೆ ಅಚ್ಚುಕಟ್ಟಾಗಿದೆ. ಇಷ್ಟಿದ್ದೂ ಇಡೀ ಕತೆಗೆ ಕಾವ್ಯದ ಗಂಧ ಒದಗುವುದು ಕಟ್ಟಿರುವೆಯ ಪ್ರಸಂಗದಿಂದಲೇ. ಈ ಕಟ್ಟಿರುವೆಗಳು ಎದುರುಮನೆ ಬಸಮ್ಮ ಆಂಟಿ ಇದ್ದ ಹಾಗಿವೆ. ಅವು ಎರಡು ಬಾರಿ ಕತೆಯ ದೇಹದ ಮೇಲೆಲ್ಲ ಬುರಬುರನೆ ಹರಿದು ಬರುತ್ತವೆ, ಮಗುವಿನ ರಕ್ತ ಹೀರಲು ಪ್ರಯತ್ನಿಸುತ್ತವೆ. ಗಮನಿಸಿ ನೋಡಿ, ಎರಡೂ ಬಾರಿ ಅವು ಬರುವುದು ಲೈಂಗಿಕ ಸಮಾಗಮದ ಸಮಯದಲ್ಲೇ. ದೊಡ್ಡ ಜಾತ್ರೆಯಲ್ಲಿ ಅವನನ್ನು ಕೊಂದು ಕಾಲುವೆ ದಂಡೆಯ ಮೇಲೆ ಎಸೆದು ಹೋದ ಚಿತ್ರ ಮನಸ್ಸಿಗೆ ಕಟ್ಟುವುದು ಕೂಡ ಇಲ್ಲಿಯೇ.

‘ಪಲಾಯನವಾದ’ ಕತೆ ಸ್ವತಂತ್ರವಾಗಿ ಮುಖ್ಯವಾದ ಕತೆ ಅನಿಸದಿದ್ದರೂ ಇಡೀ ಸಂಕಲನದ ಕತೆಗಳನ್ನು ಒಟ್ಟಾಗಿ ಓದುವಾಗ ಉಳಿದ ಕತೆಗಳಿಗೆ ಪೂರಕವಾದ ಬಹಳಷ್ಟನ್ನು ತೆರೆದುಕೊಡುತ್ತಿದೆ ಅನಿಸುತ್ತದೆ ಮತ್ತು ಆ ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ಮನೆಯಲ್ಲಿ ಸಣ್ಣಪುಟ್ಟ ವಿಷಯಕ್ಕೆ ಜಗಳ, ಕಿರಿಕಿರಿಗಳು ಏಕಾಗುತ್ತವೆ ಎನ್ನುವ ಬಗ್ಗೆ ಯೋಚಿಸಬೇಕು. ಇದನ್ನು ಗಟ್ಟಿಸ್ವರದಲ್ಲಿ ಕೇಳಿದರೆ ನಮ್ಮ ಕಡೆ ನಾಗದೋಷ, ಕುಲದೇವರ ಮುನಿಸು ಎಂಬಲ್ಲಿಂದ ತೊಡಗಿ, ಯಾರೋ ಪಿತೃಗಳಿಗೆ ಸರಿಯಾಗಿ ಶ್ರಾದ್ಧಕಾರ್ಯ ಮಾಡಿಲ್ಲವೆಂದೋ, ಸಂಬಂಧಿಕರಲ್ಲಿ ಯಾರೋ ಅಕಾಲಿಕ ದುರ್ಮರಣ ಹೊಂದಿದ್ದು ಅವರಿಗೆ ಸದ್ಗತಿ ಪ್ರಾಪ್ತಿಯಾಗದೆ ಹೀಗೆಲ್ಲ ಆಗುತ್ತಿದೆ ಎಂದೋ ಹೇಳಿ ಲಕ್ಷಗಟ್ಟಲೆ ಪೀಕಲು ಪುರೋಹಿತಶಾಹಿ ಸಿದ್ಧವಾಗಿ ನಿಂತಿರುತ್ತದೆ. ಇದು ಸರಿಸುಮಾರು ಜಗತ್ತಿನ ಎಲ್ಲಾ ಕಡೆ ಹೀಗೆಯೇ ಇದೆ, ಸ್ವರೂಪದಲ್ಲಿ ಅಷ್ಟಿಷ್ಟು ವ್ಯತ್ಯಾಸವಿರುತ್ತದೆ ಅಷ್ಟೆ. ಆದರೆ ಇದಕ್ಕೆ ಲಾಜಿಕಲ್ ಪರಿಹಾರಗಳಿದ್ದೇ ಇರುತ್ತವೆ. ಅವುಗಳನ್ನು ಕಂಡುಕೊಳ್ಳಲು ಒಂದು ಸ್ವಸ್ಥ ಮನಸ್ಸು ಮತ್ತು ಆರೋಗ್ಯಕರ ಮನೋಧರ್ಮ ಅಗತ್ಯವಿರುತ್ತದೆ, ಒಬ್ಬರಲ್ಲಿ ಅಲ್ಲ - ಎಲ್ಲರಲ್ಲೂ. ಮುದಿರಾಜ ಬಾಣದ್ ಅವರ ಹೆಚ್ಚಿನ ಕತೆಗಳಲ್ಲಿ ಬರುವ ಕುಟುಂಬಗಳು ಇಂಥ ಒಂದು ಸ್ಥಿತಿಯನ್ನು ಬಹುತೇಕ ಸಹಜ ಸ್ಥಿತಿಯೆಂದೇ ಸ್ವೀಕರಿಸಿ ಬದುಕುತ್ತಿರುವಂತಿದೆ. ಆದರೆ ಅದೇನೂ ಸಹಜ ಸ್ಥಿತಿಯಲ್ಲ ಎನ್ನುವ ಅರಿವು ನಿರೂಪಕನಲ್ಲಿ ಇರುವುದೇ ಇಲ್ಲಿ ಸಮಸ್ಯೆಯನ್ನು ಕಾಣುವಂತೆ ಮಾಡುತ್ತಿದೆ. ಸ್ಥಾಗಿತ್ಯದಲ್ಲಿಯೇ ರಮಿಸುತ್ತಿರುವಂತೆ ಕಾಣುವ ಇಂಥ ಸ್ಥಿತಿಯಲ್ಲಿ ಸೃಜನಶೀಲ ಸಾಧನೆಯಾಗಲಿ, ಕೌಟುಂಬಿಕ ಅಭಿವೃದ್ಧಿಯೇ ಆಗಲಿ ಸಾಧ್ಯವಾಗುವುದಿಲ್ಲ ಎನ್ನುವುದು ನಿಜ. ಮೊದಲಿಗೆ ಇದೆಲ್ಲ ವೈಯಕ್ತಿಕವೋ, ಕೌಟುಂಬಿಕವೋ ಅನಿಸುವುದು ಕ್ರಮೇಣ ಸಾಮುದಾಯಿಕವಾಗುತ್ತದೆ ಎನ್ನುವುದಾದರೆ, ಇಂಥ ಅಸಹನೆ, ಅಸಮಾಧಾನ, ಸಾಕೊಸಾಕಾಗಿರುವುದರ ಕುರುಹುಗಳು ಬಹಳಷ್ಟನ್ನು ಹೇಳುತ್ತವೆ ಎನ್ನುವುದು ನಿಜವಾದರೂ ಈ ಮನಸ್ಸುಗಳು ಕೊನೆಗೂ ಕೇಳುವುದು ಒಂದಿಷ್ಟು ಪ್ರೀತಿಯನ್ನು ಎನ್ನುವುದೇ ಅಂತಿಮ ಸತ್ಯ. ನಾವು ಮೇಲ್ನೋಟಕ್ಕೆ ಅಹಂಕಾರದಂತೆ, ಸಿಡುಕಿನಂತೆ, ಸಣ್ಣತನದಂತೆ ಎಲ್ಲ ಕಂಡುಬರುವ ಈ ಒರಟುತನವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಅದು ಈ ಮನಸ್ಸುಗಳು ಒಂದಿಷ್ಟು ಪ್ರೀತಿಯನ್ನು ಬೇಡುತ್ತಿರುವ ವಿಧಾನ ಎನ್ನುವುದು ನಮಗೇ ಅರ್ಥವಾಗುತ್ತದೆ.

‘ಕೈಚೀಲ’ ಒಂದು ಸುಂದರ ಕತೆ. ಅದೆಷ್ಟು ಸೂಚ್ಯವಾಗಿ ಮೂಡಿ ಬಂದಿದೆ ಎಂದರೆ ಅದರ ಬಗ್ಗೆ ಮಾತನಾಡಿದರೂ ಆ ಸೂಕ್ಷ್ಮಗಳೆಲ್ಲ ಕೆಟ್ಟುಬಿಡಬಹುದು ಎಂಬ ಭಯ ಹುಟ್ಟಿಸುವಷ್ಟು!

ವಿವಾಹೇತರ ಸಂಬಂಧಗಳದ್ದು ಒಂದು ಬಗೆ. ಅದು ದಾಂಪತ್ಯದ ಜೊತೆ ಜೊತೆಗೇ ಸಮಾನಾಂತರವಾಗಿ ಸಾಗುತ್ತಿದ್ದರೆ ಅದರದ್ದು ಇನ್ನೊಂದೇ ಬಗೆ. ಅಂಥ ಒಂದು ಸಂಬಂಧ ಸಲಿಂಗಕಾಮದ ನೆಲೆಯಲ್ಲಿ ಸಾಗುತ್ತಿದ್ದರೆ ಎಂಬ ಪ್ರಶ್ನೆಯನ್ನೂ ಈಚೆಗೆ ಕತೆಗಾರರು ಎತ್ತಿಕೊಳ್ಳುತ್ತಿದ್ದಾರೆ. ತಮಾಶೆ ಎಂದರೆ ತನ್ನ ಪತಿಯ ವಿವಾಹೇತರ ಸಂಬಂಧವನ್ನು ಎಳ್ಳಷ್ಟೂ ಸಹಿಸದ ಹೆಂಡಿರನ್ನು ಕಾಣುವುದು ಸಾಮಾನ್ಯ ಎನ್ನುವಾಗಲೇ ಈ ಸಲಿಂಗರತಿಯ ವಿವಾಹೇತರ ಸಂಬಂಧಕ್ಕೆ ಅವರು ಪ್ರತಿಕ್ರಿಯಿಸುವ ಬಗೆಯ ಬಗ್ಗೆ ನಮ್ಮ ಕತೆಗಾರರಿಗೆ ಅಷ್ಟೇನೂ ವೈವಿಧ್ಯಮಯ ಪ್ರಕರಣಗಳು ದೊರೆತಿಲ್ಲ ಅನಿಸುತ್ತದೆ. ನಾನು ಓದಿರುವ ಈ ಬಗೆಯ ಎಲ್ಲಾ ಕತೆಗಳಲ್ಲಿ ಹೆಂಡತಿಗೆ ಅಸಹ್ಯ, ಅದೇ ದೇಹದೊಂದಿಗೆ ತಾನೂ ಸಮಾಗಮ ಹೊಂದಲು ಸ್ವಲ್ಪ ಕಿರಿಕಿರಿ ಎನ್ನುವುದನ್ನು ಬಿಟ್ಟರೆ ಬೇರೆ ಅದನ್ನಾಕೆ ತನ್ನ ವೈವಾಹಿಕ ನೆಲೆಗಟ್ಟಿಗೆ ಬಂದ ಬೆದರಿಕೆ ಎಂದು ತಿಳಿಯದೇ ಇರುವುದು! ಇಲ್ಲಿನ ‘ಹೇನು’ ಕತೆ ಕೂಡ ಅದಕ್ಕೆ ಅಪವಾದವಲ್ಲ ಅನಿಸುತ್ತದೆ.

ಮುದಿರಾಜ ಬಾಣದ್ ಅವರ ಸಂವೇದನೆಗಳು ಪಕ್ವಗೊಂಡಿವೆ. ಅವರ ಭಾಷೆ ಚೆನ್ನಾಗಿದೆ. ಕಥನದ ತಂತ್ರಗಳು ಕರಗತವಾಗಿರುವಂತೆ ಬರೆಯುವ ಅವರು ಅಚ್ಚರಿ ಹುಟ್ಟಿಸುತ್ತಾರೆ. ಬದುಕನ್ನು ಅವರಷ್ಟು ನಿಕಟವಾಗಿ, ಮಗುವಿನ ಮುಗ್ಧತೆಯಿಂದಲೂ ಅರಿವಿನ ಪ್ರಬುದ್ಧತೆಯಿಂದಲೂ ಗಮನಿಸುವ ಕತೆಗಾರರು ಹೊಸ ತಲೆಮಾರಿನಲ್ಲಿ ಅಷ್ಟಿಲ್ಲ. ಅವರು ಇನ್ನೂ ಹೆಚ್ಚಿನ ಏಕಾಗ್ರತೆಯಿಂದ ಮತ್ತು ಧ್ಯಾನಸ್ಥ ಸ್ಥಿತಿಯಲ್ಲಿ ತಮ್ಮ ಕೃತಿಗಳನ್ನು ಕಟ್ಟುವ ವ್ರತ ಹಿಡಿದಲ್ಲಿ ನಿಶ್ಚಯವಾಗಿ ಅದ್ಭುತವಾದ ದೀರ್ಘ ಕೃತಿಗಳನ್ನು ಕನ್ನಡಕ್ಕೆ ಕೊಡಬಲ್ಲ ಕಸು ಹೊಂದಿರುವ ಕತೆಗಾರ. 

No comments: