Tuesday, February 23, 2021

ಹೃದಯಕ್ಕೆ ಇರುವ ಅಭಿವ್ಯಕ್ತಿ ಸಾಧ್ಯತೆಗಳು


ಈಚೆಗೆ ಟಿ ಎಸ್ ಎಲಿಯಟ್ ಪೊಯೆಟ್ರಿ ಪುರಸ್ಕಾರ ಪಡೆದ ಭಾನು ಕಪಿಲ್ ಬಗ್ಗೆ ನೀವು ಓದಿರಬಹುದು. ಈ ಪುರಸ್ಕಾರ ಪಡೆದ ಪ್ರಪ್ರಥಮ ಭಾರತೀಯ ನಾರಿ ಆಕೆ. ಲಂಡನ್ನಿನಲ್ಲಿ ಪ್ರಕಟವಾದ ಪ್ರಪ್ರಥಮ ಕೃತಿಗೆ ಸಿಗುವ ಈ ಪುರಸ್ಕಾರಕ್ಕೆ ಅರ್ಹ ಕೃತಿಯನ್ನು ಆರಿಸುವವರು ಹೆಸರಾಂತ ಕವಿಗಳು. ಬಹುಮಾನದ ಮೊತ್ತ  25000 ಪೌಂಡ್ಸ್.

ಭಾನು ಕಪಿಲ್ ಕವಿತೆಗಳ ಹೆಸರು ಹೌ ಟು ವಾಶ್ ಅ ಹಾರ್ಟ್. ಹೃದಯವನ್ನು ತೊಳೆಯುವುದು ಹೇಗೆ ಎಂಬ ಸಾಕಷ್ಟು ನೇರವಾಗಿರುವ ಈ ಪ್ರಶ್ನೆಯನ್ನು ಮತ್ತು ಈ ಸಂಕಲನದ ಕವಿತೆಗಳನ್ನು ಅರ್ಥ ಮಾಡಿಕೊಳ್ಳಲು ಒಂದು ಮಟ್ಟದ ಪೂರ್ವ ಸಿದ್ಧತೆಯ ಅಗತ್ಯವಿದೆ. ಅದನ್ನು ಆಕೆ ಪುಸ್ತಕದ ಕೊನೆಯಲ್ಲಿ ಒದಗಿಸಿದ್ದಾಳೆ ಕೂಡ. ಒಂದೆರಡು ಕವಿತೆಗಳ ಅನುವಾದದ ಬಳಿಕ ಅದನ್ನು ವಿವರಿಸಿದರೆ ಚೆನ್ನಾಗಿರುತ್ತದೆ ಅನಿಸುವುದರಿಂದ ಮೊದಲಿಗೆ ಅನುವಾದಕ್ಕೇ ಹೊರಡುತ್ತೇನೆ.

1.
ಇಷ್ಟವಾಯಿತೆ ಇದು?
ಹೊರಗೆ ರಂಗಿನಲ್ಲದ್ದಿ ತೆಗೆದಂತಿದೆ
ಮತ್ತಿಲ್ಲಿ ನಾನು ಗತಕಾಲದ ಕವಿಯಂತೆ ಉಣ್ಣೆಯ ಸ್ಕಾರ್ಪ್ ತೊಟ್ಟು, ಒಳಗೆ.
ನೇರ ಹೊರಗೋಡಿ ಆ ಬೀಸಿ ಬರುವ ಗಾಳಿಗೊಡ್ಡಿ ನಿಲ್ಲುವಾಸೆಯಿದೆ ನನಗೆ.
ನಿನ್ನೆ ನೀನು ಆ ಹಿಮದ ಮೆಳೆಯೊಳಗೆ ವ್ಯಗ್ರಮೃಗದಂತೆ ಕಣ್ಮರೆಯಾದೆ, 
ವ್ಯಗ್ರಮೃಗ ನೀನು. 
ಬಹುಶಃ ನಾನೀಗ ಮತ್ತೆ ಬರೆಯಬಹುದು.
"ತೇಲಿ ಹೋದಂಥ ಭಾವವೊಂದರ ಸಾಧ್ಯತೆ’ - ಕೆ.
ಕಠಿಣ ಪದಗಳು: ಆತಿಥ್ಯ, ನಕ್ಷತ್ರಗಳು, ಮಲ್ಲಿಗೆಯ ಹೂವು
ಖಾಸಗಿತನ.
ನೀ ನಿನ್ನ ಮನೆಯೊಳಗೆ ನನಗೊಂದು ತಾವು ಕೊಟ್ಟೆ, ನನ್ನೆಲ್ಲ ಪುಸ್ತಕಗಳಿಗೆ, ಬಟ್ಟೆಬರೆಗೆ ಮತ್ತು ನಾನು

ಅದನ್ನೆಂದಿಗೂ ಮರೆಯುವುದಿಲ್ಲ.
‘ಏಶಿಯನ್ ಅನಾಥೆ’ ಎಂದೇ ನೀ ಕರೆವ
ಆ ನಿನ್ನ ದತ್ತುಪುತ್ರಿ
ಕಾಫಿಯ ಕಪ್‌ನೊಂದಿಗೇ ಬಂದು ಅಲ್ಲಿ ನನ್ನ ಮಂಚದ ಮೇಲೆ
ತುದಿಗಾಲಲ್ಲಿ ಕೂತಾಗ, ಅದೆಷ್ಟು ಖುಶಿಯಾಯ್ತು.
ಕುತಂತ್ರವೇನಿರಲಿಲ್ಲ ಅದರಲ್ಲಿ.
ಕಿಟಕಿಯಂಚಿನ ಕಪ್ಪುಗಳಿಂದ ನೀರು ಕುಡಿಯುವ ಬಗೆ
ತೋರಿಸಿಕೊಟ್ಟೆ ಅವಳಿಗೆ.

2.

ನಮ್ಮಿಬ್ಬರ ಜಂಟೀ ಗೋಟಾಳೆಯನ್ನು ವೈಭವೀಕರಿಸಲಾರೆ.
ನಿನ್ನ ರಾಸಲೀಲಾ ವಿನೋದ ಚಾಪೆ ಹಾಸಿತ್ತು, ಹೊರ ಜಗತ್ತಲ್ಲಿ ಅದೇನೇ ಆಗಿದ್ದರೂ
‘ನಾನಿದ್ದೇನೆ’ ಎನ್ನಬಲ್ಲ ನಿನ್ನ ಸಾಮರ್ಥ್ಯದ ಕುರಿತೇ ಯೋಚಿಸುತ್ತಿದ್ದೆ.
ಇಲ್ಲಿಂದ ನೀನು ಭವಿಷ್ಯದ ಬಗ್ಗೆ ಪುಂಖಾನುಪುಂಖ ಒಣಮಾತಿನ 
ಪಟಾಕಿಯನ್ನಷ್ಟೇ ಬಿಟ್ಟೆ.
ದಿನದಿಂದ ದಿನಕ್ಕೆ ನಿನಗೆ ಸಂತೋಷ ಎಂದರೇನೆಂದು ಅರಿವಾಗುತ್ತ ಹೋಯ್ತು
ನಿನ್ನ ಅತಿಥಿಯಾಗಿ ನಾನು
ನಮ್ಮಿಬ್ಬರ ಜಂಟೀ ಗೋಳುಗಳನ್ನು ವೈಭವೀಕರಿಸುವುದಕ್ಕೆ ತಯಾರಾಗುತ್ತ ಹೋದೆ.
ಕೊನೆಗೂ ಇರುಳು ಉರುಳಿದಾಗ ನಾನು
ಕತ್ತಲಕಡೆಗೆ ಹೊರಳಿದೆ, ಸಣ್ಣ ನಿಟ್ಟುಸಿರಿನೊಡನೆ.
ಅಂಡಾಣುವೊಂದು ನಷ್ಟಗೊಳ್ಳುವುದರಲ್ಲಿತ್ತು, ನೀನು
ಗುಡ್‌ನೈಟ್ ಎಂದುಸುರಿ ಮುತ್ತಿಟ್ಟಾಗ.
ಈ ಕಲ್ಪನೆಗೊಂದು ಬೊಜ್ಜ ಮಾಡಬೇಕೆಂದು
ಅನಿಸಿಬಿಟ್ಟಿತು ಆಗಲೇ.

 
3.
ನನ್ನ ಎಡಕ್ಕೆ ಹೊಳೆವ ರಂಗಿನಾಟದ ಕದವಿದೆ
ಮತ್ತು ಬಲಕ್ಕೆ ಕಟುಕನ ಬಲಿಪೀಠ
ನಿನ್ನ ಮೇಲ್ಗಡೆ ಒಂದು ಹೃದಯ
ಮಂಜುಗಡ್ಡೆಯೊಳಗೇ ಮಿಡಿವ ಹೃದಯ
ನಾನು ನನ್ನ ಈ ಪ್ರದರ್ಶನದ ಸೆಟಿಂಗ್, ಅದರ ಒಟ್ಟು ವಾತಾವರಣ
ನನ್ನನ್ನೆ ಹೋಲುತಿರಬೇಕು,
ನನ್ನ ಬಾಲ್ಯದ ಸ್ಮೃತಿಗಳ ಮನೆಗಿಂತ
ಎನಲು ವಿವರ್ಣವಾಯ್ತು ನಿನ್ನ ಮೊಗ.
ಎಲ್ಲವೂ ಮುಗಿದು ಹೋಯಿತೆನಿಸಲು
ಕಾರಣವಾದುದೇನಿಲ್ಲೀಗ?
ನಿನ್ನ ಕಂಗಳಲ್ಲಿ ಒಸರಿದ ಹಾಲು
ನನ್ನೆದೆಯ ಹಿಂಡುವುದು.
ಆ ಐನು ಕ್ಷಣದಲ್ಲೆ ಅರ್ಥವಾಯಿತು ನನಗೆ 
ನಾನನ್ನ ಅಂಗಾಂಗವನ್ನೆಲ್ಲ ನಿನ್ನೆದುರು ತೆರೆದಿಟ್ಟಿದ್ದೇಯಾದಲ್ಲಿ
ಪೂರ್ತಿಯಾಗಿ ಮುಕ್ಕಿ ಮೂರಾಬಟ್ಟೆ ಮಾಡಬಲ್ಲ
ವಿನಾಶಕಾರಿ ತೋಳ ನೀನೆಂದು.
ಅನುಮಾನವಿಲ್ಲದ ಹಾಗೆ
ನಿನ್ನ ಮುಂದಿನ ಕವಿತೆಯಲ್ಲಿ
ಕೆತ್ತಿ ಕಿತ್ತ ಹೃದಯವೊಂದರ ಪ್ರತಿಮೆ
ಹಾಜರಿಕ್ಕಿತು.

4

ಈ ಮುಗಿವ ಮಾಗಿ ಚಿಗುರುವ ಚೈತ್ರದಂಚಿನ
ಒಂದು ಮುಂಜಾನೆ ಟೀವಿಯೆದುರು ಕಾಫಿ ಹಿಡಿದು
ಮೈಮುರಿಯುತ್ತ ಈ ಪದಗಳನ್ನು ಬರೆಯುತ್ತಿರಬೇಕಾದರೆ
ಕೆನೆಗಟ್ಟಿದ ಅಗ್ನಿಯ ತೇಜ ಆವರಿಸಿಕೊಂಡಂತೆ.
ಸತ್ತಾಗ ನಾನು ಎಲ್ಲವನ್ನೂ ಕಳೆದುಕೊಳ್ಳುವ
ಒಳಗುದಿಯ ನೆನಪಾಗಲಿಲ್ಲ ನನಗೆ.
ಇನ್ಯಾರದೋ ಮನೆಯಲ್ಲಿ ಸದಾಕಾಲ ಅತಿಥಿಯಾಗಿ
ಇರುವುದೆಂದರೆ ಇಂಚಿಂಚು ಸಾಯುತ್ತಲೇ ಇರುವಂತೆ.
ಯಾವುದೇ ಸಂಕೋಚವಿಲ್ಲದೆ, ಅನಿಸಿದ್ದನ್ನು ಮುಕ್ತವಾಗಿ
ಹೇಳಿರೆಂಬ ಆತಿಥೇಯರ ಆಹ್ವಾನ
ದಾಳದಲ್ಲಿ
ಗೊತ್ತು ಅತಿಥಿಗೆ ಸದಾ ಹಾಗೂ ಹೀಗೂ ಓಲಾಡುವ ಒಂದು ಕುಣಿಕೆಯಿದೆ.
ಕತ್ತು ಕೊಟ್ಟಲ್ಲಿ ಕುತ್ತು ಬರುವುದು
ಜೀವನಸೆಲೆ ಬತ್ತಿ ಹೋಪುದು.
 
5.
ಹೃದಯವನ್ನು ತೊಳೆಯಬೇಕು ಹೇಗೆ
ಹೊರತೆಗೆದು.
ಅದು ಜೀವಿಯೆ? ಮಂಜುಗಡ್ಡೆಯೆ?
ರಂಗಕರ್ಮಿಯ ಪ್ರಶ್ನೆಯಲ್ಲೇ
ಅಧಿಕಾರಶಾಹಿಯ ಪಸೆಯಿದೆ.
ಅಧಿಕಾರವೇ ಸಂಬಂಧವೊಂದರ ಕುರುಹಾಗಿದ್ದರೆ
ನಾವೀಗ ಸರಿಯಾದ ಕಡೆ ತಲುಪಿದೆವೆನ್ನಿ.
ಏನಾದರೂ ಸ್ವಲ್ಪ ಹೆಚ್ಚೂಕಡಿಮೆಯಾಯಿತೆಂದರೆ
ಯಾರು ಅದಕ್ಕೆಲ್ಲ ಆಮೇಲೆ?
ಎನ್ನುವ ಅರ್ಥವಿದೆ, ಅದರಲ್ಲಿ. ಅದು ಇರಬೇಕಾದ್ದೇ ಹಾಗೆನ್ನಿ.
ನಿನ್ನ ಕೆಲಸ ಅರ್ಥಮಾಡಿಕೊಳ್ಳೋದು, ಫೀಡ್‌ಬ್ಯಾಕ್ ಹ್ಯಾಗಿರಬೇಕು ಅನ್ನೋದನ್ನ.
ಮನೆಯ ಹೊರಗೆ ಕಾಲ ಕಳೆಯೋದು ಅಂದರೇನೇ ಒಂದು ಖುಶಿ.
ಇದರ ಜೊತೆ ಎಲ್ಲಿಗಾದರೂ ಹೋಗೋದಾದರೂ ಹ್ಯಾಗೆ
ಮಾಡಬಹುದಾದ್ದೆಲ್ಲ ಇಷ್ಟೇ:
ಪೆಟ್ಟಿಗೆಯೊಳಗೆ ಅದಾಗಲೇ ಕರಗುತ್ತಿರೋ
ಕೆಂಬಣ್ಣದ ಮಂಜುಗಡ್ಡೆಯೊಳಗೆ
ಇಕ್ಕಿಬಿಡೋದು, ಕೈಯನ್ನ.
***********************************************************
ಇನ್ನು ಸಾಕು.

ನಿಮಗೆಲ್ಲ ರಂಗಪ್ರಯೋಗಗಳನ್ನು ಆಧರಿಸಿ ಅದಾಗಲೇ ಬರೆದ ನಾಟಕದ ಪಠ್ಯವನ್ನು ತಿದ್ದುವುದು, ಹಾಗೆ ತಿದ್ದಿ ಅಂತಿಮ ಪಠ್ಯವನ್ನು ಸಿದ್ಧಪಡಿಸುವುದು ಸಾಮಾನ್ಯ ಎನ್ನುವುದು ಗೊತ್ತು. ಹಾಗೆಯೇ ಒಬ್ಬ ಸಮರ್ಥ ನಿರ್ದೇಶಕ ನಾಟಕದ ಪಠ್ಯವನ್ನು ಓದುವಾಗಲೇ ಅದರ ರಂಗಸಾಧ್ಯತೆಗಳ ಬಗ್ಗೆ ತನ್ನದೇ ಆದ ಕಲ್ಪನೆಯನ್ನುಹರಿಯ ಬಿಡಲು ಪಠ್ಯ ಎಷ್ಟರಮಟ್ಟಿಗೆ ಅವಕಾಶಗಳನ್ನುಳಿಸಿದೆ ಎನ್ನುವುದನ್ನೂ ಲೆಕ್ಕ ಹಾಕುತ್ತಿರುತ್ತಾನೆ. ಪಠ್ಯವೇ ಎಲ್ಲವನ್ನೂ, ಅಂದರೆ ಪಾತ್ರ, ಅದರ ಗಾತ್ರ, ಅದರ ಜಗತ್ತಿನ ಗಾತ್ರ,  ಬೆಳಕು, ಸಮಯ, ಪ್ರತಿಯೊಂದರ ಅಂದರೆ ಮಾತಿನ, ಚಲನೆಯ ಕಾಲಾವಧಿ, ಇತ್ಯಾದಿ ಇತ್ಯಾದಿಗಳನ್ನು, ನಿಖರವಾಗಿ ಸೂಚಿಸುತ್ತ ನಿರ್ದೇಶಕನ ಕೈಕಾಲು ಕಟ್ಟಿಹಾಕಿದಷ್ಟೂ ಆ ನಾಟಕ ದುರ್ಬಲವಾಗುತ್ತ ಹೋಗುತ್ತದೆ. ನಾಟಕದ ಪಠ್ಯ ಸದಾ ಸಾಧ್ಯತೆಗಳ ತುದಿಗಳನ್ನು ಗೊಂಡೆ ಕಟ್ಟದೆ (ಲೂಸ್ ಎಂಡ್ಸ್) ಮುಕ್ತವಾಗಿಡುತ್ತ ಹೋಗಬೇಕು. ಕವಿತೆಗೂ, ಕತೆಗೂ ಎಲ್ಲ ಅದರೊಂದಿಗೆ, ಅಂದರೆ ಈ ಬಗೆಯ ತಂತ್ರದೊಂದಿಗೆ, ಏನೋ ಒಂದು ಬಗೆಯ ಸಂಬಂಧವಿದೆ. ಹೇಳಬೇಕು ಎಷ್ಟು, ಹೇಳಬಾರದು ಎಷ್ಟು ಎಂಬುದರ ನಡುವಣ ಒಂದು ಅನುಪಾತದಲ್ಲಿಯೇ ಕತೆಯ, ಕವಿತೆಯ ಯಶಸ್ಸು ಇರುತ್ತದೆ. ಭಾನು ಕಪಿಲ್ ಕವಿತೆಗಳ ಮಹತ್ವ ಇರುವುದೇ ಇಲ್ಲಿ. ಭಾಷೆಯನ್ನು ‘ಹೀಗೂ’ ಬಳಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟದ್ದಕ್ಕಾಗಿ ಆಕೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ಹೇಗೆ ಎನ್ನುವ ಬಗ್ಗೆ ಪುಸ್ತಕದ ಕೊನೆಯಲ್ಲಿ ಸ್ವತಃ ಭಾನುಕಪಿಲ್ ವಿವರಿಸಿದ್ದಾರೆ. ಅದನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.

ಗಾಳಿಯಲ್ಲಿ ಒಂದು ದೇಹದ ಆಸುಪಾಸಿನಲ್ಲೇ ಒಂದು ಹೃದಯ ತೇಲಾಡುತ್ತಿರುತ್ತದೆ. ಅಥವಾ, ಒಂದು ಬಟ್ಟೆಯಲ್ಲಿ ಸುತ್ತಿದ ಹೃದಯ. ಅದರ ಸುತ್ತ ಅಂಗಾಂಗಗಳನ್ನು ಚೌಕಟ್ಟಿನಂತೆ ಇರಿಸಲಾಗಿದೆ. ಇದು ಒಂದು ಪರಿಕಲ್ಪನೆ. 2019ರಲ್ಲಿ ಒಂದು ದೃಶ್ಯ ಪರಿಕಲ್ಪನೆಯನ್ನು ಸಂಯೋಜಿಸಲು ಆಹ್ವಾನ ಬಂದಾಗ ಭಾನು ಕಪಿಲ್ , ಸಹೋದರಿ ರೋಹಿಣಿ ಕಪಿಲ್ ಜೊತೆ ಸೇರಿಕೊಂಡು ಇನ್‌ಸ್ಟಲ್ಲೇಶನ್, ರಂಗಪ್ರಸ್ತುತಿ, ಕವಿತಾ ವಾಚನ ಎಲ್ಲವೂ ಸೇರಿಕೊಂಡಿರುವ ಒಂದು ದೃಶ್ಯ ಪರಿಕಲ್ಪನೆಯನ್ನು ಸಂಯೋಜಿಸುತ್ತಾರೆ. ಅದರ ಹೆಸರು ಹೌ ಟು ವಾಶ್ ಅ ಹಾರ್ಟ್. ಇದನ್ನು ಮಾಡುತ್ತ ಭಾನು ಕಪಿಲ್ ಅವರಿಗೆ ಕವಿತೆ ಏಕೆ ನಿಜಕ್ಕೂ ಮಹಾನ್ ಆದುದು ಎಂಬ ಸತ್ಯ ಗೋಚರಿಸಿತಂತೆ. 

ಲಂಡನ್ ತಲುಪಿದ ರಾತ್ರಿ ಅವರಿಗೆ ಅಂಕುರ್ ಕಾರಾ ಎಂಬವರಿಂದ ಒಂದು ಕವನ ಸಂಕಲನಕ್ಕೆ ಬ್ಲರ್ಬ್ ಬರೆದು ಕೊಡಬಹುದೆ ಎನ್ನುವ ಕೋರಿಕೆ ಬರುತ್ತದೆ.  ವೈಫೈ ಸರಿಯಾಗಿ ಕೆಲಸ ಮಾಡದೆ, ಕವಿತೆಗಳ ಹಸ್ತಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಸಾದ್ಯವಾಗುವುದಿಲ್ಲ. ಹಾಗಾಗಿ ಇವರು ನೇರವಾಗಿ ಕವಿಯ ಬಳಿಯೇ ಅವರ ಕವಿತೆಗಳ ಬಗ್ಗೆ ಮಾತನಾಡುವ ಅನಿವಾರ್ಯ ಹುಟ್ಟಿಕೊಳ್ಳುತ್ತದೆ. ಅಂಕುರ್ ಒಬ್ಬ ಕಾರ್ಡಿಯಾಜಲಿಸ್ಟ್. ಭಗವದ್ಗೀತೆಯಿಂದ ಸ್ಫೂರ್ತಗೊಂಡ ಪ್ರೀತಿ ಮತ್ತು ಹೃದಯ ದಂದುಗಗಳ ಬಗ್ಗೆ ಅವರ ಕವಿತೆಗಳು! ವಲಸೆಬಂದ ಹೃದಯಗಳ ಬಗ್ಗೆ ತಮಗೇನು ಗೊತ್ತು ಎಂದು ಅವರಲ್ಲಿ ವಿಚಾರಿಸುತ್ತಾರೆ ಭಾನು ಕಪಿಲ್. ಆತಂಕ ಮತ್ತು ಆಘಾತಗಳ ಹಾದಿಯದು. ಅಂಕುರ್, ಭಾನು ಅವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರ ಕಾಯಿಲೆಯಂಥ ಸ್ಥಿತಿಯ ಕುರಿತು ಹೇಳುತ್ತಾರೆ. 

ಮುಂದೆ ICA ಕಾರ್ಯಕ್ರಮದಲ್ಲಿ ಭಾನುಕಪಿಲ್ ಈ ಇ-ಮೇಲ್ ಸಂಭಾಷಣೆಯನ್ನು ಯಥಾವತ್ ಓದುವುದು, ಬಳಿಕ ಪುಸ್ತಕವನ್ನು ಹರಿದು ಶ್ರೇಷ್ಠ ರಕ್ತದಲ್ಲಿ ಅದ್ದುವುದು ಮುಂತಾದ ಕೆಲವು ರಂಗನಡೆಗಳನ್ನು ಸೇರಿಸಿಕೊಳ್ಳುತ್ತಾರೆ. ಈ ಶ್ರೇಷ್ಠ ರಕ್ತ ಎಂದರೇನು? ಅದೊಂದು ಪರಿಕಲ್ಪನೆ ಹುಟ್ಟಿದ್ದು ಕೂಡ 2002ರಲ್ಲಿ, Lygia Pape ಸುರು ಮಾಡಿದ ರಂಗ ಪರಂಪರೆಗೆ ಸಲ್ಲುವಂಥದ್ದು. ರಂಗದ ಮೇಲೆ ಇಬ್ಬರು ಮುಖಾಮುಖಿಯಾಗಿ ಕುರ್ಚಿಯಲ್ಲಿ ಕುಳಿತಿರುತ್ತಾರೆ.  ಇಬ್ಬರ ಮೇಲಕ್ಕೆತ್ತಿದ ಕೈಗಳಲ್ಲೂ ಕೆಂಪು ಬಣ್ಣದಲ್ಲಿ ಅದ್ದಿದ ಮಂಜುಗಡ್ಡೆಯಿರುತ್ತದೆ. ಮಂಜುಗಡ್ಡೆ ಕರಗಿದಂತೆಲ್ಲ ಕೈಯಲ್ಲಿರುವ (ಹೃದಯ?) ಅದರಿಂದ ರಕ್ತ ಹನಿಹನಿಯಾಗಿ ಒಸರಿದಂತಿರುತ್ತದೆ, ನೋಡುವ ಪ್ರೇಕ್ಷಕರಿಗೆ. ಯಾರ ಕೈಯಲ್ಲಿರುವ ಮಂಜುಗಡ್ಡೆ ಮೊದಲು ಕರಗುವುದೋ ಅದು ಶ್ರೇಷ್ಠರಕ್ತ. ಇಲ್ಲಿ ಪಾತ್ರಧಾರಿಗಳು ಮೌನವಾಗಿರುವ ಅಗತ್ಯವನ್ನೇನೂ ರಂಗನಡೆ ಸೂಚಿಸುವುದಿಲ್ಲವಾದರೂ ಸಾಮಾನ್ಯವಾಗಿ ರಂಗದಲ್ಲಿ ಮೌನವೇ ನೆಲೆಸಿರುವುದು ಸ್ವಾಭಾವಿಕ. ಇಲ್ಲಿ ಮೊದಲಿಗೆ ಭಾನು ಅವರಿಗಿದ್ದ ಪರಿಕಲ್ಪನೆಯ ಪ್ರಕಾರ ಆ ಹೃದಯಗಳ ಕತೆಯನ್ನು ಅವೇ ಹೇಳಿಕೊಂಡ ಹಾಗೆ ರಂಗದ ಹಿಂದಿನಿಂದ ಧ್ವನಿ ಕೊಡುವುದು. ಆದರೆ ಅದು ಕಷ್ಟದ್ದು ಅನಿಸಿ ಬೇರೊಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರು ಪ್ರೇಕ್ಷಕರ ಕೈಗಳಲ್ಲೇ ಕೆಂಬಣ್ಣದ ಮಂಜುಗಡ್ಡೆಯನ್ನಿರಿಸುತ್ತಾರೆ, ಅವರ ಸುಖಾಗಮನ ಬಯಸುವ ಕುರುಹಾಗಿ. ಏನನ್ನಾದರೂ ಓದುವ ಯೋಜನೆ ಇದ್ದರೂ ಅದನ್ನು ಕೈಬಿಟ್ಟು ಮೌನಕ್ಕೆ ಶರಣಾಗುತ್ತಾರೆ. ಹೀಗೆ ಬಕ್ಕಿಂಗ್‌ಹ್ಯಾಮ್ ಅರಮನೆಯಿಂದ ಕೆಲವೇ ಗಜಗಳ ಅಂತರದಲ್ಲಿ ನಡೆದ ಈ ಕಾರ್ಯಕ್ರಮಗಳು ಕೊಟ್ಟ ಅನುಭವವೇ ಈ ಸಂಕಲನದ ಪ್ರಧಾನ ಧಾರೆಯಾಗಿ ನೆರವಾಗಿದ್ದನ್ನು ಭಾನು ಕಪಿಲ್ ಸ್ಮರಿಸುತ್ತಾರೆ.

ಹೃದಯವನ್ನು ತೊಳೆಯಬೇಕು ಹೇಗೆ:
ಹೀಗೆ.
ಜೂನ್ ತಿಂಗಳ ಆರಂಭದಲ್ಲೊಂದು ದಿನ
ಬುಧವಾರ ಮುಸ್ಸಂಜೆ
ನವಿರಾದ ಪಕಳೆಯ ಹೂವು
ಬೆಳ್ಳನೆಯ ಬೆಳಕಿನಂತರಳಿ
ಮತ್ತರೆಕ್ಷಣ ಹಸಿರಾಗಿ ಹೊಳೆದು...

ICAಯ ಚೌಕಿಯಲ್ಲಿ
ಎಲ್ಲ ತಂಪಾಗಿತ್ತು.
ತಿನಿಸಿನ ಮೇಲಿನ ಜೇನಿಗೆ
ದುಂಬಿಗಳು ಬಂದಿದ್ದವು.
ನನ್ನಮ್ಮ ಗದರಿದ್ದಳು,
ಹೊತ್ತಾಗ ಒದ್ದಂತೆ ಈಗಲೂ ಒದೆಯಲು
ನಾನಿನ್ನೂ ನಿನ್ನ ಹೆತ್ತ ಗಬ್ಬದ ಚೀಲವೇನಲ್ಲ
ಬದಲು
ಕೆಂಪು ಕೆಂಪಾದ ಮಂಜುಗಡ್ಡೆಯ ಮೇಲೆ
ಬಿಸಿನೀರ ಸುರಿದುಬಿಟ್ಟೇನು.
ರಿಹರ್ಸಲ್ ಮಾಡುವಾಗೆಲ್ಲ
ಅಚ್ಚರಿಗೊಳ್ಳುವೆ ನಾನು
ಆ ಗಾಢ ಭಾವ, ಆಳ...
ಸೂಕ್ಷ್ಮ ಸಂವೇದನೆ
ಹಬೆಯಷ್ಟು ಹಗುರ....ತೇಲಿ ತೇಲಿ....

ಈ ಪುಸ್ತಕದ ಧ್ವನಿ ಇದು: ವಲಸೆ ಬಂದ ಅತಿಥಿ ಮತ್ತು ದೇಶೀಯನಾದ ಆತಿಥೇಯ.ಈ ಕವಿತೆಗಳಲ್ಲಿ ಮಾತನಾಡುವ ವ್ಯಕ್ತಿ ಕಲಾವಿದೆ. ತನ್ಮೂಲಕ ಕೆಂಪು (ರಕ್ತ),  ಹೃದಯ ಮತ್ತು ಮಂಜುಗಡ್ಡೆ ಮಾತನಾಡುತ್ತವೆ. 

ಮುಂದೆ ತುಂಬ ಕುತೂಹಲಕಾರಿಯಾದ ಒಂದು ಸಂಗತಿಯನ್ನು ಭಾನು ಕಪಿಲ್ ಹಂಚಿಕೊಳ್ಳುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ದಂಪತಿಗಳು ಓರ್ವ ವೀಸಾ ಸರಿಯಾಗಿಲ್ಲದ ವ್ಯಕ್ತಿಗೆ ಆಶ್ರಯ ನೀಡುತ್ತಾರೆ. ಅವರಿಬ್ಬರೂ ಬಿಳಿಯರು. ಇದಕ್ಕೆ ಕೆಲವೇ ವರ್ಷಗಳ ಹಿಂದೆ ಅವರು ಫಿಲಿಪ್ಪೇನ್ಸ್‌ನ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿರುತ್ತಾರೆ. ಭಾನು ಕಪಿಲ್ ಪತ್ರಿಕೆಯಲ್ಲಿ ಕಾಣಿಸಿಕೊಂಡ ಈ ದಂಪತಿಗಳ ಸಂದರ್ಶನವನ್ನು, ಮಾತನಾಡುವಾಗ ಆ ಹೆಂಗಸಿನ ಮುಖದಲ್ಲಾದ ಭಾವ ಸಂಘರ್ಷಗಳ ಏರುಪೇರನ್ನು ನೆನಪಿಸಿಕೊಳ್ಳುತ್ತ ಈಗ ಅಚ್ಚರಿಗೊಳ್ಳುತ್ತಾರೆ ಕೂಡ. ಏಕೆಂದರೆ, ಆಮೇಲೆ ಅವರೆಷ್ಟೇ ಪ್ರಯತ್ನ ಪಟ್ಟರೂ ಅಂಥ ಒಂದು ಲೇಖನ ಅವರಿಗೆ ಯಾವ ಪತ್ರಿಕೆಯಲ್ಲೂ ಸಿಗುವುದೇ ಇಲ್ಲ ಮತ್ತು ತಾನು ಅದನ್ನು ನಿಜಕ್ಕೂ ಓದಿದೆನಾ ಅಥವಾ ಅಂಥ ಭ್ರಾಂತಿಗೊಳಗಾದೆನಾ ಎಂಬ ಅನುಮಾನಕ್ಕೆ ಸ್ವತಃ ಅವರೇ ಒಳಗಾಗುತ್ತಾರೆ! 

ನಾನು ನಿಮಗೆ ಮೊದಲು ಕವಿತೆಗಳನ್ನೇ ಓದಿಸಲು ಒಂದು ಕಾರಣವಿದೆ. ಇದನ್ನೆಲ್ಲ ಹೇಳದೆಯೇ ಕವಿತೆ ಓದುವಾಗ ಅದು ಕೊಡುವ ಅರ್ಥ, ಅನುಭೂತಿಯೇ ಬೇರೆ. ಇಲ್ಲಿ ಈ ಕವಿತೆಗಳನ್ನು ಓದುತ್ತಾ ನಮಗೆ ಅನಿಸುವುದು ದಂಪತಿಗಳ ನಡುವಿನ ಕಂಡೂಕಾಣದಂತಿರುವ ಅಥವಾ ಈಗಿನ್ನೂ ರೂಪುಗೊಳ್ಳುತ್ತಿರುವ ಬಿರುಕು. ಆದರೆ ಈ ಹಿನ್ನೆಲೆ ಓದಿದ ತರುವಾಯದಲ್ಲಿ ಕಾಣುವುದು ಅಜಗಜಾಂತರ ವ್ಯತ್ಯಾಸದ ಹೊಸ ಜಗತ್ತು. ಕರಿಯ-ಬಿಳಿಯರ ಸಂಬಂಧದ ನಡುವಿನ ಸಂಘರ್ಷ, ಭಾವದ ಏರುಪೇರು, ತವಕ-ತಲ್ಲಣ. 

ನಡುವೆ ಹೃದಯದ ಮಲಿನ, ಗಂಗೆಯ ನಿರ್ಮಲೀಕರಣ. ಇದು ನಡುವೆ ಅಲ್ಲ. ಇದೇ ಇಡೀ ಕೃತಿಯ ನಾಭಿ. ಸ್ವರ ಇಲ್ಲಿಂದಲೇ ಹೊರಟಿದೆ. ಕೇಳಿಸಿಕೊಳ್ಳುವುದು ನಮಗೆ ಸೇರಿದ್ದು.

ನಿಮಗೀಗ ನಿಜಕ್ಕೂ ರಂಗಸಾಧ್ಯತೆಗಳನ್ನು ಹುಡುಕುತ್ತಾ ಹುಟ್ಟುವ ಕವಿತೆಗಳ ಬಗ್ಗೆ, ಅದು ಪಡೆದುಕೊಳ್ಳುವ ಭಾಷೆಯ ಲಯದ ಬಗ್ಗೆ, ಹಾಗೆ ಭಾಷೆಯ ಸಾಧ್ಯತೆಯನ್ನು ವಿಸ್ತರಿಸುವಂತೆ ಬರೆದ ಭಾನು ಕಪಿಲ್ ಬಗ್ಗೆ ಅಚ್ಚರಿ ಅನಿಸುವುದಿಲ್ಲವೆ? 

1 comment:

ಹರೀಶ್ ಪೆರ್ಲ said...

ಚೆನ್ನಾಗಿ ಬಂದ ಕವನ+ ಅದೊಂದು ಸಣ್ಣ ಕತೆಯ ಓದಿದ ಅನುಭೂತಿ ಆಯಿತು. ಪ್ರಯೋಗಾತ್ಮಕ ನೋಡಿದರೆ ಕವನಗಳು ಹಾಳೆಗಳಿಗೆ ಅಂಟಿ ಕೊಳ್ಳುವುದರಿಂದ ಬಿಡಿಸಿ ಕೊಂಡ ಹಾಗಿದೆ.