Sunday, February 28, 2021

ನಬ್ನೀತಾ ಕಾನುನ್ಗೊ ಎಂಬ ಕವಿತೆ


ಇಷ್ಟು ಆಳವಾಗಿ ತಡಕುವಂತೆ ಭಾಷೆಯನ್ನು ಮಣಿಸಲು ಸಾಧ್ಯವೇ ಎನಿಸಿದ್ದು ನಬ್ನಿತಾ ಕಾನುನ್ಗೊ ಕವಿತೆಗಳನ್ನು ಓದುವಾಗ. 2018 ರ ಬೆಂಗಳೂರಿನ ಕವಿತಾ ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಲು ಈಕೆ ಬಂದಾಗ ಇವರ ಬಗ್ಗೆ ಮೊದಲು ಕೇಳಿದ್ದು. ನಂತರ ಇನ್ನೊಂದು ಇಂತಹುದೇ ಕವಿಗೋಷ್ಠಿಯಲ್ಲಿ ಇವರ ಖಡಕ್ಕಾದ ಮಾತುಗಳನ್ನು, ಅಹಂಕಾರದಂತೆ ಕಾಣುವ ಮಾತುಗಳ ಹಿಂದಿರುವ ಕೀಳಿರಿಮೆ ಮೆಟ್ಟಿನಿಲ್ಲುವ ಛಾತಿಯನ್ನು ಕಂಡು ಬೆರಗಾಗಿದ್ದೆ. ಆದರೆ ಆಗ ಸಾಹಿತ್ಯ ಅಕಾಡಮಿಯಿಂದಲೇ ಪ್ರಕಟವಾಗಿದ್ದ ಇವರ ಒಂದೇ ಒಂದು ಕವನ ‘A Map of Ruins’ ಸಂಕಲನದ ಪ್ರತಿ ಎಲ್ಲಿಯೂ ಸಿಗುತ್ತಿರಲಿಲ್ಲ. ಈಗ ಇವರ ಎರಡನೆಯ ಕವನ ಸಂಕಲನವೂ ಬಂದಿದೆ. 

ಈಶಾನ್ಯ ಭಾರತದ, ಮೇಘಾಲಯದ ಶಿಲ್ಲಾಂಗಿನ ಈ ಪ್ರತಿಭೆ ಬಾಲ್ಯದಿಂದಲೂ ಅನುಭವಿಸಿದ್ದು ನಿರಂತರ ಸ್ಥಾನಪಲ್ಲಟ, ವಲಸೆ. ವಾಸ್ತವವಾಗಿ ಈಕೆ ಸದ್ಯದ ಬಾಂಗ್ಲಾ ದೇಶಕ್ಕೆ ಸೇರಿದ ಸಿಲ್ಹೆಟ್ ಎಂಬಲ್ಲಿಯವರು. ಹಾಗಾಗಿ ಭಾರತದಲ್ಲಿ ಸದಾ ಕಾಲ "ಹೊರಗಿನವರು" ಅನಿಸಿಕೊಂಡೇ, ಅಲ್ಪಸಂಖ್ಯಾತರ ಕ್ಯಾಂಪು, ಅಪಾರ್ಟ್‌ಮೆಂಟುಗಳಲ್ಲಿ ಬೆಳೆದವರು.  ಹೋದಲ್ಲಿ ಬಂದಲ್ಲಿ ‘ನೀವು ಹೊರಗಿನವರು, ಇಲ್ಲಿಗೇಕೆ ವಕ್ಕರಿಸಿದಿರಿ?’ ಎಂಬ ತಾತ್ಸಾರ, ದ್ವೇಷ, ಅಸ್ತಿತ್ವವನ್ನು ಸಹಿಸದ, ಸ್ವೀಕರಿಸುವ ಮನೋಭಾವದಿಂದ ಒಪ್ಪಿಕೊಳ್ಳಲಾರದ ವರ್ತನೆ. ಇದು ಸಹಜವಾಗಿಯೇ ಇವರ ಮನೋಧರ್ಮವನ್ನು ತಿದ್ದಿದೆ. ಅದು ಇಲ್ಲಿನ ಪ್ರತಿ ಕವನದಲ್ಲೂ ಮಡುಗಟ್ಟಿ ನಿಂತಿದೆ. ಹಾಗಾಗಿಯೇ ಈ ಕವಿತೆಗಳು ನಮಗೆ ಕೊಡುವ ಅನುಭವ, ಒಂದರ್ಥದಲ್ಲಿ ನಮಗೆ ಅನ್ಯವಾದದ್ದು, ಸ್ವಾಭಾವಿಕವಲ್ಲದ್ದು ಮತ್ತು ಮನಸ್ಸಿಗಿಳಿಯಲು ಕೊಂಚ ಕಷ್ಟದ್ದು. ಅಲ್ಲದೆ ಮುಂದೆ ಬೆಳೆದ ಮೇಲೆಯೂ, ಭವಿಷ್ಯ ರೂಪಿಸಿಕೊಳ್ಳಲೇ ಬೇಕಂತಿದ್ದರೆ ಶಿಲ್ಲಾಂಗ್ ಬಿಟ್ಟು ಹೋಗಲೇ ಬೇಕು ಎನ್ನುವಂಥ ಪರಿಸ್ಥಿತಿಯೇ ಮುಂದುವರಿದು ಬದುಕಿನಲ್ಲಿ ವಲಸೆಯನ್ನೇ ಸ್ಥಾಯಿಯಾಗಿಸಿದ್ದು ಇನ್ನೊಂದು ಅಂಶ. 

ಮನುಷ್ಯನ ಈ ಒಳಗಿನವರು ಮತ್ತು ಹೊರಗಿನವರು ಎಂದು ಪ್ರತ್ಯೇಕಿಸಿ ನೋಡುವ ಚಟ ಬಹಳ ಹಳೆಯದು. ಬಹುಶಃ ಅವನಿಗೆ ಸದಾಕಾಲ ದ್ವೇಷಿಸುತ್ತಲೇ ಇರಲು ಯಾರಾದರೂ ಬೇಕೇ ಬೇಕೇನೋ ಅನಿಸುವಷ್ಟು ಹಳೆಯದು. ನಮ್ಮ ದೇಶದವರೇ ಆದ ಕಾಜಿ ನಝ್ರುಲ್ ಇಸ್ಲಾಮ್ ಕೂಡ ಬಾಂಗ್ಲಾ ದೇಶ ರೂಪುಗೊಳ್ಳುವ ಸಂದರ್ಭದಲ್ಲಿ ನಮಗೆ ವಿದೇಶಿಯಾಗಿ ಬಿಟ್ಟರು. ಬಾಂಗ್ಲಾ ದೇಶ ಇವರನ್ನು ತನ್ನ ರಾಷ್ಟ್ರಕವಿ ಎಂದು ಘೋಷಿಸಿ ಪೊರೆಯಿತು. ಬಂಗಾಳಿಯ ಇವರ ಕವಿತೆಗಳನ್ನು ನಾವು ವಿದೇಶೀ ಕವಿತೆಗಳೆಂದು ಓದಬೇಕು!

ಸದಾ ಹಿಂಸೆ, ದೌರ್ಜನ್ಯ, ಬಿಕ್ಕಟ್ಟುಗಳನ್ನೆದುರಿಸಿದ ಭೂಪ್ರದೇಶವಾಗಿ, ದುರ್ಗಾಪೂಜೆಯ ದಿನಗಳಲ್ಲೇ, ಕಣ್ಣೆದುರೇ ಜೀವಂತ ಮನುಷ್ಯನನ್ನು ಸುಟ್ಟಿದ್ದು ಮತ್ತು ಅದನ್ನು ಅಲ್ಲಲ್ಲೇ ಮುಚ್ಚಿ ಹಾಕಿ ಯಾವತ್ತಿನಂತೆ ದುರ್ಗಾಪೂಜೆಯ ಸಂಭ್ರಮದಲ್ಲಿ ಊರು ದುರಂತವನ್ನು ಮರೆತಿದ್ದು ‘ಅಕ್ಟೋಬರ್ 2013’ ಎಂಬ ಹೆಸರಿನ ಕವಿತೆಯಾಗಿ ಬಂದರೆ, ಪಿಎಚ್‌ಡಿ ಅಧ್ಯಯನದ ಕೊನೆಯ ಹಂತದಲ್ಲಿ ಶಿಲ್ಲಾಂಗ್ ಬಿಟ್ಟು ಹೊರಡಲೇ ಬೇಕಾದ ಅನಿವಾರ್ಯ ಎದುರಾದ ದಿನಗಳ ಮಾನಸಿಕ ತಾಕಲಾಟಗಳನ್ನು ಹೇಳುವ ಕವಿತೆ ‘ಶಿಲ್ಲಾಂಗ್ ಬಿಟ್ಟು ಹೊರಡುವಾಗ ಏನ ಒಯ್ಯಲಿ ನನ್ನೊಂದಿಗೆ’. ಮೇಘಾಲಯವಿನ್ನೂ ರಚನೆಯಾಗಿರದ ದಿನಗಳಲ್ಲಿ, ಅಸ್ಸಾಂ ಸರಕಾರ ಇವರಿಗಾಗಿ ಕೊಟ್ಟ ಇನ್ನೂರಕ್ಕೂ ಹೆಚ್ಚು ಮನೆಗಳಿದ್ದ ಅಪಾರ್ಟ್‌ಮೆಂಟನ್ನು, ತಾತ, ಅಪ್ಪ ಎಲ್ಲ ಹುಟ್ಟಿ, ಬದುಕಿ ಬಾಳಿದ ಮನೆಯನ್ನು, ಬಿಟ್ಟು ಹೊರಡಬೇಕಾದ ದಿನಗಳಲ್ಲಿ ಬರೆದ ಕವಿತೆಯೇ ’153'. ಇವರ ಇತ್ತೀಚಿನ, ಎರಡನೆಯ ಕವನ ಸಂಕಲನದ ಹೆಸರನ್ನೂ ಈ ಕವಿತೆಯೇ ನಿರ್ಧರಿಸಿದೆ. ಅಲ್ಲಿಯೇ ಹುಟ್ಟಿ, ಬಾಳಿ ಬದುಕಿದ ಒಂದು ಮನೆ ನಮ್ಮ ಮನಸ್ಸಿನಲ್ಲಿ ಕೇವಲ ಗೋಡೆ-ಮಾಡುಗಳ ಒಂದು ಸ್ಥಾವರವಷ್ಟೇ ಆಗಿರದೆ ಹೇಗೆ ಬದುಕಿನ ಸ್ಮೃತಿಯೇ ಆಗಿರುತ್ತದೆ ಎನ್ನುವುದನ್ನು ಅದ್ಭುತವಾಗಿ ಸೆರೆಹಿಡಿಯುವ ಕವಿತೆಯಿದು. ‘ನಾನಿನ್ನೆಲ್ಲೊ ಸತ್ತು ಎನ್ನ ದೇಹ ಸುಟ್ಟಾಗ ಇಲ್ಲಿ ಈ ಮನೆಯಂಗಳದಿ ಅರಳಿದ ಹೂವು ಸುಟ್ಟು ಬಾಡುವುದು’ ಎನ್ನುತ್ತಾರವರು. 

ಓಲ್ಗಾ ತೊಕಾರ್ಝುಕ್‌ಳ ಪುಸ್ತಕ "ಹೌಸ್ ಆಫ್ ದ ಡೇ, ಹೌಸ್ ಆಫ್ ದ ನೈಟ್’ ನ ಎಫಿಗ್ರಾಫ್ ಆಗಿ ಬಳಸಲ್ಪಟ್ಟ ಖಲೀಲ್ ಗಿಬ್ರಾನ್ ರಚನೆ ಹೀಗಿದೆ:
Your house is your larger body
It grows in the sun and sleeps in the stillness of the night;
and it is not dreamless.
Does not your house dream? And dreaming, leave the
city for grove or hilltop?

ಪ್ರತಿ ಪರಿಚಯದ ಸಂದರ್ಭದಲ್ಲೂ ಬೇಕಾಗಿಯೋ ಬೇಡವಾಗಿಯೋ ‘ನಾನು ಶಿಲ್ಲಾಂಗ್ ಕವಿಯಲ್ಲ, ನಾನು ಖಾಸಿ ಅಲ್ಲ’ ಎಂದು ಹೇಳಿಕೊಂಡೇ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಅನಿವಾರ್ಯವನ್ನು ಎದುರಿಸುತ್ತ, ಎದುರಿಸುವ ಛಾತಿ ತೋರುತ್ತ ಬಂದಿರುವ ನಬ್ನಿತಾ ಅವರ ಪ್ರತಿಯೊಂದು ಕವಿತೆಯೂ ಅಪ್ಪಟವಾದ, ಅನುಭವ ಸಾಂದ್ರವಾದ, ಭಾಷಿಕ ಎಚ್ಚರದ ಸೃಷ್ಟಿ. 
 
ಅಂದರೆ ಇವರ ಒಂದೊಂದು ಕವಿತೆಯೂ ಅದರ ಆಳದಿಂದ, ಶಾಬ್ಧಿಕವಾಗಿಯೂ, ಧ್ವನಿಶಕ್ತಿಯಿಂದಲೂ ಹುಟ್ಟಿಸುವ ಕಂಪನ ವಿಚಿತ್ರವಾದದ್ದು. ಅನುರಣನದ ಅದ್ವಿತೀಯ ಶಕ್ತಿಯಿಂದ ಈ ಕವಿತೆಗಳು ಎಷ್ಟು ಗಾಢವಾಗಿ ಆವರಿಸುತ್ತವೆಯೆಂದರೆ, ಅದರ ಆಘಾತದಿಂದ ಸುಧಾರಿಸಿಕೊಳ್ಳಲು ಕೊಂಚ ಸಮಯ ಹಿಡಿಯುತ್ತದೆ. ಒಂದೊಂದು ಕವಿತೆಯೂ ನಮ್ಮನ್ನು ಆವರಿಸಿಕೊಂಡು, ಮುಂದಿನ ಕವಿತೆಗೆ ಮನಸ್ಸು ತೆರೆಯುವ ಮುನ್ನ ಸಾಕಷ್ಟು ಕಾಲ ಈಗಷ್ಟೇ ಓದಿದ ಕವಿತೆಯೊಂದಿಗೇ ಒಂದು ಏಕಾಂತವನ್ನು ಸಾಧಿಸಿ ಸಾಕಷ್ಟು ಹೊತ್ತು ನಿಲ್ಲುವಂತೆ ಪ್ರೇರೇಪಿಸುತ್ತದೆ. ಈ ಕವಿತೆಗಳ ಅನುವಾದ ಕಷ್ಟ, ಅನುವಾದ ತೆಗೆದುಕೊಳ್ಳುವ ಸಮಯ ವಿಪರೀತ. ಹಾಗಾಗಿ ನಬ್ನಿತಾ ಅವರ ಕವಿತೆ ನಮ್ಮಿಂದ ಕೇಳುವ, ನಿರೀಕ್ಷಿಸುವ ಸಮಯ, ದೈನಂದಿನ ಜಂಜಾಟದಲ್ಲಿ ಕಷ್ಟಸಾಧ್ಯ. ಬಹುಶಃ ಇನ್ನೇನಲ್ಲದಿದ್ದರೂ ಈ ಕವಿತೆಗಳ ಭಾಷೆಯ ಮೂಲಕವೇ ಭಾಷೆಗೆ ಮೀರಿದ್ದನ್ನು ಕಟ್ಟುವ ವಿಚಿತ್ರಶಕ್ತಿಯೊಂದು ನಮ್ಮ ಗಮನದಿಂದ ತಪ್ಪಿ ಹೋಗಬಾರದು ಎನ್ನುವುದು ನನ್ನ ಆಶಯ. ಈ ಸಂಕಲನದ ಬಗ್ಗೆ ಕವಿ ಜಯಂತ್ ಮಹಾಪಾತ್ರ ಅವರು ಬರೆದಿರುವ ಎರಡು ಮಾತುಗಳು ನನ್ನ ಮಾತನ್ನು ಮತ್ತಷ್ಟು ಸ್ಪಷ್ಟವಾಗಿಸುವಂತಿವೆ. 

"ತೀರ ವಿಭಿನ್ನವಾದ ಒಂದು ಜಗತ್ತೇ ನಬ್ನಿತಾ ಕಾನೊಂಗೊ ಅವರ ಕವಿತೆಗಳ ಮೂಲಭಿತ್ತಿಯಾಗಿದೆ. ಈ ಜಗತ್ತು ನಮ್ಮ ಅಂತರಾಳವನ್ನು ಕಾಡುತ್ತಲೇ ಇರುವ ಒಂದು ನಾದಮಯವಾದ ಜಗತ್ತು. ಅದು ಮತ್ತೆ ಮತ್ತೆ ಆ ಜಗತ್ತಿಗೆ ಮರಳುವಂತೆ ನನ್ನನ್ನು ಕರೆಯುತ್ತದೆ, ಮಾಡುತ್ತಿದೆ. A Map of Ruins ಸಂಕಲನದಲ್ಲಿ  ಆಳವಾದ ಸಂವೇದನೆಯ, ಸಿಹಿಕಹಿ ಎರಡೂ ಇರುವ ಹಳಹಳಿಕೆಗಳು, ನೆನಪುಗಳು ಮಾತ್ರವಲ್ಲ, ಒಂದು ವಿಶಿಷ್ಟವಾದ ಮೌನವಿದೆ. ಈ ನೀರವ ಬೌದ್ಧಿಕತೆಯೇನಿದೆ, ಅದು ಈ ನಾಸ್ಟಾಲ್ಜಿಯಾದೊಂದಿಗೆ ಬೆರೆತು, ಕವಿ ನಾವು ಕಳೆದುಕೊಂಡಿರುವುದನ್ನು ಮತ್ತು ಸದ್ಯ ಹಾಯುತ್ತಿರುವ ವರ್ತಮಾನವನ್ನು ಕಟ್ಟಿಕೊಡಲು ಬಳಸಿಕೊಳ್ಳುತ್ತಾರೆ. ಹಾಗೆ ಬಳಸಿಕೊಳ್ಳುವಲ್ಲಿ ಅವರು ಅಸಾಧಾರಣ ನಾಟಕೀಯತೆಯನ್ನೂ ಮೆರೆಯುತ್ತಾರೆ. ಕಾಲ, ಪ್ರೀತಿ ಮತ್ತು ವಿದಾಯ ಇಲ್ಲಿನ ಸ್ಥಾಯೀ ಬಿಂದುಗಳಾಗಿವೆ. ಇದು, ಈ ಪಳೆಯುಳಿಕೆಗಳೇ, ಅತ್ಯಂತ ಸರಾಗವಾಗಿ, ಸಹಜವಾಗಿ ನಬ್ನೀತಾ ಕಟ್ಟಿಕೊಡುವ ಜಗತ್ತಿನ ನಕ್ಷೆಯೊಂದನ್ನು ನಿರ್ಮಿಸುವ ಪರಿಕರಗಳಾಗಿವೆ. ಈ ಪಾಳುಬಿದ್ದ ಪಳೆಯುಳಿಕೆಗಳು ನನ್ನನ್ನು ಅಸ್ವಸ್ಥಗೊಳಿಸಿವೆ, ಅವು ನನಗೆ ನಾನು ನಿಭಾಯಿಸಲು ಸಾಧ್ಯವಿರುವುದಕ್ಕಿಂತ ಹೆಚ್ಚಾದವು, ನನ್ನ ಶಕ್ತಿಗೆ ಮೀರುವಷ್ಟಿವೆ ಅಂತನಿಸುವಂತೆ ಮಾಡಿವೆ.  

ದೀರ್ಘಕಾಲ ನನ್ನೊಂದಿಗೆ ಉಳಿಯುವಂಥ, ಬಹಳ ಅಪರೂಪದ ಚೊಚ್ಚಲ ಸಂಕಲನವಿದು, ನನಗಿದು ತುಂಬ ಇಷ್ಟವಾಯಿತು."

ಹುಟ್ಟು
ಭೀತಿಯ ಬಲೆಯೊಳಗೆಲ್ಲೋ
ಬೀಜವೊಂದು ಮೊಳಕೆಯೊಡೆದಿದೆ. ಮತ್ತು ನಾನಾಗ ಹುಟ್ಟಿದೆ.
ನನ್ನಜ್ಜ ಅವನ ಗುಮಾಸ್ತಗಿರಿಯ ಸೂಟ್ಕೇಸಿನಂಥ ತಲೆಬುರುಡೆಯೊಳಗೆ
ನ್ಯಾಯವಾಗಿ ಗಳಿಸಿದ್ದ ನಿಧಿಯೊಂದಿಗೇ ನನ್ನ 
ಗುಟ್ಟಾಗಿ ತುಂಬಿ
ನಾರ್ತ್ ಈಸ್ಟ್ ಫ್ರಂಟೀಯರ್ ಏಜೆನ್ಸಿಗೆ ಹೊತ್ತೊಯ್ದ 
ಹಾಗೆ ನಕಾಶೆಯಲ್ಲಿ ನನ್ನನ್ನು ಒಂದೆಡೆ ಬಿತ್ತಲಾಯಿತು.
ನಾಗಾ ಮಂದಿಯ ಪುರೋಗಾಮಿ ದಿನಗಳ ಗಳಿಕೆಯಿತ್ತು;
ಅವನ ಕಳ್ಳಒಲೆಯೊಳಗಿನ ಬೂದಿಮುಚ್ಚಿದ ಕೆಂಡದಂತಿದ್ದೆ ನಾನು.

ನನ್ನಪ್ಪನ ಕಡುಕಷ್ಟದ ಜನ್ಮ ಕಾಲದಲ್ಲಿ ನಾನು ಹುಟ್ಟಿದೆ;
ದಾಳಿಕೋರರ ಕಿವಿಗೆ ಕೇಳಿಸದಂತೆ
ಅಮ್ಮನ ಬೊಬ್ಬಿಡುವ ಬಾಯಿಗೆ ಮಿಡ್‌ವೈಫ್ ಕೈಯೊತ್ತಿಟ್ಟ ಹೊತ್ತು
ಹಬಿಗಂಜ್ ಎಂಬಲ್ಲಿ ಬದುಕೆಂಬ ಗರ್ಭಕ್ಕೊದ್ದು ಬದುಕಿಗೆ ಒಗೆಯಲ್ಪಟ್ಟವಳು.

ಕಣ್ಣೆದುರೇ ತನ್ನ ಕರುಳಕುಡಿಯನ್ನು 
ಜೀವಂತ ಹಿಂಸಿಸಿ ಕೊಲ್ಲುವುದನ್ನು
ಕಣ್ಣಾರೆ ಕಂಡ ತಾಯ ತೊಡೆಗಳಿಂದ...
ಅವಳನ್ನು ಪಲಾಶವೃಕ್ಷಕ್ಕೆ ನಗ್ನನೇಲಿಸಿ
ಜೀವಂತ ಸುಡುವ ಕೆಲವೇ ಘಳಿಗೆ ಮೊದಲು
ನಾನು ಹುಟ್ಟಿದೆ;

ಮಣ್ಣಿನ ಕಣ್ಣುಗಳು ಮರಗಟ್ಟುತ್ತಿದ್ದ ಹೊತ್ತಲ್ಲಿ,
ಕಣ್ಣೀರು ಕನಸುಗಳೊಂದಿಗೆ ನಿರಂತರ ಸುರಿಯುತ್ತಿದ್ದ ಹೊತ್ತಲ್ಲಿ,
ಕುಡಿಕೆ ತುಂಬ ಬೇಡಿ ತಂದ ಅನ್ನ ಕಾದಿರುತ್ತಿದ್ದ ಹೊತ್ತಲ್ಲಿ,
ಬಿಡಿಗಾಸು ಬಿಡದೆ ಎಲ್ಲವನ್ನೂ  ತೆತ್ತು ಬದುಕೊಂದನ್ನು ಬೆಲೆಗೆ 
ಕೊಂಡುಕೊಂಡ ದಿನಗಳಲ್ಲಿ ನಾನೂ ಅಸ್ತಿತ್ವದಲ್ಲಿದ್ದೆ.

ಇನ್ನೂ ಕೆಲ ಕಾಲಾನಂತರ, ಬೆಟ್ಟದಲ್ಲಿ ಹುಟ್ಟಿದೆ ನಾನು
ಈ ಭೂಮಿ ನಮಗೆ ಅನ್ನವಿಕ್ಕುವುದೆಂಬ 
ಇದೇ ನಮ್ಮ ನೆಲೆ, ನಮ್ಮ ಆಶ್ರಯವೆಂಬ ಹುಸಿನಂಬಿಕೆಯಡಿ.
ಪ್ರತೀ ಕ್ಷಣ, ಪ್ರತೀ ದಿನ
ನೆನಪುಗಳ ಭಾರಕ್ಕೆ, ಭೂತದ ಸ್ಮೃತಿಗೆ ಧೃತಿತಪ್ಪಿ
ಹೆಜ್ಜೆಗಳು ಎಡವುತ್ತ, ಮನಸ್ಸು ಕುಗ್ಗುತ್ತ, ಮುಖಹೀನರಾಗಿ
ಅವರು ಉದುರಿ ಬಿದ್ದ ಕುಂಕುಮಭೂಮಿ ನಾನು.

ದಿವಾಳಿಗೊಂಡ ವ್ಯಾಪಾರದಲ್ಲಿ ಹುಟ್ಟಿಕೊಂಡೆ ನಾನು
ವಶೀಲಿಬಾಜಿಯೊಂದೇ ನಡೆವ ಕಣ್ಮರೆಯಕಾಡಿನಲ್ಲೆಲ್ಲೋ ಇದ್ದ ಮಾರುಕಟ್ಟೆಗೆ
ಪಲಾಯನ ಮಾಡಲೆಂದೇ ಪಾದಗಳನ್ನು ಬೆಳೆಸಿಕೊಂಡ 
ಪ್ರತಿಭೆಯ ಕುಡಿಯಲ್ಲಿಯೇ ನಾನೂ ಹುಟ್ಟಿಕೊಂಡೆ.
ಭೂಗೋಳದ ತೆಳ್ಳಗಿನ ಪದರದ ಮೇಲೆ, ಇತಿಹಾಸದ ಉದ್ದುದ್ದ ನಾಲಗೆಯ ಮೇಲೆ
ಇರುವುದೆಲ್ಲವನ್ನೂ ಅಳಿಸಿ ವಿರೂಪಗೊಳಿಸುವುದಕ್ಕೆಂದೇ ಎದ್ದ ತುರ್ತಿನಲ್ಲಿಯೇ
ನಾನೂ ಹುಟ್ಟಿಕೊಂಡೆ.

ಚಿಗುರಿಕೊಂಡ ಸಸಿಯನ್ನು ಕಿತ್ತುಕಿತ್ತು ಹೊಸನೆಲಕ್ಕೂರುವ
ಮೃತ್ಯುಶಯ್ಯೆಯಲ್ಲಿ ಆಗಾಗ ಕೊನೆಯುಸಿರಿನ ಎದೆಯುಬ್ಬಸ ಮರುಕಳಿಸುವ
ವ್ಯತ್ಯಾಸ, ವಿಶೇಷ.
ಅದು ಮಾತ್ರ ಬದಲಾವಣೆ, ಅಲ್ಲಿನ ನಿಶ್ಚಲ ದೈನಂದಿನದಲ್ಲಿ.
ವನ್ಯಮೃಗವನ್ನು ಕಾಡಿನಿಂದ ಅಭಯಧಾಮಕ್ಕೆ, ಅಲ್ಲಿಂದ ಮೃಗಾಲಯಕ್ಕೆ
ವರ್ಗಾಯಿಸಿದ ಹಾಗೆ.
ನಿಧಾನವಾಗಿ ಹುಚ್ಚು ಹಿಡಿಸಿ ಕೊಲ್ಲುವ ವಿಭಿನ್ನ ಮಾರ್ಗದಲ್ಲೂ ಇದ್ದ ಸಾಮಾನ್ಯಾಂಶ.
ಹಾವಿನ ಹುತ್ತದಲ್ಲೋ, ಮೊಲದ ಪೊಟರೆಯಲ್ಲೋ ಹೇಗಾದರೂ ಸರಿ ಉಸಿರು ಹಿಡಿದು
ಬದುಕಲೇ ಬೇಕೆಂಬ ಸವಾಲೆಸೆದು ಮತ್ತೆ ಮತ್ತೆ ಹುಟ್ಟಿಸುತ್ತಲೇ ಇತ್ತು ನನ್ನನ್ನು
ನಿನ್ನ ಅಸ್ತಿತ್ವವನ್ನು ಒಪ್ಪಿಕೊಳ್ಳಲಾಗದು ಎಂಬ ನಿಮ್ಮ ತಿರಸ್ಕಾರ.
ಗಾಳಿಗೊಂದು ಸುಳಿವು ನೀಡಿ...

-ಒಂದು-

ಗಾಳಿಗೊಂದು ಸುಳಿವು ನೀಡಿ
ಚಂದ್ರಮನು ಚೆಲ್ಲಿದ್ದಾನೆಲ್ಲಿ ನಮ್ಮ
ಬೆಳ್ಳಿನೆನಪುಗಳ ಚಿತ್ತಾರ

ಪ್ರಮಾಣ ಮಾಡಿ ಹೇಳಬಲ್ಲೆ, ಎಲ್ಲಿ ಬೇಕಾದರೂ
ಆಟಿಕೆಯೊಂದು ಮುರಿದ ಸದ್ದು
ಕಂದ ಎಲ್ಲೋ ಚೀರಿ ಅತ್ತ ಅಳು
ಕೇಳಿದ್ದೇನೆ ನಾನು
ಎಲ್ಲೆಂದರಲ್ಲಿ ಅದನ್ನೇ ನೋಡೀ ನೋಡಿ ಬೇಸತ್ತ ಅದೇ ಅಕ್ಕಿಡಬ್ಬದಲ್ಲಿ
ಒದ್ದೆ ಅಕ್ಕಿ ಕೆರಳಿದಂತೆ ತಡವಿ ತಡವಿ ಎಬ್ಬಿಸಿದ ಸದ್ದು

ಕರಾರು ಪತ್ರಗಳು, ಮನಸ್ಸಿಲ್ಲದ ಮನಸ್ಸಿನ ವ್ಯವಹಾರಗಳು
ಕರಾರುಪತ್ರಗಳೂ ಇಲ್ಲ, ವ್ಯವಹಾರ ವಹಿವಾಟೂ ಇಲ್ಲ
ಎಲ್ಲವೂ ಓಟ ಕಿತ್ತಿವೆ, ಆಟ ನಿಲ್ಲಿಸಿ ಪೆವಿಲಿಯನ್ ಕಡೆಗೆ
ಹತಾಶೆಗಳೂ, ಹೊಸ ಆಶೆಗಳೂ ಏಕತ್ರ ಬದುಕಿನಲೆಗಳಂತೆ
ಎಲ್ಲವೂ ಸಂಶಯಾಧಾರಿತ, ಸಾಕ್ಷಿಯ ಕೊರತೆ.

ಯಾವುದೋ ತಾಯ ಕಿತ್ತು ತೆಗೆದ ತಲೆಗೂದಲಿನಂತೆ
ಈ ಒಡಕು ಕ್ಷಣಗಳು ಅಪಸ್ವರವನ್ನೆಬ್ಬಿಸಿವೆ
ಕಿತ್ತೆಸೆದ ನೇಯ್ದ ತಾಳೆಗರಿಯೊ, ಬಿದಿರ ಎಳೆಯೋ ಸುರುಳಿಸುತ್ತಿದ ಹಾಗೆ ಬಿದ್ದಿವೆ.
ಶಿಲ್ಲಾಂಗಿನ ರಾತ್ರಿಯ ಕಡುನೀಲಿ ಆಗಸದಿಂದ ಕಿತ್ತು ತಂದ ತಾರೆಗಳನ್ನು
ನೇಯ್ದ ಹಳೆಯ ಮುದುರಿದ ಬನಾರಸ್ ಸೀರೆಯ ಹಾಗೆ.

ತಂತಮ್ಮ ಅರಿಶಿನ ಗಂಧದ ಯೌವನದ ವೈಶಾಖವನ್ನು
ಭರಣಿಗಳಲ್ಲಿ ಘಮ್ಮೆಂದು ತುಂಬಿಟ್ಟ ಮುತ್ತಜ್ಜಿಯರು
ಒಂದಿಷ್ಟೇ ಇಷ್ಟು ಬಿಸಿಲು, ಮತ್ತಿಷ್ಟು ಪುರುಸೊತ್ತು
ಸಿಕ್ಕಿದ್ದೇಯಾದರೆ ಸಿಲ್ಹೆಟ್ ನಗರವನ್ನೇ
ಉಪ್ಪಿನಕಾಯ್ಮಾಡಿ ನೆನಪುಗಳಲ್ಲಿ ತುಂಬಿಡುತಿದ್ದರು.

ಸರಿಸರಿ ಹೊರಡಿ, ನಿಮ್ಮ ನಿಮ್ಮ ಮಕ್ಕಳು
ಆಡುಕುರಿಗಳನ್ನೆಲ್ಲ ಅಟ್ಟಿಕೊಂಡು ಎದ್ದೇಳಿ
ಕಟ್ಟಿ ಗಂಟುಮೂಟೆ, ದೊರೆಗಳು ಬದಲಾದರು
ಇಲ್ಲಿಂದ ಹೊರಟು ಹೋಗಿ.

-ಎರಡು-
ಗೊಂದಲಿತ ಗೂಡುಗಳು ನೆರಳು ಆಶ್ರಯ ನೀಡವು
ವಿಳಾಸವಿಲ್ಲದ ಮಾಡಿನಡಿ ಬದುಕ ಪ್ರೀತಿಸಬಲ್ಲ ಕಾವು ನನ್ನಲ್ಲಿ ಇಲ್ಲ
ಇಲ್ಲಿ ಚಪ್ಪಡಿಕಲ್ಲು ಸೃವಿಸುತ್ತಿದೆ ನೋವು ತುಂಬಿದ ಕೀವು ರಸ
ಕುಶಿಯು ಸುರಿಯುವುದು ಆಮ್ಲಮಳೆಯಂತೆ
ಎಂದರೆ ನಾನು ಕೇಳುವುದು ಅದೊಂದು ಕವಿತೆಯಂತೆ, ಪ್ರಾಸಬದ್ಧ

ಪಾರಿವಾಳವೇ ಮೇಲು, ಅಥವಾ ಒಂದು ಕಾಗೆ
ಆದರೆ ನಾನೊ, ಕವಿಯಾಗಿಬಿಟ್ಟೆ
ಒಂದು ಮನಸ್ಸು, ಒಂದು ನಕಾಶೆ
ಜೀರ್ಣಾಂಗವೇ ಇಲ್ಲದ ಅನ್ನಾಂಗ

ಸತತ ಮಳೆನೀರು ತೊಳೆದ ಸುಣ್ಣದಕಲ್ಲುಗಳ ಸಂದುಗಳಲ್ಲಿ
ಆರ್ಕಿಡ್ ಪೊದೆಗಳಲ್ಲಿ ಅಥವಾ ಸಣ್ಣ ಪುಟ್ಟ ಮೀನುಗಳ ತೊರೆಯಲ್ಲಿ
ನಾನು ಬೆಳೆದೆ
ಇಡೀ ಮರಕ್ಕೆ ಹೆಣ್ಣಿನ ಮೊಲೆಗಳನ್ನು ಕುತ್ತಿ ಕತೆ ಕಟ್ಟಿದವರೋ
ಕುಡುಗೋಲು, ಕತ್ತಿ ಹಿಡಿದು ಬರುವವರೋ ಇರದ ಕಡೆ, ದೂರದಲ್ಲಿ.
ಕಿತ್ತಳೆ ಮಾರುವ ಮುದುಕಿ ನನ್ನ ಕದ್ದು ತಿರುಗುವ 
ಕನಸುಗಳಲ್ಲಿ ಇಣುಕುತ್ತಾಳೆ, ಕಾಡುತ್ತಾಳೆ
ನನ್ನ ಬಳಿ ಅವಳ ಮಗನ ಚಿತ್ರವಿದೆ,
ಅವನು ನನ್ನ ಸುಟ್ಟ ತುಟಿಗಳ ಮೇಲೆ ಹೂವನಿಟ್ಟಿದ್ದ.

ಗಾಳಿಗೊಂದು ಸುಳಿವು ನೀಡಿ
ಇಲ್ಲವೆಂದರೆ ಅವು ನನಗೆ ಹೇಳುವುದೇ ಇಲ್ಲ;
ಯಾರನ್ನು ದ್ವೇಷಿಸಬೇಕು ನಾನು ಬದುಕಬೇಕೆಂದರೆ, 
ಮತ್ತು ಪ್ರೀತಿಸಿದ್ದು ಯಾರನ್ನು, ಸತ್ತಿದ್ದೂ. ಕಿತ್ತ ಹಲ್ಲು
ಕಾರಣಗಳಿದ್ದವು ನೋವಾಗುವುದೆಂಬ ಅರಿವಿದ್ದೂ 
ನೋವಿನಲ್ಲೆ ಕಿತ್ತುಹಾಕಲು
ಮತ್ತೀಗ ಕಿತ್ತಹಲ್ಲು ಇದ್ದ ಜಾಗದ ಖಾಲಿತನ
ನನ್ನೊಳಗೆ ಉಳಿದೇ ಬಿಡುವ ಬೇಡದ ಒಂದು ನೆನಪು.

ಈ ನಾಲಗೆಯೊಂದು ಮಗುವಿನಂತೆ
ಅದಕ್ಕೆ ಇಲ್ಲದ ಜಾಗದಲ್ಲೇ
ಕಳೆದುಕೊಂಡ ಜಗತ್ತ
ಮತ್ತೆ ಮತ್ತೆ ಸವರಿ ಹುಡುಕುವ ಹಠ...ಚಟ.ನಿರೂಪಕ
ಯಾರು ನಾವು?
ನೋವಿನ ದಲ್ಲಾಳಿಗಳೆ?
ಒಂದೇ ಒಂದು ಮುಗುಳ್ನಗುವಿಗಾಗಿ 
ಬದುಕಿನ ನಿಯಮಗಳನ್ನು ಚೌಕಾಶಿಗಿಟ್ಟವರು.
ಎಲೆಮರೆಯಲ್ಲೆ ಗುಟ್ಟುಗಳನ್ನು ಅಡಗಿಸಿಟ್ಟು ಕಾದವರು.

ನಾವು ಸೂರ್ಯನತ್ತ ಕೈಚಾಚಲಿಲ್ಲ
ಚಂದ್ರನತ್ತ ಮೊಗಮಾಡಲಿಲ್ಲ
ನಮ್ಮ ರಾತ್ರಿಯ ಆಗಸ ಹರಡಿದ ಚಾದರದಡಿ ಕಿತ್ತುಕೊಳ್ಳಲು 
ಅಷ್ಟು ನಕ್ಷತ್ರಗಳೇ ಇದ್ದಿರಲಿಲ್ಲ.

ನಿರೀಕ್ಷೆಗಳನ್ನೇ ಮೂಟೆ ಕಟ್ಟಿಕೊಂಡು 
ರುಚಿಗಳ ಕಾಡಲ್ಲಿ ಅಂಡಲೆಯುತ್ತಿರುವಾಗ
ಬಾಯ್ತುಂಬ ಒಣಗಿದ ಆಸರಿಕೆಗೆ
ಕಿತ್ತಳೆಯ ರಸದ ಅಂಟು, ಪರಿಮಳ.
ಈ ನಮ್ಮ ಪೆದ್ದು ಸಾಹಸವೇ
ನಿಮ್ಮ ನಾಲಗೆಯ ಮೇಲೆ ಸಪ್ತವರ್ಣದ 
ಆಗಸದ ಹೊಸ ದಾಹ ತಂದಿರಬೇಕು.

ಮಜಾ ನೋಡಲು ನೆರೆದ ಜನರನ್ನು ಬೆಟ್ಟಗುಡ್ಡ ಎಂದು ತಿಳಿದು
ಅವರು ಬೊಟ್ಟು ಮಾಡಿ ತೋರುತ್ತಿದ್ದ ಕೈಬೆರಳನ್ನೆ ಹೂವಿನ ಗುಚ್ಛವೆಂದು ಎಣಿಸಿ
ಪೆದ್ದರಾದೆವು ಮತ್ತೆ ಮತ್ತೆ.

ನಾನು ಮರಗಟ್ಟಿದಾಗ ನನ್ನ ಅದೇ ಭಾವ ಕಾಡಿತೆ ನಿಮ್ಮನ್ನು ಅರೆಗಳಿಗೆ?
ಕಲ್ಲಾದ ಮನಸ್ಸಿನ ಆರ್ತ ಧ್ವನಿ ಬೆನ್ನ ಹಿಂದೆ ಕೇಳಿಸಿದಂತಾಗಲಿಲ್ಲವೆ
ನಮ್ಮ ನಡುವೆ ಏನೋ ಬಿರುಕು ಬಿಟ್ಟ ಸದ್ದು?

ಪಾದಗಳಿಂದ ಮೆತ್ತಗೆ ಹತ್ತಿ ಮೈಮೇಲೆ ಹರಿಯತೊಡಗಿದ ಸಣ್ಣ ಹೆಸರಿನ ಸೈನ್ಯ
ಯುದ್ಧ ತೊಡಗಿದ್ದು ತಿಳಿಯಲೇ ಇಲ್ಲ
ಯಾರು ಯಾವಾಗ ನಮ್ಮನ್ನು ಹೀಗೆ ಇಲ್ಲಿ ಸಾಲಾಗಿ ನಿಲ್ಲಿಸಿದರೋ
ನಮಗದರ ಅರಿವೇ ಆಗಲಿಲ್ಲ...ನಾಗರಿಕ ಪಟ್ಟ

ಹಿಂಡಿದಂತೆ ತಿರುಪಿಕೊಳ್ಳುತ್ತ 
ನಡುಕ ಹುಟ್ಟಿಸುವ ಭಯವ ಅರಿಯಲೆಳಸುತ್ತ 
ಬರೆಯುವುದೊಂದು ಚಟವಷ್ಟೇ ಆಗಿಬಿಟ್ಟಿದೆ ಈಗ

ಮುಸ್ಸಂಜೆಯೊಂದು ಧಡಕ್ಕನೆದ್ದು ಕೂರುವುದು
ಬೋಳು ಮರಕ್ಕೆ ಸಿಕ್ಕಿ ತೂಗುಬಿದ್ದಿರುವ 
ಸೂತ್ರಕಿತ್ತ ಗಾಳಿಪಟ ಹುಯಿಲಿಡುವ ಹಾಗೆ.
ಕರೆಂಟು ಕಂಬದ ತುಂಬ ಅಂಟಿಕೊಂಡ ಹಕ್ಕಿಪುಕ್ಕದ ಕುಚ್ಚಿನ ಹಾಗೆ
ನಿಶ್ಚಿತ ನೀರವ ಮೌನಕ್ಕೆ ಜೋತುಬಿದ್ದು ಪತರುಗುಟ್ಟುವ
ಅಪಶಕುನದ ಮುನ್ಸೂಚನೆಯಂತೆ
ಇಲ್ಲಿರಬೇಕಾಗಿ ಬಂದ ಘಳಿಗೆ ಕಾಣತೊಡಗಿದೆ.

ತೆರೆಯೊಂದರ ಮರೆಗಲ್ಲದೆ ಬೇರೆಲ್ಲಿಗೂ
ನಾನೀಗ ಪ್ರತಿಭಟನೆಯ ಮೆರವಣಿಗೆ ಹೊರಡಲಾರೆ
ಅಲ್ಲಿ ನಾನು ನನ್ನ ಹಕ್ಕುಗಳನ್ನು ಮಡಿಚಿಟ್ಟಿದ್ದೇನೆ, ಗಾಳಿಯನ್ನು ಕೂಡ.
ನನ್ನ ನೋವಿನ ದನಿಯನ್ನು ಪರಕೀಯತೆಯ ಹಂಗಿನಡಿ ಹೂತಿಟ್ಟಿದ್ದೇನೆ
ನನ್ನ ಕಂಗಳಲ್ಲಿ ಶಾಶ್ವತವಾಗಿ ನಿಂತುಬಿಟ್ಟಿದೆಯದು
ಮರ್ಯಾದೆಯಾಗಿ ಬಾಳುವೆ ನಡೆಸುವ ಎರಡು ಸಂ-ಭ್ರಮೆಗಳಂತೆ
ಒಮ್ಮೊಮ್ಮೆ
ಕ್ಷಿತಿಜದಂಚಲ್ಲಿ ಬಿಟ್ಟು ನಡೆದ ಅರೆ ಉಂಡ ಬಾಳೆಲೆಯಂತೆ
ಮತ್ತೊಮ್ಮೆ
ಮನೆಗಾಗಿ ಅಷ್ಟಿಷ್ಟು ಗಳಿಸಬೇಕೆಂಬ ಕೀವು ತುಂಬಿದ ಕನಸುಗಳಂತೆ

ಈ ಗೂಡು ಮಣಭಾರ ಎದೆಯ ಮೇಲೆ
ಹಳೆಯ ಮರೆಯಲಾರದ ನೆನಪುಗಳಿಗೆ
ಮೋಡ ಮುಸುಕಿದೆ, ಪಾಪಪ್ರಜ್ಞೆಯ ಗ್ರಹಣ ಹಿಡಿದಂತೆ 
ಹೊರೆ ಹೇರಿದಂತೆ ಕೂತಿವೆ ನನ್ನ ಚದುರಿದ ಚಿತ್ರಗಳಂಥ ಗತಕಾಲದ ಮೇಲೆ.
ಮಳೆಯ ನಾಡಿಗಷ್ಟೇ ಅಚ್ಚುಕಟ್ಟಾಗಿ ಹೊಂದುವ ಪುಟ್ಟ ಕುಟೀರ ನನ್ನದು.
ನನ್ನ ಡೇರೆಯ ತೂತುಗಳಿಗೆ ತೇಪೆ ಹಚ್ಚುವಷ್ಟೂ ತಲೆಯೆತ್ತದಂತೆ ಅಲ್ಲಿ ನಾನು.
ತೂರಿ ಬರುವ ತಾರೆಗಳೆನ್ನ ಕ್ಷಮಿಸಲಿ...

ನನ್ನ ನಾಗರಿಕ ಪಟ್ಟದಷ್ಟೇ
ಅವು ನಕಲಿ

ಆದರೆ ಇರುಳು ಕಣ್ಣಿಗೆ ಕಾಣುವಷ್ಟೇ ಇರುವುದಿಲ್ಲ
ಅದು ಸದಾ ಕಡುಕತ್ತಲು, ಧುತ್ತೆಂಬ ಸತ್ಯ
ಕಾಂಬ ನೋಟದಿಂದುದ್ಭವ
ಗಿರಿಯ ಮೋಹದಿಂದನುಭವ
ಒಂದು ಪುಟದಿಂದಿನ್ನೊಂದಕ್ಕೆ ತನ್ನವರ ಅರಸುತ್ತ ಅದು
ಸಾಗುವುದು ನಿರಂತರ.

ಪೆನ್ನಿನ ಮಸಿ, ಅದೆಷ್ಟೇ ಗಾಢವಾಗಿರಲೇನು,
ಮನದ ಆಗಸವ ಇಳಿಸಿ ಜಗಕೆ ಇಹದ ತಾವಾಗಿಸದು ಎಂದೂ.ಮಾಗಿಯ ಸೆರೆವಾಸ

ಮಾಗಿಯ ತೋಳುಗಳಲ್ಲಿ ಸೆರೆಯಾಗ ಬಯಸಿ ನುಗ್ಗಿದವನು ಅವನೇ
ವಸಂತದಲ್ಲೇ ಮೋಹದ ಚಳಿಯ ಅವನು ಬಿಗಿಯಾಗಿ ಅಪ್ಪಿಕೊಂಡಿದ್ದ
ಮತ್ತೆ ಶರತ್ಕಾಲದಿ ಅರಿವು ಆವರಿಸಿತವನನ್ನು. 


ಇರುಳ ನಡಿಗೆ
ಶರತ್ಕಾಲದಿ ಉದುರುವ ಎಲೆಯಂತೆ ಕಾಲದ ಇಳಿಮೊಗ, ನಿನ್ನ ಮುಖ
ಭೂಗರ್ಭದ ಕಗ್ಗತ್ತಲ ರಂಧ್ರದಲ್ಲಿ ಹೂತು ಹೋಗಲು ಹೊರಟಂತೆ
ಕಂಭದಿಂದ ಚಕ್ಕೆ ಎದ್ದಂತೆ ನಿನ್ನ ಕೈಗಳು ಮೇಲೆದ್ದಿವೆ ಚಾಚಿ
ನನ್ನ ಗುಟ್ಟುಗಳ ಬಟ್ಟೆ ಬಯಲಿಗೆಳೆವಂತೆ, ಒಂದೊಂದಾಗಿ ಕಳಚಿ.

ನಿನ್ನ ಮೊಗ ನನ್ನ ಮೈಮೇಲಿನ ಪಸೆಯಾರುವಂತೆ ಹೀರುವ ಚಂದ್ರಮ,
ಈ ಭ್ರಷ್ಟಕಾಲವನ್ನು ನನ್ನದೇ ತುಟಿಗಳಿಂದ ಕುಡಿವ ಒಂದು ನಗರದಂತೆ.
ನಿನ್ನ ಮುಗುಳ್ನಗು ಚೆಂದ, ಬೆಳಕಾಗಿ, ಮಳೆಯಾಗಿ ಅಥವಾ ಹಕ್ಕಿಯಾಗಿ
ಕರಗಿಬಿಡಬಲ್ಲ ಒಂದು ಮಾಂಸದ ಮುದ್ದೆಯೆದುರು. 

ನಿನ್ನ ಕಣ್ಣುಗಳಾಳದ ಕರಾಳ ಹುನ್ನಾರಗಳಡಿ ನನ್ನ ಕಂಗಳು ಮುಚ್ಚಿಕೊಳ್ಳುತ್ತವೆ.
ನಿನ್ನ ತೊಡೆಗಳಲ್ಲಿ ನಾನು ಈ ಇರುಳ ಛಳಕುಗಳನ್ನು ಎತ್ತೆತ್ತಿ ಬೀದಿಯಾಚೆ ಒಗೆಯುತ್ತಿದ್ದೇನೆ
ಸಾಕಷ್ಟು ನೊಂದುಂಡು ಹೈರಾಣಗೊಂಡು 
ನನ್ನ ಕನಸು ಕಲ್ಪನೆಗಳ ತೋಳುಗಳು ಖಾಲೀ ಇರುಳಿನ ಬೆರೆಳು ಹಿಡಿದು ತೆವಳುತ್ತ 
ಕುಂಟುತ್ತ ಹೊರಟಿವೆ, ನಿನ್ನನ್ನು ಅರಸುತ್ತ, ನಿನ್ನನ್ನು ಪಡೆಯಲು, ಸುವಿಶಾಲ ಜಗದಗಲ

- ಈ ಇರುಳ ನಡಿಗೆ ಎಂಬ ಕವಿತೆ ನೋಡಿ. Night’s Passing ಎಂದು ಇದರ ಹೆಸರು. ಗಂಡು ಹೆಣ್ಣಿನ ಸಮಾಗಮವಿದೆ ಇಲ್ಲಿ. ಅದೂ ಬಹುಶಃ ಪರಸ್ಪರ ಪ್ರೇಮಿಗಳ ನಡುವೆ, ಗಂಡ ಹೆಂಡಿರ ನಡುವೆ ನಡೆಯುವಂಥ ಒಂದು ಸಮಾಗಮ. ಆದರೆ ಅದೆಷ್ಟು ಭಯಾನಕವಿದೆ ಎನ್ನುವುದನ್ನು ಗಮನಿಸಿ. ಅವಳಿಗಿಲ್ಲಿ ಇದ್ದಕ್ಕಿದ್ದಂತೆ ತಾನು ಹಂಬಲಿಸಿ ಬಯಸಿದ್ದು ಇವನನ್ನಲ್ಲ ಅನಿಸಿಬಿಟ್ಟಿದೆ! ಇಲ್ಲಿ ಸೌಂದರ್ಯವೂ ಇದೆ, ಅದರ ಬೆನ್ನ ಹಿಂದಿನ ಕರಾಳ ವಾಸ್ತವವೂ ಇದೆ. ಆನಂದವೂ ಇದೆ, ಅದರ ಕ್ಷಣಭಂಗುರತೆಯ, ಅದರ ನಂತರದ ಗೋಳುಗಳ ಕುರಿತ ಅರಿವು ಮತ್ತು ಅಪಾರ ಸಂಕಟವೂ ಇದೆ. ರತಿಯ ಉನ್ಮಾದದ ಛಳಕುಗಳನ್ನು ಅವಳು ಎತ್ತೆತ್ತಿ ಬೀದಿಗೆಸೆಯುತ್ತಿದ್ದಾಳೆ ಮತ್ತು ಅವನು ಸಿಕ್ಕಿದ ಮೇಲೂ ಅವನನ್ನು ಅರಸಿ, ಇರುಳ ಬೆರಳು ಹಿಡಿದು ಕುಂಟುತ್ತ ಸಾಗಿದ್ದಾಳೆ.  

ಮಳೆ
ಟಿನ್ ಶೀಟುಗಳ ಛಾವಣಿಯ ಮೇಲದರ ಗಾನ
ಗಿಡಬಳ್ಳಿ ಹುಲ್ಲು ಹಸಿರೆಲೆಗಳ ಹುಚ್ಚೆದ್ದ ಹೊಯ್ದಾಟ
ಬಯಕೆಗಳ ಹುರಿದ ಘಾಟಿನ ಹೊಗೆ
ಕಮರಿದ ಹೂಮನದ ಪುಟ್ಟಪುಟ್ಟ ಆಸೆಗಳ ನಿಷ್ಪಾಪಿ ಮೊಗ್ಗುಗಳು
ಅರಿಯದಲೆ ನನ್ನ ಕೊಂದವೆನ್ನಲೆ....

ಅನಾಥ ಕಾಗದದ ದೋಣಿ ಮಗುಚಿಕೊಂಡಂತೆ
ಕವಿತೆಯೊಂದು ಕಣ್ಣೆದುರೆ ಲಯತಪ್ಪಿತೆ;
ಗಿಜಿಗುಡುವ ಹಾದಿಗುಂಟ ಕವಿದ ಎಣ್ಣೆಮಬ್ಬು ಕಾಮನಬಿಲ್ಲ 
ಮಬ್ಬುಕವಿದ ದಿನವೊಂದು ಓರೆನೋಟದಲೆ ದಿಟ್ಟಿಸಿದಂತೆ...

ಸಂಜೆಗಪ್ಪು ಹೆಚ್ಚಿದಂತೆಲ್ಲ ನಾನು ನನ್ನೊಳಗೊಳಗೆ
ಇಳಿವೆ ಬೆಚ್ಚಗೆ ಚಿಪ್ಪೊಳಗೆ
ಕಳೆದುಕೊಂಡ ಸ್ನೇಹ, ಕಳೆದುಹೋದ ಕವಿತೆ
ಗಳ ಹುಡುಕತೊಡಗುವೆ ಒಳಗಣ್ಣ ಕತ್ತಲಲ್ಲಿ....

ಮಾತುಗಳ ನಡುವೆ ಯಾವುದೋ ಸಿಟ್ಟು ಅರಿವಿಲ್ಲದೇ
ಸುರುಳಿಬಿಚ್ಚಿ ಬುಸುಗುಡುತ್ತದೆ
ಕಾಲದ ಹೆಜ್ಜೆಗುರುತು ವಾಚ್ಯವಾಗಿಬಿಡುತ್ತದೆ....

ಕಪ್ಪನೆಯ ಮೋಡಗಳ ನಡುವೆ ತರಚಿದ ಗಾಯದಂಥ
ಎಡೆಯೊಂದು ತೆರೆದುಕೊಳ್ಳುತ್ತದೆ;
ಸಾವಿರ ನಾಲಗೆಗಳು ಅಲ್ಲಿಂದಿಳಿದು
ಎಳೆ‍ಎಳೆಯಾಗಿ ಬಿಳಲು ಚಾಚುತ್ತವೆ 
ನನ್ನ ಒಂಟಿಕ್ಷಣಗಳ ಒಮ್ಮೆ ನೆಕ್ಕಿಬಿಡಲು.ಮೊದಲ ಮಳೆ
ಮೊದಲ ಮಳೆಗೆ ತೆರೆವ ಗಿರಿಯ ತಿಳಿ ನೇರಳೆ ಆಗಸ
ನೀನೇ ಬಂದಂತೆ ನನ್ನ ಬಳಿಗೆ
ನಿನ್ನ ಮೃದುವಾದ ಕರಗಳಲ್ಲಿ ಹಳೆಯ ನೆನಪುಗಳೆಲ್ಲ
ಕೂತು ಬಂದಂತೆ ನನ್ನದೇ ಕೈಗೆ

ಕ್ಷಣಕಾಲ ಎಟುಕಿದಂತೆ ಕೆಳಗಿಳಿದು ನಿಂತ ಮೋಡ
ಅಲ್ಲಿ ಅದರ ಏಕಾಂತ ಧ್ಯಾನ
ಕಣ್ಮುಚ್ಚಿ ಏಕತ್ರ ಪ್ರಾರ್ಥನೆ
ಮತ್ತಿಲ್ಲಿ ನೆನಪುಗಳ ಮೇಘಮಾಲೆ
ಸಪ್ತಸಾಗರದಾಚೆ ಹೂತ ಗತದ ಗರ್ಭದಲ್ಲಿ ಮಿಸುಕಾಟ
ಮಳೆ ಬಡಿದು ನಿಂತ ಅಪರಾಹ್ನದಂತೆ
ತೊಯ್ದು ತೊಪ್ಪಡಿಯಾದ ಗುಬ್ಬಚ್ಚಿಯಂತೆ

ಬಳಿಕ
ಹೊಳೆವ ಎಲೆಗಳು ತೊಳೆದಿಟ್ಟಂತೆ
ಸಂತೃಪ್ತ, ನಿಚ್ಚಳ ಸ್ವಚ್ಛ ಅಲ್ಲೆಲ್ಲ
ಆತ್ಮಗಂಧದ ಸಹವಾಸ

ಕಾಲಕೊಂಕಿದ ಕಡೆ
ಇನ್ನೂ ನಿರೀಕ್ಷೆಗಳನ್ನೇ ಚೀಪುತ್ತ ನಿಲ್ಲಲಾರೆ
ಬಸವಳಿದ ಕವಿತೆಯೊಂದಕ್ಕೆ ಮಾತ್ರ ಈ ರಾತ್ರಿ
ನನ್ನೆದೆಗೆ ಲಗ್ಗೆಯಿಕ್ಕಲು ಸಾಧ್ಯ

ಮತ್ತೆ ನಾನು ಅದೇ ಒಳಕೋಣೆ ಸೇರಿಕೊಳ್ಳಬೇಕಿತ್ತು
ಪ್ರೇಮಿಗಳು ಅವ್ಯಕ್ತ ನೋವಿನಿಂದ ನುಣುಚಿಕೊಳ್ಳುತ್ತ ಮಾಯವಾಗಲು
ಅಲ್ಲಿ ಹಾದಿ ಒಂದಿಷ್ಟೇ ಬಾಗಿದೆ, ಕಾಲಕೊಂಕುವಲ್ಲಿ.
ಮತ್ತೆ ಮಳೆ ಹೊಯ್ಯುತಿದೆ, ಎಡೆಬಿಡದೆ

ನಾನು ಮನೆಗೆ ಆ ನನ್ನ ಪರಿಮಳ ಹೊತ್ತು ಬಂದಿದ್ದೇನೆ
ಒಂದಿಷ್ಟು ಮಾಘಮಾಸ ಮತ್ತು ನೀನು
ನಾನುಟ್ಟ ದಿರಿಸಾಗಿ, ಮೈತುಂಬ ಮೈಯಾಗಿ


ಸೆಮಿನಾರ್
ಹೊಚ್ಚ ಹೊಸಾ ಸಂವೇದನೆಯ
ಹಳೇ ಪಳೆಯುಳಿಕೆಯಂಥ ತಳ ಅಂತಸ್ತಿನಲ್ಲಿ
ಕಣ್ಮರೆಯಾಗಿರುವ ಹಳ್ಳಿಗಾಡಿನ
ಬಹುಶಃ ಸ್ವಂತ ಅಸ್ತಿತ್ವದ
ಹುಡುಕಾಟದ ಒಂದು ಪ್ರಯತ್ನ

ಮಾರ್ಚಿ ತಿಂಗಳ ಬಿಸಿಲ
ಕಾಣ್ಕೆ ಬಿಟ್ಟರೆ ಬೇರೆ ಬೆಳಕೇ ಇಲ್ಲದ
ಮಬ್ಬುಗತ್ತಲ ಕೋಣೆಯದು

ಹೊರಗೆ ಎರಡು ಬರಡು ಮರ
ಏನನ್ನೂ ಕೇಳಿಸಿಕೊಳ್ಳವು.
ಧೂಳು, ಘಾಟು ತುಂಬಿದ ಕೋಣೆಯಲ್ಲೆ
ಇಬ್ಬರು ಪ್ರಮೇಯಗಳೊಂದಿಗೆ ಸರಸವಾಡುತ್ತ
ನಿಂತಿದ್ದರಲ್ಲ, ನಾನು ಅದರಾಚೆ ದೃಷ್ಟಿನೆಟ್ಟು
ಮರಗಳನ್ನೆ ನೋಡುತ್ತಿದ್ದೆ.

ಗಾಳಿಯೇನಷ್ಟಿಲ್ಲ -ದಿದ್ದರೂ
ಅಸಹನೆಯಿಂದ ಕಿಟಕಿ ತನ್ನ ಕೈಯಾಡಿಸುವುದು
ವ್ಯರ್ಥವಾಗುವುದು.
ಈ ಹಳೆಯ ಪಳೆಯುಳಿಕೆಯಂಥ ಉಗ್ರಾಣಕ್ಕೆ
ಹೀಗೆ ಆಗಾಗ ಭೇಟಿ ನಮ್ಮದು
ನಮ್ಮನಮ್ಮೊಳಗೆ ನಾವ್ನಾವಿಳಿದು.

ವಿಪರ್ಯಾಸ ಎಂಬ ಕವಿತೆ ಗಮನಿಸಿ. ಒಂದು ಸಂವೇದನೆಯಾಗಿ ಇದರಲ್ಲಿ ವಿಶಿಷ್ಟವಾದದ್ದು, ನಮಗೆ ತಿಳಿಯದೇ ಇರುವುದು ಏನೂ ಇಲ್ಲ ಇಲ್ಲಿ. ನಾಗರೀಕತೆ ನಮ್ಮ ದೈನಂದಿನದಲ್ಲಿ ಹೊರಿಸಿದ ಎಷ್ಟೋ ಕೃತಕ ಸಂಪ್ರದಾಯಗಳೂ, ಅವುಗಳತ್ತ ನಮ್ಮದೇ ಅಂತರಂಗದಲ್ಲಿರುವ ಪ್ರತಿರೋಧಗಳೂ ನಮಗೆ ಗೊತ್ತಿರುವಂಥದ್ದೇ. ಈ ಪ್ರತಿರೋಧ ಸೃಷ್ಟಿಸುವ ಮಾನಸಿಕ ಒತ್ತಡ ಅಥವಾ ಕಿರಿಕಿರಿಗಳಿಗೆ ಭಾಷೆಯಲ್ಲಿ ಒಂದು ಅಭಿವ್ಯಕ್ತಿಕೊಡಲು ಹೊರಟ ಕವಿ ಅದರ ಕುರಿತು ಧೇನಿಸಿರುತ್ತಾನೆ, ಸೂಕ್ಷ್ಮವಾಗಿ ಪ್ರತಿಸ್ಪಂದಿಸಿರುತ್ತಾನೆ ಮತ್ತು ತನ್ನದೇ ಆದ ಒಂದು ದರ್ಶನವನ್ನೂ ಪಡೆದುಕೊಂಡಿರುತ್ತಾನೆ. ಇದೇ ಎಂದೇನಲ್ಲ, ನಮ್ಮನ್ನು ಇನ್ನಿಲ್ಲದಂತೆ ಕಾಡಬಲ್ಲ ಇಂಥ ಹತ್ತು ಹಲವು ಸೂಕ್ಷ್ಮಸಂವೇದನೆಗಳು ನಮ್ಮ ನಿಮ್ಮ ದೈನಂದಿನದಲ್ಲೇ ಇವೆ. ಆದರೆ, ಇವತ್ತಿನ ದೈನಂದಿನದಲ್ಲಿ ನಮಗೆ ಈ ಬಗೆಯ ಪ್ರತಿಸ್ಪಂದನಕ್ಕೆ ಬೇಕಾದ ಒಂದು ಸ್ಪೇಸ್ ಇಲ್ಲವಾಗಿದೆ. ಹಾಗಾಗಿ ಭಾಷೆಯಲ್ಲಿ ಇದನ್ನು ಕಟ್ಟಿಕೊಡಬಲ್ಲ ಕವಿತೆಗಳೂ ಇಲ್ಲವಾಗಿವೆ. ಇಷ್ಟೇ ಇದರ ವಿಶೇಷ.

ವಿಪರ್ಯಾಸ
ಹಗಲು ಇರುಳಾಗಿ ಮಗ್ಗುಲು 
ಬದಲಿಸಿದ ಹಾಗೆ ಪದೇಪದೇ
ವ್ಯಂಗ್ಯ ಹಳಬನಂತೆ ಕುಸಿದು ಕೂರುವುದು
ಕಾಗದದ ಮೇಲೆ.
ನಾಗರೀಕತೆಯ ತಿಪ್ಪೆರಾಶಿಯ ಮೇಲಿಂದ
ಅದೇ ಗತಕಾಲ ಕೆಳಗುರುಳಿ ಬಿದ್ದು
ರೇಶಿಮೆಯ ನಯದಲ್ಲೆ ನೋವ ಅಭಿನಯಿಸುವ
ಕಲೆಯ ಚಟ ಹತ್ತಿದ ನನ್ನ
ಮಸಿಕುಡಿಕೆ, ಪೆನ್ನು ಕೂತ ಮೇಜಿನ
ಮೇಲೆ ಉಳಿಯುವುದು.
ಅಸಹಾಯಕತೆಯು ಲಜ್ಜೆಗೇಡಿತನವಾಗಿ
ರೂಪ ಬದಲಿಸುವ ಅಂತರದ ಹಂತದಲ್ಲೆ
ಅಧಃಪತನದ ಜೊತೆ ಇಡೀ ಬೀದಿ
ನನ್ನೊಂದಿಗೇ ಒಬ್ಬಂಟಿಯಾಗುವುದು,
ಚಾಚಿ ಹಬ್ಬಿದಂತೆಲ್ಲ ಅದರ ಕರಾಳ ನೆರಳು.
ನನ್ನದೆಲ್ಲದರ ಜೊತೆಗೇ ನನ್ನೊಳಗನ್ನೆಲ್ಲ ತಿಂಬ
ಈ ಸದಾಸನ್ನದ್ಧ ಸ್ವಭಾವ
ನಾ ಬಿಟ್ಟೂ ಬಿಡಲಾರೆ, ಇಟ್ಟೂ ಹಿಡಿಯಲಾರೆ
ಉಪಶಮನದ ಬಯಕೆಯೊಂದೇ ನನ್ನ ಭಾವದ
ಪುಟ್ಟ ಸ್ವಾತಂತ್ರ್ಯ.
ಹಾಗೆ ಸ್ವತಂತ್ರವಾಗಿರಲಾರೆ ನಾನೆಂಬ ಅರಿವು
ಒಂದಿಷ್ಟು ಮರುಳು, ಮತ್ತಿಷ್ಟು ಆಸೆ
ಎರಡೂ ನನಗಿತ್ತ ರೋಗ.

ಅವಳ ತೊಡೆಗಳಲ್ಲಿನ್ನೂ ಮೊಲೆವಾಲ ಘಮವಿದೆ...
ಗರ್ಭದಲ್ಲಿ ನಿರೀಕ್ಷೆಗಳನ್ನಿರಿಸಿಕೊಂಡು
ಧಾವಂತದಿಂದ ಮನೆಯಿಂದ ಹೊರ ನಡೆದ ಅವಳು
ಇನ್ನೆಲ್ಲೊ ಮರಳಿದ್ದಾಳೆ, ಖಾಲೀ ಕೊಡ ಹಿಡಿದು
ಅದರಲ್ಲಿ ಅವಳ ಕೊನೆಯ ಪ್ರಯತ್ನಗಳಿವೆ, ಬಣಗುಡುತ್ತ.

ಅವಳ ಹೆಜ್ಜೆಗಳು ಮೃದುವಾಗಿ ಎಡವಿರಬೇಕೆಲ್ಲೊ
ಒಂದಾನೊಂದು ಕಾಲಕ್ಕೆ ಯೌವನದಿಂದ ನಳನಳಿಸುತ್ತಿದ್ದ ಹಸಿರೆಲೆಗಳ
ಆದರೀಗ ಉರಿವಧರೆಯಾಗಿರುವ ಒಣದರಲೆಯ ಕಂಬಳಿಯ ಮೇಲೆ
ಗೀಚಿದಂತೆ ಬರೆದ ವಿಳಾಸಗಳು, ಸಂತ್ರಸ್ತ ಪರಿಹಾರಗಳ
ಹಳದೀ ಹಾಳೆಯಂತಾಗಿರುವ ವಿಭಜಿತ ಆಗಸದ ಅಚೆ ಮಗ್ಗುಲ ತರ ಭೂಮಿ

ಅವಳಲ್ಲಿ ಅರೆಕ್ಷಣ ನಿಂತು ಉಸಿರೆಳೆದುಕೊಂಡಿರಬೇಕೆಲ್ಲೊ
ಸಾಯಲಿರುವ ಸೂರ್ಯನ ಎದುರು ಕಪ್ಪಿಟ್ಟ
ಗಿಡಗಂಟಿಗಳ ತಿರುವಿನಲ್ಲಿ.
ಕತ್ತಲೆ ಬೆಳಕಿನ ನೆರಳಿನಾಟದಲ್ಲಿ ಕಾಣದಂತೆಯೂ ಕಂಡ ಅಂಚುಗಳ ಚಿತ್ತಾರ
ಹಾದು, ಆ ಅಪರಾಹ್ನ ರಸ್ತೆಯಲ್ಲೆದ್ದ ಧೂಳು ಈಗ ಉಸ್ಸೆಂದು ನೆಲಕೆ 
ಮರಳಿ ಒರಗುವುದ ಕಂಡು, ಸೊಕ್ಕಿದ ನದಿ ನೀರು ದಡದ ಒಡಲಿನ
ಬೆಂಕಿಯಾರಿಸಿ, ಅವಳ ಯೌವನದ ಸೊಂಟದಿ ಬಳಕಿ ಬಾಗಿದ ಕಾಲವೀಗ
ಕೊಡವುಕ್ಕಿ ಚೆಲ್ಲುವುದು ನಿಂತ ಬಳಿಕವಷ್ಟೇ ವಿರಮಿಸಿದೆ. 

ಅವಳ ತುಟಿಗಳ ಮೇಲೆ ದಿಗ್ದಿಂಗತ ದೂರ ಜೊತೆಗೇ ಬಂದ ಅವಳ ಮುದ್ದುಕೃಷ್ಣ
ಅವಳ ಜೋಗುಳದ ಲಯದಲ್ಲಿ ಅವಳಾಚೆಗೂ ಬೆಳೆದುಳಿದ ಕಂದ.

ಅವಳ ತೊಡೆಗಳಲ್ಲಿನ್ನೂ ಮೊಲೆವಾಲ ಘಮವಿದೆ
ಅವಳೆದೆಯಲ್ಲಿ ರಕ್ತವಿನ್ನೂ ಬಸಿದು ನಿಂತಿದೆ.
ನಾನ್ಯಾಕೆ ಅವಳ ಕೆರೆಯುತ್ತಿದ್ದೇನೆ ಇನ್ನೂ ಇನ್ನೂ
ಆ ಹಾಡ ಕೆನೆಯನ್ನು ಅವಳ ಸ್ರಾವದೋಕುಳಿಯಿಂದ?
ನನ್ನ ಕತೆಯ ಕಲ್ಲು ಬಿರುಕುಗಳೆಡೆಯಿಂದ ಅವಳು
ಪೂರ್ತಿಯಾಗಿ ಸೋರಿ ಬರಿದಾದ ಈ ದುರಿತಕಾಲದಲ್ಲಿ!

ಅರೆಚಿಂದಿ ಬಾವುಟದ ನಿಶ್ಶಕ್ತ ಅಲುಗಾಟದಂತೆ
ಆಘಾತದಿಂದ ಮರಗಟ್ಟಿದ ಕೈಗಳಿಂದ ಕುಟುಕು ಜೀವ
ಕೊನೆಯ ವಿದಾಯದ ಒಂದು ಅಸ್ಪಷ್ಟ ಸೂಚನೆಯನ್ನೇ
ಕಾದಿರುವಂತೆ, ಏನೋ ಅಸ್ಪಷ್ಟ ನೆನಪು, ಮರುಕಳಿಕೆ.

ಅಂದರೆ, ಗಡಿಯಲ್ಲಿ ಅವರು ಅವಳನ್ನು ಕೊಂದು ಕೆಡವಿದಾಗಲೂ
ಅವಳ ನಿರ್ಜೀವ ಮೊಲೆತೊಟ್ಟ ಮಗುವೊಂದು ಚೀಪುತ್ತಲೇ ಇತ್ತು.


(ಕವನಗಳ ಅನುವಾದಕ್ಕೆ ಮುಕ್ತ ಅನುಮತಿಯಿತ್ತು, ಏನೇ ಅನುಮಾನ ಬಂದರೂ ಕೇಳು, ವಿವರಿಸುತ್ತೇನೆ ಎಂದ ನಬ್ನೀತಾ ಕಾನುನ್ಗೊ ಅವರಿಗೆ ಕೃತಜ್ಞತೆಗಳು)
 

No comments: