Sunday, February 7, 2021

ಮೂಚಿಮ್ಮನ ಕತೆ ಹೇಳುತ್ತ...

ಸರಾಗವಾಗಿ ಓದಿಸಿಕೊಳ್ಳುವ ಗುಣ, ಕುತೂಹಲವನ್ನು ಕಾಯ್ದುಕೊಳ್ಳುವ ಜಾಣ್ಮೆ, ಸ್ಪಷ್ಟ ಮತ್ತು ಅಚ್ಚುಕಟ್ಟಾದ ನಿರೂಪಣೆ, ಸುಂದರವಾದ ಭಾಷೆ ಮತ್ತು ಎಷ್ಟು ಬೇಕೋ ಅಷ್ಟೇ ವಿವರಗಳು, ಆಧುನಿಕತೆಯನ್ನೂ ಪರಂಪರೆಯನ್ನೂ ಒಟ್ಟಿಗೇ ಕೊಂಡೊಯ್ಯುವ ಅವರ ಕಥಾನಕಗಳ ಹಿಂದಿನ ಧ್ವನಿ ಅಥವಾ ಮನೋಧರ್ಮ, ತಪ್ಪಿಲ್ಲದಂಥ ಕನ್ನಡ ಎಲ್ಲವೂ ಡಾ.ಅಜಿತ್ ಹರೀಶಿಯವರಲ್ಲಿ

ಗಮನಿಸಬೇಕಾದ ಗುಣಗಳು. ‘ಮೂಚಿಮ್ಮ’ ಅವರ ಮೊದಲನೆಯ ಸಂಕಲನವೇನಲ್ಲ. ಈಗಾಗಲೇ ಅವರು ನುರಿತ ಕತೆಗಾರ ಎಂದು ಹೆಸರಾಗಿದ್ದಾರೆ, ಕನ್ನಡ ಸಾಹಿತ್ಯಲೋಕ ಅವರನ್ನು ಗುರುತಿಸಿದೆ. ಹಾಗಾಗಿಯೇ ಅವರ ಬಗ್ಗೆ ಬರೆಯುವಾಗ ಇದೇ ಮೊದಲ ಪ್ರಯತ್ನಕ್ಕೆ ಕೈಯಿಕ್ಕಿರುವ ಹೊಸಬರ ಬಗ್ಗೆ ಬರೆಯುವಂತೆ ಮಾತನಾಡುವುದು ಸಾಧ್ಯವಿಲ್ಲ. ಬಹುಶಃ ಹೊಗಳಿಕೆಯ ನಿರೀಕ್ಷೆ ಕೂಡ ಅವರಲ್ಲಿ ಈಗ ಪ್ರಧಾನವಾಗಿ ಉಳಿದಿಲ್ಲ. ಇದು ಅವರು ಬೆಳೆಯಲು ಕಾತರಿಸುವ, ತಮ್ಮ ಕತೆಗಾರಿಕೆಯ ಕೌಶಲ್ಯವನ್ನು ಮತ್ತಷ್ಟು ಇನ್ನಷ್ಟು ವೃದ್ಧಿಸಿಕೊಂಡು ನೈಪುಣ್ಯ ಸಾಧಿಸಲು ಹಪಹಪಿಸುವ ಕಾಲ ಎಂದು ನಾನು ಭಾವಿಸುತ್ತೇನೆ. ಮತ್ತಿದಕ್ಕೆ ಅಂತ್ಯವೆನ್ನುವುದು ಇರುವುದಿಲ್ಲ, ಒಂದು ಹಂತದಲ್ಲಿ ಆರಂಭ ಮಾತ್ರ ಇರುತ್ತದೆ. ನಮ್ಮ ಕಾಲದ ಅತ್ಯಂತ ಹಿರಿಯ ಕತೆಗಾರ ಕೂಡ ಕಲಿಯುವುದು, ಪ್ರತಿ ಹೊಸಕತೆಯ ರಚನೆ ಮುಗಿದಾಗಲೂ ಅದು ಹೇಗೆ ಬಂದಿರಬಹುದು ಎಂಬ ಬಗ್ಗೆ ಇನ್ನೊಬ್ಬರ ಅನಿಸಿಕೆ ತಿಳಿಯಲು ಕಾತರದಿಂದಿರುವುದು ಸಹಜವೇ ಆಗಿದೆ. ಹಾಗಾಗಿ ನಾನು ಡಾ. ಅಜಿತ್ ಹರೀಶಿ ಅವರ ಕತೆಗಳ ಬಗ್ಗೆ ಔಪಚಾರಿಕ ಹೊಗಳಿಕೆಯ ಮಾತುಗಳನ್ನೆಲ್ಲ ಕೈಬಿಟ್ಟು, ನನ್ನನ್ನು ಅವರಲ್ಲಿ ಕಂಡುಕೊಳ್ಳುತ್ತ, ನನಗೆ ನಾನೇ ಹೇಳಿಕೊಳ್ಳಬಹುದಾದ ಕೆಲವು ಮಾತುಗಳನ್ನಷ್ಟೇ ಹೇಳಲು ಪ್ರಯತ್ನಿಸುತ್ತೇನೆ. 

‘ಮೂಚಿಮ್ಮ’ ಕತೆ, ಡಾ.ಅಜಿತ್ ಹರೀಶಿಯವರ ಇದುವರೆಗಿನ ಕತೆಗಳಲ್ಲಿಯೇ ಒಂದು ಹೆಜ್ಜೆ ಮುಂದಿರುವ, ಅವರ ಸಾಧ್ಯತೆಯನ್ನು ತೋರಿಸಿಕೊಡುವ ಕತೆ. ಇಲ್ಲಿ ಮೂಚಿಮ್ಮ ಮನೆಗೆ ಬಂದಾಗ ಸುಲೋಚನೆಗೆ ಅದು ಅಷ್ಟು ಇಷ್ಟವಾಗುವುದಿಲ್ಲ. ಆದರೆ ಮುಂದೆ ಕ್ರಮೇಣ ಒಗ್ಗಿಕೊಳ್ಳುತ್ತಾಳೆ. ಅದಕ್ಕೆ ಮೂಚಿಮ್ಮ ಬಗ್ಗೆ ರವೀಶನಿಗಿರುವ ನಂಟು ಆಕೆಗಿಲ್ಲ ಎನ್ನುವುದೂ ಒಂದು ಅಂಶ, ಮೂಚಿಮ್ಮ ತನ್ನ ವೈದ್ಯ ವಿದ್ಯೆಯನ್ನು ಮುನ್ನೆಡೆಸಿಕೊಂಡು ಹೋಗುವ ವಾರಸುದಾರಿಕೆಯನ್ನು ತನ್ನ ಪತಿಗೆ ವಹಿಸುತ್ತಾಳೆಂಬುದು ಇನ್ನೊಂದು ಅಂಶ. ಇದು ಅತ್ಯಂತ ಸಹಜವಾಗಿ ಕತೆಯಲ್ಲಿ ಬಂದಿರುವುದನ್ನು ಓದುಗ ಕಂಡುಕೊಳ್ಳುತ್ತಾನೆಯೇ ಹೊರತು ಅಜಿತರ ಬೇರೆ ಕತೆಗಳಲ್ಲಿ ಆಗುವಂತೆ ಯಾರೂ ಓದುಗನಿಗೆ ‘ಸುಲೋಚನೆಗೆ ಮೊದಲು ಸ್ವಲ್ಪ ಇರಿಸುಮುರಿಸಾಯ್ತು, ಆಮೇಲೆ ಒಗ್ಗಿಕೊಂಡಳು’ ಎಂದು ಹೇಳಿ ತಿಳಿಯುತ್ತಿಲ್ಲ. ಹಾಗಿದ್ದೂ ಕತೆಯಲ್ಲಿ ಮೂಚಿಮ್ಮನ ಕತೆ ರವೀಶನ ಬಾಯಿಂದಲೇ ಸುಲೋಚನೆ ತಿಳಿಯುತ್ತಾಳೆ ಎನ್ನುವುದು ನಿಜ. ಈ ಕತೆಯ ಎರಡನೆಯ ಧನಾತ್ಮಕ ಗುಣವೆಂದರೆ, ಮೂಚಿಮ್ಮ ಮನೆಗೆ ಬಂದಿರುವುದು ಬಾಂದುಕಲ್ಲಿನಡಿ ತಾನು ಹೂತಿಟ್ಟ ನಿಧಿಯನ್ನು ತೆಗೆದುಕೊಂಡು ಹೋಗುವುದಕ್ಕೆ, ಆದರೆ ರವೀಶನಿಗೇ ಸೇರಬಹುದಾಗಿದ್ದ ಆ ನಿಧಿಯನ್ನು ಹಾಗೆ ಕೊಡದೆ ತನ್ನ ಮೊಮ್ಮಗನಿಗೆ ಕೊಡುತ್ತಿರುವ ಬಗ್ಗೆ ಮೂಚಿಮ್ಮನಿಗೆ ಎಲ್ಲೋ ಒಂದು ಪಾಪಪ್ರಜ್ಞೆಯೂ ಇದ್ದಿರಬೇಕು. ಅದಕ್ಕಾಗಿಯೂ ಅವಳು ತನ್ನ ವೈದ್ಯಕೀಯವನ್ನು ರವೀಶನಿಗೆ ಕೊಡುತ್ತಿದ್ದಿರಬಹುದು ಅಥವಾ ಅವಳಿಗೆ ಬೇರೆ ಯೋಗ್ಯರು ಕಂಡಿಲ್ಲದ್ದರಿಂದಲೂ ಇರಬಹುದು. ಈ ಯಾವ ಅಂಶಗಳ ಬಗ್ಗೆಯೂ ಕತೆ ಮಾತನಾಡುವುದಿಲ್ಲ ಎನ್ನುವುದೇ ಇಲ್ಲಿನ ದೊಡ್ಡ ಗುಣ. ಅಷ್ಟರಮಟ್ಟಿಗೆ ಮೂಚಿಮ್ಮನ ಪಾತ್ರ ಮತ್ತು ರವೀಶನ ಪಾತ್ರ ಎರಡನ್ನೂ ಕಟ್ಟಿರುವ ಬಗೆ ಹಾಗೂ ಇವೆರಡೂ ಪಾತ್ರಗಳ ಜೊತೆಗೇ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸೂಚಿಸುವುದಕ್ಕಾಗಿಯೇ ಸುಲೋಚನೆಯ ಮೂಲಕ ಬರುವ ಕೆಲವು ನಡೆನುಡಿ - ಮೂರು ಅಚ್ಚುಕಟ್ಟಾಗಿದೆ. ಬಹುಶಃ ಎಲ್ಲೋ ಬರಬಹುದಾಗಿದ್ದ ಒಂದು ಮಾತು, ಪದ, ವಾಕ್ಯ ಈ ಬಿಗಿಯಾದ ಬಂಧವನ್ನು ಕೆಡಿಸಬಹುದಾಗಿತ್ತು. ಹಾಗಾಗದೇ ಇರುವುದನ್ನು ಮುಖ್ಯವಾಗಿ ಗಮನಿಸಬೇಕು. ಇಷ್ಟಾಗಿಯೂ ಹಣ ತನಗೆ ಸಿಗಲಿಲ್ಲ ಎಂದು ಹುಳ್ಳಗಾಗುವ ರವೀಶನ ಮನಸ್ಸು ಕತೆಗಾರನ ಗಮನದಿಂದ ತಪ್ಪಿಹೋಗುವುದಿಲ್ಲ. ತನ್ನ ನಾಯಕನನ್ನು ಹೀರೋಯಿಕ್ ಮಾಡುವ ಆಮಿಷಕ್ಕೆ ಅಜಿತ್ ಒಳಗಾಗದಿರುವುದು ದೊಡ್ಡ ಗುಣ. ಇಡೀ ಕತೆ ಓದಿದ ಮೇಲೆ ನನ್ನ ಮನಸ್ಸಿನಲ್ಲಿ ನಿಂತ ಪಾತ್ರ ಮಾತ್ರ ಮೂಚಿಮ್ಮನದ್ದಲ್ಲ, ಬದಲಿಗೆ ಗೋಯಿಂದಣ್ಣ. 

ಗಮನಿಸಿ ನೋಡಿ, ಈ ಗೋಯಿಂದಣ್ಣನಿಗೆ ಮಾತ್ರ ನಿಧಿ ಬಾಂದುಕಲ್ಲಿನ ಕೆಳಗೆ ಹೂತಿಟ್ಟ ವಿಷಯ ಗೊತ್ತಿದ್ದಿದ್ದು. ಬರೀ ಒಂದು ನಾಣ್ಯದ ಮಜೂರಿಯ ಮೇಲೆ ಮತ್ತು ಅದರ ಹಿಂದಿನ ವಿಶ್ವಾಸದ ಮೇಲೆ ನಿಂತ ರಹಸ್ಯ ಅದು. ಮನಸ್ಸು ಮಾಡಿದ್ದರೆ ಗೋಯಿಂದಣ್ಣ ಇಡೀ ಆಸ್ತಿ ಎತ್ತಿ ಹಾಕಬಹುದಾಗಿತ್ತು. ಅಥವಾ ರವೀಶನಿಗೆ ಹೇಳಬಹುದಾಗಿತ್ತು. ಆದರೆ ಮೂಚಿಮ್ಮನಿಗೆ ಕೂಡ ಅಂಥ ಸಂಶಯ ಬರುವುದಿಲ್ಲ, ಗೋಯಿಂದಣ್ಣನೂ ತಪ್ಪಿ ನಡೆದುಕೊಳ್ಳುವುದಿಲ್ಲ. ಈ ಅಂಶ ಮಾತ್ರ ನನ್ನನ್ನು ತುಂಬ ಕಲಕಿದ್ದು. ಈ ಮೌಲ್ಯ, ಈ ಒಂದು ಹಳ್ಳಿಯ ಗುಣವನ್ನು ಕತೆ ಗುರುತಿಸುತ್ತದಲ್ಲ, ಮತ್ತು ಅದನ್ನು ಸದ್ದು ಗದ್ದಲ ಮಾಡದೆ ತಣ್ಣಗೆ ಹೇಳುತ್ತದಲ್ಲ, ಅದಕ್ಕಾಗಿ ಈ ಕತೆ ಒಂದು ಮಾಸ್ಟರ್ ಪೀಸ್ ಕತೆ.

ಈ ಕತೆಯ ಯಾರೂ ಒಂದು ಕಾಲ್ಪನಿಕ ಆದರ್ಶವನ್ನು, ಹೀರೋಯಿಸಂನ್ನು ಪ್ರದರ್ಶಿಸುವುದಿಲ್ಲ. ಎಲ್ಲರೂ ‘ಕೇವಲ’ ಮನುಷ್ಯರಂತೆ ವರ್ತಿಸುತ್ತಾರೆ. ಹಾಗಾಗಿಯೇ ಗೋಯಿಂದಣ್ಣನ ದೊಡ್ಡತನವನ್ನು ಕೂಡ ಮನಸ್ಸು ಬೆರಗಿನಿಂದ ಸ್ವೀಕರಿಸಿ ನಮಿಸುತ್ತದೆ.

ಆದರೆ, ಇಂಥ ವಿಶಿಷ್ಟ ಕತೆಯನ್ನು ಬರೆಯಬಲ್ಲ ಅಜಿತ್ ಅವರು ಮ್ಯಾಗಝೀನ್ ಕತೆಗಳ ತರ ಇರುವ, ಸಿನಿಮೀಯವೆನಿಸುವ ಕತೆಗಳನ್ನೇ ಹೆಚ್ಚಾಗಿ ಬರೆಯುತ್ತಿರುವುದು ನನಗೆ ಆಶ್ಚರ್ಯ ಹುಟ್ಟಿಸುತ್ತದೆ. ಒಂದು ಕೊಂಚ ಕಷ್ಟದ, ಯಶಸ್ಸು ನಿಧಾನವಾದ ಮತ್ತು ಅಷ್ಟು ಖ್ಯಾತಿಯಿಲ್ಲದ ಮಾರ್ಗ. ಇನ್ನೊಂದು ಸುಲಭದ, ಬೇಗನೆ ಜನಪ್ರಿಯತೆ , ಖ್ಯಾತಿ ತಂದುಕೊಡಬಹುದಾದ ಮಾರ್ಗ. ಎರಡೂ ಹಾದಿಯಲ್ಲಿ ಸಾಗಿದ ಕತೆಗಾರರು/ಕಾದಂಬರಿಕಾರರು ನಮ್ಮಲ್ಲಿ ಎಲ್ಲ ಕಾಲದಲ್ಲಿಯೂ ಇದ್ದರು/ಇದ್ದಾರೆ. ಯಾವುದು ಮೇಲು ಯಾವುದು ಕೀಳು ಎಂಬ ಪ್ರಶ್ನೆಯೇ ಸಾಹಿತ್ಯದಲ್ಲಿ ಇಲ್ಲ. ವೈಯಕ್ತಿಕವಾಗಿ ಕೆಲವರಿಗೆ ಕೆಲವು ಇಷ್ಟಾನಿಷ್ಟಗಳಿರಬಹುದೇ ಹೊರತು ಇನ್ನೇನಿಲ್ಲ.

ಈ ಸಂಕಲನದ ಮೊದಲ ಕತೆ "ಆವಿ" ಡಾಕ್ಟರ್ ಶರತ್, ದಿಶಾ ಮತ್ತು ಡಾಕ್ಟರ್ ಸುನೀಲ್ ನಡುವಣ ಒಂದು ತ್ರಿಕೋನ ಪ್ರೇಮದ ಕತೆಯನ್ನೇ ವಿಸ್ತರಿಸಿದ ಕಥಾನಕ. ಇದಕ್ಕೆ ಶರತ್‌ ಮತ್ತು ದಿಶಾ ಮದುವೆಯಿಂದ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎಂಬ ಒಂದು ತೊಡಕನ್ನೊಡ್ಡಿ ದಿಶಾ ಪಾತ್ರವನ್ನು ಅವಳು ಅಂತಿಮವಾಗಿ ಏನನ್ನು ಆರಿಸಿಕೊಳ್ಳುತ್ತಾಳೆ ಎನ್ನುವ ಪ್ರಶ್ನೆಯ ಎದುರು ನಿಲ್ಲಿಸಲಾಗುತ್ತದೆ. ಅಂಥ ಒಂದು ತೊಡಕು ಇಲ್ಲದೇ ಇದ್ದರೆ ಈ ಕತೆ ಹೇಗಿರುತ್ತಿತ್ತು ಎಂದು ಯೋಚಿಸುತ್ತೇನೆ. ಅಥವಾ, ಸುನೀಲನಂಥ ಒಂದು ಸಾಧ್ಯತೆ ಕಣ್ಣೆದುರು ಇಲ್ಲದೇ ಇರುತ್ತಿದ್ದರೆ ಏನಾಗುತ್ತಿತ್ತು ಎಂದೂ ಯೋಚಿಸುತ್ತೇನೆ. ಅನೇಕ ತ್ರಿಕೋನ ಪ್ರೇಮದ ಕತೆಗಳನ್ನು, ಪತಿ ಪತ್ನಿ ಔರ್ ವೋ ಕತೆಗಳನ್ನು, ತ್ಯಾಗರಾಜರ ಕತೆಗಳನ್ನು ಈಗಾಗಲೇ ಓದಿರುವ ನಮಗೆ ಹೊಸತೇ ಆದ ಏನೂ ಇಲ್ಲಿ ಸಿಗುತ್ತಿದೆ ಅನಿಸುವುದಿಲ್ಲ.

‘ನಟ’ ಎಂಬ ಎರಡನೆಯ ಕತೆಯಲ್ಲಿ ನಟರಾಜ ಮತ್ತು ಒಬ್ಬಳು ನಟಿಯ ನಡುವೆ ಸಂಬಂಧ ಬಲಿಯುವುದು ಮತ್ತು ನಟಿ ಯುವಂತಿಕಾಳ ಕೆರಿಯರ್ ಒಬ್ಬ ನಟಿಯಾಗಿ ಸಾಗಿದ ಕತೆ ಎರಡೂ ಸಮಾನಾಂತರವಾಗಿ ಬರುವುದು ತುಂಬ ಚೆನ್ನಾಗಿದೆ. ಈ ಕತೆಗೆ ಪರಿಪ್ರೇಕ್ಷ್ಯವೋ ಎಂಬಂತೆ ಒಂದು ಜಿಂಕೆ ಮರಿಯ ಕತೆಯಿದೆ. ಅದು ಅನಾಯಾಸ ನದಿಯಲ್ಲಿ ಸಿಕ್ಕುತ್ತದೆ, ಅದನ್ನು ನಟರಾಜ ಕೆಲಕಾಲ ಪೋಷಿಸುತ್ತಾನೆ. ಆದರೆ ನೈಸರ್ಗಿಕವಾಗಿ ಅದು ಬೆಳೆಯಬೇಕಾದ ವಾತಾವರಣ ಬೇರೆ ಎನ್ನುವ ಕಾರಣಕ್ಕೂ, ನಟಿಯ ಗುಂಗಿನಲ್ಲಿ ಒಂದಿಷ್ಟು ನಿರ್ಲಕ್ಷ್ಯಕ್ಕೆ ಜಿಂಕೆಮರಿ ತುತ್ತಾಯಿತು ಎಂಬ ಪಾಪಪ್ರಜ್ಞೆಯಿಂದಲೂ ಅದನ್ನು ಕಾಡಿಗೇ ಬಿಡುವ ನಿರ್ಧಾರಕ್ಕೆ ಬರಬೇಕಾಗುತ್ತದೆ. "ಜವಾಬ್ದಾರಿಯಿಲ್ಲದೇ ಮೂಕಪ್ರಾಣಿಗಳನ್ನು ಸಾಕಬಾರದು" ಎಂಬುದು ತತ್ವವಾಕ್ಯ. ಇದು ಗಂಡು ಹೆಣ್ಣು ಸಂಬಂಧದ ಬಾಧ್ಯತೆಗೂ ಅನ್ವಯಿಸುತ್ತದೆ ಅಲ್ಲವೆ? ಒಂದು ಹೆಣ್ಣನ್ನು, ಅವಳು ನಟಿಯಾಗಿರಲಿ, ವೇಶ್ಯೆಯೇ ಆಗಿರಲಿ ಬಳಸಿಕೊಳ್ಳುತ್ತೇವೆಂದರೆ ಅಷ್ಟರಮಟ್ಟಿಗೆ ಜವಾಬ್ದಾರಿಯಿಂದ, ಬಾಧ್ಯತೆಯಿಂದ ನುಣುಚಿಕೊಂಡಂತೆಯೇ ಸರಿ. ಈ ಕತೆಯ ಹೆಸರೂ ನಟ ಮತ್ತು ನಾಯಕನ ಹೆಸರು ನಟರಾಜ. ನಿಜವಾದ ನಟಿಗಿಂತ ನಟರಾಜನ ನಟನೆಯೇ ಒಂದು ಗುಲಗಂಜಿ ತೂಕ ಹೆಚ್ಚು ಎನ್ನುವ ಧ್ವನಿಯಿದೆ ಇಲ್ಲಿ.  ಇಲ್ಲಿ ನಟಿಯ ಬಗ್ಗೆ ಕತೆಯ ಮನೋಧರ್ಮ ಕೊಂಚ ಅಫೆಂಡಿಂಗ್ ಆಗಿದೆ ಎಂದೂ ಅನಿಸುತ್ತದೆ. 

‘ವಿಲಿಪ್ತ’ ಕತೆ ಸ್ವಾಮೀಜಿ ಎನ್ನಲಾಗದಿದ್ದರೂ ಗುರುವಿನ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯ ಲೈಂಗಿಕ ಆಸಕ್ತಿಯನ್ನು ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುವ ಭಂಡರ ಮತ್ತು ಸಮಾಜ ಒಬ್ಬನ ಖಾಸಗಿ ವಿಚಾರವಾದ ಲೈಂಗಿಕ ವ್ಯವಹಾರಕ್ಕೆ ಅವನ ನೈತಿಕತೆಯನ್ನು ತಳುಕುಹಾಕಿ ನೋಡುವ ಬಗೆಯನ್ನೂ ಯಾವುದೇ ನಿಲುವುಗಳಿಲ್ಲದೇ ಚಿತ್ರಿಸುವ ಕತೆ. ಸಮಾಜದ ಈ ವಿಧಾನಕ್ಕೆ ಹೆದರುವ ಮಂದಿ ಯಾವುದೋ ಒಂದು ಹೆಜ್ಜೆ ಇಡಲು ಮುಂದಾಗುತ್ತಾರೆ. ತಾನು ಸಭ್ಯ ಎಂದು ಸಮರ್ಥಿಸಿಕೊಂಡು ಬದುಕುವ ದಾರಿ ಕೆಲವರದು. ಆತ್ಮಹತ್ಯೆ ಅಥವಾ ನಿವೃತ್ತಿ ಇನ್ನು ಕೆಲವರದ್ದು. ಈ ಕತೆಯಲ್ಲಿ ಅಜಿತ್ ಅವರು ನಮ್ಮ ವರ್ತಮಾನದ ವಿದ್ಯಮಾನವನ್ನು ಚಿತ್ರಿಸುವುದಾಚೆ ಅದನ್ನು ಬೆಳೆಸಲು ಹೋಗಿಲ್ಲ. ಮನುಷ್ಯನ ಲೈಂಗಿಕತೆ ಸಹಜವಾದದ್ದು, ಅದಕ್ಕೆ ಚೌಕಟ್ಟು ನಿರ್ಮಿಸುವ ಸಮಾಜದ ಉದ್ದೇಶ ಪ್ರಧಾನವಾಗಿ ಸಮಷ್ಠಿಯ ಸ್ವಾಸ್ಥ್ಯ. ಮದುವೆ ಮತ್ತು ವೇಶ್ಯಾವಾಟಿಕೆಯ ಹಿನ್ನೆಲೆಯಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಸಂನ್ಯಾಸ ಎಂಬುದೇ ಜೀವ ವಿರೋಧಿಯಾದ, ಅನೈಸರ್ಗಿಕವಾದ ಒಂದು ಶಿಸ್ತು. ಸ್ವತಃ ಆಯಾ ವ್ಯಕ್ತಿಗೆ ಇಷ್ಟವಿಲ್ಲದಿದ್ದರೆ ಅದರಿಂದ ಮುಕ್ತವಾಗಿ ಹೊರಬರಲು ಅವಕಾಶವಿರುವ ಒಂದು ಸಮಾಜದತ್ತ ನಾವು ಹೊರಳಬೇಕಿದೆ. ಬಹುಶಃ ಅದು ಅಸಾಧ್ಯವೂ ಅಲ್ಲ ಅಸಂಗತವೂ ಅಲ್ಲ. ಇಂಥ ನಿಲುವನ್ನೇ ದಾಂಪತ್ಯ ನಿಷ್ಠೆಯ ಪ್ರಶ್ನೆಗೂ ಅನ್ವಯಿಸಬಹುದು. ಬಹುಶಃ ಅಂಥ ಕತೆಗಳು ಕನ್ನಡದಲ್ಲಿ ಹೆಚ್ಚು ಬಂದಿವೆ. ಸಂನ್ಯಾಸದ ಬಗ್ಗೆ ಮಾತನಾಡುವಾಗ ನಮಗಿನ್ನೂ ಮಡಿವಂತಿಕೆ ಇದೆ ಅನಿಸುತ್ತದೆ.

 ‘ಪತನ’ ಕತೆ ಪರೋಕ್ಷವಾಗಿ ಧ್ವನಿಸುವುದು ದಾಂಪತ್ಯ ನಿಷ್ಠೆಯನ್ನೇ. ಆದರೆ ಇಲ್ಲಿ ಅದರ ಚೌಕಟ್ಟು ಮೀರುತ್ತಿರುವುದು ಸ್ತ್ರೀಯಾಗಿರದೆ ಪುರುಷನಾಗಿರುವುದು ಒಂದು ವಿಶೇಷ. ಪುರುಷನೊಬ್ಬ ದಾಂಪತ್ಯದ ಚೌಕಟ್ಟಿನಾಚೆ ಏನು ಮಾಡಿದರೂ ಅದನ್ನು ವಿಶೇಷ ಸಂಗತಿ ಎಂಬಂತೆ ಕಾಣುವ ಏಕೈಕ ವ್ಯಕ್ತಿ ಹೆಂಡತಿ ಮಾತ್ರ, ಸಮಾಜ ಆ ಬಗ್ಗೆ ಮೌನಿ. ಆದರೆ ಸ್ತ್ರೀಯ ವಿಚಾರದಲ್ಲಿ ಹಾಗಾಗುವುದಿಲ್ಲ. ಪತಿ ಅಂಥವಳನ್ನು ತಿರಸ್ಕರಿಸುತ್ತಾನೆ ಮತ್ತು ಸಮಾಜ ಅಂಥವಳ ಬಗ್ಗೆ ಹಕ್ಕಿನಿಂದ ಮಾತನಾಡುತ್ತದೆ. ಅಜಿತ್ ಹರೀಶಿಯವರು ಆರಿಸಿಕೊಂಡಿರುವ ವಸ್ತುವಿನಲ್ಲಿ ಹೆಚ್ಚಿನ ಸಂಘರ್ಷವೇನಿಲ್ಲ. ಇಲ್ಲಿ ಪ್ರಕೃತಿಯೇ ಅಂಥ ಪುರುಷನಿಗೆ ತಕ್ಕ ಪಾಠ ಕಲಿಸುತ್ತದೆ. ಪತ್ನಿ ಯಥಾಪ್ರಕಾರ ಕ್ಲಾಸಿಕಲ್ ಕ್ಷಮಯಾ ಧರಿತ್ರಿಯಾಗಿ ಅವನನ್ನು ಕ್ಷಮಿಸುತ್ತಾಳೆ. 

‘ದಹನ’ ಕತೆಯಲ್ಲಿ ಒಂದು ಮಹತ್ವದ ಸಂಘರ್ಷವಿದೆ. ಆದರೆ ಅದು, ಕತೆಯ ಕೇಂದ್ರ ಗಮ್ಯ ಬೇರೆಯೇ ಆಗಿರುವುದರಿಂದ ಎನಿಸುತ್ತದೆ, ಕತೆಯಲ್ಲಿ ಅಂಥ ಪೋಷಣೆಯನ್ನು ಪಡೆಯದೆ ಹೋಗಿದೆ. ಇಲ್ಲಿ ಬರುವ ಶ್ರೀ ಗಂಗಾಧರ ಅವಧೂತರು ವಾಸ್ತವವಾಗಿ ಆ ಊರಿನಲ್ಲಿ ದೋಣಿ ನಡೆಸುತ್ತಿದ್ದ ಅಂತಣ್ಣನ ಮಗ. ಅವನು ಅವಧೂತನಾಗಲು ಕಾರಣವೇ ಅವನಿಗೆ ಬೀಳುವ ಕನಸುಗಳು ಎನ್ನುವ ಕಾರಣಕ್ಕೆ ಈ ಕತೆಯಲ್ಲಿ ಅವನ ಕನಸುಗಳಿಗೊಂದು ವಿಶೇಷ ಮಹತ್ವವಿದೆ. ಇಡೀ ಕತೆ ಒಂದರ್ಥದಲ್ಲಿ ಈ ವಿಲಕ್ಷಣ ವಿದ್ಯಮಾನದ ಮೇಲೆಯೇ ನಿಂತಂತಿದೆ ಎನ್ನುವುದನ್ನು ಗಮನಿಸಬೇಕು. ‘ಮೂಚಿಮ್ಮ’ ಕತೆಯಲ್ಲಿಯೂ ಇಂಥ ಒಂದು ವಿಲಕ್ಷಣ ವಿದ್ಯಮಾನ ನುಸುಳಿಕೊಂಡಿರುವುದನ್ನು ಗಮನಿಸಬಹುದು. ಅಲ್ಲಿ ಮೂಚಿಮ್ಮ ತನ್ನ ವೈದ್ಯವಿದ್ಯೆಯನ್ನು ಒಂಥರಾ ಧಾರೆ ಎರೆದು ಕೊಟ್ಟ ಹಾಗೆ ರವೀಶನಿಗೆ ವಹಿಸುವುದು ಕಂಡು ಬರುತ್ತದೆ. ಆ ವಿದ್ಯೆಯನ್ನು ಅದಾಗಲೇ ರವೀಶ ಅಷ್ಟಿಷ್ಟು ಕಲಿತಿದ್ದರೆ ಅಥವಾ ಮೂಚಿಮ್ಮ ಅದನ್ನು ಒಂದೆರಡು ತಿಂಗಳು ಜೊತೆಗಿರಿಸಿಕೊಂಡು ಕಲಿಸಿದ್ದರೆ ಅದೊಂದು ರೀತಿ. ಮಗಳನ್ನು ಧಾರೆಯೆರೆದು ಕೊಟ್ಟಂತೆ ಜ್ಞಾನವನ್ನು, ವಿದ್ಯೆಯನ್ನು ಕೊಡಲು ಸಾಧ್ಯವೆ? ಡಾ. ಅಜಿತ್ ಹರೀಶಿಯವರು ಇಂಥ ಅಂಶಗಳ ಕುರಿತು ಹೆಚ್ಚಿನ ಗಮನ ಕೊಡುವುದು ಅಗತ್ಯವಿದೆ ಅನಿಸುತ್ತದೆ. ಅದಿರಲಿ. ಈ ಕತೆಯ ಕೇಂದ್ರ ವರ್ತಮಾನದಲ್ಲಿ ನಿರೂಪಕ ವ್ಯವಹಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಿ ನೆಲಕಚ್ಚಿದ್ದಾನೆ, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದಾನೆ  ಮತ್ತು ಗಂಗಾಧರ ಅವಧೂತರಿಗೆ ಬರೀ ಸಾಯುವ ಕನಸುಗಳೇ ಬೀಳತೊಡಗಿ ಅವರ ‘ವ್ಯವಹಾರ’ವೂ ಮುಳುಗುವ ಹಾದಿಯಲ್ಲಿದೆ. ನಾನು ಹೇಳಿದ ಸಂಘರ್ಷ ಇರುವುದೇ ಇಲ್ಲಿ. ಇಬ್ಬರ ಹಣ ಸಂಪಾದನೆಯ ಹಾದಿಯೂ ನೇರವಾದ ಹಾದಿಯಲ್ಲಿ ಸಾಗಿರಲಿಲ್ಲ. ಇಬ್ಬರ ಪತನವೂ ನ್ಯಾಯಯುತವಾಗಿಯೇ ಇದೆ. ಆದರೆ ಕತೆಯಲ್ಲಿ ಈ ಇಬ್ಬರ ಕೊನೆಯ ಹಂತದ ಮುಖಾಮುಖಿಗೆ ಯಾವುದೇ ಒಂದು ಅರ್ಥಪೂರ್ಣವೆನ್ನಬಹುದಾದ ಆಯಾಮ ದೊರಕದೇ, ಕತೆ ಸ್ವಾಮಿಗಳ ದೇಹಾಂತ್ಯದಲ್ಲಿ ಮುಗಿಯುತ್ತದೆ.

ಜನಾರ್ದನ ಮತ್ತು ಬೆಸುಗೆ ಎರಡೂ ಕತೆಗಳು ತೀರ ಸಾಧಾರಣವೆನ್ನಿಸುವ, ಓದುಗ ಸುಲಭವಾಗಿ ಎತ್ತ ಸಾಗಬಹುದೆಂಬುದನ್ನು ಊಹಿಸಬಲ್ಲ ರಚನೆಗಳು. ಒಂದು ಸಂಕಲನದಲ್ಲಿ ಕೇವಲ ಗಾತ್ರದ ಅನಿವಾರ್ಯಕ್ಕೆ ಇಂಥ ಕತೆಗಳನ್ನು ಸೇರಿಸುವ ಆಮಿಷಕ್ಕೆ ಅನೇಕ ಕತೆಗಾರರು ಬಲಿಯಾಗುವುದನ್ನು ಕಂಡಿದ್ದೇನೆ. ಆದರೆ, ಒಂದು ಸರಪಳಿಯ ಸಾಮರ್ಥ್ಯ ಅದರ ಅತ್ಯಂತ ದುರ್ಬಲ ಕೊಂಡಿಯ ಮೇಲೆಯೇ ಅವಲಂಬಿಸಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು.

‘ಪರಿವರ್ತನೆ’ ಕತೆ ಮತ್ತೊಮ್ಮೆ ಮೊದಲ ಕತೆಯ ವಸ್ತುವನ್ನೇ ಚರ್ಚೆಗೆ ಎಳೆತರುವಂತಿದೆ. ದಾಂಪತ್ಯದಲ್ಲಿ ಸೆಕ್ಸ್‌ನ ಸ್ಥಾನಮಾನದ ಕುರಿತು ಗಂಭೀರ ಪ್ರಶ್ನೆಯನ್ನು ಎತ್ತುವ ಮೊದಲ ‘ಆವಿ’ ಎಂಬ ಕತೆ  ಮತ್ತು ಈ ಕತೆಗಳು ಅವಾಸ್ತವಿಕ ಅನಿಸುವಾಗಲೇ ಅಪವಾದಗಳಿಲ್ಲವೆ ಎನ್ನುವ ಪ್ರಶ್ನೆಯನ್ನೂ ಎತ್ತುವಂತೆ ಮಾಡುತ್ತದೆ. ಬಂಜೆತನ, ನಪುಂಸಕತ್ವ, ಸಲಿಂಗಕಾಮ ಮೂರೂ ದಾಂಪತ್ಯಕ್ಕೆ ಸವಾಲೊಡ್ಡಿದ ಕತೆಗಳು. ಅದೇ ರೀತಿ ಅಕಾಲಿಕ ವೈಧವ್ಯ, ವೈವಾಹಿಕ ಚೌಕಟ್ಟಿನಾಚೆಯ ಸಂಬಂಧ, ಪತ್ನಿವಿಯೋಗ ಕೂಡ ದಾಂಪತ್ಯಕ್ಕೆ ಸವಾಲೊಡ್ಡಿದ ಕತೆಗಳೇ. ಇವು  ಓದುಗರಿಗೆ ಹೊಸದಲ್ಲ.  ಆದರೆ ರತಿಸುಖ ಅಸಾಧ್ಯ ಎಂಬುದು ಖಚಿತವಾದ ಮೇಲೂ ಕೇವಲ ಅನುಬಂಧಕ್ಕಾಗಿಯೇ ದಾಂಪತ್ಯವನ್ನು ಸ್ವೀಕರಿಸಲು ಸಿದ್ಧವಾಗುವ ಗಂಡು-ಹೆಣ್ಣುಗಳ ಕತೆ ಅಪರೂಪವೇ ಎನ್ನಬಹುದು. ಈ ಪ್ರಶ್ನೆಯನ್ನು ಸಾರ್ವತ್ರಿಕಗೊಳಿಸಿ ಅದಕ್ಕೆ ಉತ್ತರ ಕಂಡುಕೊಳ್ಳುವುದು ಸಾಧ್ಯವಿಲ್ಲ. ಮೊದಲೇ ಹೇಳಿದಂತೆ ಅದು ತೀರ ವೈಯಕ್ತಿಕವಾದ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ ವಿಚಾರ. ಆದರೆ ಕತೆಯೊಂದರಲ್ಲಿ ಅದನ್ನು ತರುವಾಗ ಅದು ಒಡ್ಡುವ ಸವಾಲುಗಳು ದೊಡ್ಡವು. ಅಂಥ ಆಯ್ಕೆ, ಓದುಗರಿಗೆ ಸಿನಿಮೀಯ ಆದರ್ಶ ಅನಿಸದೇ, ಹೌದು ಹೌದು ಅನಿಸುವಂತೆ ಬರುವುದು ಆ ಸವಾಲು. ‘ಆವಿ’ ಕತೆಯಲ್ಲಿ ಅಷ್ಟು ಕನ್ವಿನ್ಸಿಂಗ್ ಅನಿಸದೇ ಹೋದ ಅದೇ ವಸ್ತು ‘ಪರಿವರ್ತನೆ’ ಕತೆಯಲ್ಲಿ ಚೆನ್ನಾಗಿಯೇ ಮೂಡಿದೆ. ಇದಕ್ಕಿರಬಹುದಾದ ಕಾರಣಗಳ ಬಗ್ಗೆ ಯೋಚಿಸಿದರೆ ಕಥೆಯೊಂದನ್ನು ಹೇಳುವ ಮರ್ಮಗಳ ಬಗ್ಗೆ ನಮ್ಮ ಅರಿವು ಹೆಚ್ಚುತ್ತದೆ.

‘ತಾನೊಂದು ಬಗೆದರೆ’ ಕತೆ ಇದಕ್ಕೆ ಮತ್ತಷ್ಟು ಪುರಾವೆ, ಕಸು ತುಂಬುವಂಥ ಒಂದು ಕತೆ. ಇದನ್ನು ಕಥಾನಕದ ದೃಷ್ಟಿಯಿಂದ ನೋಡಿದರೆ ಬಹುಶಃ ಇದು ಅಷ್ಟು ಯಶಸ್ವಿಯಾದ ಕತೆಯೆಂದು ಅನಿಸದೇ ಇರಬಹುದು. ಆದರೆ ನಿರೂಪಣೆಯ ಹದವನ್ನೇ ಗಮನದಲ್ಲಿಟ್ಟುಕೊಂಡು ನೋಡಿದರೆ, ಇದು ನಿಜಕ್ಕೂ ಈ ಸಂಕಲನದ ಒಂದು ಉತ್ತಮ ಕತೆ. ‘ಮೂಚಿಮ್ಮ’ ಕತೆ ಸಾಧಿಸುವ ಕಥಾನಕ, ತಂತ್ರ, ಧ್ವನಿ ಮತ್ತು ಕೇಂದ್ರ ಎಲ್ಲ ಬಗೆಯ ಯಶಸ್ಸು ಈ ಕತೆಗೆ ಪ್ರಾಪ್ತಿಯಾದಂತಿಲ್ಲ. ಆದರೆ ನಿರೂಪಣೆಯ ವಿಚಾರವಾಗಿ ನನಗೆ ವೈಯಕ್ತಿಕವಾಗಿ ಬೆಸ್ಟ್ ಅನಿಸುವ, ಡಾ.ಅಜಿತ್ ಹರೀಶಿಯವರು ಸಾಧಿಸಿರುವ, ಅವರಿಗೆ ಸಾಧ್ಯವಿರುವ ಬಟ್ ಅವರು ಬಹುಶಃ ತಮ್ಮದಲ್ಲದ ಹಾದಿ ಎಂದುಕೊಂಡಿರುವ ಒಂದು ವಿಧಾನದ ಬಗ್ಗೆ ಹೇಳುವುದಷ್ಟೆ ನನ್ನ ಉದ್ದೇಶ. ಈ ಇಡೀ ಕತೆಯ ನಿರೂಪಣೆಯಲ್ಲಿ ಎಲ್ಲಿಯೂ  ತನಗೆ ಹೇಗೆ ಬೇಕೋ ಹಾಗೆ ಅದನ್ನು ನಿಯಂತ್ರಿಸಿದ ಹಾಗಿಲ್ಲ. ತನ್ನ ಕಥನವನ್ನು ಅದು ಹೇಗಿದೆಯೋ ಹಾಗೆ ಹೇಳುವ ಕೆಲಸವನ್ನಷ್ಟೇ ಇಲ್ಲಿಯ ನಿರೂಪಕ/ಕತೆಗಾರ ನಿರ್ವಹಿಸಿದಂತಿದೆ. ಹಾಗಾಗಿ ಕಥಾನಕದ ವಿಸ್ತಾರಕ್ಕೆ ಹೋಲಿಸಿದಲ್ಲಿ ಅದಕ್ಕೊಂದು ಆಕೃತಿ, ಕೇಂದ್ರ ಒದಗದೇ ಹೋಗಿರಬಹುದು. ಇದು ಗಂಗೆ ಮತ್ತು ಶಂಕರನ ನಡುವಿನ ಸಂಬಂಧದ ಕತೆಯೇ, ಅಥವಾ ಶಂಕರ ಮತ್ತು ವೆಂಕಟನ ನಡುವಿನ ಸಂಬಂಧದ ಕತೆಯೋ ಅಥವಾ ಎರಡೂ ಹೌದೆನ್ನುವ ಕತೆಯೋ ಎಂಬ ಪ್ರಶ್ನೆಯಿದೆ. ಹಾಗಿದ್ದೂ ಒಂದರ ಜೊತೆ ಇನ್ನೊಂದರ ತಥಾಕಥಿತ ಸಂಬಂಧವೇನಾದರೂ ಇದೆಯೇ ಎಂಬ ಪ್ರಶ್ನೆಯೂ ಇದೆ. ಬಯಸಿದ್ದರೆ ಅಂಥ ಒಂದನ್ನು ಈ ಕತೆಗೆ ದಕ್ಕಿಸುವುದೇನೂ ಕಷ್ಟವಿರಲಿಲ್ಲ. ಸೂಕ್ಷ್ಮವಾಗಿ ಅಂಥ ಕೆಲವು ಹೊಳಹುಗಳನ್ನು ಒಂದು ಯಥಾವತ್ ಚಿತ್ರದಲ್ಲಿಯೂ ಕಾಣಲು ಸಾಧ್ಯವಿದೆ ಕೂಡ ಅಲ್ಲವೆ? ಆದರೆ ಅದು ಮುಖ್ಯ ಪ್ರಶ್ನೆಯಲ್ಲ. 

ಕತೆಯನ್ನು ಓದಿ ಬಹಳ ಕಾಲದ ಮೇಲೂ ಮನಸ್ಸಿನಲ್ಲಿ ಕತೆಗಾರನ ಹೆಸರು, ಇಡೀ ಕತೆ, ಎಲ್ಲಿ ಓದಿದೆ, ಯಾವಾಗ ಓದಿದೆ ಎನ್ನುವುದೆಲ್ಲ ನಮ್ಮ ನೆನಪಿನಲ್ಲಿ ಉಳಿಯದೇ ಹೋಗಬಹುದು. ಆದರೆ, ಬಾಂದುಕಲ್ಲಿನಡಿ ಇರಿಸುವಾಗ, ತೆಗೆದುಕೊಡುವಾಗ ಒಂದೊಂದು ನಾಣ್ಯ ಪಡೆದು, ಹೆಚ್ಚಿನದ್ದಕ್ಕೆ ಆಶೆ ಪಡದ ಗೋಯಿಂದಣ್ಣನನ್ನು ಮನಸ್ಸು ಮರೆಯುವುದಿಲ್ಲ. ಹಾಗೆಯೇ ‘ತಾನೊಂದು ಬಗೆದರೆ’ ಕತೆ ಕಟ್ಟಿಕೊಡುವ ಒಂದು ಪರಿಸರವನ್ನೂ... 

ನಿಜವಾದ ಯಶಸ್ಸು ಎಂದು ನಾನು ತಿಳಿಯುವುದು ಅಷ್ಟನ್ನು ಮಾತ್ರ.

No comments: