Sunday, March 21, 2021

ಕಥನ ತಂತ್ರದ ಹೊಸ ನುಡಿಗಟ್ಟುಗಳು


ಜೀವನಾನುಭವದಿಂದ ಹುಟ್ಟಿದ ಪ್ರಬುದ್ಧತೆ ಮತ್ತು ಒಂದು ಕಲಾ ಮಾಧ್ಯಮವಾಗಿ ಕಥನದ ಮರ್ಮವನ್ನು ಅರಿಯುವ ಪ್ರಾಮಾಣಿಕ ಕುತೂಹಲ ಎರಡನ್ನೂ ಇಟ್ಟುಕೊಂಡು ಬರೆಯಬಲ್ಲ ಲೇಖಕಿಯರು ಹೊಸ ತಲೆಮಾರಿನಲ್ಲಿ ಕಂಡುಬರುತ್ತಿಲ್ಲ ಅನಿಸುವಾಗಲೇ ಛಾಯಾ ಭಟ್ ಅವರ ‘ಬಯಲರಸಿ ಹೊರಟವಳು’ ಸಂಕಲನ ಈ ಪೂರ್ವಾಗ್ರಹವನ್ನು ಮೀರಿ ಹುಟ್ಟಿಸುವ ಮೆಚ್ಚುಗೆ ಮತ್ತು ಅಭಿಮಾನ ಉಲ್ಲೇಖನೀಯ. ಮೊದಲ ಸಂಕಲನ ಎನ್ನುವ ರಿಯಾಯಿತಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ನಿಲ್ಲುವ  ಈ ಕತೆಗಳು ಬದಲಾವಣೆಯ ಹೊಸ ಹೊಳಹುಗಳನ್ನು ಮೈದುಂಬಿಕೊಂಡು ಬಂದಿವೆ. 

ಕಥನದ ಕಲ್ಪಿತವಾಸ್ತವವನ್ನು ಸಾಧ್ಯವಾದಷ್ಟೂ ಹೆಚ್ಚು ವಾಸ್ತವಿಕ ನೆಲೆಗೆ ಹಚ್ಚುವ ಒಂದು ಪ್ರಯತ್ನ ಬಹುಶಃ ಈ ಹೊತ್ತಿನ ಎಲ್ಲ ಕತೆಗಾರರದ್ದು. ಅದಕ್ಕಾಗಿ ಆತ ರಮ್ಯ, ಸುಂದರ, ಹಿತಾನುಭವದ ಪ್ರತಿಮೆಗಳನ್ನು, ಭಾಷೆಯನ್ನು ಬೇಕಂತಲೇ ಬಿಟ್ಟುಕೊಟ್ಟು ಹೆಚ್ಚು ಹೆಚ್ಚಾಗಿ "ದೈನಂದಿನದ ಕ್ಷುದ್ರತೆ"ಯನ್ನು ತನ್ನ ಕತೆಯ ವಿವರಗಳಲ್ಲಿ ತರುತ್ತಿರುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಕವಿತೆಗಳತ್ತ ಒಲಿಯುವ ಮತ್ತು ಕಥೆಗಳನ್ನೂ ಕವಿತೆಗಳಂತೆ ಕಟ್ಟುವ ಲೇಖಕಿಯರು ಅದರಲ್ಲೂ ವಿಶೇಷತಃ ಉತ್ತರಕನ್ನಡದ ಬರಹಗಾರರು ಇದುವರೆಗೂ ಈ ಹಾದಿ ತುಳಿದಿದ್ದು ಕಡಿಮೆ. ಛಾಯಾ ಭಟ್ ಮೊದಲ ಬಾರಿಗೆ ತಮ್ಮ ಕಥೆಗಳನ್ನು ಪ್ರಜ್ಞಾಪೂರ್ವಕವಾಗಿ ಅಂಥ "ದೈನಂದಿನದ ಕ್ಷುದ್ರತೆ"ಯ ನೆಲೆಯಲ್ಲೇ ಕಟ್ಟಿರುವುದು ವಿಶೇಷವಾಗಿ ಗಮನ ಸೆಳೆಯುತ್ತದೆ.

ಈ ‘ದೈನಂದಿನದ ಕ್ಷುದ್ರತೆ’ ಮೊದಲಿಗೆ ಚರ್ಚಿಸಲ್ಪಟ್ಟಿದ್ದು ಡಾ||ಯು ಆರ್ ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯಲ್ಲಿ. ಅಣ್ಣಾಜಿಯೊಂದಿಗೆ ಕೃಷ್ಣಪ್ಪ ನಡೆಸುವ ಚರ್ಚೆಯಲ್ಲಿ ಬರುತ್ತದೆ ಅದು. ಇಲ್ಲಿನ ಕತೆಗಳಲ್ಲಿ ಕಟ್ಟಿಕೊಡುವ ವಿವರಗಳಲ್ಲಿ ಛಾಯಾ ಭಟ್ ಅವರು ಬೇಕಂತಲೇ ಮುಟ್ಟಿನ ಬಟ್ಟೆ, ವಾಂತಿಯ ದುರ್ಗಂಧ, ಹೇಲು-ಉಚ್ಚೆಯ ವಾಸನೆ, ಗಂಡಿನ ಲೈಂಗಿಕ ವಾಂಛೆಗಳು, ಬಾಳಂತನದ ವಾಸನೆ, ತೇಗಿನ ದುರ್ಗಂಧ ಎಲ್ಲವನ್ನೂ ಸ್ವಲ್ಪ ಢಾಳಾಗಿ ತರುತ್ತಾರೆ. ಎಲ್ಲಿಯವರೆಗೆಂದರೆ, ಸುಧಾಕರನನ್ನು ಮದುವೆಯಾಗಲು ಹೊರಟಿರುವ ಶಾರಿಗೆ ಒಂದು ತೆಳ್ಳನೆಯ ಹೊಟ್ಟೆಯನ್ನು ಕೂಡ ಕೊಡುವುದಿಲ್ಲ ಅವರು. ಅವಳ ‘ಏಳು ತಿಂಗಳ ಬಸುರಿ ಹೊಟ್ಟೆ’ಯನ್ನು ಆಡಿಕೊಂಡೇ ಅವಳನ್ನು ಹೊಸಬದುಕಿಗೆ ಸಜ್ಜಾಗಿಸುವ ಸವಾಲು ಅವರೇಕೆ ಕೈಗೆತ್ತಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನಮ್ಮ ಸ್ತ್ರೀವಾದಿಗಳು ಗಮನವಿಟ್ಟು ನೋಡುವ ಅಗತ್ಯವಿದೆ. ಹಾಗೆಯೇ ಊರವರ ಕಣ್ಣಲ್ಲಿ ‘ಅಮ್ಮ’ ಆಗಿಬಿಟ್ಟಿರುವ ಪಾತಿಚಿಕ್ಕಿಯ ಬಾಯಲ್ಲಿ ಬರುವ ದುರ್ನಾತದ ತೇಗನ್ನು ಓದುತ್ತ ಓದುಗನೂ ಮೂಗು ಮುಚ್ಚಿಕೊಳ್ಳುವಂತೆ ಮಾಡುವುದನ್ನೂ ಗಮನಿಸಬೇಕು. ಕಾರಂತರು ಒಂದೆಡೆ  "ಒಂದು ಹೆಣ್ಣನ್ನು ಮದುವೆಯಾಗುವುದೆಂದರೆ ಅವಳ ವಾಸನೆಯನ್ನು ಕೂಡಾ ಒಪ್ಪಿಕೊಳ್ಳುವುದೆಂದು ಅರ್ಥ" ಎಂದಿದ್ದರು. ವಾಸನೆ ಎಂದರೆ ಅದರ ಎರಡೂ ಬಗೆ ಸೇರಿದಂತೆ ಹಲವು ಅರ್ಥಗಳಿವೆ. ಮಾತ್ರವಲ್ಲ, ವಾಸನೆ ಎಂಬುದು ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲಕ್ಕಿಂತ ಮುಖ್ಯವಾದದ್ದು, ಈ ವಾಸನೆಯೇ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಲು, ಒಪ್ಪಿಕೊಳ್ಳಲು ಬೇಕಾದ ಕಣ್ಣು ಕೊಡುವಂಥದ್ದು ಎಂಬ ಮಾತು. 

ದೈನಂದಿನ ಕ್ಷುದ್ರತೆಯನ್ನು ಎತ್ತಿ ಆಡುವುದು ಓದುಗನಿಗೆ ಅಷ್ಟೇನೂ ಆಪ್ಯಾಯಮಾನ ಅನುಭವವನ್ನು ಕೊಡುವುದಿಲ್ಲ. ದೈನಂದಿನ ಕ್ಷುದ್ರತೆಯನ್ನು ಕುರಿತು ವ್ಯಂಗ್ಯವಾಡುವ, ಟೀಕಿಸುವ, ಅದನ್ನು ತಾನು ಗುರುತಿಸುತ್ತಿದ್ದೇನೆ ಎಂಬ ನೆಲೆಯ ಧ್ವನಿಯಲ್ಲಿ ಮಾತನಾಡತೊಗಿದಂತೆಲ್ಲ ಕತೆಗಾರ ಮತ್ತು ಓದುಗನ ಸಂಬಂಧದಲ್ಲಿ ಒಂದು ವಿಚಿತ್ರ ಅಂತರ ಕೂಡ ಬೆಳೆಯತೊಡಗುತ್ತದೆ. ತುಂಬ ಆಪ್ತವಾದ ನಿರೂಪಣೆ, ತಾನು ಓದುಗನ ಜೊತೆಜೊತೆಗೇ ನಿಂತು ಈ ಕತೆಯನ್ನು ಕಾಣುತ್ತಿದ್ದೇನೆಂಬ ಸಖನ ಧ್ವನಿ ಕತೆಗಾರನಿಗೆ ತನ್ನ ಓದುಗನನ್ನು ಒಲಿಸಿಕೊಳ್ಳಲು ಸಹಾಯಕವಾಗಿ ಒದಗಿ ಬರುತ್ತದೆ. ಇಲ್ಲ, ನಾನು ಓದುಗನಿಗಿಂತ (ಪ್ರತ್ಯಕ್ಷವಾಗಿ ಇದನ್ನು ಕತೆಗಾರ ಧ್ವನಿಸುವುದು "ತನ್ನ ಪಾತ್ರಗಳಿಗಿಂತ" ಎಂಬ ನೆಲೆಯಲ್ಲಿ) ಸ್ವಲ್ಪ ಮೇಲ್ಮಟ್ಟದವನು ಎಂಬ ಧ್ವನಿ ಕತೆಯ ನಿರೂಪಣೆಯಲ್ಲಿ ಕಾಣಿಸಿಕೊಂಡರೆ, ಓದುಗ ಬಹುಬೇಗ ಆ ಕತೆಗಾರನನ್ನು ವಿಮರ್ಶಕ ದೃಷ್ಟಿಯಿಂದ, ಕೊಂಚ ಇರಿಸುಮುರಿಸಿನೊಂದಿಗೆ ಕಾಣುವುದು ಸಹಜ ಮತ್ತು ನಿರೀಕ್ಷಿತ. 

ಈ ರೀತಿ ಇಲ್ಲಿ ಕತೆಗಾರ, ಕತೆಯನ್ನು ಕತೆಯೊಳಗಿಂದ ನಿರೂಪಿಸುತ್ತಿರುವ ನಿರೂಪಕ ಅಥವಾ ಅಂಥ ಒಂದು ಪ್ರಜ್ಞೆ, ಕತೆಯ ಪಾತ್ರಗಳು ಎಂಬ ತ್ರಿಕೋನದ ಜೊತೆ ಓದುಗನ ಸಂಬಂಧವೇನಿದೆ ಅದು ಒಪ್ಪಿಕೊಂಡು ಓದುವ ಪ್ರೀತಿಯ ನೆಲೆಯಿಂದ ಕೊಂಚ ಜಾರಿ, ಈ ಯಾವತ್ತೂ ವಿವರಗಳ ಔಚಿತ್ಯ ಮತ್ತು ಉದ್ದೇಶವನ್ನು ಪ್ರಶ್ನಿಸುತ್ತ ಓದುವ ನಿಷ್ಠುರ ಓದುಗನ ನೆಲೆಗೆ ವರ್ಗಾವಣೆಯಾಗುತ್ತದೆ. ಇಂಥ ಓದುಗನ ಮೆಚ್ಚುಗೆ ಗಿಟ್ಟಿಸಿಕೊಳ್ಳುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಈ ಅಗ್ನಿಪರೀಕ್ಷೆಯಲ್ಲಿ ಪಾಸಾಗುವ ಲೇಖಕರು ಕಡಿಮೆ. ಛಾಯಾ ಭಟ್ ಇಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ ಎನ್ನುವುದೇ ಈ ಕತೆಗಳನ್ನು ಸೂಕ್ಷ್ಮವಾಗಿ ಓದಲು ನಮಗಿರುವ ಸವಾಲು ಮತ್ತು ಮೆಚ್ಚುಗೆ. 

ಒಂದೊಂದಾಗಿ ಇಲ್ಲಿನ ಕತೆಗಳ ವಿಚಾರಕ್ಕೆ ಬಂದರೆ, ಇಲ್ಲಿನ ಎಲ್ಲಾ ಕತೆಗಳೂ ಸಾಕಷ್ಟು ಸಂಕೀರ್ಣ ರಚನೆಗಳೇ. ಅವುಗಳ ಪಾತ್ರ ಪ್ರಪಂಚ ದೊಡ್ಡದು ಮತ್ತು ಅವು ತಮ್ಮ ತೆಕ್ಕೆಯೊಳಗೆ ಸೆಳೆದುಕೊಳ್ಳುವ ಜಗತ್ತು ಕೂಡಾ ಹಿರಿದು. ಛಾಯಾ ಭಟ್ ಅವರಿಗೆ ಕಥನ ಮುಖ್ಯ ಗಮ್ಯ ಅಲ್ಲದೇ ಇರುವುದು ಇದಕ್ಕೆ ಒಂದು ಕಾರಣವಾದರೆ, ಅವರು ಕಟ್ಟಿಕೊಡುವ ಬದುಕಿನ ವಾಸ್ತವದ ವಿವರಗಳು, ನಡೆನುಡಿಗಳು ಮತ್ತು ಬದುಕಿನ ಕ್ಷುದ್ರತೆ ಎಂದು ಸ್ಥೂಲವಾಗಿ ಗುರುತಿಸಬಹುದಾದ ಒಂದು ಅಂಶ ಅವರಿಗೆ ಕಥನಕ್ಕಿಂತ ಹೆಚ್ಚು ಮುಖ್ಯ ಅನಿಸಿರುವುದು ಇನ್ನೊಂದು ಕಾರಣ. ಇವೆರಡೂ ಒಂದೇ ಅಲ್ಲ. ಮನುಷ್ಯನನ್ನು ಒಂದು ಕತೆಯ ಪಾತ್ರವಾಗಿಯಷ್ಟೇ ಕಾಣದ, ಅವನನ್ನು ಮನುಷ್ಯನನ್ನಾಗಿಯೇ ಕತೆಯ ಚೌಕಟ್ಟಿಗೆ ತರುವ ಬಗೆಯಿದು. ಹಾಗಾಗಿ, ಛಾಯಾ ಭಟ್ ಅವರ ಕತೆಗಳಲ್ಲಿ ನಮಗೆ ವ್ಯಾಖ್ಯಾನಿಸಿ ಹೇಳಬಲ್ಲಂಥ ಕತೆ ಸಿಗುವುದು ಸ್ವಲ್ಪ ಕಷ್ಟ. ಈ ಕತೆಗಳ ಮಟ್ಟಿಗೆ ಹಾಗೆ ಮಾಡಿದಾಗಲೆಲ್ಲ ನಾವು ಕತೆಗಾರರಿಗೆ ಅನ್ಯಾಯವೆಸಗುತ್ತೇವೆ. ಛಾಯಾ ಅವರ ಗಮನ ಕಥನದ ಗಮ್ಯ, ಕೇಂದ್ರ, ಉದ್ದೇಶಗಳಿಗಿಂತ ಹೆಚ್ಚಾಗಿ ತಮ್ಮ ಕತೆಯ ಪರಿಸರ, ಒಟ್ಟು ಕಥನದ ಆವರಣ (ಆಕೃತಿ ಅಲ್ಲ). ಅಲ್ಲಿನ ಮನುಷ್ಯರ ನಡಾವಳಿ, ಬದುಕಿನ ದೈನಂದಿನದ ವಿವರಗಳು ಹೆಚ್ಚು ಜೀವಂತಿಕೆಯಿಂದ ಬರಬೇಕೆಂಬುದರ ಕಡೆಗೇ ಇರುವುದು ಸ್ವಷ್ಟ. ಇಲ್ಲಿ ಅವರಿಗೆ ಇದನ್ನು ಕೇವಲ ತಂತ್ರವಾಗಿ ಬಳಸಿಕೊಳ್ಳುವುದಾಗಲೀ, ಓದುಗನಿಗೆ ಇಷ್ಟವಾಗಬಹುದಾದ ನಾಸ್ಟಾಲ್ಜಿಕ್ ನೆಲೆಯೊಂದನ್ನು ಬಳಸಿ ಅವನನ್ನು ಆಕರ್ಷಿಸುವುದಾಗಲೀ ಮುಖ್ಯವಾಗಿ ಕಂಡಿಲ್ಲ. ಹಾಗಾಗಿ ಅವರು ಸಾಮಾನ್ಯವಾಗಿ  ಕತೆಗಾರರಲ್ಲಿ ಕಂಡು ಬರುವ ರಮ್ಯಚಿತ್ರಗಳಿಗೆ ಹೊರತಾದ ಒಂದು ‘ದೈನಂದಿನದ ಕ್ಷುದ್ರತೆ’ ಎಂದು ನಾನು ಉಲ್ಲೇಖಿಸಿದ ನೆಲೆಯಿಂದ ಅಂಥ ತಂತ್ರ ಮತ್ತು ನಾಸ್ಟಾಲ್ಜಿಕ್ ನೆಲೆಯನ್ನು ಕೆಡಹುತ್ತಾರೆ. 

ಛಾಯಾ ಅವರು ತಮ್ಮ ಕತೆಗಳನ್ನು ಮುಗಿಸುವ ಬಗೆ ಕೂಡಾ ವಿಶೇಷ ಗಮನಕ್ಕೆ ಅರ್ಹವಾಗಿರುವ, ಅವರ ಕಥನ ಕಲೆಯ ಪ್ರಮುಖ ಎನ್ನಬಹುದಾದ ಲಕ್ಷಣವನ್ನು ತೋರಿಸುವ ಅಂಶ. ಅವರು ಕಥನ ಕುತೂಹಲಿಯಲ್ಲ. ತಮ್ಮ ಓದುಗರನ್ನೂ ಕಥನ ಕುತೂಹಲಿಗಳಾಗದೇ ಅದರಾಚೆಯದ್ದಕ್ಕೆ ಕೈಚಾಚುವಂತೆ ಪ್ರೇರೇಪಿಸುವ ಕತೆಗಾರರು. ಅವರು ಕತೆಯನ್ನು ಮುಗಿಸುವ ಪರಿಯಲ್ಲಿ ಇನ್ನು ಮುಂದಿನ ಕತೆಯನ್ನು ನೀವೇ ಊಹಿಸಿಕೊಳ್ಳಿ ಎನ್ನುವ ಬಗೆಯ ಕಥನ ತಂತ್ರ ಇದೆ ಎಂದು ತಿಳಿಯುವುದು ನಮ್ಮ ಆತುರದ ತೀರ್ಮಾನವಷ್ಟೇ ಆಗುತ್ತದೆ. ಇವು ಆ ಬಗೆಯ ಕತೆಗಳಲ್ಲ. ಅಂಥ ಕತೆಗಳನ್ನು ಸಾಕಷ್ಟು ಮಂದಿ ಬರೆದಿದ್ದಾರೆ ಮಾತ್ರವಲ್ಲ, ಹೆಚ್ಚೂ ಕಡಿಮೆ ಸಣ್ಣಕತೆಯ ಒಂದು ಸ್ಥಾಪಿತ ಲಕ್ಷಣವೇ ಅದು ಎನ್ನುವ ಮಟ್ಟಿಗೆ ಅದು ಸಾಮಾನ್ಯವಾಗಿಬಿಟ್ಟಿದೆ. ಛಾಯಾ ಅವರ ಕತೆಗಳ ಅಂತ್ಯದಲ್ಲಿ ಇರುವುದು ಕಥನ ಕುತೂಹಲದಿಂದ ಪೂರ್ತಿಯಾಗಿ ಕಳಚಿಕೊಂಡ ಒಂದು ನಿಲುವು. ಅಂದರೆ, ಛಾಯಾ ಅವರು ಇಲ್ಲಿ ಓದುಗನನ್ನು ಸಮಗ್ರವಾಗಿ ಬದುಕನ್ನು ಕಾಣಲು, ಕತೆಯ ಆದಿ-ಅಂತ್ಯದ ಚೌಕಟ್ಟಿನಿಂದ ಹೊರಗೆ ಬಂದು ದೈನಂದಿನಕ್ಕೆ ಮುಖಾಮುಖಿಯಾಗಲು ಆಹ್ವಾನಿಸುತ್ತಿದ್ದಾರೆ. ತನ್ಮೂಲಕ ಅವರು ತಮ್ಮ ಕತೆಯ ಗ್ರಹಿಕೆಗಳನ್ನು ಓದುಗ ತನ್ನ ಅನುಭವಕ್ಕೆ ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾರೆಯೇ ಹೊರತು ಬರಿಯ ಮನರಂಜನೆಗಾಗಿ ತಾವು ಕತೆ ಹೇಳುತ್ತಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸುತ್ತಿದ್ದಾರೆ. ಇದು ಕೂಡ ಛಾಯಾ ಭಟ್ ಅವರ ಕತೆಗಳ ಬಗ್ಗೆ ಮೆಚ್ಚುಗೆ, ಗೌರವ ಮೂಡಲು ಕಾರಣ.

ಇದನ್ನೆಲ್ಲ ತಮ್ಮ ಕಥಾಜಗತ್ತಿನಲ್ಲಿ ಒಳಗುಗೊಳ್ಳುವುದು ಸುಲಭವಲ್ಲ. ಹಾಗಾಗಿಯೇ ಈ ಕತೆಗಳಲ್ಲಿ ಜಗತ್ತು ವಿಸ್ತರಿಸುತ್ತ ಹೋಗುತ್ತದೆ, ಹಾರಿಜಾಂಟಲಿ ಮತ್ತು ವರ್ಟಿಕಲಿ. ಇದರಿಂದಾಗಿ ಏನಾಗುತ್ತದೆ ಎಂದರೆ ಅವರ ಕತೆಯ ವಸ್ತು, ಅದರ ಗಮ್ಯ ಒಂದು ಸಾಲಿನ ವ್ಯಾಖ್ಯಾನಕ್ಕೆ ಸಿಗದ ಜಾಡು ಅನುಸರಿಸುತ್ತದೆ. ಪ್ರತಿಯೊಂದು ಕತೆಯ ಪ್ರತಿಯೊಂದು ಪಾತ್ರಕ್ಕೂ ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ವಿವರಿಸಲು, ಓದುಗನೆದುರು ಹರವಿಕೊಳ್ಳಲು ತನ್ನದೇ ಆದ ಕತೆಗಳಿವೆ ಎನ್ನುವುದೇ ಇಲ್ಲಿನ ಮಹತ್ವದ ಅಂಶ. ಸಣ್ಣಕತೆಯ ಸಿದ್ಧಮಾದರಿಗೆ ಇದು ವಿರುದ್ಧವಾಗಿದೆ, ನಿಜ. ಆದರೆ ಪ್ರಸ್ತುತ ಕನ್ನಡದ ಸಣ್ಣಕತೆಗಳು ಈ ಸಿದ್ಧಮಾದರಿಯ ರಾಚನಿಕ ಮಿತಿಗಳನ್ನು ಒಡೆದು ಕಟ್ಟುವ ಪ್ರಕ್ರಿಯೆಯಲ್ಲಿರುವುದನ್ನು ಈಗಾಗಲೇ ನಾವು ಗಮನಿಸುತ್ತಿದ್ದೇವೆ.

ಅವರ ಈ ಕತೆಗಳಲ್ಲಿ ಕೌಟುಂಬಿಕ-ವೈಯಕ್ತಿಕ ನೆಲೆಯ ವಸ್ತುಗಳಷ್ಟೇ ಕಾಣಸಿಗುತ್ತವೆ. ವಿವರಗಳಲ್ಲಿ ಸಮಾಜವನ್ನು, ಇಡೀ ಊರನ್ನು ಒಳಗುಗೊಳ್ಳುವ ಉದ್ದೇಶ ಕಂಡು ಬಂದರೂ, ಇಡೀ ಊರಿನ, ಸಮಾಜದ, ಸಮುದಾಯದ ಗುಣಲಕ್ಷಣವನ್ನು ಚಿತ್ರಿಸಲು ಅವರ ಲೇಖನಿ ಸಶಕ್ತವಾಗಿದೆ ಎನ್ನುವ ಹೊಳಹುಗಳು ಸಾಕಷ್ಟಿದ್ದರೂ ಅವರ ಕತೆಗಳ ವಸ್ತು, ಈ ಸಂಕಲನದ ಮಟ್ಟಿಗೆ ಎಲ್ಲೂ ಕೌಟುಂಬಿಕ ಚೌಕಟ್ಟನ್ನು ಮೀರಿ ಚಾಚಿಕೊಳ್ಳುವುದಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಛಾಯಾ ಭಟ್ ಮೀರುತ್ತಾರೆ ಎಂದು ನಿರೀಕ್ಷಿಸಬಹುದು.

‘ನಡೆಯುವಾಗ ಅಲುಗಾಡುವ ಕಂದೀಲಿನ ಬೆಳಕಿನಿಂದಾಗಿ ತೊನೆದಾಡುವ ನಮ್ಮ ನೆರಳಿನಂತೆ, ಕಣ್ಣಾಮುಚ್ಚಾಲೆಯಾಡಿಸಿ ಕಡೆಗೆ ಅಕ್ಷರ ರೂಪಕ್ಕಿಳಿದ ಕತೆಗಳಿವು’ ಎಂದು ಕರೆದಿದ್ದಾರೆ ಛಾಯಾ, ತಮ್ಮ ಕಥೆಗಳನ್ನು. ಇಲ್ಲಿ ಕಂದೀಲಿನ ಬೆಳಕು ನಿಜ, ಅದು ಕೊಟ್ಟ ತೊನೆದಾಡುವ ನೆರಳುಗಳು ಮಾತ್ರ ಭ್ರಮೆ. ಆದರೆ ಭ್ರಮೆಯಿದ್ದಾಗಲಷ್ಟೇ ನಿಜಕ್ಕೂ ಒಂದು ಬೆಲೆ, ಗುರುತು, ಅಸ್ತಿತ್ವ ಎನ್ನುವುದು ಸತ್ಯ. ಛಾಯಾ ಭಟ್ ಅವರ ಕತೆಗಳು ಈ ನಿಟ್ಟಿನಲ್ಲಿ ಏನನ್ನು ಹೇಳುತ್ತಿವೆ ಎನ್ನುವುದನ್ನು ವಿಶ್ಲೇಷಿಸಿಯೇ ತಿಳಿದುಕೊಳ್ಳಬೇಕಾದ ಸವಾಲನ್ನಂತೂ ಸಮರ್ಥವಾಗಿ ಒಡ್ಡುತ್ತವೆ.

  
(ಈ ಲೇಖನದ ಪರಿಷ್ಕೃತ ರೂಪ ಮಾರ್ಚ್(2021) ತಿಂಗಳ ಮಯೂರದಲ್ಲಿ ಪ್ರಕಟವಾಗಿದೆ)


No comments: