Friday, May 28, 2021

ಗೆದ್ದಲು ಹತ್ತಿದ ಮನುಷ್ಯರ ಕತೆ - ದ ಪ್ಲೇಗ್


1947ರಷ್ಟು ಹಿಂದೆ ಫ್ರೆಂಚ್ ಭಾಷೆಯಲ್ಲಿ ಬಂದ ಅಲ್ಬರ್ಟ್ ಕಮೂನ ಬಹುಶ್ರುತ ಕಾದಂಬರಿ ಪ್ಲೇಗ್ ಇದೀಗ ಕನ್ನಡದ ಪ್ರಮುಖ ವಿಮರ್ಶಕ ಎಚ್ ಎಸ್ ರಾಘವೇಂದ್ರ ರಾವ್ ಅವರ ಅನುವಾದದಲ್ಲಿ ಕನ್ನಡಕ್ಕೆ ಬಂದಿರುವುದು ಹಲವು ಕಾರಣಗಳಿಗೆ ಒಂದು ವಿಶೇಷ ವಿದ್ಯಮಾನವಾಗಿದೆ. ಕನ್ನಡದಲ್ಲಿ ನವ್ಯ ಪರಂಪರೆಗೆ ಬಹುಮುಖ್ಯ ಪ್ರೇರಣೆಯನ್ನೊದಗಿಸಿದವರಲ್ಲಿ ಅಲ್ಬರ್ಟ್ ಕಮೂ ಒಬ್ಬ. ಆದರೆ, ಆ ಕಾಲಘಟ್ಟದಲ್ಲಿ ಈತನ ‘ಪ್ಲೇಗ್’, ‘ಔಟ್‌ಸೈಡರ್’ ‘ದ ಫಾಲ್’ ಮತ್ತು ‘ದ ಸ್ಟ್ರೇಂಜರ್’ ಕೃತಿಗಳ ಉಲ್ಲೇಖವಾದಷ್ಟು ಅವೇ ಕೃತಿಗಳ ಅನುವಾದದತ್ತ ಗಮನಹರಿಯಲಿಲ್ಲ ಎನ್ನುವುದು ಒಂದು ವಿಪರ್ಯಾಸ. ಪ್ರೊ.ಡಿ ಎ ಶಂಕರ್ ಅವರ ಅನುವಾದ (‘ಅನ್ಯ’)ದಲ್ಲಿ 1970ರಲ್ಲಿ ಬಂದ ‘ದ ಔಟ್‌ಸೈಡರ್’ ಹೊರತು ಪಡಿಸಿದರೆ ಕಮೂನ ಕತೆ, ಕಾದಂಬರಿಗಳು ಕನ್ನಡದಲ್ಲಿ ಲಭ್ಯವಿರಲಿಲ್ಲ ಮಾತ್ರವಲ್ಲ ನವ್ಯ ಕಾಲಘಟ್ಟದ ಪ್ರಮುಖ ಬರಹಗಾರರಾಗಲಿ, ವಿಮರ್ಶಕರಾಗಲಿ ಕಮೂ ಬಗ್ಗೆ ಉಲ್ಲೇಖಿಸಿದಷ್ಟು ಅವನ ಕೃತಿಗಳ ಚರ್ಚೆ ನಡೆಸಲಿಲ್ಲ. ಹಾಗಾಗಿ, ನವ್ಯ ಕಾಲಘಟ್ಟದಲ್ಲಿಯೇ ಅಲ್ಬರ್ಟ್ ಕಮೂ ಕನ್ನಡಕ್ಕೆ ಬಂದಿದ್ದರೆ ಈ ಕೃತಿಯ ಬಗ್ಗೆ ಎಷ್ಟು ಬಗೆಯ ಚರ್ಚೆ ಮತ್ತು ಒಳನೋಟಗಳಿಂದ ಕೂಡಿದ ವಿಶ್ಲೇಷಣೆ ಸಾಧ್ಯವಾಗಬಹುದಿತ್ತೋ ಅದಂತೂ ಶಾಶ್ವತವಾಗಿ ತಪ್ಪಿಹೋದಂತಾಯಿತು. ಉದಾಹರಣೆಗೆ, ಆ ಕಾಲದಲ್ಲಿಯೇ ಶಂಕರ ಮೊಕಾಶಿ ಪುಣೇಕರರಂಥವರು ಎಗ್ಸಿಸ್ಟೆಂಟಿಯಲಿಸ್ಟ್ ಅವಸ್ಥೆಯ ಬಗ್ಗೆ ಮತ್ತು ಅಂಥ ಮನೋಧರ್ಮದಿಂದಲೇ ಹುಟ್ಟಿಬಂದ ಪಾಶ್ಚಾತ್ಯ ಸಾಹಿತ್ಯವೂ, ಕನ್ನಡ ಸಾಹಿತ್ಯದ ಮೇಲಿನ ಅದರ ಪ್ರಭಾವವೂ ಎಷ್ಟು ಅಬ್ಸರ್ಡ್ ಎಂಬ ಬಗ್ಗೆ ಸಾಕಷ್ಟು ಬರೆದಿದ್ದರು. ‘ನಟನಾರಾಯಣಿ’ ಕಾದಂಬರಿಯೇ ಅವರ ವಾದಮಂಡನೆಯ ಒಂದು ಅಭಿವ್ಯಕ್ತಿ ಕ್ರಮವಾಗಿ ಬಂದಿದ್ದು ಎನ್ನುವುದನ್ನು ಗಮನಿಸಿದರೆ ಈ ಮಾತಿನ ಗುರುತ್ವ ಅರ್ಥವಾದೀತು. ಆದರೆ ಅವರದ್ದು ಪರಿಪೂರ್ಣ ವಿರೋಧದ ಧಾಟಿಯಾಗಿದ್ದು ಆ ಕಾರಣದಿಂದಲೇ ಅದಕ್ಕಂಟಿದ ಪೂರ್ವಾಗ್ರಹಗಳಿಂದ ಅದು ಮುಕ್ತವಾಗಿರಲಿಲ್ಲ. ಆ ದಿನಗಳಲ್ಲಿ ಅಕಾಡೆಮಿಕ್ ವಲಯಕ್ಕಷ್ಟೇ ಸೀಮಿತವಾದ ಕಾಫ್ಕಾ, ಕಮೂ ಯಾರೂ ಕನ್ನಡಕ್ಕೆ ಅಷ್ಟಾಗಿ ಬಂದಿರಲೂ ಇಲ್ಲ, ಕನ್ನಡ ಓದುಗರು ಅಷ್ಟಾಗಿ ಅವರನ್ನು ಓದಿರಲೂ ಇಲ್ಲ.

ಇವತ್ತು, ಅದರಲ್ಲೂ ವಿಶೇಷವಾಗಿ ಕರೊನಾದಂಥ ಒಂದು ವಿಪತ್ತನ್ನು ಹಾದು ಬಂದಿರುವ ಇವತ್ತು, ನಮಗೆ ಈ ‘ಪ್ಲೇಗ್’ ಕಾದಂಬರಿ ಕಾಣಿಸಬಹುದಾದ ಬಗೆ ಬೇರೆ. 1947ರಲ್ಲಿ ಬಂದ ಈ ಕಾದಂಬರಿಯನ್ನು ಹಲವು ಬಗೆಯ ಓದಿಗೆ ಒಳಪಡಿಸುವುದು ಸಾಧ್ಯವಿದೆ ಎಂದು ಸ್ವತಃ ಅನುವಾದಕರಾದ ಎಚ್ ಎಸ್ ರಾಘವೇಂದ್ರ ರಾವ್ ಅವರೇ ಹೇಳಿದ್ದಾರೆ. ಎರಡನೇ ಮಹಾಯುದ್ಧದ ಹಿಂದಿನ ಕಾರ್ಯಕಾರಣ ಸಂಬಂಧಗಳನ್ನೂ, ಅದರ ಪರಿಣಾಮವನ್ನೂ ಒಂದು ಮೆಟಫರ್ ತರ ಕಟ್ಟಿಕೊಡುವ ಕೃತಿ ಇದೆಂದು ಹೇಳಲಾಗುತ್ತದೆ. ಹಾಗೆಯೇ ಇಲ್ಲಿ ಪತ್ರಕರ್ತನೊಬ್ಬನ ಸತ್ಯ ನಿಷ್ಠುರತೆಯನ್ನೂ ಕಾಣುತ್ತೇವೆ. ಕಮೂನ ಸೃಜನಶೀಲ ಒಲವಿನ ಎರಡು ಪಾತಳಿಗಳಲ್ಲಿ ಸತ್ಯಶೋಧನೆಗೆ ಇರುವಷ್ಟೇ ಮಹತ್ವ ಕಲಾತ್ಮಕ ಅಭಿವ್ಯಕ್ತಿಗೂ ಇದೆ ಎನ್ನುವುದು ಸ್ಪಷ್ಟ. ಹಲವು ನಿರೂಪಕರಿದ್ದಂತೆಯೂ ಭಾಸವಾಗುವ ಒಂದು ವಿಶಿಷ್ಟ ನಿರೂಪಣೆಯ ತಂತ್ರವೂ ಇದರಲ್ಲಿದೆ. ಈ ಕಾದಂಬರಿಯನ್ನು ನಾವು ನಿರೂಪಕ - ವೈದ್ಯ ರಿಯೂ ನಿಟ್ಟಿನಿಂದ ಕಾಣಬಹುದು, ತಾನು ಬದುಕನ್ನು ಪೂರ್ತಿಯಾಗಿಯೇ ಬಲ್ಲೆ ಎನ್ನಬಲ್ಲ ಅವನ ಗೆಳೆಯ ತಾಹೂ ನಿಟ್ಟಿನಿಂದ ನೋಡಬಹುದು, ಜೀವನವಿಡೀ ಒಂದು ವಾಕ್ಯವನ್ನು ಕಟ್ಟಲು ತೇಯುವ, ಐವತ್ತು ಪುಟಗಳ ಆತ್ಮಕತೆಯ ತುಂಬ ಅದೊಂದೇ ವಾಕ್ಯವನ್ನು ಬೇರೆ ಬೇರೆ ಬಗೆಯಲ್ಲಿ ಕಟ್ಟಿದ ಮುದುಕ-ಲೇಖಕ ಮತ್ತು ವರ್ಕಾಲಿಕ್ ಅನಿಸುವ ಗ್ರ್ಯಾಂಡ್ ನಿಟ್ಟಿನಿಂದ ನೋಡಬಹುದು, ತತ್ವಜ್ಞಾನಿಯಂತೆ ಮಾತನಾಡುವ ಗೂರಲು ಮುದುಕನ ನಿಟ್ಟಿನಿಂದ ನೋಡಬಹುದು ಅಥವಾ ಪತ್ರಕರ್ತ-ಪ್ರೇಮಿ ರೋಂಬೆಯ ನಿಟ್ಟಿನಿಂದಲೋ, ನಿಗೂಢ ಅಪರಾಧಿ ಕೊತಾ ದೃಷ್ಟಿಯಿಂದಲೋ ನೋಡಬಹುದು. ಅಂದರೆ, ಕಮೂನ ಉದ್ದೇಶ ನೀವು ಈ ಎಲ್ಲಾ ನಿಟ್ಟಿನಿಂದ ಮಾತ್ರವಲ್ಲ, ನಿಮ್ಮದೇ ನಿಟ್ಟಿನಿಂದಲೂ ನೋಡಬೇಕೆಂಬುದೇ. ಏಕೆಂದರೆ, ಇದು ಕಮೂಗೆ ಮನುಷ್ಯನನ್ನು. ಮನಸ್ಸನ್ನು ಮತ್ತು ಬದುಕನ್ನು ಅರಿಯುವ ಒಂದು ಮಾರ್ಗವೇ ಹೊರತು ಇನ್ನೇನಲ್ಲ. ನಮ್ಮನ್ನು ನಾವು ಅರಿಯುವ ಪ್ರಯತ್ನದಲ್ಲಿಯೇ ನಾವು ನಮ್ಮೊಂದಿಗಿರುವ ನಮ್ಮಂಥ ಎಲ್ಲರನ್ನೂ ಅರಿಯುವುದು ಕೂಡ ಸಾಧ್ಯವಾಗಬೇಕು. ಇದಕ್ಕಾಗಿಯೇ ಆತ ಪತ್ರಕರ್ತನ ಸತ್ಯನಿಷ್ಠುರ ಶೈಲಿಯನ್ನೂ, ಸೃಜನಶೀಲ ಕಲೆಗಾರನ ತಂತ್ರವನ್ನೂ ಜೊತೆಯಾಗಿಯೇ ದುಡಿಸಿಕೊಳ್ಳುತ್ತಾನೆ. ಇಲ್ಲಿ ಎರಡು ಮಾರ್ಗಗಳಿವೆ.

ಮೊದಲನೆಯದು ವ್ಯಕ್ತಿ ಮತ್ತು ಸಮುದಾಯದ ಪ್ರಜ್ಞೆಯನ್ನು ಗ್ರಹಿಸುವ ಮಾರ್ಗ. ವ್ಯಕ್ತಿ ಮತ್ತು ಸಮುದಾಯ ಎರಡೂ ಸ್ವತಂತ್ರವಾಗಿ ವರ್ತಿಸುವ ಬಗೆ ಬೇರೆ, ಒಂದಾದಾಗ ವರ್ತಿಸುವ ಬಗೆ ಬೇರೆ ಎನ್ನುವುದು ನಿಜವಾದರೂ ವ್ಯಕ್ತಿಯೇ ಸಮುದಾಯದ ಪ್ರಧಾನ ಘಟಕ ಎನ್ನುವುದು ಕೂಡ ಅಷ್ಟೇ ನಿಜ. ಹಾಗಾಗಿ ಎರಡರ ನಡುವೆ ತುಯ್ಯುತ್ತ ಈ ಕೃತಿಯ ನಡೆ ಸಾಗುವುದು ಎಂಥ ಓದುಗನಿಗಾದರೂ ಒಂದು ಬಗೆಯ ವ್ಯಾಯಾಮವನ್ನು ಒದಗಿಸುವುದು ಸುಳ್ಳಲ್ಲ. ಎರಡನೆಯದು ಹೆಚ್ಚು ಮುಖ್ಯವಾದದ್ದು ಮತ್ತು ಗಂಭೀರವಾದದ್ದು ಕೂಡ. ವಾಸ್ತವವನ್ನು ನಿರೂಪಿಸುತ್ತೇನೆ ಎಂದು ಹೊರಡುವ ಪ್ರತಿಯೊಬ್ಬ ಲೇಖಕನಿಗೂ ತಾನು ಉದ್ದೇಶಿಸುವ ವಾಸ್ತವ ಯಾವುದು ಎಂಬ ಬಗ್ಗೆ ಅತ್ಯಂತ ಸ್ಪಷ್ಟವಾದ ಅರಿವಿರಬೇಕಾಗುತ್ತದೆ. ಅಂದರೆ, ನಾವು ಬದುಕುತ್ತಿರುವ ನಮ್ಮ ದೈನಂದಿನ ವಾಸ್ತವವನ್ನು ಆಯಾ ಕ್ಷಣಗಳಲ್ಲೇ ನಾವು ಗ್ರಹಿಸುವುದು ಬೇರೆ; ಅದನ್ನೇ ದೇಶ-ಕಾಲ ಎರಡೂ ನಿಟ್ಟಿನ ಅಂತರದಿಂದ ಅದೇ ಕಾಲಕ್ಕೆ (ಆನಂತರದಲ್ಲಿ ಅಥವಾ ಮತ್ತೊಮ್ಮೆ ಅಲ್ಲ) ಗ್ರಹಿಸುವುದೇ ಬೇರೆ. ಈ ದೇಶ-ಕಾಲ ಅಂತರವೊಂದು ಅದೇ ಕಾಲಕ್ಕೆ ಸಾಧ್ಯವಾಗುವುದು ಕಲೆಯಲ್ಲಿ ಮಾತ್ರ ಎನ್ನುವುದು ನಿಜ. ಹಾಗೆ ಕಲೆಯಲ್ಲಿ ಮೂಡುವ (ಕಲ್ಪಿತ) ವಾಸ್ತವ ನಿಜಕ್ಕೂ ಮೂರನೆಯ ಆಯಾಮದ್ದು. ಇದು, ಮರದಲ್ಲಿ ಕೂತ ಹಕ್ಕಿ ಹಣ್ಣು ತಿನ್ನುತ್ತಿದೆ ಮತ್ತು ಅದೇ ಕಾಲಕ್ಕೆ ಹಕ್ಕಿ (ಇನ್ನೊಂದು ಹಕ್ಕಿಯಲ್ಲ, ಅದೇ  ಹಕ್ಕಿ) ಅದನ್ನು ಗಮನಿಸುತ್ತಿದೆ ಎಂದಂತೆ. ಇದು ಬರಿಯ ಸಾಕ್ಷಿಪ್ರಜ್ಞೆಯಲ್ಲ. ಸಾಕ್ಷಿಪ್ರಜ್ಞೆಯಷ್ಟೇ ಆಗಿದ್ದರೆ ಅದನ್ನು ವಿಶೇಷವಾಗಿ ಎತ್ತಿ ಹೇಳಬೇಕಾದ್ದೇನೂ ಇರಲೇ ಇಲ್ಲ. ಸಾಕ್ಷಿಪ್ರಜ್ಞೆಯನ್ನು ಮೀರಿದ ಒಂದು ವಿಷನ್, ಮುಂಗಾಣ್ಕೆಯ ಕುರಿತಾಗಿದ್ದು ಇದು. ಒಬ್ಬ ಬರಹಗಾರನಿಗೆ ಇರುವ ಈ ಶಕ್ತಿಯೇ ಅವನ ಸಾಹಿತ್ಯದ ಆಕರ್ಷಣೆ, ಶಕ್ತಿ ಮತ್ತು ಸಾಮಾಜಿಕ ಅಗತ್ಯದ ಬಗ್ಗೆ ಹೇಳುತ್ತಿರುತ್ತದೆ. ಕಮೂಗೆ ತಾನು ಮಾಡಹೊರಟಿದ್ದರ ಸ್ಪಷ್ಟ ಅರಿವಿತ್ತು ಎನ್ನುವುದಕ್ಕೆ ಕೃತಿಯಲ್ಲೇ ಸಾಕಷ್ಟು ಸಾಕ್ಷ್ಯಗಳಿವೆ. ಆದರೆ, ನಮ್ಮ ನವ್ಯ ಕಾಲಘಟ್ಟದಲ್ಲಿ ಇದನ್ನು ಎಗ್ಸಿಸ್ಟೆಂಟಿಯಲಿಸ್ಟ್ ಅವಸ್ಥೆ ಎಂದು ಸೀಮಿತಗೊಳಿಸಿ ನೋಡಲಾಯಿತೆ ಎನ್ನುವುದು ಉತ್ತರವಿಲ್ಲದೆ ಉಳಿದು ಹೋಗುವ ಪ್ರಶ್ನೆ. ಆದರೆ, ಇಂದು ಅದನ್ನು ಮತ್ತೆ ಎತ್ತುವುದರಿಂದಲೇ ನಮಗೆ ಸೃಜನಾತ್ಮಕವಾಗಿ ಕಮೂ ಏಕೆ ಮುಖ್ಯನಾಗುತ್ತಾನೆಂಬುದಕ್ಕೆ ಉತ್ತರ ಸಿಗುತ್ತದೆ. ಹಾಗಾಗಿ ಈ ಅನುವಾದಕ್ಕೆ ಬಹಳ ಮಹತ್ವವಿದೆ. 

ಕಾದಂಬರಿಯ ಆರಂಭದಲ್ಲಿಯೇ ಒಂದು ಮಾತು ಬರುತ್ತದೆ. ಓರಾನ್ ಎಂಬ ಒಂದು ಪುಟ್ಟ ನಗರವನ್ನು ವಿವರಿಸುತ್ತ, ಆ ಊರು ಎಷ್ಟು ವಿಲಕ್ಷಣವಾದದ್ದು ಎನ್ನುವಾಗಲೇ ಬರುವ ಮಾತದು. ಒಂದು ಊರನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಆ ಊರಿನ ಜನರ ಕುರಿತ ಮೂರು ವಿಚಾರಗಳನ್ನು ತಿಳಿದುಕೊಳ್ಳಬೇಕು.  ಆ ಊರಿನ ಜನ ಯಾವ್ಯಾವ ಬಗೆಯ ಕೆಲಸ-ಕಾರ್ಯಗಳಲ್ಲಿ ತಮ್ಮ ದಿನವನ್ನು ವ್ಯಯಿಸುತ್ತಾರೆ ಎನ್ನುವುದನ್ನು, ಅಲ್ಲಿನ ಜನರ ನಡುವಿನ ಸಂಬಂಧಗಳು, ಪ್ರೀತಿ-ಜಗಳ-ದ್ವೇಷ ಇತ್ಯಾದಿ ಹೇಗಿರುತ್ತದೆ ಎನ್ನುವುದನ್ನು ಮತ್ತು ಅಲ್ಲಿನ ಮಂದಿ ಸಾಮಾನ್ಯವಾಗಿ ಹೇಗೆ ಸಾಯುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು. ಈ ಮಾತಿಗಿರುವ ಒಂದು ವ್ಯಕ್ತಿಗತವಾದ, ವೈಯಕ್ತಿಕವಾದ ಮುಖದ ಜೊತೆಗೇ ಅದಕ್ಕೊಂದು  ಸಾಮುದಾಯಿಕವಾದ ಮುಖವೂ ಇದೆ ಎನ್ನುವುದು ಈ ನುಡಿಯನ್ನು ಅದೆಷ್ಟು ಧ್ವನಿಪೂರ್ಣ ಮಾಡುತ್ತದೆ ಎನ್ನುವುದನ್ನು ಗಮನಿಸಿ. ಇಡೀ ಕಾದಂಬರಿಯ ಒಟ್ಟಾರೆ ಗಮ್ಯ ಇದಲ್ಲದೇ ಬೇರೆಯಲ್ಲ ಅನಿಸಿಬಿಡುವುದು ಇಂಥಲ್ಲೇ. ರಿಯೂ, ತಾಹೂ, ಗ್ರ್ಯಾಂಟ್, ರೋಂಬೆ, ಮುದುಕ, ಕೊತಾ ಪ್ರತಿಯೊಬ್ಬರೂ ನಮಗೆ ವೃತ್ತಿ-ಪ್ರವೃತ್ತಿ, ಮನುಷ್ಯ ಸಂಬಂಧಗಳು ಮತ್ತು ಸಾವು ಎಂಬ ತ್ರಿಕೋನದೊಳಗೇ ದಕ್ಕುತ್ತ ಹೋಗುವ ಪರಿ, ಏಕಕಾಲಕ್ಕೆ ಸತ್ಯದತ್ತಲೂ, ಕಲೆಯತ್ತಲೂ ಕಣ್ಣಿಟ್ಟು ಚಲಿಸುವ ಮಹಾಯಾನವಾಗಿದೆ.

ಹಾಗೆಯೇ, ಯಾವುದೇ ಒಂದು ವಿಪತ್ತು ಎರಗಿದಾಗ ಸಹಜವಾಗಿಯೇ ಮನುಷ್ಯ ಕಾರ್ಯ-ಕಾರಣ ಸಂಬಂಧದ ಶೋಧಕ್ಕಿಳಿಯುತ್ತಾನೆ. ಅಲ್ಲಿಯೇ ಅವನು ಕರ್ಮಸಿದ್ಧಾಂತದ ಸುಳಿಗೂ ಸಿಲುಕುವುದು. ‘ಪ್ಲೇಗ್’ ಕಾದಂಬರಿಯೂ ಅದಕ್ಕೆ ಹೊರತಾಗಿಲ್ಲ. ಫಾದರ್ ಪೆನೆಲೊ ಈ ಆಯಾಮದ ಕೇಂದ್ರವಾಗಿದ್ದಾನೆ. ಇದಕ್ಕೆ ಸಂವಾದಿಯಾಗಿ ತಾಹು, ಮತ್ತು ಅವನ ವಿಚಾರಗಳಿವೆ. ಈ ಕಾದಂಬರಿಯ ಆತ್ಮದಂಥ ಒಂದು ಅಧ್ಯಾಯ ಪುಟ 202-209 ರಲ್ಲಿದೆ. ಮನುಕುಲಕ್ಕೇ ಒದಗುವ ವಿಪತ್ತು ಮನುಷ್ಯನ ಸಂವೇದನೆಗಳಲ್ಲಿ ಉಂಟುಮಾಡುವ ಪಲ್ಲಟವನ್ನು ಗುರುತಿಸಲು ಯತ್ನಿಸುವ ಈ ಅಧ್ಯಾಯ ಮಹತ್ವದ ಒಳನೋಟಗಳನ್ನು ಹೊಂದಿದೆ. ಅದೇ ರೀತಿ ನಿಗೂಢ ಅಪರಾಧಿಯಾದ ಕೊತಾ, ತಾನು ಬದುಕನ್ನು ಪೂರ್ತಿಯಾಗಿ ಅರಿತಿದ್ದೇನೆ ಎನ್ನುವ ತಾಹು ಮತ್ತು ಗೂರಲು ಕೆಮ್ಮಿನ ಮುದುಕ ಮೂವರ ವಿಚಾರಧಾರೆಯಲ್ಲಿಯೂ ಒಂದು ಸಾಮ್ಯತೆಯಿರುವುದು ಮತ್ತು ಅವರು ಪ್ಲೇಗನ್ನು ಒಂದು ಸಹಜ ವಿದ್ಯಮಾನವೆಂಬಂತೆ ಸ್ವೀಕರಿಸಿ ಅದರೊಂದಿಗೆ ಬದುಕಬೇಕೆಂಬ ಅನಿಸಿಕೆ ಹೊಂದಿರುವುದನ್ನು ಗಮನಿಸಬೇಕು. ಕೊತಾಗೆ ಅದು ಒಂದು ರಕ್ಷೆಯಂತೆ ಒದಗಿದರೆ, ತಾಹುಗೆ ಅದೊಂದು ಮನುಷ್ಯತ್ವಕ್ಕಂಟಿದ ರೋಗ. ಮುದುಕನಿಗೋ ಅದೇ ಜೀವನ, ಪರಿಹಾರವಿಲ್ಲದ, ಮುಕ್ತಿಯಿಲ್ಲದ ಹೊರೆಕಾಣಿಕೆ!

ಎಚ್ ಎಸ್ ರಾಘವೇಂದ್ರ ರಾವ್ ಅವರ ಅನುವಾದ ಸುಲಲಿತ ಓದಿಗೆ ಪೂರಕವಾಗಿ ಸಾಗುತ್ತದೆ. ಒಂದು ಅನುವಾದವನ್ನು ಓದುತ್ತಿದ್ದೇವೆಂಬ ಪ್ರಜ್ಞೆ ಹಿನ್ನೆಲೆಗೆ ಸರಿಯುವಷ್ಟು ಅವರ ಕೃತಿಯ ಕನ್ನಡತನ ಅಚ್ಚುಕಟ್ಟಾಗಿದೆ, ಸಮೃದ್ಧವಾಗಿದೆ. ಆದರೆ ಅದೇ ಕಾಲಕ್ಕೆ ಮೂಲದ ಒಂದು ಓಘವನ್ನು ಸಪ್ರಯತ್ನ ಉಳಿಸಿಕೊಳ್ಳಲು ಹೊರಟಂತೆಯೂ ಕಾಣುತ್ತದೆ. ಲಭ್ಯವಿರುವ ಎರಡೂ ಇಂಗ್ಲೀಷ್ ಆವೃತ್ತಿಗಳನ್ನು ಇಟ್ಟುಕೊಂಡು, ಅಗತ್ಯಬಿದ್ದಾಗ ಮೂಲವನ್ನೂ ಗಮನಿಸಿ ತಾವು ಅನುವಾದಿಸಿದ್ದಾಗಿ ಅವರು ಹೇಳಿದ್ದಾರೆ. ಕಾದಂಬರಿಯ ಆರಂಭದ ಅಧ್ಯಾಯದಲ್ಲೇ ಬರುವ discomfort in dying ಎನ್ನುವಲ್ಲಿ ಎಚ್ಚೆಸ್ಸಾರ್ ಅವರು ಸರಳವಾಗಿ ‘ಕಿರಿಕಿರಿ’ ಎಂಬ ಶಬ್ದ ಬಳಸಿಬಿಡುತ್ತಾರೆ. ಈ ‘ಕಿರಿಕಿರಿ’ ಎಂಬ ಶಬ್ದದಲ್ಲೇ ಇರುವ discomfort ಗಮನಿಸಿ! ಬಹುಶಃ ಅವರು ಇದರ ಹೊರತಾಗಿ ಬೇರೆ ಯಾವ ಶಬ್ದ ಬಳಸಿದ್ದರೂ ಓದುಗನಿಗೆ ನಿಜವಾದ ಕಿರಿಕಿರಿಯೇ! ಹಾಗೆಯೇ, cloying perfume ಇಲ್ಲಿ ಸಿಹಿವಾಸನೆಯಾಗಿದೆ! `the sour "Good night, father," she flung at him over her shoulder' ಇಲ್ಲಿ ‘ಒಣದನಿಯಲ್ಲಿ ಬಿಸಾಕುತ್ತಿದ್ದ, "ಗುಡ್ ನೈಟ್ ಫಾದರ್"  ಆಗಿ ಜೀವ ತಳೆಯುತ್ತದೆ. ಈ ಬಿಸಾಕಬಹುದಾದ ಗುಡ್ ನೈಟು, ಮಾರ್ನಿಂಗುಗಳ ಭಾರವನ್ನು ಬಲ್ಲವರೇ ಬಲ್ಲರು! ಅಲ್ಲಲ್ಲಿ ಎಲೆಮರೆಯ ಹೂವಿನಂತೆ ದಕ್ಕುವ ‘ವಾಗ್ಮಿತೆ’, ‘ತುಟಿಮರುಕ’, ‘ನರಳುಗಾಳಿ’, ‘ಪರಟೋಣಿ’, ಕಸುಬಿಷ್ಟೆ ಮುಂತಾದ ಪ್ರಯೋಗಗಳನ್ನು ನಾವು ಸೂಕ್ಷ್ಮವಾಗಿ ಗಮನಕ್ಕೆ ತಂದುಕೊಳ್ಳದೇ ಹೋದರೆ ಈ ಅನುವಾದದ ನಿಜವಾದ ಸೊಗಡು ನಮ್ಮ ಅರಿವಿಗೇ ಬರುವುದಿಲ್ಲ. 

ಈ ಕಾದಂಬರಿ ಹಲವಾರು ಕಾರಣಗಳಿಗಾಗಿ ಮುಖ್ಯವಾಗುವ ಒಂದು ಅಪರೂಪದ ಕೃತಿ. ಸಾಹಿತ್ಯದ ವಿದ್ಯಾರ್ಥಿಗಳಿಗೂ, ತತ್ವಶಾಸ್ತ್ರದ ಜಿಜ್ಞಾಸುಗಳಿಗೂ, ಮನಶ್ಶಾಸ್ತ್ರದ ಅಭ್ಯಾಸಿಗಳಿಗೂ, ಕರ್ಮಸಿದ್ಧಾಂತದ ಪ್ರತಿಪಾದಕರಿಗೂ, ಬದುಕು ಮತ್ತು ಮನುಷ್ಯನ ಕುರಿತು ಅರಿಯಬಯಸುವ, ಚೆನ್ನಾಗಿ ಬದುಕುವ ಹಾದಿಯೊಂದನ್ನು ಕಂಡುಕೊಳ್ಳಬಯಸುವ  ಸಾಮಾನ್ಯ ಓದುಗರಿಗೂ ಸಮಾನವಾಗಿ, ಸಮೃದ್ಧವಾಗಿ ದಕ್ಕುವ ಕೃತಿ. ಇದನ್ನು ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದ ಎಚ್ಚೆಸ್ಸಾರ್ ಅಭಿನಂದನಾರ್ಹರು.
(ಈ ಪರಿಷ್ಕೃತ ಬರಹ ಮಯೂರ ಮಾಸಿಕದ ಮೇ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದೆ.)

No comments: