Sunday, June 13, 2021

ಜ್ಯೋತಿರ್ಲಿಂಗ


ನಾವು ಯಾವಾಗ ಓದುವುದಕ್ಕೆ ಆರಂಭಿಸಿದೆವೋ ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಆದರೆ, ಅಂದಿನಿಂದಲೂ ನಮ್ಮ ಓದುವ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳಂತೂ ಆಗಿರುವುದನ್ನು ಯಾರಾದರೂ ಗಮನಿಸಿಕೊಳ್ಳಬಹುದು. ಓದಲು ಆಯ್ದುಕೊಳ್ಳುವ ಪುಸ್ತಕಗಳ ಲೇಖಕರು, ಪುಸ್ತಕದ ವಸ್ತು, ಪ್ರಕಾರ ಮಾತ್ರಕ್ಕೆ ಸಂಬಂಧಿಸಿದ್ದಲ್ಲದೆ, ಮುದ್ರಿತವೊ, ಡಿಜಿಟಲ್ ಪುಸ್ತಕವೊ, ಅದರಲ್ಲಿ ಇ-ಪುಸ್ತಕವೊ, ಆಡಿಯೊ ಪುಸ್ತಕವೋ ಎನ್ನುವವರೆಗೆ ಈ ಬದಲಾವಣೆಗಳು ಆಗಿರಬಹುದು. ಅವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಓದುವ ಕ್ರಮದಲ್ಲಿ ಆದ ಬದಲಾವಣೆಗಳನ್ನು ಕೂಡ ಕೊಂಚ ಸೂಕ್ಷ್ಮವಾಗಿ ಗಮನಿಸಿಕೊಂಡರೆ ತಿಳಿದುಕೊಳ್ಳಲು ಸಾಧ್ಯವಿದೆ.

ಓದುವಾಗ ಟಿಪ್ಪಣಿ ಮಾಡಿಕೊಳ್ಳುತ್ತ ಓದುವುದು, ಅಡಿಗೆರೆಗಳನ್ನು ಹಾಕುತ್ತ ಓದುವುದು, ಗಟ್ಟಿಯಾಗಿ ಓದುವುದು, ಮೌನವಾಗಿ ಓದುವುದು, ಒಮ್ಮೆ ಓದಿದರೆ ಯಾವಾಗ ಬೇಕೆಂದರೂ ಕೋಟ್ ಮಾಡಬಲ್ಲಷ್ಟು ನಿಖರವಾಗಿ ನೆನಪಿನಲ್ಲುಳಿಯುವಂತೆ ಓದುವುದು, ಅನ್ಯ ಭಾಷೆಯ ಕೃತಿಯಾಗಿದ್ದಲ್ಲಿ ನಡುನಡುವೆ ಅನುವಾದವನ್ನೂ ಮಾಡುತ್ತ ಓದುವುದು, ಪುಸ್ತಕ ಮುಚ್ಚಿದ ಕ್ಷಣಕ್ಕೇ ಓದಿದ್ದನ್ನು ಮರೆತುಬಿಡಬಲ್ಲಂತೆ ಓದುವುದು, ಕಂಟೆಂಟ್ ನೆನಪಿದ್ದರೂ ಬರೆದವರು ಯಾರು, ಪುಸ್ತಕದ ಹೆಸರೇನು ಎಂದೆಲ್ಲ ನೆನಪಿಟ್ಟುಕೊಳ್ಳಲು ಹೋಗದೆ ಓದುವುದು,  ಮೇಲ್ಮೇಲಕ್ಕೆ ಕಣ್ಣಾಡಿಸಿ ಓದುವುದು, ಮೊಬೈಲ್ ಅಥವಾ ಕಂಪ್ಯೂಟರ್ ತೆರೆಯ ಮೇಲೆ ಓದುವುದು, ತೀರ ಏಕಾಂತವಿದ್ದರೆ ಮಾತ್ರ ಓದುವುದು, ಸಂತೆಯಲ್ಲಾದರೂ ಓದುವುದು ಇತ್ಯಾದಿ ಇತ್ಯಾದಿ. 

ಕೆಲವು ವರ್ಷಗಳ ಹಿಂದೆ, ಕನ್ನಡದ ಪ್ರಮುಖ ಕತೆಗಾರ ಶ್ರೀಧರ ಬಳಗಾರ ಅವರು ಮಂಗಳೂರಿಗೆ ಬಂದಿದ್ದರು. ಯುಜಿಸಿಯ ಒಂದು ರಾಷ್ಟ್ರೀಯ ಸಂಸ್ಕೃತ ವಿಚಾರಸಂಕಿರಣದಲ್ಲಿ ಅವರು ತಮ್ಮ ಪೇಪರ್ ಪ್ರೆಸೆಂಟೇಶನ್ ಮಾಡುವುದಿತ್ತು. ಭರ್ತೃಹರಿಯ ಒಂದು ವಿಚಾರದ ಕುರಿತು ಅವರು ಮಾತನಾಡಿದ್ದ ವಿಷಯದ ಬಗ್ಗೆ ಹೇಳುತ್ತ, ಅವರ ಪ್ರಬಂಧದ ಕೀನೋಟ್ ಬರಹವನ್ನು ನನಗೇ ಕೊಟ್ಟು ಹೋದರು. ಅದೊಂದು ಅದೃಷ್ಟವಶಾತ್ ಸಿಕ್ಕಿದ ಜ್ಞಾನಸ್ಪರ್ಶ.

ವಾಕ್ಯ ಮತ್ತು ಶಬ್ದದ ಸಂಬಂಧದ ಕುರಿತು ನಡೆಸುವ ಜಿಜ್ಞಾಸೆಯಿತ್ತು ಅದರಲ್ಲಿ. ಆ ಬಗ್ಗೆ ಈಗಾಗಲೇ ಬ್ಲಾಗಿನ ಇನ್ಯಾವುದೋ ಒಂದು ಲೇಖನದಲ್ಲಿ ಬರೆದಿರುವುದರಿಂದ ಇಲ್ಲಿ ಅದನ್ನು ಕೇವಲ ಸಾಂದರ್ಭಿಕವಾಗಿ ಉಲ್ಲೇಖಿಸಿ ಮುಂದುವರಿಯುವೆ.

ಕೇಳುಗನೊಂದಿಗೆ ಸಂವಹನ ಸಾಧ್ಯವಾಗುವಂತೆ ಅರ್ಥವನ್ನು ಸ್ಫುರಿಸುವ ಕಾರ್ಯ ಮಾಡುವುದು ಶಬ್ದವೇ ಅಥವಾ ಶಬ್ದದ ಸಮರ್ಪಕ ಸಂಯೋಜನೆಯುಳ್ಳ ವಾಕ್ಯವೆ ಎನ್ನುವುದು ಜಿಜ್ಞಾಸೆ. ಒಂದು ಶಬ್ದಕ್ಕೆ ವಾಕ್ಯದ ಹಂಗಿಲ್ಲದ ಸ್ವತಂತ್ರ ಸಂವಹನ ಸಾಮರ್ಥ್ಯವಿರಲು ಸಾಧ್ಯವಿಲ್ಲವೆ? ಇದ್ದರೆ ವಾಕ್ಯ ಏಕೆ ಬೇಕು? ವಾಕ್ಯವೇ ಅರ್ಥವನ್ನು ಪೂರ್ಣಗೊಳಿಸುವುದು ಎಂದಾದಲ್ಲಿ ಶಬ್ದದ ಪಾತ್ರ/ಮಹತ್ವ ಏನು? ಇತ್ಯಾದಿ ಇತ್ಯಾದಿ. ಅಲ್ಲಿಂದ ಇದು ಶಬ್ದ ಮತ್ತು ಸದ್ದು (ಪದ ಮತ್ತು ಶಬ್ದ ಅಥವಾ ಪದ ಮತ್ತು ಸದ್ದು) ಎರಡರ ಸಂಬಂಧವನ್ನು ಕುರಿತು ಚರ್ಚಿಸುತ್ತದೆ. ಒಂದು ಪದಕ್ಕೆ ಇರುವ ಸದ್ದು ಅದರ ಧ್ವನಿಶಕ್ತಿಯೊಂದಿಗೆ ಎಂಥ ಸಂಬಂಧವನ್ನು ಹೊಂದಿದೆ ಎನ್ನುವುದು ಇದರ ರೂಕ್ಷ ವಿವರಣೆಯಾದೀತು. ಸದ್ದಿಗೆ ಸಂಗೀತದೊಂದಿಗೂ ಸಂಬಂಧವಿದೆ. ಧ್ವನಿಶಕ್ತಿಗೆ ಸದ್ದಿನ ಹಂಗಿಲ್ಲ ಎನ್ನುವುದನ್ನು ಮರೆಯುವಂತಿಲ್ಲವಲ್ಲ. ಒಂದು ಪದ (ಶಬ್ದ) ಅದರ ಸದ್ದಿನ ಸಹಿತ ಮನಸ್ಸಿನಲ್ಲಿ ಉದ್ದೀಪಿಸುವ ಚಿತ್ರದೊಂದಿಗೆ ಪದದ ಮತ್ತು ಅದರ ಸದ್ದಿನ ಪಾತ್ರವೇನು ಎನ್ನುವುದನ್ನು ಬಹುಶಃ ಎಂದಿಗೂ ಪರಸ್ಪರ ಸ್ವಾಯತ್ತಗೊಳಿಸಿ ಕಾಣಲಾರೆವು. ಆದರೆ ಧ್ವನಿಶಕ್ತಿಯನ್ನೇ ಕಳೆದುಕೊಂಡು ಕ್ಲೀಷೆಯಾಗಿಬಿಟ್ಟ ಪದಗಳ ಸಂದರ್ಭದಲ್ಲಿ ಅದು ಸ್ಥೂಲವಾಗಿ ನಮಗೆ ಕಾಣಿಸುತ್ತದೆ ಎನ್ನುವುದು ನಿಜ. ಹಾಗೆಯೇ, ಮನಸ್ಸಿನಲ್ಲಿ ಮೂಡಿಸುವ ಚಿತ್ರ ಎಂದಾಗ ಕಣ್ಣೆದುರು ಇರುವ ಚಿತ್ರ ಮತ್ತು ಕಣ್ಣೆದುರು ಏನೂ ಇಲ್ಲದಿದ್ದಾಗಲೂ ಮನಸ್ಸಿನಲ್ಲಿ ಮೂಡುವ ಚಿತ್ರ ಎನ್ನುವ ಎರಡೂ ಸಂದರ್ಭಗಳಲ್ಲಿ ಪದ, ಸದ್ದು, ಧ್ವನಿಶಕ್ತಿಯೊಂದಿಗೆ ದೃಶ್ಯ ಅದೃಶ್ಯಗಳ ಸಂಬಂಧವೊಂದು ಏರ್ಪಟ್ಟಿದೆ ನೋಡಿ!  ಇದರ ಇನ್ನೊಂದು ಮಗ್ಗಲು ಕೂಡ ಇದೆ, ಅದು ಅನಿವರ್ಚನೀಯಗಳ ಕುರಿತಾದ್ದು, ಮೌನದ ಭಾಷೆಗೆ ಸಂಬಂಧಪಟ್ಟಿದ್ದು. ವಾಚ್ಯವಾಗಲಾರದ, ವಾಚ್ಯವಾಗಬಾರದ ಭಾಷೆಯ ಬಗೆಗಿನದು.

ಒಂದು ಶಬ್ದ ಅಥವಾ ವಾಕ್ಯ ಅದನ್ನು ಬಳಸುವ ವ್ಯಕ್ತಿಯ ಸಂವೇದನೆಯಿಂದ ಸ್ಫೂರ್ತಗೊಳ್ಳುತ್ತದೆ ಎನ್ನುವುದು ಸಾಮಾನ್ಯವಾದ ನಂಬಿಕೆ. ಅನುಕರಣೆ, ಅನುಸಂಧಾನ, ನಕಲು ಮತ್ತು ಕ್ಲೀಷೆಯ ಸಂದರ್ಭಗಳನ್ನು ಹೊರತು ಪಡಿಸಿ ನೋಡಿದರೆ ಅದು ನಿಜ ಮತ್ತು ಸಹಜ. ಹಾಗಾಗಿ ಒಬ್ಬ ವ್ಯಕ್ತಿ ಬಳಸುವ ಶಬ್ದಗಳು, ವಾಕ್ಯಬಂಧ ತೀರ ವ್ಯಕ್ತಿಗತವಾಗಿರುತ್ತವೆ. ಒಬ್ಬನ ಸಹಿ (sig-`nature'), ಒಬ್ಬ ವ್ಯಕ್ತಿಯ ನಡೆಯುವ ವೇಗ, ಶೈಲಿ, ವಿಧಾನ ಹೇಗೆ ವ್ಯಕ್ತಿಗತವೋ ಹಾಗೆಯೇ ಒಬ್ಬ ವ್ಯಕ್ತಿ ಬಳಸುವ ಶಬ್ದ, ಕಟ್ಟುವ ವಾಕ್ಯ, ಏನನ್ನು ಹೇಗೆ ಹೇಳುತ್ತಾನೆ ಅಥವಾ ಏನನ್ನು ಹೇಳುವುದಿಲ್ಲ ಮತ್ತು ಹೇಳಬೇಕೆಂದು ನಾವು ನಿರೀಕ್ಷಿಸುವಂತೆ ಹೇಳುವುದಿಲ್ಲ ಎನ್ನುವುದೆಲ್ಲವೂ ಆತನ ವ್ಯಕ್ತಿಗತ ಭಾಷೆ ಅಥವಾ ಹಾಗೆ ಹೇಳಬಹುದಾದರೆ ಆತನ ಛಂದಸ್ಸನ್ನು ನಿರ್ಧರಿಸುವ ಸಂಗತಿಗಳಾಗಿರುತ್ತವೆ. ಅವರವರ ಭಾಷೆಗೆ ಹೀಗೆ ಅವರವರದ್ದೇ ಗುರು-ಲಘು ಸಂಯೋಗ.

ಭರ್ತೃಹರಿಯ ವಿಚಾರಗಳನ್ನೂ ಸೇರಿದಂತೆ ಇಂಥ ಕೆಲವು ಸಂಗತಿಗಳನ್ನು ಅಕ್ಷರ ಪ್ರಕಾಶನದ ‘ಶಬ್ದ ಮತ್ತು ಜಗತ್ತು’ (ಮೂಲ: ಬಿಮಲ್ ಕೃಷ್ಣ ಮತಿಲಾಲ್, ಅನುವಾದ ಎಂ. ಎ. ಹೆಗಡೆ) ಹೆಚ್ಚು ವಿಸ್ತರಿಸಿ ಚರ್ಚಿಸುತ್ತದೆ.

ಇದನ್ನೆಲ್ಲ ಬರೆಯಲು ಕಾರಣವಾಗಿದ್ದು ಇತ್ತೀಚೆಗೆ ಓದಿದ ಒಂದು ಹೊಸ ಪುಸ್ತಕ. 

ಕಳೆದ ಇಪ್ಪತ್ತೈದು ವರ್ಷಗಳಿಂದ ಓದಿದಾಗ ಇದು ಅಪೂರ್ವ, ಇದು ವಿಶೇಷ, ಆಹ್! ಅರೆರೆ! ಅನಿಸಿದ ವಾಕ್ಯಗಳನ್ನೆಲ್ಲ ಸುಮಾರು ನಲ್ವತ್ತೈದು ನೋಟ್‌ಬುಕ್ಕುಗಳಲ್ಲಿ ದಾಖಲಿಸುತ್ತ ಬಂದ ಬ್ರಿಯಾನ್ ದಿಲ್ಲಾನ್, ತನ್ನ ಈ ಹಿಂದಿನ ‘ಎಸ್ಸೇಯಿಸಂ’ ಪುಸ್ತಕ ಮುಗಿಸುವ ಹಂತದಲ್ಲಿದ್ದಾಗಲೇ ಈ ಪುಸ್ತಕ ಬರೆಯುವ ಬಗ್ಗೆ ಯೋಚಿಸಿದ್ದರು. ಹಾಗೆಯೇ ಈಗ, ತಮ್ಮ ಮುಂದಿನ ಪುಸ್ತಕ ಇಮೇಜಸ್ ಬಗ್ಗೆ ಎನ್ನುವ ಮಾತನಾಡಿದ್ದಾರೆ.  ಒಂದು ವಾಕ್ಯವನ್ನು ಓದಿದಾಗ ತಕ್ಷಣಕ್ಕೆ ಹುಟ್ಟಿದ ಅಚ್ಚರಿ, ವಿಸ್ಮಯ ಮಾತ್ರ ಇಲ್ಲಿ ಮುಖ್ಯ. ಇಂಥ ಟಿಪ್ಪಣಿಗಳಿಗೆ ಬೇರೆ ಯಾವುದೇ ಒಳ ಉದ್ದೇಶಗಳಿರಲಿಲ್ಲ. ಪುಸ್ತಕದ ಹೆಸರು Suppose A Sentence. ಇದು Gertrude Stein ಬರೆದ ಒಂದು ಕವಿತೆಯಿಂದ ಹುಟ್ಟಿದ ಹೆಸರು. ಆಕೆಯ ವಾಕ್ಯದ ಕುರಿತೂ ಒಂದು ಪ್ರಬಂಧ ಈ ಪುಸ್ತಕದಲ್ಲಿದೆ. ಯೂಟ್ಯೂಬಿನಲ್ಲಿ ಈ ಪುಸ್ತಕದ ಕುರಿತು ಒಂದು ಪುಟ್ಟ ಚರ್ಚೆಯ ವೀಡಿಯೋ ಕೂಡ ಲಭ್ಯವಿದ್ದು ಅದು ಈ ಪುಸ್ತಕದ ಬಗ್ಗೆ ಕುತೂಹಲ ಕೆರಳಿಸುವಷ್ಟು ಸೊಗಸಾಗಿದೆ. (https://www.youtube.com/watch?v=LnVeRGnUrfo)

ಈ ಪುಸ್ತಕದ ಒಂದು ಅಧ್ಯಾಯದ ಕೇಂದ್ರವಾಗಿರುವ ಒಂದು ಪುಟ್ಟ ವಾಕ್ಯದ ಕುರಿತು ಹೇಳಿ ನನ್ನ ವರಾತ ಮುಗಿಸುತ್ತೇನೆ. ಆ ವಾಕ್ಯ ಸರ್ ಥಾಮಸ್ ಬ್ರೋನ್ ಬರೆದಿರುವುದು. ಅಲ್ಲಿಯೇ ಥಾಮಸ್ ಬ್ರೋನ್ ಬಗ್ಗೆ ವರ್ಜೀನಿಯಾ ವೂಲ್ಫ್ ಬರೆದ ಒಂದು ಮಾತಿದೆ ನೋಡಿ. 

“Time which antiquates Antiquities, and hath an art to make dust of all things, hath yet spared these minor Monuments.”
—Sir Thomas Browne

“Few people love the writings of Sir Thomas Browne, but those who do are of the salt of the earth.” So wrote Virginia Woolf in the TLS in 1923. 

ಥಾಮಸ್ ಬ್ರೋನ್ ವಾಕ್ಯವನ್ನು ಅನುವಾದಿಸಬಹುದೆ? ಒಂದು ಕಚ್ಚಾ ಅನುವಾದದಲ್ಲಿ ಅದು ಹೀಗೆ:
ಸ್ಮಾರಕಗಳನ್ನು ಸ್ಮರಣಾರ್ಹಗೊಳಿಸುವ ಕಾಲ, ಎಲ್ಲವನ್ನೂ ಧೂಳಾಗಿಸಬಲ್ಲ ಕಲೆಗಾರ ಕೂಡ, ಹಾಗಿದ್ದೂ ಈ ಸಾಮಾನ್ಯ ಸ್ಥಾವರಗಳನ್ನು ಉಳಿಸಿಕೊಟ್ಟಿದೆ.

ಕನ್ನಡದಲ್ಲಿ ಸ್ಮರಣಾರ್ಹವಾದ ವಾಕ್ಯಗಳನ್ನು ಕಾಲನೆಂಬ ಕಲೆಗಾರ ಧೂಳೆಬ್ಬಿಸಿ ಬಿಡದೆ ಸ್ಮೃತಿಯಲ್ಲಿ ಉಳಿಸಿಕೊಟ್ಟ ಉದಾಹರಣೆಗಳೂ ಅನೇಕ. ಕೇವಲ ಅದರ ನುಡಿಗಟ್ಟಿನ ಬಾಹ್ಯ ಸೌಂದರ್ಯಕ್ಕಾಗಿಯಲ್ಲ, ಅದು ಕೊಟ್ಟ ಧಕ್ಕೆಗಾಗಿ, ಅದು ಒಮ್ಮೆಗೇ ತೆರೆದ ನಮ್ಮ ಮನಸ್ಸಿನ ಕಿಟಕಿಗಳಿಗಾಗಿ, ಒಮ್ಮೆಗೇ ಉಸಿರು ಬಿಟ್ಟು ನಮ್ಮ ಜೀವ ಹಗುರಗೊಳಿಸಿದ್ದಕ್ಕಾಗಿ, ಕಚ್ಚಿಕೊಂಡಿದ್ದ ದವಡೆಯನ್ನು ಸಡಿಲಗೊಳಿಸಿದ್ದಕ್ಕಾಗಿ...

ಬಹುಶಃ, ಬರೆಯುವುದು ಅಷ್ಟೇನೂ ಸುಲಭದ ಕಾಯಕವಲ್ಲ ಎನ್ನುವುದನ್ನು ನೆನಪಿಸುವುದು ಅಂಥ ವಾಕ್ಯಗಳೇ.


ಈ ವಾಕ್ಯದ ಬಗ್ಗೆ ಬ್ರಿಯಾನ್ ಬರೆಯುತ್ತ ಹೋಗುತ್ತಾನೆ. ವಾಕ್ಯ ಸ್ಫುರಿಸುವ ಅರ್ಥಪರಂಪರೆಯನ್ನು ಮಾತ್ರವಲ್ಲ, ಅಲ್ಪವಿರಾಮಗಳ ಬಗ್ಗೆ, ಪದಗಳ ನಡುವಿನ ಗೆರೆಯ ಬಗ್ಗೆ, ಗೆರೆಯ ಎರಡೂ ಪಕ್ಕ ಖಾಲಿಯಿತ್ತೇ ಇಲ್ಲವೆ ಎಂಬ ಬಗ್ಗೆ, ಮುದ್ರಣದ ಆವೃತ್ತಿ ಬದಲಾದಂತೆ ಇಂಥ ಚಿಹ್ನೆಗಳು ಬದಲಾದ ಬಗ್ಗೆ, ಥಾಮಸ್ ಬ್ರೋನ್ ಬದುಕಿನ ಬಗ್ಗೆ, ಅವನು ಬರವಣಿಗೆಗೆ ತೊಡಗಿದ ಸಂದರ್ಭ, ಅದರಲ್ಲಿ ಪಡೆದ ಯಶಸ್ಸು, ಅವನ ಬದುಕಿನ ಏರಿಳಿತಗಳು ಅವನ ಜೀವನದೃಷ್ಟಿಯ ಮೇಲೆ ಬೀರಿದ ಪರಿಣಾಮ, ಅವನ ಒಟ್ಟಾರೆ ಪರಿಸ್ಥಿತಿ, ಮನಸ್ಥಿತಿಗಳ ಬಗ್ಗೆ ಕೂಡ. ಇದು ಈ ಪ್ರಬಂಧದ ಮಟ್ಟಿಗೆ ಮಾತ್ರವಲ್ಲ, ಎಲ್ಲಾ ಲೇಖಕ, ಲೇಖಕಿಯರ ಬದುಕು, ಪ್ರೇಮ, ಪ್ರೇಮ/ದಾಂಪತ್ಯ ವೈಫಲ್ಯ, ಆರ್ಥಿಕ ಪರಿಸ್ಥಿತಿ, ಕಾಯಿಲೆ, ಸಾವಿನೊಂದಿಗಿನ ಹೋರಾಟ, ಕುಡಿತ, ಜೂಜು, ಜಗಳಗಂಟತನ ಇತ್ಯಾದಿ ಇತ್ಯಾದಿ. ಅಂದರೆ, ಭಾಷೆಯೊಂದು ವ್ಯಕ್ತಿಯ ಆತ್ಮದ ಛಂದಸ್ಸಾಗಿ ಮೂಡುವ ಬಗ್ಗೆ ಕೂಡ...

ಚಿತ್ತಾಲರು ಒಂದು ಕಡೆ ಬರೆಯುತ್ತಾರೆ, "ಒಬ್ಬ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗುವುದಕ್ಕೆ ಬೇಕಾಗುವ ಮಾನಸಿಕ ತಯಾರಿ ಒಂದು ಪುಸ್ತಕವನ್ನು ಕೈಗೆತ್ತಿಕೊಳ್ಳುವುದಕ್ಕೂ ಬೇಕು."
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ