ಅಮರೇಶ ನುಗಡೋಣಿಯವರು ಸದಾ ವರ್ತಮಾನದ ಸವಾಲು, ಸಂಘರ್ಷ, ಪಲ್ಲಟಗಳಿಗೆ ತಮ್ಮ ಕೃತಿಯ ಮೂಲಕ ಮುಖಾಮುಖಿಯಾಗುತ್ತ ಬಂದ ಅಪರೂಪದ ಕತೆಗಾರ. ಅವರ ತಲೆಮಾರಿನ ಮತ್ತು ಅವರಿಗಿಂತ ಹಿರಿಯರಾದ ಹೆಚ್ಚಿನ ಕತೆಗಾರರು ಸದಾ ತಮ್ಮ ಬಾಲ್ಯದ ಜಗತ್ತಿಗೇ ಮರಳುತ್ತ, ಸಾರ್ವಕಾಲಿಕವೂ, ಸಾರ್ವತ್ರಿಕವೂ (ವಿಶ್ವಕ್ಕೇ) ಆದ ಮೌಲ್ಯಗಳನ್ನು, ಸತ್ಯಗಳನ್ನು ಕುರಿತೇ ಮತ್ತೆ ಮತ್ತೆ ಬರೆಯುತ್ತ ಸುಖಿಸುತ್ತಿರುವಾಗಲೇ ಅಮರೇಶ ನುಗಡೋಣಿಯವರು ವರ್ತಮಾನಕ್ಕೆ ಮತ್ತು ತಮ್ಮ ತಕ್ಷಣದ ಸಮಾಜಕ್ಕೆ ಸ್ಪಂದಿಸುತ್ತ ಇಂದಿನ ಕತೆಗಳನ್ನು ಬರೆಯುತ್ತಿರುವವರಲ್ಲಿ ಪ್ರಮುಖರಾಗಿ ಗಮನ ಸೆಳೆಯುತ್ತಾರೆ. ಅದು ಕೇವಲ ಭೌತಿಕ ಜಗತ್ತಿನ ವಿವರಗಳ ಮಟ್ಟಿಗೆ, ವರ್ತಮಾನದ ಕಥಾಜಗತ್ತು, ವಸ್ತು ಮತ್ತು ವ್ಯಕ್ತಿಗಳನ್ನು ಸೃಷ್ಟಿಸುವುದರ ಮಟ್ಟಿಗೆ ಸೀಮಿತವಾದ ಬದ್ಧತೆಯಾಗಿರದೆ, ಅವರು ತಮ್ಮ ಪಾತ್ರದ ಜೀವನಶೈಲಿಯಲ್ಲಿ, ದೈನಂದಿನ ಬದುಕಿನಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಅವನ ಆದ್ಯತೆ-ಪ್ರಾಶಸ್ತ್ಯಗಳಲ್ಲಿ, ಮೌಲ್ಯ-ಆದರ್ಶಗಳಲ್ಲಿ ಕಂಡುಬರುವ ಸೂಕ್ಷ್ಮ ಪಲ್ಲಟಗಳ ಬಗ್ಗೆ ತೋರುವ ಬದ್ಧತೆಯಾಗಿದೆ. ಹೀಗಾಗಿ ಅವರ ಗ್ರಹಿಕೆಗಳಲ್ಲಿನ ಸೂಕ್ಷ್ಮಸಂವೇದಿತ್ವ ಸದಾ ಹರಿತವಾಗಿಯೇ ಉಳಿದುಬಂದಿದೆ. ಅವರನ್ನು ಕುತೂಹಲದಿಂದ ಓದಲು ಇದು ನಮಗಿರುವ ಬಹುಮುಖ್ಯ ಆಕರ್ಷಣೆಯಾಗಿದೆ.
ಸದ್ಯದ ಕಾದಂಬರಿ, ‘ಗೌರಿಯರು’ ತುಂಬ ಯೋಜಿತ ಹಂದರವುಳ್ಳ, ತಂತ್ರ, ವಸ್ತು ಮತ್ತು ಉದ್ದೇಶದ ಮಟ್ಟಿಗೆ ಹೆಚ್ಚು ಸ್ಪಷ್ಟವಾಗಿ ಮಹತ್ವಾಕಾಂಕ್ಷೆಯ ರಚನೆಯಾಗಿದ್ದೂ ಅದರ ಪೂರ್ವನಿಯೋಜಿತ ರಾಚನಿಕತೆಯೇ ಅದರ ಮಿತಿಯಾಗದ ಹಾಗೆ ಅವರು ಬಚಾವಾಗಿರುವುದನ್ನು ಗಮನಿಸುವುದೇ ಈ ಬರಹದ ಮುಖ್ಯ ಉದ್ದೇಶ. ಉಳಿದಂತೆ ಈ ಕಾದಂಬರಿಯ ಬಗ್ಗೆ ಸಾಕಷ್ಟು ಆಳವಾಗಿ, ವಿವರವಾಗಿ ಈಗಾಗಲೇ ಖ್ಯಾತ ವಿಮರ್ಶಕರಾದ ಎಂ ಎಸ್ ಆಶಾದೇವಿ, ಫ್ರೊ.ಶೈಲಜ ಹಿರೇಮಠ, ಕೆ ವಿ ನಾರಾಯಣ ಮೊದಲಾದವರು ಬರೆದಿದ್ದಾರೆ.
ಸ್ವಭಾವತಃ ಮುಗ್ಧ ಎನಿಸುವ ಅಮರೇಶ ನುಗಡೋಣಿಯವರ ಸಹಜ ಶೈಲಿ ಮತ್ತು ಬದುಕನ್ನು ಅವರು ನೋಡುವ ಕ್ರಮದಲ್ಲಿ ಇರುವ ಸಹಜ - ಸರಳ - ನೇರ ಗುಣವೇ ಇದನ್ನು ಒಂದು ಅಜೆಂಡಾ ಕೃತಿಯಾಗದ ಹಾಗೆ ಪೊರೆದಿದೆ ಮತ್ತು ಒಂದು ನಿರ್ದಿಷ್ಟ ಹಂತದಲ್ಲಿ ಅದು ತನ್ನ ಮಿತಿಯಾಗಬಹುದಾಗಿದ್ದ ಚೌಕಟ್ಟಿನಿಂದ ಮುಕ್ತವಾಗಿ ಬೆಳೆದು, ಅದನ್ನೇ ಮೀರಿ ನಿಲ್ಲುತ್ತದೆ. ಈ ಕಾದಂಬರಿಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇ ಅದು ಎಂದು ನನಗಂತೂ ಅನಿಸಿದೆ.
ಸ್ವಲ್ಪ ಸೂಕ್ಷ್ಮವಾಗಿ ಈ ಕೃತಿಯನ್ನು ಗಮನಿಸುವ ಅಗತ್ಯ ಇರುವುದರಿಂದ, ಕತೆಯನ್ನು ಹೇಳಿ ಬಿಡುವ spoiler ಲೇಖನ ಇದಾಗದಂತೆ ಸಾಧ್ಯವಾದ ಮಟ್ಟಿಗೆ ಎಚ್ಚರಿಕೆ ವಹಿಸುತ್ತ ಅದರ ಒಟ್ಟು ಹಂದರವನ್ನು ವಿವರಿಸುತ್ತೇನೆ.
ಮಾದೇವಪ್ಪ ಮತ್ತು ನೀಲಮ್ಮನ ಮಕ್ಕಳು ಸದಾಶಿವಪ್ಪ ಮತ್ತು ಶಿವಲಿಂಗಪ್ಪ. ಆದರೆ ಇಲ್ಲಿ ಮಾದೇವಪ್ಪ ಮತ್ತು ನೀಲಮ್ಮನ ಬದುಕಿನ ಬಗ್ಗೆ ಹೆಚ್ಚೇನೂ ವಿವರಗಳಿಲ್ಲ. ಹಿರಿಯ ಮಗ ಸದಾಶಿವಪ್ಪನವರ ಪತ್ನಿ ಪಾರ್ವತಿ. ಪಾರ್ವತಿಯ ತಂಗಿ ದಾಕ್ಷಾಯಿಣಿ. ಈ ಅಕ್ಕ ತಂಗಿಯರ ಹೊಕ್ಕುಬಳಕೆ, ಆತ್ಮೀಯತೆ ತುಂಬ ಹೃದಯಸ್ಪರ್ಶಿಯಾಗಿದೆ. ದಾಕ್ಷಾಯಿಣಿಯ ಗಂಡ ಶುಗರ್ ಪೇಶಂಟ್ ಮತ್ತು ಹಾಗಾಗಿ ಆಕೆ ತನ್ನ ಮನೆ ಬಿಟ್ಟು ಹೊರಗಡೆ ಹೊರಡುವುದು ಹೆಚ್ಚೂಕಡಿಮೆ ದುಸ್ತರವಾಗಿ ಬಿಟ್ಟಿದೆ. ಸದಾಶಿವಪ್ಪ ಮತ್ತು ಪಾರ್ವತಿಯರ ಮಕ್ಕಳು - ಶಿವಲೀಲಾ, ಅಕ್ಕಮ್ಮ ಮತ್ತು ಶ್ರೀದೇವಿ. ಈ ಮೂವರದ್ದೂ - ಈಗಾಗಲೇ ಹೇಳಿರುವ ಪಾರ್ವತಿ ಮತ್ತು ದಾಕ್ಷಾಯಿಣಿಯರ ಜೊತೆ ಸೇರಿ - ಒಂದೊಂದು ತರದ ಕತೆ. ವಿಶೇಷವೆಂದರೆ, ಈ ಮೂವರು ಮತ್ತು ಈ ಮೂವರು ಮಾತ್ರ ಈ ಕಾದಂಬರಿಯಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸ್ವಾಯತ್ತೆ ಹೊಂದಿರುವ, ಆಧುನಿಕ ಮನೋಭಾವದ ಹೆಣ್ಣುಮಕ್ಕಳು. ಇವರಲ್ಲಿ ಒಬ್ಬಳು ತೀರ ಸಹನೆಯಿಂದ ಕಾದೂ ಕಾದೂ ಕೊನೆಗೂ ದಾಂಪತ್ಯದ ಚೌಕಟ್ಟಿನಿಂದ ಹೊರಬರಬೇಕಾದ ಸಂದರ್ಭದಲ್ಲಿ ಹಾಗೆ ಮಾಡುವ ಛಾತಿ ತೋರುವಷ್ಟರ ಮಟ್ಟಿಗೆ ಮಾತ್ರ ಸ್ವತಂತ್ರ ಪ್ರವೃತ್ತಿಯವಳಾದರೆ, ಇನ್ನೊಬ್ಬಳು ಸಂಬಂಧದ ಹಂಗಿಲ್ಲದಂತೆ ಸಿಂಗಲ್ ಪೇರೆಂಟ್ ಆಗಿ ಬದುಕು ರೂಪಿಸಿಕೊಳ್ಳಬಲ್ಲಷ್ಟು ದಿಟ್ಟೆ. ಮೂರನೆಯವಳು ಚಡ್ಡಿಯಲ್ಲಿ ಓಡಾಡುವಷ್ಟು ಮೈಚಳಿ ಬಿಟ್ಟ, ತನ್ನ ಕಿರಿಕ್ ಗುಣದಿಂದಲೂ ಆಕರ್ಷಕಳೆನಿಸಬಹುದಾದ, ಲಿವಿನ್ ಸಂಬಂಧವನ್ನು ‘ಹೇಗಾದರೂ ಮಾಡಿ’ ನೇರ್ಪುಗೊಳಿಸಿಕೊಳ್ಳಬೇಕೆಂಬ ಮನಸ್ಸುಳ್ಳ ‘ಕೊಲ್ಲುವ’ ಹುಡುಗಿ, ಲಕ್ಷದಷ್ಟು ಸಂಬಳ ಎಣಿಸುವ ಉಪನ್ಯಾಸಕಿ. ಈ ಮೂವರ ಕತೆಗಳೇ ಈ ಕಾದಂಬರಿಯಲ್ಲಿ ಪ್ರಧಾನವಾಗಿ ಪೋಷಣೆ ಪಡೆದಿರುವುದರಿಂದ, ಒಂದು ನಿಟ್ಟಿನಲ್ಲಿ ಇವರೇ ಕಾದಂಬರಿಯ ಕೇಂದ್ರವೆಂದರೂ, ಸದಾಶಿವಪ್ಪ ಮತ್ತು ಶಿವಲಿಂಗಪ್ಪನವರ ಕೃಷಿಕ ಬದುಕು ಕೂಡಾ ಕೇಂದ್ರಬಿಂದುವಿನಿಂದ ಸರಿಯದೇ ನಿಲ್ಲುವುದು ಕಾದಂಬರಿಯ ಹರಹನ್ನು ಅದರ ಹೆಸರು ಒಡ್ಡುವ ಚೌಕಟ್ಟಿನಾಚೆಗೂ ವಿಸ್ತರಿಸುತ್ತದೆ.
ಶಿವಲೀಲಾ, ಅಕ್ಕಮ್ಮ ಮತ್ತು ಶ್ರೀದೇವಿ ಎಂಬ ಮೂರೂ ಪಾತ್ರಗಳನ್ನು ರೂಪಿಸುವಲ್ಲಿ ಅಮರೇಶ ನುಗಡೋಣಿಯವರು ಪರಂಪರೆ, ತಲೆಮಾರು, ವಯೋಮಾನ ಮತ್ತು ಕಾಲಮಾನಕ್ಕೆ ಸಲ್ಲುವಂತೆ ಆಯಾ ಪಾತ್ರಗಳ ದಿಟ್ಟತನಕ್ಕೆ ಒಡ್ಡಿದ ಮಿತಿ ಮತ್ತು ತೆರೆದ ಆಕಾಶ-ಅವಕಾಶಗಳನ್ನು ಗಮನಿಸಬೇಕು. ಮೊದಲನೆಯ ಪಾತ್ರ ಗಂಡಿನ ಹಂಗಿನಿಂದ ಹೊರಬಂದರೂ ಮತ್ತೆ ಹೊಸ ಸಂಬಂಧಕ್ಕೆ ಮನಸ್ಸು ಮಾಡುವುದಿಲ್ಲ. ಎರಡನೆಯ ಪಾತ್ರ ಗಂಡಿನ ಹಂಗು, ಆಸರೆ ತೊರೆದರೂ ಮುಂದಿನ ತಲೆಮಾರನ್ನು ರೂಪಿಸಿಕೊಳ್ಳುತ್ತಾಳೆ, ಗಂಡು ಮಗುವಿನ ಹೆಮ್ಮೆಯ ತಾಯಾಗುತ್ತಾಳೆ. ಮೂರನೆಯ ಪಾತ್ರ ತನ್ನ ಸ್ವತಂತ್ರ ಮನೋವೃತ್ತಿ, ಸ್ವಚ್ಛಂದವಾಗಿ ಬದುಕಿನ ರಸವನ್ನು ಆಸ್ವಾದಿಸುವ ಮನೋಧರ್ಮ ಎರಡನ್ನೂ ಬಿಟ್ಟುಕೊಡದೇನೆ ಗಂಡಿನ ಪ್ರೀತಿ, ಸಂಬಂಧಗಳ ಬಗ್ಗೆ ಆಸಕ್ತಿಯನ್ನೂ ಮತ್ತು ಅದನ್ನು ಉಳಿಸಿಕೊಳ್ಳುವ ಸಂಕಲ್ಪವನ್ನೂ ಹೊಂದಿದೆ. ಈ ಬಗೆಯ ಸೂಕ್ಷ್ಮ ವ್ಯತ್ಯಾಸವುಳ್ಳ ಮೂರು ಪಾತ್ರಗಳನ್ನು ಒಟ್ಟಿಗೇ ನಿಭಾಯಿಸಿಕೊಂಡು ಬರುವ ಸವಾಲನ್ನು ಅವರು ನಿರ್ವಹಿಸಿರುವ ಬಗೆ ತುಂಬ ಗಮನಾರ್ಹವಾಗಿದೆ.
ಈಗಾಗಲೇ ಹೇಳಿರುವಂತೆ ಸದಾಶಿವಪ್ಪನ ತಮ್ಮ ಶಿವಲಿಂಗಪ್ಪ ಆತನ ಹೆಂಡತಿ ಚೆನ್ನಮ್ಮ. ಈಕೆಯೇ ಕುಟುಂಬದಲ್ಲಿ ಪಾಲು ಪಟ್ಟಿಯ ಮಾತೆತ್ತಿದವಳು ಮತ್ತು ಕಥಾನಕದ ವರ್ತಮಾನಕ್ಕೆ ಸಲ್ಲುವಂತೆ ಈ ಪಾತ್ರ ಬದುಕಿಲ್ಲ. ಇವರ ಮಗಳು ಕಲ್ಯಾಣಿ - ಆಕೆಯ ಗಂಡ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವ ಒಬ್ಬ ರೈತ. ಇವರ ಮಗ ಶರಣ, ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕ. ಸದ್ಯ ಶಿವಲಿಂಗಪ್ಪನ ಕೈಯಲ್ಲಿ ಕೃಷಿ ಸುಲಲಿತವಾಗಿ ಸಾಗುತ್ತಿಲ್ಲ. ಅವನ ಮುಂದಿನ ತಲೆಮಾರು ಕೃಷಿಯಿಂದ ದೂರವಾಗುವ ಹವಣಿಕೆಯಲ್ಲಿದೆ. ಅವನು ಸಾಕಷ್ಟು ಸಾಲದಲ್ಲಿ ಮುಳುಗಿ ಸೋತಿದ್ದಾನೆ. ಅವನ ಅನಾರೋಗ್ಯ, ಒಂಟಿತನ ಮತ್ತು ಆರ್ಥಿಕ ಸೋಲು ಸದಾಶಿವಪ್ಪನವರಲ್ಲಿ ಮರುಕವನ್ನೂ, ಚಿಂತನ-ಮಂಥನವನ್ನೂ ಹುಟ್ಟುಹಾಕಿದೆ.
ತಮ್ಮ ಶಿವಲಿಂಗಪ್ಪನ ಹೆಂಡತಿಯ ಪಾಲು ಪ್ರಶ್ನೆಯ ಎದುರು ಮೌನವಾಗಿಯೇ ಮನೆಯಿಂದ ಹೊರಬಂದು, ಊರ ಹೊರಗಿನ ಪಾಳುಬಿದ್ದ ಜಮೀನು ಖರೀದಿಸಿ, ತೋಟ ನಿರ್ಮಿಸಿಕೊಂಡ ಸದಾಶಿವಪ್ಪ, ಕೃಷಿ ಬದುಕಿನ ಹಲವಾರು ಏಳುಬೀಳುಗಳ ಒಂದು ಪ್ರತೀಕದಂತಿದ್ದಾನೆ. ಅವನ ಸಹಪಾಠಿಯೂ ಆಗಿದ್ದ ಮಠದ ಸ್ವಾಮಿಗಳ ನೆರವಿಂದಲೇ ಖರೀದಿಸಿದ್ದ ಜಮೀನು, ತೋಟವನ್ನು ನುಂಗಿ ಹಾಕಲು ಸಂಚು ರೂಪಿಸಿದವರಿಂದ ಬಚಾವಾಗುವುದಕ್ಕೂ ಅವನಿಗೆ ಅವರೇ ನೆರವಾಗುತ್ತಾರೆ. ಅವನ ತೋಟದಲ್ಲಿಯೇ ನೆಲೆಯಾಗಿ ದುಡಿದ ದಂಪತಿಗಳು ಮಲ್ಲಪ್ಪ ಮತ್ತು ಎಲ್ಲಮ್ಮ.
ಗೌರಿಪೂಜೆಯ ನೋಂಪಿಯ ತಯಾರಿಗೆ ಸಹಕರಿಸಲು ಬರುವ ಹೂಗಾರರ ಮನೆಯ ಹುಡುಗಿಯರು ಸಣ್ಣಗೌರಮ್ಮ ಮತ್ತು ದೊಡ್ಡಗೌರಮ್ಮ. ನೋಂಪಿ ಪೂಜೆಯ ತಯಾರಿ ನಡೆದಿರುವುದು ಹಂಪಮ್ಮನ ಮನೆಯಲ್ಲಿ. ಹೀಗೆ ಒಟ್ಟಾರೆ ಕಾದಂಬರಿಯಲ್ಲಿ ಸ್ತ್ರೀಯರೇ ಬಹುಮತೀಯರು ಎನ್ನುವುದು ನಿಜ ಮಾತ್ರವಲ್ಲ ಇವರೆಲ್ಲರ ಹೆಸರುಗಳನ್ನು ಗಮನಿಸಿದರೂ ತಿಳಿಯುತ್ತದೆ, ಎಲ್ಲರೂ ಗೌರಿಯರೇ!
ಇಲ್ಲಿ ಗಮನಿಸಬೇಕಾದ ಚೋದ್ಯವೊಂದಿದೆ. ಈಗಾಗಲೇ ಅರ್ಥವಾಗಿರುವಂತೆ ಸದಾಶಿವಪ್ಪನ ಮೂವರು ಮಕ್ಕಳಾದ ಶಿವಲೀಲಾ, ಅಕ್ಕಮ್ಮ ಅಥವಾ ಶ್ರೀದೇವಿಯರು ಮೂಲಭೂತವಾದಿ, ಸನಾತನೀ ಅರ್ಥಪರಂಪರೆಯಲ್ಲಿ ಮುತ್ತೈದೆಯರಲ್ಲ. ಆ ಅರ್ಥಪರಂಪರೆಗೆ ಒಗ್ಗುವಂತೆ ಅವರ ಬದುಕು ನೇರ್ಪುಗೊಳ್ಳಲಿ ಎನ್ನುವುದೇ ಈ ಪೂಜೆಯ ಉದ್ದೇಶ, ಕನಿಷ್ಠ ಪಾರ್ವತಿ-ದಾಕ್ಷಾಯಿಣಿಯರ ಮಟ್ಟಿಗೆ. ಈ ಮೂವರೂ ಆರ್ಥಿಕವಾಗಿಯೂ, ಶೈಕ್ಷಣಿಕವಾಗಿಯೂ ಆಢ್ಯರು. ಮೂವರೂ ಮೂರು ಕಾರುಗಳಲ್ಲಿ ಹುಟ್ಟಿದ ಮನೆಗೆ ಬಂದಿದ್ದಾರೆನ್ನುವುದನ್ನು ಊರು ಗಮನಿಸಿಯೇ ಗಮನಿಸಿದೆ. ಊರಿನಲ್ಲಿ ಸದಾಶಿವಪ್ಪನಿಗೂ ಒಂದು ಗೌರವಯುತವಾದ ಸ್ಥಾನಮಾನವಿದ್ದೇ ಇದೆ ಎನ್ನುವುದು ಕೂಡ ನಮ್ಮ ಅರಿವಿಗೆ ಬರುತ್ತದೆ. ಈ ಒಟ್ಟು ಹಿನ್ನೆಲೆಯಲ್ಲಿ ಈ ಮೂವರ ಗೌರಿಪೂಜೆಯನ್ನು ಈ ಊರಿನ ಧರ್ಮಭೀರುಗಳು ಸಹಿಸಿದಂತಿದೆಯೇ ಹೊರತು, ನೋಂಪಿ ಪೂಜೆಯ ಸಂದರ್ಭದಲ್ಲಿ ಕೇಳಿ ಬರುವ ಟೀಕೆ, ಕುಹಕದ ಮಾತುಗಳನ್ನು ಗಮನಿಸಿದರೆ ಅದಕ್ಕೆ ಬೇರಾವ ಐಡಿಯಲಿಸ್ಟಿಕ್ ಆಯಾಮಗಳೂ ಇಲ್ಲಿ ಮೂಡುವುದಿಲ್ಲ. ಇದನ್ನು ಹೇಗಿದೆಯೋ ಹಾಗೆ ಚಿತ್ರಿಸಿದ ಅಮರೇಶ ನುಗಡೋಣಿಯವರು ವಿಶೇಷ ಅನಿಸುತ್ತಾರೆ.
ಅವರ ಕಾದಂಬರಿಯ ಹೆಸರು, ಅದು ಸ್ಫುರಿಸುವ ಆಶಯ, ವಿಮರ್ಶಕರು ಎದುರು ನೋಡುತ್ತಿರುವ ಸ್ತ್ರೀಮತದ ಅಭಿವ್ಯಕ್ತಿಯ ಅಂಶಗಳು ( ಈ ಕುರಿತು ಒಬ್ಬ ಬರಹಗಾರನಿಗಿರುವ ಪ್ರಜ್ಞೆಯ ಒತ್ತಡ) ಮತ್ತು ಒಂದು ಕೃತಿ ತಾತ್ವಿಕವಾಗಿ, ಸಾಮಾಜಿಕ ಅರ್ಥಪೂರ್ಣತೆಯನ್ನು ಆವಾಹಿಸಿಕೊಳ್ಳುವುದಕ್ಕಾಗಿ ಪಡೆದುಕೊಳ್ಳಬಹುದಾಗಿದ್ದ ಒಂದು ಕಾಲ್ಪನಿಕ ರೂಪದ ತುರ್ತುಗಳನ್ನು ಮೀರಿನಿಂತಿರುವುದಕ್ಕಾಗಿ ಅಮರೇಶ ನುಗಡೋಣಿಯವರು ಹೆಚ್ಚು ಅಭಿನಂದನಾರ್ಹರಾಗಿದ್ದಾರೆ. ಬಹುಶಃ ಇನ್ನೊಂದು ಅತಿರೇಕವಾಗಬಹುದಾಗಿದ್ದ ಧಾರ್ಮಿಕ ಮೂಲಭೂತವಾದಿಗಳ ಪೀಡೆಯೂ ಅವರ ಕಥಾಜಗತ್ತಿನಲ್ಲಿಲ್ಲ. ಅವರ ಕಥಾಲೋಕದ ಮಂದಿ ಅವರು ದಿನನಿತ್ಯ ನೋಡುತ್ತಿರುವ ಅದೇ ಸಾಮಾನ್ಯ ಮಂದಿ. ಅವರಿಗೆ ಕಥಾಜಗತ್ತಿನ ಪಾಲಿಶ್ಡ್ ಪಾತ್ರಗಳಗುವ ಉಮೇದಿ ಒಂದಿಷ್ಟೂ ಇಲ್ಲ. ಅವರು ಅಮರೇಶರ ಲೇಖನಿಯಲ್ಲಿ ಕಾಲ್ಪನಿಕ ಆದರ್ಶಗಳಾಗಿ ಮೈತಳೆಯುವುದಿಲ್ಲ. ಬದಲಿಗೆ, ಮಣ್ಣಿನ, ಬೆವರಿನ ವಾಸನೆಯಿರುವ, ಹೊಟ್ಟೆಕಿಚ್ಚು, ಸಿಟ್ಟು, ವ್ಯಂಗ್ಯಗಳೆಲ್ಲ ಹೊರಹಾಕಲು ಕಾದಿರುವ ಸಾಮಾನ್ಯ ಮನುಷ್ಯರಾಗಿರಲು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಇಲ್ಲಿ ಸ್ತ್ರೀಮತವಿಲ್ಲ, ಇರುವುದೆಲ್ಲ ಮನುಷ್ಯಮತವಷ್ಟೇ ಆಗಿ ಕಾದಂಬರಿ ಸಂಪನ್ನವಾಗುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ