Saturday, September 18, 2021

ಶುದ್ಧ ಕವಿತೆಯ ಯಕ್ಷಿಣಿ ಕನ್ನಡಿ


ಇಂಗ್ಲೀಷಿನ ಆದಿಕವಿಯ ಕತೆಯೊಂದಿದೆ. ಇವನು ನಮ್ಮ ಕಾಳಿದಾಸನ ಪೂರ್ವಾಶ್ರಮದಂತೆ ಒಬ್ಬ ಅನಕ್ಷರಸ್ಥ ಕುರುಬ. ಒಮ್ಮೆ ಒಂದು ಔತಣಕೂಟದಲ್ಲಿ ಸರದಿ ಪ್ರಕಾರ ಎಲ್ಲರೂ ಏನನ್ನಾದರೂ ಹಾಡಬೇಕೆಂದು ತೀರ್ಮಾನವಾಗುತ್ತದೆ. ಆದರೆ ಈತ ಹಾಡಲಾರ. ಅಲ್ಲಿಂದ ಕದ್ದು ತಪ್ಪಿಸಿಕೊಳ್ಳುತ್ತಾನೆ. ರಾತ್ರಿ ಮಲಗಿದ್ದಾಗ ಕನಸಿನಲ್ಲಿ ದೇವರೇ ಪ್ರತ್ಯಕ್ಷನಾಗಿ ‘ಹಾಡು ಮಗಾ’ ಎನ್ನಬೇಕೆ! ‘ನನಗೆ ಹಾಡಲು ಬರುವುದಿಲ್ಲ’ ಎಂದರೆ ದೇವರು ಕೇಳಬೇಕಲ್ಲ. ಕೊನೆಗೆ, ‘ಹಾಡುವುದಾದರೂ ಏನನ್ನು ನಾನು’ ಎನ್ನಲಾಗಿ ದೇವರೇ ‘ಸೃಷ್ಟಿಯ ಆದಿಯಿಂದಲೇ ತೊಡಗು’ ಎನ್ನುತ್ತಾನೆ.ಹುಡುಗ ಬಾಯಿ ತೆರೆದಿದ್ದೇ, ಸ್ವತಃ ಅವನಿಗೇ ಅಚ್ಚರಿಯಾಗುವಂತೆ ಸ್ತುತಿಗೀತೆ ಸರಾಗವಾಗಿ ನುಡಿಗೊಂಡು ಬಂತಂತೆ. 

ಕುರುಬ ಎದ್ದಾಗ ಕವಿಯಾಗಿರುತ್ತಾನೆ, ಮುಂದೆ ಸಂತನೂ ಆಗುತ್ತಾನೆ. ಆದರೆ ಅವನು ಜಗತ್ತಿನೆದುರು ಹಾಡಿದ ಹಾಡು ಏನಿದೆ, ಅದು ಆವತ್ತು ಅವನು ಕನಸಿನಲ್ಲಿ ಹಾಡಿದ ಹಾಡಿನಷ್ಟು ಸೊಗಸಾಗಿರಲಿಲ್ಲವಂತೆ. ಇಡೀ ಕತೆಯ ಬಹುಮುಖ್ಯವಾದ ಎಳೆಯೇ ಇದು. ಬರೆಯದೇ ಇರುವ ಪ್ರತಿಯೊಂದು ಕವಿತೆಯೂ ಶ್ರೇಷ್ಠ ಕವಿತೆ. ಕವಿ ಅದನ್ನು ಬರೆಯಲು ಪ್ರಯತ್ನಿಸಿದಂತೆಲ್ಲ ಅದು ಇನ್ನೇನೋ ಆಗಿ ಬಿಡುತ್ತದೆ. ದಂತವೈದ್ಯ ನಿಮ್ಮ ಬಾಯನ್ನು ಅಗಲಿಸಿ ಒಸಡಿಗೆ ಆನಿಸಿ ಕನ್ನಡಿಯುಳ್ಳ ಕಡ್ಡಿಯೊಂದನ್ನು ಸಿಕ್ಕಿಸಿಟ್ಟು ಒಳಗನ್ನೆಲ್ಲ ಬಗೆದು ನೋಡುವಂತೆ ಕವಿತೆ. ಬೇಕೆಂದರೂ ಆಗ ಅದನ್ನು ನೀವು ಹಾಡಲಾರಿರಿ. ಹಾಡಬಹುದಾದ ಹೊತ್ತಿಗೆ ಅದು ಹಾರಿ ಹೋಗಿರುತ್ತದೆ. ಶುದ್ಧ ಕವಿತೆ ಯಾವತ್ತೂ ಯಕ್ಷಿಣಿ ಕನ್ನಡಿಯಲ್ಲಿ ಕಂಡ ಬಿಂಬದಂತೆ. ಅದರ ಪ್ರತಿಬಿಂಬವನ್ನು ಹಿಡಿಯುವುದು ಕಷ್ಟ. ಹಿಡಿದರೂ ಅದರೆದುರು ಇಲ್ಲದ ಬಿಂಬದಿಂದಾಗಿ ಅದು ಕಿಂಚಿದೂನ.

ಜ ನಾ ತೇಜಶ್ರೀ ಸದ್ಯ ಬರೆಯುತ್ತಿರುವ ಕನ್ನಡದ ಕವಿಗಳಲ್ಲಿ ಬಹುಮುಖ್ಯರಾದವರು. ಸದ್ಯದ ಸಂಕಲನ "ಯಕ್ಷಿಣಿ ಕನ್ನಡಿ"ಯಲ್ಲಿನ ಕೆಲವು ಮುಖ್ಯ ಕವನಗಳನ್ನು ಆಗಲೇ ಪತ್ರಿಕೆಯಲ್ಲಿ ಓದಿದ್ದರೂ ಅವರ ಹಲವಾರು ಕವಿತೆಗಳ ಜೊತೆಗಿಟ್ಟು ಅವುಗಳನ್ನು ಮತ್ತೊಮ್ಮೆ ಓದುವಾಗ ಸಿಗುವ ಅನುಭೂತಿ ಬೇರೆಯೇ ಆದುದು. ಅಲ್ಲದೆ ಬಹಳ ದೀರ್ಘ ಮೌನದ ಬಳಿಕ ತೇಜಶ್ರೀಯವರ ಕವಿತೆಗಳು ಓದುಗರಿಗೆ ಸಿಗುತ್ತಿರುವುದೂ ಈ ಸಂಕಲನ ಮಹತ್ವ ಪಡೆಯಲು ಇನ್ನೊಂದು ಕಾರಣ. "ಕ್ಯಾಪ್ಟನ್ ಕವಿತೆಗಳು" ಕಳೆದ ಒಂದೆರಡು ವರ್ಷಗಳ ಹಿಂದಷ್ಟೇ ಬಂದಿದ್ದರೂ ಅವು ಏಕಸೂತ್ರದ, ಒಂದು ನಿರ್ದಿಷ್ಟ ಮನಸ್ಥಿತಿಯ ಸಿದ್ಧತೆಯನ್ನಷ್ಟೇ ಬೇಡುವ ಬಗೆಯ ಕವಿತೆಗಳಾಗಿದ್ದವು. ಸಾಕಷ್ಟು ಅನುವಾದಿತ ಮತ್ತು ಸಂಕಲಿತ ಕವಿತೆಗಳ ಸಂಕಲನವನ್ನು ಅವರು ಹೊರತಂದಿದ್ದರೂ ಅವರ ಸ್ವಂತ ರಚನೆಗಳು ಅಪರೂಪವಾಗಿದ್ದವು ಎನ್ನಬೇಕು. ಹಾಗಾಗಿ ಬಹಳ ವಿಭಿನ್ನವೂ, ವಿಶಿಷ್ಟವೂ ಆದ ಮುವ್ವತ್ತೈದು ಕವಿತೆಗಳಿಂದ ಈ ಸಂಕಲನ ಗಮನಸೆಳೆಯುತ್ತದೆ.

ಕನ್ನಡದಲ್ಲಿ ‘ಆಕಾಶರಾಯ’ರನ್ನು, ‘ಪುಷ್ಪಕವಿ’ಗಳನ್ನು ಗೇಲಿ ಮಾಡಿದಂತೆಯೇ ‘ಅರ್ಥವಾಗುವ ಹಾಗೆ ಬರೆಯಿರಿ’ ಎಂದವರನ್ನೂ ಗೇಲಿ ಮಾಡಲಾಯಿತು. ಆದರೆ, ಕಾಲದ ಪರೀಕ್ಷೆಯಲ್ಲಿ ಅರ್ಥವಾಗದ ಹಾಗೆ ಬರೆದವರು, ನಿರ್ದಿಷ್ಟ ವ್ಯಾಖ್ಯಾನಕಾರರ ಹಂಗಿನಲ್ಲಷ್ಟೇ ಸಾಮಾನ್ಯ ಓದುಗರಿಗೆ ಅರ್ಥವಾದವರು ಬಹುಬೇಗ ಜನಮನದಿಂದ ಮರೆಯಾದರು; ಹೆಗ್ಗಳಿಕೆಗೆ ಅಲ್ಲಿ ಇಲ್ಲಿ ಉಲ್ಲೇಖಿಸಿ ತಮ್ಮ ಬೌದ್ಧಿಕ ಮೇಲ್ಮಟ್ಟವನ್ನು ಹೇಳಿಕೊಳ್ಳುವುದಕ್ಕೆ ಮಾತ್ರ ಬಳಕೆಯಾಗುವ ಮಟ್ಟದಲ್ಲಿ ಉಳಿದರು ಎನ್ನುವುದು ನಿಜ. ಹಾಗೆಂದ ಮಾತ್ರಕ್ಕೆ ಸರಳವಾಗಿ ಬರೆದವರೆಲ್ಲ ಶ್ರೇಷ್ಠ ಕವಿಗಳೆಂದೇನಲ್ಲ. ಮುಖ್ಯ, ಕವಿತೆ ಎನ್ನುವುದರ ಪರಿಕಲ್ಪನೆಯೇ ಕನ್ನಡದಲ್ಲಿ ಅಷ್ಟು ಸ್ಪಷ್ಟವಾಗಿಲ್ಲ ಎನಿಸುತ್ತದೆ, ವಿಶೇಷತಃ ಬೇರೆ ಬೇರೆ ಭಾಷೆಯಲ್ಲಿ, ವಿಶೇಷತಃ ಭಾರತೀಯ ಭಾಷೆಯಲ್ಲಿಯೇ ಇವತ್ತು ಕವಿತೆ ಬರೆಯುತ್ತಿರುವವರ ನಡುವೆ ಕನ್ನಡದ ಕವಿತೆಗಳನ್ನಿಟ್ಟು ನೋಡುವಾಗ ಈ ಮಾತು ಬಂದೇ ಬರುತ್ತದೆ. 

ನಮ್ಮಲ್ಲಿ ಮುಖ್ಯವಾಗಿ ಐದು ಬಗೆಯ ಕವಿತೆಗಳು ಕಂಡು ಬರುತ್ತವೆ. (ಕವಿತೆ, ಕವನ, ಪದ್ಯಗಳ ಕುರಿತೇ ಹೊರತು ಮಹಾಕಾವ್ಯ, ಖಂಡಕಾವ್ಯಗಳಿಗೆ ಅನ್ವಯಿಸಿ ಹೇಳುತ್ತಿಲ್ಲ.)

1. ಒಂದು ನಿರ್ದಿಷ್ಟ ಸ್ಥಿತಿ (ಗತಿ)ಯ ಕುರಿತು ಬರೆದ ಕವಿತೆಗಳು. ಇವು ಒಂದು ಸ್ಥಿರ ಚಿತ್ರವನ್ನು ಪದಗಳಲ್ಲಿ ಹಿಡಿದು ಕೊಡುವ ಪ್ರಯತ್ನದಲ್ಲಿರುತ್ತವೆ. ಅವು ಕಥಾನಕದ ಒಂದು ಫ್ಲ್ಯಾಶ್ ಆಗಬಹುದು, ಕ್ಷಣಭಂಗುರವಾದ ಒಂದು ನೋಟ ಆಗಬಹುದು, ಒಂದು ರಾಜಕೀಯ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವಂಥದ್ದಾಗಬಹುದು ಅಥವಾ ಕ್ರಾಂತಿಕಾರಕ ಗೀತೆಗಳೋ, ಪದ್ಯಗಳೋ ಆಗಬಹುದು, ಸಿನಿಮಾಕ್ಕೆ ಬರೆದ ಕವಿತೆಯೂ ಆಗಬಹುದು. ಇವು ಏನನ್ನು ಕಾಣಿಸುತ್ತವೆಯೋ ಅದರ ಹಿಂದುಮುಂದಿನ ಪರಿಸ್ಥಿತಿಯತ್ತ ನಮ್ಮ ಗಮನ ಸೆಳೆಯುವುದರಾಚೆ ಹೆಚ್ಚಿನ ಉದ್ದೇಶವನ್ನು ಹೊಂದಿರುವುದಿಲ್ಲ. ಭಾವೋದ್ದೀಪನ ಅಥವಾ ಬೌದ್ಧಿಕ ಜಾಗೃತಿ ಎರಡೂ ಬಗೆಯ ಉದ್ದೇಶದಿಂದ ಇಂಥ ಕವಿತೆಗಳು ಹುಟ್ಟಬಹುದು. ಒಂದು ನಿರ್ದಿಷ್ಟ ಛಂದೋಬದ್ಧ ಲಯ ಅಥವಾ ಗೇಯತೆ ಕೂಡ ಈ ಬಗೆಯ ಕವಿತೆಗಳ ಒಂದು ಲಕ್ಷಣ. ಆದರೆ ಈ ಕವಿತೆಗಳು ಓದುಗನ ಮನೋಲೋಕದ ಏಕತ್ರ ಗಮನ ಕೇಂದ್ರೀಕರಣವನ್ನೇನೂ ಯಾಚಿಸುವುದಿಲ್ಲ. ಇವುಗಳನ್ನು ಎಲ್ಲಿಯೂ ಓದಬಹುದು, ದಕ್ಕಿಸಿಕೊಳ್ಳಬಹುದು.

2.  ಭಾಷೆಯನ್ನು ಚಾಣಾಕ್ಷತೆಯಿಂದ ಬಳಸುವ, ತನ್ಮೂಲಕವೇ ಚುರುಕು ಮುಟ್ಟಿಸುವ (ಚುಟುಕು, ಜೋಕು, ಚೌಪದಿಗಳನ್ನು ಹೊರತುಪಡಿಸಿ) ಕವಿತೆಗಳು. ಇಲ್ಲಿ ಭಾಷೆಯ ಬಳಕೆಗೆ ವಿಶೇಷ ಫೋಕಸ್ ಇದ್ದು, ತನ್ಮೂಲಕವೇ ಅದು ಚಕ್ಕನೆ ಏನನ್ನೋ ಹೊಳೆಯಿಸಿ ಓದುಗನನ್ನು ತಟ್ಟುವಂತಿರುತ್ತವೆ. ಈ ಭಾಷೆಯನ್ನು ಬೇರೆ ತರ ಪೇಲವವಾಗಿ ಬಳಸಿ ಅದನ್ನೇ ಹೇಳಿದರೆ ಅದಕ್ಕೆ ಕವಿತೆಯ ಚಾರ್ಮ್ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ, ಈ ಭಾಷೆಯ ಗಿಮ್ಮಿಕ್ ಇಲ್ಲದೆಯೂ ಅದನ್ನು ಹೇಳುವುದು ಸಾಧ್ಯ ಎನ್ನುವುದು ನಿಜ. ಅಲ್ಲದೆ ಕೆಲವೊಮ್ಮೆ, ಈ ಭಾಷೆಯ ಸರ್ಕಸ್ಸೇ ಕವಿ ತಿಣುಕಿ ತಿಣುಕಿ ಏನನ್ನೋ ಹೇಳಲು ಹೊರಟ ಆಭಾಸವನ್ನು ಹುಟ್ಟಿಸಿ ಓದುಗನೂ ಅದು ಕೈಗೆಟುಕಲು ಅಷ್ಟೇ ತಿಣುಕುವಂತಾಗುತ್ತದೆ ಎನ್ನುವುದು ಕೂಡ ನಿಜ. ಸಾಮಾನ್ಯ ಓದುಗ ಎಂದು ನಾವು ಪರಿಗಣಿಸುವ ಮಂದಿ ಕವಿತೆಯಿಂದ ದೂರ ಉಳಿಯುವಂತೆ ಮಾಡುವಲ್ಲಿ ಇಂಥ ಕವಿತೆಗಳ ಕೊಡುಗೆ ಗಮನಾರ್ಹವಾದುದು.

3. ಕಾಮ, ಪ್ರೇಮ, ಭಕ್ತಿ, ನೋವು, ವಿಸ್ಮಯ ಮುಂತಾದ ರಸಕವಿತೆಗಳು. ಈ ಕವಿತೆಗಳಲ್ಲಿ ಭಾವಕ್ಕೆ ಹೆಚ್ಚಿನ ಮಹತ್ವ. ಅದಕ್ಕೆ ಬೇಕಾಗಿ ಮಗುವಿನ ನಗು, ಆಸ್ಪತ್ರೆಯ ಆವರಣ, ಇನ್ನೂ ಚುಮುಚುಮು ನಸುಕು, ಎದೆಭಾರಗೊಳಿಸುವ ಮುಸ್ಸಂಜೆ, ನೀಲಾಂಜನದ ಬೆಳಕು, ಪುಟ್ಟ ಮಕ್ಕಳು, ಮುದುಕ/ಮುದುಕಿಯರು, ಅನುಕಂಪವನ್ನೋ ಪ್ರೀತಿಯನ್ನೋ ಸ್ಫುರಿಸುವಂಥ ಅಸಹಾಯಕರು ಇತ್ಯಾದಿಗಳೆಲ್ಲ ಬಳಕೆಯಾಗುತ್ತವೆ ಇಲ್ಲಿ. ಅತ್ಯಂತ ಕಲಾತ್ಮಕವಾದ, ಕಾವ್ಯಾತ್ಮಕವಾದ ಭಾಷೆ, ಅದ್ಭುತ ರೂಪಕಗಳು, ಉಪಮೆಗಳು, ಕಾಮನಬಿಲ್ಲಿನಲ್ಲಿ ಜೋಕಾಲಿ ಕಟ್ಟಿ, ಚಂದಿರನನ್ನು ಕೈಯಲ್ಲಿಟ್ಟು ಆಕಾಶದಲ್ಲಿ ತೇಲಿಸಬಲ್ಲ ಕವಿತೆಗಳಿವು. ಸಾಮಾನ್ಯ ಅರ್ಥದಲ್ಲಿ ಕವಿತೆಗಳೆಂದರೆ ಇವೇ. ಕವಿ ಎಂದರೆ ಇಂಥವನ್ನು ಬರೆಯುವವನೇ ಎನ್ನುವ ಅಭಿಪ್ರಾಯ ಚಾಲ್ತಿಯಲ್ಲಿದೆ.

4. Abstract ಆದ ಕವಿತೆಗಳು. ಈ ಕವಿತೆಗಳಲ್ಲಿ ತಟ್ಟನೆ ಅರ್ಥವಾಗಬಲ್ಲ ಭಾವ, ಕಥಾನಕ, ಚಿತ್ರ ಕೈಗೆಟಕುವುದೇ ಇಲ್ಲ. ಇಲ್ಲಿ ಬರುವ ವೈರುಧ್ಯಮಯ ಪ್ರತಿಮೆಗಳು, ದೃಶ್ಯಗಳು, ಮಾಂತ್ರಿಕ ವಾಸ್ತವತೆಯಂತೆ ಕಾಣುವ ವೈಚಿತ್ರ್ಯಗಳು ಒಟ್ಟಾರೆಯಾಗಿ ಓದುಗನಲ್ಲಿ ಉದ್ದೀಪಿಸುವ ಒಂದು ಅಯೋಮಯ ಭಾವವನ್ನೇ ವರ್ತಮಾನದ (ಅದು ವೈಯಕ್ತಿಕವಾಗಿರಬಹುದು, ಸಾಮಾಜಿಕವಾಗಿರಬಹುದು) ಒಂದು ಸ್ಥಿತಿಗೆ ಜೋಡಿಸಿ ಏನನ್ನೋ ಹೇಳಬಯಸುವ ಕವಿತೆಗಳಿವು. ಈ ಕವಿತೆಗಳು ಹೊಳಹುಗಳನ್ನು ಬಿಟ್ಟುಕೊಡುತ್ತವೆಯೇ ಹೊರತು ಅರ್ಥವನ್ನಲ್ಲ. ಅನುಭವವಾಗುತ್ತವೆಯೇ ಹೊರತು ವಿವರಣೆಗೆ ದಕ್ಕುವುದಿಲ್ಲ. ವಿವರಿಸಿದರೆ ಅದು ನಮಗೆ "ಕಂಡಿದ್ದು" ಆಗಬಹುದೇ ಹೊರತು "ಇರುವುದು" ಆಗುವುದಿಲ್ಲ.  ಬಹುತೇಕ ಆಗಲೂ ಅಸಂಗತವಾಗಿಯೇ ಉಳಿದುಬಿಡುವಂಥ ಕವಿತೆಗಳು. ಈ ಬಗೆಯ ಕವಿತೆಗಳು ಸದ್ಯದ ದಿನಗಳಲ್ಲಿ ಇತರ ಭಾರತೀಯ ಭಾಷೆಗಳಲ್ಲೂ, ಪಾಶ್ಚಾತ್ಯ ಭಾಷೆಯಲ್ಲೂ ಹೆಚ್ಚಿನ ಪ್ರಾಯೋಗಿಕತೆಗೆ ಒಳಪಡುತ್ತಿರುವುದು ಕಾಣುತ್ತೇವೆ. ಆದರೆ ಕನ್ನಡದಲ್ಲಿ ಇಂಥ ರಚನೆಗಳು ಅಷ್ಟಾಗಿ ಕಂಡುಬರುತ್ತಿಲ್ಲ. ಕವಿ ತನ್ನ ಕನಸಿನಲ್ಲಿಯೋ, ತೀರ ಒಬ್ಬಂಟಿ ಮೌನದಲ್ಲೋ ಪಡೆದ ಅನುಭೂತಿಯನ್ನು ಭಾಷೆಯಲ್ಲಿ ಹಿಡಿಯಲು ನಡೆಸಿದ ವಿಫಲ ಪ್ರಯತ್ನದಂತೆ ಈ ಕವಿತೆಗಳು ಹುಟ್ಟಿರುತ್ತವೆ. ಹಾಗಾಗಿ ನಾವು ಕವಿ ಪಡೆದ ಅನುಭೂತಿಯ ಕಲ್ಪನೆಯನ್ನಷ್ಟೇ ಊಹಿಸಬಹುದೇ ಹೊರತು ಅದನ್ನೇ ಮುಟ್ಟಲಾಗದು. ಸ್ವತಃ ಕವಿಗೂ ಬಹುಶಃ ಅದನ್ನು ಮತ್ತೊಮ್ಮೆ ಮುಟ್ಟಲಾಗದು. ವಾಸ್ತವವಾಗಿ ‘ಕವಿ ಭಾವ ಪ್ರತಿಮಾ ಪುನಃಸೃಷ್ಟಿ’ ಎಂದು ಕರೆಯಲ್ಪಡುವುದು ಇದೇ. ಕವಿತೆ ಮುಟ್ಟಲು ಪ್ರಯತ್ನಿಸಬೇಕಾದುದೂ ಇದನ್ನೇ. ವೈಯಕ್ತಿಕವಾಗಿ ನನಗೆ ಇಷ್ಟವಾಗುವ, ನನ್ನ ಅಭಿರುಚಿ ಬಯಸುವ ಕವಿತೆಗಳು ಈ ಬಗೆಯವು.

5. ಒಳನೋಟಗಳಿರುವ, ದರ್ಶನದ ಸಾಧ್ಯತೆಗಳನ್ನಿಟ್ಟುಕೊಂಡ, ಅರ್ಥಸಾಧ್ಯತೆಗಳಿಗೆ ತೆರೆದುಕೊಂಡಂಥ ಕವಿತೆಗಳು. ಎಲ್ಲರೂ ಬಲ್ಲ ಉದಾಹರಣೆ ಕೊಡಬಹುದಾದರೆ, ಬೇಂದ್ರೆಯವರ ಹೆಚ್ಚಿನ ಕವಿತೆಗಳು ಈ ಬಗೆಯವು. ಕವಿತೆಗಳ ನನ್ನ ಬಹುಸೀಮಿತ ಓದಿನಲ್ಲಿ ಅಜಿತನ್ ಕುರುಪ್ ಮತ್ತು ಹಿಂದಿಯ ವಿಜಯಕುಮಾರ್, ಜೆಜುರಿ ಖ್ಯಾತಿಯ ಕೋಲಟ್ಕರ್ ಈ ಬಗೆಯ ಕವಿಗಳೆಂದು ನನಗನಿಸಿದೆ. ಇವು ಸಾಮಾನ್ಯವಾಗಿ ವಿಮರ್ಶಕಪ್ರಿಯ ಕವಿತೆಗಳು. ನುರಿತ ವಿಮರ್ಶಕರು ಇಂಥ ಕವಿತೆಗಳನ್ನು ಬೇರೆ ಬೇರೆ ಬಗೆಯಲ್ಲಿ ಬಗೆದು, ವಿವರಿಸಿ ಕೃತಾರ್ಥರಾಗುತ್ತಾರೆ. ಇಂಥ ಕವಿತೆಗಳು ಒಂದು ಭಾಷೆಗೇ ವಿಶಿಷ್ಟವಾದ ಘನತೆ, ಗೌರವವನ್ನು ತಂದುಕೊಡುತ್ತವೆ ಮಾತ್ರವಲ್ಲ, ಭಾಷೆಯನ್ನೂ ಕಟ್ಟಿ ಬೆಳೆಸಬಲ್ಲ ಕಸು ಹೊಂದಿರುತ್ತವೆ. ಈ ಸಾಲಿಗೆ ಸೇರಬಲ್ಲ ಅನೇಕ ಕವಿಗಳು ನಮ್ಮ ನಡುವೆ ಇರುವುದು ನಮಗೊಂದು ಹೆಮ್ಮೆ. ಆದರೆ ಪ್ರತಿಯೊಬ್ಬ ಕೆಟ್ಟಕವಿಯೂ ತನ್ನನ್ನು ತಾನು ಶ್ರೇಷ್ಠ ಕವಿ ಎಂದು ತಿಳಿದಿರುತ್ತಾನೆ ಎನ್ನುವುದು ಎಲ್ಲರೂ ಬಲ್ಲ ಸತ್ಯವಾಗಿರುವುದರಿಂದ ಇಲ್ಲಿ ಯಾರನ್ನೂ ಹೆಸರಿಸದೇ ಇರುವುದು ಕವಿಗಳ ದೃಷ್ಟಿಯಿಂದ ಕ್ಷೇಮಕರ.

ಒಬ್ಬ ಕವಿ ಈ ಎಲ್ಲ ಬಗೆಗೂ ಸಲ್ಲುವಂಥ ಕವಿತೆಗಳನ್ನು ಬರೆಯುವುದು ಸಾಧ್ಯ ಮಾತ್ರವಲ್ಲ, ಒಬ್ಬ ಕವಿಯ ಒಂದು ಕವಿತೆ ಏಕಕಾಲಕ್ಕೆ ಎರಡು ಅಥವಾ ಮೂರು ಬಗೆಯ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವುದು ಕೂಡ ಸಾಧ್ಯ. ಆದರೆ, ಈ ಐದೂ ಬಗೆಯ ಕವಿತೆಗಳಲ್ಲಿ ಯಾವೊಂದು ಬಗೆಯ ಕೆಳಗೂ ಗುರುತಿಸಲಾಗದಂಥ ಕವಿತೆಗಳೇ ಇವತ್ತು ಕನ್ನಡದಲ್ಲಿ ಹೆಚ್ಚು. ತಮ್ಮ ಮೌನಕ್ಷಣಗಳನ್ನು ಭಾಷೆಯಲ್ಲಿ ಕಟ್ಟಿಕೊಡುತ್ತೇವೆ ಎಂದುಕೊಂಡಿರುವ ಕೆಲವೇ ಕೆಲವು ಗಂಭೀರ ಕವಿಗಳೂ ಭಾಷೆಯ ಓಘದಲ್ಲಿ ಮೌನವನ್ನು ಪೂರ್ತಿಯಾಗಿ ಮರೆತು ಸದ್ದುಗದ್ದಲ ಹುಟ್ಟಿಸುವುದರಲ್ಲೇ ಕೃತಾರ್ಥರಾಗುತ್ತಿರುವುದನ್ನು ಕಂಡರೆ ಕವನ ಸಂಕಲನಗಳಿಗೆ ಕೈಹಚ್ಚಲು ಹೆದರುವಂತಾಗುತ್ತದೆ. ಕವಿಯ ಸಂವೇದನೆ, ಕವಿಯನ್ನು ತೀವ್ರವಾಗಿ ಬಾಧಿಸುವ ಮೌನಕ್ಷಣಗಳು ಮತ್ತು ಅವನ ಅನಿವಾರ್ಯವಾದ ಭಾಷೆಯ ಆಮಿಷ - ಇವುಗಳ ನಡುವಿನ ಕಂದಕ ಏನಿದೆ, ಅಲ್ಲಿ ಕವಿಯ ಮೌನಸಂವೇದನೆ ಜಾರಿಬಿಡುತ್ತದೆ. ಭಾಷೆಯಲ್ಲಿ ಅವನು ಅವನದ್ದಲ್ಲದ ಕವಿತೆಯನ್ನು ಬರೆಯುತ್ತಾನೆ ಮತ್ತು ತಕ್ಷಣದ ಮೆಚ್ಚುಗೆಗಳಿಗೆ ಮರುಳಾಗಿ ಅದರಲ್ಲೇ ತನ್ನನ್ನು ತಾನು ಕಂಡುಕೊಳ್ಳಲು ಕಲಿಯುತ್ತಾನೆ. ಅಲ್ಲಿಗೆ ಒಬ್ಬ ಕವಿ ಸತ್ತಂತೆಯೇ. ಭಾಷೆಯಲ್ಲೇ ನಿಮಗ್ನಗೊಳ್ಳುವ ಕವಿತೆಯೊಂದು ಸದ್ದು ಹುಟ್ಟಿಸಬಹುದೇ ಹೊರತು ಅನುಭೂತಿಯನ್ನಲ್ಲ. ಆದರೆ, ತನ್ನ ಕವಿತೆಗಳಿಗೇಕೆ ವಿಮರ್ಶಕರು ಸ್ಪಂದಿಸುತ್ತಿಲ್ಲ, ಅವು ಅಷ್ಟು ಕೆಟ್ಟದಾಗಿವೆಯೇ ಎಂದು ಪ್ರಶ್ನಿಸುವ ಇವರ ಮುಗ್ಧತೆ ಬಗೆಹರಿಯುವುದಿಲ್ಲ ಎನ್ನುವುದು ದುರಂತ.


ಜ ನಾ ತೇಜಶ್ರೀಯವರ ಕವಿತೆಗಳಲ್ಲಿ ‘ಅಡಿಗರಿಂದ ಲಂಕೇಶರಿಗೆ’ ಎನ್ನುವ ಒಂದು ಕವಿತೆಯಿದೆ. ‘ವಿಮರ್ಶೆ’ ಎನ್ನುವ ಒಂದು ಕವಿತೆಯಿದೆ. ಕೀರಂ ನೆನಪಿನಲ್ಲಿ ಬರೆದ ‘ತೆರಣಿಯ ಕಾವ್ಯ ಮೀಮಾಂಸೆ’ ಎಂಬ ಕವಿತೆಯಿದೆ. "ನೀನೆಂದರೆ, ಪ್ರತಿಗಳಿಗೆ ನನ್ನೊಳಗಿದ್ದೂ| ಮಾತಿಗೊದಗದ ಕವಿತೆ|" ಎಂದು ಕೃಷ್ಣನನ್ನು ಕುರಿತು ಬರೆದ ಕವಿತೆಯೂ ಇದೆ. ಇವೆಲ್ಲವೂ ಕವಿತೆಯ ರಾಚನಿಕ ಕಸರತ್ತಿನ ಹಿಂದು ಮುಂದಿನ ಪ್ರಕ್ರಿಯೆಯ ಕುರಿತು ಪರೋಕ್ಷವಾಗಿಯಾದರೂ ಮಾತನಾಡುತ್ತಿವೆ ಎನ್ನುವುದನ್ನು ಗಮನಿಸಬೇಕು. ತೇಜಶ್ರೀಯವರ ಕವಿತೆಗಳಲ್ಲಿಯೂ ಭಾಷೆಗೆ ಅತ್ಯಂತ ಎಚ್ಚರಿಕೆಯ ಪೋಷಣೆ ಇದೆ. ಆದರೆ ಸಂವೇದನೆ ಭಾಷೆಯಾಗಿ ಪಡಿಮೂಡುವ ಹಂತದಲ್ಲಿ ಭಾಷೆಯ ಮಾಯೆ ಕಾಲೆಳೆಯದಂತೆ ಎಚ್ಚರಿಕೆವಹಿಸುವುದರಲ್ಲಿ ಅವರು ಪ್ರವೀಣೆ. ‘ಮತ್ತೆ ಮತ್ತೆ ಮುಟ್ಟಿ ತಟ್ಟಿ ತಡವಿ| ಪರಚಿ ತರಚಿ ತಿರುಚಿ ನೋಡಿದರಷ್ಟೇ ಚಿಪ್ಪೊಡೆವ|’ ಕಾವ್ಯ ಸೋಜಿಗದ ಮೋಹ ಇವರಲ್ಲೂ ಇದ್ದೇ ಇದೆ. ಹಾಗಾಗಿ, ಈ ಪ್ರಾವೀಣ್ಯವೇ ಕೆಲವೊಮ್ಮೆ ಮೆರೆಯುವುದುಂಟು, ಅನಗತ್ಯವಾಗಿ ಎನ್ನುವುದನ್ನು ಬಿಟ್ಟರೆ ತೇಜಶ್ರೀ ನಮ್ಮ ನಡುವಿನ ಕೆಲವೇ ಕೆಲವು ಕವಿಗಳಲ್ಲಿ ಅಪ್ಪಟ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ.  

*****

‘ಗಿಳಿಮರ’, ‘ಸೃಷ್ಟಿ ಸ್ಥಿತಿ ಲಯ’, ‘ಹಕ್ಕಿ ಮತ್ತು ನೀಲಾಂಜನೆ’, ‘ಹೆಣದ ಮೇಲಣ ಹಕ್ಕಿ’, ‘ಸೀಳು ನೋಟ’, ‘ನೆಲದೆದೆಯಲ್ಲಿ ಮರದ ಬೇರಿನ ಸಿಕ್ಕು’, ‘ಬದುಕು ಬರೆದ ಮರ’, ‘ನೆಲದ ಮರೆಯ ನಿಧಾನವೇ’ ಮತ್ತು ‘ಬದುಕ ಬಗೆ’ - ಈ ಒಂಭತ್ತು ಕವಿತೆಗಳನ್ನು ಒಟ್ಟಿಗೆ ಗಮನಿಸುವುದು ಸೂಕ್ತ. ಈ ಕವಿತೆಗಳಲ್ಲಿ ಮನುಷ್ಯ, ಮರ, ಹಕ್ಕಿ, ಒಟ್ಟು ಪ್ರಕೃತಿ ಮತ್ತು ಬದುಕು ಬೇರೆ ಬೇರೆಯಾಗಿ ಉಳಿಯದೇ ಒಂದು ಅನನ್ಯ ತಾದ್ಯಾತ್ಮವನ್ನೈದುವ ಮಾಯಕತೆ ಅತ್ಯಂತ ಸರಳವಾಗಿ, ನೈಜವಾಗಿ, ಹೌದೆನಿಸುವಂತೆ ಮೈತಾಳಿರುವುದು ವಿಶೇಷ. ಕವಿ ತನ್ನ ಕಲ್ಪನೆ, ಕನಸು, ಭ್ರಮೆಯಲ್ಲಿ ಪಡೆದ ಅನುಭೂತಿ ಅಥವಾ ಆವಾಹಿಸಿಕೊಂಡ ಅನುಭವವನ್ನು ಭಾಷೆಯಲ್ಲಿ ಕಟ್ಟಿಕೊಡುವ ಅಪ್ರತಿಮ ಸಫಲ ಪ್ರಯತ್ನವೊಂದು ಇಲ್ಲಿದೆ. ಈ ಕವಿತೆಗಳಲ್ಲಿ ಅಂಥ ಅನುಭೂತಿಯು ಅನುಭವವಾಗಿ ಆವಿರ್ಭವಿಸಿರುವುದು ಕವಿತೆಯನ್ನು ಓದುತ್ತ ಸ್ವತಃ ಓದುಗನ ಅನುಭವವೂ ಆಗಿ ಸಾಕಾರಗೊಳ್ಳುವಲ್ಲಿ ಸಾರ್ಥಕಗೊಳ್ಳುವಂತಿದೆ. ಹಾಗಿದ್ದೂ ಒಂದು ಅದ್ಭುತ ರಮ್ಯ ಅನುಭೂತಿಯನ್ನು ಹಾಡುವ ಹೊತ್ತಲ್ಲೇ ಕವಿ ತನ್ನ ಕಾಲುಗಳನ್ನು ಭದ್ರವಾಗಿ ವರ್ತಮಾನದ (ಸದ್ಯದ) ನೆಲದಲ್ಲಿ ನೆಟ್ಟಿರುವುದನ್ನು ವಿಶೇಷವಾಗಿ ಗಮನಿಸಬೇಕು. ಈ ವೈರುಧ್ಯವನ್ನು ಸಂತುಲನಗೊಳಿಸುವಲ್ಲಿ ತೇಜಶ್ರೀಯವರು ನಿರ್ವಹಿಸುವ ಸಮತೋಲನವೇ ಅವರ ಹೆಚ್ಚುಗಾರಿಕೆ ಎಂದರೂ ಸರಿಯೇ. ಈ ಒಂಭತ್ತು ಕವಿತೆಗಳಲ್ಲಿ ‘ಹೆಣದ ಮೇಲಿನ ಹಕ್ಕಿ’ ಮತ್ತು ‘ಸೀಳುನೋಟ’ ಕವಿತೆಗಳು ನಮ್ಮೆಲ್ಲಾ ಆಶಯ, ಆದರ್ಶ, ಮಹತ್ತಿಗೆ ಕೈಚಾಚುವ ಕಲ್ಪನೆಯಾಚೆ ಅತ್ಯಗತ್ಯವಾದ ವಾಸ್ತವ ಪ್ರಜ್ಞೆಯನ್ನು ಮೆರೆಯುತ್ತವೆ.

ಇಂದೆಂಬುದು ನಾಳೆಯ ಕಾಲ್ಕೆಳಗಿನ ಹೆಣ  (ನಿನ್ನೆಯೆಂಬುದು ಇಂದಿನ ಕಾಲ್ಕೆಳಗಿನ ಹೆಣ - ಅಲ್ಲ ಎನ್ನುವುದನ್ನು ಗಮನಿಸಿ)
ಸಂದಿಗೊಂದಿ ಹತ್ತಿ ಇಳಿದು 
ಎಷ್ಟೋ ಹೆಜ್ಜೆ ನಡೆದ ದಾರಿಯಲ್ಲೆ ನಡೆದು
ನಿಂತದ್ದು ನಡೆಯಾದರೆ, ನಡೆದದ್ದು ನಡೆಯಷ್ಟೇ ಅಲ್ಲ
ಹೆಣ ತೇಲುತ್ತಿದೆ,
ಆಳದಲ್ಲಿ ಮರಳು ಮತ್ತು ನೀರು
ಒಂದರ ಮಡಿಲಲ್ಲಿ ಇನ್ನೊಂದು ಮಲಗಿವೆ

ಶತಶತಮಾನಗಳಿಂದ ಹಕ್ಕಿ ನಿಂತಿರುವುದು
ಮಾತು ಬಸಿದ ಹೆಣದ ಮೇಲೆ.

- ಈ ಕವಿತೆಯ ಹಕ್ಕಿಯನ್ನು ‘ಗಿಳಿಮರ’  ಕವಿತೆಯ ಪ್ರವಾಹದ ನೀರಿನಲ್ಲಿ ಮುಳುಗಿದ, ಒಂದು ಗಿಳಿಯಾಗಿ ಬಿಟ್ಟ ಮರದ ಜೊತೆ ಕಲ್ಪಿಸಿಕೊಳ್ಳಿ. ಇದೇ ಮಾತನ್ನು ಮರವೀಗ ಒಂದು ಹಕ್ಕಿ ಎನ್ನುವ ‘ಸೃಷ್ಟಿ ಸ್ಥಿತಿ ಲಯ’ ಕವಿತೆಯ ಸಂದರ್ಭದಲ್ಲೂ ಹೇಳಬಹುದು. ‘ಸೀಳುನೋಟ’ ಕವಿತೆ ಇದನ್ನೇ ಹೆಚ್ಚು ಸಂಕೀರ್ಣವಾಗಿ ಮಾಡುತ್ತದೆ. ಇಲ್ಲಿ ಒಬ್ಬ ಕಲಾವಿದನ ಸೃಷ್ಟಿಯಲ್ಲಿ ಎಮ್ಮೆ, ಹುಲ್ಲು, ಕಾಗೆ, ಮಳೆ, ತಾಳ್ಮೆಯ ಬೆರಳುಗಳಲ್ಲಿ ಬರೆಯಲ್ಪಡುವ ಒಂಟಿತನ ಎಲ್ಲ ಇರುವಂತೆಯೇ ದೂರದ ನೋಟವನ್ನು ಕ್ಲೋಸಪ್ಪಿಗೆ ತರುತ್ತ ಕಾಗೆ ತಿನ್ನುತ್ತಿರುವ ಹಣ್ಣಿನಲ್ಲಿ ಇನ್ನೇನು ಸ್ವಾಹಾ ಆಗಲಿರುವ ಪುಟ್ಟ ಹುಳುವೊಂದು ನಗುತ್ತಿರುವುದನ್ನೂ ಕಾಣಿಸಲಾಗಿದೆ. ಒಂದು ನಿಟ್ಟಿನಿಂದ ನೋಡಿದರೆ ಬದುಕು ಮತ್ತು ಸಾವನ್ನು ಒಟ್ಟಿಗಿಟ್ಟು ನೋಡುವುದು ಕೂಡ ಒಂದು ಕವಿಕಲ್ಪನೆಯ ಅನುಭೂತಿಯೇ ಎನ್ನಬಹುದು. ಆದರೆ ಅದು ವಾಸ್ತವಕ್ಕೂ ಸಲ್ಲುವ ಅನುಭವ ಕೂಡ ಹೌದು. 

*****

‘ಎಲ್ಲ ಒಂದು ಸ್ಪರ್ಶಕ್ಕಾಗಿ’ ಈ ಸಂಕಲನದ ಒಂದು ಬಹುಮುಖ್ಯ ಕವಿತೆ. ಹಾಗಿದ್ದೂ ಅಹಲ್ಯೆ ಈಗಾಗಲೇ ಸಾಹಿತ್ಯದ ಕವಿಸಮಯವಾಗಿ ಬಿಟ್ಟಿದ್ದಾಳೆ. ಉತ್ತರಕಾಂಡದ ಅಹಲ್ಯೆಗೂ ಬಾಲಕಾಂಡದ ಅಹಲ್ಯೆಗೂ ತಾತ್ವಿಕವಾಗಿ ವೈರುಧ್ಯಗಳಿವೆ. ಅದೇನಿದ್ದರೂ ತೇಜಶ್ರೀಯವರ ರಾಮ ಮತ್ತು ಅಹಲ್ಯೆ ತಾತ್ವಿಕ ನೆಲೆಗಿಂತ ಕಾವ್ಯಾತ್ಮಕ ನೆಲೆಯಲ್ಲಿ ಹೆಚ್ಚು ಗಮನಸೆಳೆಯುತ್ತಾರೆ. ಬದುಕಿನಲ್ಲಿ ಒಂದು ಕರುಣೆ, ಪ್ರೀತಿ, ಮೋಹ, ವಾತ್ಸಲ್ಯದ ಸ್ಪರ್ಶಕ್ಕೆ ಇರುವ ಮಹತ್ವದಷ್ಟೇ ವ್ಯಕ್ತಿಯೊಂದು ಕಲ್ಲಾಗುವ, ಜಡವಾಗುವ, ಕೊರಡಾಗುವ ಪ್ರಕ್ರಿಯೆಯೂ ಈ ಕವಿತೆಯಲ್ಲಿ ಪಡೆದಿರುವ ಪೋಷಣೆ ಗಮನ ಸೆಳೆಯುತ್ತದೆ.

‘ಹೆಣ್ಣು ಪ್ರತಿಮೆ’ ಕವಿತೆ ಕೂಡ ‘ಎಲ್ಲ ಒಂದು ಸ್ಪರ್ಶಕ್ಕಾಗಿ’ ಕವಿತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಅನಿಸುತ್ತದೆ. ಈ ಕವಿತೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.

‘ಶಾಶ್ವತಕ್ಕೆ ಕೈಚಾಚಿ ಕಣ್ಣಾಳದ ಕವಿತೆ’ ಹಾಗೂ ‘ಚರ್ಚ್ ರಸ್ತೆಯ ಹುಚ್ಚಿ’ - ಈ ಸಂಕಲನದ ಇನ್ನೆರಡು ಮಹತ್ವದ ರಚನೆಗಳು. ಸಹಜವಾಗಿಯೇ ಅಹಲ್ಯೆಯ ಕುರಿತ ಕವಿತೆ, ಚರ್ಚ್ ರೋಡಿನ ಹುಚ್ಚಿಯ ಕುರಿತ ಕವಿತೆ, ಅಮೀನಳ ಕವಿತೆ ಮತ್ತು ‘ಹೆಣ್ಣು ಪ್ರತಿಮೆ’ - ಈ ನಾಲ್ಕೂ ಕವಿತೆಗಳು ಒಂದೇ ಲಯದ, ಭಾವದ ಕವಿತೆಗಳೆನಿಸುತ್ತವೆ ಮಾತ್ರವಲ್ಲ ಉತ್ಕಟ ಕವಿತೆಗಳು ಕೂಡ. ಅಹಲ್ಯೆಯ ಕುರಿತ ಕವಿತೆಯಲ್ಲಿ ಶಾಪ-ಪಾಪದ ಪಸೆಯಿಲ್ಲ. ದೈವತ್ವದ ಪಾವಿತ್ರ್ಯವಾಗಲಿ ಕಾಮದ ಕೆಸರಾಗಲಿ ಇಲ್ಲ. ಇಲ್ಲಿ ಮುಖ್ಯವಾಗುವುದು ಅಹಲ್ಯೆಯನ್ನು ನಿಸರ್ಗಗೊಳಿಸಿದ ಪರಿ. ಅಹಲ್ಯೆ ಕಲ್ಲಾಗುವುದು, ಚೇತನ ಜಡಗೊಳ್ಳುವುದು ಇಲ್ಲಿ ಪ್ರಕಟಗೊಂಡಿರುವ ವಿನೂತನ ಬಗೆಯೇನಿದೆ, ಅದು ಗಮನಾರ್ಹವಾಗಿದೆ. ಇಡೀ ಪ್ರಕೃತಿಗೆ ಬರ ಬಡಿಯುವುದು ಮತ್ತು ಚೈತನ್ಯದ ಸಣ್ಣ ಕುಡಿಯೊಡೆದು ಅದು ರಾಮನ ಬರವಿನಲ್ಲಿ ಸಂಚಲಿತಗೊಳ್ಳುವುದು ಇಲ್ಲಿ ಸಿಗುವ ಚಿತ್ರ. ಇದು ಉತ್ಕಟವಾಗಿ ಮೂಡಿಬಂದಿದೆ. ಹಾಗೆಯೇ ಚರ್ಚ್ ರೋಡಿನ ಹುಚ್ಚಿಯ ಕುರಿತ ಕವಿತೆ.  ಭಾಷೆಯ ಯಾವ ಅಲಂಕಾರದ ಸ್ಪರ್ಶವೂ ಇಲ್ಲದ ಸಹಜ ನುಡಿಯ ಕವಿತೆ ಇದು. ಹಾಗಾಗಿಯೇ ಇದು ಹೆಚ್ಚು ಉತ್ಕಟವಾಗಿಯೂ ಇದೆ, ಸಹಜವಾಗಿಯೂ ಇದೆ. ಭಗ್ನ ವಿಗ್ರಹವೊಂದು ಕೊಳದ ನೀರಿನಲ್ಲಿ ಪ್ರತಿಬಿಂಬವಾಗುವ ಹೊತ್ತಲ್ಲೇ ಸುರಿವ ಮಳೆ ಹುಟ್ಟಿಸುವ ತೆರೆಗಳು, ಮೀನು-ಆಮೆಗಳ ಓಡಾಟ ಹೇಗಿದೆಯೋ ಹಾಗೆಯೇ ಅಹಲ್ಯೆಯನ್ನು ಆತುಕೊಂಡೇ ಬೆಳೆವ ಮತ್ತಿಗಿಡವೂ ಜೀವಸೆಲೆಯ ಕುಡಿಯೊಂದು ಸದಾ ಮಿಡಿಯುತ್ತಿರುತ್ತದೆ ಎನ್ನುವುದನ್ನು ಸೂಚಿಸುವಂತಿದೆ. ಚರ್ಚ್ ರೋಡಿನ ಹುಚ್ಚಿಯ ಇಡೀ ಬದುಕಿನ ವಿಷಾದದಲ್ಲೇ ಸ್ಥಾಯಿಯಾದ ಅವಳ ಸ್ವಗತ ಅವಳ ನಿರ್ಲಿಪ್ತಿಯನ್ನು ಸೂಚಿಸುವಂತಿದೆ. ಅಮೀನಳ ಕವಿತೆಯಂತೂ ಜೀವಚೈತನ್ಯದ ಸೆಲೆಯ ಧಾರೆಯೇ ಆಗಿದೆ. ಕೊಳಲಿನ ನಾದವೇ ಆ ಜೀವಸೆಲೆ. ಬಾವಿಯೊಳಗಿನ ಚಂದ್ರನೇ ಎಂದೂ ಕೈಗೆಟುಗದ, ಅಲೌಕಿಕದ ಮೋಹದ ಬಿಂಬ. ಅಮೀನ ಎಲ್ಲಿ ಎನ್ನುವಲ್ಲಿಯೇ ಈ ಅಲೌಕಿಕವನ್ನು ದಕ್ಕಿಸಿಕೊಳ್ಳಲು ಲೌಕಿಕದಲ್ಲಿ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ದನಿಯಿದೆ. ಹಾಗಾಗಿ ಇಲ್ಲಿ ಇಲ್ಲವಾದ ಅಮೀನ ದುರಂತವಾಗಿ ಕಾಣದೆ, ಮಿಲನಗೊಂಡ ಅಮೀನಳಾಗಿ ಬಿಡುತ್ತಾಳೆ.

*****


ಡಿಸೆಂಬರ್ ಮೂರರ ಭಾನುವಾರ ಪ್ರಜಾವಾಣಿಯ ಮುಕ್ತಛಂದದಲ್ಲಿ ಪ್ರಕಟವಾದ ಜ ನಾ ತೇಜಶ್ರೀ ಅವರ ಒಂದು ಕವಿತೆ, ‘ಹೆಣ್ಣು ಪ್ರತಿಮೆ’ ಈ ಸಂಕಲನದಲ್ಲಿದೆ. ಅದು ಅಲ್ಲಿ ಪ್ರಕಟವಾದಾಗ ಬರೆದ ಮಾತುಗಳನ್ನೇ ಇಲ್ಲಿ ನೆನೆಯುತ್ತೇನೆ.

ಅವತರಿಸು ಇನ್ನೊಮ್ಮೆ| 
ಸುಮ್ಮನೇ ನನ್ನೊಳಗೆ| 
ಕೂರ್ಮಾವತಾರ!  

ಬೆಟ್ಟದ ಅಂಗಾಲು ತೊಳೆಯಲೆಂಬಂತೆ| ಅದರ ಬುಡದಲ್ಲೊಂದು ಕೊಳ.
ನೀರ ಪ್ರತಿಬಿಂಬದಲ್ಲಿ ತನ್ನನ್ನೇ ತಾನು| ನೋಡಿಕೊಂಡು ಬೀಗುತ್ತ ಬೆಳೆದಿತ್ತು ಬೆಟ್ಟ.

ಇಲ್ಲಿ ಅಂಗಾಲು ತೊಳೆಯುವ ಮಾತಿದೆ. ಅದು ಯಾವತ್ತಿದ್ದರೂ ತಾಯಿ. ಇಲ್ಲಿ ತಟ್ಟನೇ ನೆನಪಾಗುವುದು ಮೊನ್ನೆಮೊನ್ನೆಯಷ್ಟೇ ಅರೆನಿದ್ದೆಯಲ್ಲಿದ್ದ ಮಗುವಿನ ಅಂಗಾಲಿಗೆ ಮೆತ್ತಿದ ಮಣ್ಣನ್ನು ಅದರ ನಿದ್ದೆ ಕೆಡದಂತೆ ಒದ್ದೆ ಬಟ್ಟೆಯಿಂದ ಒರೆಸುವ ತಾಯಿಯ ಚಿತ್ರ ಕೊಟ್ಟ ಶ್ರೀದೇವಿ ಕಳಸದ ಅವರ ಕವಿತೆ,
(https://www.facebook.com/shreedevi.kalasad/posts/10215339055732490). ಇಲ್ಲಿಯೂ ತಾಯಿ ಮಗುವಿನ ಕಲ್ಪನೆಯೇ ಮನಸ್ಸಿಗೆ ಬರುತ್ತದೆ.

ಅಲ್ಲೇ ಕೊಂಚ ಮುಂದೊಂದು ತಗ್ಗು| ಆ ತಗ್ಗಿನೊಳಗೊಂದು ಹೆಣ್ಣು ಪ್ರತಿಮೆ

ಈ ಸೊಲ್ಲಿನಲ್ಲಿ ಕವಿ ಇದ್ದಕ್ಕಿದ್ದಂತೆ ಬೆಟ್ಟ ಮತ್ತು ಕೊಳವನ್ನು ಬಿಟ್ಟು ಅದರ ತಗ್ಗಿನಲ್ಲಿರುವ ಒಂದು ಹೆಣ್ಣಿನ ಭಗ್ನ ಶಿಲಾ ಪ್ರತಿಮೆಯನ್ನು ನಮ್ಮ ಗಮನಕ್ಕೆ ತರುತ್ತಿದ್ದಾನೆ. ಮತ್ತೆ, ಮುಂದಿನ ಇಡೀ ಕವಿತೆ ಈ ಪ್ರತಿಮೆಯ ಸುತ್ತಲೇ ಇದೆ ಎನ್ನುವುದನ್ನು ಗಮನಿಸಿ. ಆ ಅಂಗಾಲು ತೊಳೆಯುವ ತಾಯಿ, ಬಂಡೆಗಲ್ಲನ್ನು ಸೂಚಿಸುವ ಬೆಟ್ಟ, ಆರ್ದ್ರತೆಯನ್ನು ಸೂಚಿಸುವ ಕೊಳ ಎರಡೂ ನಿಮ್ಮ ಮನಸ್ಸಿನ ಹಿನ್ನೆಲೆಯಲ್ಲಿರಲಿ.

ಈ ಹೆಣ್ಣು ಪ್ರತಿಮೆಯದ್ದು ಬಿರಿದ ತುಟಿಯಲ್ಲ, ಬಿರುಕು ತುಟಿ. 

ಇಕ್ಕಳದಂತೆ ಹೊಸೆದ ಕಾಲುಗಳಲ್ಲಿ ಸವೆದ ಬೆರಳು
ಕಾಲದ ಏಟಿಗೆ ವಿಭ್ರಾಂತಿಗೊಳಗಾಗದ ಗಟ್ಟಿ ತುರುಬು ನೆತ್ತಿಯ ಮೇಲೆ
ಕಲಶವಿಟ್ಟಂತೆ ವಿಮಗ್ನ ಅವಳ ಕಣ್ಣು.

ಅಡಿಗರ ‘ನಿನ್ನ ಮಣ್ಣಿನ ಕಣ್ಣನು’ ಎಂಬ ಸೊಲ್ಲು ನೆನಪಾಗುತ್ತದೆ. ಮಣ್ಣಿನ ಕಣ್ಣು ಎಂದರೇನು? ಮಣ್ಣಿನಲ್ಲಿ ಮಾಡಿದ ಕಣ್ಣೇ ಅಥವಾ ಮಣ್ಣಿನ, ಭೂತಾಯಿಯ ಕಣ್ಣೆ? ಭೂಮಿತಾಯಿಯ ಕಣ್ಣು ಸೆಳೆಯುವುದು ಅಂದರೆ ನಾವು ಮಣ್ಣಾಗುವುದು. ಮಣ್ಣಿನ ಕಣ್ಣಾದರೆ ಅದಕ್ಕೆ ದೃಷ್ಟಿಯಿಲ್ಲ. ಇಲ್ಲಿಯೂ ಅವಳ ಕಣ್ಣು ವಿಮಗ್ನ ಎನ್ನುತ್ತಾರೆ ಕವಿ. ಹಾಗೆಯೇ ಅವಳ ಕಾಲುಗಳು ಇಕ್ಕಳದಂತೆ ಹೊಸೆದಿವೆ. ಹೀಗೆ ಹೊಸೆದುಕೊಂಡು ಬಹುಕಾಲವಾಗಿದೆ! ಯಾಕೆಂದರೆ ಹೊಸೆದ ಕಾಲುಗಳ ಬೆರಳು ಸವೆದಿವೆ. ಹೆಣ್ಣು ಇಕ್ಕಳದಂತೆ ಕಾಲು ಹೊಸೆದುಕೊಂಡಿದ್ದಾಳೆಂದರೆ ಅವಳು ಅಹಲ್ಯೆಯಾದಂತೆಯೇ ಅಲ್ಲವೆ. ಅಹಲ್ಯೆಯಾದರೂ ಅವಳು ಕಾಲದ ಏಟಿಗೆ ವಿಭ್ರಾಂತಿಗೊಳಗಾಗದ ಹೆಣ್ಣು. ಕಾಲಿನ ಸ್ಪರ್ಶಕ್ಕೆ ಆಗುವಳೆ ಎನ್ನುವುದು ಪ್ರಶ್ನೆ. ಒಂದು ಸ್ಪರ್ಶದಿಂದ ಏನೂ ಆಗಬಹುದು ಎಂದು ನಂಬುವ ಕವಿ ಇವರು. (ಏನೂ ಆಗಬಹುದು ಒಂದೇ ಒಂದು ಸ್ಪರ್ಶದಿಂದ....‘ಅಹಲ್ಯೆ’ ಕವಿತೆ) ಇವಳು ವಿಭ್ರಾಂತಿಗೆ ಒಳಗಾಗದ ಗಟ್ಟಿ (ಬಂಡೆ ಕಲ್ಲಿನಂಥ) ಹೆಣ್ಣು ಎನ್ನಲು ಸಾಕ್ಷಿ ಇವಳ ನೆತ್ತಿಯ ಮೇಲಿನ ಗಟ್ಟಿ ತುರುಬು. ಈ ತುರುಬಿನ ಮೇಲೊಂದು ಕಣ್ಣಿಡಿ. 

ಈಗ ಕವಿ ಮತ್ತೆ ಕೊಳದತ್ತ ಗಮನ ಹರಿಸುತ್ತಾರೆ. 

ಮಳೆಬಿದ್ದ ಕೊಳದೊಳಗೆ ಮಳೆಹನಿಗಳ ತಟ್ಟಾಟ
ಹನಿಯು ಹನಿಯನ್ನೆ ಮುಟ್ಟಿ ಕೊಳದೊಳಗೆಲ್ಲ ಬಳೆಯ ಚಿತ್ರ

ಮಹಾ ತಂತ್ರಗಾತಿ ಕವಿಯೇ ಇರಬೇಕಿವರು. ಇಲ್ಲಿನ ಶಬ್ದಜಾಲವನ್ನೇ ಗಮನಿಸಿ. ಇದು ತೀರ ಸೂಚ್ಯವಾಯಿತು, ಹೌದೆಂದರೆ ಹೌದು, ಅಲ್ಲವೆಂದರೆ ಅಲ್ಲ. ಕೊಳದ ನೀರು ನಿಂತ ನೀರಲ್ಲ. ಅದು ಮಳೆಬಿದ್ದ ಕೊಳ, ಮತ್ತೀಗ ಹೊಸದಾಗಿ ಮಳೆಹನಿಗಳ ತಟ್ಟಾಟ ಸುರುವಾದಂತಿದೆ ಅಲ್ಲಿ. ಹನಿಯು ಹನಿಯನ್ನೆ ಮುಟ್ಟುವುದು ಮತ್ತು ಈ ಸ್ಪರ್ಶದಿಂದ ವರ್ತುಲಗಳು ಪರಸ್ಪರ ಸಂಯುಕ್ತಗಣಗಳಾಗುತ್ತಿವೆ. ಒಂದು ಮಿಲನವಿದೆ ಇಲ್ಲಿ. ಈ ಮಿಲನದ ತಟ್ಟಾಟದಿಂದ ಕೊಳವೆಲ್ಲ ಬಳೆಯ ರಂಗೋಲಿಯಾಗಿದೆ. ಇದು ಕರಣಗಳದೆ ರಿಂಗಣ?

ಈಗ ಹೆಣ್ಣಿನ ಭಗ್ನ ಶಿಲಾ ಪ್ರತಿಮೆಯ ವಿಮಗ್ನ ಕಣ್ಣನೋಟ ಇದ್ದಕ್ಕಿದ್ದಂತೆ ಕೊಲ್ಲಿನೋಟವಾಗಿ ಬಿಟ್ಟಿದೆ! ಅವಳು ತನ್ನನ್ನೇ ತಾನು ಕೊಳದ ನೀರಲ್ಲಿ ಕಂಡುಕೊಳ್ಳುವಷ್ಟು ಜೀವನ್ಮುಖಿಯಾಗಿದ್ದಾಳೆ. ‘ನೀರ ಪ್ರತಿಬಿಂಬದಲ್ಲಿ ತನ್ನನ್ನೇ ತಾನು| ನೋಡಿಕೊಂಡು ಬೀಗುತ್ತ ಬೆಳೆದಿ’ತ್ತಲ್ಲ ಬೆಟ್ಟ, ಹಾಗೆ ಇವಳು ‘ಬೆಳೆಯುವ’ ಸೂಚನೆ ಕೊಡುತ್ತಿದ್ದಾಳೆಯೆ? ಬಿರುಕು ತುಟಿ ಬಿರಿಯುವುದೆ? ಹೊಸೆದ ಕಾಲು ಬೆಸೆಯುವುದಕ್ಕೆ ಅಣಿಯಾಗುವುದೆ? ವಿಮಗ್ನ ನೋಟ ಇದೀಗ ಸ್ವಮಗ್ನವಾದಂತೆ ಇವಳ ಗಟ್ಟಿ ತುರುಬಿನ ಕಟ್ಟು ಬಿಚ್ಚಿ ವಿಭ್ರಾಂತಳಾಗುವಳೆ ಹರಿಣಿ?

ಮುಂದೆ ಕೊಳದೊಳಗೆ ಸಹಜವಾಗಿಯೇ ಜೀವಸಂಚಾರವಾಗುತ್ತದೆ. ಮೀನುಗಳು ಪುಳಕಗೊಳ್ಳುತ್ತವೆ. ಆವೆಮಣ್ಣೊಳಗೆ ಅಡಗಿದ್ದ ಆಮೆಗಳು ಹೊರಗಿಣುಕುತ್ತವೆ. ಈ ಪುಳಕ, ಆವೆಮಣ್ಣು, ಆಮೆಯ ಇಣುಕು ಇವೆಲ್ಲ ನಿಮ್ಮ ಮನಸ್ಸಿನ ಭಿತ್ತಿಯೊಳಗೆ ಯಾವ್ಯಾವ ಚಿತ್ರಗಳನ್ನು ಮೂಡಿಸುತ್ತವೆಯೋ ಅದು ನಿಮಗೇ ಬಿಟ್ಟಿದ್ದು. ಕವಿತೆಯ ಬಗ್ಗೆ ಮಾತನಾಡಬಾರದು. ಮಾತನಾಡುವುದೇ ಎಂದಾದರೆ ತೀರ ಶಬ್ದಸೂತಕದ ಮಟ್ಟಕ್ಕೆ ಹೋಗಬಾರದು. ಹಾಗಾಗಿ ಸುಮ್ಮನಿರುವೆ.

ಈ ಆಮೆಯ ಮುಂದಿನ ಚಲನೆಯ ಕಾತುರ, ಆ ಚಲನೆಯ ಲಯ, ಅದರ ಸಂಯಮ, ಬೇಟದ ಕೌತುಕ ಮತ್ತು ನಿಧಾನ, ಅದು ಮೊದಲಿಗೆ ಮುಟ್ಟುವ ಸವೆದ ಬೆರಳು, ನಂತರದ್ದು ಹುಡುಕಾಟ ಎಂದು ಕವಿ ಹೇಳುವ ಬಗೆಯಲ್ಲಿರುವ ಧ್ವನಿ, ಕೊನೆಗೂ ಅದು ಹೋಗಿ ಸೇರುವ ತಾಣ ಮುಂತಾದ ಕತೆಯೆಲ್ಲವೂ ನಿಮ್ಮ ಆಸ್ವಾದನೆಗೆ ಸಲ್ಲತಕ್ಕ ಸುಂದರ ಕಾವ್ಯ. ಹಾಗಾಗಿ ಈ ಬರಹಕ್ಕೆ ಒಂದು ಪುಟ್ಟ ಕವಿತೆಯೇ ತಕ್ಕ ಶೀರ್ಷಿಕೆ.
* ಚಿತ್ರ ಕಲಾವಿದರು: ಡಿ ಕೆ ರಮೇಶ್ (ಪ್ರಜಾವಾಣಿ ಕೃಪೆ)

****

ಸಂಕಲನದ ಇನ್ನೊಂದು ಕವಿತೆ ‘ಕೊಳಲು ಮತ್ತು ಅಮೀನ’ ಸ್ವತಃ ತೇಜಶ್ರೀಯವರ ಧ್ವನಿಯಲ್ಲೇ ಕೇಳುವ ಅವಕಾಶ ನನಗೊದಗಿತ್ತು. ಆವತ್ತು ಆ ಕವಿತೆಯ ಗುಂಗು ನನ್ನನ್ನಾವರಿಸಿದ ನೆನಪಿನ್ನೂ ಹಸಿರಾಗಿದೆ. ಅವರ ಬಳಿ ಅದರ ಪಠ್ಯ ಕೇಳಿ ಪಡೆದು, ಅದರ ಬಗ್ಗೆ ಬರೆದಿದ್ದು ಇಲ್ಲಿನ ಒಂದು ಲೇಖನವಾಗಿ ಮೂಡಿದೆ. (https://narendrapai.blogspot.com/2017/08/blog-post.html)

****

‘ಶಾಶ್ವತಕ್ಕೆ ಕೈಚಾಚಿ ಕಣ್ಣಾಳದ ಕವಿತೆ’ ಇಲ್ಲಿ ಇದುವರೆಗೂ ಗಮನಿಸಿದ ತೇಜಶ್ರೀಯವರ ಎರಡು ಬಗೆಯ ಕವಿತೆಗಳ ಕೊಲಾಜ್ ಮಾದರಿಯಂತಿದೆ. ಅದು ಒಂದು ಕಡೆ ಮರವೇ ಗಿಳಿಯಾಗುವ ಪ್ರಕ್ರಿಯೆಯನ್ನೂ ಮೈಗೂಡಿಸಿಕೊಂಡಿದೆ, ಇನ್ನೊಂದೆಡೆ ಕೊಳಲ ನಾದವನ್ನೇ ತನ್ನ ಹಾದಿಯಾಗಿಸಿಕೊಂಡು ಚಂದಿರನನ್ನು ಹಿಡಿಯಲು ಹೊರಟ ಅಮೀನಳನ್ನೂ ಮೈಗೂಡಿಸಿಕೊಂಡಿದೆ. ಈ ಕವಿತೆಗೆ ಕಲಾವಿದ ಪ ಸ ಕುಮಾರ್ ಅವರ ‘ಕ್ಯಾಚ್ ದ ಮೂನ್’ ಸರಣಿಯ ಚಿತ್ರಗಳು ಪ್ರೇರಣೆ ಎಂದು ತೇಜಶ್ರೀಯವರು ಹೇಳಿಕೊಂಡಿದ್ದಾರೆ. ಚಿತ್ರವನ್ನೂ ಕವಿತೆಯನ್ನೂ ಒಟ್ಟಾಗಿ ಓದುವಾಗ ಯಾವುದಕ್ಕೆ ಯಾವುದು ಸ್ಫೂರ್ತಿಯೋ ತಿಳಿಯದಂತಾದರೆ ಅಚ್ಚರಿಯೇನಿಲ್ಲ! 

ದಿನಕ್ಕೆ ಇಂತಿಷ್ಟು ಕವಿತೆ ಬರೆದರೆ ಕೊನೆಯ ದಿನದೊಳಗೆ ಪ್ರಶಸ್ತಿಗೆ ಹಸ್ತಪ್ರತಿ ಕಳಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಬರೆಯಬಲ್ಲ ಪ್ರಾಲಿಫಿಕ್ ಕವಿಗಳ ನಡುವೆ ಸುದೀರ್ಘ ಕಾಲದ ಮೌನದ ಬಳಿಕ ಒಂದು ಪುಟ್ಟ ಸಂಕಲನ ಕೊಡುವ ತೇಜಶ್ರೀಯಂಥವರು ಅಪರೂಪ. ಹಾಗೆಯೇ ಅವರ ಕೆಲವೇ ಕೆಲವು ಕವಿತೆಗಳು ಓದಲು ಸಿಕ್ಕಿದರೂ ಅವು ಒಂದೊಂದೂ ಘನವಾದ, ಬಹುಕಾಲ ನಮ್ಮೊಂದಿಗೆ ನಿಲ್ಲುವ, ಸಾರ್ಥಕ ರಚನೆಗಳಾಗಿರುತ್ತವೆ. 

(ಈ ಬರಹ ಬೆನ್ ಲರ್ನರ್‌ನ ದ ಹೇಟ್ರೆಡ್ ಆಫ್ ಪೋಯೆಟ್ರಿ ಪುಸ್ತಕಕ್ಕೆ ಋಣಿಯಾಗಿದೆ.) 
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ