Sunday, October 17, 2021

ಪರಿತ್ಯಕ್ತ ಬಯಲು


ನನ್ನನ್ನು ವೆರಾಂಡಕ್ಕೆ ತಂದು ಕೂರಿಸಿದರು. ನನ್ನ ತಂಗಿ ಸೊನ್ಸಾ ನನ್ನ ಕಾಲುಗಳಡಿ ದಿಂಬುಗಳನ್ನು ಹೊಂದಿಸಿಟ್ಟಳು. ಯಾವುದೇ ನೋವು ಕಾಣಿಸಿಕೊಳ್ಳಲಿಲ್ಲ. ಅದು ಆಗಸ್ಟ್ ತಿಂಗಳ ಬೆಚ್ಚಗಿನ ಒಂದು ದಿನ. ನನ್ನ ಹೆಂಡತಿಯ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ನಡೆದಿತ್ತು. ನಾನು ನೆರಳಿನಲ್ಲಿ, ಬಿಳುಚಿದಂತಿದ್ದ ಆಕಾಶವನ್ನು ನೋಡುತ್ತ ಬಿದ್ದುಕೊಂಡಿದ್ದೆ. ಅಷ್ಟೊಂದು ಪ್ರಖರವಾದ ಬೆಳಕಿಗೆ ಹೊಂದಿಕೊಳ್ಳಲು ನನಗೆ ಕಷ್ಟವಾಗುತ್ತ ಇತ್ತು. ಆಗೊಮ್ಮೆ ಈಗೊಮ್ಮೆ ನನ್ನನ್ನು ಗಮನಿಸಿಕೊಳ್ಳಲು ಬಂದು ಹೋಗಿ ಮಾಡುತ್ತಿದ್ದ ಸೊನ್ಸಾ ಬಳಿ ನನ್ನ ಸನ್‌ಗ್ಲಾಸ್ ತಂದುಕೊಡಲು ಕೇಳಿಕೊಂಡೆ. ನನ್ನ ಕಣ್ಣುಗಳಲ್ಲಿ ನೀರಿತ್ತು, ಅವಳು ಅದನ್ನು ತಪ್ಪಾಗಿ ಅರ್ಥೈಸುವುದು ನನಗೆ ಬೇಡವಾಗಿತ್ತು. ಅವಳದನ್ನು ತರಲು ಹೋದಳು. ಅಲ್ಲಿ ಬರೀ ನಾವಿಬ್ಬರೇ ಇದ್ದೆವು. ಉಳಿದವರೆಲ್ಲಾ ಅಂತಿಮ ಕ್ರಿಯೆಯ ನಡಾವಳಿಗಳಲ್ಲಿ ವ್ಯಸ್ತರಾಗಿದ್ದರು. ಅವಳು ಮರಳಿ ಬಂದು ನನಗೆ ಸನ್‌ಗ್ಲಾಸ್ ತೊಡಿಸಿದಳು. ನಾನು ತುಟಿಗಳಲ್ಲೆ ಮುತ್ತು ಕಳಿಸಿದೆ, ಅವಳು ಮುಗುಳ್ನಕ್ಕಳು. ಅವಳಿಗದು ಸರಿಯಾಗಿ ಅರ್ಥವಾಗಿದ್ದರೆ...

ಸನ್‌ಗ್ಲಾಸ್ ಎಷ್ಟು ಕಪ್ಪಾಗಿತ್ತೆಂದರೆ, ಅವಳ ಗಮನಕ್ಕೆ ಬರದ ಹಾಗೆ ನಾನವಳ ದೇಹವನ್ನು ನೋಡುವುದು ಸಾಧ್ಯವಿತ್ತು. ಅವಳು ಹೊರಟು ಹೋದ ಮೇಲೆ, ಮತ್ತೆ ನಾನು ಆಕಾಶ ದಿಟ್ಟಿಸುತ್ತ ಬಿದ್ದುಕೊಂಡೆ. ತೀರ ದೂರದಿಂದೆಲ್ಲೊ ಸುತ್ತಿಗೆಯ ಪೆಟ್ಟು ಹಾಕುವ ಸದ್ದು ಕೇಳಿಸುತ್ತಾ ಇತ್ತು. ನನಗದು ಆಪ್ಯಾಯಮಾನವೆನಿಸಿತು. ನನಗೆ ಸಂಪೂರ್ಣ ಮೌನವನ್ನು ಸಹಿಸುವುದು ಸಾಧ್ಯವೇ ಇಲ್ಲ. ನಾನಿದನ್ನೊಮ್ಮೆ ನನ್ನ ಹೆಂಡತಿ ಹೆಲೆನ್ ಬಳಿಯೂ ಹೇಳಿದ್ದೆ. ಅವಳು ಕಾಡುವ ಪಾಪಪ್ರಜ್ಞೆಯಿಂದಾಗಿ ಹಾಗಾಗುತ್ತೆ ಎಂದಿದ್ದಳು.  ನೀವು ಅವಳ ಹತ್ತಿರ ಅಂಥ ಸಂಗತಿಗಳನ್ನೆಲ್ಲ ಹೇಳುವಂತೆಯೇ ಇರಲಿಲ್ಲ. ತಕ್ಷಣ ಅವಳು ಕುಟುಕಲು ಸುರು ಮಾಡಿಬಿಡುತ್ತಾಳೆ.

ಒಂದಷ್ಟು ಹೊತ್ತು ಅಲ್ಲಿ ಹಾಗೆಯೇ ಬಿದ್ದುಕೊಂಡಿದ್ದೆ. ಸುತ್ತಿಗೆಯ ಸದ್ದು ಕೂಡ ನಿಂತು ಸಾಕಷ್ಟು ಹೊತ್ತಾಗಿತ್ತು. ಆಗ ಇದ್ದಕ್ಕಿದ್ದ ಹಾಗೆ ನನ್ನ ಸುತ್ತಲೂ ಕತ್ತಲು ಕವಿದುಕೊಂಡಂತಾಯ್ತು. ಕವಿದ ಮೋಡಗಳು ಮತ್ತು ನನ್ನ ದಟ್ಟ ಸನ್‍ಗ್ಲಾಸ್ ಎರಡೂ ಸೇರಿ ಅಂಥ ಅನುಭವವಾಗಿರಬೇಕು ಎಂದು ಅರಿಯುವ ಮೊದಲೇ ವಿವರಿಸಲಾಗದ ಆತಂಕ, ದುಗುಡ ನನ್ನಲ್ಲಿ ತುಂಬಿಕೊಂಡಿತು. ಅದೇನೂ ಹೆಚ್ಚು ಕಾಲ ಇರದಿದ್ದರೂ, ಒಂದು ಬಗೆಯ ಶೂನ್ಯ, ಎಲ್ಲರಿಂದಲೂ ದೂರವಾಗಿ ಬಿಟ್ಟಂಥ ಭಾವವನ್ನು ಅದು ಉಳಿಸಿ ಹೋಯಿತು. ಸೊನ್ಸಾ ಮತ್ತೆ ನನ್ನ ಬಳಿ ಬಂದಾಗ ನಾನವಳ ಬಳಿ ಗುಳಿಗೆ ಕೊಡುವಂತೆ ಕೇಳಿದೆ. ಇಷ್ಟು ಬೇಗನೆ ಎಂದವಳು ಕೇಳಿದಳು. ನಾನು ತೀರ ಅಗತ್ಯವಿದೆ ಎಂದೆ. ಅವಳು ನನ್ನ ಸನ್‌ಗ್ಲಾಸ್ ತೆಗೆದಳು. ಬೇಡ, ತೆಗೆಯಬೇಡ ಎಂದೆ. ಕಣ್ಣುಗಳನ್ನು ಮುಚ್ಚಿಕೊಂಡೆ. ಅವಳು ಮತ್ತೆ ಸನ್‍ಗ್ಲಾಸ್ ಹಾಕಿದಳು. ತುಂಬ ನೋವಿದೆಯ ಈಗ? ಹೌದು ಎಂದೆ. ಹೋದಳು. ಮರಳಿದಾಗ ಅವಳ ಕೈಯಲ್ಲಿ ಗುಳಿಗೆ ಮತ್ತು ಒಂದು ಗ್ಲಾಸ್ ನೀರಿತ್ತು. ಪೆಟ್ಟಾಗದಿರುವ ಭುಜದ ಕಡೆಯಿಂದ ನನ್ನನ್ನು ಮೆತ್ತಗೆ ಎತ್ತಿ ಕೂರಿಸಿ, ಗುಳಿಗೆಯನ್ನು ನನ್ನ ಬಾಯೊಳಗಿಟ್ಟು ನೀರಿನ ಗ್ಲಾಸನ್ನು ತುಟಿಗಿರಿಸಿದಳು. ಅವಳ ದೇಹದ ಸುವಾಸನೆ ನನ್ನನ್ನು ಆವರಿಸಿತು.

ಅಷ್ಟರಲ್ಲಿ ನನ್ನ ಅಮ್ಮ, ನನ್ನಇಬ್ಬರು ಸಹೋದರರು ಮತ್ತು ಅತ್ತಿಗೆ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಮರಳಿದರು. ಅವರು ಬಂದ ಸ್ವಲ್ಪ ಹೊತ್ತಿನ ಬಳಿಕ ಹೆಲೆನಳ ಅಪ್ಪ, ಅವಳ ಇಬ್ಬರು ಸಹೋದರಿಯರು ಮತ್ತು ನನಗೆ ಅಷ್ಟೇನೂ ಹೊಕ್ಕುಬಳಕೆಯಿರದ ಅವಳ ಒಬ್ಬಳು ಆಂಟಿ ಕೂಡಾ ಮನೆಗೆ ಬಂದರು. ಪ್ರತಿಯೊಬ್ಬರೂ ನನ್ನ ಹತ್ತಿರ ಬಂದು ಏನಾದರೂ ಒಂದೆರಡು ಮಾತುಗಳನ್ನಾಡಿ ಹೋಗುತ್ತಿದ್ದರು. ತೆಗೆದುಕೊಂಡಿದ್ದ ಗುಳಿಗೆ ಕೆಲಸ ಮಾಡತೊಡಗಿತ್ತು. ನಾನು ನನ್ನ ಸನ್‌ಗ್ಲಾಸಿನ ಮರೆಯಲ್ಲಿ ಗಾಡ್‌ಫಾದರ್‌ನಂತೆ ಕುಳಿತೇ ಇದ್ದೆ. ನಾನೇನೂ ಆಡಬೇಕಾದ ಅಗತ್ಯವಿದ್ದಿರಲಿಲ್ಲ. ಸಹಜವಾಗಿಯೇ ಪ್ರತಿಯೊಬ್ಬರೂ ನಾನು ಗಾಢ ಸಂತಾಪದಲ್ಲಿದ್ದೇನೆಂದು ಅವರಾಗಿಯೇ ತಿಳಿದುಕೊಂಡು ಬಿಟ್ಟಿದ್ದರು. ನಾನಂತೂ ನನ್ನ ಪಾಡಿಗೆ ನಾನು ತಣ್ಣಗೇ ಇದ್ದೆ. ಅವರಲ್ಲಿ ಯಾರೂ ಅದನ್ನು ಅರಿಯುವ ಸಂಭವವಂತೂ ಇರಲಿಲ್ಲ. ಹೆಲೆನಳ ತಂದೆ ನನ್ನ ಪಕ್ಕಕ್ಕೆ ಬಂದು ಏನೋ ಒಂದೆರಡು ಮಾತು ಆಡಿದಾಗ, ಈಗ ಹೆಲೆನಳ ಕತೆಯಂತೂ ಮುಗಿದೇ ಹೋಯಿತು; ಇನ್ನು ಇವನು ನನ್ನ ಮಾವನೂ ಅಲ್ಲ, ಅವಳ ಸಹೋದರಿಯರು ನನಗೆ ನಾದಿನಿಯರೂ ಅಲ್ಲ ಎಂಬ ಯೋಚನೆಯಿಂದಲೇ  ಒಳಗೊಳಗೇ ವಿವರಿಸಲಾಗದ ಒಂದು ತೃಪ್ತಿಭಾವ ಆವರಿಸಿಕೊಳ್ಳತೊಡಗಿತು.

ಸ್ವಲ್ಪ ಹೊತ್ತಿಗೆ ವೆರಾಂಡಾದ ಕೆಳಗಿರುವ ಗಾರ್ಡನ್ನಿನ ಉದ್ದನೆಯ ಟೇಬಲ್ಲಿನ ಮೇಲೆ ಹೆಲೆನಾಳ ಸಹೋದರಿಯರೂ, ಅತ್ತಿಗೆಯೂ ಸೇರಿ ಪ್ಲೇಟುಗಳನ್ನು, ಅಡುಗೆಯ ಪಾತ್ರೆಗಳನ್ನು ಜೋಡಿಸುತ್ತಿರುವುದು ಕೇಳಿಸಿತು. ಪ್ರತಿ ಬಾರಿ ಅವರು ಲಿವಿಂಗ್ ರೂಮಿನ ಮೂಲಕ ಹಾದು ಹೋಗುವಾಗಲೂ  ನನ್ನತ್ತ ಮುಗುಳ್ನಕ್ಕು ತಲೆಯಾಡಿಸಿ ಸಾಗುತ್ತಿದ್ದರು. ನಾನು ಮಾತ್ರ ಅವರನ್ನು ಗಮನಿಸುತ್ತ ಇಲ್ಲವೆಂಬಂತೆ ಕುಳಿತೆ. ನಡುವೆ ನಾನು ಸ್ವಲ್ಪ ಹೊತ್ತು ತೂಕಡಿಸಿದೆ ಎಂದು ಕಾಣುತ್ತದೆ. ಏಕೆಂದರೆ, ಮತ್ತೆ ನನಗೆ ಕೇಳಿಸಿದ್ದು ಕೆಳಗಿನ ಗಾರ್ಡನ್ನಿನಲ್ಲಿ ಗುಜುಗುಜು ಮಾತನಾಡುತ್ತಿರುವ ಸದ್ದು. ನನಗೆ ಅವರ ತಲೆ ಮಾತ್ರ ಕಾಣಿಸುತ್ತ ಇತ್ತು. ಆಚೀಚೆ ಹೋಗದೆ ಇದ್ದಲ್ಲೇ ಇದ್ದ ಒಟ್ಟು ಒಂಬತ್ತು ತಲೆಗಳು.  ಅದೊಂದು ನೆಮ್ಮದಿಯ ನೋಟವಾಗಿತ್ತು. ದೊಡ್ಡ ಬಿರ್ಚ್ ಮರದ ತಂಪಿನಡಿ ನೆರೆದ ಒಂಬತ್ತು ತಲೆಗಳು ಮತ್ತು ಟೇಬಲ್ಲಿನ ಆ ತುದಿಯಲ್ಲಿ, ನನಗೆ ಎದುರಾಗಿ ಸೊನ್ಸಾ.  ಸ್ವಲ್ಪ ಹೊತ್ತಿನ ನಂತರ ನಾನೊಮ್ಮೆ ಅವಳ ಗಮನ ಸೆಳೆಯುವುದಕ್ಕಾಗಿ ನನ್ನ ಕೈಯೆತ್ತಿ ಆಡಿಸಿದೆ. ಆದರೆ ಅದು ಅವಳ ಗಮನಕ್ಕೆ ಬರಲಿಲ್ಲ. ಇದಾಗುತ್ತಲೇ ನನ್ನ ಕಿರಿಯ ಸಹೋದರ ಎದ್ದು ವೆರಾಂಡಾದ ಕಡೆಗೆ ಬಂದ. ನಾನು ಕಣ್ಣುಗಳನ್ನು ಮುಚ್ಚಿ ನಿದ್ದೆಯಲ್ಲಿರುವವನಂತೆ ಮಲಗಿದೆ. ನನ್ನ ಪಕ್ಕ ಹಾದು ಹೋಗುವಾಗ ಅವನು ಒಂದು ಗಳಿಗೆ ನಿಂತ. ನನ್ನಲ್ಲೇ ನಾನು "ನಾವು ಸಂಪೂರ್ಣ ನಿಸ್ಸಹಾಯಕರು" ಎಂದು ಹೇಳಿಕೊಂಡೆ.                          

ಕೊನೆಗೆ ಎಲ್ಲರೂ ಟೇಬಲ್ಲಿನಿಂದ ಎದ್ದರು. ನನ್ನಮ್ಮ ಮತ್ತು ಸೊನ್ಸಾ ಇಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಹೊರಡುವ ತಯಾರಿಯಲ್ಲಿದ್ದಷ್ಟೂ ಹೊತ್ತು ನಾನು ಕಣ್ಣು ಮುಚ್ಚಿಕೊಂಡೇ, ಮಲಗಿರುವವನ ಹಾಗೇ ಬಿದ್ದುಕೊಂಡಿದ್ದೆ. ಆಮೇಲೆ ಅಮ್ಮ ಲಿವಿಂಗ್ ರೂಮಿನಿಂದ ಪ್ರತ್ಯಕ್ಷಳಾಗಿ ನನ್ನ ಪಕ್ಕ ಬಂದಳು. ನಾನು ಅವಳತ್ತ ಮುಗುಳ್ನಕ್ಕೆ. ಹಸಿವಾಗಿದೆಯಾ ಎಂದು ಕೇಳಿದಳು. ನನಗೆ ಹಸಿವಾಗಿರಲಿಲ್ಲ. ನೋವಿದೆಯಾ ಎಂದಳು, ಇಲ್ಲವೆಂದೆ. ಒಳಗಡೆ ಹೇಗಿದೆ ಎಂದಳು. ಇಲ್ಲವೆಂದೆ. ಅವಳು ಹೊದಿಕೆ ಸರಿಪಡಿಸತೊಡಗಿದಳು. ಅದು ಸರಿಯಾಗಿಯೇ ಇತ್ತು. ನೀನು ಮನೆಗೆ ಹೊರಡುವವಳಾ ಎಂದು ಕೇಳಿದೆ. ಯಾಕೆ, ನಾನಿಲ್ಲಿರುವುದು ನಿನಗೆ ಇಷ್ಟವಿಲ್ವಾ ಎಂದಳು. ಛೇಛೇ, ಹಾಗಲ್ಲ, ಅಪ್ಪ ಕಾಯುತ್ತಿರಬಹುದು ಅಂತ ಹೇಳಿದೆ ಅಷ್ಟೆ ಅಂದೆ. ಅದಕ್ಕವಳು ಉತ್ತರಿಸಲಿಲ್ಲ. ಅವಳು ಅತ್ತ ಸರಿದು ಬೆತ್ತದ ಸೋಫಾದ ಮೇಲೆ ಕುಳಿತಳು. ಆಗಷ್ಟೇ ಸೊನ್ಸಾ ಕಾಣಿಸಿಕೊಂಡಳು. ನಾನು ನನ್ನ ಸನ್‌ಗ್ಲಾಸ್ ತೆಗೆದೆ. ಅವಳ ಕೈಯಲ್ಲಿ ಒಂದು ವೈನ್ ಗ್ಲಾಸ್ ಇತ್ತು. ಅದನ್ನವಳು ಅಮ್ಮನಿಗೆ ಕೊಟ್ಟಳು. ನನಗೂ ಇದ್ದಿದ್ದರಾಗಿತ್ತು ಎಂದೆ. ಗುಳಿಗೆ ತಗೊತಿರುವಾಗ ಬೇಡ ಅಂದಳು. ಛೇ, ಅದೆಂಥ ಮಾತು ಎಂದೆ. ಹಾಗಿದ್ದರೆ ಸರಿ, ಒಂದೇ ಒಂದು ಗ್ಲಾಸ್ ತಗೊ ಎಂದು ತರಲು ಹೋದಳು.  ಅಮ್ಮ ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಕಿಟಕಿಯಿಂದ ಹೊರಗಿನ ಗಾರ್ಡನ್ ನೋಡುತ್ತ ಕುಳಿತಳು. ಇನ್ನೀಗ ಇದೆಲ್ಲವೂ ನಿನ್ನದೇ ಆಗುತ್ತಾ ಎಂದಳು. ಹೌದು, ನನ್ನ ಹೆಸರಿಗೆ ವರ್ಗಾವಣೆಯಾಗುತ್ತೆ ಎಂದೆ. ತುಂಬ ಶೂನ್ಯ ಆವರಿಸುತ್ತೆ ಇನ್ನು ಎಂದಳು. ನಾನದಕ್ಕೆ ಉತ್ತರಿಸಲಿಲ್ಲ. ಅವಳ ಮಾತಿನ ಅರ್ಥವೇನೆಂದು ನನಗೆ ಸರಿಯಾಗಿ ತಿಳಿಯಲಿಲ್ಲ. ಸೊನ್ಸಾ ಕೈಯಲ್ಲಿ ಎರಡು ಗ್ಲಾಸ್ ವೈನ್ ಹಿಡಿದು ಬಂದಳು. ಒಂದನ್ನು ಅಮ್ಮನ ಪಕ್ಕ ಇದ್ದ ಟೇಬಲ್ಲಿನ ಮೇಲಿರಿಸಿ ನನ್ನ ಪಕ್ಕ ಬಂದಳು. ನಿಧಾನವಾಗಿ ನನ್ನ ಭುಜಕ್ಕೆ ಆಸರೆ ನೀಡಿ ಎಬ್ಬಿಸಿ, ನನ್ನ ತುಟಿಗಳಿಗೆ ಗ್ಲಾಸ್ ತಗುಲಿಸಿದಳು. ಅವಳು ಕಳೆದ ಸಲಕ್ಕಿಂತ ಹೆಚ್ಚು ಬಾಗಿದ್ದರಿಂದ ನನಗೆ ಅವಳ ಮೊಲೆಗಳನ್ನು ಕಾಣುವುದಕ್ಕಾಯಿತು. ಗ್ಲಾಸ್ ಮರಳಿ ಒಯ್ಯುವಾಗ ನಮ್ಮಿಬ್ಬರ ಕಣ್ಣುಗಳು ಸಂಧಿಸಿದವು. ಬಹುಶಃ ಅವಳು ಇದುವರೆಗೂ ಗಮನಿಸದೇ ಇದ್ದ ಏನನ್ನೋ ಕಂಡುಕೊಂಡಿರಬೇಕು ಅನಿಸುತ್ತದೆ. ಒಂದು ಕ್ಷಣ ಅವಳ ಕಣ್ಣುಗಳಲ್ಲಿ ಅದನ್ನು ಕಂಡ ಮಿಂಚು ಹಾದು ಹೋದಂತಾಯ್ತು. ಆ ಕಣ್ಣುಗಳಲ್ಲಿ ಕಂಡ ಉರಿಯಲ್ಲಿ ಸಿಟ್ಟು ತುಂಬಿತ್ತು. ನಂತರ ಏನೂ ಆಗದವರಂತೆ ನಕ್ಕು ಅಮ್ಮನ ಪಕ್ಕ ಹೋಗಿ ಕುಳಿತಳು. ಚಿಯರ್ಸ್ ಅಮ್ಮಾ ಎಂದಳು, ಅಮ್ಮನೂ ಗ್ಲಾಸ್ ಎತ್ತಿದಳು. ಅವರಿಬ್ಬರೂ ನಿಧಾನವಾಗಿ ವೈನ್ ಕುಡಿಯತೊಡಗಿದರು. ನಾನು ಮತ್ತೆ ನನ್ನ ಸನ್‌ಗ್ಲಾಸ್ ಹಾಕಿಕೊಂಡೆ. ಯಾರೊಬ್ಬರೂ ಮಾತನಾಡಲಿಲ್ಲ. ಆ ಮೌನ ಅಷ್ಟೇನೂ ಸಹನೀಯವಾಗಿರಲಿಲ್ಲ. ನಾನು ಏನಾದರೂ ಮಾತನಾಡಬೇಕೆಂದುಕೊಂಡೆನಾದರೂ ಏನನ್ನು ಆಡಲಿ ಎಂಬುದು ಹೊಳೆಯಲಿಲ್ಲ. ಇಲ್ಲಿ ಹಕ್ಕಿಗಳೇ ಕಾಣಿಸುವುದಿಲ್ಲ ಎಂದಳು ಸೊನ್ಸಾ. ಸೀಗಲ್ಸ್ ಬಿಟ್ಟರೆ ನಮ್ಮ ಮನೆ ಅಕ್ಕಪಕ್ಕದಲ್ಲೂ ಹಕ್ಕಿಗಳಿಲ್ಲ ಈಗ ಎಂದಳು ಅಮ್ಮ. ಹಿಂದೆಲ್ಲ ತುಂಬ ಪಿಕಳಾರಗಳಿದ್ದವು ಇಲ್ಲೆಲ್ಲ, ತುಂಬಾ. ಈಗ ಎಲ್ಲಾ ಹೋಗಿ ಬಿಟ್ಟವು. ಸೊನ್ಸಾ ಛೇ, ಹಾಗಾಗಬಾರದಿತ್ತು ಎಂದಳು. ಮುಂದುವರಿದು, ಏನಾಗ್ತಿದೆ, ಯಾಕೆ ಹೀಗಾಗ್ತಿದೆ ಇದೆಲ್ಲ ಎಂದಳು. ಅಮ್ಮ ಅದನ್ನಂತೂ ಅಂದಾಜು ಮಾಡುವುದೇ ಕಷ್ಟ ಎಂದು ಸುಮ್ಮನಾದಳು. ಆ ಬಳಿಕ ಅವರಿಬ್ಬರೂ ಮೌನವಾಗಿಯೇ ಕುಳಿತರು. ಈಗ ಇನ್ನೇನು ವಾತಾವರಣ ಹೀಗೇ ಇರುತ್ತಾ ಇಲ್ಲ ಮಳೆ ಸುರಿಯುತ್ತಾ ಅಂತ ಅಂದಾಜು ಮಾಡುವುದು ಕೂಡ ಸಾಧ್ಯವಿಲ್ಲದ ಹಾಗಾಗಿ ಬಿಟ್ಟಿದೆ ಎಂದಳು ಅಮ್ಮ. ನೀನು ಹವಾಮಾನ ವರದಿ ಕೇಳಿಸಿಕೊ ಬಹುದಲ್ಲ ಎಂದಳು ಸೊನ್ಸಾ. ಅವನ್ನೆಲ್ಲ ನಂಬುವ ಹಾಗೇ ಇಲ್ಲ ಎಂದಳು ಅಮ್ಮ. ಮೆಡಿಟರೇನಿಯನ್ ಪ್ರದೇಶದಲ್ಲಿ ಮಳೆ ಬರುವ ಸೂಚನೆ ಇಲ್ಲದಿದ್ದಾಗ್ಯೂ ಪಿಕಳಾರಗಳು ತಗ್ಗಿನಲ್ಲೇ ಹಾರಾಡಿಕೊಂಡಿರುತ್ತವೆ ಎಂದಳು ಸೊನ್ಸಾ. ಹೌದಾ? ಹಾಗಿದ್ದರೆ ಅವು ಬೇರೆ ತರದ ಪಿಕಳಾರಗಳಿರಬೇಕು ಎಂದಳು ಅಮ್ಮ. ಇಲ್ಲಿಲ್ಲ, ಸೊನ್ಸಾ ಹೇಳಿದಳು, ಅವು ಒಂದೇ ಬಗೆಯ ಪಿಕಳಾರಗಳೇ. ಹಾಗಿದ್ದರೆ ಅದು ವಿಚಿತ್ರವೇ ಸರಿ ಎಂದಳು ಅಮ್ಮ. ಸೊನ್ಸಾ ಅದಕ್ಕೇನೂ ಹೇಳಲಿಲ್ಲ. ಅವಳು ಅವಳ ವೈನ್ ಕುಡಿಯುತ್ತ ಇದ್ದಳು. ಸೊನ್ಸಾ ಹೇಳ್ತಿರೋದು ನಿಜಕ್ಕೂ ಹೌದಾ ಎಂದು ಅಮ್ಮ ಕೇಳಿದಳು. ಹೌದು, ಅದು ನಿಜ ಎಂದೆ. ತಕ್ಷಣವೇ ಸೊನ್ಸಾ, ಓ ದೇವರೇ! ನೀನು ನನ್ನ ಒಂದು ಮಾತನ್ನೂ ನಂಬುವುದಿಲ್ಲವಲ್ಲ ಎಂದಳು. ಬಹುಶಃ ಇವತ್ತಿನ ಸಂದರ್ಭದಲ್ಲಿ ಪ್ರಮಾಣ ಮಾಡುವುದು ನಿನ್ನ ಡಿಗ್ನಿಟಿಗೆ ಕಡಿಮೆ ಅನಿಸಿರಬೇಕು ನಿನಗೆ ಎಂದು ಅಮ್ಮ ಕುಟುಕಿದಳು.   ಸೊನ್ಸಾ ತನ್ನ ಕನ್ನಡಕ ಒರೆಸಿಕೊಂಡು ಎದ್ದು ನಿಂತಳು. ನೀನು ಹೇಳಿದ್ದು ನಿಜ, ನಾನು ನಾಳೆಯ ತನಕ ಕಾಯಬೇಕು ಅದಕ್ಕೆಲ್ಲ ಎಂದಳು. ಬರೀ ಸಣ್ಣಬುದ್ಧಿಯಾಯ್ತು ಎಂದಳು ಅಮ್ಮ. ನಾನೊಂದು ಒಳ್ಳೆ ಬುದ್ಧಿಯ ಮಗು ಅಂತ ಯೋಚಿಸೋದು ಕೂಡ ಎಂದಳು ಸೊನ್ಸಾ. ಅವಳು ನನ್ನತ್ತ ಬಂದು ಮತ್ತೆ ನನಗೆ ನನ್ನ ವೈನ್ ಕುಡಿಯಲು ಸಹಾಯ ಮಾಡಿದಳು. ಅವಳು ನನ್ನ ತಲೆಯನ್ನು ಸಾಕಷ್ಟು ಎತ್ತಿ ಹಿಡಿದಿರಲಿಲ್ಲ, ಸ್ವಲ್ಪ ವೈನ್ ನನ್ನ ತುಟಿಗಳ ತುದಿಯಿಂದ ಕೆಳಕ್ಕೆ ಹರಿದು ಗದ್ದಕ್ಕಿಳಿಯಿತು. ಅವಳದನ್ನು ಹೊದಿಕೆಯ ಒಂದು ತುದಿಯಿಂದ ಒರಟಾಗಿ ತಿಕ್ಕಿ ಒರೆಸಿದಳು. ಅವಳ ತುಟಿಗಳು ಸಿಟ್ಟಿನಿಂದ ಬಿಗಿದುಕೊಂಡಿದ್ದವು. ಆಮೇಲೆ ಅವಳು ಲಿವಿಂಗ್ ರೂಮಿನೊಳಕ್ಕೆ ಹೊರಟು ಹೋದಳು. ಅವಳಿಗೇನಾಗಿದೆ ಇದ್ದಕ್ಕಿದ್ದ ಹಾಗೆ ಎಂದು ಅಮ್ಮ ಆಶ್ಚರ್ಯಪಟ್ಟಳು. ಅವಳೀಗ ದೊಡ್ಡವಳಾಗಿದ್ದಾಳಮ್ಮಾ, ಅವಳಿಗೆ ಹೆಚ್ಚು ಹೇಳಿಸಿಕೊಳ್ಳುವುದು ಇಷ್ಟವಾಗಲ್ಲ ಎಂದೆ. ಆದರೆ ನಾನು ಅವಳ ಅಮ್ಮ ಎಂದಳು. ನಾನು ಉತ್ತರಿಸಲಿಲ್ಲ. ನಾನು ಅವಳ ಒಳ್ಳೆಯದನ್ನಷ್ಟೇ ಬಯಸೋದು ಎಂದಳು. ನಾನು ಅದಕ್ಕೂ ಉತ್ತರಿಸಲಿಲ್ಲ. ಅಮ್ಮ ಬಿಕ್ಕಳಿಸಿ ಅಳುವುದಕ್ಕೆ ಸುರುಮಾಡಿದಳು. ಏನಾಯ್ತಮ್ಮಾ ಈಗ ಅಷ್ಟಕ್ಕೂ ಎಂದೆ. ಯಾವುದೂ ಇರಬೇಕಾದ ಹಾಗೆ ಇಲ್ಲ ಅನಿಸುತ್ತಾ ಇದೆ... ಎಲ್ಲವೂ...ಎಲ್ಲವೂ ಒಂಥರಾ ವಿಚಿತ್ರವಾಗಿದೆ ಅನಿಸತೊಡಗಿದೆ ನನಗೆ... ಸೊನ್ಸಾ ಪುನಃ ಹೊರಗೆ ಬಂದಳು. ನಾನು ವಾಕ್ ಹೋಗಿ ಬರುತ್ತೇನೆ ಎಂದಳು. ಅಮ್ಮನ ಕಣ್ಣಲ್ಲಿ ನೀರಿರುವುದನ್ನು ಅವಳು ಗಮನಿಸಿರಬಹುದು ಎಂದುಕೊಂಡೆ, ಆದರೆ ನನಗದು ಖಾತ್ರಿಯಾಗಿ ಗೊತ್ತಾಗಲಿಲ್ಲ. ಅವಳು ಹೊರಟು ಹೋದಳು. ಎಷ್ಟು ಚಂದ ಆಗಿದ್ದಾಳೆ ಎಂದೆ. ಅದರಿಂದ ಏನು ಉಪಯೋಗ ಎಂದಳು ಅಮ್ಮ. ಓ ಅಮ್ಮಾ, ಏನು ಮಾತದು ಎಂದೆ. ಸರಿ, ನನಗೆ ನಾನೇನು ಆಡುತ್ತಿದ್ದೇನೋ ಗೊತ್ತಾಗ್ತಿಲ್ಲ ಎಂದಳು ಅಮ್ಮ.  ನಿನಗೆ ಮನೆಗೆ ಹೋಗಬೇಕು ಅನಿಸಿದರೆ ಹೋಗು, ಪರವಾಗಿಲ್ಲ. ಇಲ್ಲಿ ಹೇಗೂ ಸೊನ್ಸಾ ಇರ್ತಾಳೆ ಎಂದೆ. ಅಮ್ಮ ಮತ್ತೆ ಅಳತೊಡಗಿದಳು, ಗಟ್ಟಿಯಾಗಿನಿಯಂತ್ರಿಸಿಕೊಳ್ಳಲಾಗದ ಹಾಗೆ ಅಳತೊಡಗಿದಳು. ಸಾಕಷ್ಟು ಹೊತ್ತು ನಾನು ಅವಳನ್ನು ಅಳುವುದಕ್ಕೆ ಬಿಟ್ಟೆ. ಇನ್ನು ಸಾಕು ಅನಿಸಿದಾಗ ಕೇಳಿದೆ, ನೀನೀಗ ಅಳುತ್ತಿರುವುದಾದರೂ ಯಾಕಾಗಿ? ಅವಳು ಉತ್ತರಿಸಲಿಲ್ಲ. ನನಗೆ ಕಿರಿಕಿರಿಯಾಗತೊಡಗಿತು. ಯಾರು ಸತ್ತರಂತ ಅಳುವುದು ಇವಳೀಗ ಅಂತ ಅಂದುಕೊಂಡೆ ಮನಸ್ಸಿನಲ್ಲೇ. ನಿನ್ನಪ್ಪ ಯಾರನ್ನೋ ಭೇಟಿಯಾಗುತ್ತಿದ್ದಾನೆ ಅಂದಳು. ಯಾರನ್ನೋ ಭೇಟಿಯಾಗುತ್ತಾನ? ಅಪ್ಪನ? ಎಂದೆ. ನಾನಿದನ್ನ ನಿನಗೆ ಹೇಳಬೇಕಂತ ಇರಲಿಲ್ಲ. ನಿನಗೆ ನಿನ್ನವೇ ಆದ ಚಿಂತೆಗಳಿಲ್ಲ ಅಂತಲೂ ನಾನು ಅಂದುಕೊಂಡಿಲ್ಲ, ಗೊತ್ತಿದೆ ನನಗೆ ಎಂದಳು.  ನನಗ್ಯಾವ ಚಿಂತೆಗಳೂ ಇಲ್ಲ, ಅದೆಲ್ಲ ಬಿಡು ಎಂದೆ. ಏನು ಮಾತೂಂತ ಆಡ್ತೀ ಎಂದಳು. ನಾನದಕ್ಕೆ ಉತ್ತರಿಸಲಿಲ್ಲ. ನಾನು ಬಿದ್ದಲ್ಲೇ ಬಿದ್ದುಕೊಂಡು ಆ ಗಿಡ್ಡನೆಯ ಬಡಕಲು ಮನುಷ್ಯನ ಬಗ್ಗೆ ಯೋಚಿಸತೊಡಗಿದೆ, ಅದು ನನ್ನಪ್ಪ. ಅವನು, ತನ್ನ ಅರವತ್ಮೂರನೆಯ ವಯಸ್ಸಿನಲ್ಲಿ.....ನನ್ನನ್ನು ಮತ್ತು ನನ್ನ ಒಡಹುಟ್ಟಿದವರನ್ನು ಹುಟ್ಟಿಸುವುದರಾಚೆ ಲೈಂಗಿಕವಾಗಿ ಒಬ್ಬ ಸಂಪನ್ನ ಪುರುಷ ಅಂತ ನಾನು ಯಾವತ್ತೂ ನನ್ನಪ್ಪನ ಬಗ್ಗೆ ಯೋಚಿಸಿಯೇ ಇರಲಿಲ್ಲ. ಒಂದು ಹೆಂಗಸಿನ ತೊಡೆಗಳ ನಡುವೆ ನನ್ನಪ್ಪನ ಬೆತ್ತಲೆ ಚಿತ್ರವನ್ನು ಮನಸ್ಸಿನಲ್ಲೇ ಕಲ್ಪಿಸಿದೆ. ಅಸಹ್ಯವಷ್ಟೇ ಹುಟ್ಟಿತು ಮನಸ್ಸಿನಲ್ಲಿ. ಖಾಲಿ ಗ್ಲಾಸುಗಳನ್ನು ಒಳಗಡೆ ಎತ್ತಿಕೊಂಡು ಹೋದ ಅಮ್ಮ ಮತ್ತೆ ಮರಳಿ ಬಂದಳು. ನನಗೆ ಅರ್ಥವಾಯಿತು, ಅವಳಿಗಿನ್ನೂ ಮಾತನಾಡುವುದಿತ್ತು. ಅವಳು ನನ್ನತ್ತ ಬೆನ್ನು ಹಾಕಿ ಹೊರಗಿನ ಗಾರ್ಡನ್ ನೋಡುತ್ತ ನಿಂತಳು. ನೀನೇನು ಮಾಡಬೇಕಂತ ಇದ್ದಿ ಹಾಗಾದರೆ ಎಂದು ಕೇಳಿದೆ. ನಾನೇನು ಮಾಡುವುದಿದೆ? ನಿನಗೇನು ಮಾಡಬೇಕನಿಸುತ್ತೊ ಹಾಗೆ ಮಾಡು ಅಂತ ಅವನು ಹೇಳಿಬಿಟ್ಟಿದ್ದಾನೆ. ಅದರರ್ಥ ನಾನು ಮಾಡುವುದೇನೂ ಉಳಿದಿಲ್ಲ ಅಂತಲೇ ಎಂದಳು. ನೀನಿಲ್ಲೇ ಉಳಿದುಕೊಳ್ಳಬಹುದು ಎಂದೆ ನಾನು. ಹಿಂದಿನಿಂದಲೇ ಅವಳು ಅಲ್ಲಿ ಅಳುತ್ತಿದ್ದಾಳೆ ಎಂದು ನನಗೆ ಗೊತ್ತಾಯಿತು. ಬಹುಶಃ ಅವಳಿಗೆ ನಾನು ಅವಳ ಕಣ್ಣೀರನ್ನು ನೋಡುವುದು ಬೇಕಿರಲಿಲ್ಲ. ಅವಳು ಹಾಗೆಯೇ ವೆರಾಂಡದ ಮೆಟ್ಟಿಲುಗಳನ್ನು ಇಳಿಯತೊಡಗಿದಳು. ಅವಳ ಕಣ್ಣುಗಳಲ್ಲಿ ನೀರು ತುಂಬಿದ್ದಿರಬೇಕನಿಸುತ್ತದೆ, ಬಹುಶಃ ಅಲ್ಲಿ ಎಡವಿರಬೇಕು, ಏಕೆಂದರೆ, ಇದ್ದಕ್ಕಿದ್ದಂತೆ ಅವಳು ದೇಹದ ಸಮತೋಲ ತಪ್ಪಿ ಮುಂದಕ್ಕೆ ಮುಗ್ಗರಿಸಿದಳು, ನನ್ನ ದೃಷ್ಟಿಗೆ ಕಾಣದಾದಳು. ನಾನು ಅಮ್ಮಾ ಅಮ್ಮಾ ಎಂದು ಕೂಗಿ ಕರೆದೆ. ಅವಳಿಂದ ಉತ್ತರವೇ ಬರಲಿಲ್ಲ. ಬಹಳ ಸಲ ಹಾಗೆಯೇ ಕೂಗಿ ಕೂಗಿ ಕರೆದರೂ ಉತ್ತರ ಬರಲಿಲ್ಲ. ನಾನು ಎದ್ದೇಳಲು ಪ್ರಯತ್ನಿಸಿದೆನಾದರೂ ಅಕ್ಕಪಕ್ಕದಲ್ಲಿ ಹಿಡಿದುಕೊಳ್ಳುವುದಕ್ಕೆ ಏನೂ ಇರಲಿಲ್ಲ. ನಾನು ಒಂದು ಪಕ್ಕಕ್ಕೆ ಹೊರಳಿಕೊಂಡು ಪ್ಲಾಸ್ಟರ್ ಬಿಗಿದಿದ್ದ ಒಂದು ಕಾಲನ್ನು ಚಾಚಲು ಪ್ರಯತ್ನಿಸಿದೆ. ಲಾಂಜರ್‌ನ ಬದಿಗೆ ಕಾಲನ್ನು ಒತ್ತಿ ಮೊಣಕೈಯನ್ನು ಊರಿ ಕೂರಲು ಪ್ರಯತ್ನಿಸಿದೆ. ಆಗ ನನಗವಳು ಕಾಣಿಸಿದಳು. ಕಲ್ಲುಜಲ್ಲಿಯ ನೆಲದ ಮೇಲೆ ಮುಖ ಅಡಿಯಾಗಿ ಬಿದ್ದಿದ್ದಳು.  ಪ್ಲಾಸ್ಟರಿನಲ್ಲೇ ಇದ್ದ ನನ್ನಇನ್ನೊಂದು ಕಾಲನ್ನೂ ಲಾಂಜರಿನಿಂದ ತಪ್ಪಿಸಿ ಈಚೆ ತೆಗೆದೆ. ಭುಜ ಮತ್ತು ತೋಳಿನಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ಎರಡೂ ಕಾಲುಗಳು ಪ್ಲಾಸ್ಟರಿನೊಳಗಿದ್ದಿದ್ದರಿಂದ ನನಗೆ ನಡೆಯುವುದಕ್ಕಂತೂ ಸಾಧ್ಯವಿರಲಿಲ್ಲ. ಹಾಗಾಗಿ ನಾನು ಹಾಗೆಯೇ ತೆವಳಿಕೊಂಡು ಮುಂದು ಮುಂದಕ್ಕೆ ಸಾಗಿದೆ. ನೆಲದ ಮೇಲೆ ತೆವಳಿಕೊಂಡೇ ಇಂಚಿಂಚಾಗಿ ಮೆಟ್ಟಿಲ ವರೆಗೂ ಹೋದೆ. ನನ್ನ ಕೈಲಿ ಹೆಚ್ಚೇನೂ ಮಾಡುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ ನಾನವಳನ್ನು ಅಲ್ಲಿ ಹಾಗೆಯೇ ಇದ್ದು ಬಿಡಲು ಬಿಡುವುದಕ್ಕೂ ಸಾಧ್ಯವಿರಲಿಲ್ಲ. ನಿಧಾನವಾಗಿ ಮೆಟ್ಟಿಲುಗಳ ಮೇಲಿಂದ ಜಾರಿಕೊಂಡು ಅವಳನ್ನು ತಲುಪಿದೆ. ಮಕಾಡೆ ಬಿದ್ದಿದ್ದ ಅವಳನ್ನು ಹೊರಳಿಸಲು ಪ್ರಯತ್ನಿಸಿದೆನಾದರೂ ನನಗದು ಸಾಧ್ಯವಾಗಲಿಲ್ಲ. ಅವಳ ಹಣೆಯ ಅಡಿಗೆ ನನ್ನ ಕೈ ತೂರಿಸಿದೆ, ಅದು ಒದ್ದೆಯಾಗಿತ್ತು. ಕಲ್ಲಿನ ಚೂರೊಂದು ನನ್ನ ಕೈಯ ತಳ ಭಾಗವನ್ನು ಕತ್ತರಿಸಿತು. ನನ್ನಲ್ಲಿ ಯಾವುದೇ ತ್ರಾಣ ಉಳಿದಿರಲಿಲ್ಲ. ನಾನೂ ಅಲ್ಲೇ ಅವಳ ಪಕ್ಕದಲ್ಲೇ ಬಿದ್ದುಕೊಂಡೆ. ಆಗ ಅವಳಲ್ಲಿ ಸ್ವಲ್ಪ ಚಲನೆ ಕಾಣಿಸಿತು. ಅಮ್ಮಾ ಎಂದು ಕರೆದೆ. ಉತ್ತರವಿಲ್ಲ. ಅಮ್ಮಾ ಎಂದು ಮತ್ತೊಮ್ಮೆ ಕರೆದೆ. ಸಣ್ಣದಾಗಿ ನರಳಿದಳು. ನಿಧಾನಕ್ಕೆ ನನ್ನತ್ತ ಮುಖ ಹೊರಳಿಸಿದಳು. ಅದು ರಕ್ತಸಿಕ್ತವಾಗಿತ್ತು ಮತ್ತು ಅವಳು ಹೆದರಿ ಹೋದಂತಿದ್ದಳು. ಎಲ್ಲಿ ನೋಯುತ್ತಿದೆ ಹೇಳು ಎಂದೆ. ಓ ಅಯ್ಯೊ ಎಂದು ನರಳಿದಳು. ಹಾಗೇ ಬಿದ್ದುಕೊಂಡಿರು, ಅಲ್ಲಾಡಬೇಡ ಎಂದೆ. ಆದರೆ ಅವಳು ಬೆನ್ನ ಮೇಲೆ ಹೊರಳಿಕೊಂಡು ನಿಧಾನವಾಗಿ ಕುಳಿತುಕೊಂಡಳು. ರಕ್ತಸಿಕ್ತವಾದ ಮಂಡಿಯಿಂದ ಕಲ್ಲಿನ ಚೂರುಗಳನ್ನು ನಿಧಾನವಾಗಿ ತೆಗೆಯತೊಡಗಿದಳು. ಅಯ್ಯೊ, ಹಾ ಎನ್ನುತ್ತ ಏನಾಗಿ ಬಿಟ್ಟಿತು, ಹೇಗಾದರೂ ಬಿದ್ದೆ ನಾನು ಎಂದೆಲ್ಲ ಬಡಬಡಿಸತೊಡಗಿದಳು. ನಿನಗೆ ಕಣ್ಣುಕತ್ತಲೆ ಬಂದಂತಾಗಿರಬೇಕು ಎಂದೆ. ಹೌದು, ಇದ್ದಕ್ಕಿದ್ದ ಹಾಗೆ ಕಣ್ಣಿಗೆ ಕತ್ತಲಾವರಿಸಿತು ಎಂದಳು. ಆ ಬಳಿಕ ಒಮ್ಮೆಗೇ ನನ್ನತ್ತ ತಿರುಗಿ ದಿಟ್ಟಿಸತೊಡಗಿದಳು. ಓ ವಿಲಿಯಂ! ನೀನು ಇದೇನು ಮಾಡಿಬಿಟ್ಟೆ! ಓ ದೇವರೇ! ನೀನೇಕೆ ಇಲ್ಲಿಗೆ ಬಂದೆ! ದೇವರೇ ದೇವರೇ! ಎಂದೆಲ್ಲ ಅವಸರಿಸಿದಳು. ಹಾಂ ಹಾಂ ಎಂದೆ. ನಾನು ನೋವಿನಿಂದ ಬಿದ್ದುಕೊಂಡಿದ್ದೆ. ನಿಧಾನವಾಗಿ ಸರಿಯಾಗಿದ್ದ ಮೊಣಕೈಯನ್ನು ಊರಿಕೊಂಡು  ಹುಲ್ಲುಹಾಸಿದ್ದ ಕಡೆಗೆ ತೆವಳಲು ಪ್ರಯತ್ನಿಸಿದೆ. ಅಲ್ಲೇ ಬೋರಲು ಮಲಗಿ ಸುಧಾರಿಸಿಕೊಳ್ಳತೊಡಗಿದೆ. ನನ್ನ ಭುಜ ವಿಪರೀತ ನೋಯುತ್ತಿತ್ತು. ಪ್ರಾಕ್ಚರ್ ಮತ್ತೆ ಬಾಯ್ತೆರೆದಿರಬೇಕೆಂದು ಅನಿಸತೊಡಗಿತು. ಅಮ್ಮ ಆಗಲೂ ಮಾತನಾಡುತ್ತಲೇ ಇದ್ದಳಾದರೂ ಅವಳಿಗೆ ಉತ್ತರಿಸುವಷ್ಟೂ ತ್ರಾಣ ನನ್ನಲ್ಲಿ ಉಳಿದಿರಲಿಲ್ಲ. ನನ್ನಿಂದ ಎಷ್ಟಾಗುತ್ತೋ ಅಷ್ಟು ಮಾಡಿದ್ದೇನೆಂದುಕೊಂಡೆ. ಅವಳು ನಿಧಾನವಾಗಿ ನಿಲ್ಲಲು ಯತ್ನಿಸಿದಂತಿತ್ತು. ಆದರೂ ನಾನು ಕಣ್ತೆರೆದು ನೋಡಲು ಹೋಗಲಿಲ್ಲ. ಅವಳು ನರಳಿದ್ದು ಕೇಳಿಸಿತು. ಇಲ್ಲಿ ಬಾ, ಹುಲ್ಲಿನ ಮೇಲೆ ಕುಳಿತುಕೋ ಎಂದೆ. ನಿನ್ನ ಪರಿಸ್ಥಿತಿ ಹೇಗಿದೆ ಎಂದು ಕೇಳಿದಳು. ನಾನು ಪರವಾಗಿಲ್ಲ, ಬಾ ಇಲ್ಲಿ ಕುಳಿತುಕೋ, ಇನ್ನೇನು ಸೊನ್ಸಾ ಬರುವ ಹೊತ್ತಾಯಿತು ಎಂದೆ. ಅವಳತ್ತ ನೋಡಿದೆ. ಅವಳಿಗೆ ನಡೆಯಲು ಆಗುತ್ತಿರಲಿಲ್ಲ. ನಿಧಾನಕ್ಕೆ ಬಂದು ನನ್ನ ಪಕ್ಕದಲ್ಲಿ ಕುಳಿತಳು. ಸ್ವಲ್ಪ ಹೊತ್ತು ಮಲಗಿದರೆ ಒಳ್ಳೆಯದು ಅನಿಸ್ತಿದೆ ಎಂದು ಅಲ್ಲೇ ಒರಗಿಕೊಂಡಳು. ನಾವಿಬ್ಬರೂ ಹಾಗೆ ಅಲ್ಲಿ ಬಿಸಿಲಲ್ಲೆ ಬಿದ್ದುಕೊಂಡಿದ್ದೆವು. ನೀನು ನಿದ್ದೆ ಮಾಡಬಾರದು, ಎಚ್ಚರವಾಗಿರು ಎಂದೆ. ಇಲ್ಲ ಗೊತ್ತಿದೆ ಎಂದಳು. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಸೊನ್ಸಾ ಹತ್ತಿರ ಅಪ್ಪನ ಬಗ್ಗೆ ಏನೂ ಹೇಳಲು ಹೋಗಬೇಡ ಎಂದಳು. ಯಾಕೆ ಬೇಡ ಎಂದೆ. ತುಂಬ ಅವಮಾನಕರ ಅದು ಎಂದಳು. ನಿನಗೆ? ಎಂದು ಕೇಳಿದೆ, ನನಗದು ಅರ್ಥವಾಗಿದ್ದರೂ. ಹೌದು ಎಂದಳು.  ನೀನು ನಲವತ್ತು ವರ್ಷಗಳಷ್ಟು ದೀರ್ಘ ಕಾಲ ಅಷ್ಟೊಂದು ನಂಬಿ ನಡೆದ ಒಬ್ಬ ವ್ಯಕ್ತಿಯಿಂದ ವಂಚನೆಗೊಳಗಾಗುವುದು ಅವಮಾನಕರವೇ ಎಂದಳು. ಅವನು ಮರಳಿ ಬರುತ್ತಾನೆ ಎಂದೆ. ಅವನು ಮರಳಿ ಬಂದರೆ, ಆಗ ನಾನು ಬೇರೆಯೇ ವ್ಯಕ್ತಿಯಾಗಿರುತ್ತೇನೆ ಮಾತ್ರವಲ್ಲ, ಮರಳಿ ಬಂದಾಗ ಅವನೂ ಬೇರೊಬ್ಬ ವ್ಯಕ್ತಿಯಾಗಿರುತ್ತಾನೆ ಎಂದಳು. ಇಲ್ಲ ಎಂದೇನೋ ಹೇಳಿದೆ, ಆದರೆ ಆ ಮಾತನ್ನು ಮುಂದುವರಿಸಲಾಗಲಿಲ್ಲ. ಸೊನ್ಸಾ ದ್ವಾರದಲ್ಲಿ ನಿಂತಿದ್ದಳು. ಅಲ್ಲಿಂದಲೇ ನನ್ನ ಹೆಸರು ಹಿಡಿದು ಕೂಗಿದಳು. ನಾನು ಕಣ್ಣುಗಳನ್ನು ಮುಚ್ಚಿಕೊಂಡೆ. ನನ್ನಲ್ಲಿ ನಿಶ್ಶಕ್ತಿ ಆವರಿಸಿತು. ಯಾರಾದರೂ ನನ್ನ ಕಾಳಜಿ ವಹಿಸಿಕೊಳ್ಳಲಿ ಅನಿಸತೊಡಗಿತ್ತು. ಸೊನ್ಸಾ ಮತ್ತೆ ಅಮ್ಮಾ ಎಂದು ಕಿರುಚಿದಳು. ಅವಳು ನನ್ನ ಪಕ್ಕದಲ್ಲೇ ನಿಂತಿದ್ದು ಗಮನಕ್ಕೆ ಬಂದಾಗ ನಾನು ಕಣ್ತೆರೆದು ಅವಳತ್ತ ಮುಗುಳ್ನಕ್ಕೆ ಮತ್ತು ಪುನಃ ಕಣ್ಣುಗಳನ್ನು ಮುಚ್ಚಿದೆ. ಅಮ್ಮ ಅದೇನು ನಡೆಯಿತು ಎನ್ನುವುದನ್ನು ವಿವರಿಸುತ್ತಿದ್ದಳು. ನಾನೇನೂ ಹೇಳಲು ಹೋಗಲಿಲ್ಲ. ನನಗೆ ನಾನು ನಿಸ್ಸಹಾಯಕನಾಗಿ ಸೊನ್ಸಾಳ ಆರೈಕೆಯಲ್ಲಿರುವುದು ಬೇಕಾಗಿತ್ತು. ಅವಳು ದಿಂಬುಗಳನ್ನು ತಂದು ನನ್ನ ತಲೆ ಮತ್ತು ಭುಜಗಳಡಿ ಹೊಂದಿಸಿಟ್ಟಳು. ನಾನು ನನಗೊಂದು ಗುಳಿಗೆ ಸಿಗಬಹುದೆ ಎಂದು ಕೇಳಿದೆ. ಅವಳು ಸ್ವಲ್ಪ ಹೊತ್ತಿನ ಮಟ್ಟಿಗೆ ಹೊರಟು ಹೋದಳು. ಬಹುಶಃ ಆಗ ಅವಳು ಆಂಬುಲೆನ್ಸಿಗೆ ಕರೆ ಮಾಡಿದ್ದಿರಬೇಕು. ಆದರೆ ವಾಪಾಸು ಬಂದಾಗ ಆ ಬಗ್ಗೆ ಅವಳೇನೂ ಹೇಳಿರಲಿಲ್ಲ. ಅವಳು ನನಗೆ ಗುಳಿಗೆ ಕೊಟ್ಟು ಈಗ ಹೇಗಿದೆ ಎಂದು ವಿಚಾರಿಸಿಕೊಂಡಳು. ಪರವಾಗಿಲ್ಲ ಎಂದೆ ಮತ್ತು ಅದು ನಿಜವಾಗಿದ್ದರೂ ಅವಳದನ್ನು ನಂಬಬಾರದು ಎಂದೇ ನಾನು ಬಯಸಿದ್ದೆ. ಭುಜದಲ್ಲಿ ನನಗೆ ನೋವಿದ್ದ್ರೂ ನಾನು ಆರಾಮವಾಗಿಯೇ ಇದ್ದೆ. ಅವಳು ಸ್ವಲ್ಪ ಹೊತ್ತು ನನ್ನತ್ತಲೇ ನೋಡುತ್ತಿದ್ದು ಬಳಿಕ ವೆರಾಂಡಕ್ಕೆ ಹೋಗಿ ಲಾಂಜರ್ ಎತ್ತಿಕೊಂಡು ಬಂದಳು. ಅದು ನನಗಾಗಿರಲಿಲ್ಲ, ಅಮ್ಮನಿಗಾಗಿತ್ತು. ಆ ಬಗ್ಗೆ ಯೋಚಿಸಿದಾಗ, ಅವಳು ಮಾಡಿದ್ದು ಸರಿಯಾಗಿಯೇ ಇತ್ತು. ಆದರೂ ಅವಳು ಒಂದು ಮಾತು ನನ್ನನ್ನು ಕೇಳಿ ಅದನ್ನು ಬಳಸಬಹುದಿತ್ತು ಎನಿಸಿತು. ಅಮ್ಮ ಒಪ್ಪಲಿಲ್ಲ, ಅದನ್ನು ನನಗೆ ಕೊಡುವಂತೆ ಅವಳು ಒತ್ತಾಯಿಸತೊಡಗಿದಳು. ಇಲ್ಲ, ನೀನು ಮೊದಲು ಕುಳಿತುಕೋ ಎಂದು ಸೊನ್ಸಾ ಹೇಳಿದಳು. ನಾನು ಏನೂ ಮಾತನಾಡಲಿಲ್ಲ. ನಾನೀಗ ಚೆನ್ನಾಗಿದ್ದೇನೆಂದು ಸೊನ್ಸಾ ಬಳಿ ಹೇಳಿದ್ದೇ ಅದಕ್ಕೆ ಕಾರಣವಾಗಿರಬೇಕು ಎಂದು ನಾನು ಅಂದುಕೊಂಡೆ. ಸೊನ್ಸಾ ಅಮ್ಮನಿಗೆ ಲಾಂಜರ್ ಮೇಲೆ ಕೂರಲು ಸಹಾಯ ಮಾಡಿದಳು ಮತ್ತು ಬಳಿಕ ಅವರಿಬ್ಬರೂ ಮನೆಯೊಳಕ್ಕೆ ಹೋದರು. ನನಗೆ ಹುಲ್ಲು ಹಾಸು ಒರಟಾಗಿದೆ ಅನಿಸತೊಡಗಿತು. ಸೊನ್ಸಾ ನನ್ನನ್ನು ಇಲ್ಲಿಯೇ ಎಷ್ಟು ಹೊತ್ತು ಬಿಟ್ಟಿರಬೇಕೆಂದು ಬಯಸಿದ್ದಾಳೆ ಎಂದು ಯೋಚಿಸತೊಡಗಿದೆ. ನನಗೆ ಅವಳು ಹಾಸ್ಪಿಟಲಿಗೆ ಕರೆ ಮಾಡಿದ ವಿಷಯ ಗೊತ್ತಿರಲಿಲ್ಲವಲ್ಲ. ಅಲ್ಲೆಲ್ಲಾ ಸಂಪೂರ್ಣ ನಿಶ್ಶಬ್ದ ಆವರಿಸಿತ್ತು. ಆಗ ಒಂದು ವಾಹನ ಮನೆಯ ಮುಂದೆ ಬಂದು ನಿಂತಿತು ಮತ್ತು ಕಾಲಿಂಗ್ ಬೆಲ್ ಸದ್ದು ಮಾಡಿತು. ಸ್ವಲ್ಪ ಹೊತ್ತಿನಲ್ಲೇ ಸೊನ್ಸಾ ಮತ್ತು ಇಬ್ಬರು ಬಿಳಿಯ ದಿರಿಸು ತೊಟ್ಟ ಗಂಡಸರು ವೆರಾಂಡದಲ್ಲಿ ಕಾಣಿಸಿಕೊಂಡು ಮೆಟ್ಟಿಲಿಳಿಯತೊಡಗಿದರು. ಅವರು ನೇರವಾಗಿ ಅಮ್ಮನ ಬಳಿ ಹೋದರು. ಅವರಲ್ಲಿ ಒಬ್ಬನು ಅಮ್ಮನನ್ನು ವಿಚಾರಿಸತೊಡಗಿದರೆ ಇನ್ನೊಬ್ಬ ನನ್ನತ್ತ ತಿರುಗಿ ನನ್ನ ಕಾಲನ್ನು ಗಮನಿಸತೊಡಗಿದ. ಎಷ್ಟು ಸಮಯದಿಂದ ಇದೆ ಇದು ಎಂದು ಬ್ಯಾಂಡೇಜನ್ನು ಉದ್ದೇಶಿಸಿ ಕೇಳಿದ. ಒಂದು ವಾರದಿಂದ ಎಂದೆ. ಮೇಲಿನಿಂದ ಬಿದ್ದು ಆಗಿದ್ದಾ ಎಂದು ಕೇಳಿದ. ಕಾರ್ ಆಕ್ಸಿಡೆಂಟ್ ಎಂದೆ. ನಾನು ನನ್ನ ಮುಖ ಅತ್ತ ಹೊರಳಿಸಿದೆ. ನಿಜಕ್ಕೂ ಇದೆಲ್ಲ ಅಗತ್ಯವಿದೆಯೇ ಎಂದು ಅಮ್ಮ ಕೇಳುತ್ತಿದ್ದಳು. ಹೌದು ಅಮ್ಮಾ ಎಂದಳು ಸೊನ್ಸಾ. ನನ್ನ ಜೊತೆ ಮಾತನಾಡಿದ್ದ ವ್ಯಕ್ತಿ ಸ್ಟ್ರೆಚರ್ ತರಲು ಹಿಂದಿರುಗಿದ. ಇನ್ನೊಬ್ಬ ವ್ಯಕ್ತಿ ನನ್ನತ್ತ ತಿರುಗಿ ಹೇಗಿದ್ದೀ ಎಂದು ವಿಚಾರಿಸಿದ.  ಪರವಾಗಿಲ್ಲ ಎಂದೆ. ಸೊನ್ಸಾ ಅವನಿಗೆ ನನ್ನ ಭುಜದ ಪೆಟ್ಟಿನ ಬಗ್ಗೆ ಹೇಳಿದ್ದಿರಬೇಕು. ಏಕೆಂದರೆ ಅವನು ನನ್ನತ್ತ ಬಾಗಿ ಭುಜದ ಪಟ್ಟಿ ಗಮನಿಸಿ ನೋಡತೊಡಗಿದ. ಅವನ ಸಹಾಯಕ ಸ್ಟ್ರೆಚರ್‌ನೊಂದಿಗೆ ಬಂದ ಮತ್ತು ಅವರು ನನ್ನನ್ನು ಅದರಲ್ಲಿ ಮಲಗಿಸಿ ಎತ್ತಿದರು. ಅವರು ಮೆಟ್ಟಿಲುಗಳ ಮೂಲಕ ಏರಿ ನನ್ನನ್ನು ಬೆಡ್‌ರೂಮಿಗೆ ಕರೆತಂದರು. ಸೊನ್ಸಾ ಮುಂದುಗಡೆ ಸಾಗುತ್ತ ಅವರಿಗೆ ದಾರಿ ತೋರಿಸಿದಳು. ಅವರು ನನ್ನನ್ನು ಹಾಸಿಗೆಯ ಮೇಲೆ ಮಲಗಿಸಿ ಹೊರಟು ಹೋದರು. ಸೊನ್ಸಾ ಕೂಡಾ ಹೊರಗೆ ಹೋದಳು. ಸ್ವಲ್ಪ ಹೊತ್ತಿನ ಬಳಿಕ ಮರಳಿದ ಅವಳು ನಾನು ಅಮ್ಮನ ಜೊತೆ ಹಾಸ್ಪಿಟಲಿಗೆ ಹೋಗಿ ಬರುತ್ತೇನೆ ಎಂದಳು. ಸರಿ ಎಂದೆ. ನಿನಗೇನಾದರೂ ಬೇಕಿತ್ತಾ ಎಂದಳು. ಇಲ್ಲ ಎಂದೆ. ಹೊರಟು ಹೋದಳು. ಇದೆಲ್ಲ ಇಷ್ಟು ಕ್ಷಿಪ್ರವಾಗಿ ಮುಗಿದು ಬಿಡುತ್ತದೆ ಅಂತ ಎಣಿಸಿರಲಿಲ್ಲ ನಾನು, ನಿಜವಾಗಿಯೂ. ಕೊನೆಗೂ ನನಗೆ ಅನಿಸಿತು, ಅಮ್ಮನಿಗೂ ಚಿಕಿತ್ಸೆಯ, ಕಾಳಜಿಯ ಅಗತ್ಯ ಇದ್ದಿರಬಹುದು.

ಸ್ವಲ್ಪ ಸಮಯದ ಬಳಿಕ ಮನೆಯಲ್ಲಿ ಎಲ್ಲಿಲ್ಲದ ನಿಶ್ಶಬ್ದ ಆವರಿಸಿತು. ನಿಧಾನವಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು ಮತ್ತು ನನಗೆ ಆ ವಿಶಾಲವಾದ ಪರಿತ್ಯಕ್ತ ಬಯಲು ಗೋಚರಿಸಿತು. ಅದನ್ನು ಕಾಣುವುದು ತುಂಬ ಹಿಂಸೆಯ ಅನುಭವವಾಗಿತ್ತು. ಅದು ವಿಪರೀತ ದೊಡ್ಡದಾಗಿತ್ತು ಮತ್ತು ಕಣ್ಣು ಚಾಚಿದಷ್ಟೂ ಬಟಾಬಯಲಾಗಿ ಹರಡಿಕೊಂಡಿತ್ತು. ಒಂದರ್ಥದಲ್ಲಿ ಅದು ನನ್ನ ಒಳಗೂ ಇತ್ತು, ನನ್ನ ಹೊರಗೂ ಇತ್ತು. ನಾನದನ್ನು ಓಡಿಸುವುದಕ್ಕೆಂದೇ ಕಣ್ಣುಗಳನ್ನು ತೆರೆದೆನಾದರೂ ನನಗೆಷ್ಟು ಆಯಾಸವಾಗಿತ್ತೆಂದರೆ, ಕಣ್ಣುಗಳು ತನ್ನಿಂತಾನೇ ಮುಚ್ಚಿಕೊಂಡವು. ಬಹುಶಃ ಗುಳಿಗೆ ತೆಗೆದುಕೊಂಡಿದ್ದರಿಂದ ಹಾಗಾಗಿರಬೇಕು. ನನಗೇನೂ ಭಯವಿಲ್ಲ ಎಂದು ಗಟ್ಟಿಯಾಗಿ ಹೇಳಿದೆ, ಏನನ್ನಾದರೂ ಹೇಳಬೇಕು ಅಂತಲೆ. ಅದನ್ನೇ ಮತ್ತೂ ಕೆಲವು ಸಲ ಹೇಳಿದೆ. ಆನಂತರ ನನಗೇನೂ ನೆನಪಿಲ್ಲ.

ಅರೆಬರೆ ಬೆಳಕಿನಲ್ಲಿ ನನಗೆ ಎಚ್ಚರವಾಯಿತು. ಕರ್ಟನ್‌ಗಳನ್ನು ಮುಚ್ಚಲಾಗಿತ್ತು. ಅಲರಾಂ ನಾಲ್ಕೂವರೆ ತೋರಿಸುತ್ತಿತ್ತು. ಬೆಡ್‌ರೂಮಿನ ಬಾಗಿಲನ್ನು ಓರೆ ಮಾಡಲಾಗಿತ್ತು ಮತ್ತು ಅದರ ಸಂದಿಯಲ್ಲಿ ಇಷ್ಟಿಷ್ಟೇ ಬೆಳಕಿನ ರೇಖೆಯೊಂದು ಒಳಗೆ ಬಂದಿತ್ತು. ಸ್ಟೂಲಿನ ಮೇಲೆ ಒಂದು ನೀರಿನ ಬಾಟಲು ಇಟ್ಟಿದ್ದರು. ನನ್ನ ಸರಿಯಾಗಿರುವ ಕೈಗೆ ಸುಲಭವಾಗಿ ಸಿಗುವಂತೆ ಬೆಡ್‌ಪಾನ್ ಇಟ್ಟಿದ್ದರು. ಸೊನ್ಸಾಳನ್ನು ಎಬ್ಬಿಸುವುದಕ್ಕೆ ಯಾವುದೇ ಕಾರಣ ಉಳಿದಿರಲಿಲ್ಲ. ನಾನು ಲೈಟ್ ಆನ್ ಮಾಡಿ ಮೈಗ್ರೆಟ್ ಮತ್ತು ಸತ್ತ ಹುಡುಗಿ ಓದತೊಡಗಿದೆ. ಅದು ಸೊನ್ಸಾಳ ಪುಸ್ತಕ. ಕೆಲಹೊತ್ತಿನ ಬಳಿಕ ನನಗೆ ಹಸಿವಾಗುತ್ತಿರುವುದು ಗಮನಕ್ಕೆ ಬಂತು. ಆದರೆ ಸೊನ್ಸಾಳನ್ನು ಕರೆಯಲು ಅದು ತೀರ ಬೇಗ. ನಾನು ಓದುವುದನ್ನೆ ಮುಂದುವರಿಸಿದೆ. ಗಡಿಯಾರ ಆರೂವರೆ ತೋರಿಸುತ್ತಿದ್ದಂತೆ ನನ್ನಲ್ಲಿ ಅಸಹನೆ ಹೆಚ್ಚುತ್ತ ಹೋಯಿತು ಮತ್ತು ಸ್ವಲ್ಪ ಕಿರಿಕಿರಿಯೂ ಆಗತೊಡಗಿತು. ನನ್ನ ಪಕ್ಕದಲ್ಲಿ ಒಂದಿಷ್ಟು ಸ್ಯಾಂಡ್‌ವಿಚ್ ಇರಿಸಿ ಹೋಗುವಷ್ಟು ಬುದ್ಧಿ ಇರಬೇಡವೆ ಸೊನ್ಸಾಗೆ, ನಾನು ರಾತ್ರಿ ಎಚ್ಚರಗೊಳ್ಳಬಹುದು ಎಂದು ಅವಳು ಯೋಚಿಸಬೇಡವೆ , ಅಷ್ಟೂ ನಿರ್ಲಕ್ಷ್ಯವೆ ಎಂದೆಲ್ಲ ಅನಿಸತೊಡಗಿತು. ನಾನು ಮನೆಯೊಳಗಡೆ ಏನಾದರೂ ಸದ್ದು ಆಗಬಹುದೇ ಎಂದು ಆಲಿಸತೊಡಗಿದೆ. ಆದರೆ ಅತ್ಯಂತ ನಿಶ್ಶಬ್ದದ ವಾತಾವರಣವಷ್ಟೇ ಇತ್ತು. ನಾನು ಸೊನ್ಸಾಳ ಚಿತ್ರವನ್ನೇ ಕಲ್ಪಿಸಿಕೊಳ್ಳತೊಡಗಿದೆ ಮತ್ತು ನನ್ನ ಮನಸ್ಥಿತಿಯೇ ಬದಲಾಯಿತು. ನಾನು ಅವಳನ್ನು ವಾಸ್ತವದಲ್ಲಿ ನೋಡಿದ್ದಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ ಸೊನ್ಸಾಳನ್ನು ನೋಡುವುದು ಸಾಧ್ಯವಾಯಿತು ಮತ್ತು ನಾನು ಅವಳ ಆ ಚಿತ್ರವನ್ನು ಅಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ನಾನಲ್ಲಿ ಹಾಗೆಯೇ ತುಂಬಾ ಹೊತ್ತು ಬಿದ್ದುಕೊಂಡಿದ್ದೆ. ಕೊನೆಗೆ ಯಾವುದೋ ಒಂದು ಅಲರಾಂ ಸದ್ದಿಗೆ ಎಚ್ಚರಗೊಂಡೆ. ಪುಸ್ತಕವನ್ನು ಕೈಗೆತ್ತಿಕೊಂಡೆನಾದರೂ ಅದನ್ನು ಓದಲಿಲ್ಲ. ನಾನು ಕಾಯತೊಡಗಿದೆ. ಕೊನೆಗೊಮ್ಮೆ ಅವಳನ್ನು ಕರೆಯತೊಡಗಿದೆ. ಆಮೇಲೆ ಅವಳು ಬಂದಳು. ಅವಳು ಗುಲಾಬಿ ಬಣ್ಣದ ಸ್ನಾನದ ಟವಲು ತೊಟ್ಟಿದ್ದಳು. ನಾನು ಎಚ್ಚರವಾಗಿಯೇ ಇದ್ದೆ ಎನ್ನುವುದನ್ನು ಅವಳು ಗಮನಿಸಲಿ ಎಂದೇ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡೇ ಮಲಗಿದ್ದೆ. ಅಲರಾಂ ಸದ್ದು ಆಗಿದ್ದು ಕೇಳಿಸಿತು ಎಂದೆ. ನಿನಗೆ ಜೋರು ನಿದ್ದೆ ಬಂದಿತ್ತು, ಎಬ್ಬಿಸುವುದು ಬೇಡ ಅಂದುಕೊಂಡೆ ಎಂದಳು. ನಿನಗೆ ನೋವೇನಾದರೂ ಇದೆಯೆ? ನನ್ನ ಭುಜ ನೋಯುತ್ತಿದೆ ಎಂದೆ. ಗುಳಿಗೆ ಕೊಡಬೇಕೆ ಎಂದಳು. ಹಾಂ, ಹೌದು ಎಂದೆ. ಅವಳು ಹೋದಳು. ಅವಳ ಕಾಲುಗಳಲ್ಲಿ ಚಪ್ಪಲಿ ಇರಲಿಲ್ಲ. ಅವಳ ಹಿಮ್ಮಡಿ ನೆಲಕ್ಕೆ ತಾಕದಂತೆ ನಡೆಯುತ್ತಿದ್ದಳು. ಪುಸ್ತಕವನ್ನು ಸ್ಟ್ಯಾಂಡಿನ ಮೇಲಿರಿಸಿದೆ. ಅವಳು ಗುಳಿಗೆ ಮತ್ತು ಒಂದು ಗ್ಲಾಸ್ ನೀರಿನೊಂದಿಗೆ ಬಂದಳು. ನನ್ನ ಭುಜದ ಹಿಂಭಾಗ ಹಿಡಿದು ಎಬ್ಬಿಸಿದಳು. ಅವಳ ಒಂದು ಮೊಲೆ ನನಗೆ ಕಾಣುತ್ತಿತ್ತು. ಆಮೇಲೆ ನಾನು ನನ್ನ ಹಿಂದೆ ಇನ್ನೊಂದು ದಿಂಬು ಇರಿಸುವಂತೆ ಕೇಳಿದೆ. ನೀನು ತುಂಬಾ ಮುದ್ದಾಗಿ ಕಾಣುತ್ತಿ ಎಂದೆ. ಈಗ ನಿನಗೆ ಸ್ವಲ್ಪ ಸುಧಾರಿಸಿದೆ ಅನಿಸುತ್ತಾ ಎಂದಳು. ಹೌದು, ಥ್ಯಾಂಕ್ಸ್ ಎಂದೆ. ಬೇಗ ತಿಂಡಿ ತಯಾರಿಸಿ ತರುವೆ, ನನಗಿನ್ನೂ ಡ್ರೆಸ್ ಮಾಡಬೇಕಿದೆ ಎಂದಳು. ಅವಸರವೇನಿಲ್ಲ ಎಂದೆ. ನಿನಗೆ ಹಸಿವಾಗುತ್ತಿಲ್ಲವೆ ಎಂದಳು. ಓ ಹೌದು, ಆಗುತ್ತಿದೆ ಎಂದೆ. ಅವಳು ನನ್ನನ್ನೇ ನೋಡಿದಳು. ಆ ದೃಷ್ಟಿಯನ್ನು ಅರ್ಥ ಮಾಡಿಕೊಳ್ಳುವುದು ನನಗೆ ಸಾಧ್ಯವಾಗಲಿಲ್ಲ. ಆ ಬಳಿಕ ಅವಳು ಹೊರಟು ಹೋದಳು. ತುಂಬಾ ಹೊತ್ತಿನ ತನಕ ಅವಳ ಸುದ್ದಿಯಿರಲಿಲ್ಲ.

ತಿಂಡಿ ಹಿಡಿದು ಬಂದಾಗ ಅವಳು ಪೂರ್ತಿ ಡ್ರೆಸ್ಸಿನಲ್ಲಿದ್ದಳು. ಅವಳು ಕತ್ತಿನ ತನಕ ಬಟನ್ನುಗಳಿದ್ದ, ಲೂಸ್ ಫಿಟಿಂಗಿನ ಅಂಗಿ ಧರಿಸಿದ್ದಳು. ಅವಳು ನನಗೆ ನೀನಿನ್ನು ಎದ್ದು ಕೂರಲು ಪ್ರಯತ್ನಿಸಬೇಕು ಎಂದು ಹೇಳಿ ಕೆಲವು ದಿಂಬುಗಳನ್ನು ತಂದು ನನ್ನ ಹಿಂದುಗಡೆ ಹೊಂದಿಸಿಟ್ಟಳು. ಅವಳು ಬೇರೆಯೇ ವ್ಯಕ್ತಿ ಅನಿಸತೊಡಗಿತು. ಅವಳು ನನ್ನತ್ತ ಬಿಟ್ಟು ಬೇರೆಲ್ಲಾ ಕಡೆ ನೋಡುತ್ತಿದ್ದಳು. ಸ್ಯಾಂಡ್‌ವಿಚ್ ಮತ್ತು ಕಾಫಿ ಇರಿಸಿದ ಟ್ರೇಯನ್ನು ನನ್ನೆದುರಿನ ಡುವೆಟ್ ಮೇಲಿರಿಸಿದ್ದಳು. ಏನಾದರೂ ಬೇಕಿದ್ದರೆ ಕರೆ ಎಂದವಳೇ ಹೊರಟು ಹೋದಳು.

ತಿಂಡಿ ತಿಂದಾದ ಬಳಿಕ ನಾನು ಅವಳನ್ನು ಕರೆಯದೇ ಇರುವ ನಿರ್ಧಾರಕ್ಕೆ ಬಂದೆ. ಅವಳು ಅವಳಿಗೆ ಬರಬೇಕನಿಸಿದಾಗ ಬರಲಿ ಎಂದು ಹೇಳಿಕೊಂಡೆ.  ನಾನು ಕಪ್ ಮತ್ತು ಪ್ಲೇಟನ್ನು ಪಕ್ಕದ ಸ್ಟೂಲಿನ ಮೇಲಿರಿಸಿದೆ. ಟ್ರೇಯನ್ನು ಬೇಕಂತಲೇ ನೆಲಕ್ಕೆ ಬಿಟ್ಟೆ. ಅವಳಿಗದು ಕೇಳಿಸಿಯೇ ಕೇಳುತ್ತದೆ ಎನ್ನುವ ಬಗ್ಗೆ ನನಗೆ ಖಾತ್ರಿಯಿತ್ತು. ನಾನು ತುಂಬಾ ಹೊತ್ತು ಕಾದು ನೋಡಿದೆ, ಆದರೆ ಅವಳು ಬರಲೇ ಇಲ್ಲ. ಅಮ್ಮ ಹೇಗಿದ್ದಾಳೆಂದು ಕೇಳುವುದಕ್ಕೇ ಮರೆತು ಬಿಟ್ಟೆನಲ್ಲಾ, ನನಗದು ಸಾಧ್ಯವಾಯಿತಾದರೂ ಹೇಗೆ ಎಂದು ಅಚ್ಚರಿಪಟ್ಟೆ. ಆಮೇಲೆ ನಾನು ಯೋಚಿಸತೊಡಗಿದೆ, ನಾನು ಪೂರ್ತಿಯಾಗಿ ಗುಣಮುಖನಾದ ಮೇಲೆ ಎಷ್ಟು ಚೆನ್ನಾಗಿರುತ್ತದೆ, ನಾನು ಸರ್ವತಂತ್ರ ಸ್ವತಂತ್ರನಾಗಿರುತ್ತೇನೆ, ಇಡೀ ಮನೆ ನನಗೊಬ್ಬನಿಗೇ ಇರುತ್ತದೆ ಮತ್ತು ನಾನು ಯಾವಾಗ ಬರುತ್ತೇನೆ ಯಾವಾಗ ಹೋಗುತ್ತೇನೆ ಎಂದು ನೋಡುವ ಒಬ್ಬನೇ ಒಬ್ಬ ವ್ಯಕ್ತಿ ಇರುವುದಿಲ್ಲ. ನಾನೇನು ಮಾಡುತ್ತಿದ್ದೇನೆಂಬ ನಿಗಾ ಇಡುವವರು ಯಾರೆಂದರೆ ಯಾರೂ ಇರುವುದಿಲ್ಲ. ಏನನ್ನೂ ಕದ್ದುಮುಚ್ಚಿ ಮಾಡುವ ಅಗತ್ಯ ಇನ್ನು ಇರುವುದಿಲ್ಲ.

ಕೊನೆಗೂ ಅವಳು ಬಂದಳು. ಸಾಕಷ್ಟು ಕಾಲ ಗುಳಿಗೆಯ ಪ್ರಭಾವ ನನ್ನ ಗಮನಕ್ಕೆ ಬರುತ್ತಲೇ ಇದ್ದು ಅವಳು ಬರುವ ಹೊತ್ತಿಗೆ ನಾನು ಸುಧಾರಿಸಿಕೊಂಡಿದ್ದು ಅವಳಿಗೂ ತಿಳಿಯುವಂತಿತ್ತು. ಅಮ್ಮ ಹೇಗಿದ್ದಾಳೆಂದು ಅವಳ ಬಳಿ ಕೇಳಿದೆ. ಈಗಷ್ಟೇ ಎದ್ದಿದ್ದಾಳೆ ಎಂದಳು. ಅವಳು ಹಾಸ್ಪಿಟಲಿನಲ್ಲೇ ಇದ್ದಾಳೆಂದು ಭಾವಿಸಿದ್ದೆ ಎಂದೆ. ಇಲ್ಲ, ಒಂದಿಷ್ಟು ತರಚಿದ ಮತ್ತು ಸೀಳಿದ ಗಾಯಗಳಷ್ಟೇ ಆಗಿವೆ ಎಂದಳು. ಅಪ್ಪನ ಬಗ್ಗೆ ಅಮ್ಮ ನನಗೆ ಹೇಳಿದ್ದನ್ನು ನಾನವಳಿಗೆ ಹೇಳಿದೆ. ಮೊದಲಿಗೆ ಅವಳು ನನ್ನ ಮಾತುಗಳನ್ನು ನಂಬಿದಂತೆಯೇ ಕಾಣಲಿಲ್ಲ. ಬಳಿಕ ಅವಳ ಇಡೀ ದೇಹ, ಅವಳ ನೋಟ ಕೂಡ ಮರಗಟ್ಟಿದಂತಾಯಿತು. ಕೊನೆಗೆ, ಅದು.....ಅದು.....ಹೇಸಿಗೆ!  ಎಂದುಬಿಟ್ಟಳು. ಅವಳ ಆ ತೀವ್ರವಾದ ಅಕ್ರೋಶ ಭರಿತ ಪ್ರತಿಕ್ರಿಯೆಯಿಂದ ನನಗೆ ಆಘಾತವಾಯಿತು.  ಕೊನೆಗೂ ಅವಳೊಬ್ಬ ಆಧುನಿಕಳಾದ, ಯುವ ಪೀಳಿಗೆಯ ಯುವತಿ ಎಂದು ನಾನು ಭಾವಿಸಿದ್ದೆ. ಇಂಥವು ನಡೆಯುತ್ತವೆ ಎಂದು ನಾನೆಂದೆ. ಅವಳು ನನ್ನತ್ತ ನಾನೇನೋ ತಪ್ಪಾಗಿ ಹೇಳಿದ್ದೇನೆಂಬತೆ ಹರಿತವಾಗಿ ನೋಡಿದಳು. ಓಹೋ, ಖಂಡಿತ, ಹೌದೌದು ಎಂದಳು. ಕೆಳಗೆ ಬಿದ್ದಿದ್ದ ಟ್ರೇಯನ್ನು ಎತ್ತಿ ಕಪ್ ಮತ್ತು ಪ್ಲೇಟನ್ನು ಅದರ ಮೇಲೆ ಕುಕ್ಕಿದಂತೆ ಇರಿಸಿದಳು. ನಾನು ನಿನಗೆ ಹೇಳಿದ್ದು ಅಮ್ಮನಿಗೆ ಗೊತ್ತಾಗುವುದು ಬೇಡ ಎಂದೆ. ಯಾಕೆ ಬೇಡ ಎಂದಳು. ನಿನಗೆ ಹೇಳಬೇಡ ಎಂದಿದ್ದಳು ನನ್ನ ಬಳಿ ಎಂದೆ.  ಹಾಗಿದ್ದ ಮೇಲೆ ಯಾಕೆ ಹೇಳಿದೆ ನೀನು ಎಂದು ಕೇಳಿದಳು. ನಿನಗೆ ತಿಳಿದಿರಬೇಕು ಅನಿಸಿತು ಎಂದೆ. ಯಾಕೆ? ಎಂದು ಮರುಪ್ರಶ್ನಿಸಿದಳು. ಅದಕ್ಕೆ ನಾನು ಉತ್ತರಿಸಲಿಲ್ಲ. ನನಗೆ ಕಿರಿಕಿರಿ ಅನಿಸತೊಡಗಿತ್ತು. ನನಗೆ ಇನ್ನೊಬ್ಬರಿಂದ ಹೇಳಿಸಿಕೊಳ್ಳುವುದು ಇಷ್ಟವಿರಲಿಲ್ಲ. ಅಂದರೆ ನಮ್ಮಿಬ್ಬರದ್ದೂ ಆದ ಒಂದು ಗುಟ್ಟು ಇರಲಿ ಅಂತನ? ಎಂದಳು, ಅದನ್ನಾಡಿದ ರೀತಿ ನನಗೆ ಇಷ್ಟವಾಗಲಿಲ್ಲ. ಹೌದು, ಏನೀಗ ಎಂದೆ. ನನ್ನನ್ನೇ ದೃಷ್ಟಿಸಿ ನೋಡಿ ಬಳಿಕ ಅವಳೆಂದಳು, ನನಗನಿಸುತ್ತೆ, ನಮಗಿಬ್ಬರಿಗೂ ಪರಸ್ಪರರ ಬಗ್ಗೆ ಇರುವ ಯೋಚನೆ ಬೇರೆ ಬೇರೆ ತರದ್ದು. ಹಾಗಿದ್ದರೆ ಅದು ಬೇಜಾರಿನ ಸಂಗತಿ ಎಂದೆ. ನಾನು ನನ್ನ ಕಣ್ಣುಗಳನ್ನು ಮುಚ್ಚಿದೆ. ಅವಳು ಬಾಗಿಲು ಎಳೆದುಕೊಂಡು ಹೊರಟು ಹೋದಳು. ನಾನು ಹಾಸ್ಪಿಟಲಿನಿಂದ ಮರಳಿದ ಲಾಗಾಯ್ತು ಅದನ್ನು ಮುಚ್ಚಿರಲಿಲ್ಲ ಮತ್ತು ಅದು ಸದಾ ತೆರೆದಿರಬೇಕೆಂದು ನಾನು ಬಯಸುತ್ತೇನೆಂಬುದು ಅವಳಿಗೂ ಗೊತ್ತಿತ್ತು. ಮೊದಲೇ ನನಗೆ ಸಿಟ್ಟು ಬಂದಿತ್ತು, ಈಗ ಈ ಮುಚ್ಚಿದ ಬಾಗಿಲು ನನ್ನ ಕೋಪವನ್ನು ಕಡಿಮೆ ಮಾಡುವುದಕ್ಕಂತೂ ಸಾಧ್ಯವಿರಲಿಲ್ಲ. ನನಗೆ ಅವಳು ಈ ಮನೆಯಲ್ಲಿರುವುದು ಬೇಡವಾಗಿತ್ತು, ಅವಳನ್ನು ಇನ್ನೆಂದೂ ನೋಡದಿರಲು ಬಯಸತೊಡಗಿದೆ. ಇಷ್ಟೆಲ್ಲಾ ಮಾಡಿ ಏನನ್ನಾದರೂ ಪಡೆಯುವಷ್ಟು ನಾನು ಅಸಹಾಯಕನಾಗಿರಲಿಲ್ಲ. ಅವಳಿಗೆ ನಾನು ಯಾವ ಕೆಡುಕನ್ನೂ ಮಾಡಿರಲಿಲ್ಲ.

ನನ್ನನ್ನು ನಾನು ಸಮಾಧಾನ ಪಡಿಸಿಕೊಳ್ಳಲು ನನಗೆ ಕೊಂಚ ಸಮಯವೇ ಹಿಡಿಯಿತು. ಆಮೇಲೆ ನನಗೆ ಅವಳ ವರ್ತನೆಗೆ ನನಗಿಂತಲೂ ತಂದೆಯ ಕುರಿತು ಆಗಷ್ಟೇ ತಿಳಿದ ವಿಚಾರವೇ ಹೆಚ್ಚು ಕಾರಣವಾಗಿದ್ದಿರಬೇಕು ಅನಿಸಿತು. ಮತ್ತೊಮ್ಮೆ ಅವಳು ಇಡೀ ವಿಚಾರವನ್ನು ಕುರಿತು ಯೋಚಿಸಿದ್ದೇ, ಅವಳಿಗೆ ತಾನು ನನ್ನೊಂದಿಗೆ ಅತಿರೇಕವಾಗಿ ವರ್ತಿಸಿದೆ ಎಂದು ಅನಿಸದೇ ಇರದು  ಎಂದೂ ಅನಿಸಿತು.

ಆದರೂ ನನಗೆ ನೆಮ್ಮದಿಯಿಂದಿರುವುದು ಸಾಧ್ಯವಾಗಲಿಲ್ಲ. ಅವಳು ಹೊರಟು ಹೋಗಬೇಕೆಂಬ ನನ್ನ ಹಠ ಹೆಚ್ಚುತ್ತಲೇ ಇತ್ತೆಂಬುದನ್ನು ನಾನು ಒಪ್ಪಿಕೊಳ್ಳಲೇ ಬೇಕು. ನನ್ನ ಬಾಗಿಲಿನಾಚೆ  ಹೆಜ್ಜೆ ಸದ್ದು ಕೇಳಿಸುವುದೇ ಎಂದು ಯೋಚಿಸುತ್ತಲೇ ಇರುವುದು ಮತ್ತು ಕಣ್ಣುಗಳನ್ನು ಮುಚ್ಚಿ ನಿದ್ದೆಯಲ್ಲಿರುವವನಂತೆ ನಟಿಸುವುದು ಹೆಚ್ಚಾಯಿತು. ಮತ್ತು ಪ್ರತಿ ಬಾರಿ ಅವಳು ಬಂದಿಲ್ಲ ಎಂದು ಸ್ಪಷ್ಟವಾದಾಗಲೂ ನಾನು ನೆಮ್ಮದಿಯ ಉಸಿರು ಬಿಡುತ್ತಿದ್ದೆ. ಕೊನೆಗೆ ನಾನು ಹಾಗೇ ಸದ್ದಿಗಾಗಿ ಕಾಯುತ್ತಾ ಕಣ್ಣುಗಳನ್ನು ಮುಚ್ಚಿಕೊಂಡೇ ಬಿದ್ದಿದ್ದಷ್ಟೇ ನೆನಪಿದೆ. ಕಣ್ಣು ಬಿಟ್ಟಾಗ ನನ್ನ ಹಾಸಿಗೆಯ ತುದಿಯಲ್ಲಿ ಅಮ್ಮ ನಿಂತಿದ್ದಳು. ಉಳಿದ ಯಾವ ಸಂಗತಿಯೂ ನನಗೆ ನೆನಪಿರಲಿಲ್ಲ. ಅಮ್ಮನ ಹಣೆಯ ಮೇಲೊಂದು ಬ್ಯಾಂಡೇಜಿನ ಉಬ್ಬಿದ ಪಟ್ಟಿಯಿತ್ತು, ಅವಳು ನನ್ನನ್ನೇ ನೋಡುತ್ತ ಅಲ್ಲಿ ನಿಂತಿದ್ದಳು. ನಿನಗೆ ಕೆಟ್ಟ ಕನಸೇನಾದರೂ ಬಿದ್ದಿತ್ತಾ ಎಂದವಳು ಕೇಳಿದಳು. ನಿದ್ದೆಯಲ್ಲಿ ನಾನು ಮಾತನಾಡುತ್ತಾ ಇದ್ದೆನಾ ಎಂದೆ. ಇಲ್ಲ, ಆದರೆ ನೀನು ಚಿತ್ರ ವಿಚಿತ್ರ ಮುಖಭಾವ ಮಾಡುತ್ತಾ ಇದ್ದೆ ಎಂದಳು. ನೋವಿದೆಯಾ ನಿನಗೀಗ ಎಂದಳು. ಹೌದು ಎಂದೆ. ನಾನು ಹೋಗಿ ನಿನಗೆ ಗುಳಿಗೆ ತರುವೆ ಎಂದಳು. ಅವಳಿಗೆ ನಡೆಯುವುದಕ್ಕೆ ಕಷ್ಟವಾಗುತ್ತಿತ್ತು. ತನ್ನದೇ ಅತಿರೇಕ ವರ್ತನೆಯಿಂದಾಗಿ ಬಹುಶಃ ಸೊನ್ಸಾ ಮುಜುಗರಕ್ಕೊಳಗಾಗಿರಬೇಕು, ಅದಕ್ಕೇ ಅವಳ ಬದಲಾಗಿ ಅಮ್ಮ ಬಂದಿರಬೇಕು ಎಂದು ಯೋಚಿಸಿದೆ. ಆದರೆ ಅಮ್ಮ ಮತ್ತೆ ಗುಳಿಗೆಯೊಂದಿಗೆ ಬಂದಾಗ ಹೇಳಿದಳು: ಈಗ ಇಲ್ಲಿ ಬರೀ ನಾವೇ ಇಬ್ಬರು. ಅವಳದನ್ನು ಹೇಳಿದ ರೀತಿ ಹೇಗಿತ್ತೆಂದರೆ, ನನಗದು ಈಗಾಗಲೇ ತಿಳಿದಿದೆ ಎನ್ನುವ ತರ. ನಾನು ಏನೂ ಉತ್ತರಿಸಲಿಲ್ಲ. ಅವಳು ನನಗೆ ಗುಳಿಕೆ ಕೊಟ್ಟು ಭುಜಕ್ಕೆ ಆಸರೆ ನೀಡಲು ಬಂದರೂ ನಾನು ಈಗದರ ಅಗತ್ಯವಿಲ್ಲ ಎಂದು ಹೇಳಿದೆ. ನಾನು ಗುಳಿಗೆಯನ್ನು ಬಾಯೊಳಗಿಟ್ಟು ಬಾಟಲಿಯಿಂದ ನೀರನ್ನು ಕುಡಿದೆ.  ಅವಳು ಕಿಟಕಿ ಪಕ್ಕದ ಕುರ್ಚಿಯಲ್ಲಿ ಕುಳಿತಳು. ಸೊನ್ಸಾಗೆ ಇದೆಲ್ಲ ನನಗೊಬ್ಬಳಿಗೆ ಕಷ್ಟವಾಗಬಹುದು ಅಂತ ತುಂಬ ಚಿಂತೆಯಾಗಿತ್ತು ಆದರೆ ಅವಳಿಗೆ ವಾಪಾಸ್ ಹೋಗಲೇ ಬೇಕಾಗಿತ್ತು ಎಂದಳು. ನಾನು ತಲೆಯಾಡಿಸಿದೆ. ಹೌದು, ಅವಳು ಹೇಳಿದ್ದಳು, ಅವಳೇಕೆ ಹೋಗಬೇಕಾಯಿತು ಎನ್ನುವುದು ನಿನಗೆ ಅರ್ಥವಾಗುತ್ತದೆ ಅಂತ ಅಂದಳು. ನಾನು ಹೌದು ಎಂದೆ. ಅವಳು ನನ್ನತ್ತ ನಕ್ಕು ನಿನಗೆ ಗೊತ್ತಿಲ್ಲ, ನಾನು ನಿನಗೆ ಅದೆಷ್ಟು ಕೃತಜ್ಞಳು ಅನ್ನೋದು ಎಂದಳು. ಯಾತಕ್ಕಾಗಿ ಎಂದೆ, ನನಗೆ ಅವಳು ಏನು ಹೇಳಲು ಹೊರಟಿದ್ದಳೆಂಬುದು ಗೊತ್ತಿದ್ದರೂ. ಅವಳು ಹೇಳುತ್ತಿದ್ದಳು, ನಾನು ವಾಪಾಸು ಬಂದು ವಿಲಿಯಂ ನಿನ್ನ ಪಕ್ಕದಲ್ಲಿ ಬಿದ್ದುಕೊಂಡಿದ್ದನ್ನು ಕಂಡಾಗ ನನಗನಿಸಿತ್ತು, ಕನಿಷ್ಠ ವಿಲಿಯಂ ಅಮ್ಮನ ಕಾಳಜಿ ವಹಿಸುತ್ತಾನೆ ಅಂತ. ಖಂಡಿತವಾಗಿಯೂ, ಅದರಲ್ಲೇನಿದೆ ವಿಶೇಷ ಎಂದೆ. ನಾನು ನನ್ನ ಕಣ್ಣುಗಳನ್ನು ಮುಚ್ಚಿದೆ. ಸ್ವಲ್ಪ ಹೊತ್ತಿನಬಳಿಕ ಅವಳು ಎದ್ದು ಹೊರಟು ಹೋಗುವುದು ಕೇಳಿಸಿತು. ನಾನು ಕಣ್ತೆರೆದು ಯೋಚಿಸಿದೆ, ಕನಿಷ್ಠ ಅವಳಿಗೆ ಗೊತ್ತಾಗಿದ್ದರೆ.

******


ಅದ್ಭುತವಾದ ಸಣ್ಣಕತೆಗಾರನೆಂದು ಪರಿಗಣಿಸಲ್ಪಡುವ ನಾರ್ವೆಯ ಕ್ಷೆಲ್ ಅಸ್ಕಿಡ್ಸನ್ (1929) ತನ್ನ ಕತೆಗಳಲ್ಲಿ ತರುವ ಪಾತ್ರಗಳು, ವಿವರಗಳು ಜೀವಂತಿಕೆಯಿಂದ ಪರಿಪೂರ್ಣವಾಗಿರುತ್ತವೆ. ಅವನ ಕತೆಯಲ್ಲಿ ಹಾಸುಹೊಕ್ಕಾಗಿರುವ ಮೌನ ಓದುಗನನ್ನು ಆ ಕತೆಗಳೊಂದಿಗೆ, ಪಾತ್ರಗಳೊಂದಿಗೆ ಮತ್ತು ಕಥಾವಾತಾವರಣದೊಂದಿಗೆ ನಿರಂತರ ಸಂಬಂಧವೊಂದನ್ನು ಕಟ್ಟಿಕೊಳ್ಳುವಂತೆ ಮಾಡುತ್ತದೆ. ಭೌತಿಕ ವಿವರಗಳಲ್ಲಿಯೇ ಪಾತ್ರದ ಮನೋಲೋಕವನ್ನು ಕಟ್ಟಿಕೊಡಬಲ್ಲ ಅನನ್ಯ ಶಕ್ತಿಯೇ ಅವನ ಇನ್ನೊಂದು ಹೆಚ್ಚುಗಾರಿಕೆ. ಅವನ ಕತೆಯ ನಿರೂಪಣೆಯಲ್ಲಿ ಕಂಡೂ ಕಾಣದಂತಿರುವ ಒಂದು ವ್ಯಂಗ್ಯವಿದೆ. ಆದರೆ ಅದು ಬ್ರೆಕ್ಟ್‌ನ ವ್ಯಂಗ್ಯವಲ್ಲ. ಅವನ ಕತೆಗಳ ಕೊನೆಯ ಸಾಲು, ಪದ ನಮ್ಮನ್ನು ತೀವ್ರವಾಗಿ ಕಾಡುತ್ತ ಉಳಿಯುವಷ್ಟು ಸಶಕ್ತವಾಗಿರುತ್ತವೆ, ಆದರೆ ಅದು ಧ್ವನಿಸುವ ತಿರುವು ಅಥವಾ ಅಂತ್ಯಕ್ಕಾಗಿ ಅಲ್ಲ. ತಥಾಕಥಿತ ಅಂತ್ಯವೆಂಬುದೇ ಇಲ್ಲದ ಸ್ಥಿತಿಯಲ್ಲಿ ಮುಗಿದು ಬಿಡುವ ಅದು ನಮ್ಮಲ್ಲಿ ಹುಟ್ಟಿಸುವ ಒಂದು ಬಗೆಯ ಅಸ್ವಸ್ಥ ತಲ್ಲಣಕ್ಕಾಗಿ, ಆ ಪಾತ್ರಗಳ ಮಾನವೀಯ ನೆಲೆಯ ವಿಭಿನ್ನ ಮುಖಗಳಿಂದಾಗಿ, ಎಲ್ಲೋ ಏನೋ ಸರಿಯಿಲ್ಲ ಅನಿಸುವ ಅಸಂತೃಪ್ತ ಭಾವದಿಂದಾಗಿ.

ಪ್ರಸ್ತುತ ಕತೆ, ‘ಪರಿತ್ಯಕ್ತ ಬಯಲು’ "A Great Deserted Landscape" ಕತೆಯ ಅನುವಾದವಾಗಿದೆ.  ಈ ಕತೆ ಒಬ್ಬ ಸಹೋದರನನ್ನು, ಒಬ್ಬ ಪತಿಯನ್ನು, ಕೊಲೆಗಾರನೂ ಆಗಿರಬಹುದಾದ ಒಬ್ಬನನ್ನು ಚಿತ್ರಿಸುತ್ತಿದೆ. ಈ ಕತೆ ಆತನ ಸಹೋದರಿಯ, ಪತ್ನಿಯ ಮತ್ತು ತಾಯಿಯ ಕತೆಯೂ ಹೌದಾದರೂ ಕೇಂದ್ರ ಅವನೇ. ಒಬ್ಬ ನೀಚನಂತೆ, ಸ್ವಕೇಂದ್ರಿತನಂತೆ, ಸ್ವಾರ್ಥಿಯಂತೆ ಕಾಣುವ ಈತನನ್ನು ದ್ವೇಷಿಸಬಹುದಾದರೂ, ಓದುಗ ಈತನಲ್ಲಿ ತನ್ನನ್ನು ತಾನೇ  ಕಂಡುಕೊಳ್ಳುವಷ್ಟು ಸಹಜವಾಗಿ ಈ ಪಾತ್ರದ ಪೋಷಣೆ ಇದೆ.  ಕನ್ನಡದಲ್ಲಿ ಲಂಕೇಶ್ ಒಬ್ಬರೇ ಇಷ್ಟು ತೀವ್ರವಾಗಿ ಕಾಡಬಲ್ಲ ಜೀವಂತ ಪಾತ್ರಗಳನ್ನು ಕಟ್ಟಿದ್ದರು ಎಂದರೆ ಅದು ಅತಿಶಯೋಕ್ತಿಯೇನಲ್ಲ. ಅವರ ‘ಸಹಪಾಠಿ’, ‘ಮುಟ್ಟಿಸಿಕೊಂಡವನು’, ‘ಚಂದ್ರಪ್ಪ ಗೌಡರಿಗೆ ಬಿದ್ದ ಕನಸು’, ‘ಉಲ್ಲಂಘನೆ’ಯಂಥ ಕತೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಬಲ್ಲವು.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, October 10, 2021

ನನಗೂ, ಅದು ಇಷ್ಟವಿಲ್ಲ


ಕವಿ, ಕಾದಂಬರಿಕಾರ ಮತ್ತು ವಿಮರ್ಶಕ ಬೆನ್ ಲಾರ್ನರ್‌‍ನ ಕೃತಿ ‘ದ ಹೇಟ್ರೆಡ್ ಆಫ್ ಪೋಯೆಟ್ರಿ’ ಕವಿತೆಯ ಪ್ರೀತಿಯ ಕುರಿತಾಗಿದೆ. ಅದರ ಹೆಸರು ಕವಿತೆಯ ದ್ವೇಷವೇ ಹೌದಾದರೂ ಅದು ಅಂಥ ದ್ವೇಷದ ಮೂಲವನ್ನು ಸಕಾರಣವಾಗಿ ಸಮರ್ಥಿಸುತ್ತ, ಶೋಧಿಸುತ್ತ ಹೋಗುವುದರಿಂದಲೇ ನಮಗೆ ಪ್ರೀತಿಸಬಹುದಾದ ಕವಿತೆಯ ಕುರಿತು ತಿಳಿಯುತ್ತದೆ ಮಾತ್ರವಲ್ಲ ಬೆನ್ ಲಾರ್ನರನ ಉದ್ದೇಶ ಅಂಥ ಪ್ರೀತಿಯನ್ನು ಪೋಷಿಸುವುದು ಎನ್ನುವುದೂ ಅರ್ಥವಾಗುತ್ತದೆ. ಹಾಗಾಗಿ ಬಹುಶಃ ಕವಿಗಳು, ಕವಿತೆಯನ್ನು ಓದುವ ವ್ಯವಧಾನವುಳ್ಳವರು ಅವಶ್ಯ ಗಮನಿಸಬೇಕಾದ ಕೃತಿ ಇದು.

ಒಂಭತ್ತನೆಯ ಇಯತ್ತೆಯಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಕವಿತೆಯನ್ನು ನೋಡದೇ ತರಗತಿಯಲ್ಲಿ ಪಠಿಸಬೇಕೆಂದು ಅಧ್ಯಾಪಕರು ವಿಧಿಸಿದಾಗ ಸಹಜವಾಗಿಯೇ ಹುಡುಗರು ಇದ್ದುದರಲ್ಲಿ ಅತ್ಯಂತ ಪುಟ್ಟ ಕವಿತೆಯನ್ನು ಆಯುತ್ತಾರೆ. ಇವನು ಆಯ್ದುಕೊಂಡಿದ್ದು ಇದನ್ನು;

I, too, dislike it.
   Reading it, however, with a perfect
      contempt for it, one discovers in
   it, after all, a place for the genuine.     

ನನಗೂ, ಅದು ಇಷ್ಟವಿಲ್ಲ.
ಹಾಗಿದ್ದೂ, ಒಂಚೂರೂ ಮನಸ್ಸಿಲ್ಲದೆ ಓದುವುದು, ಅದನ್ನು,
ಏನಿಲ್ಲವೆಂದರೂ, ಸಹಜವಾದುದನ್ನು ಒಪ್ಪಿಕೊಳ್ಳಲು
ಅವಕಾಶ ಮಾಡಿಕೊಡುತ್ತದೆ.

****

"ಅವನೊಬ್ಬ ಕವಿ" ಎನ್ನುವುದು ತಮಾಶೆಯ ಮಾತೂ ಆಗಬಹುದು. "ನಾನೊಬ್ಬ ಕವಿ" ಎಂದು ಬಹುಶಃ ಯಾರೂ ಪರಿಚಯಿಸಿಕೊಳ್ಳುವುದಿಲ್ಲ. ಅದು ಡೆಸಿಗ್ನೇಶನ್ ಅಲ್ಲ. ಹಾಗೆ ಆಗಬಹುದಾದರೂ ಅದು ಅಷ್ಟು ಗೌರವವನ್ನು ತಂದುಕೊಡುವುದಿಲ್ಲ. " ಅದು ಸರಿಯಪ್ಪ, ಆದರೆ ಬದುಕುವುದಕ್ಕೆ ಏನು ಮಾಡ್ತೀಯ" ಎಂದು ಕೇಳುವವರು ಇದ್ದೇ ಇರುತ್ತಾರೆ. ಅಥವಾ, "ಅದೆಲ್ಲ ಸರಿ, ಆದರೆ ಇನ್ನಾದರೂ ಗಂಭೀರವಾಗಿ ಏನಾದರೂ ಕೆಲಸ ಮಾಡು" ಎನ್ನಬಹುದು. ಅಂದರೆ, ಕವಿತೆ ಬರೆಯುವುದು ಕೆಲಸವಲ್ಲ. 

ನಿನ್ನ ಇಷ್ಟದ ಕವಿ ಯಾರು ಎಂದು ಕೇಳಿದರೆ ಕೊಡುವ ಉತ್ತರ ಏನಿದ್ದರೂ, ಕೇಳಿದವರಿಗೆ ಆ ಹೆಸರು ಹೊಸದಾಗಿರುತ್ತದೆ. ಯಾವತ್ತೋ, ಎಲ್ಲೋ ಕೇಳಿದಂತಿರುತ್ತದೆಯೇ ಹೊರತು ಅವರು ಆತನ ಯಾವ ಕವಿತೆಯನ್ನೂ ಓದಿರುವುದಿಲ್ಲ. ಆದರೂ ಕೇಳುತ್ತಾರೆ. ನಿನ್ನ ಕವಿತೆಗಳು ಪ್ರಕಟವಾಗಿವೆಯೇ ಎನ್ನುತ್ತಾರೆ. ಪ್ರಕಟವಾಗಿದ್ದರಷ್ಟೇ ನೀನು ಕವಿ ಎಂದು ಒಪ್ಪಿಕೊಳ್ಳುವೆ ಎನ್ನುವ ಹಾಗೆ. ಆದರೆ ನಿನ್ನ ಪ್ರಕಟಿತ ಕವಿತೆಗಳಲ್ಲಿ ಒಂದನ್ನೂ ಅವರು ಓದಿರುವುದಿಲ್ಲ. ಅಷ್ಟಿದ್ದೂ ಇದನ್ನೆಲ್ಲ ಸಹಜವೆಂದು ಒಪ್ಪಿಕೊಳ್ಳಬೇಕು, ಕವಿಗಳು.

****

ಪ್ಲೇಟೋ, ಸಾಕ್ರಟೀಸ್‌ನಂಥವರು ಕವಿಗಳನ್ನು ನಿಷೇಧಿಸಬೇಕೆಂದರು. ಕವಿಗಳು ವಾಸ್ತವವಾದಿಗಳಲ್ಲ. ಅವರು ಅಸಂಭವನೀಯ ಕನಸುಗಳನ್ನು ಜನರ ತಲೆಗೆ ತುಂಬುತ್ತಾರೆ. ಅಧಿಕಾರಶಾಹಿಗೆ ಸವಾಲಾಗುತ್ತಾರೆಯೇ ಹೊರತು ಸಹಕಾರಿಯಾಗುವುದಿಲ್ಲ. 

ಕನಸುಗಾರಿಕೆ, ಅವಾಸ್ತವವಾದಿ ಚಿಂತನೆ, ಸೂಕ್ಷ್ಮಸಂವೇದಿತನ, ಭಾವುಕತೆ, ಕಾರ್ಯಸಾಧ್ಯವಲ್ಲದ ಯೋಚನೆಗಳಿಗಷ್ಟೇ ಹೇಳಿಸಿದವರು, ಕವಿಗಳು ಎನ್ನುವ ಆರೋಪವೊಂದು ಇದ್ದೇ ಇದೆ. 

ಅಥವಾ, ಅಧಿಕಾರಶಾಹಿ ಸದಾ ಕವಿಗಳಿಗೆ, ಬರಹಗಾರರಿಗೆ ಹೆದರುತ್ತದೆಯೆ? ಅವರು ಬಾಯಿಬಿಟ್ಟರೆ ಅಧಿಕಾರದ ಕುರ್ಚಿ ಅಲುಗಾಡತೊಡಗುತ್ತದೆಯೆ? ಕೆಲವೇ ಕೆಲವರಿಗೆ ಸಾಧ್ಯವಾಗುವ ದೂರಗ್ರಾಹಿ ಪರಿಣಾಮಗಳನ್ನು ಕಾಣಬಲ್ಲ ಶಕ್ತಿ ಈ ಕವಿಗಳಿಗೆ, ಬರಹಗಾರರಿಗೆ ಇರುವುದರಿಂದಲೇ ಅವರನ್ನು ಸಮಾಜ ಬುದ್ಧಿವಂತರೆಂದು ಗುರುತಿಸುತ್ತ, ಅವರ ಮಾತಿಗೆ ಬೆಲೆ ಕೊಡುತ್ತ ಬಂದಿದೆಯೆ? ಅದೇ ಕಾರಣಕ್ಕೆ ಅಧಿಕಾರಶಾಹಿ ಅವರನ್ನು ನಿಷೇಧಿಸಬಯಸುತ್ತದೆಯೆ?

ಪ್ರಶ್ನೆಯಿದೆ.

*****


ಕವಿಗೆ ಮೌನ ಬಹಳ ಮುಖ್ಯ. ಒಬ್ಬ ಒಳ್ಳೆಯ ಕವಿ ತುಂಬ ಕಡಿಮೆ ಬರೆಯುತ್ತಾನೆ. ಕವನ ಸಂಕಲನದಲ್ಲಿ ಕಾದಂಬರಿಯಲ್ಲಿರುವಷ್ಟು ಶಬ್ದಗಳಿರುವುದಿಲ್ಲ. ಆದರೆ ಕವನ ಸಂಕಲನದಲ್ಲಿ ಕಾದಂಬರಿಯಲ್ಲಿರುವುದರ ಹತ್ತು ಪಟ್ಟು ಹೆಚ್ಚು ಮೌನವಿರುತ್ತದೆ. ಈ ಮೌನವನ್ನು ಸಾಧಿಸುವುದಕ್ಕಾಗಿಯೇ ಕವಿಗಳು ಆಗಾಗ ಮೌನಕ್ಕೆ ಮೊರೆ ಹೋಗುತ್ತಾರೆ. ಆದರೆ ಕೆಟ್ಟ ಕವಿಗಳಿಗೆ ಇದೆಲ್ಲ ಅನ್ವಯಿಸುವುದಿಲ್ಲ. ಒಳ್ಳೆಯ ಕವಿತೆಯನ್ನು ಗುರುತಿಸುವುದಕ್ಕೆ ನಾವು ಕೆಟ್ಟ ಕವಿತೆಗಳನ್ನು ಗಮನಿಸುತ್ತಲೇ ಇರಬೇಕಾಗುತ್ತದೆ. 

ಕೆಟ್ಟ ಕವಿತೆಯಲ್ಲಿ ಹೆಚ್ಚು ಸದ್ದು, ಮಾತು, ವಾಚಾಳಿತನ ಇರುತ್ತದೆ. ಅದು ‘ಇರುವುದನ್ನು’ ಹೇಳುವುದೇ ಹೆಚ್ಚು. ಇರುವುದರಾಚೆಯದನ್ನು ಅದು ಕಾಣುವುದಿಲ್ಲ, ಕಾಣಿಸುವುದೂ ಇಲ್ಲ. ಏನು ಇದೆಯೋ ಅದನ್ನು ಇದೆ ಎನ್ನಲು ಅಂಥ ಕವಿತೆ ತನ್ನೆಲ್ಲಾ ಶ್ರಮ ವ್ಯಯಿಸುತ್ತದೆ. ಅಷ್ಟು ಶ್ರಮ ವ್ಯಯಿಸಿ ಅದನ್ನು ಹೇಳುವ ಅಗತ್ಯ ನಿಜಕ್ಕೂ ಇರುವುದಿಲ್ಲ. 

ಕವಿಯ ಮೌನ ಕೆಲವೊಮ್ಮೆ ಕವಿತೆಯ ಸಾಲುಗಳನ್ನು ಮುರಿಯುವಲ್ಲಿ, ಸಾಲುಗಳನ್ನು ಒಟ್ಟು ಆಕೃತಿಯ ನಡುವೆ ಇಡುವ ಕ್ರಮದಲ್ಲಿ ಕಾಣಿಸುತ್ತದೆ. ಕೆಲವರು ಅಕ್ಷರ ಮಾಲೆಯ ಜೊತೆ ಬೇರೆ ಬೇರೆ ಚಿಹ್ನೆಗಳನ್ನೂ ಬಳಸುತ್ತ ಅದನ್ನು ಸಾಧಿಸುತ್ತಾರೆ. ಒಂದು ‘-’, ಒಂದು ‘/’ , ‘...’ ಕೆಲವೊಮ್ಮೆ ಕವಿಗೆ ಅನಿವಾರ್ಯವಾಗುತ್ತದೆ, ಸಹಾಯಕ ಎನಿಸುತ್ತದೆ. ಕೆಲವೊಮ್ಮೆ ಅಂಥವುಗಳನ್ನು ಬಳಸಬಹುದಾದಲ್ಲಿ ಅವುಗಳನ್ನು ಕೈಬಿಟ್ಟು ಕವಿತೆ ಸವಾಲೊಡ್ಡುತ್ತದೆ. ಅಲ್ಲಿ ಭಾಷೆಯ ಅರ್ಥಸಾಧ್ಯತೆಗಳು ಬಹುವಿಧವಾಗಿ ಮೇಳೈಸುತ್ತವೆ. ಮೇಲೆ ಉಲ್ಲೇಖಿಸಿದ, ನಾಲ್ಕೇ ಸಾಲುಗಳ ಕವಿತೆಯಲ್ಲಿ ಇರುವ ಅಲ್ಪವಿರಾಮಗಳ ಸಂಖ್ಯೆ  ಏಳು. 

ಗದ್ಯ ಲೇಖನದ ನಡುವೆ ಉಲ್ಲೇಖಿಸಲ್ಪಡುವ, ಕವಿತೆಯ ಅಧಿಕೃತ  ಸಾಲುಗಳ ನಿಯಮ ಕೈಬಿಟ್ಟು ಗೆರೆಗಳ ಮೂಲಕ ಸಾಲುಗಳ ಕೊನೆಯನ್ನು ಕಾಣಿಸುತ್ತ ಬರೆದುಕೊಂಡು ಹೋದ ಕವಿತೆಗಳಿವೆಯಲ್ಲ, ಅವು ಕವಿತೆಗೆ ನಿಜವಾದ ಸವಾಲು. ಅದನ್ನು ನೀವು ಗದ್ಯ ಓದಿದ ಹಾಗೇ ನಿರಾಳವಾಗಿ ಓದಬಹುದು. ಮತ್ತು ಹಾಗೆ ಓದುವಾಗ, ಅದರಲ್ಲಿ ನಿಜಕ್ಕೂ ಕವಿತೆ ಇದ್ದರೆ ಅದು ನಿಮಗೆ ಕಾಣಿಸಿಕೊಳ್ಳುತ್ತದೆ.

****

ಛಂದಸ್ಸು ಮತ್ತು ಗೇಯತೆಯತ್ತ ಗಮನಕೊಡುವ ಕವಿತೆಗಳ ಚಂದವೇ ಬೇರೆ ಇದೆ. ಕೆಲವು ಕವಿತೆಗಳನ್ನು ಹಾಡುವಾಗ ಯಾವುದೋ ಒಂದು ಪದವನ್ನು ಕ್ರಮ ಮೀರಿ ಎಳೆದು ಹೇಳಬೇಕಾಗುತ್ತದೆ. ಎಲ್ಲಿ ಎಷ್ಟು ಎಳೆಯುತ್ತೀರಿ ಅಥವಾ ಎಲ್ಲಿ ಎಷ್ಟು ಅಮುಕುತ್ತೀರಿ ಎನ್ನುವುದರ ಮೇಲೆ ರಚನೆಯ ಯೋಗ್ಯತೆಯನ್ನು ಅಳೆಯಲು ಸಾಧ್ಯ.

ಮೇಲೆ ಉಲ್ಲೇಖಿಸಿದ ಕವಿತೆಯಲ್ಲಿ ಅದು ‘ನನಗೂ’ ಎಂದಿದೆ. ‘ನನಗೆ’ ಅಲ್ಲ. ನಾನು ಅದನ್ನು ಇಷ್ಟಪಡುವುದಿಲ್ಲ ಎನ್ನಬಹುದು. ನಾನೂ ಅದನ್ನು ಇಷ್ಟಪಡುವುದಿಲ್ಲ ಎಂದಾಗ ಮಾತ್ರೆ ಬದಲಾಯಿತು. ಇಂಗ್ಲೀಷಿನಲ್ಲಿ I dislike ಎನ್ನುವುದನ್ನು I too dislike ಎನ್ನಬೇಕಾಗುತ್ತದೆ. ಮಾತ್ರೆಯ ಜೊತೆ ಅರ್ಥವೂ ಬದಲಾಗುತ್ತಿರುತ್ತದೆ. ಹಾಗೆಯೇ ರಾಗದ ಜೊತೆ ಕವಿತೆಯ ಹಣೆಬರಹವೂ. 

*****

ಕವಿತೆ ಕೇವಲ ವ್ಯಕ್ತಿಯ ಭಾವವನ್ನು ಹಾಡಿದರೆ ಸಾಕೆ? ಅದಕ್ಕೆ ಅದರದ್ದೇ ಆದ ವಿಶಿಷ್ಟ ಶಕ್ತಿಯಿಲ್ಲವೆ? ಬಸವಣ್ಣ, ಅಲ್ಲಮ, ಅಕ್ಕನಾದಿಯಾಗಿ ವಚನಗಳನ್ನು ಕಟ್ಟಿದವರ ಕವಿತಾಶಕ್ತಿ ಒಂದು ಸಮಾಜವನ್ನೇ ಬದಲಿಸಲಿಲ್ಲವೆ? ಕನಕ ಪುರಂದರರ ಕವಿತೆಗಳು ಇಂದಿಗೂ ಪ್ರಸ್ತುತವಾಗಿಯೇ ಉಳಿದಿದೆ ಎಂದರೆ ಅವು ಜನಸಾಮಾನ್ಯರ ನಾಡಿಮಿಡಿತವನ್ನು ಇನ್ನಿಲ್ಲದಂತೆ ಮೀಟಿದ್ದಕ್ಕೆ ಸಾಕ್ಷಿಯಲ್ಲವೆ? ಲಾವಣಿಪದಗಳು, ಕ್ರಾಂತಿಪದಗಳು ಸ್ವಾತಂತ್ರ್ಯ ಹೋರಾಟ ಕಾಲದಿಂದಲೂ ಜನರನ್ನು ಸಂಘಟಿಸುತ್ತ ಬಂದಿಲ್ಲವೆ? ನಮ್ಮ ಮಹಾಕಾವ್ಯಗಳಂತೂ ನವರಸಗಳನ್ನೂ ಒಗ್ಗೂಡಿಸಿಕೊಂಡು ಇಂದಿಗೂ ಅತ್ಯಂತ ಜೀವಂತಿಕೆಯಿಂದ ನಾಡುನುಡಿಯ ಭಾಗವೇ ಆಗಿ ಸೇರಿ ಹೋಗಿಲ್ಲವೆ? ಅದೆಲ್ಲ ನಿಜ. ಆದರೆ ಕವಿತೆಯ ರಾಜಕೀಯ ನೆಲೆ ಯಾವುದು? ಅದು ಸಮಷ್ಟಿಯ ಕುರಿತು ಹಾಡಬೇಕೆಂದರೆ ಅದು ಹೇಗೆ? 

ಕರಿಯರ ಕುರಿತು ಬಿಳಿಯರು ಬರೆದ ಕವಿತೆಗಳಿವೆ. ಕರಿಯರ ನೋವು, ಸೋಲು, ಅಪಮಾನ, ದುಗುಡ ದುಮ್ಮಾನಗಳನ್ನು ಕರಿಯರೇ ಹಾಡಿದ್ದಿದೆ. ಸಂತನಂತೆ ಹಾಡಿದ ಕವಿಗಳಿದ್ದಾರೆ ನಮ್ಮ ನಡುವೆ. ‘ಹುಲ್ಲಿನ ದಳಗಳು’ ಬರೆದ ವಾಲ್ಟ್ ವಿಟ್ಮನ್‌ಗೆ ಮನುಷ್ಯರಲ್ಲಿ ಭೇದ ಭಾವವೇ ಇರಲಿಲ್ಲ. ಅವನಿಗೆ ಎಲ್ಲರೂ ಸಮಾನರಾಗಿದ್ದರು. ಆದರೆ ಎಲ್ಲಾ ಸಂತರಂತೆಯೇ ವಾಲ್ಟ್ ವಿಟ್ಮನ್ ಕೂಡಾ ಆ ಸಮಾನರಲ್ಲಿ ಒಬ್ಬನಾಗಿರದೇ ಅವರನ್ನೆಲ್ಲ ಮೀರಿದ ಒಬ್ಬರಾಗಿದ್ದರು. ಹಾಗಾಗಿ ಸಂತನ ಕನಸುಗಳು ಯಾವತ್ತೂ ವಾಸ್ತವಿಕವಾಗಿ ನನಸುಗಳಾಗುವುದೇ ಇಲ್ಲ. ವಾಲ್ಟ್ ವಿಟ್ಮನ್ ಕಂಡ ಸಮಾನರ ಸಮಾಜವೊಂದು ಯಾವತ್ತೂ ಇದ್ದಿರಲಿಲ್ಲ.

ವಿಟ್ಮನ್ ಮಿಲಿಟರಿಯಲ್ಲಿ ಗಾಯಾಳುಗಳ ಸೇವೆಗೆ ನಿಂತ ನರ್ಸ್ ಇದ್ದ ಹಾಗೆ ಎನ್ನುತ್ತಾನೆ ಲಾರ್ನರ್. ಆಕೆ ಗಾಯಾಳುಗಳಲ್ಲಿ ಜಾತಿ, ಧರ್ಮ, ಪಂಗಡ ಎಂದೆಲ್ಲ ನೋಡುವುದಿಲ್ಲ. ಅವಳಿಗೆ ಎಲ್ಲರೂ ಸಮಾನರು, ಎಲ್ಲರೂ ಮಾನವರು. ಅವಳದ್ದು ಮಾನವೀಯ ಅಂತಃಕರಣ. ವಿಟ್ಮನ್‌ದೂ ಕೂಡ ಅದೇ ನೆಲೆ. ಆದರೆ ವಿಟ್ಮನ್ ಎಂದೂ ಯುದ್ಧದಲ್ಲಿ ಭಾಗವಹಿಸಲಾರ, ನಿರ್ದಿಷ್ಟವಾಗಿ ಯಾವುದೋ ಒಂದು ಕಡೆಗೆ ಸೇರಿದವನಂತೆ ವರ್ತಿಸಲಾರ.

*****

ವ್ಯಕ್ತಿಗತ ಮತ್ತು ಸಾಮಾಜಿಕ-ರಾಜಕೀಯ ನೆಲೆಯ ಚರ್ಚೆಯ ಸಂದರ್ಭದಲ್ಲಿ ವ್ಯಕ್ತಿಗತವಲ್ಲದ್ದು ಸಾಮಾಜಿಕ ಎನ್ನುವ ನಿಲುವನ್ನು ಬೆನ್ ಲಾರ್ನರ್ ಕೂಡ ಒಪ್ಪಿದಂತೆ ಕಾಣುವುದಿಲ್ಲ. ಇದು ತುಂಬ ಕುತೂಹಲಕರವಾದ ಮತ್ತು ಹೆಚ್ಚು ಗಮನಾರ್ಹವಾದ ಒಂದು ಸಂಗತಿ. 

ಕರಿಯನಾಗಿರಲಿ, ಬಿಳಿಯ ಅಮೆರಿಕನ್ ಆಗಿರಲಿ ಕೇವಲ ತನ್ನ ವೈಯಕ್ತಿಕ ಅನುಭವವನ್ನು, ವ್ಯಕ್ತಿಗತ ನೆಲೆಯ ಅನುಭವವನ್ನು ಬರೆದಾಗಲೂ, ತನ್ನ ಇಡೀ ಸಮುದಾಯದ ಅನುಭವ, ಅಪಮಾನ, ನೋವು, ದುಗುಡ ದುಮ್ಮಾನಗಳ ಕುರಿತು ಬರೆದಾಗಲೂ ಅದನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸರಿ? ಬಿಳಿಯ ಮತ್ತು ಕರಿಯ ಸಮುದಾಯದ ಸಮನ್ವಯಕಾರನ ನುಡಿಗಟ್ಟಿನಲ್ಲಷ್ಟೇ ಮಾತನಾಡುವುದು ರಾಜಕೀಯ-ಸಾಮಾಜಿಕ ನೆಲೆಯಾಗುವುದೆ ಎನ್ನುವ ಪ್ರಶ್ನೆಯೊಂದು ಹಾಗೆಯೇ ಉಳಿದು ಬಿಡುತ್ತದೆ. ಇದನ್ನು ನಾವು ನಮ್ಮ ಸಂದರ್ಭದಲ್ಲಿಟ್ಟು ಗಮನಿಸುವುದು ಅಗತ್ಯ ಮತ್ತು ಒಳ್ಳೆಯದು. 

ಜಾತಿಯ ಬಗ್ಗೆ ಈಚಿನ ದಶಕಗಳಲ್ಲಿ ಕೊಂಚ ಅತಿಯಾದ ಜಾಗೃತಿಯನ್ನು ಮೂಡಿಸಿಕೊಂಡಿರುವ ದೇಶ ನಮ್ಮದು. ಕರ್ನಾಟಕವಂತೂ ಹಿಂದಿನಿಂದಲೂ ಜಾತಿ ಲೆಕ್ಕಾಚಾರದಲ್ಲಿಯೇ ಅಧಿಕಾರ ಕೇಂದ್ರವನ್ನು ಹಂಚಿಕೊಂಡು ಬಂದಿದೆ. ಅದು ಸಾಂಸ್ಕೃತಿಕ ವಲಯವಿರಲಿ, ವ್ಯಾವಹಾರಿಕ ವಲಯವಿರಲಿ, ಜಾತಿಗೆ ಸಿಕ್ಕ ಪ್ರಾಧಾನ್ಯ ಅಂದಿಗೂ ಇಂದಿಗೂ ಒಂದೇ ತರವಾಗಿದೆ. ಹಾಗಾಗಿ, ಇಲ್ಲಿ ಸವರ್ಣೀಯರ ಸಾಹಿತ್ಯ ಮತ್ತು ದಲಿತ ಸಾಹಿತ್ಯ ಸದಾ ಪವರ್ ಪಾಲಿಟಿಕ್ಸ್‌ನ ಹಾವೇಣಿಯಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದಿದೆ. 

‘ದೇಶಕಾಲ’ದಂಥ ಒಂದು ಪತ್ರಿಕೆ ಎಲ್ಲರಿಗೂ ಸಮಾನ ಅವಕಾಶವನ್ನು ನಿರಾಕರಿಸಿ, ದೇಶ ಮತ್ತು ಕಾಲಕ್ಕೆ ವಿರುದ್ಧವಾಗಿ ನಿರ್ದಿಷ್ಟ ಲೇಖಕರ ಗುಂಪುಗಾರಿಕೆಯನ್ನು ಪುಷ್ಟೀಕರಿಸುತ್ತ ಇದೆ ಎಂದು ಹೊರಟ ಅಪಸ್ವರವೇ ಇದಕ್ಕೆ ಬಹುಮುಖ್ಯ ಸಾಕ್ಷಿ. ಅಲ್ಲಿಂದ ಮುಂದೆ ಸಾಹಿತ್ಯ ಮತ್ತು ಇತರ ಸಾಂಸ್ಕೃತಿಕ ವಲಯದಲ್ಲಿ ಜಾತಿವಾರು ಮೀಸಲಾತಿಯ ಹಕ್ಕು ಮಂಡಿಸುವಲ್ಲಿ ಯಾವುದೇ ಮುಜುಗರ ಉಳಿಯಲಿಲ್ಲ. 

ಅಕಾಡಮಿ, ಪ್ರಾಧಿಕಾರ, ಮಂಡಳಿಗಳಲ್ಲಿನ ಆಯಕಟ್ಟಿನ ಸ್ಥಾನಗಳನ್ನು ಹೊಂದುವಲ್ಲಿ, ಫೆಲೊಶಿಪ್, ಗ್ರ್ಯಾಂಟ್ಸ್, ಪ್ರಶಸ್ತಿ-ಪುರಸ್ಕಾರ ಎಲ್ಲದರಲ್ಲೂ ಜಾತಿವಾರು ಮೀಸಲಾತಿ ಸಾಧ್ಯವಾಗದೇ ಇದ್ದಲ್ಲಿ ನಿರಂತರವಾಗಿ ಅನ್ಯಾಯ ನಡೆಯುತ್ತಲೇ ಇರುತ್ತದೆ ಎನ್ನುವ ನಿಲುವು ನಿಶ್ಚಯವಾಗಿಯೂ ಸರಿಯಾಗಿಯೇ ಇತ್ತು. ಆದರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಸಂಬಂಧಿಸಿದಂತೆ ಸಾಂಸ್ಥಿಕ ನೆಲೆಯಲ್ಲಿ ಯೋಚಿಸುವಾಗ ಸರಿ ಎನಿಸುವ ಒಂದು ನಿಲುವು ವ್ಯಕ್ತಿಗತ ನೆಲೆಯಲ್ಲಿ ಅಸಹ್ಯಕರ ಎನಿಸುವುದು ಕೂಡ ಸರಿಯಾಗಿಯೇ ಇದೆ. 

ನಾವು ಸಾಹಿತಿಯ ಜಾತಿ-ಪಂಗಡ ನೋಡಿ ಪುಸ್ತಕ ಓದುವುದು ಸಾಧ್ಯವಿಲ್ಲ. ಯಾವುದೇ ವಿಮರ್ಶಕ ಸಾಹಿತಿಯ ಜಾತಿ-ಪಂಗಡ ನೋಡಿ ಬಳಿಕ ವಿಮರ್ಶೆ ಬರೆಯಬೇಕೇ ಬೇಡವೆ ಎಂದು ನಿರ್ಧರಿಸಲಾರ. ಆದರೆ ಹಾಗೆಂದು ಒಬ್ಬ ತನ್ನ ವ್ಯಕ್ತಿಗತ ನೆಲೆಯಲ್ಲಿ ಹೇಳಬಹುದೇ ಹೊರತು ಸಾರ್ವತ್ರಿಕ ನೆಲೆಯಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುವುದು ಕೂಡ ಅಷ್ಟೇ ನಿಜ. ಭ್ರಷ್ಟತೆ, ನಿರ್ಲಜ್ಜತನ, ಇನ್ನೊಬ್ಬರಿಗೆ ಸಲ್ಲಬೇಕಾದುದನ್ನು ದೋಚಿಕೊಳ್ಳಬಲ್ಲ ಬಲಾಢ್ಯತೆ ಸಾಂಸ್ಕೃತಿಕ ವಲಯದ ಸಹಜ ವಿದ್ಯಮಾನವಾಗುತ್ತಿರುವಾಗ ಆದರ್ಶ ಮತ್ತು ವಾಸ್ತವದ ನಡುವಿನ ಕಂದಕಕ್ಕೆ ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ.

ಇಂಥ ಸಂದರ್ಭದಲ್ಲಿ, ಸಮನ್ವಯ ಮತ್ತು ಸೌಹಾರ್ದ ಕಷ್ಟ. 

ಇಲ್ಲಿ ಬೆನ್ ಲಾರ್ನರ್ ಜೂಲೈ 2013ರ ಹಾರ್ಪರ್ ಮ್ಯಾಗಝೀನ್‌ನಲ್ಲಿ ಪ್ರಕಟವಾದ ಮಾರ್ಕ್ ಎಡ್ಮಂಡ್ ಬರೆದ ಲೇಖನದತ್ತ ನಮ್ಮ ಗಮನ ಸೆಳೆಯುತ್ತಾನೆ. ಸಮಕಾಲೀನ ಕವಿಗಳಲ್ಲಿ ಪ್ರತಿಭೆ ಇದ್ದರೂ ಅವರ ಕವಿತೆಗಳಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯ ಕೊರತೆಯಿದೆ ಎನ್ನುವ ಎಡ್ಮಂಡ್, ಹೆಚ್ಚಿನವರ ಕವಿತೆಗಳು ಅವುಗಳಷ್ಟಕ್ಕೇ ಚೆನ್ನಾಗಿದ್ದೂ, ಒಟ್ಟಾರೆಯಾಗಿ ಇರಬೇಕಾದಷ್ಟು ಚೆನ್ನಾಗಿಲ್ಲ ಎನ್ನುತ್ತಾನೆ. ಮಾತ್ರವಲ್ಲ, ಅದಕ್ಕೆ ವಿವರಣೆಯನ್ನೂ ನೀಡುತ್ತಾನೆ. "ಅವು ಕವಿಯ ವೈಯಕ್ತಿಕ ಅನುಭವದಾಚೆ ಚಾಚಿಕೊಂಡು ವಿಸ್ತರಿಸಬಲ್ಲ ಮತ್ತು ಸಾಮಾನ್ಯರ ದೈನಂದಿನದ ಜಗತ್ತನ್ನು ಬೆಳಗಿ ಅನುಭವದ ಅರ್ಥಕ್ಕಾಗಿ ತಹತಹಿಸುವ ಓದುಗನ ಹಸಿವನ್ನು ಹಿಂಗಿಸುವ ಸಾಮರ್ಥ್ಯ ಹೊಂದಿಲ್ಲ."

ಆದರೆ, ಸಿಲ್ವಿಯಾ ಪಾತ್ ಬರವಣಿಗೆಯನ್ನು ಹೊಗಳುವ ಎಡ್ಮಂಡ್, ಆಕೆ ಸ್ತ್ರೀವಾದಿಯಾಗಿ ಮಹಿಳೆಯರನ್ನಷ್ಟೇ ಪ್ರತಿನಿಧಿಸುತ್ತಿರುವುದನ್ನು ಕಾಣುವುದಿಲ್ಲ. ತಂದೆ-ಮಗಳ ಸಂಬಂಧವನ್ನು ಪರಾಮರ್ಶೆಗೊಳಪಡಿಸಬೇಕೆಂಬ ಅವಳ ಕರೆಯನ್ನು ಮೆಚ್ಚಿಯೂ ಮಗಳ ಕವಿತೆಯನ್ನು ಓದಿ ತಂದೆ ಬೆಚ್ಚಿ ಬೀಳಬಹುದಾದ ಸಾಧ್ಯತೆಯನ್ನು ಕಾಣುವುದಿಲ್ಲ ಎನ್ನುತ್ತಾನೆ ಲಾರ್ನರ್.  ಮುಂದುವರಿದು ಅಮೀರಿ ಬರಾಕಾನ ಕವಿತೆಯ ಸಂದರ್ಭವನ್ನು ಚರ್ಚೆಯ ವಸ್ತುವನ್ನಾಗಿಸುತ್ತಾನೆ.

ನ್ಯೂಜೆರ್ಸಿಯ ಪೋಯೆಟ್ ಲಾರೆಟ್ ಆಗಿದ್ದ ಅಮೀರಿ ಬರಾಕಾ ತನ್ನ "ಯಾರೋ ಕೆಲವರು ಅಮೆರಿಕದ ಧೂಳೆಬ್ಬಿಸಿದರು" ಕವಿತೆಯಲ್ಲಿ ನೀಗ್ರೋಗಳ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯವನ್ನು ಎತ್ತಿ ಆಡುತ್ತಲೇ ಅಂಥವರೆಲ್ಲ ಇರುವ ಅಮೆರಿಕವನ್ನು, ಅಂಥವರಲ್ಲ - ಇನ್ಯಾರೋ ಉಡಾಯಿಸಿದರಂತೆ ಎಂದು ಹಾಡುತ್ತಾನೆ. ಅದೇ ಕಾಲಕ್ಕೆ ‘ಯಾರು ಆವತ್ತು ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಗೊಳಗಾಗುತ್ತೆ ಎಂದು ತಿಳಿದಿದ್ದರು, ಯಾರು ಆವತ್ತು 4,000 ಇಸ್ರೇಲಿಗಳಿಗೆ ಅವಳಿ ಕಟ್ಟಡದ ನೌಕರಿಗೆ ಹೋಗದೆ ಮನೆಯಲ್ಲೇ ಇರಿ ಎಂದಿದ್ದರು ’ ಎಂಬ ಸಾಲುಗಳನ್ನೂ ಹಾಡುತ್ತಾನೆ. ಪರಿಣಾಮವಾಗಿ ನ್ಯೂಜೆರ್ಸಿಯ ಪೋಯೆಟ್ ಲಾರೆಟ್ ಸ್ಥಾನದಿಂದ ಕೆಳಗಿಳಿಯುವಂತೆ ಬರಾಕಾಗೆ ಹೇಳಲಾಗುತ್ತದೆ. ಅಮೀರಿ ಬರಾಕಾ ರಾಜೀನಾಮೆ ನೀಡಲು ನಿರಾಕರಿಸುತ್ತಾನೆ ಮತ್ತು ಸಾಂವಿಧಾನಿಕವಾಗಿ ಆತನನ್ನು ಆ ಗೌರವದಿಂದ ಚ್ಯುತಿಗೊಳಿಸಲು ಅವಕಾಶ ಇರುವುದಿಲ್ಲ. 

ಬರಾಕಾನ ಕವಿತೆಯನ್ನು ಸಮಷ್ಟಿಯ ಅಭಿವ್ಯಕ್ತಿಯ ಉತ್ತಮ ಪ್ರಯತ್ನ ಎಂದು ಹೇಳುವ ಎಡ್ಮಂಡ್ ಮಾತನ್ನು ಲಾರ್ನರ್ ಪ್ರಶ್ನಿಸುತ್ತಾನೆ. ಸ್ಪಷ್ಟವಾಗಿಯೇ ಬರಾಕಾ ತನ್ನ ಮಾತುಗಳಲ್ಲಿ ತನ್ನ ಕವಿತೆ ಅಮೆರಿಕನ್ ಬಿಳಿಯರು ಅಮೆರಿಕನ್ ಕರಿಯರ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಎತ್ತಿದ ಧ್ವನಿ ಎಂದು ಹೇಳಿರುವಾಗ ಅದು ಹೇಗೆ ಸಮಷ್ಟಿಯ ಅಭಿವ್ಯಕ್ತಿಯಾಗುತ್ತದೆ ಎನ್ನುವುದು ಆ ಪ್ರಶ್ನೆ.

ಆದರೆ ವೈಯಕ್ತಿಕ ಮತ್ತು ಸಾಮುದಾಯಿಕ ಎಂದು ಗೆರೆ ಎಳೆಯುವಲ್ಲಿ ಸಮುದಾಯದ ವಿಭಿನ್ನ ಪಂಗಡಗಳೆಲ್ಲವುಗಳ ಅಭಿವ್ಯಕ್ತಿಯಾಗುವ ಅಗತ್ಯವೇನಿಲ್ಲ, ಕೇವಲ ಒಂದು ನಿರ್ದಿಷ್ಟ ಸಮುದಾಯದ ಅಭಿವ್ಯಕ್ತಿಯಾದಾಗಲೂ ಅದು ವ್ಯಕ್ತಿಗತ ನೆಲೆಯ ಕಳಂಕ ತೊಡೆದುಕೊಳ್ಳಲು ಸಾಧ್ಯ ಎಂಬ ಸರಳ ಸಂಗತಿಯನ್ನು ಲಾರ್ನರ್ ಅರಿಯದವನಂತೆ ತನ್ನ ವಾದ ಮುಂದುವರಿಸುತ್ತಾನೆ.

ಹಾಗೆಯೇ ಸಾರ್ವತ್ರಿಕ ಸತ್ಯಗಳ ಅಭಿವ್ಯಕ್ತಿ ಭರದಲ್ಲಿ ಬಹುತ್ವದ ಅಭಿವ್ಯಕ್ತಿಯ ಅಗತ್ಯ ಮತ್ತು ಮಹತ್ವವನ್ನು ಕಡೆಗಾಣಿಸುವುದು ಸಾಂಸ್ಕೃತಿಕವಾಗಿ ದೊಡ್ಡ ತಪ್ಪಾಗುತ್ತದೆ ಎನ್ನುವುದನ್ನೂ ಆತ ನಿರ್ಲಕ್ಷಿಸಿದ್ದಾನೆ ಅನಿಸುತ್ತದೆ.

****


ಕ್ಲಾಡಿಯಾ ರಾನ್ಕಿನೇಯ ಕಾವ್ಯಾತ್ಮಕವಾದ ಗದ್ಯದ ಒಂದು ತುಣುಕನ್ನು ಇಲ್ಲಿ ಲಾರ್ನರ್ ಕೊಟ್ಟಿದ್ದು ಅದು ಬಹು ಸುಂದರವಾಗಿದೆ. ಕವಿತೆ ಎನ್ನುವುದು ಕೇವಲ ಕವನದ ಅಲೈನ್ ಆಗದ ಸಾಲುಗಳಲ್ಲೇ ಇರಬೇಕಾದ್ದಿಲ್ಲ, ಅದು ಗದ್ಯದಲ್ಲೂ ಇರುವುದು ಸಾಧ್ಯ ಎನ್ನುವ ಲಾರ್ನರ್ ಕ್ಲಾಡಿಯಾಳ ಬರಹವನ್ನು ಕವಿತೆಯಾಗಿ ಪರಿಗಣಿಸಿದ್ದನ್ನೂ ಉಲ್ಲೇಖಿಸಿ ಅದನ್ನು ಮೆಚ್ಚಿಕೊಳ್ಳುತ್ತಾನೆ. 

ಹಾಗೆಯೇ ಈ ಕೃತಿಯ ಕೊನೆಯ ಹತ್ತು ಪುಟಗಳಿಗೂ ಅದೇ ಮಾತು ಅನ್ವಯಿಸುತ್ತದೆ. ಈ ಹತ್ತು ಪುಟಗಳು ಇಡೀ ಕೃತಿಯ ನೆಲೆಗಟ್ಟನ್ನು ವಿಸ್ತರಿಸಿ ವಿವರಿಸುತ್ತವೆ. ಭಾಷೆ, ಅನುಭವ, ನೆನಪುಗಳು ಮತ್ತು ಸಂವೇದನೆಯ ಸಂಬಂಧವನ್ನು ವಿವರಿಸುತ್ತ ಲಾರ್ನರ್ ಬರೆದಿರುವುದನ್ನು ಗದ್ಯ ಎನ್ನುವುದಕ್ಕಿಂತ ಕಾವ್ಯ ಎನ್ನುವುದೇ ಹೆಚ್ಚು ಸೂಕ್ತ.

ತನ್ನದಾದ ಒಂದು ಭಾಷೆ ರೂಪುಗೊಳ್ಳುವುದಕ್ಕೂ ಮುನ್ನ ಮಗುವೊಂದು ರೂಪಿಸಿಕೊಳ್ಳುವ ಅಭಿವ್ಯಕ್ತಿ ಕ್ರಮ ಮತ್ತು ಸ್ಮೃತಿಯ (ಅದರ ಭಾಷೆಯ)  ಕ್ರಮದ ಕುರಿತು ಹೇಳುತ್ತ ಅದು ಕವಿತೆಯ ಭಾಷೆಗೆ ಅತಿ ಹತ್ತಿರದ್ದು ಎನ್ನುತ್ತಾನೆ. Actual poetry ಮತ್ತು virtual poetry ಎಂದು ಒಂದು ಕವಿತೆ ಭಾಷೆಯಲ್ಲಿ ಸಂಭವಿಸುವ ಮುನ್ನ ಹೊಳಹುಗಳಲ್ಲಿ ನೀಡುವ ದರ್ಶನದ, ಅದರ ಸಂಭಾವ್ಯ ಅಭಿವ್ಯಕ್ತಿಯ ಮತ್ತು ಅಂತಿಮವಾಗಿ ಭಾಷೆಯಲ್ಲಿ ಅದು ಸಂಭವಿಸುವ ಏಕೈಕ ರೂಪ - ಎರಡನ್ನು ಆತ ಕರೆಯುವುದು (ಗುರುತಿಸುವುದು) ಹೀಗೆ. ಒಂದು ಅನುಭವ, ಒಂದು ಸಂವೇದನೆ, ಒಂದು ನಿರ್ದಿಷ್ಟ ಕ್ಷಣ ಮನುಷ್ಯನ ಮನಸ್ಸಿನಲ್ಲಿ ಹೆಪ್ಪುಗಟ್ಟಿ ನಿಲ್ಲುವ ಮುಹೂರ್ತ ಮಾತಾಗಿ, ನುಡಿಯಾಗಿ, ಭಾಷೆಯಾಗಿ, ಅಕ್ಷರವಾಗಿ ಸ್ಥಿರವಾಗುವ ಹಂತದಲ್ಲಿ ಕವಿತೆ ಹುಟ್ಟುತ್ತದೆ ಅಥವಾ ಸಾಯುತ್ತದೆ ಎನ್ನುವ ಸೂಕ್ಷ್ಮದ ಅರಿವನ್ನು ಇಟ್ಟುಕೊಂಡರೆ, ಕವಿತೆಯನ್ನು ದ್ವೇಷಿಸುತ್ತಲೇ ಶುದ್ಧ ಸಹಜ ಕವಿತೆಗೆ ಒಂದು ಸ್ಥಾನವನ್ನು ಪರಿಕಲ್ಪಿಸುವುದಕ್ಕೆ ಸಾಧ್ಯ ಎನ್ನುವ ಮಾತಿನೊಂದಿಗೆ ಈ ಪುಸ್ತಕ ಮುಗಿಯುತ್ತದೆ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, October 3, 2021

ಸಣ್ಣ ಸಂಗತಿ

ಕೆಲವೊಮ್ಮೆ ಒಂದು ಪುಸ್ತಕ ಏಕೆ ಇಷ್ಟವಾಯಿತು ಎಂದು ಹೇಳುವುದು ಸುಲಭ. ಕೆಲವೊಮ್ಮೆ ಅದು ಬಲುಕಷ್ಟ. 

ಕೆಲವೊಂದು ಪುಸ್ತಕಗಳು ಸುಮ್ಮನೇ ಇಷ್ಟವಾಗಿ ಬಿಡುತ್ತವೆ, ತೇಜಸ್ವಿಯವರ ಕರ್ವಾಲೊ ತರ. ಲಾರಾ ಇಂಗಲ್ಸ್ ವೈಲ್ಡರ್ ಸರಣಿಯ ತರ. ಅದನ್ನು ಸೌಖ್ಯವಿಲ್ಲದೆ, ಬದುಕಿನ ರುಚಿಯಿಲ್ಲದೆ ಮಲಗಿರುವಾಗಲೂ ಓದಿ ಉತ್ಸಾಹ ತುಂಬಿಕೊಳ್ಳಬಹುದು. ಆದರೆ ಅದರ ಬಗ್ಗೆ ಬರೆಯುವುದು ಕಷ್ಟ. 

ಇನ್ನು ಕೆಲವೊಮ್ಮೆ ಒಂದು ಪುಸ್ತಕ ಎಷ್ಟು ಇಷ್ಟವಾಗುತ್ತದೆ ಎಂದರೆ ಆ ಲೇಖಕನ ಇತರ ಲಭ್ಯ ಪುಸ್ತಕಗಳನ್ನೆಲ್ಲ ಹುಡುಕಿ ಓದಬೇಕೆಂಬಷ್ಟು. ಪ್ಯಾಲಸ್ತೇನಿ ಬರಹಗಾರ್ತಿ ಅದಾನಿಯಾ ಶಿಬಿಲಿಯ "ಮೈನರ್ ಡೀಟೇಲ್ಸ್" ಅಂಥ ಒಂದು ಪುಸ್ತಕ. ಮೊದಲನೆಯ ಭಾಗದಲ್ಲಿ ಇದು ಇಸ್ರೇಲಿ ಮಿಲಿಟರಿ ಪಡೆಯೊಂದರ ಒಂದು ಅನಾಗರಿಕ ಕ್ರೌರ್ಯದ ಅನಾವರಣ ಮಾಡಿದರೆ ಎರಡನೆಯ ಭಾಗ, ಅದರ ನಿರೂಪಣೆಯ ಜಾಣ್ಮೆಯಿಂದಲೂ, ಏನನ್ನೂ ಹೇಳದೆ ಹೊಳಹುಗಳಲ್ಲಿ ಓದುಗನನ್ನು ಮುಳುಗಿಸಿ ತೇಲಿಸುತ್ತ ಸಾಗುವ ಬಗೆಯಿಂದಲೂ ಅಚ್ಚರಿಯ ಮೇಲೆ ಅಚ್ಚರಿ ಹುಟ್ಟಿಸುತ್ತದೆ.  


ನೈತಿಕ ವಿಚಕ್ಷಣಮತಿ, ರಾಜಕೀಯ ಪ್ರಜ್ಞೆ ಮತ್ತು ಒಬ್ಬ ಕಲಾವಿದನ ನೈಪುಣ್ಯ ಮೂರೂ ಸಂತುಲಿತ ಪ್ರಮಾಣದಲ್ಲಿ ಬೆರೆತ  ಅಪರೂಪದ ಕೃತಿ ಎಂದು ಪಂಕಜ್ ಮಿಶ್ರಾ ಆಡಿರುವ ಮಾತು ಈ ಕೃತಿಗೆ ಬಂದಿರುವ ವ್ಯಾಪಕ ಹೊಗಳಿಕೆಗಳಲ್ಲಿ ಸತ್ಯಕ್ಕೆ ಹತ್ತಿರವಾಗಿರುವ ಮಾತು. 1948ರಲ್ಲಿ ಇಸ್ರೇಲ್ ನಡೆಸಿದ ಆಕ್ರಮಣ ಮತ್ತು ದೌರ್ಜನ್ಯದಿಂದಾಗಿ ಸುಮಾರು ಏಳು ಲಕ್ಷ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾದರು ಎನ್ನುವುದು ಒಂದು ಅಂದಾಜು. ಇದನ್ನು ಇಂದಿಗೂ ಪ್ಯಾಲಸ್ತೀನ್ ಮೌನವಾಗಿ ರೋದಿಸುತ್ತ ಜೀರ್ಣಿಸಿಕೊಳ್ಳುತ್ತಿದ್ದರೆ ಇಸ್ರೇಲ್ ಇದನ್ನು ತನ್ನ ಸ್ವಾತಂತ್ರ್ಯದ ಸಮರ ಎಂದು ಸಂಭ್ರಮಿಸಿತ್ತು. ಆ ಹಿಂಸೆ, ಅದರ ನೈತಿಕ ನೆಲೆಯನ್ನು ಯುದ್ಧದ ಹಿನ್ನೆಲೆಯಲ್ಲಿ ಚಿತ್ರಿಸುತ್ತ ಸಾಗುವ ಈ ಕಾದಂಬರಿ ತನ್ನ ವಿಲಕ್ಷಣ ನಿರೂಪಣೆಯಿಂದಲೇ ವರ್ತಮಾನದ ಹಿಂಸೆಯನ್ನಾಗಿಸಿ, ಅದು ಎಂದೋ ನಡೆದು ಹೋದ ಕತೆಯಲ್ಲ, ನಿತ್ಯದ ಕತೆ ಎನ್ನುವಂತೆ ಮಾಡುವುದು ಈ ಕಾದಂಬರಿಯ ವಿಶೇಷ.

ಗಡಿಗಳನ್ನು ಪ್ರಶ್ನಿಸುವ ಈ ಕಾದಂಬರಿಯ ಎರಡನೆಯ ಭಾಗದ ನಿರೂಪಕಿ ಒಂದು ತರದ ಸಂಶೋಧಕ ಪತ್ರಕರ್ತೆ. ಆದರೆ ಹತ್ತಾರು ಗಡಿಗಳನ್ನು, ಗೋಡೆಗಳನ್ನು, ಬೇಲಿಗಳನ್ನು ದಾಟಿ ಸಾಗುವ ಈಕೆಗೆ ಕೂಡ ಕಂಡಿದ್ದು ಕಾಣಿಸುವುದಿಲ್ಲ. ಬೋರಲು ಬಿದ್ದ ಹುಡುಗಿಯ ಮೃತದೇಹದ ಫೋಟೋ ಕಂಡರೂ ಅದು ಅವಳದೇ ಎನ್ನುವುದು ಗೊತ್ತಾಗುವುದಿಲ್ಲ. ಹುಡುಗಿ ಸತ್ತು ಬಿದ್ದ, ಅವಳನ್ನು ಹೂಳಿದ ನೆಲವನ್ನು ತುಳಿದು ನಡೆದಾಡಿದರೂ ಹಿಂಸೆ, ಸಾವು ಕಾಣಿಸುವುದಿಲ್ಲ. ನಾಯಿಯ ಬೊಗಳುವಿಕೆ ಏನನ್ನೂ ಕಾಣಿಸುವುದಿಲ್ಲ. ಹಾಗೆ ಕೊನೆಗೂ ಬದುಕಿನ ಗಡಿಯನ್ನು ದಾಟುವ ಹೆಜ್ಜೆ ಎತ್ತಿಡುತ್ತಿದ್ದೇನೆಂಬ ಅರಿವಿದ್ದೂ ಅರಿವಾಗುವುದಿಲ್ಲ. ಆದರೆ ಇದನ್ನೆಲ್ಲ ಹೇಗೋ ತಿಳಿದುಬಿಡುವ ಓದುಗ ತಲ್ಲಣಿಸುತ್ತ ಉಳಿಯುತ್ತಾನೆ. ಅದಕ್ಕಾಗಿ ಮೊದಲ ಭಾಗವನ್ನು ತುಂಬ ಎಚ್ಚರಿಕೆಯಿಂದ ಹೆಣೆದಿರುವಂತೆ ಕಾಣುತ್ತದೆ. ಈ ಕೃತಿಯ ಕಥಾನಕದ ಮಂದಗತಿಯ ನಡೆ, ಅದರ ಭಾಷೆಯ ತೀವ್ರತೆ, ವಿವರಗಳ ಗಾಢ ವಿಷಣ್ಣತೆ ಓದುಗನನ್ನು ಆವರಿಸುತ್ತದೆಯೇ ಹೊರತು ಅದರ ನಿರೂಪಕ/ಕಿಯನ್ನಲ್ಲ ಎನ್ನುವುದನ್ನು ಗಮನಿಸಬೇಕು, ರಾಚನಿಕ ಮತ್ತು ಸಾಹಿತ್ಯಿಕ ನಿಟ್ಟಿನಿಂದ. ಕೃತಿಯ ತಾತ್ವಿಕ, ಸೈದ್ಧಾಂತಿಕ ನೆಲೆಗಳು ಬೇರೆಯೇ ಇವೆ.

ಈ ಗಡಿಗಳು ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳಲ್ಲಿ ಇವೆ. ಕಾಂಪೌಂಡ್ ವಾಲ್ ಒಳಗೆ ಭವ್ಯವಾಗಿ ನಿಂತ ಪ್ರತಿ ಮನೆ,ಅಪಾರ್ಟ್‌ಮೆಂಟುಗಳ ನಡುವೆ ಇವೆ. ದಾಟಬಹುದಾದ, ದಾಟಬಾರದ ರಸ್ತೆ, ಹಾದಿ ಬೀದಿಗಳಲ್ಲಿವೆ. ಮಾಡಬಹುದಾದ್ದು ಮತ್ತು ಮಾಡಬಾರದ ನಡೆನುಡಿಗಳಲ್ಲಿ ಇವೆ. ನಾವು ತಿಳಿದೋ ತಿಳಿಯದೆಯೊ ಗಡಿಗಳನ್ನು ದಾಟುತ್ತಲೇ ಇರುತ್ತೇವೆ, ಅತಿಕ್ರಮಣ ನಡೆಯುತ್ತದೆ, ಪೆಟ್ಟು ಬೀಳುತ್ತದೆ, ನಾವೂ ಬೀಳುತ್ತೇವೆ, ಏಳುತ್ತೇವೆ, ಮತ್ತೆ ನಡೆಯತೊಡಗುತ್ತೇವೆ; ಇನ್ನೊಬ್ಬರ ಬದುಕಿನೊಳಕ್ಕೆ, ಇನ್ನೊಬ್ಬರ ಜಾಗದೊಳಕ್ಕೆ ಮತ್ತು ಇನ್ನೊಬ್ಬರ ಭಾವದೊಳಕ್ಕೆ. ನಾವು ನಿರಂತರ ಟ್ರೆಸ್‌ಪಾಸರ್ಸ್.

ದೇಶ ದೇಶಗಳ ನಡುವಣ ಗಡಿಗೆ ಬೇಲಿಗಳಿವೆ, ಗೋಡೆಗಳಿವೆ, ಬಂದೂಕು, ಗುಂಡು, ಬಾಂಬುಗಳ ರಕ್ಷಣೆಯಿದೆ. ನೀವೇಕೆ ಇಲ್ಲಿ ಕಾಲಿಟ್ಟಿರಿ ಎಂದು ಕೇಳಲಾಗುವುದಿಲ್ಲ, ನಿಮ್ಮ ಎದೆಯೊಳಗೆ ಬೆಂಕಿ ಹೊಕ್ಕು ನೀವು ಸಾಯುವ ಮುನ್ನ ಗುಂಡಿನ ಸದ್ದು ಮಾತ್ರ ನಿಮಗೆ ಕೇಳಲು ಸಿಗುತ್ತದೆ. 

ಇಡೀ ಕಾದಂಬರಿಯ ಕೇಂದ್ರ ಒಂದು ಪುಟ್ಟ ಹುಡುಗಿಯ ಸಾಮೂಹಿಕ ಅತ್ಯಾಚಾರ ಮತ್ತು ತದನಂತರದ ಕೊಲೆ. ಅದಕ್ಕೂ ಮುನ್ನ ನಡೆಯುವ ದೌರ್ಜನ್ಯ. ಚರಿತ್ರೆಯಲ್ಲಿ ಇದು ತೀರ ನಗಣ್ಯ ವಿದ್ಯಮಾನ. ಆ ಹೆಣ್ಣಿನ ಬಗ್ಗೆ ಯೋಚಿಸುವವರು, ಅದೂ ಆ ಘಟನೆ ನಡೆದ ಐದಾರು ದಶಕಗಳ ಬಳಿಕ ಇದ್ದಾರಾದರು ಯಾರು? ನಿರೂಪಕಿಯ ಹುಟ್ಟಿದ ದಿನಕ್ಕೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಕ್ರೌರ್ಯ ಅದು. ಬದುಕಿದ್ದರೆ ಆ ಪುಟ್ಟ ಹುಡುಗಿಗೆ ಇವತ್ತು ಎಪ್ಪತ್ತರ ಆಸುಪಾಸಿನ ವಯಸ್ಸು. ಹಾಗಿದ್ದೂ ಇವತ್ತು ನಾವು ಅವಳ ಮೇಲೆ ಎಂದೋ ಇತಿಹಾಸದಲ್ಲಿ ನಡೆದ ದೌರ್ಜನ್ಯದ ಇಂಚಿಂಚು ಅನುಭವವನ್ನು ನಮ್ಮ ಭಾವಕೋಶದೊಳಕ್ಕೆ ಬಿಟ್ಟುಕೊಳ್ಳಬೇಕು ಏಕೆ? 

ಇವತ್ತೂ ಗಡಿಗಳ ನಡುವೆ ಬಾಂಬುಗಳು, ಗುಂಡುಗಳು ಸಿಡಿಯುತ್ತಿವೆ. ಯಾರದೋ ರಾಜಕೀಯ ಲಾಭಕ್ಕೆ ಯಾವುದೋ ದೇಶ ವೈರಿ ದೇಶ ಎಂದು ಬಿಂಬಿಸಲಾಗುತ್ತದೆ. ಒಳಗಿನಿಂದಲೇ, ಒಳಗಿನವರೇ ನಡೆಸುವ ಹಿಂಸೆಯನ್ನು ಇನ್ಯಾವುದೋ ದೇಶದ ತಲೆಗೆ ಕಟ್ಟಿ ದೇಶಪ್ರೇಮದ ಪಾಠವನ್ನೂ ಮಾಡಲಾಗುತ್ತದೆ. ಒಟ್ಟಿನಲ್ಲಿ ಮನುಷ್ಯನಿಗೆ ದ್ವೇಷಿಸುವುದಕ್ಕೆ ಏನಾದರೂ ಬೇಕು. ಪರದೇಶ, ಪರಭಾಷೆ, ಪರಧರ್ಮ, ಪರರಾಜ್ಯ, ಲಿಂಗ, ಜಾತಿ ಏನಾದರೂ ಒಂದು ಆಧಾರ ಇದ್ದರೆ ದ್ವೇಷಿಸಲು ಸಾಧ್ಯ. ದ್ವೇಷ ಚಿರಾಯು.

ಇವತ್ತೂ ಪ್ರತಿ ದಿನ ಎಂಬಂತೆ ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಸಾಮೂಹಿಕ ಅತ್ಯಾಚಾರ, ಕಿರುಕುಳ, ಹಿಂಸೆ ವರದಿಯಾಗುತ್ತಲೇ ಇದೆ. ಆದರೆ ವರದಿಯಾಗದ, ಅರಣ್ಯರೋದನದ ವಿವರ ಸಿಗುವುದಿಲ್ಲ. ಚರಿತ್ರೆಯಲ್ಲಿ ಅದು ನಗಣ್ಯ ವಿವರ. 


ಒಂದು ಕಲಾಕೃತಿಯ ಮೇಲೆ ಅಂಟಿಕೊಂಡಿದ್ದ ನೊಣವೊಂದರ ಮಲದ ಕಲೆ, ಚಿತ್ರದ ಒಂದು ಕಿರುಬೆರಳು ಅದು ಮೂಲಚಿತ್ರವೇ ಅಥವಾ ಅದರ ನಕಲಿ ಸೃಷ್ಟಿಯೇ ಎಂದು ಕಂಡುಹಿಡಿಯುವುದರಲ್ಲಿ ಉಪಯೋಗಕ್ಕೆ ಬರುತ್ತದೆಯೇ ಹೊರತು ಚಿತ್ರದ ಎದ್ದು ಕಾಣುವ ವಿವರಗಳಲ್ಲ ಎನ್ನುವುದು ಒಂದು ಲಾಜಿಕ್. ಅಂದರೆ, ಸಿಗ್ನಿಫಿಕೆಂಟ್ ಡೀಟೇಲ್ಸ್ ಎಂದು ಏನನ್ನು ಕರೆಯುತ್ತೇವೆಯೋ ಅದಕ್ಕಿಂತ ಮೈನರ್ ಡೀಟೇಲ್ಸ್ ಕೆಲವೊಮ್ಮೆ ಚರಿತ್ರೆಯನ್ನು ಮರಳಿ ಕಟ್ಟಿಕೊಳ್ಳುವುದರಲ್ಲಿ, ಅದರಲ್ಲೂ ವರ್ತಮಾನದ ದಾರುಣತೆ ಚರಿತ್ರೆಯದ್ದಕ್ಕಿಂತ ಕಡಿಮೆಯೇನೂ ಅಲ್ಲ ಅನಿಸುವಂಥ ದುರ್ಭರ ಸನ್ನಿವೇಶದಲ್ಲಿ ಬದುಕುತ್ತಿರುವಾಗ, ಹೆಚ್ಚು ಮುಖ್ಯವಾಗುತ್ತದೆ. ಹನ್ನೆರಡು ವರ್ಷಗಳಷ್ಟು ದೀರ್ಘ ಕಾಲ ತೆಗೆದುಕೊಂಡ, ಸರಿಯಾಗಿ ನೂರು ಪುಟಗಳಷ್ಟೂ ಇಲ್ಲದ, ಕಾದಂಬರಿಗಾಗಿ ಓಡಾಡುತ್ತಿದ್ದಾಗ ಇಸ್ರೇಲಿ ಪೋಲೀಸರಿಂದ ಬಂಧನಕ್ಕೂ ಒಳಗಾದ, ಮ್ಯೂಸಿಯಂ ಒಂದು ಮುಚ್ಚಲು ಕಾರಣವಾದ ಈ ಪುಟ್ಟ ಕಾದಂಬರಿಯ ರಿಲವನ್ಸ್ ಕೂಡ ಅದೇ.

ನಾವು ಹಿಂಸೆಯನ್ನು, ಯುದ್ಧವನ್ನು, ದೌರ್ಜನ್ಯವನ್ನು ಮತ್ತು ಗಡಿಗಳನ್ನು ನೋಡುವ ದೃಷ್ಟಿ ಬದಲಾಗದಿದ್ದರೆ ನಮಗೆ ಅವುಗಳ ಹಿಂದಿನ ರಾಜಕಾರಣ, ನೈತಿಕ ನೆಲೆ ಕಾಣುವುದಿಲ್ಲ. ಸೈನಿಕ ಗುಂಡಿಕ್ಕಿದರೆ ದೇಶಪ್ರೇಮ, ನಾಗರಿಕ ಮಾಡುವುದು ಕೊಲೆ. ಯಾವುದೋ ಧರ್ಮದ ಹುಡುಗಿಯ ಮೇಲೆ ನಡೆಯುವ ರೇಪ್ ಸಹ್ಯ, ನಮ್ಮ ಧರ್ಮದ ಹುಡುಗಿಯ ಮೇಲೆ ನಡೆದರೆ ದೌರ್ಜನ್ಯ - ಅಲ್ಲ ಎನ್ನುವುದು ಕಾಣಿಸುವುದಿಲ್ಲ. ಮನುಷ್ಯ ತನ್ನ ಅನಾಗರಿಕ ಗಡಿಗಳಿಂದ ಮುಕ್ತನಾಗದೇ ಇದ್ದರೆ ಅವನು ಮನುಷ್ಯ ಎಂದು ಕರೆಸಿಕೊಳ್ಳುವುದಕ್ಕೂ ಯೋಗ್ಯನಾಗಿ ಉಳಿಯುವುದಿಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ