Thursday, November 4, 2021

ನಾದಿರ್ ಶಾ ನಾಡಿನಲ್ಲಿ...


ಲಂಕೇಶರ ಬರವಣಿಗೆಗೆ ಒಂದು ವಿಶಿಷ್ಟ ಶಕ್ತಿಯಿತ್ತು. ಅವರನ್ನು ಓದಿದ ಮೇಲೆ ನಮಗೂ ಬರೆಯಬೇಕು ಅನಿಸುತ್ತಿತ್ತು. ಅಪರೂಪಕ್ಕೆ ಕೆಲವೇ ಕೆಲವು ಬರಹಗಾರರಲ್ಲಿ ಇಂಥ ಒಂದು ಶಕ್ತಿ ಇರುತ್ತದೆ. ಆ ಕಾರಣಕ್ಕಾಗಿಯೇ ಲಂಕೇಶರ ಯಾವುದೇ ಬರಹ, ಪುಸ್ತಕ ಯಾವತ್ತೂ ತನ್ನ ಆಕರ್ಷಣೆ, ಗುರುತ್ವ ಕಳೆದುಕೊಳ್ಳುವುದಿಲ್ಲ ಅನಿಸುತ್ತದೆ. ಅಷ್ಟೇಕೆ, ಲಂಕೇಶರ ಬಗ್ಗೆ ಬಂದ ಪುಸ್ತಕಗಳಿಗೆ ಕೂಡ ಅಂಥದೇ ಒಂದು ಆಕರ್ಷಣೆ ದಕ್ಕಿ ಬಿಡುವುದು ನಿಜಕ್ಕೂ ಕುತೂಹಲಕರ. ಲಂಕೇಶರ ಬಗ್ಗೆ ಬಂದ ಪುಸ್ತಕ ಎನ್ನುವಾಗ ನನ್ನ ಮನಸ್ಸಿನಲ್ಲಿದ್ದಿದ್ದು ನಟರಾಜ್ ಹುಳಿಯಾರರ ‘ಇಂತಿ ನಮಸ್ಕಾರಗಳು’ ಮತ್ತು ಬಿ ಚಂದ್ರೇಗೌಡರ ಪುಸ್ತಕಗಳು ಮಾತ್ರ. ಪಂಡಿತರು ಅವರ ಕೃತಿಗಳ ಬಗೆಗೋ, ತುಂಬ ‘ಸರಿ’ಯಾಗಿರುವವರು ಬರೆದ ಲಂಕೇಶರ ‘ತಪ್ಪು’ಗಳ ಕುರಿತ ಕೃತಿಯ ಕುರಿತೋ ಅಲ್ಲ. 

ಬಿ ಚಂದ್ರೇಗೌಡರು ಲಂಕೇಶ್ ಒಡನಾಟವೇ ಕೇಂದ್ರವಾಗಿರುವ ಎರಡು ಪುಸ್ತಕಗಳನ್ನು ಹೊರತಂದಿದ್ದಾರೆ. ಇವು ವಿಶಿಷ್ಟವಾಗಿವೆ. ಒಂಥರಾ ಆತ್ಮಚರಿತ್ರೆ, ಮೆಮೊಯರ್, ಒಂದು ಕಾಲಘಟ್ಟದ ಚರಿತ್ರೆಯಂತೆಲ್ಲ ಕಾಣಿಸುವ ಈ ಕೃತಿಗಳು ಸತ್ಯ ಹೇಳಬಲ್ಲ, ಸತ್ಯ ತೋರಬಲ್ಲ ತಮ್ಮ ನಿಲುವಿಗಾಗಿಯೇ ಮುಖ್ಯವಾಗಿವೆ. ಯಾವ ಕಾಲದಲ್ಲೂ ಇರದಿದ್ದಷ್ಟು ಕೃತಿ ಮತ್ತು ಕೃತಿಕಾರರ ಸೋಗಲಾಡಿತನ ಹೆಚ್ಚುತ್ತಿರುವ ಈ ದಿನಗಳಲ್ಲಿ ಇಂಥ ಒಂದು ಕೃತಿಯ ಅಗತ್ಯ ಬಹಳವಿದೆ ಅನಿಸುತ್ತದೆ. ಕೊರೊನಾದ ಲಾಕ್‌ಡೌನ್ ಅವಧಿಯನ್ನು ತಾವು ಲಂಕೇಶರ ಜೊತೆಗೆ, ಆ ನೆನಪುಗಳ ಜೊತೆಗೆ ಕಳೆದು ಆರೋಗ್ಯ ಉಳಿಸಿಕೊಂಡೆ ಎನ್ನುವ ಬಿ ಚಂದ್ರೇಗೌಡರ ಮಾತು ಒಂದು ಮೆಟಫರ್ ತರ ಇದೆ. ಲಂಕೇಶ್ ಕೂಡ ತಾವು ಪತ್ರಿಕೆಗೆ ಬರೆಯುತ್ತ ಒಂದು ದಿನ ಕೂಡ ಕಾಯಿಲೆ ಬೀಳಲಿಲ್ಲ, ಜ್ವರ ಎಂದು ಮಲಗಲಿಲ್ಲ ಎಂದು ಬರೆದುಕೊಂಡಿದ್ದರು. ಈ ಪುಸ್ತಕ ಕೂಡ ನಮಗೆಲ್ಲರಿಗೂ ಒಂದು ಅರ್ಥದಲ್ಲಿ ‘ಗುಣಮುಖ’ರಾಗುವ ಹಾದಿಯ ಹಾಗಿದೆ. 

ನಾವೇಕೆ ಪುಸ್ತಕಗಳನ್ನು ಓದುತ್ತೇವೆ ಎಂಬ ಪ್ರಶ್ನೆಗೆ ಸರಳವಾದ ಮತ್ತು ಸಾರ್ವತ್ರಿಕವಾದ ಒಂದೇ ಉತ್ತರ ಕಷ್ಟ. ಹಾಗಿದ್ದೂ ಮನರಂಜನೆ, ಜ್ಞಾನಾರ್ಜನೆ ಎಂದೆಲ್ಲಎಲ್ಲರಿಗೂ ಗೊತ್ತಿರುವ ಸಾಮಾನ್ಯ ಉತ್ತರಗಳನ್ನು ಯಾರೂ ಹೇಳಬಹುದು. ಸ್ವಲ್ಪ ಮುಂದುವರಿಸಿದರೆ, ಹೆಸರಾಂತ ಸಾಹಿತಿಗಳು, ಪ್ರಖ್ಯಾತ ವಿಮರ್ಶಕರು, ಪಂಡಿತರು ಎಲ್ಲ ತುಂಬ ಗಹನವಾದ ಉತ್ತರಗಳನ್ನು ಕೊಡಬಹುದು. ನಾನೇಕೆ ಬರೆಯುತ್ತೇನೆ ಮತ್ತು ನಾನೇಕೆ ಓದುತ್ತೇನೆ ಎಂಬ ಬಗ್ಗೆ ಸಾಕಷ್ಟು ಪುಸ್ತಕಗಳು ಕೂಡಾ ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. 

ನಮಗೆಲ್ಲ ಒಂದೆರಡು ಭಾಷೆಗಳು ಬಂದರೂ ಸಾಕು, ಅಗಾಧವಾದ ಸಾಹಿತ್ಯರಾಶಿ ನಮ್ಮೆದುರು ತೆರೆದುಕೊಳ್ಳುತ್ತದೆ. ಇವತ್ತು ಲಕ್ಷಾಂತರ ಮಂದಿ ಬರೆಯುತ್ತಿದ್ದಾರೆ. ದಿನಂಪ್ರತಿ ಪತ್ರಿಕೆಗಳಲ್ಲಿ ರಾಶಿ ರಾಶಿ ಲೇಖನಗಳು, ಪ್ರಬಂಧಗಳು, ಕತೆ, ಕಾದಂಬರಿಗಳು ಬರುತ್ತವೆ. ವೆಬ್ ಮ್ಯಾಗಝೀನ್‌ಗಳು, ವಾರ್ತಾಪತ್ರಗಳು, ಬ್ಲಾಗುಗಳು, ಈಮೇಲ್, ಫೇಸ್‌ಬುಕ್, ವ್ಯಾಟ್ಸಪ್‌ಗಳ ಮೂಲಕ ಸಿಗುವ ಲಿಂಕು ಮತ್ತು ಬರಹಗಳು ಎಷ್ಟಿರುತ್ತವೆ ಎಂದರೆ, ಅವುಗಳಲ್ಲಿ 5 - 10% ದಷ್ಟನ್ನು ಓದುವುದು ಕೂಡ ಕಷ್ಟ. ಹಾಗಾಗಿ ಇವತ್ತು ನಮ್ಮ ಸಾಹಿತಿಗಳೆಲ್ಲ ದಿನ ಬೆಳಗಾದರೆ ತಾವು ಬರೆದಿದ್ದು, ತಮ್ಮ ಬಗ್ಗೆ ಬರೆದಿದ್ದು, ತಾವು ಭಾಗವಹಿಸಿದ್ದು, ತಾವು ಭಾಗವಹಿಸಲಿರುವುದು, ತಾವು ಬರೆದಿದ್ದರ ಬಗ್ಗೆ ಬರೆದಿದ್ದು, ತಾವು ಆಡಿದ್ದು, ತಾವು ಆಡಿದ್ದರ ಬಗ್ಗೆ ಇರುವುದು ಎಲ್ಲವನ್ನೂ ಮುದ್ದಾಂ "ಇದನ್ನು ಗಮನಿಸಿ" ಎಂದು ಸಂದೇಶ ಕಳಿಸಿ ಕೇಳಿಕೊಳ್ಳುವುದು. ಹಾಗೆ ಕೇಳಿಕೊಂಡರೂ ಓದುವವರು/ಗಮನಿಸುವವರು ಅಷ್ಟಕ್ಕಷ್ಟೆ. ಬಹುಶಃ ಯಾರೂ ಇವತ್ತು ನಾವು ಬರೆದಿದ್ದನ್ನೆಲ್ಲ ಓದುವುದಿಲ್ಲ ಎನ್ನುವ ಸತ್ಯ ನಮಗೂ ಗೊತ್ತಿದೆ.

ಅಷ್ಟಕ್ಕೂ ಕೈಗೆ ಸಿಕ್ಕಿದ್ದನ್ನು ಓದದೆ, ಹುಡುಕಿಕೊಂಡು ಹೋಗಿ ಶ್ರೇಷ್ಠವಾದುದನ್ನು ಮಾತ್ರ ಓದಬೇಕೆಂದು ಎಲ್ಲಿದೆ! ಇತ್ತೀಚೆಗಷ್ಟೇ How to Start Writing (and When to Stop) ಎಂಬ ಕೃತಿ ಹೊರತಂದಿರುವ ನೊಬೆಲ್ ವಿಜೇತೆ Wislawa Szymborska ತುಂಬ ಹಿಂದೆಯೇ Non Required Readings ಎಂಬ ಕುತೂಹಲಕಾರಿಯಾದ,  ಆಯ್ದ ಗದ್ಯ ಬರಹಗಳ ಒಂದು ಕೃತಿಯನ್ನು ಹೊರತಂದಿದ್ದಳು. ಅದಕ್ಕಿದ್ದ ಕಾರಣವೆಂದರೆ, ಆಕೆ ಗಮನಿಸಿದಂತೆ ವಿಮರ್ಶಕರಿಂದ  ಅನನ್ಯ, ಅದ್ಭುತ, ಅನುಪಮ, ಅಸಾಧಾರಣ ಎಂದೆಲ್ಲ ಹೊಗಳಿಸಿಕೊಂಡ ಪುಸ್ತಕಗಳೆಲ್ಲ ಧೂಳು ತಿನ್ನುತ್ತ ರೀಸೈಕಲಿಂಗ್‌ಗೆ ಕಾಯುತ್ತಿರಬೇಕಾದರೆ, ಯಾರೂ ಚಕಾರವೆತ್ತದೇ ಇದ್ದ ಪುಸ್ತಕಗಳೆಲ್ಲ ಬಿಸಿ ದೋಸೆಯಂತೆ ಬಿಕರಿಯಾಗಿ ಮತ್ತೆಮತ್ತೆ ಮುದ್ರಣವಾಗುತ್ತಿದ್ದುದೇ ಹೊರತು ಇನ್ನೇನಲ್ಲ. ಅಂದರೆ ಜನ ಏನನ್ನು ಓದುತ್ತಾರೆ ಎನ್ನುವುದು ಬಹಳ ಮುಖ್ಯ. ನಾವೂ ಅಷ್ಟೇನೂ ಮುಖ್ಯವಲ್ಲದ, ಓದಲೇ ಬೇಕಾದ ಕೃತಿಯೇನೂ ಅಲ್ಲದ ಪುಸ್ತಕವನ್ನು ಓದಬಹುದು ಮಾತ್ರವಲ್ಲ, ಬೇಕಿದ್ದರೆ ಅಂಥವನ್ನೇ ಆಯ್ದು ತಂದು ಓದಬಹುದು. ಎಲ್ಲವೂ, ನಾವೇಕೆ ಓದುತ್ತೇವೆ ಎನ್ನುವುದರ ಮೇಲೆ ನಿಂತಿದೆ.


ಸ್ಪಷ್ಟವಾಗಿ ನಾವೇಕೆ ಓದುತ್ತೇವೆ ಎಂಬ ಪ್ರಜ್ಞೆ ಇರುವವರಿಗೆ ತಾವು ಏನನ್ನು ಓದಬೇಕು (ಏನನ್ನು ಓದಬಾರದು) ಎನ್ನುವ ಅರಿವು ಇರುತ್ತದೆ. ಅಂಥವರು ತಾವು ಏನನ್ನು ಓದುವ ಅಗತ್ಯವಿಲ್ಲ ಎನ್ನುವುದನ್ನು ಅರಿಯುವುದಕ್ಕೂ ಒಟ್ಟಾರೆ ಸಾಹಿತ್ಯ ರಾಶಿಯ ಮೇಲೆ ಒಂದು ಕಣ್ಣಿಟ್ಟೇ ಇರಬೇಕಾಗುತ್ತದೆ. ಹಾಗಿದ್ದೂ, ತುಂಬ ಚ್ಯೂಸಿಯಾಗಿರುವ ಒಬ್ಬ ಓದುಗನಿಗೂ ತಡವಾಗಿಯಾದರೂ ಒಂದು ಜ್ಞಾನೋದಯವಾಗುವ ಕಾಲ ಬರುತ್ತದೆ ಎನ್ನಬೇಕೇನೋ. ಏಕೆಂದರೆ ಇವತ್ತು ರೆಕಮಂಡ್ ಮಾಡುವವರನ್ನು ಕೂಡ ನಂಬುವಂತಿಲ್ಲ. ಏನೇನೋ ಕಾರಣಗಳಿಗೆ, ಕೆಲವೊಮ್ಮೆ ತೀರ ವೈಯಕ್ತಿಕ ಸಂಬಂಧದ ಹಿನ್ನೆಲೆಯಲ್ಲಿ ಒಬ್ಬ ಸಾಹಿತಿಯನ್ನು ರೆಕಮಂಡ್ ಮಾಡುವ ಮಟ್ಟಕ್ಕೆ ಇಳಿದವರು ಹೇಳಿದ ಪುಸ್ತಕ ಬೂಸಾ ಆಗಿರುವುದು ಕಂಡು ದಂಗಾಗಿದ್ದೇನೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಇವತ್ತು ಒಬ್ಬ ವಿಮರ್ಶಕ ಕೊಂಡಾಡುವ ಪುಸ್ತಕ ಬರೆದವನು ಯಾವುದೋ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿದ್ದು, ಆತ ಈ ಲೇಖಕನದ್ದೇ ಒಂದು ಪುಸ್ತಕಕ್ಕೆ ಪ್ರಶಸ್ತಿ ಕೊಡಿಸಿರುವುದನ್ನು ಕಂಡುಹಿಡಿಯಬಹುದು. ತಮ್ಮ ಕೃತಿಗೆ ಮುನ್ನುಡಿ ಬರೆದವರಿಗೆ, ವಿಮರ್ಶೆ ಬರೆದುಕೊಟ್ಟವರಿಗೆ ಅವಾರ್ಡ್ ಕೊಡುವ ಅವಾರ್ಡಿಗಳು ನಮ್ಮಲ್ಲಿದ್ದಾರೆ. ಅಷ್ಟೂ ಅಸೂಕ್ಷ್ಮರಾಗಿದ್ದಾರೆ ನಮ್ಮ ಸಾಹಿತಿಗಳು. 

ಬರೆಯುವ, ಅದನ್ನು ಆದಷ್ಟೂ ಬೇಗ ಪುಸ್ತಕವನ್ನಾಗಿ ಪ್ರಕಟಿಸುವ, ಪ್ರಕಟಿಸಿದ್ದೇ ಅದಕ್ಕೆ ಸಾಕಷ್ಟು ಪ್ರಚಾರ ಕೊಡಿಸುವ/ಕೊಡುವ, ಎಷ್ಟೆಲ್ಲಾ ಪ್ರಶಸ್ತಿ, ಪುರಸ್ಕಾರಗಳಿವೆಯೋ ಅವಕ್ಕೆಲ್ಲ ಕೊನೆಯ ದಿನಾಂಕದೊಳಗೆ ಅಗತ್ಯ ಪ್ರತಿ ಕಳಿಸಿ ಕಾಯುವ, ಪ್ರಶಸ್ತಿ ಪುರಸ್ಕಾರ ಬಂದಾಗ ಅದು ಆಗಲೇ ಪತ್ರಿಕೆಯಲ್ಲಿ ಬಂದು ಎಲ್ಲರಿಗೂ ತಿಳಿದಿದ್ದರೂ ಮತ್ತೊಮ್ಮೆ ಅದನ್ನು ಊರಿಗೆಲ್ಲಾ ಹೇಳಿಕೊಂಡು ಬರುವ, ತಾನು ನಟ್ಟ ನಡುವೆ ಕುರ್ಚಿಯಲ್ಲಿ ಜರಿಶಾಲು ಹೊದ್ದು, ಹಾರ ತುರಾಯಿ ತೊಟ್ಟು ಕೈಯಲ್ಲಿ ತಟ್ಟೆ ಫಲಕ ಹಿಡಿದ ಚಿತ್ರವನ್ನು ಪ್ರದರ್ಶಿಸಿ ಮೆರೆಯುವ ಒಬ್ಬ ಸಾಹಿತಿಗೆ ಬರೆಯಲು ಇರುವ ಮೂಲ ಪ್ರೇರಣೆ, ಉದ್ದೇಶ, ಸ್ಫೂರ್ತಿ ಏನೆನ್ನುವುದು ಸರ್ವವಿದಿತ. ಹಾಗಿದ್ದೂ ಆತ ಬಾಯಿ ಬಿಟ್ಟರೆ ಅಹಹಹಹಹಾ ಎನ್ನುವಂಥ ಕಾಮನಬಿಲ್ಲನ್ನೇ ತೋರಿಸುವಂಥ ಮಾತುಗಳನ್ನು ಸೃಜನಶೀಲತೆಯ ಬಗ್ಗೆ ಆಡುವುದು ವಿಚಿತ್ರವಾಗಿರುತ್ತದೆ. ಇವರಿಗೆಲ್ಲ ಆತ್ಮಘನತೆ ಎನ್ನುವುದೇನಾದರೂ ಇದೆಯೆ?

ಇವತ್ತು ಚ್ಯೂಸಿಯಾಗಿರುವ ಓದುಗರಿಗೆ ಸಿಗುವ ಕೆನೆಪದರದ ಬರಹಗಾರರು ಇಂಥವರೇ. ಇದು ಎಲ್ಲಾ ಭಾಷೆಗೂ ಅನ್ವಯವಾಗುವ ಸತ್ಯ. ವಿಶೇಷತಃ ಇಂಗ್ಲೀಷಿಗೆ ಅನುವಾದಗೊಂಡು ಬರುತ್ತಿರುವ ಜಾಗತಿಕ ಸಾಹಿತ್ಯ ಹಾದು ಬರಲು ಇರುವ ದುರ್ಗಮ ಹಾದಿಯನ್ನು ಗಮನಿಸಿದರೆ ಅಲ್ಲಿ survive ಆಗುವ fittest animal ಹೇಗಿರಬೇಕೆಂಬ ಸ್ಥೂಲ ಪರಿಕಲ್ಪನೆ ನಮಗೆ ಬರುವುದು ಸಾಧ್ಯ. ಇಂಥ Fittest Animal ಗಳ ಕೃತಿಗಳಲ್ಲಿ ಸೃಜನಶೀಲತೆಯನ್ನಾಗಲೀ, ಬದುಕಿನ ಸತ್ಯ ದರ್ಶನವಾಗಲೀ ನಿರೀಕ್ಷೆ ಮಾಡಬಾರದು. ಇವರು ಬರೆಯುವುದೇ ಲೋಕಮನ್ನಣೆಗೆ, ಪ್ರಸಿದ್ಧಿ, ಪ್ರಚಾರ, ಪ್ರಶಸ್ತಿಗಳಿಗಾಗಿಯೇ ಪ್ರಕಟಣೆ, ಬರವಣಿಗೆ. ಬದುಕನ್ನು ನಿಜಕ್ಕೂ ತುಂಬಿ ಕೊಡಬಲ್ಲ, ಶ್ರೀಮಂತಗೊಳಿಸಬಲ್ಲ, ನಮಗೆ ತಿಳಿಯದೇ ಇರುವುದನ್ನು ಕಾಣಿಸಬಲ್ಲ ಬರವಣಿಗೆ ಈ ಹಾದಿಯಲ್ಲಿ ಬರಲು ಸಾಧ್ಯವೇ ಇಲ್ಲ. ಅಂಥ ಅನುಭವ, ಅರಿವು ಇರುವ ಒಬ್ಬ ವ್ಯಕ್ತಿ ಅದನ್ನು ಇಂಥ ವಾತಾವರಣದಲ್ಲಿ ಬರೆಯುವ ಸಾಧ್ಯತೆಯೇ ಕಡಿಮೆ. ಬರೆದರೂ ಅದು ಪ್ರಕಾಶಕರನ್ನು ತಲುಪುವ ಸಾಧ್ಯತೆ ಇನ್ನೂ ಕಡಿಮೆ. ತಲುಪಿದರೂ ಪ್ರಕಾಶಕನಿಗೆ ಅದು ಇಷ್ಟವಾಗುವ ಸಾಧ್ಯತೆ ಮತ್ತೂ ಕಡಿಮೆ. ಇಷ್ಟವಾಗುವುದು ಹಾಗಿರಲಿ, ಅರ್ಥವಾಗುವ ಸಾಧ್ಯತೆ ಕೂಡ ಇಲ್ಲ. ಏಕೆಂದರೆ, ಪ್ರಕಾಶಕನಲ್ಲಿ ಅಂಥ ಹಸಿವಾಗಲೀ, ಅದರ ಹುಡುಕಾಟವಾಗಲೀ ಇರುವುದಿಲ್ಲ. ಯಾರೋ ರೆಕಮಂಡ್ ಮಾಡಿದ್ದನ್ನು ಅವನು ಪ್ರಕಟಿಸುತ್ತಾನೆಯೇ ಹೊರತು, ಅವನಿಗೆ ಪ್ರಕಟನೆ ಒಂದು ಉದ್ಯಮವೇ ಹೊರತು ಸೃಜನಶೀಲ ಕೈಂಕರ್ಯವಲ್ಲ. ಇದಿಷ್ಟು ಅರ್ಥವಾದರೆ ತಾವು ನಿಜಕ್ಕೂ ಶ್ರೇಷ್ಠವಾದುದನ್ನೇ ಓದುತ್ತೇವೆ ಎಂಬ ಭ್ರಮೆಯಲ್ಲಿರುವ ಚ್ಯೂಸೀ ಓದುಗರು ಪೂರ್ತಿಯಾಗಿ ಮೋಸ ಹೋಗಿರುವುದು ಅರ್ಥವಾಗುತ್ತದೆ.     

ಈ ರೆಕಮಂಡ್ ಮಾಡುವವರ ಬಗ್ಗೆ ಎರಡು ಉದಾಹರಣೆ ಕೊಡುತ್ತೇನೆ. ಒಂದು ಕಾದಂಬರಿಯ ಬಗ್ಗೆ ನನ್ನ ಒಬ್ಬರು ಸಾಹಿತಿ ಮಿತ್ರರು ಒಮ್ಮೆ ಕರೆ ಮಾಡಿದರು. ಅವರು ಧಾರವಾಡದವರು, ಈಗ ಬದುಕಿಲ್ಲ. ಒಂದು ನಿರ್ದಿಷ್ಟ ಕಾದಂಬರಿಯ ಬಗ್ಗೆ ಚರ್ಚಿಸುತ್ತ ತಮಗೆ ಅದು ಅಷ್ಟೇನೂ ಹಿಡಿಸಲಿಲ್ಲ, ಅವರದೇ ಹಿಂದಿನ ಕೃತಿಗಳಷ್ಟು ಚೆನ್ನಾಗಿ ಬಂದಿಲ್ಲ ಅದು ಎಂದೆಲ್ಲ ಹೇಳಿದರು. ಬಳಿಕ ಆಗ ಬರುತ್ತಿದ್ದ ‘ಗಾಂಧಿ ಬಜಾರ್ ಪತ್ರಿಕೆ’ಯಲ್ಲಿ ಅದೇ ಕಾದಂಬರಿಯನ್ನು ಇನ್ನಿಲ್ಲದಂತೆ ಹೊಗಳಿ ಒಂದು ವಿಮರ್ಶೆ ಬರೆದರು! ಇನ್ನೊಮ್ಮೆ ಬೆಂಗಳೂರಿನ ಬಹು ಪ್ರಖ್ಯಾತ ಕತೆಗಾರರು ಕರೆ ಮಾಡಿದ್ದಾಗ ಒಬ್ಬ ನಿರ್ದಿಷ್ಟ ಲೇಖಕನ ಕನ್ನಡದ ಬಗ್ಗೆ ತೀರ ಕೆಟ್ಟದಾಗಿ ‘ಒಂದು ಸಾಲು ಓದುವುದು ಕಷ್ಟ’ ಎಂದೆಲ್ಲ ಉಗಿದರು. ಆಗಷ್ಟೇ ಆ ಲೇಖಕರ ಹೊಸ ಕಾದಂಬರಿಯೊಂದು ಪ್ರಕಟವಾಗಿತ್ತು. ಮುಂದೆ ಎರಡೇ ತಿಂಗಳಲ್ಲಿ ಅದಕ್ಕೆ ನಮ್ಮೂರಿನ ಕಡೆಯದೇ ಒಂದು ಪ್ರತಿಷ್ಠಿತ ಪ್ರಶಸ್ತಿ ಬಂತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಖ್ಯಾತನಾಮರು ಅದೇ ಕಾದಂಬರಿಯನ್ನು ಅನನ್ಯ, ಅದ್ಭುತ, ಅನುಪಮ ಎಂದು ಹೊಗಳಿದ್ದಲ್ಲದೆ ಮುಂದೆ ಆ ಲೇಖಕನ ಖಾಯಂ ‘ಕೊಟ್ಟು- ಪಡೆಯುವ’ ಅಭಿಮಾನಿಯಾದರು. ಹಾಗೆ ನೋಡಿದರೆ ಇವರು ನಿಂದಿಸದೇ ಬಿಟ್ಟ ಕನ್ನಡದ ಸಾಹಿತಿಯೇ ಇಲ್ಲವೇನೋ. ಹಾಗಿದ್ದೂ, ಇಳಿವಯಸ್ಸಿನಲ್ಲೂ ಯಾವುದೇ ಹಿಂಜರಿಕೆಯಿಲ್ಲದೆ ತಾವು ನಿಂದಿಸುತ್ತಿದ್ದವರ ಸಾಲಿನಲ್ಲೇ ಕುಳಿತು, ಅಂಥವರೇ ಕೊಡಿಸಿದ ಪ್ರಶಸ್ತಿಗಳನ್ನು ಹೆಮ್ಮೆಯಿಂದ ಪ್ರದರ್ಶಿಸುವ ಎದೆಗಾರಿಕೆ ತೋರಿಸುತ್ತ ಬಂದಿದ್ದಾರೆ. ಇನ್ನು ಆಯಕಟ್ಟಿನ ಸ್ಥಾನಮಾನ ಹೊಂದಿರುವವರ ಹಿಂದೆ ನೊಣದಂತೆ ಗುಂಯಿಗುಡುತ್ತ ಸುತ್ತುವ ಸಾಹಿತಿಗಳ ಬಗ್ಗೆ ವಿವರಿಸದಿರುವುದೇ ಒಳ್ಳೆಯದು.


ಏಕೆ ಇದನ್ನೆಲ್ಲ ಹೇಳಬೇಕಾಯಿತೆಂದರೆ, ಇವತ್ತು ಬದುಕು ತುಂಬಿಕೊಡಬಲ್ಲ ಒಂದು ಸಾಲು ಓದಲು ಸಿಗುವುದು ಕಷ್ಟವಾಗಿದೆ. ಮತ್ತೆ ಮತ್ತೆ ಹಳಸಲು ಬರವಣಿಗೆಗೆ ಕೈಯಿಕ್ಕುವ ಭಯ ಪ್ರತಿಯೊಂದು ಹೊಸ ಪುಸ್ತಕವನ್ನು ಕೈಗೆತ್ತಿಕೊಳ್ಳುವಾಗಲೂ ಕಾಡುತ್ತದೆ. ಅದೇ ತೀರ ಅಸಾಹಿತ್ಯಿಕ ವಲಯದಿಂದ ಬಂದ ಲೇಖಕರ ಪುಸ್ತಕ ತೆರೆದು ನೋಡಿ, ಸಿಕ್ಕಿದರೆ. ನಾನು ಏನನ್ನು ಹೇಳುತ್ತ ಬಂದೆನೋ ಅದು ಥಕ್ಕೆಂದು ಮನಸ್ಸಿಗೆ ಹೊಳೆದು ಬಿಡುತ್ತದೆ. ಅಂಥ ಒಬ್ಬ ಬರಹಗಾರ ಬಿ ಚಂದ್ರೇಗೌಡರು. ನಾನು ಮೊದಲು ಓದಿದ್ದು ಅವರ ‘ಹಳ್ಳೀಕಾರನ ಅವಸಾನ’.

ಟಿ ಆರ್ ಶಾಮಭಟ್ಟರು ಅನುವಾದಿಸಿದ, ಎಂ ಎನ್ ಶ್ರೀನಿವಾಸ್ ಅವರ ‘ನೆನಪಿನ ಹಳ್ಳಿ’ ಪುಸ್ತಕ ಓದುವಾಗ ಗಮನಕ್ಕೆ ಬಂದ ಪುಸ್ತಕವಿದು, ಬಿ ಚಂದ್ರೇಗೌಡರ ‘ಹಳ್ಳಿಕಾರನ ಅವಸಾನ’. ಆದರೆ ಅದು ಎಲ್ಲಿಯೂ ಸಿಗುವಂತಿರಲಿಲ್ಲ. ಸಾಕಷ್ಟು ಹುಡುಕಿ ದಣಿದ ಮೇಲೆ ಹೇಗೋ ಚಂದ್ರೇಗೌಡರನ್ನೇ ಸಂಪರ್ಕಿಸಿ ಅಂತೂ ಅವರಿಂದ ಕೇಳಿ ಅದನ್ನು ತರಿಸಿಕೊಂಡೆ, 2015ರಲ್ಲಿ. ಚಂದ್ರೇಗೌಡರು ಕನ್ನಡಿಗರಿಗೆ ಅಪರಿಚಿತರಲ್ಲ. ಲಂಕೇಶ್ ಪತ್ರಿಕೆ ಓದುತ್ತಿದ್ದವರಿಗೆ ಅವರ ಅಂಕಣ ‘ಕಟ್ಟೆ ಪುರಾಣ’ದಿಂದಲೇ ಅವರು ಪರಿಚಿತರು. ಇಲ್ಲವಾದರೂ ಇತ್ತೀಚೆಗಷ್ಟೇ ಪ್ರಕಟವಾಗಿರುವ ‘ಲಂಕೇಶ್ ಜೊತೆಗೆ...’ ಪುಸ್ತಕ ಕೂಡ ಅವರಿಗೆ ಹೆಸರು ತಂದುಕೊಡುತ್ತಿದೆ.

ಹಳ್ಳಿ ಬದುಕಿನ ಬಗ್ಗೆ ಕನ್ನಡದಲ್ಲಿ ಕೈಬೆರಳೆಣಿಕೆಯ ಪುಸ್ತಕಗಳಷ್ಟೇ ಇವೆ. ಗೊರೂರು ಅವರ ‘ಬೈಲಹಳ್ಳಿ ಸರ್ವೆ’, ‘ಹಳ್ಳಿಯ ಚಿತ್ರಗಳು’, ‘ನಮ್ಮಊರಿನ ರಸಿಕರು’, ‘ಹಳೆಯ ಪಳೆಯ ಮುಖಗಳು’ ಇಷ್ಟವಾಗುವುದು ಅಲ್ಲಿ ನಮಗೆ ಸಿಗುವ ಪ್ರಾಮಾಣಿಕವಾದ ಮತ್ತು ನವಿರಾದ ನಿರೂಪಣೆಗಾಗಿ. ತೇಜಸ್ವಿಯವರ ಪುಸ್ತಕಗಳಲ್ಲಿ ಅಂಥ ಅಥೆಂಟಿಕ್ ಆದ ಒಂದು ಹಳ್ಳಿ ಬದುಕು ಕಾಣಲು ಸಿಗುತ್ತದೆ. ಕೇಶವ ರೆಡ್ಡಿ ಹಂದ್ರಾಳರ ಎರಡು ಪುಸ್ತಕಗಳನ್ನೂ ಇಲ್ಲಿ ನೆನೆಯಬೇಕು. ಆದರೆ ‘ಹಳ್ಳೀಕಾರನ ಅವಸಾನ’ ವಿಶಿಷ್ಟವಾಗಿದೆ. ಅದು ಬದುಕಿನ ವಿವರಗಳ ಮೂಲಕವೇ ಬದುಕನ್ನು ಕಾಣಿಸುತ್ತಿದೆ, ಒಳಗಿನಿಂದ. ಹೊರಗಿನ ವರದಿಯೋ, ನಿರೂಪಣೆಯೋ ಅಲ್ಲ. ಫಿಕ್ಷನ್ನಿನ ಅಂಶ ಗೌಣವೆನ್ನಿಸುವಷ್ಟು ಕಡಿಮೆಯಿದೆ ಅವರಲ್ಲಿ. ಹಾಗಾಗಿ ಅವರು ತಮ್ಮ ಬರವಣಿಗೆಯುದ್ದಕ್ಕೂ ಈ ಬದುಕಿನ ಸತ್ಯಗಳಿಗೆ ಹೆಚ್ಚು ಹತ್ತಿರವಿರುತ್ತಾರೆ. ಅಂಥ ಹುಸಿ ಭರವಸೆ ಹುಟ್ಟಿಸುವ ಕೃತಿಗಳ ನಿಜವಾದ ಬಣ್ಣ ಬಿಳುಚಿಕೊಳ್ಳುವುದು ಕೂಡ ಇಂಥ ಕೃತಿಗಳ ಸಾಂಗತ್ಯದಲ್ಲಿಯೇ. ಹಾಗಾಗಿಯೂ ಇಂಥ ಕೃತಿಗಳ ಮಹತ್ವ ಹೆಚ್ಚಿದೆ.

ಚಂದ್ರೇಗೌಡರ ‘ಲಂಕೇಶ್ ಜೊತೆಗೆ.... ’ ಮತ್ತು ಕೊಂಚ ಹಿಂದೆ ಬಂದ ‘ಬಚ್ಚಿಟ್ಟ ಸತ್ಯಗಳು’  - ಈ ಎರಡೂ ಕೃತಿಗಳು ನಿರ್ದಿಷ್ಟ ಅರ್ಥದಲ್ಲಿ ಶುದ್ಧ ಸಾಹಿತ್ಯಿಕ ರಚನೆಗಳಲ್ಲ. ಯಾರನ್ನೋ ಮೆಚ್ಚಿಸಲು ಅಥವಾ ಅಕಾಡಮಿಯ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ತನ್ನ ಹೆಸರು ಶಾಶ್ವತವಾಗಿ ಇರಬೇಕೆಂಬ ಕಾರಣಕ್ಕೆ ಐದಾರು ವರ್ಷಕ್ಕೊಂದರಂತೆ ಪುಸ್ತಕ ಹೊರಬರುತ್ತಿರಬೇಕೆಂಬ ಉದ್ದೇಶದಿಂದ ಬರೆದ/ಪ್ರಕಟಿಸಿದ ಪುಸ್ತಕಗಳೂ ಅಲ್ಲ ಇವು. ಅದೆಲ್ಲ ಹೋಗಲಿ ಎಂದರೆ ಈ ಪುಸ್ತಕ ಬರೆದು ಬಹುಶಃ ಅವರು ಸೃಷ್ಟಿಸಿಕೊಂಡ ಪ್ರತಿಷ್ಠಿತ ವೈರಿಗಳೇ ಹೆಚ್ಚು ಎನ್ನಬಹುದೇನೋ. 

ಲಂಕೇಶರನ್ನು ಮಣ್ಣು ಮಾಡುವ ಸಂದರ್ಭದಲ್ಲಿ ಇವರಷ್ಟಕ್ಕೆ ಇವರು ‘ಇಷ್ಟೆಲ್ಲ ಉರಿದು ಉಂಟಿಕೊಳ್ಳುವ ಅಗತ್ಯವಿತ್ತೆ ಅನ್ನಿಸಿತು’ ಎಂದು ಬರೆಯುತ್ತಾರೆ. ಅದೊಂದು ಕ್ಷಣದ ಅನಿಸಿಕೆ. ನಿಜ, ತುಂಬ ಸಿಟ್ಟು ಬಂದಾಗಲೂ, ಕಣ್ಣೆದುರಿನ ಪರಿಸ್ಥಿತಿ ನೋಡುತ್ತ ಮೈಯುರಿದರೂ, ಅನ್ಯಾಯ ನಡೆಯುತ್ತಿದೆ ಅನಿಸಿದಾಗಲೂ ಬಾಯಿ ಮುಚ್ಚಿಕೊಂಡು, ಕಣ್ಣು ಕಾಣಿಸದವರಂತೆ ಇದ್ದು ಬಿಡುವುದು ಬಹುಶಃ ತೀರ ಕಷ್ಟವಿರಲಾರದು. ಅದನ್ನು ಜಗತ್ತು ಸಹನೆ, ಪ್ರಬುದ್ಧತೆ ಎಂದೆಲ್ಲ ಕರೆದು ಕೊಂಡಾಡುವ ಸಾಧ್ಯತೆ ಕೂಡ ಇದೆ. ಇಲ್ಲದಿದ್ದಲ್ಲಿ ಸಿಡುಕ, ಜಗಳಗಂಟ, ಪ್ರತಿಯೊಂದಕ್ಕೂ ತಕರಾರು ತೆಗೆಯುವ ಮಹಾಮಾರಿ, ಅಂಥವರ ಬಳಿ ಮಾತನಾಡುವುದೇ ಕಷ್ಟ ಎಂಬೆಲ್ಲ ಮಾತುಗಳು ಸಿಗುತ್ತಿರುತ್ತವೆ. ಹಾಗಾಗಿ ಜೀವನಪೂರ್ತಿ ಜನರಿಗೆ ಇಷ್ಟವಾಗುವ ಸಿಹಿಯಾದ ಸುಳ್ಳುಗಳನ್ನೇ ಆಡಿಕೊಂಡು ನೆಮ್ಮದಿಯಿಂದ ಒಳ್ಳೆಯವನೆನಿಸಿಕೊಂಡು ಇರಬಹುದು. ಕಹಿಯಾದ ಸತ್ಯ ಯಾರಿಗೂ ಬೇಡ. ನಮ್ಮ ಸಾಹಿತಿಗಳಲ್ಲಿ ಹೆಚ್ಚಿನವರು ಆಚರಿಸಿಕೊಂಡು ಬಂದಿರುವ ರೂಢಿ ಇದೇ. ಆದರೆ ಲಂಕೇಶರು ಭಿನ್ನವಾಗಿದ್ದರು ಮತ್ತು ಆ ಕಾರಣಕ್ಕಾಗಿಯೇ ಅವರನ್ನು ಮೆಚ್ಚಿಕೊಂಡವರು ಕಡಿಮೆ. ಮೆಚ್ಚಿಕೊಂಡವರಲ್ಲಿಯೂ ಅವರ ಕತೆ, ಕಾದಂಬರಿಗಳಾಚೆ ಅವರನ್ನು ಮೆಚ್ಚಿಕೊಳ್ಳುವ ಸಾಹಸ ಮಾಡುವುದಿಲ್ಲ ಎನ್ನುವುದು ಕೂಡ ಅಷ್ಟೇ ನಿಜ.

ಲಂಕೇಶರ ಬಗ್ಗೆ ನಾವು ತುಂಬ ಕೇಳಿದ್ದೇವೆ. ಅವರು ಬದುಕಿದ್ದಾಗ ಕೇಳಿಸದೇ ಇದ್ದ ಅಪಸ್ವರಗಳೆಲ್ಲ ಒಮ್ಮೆಗೇ ಒದ್ದುಕೊಂಡು ಬಂದಂತೆ ಅವರು ಇಲ್ಲವಾದ ಬಳಿಕ ಅಪ್ಪಳಿಸಿವೆ. ಅದೇನಿದ್ದರೂ ಅವರನ್ನು ಸಾಕಷ್ಟು ಓದಿಕೊಂಡವರಿಗೆ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಸ್ಥೂಲ ಅಂದಾಜು ಇದ್ದೇ ಇತ್ತು. ಲಂಕೇಶ್ ಈ ದೇಶ ಕಂಡಿರುವ ಅನೇಕ ಸಂತರ ಸಾಲಿಗೆ ಸೇರುವವರಲ್ಲ ಎನ್ನುವುದು ಯಾರಿಗಾದರೂ ಗೊತ್ತಿತ್ತು. ಹಾಗಿದ್ದೂ ಅವರು ಎಲ್ಲೋ ಅಬದ್ಧ ಆಡಿದರು, ಇನ್ನೆಲ್ಲೋ ಅನಗತ್ಯ ಸಿಡುಕಿದರು ಎನ್ನುವುದನ್ನೇ ಸಮಯ-ಸಂದರ್ಭಗಳಿಂದ ವಿಂಗಡಿಸಿಟ್ಟು ಅವರ ಚಿತ್ರವನ್ನು ವಿಕಾರವಾಗಿ ಕಟ್ಟಿಕೊಡಲು ನಡೆದ ಪ್ರಯತ್ನಗಳೇನೂ ಕಡಿಮೆಯಿಲ್ಲ. ಸ್ವತಃ ಲಂಕೇಶ್ ಬದುಕಿದ್ದರೆ ಅವರೇ ಅದನ್ನು ಇನ್ನೂ ಕೆಟ್ಟದಾಗಿ ಹೇಳಿ ತಗಳಪ್ಪ ಇದೇ ನಾನು ಎನ್ನುತ್ತಿದ್ದರು! ಆದರೆ ಅಷ್ಟು ಮೆಚ್ಯುರಿಟಿ ಅವರ ಸುತ್ತ ಇದ್ದವರಲ್ಲೇ ಹುಟ್ಟಲಿಲ್ಲ ಎಂದ ಮೇಲೆ ಇನ್ನೇನಿದೆ? ಕನಿಷ್ಠ ಚಂದ್ರೇಗೌಡರಂಥ, ಒಂದು ನೆಲೆಯಲ್ಲಿ ಮುಗ್ಧರಂತೆ ಕಾಣುವ ಒಂದು ಹತ್ತು ಮಂದಿ ಬರಹಗಾರರನ್ನು ಅವರು ಬೆಳೆಸಿದ್ದರೆ, ರಾಜ್ಯದ ಎಲ್ಲ ಕಡೆಯ ಗೋಸುಂಬೆಗಳ ಬಣ್ಣ ಬಯಲಾಗುತ್ತಿತ್ತು. ಸತ್ಯವನ್ನು ಕಾಣಲು, ಅದನ್ನು ಹೇಳಲು ಕೇವಲ ಧೈರ್ಯವಿದ್ದರೆ ಸಾಲದು, ಅದಕ್ಕೆ ವಿಶಿಷ್ಟವಾದ ಒಂದು ಮನಸ್ಥಿತಿಯ ಅಗತ್ಯವಿದೆ. ಇನ್ನೊಬ್ಬರಿಂದ ಏನನ್ನೂ ನಿರೀಕ್ಷಿಸದ, ತನ್ನ ಬಗ್ಗೆ ತನಗೇ ಭ್ರಮೆಗಳಿಲ್ಲದ ಒಂದು ನಿರಪೇಕ್ಷ ಮನಸ್ಥಿತಿಯ ಅಗತ್ಯ ಇರುತ್ತದೆ. ಬಾಯಿ ಬಿಟ್ಟರೆ ಒಂದೋ ಪರರದ್ದಕ್ಕೆ ಜೊಲ್ಲು ಸುರಿಸುವ, ಇಲ್ಲಾ ತಾನೇ ಎಲ್ಲರಿಗೂ ಕೊಡುವವನು ಎಂಬ ಅಹಂಕಾರದಿಂದ ಸೆಟೆದುಕೊಳ್ಳುವ ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಚಂದ್ರೇಗೌಡರಿಗೆ ಸಾಧ್ಯವಾಗಿದೆ. ಬಹುಶಃ ಲಂಕೇಶ್ ಇದ್ದಿದ್ದರೆ ಚಂದ್ರೇಗೌಡರ ‘ಹುಂಬತನ’ಕ್ಕೆ ಬಯ್ದು ಇದನ್ನೆಲ್ಲ ಪ್ರಕಟಿಸುವುದು ಬೇಡ ಎನ್ನುತ್ತಿದ್ದರೇನೋ ಎನ್ನುವ ಅನುಮಾನ ಕೂಡ ನನಗಿದೆ. ಹಾಗಿದ್ದೂ...


"ಬಡತನ ಮನುಷ್ಯನಿಂದ ಏನನ್ನಾದರೂ ಮಾಡಿಸುತ್ತದೆ ಎಂಬ ಮಾತು ಅಷ್ಟು ನಿಜವಲ್ಲ. ಹಾಗೇನಾದರೂ ಆಗಿದ್ದರೆ ಈ ಬಡ ದೇಶ ಎಕ್ಕುಟ್ಟಿ ಹೋಗುತ್ತಿತ್ತು. ಎಲ್ಲ ಇದ್ದವರಿಂದಲೇ ಎಲ್ಲಾ ಮೌಲ್ಯಗಳೂ ಪತನವಾಗುತ್ತಿರುವುದು." ಎಂಬ ಮುತ್ತಿನಂಥ ಮಾತನ್ನು ಚಂದ್ರೇಗೌಡರು ಹೇಳುತ್ತಾರೆ. ಈ ಮೇಲೆ ಹೇಳಿದ ಜೊಲ್ಲು ಸುರಿಸುವ ಮತ್ತು ಸೆಟೆದುಕೊಂಡಿರುವ ಮಂದಿ ಬಡವರಲ್ಲ. ಎಲ್ಲಾ ಇರುವವರೇ ಎನ್ನುವುದನ್ನು ನಾವೂ ಬಲ್ಲೆವು. ಆದರೆ ಎಲ್ಲಾ ಇರುವವರ ಬಗ್ಗೆ ಯಾರೂ ಮಾತನಾಡುವ ಪೊಗರು ತೋರಿಸಲು ಹೋಗುವುದಿಲ್ಲ. ಏಕೆಂದರೆ, ಅದು ಬದುಕುವ ದಾರಿಯಲ್ಲ. ಬದುಕುವ ದಾರಿ ಬಲ್ಲವರು ಅಧಿಕಾರ ಕೇಂದ್ರಗಳಿಗೆ, ಧನಬಲಕ್ಕೆ, ಜನಬಲಕ್ಕೆ ಹಿತವಾಗುವಂಥ ಮಾತುಗಳನ್ನೇ ಆಡುತ್ತ, ಅದಾಗದಿದ್ದರೆ ಬಾಲವನ್ನು ತಿಕದ ಸಂಧಿಗೆ ಸಿಕ್ಕಿಸಿಕೊಂಡು ಬಾಯ್ಮುಚ್ಚಿಕೊಂಡೇ ಉಳಿಯುವ ಹಾದಿಯಲ್ಲಿ ಸಾಗುತ್ತಾರೆ. 

ಈ ಇಡೀ ಪುಸ್ತಕದಲ್ಲಿ ಲಂಕೇಶರನ್ನಾಗಲೀ, ಸ್ವತಃ ತಮ್ಮನ್ನೇ ಆಗಲಿ ಚಂದ್ರೇಗೌಡರು present  ಮಾಡುತ್ತಿಲ್ಲ. ನಾವು ಈ ಜಗತ್ತು ನಮ್ಮನ್ನು ಸ್ವೀಕರಿಸಲಿ ಎಂಬ ಒತ್ತಾಸೆಯಿಂದ ನಾವು ಒಳಗೆ ಹೇಗೇ ಇದ್ದರೂ ಹೊರಗೆ ನಯವಾಗಿ, ಸ್ವೀಕಾರಾರ್ಹರಾಗುವಂತೆ, ಸಭ್ಯವೂ ನಾಗರಿಕವೂ ಆದ ಒಂದು ಮಾಸ್ಕ್ ಧರಿಸಿ ನಿಜದ ನಾವಲ್ಲದ ನಮ್ಮನ್ನೇ ನಾವು ಜಗತ್ತಿಗೆ ಪ್ರೆಸೆಂಟ್ ಮಾಡುತ್ತಿರುತ್ತೇವೆ, ದುಬಾರಿ ಪ್ಯಾಂಟು ಶರ್ಟುಗಳೊಳಗೆ ಬೊಜ್ಜು ಮುಚ್ಚಿಟ್ಟ ಹಾಗೆ. ಅದೊಂದು ಸರಿಯಾದ ಅರ್ಥದಲ್ಲಿಯೇ ಪ್ರೆಸೆಂಟೇಶನ್ ಅಥವಾ ಪ್ರದರ್ಶನ. ಸತ್ಯದರ್ಶನವಲ್ಲ. ಚಂದ್ರೇಗೌಡರು ಇಲ್ಲಿ ಅದನ್ನು ಮಾಡುತ್ತಿಲ್ಲ. ನೀವು ಸ್ವೀಕರಿಸುವುದೇ ಆದರೆ ನಾವು ಹೇಗಿದ್ದೇವೋ ಹಾಗೆಯೇ ಒಪ್ಪಿಕೊಳ್ಳಿ; ಇಲ್ಲದಿದ್ದರೆ ಕತ್ತೆಬಾಲ ಎಂಬ ಧಾರ್ಷ್ಟ್ಯವಿದೆ ಇಲ್ಲಿ. ಅವರು ತಮಗೂ ಯಾವುದೇ ರಿಯಾಯಿತಿ ಕೊಟ್ಟುಕೊಂಡಿಲ್ಲ, ಲಂಕೇಶರಿಗೂ ಕೊಟ್ಟಿಲ್ಲ, ಅವರ ಸಹವರ್ತಿಗಳಿಗೂ ಕೊಟ್ಟಿಲ್ಲ. ಹಾಗಾಗಿ ಅವರು ಹೇಳುವ, ಕಾಣಿಸುವ ಸತ್ಯಗಳು ಅಥೆಂಟಿಕ್ ಅನಿಸುವುದಷ್ಟೇ ಅಲ್ಲ, ಬದುಕಿನ ವ್ಯಂಗ್ಯ, ವಿಪರ್ಯಾಸ ಮತ್ತು ಸತ್ಯಗಳಿಗೆ ಮನಸ್ಸು ದಂಗಾಗುವುದಕ್ಕಿಂತಲೂ ಹೆಚ್ಚು ಮರುಗುತ್ತದೆ, ಇಷ್ಟೇ ಅಲ್ಲವೆ ಈ ಮಂದಿ ಅನಿಸುವಂತೆ ಮಾಡುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಸಿನಿಕತೆ ಇದೆಯೇ ಅನಿಸಬಹುದು, ಇಲ್ಲ. ಇದು ಸಿನಿಕತೆಯ ದರ್ಶನವಲ್ಲ. ಘನತೆಯಿಂದ, ಸ್ವಾಭಿಮಾನದಿಂದ ಬದುಕಿದವರ ಬಗ್ಗೆಯೂ ಇದೆ ಇಲ್ಲಿ. ‘ಲಂಕೇಶರು ಕಟ್ಟಿದ ಸ್ವಾಭಿಮಾನದ ಸಂಸ್ಕೃತಿ’ ಎಂದೇ ಕರೆದಿದ್ದಾರೆ ಅದನ್ನು ಚಂದ್ರೇಗೌಡರು. ಆದರೆ ಅದನ್ನು ಉಳಿಸಿಕೊಂಡು ಬಂದವರು ಅವರ ಜೊತೆಗೆ ಕೊನೆತನಕ ಇದ್ದವರಲ್ಲ, ಅವರಿಂದ ಮುನಿಸಿಕೊಂಡು ದೂರವಾದವರು ಕೂಡ ಇದ್ದಾರೆ ಅಂಥವರಲ್ಲಿ. ಕೊನೆತನಕ ಅವರ ಜೊತೆಗೇ ಇದ್ದವರಲ್ಲಿ ಅನೇಕರಿಗೆ ಅಂಥ ಘನತೆಯೇ ಇರಲಿಲ್ಲ ಎನ್ನುವುದಷ್ಟೇ ಬದುಕಿನ ವಿಪರ್ಯಾಸ. 

ಬಹುಶಃ ನಾವು ಬದುಕಿರುವಾಗಲೇ ನಮ್ಮ ನಮ್ಮ ದೇವರ ಸತ್ಯ ನಮಗೆ ಗೊತ್ತಾಗುವಂತೆ ಮನಸ್ಸು ಚೊಕ್ಕವಾಗಿಟ್ಟುಕೊಳ್ಳಲು ವಿಫಲರಾದರೆ ನಮಗೂ ಇದೇ ಗತಿ ಕಾದಿದೆ ಎನ್ನುವುದಕ್ಕೆ ಈ ಕೃತಿ ಒಂದು ದಿಕ್ಸೂಚಿಯಂತೆ ಇದೆ. ತಮ್ಮನ್ನೇ ತಾವು ಗ್ರೇಟ್ ಎಂಬಂತೆ ಬಿಂಬಿಸಿಕೊಳ್ಳುವುದರಲ್ಲೇ ಮಗ್ನರಾಗಿರುವ, ನಿಜದಲ್ಲಿ ತಮ್ಮನ್ನೇ ತಾವು For Sale ಎಂದು ಬಿಕರಿಗಿಟ್ಟಿರುವವರನ್ನು, ಅವರ ಕೃತಿರತ್ನಗಳನ್ನು ದಿನಬೆಳಗಾದರೆ ಕಾಣುತ್ತ ವಾಕರಿಕೆ ಹುಟ್ಟುತ್ತಿರುವ ದಿನಗಳಲ್ಲಿ ನಾವು ನಿಜಕ್ಕೂ ಓದಲೇ ಬೇಕಾದ ಒಂದು ಕೃತಿಯನ್ನು ಕೊಟ್ಟಿದ್ದಕ್ಕೆ ಚಂದ್ರೇಗೌಡರಿಗೆ ಕೃತಜ್ಞ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ