Sunday, December 19, 2021

ತಮಿಳು ಕಥನ ಸಾಹಿತ್ಯದ ಸೂರ್ಯ


"ಮನುಷ್ಯ ಮೊದಲಿಗೆ ಮಾತನಾಡುತ್ತ ಭಾಷೆಯನ್ನು ಕಟ್ಟಿದನೇ ಹೊರತು ಮೊದಲು ಬರೆದು ಮಾಡಿ ಕಟ್ಟಿದ್ದಲ್ಲ. ಲಿಪಿ ಹುಟ್ಟಿದ್ದು ಭಾಷೆ ಹುಟ್ಟಿದ ತದನಂತರದಲ್ಲಿ. ನಾವು ಮಕ್ಕಳೊಂದಿಗೆ ಗ್ರಾಂಥಿಕ ಭಾಷೆಯಲ್ಲಿ ಮಾತನಾಡುತ್ತೇವೆಯೇ? ನಮ್ಮ ದೈನಂದಿನ ವ್ಯವಹಾರದಲ್ಲೂ ನಾವು ಪುಸ್ತಕದ ಭಾಷೆಯನ್ನು ಬಳಸುವುದಿಲ್ಲ. ಹಾಗಿದ್ದ ಮೇಲೆ ಬರವಣಿಗೆಯಲ್ಲಿ ಗ್ರಾಂಥಿಕವಾಗಿರಬೇಕೇಕೆ?" ಎಂದು ಶುದ್ಧ ಭಾಷಾ ಬಳಕೆಯ ಬಗ್ಗೆ ಪ್ರತಿಕ್ರಿಯಿಸಿದ ಕಿ.ರಾ ಎಂದೇ ಖ್ಯಾತರಾಗಿದ್ದ ತಮಿಳು ಕತೆ, ಕಾದಂಬರಿಕಾರ Ki ರಾಜನಾರಾಯಣನ್ ತಮ್ಮ ತೊಂಬತ್ತೆಂಟರ ವಯಸ್ಸಿನಲ್ಲಿ, 2021ರ ಮೇ 18ರಂದು ಇಹಲೋಕ ತ್ಯಜಿಸಿದರು. ಆಡುಭಾಷೆಯೇ ಯಾವುದೇ ಒಂದು ಭಾಷೆಯ ನಿಜರೂಪ, ಅದೇ ಅದರ ಶುದ್ಧರೂಪ ಎನ್ನುವುದು ಅವರ ಖಚಿತವಾದ ನಿಲುವಾಗಿತ್ತು. ಜಾನಪದ ಕತೆಗಳನ್ನು ಸಂಗ್ರಹಿಸುವಾಗಲೂ ಅವುಗಳನ್ನು ಧ್ವನಿಮುದ್ರಿಸಬೇಕು, ಬರಹರೂಪದಲ್ಲಿ ಅವು ಪುಸ್ತಕವಾಗಿ ಬರುವಾಗ ಶ್ರೀಮಂತವಾದ ಆಡುಮಾತುಗಳೆಲ್ಲ ಕಳೆದು ಹೋಗುತ್ತವೆ ಎಂಬ ಬೇಸರ ಅವರಲ್ಲಿತ್ತು. ಅನುವಾದದಲ್ಲಂತೂ ನಮಗೆ ಅಂಥ ಸೌಭಾಗ್ಯ ಪೂರ್ತಿಯಾಗಿ ನಷ್ಟವಾಗುತ್ತದೆ ಎನ್ನುವುದು ನಿಜ.

ತಮ್ಮ ಮುವ್ವತ್ತನೆಯ ವಯಸ್ಸಿನಲ್ಲಿ ಮೊದಲ ಕತೆ ಬರೆದು "ಸರಸ್ವತಿ" ಯಲ್ಲಿ ಪ್ರಕಟಿಸುವುದರ ಮೂಲಕ ಸಾಹಿತ್ಯಕ್ಷೇತ್ರ ಪ್ರವೇಶಿಸಿದ ರಾಜನಾರಾಯಣನ್ ಕಮ್ಯುನಿಸ್ಟ್ ಹೋರಾಟಗಾರರಾಗಿ ಗುರುತಿಸಿಕೊಂಡವರು, ಜೈಲು ವಾಸ ಅನುಭವಿಸಿದವರು, ಮೊಕದ್ದಮೆಗಳನ್ನು ಎದುರಿಸಿದವರು. "ಗೋಪಾಲಪುರತ್ತು ಮಕ್ಕಳ್", "ಅಂಡಮಾನ್ ನಾಯ್ಕರ್", "ಕರಿಸಾಲ್ ಕಾತು ಕಾದುತಸಿ" ಕಾದಂಬರಿಗಳು, ಇನ್ನೂರಕ್ಕೂ ಹೆಚ್ಚು ಜಾನಪದ ಕತೆಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದು, ಆಡುನುಡಿಯ ಒಂದು ನಿಘಂಟನ್ನು ಕೂಡ ತಯಾರಿಸಿದ್ದು ಅವರ ಸಾಹಿತ್ಯ ಕೃಷಿಯ ಮೈಲುಗಲ್ಲುಗಳು. "ಗೋಪಾಲಪುರತ್ತು ಮಕ್ಕಳ್" ಅವರಿಗೆ 1991 ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರವನ್ನು ತಂದುಕೊಟ್ಟಿತು. ಮುಸಲ್ಮಾನ್ ದೊರೆಗಳ ದೌರ್ಜನ್ಯಕ್ಕೆ ಬೇಸತ್ತು ತಮ್ಮ ರಾಜಕುಮಾರಿಯರನ್ನು ಅವರಿಗೆ ಮದುವೆ ಮಾಡಿಕೊಡುವ ದುರ್ಗತಿಯಿಂದ ತಪ್ಪಿಸಿಕೊಂಡು ತಮಿಳುನಾಡಿಗೆ ಓಡಿಬಂದು ನೆಲೆಯಾದವರ ಕತೆಯೇ ಪ್ರಧಾನ ಎಳೆಯಾಗಿರುವ ಈ ಕಾದಂಬರಿ "ಗೋಪಾಲಪುರಂ" ಎಂಬ ಹೆಸರಿನಲ್ಲಿ ಪ್ರೀತಮ್ ಕೆ ಚರ್ಕವರ್ತಿಯವರಿಂದ ಇಂಗ್ಲೀಷಿಗೆ ಅನುವಾದಿಸಲ್ಪಟ್ಟಿದೆ.    


Tamil writer Ki. Rajanarayanan. File   | Photo Credit: M. Samraj, The Hindu.

ಅವರು 1984ರಲ್ಲಿ ಸಂಪಾದಿಸಿ ಪ್ರಕಟಿಸಿದ್ದ "ಕರಿಸಾಲ್ ಕಥೈಗಳ್" ಕೃತಿಯಲ್ಲಿ ಒಟ್ಟು 21 ಕಥೆಗಳಿದ್ದು ಅದು 1991ರಲ್ಲಿ, ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರ ಬಂದ ಸಂದರ್ಭದಲ್ಲಿ ಮರುಮುದ್ರಣಗೊಂಡರೂ ಅದರ ಪ್ರತಿಗಳು ಬಹುಬೇಗ ಅಲಭ್ಯವಾಗಿ ಬಿಟ್ಟವು. 2015ರಲ್ಲಿಯೇ ಹಾರ್ಪರ್ ಕಾಲಿನ್ಸ್‌ಗಾಗಿ ಪದ್ಮಾ ನಾರಾಯಣನ್ ಈ ಕತೆಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದರೂ ಹಲವಾರು ಕಾರಣಗಳಿಂದಾಗಿ ಅದು ಮುದ್ರಿತ ರೂಪದಲ್ಲಿ ಸಾಕಾರಗೊಂಡಿದ್ದು ಮಾತ್ರ 2021ರಲ್ಲಿ, ರಾಜನಾರಾಯಣನ್ ಅವರು ಇಹಲೋಕ ತ್ಯಜಿಸುವ ಕೆಲವೇ ಕಾಲ ಮುನ್ನ ಎನ್ನುವುದಷ್ಟೇ ಅದರ ಹೆಗ್ಗಳಿಕೆ. ಅದಕ್ಕೂ ತಮಿಳುನಾಡು ಪಠ್ಯ ಪುಸ್ತಕ ಸಮಿತಿ ಪುಸ್ತಕವನ್ನು ಖಾಸಗಿಯವರು ಮುದ್ರಿಸಬಹುದು ಎಂಬ ಅನುಮತಿ ಕೊಟ್ಟಿದ್ದರಿಂದಷ್ಟೇ ಸಾಧ್ಯವಾದ ವಿದ್ಯಮಾನ ಎಂದು ನೋವಿನಿಂದಲೇ ಬರೆಯುತ್ತಾರೆ ಮಿನಿ ಕೃಷ್ಣನ್. (ನೋಡಿ ದ ಹಿಂದೂ ಲಿಟರರಿ ರಿವ್ಯೂ: ದಿನಾಂಕ ಮೇ 29, 2021). ಮೊದಲ ಪ್ರತಿಗಳನ್ನು ಸ್ಪರ್ಶಿಸಿ ಕುಶಿ ಪಟ್ಟ ರಾಜನಾರಾಯಣನ್ ಕೇಳಿದ ಪ್ರಶ್ನೆ, "ಬೆಲೆ ಎಷ್ಟಿಟ್ಟಿದ್ದಾರೆ" ಎನ್ನುವುದೇ! ತಾವು ಓದುಗರಿಗೆ ಹೊರೆಯಾದೆವೇ ಎಂಬ ಭಾವ ಅವರನ್ನು ಕಾಡುತ್ತಿತ್ತು ಎಂದು ಕಾಣುತ್ತದೆ.


ಅವರಿಗೆ ಸಿಗಬಹುದಾದ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಿಗಲಿಲ್ಲ ಎನ್ನುವುದು ನಿಜವಾದರೂ ಅವರು ಸೂರ್ಯನಂತೆಯೇ ಬೆಳಕಾಗಿ, ಜಗಜಗಿಸುತ್ತಲೇ ಬದುಕಿದವರು ಎಂದು ತಮ್ಮ ಲೇಖನ ಮುಗಿಸುವ ಮಿನಿಕೃಷ್ಣನ್ ಮಾತಿಗೆ ಅವರ ಕನಸಿನ ಪುಸ್ತಕದ ಹೆಸರು Along with the Sun ಸಾಥ್ ಕೊಡುವಂತಿದೆ. 

ಇಂಗ್ಲೀಷಿನಲ್ಲಿ ಲಭ್ಯವಿರುವ Ki ರಾಜನಾರಾಯಣನ್ ಅವರ ಒಂದೇ ಒಂದು ಪುಸ್ತಕ "ಗೋಪಾಲಪುರಮ್". ಮೇಲೆ ಉಲ್ಲೇಖಿಸಿದ ರಾಜನಾರಾಯಣನ್ ಅವರ ಸಂಪಾದಕತ್ವದ ಪುಸ್ತಕದಲ್ಲಿಯೂ ಅವರ ಒಂದು ಕತೆಯಿದೆ. 

"ಗೋಪಾಲಪುರಂ" ಕಾದಂಬರಿ ತೊಡಗುವುದು ಒಂದು ಕಳ್ಳತನ ಮತ್ತು ಕೊಲೆ ಪ್ರಕರಣದೊಂದಿಗೆ. ಆದರೆ ಅದರೊಂದಿಗೆ ಕೊಟ್ಟಾಯ್ಯರ್ ಮನೆತನದ ಕತೆ ಬಿಚ್ಚಿಕೊಳ್ಳುತ್ತದೆ. ತೆಲುಗಿನ ನಾಡಿನಿಂದ, ಅಲ್ಲಿ ಪ್ರಬಲರಾಗಿದ್ದ ಮುಸಲ್ಮಾನ್ ದೊರೆಗಳ ಕಣ್ಣು ತಮ್ಮ ಮನೆಯ ಹೆಣ್ಣುಮಕ್ಕಳ ಮೇಲೆ ಬೀಳತೊಡಗಿದಾಗ ಆ ಸಂಕಟದಿಂದ ಬಚಾವಾಗಲು ಅವರ ಕಣ್ತಪ್ಪಿಸಿ ಪಲಾಯನ ಮಾಡಿದ ದಿನಗಳ ಅಜ್ಞಾತವಾಸ, ತಮಿಳುನಾಡಿನ ದಕ್ಷಿಣ ಭಾಗದ ಕಾಡಿನ ನಡುವೆ, ಥೇಟ್ ಖಾಂಡವ ವನ ದಹಿಸಿ ಇಂದ್ರಪ್ರಸ್ಥವನ್ನು ಕಟ್ಟಿಕೊಂಡ ಪಾಂಡವರ ಹಾಗೆ ಊರು ಕಟ್ಟಿ ವಾಸ್ತವ್ಯ ಹೂಡಿದ ಕತೆ, ಪಂಜಿನ ಡಕಾಯಿತರಿಂದ ಬಚಾವು ಮಾಡಿದ ಅಕ್ಕಯ್ಯನ ಸಾಹಸ, ಅವರ ಕೃಷಿ, ಹೈನುಗಾರಿಕೆ, ಊರಿನ ನ್ಯಾಯಾಂಗ ಪದ್ಧತಿ ಎಂದೆಲ್ಲ ಕಥನ ಒಳಗೊಳ್ಳುವ ದೈನಂದಿನ ಬದುಕಿನ ಎಳೆ ಎಳೆಯಾದ ವಿವರಗಳು, ಕ್ರಮೇಣ ನಿಜಾಮರ ಅಧಿಕಾರ ಬದಿಗೆ ಸರಿದು ಬ್ರಿಟಿಷರ ಕೈ ಮೇಲಾಗುತ್ತ ಬಂದ ದಿನಗಳು ಎಂದೆಲ್ಲ ಸಾಗುವ ಕಥಾನಕ ಸ್ವಾತಂತ್ರ್ಯ ಸಂಗ್ರಾಮದ ಅಂಚಿಗೆ ಬರುತ್ತಲೇ ಥಟ್ಟನೆ ಮುಗಿದು ಬಿಡುತ್ತದೆ. ಅಯ್ಯೊ, ಮುಗಿದೇ ಹೋಯಿತಲ್ಲ ಅನಿಸುವಷ್ಟು ಆಪ್ತವಾಗುವ, ಇನ್ನಷ್ಟು ಇರಬೇಕಿತ್ತೆಂಬ ಆಸೆ ಹುಟ್ಟಿಸುವ ಈ ನಿರೂಪಣೆ, ಅದು ಕಟ್ಟುವ ಒಂದು ವಾತಾವರಣ, ವಿವರಗಳ ಜಾನಪದೀಯ ಶೈಲಿ ಎಲ್ಲವೂ ಅನನ್ಯವಾಗಿದೆ. 

ಬ್ರಿಟಿಷ್ ಅಧಿಕಾರಿ ಕೊಟ್ಟಾಯರ್ ಮನೆಗೆ ಬಂದು ಗೋಪಾಲಪುರಂಗೆ ಗೋವಿಂದಪ್ಪನ್ ನಾಯಕ್ಕರ್‌ನ್ನು ತಮ್ಮಕಂಪೆನಿಯ ಅಧಿಕೃತ ಅಧಿಕಾರಿಯನ್ನಾಗಿ ನೇಮಿಸಲು ಮುಂದಾದಾಗ ಇಡೀ ಊರು ಒಂದಾಗಿ ನಿರ್ಧಾರ ಕೈಗೊಳ್ಳಲು ಪ್ರಯತ್ನಿಸುತ್ತದೆ. ಕೊನೆಗೆ ಅವರು ಮಂಗೈಯತ್ತರ್ ಅಮ್ಮಾಳ್ ಅವರನ್ನು ಕಂಡು ಮಾರ್ಗದರ್ಶನ ಬೇಕೆಂದು ಕೇಳಿಕೊಂಡಾಗ ಆಕೆ ಹೇಳುವ ಮಾತು ತುಂಬ ಅರ್ಥಪೂರ್ಣವಾಗಿದೆ.

"ಈ ಬಿಳಿಯರು ಈ ತನಕ ನಮ್ಮ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ಕಂಡ ಉದಾಹರಣೆ ಇಲ್ಲ. ಗೊತ್ತಿರುವ ಮಟ್ಟಿಗೆ ಹೆಣ್ಣಿಗೆ ಗೌರವ ಕೊಟ್ಟು ನಡೆದುಕೊಂಡಿದ್ದಾರೆ. ಹಿಂದೆ ನಾವು ಮುಸಲ್ಮಾನ ದೊರೆಗಳ ಕೈಯಲ್ಲಿ ಅನುಭವಿಸಿದ ಅವಮಾನ ಇವರಿಂದ ನಮಗೆ ಆಗಿಲ್ಲ. ಈ ಭೂಮಿತಾಯಿಯೂ ಒಂದು ಹೆಣ್ಣು. ಯಾರು ಹೆಣ್ಣನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೋ ಅವರು ಭೂಮಿತಾಯನ್ನೂ ಚೆನ್ನಾಗಿಯೇ ಪೊರೆಯುತ್ತಾರೆ, ಅಂಥ ಅರ್ಹತೆ ಇರುವವರಾಗಿರುತ್ತಾರೆ ಎನ್ನುವುದು ನಿಶ್ಚಿತ. ಹಾಗಾಗಿ ನೀನು ಮುಂದುವರಿಯಬಹುದು."

ಮಿನಿಕೃಷ್ಣನ್ ಹೊಸ ಪುಸ್ತಕಗಳ ಪ್ರತಿ ಹಿಡಿದು ಭೇಟಿಗೆ ಹೋಗಿದ್ದಾಗ ಅವರಿಗೆ ರಾಜನಾರಾಯಣನ್ ಒಂದು ಪುಟ್ಟ ಕತೆ ಹೇಳುತ್ತಾರೆ. ಅದು ತುಂಬ ಸಾಂಕೇತಿಕವಾಗಿದೆ ಅನಿಸುತ್ತದೆ. ಅವರ ಊರಲ್ಲಿ ಸಿಹಿತಿಂಡಿ ತಯಾರಿಸುವ ಒಂದು ಕುಟುಂಬವಿತ್ತಂತೆ. ಅವರು ವಾರದಲ್ಲಿ ಒಂದೇ ಒಂದು ದಿನ, ನಿರ್ದಿಷ್ಟ ಸಂಖ್ಯೆಯ ಸಿಹಿ ತಯಾರಿಸಿ ಮಾರುತ್ತಿದ್ದರಂತೆ. ಬಯಸಿದ್ದರೆ ಸಾಕಷ್ಟು ಸಂಪಾದಿಸುವ ಸಾಧ್ಯತೆ ಅವರಿಗಿದ್ದರೂ ಅವರು ಎಂದೂ ತಮ್ಮ ನಿಯಮ ಮೀರುತ್ತಿರಲಿಲ್ಲವಂತೆ. 

ಬಹುಶಃ ಬರವಣಿಗೆಯಲ್ಲಿ ರಾಜನಾರಾಯಣನ್ ಇದೇ ಶಿಸ್ತನ್ನು ಪಾಲಿಸಿದಂತಿದೆ. ಪುಟ್ಟ ಪುಟ್ಟ ಅಧ್ಯಾಯಗಳು, ಬದುಕಿನ ಅನಿವಾರ್ಯ ವಿದ್ಯಮಾನಗಳೆಂಬಂತೆ ಸಹಜ ಗತಿಯಲ್ಲಿ ಬಂದು ಹೋಗುವ ಸಾವು, ನೋವು, ನಷ್ಟ, ನಲಿವು-ಗೆಲುವು, ಎಲ್ಲೂ ಅಬ್ಬರವಿಲ್ಲ, ಆಡಂಬರವಿಲ್ಲ. ಸುಲಲಿತವಾಗಿ ಸಾಗುವ ಈ ಕಥನದ ಆಕರ್ಷಣೆಯನ್ನು ವಿವರಿಸುವುದು ಕಷ್ಟ. ಹೀಗೆ ಬರೆದ ಕಥನದ ಚೌಕಟ್ಟಿಗೂ, ಅವರ ಒಟ್ಟು ಕೃತಿಗಳ ಮಿತವಾದ ಸಂಖ್ಯೆಗೂ ಈ ಮಿತವ್ಯಯದ ಭಾಷೆ-ನಿರೂಪಣೆಯ ಶಿಸ್ತು ಅನ್ವಯಿಸುವಂತಿದೆ. ಹಾಗಾಗಿ ಅವರ ಹಿತಮಿತವಾದ ವಿವರಗಳ ಚಿಕ್ಕಚೊಕ್ಕ ಭಾಷೆಯ ಕೃತಿ ಒಂದು ಹನಿ ಹೆಚ್ಚಿಲ್ಲ, ಒಂದು ಹನಿ ಕಡಿಮೆಯಿಲ್ಲದ ಪನ್ನೀರ ಪ್ರೋಕ್ಷಣೆಯಂತೆ ಸತ್ಯಂ ಶಿವಂ ಸುಂದರಂ ಅನಿಸಿಕೊಳ್ಳುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, December 18, 2021

ನನ್ನ ಓದು

2021 ರಲ್ಲಿಯೂ ಲಾಕ್‍ಡೌನ್, ವರ್ಕ್ ಫ್ರಮ್ ಹೋಮ್ ಎಲ್ಲ ಇದ್ದರೂ ಆಫೀಸಿಗೇ ಹೋಗಿ ನಿರ್ದಿಷ್ಟ ಅವಧಿಯಲ್ಲಿ ಅಂದಂದಿನ ಕೆಲಸ ಮುಗಿಸಿದ ಭಾವದಲ್ಲಿ ಮನೆಗೆ ಬಂದು ನಮ್ಮ ನಮ್ಮ ಇಷ್ಟದ ಕೆಲಸ, ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳುವಷ್ಟು ಪುರುಸೊತ್ತು ಮನಸ್ಸಿಗಾಗಲಿ, ಕೈ-ಕಣ್ಣುಗಳಿಗಾಗಲಿ ಆ ದಿನಗಳಲ್ಲಿಇರಲಿಲ್ಲವೆಂದೇ ಹೇಳಬೇಕು. ಹಾಗಿದ್ದೂ 2021ರಲ್ಲಿ ಓದಿದ ಪುಸ್ತಕಗಳತ್ತ ಕಣ್ಣು ಹಾಯಿಸಿದರೆ Not Bad ಅನಿಸುತ್ತದೆ. 

ಸುಮಾರು 25 ಪುಸ್ತಕಗಳ ಬಗ್ಗೆ ಬ್ಲಾಗ್ ಬರೆದಿದ್ದೇನೆ ಅನಿಸುತ್ತದೆ. ಅವುಗಳಲ್ಲಿ ಟಿ ಎಸ್ ಎಲಿಯೆಟ್ ಪುರಸ್ಕಾರಕ್ಕೆ ಪಾತ್ರರಾದ ಭಾನು ಕಪಿಲ್ ಅವರ ಕವಿತೆಗಳ ಸಂಕಲನಗಳು ಬಹಳ ಮುಖ್ಯ ಎಂದು ಈಗಲೂ ಅನಿಸುತ್ತದೆ. ನಾನು ಆಕೆಯ ಎಲ್ಲ ಪ್ರಕಟಿತ ಕವನ ಸಂಕಲನಗಳನ್ನೂ ಸ್ವಲ್ಪ ಕಷ್ಟಪಟ್ಟೇ ತರಿಸಿಕೊಂಡೆ ಎನ್ನಬೇಕು. ಅವರ How to Wash a Heart ನ ಕಿಂಡ್ಲ್ ಆವೃತ್ತಿ ಸಿಕ್ಕರೆ ಉಳಿದ Ban EN Banlieu, Schizophrene, Incubation a Space for Monsters, The Vertical Interrogation of Strangers ಪ್ರತಿಗಳು ಮುದ್ರಿತ ರೂಪದಲ್ಲಿ ಸಿಕ್ಕವು. 

ನನಗೆ ತುಂಬ ಇಷ್ಟವಾದ ಛಾಯಾ ಭಟ್ ಮತ್ತು ಅಮರೇಶ ಗಿಣಿವಾರ ಅವರ ಕಥಾ ಸಂಕಲನದ ಬಗ್ಗೆ ನಿರೀಕ್ಷಿತ ಉತ್ಸಾಹ ಓದುಗ/ವಿಮರ್ಶಕ ವಲಯದಲ್ಲಿ ಕಂಡು ಬರಲಿಲ್ಲ. ಇವರ ಕಥಾ ಸಂಕಲನಗಳು ಆ ವರ್ಷದ ಗಮನಾರ್ಹ ಕೃತಿಗಳೆಂದು ಪಟ್ಟಿಗಳಲ್ಲಿ ಕಾಣಿಸಿಕೊಂಡರೂ ನೂರಾರು ಪ್ರಶಸ್ತಿ/ಬಹುಮಾನಗಳ ಜಾತ್ರೆಯಲ್ಲಿ ಈ ಎರಡೂ ಕೃತಿಗಳ ಹೆಸರು ಕೂಡ ಕೇಳಿ ಬರಲಿಲ್ಲ! ಒಳ್ಳೆಯ ಕೃತಿಗಳಿಗೆ ಪ್ರಶಸ್ತಿ ಬರುವುದಿಲ್ಲ ಎಂದುಕೊಂಡು (ಅದರಲ್ಲಿ ನಮ್ಮನ್ನು ಅನಾಮತ್ ಸೇರಿಸಿಕೊಂಡು) ಹಿರಿಹಿರಿ ಹಿಗ್ಗಬಹುದು.


ಎಚ್ ಎಸ್ ರಾಘವೇಂದ್ರ ರಾವ್
ಅವರ ಅನುವಾದದ "ಪ್ಲೇಗ್" ನನಗೆ ತುಂಬ ಇಷ್ಟವಾದ ಇನ್ನೊಂದು ಕೃತಿ. ಬಹುಶಃ ಇದರೊಂದಿಗೇ ಇಲ್ಲಿ ಹೆಸರಿಸಬೇಕಾದ ಇನ್ನೊಂದು ಪುಸ್ತಕ, ಪ್ರಕಾಶ್ ನಾಯಕ್ ಅನುವಾದಿಸಿದ "ಅಪರಿಚಿತ". ಇದು ಕೂಡ ಅಲ್ಬರ್ಟ್ ಕಮೂನ ಕಾದಂಬರಿ. 


Brian Dillon ನ Sappose a Sentence ನಿಜಕ್ಕೂ ತುಂಬ ವಿಶಿಷ್ಟವಾದ ಪುಸ್ತಕ. Quotable quotation ಗಳಲ್ಲದ, ನಮ್ಮಲ್ಲಿ ಚಿಂತನೆಯನ್ನೊ, ಭಾವನೆಗಳನ್ನೊ ಉದ್ದೀಪಿಸಬಲ್ಲಂಥ ಅಪೂರ್ವ ವಾಕ್ಯ ಅಥವಾ ವಾಕ್ಯಗಳನ್ನು ಇಟ್ಟುಕೊಂಡು, ಆ  ಲೇಖಕನ ಬದುಕು, ಸಾಹಿತ್ಯ, ಆತನ ಕಾಲದ ಯಾವುದೋ ವಿದ್ಯಮಾನ ಎಂದೆಲ್ಲ ವಿವರವಾಗಿ ತೆರೆದಿಡುವ ಈ ಬಗೆಯ ಪುಸ್ತಕಗಳು ಕನ್ನಡದಲ್ಲೂ ಬಂದಿದ್ದರೆ ಚೆನ್ನಾಗಿತ್ತು ಅನಿಸುವಂತೆ ಮಾಡಿದ ಪುಸ್ತಕವಿದು.


Flights ಕಾದಂಬರಿಗೆ ನೊಬೆಲ್ ಪ್ರಶಸ್ತಿ ಪಡೆದ Olga Tokarczuk ಈ ವರ್ಷ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆಯ The Lost Soul ಕಾದಂಬರಿಯ ಬಗ್ಗೆ ಬ್ಲಾಗಿನಲ್ಲಿದೆ. ವರ್ಷಾಂತ್ಯಕ್ಕೆ ಬಹು ನಿರೀಕ್ಷಿತ ಹಾಗೂ ವಿಪರೀತ ಕಾಯಿಸಿದ ಮಹತ್ವಾಕಾಂಕ್ಷೆಯ ಬೃಹತ್ ಕೃತಿ The Book of Jacob ಹೊರಬಿದ್ದಿದೆ. 


ಕನ್ನಡದ ಪ್ರಮುಖ ಕತೆಗಾರ ಅಮರೇಶ್ ನುಗಡೋಣಿಯವರು ಚೊಚ್ಚಲ ಕಾದಂಬರಿಯಾಗಿ ಈ ವರ್ಷ ‘ಗೌರಿಯರು’ ಕೃತಿಯನ್ನು ಹೊರತಂದರು. ಕಳೆದ ವರ್ಷವೇ ಅವರ ‘ದಂದುಗ’ ಹೊರಬಿದ್ದಿದ್ದರೂ ಅದು ಕ್ರಮಾಂಕದಲ್ಲಿ ಎರಡನೆಯ ಕಾದಂಬರಿ.


ಕನ್ನಡದ ಪ್ರಮುಖ ಕಾದಂಬರಿಕಾರ, ಕವಿ, ಕತೆಗಾರ, ಸಂಘಟಕ, ವೈದ್ಯ ಇತ್ಯಾದಿಗಳೆಲ್ಲ ಆಗಿರುವ ಡಾ. ನಾ ಮೊಗಸಾಲೆಯವರು ತಮ್ಮ "ಧರ್ಮಯುದ್ಧ"ದ ಮೂಲಕ ಸದ್ದೆಬ್ಬಿಸಿದ ವರ್ಷವಿದು. ಈ ಕಾದಂಬರಿ ತನ್ನ ಅತ್ಯಂತ ಸಮಕಾಲೀನ ವಸ್ತು, ಆಪ್ತವಾಗಿ ಬಿಡುವ ಅಥೆಂಟಿಕ್ ಆದ ವಾತಾವರಣ, ಸುಲಲಿತ ಮತ್ತು ನಿಯಂತ್ರಿತ ನಿರೂಪಣೆ ಮುಂತಾದ ಗುಣಗಳಿಂದ ಆಕರ್ಷಕವಾಗಿಯೂ, ಚಿಂತನೆಗೆ ಹಚ್ಚಬಲ್ಲಂತೆಯೂ ಮೂಡಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಪರೂಪವೆನ್ನಿಸುವ ಕ್ಲಾಸಿಕಲ್ ಕಾದಂಬರಿಗಳ ಗುಣಲಕ್ಷಣಗಳನ್ನು ಹೊಂದಿ ಹೊರಬಂದ ಕೃತಿಯಾಗಿ ಇದು ನನಗೆ ತುಂಬ ಇಷ್ಟವಾದ ಕೃತಿ.


ಕನ್ನಡದ ಮಹತ್ವದ ಬರಹಗಾರ ವಿವೇಕ ಶಾನಭಾಗ ಅವರು ಈ ವರ್ಷ ಒಂದು ನಾಟಕ ಮತ್ತು ಒಂದು ಕಾದಂಬರಿಯೊಂದಿಗೆ ಒಳ್ಳೆಯ ಓದನ್ನು ಒದಗಿಸಿದರು. ಅವರ "ಸಕೀನಾಳ ಮುತ್ತು" ಕಾದಂಬರಿ ಹಾಗೂ "ಇಲ್ಲಿರುವುದು ಸುಮ್ಮನೆ" ರಂಗನಾಟಕ ಈ ವರ್ಷದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಕೃತಿಗಳಲ್ಲಿ ಮುಖ್ಯವಾದವು. ಹಾಗೆಯೇ ಜಯಂತ್ ಕಾಯ್ಕಿಣಿಯವರು ಕೂಡ ಒಂದು ಕಥಾಸಂಕಲನ ಮತ್ತು ಒಂದು ಕವನ ಸಂಕಲನದೊಂದಿಗೆ ಕನ್ನಡಕ್ಕೆ ಜೀವಕಳೆಯನ್ನು ತಂದರೆನ್ನಬೇಕು. ಅವರ "ವಿಚಿತ್ರಸೇನನ ವೈಖರಿ" ಮತ್ತು "ಅನಾರ್ಕಲಿಯ ಸೇಫ್ಟಿಪಿನ್" ಕನ್ನಡದ ಓದುಗರ ಅಪಾರ ಪ್ರೀತಿಗೆ ಭಾಜನವಾಯಿತೆನ್ನಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಂಬಾರರು ತಮ್ಮ ಕಾದಂಬರಿಯೊಂದಿಗೆ ಪ್ರಕಟಗೊಂಡ ವರ್ಷವಾಗಿಯೂ 2021 ದಾಖಲಾಯಿತು. "ಚಾಂದ್‌ಬೀ ಸರ್ಕಾರ್" ಅವರ ಹೊಸ ಕಾದಂಬರಿ. ಕನ್ನಡದ ಲಿಪಿಬ್ರಹ್ಮ ಕೆ ಪಿ ರಾವ್ ಅವರ "ವರ್ಣಕ" ಕೂಡ 2021ರ ಒಂದು ಹೊಸ ದಾಖಲೆ.

ಉಳಿದಂತೆ ಮನೋಹರ ಗ್ರಂಥ ಮಾಲಾ ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡಕ್ಕೆ ಬಹಳ ಮೌಲಿಕವಾದ ಕೃತಿಗಳನ್ನು ಸೇರ್ಪಡೆಗೊಳಿಸಿದೆ. 


ಕನ್ನಡದ ಮಹತ್ವದ ಕವಿ ಜ ನಾ ತೇಜಶ್ರೀ ಅವರ "ಯಕ್ಷಿಣಿ ಕನ್ನಡಿ" ಈ ವರ್ಷ ಕನ್ನಡದ ಕವಿಮನಗಳನ್ನು ತಣಿಸಿದ ಮಹತ್ವದ ಕೃತಿ. 


ತನಗೆ ಸಾಹಿತಿಯಾಗುವ ಯಾವುದೇ ಉದ್ದೇಶವಿಲ್ಲ, ಕೊನೆಯಲ್ಲಿ ಬಹುಶಃ ತಾನು ಏನಾಗುತ್ತೇನೋ ತನಗೇ ತಿಳಿಯದು ಎಂದು ಮನಬಿಚ್ಚಿ ಮಾತನಾಡುವ Adania Shibli ಯ ಅರೇಬಿಯನ್ ಕಾದಂಬರಿ The Minor Details  ಪ್ರತಿಯೊಬ್ಬರೂ ಓದಬೇಕಾದ ಒಂದು ಅಪರೂಪದ ಕಾದಂಬರಿ. ಇಸ್ರೇಲ್ ಮತ್ತು ಪ್ಯಾಲಸ್ತೇನಿ ಯುದ್ಧಾವಂತಾರದ ಒಂದು ಚಿತ್ರವನ್ನು ವಿಶಿಷ್ಟ ಬಗೆಯಲ್ಲಿ ಕಟ್ಟಿಕೊಡುವ ಈ ಕೃತಿ ಸಂವೇದನೆಗಳ ನೆಲೆಯಲ್ಲೂ, ರಾಚನಿಕ ಶಿಲ್ಪದ ನೆಲೆಯಲ್ಲೂ ಗಮನಿಸಬೇಕಾದ ಕಾದಂಬರಿ.


ಕವಿತೆಗಳೆಂದರೇ ಅಲರ್ಜಿಯಾದಂತೆ ಮಾತನಾಡ ತೊಡಗುವ Ben Lerner ನ ಮಾತುಗಳನ್ನು ಕೇಳುತ್ತಿದ್ದರೆ ನಾವೆಲ್ಲ ಕವಿತೆಗಳಿಂದ ನಿಜಕ್ಕೂ ಏನನ್ನು ನಿರೀಕ್ಷಿಸುತ್ತೇವೆ ಮತ್ತು ಯಾಕೆ ನಮಗೆ ಬಹುಪಾಲು ಪ್ರಕಟಿತ ಕವಿತೆಗಳು ನಿರಾಶೆಯನ್ನುಂಟು ಮಾಡುತ್ತವೆ ಎನ್ನುವುದು ಅರ್ಥವಾದೀತು. 


ಸ್ವತಃ Ben Lerner ನ ಇದುವರೆಗಿನ ಮೂರೂ ಕವನ ಸಂಕಲನಗಳ ಸಂಯುಕ್ತ ಸಂಪುಟ ನಿಮಗೆ ದೊರೆತರೆ ಅಂಥ ನಿರೀಕ್ಷೆಯ ಹೊಳೆಯಲ್ಲಿ ಮುಳುಗಿ ತೇಲಿದ ಪ್ರತ್ಯಕ್ಷ ಅನುಭವವೂ ದೊರೆತೀತು. ಗಮನಿಸಬೇಕಾದ ಬರಹಗಾರ Ben Lerner.


ಮೊನ್ನೆ ಮೊನ್ನೆ ಸೆಪ್ಟೆಂಬರ್ 23ಕ್ಕೆ ತೀರಿಕೊಂಡ Kjell Askildsen ಎಂಥ ಅದ್ಭುತ ಕತೆಗಾರನಾಗಿದ್ದ ಎನ್ನುವುದನ್ನು ಸೂಚಿಸಲು ಅವನ ಒಂದು ಕತೆಯನ್ನು ಯಥಾನುಶಕ್ತಿ ಅನುವಾದಿಸಿದ್ದೇನೆ, ಬ್ಲಾಗಿನಲ್ಲಿದೆ. ಅವನ ತೀರ ಸೀಮಿತ ಸಂಖ್ಯೆಯ ಕತೆಗಳಷ್ಟೇ ಇಂಗ್ಲೀಷಿನಲ್ಲಿ ಸಿಗುತ್ತಿವೆ. ಸೆಪ್ಟೆಂಬರ್ 1929 ರಲ್ಲಿ ನಾರ್ವೆಯಲ್ಲಿ ಹುಟ್ಟಿದ Kjell Askildsen ಅಷ್ಟು ಖ್ಯಾತನಲ್ಲವಾದರೂ ಅವನ ಕತೆಗಳು ಸೂಕ್ಷ್ಮ ಸಂವೇದನೆಯಿಂದ ನಳನಳಿಸುತ್ತಿರುತ್ತವೆ ಎಂಬ ಕಾರಣಕ್ಕಾದರೂ ಆತ ಮುಖ್ಯ.


ಬಿ ಚಂದ್ರೇಗೌಡ
ರ ಎರಡು ಪುಸ್ತಕಗಳು ಈ ವರ್ಷ ಓದಲು ಸಿಕ್ಕವು. ಒಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇನ್ನೊಂದನ್ನು ಓದುವ ಅದೃಷ್ಟ ತೆರೆಯಲು ಅವರೇ ಕಾರಣರಾದರು. ಈ ಹಿಂದೆ ಬಿ ಚಂದ್ರೇಗೌಡರ "ಹಳ್ಳೀಕಾರನ ಅವಸಾನ" ಕೃತಿಯನ್ನೂ ಹೀಗೆಯೇ ಪಡೆದು ಓದುವ ಸಂದರ್ಭ ಬಂದಿತ್ತು. ಅಪರೂಪದ ಬರಹಗಾರರೊಬ್ಬರ ಕೃತಿಗಳು ಸುಲಭವಾಗಿ ಓದುಗರ ಕೈಗೆ ಸಿಗದಂತಾಗಿರುವುದು ಒಂದು ದುರಂತ. 


ಇವರ "ಲಂಕೇಶರ ಜೊತೆಗೆ" ಪುಸ್ತಕವನ್ನು ಸಾಕಷ್ಟು ಮಂದಿ ಕೇಳಿ ಬರುತ್ತಿದ್ದಾರೆಂದು ನನ್ನ ಖಾಯಂ ಪುಸ್ತಕ ಮಾರಾಟಗಾರ, ಮಂಗಳೂರಿನ ನವಕರ್ನಾಟಕ ಮಳಿಗೆಯ ಹರೀಶ್ ಸ್ವತಃ ಹೇಳುತ್ತಾರೆ. ಚಂದ್ರೇಗೌಡರು ಏನನ್ನೇ ಬರೆದರೂ ಅದನ್ನು ಓದಬೇಕು, ಬೇರೆ ಬೇರೆ ಕಾರಣಗಳಿಗಾಗಿ ಕೂಡ.


ಎಸ್ ಹರೀಶ್ ಅವರ ಮಲಯಾಳಂ ಕಾದಂಬರಿ Moustache ಬಹು ಅಪರೂಪದ, ಪ್ರತಿಯೊಬ್ಬರೂ ಓದಲೇ ಬೇಕಾದ, ಸಾಕಷ್ಟು ಜನಪ್ರಿಯವೂ, ಬಹುಪ್ರಖ್ಯಾತವೂ ಆದ ಕೃತಿ. ಇದರಷ್ಟೇ ಮುಖ್ಯವಾದ ಇನ್ನೊಂದು ಕೃತಿ ಇತ್ತೀಚೆಗೆ ತೀರಿಕೊಂಡ, ಬಹುಮುಖ್ಯ ತಮಿಳು ಕತೆಗಾರ Ki. Rajanarayanan ಅವರ "ಗೋಪಾಲಪುರಂ". ಇದರ ಬಗ್ಗೆ ಇಷ್ಟೇ ಹೇಳಿದರೆ ತೃಪ್ತಿಯಿಲ್ಲ, ಪ್ರತ್ಯೇಕ ಬರಹ ಬರೆಯುವೆ.


ನೊಬೆಲ್ ಪ್ರಶಸ್ತಿ ಪುರಸ್ಕೃತ ಪೊಲಿಷ್ ಕವಿ Wislawa Szymborska (ವಿಸ್ಲಾವಾ ಶಿಂಬೊಷ್ಕಾ) ಳ ಹೊಸ ಗದ್ಯ ಕೃತಿ How to Start Writing (and When to Stop) - Advice for Authors  ಮತ್ತೊಂದು ಮನಸೆಳೆದ ಕೃತಿ.  ಇದು ಆಕೆ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕಿಯಾಗಿ ಹೊಸ ಬರಹಗಾರರ (ಸಾಮಾನ್ಯವಾಗಿ ತಿರಸ್ಕೃತ) ಕತೆ/ಕವಿತೆ ಇತ್ಯಾದಿಗಳನ್ನು ಕುರಿತು ನೀಡಿದ ಸಲಹೆ/ಸೂಚನೆ/ಟೀಕೆ/ಟಿಪ್ಪಣಿಗಳ ಸಂಕಲನ. ಅವು ನಾಲ್ಕೈದು ಸಾಲಿನ ಬರಹಗಳಾಗಿದ್ದು ಮುದ ನೀಡುವ ಬರವಣಿಗೆಯನ್ನಾಗಿಯೂ ಓದಬಹುದು (ಬೇರೆಯವರ ಬರಹದ ಕುರಿತ ಹರಿತ ಟೀಕೆ ಕೊಡುವ ಮನರಂಜನೆಯ ತರ) ಅಥವಾ ನಮ್ಮನ್ನೇ ಕುರಿತು ಬರೆದಿದ್ದು ಅಂದುಕೊಂಡು ಮುನಿಸು ಬಂದರೂ ತಿದ್ದಿಕೊಳ್ಳುವ ಮನಸ್ಸಿಟ್ಟುಕೊಂಡೂ ಓದಬಹುದು. ಈ ಬಗ್ಗೆ ಬ್ಲಾಗ್ ಬರೆಯುವ ಉದ್ದೇಶದಿಂದ ಆಯ್ದ ಟಿಪ್ಪಣಿಗಳನ್ನು ಅನುವಾದಿಸುತ್ತಿದ್ದೇನೆ.


J P Losty ಮತ್ತು Sumedha V Ojha ದೇಶ ವಿದೇಶ ಸುತ್ತಿ, ಎಲ್ಲೆಲ್ಲೊ ಹರಿದು ಹಂಚಿ ಹೋಗಿರುವ ಹದಿನೇಳನೆಯ ಶತಮಾನದ ರಜಪೂತ ಕಲಾವಿದರ ಪೇಂಟಿಂಗ್ಸ್ ಹೇಳುವ ರಾಮಾಯಣವನ್ನು ಇಲ್ಲಿ ಅವೇ ಚಿತ್ರಗಳಲ್ಲಿ ಮರು ನಿರೂಪಿಸಲಾಗಿದ್ದು, ಇದೊಂದು ಅಪೂರ್ವ ಕಲಾಸಂಗ್ರಹ. ರೋಲಿ ಬುಕ್ಸ್ ಇದನ್ನು ಮುದ್ರಿಸಿದ್ದು ಆಸಕ್ತರು ಗಮನಿಸಬೇಕಿದೆ.


ನಮ್ಮ ಕತೆಗಾರ ಸಚ್ಚಿದಾನಂದ ಹೆಗಡೆಯವರು ಸಂಗೀತಶಾಸ್ತ್ರವನ್ನಿಟ್ಟುಕೊಂಡು, ವಿವಿಧ ರಾಗಗಳು ಸೃಜಿಸುವ ವಿಭಿನ್ನ ವಿನ್ಯಾಸಗಳ ಕುರಿತೇ ಒಂದು ಪುಸ್ತಕ ಬರೆದರು, "ಸ್ವರವಿನ್ಯಾಸ" ಎಂದು ನೆನಪು. ಆದರೆ ಸಂಗೀತ ಕ್ಷೇತ್ರದ ಜಿಜ್ಞಾಸುಗಳನ್ನು ಸೆಳೆದಷ್ಟು ಸಾಹಿತ್ಯ ಕ್ಷೇತ್ರದ ಓದುಗರನ್ನು ಅದು ಸೆಳೆದಂತಿಲ್ಲ. Alison Jane ಸಾಹಿತ್ಯ ಕೃತಿಯೊಂದು ತನ್ನ ನಿರೂಪಣಾ ವಿಧಾನದ ಹತ್ತು ಹಲವು ಪಟ್ಟುಗಳಿಂದ, ಅಂದರೆ ಭಾಷೆ, ಅದರ ಲಯ, ಶಬ್ದದ ಬಳಕೆ, ಹಿಡಿದಿಟ್ಟುಕೊಂಡು ಬಿಚ್ಚುತ್ತ ಹೋಗುವ ತಂತ್ರ, ಓದುಗನ ಮೆದುಳನ್ನು ನಿಯಂತ್ರಿಸುತ್ತಾ ಅವನನ್ನು ಯಾವುದಕ್ಕೋ ಸಜ್ಜುಗೊಳಿಸಿ ಪರವಶಗೊಳಿಸುವ ಮೋಡಿಕಾರಕ ಶೈಲಿ, ಪಂಚೇಂದ್ರಿಯಗಳಿಗೂ ಒಂದು ಅನುಭವವನ್ನು ಭಾಷೆಯ ಮೂಲಕವೇ ತಲುಪಿಸಬಲ್ಲ ಕಸು ತುಂಬಿಕೊಳ್ಳಲು ನಿರೂಪಕ ಪಡುವ ಪಡಿಪಾಟಲು ಎಂದೆಲ್ಲ ವಿವರ ವಿವರವಾಗಿ. ನಿರ್ದಿಷ್ಟ ಸಾಹಿತ್ಯ ಕೃತಿಗಳ ಸ್ಪಷ್ಟ ಸಾಕ್ಷ್ಯದೊಂದಿಗೆ ವಿವರಿಸುತ್ತ ಹೋಗುವ ಕೃತಿ, Meander, Spiral, Explode. ಇಲ್ಲಿ ಆಕೆ ಮೂರನ್ನು ಮಾತ್ರ ಹೆಸರಿಸಿದ್ದರೆ ಉಳಿದ ನೂರನ್ನು ಕೃತಿಯ ಒಳಪುಟಗಳು ತೆರೆದಿಡುತ್ತ ಹೋಗುತ್ತವೆ. ಓದುಗರ ಬೆವರಿಳಿಸಬಲ್ಲ ಅಪರೂಪದ ಕೃತಿಯಿದು.


ತುಂಬ ನಿರಾಸೆ ಹುಟ್ಟಿಸಿದ ಎರಡು ಪುಸ್ತಕಗಳು, ಒಂದು ಈ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ದಾಮೋದರ ಮೊವ್ಜೊ ಅವರ "ಜೀವ ಕೊಡಲೆ ಚಹ ಕುಡಿಯಲೆ", ಇನ್ನೊಂದು ಮ ಸು ಕೃಷ್ಣಮೂರ್ತಿಯವರು ಅನುವಾದಿಸಿದ "ಅನಾಮದಾಸನ ಕಡತ". ಚಹ ಕುಡಿಯಲೆ, ಜೀವ ಕೊಡಲೆ ಎಂಬಷ್ಟು ಜಿಜ್ಞಾಸೆ ಏನಿರಬಹುದು ಎಂಬ ಕುತೂಹಲಕ್ಕೆ ಬಲಿಯಾಗುವುದಕ್ಕಿಂತ ಮೊಕಾಶಿಯವರ "ಗಂಗವ್ವ ಗಂಗಾಮಾಯಿ"ಯನ್ನೇ ಇನ್ನೊಮ್ಮೆ ಓದಿದರೆ ಪೆಚ್ಚಾಗುವ ಸರದಿ ತಪ್ಪಿಸಬಹುದು. ವಿವೇಕ ಶಾನಭಾಗರ "ಒಂದು ಬದಿ ಕಡಲು" ಕೂಡ ಆದೀತು. ಈ ಕೃತಿಯನ್ನು ಅನುವಾದಿಸಿದವರಿಗಾಗಲಿ, ಪ್ರಕಟಿಸಿದವರಿಗಾಗಲಿ ಕನ್ನಡದಲ್ಲಿ ಇದನ್ನು ಮೀರಿಸಿದ ಕೃತಿಗಳು ಇರುವ ಪ್ರಜ್ಞೆ ಇದ್ದಂತಿಲ್ಲ. ಇನ್ನು "ಅನಾಮದಾಸನ ಕಡತ" ಪುಸ್ತಕವನ್ನು ದೂರುವುದಿದ್ದರೆ ಬೇರೆ ಕಾರಣಕ್ಕೆ. 


ಸಾಹಿತ್ಯಿಕವಾಗಿ ಇದೊಂದು ಉಪನಿಷತ್ತಿನ ಕತೆಯನ್ನು ಆಧರಿಸಿದ ಕೃತಿ ಎನ್ನಬಹುದು. ಆದರೆ ಉಪನಿಷತ್ತಿಗೂ ಇದಕ್ಕೂ ಸಂಬಂಧ ಅಷ್ಟೇನಿಲ್ಲ. ಬ್ರಹ್ಮ ಅಂದರೇನು, ಆತ್ಮ ಎಂದರೇನು, ಸತ್ಯ ಎಂದರೇನು ಎನ್ನುವಂಥ ಹಳೆಯ ಕಗ್ಗವನ್ನೇ ಇಲ್ಲಿ ಮತ್ತೆ ಮತ್ತೆ ಜಗಿಯಲಾಗಿದೆ. ಅದನ್ನು ಎಷ್ಟು ಜಗ್ಗಿದರೂ ನಾವು ಸಾಯದೇ ಪರಿಹಾರವಾಗದ ಪ್ರಶ್ನೆಯಾಗಿಯೇ ಅದು ಉಳಿಯಲಿದೆ. ಬದುಕುವುದಕ್ಕೆ ಮಾಡಲೇಬೇಕಾದ ತುರ್ತು ಉದ್ಯೋಗ ಏನೂ ಇಲ್ಲದ ಐಷಾರಾಮಿಗಳಿಗಾಗಿಯೇ ಇಂಥ ಪುಸ್ತಕಗಳಿರುತ್ತವೆ ಎನ್ನುವುದಕ್ಕೆ ಈ ಪುಸ್ತಕದ ಅಲಂಕಾರವೇ ಸಾಕ್ಷಿ. ಇನ್ನೂರು ಇನ್ನೂರಿಪ್ಪತ್ತು ಪುಟಗಳ ಈ ಪುಟ್ಟ ಪುಸ್ತಕವನ್ನು ದುಬಾರಿ ಬೆಲೆಯ ಕಾಗದ ಬಳಸಿ, ಚಿನ್ನದ ಲೇಪದ ಬಾರ್ಡರಿನೊಂದಿಗೆ ರಟ್ಟಿನ ಪುಸ್ತಕವನ್ನಾಗಿಸಿ ಭರ್ಜರಿ ನಾಲ್ಕುನೂರ ಐವತ್ತು ರೂಪಾಯಿ ಬೆಲೆ ಇರಿಸಿ ಕನ್ನಡದ ಓದುಗರನ್ನು ಮೂರ್ಖರನ್ನಾಗಿಸಿದ ಕೀರ್ತಿ ಬಹುವಚನ ಪ್ರಕಾಶನಕ್ಕೇ ಸಲ್ಲಬೇಕು.  ಉಳ್ಳವರ ಪ್ರದರ್ಶನದ ಶೋಕಿ ಇದು. ಈ ಕಡತ ಜಾಡಿಸುವುದಕ್ಕಿಂತ ರಾಮಕೃಷ್ಣ ಆಶ್ರಮದ ಯಾವುದಾದರೂ ಉಪನಿಷತ್ ಕತೆಗಳು ಎಂಬ ಪುಸ್ತಕ ಖರೀದಿಸಿ ಓದಬಹುದು. ಮತ್ತೂ ಸಮಯವಿದ್ದರೆ ದ್ವಾರಕೀಶ್ ಮಂಜುಳ ಅಭಿನಯದ ಮಂಕುತಿಮ್ಮ ಸಿನಿಮಾ ನೋಡುವುದು ವಾಸಿ. ಇದರ ಅರ್ಧ ಬೆಲೆಗೆ ಪೂರ್ತಿ ಕಡತ ಓದಿದ ಸುಖ ಸಿಗುತ್ತದೆ.

ಇಂಥ ಹೊಸ ಪುಸ್ತಕಗಳನ್ನು ಓದುವುದಕ್ಕಿಂತ ರಾಮಚಂದ್ರ ಕೊಟ್ಟಲಗಿ ಅವರಂಥವರ "ದೀಪ ಹೊತ್ತಿತು" ತರದ ಕಾದಂಬರಿಗಳನ್ನೇ ಮತ್ತೆ ಮುದ್ರಿಸುವುದು, ಓದುವುದು ಮಾಡಿದರೆ ಪ್ರಸ್ಥಾನತ್ರಯಗಳನ್ನು ಪಾರಾಯಣ ಮಾಡಿದ ಪುಣ್ಯ ಪ್ರಾಪ್ತಿಯಾದೀತು. ಈ ವರ್ಷದ ಆರಂಭದಲ್ಲೇ ಓದಿದ ಕಾದಂಬರಿಯಿದು. ಮೊದಲ ಭಾಗ ಮುಗಿಯುತ್ತಲೇ ಎರಡನೆಯ ಭಾಗ ಅಲಭ್ಯ ಎಂಬ ಆತಂಕ ಕಾಡತೊಡಗಿತು. ಅದೃಷ್ಟವಶಾತ್ ಮನೋಹರ ಗ್ರಂಥ ಮಾಲಾದ ಸಮೀರ ಜೋಶಿ ಎರಡನೆಯ ಭಾಗ ಲಭ್ಯವಿದೆ ಎಂಬ ಎದೆಗೆ ತಂಪೆರೆಯುವ ಸುದ್ದಿ ಕೊಟ್ಟಿದ್ದಲ್ಲದೆ ತಕ್ಷಣ ನನಗೊಂದು ಪ್ರತಿಯನ್ನೂ ಒದಗಿಸಿ ಪುಣ್ಯ ಕಟ್ಟಿಕೊಂಡರು!


Rodrigo Garcia (ಮಾರ್ಕೆಸ್ ಮಗ) ಬರೆದ A Farewell to Gabo and Mercedes ಅಂಥ ವಿಶೇಷವೇನಿಲ್ಲದ ಕೃತಿಯಾಗಿಯೇ ಉಳಿಯುತ್ತದೆ. ಈಗಾಗಲೇ ವಿಪುಲ ಸಂದರ್ಶನಗಳು, ಆತ್ಮಕತೆಯಂಥ ಲಿವಿಂಗ್ ಟು ಟೆಲ್ ದ ಟೇಲ್, ಐ ಯಾಮ್ ನಾಟ್ ಹಿಯರ್ ಟು ಗಿವ್ ಅ ಸ್ಪೀಚ್,  ದ ಫ್ರ್ಯಾಗ್ರೆನ್ಸ್ ಆಫ್ ಗ್ವಾ ಮೊದಲಾದ ಕೃತಿಗಳಲ್ಲಿ ಸಿಗುವುದರಾಚೆಯದೇನೂ ಇಲ್ಲಿಲ್ಲ. ಹಾಗಿದ್ದೂ ಮಾರ್ಕೆಸ್ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಇದನ್ನು ಓದಬಹುದು.


Self Portrait of an Other  - ಇದು Cees Nooteboom ಮತ್ತುMax NeuMann ಅವರ ಕವಿತೆ ಮತ್ತು ಪೇಂಟಿಂಗ್ಸ್ ಸೇರಿದ ಜಂಟಿ ಕೃತಿ. ಇಲ್ಲಿನ ಚಿತ್ರಗಳಿಗಿಂತ ಕವಿತೆಗಳು ಹೆಚ್ಚು ಮನಸೆಳೆಯುವಂತಿವೆ. ನೆದರ್ಲ್ಯಾಂಡಿನ ಕವಿಯ ವಿಶಿಷ್ಟ ರಚನೆಗಳನ್ನು ಚಿತ್ರಗಳ ಹಂಗಿಲ್ಲದೆಯೂ ಓದಿ ಆನಂದಿಸಬಹುದಾಗಿದೆ.


ಜಿ ಎಸ್ ಜಯದೇವ
ಅವರ "ಸೋಲಿಗ ಚಿತ್ರಗಳು" ಕೃತಿ ಮತ್ತೊಮ್ಮೆ ತೇಜಸ್ವಿ ಜಗತ್ತಿಗೆ ಪುಟ್ಟ ಪ್ರವೇಶ ಒದಗಿಸುವ ಲವಲವಿಕೆ, ಜೀವಂತಿಕೆ ಮತ್ತು ಒಳನೋಟಗಳನ್ನು ಹೊಂದಿರುವ ಅಪರೂಪದ ಕೃತಿ. ಇದೊಂದು ಎಲ್ಲರೂ ಓದಬಹುದಾದ, ಓದಬೇಕಾದ ಅಪರೂಪದ, ಮೌಲಿಕ ಕೃತಿ.


ಇವೆಲ್ಲ ಅಲ್ಲದೆ ಇನ್ನೂ ಬಹಳಷ್ಟು ಮಹತ್ವದ ಕೃತಿಗಳು 2021ರಲ್ಲಿ ಬಂದಿವೆ. ಎಸ್ ದಿವಾಕರ್ ಅವರ ಕೃತಿಗಳು ಮರುಮುದ್ರಣಗೊಂಡಿವೆ. ಯಾವತ್ತೂ ಸಹೃದಯರು ಓದಬಹುದಾದ, ಓದಬೇಕಾದ ಮಹತ್ವದ ಕೃತಿಗಳನ್ನೇ ಕೊಡುತ್ತ ಬಂದಿರುವ ಎಸ್ ದಿವಾಕರ್ ಯಾವತ್ತೂ ನಿರಾಶೆಗೊಳಿಸದ ಅಪರೂಪದ ಬರಹಗಾರ, ಕನ್ನಡದ ನಿಜ ಆಸ್ತಿ.  


ಹಾಗೆಯೇ ಟಿ ಪಿ ಅಶೋಕ್ ಅತ್ಯಂತ ಲವಲವಿಕೆಯಿಂದ ಕನ್ನಡದ ಅನೇಕ ಮಹತ್ವದ ಕೃತಿಕಾರರನ್ನು ಕುರಿತು ಬರೆಯತೊಡಗಿದ್ದಾರೆ, ಕೃತಿಗಳನ್ನು ಹೊರತರುತ್ತಿದ್ದಾರೆ. ಕಾದಂಬರಿಗಳನ್ನು ಕುರಿತ ಅವರ ಮಹತ್ವದ ಸಂಪುಟದಲ್ಲಿ ತಪ್ಪಿ ಹೋಗಿರುವ ಶಾಂತಿನಾಥ ದೇಸಾಯಿ ಕುರಿತ ಪುಟ್ಟ ಪುಸ್ತಕ ಬಂದಿದೆ. ಕಾರಂತರ ಕುರಿತ ವಿಶಿಷ್ಟ ಕೃತಿಯೊಂದು ಮರುಮುದ್ರಣಗೊಂಡಿದೆ. ಪುಣೇಕರ್ ಬಗ್ಗೆಯೂ ಬರೆದಿರುವ ಅವರು ಬೇಗನೆ ಚಿತ್ತಾಲರ ಬಗ್ಗೆಯೂ ದೇವರ ಗೆಣ್ಣೂರ ಬಗ್ಗೆಯೂ ಬರೆದು ಕಾದಂಬರಿ ಲೋಕದ ಚಿತ್ರವನ್ನು ಪರಿಪೂರ್ಣಗೊಳಿಸುತ್ತಾರೆ ಎನ್ನುವ ನಿರೀಕ್ಷೆಯಿದೆ. ಬಿ ಆರ್ ಲಕ್ಷ್ಮಣರಾಯರು ಹಲವಾರು ಕೃತಿಗಳನ್ನು, ಬೆಸ್ಟ್ ಆಫ್ ಬಿಆರೆಲ್ ತರದ ಪ್ರಾತಿನಿಧಿಕ ಸಂಕಲನವನ್ನು, ಅನುವಾದಿತ ಕವಿತೆಗಳ ಸಂಕಲನವನ್ನು ತಂದು ಹೊಸ ತಲೆಮಾರಿಗೆ ಉಪಕಾರವನ್ನೇ ಮಾಡಿದ್ದಾರೆ. ಲಕ್ಷ್ಮೀಶ ತೋಳ್ಪಾಡಿಯವರ ಪುಸ್ತಕಗಳನ್ನು ಕಾದು, ಪಡೆದು ಓದುವವರಿದ್ದಾರೆ. ಅವರ "ಸಾವು ಒಡ್ಡುತ್ತಿರುವ ಆಮಿಷ - ಬಾಳು" ಎಂಬ ವಿಶಿಷ್ಟ ಕೃತಿ ಹೊರಬಂದ ವರ್ಷ 2021. ಸಾವಿನ ಸುದ್ದಿ ಕೇಳಿ ಕೇಳಿ ಬಸವಳಿದ ಮನಸ್ಥಿತಿಯಲ್ಲಿ ಇದನ್ನು ಓದಲು ಮನಸ್ಸಾಗದಿದ್ದರೂ ಖರೀದಿಸಲು ಮರೆಯಲಿಲ್ಲ!


ಹೊಸಬರಲ್ಲಿ ಚೈತ್ರಿಕಾ ಹೆಗಡೆಯವರ "ನೀಲಿ ಬಣ್ಣದ ಸ್ಕಾರ್ಪು" ನನ್ನ ಗಮನ ಸೆಳೆದ ಸಂಕಲನ. ಇದನ್ನು ಇನ್ನೂ ಪೂರ್ತಿಯಾಗಿ ಓದುವುದು ಸಾಧ್ಯವಾಗಲಿಲ್ಲ. ಹಾಗೆಯೇ ಭುವನಾ ಹಿರೇಮಠ ನಮ್ಮ ನಡುವಿನ ಭರವಸೆ ಹುಸಿಯಾಗಿಸದ ಕವಿ. ಅವರ ಸಂಕಲನವನ್ನೂ ಅಂತೂ ಇಂತೂ ತರಿಸಿಕೊಂಡರೂ ಓದುವುದಾಗಲಿಲ್ಲ. ಇದೇ ಸಾಲಲ್ಲಿ ಸನ್ಮಿತ್ರ ವಿಕ್ರಮ್ ಹತ್ವಾರ್ ಅವರ ಕವನ ಸಂಕಲನ ಮತ್ತು ಅಭಿಮಾನದ ಕವಿ ಜ ನಾ ತೇಜಶ್ರೀ ರೆಕಮಂಡ್ ಮಾಡಿ ಸ್ವತಃ ಒದಗಿಸಿದ ಎಚ್ ಆರ್ ಸುಜಾತ ಅವರ "ಜೇನುಮಲೆಯ ಹುಡುಗಿ" ಇದ್ದಾರೆ. ಕೆ ಸತ್ಯನಾರಾಯಣರ "ಅವರವರ ಭವಕ್ಕೆ ಅವರವರ ಭಕುತಿಗೆ" ಮತ್ತು ಆನಂದ ಝಂಜರವಾಡರ "ಶಬ್ದ ಸುಪಾರಿ"ಯ ಜೊತೆಗೆ ಡಾ. ಗಜಾನನ ಶರ್ಮರೂ ಬಾ ಓದು ಮೊದಲು ನನ್ನನ್ನು ಎಂಬ ಒತ್ತಡ ಹಾಕುತ್ತಿರುವ ಪ್ರಮುಖರು.

ಇನ್ನೂ ತರಿಸಿಕೊಳ್ಳಲಾಗದೆ ನನ್ನನ್ನು ಕಾಡುತ್ತಿರುವ ಕೆಲವು ಪುಸ್ತಕಗಳೆಂದರೆ, ದಿಲೀಪ್ ಕುಮಾರ್ ಅವರ "ಪಚ್ಚೆಯ ಜಗಲಿ", ಎಲ್ ನಾರಾಯಣ ರೆಡ್ಡಿ ಅವರ "ಅಕ್ಷರ ವೃಕ್ಷ", ಅನನ್ಯಾ ತುಷಿರಾ ಅವರ "ಅರ್ಧ ನೆನಪು ಅರ್ಧ ಕನಸು", ಎಚ್ ಎಸ್ ಮುಕ್ತಾಯಕ್ಕ ಅವರ "ತನ್‌ಹಾಯಿ", ತೇರಳಿ ಶೇಖರ್ ಅನುವಾದಿಸಿರುವ ಕೆ ಸಚ್ಚಿದಾನಂದನ್ ಅವರ ಕವಿತೆಗಳ ಸಂಕಲನ "ಮರೆತಿಟ್ಟ ವಸ್ತುಗಳು" .... ಇತ್ಯಾದಿ😜 (ಟು ಬಿ ಸೇಫ್!!!)

ಇವರೆಲ್ಲ ಅಲ್ಲದೆ ಇನ್ನೂ ಐವತ್ತು ಅರವತ್ತು ಒಳ್ಳೆಯ ಪುಸ್ತಕಗಳು ಬಂದಿವೆ ಕನ್ನಡದಲ್ಲಿ, ನಾನವುಗಳನ್ನು ಓದಿಲ್ಲ, ಖರೀದಿಸಿಲ್ಲ ಎನ್ನುವುದರ ಮೇಲೆ ಅವೆಲ್ಲ ಒಳ್ಳೆಯ ಕೃತಿಗಳು ಎನ್ನಲು ಹಿಂಜರಿಕೆಯಿಲ್ಲ. ಅವುಗಳ ಬಗ್ಗೆ ಅಲ್ಲಲ್ಲಿ ಅವರಿವರು ಮೆಚ್ಚಿ ಬರೆದಿರುವುದನ್ನು ಓದಿದ್ದೇನೆ, ಕಾಸುಳಿಸಿಕೊಂಡು ತೃಪ್ತನಾಗಿದ್ದೇನೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, December 10, 2021

ತಪ್ಪದೇ ಓದಬೇಕಾದ ಒಂದು ಆಧುನಿಕ ಮಹಾಪುರಾಣ


ಮಲಯಾಳಂ ಭಾಷೆಯಿಂದ ಇಂಗ್ಲೀಷಿಗೆ ಬಂದಿರುವ ಕಾದಂಬರಿ, ಎಸ್ ಹರೀಶ್ ಅವರ ಮುಶ್ಟಾಚ್ ಒಂದು ಚೇತೋಹಾರಿ ಅನುಭವವನ್ನು ಕೊಡುವ ಕೃತಿ. ಜಾನಪದ ಲಯದಲ್ಲಿದ್ದೂ, ಮಾಂತ್ರಿಕ ವಾಸ್ತವವಾದದ ನಿರೂಪಣೆಯುಳ್ಳ, ವಸಾಹತುಶಾಹಿ ಬ್ರಿಟಿಷ್ ಆಡಳಿತ ಕಾಲದ ಹಿನ್ನೆಲೆಯಲ್ಲಿ ಮೂಡಿರುವ ಈ ಕಾದಂಬರಿ ಕೇರಳದ ಕೃಷಿ ಮತ್ತು ಮೀನುಗಾರಿಕೆಯ ಬದುಕನ್ನು ವಿವರ ವಿವರವಾಗಿ ಕಟ್ಟಿಕೊಡುತ್ತಲೇ ಅಲ್ಲಿನ ಸಮಾಜದ ಮೇಲ್ವರ್ಗ ಮತ್ತು ಕೆಳವರ್ಗದ ನಡುವಣ ಸೂಕ್ಷ್ಮ ಸಂಬಂಧ, ಅದರ ನೆರಳಿನಂತಿರುವ ಜಾತಿಪದ್ಧತಿ, ಶೋಷಣೆಯ ಹಿನ್ನೆಲೆಯ ಜೊತೆಗೇ ಅವರ ಅಡುಗೆ, ತಿನಿಸು, ಗಂಡು ಹೆಣ್ಣು ಸಂಬಂಧ ಮತ್ತು ಕತೆಗಳೊಂದಿಗೆ ಅವರಿಗಿದ್ದ ನಂಟನ್ನೂ ಕಾಣಿಸುತ್ತ ಸಾಗಿಸುತ್ತದೆ.

ಒಂದು ನಿರ್ದಿಷ್ಟ ಪಾತಳಿಯಲ್ಲಿ ವಾಸ್ತವ ಮತ್ತು ಕಲ್ಪನೆಯ ಜೊತೆಗೆ ಒಂದು ಕಥನಕ್ಕಿರುವ ಸಂಬಂಧದ ಶೋಧ ಇಲ್ಲಿ ನಡೆಯುತ್ತಿದೆ ಅನಿಸುವಾಗಲೇ, ಇನ್ನೊಂದು ಸಮಾನಾಂತರ ಪಾತಳಿಯಲ್ಲಿ ಕಲ್ಪನೆಯೊಂದಿಗೆ ಓದುಗನ ಮನಸ್ಸಿಗಿರುವ ಮೋಹ ಹಾಗೂ ವಾಸ್ತವ ಪ್ರಜ್ಞೆಯನ್ನು ಬಿಟ್ಟುಕೊಡದೇನೆ ಅವನು ಕಲ್ಪನೆಯೊಂದಿಗೆ ರಮಿಸುತ್ತ ಕಥನವನ್ನು ಆಸ್ವಾದಿಸುವ ಬಗೆಯ ಸಾಹಿತ್ಯದ ಸಂದರ್ಭದಲ್ಲಿ, ಕಟು ವಾಸ್ತವವಾದಿ ಪರಿಕಲ್ಪನೆಯನ್ನು ಓದುಗನಿಗೆ ಕೊಟ್ಟು ಅವನನ್ನು ವರ್ತಮಾನದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಒತ್ತಡಗಳಿಗೆ ಅಣಿಯಾಗಿಸುವ ತಾರ್ಕಿಕ ಮತ್ತು ಬೌದ್ಧಿಕ ಉದ್ದೇಶಗಳ ಸಾಹಿತ್ಯಕ್ಕೆ, ಶ್ರೇಷ್ಠ ಸಾಹಿತ್ಯ ಅನಿಸಿಕೊಂಡ ಒಂದು ಪ್ರಕಾರಕ್ಕೆ ಒಂದು ಸಮರ್ಥವಾದ ಪರಿಪ್ರೇಕ್ಷ್ಯವನ್ನು ಒದಗಿಸುವ ಪ್ರಯತ್ನ ಕೂಡ ಇಲ್ಲಿ ನಡೆದಿರುವಂತೆ ಕಾಣುತ್ತದೆ. ಇದಕ್ಕೆ ಪೂರಕವಾಗಿ ಒಂದು ಪುಸ್ತಕ ಬಿಡುಗಡೆಯ ಸಂದರ್ಭ ಕಾದಂಬರಿಯ ಮೊದಲಿಗೆ ಬರುತ್ತದೆ. 

ಭಯಂಕರವಾದ ಮೀಸೆಯುಳ್ಳವನೊಬ್ಬನ ಕತೆಯಂತೆ ಕಾಣುವ ಈ ಕಾದಂಬರಿ ಅವನ ಬಗ್ಗೆ ಹೇಳುವುದಕ್ಕಿಂತ ಅವನ ಸುತ್ತಲಿನ ಬದುಕಿನ ಬಗ್ಗೆ ಹೇಳುವುದು ಹೆಚ್ಚು. ಹಾಗಾಗಿಯೇ ಇದೊಂದು ಸಾಂಸ್ಕೃತಿಕ ಕಥನದ ಸೊಗಡನ್ನು ಮೈದುಂಬಿಕೊಂಡು ಬಂದ ಸೊಗಸಾದ ಕೃತಿಯಾಗಿ ನಿಲ್ಲುತ್ತದೆ. ಇನ್ನೊಂದು ದೃಷ್ಟಿಯಿಂದ ಇದು ಸೀತೆಯನ್ನು ಹುಡುಕಿ ಹೊರಟವನ ಕತೆ ಕೂಡ. ಈ ಸೀತೆಯೂ ಅಪಹೃತಳಂತೆ ಕಾಣುವಾಗಲೇ ಅವಳನ್ನು ಹುಡುಕುತ್ತಿರುವಾತ ರಾಮನ ಬದಲಿಗೆ ರಾವಣನಂತೆ ಕಂಡರೆ ಅಚ್ಚರಿಯೇನಿಲ್ಲ. ಅಂಥ ಅಚ್ಚರಿಯ ನೆಲೆಯಲ್ಲೇ ಇಲ್ಲಿನ ಎಲ್ಲ ಕಥಾನಕಗಳೂ ತೆರೆದುಕೊಳ್ಳುವುದು ಈ ಕೃತಿಯ ಇನ್ನೊಂದು ಹೆಚ್ಚುಗಾರಿಕೆ. 

ಕುಟ್ಟತ್ತಿಯ ಕತೆ, ಕನ್ನಿನೀರಿನ ಬೇಡಿಕೆಯೊಂದಿಗೆ ಬರುವ ಭೂತದ ಕತೆ, ಮೊಸಳೆಗಳ ವಂಶಾಭಿವೃದ್ಧಿ ಹಾಗೂ ನಿರ್ವಂಶದ ಕತೆ, ಬಗೆ ಬಗೆಯ ಹಾವುಗಳ ರೋಚಕ ಪುರಾಣ, ಕೊಲ್ಲದೇ ಅವುಗಳನ್ನು ಸುಲಿದು, ಹೊಟ್ಟೆ ಪಾಡಿಗೆ ಮೊಟ್ಟೆ ಮಾತ್ರ ತಿಂದು ತಮ್ಮ ಜೀವ ಉಳಿಸಿಕೊಂಡು ಆ ಜಂತುವಿನ ಜೀವವನ್ನೂ ಉಳಿಸುವ ಬೇಟೆಗಾರರು, ಸಹೋದರಿಯಾಗಿ ಕಾಯುವ ತೆಂಗಿನ ತಳಿಯ ಇತಿಹಾಸ, ಪೋಲೀಸರಿಂದ ಬಚಾವಾಗಲು ನೀರಿನಲ್ಲೇ ಅಡಗಿ ವರ್ಷಗಟ್ಟಲೆ ಕಳೆಯಬಲ್ಲವರು, ನೀರಿನಲ್ಲೇ ಬದುಕುವ ಕಟ್ಟಪುಳಂ (ಕಟ್ಟುಹಾವಿನ ಜಾತಿಯ ಮನುಷ್ಯ),  ವ್ಯರ್ಥ ಶೌರ್ಯ ಮೆರೆಯುವ ನಾಡಾರ್ ತರದ ಪೋಲೀಸ್ ಅಧಿಕಾರಿಗಳು, ಮಾತನಾಡುವ ಬಗೆ ಬಗೆಯ ಹಕ್ಕಿಗಳು, ರೂಪಕದಂತೆಯೂ ಸಾಂಕೇತಿಕವಾಗಿಯೂ ಗಮನಾರ್ಹವಾದ, ಮನಸ್ಸಿನಲ್ಲಿ ನಿಲ್ಲುವ - ಮೇಲ್ಜಾತಿಯ ಕೇಶವ ಪಿಳ್ಳನಿಂದ ಬರಡಾದ ವೇದಗಿರಿ ಬೆಟ್ಟದಲ್ಲಿ ಬಾಳೆ ಕೃಷಿ ಮಾಡುವ ಸವಾಲನ್ನು ಸ್ವೀಕರಿಸಿ ಯಶಸ್ವಿಯಾದ ಕೆಳವರ್ಗದ ಪಾಚುಪಿಳ್ಳನ ಕತೆ,  ಹುಚ್ಚು ಕಲ್ಪನೆಗಳ ಸಂಶೋಧಕ ಅವರಾಚನ್, ಕುಷ್ಟರೋಗಿಗಳನ್ನೂ, ಸಾಂಕ್ರಾಮಿಕ ರೋಗಗಳಿಗೆ ಬಲಿಯಾದವರನ್ನೂ ತಂದಿಟ್ಟುಕೊಂಡು ಆರೈಕೆ ಮಾಡುವ ವಿಶಿಷ್ಟ ನಾಡವೈದ್ಯರು, ಸಾಯುವವರನ್ನು ಕಾಯುವವರು, ಮೂಲ ಕಥಾನಾಯಕನಾದ ವಾವಚ್ಚನ್ ಕತೆಗೂ, ಅವನ ತರವೇ ಶೌರ್ಯ-ಸಾಹಸ ಮೆರೆದು, ದಂತಕತೆಗಳಾದ, ಖ್ಯಾತರಾದ ಇತ್ಯಚ್ಚನ್, ಔಸಿಫ್, ನಾರಾಯಣನ್ ಮುಂತಾದವರ ಕತೆಗಳು, ಮೊಸಳೆಗಳ ಬೇಟೆಯ ವ್ಯಸನ ಹತ್ತಿಸಿಕೊಂಡ ಪ್ರೀಚರ್ ಸಾಹೇಬ್, ಜೀವಂತ ಇರುವಾಗಲೇ, ತಾವು ತಮಗೇ ಗೊತ್ತಿಲ್ಲದಂತೆ ಕತೆಗಳಾಗಿ, ಹಾಡುಗಳಾಗಿ ಅಮರರಾದುದನ್ನು ಸೋಜಿಗದಿಂದಲೇ ಕಾಣುವ ಮುಸ್ಟೇಚ್ ಮತ್ತು ಸೀತಾ, ಅಸ್ಮಿತೆಯನ್ನು ಗೌಣವಾಗಿಸುವ ಕಥನದ ಮಾಯಕತೆಯನ್ನು ಹೇಳುತ್ತಲೇ ಏರ್ ಇಂಡಿಯಾದ ಮಹಾರಾಜನಿಗೂ ನಮ್ಮ ಕಥಾನಾಯಕನಿಗೂ ಇರುವ ಬಾದರಾಯಣ ಸಂಬಂಧವನ್ನು ತೆರೆದಿಡುವ ಚರಿತ್ರೆ, ಎರಡನೆಯ ಮಹಾಯುದ್ಧದ ಹಿನ್ನೆಲೆಯಲ್ಲಿ ಮಲಯಾ ದೇಶದಲ್ಲಿ ಸುದ್ದಿ ಮಾಡಿದ ಮೀಸೆ! - ಈ ಕೃತಿ ಕೇವಲ ಹಲವು ಕಾಲಮಾನವನ್ನು ಏಕಕಾಲಕ್ಕೆ ಬದುಕುತ್ತಿಲ್ಲ, ಕನಸು-ಕಲ್ಪನೆ-ಭ್ರಮೆ-ಕಥನದೊಂದಿಗೆ ಇತಿಹಾಸ, ವರ್ತಮಾನ ಮತ್ತು ಮನುಕುಲದ ಚರಿತ್ರೆಯನ್ನೂ ಉಸಿರಾಡುತ್ತಿದೆ.


ಇಲ್ಲೊಂದು ಕಡೆ ಸೀತೆಯನ್ನು ಹುಡುಕಿ ಹೊರಟ ಮೀಸೆಯವನಿಗೆ ಒಬ್ಬ ಹೇಳುವ ಭವಿಷ್ಯ ಎಷ್ಟು ಸೊಗಸಾಗಿದೆ ನೋಡಿ;

"ಒಳ್ಳೆಯದು.... ನಮಗೆ ನಿನ್ನ ಜನನದ ದಿನ ಅಥವಾ ಘಳಿಗೆ ಗೊತ್ತಿಲ್ಲ. ಆದರೆ ನನಗೆ ಕಂಡಿದ್ದನ್ನು ನಿನಗೆ ಹೇಳುತ್ತೇನೆ ಕೇಳು. ನೀನು ದೇವಪುರುಷನ ಭವಿಷ್ಯವನ್ನೇ ಹೊತ್ತು ಹುಟ್ಟಿದ್ದೀ, ಶ್ರೀರಾಮನದ್ದು. ಇಡೀ ಜಗತ್ತು ನಿನ್ನ ಬಗ್ಗೆ ತಿಳಿಯುವಂತಾಗುತ್ತದೆ, ನಿನ್ನ ಬಗ್ಗೆ ಕತೆಗಳನ್ನು ಹೇಳುತ್ತದೆ, ಹಾಡು ಕಟ್ಟಿ ಹಾಡುತ್ತದೆ. ಆದರೆ ನೀನು ನಿನ್ನ ಇಡೀ ಬದುಕನ್ನು ಅಲೆಮಾರಿಯಂತೆ ಅಲೆದಾಡುತ್ತ ಕಳೆಯುತ್ತಿ. ನೀನು ಏನನ್ನು ಹುಡುಕುತ್ತಿರುವಿಯೋ ಅದನ್ನು ನೀನು ಬಿಟ್ಟುಕೊಡಬೇಕಾಗುತ್ತದೆ, ಅದು ನಿನಗೆ ಸಿಕ್ಕಿದರೂ. ನಿನ್ನ ಮಕ್ಕಳೇ ನಿನ್ನ ವಿರುದ್ಧ ನಿಲ್ಲುತ್ತಾರೆ. ಮತ್ತು ನಿನಗೆ ಅತ್ಯಂತ ಪ್ರಿಯವಾದದ್ದನ್ನು, ಬೇಕಾದುದನ್ನು ನೀನು ಕಳೆದುಕೊಳ್ಳುತ್ತಲೇ ಇರುತ್ತಿ."

ಇಲ್ಲಿ ಬರುವ ನೂರಾರು ವ್ಯಕ್ತಿಚಿತ್ರಗಳು, ಹಾಗೆ ಬಂದು ಹೀಗೆ ಹೋಗುವ ಸಾಂದರ್ಭಿಕವಾದರೂ ಜೀವಂತ ವಿವರಗಳ ಪಾತ್ರಗಳು, ಯಾವುದರ ಹಿಂದೆ ಹೋದರೂ ತೆರೆದುಕೊಳ್ಳುವ ಸಮೃದ್ಧ ಕಥನಗಳು - ಈ ಕಾದಂಬರಿಯನ್ನು ಹೇಗೆ ಬೇಕಾದರೂ, ಎಲ್ಲಿಂದ ಬೇಕಾದರೂ ಓದಬಹುದಾದ ಒಂದು ಸುಲಲಿತ ಸೌಕರ್ಯವನ್ನೂ ನಿರ್ಮಿಸುವಂತಿದೆ. ಹಾಗೆ ನೋಡಿದರೆ ಇದು ಒಂದು ಬಗೆಯಲ್ಲಿ ಕತೆಗಳ ಸಂಕಲನ. ಓದಬಯಸುವವರಿಗೆ ಎಂದಿಗೂ ಮುಗಿಯದ ಮಹಾ ಕಾದಂಬರಿ. ಅಯ್ಯೊ ಮುಗಿಯಿತಲ್ಲ ಅನಿಸುವಂಥ ಬರವಣಿಗೆ.

ಮಾರ್ಕೆಸನ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಗಳ ಸಾಲಿಗೆ ಸೇರುವ, ತುಂಬ ಅಪರೂಪದ ಒಂದು ಕಾದಂಬರಿಯಿದು. ಮುದ್ರಿತ ಪುಸ್ತಕವಾಗಿಯೂ, ಡಿಜಿಟಲ್ ಪುಸ್ತಕವಾಗಿಯೂ, ಆಡಿಯೋ ಪುಸ್ತಕವಾಗಿಯೂ ಈ ಕೃತಿ ಲಭ್ಯವಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ