Sunday, June 26, 2022

ಪ್ರಬುದ್ಧ ದೃಷ್ಟಿಯ ಕತೆಗಳು


ಅಪರ್ಣ ಎಚ್ ಎಸ್ ಅವರ ಕಥಾ ಸಂಕಲನ "ಕೆಂಪು ಹಾಗೂ ಇತರ ಬಹುಮಾನಿತ ಕತೆಗಳು" ಒಟ್ಟು ಹತ್ತು ಕತೆಗಳ ಸಂಕಲನ. ಇಲ್ಲಿನ ಕತೆಗಳಲ್ಲಿ ಪ್ರಧಾನವಾಗಿ ಕಂಡು ಬರುವ ಅಂಶ ಮನುಷ್ಯನ ವ್ಯಕ್ತಿತ್ವದೊಳಗಿನ ದ್ವಂದ್ವ, ಅವನ ಧರ್ಮಸಂಕಟಗಳ ಕುದಿಬಿಂದು ಮತ್ತು ಒಟ್ಟಾರೆ ಮನುಷ್ಯತ್ವದ ಆಳವನ್ನೇ ಬೆದಕಿ ನೋಡುವ ಚಿಕಿತ್ಸಕ ಮನೋಧರ್ಮ. 

ನಿರೂಪಣೆಯಲ್ಲಿ ಸಾಕಷ್ಟು ನೇರವಾಗಿಯೇ ಕಥನವನ್ನು ತೆರೆದಿಡುವ ಅಪರ್ಣ ಸನ್ನಿವೇಶಗಳನ್ನು, ಘಟನೆಗಳನ್ನಿಟ್ಟುಕೊಂಡು ಕತೆ ಹೆಣೆಯುತ್ತಾರೆ. ಹಾಗಾಗಿ subtle ಆದ ಏನನ್ನೂ ಇವರು ತಮ್ಮ ಕತೆಗಳಲ್ಲಿ ಕಾಣಿಸುವುದಕ್ಕೆ ಹೋಗುವುದಿಲ್ಲ. ಹಾಗಾಗಿ ಸರಳವಾಗಿ ಓದಿಸಿಕೊಂಡು ಹೋಗುವ, ಹೊರೆಯೆನಿಸದ ಇವರ ಕತೆಗಳು ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ. ಹಾಗಿದ್ದೂ ಇವರು ಕತೆಗಳಿಗೆ ಎತ್ತಿಕೊಳ್ಳುವ ವಸ್ತು, ಅದು ಓದುಗನ ಮನಸ್ಸಿನಲ್ಲೆಬ್ಬಿಸುವ ಜಿಜ್ಞಾಸೆ, ಇವರೆತ್ತುವ ಧರ್ಮಸಂಕಟದ ಪ್ರಶ್ನೆ, ವ್ಯಕ್ತಿತ್ವದ ಮೇಲ್ನೋಟದ ಚರ್ಯೆಯ ಹಿಂದಿರುವ ಮನೋಧರ್ಮದ ಪ್ರಾಮಾಣಿಕತೆಗೆ ಇವರು ಹಾಕುವ ಪಾತಾಳಗರಡಿ ಈ ಕತೆಗಳ ಮಹತ್ವ ಹೆಚ್ಚಿಸಿದೆ. ಈ ನೆಲೆಯಲ್ಲಿ ಇವು ಓದುಗನನ್ನು ಬೆಚ್ಚಿ ಬೀಳಿಸಬಲ್ಲ ಮತ್ತು ಅವನನ್ನು ಅವನು ಮತ್ತೊಮ್ಮೆ ತನ್ನದೇ ವ್ಯಕ್ತಿತ್ವದ ಕನ್ನಡಿಯೆದುರು ನಿಂತು ನೋಡಿಕೊಳ್ಳುವಂತೆ ಮಾಡಬಲ್ಲ ಕಸು ಹೊಂದಿವೆ. 

ಮೊದಲ ಕತೆ ‘ಪುನರಾರಂಭ’ದ ಕೊನೆಯಲ್ಲಿ ಈ ರೀತಿಯಿದೆ:

"ಕಾರು ಅಲ್ಲೇ ಬಿಟ್ಟು, ಅವಳ ಕೈ ಹಿಡಿದು ಅವನು ಮನೆಗೆ ವಿರುದ್ಧವಾದ ದಿಕ್ಕಿನಲ್ಲಿ ಹೆಜ್ಜೆ ಇಡತೊಡಗಿದ. ಅವಳು ತಾನಾಡುತ್ತಿದ್ದ ಮಾತು ನಿಲ್ಲಿಸದೆ, ಅವನೊಂದಿಗೆ ಹೆಜ್ಜೆ ಹಾಕಿದಳು. ಸಿಗ್ನಲ್ ಬಿಟ್ಟಿತು. ಇವರ ಕಾರಿನ ಹಿಂದಿದ್ದವರೆಲ್ಲಾ ಪ್ರಳಯವಾದಂತೆ ಹಾರನ್ ಮಾಡತೊಡಗಿದರು. ಇವರಿಬ್ಬರಿಗೆ ಮಾತ್ರ ಅದು ಕೇಳಲೇ ಇಲ್ಲ."

ಇಡೀ ಕತೆಯ ನಿರೂಪಣೆಯ ಉದ್ದಕ್ಕೂ ಅವಳು ಮತ್ತು ಅವನು ಪರಸ್ಪರ ದ್ವೇಷಿಸುತ್ತಿರುವಂತಿದೆ. ಆದರೆ ಅದು ಅವರ ಪ್ರೇಮದ ಆಟ ಎನ್ನುವುದು ಬಹುಬೇಗ ಓದುಗರಿಗೂ ಅರಿವಾಗುತ್ತದೆ. ಕೊನೆಯಲ್ಲಿ ಕಾಣಿಸುವ ವೈರುಧ್ಯ ಗಮನಿಸಿ, ಟ್ರಾಫಿಕ್ ಜಾಮಿನಲ್ಲಿ ಕಾರು ನಿಲ್ಲಿಸಿ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕತೊಡಗುತ್ತಾರೆ. ವಿರುದ್ಧ ದಿಕ್ಕಿನಲ್ಲಿ, ಆದರೆ ಇಬ್ಬರೂ ಕೈ ಕೈ ಹಿಡಿದು!

‘ಶುದ್ಧಿ’ ಕತೆಯಲ್ಲಿ ವ್ಯಕ್ತಿತ್ವದೊಳಗಿನ ವೈರುಧ್ಯ ಮತ್ತು ಧರ್ಮಸಂಕಟ ಇನ್ನಷ್ಟು ಸ್ಫುಟವಾಗಿದೆ.  

"ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಮೂಲದ ಯಶಸ್ವಿ ಉದ್ಯಮಿಯಾಗಿರುವ, ಸಾವಿರ ಕೋಟಿ ವಹಿವಾಟಿರುವ ‘ಪ್ರೋಟೆಕ್’ ಸಂಸ್ಥೆಯ ಸಂಸ್ಥಾಪಕನಾಗಿರುವ, ಫೋರ್ಬ್ ಪತ್ರಿಕೆಯಲ್ಲಿ ಆಗಾಗ ಕಾಣಿಸಿಕೊಳ್ಳುವ, ಐಟಿ ಜಗತ್ತಿನಲ್ಲಿ ‘ಪ್ರೋ ಪ್ರಾಣ್’ ಎಂದೇ ಹೆಸರಾಗಿರುವ ‘ಪ್ರಾಣೇಶ ನರಸಿಂಹ ಆಚಾರ್ಯ’ ಬೆಂಗಳೂರಿನ ಬಸವನಗುಡಿಯ ಆ ಹಳೆಮನೆಯ ಎದುರು, ತನ್ನ ಬ್ರಾಂಡೆಡ್ ಟೀ ಶರ್ಟ್ ಕೆಳಗೆ, ತನ್ನಪ್ಪನ ಹಳೆ ಪಂಚೆಯೊಂದನ್ನು ಸುತ್ತಿಕೊಂಡು, ಕೈಯಲ್ಲಿ ಪೊರಕೆ ಹಿಡಿದುಕೊಂಡು ದಿಕ್ಕುಕಾಣದೆ ನಿಂತಿದ್ದು..."

- ಇದು ಒಂದು ಕಡೆಯದ್ದಾದರೆ ಇನ್ನೊಂದು ಕಡೆ ಸದ್ಯ ಚಿಂದಿಯಾಗಿರುವ ಹಳೆಯ ಕ್ಯಾಲೆಂಡರು, ಫೋಟೋಗಳಲ್ಲಿ ಶತಮಾನಗಳಿಂದ ನೆಲೆಸಿರುವ ದೇವರನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲಾರದ ಹೆತ್ತವರಿದ್ದಾರೆ. 

"ಗಂಡನ ಸಂಬಳದಲ್ಲಿ ಅಚ್ಚುಕಟ್ಟಾಗಿ ಮನೆ ನಡೆಸಿ, ಅದರಲ್ಲೇ ಕೊಂಚ ಉಳಿಸಿ ಪೋಸ್ಟ್ ಆಫೀಸಿನಲ್ಲಿ ಮಕ್ಕಳಿಬ್ಬರ ಹೆಸರಿನಲ್ಲಿ ಆರ್ ಡಿ ಕಟ್ಟುವ, ತನ್ನ ಸಣ್ಣ ವ್ಯಾಪಾರದಿಂದ ಬಂದ ಹಣದಲ್ಲಿ ಹೆಣ್ಣುಮಕ್ಕಳಿಬ್ಬರಿಗೂ ಆದಾಗೆಲ್ಲಾ ಚೂರುಪಾರು ಬಂಗಾರ ಮಾಡಿಸಿಡುವ ಪ್ರಮೀಳೆ ಜಾಣೆ ಎಂಬುದರಲ್ಲಿ ಸಂಶಯವೇ ಇರಲಿಲ್ಲ." ಎಂಬ ಮಾತುಗಳಲ್ಲಿ ಪ್ರಮೀಳೆಯ ಸುಂದರ ಸಂಸಾರದ ಕತೆಯನ್ನು ಹೇಳುವ  ‘ಕೋಲಾ’ ದ ‘ಗಂಡಾಂ’ತರ, ಕೋಲಾ-ಹಲ ಇನ್ನೊಂದೇ ಬಗೆಯದ್ದು.

‘ನದಿಗಿಲ್ಲ ತೀರದ ಹಂಗು’ ಕತೆ ಮತ್ತೊಮ್ಮೆ ‘ಪುನರಾರಂಭ’ ಕತೆಯನ್ನೇ ಹೇಳುತ್ತಿದೆ.

‘ಕೆಂಪು’ ಕತೆ ಕನ್ನಡದ ಸಣ್ಣಕತೆಗಳಲ್ಲಿ ಕ್ಲೀಷೆಯಾಗುವಷ್ಟು ಬಂದಿರುವ ಮತ್ತೊಂದು ಮುಟ್ಟಿನ ಕತೆಯಾಗದೇ, ವಿಶಿಷ್ಟವಾಗಿ ನಿಲ್ಲುವುದೇ ಅದರ ವಿಶೇಷತೆ. ಹರಯದಲ್ಲಿ ಅರಿಯದೇ ಮೋಹಿನಿಯ ಸಂಕಟಕ್ಕೆ ವಿಚಿತ್ರವಾಗಿ ಸ್ಪಂದಿಸುವ ಲಕ್ಷ್ಮಿ, ತಾನೇ ಮೋಹಿನಿಯಾಗುವ ಮತ್ತು ಫೋಬಿಯಾವನ್ನು ಮೀರುವ ಹಂತ ಅತ್ಯಂತ ಸೂಕ್ಷ್ಮವಾದ ಹದವನ್ನು ಪಡೆದು ಬಂದಿದೆ. ಈ ಕತೆಯನ್ನು ಅಪರ್ಣ ಅವರು ಮನುಷ್ಯನ ಸಣ್ಣತನ, ಈರ್ಷ್ಯೆಗಳೇ ಅವನ ಭ್ರಮೆಯಾಗಿ ಕಾಡುವುದನ್ನೂ, ಅವನದನ್ನು ಮೀರುವ ಮಾರ್ಗವನ್ನೂ ಸೂಚಿಸಲು  ಬಳಸಿಕೊಂಡಿರುವುದನ್ನು ಕಾಣುತ್ತೇವೆ. ಇದು ಸರಳ, ನೇರ ಕತೆಗೆ ಅವರು ಕೊಟ್ಟ add-on value ಮಾತ್ರವಲ್ಲ, ನಿರೂಪಣೆಯಲ್ಲಿ ಹದ ತಪ್ಪದೆ ಅವರಿದನ್ನು ನಿರ್ವಹಿಸಿರುವ ರೀತಿಯೂ ಅತ್ಯಂತ ಪ್ರಬುದ್ಧವಾಗಿದೆ.

‘ಕದನ ವಿರಾಮ’ ಒಂದು ಕಾರ್ಪೊರೇಟ್ ಜಗತ್ತಿನ ಹಾವೇಣಿಯಾಟದ ಕತೆ. ಹುದ್ದೆ, ಹಕ್ಕು ಸ್ಥಾಪನೆ ಮತ್ತು ಮೇಲಾಟದ ಕಸರತ್ತುಗಳೇ ಮುಖ್ಯವಾಗಿ ಬಿಡುವ ಮನುಷ್ಯನ ಹಪಾಹಪಿಯೆದುರು ಅವನೇ ನಿಂತು ನಾಚಿಕೊಳ್ಳುವ, ನಾಚಿಕೊಂಡರೂ ಅದನ್ನು ಎಲ್ಲೋ ಸಮರ್ಥಿಸಿಕೊಂಡು ಮುಂದುವರಿಯುವ, ನಾಚಿಕೊಳ್ಳುವಷ್ಟು ಒಳ್ಳೆಯತನ ತನ್ನಲ್ಲಿದೆಯಲ್ಲಾ ಎಂದು ಆ ಬಗ್ಗೆ ತಾನೇ ಹೆಮ್ಮೆ ಪಡುವ ವಿಪರ್ಯಾಸವನ್ನು ಕಟ್ಟಿಕೊಡುವ ಕತೆ. ಕತೆಯ ಕೊನೆಯಲ್ಲಿ ಅಹಲ್ಯ ತನ್ನ ಮೇಲಧಿಕಾರಿಯನ್ನು ಬಯ್ಯಲು ಬಳಸುವ ಭಾಷೆಯಲ್ಲಿಯೇ ಇಂಥ ರಾಜೀಸೂತ್ರವಿದೆ. ಮುಂದೆ ದೇಶಪಾಂಡೆ ಸಿಕ್ಕರೆ ಆಡಬೇಕೆಂದು ಅವಳು ರಿಹರ್ಸಲ್ ನಡೆಸುವ ಮಾತು ಯಾವತ್ತೂ ಜೀವಂತ ದೃಶ್ಯವಾಗುವುದಿಲ್ಲ ಎನ್ನುವುದು ಗೊತ್ತಿದ್ದೂ ತಯಾರಾಗುವ ಬಗೆಯಲ್ಲೇ ಒಂದು ವಿಕಟ ವ್ಯಂಗ್ಯವಿದೆ. ಇಷ್ಟೆಲ್ಲ ಇದ್ದೂ ಈ ಕತೆ ಅಹಲ್ಯಾಳ ಪ್ರಜ್ಞೆಯಿಂದಲೇ ನಿರೂಪಿಸಲ್ಪಡುತ್ತಿರುವುದರಿಂದಲೋ ಅಥವಾ ಅಹಲ್ಯಾಳ ರಾಜೀಸೂತ್ರದ ಬದುಕೇ ನಾವು ಒಪ್ಪಿಕೊಂಡಿರುವ ಆದರ್ಶವಾಗಿರುವುದರಿಂದಲೋ, ಕತೆಗಾರ್ತಿಯ ಎರಡಲುಗಿನ ಅಂತ್ಯ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂದೇ ಅನಿಸುತ್ತದೆ.   

ಹಾಗೆ ನೋಡಿದರೆ, ‘ಕದನ ವಿರಾಮ’ದ್ದೇ ಇನ್ನೊಂದು ಆವೃತ್ತಿಯಾಗಿರುವ ‘ಸಾಪೇಕ್ಷತೆ’ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಕತೆಯಲ್ಲಿ ಇಬ್ಬರು ಗೆಳತಿಯರಿದ್ದಾರೆ. ಸಮನ್ವಿತಾಗೆ ಸದಾ ತಾನು ಒಂದಿಂಚಾದರೂ ಹೆಚ್ಚಿನವಳಾಗಬೇಕು ಎಂಬ ಹೆಬ್ಬಯಕೆ ಇದ್ದರೆ ಕೃಷ್ಣವೇಣಿಯಲ್ಲಿ ಅದು ಇದ್ದೂ ಕಾಣಿಸದ ಹಾಗಿದೆ. ಅಷ್ಟರಮಟ್ಟಿಗೆ ಇಬ್ಬರಲ್ಲೂ ತಥಾಕಥಿತ ವ್ಯತ್ಯಾಸವೇನಿಲ್ಲ. ಅತೃಪ್ತಿ ಇಬ್ಬರ ವ್ಯಕ್ತಿತ್ವದ, ಮೂಲಭೂತವಾಗಿ ಎಲ್ಲ ಮನುಷ್ಯರ ಆಳದ ಮೂಲತತ್ವ. ಬದುಕಿನಲ್ಲಿ ನಮ್ಮ ಯಶಸ್ಸು-ಸೋಲುಗಳಿಗೆ ಸಾಪೇಕ್ಷವಾಗಿ ನಿಲ್ಲುವ ಇನ್ನೊಬ್ಬ ವ್ಯಕ್ತಿಯ ಯಶಸ್ಸು-ಸೋಲುಗಳೇ ನಮ್ಮ ಆನಂದ-ಸಂಕಟಗಳಿಗೆ ಕಾರಣವಾಗಿ ಬಿಡುವುದು ವಿಪರ್ಯಾಸವಾದರೂ ನಿಜ. ಆದರೆ ಎಷ್ಟೋ ಬಾರಿ ನಾವಿದನ್ನು ಕಂಡುಕೊಳ್ಳಲು ವಿಫಲರಾಗುತ್ತೇವೆ. ಜಗತ್ತೆಲ್ಲ ಹಾಗೆ, ತಾನು ಆ ತರ ಇಲ್ಲ ಎಂದುಕೊಳ್ಳುವವರು ಹೆಚ್ಚು. ಆದರೆ ನಾವು ಎಲ್ಲರಿಗಿಂತ ಹೆಚ್ಚು ಆಳವಾಗಿ ಅದನ್ನು ಅಡಗಿಸಿಕೊಂಡಿರುವ ಜಾಣರಾಗಿರುತ್ತೇವೆ. ಇದನ್ನು ಈ ಕತೆಯಲ್ಲಿ ಸಶಕ್ತವಾಗಿ ಅನಾವರಣಗೊಳಿಸಿರುವ ಬಗೆ ಮೆಚ್ಚುಗೆಗೆ ಕಾರಣವಾಗುತ್ತದೆ.

‘ಫೀನಿಕ್ಸ್’ ಕತೆ ಹೆಚ್ಚು ವಿಶಾಲವಾದ ಹರಹು ಹೊಂದಿರುವ ಕತೆ. ಗೆರೆ ಕೊರೆದು ವಿಂಗಡಿಸಲಾಗದ ಪ್ರೇಮ ಕಾಮದ ಸಂಬಂಧದ ಸೆಳೆತ ಒಂದು ಕಡೆ ಇದ್ದರೆ, ತತ್ವ ಸಿದ್ಧಾಂತಗಳ ಸೋಗಲಾಡಿತನ ಮತ್ತು ಈ ಸೋಗಲಾಡಿತನವನ್ನು ಕೂಡ ಸಮರ್ಥಿಸುವಂತೆ ಕಾಣಿಸಿಕೊಳ್ಳುವ ವಾಸ್ತವದ ಒತ್ತಡ ಇನ್ನೊಂದೆಡೆ ಇದೆ. ನಡುವೆ ಗಂಡು, ಹೆಣ್ಣು ಇಬ್ಬರಲ್ಲೂ ಬದ್ಧತೆಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸೋತ ಗಿಲ್ಟ್ ಇರುವುದು ಈ ಕತೆಯ ಹೆಚ್ಚುಗಾರಿಕೆ. ಆದರೆ, ಕತೆ ಇದನ್ನು ನಿರ್ವಹಿಸಿರುವ ರೀತಿ ಅನನ್ಯವಾಗಿದೆ. ಅಂದರೆ, ಅದು ಗೆರೆ ಕೊರೆದು ವಿಂಗಡಿಸಲಾಗದ ಕಾಮ ಪ್ರೇಮದ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ, ಸ್ವೀಕರಿಸುತ್ತದೆ. ತೂಗಿ ನೋಡುವ, ಸರಿ ತಪ್ಪು ಜಿಜ್ಞಾಸೆ ನಡೆಸುವ, ತೀರ್ಮಾನಗಳನ್ನು ಕಾಣಿಸುವ ಯಾವ ಪ್ರಯತ್ನಕ್ಕೂ ಕೈಯಿಕ್ಕುವುದಿಲ್ಲ. ಬದಲಿಗೆ, ಕೈಹಿಡಿದ ಗಂಡನನ್ನು ಬಿಟ್ಟ ಕಹಿಯನ್ನು, ಬಸುರಿ ಹೆಂಡತಿಯ ಪ್ರೀತಿಗೆ , ಅಗತ್ಯಗಳಿಗೆ ಸ್ಪಂದಿಸಲಾಗದ ವೈಕಲ್ಯವನ್ನು, ಹೆತ್ತ ಮಗುವನ್ನು ಕಡೆಗಣಿಸುತ್ತಿದ್ದೇನಾ ಎಂಬ ಕೊರಗನ್ನು, ಹೆಂಡತಿಯಿಂದಲೇ ಖರ್ಚಿಗೆ ಹಣ ಪಡೆದೂ ಅವಳಿಗೆ ಪ್ರೀತಿಯನ್ನು ಕೂಡಾ ಕೊಡಲಾರದ ಕೈಲಾಗದತನ-ವನ್ನುಅದು ಗುರುತಿಸುತ್ತಲೇ ಈ ಕಾಮ ಪ್ರೇಮದ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ, ಸ್ವೀಕರಿಸುತ್ತದೆ ಎನ್ನುವಲ್ಲಿಯೇ ಈ ಕತೆಯ ವಿಶೇಷತೆಯಿದೆ, ಹೆಚ್ಚುಗಾರಿಕೆಯಿದೆ. 

ಅಂದರೆ, ಆಯ್ಕೆ ಎನ್ನುವುದು ಅದೆಷ್ಟೇ ಟೆಂಪೊರರಿಯಾಗಿದ್ದರೂ ಅದು ಸಾಧ್ಯವಾಗುವುದು ಕೆಲವರಿಗಷ್ಟೇ. ಅದು ಕೆಲವೇ ಕೆಲವು ಮಂದಿಯ ಪ್ರಿವಿಲೇಜ್.  ಉಳಿದವರಿಗೆ ಸಹಜವಾಗಿ ಬದುಕಲು ಕೂಡ ಇಲ್ಲಿ ಹಲವು ಸ್ತರದ ತೊಡಕುಗಳಿವೆ, ಕಷ್ಟವಿದೆ. ಗಿಲ್ಟ್ ಅವುಗಳಲ್ಲಿ ಬಹುಮುಖ್ಯವಾದದ್ದು. ಈ ಗಿಲ್ಟ್ ಕೂಡ ಸಕಾರಣವಾದದ್ದು. ಈ ಗಿಲ್ಟ್ ಸಕಾರಣವಾದದ್ದು ಎಂದು ನಮ್ಮ ಮನಸ್ಸು ಗ್ರಹಿಸುತ್ತದೆ, ಮನ್ನಿಸಿದೆ ಮತ್ತು ಅದಕ್ಕೆ ಕಾರಣ ಅವನ ಒಳ್ಳೆಯದು-ಕೆಟ್ಟದುಗಳ ಪಾರಂಪರಿಕ ಪ್ರಜ್ಞೆಯಾಗಿದೆ. 

ಕೈಹಿಡಿದ ಹೆಂಡತಿಯತ್ತ ಇರುವ ಬಾಧ್ಯತೆಗಳು, ಮಗುವಿನತ್ತ ತಾಯಿಗಿರುವ ಬಾಧ್ಯತೆಗಳು, ಕೈಹಿಡಿದ ಪತಿಯೊಂದಿಗೆ ಹೊಂದಿಕೊಂಡು ಹೋಗುವ ಬಾಧ್ಯತೆಗಳು ಇತ್ಯಾದಿ ಒಂದು ಸ್ವಸ್ಥ ಸಮಾಜದ ಅಗತ್ಯ ಎಂದು ತಿಳಿ ಹೇಳುವ ಮಾದರಿ ಪ್ರಜೆಯ ಲಕ್ಷಣಗಳೇನಿವೆ, ಅವು ಈ ಗಿಲ್ಟ್‌ಗೆ ಕಾರಣ. ಏಕೆಂದರೆ, ಇಲ್ಲಿನ ನಾಯಕ ನಾಯಕಿ ಇಬ್ಬರೂ ಈ ಮಾದರಿಯನ್ನು ಒಪ್ಪಿಕೊಂಡವರೇ, ಅದು ಅಗತ್ಯ ಎಂದು ಭಾವಿಸುವವರೇ. ಆದರೆ ಪ್ರೇಮ ಕಾಮದ ತುಡಿತ ಇವುಗಳನ್ನು ಮೀರಿದ್ದು ಎನ್ನುವುದು ಕೂಡ ನಿತ್ಯಸತ್ಯ. ಈ ಲಕ್ಷ್ಮಣರೇಖೆಯನ್ನು ದಾಟುವ ಸಂಕೀರ್ಣ ಹೆಜ್ಜೆಯೇನಿದೆ, ಅದು ಕೂಡಾ ಶಾಶ್ವತವಾದ ಏನನ್ನೂ ಕಟ್ಟಿಕೊಡುವುದಿಲ್ಲ ಎನ್ನುವ, ಈ ಬದುಕಿನ ಕ್ಷಣಭಂಗುರತೆಯೆದುರು ಎಲ್ಲಾ ಮಾದರಿಗಳು, ಲಕ್ಷ್ಮಣರೇಖೆಗಳು ಕ್ಷುಲ್ಲಕವೆನ್ನುವ ಸತ್ಯವೇನಿದೆ, ಅದು ಸಾವಿನಂಥ ಒಂದು ಅಂತಿಮ ಸತ್ಯವಾಗಿದೆ. ಅದನ್ನು ಈ ಕತೆ ಗುರುತಿಸುತ್ತಿದೆ, ಅವಳು ಅವನ ಎಲ್ಲಾ ಮೆಸೇಜುಗಳನ್ನು ಡಿಲೀಟ್ ಮಾಡಿ, ಅವನ ನಂಬರು ಬ್ಲಾಕ್ ಮಾಡಿ ಎಲ್ಲ ಮುಗಿಯಿತು ಎನ್ನುವಲ್ಲಿ ಮತ್ತು ಅವನು ಅವಳೊಂದಿಗಿನ ಬೆಂಕಿಯಂಥ ಸಂಬಂಧ ಕಡಿದುಕೊಳ್ಳಬೇಕು ಎಂದು ನಿರ್ಧರಿಸುವಲ್ಲಿ ಎರಡೂ ಅತಿರೇಕಗಳಿವೆ. 

ಒಂದು, ಆದರ್ಶವನ್ನು ಮೀರುವುದರಿಂದ ದಕ್ಕಿಸಿಕೊಳ್ಳುವುದು ಕೂಡಾ ಕ್ಷುಲ್ಲಕ, ಕ್ಷಣಭಂಗುರ ಎನ್ನುವ ಅತಿರೇಕದ ಪ್ರಜ್ಞೆ; ಇನ್ನೊಂದು ಆದರ್ಶವನ್ನು ಮೀರದೇ ಬಾಳುವುದು ಕೂಡಾ ಕೊನೆಗೊಂದು ದಿನ ಮುಗಿದು ಹೋಗುವ ಬದುಕಿನೆದುರು ಕ್ಷುಲ್ಲಕವೇ ಎನ್ನುವ ಅತಿರೇಕದ ಪ್ರಜ್ಞೆ. ಆದರ್ಶ, ನಿಯಂತ್ರಿತ ಬದುಕು ಅದೇ ಕಾರಣಕ್ಕೆ ಅಹಂಕಾರವನ್ನು ಕೊಟ್ಟರೆ, ಸ್ವೇಚ್ಛೆಯ ಬದುಕು ಗಿಲ್ಟ್ ಕೊಡುತ್ತದೆ. ಎರಡೂ ರೋಗಗಳೇ. ಆದರೆ ಇಲ್ಲಿ ಜೀವನದ ಜೀವಂತಿಕೆಯ ಸೆಳೆತದ ಎದುರು ಎಲ್ಲ ನಿರ್ಧಾರಗಳೂ ಮುರಿದು ಬೀಳುತ್ತವೆ. ಸಾವಿಗಿಂತ ಬದುಕು ದೊಡ್ಡದಾಗುತ್ತದೆ. ಈ ಪುಟ್ಟ ಕತೆ ಇವೆಲ್ಲವನ್ನೂ ಹಿಡಿದಿಟ್ಟಿರುವುದು ಅದ್ಭುತವಾಗಿದೆ.

‘ಜಬ್ಬಾರ್’ ಒಂದು ಉತ್ತಮ ಕತೆಯಾಗಿದ್ದೂ ಅದರ ಸಿನಿಮೀಯ ಲಕ್ಷಣಗಳಿಂದಾಗಿ ಸೊರಗಿದೆ. ಇಲ್ಲಿ ಹೇಗೆ ನಿರೂಪಕ ಇಡೀ ಕತೆಗೆ ಥರ್ಡ್ ಪಾರ್ಟಿಯಾಗಿಯೇ ಉಳಿಯುತ್ತಾನೋ ಹಾಗೆಯೇ ಓದುಗನೂ ಕತೆಯ ಹೊರಗೇ ಉಳಿಯುತ್ತಾನೆ. ಹಾಗಿದ್ದೂ ಇದೊಂದು ಮ್ಯಾಗಝೀನ್ ಕತೆಯ ಮಟ್ಟದಲ್ಲಿ ಉತ್ತಮ ಕತೆಯೇ.

‘ಮಲ್ಲಿಕಾರ್ಜುನ ದೇವರಾಗಿದ್ದು’ ಈ ಸಂಕಲನದ ರಂಜಕ ಗುಣಗಳಿರುವ ಇನ್ನೊಂದು ಒಳ್ಳೆಯ ಕತೆ.

ಒಟ್ಟಾರೆಯಾಗಿ ಬದುಕಿನ, ಮನುಷ್ಯನ ಮತ್ತು ಮನಸ್ಸಿನ ಸಂಕೀರ್ಣ ಎಳೆಗಳ ಸ್ಪರ್ಶವಿರುವ, ಪ್ರಬುದ್ಧ ಕತೆಗಾರ್ತಿಯೊಬ್ಬರ ಸಶಕ್ತ ಕತೆಗಳನ್ನು ಈ ಸಂಕಲನ ಒಳಗೊಂಡಿದೆ. ಹೇಳುವುದಕ್ಕಿಂತ ಹೆಚ್ಚಿನದನ್ನು ಕಾಣಿಸುವ ಗುಣವಿರುವ ಒಂದೆರಡು ಕತೆಗಳನ್ನೂ ಈ ಸಂಕಲನ ಒಳಗೊಂಡಿರುವುದು ಇವರಿಂದ ಮುಂದೆ ಬರೀ ಕಾಣಿಸುವ ಕತೆಗಳನ್ನೇ ನಿರೀಕ್ಷಿಸಬಹುದು ಎನ್ನುವ ಆಶಾವಾದಕ್ಕೆ ಇಂಬು ನೀಡುತ್ತದೆ.  

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, May 26, 2022

ಜಾನೇ ಕಹಾಂ ಗಯೇ ವೋ ದಿನ್...


ಈ ಇಡೀ ಬರಹದಲ್ಲಿರುವ ಹೆಚ್ಚಿನ, ಬೇಡ ಎಲ್ಲಾ ಮಾತುಗಳು, ಅಭಿಪ್ರಾಯಗಳು ನನ್ನ ಸ್ವಂತದ್ದಲ್ಲ. ಕೇಳಿದ್ದು, ಓದಿದ್ದು, ಬಲ್ಲವರು ನನಗೆ ತಿಳಿಹೇಳಿದ್ದು ಎಲ್ಲ ಮಿಕ್ಸಪ್ ಮಾಡಿ ನನ್ನದೇ ಎನ್ನುವ ತರ ಬಿಲ್ಡಪ್ ಕೊಟ್ಟಿರುವುದಷ್ಟೇ. 

ಇಲ್ಲಿ ಮತ್ತು ಈಗ - ಮನುಷ್ಯ ನೆಮ್ಮದಿಯಾಗಿರಬಲ್ಲ ಏಕೈಕ ತಾಣ ಎಂದು ಆಧ್ಯಾತ್ಮವಾದಿಗಳೂ, ಚಿಂತಕರೂ ಹೇಳುತ್ತಿರುತ್ತಾರೆ. ವರ್ತಮಾನದಲ್ಲಿ ಯಾರೂ ಪಾಪಿಯಾಗಿರುವುದಿಲ್ಲ ಎನ್ನುವುದು ಇಂಥದೇ ಇನ್ನೊಂದು  ಹೇಳಿಕೆ. ಧ್ಯಾನ, ಸಮಾಧಿ ಎನ್ನುವುದೆಲ್ಲ ಬಹುಶಃ ಇಂಥ ಒಂದು ಸ್ಥಿತಿಯನ್ನೇ ಸೂಚಿಸುತ್ತಿರಬಹುದು. ಅದು ನಿದ್ದೆಯೂ ಅಲ್ಲ, ಎಚ್ಚರವೂ ಅಲ್ಲ. ಆದರೆ ‘ನಾನು’ ಎಂಬ ಪ್ರಜ್ಞೆಯನ್ನು ಕಳಚಿಕೊಂಡು ಬದುಕುವ ಒಂದು ಸ್ಥಿತಿಯಿರಬಹುದು. ನಿದ್ದೆ ಕೂಡಾ ಹೆಚ್ಚೂ ಕಡಿಮೆ ‘ನಾನು’ ಕಳೆದುಕೊಂಡ ಒಂದು ಸ್ಥಿತಿಯೇ. ಆದರೆ ಅಲ್ಲಿ ಪ್ರಜ್ಞೆ ಕೂಡಾ ಕಳೆದುಕೊಂಡಿರುತ್ತೇವೆ. ಹಾಗಾಗಿ ಅದು ಧ್ಯಾನ ಅಲ್ಲ.

ಬರೆಯುವಾಗ ಒಬ್ಬ ಸಾಹಿತಿ ಕೂಡಾ ನಿಷ್ಪಾಪಿ. ಏನೇನೋ ರಾಜಕೀಯ ಮಾಡುತ್ತ, ಪ್ರಶಸ್ತಿ, ಪ್ರಸಿದ್ಧಿಗಾಗಿ ಎಂಥೆಂಥವರ ಮುಂದೆ ಹಲ್ಲುಗಿಂಜಿ, ಕೈಹಿಸುಕಿ, ಕಾಲು ಹಿಡಿದು ಮಾಡಿದರೂ, ಬೇರೆ ಬರಹಗಾರರ ಕುರಿತು ಎಷ್ಟೇ ಸಣ್ಣಬುದ್ಧಿಯ, ಕುತ್ಸಿತ ಮನೋಭಾವದ ವರ್ತನೆ ತೋರಿದರೂ, ಅಧಿಕಾರ-ಹಣ-ಆಕರ್ಷಣೆಯ ಬಲದಲ್ಲಿ ಕಲೆಯ ಕ್ಷೇತ್ರದಲ್ಲಿ ಮಾಡಬಾರದ್ದು ಮಾಡಿದರೂ, ಬರೆಯುತ್ತಿರುವಷ್ಟು ಹೊತ್ತು ಅವನು ಪರಿಶುದ್ಧ. ಅವನು ತನ್ನನ್ನೇ ತಾನು ಕಳೆದುಕೊಂಡು , ಇನ್ನೇನೋ ಆಗಿ ಬರೆಯುತ್ತಿರುತ್ತಾನೆ. ಅಥವಾ ಒಬ್ಬ ಚಿತ್ರಕಲಾವಿದ, ನಟ, ಹಾಡುಗಾರ, ಬಡಗಿಯಿರಲಿ, ಶಿಲ್ಪಿಯಿರಲಿ, ತನ್ಮಯನಾಗಿ ತನ್ನ ಕಾಯಕದಲ್ಲಿ ತನ್ನನ್ನು ತಾನು ಕಳೆದುಕೊಂಡೂ ದುಡಿಯುತ್ತಿರುವಷ್ಟು ಹೊತ್ತು ಅದು ಧ್ಯಾನವೇ, ಸಮಾಧಿಯೇ.  

ಆದರೆ ಸಾಹಿತಿ ಮಾತ್ರ ವರ್ತಮಾನದಲ್ಲಿಯೇ ಇರುವುದು ಸಾಧ್ಯವಿಲ್ಲ. ಅವನು ಸದಾ ಭೂತ, ಭವಿಷ್ಯತ್ ಕಾಲಗಳಿಗೆ ಜೋಕಾಲಿಯಾಡುತ್ತಿರುತ್ತಾನೆ. ಅವನ ಕತೆ, ಕವಿತೆ, ಕಾದಂಬರಿಗಳಿಗೆ ವಸ್ತುವಾಗುವ, ವಸ್ತುವಿಗೆ ಬೇಕಾದ ರಕ್ತ, ಮಾಂಸದಂತೆ ವಿವರಗಳನ್ನು ಒದಗಿಸಿ ಜೀವಂತಿಕೆ ತರುವ ಸಂಗತಿಗಳೆಲ್ಲಾ ಸಿಗುವುದು ಅವನ ಭೂತಕಾಲದ ಅನುಭವದಲ್ಲಿಯೇ. ಹಾಗಾಗಿ ಅವನು ಮತ್ತೆ ಮತ್ತೆ ಆ ನೆನಪುಗಳ ಗೋಡೋನಿಗೆ ಹೋಗಿ ಬರುತ್ತಲೇ ಇರಬೇಕಾಗುತ್ತದೆ. ತನ್ನ ದೈನಂದಿನವನ್ನು ಕೂಡಾ ಅವನು ಬರೆದು ಸೋಸುತ್ತಿರುತ್ತಾನೆ. ಪ್ರತಿನಿತ್ಯ ಡೈರಿ ಬರೆಯುವವರಲ್ಲಿ ಹೆಚ್ಚಿನವರು ಲೇಖಕರೇ ಆಗಿರುವುದು ಈ ಕಾರಣಕ್ಕೆ. 

ಹೀಗೆ ಮತ್ತೆ ಮತ್ತೆ ತನ್ನ ಸ್ಮೃತಿಯನ್ನು ಸ್ಫುಟಗೊಳಿಸಿಕೊಳ್ಳುತ್ತ, ಅನುಭವವನ್ನು ನಿಕಷಕ್ಕೊಡ್ಡುತ್ತ ಅವನು ಕಂಡುಕೊಳ್ಳುವುದು ನಮ್ಮ ನಿಮ್ಮಂಥ ಸಾಮಾನ್ಯರಿಗಿಂತ ಕೊಂಚ ಭಿನ್ನವೂ, ಹೆಚ್ಚು ಗುರುತ್ವವುಳ್ಳದ್ದೂ ಆಗುವುದು ಸಹಜವೇ. ಹಾಗಿದ್ದೂ ಅವನ "ಅನುಭವದ ಸತ್ಯ" ಮತ್ತು ಅವನ "ವಿಶ್ಲೇಷಣೆಯ ಸತ್ಯ" ಎರಡರ ಹೊರತಾದ ಒಂದು ಸತ್ಯ ಅವನಿಗೆ ಅವನ ಸೃಜನಶೀಲ ಸಾಹಸದ ಹಂತದಲ್ಲಿ ಕಾಣುವುದು ತಪ್ಪುವುದಿಲ್ಲ. ಈ ಬಗ್ಗೆ ಎಲೆನಾ ಫರಾಂಟೆಯ ಹೊಸ ಪುಸ್ತಕ "In The Margins - On the Pleasures of Reading and Writing" ಗಮನಿಸಿದರೆ ಹೆಚ್ಚಿನ ವಿಚಾರಗಳು ಸಿಗುತ್ತವೆ. ಲೇಖಕನೊಬ್ಬನಿಗೆ ಸತ್ಯವನ್ನೇ ಬರೆಯುವ ಬಗ್ಗೆ ಇರುವ ಭಯ ಮತ್ತು ಸತ್ಯವನ್ನಲ್ಲದೆ ಬೇರೇನನ್ನೂ ಬರೆಯಬಾರದ ಬದ್ಧತೆ - ಎರಡರ ನಡುವೆ ನೆರವಿಗೆ ಬರುವ ಕಲ್ಪನೆಯ ಸುಖ-ಕಷ್ಟಗಳ ಬಗ್ಗೆ ಅವರು ಇನ್ನಿಲ್ಲದಂತೆ ಅಲ್ಲಿ ತೋಡಿಕೊಂಡಿದ್ದಾರೆ.

ಅದೇನಿದ್ದರೂ ಒಬ್ಬ ಸಾಹಿತಿ ತನ್ನ ಅನುಭವ ದ್ರವ್ಯವನ್ನಿಟ್ಟುಕೊಂಡು, ಪಾತ್ರಗಳನ್ನು ಸೃಜಿಸಿದ ಮೇಲೆ ಮಾತ್ರ ಆಯಾ ಪಾತ್ರಗಳು ಅವುಗಳ ವ್ಯಕ್ತಿತ್ವ, ಪರಿಸರ ಪ್ರಭಾವ ಮತ್ತು ಸಂದರ್ಭಗಳಿಗೆ ತಕ್ಕಂತೆ ವರ್ತಿಸುತ್ತ ಹೋಗುತ್ತವೆ. ಅಲ್ಲಿ ಸಾಹಿತಿಯ ಕೈಚಳಕಕ್ಕೆ ಮಿತಿಗಳು ಹೆಚ್ಚುತ್ತ ಹೋಗುತ್ತವೆ. ಹಾಗಿದ್ದೂ ಅವನನ್ನು ಕೈಹಿಡಿದು ನಡೆಸುವುದು ಅವನ ಭೂತಕಾಲದ ಅನುಭವಗಳೇ, ಗ್ರಹಿಕೆಗಳೇ, ಪೂರ್ವಗ್ರಹಗಳೇ, ಹಠ ಮತ್ತು ಚಟಗಳೇ. ಹಾಗಿದ್ದೂ ಸಾಮಾನ್ಯವಾಗಿ ಎಲ್ಲಾ ಲೇಖಕರು ತಮ್ಮ ಕತೆ, ಕಾದಂಬರಿಗಳಿಗೆ ನೆಚ್ಚಿಕೊಳ್ಳುವುದು ಬಾಲ್ಯಕಾಲ ಸ್ಮೃತಿಯನ್ನು ಎಂಬ ಮಾತಿಗೆ ಅಪವಾದಗಳು ಕಡಿಮೆ. 


ಲಂಕೇಶರ "ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ" ಕತೆ, "ಅಕ್ಕ" ಕಾದಂಬರಿ, "ಮುಸ್ಸಂಜೆಯ ಕಥಾ ಪ್ರಸಂಗ" ಕಾದಂಬರಿ, ತೇಜಸ್ವಿಯವರ "ಲಿಂಗ ಬಂದ", "ಪಂಜ್ರೊಳ್ಳಿ ಪಿಶಾಚಿಯ ಸವಾಲು", "ತ್ಯಕ್ತ" ಕತೆಗಳು, ಜಯಂತರ "ಬಣ್ಣದ ಕಾಲು", "ಟ್ರೈಸಿಕಲ್",  ಹಲವಾರು ಕವಿತೆ, ನುಡಿಚಿತ್ರಗಳಲ್ಲಿ ಬರುವ ಪುಟ್ಟ ಪೋರರು, ಹೋಟೆಲ್ ಮಾಣಿಗಳು, ಆಲನಹಳ್ಳಿಯವರ "ಕಾಡು", ಕೆ ಸದಾಶಿವ ಅವರ "ರಾಮನ ಸವಾರಿ ಸಂತೆಗೆ ಹೋಗಿದ್ದು", ಅನಂತಮೂರ್ತಿಯವರ  ಕತೆ "ಘಟಶ್ರಾದ್ಧ", ವಿವೇಕ ಶಾನಭಾಗ ಅವರ ಕತೆ "ಕಣ್ಮರೆ", ವಸುಧೇಂದ್ರರ "ನಂ ವಾಜೀನೂ ಸೇರಿಸ್ಕೊಳ್ರೋ", ಸುನಂದಾ ಕಡಮೆಯವರ "ಪುಟ್ಟಪಾದದ ಗುರುತು", ಚಿತ್ತಾಲರ "ಶಿಕಾರಿ"ಯ ನಾಗಪ್ಪ ಕೊನೆಗೂ ಕಾಣೆಯಾದ ತನ್ನ ತಂಗಿಯನ್ನೂ... ಎಂಬ ನಿರ್ಧಾರಕ್ಕೆ ಬರಲು ಕಾರಣವಾದಂತಿರುವ ಪೇಪರ್ ಹುಡುಗನೂ ಸೇರಿದಂತೆ ಇನ್ನೊಬ್ಬರ ಕನಸಿನಲ್ಲಿ ಸಿಕ್ಕಿಬಿದ್ದ ಬಾಲಕನ ಕತೆ "ಬೇನ್ಯಾ", ಅಬ್ದುಲ್ ರಶೀದರ "ಹಾಲು ಕುಡಿದಾ ಹುಡುಗ", "ಹೆಲಿಪೆಟ್ಟರ್ ಎಂಬ ದುಷ್ಟಜಂತು.." - ಹೀಗೆ ಉದಾಹರಣೆಗಳನ್ನು ಕೊಡುತ್ತಲೇ ಹೋಗಬಹುದು. ಎಲ್ಲರೂ ಒಂದಲ್ಲಾ ಒಂದು ಕತೆಯನ್ನೊ ಕಾದಂಬರಿಯನ್ನೊ ನೇರವಾಗಿ ತಮ್ಮ ಬಾಲ್ಯದ ಸ್ಮೃತಿಯಿಂದಲೇ ಮೊಗೆದು ಕೊಟ್ಟಿದ್ದಾರೆ ಮಾತ್ರವಲ್ಲ, ಅಂಥ ಕತೆಗಳೇ ಆಯಾ ಲೇಖಕರ ಟ್ರಂಪ್ ಕಾರ್ಡ್ ತರ ಓದುಗರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿರುವುದು ಕೂಡಾ ಅಷ್ಟೇ ಸತ್ಯ.  

ಆದರೆ ಇದೇನೂ ನಿಯಮವಲ್ಲ. ಅಥವಾ ಎಲ್ಲಾ ನಿಯಮಕ್ಕೂ ಅಪವಾದಗಳಿವೆ ಎಂಬಂತೆ ನಮ್ಮ ಕೆಲವು ಕತೆ, ಕಾದಂಬರಿಕಾರರು ತಪ್ಪಿಯೂ ಬಾಲ್ಯವನ್ನು ಸ್ಪರ್ಶಿಸುವ ಕತೆಗಳನ್ನಾಗಲೀ ಕಾದಂಬರಿಯನ್ನಾಗಲೀ ಬರೆದೇ ಇಲ್ಲ ಎಂದರೆ ನಂಬುತ್ತೀರಾ? ನೆನಪಿಸಿಕೊಳ್ಳಿ, ನಿಮಗೇ ಕೆಲವು ಹೆಸರುಗಳು ತಟ್ಟನೆ ಹೊಳೆಯಲಿವೆ!

ಬಾಲ್ಯದ ಸ್ಮೃತಿಗಳು ಎನ್ನುವಾಗ ಕತೆ ಅಥವಾ ಕಾದಂಬರಿಯಲ್ಲಿ ಮಕ್ಕಳು ಪ್ರಧಾನ ಭೂಮಿಕೆಯಲ್ಲಿರುವುದು, ಮುಗ್ಧ ಬಾಲಕರ ಪ್ರಜ್ಞೆಯ ಮುಖೇನ ನಿರೂಪಣೆ ಸಾಗುವುದು ಅಥವಾ ಬಾಲ್ಯದ ವಿವರಗಳೇ ಮುಖ್ಯವಾಗಿರುವ ಕತೆಗಳು ಎಂದೇನಲ್ಲ. ಕತೆ ಅಥವಾ ಕಾದಂಬರಿಯ ಕಾಲಘಟ್ಟ ಲೇಖಕನ ಬಾಲ್ಯಕ್ಕೆ ಸೇರಿದವಾದರೂ ಸರಿಯೇ. ಅಶೋಕ ಹೆಗಡೆಯವರ ಕಾದಂಬರಿ "ಅಶ್ವಮೇಧ" ಎಲ್ಲಾ ಅರ್ಥದಲ್ಲೂ ಇದಕ್ಕೆ ತಕ್ಕ ಉದಾಹರಣೆಯಾಗಬಲ್ಲದು. ಈ ಕಾದಂಬರಿಯಲ್ಲಿ ಬರುವ ಕಾಲಘಟ್ಟ ಅಶೋಕ ಹೆಗಡೆಯವರ ಬಾಲ್ಯಕ್ಕೆ ಸಲ್ಲುವ ಕಾಲವೇ. ಆದರೆ ಕತೆಯಲ್ಲಿ ಬಾಲಕ-ಬಾಲಕಿಯರ ಪಾತ್ರಗಳೇನಿಲ್ಲ, ನಿರೂಪಣೆ ಪ್ರಬುದ್ಧ ಪ್ರಜ್ಞೆಯಲ್ಲಿ ಸಾಗುತ್ತದೆ ಮಾತ್ರವಲ್ಲ ಕಥಾನಕ ರಾಜಕೀಯ-ಸಾಮಾಜಿಕ ಪಲ್ಲಟದ ಕುರಿತಾದ್ದು. ಆದರೆ ಅಶೋಕ ಹೆಗಡೆಯವರು ತಮ್ಮ ಕಾದಂಬರಿಯ ದೇಶ-ಕಾಲವನ್ನು ಎಷ್ಟು ಪರಿಪಕ್ವವಾಗಿ ಕಟ್ಟುತ್ತಾರೆ ಎನ್ನುವುದರಲ್ಲಿ ಅವರು ಬಾಲ್ಯಕಾಲ ಸ್ಮೃತಿಯನ್ನು ದುಡಿಸಿಕೊಂಡಿದ್ದು ಕಾಣುತ್ತದೆ. ಇದನ್ನೇ ಬೇರೆಯವರು ಪ್ರಯತ್ನಿಸಿದ್ದಿದೆ, ಇಲ್ಲವೇ ಇಲ್ಲ ಎಂದಲ್ಲ. ಆದರೆ ಅವರ ವಿವರಗಳು ನಮ್ಮನ್ನು ಆ ಕಾಲಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿವೆಯೇ ಇಲ್ಲವೇ ಎನ್ನುವುದು ಪ್ರಶ್ನೆ, ಅಷ್ಟೆ.

ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ನಾವಿಲ್ಲಿ ಗಮನಿಸುತ್ತಿರುವುದು ಬಾಲ್ಯದ ಘಟನೆಗಳನ್ನೋ, ವ್ಯಕ್ತಿಗಳನ್ನೋ ಅಂದುಕೊಳ್ಳದೇ ಇರುವುದು ಲೇಸು. ಅದು ಒಂದು ಅನುಭವ, ಸಂವೇದನೆ, ಭಾವಾನುಭೂತಿ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳುವುದಕ್ಕೆ ಸಂಬಂಧಿಸಿದ್ದು. ನೇರವಾಗಿ ಒಬ್ಬ ಸಾಹಿತಿಯ ಬರವಣಿಗೆಯ ಆರ್ದ್ರತೆಗೆ ಸಂಬಂಧಪಟ್ಟಿದ್ದು.

ಒಬ್ಬ ಲೇಖಕ ತನ್ನ ಸ್ಮೃತಿಗಳನ್ನು, ಅವು ಬಾಲ್ಯಕ್ಕೆ ಸೇರಿರಲಿ, ಹದಿಹರಯಕ್ಕೆ ಸೇರಿರಲಿ, ಯೌವನಕ್ಕೆ ಸೇರಿರಲಿ ಆಗಾಗ ಸ್ಪರ್ಶಿಸುತ್ತಲೇ ಇರದಿದ್ದರೆ ಒಂದು ವಯಸ್ಸಿನ ನಂತರ ಅವು ಮೊಂಡಾಗುತ್ತವೆ, ಜೀವಂತಿಕೆಯ ಹಾರ್ಮೋನುಗಳನ್ನು ಕಳೆದುಕೊಂಡು ನಿಸ್ತೇಜವಾಗುತ್ತವೆ. ಹಾಗಾಗಿ ಲೇಖಕನಿಗೆ, ಅದರಲ್ಲೂ ಸೃಜನಶೀಲ ಎನ್ನುತ್ತೇವಲ್ಲ, ಕಲ್ಪನೆ, ಕನಸು, ಭ್ರಮೆ, ವಾಸ್ತವ ಮತ್ತು ಮ್ಯಾಜಿಕ್ ಎಲ್ಲವೂ ಸೇರಿರುವ ಒಂದು ವರ್ತಮಾನವನ್ನು ಕಟ್ಟುವ ಬರವಣಿಗೆ, ಅದರಲ್ಲಿ ತೊಡಗಿರುವ ಲೇಖಕನಿಗೆ ಇದೊಂದು ತರದ ರಿಯಾಜ್ ಇದ್ದಂತೆ. ಅವನು ಈ ರಿಯಾಜ್ ನಡೆಸುವಲ್ಲಿ ಆಲಸ್ಯ ತೋರಿದರೆ ಮುಂದೆ, ಒಂದು ವಯಸ್ಸಿನ ನಂತರ ಅವನಿಂದ ಸೃಜನಶೀಲ ಸಾಹಿತ್ಯ ಸೃಷ್ಟಿ ಸಾಧ್ಯವಾಗದೇ ಹೋಗಬಹುದು. ನಮ್ಮ ಅನೇಕ ಹಿರಿಯ ಸಾಹಿತಿಗಳು ಒಂದು ಹಂತದ ನಂತರ ಚಿಂತನಾತ್ಮಕ ಲೇಖನಗಳು, ಪ್ರಬಂಧಗಳು, ರಾಜಕೀಯ, ಸಾಹಿತ್ಯ ವಿಮರ್ಶೆ, ಆತ್ಮಚರಿತ್ರೆ, ಅನುವಾದ ಎಂದು ಹೊರಳಿಕೊಂಡಿದ್ದನ್ನು ಕಾಣುತ್ತೇವೆ. ಅವರು ಮತ್ತೆ ಕತೆ, ಕಾದಂಬರಿ ಬರೆದರೂ ಅವು ಅವರ ಮೊದಮೊದಲಿನ ಕೃತಿಗಳ ಚಾರ್ಮ್ ಅದರಲ್ಲಿ ಇರುವುದು ಕಡಿಮೆ, ಅದನ್ನು ಅವರು ಒಪ್ಪದಿದ್ದರೂ. ಹಾಗಿದ್ದೂ ಪೋರ್ಚುಗಲ್ಲಿನ ಜೋಸೆ ಸಾರಾಮೊಗೊ ವಯಸ್ಸಾದಂತೆಲ್ಲ ಒಂದಕ್ಕಿಂತ ಒಂದು ಒಳ್ಳೆಯ ಕಾದಂಬರಿಗಳನ್ನು ಬರೆಯುತ್ತ ಹೋಗಿದ್ದು, ವಯಸ್ಸಾದ ಮೇಲೆಯೇ ನೆನಪು ಸ್ಫುಟಗೊಂಡವನಂತೆ ನಳನಳಿಸತೊಡಗಿದ್ದು ಕೂಡಾ ಅಷ್ಟೇ ನಿಜ. ನಮ್ಮ ಶ್ರೀನಿವಾಸ ವೈದ್ಯರು ಇಂಥದ್ದಕ್ಕೆ ಇನ್ನೊಂದು ಒಳ್ಳೆಯ ಉದಾಹರಣೆಯಾಗಬಲ್ಲರು. ಈ ಉದಾಹರಣೆಗಳು ಒಂಥರಾ ನಿಯಮಕ್ಕಿರುವ ಅಪವಾದಗಳಂತೆ ರುಚಿಗೆ ತಕ್ಕಷ್ಟೇ ಇವೆ.

ಓದುಗರಾಗಿ ನಮಗೂ ನಾವು ಚಿಕ್ಕವರಿರುವಾಗ ಮಾಡಿದ ಕೀಟಲೆ, ತಂಟೆ, ತಕರಾರು, ತಿಂದ ಪೆಟ್ಟು, ಆಡಿದ ಆಟ, ಆಗಿನ ಗೆಳೆಯರು, ಶಾಲೆ, ತಿಂದ ತಿಂಡಿಗಳು ಎಲ್ಲ ಇಷ್ಟ. ಆಗ ಓದಿದ ಚಂದಮಾಮ, ಬಾಲಮಿತ್ರ, ಬೊಂಬೆಮನೆ, ಪುಟಾಣಿ ಸಿಕ್ಕರೆ ಕುಶಿಯೇ. ಫ್ಯಾಂಟಮ್, ಲೈಲಾ ಮಜ್ನೂ, ಶೂಜ ,ಆಜಾದ್ ನಮಗೀಗಲೂ ಇಷ್ಟ. ಎತ್ತಿನ ಗಾಡಿಯಲ್ಲಿ ಮಾಡಿದ ಪ್ರಯಾಣ, ಕೈಯಿಂದ ನಡೆಸುತ್ತಿದ್ದ ದೋಣಿಯಲ್ಲಿ ಮಾಡಿದ ಜಲಯಾತ್ರೆಗಳ ನೆನಪು ಹಸಿರು. ಕೃಷಿಯ, ಹೈನುಗಾರಿಕೆಯ ನೆನಪುಗಳು ಕೊಡುವ ಮುದವೇ ಬೇರೆ. ಆಗಿನ ಗೋಪೂಜೆಯೇ ಹಬ್ಬ. ಅದರ ಸಂಭ್ರಮ ಅಂಗಳಕ್ಕೆ ಸೆಗಣಿ ಸಾರಿಸಲು ಸುರು ಮಾಡಿದಾಗಿನಿಂದ ತೊಡಗಿ ಅದು ಕಿತ್ತು ಹೋಗುವ ತನಕ ಇರುತ್ತಿತ್ತು. ಬಚ್ಚಲ ಹಂಡೆಯಲ್ಲಿ ನಾವೇ ನೀರು ಬಿಸಿ ಮಾಡಿಕೊಂಡು, ಅದೇ ಒಲೆಯಲ್ಲಿ ಹಲಸಿನ ಬೀಜವನ್ನೊ, ಹುಣಸೆ ಬೀಜವನ್ನೊ, ಸ್ವಲ್ಪ ದೂರದಲ್ಲಿ ಗೇರು ಬೀಜವನ್ನೊ, ಕೊನೆಗೆ ಈರುಳ್ಳಿಯನ್ನೊ ಸುಟ್ಟು ತಿಂದ ಕುಶಿ ಆಮೇಲೆ ಸಿಗಲೇ ಇಲ್ಲ ಎನ್ನುವವರೇ ನಾವೆಲ್ಲರೂ. ತಳ್ಳಿಕೊಂಡು ಹೋಗಲು ಒಂದೊಳ್ಳೆ ಸೈಕಲ್ ಚಕ್ರ ಸಿಕ್ಕಿದಾಗ ಆದ ಕುಶಿ ಆಮೇಲೆ ಕಾರು ಕೊಂಡಾಗಲೂ ಸಿಕ್ಕಿರಲಿಕ್ಕಿಲ್ಲವೇನೋ! ಈಗ ಮಾಲ್ಗುಡಿಯ ಸ್ವಾಮಿಯ ನೆನಪಾಗಿರಬೇಕು ಅಲ್ಲವೆ?


ಹೆಚ್ಚು ಹೇಳುವುದಕ್ಕೇನೂ ಇಲ್ಲ; ವಯಸ್ಸಿನೊಂದಿಗೆ ಕೂಡಿ+ ಕಳೆದು - ಗುಣಿಸಿ x ಭಾಗಿಸಿ/ ಕಳೆದ ನಮ್ಮ ಪುಟ್ಟ ಬದುಕಿನಲ್ಲಿ ಇದು ನಮಗೆಲ್ಲರಿಗೂ ಸಾಮಾನ್ಯವಾಗಿಯೇ ಇರುವ ಸಮಾನ ಭಾಜಕ! ನೆನಪುಗಳಷ್ಟೇ ಅವಿಭಾಜ್ಯ. ಹಾಗಾಗಿ ನಮಗೆ ಇಂಥ ಕುಶಿಯನ್ನು ಕೊಡುವ ಕೆಲವು ಪುಸ್ತಕಗಳ ಬಗ್ಗೆ ತಿಳಿಸಿ ಇದನ್ನು ಮುಗಿಸುವೆ.

01. ಮೊದಲಿಗೆ ಲಾರಾ ಇಂಗಲ್ಸ್ ವೈಲ್ಡರಳ ಸರಣಿ.
02. ಗೊರೂರು ರಾಮಸ್ವಾಮಿ ಅಯ್ಯಂಗಾರರ ಬಾಲ್ಯದ ಆತ್ಮಕತೆ, ಬೈಲಹಳ್ಳಿಯ ಸರ್ವೆ, ಹಳೆಯ ಪಳೆಯ ಮುಖಗಳು, ನಮ್ಮ ಊರಿನ ರಸಿಕರು ಮತ್ತು ಹಳ್ಳಿಯ ಚಿತ್ರಗಳು. 
03. ಕಮಲಾ ಸುರಯ್ಯಾ ಅವರ ಬಾಲ್ಯದ ನೆನಪುಗಳು
04. ಉಷಾ ರಾಜಗೋಪಾಲನ್ ಅವರ The Zoo in my Backyard
05. ಕೇಶವರೆಡ್ಡಿ ಹಂದ್ರಾಳ ಅವರ ಒಕ್ಕಲ ಒನಪು ಮತ್ತು ಮರೆತ ಭಾರತ
06. ಬಿ ಚಂದ್ರೇಗೌಡ ಅವರ ಹಳ್ಳೀಕಾರನ ಅವಸಾನ
07. ಮಾಯಾ ಶಾನಭಾಗ ಅವರ What We Carry
08. ಕಿ ರಾಜನಾರಾಯಣನ್ ಅವರ Gopallapuram
09. ಶಿವಾನಿ ಅವರ Amader Shantiniketan
10. ಸ ಉಷಾ ಅವರ ಕಸೂತಿ
11. ಟಿ ಆರ್ ಶಾಮಭಟ್ಟ ಅವರು ಅನುವಾದಿಸಿರುವ ಪ್ರೊ ಎಂ ಎನ್ ಶ್ರೀನಿವಾಸ್ ಅವರ ನೆನಪಿನ ಹಳ್ಳಿ
12. ನಾ ಮುತ್ತುಸ್ವಾಮಿ ಅವರ Bullocks from the West  ಮತ್ತು Waterness
13. ಪ್ರಸಾದ್ ರಕ್ಷಿದಿ ಅವರ ಬೆಳ್ಳೇಕೆರೆ ಹಳ್ಳೀ ಥೇಟರ್
14. ವಿಠ್ಠಲ ಕಲ್ಗುಳಿ ಅವರ ಮಂಗನಬ್ಯಾಟೆ
15. ಶ್ರೀನಿವಾಸ ವೈದ್ಯರ ಇನ್ನೊಂದು ಸಂತೆ
16. ಶ್ಯಾಮಲಾ ಮಾಧವ ಅವರು ಅನುವಾದಿಸಿರುವ (ಬಾಲ್ಯಕಾಲ ಸ್ಮೃತಿ) ಸಾವಿತ್ರಿ ಬಾಬುಲ್ಕರ್ ಅವರ Childhood Daze!
17. ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಬೆಲ್ಲಂಪುಲ್ಲಕ್ಕ
18. ಪಿ ಶ್ರೀಧರ ನಾಯಕ್ ಅವರ ಭಾವಲೋಕ

ಇನ್ನಷ್ಟು ಅವಿಭಾಜ್ಯ ಸಂಖ್ಯೆಗಳನ್ನು ಸೂಚಿಸಿ, ಅಂಕಗಳಿಗೆ ಲಂಚವಿಲ್ಲ!
(ಎಲ್ಲಾ ಚಿತ್ರಗಳೂ ಫ್ರಾನ್ಸ್‌ನ ಆರ್ಟ್ ಡೈರೆಕ್ಟರ್ ಪಿಯರೆ ಬಾಟೆ ಅವರ ಕೃಪೆ.)

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, May 24, 2022

ಮಹತ್ವದ ಕಥಾಸಂಕಲನ ಜಮೀಲಾ ಜಾವೇದ


ಕೇವಲ ನಲ್ವತ್ತೈದು ವರ್ಷಗಳಷ್ಟೇ ಬದುಕಿದ್ದ, 1932ರಲ್ಲಿ ಹುಟ್ಟಿ 1977ರಲ್ಲಿ ಕೊನೆಯುಸಿರೆಳೆದ ಹಮೀದ್ ದಳವಾಯಿ ಅವರ ಕತೆಗಳನ್ನು ಓದುತ್ತಿದ್ದರೆ ಆಶ್ಚರ್ಯ, ಮೆಚ್ಚುಗೆ, ಅಭಿಮಾನ ಎಲ್ಲವೂ ಒಟ್ಟಿಗೇ ಮೂಡುತ್ತದೆ. ಈ ಕತೆಗಳನ್ನು ಬರೆದಾಗ ಅವರಿಗಿನ್ನೂ 20-34 ವರ್ಷ ಎನ್ನುವ ಮಾತಂತೂ ಬೆರಗಿಗೆ ಕಾರಣವಾಗುವಂಥದ್ದು. ಸುಮಾರು ನಲ್ವತ್ತಕ್ಕೂ ಹೆಚ್ಚು ಕತೆಗಳನ್ನು ಬರೆದಿದ್ದರೂ ಪುಸ್ತಕ ರೂಪದಲ್ಲಿ ಇರುವುದು ಒಂದೇ ಕಥಾ ಸಂಕಲನ. "ಜಮೀಲಾ ಜಾವೇದ" ನಮ್ಮ ಚಂದ್ರಕಾಂತ ಪೋಕಳೆಯವರಿಂದಾಗಿ ಅದೇ ಹೆಸರಿನಲ್ಲಿ ಕನ್ನಡಕ್ಕೆ ದಕ್ಕಿದೆ. 

ಹಮೀದ್ ದಳವಾಯಿ ಅವರ ಕಾದಂಬರಿ "ಇಂಧನ್" (ಇಂಗ್ಲೀಷಿನಲ್ಲಿ Fuel) ಗೆ 1966ರಲ್ಲಿ ಮಹಾರಾಷ್ಟ್ರ ರಾಜ್ಯ ಸರಕಾರದ ಪ್ರಶಸ್ತಿ ಬಂದಿತ್ತಂತೆ. ಅದನ್ನೂ ಪೋಕಳೆಯವರು ಕನ್ನಡಕ್ಕೆ ತಂದಿದ್ದು ಸೃಷ್ಟಿ ನಾಗೇಶ್ ಅವರು ಪ್ರಕಟಿಸಿದ್ದರೂ ಸದ್ಯ ಎಲ್ಲಿಯೂ ಅದರ ಪ್ರತಿಗಳು ಲಭ್ಯವಿಲ್ಲ.  "ಜಮೀಲಾ ಜಾವೇದ" ಸಂಕಲನವನ್ನು ವಸಂತ ಪ್ರಕಾಶನ ಪ್ರಕಟಿಸಿದೆ, ನವಕರ್ನಾಟಕದ ಮಳಿಗೆಗಳಲ್ಲಿ, ಆನ್‌ಲೈನಿನಲ್ಲಿಯೂ ಸಿಗುತ್ತದೆ. ಬೆಲೆ ರೂ.85/-

ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿವೆ. "ಬಾಬುಖಾನನ ಗ್ರಾಮೋಫೋನ್" ಕತೆಯನ್ನು ಟಿವಿ9 ವೆಬ್ ಪತ್ರಿಕೆ ಪ್ರಕಟಿಸಿದ್ದು ಓದಿಗೆ ಲಭ್ಯವಿದೆ. ಹಮೀದ್ ದಳವಾಯಿಯವರ ಕತೆ ಇವತ್ತಿಗೂ ಕೇವಲ ನಾಸ್ಟಾಲ್ಜಿಯಾಕ್ಕೆ ಸಂತೃಪ್ತಿಕೊಡುವ ಮಟ್ಟಕ್ಕೆ ನಿಲ್ಲದೆ, ಮನುಷ್ಯನ ಮೌಲ್ಯಗಳ ಬಗ್ಗೆ, ಭಾವನೆ ಮತ್ತು ಸಂಸ್ಕಾರದ ಬಗ್ಗೆ ಮೌನವಾಗಿ ಮಿಡಿಯುವುದು ಈ ಕತೆಗಳ ಬಗ್ಗೆ ಗೌರವ ಹುಟ್ಟಿಸುತ್ತದೆ. ದಳವಾಯಿಯವರ ಕತೆಗಳು ತೀರ ಸರಳವಾದ ಭಾಷೆಯಲ್ಲಿ, ಸಾಹಿತಿಯ ಯಾವ ಶೈಲಿಯೂ ಇಲ್ಲದೆ, ಸಹಜವಾಗಿ ಹೇಳುವ ವಿಧಾನದಲ್ಲಿ ಸಾಗುತ್ತವೆ. ಅಲ್ಲಿ ತೋರುಗಾಣಿಕೆಯ ಯಾವ ಭಂಗಿಯೂ ಇಲ್ಲ, ತಂತ್ರಗಾರಿಕೆ, ಮೆಚ್ಚಿಸಲು ಆಡುವ ಮಾತುಗಳೂ, ವಿಧಾನಗಳೂ ಇಲ್ಲ. 

ಸುಮಾರು ಐವತ್ತು ವರ್ಷಗಳಷ್ಟು ಹಿಂದಿನ ಭಾರತದ ಪರಿಸ್ಥಿತಿಯ ಒಂದು ಚಿತ್ರ ಒದಗಿಸುವ ಈ ಕತೆಗಳು ಸಮಾಜದ, ಆರ್ಥಿಕತೆಯ, ಹೆಣ್ಣಿನ ಸ್ಥಾನಮಾನದ, ಹಿಂದೂ ಮುಸ್ಲಿಂ ಬಾಂಧವ್ಯದ, ಧಾರ್ಮಿಕ ಮೌಲ್ಯ ಮತ್ತು ಮೌಢ್ಯದ, ಮೋಸ, ವಂಚನೆಯಂಥ ಮೌಲ್ಯಗಳಿಗೆ ಸಂಬಂಧಿಸಿದ ವಿವಿಧ ಚಿತ್ರಗಳನ್ನು ಕೊಡುತ್ತವೆ.  ಬಾಲ್ಯದ, ಗಂಡು ಹೆಣ್ಣು ಸಂಬಂಧದ, ಹರಯದ ಪ್ರೇಮದ, ಮನುಷ್ಯ ಸಂಬಂಧಗಳ ಹಲವು ಕಥನಗಳು ಇಲ್ಲಿ ತೆರೆದುಕೊಂಡರೂ ದಳವಾಯಿಯವರ ಕತೆಗಳು ಒಟ್ಟಾರೆ ನೋಟವನ್ನು ಒದಗಿಸುವತ್ತ ಎಷ್ಟೊಂದು ಎಚ್ಚರಿಕೆಯಿಂದ ಗಮನಕೊಟ್ಟು ಬೆಳೆಯುತ್ತವೆ ಎಂದರೆ, ಯಾವುದೇ ಕತೆಯನ್ನು ಇಂಥ ವಸ್ತುವಿನ ಕತೆ ಎಂದು ಹೇಳುವುದೇ ಕಷ್ಟವೆನಿಸುವಷ್ಟು ಸಮಗ್ರವಾದ ಸಮಾಜವನ್ನು, ಮನುಷ್ಯನನ್ನು ಕಟ್ಟಿಕೊಡುವ ಕತೆಗಳಾಗಿಯೇ ನಿಲ್ಲುತ್ತವೆ. 

ಸಮಾಜವಾಗಲೀ, ವ್ಯಕ್ತಿಯ ಚಿತ್ರದಲ್ಲಾಗಲೀ ಕಪ್ಪು ಬಿಳುಪಿನ ಚಿತ್ರಣವಿಲ್ಲ. ವ್ಯಕ್ತಿಯೂ ಸಮಗ್ರ, ಸಮಾಜವೂ ಸಮಗ್ರ ಮತ್ತು ಹಾಗಾಗಿ ಕತೆಗಳು ಏಕ ಕಾಲಕ್ಕೆ ಹಲವು ಪಾತಳಿಯಲ್ಲಿ ಬೆಳೆಯುವ ಕಸು ಹೊಂದಿ ನಿರ್ದಿಷ್ಟ ಅಂತ್ಯದತ್ತ ಚಲಿಸುವ ತುರ್ತಿಲ್ಲದೆ, ಓದುಗನನ್ನು ಒಳಗೊಂಡು ಸಾಗುತ್ತವೆ, ನಿಲ್ಲುತ್ತವೆ.  ಹಾಗಾಗಿ ಇಲ್ಲಿನ ಯಾವ ಕತೆಯೂ ಓದುಗ ನಿರೀಕ್ಷಿಸುವ ಅಥವಾ ಬಯಸುವ ಅಂತ್ಯವನ್ನೇ ತಲುಪುತ್ತವೆ ಎನ್ನುವಂತೆಯೇ ಇಲ್ಲ. ಇದರಿಂದಾಗಿಯೇ ಈ ಕತೆಗಳ ಮಹತ್ವ ಹೆಚ್ಚು, ಸಾಹಿತ್ಯಿಕವಾಗಿಯೂ, ಒಂದು ಕಾಲದ ಸಮಾಜದ ಚಿತ್ರವಾಗಿಯೂ. ಇವೆರಡಕ್ಕಿಂತ ಹೆಚ್ಚಾಗಿ, ಈ ಕತೆಗಳು ತೆರೆದಿಡುವ ಒಂದು ಕಾಲದ ಬದುಕಿನ ಮೌಲ್ಯಗಳ ಮತ್ತು ಇಂದಿಗೆ ಅವು ಒದಗಿಸುವ ತೌಲನಿಕ ದೃಷ್ಟಿಗಾಗಿಯೂ ಮಹತ್ವ ಪಡೆಯುತ್ತವೆ. ಅದೇನೂ ಇಲ್ಲದೆ ಸುಮ್ಮನೇ ಮನರಂಜನೆಗಾಗಿಯೂ ಈ ಕತೆಗಳನ್ನು ಓದಬಹುದು. ಒಂದಿಷ್ಟೂ ಹೊರೆಯಾಗದೆ, ಬೋರ್ ಹೊಡೆಸದೆ, ಒಂದೇಟಿಗೆ ಓದಿಸಿಕೊಳ್ಳುವ ಗುಣ ಈ ಕತೆಗಳಿಗಿರುವುದು ವಿಶೇಷ. 

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, May 22, 2022

ನಾಲ್ಕೂ ದಿಕ್ಕಿನ ಗೆರೆಗಳ ನಡುವೆ...


ಮಗುವೊಂದು ಅಕ್ಷರ ಕಲಿತ ಹೊಸದರಲ್ಲಿ ತಾನು ಬರೆದ ತನ್ನದೇ ಹೆಸರನ್ನು ನಮಗೆ ತೋರಿಸುವ ಉತ್ಸಾಹ, ಗತ್ತು ಗಮನಿಸಿದ್ದೀರಾ? ಆ ಅಕ್ಷರಗಳಲ್ಲಿ ಕೆಲವೊಂದು ದೊಡ್ಡವು, ಕೆಲವು ಚಿಕ್ಕವು, ಅವುಗಳ ನಡುವಿನ ಅಂತರ ಕೆಲವೊಮ್ಮೆ ತೀರ ಹೆಚ್ಚು, ಕೆಲವೊಮ್ಮೆ ತೀರ ಕಡಿಮೆ. ಆದರೂ ಆ ಮಗು ನಿಮ್ಮಿಂದ ಮೆಚ್ಚುಗೆ ನಿರೀಕ್ಷೆ ಮಾಡುತ್ತಿರುತ್ತದೆ, ಅದು ಜಗತ್ತಿನ ಅದ್ಭುತವಾದ ಏನನ್ನೋ ಸಾಧಿಸಿದ್ದೇನೆಂಬ ಹೆಮ್ಮೆಯಿಂದ ನಿಮಗೆ ತೋರಿಸಿ, ನಿಮ್ಮ ತಾರೀಫು ನುಡಿಗಳಿಗಾಗಿ ಕಾಯುತ್ತಿರುತ್ತದೆ.

ಎಲೆನಾ ಫರಾಂಟೆ ಇದನ್ನು ಪ್ರತಿಯೊಬ್ಬ ಸಾಹಿತಿಯ ಮನಸ್ಥಿತಿಗೆ ಹೋಲಿಸಿ ತಮ್ಮ ಉಪನ್ಯಾಸ ತೊಡಗುತ್ತಾರೆ.  ಅವರ ಇತ್ತೀಚಿನ In the Margins ಕೃತಿಯಲ್ಲಿರುವುದು ಅವರ ಮೂರು ಉಪನ್ಯಾಸಗಳು. ಯೂನಿವರ್ಸಿಟಿ ಆಫ್ ಬೊಲೊನಿಯಾದಲ್ಲಿ ಬರವಣಿಗೆ ಮತ್ತು ಓದಿನ ಸುಖಕಷ್ಟಗಳ ಬಗ್ಗೆ ನೀಡಿದ ಈ ಉಪನ್ಯಾಸಗಳ ಪಠ್ಯ ರೂಪಕ್ಕೆ In the Margins ಎಂಬ ಹೆಸರು ನೀಡಿರುವುದು ಕೂಡ ಕುತೂಹಲಕರವೇ. 

ಪ್ರಾಥಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ಮಕ್ಕಳು ಅಕ್ಷರಾಭ್ಯಾಸ ನಡೆಸುವುದಕ್ಕಾಗಿ ನಮ್ಮಲ್ಲಿ ಕಾಪಿ ಬರೆಯುವ ಕ್ರಮ ಇರುವ ಹಾಗೆಯೇ ಅವರಲ್ಲಿ ಕೊಡುವ ಪುಸ್ತಕದ ಪ್ರತಿ ಹಾಳೆಯಲ್ಲಿಯೂ ಬರೆಯುವ ಸಾಲಿನ ಎಡಬದಿಯಲ್ಲಿ ಕೆಂಪು ಬಣ್ಣದ ಮಾರ್ಜಿನ್ ಗೆರೆ ಇರುವಂತೆಯೇ ಬಲಬದಿಯಲ್ಲಿಯೂ ಒಂದು ಮಾರ್ಜಿನ್ ಗೆರೆ ಇರುತ್ತಿತ್ತಂತೆ. ಕೊನೆಯಲ್ಲಿ ಬರುವ ಯಾವುದೇ ಪದ ತುಂಡಾಗದಂತೆ (ನಮ್ಮಲ್ಲಿ ಒಂದು ಪದದ ‘ಅಂ’ ಕಾರ ತುಂಡಾಗದಂತೆ ಬರೆಯುತ್ತೇವಲ್ಲ, ಹಾಗೆ) ಮಾರ್ಜಿನ್ನಿನ ಹೊರ ಬರದಂತೆ ಬರೆಯಬೇಕಿತ್ತಂತೆ.   ಬಲ ಮಾರ್ಜಿನ್ನಿನಿಂದ ಪದ ಹೊರ ಹರಿದರೆ ಶಿಕ್ಷೆ. ಈಗ ನಾವು ಕಂಪ್ಯೂಟರಿನಲ್ಲಿ ಟೈಪ್ ಮಾಡುವಾಗ ಅಲೈನ್‌ಮೆಂಟಿನ ಸಮಸ್ಯೆಯೇ ಬರುವುದಿಲ್ಲ. ಆದರೆ ಕೈಯಲ್ಲಿ ಬರೆಯುತ್ತಿದ್ದಾಗ ಇದೊಂದು ಕಷ್ಟದ, ಒತ್ತಡ ನಿರ್ಮಿಸುವ ಸಂಗತಿಯಾಗುತ್ತಿತ್ತು. ಶಾಲೆಯಲ್ಲಿ ನಾವಿದನ್ನು ಅನುಭವಿಸದಿದ್ದರೂ ಮುಂದೆ ಕೆಲಸಕ್ಕಾಗಿ ಅರ್ಜಿ ಬರೆಯುವಾಗಲೋ, ಬಯೊಡಾಟವನ್ನು ಕೈಯಲ್ಲಿ ಸಿದ್ಧಪಡಿಸುವಾಗಲೋ, ಕತೆ-ಕವಿತೆಯ ಪರಿಪೂರ್ಣ ಪ್ರತಿಯೊಂದನ್ನು ತಯಾರಿಸುವಾಗಲೋ ಖಂಡಿತ ಅನುಭವಿಸಿದ್ದೇವೆ. ಈ ಒಂದು ಒತ್ತಡದ ಬಗ್ಗೆ ವಿಶೇಷ ಗಮನ ಸೆಳೆಯುವ ಎಲೆನಾ, ಇದು ಒಬ್ಬ ಸಾಹಿತಿಯ ಒತ್ತಡಕ್ಕೆ ಕೊಡಬಹುದಾದ ಅತ್ಯುತ್ತಮ ರೂಪಕ ಎಂಬಂತೆ ಮಾತನಾಡುತ್ತಾರೆ.

ಒಂದು ಪುಸ್ತಕವನ್ನು ಓದುತ್ತ ಒಬ್ಬ ಓದುಗನ ಒಳಜಗತ್ತಿನಲ್ಲಿ ಉಂಟಾಗುವ ಪ್ರಕ್ರಿಯೆಯ ಬಗ್ಗೆ ಮಾತನಾಡುವ ಎಲೆನಾ, ಬರೆಯುವಾಗ ಬರಹಗಾರನ ಒಳಜಗತ್ತಿನ ವಿದ್ಯಮಾನವೇ ಯಥಾವತ್ ಪೆನ್ನಿನ ಮೂಲಕ ಹಾಳೆಯಲ್ಲಿ ಮೂಡುವ ಪ್ರಕ್ರಿಯೆ ಏನಿದೆ, ಅದರ ಕಷ್ಟನಷ್ಟಗಳ ಬಗ್ಗೆ ತುಂಬ ಸೂಕ್ಷ್ಮವಾದ ಕೆಲವು ಮಾತುಗಳನ್ನಾಡಿದ್ದಾರೆ. ಮೊದಲಿಗೆ, ಅವರು ಬಹುವಾಗಿ ಮೆಚ್ಚಿಕೊಳ್ಳುವ ಇತಾಲೊ ಸ್ವೇವೊನ (Italo Svevo) ಮಹತ್ವದ ಕೃತಿ "ಝೆನೊಸ್ ಕಾನ್ಷಿಯೆನ್ಸ್" ನಲ್ಲಿ ಬರುವ ನಿರೂಪಕ ಝೇನೊ ಕೊಸೀನಿಯ ಈ ಸಾಲುಗಳನ್ನು ಉಲ್ಲೇಖಿಸುತ್ತಾರೆ.

Now, having dined, comfortably lying in my over-stuffed lounge chair, I am holding a pencil and a piece of paper. My brow is unfurrowed because I have dismissed all concern from my mind. My thinking seems something separate from me. I can see it. It rises and falls... but that is its only activity. To remind it that it is my thinking and that its duty is to make itself evident, I grasp the pencil. Now my brow does wrinkle, because each word is made up of so many letters and the imperious present looms up and blots out the past. 

(Translated by William Weaver)

ಇಲ್ಲಿ ನಿರೂಪಕ ತಾನು ಸುಮ್ಮನೇ ಆರಾಮಾಗಿ ಉಂಡು ಕೂತಿದ್ದಾಗ ತನ್ನ ಮನಸ್ಸಿನಲ್ಲಿ ಬಂದು ಹೋಗುತ್ತಿರುವ ಯೋಚನೆಗಳು ಮತ್ತು ತಾನು ಎರಡೂ ಬೇರೆ ಬೇರೆ ಎಂದು ಕಂಡುಕೊಳ್ಳಬಲ್ಲ, ಹುಬ್ಬು ಗಂಟಿಕ್ಕದೇ ಕಣ್ಣೆದುರಿಗಿರುವ ಹಾಳೆಯನ್ನು ಹಿಡಿದು ಓದಬಲ್ಲ. ಆದರೆ ಒಮ್ಮೆ ಕಣ್ಣೆದುರಿನ ಪ್ರತಿಯೊಂದು ಶಬ್ದವೂ ಅವನ ವರ್ತಮಾನದೊಂದಿಗೆ ಭೂತವನ್ನು ಹೊರತಂದು ನೇಯತೊಡಗಿತೋ, ಅವನ ಹುಬ್ಬು ಗಂಟಿಕ್ಕಿದೆ, ಅವನಲ್ಲದ ಅವನ ಯೋಚನೆಗಳ ಮಹಾಪೂರವೊಂದು ತೊಡಗಿದೆ. 
 
ಮನಸ್ಸಿನಲ್ಲಿ ಬಂದು ಹೋಗುವ ಸಾವಿರಾರು ಯೋಚನೆಗಳು, ಚಿತ್ರಗಳು, ಅದು ಕಾಣುವ ಕನಸುಗಳು, ಅನುಭವಿಸುವ ಭ್ರಮೆಗಳು, ಸುಮ್ಮನೇ ಹುಟ್ಟುವ ವಿಭಿನ್ನ ಅನುಭೂತಿಗಳು ಅಕ್ಷರ ರೂಪಕ್ಕೆ ಬರುವುದು, ಅವುಗಳಿಗೆಲ್ಲ ಒಂದು ಅರ್ಥಪೂರ್ಣತೆಯ ನಂಟನ್ನು ಕೊಟ್ಟು ಆಕೃತಿಗೆ ತರುವುದು ಸುಲಭದ ಪ್ರಕ್ರಿಯೆಯೇನಲ್ಲ. ಎಲೆನಾ ತಮ್ಮೆದುರಿಗಿದ್ದ ಸಂಕಟವನ್ನು ತಕ್ಕಮಟ್ಟಿಗೆ ಪರಿಹರಿಸಿದ್ದು ಗಾಸ್ಪರಾ ಸ್ಟಾಂಪಾ (Gaspara Stampa) ಅವರ ಒಂದು ಕವಿತೆ ಎಂದು ಹೇಳುತ್ತಾರೆ. ಆ ಕವಿತೆಯಲ್ಲಿ ಬಹುಮುಖ್ಯವಾಗಿ ಕವಿ ತನ್ನ ಬಗ್ಗೆ ಘನತೆಯ ಒಂದು ಪ್ರಭಾವಳಿಯನ್ನಿಟ್ಟುಕೊಳ್ಳದೆ, ತಾನು ಸಾಮಾನ್ಯರಲ್ಲಿ ಸಾಮಾನ್ಯಳು, ಕಳಂಕಿತೆ ಅಥವಾ ನೀಚ ಹೆಣ್ಣು ಎಂದೇ ಪರಿಗಣಿಸಿಕೊಂಡು, ತಾನು ಮಾಡಬೇಕಾದುದೆಲ್ಲ ತನ್ನ ನೋವು ಮತ್ತು ಪೆನ್ನು ಎರಡರ ನಡುವಿನ ಅಂತರವನ್ನು ಅಳಿಸುವುದಷ್ಟೇ, ಅಷ್ಟೂ ಸಾಧ್ಯವಿಲ್ಲವೆ ತನಗೆ ಎಂದು ಪ್ರಶ್ನಿಸಿಕೊಳ್ಳುತ್ತಾಳೆ.  

ಆದರೆ ಬಹು ಸುಲಭದ, ಸರಳ ಕೆಲಸ ಅನಿಸುವ ಅದು ಅಷ್ಟು ಸರಳವೂ ಅಲ್ಲದ, ಸುಲಭವೂ ಅಲ್ಲದ, ಬಹುಶಃ ಬಹುಮಟ್ಟಿಗೆ ಅಸಾಧ್ಯವಾದ ಒಂದು ಕೆಲಸ ಎನ್ನುವುದು ಎಲೆನಾಗೆ ಬಹುಬೇಗ ಅರಿವಾಗುತ್ತದೆ. ಅದಕ್ಕೆ ತಾನು ಏನೂ ಅರಿಯದವಳಾಗಿರುವುದು, ತನಗೆ ಯಾವುದೇ ಅನುಭವ ಇಲ್ಲದಿರುವುದು, ತಾನು ಹೆಣ್ಣಾಗಿರುವುದು ಮತ್ತು ಹಾಗಾಗಿ ಭಾವುಕಳಾಗಿರುವುದು, ತಾನು ಪೆದ್ದಿಯಾಗಿರುವುದು, ತನ್ನಲ್ಲಿ ಪ್ರತಿಭೆಯೇ ಇಲ್ಲದಿರುವುದು ಕಾರಣವಾಗಿರಬಹುದು ಎಂದೆಲ್ಲ ಯೋಚಿಸತೊಡಗಿದ ಕಾಲವೂ ಇತ್ತೆನ್ನುತ್ತಾರೆ. ತಾನು ಬರೆದಿದ್ದು ತಾನು ಮೆಚ್ಚಿಕೊಂಡ ಕೃತಿಗಳ ಸಾಲಿಗೆ ಬರಲಿಲ್ಲ ಎನ್ನುವುದು ಅವರ ವೇದನೆ. 

ಲೇಖಕನೊಬ್ಬನ ಪರಕಾಯ ಪ್ರವೇಶ ಅಥವಾ ತನ್ನ ಸಹಜೀವಿಯ ನೋವಿಗೆ ಸಹಾನುಭೂತಿಯಿಂದ ಸ್ಪಂದಿಸಿ ಅದನ್ನು ಇನ್ನೊಂದು ಜೀವಕ್ಕೆ ತಿಳಿಸುವ (ಮಾಸ್ತಿ)ಉತ್ಕಟ ಇಚ್ಛೆಯಿಂದ  ಹುಟ್ಟುವ ಸಾಹಿತ್ಯದ ಪ್ರಕ್ರಿಯೆಗೆ ಅವಶ್ಯವೆಂದು ನಾವು ತಿಳಿಯುವ ಸೂಕ್ಷ್ಮಸಂವೇದನೆ, ಸ್ಪಂದಿಸುವ ಗುಣ, ಸೂಕ್ಷ್ಮಗ್ರಾಹಿ ಸಾಮರ್ಥ್ಯ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ವರ್ಜೀನಿಯಾ ವೂಲ್ಫ್ ಅವರ ಎರಡು ಮಾತುಗಳನ್ನು ಅವರು ನಮ್ಮ ಗಮನಕ್ಕೆ ತರುತ್ತಾರೆ. ವರ್ಜೀನಿಯಾ ವೂಲ್ಫ್ ಅವರ A Writer's Dairy ಯಿಂದ ಉಲ್ಲೇಖಿಸುವ ಈ ಮಾತುಕತೆ Lytton Strachey ಎಂಬಾಕೆಯ ಜೊತೆ ನಡೆಯುತ್ತದೆ:

"And your novel?"
"Oh, I put my hand and rummage in the bran pie"
"That's what's so wonderful. And it's all different"
"Yes, I'm 20 people."

ಇಷ್ಟೇ ಆ ಸಂಭಾಷಣೆ. ಬರೆಯುತ್ತಿರುವ ಕಾದಂಬರಿಯ ಬಗ್ಗೆ ಆಡುವ ಯಾವ ಮಾತೂ ಮುಖ್ಯವಲ್ಲ, ಕೊನೆಯ ಸಾಲನ್ನು ಬಿಟ್ಟರೆ. ಯೆಸ್, ಐಯಾಮ್ ಟ್ವೆಂಟಿ ಪೀಪಲ್ ಎನ್ನುತ್ತಾರಲ್ಲ ವೂಲ್ಫ್, ಅದು ಬಹಳ ಮುಖ್ಯವಾದದ್ದು ಎನ್ನುತ್ತಾರೆ ಎಲೆನಾ. ಹೇಗೆ ಒಬ್ಬ ಲೇಖಕ ಏಕಕಾಲಕ್ಕೆ ಹಲವು ಕಾಲಗಳಲ್ಲಿ ಬದುಕುತ್ತಿರುತ್ತಾನೋ ಹಾಗೆಯೇ ಅವನು ಹಲವು ಬದುಕುಗಳನ್ನು ಬದುಕುತ್ತಿರುತ್ತಾನೆ, ತಾತ್ಕಾಲಿಕವಾಗಿಯಾದರೂ. ಅದೊಂದು ತರದ ಆವಾಹಿಸಿಕೊಂಡಿರುವ ಸ್ಥಿತಿ. ಇದು "ದುರ್ಗಾಸ್ತಮಾನ" ಬರೆಯಲು ಕೂತ ತರಾಸು ಅವರಿಂದ ಹಿಡಿದು "ಸಖೀನಾಳ ಮುತ್ತು" ಬರೆಯಲು ಕೂತ ವಿವೇಕ ಶಾನಭಾಗ ಅವರವರೆಗೆ, ತಮ್ಮನ್ನು ತಾವು ಕಳೆದುಕೊಂಡು ತಮ್ಮ ಬರವಣಿಗೆಯಲ್ಲಿ ಸೇರಿ ಹೋಗುವ ಎಲ್ಲಾ ಬರಹಗಾರರಿಗೂ ಅನ್ವಯ.

ವರ್ಜೀನಿಯಾ ವೂಲ್ಫ್ ಅವರದೇ ಇನ್ನೊಂದು ಮಾತನ್ನೂ ಎಲೆನಾ ಉಲ್ಲೇಖಿಸುತ್ತಾರೆ. ಇದು ಹೆಚ್ಚು ಮುಖ್ಯವಾದದ್ದು ಮತ್ತು ಮಾತುಗಳನ್ನು ಮೀರಿ ಅರ್ಥ ಮಾಡಿಕೊಳ್ಳಬೇಕಾದುದು ಇಲ್ಲಿದೆ:

It is a mistake to think that literature can be produced from the raw. One must get out of life - yes, that's why I disliked so much the irruption of Sydney - one must become externalised; very, very concentrated, all at one point, not having to draw upon the scattered parts of one's character, living in the brain. Sydney comes and I'm Virginia; when I write I'm merely a sensibility. Sometimes I like being Virginia, but only when I'm scattered and various and gregarious. Now... I'd like to be only a sensibility. 

ನಾನು ಎನ್ನುವುದು "ಇಪ್ಪತ್ತು ಮಂದಿ" ಯಾಗಿ ಇದ್ದುದು ಹೇಗೆ ಮತ್ತು ಯಾವಾಗ ಈ ‘ನಾನು’ ವರ್ಜೀನಿಯಾ ಕೂಡಾ ಹೌದು ಮತ್ತು ಯಾವಾಗ ಅದು "ಕೇವಲ ಸಂವೇದನೆ" ಎಂಬ ಕುರಿತ ಚರ್ಚೆಯೇ ಈ ಕೃತಿಯ ಮೊದಲ ಎರಡು ಉಪನ್ಯಾಸಗಳಲ್ಲಿ ಎಲ್ಲಿಲ್ಲದ ಪೋಷಣೆ ಪಡೆದಿದೆ. ಕೃತಿ ರಚನೆ ಕಾಲದಲ್ಲಿಯೂ ತಾನು ಅಷ್ಟಿಷ್ಟು ವರ್ಜೀನಿಯಾ ಆಗಿ ಬಿಡುವ, "ಏಕಾಗ್ರತೆ ಕಳೆದುಕೊಂಡ ಮತ್ತು ಚದುರಿಕೊಂಡು ಬಿಟ್ಟ" ಅವಧಿಯ ಸಂಭವದ ಕುರಿತು  ಹೇಳುವ ವರ್ಜೀನಿಯಾ ಮೆದುಳಿನಲ್ಲಿ ಒಂದು ಬದುಕನ್ನು ಏಕ ಕಾಲದಲ್ಲಿ ಸಮಗ್ರವಾಗಿ ಮತ್ತು ಪರಿಪೂರ್ಣವಾಗಿ ಆವಾಹಿಸಿಕೊಳ್ಳುವುದರ ಕಷ್ಟದ ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಾರೆ.

ತಾನು ಬದುಕಿರುವುದೇ ಬರೆಯುವುದಕ್ಕಾಗಿ ಎಂಬಂತೆ ಬದುಕಿದ ಸಾಮ್ಯುಯೆಲ್ ಬೆಕೆಟ್ ಬರೆಯುವ ಹಂತದಲ್ಲಿ ಮೆದುಳಿನ ಯಾವುದೋ ಒಂದು ಮೂಲೆಯಲ್ಲಿ ಈ "ನಾನು" ಎನ್ನುವುದು ಹಠಮಾರಿಯಂತೆ ಕೂತು ಬಿಡುವ ವಿದ್ಯಮಾನದ ಬಗ್ಗೆ ಯಾಕೆ ಎಲ್ಲಿಯೂ ಏನೂ ಹೇಳಿಲ್ಲ ಎಂದು ಹುಡುಕುವ ಎಲೆನಾ ಕೊನೆಗೂ ಅದು ಬೆಕೆಟ್ ಬರೆದ "The Unnamable" ನಲ್ಲಿದೆ  ಎಂದು ಕಂಡು ಹಿಡಿಯುತ್ತಾರೆ. ಆ ಸುದೀರ್ಘ ಪರಿಚ್ಛೇದ ಎಷ್ಟೊಂದು ಸುಂದರವೂ, ಘನವೂ, ಮಂತ್ರ ಸದೃಶ ರಚನೆಯೂ ಆಗಿ ಒಡಮೂಡಿದೆ ಎನ್ನುವುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ.

I'm in words, made of words, others' words, what others, the place too, the air, the walls, the floor, the ceiling, all words, the whole world is here with me, I'm the air, the walls, the walled-in one, everything yields, opens, ebbs, flows, like flakes, I'm all these flakes, meeting, mingling, falling asunder, wherever I go I find me, leave me, go towards me, come from me, nothing ever but me, a particle of me, retrieved, lost, gone astray, I'm all these words, all these strangers, this dust of words, with no ground for their settling, no sky for their dispersing, coming together to say, fleeing one another to say, that I am they, all of them, those that merge, those that part, those that never meet, and nothing else, yes, something else, that I'm something quite different, a quite different thing, a wordless thing in an empty place, a hard shut dry cold black place, where nothing stirs, nothing speaks, and that I listen, and that I seek, like a caged beast born of caged beasts born of caged beasts born of caged beasts born in a cage and dead in a cage, born and then dead, born in a cage and then dead in a cage, in a word like a beast, in one of their words, like such a beast, and that I seek, like such a beast, with my little strength, such a beast, with nothing of its species left but fear and fury, no, the fury is past, nothing but fear ...

ಒಂಥರಾ ಭಗವದ್ಗೀತೆಯ ಶ್ರೀಕೃಷ್ಣ ತೋರಿದ ವಿಶ್ವರೂಪವನ್ನು ಸಂಜಯ ವಿವರಿಸುತ್ತಿರುವಂತಿದೆ ಇದು ಅಲ್ಲವೆ? ನಮ್ಮೆಲ್ಲಾ ಕವಿಗಳಿಗೆ ತಮ್ಮದೇ ವಿಶ್ವರೂಪವನ್ನು ಕಾಣುವ, ಗ್ರಹಿಸುವ, ಸಹಿಸುವ, ಆವಾಹಿಸಿಕೊಂಡು ಬರೆಯುವ ದಿವ್ಯ ಚಕ್ಷುಗಳು ಸಿಗಲಿ! ಅವರು ಧೃತರಾಷ್ಟ್ರರಾಗದೇ ಇರಲಿ!!

ಈ ಕೃತಿಯ ಮೂರನೆಯ ಉಪನ್ಯಾಸದಲ್ಲಿ Ingeborg Bachmann ಅವರ ಫ್ರ್ಯಾಂಕ್‌ಫರ್ಟ್ ಉಪನ್ಯಾಸಗಳ ಸರಣಿಯನ್ನು ಬಹುವಾಗಿ ಉಲ್ಲೇಖಿಸುವ ಎಲೆನಾ ಫರಾಂಟೆ ಮೂರು ಮುಖ್ಯ ವಿಚಾರಗಳ ಬಗ್ಗೆ ಹೇಳುತ್ತಾರೆ: 

01. ಹೆಣ್ಣಿನ ಧ್ವನಿ ಎಂದರೆ ಏನು ಮತ್ತು ಅದನ್ನು ಕೇಳಿಸಿಕೊಳ್ಳುವಂತೆ ಮಾಡಬೇಕು ಹೇಗೆ ಎನ್ನುವುದರ ಕುರಿತು;
02. ಭಾಷೆ ಯಾವಾಗ ಮತ್ತು ಹೇಗೆ ಕ್ಲೀಷೆಯಾಗುತ್ತದೆ ಎನ್ನುವುದರ ಕುರಿತು ಹಾಗೂ, 
03. ಕವಿತೆಯನ್ನು ಹಿಡಿಯುವುದು ಹೇಗೆಂಬ ಕುರಿತು. 

ಸರಳವಾಗಿ ಹೇಳುವುದಾದರೆ, 

ಕವಿತೆಗಳಲ್ಲಿ, ಅದನ್ನು ಹೆಣ್ಣುಮಕ್ಕಳು ಬರೆದಿರಲಿ, ಹುಡುಗರು ಬರೆದಿರಲಿ, ಫೆಮಿನಿಸಮ್ ಎಂದು ಸಾಮಾನ್ಯವಾಗಿ ಆ ಪದ ಬಳಸಿ ಸದ್ದು ಮಾಡುವ ಮಂದಿ ಕೊಡುವ ಚಿತ್ರಕ್ಕೂ ಅದರ ಸಹಜ ಗತಿಗೂ ಇರುವ ಒಂದು ಸೌಮ್ಯ ವೈರುಧ್ಯದ ಕಡೆಗೆ ಇರುವ ದಿವ್ಯ ನಿರ್ಲಕ್ಷ್ಯ ಮೊದಲನೆಯದು. ಭಾಷೆ ಕ್ಲೀಷೆಯಾಗುವ ಹಂತ ಯಾವುದು ಎನ್ನುವ ಜಿಜ್ಞಾಸೆ ಎರಡನೆಯದು. ಮತ್ತು ಮೂರನೆಯದು, ಅಮೂರ್ತವಾದ ಒಂದು ಕವಿತೆ ಅಕ್ಷರ ರೂಪಕ್ಕೆ ಬರುವ ಮುನ್ನವೇ ಗಾಳಿಗೆ ಹಾರಿ ಹೋಗುವ ಅಪಾಯದ ಬಗ್ಗೆ ಕವಿಗೆ ಇರಬೇಕಾದ ಎಚ್ಚರ. 

ನಮಗೆ ಓದಲು ಸಿಗುವ ಹೆಚ್ಚಿನ ಕವಿತೆಗಳು ಶಬ್ದಗಳಲ್ಲಿ, ಪದಗಳಲ್ಲಿ ಸದ್ದು ಎಬ್ಬಿಸುವಷ್ಟು ಓದುಗನ ಮೌನದಲ್ಲಿ ನೆನಪಾಗಿ ಉಳಿದು ಕಾಡುವ ಬಗ್ಗೆ ಯೋಚಿಸುವುದಿಲ್ಲ. ಹಾಗಾಗಿ ನಮಗೆ ಸಿಗುವ ಹೆಚ್ಚಿನ ಕವಿಗಳ ಅಥವಾ ಕವಿತೆಗಳ ಬಗ್ಗೆ ಬೇರೆ ಬೇರೆಯಾಗಿ ಹೇಳುವುದಕ್ಕೆ ಏನೂ ಇರುವುದಿಲ್ಲ. ಸಾಮಾನ್ಯವಾಗಿ, ಜನರಲ್ ಆಗಿ ಕವಿತೆಗಳ ಕುರಿತು ಹೇಳಿದ್ದನ್ನು ಅವರು ತಮಗೂ ಇದು ಅನ್ವಯ ಎಂದುಕೊಂಡು ಓದುವುದಿಲ್ಲ. ಹಾಗೆ ಸಾರಾಸಗಟಾಗಿ ಎಲ್ಲಾ ಕವಿ ಅಥವಾ ಕವಿತೆಗಳ ಕುರಿತು ಏಕ ಪ್ರಕಾರವಾಗಿ ಹೇಳಲು ಸಾಧ್ಯವೆ ಎನ್ನಬಹುದು. ಅದು ಯಾವಾಗ ಸಾಧ್ಯ ಎಂದರೆ, ಕವಿತೆ ಅಥವಾ ಕವಿ ಶಬ್ದದೊಂದಿಗೆ ನಿಂತು ಬಿಡುವ ಹಂತದಲ್ಲಿದ್ದಾಗ ಸಾಧ್ಯ. ಅವರನ್ನು ಕೇಳಬಹುದಾದ ಪ್ರಶ್ನೆಯೊಂದೇ, ನಿಮ್ಮ ಕವಿತೆಯಲ್ಲಿ ನಿಜಕ್ಕೂ ನಿಮ್ಮ ಅದೇ ಮೌನ ಇದೆಯೆ?

ಇದಕ್ಕೆ ಮೂಲತಃ ಕವಿ ತನ್ನ ಮೌನದಲ್ಲಿ ಅನುಭವಿಸಿದ್ದನ್ನು ಹಾಳೆಯ ಮೇಲೆ ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಭಾಷಾ ಕೌಶಲವನ್ನು ಮೆರೆಯುವುದೇ ಎಂದು ತಿಳಿದಿರುವುದು ಅನಿಸುತ್ತದೆ. ಕವಿಯ ಮೌನ, ಕವಿಯ ಏಕಾಂತ, ಕವಿಯ ಭಾವಲೋಕ ಅಷ್ಟು ಸುಲಭವಾಗಿ ಸಂವಹನಕ್ಕೆ ಸಿಗುವಂಥದ್ದಲ್ಲ. ಇದು ಎಲ್ಲಾ ಕವಿಗಳಿಗೂ ಗೊತ್ತು. ಆದರೆ ಹಾಳೆಯ ಎದುರು ಪೆನ್ನು ಹಿಡಿದು ಕುಳಿತಾಗ ಅವನು ತಾನು ಬಳಸಿದ, ಕಷ್ಟಪಟ್ಟು, ಆಯ್ದು, ತಾಳ್ಮೆಯಿಂದ ಧೇನಿಸಿ ಬಳಸಿದ ಪದಗಳಲ್ಲಿ ಅದನ್ನು ಪುನರ್ ಸೃಷ್ಟಿಸಿದ್ದೇನೆ ಎಂದುಕೊಳ್ಳುತ್ತಾನೆ. ಆದರೂ ಅವನಲ್ಲಿ ಅನುಮಾನವಿದ್ದೇ ಇರುತ್ತದೆ. ಕ್ರಾಸ್‌ಚೆಕ್ ಮಾಡುವುದು ಹೇಗೆ? ಅದಂತೂ ಸಾಧ್ಯವಿಲ್ಲ. ಸಾಧ್ಯವಿದೆ ಎಂಬ ಭರವಸೆ ಹುಟ್ಟಿಸುವಂತಿವೆ ಎಲೆನಾ ಅವರ ಮಾತುಗಳು.

ಇಲ್ಲಿಯೇ ಸ್ಪಷ್ಟಪಡಿಸಬೇಕಾದ ಒಂದು ಸಂಗತಿ: ಒಬ್ಬ ಕವಿ ‘ಶಬ್ದಗಳೊಂದಿಗೆ ನಿಂತು ಬಿಡುವ ಕವಿ’ ಎಂದು ಯಾವುದೇ ರೇಟಿಂಗ್ ದೃಷ್ಟಿಯಿಂದ ಹೇಳುತ್ತಿಲ್ಲ. ಕವಿತೆ ಹಲವು ರೀತಿಗಳಲ್ಲಿ ಉದಿಸಬಹುದು. ದಾಸರು, ವಚನಕಾರರು, ಹಳೆಗನ್ನಡ ಕಾಲದ ಕವಿವರ್ಯರು, ನವೋದಯ, ನವ್ಯ, ಬಂಡಾಯ, ಆಧುನಿಕ ಎಂದು ಎಲ್ಲ ಬಗೆಯ ಕವಿಗಳನ್ನು, ಅವರಲ್ಲೇ ಅತ್ಯಂತ ಶ್ರೇಷ್ಠ ಅನಿಸಿಕೊಂಡವರನ್ನು ನಾವೆಲ್ಲ ಅಷ್ಟಿಷ್ಟು ಓದಿದ್ದೇವೆ, ಬೆರಗಾಗಿದ್ದೇವೆ, ದಕ್ಕಿದಷ್ಟನ್ನು ಪಡೆದು ಬೆಳೆದಿದ್ದೇವೆ. 

ಕವಿತೆ ಮೊದಲಿಗೆ ಭಾಷೆಯಲ್ಲಿ ಮೂಡಿದ ಪದಗಳು, ಶಬ್ದಗಳಾಗಿದ್ದೂ, ಅಲ್ಲಿನ ಪದ-ಪದಸಮೂಹ-ವಾಕ್ಯ ಒಟ್ಟಾಗಿ ಹುಟ್ಟಿಸುವ ಒಂದು ಪ್ರತಿಮೆ ಮನಸ್ಸಿನಲ್ಲಿ ಉದ್ದೀಪಿಸುವ ಭಾವ, ಅದಕ್ಕೆ ಕನೆಕ್ಟ್ ಆಗುವ ನಮ್ಮದೇ ಬದುಕಿಗೆ ಸಂಬಂಧಿಸಿದ ಯಾವುದೋ ಅನುಭಾವ, ಅದನ್ನು ಮರುಸ್ಪರ್ಶಿಸಿದ್ದರಿಂದಲೇ ಈಗ ವರ್ತಮಾನದಲ್ಲಿ ಸಿಕ್ಕ ಅನುಭೂತಿ ಮತ್ತು ಒಟ್ಟು ಓದಿನ ರಸಾನುಭವ ಎಂದೆಲ್ಲ ಕೊಂಚ ಅಮೂರ್ತವಾಗಿಯೇ ನಾವು ವಿವರಿಸುವ ಈ ಎಲ್ಲಾ ಸಂಗತಿಗಳಿಗೆ ಮೂಲ ಭಾಷೆಯೇ. ಆದರೆ ಅಡುಗೆಗೆ ಹಾಕುವ ನಾನಾ ವಿಧದ ಮಸಾಲೆ, ಬೇಯಿಸುವ ಹದ ಎಲ್ಲ ಸರಿಯಿದ್ದೂ ಅದನ್ನು ಪ್ರೀತಿಯಿಂದ ಮಾಡದಿದ್ದರೆ ಹೇಗೆ ಅದಕ್ಕೆ ಬರಬೇಕಾದ ರುಚಿ ಬರುವುದಿಲ್ಲವೋ ಹಾಗೆಯೇ ಸಾಹಿತ್ಯ. ಭಾಷೆಯ ಮೇಲಿನ ಪ್ರಭುತ್ವ, ಸಮೃದ್ಧಿ ಮಾತ್ರ ಅದಕ್ಕೆ ಸಾಕಾಗುವುದಿಲ್ಲ. ಬಹುಶಃ ಇದೆಲ್ಲವನ್ನೂ ಒಂದೇ ಮಾತಿನಲ್ಲಿ ಕೀರಂ ಹೇಳಿಯಾಗಿದೆ, ಬೇಂದ್ರೆ ಕುರಿತು ಮಾತನಾಡುತ್ತ, ಭಾಷೆಯನ್ನು ಅರ್ಥದ ಹಂಗಿನಿಂದ ಪಾರು ಮಾಡಿದ ಕವಿ ಎಂದು ಅವರೇನು ಹೇಳಿದರೂ, ಅದನ್ನೇ ನಾವು ಭಾಷೆಯನ್ನು ಅರ್ಥದ ಹಂಗಿನಿಂದ ಪಾರು ಮಾಡುವವನೇ ಕವಿ ಎಂದು ಓದಿಕೊಂಡರೆ ಸಾಕು, ಹೇಳಬೇಕಾದುದೆಲ್ಲವನ್ನೂ ಹೇಳಿದಂತಾಗುವುದು.

ಕವಿಯ ನಿಟ್ಟಿನಿಂದ ಹೇಳುವ ಮಾತನ್ನು ಕವಿತೆಯ ಓದುಗನ ನಿಟ್ಟಿನಿಂದಲೂ ಹೇಳಬಹುದು. ಭಾಷೆ ನಮಗೆ ತಟ್ಟನೆ ಕಾಣುವ, ಓದಿಗೆ ಸಿಗುವ ವಸ್ತು. ಒಂದು ಪದ, ಬಳಿಕ ಪದ ಸಮೂಹ ಮತ್ತು ಕೊನೆಗೆ ಇಡಿಯ ವಾಕ್ಯ ತನ್ನ ಸದ್ದಿನಿಂದ, ಮನಸ್ಸಿನಲ್ಲಿ ತಕ್ಷಣಕ್ಕೆ ಮೂಡಿಸುವ ಚಿತ್ರದಿಂದ ಓದುಗನಲ್ಲಿ ಜೀವಂತಗೊಳ್ಳುವ ಒಂದು ಪ್ರಕ್ರಿಯೆ ಏನಿದೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮಾತ್ರವಲ್ಲ ಕಾಲ ಕಾಲಕ್ಕೆ ಒಬ್ಬನೇ ವ್ಯಕ್ತಿಗೂ ಅದು ವಿಭಿನ್ನವಾಗಿರುತ್ತದೆ. ಎಷ್ಟೋ ಬಾರಿ ತೀರ ಸಾಮಾನ್ಯವೆನಿಸಿದ ಒಂದು ಕವಿತೆಯ ಅಗಾಧತೆಯನ್ನು ಇನ್ಯಾರೋ ಗುರುತಿಸಿ ತೋರಿಸಿದಾಗಲೇ ನಮಗೆ ಅರಿವಾಗುವುದು ಅಪರೂಪದ ವಿದ್ಯಮಾನವಲ್ಲ. 

ಹಾಗೆಯೇ, ಓದುಗರಾಗಿ ನಮಗೆ ನಮ್ಮದೇ ಆದ ಒಂದು ಹುಡುಕಾಟ ಇರುತ್ತದಲ್ಲ, ಇಷ್ಟಾನಿಷ್ಟಗಳಿರುತ್ತವಲ್ಲ, ಇತಿಮಿತಿಗಳಿರುತ್ತವಲ್ಲ, ಆಯ್ಕೆಗಳಿರುತ್ತವಲ್ಲ. ಆ ಬಗ್ಗೆ ಹೇಳುತ್ತಿದ್ದೇನೆ ಅಷ್ಟೆ. ಶಬ್ದಗಳೊಂದಿಗೆ ನಿಂತು ಬಿಡುವ ಕವಿ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಆರಂಭಿಕ ಆತ್ಮರತಿ ಮತ್ತು ಅತಿ ಭಾವುಕತೆಯಿಂದ ಕವಿ ಸಾಧ್ಯವಾದಷ್ಟೂ ಬೇಗ ಬಚಾವಾಗುವುದು ಎಷ್ಟು ಅಗತ್ಯವೋ ಹಾಗೆಯೇ ಭಾಷೆ ತನ್ನನ್ನೇ ಕಟ್ಟಿ ಹಾಕದಂತೆಯೂ ಅವನು ಎಚ್ಚರವಹಿಸಬೇಕಾಗುತ್ತದೆ. ಇದಕ್ಕೆ ಸಾಧ್ಯವಾದಲ್ಲಿ, ಮತ್ತು ಆಸಕ್ತಿ ಇದ್ದಲ್ಲಿ ಆಗಸ್ಟ್ 2012ರ ಕೆರವಾನ್ ಪತ್ರಿಕೆಯಲ್ಲಿ ಪ್ರಕಟವಾದ ಅಂಜುಂ ಹಸನ್ ಅವರ ಲೇಖನವನ್ನು ಗಮನಿಸಿ. ಈ ಬಗ್ಗೆ ನನ್ನ ಬ್ಲಾಗಿನಲ್ಲಿ ಒಂದಿಷ್ಟು ವಿವರಗಳಿವೆ. (https://narendrapai.blogspot.com/2015/11/blog-post_89.html)

ಕವಿತೆಯನ್ನು ಅದರ ಶೈಲಿ, ಅದರ ಆಕೃತಿ ಮತ್ತು ಅದರ ವಸ್ತು ಇತ್ಯಾದಿಯಾಗಿ ಹಲವು ನೆಲೆಗಳಲ್ಲಿ ಮೆಚ್ಚಿಕೊಳ್ಳುವುದಕ್ಕೆ ಸಾಧ್ಯವಿದೆ. ಭಾಷೆಯನ್ನು ಬಳಸುವ ಬಗೆಯಲ್ಲೇ ಬೆಚ್ಚಿ ಬೀಳಿಸಬಲ್ಲ ಕವಿಗಳಿರುವಂತೆಯೇ ಇಡೀ ಕವಿತೆಯನ್ನು ಓದಿದ ಮೇಲೆ ಅದರ ಭಾಷೆ, ವಿವರ, ಕಥನ ಎಲ್ಲವನ್ನೂ ಮೀರಿ ಅದು ಬೇರೆಯೇ ಒಂದು ಕಾರಣಕ್ಕೆ ಎದೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುವುದೂ ಸಾಧ್ಯವಿದೆ. ಎಲೆನಾರ ಮಾತುಗಳಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಬಹುದು ಎಂಬ ನಿರೀಕ್ಷೆಯೊಂದಿಗೆ ಮುಂದುವರಿಸುವೆ.

ಎಲೆನಾ ಫರಾಂಟೆಗೂ ಇದ್ದ ಪೂರ್ವಸೂರಿಗಳು ಪುರುಷ ಸಾಹಿತಿಗಳೇ. ಆಕೆಯೂ ಮೆಚ್ಚಿಕೊಂಡಿದ್ದು ಪುರುಷ ಬರಹಗಾರರ ಬರವಣಿಗೆಯನ್ನು, ಆಗ ಬಯಸಿದ್ದು ಅವರ ಹಾಗೆ ಮತ್ತು ಆಕೆಯ ಐಡಿಯಲ್ಸ್ ಬಂದಿದ್ದು ಅಲ್ಲಿಂದ. ಆದರೆ ಆಕೆಯೇ ತಾನು ಸಾಕಷ್ಟು ಪ್ರಬುದ್ಧ ಎಂದು ತಿಳಿದ ಅನೇಕ (ಪುರುಷ) ಸಾಹಿತಿಗಳು ಕೂಡಾ ಅವರಿವರನ್ನು ಬಿಡಿ, ಜೇನ್ ಆಸ್ಟಿನ್, ಬ್ರೊಂಟೆ ಸಹೋದರಿಯರು ಅಥವಾ ವರ್ಜಿನಿಯಾ ವೂಲ್ಫ್ ಅವರನ್ನು ಕೂಡಾ ಓದಿರಲಿಲ್ಲ ಎನ್ನುವ ಮಾತನ್ನು ದಾಖಲಿಸಿದ್ದಾರೆ. ಅದೇನಿದ್ದರೂ, ಈ ಹಿನ್ನೆಲೆಯಲ್ಲಿಯೇ ಎಲೆನಾ ಎತ್ತುವ ಸಮಸ್ಯೆ ಇಲ್ಲಿ ಮುಖ್ಯ. ಹೆಣ್ಣಿನ ಧ್ವನಿ ಎಂದು ಹೇಳಬಹುದಾದ ಒಂದು ವಿಶಿಷ್ಟ ಜಗತ್ತಿನ ಮಾತುಗಳಿಗೆ ಯಾವುದೇ ಮಾದರಿ, ಐಡಿಯಲ್ಸ್ ಇರಲಿಲ್ಲ ಎನ್ನುವುದು ಆ ಮಾತು. ಹೆಣ್ಣಿನ ಜಗತ್ತಿಗೆ ಸಲ್ಲುವ ಅನೇಕ ಸಂಗತಿಗಳಿವೆ, ಅವಳ ದೈನಂದಿನ, ನೋವು, ನಲಿವು, ಅವಳ ದೈಹಿಕ ಆಗುಹೋಗುಗಳು, ಬೆಳವಣಿಗೆಗಳು, ಅದಕ್ಕೊದಗುವ ಸಂಸ್ಕಾರಗಳು, ಬದಲಾವಣೆಗಳು ಯಾವುದನ್ನೂ ಪುರುಷ ವಿವರಿಸಲಾರ. ವಿವರಿಸಿದ್ದರೆ ಅದು ಅವನ ಸೀಮಿತ ತಿಳುವಳಿಕೆಯ ನೆಲೆಯಲ್ಲಿಯೇ ಹೊರತು ಹೆಣ್ಣಾಗಿ ಅನುಭವಿಸಿದ್ದಲ್ಲ, ಕಂಡಿದ್ದಲ್ಲ. ಹಾಗಾಗಿ ಹೆಣ್ಣೇ ಆ ಜಗತ್ತಿನ ಸಂಗತಿಗಳಿಗೆ ಮಾತಾಗುವಾಗ ಅವಳು ಅವಳದೇ ನುಡಿಗಟ್ಟುಗಳನ್ನು, ಭಾಷೆಯನ್ನು, ಲಯವನ್ನು, ವಸ್ತುವನ್ನು, ಒಂದರ್ಥದಲ್ಲಿ ಬರಹದ ಸಮಸ್ತ ಕೌಶಲವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಬಹುಶಃ ಅದಾಗಲೇ ಸಿದ್ಧವಾಗಿ ಲಭ್ಯ ಇರುವ ಯಾವುದೂ ಅವಳ ಉಪಯೋಗಕ್ಕೆ ಬರದೇ ಇರಬಹುದು ಅಥವಾ ಬಳಸಿಕೊಂಡಲ್ಲಿ ಅದೇ ಅವಳ ಹಾದಿಯನ್ನು ಮತ್ತೊಮ್ಮೆ ತಪ್ಪಿಸಬಹುದಾದ ಅಪಾಯ ಬರಬಹುದು. ಹಾಗಾಗಿ, ಅವಳ ಧ್ವನಿ ಹೊಸತಾಗಿ ಮೂಡಬೇಕಾಗಿದೆ ಮತ್ತು ಆ ಹೊಸತನದ ಕೊಸರು ಕೊರತೆಯೇನಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಸಾಗಲು ಅವಳು ತಯಾರಿರಬೇಕಾಗುತ್ತದೆ. 

ಹಾಗೆಯೇ ಇಲ್ಲಿ ವಾಸ್ತವ, ಕಲ್ಪಿತ ವಾಸ್ತವಗಳ ಚರ್ಚೆಯೂ ಇದೆ. ಚಿಕ್ಕಂದಿನಲ್ಲಿಯೇ ಎಲೆನಾ ಅವರಿಗೆ ಅವರ ಶಿಕ್ಷಕಿಯೊಬ್ಬರು ಹೇಳುತ್ತಾರೆ, ಸದಾ ಸತ್ಯವನ್ನು ಬರಿ, ಇದ್ದುದ್ದು ಇದ್ದ ಹಾಗೆ ಬರಿ. ಎಲೆನಾ ಮುಂದೆ ಬೆಳೆದು ಪ್ರಬುದ್ಧರಾದ ಮೇಲೆಯೂ ತಾವು ಏನೇ ಬರೆದರೂ ಅದು ವಾಸ್ತವದಿಂದಲೇ ಬಂದಿದ್ದಾಗಿರಬೇಕು ಎಂದು ನಿರ್ಧರಿಸುತ್ತಾರೆ. ಮಾಂತ್ರಿಕ ವಾಸ್ತವಿಕತೆಯ ಅಧ್ವರ್ಯು ಎಂದೇ ಪರಿಗಣಿಸಲ್ಪಡುವ ಮಾರ್ಕೆಸ್ ಕೂಡಾ ಒಂದೆಡೆ ತಾನು ತನ್ನ ಅನುಭವಕ್ಕೆ ಬರದ ಏನನ್ನೂ ಬರೆದಿಲ್ಲ ಎಂದೇ ಹೇಳುತ್ತಾನೆ. ಆದರೆ, ವಾಸ್ತವ ಎಂದರೆ ಘಟನೆಗಳು ಎಂದು ತಿಳಿಯುವವರಿಗೆ ವ್ಯಕ್ತಿಗಳು, ಘಟನೆಗಳು ಅಮುಖ್ಯ ಎನ್ನುವುದು ಅರ್ಥವಾಗುವುದಿಲ್ಲ. 

But how can I explain, how can I explain to you? 
You will understand less after I have explained it. 
All that I could hope to make you understand 
Is only events: not what has happened. 
And people to whom nothing has ever happened
Cannot understand the unimportance of events.
( T S Eliot)

ಆದರೆ ಎಲೆನಾ ಅವರಿಗೆ ವಾಸ್ತವದ ಸತ್ಯವನ್ನೇ ಬರೆಯುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಮೊದಲನೆಯದಾಗಿ ಒಬ್ಬ ಹೆಣ್ಣಾಗಿ ಅವರ ಕಷ್ಟಗಳು ತುಸು ಹೆಚ್ಚೇ ಇದ್ದವು. ಎರಡನೆಯದಾಗಿ ಬೇರೆಯವರ ಬದುಕನ್ನು ಬಯಲಿಗಿಡುವ ಅಧಿಕಾರವೂ ತಮಗಿಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಇದಕ್ಕೆ ಅವರು ಆತ್ಮಚರಿತ್ರೆ ಮತ್ತು ಜೀವನ ಚರಿತ್ರೆ ಬರೆದವರು ಮಾಡಿಕೊಂಡ ರಾಜಿಸೂತ್ರಗಳ ಕುರಿತು ಇಲ್ಲಿ ವಿವರವಾಗಿಯೇ ಚರ್ಚಿಸಿದ್ದಾರೆ. ಒಂದು ಕಡೆ ದಾಸ್ತೊವಸ್ಕಿ ತನ್ನ ಪ್ರಸಿದ್ಧ ಕಾದಂಬರಿ "ನೋಟ್ಸ್ ಫ್ರಂ ಅಂಡರ್‌ಗ್ರೌಂಡ್" ನಲ್ಲಿ ಹೇಳಿದ ಒಂದು ಮಾತನ್ನೂ ಉಲ್ಲೇಖಿಸುತ್ತಾರೆ. 

We've become so estranged that at times we feel some kind of revulsion for genuine "real life," and therefore we can't bear to be reminded of it. Why, we've reached a point where we almost regard "real life" as hard work, as a job, and we've all agreed in private that it's really better in books. 

(Translated by Michael Katz)

ನಾವು ಆಗಾಗ ತಪ್ಪಾಗಿ ಇದು "ನನ್ನ ಅನುಭವ", ಇದು "ನನ್ನ ಯೋಚನೆ", ಇದು "ನನ್ನ ಐಡಿಯಾ" ಎನ್ನುತ್ತೇವೆ ಎನ್ನುವ ಎಲೆನಾ ಇಲ್ಲಿ "ನನ್ನದು" ಎಂಬ ವಾಸ್ತವ ಯಾವುದೂ ಇಲ್ಲ ಎನ್ನುತ್ತಾರೆ. ಇದೊಂದು ಸಮಷ್ಠಿಯ ಸಂವೇದನೆ, ಅದನ್ನು ಈಗಾಗಲೇ ನಮ್ಮ ಪೂರ್ವಸೂರಿಗಳು ಹೇಳಿಯಾಗಿದೆ ಮತ್ತು ಮುಂದಿನವರು ಹೇಳಲಿದ್ದಾರೆ, ನಮ್ಮದೇನಿದ್ದರೂ ಅದನ್ನೇ ನಮ್ಮ ಕಾಲಕ್ಕೆ ಸಲ್ಲುವ ನುಡಿಗಟ್ಟುಗಳಲ್ಲಿ, ನಮ್ಮ ನಮ್ಮ ಪ್ರಜ್ಞೆ, ವಿವೇಚನೆ ಮತ್ತು ಗ್ರಹಿಕೆಗೆ ನಿಷ್ಠರಾಗಿ ಪಾಠ ಒಪ್ಪಿಸುವ ಕೆಲಸವಷ್ಟೇ ಎಂರ್ಥದ ಮಾತುಗಳನ್ನಾಡುತ್ತಾರೆ. 

ಇಲ್ಲಿ ಅವರು ಹೆಣ್ಣಿನ ಜಗತ್ತನ್ನು ಭಾಷೆಯಲ್ಲಿ ಕಟ್ಟಿಕೊಡುವ ತಮ್ಮದೇ ಆದ ಕಷ್ಟ, ಪೂರ್ವಸೂರಿಗಳ ಉದಾಹರಣೆಯಿಲ್ಲದ ಹಾದಿಯಲ್ಲಿ ಸಾಗುವ ಒಬ್ಬಂಟಿತನದ ಬಗ್ಗೆ ಹೇಳಿಕೊಂಡಿದ್ದಾರೆ. ಎಲೆನಾ ಉಲ್ಲೇಖಿಸುವ Ingeborg Bachmann ಅವರ ಮಾತುಗಳಿಗೆ ಬನ್ನಿ.

I believe that old images, like Morike's or Goethe's can no longer be used, that they shouldn't be used anymore, because in our mouths they would sound false. We have to find true sentences, which correspond to the condition of our conscience and to this changed world.

ಯಾವುದೇ ಒಂದು ಮಾತು ಮೊದಲಿಗೇ ಕ್ಲೀಷೆಯಾಗಿರುವುದಿಲ್ಲ. ಕ್ರಮೇಣ ಅದು ಕ್ಲೀಷೆಯಾಗುತ್ತದೆ. ಹಾಗಿದ್ದೂ ಅದನ್ನು ಹಿಂದೆ ಬಳಸಿದವರ ಕೈಯಲ್ಲಿ ಅದು ಯಾವತ್ತೂ ಕ್ಲೀಷೆಯಾಗಿ ಬದಲಾಗುವುದಿಲ್ಲ. ನಮ್ಮ ಕೈಲಿ ಮಾತ್ರ ಕ್ಲೀಷೆಯಾಗುತ್ತದೆ. ಹಾಗಾಗಿ ನಾವು ಹೇಳುತ್ತಿರುವ ಮಾತು ಹಳೆಯದೇ ಆಗಿದ್ದರೂ ಅದನ್ನು ಕ್ಲೀಷೆಯಾಗದ ಹಾಗೆ ಹೇಳುವುದಕ್ಕೆ, ನಮ್ಮ ಅನುಭವ, ಅನುಭೂತಿ, ಭಾವ ಮತ್ತು ಅನುಭಾವಕ್ಕೆ ನಿಷ್ಠವಾಗಿರುವಂತೆ ಹೇಳುವುದಕ್ಕೆ ನಿರಂತರವಾಗಿ ವ್ಯಾಯಾಮ ನಡೆಸುತ್ತಿರಬೇಕಾಗುತ್ತದೆ. Ingeborg Bachmann  ಮಾತಿನ ಗುರುತ್ವ ಇರುವುದು ಭಾಷೆ ಎರಡು ಸಂಗತಿಗಳನ್ನು ಮೈಗೂಡಿಸಿಕೊಂಡು ಹರಿಯುವುದರಲ್ಲಿ. ಅದು ‘ನಮ್ಮ ವಿವೇಚನೆಯ ಒತ್ತಡ’ ಮತ್ತು ‘ಬದಲಾದ ಜಗತ್ತು ಒಡ್ಡುವ ಒತ್ತಡ’ ಎರಡಕ್ಕೂ ಸಂವಾದಿಯಾದ ಒಂದು ಲಯ ಕಂಡುಕೊಳ್ಳುವುದರಲ್ಲಿ. ಕವಿ ತನ್ನ ಭಾವಜಗತ್ತಿನಲ್ಲಿ ಕಂಡ ಅಮೂರ್ತ ಕವಿತೆಯೊಂದು ಅಕ್ಷರಕ್ಕಿಳಿಯುವ ವರೆಗೂ ಅನನ್ಯವೂ, ದಿವ್ಯವೂ, ಶ್ರೇಷ್ಠವೂ ಆಗಿರುತ್ತದೆ. ಆದರೆ ಮುಂದೇನಾಗುತ್ತದೆ ಎನ್ನುವುದೇ ಸೋಜಿಗ.

ಮ್ಯಾಕ್ಸಿಕನ್ ಕವಿ Maria Guerra ಅವರ ಕವಿತೆ: (ಎಲೆನಾ ಅವರ ಕೃತಿಯಿಂದಲೇ)

I lost a poem.
Already written
And ready on page
To put in the form of a book
I looked in vain.
It was a poem
With a vocation for Wind.

ಮನಸ್ಸಿನ ಹಾಳೆಯಿಂದ ಎತ್ತಿಕೊಂಡಿದ್ದನ್ನು ಬರೆಯಲು ಪೆನ್ನು ಹಿಡಿಯುವ ಮೊದಲೇ ಗಾಳಿ ಬೀಸಿದ್ದರಿಂದ ಅದು ಹಾರಿಯೇ ಹೋಗುತ್ತದೆ. ಇದು ಬಹುಶಃ ಪ್ರತಿಯೊಬ್ಬ ಕವಿಯ ಸಮಸ್ಯೆ. ಕವಿಯ ಸಮಸ್ಯೆ ಮಾತ್ರವಲ್ಲ, ಪ್ರತಿಯೊಬ್ಬ ಬರಹಗಾರನ ಸಮಸ್ಯೆ ಕೂಡಾ. ಅನುಭೂತಿಗೆ, ಭಾವಕ್ಕೆ, ಹೊಳಹುಗಳಿಗೆ ಭಾಷೆಯ ಹಂಗಿಲ್ಲ. ಆದರೆ ಅವನ್ನ ಭಾಷೆಯಲ್ಲಿ ಹಿಡಿದಿಡುವ ಪ್ರಯತ್ನ ಎಲ್ಲ ಬರಹಗಾರರು ಮಾಡುತ್ತಿರುತ್ತಾರೆ. ನಡುವೆ ಗಾಳಿ ಬೀಸಿದರೆ ಕಂಡಿದ್ದು ಮತ್ತೊಮ್ಮೆ ಕಾಣಲು ಸಿಗದ ಮಾಯಾಜಿಂಕೆ ಆಗಿ ಬಿಡುತ್ತದೆ. ಹಠ ಹಿಡಿದು ಬರೆದರೆ ಕಂಡಿದ್ದೇ ಒಂದು, ಕಾಣಿಸಿದ್ದೇ ಇನ್ನೊಂದು ಆಗಿರುತ್ತದೆ.  ಸೀತೆ ಕಂಡಿದ್ದು ಬಂಗಾರದ ಜಿಂಕೆ. ರಾಮನಿಗೆ ಸಿಕ್ಕಿದ್ದು ಮಾರೀಚ. ರಾಮನಿಗೆ ಗೊತ್ತಿತ್ತೆ, ಅದು ಮಾಯಾಜಿಂಕೆ, ಬಂದಿರುವ ಉದ್ದೇಶ ದುರುದ್ದೇಶ ಎನ್ನುವುದು? ಸೀತೆಗೇ ಗೊತ್ತಿತ್ತೆ, ಅದರ ಬಯಕೆ ತನಗೆ ಉಚಿತವಲ್ಲದ್ದು ಎನ್ನುವುದು?  ಕಣ್ಣೆದುರು ಇರುವುದನ್ನು ನೋಡುವುದಕ್ಕೆ ಬರೀ ಕಣ್ಣು ಸಾಲದು ಸ್ವಾಮೀ... ಎನ್ನುತ್ತಾರಲ್ಲ ಎ. ಕೆ. ರಾಮಾನುಜನ್, ಹಾಗೆ ಅದು. ಧೃತರಾಷ್ಟ್ರನಿಗೆ ಸಂಜಯನಿದ್ದ. ಸಂಜಯನಿಗೆ ಶ್ರೀಕೃಷ್ಣನೇ ದಿವ್ಯಚಕ್ಷುಗಳನ್ನು ನೀಡಿದ್ದ. ಸಾಹಿತ್ಯ ನಮಗೆ ಒದಗಿಸುವುದು ಅದನ್ನೇ. ಸಾಹಿತಿ ನಮಗೆ ಒದಗಿಸಬೇಕಾದ್ದು ಕೂಡಾ ಅದನ್ನೇ. ಆದರೆ ಇನ್ನೊಬ್ಬರಿಗೆ ಏನನ್ನಾದರೂ ಕೊಡುವುದಕ್ಕೆ ಮೊದಲು ಅದು ನಮ್ಮಲ್ಲಿ ಕೊಡುವಷ್ಟು ಇರಬೇಕಾಗುತ್ತದೆ. 

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, May 5, 2022

ಅಸಾಹಿತ್ಯಿಕ ಗುಣದ ಹೊಸತನ


"ಸಾಹಿತ್ಯದ ಉದ್ದೇಶಗಳಲ್ಲಿ ಮನರಂಜನೆಯೂ ಒಂದು ಎಂಬುದನ್ನು ನಾವು ಮರೆಯಬಾರದು. ನಾನು ತಿಳಿದಂತೆ ಒಂದು ಕೃತಿಯನ್ನು ಅದರ ತಾತ್ವಿಕತೆಗಾಗಿ ಓದುವವರಿಗಿಂತಲೂ ಭಾಷೆಯ ಸಾಹಿತ್ಯಿಕ ಬಳಕೆಯನ್ನು ಮೆಚ್ಚಲು ಓದುವವರು ಹೆಚ್ಚು ಕಾಲ ಸಾಹಿತ್ಯಕ್ಷೇತ್ರದಲ್ಲಿ ಉಳಿಯುತ್ತಾರೆ. ನಮ್ಮೆಲ್ಲ ಸಾಹಿತ್ಯಾಸಕ್ತಿಯ ಹಿಂದೆ ಓದುವ ಚಪಲವೂ ಇರುತ್ತದೆಯಲ್ಲವೆ? ಎಷ್ಟೋ ಸಾರಿ ಒಂದು ಪುಸ್ತಕದ ಓದು ಕೊನೆ ಮುಟ್ಟುತ್ತಿದ್ದಂತೆಯೇ ಇದು ಮುಗಿದು ಹೋದರೆ ಏನಪ್ಪಾ ಮಾಡುವುದು! ಎಂದು ಚಿಂತಿಸಿಲ್ಲವೆ."

- ಇದು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಮಾತು. 

‘ಚಿದಂಬರ ರಹಸ್ಯ’ ಕಾದಂಬರಿಯ ಕೊನೆಯಲ್ಲಿ ಇಡೀ ಕೆಸರೂರು ಲಂಟಾನದ ಬೆಂಕಿ ಮತ್ತು ಹೊಗೆಯಲ್ಲಿ ಮುಳುಗಿದ್ದಾಗ ಅಲ್ಲಿಂದ ತಪ್ಪಿಸಿಕೊಂಡು ಒಂದು ಎತ್ತರದ ಸ್ಥಳದಲ್ಲಿ ನಿಂತು ಜಯಂತಿ ಹೇಳುತ್ತಾಳೆ, "ನೋಡು ಜೇನುಕಲ್ಲುಗುಡ್ಡದ ತುದಿ ಚೆನ್ನಾಗಿ ಕಾಣ್ತಿದೆ. ಕೆಸರೂರಿನ ಜನ ಈಗಲೂ ಎಲ್ಲಾ ಅಲ್ಲಿಗೆ ಓಡಿದರೆ ಬೆಂಕಿಯಿಂದ ತಪ್ಪಿಸಿಕೋಬಹುದು". ಅದಕ್ಕೆ ರಫಿ "ನಮಗೆ ಕಾಣ್ತಿದೆ! ಅವರಿಗೆ ಕಾಣ್ತದ? ಈ ಹೊಗೇಲಿ!" ಎನ್ನುತ್ತಾನೆ. ಯಾರೋ ಸಂದರ್ಶಕರು ಜಯಂತಿ ಮತ್ತು ರಫಿ ಇಬ್ಬರೇ ಉಳಿಯುವುದರಲ್ಲಿ ತಾತ್ವಿಕ ಆಯಾಮವನ್ನು ಗುರುತಿಸಿ, ಆ ಬಗ್ಗೆ ಪ್ರಶ್ನಿಸಿದರೆ ತೇಜಸ್ವಿ ಒಂದೇ ಮಾತಲ್ಲಿ ತಾವು ಅಂಥದ್ದನ್ನೆಲ್ಲ ಯೋಚಿಸಿಯೇ ಇಲ್ಲ ಎಂದು ಬಿಡುತ್ತಾರೆ.

ನಿಮಗೆ ನೆನಪಿದ್ದರೆ ‘ಕರ್ವಾಲೋ’ ಕಾದಂಬರಿಯಲ್ಲಿ ನಾಯಿ ಕಿವಿ ಪೊದೆ ಸೇರಿಕೊಂಡ ಯಾವುದೋ ಪ್ರಾಣಿಯನ್ನು ಅಟಕಾಯಿಸಿಕೊಂಡು ಬೊಗಳುತ್ತಿರುವಾಗ ಮರ ಏರಿ ನೋಡುವ ಪ್ಯಾರನ ಬಳಿ "ಲೋ ಪ್ಯಾರ ನಿಂಗೇನಾದರೂ ಕಾಣುತ್ತೇನೋ?" ಎಂದರೆ ಅವನು "ಕಾಣ್ತೀತೇ. ಆದ್ರೆ ಕಾಣಕಿಲ್ಲ" ಎನ್ನುತ್ತಾನೆ. ಅದನ್ನು ಪ್ರಶ್ನಿಸಿದರೆ "ಅಲ್ಲಾ ಸಮೀ ಕಾಣ್ತಿತೆ ಆದ್ರೆ, ಕಣ್ಗೆ ಏನೂ ಕಾಣಕ್ಕಿಲ್ಲ" ಎಂಬ ಉತ್ತರ ಬರುತ್ತದೆ.

"ನಮಗೆ ಕಾಣ್ತಿದೆ! ಅವರಿಗೆ ಕಾಣ್ತದ?" ಕೂಡ ಎಷ್ಟೋ ಬಾರಿ ಕಾಣ್ತಿತೆ ಆದ್ರೆ ಕಾಣಾಕಿಲ್ಲ ಆಗಿರುತ್ತದೆ. ಇದೇನೂ ಹೊಸ ತಾತ್ವಿಕತೆಯಲ್ಲ ಮತ್ತೆ. 

ಬಹುಶಃ ತೇಜಶ್ರೀ ಹೇಳದೇ ಇದ್ದಿದ್ದರೆ ನಾನಿವರನ್ನು ಓದುತ್ತಿರಲಿಲ್ಲ. ಮೊದಲಿಗೆ ಮನಸ್ಸೆಳೆದ ಅಂಶವೇ ಇವರ ಅಸಾಹಿತ್ಯಿಕ ಅಪ್ರೋಚ್. ನಾವು ಕನ್ನಡದ ಸಣ್ಣಕತೆಯ ಹುಟ್ಟು, ಬೆಳವಣಿಗೆ, ಅದರ ಪ್ರಯೋಗಶೀಲತೆ, ಅದರ ಪಾರಂಪರಿಕ ಶೈಲಿಯಿಂದ ತೊಡಗಿ ದೇಶ ವಿದೇಶಗಳಲ್ಲಿ ಈ ಒಂದು ಪ್ರಕಾರವನ್ನು ಬಳಸಿಕೊಂಡು ಬೇರೆ ಬೇರೆಯವರು ಏನೆಲ್ಲ ಕಸರತ್ತು ನಡೆಸಿದ್ದಾರಲ್ಲ ಎಂದು ವಿಸ್ಮಯದಿಂದಲೂ ಕಲಿಯುವ ಅಭೀಪ್ಸೆಯಿಂದಲೂ ಅಷ್ಟಿಷ್ಟು ತಿಳಿದುಕೊಂಡೆವು ಎಂದು ಬೀಗುತ್ತಿರಬೇಕಾದರೆ ಈ ಹುಡುಗಿ "ಬನ್ನಿ ಬನ್ನಿ ಕುಳಿತುಕೊಳ್ಳಿ, ಅಲ್ಲಲ್ಲ, ಅಲ್ಲಿ ಕೋಳಿ ಹೇಲು ಹಾಕಿದೆ, ಈಕಡೆ ಕುಳಿತುಕೊಳ್ಳಿ. ನನಗೊಬ್ಬ ಅಜ್ಜಿ ಇದ್ದಳು, ಅಜ್ಜಿ ಎಂದರೆ ಸ್ವಂತ ಅಜ್ಜಿಯಲ್ಲ, ಅಪ್ಪನ ಕಡೆಯ ದೂರದ ನೆಂಟರಂತೆ. ವಿಷಯ ಅದಲ್ಲ ಮಹರಾಯ್ರೆ, ಆ ಅಜ್ಜಿಗೆ ಕತೆ ಹೇಳುವ ಹುಚ್ಚು. ಈಗ ಆ ಅಜ್ಜಿ ಹೇಳಿದ ಒಂದು ಕತೆಯನ್ನು ನಿಮಗೆ ಹೇಳುವಾ ಅಂತ, ಆಯ್ತಲ್ಲ?" ಎಂದು ಮಾತಿಗೆ ತೊಡಗಿದಂತೆ ಚಟಪಟನೆ ತಂತ್ರ, ವಸ್ತು, ನಿರೂಪಣೆಯ ಶೈಲಿ, ಬಿಗಿ, ಏಕಸೂತ್ರದ ಎಳೆ ಎಂದೆಲ್ಲ ನಾಲ್ಕಾಣೆ ತಲೆಕೆಡಿಸಿಕೊಳ್ಳದೆ ಕತೆ ಹೇಳಿ ಮುಗಿಸುವ ಪರಿ ಇದೆಯಲ್ಲ, ಅದು planned  ಇರಬಹುದೆ ಎಂದು ಯೋಚಿಸುವಷ್ಟು ಕೆಟ್ಟು ಹೋಗಿದ್ದೇವೆ ಬಿಡಿ!

ಇಲ್ಲಿನ ಕತೆಗಳಾದರೂ ಎಂಥವು! 

"ನೀನು ಬರೇ ಮಂಗ ಅಲ್ಲ, 
ದೊಡ್ಡ ಹನುಮಂತ" 
ಅಂತ, 
ರೆಕ್ಕೆ ಇಲ್ಲದಿದ್ದರೂ ಸಾಗರ ದಾಟುವ 
ಧೈರ್ಯ ಕೊಟ್ಟ 
ನನ್ನವರೆಲ್ಲರಿಗೂ!

-ಅರ್ಪಿಸಿರುವ ಇಲ್ಲಿನ ಒಟ್ಟು ಇಪ್ಪತ್ತೊಂದು ಕತೆಗಳಲ್ಲಿ ಒಂದಿನಿತೂ ಒಜ್ಜೆಯಿಲ್ಲ. ಒಟ್ಟು ನೂರ ನಲವತ್ತು ಪುಟಗಳಲ್ಲಿ ಈ ಇಪ್ಪತ್ತೊಂದೂ ಕತೆಗಳು ತೆರೆದುಕೊಳ್ಳುತ್ತವೆ, ತೆರೆದುಕೊಳ್ಳುವಷ್ಟರಲ್ಲಿ ಸದ್ದು ನಿಲ್ಲಿಸಿ ಮನಸ್ಸಿನಲ್ಲೊಂದಿಷ್ಟು ಜಾಗ ಕೇಳುತ್ತವೆ. 

ಇಲ್ಲಿನ ಕತೆಗಳಲ್ಲಿ ‘ಇದು ನನ್ನ ಕತೆ, ನಾನು ಬರೆದ ಕತೆ’ ಎನ್ನುವ ಮಾರ್ಕ್ ಕಾಣಿಸುವ, ಉಳಿಸುವ ಹಂಬಲವೇ ಇಲ್ಲದ, ಒಂದು ಬಗೆಯ ನಿರಪೇಕ್ಷ ಭಾವವಿದೆ. ಅನಗತ್ಯ ವಿವರಗಳ ಕುಸುರಿ, ಗಿಮ್ಮಿಕ್ ಎನ್ನಬಹುದಾದ ತಾತ್ವಿಕತೆಯನ್ನು ಎಲ್ಲಿಯೂ ತರದೆ ನೇರವಾಗಿ "ಇದಿಷ್ಟು ಹೇಳಲಿಕ್ಕಿರುವುದು, ಇಷ್ಟೇ ಹೇಳಲಿಕ್ಕಿರುವುದು" ಎಂಬಂತೆ ಹೇಳಿ ಮುಗಿಸುವ ಈ ಕತೆಗಳಲ್ಲಿ ಗಂಭೀರ ತಾತ್ವಿಕತೆಯನ್ನು ಖಂಡಿತವಾಗಿಯೂ ಕಾಣಲು ಸಾಧ್ಯವಿದೆ. ಎಲ್ಲಿಯೋ ಓದಿದ ಕತೆಯ ನೆರಳುಗಳಿಲ್ಲದ, ಕರಾವಳಿಯ ದೈನಂದಿನದ ದಟ್ಟ ಪರಿಸರವನ್ನು ಕಟ್ಟಿಕೊಂಡೇ ಸಾಗುವ ಇಲ್ಲಿನ ಕತೆಗಳಲ್ಲಿ ಕ್ಲೀಷೆಗೆ ಹೊರತಾದ ಹೊಸತನವಿದೆ. ಹುಲಿ, ದನ, ಕೋಳಿ, ಹಾವು ಎಲ್ಲ ಮಂದಿಯಷ್ಟೇ ಸಹಜವಾಗಿ ಇಲ್ಲಿನ ಕತೆಗಳಲ್ಲಿ ಸ್ಥಾನ ಪಡೆದಿರುವಂತೆಯೇ ದೈವ-ಭೂತ-ದೆವ್ವಗಳಿಗೂ ಜಾಗವಿದೆ. ಪುರಾಣಗಳು ಯಕ್ಷಗಾನದ ವೇಷದಲ್ಲಿ ಮೈತಳೆದರೆ ಆಧ್ಯಾತ್ಮ ತಪ್ಪದೇ ಹಣಿಕಿಕ್ಕಿ ಚು(ಚ)ಚ್ಚಿಸಿಕೊಳ್ಳುತ್ತಿರುತ್ತದೆ. ಇಲ್ಲಿನ ಮಂದಿ ಇದುವರೆಗೂ ಕತೆಗಳಲ್ಲಿ ಬಂದು ಹೋಗಿರುವ ಪ್ರಸಂಗವೇ ತುಂಬ ಕಮ್ಮಿ.

ಓದುಗನೊಂದಿಗೆ ನೇರವಾಗಿ ಮಾತಿಗಿಳಿದಂತೆ, ಯಾವುದೇ ಹುಸಿ ಆಡಂಬರವಿಲ್ಲದ ನೆಲೆಯಲ್ಲಿ ತೊಡಗುವ ಕತೆಗಳಾಗಿ ಕೊಂಚ ವಾಚಾಳಿತನ, ಕತೆಯ ಚೌಕಟ್ಟಿಗೆ ಹೊರಗಿನದು ಅನಿಸುವ ಹೋಲಿಕೆಗಳು, ಕತೆಯ ಗಾಂಭೀರ್ಯವನ್ನು ಅನಗತ್ಯವಾಗಿ ಲಘುವಾಗಿಸುವ ತಮಾಶೆ ಕೆಲವೊಂದು ಕಡೆ ಬೇಕಿದ್ದವೆ ಎನ್ನುವ ಪ್ರಶ್ನೆಯಿದೆ. ಆದರೆ ತಂತ್ರಕ್ಕೆ, ನಿರೂಪಣೆಯ ಶಿಸ್ತಿಗೆ ಚಿಕ್ಕಾಸಿನ ಬೆಲೆ ಕೊಡದ ಕತೆಗಳಿವು ಎನ್ನುವುದರಿಂದ ನವ್ಯ ಕಾಲಘಟ್ಟದ ನಂತರ ಕನ್ನಡದ ಸಣ್ಣಕತೆಗಳಲ್ಲಿ ಕಾಣಿಸಿಕೊಂಡ improvisation, add on value, ಕತೆಗಾರನೇ ಸ್ವತಃ ವಿಮರ್ಶಾತ್ಮಕ ದೃಷ್ಟಿಕೋನ ಇಟ್ಟುಕೊಂಡು ಬರೆಯುವ ವಿಧಾನ ಯಾವುದನ್ನೂ ಇಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕತೆಗಾರ್ತಿ ಯಾಕೆ ಅದನ್ನೆಲ್ಲ ಉದ್ದೇಶಪೂರ್ವಕ ಬಿಟ್ಟುಕೊಟ್ಟಿದ್ದಾರೆ ಎನ್ನುವ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ.

ಕತೆಗಾರ ತನ್ನ ಕತೆಯನ್ನು ಒಪ್ಪ ಮಾಡುವುದೇ ತಪ್ಪು ಎನ್ನುವುದಾದರೆ, ವಿಮರ್ಶಕರ ವಿಮರ್ಶೆಯ ಹತಾರಗಳನ್ನು ಕೂಡಾ ವ್ಯಸನ ಎನ್ನದೆ ವಿಧಿಯಿಲ್ಲ. ಮಾಸ್ತಿಯವರು ಬರೆಯುತ್ತಿದ್ದ ಕಾಲಕ್ಕೂ ಇವತ್ತಿಗೂ ಸಣ್ಣಕತೆಯ ಆಕೃತಿ, ಆಶಯ, ನಿರೀಕ್ಷೆ, ಪ್ರಯೋಗಶೀಲತೆ ಮತ್ತು ಸಾಧ್ಯತೆಗಳ ಪರಿಕಲ್ಪನೆಯಲ್ಲಿ ಅಜಗಜಾಂತರ ವ್ಯತ್ಯಾಸಗಳಾಗಿವೆ. ಹಾಗೆಯೇ ಸಣ್ಣಕತೆಗಾರರಿಗೆ ಇರುವ ಅವಕಾಶ ಕೂಡ, ಸಾಹಿತ್ಯಿಕ ಮತ್ತು ಅಸಾಹಿತ್ಯಿಕ ಕ್ಷೇತ್ರಗಳಲ್ಲಿ ಅಪಾರವಾಗಿಯೇ ಹೆಚ್ಚಾಗಿದೆ. 

ಹಾಗಿದ್ದೂ "ಊರು ಹೇಳದ ಕಥೆ" ಸಂಕಲನದ ಕತೆಗಳು ಈ ಯಾವುದೇ ವಿದ್ಯಮಾನಗಳಿಗೆ ಸ್ಪಂದಿಸಿಯೇ ಇಲ್ಲವೆಂಬಂತೆ ಮೂಡಿವೆ. ಅಂದ ಮಾತ್ರಕ್ಕೆ ಈ ಕತೆಗಳಲ್ಲಿ ಪ್ರಯೋಗಶೀಲತೆಯನ್ನು, ಸಾಧ್ಯತೆಗಳಿಗೆ ಮುಕ್ತವಾಗಿಟ್ಟುಕೊಂಡ ಆಕೃತಿಯನ್ನು ಹೊಂದಿರುವ ಕತೆಗಳಿಲ್ಲ ಎಂದೇನಲ್ಲ. ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆಯೂ ಈ ಕತೆಗಳನ್ನು ಓದುವ, ಓದಿ ಕುಶಿಪಡುವ ಒಂದು ಸಾಧ್ಯತೆಯನ್ನು ಉಳಿಸಿಕೊಂಡಿರುವುದು ಇವುಗಳ ವೈಶಿಷ್ಟ್ಯ. "ಹುಲಿ ಬಂತು ಹುಲಿ" ಕತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿನ ನಿರೂಪಣೆ ನಾವು ಮೇಲ್ನೋಟಕ್ಕೆ ಅಂದುಕೊಂಡಷ್ಟು ಮುಗ್ಧವಾದದ್ದಲ್ಲ ಎನ್ನುವುದು ಹೊಳೆದೇ ಹೊಳೆಯುತ್ತದೆ.  ಹಾಗಾಗಿ, ಒಬ್ಬ ಕತೆಗಾರ ಪ್ರಜ್ಞಾಪೂರ್ವಕವಾಗಿ ಸಣ್ಣಕತೆಯ ಪ್ರಕಾರದಲ್ಲಿ ನಡೆದ ಪ್ರಯೋಗಗಳನ್ನು ಮತ್ತು ಅದು ಮೈಗೂಡಿಸಿಕೊಂಡ ಕೆಲವು ಬೆಳವಣಿಗೆಗಳನ್ನು ಬಿಟ್ಟುಕೊಟ್ಟು ಬರೆಯುವ ಲಾಭ ನಷ್ಟಗಳ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ.  

ಹಾಗೆ ಈ ವಿಧಾನದಿಂದಾಗಿ ಈ ಕತೆಗಳು ಪಡೆದುಕೊಂಡಿದ್ದು ಕಳೆದುಕೊಂಡಿದ್ದು ಏನು ಎನ್ನುವುದರ ಕುರಿತು ಕೂಡ ಯೋಚಿಸಬೇಕು. 

ಸಂಕಲನದ ಎರಡನೆಯ ಕತೆ "ಅಶ್ವತ್ಥಾಮ" ಮೇಲ್ನೋಟಕ್ಕೆ ಒಬ್ಬ ಕುಡುಕನ ಹರಟೆಯ ತರ ಕಂಡರೂ ಅದು ಒಂದು ನೆಲೆಯಲ್ಲಿ ದೈವವನ್ನು ನಿರಾಕರಿಸುತ್ತಲೂ ಇದೆ ಇನ್ನೊಂದು ನೆಲೆಯಲ್ಲಿ ದೈವವನ್ನು ಪುರಸ್ಕರಿಸುತ್ತಲೂ ಇದೆ. ಕತೆಗಾರರ ನಂಬಿಕೆ ಏನೇ ಇದ್ದರೂ, ಇಲ್ಲಿ ಮುಖ್ಯವಾಗುವುದು ಅಶ್ವತ್ಥಾಮನ ದುಡುಕು, ಅಬದ್ಧ ನಡವಳಿಕೆಗಳೇ. ಪುರಾಣದ ಪಾತ್ರ ಇಲ್ಲಿ ರೂಪಕವಾಗುವುದು ಕತೆಯ ಹೆಸರಿನಲ್ಲಿ ಮಾತ್ರ. ಹಾಗಾಗಿ ಕತೆಯ ಹೆಸರು ಬದಲಿಸಿದರೆ ಈ ರೂಪಕ ಕತೆಯಿಂದಲೇ ಹುಟ್ಟುವ ಸಾಧ್ಯತೆ ಎಷ್ಟು ಎನ್ನುವ ಕುರಿತು ಯೋಚಿಸಬೇಕು. ಇಡೀ ಕತೆಯನ್ನು ಒಂದು ಭ್ರಾಂತಿ ಎಂಬಂತೆ ಮುಗಿಸಿರುವ ಬಗೆಯಿಂದ ಓದುಗ ಮತ್ತೊಮ್ಮೆ ಇಡೀ ಕತೆಯನ್ನು ಕುರಿತು ಮೊದಲಿನಿಂದ ಯೋಚಿಸುವ ಅನಿವಾರ್ಯವನ್ನು ಸೃಷ್ಟಿಸುವ ಇರಾದೆ ಕತೆಗಾರರಿಗಿದೆ.  ಹಾಗಾಗಿ ಅಶ್ವತ್ಥಾಮ ಒಂದು ಹೆಸರಾಗಿ ಓದುಗನ ಮನಸ್ಸಿಗೆ ಬರದಿದ್ದರೂ ಅಂಥ ದುಡುಕು, ಅಸಂಬದ್ಧತೆಯ ಅನುಭೂತಿ ಆಗುವುದು ತಪ್ಪುವುದಿಲ್ಲ. ಅಷ್ಟರಮಟ್ಟಿಗೆ ಈ ಕತೆ ಹೆಸರಿನ ಹಂಗಿಲ್ಲದೆಯೂ ಗೆಲ್ಲುವ ಶಕ್ತಿ ಹೊಂದಿದೆ.

ಹಾಗೆ ನೋಡಿದರೆ "ಒಬ್ಬ ನಾಯಕನ ಪ್ರಸಂಗ"ದಲ್ಲಿ ಬರುವ ನಾಯಕನೂ ಟಿಪಿಕಲ್ ಅಶ್ವತ್ಥಾಮನೇ. ಕುಡಿದು ಬಂದು ರಾಮನ ಪಾತ್ರ ಮಾಡುವ, ಬಲರಾಮನ ಪಾತ್ರ ಮಾಡುವುದಕ್ಕೆ ಬಣ್ಣಹಚ್ಚಿ ತಯಾರಾದವ ರಂಗಕ್ಕೆ ಇಳಿಯುವುದಕ್ಕೂ ಮೊದಲೇ ಎದ್ದು ನಡೆಯುವ ಈ ನಾಯಕ ತಾನು ಅದೇ ಹಳೆಯ ಡಯ್ಲಾಗು ಉದುರಿಸುವ ಯಂತ್ರವಾಗಲಾರೆ ಎನ್ನುವ - ಒಳಗಿನ ಹೊಸತನದ ಅದಮ್ಯ ತುಡಿತವೇ ಸರಳವಾಗಿ ಬದುಕುವುದಕ್ಕೆ ಇರುವ ಮಹಾ ತೊಡಕಾಗಿ ಬಿಡುವವನ - ಕತೆಯಾಗುತ್ತಾನೆ. ಇದ್ದಕ್ಕಿದ್ದಂತೆ ಅವನಲ್ಲಿ ಸುಭದ್ರೆಯಾಗುವ ಆಕರ್ಷಣೆ ಹುಟ್ಟುವುದು ವಿಚಿತ್ರವಾಗಿದೆ ಮತ್ತು ಅದಕ್ಕೆ ಕಾರಣವಾಗುವ, ಸಮಕಾಲೀನ ಬದುಕಿನಿಂದಲೇ ಆಯ್ದ ಒಂದು ವಿವರ  ಈ ಕತೆಗೆ ಕೊಡುವ ಓಜಸ್ಸು ಅಪರೂಪದ್ದಾಗಿದೆ.

"ಕಥಾ ಮಹಾತ್ಮೆ" ಎನ್ನುವ ಕತೆ, ಕತೆಯ ಕುರಿತಾಗಿಯೇ ಇರುವುದು ಕುತೂಹಲಕರ. ಈ ಕತೆಗಾರರು ಪುರಾಣ, ಜಾನಪದ, ಕಟ್ಟುಕತೆ, ಕುಡುಕನ ಓಘ ಎಲ್ಲವನ್ನೂ ತಮ್ಮ ಕತೆಗೆ ಬಳಸಿಕೊಳ್ಳುವ ಬಗೆಯನ್ನು ಗಮನವಿಟ್ಟು ನೋಡುವ ಅಗತ್ಯವಿದೆ. ಕರಾವಳಿಯ ಯಕ್ಷಗಾನ, ಹಾಸ್ಯ ನಾಟಕಗಳು, ಕೋಲದಂಥ ನಡಾವಳಿಗಳು, ಒಟ್ಟು ಬದುಕಿನ ಲಯ ಇಂಥದ್ದಕ್ಕೆ ಪರೋಕ್ಷ ಕಾರಣವಿರಬಹುದಾದರೂ, ಕಥನಕ್ರಮದಲ್ಲಿ ಅವುಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡು ಬರೆಯುವುದು ಸುಲಭವೂ ಅಲ್ಲ, ಇದನ್ನು ಇದುವರೆಗೆ ಇಷ್ಟು ಸಮರ್ಥವಾಗಿ ದುಡಿಸಿಕೊಂಡವರೂ ಇಲ್ಲ ಎನ್ನುವುದನ್ನು ಗಮನಿಸಿದರೆ ಇಲ್ಲಿನ ಪ್ರಾಯೋಗಿಕತೆಯ ಮಹತ್ವ ತಿಳಿಯುತ್ತದೆ.

"ಕೋಲಾರ ಮತ್ತು ಕೆಂಪು ಕೊಳವೆ" ಕತೆ ಇಂಥ ಒಂದು ಅದ್ಭುತವಾದ ಕತೆ. ಹಾಗೆ ನೋಡಿದರೆ ಕತೆಗಾರರಿಗೆ ಇದನ್ನು ‘ಇರುವ’ ಕತೆಯಾಚೆಯ ಇನ್ನೇನೋ ಆಗಿಸುವ ಯಾವುದೇ ಉದ್ದೇಶವಿಲ್ಲ. ಇಲ್ಲಿನ ಬಹುತೇಕ ಎಲ್ಲಾ ಕತೆಗಳ ಮಟ್ಟಿಗೂ ಈ ಮಾತು ಹೇಳಬಹುದಾದರೂ, ಈ ಕತೆಯ ನಾಟಕೀಯ ಅಂಶಗಳನ್ನು ಗಮನಿಸುವಾಗ ಈ ಮಾತಿನ ಅಗತ್ಯ ಹೆಚ್ಚಿದೆ. ಹಾಗಿದ್ದೂ ಈ ಕತೆಯಲ್ಲೊಂದು ಅನನ್ಯವಾದ ಆಕರ್ಷಣೆಯಿದೆ. ಹಳತನ್ನು ಕೆಡವಿ ಹೊಸತನ್ನು ಕಟ್ಟುವ ಮನೋಧರ್ಮವಿದೆ. ಇದನ್ನೆಲ್ಲ ಗಮನಿಸುವಾಗ ನನಗೆ ಮಲಯಾಳಂ ನ ಎಸ್ ಹರೀಶ್ ಅವರ ಕತೆಗಾರಿಕೆಯ ಒಂದು ಓಘ ಮತ್ತು ಕಥನಕ್ರಮ ಈ ಕತೆಗಾರರ ಕಥನಕ್ರಮಕ್ಕೆ ಹೆಚ್ಚು ಹತ್ತಿರವಾದದ್ದು ಅನಿಸುತ್ತದೆ. ಬಹುಶಃ ಸ್ವಲ್ಪ ಹೆಚ್ಚಿನ ಕೊಡುಗೆ ನೀಡುವ ಮನಸ್ಸು ಮಾಡಿದರೆ ಅಂಥ ಸಾಧ್ಯತೆಯೊಂದು ಯಶಸ್ವಿನಿ ಕದ್ರಿಯವರಿಗೆ ಇದೆ. 

"ಫೋಟೋದೊಳಗೊಬ್ಬಳು ಅಹಲ್ಯೆ" - ಈ ಸಂಕಲನದ ಸಶಕ್ತ ಕತೆಗಳಲ್ಲೊಂದು. ಹಾಗೆಯೇ "ಹುಲಿ ಬಂತು ಹುಲಿ" ಕತೆ ಕೂಡ. ಈ ಕತೆಯನ್ನು ಕತೆಯ ನಿರೂಪಕಿ ತನ್ನ ಅಜ್ಜಿಯ ಬಾಯಿಂದ ನಾಲ್ಕು ಬಾರಿ ಕೇಳಿದ್ದಾಳೆ. ಪ್ರತಿ ಬಾರಿ ಕೇಳಿದಾಗಲೂ ಅದು ಹೊಸತಾಗಿ ಕೇಳಿಸಿದೆ ಮಾತ್ರವಲ್ಲ, ಪ್ರತಿ ಬಾರಿ ಕೇಳಿದಾಗಲೂ ನಿರೂಪಕಿ ಬಾಲ್ಯದಿಂದ ಯೌವನಕ್ಕೆ ತಲುಪುವಷ್ಟು ಕಾಲ ಸರಿದಿದೆ ಎನ್ನುವ ಎರಡೂ ಅಂಶಗಳು ಮುಖ್ಯ. ಕೊನೆಯಲ್ಲಿ ಈ ನಿರೂಪಕಿಗೆ ಒಂದು ಟೈಂ ಮಶೀನ್ ಸಿಗುತ್ತದೆ, ಕಾಲಾಂತರ ಪ್ರಯಾಣಿಸಿ ಕತೆಯೊಳಗಿನ ಸತ್ಯವನ್ನು ಕಾಣುವ ಅವಕಾಶವನ್ನು ಅದು ಒದಗಿಸುತ್ತದೆ. ಹಾಗಿದ್ದೂ ಕತೆ ವಾಚ್ಯವಾಗದೇ ಉಳಿಯುವ ಅಂಶದಿಂದಾಗಿಯೇ ಈ ಕತೆ ಮುಖ್ಯವಾಗುತ್ತದೆ ಮಾತ್ರವಲ್ಲ, ಈ ಸಂಕಲನದ ಕತೆಗಳ ಮೇಲ್ನೋಟದ ಸಾದಾತನ ಅನುಮಾನಾಸ್ಪದ ಎನ್ನುವುದು ಸ್ಪಷ್ಟವಾಗುತ್ತದೆ.

"ಊರು ಹೇಳದ ಕತೆ" ನಮಗೆಲ್ಲ ಗೊತ್ತಿರುವ ಕತೆಯೇ. ಆದರೆ ಅದಕ್ಕೆ ಈ ಸಂಕಲನದಲ್ಲಿ ಸಿಗುವ ಒಂದು ವಿಚಿತ್ರವಾದ ತಿರುವು ಒಂದು ಜೀವನ ದರ್ಶನವನ್ನು ತೆರೆಯಬಲ್ಲ ಕಸು ಹೊಂದಿದೆ. ಜೀವನಕ್ಕೆ ಒಂದು ಸಹಜವಾದ ಗತಿಯಿದೆ. ಆದರೆ ನಮಗದು ವಿಶೇಷ ಅನಿಸದ ಕಾರಣದಿಂದಾಗಿ ಗಮನಕ್ಕೆ ಬರುವುದಿಲ್ಲ. ಆದರೆ ಆ ಗತಿಯಲ್ಲಿ ಅಸಹಜತೆ ಕಾಣಿಸಿಕೊಂಡಾಗ ನಮಗೆ ದಿಗಿಲಾಗುತ್ತದೆ. ನಾವು ಎಲ್ಲರ ಹಾಗೆಯೇ ಇರುವ ತನಕ ಜಗತ್ತು ನಮ್ಮನ್ನು ಸ್ವೀಕರಿಸುತ್ತದೆ ಎಂದೂ, ಹುಚ್ಚ ಎಂದು ಪರಿಗಣಿಸದೆಯೇ ಬದುಕಲು ಬಿಡುತ್ತದೆ ಎಂದೂ ತಿಳಿಯುವುದರಿಂದ ಎಲ್ಲಾ ಅಸಹಜತೆಗೂ ನಾವು ಹೆದರುತ್ತೇವೆ. ಎಲ್ಲರಂತೆಯೇ ಇರಲು ಒದ್ದಾಡುತ್ತೇವೆ, ಅದು ಸರಿಯಿರಲಿ ಇಲ್ಲದಿರಲಿ. ಆದರೆ ಅಸಹಜತೆಯನ್ನು ಜಗತ್ತು ಒಪ್ಪಿಕೊಳ್ಳುವ ಕೆಲವು ಆಯಾಮಗಳೂ ಬದುಕಿನಲ್ಲಿ ಇವೆ. ಪವಾಡಗಳನ್ನು, ಅದ್ಭುತಗಳನ್ನು ಜಗತ್ತು ಒಪ್ಪಿಕೊಂಡು ಶರಣಾಗುತ್ತದೆ. ಆದರೆ ಆಗಲೂ ಅಸಹಜತೆಯೇನೂ ಸಹಜವಾಗಿ ಬಿಡುವುದಿಲ್ಲ. ಅಸಹಜತೆಯ ಹೊರೆ ಹೊತ್ತವರಿಗೂ ಅದರ ಆಸುಪಾಸಿನವರಿಗೂ ಅದೊಂದು ಶಾಶ್ವತವಾದ ಒದ್ದಾಟವೇ ಆಗಬಹುದು. ಆದರೆ ಅದನ್ನೂ ಒಪ್ಪಿಕೊಳ್ಳುವುದಕ್ಕೆ, ಸ್ವೀಕರಿಸುವುದಕ್ಕೆ ನಮ್ಮ ನಮ್ಮ ಮನೋಧರ್ಮದಲ್ಲಿಯೇ ಒಂದು ಬದಲಾವಣೆಯ ಅಗತ್ಯವಿರುತ್ತದೆ. ಆದರೆ ಅದು ಸುಲಭವಿರುವುದಿಲ್ಲ.

ನಾನು ಚಿಕ್ಕವನಿರುವಾಗ "ಅಮ್ಮ" ಎಂದೇ ಗುರುತಿಸಲ್ಪಟ್ಟ, ಒಬ್ಬ ನಡುವಯಸ್ಸಿನ ಹೆಂಗಸಿಗೆ ಮೈಮೇಲೆ ದೇವಿ ದರ್ಶನ ಬರುವುದಿತ್ತು. ವಾರದ ಎರಡು ದಿನ ಅವರ ಮನೆಗೆ ಎಲ್ಲೆಲ್ಲಿಂದ ಜನಸಾಗರ ಹರಿದು ಬರುತ್ತಿತ್ತು. ಇಡೀ ತಾಲೋಕಿನಲ್ಲಿ ಅವರಿಗೆ ಭಕ್ತರಿದ್ದರು. ಆವತ್ತು ನಾನಾ ವಿಧದ ಹೂವಿನ ರಾಶಿ ಬಂದು ಬೀಳುತ್ತಿತ್ತು ಅವರಲ್ಲಿ. ಆ ಎಲ್ಲಾ ಹೂವುಗಳು ಸೇರಿ ಕೊಡುತ್ತಿದ್ದ ಒಂದು ಘಂ ಎನ್ನುವ ಪರಿಮಳವಿನ್ನೂ ನನ್ನ ಮೂಗಿನಲ್ಲಿ ನಿಂತಂತಿದೆ. ಆ ದಿನಗಳಲ್ಲಿ ಆ ಮನೆಯ ಒಟ್ಟಾರೆ ವಾತಾವರಣವೇ ಒಂದು ದೈವಿಕ ಕಳೆಯಿಂದ, ಹೂವು, ಕುಂಕುಮ, ಬೂದಿ, ಗೋಪಿಚಂದನಗಳ ಪರಿಮಳದಿಂದ, ಚಿತ್ರವಿಚಿತ್ರವಾಗಿ ವರ್ತಿಸುವ ‘ಮೈಮೇಲೆ ಬರುವ’ ಜನರ ಸಮಸ್ಯೆ-ಪರಿಹಾರ-ಕತೆಗಳಿಂದ ಭಯಾನಕವಾಗಿರುತ್ತಿತ್ತು. ಆ ವಿಶಾಲವಾದ ಮನೆಯಲ್ಲಿ ಇಷ್ಟೆಲ್ಲ ಗದ್ದಲ ನಡೆಯುತ್ತಿದ್ದಾಗಲೂ ಆಕೆಯ ಪತಿ ನಿರ್ವಿಕಾರವಾಗಿ ಹೊರಗಿನ ಜಗುಲಿಯಲ್ಲಿ,(ಅದಕ್ಕೆ ಶೀಟ್ ಹೊದಿಸಿ ವಿಶಾಲ ದಿವಾನಖಾನೆಯ ತರ ಬದಲಿಸಿದ್ದರು) ಒಂದು ಕುರ್ಚಿಯಲ್ಲಿ ಶುಭ್ರ ಬಿಳಿ ಸಿಲ್ಕಿನ ಶರಟು, ಪಂಚೆ ತೊಟ್ಟು ವೀಳ್ಯ ಜಗಿಯುತ್ತ ಕುಳಿತಿರುತ್ತಿದ್ದರು. ಬೆಳ್ಳನೆಯ ಮೈಬಣ್ಣದ ಅವರ ತಲೆ ತುಂಬ ಕೂದಲಿದ್ದರೂ ವಯಸ್ಸಿಗೆ ಸರಿಯಾಗಿ ಬೆಳ್ಳಗಾಗಿದ್ದವು. ಅವರ ಮುಖದಲ್ಲಿ ಎದ್ದು ಕಾಣುತ್ತಿದ್ದುದು ವೀಳ್ಯದೆಲೆಯಿಂದ ಕೆಂಪಾದ ತುಟಿಗಳೇ. ಕಣ್ಣುಗಳಲ್ಲಿ ಭಾವವಿರಲಿಲ್ಲ, ನೋಟ ನೆಟ್ಟಗೆ, ಏನನ್ನೂ ನೋಡದ, ಏನನ್ನೋ ಕುರಿತಿಟ್ಟು ನೋಡುತ್ತಿರುವಂಥವನದ್ದು. ಆಗ ನನಗೆ ಹೆಚ್ಚೆಂದರೆ ಹನ್ನೆರಡರ ಆಸುಪಾಸು. ಆ ವಯಸ್ಸಿನಲ್ಲಿಯೂ ನನಗೆ ಅವರ ಬಗ್ಗೆ ಏನೆಲ್ಲ ಯೋಚನೆ ಬರುತ್ತಿತ್ತು. ದೇವಿಯ ಪತಿಯಾಗಿ ಬದುಕುವ ಅವರ ಕಷ್ಟಗಳ ಬಗ್ಗೆ, ಅವರ ಮನಸ್ಸಿನಲ್ಲಿ ಈ ಕ್ಷಣ ಏನಿರಬಹುದು ಎನ್ನುವ ಬಗ್ಗೆ. ಆತ ಸತ್ತಾಗ, ಆತನ ಶವವನ್ನು ವಾಹನದಿಂದ ಇಳಿಸಿದಾಗ ‘ಅಮ್ಮ’ ರೋದಿಸಿದ ಚಿತ್ರ ಕೂಡ ನನ್ನ ಮನಸ್ಸಿನಿಂದ ಎಂದಿಗೂ ಅಳಿಸಿ ಹೋಗದು. ತದನಂತರ ಅವರು ತಮ್ಮ ದರ್ಶನದ ಕಾರ್ಯಕ್ರಮವನ್ನು ಪೂರ್ತಿಯಾಗಿ ನಿಲ್ಲಿಸಿದರು. ಇಲ್ಲಿನ "ಊರು ಹೇಳದ ಕತೆ"ಯನ್ನು ಓದಿದಾಗ ಅದೆಲ್ಲವೂ ನೆನಪಾಯಿತು.

ಅಂತೂ ಈ ಕತೆಗಳು ಉದ್ದೇಶಪೂರ್ವಕವಾಗಿಯೇ improvisation, value addition  ಮತ್ತು ವಿಮರ್ಶಕ ಪ್ರಜ್ಞೆಯಿಂದ ಆಧುನಿಕ ಕತೆಯನ್ನಾಗಿಸುವ ಪ್ರಯತ್ನಗಳನ್ನು ಬಿಟ್ಟುಕೊಟ್ಟು ಬರೆದೂ ಮುಖ್ಯವಾಗುತ್ತವೆ, ಈ ವಿಧಾನವನ್ನೇ ಎಸ್ ಹರೀಶ್ ಬಳಸುತ್ತ ಸಾಧಿಸಿದ ಸ್ತರಕ್ಕೆ ಇವು ಇನ್ನೂ ಬಂದಿಲ್ಲ ಎನ್ನುವುದನ್ನು ಒಪ್ಪಿಕೊಂಡರೂ ಈ ಮಾತು ನಿಲ್ಲುತ್ತದೆ. ಹಾಗೆ ಎಸ್ ಹರೀಶ್ ಹೆಚ್ಚು ಪ್ರಜ್ಞಾಪೂರ್ವಕವಾಗಿಯೇ ತಮ್ಮ ಕಥನಕ್ರಿಯೆಯ ನೆಲೆಯನ್ನು ಗುರುತಿಸಿಕೊಂಡಿದ್ದಾರೆ ಮತ್ತು ಅದನ್ನೇ ಮುಂದುವರಿಸುತ್ತಿದ್ದಾರೆ. ಯಶಸ್ವಿನಿ ಕದ್ರಿಯವರ ನಿಲುವು ಈ ಬಗ್ಗೆ ಏನಿದೆ ಎನ್ನುವುದು ಈ ಎರಡೂ ಜಿಜ್ಞಾಸೆಗಳನ್ನಿಟ್ಟುಕೊಂಡು ಬಹಳ ಮುಖ್ಯ. 

ಯಶಸ್ವಿನಿ ಕದ್ರಿಯವರ ಕತೆಗಳನ್ನು ಎಲ್ಲರೂ ಓದಬೇಕು ಎಂದು ಹೇಳುವವರಲ್ಲಿ ಈಗ ನಾನೂ ಇದ್ದೇನೆ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, May 3, 2022

ಎಸ್ ಹರೀಶ್ ಎಂಬ ಮೋಡಿಗಾರ


ಇನ್ನೂ ನಲವತ್ತಾರು-ನಲವತ್ತೇಳರ ಹರಯದ ಎಸ್ ಹರೀಶ್ ಕತೆ, ಕಾದಂಬರಿಗಳನ್ನು ಗಮನಿಸಿದರೆ ಹೊಟ್ಟೆಕಿಚ್ಚಾಗುತ್ತದೆ. "ನನಗೆ ಹೊಟ್ಟೆಕಿಚ್ಚಾಗುವ ಹಾಗೆ ಬರೆಯಿರಿ" ಎನ್ನುತ್ತಿದ್ದರು ಲಂಕೇಶ್. ಕನ್ನಡದಲ್ಲೇಕೆ ಈ ರೀತಿ ಬರೆಯುವವರು ಬರುತ್ತಿಲ್ಲ ಎನಿಸಿ ಬೇಸರವೂ ಆಗುತ್ತದೆ. ಇವರ "ಮುಸ್ಟೇಚ್" ಕಾದಂಬರಿಯ ಬಗ್ಗೆ ಹೇಳಬೇಕಾದ್ದಿಲ್ಲ ಅನಿಸುತ್ತದೆ, ಅಷ್ಟರಮಟ್ಟಿಗೆ ಅದು ಕನ್ನಡದ ಎಲ್ಲ ಓದುಗರನ್ನೂ ತಲುಪಿದೆ. ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜೆಸಿಬಿ ಪ್ರಶಸ್ತಿ ಅದಕ್ಕೆ ಪ್ರಚಾರ ನೀಡಿದೆಯೇ ಹೊರತು ಪುರಸ್ಕಾರವನ್ನಲ್ಲ ಅನಿಸುವ ಮಟ್ಟಿಗೆ ಆ ಕೃತಿ ಅದ್ಭುತವಾಗಿದೆ. ಮಾರ್ಕೆಸನ "ಒನ್ ಹಂಡ್ರೆಡ್ ಡೇಸ್ ಆಫ್ ಸಾಲಿಟ್ಯೂಡಿ"ಗೆ ಸರಿಸಮಾನವಾಗಿ ನಿಲ್ಲಬಲ್ಲ ಒಂದು ಕೃತಿಯದು. 

ಹಾಗೆ ನೋಡಿದರೆ ಎಸ್ ಹರೀಶರ ಇನ್ನೂ ಎರಡು ಸಂಕಲನಗಳು ಇಂಗ್ಲೀಷಿಗೆ ಅನುವಾದಗೊಂಡಿಲ್ಲ. ಸದ್ಯಕ್ಕೆ ನಮಗೆ ಲಭ್ಯವಿರುವುದು ಅವರ ಮೂರು ಕಥಾಸಂಕಲನಗಳಲ್ಲಿ ನಡುವಿನ "ಆಡಮ್" ಸಂಕಲನವೊಂದೇ. ಮೊದಲ ಕಥಾಸಂಕಲನ ಪ್ರಕಟಿಸಿದ ಬಳಿಕ ಹಲವಾರು ವರ್ಷಗಳ ಕಾಲ ಎಸ್ ಹರೀಶ್ ಏನನ್ನೂ ಬರೆಯದೆ ಸುಮ್ಮನಿದ್ದರು. ಬಹುಶಃ ತಾನಿನ್ನು ಎಂದೂ, ಏನೂ ಬರೆಯುವುದಿಲ್ಲ ಎಂದುಕೊಂಡಿದ್ದರಂತೆ. ಹಾಗಾಗಿ ತಮಗೆ ಮರುಜೀವ ಕೊಟ್ಟ ಕೃತಿಯಿದು ಎಂದು ತುಂಬ ಅಕ್ಕರಾಸ್ಥೆಯಿಂದ ಹೇಳಿಕೊಳ್ಳುತ್ತಾರೆ ಅವರು. ಅಲ್ಲದೆ ಮಲಯಾಳಂನಲ್ಲಿ ಹತ್ತು ಮುದ್ರಣಗಳನ್ನು ಕಂಡ ಕೃತಿ ಕೂಡ ಹೌದು ಇದು. ಇದಕ್ಕೂ ಕೇರಳ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಸಂದಿದೆ. 

ಈ ಸಂಕಲನದಲ್ಲಿ ಒಟ್ಟು ಒಂಬತ್ತು ಕತೆಗಳಿವೆ. ಮೂರು ಕತೆಗಳು ಪೂರ್ತಿಯಾಗಿ ನಾಯಿ, ಎಮ್ಮೆ, ಎತ್ತುಗಳಿಗೆ ಸಂಬಂಧಿಸಿದ್ದರೆ ಉಳಿದವುಗಳಲ್ಲಿ ಕೋಳಿ, ನಾಯಿ, ಹಾವು, ಮೇಕೆಗಳೆಲ್ಲ ಯಥಾನುಶಕ್ತಿ ಕತೆಗಳಿಗೆ ಜೀವ ತುಂಬುತ್ತವೆ. ಇದು "ಮುಸ್ಟೇಚ್" ಕಾದಂಬರಿಯನ್ನು ಓದಿದವರಿಗೆ ವಿಶೇಷ ಎಂದನಿಸದ ಸಂಗತಿ.

"ಡೆತ್ ನೋಟಿಸ್" ಕತೆ ಸುರುವಾಗುವುದು ಹೀಗೆ: 

ನಮ್ಮ ಮನೆ ಹಿಂದಿನ ಹಳೇ ಹಟ್ಟಿಯಲ್ಲಿದ್ದ ಗಬ್ಬದ ಹಸು - ಹೈಬ್ರಿಡ್ ವೆರೈಟಿದು - ಆವತ್ತು ರಾತ್ರಿ ಎಂಟುಗಂಟೆ ಹೊತ್ತಿಗೆ ಅದಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿತು. ಅದಕ್ಕೂ ಕೆಲವೇ ಗಂಟೆಗಳ ಹಿಂದೆ, ಒಂದು ಕಂತ್ರಿನಾಯಿ ನಮ್ಮ ಕಾಂಪೌಂಡಿನ ಹಿಂದಿರುವ ಕುರುಚಲು ಪೊದೆಯ ಹತ್ತಿರ ಮರಿ ಹಾಕಿತ್ತು. ಕಿವಿ ಹರಿದು ಹೋಗುವಂಥ ಅದರ ಕಿರಿಚಾಟವಂತೂ ಇಡೀ ಜಗತ್ತಿಗೇ ಅದರ ದೇಹ ಸೀಳುವ ನೋವನ್ನು ಅನೌನ್ಸ್ ಮಾಡಿತ್ತು. ತಿಂಗಳ ಕಾಲ ಆಸುಪಾಸಿನ ಸಿಕ್ಕಸಿಕ್ಕ ನಾಯಿಗಳ ಜೊತೆ ಹೆಚ್ಚೂಕಡಿಮೆ ಅದೇ ಜಾಗದಲ್ಲಿ ಮಜಾ ಉಡಾಯಿಸಿದ್ದಕ್ಕೆ ಅವಳು ಈಗ ಸರಿಯಾದ ಬೆಲೆಯನ್ನೇ ಕೊಡುತ್ತಿದ್ದಳು. 

ಕೆಲವೇ ಕ್ಷಣಗಳಲ್ಲಿ ನಾನು, ನನ್ನಮ್ಮ ಹೇಳಿದ ಹಾಗೆ, ಸುರಿಯುತ್ತಿದ್ದ ಮಳೆಯಲ್ಲೇ ನಿಂತು ಹೊಂಡ ತೋಡುತ್ತಿದ್ದೆ. ಒಂದೊಂದೇ ಕುನ್ನಿಗಳನ್ನು ಎತ್ತಿ - ಒಟ್ಟು ಏಳಿದ್ದವು, ಕಾಮನಬಿಲ್ಲಿನ ಬಣ್ಣದ ಹಾಗೆ - ಹೊಂಡಕ್ಕೆ ಹಾಕಿದೆ. ಎಂದಿಗೂ ಜಗತ್ತಿಗೆ ತೆರೆದುಕೊಳ್ಳಲಾರದ ಅವುಗಳ ಕುರುಡುಗಣ್ಣುಗಳಲ್ಲೇ ಅವು ಸಿಕ್ಕಸಿಕ್ಕ ಕಡೆ ತಡಕಾಡತೊಡಗಿದ್ದವು, ಅಮ್ಮನ ಮೊಲೆಗಾಗಿ. ನಾನು ಹೊಂಡಕ್ಕೆ ಮಣ್ಣು ಹಾಕಿ ಮುಚ್ಚಿದಂತೆಲ್ಲ ಹೊಂಡದಲ್ಲಿದ್ದ ಮಳೆಯ ಕೆಸರು ನೀರು ಮೇಲಕ್ಕೆ ರಾಚುತ್ತಿತ್ತು. 

"ನೀನೊಬ್ಬಳು ಎಂಥ ಅಮ್ಮನೋ" ಕೆಸರಾಗಿದ್ದ ಹಾರೆಯನ್ನು ತೊಳೆದ ಮೇಲೆ ನಾನು ಅಮ್ಮನನ್ನು ಉದ್ದೇಶಿಸಿ ಹೇಳಿದೆ. 

ಅಮ್ಮ ನನಗೆ ಒಂದು ಗ್ಲಾಸ್ ಟೀ ಕೊಟ್ಟು, ಒಂದು ಪ್ಲೇಟಿನಲ್ಲಿ ನಿನ್ನೆಯ ಉಳಿದ ತಂಗಳನ್ನಕ್ಕೆ ಸ್ವಲ್ಪ ಮೀನಿನ ಸಾರು ಸುರಿದು ನನ್ನ ಬೆನ್ನ ಹಿಂದೆಯೇ ಕುಂಯಿ ಕುಂಯಿ ಎಂದು ಅಳುತ್ತಾ ಬಂದಿದ್ದ ನಾಯಿಯ ಎದುರು ತಳ್ಳಿದಳು.

- ಈ ಕತೆಯೇನೂ ಆಕಳು, ನಾಯಿಯ ಕುರಿತಾದ್ದಲ್ಲ. ಬದಲಿಗೆ ಅದು ವಿಚಿತ್ರ ಬಂಗಲೆಯಲ್ಲಿ ಒಂಟಿಯಾಗಿ ಬದುಕುತ್ತಿರುವ ಪೀಟರ್ ಸರ್ ಎಂಬಾತನ ಕತೆಗಳು, ಸುಳ್ಳುಗಳು ಮತ್ತು ಭಯದ ಸುತ್ತ ಸಾಗುತ್ತದೆ. 

"ಕೆರೆ ಪಕ್ಕದ ಮರ್ಡರ್" ಕತೆಯಂತೂ ತುಂಬ ಲಾಜಿಕಲ್ ಆಗಿದೆ. ತಂಬಿಯೆಚ್ಚನ್ ಎಂಬ, ಕ್ರಿಮಿನಲ್ ಆಗಿದ್ದವನೊಬ್ಬ ಸಂತನಷ್ಟು ಒಳ್ಳೆಯವನಾಗಿ ಪರಿವರ್ತನೆಯಾದ ಗುಟ್ಟೇನೆಂದು ತಿಳಿಯಲು ಹೊರಡುವ ಹೆಸರಿಲ್ಲದ ಇಬ್ಬರು ನಿಗೂಢ ವ್ಯಕ್ತಿಗಳು ನಿಜಕ್ಕೂ ಯಾರು ಎನ್ನುವ ಬಗ್ಗೆ ಕೇವಲ ಹೊಳಹುಗಳನ್ನಷ್ಟೇ ಉಳಿಸುವ ವಿಚಿತ್ರ ತಂತ್ರಗಾರಿಕೆಯ ಈ ಕತೆಯ ಸೊಗಸನ್ನು ಓದಿಯೇ ಅನುಭವಿಸಬೇಕು.

"ಕಾವ್ಯಮೇಳ" ಕತೆ ಕೂಡ ಅಷ್ಟೇ ಸೊಗಸಾದ ಇನ್ನೊಂದು ಕತೆ. "ಸೂರದಾಸನನ್ನು ಮೊದಲ ಬಾರಿ ಭೇಟಿಯಾದಾಗ ನಾನು ದಿಂಡಿಗಲ್ಲಿನ ಒಂದು ಕೊನೆಯಲ್ಲಿ ಅತ್ತ ಹಳ್ಳಿಯೂ ಅಲ್ಲದ ಇತ್ತ ಪೇಟೆಯೂ ಅಲ್ಲದ ಒಂದು ಜಾಗದಲ್ಲಿ ವಾಸುವಾವನ್ ಎಂಬ ಹೆಸರಿನಲ್ಲಿ ಬಿರಿಯಾನಿ ಶಾಪ್ ನಡೆಸಿಕೊಂಡಿದ್ದೆ" ಎಂದು ಸುರುವಾಗುವ ಈ ಕತೆಯಲ್ಲಿ ಮೊದಲ ಸಾಲೇ ಬಿಟ್ಟುಕೊಡುವ ಒಂದು ಗುಟ್ಟನ್ನು ನಾವು ಬಹುಬೇಗ ಮರೆತು ಬಿಡುತ್ತೇವೆ. ಅಷ್ಟು ಮೋಹಕವಾದ ಶೈಲಿ, ಮೈಮರೆಸುವ ವಿವರಗಳು ಎಸ್ ಹರೀಶ್ ಅವರ ಕತೆಗಳ ಮಾಯಕತೆಗೆ ಸಾಕ್ಷಿ ಎಂಬಂತೆ ಈ ಕತೆ ಇದೆ. ಇವರ ಕತೆಗಳಲ್ಲಿ ಹೊಟ್ಟೆಯೊಳಗೆ ಹೊಕ್ಕು ಹೊರಬಂದರೂ ನೋವು ಕೊಡದೆ ಕೊಲ್ಲುವ ಚಾಕುವಿನಂತೆ  ಮನುಷ್ಯ ಸ್ವಭಾವದ ಸೂಕ್ಷ್ಮ ಕ್ರೌರ್ಯ ಫಕ್ಕನೆ ಒಡೆದು ಕಾಣಿಸದ ಬಗೆಯಲ್ಲಿ ಅವಿತುಕೊಳ್ಳುತ್ತ ಹೋಗುತ್ತದೆ. ಓದಿ ಮುಗಿಸಿದ ಮೇಲೆಯೇ ತೆರೆದುಕೊಳ್ಳುವ ಸತ್ಯ ಬೆಚ್ಚಿ ಬೀಳಿಸುವಂತೆಯೇ ಕತೆಗಾರನ ಕಲೆಗಾರಿಕೆ, ಜಾಣತನ, ನೈಪುಣ್ಯ ಮನಸೆಳೆಯುತ್ತವೆ.

"ಒಬ್ಬಂಟಿ" ಕತೆ ಈ ಸಂಕಲನದ ಇನ್ನೊಂದು ಅದ್ಭುತವಾದ ಕತೆ. ರಾತ್ರಿಹೊತ್ತು ಬಸ್ಸಿನಲ್ಲಿ ನಿದ್ದೆ ಹೋದವನನ್ನು ಕಂಡಕ್ಟರ್ ಎಬ್ಬಿಸಿ ಇಳಿಸುತ್ತಾನೆ. ಆದರೆ ಅವನು ಇಳಿಸಿದ್ದು ಎಲ್ಲೋ ನಡುದಾರಿಯಲ್ಲಿ, ಕಗ್ಗತ್ತಲೆಯಲ್ಲಿ. ಆ ಜಾಗ ಯಾವುದೆಂದೂ ಈ ಪ್ರಯಾಣಿಕನಿಗೆ ಗೊತ್ತಿಲ್ಲ. ಅಲ್ಲಿಂದ ಯಾವ ದಿಕ್ಕಿನತ್ತ ಹೋಗಬೇಕೆಂಬುದೂ ಗೊತ್ತಿಲ್ಲ. ಸಾಲದಿದ್ದರೆ ಕಗ್ಗತ್ತಲು. ನರಹುಳದ ಸುಳಿವಿಲ್ಲದ ಕಾಡಿನಂಥ ಪ್ರದೇಶ. ಹುಟ್ಟಿದಾರಭ್ಯ, ಅಲ್ಲ, ಗರ್ಭದಲ್ಲಿ ಕೂಡಾ ಒಂಟಿಯಾಗಿರದ ಒಂದು ಜೀವ ಈ ರೀತಿ ಮೊತ್ತಮೊದಲ ಬಾರಿಗೆ ಒಂಟಿತನವನ್ನು ಮುಖಾಮುಖಿಯಾಗುವ ಈ ಕತೆ ನಿಜಕ್ಕೂ ಅನನ್ಯವಾಗಿದೆ.


"ಮಾವೋಯಿಸ್ಟ್"  ಕತೆ ಬಹುಶಃ ಈ ಸಂಕಲನದ ಅತ್ಯಂತ ದೀರ್ಘವಾದ ಮತ್ತು ಇಡೀ ಸಂಕಲನದ ಎಲ್ಲಾ ಕತೆಗಳ ಯಶಸ್ಸನ್ನು ತೆರೆದು ತೋರಿಸುವಂಥ ಪ್ರಾತಿನಿಧಿಕ ಕತೆ. ಇದರಲ್ಲಿ ಮಾವೋಗೆ ಯಾವುದೇ ಪಾತ್ರವಿಲ್ಲ. ಗಂಡು ಎತ್ತು ಹೆತ್ತಾಗ ಅದನ್ನು ಕರುವಿದ್ದಾಗಲೇ ಟವೆಲಿನ ಮುಸುಕು ಹಾಕಿ ಉಸಿರುಕಟ್ಟಿಸಿ ಕೊಂದು ಬಿಡುವುದು ಕ್ರಮ. ಅದರಿಂದ ಉಪಯೋಗಕ್ಕಿಂತ ಉಪದ್ರವೇ ಹೆಚ್ಚು ಎನ್ನುವುದು ಅದಕ್ಕಿರುವ ಸಮರ್ಥನೆ. ಆದರೆ ಕಾಸಿನ ಪ್ರಯೋಜನಕ್ಕಿಲ್ಲದ, ಇಪ್ಪತ್ತನಾಲ್ಕು ಗಂಟೆ ಪುಸ್ತಕದಲ್ಲಿ ತಲೆಹೊಗ್ಗಿಸಿ ಕೂರುವ ಹದಿಹರಯದ ಮಗ ಭಾನು, ಪುಸ್ತಕದಿಂದ ತಲೆಯೆತ್ತಿ "ಬೇಡ ಅಪ್ಪ, ಅದನ್ನು ಕೊಲ್ಲಬೇಡ" ಎಂದು ಹೇಳಿದ್ದೇ ಕಾರಣವಾಗಿ ಜೋಗಯ್ಯನ ಹತ್ಯೆಯ ಪ್ರಯತ್ನದಿಂದ ಬಚಾವಾದ ಎತ್ತಿನ ಹೆಸರು ಕೂಡ ಮುಂದೆ ಭಾನು ಎಂದೇ ಆಗುತ್ತದೆ. ಮಗ ಭಾನು ಊರಿಗೆ ಬರದೆ ಪರದೇಶಿಯಾದ ಮೇಲೆ ಅವನ ಮೇಲಿನ ಮುದ್ದನ್ನೆಲ್ಲ ಈ ಎತ್ತಿನ ಮೇಲೆ ಸುರಿದು, ಮಗನ ಹೆಸರನ್ನೇ ಇಟ್ಟು ಬೆಳೆಸುತ್ತಾರೆ ಜೋಗಯ್ಯ ದಂಪತಿಗಳು. ಆ ಭಾನು ಮುಂದೆ ಮಾವೋವಾದಿಯಾಗಿ ಪುಂಡಾಟಿಕೆಯಲ್ಲಿ ತೊಡಗಿದ ಸುದ್ದಿಗೆ ಗಂಟುಬಿದ್ದು ಈ ಕತೆಯ ಹೆಸರು ಮಾವೋಯಿಸ್ಟ್ ಆಗಿದೆ. ಆದರೆ ಈ ಎತ್ತಿನ ಪುಂಡಾಟಿಕೆ ಹೆಚ್ಚಾಗಿ, ಅದನ್ನು ಇಡೀ ಊರು ಬೇಟೆಯಾಡಲು ತೊಡಗುವ ಕತೆಯೇ ಒಂದು ರೂಪಕದಂತಿರುವುದು ನಿಜವೇ.  ಕಸಾಯಿಖಾನೆಗೆ ಹೊರಟ ಭಾನು ಮತ್ತು ಅವನ ಹೊಸ ಗೆಳತಿ ಎಮ್ಮೆ ಇಬ್ಬರೂ ಲಾರಿಯಿಂದ ತಪ್ಪಿಸಿಕೊಂಡಲ್ಲಿಂದ ಸುರುವಾಗುವ ಹೈಡ್ರಾಮಾ ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳುವ ಎಷ್ಟೆಲ್ಲ ಕತೆಗಳು, ಪ್ರಕರಣಗಳು ಇಲ್ಲಿವೆ!  ನಮ್ಮ ದೈನಂದಿನದಲ್ಲಿಯೇ, ಬದುಕಿನ ನಿತ್ಯದ ಆಸುಪಾಸಿನಲ್ಲೇ ನಾವು ಕತೆ-ಕಾದಂಬರಿಗಳನ್ನು ಹೇಗೆ ಕಾಣಬೇಕು ಎನ್ನುವುದಕ್ಕೆ ಅದೇ ಒಂದು ಉದಾಹರಣೆಯಂತಿದೆ ಈ ಕತೆ!

ಕೊನೆಯ ಕತೆ "ರಾತ್ರಿ ಕಾವಲು" ನಮ್ಮ ಅನಂತಮೂರ್ತಿಯವರ ‘ಮೌನಿ’ ಕತೆಯ ಅಪ್ಪಣ್ಣ ಭಟ್ಟ ಮತ್ತು ಕುಪ್ಪಣ್ಣಭಟ್ಟರನ್ನು ನೆನಪಿಸುವಂಥದ್ದು. ಸ್ವಲ್ಪ ಮಟ್ಟಿಗೆ ಜಯಂತರ ‘ಬಿಡು ಬಿಡು ನಿನ್ನಯ’ವನ್ನು ಕೂಡ. 

ಒಟ್ಟಾರೆಯಾಗಿ, ತುಂಬ ಅಪರೂಪದ, ಅತ್ಯಂತ ಆಪ್ತವಾಗುವ, ನವಿರಾದ ನಿರೂಪಣೆಯ, ಶ್ರೀಮಂತ ವಿವರಗಳ ಒಳ್ಳೆಯ ಕತೆಗಳ ಒಂದು ಸಂಕಲನವಿದು.      

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, April 18, 2022

ವಿಮರ್ಶೆಯ ವ್ಯಸನ


ವಿಮರ್ಶಕರನ್ನು ನಿರಂತರವಾಗಿ ಹೀಗಳೆಯುವುದು, ಇಂಥವರೇ ಎಂದು ಬೊಟ್ಟು ಮಾಡದೇ ದೂರುವುದು, ಅವರ ಮೇಲೆ ಬೇರೆ ಬೇರೆ ತರದ ಆರೋಪಗಳನ್ನು ಹೊರಿಸುವುದು ನಡೆಯುತ್ತಲೇ ಇದೆ. ಬಹುಶಃ ಇದರ ಪರಿಣಾಮವಾಗಿಯೇ ಇದ್ದರೂ ಇರಬಹುದು, ಈಗ ಕನ್ನಡದ ಹಿರಿಯ ವಿಮರ್ಶಕರು ಅನುವಾದ ಮತ್ತಿತರ ಚಟುವಟಿಕೆಗಳಲ್ಲೇ ವ್ಯಸ್ತರಾಗುತ್ತಿದ್ದಾರೆ. ಗಿರಡ್ಡಿ ತರದವರು ಬದುಕಿದ್ದಾಗಲೇ ವಿಮರ್ಶೆ ಬರೆಯುವುದಿರಲಿ, ಮುನ್ನುಡಿ, ಬೆನ್ನುಡಿ ಕೂಡಾ ಬರೆಯದೆ, ಈ ಕಾಲದ ಸಾಹಿತ್ಯವನ್ನು ಈ ಕಾಲದ ವಿಮರ್ಶಕರೇ ವಿಮರ್ಶಿಸಲಿ ಎಂದುಬಿಟ್ಟರು. ಪತ್ರಿಕೆಯವರು ಕೇಳದೆ, ಮುನ್ನುಡಿ, ಬೆನ್ನುಡಿಗಳಿಗೆ ದುಂಬಾಲು ಬೀಳುವವರಿಲ್ಲದೆ, ಸ್ವತಃ ಪುಸ್ತಕ ತರುವ ಉದ್ದೇಶವಿಲ್ಲದೆ ಯಾರಾದರೂ ಹಿರಿಯ ವಿಮರ್ಶಕರು ತಾವಾಗಿಯೇ ಒಂದು ಪುಸ್ತಕ ಇಷ್ಟವಾಯಿತು ಎಂದು ವಿಮರ್ಶೆ ಬರೆದಿದ್ದನ್ನು ಎಲ್ಲಾದರೂ ಕೇಳಿದ್ದೀರಾ? ಬರೆದರೆ ಅದು ಆಯಕಟ್ಟಿನ ಸ್ಥಾನದಲ್ಲಿರುವವರಿಗೆ ಬೆಣ್ಣೆ ಹಚ್ಚುವುದಕ್ಕಷ್ಟೇ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಆ ವಿಮರ್ಶಕರು ಈ ವಿಮರ್ಶಕರ ನಡುವೆ ನಡೆದ ಕೊಡು-ಕೊಳ್ಳುವಿಕೆ ಕಣ್ಣಿಗೆ ಹೊಡೆದು ಕಾಣುವಷ್ಟು ಸ್ಪಷ್ಟವಾಗಿಯೇ ಇರುತ್ತದೆ. ಹೆಸರೇ ಹೇಳಬೇಕೆಂದರೆ ನನ್ನ ಬಳಿ ಅಂಥ ಹೆಸರುಗಳಿವೆ. ಸಮಯ ಬಂದಾಗ ವಿವರಗಳ ಸಮೇತ ಅದನ್ನು ಬರೆಯುವವನೇ.

ಮೊನ್ನೆ ನುಡಿ ಪುಸ್ತಕದವರು ತಿಂಗಳಿಗೊಂದು ಪುಸ್ತಕ ಸೂಚಿಸುತ್ತೇವೆ, ಹೊಸ ವಿಮರ್ಶಕರು ಅದನ್ನು ಕುರಿತು ಬರೆಯಲಿ, ಅತ್ಯುತ್ತಮವಾದ ಮೂರು ಬರಹಗಳಿಗೆ ನಗದು ಬಹುಮಾನ ನೀಡುತ್ತೇವೆ ಎಂದು ಪೋಸ್ಟ್ ಹಾಕಿದರು. (ನಂತರ ಎರಡು ತಿಂಗಳಿಗೊಮ್ಮೆ ಎಂದು ಬದಲಿಸಿದ್ದಾರೆ). ಕನ್ನಡದಲ್ಲಿ ವಿಮರ್ಶಕರ ಕೊರತೆಯಿದೆ, ನೀನು ವಿಮರ್ಶೆ ಬರಿ (ಹಾಗಾದರೂ ಕೆಟ್ಟದಾಗಿ ಕತೆ ಬರೆಯುವುದು ನಿಲ್ಲಲಿ!) ಎಂದು ನನ್ನನ್ನು ಹಲವರು ಉತ್ತೇಜಿಸಿದ್ದರು. ಬೇಂದ್ರೆಯವರು ಇದೇ ತರ ಒಬ್ಬರಿಗೆ "ನೀನು ಪದ್ಯಾನ ಬರೀ, ಅಂದ್ರ ನಿನ್ನ ಗದ್ಯಾ ಸುಧಾರಿಸ್ತದ" ಅಂದಿದ್ದರಂತೆ. ಈ ಉತ್ತೇಜನದ ವಿವಿಧ ಮಾದರಿಗಳ ಒಳಹೊರಗುಗಳನ್ನು ಎಲ್ಲರೂ ಬಲ್ಲೆವು. ಯಾರೂ ಯಾರನ್ನೂ ಸುಮ್ಮನೇ ಉತ್ತೇಜಿಸುವುದು, ಪ್ರೋತ್ಸಾಹಿಸುವುದು, ಬೆಂಬಲಿಸುವುದು ನಡೆಯುತ್ತದೆ ಎಂದು ಮುಗ್ಧವಾಗಿ ನಂಬುವ ಹಂತವನ್ನು ಎಲ್ಲರೂ ಬೇಗನೇ ದಾಟಿದರೆ ಒಳ್ಳೆಯದು. ನಾನು ವಿಮರ್ಶೆ (ತರದ ಬರಹಗಳನ್ನು) ಬರೆಯುತ್ತ ಕಳೆದುಕೊಂಡಿದ್ದೇನು, ಗಳಿಸಿದ್ದೇನು ಎಂದು ಸ್ವವಿಮರ್ಶೆ ಮಾಡಿಕೊಂಡರೆ, ವಿಮರ್ಶಕರಾಗಿ ಎಂದು ಯಾರನ್ನೂ ಉತ್ತೇಜಿಸುವ ಪ್ರಶ್ನೆಯೇ ಬರುವುದಿಲ್ಲ. ವಿಮರ್ಶೆಯತ್ತ ಹೊರಳಬೇಡಿ ಎಂದು ನಾನು ಒಬ್ಬಿಬ್ಬರಿಗೆ ಉಪದೇಶ ಕೊಟ್ಟಿದ್ದೂ ಇದೆ, ಅವರು ಅದನ್ನು ತಪ್ಪಾಗಿ ತಿಳಿದುಕೊಂಡರೂ.

ನುಡಿ ಪುಸ್ತಕದವರಿಗೆ ನಾನು ಹೊಸ ವಿಮರ್ಶಕರನ್ನು ಉತ್ತೇಜಿಸುವ ಪ್ರಕ್ರಿಯೆಯ ಬಗ್ಗೆ ನನ್ನ ಅಪಸ್ವರವೇನಿದೆ ಎನ್ನುವುದನ್ನು ತಿಳಿಸಲು ಒಂದು ಕಾಮೆಂಟ್ ಹಾಕಿದೆ. ದಿಲೀಪ್ ಕುಮಾರ್ ಅವರು ಸತ್ಯಕಾಮರ ಒಂದು ಮಾತನ್ನು ಉಲ್ಲೇಖಿಸಿ ಇದು ನರೇಂದ್ರ ಪೈಯವರ ಮಾತಿನ ಸಾರಸ್ವರೂಪ ಎಂದಾಗ ವಿವರಣೆ ಕೊಡಬೇಕಾಯಿತು. ಸತ್ಯಕಾಮರ ಬಗ್ಗೆ ಅರಿಯದವರಿಲ್ಲ. ಅವರು ಕೂಡಾ ವಿಮರ್ಶಕರು ಶುಷ್ಕಕಾಷ್ಠ, ಸ್ನಾನ ಮಾಡದೆ ಬರುತ್ತಾರೆ, ನಿಷ್ಣಾತರಲ್ಲದ ವಿಮರ್ಶಕರು ಹಾನಿ ಮಾಡುವುದೇ ಹೆಚ್ಚು, ಅವರದ್ದೊಂದು ಹಾವಳಿ, ಸಾಹಿತ್ಯದ ಬೆನ್ನಿನಿಂದ ಹುಟ್ಟುತ್ತಾರೆ ಎಂಬ ಮಾತುಗಳನ್ನೆಲ್ಲ ಆಡುತ್ತಾರೆ. ವಿಮರ್ಶಕರು ಎಂದಿರುವ ಕಡೆ ದಲಿತರು ಎಂದು ಓದಿ ನೋಡಿ. ಅಥವಾ ಮುಸ್ಲಿಮರು ಎಂದು ಹಾಕಿ ಓದಿ. ಅಫೆನ್ಸಿವ್ ಅನಿಸುತ್ತೆ ಅಲ್ಲವೆ? ಹಾಗೆಯೇ ಇದು. ಆದರೆ ಬಿಟ್ಟಿ ಸಿಕ್ಕುವ ವಿಮರ್ಶಕರನ್ನು ಯಾರು ಬೇಕಾದರೂ ಏನು ಬೇಕಾದರೂ ಜರೆಯಬಹುದು! ಸಾಹಿತಿಗಳೆಲ್ಲ ಸ್ನಾನ ಮಾಡಿಯೇ ಬರುತ್ತಾರೆ, ಹೊಟ್ಟೆಯಿಂದಲೇ ಹುಟ್ಟುತ್ತಾರೆ ಮತ್ತು ಅವರು ತಮ್ಮ ಕೆಲಸದಲ್ಲಿ ನಿಷ್ಣಾತರೇ ಇರುತ್ತಾರೆ! ಹಾಗಿದ್ದೂ ನಗಣ್ಯರಾದ ವಿಮರ್ಶಕರನ್ನು ಜರೆಯುತ್ತಲೇ ಇರುತ್ತಾರೆ. ಅದೊಂದು ತರದ ವ್ಯಸನ. ವಿಮರ್ಶೆಯ ವ್ಯಸನ. ತಮಗೆ ಬರಬೇಕಿದ್ದ ವಿಮರ್ಶೆ ಬರಲಿಲ್ಲ ಎಂಬ ಕೊರಗು.

ಒಟ್ಟಾರೆಯಾಗಿ ವಿಮರ್ಶಕರ ಮೇಲೆ ಸಕಾರಣ ಮತ್ತು ವಿನಾಕಾರಣ ಆಗುತ್ತಿರುವ ದಾಳಿಯನ್ನೆಲ್ಲ ಗಮನಿಸಿದಾಗ, ವಿಮರ್ಶಾ ಕ್ಷೇತ್ರಕ್ಕೆ ಅರ್ಹರಾದ ಆಳವಾದ ಅಧ್ಯಯನ, ಆರೋಗ್ಯಕರ ಮನೋಧರ್ಮ ಮತ್ತು ರಸಪ್ರಜ್ಞೆ ಇರುವ ವಿನಯವಂತ ವಿಮರ್ಶಕರನ್ನು ತರುವುದೆಲ್ಲಿಂದ ಎಂಬ ಪ್ರಶ್ನೆಯನ್ನು ಸ್ವಲ್ಪ ಬದಿಗಿಟ್ಟು ಯೋಚಿಸಿದರೆ, ಸುಮ್ಮನೇ ತಾನು ಓದಿದ್ದರ ಬಗ್ಗೆ ಎರಡು ಮಾತು ಬರೆಯಬೇಕು ಅಂದುಕೊಂಡವರಿಗೆ ಏನನಿಸಬೇಕು?

ಆಮೇಲೆ ವಿಮರ್ಶಕರ ಅಗತ್ಯ ನಿಜಕ್ಕೂ ಇದೆಯೆ? ವಿಮರ್ಶಕರು/ವಿಮರ್ಶೆ ಬೇಕೆ ಎನ್ನುವ ಪ್ರಶ್ನೆಯಿದೆ. ವಿಮರ್ಶಕರನ್ನು ಹಿಗ್ಗಾಮುಗ್ಗಾ ನಿಂದಿಸುವುದನ್ನು ಕಂಡಾಗೆಲ್ಲ ಅಷ್ಟಕ್ಕೂ ಈ ವಿಮರ್ಶಕರ ಅಥವಾ ವಿಮರ್ಶೆಯ ಅಗತ್ಯವೇನಿದೆ, ಯಾಕೆ ನಮ್ಮ ಕೃತಿಯ ಬಗ್ಗೆ ಇನ್ನೊಬ್ಬರು ಆಡುವ ನಾಲ್ಕು ಮಾತಿಗೆ ಅಂಥ ಮಹತ್ವ? ಇನ್ನೊಬ್ಬರಿಂದಲೇ ನಮ್ಮನ್ನು ನಾವು ಕಂಡುಕೊಳ್ಳುವ ಒಂದು ಬಯಕೆಯ ಹಿಂದಿರುವ ಮನಸ್ಥಿತಿ ಯಾವುದು ಎಂಬ ಪ್ರಶ್ನೆಗಳೆಲ್ಲ ಏಳುತ್ತವೆ. ವಿಮರ್ಶೆಯ ನಿಜವಾದ ಫಲಾನುಭವಿಗಳು ಯಾರು ಎನ್ನುವುದು ನಿಜಕ್ಕೂ ಕುತೂಹಲಕರ ವಿಷಯ, ಈ ಬಗ್ಗೆ ಮುಂದೆ ಬರೆಯುತ್ತೇನೆ.

ಒಟ್ಟಾರೆಯಾಗಿ ನಾನು ಗ್ರಹಿಸಿದ ಕೆಲವು ಸಂಗತಿಗಳು ಹೀಗಿವೆ:

1. ನನ್ನ ಪುಸ್ತಕದ ಬಗ್ಗೆ ಒಬ್ಬನೂ ಒಂದು ಮಾತು ಆಡಲಿಲ್ಲ ಎಂದು ದೂರುವ ಜನಪ್ರಿಯ/ಖ್ಯಾತ ಬರಹಗಾರರು ನನಗೆ ಗೊತ್ತು. ಏನು ಇವರ ಮಾತಿನ ಅರ್ಥ ಎಂದು ಯೋಚಿಸಿದರೆ, ಹೆಸರಾಂತ ವಿಮರ್ಶಕರು ಬರೆದರೆ ಮಾತ್ರ ಬೆಲೆ ಎನ್ನುವ ಸಂಗತಿ ತಿಳಿಯುತ್ತದೆ. ಒಬ್ಬ ಸಾಮಾನ್ಯ ಓದುಗ ಎಷ್ಟು ಚೆನ್ನಾಗಿ ಬರೆದರೂ ಅದು ಫೈಲಿಗೆ ಬರುವುದಿಲ್ಲ. ತನ್ನ ಕೃತಿಗೆ ವಿಮರ್ಶೆ ಬಂದಿಲ್ಲ ಎಂದು ಅಲವತ್ತುಕೊಳ್ಳುವ ಲೇಖಕ ಹೇಳುತ್ತಿರುವುದು ತನ್ನ ಕೃತಿಗೆ ಮೊದಲ ಸಾಲಿನ ವಿಮರ್ಶಕರು ವಿಮರ್ಶೆ ಬರೆದಿಲ್ಲ ಎಂದು. ನಮ್ಮ ನಿಮ್ಮಂಥವರು ಬರೆದಿಲ್ಲ ಅಂತ ಅಲ್ಲ.  ಈ ಮೊದಲ ಸಾಲಿನ ವಿಮರ್ಶಕರೆಂದರೆ: ಸಿ ಎನ್ ರಾಮಚಂದ್ರ ರಾವ್, ಎಚ್ ಎಸ್ ರಾಘವೇಂದ್ರ ರಾವ್, ಎಸ್ ಆರ್ ವಿಜಯಶಂಕರ, ಕೆ ವಿ ನಾರಾಯಣ, ರಾಜೇಂದ್ರ ಚೆನ್ನಿ, ಎಂ ಎಸ್ ಆಶಾದೇವಿ, ಓ ಎಲ್ ನಾಗಭೂಷಣಸ್ವಾಮಿ, ಟಿ ಪಿ ಅಶೋಕ, ರಹಮತ್ ತರೀಕೆರೆ, ವಿನಯಾ ಒಕ್ಕುಂದ ಮುಂತಾದವರು. ಕಣ್ಮರೆಯಾಗಿರುವ ಜಿ ಎಸ್ ಅಮೂರ ಮತ್ತು ಗಿರಡ್ಡಿಯವರಲ್ಲದೆ ಈಗ ಬರೆಯುತ್ತಿಲ್ಲ ಎಂಬ ಕಾರಣಕ್ಕೆ ಜಿ ಎಚ್ ನಾಯಕ ಅವರನ್ನು ಹೆಸರಿಸಿಲ್ಲ. ಈ ಜಗಮಗಿಸುವ ಜಗತ್ತಿಗೆ ಇನ್ನೂ ಕೆಲವು ಉತ್ತಮ ವಿಮರ್ಶಕರು ಯೋಗ್ಯತೆಯಿದ್ದೂ ಕಣ್ಣಿಗೆ ಕಾಣುವುದಿಲ್ಲ. ಅವರನ್ನೂ ಹೆಸರಿಸಿಲ್ಲ.

2. ವಿಮರ್ಶಕನನ್ನು ಮಾತ್ರ ಅವನು ವಿಮರ್ಶಕ ಅನಿಸಿಕೊಂಡ ತಪ್ಪಿಗೆ "ಯಾಕಯ್ಯ ನನ್ನದನ್ನು ಓದಿಲ್ಲ ನೀನು" ಎಂದು ದಬಾಯಿಸಲು ಸಾಧ್ಯ. ಅದರಲ್ಲೂ ಅವನು ಪುಗಸಟ್ಟೆ ಪ್ರತಿ ಪಡೆದುಕೊಂಡಿದ್ದರೆ ಮುಗಿದೇ ಹೋಯಿತು, ಬಾಯಿಗೆ ಬಂದಂತೆ ಬಯ್ಯುವುದಕ್ಕೂ ಮುಕ್ತ ಅವಕಾಶ. ನಡುವೆ ಅವನು ಬೇರೆ ಯಾವುದೇ ಕೃತಿಯ ಬಗ್ಗೆ ಬರೆದರೂ ತಕ್ಷಣ "ನನ್ನ ಪುಸ್ತಕ ಏನು ಮಾಡಿದಿ, ಅದನ್ನು ಯಾವಾಗ ಓದುತ್ತಿ" ಎಂದು ಕೇಳಬಹುದು. ಅದೇ ನಿಮ್ಮ ಗೆಳೆಯ  ತಾನು ಪಡೆದುಕೊಂಡ ಪುಕ್ಕಟೆ ಪ್ರತಿಯನ್ನು ಮರುದಿನವೇ ರದ್ದಿಗೆ ಎಸೆದರೂ ಅದು ಅಷ್ಟು ಮುಖ್ಯವಾಗುವುದಿಲ್ಲ.

3. ವಿಮರ್ಶಕನಾದವನು ನಮ್ಮ ಕೃತಿಯ ಬಗ್ಗೆ ಬರೆಯದಿದ್ದರೆ ಅವನನ್ನು ಜಾತಿವಾದಿ, ಗುಂಪುಗಾರಿಕೆ ಮಾಡುವವನು, ಸ್ವಜನಪಕ್ಷಪಾತಿ, ಹೆಸರಾಂತ ಲೇಖಕರ ಬಗ್ಗೆ ಮಾತ್ರ ಬರೆಯುತ್ತಾನೆ, ಹೆಣ್ಣು ಮಕ್ಕಳಿಗೆ ಮುನ್ನುಡಿ ಬರೆಯುವವನು, ಪ್ರಶಸ್ತಿ ಕೊಡಿಸುವವನು ಇತ್ಯಾದಿ ಇತ್ಯಾದಿ ಜರೆಯುವುದಕ್ಕೆ ಕೂಡ ಮುಕ್ತ ಅವಕಾಶ. ಜೀವಮಾನದಲ್ಲಿ ಒಂದೇ ಒಂದು ಪುಸ್ತಕ ಬರೆಯದವನು ಕೂಡಾ ತನ್ನದೊಂದು ಕಲ್ಲಿರಲಿ ಎಂದು ತಾನೂ ಕಲ್ಲು ಎಸೆಯಬಹುದು. ಆದರೆ ನಿಮ್ಮಿಂದ ಪುಸ್ತಕ ಪಡೆದೂ ಅದನ್ನು ಓದದ/ಅದರ ಬಗ್ಗೆ ಸೊಲ್ಲೆತ್ತದ ಇತರರ ಬಗ್ಗೆ ಇಂಥ ದೂರುಗಳೆಲ್ಲ ಇರುವುದಿಲ್ಲ.

4. ತನ್ನ ಕನಿಷ್ಠ ಒಂದಾದರೂ ಕೃತಿಯ ಬಗ್ಗೆ ಬರೆದ ವಿಮರ್ಶಕ  ಎಲ್ಲಾ ಪಾಪಕೃತ್ಯಗಳಿಂದ ಮುಕ್ತನಾಗಿಬಿಡುತ್ತಾನೆ. ಅವರೆಲ್ಲ ಒಳ್ಳೆಯ ವಿಮರ್ಶಕರು, ಸಹೃದಯರು, ಅದ್ಭುತ - ಪ್ರಕಾಂಡ - ಗಾಢ - ಓದುಗರು ಮತ್ತು ಮಹಾ ಜ್ಞಾನಿಗಳು ಕೂಡ. ಇಷ್ಟೆಲ್ಲ ಹೊಗಳಿಸಿಕೊಂಡ ಮೇಲೂ ಅವನು ತಮ್ಮ ಎರಡನೆಯ ಮತ್ತು ಮುಂದಿನ ಕೃತಿಗಳ ಬಗ್ಗೆ ಬರೆಯದಿದ್ದರೆ ಅವನೆಂಥಾ ವಿಮರ್ಶಕ!

5. ವಿಮರ್ಶಕನೊಬ್ಬ ನೀವು ಬರೆದಿದ್ದನ್ನೆಲ್ಲ ಓದಬೇಕು. ಆದರೆ ನೀವು ಅವನು ಬರೆದಿದ್ದನ್ನೆಲ್ಲ ಓದಬೇಕೆಂಬ ನಿಯಮವಿಲ್ಲ. 2020ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನದ ಮುನ್ನುಡಿಯನ್ನು ತುಂಬ ಜನ ಮೆಚ್ಚಿಕೊಂಡು ಬರೆದರು. ಆದರೆ ಅದು 2015ರಿಂದ ನನ್ನ ಬ್ಲಾಗಿನಲ್ಲಿ ಕೊಳೆಯುತ್ತ ಬಿದ್ದಿದ್ದ ಹಳೆಯ ಬರಹ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೆ ಅವರು ನನ್ನ ಬ್ಲಾಗಿನ ರೆಗ್ಯುಲರ್ ಓದುಗರು ಎಂದು ಹೇಳಿಕೊಂಡಿದ್ದರು! ನಾನು ಬರೆದ ಏನನ್ನೂ ಓದದ ಸಾಹಿತಿಯೊಬ್ಬ ನನ್ನಿಂದ ತನ್ನ ಕೃತಿಗೆ ವಿಮರ್ಶೆಯನ್ನು ಹಕ್ಕಿನಿಂದ ಬಯಸುವುದು ವಿಮರ್ಶಕರು ತೆಪ್ಪಗೆ ಒಪ್ಪಿಕೊಳ್ಳಬೇಕಾದ್ದು ಕ್ರಮ.

6. ಇನ್ನು ಕೆಲವು ಜನರಲೈಸ್ಡ್ ಕಾಮೆಂಟುಗಳಿಗೆ ಸದಾ ವಿಮರ್ಶಕರು ಬಲಿಯಾಗುತ್ತಿರಬೇಕು. ವಿಮರ್ಶೆ ವಸ್ತುನಿಷ್ಠವಾಗಿಲ್ಲ, ವಿಮರ್ಶೆ ಹಾದಿತಪ್ಪಿದೆ, ಆಹಾ ಓಹೋ ವಿಮರ್ಶೆ, ತುತ್ತೂರಿ ವಿಮರ್ಶೆ, ಕೊಚ್ಚಿ ಹಾಕುವ ವಿಮರ್ಶೆ, ಹಾಗೆ ಬರೆಯಬಾರದಿತ್ತು, ದ್ವೇಷ ಸಾಧಿಸುವ ವಿಮರ್ಶೆ ಇತ್ಯಾದಿ ಇತ್ಯಾದಿ. ನಿರ್ದಿಷ್ಟವಾಗಿ ಇಂಥವರೇ ಹೀಗೆ ಬರೆದರು ಎಂದು ಉಲ್ಲೇಖಿಸದೆ ಈ ಚಪ್ಪಲಿ ಎಸೆತ ಸದಾ ನಡೆಯುತ್ತಿರುತ್ತದೆ. ಇವರ ಉರಿ ವಿಮರ್ಶೆಯ ಕುರಿತಾದ್ದಲ್ಲ. ಅದನ್ನು ಬರೆದವನ ಅಥವಾ ಕೃತಿಕಾರನ ಕುರಿತು ಇರುವ ವಿಷವನ್ನು ಇವರು ಹೊರಹಾಕುವ ವಿಧಾನ ಇದು ಅಷ್ಟೆ. ಇವರ ಒಟ್ಟಾರೆ ಧ್ವನಿ ನಮಗೆ ಬೇಕಾದಂತೆ ಬರೆಯುತ್ತಿಲ್ಲ ಎನ್ನುವುದಷ್ಟೇ. ಇದಕ್ಕೊಂದು ಒಳ್ಳೆಯ ಉದಾಹರಣೆ ಕೊಡುತ್ತೇನೆ. ವಿಜಯನಗರ ಸಾಮ್ರಾಜ್ಯದ ಹಿನ್ನೆಲೆಯುಳ್ಳ ಒಂದು ಕಾದಂಬರಿ ಬಂತು. ಅದಕ್ಕೆ ಹಲವರು ವಿಮರ್ಶೆ ಬರೆದರು. ಅವೆಲ್ಲವೂ ಆಹಾ ಓಹೋ ವಿಮರ್ಶೆ ಎಂದು ಜರಿದು ಒಬ್ಬರು ತೀರ್ಪುಕೊಟ್ಟು, ಅವುಗಳನ್ನೆಲ್ಲ ಮೀರಿಸುವ, ವಸ್ತುನಿಷ್ಠವಾದ ಏಕೈಕ ವಿಮರ್ಶೆ ಎಂದು ಹೊಸ ವಿಮರ್ಶೆ ಒಂದನ್ನು ತಲೆಯ ಮೇಲೆ ಹೊತ್ತು ಮೆರೆಸಿದರು. ಆ ವಿಮರ್ಶೆಯಲ್ಲಿದ್ದ ಬಹುಮುಖ್ಯ ಅಂಶವೇನೆಂದರೆ, ಕಾದಂಬರಿ ಹಿಂದುತ್ವವನ್ನು ಪೊರೆಯುತ್ತಿದೆ ಎನ್ನುವುದು. ಕನಿಷ್ಠ ಅದಾದರೂ ನಿಜವಾಗಿದ್ದರೆ, ಹಿಂದೂ ಧರ್ಮವನ್ನು ಮೇಲೆತ್ತುವುದಕ್ಕೆಂದೇ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯ ಕಾಲದ ಸಮರ್ಥ ಚಿತ್ರಣ ಕಾದಂಬರಿಯಲ್ಲಿ ಇದ್ದಿರಬೇಕು ಎನ್ನಬಹುದಿತ್ತು. ಆದರೆ ಕಾದಂಬರಿಯಲ್ಲಿ ಅಂಥದ್ದೇನೂ ಇರಲಿಲ್ಲ. ಆದರೆ ಅದು ಹಿಂದುತ್ವಕ್ಕೆ ಕುಮ್ಮಕ್ಕು ಕೊಡುವ ಕಾದಂಬರಿ ಎಂದು ಬರೆದಿದ್ದು ಹಲವರಿಗೆ ಇಷ್ಟವಾಯಿತು. ವಿಜಯನಗರ ಕಾಲದ ಕಾದಂಬರಿ ಹಿಂದುತ್ವಕ್ಕೆ ಮಹತ್ವ ಕೊಡದೆ ಬೌದ್ಧಧರ್ಮಕ್ಕೆ ಕೊಡಬೇಕಿತ್ತೆ? ಕೊನೆಗೂ ನಾವು ಮೆಚ್ಚುವ ವಿಮರ್ಶೆ ನಮಗೆ ಬೇಕಾದ ವಿಮರ್ಶೆ.

7. ಇತ್ತೀಚೆಗೆ ನನ್ನ ಗೆಳೆಯರೊಬ್ಬರು, ವಿಮರ್ಶಕರು ಬರೆದ ಪಾರಿಭಾಷಿಕ ಶಬ್ದ ಬಳಸಿ, ಯಾರಿಗೂ ಅರ್ಥವಾಗದಂಥ ವಿಮರ್ಶೆ ಬರೆಯುತ್ತಾರೆ ಎಂದು ಹಾಸ್ಯ ಮಾಡಿದರು. ಸರಿಯೇ. ಅಕಾಡಮಿಕ್ ವಿಮರ್ಶೆ ಬಗ್ಗೆ ಎಷ್ಟು ದೂರುಗಳಿವೆಯೋ, ಅಷ್ಟೇ ಮಂದಿ ಒಳಗೊಳಗೇ ಅಂಥವನ್ನು ಬಯಸುತ್ತಿರುತ್ತಾರೆ ಎನ್ನುವುದೂ ಅಷ್ಟೇ ಸತ್ಯ. ಯಾವ ವಿಮರ್ಶೆಯನ್ನು, ವಿಮರ್ಶಕರನ್ನು ಇಷ್ಟೆಲ್ಲ ಹೀಗಳೆದು, ಜರಿದು, ತೆಗಳಿ, ಮೂರು ಕಾಸಿಗೆ ಹರಾಜು ಹಾಕಲಾಗುವುದೋ ಅಂಥದ್ದನ್ನೇ ಮುನ್ನುಡಿಯಾಗಿ ಬಯಸುವ ಮಂದಿ, ಅಂಥವರ ಬಳಿಯೇ ಮುನ್ನುಡಿ ಬರೆಸುವ ಮಂದಿಯ "ಮುನ್ನುಡಿ ಅಪ್ಲಿಕೇಶನ್ನು" ಹೇಗಿರುತ್ತದೆ ಎಂಬ ಸ್ಯಾಂಪಲ್ಲುಗಳನ್ನು ಕಲ್ಪಿಸಿಕೊಳ್ಳಿ. ಅದೂ ಒಳ್ಳೆಯ ಹಾಸ್ಯಬರಹ ಆಗಬಲ್ಲದು. ಇಲ್ಲಿ ಅರ್ಥವಾಗದ ವಿಮರ್ಶೆಯ ಫಲಾನುಭವಿಯಾಗುವ ಸಂಕಷ್ಟ ಈ ಗೆಳೆಯರಿಗೆ ಅದೇಕೆ ಒದಗಿತೊ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ.

8.   ಇನ್ನು ಕೆಲವು ಸಂಭಾವಿತ ಲೇಖಕರು ವಿಮರ್ಶಕರನ್ನು ಸಾರಾಸಗಟಾಗಿ ತಿರಸ್ಕರಿಸಿ, ಕಸದ ಬುಟ್ಟಿಗೆ ಎಸೆದು ಕುಳಿತಿದ್ದಾರೆ - ಅಂತೆ.  ಆದರೆ ಇವರಿಗೂ ಪ್ರಶಸ್ತಿ, ಬಹುಮಾನ, ಸನ್ಮಾನ ಎಲ್ಲ ಬೇಕು. ಮತ್ತು ಅದಕ್ಕೆ ಇವರನ್ನು ಆಯ್ಕೆ ಮಾಡುವವರು ಕೂಡ ಅದೇ ವಿಮರ್ಶಕರು ಎನ್ನುವುದು ಗೊತ್ತಿದ್ದರೂ ಇವರು ಹಂಸಕ್ಷೀರ ನ್ಯಾಯದಂತೆ ವಿಮರ್ಶಕರನ್ನಷ್ಟೇ ತಿರಸ್ಕರಿಸಿ ಪ್ರಶಸ್ತಿಗಳನ್ನೆಲ್ಲ ಉದಾರ ಮನಸ್ಸಿನಿಂದ ಸ್ವೀಕರಿಸುತ್ತಾರೆ!

9. ಸ್ವಲ್ಪ ಕಾಲದ ಹಿಂದೆ ಶ್ರೇಷ್ಠತೆಯ ವ್ಯಸನ ಎಂದು ಒಂದು ಬಗೆಯ ಸಾಹಿತ್ಯವನ್ನು ಜರೆಯಲಾಗುತ್ತಿತ್ತು. ಆದರೆ ಜರೆಯುತ್ತಿರುವ ವ್ಯಕ್ತಿಗೆ ತನ್ನ ಸಾಹಿತ್ಯವನ್ನು ಶ್ರೇಷ್ಠ ಸಾಹಿತ್ಯ ಎಂದು ಪರಿಗಣಿಸಬೇಕು ಎಂಬ ಸುಪ್ತ ಆಸೆಯಿದ್ದುದು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುವಂತಿರುತ್ತಿತ್ತು. ಈಗಲೂ ಹಾಗೆಯೇ. ವಿಮರ್ಶೆಯನ್ನು, ವಿಮರ್ಶಕರನ್ನು ಯಾರು ಆಡಿಕೊಳ್ಳುತ್ತಿದ್ದಾರೋ, ಅವರ ಸುಪ್ತಮನಸ್ಸಿನ ರೋಗದ ಎಳೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿದುಕೊಳ್ಳುವುದು ಕಷ್ಟವಿಲ್ಲ. ನಾವು ಯಾವುದರ ಕುರಿತು ವಿಪರೀತ ಮಾತನಾಡುತ್ತೇವೆ? ನಮಗೆ ಬೇಕಾದ್ದರ ಬಗ್ಗೆಯೆ ಅಥವಾ ನಮಗೆ ಬೇಡವಾದದ್ದರ ಬಗ್ಗೆ? ನಮಗೆ ಬೇಕಾದ್ದು ಸಿಗುತ್ತಿಲ್ಲ ಎಂದಾಗ ಅದನ್ನು ಕೊಡದ ಮಂದಿಯನ್ನು ನಿಂದಿಸುವುದೊಂದೇ ಉಳಿಯುವ ಹಾದಿಯೆ?

10. ಕೆಲವರ ಪ್ರಕಾರ ವಿಮರ್ಶಕನಾದವನು ಎಲ್ಲಾ ಓದಿಕೊಂಡಿರಬೇಕು. ಇದನ್ನು ಸ್ವಲ್ಪ ಪರಿಷ್ಕರಿಸಿ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳುವುದಾದರೆ "ತನ್ನ ಕಾಲದ ಬಹುಮುಖ್ಯ ಕೃತಿಗಳೆಲ್ಲವನ್ನೂ ಗಮನಿಸಿಕೊಂಡಿರಬೇಕು". ಆಗ ಅವನೊಬ್ಬ ನಿಷ್ಣಾತನೂ, ಸ್ನಾನ ಮಾಡಿ ಬಂದವನೂ ಅನಿಸಿಕೊಳ್ಳುತ್ತಾನೆ. ಆದರೆ ಸಾಹಿತಿಗೆ ಅಂತಹ ಸ್ನಾನ ಅಥವಾ ನೈಪುಣ್ಯದ ಅಗತ್ಯವೇ ಇಲ್ಲ, ಭಾಷೆ ಬಂದರೆ ಸಾಕು ಎನ್ನುವ ಮನೋಧರ್ಮವಿದೆ. ಆದರೆ ಎಂಥಾ ಪ್ರಕಾಂಡ ಪಂಡಿತನೇ ಆದರೂ ಅವನ ಆಯುರ್ಮಾನದಲ್ಲಿ ಅವನು ಓದಬಹುದಾದ ಕೃತಿಗಳ ಸಂಖ್ಯೆಗೆ ಒಂದು ಇತಿಮಿತಿಯಿದೆ. ಎಲ್ಲವನ್ನೂ ಗಮನಿಸಿ (ಓದಿ) ಬರೆಯುವುದಾದರೆ ಅವನು ಪ್ರೇತಾತ್ಮನಾದ ಮೇಲೆಯೇ ಪೆನ್ನು ಹಿಡಿಯಬೇಕಾದೀತು. ಹಾಗಿದ್ದೂ ಈ ಮಾತನ್ನು ವಿಮರ್ಶಕರು ಒಪ್ಪುವುದೇ ವಿಹಿತ. ಹಾಗಾಗಿ ನಾನು ನೂರು ಮಂದಿ ಕನ್ನಡ ಲೇಖಕರ ಪಟ್ಟಿಯೊಂದನ್ನು ಫೇಸ್‍ಬುಕ್ಕಿನಲ್ಲಿ ಹಾಕಿದೆ. ತಕ್ಷಣವೇ ಈ ನೂರು ಮಂದಿ ಬರೆದಿದ್ದನ್ನೆಲ್ಲಾ ಓದಿ ಮುಗಿಸಿದವರು ಎದ್ದು ಕುಳಿತರು. ಅವರನ್ನು ಸೇರಿಸಿ, ಇವರನ್ನು ಸೇರಿಸಿ, ಮಹಿಳೆಯರಿಲ್ಲ, ಮುಸಲ್ಮಾನರಿಲ್ಲ, ಕೋಲಾರದವರಿಲ್ಲ, ಬ್ರಾಹ್ಮಣರ ಸಂಖ್ಯೆ ಹೆಚ್ಚಾಯಿತು, ಹೊಸಬರಿಲ್ಲ, ಹಳಬರನ್ನು ಪೂರ್ತಿಯಾಗಿ ಬಿಡಬಾರದು, ನನ್ನ ಬಳಗದ ಇತರ ಸದಸ್ಯರಿಗೂ ಜಾಗಕೊಡಿ ಇತ್ಯಾದಿ ಇತ್ಯಾದಿ. ಸೊ, ನಾನು ಓದಿದ್ದು ತೀರ ಕಡಿಮೆ ಎನ್ನುವುದು ನನಗೇ ಮನವರಿಕೆಯಾಗಿದ್ದಷ್ಟೇ ಅಲ್ಲ, ನನ್ನ ಬಳಿ ವಿಮರ್ಶೆ ಬರೆದುಕೊಡಿ ಎನ್ನುವವರಿಗೂ ಅರ್ಥವಾಯಿತು. ನನ್ನ ಉದ್ದೇಶವಿದ್ದಿದ್ದೂ ಅದೇ. ನಾನೇನೂ (ಕಣ್ಣಿಗೆ) ಪಟ್ಟಿ ಕಟ್ಟಿಕೊಂಡು ಓದುವುದಿಲ್ಲ! ಯಾರೂ ಹಾಗೆ ಓದುವುದಿಲ್ಲ. ಆದರೂ ನಮ್ಮ ಮಂದಿಗೆ ಅದು Rank list ತರ ಕಂಡಿತು. ಬೇಕಿದ್ದ ಫಲಶ್ರುತಿ ಏನೆಂದರೆ, ಎಲ್ಲಾ ಓದಿದವರೇ ವಿಮರ್ಶೆ ಬರೆಯಬೇಕೇ ಹೊರತು ಅಷ್ಟಿಷ್ಟು ಓದಿಕೊಂಡವರು ಬರೆಯುವುದು ತಪ್ಪು ಎಂಬ ಠರಾವು ಅಷ್ಟೆ.

11. ಚುಕ್ಕುಬುಕ್ಕು ಎಂಬ ಹೆಸರಿನ ವೆಬ್‍ಸೈಟ್ ಚಲಾವಣೆಯಲ್ಲಿದ್ದಾಗ ಜೋಗಿಯವರು ಒಮ್ಮೆ ಬರೆದಿದ್ದರು. ವಿಮರ್ಶೆ ಎನ್ನುವುದು ಪಾಶ್ಚಾತ್ಯರಲ್ಲಿ ಈಗಾಗಲೇ ಸತ್ತಿದೆ, ಆದರೆ ನಾವಿನ್ನೂ ಅದರ ಹೆಣ ಇಟ್ಟುಕೊಂಡು ಕೂತಿದ್ದೇವೆ - ಇದು ಅವರ ಮಾತು. ಸರಿಯೇ. ಆದಷ್ಟೂ ಬೇಗ ಈ ಹೆಣ ಇಟ್ಟುಕೊಂಡು ಕೂತವರು ಎದ್ದು ಹೋದರೆ ನಾವೂ ಪಾಶ್ಚಾತ್ಯರ ಸಮಾನ ಆಗುತ್ತೇವೆ, ಆಗಬೇಕು ಎನ್ನುವ ಆಶಯ ಮೆಚ್ಚತಕ್ಕದ್ದೇ. ಆದರೆ ಆಗಲೂ ಈಗಲೂ ವಿಶ್ವದಾದ್ಯಂತ ಬರುತ್ತಿರುವ ಕನಿಷ್ಠ ಒಂದು ಡಜನ್ ಮ್ಯಾಗಝೀನ್‌ಗಳು ಬುಕ್ ರಿವ್ಯೂ ಮಾಡುತ್ತಲೇ ಇವೆಯಲ್ಲ, ಅವುಗಳಲ್ಲಿ ಸಿನಿಮಾ ತಾರೆಯರ ಸಂದರ್ಶನಗಳಿರುತ್ತವೆಯೆ? ಏಶಿಯಾ ರಿವ್ಯೂ ಆಫ್ ಬುಕ್ಸ್, ಲಂಡನ್ ರಿವ್ಯೂ ಆಫ್ ಬುಕ್ಸ್, ಪ್ಯಾರಿಸ್ ರಿವ್ಯೂ, ಗ್ರಾಂಟಾ, ವರ್ಲ್ಡ್ ಲಿಟರೇಚರ್ ಟುಡೇ, ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್, ಕೇನ್ಯಾನ್ ರಿವ್ಯೂ ಆಫ್ ಬುಕ್ಸ್, ಪೋಯೆಟ್ರಿ ರಿವ್ಯೂ, ಚಿಕಾಗೊ ರಿವ್ಯೂ ಆಫ್ ಬುಕ್ಸ್, ಲಿಟರರಿ ರಿವ್ಯೂ ಈಗಲೂ ಅಚ್ಚಾಗುತ್ತಿರುವ ಪುಸ್ತಕಗಳಾದರೆ, ಪ್ರತಿ ವಾರ, ತಿಂಗಳು ನ್ಯೂಸ್ ಲೆಟರ್ ಕಳಿಸುವ ಇನ್ನಷ್ಟು ಸಾಹಿತ್ಯಿಕ ವೆಬ್‌ಸೈಟುಗಳ ಮಾಹಿತಿ ನಾನು ಕೊಡಬಲ್ಲೆ. ಈಗಲೂ ಗುಡ್‍ರೀಡರ್ ತರದ ವೆಬ್‌ಸೈಟು ಪುಸ್ತಕ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿಯೇ ಉಳಿದಿದೆ. 

ಜೋಗಿಯವರ ಅಭಿಪ್ರಾಯವಾಗಲಿ, ವಿಮರ್ಶೆ ಸತ್ತಿರುವ ಅವರ ಜಗತ್ತಾಗಲಿ ಬದಲಾಗಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತೆ 2021ರ ಆಗಸ್ಟ್ 15ರ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ವಿವೇಕ್ ಶಾನಭಾಗ್ ಅವರ ಸಂದರ್ಶನ ಗಮನಿಸಬಹುದು. ಅಲ್ಲಿಯೂ ಜೋಗಿಯವರು ವಿವೇಕ್ ಅವರಿಗೆ ಹಾಕಿರುವ ಪ್ರಶ್ನೆ "ವಿಮರ್ಶೆ ಕಣ್ಮರೆಯಾಗಿರುವ ಜಗತ್ತಿನಲ್ಲಿ ಲೇಖಕ ಅನಾಥ ಎಂದು ಭಾಸವಾಗುತ್ತಿದೆಯಾ" ಎಂಬುದು. ಅವರ ಪ್ರಕಾರ ವಿಮರ್ಶೆ ಜಗತ್ತಿನಿಂದಲೇ ಕಣ್ಮರೆಯಾಗಿದೆ. ಅದೊಂಥರಾ ಅಚ್ಛೇ ದಿನ್, ಬೇಗ ಬರಲಿ.

12. ಮೇ 2021ರ ವರೆಗೂ ನಾನು ನಿರಂತರವಾಗಿ ‘ಮಯೂರ’ ಪತ್ರಿಕೆಗೆ ವಿಮರ್ಶೆ ತರದ ಲೇಖನಗಳನ್ನು ಬರೆಯುತ್ತಿದ್ದೆ.  2020ರಲ್ಲಿ ನಾನು ಒಂದು ಕೃತಿಗೆ ಸಿಗುತ್ತಿರುವ ಅತಿಯಾದ ಪ್ರಚಾರ ಮತ್ತು ಅದರ ಮಿತಿಯ ಬಗೆಗಿನ ಹಿರಿಯರ ಅನುಮಾನಾಸ್ಪದ ಮೌನ ಎರಡರ ಕುರಿತು ಬರೆದಾಗ ಒಬ್ಬ ಫೇಸ್‌ಬುಕ್ ಚಿಂತಕರು ಒಂದು ಆದೇಶ ಹೊರಡಿಸಿದರು. ಅದರ ಒಟ್ಟಾರೆ ಧ್ವನಿ ಏನಿತ್ತೆಂದರೆ, ನನ್ನಂಥ ಮೇಲ್ಜಾತಿಯವರು ನಿರಂತರವಾಗಿ ಒಂದು ಪತ್ರಿಕೆಯಲ್ಲಿ ವಿಮರ್ಶೆ ಬರೆಯುತ್ತ ಇರುವುದು ಇತರರ ಅವಕಾಶ ಕದ್ದಂತೆ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಪ್ರಜ್ಞೆ ಇರುವವರು ಅದಕ್ಕೆ ಅವಕಾಶ ಕೊಡುವುದಿಲ್ಲ, ಅಷ್ಟಾಗಿಯೂ ಹಾಗೆ ಮಾಡುವವರ ಜೊತೆ ತಮಗೆ ಸಂವಾದ ಸಾಧ್ಯವಿಲ್ಲ ಎನ್ನುವುದು. ಯಾವುದೇ ಸಂಕೋಚ, ಹಿಂಜರಿಕೆಯಿಲ್ಲದೆ, ಧ್ವನಿಯೆತ್ತಿ, ಜಾತಿ, ಪ್ರಾದೇಶಿಕತೆಯಂಥ ಮಾನದಂಡವನ್ನು ಆಧರಿಸಿ ಸಾಹಿತ್ಯದಲ್ಲಿ ಮೀಸಲಾತಿ ಕೊಡಬೇಕು ಎಂಬ ಬೇಡಿಕೆ ಸುರುವಾಗಿದ್ದು ದಶಕದ ಹಿಂದೆ. ಇವತ್ತು ಕಾಲ ಬದಲಾಗಿದೆ. ಈಗ ಅವಕಾಶ ಸಿಗದ ಪ್ರತಿಯೊಬ್ಬರೂ ಪಟ್ಟಿಯಲ್ಲಿ ನನ್ನ ಹೆಸರೇಕಿಲ್ಲ ಎಂದು ದಬಾಯಿಸಿ ಕೇಳಲು ಯಾವ ಸಂಕೋಚವನ್ನೂ ತೋರಿಸುತ್ತಿಲ್ಲ.  ಸಾಹಿತಿ ಸಾಕ್ಷಾತ್ ಪುಢಾರಿಯಾಗಿ ಎದ್ದು ನಿಂತು ಬಹುಕಾಲವಾಗಿದೆ. ಈಗ ಅವನು ಯಾವುದೇ ಒಂದು ಪಟ್ಟಿಯಲ್ಲಿ ತನ್ನ ಹೆಸರಿಲ್ಲದಿದ್ದರೆ ಕತ್ತೆಬಾಲ ಎಂದು ತೆಪ್ಪಗಿರುವುದಿಲ್ಲ. ಅಥವಾ ನೀವು ಇಟ್ಟ ಮೊದಲ ತಟ್ಟೆಯನ್ನು ನೋಡಿ ಓಡಿ ಬರುತ್ತಾನೆ, ಯಾಕೆ ಮೊದಲ ತಟ್ಟೆ ಅವರಿಗಿಟ್ಟಿದ್ದು, ಅವನೇನು ಗಣಪತಿಯೆ? 

13. ವಾಸ್ತವವಾಗಿ ಈಗಲೂ ವಿಮರ್ಶೆ ಬೇಕೆ ಬೇಡವೆ ಎಂದು ಕೇಳಿದರೆ ಬರುವ ಉತ್ತರ ಬೇಕಪ್ಪಾ ಬೇಕು ಎಂದೇ! ಯಾರಿಗೆ ಬೇಕು, ಯಾಕೆ ಬೇಕು ಎಂದು ಕೇಳಿ ನೋಡಿ, ಅದು ಹಿಡಿದಿರುವ ಅಧಃಪತನದ ಹಾದಿ ಕಾಣಿಸತೊಡಗುತ್ತದೆ. ನಮ್ಮ ಬರಹಗಾರರಿಗೆ ಪುಂಖಾನುಪುಂಖ ವಿಮರ್ಶೆ ಬೇಕು. ಸಾಧ್ಯವಾದರೆ ಅವರು ತಮ್ಮ ಕೃತಿಯ ಬಗ್ಗೆ ಬಂದಿರುವ ವಿಮರ್ಶೆಯ ಒಂದು ಸಂಪುಟವನ್ನೇ ಅಚ್ಚುಹಾಕುತ್ತಾರೆ. ಅದು ಕೃತಿಗಿಂತ ದಪ್ಪಗಿದ್ದರೆ ಆಶ್ಚರ್ಯವೇನಿಲ್ಲ. ಇದರ ಓದುಗರು ಯಾರು ಎಂದು ಕೇಳಿ. ಇದು ಇರುವುದೇ ಬೇರೆ ಬೇರೆ ಪ್ರಶಸ್ತಿಗಳ ಆಯ್ಕೆ ಸಮಿತಿಗೆ ತಲಾ ನಾಲ್ಕು ಪ್ರತಿ ಕಳಿಸುವುದಕ್ಕೆ, ಅಷ್ಟೆ. ನಿಜ ಹೇಳಬೇಕೆಂದರೆ ಇವತ್ತಿನ ಬರಹಗಾರರಿಗೆ ತಮ್ಮ ಕೃತಿಗಳನ್ನು ಓದುವ ಓದುಗರು ಬೇಕಾಗಿಲ್ಲ. ಅವರು ಬರೆಯುವುದು ಪ್ರಶಸ್ತಿಗೆ. ಅವರ ಪುಸ್ತಕಕ್ಕೆ ನಾಲ್ಕೈದು ಪ್ರಶಸ್ತಿಯ ಗರಿ ತಗುಲಿಸಿಕೊಂಡರೆ ಸಾಕು, ಯಾರು ಓದದಿದ್ದರೂ ನಷ್ಟವೇನಿಲ್ಲ. ಹಾಗಾಗಿ ಅವರೆಲ್ಲರೂ ಸಗಟು ಖರೀದಿಯನ್ನು ಯಾವುದೇ ಗೊಂದಲವಿಲ್ಲದೆ ಬೆಂಬಲಿಸುತ್ತಾರೆ. ಆದರೆ ಪ್ರಶಸ್ತಿ ಬರುವುದು ಹೇಗೆ? ಅದಕ್ಕಾಗಿ ಒಂದಿಷ್ಟು "ತುರ್ತು" ವಿಮರ್ಶೆಗಳ ಅಗತ್ಯವಿದೆ. ಈ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಿದ್ದಾರಲ್ಲ, ಅವರು ಓದುವುದನ್ನು ನಿಲ್ಲಿಸಿ ದಶಕಗಳೇ ಆಗಿರುತ್ತವೆ. ಆದರೂ ಅವರು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರಲು ಬೇರೆ ಬೇರೆ ಕಾರಣಗಳಿಂದಾಗಿ ಅರ್ಹರೇ ಆಗಿರುತ್ತಾರೆ. ಯಾವುದೇ ಪುಸ್ತಕವನ್ನು ಓದದೇ ಅವರು ಒಂದು ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು ಹೇಗೆ? ಅವರ ಕಷ್ಟ ಪರಿಹಾರಕ್ಕೆಂದೇ ಇರುವುದು ವಿಮರ್ಶಕರು. ವಿಮರ್ಶಕರ ಸದ್ಯದ ರೋಲ್ ಅಷ್ಟೇ. ಅದಕ್ಕಾಗಿ ಮಾತ್ರ ನಮಗೆ ವಿಮರ್ಶಕರು ಬೇಕು. ಅವರು ಪುಸ್ತಕ ಓದದೆಯೇ ಬರೆದುಕೊಟ್ಟರೂ ಪರವಾಗಿಲ್ಲ, ನಮಗೆ ಸಂಖ್ಯೆ ಮುಖ್ಯ, ಕ್ವಾಲಿಟಿಯಲ್ಲ.

ಆದರೆ ಇವರ ಮೂತಿಗೆ ಮೈಕ್ ಹಿಡಿಯಿರಿ, ಆಗ ಇವರು ಹೇಳುವುದಾದರೂ ಏನು? "ಒಬ್ಬ ಬರಹಗಾರನಿಗೆ ಸಿಗಬೇಕಾದ್ದೆಲ್ಲವೂ ಅವನು ಅದನ್ನು ಬರೆಯುವಾಗಲೇ ಸಿಗಬೇಕು, ಆಮೇಲೆ ಸಿಗುವುದೇನೂ ಇಲ್ಲ!" ಅಥವಾ, "ಒಮ್ಮೆ ಬರೆದಾದ ಮೇಲೆ ಆ ಕೃತಿ ನಮ್ಮದಲ್ಲ!"

ಯಾವನೇ ಒಬ್ಬ ಲೇಖಕ, ಅದರಲ್ಲೂ ಭಿಕ್ಷುಕರ ಬಗ್ಗೆ, ತಿರಿದು ತಿನ್ನುವವರ ಬಗ್ಗೆ ಬರೆದವನು ಅಂಥ ಕೃತಿಗೆ ಬಂದ ಪ್ರಶಸ್ತಿ ಮೊತ್ತದಲ್ಲಿ ಶೇಕಡಾ ಹತ್ತರಷ್ಟನ್ನಾದರೂ ತನ್ನದೇ ಊರಿನ ಅಥವಾ ತನ್ನದೇ ಬೀದಿಯ ಭಿಕ್ಷುಕರ ಬದುಕು ಬದಲಿಸಲಿಕ್ಕೆ ಬಳಸಿದ ಉದಾಹರಣೆ ಇದೆಯೆ? ಅಂಥವರ ಬಗ್ಗೆ ಕಣ್ಣಲ್ಲಿ ನೀರು ಬರುವಂಥ ಕತೆ/ಕವಿತೆ ಬರೆದು, ಜರಿಶಾಲು, ಬೆಳ್ಳಿತಟ್ಟೆಯಲ್ಲಿ ಚೆಕ್ ಇಟ್ಟುಕೊಂಡು ವರದಿಗಾರರ ಕ್ಯಾಮರಾದೆದುರು ಹಲ್ಲು ಕಿರಿಯುವ ಸಾಹಿತಿಯ ಸೂಕ್ಷ್ಮಸಂವೇದನೆ ಕೆಲಸಕ್ಕೆ ಬರುವುದಿಲ್ಲ ಯಾಕೆ! 

14. ವೈಯಕ್ತಿಕವಾಗಿ ನನಗೆ ಒಂದಷ್ಟು ಕಾಲ ಯಾವುದೇ ಕನ್ನಡ ಪುಸ್ತಕದ ಬಗ್ಗೆ ಯಾರೂ ಬರೆಯದಿರುವುದು, ಮಾತನಾಡದಿರುವುದು ಈ ಕಾಲದ ಅಗತ್ಯ ಅನಿಸುತ್ತದೆ. I repeat, ವೈಯಕ್ತಿಕವಾಗಿ, ಅಷ್ಟೆ. ಬಹುತೇಕ ವಿಮರ್ಶಕರು ಈ ಹಾದಿಯಲ್ಲೇ ಇದ್ದಾರೆ ಎಂದೂ ಅನಿಸುತ್ತದೆ. ನಾನ್ ಅಕಾಡಮಿಕ್ ವಲಯದ ಓದುಗರು, ವಿಮರ್ಶಕರಲ್ಲದವರು ಪುಸ್ತಕಗಳ ಬಗ್ಗೆ ಮಾತನಾಡಲಿ. ವಿಮರ್ಶಕರು ಎಂದು ಗುರುತಿಸಿಕೊಂಡವರು ಮೌನವಹಿಸಲಿ ಎಂದು ಅನಿಸುತ್ತದೆ. ಆಗ, "ನನ್ನ ವಿಮರ್ಶಕರು ಸಾಮಾನ್ಯ ಓದುಗರು" ಎಂದು ಹೇಳಿಕೊಂಡು ಬರುವ ಅನೇಕ "ಮುಗ್ಧ"ರಿಗೆ ತಾವು ವಿಮರ್ಶಕರು, ವಿಮರ್ಶಕರು ಎಂದು ಜರೆಯುತ್ತ ಬಂದಿದ್ದು ಯಾರನ್ನು ಎನ್ನುವುದಾದರೂ ಅರ್ಥವಾಗಬಹುದು. ಕನ್ನಡದಲ್ಲಿ ಇರುವ ಪೂರ್ಣಕಾಲಿಕ ವಿಮರ್ಶಕರಿಗಿಂತ, ಹವ್ಯಾಸಿ ವಿಮರ್ಶೆ ಬರೆಯುವ ಲೇಖಕರ ಸಂಖ್ಯೆ ಹೆಚ್ಚಿದ್ದು, ಹೆಚ್ಚಿನ ಅಧ್ವಾನಗಳನ್ನು ವಿಮರ್ಶೆಯ ಹೆಸರಲ್ಲಿ ಮಾಡುತ್ತ ಬಂದವರು ಈ ಮಂದಿಯೇ ಹೊರತು ವಿಮರ್ಶಕರಲ್ಲವೇ ಅಲ್ಲ. 

15. ಇವತ್ತು ಕೈಸೇರಿದ ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯಲ್ಲಿ ರಾಜೇಂದ್ರ ಬಡಿಗೇರ ಎನ್ನುವ ಸಂಶೋಧಕರು "ಸಾಹಿತ್ಯ ವಿಮರ್ಶಾ ರಾಜಕಾರಣ" ಎಂಬ ವಾಗ್ವಾದ ಸುರುಮಾಡಿದ್ದಾರೆ. ಇಡೀ ಲೇಖನದಲ್ಲಿ "ಸಾಹಿತ್ಯ ವಿಮರ್ಶೆಯಲ್ಲಿ ವ್ಯಕ್ತಿ ರಾಜಕಾರಣ, ಲಿಂಗ ರಾಜಕಾರಣ, ಜಾತಿ ರಾಜಕಾರಣ, ಪ್ರಾದೇಶಿಕ ರಾಜಕಾರಣ, ಪಂಥ ರಾಜಕಾರಣ, ಸಿದ್ಧಾಂತ ರಾಜಕಾರಣ, ಅಕೆಡೆಮಿಕ್ ರಾಜಕಾರಣ, ಮಾರುಕಟ್ಟೆ ರಾಜಕಾರಣ, ಅಧಿಕಾರ, ಪ್ರಶಸ್ತಿ, ಇತ್ಯಾದಿ ರಾಜಕಾರಣ" ದ ಬಗ್ಗೆ ಬರೆಯುವ ಈ ಸಂಶೋಧಕರು ತಮ್ಮ ಮಂಡನೆಯುದ್ದಕ್ಕೂ ತಾವು ಬಳಸುವ ಪದ "ರಾಜಕಾರಣ" ಎಂದರೇನು, ತಾವು ಯಾವ ಅರ್ಥದಲ್ಲಿ ಅದನ್ನು ಬಳಸುತ್ತಿದ್ದೇವೆ ಎಂದು ವಿವರಿಸುವ ಗೋಜಿಗೆ ಹೋಗಿಲ್ಲ. ಹಾಗೆಯೇ ಇವರು ಸಾಹಿತ್ಯ ವಿಮರ್ಶೆಯ ತುರ್ತು ಏನಿದೆ ಎಂಬ ಕುರಿತೇ ಅನುಮಾನಗಳಿರುವ ಈ ದಿನಗಳಲ್ಲಿ ಸಾಹಿತ್ಯ ವಿಮರ್ಶೆಯ ರಾಜಕಾರಣಾ ಮಾತ್ರ ಚರ್ಚಾರ್ಹ ಸಂಗತಿಯಾಗಬೇಕು ಏಕೆ, ಏನು ಅದರ ಸಕಾಲಿಕ ಅಗತ್ಯ ಎಂದೂ ಹೇಳಿಲ್ಲ.   ಬಹುಶಃ ಇದು ಅವರದ್ದೇ "ಬರೆಯುವ ರಾಜಕಾರಣ"ವಿರಬಹುದು!

ಈ ಲೇಖನದಲ್ಲಿ ಈಗಾಗಲೇ ಬಂದಿರುವ ವ್ಯಕ್ತಿ ರಾಜಕಾರಣ, ಲಿಂಗ ರಾಜಕಾರಣ, ಜಾತಿ ರಾಜಕಾರಣ, ಪ್ರಾದೇಶಿಕ ರಾಜಕಾರಣ, ಪಂಥ ರಾಜಕಾರಣ - ಗಳಿಗೆ ಈ ಸಂಶೋಧಕರು ಸುಮಾರು ಮುವ್ವತ್ತಕ್ಕೂ ಹೆಚ್ಚು ಕೊಟೇಶನ್ನುಗಳನ್ನು ಪ್ರಮಾಣವಾಗಿ ಕೊಡುತ್ತಾರೆ. ಇವುಗಳಲ್ಲಿ ಹೆಚ್ಚಿನವು ವಿಮರ್ಶಕರವೇ ಆಗಿರುವುದು ನಗು ಬರಿಸುತ್ತದೆ. ಎಲ್ಲಿಯೂ ಒಬ್ಬನೇ ಒಬ್ಬ ವಿಮರ್ಶಕ ಪಾಪಿಯ ಪಾಪದ ವಿವರವಿಲ್ಲ, ಅವನು ಮಾಡಿದ ರಾಜಕಾರಣ ಏನೆಂಬ ಮಾಹಿತಿಯಿಲ್ಲ. ಎಲ್ಲವೂ ಇಂಥಿಂಥವರು ಇಂಥಿಂಥ ಮಾತನ್ನಾಡಿದ್ದಾರೆ, ಸೊ, ರಾಜಕಾರಣ ಇದೆ ಎಂಬ ಅಂತೆ-ಕಂತೆ. ವಿಮರ್ಶಕರೇ ವಿಮರ್ಶೆಯಲ್ಲಿ ವ್ಯಕ್ತಿ ರಾಜಕಾರಣ, ಲಿಂಗ ರಾಜಕಾರಣ, ಜಾತಿ ರಾಜಕಾರಣ, ಪ್ರಾದೇಶಿಕ ರಾಜಕಾರಣ, ಪಂಥ ರಾಜಕಾರಣ ಇದೆ ಎಂದು ಬೊಂಬಡ ಬಡಿದಿರುವುದು ಯಾರಿಗೆ ಇವರ ಹುಯಿಲು ಎನ್ನುವುದೇ ಅರ್ಥವಾಗುವುದಿಲ್ಲ! ಅದೆಲ್ಲ ಇದ್ದರೆ ಈ ವಿಮರ್ಶಕರು ವಿಮರ್ಶೆ ಮಾಡದೆ ಮುಚ್ಚಿಕೊಂಡಿದ್ದರೆ ಆಯ್ತಲ್ಲ, ಸಮಸ್ಯೆಯೇ ಇರುವುದಿಲ್ಲವಲ್ಲ! ಬೆಂಕಿ ಬಿದ್ದಿದ್ದರೆ ಅದನ್ನು ಆರಿಸಬೇಕು, ಬೊಬ್ಬಿಡುವುದೇಕೆ! ಇದಕ್ಕೆ ಅಕ್ಷರ ಸಂಗಾತ ಸಂಚಿಕೆಯೇ ಒಂದು ರೂಪಕವನ್ನೂ ಒದಗಿಸಿಕೊಟ್ಟಿದೆ.

ಈ ಸಂಚಿಕೆಯ ಹನ್ನೊಂದನೆಯ ಪುಟದಲ್ಲಿ ರಾಜೇಂದ್ರ ಬಡಿಗೇರ ಅವರು ವಿಮರ್ಶಕ ರಾಜೇಂದ್ರ ಚೆನ್ನಿಯವರ ಒಂದು ಮಾತನ್ನು ಕೋಟ್ ಮಾಡುತ್ತಾರೆ: " ಕನ್ನಡದಲ್ಲಿ ಬಂದಿರುವ ವಿಮರ್ಶೆಯು ನೂರಕ್ಕೆ ತೊಂಬತ್ತರಷ್ಟು ಅಪ್ರಾಮಾಣಿಕವಾದ ಗೊಡ್ಡು ವಿಮರ್ಶೆಯಾಗಿರುವುದರಿಂದಾಗಿ, ಅದ್ಭುತ ಕೃತಿಗಳು ಬಂದಿವೆ ಎಂಬ ಭ್ರಮೆಯಲ್ಲಿದ್ದೇವೆ. ಇಂದಿಗೂ ಪ್ರಕಟವಾಗುವ ಎಲ್ಲ ಕೃತಿಗಳು ಚೆನ್ನಾಗಿವೆ ಎಂದು ಬರೆಯುವ, ಹಲವಾರು ದಶಕಗಳಿಂದ ಎಲ್ಲವನ್ನು ವಿನಾಕಾರಣ ಪ್ರೀತಿಯಿಂದ ಆದರಿಸುವ ಗಣ್ಯ ವಿಮರ್ಶಕರ ಅಗ್ರಹಾರವೇ ನಮ್ಮಲ್ಲಿದೆ."

ಮುಂದೆ ಇದೇ ಸಂಚಿಕೆಯ ಇಪ್ಪತ್ತೆರಡನೆಯ ಪುಟದಲ್ಲಿ ವಿಮರ್ಶಕ, ಕವಿ ವಿಕ್ರಮ್ ವಿಸಾಜಿಯವರಿಗೆ ನೀಡಿದ ಸಂದರ್ಶನದಲ್ಲಿ ಇದೇ ರಾಜೇಂದ್ರ ಚೆನ್ನಿಯವರು "ವಿಮರ್ಶೆಯ ಬಗ್ಗೆ ಹಗುರವಾಗಿ ಮಾತನಾಡುವುದು, ಅದನ್ನು ಅವಹೇಳನ ಮಾಡುವುದು ಕನ್ನಡದಲ್ಲಿ ಮೊದಲಿನಿಂದ ಇರುವ ಅನಾಗರಿಕ ಹವ್ಯಾಸವಾಗಿದೆ. ಈ ಹವ್ಯಾಸ ಇರುವವರನ್ನು ಸರ್ವ ದಯಾಮಯನಾದ ದೇವರು ಎಂದಿಗೂ ಕ್ಷಮಿಸದೇ ಇರಲಿ!" ಎನ್ನುತ್ತಾರೆ. 

ರಾಜೇಂದ್ರ ಬಡಿಗೇರ ಅವರು ಮಂಡಿಸುವ ಪ್ರಮೇಯ ಇಂಥವರ ಮಾತುಗಳನ್ನು ಪ್ರಮಾಣ ಎಂದು ತೆಗೆದುಕೊಂಡು, ಅದರ ಮೇಲೆಯೇ ನಿಂತಿರುವಂಥದ್ದು. ವೇದಿಕೆಯ ಮೇಲೆ ಇರುವವರನ್ನು ನೋಡಿಕೊಂಡು ಡಯ್ಲಾಗು ಬದಲಿಸುವ ನಮ್ಮ ಸಾಹಿತಿಗಳು, ವಿಮರ್ಶಕರು ಹಾಡುವ ಹಾಡನ್ನು ನಂಬಿ ಸಂಶೋಧಕರು ಪ್ರಮೇಯ ಮಂಡಿಸಲು ಹೋದರೆ ಇನ್ನೇನಾಗುತ್ತದೆ.   

ಮಾನವಂತ ವಿಮರ್ಶಕರು ಮೌನವಹಿಸುವುದು ಇಂದಿನ ಅಗತ್ಯ. ಇದು ಪುಸ್ತಕ ಪರಿಚಯ, ಬೆನ್ನುಡಿ, ಮುನ್ನುಡಿ ಇತ್ಯಾದಿಗಳಿಗೆ ಕೂಡ ಅನ್ವಯಿಸುತ್ತದೆ. ಆದರೆ ಹೀಗೆಲ್ಲ ಇನ್ನೊಬ್ಬರಿಗೆ ನಾವು ಹೇಳಲು ಸಾಧ್ಯವಿಲ್ಲ, ಸರಿಯೂ ಅಲ್ಲ. ಆದರೆ ನಮ್ಮ ಮಟ್ಟಿಗೆ ನಾವು ಆಚರಿಸಲು ಯಾರದೇ ಅಡ್ಡಿಯಿಲ್ಲ. ಸಾಕಷ್ಟು ಓದಿಕೊಂಡಿರುವ ಒಬ್ಬ ಸೃಜನಶೀಲ ಲೇಖಕನಿಗೆ ತನ್ನ ಬರಹ ಹೇಗಿದೆ ಎಂದು ತಿಳಿಯಲು ಇನ್ನೊಬ್ಬರ ಮಾತಿನ ಅಗತ್ಯವಿರುವುದಿಲ್ಲ ಎಂದಿದ್ದರು ವಿವೇಕ್ ಶಾನಭಾಗ.  ಆ ಮಾತು ಅಕ್ಷರಶಃ ನಿಜ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, April 15, 2022

ಸಂಪಾದಕರ ಪೀಠದಿಂದ...


ಪೊಲಿಶ್ ಭಾಷೆಯ ಸಾಹಿತ್ಯ ಪತ್ರಿಕೆಯ ಒಂದು ಅಂಕಣ, ಮೆಯಿಲ್ ಬಾಕ್ಸ್ ಅದರ ಹೆಸರು. ಅಲ್ಲಿ ಹೊಸ ಬರಹಗಾರರು ತಮ್ಮ ಆರಂಭಿಕ ಕತೆ, ಕವಿತೆಗಳನ್ನು ಪ್ರಕಟಣೆಗೆ ಕಳಿಸಿ, ಸಲಹೆ-ಸೂಚನೆ ಕೇಳಿ, ಮಾರ್ಗದರ್ಶನ ಬಯಸಿ ಬರೆದ ಸಂದರ್ಭದಲ್ಲಿ ಕೇವಲ ಒಂದು ಸಾಲಿನ ವಿಷಾದ ಪತ್ರವನ್ನೋ, ತಿರಸ್ಕೃತ ಎಂಬ ಸಂದೇಶವನ್ನೋ ಕಳಿಸುವ ಬದಲಿಗೆ, ಪತ್ರಿಕೆಯಲ್ಲಿಯೇ ಸೂಕ್ಷ್ಮವಾಗಿ, ಚುಟುಕಾಗಿ ಅವರ ವೈಫಲ್ಯದ ಮೂಲವನ್ನು ಮನದಟ್ಟು ಮಾಡಿಕೊಡಬಲ್ಲ ನಾಲ್ಕು ಸಾಲು ಬರೆಯುವ ಕ್ರಮವನ್ನು ಅದರ ಸಂಪಾದಕದ್ವಯರು ಆರಂಭಿಸುತ್ತಾರೆ. ನೊಬೆಲ್ ಪುರಸ್ಕೃತ ಕವಿ ವಿಸ್ಲಾವ್ ಶಿಂಬೊಶ್ಕಾ (1923-2012) ಅವರಲ್ಲೊಬ್ಬರು. ಸ್ವತಃ ತಾನು ಒಬ್ಬ ಒಳ್ಳೆಯ ಕವಿಯಾಗಿರಲಾರೆ ಎಂಬ ಸಂಕೋಚ ಮತ್ತು ಅನುಮಾನಗಳೊಂದಿಗೇ ಬರೆಯುವ ಶಿಂಬೊಶ್ಕಾ ತಮ್ಮ ಆರಂಭಿಕ ಕವಿತೆಗಳು ಕೆಟ್ಟದಾಗಿದ್ದವು ಎಂದು ಮುಲಾಜಿಲ್ಲದೆ ಹೇಳಿಕೊಳ್ಳುತ್ತಾರೆ. ಹಾಗೆಯೇ ಹೊಸ ಬರಹಗಾರರ ಬಗ್ಗೆ ಅವರದ್ದು ನಿಷ್ಠುರವಾದ ಮತ್ತು ನೇರವಾದ ಮಾತು.

ಕೊಂಚ ಅತಿ ಎನ್ನುವಷ್ಟು ಹರಿತ, ಕಟು ಆಗಲಿಲ್ಲವೆ ನಿಮ್ಮ ಮಾತುಗಳು, ಇನ್ನಷ್ಟೇ ಅಂಬೆಗಾಲಿಟ್ಟು ಬರುತ್ತಿರುವ ಹೊಸ ಪ್ರತಿಭೆಗಳನ್ನದು ಮುರುಟಿಸದೆ ಎನ್ನುವ ಮಾತುಗಳಿಗೆ ಅವರ ಉತ್ತರ ಸ್ಪಷ್ಟವಾಗಿದೆ.

"ನೀವು ಯುವ ಸಾಹಿತ್ಯ ಪ್ರತಿಭೆಯನ್ನು ನಾವು ತುಳಿಯುತ್ತಿದ್ದೇವೆ ಎನ್ನುತ್ತೀರಿ. "ಇನ್ನಷ್ಟೇ ಮೊಳಕೆಯೊಡೆಯುತ್ತಿರುವ ಎಳೆ ಸಸಿಯನ್ನು ಜತನದಿಂದ ಕಾಪಾಡಬೇಕು, ಆರೈಕೆ ಮಾಡಿ ಪೋಷಣೆಯೊದಗಿಸಬೇಕು. ನೀವು ಮಾಡುತ್ತಿರುವ ಹಾಗೆ ಅವರ ದೌರ್ಬಲ್ಯಗಳನ್ನು, ವೈಫಲ್ಯವನ್ನು ಟೀಕಿಸಬಾರದು, ಅದು ಪಕ್ವಗೊಂಡು ಫಲವನ್ನು ನೀಡುವುದಕ್ಕೆ ಸ್ವಲ್ಪ ಕಾಯಬೇಕು" - ಎಂದು ಹೇಳಲಾಗುತ್ತದೆ. ನಾವು ಸಾಹಿತ್ಯಕ್ಷೇತ್ರದಲ್ಲಿನ ಮೊಳಕೆಗಳಿಗೆ ಹಸಿರುವಾಣಿ ಬೆಳೆಸುವ ವಿಧಾನವನ್ನು ಅನುಸರಿಸುವುದಿಲ್ಲ. ಮೊಳಕೆಯೊಡೆಯುವ ಸಸಿ ಸ್ವಾಭಾವಿಕವಾದ ಪರಿಸರದಲ್ಲಿ, ತನ್ನ ಸುತ್ತಲಿನ ನಿಸರ್ಗ ಒದಗಿಸುವ ವಾತಾವರಣಕ್ಕೆ ಆರಂಭಿಕ ಹಂತದಲ್ಲಿಯೇ ಹೊಂದಿಕೊಂಡು ಅದಕ್ಕೆ ತಕ್ಕುದಾದ ಬಗೆಯಲ್ಲಿ ಬೆಳೆಯಬೇಕಾಗುತ್ತದೆ. ಕೆಲವೊಮ್ಮೆ ನಮಗೆ ಕೇವಲ ಒಂದು ಹುಲ್ಲಿನೆಸಳು ಮಾತ್ರ ಕಾಣಿಸುತ್ತಿದ್ದರೆ ಇನ್ಯಾರೋ ಅದೊಂದು ತೇಗದ ಮರವಾಗಲಿದೆ ಎಂದು ಅದಕ್ಕೇ ಮನದಟ್ಟು ಮಾಡಿರುತ್ತಾರೆ. ನೀವೆಷ್ಟೇ ಜತನದಿಂದ ಆರೈಕೆ ಮಾಡಿದರೂ ಅದು ತೇಗದ ಮರವಾಗಲು ಸಾಧ್ಯವಿಲ್ಲ. ನಿಶ್ಚಿತವಾಗಿಯೂ ನಮ್ಮ ಪರಾಮರ್ಶನ ಕೆಲವೊಮ್ಮೆ ತಪ್ಪಾಗುವುದಿದೆ. ಆಗೇನಾಗುತ್ತದೆ? ನಾವೆಂದಿಗೂ ಸಸಿಯನ್ನು ಬೆಳೆಯದಂತೆ ತಡೆಯುತ್ತಿಲ್ಲ, ಅದನ್ನು ಬೇರು ಸಹಿತ ಕಿತ್ತೆಸೆಯುತ್ತಿಲ್ಲ. ಅವು ಗಿಡವಾಗಿ ಬೆಳೆದು ನಿಲ್ಲಲು ಮತ್ತು ನಮ್ಮ ನಿಲುವು ತಪ್ಪಾಗಿತ್ತೆಂದು ಸಾಬೀತು ಪಡಿಸಲು ಸರ್ವತಂತ್ರ ಸ್ವತಂತ್ರವಾಗಿಯೇ ಇರುತ್ತವೆ. ನಮ್ಮದು ತಪ್ಪಾಯಿತೆಂದು ನಾವು ಸಂತೋಷದಿಂದ ಒಪ್ಪಿಕೊಳ್ಳುತ್ತೇವೆ. ನೀವು ನಮ್ಮ ಅಂಕಣವನ್ನು ಸರಿಯಾಗಿ ಗಮನಿಸಿದ್ದರೆ ನಿಮಗೇ ಗೊತ್ತಾಗುತ್ತದೆ, ಮೆಚ್ಚುಗೆಗೆ, ಪ್ರೋತ್ಸಾಹಕ್ಕೆ ಅರ್ಹವಾದದ್ದು ಕಣ್ಣಿಗೆ ಬಿದ್ದಾಗ ನಾವು ಉದಾರವಾಗಿಯೇ ಅದನ್ನು ಕೊಂಡಾಡಿದ್ದೇವೆ.... "

ಹೊಸ ಮತ್ತು ಯುವ ಬರಹಗಾರರಿಗೆ ಬರೆದ ಅಂಥ ಪುಟ್ಟಪುಟ್ಟ ಪ್ರತಿಸ್ಪಂದನಗಳಲ್ಲಿ ಕೆಲವನ್ನು ಆಯ್ದು ಕಲೆಹಾಕಿ ಒಂದು ಪುಸ್ತಕ ತರಲಾಗಿದೆ. ಇಂಗ್ಲೀಷಿಗೆ ಅದನ್ನು ಅನುವಾದಿಸಿದವರು ಕ್ಲೇರಾ ಕಾವನಾಗ್. ಈಕೆ ಸ್ವತಃ ಓರ್ವ ವಿಮರ್ಶಕಿಯಾಗಿ ಹೆಸರಾದವರು ಮಾತ್ರವಲ್ಲ ಆಡಮ್ ಝಗ್ಜಾವಸ್ಕಿ, ಶಿಂಬೊಶ್ಕಾ ಮುಂತಾದವರ ಕವನ ಸಂಕಲನಗಳ ಅನುವಾದಕಿಯಾಗಿಯೂ ಹೆಸರಾದವರು, ಹತ್ತಾರು ಅಂತರ‍್ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು. ಈ ಪುಸ್ತಿಕೆಯ ಹೆಸರು "How to Start Writing (And When to Stop)". 


ಈ ಪುಸ್ತಕವನ್ನು ಗಮ್ಮತ್ತಿಗಾಗಿ ಓದಬಹುದು ಎನ್ನುವ ಲೇಖಕಿಗೆ ಇಲ್ಲಿ ಕಲೆಯ ಕುರಿತ ಗಹನವಾದ ಚರ್ಚೆಯೇನಿಲ್ಲ, ಬದಲಿಗೆ ಕೇವಲ ಹೊಸ ಬರಹಗಾರರ ಮತ್ತು ಲೇಖಕನಾಗಬೇಕೆಂಬ ತುಡಿತದಿಂದ, ಹಿರಿಯ ಬರಹಗಾರರನ್ನು ಓದಿ, ಅನುಕರಿಸುತ್ತ, ಅವರ ಹಾಗೆ ತಾವಾಗಬೇಕೆಂಬ ತಹತಹವೇ ಮೂಲವಾಗಿ ಸಾಹಿತ್ಯದತ್ತ ಆಕರ್ಷಿತರಾದ ಯುವಕರ ಬರವಣಿಗೆಗೆ ಸಂದ ಪ್ರತಿಸ್ಪಂದನವಷ್ಟೇ ಇದೆ ಎನ್ನುವುದರ ಅರಿವಿದೆ. ಹಾಗಾಗಿ ಇಲ್ಲಿ ಹಿರಿಯ ಲೇಖಕರ ಕಳಪೆ ಕೃತಿಗಳ ತಲಸ್ಪರ್ಶಿ ವಿಮರ್ಶೆಯೋ, ಅನಗತ್ಯವಾಗಿ ಪ್ರಚಾರಕ್ಕೆ ಬಂದು ಜನಪ್ರಿಯಗೊಂಡ ಕೃತಿಗಳ ಮೌಲ್ಯಮಾಪನವೋ ಇಲ್ಲ. ಸಾಹಿತ್ಯ ಕ್ಷೇತ್ರದ ರಾಜಕಾರಣದ ಕುರಿತ ಚರ್ಚೆಯೂ ಇಲ್ಲ. ಇವೆಲ್ಲ ನಾಲ್ಕೈದು ಸಾಲಿನ ಬರಹಗಳಾಗಿದ್ದು ಮುದ ನೀಡುವ ಬರವಣಿಗೆಯನ್ನಾಗಿಯೂ ಓದಬಹುದು (ಬೇರೆಯವರ ಬರಹದ ಕುರಿತ ಹರಿತ ಟೀಕೆ ಕೊಡುವ ಮನರಂಜನೆಯ ತರ) ಅಥವಾ ನಮ್ಮನ್ನೇ ಕುರಿತು ಬರೆದಿದ್ದು ಅಂದುಕೊಂಡು ಮುನಿಸು ಬಂದರೂ ತಿದ್ದಿಕೊಳ್ಳುವ ಮನಸ್ಸಿಟ್ಟುಕೊಂಡೂ ಓದಬಹುದು. ಬರಹಗಾರನಾಗುವ ಕನಸು ಕಾಣುತ್ತಿರುವವರೂ ಓದಬಹುದು, ನಿಲ್ಲಿಸುವ ಸಮಯ ಸನ್ನಿಹಿತವಾಗಿದೆಯೇ ಎಂಬ ಅನುಮಾನ ಕಾಡುತ್ತಿರುವವರೂ ಓದಬಹುದು.

ಹಾಗಿದ್ದೂ ಒಬ್ಬ ಮನುಷ್ಯ ಸಾಹಿತಿಯಾಗುವುದೇ ಒಂದು ದೊಡ್ಡ ಸಾಧನೆ, ಅದೊಂದು ಅಪೂರ್ವಯೋಗ ಎಂಬೆಲ್ಲ ಭ್ರಮೆಗೆ ಬೀಳುವ ಅಗತ್ಯವಿಲ್ಲ, ಬದಲಿಗೆ ಪ್ರತಿಭೆ ಯಾವ ರಂಗಕ್ಕೆ ಸಲ್ಲುವುದಿದ್ದರೂ ಅದು ಪ್ರತಿಭೆಯೇ; ಸಾಧನೆ ಯಾವ ಕ್ಷೇತ್ರದಲ್ಲಿ ನಡೆದರೂ ಅದು ಸಾಧನೆಯೇ. ಹಾಗಾಗಿ ಸಾಹಿತಿಯಾಗಲಾರದವನದ್ದು ಸೋಲಲ್ಲ, ತಾನು ನಿಜಕ್ಕೂ ಎಲ್ಲಿ ಸಲ್ಲಬೇಕು ಎನ್ನುವುದನ್ನು ಸರಿಯಾದ ಸಮಯಕ್ಕೆ ಗುರುತಿಸಲಾರದೇ ಹೋದಲ್ಲಿ ಮಾತ್ರ ಅದು ಸೋಲಾಗಬಹುದು ಎಂಬ ಪ್ರಜ್ಞಾಪೂರ್ವಕವಾದ ಒಂದು ವಿವೇಚನೆಯೇ ಮಂಚೂಣಿಯಲ್ಲಿದೆ.  

ಈಗ ಇಲ್ಲಿನ ಕೆಲವು ಟಿಪ್ಪಣಿಗಳ ಅನುವಾದ.

ಕವಿಯೊಬ್ಬರ ಕವಿತೆಗಳಿಗೆ ಪ್ರತಿಸ್ಪಂದಿಸಿ...
ಇವು ಹಿತಾನುಭವ ನೀಡುವ ಪುಟ್ಟಪುಟ್ಟ ಕವಿತೆಗಳು, ಪರಿಶುದ್ಧವಾದ ಭಾವಜಗತ್ತಿನ ಸಂತೃಪ್ತ ಹಗಲುಗನಸುಗಳತ್ತ ನಮ್ಮನ್ನು ಒಯ್ಯುವಂಥವು, ನಮ್ಮದೊಂದು ಅರಮನೆಯಿದ್ದಿದ್ದರೆ,  ಅದರ ಸಕಲೆಂಟು ವಿಧಿಗಳೊಂದಿಗೆ ನಿಮ್ಮನ್ನು ಆಸ್ಥಾನಕವಯಿತ್ರಿಯನ್ನಾಗಿ ನೇಮಿಸಬಹುದಿತ್ತು. ನೊಣವೊಂದು ಕೂರಲು ಹೋಗಿ ಉದುರಿಬಿದ್ದ ಗುಲಾಬಿ ಪಕಳೆಯ ಸಂಕಟಕ್ಕೆ ನೀವು ಮನನೊಂದು ಹಾಡುವಿರಿ, ನಮ್ಮ ಕೃತಕೃತ್ಯ ಬೆರಳುಗಳು ಅರಳಿದ ಅದರ ದಿವ್ಯ ಸೌಂದರ್ಯವನ್ನು ನೇವರಿಸಿ ಧನ್ಯಗೊಂಡ ಬಗೆಯನ್ನು ಕೊಂಡಾಡುವಿರಿ. ನಿಶ್ಚಿತ, ಹನ್ನೆರಡು ಮಂದಿ ಚಿಕ್ಕಪ್ಪಂದಿರಿಗೆ ಕ್ಯಾಬೇಜಿನ ದಂಟಿನಲ್ಲಿ ವಿಷವಿಕ್ಕಿದ್ದನ್ನು ಅಜರಾಮರವಾಗಿಸಿದ ಯಾವನೇ ಕವಿಯನ್ನು ಅವನ ಸಾಧಾರಣವೆನಿಸುವ ಅಭಿರುಚಿಗಾಗಿ ಪಾಳುಕೋಟೆಯೊಳಗೆ ದಬ್ಬುವುದೇ ಸರಿಯಾದದ್ದು. ವಿಚಿತ್ರವೆನಿಸುವುದೆಂದರೆ, ಗುಲಾಬಿಯ ಕುರಿತ ಕವಿತೆಯನ್ನು ಮಾಸ್ಟರ್‌ಪೀಸ್ ಎನ್ನಬಹುದೇನೊ, ಆದರೆ ಚಿಕ್ಕಪ್ಪಂದಿರ ಕುರಿತಾದ್ದರಲ್ಲಿ ಕೊರತೆಯೆನಿಸುವುದಂಥದ್ದೇನೋ ಇದೆ. ಹೆಗ್ಗಣಗಳು ಬದಲಾಗಬಹುದು ಮತ್ತು ಅವಕ್ಕೆ ನೈತಿಕತೆಯ ಹಂಗಿಲ್ಲ ಎನ್ನುವುದು ಸತ್ಯ. ಅವೂ ಕೆಲವೊಮ್ಮೆ ಕೇಕಿನ ಮೇಲ್ಪದರವನ್ನಷ್ಟೇ ಇಷ್ಟಪಡುತ್ತವೆ. ಕವಿಯೊಬ್ಬ ತನ್ನ ವಯಸ್ಸಿಗೆ ತಕ್ಕಂತೆ ಭಾಷೆ ಬಳಸುವ ಹಾಗೆ. ನಿಮ್ಮ ಕವಿತೆಗಳು ಹಳೆಯ ತಲೆಮಾರಿಗೆ ಸಲ್ಲುವಂಥವು, ಅವುಗಳ ಆಕೃತಿ ಮತ್ತು ತಿರುಳು ಎರಡೂ ವಿಚಾರಕ್ಕೆ ಸಂಬಂಧಿಸಿದಂತೆ ಇದು ಅನ್ವಯವಾಗುವ ಮಾತು. ಹತ್ತೊಂಬತ್ತರ ಹರಯದ ಒಬ್ಬ ಹೆಣ್ಣಿನಲ್ಲಿ ಇದು ಅಸಹಜ ವಿದ್ಯಮಾನ. ನೀವಿದನ್ನು ನಿಮ್ಮ ಮುತ್ತಜ್ಜಿಯ ಸಂಗ್ರಹದಿಂದ ಕದ್ದಿಲ್ಲ ಎಂದು ಭಾವಿಸಬಹುದೆ?

ಇನ್ನೊಂದು ಸ್ಪಷ್ಟೀಕರಣ:
"ದಯವಿಟ್ಟು ನನಗೆ ಪ್ರಕಟಿಸುವ ಬಗ್ಗೆ ಏನಾದರೊಂದು ಭರವಸೆ ಕೊಡಿ, ಅಥವಾ ಕನಿಷ್ಠ ನನಗೊಂದಿಷ್ಟು ಸಮಾಧಾನದ ಮಾತುಗಳನ್ನಾದರೂ ಕೊಡಿ."  ನಾವು ಇದನ್ನೋದಿದ ನಂತರ ಎರಡನೆಯದನ್ನು ಆಯ್ದುಕೊಳ್ಳಬೇಕಿದೆ. ಸೊ, ದಯವಿಟ್ಟು ಗಮನವಿಟ್ಟು ಕೇಳಿ, ನಾವು ನಿಮಗೆ ಹಿತಾನುಭವ ನೀಡಲು ಹೊರಟಿದ್ದೇವೆ. ಉಜ್ವಲವಾದ ಒಂದು ಭವಿಷ್ಯ ನಿಮಗಾಗಿ ಕಾದಿದೆ, ಒಬ್ಬ ಓದುಗನಿಗಷ್ಟೇ ಇರುವ ಅದೃಷ್ಟವದು. ಅದೂ ಎಂಥ ಓದುಗ!  ಅತ್ಯಂತ ಮೇಲ್ಮಟ್ಟದ ಓದುಗನಾಗುವ, ಅತಿ ನಿರ್ಲಿಪ್ತನಾದೊಬ್ಬ ಓದುಗನಾಗುವ ಅದೃಷ್ಟ, ಅಂಥ ಉಜ್ವಲ ಭವಿಷ್ಯ. ಸಾಹಿತ್ಯದ ನಿಜವಾದ ಪ್ರೇಮಿಯ ಹಾದಿಯಲ್ಲಿ ನೀವಿರುತ್ತೀರಿ. ಸಾಹಿತ್ಯ ಸದಾ ನಿಮ್ಮ ಅತ್ಯಂತ ಭರವಸೆಯ, ಪೂರ್ತಿ ಅವಲಂಬಿಸಬಹುದಾದ ಸಂಗಾತಿಯಾಗಿರಲಿದೆ. ಅಲ್ಲಿ ಗೆಲುವು ಮುಖ್ಯವಾಗದು, ಪ್ರಯತ್ನವಷ್ಟೇ ಸದಾ ನಡೆಯುತ್ತಿರುತ್ತದೆ. ನೀವು ಅದೆಲ್ಲವನ್ನೂ ಕೇವಲ ಓದುವುದರಲ್ಲಿರುವ ಸುಖಕ್ಕಾಗಿಯಷ್ಟೇ ಓದಲಿರುವಿರಿ. ನಿಮಗೆ ಅದರ "ಟ್ರಿಕ್ಕು"ಗಳನ್ನು ಹೆಕ್ಕಿ ತೆಗೆಯುವ ದರ್ದು ಇರುವುದಿಲ್ಲ. ಈ ಭಾಗವನ್ನು ಇನ್ನೂ ಸ್ವಲ್ಪ ಚೆನ್ನಾಗಿ, ಅಥವಾ ಸ್ವಲ್ಪ ಭಿನ್ನವಾಗಿ ಬರೆಯಬಹುದಿತ್ತಲ್ಲವೇ ಎಂಬ ಯೋಚನೆ ಕೂಡ ನಿಮಗೆ ಮುಖ್ಯವಾಗುವುದಿಲ್ಲ.  ಅಸೂಯೆಯಿಲ್ಲ, ತಿರಸ್ಕಾರವಿಲ್ಲ, ಥಟ್ಟನೆ ಕುಟುಕಬೇಕೆನ್ನಿಸಿ ಉಕ್ಕಿ ಬರುವ ಸಿಟ್ಟಿಲ್ಲ, ಸ್ವತಃ ಬರಹಗಾರನಾಗಿರುವ ಒಬ್ಬ ಓದುಗನನ್ನು ಕಾಡುವ ಯಾವುದೇ ಭಾವವಿಕಾರವಿಲ್ಲ. ನಿಮಗೆ ಡಾಂಟೆ ಯಾವತ್ತಿದ್ದರೂ ಕೇವಲ ಡಾಂಟೆಯಷ್ಟೇ ಆಗಿರುತ್ತಾನೆ, ಅವನಿಗೆ ಪ್ರಕಾಶಕರೂ ಆಗಿದ್ದ ಚಿಕ್ಕಮ್ಮಂದಿರು ಇದ್ದರೇ ಇಲ್ಲವೇ ಎನ್ನುವುದು ಮುಖ್ಯವಾಗುವುದಿಲ್ಲ. ಮುಕ್ತಛಂದದಲ್ಲಿ ಬರೆಯುವ ಅಬಕಡನ ಕವಿತೆಗಳೇಕೆ ಸದಾ ಪ್ರಕಟವಾಗುತ್ತಿರುತ್ತವೆ, ಅದೇ ತಾನು ನಿರಂತರವಾಗಿ ಪ್ರಾಸ ಲಯಬದ್ಧವಾಗಿ ಬರೆಯುತ್ತ ಬಂದಿದ್ದರೂ, ಹತ್ತೂ ಬೆರಳಿನಲ್ಲಿ ಶಬ್ದಭಂಡಾರದ ಸ್ವತ್ತನ್ನು ಸೂರೆಗೊಳ್ಳುತ್ತ ಬರೆಯುತ್ತಿದ್ದರೂ ಕನಿಷ್ಠ ಒಂದು ವಿಷಾದಪತ್ರಕ್ಕೂ ಅರ್ಹನಾಗದೆ ಉಳಿದು ಬಿಟ್ಟಿದ್ದೇನೆ ಎಂಬ ಚಿಂತೆ ನಿಮ್ಮನ್ನು ನಿದ್ದೆ ಬಾರದೆ ಹೊರಳಾಡುವಂತೆ ಮಾಡುವ ಸಂಭವವಿಲ್ಲ. ತಿರಸ್ಕಾರದ ಭಯದಿಂದ ಹಿಂಜರಿಯುವ ಹೊತ್ತಲ್ಲಿ ಮುಖ್ಯವಾಗಿ ಬಿಡುವ ಸಂಪಾದಕರ ವಿಚಿತ್ರ ಮುಖಭಾವಗಳು ಈಗ ನಿಮ್ಮಲ್ಲಿ ಯಾವುದೇ ಉದ್ವೇಗವನ್ನು ಉಂಟುಮಾಡುವ ಶಕ್ತಿ ಹೊಂದಿರುವುದಿಲ್ಲ. ಮತ್ತೂ ಒಂದು ಅವಗಣಿಸಲು ಸಾಧ್ಯವೇ ಇಲ್ಲದ ಲಾಭವಿದೆ ಇಲ್ಲಿ; ಮಂದಿ ಯಾವತ್ತೂ ಅಸಮರ್ಥ ಬರಹಗಾರರ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿರುತ್ತಾರೆ, ಅಸಮರ್ಥ ಓದುಗರ ಬಗ್ಗೆಯಲ್ಲ ಎನ್ನುವುದನ್ನು ನೆನಪಿಡಿ. ನಿಶ್ಚಿತವಾಗಿಯೂ ಅಸಮರ್ಥ ಮತ್ತು ಸೋತ ಓದುಗರ ದೊಡ್ಡ ಪಡೆಯೇ ಇದೆ, ಗೊತ್ತಾ? ಹಾಗಿದ್ದೂ ಅವರು ಯಾರದೇ ನಿಂದನೆಗೊಳಗಾಗದೇ ಬಚಾವಾಗುತ್ತಾರೆ. ಆದರೆ ನಾವು ನಿಮ್ಮನ್ನೆಂದೂ ಅವರ ಜೊತೆ ಸೇರಿಸುವುದಿಲ್ಲ ಎಂದು ಹೇಳಬೇಕಾದ್ದೇ ಇಲ್ಲ. ಯಶಸ್ವಿಯಾಗದ ಬರಹಗಾರರನ್ನು ಸದಾ ಕಣ್ಣು ಮಿಟುಕಿಸಿ, ನಿಟ್ಟುಸಿರಿಟ್ಟು ಹಂಗಿಸುವವರು ಇದ್ದೇ ಇರುತ್ತಾರೆ. ಯಾಕೆ, ಸ್ವತಃ ಪ್ರೇಯಸಿಯನ್ನು ಕೂಡಾ ಈ ವಿಷಯದಲ್ಲಿ ನಂಬುವಂತಿಲ್ಲವೆನ್ನಿ. ಸೊ, ಈಗ ನಿಮಗೆ ಹೇಗನಿಸುತ್ತಿದೆ? ದೊರೆಯಂತೆ ಮೆರೆಯುವೆ ಅನಿಸುತ್ತಿಲ್ಲವೆ? ನಮಗೆ ಆ ನಂಬುಗೆಯಿದೆ.

ನೊಂದಮನಕ್ಕೆ ಸತ್ಯದರ್ಶನ:
ನೀವು ನಮ್ಮ ಪ್ರತಿಸ್ಪಂದನವನ್ನು ತೀರ ವೈಯಕ್ತಿಕವಾದ ನಿಂದನೆ ಎಂದು ಭಾವಿಸಿದಂತಿದೆ. ನೀವು ಹಾಗೆ ತಿಳಿದಿದ್ದರೆ ಅದು ತಪ್ಪು, ಹಾಗೆ ತಿಳಿಯದಿರಿ. ಕವಿತೆ ರಚಿಸುವುದಕ್ಕೆ ಅತ್ಯಂತ ಅಗತ್ಯವಾಗಿರುವ ಕಲ್ಪನಾಶಕ್ತಿಯ ಕೊರತೆಯಿದೆ ನಿಮ್ಮಲ್ಲಿ ಎಂದು ಹೇಳುವಾಗ ನಾವು ನಮ್ಮ ತೀರ ಇತಿಮಿತಿಗಳಿರುವ ಸಂಪಾದಕೀಯ ಸ್ಥಾನಮಾನದ ಸವಲತ್ತನ್ನು ನಿಮ್ಮ ವ್ಯಕ್ತಿತ್ವದ, ಹೃದಯದ, ಧನಾತ್ಮಕ ಸಂಗತಿಗಳ ಕುರಿತಾಗಲಿ, ನೀವು ಬದುಕಿನಲ್ಲಿ ಆಯ್ದುಕೊಂಡಿರುವ ವೃತ್ತಿಯಲ್ಲಿ ನಿಮಗಿರುವ ನೈಪುಣ್ಯದ ಕುರಿತಾಗಲಿ, ನಿಮ್ಮ ಅಪಾರ ಬೌದ್ಧಿಕ ಸಾಮರ್ಥ್ಯದ ಕುರಿತಾಗಲಿ, ನಿಮ್ಮ ಸೌಜನ್ಯ, ನಿಮ್ಮ ಧೀರೋದಾತ್ತ ನಿಲುವಿನ ಕುರಿತಾಗಲಿ ಟೀಕಿಸುವುದಕ್ಕೆ ಬಳಸಿಕೊಂಡಿಲ್ಲ. ಕವಿತೆಗಳನ್ನು ಬರೆಯುವುದು, ಕವಿ ಎನಿಸಿಕೊಳ್ಳುವುದು ಅತ್ಯುನ್ನತವಾದ ಗೌರವ ಮತ್ತು ಕೀರ್ತಿಯನ್ನು ತಂದುಕೊಡುತ್ತದೆ ಎಂಬ ರಮ್ಯವಾದ ಪರಿಕಲ್ಪನೆಯೇನಿದೆ, ಅದು ಸ್ವಲ್ಪಮಟ್ಟಿಗೆ ನಿಜವಿರಬಹುದು, ಆದರೆ ನಿಜವಾಗಿಯೂ ನಮಗೆ ಏನನ್ನು ಅತ್ಯಂತ ಸಮರ್ಥವಾಗಿಯೂ ಸುಂದರವಾಗಿಯೂ ಮಾಡುವುದರಲ್ಲಿ ನೈಪುಣ್ಯವಿದೆಯೋ ಅದನ್ನು ಮಾಡುವುದರಲ್ಲಿಯೇ ಅತ್ಯಂತ ಮಹತ್ತಾದ ಗೌರವ, ಯಶಸ್ಸು ಅಡಗಿರುತ್ತದೆ. ನಿಮಗೆ ಶುಭವಾಗಲಿ. 

ಈವಾಗೆ ಕೆಮಿಸ್ಟ್ರಿ ಹೆಚ್ಚು ಸೂಕ್ತವಲ್ಲವೆ?
ಸಾಹಿತ್ಯದಲ್ಲಿ ಮೇಜರ್ ಡಿಗ್ರಿಯೊಂದು ನಿಮ್ಮನ್ನು ಅಧ್ಯಾಪಕ ವೃತ್ತಿಗೆ ತಯಾರು ಮಾಡುವುದೇ ಹೊರತು ಒಳ್ಳೆಯ ಕವಿತೆ ಬರೆಯುವುದು ಹೇಗೆ ಎಂಬುದನ್ನು ಅದು ನಿಮಗೆ ತೋರಿಸಿಕೊಡಲಾರದು. ನೀವು ಎಷ್ಟೇ ನಿಷ್ಠೆಯಿಂದ ಹಾಜರಾದರೂ, ಯಾವುದೇ ಕೋರ್ಸ್ ನಿಮ್ಮಲ್ಲಿ ಪ್ರತಿಭೆಯನ್ನು ಹುಟ್ಟುಹಾಕಲಾರದು. ಹೆಚ್ಚೆಂದರೆ ಅದು ಈಗಾಗಲೇ ಇರುವ ಪ್ರತಿಭೆಗೆ ಸಾಣೆಯಿಡಬಹುದಷ್ಟೇ. ನೀವು ಒಂದು ಮನಮೋಹಕವಾದ ಪುಟ್ಟ ಪದ್ಯವನ್ನು ಬರೆದಿದ್ದೀರಿ, ಈಗಷ್ಟೇ ತನ್ನ ಮೊದಲ ಪ್ರೇಮವನ್ನು ಕಂಡುಕೊಂಡ ಯಾರಲ್ಲಾದರೂ ಸುಲಭವಾಗಿ ಹುಟ್ಟುವ ಕವಿತೆಯದು. ಎಲ್ಲಾ ಪ್ರೇಮಿಗಳೂ ಒಂದಲ್ಲಾ ಒಂದು ಸಂಚಾರೀ ಭಾವದ ಪ್ರತಿಭೆಯನ್ನು ಪ್ರದರ್ಶಿಸ ಬಲ್ಲವರಾಗುತ್ತಾರೆ. ಆದರೆ, ಅಯ್ಯೊ, ಅಂಥ ಪ್ರತಿಭೆಯ ಉಕ್ಕು, ಮುರಿದು ಬಿದ್ದ ಸಂಬಂಧ ಹೃದಯಕ್ಕೆ ಕೊಡುವ ಅಗ್ನಿಪರೀಕ್ಷೆಯ ತಳಮಳವನ್ನು ತಡೆದುಕೊಂಡು ಬಾಳುವುದು ತೀರ ವಿರಳ. ಸೊ, ಈವಾ, ನೀನು ಕೆಮಿಸ್ಟ್ರಿಯ ಕುರಿತು ಯೋಚಿಸಬಹುದಲ್ಲ?

ನಿಮ್ಮಂಥವರು ಬರೀಬೇಕು ಕಣ್ರೀ!
ನಿಶ್ಚಿತವಾಗಿ ನೀವು ನಿಮ್ಮೂರಿನ ಯಾವುದೋ ಸಭೆ ಸಮಾರಂಭದ ಕೊನೆಯಲ್ಲಿ, ಮಹಾ ಮಹಾ ಕೊರೆತದ ಭಾಷಣಗಳು, ಗುಲಾಬು ಮೆತ್ತಿದ ಮುದ್ದು ಮೊಗದ ಮಕ್ಕಳು ಸ್ಕರ್ಟ್ ಹಾರಿಸಿ ಕುಣಿದು ಕುಪ್ಪಳಿಸಿದ ಹಾಡು ಗದ್ದಲಗಳೆಲ್ಲ ಮುಗಿದ ಬಳಿಕದ ಅವಕಾಶದಲ್ಲಿ ಈ ಮನಮೋಹಕ ಪ್ರಾಸಬದ್ಧ ರಚನೆಗಳನ್ನು ವಾಚಿಸಿರುತ್ತೀರಿ.  ಬಹುಶಃ ಮುಂದಿನ ಕಾರ್ಯಕ್ರಮ ಔತಣವಿದ್ದೀತೆಂದು ಏಳ ತೊಡಗಿದ ಸಭಿಕರು ಓಹ್, ಇದೇನೀಗ ಇಲ್ಲಿ ಎಂದು ಅಚ್ಚರಿಯಿಂದ ಅಲ್ಲಲ್ಲೇ ಕುರ್ಚಿಯಲ್ಲಿ ಕುಳಿತು ಕೇಳುತ್ತಾರೆ. ಅಷ್ಟರಲ್ಲಿ ನಮ್ಮದೇ ಪೇಟೆಯ ಬಗ್ಗೆ ಇಲ್ಲೊಂದು ಕವಿತೆ! ಕವಿ ಯಾರನ್ನೂ ಬಿಡದೆ, ಹೆಸರು ಸಹಿತ ಪ್ರತಿಯೊಬ್ಬರನ್ನೂ ಉಲ್ಲೇಖಿಸಿದ್ದಾನೆ, ಗೌರವಪೂರ್ವಕವಾಗಿ, ಸವಿನಯ ಮರ್ಯಾದೆಯೊಂದಿಗೆ. ಜನರ ಮೊಗದ ಮೇಲೆ ಸಂತೃಪ್ತ ನಗೆಯೊಂದು ಆಗಲೇ ಮೂಡಿದೆ. ಬೆನ್ನಿಗೇ ಅದೇನು ಕರತಾಡನ! ರೋಗಗ್ರಸ್ತವಾದೊಂದು ಕ್ಷಣ ಸ್ವಲ್ಪ ಹೊತ್ತಿನ ನಂತರ ಉದ್ಭವಿಸುತ್ತದೆ. ಯಾರೋ ಒಬ್ಬ ಕವಿಗೆ ಸಲಹೆ ಕೊಡುತ್ತಾನೆ, "ನೀನಿದನ್ನೆಲ್ಲ ಪ್ರಕಟಿಸಬೇಕು, ಇವೆಲ್ಲ ಹಾಗೇ ವೇಸ್ಟ್ ಆಗಬಾರದು." ದೇವರೇ, ಈ ಸಲಹೆ ಸರಿಯಿಲ್ಲ. ಅಲ್ಲಿನ ಮೆಚ್ಚುಗೆ, ಹೊಗಳಿಕೆ ಯಾವುದೂ ವ್ಯರ್ಥವಲ್ಲ, ಎಲ್ಲರಿಗೂ ಅದೆಲ್ಲ ಕುಶಿಕೊಟ್ಟಿದ್ದು ನಿಜವೇ. ಆದರೆ, ಇಲ್ಲಿ ಈಗಷ್ಟೇ ಸಂಪಾದಕರ ಕಚೇರಿಯಲ್ಲಿ, ಸಾಹಿತ್ಯಿಕ ತಕ್ಕಡಿಯಲ್ಲಿ ತೂಗಲ್ಪಟ್ಟಾಗ ಅವು ವ್ಯರ್ಥವಾಗುತ್ತಿವೆ. ಇವು ಕವಿತೆಗಳಲ್ಲ ಎಂದು ಹೇಳುತ್ತಿದೆಯದು. ಇದು ಬರೆದಾತನಿಗೆ ಅತೀವವಾದ ವೇದನೆಯನ್ನುಂಟು ಮಾಡುತ್ತಿದೆ. ಇದನ್ನು ತಪ್ಪಿಸಬಹುದಾಗಿತ್ತು.

ಮನವ ತೆರೆದಿಡುವ ಬರಹದ ನಿಜಗಮ್ಯ:
ನಿಮ್ಮ ಇದುವರೆಗಿನ ಬರವಣಿಗೆ ಪೂರ್ತಿಯಾಗಿ ಖಾಸಗಿ ನೆಲೆಯದ್ದು - ಇಲ್ಲಿ ಬರುವ ಮಂದಿ ಮತ್ತು ಸ್ಥಳಗಳೆಲ್ಲ ಒಂದಕ್ಕೊಂದು ಸರಿಯಾಗಿ ಜೋಡಿಸಲ್ಪಡದ ಬಗೆಯಲ್ಲಿ, ಅನ್ಯಮನಸ್ಕ ಮನಸ್ಥಿತಿಯಲ್ಲಿ ಗೀಚಿದಂತೆ ಬಂದಿದ್ದು ಅವು ಓದುಗರ ಗಮನವನ್ನು ಸೆಳೆದಿಡುವಲ್ಲಿ ವಿಫಲವಾಗಿವೆ. ಹಾಗೆಯೇ, ಸಾಂದರ್ಭಿಕವಾಗಿ ಹೇಳಬೇಕಾದ ಮಾತೆಂದರೆ, ನೀವೇಕೆ ಬರೆಯಬೇಕೆನ್ನಿಸುವ ನಿಮ್ಮ ತುಡಿತವನ್ನು ಅದೊಂದು ತುರ್ತಾಗಿ ಗುಣಪಡಿಸಬೇಕಾದ ಒಂದು ಕಾಯಿಲೆಯೋ ಎಂಬಂತೆ ಕಾಣುತ್ತೀರಿ ಮತ್ತು ಅದರ ಬಗ್ಗೆ ತುಂಬ ಮುಜುಗರ, ನಾಚಿಕೆಯಿಂದ ಮಾತನಾಡುತ್ತೀರಿ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ನಿಮ್ಮ ಅನುಭವ ಮತ್ತು ಯೋಚನೆಗಳನ್ನು ಆಗಾಗ ಹೀಗೆ ಬರೆಯುತ್ತ ಬರುವುದರಲ್ಲಿ ಪರೋಕ್ಷವಾಗಿಯೂ ಯಾವುದೇ ಬಗೆಯ ಅಸಂಬದ್ಧತೆಯಾಗಲೀ, ವೈಚಿತ್ರವಾಗಲೀ ಇಲ್ಲ. ಬದಲಿಗೆ ಅದು ಖಾಸಗಿ ನೆಲೆಯ ಸಾಹಿತ್ಯಿಕ ಸಂಸ್ಕಾರವನ್ನು ತೋರಿಸುತ್ತದಷ್ಟೆ. ಅದು ಕೇವಲ ಬರಹಗಾರರಿಗಷ್ಟೇ ಅಲ್ಲ, ಎಲ್ಲ ಸುಶಿಕ್ಷಿತ ಮಂದಿಯಲ್ಲೂ ಅಪೇಕ್ಷಣೀಯವಾಗಿ ಇರಬೇಕಾದ ಒಂದು ಸಂಸ್ಕಾರ. ನಾವು ನೆನಪುಗಳ ಅಥವಾ ಪತ್ರಗಳ ಪ್ರಕಟಿತ ಆವೃತ್ತಿಯನ್ನು ಓದುವಾಗಲೆಲ್ಲ ಅಂಥ ಖಾಸಗಿ ವಿಷಯಗಳ ಹಂಚಿಕೊಳ್ಳುವಿಕೆಯಲ್ಲಿಯೂ ಆಸ್ವಾದಿಸುವುದು ಅದರ ಸಾಹಿತ್ಯಿಕ ಮೌಲ್ಯವನ್ನೇ. ಸಾಮಾನ್ಯವಾಗಿ ಅಂಥ ಬರವಣಿಗೆ ಬರುವುದು ಸ್ವತಃ ಬರಹಗಾರರಲ್ಲದವರಿಂದ, ಮಾತ್ರವಲ್ಲ, ಬರಹಗಾರ ಅನಿಸಿಕೊಳ್ಳುವ ಯಾವುದೇ ಇರಾದೆ ಕೂಡ ಇಲ್ಲದವರಿಂದ..... ಈ ದಿನಗಳಲ್ಲಿ ಒಬ್ಬ ತಾನು ಏನನ್ನಾದರೂ ನಾಲ್ಕಕ್ಷರ ಗೀಚಿದ್ದೇಯಾದರೆ ತಕ್ಷಣವೇ ಅದರ ಸಾಹಿತ್ಯಿಕ ಮೌಲ್ಯವನ್ನು ತೂಗತೊಡಗುತ್ತಾನೆ, ಅದನ್ನು ಪ್ರಕಟಿಸುವ ತಹತಹದಲ್ಲಿ ಬೇಯತೊಡಗುತ್ತಾನೆ, ತಾನು ಅದರಲ್ಲಿ ಸಮಯ ಕಳೆದಿದ್ದು ತಕ್ಕುದಾಯ್ತಲ್ಲವೇ ಎಂದು ಭಾವಿಸತೊಡಗುತ್ತಾನೆ.... ಹೆಚ್ಚೂ ಕಡಿಮೆ ಸುಸಂಬದ್ಧವಾಗಿ ಮೂಡಿಬಂದ ಪ್ರತಿ ವಾಕ್ಯವೂ ತತ್‌ಕ್ಷಣವೇ ಫಲದಾಯಕವೂ ಆಗಬೇಕೆಂದು ನಿರೀಕ್ಷಿಸುವುದಿದೆಯಲ್ಲ, ಅದು ನಾಚಿಕೆಗೇಡು. ಹತ್ತೋ ಇಪ್ಪತ್ತೋ ವರ್ಷಗಳ ಬಳಿಕ ಫಲಪ್ರದವಾದರೇನಾಗಿ ಬಿಡುವುದು? ಅಥವಾ ಈ ಸಂಪನ್ನಗೊಂಡ ಸುಸಂಬದ್ಧ ಬರವಣಿಗೆ ಯಾವತ್ತೂ ಮಂದಿಯ ಕಣ್ಣಿಗೆ ಬಿದ್ದು ನೀಡಬಹುದಾದ ಯಾವುದೇ ಫಲ ನೀಡದೇ ಹೋದಲ್ಲಿ ಆಗುವ ನಷ್ಟವೇನು? ಅದು ಬರೆದವನ ಮನದ ಕಾರ್ಗತ್ತಲನ್ನು ನಿವಾರಿಸುವಲ್ಲಿ ಸಹಾಯಕವಾಗಿರಲಿಲ್ಲವೆ, ಅವನ ಬದುಕನ್ನು ಶ್ರೀಮಂತಗೊಳಿಸಲಿಲ್ಲವೆ? ಅದಕ್ಕೆ ಯಾವ ಮಹತ್ವವೂ ಇಲ್ಲವೆ?

ಯಶಸ್ಸಿಗೆ ಸುಲಭದ ಹಾದಿಯಿದೆಯೆ?:
ಇಲ್ಲ, ನಮ್ಮ ಬಳಿ ಕಾದಂಬರಿ ಬರೆಯುವುದರ ಕುರಿತಾಗಿ ಯಾವುದೇ ಮಾರ್ಗದರ್ಶಕ ಪಠ್ಯಪುಸ್ತಕಗಳಿಲ್ಲ. ಅಮೆರಿಕದಲ್ಲಿ ಅಂಥ ಸಂಗತಿಗಳು ಆಗಾಗ ಕಂಡುಬರುತ್ತವೆ ಎಂಬ ಬಗ್ಗೆ ನಮಗೆ ಸುದ್ದಿಯಿದೆ. ನಾವು ಕೇವಲ ಒಂದೇ ಒಂದು ಸರಳವಾದ ನೆಲೆಯಲ್ಲಿ ಅವುಗಳ ಬೆಲೆಯೇನು ಎಂದು ಕೇಳುವ ಧಾರ್ಷ್ಟ್ಯ ತೋರುತ್ತೇವೆ: ಖಚಿತವಾದ ಸಾಹಿತ್ಯಿಕ ಯಶಸ್ಸನ್ನು ತಂದುಕೊಡಬಲ್ಲಂಥ ಫಾರ್ಮುಲಾ ಹೊಂದಿರುವಂಥ ಯಾವನೇ ಒಬ್ಬ ಲೇಖಕ ಸ್ವತಃ ಅದನ್ನು ಸ್ವಂತಕ್ಕೆ ಬಳಸದೆ ಹೊಟ್ಟೆಪಾಡಿಗಾಗಿ ಗೈಡ್ ಬುಕ್ಕುಗಳನ್ನು ಬರೆಯುವ ಹಾದಿಯನ್ನೇಕೆ ಹಿಡಿಯಬೇಕಾಯಿತು? ಸರಿಯೆ? ಸರಿ.
  
ವಯೋಮಿತಿ ಎಂಬುದೇನಿಲ್ಲ
ಖಂಡಿತವಾಗಿಯೂ ನೀವು ನಲವತ್ತು ವರ್ಷ ಪ್ರಾಯ ಸಂದ ಮೇಲೂ ಇದ್ದಕ್ಕಿದ್ದಂತೆ ಬರವಣಿಗೆಯಲ್ಲಿ ತೊಡಗಿಕೊಳ್ಳಬಹುದು. ನಿರ್ದಿಷ್ಟವಾಗಿ ಅದೇನೇನೂ ತಡವಾದ ಆರಂಭವಲ್ಲ;  ಅಂಥ ಪ್ರಬುದ್ಧ ಆರಂಭಕ್ಕೆ ಅನ್ವಯವಾಗುವ ಇತರೇ ನಿಯಮಗಳನ್ನು ಮರೆಯದಿದ್ದಲ್ಲಿ ಮಾತ್ರ ಎನ್ನಬಹುದು.  ಜೀವಂತಿಕೆಯಿಂದ ನಳನಳಿಸುವ ಕಲ್ಪನಾಶಕ್ತಿ ಮತ್ತು ಪೂರ್ವಗ್ರಹಗಳು, ಇಸಂಗಳಂಥ ಸರಪಳಿಯಿಂದ ಬಂಧಿತವೂ ಬಾಧಿತವೂ ಆಗಿರದ ವಿಶಾಲ ಮನೋಧರ್ಮಗಳಿದ್ದಲ್ಲಿ ತಡವಾದ ಆರಂಭವೂ ಯಶಸ್ವಿಯಾಗುವುದು ನಿಶ್ಚಿತ. ಭಾಷ್ಯಗಳು, ಪ್ರತಿಸ್ಪಂದನಗಳಲ್ಲ, ಪ್ರಾಮಾಣಿಕವಾದ ಛಾಪು ಯಾವತ್ತೂ ಮೇಲ್ಗೈ ಸಾಧಿಸುತ್ತದೆ;  ಬದುಕನ್ನು, ಜಗತ್ತನ್ನು ಆಳವಾಗಿ ಅನುಭವಿಸಿ ಅರ್ಥಮಾಡಿಕೊಂಡವರಿಂದ ಬರುವ ತತ್‌ಕ್ಷಣದ ನುಡಿಯಲ್ಲಿ ಒಳನೋಟಗಳು, ದರ್ಶನಗಳು ತಂತಾನೇ ಒಡಮೂಡಿಕೊಂಡು ಬರುತ್ತವೆ.   ಇನ್ನೊಂದೆಡೆ, ತಡವಾಗಿ ಹೊರಬಿದ್ದ ಮೊದಲ ಕೃತಿಯಿಂದ ನಾವು ಹೆಚ್ಚುವರಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ.  ಜೀವನಾನುಭವದ ಘನವಾದ ಭಾಗ ಮತ್ತು, ವಾಸ್ತವಾಂಶಗಳನ್ನೇ ಅವಲಂಬಿಸಿ ಬರೆದ ನೆನಪುಗಳಂಥ ಬರವಣಿಗೆಯನ್ನು ಹೊರತು ಪಡಿಸಿದ ಸಂದರ್ಭದಲ್ಲಿ, ಪ್ರಜ್ಞಾಪೂರ್ವಕ ಬೆಳೆಸಿಕೊಂಡ ಸಾಹಿತ್ಯಿಕ ಅಭಿರುಚಿ. ಒಂದೇ ಮಾತಿನಲ್ಲಿ ಹೇಳುವುದಾದರೆ, ನಲವತ್ತು ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ತನಗಿನ್ನೂ ಹದಿನೇಳು ಎನಿಸುವಂತೆ ಬರೆಯಬಾರದು, ಏಕೆಂದರೆ, ಆಗ ಕಾಲವಾಗಲಿ, ಮಾನಸಿಕ ಪ್ರಬುದ್ಧತೆಯಾಗಲಿ ಜೋಲು ಬಿದ್ದಿರುವುದನ್ನು ಮರೆಮಾಚಲು ಸಾಧ್ಯವಾಗದು. 

ತರಬೇತಿ, ಶಿಕ್ಷಣ, ಪೂರ್ವಸಿದ್ಧತೆ ಇತ್ಯಾದಿ...
ಒಬ್ಬ ಯುವ ಸಂಗೀತಗಾರ ಸಂಗೀತ ಶಾಸ್ತ್ರಜ್ಞರಲ್ಲಿ ಪಾಠ ಕಲಿಯುತ್ತಾನೆ, ಒಬ್ಬ ಯುವ ಚಿತ್ರಕಲಾವಿದ, ಚಿತ್ರಕಲಾವಿದರ ಅಕಾಡಮಿಯಲ್ಲಿ ಕಲಿಯುತ್ತಾನೆ, ಆದರೆ ಒಬ್ಬ ಯುವ ಬರಹಗಾರ ಎಲ್ಲಿಗೆ ಹೋಗಬೇಕು? ನಿಮಗಿದೊಂದು ದೊಡ್ಡ ಕೊರತೆ ಎಂದನಿಸುತ್ತದೆ. ಆದರೆ ಹಾಗೇನೂ ಇಲ್ಲ. ಸಂಗೀತಗಾರರ ಮತ್ತು ಚಿತ್ರಕಲಾವಿದರ ಶಾಲೆಗಳು ಆರಂಭಿಕ ಹಂತದ, ಪ್ರಾಥಮಿಕವಾದ ಕೆಲವೊಂದು ತಾಂತ್ರಿಕ ವಿಚಾರಗಳಲ್ಲಿ ತರಬೇತಿ ಕೊಡುತ್ತವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅವುಗಳನ್ನು ಅರಿತುಕೊಂಡು ಮುಂದುವರಿಯಲು ಅದು ಸಹಾಯಕ. ಅದೇ ಒಬ್ಬ ಬರಹಗಾರನಿಗೆ ಅಲ್ಲೇನಿರುತ್ತದೆ ಕಲಿಯುವುದು? ಪೆನ್ನನ್ನು ಬಿಳಿ ಹಾಳೆಯ ಮೇಲೆ ಒತ್ತಿಟ್ಟು ಬರೆಯುವುದನ್ನು ಯಾವುದೇ ಸಾಮಾನ್ಯ ಶಾಲೆ ಕೂಡ ಕಲಿಸಬಲ್ಲದು. ಸಾಹಿತ್ಯದಲ್ಲಿ ಯಾವುದೇ ತಾಂತ್ರಿಕವಾದ ರಹಸ್ಯಗಳು ಅಥವಾ ಒಬ್ಬ ಪ್ರತಿಭಾನ್ವಿತ ಹವ್ಯಾಸಿ ಬರಹಗಾರನಿಗೆ ಉಪಯೋಗಕ್ಕೆ ಬರುವಂಥ ಯಾವುದೇ ರಹಸ್ಯಗಳಿಲ್ಲ. ಪ್ರತಿಭೆಯೇ ಇಲ್ಲದವನಿಗೆ ಯಾವುದೇ ಡಿಪ್ಲೊಮಾ ನೆರವಿಗೆ ಬಾರದು. ತಾಂತ್ರಿಕ ಕೌಶಲ್ಯ ಬಯಸುವ ಯಾವುದೇ ವೃತ್ತಿಯನ್ನು ತೆಗೆದುಕೊಂಡರೂ ಸಾಹಿತ್ಯ ಕೊನೆಯ ಸಾಲಿನಲ್ಲಿರುತ್ತದೆ. ನೀವು ಬರವಣಿಗೆಯನ್ನು ಇಪ್ಪತ್ತರಲ್ಲಿ ಬೇಕಾದರೂ ತೊಡಗಬಹುದು, ಎಪ್ಪತ್ತರಲ್ಲಿ ಬೇಕಾದರೂ ತೊಡಗಬಹುದು. ನೀವೊಬ್ಬ ಪ್ರೊಫೆಸರ್ ಆಗಿದ್ದರೂ, ಮನೆಯಲ್ಲೇ ಸ್ವತಂತ್ರವಾಗಿ ಅಕ್ಷರ ಕಲಿತವರಾದರೂ ಸರಿಯೇ. ಅದರಿಂದೇನೂ ವ್ಯತ್ಯಾಸವಾಗದು. ನೀವು ನಿಮ್ಮ ಹೈಸ್ಕೂಲ್ ಡಿಪ್ಲೊಮಾವನ್ನು ಅರ್ಧದಲ್ಲಿ ಬಿಟ್ಟುಬಂದವರಿರಬಹುದು (ಥಾಮಸ್ ಮನ್ನ್ ತರ) ಅಥವಾ ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದವರೂ ಆಗಿರಬಹುದು (ಅದೂ ಥಾಮಸ್ ಮನ್ನ್ ತರವೇ). ಕಲೆಯ ಗಂಧರ್ವಲೋಕಕ್ಕೆ ಎಲ್ಲಾ ಹಾದಿಗಳೂ ಮುಕ್ತವಾಗಿ ತೆರೆದೇ ಇರುವಂಥವು. ಅಂತಿಮವಾಗಿ ನಿಮ್ಮ "ತಳಿ"ಯನ್ನು ನಿರ್ಧರಿಸಿ ಪ್ರವೇಶ ದೊರೆಯುವುದಂತಿದ್ದಲ್ಲಿ ಕೂಡ ತಾತ್ವಿಕವಾಗಿ ಇದು ಸತ್ಯ, 

ಲೇಖಕ ರೂಪುಗೊಳ್ಳುವುದು ತನ್ನೊಳಗಿನ ಬೆರಗಿನಲ್ಲಿ...
ಮತ್ತದೇ ದೂರು, ಅರೋಪ. "ಯುವ ಬರಹಗಾರರು."  ಅವರಿನ್ನೂ ಎಲ್ಲಿಯೂ ಕಾಣಿಸಿಕೊಂಡಿಲ್ಲದೇ ಇರುವುದರಿಂದ ನಾವು ಅವರನ್ನು ಸ್ವಲ್ಪ ಸಂಭಾಳಿಸಿಕೊಂಡು ಹೋಗಬೇಕು. ಅವರಿನ್ನೂ ಗಮನಾರ್ಹವಾದ ಯಾವುದೇ ಅನುಭವಕ್ಕೆ ಪಕ್ಕಾಗಿಲ್ಲ, ಒಬ್ಬ ಓದಿಕೊಂಡಿರಬೇಕಾದ್ದೆಲ್ಲವನ್ನೂ ಅದಾಗಲೇ ಓದಿಕೊಂಡಿರುವವರಲ್ಲ ಇತ್ಯಾದಿ. ಹದಿಹರಯದವರಾದ್ದರಿಂದ ಸ್ವಲ್ಪ ಸರಳಗೊಳಿಸಿ ಹೇಳುವುದಾದರೆ, ಇಂಥ ರಿಯಾಯಿತಿಯ ಕೋರಿಕೆಗಳೆಲ್ಲ ಒಂದು ಪೂರ್ವಗ್ರಹಪೀಡಿತ ನಿಲುವಿನಿಂದ ಹೊರಟಿರುತ್ತವೆ ಎನ್ನಬೇಕು. ಅದು, ಕೇವಲ ಬಾಹ್ಯಪ್ರೇರಣೆಗಳು, ಸಂದರ್ಭಗಳಷ್ಟೇ ಒಬ್ಬ ಬರಹಗಾರನನ್ನು ರೂಪಿಸುತ್ತವೆ ಎಂಬ ಪೂರ್ವಗ್ರಹ. ಸೃಜನಶೀಲ ಪ್ರತಿಭೆಯೆಂಬುದು ಅವನಿಗೆ ಸಿಗುವ ಜೀವನಾನುಭವದಿಂದಲೇ ಉದ್ಭವಿಸುತ್ತದೆ ಅಂತ ತಿಳಿಯುವುದು. ನಿಜಕ್ಕಾದರೆ ಒಬ್ಬ ಬರಹಗಾರ ರೂಪುಗೊಳ್ಳುವುದು ಒಳಗಿನಿಂದ, ಅವನ ಅಂತರಂಗದಲ್ಲಿ, ಅವನ ಹೃದಯ, ಮನಸ್ಸುಗಳಲ್ಲಿ. ಸ್ವಪ್ರೇರಣೆಯಿಂದ ತೊಡಗುವ ಚಿಂತನ ಮಂಥನವಾಗಲಿ, ಸೂಕ್ಷ್ಮಸಂವೇದನೆ, ಜೀವನದ ಸಣ್ಣಪುಟ್ಟ ಸಂಗತಿಗಳತ್ತ ಕೌತುಕ, ಇತರರಿಗೆ ತೀರಾ ಸಾಮಾನ್ಯವೆನಿಸುವಂಥ ಸಂಗತಿಗಳತ್ತ ಇರುವ ವಿಸ್ಮಯ ಇವು ಯಾವುವೂ ಕಲಿಯುವುದರಿಂದಲೋ, ಹೇಳಿಕೊಟ್ಟೋ, ಅಭ್ಯಾಸ ಮಾಡಿಯೋ ಬರುವಂಥದ್ದಲ್ಲ.  ಮತ್ತೊಮ್ಮೆ ಹೇಳುತ್ತೇವೆ, ಕಲಿಯುವುದರಿಂದಲೋ, ಹೇಳಿಕೊಟ್ಟೋ, ಅಭ್ಯಾಸ ಮಾಡಿಯೋ ಬರುವಂಥದ್ದಲ್ಲ. ವಿದೇಶ ಪ್ರವಾಸ? ಅವು ಕೆಲವೊಮ್ಮೆ ಇದ್ದುದರಲ್ಲಿ ಸುಲಭವಾಗಿ ದಕ್ಕುವಂಥವು, ಪ್ರಾಮಾಣಿಕವಾಗಿ ನೀವು ಪ್ರವಾಸ ಮಾಡಲಿ ಎಂದೇ ನಾವು ಬಯಸುತ್ತೇವೆ. ಆದರೆ ನೀವು ಸ್ವಿಜರ್ಲ್ಯಾಂಡಿಗೆ ಹೊರಡುವ ಮುನ್ನ ಮುಳ್ಳಯ್ಯನ ಗಿರಿಗೆ ಭೇಟಿಕೊಡಿ ಎಂಬ ಸಲಹೆಯನ್ನು ಕೊಡಬಯಸುತ್ತೇವೆ. ಬರೆಯುವುದಕ್ಕೇನನ್ನೂ ದಕ್ಕಿಸಿಕೊಳ್ಳದೇನೆ ನೀವು ಹಿಂದಿರುಗಿ ಬಂದಲ್ಲಿ ಯಾವ ದಿವ್ಯ ನೀಲಕಣಿವೆಯೂ ನಿಮ್ಮನ್ನು ಪೊರೆಯಲಾರದು.

ಮಾರ್ಗದರ್ಶನ ಮತ್ತು ಬರಹಗಾರರ ಬಳಗ...
ಖಂಡಿತವಾಗಿಯೂ ಸುರುವಾತಿನಲ್ಲಿ ಸಲಹೆ ಸೂಚನೆಗಳು ನಿಜವಾದ ಪ್ರತಿಭೆಯಿರುವವರಿಗೂ ಅನುಕೂಲಕರವೇ. ಆದರೆ ಅವೆಲ್ಲವೂ ಸಹಜವಾಗಿ, ಸರಳವಾಗಿ ಮತ್ತು ಸ್ವಯಂಸ್ಫೂರ್ತ ನೆಲೆಯಲ್ಲಿ ಒದಗಿದರೆ ಚೆನ್ನ. ಅಭಿರುಚಿಯ ನೆಲೆಯಲ್ಲಿ ಯಾವುದು ಉತ್ತಮ, ಯಾವುದು ಕಳಪೆ ಎನ್ನುವುದರ ಪ್ರಾಮಾಣಿಕ ಪ್ರಜ್ಞೆ, ಯಾವುದು ಹೆಚ್ಚು ಮಹತ್ವವುಳ್ಳದ್ದು ಮತ್ತು ಯಾವುದಕ್ಕೆ ಮಹತ್ವ ಇಲ್ಲ, ಯಾವುದು ನಿಜಕ್ಕೂ ಪರಿಣಾಮಕಾರಿಯಾದೀತು, ಯಾವುದು ಆಗಲಾರದು ಮತ್ತು ಯಾಕೆ: ಇವೆಲ್ಲ ಕೇವಲ ವಿಸ್ತೃತ ಓದು ಮತ್ತು ವಿವಿಧ ಇಸಂಗಳೊಂದಿಗೆ ನಿಮಗಿರುವ ಹೊಕ್ಕುಬಳಕೆಯಿಂದಲೇ ಸಿದ್ಧಿಸುವಂಥದ್ದಲ್ಲ.  ಅದು ಎಲ್ಲ ಒಳತೋಟಿಗಳನ್ನು ಮೀರಿ ಬರಬೇಕಾದ್ದು. ಬಹುದೀರ್ಘ ವರ್ಷಗಳ ಅನುಭವದಿಂದ ನಾವಿದನ್ನು ಹೇಳುವ ಸಲಿಗೆ ತೆಗೆದುಕೊಳ್ಳುತ್ತಿದ್ದೇವೆ. ತಪ್ಪಾಗಿ ಬಳಸಲ್ಪಟ್ಟ ಒಂದೆರಡು ರೂಪಕಗಳ ಕುರಿತು ಬರುವ ಕೆಲವು ಟೀಕೆಗಳು ಒಬ್ಬ ಎಳೆಯ ಕವಿಯನ್ನು ಆತ ಒಮ್ಮೆ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುವ ದುರಂತದಿಂದ ಬಚಾವು ಮಾಡಬಹುದು.  ಅದೇ ಇನ್ನೊಬ್ಬನಿಗೆ ಒಂದಿಡೀ ದಿನದ ಚರ್ಚೆ, ಮಾತುಕತೆಯಿಂದ ನಯಾಪೈಸೆಯ ಲಾಭವಾಗದೆಯೂ ಹೋಗಬಹುದು. ಅದೇ ತುಡಿತ ಒಬ್ಬ ಉದಯೋನ್ಮುಖ ಬರಹಗಾರನನ್ನು ತನಗಿಂತ ಹೆಚ್ಚು ಬಲ್ಲವರತ್ತ, ಜೀವನಾನುನುಭವ,  ಸಂವೇದನಾಶೀಲತೆ ಮತ್ತು ಸಾಂಸ್ಕೃತಿಕ ಸಿರಿತನವುಳ್ಳ ಇತರರತ್ತ ಸೆಳೆಯುತ್ತದೆ. ಅಂಥವರು ನೀವೆಲ್ಲಿ ಹುಡುಕಿದರಲ್ಲಿ ನಿಮಗೆ  ಸಿಗುತ್ತಾರೆ.  ನಾವು ನಿಮಗೆ ನಿಮ್ಮ ಸದ್ಯದ ಗೆಳೆಯರ ಗುಂಪಿನಿಂದ ದೂರವಾಗಿ ಎಂದು ಹೇಳುತ್ತಿಲ್ಲ, ಅವರ ಒಡನಾಟ ನಿಮಗೆ ಸಾಲದೇನೋ ಎಂಬ ಅನುಮಾನವಷ್ಟೆ ನಮ್ಮದು. ನಿಮ್ಮ ಹೃದಯವನ್ನು ಸೆಳೆಯುವುದು ಆ ಗುಂಪಿಗೆ ಸಾಧ್ಯವಾಗಿರಬಹುದು ಆದರೆ ನಿಮ್ಮ ಬೌದ್ಧಿಕ ಹಸಿವು ಇನ್ನೂ ಹೆಚ್ಚಿನದ್ದಕ್ಕೆ ಹಾತೊರೆಯುತ್ತಿದೆ ಎಂದು ನಮಗೆ ನಿಮ್ಮ ಪತ್ರವನ್ನು ನೋಡಿದಾಗ ಅನಿಸಿದೆ.

ಕವಿತೆ ಎಂದರೇನು?
ಕವಿತೆಯ ಬಗ್ಗೆ ಒಂದು ಸಾಲಿನ ವ್ಯಾಖ್ಯಾನ ಬೇಕಿದೆ, ದಯವಿಟ್ಟು ಕೊಡಿ. ನಮಗೆ ಏನಿಲ್ಲವೆಂದರೂ ಸುಮಾರು ಐದು ನೂರು ಗೊತ್ತಿವೆ, ಬೇರೆ ಬೇರೆ ಮೂಲಗಳಿಂದ ದೊರಕಿರುವಂಥವು. ಅವುಗಳಲ್ಲಿ ಒಂದಾದರೂ ಚಿಕ್ಕ ಚೊಕ್ಕದಾಗಿ ಎಲ್ಲವನ್ನೂ ಹೇಳಬಲ್ಲಷ್ಟು ಸಂಪನ್ನ ಅನಿಸುವಂಥದ್ದಿಲ್ಲ. ಪ್ರತಿಯೊಂದೂ ಅದರದ್ದೇ ವಯೋಮಾನಕ್ಕನುಗುಣವಾದ ಅಭಿರುಚಿಯನ್ನಷ್ಟೇ ಹೇಳುತ್ತಿದೆ. ಹೊಸದನ್ನು ಪ್ರಯತ್ನಿಸುವ ಅಧಿಕಪ್ರಸಂಗಿತನದಿಂದ ನಮ್ಮನ್ನು ರೇಜಿಗೆಯೇ ಕಾಪಾಡಿದೆ. ಆದರೆ ಕಾರ್ಲ್ ಸ್ಯಾಂಡ್‌ಬರ್ಗ್‌ನ ಸುಂದರ ನುಡಿಮುತ್ತು ನೆನಪಿಗೆ ಬರುತ್ತಿದೆ: "ನೆಲದ ಮೇಲೆ ನೆಲೆಯಾದ ಸಾಗರಜೀವಿಯೊಂದು ಹಾರಬೇಕೆಂದು ಬಯಸುತ್ತ ಬರೆದಿಟ್ಟ ದಿನಚರಿ, ಕವಿತೆ." ಸದ್ಯಕ್ಕಿದು ಸಾಕಲ್ಲವೆ?

ಅವಾಸ್ತವಿಕ ಚರ್ವಿತ ಚರ್ವಣ ಮತ್ತು ಕಲೆಯ ಸಂಬಂಧ
"ಕಡುವಾಸ್ತವವನ್ನು ಪೂರ್ತಿಯಾಗಿ ತೆಗೆದುಬಿಡಿ, ಆಗ ನಿಮ್ಮ ಪೇಂಟಿಂಗ್ ಸೋಲಲು ಸಾಧ್ಯವೇ ಇಲ್ಲ." ಪ್ರಸಿದ್ಧ ಶಿಲ್ಪಿ ಜಿಕೊಮೆಟಿ ಒಮ್ಮೆ ಹೇಳಿದ ಮಾತಿದು. ನಿಜಕ್ಕೂ ಪ್ರಥಮ ಶ್ರೇಯಾಂಕದ ಈ ಗ್ರಹಿಕೆ ಸಾಹಿತ್ಯಕ್ಕೂ ಯಥಾವತ್ ಅನ್ವಯಿಸುತ್ತದೆ. ವಾಸ್ತವಿಕತೆಯನ್ನು ನಿವಾರಿಸಿ, ನಿಮ್ಮ ಕವಿತೆ ಸೋಲುವುದು ಸಾಧ್ಯವೇ ಇಲ್ಲ... ಸೋಲನ್ನು ಯಾವತ್ತೂ ಒಂದನ್ನು ಇನ್ನೊಂದರ ಜೊತೆ ಹೋಲಿಸಿ ಮತ್ತು ಅಂಥ ತೌಲನಿಕ ಮಾನದಂಡದ ಆಧಾರದ ಮೇಲೆ ಅಳೆಯಲಾಗುತ್ತದೆ ಮತ್ತು ಅದನ್ನು ಬೇಕಾಬಿಟ್ಟಿ ಸ್ವಾತಂತ್ರ್ಯವಹಿಸಿ ನಿರ್ಧರಿಸಲು ಸಾಧ್ಯವಿಲ್ಲ ಎನ್ನುವುದು ನಿಜವೇ. ಒಂದು ಕವಿತೆ ಎಲ್ಲಾ ವಾಸ್ತವಿಕ ಅಂಶಗಳಿಂದ ಹೊರತಾಗಿ ನಿಂತರೆ, ಕವಿ ತಾನು ತನ್ನ ತಕ್ಷಣದ ಜಗತ್ತಿನಿಂದ ಬೇರ್ಪಟ್ಟು, ತನ್ನ ಅಭಿವ್ಯಕ್ತಿಯಲ್ಲಿಯೂ ವಾಸ್ತವ ಜಗತ್ತಿನೊಂದಿಗೆ ಪರಸ್ಪರ ಸಂಬಂಧವನ್ನು ನಿರ್ಧರಿಸುವಂಥ ಸಂಗತಿಗಳನ್ನೆಲ್ಲ ದೂರತಳ್ಳಿ  ಬರೆಯುತ್ತಾನೆಂದಾದರೆ, ಅದನ್ನು ತೂಗಿ ನೋಡುತ್ತೀರಿ ಹೇಗೆ, ಯಾವುದರೊಂದಿಗೆ? ಇದು ಚೆನ್ನಾಗಿದೆ, ಇದು ಸಾಧಾರಣ ಮತ್ತು ಇದು ಕೆಟ್ಟದಾಗಿದೆ ಎನ್ನುವುದು ಹೇಗೆ? ನಿಮ್ಮ ಕವಿತೆಗಳು ಚಿತ್ರವಿಚಿತ್ರ ಲಿಖಿತ ಒಗಟುಗಳು, ಅವುಗಳ ರಹಸ್ಯಮಯತೆ ಮತ್ತು ವೈಚಿತ್ರ್ಯವೂ ಕೇವಲ ಆಕಸ್ಮಿಕ. ಅಲ್ಲಿ ಯಾವುದೇ ತಾತ್ವಿಕ ನೆಲೆಯ ತಥಾಕಥಿತ ಸಂಬಂಧವಿಲ್ಲ, ಸುಸಂಬದ್ಧವಾದ ಒಂದು ಚಿತ್ರವನ್ನು ಕಟ್ಟಿಕೊಡುವ ಉದ್ದೇಶದ ಪ್ರಯತ್ನವಿಲ್ಲ. ಅಸ್ಪಷ್ಟ, ಗೋಜಲು ಬಿಟ್ಟರೆ ಬೇರೇನಿಲ್ಲ. "ಜಗದ ಸಕ್ಕರೆಯೊಳು ಝಗಝಗಿಸೊ ಕವಚದೀ ದೇಹ ಕರಗುವಂತೆ ಮುಳುಗುವೆ ನಾ..."  ಅಯ್ಯೊ ಪಾಪ...

ವ್ಯಕ್ತಿ ವಿಶಿಷ್ಟದೊಡನೆ ಸಮಷ್ಠಿಯ ಸಂಬಂಧ...
ಒಬ್ಬ ಪದ್ಯ ಬರೆಯೊ ಕವಿ ಮುಖ್ಯವಾಗಿ ತನ್ನದೇ ಕವಿತೆಯನ್ನು ಬರೆಯುತ್ತಿರುತ್ತಾನೆ. ಇವು ಇತರರನ್ನೂ ಒಳಗುಗೊಳ್ಳುವಂತಿರುತ್ತವೆಯೇ ಎನ್ನುವುದು ಆತನ ವ್ಯಕ್ತಿತ್ವ ಮತ್ತು ಆತನ ಅನುಭವದ ಆಳ ವಿಸ್ತಾರಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಜಗತ್ತಿನ ಆಳ ಅಗಲ ಸೀಮೆ ತುಂಬ ಸೀಮಿತವಾಗಿದೆ. ನಿಮ್ಮ ಕಲ್ಪನೆ ಅನ್ಯವೆನ್ನಬಹುದಾದ ಬೇರೆಯೇ ಒಂದು ಕಾಲ ಮತ್ತು ದೇಶದ ಜೊತೆ ಲಂಘಿಸಿ ತನ್ನನ್ನು ವಿಸ್ತರಿಸಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಬ್ಲೇಕ್ ಬರೆದಿದ್ದೇನು? " ಹುಲಿಯೇ ಮಿರಮಿರ ಮಿಂಚುವ ಹುಲಿಯೇ | ಕಾರಿರುಳಿನ ಕಾನನದಲಿಯೇ| ಅದಾವುದಾದಿವ್ಯ ದೃಷ್ಟಿಬಲವೋ ಬಾಹುಬಲ| ಕಟ್ಟೀತು ನಿನ್ನ ಸೆರೆಕೋಟೆ ಓ ಮಹಾಬಲ?|"  ಈ ಹುಲಿ ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡಿ ಕಾಡದೇ ಹೋಗುವುದಾದರೆ ಇಂಥವೇ ಇನ್ನಷ್ಟು ಸಾಲುಗಳನ್ನು ಬರೆಯುತ್ತ ಹೋಗುವುದರಿಂದ ಏನನ್ನು ಸಾಧಿಸಿದಂತಾಯಿತು? ನಮ್ಮ ದೈನಂದಿನ ಜಂಜಾಟಗಳಿಗೆ ಸಂಬಂಧವೇ ಇಲ್ಲದ, ಇಂಥವೇ ನೂರಾರು ತಲೆಕೆಡಿಸೋ ಐಡಿಯಾಗಳು ಇದ್ದೇ ಇರುತ್ತವಲ್ಲ ಜೊತೆಜೊತೆಗೇನೆ. 

ಕವಿ ಎನಿಸಿಕೊಳ್ಳುವ ಒತ್ತಡ...
ಯೌವನವೆಂಬುದು ನಿಜಕ್ಕೂ ತುಂಬ ಸಂಕೀರ್ಣ ಕಾಲಘಟ್ಟ. ಬರಹಗಾರನಾಗುವ ತುಡಿತವೂ ಈ ಸಂಕ್ಲಿಷ್ಟ ಪರಿಸ್ಥಿತಿಯಲ್ಲಿ ಕಾಡತೊಡಗಿದರೆ, ಸ್ವಲ್ಪ ವಿಶೇಷವಾದ ದೃಢಸಂಕಲ್ಪ ಮಾತ್ರ ಪೊರೆಯಬಲ್ಲುದು. ನಿರಂತರವಾದ ಪ್ರಯತ್ನ, ಆಲಸ್ಯವಿಲ್ಲದ ಕ್ರಿಯಾಶೀಲತೆ, ವಿಪುಲ ಓದು, ಸೂಕ್ಷ್ಮಗ್ರಹಿಕೆ, ಸ್ವವಿಮರ್ಶೆ, ಸಂವೇದನಾಶೀಲತೆ, ತರ್ಕಶುದ್ಧ ನಿಲುವು, ಹಾಸ್ಯಪ್ರಜ್ಞೆ ಮತ್ತು ಈ ಜಗತ್ತು ಈಗಲೂ ಬದುಕುವುದಕ್ಕೆ ಅರ್ಹವಾಗಿದೆ ಹಾಗೂ ಈವರೆಗೆ ಅನುಭವಿಸಿದ್ದಕ್ಕಿಂತ ಹೆಚ್ಚಿನ ಸೌಖ್ಯ ಮುಂದಿನ ದಿನಗಳಲ್ಲಿ ಬರುವುದಿದೆ ಎಂಬ ಭರವಸೆ ಕೊಡುವ ಆತ್ಮಸ್ಥೈರ್ಯ ಎಲ್ಲವೂ ಇರಬೇಕಾಗುತ್ತದೆ ಅದಕ್ಕೆ. ನೀವು ಕಳಿಸಿರುವ ಬರವಣಿಗೆಯ ಪ್ರಯತ್ನದಲ್ಲಿ ಬರೆಯಬೇಕು ಎಂಬ ಆಸೆಯ ಒತ್ತಡದಾಚೆ ಮೇಲೆ ಪಟ್ಟಿ ಮಾಡಿದ ಗುಣಲಕ್ಷಣಗಳಿನ್ನೂ ಕಂಡುಬರುತ್ತಿಲ್ಲ. ನೀವಿದನ್ನು ತಿಣುಕಾಡಿ ಸೃಷ್ಟಿಸಿರುವಂತಿದೆ.

ಯಾವ ದೈನಂದಿನವೂ ಕ್ಷುದ್ರವಲ್ಲ...
ಘನವಾದ, ಮಹತ್ತರವಾದ ವಸ್ತುಆರಿಸಿಕೊಳ್ಳುವುದನ್ನು ರಿಲ್ಕ ಅಷ್ಟಾಗಿ ಪ್ರೋತ್ಸಾಹಿಸುತ್ತಿರಲಿಲ್ಲ. ಅದಕ್ಕೆ ಮಹಾನ್ ಕಲಾಪರಿಣತಿ ಮತ್ತು ಪ್ರಬುದ್ಧತೆಯ ಅಗತ್ಯವಿರುವುದರಿಂದ ಅವು ಬಹುದೊಡ್ಡ ಸವಾಲೊಡ್ಡುತ್ತವೆ ಎಂಬ ಕಾರಣಕ್ಕೆ. ಬದಲಿಗೆ ಅವನು ನಿಮ್ಮ ದೈನಂದಿನದ ಬದುಕನ್ನೇ ಸೂಕ್ಷ್ಮವಾಗಿ ಗಮನಿಸುವಲ್ಲಿಂದ ಆರಂಭಿಸುವುದು ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದ. ನಿಮ್ಮ ಸುತ್ತಮುತ್ತಲ ಬದುಕಿನಿಂದ ವಸ್ತುವನ್ನು ತೆಗೆದುಕೊಳ್ಳಿ, ನಾವು ಕಳೆದುಕೊಂಡದ್ದರ ಕುರಿತು, ಅಚಾನಕ್ ಮರಳಿ ಪಡೆದುದರ ಕುರಿತು ಬರೆಯಿರಿ ಎಂದು ಅವನು ಸಲಹೆ ಕೊಡುತ್ತಿದ್ದ. ನೀವು ಕಾಣಬಲ್ಲ ಸಂಗತಿಗಳ ಕುರಿತು ಬರೆಯಿರಿ, ನಿಮ್ಮ ಕನಸುಗಳಿಂದ ಪ್ರತಿಮೆಗಳನ್ನು ಪಡೆದುಕೊಳ್ಳಿ, ಸ್ಮೃತಿಯಿಂದ ವಸ್ತು ಪಡೆಯಿರಿ ಎನ್ನುತ್ತಿದ್ದ. "ದೈನಂದಿನ ಬದುಕು ತೀರ ಸಪ್ಪೆಯೆನಿಸಿದರೆ, ಅದನ್ನು ದೂರಬೇಡಿ; ನಿಮ್ಮನ್ನೇ ದೂರಿಕೊಳ್ಳಿ, ನೀವಿನ್ನೂ ಅದರ ಸಿರಿವತ್ತಾದ ಪದರವನ್ನು ಸ್ಪರ್ಶಿಸಬಲ್ಲಷ್ಟು ಕವಿಯಾಗಿ ರೂಪುಗೊಂಡಿಲ್ಲ ಎಂದು ನಿಮಗೆ ನೀವೇ ಹೇಳಿಕೊಳ್ಳಿ" ಎನ್ನುತ್ತಾನಾತ. ನಿಮಗೆ ನಮ್ಮ ಮಾತು ನಿಮ್ಮ ಕಾಲ್ದಾರಿಯಲ್ಲಿ ಸಿಕ್ಕವನೊಬ್ಬನ ಒಣ ಉಪದೇಶದಂತೆ ಕೇಳಿಸಬಹುದು ಎಂಬ ಕಾರಣಕ್ಕೆ ನಾವು ಜಗತ್ತಿನ ಮಹಾನ್ ದಾರ್ಶನಿಕ ಕವಿಯೊಬ್ಬನನ್ನು ನಮ್ಮ ಸಹಾಯಕ್ಕೆ ಎಳೆದು ತರಬೇಕಾಯಿತು. ಅವನು ತೀರ ಸಾಮಾನ್ಯವೆಂದು ಕಾಣಿಸೊ ಸಂಗತಿಗಳಿಗೆ ನೀಡುತ್ತಿದ್ದ ಮಹತ್ವವನ್ನು ನೋಡಿ.

ನಿಜ ಜೀವನದಲ್ಲಿ ಅದು  ಹೀಗೆ ನಡೆಯಲು ಸಾಧ್ಯವೇ ಇಲ್ಲ...
"ನಾನು ಕತೆಯನ್ನು ಕಟ್ಟುತ್ತೇನೆಯೇ ಹೊರತು ಅವುಗಳನ್ನು ಜೀವಂತ ಬದುಕಿನಿಂದ ನೇರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ನನ್ನನ್ನು ಟೀಕಿಸಲಾಗುತ್ತದೆ. ಅದು ಸರಿಯೆ?" ಇಲ್ಲ, ಅದು ಸರಿಯಲ್ಲ. ಅಂಥ ನಿಯಮಬದ್ಧ ತಾತ್ವಿಕ ನಿಲುವುಗಳನ್ನು ಸರಿಯೆನ್ನುವುದಾದರೆ ಜಗತ್ತಿನ ಸಾಹಿತ್ಯದಲ್ಲಿ ಮುಕ್ಕಾಲಂಶ ಸರಿಯಿಲ್ಲ ಎನ್ನಬೇಕಾಗುತ್ತದೆ. ಯಾವುದೇ ಒಬ್ಬ ಬರಹಗಾರ ಕೇವಲ ತನ್ನ ಬದುಕಿನಿಂದಲೇ ಎಲ್ಲವನ್ನೂ ಪಡೆಯುತ್ತಿರುವುದಿಲ್ಲ. ತನಗೆ ಸರಿಹೊಂದುವ ಇತರರ ಅನುಭವದಿಂದಲೂ ಅವನು ಪಡೆದುಕೊಳ್ಳುತ್ತಿರುತ್ತಾನೆ, ತನ್ನ ಅನುಭವದೊಂದಿಗೆ ಅದನ್ನು ಸಂತುಲಿತಗೊಳಿಸಿಕೊಳ್ಳುತ್ತಾನೆ ಅಥವಾ ಅವನ ಕಲ್ಪನಾಶಕ್ತಿಯನ್ನು ಬಳಸಿಕೊಳ್ಳುತ್ತಿರುತ್ತಾನೆ. ಆದರೆ ಒಬ್ಬ ನಿಜವಾದ ಕಲಾವಿದ ಕಲ್ಪನೆಯಲ್ಲಿಯೂ ವಾಸ್ತವ ಬದುಕಿನ ಎಲ್ಲಾ ಅಂಶಗಳನ್ನೂ ಮರುಸೃಜಿಸಬಲ್ಲವನಾಗಿರುತ್ತಾನೆ ಮತ್ತು ತನ್ಮೂಲಕ, ಬರೆಯುತ್ತ ಬರೆಯುತ್ತ ಅದು ಅವನ ಅನುಭವವೇ ಆಗಿಬಿಡುತ್ತದೆ. ಫ್ಲೂಬರ್ಟ್ ತಾನೇ ಎಮ್ಮಾ ಬೊವರಿ ಎಂದು ಹೇಳಿಕೊಂಡಿದ್ದರ ಮರ್ಮ ಇದೇ.  ಹಾಗಲ್ಲ ಹೀಗಲ್ಲ ಎಂದು ಹಾದಿ ತಪ್ಪಿಸುವವರ ಮಾತುಗಳಿಗೆ ಕಿವಿಗೊಟ್ಟು ತನ್ನ ಕಲ್ಪನೆ ವಿಪರೀತವಾಯಿತೆಂದು ಅವನೇನಾದರೂ ತನ್ನ ಕಾದಂಬರಿಯನ್ನು ಕೈಬಿಟ್ಟಿದ್ದರೆ, ಎಲ್ಲಿಂದಲೋ ಸ್ವತಃ ಮದಾಮ್ ಬೊವರಿಯೇ ಪ್ರತ್ಯಕ್ಷಳಾಗಿ ತಾನೇ ತನ್ನ ಕಾದಂಬರಿಯನ್ನು ಮುಗಿಸಿಕೊಡಬೇಕಾಗುತ್ತಿತ್ತೇನೋ. ಆಗ ಮಾತ್ರ ಅದು ಯಥಾವತ್ ನಕ್ಷೆ ತೆಗೆಯುವವರ ಕೆಲಸವಾಗಿ ಬಿಡುತ್ತಿತ್ತು, ಕಾದಂಬರಿಯಲ್ಲ. ಪ್ರವಚನಗಳ ಬಗ್ಗೆ ಇಷ್ಟು ಸಾಕು.  ನೀವು ಕತೆ ಕಳಿಸಿಕೊಟ್ಟಾಗ ನಾವು ಅವುಗಳನ್ನು ನಿಮ್ಮ ವೈಯಕ್ತಿಕ ವಿವರಗಳೊಂದಿಗೆ ತಾಳೆ ನೋಡುವುದಿಲ್ಲ. ನಾವು ಸಾಹಿತ್ಯ ವಿಮರ್ಶಕರು, ಪತ್ತೇದಾರರಲ್ಲ.

ಷೇಕ್ಸ್‌ಪಿಯರ್ ಕೂಡ ಕದ್ದಿದ್ದಾನೆ...
ಮಹಾನ್ ಕಾದಂಬರಿಗಳನ್ನು ರಂಗಪ್ರದರ್ಶನಕ್ಕೆ ಅಳವಡಿಸಿಕೊಂಡಿದ್ದನ್ನು ಟೀಕಿಸಿದ್ದಕ್ಕಾಗಿ ನೀವು ನಮ್ಮನ್ನು ಹಿಗ್ಗಾಮುಗ್ಗಾ ಥಳಿಸಿದ್ದೀರಿ. "ಷೇಕ್ಸ್‌ಪಿಯರ್ ಕೂಡ ಬೇರೆಯವರ ಕತೆಯನ್ನು ಕದ್ದಿದ್ದಾನೆ." ಎಂದು ಓದಿದೆವು. ನಿಜವೇ. ಆದರೆ ಅವನು ದರಿದ್ರವಾಗಿದ್ದದ್ದನ್ನು ಎತ್ತಿಕೊಂಡು ಅಪರಂಜಿಯಂಥದ್ದನ್ನು ಸೃಷ್ಟಿಸಿದ. ಆದರೆ ಅದೇ ನಮ್ಮ ರಂಗಭೂಮಿಯಲ್ಲಿ ಅಪೂರ್ವವಾದದ್ದನ್ನು ಬಳಸಿಕೊಂಡು ದರಿದ್ರವಾದದ್ದನ್ನು ಸೃಷ್ಟಿಸಿದ್ದಾರೆ.  ತದೆಸ್ ರಿಯೊವಿಜ್ ಹೇಳಿದಂತೆ, ಇವತ್ತು "ಷೇಕ್ಸ್‌ಪಿಯರನ್ನು ಕೂಡ ರಂಗಕ್ಕೆ ಅಳವಡಿಸಿಕೊಳ್ಳಲಾಗುತ್ತದೆ." ನಮೋ ನಮಃ.

ಯಾರಾದರೂ ಸತ್ತರೆ, ತಕ್ಷಣ ಒಂದು ಕವಿತೆ...
ಒಬ್ಬ ಪ್ರಖ್ಯಾತ ವ್ಯಕ್ತಿ ಸತ್ತರೆ, ಮರುದಿನ ಆತನ/ಆಕೆಯ ಸದ್ಗುಣಗಳನ್ನು ಹಾಡಿ ಹೊಗಳುವ ಕವಿತೆಗಳ ಮಹಾಪೂರವೇ ಹರಿದು ಬರುತ್ತದೆ. ಅಂಥ ದುಡುಕು ಕೂಡ, ಕವಿ ತಾನು ಸ್ವತಃ ಕಳೆದುಕೊಂಡಿದ್ದರ ಬಗ್ಗೆ ಎಷ್ಟೊಂದು ವಿಹ್ವಲನಾಗಿದ್ದಾನೆಂಬುದನ್ನು ಸಿದ್ಧಪಡಿಸುತ್ತದೆ ಮತ್ತು ಅದು ಮಾರ್ಮಿಕವಾಗಿರುತ್ತದೆ. ಹಾಗಿದ್ದೂ ಅದು ಕವಿತೆಯ ಕಲಾತ್ಮಕ ಮೌಲ್ಯದ ಬಗ್ಗೆ ಅನುಮಾನಗಳನ್ನೆಬ್ಬಿಸುತ್ತದೆ. ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಕೆಲಸ ಏನಿದ್ದರೂ ಅವಸರದ ಸಹಜ ನಿರ್ಲಕ್ಷ್ಯ ಮತ್ತು ಚಲ್ತಾ ಹೈ ನಿಲುವಿನಿಂದ ಕೂಡಿರುತ್ತದೆ, ಅಪವಾದಗಳಿಲ್ಲವೆಂದಲ್ಲ, ಅಪರೂಪ ಮತ್ತು ಕಡಿಮೆ. ನಿಮ್ಮ ಲೇಖನಿಯಿಂದ ತಕ್ಷಣಕ್ಕೆ ಹೊಮ್ಮಿ ಬರುವುದೇನು? ಸಿದ್ಧಮಾದರಿಯ ನುಡಿಗಟ್ಟುಗಳು, ಮತ್ತೆ ಮತ್ತೆ ಬಳಸಿ ಸವೆದು ಹೋದ ಮಾತುಗಳು, ಅದಾಗಲೇ ಅಲ್ಲಿ ಇಲ್ಲಿ ನೋಡಿದ ಭಾವುಕ ಚಿತ್ರಗಳು, ಕಡ ತಂದ ಶೋಕಸಾಗರ. ಕ್ಲೀಶೆಗಳಿಂದ ತುಂಬಿದ್ದಾಗ ನಿಜವಾದ ಭಾವನೆಗೆ ಯಾವ ಮೌಲ್ಯವೂ ಇರುವುದಿಲ್ಲ. ಕೃಪೆಯೆಂಬಂತೆ ಪ್ರದರ್ಶನಕ್ಕೆ ಬಂದ ಕ್ಲೀಶೆ ಈ ರೀತಿ ಇರುತ್ತದೆ: "ನೀವು ಹೊರಟು ಹೋದಿರಿ, ಇನ್ನು ನಮ್ಮೊಂದಿಗಿಲ್ಲ, ಆದರೇನು ನಿಮ್ಮ ನೆನಪು ಶಾಶ್ವತ." ಭಾವೀ ದುಃಖತಪ್ತ ಕವಿ ಇದೇ ಸಂದರ್ಭವೆಂದು, ಸಾವು ಇಲ್ಲದ ಸಹೋದರತ್ವವನ್ನು ಕರುಣಿಸಿತೋ ಎಂಬಂತೆ ಆ ಸತ್ತವನನ್ನು ಏಕವಚನದಿಂದ ಕರೆಯಲೂ ಹಿಂಜರಿಯುವುದಿಲ್ಲ. ಈಚೆಗೆ ಸಾವೆರಿ ದುನಿಕೊವಸ್ಕಿಯ ಕಣ್ಮರೆ ಅವನ ಗೌರವಾರ್ಥ ಅಸಂಖ್ಯ ಕವಿತೆಗಳ ಹುಟ್ಟಿಗೆ ಸ್ಫೂರ್ತಿಯಾಯಿತು.  ಪ್ರತಿಯೊಂದು ಕವಿತೆಯೂ ಅವನೊಬ್ಬ ಮಹಾನ್ ಶಿಲ್ಪಿಯಾಗಿದ್ದ ಅಥವಾ ಈಗಲೂ ಆಗಿದ್ದಾನೆ ಎಂದು ಅವನಿಗೇ ಹೇಳುತ್ತಿವೆ ಮಾತ್ರವಲ್ಲ, ಅವನನ್ನು ಸಾವೆರಿ ಸಾವೆರಿ ಎಂದೇ ಕರೆದಿವೆ. ನಾವೇಕೆ ಶಿಲ್ಪವನ್ನೂ ಕವಿತೆಗಳಂತೆ ಪರಿಗಣಿಸಲು ಸಾಧ್ಯವಾಗುತ್ತಿಲ್ಲ ಮತ್ತು ಅವು ಅದ್ವಿತೀಯವೂ, ಒಂದಷ್ಟು ಕಾಲ ನಿಲ್ಲಬಲ್ಲಂಥ ರಚನೆಯೂ ಆಗಿ ಆಕಾರ ತಳೆಯುವುದಕ್ಕೆ ಅಗತ್ಯವಾದಷ್ಟು ಸಮಯ ತಾಳ್ಮೆಯಿಂದ ಕಾದಿರಲು ತಯಾರಿಲ್ಲ?

ಭಯಂಕರಗಳು, ಸುಂದರಗಳು... 
ಓದುಗನ ಮನಸ್ಸಿನಲ್ಲಿ ಅಚ್ಚಳಿಯದಂಥ ಗುರುತು ಉಳಿಸಬೇಕೆಂಬ ಬರಹಗಾರನ ಆಸೆ ಖಂಡಿತವಾಗಿಯೂ ಸರಿಯಾದುದೇ. ಸಮಸ್ಯೆ ಇರುವುದು ಇದನ್ನು ಸಾಧಿಸಲು ಅನುಸರಿಸುವ ವಯ್ಯಾರಗಳ ಹಾದಿಯದ್ದು. ಎಚ್ಚರಿಸುತ್ತಿದ್ದೇವೆ, ಬಹುಶಃ ಏಳು ನೂರಾ ಎಂಬತ್ತೊಂಬತ್ತನೆಯ ಬಾರಿ ಅನಿಸುತ್ತದೆ, ಉತ್ಪ್ರೇಕ್ಷಿತವೂ, ಕರ್ಕಶವೂ ಆದ ಅತಿರೇಕ ಒಂದು ರಚನೆಯನ್ನು ದುರ್ಬಲಗೊಳಿಸುತ್ತದೆ ಅಥವಾ ಅದು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗುತ್ತದೆ.  ಸ್ಪಷ್ಟವಾಗಿಯೇ ಕಲ್ಪನಾತೀತ ವಿದ್ಯಮಾನಗಳು ನಿಮ್ಮ ಕತೆಯಲ್ಲಿ ಘಟಿಸುತ್ತವೆ. ನಿಮ್ಮ ಪಾತ್ರ ಬಾಗಿಲ ಹಿಡಿಕೆಯನ್ನು ಸುಮ್ಮನೇ ಹಿಡಿಯುವುದಿಲ್ಲ, ಅವನು ಅದನ್ನು "ಹಿಂಡು"ತ್ತಾನೆ. ರೈಲು "ಹುಚ್ಚು ಹಿಡಿದಂತೆ" ಓಡತೊಡಗುತ್ತದೆ  - ಸದ್ಯದಲ್ಲೇ ಅಪಘಾತವಾಗಲಿದೆಯೆ? ಇಲ್ಲ, ಹಾಗೇನಿಲ್ಲ, ಸ್ವಲ್ಪ ಹೊತ್ತಿನಲ್ಲೇ ನಾವು ಅದು ಸ್ಟೇಶನ್ ತಲುಪಿದ ಬಗ್ಗೆ ಓದುತ್ತೇವೆ, ಅದೂ ಸ್ವಲ್ಪ ತಡವಾಗಿ ತಲುಪುತ್ತದೆ.  ಗಾಳಿ "ಅಳುತ್ತಿರುವಂತೆ ಸುಯ್ಲಿಡುತ್ತದೆ", ಒಬ್ಬ ಪ್ರಯಾಣಿಕ "ನರಕದರ್ಶನವಾದಂತೆ" ಕಂಗೆಡುತ್ತಾನೆ, ಪ್ಲ್ಯಾಟ್‌ಫಾರ್ಮ್ ಮೇಲೆ ನಿಂತ ಹೆಣ್ಣೊಬ್ಬಳು "ದಾರುಣಮೂರ್ತಿಯಂತೆ" ನಿಂತಿದ್ದಾಳೆ, ಅಥವಾ ಇನ್ನೂ ಕೆಟ್ಟದಾಗಿ ಹೇಳಬೇಕೆಂದರೆ "ಸಿಡಿಲಿನ ಆಘಾತಕ್ಕೆರವಾದ ಪ್ರತಿಮೆಯಂತೆ" ನಿಂತಿದ್ದಾಳೆ. ಇಷ್ಟೆಲ್ಲ ಆದ ಬಳಿಕ ಪ್ರತಿಯೊಬ್ಬರು ಎಂದಿನಂತೆ ಸಹಜವಾಗಿ ಬದುಕುತ್ತಿರುತ್ತಾರೆ, ಓಡಾಡುತ್ತ, ತಿನ್ನುತ್ತ, ಸಂಸಾರ ನಡೆಸುತ್ತ ಇರುತ್ತಾರೆ. ನಿಜಕ್ಕೂ ಅಲ್ಲಿ ಏನೂ ನಡೆಯುವುದಿಲ್ಲ. ಪ್ಲೀನಿ ದ ಯಂಗರ್‌ನ "ಪೋರ್ಟೇಟ್ ಆಫ್ ಅ ವಲ್ಕಾನಿಕ್ ಇರಪ್ಷನ್" ಕಡೆ ತಾವು ಒಮ್ಮೆ ಗಮನ ಹರಿಸಿದಲ್ಲಿ ತಮ್ಮ ಕಲಾತ್ಮಕ ಪುನರುಜ್ಜೀವನ ಸಾಧ್ಯವಾದೀತು ಎಂದು ಸೂಚಿಸಲು ಬಯಸುತ್ತೇವೆ.

(ಈ ಅನುವಾದದ ಆಯ್ದ ಭಾಗ "ಅಕ್ಷರ ಸಂಗಾತ" ದ ಡಿಸೆಂಬರ್-ಫೆಬ್ರವರಿ 2022 ಸಂಚಿಕೆಯಲ್ಲಿ ಪ್ರಕಟವಾಗಿದ್ದು ಅದರ ಪೂರ್ಣಪಠ್ಯ ಇಲ್ಲಿದೆ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ