Sunday, February 13, 2022

Its a Big Nothing Mother...


ಕ್ಲೇರಿ ಕೀಗನ್ ಐ‍ರ‍್ಲೆಂಡ್‌ನ ಹೆಸರಾಂತ ಲೇಖಕಿ. ಈಕೆಯ ಕೃತಿಗಳು ಇಪ್ಪತ್ತಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿವೆ, ಹಲವಾರು ಪುರಸ್ಕಾರಗಳಿಗೆ ಪಾತ್ರವಾಗಿವೆ. ಈಕೆಯ Foster ಕೃತಿ ಇಪ್ಪತ್ತೊಂದನೆಯ ಶತಮಾನದ ಐವತ್ತು ಉತ್ಕೃಷ್ಟ ಕೃತಿಗಳಲ್ಲಿ ಒಂದು ಎಂದು ‘ದ ಟೈಮ್ಸ್’ ಪಟ್ಟಿ ಮಾಡಿತ್ತು. ಪ್ರಸ್ತುತ ಕೃತಿ Small Things Like These ಓದುಗ ವಲಯದಲ್ಲಿ ತುಂಬ ಹೆಸರು ಮಾಡುತ್ತಿದೆ, ಪ್ರಶಂಸೆಗೆ ಪಾತ್ರವಾಗುತ್ತಿದೆ.

ಈ ಕಾದಂಬರಿಯ ಕೇಂದ್ರ ಪಾತ್ರ ಫರ್ಲೊಂಗ್. ಮನೆಗೆಲಸ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಹತ್ತೊಂಬತ್ತರ ಹುಡುಗಿ ಅವನನ್ನು ಹೆತ್ತಿದ್ದು. ತಂದೆ ಯಾರು ಎನ್ನುವುದು ಅವನಿಗೆ ಗೊತ್ತಿಲ್ಲ. ಅವನಿಗೆ ಹನ್ನೆರಡು ತುಂಬುವ ಹೊತ್ತಿಗೆ ಅವನ ತಾಯಿ ಬಿದ್ದು, ತಲೆಗೆ ಏಟಾಗಿ ಸಾಯುತ್ತಾಳೆ. ವೈದ್ಯರು ಮೆದುಳಿನ ರಕ್ತಸ್ರಾವದಿಂದ ಎಂದಿದ್ದರು. ಮದುವೆಯಾಗದೆ ಬಸುರಾದ ಕಾರಣಕ್ಕೆ ಅವಳನ್ನು ಇಡೀ ಊರು ತಿರಸ್ಕಾರದಿಂದ ಕಂಡಿತ್ತು. ಬೇರೆ ಯಾರೇ ಆಗಿದ್ದರೂ ಕೆಲಸದಿಂದ ತೆಗೆದು ಹಾಕುತ್ತಿದ್ದರು. ಆದರೆ ಮಿಸೆಸ್ ವಿಲ್ಸನ್ ಹಾಗೆ ಮಾಡದೆ, ಹೆರಿಗೆ ಮಾಡಿಸಿ, ಪೊರೆಯುತ್ತಾಳೆ. ಮುಂದೆ ಅವಳು ಸತ್ತ ಮೇಲೂ ಸ್ವತಃ ತಾಯಿಯಂತೆ ಫರ್ಲೊಂಗ್‌ನನ್ನು ಸಾಕುತ್ತಾಳೆ, ಶಿಕ್ಷಣ ಕೊಡಿಸುತ್ತಾಳೆ. ಶಾಲೆಯಲ್ಲಿ ಫರ್ಲೊಂಗ್ ಸತತವಾಗಿ ಅಪಮಾನ, ನಿಂದೆ, ಕುಹಕ ಎದುರಿಸಿದಂತೆಯೇ ಮಿಸೆಸ್ ವಿಲ್ಸನ್‌ಗೂ ಕೆಟ್ಟ ಹೆಸರು ಬರುತ್ತದೆ. 

ಕಥಾನಕ ತೊಡಗುವ ಕಾಲಕ್ಕೆ ಫರ್ಲೊಂಗ್ ಊರಲ್ಲಿ ಸಣ್ಣ ಕಟ್ಟಿಗೆ ಡಿಪೊ ಇಟ್ಟು ತಕ್ಕ ಮಟ್ಟಿಗೆ ಸೆಟ್ಲ್ ಆಗಿದ್ದಾನೆ. ಸಾರಾಯಿ ಕುಡಿಯದವನು, ನ್ಯಾಯದಿಂದ ನಡೆಯುವವನು ಎಂದು ಗೌರವ ಸಂಪಾದಿಸಿದ್ದಾನೆ, ಮದುವೆಯಾಗಿ ಐದು ಹೆಣ್ಣು ಮಕ್ಕಳ ತಂದೆಯಾಗಿದ್ದಾನೆ. ತೀವ್ರ ಬಡತನ, ಸಾಲ, ನಿರುದ್ಯೋಗ, ಬ್ಯಾಂಕಿನವರ ಜಪ್ತಿ ಎಲ್ಲ ಕಾಡುತ್ತಿರುವ ತೊಂಬತ್ತರ ದಶಕದ ದಿನಗಳಲ್ಲಿ ಫರ್ಲೊಂಗ್ ಇದ್ದುದರಲ್ಲಿ ತನ್ನ ಕಾಲ ಮೇಲೆ ತಾನು ನಿಂತಿದ್ದಾನೆ, ಅಶಕ್ತರಿಗೆ ಕೈಲಾದ ಸಹಾಯವನ್ನೂ ಮಾಡಿದ್ದಾನೆ. ಆದರೆ ಅವನಿಗೆ ಗೊತ್ತು, ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವ ಪ್ರಸಂಗ ಬರುವುದಕ್ಕೆ ಇಂಥಾದ್ದೇ ಎಂಬ ಕಾರಣವಾಗಲಿ, ತುಂಬ ದೀರ್ಘ ಕಾಲವಾಗಲಿ ಬೇಕಾಗಿಲ್ಲ ಎನ್ನುವ ಸತ್ಯ. ಅವನು ಬಂದಿದ್ದು ಅಂಥದ್ದೇ ಸ್ಥಿತಿಯಿಂದ, ಹಾಗಾಗಿ ಅವನು ಅಂಥದ್ದೇ ಸ್ಥಿತಿಗೆ ಸದಾ ಸಿದ್ಧನಾಗಿಯೇ ಇದ್ದನೇನೋ. 

ಕ್ರಿಸ್‌ಮಸ್ ಮತ್ತೆ ಬಂದಿದೆ. ಊರೆಲ್ಲಾ ಮಂಜು ಸುರಿಯುತ್ತಿದೆ. ಹೊರಗೆ ಕಾಲಿಡುವುದೇ ಕಷ್ಟ ಎಂಬಷ್ಟು ಚಳಿಯಿದೆ. ಫರ್ಲೊಂಗನ ಡೆಲಿವರಿ ವ್ಯಾನಿನ ಟಯರುಗಳು ಮಂಜಿನ ರಸ್ತೆಯಲ್ಲಿ ಕೆಟ್ಟು ಹೆಚ್ಚು ಕಾಲ ಬರುವುದು ಕಷ್ಟ ಎಂಬಷ್ಟು ಓಡಾಟ ನಡೆಸಬೇಕಾಗಿ ಬಂದಿದೆ. ಎಲ್ಲೆಲ್ಲೂ ಉರುವಲಿನ ಬೇಡಿಕೆ ಹೆಚ್ಚಿದೆ. 

ಇನ್ನು ಈ ಕಾದಂಬರಿಯ ಒಂದು ಕೇಂದ್ರ ಎನ್ನಬಹುದಾದ ಅಧ್ಯಾಯದ ಅನುವಾದ...

****

ಮರುದಿನ ಮುಂಜಾನೆ ಫರ್ಲೊಂಗ್ ಎದ್ದು ತೆರೆ ಸರಿಸಿದಾಗ ಕಂಡ ಆಗಸ ವಿಚಿತ್ರವಾಗಿದೆ ಅನಿಸಿತು. ಅಲ್ಲಿ ಕೆಲವೇ ಕೆಲವು ಮಂದ ತಾರೆಗಳಷ್ಟೇ ಕಂಡವು. ಬೀದಿಯಲ್ಲಿ ಒಂದು ನಾಯಿ ಯಾವುದೋ ಟಿನ್ ಕ್ಯಾನನ್ನು ಮರಗಟ್ಟಿದಂತಿದ್ದ ಪೇವ್ಮೆಂಟಿನುದ್ದಕ್ಕೂ ತನ್ನ ಮೂಗಿನಿಂದ ಸಶಬ್ದ ತಳ್ಳುತ್ತ ಅದನ್ನು ನೆಕ್ಕಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾ ಇತ್ತು. ಕಾಗೆಗಳೆಲ್ಲ ಆಗಲೇ ಹಾಜರಾಗಿದ್ದವು. ಕೆಲವೊಮ್ಮೆ ಸ್ವಾಭಾವಿಕವಾದ ಪುಟ್ಟ ಪುಟ್ಟ ಕಾ ದೊಂದಿಗೆ ಅಲ್ಲಲ್ಲೇ ಸುತ್ತುತ್ತಿದ್ದರೆ ಇನ್ನು ಕೆಲವೊಮ್ಮೆ ಈ ಜಗತ್ತು ಸರಿಯಿಲ್ಲ ಎಂದು ತಕರಾರು ದಾಖಲಿಸುವವರ ಹಾಗೆ ಕರ್ಕಶವಾಗಿ ಉದ್ದುದ್ದ ಕಾ ಕಾ ಗಳನ್ನೂ ಕೊಡುತ್ತಿದ್ದವು. ಒಬ್ಬ ಒಂದು ಪಿಜ್ಜಾ ಬಾಕ್ಸನ್ನು ಕಾಲಿನಿಂದ ಮೆಟ್ಟಿ ಹಿಡಿದು ಕೊಕ್ಕಿನಿಂದ ತರಿದು ನೋಡುವವನಿದ್ದ, ತುಂಬ ಎಚ್ಚರಿಕೆಯೊಂದಿಗೆ. ಅನುಮಾನಾಸ್ಪದವಾದ ಏನಾದರೂ ಕಂಡರೆ ತಕ್ಷಣವೇ ನೆಗೆದು ಹೋಗಲು ರೆಕ್ಕೆಗಳನ್ನು ತಯಾರಾಗಿಯೇ ಇರಿಸಿದ್ದ. ಇನ್ನು ಕೆಲವು ಅಪ್ಟುಡೇಟ್ ಇದ್ದಂತಿದ್ದವು. ಅವು ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಒಬ್ಬನೇ ವಾಕ್ ಹೋಗುವುದನ್ನು ಇಷ್ಟಪಡುವ ಫರ್ಲೊಂಗ್ ಮೇಲೆ ಒಂದು ಕಣ್ಣಿಟ್ಟುಕೊಂಡೇ ತಮ್ಮ ತಮ್ಮ ರೆಕ್ಕೆಯನ್ನು ಒತ್ತಿಟ್ಟುಕೊಂಡು ಸುತ್ತಮುತ್ತಿನ ನೆಲವನ್ನು ಪರಿಶೀಲಿಸುತ್ತಿರುವವರಂತೆ ಗಂಭೀರವಾಗಿ ಅತ್ತಿತ್ತ ನಡೆದಾಡಿಕೊಂಡಿದ್ದವು. 

ಹೆಂಡತಿ ಅಯ್ಲೀನ್ ಗಾಢ ನಿದ್ದೆಯಲ್ಲಿದ್ದಳು. ಕೆಲವು ಕ್ಷಣಕಾಲ ಅವನು ಅವಳನ್ನೇ ನೋಡುತ್ತ ನಿಂತ. ಅವಳ ಬೋಳಾದ ಹೆಗಲು, ನಿದ್ದೆಯಲ್ಲಿರುವ ಅವಳ ಕೈಗಳು, ದಿಂಬಿನ ಹಿನ್ನೆಲೆಯಲ್ಲಿ ಕಪ್ಪಗೆ ಕಾಣುವ ಅವಳ ತಲೆಗೂದಲು, ತೀರ ಸುಸ್ತಾದಂತೆ ಮಲಗಿರುವ ಅವಳ ನಿದ್ದೆಯ ಅಗತ್ಯ ಅವನ ಮನಸ್ಸಿನಲ್ಲಿ ಸುಳಿದು ಹೋದವು. ಅವಳೊಂದಿಗೆ ಇದ್ದು ಬಿಡಬೇಕು, ಅವಳನ್ನೊಮ್ಮೆ ನೇವರಿಸಬೇಕು ಎಂಬ ಇಚ್ಛೆಯನ್ನು ಹತ್ತಿಕ್ಕಿ ಅವನು ಕುರ್ಚಿಯ ಮೇಲಿದ್ದ ಅವನ ಶರ್ಟು, ಪ್ಯಾಂಟ್ ಕೈಗೆತ್ತಿಕೊಂಡು ಅವಳಿಗೆ ಎಚ್ಚರವಾಗದ ಹಾಗೆ ಹೊರಡಲು ಅಣಿಯಾದ. ಕೆಳಗಡೆ ಇಳಿಯುವುದಕ್ಕೂ ಮುನ್ನ ಅವನೊಮ್ಮೆ ಕ್ಯಾಥಲೀನ್ ಮಲಗಿರುವ ಕಡೆಗೆ ಇಣುಕಿದ. ಹಲ್ಲು ತೆಗೆಸಿಕೊಂಡಾದ ಬಳಿಕ ಅವಳೂ ಗಾಢ ನಿದ್ದೆಯಲ್ಲಿದ್ದಳು. ಅಲ್ಲೇ ಪಕ್ಕದಲ್ಲಿ ಮಲಗಿದ್ದ ಜೋನ್ ಒಮ್ಮೆ ಹೊರಳಾಡಿ, ಮಗ್ಗಲು ಬದಲಿಸಿ, ದೀರ್ಘ ಉಸಿರೊಂದನ್ನು ಬಿಟ್ಟು ಪುನಃ ಮಲಗಿದ್ದು ಕಂಡ. ದೂರದಲ್ಲಿದ್ದ ಹಾಸಿಗೆಯ ಮೇಲೆ ಲೊರೆಟ್ಟಾ ಪೂರ್ತಿ ಎಚ್ಚರದಲ್ಲಿ ಕಣ್ಣುಬಿಟ್ಟುಕೊಂಡೇ ಇದ್ದಳು. ಅವಳ ಕಣ್ಣುಗಳ ಮಿಂಚನ್ನು ಗಮನಿಸುವಷ್ಟು ಅವನಿಗೆ ವ್ಯವಧಾನ ಇದ್ದಂತಿರಲಿಲ್ಲ. 

"ಪುಟ್ಟಾ, ಚೆನ್ನಾಗಿದ್ದೀಯಲ್ಲ?" ಫರ್ಲೊಂಗ್ ಪಿಸುಗುಟ್ಟಿದ.
"ಹಾಂ ಡ್ಯಾಡಿ, ನಾನು ಆರಾಮಿದ್ದೇನೆ"
"ಹೊರಗೆ ಹೋಗ್ತಿದ್ದೇನೆ, ಬೇಗ ಬಂದು ಬಿಡ್ತೇನೆ"
"ಹೋಗಲೇ ಬೇಕಾ ಡ್ಯಾಡಿ?"
"ಅರ್ಧಗಂಟೆಯೊಳಗೆ ಬಂದುಬಿಡ್ತೇನೆ ಪುಟ್ಟಾ. ನೀನೀಗ ಸ್ವಲ್ಪ ಮಲಗು"

ಕಿಚನ್ನಿನಲ್ಲಿ ಅವನು ಕೆಟ್ಲ್ ಅಥವಾ ಟೀ ಎಂದೆಲ್ಲ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಒಂದು ಬ್ರೆಡ್ಡಿನ ತುಂಡಿಗೆ ಬಟರ್ ಉದ್ದಿಕೊಂಡು ಕೈಯಲ್ಲೇ ಹಿಡಿದು ತಿಂದು ಮುಗಿಸಿ ಹೊರಬಿದ್ದ. ರಸ್ತೆ ತುಂಬ ಮಂಜು ಬಿದ್ದಿತ್ತು, ಪೇವ್ಮೆಂಟಿನ ಮೇಲೆ ಸಾಗುವಾಗ  ಅವನ ಬೂಟುಗಳು ಎಂದಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದವು. ಭಾನುವಾರ ಬೇರೆ, ಇನ್ನೂ ಕತ್ತಲಿರುವಾಗಲೇ ಹೊರಬಿದ್ದಿದ್ದರಿಂದ ಇರಬಹುದು.  

ಅಂಗಳ ದಾಟಿ ಗೇಟಿನ ಬಳಿ ಬಂದಾಗ ಗೇಟಿನ ಚಿಲಕ ಮಂಜಿನಿಂದ ಗಟ್ಟಿ ಹಿಡಿದುಕೊಂಡಿತ್ತು. ಬೆಚ್ಚಗೆ ಮನೆಯೊಳಗಿರುವುದನ್ನು ಬಿಟ್ಟು ಹೀಗೆ ಹೊರಬೀಳಬೇಕಾಗಿ ಬಂದಿದ್ದಕ್ಕೆ ಬೈಯ್ದುಕೊಳ್ಳುತ್ತ ಬದುಕುವುದು ದೊಡ್ಡ ಹೊರೆ ಅಂದುಕೊಂಡ. ಪಕ್ಕದ ಮನೆಯಲ್ಲಿಯೂ ಬೆಳಕಿತ್ತು. ಅದರತ್ತ ಹೊರಟ. 

ಅವನು ಬಾಗಿಲು ತಟ್ಟಿದಾಗ "ಬಂದೇ" ಎಂದು ಕೂಗಿದ ಹೆಂಗಸಿನ ಧ್ವನಿ ಆ ಮನೆಯಾಕೆಯದಾಗಿರದೆ ಬೇರೊಂದು ಎಳೆಯ ಹುಡುಗಿಯ ಸ್ವರವಾಗಿತ್ತು. ಅವಳು ಉದ್ದನೆಯ ನೈಟಿ ತೊಟ್ಟು ಶಾಲು ಹೊದ್ದಿದ್ದಳು. ಸೊಂಟದ ತನಕ ಜೋತಾಡುತ್ತಿದ್ದ ಆಕೆಯ ತಲೆಗೂದಲು ಅತ್ತ ಕಂದು ಬಣ್ಣದ್ದೂ ಆಗಿರದೆ, ಇತ್ತ ಕೆಂಬಣ್ಣವನ್ನೂ ಹೊಂದಿರದೆ ದಟ್ಟ ಕಂದು ಛಾಯೆಯಿದ್ದ ಬಂಗಾರದ ಬಣ್ಣ ಹೊಂದಿತ್ತು. ಕಾಲುಗಳಲ್ಲಿ ಚಪ್ಪಲಿಯಿರಲಿಲ್ಲ. ಅವಳ ಹಿಂದೆ ಗ್ಯಾಸ್ ಕುಕ್ಕರಿನ ಮೇಲಿದ್ದ ಚಹ ಕಾಯಿಸುವ ಕೆಟ್ಲಿನ ಬುಡದಲ್ಲಿ ವರ್ತುಲಾಕಾರದ ಬೆಂಕಿ ಬೆಳಗುತ್ತಿತ್ತು. ಆಚೆ ಟೇಬಲ್ಲಿನ ಸುತ್ತ ಪುಟ್ಟಪುಟ್ಟ ಮೂವರು ಚಿಣ್ಣರು ಬಣ್ಣ ಹಾಕುವ ಪುಸ್ತಕ ಹಿಡಿದು ಕೂತಿದ್ದರು, ಅವರ ಪಕ್ಕ ಬಣ್ಣದ ಕಡಕುಗಳಿದ್ದ ಚೀಲವಿತ್ತು. ಪರಿಚಿತವಾದ ಯಾವುದೋ ಒಂದು ಸುವಾಸನೆ ರೂಮಿನ ತುಂಬ ಪಸರಿಸಿತ್ತು. 

ಫರ್ಲೊಂಗ್ "ತೊಂದರೆ ಕೊಡ್ತಿರೋದಿಕ್ಕೆ ಕ್ಷಮಿಸಿ" ಎಂದ. "ಪೆಡ್ಲಾಕ್ ತೆಗೆಯಲಿಕ್ಕಾಗದ ಹಾಗೆ ಹಿಡಿದುಕೊಂಡು ಬಿಟ್ಟಿದೆ, ಮಂಜು ಸುರೀತಿದೆಯಲ್ಲ. ಹಾಗಾಗಿ ಈ ದಾರಿಯಾಗಿ ಬರಬೇಕಾಯ್ತು." 

"ಅಯ್ಯೊ, ಅದಕ್ಕೇನಂತೆ, ತೊಂದರೆಯೇನಿಲ್ಲ" ಎಂದಳಾಕೆ. "ಬಿಸಿನೀರಿನ ಕೆಟ್ಲ್ ಬೇಕಾಗಿದೆ, ಸರಿಯಲ್ಲವೆ?" 

ಅವಳ ಮಾತು ಕೇಳುತ್ತಿದ್ದರೆ ಪೂರ್ವ ಪ್ರದೇಶದವಳಿರಬೇಕು ಅನಿಸುತ್ತಿತ್ತು. 

"ಅದೇ, ನಿಮಗೆ ಉಪದ್ರ ಕೊಡುತ್ತಿದ್ದೇನೆ..." 

ಅವಳು ತಲೆಗೂದಲನ್ನು ಹಿಂದಕ್ಕೆ ಎತ್ತಿಹಾಕಿದಾಗ ಅನುದ್ದಿಶ್ಯವಾಗಿ ಫರ್ಲೊಂಗನ ದೃಷ್ಟಿಗೆ ಅವಳ ತೆಳ್ಳಗಿನ ಮೇಲುದದ ಮೇಲೆ ಬಿತ್ತು. 

ಅವಳು ಕೆಟ್ಲ್ ಎತ್ತಿಕೊಡುತ್ತ, "ಕೆಟ್ಲ್ ರೆಡಿಯಾಗಿಯೇ ಇದೆ, ತಗೊಂಡು ಹೋಗುತ್ತೀರಲ್ಲ?" ಎಂದಳು. 

"ನೀವಿದನ್ನು ಟೀ ಮಾಡಲು ಕಾಯಿಸಿಟ್ಟಿದ್ದಿರೇನೋ..." ಎಂದ ಮುಜುಗರದಿಂದ. 

"ತಗೊಂಡು ಹೋಗಿ, ನಿಮಗೆ ನೀರು ಕೊಡದೇ ನಾವು ಗಂಟುಕಟ್ಟುವುದು ಅಷ್ಟರಲ್ಲೇ ಇದೆ" 

ಪ್ಯಾಡ್ಲಾಕ್ ಸಡಿಲಿಸಿ ಮರಳಿ ಬಂದು ಬಾಗಿಲು ತಟ್ಟಿದಾಗ, "ಬನ್ನಿ ಒಳಗೆ" ಎಂದು ಮೃದುವಾಗಿ ಕರೆದ ದನಿ ಕೇಳಿಸಿತು.  ಬಾಗಿಲು ದೂಡಿ ಒಳ ಹೊಕ್ಕಾಗ ಟೇಬಲ್ಲಿನ ಮೇಲೆ ಕ್ಯಾಂಡ್ಲ್ ಹಚ್ಚಿಟ್ಟಿದ್ದು ಕಂಡಿತು. ಮಕ್ಕಳಿಗಾಗಿ ವಿಟಾಮಿಕ್ಸ್ ಹಾಕಿದ ಬೌಲುಗಳಿಗೆ ಅವಳು ಬಿಸಿಹಾಲು ಬೆರೆಸುತ್ತಿದ್ದಳು. 

ಅವನು ಒಂದು ಕ್ಷಣ ಹಾಗೆಯೇ ನಿಂತು ಆ ಸರಳ ಖೋಲಿಯ ಶಾಂತಿಯನ್ನು ಮೈದುಂಬಿಕೊಳ್ಳತೊಡಗಿದ. ಅದೇ ಮನೆಯಲ್ಲಿ ತನ್ನ ಹೆಂಡತಿಯ ಜೊತೆ ತಾನು ಸಂಸಾರ ಹೂಡಿದರೆ ಹೇಗಿರುತ್ತದೆ ಎಂಬ ಕಲ್ಪನೆಯೊಂದಿಗೆ ತನ್ನ ಮನಸ್ಸಿನ ಒಂದು ಭಾಗ ಸುಖವಾಗಿ ವಿಹರಿಸಲು ಬಿಟ್ಟುಕೊಟ್ಟು ಮೈಮರೆತ. ಬೇರೆಲ್ಲೋ ಬೇರೆಯೇ ಬಗೆಯ ಒಂದು ಬದುಕನ್ನು ತಾನು ಬದುಕುವ ಸಂಭಾವ್ಯ ಸಾಧ್ಯತೆಯೊಂದಿಗೆ ಮೈಮರೆಯುವ ಚಾಳಿ ಇತ್ತೀಚಿನದು. ಇದು ತನಗೆ ರಕ್ತಗುಣವಾಗಿ ಬಂದಿದ್ದಿರಬಹುದೇ ಎಂಬ ಅನುಮಾನ ಕೂಡ. ಅವನಪ್ಪ ಒಂದು ವೇಳೆ ಬೇರೆ ಬಗೆಯ ವ್ಯಕ್ತಿಯಾಗಿದ್ದು ಲಂಡನ್ನಿಗೆ ಹೋಗುವ ಬೋಟು ಹತ್ತಿದ್ದರೆ? ತಾನು ಹೀಗೆಲ್ಲ ಯೋಚಿಸುವುದರಲ್ಲಿ ತಪ್ಪೇನಿಲ್ಲ ಎಂದೂ ಅನಿಸುವುದು, ಸರಿಯಲ್ಲ ಎಂದೂ ಅನಿಸುವುದು. ಬದುಕು ಯಾವುದೋ ಒಂದು ತಿರುವಿನಲ್ಲಿ ಮಾಡುವ ಆಯ್ಕೆ ಹೇಗಿರುತ್ತದೆ ಎಂದರೆ, ಮತ್ತೆಂದೂ ನಾವು ಹಿಂದಿರುವುದು ಸಾಧ್ಯವೇ ಇರುವುದಿಲ್ಲ.

"ಕೆಲಸ ಆಯ್ತಾ?" ಕೆಟ್ಲ್ ತೆಗೆದುಕೊಳ್ಳುತ್ತ ಕೇಳಿದಳವಳು.
"ಓಹೋ. ತುಂಬ ಥ್ಯಾಂಕ್ಸ್ ನಿಮಗೆ" ಕೆಟ್ಲ್ ಕೊಡುವಾಗ ತಗುಲಿದ ಅವಳ ಕೈ ಎಷ್ಟು ತಣ್ಣಗಿದೆ ಎಂದುಕೊಂಡ. 
"ಒಂದು ಕಪ್ ಟೀ ತಗೊಳ್ತೀರ?"
"ಖಂಡಿತಾ ತಗೊಳ್ತಿದ್ದೆ, ಆದರೆ ನನಗೆ ಆಗಲೇ ತಡವಾಗಿದೆ"
"ನೀರು ಕುದಿಯುವುದಕ್ಕೇನೂ ಸಮಯ ಹಿಡಿಯುವುದಿಲ್ಲ"
"ಇಲ್ಲ, ಆಗಲೇ ಸಮಯ ಮೀರಿದೆ. ನಿಮಗೆ ಒಂದಿಷ್ಟು ಕಟ್ಟಿಗೆ ಇಳಿಸಲು ಯಾರಾದರೂ ಸಿಗ್ತಾರಾ ನೋಡುವೆ"
"ಅಯ್ಯೊ, ಅದರ ಅಗತ್ಯವೇನಿಲ್ಲ"
ಅಲ್ಲಿಂದ ಹೊರಬರುತ್ತ, "ಹ್ಯಾಪಿ ಕ್ರಿಸ್ಮಸ್" ಎಂದ.
"ನಿಮಗೂ ಕ್ರಿಸ್ಮಸ್ ಶುಭಾಶಯಗಳು..." ಎಂದು ಆಕೆ ಅಲ್ಲಿಂದಲೇ ಹೇಳುತ್ತಿರುವುದು ಕೇಳಿಸಿತು.

* ****

ಗೇಟ್ ದೂಡಿ ತೆರೆದು ಅಲ್ಲಿದ್ದ ಕಟ್ಟಿಗೆ ರಾಶಿ ಕಣ್ಣಿಗೆ ಬೀಳುತ್ತಲೇ ಫರ್ಲೊಂಗ್ ಮತ್ತೆ ಅವನ ವೃತ್ತಿಯೊಂದಿಗೆ ಒಂದಾದ. ಮುಂದೇನು ಮಾಡಬೇಕೆಂಬ ಯೋಚನೆಯೊಂದೇ ಅವನನ್ನು ಆವರಿಸಿಕೊಂಡಿತು. ಲಾರಿಯ ಬಗ್ಗೆ ಅವನಲ್ಲಿ ಸ್ವಲ್ಪ ಆತಂಕವೇ ಇತ್ತು. ಇಗ್ನಿಶನ್ ಆನ್ ಮಾಡುತ್ತಲೇ ಸ್ಟಾರ್ಟ್ ಆದುದರಿಂದ ಒಂದು ನೀಳ ನಿಟ್ಟುಸಿರು ಅವನಿಂದ ಹೊರಬಿತ್ತು. ಆಗಲೇ ಅವನಿಗೆ ತಾನು ಉಸಿರು ಹಿಡಿದಿದ್ದೆ ಎಂಬ ಅರಿವಾಗಿದ್ದೂ.  ಗಾಡಿ ಓಡತೊಡಗಿತು. ಹಿಂದಿನ ಸಂಜೆ ಲೋಡನ್ನು ಒಮ್ಮೆ ಚೆಕ್ ಮಾಡಿದ್ದ. ಆರ್ಡರ್ ಜೊತೆ ಅದರ ಹೊಂದಾಣಿಕೆ ಸರಿಯಾಗಿದೆಯೇ ಎಂಬುದನ್ನು ನೋಡಿದ್ದರೂ ಈಗ ಮತ್ತೊಮ್ಮೆ ಚೆಕ್ ಮಾಡಿದ್ದ. ಅಂಗಳವನ್ನು ಸರಿಯಾಗಿ ಚೊಕ್ಕ ಮಾಡಿದ್ದಾರೆಯೇ ಎಂದೂ ನೋಡಿ ಬಂದಿದ್ದ. ಹಿಂದಿನ ರಾತ್ರಿ ಲಾಕ್ ಮಾಡುವ ಮುನ್ನ ಎಲ್ಲವನ್ನೂ ನೋಡಿಯೇ ಇದ್ದನಾದರೂ ಈಗ ಮತ್ತೊಮ್ಮೆ ತೂಕ ಮಾಡುವ ಜಾಗ ಸಹ ನೋಡಿ ಬಂದ, ಅಲ್ಲೇನಾದರೂ ಬಿಟ್ಟಿದ್ದರೆ ಎಂದು. ಎಲ್ಲವೂ ಸರಿಯಾಗಿಯೇ ಇತ್ತು. ಬಾಗಿಲು ತೆರೆದು ಲೈಟ್ಸ್ ಹಾಕಿ ನೋಡಿದ. ಪೇಪರುಗಳ ರಾಶಿ, ಟೆಲಿಫೋನ್ ಡೈರೆಕ್ಟರಿಗಳು, ಫೈಲು, ಫೋಲ್ಡರುಗಳು, ಡೆಲಿವರಿ ಕೊಟ್ಟ ದಾಖಲಾತಿ ಪತ್ರಗಳ ಫೈಲು, ಬಿಲ್ಲುಗಳ ಪ್ರತಿಯನ್ನು ಕ್ರಮಬದ್ಧವಾಗಿ ಚುಚ್ಚು ಮುಳ್ಳಿಗೆ ಸೇರಿಸಿರುವುದು ಎಲ್ಲ ಕಂಡಿತು. ದಾರಿಯ ನಡುವಿನ ಒಂದು ಮನೆಯಲ್ಲಿ ಡೆಲಿವರಿ ಕೊಡಬೇಕಾದ ಕಟ್ಟಿಗೆ ಚೀಲಕ್ಕೆ ಅಂಟಿಸಲು ಒಂದು ಪುಟ್ಟ ನೋಟ್ ಬರೆಯುತ್ತಿದ್ದಾಗಲೇ ಟೆಲಿಫೋನ್ ಸದ್ದು ಮಾಡಿತು. ಅದು ಪೂರ್ತಿಯಾಗಿ ಸದ್ದಡಗಿಸುವ ತನಕವೂ ಕಾದು ಅದೇನಾದರೂ ಪುನಃ ಸದ್ದು ಮಾಡುವುದೇ ಎಂದು ನೋಡಲು ಅಲ್ಲಿಯೇ ಉಳಿದ. ನೋಟ್ ಬರೆದು ಮುಗಿಸಿ, ಬಾಗಿಲು ಲಾಕ್ ಮಾಡಿ ಅಲ್ಲಿಂದ ಹೊರಟ.

ಕಾನ್ವೆಂಟ್ ತನಕ ಡ್ರೈವ್ ಮಾಡಿ, ಫರ್ಲೊಂಗನ ಲಾರಿಯ ಹೆಡ್‌ಲೈಟುಗಳು ಕಟ್ಟಡದ ಕಿಟಕಿ ಗಾಜಿನ ಮೇಲೆ ಬಿದ್ದು ಫಳಫಳಿಸುವ ಕ್ಷಣದಲ್ಲಿ ಯಾಕೋ ಏನೋ, ಅವನಿಗೆ ಇಲ್ಲಿ ತಾನು ತನ್ನನ್ನೇ ಮುಖಾಮುಖಿಯಾಗಲಿದ್ದೇನೆ ಎಂದು ಅನಿಸಿಬಿಟ್ಟಿತು. ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಸದ್ದಿಲ್ಲದೆ ಎದುರು ಭಾಗ ದಾಟಿ ಮುಂದಕ್ಕೆ ಗಾಡಿ ತಂದು, ರಿವರ್ಸ್ ಹಾಕಿ, ಕಟ್ಟಿಗೆ ಕೂಡಿಡುವ ಶೆಡ್ಡಿನೊಳಗೆ ಗಾಡಿ ಹೊಗಿಸಿದ ಬಳಿಕ ಇಂಜಿನ್ ಆಫ್ ಮಾಡಿದ. ಗಾಡಿಯಿಂದ ಹೊರಬಂದು ಕಾಂಪೌಂಡಿನ ಪೊದೆಗಳುದ್ದಕ್ಕೂ ದೃಷ್ಟಿ ಹರಿಸಿದ. ಮಾತೆ ಮೇರಿಯ ಪ್ರತಿಮೆ ನೋಡುತ್ತ, ಅವಳು ತನ್ನ ಕಾಲ ಬಳಿ ಬಿದ್ದಿದ್ದ ಕೃತಕ ಹೂವುಗಳಿಂದ ಮತ್ತು ಕಟ್ಟಡದ ಮೇಲ್ಭಾಗದ ಕಿಟಕಿಗಳಿಂದ ಬಿದ್ದ ಬೆಳಕಿಗೆ ಹೊಳೆಯುತ್ತಿದ್ದ ಮಂಜಿನಿಂದ ಬೇಸರಗೊಂಡಂತೆ  ತನ್ನ ದೃಷ್ಟಿಯನ್ನು ಕೆಳಹಾಕಿ ನಿಂತಿದ್ದಾಳೆ ಎಂದುಕೊಂಡ.  ನಿದ್ದೆಗಣ್ಣಲ್ಲೇ ಮೆಟ್ಟಿಲೇರಿದ.

ಇಲ್ಲಿ ಮೇಲಿಂದ ಎಲ್ಲವೂ ಎಷ್ಟು ನಿಶ್ಶಬ್ದವಾಗಿ, ಸ್ತಬ್ದವಾಗಿದೆ, ಆದರೆ ಯಾವತ್ತೂ ಇಲ್ಲಿ ಶಾಂತಿಯ ಅನುಭವ ಯಾಕೆ ಆಗುವುದಿಲ್ಲ? ದಿನ ಇನ್ನೂ ಸುರುವಾಗಿಲ್ಲ, ಫರ್ಲೊಂಗ್ ಕೆಳಕ್ಕೆ ನೋಡಿದ, ಕಪ್ಪಗೆ ಹೊಳೆಯುತ್ತಿದ್ದ ನದಿಯಲ್ಲಿ ದೀಪಗಳಿಂದ ಬೆಳಗುತ್ತಿದ್ದ ದಡದ ಮೇಲಿನ ಊರು ಅರ್ಧಕ್ಕರ್ಧ ಪ್ರತಿಫಲಿಸಿತ್ತು. ದೂರದಿಂದ ಕಾಣುವಾಗ ಹೆಚ್ಚಿನ ಸಂಗತಿಗಳು ತುಂಬ ಚೆನ್ನಾಗಿರುವಂತೆ ಕಾಣುತ್ತವೆ.  ಯಾವುದು, ನೀರಿನಲ್ಲಿ ಪ್ರತಿಫಲಿಸುತ್ತಿದ್ದ ಊರೋ, ದಡದ ಮೇಲಿನ ಊರೋ ಎಂದು ನಿರ್ಧರಿಸುವುದು ಆಗಲಿಲ್ಲ ಅವನಿಗೆ. ಎಲ್ಲೋ ದೂರದಿಂದ ಕ್ರಿಸ್ಮಸ್ ಹಾಡುಗಳು ಕ್ಷೀಣವಾಗಿ ತೇಲಿ ಬರುತ್ತಿದ್ದವು. ಪಕ್ಕದ ಸೇಂಟ್ ಮಾರ್ಗರೆಟ್ಸ್ ಬೋರ್ಡಿಂಗ್‌ನ ಅವೇ ಪುಟ್ಟ ಬಾಲೆಯರು ಹಾಡುತ್ತಿರಬಹುದೇ ಎಂಬ ಅನುಮಾನ ಮನಸ್ಸಿನಲ್ಲಿ ಹಾಯ್ದು ಹೋಯ್ತು. ಆ ಪುಟ್ಟ ಮಕ್ಕಳು ನಿಜಕ್ಕೂ ಮನೆಗೆ ಹೋಗಲಿಲ್ಲವೆ ಹಾಗಾದರೆ? ನಾಳೆಯಲ್ಲ ನಾಡಿದ್ದು ಕ್ರಿಸ್ಮಸ್ ಈವ್. ಅದು ನಿಶ್ಚಯವಾಗಿ ಟ್ರೈನಿಂಗ್ ಸ್ಕೂಲಿನ ಹುಡುಗಿಯರೇ ಇರಬೇಕು. ಅಥವಾ ಮಾಸ್‌ಗೂ ಮುನ್ನ ತಯಾರಿ ನಡೆಸುತ್ತಿರುವ ನನ್ಸ್ ಇರಬಹುದೆ? ಕ್ಷಣಕಾಲ ಅವನು ಅಲ್ಲಿಯೇ ನಿಂತು ಕೆಳಭಾಗದಲ್ಲಿ ಕಾಣುತ್ತಿದ್ದ ಊರನ್ನೇ ನೋಡತೊಡಗಿದ. ಕೆಲವು ಮನೆಗಳ ಚಿಮ್ನಿಯಿಂದ ಹೊಗೆ ಹೊರಡತೊಡಗಿತ್ತು. ಆಗಸದಲ್ಲಿ ನಕ್ಷತ್ರಗಳು ಪೇಲವಗೊಳ್ಳುತ್ತಿದ್ದವು. ಇದ್ದುದರಲ್ಲೇ ಹೆಚ್ಚು ಹೊಳೆಯುತ್ತಿದ್ದ ಒಂದು ತಾರೆ ಇದ್ದಕ್ಕಿದ್ದಂತೆ ನಭದಿಂದ ಜಾರಿ ಬಿತ್ತು, ಹಾದಿಯುದ್ದಕ್ಕೂ ಚಾಕ್‍ನಿಂದ ಒಂದು ಗೆರೆ ಎಳೆದ ಹಾಗೆ ಮಾಡಿ ಅದು ಮಾಯವಾಯಿತು. ಇನ್ನೂ ಒಂದು ಅದೇ ತರ ಉರಿದು ಬೀಳಲು ತಯರಾಗುತ್ತಿರುವಂತೆ ಕಂಡಿತು.

ಕಟ್ಟಿಗೆ ಶೆಡ್ಡಿನ ಬಾಗಿಲು ತೆರೆಯಲು ಹೋದಾಗ ಅದರ ಚಿಕಲ ಮಂಜಿಗೆ ಗಟ್ಟಿಯಾಗಿ ಹಿಡಿದುಕೊಂಡಿರುವ ಅರಿವಾಯ್ತು. ತನ್ನ ಬದುಕಿನ ಎಷ್ಟೊಂದು ಸಮಯ ಹೀಗೇ ಹಿಡಿದುಕೊಂಡ ಬಾಗಿಲು ತೆರೆಯುವುದರಲ್ಲಿ ಮತ್ತು ಬಾಗಿಲಿನ ಎದುರು ನಿಂತು ಕಾಯುವುದರಲ್ಲೇ ವ್ಯಯಿಸಿದ್ದೇನೆ ಎಂದು ತನ್ನನ್ನು ತಾನು ಬೇಸರದಿಂದ ಕೇಳಿಕೊಂಡ. ಬಲ ಹಾಕಿ ಚಿಲಕ ಜಗ್ಗಿ ಬಾಗಿಲು ತೆರೆಯುತ್ತಲೇ ಒಳಗಡೆ ಏನೋ ಇದೆ ಅನಿಸತೊಡಗಿತು. ಸಾಮಾನ್ಯವಾಗಿ ಮಲಗುವುದಕ್ಕೆ ಸರಿಯಾದ ಜಾಗ ಸಿಗದ ನಾಯಿಗಳು ಹೀಗೆ ಶೆಡ್ಡಿನ ಒಳಗೆ ಸೇರಿಕೊಳ್ಳುವುದು ಇದ್ದೇ ಇತ್ತು. ಈಗ ಅವನ ಕಣ್ಣಿಗೆ ಕತ್ತಲಲ್ಲಿ ಏನೂ ಸರಿಯಾಗಿ ಕಾಣಿಸಲಿಲ್ಲ. ಲಾರಿ ಹತ್ತಿರ ಹೋಗಿ ಟಾರ್ಚ್ ತರಲೇ ಬೇಕಾಯಿತು. ಟಾರ್ಚಿನ ಬೆಳಕು ಹರಿಸಿದಾಗ ನೆಲದ ಮೇಲೆ ಬಿದ್ದಿರುವುದನ್ನು ಕಾಣುತ್ತಲೇ ಅದೊಂದು ಪುಟ್ಟ ಹುಡುಗಿ ಮತ್ತು ಅದರ ಸ್ಥಿತಿ ಗಮನಿಸಿದರೆ ಒಂದು ರಾತ್ರಿಗಿಂತ ಹೆಚ್ಚು ಕಾಲದಿಂದ ಅದು ಇಲ್ಲಿಯೇ ಇದ್ದಿರಬೇಕು ಅನಿಸಿತು.

"ದೇವರೇ!" ಎಂಬ ಉದ್ಗಾರ ಅವನಿಂದ ಹೊರಟಿತು. ತಕ್ಷಣವೇ ಅವನು ತನ್ನ ಕೋಟ್ ತೆಗೆದು ಆ ಹುಡುಗಿಗೆ ಹೊದೆಯಲು ಹೋದ. ಆದರೆ ಆ ಹುಡುಗಿ ತಕ್ಷಣ ಹಿಂಜರಿದು ಮತ್ತಷ್ಟು ಮುದುರಿಕೊಂಡಳು.

‘ಹೆದರ ಬೇಡ ಮಗೂ, ನಾನು ಕಟ್ಟಿಗೆ ಹಾಕಲು ಬಂದಿದ್ದೆ ಅಷ್ಟೆ.’

ಏನು ಮಾಡುವುದೆಂದು ತೋಚದೆ ಅವನು ಅಕ್ಕಪಕ್ಕ ಟಾರ್ಚ್ ಬಿಟ್ಟು ಗಮನಿಸಿದ. ಅವಳು ಬಿದ್ದುಕೊಂಡಿದ್ದ ಆಸುಪಾಸಿನಲ್ಲೆಲ್ಲ ಮಲಮೂತ್ರ ಇರುವುದು ಕಂಡಿತು.

‘ದೇವರು ದೊಡ್ಡವನು ಮಗೂ, ಮೊದಲು ಇದರಿಂದ ಹೊರಗೆ ಬಾ’

ಕೊನೆಗೂ ಅವಳನ್ನು ಹೊರಗೆ ಕರೆತರುವುದು ಸಾಧ್ಯವಾದಾಗ ಅವನು ಅವಳನ್ನು ಸರಿಯಾಗಿ ಗಮನಿಸುವುದು ಸಾಧ್ಯವಾಯಿತು. ನಿಲ್ಲುವುದಕ್ಕೂ ತ್ರಾಣವಿಲ್ಲದಿದ್ದ ಆ ಹುಡುಗಿಯ ತಲೆಗೂದಲನ್ನು ಹರಕು ಮುರುಕಾಗಿ ಕತ್ತರಿಸಲಾಗಿತ್ತು. ಒಮ್ಮೆಗೆ ಅವನಿಗೆ ತಾನಿಲ್ಲಿಗೆ ಬರಲೇ ಬಾರದಿತ್ತು ಎಂದು ಅನಿಸಿದ್ದು ಸತ್ಯ.

‘ಪರವಾಗಿಲ್ಲ ಅಲ್ಲವೆ ಈಗ? ನನ್ನ ಮೇಲೆ ಭಾರ ಹಾಕು, ಪಕ್ಕಕ್ಕೆ ಬಾ’

ಹುಡುಗಿ  ಹೆಚ್ಚು ಸನಿಹ ಬರಲು ಇಷ್ಟಪಡಲಿಲ್ಲ. ಹೇಗೋ ಅವನ ಲಾರಿ ಇರುವಲ್ಲಿಯವರೆಗೆ ಅವಳನ್ನು ಕರೆತಂದಿದ್ದೇ ಅವಳು ಬಾನೆಟ್ಟಿನ ಮೇಲೆ ಒರಗಿ ಅದರ ಬಿಸಿಗೆ ಚೇತರಿಸಿಕೊಳ್ಳತೊಡಗಿದಳು. ಹೆಚ್ಚೂ ಕಡಿಮೆ ಅವನಂತೆಯೇ ಕೆಳಗೆ ಕಾಣಿಸುತ್ತಿದ್ದ ಊರಿನ ದೀಪಗಳತ್ತಲೂ, ನದಿಯತ್ತಲೂ ಕೊನೆಗೆ ಆಗಸದತ್ತಲೂ ದಿಟ್ಟಿಸಿದಳು. 

"ನಾನೀಗ ಹೊರಗೆ ಬಂದೆ" ಅವಳ ಬಾಯಿಂದ ಬಂದ ಮೊದಲ ಪದಗಳು. 
"ಹಾಂ ಮತ್ತೆ" ಎನ್ನುತ್ತ ಫರ್ಲೊಂಗ್ ಅವಳ ಮೇಲೆ ಕೋಟನ್ನು ಸರಿಯಾಗಿ ಹೊದೆಸಿದ. ಈಗ ಅವಳು ಹೆಚ್ಚಿನ ಪ್ರತಿರೋಧ ತೋರಿಸಲಿಲ್ಲ. 
"ಇದು ರಾತ್ರಿಯ ಹೊತ್ತಾ ಅಥವಾ ಹಗಲಿನ ಹೊತ್ತಾ?"
"ಹಗಲು. ಇನ್ನೇನು ಬೆಳಕು ಮೂಡಲಿದೆ."
"ಅದು ಬಾರೋ ಅಲ್ಲವೆ?"
"ಹೌದು. ಅಲ್ಲೀಗ ತುಂಬ ಸಾಲ್ಮನ್ ಮೀನುಗಳಿವೆ ಮತ್ತು ಈಗಲ್ಲಿ ಪ್ರವಾಹ ಹರಿಯುತ್ತಿದೆ."

ಒಂದು ಕ್ಷಣ ಅವನಿಗೆ ತಾನು ಚಾಪೆಲ್ಲಿನಲ್ಲಿ ಭೇಟಿಯಾದ ಹುಡುಗಿಯೇ ಇವಳಿರಬಹುದೇ ಎಂಬ ಅನುಮಾನ ಸುಳಿದು ಹೋಯಿತು. ಆದರೆ ಇವಳು ಅವಳಾಗಿರಲಿಲ್ಲ. ಅವನು ಅವಳ ಪಾದಗಳತ್ತ ಟಾರ್ಚಿನ ಬೆಳಕು ಹರಿಸಿದ. ಉಗುರುಗಳು ಉದ್ದುದ್ದ ಬೆಳೆದಿದ್ದವು ಮತ್ತು ಇದ್ದಲಿನ ಕಪ್ಪು ಬಣ್ಣ ಕಾಲಿಗೆಲ್ಲ ಮೆತ್ತಿದಂತಿತ್ತು. ಅವನು ಟಾರ್ಚ್ ಆರಿಸಿದ. 

"ಅದು ಹೇಗೆ ನಿನ್ನನ್ನು ಅಲ್ಲಿ ಬಿಟ್ಟು ಬಾಗಿಲು ಹಾಕಿದರು?"

ಅವಳು ಅದಕ್ಕೆ ಉತ್ತರಿಸಲಿಲ್ಲ. ಅವಳ ತಲೆಯಲ್ಲಿ ಈಗ ಅದೇನು ಓಡುತ್ತಿರಬಹುದು ಎಂದು ಅಂದಾಜು ಮಾಡಲು ಪ್ರಯತ್ನಿಸಿದರೂ ಏನೂ ಹೊಳೆಯಲಿಲ್ಲ. ಅವಳಿಗೆ ಸ್ವಲ್ಪ ಸಮಾಧಾನವಾಗುವಂಥದ್ದೇನಾದರೂ ಆಡಬೇಕನಿಸಿದರೂ ಏನು ಆಡಬೇಕೆಂದು ತಿಳಿಯಲಿಲ್ಲ. 

ಕೆಲಹೊತ್ತಿನ ಬಳಿಕ, ಗೋರಿಗಳ ಮೇಲೆ ಮರಗಟ್ಟಿದ ಎಲೆಗಳು ಒಂದೊಂದಾಗಿ ಉದುರುತ್ತಿರುವಾಗ, ಅವನು ಸ್ವಲ್ಪ ಸುಧಾರಿಸಿಕೊಂಡು ಅವಳನ್ನು ಎದುರಿನ ದ್ವಾರದ ವರೆಗೂ ಕರೆದುಕೊಂಡು ಹೋದ. ಅವನ ಮನಸ್ಸೇ ಅವನನ್ನು ಇದೇನು ಮಾಡುತ್ತಾ ಇದ್ದೀ ಎಂದು ಕೇಳುತ್ತಿದ್ದರೂ ಅವನು ಅಭ್ಯಾಸಬಲದಿಂದ ಎಂಬಂತೆ ಮುಂದುವರಿದ. ಬೆಲ್ ಒತ್ತಿದ ಬಳಿಕ ತನ್ನನ್ನೇ ತಾನು ಸಮಾಧಾನ ಮಾಡಿಕೊಂಡು ಬಾಗಿಲು ತೆರೆಯುವುದನ್ನೆ ಕಾಯುತ್ತ ನಿಂತ. ಒಳಗೆ ಸದ್ದಾಗಿದ್ದು ಗೊತ್ತಾಗುವಂತಿತ್ತು. ಸ್ವಲ್ಪ ಹೊತ್ತಿನಲ್ಲೇ ಒಬ್ಬ ಎಳೆಯ ನನ್ ಬಾಗಿಲು ತೆರೆದು ಇವರತ್ತ ನೋಡಿದ್ದೇ ‘ಓಹ್!’ ಎಂದು ಕಿರುಚಿ ಥಟ್ಟನೇ ಬಾಗಿಲು ಮುಚ್ಚಿಬಿಟ್ಟಳು.

ಜೊತೆಗಿದ್ದ ಹುಡುಗಿ ಏನನ್ನೂ ಹೇಳದೆ, ತನ್ನ ಕಂಗಳ ಬೆಂಕಿಯಿಂದಲೇ ಬಾಗಿಲಿನಲ್ಲಿ ಒಂದು ತೂತು ಕೊರೆಯಲಿದ್ದಾಳೋ ಎಂಬಂತೆ ದಿಟ್ಟಿಸತೊಡಗಿದಳು. 

"ಇಲ್ಲಿ ಏನು ನಡೆಯುತ್ತಿದೆ?" ಫರ್ಲೊಂಗ್ ಬಾಯಲ್ಲಿ ಅಯಾಚಿತವಾಗಿ ಈ ಮಾತು ಬಂತು. 

ಆಗಲೂ ಹುಡುಗಿ ಮಾತನಾಡಲಿಲ್ಲ. ಮುಂದಿನ ಮಾತಿಗಾಗಿ ಫರ್ಲೊಂಗ್ ಸುಮ್ಮನೇ ತಡಕಾಡಿದ. ಮೆಟ್ಟಿಲುಗಳ ಮೇಲೆ, ಆ ಚಳಿಯಲ್ಲಿಯೇ ಅವರು ಸಾಕಷ್ಟು ಹೊತ್ತು ಕಾದು ನಿಲ್ಲಬೇಕಾಯಿತು. ಅವನು ಅವಳ ಜೊತೆ ಅಲ್ಲಿಂದ ಹೊರಟು ಬಿಡಬಹುದಿತ್ತು. ಮುಖ್ಯ ಪಾದ್ರಿಯ ಬಳಿಗೆ ಅಥವಾ ತನ್ನ ಮನೆಗೇ ಅವಳನ್ನು ಕರೆದೊಯ್ಯಬಹುದಿತ್ತು. ಆದರೆ ಅವಳು ತೀರ ಪುಟ್ಟದಾಗಿ, ಹೊರಜಗತ್ತಿಗೇ ವಿದಾಯ ಹೇಳಿದಷ್ಟು ತಣ್ಣಗೆ ಕಲ್ಲಿನಂತಿದ್ದಳು. ಅಲ್ಲದೆ ಅವನಿಗೂ ಇದೆಲ್ಲದರಿಂದ ಒಮ್ಮೆಗೆ ಪಾರಾಗಿ ತನ್ನ ಮನೆಗೆ ಸೇರಿದರೆ ಸಾಕೆನಿಸಿತ್ತು ಎನ್ನುವುದೂ ನಿಜ.  

ಅವನು ಮತ್ತೊಮ್ಮೆ ಬೆಲ್ ಒತ್ತಿದ. 

"ನೀನು ಅವರ ಬಳಿ ನನ್ನ ಮಗುವನ್ನು ಕೇಳುತ್ತೀಯಲ್ಲವೆ?"
"ಏನು!?"
"ಅವನಿಗೆ ಹಸಿವಾಗಿರಬಹುದು" ಹುಡುಗಿ ಮುಂದುವರಿಸಿದಳು, "ಅವನಿಗೆ ಹಾಲೂಡಿಸುವವರು ಇಲ್ಲಿ ಯಾರಿದ್ದಾರೆ?"
"ನಿನಗೆ ಮಗು ಬೇರೆ ಇದೆಯೆ?"
"ಅವನಿಗೆ ಹದಿನಾಲ್ಕು ವಾರಗಳಷ್ಟೇ ಆಗಿವೆ. ಅವರು ಅವನನ್ನು ನನ್ನಿಂದ ತೆಗೆದುಕೊಂಡಿದ್ದರು. ಅವನಿನ್ನೂ ಇಲ್ಲಿಯೇ ಇದ್ದರೆ ನನಗೆ ಹಾಲೂಡಿಸಲು ಬಿಡಬಹುದೇನೋ. ಆದರೆ ಅವನೀಗ ಎಲ್ಲಿದ್ದಾನೆಂಬುದು ನನಗೆ ಗೊತ್ತಿಲ್ಲ."

ಈಗ ಫರ್ಲೊಂಗ್ ತಾನು ಏನು ಮಾಡಬೇಕಾಗಿದೆ ಎನ್ನುವ ಬಗ್ಗೆ ಮತ್ತೆ ಎಲ್ಲವನ್ನೂ ಹೊಸದಾಗಿ ಪರಿಗಣಿಸತೊಡಗಿದ್ದಾಗಲೇ, ಉದ್ದನೆಯ ಜೀವದ, ಅವನು ಈ ಹಿಂದೆ ಚಾಪೆಲ್ಲಿನಲ್ಲಿ ನೋಡಿದ್ದರೂ ವ್ಯವಹರಿಸದಿದ್ದ ಮದರ್ ಸುಪೀರಿಯರ್ ಅವನೆದುರಿನ ಬಾಗಿಲನ್ನು ವಿಶಾಲವಾಗಿ ತೆರೆದರು. ಆಕೆಯ ಮೊಗದಲ್ಲಿ ಮುಗುಳ್ನಗುವಿತ್ತು. 

"ಫರ್ಲೊಂಗ್ ಅವರೆ, ಭಾನುವಾರದ ಮುಂಜಾನೆ ಇಷ್ಟೊಂದು ಬೇಗ ನಿಮ್ಮನ್ನಿಲ್ಲಿ ಕಾಣುತ್ತಿರುವುದಕ್ಕೆ ನಿಜಕ್ಕೂ ಸಂತಸವಾಗಿದೆ."
"ಮದರ್, ತೀರ ಬೇಗ ಆಯ್ತು, ಗೊತ್ತು..."

ಈಗ ಅವರ ಗಮನ ಹುಡುಗಿಯತ್ತ ಹರಿಯಿತು. 

"ಓಹ್, ಈ ಗೋಟಾಳೆಯ ಕಡೆಗೆ ನೀವು ಗಮನಕೊಡಬೇಕಾಗಿ ಬಂದಿದ್ದಕ್ಕೆ ನಿಜಕ್ಕೂ ಕೆಡುಕೆನಿಸುತ್ತಿದೆ, ದಯವಿಟ್ಟು ಕ್ಷಮಿಸಿ" ಎನ್ನುತ್ತಲೇ "ಎಲ್ಲಿದ್ದೀ ನೀನು?" ಎಂದರು. ಈಗ  ಅವರ ಸ್ವರ ಬದಲಾಗಿತ್ತು. 

"ನೀನು ನಿನ್ನ ಹಾಸಿಗೆಯಲ್ಲಿಲ್ಲ ಎಂಬ ಅಂಶ ನಮ್ಮ ಗಮನಕ್ಕೆ ಬಂದು ಹೆಚ್ಚೇನೂ ಸಮಯವಾಗಿಲ್ಲ. ಇನ್ನೇನು ಈ ಬಗ್ಗೆ ವಿಚಾರಿಸಲು ವಾರ್ಡನ್ನರನ್ನು ಕರೆಸುವುದಿತ್ತು."

"ಈ ಹುಡುಗಿ ಸಿಕ್ಕಿ ಹಾಕಿಕೊಂಡು ಇಡೀ ರಾತ್ರಿ ನಿಮ್ಮ ಶೆಡ್ಡಿನಲ್ಲಿ ಕಳೆದಿದ್ದಾಳೆ"

"ಏನು ಅವಳನ್ನು ಅಲ್ಲಿ ಹಿಡಿದು ಹಾಕಿತ್ತೋ! ದೇವರು ನಿನ್ನ ರಕ್ಷಿಸಲಿ ಮಗೂ. ಈಗ ಒಳಗೆ ಬಾ, ಮೇಲ್ಗಡೆ ಹೋಗಿ ಬಿಸಿ ನೀರಿನಲ್ಲಿ ಒಂದು ಒಳ್ಳೆಯ ಸ್ನಾನ ಮಾಡು. ಇಲ್ಲವಾದರೆ ನೀನು ಸತ್ತೇ ಹೋಗುತ್ತಿ. ಈ ಹುಡುಗಿಗೆ ಕೆಲವೊಮ್ಮೆ ಹಗಲು ರಾತ್ರಿಗಳ ವ್ಯತ್ಯಾಸ ತಿಳಿಯುವುದಿಲ್ಲ. ಈ ಹುಡುಗಿಯನ್ನು ಅದು ಹೇಗೆ ಸಂಭಾಳಿಸುವುದೋ ನನಗಂತೂ ತಿಳಿಯುತ್ತಿಲ್ಲ."

ಹುಡುಗಿ ಒಂಥರಾ ಟ್ರಾನ್ಸ್‌ನಲ್ಲಿದ್ದವರಂತೆ ಅಲ್ಲಿಯೇ ನಿಂತು ಮೆಲ್ಲನೆ ದೇಹವನ್ನು ನಡುಗಿಸತೊಡಗಿದಳು. 

"ನೀವೂ ಒಳಗೆ ಬನ್ನಿ" ಎಂದು ಮದರ್ ಸುಪೀರಿಯರ್ ಫರ್ಲೊಂಗನನ್ನು ಆಹ್ವಾನಿಸಿದರು. 

"ನಾವು ಟೀ ಮಾಡುತ್ತೇವೆ. ಇದೊಂದು ಭಯಂಕರ ವ್ಯವಹಾರ ಬಿಡಿ."

ಫರ್ಲೊಂಗ್ ವರ್ತಮಾನದಿಂದಲೇ ಬಚಾವಾಗಿ ಇದೆಲ್ಲ ತೊಡಗುವುದಕ್ಕಿಂತಲೂ ಹಿಂದೆ ಇದ್ದ ಸ್ವಸ್ಥ ಭೂತಕಾಲಕ್ಕೆ ಮರಳುವ ಧರ್ತಿಯಲ್ಲಿದ್ದಾನೋ ಎಂಬಂತೆ ಹಿಂದಡಿಯಿಡುತ್ತ ಹೇಳಿದ, "ಬೇಡ ಬೇಡ."

"ಇಲ್ಲ, ನೀವು ಒಳಗೆ ಬರುತ್ತೀರಿ. ಇಲ್ಲ ಎಂದರೆ ನಾವೂ ಟೀ ಕುಡಿಯುವುದಿಲ್ಲ ಬಿಡಿ."
"ಅಯ್ಯೊ, ಮದರ್, ನಾನು ಅರ್ಜೆಂಟಿನಲ್ಲಿದ್ದೇನೆ. ನಾನು ಮನೆಗೆ ಮರಳಿ, ಮಾಸ್‌ನಲ್ಲಿ ಭಾಗವಹಿಸುವುದಕ್ಕೆ ತಯಾರಾಗಿ ವಾಪಾಸ್ ಬರಬೇಕಿದೆ."
"ಹಾಗಿದ್ದರೆ ಆ ಅರ್ಜೆಂಟಿನ ಭೂತ ನಿಮ್ಮನ್ನು ಬಿಟ್ಟು ಹೋಗುವ ತನಕ ಇಲ್ಲಿಯೇ ಇರಿ. ಈಗಿನ್ನೂ ತುಂಬ ಸಮಯವಿದೆ. ಅದೂ ಅಲ್ಲದೆ ಇವತ್ತು  ಒಂದಕ್ಕಿಂತ ಹೆಚ್ಚು ಮಾಸ್ ನಡೆಸಲಿದ್ದೇವೆ. "

ಫರ್ಲೊಂಗ್ ಕ್ಯಾಪ್ ತೆಗೆದು ಒಳಗಡಿಯಿಟ್ಟ. ಹುಡುಗಿಯನ್ನು ಮೆಲ್ಲಗೆ ನಡೆಸಿಕೊಂಡು ಹಾಲ್‌ನ ಉದ್ದಕ್ಕೂ ನಡೆದು ಹಿಂದುಗಡೆಯ ಕಿಚನ್ನಿಗೆ ತಲುಪಿದ. ಅಲ್ಲಿ ಇಬ್ಬರು ಹುಡುಗಿಯರು ಟರ್ನಿಪ್ ಸುಲಿಯುತ್ತಾ, ನಲ್ಲಿ ನೀರಿನಲ್ಲಿ ಕ್ಯಾಬೇಜ್ ತೊಳೆಯುತ್ತಾ ಇದ್ದರು. ಮೊದಲಿಗೆ ಬಾಗಿಲು ತೆರೆದ ಎಳೆಯ ನನ್ ಒಲೆಯ ಮೇಲಿದ್ದ ಏನನ್ನೋ ಸೌಟಿನಲ್ಲಿ ಕಲೆಸುತ್ತಾ ಇದ್ದಳು. ಒಂದು ಕೆಟ್ಲ್ ಕೂಡಾ ಒಲೆಯ ಮೇಲಿತ್ತು. ಅವಳು ನಿಂತಲ್ಲಿ ಕತ್ತಲಿತ್ತು.  ಆ ಇಡೀ ಕೋಣೆಯಲ್ಲಿ ಎಲ್ಲವೂ ಹೊಳೆಯುತ್ತಿರುವಂತೆ ಭಾಸವಾಗುತ್ತಿತ್ತು. ತೂಗು ಬಿಟ್ಟಿದ್ದ ಒಂದು ಮಡಕೆಯಲ್ಲಿ ಫರ್ಲೊಂಗ್ ತನ್ನದೇ ಪ್ರತಿಬಿಂಬ ನೋಡುತ್ತ ಅಲ್ಲಿಂದ ಮುಂದಕ್ಕೆ ಚಲಿಸಿದ. ಮದರ್ ಕಾರಿಡಾರಿನ ಟೈಲ್ಸ್ ಮೇಲೆ ಸಾಗುತ್ತ ಉದ್ದಕ್ಕೂ ಮಾತನಾಡುತ್ತಲೇ ಇದ್ದರು.

"ಹೀಗೆ ಬನ್ನಿ"
"ನಾವು ಈ ನೆಲದ ಮೇಲೆಲ್ಲ ಹೆಜ್ಜೆ ಗುರುತು ಮೂಡಿಸಿ ಕೆಸರು ಮಾಡುತ್ತಿದ್ದೇವೆ ಮದರ್"
"ಕೈ ಕೆಸರಾದರೆ ಬಾಯ್ ಮೊಸರು." 

ಆಕೆ ಅವರನ್ನು ಚೆನ್ನಾಗಿದ್ದ ಒಂದು ದೊಡ್ಡ ಕೋಣೆಗೆ ಕರೆದೊಯ್ದರು. ಅಲ್ಲಿ ಆಗಷ್ಟೇ ಹಚ್ಚಿದ್ದ ಪೂರ್ತಿ ಕಬ್ಬಿಣದ ಅಗ್ಗಿಷ್ಟಿಕೆ ಉರಿಯುತ್ತಿತ್ತು.  ಹಿಮದಷ್ಟು ಬೆಳ್ಳಗಿದ್ದ ಟೇಬಲ್ ಕ್ಲಾತ್ ಹಾಸಿದ್ದ ಉದ್ದನೆಯ ಮೇಜು, ಅದರ ಸುತ್ತಲೂ ಕುರ್ಚಿಗಳು ಎಲ್ಲವೂ ಅಣಿಯಾಗಿತ್ತು. ಗ್ಲಾಸ್ ಹಾಕಿದ್ದ ಬೀಟೆ ಮರದ ಒಂದು ಬುಕ್ ಕೇಸ್ ಗೋಡೆಯಂಚಿಗಿತ್ತು. ಅಗ್ಗಿಷ್ಟಿಕೆಯ ಮೇಲುಗಡೆ ಜಾನ್ ಪಾಲ್ II ಅವರ ದೊಡ್ಡ ಚಿತ್ರಪಠವನ್ನು ತೂಗುಹಾಕಲಾಗಿತ್ತು.

ಅವನ ಕೋಟನ್ನು ಅವನಿಗೆ ಹಿಂದಿರುಗಿಸುತ್ತ, "ಈಗ ಅಗ್ಗಿಷ್ಟಿಕೆಗೆ ಹತ್ತಿರವಾಗಿ ಕುಳಿತುಕೊಂಡು ಸ್ವಲ್ಪ ಬೆಚ್ಚಗಾಗಿ." ಎಂದರು. "ಈ ಹುಡುಗಿಯ ಕಾಳಜಿ ನಾನು ಮಾಡುತ್ತೇನೆ, ನೀವಿನ್ನು ಟೀ ಬಗ್ಗೆ ಯೋಚಿಸಿ." ಎನ್ನುತ್ತಲೇ ಒಂದು ಬಾಗಿಲಿನಾಚೆ ಮರೆಯಾದರು. 

ಆಕೆ ಕಣ್ಮರೆಯಾಗುವಷ್ಟರಲ್ಲಿ ಆ ಎಳೆಯ ನನ್ ಒಂದು ಟ್ರೇ ಹಿಡಿದು ಅಲ್ಲಿ ಕಾಣಿಸಿಕೊಂಡಳು. ಅವಳ ಕೈಗಳು ಸ್ಥಿರವಾಗಿರಲಿಲ್ಲ, ಹಾಗಾಗಿ ಒಂದು ಚಮಚೆ ಕೆಳಬಿತ್ತು. "ಯಾರೋ ಅತಿಥಿ ಬರುತ್ತಾರೆಂದಾಯ್ತು" ಎಂದ ಫರ್ಲೊಂಗ್. 

"ಇನ್ನೂ ಒಬ್ಬ ಅತಿಥಿಯೆ?" ಎಂದ ನನ್ ಕಂಗಳಲ್ಲಿ ಗಾಭರಿ ಎದ್ದು ಕಾಣುತ್ತಿತ್ತು. "ಅದೊಂದು ಹೇಳುವ ಕ್ರಮ, ಚಮಚೆ ಕೆಳಗೆ ಬಿದ್ದಾಗ, ಅತಿಥಿ ಬರುತ್ತಾರೆ ಅಂತ, ಅಷ್ಟೆ.’‘

"ಓಹ್!" ಎಂದಳಾಕೆ ಅವನತ್ತಲೇ ನೋಡುತ್ತ.

ಬಳಿಕ ಅವಳು ಮುಂದುವರಿಸಿದಳು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕಪ್ಪುಗಳಿಗೆ ಟೀ ಸುರಿದು ಸಾಸರ್‌ಗಳ ಮೇಲಿಟ್ಟಳು. ಒಂದು ಟಿನ್ನಿನ ಮುಚ್ಚಳ ತೆಗೆಯುವುದಕ್ಕೆ ಗಡಿಬಿಡಿ ಹೆಚ್ಚಾಗಿ ಒದ್ದಾಡುವಂತಾಯಿತು. ಹಣ್ಣಿನ ಕೇಕ್ ಮೇಲಿದ್ದ ತೆಳ್ಳನೆಯ ಹಾಳೆ ಸರಿಸಲು ಸಮಯ ಹಿಡಿಯಿತು. ಚಾಕುವಿನಿಂದ ಬಹುಬೇಗ ಕೇಕ್ ಕತ್ತರಿಸಿಟ್ಟಳು.  

ಮದರ್ ಸುಪೀರಿಯರ್ ಮರಳಿದವರೇ ನಿಧಾನವಾಗಿ ಅಗ್ಗಿಷ್ಟಿಕೆಯ ಬಳಿ ಹೋಗಿ, ಉರಿದ ಕೊಳ್ಳಿಯನ್ನು ಸ್ವಲ್ಪ ಕೊಡವಿ, ಬೆಂಕಿ ಸರಿಮಾಡಿದರು. ತುಂಬ ಕೌಶಲದಿಂದ ಉರಿಯುತ್ತಿರುವ ಕೊಳ್ಳಿಗಳನ್ನೆಲ್ಲ ಸರಿಸಿ, ಫರ್ಲೊಂಗ್ ತಂದ ಹೊಸ ಕಟ್ಟಿಗೆಯಿಂದ ಬೆಂಕಿಯನ್ನು ಮತ್ತಷ್ಟು ಒಪ್ಪಗೊಳಿಸಿ, ಇವರಿಗೆದುರಾಗಿ ಇದ್ದ ಕುರ್ಚಿಯಲ್ಲಿ ಹೋಗಿ ಕುಳಿತುಕೊಂಡರು. 

"ಮನೆಯಲ್ಲಿ ಎಲ್ಲವೂ ಆರಾಮಾಗಿದೆಯಲ್ಲವೆ ಬಿಲ್ಲಿ?"

ಆಕೆಯ ಕಣ್ಣುಗಳು ನೀಲಿಯಾಗಿಯೂ ಇರಲಿಲ್ಲ, ಕಂದು ಬಣ್ಣದವೂ ಆಗಿರಲಿಲ್ಲ. ಎರಡರ ನಡುವಿನ ವರ್ಣ ಅನಿಸುತ್ತಿತ್ತು. 

"ಎಲ್ಲವೂ ಆರಾಮಿದೆ ಮದರ್, ಥ್ಯಾಂಕ್ಯೂ"
"ಮತ್ತೆ ನಿಮ್ಮ ಹೆಣ್ಣು ಮಕ್ಕಳು? ಅವರು ಹೇಗಿದ್ದಾರೆ? ಅವರಲ್ಲಿ ಇಬ್ಬರು ನಮ್ಮಲ್ಲೇ ಸಂಗೀತಾಭ್ಯಾಸ ಮಾಡುತ್ತಿದ್ದಾರೆಂದು ಕೇಳಿದೆ. ಇನ್ನೂ ಇಬ್ಬರಿರಬೇಕು, ಅಲ್ಲವೆ?"
"ದೇವರ ದಯೆಯಿಂದ ಎಲ್ಲರೂ ಸರಿಯಾಗಿ ಬೆಳೆಯುತ್ತಿದ್ದಾರೆ ಮದರ್." 
"ಇನ್ನೂ ಒಬ್ಬಳು ಸಹಹಾಡುಗಾರ್ತಿಯಾಗಿದ್ದಾಳೆ, ಅದರಲ್ಲಿ ಕುಶಿಯಾಗಿದ್ದಾಳೆ ಅನಿಸುತ್ತದೆ."
"ಹಾಂ, ಅವರವರ ಪಾಡಿಗೆ ಚೆನ್ನಾಗಿಯೇ ಇದ್ದಾರೆ ಮದರ್"
"ದೇವರು ಮನಸ್ಸು ಮಾಡಿದರೆ ಎಲ್ಲರೂ ಸದ್ಯದಲ್ಲೇ ನಮ್ಮಲ್ಲೇ ಸೇರಿಕೊಳ್ಳುವಂತೆ ಆಗಬಹುದು"
"ದೇವರು ಮನಸ್ಸು ಮಾಡಬೇಕು ಮದರ್"
"ಅದೇನೆಂದರೆ ಈ ದಿನಗಳಲ್ಲಿ ಹೊರಗಡೆ ತುಂಬ ಮಂದಿ ಕಾದಿದ್ದಾರೆ. ನಾವು ಎಲ್ಲರಿಗೂ ಒಂದು ಸ್ಥಳಾವಕಾಶ ಒದಗಿಸುವುದು ಸ್ವಲ್ಪ ಕಷ್ಟವೇ ಎನ್ನಬೇಕು."
"ನಿಜ ಮದರ್"
"ನಿನಗೆ ಒಟ್ಟು ಐದು ಹೆಣ್ಣುಮಕ್ಕಳೇ ಆರೆ?"
"ಐದು ಮದರ್."

ಬಳಿಕ ಆಕೆ ಮೇಲೆದ್ದು ಟೀ ಪಾಟ್‌ನ ಮುಚ್ಚಳ ಎತ್ತಿ ಟೀಎಲೆಗಳನ್ನು ಸರಿಯಾಗಿ ಕಲೆಯುವಂತೆ ಸ್ವಲ್ಪ ಕಲೆಸಿದರು. 

"ಆದರೂ ನಿಮಗೆ ಸ್ವಲ್ಪ ಬೇಸರವೇ ಇದ್ದಿರಬಹುದು ಅಲ್ಲವೆ?" ಈಗ ಫರ್ಲೊಂಗ್‍ಗೆ ಆಕೆಯ ಬೆನ್ನಷ್ಟೇ ಕಾಣಿಸುತ್ತಿತ್ತು.

"ಬೇಸರವೆ? ಯಾಕೆ ಮದರ್?"
"ಹೆಸರು ಉಳಿಸುವುದಕ್ಕೆ ಒಂದು ಗಂಡು ಮಗು ಇಲ್ಲವಲ್ಲ" 

ಈಗ ಫರ್ಲೊಂಗ್‌ಗೆ ಆಕೆಯ ವ್ಯವಹಾರ ಚಾತುರ್ಯ ಏನೆಂದು ಅರ್ಥವಾಯಿತು. ಅವನು ಇಂಥದ್ದನ್ನೆಲ್ಲ ಸಾಕಷ್ಟು ನೋಡಿ ಬಲ್ಲವನೇ ಆದ್ದರಿಂದ ನೆಲದ ಮೇಲೆಯೇ ನಿಂತಿದ್ದ. ಅವನು ಸ್ವಲ್ಪ ಆರಾಮಾಗಿ ಕೂತು ಕಾಲು ಚಾಚಿದ. 

"ಖಂಡಿತ. ನಾನೀಗ ನನ್ನ ತಾಯಿಯ ಹೆಸರನ್ನು ಉಳಿಸಿಲ್ಲವೆ ಮದರ್? ಮತ್ತು ಅದರಿಂದ ನನಗೆ ಯಾವ ಕೆಡುಕೂ ಆಗಿದ್ದಿಲ್ಲ"
"ಓ ಹಾಗೆಯೋ"
"ಹೆಣ್ಣು ಮಕ್ಕಳ ಬಗ್ಗೆ ನನಗೆ ಯಾವ ವಿರೋಧವೂ ಇಲ್ಲ. ನನ್ನ ಸ್ವಂತ ಅಮ್ಮನೂ ಒಂದು ಕಾಲಕ್ಕೆ ಹೆಣ್ಣೇ ಆಗಿದ್ದಳು. ನಿಮಗೆ ಬೇಸರವಾಗದು ಅಂದುಕೊಳ್ಳುವೆ, ಇದೇ ಮಾತು ನಿಮಗೂ ಅನ್ವಯಿಸುತ್ತದೆ ಮಾತ್ರವಲ್ಲ ನಮಗೆ ಸಂಬಂಧಪಟ್ಟ ಅರ್ಧಕ್ಕಿಂತ ಹೆಚ್ಚು ಮಂದಿಗೂ ಅನ್ವಯಿಸುತ್ತದೆ."

ಅಲ್ಲೊಂದು ಪುಟ್ಟ ನಿರ್ವಾತ ನಿರ್ಮಾಣವಾಯಿತು. ಹಾಗಿದ್ದೂ ವಿಷಯ ಬದಲಿಸಲು ಹೆಚ್ಚೇನೂ ತಿಣುಕಾಡಬೇಕಾಗಿ ಬರಲಿಲ್ಲ. ಬಹುಬೇಗ ಆ ಕೋಣೆಗೆ ಶೆಡ್ಡಿನಲ್ಲಿ ಸಿಕ್ಕಿದ ಹುಡುಗಿಯನ್ನು ಕರೆತರಲಾಯಿತು. ಅವಳೀಗ ಬಟ್ಟೆ ಬದಲಿಸಿದ್ದಳು, ಶೂ ತೊಟ್ಟಿದ್ದಳು. ಅವಳ ಒದ್ದೆ ಕೂದಲನ್ನು ಕೆಟ್ಟದಾಗಿ ಬಾಚಿದಂತಿತ್ತು.  

"ಇಷ್ಟು ಬೇಗ!" ಫರ್ಲೊಂಗ್ ಅರೆ ಎದ್ದ. "ಈಗ ಸ್ವಲ್ಪ ಉತ್ತಮ ಅನಿಸುತ್ತದೆಯೇ ಮಗೂ"

"ಇಲ್ಲಿ ಕುಳಿತುಕೋ, ಬಾ" ಮದರ್ ಒಂದು ಕುರ್ಚಿಯನ್ನು ಎಳೆದು ಅವಳನ್ನು ಕೂರುವಂತೆ ಹೇಳಿದರು. "ಸ್ವಲ್ಪ ಟೀ ಕುಡಿದು, ಕೇಕ್ ತೆಗೆದುಕೊ. ಜೀವ ಸ್ವಲ್ಪ ಬೆಚ್ಚಗಾಗಲಿ ಮೊದಲು"

ಸಂತೋಷದಿಂದ ಅವಳ ಕಪ್‌ಗೆ ಟೀ ಸುರಿದು, ಜಗ್ ಮತ್ತು ಸಕ್ಕರೆಯ ಬೌಲ್‌ಗಳನ್ನು ಅವಳಿಗೆಟಕುವಂತೆ ಹತ್ತಿರಕ್ಕೆ ಸರಿಸಿದರು. ಹುಡುಗಿ ಟೇಬಲ್ ಎದುರು ಕುಳಿತು ಕೇಕಿನಿಂದ ಸಣ್ಣ ಸಣ್ಣ ಹಣ್ಣಿನ ತುಂಡುಗಳನ್ನು ಆರಿಸಿಕೊಂಡು ತಿನ್ನತೊಡಗಿದಳು. ಬಳಿಕ ಬಿಸಿ ಟೀ ಜೊತೆಗೆ ಕೇಕಿನ ತುಂಡುಗಳನ್ನು ನುಂಗಲು ಪ್ರಯತ್ನಿಸಿದಳು. ಸಾಸರಿನ ಮೇಲೆ ಕಪ್ಪನ್ನು ಮರಳಿ ಸರಿಯಾಗಿ ಇರಿಸಲು ಆಕೆಗೆ ಕಷ್ಟವಾಗುತ್ತಿತ್ತು. 

ಸ್ವಲ್ಪ ಹೊತ್ತು ಮದರ್ ಸುಪೀರಿಯರ್ ಸುದ್ದಿಸಮಾಚಾರ ಎಂದೆಲ್ಲ ಒಣ ಮಾತುಗಳಲ್ಲಿ ಸಮಯ ತೆಗೆದರು. ಬಳಿಕ "ನೀನು ಅದು ಹೇಗೆ ಕಟ್ಟಿಗೆಯ ಶೆಡ್ಡಿನಲ್ಲಿ ಸಿಕ್ಕಿಹಾಕಿಕೊಂಡೆ ಎನ್ನುವುದನ್ನು ನಮಗೆ ಹೇಳುವುದಿಲ್ಲವೆ?" ಎಂದು ಹುಡುಗಿಯನ್ನು ಕೇಳಿದರು. "ನಿನಗೆ ಯಾವ ತೊಂದರೆಯೂ ಆಗುವುದಿಲ್ಲ. ನೀನು ಮಾಡಬೇಕಾದ್ದೆಲ್ಲ ಏನು ನಡೆಯಿತು ಅನ್ನುವುದನ್ನು ನಮಗೆ ಹೇಳುವುದಷ್ಟೇ."

ಹುಡುಗಿ ಒಮ್ಮೆಗೇ ಕುರ್ಚಿಯಲ್ಲಿ ಮರಗಟ್ಟಿ ಹೋದಳು. 

"ನಿನ್ನನ್ನು ಅಲ್ಲಿ ಒಳಗೆ ಕೂಡಿ ಹಾಕಿದವರು ಯಾರು?"

ಬೆದರಿದ ಆ ಹುಡುಗಿಯ ಕಣ್ಣುಗಳು ಎಲ್ಲಾ ಕಡೆ ಸುತ್ತಿದವು. ಮರಳಿ ಅವಳು ತನ್ನ ಟೇಬಲ್ಲಿನ ಮೇಲಿನ ಪ್ಲೇಟಿನಲ್ಲೇ ಕಣ್ಣು ನೆಟ್ಟು ಕೂರುವ ಮುನ್ನ ಫರ್ಲೊಂಗನ ಕಣ್ಣುಗಳನ್ನೂ ಅವು ಸಂಧಿಸಿ ಹೋದವು. 

"ಅವರು ಅಲ್ಲಿ ನನ್ನನ್ನು ಅಡಗಿಸಿದರು ಮದರ್"
"ಹೇಗೆ? ಅಡಗಿಸಿದರು ಅಂದರೆ ಹೇಗೆ?"
"ನಾವೆಲ್ಲ ಆಟ ಆಡುತ್ತಿದ್ದೆವಲ್ಲ"
"ಆಟ ಆಡುತ್ತಿದ್ದಿರಾ? ಏನು ಆಟ ಅದು, ನಮಗೆ ಹೇಳಲ್ಲ?"
"ಸುಮ್ಮನೇ ಆಟ ಮದರ್"
"ಕಣ್ಣಾಮುಚ್ಚಾಲೆ ಆಟ ಅನಿಸುತ್ತೆ. ಅದೂ ನಿನ್ನ ವಯಸ್ಸಲ್ಲಿ. ಆಟ ಮುಗಿದ ಮೇಲಾದರೂ ನಿನ್ನನ್ನು ಹೊರಗೆ ಬಿಡಬೇಕು ಅಂತ ಅವರಿಗೆ ಅನಿಸಬೇಡವೆ?"

ಈಗ ಹುಡುಗಿ ಬೇರೆಲ್ಲೋ ನೋಡುತ್ತಿರುವಂತೆ ದೃಷ್ಟಿ ತಪ್ಪಿಸಿ, ಬಿಕ್ಕಿದಳು.

"ಈಗ ಇನ್ನೇನು ದುಃಖವಿದೆ ನಿನಗೆ ಮಗಳೆ? ಅದೊಂದು ಸಣ್ಣ ತಪ್ಪು, ಅಷ್ಟೆ ಅಲ್ಲವೆ? ಅದು ಏನೂ ಅಲ್ಲದ ಸಂಗತಿಯಲ್ಲವೆ?"
"ಹೌದು ಮದರ್"
"ಏನದು ಹೇಳು"
"ಅದು ಏನೂ ಅಲ್ಲದ ಸಂಗತಿ ಮದರ್"
"ನೀನು ಹೆದರಿಕೊಂಡಿದ್ದಿ ಅಷ್ಟೆ. ನಿನಗೀಗ ಅಗತ್ಯವಾಗಿ ಬೇಕಿರುವುದೆಲ್ಲಾ ಒಳ್ಳೆಯ ಟಿಫನ್ ಮತ್ತು ಒಂದು ಸುದೀರ್ಘ ನಿದ್ದೆ."

ಅವರು ಕೋಣೆಯ ಒಂದು ಕೊನೆಯಲ್ಲಿ ಶಿಲೆಯ ಪ್ರತಿಮೆಯಂತೆ ನಿಂತೇ ಇದ್ದ ಎಳೆಯ ನನ್ ಕಡೆಗೆ ನೋಡಿದರು. ಅವಳು ತನಗೆ ಗೊತ್ತು ಎಂಬಂತೆ ತಲೆಯಾಡಿಸಿದಳು. 

"ಈ ಹುಡುಗಿಗೆ ಏನಾದರೂ ಸ್ವಲ್ಪ ಫ್ರೈ ಮಾಡಿ ಕೊಡುತ್ತೀಯಲ್ಲವೆ? ಅವಳನ್ನು ಕಿಚನ್ನಿಗೆ ಕರೆದುಕೊಂಡು ಹೋಗು ಮತ್ತು ಹೊಟ್ಟೆ ತುಂಬ ತಿನ್ನಲು ಕೊಡು. ಇವತ್ತೆಲ್ಲ ಅವಳಿಗೆ ಯಾವ ಕೆಲಸವನ್ನೂ ಮಾಡಲು ಬಿಡಬೇಡ."

ಫರ್ಲೊಂಗ್ ಹುಡುಗಿಯನ್ನು ಅಲ್ಲಿಂದ ಕರೆದೊಯ್ಯುವುದನ್ನು ನೋಡುತ್ತಲೇ ಅವನಿಗೆ ಅರ್ಥವಾಯಿತು, ಈ ಹೆಂಗಸಿಗೆ ಆದಷ್ಟೂ ಬೇಗ ತನ್ನನ್ನು ಇಲ್ಲಿಂದ ಹೊರಡಿಸುವುದಿದೆ ಎಂಬುದು. ಆದರೆ ಬೇಗನೆ ಇಲ್ಲಿಂದ ಹೊರಬೀಳಬೇಕೆಂಬ ತುರ್ತು ಈಗ ತದ್ವಿರುದ್ಧವಾಗಿ ಇನ್ನೂ ಇಲ್ಲಿಯೇ ಉಳಿಯುವ ತುರ್ತಾಗಿ ಬದಲಾಗಿಬಿಟ್ಟಿತ್ತು. ಅವನು ತಾನು ತನ್ನ ನೆಲೆಯನ್ನು ಬಿಟ್ಟುಕೊಡಬಾರದು ಎಂದುಕೊಂಡ. ಅದಾಗಲೇ ಹೊರಗಡೆ ಬೆಳಕು ಹರಿಯಲು ಸುರುವಾಗಿತ್ತು. ಇನ್ನೇನು ಮೊದಲ ಸುತ್ತಿನ ಪ್ರಾರ್ಥನೆಗೆ ಬೆಲ್ ಹೊಡೆಯುವುದಿತ್ತು. ಈ ಹೊಸ ಕರೆಯಿಂದ ಅವನಲ್ಲಿ ಹೊಸ ಶಕ್ತಿಯೊಂದು ನುಗ್ಗಿದಂತಾಗಿತ್ತು. ಕೊನೆಗೂ ಈ ಹೆಂಗಸರ ನಡುವೆ ಅವನೊಬ್ಬ ಗಂಡಸು. ಅವನು ತನ್ನೆದುರಿನ ಹೆಂಗಸನ್ನು ಕೂಲಂಕಶವಾಗಿ ಪರಿಶೀಲಿಸಿದ. ಅವಳ ಡ್ರೆಸ್ಸು ಚೆನ್ನಾಗಿ ಇಸ್ತ್ರಿಮಾಡಲಾದ ದಿರಿಸು. ಶೂಗಳು ಹೊಳೆಯುವಂತೆ ಪಾಲಿಶ್ ಮಾಡಲ್ಪಟ್ಟಿವೆ. 

"ಕ್ರಿಸ್ಮಸ್ ಸ್ವಲ್ಪ ಬೇಗನೇ ಬಂದು ಬಿಟ್ಟ ಹಾಗಿದೆ ಈ ವರ್ಷ, ಅಲ್ಲವೆ?" ಫರ್ಲೊಂಗ್ ಈಗ ಸಮಯ ಕೊಲ್ಲತೊಡಗಿದ. "ನಿಜ ನಿಜ" ಎಂದಳಾಕೆ, ಸಮಾಧಾನದಿಂದಲೇ. 

"ಹಿಮಪಾತ ಆಗುವುದಿದೆ ಎಂದು ಮೊದಲೇ ವರದಿಯಾಗಿತ್ತು"
"ನಾವಿನ್ನೂ ಬೆಳ್ಳನೆಯ ಕ್ರಿಸ್ಮಸ್ ಕಂಡಿದ್ದಿಲ್ಲ. ಅದೇನಿದ್ದರೂ ನಿಮಗೀಗ ವ್ಯಾಪಾರ ಚೆನ್ನಾಗಿ ಕುದುರಿರಬೇಕು, ಅಲ್ಲವೆ?"
"ಬ್ಯುಸಿಯಾಗಿದ್ದೇವೆ, ಇಲ್ಲ ಎಂದು ಹೇಳಲಾರೆ" ಎಂದ ಫರ್ಲೊಂಗ್.
"ನಿಮ್ಮದು ಟೀ ಕುಡಿದು ಮುಗಿಯಿತೆ, ಅಥವಾ ಇನ್ನೂ ಸ್ವಲ್ಪ ಕಪ್‌ಗೆ ಹಾಕಲೆ?"
"ಎಲ್ಲ ಜೊತೆಗೇ ಮುಗಿಸೋಣ ಮದರ್." ಅವನು ಗಟ್ಟಿಯಾಗಿ ಕೂತ, ಕಪ್ ಕೈಯಲ್ಲಿ ಹಿಡಿದು. ಕಪ್‌ಗೆ ಟೀ ಸುರಿಯುವಾಗ ಅವರ ಕೈ ಸ್ಥಿರವಾಗಿತ್ತು. 

"ನಿಮ್ಮ ಸಾಗರ ವಲಸಿಗರೆಲ್ಲ ಈ ವಾರ ಊರಲ್ಲೇ ಉಳಿದುಕೊಂಡಿದ್ದಾರಾ?" 
"ಅವರು ನನ್ನ ಸಾಗರ ವಲಸಿಗರಲ್ಲ, ಕಡಲ ಮೂಲಕ ಒಂದು ಲೋಡ್ ಆರ್ಡರು ಬಂದಿತ್ತು. ಕಿನಾರೆಯಲ್ಲೇ ವಾಸ್ತವ್ಯ ಹೂಡಿರುವ ಮಂದಿ ಅವರು, ಲೋಡ್ ಇಳಿಸಿಕೊಡುತ್ತಾರೆ."
"ವಿದೇಶೀಯರು ಒಳಗೆ ಬರುವುದರ ಬಗ್ಗೆ ನಿಮಗೇನೂ ತಕರಾರಿಲ್ಲ"
"ಎಲ್ಲರೂ ಎಲ್ಲೋ ಒಂದು ಕಡೆ ಹುಟ್ಟಿರಲೇ ಬೇಕಲ್ಲ. ಏಸು ಸ್ವತಃ ಬೆತ್ಲಹೆಮ್‌ನಲ್ಲಿ ಹುಟ್ಟಿದವನಲ್ಲವೆ?"
"ನಾನು ನಮ್ಮ ಪ್ರಭುವನ್ನು ಆ ಮಂದಿಯ ಜೊತೆ ಹೋಲಿಸಲಾರೆ"

ಅವರಿಗೀಗ ಸಾಕೆನಿಸುವಷ್ಟಾಗಿತ್ತು. ಆಕೆ ತಮ್ಮ ಗೌನಿನ ಆಳವಾದ ಕಿಸೆಗೆ ಕೈ ಇಳಿಬಿಟ್ಟು ಒಂದು ಉದ್ದನೆಯ ಲಕೋಟೆಯನ್ನು ಹೊರತೆಗೆದರು. "ನಮಗೆ ಡಿಲಿವರಿ ಕೊಟ್ಟ ಕಟ್ಟಿಗೆಗೆ ಆಮೇಲೆ ಬಿಲ್ ಕಳಿಸುವಿರಂತೆ. ಇದು ನಮ್ಮ ಕಡೆಯಿಂದ ಕ್ರಿಸ್ಮಸ್ ಶುಭಾಶಯಗಳೊಂದಿಗೆ"

ತೀರ ಮುಜುಗರದೊಂದಿಗೇ ಫರ್ಲೊಂಗ್ ತನ್ನ ಕೈ ಮುಂಚಾಚಿದ. ಬಳಿಕ ಅವರು ಕಿಚನ್ನಿನ ವರೆಗೂ ಫರ್ಲೊಂಗನ ಜೊತೆಯಲ್ಲಿಯೇ ಬಂದರು. ಕಿಚನ್ನಿನಲ್ಲಿ ಎಳೆಯ ನನ್ ಫ್ರೈಯಿಂಗ್ ಪ್ಯಾನಿನಲ್ಲಿದ್ದ ಪುಡ್ಡಿಂಗಿಗೆ ಬಾತುಕೋಳಿಯ ಮೊಟ್ಟೆಯನ್ನು ಒಡೆದು ಸುರಿಯುತ್ತಿದ್ದಳು. ಪಕ್ಕದ ಟೇಬಲ್ಲಿನೆದುರು ಶೆಡ್ಡಿನಲ್ಲಿ ಸಿಕ್ಕಿದ ಹುಡುಗಿ ಕಂಗಾಲಾದವಳಂತೆ ಕುಳಿತಿದ್ದಳು. ಅವಳೆದುರು ಏನೆಂದರೆ ಏನೂ ಇರಲಿಲ್ಲ. 
 
ಅವನು ಅಲ್ಲಿಂದಲೇ ಹಾದು ಹೋಗುವುದಿದೆ ಎಂಬುದು ಅವರಿಗೆ ಗೊತ್ತೇ ಇತ್ತು. ಆದರೆ  ನಿರೀಕ್ಷೆಗೆ ವಿರುದ್ಧವಾಗಿ ಫರ್ಲೊಂಗ್ ಆ ಹುಡುಗಿಯ ಹತ್ತಿರ ನಿಂತ. 

"ಮಗೂ ನಿನಗಾಗಿ ನಾನು ಮಾಡಬಹುದಾದ್ದು ಏನಾದರೂ ಇದೆಯೆ? ನೀನು ಏನಿದ್ದರೂ ನನ್ನ ಹತ್ತಿರ ಹೇಳಬಹುದು" ಎಂದ. 

ಅವಳು ಕಿಟಕಿಯತ್ತ ದೃಷ್ಟಿ ಹರಿಸಿ, ಉಸಿರೆಳೆದುಕೊಂಡು ಒಮ್ಮೆಗೇ ಬಿಕ್ಕಿಬಿಕ್ಕಿ ಅಳತೊಡಗಿದಳು.  ಬಹು ದೀರ್ಘ ಕಾಲ ಯಾರದೇ ಕರುಣೆ ಮತ್ತು ಪ್ರೀತಿಯ ಮಾತುಗಳನ್ನು ಕೇಳಿಸಿಕೊಳ್ಳದೇ ಇದ್ದವರು ಅಂಥದ್ದನ್ನು ಕಂಡಾಗ ಒಮ್ಮೆಗೇ ದುಃಖದಿಂದ ಬಿರಿಯುವಂತಿತ್ತು ಅದು. 

"ನೀನು ನನಗೆ ನಿನ್ನ ಹೆಸರು ಹೇಳುವುದಿಲ್ಲವೆ?"

ಅವಳು ತಕ್ಷಣ ನನ್ ಕಡೆಗೆ ನೋಡಿದಳು. 

"ಇಲ್ಲಿ ನನ್ನನ್ನು ಎಂಡಾ ಎಂದು ಕರೆಯುತ್ತಾರೆ"
"ಎಂಡಾ? ಅದು ಹುಡುಗರಿಗೆ ಇಡುವ ಹೆಸರಲ್ಲವೆ?"

ಅವಳಿಗೆ ಉತ್ತರಿಸಲು ಆಗಲಿಲ್ಲ.

"ನಿನ್ನದೇ ನಿಜವಾದ ಹೆಸರೇನು ಹಾಗಾದರೆ?" ಫರ್ಲೊಂಗ್ ಬಿಟ್ಟುಕೊಡಲಿಲ್ಲ.
"ಸಾರಾ" ಬಾಯಿಬಿಟ್ಟಳು. "ಸಾರಾ ರೆಡ್ಮಂಡ್"
"ಸಾರಾ" ಅವನು ಉದ್ಗರಿಸಿದ. "ಅದು ನನ್ನ ಸ್ವಂತ ತಾಯಿಯ ಹೆಸರು. ಮತ್ತು ನೀನೆಲ್ಲಿಂದ ಬಂದವಳು?"

"ನನ್ನ ಜನ ಕ್ಲಾನಿಗಾಲ್‌ಗಿಂತ ಆಚೆ, ಬಹು ದೂರದಿಂದ ಬಂದವರು"
"ಅದು ಕಿಲ್ಡಾವಿನ್ ದಾಟಿದ ಮೇಲೆ ಬರುವುದಲ್ಲವೆ? ಅದು ಹೇಗೆ ನೀನಿಲ್ಲಿಯ ತನಕ ಬಂದೆ?"

ಈಗ ನನ್ ಒಮ್ಮೆ ಕೆಮ್ಮಿ ಕೈಯಲ್ಲಿದ್ದ ಫ್ರೈಯಿಂಗ್ ಪ್ಯಾನನ್ನು ಕೆಟ್ಟದಾಗಿ ಕುಟ್ಟಿ ಕೆಳಗಿಟ್ಟಳು. ಇನ್ನು ಆ ಹುಡುಗಿ ಏನನ್ನೂ ಆಡುವುದು ಸಾಧ್ಯವಿಲ್ಲ ಎನ್ನುವುದು ಫರ್ಲೊಂಗಿಗೆ ಅರ್ಥವಾಯಿತು. 

"ನೀನೀಗ ತುಂಬ ಕಂಗಾಲಾಗಿದ್ದೀ. ಅದರಲ್ಲಿ ಅಂಥ ಆಶ್ಚರ್ಯವಿಲ್ಲ. ಆದರೆ ನೆನಪಿಡು, ನನ್ನ ಹೆಸರು ಬಿಲ್ ಫರ್ಲೊಂಗ್ ಮತ್ತು ನಾನು ಇಲ್ಲಿಯ ಕಟ್ಟಿಗೆ ಡಿಪೊದಲ್ಲಿ ಕೆಲಸ ಮಾಡುತ್ತಿರುತ್ತೇನೆ. ಅದು ಕಡಲ ದಂಡೆ ಹತ್ತಿರ ಜೆಟ್ಟಿಗೆ ಎದುರಾಗಿಯೇ ಇದೆ. ನಿನಗೆ ಯಾವುದೇ ರೀತಿಯ ನೆರವು ಬೇಕಾದರೂ ನೇರ ಅಲ್ಲಿಗೆ ಬಂದುಬಿಡು ಅಥವಾ ನನಗೆ ಸುದ್ದಿ ಕೊಡು. ಭಾನುವಾರ ಒಂದು ಬಿಟ್ಟು ನಾನು ಯಾವಾಗಲೂ ಅಲ್ಲಿಯೇ ಇರುತ್ತೇನೆ" ಎಂದ.

ಈಗ ನನ್ ಇನ್ನೂ ಹೆಚ್ಚು ಸದ್ದೆಬ್ಬಿಸುತ್ತ ಮೊಟ್ಟೆ ಮತ್ತು ಪುಡ್ಡಿಂಗನ್ನು ಪ್ಲೇಟಿಗೆ ಸುರಿಯಲು ಪ್ಯಾನಿನಿಂದ ಕಿತ್ತುಕಿತ್ತು ಕೆರೆಯತೊಡಗಿದಳು. ಇನ್ನೇನೂ ಮಾತು ಬೇಡ ಎಂದು ನಿರ್ಧರಿಸಿದ ಫರ್ಲೊಂಗ್ ಅಲ್ಲಿಂದ ಹೊರಬಿದ್ದು ಬಾಗಿಲೆಳೆದುಕೊಂಡ. ಒಳಗಿನಿಂದ ಯಾರೋ ಬೀಗ ತಿರುಪುವ ಸದ್ದು ಕೇಳಿಸುವ ತನಕವೂ ಅವನು ಅಲ್ಲಿಯೇ ನಿಂತಿದ್ದ.

**************************************************************************

ಇದು ಕಾದಂಬರಿಯ ಐದನೆಯ ಅಧ್ಯಾಯದ ಆಯ್ದ ಭಾಗ. ಮುಂದೆ ಫರ್ಲೊಂಗಿಗೆ ತಾನು ಹಾಗೆ ಆ ಹುಡುಗಿಯನ್ನು ಬಿಟ್ಟು ಬಂದ ಬಗ್ಗೆಯೇ ವ್ಯಥೆ ಕಾಡತೊಡಗುತ್ತದೆ. ಅವನು ಆದಿನ ಮಾಸ್‌ನಲ್ಲಿ ಭಾಗವಹಿಸಿದ್ದು, ಮದರ್ ಕೊಟ್ಟ ಹಣವನ್ನೂ ಸ್ವೀಕರಿಸಿದ್ದು ಎಲ್ಲವೂ ಒಂದೊಂದಾಗಿ ಅವನನ್ನು ಹಿಂಸಿಸತೊಡಗುತ್ತದೆ. ತನ್ನದು ಹಿಪೊಕ್ರೆಸಿ ಅನಿಸತೊಡಗುತ್ತದೆ. ಆ ಹುಡುಗಿ ತನ್ನ ತಂಗಿಯಾಗಿದ್ದಿರಬಹುದೇ ಎನ್ನುವವರೆಗೂ ಅವನ ಅನುಮಾನ ಕಾಡತೊಡಗಿ ಅವನು ಅವಳನ್ನು ಹುಡುಕತೊಡಗುತ್ತಾನೆ.

ಫರ್ಲೊಂಗಿಗೆ ಸಾರಾ ಮತ್ತವಳ ಮಗು ಮರಳಿ ಸಿಕ್ಕರೆ? ಮುಂದೆ ಅವನು ಏನೇನು ಮಾಡಿದ ಎನ್ನುವುದನ್ನೆಲ್ಲ ತಿಳಿಯಲು ಕಾದಂಬರಿಯನ್ನು ಓದಬೇಕು. 

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, February 9, 2022

ಕಾಡರಸಿ ಹೊರಟು ಕವಿತೆಯೊಂದಿಗೆ...

ಇಕೊ ಉಂಬರ್ತೊ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಕೊಟ್ಟ ಒಟ್ಟು ಆರು ಉಪನ್ಯಾಸಗಳ ಲಿಖಿತ ರೂಪದ ಕೃತಿ Six Walks in the Fictional Woods ಸುರುವಾಗುವುದು ಈ ಮಾತುಗಳಿಂದ:


"ನನ್ನ ಮುಂದಿನ ಉಪನ್ಯಾಸಗಳಲ್ಲಿ ನಾನು ಒಂದು ಅದ್ಭುತವಾದ ಕೃತಿಯ ಬಗ್ಗೆ ಮತ್ತೆ ಮತ್ತೆ ಉಲ್ಲೇಖಿಸುತ್ತೇನೆ. ಅದು ಇದುವರೆಗೆ ಬರೆಯಲ್ಪಟ್ಟ ಅದ್ಭುತವಾದ ಕೃತಿಗಳಲ್ಲೊಂದು. ಅದೇ ಜೆರಾರ್ಡ್ ಡಿ ನೆರ್ವಾಲನ "ಸಿಲ್ವಿ". ನನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ನಾನಿದನ್ನು ಓದಿದೆ ಮತ್ತು ಈಗಲೂ ಮತ್ತೆ ಮತ್ತೆ ಓದುತ್ತಿರುತ್ತೇನೆ. ನಾನು ಎಳೆಯನಾಗಿದ್ದಾಗಲೇ ಅದರ ಕುರಿತು ಒಂದು ದುರ್ಬಲವಾದ ಪ್ರಬಂಧವನ್ನು ಬರೆದಿದ್ದೆ. 1976ರಿಂದ ತೊಡಗಿ ನಾನು ಬೊಲ್ಗಾನಾ ಯೂನಿವರ್ಸಿಟಿಯಲ್ಲಿ ಅದರ ಕುರಿತು ಸರಣಿ ಸೆಮಿನಾರುಗಳನ್ನು ನಡೆಸಿದೆ ಮತ್ತು ಅದರ ಪ್ರತಿಫಲವೆಂಬಂತೆ ಮೂರು ಡಾಕ್ಟೋರಲ್ ಡೆಸರ್ಟೇಶನ್ ತಯಾರಿಸಿದ್ದಲ್ಲದೆ 1982ರಲ್ಲಿ ವಿಎಸ್ ಪತ್ರಿಕೆಯ ಒಂದು ವಿಶೇಷ ಸಂಚಿಕೆಯನ್ನೂ ಹೊರತಂದೆ. 1984ರಲ್ಲಿ ನಾನು ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಸಿಲ್ವಿ ಕುರಿತೇ ಒಂದು ಗ್ರಾಜ್ಯುಯೇಟ್ ಕೋರ್ಸ್ ನಿರ್ವಹಿಸಿದೆ ಹಾಗೂ  ತುಂಬ ಕುತೂಹಲಕರವಾದ ಕೆಲವು ಪ್ರಬಂಧಗಳು ಅಲ್ಲಿ ಬರೆಯಲ್ಪಟ್ಟವು. ಈಗಂತೂ ನನಗೆ ಈ ಕೃತಿಯ ಒಂದೊಂದು ಕಾಮಾ ಕೂಡ ಗೊತ್ತಿದೆ ಮಾತ್ರವಲ್ಲ ಆ ನಾವೆಲ್ಲಾದ ನಿಗೂಢ ತಂತ್ರವೂ ಅರ್ಥವಾಗಿದೆ. ಯಾವುದೇ ಒಂದು ಪಠ್ಯವನ್ನು ಎಳೆ ಎಳೆಯಾಗಿ ಸೀಳಿ, ಸೂಕ್ಷ್ಮದರ್ಶಕದಡಿಯಿಟ್ಟು ಓದುವುದರಿಂದ ಅದರ ಮ್ಯಾಜಿಕ್ ಸತ್ತು ಹೋಗುತ್ತದೆ ಎನ್ನುವ ಮಂದಿ ಎಷ್ಟೊಂದು ಬಾಲಿಶ ತೀರ್ಮಾನಕ್ಕೆ ಬಂದಿದ್ದಾರೆನ್ನುವ ಸತ್ಯವನ್ನು ನಾನು ನಲವತ್ತು ವರ್ಷಗಳಷ್ಟು ದೀರ್ಘ ಕಾಲ ಒಂದು ಪಠ್ಯವನ್ನು ಮತ್ತೆ ಮತ್ತೆ ಓದಿದ ಅನುಭವದಿಂದ ತಿಳಿದುಕೊಂಡಿದ್ದೇನೆ.  

ಪ್ರತಿ ಬಾರಿ ನಾನು ಸಿಲ್ವಿಯನ್ನು ಕೈಗೆತ್ತಿಕೊಂಡಾಗಲೂ, ಅದನ್ನು ತುಂಬ ಚೆನ್ನಾಗಿಯೇ ಬಲ್ಲೆನಾದ್ದರಿಂದ ಇದ್ದೀತು, ನನಗದರ ಒಟ್ಟಾರೆ ಆಕೃತಿಯ ಬಗ್ಗೆ ಅರಿವಿದ್ದರೂ, ಮತ್ತೆ ನಾನು ಅದರ ಮೋಹಕ್ಕೆ ವಶನಾಗಿದ್ದೇನೆ. ಪ್ರತಿ ಬಾರಿಯೂ ಇದೇ ಮೊದಲ ಬಾರಿ ಅದನ್ನು ಓದುತ್ತಿದ್ದೇನೋ ಎಂಬ ಭಾವಕ್ಕೆ ಒಳಗಾಗಿದ್ದೇನೆ." 

ಸಿಲ್ವಿ ಕಾದಂಬರಿಗಿಂತ ಉಂಬರ್ತೊನ ಮಾತುಗಳೇ ಹೆಚ್ಚು ಆಕರ್ಷಕವಾಗಿವೆ ಅನಿಸಿದರೆ ಯಾವ ಆಶ್ಚರ್ಯವೂ ಇಲ್ಲ. ಅಲ್ಲದೆ, ಈ ಕಾದಂಬರಿಯನ್ನು ಇಂಗ್ಲೀಷಿನಲ್ಲಿ ಓದುವುದರಿಂದ ಅದರ ಮೂಲ ಫ್ರೆಂಚ್ ಆವೃತ್ತಿಯ ರಸಾನುಭವ ಸಿಗುವುದು ಸಾಧ್ಯವೇ ಇಲ್ಲ ಎಂಬಂಥ ಮಾತುಗಳನ್ನು ಉಂಬರ್ತೊವೇ ಆಡಿರುವುದರಿಂದ, ಕಾದಂಬರಿ ಓದಿಯೂ ದಕ್ಕದಿರುವ ಭಾವ ಉಳಿದು ಬಿಡುತ್ತದೆ. ಪಾಸ್ಟ್ ಇಂಪರ್ಫೆಕ್ಟ್ ಟೆನ್ಸನ್ನು ಫ್ರೆಂಚಿನಲ್ಲಿ ಬಳಸಬಹುದಾದಷ್ಟು ಚೆನ್ನಾಗಿ ಇಂಗ್ಲೀಷಿನಲ್ಲಿ ಬಳಸಲು ಬರುವುದಿಲ್ಲ ಎನ್ನುವುದೇ ಇದಕ್ಕೆ ಉಂಬರ್ತೊ ಕೊಡುವ ಕಾರಣ. ಇಡೀ ಕಾದಂಬರಿಯ ಸೊಗಸು ನಿಂತಿರುವುದೇ ಈ ‘ಕಾಲ’ ಆಡುವ, ಆಡಿಸುವ ಮಾಯಕತೆಯಲ್ಲಿ. 

ಇಲ್ಲಿಯೇ ಉಲ್ಲೇಖಿಸಬೇಕಾದ ಇನ್ನೊಂದು ಮಾತು, ನೆನಪುಗಳ ಲೋಕವನ್ನೇ ಮೊಗೆಮೊಗೆದು ಕೊಡುವ ಒಟ್ಟು ಏಳು ಸಂಪುಟಗಳ ಕಾದಂಬರಿ (In Search of Lost Time) ಬರೆದ ಮಾರ್ಸೆಲ್ ಪ್ರೌಸ್ಟ್ ಕೂಡ ಸಿಲ್ವಿಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿದ್ದಾನೆಂಬುದು.

ಈಚೆಗೆ ಪೀಟರ್ ಆರ್ನರನ ಒಂದು ಪುಟ್ಟ ಕತೆಯನ್ನು ಓದಿದಾಗ ಮತ್ತೆ ಉಂಬರ್ತೊ ಮಾತುಗಳ ನೆನಪಾಗಿ ಮತ್ತೊಮ್ಮೆ ಆತನ ಉಪನ್ಯಾಸಗಳ ಈ ಕೃತಿಯನ್ನು ಓದತೊಡಗಿದೆ. ಪರಿಣಾಮ ಈ ಅನುವಾದದ ಪ್ರಯತ್ನ.

ಇತಾಲೊ ಕೆಲ್ವಿನೊ ಪುಸ್ತಕ If on a Winter’s Night a Traveler ಮತ್ತು ಇಕೊ ಉಂಬರ್ತೊನ  The Role of a Reader ಸರಿಸುಮಾರು ಏಕಕಾಲಕ್ಕೆ ಹೊರಬಂದ ಕೃತಿಗಳು. ಈಗ ಇವೆರಡನ್ನೂ ಓದಿದ ಯಾರಿಗೇ ಆದರೂ ಒಂದು ಇನ್ನೊಂದರೊಂದಿಗೆ ಸಂವಾದ ನಡೆಸುತ್ತಿರುವಂತೆ ಅನಿಸಿದರೆ ಅಶ್ಚರ್ಯವಿಲ್ಲ ಎನ್ನುತ್ತಾನೆ ಇಕೊ. ಹಾರ್ವರ್ಡ್ ಯುನಿವರ್ಸಿಟಿಯ ತನ್ನ ಆರು ಉಪನ್ಯಾಸಗಳ ಪುಸ್ತಕರೂಪ, Six Walks in the Fictional Woods ನ ಮೊದಲ ಉಪನ್ಯಾಸವನ್ನು ಇಕೊ ತೊಡಗುವುದು ಇತಾಲೊ ಕೆಲ್ವಿನೊ  ಕೃತಿಗಳ ಉಲ್ಲೇಖದೊಂದಿಗೇನೆ. ಇಲ್ಲಿ ಕೆಲ್ವಿನೊನ Six Memos for the Next Millennium ನ ಎರಡನೆಯ ಉಪನ್ಯಾಸವನ್ನು ಕುರಿತು ಆಡುತ್ತ, ಅದು ನಿರೂಪಣೆಯಲ್ಲಿ ಅಥವಾ ಕಥಾನಕದ ಚಲನೆಯಲ್ಲಿ ಇರಬೇಕಾದ ಒಂದು ‘ವೇಗ’ದ ಕುರಿತಾಗಿದೆ ಎನ್ನುತ್ತಾನೆ. 

ಕೆಲ್ವಿನೊನ  Italian Folktales ಸಂಗ್ರಹದ ಐವತ್ತೇಳನೆಯ ಕತೆಯನ್ನು ಇದಕ್ಕೆ ಇಕೊ ಉದಾಹರಣೆಯಾಗಿ ಕೈಗೆತ್ತಿಕೊಳ್ಳುತ್ತಾನೆ. ಈ ಕತೆಯಲ್ಲಿ ರಾಜ ಕಾಯಿಲೆ ಬೀಳುತ್ತಾನೆ. ಆಗ ರಾಜಪಂಡಿತರು, "ರಾಜನೇ, ನೀನು ಗುಣಹೊಂದಬೇಕಾದರೆ ಬೆಟ್ಟದ ಮೇಲಿನ ದೈತ್ಯ ನರಭಕ್ಷಕನ ಒಂದು ರೆಕ್ಕೆಯನ್ನು ಸಂಪಾದಿಸಬೇಕು. ಆದರೆ ನರಭಕ್ಷಕನ ದೈತ್ಯನ  ರೆಕ್ಕೆಯನ್ನು ತರುವುದು ಅಸಾಧ್ಯವಾದುದೇ ಸರಿ" ಎಂದು ಕೈಚೆಲ್ಲುತ್ತಾರೆ. ಯಥಾಪ್ರಕಾರ ರಾಜ ಡಂಗೂರ ಹೊಡಿಸಿ ದೈತ್ಯ ನರಭಕ್ಷಕ ದೈತ್ಯನ ರೆಕ್ಕೆಯನ್ನು ತರುವವನಿಗೆ ಭಾರೀ ಬಹುಮಾನವನ್ನು ಘೋಷಿಸುತ್ತಾನೆ. ಆದರೆ ಯಾರೂ ಈ ಸಾಹಸಕ್ಕೆ ಮುಂದಾಗುವುದಿಲ್ಲ. ಕೊನೆಗೆ ರಾಜನ ಪರಮಾಪ್ತ ಅಂಗರಕ್ಷಕ ವೀರನೊಬ್ಬ "ನಾನು ಹೋಗುತ್ತೇನೆ" ಎಂದು ಮುಂದೆ ಬರುತ್ತಾನೆ. ಅವನಿಗೆ "ಪರ್ವತದ ತುತ್ತ ತುದಿಯಲ್ಲಿ ಒಟ್ಟು ಏಳು ಗುಹೆಗಳಿವೆ, ಅವುಗಳಲ್ಲೊಂದರಲ್ಲಿ ಈ ನರಭಕ್ಷಕ ದೈತ್ಯ ವಾಸವಾಗಿದ್ದಾನೆ" ಎಂದು ದಾರಿ ಸೂಚಿಸಲಾಗುತ್ತದೆ. 

ಈ ನಿರೂಪಣೆಯಲ್ಲಿನ ಕ್ಷಿಪ್ರಗತಿಯ ಚಲನೆಯನ್ನು ಕೊಂಡಾಡುತ್ತ ಕೆಲ್ವಿನೊ, ‘ರಾಜನಿಗೆ ಬಂದ ರೋಗವೇನೆಂಬುದರ ಬಗ್ಗೆ ಯಾವ ಮಾತೂ ಇಲ್ಲ. ದೈತ್ಯನರಭಕ್ಷಕನಿಗೆ ರೆಕ್ಕೆಗಳೇಕಿರಬೇಕು ಎನ್ನುವುದರ ಬಗ್ಗೆ ಸಮಜಾಯಿಶಿ ಇಲ್ಲ. ಅಥವಾ ಪರ್ವತದ ತುದಿಯಲ್ಲಿದ್ದ ಗುಹೆಗಳಾದರೂ ಹೇಗಿದ್ದವು ಎನ್ನುವ ವಿವರ ಇಲ್ಲ.’ ಎನ್ನುತ್ತಲೇ ನಿರೂಪಣೆಯಲ್ಲಿನ ನಿಧಾನಗತಿಯ ಅಗತ್ಯ, ಚೆಲುವು ಮತ್ತು ಉದ್ದೇಶಗಳ ಬಗ್ಗೆ ಯಾವುದೇ ರಾಜಿಯಿಲ್ಲ ಎನ್ನುತ್ತಾನೆ. ಇಲ್ಲಿ ಇಕೊ ತಾನು ಈ ಲಿಂಗರಿಂಗ್ ಬಗ್ಗೆ ಮೂರನೆಯ ಉಪನ್ಯಾಸದಲ್ಲಿ ಚರ್ಚಿಸುತ್ತೇನೆಂದೂ ಸದ್ಯಕ್ಕೆ ನಿರೂಪಣೆಯ ವೇಗ ಎಷ್ಟು ಮುಖ್ಯವೆಂಬುದರತ್ತ ಗಮನ ಹರಿಸೋಣವೆಂದೂ ಹೇಳುತ್ತಾನೆ. ಪಠ್ಯವೊಂದು ಹೇಗೆ ಸದಾ "ಆಲಸ್ಯವನ್ನು ಹೊದ್ದುಕೊಂಡ ಆಹ್ವಾನ"ವಾಗಿರುತ್ತದೆ ಎನ್ನುವುದರತ್ತ ಇಲ್ಲಿ ಇಕೊ ಹೆಚ್ಚು ಗಮನ ಕೇಂದ್ರೀಕರಿಸುತ್ತಾನೆ. 

ಚಕಚಕನೆ ಘಟಿಸುವ ಘಟನೆಗಳು ಮತ್ತು ಚುರುಕಾದ ಪಾತ್ರಗಳ ಒಂದು ಜಗತ್ತನ್ನು ಕಟ್ಟಿಕೊಡುವ ಈ ಬಗೆಯ ಕಥಾನಕಗಳು ಅದೇ ಜಗತ್ತಿನ ಬಗ್ಗೆ ಬಹಳಷ್ಟನ್ನು ವಿವರಿಸಲು ಹೋಗುವುದಿಲ್ಲ. ಒಂದಿಷ್ಟು ವಿವರಗಳನ್ನು ಕೊಡುತ್ತದೆ ಮತ್ತು ಉಳಿದವನ್ನು ಓದುಗನೇ ಕಟ್ಟಿಕೊಳ್ಳಲು ಬಿಟ್ಟು ಬಿಡುತ್ತದೆ. ಈ ಪಠ್ಯ ಒಂದು ಆಲಸ್ಯವನ್ನು ಹೊದ್ದುಕೊಂಡ ಆಹ್ವಾನ, ಓದುಗನಿಗೆ. ಕಥನ ಬಿಟ್ಟುಬಿಟ್ಟ ವಿವರಗಳನ್ನೆಲ್ಲ ಅವನೇ ತನ್ನ ಕೈಯಿಂದ ಹಾಕಿ ತುಂಬಿಕೊಳ್ಳಬೇಕಿಲ್ಲಿ. 

ಎಲ್ಲಾ ವಿವರಗಳನ್ನೂ ಪಠ್ಯವೇ ಕೊಡುತ್ತ ಹೋಗುವುದೇ ಆದಲ್ಲಿ ಅದಕ್ಕೊಂದು ಕೊನೆಯಿದೆಯೆ? ಉದಾಹರಣೆಗೆ ನಾನು ನಿಮ್ಮಲ್ಲಿಗೆ ಬರುತ್ತಿದ್ದೇನೆ ಎಂದು ಹೇಳುವಾಗ ನಾನು ಹೇಗೆ ಬರುತ್ತಿದ್ದೇನೆ ಎನ್ನುವುದನ್ನೂ ಹೇಳುವ ಅಗತ್ಯವಿದೆಯೆ? ಎಲ್ಲಿ ಅಗತ್ಯವಿರುವ ಕನಿಷ್ಠ ವಿವರ ಬೇಕೋ ಅಲ್ಲಿ ಅದನ್ನು ಕೊಡದೇ ಇರುವುದು ಮತ್ತು ಎಲ್ಲಿ ಕನಿಷ್ಠ ವಿವರ ಸಾಲುವುದೋ ಅಲ್ಲಿ ಅನಗತ್ಯವಾದ ಮಾತು, ವಿವರ ತುರುಕುವುದು ಎರಡರ ಕುರಿತು ಇಕೊ ಉದಾಹರಣೆಗಳನ್ನು ಕೊಡುತ್ತ ಹೋಗುತ್ತಾನೆ. 

ಅವನು ಟಾಂಗಾದವನತ್ತ ಒಟ್ಟಾರೆ ಕೈಬೀಸುತ್ತಾನೆ. ಟಾಂಗಾದ ಮುದುಕ ಕಷ್ಟಪಟ್ಟು ತನ್ನ ಟಾಂಗಾದಿಂದ ಇಳಿದು ಬಂದು, "ಏನಾಗಬೇಕಿತ್ತು ಸ್ವಾಮೀ" ಎಂದಾಗ "ಅರೆ, ನನಗೆ ಟಾಂಗಾ ಬೇಕು, ಬಾಡಿಗೆಗೆ" ಎನ್ನುತ್ತಾನೆ. "ಓಹ್! ನಾನು ನಿಮಗೇನೋ ಕೇಳುವುದಿದೆ ಅಂದುಕೊಂಡೆ" ಎನ್ನುವ ಮುದುಕ ಅವನನ್ನು ಟಾಂಗಾಕ್ಕೆ ಹತ್ತಿಸಿಕೊಳ್ಳುತ್ತಾನೆ. ಟಾಂಗಾವಾಲ "ಎಲ್ಲಿಗೆ ಸ್ವಾಮಿ ಹೋಗಬೇಕು" ಎಂದರೆ ಅವನು "ನಾನು ಹೇಳುವುದಿಲ್ಲ" ಎನ್ನುತ್ತಾನೆ. ಟಾಂಗಾ ನಿಂತಲ್ಲಿಂದ ಕದಲುವುದಿಲ್ಲ. ಇನ್ನು ಸಾಧ್ಯವಿಲ್ಲ ಎನಿಸಿದ ಬಳಿಕ ಅವನು "ಹೊರಡಯ್ಯ, ಚಂಗಯ್ಯಸ್ವಾಮಿ ಬೀಡಿಗೆ" ಎನ್ನುತ್ತಾನೆ. ಟಾಂಗಾ ಹೊರಡುತ್ತದೆ ಆದರೆ ಟಾಂಗಾವಾಲನಿಗೆ ಅನುಮಾನ. "ಚಂಗಯ್ಯಸ್ವಾಮಿ ಬೀಡಿಗಾ? ಈಗ ಹೊರಟರೆ ನಾವಲ್ಲಿಗೆ ತಲುಪುವಾಗ ನಡುರಾತ್ರಿಯಾಗುತ್ತಲ್ಲ ಸ್ವಾಮೀ" ಎನ್ನುತ್ತಾನೆ. "ಅದು ಸರಿ. ಒಂದು ಕೆಲಸ ಮಾಡು, ನಾಳೆ ನಸುಕಿಗೇ ಬಂದುಬಿಡು, ಆಗ ಹೊರಡೋಣ" ಎನ್ನುತ್ತಾನೆ. "ಟಾಂಗಾದಲ್ಲೇ?" ಎನ್ನುತ್ತಾನೆ ಟಾಂಗಾವಾಲ. ಅವನು ಸ್ವಲ್ಪ ಹೊತ್ತು ಯೋಚಿಸುವವನಂತೆ ಸುಮನಿದ್ದು ನಂತರ "ಹೌದು, ಅದೇ ಒಳ್ಳೇದು." ಎನ್ನುತ್ತಾನೆ. ಮರಳಿ ಹೋಟೇಲು ಹೊಗುವ ಮುನ್ನ ಅವನು ಮತ್ತೊಮ್ಮೆ ನಿಂತು, "ಅಂದಹಾಗೆ, ಕುದುರೇನ ಮರೀಬೇಡ ಮಹರಾಯ" ಎನ್ನುತ್ತಾನೆ. "ನಿಜಕ್ಕೂ ಹೌದಾ ಸ್ವಾಮಿ ಹೊರಡೋದು?" ಎನ್ನುತ್ತಾನೆ ಟಾಂಗಾವಾಲ. ಅವನಿಗೇಕೋ ಇನ್ನೂ ಅನುಮಾನವೇ. "ಸರಿ, ಹಾಗಿದ್ದರೆ ನಿನ್ನಿಷ್ಟ" ಎಂದು ಅವನು ಹೊಟೇಲಿನ ಒಳಹೋಗುತ್ತಾನೆ.

- ಇದು ಒಂದು ಉದಾಹರಣೆ. ಇಲ್ಲಿ ಮೊದಲಿಗೆ ಎಷ್ಟು ವಿವರ ಇರಬೇಕಿತ್ತೋ ಅಷ್ಟು ಇಲ್ಲದೇ ಉಂಟಾಗುವ ಗೊಂದಲ ಇದ್ದರೆ, ಕೊನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಿವರ ಬರುವುದೇ ಗೊಂದಲಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸಿ.

"ಅದೊಂದು ಸುಂದರವಾದ ಮುಸ್ಸಂಜೆ. ತುಂಬ ಚಳಿ ಹವೆಯಿದ್ದರೂ ಅದು ಚೆನ್ನಾಗಿತ್ತು. ಆಗಸದಲ್ಲಿ ಚಂದ್ರ ತುಂಬ ಎತ್ತರಕ್ಕೆ ಬಂದಿದ್ದರಿಂದ ಟುರಿನ್ ನಗರದ ಬೀದಿಗಳೆಲ್ಲ ಅದೇನು ಹಾಡು ಹಗಲೋ ಎಂಬಂತೆ ಬೆಳಗುತ್ತಿದ್ದವು. ನಿಲ್ದಾಣದ ಗಡಿಯಾರ ಆಗ ಏಳು ಗಂಟೆಯಾಗಿದೆ ಎನ್ನುವುದನ್ನು ಸೂಚಿಸುತ್ತಿತ್ತು. ಎರಡು ಎಕ್ಸ್‌ಪ್ರೆಸ್ ರೈಲುಗಳು ಸಂಧಿಸುವ ಸಮಯವಾಗಿದ್ದರಿಂದ ರೈಲ್ವೇ ನಿಲ್ದಾಣದ ಕಟ್ಟಡದ ಕಡೆಯಿಂದ ಭಾರೀ ಸದ್ದು ಕೇಳಿ ಬರುತ್ತಿತ್ತು. ಒಂದು ರೈಲು ಆ ನಿಲ್ದಾಣದಿಂದ ಹೊರಡುವುದಿತ್ತು, ಇನ್ನೊಂದು ನಿಲ್ದಾಣಕ್ಕೆ ಪ್ರವೇಶಿಸಲಿತ್ತು."

ಇದು ಕಾದಂಬರಿಯೊಂದರ ಆರಂಭದ ಪ್ಯಾರಾ. ಅತ್ಯಂತ ಕೆಟ್ಟ ನಿರೂಪಣೆ ಎಂದು ಹೇಳುವ ಇಕೊ ‘ವೇಗ’ ನಿರೂಪಣೆಯ ಒಂದು ದೊಡ್ಡ ಧನಾತ್ಮಕ ಅಂಶವೆನ್ನುವುದನ್ನು ಅರಿತಿದ್ದರೂ ಇಲ್ಲಿ ಕಾದಂಬರಿಯೇ ಇನ್ನೂ ಆರಂಭವಾಗಿರಲಿಲ್ಲ ಎನ್ನುತ್ತಾನೆ. ಇದಕ್ಕೆ ಇಕೊ ಕೊಡುವ ತತ್ಸಂವೇದಿ ಆರಂಭದ ಉದಾಹರಣೆ ಇದು:

"ಅನಪೇಕ್ಷಿತ ಕನಸುಗಳ ಒಂದು ರಾತ್ರಿ ಮುಗಿದು ಮುಂಜಾನೆ ಎದ್ದಿದ್ದೇ ಹಾಸಿಗೆಯಲ್ಲೇ ತಾನೊಂದು ದೈತ್ಯಗಾತ್ರದ ಹುಳುವಾಗಿ ಬಿಟ್ಟಿರುವುದು ಗ್ರಿಗೊರ್ ಸಾಂಸನ ಅರಿವಿಗೆ ಬಂತು."

ಓದುಗರು ತಕ್ಷಣವೇ ಕೇಳಬಹುದು, ಅದು ಹೇಗೆ ಅವನು ಹುಳುವಾಗಿ ಬದಲಾದ, ಮಲಗೋ ಮುನ್ನ ಅವನು ಅದೇನು ತಿಂದಿದ್ದ  ಇತ್ಯಾದಿ.

Reading and Understanding ಎಂಬ ಕೃತಿಯಲ್ಲಿ Roger Schank ಈ ಕತೆಯನ್ನು ಉದ್ಧರಿಸಿದ್ದಾನೆ.

ಜಾನ್ ಮೇರಿಯನ್ನು ತುಂಬ ಪ್ರೀತಿಸುತ್ತಿದ್ದನಾದರೂ ಮೇರಿಗೆ ಅವನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಒಂದು ದಿನ ಒಂದು ಡ್ರ್ಯಾಗನ್ ಮೇರಿಯನ್ನು ಅವಳ ಅರಮನೆಯಿಂದ ಹೊತ್ತೊಯ್ಯಿತು. ತಕ್ಷಣವೇ ಜಾನ್ ತನ್ನ ಕುದುರೆಯನ್ನೇರಿ ಅದನ್ನು ಹಿಂಬಾಲಿಸಿದ ಮತ್ತು ಡ್ರ್ಯಾಗನನ್ನು ಹೊಡೆದುರುಳಿಸಿದ. ಮೇರಿ ಅವನನ್ನು ಮದುವೆಯಾಗಲು ಒಪ್ಪಿದಳು. ಅವರಿಬ್ಬರೂ ಬಹುಕಾಲ ಸುಖವಾಗಿ ಬಾಳಿದರು.
 
ಮೂರು ವರ್ಷದ ಪುಟ್ಟ ಬಾಲೆಗೆ ಈ ಕತೆ ಹೇಗೆ ಅರ್ಥವಾಗುತ್ತದೆ ಎನ್ನುವುದನ್ನು ತಿಳಿಯಬೇಕಾಗಿತ್ತವನಿಗೆ. ಅವನು ಮಗುವನ್ನು ಕೇಳುತ್ತಾನೆ,

ಪ್ರಶ್ನೆ: ಜಾನ್ ಏಕೆ ಡ್ರ್ಯಾಗನನ್ನು ಕೊಲ್ಲುತ್ತಾನೆ?
ಉತ್ತರ : ಅದು ಕೆಟ್ಟ ಡ್ರ್ಯಾಗನ್
ಪ್ರಶ್ನೆ: ಅದೇಕೆ ಕೆಟ್ಟ ಡ್ರ್ಯಾಗನ್?
ಉತ್ತರ: ಅದು ಅವನಿಗೆ ಹೊಡೆಯುತ್ತಿತ್ತು
ಪ್ರಶ್ನೆ: ಅದು ಅವನಿಗೆಲ್ಲಿ ಹೊಡೆಯಿತು?
ಉತ್ತರ : ಅದು ಬೆಂಕಿ ಉಗುಳುತ್ತೆ
ಪ್ರಶ್ನೆ: ಮೇರಿ ಏಕೆ ಮದುವೆಯಾಗಲು ಒಪ್ಪಿದಳು?
ಉತ್ತರ : ಅವಳಿಗೆ ಜಾನ್ ಎಂದರೆ ತುಂಬಾ ಪ್ರೀತಿ ಮತ್ತು ಜಾನ್‌ಗೆ ಮೇರಿ ಎಂದರೆ ತುಂಬ ತುಂಬ ಪ್ರೀತಿ...
ಪ್ರಶ್ನೆ: ಹಾಗಿದ್ದರೆ ಅವಳೇಕೆ ಮೊದಲು ಒಪ್ಪಲಿಲ್ಲ?
ಉತ್ತರ: ಅದು ಗೊತ್ತಿಲ್ಲ
ಪ್ರಶ್ನೆ: ಹೋಗಲಿ, ನಿನಗೇನು ಅನಿಸುತ್ತೆ
ಉತ್ತರ: ಬಹುಶಃ ಆಗ ಅವಳಿಗೆ ಮನಸ್ಸಿರಲಿಲ್ಲ. ಅವನು ತುಂಬಾ ಕೇಳಿಕೊಂಡ, ಮತ್ತೆ ಮತ್ತೆ ಮದುವೆಯಾಗು ಅಂತ ಕೇಳಿದ. ಆಮೇಲೆ ಅವಳಿಗೆ ಸಹ ಮನಸ್ಸಾಯ್ತು...

ಇಲ್ಲಿ ಬಹುಶಃ ಪುಟ್ಟ ಹುಡುಗಿಯ ಮನಸ್ಸಲ್ಲಿ ಡ್ರ್ಯಾಗನ್ ಎಂದರೆ ಬಾಯಿ ಮೂಗುಗಳಲ್ಲಿ ಸದಾ ಬೆಂಕಿಯುಗುಳುವ ಪ್ರಾಣಿ ಎಂಬ ಪೂರ್ವಗ್ರಹವಿತ್ತು. ನಿರೂಪಣೆಯಲ್ಲಿಲ್ಲದ ಅಂಶಗಳು ಕತೆಯಲ್ಲಿ ಸೇರಿಕೊಂಡು ಒಂದು ಬಿಂದುವನ್ನು ವೃತ್ತವಾಗಿಸುವುದು ಬಹುಶಃ ಹೀಗೆ. ಬೋರ್ಹೆಸ್ ಪ್ರಕಾರ ವೂಡ್ಸ್ ಎಂದರೆ ಕಾಡು ಎಂದೇ ಆಗಬೇಕಿಲ್ಲ. ಪಾರ್ಕಿನಲ್ಲಿ ಗಿಡಗಂಟಿಗಳ ನಡುವೆ ನಡೆದಾಡಲು ಮಾಡುವ ಹಾದಿ ಕೂಡ ಆಗಬಹುದು. ಎಲ್ಲ ಕಡೆ ಅಷ್ಟೊಂದು ಅಚ್ಚುಕಟ್ಟಾದ ಹಾದಿಯೇನೂ ಇರುವುದಿಲ್ಲ. ನಡೆದಾಡುವ ವ್ಯಕ್ತಿ ತನ್ನಿಷ್ಟದ ಹಾದಿ ಮಾಡಿಕೊಂಡು ಓಡಾಡಿದರೂ ಅದರಲ್ಲೇನೂ ತಪ್ಪಿಲ್ಲ. ಓದುಗ ಕೂಡ ಹಾಗೆಯೇ. ತಾನು ಓದುತ್ತಿರುವ ಪಠ್ಯದಲ್ಲಿ ಕೆಲವೊಮ್ಮೆ ತಾನೇ ಕೆಲವೊಂದು ಹಾದಿಗಳನ್ನು ಮಾಡಿಕೊಂಡು ಓಡಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾನೆ. ಆದರೆ ಸಾಮಾನ್ಯವಾಗಿ ಪಠ್ಯವೊಂದು ಓದುಗ ಯಾವ ದಾರಿಯಲ್ಲಿ ನಡೆದಾಡಬೇಕೆಂಬುದನ್ನು ತಾನೇ ನಿರ್ಧರಿಸಿ ಸೂಚಿಸುತ್ತಾ ಇರುತ್ತದೆ. ಪ್ರತಿಬಾರಿ ಉಪನ್ಯಾಸಕಾರ ತನ್ನ ಮಾತು, ವಾಕ್ಯ ಮುಗಿಸುವ ಪದ ನುಡಿಯುವುದಕ್ಕೂ ಮುನ್ನವೇ ಕೇಳುಗ ಅವನು ಇದನ್ನೇ ಹೇಳಲಿದ್ದಾನೆ ಎಂದು ತನ್ನೊಳಗೆ ತಾನೇ (ತನಗರಿವಿಲ್ಲದೇನೆ) ಪಂದ್ಯಕಟ್ಟುತ್ತಿರುತ್ತಾನೆ. ಅವನು ಇದನ್ನು ಹೇಳಲಿದ್ದಾನೆ, ಅಥವಾ ಅದನ್ನು, ಅಥವಾ ಈ ಎಲ್ಲ ಸಾಧ್ಯತೆಗಳಲ್ಲಿ ಯಾವುದನ್ನು ಆರಿಸಲಿದ್ದಾನೆ ಎಂದಾದರೂ ಮುಂಗಾಣುತ್ತಲೇ ಇರುತ್ತೇವೆ. 

ಕೆಲವೊಮ್ಮೆ ನಿರೂಪಕ ತಾನು ನಿರ್ಧಾರಾತ್ಮಕವಾದ ಏನನ್ನೂ ಹೇಳದೆ, ಓದುಗನೇ ಅದನ್ನು ನಿರ್ಣಯಿಸಲಿ ಎಂದು ಬಿಟ್ಟು ಬಿಡುವುದೂ ಉಂಟು. 

ಇಲ್ಲಿಂದ ಮುಂದೆ ಇಕೊ ತಿರುಗುವುದು ಒಂದು ಕಥಾನಕದ ನಿರೂಪಕನ ಮತ್ತು ಅದರ ಓದುಗನ ಪಾತ್ರದ ವಿಚಾರಕ್ಕೆ. ಲೇಖಕನೊಬ್ಬ ತನ್ನ ಕೃತಿಯಲ್ಲಿ ಕಲ್ಪಿತ ಪಾತ್ರವೊಂದನ್ನು ಸೃಷ್ಟಿಸಿ, ಆ ಕಲ್ಪಿತ ಪಾತ್ರ ಲೇಖಕನ ಹೆಸರಿನ ಲೇಖಕನ ಕುರಿತೇ ಕತೆ ಹೇಳತೊಡಗಿದರೆ, ಕಥಾನಕ ಉದ್ದೇಶಿಸುತ್ತಿರುವ ವ್ಯಕ್ತಿ ನಿಜ ಜೀವನದ ಲೇಖಕ ಆಗಿರದಿದ್ದಾಗ್ಯೂ ಅಂಥ ಒಂದು ಪರಿಕಲ್ಪನೆ ಓದುಗನಲ್ಲಿ ಮೂಡದೇ ಇರಲು ಸಾಧ್ಯವೆ? ಲೇಖಕನ ಉದ್ದೇಶ ಕೂಡ ಅದೇ ಆಗಿರದೇ ಇರಲು ಸಾಧ್ಯವೆ ಎಂದೆಲ್ಲ ಪ್ರಶ್ನಿಸುತ್ತ ಇಕೊ ಹೊರಳುವುದು ಫ್ರೆಂಚ್ ಕಾದಂಬರಿಕಾರ Gérard de Nerval ನ ಕೃತಿ ಸಿಲ್ವಿಗೆ. 

ಇಲ್ಲಿಂದ ಮುಂದೆ ಇಕೊ ಉಂಬರ್ಟೊ ಮಾತುಗಳನ್ನೇ ಅನುವಾದಿಸುವ ಪ್ರಯತ್ನ ಮಾಡುತ್ತೇನೆ.

ಇಲ್ಲಿ, ಆರಂಭದಲ್ಲಿ ಪಾಸ್ಟ್ ಇಂಪರ್ಫೆಕ್ಟ್ ಟೆನ್ಸ್ ಬಳಸುವ ನಿರೂಪಕ, ಅಂದರೆ ನಾವು ನೆರ್ವಾಲ್ ಎಂದೇ ಗುರುತಿಸಲು ನಿರ್ಧರಿಸಿದ ನಿರೂಪಕ-ನ ಧ್ವನಿ ನಮಗೆ ಒಂದು ನಿರ್ದೇಶನವೀಯುತ್ತಿದೆ. ಅದರ ಪ್ರಕಾರ ನಾವು ಒಂದು ಸ್ಮೃತಿಯ ಲೋಕವನ್ನು ಪ್ರವೇಶಿಸಲು ಸಿದ್ಧರಾಗಬೇಕಿದೆ. ನೆನಪುಗಳಿಂದಲೇ ಕಟ್ಟಲಾದ ಒಂದು ಹೊಸ ಜಗತ್ತಿನ ಪ್ರವೇಶಕ್ಕೆ ತಯಾರಾಗಬೇಕಿದೆ. ನಾಲ್ಕು ಪುಟಗಳ ನಂತರ ಇದ್ದಕ್ಕಿದ್ದಂತೆ ನಿರೂಪಣೆ ಪಾಸ್ಟ್ ಇಂಫರ್ಫೆಕ್ಟ್ ಟೆನ್ಸ್ ಬಿಟ್ಟುಕೊಟ್ಟು, ಸರಳ ಭೂತಕಾಲದ ವಿವರಗಳಿಗೆ ಹೊರಳಿ, ಥಿಯೇಟರ್‌ನಿಂದ ಹೊರಬಿದ್ದ ಬಳಿಕ ಕ್ಲಬ್ಬಿನಲ್ಲಿ ಕಳೆದ ಕಾಲದ ನೆನಪುಗಳ ಬಗ್ಗೆ ಹೇಳಲಾರಂಭಿಸುತ್ತದೆ. ಇಲ್ಲಿಯೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ, ಅರ್ಥಮಾಡಿಕೊಳ್ಳಬೇಕಾದ ಸಂಗತಿಯೆಂದರೆ, ನಾವು ನಿರೂಪಕನ ಸ್ಮೃತಿಕೋಶದ ಜಗತ್ತಿನ ಕುರಿತೇ ಕೇಳುತ್ತಿದ್ದೇವೆ ಮತ್ತು ಸದ್ಯಕ್ಕೆ ಅವನು ಒಂದು ಪುಟ್ಟ ಸನ್ನಿವೇಶಕ್ಕೆ ಸೀಮಿತವಾಗಿ ಅದನ್ನು ಹೇಳುತ್ತಿದ್ದಾನೆ ಎನ್ನುವುದು. ಈ ಪುಟ್ಟ ಸನ್ನಿವೇಶದಲ್ಲಿ ಅವನು ಒಬ್ಬ ಗೆಳೆಯನೊಂದಿಗೆ ತಾನು ಒಂದಷ್ಟು ಕಾಲ ಮೋಹಿಸಿದ್ದ, ಆದರೆ ಯಾವತ್ತೂ ಅವಳನ್ನು ಸಂಪರ್ಕಿಸದೇ ದೂರವೇ ಉಳಿದ ಓರ್ವ ನಟಿಯ ಕುರಿತು ಮಾತನಾಡುತ್ತ, ತಾನು ಮೋಹಿಸಿದ್ದು ಅವಳನ್ನಲ್ಲ, ಬದಲಿಗೆ ತನ್ನದೇ ಮನಸ್ಸಿನಲ್ಲಿ ತಾನೇ ಸೃಷ್ಟಿಸಿಕೊಂಡಿದ್ದ ಕೇವಲ ಒಂದು ಪ್ರತಿಮೆಯನ್ನಾಗಿತ್ತು ಎಂಬ ಸಂಗತಿಯನ್ನು ಕಂಡುಕೊಳ್ಳುತ್ತಾನೆ.  ಅದೇನೇ ಇದ್ದರೂ, ಈಗ, ಭೂತಕಾಲದ ಕಥನದಿಂದಲೇ ವರ್ತಮಾನ ಎಂದು ಪರಿಗಣಿಸಬಹುದಾದ ಈ ಕ್ಷಣ, ಅವನು ದಿನಪತ್ರಿಕೆಯನ್ನು ಓದುತ್ತ, ತಾನು ಬಾಲ್ಯವನ್ನು ಕಳೆದ ಊರು ಲೊಯ್ಸಿಯಲ್ಲಿ ಆಗಿನ್ನೂ ಪುಟ್ಟ ಬಾಲಕನಾಗಿದ್ದಾಗ, ಅಲ್ಲಿನ ಸಾಂಪ್ರದಾಯಿಕ  ಬಿಲ್ಲುಗಾರರ ಜಾತ್ರೆಯ ಸಂಜೆಯೇ  ತುಂಬ ಸುಂದರಿಯಾಗಿದ್ದ ಸಿಲ್ವಿಯಲ್ಲಿ ಅನುರಕ್ತನಾಗಿಬಿಟ್ಟಿದ್ದೆ ಎನ್ನುವುದೇ ವಾಸ್ತವ ಎಂದು ಕಂಡುಕೊಳ್ಳುತ್ತಾನೆ.

ಎರಡನೆಯ ಅಧ್ಯಾಯದಲ್ಲಿ ಕಥೆ ಮತ್ತು ಇಂಪರ್ಫೆಕ್ಟ್ ಟೆನ್ಸ್‌ಗೆ ಮರಳುತ್ತದೆ. ನಿರೂಪಕ ಒಂದಷ್ಟು ಕಾಲ ಅರೆನಿದ್ದೆಯಂಥ ಸ್ಥಿತಿಯಲ್ಲಿ ಕಳೆಯುತ್ತಾನೆ ಹಾಗೂ ಆಗ ಅವನು ಮೇಲೆ ಹೇಳಿದಂಥದ್ದೇ ಒಂದು ಜಾತ್ರೆಯ, ಅವನ ಬಾಲ್ಯದ ಕಾಲದ ಜಾತ್ರೆ ಎಂದೇ ನಾವು ಭಾವಿಸಬಹುದಾದ ಜಾತ್ರೆಯ ನೆನಪುಗಳಿಗೆ, ಜಾರುತ್ತಾನೆ. ಅವನು ತನ್ನನ್ನು ಪ್ರೀತಿಸಿದ ಸಿಲ್ವಿಯನ್ನು ನೆನೆಯುತ್ತಾನೆ. ಹಾಗೆಯೇ ಆವತ್ತು ಸಂಜೆ ಹುಲ್ಲುಹಾಸಿನಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದ ಮಾದಕ ಸೌಂದರ್ಯದ ಚೆಲುವೆ ಅಡ್ರಿನಾಳನ್ನೂ ನೆನೆಯುತ್ತಾನೆ.  ಅವಳು ಹೆಚ್ಚೂ ಕಡಿಮೆ ತೀರ ಅನಿರೀಕ್ಷಿತವಾಗಿ, ದಿಡೀರ್ ಪ್ರತ್ಯಕ್ಷಗೊಂಡಳೋ ಎಂಬಂತೆ ಕಾಣಿಸಿಕೊಂಡು, ಕಾನ್ವೆಂಟಿನ ಗೋಡೆಗಳ ಹಿಂದೆ ಮತ್ತೆಂದೂ ಕಾಣಿಸಿಕೊಳ್ಳದ ಹಾಗೆ ಮಾಯವಾಗಿ ಬಿಡುತ್ತಾಳೆ. ನಿದ್ದೆ ಮತ್ತು ವಾಕಿಂಗ್ ಎರಡರ ನಡುವೆ ನಮ್ಮ ನಿರೂಪಕ ತಾನಿನ್ನೂ ನಿರರ್ಥಕವಾಗಿ ಅದೇ ಮಾನಸಿಕ ಪ್ರತಿಮೆಯನ್ನು ಪ್ರೇಮಿಸುತ್ತಿರುವೆನೇ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುತ್ತಾನೆ. ಹೀಗೆಯೇ ಎಂದು ವಿವರಿಸಲಾಗದ ಒಂದು ನೆಲೆಯಲ್ಲಿ ಅಡ್ರಿನಾ ಮತ್ತು ನಟಿ ಇಬ್ಬರೂ ಒಬ್ಬರೇ ಇರಬಹುದೇ, ಅದೇ ತನ್ನ ಮನಸ್ಸಿನ ಪ್ರತಿಮಾಬಿಂಬ ಇರಬಹುದೇ ಎಂಬ ಅನುಮಾನ ಕೂಡ ಇಲ್ಲಿದೆ.

ಮೂರನೆಯ ಅಧ್ಯಾಯದಲ್ಲಿ ನಿರೂಪಕನಿಗೆ ತನ್ನ ಬಾಲ್ಯಕಾಲದ ಸ್ಮೃತಿಗಳು ತುಂಬಿರುವ ಜಗತ್ತಿಗೆ ಮರಳಿ ಹೋಗಬೇಕೆಂಬ ತೀವ್ರವಾದ ಆಸೆ, ಒತ್ತಡ ಉಂಟಾಗುತ್ತದೆ. ಅವನು ಮನಸ್ಸಿನಲ್ಲೇ ಹಾಕಿದ ಲೆಕ್ಕಾಚಾರಗಳ ಪ್ರಕಾರ ಅವನು ಇನ್ನೇನು ಸೂರ್ಯೋದಯವಾಗಲಿದೆ ಎನ್ನುವ ಹೊತ್ತಲ್ಲಿ ಅಲ್ಲಿಗೆ ತಲುಪುತ್ತಾನೆ. ಹೊರಬಂದು ಒಂದು ಕುದುರೆಗಾಡಿಯನ್ನು ಏರಿ ಹೊರಡುತ್ತಾನೆ. ಮತ್ತು ಈ ಪ್ರಯಾಣದ ಸಂದರ್ಭದಲ್ಲಿ , ಅವನು ರಸ್ತೆ, ಗುಡ್ಡಬೆಟ್ಟಗಳು, ಬಾಲ್ಯದ ತನ್ನ ಪುಟ್ಟ ಊರು ಗಮನಿಸುತ್ತ ಸಾಗಿದಂತೆ ಒಂದು ಹೊಸ ಸ್ಮೃತಿಲೋಕವೇ ತೆರೆದುಕೊಳ್ಳುತ್ತದೆ. ಈ ಸ್ಮೃತಿಲೋಕದ ನೆನಪುಗಳು ತೀರ ಹಳೆಯವೇನಲ್ಲ, ಅವನ ಈ ಪ್ರವಾಸ ಕಾಲಕ್ಕೆ ಸುಮಾರು ಮೂರು ವರ್ಷಗಳಷ್ಟು ಹಿಂದಿನ ಕಾಲಮಾನಕ್ಕೆ ಸೇರಿದ ನೆನಪುಗಳವು.  ಈ ಹೊಸ ನೆನಪುಗಳ ಪ್ರವಾಹಕ್ಕೆ ಒಂದು ಪ್ರವೇಶಿಕೆಯೆಂಬಂತೆ ಇಲ್ಲೊಂದು ಸಾಲು ಬರುತ್ತದೆ, ಅದನ್ನು ನಾವು ಎಚ್ಚರಿಕೆಯಿಂದ ಓದಿದರೆ, ಅದೆಷ್ಟು ಅದ್ಭುತವಾಗಿದೆ ಎಂದು ತಿಳಿಯುತ್ತದೆ:  

"ಕುದುರೆಗಾಡಿಯು ಈ ಏರುಹಾದಿಯಲ್ಲಿ ಸಾಗುತ್ತಿರುವಾಗ ನಾವು ನಾನಿಲ್ಲಿಗೆ ಆಗಾಗ ಬರುತ್ತಿದ್ದ ನೆನಪುಗಳನ್ನು ಒಮ್ಮೆ ಸ್ಮರಿಸಿಕೊಳ್ಳೋಣ." 

ಹೀಗೆ ನಮ್ಮನ್ನು ನೆನಪಿಸಿಕೊಳ್ಳಲು ಆಹ್ವಾನಿಸಿ ಮಾತನಾಡುತ್ತಿರುವ (ಅಥವಾ ಬರೆಯುತ್ತಿರುವ) ವ್ಯಕ್ತಿ ಅದಾರು? ನಿರೂಪಕನೆ? ಆದರೆ ನಮ್ಮ ನಿರೂಪಕ ನಿರೂಪಣೆಯನ್ನು ತೊಡಗಿದ ಹೊತ್ತಲ್ಲಿ ಹೇಳಿದ್ದೇನು? ಹಲವು ವರ್ಷಗಳ ಹಿಂದೆ ಈ ಕುದುರೆಗಾಡಿಯ ಸವಾರಿಯನ್ನು ಕೈಗೊಂಡಿದ್ದರ ಕುರಿತು ಅವನು ಹೇಳುತ್ತಿರುವುದಲ್ಲವೆ ಇದು? ಹಾಗಿರುವಾಗ ಅವನು "ಕುದುರೆಗಾಡಿ ದಿಬ್ಬದ ಏರನ್ನು ಏರುತ್ತಿರುವ ಹೊತ್ತಲ್ಲಿ ನಾನಿಲ್ಲಿಗೆ ಪದೇಪದೇ ಬರುತ್ತಿದ್ದ ದಿನಗಳ ನೆನಪನ್ನು (ಅದು ನಮ್ಮದೂ ಎಂಬಂತೆ) ನಾನು ಸ್ಮರಣೆಗೆ ತಂದುಕೊಂಡೆ [ಅಥವಾ "ನಾನು ನೆನಪಿಸಿಕೊಳ್ಳಲು ಆರಂಭಿಸಿದೆ" ಅಥವಾ "ನಾನು ನನ್ನಷ್ಟಕ್ಕೆ ಅಂದುಕೊಂಡೆ" ಅಥವಾ "ನೆನಪಿಸಿಕೊಳ್ಳೋಣ"] ಎಂದು ನಮಗೆ ಹೇಳಲು ಹೇಗೆ ಸಾಧ್ಯ?


ಯಾರು ಈ ವ್ಯಕ್ತಿ ಅಥವಾ ಇಲ್ಲಿರುವ "ನಾವು" ಯಾರು - ಜೊತೆಯಾಗಿ ನೆನಪುಗಳನ್ನು ಸ್ಮರಣೆಗೆ ತಂದುಕೊಳ್ಳಲು ಸಿದ್ಧರಾಗಬೇಕಿರುವ ಆ "ನಾವು" ಯಾರು? ಹೀಗೆ ಜೊತೆಯಾಗಿ ನೆನಪುಗಳನ್ನು ಸ್ಮರಣೆಗೆ ತಂದುಕೊಂಡು ಭೂತಕಾಲದ ನೆನಪುಗಳ ಜಗತ್ತಿಗೆ ಹೂಡಲಿರುವ ಹೊಸದೊಂದು ಪ್ರಯಾಣಕ್ಕೆ ಸಿದ್ಧರಾಗಬೇಕಿರುವ ಆ "ನಾವು " ಯಾರು? ಈ ಕುದುರೆಗಾಡಿ ಏರುತ್ತಿರುವ ಹೊತ್ತಲ್ಲಿಯೇ (ಕುದುರೆಗಾಡಿ ಚಲಿಸುತ್ತಿರುವಂತೆಯೇ ನಾವೂ ನಮ್ಮ ಓದು ಸಾಗಿಸುತ್ತಿರುತ್ತೇವೆ), ಅಂದರೆ ಈಗ ಮತ್ತು ಇಲ್ಲಿ ನೆನಪಿಸಿಕೊಳ್ಳಬೇಕಿದೆಯೇ ಹೊರತು "ಕುದುರೆಗಾಡಿ ಚಲಿಸುತ್ತಿದ್ದಾಗ" (ಹಿಂದೊಂದು ದಿನ ನಡೆದಿದ್ದು) ಅಲ್ಲ.  ಅವನು ಸ್ಮರಣೆಗೆ ತಂದುಕೊಂಡಿದ್ದು ಮತ್ತು ಅದನ್ನು ಹೇಳುತ್ತಿರುವುದು ಎರಡೂ ಒಂದೇ ಕಾಲಘಟ್ಟದಲ್ಲಿ; ಆದರೆ ಅದನ್ನು  ಹಲವು ವರ್ಷಗಳ ಬಳಿಕ ನಮಗೆ ಹೇಳುತ್ತಿರುವುದು ನಿರೂಪಕ. ಹಾಗಾಗಿ ಮೊದಲಿನದು ನಿರೂಪಕನ ಧ್ವನಿಯಲ್ಲ. ಇದು ನೆರ್ವಾಲ್‌ನ ಧ್ವನಿ, ಇಲ್ಲಿ ಅವನು ಸೂತ್ರಧಾರಿ ಲೇಖಕ, ಅವನು ಒಂದು ಗಳಿಗೆಯ ಮಟ್ಟಿಗೆ ತನ್ನ ಕಥಾನಕದಲ್ಲಿ ಕಾಣಿಸಿಕೊಂಡು ತನ್ನ ಓದುಗರಿಗೆ ಹೇಳುತ್ತಿದ್ದಾನೆ, "ನಿರೂಪಕನು ಕುದುರೆಗಾಡಿಯಲ್ಲಿ ಮೇಲಕ್ಕೇರುತ್ತಿರುವ ಹೊತ್ತಲ್ಲಿ ನಾವು (ಅವನ ಜೊತೆಗೇನೆ, ಮರೆಯದಿರಿ) ಅಂದರೆ ನಾನು ಮತ್ತು ನೀವು ಇಬ್ಬರೂ, ಅವನು ಈ ಜಾಗಕ್ಕೆ ಆಗಾಗ ಬರುತ್ತಿದ್ದುದರ ನೆನಪುಗಳನ್ನು ಸ್ಮರಣೆಗೆ ತಂದುಕೊಳ್ಳೋಣ. ಇದೇನೂ ಸ್ವಗತವಲ್ಲ. ಬದಲಿಗೆ ಮೂವರ ನಡುವೆ ನಡೆಯುವ ಒಂದು ಬಗೆಯ ಸಂವಾದವೇ. ನಿರೂಪಕನ ಜಾಗಕ್ಕೆ ನುಸುಳಿಬಂದ ನೆರ್ವಾಲ್, ಅವನ ನುಸುಳುವಿಕೆಯಂತೆಯೇ ಈ ನೆನಪಿಸಿಕೊಳ್ಳುವ ಕಾರ್ಯಕ್ಕೆ ಆಹ್ವಾನಿತರಾದ, ಸುಮ್ಮನೇ ಹೊರಗಿನವರಾಗಿ ನಿಂತು ಏನು ನಡೆಯುತ್ತಿದೆಯೋ ಅದನ್ನು ನೋಡುವ ಎಂದಷ್ಟೇ ಬಂದಿದ್ದ (ಮತ್ತು ಥಿಯೇಟರಿನಲ್ಲಿಯೇ ಇನ್ನೂ ಇದ್ದೇವೆ ಎಂದು ಭಾವಿಸಿರುವ) ನಾವು  ಮತ್ತು ನಿರೂಪಕ, ಏಕೆಂದರೆ, ಕೊನೆಗೂ ಈ ಜಾಗಕ್ಕೆಲ್ಲ ಆಗಾಗ ಬಂದಿದ್ದವನು ಅವನೇ ಹೊರತು ಇನ್ಯಾರೂ ಅಲ್ಲ, ಅಲ್ಲವೆ?......
.......

ನೆರ್ವಾಲನಿಗೆ ಮೀಸಲಿರಿಸಿದ ಪುಟಗಳಲ್ಲಿ ಪ್ರೌಸ್ಟ್ ಸಿಲ್ವಿಯ ಬಗ್ಗೆ ಬರೆದ ಮಾತುಗಳು ನಿಜಕ್ಕೂ ಅದನ್ನು ಮೊದಲ ಬಾರಿ ಓದಿದ ಯಾರಿಗಾದರೂ ಅನಿಸುವಂಥವೇ.

"ಇಲ್ಲಿರುವುದೆಲ್ಲಾ ಕಾಮನಬಿಲ್ಲಿನಂಥ ಪೇಂಟಿಂಗ್ಸುಗಳು. ವಾಸ್ತವ ಬದುಕಿನಲ್ಲಿ ನೀವೆಲ್ಲೂ ಅದನ್ನು ಕಾಣಲು ಸಾಧ್ಯವಿಲ್ಲ. ಅಥವಾ ಶಬ್ದಗಳಲ್ಲಿ ಅದನ್ನು ಹೀಗೇ ಎಂದು ಹೇಳಲು ಬರುವುದಿಲ್ಲ. ಆದರೆ ಕೆಲವೊಮ್ಮೆ ಕನಸಿನಲ್ಲಿ ಅದು ನಮಗೆದುರಾಗಬಹುದು. ಅಥವಾ ಒಂದು ಸಂಗೀತವನ್ನು ಆಲಿಸುತ್ತ ಅದರ ಅನುಭೂತಿ ನಮಗಾಗಬಹುದು. ನಾವದನ್ನು ಕಾಣುವುದು ಸಾಧ್ಯ, ಹಿಡಿಯುವುದಕ್ಕೂ ಪ್ರಯತ್ನಿಸಬಹುದು, ವಿವರಿಸಲು ಬಯಸಬಹುದು. ಅಷ್ಟರಲ್ಲಿ ನಮಗೆ ಎಚ್ಚರವಾಗಿ ಬಿಡುತ್ತದೆ ಮತ್ತು ಅದೆಲ್ಲವೂ ಮಾಯವಾಗಿ ಬಿಡುತ್ತದೆ..... ಅದು ಒಂಥರಾ ಅಸ್ಪಷ್ಟ ಮತ್ತು ನಿರಂತರವಾಗಿ ಕಾಡುವಂಥದ್ದು, ಒಂದು ಹಳೆಯ ಆಪ್ತ ನೆನಪಿನಂತೆ. ಅದು ಬೇರೆಯೇ ಒಂದು ಜಗತ್ತಿಗೆ ಸಂಬಂಧಿಸಿದ್ದೋ ಎಂಬಷ್ಟು ತನ್ನದೇ ಒಂದು ಲೋಕದೊಂದಿಗೆ ತಾದ್ಯಾತ್ಮಹೊಂದಿರುವಂಥದ್ದು, ಅದು ಸಿಲ್ವಿಯ ಲೋಕ,  ಗಾಳಿಗೆ ಬಣ್ಣ ಬಳಿದ ಹಾಗೆ, ಹೂವೊಂದರ ನಿಧಾನವಾದ ಅರಳುವಿಕೆಯ ಹಾಗೆ.... ಆದರೆ ಅದು ಪದಗಳಲ್ಲಿಲ್ಲ, ಮಾತುಗಳಲ್ಲಿ ಅದನ್ನು ಎಲ್ಲಿಯೂ ಹೇಳಲಾಗಿಲ್ಲ, ಅದು ಸುಮ್ಮನೇ ಪದಗಳ ಜೊತೆಗೆಲ್ಲೊ ಇದ್ದಂತಿದೆ. ಚಾಂಟಿಲ್ಲಿಯ ಮುಂಜಾವಿನ ಮಂಜಿನಂತೆ."

ಈ ಮುಂಜಾವಿನ ಮಂಜು ಎಂಬ ಶಬ್ದ ಬಹಳ ಮುಖ್ಯವಾದದ್ದು. ಓದುಗರಿಗೆ ಸಿಲ್ವಿ ಉಂಟು ಮಾಡುವ ಒಂದು ಅನುಭೂತಿಯೇನಿದೆ, ಅದು ಮಂಜಿನಂಥದೇ. ನಾವು ಅರೆತೆರೆದ ಕಂಗಳಿನಿಂದ ಏನನ್ನೋ ನೋಡುತ್ತಿರುವಂತೆ, ನೋಡುತ್ತಿರುವ ಆಕೃತಿಯ ರೂಪುರೇಷೆಗಳು ಅಸ್ಪಷ್ಟವಾಗಿಯೇ ಉಳಿದಂತೆ.  ಅಂದಮಾತ್ರಕ್ಕೆ ಅಲ್ಲಿನ ವಸ್ತುಗಳನ್ನು ತರತಮ ವ್ಯತ್ಯಾಸವೇ ಇಲ್ಲದಂತೆ ಕಾಣುತ್ತಿದ್ದೇವೆಂದು ಅರ್ಥವಲ್ಲ. ಬದಲಾಗಿ, ಸಿಲ್ವಿಯಲ್ಲಿ ಬರುವ ಪ್ರಾಕೃತಿಕ ವಿವರಗಳು, ವ್ಯಕ್ತಿಗಳ ವಿವರಗಳೆಲ್ಲವೂ ಅತ್ಯಂತ ಸ್ಪಷ್ಟವೂ, ನಿಖರವೂ ಆಗಿವೆ. ಎಷ್ಟೆಂದರೆ, ಸಾಂಪ್ರದಾಯಿಕ ನಿರೂಪಣೆಯೊಂದಿಗೆ ತೌಲನಿಕವಾಗಿಯೂ ಸ್ಪಷ್ಟ ಮತ್ತು ನಿಖರ ಎಂದು ಹೇಳಬಹುದಾದಷ್ಟು. ಓದುಗನ ಎಟುಕಿಗೆ ನಿಲುಕಲಾರದಂತೆ ನುಣುಚಿ ಹೋಗುವ ಅಂಶವೇನೆಂದರೆ, ಅವೆಲ್ಲವೂ ಯಾವ ಕಾಲಘಟ್ಟದಲ್ಲಿ ನಿಂತಿವೆ ಎನ್ನುವುದಷ್ಟೇ. ಜಾರ್ಜ್ ಪಾಲೆಟ್ ಹೇಳುವಂತೆ, "ನೆರ್ವಾಲನ ಭೂತಕಾಲವು ಅವನೊಂದಿಗೆ "ಟೊಪ್ಪಿ ಬೇಕೇ ಟೊಪ್ಪಿ" ಆಟವಾಡುತ್ತಿರುತ್ತದೆ."

ಸಿಲ್ವಿಯ ಮೂಲಭೂತ ತಂತ್ರವೇ ನಿರಂತರವಾದ ಫ್ಲ್ಯಾಶ್‌ಬ್ಯಾಕ್ ಮತ್ತು ಫ್ಲ್ಯಾಶ್ ಫಾರ್ವರ್ಡ್‌ಗಳ ಪರ್ಯಾಯ ಬಳಕೆ ಹಾಗೂ ಕೆಲವು ನಿರ್ದಿಷ್ಟ ಸಂಗ್ರಹಿತ ಫ್ಲ್ಯಾಶ್‌ಬ್ಯಾಕುಗಳು.

ಕಾಲಘಟ್ಟ - 1 ಕ್ಕೆ ಸಂಬಂಧಿಸಿದ ಒಂದು ಕತೆಯನ್ನು ನಮಗೆ ಹೇಳುತ್ತಿರುವಾಗ ನಿರೂಪಣೆಯಲ್ಲಿ ಬಂದ ಸನ್ನಿವೇಶವು ಎರಡು ಗಂಟೆಗಳ ಹಿಂದೆ ಸಂಭವಿಸಿದ್ದೂ ಆಗಿರಬಹುದು, ಒಂದು ಸಾವಿರ ವರ್ಷಗಳಷ್ಟು ಹಿಂದೆ ಸಂಭವಿಸಿದ್ದೂ ಆಗಿರಬಹುದು. ಹಾಗೆಯೇ ನಿರೂಪಕ ( ಮೂಲ ನಿರೂಪಕ ಅಥವಾ ಸೂತ್ರಧಾರೀ ನಿರೂಪಕ - ಇಬ್ಬರೂ) ಮತ್ತು ಪಾತ್ರಗಳು ನಿರೂಪಿಸಲ್ಪಡುತ್ತಿರುವ ಸನ್ನಿವೇಶಕ್ಕೂ ಮುನ್ನ ಘಟಿಸಿದ ವಿಚಾರವನ್ನು ಉಲ್ಲೇಖಿಸಬಹುದು. ಅಥವಾ ಪಾತ್ರಗಳು ನಿರೂಪಿಸಲ್ಪಡುತ್ತಿರುವ ಸನ್ನಿವೇಶದಲ್ಲೇ ಮುಂದೆ ನಡೆಯಬಹುದಾದ, ನಡೆಯಲಿರುವ ಸನ್ನಿವೇಶದ ಹೊಳಹುಗಳನ್ನು ಕೊಡಬಹುದು. ಗೆರಾರ್ಡ್ ಗ್ಯಾನೆಟ್ ಹೇಳುವಂತೆ, "ಒಂದು ಫ್ಲ್ಯಾಶ್‌ಬ್ಯಾಕ್ ಲೇಖಕ ಹೇಳಲು ಮರೆತು ಹೋದದ್ದನ್ನು ಹೇಳಲು ಬರುವಂತೆಯೂ, ಫ್ಲ್ಯಾಶ್ ಫಾರ್ವರ್ಡ್ ಎಂಬುದು ನಿರೂಪಣೆಯ ತಾಳ್ಮೆರಹಿತ ಅವಸರದ ಅಭಿವ್ಯಕ್ತಿಯಂತೆಯೂ ಕಂಡುಬರುತ್ತದೆ."

ಪ್ರತಿಯೊಬ್ಬರೂ ಭೂತಕಾಲದ ಘಟನೆಯನ್ನು ವಿವರಿಸುವಾಗ ಅಂಥ ತಂತ್ರಗಳನ್ನು ಬಳಸುತ್ತಿರುತ್ತಾರೆ. "ಏಯ್ ಕೇಳಿಲ್ಲಿ! ನಿನ್ನೆ ನಾನು ಜಾನ್‌ನ್ನು ಭೇಟಿಯಾದೆ, ನಿನಗೆ ನೆನಪಿರಬಹುದು, ಎರಡು ವರ್ಷ ಹಿಂದೆ (ಫ್ಲ್ಯಾಶ್‌ಬ್ಯಾಕ್) ಪ್ರತಿದಿನವೂ ಜಾಗಿಂಗಿಗೆ ಹೋಗ್ತಿದ್ದನಲ್ಲ, ಅವನು. ಇರಲಿ, ಅವನು ತುಂಬಾ ಬಿಳುಚಿ ಹೋಗಿದ್ದ, ಮತ್ತು ಹೇಳಬೇಕೆಂದರೆ ಅದೇಕೆ ಹಾಗೆ ಅಂತ ನನಗೆ ಆಮೇಲಷ್ಟೇ (ಫ್ಲ್ಯಾಶ್ ಫಾರ್ವರ್ಡ್) ಗೊತ್ತಾಯಿತು. ಮತ್ತವನು ಹೇಳ್ತಾನೆ - ಓಹ್! ಹೇಳುವುದಕ್ಕೆ ಮರೆತೇ ಬಿಟ್ಟೆ ನೋಡು, ನಾನು ಅವನನ್ನು ನೋಡಿದೆ ಅಂದೆನಲ್ಲ, ನೋಡಿದಾಗ ಅವನು ಒಂದು ಬಾರಿನಿಂದ ಹೊರಗೆ ಬರ್ತಾ ಇದ್ದ, ಮತ್ತಾಗ (ಫ್ಲ್ಯಾಶ್‌ಬ್ಯಾಕ್) ಮುಂಜಾನೆ ಹತ್ತು ಗಂಟೆ ಅಷ್ಟೇ, ಅರ್ಥವಾಯಿತಲ್ಲ? ಅದೇನೇ ಇರ್ಲಿ, ಜಾನ್ ಹೇಳ್ತಾನೆ, ದೇವ್ರೇ! ನಿನಗೆ ಅವನು ಹೇಳಿದ್ದಾದ್ದರೂ ಏನಿರಬಹುದು ಅಂತ ಗೆಸ್ ಮಾಡಲು  (ಫ್ಲ್ಯಾಶ್ ಫಾರ್ವರ್ಡ್) ಸಾಧ್ಯವೇ ಇಲ್ಲ ಬಿಡು..."  ಮುಂದಿನ ನಮ್ಮ ಚರ್ಚೆಯಲ್ಲಿ ನಾನು ನಿಮ್ಮನ್ನು ಈ ತರ ಗೊಂದಲಕ್ಕೆ ದೂಡುವುದಿಲ್ಲ ಎಂದು ಆಶಿಸುತ್ತೇನೆ. ಆದರೆ ನೆರ್ವಾಲ್ ಅತ್ಯುತ್ಕ್ರಷ್ಟವಾದ ಕಲೆಗಾರಿಕೆಯಿಂದ ಸಿಲ್ವಿಯ ಆದ್ಯಂತವೂ ನಮ್ಮನ್ನು ಫ್ಲ್ಯಾಶ್‌ಬ್ಯಾಕ್ ಮತ್ತು ಫ್ಲ್ಯಾಶ್ ಫಾರ್ವರ್ಡ್‌ಗಳ ಕಣ್ಣಾಮುಚ್ಚಾಲೆಯಾಟದಲ್ಲಿ ಗೋಳುಹೊಯ್ದುಕೊಳ್ಳುತ್ತಾನೆಂಬುದು ಮಾತ್ರ ನಿಶ್ಚಿತ.

ಕತೆಯ ನಿರೂಪಕ ಒಬ್ಬ ನಟಿಯಲ್ಲಿ ಅನುರಕ್ತನಾಗಿದ್ದಾನೆ ಮತ್ತು ಅವನಿಗೆ ತನ್ನ ಪ್ರೇಮಕ್ಕೆ ಪ್ರತಿಸ್ಪಂದನವಿದೆಯೇ ಇಲ್ಲವೇ ಎನ್ನುವುದು ಗೊತ್ತಿಲ್ಲ. ದಿನಪತ್ರಿಕೆಯೊಂದರಲ್ಲಿ ಕಂಡ ಒಂದು ಸಂಗತಿ ಥಟ್ಟನೆ ಅವನ ಬಾಲ್ಯಕಾಲದ ಸ್ಮೃತಿಯನ್ನು ಅವನಲ್ಲಿ ಜಾಗೃತಗೊಳಿಸುತ್ತದೆ. ಅವನು ಮನೆಗೆ ಮರಳುತ್ತಾನೆ ಮತ್ತು ಅರೆನಿದ್ದೆ ಅರೆ ಎಚ್ಚರದ ಸ್ಥಿತಿಯಲ್ಲಿ ಅವನು ಇಬ್ಬರು ಹುಡುಗಿಯರನ್ನು ನೆನಪಿಸಿಕೊಳ್ಳುತ್ತಾನೆ, ಸಿಲ್ವಿ ಮತ್ತು ಅಡ್ರಿನಾ. ಅಡ್ರಿನಾಳದ್ದು ಒಂದು ಆದರ್ಶಮಯ ಎನ್ನಬಹುದಾದ ರಂಜಿತ ಚಿತ್ರ: ಕೆಂಗೂದಲು, ಸುಂದರಿ, ತೆಳ್ಳಗೆ, ಎತ್ತರದ ನಿಲುವು. ಅವಳೊಂದು "ಚೆಲುವು ಮತ್ತು ಖ್ಯಾತಿಯ ಮಿನುಗುತಾರೆ";   "ಕುಲೀನ ಫ್ರೆಂಚ್ ವಂಶಸ್ಥರ ರಕ್ತ ಅವಳಲ್ಲಿ ಹರಿಯುತ್ತಿತ್ತು." ಇದಕ್ಕೆ ವ್ಯತಿರಿಕ್ತವಾಗಿ ಸಿಲ್ವಿಯದು ಪಕ್ಕದೂರಿನ "ತೀರ ಸಾಮಾನ್ಯ" ಹುಡುಗಿಯಂತೆ,  ಕಪ್ಪು ಕಂಗಳ, "ಸ್ವಲ್ಪ ಮಾಸಿದ ಮೈಬಣ್ಣ"ದ ಹಳ್ಳಿಹುಡುಗಿಯಂತೆ, ನಿರೂಪಕ ಅಡ್ರಿನಾಳತ್ತ ಕೊಡುತ್ತಿರುವ ಗಮನದಿಂದ ಬಾಲಿಶ ಅಸೂಯೆ ಪಡುತ್ತಿರುವವಳಂತೆ  ಕಾಣುವ ಚಿತ್ರ.

ಕೆಲವು ಗಂಟೆಗಳ ಕಾಲ ನಿದ್ದೆಯಿಲ್ಲದೆ ಹೊರಳಾಡಿದ ಬಳಿಕ, ನಿರೂಪಕ ಕುದುರೆಗಾಡಿ ಮಾಡಿಕೊಂಡು ತನ್ನ ನೆನಪುಗಳ ಊರಿಗೆ ಮರಳಿ ಹೋಗಲು ನಿರ್ಧರಿಸುತ್ತಾನೆ. ಪ್ರಯಾಣದ ಹೊತ್ತಲ್ಲಿ ಅವನು ಬೇರೆ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳುತ್ತಾನೆ. - ಈ ಘಟನೆಗಳು ಪ್ರಯಾಣಕ್ಕಿಂತ ತೀರ ಹಳೆಯವೇನೂ ಅಲ್ಲದ ಕಾಲಘಟ್ಟಕ್ಕೆ ಸಂಬಂಧಿಸಿದವು. ಕೆಲವು ವರ್ಷಗಳು ಕಳೆದವು ಎಂಬ ಉಲ್ಲೇಖ ಒಂದೆಡೆ ಬರುವುದರಿಂದ ನಾವು ಹೀಗೆ ಊಹಿಸಬಹುದಾಗಿದೆ. ಈ ಸುದೀರ್ಘವಾದ ಫ್ಲ್ಯಾಶ್‍ಬ್ಯಾಕಿನಲ್ಲಿ ಅಡ್ರಿನಾಗೆ ಹೆಚ್ಚಿನ ಮಹತ್ವವಿಲ್ಲ. ಅದೂ ನೆನಪಿನೊಳಗಿನ ಒಂದು ನೆನಪಿನಲ್ಲಿ ಅವಳು ಕಾಣಿಸಿಕೊಳ್ಳುತ್ತಾಳಷ್ಟೆ. ಆದರೆ ಸಿಲ್ವಿ ಗಮನಾರ್ಹವಾಗಿ ಇಲ್ಲಿ ಜೀವಂತವೂ ವಾಸ್ತವವೂ ಆಗಿ ಕಾಣಿಸಿಕೊಳ್ಳುತ್ತಾಳೆ. ಅವಳೀಗ ಎಷ್ಟು ಮಾತ್ರಕ್ಕೂ "ಕೇವಲ ಸಾಮಾನ್ಯ ಹಳ್ಳಿ ಹುಡುಗಿಯಲ್ಲ....ಅವಳೀಗ ಚೆಲುವಿನ ಗಣಿಯಾಗಿ ಅರಳಿದ್ದಾಳೆ!" ಅವಳ ಆಕೃತಿ ಇಲ್ಲಿ ನಾಟ್ಯಸರಸ್ವತಿಯಂತೆ ಹರಿದಾಡಿದೆ. ಅವಳ ನಗುವಿನಲ್ಲಿ ದೈವೀಕವಾದೊಂದು ಕಳೆಯಿದೆ. ನಿರೂಪಕ ತನ್ನ ಯೌವನದಲ್ಲಿ ಅಡ್ರಿನಾಳ ಚೆಲುವಿಗೆ ಆರೋಪಿಸಿದ ಎಲ್ಲಾ ಸಂಭ್ರಮವೂ ಈಗ ಸಿಲ್ವಿಯಲ್ಲಿ ಕಾಣಿಸುತ್ತಿದೆ. ಬಹುಶಃ ಈಗ ಅವಳನ್ನು ಪ್ರೀತಿಸಲು ನಿರೂಪಕನಿಗೆ ಬೇಕಾದುದೆಲ್ಲವೂ ಸಿಕ್ಕಿದಂತಿದೆ. 

ಅವರು ಸಿಲ್ವಿಯ ಚಿಕ್ಕಮ್ಮನ ಮನೆಗೆ ಭೇಟಿ ಕೊಡುತ್ತಾರೆ ಮತ್ತು ಅಲ್ಲಿನ ಒಂದು ಪುಟ್ಟ ವಿದ್ಯಮಾನ ಅವರಿಬ್ಬರ ಬದುಕಿನ ಮುಂದಿನ ಸಂಭಾವ್ಯ ಸಂತಸದ ದಿನಗಳನ್ನು ಕುರಿತು ಒಂದು ಕಲ್ಪನೆಯನ್ನು ಮೂಡಿಸುವಂತಿದೆ. ಅವರು ಚಿಕ್ಕಮ್ಮನ ಆಸೆಯಂತೆ ಹಳೆಯ ಕಾಲದ ವಧೂವರರ ದಿರಿಸನ್ನು ತೊಟ್ಟು ಚಿಕ್ಕಮ್ಮನ ಎದುರು ನಿಲ್ಲುತ್ತಾರೆ. ಆದರೆ ಅದು ತೀರ ತಡವಾಯಿತೆನ್ನಬೇಕು, ಅಥವಾ ತೀರ ಅವಸರವಾಯಿತೊ. ಮರುದಿನವೇ ನಿರೂಪಕ ಪ್ಯಾರಿಸ್ಸಿಗೆ ಹಿಂದಿರುಗುತ್ತಾನೆ. 

ಈಗಿಲ್ಲಿ, ಅವನ ಹುಟ್ಟೂರಿಗೆ ಅವನನ್ನು ಕರೆತರುವುದಕ್ಕಾಗಿ ಕುದುರೆಗಾಡಿ ದಿಬ್ಬವನ್ನು ಏರುತ್ತಿದೆ. ಆಗ ಮುಂಜಾವಿನ ನಾಲ್ಕು ಗಂಟೆಯ ಸಮಯ. ಆಗ ನಿರೂಪಕ ಒಂದು ಹೊಸ ಫ್ಲ್ಯಾಶ್‌ಬ್ಯಾಕ್ ತೊಡಗುತ್ತಾನೆ. ಈ ಬಗ್ಗೆ ನಾನು ಬೇರೊಂದು ಉಪನ್ಯಾಸದಲ್ಲಿ ಮಾತನಾಡುತ್ತೇನೆ, ದಯವಿಟ್ಟು ಈ ನನ್ನ ಫ್ಲ್ಯಾಶ್ ಫಾರ್ವರ್ಡನ್ನು ಒಪ್ಪಿಕೊಳ್ಳಿ. ಏಕೆಂದರೆ, ಇಲ್ಲಿ, (ಏಳನೆಯ ಅಧ್ಯಾಯದಲ್ಲಿ) ಕಾಲ ಎನ್ನುವುದು ಪೂರ್ತಿಯಾಗಿ ಗೋಜಲುಮಯವಾಗುತ್ತದೆ. ಏಕೆಂದರೆ, ಈಗ ಇಲ್ಲಿ ಅವನು ನೆನಪಿಸಿಕೊಳ್ಳುವಂಥ,  ಚುಟುಕಾಗಿ ಯಷ್ಟೇ ಅಡ್ರಿನಾ ಕಾಣಿಸಿಕೊಳ್ಳುವ ಅವನ ಒಂದು ಫ್ಲ್ಯಾಶ್‌ಬ್ಯಾಕ್ ಏನಿದೆ, ಅದು ಅವನು ಈಗಾಗಲೇ ನೆನಪಿಸಿಕೊಂಡಂಥ ಪಾರ್ಟಿಯ ಮೊದಲಿನ ವಿದ್ಯಮಾನವೋ ಆ ಬಳಿಕದ್ದೋ ಎನ್ನುವುದನ್ನು ನಿರ್ಧರಿಸುವುದು ಅಸಾಧ್ಯವಾಗಿದೆ. ಇನ್ನೇನು ಬಿಲ್ಗಾರಿಕೆಯ ಪಂದ್ಯ ಸದ್ಯದಲ್ಲೇ ನಡೆಯಲಿದೆ ಎನ್ನುವಾಗ ನಾವು ಮತ್ತೊಮ್ಮೆ ನಿರೂಪಕನನ್ನು ಲೊಯ್ಸಿಯಲ್ಲಿ ಭೇಟಿಯಾಗುತ್ತೇವೆ ಮತ್ತು ಮತ್ತೊಮ್ಮೆ ಅವನು ಸಿಲ್ವಿಯನ್ನು ಕಾಣುತ್ತಾನೆ.  ಅವಳೀಗ ಸರ್ವಾಂಗ ಸುಂದರಿಯಾದ ಮಹಿಳೆಯಾಗಿದ್ದಾಳೆ. ಮತ್ತು ನಿರೂಪಕ ಅವಳೊಂದಿಗೆ ತಮ್ಮ ಬಾಲ್ಯ ಮತ್ತು ಹದಿಹರೆಯದ ಹಲವಾರು ಸಂಗತಿಗಳ ಕುರಿತು ನೆನಪಿಸಿಕೊಳ್ಳುತ್ತಾನೆ. ಈ ಫ್ಲ್ಯಾಶ್‌ಬ್ಯಾಕುಗಳು ಹೆಚ್ಚೂಕಡಿಮೆ ಅರಿವಿಗೇ ಬರದಂತೆ ನಡೆದುಬಿಡುತ್ತವೆ. ಆದರೆ ಅವನಿಗೂ ಅವಳು ಈಗ ಬದಲಾಗಿದ್ದಾಳೆ ಎಂಬ ಭಾವನೆ ಹುಟ್ಟುತ್ತದೆ. ಅವಳೀಗ ಕಸೂತಿ ನೇಯುವ ಹೆಂಗಸು. ಕೈಗವಸುಗಳನ್ನು ತಯಾರಿಸುತ್ತಾಳೆ. ರೂಸೋ ಕೃತಿಗಳನ್ನು ಓದುತ್ತಾಳೆ, ಒಪೆರಾದಲ್ಲಿ ಹಾಡಬಲ್ಲಳು, ಸಂಗೀತದ ರಾಗ ಮುದ್ರೆಗಳನ್ನು ಬರೆಯಲು ಕಲಿತಿದ್ದಾಳೆ. ಮತ್ತು ಕೊನೆಯದಾಗಿ, ಅವಳು ಅವನ ಚಿಕ್ಕಂದಿನ ಸ್ನೇಹಿತನೂ, ವಾವೆಯಲ್ಲಿ ಸಹೋದರನಾಗುವವನೂ ಆದ ಯುವಕನನ್ನು ಇನ್ನೇನು ಮದುವೆಯಾಗಲಿದ್ದಾಳೆ. ಇಲ್ಲಿ ನಿರೂಪಕ ತನ್ನ ಭ್ರಮಾಧೀನ ದಿನಗಳನ್ನು ಮತ್ತೆ ಬದುಕುವುದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊಳ್ಳುತ್ತಾನೆ ಮಾತ್ರವಲ್ಲ, ತಾನು ತನ್ನ ಕೊನೆಯ ಅವಕಾಶವನ್ನೂ ಕಳೆದುಕೊಂಡಿದ್ದೇನೆಂಬುದನ್ನು ಅರಿಯುತ್ತಾನೆ.

ಪ್ಯಾರಿಸ್ಸಿಗೆ ಮರಳಿದ ನಂತರ ನಿರೂಪಕ ನಟಿ ಓರೇಲಿಯಾ ಜೊತೆ ಪ್ರೇಮ ಸಂಬಂಧ ಬೆಳೆಸುವಲ್ಲಿ ಕೊನೆಗೂ ಯಶಸ್ವಿಯಾಗುತ್ತಾನೆ. ಈ ಹಂತದಲ್ಲಿ ಕತೆ ವೇಗ ಪಡೆದುಕೊಳ್ಳುತ್ತದೆ: ನಿರೂಪಕ ನಟಿಯೊಂದಿಗೆ ಬದುಕು ನಡೆಸುತ್ತ ತಾನು ನಿಜವಾಗಿಯೂ ಅವಳನ್ನು ಪ್ರೀತಿಸುತ್ತಿಲ್ಲ ಎನ್ನುವುದನ್ನು ಕಂಡುಕೊಳ್ಳುತ್ತಾನೆ. ಅವಳೊಂದಿಗೆ ಅವನು ತನ್ನ ಹಳ್ಳಿಗೆ ಕೆಲವು ಬಾರಿ ಭೇಟಿ ನೀಡುತ್ತಾನೆ ಮತ್ತು ಸಿಲ್ವಿ ಒಬ್ಬ ಸಂತೃಪ್ತ ತಾಯಿಯಾಗಿರುವುದನ್ನು ಕಾಣುತ್ತಾನೆ. ಅವಳೀಗ ಒಬ್ಬ ಒಳ್ಳೆಯ ಸ್ನೇಹಿತೆ ಅವನಿಗೆ, ಬಹುಶಃ ಒಬ್ಬ ಸಹೋದರಿಯೂ ಕೂಡ. ಕೊನೆಯ ಅಧ್ಯಾಯದಲ್ಲಿ, ನಟಿಯಿಂದ ಪರಿತ್ಯಕ್ತನಾದ ನಿರೂಪಕ (ಅಥವಾ ಸ್ವತಃ ಹಾಗೆ ಪರಿತ್ಯಕ್ತನನ್ನಾಗಿಸಿಕೊಂಡು) ಮತ್ತೊಮ್ಮೆ ಸಿಲ್ವಿಯ ಕುರಿತು ಮಾತನಾಡುತ್ತಾನೆ. ಯಾವ ಭ್ರಾಂತಿಯಿಂದ ತಾನು ಮುಕ್ತನಾಗುವುದು ಸಾಧ್ಯವಾಯಿತೊ ಆ ಬಗ್ಗೆ ಅವನು ಪರಾಮರ್ಶನ ನಡೆಸುವಂತಿದೆ ಅದು.

ಇಡೀ ಕತೆಯಲ್ಲಿ ಅಂಥ ವಿಶೇಷ ಏನೂ ಇಲ್ಲ ಅನಿಸಿಬಿಡಬಹುದಿತ್ತು. ಆದರೆ ಫ್ಲ್ಯಾಶ್ ಬ್ಯಾಕ್ ಮತ್ತು ಫ್ಲ್ಯಾಶ್ ಫಾರ್ವರ್ಡ್‌ಗಳ ಬ್ರಹ್ಮಗಂಟು ಇದನ್ನು ಒಂದು ಮಾಯಕ ಅದ್ಭುತವನ್ನಾಗಿಸಿದೆ. ಪ್ರೌಸ್ಟ್ ಹೇಳುವಂತೆ, "ಓದುಗನು ನಿರಂತರವಾಗಿ ತಾನು ಎಲ್ಲಿದ್ದೇನೆಂದು ತಿಳಿಯಲು, ಸದ್ಯದ ವಿವರ ವರ್ತಮಾನದ್ದೇ ಅಥವಾ ಭೂತಕಾಲದ ಸ್ಮರಣೆಯೇ ಎಂದು ತಿಳಿಯಲು ಹಿಂದಿನ ಪುಟಕ್ಕೆ ಭೇಟಿ ಕೊಡುತ್ತಲೇ ಇರಬೇಕಾಗುತ್ತದೆ." ಮುಂಜಾನೆಯ ಮಂಜು ಹೇಗೆ ಎಲ್ಲೆಲ್ಲೂ ವ್ಯಾಪಿಸಿ ಕವಿದಿರುತ್ತದೆ ಎಂದರೆ ಈ ಕೆಲಸದಲ್ಲಿ ಸಾಮಾನ್ಯವಾಗಿ ಓದುಗ ಸೋಲುವುದು ಸಹಜವಾಗಿದೆ.  ಗತಕಾಲದ ಸಂಗತಿಗಳನ್ನು ವಿಶ್ಲೇಷಿಸುವ ಹಾಗೂ ಕಾಲವನ್ನು ಮರಳಿ ಹಿಡಿದಿಡುವ ಕಾಯಕವನ್ನು ಅಷ್ಟೊಂದು ಇಷ್ಟಪಡುವ ಪ್ರೌಸ್ಟ್ ಯಾಕೆ ನೆರ್ವಾಲನನ್ನು ಏಕಕಾಲಕ್ಕೆ ಅದ್ವಿತೀಯ ಗುರು ಎಂದೂ, ಸಮಯದೊಂದಿಗಿನ ಜಂಜಾಟದಲ್ಲಿ ಮಂಚೂಣಿಯ ಓಟಗಾರನಾಗಿದ್ದೂ ಸೋತವನು ಎಂದೂ ಪರಿಗಣಿಸುತ್ತಾನೆ ಎನ್ನುವುದಕ್ಕೆ ಇಲ್ಲಿ ಉತ್ತರವಿದೆ.
............
..................
ಒಂದಾನೊಂದು ಕಾಲದಲ್ಲಿ ಎಂದು ತೊಡಗುವ ಒಂದು ಜಾನಪದ ಮಕ್ಕಳ ಕತೆಯಂತೆಯೇ ಸುರುವಾಗುವ ಸಿಲ್ವಿ ಒಂದು ನಿರ್ದಿಷ್ಟ ದಿನಾಂಕದೊಂದಿಗೆ ಮುಗಿಯುವುದು ವಿಶೇಷ. ಇಡೀ ಕೃತಿಯಲ್ಲಿ ಒಂದೇ ಒಂದು ಕಡೆ ಮಾತ್ರ ನಮಗೆ ನಿರ್ದಿಷ್ಟವಾದ ದಿನಾಂಕವೊಂದು ಕಂಡುಬರುತ್ತದೆ. ಕಟ್ಟಕಡೆಯ ಪುಟದಲ್ಲಿ, ನಿರೂಪಕ ತನ್ನ ಭ್ರಾಂತಿಯಿಂದ ಮುಕ್ತನಾದ ಮೇಲೆ, ಸಿಲ್ವಿ ಹೇಳುತ್ತಾಳೆ, "ಪಾಪ ಅಡ್ರಿನಾ, ಅವಳು 1832ರ ಸುಮಾರಿಗೆ ಸೈಂಟ್ ಸಿ.... ಕಾನ್ವೆಂಟಿನಲ್ಲಿ ತೀರಿಕೊಂಡಳು."

ಈ ಕೊನೆಯ ಹಂತದಲ್ಲಿ ನೀವು ಇದುವರೆಗೂ ಕಟ್ಟಿಕೊಂಡ ಪರಿಕಲ್ಪನೆ ಪೊಳ್ಳಾಗಿತ್ತು ಎಂದು ಹೇಳುವ ಧಾರ್ಷ್ಟ್ಯ ತೋರುವಂತೆ, ಅವಮಾನಿಸುವಂತೆ, ಇಡೀ ಕಥಾನಕಕ್ಕೆ ಬೇರೆಯೇ ವ್ಯಾಖ್ಯಾನ ನೀಡುವಂತೆ, ನಿರ್ಣಾಯಕವಾದ ಘಟ್ಟದಲ್ಲಿ ಈ ರೀತಿ ಒಂದು ನಿರ್ದಿಷ್ಟವಾದ ಕಾಲವನ್ನು ಯಾಕೆ ಸೂಚಿಸಲಾಗಿದೆ?  ಇಲ್ಲಿ ಪ್ರೌಸ್ಟನ ಮಾತು ನೆನಪಾಗುತ್ತದೆ, "ಓದುಗನು ನಿರಂತರವಾಗಿ ತಾನು ಎಲ್ಲಿದ್ದೇನೆಂದು ತಿಳಿಯಲು, ಸದ್ಯದ ವಿವರ ವರ್ತಮಾನದ್ದೇ ಅಥವಾ ಭೂತಕಾಲದ ಸ್ಮರಣೆಯೇ ಎಂದು ತಿಳಿಯಲು ಹಿಂದಿನ ಪುಟಕ್ಕೆ ಭೇಟಿ ಕೊಡುತ್ತಲೇ ಇರಬೇಕಾಗುತ್ತದೆ." ಮತ್ತೀಗ ನಾವು ಹಿಂದಕ್ಕೆ ಹೋಗಿ ಇಡೀ ನಿರೂಪಣೆಯ ಕ್ರಮಾನುಗತಿಯನ್ನು ಬಿಡಿಸತೊಡಗಿದರೆ, ಹೌದೋ ಅಲ್ಲವೋ ಎಂಬಂಥ ಹಲವಾರು ಸುಳಿವುಗಳು, ಮೈಲಿಕಲ್ಲುಗಳಂತೆ, ಅಲ್ಲಲ್ಲಿ ಇರುವುದನ್ನು ಒಮ್ಮೆಗೇ ಗುರುತಿಸತೊಡಗುತ್ತೇವೆ. ಮೊದಲ ಓದಿಗೆ ಅವು ಕಣ್ಣಿಗೆ ಕಾಣಿಸುವುದೇ ಇಲ್ಲ. ಆದರೆ ಎರಡನೆಯ ಓದಿಗೆ ಅವು ಕಣ್ಣಿಗೆ ಸಾಕಷ್ಟು ಹೊಡೆದು ಕಾಣುತ್ತವೆ.

- ಇದನ್ನು ಯುಕೊ ಉಂಬರ್ತೊ ವಿವರಿಸುತ್ತಾನೆ, ಸಾಕ್ಷ್ಯಾಧಾರದೊಂದಿಗೆ. ಇಲ್ಲಿ ಬಾಲ್ಯಕಾಲದ ಸಖಿ ಸಿಲ್ವಿಯೇ ನಿರೂಪಕನ ಮನೋಭೂಮಿಕೆಯಲ್ಲಿ ಸ್ಥಿರವಾಗಿದ್ದ ಪ್ರತಿಮೆಯೆ? ಅಡ್ರಿನಾ ಮತ್ತು ಓರೆಲಿಯಾ ಇಬ್ಬರಲ್ಲೂ ಅವನು ಸಿಲ್ವಿಯನ್ನೇ ಹುಡುಕುತ್ತಿದ್ದನೆ? ಹಾಗಿದ್ದರೆ ಅನಾಕರ್ಷಕಳಾದ  ಬಾಲ್ಯದ "ಸಾಮಾನ್ಯ ಹಳ್ಳಿಹುಡುಗಿ"ಯನ್ನು ಅವನು ಚೆಂದುಳ್ಳಿ ಚೆಲುವೆಯಾದ ನಟಿ ಅಡ್ರಿನಾಳಲ್ಲಿ ಹುಡುಕುವುದು ಹೇಗೆ ಸಾಧ್ಯ? ಯೌವನ ಪುಟಿಯುತ್ತಿದ್ದ ಸುಂದರಿ ಸಿಲ್ವಿಯನ್ನು ಚಿಕ್ಕಮ್ಮನ ಮನೆಯಲ್ಲಿ ಭೇಟಿಯಾಗಿ ಬಂದಿದ್ದು ಮೊದಲೆ? ಅಡ್ರಿನಾ ಕುರಿತ ಕನಸು ನಂತರದ್ದೆ? ಹಾಗಿದ್ದೂ ಸಿಲ್ವಿಯ ಮದುವೆ ನಿಶ್ಚಯವಾದ ಬಳಿಕ ಅವನೇಕೆ ಓರೇಲಿಯಾಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ? ಅಡ್ರಿನಾ ಕಾನ್ವೆಂಟಿನಲ್ಲಿ ಸತ್ತ ಇಸವಿಯನ್ನು ಹಿಡಿದು ಹೊರಟರೆ ಯಾವ ಪ್ರೇಮ ಮೊದಲು ಯಾವುದು ನಂತರದ್ದು ಎನ್ನುವುದನ್ನು ಅನುಕ್ರಮವಾಗಿ ಪೋಣಿಸುವುದು ಸಾಧ್ಯವೆ? ಇದನ್ನು ಉಂಬರ್ತೊ ಮಾತುಗಳಲ್ಲೇ ಅರಿಯುವುದು ಸಾಹಿತ್ಯಿಕ ತಂತ್ರಗಾರಿಕೆಯ ಪಟ್ಟುಗಳನ್ನು ಅರಿಯುವುದಕ್ಕೂ, ನೆರ್ವಾಲನ ಸ್ಮೃತಿವಾಚಕ ನೆಲೆಯ ಕೃತಿಯ ಮಹತ್ವವನ್ನು ಕಾಣುವುದಕ್ಕೂ ಬಹಳ ಮುಖ್ಯ.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ