Sunday, March 20, 2022

ಗ್ಲೋಬಲ್ ಸಾಹಿತ್ಯ ಮತ್ತು ಗ್ಲೋಬಲ್ ಸಾಹಿತಿಗಳು


ಕಿರಣ್ ಭಟ್ ಅವರ ಲೇಖನ (Between the World and Them, Kannada writing and the global by KIRAN BHAT 
appeared in The Caravan monthly issue of 01 February 2022) ಕ್ಕೆ ಫೇಸ್‌ಬುಕ್ಕಿನಲ್ಲಿ ನಾನು ಕೊಂಚ ಕಟುವಾಗಿ ಪ್ರತಿಕ್ರಿಯಿಸಿದ ಬಗ್ಗೆ ಒಂದು ಸ್ಪಷ್ಟನೆ.


ಕರ್ನಾಟಕದಿಂದ ಹೊರಗೆ ನೆಲೆಸಿ, ತಾವು ನೆಲೆಸಿದ (ಬೇರೆಯೇ ಭಾಷೆಯನ್ನಾಡುವ, ಬೇರೆಯೇ ಸಂಸ್ಕೃತಿಯ) ನಗರ/ದೇಶದ ಕತೆಯನ್ನು ತಮ್ಮ ಭಾಷೆ(ಕನ್ನಡ)ದಲ್ಲಿ ಹೇಳಿದಂಥ ಕೃತಿಕಾರರಲ್ಲಿ ಇಂಗ್ಲೀಷಿಗೆ ಅನುವಾದಗೊಂಡ ಕೃತಿಗಳ ಕುರಿತು ಬರೆಯಲು ಹೊರಟಾಗ ಸಿಗುವ ಕೃತಿಗಳಾದರೂ ಎಷ್ಟು? ಹಾಗೆ ಕಿರಣ್ ಭಟ್ ಕೇವಲ ಎರಡು ಕೃತಿಗಳನ್ನಿಟ್ಟುಕೊಂಡು ಬರೆದಿದ್ದಾರೆ, ಅದರಲ್ಲೇನು ತಪ್ಪಿದೆ ಎಂದು ನನ್ನ ಒಬ್ಬ ಗೆಳೆಯರು ಪ್ರಶ್ನಿಸಿದ್ದಾರೆ.  ನಾನು ಪೋಸ್ಟ್ ಹಾಕಿದಾಗ, ಮೂಲ ಲೇಖನವನ್ನು ಓದಿ ಪ್ರತಿಕ್ರಿಯಿಸಿದವರು ಬಹುಶಃ ಕೇವಲ ಒಬ್ಬರು. ಹಾಗಾಗಿ ಈ ಪ್ರಶ್ನೆ ಬರಲಿಲ್ಲ. ಓದಿದ್ದ ಒಬ್ಬರೂ ನೇರವಾಗಿ ಇದನ್ನು ಪ್ರಸ್ತಾಪಿಸಲಿಲ್ಲ. 

ಕನ್ನಡದ ಜಾಗತಿಕ ಪಯಣ - ವನ್ನು ನಿರ್ಧರಿಸುವ ಮಾನದಂಡವೇ ತಪ್ಪಾಗಿದೆ ಎನ್ನುವುದು ನನ್ನ ಉತ್ತರ. ಕರ್ನಾಟಕದಿಂದ ಹೊರಗಿದ್ದು,  ಬೇರೆ ಭಾಷೆ ಮಾತನಾಡುವ, ಬೇರೆಯೇ ಸಂಸ್ಕೃತಿಯ ಜನರ ನಡುವಿದ್ದು ಕನ್ನಡದಲ್ಲಿ ಆ ಜನರ ಕತೆ ಬರೆಯುವುದು - ಮೊದಲನೆಯ ವೈಶಿಷ್ಟ್ಯ. ಇಂಗ್ಲೀಷಿಗೆ ಅನುವಾದಗೊಂಡಿರುವುದು ಎರಡನೆಯದು. ಎರಡನೆಯದು ಸಾಧ್ಯವಾಗಿದ್ದರಿಂದಲೇ, ಇಂಥ ಜಾಗತಿಕ ಮಾನದಂಡಕ್ಕೆ ಹೊಂದುವಂಥ, ಮೊದಲನೆಯ ತರದ ಕೃತಿಗಳನ್ನಷ್ಟೇ ಆರಿಸಿಕೊಳ್ಳಲು ಸಾಧ್ಯವಾಯಿತು. ಆದರೂ ಎರಡನೆಯ ಮಾನದಂಡವನ್ನು ಕೂಡ ಪೂರೈಸಿರುವ ಕನ್ನಡದಿಂದ ಇಂಗ್ಲೀಷಿಗೆ ಹೋಗಿರುವ ಕೃತಿಗಳು ಕೂಡ ಇವೆರಡೇ ಅಲ್ಲ. ಆದರೆ ಅವುಗಳು ಸುದ್ದಿ ಮಾಡಲಿಲ್ಲ ಎನ್ನುವುದು ನಿಜ. ಆದರೆ ಇಂಗ್ಲೀಷಿಗೆ ಅನುವಾದಗೊಳ್ಳದ ಇಂಥ ಕೃತಿಗಳು ಕನ್ನಡದಲ್ಲಿ ಸಾಕಷ್ಟಿವೆ. ಕರ್ನಾಟಕದಿಂದ ಹೊರಗಿದ್ದು ಬರೆದವರು ಕೂಡ ಕನ್ನಡದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ಅವರ ಕೃತಿಗಳೆಲ್ಲ ಇಂಗ್ಲೀಷಿಗೆ ಅನುವಾದಗೊಂಡಿಲ್ಲ ಎನ್ನುವುದು ನಿಜವೇ. ಆದರೆ ಕೇವಲ ಎರಡು ಕೃತಿಗಳನ್ನಿಟ್ಟುಕೊಂಡು ಇಂಥ ಎಲ್ಲ ಕೃತಿಗಳ ಬಗ್ಗೆ ಎಂಬಂತೆ ಮಾತನಾಡುವುದು ತಪ್ಪಾಗುತ್ತದೆ.


ಕಿರಣ್ ಭಟ್ ಅವರ ಲೇಖನದಲ್ಲಿಯೇ ಈ ಹೊರಗಿನವರಿಗೆ ಕಂಡ ಪರವೂರು/ಪರದೇಶ ಫೇಕ್ ಆದದ್ದು ಎನ್ನುವ ಅರ್ಥಕೊಡುವ ಮಾತುಗಳು ಸಾಕಷ್ಟು ನೇರವಾಗಿಯೇ ಇವೆ. ಒಳಗಿನವರಿಗೆ ಕಂಡಂತೆ ಹೊರಗಿನವರಿಗೆ ಕಾಣುವುದಿಲ್ಲ ಎಂದು ಕೂಡ ಅವರು ಹೇಳುತ್ತಾರೆ. ಹಾಗಾಗಿ ಅವರ ಆಯ್ಕೆಗೆ ಪ್ರಧಾನ ಕಾರಣವಾದ ಮೊದಲನೆಯ ವೈಶಿಷ್ಟ್ಯ ವೇನಿದೆ, ಅದು ಅಷ್ಟು ಮಹತ್ವದ್ದಲ್ಲ ಎಂದು ಅವರಿಗೇ ಅರ್ಥವಾಗಿದೆ. ಹೆಚ್ಚೆಂದರೆ ಹೊರಗಿನವರಿಗೆ ಕಂಡ ಒಂದು ಡಿಸ್ಟಾರ್ಟೆಡ್ ನೋಟವೇನಿದೆ, ಅದು ಹೇಗಿದೆ ಎನ್ನುವುದನ್ನಷ್ಟೆ ಈ ಓದು ಅವರಿಗೆ ಕೊಟ್ಟಿದೆ. ನಿಜವಾದ ನೋಟವೇನಿದೆ ಅದು ಅವರಿಗೆ ಗೊತ್ತಿದೆ ಮತ್ತು ಈ ತರ ಹೊರಗಿನಿಂದ ಬಂದು ನಿಂತವರಿಗೆ ಅದು ಗೊತ್ತಾಗಿಲ್ಲ ಎನ್ನುವುದು ಕೂಡ ಗೊತ್ತಾಗಿದೆ. ಹಾಗಿದ್ದೂ ಅವರು ಅದನ್ನೇ ಮಾನದಂಡವನ್ನಾಗಿರಿಸಿಕೊಂಡು ಎರಡೇ ಕೃತಿಗಳನ್ನಿಟ್ಟುಕೊಂಡು ಲೇಖನ ಬರೆಯುತ್ತಾರೆ! 
 
ಡಾ||ಯು ಆರ್ ಅನಂತಮೂರ್ತಿಯವರು ಆಗಾಗ ಶ್ರೀವಿಜಯನ "ಕನ್ನಡದೊಳ್ ಭಾವಿಸಿದ ಜನಪದಂ" ಎಂಬ ಮಾತನ್ನು ಉದಾಹರಿಸುತ್ತಿದ್ದರು. ಲಂಕೇಶ್, ಜಗತ್ತಿನ ಒಳ್ಳೆಯದೆಲ್ಲವೂ ತಮಗೆ ಕನ್ನಡದಲ್ಲೇ ಸಿಗಬೇಕು ಎಂದು ಹೇಳುತ್ತಿದ್ದುದರ ಅರ್ಥ ಕನ್ನಡ ಭಾಷೆಯಲ್ಲಿ ಸಿಗಬೇಕು ಎಂಬುದಾಗಿರಲಿಲ್ಲ. ಕೆ ವಿ ತಿರುಮಲೇಶ್, ತಾವು ಇಂಗ್ಲೀಷ್ ಸಾಹಿತ್ಯದ ಬಗ್ಗೆ ಬರೆಯುವಾಗಲೂ ಅದನ್ನು ಕನ್ನಡಕ್ಕೆ ರಿಲೇಟ್ ಮಾಡಿಯೇ ಮಾತನಾಡುತ್ತಿರುವುದರಿಂದ ಮತ್ತು ತಾವು ಕನ್ನಡಿಗರಿಗೇ ಬರೆಯುತ್ತಿರುವುದರಿಂದ ತಮ್ಮ ಮಟ್ಟಿಗೆ ತಾವು ಕನ್ನಡದ ಕುರಿತೇ ಬರೆಯುತ್ತಿರುತ್ತೇನೆ ಎನ್ನುತ್ತಿದ್ದರು. ಅನಂತಮೂರ್ತಿಯವರು ಆಗಾಗ ಕನ್ನಡದ ಒಂದು ಜಾನಪದ ಹಾಡನ್ನು ಉಲ್ಲೇಖಿಸುತ್ತಿದ್ದರು, ಅದು ಪುಣ್ಯಕೋಟಿಯ ಹಾಡು. ಅದನ್ನವರು ಹಿಂಸೆಯ ಬಗ್ಗೆ ವಿವರಿಸುವಾಗ, ಕನ್ನಡದ ಜಾನಪದವನ್ನು ವಿವರಿಸುವಾಗ, ಕನ್ನಡದ ಮನೋಧರ್ಮವನ್ನು ವಿವರಿಸುವಾಗೆಲ್ಲ ಬಳಸಿಕೊಳ್ಳುತ್ತಿದ್ದರು. ಒಮ್ಮೆ ಅದನ್ನವರು ಹೇಗೆ ಕರ್ನಾಟಕ ಎಂಬುದು ಈ ಇಡೀ ಜಗತ್ತಿನ ಕೇಂದ್ರ ಎಂದು ಆ ಕವಿ ತಿಳಿಯುತ್ತಾನೆ ಎನ್ನುವುದನ್ನು ವಿವರಿಸಲು ಬಳಸಿಕೊಂಡಿದ್ದರು. "ಧರಣಿಮಂಡಲ ಮಧ್ಯದೊಳಗೆ| ಮೆರೆಯುತಿಹ ಕರ್ನಾಟ ದೇಶ"ದ ಗೊಲ್ಲನ ಕತೆಯಿದು ಎಂದು ಆ ಹಾಡು ಸುರುವಾಗುತ್ತದೆ. ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯ ಅರ್ಥ ನಾವು ವಿಶ್ವ ಪರ್ಯಟನೆ ಮಾಡಿ ವಿಶ್ವಮಾನವರಾಗುವುದೋ, ವಿಶ್ವದ ಬೇರೆ ಬೇರೆ ಜನಾಂಗದವರ ಕತೆಯನ್ನು ಕನ್ನಡದಲ್ಲೊ, ಇಂಗ್ಲೀಷಿನಲ್ಲೊ ಬರೆದು ವಿಶ್ವಮಾನವರಾಗುವುದೋ ಆಗಿರಲಿಲ್ಲ. ನಾವು ಎಲ್ಲಿದ್ದರಲ್ಲಿ ಆ ಮನೋಧರ್ಮ ಹೊಂದುವುದು ಅವರಿಗೆ ಮುಖ್ಯವೆನಿಸಿತ್ತು. ಕನ್ನಡವನ್ನು ಕನ್ನಡಿಸುವುದು ಮೇಲ್ನೋಟಕ್ಕೆ ಕಂಡಷ್ಟು ಸರಳವಲ್ಲ. ಆದರೆ ಅದು ನಮಗೆ ಸಹಜ.


ಒಂದು ಊರಿಗೆ ವಲಸೆ ಹೋದಾಗ ಆ ಊರಿನ ಭಾಷೆ, ಜೀವನ ಶೈಲಿ, ಸಂಸ್ಕೃತಿ ಎಲ್ಲವೂ ಕಾಲಕ್ರಮೇಣ, ಭಾಗಶಃ ನಮ್ಮದೂ ಆಗುತ್ತದೆ. ಆದರೆ ನಾವು ಆ ಊರಿನವರೇ ಆಗುತ್ತೇವಾ? ನಾನು ಮಂಗಳೂರಿನಲ್ಲಿ ತುಳು ಮಾತನಾಡುವ ತನಕ ಹೊರಗಿನವನೇ ಆಗಿರುತ್ತೇನಾ? ತುಳು ಬರುವವರೆಲ್ಲಾ ಇಲ್ಲಿಯವರೇ ಆಗುತ್ತಾರಾ? ಔಟ್ ಸೈಡರ್ ಪರಿಕಲ್ಪನೆ ಮಾನಸಿಕವಾದದ್ದೆ ಭೌತಿಕವಾದದ್ದೆ? ಆಧಾರ್ ಕಾರ್ಡ್ ಸಹಾಯಕ್ಕೆ ಬರುವುದೆ? ಎಷ್ಟು ಕಾಲ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಅಥವಾ ಸಾಮುದಾಯಿಕ ವಲಸೆಯ ಸಂದರ್ಭದಲ್ಲಿ ಇಂದು ಸಮುಮಾದ ನಿರ್ದಿಷ್ಟ ಭೂಪ್ರದೇಶಕ್ಕೆ "ಹೊರಗಿನ" ವ್ಯಕ್ತಿ/ಕುಟುಂಬ/ಸಮುದಾಯ ಆಗಿ ಉಳಿಯುತ್ತದೆ?

ಆರ್ಯರು ಹೊರಗಿನಿಂದ ಬಂದವರೆ ಅಥವಾ ಮುಸ್ಲಿಮರು ಹೊರಗಿನವರೆ? ದ್ರಾವಿಡರು ಮೂಲನಿವಾಸಿಗಳೆ ಅಥವಾ ಭಾರತೀಯರೇ ಅಲ್ಲದವರೆ? ಯಾರೀಗ ಒಳಗಿನವರು ಮತ್ತು ಯಾರು ಹೊರಗಿನವರು? ಹೊರಗಿರುವ ಇಲ್ಲಿಯವರು ಮತ್ತು ಒಳಗಿರುವ ಅಲ್ಲಿಯವರು ಕೊನೆಗೂ ಸಲ್ಲುವುದು ಎಲ್ಲಿಗೆ?

ನಾವು ಚಿಕ್ಕವರಿರುವಾಗ, ಬೆಂಗಳೂರಿಗೆ ಹೋದ ಕೆಲವರು ಜಾತ್ರೆಗೋ, ಹಬ್ಬಕ್ಕೊ, ಮದುವೆ ಮುಂಜಿಗೋ ಊರಿಗೆ ಬಂದಾಗ ಆಡುವ ಭಾಷೆಯನ್ನು ತಮಾಶೆಯಾಗಿ ಗಮನಿಸುತ್ತಿದ್ದೆವು. ಮೊನ್ನೆ ಮೊನ್ನೆ ತನಕ ನಮ್ಮಂತೆಯೇ "ಹೋಯ್ಕ್ - ಬರ್ಕ್", "ಬ್ಯಾರೆ ಹರ್ಬ್ ಇಲ್ಯ ಗಡೆ" ಎಂದೆಲ್ಲ ಮಾತನಾಡುತ್ತಿದ್ದವ ಇದ್ದಕ್ಕಿದ್ದಂತೆ ಬೆಂಗಳೂರಿನವನಂತೆ ಮಾತನಾಡುವುದು ನಾಟಕ ಅನಿಸುತ್ತಿತ್ತು. ಅವನು ತಪ್ಪಿ ಬೀಳುವುದನ್ನು ಕಾಯುತ್ತಿದ್ದೆವು.

ನಾವು ಕುಂದಾಪುರದಿಂದ ಉಡುಪಿ ಅಥವಾ ಮಂಗಳೂರಿಗೆ ಬಂದಾಗ, ನಮ್ಮ ಕುಂದಾಪುರ ಕನ್ನಡವನ್ನು ಮುಕ್ತವಾಗಿ ಆಡಲು ನಾಚುತ್ತಿದ್ದೆವು, ಮಂಗಳೂರಿನ ಶಿಷ್ಟ ಅನಿಸುವ ಕನ್ನಡವನ್ನು ಆಡಲು ಪ್ರಯತ್ನಿಸುತ್ತಿದ್ದೆವು. ಬೆಂಗಳೂರಿಗೆ ಹೋದಾಗ ಅಲ್ಲಿನ ಕನ್ನಡ ಪ್ರಯತ್ನಿಸಿ ನೋಡುತ್ತಿದ್ದೆವು. ಒಮ್ಮೆ ವಿಧಾನಸೌಧದ ಪಕ್ಕದ ಗೂಡಂಗಡಿಯವನು (1990ರಲ್ಲಿ, ಈಗ ಗೂಡಂಗಡಿಗಳೆಲ್ಲಿವೆ) ನನ್ನನ್ನು ಹಿಡಿದು ಹಾಕಿದ. ನೀವು ಮಂಗ್ಳೂರ್ ಕಡೆಯೋರು ಅಲ್ವಾ ಎಂದ. ಹೆಂಗ್ ಗೊತ್ತಾಯ್ತು ಅಂದೆ, ಅದು ಹೇಗೆ ಸಿಕ್ಕಿಬಿದ್ದೆ ಎಂದು ತಿಳಿಯದೆ. ನಮಗೆ ನಿಮ್ಮ ಡ್ರೆಸ್ಸಲ್ಲೇ ಗೊತ್ತಾಗ್ಬಿಡುತ್ತೆ ಅಂದ.

ನಮ್ಮದೇ ಊರಿನ ಭಾಷೆಯನ್ನು ಆಡುವ ಮಂದಿ ನಮ್ಮ ಕೈಗೆ ತಕ್ಷಣ ಸಿಕ್ಕಿ ಬೀಳುತ್ತಾರೆ. ಕ್ರಿಶ್ಚಿಯನ್ನರ ಕನ್ನಡ, ತುಳು ಮಾತನಾಡುವವರ ಕನ್ನಡ ನಮಗೆ ಎಲ್ಲಿದ್ದರೂ ಗೊತ್ತಾಗುತ್ತದೆ.  ಮೊನ್ನೆ ಮೊನ್ನೆ ನಮ್ಮಲ್ಲಿಗೆ ಬಂದ ಒಬ್ಬ ವೈದ್ಯರು ಮಾತು ಮಾತಿಗೆ "ಅಡ್ಡಿಯಿಲ್ಲ ಅಡ್ಡಿಯಿಲ್ಲ" ಎನ್ನುವುದನ್ನು ಕೇಳಿಯೇ ಅವರು ಕುಂದಾಪ್ರ ಕನ್ನಡದವರು ಎನ್ನುವುದು ಗೊತ್ತಾಗಿ ಬಿಟ್ಟಿತು.

ಅನಂತಮೂರ್ತಿಯವರು ಇಡೀ ಕರ್ನಾಟಕಕ್ಕೆ ಬೇಕಾದ ಕನ್ನಡವನ್ನು ಕೊಟ್ಟವರು ಡಾ||ರಾಜ್‍‌ಕುಮಾರ್ ಎನ್ನುತ್ತಿದ್ದರು. ಇವತ್ತು ಟೀವಿಯ ಕನ್ನಡವನ್ನು ಬೆಂಗಳೂರು ಮತ್ತಿತರ ಭಾಗದ ಜನ ಬಳಸುತ್ತಿದ್ದಾರೆ ಅನಿಸುತ್ತದೆ. ರಾಜ್ ಕಾಲಕ್ಕೆ ಮನೆನಲ್ಲಿ, ಬೀದಿನಲ್ಲಿಗಳು ಇರಲಿಲ್ಲ ಅಲ್ಲವೆ? ಮನೇಲಿ, ಬೀದೀಲಿ ಎನ್ನುತ್ತಿದ್ದೆವು. ಹಾಗೆ ಕಾಲಕ್ಕೆ ತಕ್ಕಂತೆ ಒಂದೇ ಪ್ರದೇಶದ ಭಾಷೆ ಕೂಡ ಬದಲಾಗುತ್ತಿರುತ್ತದೆ. ನನಗೆ ಕುಂದಾಪುರ ಕನ್ನಡದಲ್ಲಿ ನಾವು ಚಿಕ್ಕವರಿರುವಾಗ, ಆಟ ಆಡುವಾಗ ಬಳಸುತ್ತಿದ್ದ ಕೆಲವು ಪದಗಳು ಬೇಕಿದ್ದವು. ಊರಲ್ಲೇ ಇರುವ ನನ್ನ ಗೆಳೆಯರಿಗೂ ಅವು ನೆನಪಾಗಲಿಲ್ಲ. ಬೆಂದ, ಗುಳಿ ಎಂದೆಲ್ಲ ಗೋಲಿ ಆಡುವಾಗ ಅವನ್ನು ಬಳಸುತ್ತಿದ್ದೆವು. ‘ಕೂಚ್ ನೈ ಸರ್ಫೀಟ್ ನೈ’ ಎಂದರೆ ಗುರಿ ಹಿಡಿಯಲು ನೀವು ಇರುವಲ್ಲಿಂದ ಬೇರೆ ಕೋನ ಬಳಸುವುದಕ್ಕಾಗಲಿ,  ಅದೇ ಕೋನದಲ್ಲಿ ಬೇರೆಯೇ ಎತ್ತರ ಬಳಸುವುದಕ್ಕಾಗಲಿ ಅವಕಾಶವಿಲ್ಲ ಎಂದು ಹಾಕುವ ರಿಟ್. ಅದು ನಿರೀಕ್ಷಣಾ ಜಾಮೀನಾಗಿಯೂ ಉಪಯೋಗಕ್ಕೆ ಬರುತ್ತಿತ್ತು. ಯಾರು ಮೊದಲು ಬೊಬ್ಬೆ ಹೊಡೆಯುತ್ತಾರೆ ಎನ್ನುವುದರ ಮೇಲೆ!  ಆದರೆ ಅದರ ಶಬ್ದಾರ್ಥ ಗೊತ್ತಿರಲಿಲ್ಲ, ಬಳಸುತ್ತಿದ್ದೆವು ಅಷ್ಟೆ. ಮತ್ತವು ಕನ್ನಡದ ಶಬ್ದಗಳೇ ಅಲ್ಲ ಎಂದೂ ನಮಗೆ ಗೊತ್ತಿರಲಿಲ್ಲ. ಆದರೆ ಈಗ ಆ ಶಬ್ದಗಳೆಲ್ಲ ಎಲ್ಲಿದ್ದಾವೋ ಗೊತ್ತಿಲ್ಲ.

ಏಕ್ ದೂಜೆ ಕೇಲಿಯೆ, ಎರಡು ದಾರಿಗಳು ಮುಂತಾದ ಸಿನಿಮಾಗಳು ಕೂಡ ಈ ಸ್ಥಳೀಯ ಭಾಷೆಯ ಪ್ರಭಾವವನ್ನು ತಮ್ಮ ಸಂಭಾಷಣೆಯಲ್ಲಿ, ಹಾಡುಗಳಲ್ಲಿ ತಂದಿದ್ದಿದೆ. ಮಂಗಳೂರು ಕನ್ನಡ, ಕೊಡವರ ಕನ್ನಡ, ಧಾರವಾಡದ ಕನ್ನಡಗಳನ್ನು ಸಿನಿಮಾಗಳು ಅಳವಡಿಸಿಕೊಂಡಿದ್ದಿದೆ. ಹಳ್ಳಿಯವನ ಕನ್ನಡ, ಪೇಟೆಯವನ ಕನ್ನಡ, ಮುಸ್ಲಿಮರ ಕನ್ನಡಗಳನ್ನು ಕೂಡ ನಾಟಕ, ಸಿನಿಮಾಗಳಲ್ಲಿ ಕಾಣುತ್ತೇವೆ. ಹಾಗೆಯೇ ಪೌರಾಣಿಕ ಪಾತ್ರಗಳು, ಯಕ್ಷಗಾನದ ಪಾತ್ರಧಾರಿಗಳು ಆಡುವ ಕನ್ನಡ ಬೇರೆ. ಕಾಕನಕೋಟೆಯ ದೊರೆಗಳ ಕನ್ನಡ, ಪಾಳೇಗಾರರ (ಹೆಗ್ಗಡೆ) ಕನ್ನಡ, ಕಾಕನ ಕನ್ನಡ ಬೇರೆ. ಯಕ್ಷಗಾನದ ಪಾತ್ರಧಾರಿ ಪಾಂಡವರ ಜೊತೆ ಆಡುವ ಕನ್ನಡ ಬೇರೆ, ಕೋಡಂಗಿ ಪಾತ್ರದೊಂದಿಗೆ ಆಡುವ ಕನ್ನಡ ಸ್ವಲ್ಪ ಬೇರೆ. ದಕ್ಷಿಣಕನ್ನಡದ ಮಂಗಳೂರಿನಲ್ಲಿ ನಾವು ದಿನವೂ ತುಳು, ಕೊಂಕಣಿ (ಎರಡು ವಿಧ), ಬ್ಯಾರಿ, ಇಂಗ್ಲೀಷ್, ಮಲಯಾಳಂ ಮತ್ತು ಕನ್ನಡ ಭಾಷೆಗಳನ್ನು ಜೊತೆ ಜೊತೆಗೇ ಕೇಳಿಸಿಕೊಳ್ಳುತ್ತಿರುತ್ತೇವೆ. ಪೋರ್ಚುಗೀಸರ ಮತಾಂತರ ಪ್ರಯತ್ನಕ್ಕೆ ಹೆದರಿ ಗೋವಾದಿಂದ ಕಾಲ್ಕಿತ್ತವರ ಕೊಂಕಣಿಗೂ, ಮರಾಠರ ಮತಾಂತರ ಪ್ರಯತ್ನಕ್ಕೆ ಹೆದರಿ ಕಾಲ್ಕಿತ್ತವರ ಕೊಂಕಣಿಗೂ ಸಾಕಷ್ಟು ವ್ಯತ್ಯಾಸ ಇರುವುದು ಒಂದು ಅಂಶವಾದರೆ, ಉತ್ತರಕನ್ನಡ, ದಕ್ಷಿಣಕನ್ನಡ, ಕೇರಳಗಳಲ್ಲಿ ಇವತ್ತು ಆಡುತ್ತಿರುವ ಕೊಂಕಣಿಗೂ ಅವುಗಳೊಳಗೇ ಇರುವ ವ್ಯತ್ಯಾಸದಷ್ಟೇ ಗೋವಾದ ಕೊಂಕಣಿಯ ಜೊತೆಗೂ ಈ ಯಾವತ್ತೂ ಕೊಂಕಣಿಗಳಿಗೆ ಸಾಕಷ್ಟು ವ್ಯತ್ಯಾಸವಿರುವುದು ಇನ್ನೊಂದು ಅಂಶ. ಇಲ್ಲೆಲ್ಲ ವಿಭಿನ್ನ ಲಿಪಿಗಳ ಬಳಕೆ ಆಚರಣೆಯಲ್ಲಿರುವುದು ಇನ್ನೊಂದು ಗಮನಾರ್ಹ ಅಂಶ. ಇವುಗಳಲ್ಲಿ ಯಾವುದು ಮೂಲ ಕೊಂಕಣಿ? 

ಇದ್ಯಾವುದೂ ಹೊಸ ವಿಷಯವಲ್ಲ, ಎಲ್ಲರೂ ಬಲ್ಲ ಸಂಗತಿಗಳೇ. ಆದರೆ ಇದನ್ನೆಲ್ಲ ವ್ಯಾಖ್ಯಾನಿಸಿ ಥೀಸೀಸ್ ಬರೆದರೆ ಕಗ್ಗಂಟಿನಂತೆ ಕಾಣುತ್ತದೆ ಎನ್ನುವುದೇ ನಿಜವಾದ ತಮಾಶೆ. ಈಗ ಅದನ್ನು ಪ್ರಯತ್ನಿಸುತ್ತೇನೆ.

ಸಾಹಿತ್ಯಕ್ಕೆ ಬಂದಾಗ, ಸಾಹಿತಿ ಅಳವಡಿಸಿಕೊಳ್ಳುವುದು ತನ್ನ "ಕಥಾನಕದ ಸಮಾಜ" ಆಡುವ ಭಾಷೆಯನ್ನೇ ಹೊರತು, ಅವನು "ಬರೆದ ಭಾಷೆ"ಯನ್ನೇನೂ ಸಮಾಜ ಅಳವಡಿಸಿಕೊಳ್ಳುವುದಿಲ್ಲ. ಅವನು ಬಳಸುವ ಪಾತ್ರಗಳ ಹೆಸರನ್ನು ಗಮನಿಸಿ ಅದು ತೆಲುಗಿನ ರೆಡ್ಡಿಯೋ, ಮಲಯಾಳದ ನಾಯರೋ, ಧಾರವಾಡದ ಪಾಟೀಲರೋ ಎಂದು ತೀರ್ಮಾನಿಸುತ್ತೇವೆ. ಕೆಲವೊಮ್ಮೆ ಭಾಷೆ ಎಲ್ಲರದ್ದೂ ಒಂದೇ ಆಗಿರುತ್ತದೆ. ಕಾರಂತರು ತಮ್ಮ ಕಾದಂಬರಿಯಲ್ಲಿ ದಕ್ಷಿಣಕನ್ನಡದ ಕನ್ನಡ ಬಳಸಲಿಲ್ಲ. ಬೇಂದ್ರೆಯವರ ಕನ್ನಡವೇ ಆರಂಭದಲ್ಲಿ ಅವರ ಕವನ ಸಂಕಲನಗಳ ಮಾರಾಟಕ್ಕೆ ತೊಡಕೊಡ್ಡಿತ್ತು ಎಂದು ಕೇಳಿದ್ದೆ. "ಕುಸುಮಬಾಲೆ"ಯ ಕನ್ನಡ ಹಲವರಿಗೆ ಕಷ್ಟ.  ಹಾಗಾಗಿ ಅದರ ಸರಳ ಕನ್ನಡ ರೂಪ ಬಂತು. ಕುಂವೀ ಅವರ ಕೃತಿಗಳನ್ನು ಕೆಲವರು ಓದಿಲ್ಲದೇ ಇದ್ದರೆ ಅದಕ್ಕೆ ಅವರ ಕಾದಂಬರಿಯ ಭಾಷೆ ಕೂಡ ಬಹುಮಟ್ಟಿಗೆ ಕಾರಣ. ಅಲ್ಲದೆ ಕನ್ನಡದ ಹಲವಾರು ಸಾಹಿತಿಗಳ ಮಾತೃಭಾಷೆ ಕೂಡ ಕನ್ನಡ ಆಗಿರಲಿಲ್ಲ ಎನ್ನುವುದು ಇನ್ನೊಂದು ಗಮನಿಸಬೇಕಾದ ಅಂಶ. ಮಾಸ್ತಿ, ಪುತಿನ ಅವರ ಮನೆಮಾತು ತಮಿಳು. ಬೇಂದ್ರೆಯವರ ಮನೆಮಾತು ಮರಾಠಿ.


ಒಂದು ಕನ್ನಡದ ಕೃತಿಯನ್ನು ಇನ್ನೊಂದು ಭಾರತೀಯ ಭಾಷೆಗೆ ಅನುವಾದಿಸಿದಾಗ ಉಳಿಸಿಕೊಳ್ಳಬಹುದಾದ ಪ್ರಾದೇಶಿಕತೆಯ ಪ್ರಮಾಣ ಕಡಿಮೆಯಾಗುತ್ತದೆ. ಅದನ್ನೇ ಇಂಗ್ಲೀಷಿಗೆ ಅನುವಾದ ಮಾಡುವಾಗ ಅದು ಪೂರ್ತಿಯಾಗಿ ನಾಶವಾಗುತ್ತದೆ. ಏಕೆಂದರೆ, ಇಂಗ್ಲೀಷ್ ಭಾಷೆಯೇ ಒಂಥರಾ ಇಸ್ತ್ರಿ ಹಾಕಿದಂಥ ಭಾಷೆ. ಅದರ ಗ್ರಾಮ್ಯ ಆವೃತ್ತಿ ಕೂಡ ಸಾರ್ವತ್ರಿಕ ಬಳಕೆಯ ಆವೃತ್ತಿ ಅಥವಾ ಹಳೆಯ ಆವೃತ್ತಿಯೇ ಹೊರತು ನಿರ್ದಿಷ್ಟ ಪ್ರಾದೇಶಿಕ ಅವೃತ್ತಿಯೇನಲ್ಲ. ಆದರೆ, ಸಹಜವಾಗಿಯೇ ವಸಾಹತುಗಳ ಇಂಗೀಷ್ ಮತ್ತು ಬ್ರಿಟಿಷ್ ಇಂಗ್ಲೀಷ್ ಆವೃತ್ತಿಗಳು ಭಿನ್ನವಾಗಿರುವುದು ಕಾಣುತ್ತೇವೆ. ಹಾಗಾಗಿ ಇಂಗ್ಲೆಂಡಿನ ಇಂಗ್ಲೀಷ್, ಅಮೆರಿಕದ ಇಂಗ್ಲೀಷ್, ಭಾರತದ ಇಂಗ್ಲೀಷ್, ಆಫ್ರಿಕಾದ ಇಂಗ್ಲೀಷ್ - ಎಂದು ವಿಂಗಡಿಸಲು ಸಾಧ್ಯ. ಅದೇನಿದ್ದರೂ ಇಂಗ್ಲೀಷು ಇಂಗ್ಲೀಷೇ. ಇಟಾಲಿಕ್ ಫಾಂಟ್ ಬಳಸಿ ಉಳಿಸಿಕೊಳ್ಳುವ ಮೂಲಭಾಷೆಯ ಶಬ್ದಗಳು ಯಾವತ್ತೂ ಮೂಲ ಭಾಷೆಯ ಗಂಧಗಾಳಿಯಾದರೂ ಇದ್ದವರನ್ನು ತಲುಪಬಲ್ಲವೇ ಹೊರತು ಬೇರೆಯವರನ್ನಲ್ಲ. ನಮಗೆ ಹಿಂದಿ/ಮಲಯಾಳ/ತಮಿಳು ಶಬ್ದಗಳನ್ನು ಇಟಾಲಿಕ್ ಫಾಂಟ್ ಬರೆದು ಬಳಸಿದರೆ ತಿಳಿಯಬಹುದಾದಷ್ಟು ಬ್ರೆಜಿಲ್‌ನಲ್ಲಿ ಕೂತು ಓದುವವನಿಗೆ ತಿಳಿಯುವುದಿಲ್ಲ.

ಬೇಂದ್ರೆಯವರ ತುಂ ತುಂ ತುಂ ತುಂಬಿ ಬಂದಿತ್ತಾ, ತುಂಬ್ತುಂಬಿ ಬಂದಿತ್ತಾ ಎಂದು ಇಂಗ್ಲೀಷಿನಲ್ಲಿ ಹೇಳುವುದು ಹೇಗೆ! ನಮ್ಮಲ್ಲಿ ಕೆಲವರು ತಮಾಶೆಗೆ ತುಲಸೀಕಟ್ಟೆಗೆ ಇಂಗ್ಲೀಷಿನಲ್ಲಿ ಏನು ಹೇಳ್ತೀರಿ, ರಂಗೋಲಿಗೆ ಏನು ಹೇಳ್ತೀರಿ ಎಂದೆಲ್ಲ ಇಂಗ್ಲೀಷ್ ಜೀವನಶೈಲಿ, ಸಂಸ್ಕೃತಿಗಳಲ್ಲಿ ಇಲ್ಲದ ಶಬ್ದದ ಇಂಗ್ಲೀಷ್ ಸಮಾನಾರ್ಥಕ  ಪದಗಳನ್ನು ಕೇಳುವುದಿದೆ. ಅದು ಅನುವಾದದ ನಿಜವಾದ ಕಷ್ಟ ಸಹ ಹೌದು. ಮರಿಯಾ ರಿಲ್ಕನ ಬಗ್ಗೆ ವಿವರವಾಗಿ ಬರೆದಿರುವ Stephanie Dowrick ಹೇಳುವ ಹಾಗೆ ನಾವು ರಿಲ್ಕನನ್ನು ಓದುವುದೇ ಆದರೆ ಜರ್ಮನ್ ಭಾಷೆಯಲ್ಲೇ ಓದಬೇಕು. ಅವಳ ಪ್ರಕಾರ ಇಂಗ್ಲೀಷ್ ಅನುವಾದದಲ್ಲಿ ರಿಲ್ಕ ಇರುವುದಕ್ಕಿಂತ ಹೆಚ್ಚು ರಿಲ್ಕನ ಅಪಭ್ರಂಶಗಳೇ ಹೆಚ್ಚಿವೆ. ಅನುವಾದಕಾರರು ಕುರುಡ ಕಂಡ ಆನೆಯನ್ನು ಬಣ್ಣಿಸಿದಂತೆ ತಮಗೆ ತಿಳಿದ ರಿಲ್ಕನನ್ನು ಅನುವಾದಿಸಿದ್ದಾರೆಯೇ ಹೊರತು ಅವು ರಿಲ್ಕನ ಕವಿತೆಗಳೇ ಅಲ್ಲ ಎನ್ನುತ್ತಾಳೆ ಆಕೆ. ನಿಮಗೆ ಕಷ್ಟವಾದರೂ ಪರವಾಗಿಲ್ಲ, ಜರ್ಮನ್ ಕಲಿತು ರಿಲ್ಕನನ್ನು ಓದಿ ಎನ್ನುತ್ತಾಳೆ. ಅದೇ ರೀತಿ ಇಕೊ ಉಂಬರ್ಟೊ Gérard de Nerval ಬಗ್ಗೆ ಬರೆಯುತ್ತ, ಫ್ರೆಂಚ್ ಭಾಷೆಯಲ್ಲಿ ಬಳಸಬಹುದಾದಂತೆ ಪಾಸ್ಟ್ ಇಂಪರ್ಫೆಕ್ಟ್ ಟೆನ್ಸ್‌ನ್ನು ಇಂಗ್ಲೀಷಿನಲ್ಲಿ ಬರೆಯಲು ಬರುವುದಿಲ್ಲ ಎನ್ನುತ್ತಾನೆ. ಇನ್ನು ಅದರ ಇಂಗ್ಲೀಷ್ ಆವೃತ್ತಿಯನ್ನು ಅವಲಂಬಿಸಿ ಮಾಡಿದ ಬೇರೆ ಭಾಷೆಯ ಅನುವಾದದ ಪಾಡು ಹೇಗಿದ್ದೀತು! ಅಮೆರಿಕೆಯಲ್ಲಿದ್ದೂ ಸಿಂಗರ್ ತರ ಹಠ ಹಿಡಿದು ತಮ್ಮ ತಮ್ಮ ಮಾತೃ (ಯಿದ್ದಿಶ್)  ಭಾಷೆಯಲ್ಲಿಯೇ ತಮ್ಮ ಕೃತಿಗಳನ್ನು ಬರೆದವರು ಕಡಿಮೆಯಿಲ್ಲ. ನಾವು ಅವರನ್ನು ಇಂಗ್ಲೀಷಿನಲ್ಲಿ ಓದಿ ಅವರನ್ನು ಓದಿದ್ದೇವೆ ಎಂದುಕೊಳ್ಳುವುದು ಕೂಡ ಒಂದು ತರದ ಭ್ರಮೆಯೇ. ಗಂಭೀರವಾಗಿ ಯೋಚಿಸಿದರೆ ಅನುವಾದ ಎನ್ನುವುದೇ ಒಂದು ಕೃತಿಯನ್ನು ಒಬ್ಬ ಓದುಗ (ಅನುವಾದಕ) ಅರ್ಥಮಾಡಿಕೊಂಡಿದ್ದರ ಸರಿಸುಮಾರು ಪ್ರತಿಬಿಂಬವೇ ಹೊರತು ಮೂಲಬಿಂಬ ಅಲ್ಲ. ನಾವು ಓದುವ ಎಲ್ಲಾ ಇಂಗ್ಲೀಷ್ ಕೃತಿಗಳು ಮೂಲತಃ ಇಂಗ್ಲೀಷಿನಲ್ಲೇ ಹುಟ್ಟಿರುವುದಿಲ್ಲ. ಜಗತ್ತಿನ ನಾನಾ ಭಾಷೆಯ ಕೃತಿಗಳು ಇಂಗ್ಲೀಷಿಗೆ ಬರುತ್ತಿರುತ್ತವೆ. ಎಷ್ಟರ ಮಟ್ಟಿಗೆ ಇಂಗ್ಲೀಷ್ ಆಯಾ ಭಾಷೆಯ ಬದುಕು, ಸಂಸ್ಕೃತಿ, ಜೀವನ ಶೈಲಿಯನ್ನು ನಮಗೆ ಕಟ್ಟಿಕೊಡುತ್ತವೆಯೋ, ರಾಜಿ ಮಾಡಿಕೊಂಡು ಇನ್ನೇನನ್ನೋ ಕೊಡುತ್ತಿವೆಯೋ ಹೇಳುವುದು ಕಷ್ಟವೇ. ಎಂಥ ಸಾಮಾನ್ಯ ಕನ್ನಡಿಗನಿಗೂ ಎದ್ದು ಕಾಣುವ ತಪ್ಪುಗಳಿರುವ ಇಂಗ್ಲೀಷ್ - ಕನ್ನಡ ಅಥವಾ ಕನ್ನಡ-ಇಂಗ್ಲೀಷ್ ಅನುವಾದಗಳ ಉದಾಹರಣೆ ನನ್ನ ಬಳಿ ಸಾಕಷ್ಟಿವೆ. ಅಂಥ ಅನುವಾದವನ್ನು ಹಾಡಿಹೊಗಳಿದವರ ಪಟ್ಟಿಯೂ ಇದೆ. ಆದರೆ ಯಾರನ್ನೂ ದೂಷಿಸುವ ಉದ್ದೇಶ ಇಲ್ಲದಿರುವುದರಿಂದ ಅವನ್ನೆಲ್ಲ ಕೆದಕಲು ಹೋಗುವುದಿಲ್ಲ.

ಕರ್ನಾಟಕದ ಹೊರಗೆ ಕುಳಿತು ಕನ್ನಡದಲ್ಲಿ ಬರೆಯುವವರ ಕಷ್ಟ ಕೂಡ ಇದೆಲ್ಲಕ್ಕೆ ಹೊರತಾದ್ದೇನಲ್ಲ. ಅವರು ತಮ್ಮ ಸ್ಮೃತಿಯ ಕನ್ನಡ ಜಗತ್ತಿನ ಕತೆಗಳನ್ನು ಬರೆಯುತ್ತಿದ್ದಾರೆಯೇ, ತಮ್ಮ ಸುತ್ತಮುತ್ತಲ ಕನ್ನಡೇತರ ಜಗತ್ತಿನ ಕತೆಗಳನ್ನು ಬರೆಯುತ್ತಿದ್ದಾರೆಯೇ ಎನ್ನುವುದರ ಮೇಲೆ ಅವರ ಕಷ್ಟನಷ್ಟಗಳು ನಿಂತಿರುತ್ತವೆ. ಕೊನೆಗೂ ಊರು ಕೇರಿ ಬಿಟ್ಟು ನಿಂತ ಮನುಷ್ಯ ತನ್ನ ಸುತ್ತಲಿನ ಜಗತ್ತಿನ ಅನೇಕ ಪ್ರಭಾವಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವನ ಭಾಷೆ, ಜೀವನಶೈಲಿ ಕೂಡ ಸಾಕಷ್ಟು ಬದಲಾವಣೆಗೆ ತುತ್ತಾಗುತ್ತಿರುತ್ತದೆ. ಕಾಲಕ್ರಮೇಣ ಅವನ ಕನ್ನಡ ಕೂಡ ಬದಲಾಗುತ್ತದೆ. ಆಗ ಅವನು ಕನ್ನಡಕ್ಕೂ ಔಟ್‌ಸೈಡರ್, ಇರುವ ಪ್ರದೇಶಕ್ಕೂ ಔಟ್‌ಸೈಡರ್. ಹಾಗೆ ನೋಡಿದರೆ ಇವತ್ತು ಯಾವುದೇ ಪ್ರದೇಶದ ಮೂಲನಿವಾಸಿ ಎನ್ನುವ ಹಕ್ಕು ಸ್ಥಾಪಿಸಬಲ್ಲ ಮಂದಿ ಇದ್ದಾರೆಯೆ? ಎಲ್ಲರೂ ವಲಸಿಗರೇ ಆಗಿರುವಂಥ ಒಂದು ಕಾಲವಿದು. ಇಂಥವರ ಕನ್ನಡ ಇಂಗ್ಲೀಷ್ ಅನುವಾದಕ್ಕೆ ಹೆಚ್ಚು ಅನುಕೂಲಕರವಾಗಿರುವ ಸಾಧ್ಯತೆಯೊಂದಿದೆ.

ಪ್ರಧಾನವಾಗಿ ಉದ್ಯೋಗ ನಿಮಿತ್ತ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ದುಡಿದ ಹಲವಾರು ಸಾಹಿತಿಗಳು ಕನ್ನಡದಲ್ಲಿ ಬರೆಯುತ್ತ ಬಂದಿದ್ದಾರೆ. ಬಾಗಲೋಡಿ ದೇವರಾಯ, ಎ ಕೆ ರಾಮಾನುಜನ್, ಯಶವಂತ ಚಿತ್ತಾಲ, ಗಿರೀಶ್ ಕಾರ್ನಾಡ್, ವ್ಯಾಸರಾಯ ಬಲ್ಲಾಳ, ಕಾಮರೂಪಿ (ಎಂ ಎಸ್ ಪ್ರಭಾಕರ್), ಕೆ ವಿ ತಿರುಮಲೇಶ್, ಎಸ್. ದಿವಾಕರ್, ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ, ಎಂ ಎಸ್ ಶ್ರೀರಾಮ - ಹೀಗೆ ಈ ಪಟ್ಟಿ ಸಣ್ಣದೇನಲ್ಲ. ಎ ಕೆ ರಾಮಾನುಜನ್ ಚಿಕಾಗೊದಲ್ಲಿ ಕುಳಿತು ಕನ್ನಡ, ತಮಿಳು ಮತ್ತು ಇಂಗ್ಲೀಷಿನಲ್ಲಿ ಬರೆಯುತ್ತಿದ್ದರು. ತಮಿಳುನಾಡಿನ ನನ್ನ ಒಬ್ಬ ಗೆಳೆಯರು ಒಮ್ಮೆ ಆಶ್ಚರ್ಯದಿಂದ ಕೇಳಿದ್ದರು, ನಮ್ಮ ರಾಮಾನುಜನ್ ಕನ್ನಡದಲ್ಲೂ ಬರೆದಿದ್ದಾರೆಯೇ ಎಂದು! ನಾನು ನಮ್ಮ ರಾಮಾನುಜನ್ ತಮಿಳಿನಲ್ಲಿಯೂ ಬರೆದಿದ್ದಾರಾ ಎಂದು ಆಶ್ಚರ್ಯಪಟ್ಟೆ, ನನಗದು ಗೊತ್ತಿರಲಿಲ್ಲ. ಹಾಗೆ ನೋಡಿದರೆ, ಯು ಆರ್ ಅನಂತಮೂರ್ತಿಯವರು ‘ಸಂಸ್ಕಾರ’ ಕಾದಂಬರಿ ಬರೆದಿದ್ದು ಲಂಡನ್ನಿನಲ್ಲಿ ಕುಳಿತು. ಕಾರಂತರ ‘ನಷ್ಟ ದಿಗ್ಗಜಗಳು’ ಕಾದಂಬರಿಗೆ ಇಟೆಲಿಯ ಪ್ರವಾಸ ಸ್ಫೂರ್ತಿಯಾಗಿತ್ತು.  1975ರ ತನಕ ಬಹುತೇಕ ಕಾದಂಬರಿಗಳನ್ನು ಪುತ್ತೂರಿನಲ್ಲಿ ಕೂತು ಬರೆದ ಕಾರಂತರು (ಬೆಟ್ಟದ ಜೀವ ಮತ್ತು ಜಾರುವ ದಾರಿಯಲ್ಲಿ ಕೃತಿಗಳನ್ನು ಬರೆದಿದ್ದು ಶುಂಠಿಕೊಪ್ಪದಲ್ಲಿ) ಆ ಬಳಿಕ ಉಡುಪಿ-ಕುಂದಾಪುರ ನಡುವಿನ ಸಾಲಿಗ್ರಾಮದಲ್ಲಿ ಕೂತು ಬರೆ(ಸಿ)ದರು. ಅವರ ಹಲವಾರು ಕಾದಂಬರಿಗಳಲ್ಲಿ ಮುಂಬಯಿ ಬಂದೇ ಬರುತ್ತದೆ. ಅವರ ಕಾಲದ ಪಾತ್ರಗಳು ಲಾ ಓದಲು ಹೋಗುತ್ತಿದ್ದುದು ಮದರಾಸಿಗೇ. ಅದರಲ್ಲೂ ‘ಒಂಟಿದನಿ’ ಕಾದಂಬರಿಯ ಕಥಾಕ್ಷೇತ್ರ ಮುಂಬಯಿಯೇ.  ಭಾರತದಲ್ಲಿ ಕುಳಿತು ಇಂಗ್ಲೀಷಿನಲ್ಲಿ ಬರೆದ ವಿದೇಶೀಯರಿಗಂತೂ ಕೊರತೆಯಿಲ್ಲ. ಆರ್ ಕೆ ನಾರಾಯಣನ್ ಕರ್ನಾಟಕದಲ್ಲಿ ಕುಳಿತು ಇಂಗ್ಲೀಷಿನಲ್ಲಿ ಬರೆದ ಕನ್ನಡೇತರ ಅಲ್ಲವೆ!  ಓರಾನ್ ಪಮುಕ್ ಅಮೆರಿಕದಲ್ಲಿದ್ದರೂ ಇಸ್ತಾಂಬುಲ್ ಬಗ್ಗೆ ಬರೆಯುತ್ತಿದ್ದ ಮತ್ತು ಅವನು ಅಮೆರಿಕದಲ್ಲಿದ್ದರೂ ಬರೆಯುತ್ತಿದ್ದುದು ತುರ್ಕಿಶ್‌ನಲ್ಲೇ. ಚೀನಾದ Gao Xingjian ಫ್ರಾನ್ಸಿನಲ್ಲಿ ಕೂತು ಫ್ರೆಂಚ್ ಭಾಷೆಯಲ್ಲೇನೂ ಬರೆಯಲಿಲ್ಲ. ಅಂಜುಂ ಹಸನ್ ದೂರದ ಶಿಲ್ಲಾಂಗಿನವರು. ಅವರು ನೆಲೆಸಿದ್ದು ಬೆಂಗಳೂರು/ಮಡಿಕೇರಿಗಳಲ್ಲಿ. ಬರೆಯುವ ಭಾಷೆ ಇಂಗ್ಲೀಷ್. ಅವರು ಬೆಂಗಳೂರು ನಗರವನ್ನೇ ಕೇಂದ್ರವಾಗಿರಿಸಿಕೊಂಡು ಬರೆದ ಕಾದಂಬರಿ ‘ನೇತಿ ನೇತಿ’. ಶಿಲ್ಲಾಂಗ್ ಕೇಂದ್ರವಾಗಿರುವ ಕಾದಂಬರಿ A Lunatic in my Head. ಅವರು ಶಿಲ್ಲಾಂಗಿಗೆ ಹೊರಗಿನವರೆ, ಬೆಂಗಳೂರಿಗೆ ಹೊರಗಿನವರೆ? 

ಇವತ್ತು ನಾವು ಇಂಗ್ಲೀಷಿನಲ್ಲಿ ಓದುವ ಪುಸ್ತಕದ ಕೃತಿಕಾರ ಭಾರತೀಯನಾಗಿರುವುದು ಸಾಧ್ಯವಿದೆ. ಜುಂಪಾ ಲಾಹಿರಿ ಮೂಲತಃ ಬಂಗಾಳಿ, ಬರೆಯುತ್ತಿದ್ದುದು ಇಂಗ್ಲೀಷಿನಲ್ಲಿ.  2015ರಲ್ಲಿ ಇದ್ದಕ್ಕಿದ್ದಂತೆ ಇಟಾಲಿಯನ್ ಕಲಿಯಲು ಸುರುಮಾಡಿದ್ದಲ್ಲದೆ ಆ ಭಾಷೆಯಲ್ಲೇ ಬರೆಯತೊಡಗಿ ಕೃತಿಯನ್ನೂ ಹೊರತಂದರು, ಆ ಭಾಷೆಯ ಕೃತಿಗಳನ್ನು ಇಂಗ್ಲೀಷಿಗೂ ಅನುವಾದಿಸಿದರು.  ನೀಲ್ ಮುಖರ್ಜಿ, ಅಮಿತಾವ ಘೋಶ್, ಕಿರಣ್ ದೇಸಾಯಿ, ಅರುಂಧತಿ ರಾಯ್, ವಿಕ್ರಂ ಸೇಠ್, ಅರವಿಂದ ಅಡಿಗ ಮೊದಲಾದವರೆಲ್ಲರೂ ಭಾರತೀಯರು. ಸಲ್ಮಾನ್ ರಶ್ದಿ, ವಿ ಎಸ್ ನೈಪಾಲ್ ಕೂಡ ಇದೇ ಪಟ್ಟಿಗೆ ಸೇರುತ್ತಾರೆ. Nissim Ezekiel, Arun Kolatkar, Dom Moraes, Adil Jussawalla, A. K. Ramanujan, R. Parthasarthy, Gieve Patel, Jayanta Mahapatra, Dilip Chitre, Arvind Mehrotra, Pritish Nandy, Eunice De Souza, Kamala Das, Vikram Seth, Manohar Shetty ಮುಂತಾದ ನೂರಾರು ಭಾರತೀಯ ಕವಿಗಳು, ಬೇರೆ ಬೇರೆ ರಾಜ್ಯದ ಭಾಷೆಯವರು, ಇಂಗ್ಲೀಷಿನಲ್ಲಿ ಕವಿತೆಗಳನ್ನು ಬರೆಯುತ್ತ ಬಂದಿದ್ದಾರೆ.

ಭಾರತೀಯ ಕಾದಂಬರಿಕಾರರ ಬಗ್ಗೆ ಇರುವ ಒಂದು ಟಿಪ್ಪಣಿ ಎಂದರೆ, ನಮ್ಮ ಕಾದಂಬರಿಗಳು ಸಾಂಸಾರಿಕ ಚೌಕಟ್ಟಿನಲ್ಲಿಯೇ ಇರುತ್ತವೆ ಎನ್ನುವುದು. ಕುಟುಂಬದ ಕತೆಗಳನ್ನೇ ಭಾರತೀಯರು ಹೇಳುತ್ತಿರುತ್ತಾರೆ ಎನ್ನುವ ಅರ್ಥದಲ್ಲಿ. ಮುಂದುವರೆದು ಇದನ್ನು ಬೆಳೆಸುವುದಾದರೆ, ಕನ್ನಡದ ಬರಹಗಾರ ತನ್ನ ಕತೆಗಳನ್ನು ಎಲ್ಲಿ ನಡೆಯಿತು ಎಂಬಂತೆ ಬರೆಯುತ್ತಾನೆ ಎನ್ನುವ ಪ್ರಶ್ನೆ. ಚಿತ್ತಾಲರ ಕತೆಗಳು ಹನೇಹಳ್ಳಿಯಲ್ಲಿ ಘಟಿಸುತ್ತವೆಯೇ ಮುಂಬಯಿಯಲ್ಲೆ? ದಿವಾಕರರ ಕತೆಗಳು ಮದರಾಸಿನಲ್ಲಿ ನಡೆಯುತ್ತವೆಯೆ? ಶ್ರೀರಾಮರ ಕತೆಗಳು ಹೈದರಾಬಾದಿನಲ್ಲಿ ನಡೆದವೆ? ತಿರುಮಲೇಶರ ‘ಅರಬ್ಬಿ’ ಸಂಕಲನದ ಕವಿತೆಗಳು ಕಾಸರಗೋಡನ್ನು ಹಾಡುತ್ತಿವೆಯೆ? ಕಾರ್ನಾಡರಿಗೇಕೆ ಕನ್ನಡದ ಕಾದಂಬರಿಗಳಲ್ಲಿ ಬೆಂಗಳೂರು ಒಡಮೂಡುವುದೇ ಇಲ್ಲಅನಿಸಿತು? ಅವರ ಬಹುತೇಕ ನಾಟಕಗಳೇಕೆ ಪುರಾಣ, ಇತಿಹಾಸದ ಕಾಲದಲ್ಲಿ ನಡೆಯುತ್ತವೆ? ಅವರು ಆ ಕಾಲಕ್ಕೆ, ಆಯಾ ರಾಜ್ಯ, ಲೋಕಗಳಿಗೆ ಟಿಕೆಟ್ ಹೇಗೆ ಪಡೆದರು? ಓದುತ್ತ ನಮಗೂ ಸಿಗುವ ಟಿಕೆಟ್ ಅವರು ಹೋದಲ್ಲಿಗೇ ನಮ್ಮನ್ನು ಕೊಂಡೊಯ್ಯುವುದಿಲ್ಲ ಯಾಕೆ! ಅವರಿಗೆ ಸಿಕ್ಕಿದ ಟಿಪ್ಪೂ ಸುಲ್ತಾನನೇ ಯಾಕೆ ಎಲ್ಲರಿಗೂ ಸಿಗುವುದಿಲ್ಲ?

ವಿವೇಕ ಶಾನಭಾಗರ ಕಾದಂಬರಿ ‘ಘಾಚರ್ ಘೋಚರ್’ ಹತ್ತೊಂಬತ್ತು ಭಾಷೆಗಳಿಗೆ ಅನುವಾದಗೊಂಡಿದೆ ಎಂದು ಕೇಳಿದೆ. ವಸುಧೇಂದ್ರರ ‘ಮೋಹನಸ್ವಾಮಿ’ ಕೂಡ ಬಹುಭಾಷಾ ಆವೃತ್ತಿಗಳನ್ನು ಕಂಡಿರುವ ಕನ್ನಡದ ಪುಸ್ತಕ. ಆದರೆ ಅದನ್ನು ಓದುವವರಿಗೆ ‘ಘಾಚರ್ ಘೋಚರ್’ ನಡೆಯುವ ನಗರದ ಪರಿಕಲ್ಪನೆ ಇದೆಯೆ? ಇದ್ದರೆ ಅದು ಎಂಥಾದ್ದು? ಅಥವಾ ಇದೇ ಪ್ರಶ್ನೆಯನ್ನು ‘ಮೋಹನ ಸ್ವಾಮಿ’ಯ ಕತೆಗಳು ನಡೆಯುವ ಕಥಾಕ್ಷೇತ್ರಕ್ಕೂ ಅನ್ವಯಿಸಿ ಕೇಳಬಹುದು. ಅಂದರೆ, ಇವತ್ತಿನ ತನಕ ಎಂದೂ ಮುಂಬಯಿಗೆ ಕಾಲಿಡದ ನಾನು ಮುಂಬಯಿ ನಗರದ ಕತೆಗಳನ್ನು ಓದುವಾಗ ಪರಿಭಾವಿಸುವ (ಕನ್ನಡದೊಳ್ ಭಾವಿಸಿದ ಜನಪದಂ) ಮುಂಬಯಿ ಯಾವುದು? ಸಿನಿಮಾಗಳಲ್ಲಿ ನೋಡಿದ ಮುಂಬಯಿಯೆ? ಅಥವಾ ಗುರುಪ್ರಸಾದ್ ಕಾಗಿನೆಲೆಯವರ ‘ಹಿಜಾಬ್’ ಓದುವಾಗ ನಾನೆಂದೂ ಕಂಡಿರದ ಮಿನ್ನಿಸೋಟ ನನ್ನ ಮನಸ್ಸಿನಲ್ಲಿ ಮೂಡುವುದು ಹೇಗೆ? ಈ ಪ್ರಶ್ನೆಯನ್ನು ಇನ್ನಷ್ಟು ಸರಳಗೊಳಿಸುವುದಾದರೆ, ನಾವು ಪರಿಭಾವಿಸುವ ಸ್ವರ್ಗ, ಯಮನ ನರಕ, ಇಂದ್ರನ ಅಮರಾವತಿ ಇತ್ಯಾದಿಗಳೆಲ್ಲ ಹೇಗಿರುತ್ತವೆ? ನಾವೆಂದೂ ಕಂಡಿರದ ಜಗಜ್ಯೋತಿ ಬಸವೇಶ್ವರರ ಹೆಸರು ತೆಗೆದಾಗ ಮನಸ್ಸಿನಲ್ಲಿ ಮೂಡುವ ಬಸವಣ್ಣ ಹೇಗಿದ್ದಾರು? ಹೊನ್ನಪ್ಪ ಭಾಗವತರ್, ಡಾ||ರಾಜ್‌ಕುಮಾರ್ ಅಥವಾ ಅಶೋಕ್ ನಮ್ಮ ಸಿನಿಮಾಗಳಲ್ಲಿ ಬಸವಣ್ಣನವರ ಪಾತ್ರ ನಿರ್ವಹಿಸಿದ್ದಾರೆ. ಬಸವಣ್ಣ ಹಾಗಿದ್ದರೆ? ಅಥವಾ ವ್ಯಕ್ತಿಚಿತ್ರದಲ್ಲಿ ಲಂಕೇಶರ ‘ಸಂಕ್ರಾಂತಿ’ಯ ಬಸವಣ್ಣ ಮತ್ತು ಕಾರ್ನಾಡರ ‘ತಲೆದಂಡ’ದ ಬಸವಣ್ಣ ಈ ಸಿನಿಮಾಗಳಲ್ಲಿ ಕಂಡ ಬಸವಣ್ಣ ಎಲ್ಲರೂ ಒಂದೇ ಎರಕದ ಅಚ್ಚು ಎಂದು ಹೇಳಲು ಸಾಧ್ಯವಿದೆಯೆ? 

ಈ ಯಾವುದೇ ಪ್ರಶ್ನೆಗಳಿಗೆ ಇದೇ ಉತ್ತರ ಎಂದು ನಿರ್ಧರಿಸುವ ತುರ್ತು ನನಗೂ ಇಲ್ಲ, ಯಾರಿಗೂ ಇರಬಾರದು. ಕೇವಲ ಗಮನದಲ್ಲಿರಬೇಕಾದ ಪ್ರಶ್ನೆಗಳಿವು. ಕನ್ನಡದಲ್ಲಿ ಬರೆಯಿರಿ, ಇಂಗ್ಲೀಷಿನಲ್ಲಿ ಬರೆಯಿರಿ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮಾಡಿಸಿ, ಕನ್ನಡನಾಡಲ್ಲಿ ಕೂತು ಬರೆಯಿರಿ, ಹೊರನಾಡಿನಲ್ಲೊ ವಿದೇಶದಲ್ಲೋ ಕೂತು ಬರೆಯಿರಿ, ಅಲ್ಲಿ ಕೂತು ಇಲ್ಲಿಯವರ ಬಗ್ಗೆ ಬರೆಯಿರಿ ಅಥವಾ ಇಲ್ಲಿ ಕೂತು ಅಲ್ಲಿಯವರ ಬಗ್ಗೆ ಬರೆಯಿರಿ - ಏನನ್ನು ಬರೆದಿದ್ದೀರಿ, ಹೇಗೆ ಬರೆದಿದ್ದೀರಿ ಎನ್ನುವುದು ಮುಖ್ಯವೇ ಹೊರತು, ಕೂತಿದ್ದೆಲ್ಲಿ, ಭಾಷೆ ಯಾವುದು ಮತ್ತು ಕಥಾಕ್ಷೇತ್ರ ಲೋಕಲ್ಲಾ ಇಂಟರ್ನ್ಯಾಶನಲ್ಲಾ ಎನ್ನುವುದೆಲ್ಲ ಮುಖ್ಯವಾಗುವುದಿಲ್ಲ. ಒಂದು ಭಾಷೆಯ ಜಾಗತಿಕ ಪಯಣವನ್ನು ಲೇಖಕ ಎಲ್ಲಿ ಕೂತು ಬರೆದ, ಯಾವ ಊರಿನ ಬಗ್ಗೆ ಬರೆದ ಎನ್ನುವುದೇ ತೀರ್ಮಾನಿಸುವುದಾದರೆ ಇಲ್ಲಿ ನಾನೆತ್ತಿದ ಪ್ರಶ್ನೆಗಳಿಗೆಲ್ಲ ಸ್ಪಷ್ಟ ಉತ್ತರ ಕೊಟ್ಟುಕೊಳ್ಳುವುದು ಸಾಧ್ಯವಾಗಬೇಕಿತ್ತು, ಆದರೆ ಅದು ಕಷ್ಟ. 

ಕೊನೆಗೂ ಒಬ್ಬ ಸಾಹಿತಿ ಬರೆಯಬಹುದಾದ್ದೆಲ್ಲ ಅನುಭವವನ್ನು. ಅನುಭವವನ್ನು ಓದುಗನಿಗೆ ದಾಟಿಸಲು ಅವನಿಗೊಂದು ಭಾಷೆ ಬೇಕು. ಅನುಭವ ಕನ್ನಡದವನದ್ದೊ, ಹಿಂದಿಯವನದ್ದೊ ಎನ್ನುವುದು ಅವನಿಗೆ ಮುಖ್ಯವಾಗಬಾರದು, ಅದು ಮನುಷ್ಯನದ್ದು ಎನ್ನುವುದಷ್ಟೇ ಅದನ್ನು ಸ್ವತಃ ಪಡೆಯಲು ಅವನಿಗೆ ಬೇಕಾದ ಅರ್ಹತೆ.  ಅದನ್ನು ಹೇಳುತ್ತಿರುವುದು ಕನ್ನಡದಲ್ಲೊ ಇಂಗ್ಲೀಷಿನಲ್ಲೊ ಎನ್ನುವುದು ಕೂಡ ಅವನಿಗೆ ಮುಖ್ಯವಾಗಬಾರದು, ಮನುಷ್ಯನಿಗೆ ತನಗಾದ ಅನುಭವ ಅರ್ಥವಾಗುವುದಕ್ಕೆ ಭಾಷೆಯ ಅಗತ್ಯವಿಲ್ಲ, ಅದನ್ನು ಇನ್ನೊಬ್ಬರಿಗೆ ಅರ್ಥಮಾಡಿಸುವುದಕ್ಕೆ ಮಾತ್ರ ಭಾಷೆಯ ಬಳಕೆಯಾಗುತ್ತದೆ. ಅನುಭವವನ್ನು ಹೇಳುತ್ತಿರುವ ಭಾಷೆ ಯಾವುದು ಎನ್ನುವುದು ಅಷ್ಟರ ಮಟ್ಟಿಗೆ ಮಾತ್ರ ಮುಖ್ಯವಾಗಬೇಕು. ಒಂದು ಕವಿತೆಯ ಅನುವಾದದ ಸಂದರ್ಭದಲ್ಲಿ ಹೌದು ಅನಿಸುವ ಮಾತು ಕತೆ ಅಥವಾ ಸುದೀರ್ಘವಾದ ಕಾದಂಬರಿಯ ಸಂದರ್ಭದಲ್ಲಿ ಹೌದೆನಿಸಲು ಕಷ್ಟವಾಗಲು ಕಾರಣ, ನಾವು ಕೃತಿ ಕಟ್ಟಿಕೊಡುವ ಅನುಭವಕ್ಕಿಂತ ಅದರ ಭೌತಿಕ ವಿವರಗಳಿಗೆ ಕೊಡುವ ಮಹತ್ವವೇ. ಪಾತ್ರಗಳ ರೂಪುರೇಷೆಗಳು, ಊರಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವಿವರಗಳು, ವೃತ್ತಿ ಪ್ರವೃತ್ತಿಯ ವಿವರಗಳು ಒಂದು ಕಾದಂಬರಿಗೆ ಬೇಕು, ಆದರೆ ಒಂದು ಕೃತಿಯ ಒಟ್ಟಾರೆ ವಿಚಾರದಲ್ಲಿ ನಾವು ಅಷ್ಟರೊಂದಿಗೇ ನಿಲ್ಲುವುದು ಸಾಧ್ಯವೆ? 

ಪುಸ್ತಕೋದ್ಯಮವೆಂದರೆ ಅಮೆಜಾನ್, ಬರಹಗಾರ ಅನಿಸಿಕೊಳ್ಳುವುದೆಂದರೆ ಅದು ಇಂಗ್ಲೀಷಿನಲ್ಲಿ ಬರೆದರೆ ಮಾತ್ರ, ಕೃತಿ ಇಂಗ್ಲೀಷಿಗೆ ಅನುವಾದಗೊಂಡರೂ ಅದು ಮಾನ್ಯತೆ ಪಡೆಯಬೇಕಾದರೆ ಪ್ರತಿಷ್ಠಿತ ಪ್ರಕಾಶಕರ ಬ್ಯಾನರ್ ಹೊಂದಿರಬೇಕು, ಸಾಧ್ಯವಾದಲ್ಲಿ ಏಜೆಂಟರ ಬೆಂಬಲವಿರಬೇಕು ಎನ್ನುವ ಜಾಗತಿಕವಾಗಿ  ಒಪ್ಪಿಕೊಂಡಿರುವ ಸಿದ್ಧಮಾದರಿಯ ಒಂದು ಮನೋಧರ್ಮದಿಂದ ನೋಡುವವರಿಗೆ ಮಾತ್ರ ಇದೆಲ್ಲವೂ ಬೇರೆಯೇ ತರ ಕಾಣಿಸುತ್ತದೆ. ಇಂಗ್ಲೀಷಿನಲ್ಲಿ ಸಾಹಿತ್ಯ, ಸಂವೇದನೆ, ಭಾಷೆ, ಅದರ ಸಾಮಾಜಿಕ ಮತ್ತು ತಾತ್ವಿಕ ಅರ್ಥಪೂರ್ಣತೆ ಎಲ್ಲವೂ ಔದ್ಯಮಿಕ ಸಂಗತಿಗಳು, ಸ್ಟಾರ್ ಹೋಟೆಲುಗಳಲ್ಲಿ ಬಿಯರಿನೊಂದಿಗೆ ಸಂಜೆ ಪಾರ್ಟಿಗಳಲ್ಲಿ ಚರ್ಚಿಸಲ್ಪಡುವ ಸಂಗತಿಗಳು. ಕನ್ನಡ ಅಥವಾ ಯಾವುದೇ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗೆ ಅದಿನ್ನೂ ಅಷ್ಟು ಕುಲಗೆಟ್ಟಿಲ್ಲ. ಇಂಗ್ಲೀಷಿನಲ್ಲಿ ಬರುತ್ತಿರುವ ಸಾಕಷ್ಟು ಕೃತಿಗಳು, ವಿಶೇಷತಃ ವಿದೇಶದಲ್ಲಿರುವ ಪ್ರಾದೇಶಿಕ ವಿಶ್ವವಿದ್ಯಾಲಯಗಳ ಪ್ರಕಟಣೆಗಳು ಕೂಡ ಇವತ್ತಿಗೂ ಔದ್ಯಮಿಕ ಸೋಂಕಿಗೆ ತುತ್ತಾಗದೆ ಉಳಿದಿವೆ. ಆದರೆ ಸೋಂಕು ಬಹಳ ವೇಗವಾಗಿ ಹರಡುತ್ತಿದೆ ಎನ್ನುವುದು ನಿಜ. ಇಂಗ್ಲೀಷಿನಲ್ಲಿ ಬರೆದಿದ್ದರೆ ಅಷ್ಟು ಹಣ ಬರುತ್ತಿತ್ತು, ಇಷ್ಟು ಹಣ ಬರುತ್ತಿತ್ತು ಎಂದು ನಮ್ಮಲ್ಲಿ ಕೆಲವು ಸಾಹಿತಿಗಳು ಹಲುಬತೊಡಗಿದಾಗಲೇ ಇದು ಸುರುವಾಗಿತ್ತು. ಈಗ ಪ್ರಸಿದ್ಧಿ ಎಂದರೆ ಇಂಗ್ಲೀಷಿಗೆ ಅನುವಾದಗೊಳ್ಳುವುದು ಎನ್ನುವ ಮನೋಧರ್ಮ ಕಾಣುತ್ತಿದೆ. ಎಲ್ಲರಿಗೂ ನಮ್ಮ ಕನ್ನಡದ ಪದ್ಯ, ಕತೆ, ಪುಸ್ತಕ ಇಂಗ್ಲೀಷಿನ ಪ್ರಭಾವಳಿ ಪಡೆಯಬೇಕೆಂಬ ತುರಿಕೆ ಇದ್ದೇ ಇದೆ. ತುರಿಸತೊಡಗಿದರೆ ಬಹಳ ಹಿತಾನುಭವ ನೀಡುವ ಇದನ್ನು ಯಾವಾಗ ಎಲ್ಲಿ ತುರಿಸಿಕೊಳ್ಳಲು ತೊಡಗುತ್ತೀರಿ ಎನ್ನುವುದಷ್ಟೇ ಸರಿಯಾದ ಮುಹೂರ್ತಕ್ಕೆ ಕಾಯುತ್ತಿರುವ ಸಂಗತಿ.

ಸಾಹಿತ್ಯಕ್ಕಿರಲಿ, ನಮ್ಮ ದೈನಂದಿನ ಬದುಕಿನಲ್ಲೇ ಇರಲಿ, ಈ ಕೃತಕ ಗಡಿಗಳು, ಗೋಡೆಗಳು, ಒಳಗಿನವರು, ಹೊರಗಿನವರು ಎಲ್ಲ ಒಂದು ಹಂತದವರೆಗೆ ಮುಖ್ಯ. ಅದೇ ಮುಖ್ಯ ಎಂದು ಬಿಂಬಿಸಿ ಹೂಡುವ ಯಾವ ವಾದವೂ ಮೂಲದಲ್ಲಿಯೇ ಪ್ರಾಮಾಣಿಕವಾಗಿರುವುದಿಲ್ಲ. 
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ