ವಿಮರ್ಶಕರನ್ನು ನಿರಂತರವಾಗಿ ಹೀಗಳೆಯುವುದು, ಇಂಥವರೇ ಎಂದು ಬೊಟ್ಟು ಮಾಡದೇ ದೂರುವುದು, ಅವರ ಮೇಲೆ ಬೇರೆ ಬೇರೆ ತರದ ಆರೋಪಗಳನ್ನು ಹೊರಿಸುವುದು ನಡೆಯುತ್ತಲೇ ಇದೆ. ಬಹುಶಃ ಇದರ ಪರಿಣಾಮವಾಗಿಯೇ ಇದ್ದರೂ ಇರಬಹುದು, ಈಗ ಕನ್ನಡದ ಹಿರಿಯ ವಿಮರ್ಶಕರು ಅನುವಾದ ಮತ್ತಿತರ ಚಟುವಟಿಕೆಗಳಲ್ಲೇ ವ್ಯಸ್ತರಾಗುತ್ತಿದ್ದಾರೆ. ಗಿರಡ್ಡಿ ತರದವರು ಬದುಕಿದ್ದಾಗಲೇ ವಿಮರ್ಶೆ ಬರೆಯುವುದಿರಲಿ, ಮುನ್ನುಡಿ, ಬೆನ್ನುಡಿ ಕೂಡಾ ಬರೆಯದೆ, ಈ ಕಾಲದ ಸಾಹಿತ್ಯವನ್ನು ಈ ಕಾಲದ ವಿಮರ್ಶಕರೇ ವಿಮರ್ಶಿಸಲಿ ಎಂದುಬಿಟ್ಟರು. ಪತ್ರಿಕೆಯವರು ಕೇಳದೆ, ಮುನ್ನುಡಿ, ಬೆನ್ನುಡಿಗಳಿಗೆ ದುಂಬಾಲು ಬೀಳುವವರಿಲ್ಲದೆ, ಸ್ವತಃ ಪುಸ್ತಕ ತರುವ ಉದ್ದೇಶವಿಲ್ಲದೆ ಯಾರಾದರೂ ಹಿರಿಯ ವಿಮರ್ಶಕರು ತಾವಾಗಿಯೇ ಒಂದು ಪುಸ್ತಕ ಇಷ್ಟವಾಯಿತು ಎಂದು ವಿಮರ್ಶೆ ಬರೆದಿದ್ದನ್ನು ಎಲ್ಲಾದರೂ ಕೇಳಿದ್ದೀರಾ? ಬರೆದರೆ ಅದು ಆಯಕಟ್ಟಿನ ಸ್ಥಾನದಲ್ಲಿರುವವರಿಗೆ ಬೆಣ್ಣೆ ಹಚ್ಚುವುದಕ್ಕಷ್ಟೇ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಆ ವಿಮರ್ಶಕರು ಈ ವಿಮರ್ಶಕರ ನಡುವೆ ನಡೆದ ಕೊಡು-ಕೊಳ್ಳುವಿಕೆ ಕಣ್ಣಿಗೆ ಹೊಡೆದು ಕಾಣುವಷ್ಟು ಸ್ಪಷ್ಟವಾಗಿಯೇ ಇರುತ್ತದೆ. ಹೆಸರೇ ಹೇಳಬೇಕೆಂದರೆ ನನ್ನ ಬಳಿ ಅಂಥ ಹೆಸರುಗಳಿವೆ. ಸಮಯ ಬಂದಾಗ ವಿವರಗಳ ಸಮೇತ ಅದನ್ನು ಬರೆಯುವವನೇ.
ಮೊನ್ನೆ ನುಡಿ ಪುಸ್ತಕದವರು ತಿಂಗಳಿಗೊಂದು ಪುಸ್ತಕ ಸೂಚಿಸುತ್ತೇವೆ, ಹೊಸ ವಿಮರ್ಶಕರು ಅದನ್ನು ಕುರಿತು ಬರೆಯಲಿ, ಅತ್ಯುತ್ತಮವಾದ ಮೂರು ಬರಹಗಳಿಗೆ ನಗದು ಬಹುಮಾನ ನೀಡುತ್ತೇವೆ ಎಂದು ಪೋಸ್ಟ್ ಹಾಕಿದರು. (ನಂತರ ಎರಡು ತಿಂಗಳಿಗೊಮ್ಮೆ ಎಂದು ಬದಲಿಸಿದ್ದಾರೆ). ಕನ್ನಡದಲ್ಲಿ ವಿಮರ್ಶಕರ ಕೊರತೆಯಿದೆ, ನೀನು ವಿಮರ್ಶೆ ಬರಿ (ಹಾಗಾದರೂ ಕೆಟ್ಟದಾಗಿ ಕತೆ ಬರೆಯುವುದು ನಿಲ್ಲಲಿ!) ಎಂದು ನನ್ನನ್ನು ಹಲವರು ಉತ್ತೇಜಿಸಿದ್ದರು. ಬೇಂದ್ರೆಯವರು ಇದೇ ತರ ಒಬ್ಬರಿಗೆ "ನೀನು ಪದ್ಯಾನ ಬರೀ, ಅಂದ್ರ ನಿನ್ನ ಗದ್ಯಾ ಸುಧಾರಿಸ್ತದ" ಅಂದಿದ್ದರಂತೆ. ಈ ಉತ್ತೇಜನದ ವಿವಿಧ ಮಾದರಿಗಳ ಒಳಹೊರಗುಗಳನ್ನು ಎಲ್ಲರೂ ಬಲ್ಲೆವು. ಯಾರೂ ಯಾರನ್ನೂ ಸುಮ್ಮನೇ ಉತ್ತೇಜಿಸುವುದು, ಪ್ರೋತ್ಸಾಹಿಸುವುದು, ಬೆಂಬಲಿಸುವುದು ನಡೆಯುತ್ತದೆ ಎಂದು ಮುಗ್ಧವಾಗಿ ನಂಬುವ ಹಂತವನ್ನು ಎಲ್ಲರೂ ಬೇಗನೇ ದಾಟಿದರೆ ಒಳ್ಳೆಯದು. ನಾನು ವಿಮರ್ಶೆ (ತರದ ಬರಹಗಳನ್ನು) ಬರೆಯುತ್ತ ಕಳೆದುಕೊಂಡಿದ್ದೇನು, ಗಳಿಸಿದ್ದೇನು ಎಂದು ಸ್ವವಿಮರ್ಶೆ ಮಾಡಿಕೊಂಡರೆ, ವಿಮರ್ಶಕರಾಗಿ ಎಂದು ಯಾರನ್ನೂ ಉತ್ತೇಜಿಸುವ ಪ್ರಶ್ನೆಯೇ ಬರುವುದಿಲ್ಲ. ವಿಮರ್ಶೆಯತ್ತ ಹೊರಳಬೇಡಿ ಎಂದು ನಾನು ಒಬ್ಬಿಬ್ಬರಿಗೆ ಉಪದೇಶ ಕೊಟ್ಟಿದ್ದೂ ಇದೆ, ಅವರು ಅದನ್ನು ತಪ್ಪಾಗಿ ತಿಳಿದುಕೊಂಡರೂ.
ನುಡಿ ಪುಸ್ತಕದವರಿಗೆ ನಾನು ಹೊಸ ವಿಮರ್ಶಕರನ್ನು ಉತ್ತೇಜಿಸುವ ಪ್ರಕ್ರಿಯೆಯ ಬಗ್ಗೆ ನನ್ನ ಅಪಸ್ವರವೇನಿದೆ ಎನ್ನುವುದನ್ನು ತಿಳಿಸಲು ಒಂದು ಕಾಮೆಂಟ್ ಹಾಕಿದೆ. ದಿಲೀಪ್ ಕುಮಾರ್ ಅವರು ಸತ್ಯಕಾಮರ ಒಂದು ಮಾತನ್ನು ಉಲ್ಲೇಖಿಸಿ ಇದು ನರೇಂದ್ರ ಪೈಯವರ ಮಾತಿನ ಸಾರಸ್ವರೂಪ ಎಂದಾಗ ವಿವರಣೆ ಕೊಡಬೇಕಾಯಿತು. ಸತ್ಯಕಾಮರ ಬಗ್ಗೆ ಅರಿಯದವರಿಲ್ಲ. ಅವರು ಕೂಡಾ ವಿಮರ್ಶಕರು ಶುಷ್ಕಕಾಷ್ಠ, ಸ್ನಾನ ಮಾಡದೆ ಬರುತ್ತಾರೆ, ನಿಷ್ಣಾತರಲ್ಲದ ವಿಮರ್ಶಕರು ಹಾನಿ ಮಾಡುವುದೇ ಹೆಚ್ಚು, ಅವರದ್ದೊಂದು ಹಾವಳಿ, ಸಾಹಿತ್ಯದ ಬೆನ್ನಿನಿಂದ ಹುಟ್ಟುತ್ತಾರೆ ಎಂಬ ಮಾತುಗಳನ್ನೆಲ್ಲ ಆಡುತ್ತಾರೆ. ವಿಮರ್ಶಕರು ಎಂದಿರುವ ಕಡೆ ದಲಿತರು ಎಂದು ಓದಿ ನೋಡಿ. ಅಥವಾ ಮುಸ್ಲಿಮರು ಎಂದು ಹಾಕಿ ಓದಿ. ಅಫೆನ್ಸಿವ್ ಅನಿಸುತ್ತೆ ಅಲ್ಲವೆ? ಹಾಗೆಯೇ ಇದು. ಆದರೆ ಬಿಟ್ಟಿ ಸಿಕ್ಕುವ ವಿಮರ್ಶಕರನ್ನು ಯಾರು ಬೇಕಾದರೂ ಏನು ಬೇಕಾದರೂ ಜರೆಯಬಹುದು! ಸಾಹಿತಿಗಳೆಲ್ಲ ಸ್ನಾನ ಮಾಡಿಯೇ ಬರುತ್ತಾರೆ, ಹೊಟ್ಟೆಯಿಂದಲೇ ಹುಟ್ಟುತ್ತಾರೆ ಮತ್ತು ಅವರು ತಮ್ಮ ಕೆಲಸದಲ್ಲಿ ನಿಷ್ಣಾತರೇ ಇರುತ್ತಾರೆ! ಹಾಗಿದ್ದೂ ನಗಣ್ಯರಾದ ವಿಮರ್ಶಕರನ್ನು ಜರೆಯುತ್ತಲೇ ಇರುತ್ತಾರೆ. ಅದೊಂದು ತರದ ವ್ಯಸನ. ವಿಮರ್ಶೆಯ ವ್ಯಸನ. ತಮಗೆ ಬರಬೇಕಿದ್ದ ವಿಮರ್ಶೆ ಬರಲಿಲ್ಲ ಎಂಬ ಕೊರಗು.
ಒಟ್ಟಾರೆಯಾಗಿ ವಿಮರ್ಶಕರ ಮೇಲೆ ಸಕಾರಣ ಮತ್ತು ವಿನಾಕಾರಣ ಆಗುತ್ತಿರುವ ದಾಳಿಯನ್ನೆಲ್ಲ ಗಮನಿಸಿದಾಗ, ವಿಮರ್ಶಾ ಕ್ಷೇತ್ರಕ್ಕೆ ಅರ್ಹರಾದ ಆಳವಾದ ಅಧ್ಯಯನ, ಆರೋಗ್ಯಕರ ಮನೋಧರ್ಮ ಮತ್ತು ರಸಪ್ರಜ್ಞೆ ಇರುವ ವಿನಯವಂತ ವಿಮರ್ಶಕರನ್ನು ತರುವುದೆಲ್ಲಿಂದ ಎಂಬ ಪ್ರಶ್ನೆಯನ್ನು ಸ್ವಲ್ಪ ಬದಿಗಿಟ್ಟು ಯೋಚಿಸಿದರೆ, ಸುಮ್ಮನೇ ತಾನು ಓದಿದ್ದರ ಬಗ್ಗೆ ಎರಡು ಮಾತು ಬರೆಯಬೇಕು ಅಂದುಕೊಂಡವರಿಗೆ ಏನನಿಸಬೇಕು?
ಆಮೇಲೆ ವಿಮರ್ಶಕರ ಅಗತ್ಯ ನಿಜಕ್ಕೂ ಇದೆಯೆ? ವಿಮರ್ಶಕರು/ವಿಮರ್ಶೆ ಬೇಕೆ ಎನ್ನುವ ಪ್ರಶ್ನೆಯಿದೆ. ವಿಮರ್ಶಕರನ್ನು ಹಿಗ್ಗಾಮುಗ್ಗಾ ನಿಂದಿಸುವುದನ್ನು ಕಂಡಾಗೆಲ್ಲ ಅಷ್ಟಕ್ಕೂ ಈ ವಿಮರ್ಶಕರ ಅಥವಾ ವಿಮರ್ಶೆಯ ಅಗತ್ಯವೇನಿದೆ, ಯಾಕೆ ನಮ್ಮ ಕೃತಿಯ ಬಗ್ಗೆ ಇನ್ನೊಬ್ಬರು ಆಡುವ ನಾಲ್ಕು ಮಾತಿಗೆ ಅಂಥ ಮಹತ್ವ? ಇನ್ನೊಬ್ಬರಿಂದಲೇ ನಮ್ಮನ್ನು ನಾವು ಕಂಡುಕೊಳ್ಳುವ ಒಂದು ಬಯಕೆಯ ಹಿಂದಿರುವ ಮನಸ್ಥಿತಿ ಯಾವುದು ಎಂಬ ಪ್ರಶ್ನೆಗಳೆಲ್ಲ ಏಳುತ್ತವೆ. ವಿಮರ್ಶೆಯ ನಿಜವಾದ ಫಲಾನುಭವಿಗಳು ಯಾರು ಎನ್ನುವುದು ನಿಜಕ್ಕೂ ಕುತೂಹಲಕರ ವಿಷಯ, ಈ ಬಗ್ಗೆ ಮುಂದೆ ಬರೆಯುತ್ತೇನೆ.
ಒಟ್ಟಾರೆಯಾಗಿ ನಾನು ಗ್ರಹಿಸಿದ ಕೆಲವು ಸಂಗತಿಗಳು ಹೀಗಿವೆ:
1. ನನ್ನ ಪುಸ್ತಕದ ಬಗ್ಗೆ ಒಬ್ಬನೂ ಒಂದು ಮಾತು ಆಡಲಿಲ್ಲ ಎಂದು ದೂರುವ ಜನಪ್ರಿಯ/ಖ್ಯಾತ ಬರಹಗಾರರು ನನಗೆ ಗೊತ್ತು. ಏನು ಇವರ ಮಾತಿನ ಅರ್ಥ ಎಂದು ಯೋಚಿಸಿದರೆ, ಹೆಸರಾಂತ ವಿಮರ್ಶಕರು ಬರೆದರೆ ಮಾತ್ರ ಬೆಲೆ ಎನ್ನುವ ಸಂಗತಿ ತಿಳಿಯುತ್ತದೆ. ಒಬ್ಬ ಸಾಮಾನ್ಯ ಓದುಗ ಎಷ್ಟು ಚೆನ್ನಾಗಿ ಬರೆದರೂ ಅದು ಫೈಲಿಗೆ ಬರುವುದಿಲ್ಲ. ತನ್ನ ಕೃತಿಗೆ ವಿಮರ್ಶೆ ಬಂದಿಲ್ಲ ಎಂದು ಅಲವತ್ತುಕೊಳ್ಳುವ ಲೇಖಕ ಹೇಳುತ್ತಿರುವುದು ತನ್ನ ಕೃತಿಗೆ ಮೊದಲ ಸಾಲಿನ ವಿಮರ್ಶಕರು ವಿಮರ್ಶೆ ಬರೆದಿಲ್ಲ ಎಂದು. ನಮ್ಮ ನಿಮ್ಮಂಥವರು ಬರೆದಿಲ್ಲ ಅಂತ ಅಲ್ಲ. ಈ ಮೊದಲ ಸಾಲಿನ ವಿಮರ್ಶಕರೆಂದರೆ: ಸಿ ಎನ್ ರಾಮಚಂದ್ರ ರಾವ್, ಎಚ್ ಎಸ್ ರಾಘವೇಂದ್ರ ರಾವ್, ಎಸ್ ಆರ್ ವಿಜಯಶಂಕರ, ಕೆ ವಿ ನಾರಾಯಣ, ರಾಜೇಂದ್ರ ಚೆನ್ನಿ, ಎಂ ಎಸ್ ಆಶಾದೇವಿ, ಓ ಎಲ್ ನಾಗಭೂಷಣಸ್ವಾಮಿ, ಟಿ ಪಿ ಅಶೋಕ, ರಹಮತ್ ತರೀಕೆರೆ, ವಿನಯಾ ಒಕ್ಕುಂದ ಮುಂತಾದವರು. ಕಣ್ಮರೆಯಾಗಿರುವ ಜಿ ಎಸ್ ಅಮೂರ ಮತ್ತು ಗಿರಡ್ಡಿಯವರಲ್ಲದೆ ಈಗ ಬರೆಯುತ್ತಿಲ್ಲ ಎಂಬ ಕಾರಣಕ್ಕೆ ಜಿ ಎಚ್ ನಾಯಕ ಅವರನ್ನು ಹೆಸರಿಸಿಲ್ಲ. ಈ ಜಗಮಗಿಸುವ ಜಗತ್ತಿಗೆ ಇನ್ನೂ ಕೆಲವು ಉತ್ತಮ ವಿಮರ್ಶಕರು ಯೋಗ್ಯತೆಯಿದ್ದೂ ಕಣ್ಣಿಗೆ ಕಾಣುವುದಿಲ್ಲ. ಅವರನ್ನೂ ಹೆಸರಿಸಿಲ್ಲ.
2. ವಿಮರ್ಶಕನನ್ನು ಮಾತ್ರ ಅವನು ವಿಮರ್ಶಕ ಅನಿಸಿಕೊಂಡ ತಪ್ಪಿಗೆ "ಯಾಕಯ್ಯ ನನ್ನದನ್ನು ಓದಿಲ್ಲ ನೀನು" ಎಂದು ದಬಾಯಿಸಲು ಸಾಧ್ಯ. ಅದರಲ್ಲೂ ಅವನು ಪುಗಸಟ್ಟೆ ಪ್ರತಿ ಪಡೆದುಕೊಂಡಿದ್ದರೆ ಮುಗಿದೇ ಹೋಯಿತು, ಬಾಯಿಗೆ ಬಂದಂತೆ ಬಯ್ಯುವುದಕ್ಕೂ ಮುಕ್ತ ಅವಕಾಶ. ನಡುವೆ ಅವನು ಬೇರೆ ಯಾವುದೇ ಕೃತಿಯ ಬಗ್ಗೆ ಬರೆದರೂ ತಕ್ಷಣ "ನನ್ನ ಪುಸ್ತಕ ಏನು ಮಾಡಿದಿ, ಅದನ್ನು ಯಾವಾಗ ಓದುತ್ತಿ" ಎಂದು ಕೇಳಬಹುದು. ಅದೇ ನಿಮ್ಮ ಗೆಳೆಯ ತಾನು ಪಡೆದುಕೊಂಡ ಪುಕ್ಕಟೆ ಪ್ರತಿಯನ್ನು ಮರುದಿನವೇ ರದ್ದಿಗೆ ಎಸೆದರೂ ಅದು ಅಷ್ಟು ಮುಖ್ಯವಾಗುವುದಿಲ್ಲ.
3. ವಿಮರ್ಶಕನಾದವನು ನಮ್ಮ ಕೃತಿಯ ಬಗ್ಗೆ ಬರೆಯದಿದ್ದರೆ ಅವನನ್ನು ಜಾತಿವಾದಿ, ಗುಂಪುಗಾರಿಕೆ ಮಾಡುವವನು, ಸ್ವಜನಪಕ್ಷಪಾತಿ, ಹೆಸರಾಂತ ಲೇಖಕರ ಬಗ್ಗೆ ಮಾತ್ರ ಬರೆಯುತ್ತಾನೆ, ಹೆಣ್ಣು ಮಕ್ಕಳಿಗೆ ಮುನ್ನುಡಿ ಬರೆಯುವವನು, ಪ್ರಶಸ್ತಿ ಕೊಡಿಸುವವನು ಇತ್ಯಾದಿ ಇತ್ಯಾದಿ ಜರೆಯುವುದಕ್ಕೆ ಕೂಡ ಮುಕ್ತ ಅವಕಾಶ. ಜೀವಮಾನದಲ್ಲಿ ಒಂದೇ ಒಂದು ಪುಸ್ತಕ ಬರೆಯದವನು ಕೂಡಾ ತನ್ನದೊಂದು ಕಲ್ಲಿರಲಿ ಎಂದು ತಾನೂ ಕಲ್ಲು ಎಸೆಯಬಹುದು. ಆದರೆ ನಿಮ್ಮಿಂದ ಪುಸ್ತಕ ಪಡೆದೂ ಅದನ್ನು ಓದದ/ಅದರ ಬಗ್ಗೆ ಸೊಲ್ಲೆತ್ತದ ಇತರರ ಬಗ್ಗೆ ಇಂಥ ದೂರುಗಳೆಲ್ಲ ಇರುವುದಿಲ್ಲ.
4. ತನ್ನ ಕನಿಷ್ಠ ಒಂದಾದರೂ ಕೃತಿಯ ಬಗ್ಗೆ ಬರೆದ ವಿಮರ್ಶಕ ಎಲ್ಲಾ ಪಾಪಕೃತ್ಯಗಳಿಂದ ಮುಕ್ತನಾಗಿಬಿಡುತ್ತಾನೆ. ಅವರೆಲ್ಲ ಒಳ್ಳೆಯ ವಿಮರ್ಶಕರು, ಸಹೃದಯರು, ಅದ್ಭುತ - ಪ್ರಕಾಂಡ - ಗಾಢ - ಓದುಗರು ಮತ್ತು ಮಹಾ ಜ್ಞಾನಿಗಳು ಕೂಡ. ಇಷ್ಟೆಲ್ಲ ಹೊಗಳಿಸಿಕೊಂಡ ಮೇಲೂ ಅವನು ತಮ್ಮ ಎರಡನೆಯ ಮತ್ತು ಮುಂದಿನ ಕೃತಿಗಳ ಬಗ್ಗೆ ಬರೆಯದಿದ್ದರೆ ಅವನೆಂಥಾ ವಿಮರ್ಶಕ!
5. ವಿಮರ್ಶಕನೊಬ್ಬ ನೀವು ಬರೆದಿದ್ದನ್ನೆಲ್ಲ ಓದಬೇಕು. ಆದರೆ ನೀವು ಅವನು ಬರೆದಿದ್ದನ್ನೆಲ್ಲ ಓದಬೇಕೆಂಬ ನಿಯಮವಿಲ್ಲ. 2020ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನದ ಮುನ್ನುಡಿಯನ್ನು ತುಂಬ ಜನ ಮೆಚ್ಚಿಕೊಂಡು ಬರೆದರು. ಆದರೆ ಅದು 2015ರಿಂದ ನನ್ನ ಬ್ಲಾಗಿನಲ್ಲಿ ಕೊಳೆಯುತ್ತ ಬಿದ್ದಿದ್ದ ಹಳೆಯ ಬರಹ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆದರೆ ಅವರು ನನ್ನ ಬ್ಲಾಗಿನ ರೆಗ್ಯುಲರ್ ಓದುಗರು ಎಂದು ಹೇಳಿಕೊಂಡಿದ್ದರು! ನಾನು ಬರೆದ ಏನನ್ನೂ ಓದದ ಸಾಹಿತಿಯೊಬ್ಬ ನನ್ನಿಂದ ತನ್ನ ಕೃತಿಗೆ ವಿಮರ್ಶೆಯನ್ನು ಹಕ್ಕಿನಿಂದ ಬಯಸುವುದು ವಿಮರ್ಶಕರು ತೆಪ್ಪಗೆ ಒಪ್ಪಿಕೊಳ್ಳಬೇಕಾದ್ದು ಕ್ರಮ.
6. ಇನ್ನು ಕೆಲವು ಜನರಲೈಸ್ಡ್ ಕಾಮೆಂಟುಗಳಿಗೆ ಸದಾ ವಿಮರ್ಶಕರು ಬಲಿಯಾಗುತ್ತಿರಬೇಕು. ವಿಮರ್ಶೆ ವಸ್ತುನಿಷ್ಠವಾಗಿಲ್ಲ, ವಿಮರ್ಶೆ ಹಾದಿತಪ್ಪಿದೆ, ಆಹಾ ಓಹೋ ವಿಮರ್ಶೆ, ತುತ್ತೂರಿ ವಿಮರ್ಶೆ, ಕೊಚ್ಚಿ ಹಾಕುವ ವಿಮರ್ಶೆ, ಹಾಗೆ ಬರೆಯಬಾರದಿತ್ತು, ದ್ವೇಷ ಸಾಧಿಸುವ ವಿಮರ್ಶೆ ಇತ್ಯಾದಿ ಇತ್ಯಾದಿ. ನಿರ್ದಿಷ್ಟವಾಗಿ ಇಂಥವರೇ ಹೀಗೆ ಬರೆದರು ಎಂದು ಉಲ್ಲೇಖಿಸದೆ ಈ ಚಪ್ಪಲಿ ಎಸೆತ ಸದಾ ನಡೆಯುತ್ತಿರುತ್ತದೆ. ಇವರ ಉರಿ ವಿಮರ್ಶೆಯ ಕುರಿತಾದ್ದಲ್ಲ. ಅದನ್ನು ಬರೆದವನ ಅಥವಾ ಕೃತಿಕಾರನ ಕುರಿತು ಇರುವ ವಿಷವನ್ನು ಇವರು ಹೊರಹಾಕುವ ವಿಧಾನ ಇದು ಅಷ್ಟೆ. ಇವರ ಒಟ್ಟಾರೆ ಧ್ವನಿ ನಮಗೆ ಬೇಕಾದಂತೆ ಬರೆಯುತ್ತಿಲ್ಲ ಎನ್ನುವುದಷ್ಟೇ. ಇದಕ್ಕೊಂದು ಒಳ್ಳೆಯ ಉದಾಹರಣೆ ಕೊಡುತ್ತೇನೆ. ವಿಜಯನಗರ ಸಾಮ್ರಾಜ್ಯದ ಹಿನ್ನೆಲೆಯುಳ್ಳ ಒಂದು ಕಾದಂಬರಿ ಬಂತು. ಅದಕ್ಕೆ ಹಲವರು ವಿಮರ್ಶೆ ಬರೆದರು. ಅವೆಲ್ಲವೂ ಆಹಾ ಓಹೋ ವಿಮರ್ಶೆ ಎಂದು ಜರಿದು ಒಬ್ಬರು ತೀರ್ಪುಕೊಟ್ಟು, ಅವುಗಳನ್ನೆಲ್ಲ ಮೀರಿಸುವ, ವಸ್ತುನಿಷ್ಠವಾದ ಏಕೈಕ ವಿಮರ್ಶೆ ಎಂದು ಹೊಸ ವಿಮರ್ಶೆ ಒಂದನ್ನು ತಲೆಯ ಮೇಲೆ ಹೊತ್ತು ಮೆರೆಸಿದರು. ಆ ವಿಮರ್ಶೆಯಲ್ಲಿದ್ದ ಬಹುಮುಖ್ಯ ಅಂಶವೇನೆಂದರೆ, ಕಾದಂಬರಿ ಹಿಂದುತ್ವವನ್ನು ಪೊರೆಯುತ್ತಿದೆ ಎನ್ನುವುದು. ಕನಿಷ್ಠ ಅದಾದರೂ ನಿಜವಾಗಿದ್ದರೆ, ಹಿಂದೂ ಧರ್ಮವನ್ನು ಮೇಲೆತ್ತುವುದಕ್ಕೆಂದೇ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯ ಕಾಲದ ಸಮರ್ಥ ಚಿತ್ರಣ ಕಾದಂಬರಿಯಲ್ಲಿ ಇದ್ದಿರಬೇಕು ಎನ್ನಬಹುದಿತ್ತು. ಆದರೆ ಕಾದಂಬರಿಯಲ್ಲಿ ಅಂಥದ್ದೇನೂ ಇರಲಿಲ್ಲ. ಆದರೆ ಅದು ಹಿಂದುತ್ವಕ್ಕೆ ಕುಮ್ಮಕ್ಕು ಕೊಡುವ ಕಾದಂಬರಿ ಎಂದು ಬರೆದಿದ್ದು ಹಲವರಿಗೆ ಇಷ್ಟವಾಯಿತು. ವಿಜಯನಗರ ಕಾಲದ ಕಾದಂಬರಿ ಹಿಂದುತ್ವಕ್ಕೆ ಮಹತ್ವ ಕೊಡದೆ ಬೌದ್ಧಧರ್ಮಕ್ಕೆ ಕೊಡಬೇಕಿತ್ತೆ? ಕೊನೆಗೂ ನಾವು ಮೆಚ್ಚುವ ವಿಮರ್ಶೆ ನಮಗೆ ಬೇಕಾದ ವಿಮರ್ಶೆ.
7. ಇತ್ತೀಚೆಗೆ ನನ್ನ ಗೆಳೆಯರೊಬ್ಬರು, ವಿಮರ್ಶಕರು ಬರೆದ ಪಾರಿಭಾಷಿಕ ಶಬ್ದ ಬಳಸಿ, ಯಾರಿಗೂ ಅರ್ಥವಾಗದಂಥ ವಿಮರ್ಶೆ ಬರೆಯುತ್ತಾರೆ ಎಂದು ಹಾಸ್ಯ ಮಾಡಿದರು. ಸರಿಯೇ. ಅಕಾಡಮಿಕ್ ವಿಮರ್ಶೆ ಬಗ್ಗೆ ಎಷ್ಟು ದೂರುಗಳಿವೆಯೋ, ಅಷ್ಟೇ ಮಂದಿ ಒಳಗೊಳಗೇ ಅಂಥವನ್ನು ಬಯಸುತ್ತಿರುತ್ತಾರೆ ಎನ್ನುವುದೂ ಅಷ್ಟೇ ಸತ್ಯ. ಯಾವ ವಿಮರ್ಶೆಯನ್ನು, ವಿಮರ್ಶಕರನ್ನು ಇಷ್ಟೆಲ್ಲ ಹೀಗಳೆದು, ಜರಿದು, ತೆಗಳಿ, ಮೂರು ಕಾಸಿಗೆ ಹರಾಜು ಹಾಕಲಾಗುವುದೋ ಅಂಥದ್ದನ್ನೇ ಮುನ್ನುಡಿಯಾಗಿ ಬಯಸುವ ಮಂದಿ, ಅಂಥವರ ಬಳಿಯೇ ಮುನ್ನುಡಿ ಬರೆಸುವ ಮಂದಿಯ "ಮುನ್ನುಡಿ ಅಪ್ಲಿಕೇಶನ್ನು" ಹೇಗಿರುತ್ತದೆ ಎಂಬ ಸ್ಯಾಂಪಲ್ಲುಗಳನ್ನು ಕಲ್ಪಿಸಿಕೊಳ್ಳಿ. ಅದೂ ಒಳ್ಳೆಯ ಹಾಸ್ಯಬರಹ ಆಗಬಲ್ಲದು. ಇಲ್ಲಿ ಅರ್ಥವಾಗದ ವಿಮರ್ಶೆಯ ಫಲಾನುಭವಿಯಾಗುವ ಸಂಕಷ್ಟ ಈ ಗೆಳೆಯರಿಗೆ ಅದೇಕೆ ಒದಗಿತೊ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ.
8. ಇನ್ನು ಕೆಲವು ಸಂಭಾವಿತ ಲೇಖಕರು ವಿಮರ್ಶಕರನ್ನು ಸಾರಾಸಗಟಾಗಿ ತಿರಸ್ಕರಿಸಿ, ಕಸದ ಬುಟ್ಟಿಗೆ ಎಸೆದು ಕುಳಿತಿದ್ದಾರೆ - ಅಂತೆ. ಆದರೆ ಇವರಿಗೂ ಪ್ರಶಸ್ತಿ, ಬಹುಮಾನ, ಸನ್ಮಾನ ಎಲ್ಲ ಬೇಕು. ಮತ್ತು ಅದಕ್ಕೆ ಇವರನ್ನು ಆಯ್ಕೆ ಮಾಡುವವರು ಕೂಡ ಅದೇ ವಿಮರ್ಶಕರು ಎನ್ನುವುದು ಗೊತ್ತಿದ್ದರೂ ಇವರು ಹಂಸಕ್ಷೀರ ನ್ಯಾಯದಂತೆ ವಿಮರ್ಶಕರನ್ನಷ್ಟೇ ತಿರಸ್ಕರಿಸಿ ಪ್ರಶಸ್ತಿಗಳನ್ನೆಲ್ಲ ಉದಾರ ಮನಸ್ಸಿನಿಂದ ಸ್ವೀಕರಿಸುತ್ತಾರೆ!
9. ಸ್ವಲ್ಪ ಕಾಲದ ಹಿಂದೆ ಶ್ರೇಷ್ಠತೆಯ ವ್ಯಸನ ಎಂದು ಒಂದು ಬಗೆಯ ಸಾಹಿತ್ಯವನ್ನು ಜರೆಯಲಾಗುತ್ತಿತ್ತು. ಆದರೆ ಜರೆಯುತ್ತಿರುವ ವ್ಯಕ್ತಿಗೆ ತನ್ನ ಸಾಹಿತ್ಯವನ್ನು ಶ್ರೇಷ್ಠ ಸಾಹಿತ್ಯ ಎಂದು ಪರಿಗಣಿಸಬೇಕು ಎಂಬ ಸುಪ್ತ ಆಸೆಯಿದ್ದುದು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುವಂತಿರುತ್ತಿತ್ತು. ಈಗಲೂ ಹಾಗೆಯೇ. ವಿಮರ್ಶೆಯನ್ನು, ವಿಮರ್ಶಕರನ್ನು ಯಾರು ಆಡಿಕೊಳ್ಳುತ್ತಿದ್ದಾರೋ, ಅವರ ಸುಪ್ತಮನಸ್ಸಿನ ರೋಗದ ಎಳೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿದುಕೊಳ್ಳುವುದು ಕಷ್ಟವಿಲ್ಲ. ನಾವು ಯಾವುದರ ಕುರಿತು ವಿಪರೀತ ಮಾತನಾಡುತ್ತೇವೆ? ನಮಗೆ ಬೇಕಾದ್ದರ ಬಗ್ಗೆಯೆ ಅಥವಾ ನಮಗೆ ಬೇಡವಾದದ್ದರ ಬಗ್ಗೆ? ನಮಗೆ ಬೇಕಾದ್ದು ಸಿಗುತ್ತಿಲ್ಲ ಎಂದಾಗ ಅದನ್ನು ಕೊಡದ ಮಂದಿಯನ್ನು ನಿಂದಿಸುವುದೊಂದೇ ಉಳಿಯುವ ಹಾದಿಯೆ?
10. ಕೆಲವರ ಪ್ರಕಾರ ವಿಮರ್ಶಕನಾದವನು ಎಲ್ಲಾ ಓದಿಕೊಂಡಿರಬೇಕು. ಇದನ್ನು ಸ್ವಲ್ಪ ಪರಿಷ್ಕರಿಸಿ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳುವುದಾದರೆ "ತನ್ನ ಕಾಲದ ಬಹುಮುಖ್ಯ ಕೃತಿಗಳೆಲ್ಲವನ್ನೂ ಗಮನಿಸಿಕೊಂಡಿರಬೇಕು". ಆಗ ಅವನೊಬ್ಬ ನಿಷ್ಣಾತನೂ, ಸ್ನಾನ ಮಾಡಿ ಬಂದವನೂ ಅನಿಸಿಕೊಳ್ಳುತ್ತಾನೆ. ಆದರೆ ಸಾಹಿತಿಗೆ ಅಂತಹ ಸ್ನಾನ ಅಥವಾ ನೈಪುಣ್ಯದ ಅಗತ್ಯವೇ ಇಲ್ಲ, ಭಾಷೆ ಬಂದರೆ ಸಾಕು ಎನ್ನುವ ಮನೋಧರ್ಮವಿದೆ. ಆದರೆ ಎಂಥಾ ಪ್ರಕಾಂಡ ಪಂಡಿತನೇ ಆದರೂ ಅವನ ಆಯುರ್ಮಾನದಲ್ಲಿ ಅವನು ಓದಬಹುದಾದ ಕೃತಿಗಳ ಸಂಖ್ಯೆಗೆ ಒಂದು ಇತಿಮಿತಿಯಿದೆ. ಎಲ್ಲವನ್ನೂ ಗಮನಿಸಿ (ಓದಿ) ಬರೆಯುವುದಾದರೆ ಅವನು ಪ್ರೇತಾತ್ಮನಾದ ಮೇಲೆಯೇ ಪೆನ್ನು ಹಿಡಿಯಬೇಕಾದೀತು. ಹಾಗಿದ್ದೂ ಈ ಮಾತನ್ನು ವಿಮರ್ಶಕರು ಒಪ್ಪುವುದೇ ವಿಹಿತ. ಹಾಗಾಗಿ ನಾನು ನೂರು ಮಂದಿ ಕನ್ನಡ ಲೇಖಕರ ಪಟ್ಟಿಯೊಂದನ್ನು ಫೇಸ್ಬುಕ್ಕಿನಲ್ಲಿ ಹಾಕಿದೆ. ತಕ್ಷಣವೇ ಈ ನೂರು ಮಂದಿ ಬರೆದಿದ್ದನ್ನೆಲ್ಲಾ ಓದಿ ಮುಗಿಸಿದವರು ಎದ್ದು ಕುಳಿತರು. ಅವರನ್ನು ಸೇರಿಸಿ, ಇವರನ್ನು ಸೇರಿಸಿ, ಮಹಿಳೆಯರಿಲ್ಲ, ಮುಸಲ್ಮಾನರಿಲ್ಲ, ಕೋಲಾರದವರಿಲ್ಲ, ಬ್ರಾಹ್ಮಣರ ಸಂಖ್ಯೆ ಹೆಚ್ಚಾಯಿತು, ಹೊಸಬರಿಲ್ಲ, ಹಳಬರನ್ನು ಪೂರ್ತಿಯಾಗಿ ಬಿಡಬಾರದು, ನನ್ನ ಬಳಗದ ಇತರ ಸದಸ್ಯರಿಗೂ ಜಾಗಕೊಡಿ ಇತ್ಯಾದಿ ಇತ್ಯಾದಿ. ಸೊ, ನಾನು ಓದಿದ್ದು ತೀರ ಕಡಿಮೆ ಎನ್ನುವುದು ನನಗೇ ಮನವರಿಕೆಯಾಗಿದ್ದಷ್ಟೇ ಅಲ್ಲ, ನನ್ನ ಬಳಿ ವಿಮರ್ಶೆ ಬರೆದುಕೊಡಿ ಎನ್ನುವವರಿಗೂ ಅರ್ಥವಾಯಿತು. ನನ್ನ ಉದ್ದೇಶವಿದ್ದಿದ್ದೂ ಅದೇ. ನಾನೇನೂ (ಕಣ್ಣಿಗೆ) ಪಟ್ಟಿ ಕಟ್ಟಿಕೊಂಡು ಓದುವುದಿಲ್ಲ! ಯಾರೂ ಹಾಗೆ ಓದುವುದಿಲ್ಲ. ಆದರೂ ನಮ್ಮ ಮಂದಿಗೆ ಅದು Rank list ತರ ಕಂಡಿತು. ಬೇಕಿದ್ದ ಫಲಶ್ರುತಿ ಏನೆಂದರೆ, ಎಲ್ಲಾ ಓದಿದವರೇ ವಿಮರ್ಶೆ ಬರೆಯಬೇಕೇ ಹೊರತು ಅಷ್ಟಿಷ್ಟು ಓದಿಕೊಂಡವರು ಬರೆಯುವುದು ತಪ್ಪು ಎಂಬ ಠರಾವು ಅಷ್ಟೆ.
11. ಚುಕ್ಕುಬುಕ್ಕು ಎಂಬ ಹೆಸರಿನ ವೆಬ್ಸೈಟ್ ಚಲಾವಣೆಯಲ್ಲಿದ್ದಾಗ ಜೋಗಿಯವರು ಒಮ್ಮೆ ಬರೆದಿದ್ದರು. ವಿಮರ್ಶೆ ಎನ್ನುವುದು ಪಾಶ್ಚಾತ್ಯರಲ್ಲಿ ಈಗಾಗಲೇ ಸತ್ತಿದೆ, ಆದರೆ ನಾವಿನ್ನೂ ಅದರ ಹೆಣ ಇಟ್ಟುಕೊಂಡು ಕೂತಿದ್ದೇವೆ - ಇದು ಅವರ ಮಾತು. ಸರಿಯೇ. ಆದಷ್ಟೂ ಬೇಗ ಈ ಹೆಣ ಇಟ್ಟುಕೊಂಡು ಕೂತವರು ಎದ್ದು ಹೋದರೆ ನಾವೂ ಪಾಶ್ಚಾತ್ಯರ ಸಮಾನ ಆಗುತ್ತೇವೆ, ಆಗಬೇಕು ಎನ್ನುವ ಆಶಯ ಮೆಚ್ಚತಕ್ಕದ್ದೇ. ಆದರೆ ಆಗಲೂ ಈಗಲೂ ವಿಶ್ವದಾದ್ಯಂತ ಬರುತ್ತಿರುವ ಕನಿಷ್ಠ ಒಂದು ಡಜನ್ ಮ್ಯಾಗಝೀನ್ಗಳು ಬುಕ್ ರಿವ್ಯೂ ಮಾಡುತ್ತಲೇ ಇವೆಯಲ್ಲ, ಅವುಗಳಲ್ಲಿ ಸಿನಿಮಾ ತಾರೆಯರ ಸಂದರ್ಶನಗಳಿರುತ್ತವೆಯೆ? ಏಶಿಯಾ ರಿವ್ಯೂ ಆಫ್ ಬುಕ್ಸ್, ಲಂಡನ್ ರಿವ್ಯೂ ಆಫ್ ಬುಕ್ಸ್, ಪ್ಯಾರಿಸ್ ರಿವ್ಯೂ, ಗ್ರಾಂಟಾ, ವರ್ಲ್ಡ್ ಲಿಟರೇಚರ್ ಟುಡೇ, ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್, ಕೇನ್ಯಾನ್ ರಿವ್ಯೂ ಆಫ್ ಬುಕ್ಸ್, ಪೋಯೆಟ್ರಿ ರಿವ್ಯೂ, ಚಿಕಾಗೊ ರಿವ್ಯೂ ಆಫ್ ಬುಕ್ಸ್, ಲಿಟರರಿ ರಿವ್ಯೂ ಈಗಲೂ ಅಚ್ಚಾಗುತ್ತಿರುವ ಪುಸ್ತಕಗಳಾದರೆ, ಪ್ರತಿ ವಾರ, ತಿಂಗಳು ನ್ಯೂಸ್ ಲೆಟರ್ ಕಳಿಸುವ ಇನ್ನಷ್ಟು ಸಾಹಿತ್ಯಿಕ ವೆಬ್ಸೈಟುಗಳ ಮಾಹಿತಿ ನಾನು ಕೊಡಬಲ್ಲೆ. ಈಗಲೂ ಗುಡ್ರೀಡರ್ ತರದ ವೆಬ್ಸೈಟು ಪುಸ್ತಕ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿಯೇ ಉಳಿದಿದೆ.
ಜೋಗಿಯವರ ಅಭಿಪ್ರಾಯವಾಗಲಿ, ವಿಮರ್ಶೆ ಸತ್ತಿರುವ ಅವರ ಜಗತ್ತಾಗಲಿ ಬದಲಾಗಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂಬಂತೆ 2021ರ ಆಗಸ್ಟ್ 15ರ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ವಿವೇಕ್ ಶಾನಭಾಗ್ ಅವರ ಸಂದರ್ಶನ ಗಮನಿಸಬಹುದು. ಅಲ್ಲಿಯೂ ಜೋಗಿಯವರು ವಿವೇಕ್ ಅವರಿಗೆ ಹಾಕಿರುವ ಪ್ರಶ್ನೆ "ವಿಮರ್ಶೆ ಕಣ್ಮರೆಯಾಗಿರುವ ಜಗತ್ತಿನಲ್ಲಿ ಲೇಖಕ ಅನಾಥ ಎಂದು ಭಾಸವಾಗುತ್ತಿದೆಯಾ" ಎಂಬುದು. ಅವರ ಪ್ರಕಾರ ವಿಮರ್ಶೆ ಜಗತ್ತಿನಿಂದಲೇ ಕಣ್ಮರೆಯಾಗಿದೆ. ಅದೊಂಥರಾ ಅಚ್ಛೇ ದಿನ್, ಬೇಗ ಬರಲಿ.
12. ಮೇ 2021ರ ವರೆಗೂ ನಾನು ನಿರಂತರವಾಗಿ ‘ಮಯೂರ’ ಪತ್ರಿಕೆಗೆ ವಿಮರ್ಶೆ ತರದ ಲೇಖನಗಳನ್ನು ಬರೆಯುತ್ತಿದ್ದೆ. 2020ರಲ್ಲಿ ನಾನು ಒಂದು ಕೃತಿಗೆ ಸಿಗುತ್ತಿರುವ ಅತಿಯಾದ ಪ್ರಚಾರ ಮತ್ತು ಅದರ ಮಿತಿಯ ಬಗೆಗಿನ ಹಿರಿಯರ ಅನುಮಾನಾಸ್ಪದ ಮೌನ ಎರಡರ ಕುರಿತು ಬರೆದಾಗ ಒಬ್ಬ ಫೇಸ್ಬುಕ್ ಚಿಂತಕರು ಒಂದು ಆದೇಶ ಹೊರಡಿಸಿದರು. ಅದರ ಒಟ್ಟಾರೆ ಧ್ವನಿ ಏನಿತ್ತೆಂದರೆ, ನನ್ನಂಥ ಮೇಲ್ಜಾತಿಯವರು ನಿರಂತರವಾಗಿ ಒಂದು ಪತ್ರಿಕೆಯಲ್ಲಿ ವಿಮರ್ಶೆ ಬರೆಯುತ್ತ ಇರುವುದು ಇತರರ ಅವಕಾಶ ಕದ್ದಂತೆ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಪ್ರಜ್ಞೆ ಇರುವವರು ಅದಕ್ಕೆ ಅವಕಾಶ ಕೊಡುವುದಿಲ್ಲ, ಅಷ್ಟಾಗಿಯೂ ಹಾಗೆ ಮಾಡುವವರ ಜೊತೆ ತಮಗೆ ಸಂವಾದ ಸಾಧ್ಯವಿಲ್ಲ ಎನ್ನುವುದು. ಯಾವುದೇ ಸಂಕೋಚ, ಹಿಂಜರಿಕೆಯಿಲ್ಲದೆ, ಧ್ವನಿಯೆತ್ತಿ, ಜಾತಿ, ಪ್ರಾದೇಶಿಕತೆಯಂಥ ಮಾನದಂಡವನ್ನು ಆಧರಿಸಿ ಸಾಹಿತ್ಯದಲ್ಲಿ ಮೀಸಲಾತಿ ಕೊಡಬೇಕು ಎಂಬ ಬೇಡಿಕೆ ಸುರುವಾಗಿದ್ದು ದಶಕದ ಹಿಂದೆ. ಇವತ್ತು ಕಾಲ ಬದಲಾಗಿದೆ. ಈಗ ಅವಕಾಶ ಸಿಗದ ಪ್ರತಿಯೊಬ್ಬರೂ ಪಟ್ಟಿಯಲ್ಲಿ ನನ್ನ ಹೆಸರೇಕಿಲ್ಲ ಎಂದು ದಬಾಯಿಸಿ ಕೇಳಲು ಯಾವ ಸಂಕೋಚವನ್ನೂ ತೋರಿಸುತ್ತಿಲ್ಲ. ಸಾಹಿತಿ ಸಾಕ್ಷಾತ್ ಪುಢಾರಿಯಾಗಿ ಎದ್ದು ನಿಂತು ಬಹುಕಾಲವಾಗಿದೆ. ಈಗ ಅವನು ಯಾವುದೇ ಒಂದು ಪಟ್ಟಿಯಲ್ಲಿ ತನ್ನ ಹೆಸರಿಲ್ಲದಿದ್ದರೆ ಕತ್ತೆಬಾಲ ಎಂದು ತೆಪ್ಪಗಿರುವುದಿಲ್ಲ. ಅಥವಾ ನೀವು ಇಟ್ಟ ಮೊದಲ ತಟ್ಟೆಯನ್ನು ನೋಡಿ ಓಡಿ ಬರುತ್ತಾನೆ, ಯಾಕೆ ಮೊದಲ ತಟ್ಟೆ ಅವರಿಗಿಟ್ಟಿದ್ದು, ಅವನೇನು ಗಣಪತಿಯೆ?
13. ವಾಸ್ತವವಾಗಿ ಈಗಲೂ ವಿಮರ್ಶೆ ಬೇಕೆ ಬೇಡವೆ ಎಂದು ಕೇಳಿದರೆ ಬರುವ ಉತ್ತರ ಬೇಕಪ್ಪಾ ಬೇಕು ಎಂದೇ! ಯಾರಿಗೆ ಬೇಕು, ಯಾಕೆ ಬೇಕು ಎಂದು ಕೇಳಿ ನೋಡಿ, ಅದು ಹಿಡಿದಿರುವ ಅಧಃಪತನದ ಹಾದಿ ಕಾಣಿಸತೊಡಗುತ್ತದೆ. ನಮ್ಮ ಬರಹಗಾರರಿಗೆ ಪುಂಖಾನುಪುಂಖ ವಿಮರ್ಶೆ ಬೇಕು. ಸಾಧ್ಯವಾದರೆ ಅವರು ತಮ್ಮ ಕೃತಿಯ ಬಗ್ಗೆ ಬಂದಿರುವ ವಿಮರ್ಶೆಯ ಒಂದು ಸಂಪುಟವನ್ನೇ ಅಚ್ಚುಹಾಕುತ್ತಾರೆ. ಅದು ಕೃತಿಗಿಂತ ದಪ್ಪಗಿದ್ದರೆ ಆಶ್ಚರ್ಯವೇನಿಲ್ಲ. ಇದರ ಓದುಗರು ಯಾರು ಎಂದು ಕೇಳಿ. ಇದು ಇರುವುದೇ ಬೇರೆ ಬೇರೆ ಪ್ರಶಸ್ತಿಗಳ ಆಯ್ಕೆ ಸಮಿತಿಗೆ ತಲಾ ನಾಲ್ಕು ಪ್ರತಿ ಕಳಿಸುವುದಕ್ಕೆ, ಅಷ್ಟೆ. ನಿಜ ಹೇಳಬೇಕೆಂದರೆ ಇವತ್ತಿನ ಬರಹಗಾರರಿಗೆ ತಮ್ಮ ಕೃತಿಗಳನ್ನು ಓದುವ ಓದುಗರು ಬೇಕಾಗಿಲ್ಲ. ಅವರು ಬರೆಯುವುದು ಪ್ರಶಸ್ತಿಗೆ. ಅವರ ಪುಸ್ತಕಕ್ಕೆ ನಾಲ್ಕೈದು ಪ್ರಶಸ್ತಿಯ ಗರಿ ತಗುಲಿಸಿಕೊಂಡರೆ ಸಾಕು, ಯಾರು ಓದದಿದ್ದರೂ ನಷ್ಟವೇನಿಲ್ಲ. ಹಾಗಾಗಿ ಅವರೆಲ್ಲರೂ ಸಗಟು ಖರೀದಿಯನ್ನು ಯಾವುದೇ ಗೊಂದಲವಿಲ್ಲದೆ ಬೆಂಬಲಿಸುತ್ತಾರೆ. ಆದರೆ ಪ್ರಶಸ್ತಿ ಬರುವುದು ಹೇಗೆ? ಅದಕ್ಕಾಗಿ ಒಂದಿಷ್ಟು "ತುರ್ತು" ವಿಮರ್ಶೆಗಳ ಅಗತ್ಯವಿದೆ. ಈ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಿದ್ದಾರಲ್ಲ, ಅವರು ಓದುವುದನ್ನು ನಿಲ್ಲಿಸಿ ದಶಕಗಳೇ ಆಗಿರುತ್ತವೆ. ಆದರೂ ಅವರು ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿರಲು ಬೇರೆ ಬೇರೆ ಕಾರಣಗಳಿಂದಾಗಿ ಅರ್ಹರೇ ಆಗಿರುತ್ತಾರೆ. ಯಾವುದೇ ಪುಸ್ತಕವನ್ನು ಓದದೇ ಅವರು ಒಂದು ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು ಹೇಗೆ? ಅವರ ಕಷ್ಟ ಪರಿಹಾರಕ್ಕೆಂದೇ ಇರುವುದು ವಿಮರ್ಶಕರು. ವಿಮರ್ಶಕರ ಸದ್ಯದ ರೋಲ್ ಅಷ್ಟೇ. ಅದಕ್ಕಾಗಿ ಮಾತ್ರ ನಮಗೆ ವಿಮರ್ಶಕರು ಬೇಕು. ಅವರು ಪುಸ್ತಕ ಓದದೆಯೇ ಬರೆದುಕೊಟ್ಟರೂ ಪರವಾಗಿಲ್ಲ, ನಮಗೆ ಸಂಖ್ಯೆ ಮುಖ್ಯ, ಕ್ವಾಲಿಟಿಯಲ್ಲ.
ಆದರೆ ಇವರ ಮೂತಿಗೆ ಮೈಕ್ ಹಿಡಿಯಿರಿ, ಆಗ ಇವರು ಹೇಳುವುದಾದರೂ ಏನು? "ಒಬ್ಬ ಬರಹಗಾರನಿಗೆ ಸಿಗಬೇಕಾದ್ದೆಲ್ಲವೂ ಅವನು ಅದನ್ನು ಬರೆಯುವಾಗಲೇ ಸಿಗಬೇಕು, ಆಮೇಲೆ ಸಿಗುವುದೇನೂ ಇಲ್ಲ!" ಅಥವಾ, "ಒಮ್ಮೆ ಬರೆದಾದ ಮೇಲೆ ಆ ಕೃತಿ ನಮ್ಮದಲ್ಲ!"
ಯಾವನೇ ಒಬ್ಬ ಲೇಖಕ, ಅದರಲ್ಲೂ ಭಿಕ್ಷುಕರ ಬಗ್ಗೆ, ತಿರಿದು ತಿನ್ನುವವರ ಬಗ್ಗೆ ಬರೆದವನು ಅಂಥ ಕೃತಿಗೆ ಬಂದ ಪ್ರಶಸ್ತಿ ಮೊತ್ತದಲ್ಲಿ ಶೇಕಡಾ ಹತ್ತರಷ್ಟನ್ನಾದರೂ ತನ್ನದೇ ಊರಿನ ಅಥವಾ ತನ್ನದೇ ಬೀದಿಯ ಭಿಕ್ಷುಕರ ಬದುಕು ಬದಲಿಸಲಿಕ್ಕೆ ಬಳಸಿದ ಉದಾಹರಣೆ ಇದೆಯೆ? ಅಂಥವರ ಬಗ್ಗೆ ಕಣ್ಣಲ್ಲಿ ನೀರು ಬರುವಂಥ ಕತೆ/ಕವಿತೆ ಬರೆದು, ಜರಿಶಾಲು, ಬೆಳ್ಳಿತಟ್ಟೆಯಲ್ಲಿ ಚೆಕ್ ಇಟ್ಟುಕೊಂಡು ವರದಿಗಾರರ ಕ್ಯಾಮರಾದೆದುರು ಹಲ್ಲು ಕಿರಿಯುವ ಸಾಹಿತಿಯ ಸೂಕ್ಷ್ಮಸಂವೇದನೆ ಕೆಲಸಕ್ಕೆ ಬರುವುದಿಲ್ಲ ಯಾಕೆ!
14. ವೈಯಕ್ತಿಕವಾಗಿ ನನಗೆ ಒಂದಷ್ಟು ಕಾಲ ಯಾವುದೇ ಕನ್ನಡ ಪುಸ್ತಕದ ಬಗ್ಗೆ ಯಾರೂ ಬರೆಯದಿರುವುದು, ಮಾತನಾಡದಿರುವುದು ಈ ಕಾಲದ ಅಗತ್ಯ ಅನಿಸುತ್ತದೆ. I repeat, ವೈಯಕ್ತಿಕವಾಗಿ, ಅಷ್ಟೆ. ಬಹುತೇಕ ವಿಮರ್ಶಕರು ಈ ಹಾದಿಯಲ್ಲೇ ಇದ್ದಾರೆ ಎಂದೂ ಅನಿಸುತ್ತದೆ. ನಾನ್ ಅಕಾಡಮಿಕ್ ವಲಯದ ಓದುಗರು, ವಿಮರ್ಶಕರಲ್ಲದವರು ಪುಸ್ತಕಗಳ ಬಗ್ಗೆ ಮಾತನಾಡಲಿ. ವಿಮರ್ಶಕರು ಎಂದು ಗುರುತಿಸಿಕೊಂಡವರು ಮೌನವಹಿಸಲಿ ಎಂದು ಅನಿಸುತ್ತದೆ. ಆಗ, "ನನ್ನ ವಿಮರ್ಶಕರು ಸಾಮಾನ್ಯ ಓದುಗರು" ಎಂದು ಹೇಳಿಕೊಂಡು ಬರುವ ಅನೇಕ "ಮುಗ್ಧ"ರಿಗೆ ತಾವು ವಿಮರ್ಶಕರು, ವಿಮರ್ಶಕರು ಎಂದು ಜರೆಯುತ್ತ ಬಂದಿದ್ದು ಯಾರನ್ನು ಎನ್ನುವುದಾದರೂ ಅರ್ಥವಾಗಬಹುದು. ಕನ್ನಡದಲ್ಲಿ ಇರುವ ಪೂರ್ಣಕಾಲಿಕ ವಿಮರ್ಶಕರಿಗಿಂತ, ಹವ್ಯಾಸಿ ವಿಮರ್ಶೆ ಬರೆಯುವ ಲೇಖಕರ ಸಂಖ್ಯೆ ಹೆಚ್ಚಿದ್ದು, ಹೆಚ್ಚಿನ ಅಧ್ವಾನಗಳನ್ನು ವಿಮರ್ಶೆಯ ಹೆಸರಲ್ಲಿ ಮಾಡುತ್ತ ಬಂದವರು ಈ ಮಂದಿಯೇ ಹೊರತು ವಿಮರ್ಶಕರಲ್ಲವೇ ಅಲ್ಲ.
15. ಇವತ್ತು ಕೈಸೇರಿದ ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯಲ್ಲಿ ರಾಜೇಂದ್ರ ಬಡಿಗೇರ ಎನ್ನುವ ಸಂಶೋಧಕರು "ಸಾಹಿತ್ಯ ವಿಮರ್ಶಾ ರಾಜಕಾರಣ" ಎಂಬ ವಾಗ್ವಾದ ಸುರುಮಾಡಿದ್ದಾರೆ. ಇಡೀ ಲೇಖನದಲ್ಲಿ "ಸಾಹಿತ್ಯ ವಿಮರ್ಶೆಯಲ್ಲಿ ವ್ಯಕ್ತಿ ರಾಜಕಾರಣ, ಲಿಂಗ ರಾಜಕಾರಣ, ಜಾತಿ ರಾಜಕಾರಣ, ಪ್ರಾದೇಶಿಕ ರಾಜಕಾರಣ, ಪಂಥ ರಾಜಕಾರಣ, ಸಿದ್ಧಾಂತ ರಾಜಕಾರಣ, ಅಕೆಡೆಮಿಕ್ ರಾಜಕಾರಣ, ಮಾರುಕಟ್ಟೆ ರಾಜಕಾರಣ, ಅಧಿಕಾರ, ಪ್ರಶಸ್ತಿ, ಇತ್ಯಾದಿ ರಾಜಕಾರಣ" ದ ಬಗ್ಗೆ ಬರೆಯುವ ಈ ಸಂಶೋಧಕರು ತಮ್ಮ ಮಂಡನೆಯುದ್ದಕ್ಕೂ ತಾವು ಬಳಸುವ ಪದ "ರಾಜಕಾರಣ" ಎಂದರೇನು, ತಾವು ಯಾವ ಅರ್ಥದಲ್ಲಿ ಅದನ್ನು ಬಳಸುತ್ತಿದ್ದೇವೆ ಎಂದು ವಿವರಿಸುವ ಗೋಜಿಗೆ ಹೋಗಿಲ್ಲ. ಹಾಗೆಯೇ ಇವರು ಸಾಹಿತ್ಯ ವಿಮರ್ಶೆಯ ತುರ್ತು ಏನಿದೆ ಎಂಬ ಕುರಿತೇ ಅನುಮಾನಗಳಿರುವ ಈ ದಿನಗಳಲ್ಲಿ ಸಾಹಿತ್ಯ ವಿಮರ್ಶೆಯ ರಾಜಕಾರಣಾ ಮಾತ್ರ ಚರ್ಚಾರ್ಹ ಸಂಗತಿಯಾಗಬೇಕು ಏಕೆ, ಏನು ಅದರ ಸಕಾಲಿಕ ಅಗತ್ಯ ಎಂದೂ ಹೇಳಿಲ್ಲ. ಬಹುಶಃ ಇದು ಅವರದ್ದೇ "ಬರೆಯುವ ರಾಜಕಾರಣ"ವಿರಬಹುದು!
ಈ ಲೇಖನದಲ್ಲಿ ಈಗಾಗಲೇ ಬಂದಿರುವ ವ್ಯಕ್ತಿ ರಾಜಕಾರಣ, ಲಿಂಗ ರಾಜಕಾರಣ, ಜಾತಿ ರಾಜಕಾರಣ, ಪ್ರಾದೇಶಿಕ ರಾಜಕಾರಣ, ಪಂಥ ರಾಜಕಾರಣ - ಗಳಿಗೆ ಈ ಸಂಶೋಧಕರು ಸುಮಾರು ಮುವ್ವತ್ತಕ್ಕೂ ಹೆಚ್ಚು ಕೊಟೇಶನ್ನುಗಳನ್ನು ಪ್ರಮಾಣವಾಗಿ ಕೊಡುತ್ತಾರೆ. ಇವುಗಳಲ್ಲಿ ಹೆಚ್ಚಿನವು ವಿಮರ್ಶಕರವೇ ಆಗಿರುವುದು ನಗು ಬರಿಸುತ್ತದೆ. ಎಲ್ಲಿಯೂ ಒಬ್ಬನೇ ಒಬ್ಬ ವಿಮರ್ಶಕ ಪಾಪಿಯ ಪಾಪದ ವಿವರವಿಲ್ಲ, ಅವನು ಮಾಡಿದ ರಾಜಕಾರಣ ಏನೆಂಬ ಮಾಹಿತಿಯಿಲ್ಲ. ಎಲ್ಲವೂ ಇಂಥಿಂಥವರು ಇಂಥಿಂಥ ಮಾತನ್ನಾಡಿದ್ದಾರೆ, ಸೊ, ರಾಜಕಾರಣ ಇದೆ ಎಂಬ ಅಂತೆ-ಕಂತೆ. ವಿಮರ್ಶಕರೇ ವಿಮರ್ಶೆಯಲ್ಲಿ ವ್ಯಕ್ತಿ ರಾಜಕಾರಣ, ಲಿಂಗ ರಾಜಕಾರಣ, ಜಾತಿ ರಾಜಕಾರಣ, ಪ್ರಾದೇಶಿಕ ರಾಜಕಾರಣ, ಪಂಥ ರಾಜಕಾರಣ ಇದೆ ಎಂದು ಬೊಂಬಡ ಬಡಿದಿರುವುದು ಯಾರಿಗೆ ಇವರ ಹುಯಿಲು ಎನ್ನುವುದೇ ಅರ್ಥವಾಗುವುದಿಲ್ಲ! ಅದೆಲ್ಲ ಇದ್ದರೆ ಈ ವಿಮರ್ಶಕರು ವಿಮರ್ಶೆ ಮಾಡದೆ ಮುಚ್ಚಿಕೊಂಡಿದ್ದರೆ ಆಯ್ತಲ್ಲ, ಸಮಸ್ಯೆಯೇ ಇರುವುದಿಲ್ಲವಲ್ಲ! ಬೆಂಕಿ ಬಿದ್ದಿದ್ದರೆ ಅದನ್ನು ಆರಿಸಬೇಕು, ಬೊಬ್ಬಿಡುವುದೇಕೆ! ಇದಕ್ಕೆ ಅಕ್ಷರ ಸಂಗಾತ ಸಂಚಿಕೆಯೇ ಒಂದು ರೂಪಕವನ್ನೂ ಒದಗಿಸಿಕೊಟ್ಟಿದೆ.
ಈ ಸಂಚಿಕೆಯ ಹನ್ನೊಂದನೆಯ ಪುಟದಲ್ಲಿ ರಾಜೇಂದ್ರ ಬಡಿಗೇರ ಅವರು ವಿಮರ್ಶಕ ರಾಜೇಂದ್ರ ಚೆನ್ನಿಯವರ ಒಂದು ಮಾತನ್ನು ಕೋಟ್ ಮಾಡುತ್ತಾರೆ: " ಕನ್ನಡದಲ್ಲಿ ಬಂದಿರುವ ವಿಮರ್ಶೆಯು ನೂರಕ್ಕೆ ತೊಂಬತ್ತರಷ್ಟು ಅಪ್ರಾಮಾಣಿಕವಾದ ಗೊಡ್ಡು ವಿಮರ್ಶೆಯಾಗಿರುವುದರಿಂದಾಗಿ, ಅದ್ಭುತ ಕೃತಿಗಳು ಬಂದಿವೆ ಎಂಬ ಭ್ರಮೆಯಲ್ಲಿದ್ದೇವೆ. ಇಂದಿಗೂ ಪ್ರಕಟವಾಗುವ ಎಲ್ಲ ಕೃತಿಗಳು ಚೆನ್ನಾಗಿವೆ ಎಂದು ಬರೆಯುವ, ಹಲವಾರು ದಶಕಗಳಿಂದ ಎಲ್ಲವನ್ನು ವಿನಾಕಾರಣ ಪ್ರೀತಿಯಿಂದ ಆದರಿಸುವ ಗಣ್ಯ ವಿಮರ್ಶಕರ ಅಗ್ರಹಾರವೇ ನಮ್ಮಲ್ಲಿದೆ."
ಮುಂದೆ ಇದೇ ಸಂಚಿಕೆಯ ಇಪ್ಪತ್ತೆರಡನೆಯ ಪುಟದಲ್ಲಿ ವಿಮರ್ಶಕ, ಕವಿ ವಿಕ್ರಮ್ ವಿಸಾಜಿಯವರಿಗೆ ನೀಡಿದ ಸಂದರ್ಶನದಲ್ಲಿ ಇದೇ ರಾಜೇಂದ್ರ ಚೆನ್ನಿಯವರು "ವಿಮರ್ಶೆಯ ಬಗ್ಗೆ ಹಗುರವಾಗಿ ಮಾತನಾಡುವುದು, ಅದನ್ನು ಅವಹೇಳನ ಮಾಡುವುದು ಕನ್ನಡದಲ್ಲಿ ಮೊದಲಿನಿಂದ ಇರುವ ಅನಾಗರಿಕ ಹವ್ಯಾಸವಾಗಿದೆ. ಈ ಹವ್ಯಾಸ ಇರುವವರನ್ನು ಸರ್ವ ದಯಾಮಯನಾದ ದೇವರು ಎಂದಿಗೂ ಕ್ಷಮಿಸದೇ ಇರಲಿ!" ಎನ್ನುತ್ತಾರೆ.
ರಾಜೇಂದ್ರ ಬಡಿಗೇರ ಅವರು ಮಂಡಿಸುವ ಪ್ರಮೇಯ ಇಂಥವರ ಮಾತುಗಳನ್ನು ಪ್ರಮಾಣ ಎಂದು ತೆಗೆದುಕೊಂಡು, ಅದರ ಮೇಲೆಯೇ ನಿಂತಿರುವಂಥದ್ದು. ವೇದಿಕೆಯ ಮೇಲೆ ಇರುವವರನ್ನು ನೋಡಿಕೊಂಡು ಡಯ್ಲಾಗು ಬದಲಿಸುವ ನಮ್ಮ ಸಾಹಿತಿಗಳು, ವಿಮರ್ಶಕರು ಹಾಡುವ ಹಾಡನ್ನು ನಂಬಿ ಸಂಶೋಧಕರು ಪ್ರಮೇಯ ಮಂಡಿಸಲು ಹೋದರೆ ಇನ್ನೇನಾಗುತ್ತದೆ.
ಮಾನವಂತ ವಿಮರ್ಶಕರು ಮೌನವಹಿಸುವುದು ಇಂದಿನ ಅಗತ್ಯ. ಇದು ಪುಸ್ತಕ ಪರಿಚಯ, ಬೆನ್ನುಡಿ, ಮುನ್ನುಡಿ ಇತ್ಯಾದಿಗಳಿಗೆ ಕೂಡ ಅನ್ವಯಿಸುತ್ತದೆ. ಆದರೆ ಹೀಗೆಲ್ಲ ಇನ್ನೊಬ್ಬರಿಗೆ ನಾವು ಹೇಳಲು ಸಾಧ್ಯವಿಲ್ಲ, ಸರಿಯೂ ಅಲ್ಲ. ಆದರೆ ನಮ್ಮ ಮಟ್ಟಿಗೆ ನಾವು ಆಚರಿಸಲು ಯಾರದೇ ಅಡ್ಡಿಯಿಲ್ಲ. ಸಾಕಷ್ಟು ಓದಿಕೊಂಡಿರುವ ಒಬ್ಬ ಸೃಜನಶೀಲ ಲೇಖಕನಿಗೆ ತನ್ನ ಬರಹ ಹೇಗಿದೆ ಎಂದು ತಿಳಿಯಲು ಇನ್ನೊಬ್ಬರ ಮಾತಿನ ಅಗತ್ಯವಿರುವುದಿಲ್ಲ ಎಂದಿದ್ದರು ವಿವೇಕ್ ಶಾನಭಾಗ. ಆ ಮಾತು ಅಕ್ಷರಶಃ ನಿಜ.