Sunday, June 26, 2022

ಪ್ರಬುದ್ಧ ದೃಷ್ಟಿಯ ಕತೆಗಳು


ಅರ್ಪಣ ಎಚ್ ಎಸ್ ಅವರ ಕಥಾ ಸಂಕಲನ "ಕೆಂಪು ಹಾಗೂ ಇತರ ಬಹುಮಾನಿತ ಕತೆಗಳು" ಒಟ್ಟು ಹತ್ತು ಕತೆಗಳ ಸಂಕಲನ. ಇಲ್ಲಿನ ಕತೆಗಳಲ್ಲಿ ಪ್ರಧಾನವಾಗಿ ಕಂಡು ಬರುವ ಅಂಶ ಮನುಷ್ಯನ ವ್ಯಕ್ತಿತ್ವದೊಳಗಿನ ದ್ವಂದ್ವ, ಅವನ ಧರ್ಮಸಂಕಟಗಳ ಕುದಿಬಿಂದು ಮತ್ತು ಒಟ್ಟಾರೆ ಮನುಷ್ಯತ್ವದ ಆಳವನ್ನೇ ಬೆದಕಿ ನೋಡುವ ಚಿಕಿತ್ಸಕ ಮನೋಧರ್ಮ. 

ನಿರೂಪಣೆಯಲ್ಲಿ ಸಾಕಷ್ಟು ನೇರವಾಗಿಯೇ ಕಥನವನ್ನು ತೆರೆದಿಡುವ ಅರ್ಪಣ ಸನ್ನಿವೇಶಗಳನ್ನು, ಘಟನೆಗಳನ್ನಿಟ್ಟುಕೊಂಡು ಕತೆ ಹೆಣೆಯುತ್ತಾರೆ. ಹಾಗಾಗಿ subtle ಆದ ಏನನ್ನೂ ಇವರು ತಮ್ಮ ಕತೆಗಳಲ್ಲಿ ಕಾಣಿಸುವುದಕ್ಕೆ ಹೋಗುವುದಿಲ್ಲ. ಹಾಗಾಗಿ ಸರಳವಾಗಿ ಓದಿಸಿಕೊಂಡು ಹೋಗುವ, ಹೊರೆಯೆನಿಸದ ಇವರ ಕತೆಗಳು ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ. ಹಾಗಿದ್ದೂ ಇವರು ಕತೆಗಳಿಗೆ ಎತ್ತಿಕೊಳ್ಳುವ ವಸ್ತು, ಅದು ಓದುಗನ ಮನಸ್ಸಿನಲ್ಲೆಬ್ಬಿಸುವ ಜಿಜ್ಞಾಸೆ, ಇವರೆತ್ತುವ ಧರ್ಮಸಂಕಟದ ಪ್ರಶ್ನೆ, ವ್ಯಕ್ತಿತ್ವದ ಮೇಲ್ನೋಟದ ಚರ್ಯೆಯ ಹಿಂದಿರುವ ಮನೋಧರ್ಮದ ಪ್ರಾಮಾಣಿಕತೆಗೆ ಇವರು ಹಾಕುವ ಪಾತಾಳಗರಡಿ ಈ ಕತೆಗಳ ಮಹತ್ವ ಹೆಚ್ಚಿಸಿದೆ. ಈ ನೆಲೆಯಲ್ಲಿ ಇವು ಓದುಗನನ್ನು ಬೆಚ್ಚಿ ಬೀಳಿಸಬಲ್ಲ ಮತ್ತು ಅವನನ್ನು ಅವನು ಮತ್ತೊಮ್ಮೆ ತನ್ನದೇ ವ್ಯಕ್ತಿತ್ವದ ಕನ್ನಡಿಯೆದುರು ನಿಂತು ನೋಡಿಕೊಳ್ಳುವಂತೆ ಮಾಡಬಲ್ಲ ಕಸು ಹೊಂದಿವೆ. 

ಮೊದಲ ಕತೆ ‘ಪುನರಾರಂಭ’ದ ಕೊನೆಯಲ್ಲಿ ಈ ರೀತಿಯಿದೆ:

"ಕಾರು ಅಲ್ಲೇ ಬಿಟ್ಟು, ಅವಳ ಕೈ ಹಿಡಿದು ಅವನು ಮನೆಗೆ ವಿರುದ್ಧವಾದ ದಿಕ್ಕಿನಲ್ಲಿ ಹೆಜ್ಜೆ ಇಡತೊಡಗಿದ. ಅವಳು ತಾನಾಡುತ್ತಿದ್ದ ಮಾತು ನಿಲ್ಲಿಸದೆ, ಅವನೊಂದಿಗೆ ಹೆಜ್ಜೆ ಹಾಕಿದಳು. ಸಿಗ್ನಲ್ ಬಿಟ್ಟಿತು. ಇವರ ಕಾರಿನ ಹಿಂದಿದ್ದವರೆಲ್ಲಾ ಪ್ರಳಯವಾದಂತೆ ಹಾರನ್ ಮಾಡತೊಡಗಿದರು. ಇವರಿಬ್ಬರಿಗೆ ಮಾತ್ರ ಅದು ಕೇಳಲೇ ಇಲ್ಲ."

ಇಡೀ ಕತೆಯ ನಿರೂಪಣೆಯ ಉದ್ದಕ್ಕೂ ಅವಳು ಮತ್ತು ಅವನು ಪರಸ್ಪರ ದ್ವೇಷಿಸುತ್ತಿರುವಂತಿದೆ. ಆದರೆ ಅದು ಅವರ ಪ್ರೇಮದ ಆಟ ಎನ್ನುವುದು ಬಹುಬೇಗ ಓದುಗರಿಗೂ ಅರಿವಾಗುತ್ತದೆ. ಕೊನೆಯಲ್ಲಿ ಕಾಣಿಸುವ ವೈರುಧ್ಯ ಗಮನಿಸಿ, ಟ್ರಾಫಿಕ್ ಜಾಮಿನಲ್ಲಿ ಕಾರು ನಿಲ್ಲಿಸಿ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕತೊಡಗುತ್ತಾರೆ. ವಿರುದ್ಧ ದಿಕ್ಕಿನಲ್ಲಿ, ಆದರೆ ಇಬ್ಬರೂ ಕೈ ಕೈ ಹಿಡಿದು!

‘ಶುದ್ಧಿ’ ಕತೆಯಲ್ಲಿ ವ್ಯಕ್ತಿತ್ವದೊಳಗಿನ ವೈರುಧ್ಯ ಮತ್ತು ಧರ್ಮಸಂಕಟ ಇನ್ನಷ್ಟು ಸ್ಫುಟವಾಗಿದೆ.  

"ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ಮೂಲದ ಯಶಸ್ವಿ ಉದ್ಯಮಿಯಾಗಿರುವ, ಸಾವಿರ ಕೋಟಿ ವಹಿವಾಟಿರುವ ‘ಪ್ರೋಟೆಕ್’ ಸಂಸ್ಥೆಯ ಸಂಸ್ಥಾಪಕನಾಗಿರುವ, ಫೋರ್ಬ್ ಪತ್ರಿಕೆಯಲ್ಲಿ ಆಗಾಗ ಕಾಣಿಸಿಕೊಳ್ಳುವ, ಐಟಿ ಜಗತ್ತಿನಲ್ಲಿ ‘ಪ್ರೋ ಪ್ರಾಣ್’ ಎಂದೇ ಹೆಸರಾಗಿರುವ ‘ಪ್ರಾಣೇಶ ನರಸಿಂಹ ಆಚಾರ್ಯ’ ಬೆಂಗಳೂರಿನ ಬಸವನಗುಡಿಯ ಆ ಹಳೆಮನೆಯ ಎದುರು, ತನ್ನ ಬ್ರಾಂಡೆಡ್ ಟೀ ಶರ್ಟ್ ಕೆಳಗೆ, ತನ್ನಪ್ಪನ ಹಳೆ ಪಂಚೆಯೊಂದನ್ನು ಸುತ್ತಿಕೊಂಡು, ಕೈಯಲ್ಲಿ ಪೊರಕೆ ಹಿಡಿದುಕೊಂಡು ದಿಕ್ಕುಕಾಣದೆ ನಿಂತಿದ್ದು..."

- ಇದು ಒಂದು ಕಡೆಯದ್ದಾದರೆ ಇನ್ನೊಂದು ಕಡೆ ಸದ್ಯ ಚಿಂದಿಯಾಗಿರುವ ಹಳೆಯ ಕ್ಯಾಲೆಂಡರು, ಫೋಟೋಗಳಲ್ಲಿ ಶತಮಾನಗಳಿಂದ ನೆಲೆಸಿರುವ ದೇವರನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲಾರದ ಹೆತ್ತವರಿದ್ದಾರೆ. 

"ಗಂಡನ ಸಂಬಳದಲ್ಲಿ ಅಚ್ಚುಕಟ್ಟಾಗಿ ಮನೆ ನಡೆಸಿ, ಅದರಲ್ಲೇ ಕೊಂಚ ಉಳಿಸಿ ಪೋಸ್ಟ್ ಆಫೀಸಿನಲ್ಲಿ ಮಕ್ಕಳಿಬ್ಬರ ಹೆಸರಿನಲ್ಲಿ ಆರ್ ಡಿ ಕಟ್ಟುವ, ತನ್ನ ಸಣ್ಣ ವ್ಯಾಪಾರದಿಂದ ಬಂದ ಹಣದಲ್ಲಿ ಹೆಣ್ಣುಮಕ್ಕಳಿಬ್ಬರಿಗೂ ಆದಾಗೆಲ್ಲಾ ಚೂರುಪಾರು ಬಂಗಾರ ಮಾಡಿಸಿಡುವ ಪ್ರಮೀಳೆ ಜಾಣೆ ಎಂಬುದರಲ್ಲಿ ಸಂಶಯವೇ ಇರಲಿಲ್ಲ." ಎಂಬ ಮಾತುಗಳಲ್ಲಿ ಪ್ರಮೀಳೆಯ ಸುಂದರ ಸಂಸಾರದ ಕತೆಯನ್ನು ಹೇಳುವ  ‘ಕೋಲಾ’ ದ ‘ಗಂಡಾಂ’ತರ, ಕೋಲಾ-ಹಲ ಇನ್ನೊಂದೇ ಬಗೆಯದ್ದು.

‘ನದಿಗಿಲ್ಲ ತೀರದ ಹಂಗು’ ಕತೆ ಮತ್ತೊಮ್ಮೆ ‘ಪುನರಾರಂಭ’ ಕತೆಯನ್ನೇ ಹೇಳುತ್ತಿದೆ.

‘ಕೆಂಪು’ ಕತೆ ಕನ್ನಡದ ಸಣ್ಣಕತೆಗಳಲ್ಲಿ ಕ್ಲೀಷೆಯಾಗುವಷ್ಟು ಬಂದಿರುವ ಮತ್ತೊಂದು ಮುಟ್ಟಿನ ಕತೆಯಾಗದೇ, ವಿಶಿಷ್ಟವಾಗಿ ನಿಲ್ಲುವುದೇ ಅದರ ವಿಶೇಷತೆ. ಹರಯದಲ್ಲಿ ಅರಿಯದೇ ಮೋಹಿನಿಯ ಸಂಕಟಕ್ಕೆ ವಿಚಿತ್ರವಾಗಿ ಸ್ಪಂದಿಸುವ ಲಕ್ಷ್ಮಿ, ತಾನೇ ಮೋಹಿನಿಯಾಗುವ ಮತ್ತು ಫೋಬಿಯಾವನ್ನು ಮೀರುವ ಹಂತ ಅತ್ಯಂತ ಸೂಕ್ಷ್ಮವಾದ ಹದವನ್ನು ಪಡೆದು ಬಂದಿದೆ. ಈ ಕತೆಯನ್ನು ಅರ್ಪಣ ಅವರು ಮನುಷ್ಯನ ಸಣ್ಣತನ, ಈರ್ಷ್ಯೆಗಳೇ ಅವನ ಭ್ರಮೆಯಾಗಿ ಕಾಡುವುದನ್ನೂ, ಅವನದನ್ನು ಮೀರುವ ಮಾರ್ಗವನ್ನೂ ಸೂಚಿಸಲು  ಬಳಸಿಕೊಂಡಿರುವುದನ್ನು ಕಾಣುತ್ತೇವೆ. ಇದು ಸರಳ, ನೇರ ಕತೆಗೆ ಅವರು ಕೊಟ್ಟ add-on value ಮಾತ್ರವಲ್ಲ, ನಿರೂಪಣೆಯಲ್ಲಿ ಹದ ತಪ್ಪದೆ ಅವರಿದನ್ನು ನಿರ್ವಹಿಸಿರುವ ರೀತಿಯೂ ಅತ್ಯಂತ ಪ್ರಬುದ್ಧವಾಗಿದೆ.

‘ಕದನ ವಿರಾಮ’ ಒಂದು ಕಾರ್ಪೊರೇಟ್ ಜಗತ್ತಿನ ಹಾವೇಣಿಯಾಟದ ಕತೆ. ಹುದ್ದೆ, ಹಕ್ಕು ಸ್ಥಾಪನೆ ಮತ್ತು ಮೇಲಾಟದ ಕಸರತ್ತುಗಳೇ ಮುಖ್ಯವಾಗಿ ಬಿಡುವ ಮನುಷ್ಯನ ಹಪಾಹಪಿಯೆದುರು ಅವನೇ ನಿಂತು ನಾಚಿಕೊಳ್ಳುವ, ನಾಚಿಕೊಂಡರೂ ಅದನ್ನು ಎಲ್ಲೋ ಸಮರ್ಥಿಸಿಕೊಂಡು ಮುಂದುವರಿಯುವ, ನಾಚಿಕೊಳ್ಳುವಷ್ಟು ಒಳ್ಳೆಯತನ ತನ್ನಲ್ಲಿದೆಯಲ್ಲಾ ಎಂದು ಆ ಬಗ್ಗೆ ತಾನೇ ಹೆಮ್ಮೆ ಪಡುವ ವಿಪರ್ಯಾಸವನ್ನು ಕಟ್ಟಿಕೊಡುವ ಕತೆ. ಕತೆಯ ಕೊನೆಯಲ್ಲಿ ಅಹಲ್ಯ ತನ್ನ ಮೇಲಧಿಕಾರಿಯನ್ನು ಬಯ್ಯಲು ಬಳಸುವ ಭಾಷೆಯಲ್ಲಿಯೇ ಇಂಥ ರಾಜೀಸೂತ್ರವಿದೆ. ಮುಂದೆ ದೇಶಪಾಂಡೆ ಸಿಕ್ಕರೆ ಆಡಬೇಕೆಂದು ಅವಳು ರಿಹರ್ಸಲ್ ನಡೆಸುವ ಮಾತು ಯಾವತ್ತೂ ಜೀವಂತ ದೃಶ್ಯವಾಗುವುದಿಲ್ಲ ಎನ್ನುವುದು ಗೊತ್ತಿದ್ದೂ ತಯಾರಾಗುವ ಬಗೆಯಲ್ಲೇ ಒಂದು ವಿಕಟ ವ್ಯಂಗ್ಯವಿದೆ. ಇಷ್ಟೆಲ್ಲ ಇದ್ದೂ ಈ ಕತೆ ಅಹಲ್ಯಾಳ ಪ್ರಜ್ಞೆಯಿಂದಲೇ ನಿರೂಪಿಸಲ್ಪಡುತ್ತಿರುವುದರಿಂದಲೋ ಅಥವಾ ಅಹಲ್ಯಾಳ ರಾಜೀಸೂತ್ರದ ಬದುಕೇ ನಾವು ಒಪ್ಪಿಕೊಂಡಿರುವ ಆದರ್ಶವಾಗಿರುವುದರಿಂದಲೋ, ಕತೆಗಾರ್ತಿಯ ಎರಡಲುಗಿನ ಅಂತ್ಯ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂದೇ ಅನಿಸುತ್ತದೆ.   

ಹಾಗೆ ನೋಡಿದರೆ, ‘ಕದನ ವಿರಾಮ’ದ್ದೇ ಇನ್ನೊಂದು ಆವೃತ್ತಿಯಾಗಿರುವ ‘ಸಾಪೇಕ್ಷತೆ’ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಕತೆಯಲ್ಲಿ ಇಬ್ಬರು ಗೆಳತಿಯರಿದ್ದಾರೆ. ಸಮನ್ವಿತಾಗೆ ಸದಾ ತಾನು ಒಂದಿಂಚಾದರೂ ಹೆಚ್ಚಿನವಳಾಗಬೇಕು ಎಂಬ ಹೆಬ್ಬಯಕೆ ಇದ್ದರೆ ಕೃಷ್ಣವೇಣಿಯಲ್ಲಿ ಅದು ಇದ್ದೂ ಕಾಣಿಸದ ಹಾಗಿದೆ. ಅಷ್ಟರಮಟ್ಟಿಗೆ ಇಬ್ಬರಲ್ಲೂ ತಥಾಕಥಿತ ವ್ಯತ್ಯಾಸವೇನಿಲ್ಲ. ಅತೃಪ್ತಿ ಇಬ್ಬರ ವ್ಯಕ್ತಿತ್ವದ, ಮೂಲಭೂತವಾಗಿ ಎಲ್ಲ ಮನುಷ್ಯರ ಆಳದ ಮೂಲತತ್ವ. ಬದುಕಿನಲ್ಲಿ ನಮ್ಮ ಯಶಸ್ಸು-ಸೋಲುಗಳಿಗೆ ಸಾಪೇಕ್ಷವಾಗಿ ನಿಲ್ಲುವ ಇನ್ನೊಬ್ಬ ವ್ಯಕ್ತಿಯ ಯಶಸ್ಸು-ಸೋಲುಗಳೇ ನಮ್ಮ ಆನಂದ-ಸಂಕಟಗಳಿಗೆ ಕಾರಣವಾಗಿ ಬಿಡುವುದು ವಿಪರ್ಯಾಸವಾದರೂ ನಿಜ. ಆದರೆ ಎಷ್ಟೋ ಬಾರಿ ನಾವಿದನ್ನು ಕಂಡುಕೊಳ್ಳಲು ವಿಫಲರಾಗುತ್ತೇವೆ. ಜಗತ್ತೆಲ್ಲ ಹಾಗೆ, ತಾನು ಆ ತರ ಇಲ್ಲ ಎಂದುಕೊಳ್ಳುವವರು ಹೆಚ್ಚು. ಆದರೆ ನಾವು ಎಲ್ಲರಿಗಿಂತ ಹೆಚ್ಚು ಆಳವಾಗಿ ಅದನ್ನು ಅಡಗಿಸಿಕೊಂಡಿರುವ ಜಾಣರಾಗಿರುತ್ತೇವೆ. ಇದನ್ನು ಈ ಕತೆಯಲ್ಲಿ ಸಶಕ್ತವಾಗಿ ಅನಾವರಣಗೊಳಿಸಿರುವ ಬಗೆ ಮೆಚ್ಚುಗೆಗೆ ಕಾರಣವಾಗುತ್ತದೆ.

‘ಫೀನಿಕ್ಸ್’ ಕತೆ ಹೆಚ್ಚು ವಿಶಾಲವಾದ ಹರಹು ಹೊಂದಿರುವ ಕತೆ. ಗೆರೆ ಕೊರೆದು ವಿಂಗಡಿಸಲಾಗದ ಪ್ರೇಮ ಕಾಮದ ಸಂಬಂಧದ ಸೆಳೆತ ಒಂದು ಕಡೆ ಇದ್ದರೆ, ತತ್ವ ಸಿದ್ಧಾಂತಗಳ ಸೋಗಲಾಡಿತನ ಮತ್ತು ಈ ಸೋಗಲಾಡಿತನವನ್ನು ಕೂಡ ಸಮರ್ಥಿಸುವಂತೆ ಕಾಣಿಸಿಕೊಳ್ಳುವ ವಾಸ್ತವದ ಒತ್ತಡ ಇನ್ನೊಂದೆಡೆ ಇದೆ. ನಡುವೆ ಗಂಡು, ಹೆಣ್ಣು ಇಬ್ಬರಲ್ಲೂ ಬದ್ಧತೆಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸೋತ ಗಿಲ್ಟ್ ಇರುವುದು ಈ ಕತೆಯ ಹೆಚ್ಚುಗಾರಿಕೆ. ಆದರೆ, ಕತೆ ಇದನ್ನು ನಿರ್ವಹಿಸಿರುವ ರೀತಿ ಅನನ್ಯವಾಗಿದೆ. ಅಂದರೆ, ಅದು ಗೆರೆ ಕೊರೆದು ವಿಂಗಡಿಸಲಾಗದ ಕಾಮ ಪ್ರೇಮದ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ, ಸ್ವೀಕರಿಸುತ್ತದೆ. ತೂಗಿ ನೋಡುವ, ಸರಿ ತಪ್ಪು ಜಿಜ್ಞಾಸೆ ನಡೆಸುವ, ತೀರ್ಮಾನಗಳನ್ನು ಕಾಣಿಸುವ ಯಾವ ಪ್ರಯತ್ನಕ್ಕೂ ಕೈಯಿಕ್ಕುವುದಿಲ್ಲ. ಬದಲಿಗೆ, ಕೈಹಿಡಿದ ಗಂಡನನ್ನು ಬಿಟ್ಟ ಕಹಿಯನ್ನು, ಬಸುರಿ ಹೆಂಡತಿಯ ಪ್ರೀತಿಗೆ , ಅಗತ್ಯಗಳಿಗೆ ಸ್ಪಂದಿಸಲಾಗದ ವೈಕಲ್ಯವನ್ನು, ಹೆತ್ತ ಮಗುವನ್ನು ಕಡೆಗಣಿಸುತ್ತಿದ್ದೇನಾ ಎಂಬ ಕೊರಗನ್ನು, ಹೆಂಡತಿಯಿಂದಲೇ ಖರ್ಚಿಗೆ ಹಣ ಪಡೆದೂ ಅವಳಿಗೆ ಪ್ರೀತಿಯನ್ನು ಕೂಡಾ ಕೊಡಲಾರದ ಕೈಲಾಗದತನ-ವನ್ನುಅದು ಗುರುತಿಸುತ್ತಲೇ ಈ ಕಾಮ ಪ್ರೇಮದ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ, ಸ್ವೀಕರಿಸುತ್ತದೆ ಎನ್ನುವಲ್ಲಿಯೇ ಈ ಕತೆಯ ವಿಶೇಷತೆಯಿದೆ, ಹೆಚ್ಚುಗಾರಿಕೆಯಿದೆ. 

ಅಂದರೆ, ಆಯ್ಕೆ ಎನ್ನುವುದು ಅದೆಷ್ಟೇ ಟೆಂಪೊರರಿಯಾಗಿದ್ದರೂ ಅದು ಸಾಧ್ಯವಾಗುವುದು ಕೆಲವರಿಗಷ್ಟೇ. ಅದು ಕೆಲವೇ ಕೆಲವು ಮಂದಿಯ ಪ್ರಿವಿಲೇಜ್.  ಉಳಿದವರಿಗೆ ಸಹಜವಾಗಿ ಬದುಕಲು ಕೂಡ ಇಲ್ಲಿ ಹಲವು ಸ್ತರದ ತೊಡಕುಗಳಿವೆ, ಕಷ್ಟವಿದೆ. ಗಿಲ್ಟ್ ಅವುಗಳಲ್ಲಿ ಬಹುಮುಖ್ಯವಾದದ್ದು. ಈ ಗಿಲ್ಟ್ ಕೂಡ ಸಕಾರಣವಾದದ್ದು. ಈ ಗಿಲ್ಟ್ ಸಕಾರಣವಾದದ್ದು ಎಂದು ನಮ್ಮ ಮನಸ್ಸು ಗ್ರಹಿಸುತ್ತದೆ, ಮನ್ನಿಸಿದೆ ಮತ್ತು ಅದಕ್ಕೆ ಕಾರಣ ಅವನ ಒಳ್ಳೆಯದು-ಕೆಟ್ಟದುಗಳ ಪಾರಂಪರಿಕ ಪ್ರಜ್ಞೆಯಾಗಿದೆ. 

ಕೈಹಿಡಿದ ಹೆಂಡತಿಯತ್ತ ಇರುವ ಬಾಧ್ಯತೆಗಳು, ಮಗುವಿನತ್ತ ತಾಯಿಗಿರುವ ಬಾಧ್ಯತೆಗಳು, ಕೈಹಿಡಿದ ಪತಿಯೊಂದಿಗೆ ಹೊಂದಿಕೊಂಡು ಹೋಗುವ ಬಾಧ್ಯತೆಗಳು ಇತ್ಯಾದಿ ಒಂದು ಸ್ವಸ್ಥ ಸಮಾಜದ ಅಗತ್ಯ ಎಂದು ತಿಳಿ ಹೇಳುವ ಮಾದರಿ ಪ್ರಜೆಯ ಲಕ್ಷಣಗಳೇನಿವೆ, ಅವು ಈ ಗಿಲ್ಟ್‌ಗೆ ಕಾರಣ. ಏಕೆಂದರೆ, ಇಲ್ಲಿನ ನಾಯಕ ನಾಯಕಿ ಇಬ್ಬರೂ ಈ ಮಾದರಿಯನ್ನು ಒಪ್ಪಿಕೊಂಡವರೇ, ಅದು ಅಗತ್ಯ ಎಂದು ಭಾವಿಸುವವರೇ. ಆದರೆ ಪ್ರೇಮ ಕಾಮದ ತುಡಿತ ಇವುಗಳನ್ನು ಮೀರಿದ್ದು ಎನ್ನುವುದು ಕೂಡ ನಿತ್ಯಸತ್ಯ. ಈ ಲಕ್ಷ್ಮಣರೇಖೆಯನ್ನು ದಾಟುವ ಸಂಕೀರ್ಣ ಹೆಜ್ಜೆಯೇನಿದೆ, ಅದು ಕೂಡಾ ಶಾಶ್ವತವಾದ ಏನನ್ನೂ ಕಟ್ಟಿಕೊಡುವುದಿಲ್ಲ ಎನ್ನುವ, ಈ ಬದುಕಿನ ಕ್ಷಣಭಂಗುರತೆಯೆದುರು ಎಲ್ಲಾ ಮಾದರಿಗಳು, ಲಕ್ಷ್ಮಣರೇಖೆಗಳು ಕ್ಷುಲ್ಲಕವೆನ್ನುವ ಸತ್ಯವೇನಿದೆ, ಅದು ಸಾವಿನಂಥ ಒಂದು ಅಂತಿಮ ಸತ್ಯವಾಗಿದೆ. ಅದನ್ನು ಈ ಕತೆ ಗುರುತಿಸುತ್ತಿದೆ, ಅವಳು ಅವನ ಎಲ್ಲಾ ಮೆಸೇಜುಗಳನ್ನು ಡಿಲೀಟ್ ಮಾಡಿ, ಅವನ ನಂಬರು ಬ್ಲಾಕ್ ಮಾಡಿ ಎಲ್ಲ ಮುಗಿಯಿತು ಎನ್ನುವಲ್ಲಿ ಮತ್ತು ಅವನು ಅವಳೊಂದಿಗಿನ ಬೆಂಕಿಯಂಥ ಸಂಬಂಧ ಕಡಿದುಕೊಳ್ಳಬೇಕು ಎಂದು ನಿರ್ಧರಿಸುವಲ್ಲಿ ಎರಡೂ ಅತಿರೇಕಗಳಿವೆ. 

ಒಂದು, ಆದರ್ಶವನ್ನು ಮೀರುವುದರಿಂದ ದಕ್ಕಿಸಿಕೊಳ್ಳುವುದು ಕೂಡಾ ಕ್ಷುಲ್ಲಕ, ಕ್ಷಣಭಂಗುರ ಎನ್ನುವ ಅತಿರೇಕದ ಪ್ರಜ್ಞೆ; ಇನ್ನೊಂದು ಆದರ್ಶವನ್ನು ಮೀರದೇ ಬಾಳುವುದು ಕೂಡಾ ಕೊನೆಗೊಂದು ದಿನ ಮುಗಿದು ಹೋಗುವ ಬದುಕಿನೆದುರು ಕ್ಷುಲ್ಲಕವೇ ಎನ್ನುವ ಅತಿರೇಕದ ಪ್ರಜ್ಞೆ. ಆದರ್ಶ, ನಿಯಂತ್ರಿತ ಬದುಕು ಅದೇ ಕಾರಣಕ್ಕೆ ಅಹಂಕಾರವನ್ನು ಕೊಟ್ಟರೆ, ಸ್ವೇಚ್ಛೆಯ ಬದುಕು ಗಿಲ್ಟ್ ಕೊಡುತ್ತದೆ. ಎರಡೂ ರೋಗಗಳೇ. ಆದರೆ ಇಲ್ಲಿ ಜೀವನದ ಜೀವಂತಿಕೆಯ ಸೆಳೆತದ ಎದುರು ಎಲ್ಲ ನಿರ್ಧಾರಗಳೂ ಮುರಿದು ಬೀಳುತ್ತವೆ. ಸಾವಿಗಿಂತ ಬದುಕು ದೊಡ್ಡದಾಗುತ್ತದೆ. ಈ ಪುಟ್ಟ ಕತೆ ಇವೆಲ್ಲವನ್ನೂ ಹಿಡಿದಿಟ್ಟಿರುವುದು ಅದ್ಭುತವಾಗಿದೆ.

‘ಜಬ್ಬಾರ್’ ಒಂದು ಉತ್ತಮ ಕತೆಯಾಗಿದ್ದೂ ಅದರ ಸಿನಿಮೀಯ ಲಕ್ಷಣಗಳಿಂದಾಗಿ ಸೊರಗಿದೆ. ಇಲ್ಲಿ ಹೇಗೆ ನಿರೂಪಕ ಇಡೀ ಕತೆಗೆ ಥರ್ಡ್ ಪಾರ್ಟಿಯಾಗಿಯೇ ಉಳಿಯುತ್ತಾನೋ ಹಾಗೆಯೇ ಓದುಗನೂ ಕತೆಯ ಹೊರಗೇ ಉಳಿಯುತ್ತಾನೆ. ಹಾಗಿದ್ದೂ ಇದೊಂದು ಮ್ಯಾಗಝೀನ್ ಕತೆಯ ಮಟ್ಟದಲ್ಲಿ ಉತ್ತಮ ಕತೆಯೇ.

‘ಮಲ್ಲಿಕಾರ್ಜುನ ದೇವರಾಗಿದ್ದು’ ಈ ಸಂಕಲನದ ರಂಜಕ ಗುಣಗಳಿರುವ ಇನ್ನೊಂದು ಒಳ್ಳೆಯ ಕತೆ.

ಒಟ್ಟಾರೆಯಾಗಿ ಬದುಕಿನ, ಮನುಷ್ಯನ ಮತ್ತು ಮನಸ್ಸಿನ ಸಂಕೀರ್ಣ ಎಳೆಗಳ ಸ್ಪರ್ಶವಿರುವ, ಪ್ರಬುದ್ಧ ಕತೆಗಾರ್ತಿಯೊಬ್ಬರ ಸಶಕ್ತ ಕತೆಗಳನ್ನು ಈ ಸಂಕಲನ ಒಳಗೊಂಡಿದೆ. ಹೇಳುವುದಕ್ಕಿಂತ ಹೆಚ್ಚಿನದನ್ನು ಕಾಣಿಸುವ ಗುಣವಿರುವ ಒಂದೆರಡು ಕತೆಗಳನ್ನೂ ಈ ಸಂಕಲನ ಒಳಗೊಂಡಿರುವುದು ಇವರಿಂದ ಮುಂದೆ ಬರೀ ಕಾಣಿಸುವ ಕತೆಗಳನ್ನೇ ನಿರೀಕ್ಷಿಸಬಹುದು ಎನ್ನುವ ಆಶಾವಾದಕ್ಕೆ ಇಂಬು ನೀಡುತ್ತದೆ.  

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ